Wednesday 5 July 2017

ಬೇಕಾಗಿದೆ : ಹಿಂದಿ ಭೂತವನ್ನು ಓಡಿಸಬಲ್ಲ ಮಂತ್ರವಾದಿ

ಬೇಕಾಗಿದೆ : ಹಿಂದಿ ಭೂತವನ್ನು ಓಡಿಸಬಲ್ಲ ಮಂತ್ರವಾದಿ

ಇಂಡಿಯದ ದೇಶಭಕ್ತರಿಗೆ ಹುಸಿ ರಾಷ್ಟ್ರೀಯತೆಯ ಅಮಲು ಏರಿದೆ; ಅದರಿಂದ ಅವರು ಏಕತೆಯೆಂದು ಬಡಬಡಿಸುತ್ತ ತೂರಾಡುತ್ತಿದ್ದಾರೆ. ಎಲ್ಲದಕ್ಕೂ ಒಂದೇ ಇದ್ದರೆ ಸಾಕು ಎಂದು ಮಿಕ್ಕವನ್ನೆಲ್ಲ ಅಳಿಸಿಹಾಕಲು ಅವರು ಪಿತೂರಿ ಮಾಡುತ್ತ, ಈಗಾಗಲೇ ವಿವಿಧ ಸ್ಟೇಟ್ ಬ್ಯಾಂಕುಗಳ ಅನನ್ಯತೆಯನ್ನು ಅಳಿಸಿಹಾಕಿದ್ದಾರೆ; ಹಿಂದಿಯನ್ನು ಹೇರಲು ಹುನ್ನಾರ ಮಾಡುತ್ತಿದ್ದಾರೆ. ಚರಿತ್ರೆ ಭೂಗೋಳ ಎರಡೂ ಇಲ್ಲದ ಹಿಂದಿ ಹತ್ತಾರು ಭಾಷೆಗಳನ್ನು ಒರೆಸಿಹಾಕಿ ಮೆರೆಯುತ್ತಿರುವ ಭೂತ. ದೇಶದ ಐಕ್ಯತೆಗಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಡಂಗುರ ಸಾರುತ್ತ (ಪಶ್ಚಿಮ ಬಂಗಾಳ ಮತ್ತು ನಮ್ಮ ಮಹಾನ್ ದೇಶಪ್ರೇಮಿ ಪ್ರಧಾನಿಯ ಸ್ವಂತ ದೇಶ ಗುಜರಾತ್‍ನ ಉಚ್ಚ ನ್ಯಾಯಾಲಯಗಳು ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಸಾರಿದ್ದರೂ) ನೀರಿಳಿಯದ ಗಂಟಲುಗಳಲ್ಲಿ ಕಲ್ಲಿನ ಕಡುಬನ್ನು ತುರುಕಲು ಹೊರಟಿದ್ದಾರೆ. ಇಂಡಿಯ ದೇಶವೆಂದರೆ ಒಂದು ಎಂಬ ಹುಚ್ಚುತನ ಇವರದು. ಎ.ಇ. ಹ್ಯೂಮ್ ಎಂಬ ನಿವೃತ್ತ ಬ್ರಿಟಿಷ್ ಅಧಿಕಾರಿ ‘ಇಂಡಿಯನ್ ನ್ಯಾಷನಲ್ ಕಾಂಗ್ರಸ್’ ಎಂಬ ಹೆಸರಿನಲ್ಲಿ ನ್ಯಾಷನಲ್ ಎಂಬ ವಿಶೇಷಣವನ್ನು ಇಂಡಿಯಕ್ಕೆ ಅನ್ವಯಿಸಿ ಮೊದಲ ಬಾರಿ ಬಳಸಿದ. ಅವನ ಮನಸ್ಸಿನಲ್ಲಿ ಇಂಡಿಯ ದೇಶ ಎಂದರೆ ಬ್ರಿಟಿಷ್ ಆಡಳಿತಕ್ಕೊಳಗಾಗಿದ್ದ ಪ್ರದೇಶ ಎಂಬ ಕಲ್ಪನೆ ಇತ್ತು. ಜಗತ್ತಿನ ಆದಿಯಿಂದಲೂ ಈಗಿನ ಭಾರತ ಒಂದಾಗಿತ್ತು ಎಂಬ ಭ್ರಮೆ ಈ ದೇಶಪ್ರೇಮಿಗಳಿಗೆ. ಆದರೆ ಅದು ಎಂದೂ ಒಂದಾಗಿರಲಿಲ್ಲ; ಹಿಂದಿಯ ಹೇರಿಕೆಯಿಂದ ಅದು ಒಡೆಯುವುದರತ್ತ ಧಾವಿಸುತ್ತದೆಯೇ ಹೊರತು ಒಂದಾಗಿಸುವ ಕಡೆಗಲ್ಲ. ಭಾರತ ಒಂದು ದೇಶವಲ್ಲ; ಅನೇಕ ಭಾಷಿಕ ರಾಷ್ಟ್ರೀಯತೆಗಳ ಒಕ್ಕೂಟ. ಭಾರತ ಸಂಸ್ಕೃತಿ ಎಂಬುದಿಲ್ಲ; ಇವರ ಕಲ್ಪನೆಯ ಅದು ವಿಕೃತಗೊಂಡ ವೈದಿಕ ಸಂಸ್ಕೃತಿ. ಅದನ್ನು ಹಿಂದಿ ಎಂಬ ತೊಸಕಲು ದಾರದಿಂದ ಹೊಲಿದಿಡಲಾಗುವುದಿಲ್ಲ.
ಗಾಂಧಿ ಮಾಡಿದ ದೊಡ್ಡ ತಪ್ಪು ಎಂದರೆ ಒಂದು ದೇಶಕ್ಕೆ ಒದು ಭಾಷೆ ಇರಬೇಕೆಂದು ಪ್ರತಿಪಾದಿಸಿದ್ದು. ದೇಶಕ್ಕೊಂದೇ ಭಾಷೆಯಲ್ಲ, ಮುಖ್ಯ ಭಾಷೆಗೊಂದು ದೇಶ ಎಂಬುದು ನಿಯಮ. ಜಗತ್ತಿನ ಎಲ್ಲೆಡೆ ಭೌಗೋಳಿಕತೆಗೆ ಮತ್ತು ಅಲ್ಲಿನ ಜನಭಾಷೆಗೆ ಅನನ್ಯ ಸಂಬಂಧ ಇರುವುದನ್ನು ಆಯಾ ದೇಶ ಮತ್ತು ಅದರ ಭಾಷೆಯ ಹೆಸರಿನ ಸಾಮ್ಯದಿಂದ ಗುರುತಿಸಬಹುದು. ಹಾಗಾಗಿ ಭಾಷೆಯಿಂದಲೇ ಒಂದು ದೇಶದ ಅಸ್ತಿತ್ವ. ಅಮೆರಿಕ, ಭಾರತ ಎಂಬಂತಹ ಕೃತಕ ದೇಶಕಲ್ಪನೆಯ ಹಿಂದೆ ವ್ಯಕ್ತಿ ಹೆಸರುಗಳು ಮುಖ್ಯವಾಗಿವೆ, ಯಾವುದೇ ಸಾಮುದಾಯಿಕ ವಿಷಯವಲ್ಲ. ಅಲ್ಲದೆ ಭಾರತ ಎಂಬುದು ಭರತನು ಆಳಿದ ದೇಶ ಎನ್ನುತ್ತಾರೆ; ಯಾವ ಭರತ?  ರಾಮನ ತಮ್ಮನೋ, ಸರ್ವದಮನನೆಂಬ ಹೆಸರಿನ ದುಷ್ಯಂತ-ಶಕುಂತಲೆಯರ ಮಗನೋ, ಜೈನರ ತ್ರಿಷಷ್ಠಿಶಲಾಕಾಪುರುಷರಲ್ಲಿ ಒಬ್ಬನಾದ ಮೊದಲನೆಯ ಚಕ್ರವರ್ತಿಯೋ, ಅಥವಾ ನಾಟ್ಯಶಾಸ್ತ್ರವನ್ನು ಬರೆದ ಭರತಮುನಿಯೋ? ಹಿಂದಿ ಎಂಬ ಹೆಸರು ಎಂದಿನಿಂದ ಇದೆ ಎಂಬುದನ್ನು ಸಂಶೋಧನೆ ಮಾಡಲಿ, ಅದರ ಇತಿಹಾಸ ಒಂದು ಶತಮಾನಕ್ಕೆ ಹೆಚ್ಚಿನದಿದೆಯೇ? ಹಿಂದಿಯನ್ನು ಕೇಂದ್ರ ಸರ್ಕಾರದ ಏಕೈಕ ಅಧಿಕೃತ ಭಾಷೆಯೆಂದು ಸಾರುವುದರ ಮೂಲಕ ನಮ್ಮ ಸಂವಿಧಾನ ಈ ದೇಶದ ಜನರನ್ನು ಕುರಿಗಳು ಮತ್ತು ಕುರುಬರು ಎಂದು ವಿಂಗಡಿಸಿದಂತಾಗಿದೆ. ಹಿಂದಿಯ ಕಾರಣದಿಂದ ಅದನ್ನು ಮಾತಾಡುತ್ತೇವೆನ್ನುವವರಿಗೆ ಇನ್ನಿಲ್ಲದ ಹಿರಿಮೆ ಪ್ರಾಪ್ತವಾಗುವಂತೆ ಸಂವಿಧಾನ ಮಾಡಿದೆ. ಹಿಂದಿ ಎಂಬುದೊಂದು ಭೂತ. ಭೂತ ಹಿಡಿದ ವ್ಯಕ್ತಿ ತಾನಾಗಿ ನಡೆದುಕೊಳ್ಳುವುದಿಲ್ಲ; ಮೈಮೇಲೆ ಬಂದಿರುವ ಭೂತದಂತೆ ರಭಸದಿಂದ ಓಲಾಡುತ್ತಾನೆ. ಹಾಗೆಯೇ ಹಿಂದಿ ಎಂಬ ರಾಷ್ಟ್ರೀಯ ಭೂತ ಬಂದವರು ತಮ್ಮತನವನ್ನೆಲ್ಲ ಬಿಟ್ಟಕೊಟ್ಟು ಹೇಗೆ ಹೇಗೆಯೋ ನಡೆದುಕೊಳ್ಳುತ್ತಾರೆ. ಹಿಂದಿ ಭೂತ ಹಿಡಿದ ಜನರನ್ನು ನೋಡಿ: ಅವರು ಧರಿಸುವುದು ರಾಷ್ಟ್ರೀಯ ಅಂದರೆ ಉತ್ತರದವರ ಉಡುಪು, ಹಿಂದಿ ಸಿನಿಮಗಳಿಗೆ ಆದ್ಯತೆ, ಹಿಂದಿ ಹಾಡುಗಳು ಅವರಿಗೆ ಹೆಚ್ಚು ಇಂಪು. ದೇಶಭಕ್ತಿ ಗೀತೆಯೆಂದರೆ ಹಿಂದಿ ಹಾಡು - ಹೀಗೆ ಯುವಜನತೆಯ ಮಿದುಳಿನಲ್ಲಿ ಹಿಂದಿಯ ಅಮಲನ್ನು ನಮ್ಮ ವಾಹಿನಿಗಳು ಮತ್ತು ಸರ್ಕಾರ ಹಿಡಿಸುತ್ತಿವೆ.
ಕನ್ನಡದ ಜನ ಏಕೆ ಹೀಗಾಗಿದ್ದಾರೆಯೋ ತಿಳಿಯದು. ನಾವಿನ್ನೂ ರಾಷ್ಟ್ರೀಯ ಪಕ್ಷಗಳೆಂಬ ದೆಹಲಿ ಬಾಲಬಡುಕ ಜನರನ್ನೇ ಚುನಾವಣೆಯಲ್ಲಿ ಆಯ್ಕೆಮಾಡುತ್ತಿದ್ದೇವೆ, ಅದು ಸಿಂದಾಬಾದನ ಬೆನ್ನೇರಿದ ಭೂತದ ಹಾಗೆ ನಮಗೆ ಅಂಟಿಕೊಂಡುಬಿಟ್ಟಿದೆ, ಕೊಡವಿದರೂ ಉದುರುತ್ತಿಲ್ಲ. ನೆರೆಹೊರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳಗಳಲ್ಲಿ ಈ ರಾಷ್ಟ್ರೀಯ ಪಕ್ಷಗಳ ಭೂತ ಕಾಡುತ್ತಿಲ್ಲ. ಆದರೆ ಕನ್ನಡಿಗರಿಗೆ ಬಿಡುಗಡೆಯ ದಿನ ಎಂದೋ. ನಮ್ಮ ರಾಜ್ಯ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡು ಮುಗ್ಧ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿದೆ. ತ್ರಿಭಾಷಾಸೂತ್ರವನ್ನು ಕುವೆಂಪು ತ್ರಿಶೂಲ ಸೂತ್ರ ಎಂದರು. ತ್ರಿಭಾಷಾ ಸೂತ್ರ ಒಂದು ಮೋಸದ ತಂತ್ರ. ನಮ್ಮ ಮಕ್ಕಳು ಕನ್ನಡದ ಜೊತೆಗೆ ರಾಷ್ಟ್ರಭಾಷೆ ಹಿಂದಿ ಮತ್ತು ಅಂತಾರಾಷ್ಟ್ರೀಯ ಭಾಷೆ ಇಂಗ್ಲಿಷನ್ನು ಕಲಿಯಬೇಕು. ಜನರ ದೃಷ್ಟಿಯಲ್ಲಿ ಈ ಕ್ರಮದಲ್ಲಿ ಅವುಗಳ ಮಹತ್ವ ಹೆಚ್ಚಾಗುತ್ತದೆ. ನಮ್ಮ ಜನರೆಲ್ಲ ಕನ್ನಡ ನಾಡನ್ನು ಬಿಟ್ಟು ಹೋಗಲು ತವಕಿಸುತ್ತಿರುವುದರಿಂದ ಹಿಂದಿ-ಇಂಗ್ಲಿಷ್‍ಗಳನ್ನು ಕಲಿಯಲು ಅವರಿಗೆ ಅತೀವ ಉತ್ಸಾಹ. ನಮ್ಮ ಮಕ್ಕಳು ಮೂರು ಭಾಷೆ ಕಲಿಯಬೇಕು, ಹಿಂದಿ ಜನ ತಮ್ಮ ಭಾಷೆಯನ್ನು ಕಲಿತು, ಇಂಗ್ಲಿಷನ್ನು ಹಾಗೂ ಹೀಗೂ ಜೇಬಿಗಿಳಿಸಿಕೊಂಡು ದೇಶವಾಳುವುದು, ನಮ್ಮ ಹುಡುಗರು ಸೇವಕರಂತೆ ಅವರ ಹಿಂದೆ ಡವಾಲಿ ಧರಿಸಿ ಓಡಾಡುವುದು. ಹಿಂದೆ ಬಟ್ಲರ್ ಇಂಗ್ಲಿಷ್ ಅನ್ನುತ್ತಿದ್ದರಲ್ಲ, ಹಾಗೆ ನಮ್ಮ ಹುಡುಗರು ಹಿಂದಿಯನ್ನು ಹೇಗಾದರೂ ಕಲಿತು ಸಾಹೇಬರ ಸೇವೆ ಮಾಡುವ ಸೌಭಾಗ್ಯವನ್ನು ಹೊಂದಬೇಕು. ಎಷ್ಟಾದರೂ ಇವರದ್ದು ಕಲಿತ ಹಿಂದಿಯಲ್ಲವೇ? ಹಾಗಾಗಿ ಹಿಂದಿಯಲ್ಲೇ ಹುಟ್ಟಿ ಬೆಳೆದವರಂತೆ ಇವರು ಆ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವೇ? ಇಂಗ್ಲಿಷ್‍ನ ರೀತಿಯೂ ಇದೇ, ಹೀಗಾಗಿ ನಮ್ಮ ಹುಡುಗರು ‘ಈ ದರಿದ್ರ ಕನ್ನಡ ದೇಶದಲ್ಲಿ ಏಕೆ ಹುಟ್ಟಿದೆನೋ, ಹಿಂದಿಯವನಾಗಿಯೋ ಅಥವಾ ಅದಕ್ಕಿಂತ ಮಿಗಿಲಾಗಿ ಇಂಗ್ಲಿಷಿನವನಾಗಿಯೋ ಹುಟ್ಟಬೇಕಾಗಿತ್ತು!’ ಎಂದು ಪೇಚಾಡಿಕೊಳ್ಳಬೇಕು. ನಮ್ಮ ಸರ್ಕಾರ ನಿರೀಕ್ಷಿಸುವ ಪರಿಣಾಮ ಇದೇ ಎಂದು ಕಾಣುತ್ತದೆ.
1962 ರಲ್ಲಿ ತಮಿಳುನಾಡಿನಲ್ಲಿ ಹಿಂದಿವಿರೋಧಿ ಚಳವಳಿ ಬಹು ದೊಡ್ಡದಾಗಿ ನಡೆಯಿತು; ಆಗ ನೆಹರೂ ಕೊಟ್ಟ ಆಶ್ವಾಸನೆ ದಕ್ಷಿಣದವರು ಹಿಂದಿಯನ್ನು ಒಪ್ಪಿಕೊಳ್ಳುವವರೆಗೆ (ದಕ್ಷಿಣದವರೆಂದರೆ ತಮಿಳರು ಮಾತ್ರ, ಮಿಕ್ಕವರು ಅದನ್ನು ಪ್ರಸಾದವೆಂಬಂತೆ ಕಣ್ಣಿಗೊತ್ತಿಕೊಂಡು ಸೇವಿಸುತ್ತಿದ್ದಾರೆ!) ಇಂಗ್ಲಿಷ್ ಕೂಡ ಸಹಭಾಷೆಯಾಗಿ ಜಾರಿಯಲ್ಲಿರುತ್ತದೆ ಎಂದು. ಹಿಂದಿಯನ್ನು ನೀವು ಬಳಸಬೇಕೆಂದಿಲ್ಲ, ಆದರೆ ಅದು ಇಂಗ್ಲಿಷ್‍ನ ಜೊತೆ ಇರುತ್ತದೆ, ಇತರ ಭಾಷೆಗಳ ಸ್ಥಾನವೇನೂ ಬದಲಾಗುವುದಿಲ್ಲ. ಇಂಗ್ಲಿಷ್ ಜೊತೆಯಲ್ಲಿದ್ದರೂ ಹಿಂದಿಯ ಬಳಕೆಗೆ ಅಡ್ಡಿಯಿಲ್ಲ.  ಮುಖ್ಯಮಂತ್ರಗಳ ಸಭೆಯನ್ನುದ್ದೇಶಿಸಿ ಪ್ರಧಾನಿಯವರು ಮಾತನಾಡುವುದು ಹಿಂದಿಯಲ್ಲಿಯೇ, ಸಂಸತ್ತಿನಲ್ಲಿ ನೀವು ಇಂಗ್ಲಿಷ್‍ನಲ್ಲಿ ಪ್ರಶ್ನೆ ಕೇಳಿದರೂ ಸಚಿವರು ಉತ್ತರಿಸುವುದು ಹಿಂದಿಯಲ್ಲಿಯೇ. ಆ ಭಾಷೆ ಅರ್ಥವಾಗದಿದ್ದರೆ ದೆಹಲಿಯಲ್ಲಿನ ಸಂಸತ್ತು ಎಂಬ ಸಭೆಯಲ್ಲಿ ಕುಳಿತುಕೊಳ್ಳುವ ಯೋಗ್ಯತೆ ನಿಮಗೆಲ್ಲಿ ಬರುತ್ತದೇ?
ಬಿಜೆಪಿ ಎಂಬ ರಾಷ್ಟ್ರೀಯತೆಯ ಭೂತ ಬಲವಾಗಿ ಹೊಕ್ಕ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲಂತೂ ಹಿಂದಿಯನ್ನು ದನಗಳ ಗಂಟಲಿನಲ್ಲಿ ಔಷಧಿಯನ್ನು  ಗೊಟ್ಟದ ಮೂಲಕ ಬಲವಂತವಾಗಿ ಸುರಿಯುವ ಹಾಗೆ ನಮಗೆ ಎರೆಯಲಾಗುತ್ತಿದೆ. ನಮ್ಮ ಪ್ರಧಾನಿಯವರು ಗುಜರಾತಿಯನ್ನು ಮರೆತು, ಹಿಂದಿಯಲ್ಲಿಯೇ ಎಲ್ಲೆಡೆ ವ್ಯವಹರಿಸುತ್ತಾರೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಕೆಲವು ಕಡೆಗಳಲ್ಲಾದರೂ ತಮ್ಮ ತಾಯಿನುಡಿಯನ್ನು ಬಳಸುತ್ತಿದ್ದರೇನೋ; ಆದರೆ ಈಗ ಆತ ಅಖಿಲ ಭಾರತದ ವ್ಯಕ್ತಿ. ತಾನು ಹೋದ ಕಡೆ ಗುಜರಾತಿಯಲ್ಲಿಯೇ ಮಾತಾಡಿ ಎದುರಿಗಿರುವ ಸಭೆಯವರು ಯಾವ ಭಾಷೆಯವರೋ ಆ ಭಾಷೆಯಲ್ಲಿ ಅದನ್ನು ಭಾಷಾಂತರಗೊಳಿಸುವ ವ್ಯವಸ್ಥೆ ಮಾಡಲಾರದ ಆತ ಬಹುಭಾಷೆಯುಳ್ಳ ದೇಶದ ಬಹುತೆಯನ್ನು ಹೇಗೆ ಕಾಪಾಡಬಲ್ಲ? ತಾನೊಂದು ಇಸ್ತ್ರಿಪೆಟ್ಟಿಗೆ. ವೈವಿಧ್ಯವೇ ಇಲ್ಲದಂತೆ ಎಲ್ಲವನ್ನೂ ಸಪಾಟುಗೊಳಿಸಬೇಕೆಂಬ ಭ್ರಮೆ ಆತನಲ್ಲಿದೆ. ಖಾಸಗಿ ವಾಹಿನಿಗಳಲ್ಲಿಯೂ ಕೇಂದ್ರ ಸರ್ಕಾರದ ಜಾಹೀರಾತುಗಳೆಲ್ಲ ಹಿಂದಿಯ ಅಕ್ಷರಗಳನ್ನೇ ಬಿಂಬಿಸುವುದು. ರೈಲ್ಷೆ ಇಲಾಖೆಯು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸುವ ಜಾಹೀರಾತುಗಳೂ ಹಿಂದಿಯಲ್ಲಿಯೇ ಇರುತ್ತವೆ. ರೈಲ್ವೆ ಸವಲತ್ತು, ಸುರಕ್ಷತೆ ಹಿಂದಿಯರಿಗೆ ಮಾತ್ರ ಸಂಬಂಧಿಸಿದ್ದು, ಮಿಕ್ಕವರು ಏನಾದರೂ ಸರಿಯೇ! ಪ್ರಧಾನಿಯವರು ಜನರುನ್ನುದ್ದೇಶಿಸಿ ಹೇಳುವ ‘ಮಂಕಿ ಬಾತ್’ ಹೆಸರಿಗನುಗುಣವಾಗಿಯೇ ಹಿಂದಿಯಲ್ಲಿರುತ್ತದೆ!
ಕನ್ನಡಿಗರಲ್ಲಿ ‘ದೇಶಭಕ್ತಿ’ ಅತಿಯಾಗಿಬಿಟ್ಟಿದೆ. ನಮ್ಮ ನಾಡಿನಿಂದ ಚುನಾಯಿತನಾಗಿ ಹೋಗಿ ಕೇಂದ್ರದಲ್ಲಿ ಮಂತ್ರಿಯಾಗಿರುವ ಒಬ್ಬಾತನನ್ನು ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಏಕೆ ಮಾತಾಡಬಾರದು ಎಂದು ಒಮ್ಮೆ ಕೇಳಿದ್ದಕ್ಕೆ ಆತನ ಉತ್ತರ: ‘ನಾವು ಪ್ರಮಾಣವಚನವನ್ನು ಕನ್ನಡದಲ್ಲಿಯೇ ಸ್ವೀಕರಿಸಿದ್ದೇವೆ, ಅಂತಾರಾಷ್ಟ್ರೀಯ ಮಾತೃಭಾಷಾ ದಿನವಾದ ಫೇಬ್ರವರಿ 21 ರಂದು ಕನ್ನಡದಲ್ಲಿಯೂ ಮಾತಾಡುತ್ತೇವೆ’ ಎಂದು. ಮಾತೃಭಾಷಾ ದಿನದ ಆಚರಣೆಯ ಹಿಂದಿನ ಕಾರಣವೇನು ಎಂಬುದು ಆತನಿಗೆ ಗೊತ್ತಿದ್ದಂತಿಲ್ಲ. ಪಾಕಿಸ್ತಾನ ಆದಾಗ ಉರ್ದುವನ್ನು ಬಲವಂತವಾಗಿ ಹೇರಿದ್ದರಿಂದ ಬಂಗಾಳಿ ಪ್ರದೇಶವಾದ ಪೂರ್ವ ಪಾಕಿಸ್ತಾನದಲ್ಲಿ ವಿರೋಧ ಬಲವಾಗಿ ಡಾಕಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪಾಕಿಸ್ತಾನ ಪೋಲೀಸರು ಮಾಡಿದ ಗೋಲೀಬಾರ್‍ನಿಂದ ಐದು ಮಂದಿ ವಿದ್ಯಾರ್ಥಿಗಳು ಸತ್ತರು; ಪೂರ್ವ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾಗಲು ಈ ಉರ್ದುವಿರೋಧವೇ ಕಾರಣ. ಬಂಗ್ಲಾ ದೇಶವಾದ ಮೇಲೆ ಈ ಹಿನ್ನೆಲೆಯಲ್ಲಿ ಬಂಗ್ಲಾ ದೇಶ ವಿಶ್ವಸಂಸ್ಥೆಗೆ ಮನವಿಮಾಡಿಕೊಂಡದ್ದರಿಂದ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲು ವಿಶ್ವಸಂಸ್ಥೆಯಲ್ಲಿ ತೀರ್ಮಾನವಾಯಿತು. ಅಂದರೆ ಪರಭಾಷಿಕರ ಮೇಲೆ ಹಿಂದಿಯನ್ನು ಬಲಂತವಾಗಿ ಹೇರಿದರೆ ನಮ್ಮ ದೇಶದಲ್ಲಿಯೂ ಇದು ಮರುಕಳಿಸಬಹುದು ಎಂಬ ಪ್ರಜ್ಞೆಯೂ ಇವರಿಗಿಲ್ಲ. ಯಾವುದೋ ಸೈದ್ಧಾಂತಿಕ ನೆಲೆಯಲ್ಲಿ ವಿವಿಧ ಭಾ಼ಷಿಕ ವಲಯಗಳು  ಒಂದಾಗಿದ್ದ ಸೋವಿಯತ್ ಒಕ್ಕೂಟ ಒಡೆದುಹೋಗಲು ರಷ್ಯನ್ ಭಾಷೆಯ ಹೇರಿಕೆಯೂ ಬಹು ಮುಖ್ಯ ಕಾರಣವಾಯಿತು.
ರಾಷ್ಟ್ರಭಾಷೆಯ ಹೆಸರಿನಲ್ಲಿ ಎಲ್ಲೆಡೆಯೂ ಹಿಂದಿಯನ್ನು ಒರಟುತನದಿಂದಲೂ ನೇರವಾಗಿಯೂ ಸೂಕ್ಷ್ಮವಾಗಿಯೂ ಹೇರುತ್ತಿರುವುದರ ನೆನಪು ಮನಸ್ಸಿನಲ್ಲಿ ಕುದಿಯುತ್ತಿರುವುದರಿಂದ ಹಿಂದಿಯ ಬಗ್ಗೆ ಮೊನಚಾಗಿ ಬರೆಯುವ ಹಾಗಾಗುತ್ತದೆ. ಅದೂ ಕನ್ನಡದಂತೆಯೇ ಒಂದು ಭಾಷೆಯಾಗಿರಬಹುದು (ಆದರೆ ಒಂದಲ್ಲ ಹತ್ತಾರು ಭಾಷೆಗಳ ಕಲಸುಮೇಲೋಗರವೂ ಹೌದು) ಅದರ ಬಗ್ಗೆ ನಾವು ದ್ವೇಷ ಸಾಧಿಸಬೇಕಾಗಿಲ್ಲ. ಆದರೆ ಸರ್ಕಾರದ ಅಸಂಗತ ಭಾಷಾ ನೀತಿ ಅದನ್ನು ದ್ವೇಷಿಸುವಂತೆ ನಮ್ಮನ್ನು ಪ್ರೇರಿಸುತ್ತದೆ. ನಮ್ಮ ಮೇಲೆ ಸವಾರಿ ಮಾಡುವ ಭಾಷೆ ಅದು, ನಮ್ಮನ್ನು ದನಗಳಂತೆ ಭಾವಿಸಿ ಚಾವಟಿಯಿಂದ ಹೊಡೆಯುವ ಯಜಮಾನ ತಾನು ಎಂಬುದರಿಂದ, ‘ನಮ್ಮ’  ದೇಶದಲ್ಲಿಯೇ ನಮ್ಮನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುತ್ತಿರುವುದರಿಂದಾಗಿ ಇಂಥ ತೀವ್ರ ವಿರೋಧ ನಮ್ಮಲ್ಲಿ ಮಡುಗಟ್ಟಿರುವುದು.
ಇದಕ್ಕೆ ಕಾರಣ ಕನ್ನಡ ನಾಡು ದೆಹಲಿಯ ‘ಬಾಯ್ದಂಬುಲಕ್ಕೆ  ಕೈಯಾನುವ’ ರಾಷ್ಟ್ರೀಯ ಎನ್ನಿಸಿಕೊಂಡ ಪಕ್ಷಗಳೇ ನಮ್ಮನ್ನಾಳುತ್ತಿರುವುದು. ತಮಿಳುನಾಡಿನಲ್ಲಿ ಹಿಂದಿ ವಿರೋಧ ನಡೆದಂದಿನಿಂದ ಇಲ್ಲಿಯವರೆಗೆ ದ್ರಾವಿಡ ಪಕ್ಷಗಳಲ್ಲದೆ ಬೇರೆಯವರು ಅಲ್ಲಿನ ಆಡಳಿತವನ್ನು ಹಿಡಿಯಲು ಆ ಜನ ಅವಕಾಶವನ್ನೇ ಕೊಟ್ಟಿಲ್ಲ. ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯೂ ಮತ್ತೊಮ್ಮೆ ಆಯ್ಕೆಗೊಂಡಾಗ ಪ್ರಧಾನಿ ಚೆನ್ನೈಗೆ ಹೋಗಿ ಅವರಿಗೆ ಗೌರವ ತೋರಿಸುತ್ತಾರೆ; ಮನೆಯಲ್ಲಿ ತಳ್ಳುವ ಕುರ್ಚಿಯಿಂದಲೇ ಸಕಲ ಕಾರ್ಯನಿರ್ವಹಣೆ ಮಾಡುವ ವಿರೋಧಪಕ್ಷದ ನಾಯಕರನ್ನು ಅವರ ಮನೆಗೇ ಹೋಗಿ ಭೇಟಿ ಮಾಡಿ ಅವರ ಕೃಪೆಯನ್ನು ಬೇಡುತ್ತಾರೆ. ದಕ್ಷಿಣದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಅಲ್ಲಿನ ಪಕ್ಷಗಳೇ ಅಧಿಕಾರದಲ್ಲಿವೆ; ಕನ್ನಡ ನಾಡು ಅತಿ ದೇಶಭಕ್ತರ ಬೀಡಾಗಿ ಈ ಸ್ಥಿತಿಗಿಳಿದಿದೆ. ಇದು ಎಂದು ಹೋಗುತ್ತದೆಯೋ! ಹಿಂದೆ ನಮ್ಮಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನ ನಡೆಸಿದವರು ‘ರಾಷ್ಟ್ರೀಯ’ ಪಕ್ಷಗಳಿಂದ ಉಚ್ಚಾಟನೆಗೊಂಡವರು, ಅಥವಾ ಅಲ್ಲಿ ಬಯಸಿದ್ದು ಸಿಕ್ಕಲಿಲ್ಲವೆಂದು ಹತಾಶೆಗೊಳಗಾದವರು. ಅವರಲ್ಲಿ ಕೆಲವರು ಉತ್ತರದ ನಾಯಕರ ಹಿಡಿತಕ್ಕೆ ಹೋಗಲು ತವಕಿಸಿದ್ದೂ ಉಂಟು. ಅಂದರೆ ನಮ್ಮ ನಾಯಕರಿಗೆ ಉತ್ತರಕುಮಾರರೇ ವೀರಾಧಿವೀರರು, ಅವರ ಸೇನಾಧಿಪತ್ಯದಲ್ಲಿಯೇ ತಾವು ಚುನಾವಣೆಯ ಸಮರವನ್ನು ಗೆಲ್ಲುವ ತವಕ. ನಮ್ಮ ಅತ್ಯಂತ ಪ್ರಾಚೀನ ಉಪಲಬ್ಧ ಗ್ರಂಥವಾದ ‘ಕವಿರಾಮಾರ್ಗ’ವು ಕವಿಗಳಿಗಲ್ಲದೆ ಜನರಿಗೂ ಮಾರ್ಗ ತೋರಿಸಿದೆ. ಅದೆಂದರೆ “ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯವಿಲೀನವಿಶದವಿಷಯವಿಶೇಷಂ” ಎಂಬ ಮಾತು. “ಜಗತ್ತಿನ ಭಾಗವಾದ ಕನ್ನಡ ಎಂಬ ವಿಶಾಲ ನಾಡಿನ ಜನಪದರು ವಿಶಿಷ್ಟರು” ಎಂಬುದು. ಕನ್ನಡ ಜನ ಒಟ್ಟು ಜಗತ್ತಿನ ಭಾಗವೇ ಹೊರತು ಮತ್ತಾವುದೋ ಭೂಭಾಗದ ಭಾಗ ಅಲ್ಲ ಎಂಬ ಭಾವನೆ ಅದರದ್ದು. ನಾವು ಆ ಭಾವನೆಯನ್ನು ಮರೆತು ಇನ್ನಾವುದೋ ಭೂಭಾಗದ ತುಂಡು ಎಂಬ ಅಮಲನ್ನು ಹೊತ್ತು ಈ ಸ್ಥಿತಿಗೆ ಬಂದಿದ್ದೇವೆ.
ಸದ್ಯಕ್ಕೆ ಭಾರತದ ಭಾಷಿಕ ವಲಯಗಳು ಬೇರಾಗುವ ಸಂದರ್ಭಗಳು ಕಾಣುತ್ತಿಲ್ಲ. ಹೀಗಾಗಿ ನಾವು ಆಲೋಚಿಸಬೇಕಾದದ್ದು ಪ್ರಸ್ತುತ ಪರಿಸ್ಥಿತಿಯಲ್ಲಿಯೇ ನಮ್ಮತನವನ್ನು ಉಳಿಸಿಕೊಳ್ಳುವ ಮಾರ್ಗ ಯಾವುದು ಎಂಬುದನ್ನು ಕಂಡುಕೊಳ್ಳುವುದು. ಅದಕ್ಕೆ ಅನೇಕ ಮಾರ್ಗಗಳಿವೆ. ಕೇಂದ್ರವು ಯಾವ ಭಾಷೆಯಲ್ಲಿ ವ್ಯವಹರಿಸಬೇಕು ಎಂಬ ಪ್ರಶ್ನೆ ಬಂದಾಗ, ಯಾವುದೇ ಭಾಷೆಯನ್ನು ಬಳಸಿದರೆ ಇತರ ಭಾಷಿಕರಿಗೆ ಅಸಮಾಧಾನವಾಗುವುದು ಸಹಜ ಮತ್ತು ನ್ಯಾಯ. ಇಂಗ್ಲಿಷ್ ಪರಕೀಯಭಾಷೆಯಾದರೂ ಒಂದು ರೀತಿಯ ನಮ್ಮದೇ ಇಂಗ್ಲಿಷ್ ಇಲ್ಲಿ ನೆಲೆಗೊಂಡಿರುವುದರಿಂದಲೂ, ಎಲ್ಲ ಭಾಷಿಕರಿಗೂ ಸಮಾನ ಸುಲಭ-ಕಷ್ಟವಾದುರಿಂದಲೂ ಒಂದು ಹಂತದವರೆಗೆ ಅಂದರೆ ರಾಜ್ಯ-ಕೇಂದ್ರ ಮತ್ತು ರಾಜ್ಯ-ರಾಜ್ಯ ವ್ಯವಹಾರಗಳ ನೆಲೆಗಳಲ್ಲಿ - ಅದನ್ನು ಒಪ್ಪಬಹುದು; ಆದರೆ ಅದು ಪರಕೀಯಭಾಷೆ ಎಂಬ ಕಾರಣ ಅದಕ್ಕೆ ವಿರೋಧವೂ ಇದೆ. ಸಂಸ್ಕೃತವನ್ನೂ ಕೆಲವರು ಮುಂದೊಡ್ಡುತ್ತಾರೆ. ಆದರೆ ಹಿಂದೆ ಬಹುಸಂಖ್ಯಾತರನ್ನು ಕತ್ತಲಲ್ಲಿಡಲು ಬಳಕೆಯಾದ ಭಾಷೆ ಅದು; ಅದನ್ನು ಕಲಿಯುವುದು ಸುಲಭವೂ ಅಲ್ಲ, ಅದರ ಬಗೆಗೆ ಜನಸಾಮಾನ್ಯರಿಗೆ ಯಾವುದೇ ಆತ್ಮೀಯತೆಯಿಲ್ಲ, ಮತ್ತದು ಹತ್ತಿರವೂ ಅಲ್ಲ; ಅಲ್ಲದೆ ಅದು ಆಡುನುಡಿಯಲ್ಲ, ಕೃತಕವಾದ ಗ್ರಾಂಥಿಕ ಭಾಷೆ. ಹೀಗಾಗಿ ಅದನ್ನು ಬಳಸಲು  ಪ್ರಬಲ ವಿರೋಧ ವ್ಯಕ್ತವಾಗುವುದು ಸಹಜ. ಇನ್ನೊದು ಮಾರ್ಗವೂ ಇದೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಅವರ ಮಾತು ನೆನಪಾಗುತ್ತದೆ: ಇಂಗ್ಲಿಷನ್ನು ಆಡಳಿತದಿಂದ ಓಡಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ  ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯನವರು ‘ತಮ್ಮ ಸರ್ಕಾರಕ್ಕೆ ಉತ್ತರ ಪ್ರದೇಶ ಸರ್ಕಾರದಿಂದ ಹಿಂದಿಯಲ್ಲಿ ಪತ್ರ ಬಂದರೆ ಅದಕ್ಕೆ ಉತ್ತರಿಸಲಾಗುವುದಿಲ್ಲ’ ಎಂಬ ಪ್ರಸಂಗ ಅದು. ಆಗ  ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಉತ್ತರಿಸುತ್ತ ತಮಿಳುನಾಡಿನಿಂದ ತಮ್ಮ ಸರ್ಕಾರಕ್ಕೆ ಇಂಗ್ಲಿಷ್‍ನಲ್ಲಿ ಪತ್ರ ಬಂದರೆ ನಾವು ತಮಿಳಿನಲ್ಲಿಯೇ ಮಾರುತ್ತರ ಕಳಿಸುವ ಏರ್ಪಾಟುಮಾಡುತ್ತೇವೆಂದು ಹೇಳಿದರು. ರಾಜ್ಯಮಟ್ಟದಲ್ಲಿನ ಜನಭಾಷೆಯಾದ ಹಿಂದಿಯನ್ನು ಮಾನ್ಯ ಮಾಡುವ ಮನೋಭಾವದೊಂದಿಗೆ, ತನ್ನ ಭಾಷೆಗೆ ನೀಡುವಷ್ಟೇ ಮಾನ್ಯತೆಯನ್ನು ಬೇರೆ ರಾಜ್ಯದ ಜನಭಾಷೆಗೂ ನೀಡುವುದು ತಮ್ಮ ಆಶಯವೇ ಹೊರತು ಪರಭಾಷೆಯಾದ, ದಾಸ್ಯದ ಸಂಕೇತವಾದ, ಇಂಗ್ಲಿಷ್‍ಗೆ ಅಲ್ಲ ಎಂಬ ಭಾವನೆಯನ್ನು ಅದು ಸೂಚಿಸುತ್ತದೆ. ಈ ಉತ್ತರ ರಾಷ್ಟ್ರ ಮಟ್ಟದಲ್ಲಿ ವಿವಿಧ ರಾಜ್ಯಭಾಷೆಗಳಿಗೆ ಕಲ್ಪಿಸಬೇಕಾದ ಸ್ಥಾನದ ಬಗ್ಗೆ ಉಪಯುಕ್ತ ಸುಳಿವು ನೀಡುತ್ತದೆ. ಇಂಡಿಯದ ಎಲ್ಲ ರಾಜ್ಯಗಳಲ್ಲಿ ಎಲ್ಲ ರಾಜ್ಯಭಾಷೆಗಳಲ್ಲಿ ವ್ಯವಹರಿಸುವ ಒಂದು ವ್ಯವಸ್ಥೆ ಇರಬೇಕು. ರಾಜ್ಯರಾಜ್ಯಗಳ ನಡುವೆ ಜನಸಾಮಾನ್ಯರೇನೂ ಪತ್ರವ್ಯವಹಾರ ಮಾಡುವ ಸಂದರ್ಭಗಳು ಇರುವುದಿಲ್ಲ. ಸರ್ಕಾರಗಳ ಮಟ್ಟದಲ್ಲಿ ಬರುವ ಪತ್ರಗಳ ಸಂಖ್ಯೆ ತುಂಬ ಸೀಮಿತವಾಗಿರುವುದರಿಂದ ಅವುಗಳ ಅನುವಾದ ವ್ಯವಸ್ಥೆ ಬಹು ಕಷ್ಟಕರವಾದುದೇನೂ ಆಗುವುದಿಲ್ಲ. ಇನ್ನು ಕೇಂದ್ರ-ರಾಜ್ಯಗಳ ನಡುವಣ ವ್ಯವಹಾರ: ಕೇಂದ್ರ ಸರ್ಕಾರವು ಎಲ್ಲ ರಾಜ್ಯಭಾಷೆಗಳ ಜೊತೆ ಆಯಾ ರಾಜ್ಯಭಾಷೆಯಲ್ಲಿಯೇ ವ್ಯವಹರಿಸಬೇಕು. ಸಂಸತ್ತಿನಲ್ಲಿ ಬೇರೆ ಬೇರೆ ರಾಜ್ಯಗಳ ಸದಸ್ಯರು ತಮ್ಮ ತಮ್ಮ ಭಾಷೆಗಳಲ್ಲಿ ಮಾತಾಡುವ ಅವಕಾಶವಿದ್ದು, ಇತರ ಭಾಷಿಕ ಸದಸ್ಯರಿಗೆ ತಮ್ಮ ಭಾಷೆಯಲ್ಲಿಯೇ ಸಮಾನಾಂತರವಾಗಿ ಅನುವಾದಗೊಂಡು ಕೇಳಿಸುವ ತಾಂತ್ರಿಕ ಸೌಲಭ್ಯವಿರಬೇಕು. ವಿಶ್ವಸಂಸ್ಥೆಯಲ್ಲಿಯೂ ಯೂರೋಪಿಯನ್ ಯೂನಿಯನ್‍ನಲ್ಲಿಯೂ ಈ ವ್ಯವಸ್ಥೆ ಇದೆಯಲ್ಲ. ಜಗತ್ತಿಗೆ ಸಾಫ್ಟ್‌ವೇರ್ ತಂತ್ರಜ್ಞಾನಿಗಳನ್ನು ರಫ್ತುಮಾಡುತ್ತಿರುವ ನಮ್ಮ ದೇಶದಲ್ಲಿ ಇಂತಹ ತಂತ್ರಾಂಶವನ್ನು ರೂಪಿಸುವುದು ಕಷ್ಟವೇನಲ್ಲ, ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿನ ಸಿ-ಡಾಟ್‍ಗೆ ಈ ಕೆಲಸವನ್ನು ವಹಿಸಿದರೆ ‘ಕಣ್ಣುಮುಚ್ಚಿಬಿಚ್ಚುವೈಸು ಬೇಗ’ ಈ  ಕಾರ್ಯ ನನಸಾಗುತ್ತದೆ.
ನಮ್ಮ ರಾಜ್ಯ ಸರ್ಕಾರ ತುರ್ತಾಗಿ ಒಂದು ಕೆಲಸವನ್ನು ಮಾಡಬೇಕು: ಅದೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರುವುದು. ಕುವೆಂಪು ಅವರು ಸೂಚಿಸಿದಂತೆ ‘ಕನ್ನಡ ಮತ್ತು ಇನ್ನೊಂದು ಭಾಷೆ’; ಇದು ಎಲ್ಲ ಭಾಷಿಕ ವಲಯಕ್ಕೂ ಅನ್ವಯವಾಗಬೇಕು. ಆಯಾ ನಾಡಿನಲ್ಲಿ ಆಯಾ ರಾಜ್ಯಭಾಷೆಯೇ ಸಾರ್ವಭೌಮ. ಅದರೊಡನೆ ಇನ್ನೊಂದು ಭಾಷೆ. ಅದು ಇಂಗ್ಲಿಷ್ ಅಥವಾ ಹಿಂದಿಯೇ ಆಗಬೇಕಿಲ್ಲ.   ನಮ್ಮ ಹುಡುಗರು ತಮಿಳನ್ನೋ ತೆಲುಗನ್ನೋ ಬಂಗಾಳಿಯನ್ನೋ ಕಲಿಯಲಿ, ಬಿಡಿ. ಆಗ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯವಾದ ‘ಸಮಾನತೆ’ಗೆ ಒಂದು ಅರ್ಥ ಸಿಕ್ಕುತ್ತದೆ. “ನನ್ನ ಹೊಟ್ಟೆಯೇ ನಿನಗೆ ಅತ್ಯಂತ ಸುರಕ್ಷಿತ ಸ್ಥಳ” ಎಂದು ಕುರಿಗಳಿಗೆ ಹೇಳಿ ಅವುಗಳನ್ನು ನುಂಗುವ ತೋಳದ ಪ್ರವೃತ್ತಿಯಂತೆ ರಾಜ್ಯಗಳ ಸ್ವಾಯತ್ತತೆಯನ್ನು ನುಂಗಿಹಾಕುವ  ರಾಷ್ಟ್ರೀಯತೆ ಬೇಡವೆಂದು ಕುವೆಂಪು ತಮ್ಮೊಂದು ಕವನದಲ್ಲಿ ಸೂಚಿಸುತ್ತಾರೆ. ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ಇಂಡಿಯದಲ್ಲಿ ಉಳಿದರೂ ಗುಲಾಮರಾಗದಂತೆ ನಮ್ಮನ್ನು ನಾವು ಕಾಪಿಟ್ಟುಕೊಳ್ಳಬೇಕು. ಅದಕ್ಕೆ ಬೇಕಾದುದು ಜನರ ಇಚ್ಛಾಶಕ್ತಿ. ಜನಕ್ಕೆ ಆ ಮನೋಭಾವ ಬಂದರೆ ಅಗದು ರಾಜಕೀಯ ಇಚ್ಛಾಶಕ್ತಿಯಾಗುವುದಕ್ಕೆ ಅಡ್ಡಿ ಯಾವುದೂ ಇರುವುದಿಲ್ಲ.
******
                                                                   


No comments: