Wednesday, 10 August 2016

ಅಶ್ವತ್ಥಾಮ



              (ಬಿ.ಎಂ. ಶ್ರೀ. ಅವರ ಹಳೆಗನ್ನಡ ರುದ್ರ ನಾಟಕದ ಹೊಸಗನ್ನಡ ಅನುಸರಣ)


ಅಶ್ವತ್ಥಾಮ




ಮೂಲ:
ಬಿ. ಎಂ. ಶ್ರೀಕಂಠಯ್ಯ


ಹೊಸಗನ್ನಡಕ್ಕೆ:
ಡಾ| ಪಿ. ವಿ. ನಾರಾಯಣ



ಪ್ರಕಾಶಕರು
ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನ
ಬೆಂಗಳೂರು 560 019













Aswatthama: A rendering in modern Kannada prose by Dr. P. V. Narayana of the original verse-drama ‘ASWATTHAMAN’ in Odd Kannada by ‘Sri’ (B. M. Srikantia), an adaptation of Sophocles’ ‘Ajax’ Published by B.M.Sri. Smaraka Pratisthana, 3rd Main Road, N.R. Colony, Bangalore – 560 019



First Impression, 1987: 1000 copies



All Rights Reserved



Price: Rs. 6 – 00






















ಮುನ್ನುಡಿ

       ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ 1984 ರಲ್ಲಿ ವರ್ಷಪೂರ್ತಿ ಬಿ.ಎಂ.ಶ್ರೀ ಕನ್ಮಶತಮಾನೋತ್ಸವದ ಆಚರಣೆಯ ಅಂಗವಾಗಿ ‘ಶ್ರೀಗಂಧ’ ಎಂಬ ಸ್ಮರಣ ಸಂಚಿಕೆಯನ್ನೂ ‘ಶ್ರೀನಿಧಿ’ ಎಂಬ ಸಂಸ್ಮರಣ ಸಂಪುಟವನ್ನೂ ಬಿ.ಎಂ.ಶ್ರೀ. ಅವರ ಬದುಕು-ಬರಹವನ್ನು ಕುರಿತ ಹಲವು ಗ್ರಂಥಗಳನ್ನೂ ಪ್ರಕಟಿಸಿತು. ಪ್ರಾಧ್ಯಾಪಕರಾಗಿ ತಮ್ಮ ಅಧ್ಯಾಪನವೃತ್ತಿಯ ಹೊಣೆಗಾರಿಕೆಯ ಜೊತೆಗೆ ಶ್ರೀಯವರು ಕನ್ನಡ ನಾಡು ನುಡಿಗಳಿಗಾಗಿ ನಾಡಿನಾದ್ಯಂತ ಸಂಚರಿಸಿ ಜನಜಾಗೃತಿಯನ್ನುಂಟುಮಾಡುವುದು, ಸಂಘಗಳನ್ನು ಸ್ಥಾಪಿಸುವುದು, ಮುಂತಾದ ಬಹುಮುಖವಾದ ಸಾಹಿತ್ಯಸೇವಾಕಾರ್ಯನಿರ್ವಹಣೆಗೆ ತಾವು ಜೀವಿಸಿದ ಅರುವತ್ತು ವರ್ಷಗಳ ಬಹು ಭಾಗವನ್ನು ವಿನಿಯೋಗಿಸಿದರು. ಅವರು ಬರೆದದ್ದು ಬಹಳ ಕಡಿಮೆ. ಆದರೆ ಬರೆದದ್ದೆಲ್ಲ ಬೆಲೆಯುಳ್ಳ ಗಟ್ಟಿ ಬರಹ.
       ಶ್ರೀಯವರು ಪ್ರಕಟಿಸಿದ ‘ಇಂಗ್ಲಿಷ್ ಗೀತಗಳು’ ಕನ್ನಡ ಕಾವ್ಯವಾಹಿನಿಗೆ ಹೊಸ ತಿರುವನ್ನು ನೀಡಿ, ನವೋದಯ ಕಾವ್ಯಪ್ರವರ್ತಕ ಎಂದು ಪ್ರಸಿದ್ಧರಾಗಿರುವರಷ್ಟೆ. ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆಗಳು ಅವರ ಅಗಾಧವಾದ ಪಾಂಡಿತ್ಯ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯಿಂದ ಪ್ರಭಾವಿತವಾದ ಅವರ ವಿಮರ್ಶನಪ್ರಜ್ಞೆಗಳಿಗೆ ಶ್ರೇಷ್ಠ ನಿದರ್ಶನಗಳು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಯವರು ಷೇಕ್ಸ್‍ಪಿಯರ್ ನಾಟಕಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಪಡೆದುಕೊಂಡಿದ್ದರು. ಷೇಕ್ಸ್‍ಪಿಯರ್‍ನ ದುರಂತ ಅಥವಾ ರುದ್ರ ನಾಟಕಗಳ ತೌಲನಿಕ ಅಧ್ಯಯನಕ್ಕಾಗಿ ಗ್ರೀಕ್ ರುದ್ರ ನಾಟಕಗಳನ್ನು ಗ್ರೀಕ್ ಭಾಷೆ ಕಲಿತು ಅಧ್ಯಯನಮಾಡಿದ್ದರು; ಸಂಸ್ಕೃತ ನಾಟಕಗಳನ್ನೂ ಅಭ್ಯಾಸಮಾಡಿದ್ದರು.
       ಭಾರತೀಯ ನಾಟಕ ಸಾಹಿತ್ಯದಲ್ಲಿ ‘ಗಂಭೀರ’ ಅಥವಾ ‘ರುದ್ರ’ ನಾಟಕ ಇಲ್ಲದ್ದು ಒಂದು ಲೋಪವೆಂದೇ ಶ್ರೀಯವರಿಗೆ ಕಂಡಿದ್ದಿರಬೇಕು. ಅದು ಇಲ್ಲದ್ದನ್ನು ಸಮರ್ಥಿಸುವ ಮಾತು ಬೇರೆ. ಶ್ರೀಯವರು ಪ್ರಾಚೀನ ಕನ್ನಡ ಕಾವ್ಯವನ್ನೂ ಆಳವಾಗಿ ವ್ಯಾಸಂಗ ಮಾಡಿದ್ದರು. ರನ್ನನ ‘ಗದಾಯುದ್ಧ’ದ ದುರ್ಯೋಧನನಲ್ಲಿ ಪಾಶ್ಚಾತ್ಯ ದುರಂತ ನಾಟಕದ ನಾಯಕನನ್ನು ಗುರುತಿಸಿದರು; ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ದ ರಾವಣನೂ ಅಷ್ಟೆ. (ಅವರು ಇಂಗ್ಲಿಷಿನಲ್ಲಿ Tragic Ravana ಎಂಬ ಲೇಖನವನ್ನೂ ಬರೆದಿದ್ದಾರೆ.) ಕನ್ನಡಿಗರಿಗೆ ದುರಂತ ನಾಟಕದ ಕಲ್ಪನೆಯನ್ನು ತಂದುಕೊಡುವ ಉದ್ದೇಶದಿಂದ ‘ಗದಾಯುದ್ಧ’ವನ್ನು ನಾಟಕರೂಪಕ್ಕೆ ತಿರುಗಿಸಿದರು. ಅನಂತರ, ಸಾಫೋಕ್ಲೀಸ್‍ನ ‘ಅಯಾಸ್’ ರುದ್ರನಾಟಕದ ನಾಯಕನ ವೃತ್ತಾಂತದಲ್ಲಿ ನಮ್ಮ ಮಹಾಭಾರತದ ಅಶ್ವತ್ಥಾಮನ ವೃತ್ತಾಂತದ ಸಾಮ್ಯವನ್ನು ಗುರುತಿಸಿದರು. ಅವರು ಈ ನಾಟಕವನ್ನು ರಚಿಸಿದ ಸಂದರ್ಭವನ್ನು ಡಿ.ವಿ.ಜಿ. ತಾವು ಬಲ್ಲಂತೆ ಒಂದು ಕಡೆ ವಿವರಿಸಿದ್ದಾರೆ: “.. .. ನಾನು ಅವರಿಗಾಗಿ ಸಂಸ್ಕೃತ ಮಹಾಭಾರತದ ದ್ರೋಣ ಪರ್ವ, ಶಲ್ಯ ಪರ್ವ, ಕರ್ಣ ಪರ್ವ, ಸೌಪ್ತಿಕ ಪರ್ವ ಇವುಗಳ ಭಾಗಗಳನ್ನು ಓದುತ್ತಿದ್ದೆ. ಅವರು ನಡುನಡುವೆ ಟಿಪ್ಪಣಿ ಮಾಡುವರು. ಗುರುತು ಮಾಡಿಟ್ಟುಕೊಳ್ಳುವರು. ಇದು ಅವರ ಪ್ರಸಿದ್ಧ ಕೃತಿಯಾದ ‘ಅಶ್ವತ್ಥಾಮನ್’ ನಾಟಕದ ರಚನೆಗೆ ಅವರು ಮಾಡಿಕೊಂಡ ಸಿದ್ಧತೆ.” ಪಾಠಪ್ರವಚನಕ್ಕೆ ಪೂರ್ವಭಾವಿಯಾಗಿ ಅವರು ಮಾಡಿಕೊಳ್ಳುತ್ತಿದ್ದ ಸಿದ್ಧತೆಯನ್ನು ಪ್ರಸ್ತಾವಿಸುತ್ತ, “ಇದು ಹುಟ್ಟು ವಿದ್ವಾಂಸನ ಲಕ್ಷಣ, .. .. ಶ್ರೀಕಂಠಯ್ಯನವರ ತಪಸ್ಸು” ಎಂದಿದ್ದಾರೆ. (‘ಜ್ಞಾಪಕ ಚಿತ್ರಶಾಲೆ’ 3: ‘ಸಾಹಿತ್ಯೋಪಾಸಕರು’ - ಬಿ. ಎಂ. ಶ್ರೀಕಂಠಯ್ಯನವರು; ಪು. 220)
       ‘ಅಶ್ವತ್ಥಾಮನ್’ ಕೇವಲ ರೂಪಾಂತರ (adaptation) ಅಲ್ಲ; ಅದೊಂದು ಪುನಸ್ಸೃಷ್ಟಿ;; ಶ್ರೀಯವರ ಕಾರಯಿತ್ರೀ ಪ್ರತಿಭೆ ಅವರ ವಿದ್ವತ್ತೆಯೊಂದಿಗೆ ಮೇಳವಿಸಿ ಒಂದು ಅಜರಾಮರ ಕೃತಿಯನ್ನು ನಿರ್ಮಾಣಮಾಡಿದೆ. ಅವರದ್ದೇ ಆದ ಈಸ್ಕಿಲಸ್ಸಿನ ‘ಪರ್ಷಿಯನ್ಸ್’ ನಾಟಕದ ಹೊಸಗನ್ನಡ, ನಡುಗನ್ನಡ, ಮಿಶ್ರಕನ್ನಡದ ಭಾಷಾಂತರವನ್ನು ಓದಿದರೆ, ‘ಅಶ್ವತ್ಥಾಮನ್’ ನಾಟದ ಶ್ರೇಷ್ಠತೆ, ವೈಶಿಷ್ಟ್ಯ ಏನು ಎನ್ನುವುದು ಗೊತ್ತಾಗುತ್ತದೆ. ಅವರು ‘ಅಶ್ವತ್ಥಾಮನ್’ ನಾಟಕವನ್ನು ಹೊಸಗನ್ನಡದಲ್ಲಿ ಏಕೆ ಬರೆಯಲಿಲ್ಲ ಎಂಬ ಪ್ರಶ್ನೆಯೆ ಅನಗತ್ಯ ಎಂದು ತೋರುತ್ತದೆ. ಮುದ್ದಣ ‘ರಾಮಾಶ್ವಮೇಧ’, ‘ಅದ್ಭುತ ರಾಮಾಯಣ’ಗಳನ್ನು ಹಳಗನ್ನಡದಲ್ಲಿ ಏಕೆ ಬರೆದ? ಬರೆದ ಭಾಷೆಯಲ್ಲಿ ಅದು ಕಲಾಕೃತಿಯಾಗಿ ಮೂಡಿದೆಯೇ, ಪಾತ್ರಚರ್ಯೆ ನಾಟಕಕ್ರಿಯೆ ಇವುಗಳಿಗೆ ಭಾಷೆ, ಶೈಲಿ ಹೊಂದಿಕೊಂಡಿವೆಯೇ ಇಲ್ಲವೇ ಎನ್ನುವುದು ಮುಖ್ಯ. ಪ್ರಾಚೀನ ವಾತಾವರಣ ಸೃಷ್ಟಿಗೆ ಪೌರಾಣಿಕ ಪಾತ್ರ ನಿರ್ಮಾಣಕ್ಕೆ ಹಳಗನ್ನಡ ಚೆನ್ನಾಗಿ ಹೊಂದಿಕೊಂಡರೆ ಆಕ್ಷೇಪವೇಕೆ? ಶ್ರೀಯವರಿಗೆ ಹಳಗನ್ನಡ ಪಾಂಡಿತ್ಯ ಪ್ರೌಢಿಮೆ ಇದ್ದದ್ದರಿಂದ ಇದು ಸಾಧ್ಯವಾಯಿತು. ‘ಇಂಗ್ಲಿಷ್ ಗೀತ’ಗಳನ್ನು ಅಚ್ಚ ಹೊಸಗನ್ನಡದಲ್ಲಿ ಬರೆದ ಕೈಯೇ ‘ಅಶ್ವತ್ಥಾಮನ್’ ನಾಟಕವನ್ನೂ ಅಷ್ಟೇ ಯಶಸ್ವಿಯಾಗಿ ಹಳಗನ್ನಡದಲ್ಲಿ ಬರೆದಿರುವುದು ಶ್ರೀಯವರ ಸವ್ಯಸಾಚಿತ್ವಕ್ಕೆ ಉಜ್ವಲ ನಿದರ್ಶನ.
‘ಅಶ್ವತ್ಥಾಮನ್’ ನಾಟಕದಲ್ಲಿ ನಾವು ಮೆಚ್ಚಬೇಕಾದ ಇನ್ನೊಂದು ಅಂಶ, ಶ್ರೀಯವರು ಅದರಲ್ಲಿ ಪರಿಣಾಮಕಾರಿಯಾಗಿ ಬಳಸಿರುವ ಹೊಸ ಛಂದಸ್ಸಿನ ವಿವಿಧ ಲಯಗಳ ಯಶಸ್ವೀ ಬಳಕೆ.
       ಇಷ್ಟು ಹೇಳಿದ ಮೇಲೆ, ಜನಸಾಮಾನ್ಯಕ್ಕೂ ವಿದ್ಯಾರ್ಥಿಗಳಿಗೂ ‘ಅಶ್ವತ್ಥಾಮನ್’ ನೀರಿಳಿಯದ ಗಂಟಲಿಗೆ ಕಡುಬು ತುರುಕಿದಂತೆ ಆಗುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಆದ್ದರಿಂದ, ಮೂಲಕೃತಿಯನ್ನು ಓದಬೇಕೆಂಬ ಆಸಕ್ತಿ ಹುಟ್ಟಿಸಿ ಅದಕ್ಕೊಂದು ಪ್ರವೇಶಿಕೆಯನ್ನು ಒದಗಿಸಬೇಕೆಂಬ ಉದ್ದೇಶದಿಂದ ‘ಅಶ್ವತ್ಥಾಮನ್’ ನಾಟಕದ ಹೊಸಗನ್ನಡ ಗದ್ಯಾನುವಾದವನ್ನು ಮಾಡಿಕೊಡಬೇಕೆಂದು ಬಿ.ಎಂ.ಶ್ರೀ. ಜನ್ಮಶತಮಾತೋತ್ಸವ ಸಂದರ್ಭದಲ್ಲಿಯೇ ಡಾ| ಪಿ. ವಿ. ನಾರಾಯಣ ಅವರನ್ನು ಕೇಳಿಕೊಳ್ಳಲಾಗಿತ್ತು. ಅವರು ನಮ್ಮ ಕೋರಿಕೆಯಂತೆ ಅನುವಾದದ ಹಸ್ತಪ್ರತಿಯನ್ನು ಸಿದ್ಧಮಾಡಿಕೊಟ್ಟಿದ್ದರು. ಕಾರಣಾಂತರದಿಂದ ಅದನ್ನು ಆಗ ಪ್ರಕಟಿಸಲಾಗಲಿಲ್ಲ. ಅವರ ಯಥಾವತ್ತಾದ, ಸೊಗಸಾದ ಈ ಅನುವಾದವನ್ನು ಈಗ ಪ್ರಕಟಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, ಪ್ರಕಟನೆಗೆ ಅನುಮತಿ ನೀಡಿದ ಶ್ರೀಯವರ ಮೊಮ್ಮೊಕ್ಕಳು ಡಾ| ಎಸ್. ಜಿ. ಶ್ರೀಕಂಠಯ್ಯ ಅವರಿಗೂ, ತಡವಾಗಿಯಾದರೂ ಪ್ರಕಟಿಸುವ ಕಾರ್ಯದಲ್ಲಿ ಬಹುವಿಧವಾಗಿ ಸಹಕರಿಸಿದ ಡಾ| ಪಿ. ವಿ. ನಾರಾಯಣ ಅವರಿಗೂ ಪ್ರತಿಷ್ಠಾನ ಕೃತಜ್ಞವಾಗಿದೆ.
       ಜನಸಾಮಾನ್ಯವೂ ವಿದ್ಯಾರ್ಥಿಗಳೂ ಈ ಪುಸ್ತಕದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಆಶಿಸುತ್ತೇವೆ.
ಅಕ್ಟೋಬರ್ 10, 1987                                                   ಎಂ. ವಿ. ಸೀತಾರಾಮಯ್ಯ
     ಬೆಂಗಳೂರು                                                                 ಅಧ್ಯಕ್ಷ











ಪೀಠಿಕೆ

      
ಬಿ.ಎಂ.ಶ್ರೀ. ಅವರ ಪ್ರತಿಭೆ ತುಂಬ ಸ್ಪಷ್ಟವಾಗಿ ಅವರ ಬರವಣಿಗೆಗಳಲ್ಲಿ ಮೂಡಿಬಂದಿರುವುದು ಅವರ ರೂಪಾಂತರಗಳಲ್ಲಿ. ಅವರ ‘ಇಂಗ್ಲಿಷ್ ಗೀತಗಳು’ ಸಂಕಲನದಲ್ಲಿರುವ ತುಂಬ ಯಶಸ್ವಿಯೆನ್ನಿಸಿಕೊಂಡ ಭಾಷಾಂತರಗಳೂ ರೂಪಾಂತರಗಳೇ ಎನ್ನಬಹುದು. ‘ಪ್ರಾರ್ಥನೆ’, ‘ಮುದ್ದಿನ ಕುರಿಮರಿ’. ‘ವಸಂತ’, ‘ದುಃಖಸೇತು’, ‘ಕಾರಿಹೆಗ್ಗಡೆಯ ಮಗಳು’, ‘ಮುದಿಯ ರಾಮೇಗೌಡ’ ಮುಂತಾದ ಕವನಗಳೆಲ್ಲ ರೂಪಾಂತರಗಳೇ. ಮೂಲಭಾವನೆ ವ್ಯತ್ಯಾಸಗೊಳ್ಳದಿದ್ದರೂ ಕವನಗಳನ್ನು ಕನ್ನಡಕ್ಕೆ ತರುವಾಗ ಸನ್ನಿವೇಶಗಳನ್ನು ತಕ್ಕಂತೆ ಅಲ್ಲಲ್ಲಿ ಮಾರ್ಪಡಿಸಿಕೊಳ್ಳುವುದು ಶ್ರೀ ಅವರ ರೀತಿ. ‘ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ’ ಎಂಬ ಶ್ರೀಯವರ ಬಯಕೆಯು ವ್ಯಕ್ತವಾಗುವ ಬಗೆ ಇದು.
       ಇಂತಹ ರೂಪಾಂತರಗೊಳಿಸುವ ಕ್ರಿಯೆ ಕವನಗಳಲ್ಲಿ ನಡೆಯುವಷ್ಟು ಸುಲಭವಾಗಿ ದೀರ್ಘ ಸಾಹಿತ್ಯ ಪ್ರಕಾರಗಳಲ್ಲಿ ನಡೆಯುವುದು ಕಷ್ಟ. ಆ ದೃಷ್ಟಿಯಲ್ಲಿ ‘ಅಶ್ವತ್ಥಾಮನ್ ಒಂದು ಅಪೂರ್ವ ಸಾಧನೆ. ಶ್ರೀಯವರ ಮನಸ್ಸನ್ನು ಗಂಭೀರ ನಾಟಕಗಳು ಬಹುವಾಗಿ ಸೆಳೆದಿತ್ತೆಂದು ಕಾಣುತ್ತದೆ. ದುರಂತ ವಸ್ತುಗಳ ಕಾವ್ಯಗಳು ನಮ್ಮಲ್ಲಿಲ್ಲದಿದ್ದರೂ ನಾಗಚಂದ್ರನ ರಾವಣನಲ್ಲಿ ಅಥವಾ ರನ್ನನ ಸುಯೋಧನನಲ್ಲಿ ದುರಂತನಾಯಕನ ಲಕ್ಷಣಗಳನ್ನು ಅವರು ಗುರುತಿಸಿದರು. ತಲೆತುಂಬ ಗಂಭೀರ ನಾಟಕಗಳ ವಿಷಯ ತುಂಬಿಕೊಂಡಿದ್ದ ಅವರು ನಮ್ಮ ಕಾವ್ಯವಸ್ತುಗಳಲ್ಲಿಯ ದುರಂತ ಸನ್ನಿವೇಶಗಳನ್ನು ತಟಕ್ಕನೆ ಗುರುತಿಸಿದರು; ಮೇಲೆ ಅಂತಹ ದುರಂತವಿಲ್ಲದಿದ್ದರೂ ವಸ್ತುವಿನ ಆಳದ ವಿಷಾದವನ್ನು ಗುರುತಿಸಲು ಶ್ರೀ ಅವರಿಗೆ ಸಾಧ್ಯವಾದದ್ದು ಪಾಶ್ಚಾತ್ಯ ಹಾಗೂ ಭಾರತೀಯ ಸಾಹಿತ್ಯ ಪರಂಪರೆಗಳಲ್ಲಿನ ಆಳವಾದ ಅವರ ಪರಿಶ್ರಮದಿಂದ.
       ಅವರು ರಚಿಸಿದ ಮೂರೂ ನಾಟಕಗಳು ಗಂಭಿರ ನಾಟಕಗಳೇ: ‘ಪಾರಸಿಕರು’, ‘ಅಶ್ವತ್ಥಾಮನ್’ ಹಾಗೂ ‘ಗದಾಯುದ್ಧ ನಾಟಕ’ ಅವುಗಳಲ್ಲಿ ಒಂದು ನೇರವಾದ ಭಾಷಾಂತರ, ಮತ್ತೊಂದು ರೂಪಾಂತರ, ಮೂರನೆಯದು ಕಾವ್ಯಸನ್ನಿವೇಶವೊಂದರ ನಾಟಕರೂಪ. ಅವರ ಅನುವಾದಿತ ಕವನಗಳಂತೆಯೇ, ನಾಟಕಗಳಲ್ಲಿಯೂ ಅವರು ತುಂಬ ಸಫಲರಾಗಿರುವುದು ರೂಪಾಂತರದಲ್ಲಿಯೇ ಎಂದರೆ ‘ಅಶ್ವತ್ಥಾಮನ್’ ನಾಟಕದಲ್ಲಿಯೇ.
       ಶ್ರೀಯವರ ವೈಶಿಷ್ಟ್ಯವಿರುವುದು ಪಾಶ್ಚಾತ್ಯ ರಚನೆಗಳ ಭಾರತೀಕರಣ ಅಥವಾ ಕನ್ನಡೀಕರಣದಲ್ಲಿ. ಹಾಗಾಗಿಯೇ ‘ಏಜಾಕ್ಸ್’ ಅನ್ನು ರೂಪಾಂತರಿಸಿದರೇ ವಿನಾ, ಸಾಫೋಕ್ಲೀಸನ ಅತ್ಯುತ್ತಮ ಕೃತಿ ಎನ್ನಿಸಿಕೊಡ ‘ಈಡಿಪಸ್ ದೊರೆ’ ನಾಟಕವನ್ನಲ್ಲ. ಅದಕ್ಕೆ ಪ್ರಾಯಶಃ ಕಾರಣ, ಶ್ರೀಯವರ ಒಳನೋಟ ಏಜಾಕ್ಸ್ ನಾಟಕದ ವಸ್ತುವಿಗೆ ಸಂವಾದಿಯಾದ ವಸ್ತುವನ್ನು ಮಹಾಭಾರತದ ಸೌಪ್ತಿಕಪರ್ವದ ಅಶ್ವತ್ಥಾಮ ಪ್ರಸಂಗದಲ್ಲಿ ಗುರುತಿಸಿದ್ದು; ಏಜಾಕ್ಸ್‍ನ ಮನೋಭಾವ ಅಶ್ವತ್ಥಾಮನ ಮನೋಭಾವದಲ್ಲಿ ಪಡಿಯಚ್ಚಿನಂತೆ ಕಾಣಿಸಿದ್ದು; ಏಜಾಕ್ಸ್ ನಾಟಕದಲ್ಲಿಯಂತೆ ಅಶ್ವತ್ಥಾಮನ ಪ್ರಸಂಗದಲ್ಲಿ ದೈವ-ಮಾನುಷ ಸಂಘರ್ಷವನ್ನು ರೂಪಿಸಬಹುದಾದ ಸಾಧ್ಯತೆಯನ್ನು ಗಮನಿಸಿದ್ದು; ಹಾಗೂ ಶ್ರೀಯವರು ಈ ವಿಷಯದಲ್ಲಿ ಗ್ರೀಕ್ ಹಾಗೂ ಭಾರತೀಯ ನಂಬಿಕೆಗಳಲ್ಲಿನ ಸಾಮ್ಯವನ್ನು ಕಂಡದ್ದು.
       ಅಶ್ವತ್ಥಾಮನ್’ ಸಾಫೋಕ್ಲೀಸ್‍ನ ‘ಏಜಾಕ್ಸ್’ ಅಥವಾ ‘ಅಯಾಸ್’ನ ರೂಪಾಂತರವೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಪಾತ್ರಗಳು ಹಾಗೂ ಸನ್ನಿವೇಶಗಳ ಹೊರ ಆವರಣದ ಮಟ್ಟಿಗೆ ಇದು ನಿಜ. ಆದರೆ ನಾಟಕದ ಸತ್ತ್ವ ಅನುವಾದವೇ. ಪೌರುಷ-ಸ್ವಾಭಿಮಾನಗಳು ಒಂದು ಮಿತಿಯಲ್ಲಿದ್ದರೆ ಅವುಗಳ ಬಗ್ಗೆ ನಮ್ಮ ಸಂಪ್ರದಾಯ ಗೌರವಿಸುತ್ತದೆಯೇ ಹೊರತು, ಅವು ದೈವವನ್ನೇ ಪ್ರಶ್ನಿಸುವ ಮಟ್ಟಕ್ಕೆ ಹೋದಾಗ ಅಲ್ಲ; ದೈವವನ್ನು ಮೀರಿ, ಅದರ ಇರಾದೆಗೆ ಭಿನ್ನವಾಗಿ, ಪೌರುಷ ಏನನ್ನೋ ಸಾಧಿಸಲು ಕೈಹಾಕಿದಾಗ ದುರಂತ ಕಟ್ಟಿಟ್ಟದ್ದು; ವಿಧಿನಿಯಮ ಅನುಲ್ಲಂಘನೀಯ, ದುರ್ಭೇದ್ಯ ಎಂಬ ಸಾಫೋಕ್ಲೀಸ್‍ನ ಮನೋದೃಷ್ಟಿ ಇಡಿಯಾಗಿ ‘ಅಶ್ವತ್ಥಾಮನ್’ನಲ್ಲಿಯೂ ಮೂಡಿಬಂದಿದೆ. ಈ ದೃಷ್ಟಿಯು ಅನುವಾದಕ್ಕೆ ಎಷ್ಟು ಬೇಕೋ ಅಷ್ಟನ್ನು ಶ್ರೀಯವರು ಮೂಲಕತೆಯ ಘಟನಾವಿನ್ಯಾಸದಲ್ಲಿಯೂ ವ್ಯತ್ಯಾಸಮಾಡಿಕೊಂಡಿದ್ದಾರೆ, ಒಂದು ದೃಷ್ಟಿಯಿಂದ ಅಶ್ವತ್ಥಾಮನ ಕತೆ ‘ಏಜಾಕ್ಸ್’ ನಾಟಕದ ವಿನ್ಯಾಸಕ್ಕೆ ರೂಪಾಂತರಗೊಂಡಿದೆ ಎನ್ನಬಹುದು. ಶ್ರೀಯವರಿಗೆ ಬೇಕಾಗಿದ್ದದ್ದು ‘ಏಜಾಕ್ಸ್’ ನಾಟಕ ಕನ್ನಡಕ್ಕೆ ಬರುವುದು; ಇಲ್ಲಿನ ದೇಶೀ ಉಡುಪಿನಲ್ಲಿ ಬರುವುದು. ಹಾಗಾಗಿ ಆ ನಾಟಕಕ್ಕೆ ಅನುಗುಣವಾಗಿ ವಸ್ತುವಿನ್ಯಾಸದೊಡನೆ, ಪಾತ್ರಗಳ ಕಲ್ಪನೆಯೂ ರೂಪಾಂತರಗೊಂಡಿದೆ. ಕೃಷ್ಣ, ಏಕಲವ್ಯ, ಭಾರ್ಗವಿ - ಇಂತಹ ಪಾತ್ರಗಳು ‘ಅಶ್ವತ್ಥಾಮನ್’ನಲ್ಲಿ ರೂಪುಗೊಂಡಿರುವ ರೀತಿಯನ್ನು ಗಮನಿಸಬಹುದು.
       ಈ ಕಾರಣದಿಂದ ಶ್ರೀಯವರು ಮಹಾಭಾರತದ ಸೌಪ್ತಿಕ ಪರ್ವದ ಅಶ್ವತ್ಥಾಮ ಪ್ರಸಂಗವನ್ನು ಮಾರ್ಪಡಿಸಿಕೊಂಡು, ‘ಏಜಾಕ್ಸ್’ನ ಘಟನೆಗಳಿಗೆ ಸಂವಾದಿಯಾಗುವ ಘಟನೆಗಳನ್ನು ಸೃಷ್ಟಿಸಿಕೊಂಡು ಮಹಾಭಾರತದಲ್ಲಿನ ಪಾತ್ರಗಳನ್ನು ‘ಏಜಾಕ್ಸ್’ ನಾಟಕದ ಪಾತ್ರಗಳ ಪಡಿಯಚ್ಚಿನಲ್ಲಿ ಹಾಕಿ, ಅಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಭಾರತದಲ್ಲಿಯ ಒಂದೊಂದು ಪಾತ್ರವನ್ನು ಹುಡುಕಿ ಬದಲಾಗಿ ಇಟ್ಟು, ಏಜಾಕ್ಸ್‍ನ ಸಲಾಮಿಸ್ ಪ್ರೇಮಕ್ಕೆ  ಬದಲು ಅಶ್ವತ್ಥಾಮನ ಕನ್ನಡ ನಾಡ ಪ್ರೇಮವನ್ನು ಕಲ್ಪಿಸಿಕೊಂಡು, ಅಲ್ಲಲ್ಲಿ ಬೇಕೆನಿಸಿದಷ್ಟು ಮಾತ್ರ ಸಂಭಾಷಣೆಯ ವ್ಯತ್ಯಾಸವನ್ನು ಮಾಡಿಕೊಂಡರೂ, ಬಹು ಮುಖ್ಯವಾದ ಸಂಭಾಷಣೆಗಳನ್ನೆಲ್ಲ (ಎಂದರೆ ಎಲ್ಲೆಲ್ಲಿ ಸಾಫೋಕ್ಲೀಸ್‍ನ ದುರಂತ ದೃಷ್ಟಿ ವ್ಯಕ್ತವಾಗಿದೆಯೋ ಅಂತಹ ಕಡೆಗಳಲ್ಲೆಲ್ಲ) ನೇರವಾಗಿ ಅನುವಾದವನ್ನೇ ಮಾಡಿಬಿಟ್ಟಿದ್ದಾರೆ. ವಿವರವಾದ ಹೋಲಿಕೆಗೆ ನೋಡಿ: ಪ್ರಧಾನ್ ಗುರುದತ್ತ; ‘ಅನುವಾದಕರಾಗಿ ಬಿ.ಎಂ.ಶ್ರೀ’  - ಶ್ರೀನಿಧಿ (ಬಿ.ಎಂ.ಶ್ರೀ. ಜನ್ಮಶತಮಾನೋತ್ಸವ ನೆನಪಿನ ಸಂಪುಟ), ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, 1984)
       ಈ ರೀತಿ ‘ಅಶ್ವತ್ಥಾಮನ್’ ಅನ್ನು ‘ಏಜಾಕ್ಸ್’ನ ಪ್ರತಿಬಿಂಬವನ್ನಾಗಿ ಮಾಡಲು ಹೊರಟ ದೃಢನಿಶ್ಚಯದ ಕಾರಣದಿಂದಲೇ ಒಂದೆರಡು ಕಡೆ ಅಸಮರ್ಪಕವೆನ್ನಬಹುದಾದ ಅಂಶಗಳು ಬಂದಿವೆ. ಉದಾಹರಣೆಗೆ, ಅಶ್ವತ್ಥಾಮ ಭಾರ್ಗವಿಯನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಬಹುದು. ಭಾರ್ಗವಿಯು ಮೂಲದಲ್ಲಿನ ಟೆಕ್ಮೆಸ್ಸಳಿಗೆ ಬದಲಾಗಿ ಬಂದಿರುವ ಪಾತ್ರ. ಟೆಕ್ಮೆಸ್ಸಳು ಏಜಾಕ್ಸ್ ಗೆಲವಿನಿಂದಾಗಿ ಪಡೆದ ಹೆಣ್ಣು, ಹೆಂಡತಿ ಕೂಡ ಅಲ್ಲ. ಹಾಗಾಗಿ ಅವಳನ್ನು ಏಜಾಕ್ಸ್ ಗದರಿಸುತ್ತಾನೆ, ಬಾಯಿ ಬಡಿಯುತ್ತಾನೆ, ತಿರಸ್ಕಾರದಿಂದ ಕಾಣುತ್ತಾನೆ. ಆದರೆ   ತಬ್ಬಲಿಯಾದ   ತನ್ನನ್ನು ಸಾಕಿ ಬೆಳಸಿ, ತನ್ನಲ್ಲೇ ಜೀವವಿರಿಸಿಕೊಂಡ  ಭಾರ್ಗವಿಯನ್ನು ಅಶ್ವತ್ಥಾಮ ಅದೇ ತಿರಸ್ಕಾರ, ಗದರಿಕೆಗಳಿಂದ ನಡೆಸಿಕೊಳ್ಳುವುದು  ಅಶ್ವತ್ಥಾಮನ ಘನತೆಯನ್ನು ಕುಂದಿಸಿಬಿಡುತ್ತದೆ. ಹಾಗೆಯೇ ಅಶ್ವತ್ಥಾಮ ಹೋದರೆ, ಪಾಂಡವರ ಸೈನಿಕರು ತನ್ನನ್ನು ಎಳೆದಾಡಿ ಅವಮಾನ ಮಾಡಬಹುದೆಂಬ ಮುದುಕಿ ಭಾರ್ಗವಿಯ ಭಯ. ಯೌವನೆಯಾದ ಟೆಕ್ಮೆಸ್ಸಳಿಗೆ ಇರಬಹುದಾದ ಭಯವನ್ನೇ ವ್ಯತ್ಯಾಸವಿಲ್ಲದೆ ಭಾರ್ಗವಿ ಅನುಭವಿಸುತ್ತಾಳೆಂಬ ಕಲ್ಪನೆಯೂ ಸರಿಯಲ್ಲವೇನೋ ಎನಿಸುತ್ತದೆ.
       ಆದರೆ ಅಶ್ವತ್ಥಾಮನ ಅನುಯಾಯಿಗಳಾದ ಕನ್ನಡ ಬೇಡರ ಕಲ್ಪನೆ, ಕೊನೆಗಾಲದಲ್ಲಿ ಅಶ್ವತ್ಥಾಮ ತನ್ನ ತಾಯ್ನಾಡಿನ ಬಗ್ಗೆ ಹಂಬಲಿಸುವ ರೀತಿ ಇವು ಶ್ರೀಯವರ ಹೃದಯದಾಳದ ಕನ್ನಡನಾಡಿನ ಪ್ರೇಮವನ್ನು ಹೊಮ್ಮಿಸಿದರೂ (ಪಂಪನ ಬನವಾಸಿಯ  ಪ್ರೇಮ ಶ್ರೀಯವರ ಮೇಲೆ ಆಗಿದ್ದರೂ) ಸಲಾಮಿಸ್‍ನ ಬಗ್ಗೆ  ಏಜಾಕ್ಸ್  ತೋರುವ  ಪ್ರೇಮಕ್ಕೆ  ಸಂವಾದಿಯಾಗಿ  ಬಂದಿದ್ದು ಅತ್ಯಂತ ಸಹಜವಾಗಿ ನಾಟಕಕ್ಕೆ ಹೊಂದಿಕೊಂಡಿದೆ. ಈ ರೀತಿಯಲ್ಲಿ ಶ್ರೀಯವರು ‘ಇವಳ ಸೊಬಗನವಳು ತೊಟ್ಟು’ ಅವಳ ತೊಡಿಗೆ ಇವಳಿಗಿಟ್ಟು’ ರೂಪಾಂತರಿಸುವ ಬಗೆ ಅನ್ಯಾದೃಶವೆನಿಸುತ್ತದೆ.
 ‘ಅಶ್ವತ್ಥಾಮನ್’ ನಾಟಕದಲ್ಲಿ ಶ್ರೀಯವರು ಬಳಸುವ ಹಳಗನ್ನಡದ ಬಗ್ಗೆ ಒಂದೆರಡು ಮಾತು. ಅವರ ಸಂಭಾಷಣಾರಚನೆ ತುಂಬ ಬಿಗಿಯಾದದ್ದು, ಪದಗಳ ಜೋಡಣೆ ಅಚ್ಚುಕಟ್ಟಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಳಗನ್ನಡ ಬೇಕಾಗಿತ್ತೇ? ‘ಇಂಗ್ಲಿಷ್ ಗೀತ’ಗಳಲ್ಲಿನ ಅತ್ಯುತ್ತಮ ರಚನೆಗಳು ಸರಳವಾದ ಹೊಸಗನ್ನಡವಾಗಿದ್ದರೂ, ಅವರ ನಾಟಕಗಳ ಭಾಷೆ ಹಾಗೂ ಸ್ವತಂತ್ರ ರಚನೆಗಳ ಭಾಷೆ ಹಳಗನ್ನಡವಾಗಲು ವಿಶೇಷ ಕಾರಣಗಳಿವೆಯೇ? ಕನ್ನಡ ಸಾಹಿತ್ಯದ ಆಧುನಿಕತ್ವಕ್ಕೆ ಹೆಣಗಿದ ಶ್ರೀ ನಾಟಕಗಳ ಭಾಷೆಯನ್ನು ಮಾತ್ರ ಏಕೆ ಹಳಗನ್ನಡವಾಗಿಸುತ್ತಾರೆ? ಛಂದಸ್ಸಿನ ‘ಗದಾಯುದ್ಧ’ದ ಪ್ರಭಾವದಿಂದ, ಅದನ್ನು ನಾಟಕರೂಪಕ್ಕಿಳಿಸುವಾಗ ಪಡೆದ ಅನುಭವದಿಂದ ಇನ್ನೆರಡು ನಾಟಕಗಳಲ್ಲಿಯೂ ಹಳಗನ್ನಡ ಬಳಸಿದರೇ? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ನಾಟಕದ ವಸ್ತು ಸಮಕಾಲೀನವಾಗಿರದುದರಿಂದ, ಹಳಗನ್ನಡವು ದೂರವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, ದುರಂತ ನಾಟಕದ ಗಾಂಭೀರ್ಯಕ್ಕೆ ಹೊಸಗನ್ನಡಕ್ಕಿಂತಲೂ ಹಳಗನ್ನಡವೇ ಹೆಚ್ಚು ಸೂಕ್ತವಾದುದು ಎಂದು ಭಾವಿಸುತ್ತಾರೆ. ಆದರೆ ಇಲ್ಲಿ ಮೂಲಭೂತ ಪ್ರಶ್ನೆಯೊಂದು ಏಳುತ್ತದೆ. ಒಂದು ಕಾಲದ ಭಾಷೆಗಾಗಲೀ, ಒಂದು ಪಂಗಡದ ಭಾಷೆಗಾಗಲೀ ಅಥವಾ ಯಾವುದೊಂದು ಭಾಷೆಗಾಗಲೀ ಮಿಕ್ಕವುಗಳಿಗಿಂತ ವಿಶೇಷ ಶಕ್ತಿ ಇರಲು ಸಾಧ್ತವೇ? ಹಾಗೆಂದು ಒಪ್ಪಿಕೊಂಡುಬಿಟ್ಟರೆ ಆ ಭಾಷೆ ಈ ಭಾಷೆಗಿಂತ ಉತ್ತಮ, ಹೆಚ್ಚು ಶಕ್ತ; ಇಂತಹ ಪಂಗಡದವರ ಭಾಷೆ ಬೇರೆ ಪಂಗಡಗಳವರ ಭಾಷೆಗಿಂತ ಪರಿಣಾಮಕಾರಿ ಎಂದು ವಿಂಗಡಿಸಿಬಿಡಬಹುದಲ್ಲವೇ? ಭಾಷೆಯ ಶಕ್ತಿ ಬಳಸುವವನ ಸಾಮರ್ಥ್ಯಕ್ಕೆ ಅನುಗುಣವಾಗಿರುವುದಲ್ಲವೇ? ಅದು ಉತ್ತಮ, ಇದು ಶಕ್ತ ಎಂಬ ಭಾವನೆಯು ನಮ್ಮ ಕಲ್ಪನೆ, ಪ್ರಭಾವ ಇವುಗಳಿಗೆ ಸಂಬಂಧಿಸಿದುದೇ ಹೊರತು ಭಾಷೆಯ ಸಾಮಥ್ರ್ಯಕ್ಕೆ ಸಂಬಂಧಿಸಿದ್ದಲ್ಲವೆಂದು ನನ್ನಂಥವನಿಗೆ ತೋಚುತ್ತದೆ. ಇಲ್ಲದಿದ್ದರೆ ಒಂದು ಭಾಷೆ ಮತ್ತೊಂದಕ್ಕಿಂತ ಶಾಶ್ವತವಾಗಿ ಉತ್ತಮವೋ ಕೀಳೋ ಆಗಿರುತ್ತದೆಂಬ ಮೂಲಭೂತ ವ್ಯತ್ಯಾಸದ ಸಿದ್ಧಾಂತವನ್ನು ನಾವು ಒಪ್ಪಬೇಕಾಗುತ್ತದೆ.
ಏನಾದರಾಗಲಿ, ‘ಅಶ್ವತ್ಥಾಮನ್’ ನಾಟಕದ ಭಾಷೆ ಈಗಿನ ಓದುಗರಿಗೆ, ಪ್ರೇಕ್ಷಕರಿಗೆ ಅರ್ಥಮಾಡಿಕೊಳ್ಳಲು ಕಷ್ಟ. ಒಂದು ಕೃತಿ ಭಾಷೆಯ ಮಟ್ಟದಲ್ಲಿಯೇ ಕಷ್ಟ ಕೊಡುವುದನ್ನು ತಪ್ಪಿಸಲು ಸಾಧ್ಯ. ಹೀಗಾಗಿ ‘ಅಶ್ವತ್ಥಾಮನ್’ ನಾಟಕವನ್ನು ಹೊಸಗನ್ನಡದಲ್ಲಿ ಅನುಸರಿಸಿ ಬರೆಯಲು ಬಿ.ಎಂ.ಶ್ರೀ. ಪ್ರತಿಷ್ಠಾನ ಕೇಳಿದಾಗ ಒಪ್ಪಿಕೊಂಡು ಹಾಗೆ ಮಾಡಿದ್ದೇನೆ. ಸಂಭಾಷಣೆಗಳು ಗದ್ಯದಲ್ಲಿವೆ, ಮೇಳದವರ ಹಾಡುಗಳ ಮಾತ್ರ ಛಂದೋಬದ್ಧವಾಗಿಯೇ ರಚಿತವಾಗಿವೆ. ರಂಗದ ಮೇಲೆ ಪ್ರದರ್ಶಿಸುವವರಿಗೆ ಇದರಿಂದ ಅನುಕೂಲವೆಂಬ ಕಾರಣಕ್ಕಾಗಿ ಹೀಗೆ ಮಾಡಲಾಗಿದೆ. ಈ ಅನುಸರಣವನ್ನು ಸಿದ್ಧಪಡಿಸಲು ನನಗೆ ಹೇಳಿದ ಪ್ರೊ| ಎಂ. ವಿ. ಸೀತಾರಾಮಯ್ಯನವರಿಗೂ, ಇದರ ಪ್ರಕಟನೆಗೆ ದಯವಿಟ್ಟು ಅನುಮತಿ ನೀಡಿದ ಡಾ| ಎಸ್. ಜಿ. ಶ್ರೀಕಂಠಯ್ಯನವರಿಗೂ, ಇದನ್ನು ಚೆನ್ನಾಗಿ ಮುದ್ರಿಸಿರುವ ಲಕ್ಷ್ಮೀ ಪ್ರಿಂಟರ್ಸ್ ಸಿಬ್ಬಂದಿಗೂ ನನ್ನ ಕೃತಜ್ಞತೆಯ ವಂದನೆಗಳು.
                                          - ಪಿ. ವಿ. ನಾರಾಯಣ

ಅಭ್ಯಾಸಕ್ಕೆ ಗ್ರಂಥಸೂಚಿ
       ಅಶ್ವತ್ಥಾಮನ್                               - ವಿ. ಸೀತಾರಾಮಯ್ಯ
ಶ್ರೀನಿಧಿ                                   - ಬಿ.ಎಂ.ಶ್ರೀ ಜನ್ಮಶತಮಾನೋತ್ಸವ ನೆನಪಿನ ಸಂಪುಟ
       ಸಂಭಾವನೆ                                - ಬಿ.ಎಂ.ಶ್ರೀ. ಗೌರವ ಗ್ರಂಥ
       ಗ್ರೀಕ್ ರಂಗಭೂಮಿ ಮತ್ತು ನಾಟಕ                ಎಲ್. ಎಸ್. ಶೇಷಗಿರಿ ರಾವ್
       ಪಾಶ್ಚಾತ್ಯ ಗಂಭೀರ ನಾಟಕಗಳು                 - ಎಸ್ .ವಿ. ರಂಗಣ್ಣ
ಶ್ರೀ ಸಾಹಿತ್ಯ (ವಿ. ಸೀ. ಅವರ ‘ಪರಿಚಯ-ಕಾಣಿಕೆ’ ಲೇಖನ)
ಏಜಾಕ್ಸ್                                 - (ಅನು) ಎಸ್ ನಾರಾಯಣ ಶೆಟ್ಟಿ
ಅಯಾಸ್                                - (ಅನು) ಎಚ್. ಎಂ. ಚನ್ನಯ್ಯ












ಅಶ್ವತ್ಥಾಮ
ಎಂಬ ರುದ್ರ ನಾಟಕ

(ಗ್ರೀಕ್ ಮಹಾಕವಿ ಸಾಫೋಕ್ಲೀಸ್‍ನ ‘ಏಜಾಕ್ಸ್’ ಎಂಬ ರುದ್ರ ನಾಟಕವನ್ನು ಆಶ್ರಯಿಸಿ, ಮಹಾಭಾರತದ ಸೌಪ್ತಿಕ ಪರ್ವದ ಕತೆಯನ್ನು ಅದರೊಡನೆ ಹೊಂದಿಸಿಕೊಂಡು, ಈ ನಾಟಕವನ್ನು ರಚಿಸಿರುತ್ತದೆ. ಇದರಲ್ಲಿ ದ್ರೋಣನ ತಾಯಿ ಭಾರ್ಗವಿ ಪರಶುರಾಮನ ತಂಗಿಯೆಂದೂ, ದ್ರೋಣಾಶ್ವತ್ಥಾಮರು ಕನ್ನಡ ನಾಡಿನ ಬನವಾಸಿ ಪ್ರಾಂತದಿಂದ ಕೌರವನಾಸ್ಥಾನಕ್ಕೆ ಹೋಗಿ ಸೇರಿದರೆಂದೂ, ಇದೇ ಪ್ರಾಂತಕ್ಕೆ ಸೇರಿದ ಏಕಲವ್ಯನು ತನ್ನ ಗುರುಗಳ ಬೆಂಬಲವಾಗಿ ತನ್ನ ಬೇಡರ ಸೈನ್ಯವನ್ನು ತೆಗೆದುಕೊಂಡು ಹೋಗಿ ಭಾರತ ಯುದ್ಧದಲ್ಲಿ ಕಾದಿದನೆಂದೂ ಕಲ್ಪಿಸಿಕೊಂಡಿದೆ. ಈ ಬೇಡರೇ ಈ ನಾಟಕದಲ್ಲಿ ಮೇಳದವರು. ಶ್ರೀ)





ಪಾತ್ರಗಳು
ರುದ್ರ
ಕೃಷ್ಣ
ಅಶ್ವತ್ಥಾಮ
ಭಾರ್ಗವಿ
ರುದ್ರಶಕ್ತಿ
ದೂತ
ಏಕಲವ್ಯ
ಭೀಮ
ಕನ್ನಡ ಬೇಡರ ಮೇಳ







ಅಶ್ವತ್ಥಾಮ
(ಕುರುಕ್ಷೇತ್ರದಲ್ಲಿ ಅಶ್ವತ್ಥಾಮನ ಬಿಡಾರದ ಮುಂದೆ ರುದ್ರ, ಹೆಜ್ಜೆಯ ಗುರುತುಗಳನ್ನು ಹುಡುಕುತ್ತ ಕೃಷ್ಣ ಬರುತ್ತಾರೆ)
ರುದ್ರ          ವಾಸುದೇವ!
ಕೃಷ್ಣ          ಭಗವಾನ್!
ರುದ್ರ          ಯಾವಾಗಲೂ ನೀನು ಧರ್ಮದ್ರೋಹಿಗಳನ್ನು ಸದೆಬಡಿಯುವ ವ್ರತ ತೊಟ್ಟು ಹಾಗೇ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಈಗ ಅಶ್ವತ್ಥಾಮನಿಂದ ಬೀಡಿನ ಕೊನೆಗೆ ಬಂದು, ಹೊಸ ಹೆಜ್ಜೆಗಳನ್ನಳೆಯುತ್ತ, ಇಣುಕಿಣಿಕಿ, ಒಳಗಿದ್ದಾನೋ ಇಲ್ಲವೋ ಎಂದು ವಿಚಾರಿಸುತ್ತ ಅದೇನನ್ನು ಮಾಡುತ್ತಿರುವೆ? ಬೇಟೆ ನಾಯಿಯೂ ವಾಸನೆ ಹಿಡಿದು ಇದೇ ರೀತಿ ಬರುವುದು! ಏನು ಕೆಲಸ, ನನಗೆ ತಿಳಿಸು, ನೀನು ನನಗೆ ಪ್ರಿಯನಾದವನು.
ಕೃಷ್ಣ          ನನ್ನೊಡೆಯ, ನನ್ನ ಪರಮ ಪ್ರೇಮಿ ದೇವತೆಯೇ, ಓ ರುದ್ರ, ನಿನ್ನಾತ್ಮವೇ ನನ್ನುಸಿರು; ಜಯಭೇರಿ ನಿನ್ನ ದನಿ. ನಿನ್ನನ್ನು ಕೇಳದೆ ನಾ ಮಾಡಿದ ಕೆಲಸ ಯಾವುದಾದರೂ ಉಂಟೆ? ಕೇಳು: ಈ ರಾತ್ರಿ ಅದ್ಭುತವಾದ ಘಟನೆಯೊಂದು ನಡೆಯಿತು. ಮಲಗಿದ್ದ ಸೈನ್ಯವೆಲ್ಲ ಮಲಗಿದ್ದಂತೆಯೇ ಸತ್ತಿತ್ತು. ಭೂತ ಹಾಯ್ದಿರಬೇಕು ಎದು ಕೆಲವರು ಹೇಳಿದರೆ, ಮತ್ಸರದ ಕೌರವನ ಪ್ರೇತದ ಕೆಲಸವಿದು ಎಂದು ಮತ್ತೆ ಕೆಲವರು. ಹಲವು ಬಗೆಯ ಕಳವಳ. ಯಾರಿಗೂ ಇದೇ ಎಂದು ತಿಳಿಯದು. ಇದರ ತಳವನ್ನು ಹುಡುಕಲು ಬೆದಕುತ್ತಿದ್ದಾಗ, ಕಾವಲ ಭಟನೊಬ್ಬ ನನ್ನನ್ನು ಕೂಗಿ, ನಡುಗುತ್ತ, ‘ಅಮ್ಮಮ್ಮ, ಭೈರವರೂಪ! ಆ ಕಡೆಯೇ! ರಕ್ತಾಭಿಷೇಕ! ಅಶ್ವತ್ತಾಮನನ್ನೇ ಹೋಲುತ್ತಾನೆ, ಅಗೋ ಹೋಗುತ್ತಿದ್ದಾನೆ’ ಎಂದ. ತಕ್ಷಣವೇ ಹಿಂಬಾಲಿಸಿದೆ. ಒಮ್ಮೆ ಹೆಜ್ಜೆ ಕಂಡರೆ, ಮತ್ತೊಮ್ಮೆ ಕಾಣಿಸದು. ಸ್ವಾಮಿ, ನಿನ್ನ ದರ್ಶನವಾಯ್ತು; ಇನ್ನು ನನಗೆ ಜಯವೇ ಸರಿ. ಈ ಬೇಟೆ ಹಣ್ಣೋ ಕಾಯೋ!
ರುದ್ರ          ಹಣ್ಣೇ, ಅವನದೇ ಈ ಕೆಲಸ; ಒಳಗಿದ್ದಾನೆ.
ಕೃಷ್ಣ          ಏಕೆ ಕೈಯಿಟ್ಟನೋ ಇಂತಹ ಘೋರ ಕೆಲಸಕ್ಕೆ!
ರುದ್ರ       ಕ್ರೋಧಾತ್ಮಪರವಶನಾಗಿ. ತನ್ನ ದೊರೆಯ ಕೊಲೆಯಿಂದ ಮಾನಭಂಗಕ್ಕೆ ಕನಲಿ ಪಾಂಡವಧ್ವಂಸವನ್ನು ಮಾಡಿ ಮೆಚ್ಚಿಸುತ್ತೇನೆ ಎಂದು ತನ್ನ ಪ್ರಿಯತಮಸ್ವಾಮಿಯ ಕೈಮುಟ್ಟಿ ಬಂದ.
ಕೃಷ್ಣ          ಮಲಗಿದ್ದ ವೀರರನ್ನು ಕೊಲ್ಲುವುದೇನು? ಅದರಲ್ಲೂ ಪಶುಗಳನ್ನು, ಹೆಂಗಸರನ್ನು, ಮಕ್ಕಳನ್ನು?
ರುದ್ರ          ತಿವಿತಿವಿದು, ನಿಮ್ಮನ್ನೆಲ್ಲ ಕೊಂದೆ ಎಂದೇ ಅವನು ಎಣಿಸಿದ್ದಾನೆ.
ಕೃಷ್ಣ          ಆ ರೌದ್ರ ಖಡ್ಗದಿಂದ ನಾವು ಹೇಗೆ ಬದುಕಿ ಪಾರಾದೆವೋ! ಆ ಕೊಲೆಯ ಕೈಯನ್ನು ತಡೆದವರು ಯಾರು?
ರುದ್ರ          ಹೇಳುತ್ತೇನೆ, ಕೇಳು: ಸೂರ್ಯನೊಡನೆ ಕೌರವನೂ ಮುಳುಗಿದಾಗ, ದೀರ್ಘಕಾಲ ಅವನ ಪಕ್ಕದಲ್ಲಿಯೇ ಕುಳಿತಿದ್ದು, ದುಃಖಪ್ರವಾಹವನ್ನೇ ನುಂಗಿಕೊಂಡು, ತನ್ನ ಪ್ರೀತಿಯ ಸ್ವಾಮಿಗೆ ಕೊನೆಯ ಬಾರಿಗೆ ಕಣ್ಮುಚ್ಚಿ ನಮಿಸಿ, ಅಡಿಗಡಿಗೆ ಹಲ್ಲು ಕಡಿಯುತ್ತ ತನ್ನ ಬಿಡಾರವನ್ನು ಸೇರಿ, ಕೆರಳಿ, ಬಿಲ್ಲನ್ನು ಒಂದೆಡೆ ಎಸೆದು, ಒರೆಯಿಂದ ಇಬ್ಬಾಯ ಕತ್ತಿಯನ್ನು ಹಿರಿದು, ಒಂದೇ ಓಟಕ್ಕೆ ಬಂದು, ರಾತ್ರಿ ನಿಮ್ಮ ಪಾಳೆಯದ ಮೇಲೆರಗಿದ. ನಾನಾಗ ಕಾಣಿಸಿದೆ. ‘ಪ್ರಿಯ ವೀರ, ಏನು ದಾಳಿ, ಯಾವ ವರ ಕೊಡಲಿ?’ ಎಂದೆ. ‘ಪಾಂಡವರ ಲೋಕಕ್ಕೆ ನನ್ನಿಂದ ಪ್ರಳಯ’ ಎಂದ. ‘ಕೆಲವರನ್ನುಳಿದು’ ಎಂದೆ. ‘ನೋಡುತ್ತಿರು, ನೋಡುತ್ತಿರು, ಎಲೆ ರುದ್ರ, ಮಾನುಷ ವೀರ್ಯ ಹೇಗಿರುತ್ತದೆ ಎಂಬುದನ್ನು ದೂರದಲ್ಲಿಯೇ ನಿಂತು ನೋಡುತ್ತಿರು’ ಎಂದ. ಮದದಿಂದ ಅವನು ನಕ್ಕ, ನಾನೂ ನಕ್ಕೆ. ಮಾಯೆಯನ್ನು ಬೀಸಿದೆ: ಮರುಳುಗೊಳ್ಳುವ ಹಾಗೆ ಮಾಡಿ, ಕಣ್ಣು ಮಸುಕಾಗಿಸಿ, ನಿಮ್ಮ ಬೀಡಿನ ಮಧ್ಯದಿಂದ ತಿರುಗಿಸಿ, ಹೊರಗಿನ ಮಂದಿಯಿದ್ದ ಕಡೆಯಲ್ಲಿ ಬಿಟ್ಟೆ. ಆಹ, ಏನು ಆರ್ಭಟ! ಆಹ, ಏನು ಚೀರಾಟ! ಕೊಲ್ಲುವ ಗರ್ವವೇನು! ಮೇಲೆ ಹಾರಿ ದನಗಳನ್ನು ತರಿದ, ಅಟ್ಟಿಸಿಕೊಂಡು ಹೋಗಿ ಹೆಂಗಸರನ್ನು ಕತ್ತರಿಸಿದ. ಗುಡಾರವನ್ನು ಕಿತ್ತು, ಕಣ್ಣು ಹೊಸೆಯುತ್ತಿರುವ ಕಲಿಗಳನ್ನು ಮೂದಲಿಸುತ್ತ ತಿವಿದ. ನಾನು ಅವನ ಬಳಿಯೇ ಇದ್ದು, ಮರುಳಿಗೆ ಧೂಪ ಹಾಕುತ್ತ ಅವನ ಮನಃಕ್ಷೋಭೆಯು ಉಕ್ಕೇರುವಂತೆ ಮಾಡಿದೆ. ‘ಆಹ, ಧೃಷ್ಟದ್ಯುಮ್ನ, ಗುರುಗಳನ್ನು ಹೀಗೇ ಅಲ್ಲವೆ ತಿವಿದು ಪುಣ್ಯಪಡೆದೆ!’ ಎನ್ನುತ್ತ ಒಂದು ಕುದುರೆಯ ಕೊರಳನ್ನು ಹಿಸುಕಿ ಕೊಂದ. ಆನೆಯೊಂದನ್ನು ತಬ್ಬಿ, ಭೀಮಸೇನನೇ ಎಂದು ತಿಳಿದು, ‘ರಾಕ್ಷಸಾ, ದೈತ್ಯಾ, ಕೌರವೇಂದ್ರನ, ಬಿದ್ದ ಚಕ್ರವರ್ತಿಯ ತಲೆಯನ್ನೊದ್ದ ಕಾಲೆಲ್ಲಿ? ಎಲ್ಲಿ ತೋರಿಸು’ ಎಂದು ಅದರ ಕಾಲ್ಮುರಿದು, ಆ ಭಾರೀ ಹೆಣವನ್ನು ಒದೆದೊದೆದು ಬಿಸಾಕಿದ. ಕೊನೆಗೆ, ಎಲ್ಲರನ್ನೂ ಕೊಂದಾಯ್ತು ಎಂದು ಬಗೆದು, ಕಂಕುಳಲ್ಲಿ ಒಂದು ಕುರಿಯನ್ನು ಇರುಕಿಕೊಂಡು, ‘ಬಾ ಕೃಷ್ಣ, ಯುದ್ಧವನ್ನು ಹೊತ್ತಿಸಿದ ಮಾಯಾವಿ, ಫಲವನ್ನು ಅನುಭವಿಸು ಬಾ, ನೀನೇ ನನ್ನ ಹಿರಿಯ ಅತಿಥಿ’ ಎನ್ನುತ್ತ ತನ್ನ ಬಿಡಾರಕ್ಕೊಯ್ದು ಹಿಂಸಿಸುತ್ತಿದ್ದಾನೆ. ವೀರರು ಎಂದು ಭಾವಿಸಿ ಅಟ್ಟಿಕೊಂಡು ಬಂದ ಪಶುಗಳು ಅವನ ಸುತ್ತಲೂ ಒತ್ತಾಗಿ ಬಿದ್ದಿವೆ. ಆ ನೋಟವನ್ನು ನೋಡು, ಬೆದರಬೇಡ. ಹೆಚ್ಚಿದ ಹುಚ್ಚನ್ನು ತೋರಿಸುತ್ತೇನೆ: ಓಹೋ, ಅಶ್ವತ್ಥಾಮ, ಸೆರೆ ತಂದವರನ್ನು ಹಿಂಸಿಸುವುದು ಹಾಗಿರಲಿ, ಬಾ! ಬಾರಯ್ಯ ವೀರರ ವೀರ, ದೈವವನ್ನೇ ಲೆಕ್ಕಿಸದ ರುದ್ರಾವತಾರ!
ಕೃಷ್ಣ        ಏನು ಮಾಡುತ್ತಿದ್ದೀಯ, ರುದ್ರ, ಕರೆಯಬೇಡ, ಕರೆಯಬೇಡ.
ರುದ್ರ          ಎಂಥ ಹೇಡಿತನ ನಿನ್ನದು, ಹೆದರಬೇಡ.
ಕೃಷ್ಣ          ನಿನ್ನಾಣೆ ಬೇಡ ಬೇಡ, ಒಳಗೇ ಇರಲಿ.
ರುದ್ರ          ಯಾಕೆ ಭಯ? ಅವನೀಗಲೂ ಮನುಷ್ಯನೇ.
ಕೃಷ್ಣ          ಮನುಷ್ಯನೇ, ಆದರೆ ನನಗೆ ಅಸಾಧ್ಯನಾದ ಶತ್ರು.
ರುದ್ರ          ನಗು, ಇಂಪು, ಶತ್ರುಗಳನ್ನು ನೋಡಿ ನಗುವ ನಗು.
ಕೃಷ್ಣ          ನನಗಾ ಸಂತೋಷ ಬೇಡ. ಅವನು ಒಳಗೇ ಇರಲಿ.
ರುದ್ರ          ತಿಳಿವಳಿಕೆಯಿಲ್ಲದ ಮರುಳನಿಗೆ ಹೆದರುತ್ತೀಯಾ?
ಕೃಷ್ಣ          ತಿಳಿವಳಿಕೆ ಪಡೆದು ಬರಲಿ, ಹೆದರುವುದಿಲ್ಲ.
ರುದ್ರ          ಬಂದರೂ ನೀನಿರುವುದನ್ನು ಅವನು ಈಗ ಕಾಣಲಾರ.
ಕೃಷ್ಣ          ಅದು ಹೇಗೆ? ಅವನ ಕಣ್ಣೇನು ಕುರುಡೆ?
ರುದ್ರ          ಅವನ ಕಾಣುವ ಕಣ್ಣನ್ನು ಕತ್ತಲಿಸುತ್ತೇನೆ ನಾನು.
ಕೃಷ್ಣ          ದೇವತೆ ಅಂದುಕೊಂಡರೆ ಆಗದೆ ಇರುವುದು ಯಾವುದಿದೆ?
ರುದ್ರ          ಅಲುಗಾಡದೇ ಮರೆಯಲ್ಲಿ ನಿಂತು ನೋಡುತ್ತಿರು
ಕೃಷ್ಣ          ನಿನ್ನಾಜ್ಞೆ, ದೂರದಲ್ಲಿ ನಿಲ್ಲುತ್ತೇನೆ.
ರುದ್ರ          ಓಹೋ ಅಶ್ವತ್ಥಾಮ! ಮತ್ತೆ ಹೇಳುತ್ತಿದ್ದೇನೆ ಬಾ! ಇವತ್ತು ಯಾಕೆ ಹೀಗೆ ಮಿತ್ರನಲ್ಲಿ ಅನಾದರ?
         (ಅಶ್ವತ್ಥಾಮ ಚಾವಟಿ ಹಿಡಿದು ಬರುತ್ತಾನೆ)
ಅಶ್ವತ್ಥಾಮ      ನನ್ನ ದೇವರಿಗೆ ಜಯವಾಗಲಿ, ಜಯವಾಗಲಿ ರುದ್ರನಿಗೆ! ಕೃಪಾಕರಾ, ನೀನು ಬಂದದ್ದು ಒಳ್ಳೆಯದಾಯ್ತು, ನನಗಿತ್ತ ಈ ಜಯಕ್ಕಾಗಿ ಹೊನ್ನ ತಲೆಗಳನ್ನೇ ನಿನ್ನ ಕೊರಳಿಗರ್ಪಿಸುತ್ತೇನೆ.
ರುದ್ರ          ಚೆನ್ನಾಗಿ ಹೇಳಿದೆ. ಅದು ಹಾಗಿರಲಿ, ಈಗ ಹೇಳು - ಪಾಂಡವಸೈನ್ಯದ ಬಿಸಿರಕ್ತವನ್ನು ಖಡ್ಗಕ್ಕೆ ಕುಡಿಸಿದೆಯಾ?
ಅಶ್ವತ್ಥಾಮ      ಹಾಗೆ ಮಾಡಿದ ಅಗ್ಗಳಿಕೆ ನನ್ನದು. ಯಾಕೆ ಅನುಮಾನ?
ರುದ್ರ          ಮನಸ್ಸಿಗೆ ತೃಪ್ತಿಯಾಗುವಂತೆ ಭೀಮ ಪಾರ್ಥರನ್ನು ಹೊಡೆದೆ ತಾನೇ?
ಅಶ್ವತ್ಥಾಮ      ಅಶ್ವತ್ಥಾಮ ಅನ್ನುವವನನ್ನು ಇನ್ನವರು ಕೆಣಕುವುದಿಲ್ಲ.
ರುದ್ರ   ಇಬ್ಬರೂ ಸತ್ತರು ಹಾಗಾದರೆ!
ಅಶ್ವತ್ಥಾಮ      ಸತ್ತರು, ಇನ್ನು ಹುಟ್ಟುವುದಿಲ್ಲ. ಕೌರವಾ, ತೃಪ್ತಿಪಡು.
ರುದ್ರ          ಒಳ್ಳೆಯದು. ಆ ಪಾಂಡವರ ಪ್ರಾಣ ಎನ್ನುತ್ತಿದ್ದನಲ್ಲ, ಅವನ ಗತಿ ಏನಾಯ್ತು? ನುಣುಚಿಕೊಂಡುಬಿಟ್ಟನೋ?
ಅಶ್ವತ್ಥಾಮ      ಆ ಗುಳ್ಳೆನರಿ ಏನಾದ ಎಂದು ಕೇಳುತ್ತಿದ್ದೀಯಾ?
ರುದ್ರ          ಹೌದು, ಆ ಕೃಷ್ಣ; ನಿಮಗೆಲ್ಲರಿಗೂ ಚುಚ್ಚುವ ಮುಳ್ಳಾಗಿರುವವನು.
ಅಶ್ವತ್ಥಾಮ      ಆಹ, ಒಳಗಿದ್ದಾನೆ! ಸವಿಯಾದ ಸೆರೆ ನನಗೆ. ಅವನನ್ನು ಈಗಲೇ ಕೊಲ್ಲುವುದಿಲ್ಲ, ನನ್ನ ದೊರೆ!
ರುದ್ರ          ಏನು ಮಾಡುತ್ತೀಯೇ? ಅವನಿಂದ ಮೊದಲು ಏನಗಬೇಕಾಗಿದೆಯೋ? ಏನು ಛಲವೋ!
ಅಶ್ವತ್ಥಾಮ      ನನ್ನ ಗುಡಾರದ ಕಂಬಕ್ಕೆ ಬಿಗಿದು .. ..
ರುದ್ರ          ಬಿಗಿದು .. ..
ಅಶ್ವತ್ಥಾಮ      ಆ ಚಾವಟಿ ಬಿಚ್ಚಿ .. ಬೆನ್ನು ಹಸುರುಗಟ್ಟುವವರೆಗೆ ..
ರುದ್ರ          ಪಾಪ, ಹೆಣ್ಣುಗಳೊಡನೆ ರಾಸಕೀಡೆಯಾಡುವವನು!
ಅಶ್ವತ್ಥಾಮ      ಆಡಿಸುತ್ತೇನೆ, ಆಡಿಸುತ್ತೇನೆ. ನೀರು ಕೇಳಲಿ, ಚಚ್ಚಿ ಚಚ್ಚಿ ಹಾಡಿಸುತ್ತೇನೆ.
ರುದ್ರ          ಬೇಡ, ಆ ಬಡ ಗೋಪನನ್ನು ಹಿಂಸಿಸಬೇಡ.
ಅಶ್ವತ್ಥಾಮ      ಇನ್ನೇನು ಬೇಕಾದರೂ ಕೇಳು, ರುದ್ರ, ಕೊಡುತ್ತೇನೆ, ಇದೊಂದನ್ನಲ್ಲ! ಹೀಗೇ ಸಾಯಬೇಕು ಆ ಕುತಂತ್ರಿ.
ರುದ್ರ          ಆಯ್ತಾಯ್ತು, ನಿನ್ನಿಚ್ಛೆಗೆ ಬೇರೆಯಾದ ನನ್ನಿಚ್ಛೆ ಯಾವುದಿದೆ? ಸಂತೋಷಪಡು, ಹೊಡೆದು ಖುಷಿಪಡು, ನಿನ್ನ ಕೈ ತಡೆಯುವವರಾರಿದ್ದಾರೆ? ಹೋಗು, ನಲಿ.
ಅಶ್ವತ್ಥಾಮ      ನಲಿಯುತ್ತೇನೆ. ಇದೋ ಹೊರಟೆ. ಒಂದನ್ನು ಬೇಡುತ್ತೇನೆ ರುದ್ರ, ಇವೊತ್ತಿನ ಹಾಗೆಯೇ ಎಂದೆಂದೂ ಕೈಬಿಡದೆ ಕಾಪಾಡು.
                                               (ಹೋಗುತ್ತಾನೆ)
ರುದ್ರ          ನೋಡಿದೆಯಾ, ಕೃಷ್ನ, ದೈವಬಲ ಎಷ್ಟು ಹಿರಿದು ಅನ್ನುವುದನ್ನು? ಇವನಿಗಿಂತ ಜ್ಞಾನಿಯೂ ಶೂರನೂ ಯಾರಿದ್ದ, ಯಾರಾದರೂ ಇದ್ದದ್ದು ಗೊತ್ತಿದೆಯೋ?
ಕೃಷ್ಣ          ನಾನು ಆರನ್ನೂ ಕಾಣೆ. ಅವನ ಗತಿಯನ್ನು ಕಂಡು, ನನ್ನ ಶತ್ರುವಾದರೂ ಕೂಡ, ವಿಧಿವಶದಿಂದ ಕಾಲುತೊಡರಿ ಬಿದ್ದ ಅವನಿಗಾಗಿ ಮರುಗುತ್ತೇನೆ. ಇಂದು ಅವನು, ನಾಳೆ ನಾನು. ಮನುಷ್ಯನ ಬಾಳು ಎಂಥ ಪಾಡೋ! ಬೀಸುವ ಬಯಲ ಗಾಳಿ, ಸುಳಿದು ಅಡಗುವ ನೆರಳು.
ರುದ್ರ          ಇಂತಹ ನೋಟ ನೋಡಿಯೂ ದೈವದ ಬಗ್ಗೆ ಮದಿಸಿ ಮತಾಡಬೇಡ. ಎಷ್ಟೇ ಸಿರಿ ಬಂದರೂ, ಬಲ ಬಂದರೂ, ಕೈ ಎಷ್ಟು ನಡೆದರೂ ಸೊಕ್ಕಿನ ಮಾತಾಡಬೇಡ! ಮಾನುಷವಾದದ್ದೆಲ್ಲವನ್ನೂ ಒಂದು ಹಗಲು ಮೇಲೆತ್ತಿದರೆ, ಇನ್ನೊಂದು ಉರುಳಿಸುತ್ತದೆ. ಮಿತಿಯರಿತು ನಡೆಯುವವರನ್ನು ದೇವರು ಒಲಿಯುತ್ತಾರೆ, ಮಿಕ್ಕವರನ್ನು ಮುರಿಯುತ್ತಾರೆ.
                                             (ಹೋಗುವರು)
ಮೇಳ
1
                                        ದ್ರೋಣಪುತ್ರ, ರುದ್ರಮಿತ್ರ,
                                        ನಿನ್ನ ಹೆಸರ ಹಳಿವಿದೇನು?
                                        ಕೃಷ್ಣನಾಡೆ, ಜೊತೆಗೆ ಪಡೆಯೆ
                                        ಕೂಗುತಿರುವ ಕೂಗಿದೇನು?
                                        ರಾತ್ರಿಯೆದ್ದು ಮೇಲೆ ಬಿದ್ದು
                                        ಮೈಮರೆತರನಿರಿದೆಯಾ?
                                            ಪಶುವೆನ್ನದೆ, ಕೂಸೆನ್ನದೆ
                                 ಕತ್ತಿ ಹಿರಿದು ತರಿದೆಯಾ?
                                             ಕೆಟ್ಟ ಬಾಯ ಜನರು ಉಲಿದು
                                         ನಿನ್ನಿಳಿಕೆಗೆ ನಲಿವರಲ್ಲ!
                                         ತೆಂಕನಾಡ ಬಲವಿದೆಂದು
                                              ನಮ್ಮ ಹೆಸರ ಸುಲಿವರಲ್ಲ!
                                         ದ್ರೋಣಪುತ್ರ, ರುದ್ರಮಿತ್ರ
                                      ನಿನ್ನ ಶುಭಕೆ ನಲಿವೆ ನಾನು.
                                         ಬೆದರುಗಣ್ಣ ಸೋರೆಯಂತೆ
                                         ನಿನ್ನಳಲಿಗೆ ಅಳುವೆ ನಾನು
                                         ಹಿರಿಯನಾಗು, ಕಿರಿಯವೆಲ್ಲ
                                         ಕರುಬಿ ಕೆಸರನೆರಚುವುದು!
                                         ಮೇಲ್ಮೆವಂತಗೆಸೆದು ಬಾಣ
                                         ತಪ್ಪದೆ ಗುರಿ ಚುಚ್ಚುವುದು!
                                         ಏಳ ಗುರುವೆ ಸೂರ್ಯನೊಡನೆ
                                         ನಮ್ಮ ಬಾಳ ಸೂರ್ಯನೇ,
                                         ಕವಿವ ದಟ್ಟ ಹಳಿಯ ಮಬ್ಬ
                                         ಉರಿದು ಚೆದುರಿಸಾರ್ಯನೇ!
2
ಅರೆಮೇಳ 1
                                   ಕೃಷ್ಣ ಹುಸಿ ಹೇಳುವನೋ, ನಾ ಹೇಳಲಾರೆ!
                                   ನಂಬದಿರಲಾರನೇ, ನಂಬಲೂ ಆರೆ!
                                        ಎಂಥ ಭೀಕರವಾಯ್ತೊ ಇರುಳೊಳಗೆ ಕಾಣೆ!
                                   ನನ್ನೊಡೆಯನನು ಮುಳಿದು ರುದ್ರನೇ ಇರಿದನೋ
                                         ಜಯ ಪಡೆಯೆ ಜಾತ್ರೆಗವ ಬರಲಿಲ್ಲವೆಂದು?
                                   ತನಗೆ ಮುಡಿಪನು ಕಟ್ಟಿ ತರಲಿಲ್ಲವೆಂದು?
                                   ಮೊದಲ ಬೇಟೆಯು ತನಗೆ ಸಲಲಿಲ್ಲವೆಂದು
                                         ಕಣ್ ಕಟ್ಟಿ ಶಬರ ಶಂಕರನೆತ್ತಲೊಯ್ದನೋ?
                                   ಕದನ ನೆರವಿಗೆ ಬರಲು, ಧಿಕ್ಕರಿಸೆ, ಬಯ್ದನೋ
                                         ತಿಳಿವು ಮರುಳಾಗೆನುತ ವೀರ, ಕುಮಾರ?
                                   ಬುದ್ಧಿ ಮೋಸವೊ ಏನೋ, ಇರುಳೊಳಗೆ ಕಾಣೆ
                                         ಶಿವನುಗ್ರನೇಕಾದ, ಕಾಣೆನೋ ಕಾಣೆ!
                                                  ಅರೆಮೇಳ 2
                                     ಇಲ್ಲದಿರೆ ಹೇಗಾಯ್ತು ಈ ಹೊಲಸುಗೆಲಸ?
                                     ಎಲ್ಲರೂ ಹಳಿಯುವೀ ಹೇಸಿಕೆಯ ಕೆಲಸ?
                                     ನನ್ನೊಡೆಯ, ತಿಳಿತಿಳಿದು ನೀ ತಪ್ಪಿ ನಡೆಯೆ!
                                     ನನ್ನೊಡೆಯ, ನಿರ್ಧರದಿ ದನಗಳನು ಕೊಲುವೆಯಾ?
                                            ಮೂಕಪಶುಗಳನಟ್ಟಿ, ಮಂದೆಗಳನಿಡಿದು,
                                     ಅರೆಬಿರಿದ ಹೊಸ ಎಸಳ ಮಕ್ಕಳನು ಬಡಿದು,
                                     ಬಾಯ್ಬಿಟ್ಟು ಬೇಡುವಾ ಹೆಂಗಸರ ಕಡಿದು,
                                           ಕಲಿಗಳಲಿ ಕಲಿಯೆಂದು ನೀನಿಂತು ನಿಲುವೆಯಾ?
                                     ಮಸಲ, ದೇವತೆಗಳೇ ಕಳಿಸಿದರೂ ಗೆಲುವೆಯಾ?
                                           ಕಳ್ಳನುಣಿಸುವೆ ಮೋಹನದ ಕಣ್ಣುಗಳ ಹೆಣ್ಣ?
                                           ಇಲ್ಲದಿರೆ, ನೀನಿರುಳು ಕ್ರಮತಪ್ಪಿ ನಡೆಯೆ
                                     ಘೋರಕರ್ಮವ ಮಾಡಲೆಂದೂ ನಡೆಯೆ.

3
                                          ಏಳ ಏಳ, ಓ ಅಶ್ವತ್ಥಾಮಾ
                                          ಕಡಲಮಾರುತದ ನಾಡಿನ ಪ್ರೇಮಾ,
                                          ಬೀದಿವರಿವರೇ ಬೀಡಿನೊಳೆತ್ತ
                                          ತನ್ನಿಚ್ಚೆಯಲೇ ತಾ ಬಗೆದತ್ತ
                                          ಕೃಷ್ಣನ ನುಡಿ; ಅದು ಹುಸಿಯೆನಿಸೇಳು
                                          ನಮಗೊಂದಭಯದ ನುಡಿಯನು ಹೇಳು
                                          ರುದ್ರಭಕ್ತನೇ, ಆರ್ಯಪೂಜ್ಯನೇ
                                          ಮುಖ ತೋರಿಸೆಯೇತಕೆ, ಬಾರಾ ಬಾರಾ
                                          ನಿಂದೆ ಬೆಂಕಿಯಲಿ ಬೆಂದೆನು, ನೊಂದೆ
                                          ಅಳಲಿಗೆ ತಂಪನು ತಾರಾ ತಾರಾ
                                          ತಪ್ಪಿರೆ ಶಿವನಲಿ ಕ್ಷಮೆಯನು ಬೇಡು
                                          ಒಪ್ಪಿರೆ ಶಿವನೇ ರಕ್ಷಿಪ ನೋಡು
                                       (ಬೀಡಿನಿಂದ ಭಾರ್ಗವಿ ಬರುತ್ತಾಳೆ)
ಭಾರ್ಗವಿ          ನಿಡಿದೋಳಿನ ವಿಂಧ್ಯದ ತೆಂಕಣ ನಾಡವರೇ, ಅಶ್ವತ್ಥಾಮನ ಕೆಳೆಯರಾದ ಬೇಡರೇ, ಈ ಕುರುಧರೆಯಲ್ಲಿ ನಮ್ಮ ವಿಧಿ ಕ್ರೂರವಾಗಿದೆ. ತನ್ನ ಆತ್ಮವು ಅಂಧಕಾರದಲ್ಲಿ ಮುಳುಗಿದ್ದಾಗ, ಎಂತಹ ಎಡರನ್ನೂ ತಾನೊಬ್ಬನೇ ಎದುರಿಸುವ ಕಂದ, ಅಶ್ವತ್ಥಾಮ, ಕೊಲ್ಲುವ ಆಕ್ರೋಶದ ತೆರೆಯಲ್ಲಿ, ಎಡವಿದ.
ಮೇಳನಾಯಕ   ಇದ್ದಕ್ಕಿದ್ದಂತೆ, ರಾತ್ರಿಯಲ್ಲಿ, ನಿನ್ನೆಯ ಭಾಗ್ಯದ ತುತ್ತತುದಿಯ ತಿರುಳಲ್ಲಿ, ಅವನು ಕತ್ತರಿಸಿದ್ದಾದರೂ ಏನನ್ನು? ಭಾರ್ಗವ ಕುಲದ ರತ್ನವೇ, ದ್ರೋಣನ ತಾಯಿಯೇ, ನೀನು ತಿಳಿಯದ್ದಲ್ಲ, ನಿನಗೆ ಅಶ್ವತ್ಥಾಮನ ಮನಸ್ಸು ಗೊತ್ತಿರಬೇಕು. ಏನಾಯಿತೆಂಬುದನ್ನು ತಿಳಿಸು, ನಿಜವನ್ನು ಹೇಳು.
ಭಾರ್ಗವಿ        ಆಡಬಾರದ ಮಾತನ್ನು ಹೇಗೆ ಆಡಲಿ ನಾನು! ಕಿವಿಗಳಲ್ಲಿ ಉರಿಯನ್ನು ಹೇಗೆ ತಾನೇ ಸುರಿಯಲಿ! ರಾತ್ರಿಯಲ್ಲಿ ಉನ್ಮತ್ತನಾದ ಅಶ್ವತ್ಥಾಮ ಕೀರ್ತಿಯ ಕೊರಳನ್ನು ತಟಕ್ಕನೆ ಮುರಿದುಹಾಕಿಬಿಟ್ಟ. ನೆತ್ತರು, ನೆತ್ರು! ಕಟುಕರ ಕಡಿತ! ಸ್ವಂತ ಕೈಗಳಿಂದ ಅವನು ಪಶುಯಜ್ಞವನ್ನೇ ಮಾಡಿದ.
ಮೇಳ                      ಎಂಥ ಮಾತ ಹೇಳಿದೆ ನೀ, ಮುತ್ತಜ್ಜಿ, ಘೋರ!
                           ಕಾಡುಗಿಚ್ಚಿನ ರೀತಿ ಹಬ್ಬಿದುದು ಕ್ರೂರ!
                           ದಿಟವಾಯ್ತು, ದಿಟವಾಯ್ತು, ಪಾಂಡವರ ಕೂಗು!
                           ಅಯ್ಯೋ ಅಯ್ಯೋ ಮುಂದಾಗುವಾಗುಹೋಗು!
                           ಸೈನ್ಯದಿದಿರಲಿ ನಿಲಿಸಿ ಕೊಲ್ಲರೇ ಇಂದು,
                           ಅವಮಾನವನು ಮಾಡಿ ಭೀಮಪಾರ್ಥರು ಬಂದು,
                           ನಮ್ಮ ಬೀಡಿಗೆ ನುಸುಳಿ ನಿದ್ದೆ ಆವರಿಸಿರಲು
                           ಹಸುಗಳನು, ಕಾವಲರನಿರಿದುರದನೆಂದು!
ಭಾರ್ಗವಿ             ಅಗೋ ಆ ಕಡೆಯಿಂದಲೇ, ಅದೇ ಕಡೆಯಿಂದ ಅವನು ಮಂದೆಯೊಡನೆ ಬಂದ! ಕರುಳುಗಳನ್ನು ಕತ್ತರಿಸಿ, ಕತ್ತುಗಳನ್ನು ಮುರಿದ. ನೆತ್ತರ ತೊರೆಯಲ್ಲೇ ಅವನು ಸ್ನಾನಮಾಡಿಬಿಟ್ಟ; ಗೂಳಿಯೊಂದನ್ನು ಜಗ್ಗಿಸಿ ಹಿಡಿದು ಅದರ ನಾಲಗೆಯನ್ನು ಸೀಳಿದ. ಕಿರಿಚುವ ಕುರಿಯೊಂದನ್ನು ಕಂಬಕ್ಕೆ ಕಟ್ಟಿ, ಒದ್ದೊದ್ದು ಬಾರಿಸಿದ. ಹೊಡೆಯುವಾಗ ಬಯ್ಯುತ್ತ ಸಂತೋಷಪಟ್ಟ; ಅಲ್ಲ, ಅವನಲ್ಲ ಸಂತೋಷಪಟ್ಟದ್ದು, ಅವನನ್ನು ಆವರಿಸಿದ್ದ ಮರುಳು.
ಮೇಳ                       ಇಲ್ಲಿರದೆ ಕಳ್ಳನಂತೆ ನಾನು ಓಡಿಹೋಗುವೆ!
                            ತಡಮಾಡದೆ, ಮುಖವ ಮುಚ್ಚಿ ತಲೆಮರೆಸಿ ಹೋಗುವೆ!
                            ಏಕಲವ್ಯ ತಾನೇತಕೆ ಈ ಕಣಕ್ಕೆ ಬಂದನೋ!
                            ನಮ್ಮ ನಾಯಕನೆಮ್ಮನೇತಕೆ ಕರೆತಂದನೋ!
                            ಕೃಷ್ಣಭೀಮರು ಹಿಡಿದು ಕೊಲ್ಲದಿರರೆನ್ನ
                            ಕಲ್ಲಿಟ್ಟು ದಳವೆಲ್ಲ ಕೊಲ್ಲದಿರದೆನ್ನ
                            ಓ ಗುರುವೆ, ರಕ್ಷಿಸುವರಾರೆನ್ನ, ನಿನ್ನ!
                            ಗ್ರವಿಧಿ ಎಳೆದಾಡುತಿರುವುದೇ ನಿನ್ನ!
ಭಾರ್ಗವಿ         ಇಲ್ಲಿ ಈಗತಾನೇ ಸಿಡಿಲು ಬಡಿದು ಹೋಗಿದೆ. ಮುಂಗಾರಿನ ಬಿರುಗಾಳಿಯ ಮೊದಲುರುಬು ಈಗತಾನೇ ನಿಂತಿದೆ. ತಿಳಿವು ಮರಳಿದರೂ ಹೊಸದುಃಖ ಅವನಿಗೆ ಕಾದು ನಿಂತಿದೆ.. ನಮ್ಮ ಕೈಯಾರೆ ಮಾಡಿದ ಹೀನ ಕೃತ್ಯಗಳನ್ನು ನಾವೇ ನೋಡುವ ದುಃಖ ಇರಿಯುತ್ತದೆ.
ಮೇಳನಾಯಕ     ಅವನ ಸಂಕಟವಳಿದ ಮೇಲೆ ಎಲ್ಲವೂ ಒಳ್ಳೆಯದಾಗುತ್ತದೆ. ಕಳೆದುಹೋದ ದುಃಖ ಎಳ್ಳಷ್ಟು ಮಾತ್ರ ಅನ್ನಿಸುತ್ತದೆ.
ಭಾರ್ಗವಿ    ನಿನಗೆ ಆಯ್ಕೆಯ ಸಮಯ ಬಂದಾಗ ಯಾವುದನ್ನ ಆರಿಸುತ್ತೀಯೆ: ನೀನು ನಲಿಯುತ್ತ ಗೆಳೆಯರನ್ನು ಕೊರಗಿಸುತ್ತೀಯೋ, ಇಲ್ಲ ಗೆಳೆಯರು ಕೊರಗುತ್ತಿರುವಾಗ ಜೊತೆಯಲ್ಲಿ ನೀನೂ ಕೊರಗುತ್ತೀಯೋ?
ಮೇಳನಾಯಕ   ಇಬ್ಬರೂ ಕೊರಗಬೇಕಲ್ಲ, ಅದೇ ದೊಡ್ಡ ಕೊರಗು ಕಣಮ್ಮ.
ಭಾರ್ಗವಿ       ಆದ್ದರಿಂದಲೇ ಅವನ ಹುಚ್ಚು ಹರಿದರೂ ದೊಡ್ಡ ಸಂಕಟ ನಮಗೆ.
ಮೇಳನಾಯಕ   ಏನು ಹೀಗೆ ಹೇಳುತ್ತಿದ್ದೀಯೆ? ನಿನ್ನ ಮಾತುಗಳು ನಮಗೆ ಅರ್ಥವಾಗುತ್ತಿಲ್ಲ.
ಭಾರ್ಗವಿ     ಅಶ್ವತ್ಥಾಮ ತನ್ನ ರೋಗಿಷ್ಠ ಭ್ರಾಂತಿಯ ಬಡಿತಗಳಲ್ಲೇ ಆನಂದವನ್ನು ಸವಿದ; ಆದರೆ ತಿಳಿವಳಿಕೆಯಿದ್ದ ನಮಗೆ ದುಃಖವಾಯಿತು. ಈಗಲೋ, ಅವನಿಗೆ ತಿಳಿವು ಬಂದಮೇಲೆ, ಚೇತರಿಸಿಕೊಂಡು ಎದ್ದ ಅವನು, ಮೊದಲಿಗಿಂತಲೂ ಹಿರಿದಾದ ದುಃಖದಲ್ಲಿ ಮುಳುಗಿದ್ದಾನೆ. ನಾವು, ಮೊದಲಿನಂತೆಯೇ ದುಃಖಿಗಳು. ಒಂದು ದುಃಖ ಹೋಗಿ ಎರಡಾಯಿತು!
ಮೇಳನಾಯಕ   ಹೌದು ಹೌದು. ಯಾವುದೋ ದೇವತೆ ಕಾಡುತ್ತಿರಬೇಕು. ಇಲ್ಲದಿದ್ದರೆ, ಗುಣವಾದರೂ ರೋಗಿಯಂತೆ ನರಳುತ್ತಾನೆ ಎಂದರೆ!
ಭಾರ್ಗವಿ        ಹಾಗೆ ನರಳುತ್ತಿದ್ದಾನೆ ಎಂಬುದು ನಿಜ, ನಂಬು.
ಮೇಳನಾಯಕ   ಮೊದಲು ಈ ಹಾಳು ಉಪದ್ರವ ಹೇಗೆ ಮೇಲೆರಗಿತೋ ಏನೋ! ನಡೆದ್ದನ್ನೆಲ್ಲ ಹೇಳುವೆಯಾ. ನಿಮ್ಮ ದುಃಖ ನಮ್ಮದೂ ಹೌದು.
ಭಾರ್ಗವಿ      ಪಾಲುಗಾರರಾದ ಅಣ್ಣಂದಿರೇ, ಎಲ್ಲವನ್ನೂ ಹೇಳುತ್ತೇನೆ, ಕೇಳಿ: ಸುಂದರವಾದ ರಾತ್ರಿ, ಸಂಜೆಯುರಿ ಆರಿದಾಗ, ಇಬ್ಬಾಯ ಖಡ್ಗವನ್ನು ಹಿರಿದು ಗುರಿಯಿಲ್ಲದೆಯೇ ಎಲ್ಲಿಗೋ ಹೋಗುತ್ತಿದ್ದವನನ್ನು ತಡೆದು, ‘ಏನಿದು, ಇಷ್ಟು ಹೊತಿನಲ್ಲಿ? ಭಟನನ್ನು ಕಳಿಸದೇ, ಕಹಳೆಯನ್ನು ಊದದೇ, ಹೊರಟಿದ್ದೀಯಲ್ಲ, ಅಶ್ವತ್ಥಾಮ? ಬಳಲಿರುವ ಪಡೆಯೆಲ್ಲ ಒಳಗೇ ಇದೆಯಲ್ಲ!’ ಎಂದು ನಾನು ಕೇಳಿದೆ. ಆಗವನು, ಏಟುತಿಂದ ಹಾವಿನಂತೆ ಬುಸುಗುಟ್ಟುತ್ತ, ಹೆಣ್ಣಿಗೆ ಪರಿಚಿತವಾದ ಭಾಷೆಯಲ್ಲಿ ‘ಹೆಣ್ಣು ಬಾಯಿ ಮುಚ್ಚಿದ್ದರೇ ಚೆಂದ’ ಎಂದು ನನ್ನನ್ನು ಗದರಿ, ನೂಕಿ ಹೊರಟೇಬಿಟ್ಟ. ನಾನೂ ಸುಮ್ಮನಾದೆ. ಹೊರಗೇನಾಯಿತೋ ನನಗೆ ತಿಳಿಯದು. ಆಮೇಲೆ ಹಸುಗಳನ್ನೂ ಗೂಳಿಗಳನ್ನೂ ಕುರಿಗಳನ್ನೂ ಕಾವಲು ನಾಯಿಗಳನ್ನೂ ಒಳಗಟ್ಟುತ್ತ ಎಲ್ಲವನ್ನೂ ಕಟ್ಟಿಕೊಂಡು ಬಂದ. ಒಂದನ್ನು ಕೊಚ್ಚಿಹಾಕಿದ, ಮತ್ತೊಂದರ ಕೊರಳನ್ನು ಮುರಿದ, ಒಂದರ ತಲೆ ತರಿದ. ಒಂದನ್ನೆಳೆದು ಬಿಸಾಕಿದ. ಒಂದು ಕುರಿಗಂತೂ ಚಿತ್ರಹಿಂಸೆಯೇ ಆಗಿಹೋಯಿತು! ಮನುಷ್ಯರೆಂದು ಭಾವಿಸಿ ಆ ಪಶುಗಳನ್ನು ಕೊಚ್ಚಿಹಾಕಿದ. ಕೊನೆಗೆ, ಹೊರಗಡೆ ಓಡಿ, ಬರುಬಯಲಲ್ಲಿ ಯಾರೊಡನೆಯೋ ನಗುತ್ತ, ಭೀಮನಿಗೆ ಪಾರ್ಥನಿಗೆ ಕೃಷ್ಣನಿಗೆ ತಾನು ತೀರಿಸಿದ ಮುಯ್ಯಿಗಳನ್ನು ಕೂಗಿ ಹೇಳಿ, ಅಣಕಿಸುತ್ತ, ಹುಚ್ಚುನಗೆ ನಗುತ್ತ, ಮತ್ತೆ ಒಳಗಡೆ ಬಂದ. ಆಯ್ಯೋ, ಏನು ಃಹೇಳಲಿ, ಮೆಲ್ಲಮೆಲ್ಲನೆ ಸ್ವಲ್ಪಸ್ವಲ್ಪವಾಗಿ ಅವನಿಗೆ ಜ್ಞಾನ ಮರಳಿತು! ಕಣ್ಣು ಎಲ್ಲ ಕಡೆ ಸುಳಿದಾಡಿತು; ನಡೆದ ಘೋರವನ್ನು ತಿಳಿದು, ಕೂಗಿಕೊಂಡ; ತಲೆಯನ್ನು ಚಚ್ಚಿಕೊಡ. ಸುತ್ತಲೂ ಬಿದ್ದಿದ್ದ ಹೆಣಬಣವೆಯ ಮೇಲೆ ಧೊಪ್ಪೆಂದು ಬಿದ್ದ! ಉಗುರುಗಳಿಂದ ಬಲವಾಗಿ ತನ್ನ ಕೂದಲನ್ನು ಕಿತ್ತುಕೊಂಡ. ಒಂದೂ ಮಾತಾಡದೆ ದೀರ್ಘಕಾಲ ಕೂತ. ಬಳಿಕ ನನ್ನನ್ನು ಅದನ್ನು ಹೇಳಲೂ ಭಯವಾಗುತ್ತದೆ - ಬೆದರಿಸುತ್ತ ‘ಹೇಳು ಹೇಳು, ಏನಾಯಿತು ನನ್ನ ಪಾಡು. ಎಲ್ಲವನ್ನೂ ಹೇಳು. ಸುಳ್ಳಾಡಿದರೆ ನೋಡು’ ಎಂದು ಒದರಿದ. ನಾನು ಬೆದರಿ, ಗೆಳೆಯರೇ, ಕಂಡುದನ್ನು ಕಂಡಂತೆಯೇ ಹೇಳಿದೆ. ಕೇಳಿ ಎದೆ ಬಿರಿಯುವಂತೆ, ಹಿಂದೆಂದೂ ಕಾಣದ ರೀತಿಯಿಂದ ಅತ್ತ.! ಹಿಂದೆ ನನಗೆ ಹೇಳುತ್ತಿದ್ದ: ‘ಈ ಅಳುಬುರುಕುತನ ಹೆಣ್ಣಿಗಳಿಗೆ ಹೇಡಿಗಳಿಗೆ, ನನಗಲ್ಲ’ ಎಂದು. ಅವನೆಂದೂ ಅತ್ತದ್ದೇ ಇಲ್ಲ;, ಸಿಂಹವು ನರಳುವ ಹಾಗೆ ಆಳದಲ್ಲಿ ನರಳುತ್ತಿದ್ದವನು. ಇಂತಹವನು ಈ ಘೋರದಲ್ಲಿ ಸಿಕ್ಕಿ, ತಿನ್ನದೆ ಕುಡಿಯದೆ, ತಾನೇ ಕೊಂದ ಪ್ರಾಣಿಗಳ ಬಳಿ ಮಾತಾಡದೆ ಕುಳಿತಿದ್ದಾನೆ! ಏನೋ ಯೋಚಿಸುತ್ತಿದ್ದಾನೆ. ಒಳ್ಳೆಯದನ್ನೇ ಯೋಚಿಸುತ್ತಿರಲಾರ! ಅಗೋ ಕೇಳಿ, ಆ ನರಳುವಿಕೆಯನ್ನು. ಬನ್ನಿ, ನಿಮ್ಮ ಕೈಲಾದುದನ್ನು ಮಾಡಿ, ಗೆಳೆಯರು ಸಮಾಧಾನ ಮಾಡಿ ಹೇಳಿದರೆ ಅವನಂತಹವರು ಕೇಳುತ್ತಾರೆ.
ಮೇಳನಾಯಕ   ಪರಶುರಾಮನ ತಂಗಿ, ಭಾರ್ಗವಿಯೇ, ಈ ಸುದ್ದಿ ಎಷ್ಟು ಭಯಂಕರ! ನಮ್ಮ ಕಲಿ ಮರುಳಾಗಿ ಬಸವಳಿದಿದ್ದಾನೆಯೇ!
                                                  (ಒಳಗೆ)
ಅಶ್ವತ್ಥಾಮ      ಅಯ್ಯೋ ಪಾಪಿ, ಅಯ್ಯೋ ಪಾಪಿ!
ಭಾರ್ಗವಿ       ಓ ಇನ್ನೆಂತಹ ಕೆಟ್ಟುದಾಗುವದೋ ಕಾಣೆ! ಕೇಳಿದಿರಾ ಅಶ್ವತ್ಥಾಮನ ಧ್ವನಿಯನ್ನು, ಕೇಳಿದಿರಾ ಆ ಕೂಗನ್ನು!
ಅಶ್ವತ್ಥಾಮ      ಅಯ್ಯೋ ಪಾಪಿ, ಅಯ್ಯೋ ಪಾಪಿ!
ಮೇಳನಾಯಕ   ಹೊಸ ಹುಚ್ಚೇ! ಮೊದಲ ಹುಚ್ಚನ್ನು ಕಂಡ ಸಂಕಟವೋ?
ಅಶ್ವತ್ಥಾಮ      ಮಗೂ, ಮಗೂ!
ಭಾರ್ಗವಿ      ಕೆಟ್ಟೆ ನಾನು! ಆ ರುದ್ರಶಕ್ತಿಯನ್ನೇಕೆ ಕರೆಯುತ್ತಾನೋ! ಏನು ಆಲೋಚನೆಯೋ ಕಾಣೆ, ಏನು ಬಂದುಬಿಟ್ಟಿತು ನಮಗೆ ಇವತ್ತು!
ಅಶ್ವತ್ಥಾಮ      ಏಕಲವ್ಯಾ, ಏಕಲವ್ಯಾ .. .. ಅವನ ಬೇಟೆಯೋ ಎಂದಿಗೂ ಮುಗಿಯದು! ಇಲ್ಲಿ ನಾನೋ ಸಾಯುತ್ತಿದ್ದೇನೆ!
ಮೇಳನಾಯಕ  ಹುಚ್ಚಲ್ಲ, ಹೋಗೆ ತೆಗಿ, ಬಾಗಿಲನ್ನು ತೆಗಿ. ಅವನು ನಮ್ಮನ್ನು ಕಂಡು ಶಾಂತನಾಗುತ್ತಾನೆ.
ಭಾರ್ಗವಿ       ಇದೋ ತೆಗೆದೆ. ನೋಡಿ ಅವನ ಕೆಲಸವನ್ನು, ಪಾಡನ್ನು.
                                (ಪ್ರಾಣಿಗಳ ನಡುವೆ ಅಶ್ವತ್ಥಾಮನಿದ್ದಾನೆ)
ಅಶ್ವತ್ಥಾಮ      ಓಹೋ ಗೆಳೆಯರೇ, ಪ್ರೀತಿಯ ಬೇಡರೇ, ನನಗೆ ಹೇಸದೆಯೆ ಇನ್ನೂ ಸಹಿಸಿಕೊಂಡಿದ್ದೀರಾ? ನೋಡಿ, ಯಾವ ತೆರೆ ತಲೆಯ ಮೇಲುರುಳಿ ನನ್ನನ್ನಾವರಿಸಿದೆ!
ಮೇಳನಾಯಕ   ನೀನು ಹೇಳಿದ ಯಾವುದೂ ಹೆಚ್ಚಲ್ಲ, ತಾಯಿ. ಪ್ರಜ್ಞೆಯಿದ್ದವರು ಮಾಡುವ ಕೆಲಸವೇ ಈ ಕೆಲಸ!
ಅಶ್ವತ್ಥಾಮ      ಕಾಡಿನಲ್ಲೆನಗೆ ಒಡನಾಡಿಯಾದವರು, ಬಿಲ್ಲ ಜೊತೆಗೆಳೆದು ಬೇಟೆಯಾಡಿದವರು, ನೀವೇ, ನೀವೇ ಗತಿ, ಕೊಲ್ಲಿರಿ ನನ್ನನ್ನೂ; ಎಲ್ಲರೂ ಸೇರಿ ನನ್ನ ಕೊಲ್ಲಿ.
ಮೇಳನಾಯಕ   ಕೆಟ್ಟ ಮಾತಾಡಬೇಡ. ಹೊಲಸಿಗೆ ಹೊಲಸು ಮದ್ದಲ್ಲ.
ಅಶ್ವತ್ಥಾಮ      ನೋಡು ನೋಡು, ಕೆಚ್ಚೆದೆಯ ಶೂರನನ್ನು! ಹಗೆಗೆ ಹೆದರದಾ ರಣಧೀರನನ್ನು! ಅರಿಯದ ದನಗಳನ್ನು ಒಬ್ಬನೇ ಇರಿದವನನ್ನು! ಆಹಾ ಧೀರ, ಆಹಾ ಶೂರ; ಹೆಸರೋ ಓಹೋ, ರುದ್ರಾವತಾರ!
ಭಾರ್ಗವಿ        ಹೀಗೆಲ್ಲ ಮಾತಾಡಬೇಡ, ಕಂದ, ಬೇಡಿಕೊಳ್ಳುತ್ತೇನೆ.
ಅಶ್ವತ್ಥಾಮ      ಹೋಗು ಹೋಗು, ತೊಲಗು ತೊಲಗ, ಓ ಪಾಪೀ!
ಭಾರ್ಗವಿ       ತಾಳಿಕೋ, ಸಹಿಸಿಕೋ.
ಅಶ್ವತ್ಥಾಮ      ಅಯ್ಯೋ ಪಾಪಿಯೇ, ಪರಮ ನೀಚರುಗಳೆಲ್ಲ ನುಣುಚಿಕೊಳ್ಳಲು ಆಸ್ಪದ ಕೊಟ್ಟು, ಪಶುಗಳನ್ನೆಲ್ಲ ಕೊಂದು ರಕ್ತದ ಕೋಡಿಯನ್ನೇ ಹರಿಸಿದೆಯಲ್ಲ!
ಮೇಳನಾಯಕ   ಆದುದನ್ನೆಲ್ಲ ನೆನೆನೆನಪಿಸಿಕೊಂಡು ಹಂಬಲಿಸಿದರೆ ಏನು ಬಂದ ಹಾಗಾಯಿತು? ಆದುದು ಆಗಿಯೇ ಹೋಯಿತು, ಅದನ್ನು ಇಲ್ಲವಾಗಿಸಲು ಸಾಧ್ಯವೇ?
ಅಶ್ವತ್ಥಾಮ      ಎಲವೋ ಕೃಷ್ಣಾ, ಮರ್ಮಘಾತಕಾ!
                                      (ಹೊರಗೆ ನೆಗೆದು ಬಂದು)
ಆಗುವುದು ಏನಾದರೂ ಅಲ್ಲಿ ನಿನ್ನ ಕಣ್ಣು. ಏನು ಸಂಭವಿಸಿದರೂ ಅಲ್ಲಿ ನಿನ್ನ ಕೈ. ಶತ್ರುಪಾಳೆಯದಲ್ಲೂ ಬಿಡದ ಶತ್ರುವೇ, ತಡೆದುಕೊಳ್ಳಲಾರದ ಹಾಗೆ ನೀನು ನಗುತ್ತಿದ್ದೀಯೇನೋ!
ಮೇಳನಾಯಕ   ದೇವರು ಕೊಟ್ಟ ಹಾಗೆಯೇ ನಾವು ನಗುವುದೂ ಅಳುವುದೂ ಎಲ್ಲ.
ಅಶ್ವತ್ಥಾಮ      ಹುಟ್ಟಡಗಿಸೋಣ ಎಂದರೆ .. .. ಎದುರಿಗೇ ಬಾರನಲ್ಲ!
ಮೇಳನಾಯಕ   ಸೊಕ್ಕಿನ ಮಾತಾಡಬೇಡ, ನೋಡುತ್ತಿದ್ದೀಯಲ್ಲ ಈ ಪಾಡನ್ನು!
ಅಶ್ವತ್ಥಾಮ      ಓ ರುದ್ರ, ಗುರುದೇವ, ನನ್ನ ಗುರುವಿನ ಗುರುವೇ! ಆ ಮಾಯಾವಿಯೊಬ್ಬನನ್ನು, ಆ ಇನ್ನೊಬ್ಬ ಕ್ಷುದ್ರನನ್ನು ಕೊಲ್ಲುವ ಅವಕಾಶವನ್ನು ಕೊಡು. ಭೀಮನೊಬ್ಬನನ್ನು ಅಡಗಿಸಿಬಿಡು, ಬಳಿಕ ನನ್ನನ್ನೂ ಕರೆದುಕೊಂಡುಬಿಡು.
ಭಾರ್ಗವಿ        ನನ್ನನ್ನೂ ಕರೆದುಕೊಳ್ಳುವಂತೆ ಬೇಡಿಕೋ. ನೀನು ಸತ್ತರೆ ನಾನು ಯಾರಿಗೋಸ್ಕರ ಬದುಕಿರಲಿ?
ಅಶ್ವತ್ಥಾಮ      ಓ ಮಬ್ಬೇ, ನನಗೆ ಬೆಳಕಾದುದೇ, ಕತ್ತಲೆಯೇ, ಬಿಸಿಲಿನ ಹೊಳಪೇ, ಕೂಡಿಕೋ ಕೂಡಿಕೋ ನಿನ್ನ ಒಕ್ಕಲಾಗುತ್ತೇನೆ. ಪ್ರಭುವಿಗೆ ಯುದ್ಧಸಮಯದಲ್ಲಿ ನೆರವಿಗೆ ಬಾರದವನು ಹಗೆಗಳನ್ನು ತೀರಿಸಲೆಂದು ಎದ್ದೆ, ವಿಧಿಯ ತೊಡರಿನಿಂದಾಗಿ ಪಶುಗಳ ಜೊತೆಗೆ ಬಿದ್ದೆ. ದ್ರೋಹಿ, ದುರ್ದೈವಿ, ನಿಂದೆಯ ಕೆಸರಲ್ಲಿ ಮುಳುಗಿದೆ.. ನಾನು ಬದುಕಲು ಇನ್ನು ಅರ್ಹನಲ್ಲ, ಒಂದನ್ನೂ ಕಾಣಲಾರದವನಾಗಿದ್ದೇನೆ. ಬಾನವರ, ಮಾನವರ ಕಣ್ಣಿಗೆ ಬೀಳಲು ತಕ್ಕವನಲ್ಲ. ಸಾಕು ಇನ್ನು ರುದ್ರನಣಕ, ಈ ಶೂಲಿಯ ಅಣಕವೇ ಕೊಲ್ಲುತ್ತದೆ, ಮಹಾಬಲನು ತಾನೇ ಕಾಟ ಕೊಟ್ಟರೆ ನಾನೆಲ್ಲಿ ತಾನೇ ಓಟ ಕೀಳಲಿ? ಶರಣು ಯಾರೋ, ಶಾಂತಿಕೂಟ ಎತ್ತಲೋ. ನನ್ನ ಕಂಡು ಮರುಳು ಎಂದು ಲೋಕ ಹಾಡುತ್ತದೆ. ನನ್ನ ಹೆಸರಿಗೆ ಕೆಸರು ಅಂಟಿ ಶೋಕ ತುಂಬುತ್ತದೆ. ಪಶುಗಳೊಡನೆ ಪಶುವಾದ ನನ್ನ ನೋಟ ಪಶುಪತಿಯ ಕಣ್ಣಿಗೆ ತಂಪಾದ ನೋಟ!
ಭಾರ್ಗವಿ     ಎಂದಿಗೂ ಆಡದ ಮಾತುಗಳನ್ನಾಡುತ್ತಿದ್ದಾನೆ ಇವನು. ಎಂತಹ ಹಿರಿಮೆಯ ವ್ಯಕ್ತಿ ಹೀಗಾಗಿದ್ದಾನೆ, ಇಂತಹ ಮಾತನ್ನಾಡುತ್ತಿದ್ದಾನೆ!
ಅಶ್ವತ್ಥಾಮ      ಓ ಕನ್ನಡ ನಾಡೆ, ಸಮುದ್ರವು ಮೊರೆಯುವ ಕರಾವಳಿಯ ನಾಡೇ, ಮಲೆನಾಡೇ, ಹೊನಲಿನ ನಾಡೆ, ಬಯಲಿನ ಹೊನ್ನ ನಾಡೆ, ಹಲವು ಕಾಲ ನಿನ್ನನ್ನು ಅಗಲಿದ್ದೆ. ಅಲ್ಲಿಯೇ ಕಣ್ಣುಮುಚ್ಚಬೇಕೆಂದು ಬಯಸಿದ್ದೆ. ನನಗೆ ಆ ಪುಣ್ಯ ಎಲ್ಲಿ. ಎಲೈ ಪುಣ್ಯಕ್ಷೇತ್ರವೇ, ಅಮೃತ ತೀರ್ಥಗಳೇ, ಆರ್ಯ ನಗರಿಗಳೇ, ಸ್ವರ್ಗಗಳೇ, ದಿವ್ಯಜನವೇ, ಮನವೇ, ತಂದೆಯೊಡನೆ ಎಳವೆಯಲ್ಲಿಯೇ ನಿಮ್ಮ ಜೊತೆಗೆ ಒಂದಾಗಿ ಬೆರೆತಿದ್ದೆ. ನನ್ನ ಸ್ವಾಮಿಗೆ ನೆಚ್ಚಿಕೆಯ ಆಳಾದೆ. ಸೊಕ್ಕುಮಾತನ್ನಾಡಿದಂತಾಗುತ್ತದೆ ಇಂತಹವನು, ಇಲ್ಲವೇ ಇಲ್ಲ ಎನ್ನುವ ರೀತಿಯಾದೆ. ಈಗಲೋ ಇಂತಹವನು ಇಲ್ಲವೇ ಇಲ್ಲ ಎಂದೇ ಆದೆ. ಗಾದೆ ಮಾತಾದೆ!
ಮೇಳನಾಯಕ   ಇಂತಹ ದುಃಖವನ್ನು ತಡೆಯಲೂ ಆರೆ; ಮಾತುಗಳಲ್ಲಿ ಹೊರಹಾಕಲೂ ಆರೆ.
ಅಶ್ವತ್ಥಾಮ     ಆಹಾ, ನನ್ನ ಪೌರುಷವೇ, ನನ್ನ ಭಾಗ್ಯವೇ, ಎಂದೆಂದೂ ನಮ್ಮ ತಂದೆ ಪೂಜ್ಯರಲ್ಲಿ ಪೂಜ್ಯ, ರಾಜಗುರು, ಧರ್ಮರುಚಿ, ಶಿಷ್ಯಶತಭಕ್ತ, ಯೋಧಾಗ್ರಗಣ್ಯ, ಬ್ರಹ್ಮಜ್ಞರಲ್ಲಿ ತಾನೇ ಬ್ರಹ್ಮ, ಸೌಮ್ಯ, ಇಂತಹವನು ಜಗತ್ತೇ ತನಗೆ ತಲೆಬಾಗುವಂತೆ ಬಾಳಿದ. ಅಂತಹ ತಂದೆಯ ಪುಣ್ಯಕ್ಕೆ ತಕ್ಕವನಾಗದೆ, ನಂಬಿದ ದೇವರೇ ಕೈಬಿಡುವಂತೆ ಮಾಡಿಕೊಂಡು, ನಾನು ಮಾನಹೀನನಾಗಿ ಸಾಯುತ್ತೇನೆ. ಬದುಕಿನಲ್ಲಿ ನಾನು ಯಾವ ಸುಖ ಕಂಡೆ? ನಾನು ಯಾರಿಗಾಗಿ ಪ್ರಾಣವನ್ನೇ ತೆರಲು ಸಿದ್ಧನಿದ್ದೆನೋ, ಆತ್ಮಕಲ್ಯಾಣವನ್ನು ಕಡೆಗಣಿಸಿ ನಾನು ಯಾರ ಗುರಿಯನ್ನೇ ನನ್ನ ಗುರಿಯಾಗಿಸಿಕೊಂಡೆನೋ, ಆ ಸ್ವಾಮಿಗೆ ನಾನಲ್ಲ ಅತ್ಯಂತ ಪ್ರಿಯ, ಕರ್ಣ! ಸೇನಾಧಿಪತ್ಯವೇ, ಎಂಜಲು ಈ ಸಿಡುಕನಿಗೆ, ಹ್ಞೂ! ಈ ನಮ್ಮ ಸುಖಪುರುಷರು, ಆ ಕ್ಷುದ್ರದೇವತೆಗಳು, ನನ್ನನ್ನೇನು ಬಲ್ಲರು!
ಮೇಳ         ಬೇಡ, ಬೇಡಯ್ಯ ಗುರುವೆ!
ಅಶ್ವತ್ಥಾಮ      ಸುಮ್ಮನಿರು, ಸುಮ್ಮನಿರು. ಸರ್ವಶಕ್ತರಲ್ಲವೇ ಅವರು, ಗೊತ್ತು. ಕಣ್ಣಿಗೆ ಮಾಯೆ ಮುಸುಕದೆ, ಪ್ರಜ್ಞೆ ಕದಡಿ ಗುರಿಯಿಂದ ದೂರಾಗದೇ ಇದ್ದಿದ್ದರೆ ಯಾರೂ ನಗಲು ಇರುತ್ತಿರಲಿಲ್ಲ. ಪಾಂಡವರು, ಕೃಷ್ಣ! ಆ ರುದ್ರ ಕಾಪಾಡಿದ. ಆ ರುದ್ರ, ಉರಿಗಣ್ಣ, ಯಾರಿಗೂ ನಚ್ಚಲ್ಲದವನು, ಕೈ ತಡೆದು ಕೊಲ್ಲಲಿದ್ದ ಮರುಳುಗೊಳಿಸಿ, ಈ ಮೂಕ ಪಶುಗಳ ನೆತ್ತರಲ್ಲಿ ನನ್ನ ಕೈಯನ್ನು ತೋಯಿಸಿದ. ಈಗವರು ಗೆಲವಿನಿಂದ ಉಬ್ಬುತ್ತಾರೆ - ನನ್ನ ಪ್ರೀತಿಯಿಂದಲ್ಲ. ದೈವ ತಪ್ಪಾಗಿ ನಡೆಸಿದರೆ ಕಲಿಯೂ ಎಡವುತ್ತಾನೆ; ಹೇಡಿ ಬದುಕುತ್ತಾನೆ, ನಗುತ್ತಾನೆ. ಈಗೇನು ಮಾಡಲಿ ನಾನು? ಕಂಡ ಹಾಗೇ ದೇವರು ಕೈಬಿಟ್ಟವನು, ವೀರರ ಕಣ್ಣಲ್ಲಿ ನಗೆಪಾಟಲಾದವನು, ಎಲ್ಲವನ್ನೂ ಹೊರುವ ಈ ತಾಯಿ ಮುಟ್ಟಿದರೂ ಮುನಿಯುವಂತಹವನು. ಈ ಪಾಳೆಯವನ್ನು ಬಿಟ್ಟು ತವರೂರಿಗೆ ಹೋಗಲೇ, ವಿಂಧ್ಯವನು ದಾಟಿ? ಯಾವ ಮುಖವಿಟ್ಟುಕೊಂಡು ಬರುವ ನಂಟರನ್ನು ನೋಡಲಿ? ತಂದೆಯೂ ಇಲ್ಲ, ನನ್ನ ಹಿರಿಮೆಯೂ ಉಳಿದಿಲ್ಲ. ಆಗದು, ಅದು ಎಂದಿಗೂ ಆಗದು. ಮತ್ತೇನು? ಹಗಲು, ಸೂರ್ಯದೇವನೇ ಸಾಕ್ಷಿಯಾಗಿರುವಾಗ, ವೈರಿಗಳ ನಡುವೆ ನೇರವಾಗಿ ನುಗ್ಗಿ, ಏಕಾಕಿಯಾಗಿ ಮೂದಲಿಸಿ ಕೆರಳಿಸಿ ಸುತ್ತಲಿಂದ ಬಂದು ನಾಟಿಕೊಳ್ಳುವ ಬಾಣಗಳಿಗೆ ಬಲಿಯಾಗಲೇ? ಅದರಿಂದ ಹಗೆಗಳಿಗೆ ಸಂತೋಷ, ಜಯದ ಮುಡಿ. ಬೇರೇನು, ಬೇರೆ ಇನ್ನೇನು? ಸಾಹಸವೊಂದನ್ನೇನಾದರೂ ಮಾಡಿ, ಮಗ ಅಪ್ರತಿಮ ಕಲಿ, ಎದೆಯುಕ್ಕಿನಿಂದ ಸತ್ತನೆಂದು ನಮ್ಮಯ್ಯನಿಗೆ ಗುರುಗೆ ತೋರಿಸಬೇಕು. ಎಡೆಬಿಡದೆ ದುಃಖಗಳೊತ್ತುತ್ತಿದ್ದರೂ ನಿಡುಬಾಳನ್ನು ಬಯಸಿ ಬದುಕುವವನು ಅಂಜುಕುಳಿ, ಕೀಳ. ಪ್ರತಿ ಹಗಲೂ ಮುಂದೆ ಸರಿದು, ಹಿಂಜರಿದು ಸಾವಿತ್ತಲೇ ಸಾಗುವ ಪ್ರಯಾಣದಲ್ಲೇನು ಸಂತಸವೋ! ತೆಗೆ ತೆಗೆ, ನಾನೊಲ್ಲೆ. ಇಲ್ಲದಾಸೆಗೆ ಕಿಚ್ಚುಕಾಯಿಸುವ ಮುಕ್ಕನನ್ನೂ ನಾ ಮೆಚ್ಚೆ. ತಕ್ಕವನು ತಕ್ಕ ರೀತಿಯಲ್ಲೇ ಬಾಳುತ್ತಾನೆ, ತಕ್ಕಂತೆ ಸಾಯುತ್ತಾನೆ. ನನ್ನ ಮನಸ್ಸಿನಲ್ಲಿದ್ದುದನ್ನು ಕೇಳಿದಿರಲ್ಲ.
ಮೇಳನಾಯಕ   ನಿನ್ನ ಮಾತುಗಳು ನಾಲಗೆಯ ತುದಿಯಿಂದಲ್ಲ, ಎದೆಯಾಳದಿಂದ ಬಂದುವು, ನಮಗೆಲ್ಲ ತಿಳಿದಿದೆ. ಆದರೂ ದುಡುಕಬೇಡ, ಗೆಳೆಯರ ಮಾತಿಗೆ ಕಿವಿಗೊಟ್ಟು ಈ ಛಲಪಿಶಾಚಿಯನ್ನು ಮನಸ್ಸಿನಿಂದ ಹೊರಗೋಡಿಸು.
ಭಾರ್ಗವಿ     ಓ ನನ್ನ ಕಂದ ಅಶ್ವತ್ಥಾಮ! ವಿಧಿಗಿಂತಲೂ ಮನುಷ್ಯರಿಗೆ ಕ್ರೂರವಾದದ್ದು ಬೇರೊಂದಿಲ್ಲ. ಭೃಗುವಂಶದಲ್ಲಿ ಪರಶುರಾಮನ ತಂಗಿಯಾಗಿ ಹುಟ್ಟಿದೆ. ಈಗೇನಾದೆ! ಕೇಳು, ದೈವೇಚ್ಛೆಯನ್ನು: ಜಮದಗ್ನಿ, ನನ್ನ ತಂದೆ, ನನ್ನನ್ನು ಆ ಋಷಿ ಭಾರದ್ವಾಜನಿಗೆ ಕೊಟ್ಟ ದಾನವಾಗಿ ಕೊಟ್ಟ. ಅವನೊಡನೆ ಕಾಡುಮೇಡುಗಳಲ್ಲಿ ಅಲೆದೆ, ಆ ವೀರಶ್ರೀಯ ಮಂಗಳದ ಕಳಶವೆಂಬಂತೆ ನನ್ನ ಬಸಿರಲ್ಲಿ ಲೋಕೈಕಬಾಣನಾದ ದ್ರೋಣನನ್ನು ಹೆತ್ತೆ. ಅವನ ಮುಖ ಕಾಣುವ ಮುಂಚೆಯೇ ಯಮ ಇನಿಯನನ್ನು ಕರೆದೊಯ್ದ. ಹೊತ್ತವನನ್ನು ಹೆತ್ತೆ, ನಡೆಸಿದೆ, ಒಬ್ಬ ಯೋಧನನ್ನಾಗಿ ಮಾಡಿದೆ. ಬಡತನದಲ್ಲಿ ಎಲ್ಲೆಡೆಯಿಂದ ತಿರಿದು ತಂದು ಬಾಳುವವನಿಗೆ ನೀನು ಹುಟ್ಟಿ, ಅಂದೇ ತಾಯನ್ನು ತಿಂದುಕೊಂಡೆ. ಮಗುವಿಗೆ ಹಾಲಿಗೆ ಗತಿಯಿಲ್ಲ; ರಾಜರಲ್ಲಿ ಸ್ನೇಹ, ಆದರೆ ಊಟಕ್ಕಿಲ್ಲ. ಕಂಗೆಟ್ಟ ಮಕ್ಕಳನ್ನು ಕುರುಕ್ಷೇತ್ರಕ್ಕೆ ಕರೆತಂದೆ, ಅರಸರಲ್ಲಿ ಗುರುತನದ ಮನ್ನಣೆಯನ್ನನುಭವಿಸಿದೆ, ಭಾರತವೆಂಬ ದೊಡ್ಡ ಕಿಚ್ಚು ಹೊತ್ತಿತು; ಮಗ ಬೂದಿಯಾದ, ಬೆಂದ ಒಡಲಿಗೆ ಉಳಿದವನು ನೀನೊಬ್ಬ. ಬುದ್ಧಿವಂತನಾಗು, ತಿಳಿಗೇಡಿಯಾಗು, ಕಲಿಯಾಗು, ಹೇಡಿಯಾಗು, ನೀನೊಬ್ಬನಿದ್ದೀಯ. ಹೋಗಬೇಡ, ಹೋಗಬೇಡ, ನಿನ್ನ ಕಾಲುಕಟ್ಟಿ ಬೇಡುತ್ತೇನೆ, ಹೋಗಬೇಡಯ್ಯ, ನನ್ನ ಕಂದ ಅಶ್ವತ್ಥಾಮ! ನನ್ನನ್ನು ಯಾರಿಗೊಪ್ಪಿಸಿ ಹೋಗುತ್ತೀಯಾ? ನೀನು ಹೋದ ಮರುಗಳಿಗೆಯೇ ಅಡಗಿದ್ದ ಶೂರರೆಲ್ಲ ಬಂದು ಈ ತೊತ್ತನ್ನು ಎಳೆದುಕೊಂಡು ಹೋಗಿ ಎಂದು ನಿನ್ನ ಮಗನೊಡನೆ ನನ್ನನ್ನು ಬಯ್ದು ಕರೆದೊಯ್ಯದಿರುತ್ತಾರೆಯೇ? ನಿಮ್ಮ ಕುಲಕ್ಕೆ ಇದರಿಂದ ಶ್ರೇಯಸ್ಸೇ? ನಿನಗೆ ಕೀರ್ತಿಯೇ? ಇದನ್ನು ಆಲೋಚಿಸಬೇಡವೇ? ನಿನ್ನ ತಂದೆಯನ್ನು ನೆನೆಸಿಕೋ - ಸಾವಿನ ಸುಳ್ಳು ಸುದ್ದಿಯನ್ನು ಕೇಳಿ ಬಿಲ್ಲು ಬಿಸುಟು ಸತ್ತ. ನಿನ್ನ ತಾಯಿ ಹೆರಿಗೆ ನೋವನ್ನು ಮರೆತು ನಿನನ್ನನ್ನು ಹರಸಿ, ‘ನೂರ್ಕಾಲ ಬಾಳು, ಮುದ್ದು ಮಗು, ಹಿರಿಯ ಹೆಸರನ್ನು ಪಡೆ’ ಎಂದು ಮುತ್ತಿಟ್ಟು ನಡೆದಳು. ಪಿತೃಲೋಕಕ್ಕೀಗ ನೀನು ಹೋದರೆ, ನಿನ್ನನ್ನಿದಿರುಗೊಳ್ಳಲು ಅವರಿಗೆ ಆನಂದವಾಗುತ್ತದೆಯೇ? ನಿನ್ನ ಮಗನಿದ್ದಾನೆ, ಇನ್ನೂ ಹಸುಗೂಸು, ತಾಯಿ ಕೂಡ ಇಲ್ಲ. ತಂದೆಯೂ ಅವನನ್ನು ತೊರೆದರೆ ಅವನು ಹೇಗೆ ಬಾಳಿಯಾನು? ನೋಡಿಕೊಳ್ಳುವವರು ಯಾರು? ಕಲಿಸುವವರು ಯಾರು? ಹೇಳು. ಪ್ರೀತಿಯಿಂದ ಹಿರಿಮೆಯ ನೆಲೆಗೆ ತರುವವರು ಯಾರು? ಓ ನನ್ನ ಕಂದ ಅಶ್ವತ್ಥಾಮ, ನೀನು ಸತ್ತು ನಮ್ಮನ್ನೂ ಸಾಯುವಂತೆ ಮಾಡುತ್ತೀಯ. ನೀನಲ್ಲದೆ ನನಗೆ ಬೇರೆ ಯಾರಿದ್ದಾರೆ? ಯಾವ ಮನೆ, ಯಾವ ದಿಕ್ಕು ಉಳಿದಿದೆ ನನಗೆ? ನಿನ್ನಲ್ಲೇ ನನ್ನ ಬಾಳು, ಪ್ರೀತಿಯಿಂದ ಪ್ರೀತಿ ಹುಟ್ಟಬೇಕಲ್ಲವೇ? ಯೋಗ್ಯನಾದವನು ನಲಿವನ್ನು ಒಂದು ಕಡೆಯಿಂದ ಪಡೆದು ಮರೆಯುತ್ತಾನೆಯೇ? ಮರೆತರೆ ಯೋಗ್ಯ ಹೇಗಾದಾನು?
ಮೇಳನಾಯಕ   ಅಶ್ವತ್ಥಾಮ, ನನ್ನಂತೆ ನೀನೂ ಅವಳಿಗಾಗಿ ಮರುಗಬೇಕು.
ಅಶ್ವತ್ಥಾಮ      ಮರುಗುತ್ತೇನೆ, ಮರುಗುತ್ತೇನೆ. ಆದರೆ ಹೇಳಿದಂತೆ ಕೇಳುತ್ತಾಳೆಯೇ?
ಭಾರ್ಗವಿ        ಹೇಳು ಕಂದ, ಏನು ಹೇಳಿದರೂ ಮಾಡುತ್ತೇನೆ.
ಅಶ್ವತ್ಥಾಮ       ನನ್ನ ಮಗ, ಎಲ್ಲವನು? ಕರೆದುಕೊಂಡು ಬಾ, ನೋಡುತ್ತೇನೆ.
ಭಾರ್ಗವಿ        ಹೆದರಿಕೆಯಾಯ್ತು, ಕೂಸು ಬೀಡಿನಿಂದ ಹೊರಗೆ ಕಳಿಸಿದ್ದೇನೆ.
ಅಶ್ವತ್ಥಾಮ       ನನಗೆ ಬಂದ ಕಷ್ಟ ಕಂಡೋ? ಬೇರೇನಾದರೂ ಯೋಚಿಸಿದೆಯೋ?
ಭಾರ್ಗವಿ        ಹಸುಳೆ, ಪಾಪ, ಓಡಿಬಂದರೆ ಕಂಡು ಕೊಲ್ಲುತ್ತೀಯೇನೋ ಎಂದು.
ಅಶ್ವತ್ಥಾಮ      ಅಯ್ಯೋ, ಇನ್ನು ಅದೊಂದೇ ಭಾಗ್ಯ ನನ್ನ ಯೋಗ್ಯತೆಗೆ ಉಳಿದಿರುವುದು!
ಭಾರ್ಗವಿ        ಕಾವಲಿದ್ದು, ನಾನು ಅದನ್ನು ತಪ್ಪಿಸಿದೆ.
ಅಶ್ವತ್ಥಾಮ      ನಿನ್ನ ಮುಂದಾಲೋಚನೆಯನ್ನು ಹೊಗಳಬೇಕಾದ್ದೇ, ಅಜ್ಜಿ.
ಭಾರ್ಗವಿ       ಈಗೇನು ಹೇಳು, ನಾನು ಮಾಡಬೇಕಾದ್ದು?
ಅಶ್ವತ್ಥಾಮ      ಮಗನನ್ನೊಮ್ಮೆ ನೋಡುತ್ತೇನೆ, ಮಾತಾಡುತ್ತೇನೆ.
ಭಾರ್ಗವಿ       ಓಡಿಹೋಗಿ ನಾನೇ ಕರೆತರುತ್ತೇನೆ.
                                               (ಹೋಗುತ್ತಾಳೆ)
ಅಶ್ವತ್ಥಾಮ      ಬರುತ್ತಾಳೋ, ಇಲ್ಲವೋ!
ಮೇಳನಾಯಕ   ಬಂದಳು, ಇಗೋ ಬಂದಳು.
                                  (ಭಾರ್ಗವಿ, ರುದ್ರಶಕ್ತಿಯೊಡನೆ ಬರುತ್ತಾಳೆ)
ಅಶ್ವತ್ಥಾಮ      ಎತ್ತಿಕೊಡು, ಬಾ, ಮಗುವನ್ನು ಕೈಗೆತ್ತಿಕೊಡು. ನನ್ನ ಮಗನಾಗಿ ಇವನು ಅಂಜುವುದಿಲ್ಲ, ಈ ಘೋರವನ್ನು ಕಂಡು. ಈಗಿನಿಂದಲೇ ತಂದೆಯ ಒರಟುತನಕ್ಕೆ ಕುದುರೆಯ ಹಾಗೆ ತಿದ್ದಿ ಪಳಗಿಸಬೇಕು. ಕಂದ, ತಂದೆಗಿಂತಲೂ ಅದೃಷ್ಟದಲ್ಲಿ ಮಿಗಿಲಾಗು; ಮಿಕ್ಕೆಲ್ಲ ನಡತೆಯಲ್ಲಿ ಅವನಂತೆಯೇ ಆಗು, ಕಳಂಕ ಹತ್ತದ ಹಿರಿಯ ಹೆಸರನ್ನು ಪಡೆ. ಏನು ಸುಖ, ಏನು ಶಾಂತಿ ಮುಖದಲ್ಲಿ! ನೀನು ಅರಿಯೆ ನನ್ನ ಸಂಕಟವನ್ನು ಅಜ್ಞಾನವೇ ಸುಖ! ತಿಳಿವು ಬಂದ ಮೇಲೆ ತಂದೆ ಯಾರು, ನಿನ್ನ ಉಕ್ಕು ಎಂತಹುದು ಎಂದು ಹಗೆಗಳಿಗೆ ತೋರಿಸಬೇಕು ಮಗನೆ. ಅಲ್ಲಿಯವರೆಗೆ ತಂಗಾಳಿಯಲ್ಲಿ ಸುಳಿದು, ಹಸುಳೆತನವನ್ನು ಸವಿದು, ಇವಳ, ಈ ನಮ್ಮ ಮನೆಯ ದೇವತೆ, ಇವಳ ಕಣ್ಮಣಿಯಾಗಿ ನೀನು ಬಾಳಪ್ಪ. ನಾನು ಹೋದಮೇಲೆ ನಿಮ್ಮನ್ನಾರೂ ಜರೆಯಬಾರದು, ಅಂತಹ ರಕ್ಷಕರನ್ನು ನೇಮಿಸುತ್ತೇನೆ. ನನ್ನ ತಂದೆಯ ಶಿಷ್ಯ, ನನ್ನ ಗೆಳೆಯ, ಬೇಟೆಯಲ್ಲಿದ್ದು, ಹೊತ್ತು ಕಳೆದ ಮೇಲೆ ಬಾರದಿರನು, ಆ ಏಕಲವ್ಯ. ಬೇಟೆಯ ಹುಲಿಗಳೇ, ಗೆಳೆಯರೇ, ನಿಮ್ಮಲ್ಲೂ, ಅವನಲ್ಲೂ, ಈ ಅಕ್ಕರೆಯ ಹೊರೆಯನ್ನಿಟ್ಟಿದ್ದೇನೆ. ಆತನಿಗೆ ಹೇಳಿ, ನಮ್ಮ ಪ್ರೀತಿಯ ನಾಡಿಗೆ ಈ ಮಗುವನ್ನು ಕರೆದೊಯ್ಯಿರಿ. ನಮ್ಮದೊಂದು ಕಿಡಿ ಬೆಳೆಯಲಿ. ನನ್ನ ಆಯುಧಗಳು ಹಗೆಯ ಕೈಗೆ ಬೀಳದ ಹಾಗೆ ನೋಡಿಕೊಳ್ಳಿ. ಬಾ ರುದ್ರಶಕ್ತಿ, ಹಿಡಿ, ಈ ಬಿಲ್ಲುಬಾಣಗಳನ್ನು. ಹಿರಿಯ ದೇವತೆಗಳಿಂದ ಬಂದದ್ದು ಇದು - ಪರಶುರಾಮನದು ದ್ರೋಣನದು - ನಿನ್ನ ತಂದೆಯದು. ಮೆಲುವಾಗಿ ಕೈಗಳಿಂದ ಈ ದಿವ್ಯಧನುವನ್ನು ಹಿಡಿ .. .. ಆಹ, ಎಲ್ಲಿ ಒಂದು ಬಾಣವನ್ನು ಹೂಡು, ಹೀಗೆ ಹೀಗೆ, ಭೇಷ್ ಭೇಷ್, ಗೆಲುವಾಗಲಿ!
                                             (ಬಾಗಿಲಲ್ಲಿ)
ಮಿಕ್ಕವೆಲ್ಲ ನನ್ನೊಡನೆಯೇ ಬರಲಿ. ಕರೆದುಕೋ ಇವನನ್ನು. ಬಾಗಿಲನ್ನು ಮುಚ್ಚು. ಇದೇನು ಕಣ್ಣಿರು! ಅಳಬೇಡ, ಅಳಬೇಡ; ಹೆಣ್ಣು ಅಳುವುದು. ಬಾ ಒಳಗೆ, ಹುಣ್ಣು ಕತ್ತರಿಸುವಾಗ ಮಂತ್ರವನ್ನು ಮಣಮಣಿಸುವವನು ಮರುಳು ವೈದ್ಯ.
ಮೇಳನಾಯಕ   ಕಬ್ಬು ಕಡಿದಂತೆ ನೀನು ಹೀಗೆ ಮಾತಾಡಿದರೆ ಏನನೆನ್ನಬೇಕು? ನಿನ್ನ ಹರಿತ ನಾಲಗೆಗೆ ನನ್ನ ಧೈರ್ಯವೇ ಕುಸಿಯಿತು.
ಭಾರ್ಗವಿ       ಕಂದ ಅಶ್ವತ್ಥಾಮ, ಏನು ನಿನ್ನ ನಿರ್ಧಾರ?
ಮೇಳನಾಯಕ   ಕೇಳಬೇಡ, ಕೆಣಕಬೇಡ. ನಿನಗೆ ಮೌನವೇ ಒಳ್ಳೆಯದು.
ಭಾರ್ಗವಿ       ಅಯ್ಯೋ, ಎದೆ ನಡುಗುತ್ತದೆ. ಬೇಡುತ್ತೇನೆ, ಮಗನಾಣೆ, ಆ ದೇವತೆಗಳಾಣೆ, ನಮ್ಮನ್ನು ಹೀಗೆ ತೊರೆಯಬೇಡ.
ಅಶ್ವತ್ಥಾಮ      ನನಗಿನ್ನು ಸಿಟ್ಟು ಬರುತ್ತದೆ, ಅಷ್ಟೆ. ಆ ದೇವತೆಗೂ ನನಗೂ ಇದ್ದ ಋಣ ಹರಿದುಹೋಯಿತೆಂದು ತಿಳಿಯದೇ?
ಭಾರ್ಗವಿ       ಬಾ ಮಗು, ಸಾಕಿನ್ನು ಈ ಕ್ಷಾತ್ರ. ತವರಿನ ಅಡವಿ ನೆರಳಲ್ಲಿ ತಪಸ್ಸು ಮಾಡಿ ರೆಕ್ಕೆಮುರಿದ ಆತ್ಮವನ್ನು ಸಂತೈಸೋಣ.
ಅಶ್ವತ್ಥಾಮ      ತಪಸ್ಸು! ಎಂತಹ ತಪಸ್ಸು, ಏಲೆ, ಯಾರಿಗಾಗಿ? ಬಾಳು ಬರಿದಾದಾಗ, ಸಾವು ತಾನೇ ಪೂರ್ಣ?
ಭಾರ್ಗವಿ       ಹಾ! ಹಾ!
ಅಶ್ವತ್ಥಾಮ      ಕೇಳುವವರನ್ನು, ಮೇಲಿನವರನ್ನು, ಬೇಡಿಕೋ.
ಭಾರ್ಗವಿ       ನೀನು ಕೇಳುವುದಿಲ್ಲವೇ?
ಅಶ್ವತ್ಥಾಮ      ನನ್ನ ಕಿವಿಯ ತುಂಬ ನೀನೇ!
ಭಾರ್ಗವಿ       ಕೆಟ್ಟೆ! ಕೆಟ್ಟೆ!
ಅಶ್ವತ್ಥಾಮ      ಒಳಗೆ ಬಾ, ಸಾಕು.
ಭಾರ್ಗವಿ       ಕರಗು, ಕರಗು ಕಂದ, ದೇವತೆಗಳು ಒಲಿಯುತ್ತಾರೆ.
ಅಶ್ವತ್ಥಾಮ      ನಿನಗೆಲ್ಲೋ ಮರುಳು! ನನ್ನ ಉಕ್ಕನ್ನು ಈಗ ಕರಗಿಸುತ್ತಿಯೆ, ಅಷ್ಟೆ.
                                    (ಹೋಗುವರು. ಬಾಗಿಲು ಮುಚ್ಚುವುದು)
ಮೇಳ
1 (1)
                         ಚೆಲುವಿನ ನೆಲೆ, ಕಣ್ಗಳ ಬಲೆ, ಸುಖಚಿಲುಮೆಯ ಬನವಾಸೀ,
                         ಬೆಳೆದಲೆದಾ ಮಲೆಕಾಡನು ನಾ ಮರೆವೆನೆ ಬನವಾಸೀ!
                         ಭಾರತದೀ ಸುಳಿಗಾಳಿಗೆ ಸಿಕ್ಕುತ ನಾ ತರಗಾದೆ;
                         ಶಶಿ ತುಂಬಲು, ಶಶಿ ನವೆಯಲು, ಮನೆ ಕಾಣದೆ ಬಡವಾದೆ;
                         ನಿನ್ನನೆ ನೆನೆನೆನೆಯುತ ತಾಯ್, ಹಂಬಲಿಸುವ ನೋವೊಂದೇ!
                        ಇನ್ನೆನಗೇನಾಸೆಯಿದೆ, ಮುಂದಿರುವುದು ಸಾವೊಂದೇ!
                                               1 (2)
                        ಹಿರಿಮೆಯ ನೆಲೆ, ಪಡುಗಡಲಲೆ ಸುಖವೆರಚುವ ಬನವಾಸೀ,
                        ನೀ ಕಳಿಸಿದ ಹಿರಿಭಟರವರೇನಾದರೊ ಬನವಾಸೀ!
                        ಗುರು ಮಡಿದನು; ಮರುಳಮರಲು ಗುರುಪುತ್ರನು ಮಡಿವ,
                        ನಿರ್ದಯ ದೈವದ ಕೈಯಲಿ ಬಿಡುಗಡೆಗಾಣದೆ ಮಡಿವ.
                        ತಾನೊಬ್ಬನೆ ಕುದಿಗೊಳ್ಳುವ, ಒಲಿದರ ನುಡಿಗಳನೂ ಒಲ್ಲ
                        ಜಾರಿತು ಹಿಂದಿನ ಉಬ್ಬು! ಹಿಂದಿನವನು ತಾನಲ್ಲ!
                                               2 (1)
                        ಬಾಳಿನ ಕಡೆಯಲಿ ಬಾಗಿದ ಮುದುಕಿ,
                        ತಾಯಿರದವನನು ಬೆಳೆಸಿದ ಮುದುಕಿ,
                        ಕಂದನ ಕೇಡನು ಕಾಣಲು ಉಳಿದಳೆ?
                        ನರೆದಲೆ ದುಃಖದ ಮಡುವಲಿ ಬಿದ್ದಳೆ!
                        ಕೇಳುವರಾರೀ ಗೋಳನು ಸಲ್ಲ,
                        ಸೋರೆಯ ನುಲಿನುಲಿ ಮೆಲ್ಲುಲಿಯಲ್ಲ.
                        ಕೂಗುತ, ಚೀರುತ, ಎದೆಯ ಹೊಯ್ಯುವಳು
                        ಕೂದಲ ಕೀಳುತ, ವಿಧಿಯ ಬಯ್ಯುವಳು!
                                              2 (2)
                        ಈ ಬಾಳಿಗಿಂತಲೂ ಸಾಯ್ವುದೆ ಸುಖವು!
                        ಮತಿ ಹಾಳಾಗಲು, ಸಾಯ್ವುದೆ ಸುಖವು!
                        ಎಂತಹ ಮನೆತನ, ಕಲಿತನದುಕ್ಕು
                        ವೀರರ ಸಾಲಲಿ ಮೆರೆಯುವ ಸೊಕ್ಕು!
                        ದ್ರೋಣ ರಾಮರಲಿ ಕಲಿಕೆಯ ಪಡೆದ
                        ಒಳಬೆಳಕಿಲ್ಲದೆ ಕಣ್ ಕುರುಡಾದ,
                        ಮೈಯಲಿ ಮರುಳನು ಕೂಡಿಸಿಕೊಂಡ
                        ತನ್ನರಿವನೆ ತಾನೋಡಿಸಿಕೊಂಡ.
                              (ಅಶ್ವತ್ಥಾಮ ಖಡ್ಗ ಹಿಡಿದು ಪ್ರವೇಶ, ಭಾರ್ಗವಿ)
ಅಶ್ವತ್ಥಾಮ       ಕಾಲಚಕ್ರ ಉರುಳಿದರೆ, ಕತ್ತಲು ಬೆಳಕಾಗುತ್ತದೆ, ಇದ್ದುದು ಇಲ್ಲವಾಗುತ್ತದೆ. ಇಂಥದು ಆಗುವುದಿಲ್ಲ ಎನ್ನುವಂತಿಲ್ಲ. ಘೋರ ಪ್ರತಿಜ್ಞೆ-ಛಲಗಳು ತಮಗೆ ತಾವೆ ಓಡುತ್ತವೆ! ಕದಲದೆ, ವಜ್ರದಂತಿದ್ದ ನಾನೂ ಈ ಹೆಣ್ಣಿನ ಗೋಳು ಕೇಳಿ, ಎದೆ ಕರಗಿ, ಉಕ್ಕುಡುಗಿ, ಬೇರೆ ರೀತಿಯಾದೆ. ಮರುಗಿದೆ ಗಹೆಗಿಳು ತೊತ್ತಾಗಿ ಹಸುಳೆ ತಬ್ಬಲಿಯಾಗುವಂತೆ ನಾ ಹೋಗಲಾರೆ. ಇನ್ನೊಂದು ಮಾಡುತ್ತೇನೆ, ಈ ಕ್ಷೇತ್ರದಲ್ಲಿ ಮೆರೆಯುವ ತೀರ್ಥದಲ್ಲಿ ಮುಳುಗಿ ಅಂಟಿದ ಈ ಕರೆಯನ್ನು, ನನ್ನ ಉಗ್ರದೇವತೆಯ ಕೋಪವನ್ನು ತೊಳೆದು ತೆಗೆಯುತ್ತೇನೆ. ಜನ ಸುಳಿಯದ ಜಾಗವೊಂದನ್ನು ಹುಡುಕಿ, ಆಳವಾದ ಗುಳಿ ತೆಗೆದು, ಯಾರೂ ಕಾಣದಂತೆ, ಈ ಕ್ರೂರ ಖಡ್ಗವನ್ನು ಮೃತ್ಯುವನ್ನೂ, ಆ ಕಾಳರಾತ್ರಿಯನ್ನೂ, ನೆಲದಡಿಯ ಲೋಕದಲ್ಲಿ ಎಂದೆಂದೂ ಹೂತುಬಿಡುತ್ತೇನೆ! ಇದನ್ನು ನನಗೆ ಅಭಿಮನ್ಯು ಕೊಟ್ಟ ದಿನದಿಂದ ಒಳ್ಳೆಯದನ್ನೇ ನಾನು ಕಂಡಿಲ್ಲ. ಹಿರಿಯರಾಡುವ ಮಾತಿದೆಯಲ್ಲ - ಹಗೆಯ ಮೆಚ್ಚಿಕೆಯು ಮೆಚ್ಚಿಕೆಯಲ್ಲ, ಅದರಿಂದ ಒಳ್ಳೆಯದಾಗದು ಎಂದು ಅದು ನಿಜ. ಆಯ್ತು, ಮುಂದಕ್ಕೆ ಅದನ್ನು ಕಲಿಯೋಣ. ಇನ್ನು ಮುಂದೆ ದೇವತೆಗೆ ಬಾಗುತ್ತೇನೆ, ಪಾಂಡವರಿಗೆ ಎರಗುತ್ತೇನೆ. ಆಳುವವರು ಅವರೇ ಅಲ್ಲವೇ? ನಾವು ತಗ್ಗಬೇಕು. ಎಂತಹ ರೌದ್ರವಾಗಲೀ ಶಕ್ತಿಯಾಗಲೀ ಮೇಲಧಿಕಾರಕ್ಕೆ ಬಾಗಬೇಕು. ಹಲ್ಲು ಕೊರೆಯುವ ಶೀತಲ ಹೇಮಂತ, ಹೊತ್ತು ಬಂದಾಗ, ಮುಪ್ಪಾಗಿ, ಎಳೆಚಿಗುರ ಚೈತ್ರನಿಗೆ ದಾರಿಬಿಟ್ಟು ಹೋಗುತ್ತಾನೆ! ಕಗ್ಗತ್ತಲ ರಾತ್ರಿ ಬೆಳ್ಗುದುರೆಯ ಸೂರ್ಯನಿಗೆ ಬೆನ್ನು ತೋರಿಸಿ ಓಡುತ್ತದೆ. ಬಿರುಗಾಳಿ ಬೀಸಿ, ಅಬ್ಬರಿಸಿ, ಕಡಲನ್ನು ತಣಿಸಿ, ಕೊನೆಗೆಲ್ಲೋ ಅಡಗುತ್ತದೆ. ವಿಶ್ವವನ್ನೇ ಸೆರೆ ಹಿಡಿದು ಕೆಡಹುವ ನಿದ್ದೆಯೂ ಎಲ್ಲ ಕಾಲಕ್ಕೂ ಹಿಡಿದಿಡದೆ ಸಡಿಲಬಿಟ್ಟು ನಡೆಯುತ್ತದೆ. ವಿವೇಕವನ್ನು ಕಲಿಯುವುದಿಲ್ಲ ಎನ್ನಲು ಮತ್ರ್ಯರು ನಾವು ಯಾರು? ಇಗೋ ನಾನು ಕಲಿತೆ. ಹೊಸತನ್ನೀಗ ಅರಿತಿದ್ದೇನೆ; ಒಮ್ಮೆ ಹಗೆಯಾದವನು ಗೆಳೆಯನಾಗುತ್ತಾನೆ, ಗೆಳೆಯ ಹಗೆಯಾಗುತ್ತಾನೆ. ಅದರಿಂದಾಗಿ ಕಡುಪ್ರೀತಿ ತರವಲ್ಲ; ಕಡುಹಗೆಯೂ ತರವಲ್ಲ. ಮನುಷ್ಯನಿಗೆ ಸ್ನೇಹವೆನ್ನುವುದು ಹುಸಿಯ ಆಧಾರ .. .. ಈಗ ನನಗೆ ಎಲ್ಲವೂ ಸರಿಯಾಗುತ್ತದೆ. ಎಲೆ ತಾಯೆ, ನೀನಿನ್ನು ಒಳಗೆ ಹೋಗು; ನನ್ನೆದೆಯ ಆಸೆಗಳು ಕೂಡಿಬರಲಿ ಎಂದು ದೇವತೆಗಳನ್ನು ಬೇಡು.
(ಭಾರ್ಗವಿ ಹೋಗುತ್ತಾಳೆ)
ಗೆಳೆಯರೇ, ಇನ್ನು ನೀವೂ ಅವಳಂತೆಯೇ ನನ್ನ ಮನಸ್ಸನ್ನು ಅರಿತು ನಡೆದುಕೊಳ್ಳಿರಿ. ಏಕಲವ್ಯ ಮರಳಿದಾಗ, ನಮ್ಮಲ್ಲಿ ನಿಮ್ಮಲ್ಲಿ ಮರುಕವಿರಬೇಕೆಂದು ನೀವು ಹೇಳಿ. ಎಲ್ಲಿ ಹೋಗಬೇಕೋ ಅಲ್ಲಿಗೆ ಹೋಗುತ್ತೇನೆ ನಾನು. ಇಷ್ಟರಲ್ಲಿಯೇ ನೀವೂ ಕೇಳುತ್ತೀರಿ ಈ ಸಂಕಟವನ್ನು ಕಳೆದು ನಿಮ್ಮ ವೀರ ಬಿಡುಗಡೆಗೊಂಡ ಶುಭವಾರ್ತೆಯನ್ನು.
                                           (ಹೋಗುತ್ತಾರೆ)
ಮೇಳ
1
                                  ಹೋ, ಆನಂದ, ಹಿರಿಯಾನಂದ!
                           ನೆಗೆಯುವ ಕುಣಿಯುವ ಅಧಿಕಾನಂದ!
                                      ಓ ಶಿವ ಬಾರಾ!
                                      ಓ ಶಿವ ಬಾರಾ!
                          ಬೆಳ್ಳಿಯ ಬೆಟ್ಟದ ತುದಿಬೀಡಿಂದ
                          ತೆಂಕಣ ನಾಡಿನ ಗುಡಿಕೋಡಿಂದ.
                          ಒಂದೇ ನೆಗೆತವ ನೆಗೆಯುವ ಬಾರಾ
                                      ಬಾ, ನಟರಾಜಾ
                                       ಬಾ, ನಟರಾಜಾ
                          ಲೋಕವು ಹುಟ್ಟಲು, ಲೋಕವು ಅಳಿಯಲು
                          ದೇವತೆ ಗಣವೆಲ್ಲವು ನೆಗೆದಾಡಲು
                          ಒಬ್ಬನೆ ತಾಂಡವವಾಡಲು ರಾಜಾ,
                          ನಾಟ್ಯವ ಕಲಿಸುವ ಓ ನಟರಾಜಾ,
                          ಕುಣಿಯುವೆ, ಕಲಿಸೆನಗೀಗಲೆ ಬಾರಾ
                                        ಕುಣಿವೆನು ಬಾರಾ
                                 ಓ ಶಿವ, ಬಾರಾ!
                                  ಕತ್ತಲೆ ಕಣ್ಣಿಂದೋಡಿತು ನೋಡು
                           ಭ್ರಮೆಯಾ ಕತ್ತಲೆ ನವೆಯಿತು ನೋಡು!
                                         ಹೋ! ಆನಂದ!
                                  ಹಿರಿಯಾನಂದ!
                                   ಕಣ್ಣನು ಮುಸುಕಿದ ಕತ್ತಲೆಯೋಡೆ
                                   ಬಗೆಯಲಿ ಶಿವನಾ ಬೆಳುಬೆಳಕಾಡೆ,
                            ಮೂಡಿತು ನೇಸರು, ಜೀವಾನಂದ   
                                         ಓ ಶಿವ, ಶಂಕರ
                                         ಓ ಶಿವ, ಶಂಕರ
                            ಬದುಕಿದನೇ ನಮ್ಮಶ್ವತ್ಥಾಮ!
                            ತಿರುಗಿದನೇ ಆ ರುದ್ರಪ್ರೇಮ!
                            ತಿರುಗಲು ಭಕ್ತಿಗೆ, ಸೇವೆಗೆ, ಶಂಕರ
                            ಯಾವುದು ಆಗದು, ಓ ಶಿವ, ಶಂಕರ
                            ಕುಣಿವೆನು, ಕರುಣಿಸು ನನಗಾನಂದ
                                        ಕುಣಿವಾನಂದ!
                                        ಹಿರಿಯಾನಂದ!
                                          (ದೂತ ಬರುತ್ತಾನೆ)
ದೂತ         ಅಣ್ಣಂದಿರೇ, ಏಕಲವ್ಯನು ಬಂದ. ಇದ್ದಕ್ಕಿದ್ದಂತೆ, ಜೇನು ಮುತ್ತುವ ಹಾಗೆ ಅವನನ್ನು ಮುತ್ತಿ, ಎಡಬಲಕ್ಕೆ ಎಳೆದಾಡಿ, ಜರೆದಾಡಿ, ‘ಆ ಮರುಳನ ಬಂಟ, ರಾತ್ರಿ ಮೇಲೆ ಬಿದ್ದು ತಲೆ ಕತ್ತರಿಸುವ ಕಳ್ಳರು, ಕಲ್ಲುಬೀರಿ, ಕಲ್ಲು ಬೀರಿ’ ಎಂದು ದಳವೆಲ್ಲ ಒಕ್ಕೊರಲಿನಿಂದ ಕೂಗಿತು. ಕೈಗೆ ಕತ್ತಿ ಬಂತು, ಆ ಕತ್ತಿಗಳೆಡೆ ಬಂದು, ಕೃಷ್ಣ ಸಂತೈಸದಿದ್ದರೆ ಅನೇಕ ಸಾವುಗಳು ಉಂಟಾಗುತ್ತಿದ್ದುವು. ಎಲ್ಲಿ ಅಶ್ವತ್ಥಾಮ, ಅವನಿಗೆ ಹೇಳಬೇಕಾದ ವಿಷಯವೊಂದಿದೆ.
ಮೇಳನಾಯಕ   ಒಳಗಿಲ್ಲ. ಇದೇ ತಾನೇ ಬದಲಾಗಿ ಹೋರಗೆ ಹೋದ - ಹೊಸ ಮನಸ್ಸಿಗೆ ಹೊಸತೊಂದು ಗುರಿಯಿರಿಸಿಕೊಂಡು ಹೋಗಿದ್ದಾನೆ.
ದೂತ         ಆಹಾ! ಅವನು ಕಳಿಸಿದುದೇ ತಡವೋ?
ಮೇಳನಾಯಕ   ಅಂಥ ಅವಸರವೇನು?
ದೂತ         ತಾನು ಮರಳುವವರೆಗೆ ಅಶ್ವತ್ಥಾಮನನ್ನು ಬಿಡಾರದಲ್ಲಿಯೇ ತಡೆದಿಟ್ಟುಕೊಂಡಿರಿ ಎಂದು ಒಡೆಯನು ನನ್ನನ್ನಟ್ಟಿದ.
ಮೇಳನಾಯಕ   ಹೇಳಿದೆನಲ್ಲ, ಇದೇ ತಾನೇ ಹೋದ ಒಳ್ಳೆಯದಕ್ಕೆಂದೇ ದೇವತೆಗೆ ಶಾಂತಿಯನ್ನು ಮಾಡುವುದೇ ಅವನ ಉದ್ದೇಶ.
ದೂತ         ಹುಚ್ಚು ಹುಚ್ಚು! ಕೃಷ್ಣನಿಗೆ ದಿವ್ಯಜ್ಞಾನವಿರುವಾಗ!
ಮೇಳನಾಯಕ   ಅವನು ಹೇಳಿದ ಭವಿಷ್ಯವೇನು? ನೀನು ಕಂಡದ್ದೇನು?
ದೂತ         ಸುಮ್ಮನೆ ಕೇಳು .. .. ಕೇಳಿದ್ದನ್ನು ಹೇಳುತ್ತೇನೆ .. .. ಹಲ್ಲು ಕಡಿಯುವ ವೀರರನ್ನು ಪಡೆಗಳನ್ನು ಬಿಟ್ಟು ಏಕಲವ್ಯನ ಜೊತೆಗೆ ಬಂದು, ಸ್ನೇಹದಿಂದ ಕೈಹಿಡಿದು, ಕೃಷ್ಣ ಹೀಗೆ ಹೇಳಿದ : “ ‘ಈ ಹಗಲು, ಹೊಳೆಯುವ ಈ ಒಂದು ಹಗಲು ಆ ಅಶ್ವತ್ಥಾಮ ಒಳಗೇ ಇರಲಿ, ಹೊರಗಡೆಗೆ ಬಿಡಬೇಡ. ಅವನು ಬದುಕಿರಬೇಕೆಂದಿದ್ದರೆ ಏನಾದರೂ ಮಾಡಿ ಬಿಡಾರದಲ್ಲಿಯೇ ಮರೆಮಾಡು. ಇದೊಂದು ದಿನ ಆ ರುದ್ರನ ಕೋಪ ಬಡಿಯುವುದು, ಎಚ್ಚರಿಕೆ’ ಎಂದ. ಆಮೇಲೆ ಹೇಳಿದ ಆ ಮಾತುಗಳನ್ನು ಮರೆಯಲು ಸಾಧ್ಯವೇ ಇಲ್ಲ ‘ಯಾವಾಗಲೂ ಮನುಷ್ಯ ತಾನು ಮನುಷ್ಯ ಎಂಬುದನ್ನು ಮರೆತು, ಕಡುಕೊಬ್ಬಿ, ಒಳ್ಳೆಯದನ್ನು ತೊರೆಯುವನೊ, ಆಗಲೇ, ದೇವತೆಗಳು ಅವನ ಬಾಳಿಗೆ ಎಡರು ತಂದು ಕೆಳಗುರುಳುವಂತೆ ಹೊಡೆಯುತ್ತಾರೆ. ಯಾವತ್ತೂ ಅಶ್ವತ್ಥಾಮ ಈ ರೀತಿಯವನೇ! ಎಳೆತನದಲ್ಲಿ, ತಂದೆ ಹರಸುತ್ತ, ‘ಬಿಲ್ ಜಾಣನಾದೆ, ಜಯವಾಗಲಿ. ಮೊದಲು ದೇವತೆಗೆರಗಿ, ಪೌರುಷದಿಂದ ನೀನು ಜಯವನ್ನು ಪಡೆ’ ಎಂದು ಎಂದು ಹೇಳಿದಾಗ ಮಗ ಸೊಕ್ಕಿನಿಂದ ಹೇಳಿದ್ದ: ‘ದೇವತೆಯ ಬಲವಿದ್ದರೆ, ತಂದೆ, ಹೇಡಿಯೂ ಗೆಲ್ಲುತ್ತಾನೆ. ಅವರ ನೆರವಿಲ್ಲದೆಯೇ ಜಯಲಕ್ಷ್ಮಿಯ ಮುಂದಲೆಯನ್ನೆಳೆಯುತ್ತೇನೆ!’ ಎಂದು. ಏನು ಗರ್ವ! ಇನ್ನೊಮ್ಮೆ, ಮಹದೇವ ರುದ್ರ ಯುದ್ಧದಲ್ಲಿ ಮೇಲೆ ನಿಂತು, ‘ಶತ್ರುವಿಲ್ಲಿದ್ದಾನೆ, ಇಲ್ಲಿ ಹೊಡೆ, ಗೆಲವನ್ನೀಯುವೆ’ ಎಂದು ಉಬ್ಬಿಸುತ್ತ ಬಂದಾಗ, ಸಿಡುಕಿನಿಂದ ಯೋಧನಾಡಬರದುದನ್ನಾಡಿದ, ‘ಎಲೆ ರುದ್ರ, ಅಗೋ ಅವರ ಬೆಂಬಲಕ್ಕೆ ಹೋಗು; ಅಶ್ವತ್ಥಾಮ ಮಾಡುವ ಯುದ್ಧಕ್ಕೆ ಸೋಲಾಗದು’ ಎಂದ. ಇಂತಹ ನುಡಿಗಳಿಂದಾಗಿ, ವೀರನಾಗಿ ಹುಟ್ಟಿದರೂ ವೀರನಿಗೆ ಮೀರಿದ ದೊಡ್ಡಸ್ತಿಕೆಯಿಂದಾಗಿ, ರುದ್ರನ ಕೋಪವನ್ನು ತನ್ನ ತಲೆಗೆ ತಂದುಕೊಂಡ. ಈ ದಿನ ಬದುಕಿದರೆ, ರುದ್ರಪ್ರಸಾದದಿಂದಾಗಿ ನಾವವನನ್ನು ಉಳಿಸಿಕೊಳ್ಳಬಹುದು” - ಹೀಗೆ ಕೃಷ್ಣನು ಹೇಳಲು, ತಕ್ಷಣವೆ ಬಂದೆವು; ಎಚ್ಚರಿಸುವುದಕ್ಕಾಗಿ ಮುಂಚೆ ನನ್ನನ್ನು ಕಳಿಸಿದ್ದಾನೆ. ಈ ಮುಂಚೆಯೇ ಅಶ್ವತ್ಥಾಮ ಹೊರಗೆ ಹೋಗಿದ್ದರೆ ಅಶ್ವತ್ಥಾಮ ಸತ್ತಿರುತ್ತಾನೆ. ಇಲ್ಲ, ಇದು ಕೃಷ್ಣನ ಹೊಸದೊಂದು ತಂತ್ರವೋ!
ಮೇಳನಾಯಕ   ದುಃಖದ ಮಗು, ಭಾರ್ಗವಿಯೇ, ಬಾ, ವಾರ್ತೆಯನ್ನು ಕೇಳು. ಶಾಂತಿಯೆಂಬುದು ನಮಗೆ ಇಲ್ಲವೆಂದೇ ತೋರುತ್ತದೆ.
ಭಾರ್ಗವಿ         ಇದೇ ತಾನೆ, ಮೇಲಕ್ಕೆ ಒತ್ತಿ ಒತ್ತಿ ಬರುವ ದುಃಖದಿಂದ ಬಿಡುಗಡೆಗೊಳ್ಳುತ್ತಿದ್ದವಳನ್ನು ಏಕಣ್ಣ ಕೆರಳಿಸುತ್ತೀರಿ?
ಮೇಳನಾಯಕ   ಈತನು ಅಶ್ವತ್ಥಾಮನನ್ನು ಕುರಿತ ಕೆಟ್ಟ ವಾರ್ತೆಯನ್ನು ತಂದು ನಮ್ಮ ಹೊಟ್ಟೆಯಲ್ಲಿ ಕಿಚ್ಚು ಸುರಿದಿದ್ದಾನೆ.
ಭಾರ್ಗವಿ       ಏನಪ್ಪ, ಮುಳುಗಿಹೋದೆವೇ ನಾವು? ಅದೇನು ಹೇಳು.
ದೂತ         ಅವನು ಹೊರಗೆ ಹೋಗಿದ್ದರೆ ಉಳಿಯುವ ನೆಚ್ಚಿಕೆಯಿಲ್ಲ.
ಭಾರ್ಗವಿ       ಹೋದನೇ? ಹೀಗೇಕೆ ಹೇಳುತ್ತೀಯ?
ದೂತ         ಏಕಲವ್ಯ ಹೇಳಿದ - ಬಿಡಾರದ ಒಳಗೇ ಇರಲಿ, ಹೊರಗೆ ತಾನೊಬ್ಬನೇ ಹೋಗಬಾರದು ಎಂದು.
ಭಾರ್ಗವಿ       ಅವನೆಲ್ಲಿ, ಏಕಲವ್ಯ? ಹೀಗೇಕೆ ಹೇಳಿದ?
ದೂತ         ಬರುತ್ತಿದ್ದಾನೆ. ಈ ಹಗಲು ಹೊರಗೆ ಸುಳಿದರೆ ನಮ್ಮ ವೀರನಿಗೆ ಸಾವೆಂದು ಅವನೆಣಿಸಿದ್ದಾನೆ.
ಭಾರ್ಗವಿ       ಹಾ, ಇದು ಖಂಡಿತವೇ! ಅವನಿಗೆ ಹೇಳಿದವರಾರು?
ದೂತ         ದಿವ್ಯಜ್ಞಾನಿ ಕೃಷ್ಣ. ಉಳಿವು ಅಳಿವು ಈ ದಿನವೆಂದು.
ಭಾರ್ಗವಿ      ಕಾಪಾಡಿ, ಓ ಗೆಳೆಯರೇ! ಬೀಳುವ ಸಿಡಿಲನ್ನು ತಪ್ಪಿಸಿ. ಈ ಕಡೆಗೆ ಕೆಲವರು ಓಡಿ, ಏಕಲವ್ಯನನ್ನು ಕರೆತನ್ನಿ. ಪೂರ್ವಕ್ಕೆ ಕೆಲವರು .. .. ಪಶ್ಚಿಮಕ್ಕೆ ಕೆಲವರು ಹೋಗಿ. ಅವನ ಹೆಜ್ಜೆಗುರುತಿರುವ ಹಾಳುಹೊಲಗಳಲ್ಲಿ ಹುಡುಕಿ. ಈಗ ತಿಳಿಯಿತು .. .. ಸುಳ್ಳಾಡಿ, ನಂಬಿಸಿ, ನುಣುಚಿಕೊಂಡುಬಿಟ್ಟ. ಹಳೆಯ ಪ್ರೀತಿಯನ್ನು ಬಿಸುಟ. ಅಯ್ಯೋ ಮಗು, ಏನು ಮಾಡಲಿ? ಕುಳಿತಿರಲೂ ಸಾಧ್ಯವಿಲ್ಲ. ಆದಷ್ಟೂ ಹಿಂದೆಯೇ ಬರುತ್ತೇನೆ. ನಿಲ್ಲದಿರಿ, ಅಣ್ಣಂದಿರೇ ಓಡಿ, ತಡಮಾಡುವ ಹೊತ್ತಲ್ಲ, ಬಂಧುಗಳೇ, ಸಾಯಲು ಓಡುತ್ತಿರುವವನನ್ನು ತಡೆಹಿಡಿಯಲೇಬೇಕು.
(ಕುರುಕ್ಷೇತ್ರದ ಬೇರೊಂದು ಕಡೆಯ ಕಾಡು)
ಅಶ್ವತ್ಥಾಮ      ಈ ಕಟುಕ ಕತ್ತಿ ನಿಶ್ಚಲವಾಗಿ ನಿಂತಿದೆ, ನಂಬತಕ್ಕದ್ದೇ .. .. ಮತ್ತೆ ಕೊಲ್ಲುತ್ತವೆ. ಹೊತ್ತಿದ್ದರೆ ನೆನೆಯುವುದು ನ್ಯಾಯವೇ. ಮೊದಲೇ ಇದು ಶತ್ರುಮಿತ್ರ ಅಭಿಮನ್ಯು, ನನ್ನ ಹೊಟ್ಟೆಕಿಚ್ಚಿಗೆ ಕಾರಣನಾದವನು, ಸಮಯುದ್ಧದಲ್ಲಿ ಮೆಚ್ಚಿಕೆಯೆಂದು ಕೊಟ್ಟ ಕೊಡುಗೆಯಲ್ಲವೇ? ಬೇರೆಯ ನಾಡಿನ ನೆಲದಲ್ಲಿ ನಾಟಿಕೊಂಡಿದೆ. ಹೊಸತಾಗಿ ಸಾಣೆ ಹಿಡಿದಿರುವುದರಿಂದ ಚೂಪಾದ ಮೊನೆಯಿಂದ ಕೂಡಿದೆ. ನೋಡಿ ನಾನೇ ನಟ್ಟಿದ್ದೇನೆ .. .. ತಕ್ಷಣವೇ ಸಾವನ್ನೀಯಲಿ ಎಂದು. ನಾವಿಬ್ಬರೂ ಈಗ ಸಿದ್ಧ. ಓ ರುದ್ರ, ಪ್ರಾರ್ಥಿಸುವುದು ಸಾಯುವವನಿಗೆ ಧರ್ಮವಲ್ಲವೇ .. .. ನನಗೆ ಒಳ್ಳೆಯವನಾಗು. ನಾನು ನಿನ್ನನ್ನು ಬೇಡುತ್ತಿರುವುದು ದೊಡ್ಡ ವರವೇನಲ್ಲ, ಈ ಕತ್ತಿಯ ಮೇಲೆ ಬಿದ್ದು ರಕ್ತ ಸುರಿಸುವವನನ್ನು ಬಂದು ಮೊದಲು ಎತ್ತುವಂತೆ ಏಕಲವ್ಯನಿಗೆ ತಿಳಿಸುವುದಕ್ಕಾಗಿ ಯಾರನ್ನಾದರೂ ಕಳುಹಿಸು. ಹಗೆಗಳೇನಾದರೂ ಮೊದಲು ಕಂಡರೆ ನಾಯಿನರಿಗಳಿಗೆ ಹದ್ದುಗಳಿಗೆ ಆಹಾರವಾಗುವಂತೆ ಎಳೆದೆಸೆಯುತ್ತಾರೆ. ಇದೊಂದು ಕೃಪೆದೋರು. ಓ ಅಗ್ನಿ, ಣನು ಕರೆಯುತ್ತಿದ್ದೇನೆ, ನೀನು ಪಿತೃಲೋಕಕೆ ಕೊಂಡೊಯ್ಯುತ್ತೀಯೆ; ಅಳುಕದೇ ನೆಗೆದ ನನ್ನ ಕರುಳುಗಳಲ್ಲಿ ಖಡ್ಗ ತಿವಿದಾಗ .. .. ಮೈದಡವಿ ಸುಖನಿದ್ರೆ ಬರುವಂತೆ ಮಾಡು. ಓ ಉಗ್ರಕನ್ನಿಕೆಯರೇ, ನಿಮ್ಮನ್ನೂ ಕರೆಯುತ್ತಿದ್ದೇನೆ. ಎಂದೆಂದೂ ಇರುವವರು ನೀವು, ಎಂದೆಂದೂ ಮನುಷ್ಯರ ಅನ್ಯಾಯಗಳನ್ನು, ರೋಷವನ್ನು, ನೋಡುತ್ತಲೇ ಇರುತ್ತೀರಿ; ಅಲ್ಲದೆ, ಓ ಘೋರಮೂರ್ತಿಗಳೇ, ಬಿಡದೆ ಬೆನ್ನಹಿಂದೆಯೇ ಬಂದು, ಕಾಡುತ್ತಲೂ ಇರುತ್ತೀರಿ. ಇದೋ ನೋಡಿ, ನಾವು ಒಬ್ಬೊಬ್ಬರೂ ಹೇಗೆ ಘಾತುಕರ ತಂತ್ರಕ್ಕೆ ಸಿಕ್ಕಿಕೊಂಡು ಕೈಗುಂದಿ ಬಿದ್ದಿದ್ದೇವೆ; ನಾನೇ ಕೊನೆ! ಕೌರವ ಕುಲಶ್ರೀಯ ಹೆಸರು ಹೇಳಲು ಒಂದು ಪಿಳ್ಳೆಯೂ ಇಲ್ಲವಾಯಿತೇ! ಬಿಡಬೇಡಿ, ಬಿಡಬೇಡಿ. ಬೆನ್ನುಹತ್ತಿ ಅವರಿಗೆ ಅವರವರ ಕರ್ಮಗಳನ್ನು ಹೊರಿಸಿ! ಬನ್ನಿ, ಏಳಿ, ಕ್ರೂರಮಾತೆಯರೇ, ರೌದ್ರಿಯರೆ, ಕಟ್ಟುಗ್ರವಾಗಿ ಎರಗಿ, ಒಂದು ಪಿಳ್ಳೆಯೂ ಉಳಿಯದ ಹಾಗೆ ಪಾಂಡವರ ಸೇನೆಯ ಮೇಲೆ ನಿಮ್ಮ ಕೋಪಗಳನ್ನು ತೀರಿಸಿಕೊಳ್ಳಿ! ನೀನು, ಹಿರಣ್ಯರಥದ ಮೇಲೇರಿ ಆಕಾಶದೆತ್ತರಕ್ಕೆ ಏರುವ ಓ ಸೂರ್ಯದೇವ, ನಮ್ಮ ಹಿರಿಯರ ನಾಡಿನ ಮೇಲೆ ನಿಂತು, ಮಲಯಗಿರಿಯಲ್ಲಿ ಕುದುರೆಗಳನ್ನು ಎಳೆದು ನಿಲ್ಲಿಸಿ, ನನ್ನ ಎರಡು ಕಡೆಯ ಬಳಗಕ್ಕೆ, ಎಳವೆಯಲ್ಲಿ ನನ್ನನ್ನು ಪ್ರೀತಿಯಿಂದ ನೋಡಿಕೊಂಡವರಿಗೆ, ನನ್ನ ಈ ನೋವುಗಳನ್ನು, ನನ್ನ ಹಿರಿದಾದ ಈ ಸಾವನ್ನು ತಿಳಿಸು. ಆಹಾ, ಈ ಕಥೆಯನ್ನು ಕೇಳಿದವರು ಎಷ್ಟು ದುಃಖಿಸುತ್ತಾರೋ, ಗೋಳಾಟದಿಂದ ಊರಿಗೆ ಊರೇ ಮಾರ್ದನಿಸುತ್ತದೇನೋ! ಸಾಕು ಸಾಕು, ಈ ಕನಿಕರ. ಕೆಲಸ, ಕೆಲಸ! ಮೃತ್ಯು, ಓ ಮೃತ್ಯು, ನೀನು ಬಾ, ಬಾ! ನಿಲ್ಲು, ನಿಲ್ಲು, ನಾನೇ ನಿನ್ನ ಮಬ್ಬಿನ ಮನೆಗೆ ಆಹಾರವಾಗಿ ಬರುತ್ತೇನೆ. ಓ ಹೊಳೆಯುವ ಎಳೆಬಿಸಿಲೇ, ನನಗೆ ನೀನು ಇನ್ನೆಲ್ಲಿ! ತೇರನ್ನೇರುವ ಸೂರ್ಯ, ಇದೇ ಕಡೆ, ಕೊನೆಯ ಮಾತನ್ನು ಹೇಳುತ್ತೇನೆ. ಓ ಬೆಳಕೇ, ಓ ಪುಣ್ಯಭೂಮಿಯೇ, ಕನ್ನಡವೇ, ನನ್ನ ತಾಯ್ನಾಡೆ, ಜಗತ್ತಿನಲ್ಲಿ ಪ್ರಖ್ಯಾತವಾದ ಬನವಾಸಿಯೇ, ತೆಂಗುಗರಿಗಳ ಕೊಡೆಯಿರುವ ಕಡಲುಲಿಯ ಮನೆಯೇ, ಒಡನಾಡಿ ಹಸುಳೆಗಳೇ, ಕೆರೆಗಳೇ, ಹೊನಲುಗಳೆ, ಓ ಹಸುರು ಬಯಲೆ, ಬೀಳ್ಕೊಡಿ, ಬೀಳ್ಕೊಡಿ. ನನಗೆ ಜೀವಾನಂದವಾಗಿದ್ದ ಎಲ್ಲರೂ ಬೀಳ್ಕೊಡಿರಿ; ಹೋಗಿ ಬರುತ್ತೇನೆ. ಇದೇ ನನ್ನ ಕೊನೆಯ ಮಾತು .. .. ಹೋಗಿ ಬರುತ್ತೇನೆ. ಮುಂದಿನದು ಸತ್ತವರ ಜೊತೆಯಲ್ಲಿ .. .. ಭಾರತದಲ್ಲಿ ಅಳಿದ ಸಿಂಹಗಳ ಕೌರವಸ್ವಾಮಿ, ಕರ್ಣ, ಭೀಷ್ಮ, ಆ ತಂದೆ ದ್ರೋಣ ಇವರುಗಳ ಜೊತೆಯಲ್ಲಿ.
(ಖಡ್ಗದ ಮೇಲೆ ಬೀಳುತ್ತಾನೆ)
ಅರೆಮೇಳ                  ಅಲೆದೆನಿಲ್ಲಿ, ಅಲೆದೆನಲ್ಲಿ
                   ಅಲೆಯದಿದ್ದ ಕಡೆಯದೆಲ್ಲಿ?
                   ಅಯ್ಯೊ ತೊಳಲಿ, ಅಯ್ಯೊ ಬಳಲಿ
                   ಕಾಣಲಿಲ್ಲ, ಅವನು ಎಲ್ಲಿ?
                   ಏನದು ಸದ್ದು! ಓಹೋ!
ಅರೆಮೇಳ 2          ಓಹೋ, ನಾವೆ, ನಾವೆ, ನಿಮ್ಮ ಸೋನೆ!
1           ಬೇಟೆಯಿಲ್ಲ?
2           ಪಡುವಲೆಲ್ಲ
     ಬಳಸಿ ಬಳಸಿ ಬಂದೆವು
1           ಕಾಣಲಿಲ್ಲ?
2          ಇಲ್ಲ, ಇಲ್ಲ
     ತಡಕಿ, ತಡಕಿ ನೊಂದೆವು!
1           ಹುಡುಕಿ, ಹುಡುಕಿ ಮೂಡಲೆಲ್ಲ
     ಕಾಣಲಿಲ್ಲ - ನೊಂದೆವು
ಎಲ್ಲರೂ            ಯಾರಿಲ್ಲವೇ. ನಮಗೆ ಹೇಳುವವರಾರು?
                  ಕಾಡ ತುರುಗಾಹಿಯೋ, ಮೀನ್ ಹಿಡಿವ ಬೆಸ್ತನೋ,
    ಮೇರುಗಿರಿಯಿಂ ಹಾರಿ ವಿಹರಿಸುವ ದೇವಿಯೊ,
    ಆಡಿ ಸಾಗರದೆಡೆಗೆ ಹರಿವ ಹೊಳೆಹೆಣ್ಣುಗಳೊ,
    ಯಾರಿಲ್ಲವೇ ರುದ್ರನುರಿಗಣ್ಣಿನಂಥವನು
    ಎತ್ತಲಲೆವನೋ ಎಂದು ಹೇಳುವವನು?
    ಅಟ್ಟಿದುದು ಸೆಲೆಯಡಗಿತೀ ಬೇಟೆ ಸುಳಿವು
     ನೆಟ್ಟಗಾಗದೆ ಹೋಯ್ತು, ಬರಿಯ ಮೈನೋವು!
ಭಾರ್ಗವಿ             ಅಯ್ಯೊ ನನ್ನ ಭಾಗ್ಯವೇ!
1           ಯಾರ ಕೂಗು ಈ ಕಾಡ ನಡುವೆ ಕೇಳುವುದು?
ಭಾರ್ಗವಿ             ಕೆಟ್ಟೆ, ಕೆಟ್ಟೆ.
         ನಮ್ಮ ಮುದುಕಿ, ಭಾಗ್ಯಹೀನೆ, ಭಾರ್ಗವಿ. ಅವಳ ದುಃಖ  ನಮ್ಮೆದೆಗಳನ್ನಿರಿಯುತ್ತಿರುವುದು!
ಭಾರ್ಗವಿ             ಬಂಧುಗಳೇ, ಕೆಟ್ಟೆ, ಮುಳುಗಿದೆ, ಹಾಳಾಗಿ ಹೋದೆ.
ಮೇಳನಾಯಕ         ಏನಾಯ್ತು, ತಾಯಿ?
ಭಾರ್ಗವಿ              ನೋಡಿ, ಅಶ್ವತ್ಥಾಮನನ್ನು; ಇಗೋ, ಹೊಸತಾಗಿ ಕೊಲೆಗೊಂಡು ಈ ಕತ್ತಿಗೆ ರಕ್ತ ಸುರಿಸಿ, ಮುದುರಿಕೊಂಡು ಬಿದ್ದಿದ್ದಾನೆ.
ಮೇಳ                    ಮನೆಗೆ ಮರಳವ ಆಸೆಯಿನ್ನೆಲ್ಲಿ!
                         ಓ ಗುರುವೆ ನೀನು ನನ್ನ ಕೊಂದೆ.
                         ಓ ದುಡುಕಿನವನೇ, ಎದೆಯೊಡೆದ ಹೆಣ್ಣೇ!
ಭಾರ್ಗವಿ             ಅವನದೇ ಸರಿ, ನಮಗೆ ದುಃಖದ ಉರಿ.
ಮೇಳನಾಯಕ   ಯಾರ ಕೈ ಈ ಕೆಟ್ಟ ಕೊಲೆಯನ್ನು ಮಾಡಿತೋ!
ಭಾರ್ಗವಿ       ಅವನದೇ. ಇಗೋ ನೋಡಿ, ನಟ್ಟ ಕತ್ತಿ ನೆಲದಲ್ಲಿ.
ಮೇಳ                       ಓ ನನ್ನ ಬೆಪ್ಪೆ, ಗಾಂಪತನವೆ
                            ಓ ಕುರುಡೆ, ನನ್ನ ಮಂಕುತನವೇ,
                                ಅರಿಯದಾದೆನು - ನಿನ್ನನರಿಯದಾದೆ.
                             ಸಿರಿಯ ಕೆನ್ನೆತ್ತರನು ಸುರಿದೆ;
                             ನಿನ್ನ ಛಲವನೆ ತೀರಿಸಿ ಸರಿದೆ!
ಮೇಳನಾಯಕ   ಆ ಘೋರಸಂಕಲ್ಪನೆಲ್ಲಿದ್ದಾನೆ? ನೋಡೋಣ.
ಭಾರ್ಗವಿ     ಕಣ್ಣಿನಿಂದ ನೋಡುವಂಥದ್ದೇ ಇದು! ಬೇಡ, ಬೇಡ. ತಲೆಯಿಂದ ಕಾಲಿನವರೆಗೆ ಮೇಲುಡುಗೆಯಿಂದ ಮುಸುಕು ಹಾಕುತ್ತೇನೆ. ಮೂಗಿನಿಂದ, ತಾನೇ ಇರಿದುಕೊಂಡು ಮಾಡಿಕೊಂಡ ಗಾಯಗಳಿಂದ ರಕ್ತ ಕಾರುವುದನ್ನು ಒಲಿದವರು ಯಾರು ತಾನೇ ನೋಡಲು ಸಾಧ್ಯ? ಏನು ಮಾಡಲಿ? ಗೆಳೆಯರಲ್ಲಿ ನಿನ್ನನ್ನು ಸಂಸ್ಕರಿಸುವವರು ಯಾರು? ಏಕಲವ್ಯೆಲ್ಲಿದ್ದಾನೋ? ಅವನು ಬರಲು ಇದು ಸಕಾಲವಲ್ಲವೇ? ಓ ಕಂದ, ದೈವಹತವೀರ ಅಶ್ವತ್ಥಾಮ, ಎಲ್ಲಿಂದ, ಎಂತಹ ಎತ್ತರದ ವೈಭವದಿಂದ, ಎಲ್ಲಿಗೆ ಉರುಳಿಬಿದ್ದೆ! ನಿನ್ನನ್ನೀಗ ನೋಡಿದರೆ ಹಗೆಗಳೇ ಮರುಕಪಡುತ್ತಾರೆ,
ಮೇಳ                  ಆಗಬೇಕಾದದ್ದು ಆಗಿಹೋಯ್ತು!
                       ಮುಂಚೆಯೇ ತಿಳಿಯಬಹುದಿತ್ತು ಆ ಬಗೆ ಹಿರಿಯುಕ್ಕು
                          ಈ ಬಗೆಯ ಸಾವಿನಲಿ ಕೊನೆಯ ಕಾಣುವುದೆಂದು!
                          ಹಗಲಿರುಳು ನಿನ್ನಲ್ಲಿ ಪುಟಿವ ಹೊಗೆ
                          ಗುಡುಗುಗಳಿಂದ
                       ಆ ಉರಿವ ಬೆಂಕಿ ಒಳಗೆಂತು ಇಹುದೆಂದು!
                       ಆಗಬೇಕಾದದ್ದು ಆಗಿಹೋಯ್ತು!
                       ಬಲಿಯಾಯ್ತು ಭಾರತಕೆ ತಂದೆಮಕ್ಕಳ ಬದುಕು,
                       ಬಲಿಯಾಯ್ತು ಭಾರತಕೆ ನಮ್ಮ ಬದುಕು!
ಭಾರ್ಗವಿ        ಅಯ್ಯೋ ಅಯ್ಯೋ!
ಮೇಳನಾಯಕ   ಹೊಗೆಯುಗುಳುತ್ತ ಈ ದುಃಖದುರಿ ಹೊತ್ತುತ್ತದೆ, ನನಗೆ ಗೊತ್ತು.
ಭಾರ್ಗವಿ       ಅಯ್ಯೋ ಅಯ್ಯೋ!
ಮೇಳನಾಯಕ   ಯಾರಿಗೋಸ್ಕರ ಜೀವ ಹಿಡಿದುಕೊಂಡಿದ್ದೆಯೋ ಅಂತಹವನು ಸತ್ತರೆ ಆಗುವ ದುಃಖ ಕಡಿಮೆಯೇ!
ಭಾರ್ಗವಿ       ಇದು ನಿನ್ನ ಮನಸ್ಸಿನ ಲೆಕ್ಕಾಚಾರ; ನನಗೆ ಎದೆಯಲ್ಲಿದೆ ಬೆಂಕಿ.
ಮೇಳನಾಯಕ   ಹೌದು ತಾಯಿ, ಹೌದು.
ಭಾರ್ಗವಿ       ಓ ಮಗು, ಓ ಮುದುಕಿ, ಯಾರ ನೋಟಕ್ಕೆ ಕೊರಳು ಕೊಟ್ಟು, ಯಾರ ಖಡ್ಗದ ಮೊನೆಯಲ್ಲಿ ನಿಂತು ನುಡಿಯುವ ತೊತ್ತಾಗಬೇಕೋ!
ಮೇಳ                        ಹೇಗೋ ಏನೋ, ತಿಳಿದವರಾರು!
                             ಹಗೆಗಳಾರು ಮರುಕ ತೋರುವವರು!
                             ದೇವತೆಗಳೇ ಕಾಯುವವರು!
                             ಎಲ್ಲರನ್ನು ಕಾಯುವವರು!
ಭಾರ್ಗವಿ       ದೇವತೆಗಳು ಒಲ್ಲದ್ದರಿಂದಾಗಿಯೇ ನಮ್ಮ ಬಾಳು ಮುರಿಯಿತೇ?
ಮೇಳನಾಯಕ   ಅವರಿಟ್ಟ ಉರಿಯೇ ತಾಳಿಕೊಳ್ಳಲು ಅಸಾಧ್ಯ.
ಭಾರ್ಗವಿ       ಕೃಷ್ಣನಲ್ಲಿಟ್ಟ ಪ್ರೀತಿಯಿಂದಾಗಿ ಆ ಕೇಡಿಗ ರುದ್ರ ನಮಗೆ ಈ ರೀತಿ ಮಾಡುವುದೇ?
ಮೇಳ                          ನಗುವನು ಆಹಾ, ನಗುವನು ಕೃಷ್ಣ,
                               ನಗದಿರು ಎನುತಲೆ ಆ ಕೃಷ್ಣ!
                               ನಸುನಗುತಲೆ ಹೇಳುವನೀ ಭ್ರಮೆ ಕಥೆಯ;
                                    ಕೇಳಿ ಭೀಮಾರ್ಜುನರು
                                    ಗಹಗಹಿಸಿ ನಗುವರು,
                               ಆಹ, ನಮ್ಮೊಡೆಯನೆ, ಎಂಥ ನಗೆಪಾಟಲಾದೆ!
                               ಆ ಹಿರಿಯ ಸಜ್ಜನರು ಇವನಳಲ ಕಂಡು
                               ನಗಲಿ, ಹಿಗ್ಗಲಿ, ನಲಿದು ಅಣಕಿಸುತಲಿರಲಿ
                               ಅವರಿಗೊ ಬಹು ಮಧುರ, ಕಹಿಯು ಎನಗೀ ಸಾವು
                               ಇವನಿಗೋ ಇದರಿಂದ ಬಹಳ ಸುಖವು!
                               ತಾನು ಬಯಸಿದುದನ್ನೆ, ತನ್ನ ಕೈ ಸಾವನ್ನೆ
                                      ಕೈಕೊಂಡ ತಾನು;
                               ಏಕವರು ಹಿಗ್ಗುವರು, ಇವನ ಮೇಲೇನೆಂದು
                                     ಜರುಬಿ ಮಾತಾಡುವರು?
                               ದೈವಕ್ಕೆ ಸೋತನಿವನವರಲ್ಲ ಕೊಂದವರು!
                               ಎಂದಿಗೂ ಅಲ್ಲ ಅವರು.
                               ನಗಲಿ, ಕೃಷ್ಣನು ತಾನು ಗಹಗಹಿಸಿ ನಗಲಿ
                               ಈಗಲಶ್ವತ್ಥಾಮ ಅವನ ಕೈ ಮೀರಿದನು
                        ನಮ್ಮನಳಲಲ್ಲದ್ದಿ ಸುಖದೆಡೆಗೆ ನಡೆದ.
(ಒಳಗೆ)
ಏಕಲವ್ಯ        ಹಾ! ಹಾ!
ಮೇಳನಾಯಕ   ಏಕಲವ್ಯ!
(ಏಕಲವ್ಯ ದೂರ ಬರುತ್ತಾನೆ)
ಏಕಲವ್ಯ        ಅಣ್ಣ, ಅಶ್ವತ್ಥಾಮ, ಗುರುಪುತ್ರ, ಗುರು, ಗೆಳೆಯನೊಬ್ಬನನ್ನೇ ಬಿಟ್ಟು ನೀನೀ ರೀತಿ ಹೋದೆಯಾ?
ಮೇಳ         ಹೋದ, ಹೊರಟು ಹೋದ.
ಏಕಲವ್ಯ        ನಾನೇ ನಿರ್ಭಾಗ್ಯ!
ಮೇಳ         ಎಲ್ಲರೂ, ಎಲ್ಲರೂ.
ಏಕಲವ್ಯ        ಎಷ್ಟು ದುಡುಕು ಇವನದು!
ಮೇಳ         ಹೌದು, ಬಲು ದುಡುಕು, ಬಲು ದುಡುಕು.
ಏಕಲವ್ಯ        ಮಗು ಎಲ್ಲಿ? ತಾಯಿ, ಧೈರ್ಯ ತಂದುಕೋ, ಮಗುವೆಲ್ಲಿ?
ಭಾರ್ಗವಿ       ಮನೆಯಲ್ಲಿ ಆಡುತ್ತಿದ್ದಾನೆ.
ಏಕಲವ್ಯ       ಒಬ್ಬನೇ? ಕರೆದುಕೊಂಡು ಬಾ ತಾಯಿ, ಹೋಗು ಬೇಗ. ತಾನು ಬಳಿಯಲ್ಲಿಲ್ಲದಿದ್ದರೆ ಆ ಸಿಂಹದ ಎಳೆಮರಿಯನ್ನು ಯಾರಾದರೂ ಹಗೆಗಳು ಎತ್ತಿಕೊಂಡು ಹೋದಾರು. ನಡಿ, ಹೋಗು, ನೀನೂ.
(ಭಾರ್ಗವಿಯೂ ದೂತನೂ ಹೋಗುತ್ತಾರೆ)
ಸತ್ತವರ ಮೇಲೂ ಹಗೆ ಸಾಧಿಸುವ ಕೆಲವರು ಶೂರರಿರುತ್ತಾರೆ.
ಮೇಳನಾಯಕ   ಹೌದು, ಹೌದು ದೊರೆ. ತಾನು ಸಾಯುವ ಮುಂಚೆ ನನ್ನ ಕೂಸನ್ನು ನಿನ್ನ ಮಡಿಲಲ್ಲಿಟ್ಟ ಅದರಂತೆ ಕಾಪಾಡು.
ಏಕಲವ್ಯ        ಎಲ್ಲಿ, ಮೇಲ್ಮುಸುಕು ತೆಗಿ. ನನ್ನ ಗೆಳೆಯನನ್ನು ನೋಡುತ್ತೇನೆ, ಓ ಘೋರದರ್ಶನವೇ, ಓ ಕ್ರೂರಕರ್ಮವೇ, ಎದೆ ಬಿರಿಯದೆ ಹೇಗಿದ್ದೀತು? ಕಣ್ಣುಗಳೇ, ಒಡೆದುಹೋಗಿ, ಏನಿದೆ ಇನ್ನು ಬಾಳಲ್ಲಿ? ಕಡುಪ್ರೀತಿ, ಕಲಿತನ, ಹಿಂದೆಗೆಯದ ಶೌರ್ಯ, ಸ್ವಾಮಿಯಲ್ಲಿ ಆಳವಾದ ಭಕ್ತಿ, ಜಗತ್ತನ್ನೇ ನಡುಗಿಸುವ ಶಕ್ತಿ ಎಲ್ಲವೂ ನಾಶವಾದವು; ಹಾಳಾದವು! ನಿನ್ನ ಸಿಡುಕೂ ನನಗೆ ಅದೆಷ್ಟು ಚೆಲುವು! ಓ ವೀರ, ರುದ್ರನವತಾರ, ನನ್ನ ಗೆಳೆಯ, ನನ್ನ ಒಡೆಯ, ಅಶ್ವತ್ಥಾಮ, ಓ ಅಶ್ವತ್ಥಾಮ! ನನಗೆ ಇವತ್ತೇ ಬೇಟೆಯೇ? ಇವತ್ತೇ ವಿಧಿ ಸೆಳೆಯಬೇಕೇ? ಇದ್ದಿದ್ದರೆ ತಾನೇ ಏನು? ವಿಧಿ ಮುಳಿದರೆ ಯಾರಿದ್ದೂ ಏನು ಮಾಡಬಲ್ಲರು? ಸಾಕು ಈ ಬಿರುನೋಟ, ಮುಚ್ಚಿರಿ ಮುಚ್ಚಿರಿ. ಗೆಳೆಯರೇ, ಇನ್ನು ನಮಗೆ ದಕ್ಷಿಣದ ದಾರಿ. ಈ ಮುಖ ಹೊತ್ತು ಆ ಕಡೆಗಾದರೂ ಹೇಗೆ ಹೋಗಬಲ್ಲೆವು? ಗೆಲವಿಲ್ಲ, ಗುರುವಿಲ್ಲ, ನಮ್ಮಪ್ಪ ಏನೆನ್ನುತ್ತಾನೆ! ನೆರಳಿನಂತೆ ಹಿಂಬಾಲಿಸಿ ಸೇವೆ ಮಾಡು ಎಂದಿದ್ದನಲ್ಲ! ಕಾರಣವಿಲ್ಲದಿದ್ದರೂ ಸಿಡಿಯುವ ಆ ಮುಂಗೋಪಿ ಮುದುಕ ನಗುತ್ತಾ ಬಾ ಎನ್ನುತ್ತಾನೆಯೇ? ಸುಖದಲ್ಲೂ ನಗದವನು ಇನ್ನೇನನ್ನು ಆಡುತ್ತಾನೆಯೋ! ತವರೂರಲ್ಲಿ ನನಗೆ ಹೀಗೆ; ಓ ಗೆಳೆಯ, ಇಲ್ಲೋ ನೀನು ಸತ್ತಿರುವಾಗ ಸುತ್ತಲೂ ಹಲ್ಲು ಕಡಿಯುವ ಹಗೆಗಳೇ, ನೆರವಿಲ್ಲ. ಅದು ಒಂದೆಡೆಯಿರಲಿ, ಸಾವಿನ ಕರ್ಮಗಳನ್ನು ಮಾಡೋಣ ಬನ್ನಿ; ಈ ದೇಹವನ್ನು ಕತ್ತಿಯಿಂದ ಎಳೆಯಿರಿ. ನೋಡಿ ಈ ಕತ್ತಿಯನ್ನು: ಅಭಿಮನ್ಯು ಕೊಟ್ಟದ್ದಿದು. ವ್ಯೂಹಮುಖದಲ್ಲಿ ಕಾದಿ, ಒಬ್ಬರೂ ಸೋಲದೇ ಇದ್ದಾಗ, ಹರಸಿ ಅಶ್ವತ್ಥಾಮ ಎಳೆಯನಿಗೆ ತನ್ನ ಪ್ರೀತಿಯ ಕಠಾರಿಯಿತ್ತ. ಅವನೂ ತಲೆಬಾಗಿ ಈ ಕತ್ತಿಯನ್ನು ಉಡುಗೊರೆಯಾಗಿತ್ತ. ವಿಧಿಯ ಗತಿ ವಿಚಿತ್ರ: ಆ ಕಠಾರಿಯ ಇರಿತದಿಂದ ಅವನು ಅಂದೇ ಸತ್ತ, ಇವತ್ತು ಇವನು ಈ ಕತ್ತಿಯಿಂದ. ಇದನ್ನು ಮಾಡಿದವಳು ಯಾರೋ ಮಾರಿಯಿರಬೇಕು! ಅದು ಯಮನ ಕೆಲಸ. ಇದೂ, ಇಂತಹ ಎಲ್ಲವೂ ಮನುಷ್ಯರಿಗೆ ದೈವವೊಡ್ಡಿದ ಬಲೆಗಳು, ಬೇರೆಯ ರೀತಿ ಆಲೋಚಿಸುವವರು ಹಾಗೆ ಮಾಡಲಿ, ನನ್ನ ರೀತಿ ನನಗೆ.
ಮೇಳನಾಯಕ   ಮನುಷ್ಯನ ವೈಭವ ಕಂಡು ದೈವ ಕರುಬುತ್ತದೆ. ಇದು ಹೊಸದಲ್ಲ. ಇತ್ತ ಕಡೆ ಯಾರೋ ಮದಿಸಿದ ಆನೆಯ ಹಾಗೆ ತೂರಾಡಿಕೊಂಡು ಬರುತ್ತಿದ್ದಾನಲ್ಲ - ಭೀಮನೇನೋ!
ಏಕಲವ್ಯ       ಭೀಮನೇ. ಸತ್ತವರಿಗೆ ಪಾದಪೂಜೆಯನ್ನು ಮಾಡುವಂತಹ ನಯಗಾರ! ಬರಲಿ, ಬರಲಿ
ಭೀಮ         ಎಲವೆಲವೊ, ನಿಲ್ಲು, ನಿಲ್ಲು. ಆ ಹೆಣವನ್ನೆತ್ತಬೇಡ, ಬಿದ್ದಿರಲಿ.
ಏಕಲವ್ಯ        ಹಾಗೇಕೆ ಉಸಿರು ಕಳೆದುಕೊಳ್ಳುತ್ತೀ? ಕೇಳುವ ತೊತ್ತುಗಳಾರೂ ಇಲ್ಲಿ ಇಲ್ಲ.
ಭೀಮ         ಕೇಳೋ, ಗಮಾರ. ನಿದ್ದೆಯಲ್ಲಿದ್ದ ಸೈನ್ಯವನ್ನು ಕೊಲ್ಲಬಯಸಿದ ಘಾತುಕ, ರಾಕ್ಷಸ .. ..
ಏಕಲವ್ಯ        ಅವನೇನು ರಾಕ್ಷಸಿಯ ಗಂಡ? ರಕ್ತವನ್ನು ಹೀರಿದವನು ಅವನೇ ಏನು?
ಭೀಮ       ಈ ಭುಜದ ಗದೆಯ ಹೊಡೆತಕ್ಕೆ ಹೆದರಿ ಹೆಣ್ಣಿನ ಹಾಗೆ, ಮೂಲೆಯಲ್ಲಿ ಸತ್ತವನು. ಯುದ್ಧಧರ್ಮವನ್ನೇ ತಿಳಿಯದವನು, ಆಚಾರ್ಯಸುತ ಬೇರೆ!
ಮೇಳನಾಯಕ   ಓ ಭೀಮ, ಧರ್ಮದ ಹೆಸರೆತ್ತಿ ಅಧರ್ಮವನ್ನು ಮಾಡಬೇಡ.
ಭೀಮ      ನಮ್ಮ ದೇವರು ಬಂದು ಕಾಯದಿದ್ದರೆ, ಅವನ ಕೈ ತಡೆಯದಿದ್ದರೆ, ಪಶುಗಳ ಕಡೆ ತೋರದಿದ್ದರೆ, ಅವನಿಗೀಗ ಏನಾಗಿದೆಯೋ ಆ ಗತಿ ನಮಗಾಗುತ್ತಿತ್ತು - ನಾಯಿಪಾಲಾಗುತ್ತಿದ್ದವು ನಮ್ಮ ಹೆಣಗಳು. ನಾಯಿಗಳಿಗೆ, ನರಿಗಳಿಗೆ, ಹದ್ದುಗಳಿಗೆ ಅವನನ್ನು ಆಹಾರವಾಗಿ ಎಸೆಯುತ್ತೇನೆ. ಅದೇ ಅವನಿಗೆ ತಕ್ಕ ಸಂಸ್ಕಾರ, ಬಿಲ್ಲೆಳೆದು ಯಾರನ್ನೋ ಹೆದರಿಸುವುದು? ಗದೆಯ ರುಚಿ ತಿಳಿಯದೇ?
ಏಕಲವ್ಯ        ಅದೇನು ಹೇಳು, ಮತ್ತೊಮ್ಮೆ ಕೇಳುತ್ತೇನೆ. ಹದ್ದುಗಳಿಗೆಸೆಯುತ್ತೀಯಾ? ಆಚಾರ್ಯಸುತನಾದರೂ ಧರ್ಮವನ್ನವನು ತಿಳಿಯನಲ್ಲವೇ? ನೀನು ಧರ್ಮವನ್ನು ಬಲ್ಲವನು, ಅಲ್ಲವೇ? ಹಾಗಾದರೆ ಆಚಾರ್ಯರನ್ನಿನ್ನೂ ಮರೆತಿಲ್ಲ? ನಾವು ಜೊತೆಯಲ್ಲಿ ಕಲಿತದ್ದೂ ನೆನಪಿರಬೇಕಲ್ಲವೇ? ಹಿರಿಯ ವಂಶದ ನೀವೇ ಹೀಗೆ ಆಡಿದರೆ, ಕಿರಿಯರೇನಾಗಬೇಕು? ಹೋಗು ಹೋಗು, ಅಬ್ಬರಿಸಿ ಅಶ್ವತ್ಥಾಮನನ್ನು ಎಬ್ಬಿಸಬೇಡ.
ಭೀಮ         ಎಷ್ಟು ಬಿಂಕ, ಕಾಡಿನ ಬಿಲ್ಗಾರನದು!
ಏಕಲವ್ಯ        ಗದೆ ಬೀಸುವ ಹಾಗಲ್ಲ ಭೀಮ ಬಿಲ್ಲುವಿದ್ಯೆಯೆಂದರೆ. ನುಡಿಸಲು ಬಲ್ಲವನಿಗೆ ಬಿಲ್ಲು ಒಂದಾದರೆ, ವೀಣೆ ಇನ್ನೊಂದು. ನಿನ್ನ ತಮ್ಮನಿಗೋಸ್ಕರ ಗುರುವಿಗೆ ಬೆರಳನ್ನು ಕೊಟ್ಟೆ. ಆದರೂ ನೋಡು, ಬಿಲ್ಲಿನ ಮಾಟವನ್ನು ತೋರಿಸುತ್ತೇನೆ.
ಭೀಮ         ನಾಲಗೆಯೇನು ನಿನ್ನ ಬಿಲ್ಲು? ಆಬ್ಬಾ, ಸೊಕ್ಕೆ!
ಏಕಲವ್ಯ        ಧರ್ಮವಿದ್ದ ಕಡೆ ಸೊಕ್ಕೇ ಮತ್ತೆ!
ಭೀಮ        ನನ್ನ ಕೊಲೆಗಾರನಿಗೆ ಮೈಗಾವಲಾಗಿ ನಿಲ್ಲುವುದು ಧರ್ಮವೋ?
ಏಕಲವ್ಯ        ನಿನ್ನ ಕೊಲೆಗಾರನೇ! ಕೊಂದರೂ ಹೇಗಿದ್ದೀಯಾ?
ಭೀಮ         ದೇವತೆಯ ದಯೆಯಿಂದ. ಇಲ್ಲದಿದ್ದರೆ ನಾನೂ ಸತ್ತ ಹೆಣವೇ,
ಏಕಲವ್ಯ        ಕಾಪಾಡಿದ ದೇವತೆಗಳನ್ನು ಕಡೆಗಣಿಸಿ ಮಾತಾಡಬೇಡ.
ಭೀಮ         ದೇವತೆಗಳ ಬಗ್ಗೆ ಮೈಮರೆತು ನಡೆಯುತ್ತಿರುವವನು ನಾನೇನು?
ಏಕಲವ್ಯ        ಇನ್ನೇನು ಮತ್ತೆ? ಉತ್ತರಕ್ರಿಯೆಗಳನ್ನು ತಡೆಯುವುದು ಎಂದರೆ?
ಭೀಮ     ನಮಗೆ ಅವನು ಕಡುವೈರಿ ದನಗಳನ್ನು, ಹೆಂಗಸರನ್ನು, ಮಕ್ಕಳನ್ನು ತರಿದುಹಾಕಿದವನು - ಸೈನ್ಯವೇ ಶಾಪಹಾಕುತ್ತಿರುವವನು.
ಏಕಲವ್ಯ        ಇಲ್ಲಿ ನೋಡು, ನಿನ್ನ ಎದುರೇ ಕ್ರಿಯೆಗಳನ್ನು ಮಾಡುತ್ತೇನೆ.
ಭೀಮ         ಇಲ್ಲಿ ನೋಡು, ನಿನ್ನ ಎದುರೇ ಹದ್ದುಗಳಿಗೆಸೆಯುತ್ತೇನೆ.
ಏಕಲವ್ಯ       ನಾನಿರಬೇಕಾದರೆ, ನಿನ್ನಿಂದ ಅದು ಸಾಧ್ಯವೇ ಇಲ್ಲ.
ಭೀಮ         ನೀನು ತಡೆದರೆ, ಒಂದಲ್ಲ ಎರಡು ಹೆಣಗಳಾಗುತ್ತವೆ.
ಏಕಲವ್ಯ        ನಿಜವಾದ ಮಾತು ಹೇಳಿದೆ - ನಿನಗೆ ಬಾಳು ಬೇಡವಾಗಿದೆ.
ಭೀಮ         ಬಡ ಹಾರುವರ ಜೊತೆ ಸೇರಿ ಬಾಯಿಬಡಿಯುವುದನ್ನು ಕಲಿತಿದ್ದೀಯೆ.
ಏಕಲವ್ಯ        ನಾನು ಕಲಿತದ್ದು ಆತ್ಮವಿದ್ಯೆಯನ್ನು.
ಭೀಮ         ಆತ್ಮವಿದ್ಯೆಯನ್ನೇ? ಅನಾರ್ಯ!
ಏಕಲವ್ಯ        ಅನಾರ್ಯ ಯಾರು, ಆರ್ಯ ಯಾರು ನೋಡೋಣ.
(ಯುದ್ಧ, ಏಕಲವ್ಯ ಭೀಮನನ್ನು ತರುಬಿಕೊಂಡು ಹೋಗುತ್ತಾನೆ)
ಮೇಳ (2)               ಹೊತ್ತಿತೋ, ನಿಷ್ಠುರದ ಮಾತುಗಳ ಪಂಜು!
                        ಮೊದಲು ಸಿಹಿಯಾದರೂ ಕೊನೆಯಲ್ಲಿ ನಂಜು!
                         ಒಂದು ನುಡಿ, ಒಂದು ಕಿಡಿ ಕಡೆಗೆ ಕಾಳ್ಗಿಚ್ಚು
                         ವೀರರಿಬ್ಬರು ತೀಡೆ, ಬಿದಿರಮೆಳೆ ಕಿಚ್ಚು.
                         ಮೊದಲಾರು ಯುದ್ಧವನು ಮಾಡಿದರೊ, ಕಾಣೆ
                         ಕೂಡಿದವರಲಿ ಕಲಹವೊಡ್ಡಿದರೊ, ಕಾಣೆ.
                         ಬೇರೆ ಕಾರ್ಯವೆ ಇರದೆ ಸಾಹಸಿಯ ಬಾಳ್ಗೆ?
                         ಬೇರೆ ಭೂಷಣವಿರದೆ ಮಾನವನ ತೋಳ್ಗೆ!
                             ಓ ಹೊಲ್ಲ ಯುದ್ಧವೇ
                             ನೀನೆಂದು ನಿಲುವೆ!
                             ಓ ತಾಯಿ ಶಾಂತಿಯೇ
                             ನೀನೆಂದು ಗೆಲುವೆ!
ಮೇಳ (2)             ಹಲ್ಲು ಕಲ್ ಕತ್ತಿಗಳ ಮಸೆದು ಉರುಬಿ
                      ಮನ ಬಾಯಿ ಚಪ್ಪರಿಸಿ ಕೈಗಳನು ಚಪ್ಪರಿಸಿ ಎರಗಿ
       ಪಡೆಕೂಡಿ, ಹಗೆಯೂಡಿ ಕೊಲ್ವ ಮುನ್ನವೆ ಹಿಡಿದು,
       ಹಿರಿಯಾಳಕಿಕ್ಕರೇ ನರಕದಲಿ ಗಿಡಿದು,
                      ಯುದ್ಧವನ್ನು ನೆಲದಿ ಬಿತ್ತಿದ ಪರಮ ಪಾಪಿಯನ್ನು!
                      ಸರ್ಪದುರಿ ಹಲ್ಲುಗಳ ಬಿತ್ತಿದಾ ಪಾಪಿಯನ್ನು!
       ಆ ಪಾಪಿ ಕೆಡಿಸಿದನು ಚೆಲುವು ಬಾಳುವೆಯ
       ಆಟಪಾಟಗಳನ್ನು, ಸಿರಿಯ ಮೇಳವೆಯ!
                          ಓ ನಲವೆ, ಹೆಣ್ಣೊಲವೆ,
                             ಹಾರಿ ಹೋದಿರಿ ನೀವು!
                          ಓ ಕೊಳಲೆ, ತಣ್ಣೆಳಲೆ
                             ದೂರವಾದಿರಿ ನೀವು!
ಮೇಳ (3)          ಯಾವ ಕ್ಷಣ ಹುಟ್ಟಿದಳೊ ಬೆಂಕಿಯಲಿ ನಾರಿ
                   ಕೃಚ್ಣೆಯವಳಾ ಚಂಡಿ, ಕೌರವರ ಮಾರಿ!
                   ಭಾರತದ ಸುಖದ ಕುಡಿ ಸುಟ್ಟು ಕರಿಕಾಯ್ತೇ!
                   ಆ ಬೆಂಕಿಯುರಿಯೇ ದ್ರೌಪದಿಗೆ ಸುಖವಾಯ್ತೆ!
                   ಕೌರವನು ಜಾರೆ ತೊತ್ತಿರೊಡನೆ ನಕ್ಕಳು
                       ಆ ಕ್ಷಣವೆ ದುಃಖವನು ಹೊಕ್ಕಳು
                   ನಕ್ಕವಳನೆಳತರಿಸಿ, ಕಿತ್ತು ಸಿರಿಮುಡಿಯನ್ನು
                       ಉರಿವೆಣ್ಣ ಮುಡಿಯನ್ನು
                   ತೊತ್ತೆ ಬಾ, ಏರೆಂದು ತೋರಿದನು ತೊಡೆಯನ್ನು!
(ಏಕಲವ್ಯನನ್ನು ತರುಬಿಕೊಂಡು ಭೀಮನು ಹೋಗುತ್ತಾನೆ)
                            ಆ ತೊಡೆಯನೆಲೆ ಭೀಮ, ತೀರಿದಾ ತೊಡೆಯನ್ನು
             ನೀ ಮುರಿದೆ, ನುಡಿದಂತೆ ಮುರಿದೆ ನೀ ತೊಡೆಯನ್ನು   
                               ಒದ್ದೆ ಹೊನ್ನಿನ ಮುಡಿಯನ್ನು
                               ಒದ್ದೆ ಕೌರವನ ಸಿರಿಮುಡಿಯನ್ನು.
              ಮುರಿದೊದ್ದು, ಮಣ್ಣೊಳಗೆ ಹೊರಳಿ ನರಳುವವನನ್ನು
                             ಕಾಪಾಡಿ ಅಳಿದ ಕಡುಪ್ರೀತಿಯೊಡೆಯನನ್ನು
               ಕಂಡು ಕ್ರೋಧವು ಹೊತ್ತಿ ಕಿಡಿಯಾದನಿವನು
                              ಮರುಳಾಗಿ ಕೊಲೆಗೈದನಿವನು
               ಹೇಸಿ ತನ್ನನು ತಾನೆ ಕೊಂದುಕೊಂಡವನು
                ಶವದ ಮೇಗಡೆ ದ್ವೇಷ ತೋರಿಸಲು ಬಂದೆ,
                ಇದೊ ಮತ್ತೆ ಯುದ್ಧವನು ತಂದೆ.
                      ಕರ್ಮವೀ ಪರಿ ಮರಿಗೆ ಮರಿಯನಿಡುವುದು,
                      ಕ್ಷಮೆಯಿಂದ ಸವೆಯದಿರೆ ಮರುಕೊಳಿಸುವುದು..
                                         ಓ ಭೀಮ, ಓ ಏಕಲವ್ಯಾ
                                         ಸಾಲದೆ ರಕ್ತದಲಿ ಸ್ನಾನ?
                                         ಸಾಲದೇ ಈ ರಕ್ತಪಾನ?
(ಭಾರ್ಗವಿ, ರುದ್ರಶಕ್ತಿ. ದೂತ ಬರುತ್ತಾರೆ)
             ನೋಡಿರಿ, ನೋಡಿರಿ, ನಿಮ್ಮ ಶೌರ್ಯದ ಫಲವ!
             ಗಂಡಾಗಿ ಹೆತ್ತಿರುವ ನಿಮ್ಮ ವೀರ್ಯದ ಫಲವ!
             ಮಕ್ಕಳಿಲ್ಲದ ತಾಯಿ, ತಂದೆಯಿಲ್ಲದ ಮಗುವು!
             ಮೃತ್ಯುವಿಗೆ ಮಾತ್ರ ಆನಂದ, ನಲವು
             ಕೇಳರು, ಕೇಳರು, ನಾನಾರಿಗೆ ಹೇಳಲಿ!
             ಏಕಲವ್ಯನು ಸಾಯಲೆಂತು ನಾನು ಬಾಲಲಿ!
             ಈ ದುಷ್ಟ ಭೀಮನನು ಕೆಡಹೆಲ್ಲಿ ಹೂಳಲಿ!
(ಕೃಷ್ಣ ಬರುತ್ತಾನೆ)
            ಓ ಕೃಷ್ಣ, ಸರಿಯಾದ ಸಮಯಕ್ಕೆ ಬಂದೆ,
           ಶಾಂತಿಯನು ಕಲಿಸು ಬಾ, ನಿಲಿಸು ಬಾ ತಂದೆ.
           ಭಾರತದಿ ಶಾಂತಿಯನು ನೆಲೆಗೊಳಿಸು ಮುಂದೆ.
ಕೃಷ್ಣ          ಏನಿದು, ಅಣ್ಣಂದಿರೇ? ಓ, ಇದು ಅಶ್ವತ್ಥಾಮ! ಏಕಲವ್ಯ, ತಡ ಮಾಡಿದೆಯಲ್ಲಾ!
ಏಕಲವ್ಯ        ದೈವೇಚ್ಛೆ!
ಕೃಷ್ಣ          ಏನು ಭೀಮ, ನೀನು ಬಂದುದನ್ನು ನೋಡಿಯೇ ಬಂದೆ. ಬೀಡಿನವರೆಗೂ ಕೇಳಿಸುತ್ತಿತ್ತಲ್ಲ, ಏನದು ಕೂಗು!
ಭೀಮ         ನೋಡು ಕೃಷ್ಣ, ಈ ಬೇಡಕುನ್ನಿ ಏನು ಬೊಗಳುತ್ತಾನೆ.
ಕೃಷ್ಣ          ತೆಗೆ ತೆಗೆ, ಏಕಲವ್ಯ ಶೂರ, ಗುರುಭಕ್ತ, ಧಾರ್ಮಿಕ; ನಿನಗವನಲ್ಲಿ ಎಂತಹ ಕಲಹ?
ಭೀಮ         ಈ ಹೆಣವನ್ನು ಕೊಡುವುದಿಲ್ಲವಂತೆ; ನನ್ನಾಜ್ಞೆಯನ್ನು ಮೀರಿ ಸಂಸ್ಕಾರ ಮಾಡುತ್ತಾನಂತೆ.
ಕೃಷ್ಣ          ಗೆಳೆಯ ಗೆಳೆತನಕ್ಕೆ ಸಲ್ಲದ ಮಾತೊಂದನ್ನು ಆಡಿದರೂ ಗೆಳೆಯನಾಗಿಯೇ ಉಳಿದಿರಲು ಸಾಧ್ಯ ತಾನೇ!
ಭೀಮ         ಮರುಳಲ್ಲ ನಾನು, ಹೇಳು. ನಿನಗಿಂತಲೂ ಗೆಳೆಯರು ಯಾರಿದ್ದಾರೆ.
ಕೃಷ್ಣ          ಆ ರುದ್ರನ, ಪರಮನ ಆಜ್ಞೆ ಹೊತ್ತು ಹೇಳುತ್ತೇನೆ. ಹೃದಯವನ್ನು ಕಲ್ಲು ಮಾಡಿಕೋ; ಸತ್ತವನಿಗೆ ನಡೆಯಬೇಕಾದ ಸಂಸ್ಕಾರವನ್ನು ತಡೆಯಬೇಡ. ದ್ವೇಷವೆಷ್ಟಿದ್ದರೂ ಧರ್ಮವನ್ನು ತುಳಿಯಬೇಡ. ಇವನು ನನ್ನನ್ನೂ ದ್ವೇಷಿಸಿದ - ನನಗೆ ಬದ್ಧದ್ವೇಷಿ - ಆದರೂ ನಾನು ಅವನಿಗೆ ಗೌರವವನ್ನು ಸಲ್ಲಿಸುತ್ತೇನೆ, ಕಲಿಗಳಲ್ಲಿ ಕಲಿ ಎಂದು ಸಾರುತ್ತೇನೆ. ಅಭಿಮನ್ಯು ಒಬ್ಬ, ಇವನು ಇನ್ನೊಬ್ಬ - ಬೆಂಕಿಗಳು - ಸಿಡಿಲ ಮರಿಗಳು ರುದ್ರನಂಶಗಳು. ಇಂತಹ ವೀರನ ಬಗ್ಗೆ ಕೆಟ್ಟ ಮಾತುಗಳಾಡಿ ಅವಮಾನ ಮಾಡುವುದು ನಿನ್ನಂಥ ಹಿರಿಮೆಯ ಶೂರನಿಗೆ ತಕ್ಕದ್ದೇ? ಓ ಭೀಮ, ದೇವತೆಗಳ ಕಟ್ಟಳೆಗಳನ್ನೇ ನೀನು ಮೀರುತ್ತಿರುವುದು, ಇವನನ್ನಲ್ಲ. ಶೂರ ಸತ್ತಾಗ, ಹಗೆಗಳೂ ಹೊಗಳುವುದೇ ಶೀಲ, ನೋಯಿಸುವುದಲ್ಲ.
ಭೀಮ         ನಮ್ಮೆಲ್ಲರ ದೈವವಾದ ಆ ರುದ್ರನೇ ಕೈಬಿಟ್ಟಿದ್ದಾನಲ್ಲಾ?
ಕೃಷ್ಣ          ಬಿಟ್ಟನೋ, ಕಟ್ಟಿಕೊಂಡನೋ, ಆ ರುದ್ರಹೃದಯವನ್ನು ನಾವೆಲ್ಲಿ ಕಂಡಿದ್ದೇವೆ? ಪರಿಶುದ್ಧನನ್ನಾಗಿ ಮಾಡಿ ಆತ್ಮವನ್ನು ಸೆಳೆದೊಯ್ದಿದ್ದಾನೆ ಎನ್ನುತ್ತೇನೆ ನಾನು.
ಭೀಮ       ಹಗೆಯ ಪರ ವಹಿಸಿಕೊಂಡು ನೀನು ನನ್ನನ್ನೇ ವಿರೋಧಿಸುವುದೇ? ಓ ಕೃಷ್ಣ, ದ್ರೌಪದಿಯ ದುಃಖ ನಿನಗೆ ಗೊತ್ತಿದೆಯಲ್ಲ.
ಕೃಷ್ಣ           ದುಃಖ ಕ್ರೋಧಗಳು ಒಳ್ಳೆಯದನ್ನು ಮಾಡಲಾರವು ಅದಕ್ಕೆ, ಅದೋ ಸಾಕ್ಷಿ.
ಭೀಮ         ಅದು ಹೋಗಲಿ, ಆ ಶಿರೋರತ್ನವನ್ನು ತೆಗೆದುಕೊಂಡು ಹೋಗುತ್ತೇನೆ.
ಕೃಷ್ಣ          ಚಂಡಿ ಹಿಡಿಯಬೇಡ, ಭೀಮ. ಪುತ್ರರತ್ನರುಗಳಿಗೆ ಈ ರತ್ನ ಸಾಟಿಯೇನು?
ಭೀಮ         ಇಂತಹ ನೀಚರನ್ನು ಅದು ಹೇಗೆ ಸೈರಿಸಬೇಕೋ! ತುಳಿಯುವುದೂ ತಪ್ಪಲ್ಲ.
ಕೃಷ್ಣ       ಹೆಣ್ಣಿನ ಕಣ್ಣೀರನ್ನು ಕಂಡು ನೀನು ಹೀಗೆ ಬುಸುಗುಡುತ್ತಿದ್ದೀಯೆ. ಈಗ ತಾಳಿಕೋ. ನನ್ನ ಜೊತೆ ಬಾ, ನಿನಗೆ ಶ್ರೇಯಸ್ಕರವಾದುದನ್ನು ತೋರಿಸುತ್ತೇನೆ.
ಭೀಮ         ನೀನಿವತ್ತು ಭೀಮನನ್ನು ಹೇಡಿಯಾಗಿ ಮಾಡುತ್ತಿದ್ದೀಯೆ. ಹೀಗಾದರೆ ಜಯವೆಲ್ಲಿ ನಮಗೆ?
ಕೃಷ್ಣ         ಗೆಳೆಯನಿಗಾಗಿ ಸೋಲುವುದೇ ಗೆಲವು; ಕ್ಷಮೆಯೇ ಜಯ; ಕ್ರೋಧವನ್ನು ತುಳಿದು, ಧರ್ಮವನ್ನು ಬಲವಾಗಿ ಆಶ್ರಯಿಸಿ, ಮನಸ್ಸಿನೊಂದಿಗೆ ಹೋರಾಡುವುದೇ ಜಯ. ಬಾ ಭೀಮ, ಎಲ್ಲರೂ ಹೊಗಳುವ ಹಾಗೆ ಗೌರವಿಸೋಣ ಬಾ; ಅಶ್ವತ್ಥಾಮ ಪೂಜ್ಯ.
ಭೀಮ         ಸತ್ತವನ ಬಗ್ಗೆ ಇದೆಂಥ ಭಕ್ತಿ? ಇನ್ನೂ ನಿನ್ನ ಮನಸ್ಸನ್ನೇ ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗಿಲ್ಲ, ಕೃಷ್ಣ.
ಕೃಷ್ಣ          ಓ ಮಿತ್ರ, ನಾನೂ ಒಂದು ದಿನ ಹೀಗೇ ಆಗುವವನಲ್ಲವೇ?
ಭೀಮ         ನಿನ್ನ ಕೆಲಸವೇ ಸರಿ, ನನ್ನದಲ್ಲ.
ಕೃಷ್ಣ          ಧರ್ಮಕ್ಕೆ ಅನುಗುಣವಾಗಿರಲಿ, ಯಾರದಾದರೇನು?
ಭೀಮ         ನಿನ್ನೊಡನೆ ವಾದಿಸಲಾರೆ; ನಿನ್ನಿಷ್ಟದಂತಾಗಲಿ. ಈ ಘೋರವನ್ನು ನಾನಂತೂ ಕ್ಷಮಿಸಲಾರೆ. ಬದುಕಿನಲ್ಲಿ ಹೇಗೋ ಸಾವಿನಲ್ಲೂ ಇವನು ನನ್ನ ಶತ್ರುವೇ.
(ಹೋಗುತ್ತಾನೆ)
ಮೇಳನಾಯಕ   ಓ ಕೃಷ್ಣ, ನೀನು ನಿಜವಾಗಿಯೂ ಧರ್ಮದೇವತೆಯೇ. ಕಾಣದವರು ದೂರುತ್ತಾರೆ. ಆದರೆ ನಾವಿಂದು ಸತ್ಯವನ್ನು ಕಂಡೆವು.
ಕೃಷ್ಣ          ಹಿಂದೆ ಹಗೆ, ಮುಂದೆ ಕೆಳೆ. ಸಂಸ್ಕಾರ ಕರ್ಮಗಳಲ್ಲಿ ನಿಮ್ಮ ಜೊತೆಗೆ ನಾನು ಕೂಗೂಡಿಸಲೇನು? ವೀರ, ಧೀರ, ರುದ್ರಾವತಾರನಾದವನಿಗೆ ಸೇವೆಯನ್ನು ಸಲ್ಲಿಸೋಣ.
ಏಕಲವ್ಯ       ಓ ಕೃಷ್ಣ, ಈ ನಿನ್ನ ಸೌಜನ್ಯ, ನಿನ್ನ ಧರ್ಮಪ್ರೀತಿಗಳು ಸ್ತೋತ್ರಾರ್ಹವಾದವು, ಆ ಪಶುವಿನ ಹಾಗಲ್ಲ, ಆ ಮತ್ತನಾದ ದೈತ್ಯನ ಹಾಗಲ್ಲ. ನಿನ್ನ ನಡೆ, ನಿನ್ನ ನುಡಿಗಳಿಂದ ಬಿದ್ದ ಹಗೆಯನ್ನು ಕರುಣೆ ತೋರಿಸಿ ನಿನ್ನವರಿಂದ ಕಾಪಾಡಿದೆ. ಆದರೂ ಪ್ರೇತಕರ್ಮಗಳಲ್ಲಿ, ಓ ವಾಸುದೇವಾ, ನಿನ್ನನ್ನು ನಮ್ಮ ಜೊತೆಗೆ ಸೇರಿಸಿಕೊಳ್ಳಲು ಅಳುಕಾಗುತ್ತದೆ. ಗೆಳೆಯನಿಗೆ ಅದು ಪ್ರಿಯವೋ ಅಪ್ರಿಯವೋ ನನಗೆ ತಿಳಿಯದು. ಈ ಒಂದು ವಿಷಯದಲ್ಲಿ ಕ್ಷಮಿಸು, ಬೇಡುತ್ತೇನೆ.
ಕೃಷ್ಣ          ನಿಮ್ಮ ಸಂತೋಷ; ನನ್ನ ಇಷ್ಟ ಇಲ್ಲಿ ಮುಖ್ಯವಲ್ಲ. ನಿನ್ನ ತೀರ್ಮಾನಕ್ಕೆ ತಲೆಬಾಗಿಸಿ ಇಗೋ ಹೊರಟೆ. ಈ ಕಂದ ತಂದೆಯನ್ನು ಮೀರಿಸುವಂತಾಗಲಿ. ಭಾರ್ಗವಿ, ತಾಳ್ಮೆಯಿರಲಿ ತಾಯಿ. ಕಲಿಗಳನ್ನು ಬೆಳಸುವುದೇ ನಿನ್ನ ಪಾಲಿನ ಸಂತೋಷ.
(ಹೋಗುತ್ತಾನೆ. ಭಾರ್ಗವಿ ಬಾಗಿ ಮಗುವನ್ನು ಕರೆದುಕೊಳ್ಳುತ್ತಾಳೆ)
ಏಕಲವ್ಯ        ಇನ್ನು ಏಳಿರಿ. ಆಗಲೇ ಹೊತ್ತಾಯಿತು, ಏಳಿ. ಜಾಗ ಆರಿಸಿ, ಸಮಾಧಿಗಾಗಿ ಭೂಮಿಯನ್ನು ತೋಡಿ. ಗಂಗೆ ತರಲು ಒಬ್ಬನು ಹೋಗಲಿ - ಅಗ್ನಿಗೆ ಇನ್ನೊಬ್ಬ ಹೋಗಲಿ. ಎಲ್ಲ ಆಯುಧಗಳನ್ನು ಬೀಡಿನಿಂದ ತನ್ನಿ. ಬಾ ತಾಯಿ, ಬಾ ಮಗು, ಗೆಳೆಯರೇ ಬನ್ನಿ. ಮೈಚಾಚಿ. ತಲೆಬಾಗಿ ಭಕ್ತಿಯನ್ನು ಸಲ್ಲಿಸೋಣ. ಆಹಾ, ಇನ್ನೂ ಇವನಿಂದ ರಕ್ತಸುರಿಯುತ್ತಿದೆಯಲ್ಲ. ವೀರರ ವೀರನಿಗೆ, ರುದ್ರಾವತಾರನಿಗೆ, ರುದ್ರನೊಡನೆ ಹೋರಾಡಿದವನಿಗೆ, ರುದ್ರನನ್ನೇ ಸೇರಿದವನಿಗೆ ಸೇವೆ ಮಾಡೋಣ, ಪೂಜೆಗೈಯೋಣ.
ಮೇಳ                     ನಮ್ಮ ಕಾಡುಗಳೆಡೆಯ ಹಟ್ಟಿಯನು ಮುಟ್ಟಿ
                          ನಮ್ಮ ಬೆಟ್ಟದ ಮೇಲೆ ಗುಡಿಯನ್ನು ಕಟ್ಟಿ,
                              ಸೇವೆಯನು ಮಾಡೋಣ
                           ಜಾತ್ರೆಯನು ಮಾಡೋಣ.
ಎಲ್ಲರೂ                    ಅಶ್ವತ್ಥಾಮನಿಗೆ ಜಯವಾಗಲಿ!
                         ಜೈ ಅಶ್ವತ್ಥಾಮ!
ಮೇಳನಾಯಕ            ಇಂದೇನೊ ಮುಂದೇನೊ ಯಾವನೂ ಕಾಣ               
                       ಬಂದುದನು ಕೊಂಡುಂಡು ತಾಳಿದವ ಜಾಣ
                            ರುದ್ರನೊಲಿದರೆ ಉಳಿವು
                            ಒಲಿಯದಿದ್ದರೆ ಅಳಿವು.
                       ತಗ್ಗಿ ನಡೆದರೆ ರುದ್ರ ತಾನೊಲಿಯದಿರನು
                       ಮಿತಿಯರಿತು ನಡೆಯೆ ಶಿವ ತಾನೊಲಿಯದಿರನು.
*****

             




No comments: