ಯಜಮಾನ-ಆಳು (ಟಾಲ್ಸ್ ಟಾಯ್ ಕತೆ)
1
ಅದು ನಡೆದದ್ದು ಎಪ್ಪತ್ತರ ದಶಕದ ಒಂದು
ಚಳಿಗಾಲದಲ್ಲಿ, ಸಂತ ನಿಕೋಲಾಸ್ ಹಬ್ಬದ ಮಾರನೇ ದಿನ. ಅಂದು ಪ್ಯಾರಿಷ್‍ನಲ್ಲೊಂದು ಔತಣಕೂಟವಿತ್ತು,
ಸೆಕೆಂಡ್ ಗಿಲ್ಡ್ ವ್ಯಾಪಾರಿಯಾದ ಇನ್‍ಕೀಪರ್ ವಾಸಿಲಿ ಆಂಡ್ರೆವಿಚ್ ಬ್ರೆಖ್ಯುನೊವ್, ಚರ್ಚ್
ಹಿರಿಯನಾಗಿದ್ದುದರಿಂದ ಚರ್ಚ್‍ಗೆ ಹೋಗಬೇಕಾಗಿತ್ತು. ಜೊತೆಗೆ ಮನೆಯಲ್ಲಿಯೂ ಬಂಧುಗಳು ಹಾಗೂ
ಗೆಳೆಯರಿಗೆ ಆತಿಥ್ಯ ನೀಡಬೇಕಾಗಿತ್ತು.
ಅತಿಥಿಗಳಲ್ಲಿ ಕೊನೆಯವನು ಹೋಗುವವರೆಗೂ ಕಾದಿದ್ದು,
ತಕ್ಷಣವೇ ಅವನು ತಾನು ದೀರ್ಘಕಾಲದಿಂದ ತೋಪೊಂದನ್ನು ಖರೀದಿಸಲು ವ್ಯವಹಾರ ನಡೆಸುತ್ತಿದ್ದ ನೆರೆಯ
ಮಾಲೀಕನ ಬಳಿ ಧಾವಿಸಲು ಸಿದ್ಧತೆ ಮಾಡಿಕೊಳ್ಳತೊಡಗಿದ. ಈಗವನು ಹೋಗುವ ತರಾತುರಿಯಲ್ಲಿದ್ದ,
ಯಾಕಂದರೆ ಪಟ್ಟಣದ ಹಣವಂತರು ಈ ಲಾಭದಾಯಕ ವ್ಯವಹಾರ ಕುದುರಲು ತಾವೇ ಕೊಳ್ಳಲು ಮುಂದಾಗಿ
ಅಡ್ಡಿಮಾಡಿಯಾರೆಂಬುದು ಅವನ ಆತಂಕ.
ಆ ತೋಪಿಗಾಗಿ ಯುವಕ ಮಾಲೀಕ ಹತ್ತು ಸಾವಿರ ರೂಬಲ್‍ಗಳ
ಬೆಲೆಯನ್ನು ಹೇಳುತ್ತಿದ್ದ; ವಾಸಿಲಿ ಬ್ರೆಖ್ಯುನೊವ್ ಅದಕ್ಕೆ ಏಳು ಸಾವಿರ ಕೊಡುವುದಾಗಿ ಚೌಕಸಿ
ಮಾಡುತ್ತಿದ್ದ. ಏಳು ಸಾವಿರ ಅದರ ವಾಸ್ತವ ಬೆಲೆಯ ಮೂರನೇ ಒಂದು ಭಾಗದಷ್ಟು ಮಾತ್ರ. ತನ್ನ ಬೆಲೆಗೇ
ವಾಸಿಲಿ ಬ್ರೆಖ್ಯುನೊವ್ ಕೊಳ್ಳಲು ಸಿದ್ಧನಾಗಿದ್ದಿರಬಹುದು; ಅದು ತನ್ನ ಪ್ರದೇಶಕ್ಕೆ
ಸಮೀಪವಾಗಿತ್ತು, ಜೊತೆಗೆ ತನ್ನ ಹಳ್ಳಿಯವರಾರೂ ಆ ಪ್ರದೇಶದ ಭೂಮಿಯ ಬೆಲೆಯನ್ನು ಏರಿಸಬಾರದೆಂಬ
ಬಗ್ಗೆ ದೀರ್ಘಕಾಲೀನ ಒಪ್ಪಂದವೂ ಆಗಿತ್ತು. ಆದರೆ ಗೊರ್ಯಾಚ್ಕಿನ್ ತೋಪಿಗೆ ಪಟ್ಟಣದ ಕೆಲವು ಮರದ
ದಿಮ್ಮಿ ವ್ಯಾಪಾರಿಗಳು ಹೆಚ್ಚು ಬೆಲೆ ಕೊಡಲು ಸಿದ್ಧರಾಗುತ್ತಿದ್ದಾರೆಂಬ ವಿಷಯ ಅವನಿಗೆ ಈಚೆಗೆ
ತಿಳಿದಿತ್ತು. ಹೀಗಾಗಿ ತಕ್ಷಣವೇ ಹೋಗಿ ವ್ಯಾಪಾರವನ್ನು ಕುದುರಿಸಿಬಿಡಬೇಕೆಂದು ಅವನು
ನಿರ್ಧರಿಸಿದ್ದ. ಆದ್ದರಿಂದಲೇ ಔತಣ ಮುಗಿದ ತಕ್ಷಣವೇ ತನ್ನ ಕಬ್ಬಿಣದ ಪೆಟ್ಟಿಗೆಯಿಂದ ಏಳುನೂರು
ರೂಬಲ್‍ಗಳನ್ನು ತೆಗೆದುಕೊಂಡು ಅದರೊಡನೆ ತನ್ನ ವಶದಲ್ಲಿದ್ದ ಚರ್ಚ್‍ಗೆ ಸೇರಿದ ಎರಡು ಸಾವಿರದ
ಮುನ್ನೂರು ರೂಬಲ್‍ಗಳನ್ನು ಸೇರಿಸಿ ಮೂರು ಸಾವಿರ ರೂಬಲ್‍ಗಳನ್ನು ಹೊಂದಿಸಿಕೊಂಡು ಸಿದ್ಧನಾದ.
ಎಚ್ಚರಿಕೆಯಿಂದ ನೋಟುಗಳನ್ನು ಎಣಿಸಿಕೊಂಡು ಅದನ್ನು ತನ್ನ ಜೇಬಿನ ಪುಸ್ತಕದಲ್ಲಿರಿಸಿಕೊಂಡು
ತರಾತುರಿಯಿಂದ ಹೊರಟ.
ಆವತ್ತು ಕುಡಿದಿರದ ನಿಕಿಟ ಎಂಬ ವಾಸಿಲಿ
ಆಂಡ್ರೆವಿಚ್‍ನ ಒಬ್ಬನೇ ಆಳು ಕುದುರೆಯನ್ನು ಜಾರುಬಂಡಿಗೆ ಹೂಡಿ ಸಿದ್ಧಪಡಿಸಲು ಹೊರಟ. ಕುಡಿತದ
ಅಭ್ಯಾಸವಿದ್ದ ನಿಕಿಟ ಅವತ್ತು ಕುಡಿಯದಿದ್ದುದಕ್ಕೆ ಕಾರಣ ತನ್ನ ಕೋಟು ಹಾಗೂ ಲೆದರ್ ಬೂಟುಗಳನ್ನೂ
ಮಾರಿ, ಹಬ್ಬದ ಹಿಂದಿನ ದಿನ ಕುಡಿದು, ಇನ್ನು ಮುಂದೆ ಕುಡಿಯುವುದಿಲ್ಲವೆಂದು ಪ್ರತಿಜ್ಞೆ
ಮಾಡಿದ್ದವನು ಎರಡು ತಿಂಗಳ ಕಾಲ ಅದನ್ನು ಪಾಲಿಸಿ, ಹಬ್ಬದ ಎರಡು ದಿನಗಳೂ ಹೋದ ಕಡೆಯಲ್ಲೆಲ್ಲ
ಕುಡಿದಿದ್ದ ವೋಡ್ಕಾ ಈಗಲೂ ತನ್ನನ್ನು ಸೆಳೆಯುತ್ತಿದ್ದರೂ ತನ್ನ ವ್ರತಭಂಗ ಮಾಡಿರಲಿಲ್ಲ.
ನಿಕಿಟ ಸುಮಾರು ಐವತ್ತು ವರ್ಷ ವಯಸ್ಸಿನ ಪಕ್ಕದ
ಹಳ್ಳಿಯೊಂದರ ಒಬ್ಬ ರೈತ; ಅವನು ಅಲ್ಲಿ ಇತರ ರೈತರಿಂದ ‘ಯಜಮಾನ’ ಅನ್ನಿಸಿಕೊಂಡಿರಲಿಲ್ಲ, ಯಾಕಂದರೆ
ಅವನು ಸಂಸಾರದ ಹೊರೆ ಹೊತ್ತವನಾಗಿರದೆ ಬಹುತೇಕ ಮನೆಯಿಂದ ಹೊರಗೆ ಕೂಲಿಯಾಗಿ ಕಾಲ
ಕಳೆಯುತ್ತಿದ್ದವನು. ಅವನ ಶ್ರಮದುಡಿಮೆ, ಕುಶಲತೆ ಮತ್ತು ಕೆಲಸದಲ್ಲಿನ ಸಾಮರ್ಥ್ಯಗಳಿಗಾಗಿ,
ಅದಕ್ಕಿಂತ ಹೆಚ್ಚಾಗಿ ಅವನ ನಯವಂತ ನಡತೆ ಮತ್ತು ಪ್ರಸನ್ನತೆಗಳಿಗಾಗಿ ಎಲ್ಲರೂ ಅವನಿಗೆ ಗೌರವ
ನೀಡುತ್ತಿದ್ದರು. ಅವನು ಯಾವತ್ತೂ ಎಲ್ಲಿಯೂ ದೀರ್ಘಕಾಲ ನೆಲೆಸಿದವನಲ್ಲ; ಇದಕ್ಕೆ ಕಾರಣ ಅವನು
ವರ್ಷಕ್ಕೆರಡು ಬಾರಿಯೋ, ಆಥವಾ ಇನ್ನೂ ಹೆಚ್ಚು ಬಾರಿಯೋ, ಕುಡಿತದಲ್ಲಿ ಓಲಾಡುತ್ತಿದ್ದ; ತನ್ನ
ಬಟ್ಟೆಬರೆಗಳನ್ನೆಲ್ಲ ಅದಕ್ಕಾಗಿ ಮಾರಿಬಿಡುತ್ತಿದ್ದ; ಅಷ್ಟೇ ಅಲ್ಲದೆ ಆಗ ಅವನು ಉಗ್ರನೂ
ಜಗಳಗಂಟನೂ ಆಗಿಬಿಡುತ್ತಿದ್ದ. ವಾಸಿಲಿ ಆಂಡ್ರೆವಿಚ್ ಅವನನ್ನು ಎಷ್ಟೋ ಸಲ ಅಟ್ಟಿಬಿಟ್ಟಿದ್ದ,
ಆದರೆ ಆನಂತರ ಪುನಃ ಕೆಲಸಕ್ಕೆ ತೆಗೆದುಕೊಂಡಿದ್ದ; ಅದಕ್ಕೆ ಕಾರಣ ಅವನ ಪ್ರಾಮಾಣಿಕತೆ, ಪ್ರಾಣಿಗಳ
ಬಗೆಗಿನ ದಯಾವಂತಿಕೆ, ಎಲ್ಲಕ್ಕಿಂತ ವಿಶೇಷವಾಗಿ ಅವನು ಅಗ್ಗದ ಕೂಲಿಯಾಗಿದ್ದುದು. ಅವನು ನಿಜವಾಗಿ
ಬೆಲೆರಬಾಳುತ್ತಿದ್ದ ಎಂಬತ್ತು ರೂಬಲ್‍ಗಳನ್ನು ವರ್ಷಕ್ಕೆ ವಾಸಿಲಿ ಆಂಡ್ರೆವಿಚ್ ಎಂದೂ
ಕೊಟ್ಡವನಲ್ಲ, ಕೊಡುತ್ತಿದ್ದುದು ನಲವತ್ತು ರೂಬಲ್‍ಗಳಷ್ಟು ಮಾತ್ರ, ಅದೂ ಆಗಷ್ಟು ಈಗಷ್ಟು
ಎಂಬಂತೆ, ಅದೂ ಚಿಲ್ಲರೆಯ ರೀತಿಯಲ್ಲಿ, ಅದನ್ನೂ ಕೊಡುತ್ತಿದ್ದುದು ನಗದಿನ ರೂಪದಲ್ಲಾಗಿರದೆ
ತನ್ನದೇ ಅಂಗಡಿಯ ವಸ್ತುಗಳನ್ನು, ದುಬಾರಿ ಬೆಲೆಗೆ.
ನಿಕಿಟನ ಹೆಂಡತಿ ಮಾರ್ತಾ ಒಂದು ಕಾಲದಲ್ಲಿ ಸುಂದರಿ
ಹಾಗೂ ಗಟ್ಟಿಗಿತ್ತಿ ಎನಿಸಿಕೊಂಡಿದ್ದವಳು, ತನ್ನ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳೊಡನೆ ಹೇಗೋ
ಸಂಸಾರ ನಿಭಾಯಿಸುತ್ತಿದ್ದಳು; ನಿಕಿಟನನ್ನು ಮನೆಯಲ್ಲಿಯೇ ಇರುವಂತೆ ಎಂದೂ ಬಲವಂತ ಮಾಡಿದವಳಲ್ಲ.
ಅದಕ್ಕೆ ಮೊದಲ ಕಾರಣವೆಂದರೆ, ತನ್ನ ಮನೆಯಲ್ಲಿ ಬೀಡುಬಿಟ್ಟಿದ್ದ ನೆರೆಯ ಹಳ್ಳಿಯ ರೈತನಾದ ಒಬ್ಬ
ಚಿಲ್ಲರೆ ಸಾರಾಯಿ ಮಾರಾಟಗಾರನ ಜೊತೆಯಲ್ಲಿ ಈಗ್ಗೆ ಇಪ್ಪತ್ತು ವರ್ಷಗಳಿಂದ ವಾಸಿಸುತ್ತಿದ್ದುದು;
ಎರಡನೆಯದಾಗಿ, ಕುಡಿದಿಲ್ಲದಾಗ ತನ್ನ ಗಂಡನನ್ನವಳು ಹೇಗೋ ಒಲಿಸಿಕೊಳ್ಳುತ್ತಿದ್ದವಳು, ಕುಡಿದಾಗ
ಮಾತ್ರ ಬೆಂಕಿಯನ್ನು ಕಂಡ ಹಾಗೆ ಹೆದರಿ ದೂರ ಉಳಿಯುತ್ತಿದ್ದಳು. ಪ್ರಾಯಶಃ ಕುಡಿಯದಿದ್ದಾಗಿನ ತನ್ನ
ವಿನೀತತೆಯನ್ನು ಸರಿದೂಗಿಸಲೋ ಎಂಬಂತೆ ಮನೆಯಲ್ಲಿದ್ದಾಗ ಒಮ್ಮೆ ಕುಡಿದಿದ್ದ ನಿಕಿಟ ಅವಳ
ಪೆಟ್ಟಿಗೆಯ ಬೀಗ ಒಡೆದು ಅವಳ ಅತ್ಯುತ್ತಮ ಬಟ್ಟೆಗಳನ್ನೆಲ್ಲ ತೆಗೆದುಕೊಂಡು, ಒಂದು ಕೊಡಲಿಯನ್ನು
ಕೈಯಲ್ಲಿ ಹಿಡಿದು, ಅವಳ ಉಡುಗೆತೊಡುಗೆಗಳನ್ನೆಲ್ಲ ಚೂರುಚೂರಾಗಿ ತುಂಡರಿಸಿದ್ದ. ನಿಕಿಟ ತಾನು
ಸಂಪಾದಿಸುತ್ತಿದ್ದ ಕೂಲಿಯನ್ನೆಲ್ಲ ಹೆಂಡತಿಗೇ ಕೊಡುತ್ತಿದ್ದ, ಹಾಗೆ ಮಾಡಲು ಅವನ ತಕರಾರೇನೂ
ಇರಲಿಲ್ಲ. ಹೀಗಾಗಿ, ರಜೆಗೆ ಎರಡು ದಿನ ಮುಂಚೆ, ವಾಸಿಲಿ ಆಂಡ್ರೆವಿಚ್‍ನನ್ನು ಕಾಣಲು ಎರಡು ಬಾರಿ
ಹೋಗಿ ಅವನಿಂದ ಗೋಧಿಹಿಟ್ಟು, ಟೀ, ಸಕ್ಕರೆ ಮತ್ತು ಒಂದಷ್ಟು ವೋಡ್ಕಾ ಇವಕ್ಕೆಲ್ಲ ಮೂರು ರೂಬಲ್
ಬೆಲೆ, ಐದು ರೂಬಲ್ ನಗದನ್ನು ಪಡೆದು, ಈ ಉಪಕಾರಕ್ಕಾಗಿ – ಕನಿಷ್ಠವೆಂದರೂ ಅವನು ನಿಕಿಟನಿಗೆ ಇಪ್ಪತ್ತು ರೂಬಲ್‍ಗಳನ್ನು ನೀಡಬೇಕಾಗಿತ್ತು -
ಅವನಿಗೆ ವಂದನೆ ಹೇಳಿ ಬಂದಿದ್ದಳು.
“ನಿನ್ನ ಜೊತೆ ನಾನು ಯಾವ ರೀತಿ ಒಪ್ಪಂದ
ಮಾಡಿಕೊಂಡಿರೋದು?” ವಾಸಿಲಿ ಆಂಡ್ರೆವಿಚ್ ನಿಕಿಟನನ್ನು ಪ್ರಶ್ನಿಸಿದ. “ನಿನಗೆ ಏನಾದರೂ ಬೇಕಾದ್ರೆ
ತಗೊಂಡು ಹೋಗು; ಅದರ ಬದಲು ತಕ್ಕ ಹಾಗೆ ಕೆಲಸ ಮಾಡು. ಬೇರೆಯೋರ ಥರ ಅದಕ್ಕಾಗಿ ನೀನು ಕಾದುಕೊಂಡಿರೋ
ಹಾಗೆ ಮಾಡಲ್ಲ, ದಂಡ ಅಂತ ಕೂಲಿಯಲ್ಲಿ ಉತ್ತಾರ ಹಾಕಿಕೊಳ್ಳಲ್ಲ. ನಮ್ಮ ವ್ಯವಹಾರ ನೇರವಾದ್ದು.
ನೀನು ನಂಗೆ ಕೆಲಸ ಮಾಡಿ ಕೊಡ್ತೀಯಾ, ನಾನು ನಿನ್ನನ್ನ ಕಡೆಗಣಿಸಲ್ಲ.”
ಈ ಮಾತುಗಳನ್ನಾಡುವಾಗ ತಾನು ನಿಕಿಟನ ಹಿತರಕ್ಷಕ
ಎಂಬ ಭಾವನೆಯನ್ನೇ ವಾಸಿಲಿ ಆಂಡ್ರೆವಿಚ್ ತಾಳಿರುತ್ತಿದ್ದುದು. ನಿಕಿಟ ಮಾತ್ರವಲ್ಲ, ಅವನನ್ನು
ಹಣಕ್ಕಾಗಿ ಅವಲಂಬಿಸಿದ್ದವರೆಲ್ಲರ ಹಿತರಕ್ಷಕನೇ ಹೊರತು ಅವರನ್ನು ತಾನು ಕಡೆಗಣಿಸುವವನಲ್ಲ ಎಂಬ
ಭಾವನೆ ಬರುವಂತೆ ಅವನು ನಂಬಿಸುತ್ತಿದ್ದ.
“ಹೌದು, ವಾಸಿಲಿ ಆಂಡ್ರೆವಿಚ್ ಯಜಮಾನರೇ, ನನಗೆ
ಅರ್ಥವಾಗತ್ತೆ. ನನ್ನ ತಂದೆ ಕೆಲಸ ಆಗಿದ್ರೆ ಎಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡ್ತಿದ್ದೆನೋ
ಅಷ್ಟೇ ಕಷ್ಟಪಟ್ಟು ನಿಮ್ಮ ಕೆಲಸ ಮಾಡಿಕೊಂಡ್ತೀನಿ. ನಿಮ್ಮ ಸ್ವಭಾವ ನಂಗೆ ಚೆನ್ನಾಗಿ ಗೊತ್ತು!”
ಎಂದು ನಿಕಿಟ ಹೇಳುತ್ತಿದ್ದ. ವಾಸಿಲಿ ಆಂಡ್ರೆವಿಚ್ ತನ್ನನ್ನು ವಂಚಿಸುತ್ತಿದ್ದಾನೆ ಎಂಬುದು
ಅವನಿಗೆ ಚೆನ್ನಾಗೇ ಗೊತ್ತಿತ್ತು, ಆದರೆ ತನಗೆ ಬರಬೇಕಾದ್ದನ್ನೆಲ್ಲ ಚುಕ್ತಾ ಮಾಡಿಬಿಡಬೇಕೆಂದು ಹಟ
ಹಿಡಿಯುವುದಾಗಲೀ, ತನ್ನ ದೃಷ್ಟಿಕೋನವನ್ನು ವಿವರಿಸಿ ಹೇಳುವುದಾಗಲೀ ಉಪಯೋಗಕ್ಕೆ ಬಾರದೆಂದು
ಅವನಿಗೆ ಮನವರಿಕೆಯಾಗಿತ್ತು; ಹೋಗಲು ಬೇರೆಲ್ಲೂ ಜಾಗವಿಲ್ಲದ್ದರಿಂದಾಗಿ ತನಗೆ ಸಿಕ್ಕಿದಷ್ಟಕ್ಕೇ
ಅವನು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.
ಕುದುರೆಯನ್ನು ಗಾಡಿಗೆ ಹೂಡಲು ಯಜಮಾನರು
ಹೇಳಿದ್ದರಿಂದ, ಅವನೀಗ ಎಂದಿನ ಕುಶಾಲುತನ ಹಾಗೂ ಇಷ್ಟದಿಂದಲೇ ಶೆಡ್ ಕಡೆ ದಡದಡ ಸರಾಗವಾದ ಹೆಜ್ಜೆ
ಇಡುತ್ತ ಹೋದ. ಮೊಳೆಗೆ ನೇತು ಹಾಕಿದ್ದ ಭಾರವಾದ ಚರ್ಮದ ಕಡಿವಾಣಗಳನ್ನು ತೆಗೆದುಕೊಂಡು, ಅದರ
ಸರಪಳಿಯನ್ನು ಸಳಸಳ ಸದ್ದುಮಾಡುತ್ತ ಬಾಗಿಲು ಮುಚ್ಚಿದ್ದ ಕುದುರೆ ಲಾಯದ
ಬಳಿ
ಹೋಗಿ ಅಲ್ಲಿ ನಿಂತಿದ್ದ ಕುದುರೆಗೆ ಜೋಡಿಸಿದ.
“ಏನು ಒಂಟಿತನಾನಾ? ಒಂಟಿತನಾನಾ, ಮಂಕು ಮುಂಡೇದೇ?”
ಎಂದು ತನ್ನನ್ನು ಕಂಡು ನವಿರಾಗಿ ಕೆನೆದ ಸಾಧು ಸ್ವಭಾವದ ಮಧ್ಯಮ ಎತ್ತರದ, ಜೋತುಬಿದ್ದಂತಿದ್ದ
ಬಾಲದ ಪಟ್ಟಿಯನ್ನು ಹೊತ್ತು ಶೆಡ್‍ನಲ್ಲಿ ಒಂಟಿಯಾಗಿ ನಿಂತಿದ್ದ ಠಾಕಣಕ್ಕೆ ಉತ್ತರ ಕೊಡುವವನಂತೆ
ನುಡಿದ. “ಈಗ, ಇನ್ನೂ ಸಾಕಷ್ಟು ಸಮಯ ಇದೆ. ಸ್ವಲ್ಪ ನೀರು ಕುಡಿಸಬೇಕು ನಿಂಗೆ” ಎಂದು ತನ್ನ
ಮಾತುಗಳನ್ನು ಅರ್ಥಮಾಡಿಕೊಳ್ಳಬಲ್ಲ ಯಾರಿಗೋ ಹೇಳುವವನಂತೆ ಮಾತಾಡುತ್ತ, ದಷ್ಟಪುಷ್ಟವಾಗಿ
ಬೆಳೆದಿದ್ದ ಠಾಕಣದ ಬೆನ್ನ ಮೇಲೆಲ್ಲ ತುಂಬಿಕೊಂಡಿದ್ದ ದೂಳನ್ನು ತನ್ನ ಕೋಟಿನ ಚುಂಗಿನಿಂದಲೇ
ಕೊಡವುತ್ತ; ಅದರ ಚೆಲುವಾದ ತಲೆಯ ಕಡೆ ಕಡಿವಾಣವನ್ನು ಇರಿಸಿ, ಅದರ ಕಿವಿಗಳನ್ನೂ ಕೂದಲನ್ನೂ
ನೇರಗೊಳಿಸಿ, ಕಟ್ಟಿದ್ದ ಗೂಟದಿಂದ ಬಿಡಿಸಿ ನೀರಿದ್ದ ಕಡೆ ಕುದುರೆಯನ್ನು ಕರೆದೊಯ್ದ.
ಎಲ್ಲ ಕಡೆ ಲದ್ದಿ ತುಂಬಿದ್ದ ಲಾಯದಿಂದ ಹೊರಬಂದ
‘ಮುಖೋರ್ಟಿ’ ತಿರುಗಿ ತನ್ನ ಹಿಂಗಾಲುಗಳನ್ನು ಮೇಲೆತ್ತಿ ಒದೆಯುವಂತೆ ತೋರಿಸಿ ತನ್ನ ಜೊತೆಗೆ
ಕುಕ್ಕುಲು ಓಟದಿಂದ ಸಾಗುತ್ತ ನೀರಿನೆಡೆ ಕರೆದೊಯ್ಯುತ್ತಿದ್ದ ನಿಕಿಟನನ್ನು ಹಿಂಬಾಲಿಸಿತು.
ಮೇಲೆತ್ತಿದ ಹಿಂಗಾಲುಗಳು ತನ್ನ ಕುರಿಚರ್ಮದ
ತುಪ್ಪುಳುಗಂಬಳಿಯನ್ನು ಮುಟ್ಟಿದರೂ ಅದು ಒದೆಯದೆಂದು ಖಾತ್ರಿಯಿದ್ದ ನಿಕಿಟ ಮುಖೋರ್ಟಿಯ
ಕೌಶಲವನ್ನು ಮೆಚ್ಚುತ್ತ, “ನೋಡಿದ್ಯಾ, ಈ ಹಡಬೇನ!” ಎಂದು ಅದನ್ನು ಗದರಿಸಿದ.
ತಣ್ಣೀರನ್ನು ಕುಡಿದ ಕುದುರೆ ನಿಟ್ಟುಸಿರು ಬಿಟ್ಟು
ಒದ್ದೆಯಾಗಿದ್ದ ತನ್ನ ನೀಳ ಗಡಸು ತುಟಿಗಳನ್ನು ಆ ಈ ಕಡೆ ಆಡಿಸಿದಾಗ, ಅದರ ಹೆಗಲ ಕೂದಲಿಂದ ಸಣ್ಣ
ಹನಿಗಳು ತೊಟ್ಟಿಯಲ್ಲಿ ಉದುರಿದವು; ಆಮೇಲೆ ಏನೋ ಯೋಚಿಸುತ್ತಿರುವಂತೆ ನೇರವಾಗಿ ನಿಂತು, ಕೊನೆಗೆ
ಜೋರಾಗಿ ಕೆನೆಯಿತು.
“ನಿಂಗೆ ಇನ್ನು ಹೆಚ್ಚು ಬೇಡವಾದ್ರೆ ಬಿಟ್ಬಿಡು;
ಆದ್ರೆ ಆಮೇಲೆ ಮಾತ್ರ ಕೇಳೋ ಹಾಗಿಲ್ಲ” ಎಂದ ನಿಕಿಟ ಗಂಭೀರವಾದ ದನಿಯಿಂದ, ಹಾಗೆಯೇ ತನ್ನ
ನಡವಳಿಕೆಯನ್ನು ಮುಖೋರ್ಟಿಗೆ ಸಂಪೂರ್ಣವಾಗಿ ವಿವರಿಸಿದ. ಆನಂತರ ಕಡಿವಾಣದಲ್ಲೇ ಸುತ್ತಣ
ಅಂಗಳದಲ್ಲೆಲ್ಲ ಓಡಾಡುವ ಬಯಕೆಯ ಹುಡುಗಾಟದ ಕಿರುವರೆಯದ ಕುದುರೆಯನ್ನು ಶೆಡ್ ಕಡೆ ಕರೆದೊಯ್ದ.
ಅಂಗಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯನ್ನು ಬಿಟ್ಟರೆ ಯಾರೂ ಇರಲಿಲ್ಲ. ಆ ವ್ಯಕ್ತಿ ಎಂದರೆ
ಅಡುಗೆಯಾಳಿನ ಗಂಡ, ಬಿಡುವಿನ ವೇಳೆ ಕಳೆಯಲು ಇಲ್ಲಿಗೆ ಬಂದಿದ್ದ.
“ದೊಡ್ಡದೋ ಚಿಕ್ಕದೋ, ಯಾವ ಜಾರುಬಂಡಿಗೆ ಕುದುರೆಯನ್ನು
ಹೂಡಬೇಕು ಹೋಗಿ ಕೇಳಿಕೊಂಡು ಬಾರಣ್ಣ!”
ಅಡುಗೆಯಾಳಿನ
ಗಂಡ ಕಬ್ಬಿಣದ ಬುನಾದಿ ಹಾಗೂ ಕಬ್ಬಣದ್ದೇ ಚಾವಣಿಯ ಮನೆಯೊಳಕ್ಕೆ ಹೋಗಿ, ಬೇಗನೇ ವಾಪಸಾಗಿ ಚಿಕ್ಕ
ಗಾಡಿ ಸಿದ್ಧಪಡಿಸಬೇಕಂತೆ ಎಂದು ಹೇಳಿದ. ಆ ಹೊತ್ತಿಗೆ ನಿಕಿಟ ಕೊರಳ ಪಟ್ಟಿ ಹಾಗೂ
ಹೊಟ್ಟೆಪಟ್ಟಿಯನ್ನು ಮುಖೋರ್ಟಿಗೆ ತೊಡಿಸಿ, ಕೈಯಲ್ಲಿ ಕುದುರೆಯನ್ನು ಹಿಡಿದು ಶೆಡ್‍ನಲ್ಲಿದ್ದ
ಜಾರುಬಂಡಿ ಗಾಡಿಗಳ ಬಳಿಗೆ ಒಯ್ಯುತ್ತಿದ್ದ.
“ಸರಿ, ಹಾಗಾದ್ರೆ ಚಿಕ್ಕದಂತಾ?” ಎಂದು ನಿಕಿಟ ಆ ಜಾಣ
ಕುದುರೆಯ ಬೆನ್ನು ಚಪ್ಪರಿಸಿ - ಉದ್ದಕ್ಕೂ ಅದು ಅವನನ್ನು ಕಚ್ಚುವಂತೆ ನಟಿಸುತ್ತಿತ್ತು – ಅಡಿಗೆಯಾಳಿನ ಗಂಡನ ಜೊತೆ ಸೇರಿ ಅದನ್ನು ಮೂಕಿಗೆ ಹೂಡಲು
ಕರೆದೊಯ್ದ. ಲಗಾಮುಗಳನ್ನು ಸರಿಪಡಿಸಿದರೆ ಇನ್ನೇನು ಎಲ್ಲ ಸಿದ್ಧತೆಯೂ ಮುಗಿದತಾಯಿತು
ಎನ್ನುವಷ್ಟರಲ್ಲಿ, ಒಂದಷ್ಟು ಒಣಹುಲ್ಲು ತರಲು ಲಾಯಕ್ಕೂ ಹಾಸುಗಂಬಳಿಯನ್ನು ತರಲು ಶೆಡ್‍ಗೂ ನಿಕಿಟ
ಆ ಇನ್ನೊಬ್ಬನನ್ನು ಕಳಿಸಿದ.
“ಈಗ ಎಲ್ಲ ಸಿದ್ಧವಾದ ಹಾಗಾಯ್ತು! ಏಯ್, ಮೂಗರಳಿಸಿ
ನಿಂತುಕೋಬೇಡ!” ಎನ್ನುತ್ತ ನಿಕಿಟ, ಅಡುಗೆಯಾಳಿನ ಗಂಡ ತಂದಿದ್ದ ಒಕ್ಕಿದ ಓಟ್ಸ್‍ನ ಒಣ ಹುಲ್ಲನ್ನು
ಗಾಡಿಯೊಳಕ್ಕೆ ಕೂರಿದ. “ಈಗ ಗೋಣಿಬಟ್ಟೆಗಳನ್ನು ಹೀಗೆ ಹರವಿ ಅದರ ಮೇಲೆ ಹಾಸುಗಂಬಳಿಯನ್ನು
ಹಾಸಬಹುದು. ಸರಿ, ಈಗ ಕೂತ್ಕೊಳ್ಳಕ್ಕೆ ಆರಾಮವಾಗತ್ತೆ” ಎಂದು ಬಾಯಲ್ಲಿ ಮಾತಾಡಿಕೊಳ್ಳುತ್ತ
ಅದಕ್ಕನುಗುಣವಾದ ಕ್ರಿಯೆಯನ್ನು ಕೈಗಳಿಂದ ಮಾಡುತ್ತ ಹಾಸುಗಂಬಳಿಯನ್ನು ಹಾಸಿದ.
“ಥ್ಯಾಂಕ್ ಯೂ ಗೆಳೆಯ, ಇಬ್ಬರಿದ್ದರೆ ಕೆಲಸವೆಲ್ಲ ಸಲೀಸಾಗಿ
ಸಾಗತ್ತೆ” ಎಂದ ಅಡುಗೆಯಾಳಿನ ಕಡೆ ತಿರುಗಿ. ಚರ್ಮದ ಲಗಾಮುಗಳನ್ನು ಒಟ್ಟಿಗೆ ಹಿತ್ತಾಳೆಯ
ಉಂಗುರಕ್ಕೆ ಸೇರಿಸಿ, ನಿಕಿಟ ಚಾಲಕನ ಜಾಗದಲ್ಲಿ ಕೂತು ತಾಳ್ಮೆಗೆಡುತ್ತಿದ್ದ ಕುದುರೆಯನ್ನು
ಗಟ್ಟಿಯಾದ ಲದ್ದಿ ಎಲ್ಲೆಡೆ ಬಿದ್ದಿದ್ದ ಅಂಗಳದಿಂದ ಗೇಟಿನ ಕಡೆಗೆ ಚಲಾಯಿಸಿದ.
“ನಿಕಿಟ ಮಾಮ, ಓ ಮಾಮ, ಮಾಮ” ಎಂದು ಜೋರುದನಿಯೊಂದು
ಕೂಗಿತು; ಕಪ್ಪು ಕುರಿಚರ್ಮದ ತುಪ್ಪುಳುಗಂಬಳಿ, ಹಗುರವಾದ ಬೂಟುಗಳು ಹಾಗೂ ಬೆಚ್ಚಗಿನ ಟೋಪಿಯನ್ನು
ಧರಿಸಿದ್ದ ಏಳು ವರ್ಷದ ಹುಡುಗನೊಬ್ಬ ಮನೆಯೊಳಗಿನಿಂದ ಅಂಗಳದ ಕಡೆಗೆ ರಭಸದಿಂದ ಓಡಿಬಂದ. “ನನ್ನೂ
ಜೊತೇಲಿ ಕರ್ಕೊಂಡು ಹೋಗು, ಮಾಮ!” ಎಂದು ತನ್ನ ಕೋಟನ್ನು ಭದ್ರಗೊಳಿಸಿಕೊಳ್ಳುತ್ತ ಓಡಿಬಂದ ಆ
ಹುಡುಗ ಅಳಲು ತೊಡಗಿದ.
“ಆಗಲಿ, ಬಾ. ಪುಟ್ಟ” ಎಂದು ನಿಕಿಟ ಗಾಡಿಯನ್ನು ನಿಲ್ಲಿಸಿ,
ಯಜಮಾನರ ಬಿಳಿಚಿಕೊಂಡಿದ್ದ ಸಣಕಲು ಮಗನನ್ನು ಮೇಲಕ್ಕೆತ್ತಿ ಕೂರಿಸಿಕೊಂಡ; ಹುಡುಗನ ಮುಖ ಬೆಳಗಿತು,
ಆಮೇಲೆ ಗಾಡಿ ಮನೆಯ ಮುಂದಿನ ರಸ್ತೆಯಲ್ಲಿ ಇಳಿಸಲೆಂದು ಕರೆದೊಯ್ದ.
ಆಗಲೇ ಎರಡೂವರೆ ಗಂಟೆಯಾಗಿತ್ತು, ಗಾಳಿ ಜೋರಾಗಿ ಬೀಸುತ್ತ,
ಬಿಸಿಲಿಲ್ಲದೆ ಮಂಕಾಗಿ ಚಳಿಯಿಂದ ಕೂಡಿ, ಇಪ್ಪತ್ತು ಡಿಗ್ರಿ ಫಾರನ್‍ಹೈಟ್‍ಗಿಂತ ತಂಪಾದ ಕಾವಳ
ತುಂಬಿದ್ದ ದಿನ ಅದು. ಕೆಳಮಟ್ಟದಲ್ಲೇ ತೇಲುತ್ತಿದ್ದ ಕಪ್ಪು ಮೋಡ ಅರ್ಧ ಆಕಾಶವನ್ನು ಮುಸುಕಿತ್ತು.
ಮನೆಯಂಗಳಲ್ಲಿ ನಿಶ್ಶಬ್ದತೆ ಆವರಿಸಿತ್ತು, ಆದರೆ ಬೀದಿಯಲ್ಲಿ ಮಾತ್ರ ಗಾಳಿ ಸಶಬ್ದವಾಗಿ
ಬೀಸುತ್ತಿತ್ತು. ಪಕ್ಕದ ಶೆಡ್‍ನಿಂದ ಹಿಮವು ಜಾರಿ ಈ ಕಡೆ ಸರಿದು ಬಂದು ಬಚ್ಚಲುಮನೆಯ ಮೂಲೆಯಲ್ಲಿ
ಸುತ್ತುತ್ತಿತ್ತು.
ನಿಕಿಟ ಗಾಡಿಯನ್ನು ಇನ್ನೂ ಅಂಗಳದಿಂದ ಚಲಾಯಿಸಿ ತಂದು ಮನೆಯ
ಕಡೆ ಕುದುರೆಯ ಮೂತಿಯನ್ನು ಪೂರ್ತಿ ತಿರುಗಿಸಿರಲಿಲ್ಲ, ಅಷ್ಟರಲ್ಲಿ ವಾಸಿಲಿ ಆಂಡ್ರೆವಿಚ್ ಮನೆಯ
ಮುಂದಣ ಎತ್ತರದ ಮುಖಮಂಟಪದಿಂದ ಹೊರಬರುತ್ತಿದ್ದುದು ಕಾಣಿಸಿತು. ಅವನು ಕುರಿಚರ್ಮದ ತುಪ್ಪುಳಗಂಬಳಿ
ಧರಿಸಿ, ಅದರ ಮೇಲೆ ಸೊಂಟಕ್ಕೆ ಬಟ್ಟೆಯೊಂದನ್ನು ಬಿಗಿದುಕೊಂಡು ಬಾಯಲ್ಲಿ ಸಿಗರೇಟು ಕಚ್ಚಿಕೊಂಡು
ಹೊರಗೆ ನೆಲದ ಮೇಲೆ ಬಿದ್ದಿದ್ದ ಗಟ್ಟಿ ಹಿಮದ ಮೇಲೆ ಕಾಲೂರಿದಾಗ ತಳದ ಹಿಮ
ಕರಕರಗುಟ್ಟುತ್ತಿರುವಂತೆಯೇ ನಡೆದು ಬಂದವನು, ಕೊನೆಯ ದಮ್ಮು ಎಳೆದು ಸಿಗರೇಟನ್ನು ಕೆಳಗೆಸೆದು
ಅದನ್ನು ಕಾಲಿನಿಂದ ಉಜ್ಜಿ, ತನ್ನ ಮೀಸೆಯ ಹಿಂದಿನಿಂದ ಹೊಗೆಯನ್ನು ಹೊರಬಿಡುತ್ತ
ದಷ್ಟಪುಷ್ಟವಾಗಿದ್ದ ಕುದುರೆಯ ಕಡೆ ನೋಟವೊಂದನ್ನು ಬೀರಿ, ಮೀಸೆಯೊಂದನ್ನು ಹೊರತುಪಡಿಸಿ ನುಣ್ಣಗೆ
ಮುಖಕ್ಷೌರ ಮಾಡಿಕೊಂಡಿದ್ದ ತನ್ನ ಕೆಂಚು ಮುಖದ ಎರಡೂ ಬದಿಗಳಲ್ಲಿನ ಕುರಿಚರ್ಮದ ತುಪ್ಪುಳುಗಂಬಳಿಯ
ಕಾಲರನ್ನು, ತನ್ನ ಉಸಿರಾಟದಿಂದಾಗಿ ತೇವಗೊಳ್ಳದಿರುವಂತೆ, ಬಿಗಿಗೊಳಿಸಿಕೊಳ್ಳುತ್ತ ಬಂದ.
“ನೋಡಿದ್ಯಾ? ಈ ತುಂಟ ಮರಿ ಆಗಲೇ ಬಂದು ಕೂತ್ಬಿಟ್ಟಿದೆ!”
ಎಂದವನು ತನ್ನ ಪುಟ್ಟ ಮಗ ಜಾರುಬಂಡಿಯಲ್ಲಿ ಕೂತಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ. ತನ್ನ
ಸಂದರ್ಶಕರ ಜೊತೆ ಕುಡಿದಿದ್ದ ವೋಡ್ಕಾದಿಂದಾಗಿ ವಾಸಿಲಿ ಆಂಡ್ರೆವಿಚ್ ಅಮಲೇರಿದ್ದ; ಹೀಗಾಗಿ ತನ್ನ
ಸ್ಥಿತಿಯ ಬಗ್ಗೆ ತಾನು ಮಾಡುತ್ತಿದ್ದ ಎಲ್ಲದರ ಬಗ್ಗೆ ಎಂದಿಗಿಂತ ಹೆಚ್ಚು ಆನಂದಿತನಾದ. ಯಾವಾಗಲೂ
ತನ್ನ ಉತ್ತರಾಧಿಕಾರಿ ಎಂಬಂತೆ ಕಾಣುತ್ತಿದ್ದ ಮಗನನ್ನು ಕಂಡು ಅವನಿಗೆ ಮಹಾ ತೃಪ್ತಿ ಎನಿಸಿತು.
ಅವನ ಕಡೆ ನೋಡಿದ ತನ್ನ ಕಣ್ಣುಗಳನ್ನವನ ಮೇಲೆ ಕೀಲಿಸಿ, ಹಲ್ಲುಗಳನ್ನು ಕಿರಿಯುತ್ತ.
ಕೃಶವೂ ಪೇಲವವೂ ಆದ ಮೈಯಿನ ಬಸಿರಿ ಹೆಂಗಸಾದ ಅವನ ಹೆಂಡತಿ
ಕಣ್ಣುಗಳ ಹೊರತು ಮುಖದ ಮಿಕ್ಕ ಭಾಗ ಕಾಣದಂತೆ ತನ್ನ ತಲೆ ಮತ್ತು ಭುಜಗಳನ್ನು ಶಾಲಿನಿಂದ
ಮುಚ್ಚಿಕೊಂಡು ಗಂಡನು ಹೊರಡುವುದನ್ನು ನೋಡುತ್ತ ಹಜಾರದಲ್ಲಿ ನಿಂತುಕೊಂಡಿದ್ದಳು.
ಬಾಗಿಲ ಹೊರಗೆ ಬಂದು ಅಂಜಿಕೆಯಿಂದಲೇ, “ನೀವು ನಿಕಿಟನನ್ನು
ಜೊತೆಗೆ ಕರೆದುಕೊಂಡು ಹೋಗಲೇಬೇಕು” ಎಂದಳು. ವಾಸಿಲಿ ಆಂಡ್ರೆವಿಚ್ ಉತ್ತರಿಸಲಿಲ್ಲ. ಅವಳ ಮಾತುಗಳು
ಅವನಲ್ಲಿ ಕಿರಿಕಿರಿಯುಂಟುಮಾಡಿದ್ದು ಮುಖ ಸಿಂಡರಿಸಿಕೊಂಡು ಉಗುಳಿದ್ದರಿಂದಾಗಿ ಸ್ಪಷ್ಟವಾಗಿತ್ತು.
“ನಿಮ್ಮ ಹತ್ರ ಹಣ ಇದೆ; ಹವಾಗುಣ ಕೆಟ್ಟರೆ ಏನು ಗತಿ!
ಅವನನ್ನು ಖಂಡಿತ ಜೊತೆಗೆ ಕರೆದೊಯ್ಯಲೇಬೇಕು” ಎಂದು ಅದೇ ನಮ್ರ ದನಿಯಿಂದ.
“ಯಾಕೆ, ನಂಗೇನು ರಸ್ತೆ ಗೊತ್ತಿಲ್ವಾ? ಅದಕ್ಕೆ
ಮಾರ್ಗದರ್ಶಕ ಬೇರೆ ಬೇಕಾ?” ಎಂದ ವಾಸಿಲಿ ಆಂಡ್ರೆವಿಚ್ ಕೌತುಕದಿಂದ. ಮಾತಾಡುವಾಗ ಪ್ರತಿಯೊಂದು
ಶಬ್ದವನ್ನೂ ಬಿಡಿಸಿ ಬಿಡಿಸಿ ತನ್ನ ತುಟಿಗಳನ್ನು ಅಸಹಜವಾಗಿ ಒತ್ತಿ ನುಡಿದ; ಕೊಳ್ಳುವವರೋ
ಮಾರುವವರೋ ಇದ್ದರೆ ಅವರ ಜೊತೆ ಅವನು ಹಾಗೇ ಮಾತನಾಡುತ್ತಿದ್ದುದು.
“ಏನಾದ್ರೂ ಆಗಲಿ. ಅವನನ್ನ ಜೊತೇಲಿ ಕರ್ಕೊಂಡು ಹೋಗಿ,
ದೇವರಮೇಲೆ ಆಣೆ” ಎಂದು ಹೆಂಡತಿ ತನ್ನ ತಲೆಯ ಸುತ್ತ ಶಾಲನ್ನು ಇನ್ನಷ್ಟು ಬಿಗಿಯಾಗಿ
ಸುತ್ತಿಕೊಳ್ಳುತ್ತ ಮತ್ತೆ ಹೇಳಿದಳು.
“ಒಳ್ಳೇ ಜಿಗಣೆ ಥರ ಅಟಿಕೋತಾಳಲ್ಲ! .... ಅವನನ್ನ ಎಲ್ಲಿಗೆ
ಕರ್ಕೊಂಡು ಹೋಗ್ಬೇಕೂಂತ?”
“ನಾನು ನಿಮ್ಮ ಜೊತೆ ಬರಕ್ಕೆ ಸಿದ್ಧವಾಗಿದೀನಿ, ಯಜಮಾನರೇ.
ಆದ್ರೆ ನಾನು ಹೊರಗೆ ಹೋಗಿರೋವಾಗ ಯಾರಾದ್ರೂ ಕುದುರೆಗಳಿಗೆ ಮೇವು ನೀರು ಹಾಕ್ಬೇಕು, ಅಷ್ಟೆ” ಎಂದ
ನಿಕಿಟ ಹರ್ಷವದನನಾಗಿ, ಯಜಮಾನರ ಅನುಮತಿಗಾಗಿ ಕಾಯುತ್ತ.
“ಆ ಕೆಲ್ಸ ನಾನು ಮಾಡಿಸ್ತೀನಿ ನಿಕಿಟ. ಸೈಮನ್‍ಗೆ
ಹೇಳ್ತೀನಿ” ಎಂದಳು ಯಜಮಾನಿತಿ.
“ಸರಿ, ಯಜಮಾನ್ರೇ, ನಾನು ನಿಮ್ಮ ಜೊತೆ ಬರಲಾ?” ಎಂದು
ಕೇಳಿದ ನಿಕಿಟ, ಯಜಮಾನರ ಉತ್ತರಕ್ಕಾಗಿ ಎದುರು ನೋಡುತ್ತ.
“ನಾನು ಯಜಮಾನಿತಿ ಮಾತು ಕೇಳಲೇಬೇಕೂಂತ ಕಾಣತ್ತೆ. ಜೊತೆಗೆ
ಬರೋದಾದ್ರೆ, ಸ್ವಲ್ಪ ಬೆಚ್ಚಗಿನ ಬಟ್ಟೆ ತೊಟ್ಟು ಬಾ” ಎಂದ ವಾಸಿಲಿ ಆಂಡ್ರೆವಿಚ್, ನಿಕಿಟ
ತೊಟ್ಟಿದ್ದ ಕುರಿಚರ್ಮದ ಗಿಡ್ಡ ಕೋಟ್ ಕಡೆ ಕಣ್ಣು ಹಾಯಿಸುತ್ತ; ಕಂಕುಳ ಹತ್ತಿರ ಹಾಗೂ ಬೆನ್ನ ಬಳಿ
ಅದು ಹರಿದುಹೋಗಿತ್ತು, ಜೊತೆಗೆ ಜಿಡ್ಡುಜಿಡ್ಡು, ಯದ್ವಾತದ್ವ ಆಕಾರ ತಾಳಿತ್ತು. ಅದರ ಅಂಚುಗಳೆಲ್ಲ
ಜೂಲುಜೂಲಾಗಿದ್ದು, ಅವನ ಬದುಕಿನಲ್ಲಿ ಅನೇಕ ಮಳೆಗಾಲಗಳನ್ನು ಕಳೆದಿತ್ತು.
“ಓಯ್, ಅಣ್ಣ, ಇಲ್ಲಿ ಬಾ, ಸ್ವಲ್ಪ ಕುದುರೇನ ಹಿಡಕೊಂಡಿರು”
ಎಂದು ಇನ್ನೂ ಅಂಗಳದಲ್ಲೇ ನಿಂತಿದ್ದ ಅಡುಗೆಯಾಳಿನ ಗಂಡನ ಕಡೆ ತಿರುಗಿ ಕೂಗಿದ.
“ಉಹ್ಞೂ, ನಾನೇ ಹಿಡಕೋತೀನಿ, ನಾನೇ ಹಿಡಕೋತೀನಿ” ಎಂದು
ಹುಡುಗ ಒರಲಿ, ಚಳಿಯಿಂದ ಕೆಂಪಾಗಿದ್ದ ತನ್ನ ಕೈಗಳನ್ನು ಜೇಬುಗಳಿಂದ ಹೊರತೆಗೆದು ಚಾಚಿ
ಲಗಾಮುಗಳನ್ನು ಹಿಡಿದುಕೊಂಡ.
“ಬಟ್ಟ ಬದಲಿಸಿ ಬರಕ್ಕೆ ಜಾಸ್ತಿ ಹೊತ್ತು ತಗೋಬೇಡ. ಚಟುವಟಿಕೆಯಿಂದ
ಬಾ” ಎಂದ ವಾಸಿಲಿ ಆಂಡ್ರೆವಿಚ್ ನಿಕಿಟನ ಕಡೆ ನೋಡಿ ನಗುತ್ತ.
“ಒಂದೇ ಕ್ಷಣ, ಯಜಮಾನ್ರೇ” ಎಂದು ಉತ್ತರಿಸಿದ ನಿಕಿಟ ಚೂಪು
ಮೂತಿಯ ಬೂಟುಗಳೊಳಗೆ ಬಾಗಿದ್ದ ತನ್ನ ಕಾಲ್ಬೆರಳುಗಳಿಂದ ಕೂಡಿದ ಕಾಲುಗಳನ್ನು ತಿರುಗಿಸಿ ಓಡಿದ.
ಅಂಗಳವನ್ನು ಲಗುಬಗೆಯಿಂದ ದಾಟಿ ಕೆಲಸಗಾರನ ಮನೆಯೊಳಕ್ಕೆ ನಡೆದ.
“ಅರಿನಿಷ್ಕಾ! ಅಗ್ಗಿಷ್ಟಿಕೆ ಹತ್ರ ಇರೋ ನನ್ನ ಕೋಟನ್ನ
ಕೊಡು. ಯಜಮಾನ್ರ ಜೊತೆ ನಾನೂ ಹೋಗ್ತೀನಿ” ಎನ್ನುತ್ತ ಗುಡಿಸಲೊಳಕ್ಕೆ ಓಡಿ ಹೋಗಿ, ಮೊಳೆಗೆ
ನೇತುಹಾಕಿದ್ದ ನಡುಪಟ್ಟಿಯನ್ನು ತೆಗೆದುಕೊಂಡ.
ಊಟದ ನಂತರ ಸ್ವಲ್ಪ ಹೊತ್ತು ನಿದ್ದೆ ಹೊಡೆದಿದ್ದ ಕೆಲಸಗಾರನ
ಅಡುಗೆಯವಳು ತನ್ನ ಗಂಡನಿಗಾಗಿ ಟೀ ಮಾಡಲು ಡಬರಿಯನ್ನು ಸಿದ್ಧಪಡಿಸುತ್ತಿದ್ದವಳು ನಿಕಿಟನ ಕಡೆ
ಹಸನ್ಮುಖದಿಂದ ತಿರುಗಿ, ಅವನ ತರಾತುರಿ ತನಗೂ ಅಂಟಿಕೊಂಡಿತೋ ಎಂಬಂತೆ ಸರಸರ ಓಡಾಡಿ,
ಅಗ್ಗಿಷ್ಟಿಕೆಯ ಬಳಿ ಆರಹಾಕಿದ್ದ ದಯನೀಯವಾಗಿ ಛಿದ್ರವಾಗಿದ್ದ ಅವನ ಬಟ್ಟೆಗಳನ್ನು ತೆಗೆದುಕೊಂಡು,
ಕೊಡವಿ ಸುಕ್ಕುಗಳನ್ನು ನೇರ್ಪಡಿಸುತ್ತ ಬಂದಳು.
“ನೀನು ಗಂಡನ ಜೊತೆ ಒಂದಷ್ಟು ಹಾಯಾಗಿ ಕಾಲ ಕಳೀಬಹುದು ಈಗ”
ಎಂದ ನಿಕಿಟ, ಎಂದಿನಂತೆ ತನ್ನೊಡನೆ ಒಂಟಿಯಾಗಿದ್ದ ಯಾರಿಗಾದರೂ ಮೆಲುದನಿಯಿಂದ ಹೇಳುತ್ತಿದ್ದ
ಮಾತುಗಳನ್ನಾಡಿದ.
ಆಮೇಲೆ, ನಿಕಿಟ ತನ್ನ ಸೊಂಟದ ಸುತ್ತ ನಡುಪಟ್ಟಿಯನ್ನು
ಸುತ್ತಲು ಉಸಿರು ಬಿಗಿಹಿಡಿದು, ಒಳಸೇರಿದ್ದ ಹೊಟ್ಟೆಯನ್ನು ಮತ್ತಷ್ಟು ಒಳಕ್ಕೆಳೆದುಕೊಂಡು, ತನ್ನ
ಕುರಿಚರ್ಮದ ತುಪ್ಪುಳುಗಂಬಳಿಯ ಸುತ್ತ ಆದಷ್ಟೂ ಬಿಗಿಯಾಗಿ ಸುತ್ತಿಕೊಂಡ.
“ಈಗ ಸರಿಹೋಯ್ತು” ಎಂದ ತನಗೆ ತಾನೇ, ಪಟ್ಟಿಯ ತುದಿಗಳನ್ನು
ಗಂಟುಹಾಕುತ್ತ, ಅಡುಗೆಯಾಳಿನ ಕಡೆ ತಿರುಗದೆ, “ಈಗ ಬಿಚ್ಚಿಹೋಗಲ್ಲ!” ಎಂದುಕೊಂಡ. ತನ್ನ
ತೋಳುಗಳನ್ನು ಸಲೀಸಾಗಿ ಆಡಿಸಲು ಅನುಕೂಲವಾಗುವಂತೆ ಮೇಲೆ ಕೆಳಗೆ ಮಾಡುತ್ತ, ತುಪ್ಪುಳಗಂಬಳಿಯ ಮೇಲೆ
ಕೋಟ್ ಧರಿಸಿ, ಬೆನ್ನ ಕಡೆ ಎಳೆದುಕೊಂಡು ತೋಳುಗಳನ್ನು ಸಲೀಸುಗೊಳಿಸಿಕೊಂಡು, ಕಂಕುಳುಗಳಲ್ಲಿ
ಕೈಯಾಡಿಸಿ, ಗೂಡಿನಿಂದ ಚರ್ಮದ ಗವಸುಗಳನ್ನು ಹೊರತೆಗೆದು ಹಾಕಿಕೊಂಡು, “ಈಗೆಲ್ಲ ಸಿದ್ಧವಾದ
ಹಾಗಾಯ್ತು!” ಎಂದುಕೊಂಡ.
“ಕಾಲುಗಳ ಸುತ್ತ ಸುತ್ತಿಕೋಬೇಕು, ನಿಕಿಟ, ನಿನ್ನ ಬೂಟುಗಳು
ಅಧ್ವಾನವಾಗಿವೆ.”
ವಿಷಯ ಅರ್ಥವಾದವನಂತೆ ನಿಕಿಟ ನಿಂತ.
“ಹೌದು, ಹಾಗೆ ಮಾಡ್ಬೇಕು ... ಆದ್ರೆ ಇಷ್ಟೇ ಸಾಕು, ದೂರ
ಏನಿಲ್ಲ!” ಅಂದುಕೊಳ್ಳುತ್ತ ಅಂಗಳದ ಕಡೆ ಓಡಿದ.
“ಥಂಡಿ ಆಗಲ್ವಾ, ನಿಕಿಟ” ಎಂದಳು ಯಜಮಾನಿತಿ ಜಾರುಬಂಡಿ
ಹತ್ತಿರ ಬಂದು.
“ಥಂಡೀನಾ? ಏನಿಲ್ಲ, ಬೆಚ್ಚಗೇ ಇದೆ” ಎಂದ ನಿಕಿಟ, ತನ್ನ
ಕಾಲುಗಳನ್ನು ಮುಚ್ಚುವಂತೆ ಜಾರುಬಂಡಿಯ ಮುಂಭಾಗಕ್ಕೆ ಒಂದಷ್ಟು ಹುಲ್ಲನ್ನು ನೂಕುತ್ತ. ಆಮೇಲೆ
ತನ್ನ ಚಾವಟಿಯನ್ನ ಜಾರುಬಂಡಿಯ ಕೆಳಭಾಗದಲ್ಲಿ ಕಟಕಟ ಎನಿಸಿದ. ಆ ಜಾಣ ಕುದುರೆಗೆ ಇದೇನೂ ಆವಶ್ಯಕವಾಗಿರಲಿಲ್ಲ
ವಾಸಿಲಿ ಆಂಡ್ರೆವಿಚ್ ಫರ್‍ನಿಂದ ಅಂಚುಗಟ್ಟಿದ್ದ ಎರಡು
ಕೋಟುಗಳನ್ನು ಒಂದರ ಮೇಲೊಂದು ಧರಿಸಿ, ಈ ಹೊತ್ತಿಗೆ ಜಾರುಬಂಡಿಯಲ್ಲಿ ಕುಳಿತಿದ್ದ. ಅವನ ವಿಶಾಲವಾದ
ಬೆನ್ನು ಅದರ ಅಗಲವನ್ನೆಲ್ಲ ಆಕ್ರಮಿಸಿತ್ತು. ತಾನೇ ಲಗಾಮುಗಳನ್ನು ಕೈಲಿ ತೆಗೆದುಕೊಂಡು ತಕ್ಷಣ
ಕುದುರೆಯನ್ನು ಮುಟ್ಟಿದ. ಜಾರುಬಂಡಿ ಹೊರಟ ಕೂಡಲೇ ನಿಕಿಟ ಅದರೊಳಕ್ಕೆ ಹಾರಿ ಮುಂಭಾಗದ
ಎಡಬದಿಯಲ್ಲಿ ಒಂದು ಕಾಲನ್ನು ಕೆಳಗೆ ಇಳಿಬಿಟ್ಟುಕೊಂಡು ಕುಳಿತ.
2
ಆ ಗಡಸು ಕುದುರೆ ಹೆಪ್ಪುಗಟ್ಟಿದ್ದ ಹಳ್ಳಿಯ
ನುಣುಪು ದಾರಿಯ ಗುಂಟ ವೇಗವಾಗಿ ಜಾರುಬಂಡಿಯನ್ನು ಎಳೆದೊಯ್ದಿತು. ಗಾಡಿ ಮುಂದೆ ಸರಿದಂತೆಲ್ಲ
ಜಾರುತೋಡುಗಳು ಸ್ವಲ್ಪ ಕೀಚು ಸದ್ದು ಮಾಡುತ್ತಿದ್ದವು.
“ಅಲ್ಲಿ ಕೂತಿರೋ ನಮ್ಮ ಮರಿಯನ್ನ ನೋಡು! ನಿಕಿಟ, ಎಲ್ಲಿ
ಚಾವಟಿ ಕೊಡು”ಎಂದು ಕೂಗಿದ ವಾಸಿಲಿ ಆಂಡ್ರೆವಿಚ್ ದನಿಯಲ್ಲಿ ತನ್ನ ‘ಉತ್ತರಾಧಿಕಾರಿ’ಯ ಬಗೆಗಿನ
ಸಂಭ್ರಮ ಎದ್ದು ಕಾಣುತ್ತಿತ್ತು. ಹುಡುಗ ಜಾರುತೋಡುಗಳ ಮೇಲೆ ಕಾಲಿಟ್ಟುಕೊಂಡು ಜಾರುಬಂಡಿಯ ಗೋಡೆಗೆ
ಒರಗಿ ನಿಂತಿದ್ದ. “ಕೆಳಗಿಳಿ, ಅಮ್ಮನ ಹತ್ರ ಹೋಗು” ಎಂದ.
ಹುಡುಗ ಕೆಳಗೆ ದುಮುಕಿದ. ನಿದಾನವಾಗಿ ಸಾಗುತ್ತಿದ್ದ
ಕುದುರೆ ಇದ್ದಕ್ಕಿದ್ದಂತೆ ತನ್ನ ಗತಿಯನ್ನು ಬದಲಿಸಿ ನಾಗಾಲೋಟಕ್ಕೆ ಶುರುಮಾಡಿತು.
ವಾಸಿಲಿ ಆಂಡ್ರೆವಿಚ್ ವಾಸಿಸುತ್ತಿದ್ದ ಹಳ್ಳಿಯ
ತಿರುವಿನಲ್ಲಿ ಆರು ಮನೆಗಳಿದ್ದವು. ಹಳ್ಳಿಯ ಕೊನೆಯಲ್ಲಿದ್ದ ಕಮ್ಮಾರನ ಮನೆಯನ್ನು ಅವರು ಹಾದು ಹೋದ
ತಕ್ಷಣವೇ, ತಾವಂದುಕೊಂಡದ್ದಕ್ಕಿಂತ ಗಾಳಿಯ ರಭಸ ಜೋರಾಗಿದೆ ಎಂದು ಅನ್ನಿಸಿತು. ದಾರಿಯು
ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಸ್ಲೆಜ್‍ಗಳು ಹೋಗಿ ಬಿದ್ದಿದ್ದ ಜಾಡು ಬಹು ಬೇಗ ಹಿಮದಿಂದ
ಮುಚ್ಚಿಕೊಂಡುಬಿಡುತ್ತಿದ್ದವು. ನೆಲದ ಉಳಿದ ಭಾಗಕ್ಕಿಂತ ಬಂಡಿ ಜಾಡು ಹಗುರವಾಗಿರುತ್ತಿದ್ದುದೇ
ಜಾಡನ್ನು ಗುರುತಿಸಲು ಇದ್ದ ಒಂದೇ ದಾರಿ. ಹೊಲಗಳ ಮೇಲೆಲ್ಲ ಹಿಮದ ಕುಂಟೆಗಳು; ಹೀಗಾಗಿ ಭೂಮಿ-ಆಗಸ
ಸೇರುತ್ತಿದ್ದ ಭಾಗ ಕಾಣಿಸುತ್ತಲೇ ಇರಲಿಲ್ಲ. ಟೆಲ್ಯಾಟಿನ್ ಅರಣ್ಯಪ್ರದೇಶ ಸಾಮಾನ್ಯವಾಗಿ
ಸ್ಪಷ್ಟವಾಗಿ ಕಾಣುತ್ತಿತ್ತು; ಆದರೆ ಈಗ ಗಾಡಿಯ ಓಟದಿಂದ ಮೇಲೆದ್ದ ಹಿಮದ ದೂಳಿನಲ್ಲಿ ಮಬ್ಬಾಗಿ
ಆಗೊಮ್ಮೆ ಈಗೊಮ್ಮೆ ಎಂಬಂತೆ ಮಾತ್ರ ಕಾಣುತ್ತಿತ್ತು. ಗಾಳಿ ಎಡಭಾಗದಿಂದ ಬೀಸುತ್ತಿತ್ತು, ಮುಖೋರ್ಟಿಯ
ಜೂಲಿನ ಒಂದು ಭಾಗದ ಮೇಲೆ ಬೀಸುತ್ತಿದ್ದ ಗಾಳಿ ಕುದುರೆಯ ಸರಳಗುಣಿಕೆ ಹಾಕಿದ್ದ ನವಿರುಗೂದಲ
ಬಾಲವನ್ನು ಕೂಡ ಪಕ್ಕಕ್ಕೆ ಸರಿಸುತ್ತಿತ್ತು. ಗಾಳಿ ಬೀಸುವ ಕಡೆ ಕೂತಿದ್ದ ನಿಕಿಟನ ಅಗಲ ಕಾಲರ್‍ನ
ಕೋಟು ಅವನ ಗಲ್ಲ ಮತ್ತು ಮೂಗಿನ ಮೇಲೆ ಬಂದು ಕೂರುತ್ತಿತ್ತು.
“ಈ ರಸ್ತೆ ಮುಖೋರ್ಟಿ ಜೋರಾಗಿ ಓಡೋದಕ್ಕೆ ಸರಿಯಾದ ಅವಕಾಶವನ್ನೇ
ಕೊಡಲ್ಲ – ರಸ್ತೆ ತುಂಬ ಬರೀ ಹಿಮ
ತುಂಬಿದೆ” ಎಂದ ವಾಸಿಲಿ ಆಂಡ್ರೆವಿಚ್; ಅವನಿಗೆ ತನ್ನ ಕುದುರೆಯ ಬಗ್ಗೆ ತುಂಬ ಅಭಿಮಾನ. “ಒಂದ್ಸಲ
ನಾನು ಪಶೂಟಿನೋಕ್ಕೆ ಗಾಡೀಲಿ ಹೋಗಿದ್ದೆ, ಅರ್ಧ ಗಂಟೇಲಿ, ಅಷ್ಟೆ”
“ಏನು?” ಎಂದ ನಿಕಿಟ, ಅವನ ಕಾಲರ್ ಕಿವಿ
ಮುಚ್ಚಿದ್ದರಿಂದಾಗಿ ಮಾತು ಸರಿಯಾಗಿ ಕೇಳಿಸದೆ.
“ಹಿಂದೊಂದ್ಸಲ ನಾನು ಪಶೂಟಿನೋಕ್ಕೆ ಗಾಡೀಲಿ ಅರ್ಧ ಗಂಟೇಲೇ
ಹೋಗಿದ್ದೆ”, ಈ ಸಲ ವಾಸಿಲಿ ಆಂಡ್ರೆವಿಚ್ ಜೋರಾಗಿ ಹೇಳಿದ.
“ಇದು ಒಳ್ಳೆ ಕುದುರೆ ಅನ್ನೋದನ್ನೇನೂ ವಿಶೇಷವಾಗಿ
ಹೇಳ್ಳೇಬೇಕಾಗಿಲ್ಲ” ಅಂದ ನಿಕಿಟ.
ಸ್ವಲ್ಪ ಹೊತ್ತು ಅವರು ಮೌನದಿಂದಿದ್ದರು. ಆದರೆ ವಾಸಿಲಿ
ಆಂಡ್ರೆವಿಚ್‍ಗೆ ಮಾತನಾಡುವ ಚಪಲ.
“ಆ ಚಿಲ್ಲರೆ ಸಾರಾಯಿ ಮಾರಾಟಗಾರನಿಗೆ ವೋಡ್ಕಾ ಕೊಡಬೇಡ ಅಂತ
ನಿನ್ನ ಹೆಂಡತೀಗೆ ಹೇಳಿದೆ ತಾನೇ?” ಎಂದು ಹಿಂದೆ ಮಾಡಿದ್ದ ರೀತಿಯಲ್ಲಿ ಜೋರಾಗಿ ಹೇಳಿದ. ತನ್ನಂಥ
ಬುದ್ಧಿವಂತ ಹಾಗೂ ಮುಖ್ಯ ವ್ಯಕ್ತಿಯ ಜೊತೆ ಮಾತಾಡುವುದಕ್ಕೆ ನಿಕಿಟನಿಗೆ ಹೆಮ್ಮೆ ಅನ್ನಿಸುತ್ತೆ
ಅನ್ನುವ ಖಾತ್ರಿಯಿತ್ತು ವಾಸಿಲಿ ಆಂಡ್ರೆವಿಚ್‍ಗೆ. ತಾನು ಆಡಿದ ವಿನೋದದ ಮಾತಿನ ಬಗ್ಗೆ ಅವನಿಗೆ
ಸಂತೋಷವಾಗಿತ್ತು; ಆದರೆ ಈ ಮಾತು ನಿಕಿಟನ ಬಾಯಿಗೆ ಅಹಿತಕರವಾದೀತು ಎಂಬ ಸೂಕ್ಷ್ಮ ಅವನಿಗೆ
ಅರ್ಥವಾಗಿರಲಿಲ್ಲ.
ತನ್ನ ಯಜಮಾನನ ಮಾತುಗಳು ಕೇಳಿಸದಿರುವ ಹಾಗೆ ಈಗಲೂ ಜೋರಾಗಿ
ಬೀಸುತ್ತಿದ್ದ ಗಾಳಿ ತಡೆಯಿತು.
ವಾಸಿಲಿ ಆಂಡ್ರೆವಿಚ್ ಚಿಲ್ಲರೆ ಸಾರಾಯಿ ಮಾರಾಟಗಾರನ
ಬಗೆಗಿನ ತನ್ನ ತಮಾಷೆ ಮಾತನ್ನು ಮತ್ತೊಮ್ಮೆ ಜೋರಾಗಿಯೂ ಸ್ಪಷ್ಟವಾಗಿಯೂ ಆಡಿದ.
“ಅದು ಅವರ ವಿಷಯ, ಯಜಮಾನ್ರೇ. ಅವರ ವ್ಯವಹಾರದಲ್ಲಿ ನಾನು
ಮೂಗು ತೂರ್ಸೋದಿಲ್ಲ. ನಮ್ಮ ಹುಡುಗನನ್ನು ಅವಳು ಎಲ್ಲೀವರೆಗೂ ಚೆನ್ನಾಗಿ ನೋಡ್ಕೋತಾಳೋ
ಅಲ್ಲೀವರೆಗೆ ಅವರಿಗೆ ದೇವರು ಒಳ್ಳೇದು ಮಾಡಲಿ.”
“ಅದು ಸರಿಯೇ. ಈ ಬೇಸಿಗೇಲಿ ನಿನಗೇನಾದ್ರೂ ಕುದುರೆ
ಕೊಂಡ್ಕೊಳ್ಳೋ ಆಲೋಚನೆ ಇದೆಯಾ?” ಎಂದ ವಾಸಿಲಿ ಆಂಡ್ರೆವಿಚ್ ಮಾತು ಬದಲಿಸುತ್ತ.
“ಹೌದು, ಬೇರೆ ದಾರಿಯೇ ಇಲ್ಲ” ಎಂದ ನಿಕಿಟ, ತನ್ನ
ಕಾಲರನ್ನು ಕೆಳಕ್ಕೆ ಸರಿಸಿ, ಯಜಮಾನರ ಕಡೆ ಹಿಂದೆ ಬಾಗಿ.
ಮಾತುಕತೆ ಈಗ ಹೆಚ್ಚು ಆಸಕ್ತಿದಾಯಕವಾದ ವಿಷಯದ ಕಡೆ
ತಿರುಗಿತ್ತು. ಹೀಗಾಗಿ ಅದನ್ನು ತಪ್ಪಿಸುವುದಕ್ಕೆ ಅವನಿಗೆ ಇಷ್ಟವಾಗಲಿಲ್ಲ.
“ಮಗ ಬೆಳಿತಿದಾನೆ. ಅವನು ತಾನೇ ಉಳೋದನ್ನು ಕಲ್ತುಕೋಬೇಕಲ್ಲ.
ಇದುವರತನಕ ನಾವು ಕುದುರೇನ ಬಾಡಿಗೆಗೆ ತೊಗೋಬೇಕಾಗಿತ್ತು.”
“ಅದ್ಸರಿ, ಒಂದು ಸಣ್ಣ ಗಾತ್ರದ್ದನ್ನ ಯಾಕೆ ತೊಗೋಬಾರ್ದು?
ನಾನೇನು ಅದಕ್ಕೆ ಹೆಚ್ಚಿಗೆ ಕೇಳಲ್ಲ” ಎಂದು ವಾಸಿಲಿ ಆಂಡ್ರೆವಿಚ್ ಜೋರಾಗಿ ಕೂಗಿ ಹೇಳಿದ.
ಅವನಲ್ಲಿ ಹೊಸ ಉತ್ಸಾಹ ತುಂಬಿ ಬಂದಿತ್ತು; ಅದಕ್ಕೇ ತನಗೆ ಪ್ರಿಯವಾದ ವ್ಯವಹಾರದ, ಅಂದರೆ ಕುದುರೆ
ವ್ಯಾಪಾರದ, ಮಾತು ತೆಗೆದ. ಅವನ ತಲೇಲೆಲ್ಲ ಅದೇ ತುಂಬಿಕೊಂಡಿತ್ತು.
“ನೀವೇನಾದ್ರೂ ಹದಿನೈದು ರೂಬಲ್ ಕೊಟ್ರೆ ಕುದುರೆ ಮಾರ್ಕೆಟ್‍ನಲ್ಲಿ
ಒಂದನ್ನ ಕೊಂಡ್ಕೋತೀನಿ” ಎಂದ ನಿಕಿಟ; ವಾಸಿಲಿ ಆಂಡ್ರೆವಿಚ್ ಮಾರಬೇಕು ಎಂದಿದ್ದ ಕುದುರೆಗೆ ಏಳು
ರೂಬಲ್‍ಗಳಷ್ಟು ಜಾಸ್ತಿಯಾಗತ್ತೆ ಅಂದವನಿಗೆ ಗೊತ್ತಿತ್ತು. ಅಲ್ಲದೆ ತನ್ನ ತಲೆಗೇ ಕಟ್ಟಿದರೆ
ಇಪ್ಪತ್ತೈದು ರೂಬಲ್‍ಗಳಷ್ಟು ಬೆಲೆ ಹೇಳ್ತಾನೆ ಬೇರೆ. ಹಾಗಾದ್ರೆ ಇನ್ನಾರು ತಿಂಗಳು ತಾನು ಬೇರೇನೂ
ಹಣ ಪಡೆಯೋದಕ್ಕೆ ಸಾಧ್ಯವಿರಲಿಲ್ಲ.
“ಅದು ತುಂಬ ಒಳ್ಳೆ ಕುದುರೆ, ಕಣಯ್ಯ. ನಿನ್ನ ಒಳ್ಳೇದಕ್ಕೇ
ನಾನು ಹೇಳ್ತಿರೋದು. ಬ್ರೆಖ್ಯುನೆವ್ ಯಾರಿಗೂ ಕೆಟ್ಟದ್ದು ಬಯಸೋ ಮನುಷ್ಯ ಅಲ್ಲ. ನಂಗೇ ನಷ್ಟವಾಗಲಿ
ಬಿಡು. ನಾನು ಬೇರೆಯೋರ ಥರ ಅಲ್ಲ. ನಿಜವಾಗ್ಲೂ!” ಗಿರಾಕಿಗಳನ್ನೂ ವ್ಯಾಪಾರಿಗಳನ್ನೂ ಒಲಿಸಿಕೊಳ್ಳೋ
ತನ್ನ ಎಂದಿನ ಪೂಸಿ ಹೊಡೆಯೋ ದನಿಯಲ್ಲಿ ಹೇಳಿ. “ಅದು ತುಂಬ ಒಳ್ಳೇ ಕುದುರೆ, ನೋಡು” ಎಂದ
ಮತ್ತೊಮ್ಮೆ.
“ಅದೇನೋ ಸರಿ” ಎಂದ ನಿಕಿಟ ನಿಟ್ಟುಸಿರು ಬಿಡುತ್ತ; ಅವನು
ಹೆಚ್ಚು ಹೇಳೊದನ್ನು ಸಾಧ್ಯವಿಲ್ಲ ಅಂತ ಅವನಿಗೆ ಗೊತ್ತಿತ್ತು. ಮತ್ತೊಂದು ಸಲ ತನ್ನ ಕಿವಿ ಮತ್ತು
ಮುಖವನ್ನು ಮುಚ್ಚಿಕೊಂಡ ಕಾಲರ್ ಅನ್ನು ತಕ್ಷಣ ಸರಿಪಡಿಸಿಕೊಂಡ.
ಆ ಮುಂದಿನ ಅರ್ಧ ಗಂಟೆಯ ಪಯಣ ಮೌನದಿಂದ ಕೂಡಿತ್ತು. ನಿಕಿಟನ
ಪಕ್ಕದಿದ ಗಾಳಿ ರಭಸವಾಗಿ ಬೀಸುತ್ತಿತ್ತು; ಅದು ಹೊಡೆಯುತ್ತಿದ್ದ ಜಾಗದಲ್ಲೇ ಅವನ ತುಪ್ಪುಳುಗಂಬಳಿ
ಹರಿದುಹೋಗಿತ್ತು.
ಇನ್ನೂ ಪೂರ್ತಿ ತಣ್ಣಗಾಗದೇ ಇದ್ದ ತನ್ನ ಬಾಯನ್ನು
ಮುಚ್ಚಿದ್ದ ಕಾಲರ್ ಅನ್ನು ಎಳೆದುಕೊಂಡು ಅದನ್ನು ಊದಿದ.
“ಏನು ಯೋಚನೆ ಮಾಡ್ತಿದ್ದೀಯಾ? ಕರಮ್ಯೆಶೆವೋ ಮೂಲಕ
ಹೋಗೋಣ್ವೋ ಇಲ್ಲ ನೇರವಾದ ದಾರೀಲಿ ಹೋಗೋಣ್ವೋ?” ಎಂದು ಕೇಳಿದ ವಾಸಿಲಿ ಆಂಡ್ರೆವಿಚ್.
ಕರಮ್ಯೆಶೆವೋ ಮೂಲಕ ಹೋಗೋ ದಾರಿ ಹೆಚ್ಚು
ಪರಿಚಿತವಾದ್ದದ್ದು, ಎರಡೂ ಕಡೆ ಎತ್ತರಿಸಿದ ರಸ್ತೆ ಸೂಚನೆ ನೀಡುವ ತೋರುಗಂಬಗಳನ್ನು
ನೆಟ್ಟಿದ್ದರು. ನೇರವಾದ ರಸ್ತೇಲಿ ಹೋದರೆ ಹತ್ತಿರವೇನೋ ಆಗುತ್ತಿತ್ತು, ಆದರೆ ಹೆಚ್ಚು
ಬಳಕೆಯದಲ್ಲ, ಜೊತೆಗೆ ರಸ್ತೆ ತೋರುಗಂಬಗಳು ಇರ್ಲಿಲ್ಲ, ಬರೀ ಹಿಮ ತುಂಬಿರುತ್ತಿತ್ತು.
ನಿಕಿಟ ಸ್ವಲ್ಪ ಹೊತ್ತು ಯೋಚಿಸಿದ.
“ಕರಮ್ಯೆಶೆವೋ ದೂರದ ದಾರಿ ಆದ್ರೂ, ಆ ಕಡೆ ಹೋಗೋದೇ ವಾಸಿ”
ಎಂದ.
“ಆದ್ರೆ ನೇರವಾದ ರಸ್ತೇಲಿ ಹೋದ್ರೆ, ಕಾಡೊಳಗಿನ ಟೊಳ್ಳು
ರಸ್ತೆ ದಾಟಿದ್ರೆ ಆಮೇಲೇನೂ ತೊಂದ್ರೆ ಇರಲ್ಲ” ಎಂದ ವಾಸಿಲಿ ಆಂಡ್ರೆವಿಚ್; ಅವನಿಗೆ ಹತ್ತಿರದ
ದಾರಿಯಲ್ಲಿ ಹೋಗುವುದೇ ಇಷ್ಟವಾಗಿತ್ತು.
“ನೀವು ಹೇಳಿದ ಹಾಗೇ” ಎಂದ ನಿಕಿಟ ಮತ್ತೆ ತನ್ನ ಕಾಲರ್
ಸರಿಪಡಿಸಿಕೊಳ್ಳುತ್ತ.
ವಾಸಿಲಿ ಆಂಡ್ರೆವಿಚ್ ತಾನು ಹೇಳಿದ ಹಾಗೆಯೇ ಮಾಡಿದ. ಅರ್ಧ
ವೆಸ್ಟ್ ದೂರ ಸಾಗಿದ ಮೇಲೆ ಒಂದು ನೀಳವಾದ ಓಕ್ ಮರದ ತೋರುಗಂಬ ಇತ್ತು. ಅದರಲ್ಲಿ ಒಂದೆರಡು ಒಣ
ಎಲೆಗಳು ಜೋತಾಡುತ್ತಿದ್ದವು, ಅಲ್ಲಿ ಅವರು ಎಡಕ್ಕೆ ತಿರುಗಿದರು.
ತಿರುಗಿದಾಗ ಎದುರುಗಾಳಿ ಇತ್ತು, ಹಿಮ ಆಗಲೇ ಬೀಳಕ್ಕೆ
ಶುರುವಾಗಿತ್ತು. ಗಾಡಿ ಓಡಿಸುತ್ತಿದ್ದ ವಾಸಿಲಿ ಆಂಡ್ರೆವಿಚ್ ತನ್ನ ಗಲ್ಲಗಳನ್ನು ಊದಿಸಿಕೊಂಡು
ತನ್ನ ಮೀಸೆಯ ಮೂಲಕ ಉಸಿರು ಬಿಡುತ್ತಿದ್ದ. ನಿಕಿಟ ತೂಕಡಿಸುವುದಕ್ಕೆ ತೊಡಗಿದ.
ಮುಂದೆ ಹತ್ತು ನಿಮಿಷ ಅವರು ಮೌನದಿಂದಲೇ ಪಯಣಿಸಿದರು.
ಇದ್ದಕ್ಕಿದ್ದಂತೆ ವಾಸಿಲಿ ಆಂಡ್ರೆವಿಚ್ ಏನೋ
ಹೇಳಲು ತೊಡಗಿದ.
“ಆ್ಞ ... ಏನು?” ಎಂದು ಕೇಳಿದ ನಿಕಿಟ ಕಣ್ಣುಬಿಡುತ್ತ.
ವಾಸಿಲಿ ಆಂಡ್ರೆವಿಚ್ ಉತ್ತರಿಸಲಿಲ್ಲ, ಆದರೆ ಬಾಗಿ
ಹಿಂದಕ್ಕೆ ನೋಡಿ ಆಮೇಲೆ ಕುದುರೆಯ ಮುಂದೆ ಕಣ್ಣು ಹಾಯಿಸಿದ. ಮುಖೋರ್ಟಿಯ ಕಾಲುಗಳು ಮತ್ತು ಕತ್ತಿನ
ಭಾಗದಲ್ಲಿ ಬೆವರು ಸಾಲುಗಟ್ಟಿತ್ತು. ಅದೀಗ ನಡಿಗೆ ನಿಧಾನಗೊಳಿಸಿತ್ತು.
“ಏನಾಯ್ತು?” ಅಂದ ನಿಕಿಟ.
“ಏನಾಯ್ತು? ಏನಾಯ್ತಾ?” ವಾಸಿಲಿ ಆಂಡ್ರೆವಿಚ್ ಕೋಪದಿಂದ
ಅವನನ್ನು ಅಣಕಿಸಿದ. “ತೋರುಗಂಬಗಳೇ ಕಾಣಿಸ್ತಿಲ್ಲ. ಎಲ್ಲೋ ದಾರಿ ತಪ್ಪಿರಬೇಕು!” “ಸರಿ, ಗಾಡಿ
ನಿಲ್ಲಿಸಿ, ನಾನು ಹೋಗಿ ನೋಡ್ತೀನಿ” ಎಂದು ನಿಕಿಟ ಗಾಡಿಯಿಂದ ಹಗುರವಾಗಿ ದುಮುಕಿದ; ಹುಲ್ಲಿನ
ಅಡಿಯಲ್ಲಿ ಇರಿಸಿದ್ದ ಚಾವಟಿಯನ್ನು ತೆಗೆದುಕೊಂಡು ಗಾಡಿ ನಿಂತಿದ್ದ ಎಡಭಾಗದಲ್ಲಿ ತಿರುಗಿಕೊಂಡು
ಹೋದ.
ಈ ವರ್ಷ ಹಿಮ ಹೆಚ್ಚಾಗಿರಲಿಲ್ಲ, ಹೀಗಾಗಿ ಎಲ್ಲಿ ಬೇಕಾದರೂ
ನಡೆದು ಹೋಗಬಹುದಾಗಿತ್ತು. ಆದರೂ ಕೆಲವು ಕಡೆಗಳಲ್ಲಿ ಮೊಣಕಾಲುದ್ದ ಹಿಮ ಬಿದ್ದಿತ್ತು, ಅವನ
ಬೂಟುಗಳೊಳಗೂ ಸೇರಿಕೊಂಡಿತು. ತನ್ನ ಕಾಲು ಹಾಗೂ ಚಾವಟಿಗಳಿಂದ ನೆಲಕ್ಕಾಗಿ ತಡಕಾಡುತ್ತ ಅತ್ತಿತ್ತ
ಹೋದ ಅವನಿಗೆ ಎಲ್ಲಿಯೂ ರಸ್ತೆ ಕಾಣಲಿಲ್ಲ.
“ಇದು ಹೇಗಾಯ್ತು?” ಎಂದ ವಾಸಿಲಿ ಆಂಡ್ರೆವಿಚ್, ನಿಕಿಟ
ಜಾರುಬಂಡಿ ಕಡೆಗೆ ವಾಪಸಾದಾಗ.
“ಈ ಕಡೆ ರಸ್ತೇನೇ ಇಲ್ಲ, ಇನ್ನೊಂದು ಕಡೆ ಹೋಗಿ ನೋಡ್ಬೇಕು.”
ಎಂದ ನಿಕಿಟ.
“ಮುಂದೆ ಏನೋ ಕಾಣಿಸ್ತಿದೆ, ಹೋಗಿ ನೋಡು.”
ಏನೋ ಕಪ್ಪಗೆ ಕಾಣಿಸುತ್ತಿದ್ದ ಕಡೆಗೆ ನಿಕಿಟ ಹೋದ, ಆದರೆ
ಅದು ಗಾಳಿ ಬೀಸಿ ಚಳಿಗಾಲದಲ್ಲಿ ಬೆಳೆಯಿಲ್ಲದ ಹೊಲಗಳಿಂದ ಹೊತ್ತು ತಂದಿದ್ದು ಹಿಮದ ಸುತ್ತ
ಬಿದ್ದಿದ್ದ ಮಣ್ಣು, ಅದಕ್ಕೆ ಬಣ್ಣ ಬಳಿದಿತ್ತು. ಬಲಗಡೆಯಲ್ಲಿಯೂ ಹುಡುಕಿದ ಅವನು ಮತ್ತೆ ಗಾಡಿಯ
ಬಳಿ ಹಿಂದಿರುಗಿದ. ತನ್ನ ಕೋಟಿನ ಮೇಲೆ ಕೂತಿದ್ದ ಹಿಮವನ್ನು ಕೊಡವಿಕೊಂಡ, ಬೂಟುಗಳನ್ನು
ಜಾಡಿಸಿಕೊಂಡ, ಮತ್ತೆ ಬಂದು ಕೂತ.
“ನಾವು ಬಲಗಡೆಗೆ ಹೋಗಬೇಕು” ಎಂದ ಅವನು ನಿಶ್ಚಿತವಾಗಿ.
“ಮುಂಚೆ ಗಾಳಿ ನಮ್ಮ ಎಡದಿಂದ ಬೀಸ್ತಿತ್ತು, ಆದ್ರೆ ಈಗ ಎದುರುಗಾಳಿಯಾಗಿದೆ. ಗಾಡೀನ ಬಲಕ್ಕೆ
ಹೊಡೀರಿ” ಎಂದ ಮತ್ತೆ ದೃಢವಾಗಿ.
ಅವನ ಸಲಹೆಯನ್ನು ಸ್ವೀಕರಿಸಿದ ವಾಸಿಲಿ ಆಂಡ್ರೆವಿಚ್
ಗಾಡಿಯನ್ನು ಬಲಕ್ಕೆ ತಿರುಗಿಸಿದ. ಆದರೆ ಅಲ್ಲಿಯೂ ರಸ್ತೆ ಕಾಣಿಸಲಿಲ್ಲ. ಅವರು ಸ್ವಲ್ಪ ಹೊತ್ತು
ಅದೇ ದಿಕ್ಕಿನಲ್ಲಿ ಮುಂದುವರಿದರು. ಗಾಳಿ ಎಂದಿಗಿಂತ ಹೆಚ್ಚು ಬಿರುಸಾಗಿ ಬೀಸುತ್ತಿತ್ತು;
ಹಗುರವಾಗಿ ಹಿಮವೂ ಬೀಳುತ್ತಿತ್ತು.
“ನಾವು ದಾರಿ ತಪ್ಪಿದ್ದೀವಿ ಅಂತ ಕಾಣತ್ತೆ, ಯಜಮಾನ್ರೇ”
ಎಂದ ನಿಕಿಟ ಇದ್ದಕ್ಕಿದ್ದಂತೆ, ಖುಷಿಯಿಂದಲೆಂಬಂತೆ. “ಅದೇನು?” ಎಂದು ಅವನು ಹಿಮದ ಹೊದಿಕೆಯ
ಕೆಳಗೆ ಕಾಣಿಸುತ್ತಿದ್ದ ಆಲೂಗಡ್ಡೆಯ ಬಳ್ಳಿಗಳ ಕಡೆ ತೋರಿಸುತ್ತ.
ವಾಸಿಲಿ ಆಂಡ್ರೆವಿಚ್ ಬೆವರುತ್ತಿದ್ದ ಕುದುರೆ ಲಗಾಮು
ಎಳೆದು ನಿಲ್ಲಿಸಿದ, ಕುದುರೆಯ ಪಕ್ಕೆಗಳು ಬಿರುಸಾದ ಉಸಿರಾಟದಿಂದಾಗಿ ಉಬ್ಬಿ ತಗ್ಗಿ
ಮಾಡುತ್ತಿದ್ದವು.
“ಏನದು?”
“ಗೊತ್ತಾಗಲಿಲ್ವಾ? ನಾವು ಜರೋವ್ ಅವರ ಹೊಲದ ಹತ್ರ
ಇದ್ದೀವಿ. ನಾವೆಲ್ಲಿ ಬಂದುಬಿಟ್ವಿ ನೋಡಿ.”
“ಏನೇನೋ ಹೇಳ್ಬೇಡ” ಎಂದ ವಾಸಿಲಿ ಆಂಡ್ರೆವಿಚ್ ಕೋಪದಿಂದ.
“ಏನೇನೋ ಅಲ್ಲ, ಯಜಮಾನ್ರೇ. ಆಗಿರೋದೇ ಹಾಗೆ” ಎಂದುತ್ತರಿಸಿ
ನಿಕಿಟ, “ನಮ್ಮ ಜಾರುಬಂಡಿ ಆಲೂಗಡ್ಡೆ ಹೊಲದ ಮೇಲೆ ಹೋಗ್ತಾ ಇರೋದು ಕಾಣಿಸಲ್ವಾ? ಇಲ್ಲಿ ತಂದು ಸುರಿದಿರೋ
ಆಲೂಗಡ್ಡೆ ಬಳ್ಳಿಗಳು ಗುಡ್ಡೆಯಾಗಿವೆ. ಇದು ಜ಼ಕರೋವ್ ಅವರ ಕಾರ್ಖಾನೆ ಜಾಗ.”
“ಅಯ್ಯೋ ದೇವರೇ, ನಾವು ಹೇಗೆ ದಾರಿ ತಪ್ಪಿದ್ವೀ ಅಂತ!
ಈಗೇನ್ಮಾಡೋದು?”
“ನಾವು ನೇರವಾಗೇ ಹೋಗ್ಬೇಕು, ಅಷ್ಟೆ. ಎಲ್ಲಾದ್ರೂ ಹೊಲದಿಂದ
ಹೊರಕ್ಕೆ ಬರ್ತೀವಿ. ಜ಼ಕರೋವ್ ಅವರ ಹೊಲದ ಹತ್ರ ಅಲ್ಲದಿದ್ರೂ ಇನ್ನೆಲ್ಲೋ ಬಂದ್ಬಿಟ್ಟಿದ್ದೀವಿ”
ಎಂದ ನಿಕಿಟ.
ವಾಸಿಲಿ ಆಂಡ್ರೆವಿಚ್ ಈ ಮಾತನ್ನೊಪ್ಪಿದ, ನಿಕಿಟ ಹೇಳಿದ
ಹಾಗೆ ಗಾಡಿ ಓಡಿಸಿದ. ಸ್ವಲ್ಪ ದೂರ ಹೀಗೆ ಹೋದರು. ಕೆಲವು ಸಲ ಅವರಿಗೆ ಒಣಭೂಮಿ ಕಾಣಿಸಿದರೆ,
ಕೆಲವು ಸಲ ಹಿಮಗಟ್ಟಿದ್ದ ಉಬ್ಬುಗಳ ಮೇಲೆ ಸ್ಲೆಜ್‍ಗಳು ಓಡಿಯಾಡಿ ಗುರುತಾಗಿದ್ದ ಜಾಗಗಳು
ಎದುರಾದವು, ಕೆಲವು ಸಲ ಅವರು ಚಳಿಗಾಲದ ಗೋಧಿ ಹೊಲಗಳನ್ನು ಕಂಡರು, ಒಣ ಪುರುಲೆಗಳು ಬಿದ್ದಿದ್ದ
ರಾಶಿಗಳು ಹಾಗೂ ಹಿಮದಲ್ಲಿ ಸಿಕ್ಕಿಕೊಂಡು ಗಾಳಿಗೆ ಅಲುಗಾಡುತ್ತಿದ್ದ ಹುಲ್ಲುಕಡ್ಡಿಗಳನ್ನು ಕೆಲವು
ವೇಳೆ ಕಂಡರು. ಕೆಲವು ವೇಳೆ ದಟ್ಟವಾಗಿ ಬೆಳಗಿದ್ದ ಹಿಮರಾಶಿಯು ಎದುರಾಯಿತು, ಅದರ ಮೇಲೇ ಏನೂ
ಕಾಣಿಸುತ್ತಿರಲಿಲ್ಲ.
ಹಿಮ ಮೇಲಿನಿಂದ ಬೀಳುತ್ತಿತ್ತು, ಕೆಲವು ವೇಳೆ
ಕೆಳಗಿನಿಂದಲೂ ಮೇಲೇಳುತ್ತಿತ್ತು. ಕುದುರೆ ದಣಿದಿದ್ದುದು ಎದ್ದು ಕಾಣಿಸುತ್ತಿತ್ತು, ಬೆವರಿನಿಂದ
ಅದರ ರೋಮಗಳು ಸುರುಳಿಗಟ್ಟಿ ಮೇಲೆಲ್ಲ ಮಂಜು ಮುಸುಕಿತ್ತು. ಅದೀಗ ನಿಧಾನ ನಡಿಗೆಯಲ್ಲಿ
ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಅದು ಒಂದೆಡೆ ಮುಗ್ಗರಿಸಿ ಕುಸಿದು ಕುಳಿತುಬಿಟ್ಟಿತು; ಅದೇನು
ಗುಂಡಿಯೋ ನೀರಿನ ಕುಂಟೆಯೋ ಗೊತ್ತಾಗಲಿಲ್ಲ. ವಾಸಿಲಿ ಆಂಡ್ರೆವಿಚ್ ಗಾಡಿಯನ್ನು ನಿಲ್ಲಿಸಲು
ಹಾತೊರೆಯುತ್ತಿದ್ದ, ಆದರೆ ನಿಕಿಟ ಅವನತ್ತ ತಿರುಗಿ ಕೂಗಿಕೊಂಡ:
“ಯಾಕೆ ನಿಲ್ಲಿಸಿದ್ರಿ? ದಾರಿಗೆ ಬಂದಿದ್ದೀವಿ, ಹೋಗೋಣ.
ಏಯ್, ಮುಖೋರ್ಟಿ, ಮರಿ. ಎದ್ದೇಳು, ಓಡು!” ಎನ್ನುತ್ತ ಸಂತೋಷದಿಂದ ಕುದುರೆಗೆ ಹೇಳಿ, ಸ್ಲೆಜ್‍ನಿಂದ
ಕೆಳಕ್ಕೆ ಜಿಗಿದು ತಾನೇ ಗುಂಡಿಯಲ್ಲಿ ಬಿದ್ದ.
ಕುದುರೆ ತಕ್ಷಣ ಮೇಲೆದ್ದು ಗುಂಡಿಯನ್ನು ಸರಕ್ಕನೆ ಹತ್ತಿ
ಹಿಮಗಟ್ಟಿದ್ದ ದಂಡೆಯ ಮೇಲೆ ನಿಂತಿತು. ಅದು ಗುಂಡಿಯೇ, ಯಾರೋ ತೋಡಿದ್ದರು.
“ನಾವೆಲ್ಲಿದ್ದೀವೀಗ?” ಎಂದು ಕೇಳಿದ ವಾಸಿಲಿ ಆಂಡ್ರೆವಿಚ್.
“ಇಷ್ಟರಲ್ಲೇ ಗೊತ್ತಾಗತ್ತೆ! ಹೋಗೋಣ, ಎಲ್ಲಿಗಾದ್ರೂ
ಹೋಗ್ತೀವಲ್ಲ” ಎಂದ ನಿಕಿಟ ಉತ್ತರವಾಗಿ.
“ಇದು ಗೊರ್ಯಾಚ್ಕಿನ್ ಕಾಡಲ್ಲವಾ!” ಎಂದು ವಾಸಿಲಿ
ಆಂಡ್ರೆವಿಚ್ ಮುಂದೆ ಹಿಮದಲ್ಲಿ ಮೇಲೆದ್ದು ಕಾಣುತ್ತಿದ್ದ ಏನೋ ಕಪ್ಪಾದ ವಸ್ತುವಿನ ಕಡೆಗೆ
ತೋರಿಸುತ್ತ.
“ಅದು ಯಾವ ಕಾಡು ಅಂತ ಅಲ್ಲಿಗೆ ಹೋದ್ರೆ ಗೊತ್ತಾಗತ್ತೆ”
ಎಂದ ನಿಕಿಟ.
ಕಾಣಿಸಿದ್ದ ಆ ಕಪ್ಪು ವಸ್ತುವಿನ ಪಕ್ಕದಲ್ಲಿ ಒಣಗಿದ
ನೀಳವಾದ ವಿಲೋ ಎಲೆಗಳು ಅಲುಗಾಡುತ್ತಿದ್ದುದು ಕಾಣಿಸಿತು; ಇದರಿಂದ ಅದು ಕಾಡಾಗಿರದೆ ವಸತಿ ಪ್ರದೇಶ
ಅಂತ ಗೊತ್ತಾಯಿತು; ಆದರೆ ಹಾಗೆ ಹೇಳಲು ಅವನು ಇಷ್ಟಪಡಲಿಲ್ಲ. ಆ ಗುಂಡಿಯಿಂದ ಇನ್ನೂ ಇಪ್ಪತ್ತೈದು
ಗಜಗಳಷ್ಟು ದೂರ ಕೂಡ ಸಾಗಿರಲಿಲ್ಲ, ಅವರಿಗೆ ಎದುರುಗಡೆ ಮರಗಳು, ಕಪ್ಪಾಗಿ ಕಾಣಿಸಿತಲ್ಲ, ಅಲ್ಲೇನೋ
ನರಳುವ ದನಿ ಕೇಳಿಸಿದ ಹಾಗಾಯ್ತು. ನಿಕಿಟ ಊಹಿಸಿದ್ದುದು ನಿಜವೇ ಆಗಿತ್ತು: ಅದು ಕಾಡಲ್ಲ, ಅಲ್ಲಿ
ಇಲ್ಲಿ ಅಲುಗಾಡುತ್ತಿದ್ದ ಎಲೆಗಳ ವಿಲೋ ಮರಗಳು. ಅವುಗಳನ್ನು ಒಕ್ಕುವ ಕಣದ ಬದುಗಳ ಗುಂಟ
ನಟ್ಟಿದ್ದುದು ಸ್ಪಷ್ಟವಾಗಿತ್ತು. ಕರುಣಾಜನಕವಾಗಿ ನರಳುತ್ತಿದ್ದಂತೆ ಸದ್ದುಮಾಡುತ್ತಿದ್ದ ವಿಲೋ
ಮರಗಳ ಹತ್ತಿರ ಬಂದ ಕುದುರೆ ಇದ್ದಕ್ಕಿದ್ದಂತೆ ತನ್ನ ಮುಂಗಾಲುಗಳನ್ನು ಜಾರುಬಂಡಿಯ ಎತ್ತರಕ್ಕೂ
ಮೇಲಕ್ಕೆ ಎತ್ತಿ ಹಿಂಗಾಲುಗಳನ್ನು ಎಳೆದು ಜಾರುಬಂಡಿಯನ್ನು ತಗ್ಗಿನಿಂದ ಮೇಲಕ್ಕೆಳೆದೊಯ್ದು
ಎಡಕ್ಕೆ ತಿರುಗಿತು, ಈಗದರ ಕಾಲುಗಳು ಹಿಮದಲ್ಲಿ ಹೂತುಹೋಗಲಿಲ್ಲ; ಅವರೀಗ ರಸ್ತೆಯಲ್ಲಿ
ಬಂದಿದ್ದರು.
‘ಅಬ್ಬ, ಸರಿಯಾಯಿತು, ಆದರೆ ಎಲ್ಲಿದ್ದೇವೋ ದೇವರೇ ಬಲ್ಲ!”
ಎಂದ ನಿಕಿಟ.
ರಸ್ತೆಯಲ್ಲಿ ಕುದುರೆ ನೇರವಾಗಿ ಸಾಗಿತು; ಇನ್ನೊಂದು ನೂರು
ಗಜಗಳಷ್ಟು ದೂರ ಹೋಗಿರಲಿಲ್ಲ, ಮನೆಯ ತಡಿಕೆ ಗೋಡೆಯೊಂದು ಅವರಿಗೆ ಕಪ್ಪಗೆ ಗೋಚರಿಸಿತು. ಅದರ
ಚಾವಣಿಯ ಮೇಲೆಲ್ಲ ದಟ್ಟವಾಗಿ ಹಿಮ ತುಂಬಿ ಕೆಳಕ್ಕೆ ಇಳಿಯುತ್ತಿತ್ತು. ಆ ಗುಡಿಸಲನ್ನು ದಾಟಿದ
ಮೇಲೆ ರಸ್ತೆ ಗಾಳಿಗೆದುರಾಯಿತು, ಅವರು ಮತ್ತೆ ಹಿಮದ ರಾಶಿಯಲ್ಲಿ ಸಾಗಿದರು. ಆದರೆ ಮುಂದೆ ಎರಡೂ
ಬದಿಗಳಲ್ಲಿ ಮನೆಗಳಿದ್ದ ಒಂದು ಗಲ್ಲಿ ಕಾಣಿಸಿತು. ಗಾಳಿ ಬೀಸಿ ಹಿಮವನ್ನು ಹರಡಿದ್ದುದು
ಸ್ಪಷ್ಟವಾಗಿತ್ತು; ಆಗಿದ್ದೂ ಅದೇ. ಹಿಮದಲ್ಲಿ ಸಾಗುತ್ತ ಗಾಡಿ ಒಂದು ಬೀದಿಗೆ ಬಂತು. ಹಳ್ಳಿಯ
ಕೊನೆಯ ಮನೆ ಹಿಮಗಟ್ಟಿದ್ದ ಒಣಗಲೆಂದು ಹಾಕಿದ್ದ ಬಟ್ಟೆಗಳು – ಒಂದು ಕೆಂಪು ಮತ್ತೊಂದು ಬಿಳಿ ಅಂಗಿ, ಷರಾಯಿಗಳು, ಕಾಲಿನ ಪಟ್ಟಿಗಳು, ಒಂದು
ಒಳಲಂಗ – ಗಾಳಿಯಿಂದಾಗಿ ಪಟಪಟನೆ
ಹಾರಾಡುತ್ತಿದ್ದ ಹಗ್ಗ ಕಾಣಿಸಿತು. ಅದರಲ್ಲೂ ಆ ಬಿಳಿ ಅಂಗಿ ತೋಳುಗಳನ್ನು ಹಾಗೆ ಹೀಗೆ ಆಡಿಸುತ್ತ
ಸಿಕ್ಕಾಪಟ್ಟೆ ಅಲುಗಾಡುತ್ತಿತ್ತು.
“ಅಲ್ನೋಡು, ಇಲ್ಲ ಸೋಮಾರಿ ಅಥವಾ ಸತ್ತವಳು ಯಾರೋ
ವಿಶ್ರಾಂತಿಗಾಗಿ ಹೋಗಕ್ಕೆ ಮುಂಚೆ ಬಟ್ಟೆಗಳನ್ನೇ ತಗೊಂಡು ಹೋಗಿಲ್ಲ” ಎಂದ ನಿಕಿಟ. ಓಲಾಡುತ್ತಿದ್ದ
ಅಂಗಿ ಕಡೆ ನೋಡುತ್ತ.
3
ಬೀದಿಯ ಪ್ರವೇಶದಲ್ಲಿ ಗಾಳಿ ಇನ್ನೂ ರಭಸವಾಗಿಯೇ
ಬೀಸುತ್ತಿತ್ತು, ರಸ್ತೆಯ ಮೇಲೆಲ್ಲ ಹಿಮ ಆವರಿಸಿತ್ತು, ಆದರೆ ಹಳ್ಳಿಯೊಳಗೆ ಎಲ್ಲವೂ
ನೀರವದಿಂದಿತ್ತು, ಬೆಚ್ಚಗೆ ಹಿತಕರವಾಗಿತ್ತು. ಒಂದು ಮನೆಯ ಮುಂದೆ ಮಾತ್ರ ನಾಯೊಂದು ಹೆಂಗುಸೊಬ್ಬಳ
ಮುಂದೆ ನಿಂತು ಬೊಗಳುತ್ತಿತ್ತು. ಅವಳು ಕೋಟಿನಿಂದ ತನ್ನ ತಲೆಯನ್ನು ಮುಚ್ಚಿಕೊಂಡು ಎಲ್ಲಿಂದಲೋ
ಓಡಿ ಬಂದವಳು ಗುಡಿಸಿಲ ಬಾಗಿಲ ಬಳಿ ಹೊಸ್ತಿಲಲ್ಲಿ ನಿಂತು ಹಾದು ಹೋಗುತ್ತಿದ್ದ ಜಾರುಬಂಡಿಯನ್ನು
ನೋಡುತ್ತ ನಿಂತಳು. ಹಳ್ಳಿಯ ನಡುವೆ ಹುಡುಗಿಯರು ಹಾಡು ಹೇಳುತ್ತಿದ್ದುದು ಕೇಳಿಸುತ್ತಿತ್ತು.
ಈ ಹಳ್ಳಿಯಲ್ಲಿ ಗಾಳಿಯ ರಭಸ ಕಡಿಮೆ ಇತ್ತು, ಹಾಗೆಯೇ ಹಿಮ
ಬೀಳುವುದೂ, ಹೀಗಾಗಿ ಕಾವಳ ಕೂಡ ಕಡಿಮೆಯೇ.
“ಓ, ಇದು ಗ್ರಿಶ್ಕಿನೋ” ಎಂದ ವಾಸಿಲಿ ಆಂಡ್ರೆವಿಚ್.
“ಹಾಗೇ ಅನ್ಸತ್ತೆ” ಎಂದ ನಿಕಿಟ.
ಅದು ಗ್ರಿಶ್ಕೋನೇನೇ ಆಗಿತ್ತು, ಅಂದರೆ ತಾವು ಎಡಭಾಗಕ್ಕೆ
ತುಂಬ ದೂರ ಬಂದುಬಿಟ್ಟಂತಾಗಿತ್ತು, ಸುಮಾರು ಆರು ಮೈಲಿ, ಜೊತೆಗೆ ತಾವು ಅಂದುಕೊಂಡ
ದಿಕ್ಕಿನಲ್ಲಾಗಿರದೆ ತಾವು ಹೋಗಬೇಕಾಗಿದ್ದ ಕಡೆಗೇ.
ಗ್ರಿಶ್ಕಿನೋದಿಂದ ಗೊರ್ಯಾಶ್ಕಿನ್‍ಗೆ ಸುಮಾರು ನಾಲ್ಕು
ಮೈಲಿ ದೂರ.
ಹಳ್ಳಿಯ ಮಧ್ಯೆ ರಸ್ತೆ ನಡುವೆಯೇ ನಡೆದು ಹೋಗುತ್ತಿದ್ದ
ಒಬ್ಬ ನೀಳಕಾಯದ ವ್ಯಕ್ತಿಯೊಬ್ಬನ ಮೇಲೇ ಗಾಡಿ ಹೋಗುವಂತೆ ಚಲಿಸಿತು.
“ಯಾರು ನೀವು” ಎಂದ ಆ ವ್ಯಕ್ತಿ ಕುದುರೆಯನ್ನು
ಹಿಡಿದುಕೊಂಡು ನಿಲ್ಲಿಸಿ; ಆದರೆ ವಾಸಿಲಿ ಆಂಡ್ರೆವಿಚ್‍ನನ್ನು ಗುರುತಿಸಿ ತಕ್ಷಣವೇ ಮೂಕಿಯನ್ನು
ಹಿಡಿದುಕೊಂಡು ಹೆಜ್ಜೆ ಮೇಲೆ ಹೆಜೆಯಿಡುತ್ತ ಸ್ಲೆಜ್ ಹತ್ತಿರ ಬಂದು ಚಾಲಕನ ಜಾಗದಲ್ಲಿ ಕೂತ.
ಅವನ ಹೆಸರು ಇಸಾಯ್ ಅಂತ, ವಾಸಿಲಿ ಆಂಡ್ರೆವಿಚ್‍ಗೆ
ಪರಿಚಿತನಾಗಿದ್ದ ಒಬ್ಬ ರೈತ, ಆ ಪ್ರದೇಶದಲ್ಲೆಲ್ಲ ಮಹಾ ಕುದುರೆಕಳ್ಳ ಎಂಬ ಕುಖ್ಯಾತಿಯನ್ನು
ಪಡೆದಿದ್ದ.
“ಆ, ವಾಸಿಲಿ ಆಂಡ್ರೆವಿಚ್, ಎಲ್ಲಿಗೆ ಹೋಗ್ತಿದ್ದೀರಿ?”
ಎಂದು ಕೇಳಿದ ಇಸಾಯ್, ಅವನ ಬಾಯಿಂದ ಹೊಮ್ಮಿದ ವೋಡ್ಕಾ ವಾಸನೆ ನಿಕಿಟನನ್ನು ಆವರಿಸಿತು.
“ನಾವು ಗೊರ್ಯಾಶ್ಕಿನ್‍ಗೆ ಹೊರಟಿದ್ವಿ.”
“ನೋಡು, ಎಲ್ಲಿಗೆ ಬಂದ್ಬಿಟ್ಟಿದ್ದೀರ ನೀವು? ಮೋಲ್ಶನೋವ್ಕಾ
ಮೂಲಕ ಹೋಗ್ಬೇಕಾಗಿತ್ತು.”
“ಹೌದು, ಹೋಗ್ಬೇಕಾಗಿತ್ತು, ಆದರೆ ಹೋಗಕ್ಕೆ ಆಗಲಿಲ್ಲ” ಎಂದ
ವಾಸಿಲಿ ಆಂಡ್ರೆವಿಚ್ ಕುದುರೆಯನ್ನು ನಿಲ್ಲಿಸಿಕೊಂಡು.
“ಈ ಕುದುರೆ ಒಳ್ಳೆ ಮಜಬೂತಾಗಿದೆ” ಎಂದ ಇಸಾಯ್, ಮುಖೋರ್ಟಿ
ಕಡೆ ಒಂಥರ ದೃಷ್ಟಿ ಹಾಯಿಸಿ; ಆನಂತರ ತನ್ನ ನಿಪುಣ ಕೈಯಿಂದ ಕುದುರೆಯ ರೋಮಭರಿತ ಬಾಲದವರೆಗೆ
ಗಂಟನ್ನು ಬಿಗಿಗೊಳಿಸಿದ.
“ರಾತ್ರಿ ಇಲ್ಲೇ ಇರ್ತೀರಾ?”
“ಇಲ್ಲ ಮಾರಾಯ, ಮುಂದೆ ಹೋಗ್ಬೇಕು.”
“ವ್ಯವಹಾರ ಜೋರಾಗಿರಬೇಕು. ಇವರ್ಯಾರು? ಓ, ನಿಕಿಟ
ಸ್ಟೆಪಾನ್ಯಿಚ್ ಅಲ್ಲವಾ!”
“ಇನ್ಯಾರು? ಮತ್ತೆ ದಾರಿ ತಪ್ಪದೇ ಇರ್ಬೇಕಾದ್ರೆ ಹೇಗೆ ಹೋಗ್ಬೇಕು,
ಹೇಳು” ಎಂದು ನಿಕಿಟ ಪ್ರಶ್ನಿಸಿದ.
“ಇಲ್ಲಿ ದಾರಿ ಹೇಗೆ ತಪ್ಪತ್ತೇಂತ? ಹಿಂದಕ್ಕೆ ತಿರುಗಿ ಇದೇ
ಬೀದೀಲಿ ನೇರವಾಗಿ ಹೋಗಿ, ಅದಾದ ಮೇಲೂ ನೇರವಾಗಿಯೇ ಹೋಗಿ. ಎಡಗಡೆ ತಿರಕ್ಕೋಬೇಡಿ. ದೊಡ್ಡ ದಾರಿ
ಸೇರ್ಕೋತೀರಿ, ಆಮೇಲೆ ಬಲಕ್ಕೆ ತಿರುಗಿಕೊಂಡು ಮುಂದೆ ಸಾಗಿ.”
“ದೊಡ್ಡ ದಾರೀಲಿ ಹೇಗೆ ತಿರುಕ್ಕೋಬೇಕು, ಬೇಸಿಗೆ ದಾರೀಲೋ,
ಚಳಿಗಾಲದ ದಾರೀಲೋ?”
“ಚಳಿಗಾಲದ ದಾರೀಲಿ. ತಿರುಗಿಕೊಂಡ ತಕ್ಷಣ ಕೆಲವು ಪೊದೆಗಳು
ಕಾಣ್ಸತ್ವೆ, ಅವುಗಳ ಎದುರಾಗಿ ಜಾಡು ಕಾಣತ್ತೆ –
ಒಂದು ಓಕ್ ತೋರುಗಂಬ ಇದೆ, ಅದರಲ್ಲಿ ಒಂದೆರಡು ಎಲೆಗಳೂ ಇವೆ – ಅದೇ ದಾರಿ.”
ವಾಸಿಲಿ ಆಂಡ್ರೆವಿಚ್ ಕುದುರೆಯನ್ನು ಹಿಂದಕ್ಕೆ ತಿರುಗಿಸಿ
ಹಳ್ಳಿಯ ಹೊರವಲಯದ ಕಡೆಗೆ ಗಾಡಿ ಓಡಿಸಿದ.
“ಇವತ್ತು ರಾತ್ರಿ ಇಲ್ಲೇ ಯಾಕೆ ಇರ್ಬಾರ್ದು?” ಇಸಾಯ್ ಕೂಗಿ
ಹೇಳಿದ.
ಆದರೆ ವಾಸಿಲಿ ಆಂಡ್ರೆವಿಚ್ ಇದಕ್ಕೆ ಉತ್ತರ ಹೇಳದೆ
ಕುದುರೆಯನ್ನು ತಿವಿದ. ಮುಂದಿನ ನಾಲ್ಕು ಮೈಲಿಗಳದು ಒಳ್ಳೆ ದಾರಿ, ಅವುಗಳಲ್ಲಿ ಎರಡು ಮೈಲಿ
ಕಾಡಿನಲ್ಲೇ ಇತ್ತು, ಹೋಗುವುದು ಸುಲಭವಾಗಿತ್ತು. ಯಾಕಂದರೆ ಗಾಳಿಯ ರಭಸವೂ ಕಡಿಮೆಯಾಗಿತ್ತು, ಹಿಮ
ಬೀಳುವುದೂ ನಿಂತಿತ್ತು.
ಗೊಬ್ಬರದಿಂದ ಕಪ್ಪಗಾಗಿದ್ದ ಮತ್ತು ಜನರ ಓಡಾಟದ ಹಳ್ಳಿಯ
ಬೀದಿಯಲ್ಲಿ ಹೋಗುತ್ತ ಹಗ್ಗದ ಮೇಲೆ ಒಣಗಿಹಾಕಿದ್ದ ಬಟ್ಟೆಗಳು ಹಾರಾಡುತ್ತಿದ್ದು ಸಡಿಲವಾಗಿ
ಹೆಪ್ಪುಗಟ್ಟಿದ್ದ ಹಿಮದಿಂದಾಗಿ ಅಂಟಿಕೊಂಡಿದ್ದ ಬಿಳಿ ಅಂಗಿಯ ಮನೆಯನ್ನು ದಾಟಿ ಮತ್ತೆ ಅವರು ವಿಲೋ
ಮರಗಳ ನರಳುವಿಕೆ ಬರುತ್ತಿದ್ದ ತಾಣಕ್ಕೆ ಬಂದು ಬಯಲು ಹೊಲಗಳ ಪ್ರದೇಶ ಸೇರಿದರು. ರಭಸದ ಗಾಳಿ
ಪೂರ್ತಿ ನಿಲ್ಲದೆ ಇದ್ದದ್ದು ಮಾತ್ರವಲ್ಲ, ಮತ್ತಷ್ಟು ಬಿರುಸಾದಂತೆ ತೋರಿತು. ಜಾರುತ್ತಿದ್ದ ಹಿಮ
ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿತ್ತು; ತೋರುಗಂಬಗಳು ಅವರು ದಾರಿ ತಪ್ಪಿಲ್ಲದುದನ್ನು
ಖಚಿತಪಡಿಸುತ್ತಿದ್ದವು. ಆದರೆ ಅವುಗಳು ಕೂಡ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ, ಯಾಕಂದ್ರೆ ಗಾಳಿ
ಅವರ ಮುಖಗಳಿಗೆ ರಾಚುತ್ತಿತ್ತು.
ವಾಸಿಲಿ ಆಂಡ್ರೆವಿಚ್ ತನ್ನ ಕಣ್ಣುಗಳನ್ನು ಬಿಟ್ಟುಕೊಂಡು,
ತಲೆಯನ್ನು ತಗ್ಗಸಿಕೊಂಡು, ದಾರಿಯ ಕುರುಹುಗ:ಳನ್ನು ಗಮನಿಸುತ್ತ ಸಾಗಿದ, ಆದರೆ ಅವನು ಮುಖ್ಯವಾಗಿ
ಭರವಸೆ ಇಟ್ಟಿದ್ದುದು ಕುದುರೆಯ ಜಾಣತನದ ಮೇಲೆ, ಹೀಗಾಗಿ ಅದು ತಾನಾಗಿ ಹೋಗಲು ಬಿಟ್ಟಿದ್ದ.
ಕುದುರೆ ಕೂಡ ದಾರಿ ತಪ್ಪಲಿಲ್ಲ, ರಸ್ತೆಯ ಬಾಗು ತಿರುವುಗಳಲ್ಲಿ ಎಡಕ್ಕೆ ಬಲಕ್ಕೆ ತಿರುಗುತ್ತ,
ತನ್ನ ಕಾಲಿಂದ ರಸ್ತೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳುತ್ತ ಸರಿಯಾಗಿ ಹೋಗುತ್ತಿತ್ತು. ಹೀಗಾಗಿ
ಹಿಮ ದಟ್ಟವಾಗಿ ತುಂಬಿದ್ದರೂ, ಗಾಳಿ ಜೋರಾಗಿದ್ದರೂ ಒಮ್ಮೆ ಎಡಗಡೆಯಲ್ಲಿ ಒಮ್ಮೆ ಬಲಗಡೆಯಲ್ಲಿ
ಇದ್ದ ರಸ್ತೆಯ ಗುರುತನ್ನು ಕಾಣಲು ಅವರಿಗೆ ಕಷ್ಟವಾಗಲಿಲ್ಲ.
ಹೀಗೇ ಅವರು ಸುಮಾರು ಹತ್ತು ನಿಮಿಷದ ಕಾಲ ಪಯಣ
ಮುಂದುವರಿಸಿದರು; ಆಗ ಇದ್ದಕ್ಕಿದ್ದಂತೆ ಗಾಳಿ ಬೀಸಿ ಓರೆಯಾಗಿದ್ದ ಹಿಮಪಾತದ ಪರದೆಯ ಮೂಲಕ ಎಂಥದೋ
ಕಪ್ಪು ವಸ್ತುವೊಂದು ಕಣ್ಣಿಗೆ ಬಿತ್ತು, ಅದು ಕುದುರೆಯ ಮುಂದೆಯೇ ಚಲಿಸುತ್ತಿತ್ತು.
ಅದು ಬೇರೇನೂ ಅಲ್ಲ, ಸಹ ಪ್ರಯಾಣಿಕರಿದ್ದ ಇನ್ನೊಂದು
ಜಾರುಬಂಡಿಯಾಗಿತ್ತು. ಮುಖೋರ್ಟಿ ಅದನ್ನು ಹಿಂದೆ ಹಾಕಲು ಹೋಗಿ ತನ್ನ ಕಾಲಿಂದ ಆ ಜಾರುಬಂಡಿಯ
ಹಿಂಭಾಗವನ್ನು ಒದೆಯಿತು.
“ಮುಂದೆ ಹೋಗ್ರಪ್ಪಾ ... ಯಾರಲ್ಲಿ, ಮುಂದೇನೇ ಹೋಗಿ” ಎಂಬ
ಧ್ವನಿಗಳು ಒಟ್ಟಿಗೇ ಆ ಸ್ಲೆಜ್‍ನಿಂದ ಹೊರಬಿದ್ದವು.
ವಾಸಿಲಿ ಆಂಡ್ರೆವಿಚ್ ಓರೆಯಾಗಿ ಸಾಗಿ ಇನ್ನೊಂದು
ಜಾರುಬಂಡಿಯನ್ನು ಹಿಂದೆ ಹಾಕಿದ. ಅದರಲ್ಲಿ ಮೂವರು ಗಂಡಸರೂ ಒಬ್ಳು ಹೆಂಗಸೂ ಇದ್ದರು; ಹಬ್ಬ
ಮುಗಿಸಿಕೊಂಡು ವಾಪಸಾಗುತ್ತಿದ್ದವರಂತೆ ಕಾಣಿಸಿತು. ಒಬ್ಬ ರೈತ ಹಿಮ ದಟ್ಟವಾಗಿ ಕೂತಿದ್ದ ಕುದುರೆಯ
ಪಿರ್ರೆಗೆ ಬೆತ್ತದಿಂದ ಹೊಡೆಯುತ್ತಿದ್ದ. ಮುಂದೆ ಕೂತಿದ್ದ ಇನ್ನಿಬ್ಬರು ಗಂಡಸರು ತಮ್ಮ
ತೋಳುಗಳನ್ನು ಬೀಸಿ ಏನೋ ಕೂಗಿ ಹೇಳಿದರು. ಮೈಪೂರ್ತಿ ಗುಬುರು ಹಾಕಿಕೊಂಡು ಹಿಂದೆ ಕೂತಿದ್ದ ಹೆಂಗಸು
ಹಿಮದಲ್ಲಿ ಮುಚ್ಚಿಹೋಗಿ, ತೂಕಡಿಸುತ್ತ ಮೇಲೆಕೆಳಗೆ ಕುಲುಕಾಡುತ್ತಿದ್ದಳು.
“ಯಾರು ನೀವು” ಎಂದು ಕೂಗಿ ಕೇಳಿದ ವಾಸಿಲಿ ಆಂಡ್ರೆವಿಚ್.
“... ಕಡೆ” ಎಂಬಷ್ಟು ಮಾತ್ರ ಕೇಳಿಸಿತ್ತು.
“ಎಲ್ಲಿಂದ ಬರ್ತಿದ್ದೀರಿ?”
“... ಕಡೆ” ಒಬ್ಬ ರೈತ ತನಗೆ ಸಾಧ್ಯವಾಗುವಷ್ಟು ಜೋರಾಗಿ
ಕೂಗಿ ಹೇಳಿದಾಗಲೂ ಕೇಳಿಸಿದ್ದು ಅಷ್ಟು ಮಾತ್ರ. ಅವರು ಯಾರು ಎಂಬುದನ್ನು ಗುರುತಿಸಲಂತೂ
ಸಾಧ್ಯವಾಗಲಿಲ್ಲ.
“ಸರಿ ಮುಂದುವರೀರಿ, ಒಳ್ಳೆದಾಗಲಿ!” ಎಂದು ಕೂಗಿದ
ಮತ್ತೊಬ್ಬ, ಬೆತ್ತದಿಂದ ಕುದುರೆಯ ಮೇಲೆ ಒಂದೇ ಸಮನಾಗಿ ಬಾರಿಸುತ್ತ.
“ಹಬ್ಬ ಮುಗಿಸಿಕೊಂಡು ಬರ್ತಿದ್ದೀರಿ ಅಂತ ಕಾಣತ್ತೆ?”
“ಹೋಗಿ ಹೋಗಿ, ಜೋರಾಗಿ ಸೈಮನ್! ಮುಂದೆ ಹೋಗು, ಜೋರಾಗಿ!”
ಸ್ಲೆಜ್‍ಗಳ ಪಕ್ಕಗಳು ಒಂದಕ್ಕೊಂದು ಡಿಕ್ಕಿ ಹೊಡೆದವು,
ಒಂದರ ಮೇಲೊಂದು ನುಗ್ಗೋ ಹಾಗೆ ಕಾಣಿಸಿದರೂ, ದೂರ ಸರಿಯುವಂತೆ ನೋಡಿಕೊಂಡರು; ರೈತರ ಜಾರುಬಂಡಿ
ಹಿಂದೆ ಬಿತ್ತು.
ಅವರ ಕೂದಲು ತುಂಬಿದ ಡೊಳ್ಳು ಹೊಟ್ಟೆಯ ಕುದುರೆಯ ಮೇಲೆಲ್ಲ
ಹಿಮ ಆವರಿಸಿತ್ತು; ಅದಂತೂ ತಗ್ಗಿನ ಮೂಕಿಯಡಿಯಲ್ಲಿ ಏದುಸಿರು ಬಿಡುತ್ತಿತ್ತು; ತನ್ನ
ಶಕ್ತಿಯನ್ನೆಲ್ಲ ಬಿಟ್ಟು ಅದು ಗಾಡಿಯನ್ನೆಳೆಯುತ್ತಿತ್ತು; ಪಾಪ, ಬೆತ್ತದೇಟಿನಿಂದ
ತಪ್ಪಿಸಿಕೊಳ್ಳಲು ಹೆಣಗಾಡುತ್ತ ಆಳವಾದ ಹಿಮದಲ್ಲಿ ತನ್ನ ಗಿಡ್ಡ ಕಾಲುಗಳನ್ನಿಟ್ಟು ಮೇಲಕ್ಕೆ
ಕೀಳುವಾಗ ಹಿಮವನ್ನು ಮೇಲೆಕ್ಕೆ ಚಿಮ್ಮಿಸಿ ಸಾಗುತ್ತಿತ್ತು.
ಸಣ್ಣ ವಯಸ್ಸಿನದರಂತಿದ್ದ ಅದರ ಮೂತಿ, ಮೀನಿನದರಂತೆ
ಮೇಲೆದ್ದ ಕೆಳತುಟಿ, ಭಯದಿಂದಾಗಿ ಅರಳಿದ ಮೂಗಿನ ಹೊಳ್ಳಗೆಗಳು ಹಾಗೂ ಹಿಂದೆ ಅಂಟಿಕೊಂಡ ಕಿವಿಗಳು
ನಿಕಿಟನ ಭುಜದ ಬಳಿ ಕೆಲ ಕ್ಷನಗಳು ನಿಂತಿದ್ದು ಆನಂತರ ಹಿಂದೆ ಬಿದ್ದಿತು.
“ಸಾರಾಯಿ ಏನು ಮಾಡತ್ತೆ, ನೋಡಿ. ಆ ಕುದುರೆ ಸಾಯೋ ಹಾಗೆ
ದಣಿಸಿದ್ದಾರಲ್ಲ, ಎಂತ ಅಜ್ಞಾನಿಗಳು!” ಎಂದ ನಿಕಿಟ.
ಕೆಲವು ನಿಮಿಷಗಳ ಕಾಲ ದಣಿದ ಆ ಕುದುರೆಯ ಹೆಜ್ಜೆ ಸಪ್ಪುಳ
ಹಾಗೂ ಅಮಲೇರಿದ್ದ ರೈತರ ಕೂಗಾಟಗಳು ಕೇಳಿಸುತ್ತಿದ್ದವು. ಬರಬರುತ್ತ ಸದ್ದು ಕಡಿಮೆಯಾಗಿ, ಕೊನೆಗೆ
ನಿಂತೇ ಹೋಯಿತು. ಹೀಗಾಗಿ ಅವರ ಸುತ್ತ ಕಿವಿಯಲ್ಲಿ ಗುಯ್‍ಗುಟ್ಟುತ್ತಿದ್ದ ಗಾಳಿಯ ಶಿಳ್ಳೆ ಹಾಗೂ
ಗಾಳಿಯಿಂದ ಬೋಳಗಿದ್ದ ದಾರಿಯಲ್ಲಿ ಸಾಗುವಾಗ ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿದ್ದ ಜಾರುಬಂಡಿಯ
ಕುಯ್‍ಗುಟ್ಟಿವಿಕೆಯ ಹೊರತಾಗಿ ಬೇರಾವುದೇ ಸದ್ದು ಇರಲಿಲ್ಲ.
ಮತ್ತೊಂದು ಜಾರುಬಂಡಿ ಜೊತೆ ಮುಖಾಮುಖಿಯಾದದ್ದು ವಾಸಿಲಿ
ಆಂಡ್ರೆವಿಚ್‍ನಲ್ಲಿ ಗೆಲುವು ಮೂಡಿಸಿತ್ತು. ಆಮೇಲೆ ಅವನು ರಸ್ತೆಯನ್ನು ಖಚಿತಪಡಿಸಿಕೊಳ್ಳದೆಯೇ
ಕುದುರೆಯನ್ನು ಪುಸಲಾಯಿಸುತ್ತ ಅದರಲ್ಲಿ ನಂಬಿಕೆಯಿಟ್ಟು ಧೈರ್ಯವಾಗಿ ಗಾಡಿ ಚಲಾಯಿಸಿದ.
ನಿಕಿಟನಿಗೆ ಮಾಡಲು ಕೆಲಸವಿರಲಲ್ಲ, ಅಂತಹ ಪರಿಸ್ಥಿತಿಯಲ್ಲಿ
ಮಾಡುತ್ತಿದ್ದಂತೆ ತೂಕಡಿಸುತ್ತ ನಿದ್ದಗೆಟ್ಟಿದನ್ನು ಸರಿದೂಗಿಸಿಕೊಳ್ಳುತ್ತಿದ್ದ. ಕುದುರೆ
ತಟಕ್ಕನೆ ನಿಂತಿತು, ನಿಕಿಟ ಮುಂದೆ ಮುಗ್ಗರಿಸಿದ.
“ಓ, ನಾವು ಮತ್ತೆ ದಾರಿ ತಪ್ಪಿಬಿಟ್ವಿ!” ಎಂದ ವಾಸಿಲಿ
ಆಂಡ್ರೆವಿಚ್.
“ಅದು ಹೇಗಾಯ್ತು?”
“ಯಾಕೇಂದ್ರೆ, ಎಲ್ಲೂ ತೋರುಗಂಬಗಳೆ ಕಾಣಿಸ್ತಿಲ್ಲ. ಮತ್ತೆ
ದಾರಿ ಬಿಟ್ಟು ಬಂದಿರಬೇಕು ನಾವು.
“ಸರಿ, ದಾರಿ ತಪ್ಪಿದ್ರೆ ಸರಿದಾರಿ ಹುಡುಕ್ಬೇಕು” ಎಂದು
ಒರಟಾಗಿ ನುಡಿದ ನಿಕಿಟ ಗಾಡಿಯಿಂದ ಹೊರಕ್ಕೆ ಹಾರಿ
ತನ್ನ ಪಾರಿವಾಳದ್ದರಂತಹ ಪಾದಗಳಿಂದ ಮೆಲುಹೆಜ್ಜೆಗಳನ್ನಿಡುತ್ತ ಮತ್ತೆ ಹಿಮದ ಮೇಲೆ ದಾರಿ
ಹುಡುಕಿಕೊಂಡು ಹೊರಟ.
ಈಗ ಕಣ್ಣ ಮುಂದೆ ಸ್ವಲ್ಪ ಹೊತ್ತು ಕಣ್ಮರೆಯಾಗಿ ತುಂಬ
ಹೊತ್ತೇ ನಡೆದ ಮೇಲೆ ಅವನು ವಾಪಸು ಬಂದ.
“ಇಲ್ಲಿ ರಸ್ತೆ ಇಲ್ಲ. ಮುಂದೆ ಇರಬಹ್ದು” ಎಂದ ಸ್ಲೆಜ್‍ನೊಳಕ್ಕೆ
ಬಂದು.
ಆಗಲೇ ಕತ್ತಲಾಗತೊಡಗಿತ್ತು. ಹಿಮಪೂರಿತ ಗಾಳಿಯ ರಭಸ
ಹೆಚ್ಚಾಗಿರಲಿಲ್ಲ, ಆದರೆ ಕಡಿಮೆಯೂ ಆಗಿರಲಿಲ್ಲ.
“ಆ ರೈತರ ದನಿ ಮತ್ತೆ ಕೇಳೋ ಹಾಗಾದ್ರೆ!” ಎಂದ ವಾಸಿಲಿ
ಆಂಡ್ರೆವಿಚ್.
“ಅವರು ನಮ್ಮನ್ನ ಹಿಂದೆ ಹಾಕಿ ಮುಂದೆ ಹೋಗಿಲ್ಲ, ಅಂದ್ರೆ
ನಾವು ತುಂಬಾನೇ ದಾರಿ ತಪ್ಪಿ ಬಂದಿರ್ಬೇಕು; ಅಥವಾ ಅವರೂ ದಾರಿ ತಪ್ಪಿರ್ಬೇಕು.”
“ಎಲ್ಲಿಗೆ ಹೋಗೋದು ನಾವೀಗ!” ಎಂದು ಚಿಂತಿಸಿದ ವಾಸಿಲಿ
ಆಂಡ್ರೆವಿಚ್.
“ಅದ್ಯಾಕೆ, ಕುದುರೆ ತನಗೆ ತೋಚಿದ ದಾರೀಲಿ ಸಾಗಲಿ. ಅದು
ಸರಿದಾರೀಗೆ ಕರೆದೊಯ್ಯತ್ತೆ. ಎಲ್ಲಿ, ಲಗಾಮು ನನ್ನ ಕೈಲಿ ಕೊಡಿ” ಎಂದ ನಿಕಿಟ.
ವಾಸಿಲಿ ಆಂಡ್ರೆವಿಚ್ ಅವನಿಗೆ ಲಗಾಮುಗಳನ್ನು ಕೊಟ್ಟ;
ಅವನಿಗೂ ಅದೇ ಬೇಕಾಗಿತ್ತು, ಗವಸು ಹಾಕಿದ್ದರೂ ಅವನ ಕೈಗಳು ಜಡ್ಡುಗಟ್ಟಿದ್ದವು.
ನಿಕಿಟ ಲಗಾಮು ಹಿಡಿದ, ಹಿಡಿದುಕೊಂಡಿದ್ದ ಅಷ್ಟೆ,
ಅವುಗಳನ್ನು ಆಡಿಸದೆ ಇರಲು ಪ್ರಯತ್ನಿಸುತ್ತ, ತನ್ನ ನಂಬಿಕೆಯ ಕುದುರೆಯ ಮೇಲೇ ಭರವಸೆಯಿಟ್ಟು.
ವಾಸ್ತವವಾಗಿಯೂ ಆ ಜಾಣ ಕುದುರೆ ತನ್ನ ಕಿವಿಗಳನ್ನು ಒಮ್ಮೆ ಈ ಕಡೆ ಮತ್ತೊಮ್ಮೆ ಆ ಕಡೆ ತಿರುಗಿಸಿ
ಮತ್ತೆ ಮುಂದುವರಿಯಲು ತೊಡಗಿತು.
“ಇದಕ್ಕೆ ಬರದೇ ಇರೋದು ಅಂದ್ರೆ ಮಾತೊಂದೇ. ನೋಡಿ, ಏನು
ಮಾಡ್ತ ಇದೇಂತ? ಹೋಗಣ್ಣ ಮರಿ, ಹೋಗು! ನಿಂಗೆ ಚೆನ್ನಾಗಿ ಗೊತ್ತು. ಅಷ್ಟೇ, ಹಾಗೇ ಮಾಡು” ಎಂದ
ನಿಕಿಟ.
ಗಾಳಿ ಈಗ ಹಿಂದಿನಿಂದ ಬೀಸುತ್ತಿತ್ತು ಇದರಿಂದ
ಬೆಚ್ಚಗೆನ್ನಿಸಿತು.
“ಹೌದು, ಆದು ಜಾಣ ಕುದುರೆ” ಕಿರ್‍ಗಿಜ಼್ ಕುದುರೆ
ಬಲವಾಗೇನೋ ಇರತ್ತೆ, ಆದ್ರೆ ಮೊದ್ದು. ಆದ್ರೆ ಇದು - ನೀವೇ ನೋಡಿ ತನ್ನ ಕಿವಿಗಳಿಂದ ಏನು
ಮಾಡ್ತಿದೇಂತ! ಅದಕ್ಕೆ ಟೆಲಿಗ್ರಾಫ಼್ ಏನೂ ಬೇಕಾಗಿಲ್ಲ, ಒಂದು ಮೈಲಿ ದೂರ ವಾಸನೆ ಹಿಡಿಯತ್ತೆ”
ಎಂದು ಕುದುರೆಯನ್ನು ಮನಸಾರೆ ಹೊಗಳಿದ.
ಇನ್ನೊಂದು ಅರ್ಧ ಮೈಲಿ ಹೋಗೋದರೊಳಗೆ ಅದೇನೋ ಕಪ್ಪಗೆ
ಕಾಣಿಸಿತು – ಕಾಡೋ ಹಳ್ಳಿಯೋ - ಪುನಃ
ಬಲಗಡೆ ತೋರುಗಂಬಗಳು ಕಾಣಿಸಿದವು. ತಾವು ಮತ್ತೆ ರಸ್ತೆಯನ್ನು ಸೇರಿರುವುದು ಸ್ಪಷ್ಟವಾಗಿತ್ತು.
“ಅದೇ ಗ್ರಿಶ್ಕಿನೋ ಮತ್ತೆ” ಎಂದ ನಿಕಿಟ ಇದ್ದಕ್ಕಿದ್ದಂತೆ
ಅಚ್ಚರಿಯಿಂದ.
ಆಗಿದ್ದೂ ಅದೇ – ಅವರ ಎಡಗಡೆಗೆ ಹಿಮ ಜೋತಾಡುತ್ತಿದ್ದ ಗುಡಿಸಲು, ಆ ಮುಂದೆ ಹಿಮ ಕೂತಿದ್ದ
ಅಂಗಿಗಳು, ಷರಾಯಿಗಳು ಇದ್ದ ಹಗ್ಗ, ನಿರ್ವಾಹವಿಲ್ಲದೆ ಗಾಳಿಯಲ್ಲಿ ಇನ್ನೂ ಪಟಪಟಗುಟ್ಟುತ್ತ.
ಮತ್ತೆ ಅದೇ ಬೀದಿಯಲ್ಲಿ ಸಾಗಿದರು, ಮತ್ತೆ ಎಲ್ಲ
ನಿಶ್ಶಬ್ದವಾಗಿತ್ತು, ಅದೇ ಬೆಚ್ಚಗಿನ ವಾತಾವರಣ, ಗೆಲುವು, ಮತ್ತದೇ ಗೊಬ್ಬರದ ಬಣ್ಣವಾಗಿದ್ದ
ಬೀದಿ, ಕಿವಿಗೆ ಬೀಳುತ್ತಿದ್ದ ಅವೇ ಹಾಡುಗಳು ಮತ್ತು ನಾಯಿಯ ಬೊಗಳುವಿಕೆ. ಈಗಾಗಲೇ ಕತ್ತಲೆ ಎಷ್ಟು
ಆವರಿಸಿತ್ತೆಂದರೆ, ಕೆಲವು ಕಿಟಕಿಗಳಲ್ಲಿ ದೀಪ ಕಾಣಿಸಿಕೊಂಡಿತ್ತು.
ಹಳ್ಳಿಯ ಮಧ್ಯಭಾಗಕ್ಕೆ ಬಂದಾಗ ವಾಸಿಲಿ ಆಂಡ್ರೆವಿಚ್
ಕುದುರೆಯನ್ನು ಎರಡು ಬಾಗಿಲಿದ್ದ ಇಟ್ಟಿಗೆಯಿಂದ ಕಟ್ಟಿದ್ದ ಮನೆಯ ಕಡೆ ತಿರುಗಿಸಿ ಅದರ ಮುಂದೆ
ನಿಲ್ಲಿಸಿದ.
ಹಿಮದ ಕಾವಳ ಮುಸುಕಿ ಒಳಗಿನಿಂದ ಬರುತ್ತಿದ್ದ ಬೆಳಕಿನಲ್ಲಿ
ಹೊಳೆಯುತ್ತ ತೇಲಾಡುತ್ತಿದ್ದ ಹಿಮದ ಹಳುಕುಗಳು ತುಂಬಿದ ಕಿಟಕಿಯ ಹತ್ತಿರ ಹೋದ ನಿಕಿಟ ಅದರ ಮೇಲೆ
ತನ್ನ ಚಾವಟಿಯಿಂದ ಸದ್ದು ಮಾಡಿದ.
“ಯಾರು?” ಎಂದಿತು ಒಳಗಿನಿಂದ ಸದ್ದಿಗೆ ಉತ್ತರಿಸುತ್ತ.
“ಕ್ರೆಸ್ಟಿಯಿಂದ, ಬ್ರೆಖ್ಯುನೋವ್ ಕುಟುಂಬದವರು, ಕಣಪ್ಪ.
ಒಂದ್ನಿಮಿಷ ಹೊರಗೆ ಬನ್ನಿ” ಎಂದ ನಿಕಿಟ.
ಕಿಟಕಿಯೆಡೆಯಿಂದ ಯಾರೋ ಚಲಿಸಿದಂತಾಯಿತು, ಒಂದೋ ಎರಡೋ
ನಿಮಿಷದ ಬಳಿಕ ನಡುಮನೆಯ ಬಾಗಿಲ ಬಳಿ ಬಂದು ಸಲೀಸಾಗಿ ಬಾಗಿಲು ತೆರೆದಾಗ ತಲೆಬಾಗಿಲ ಒಳಗಿನಿಂದ
ಚಿಲಕ ತೆಗೆದ ಸದ್ದಾಯಿತು. ಬಿಳಿ ಅಂಗಿಯ ಮೇಲೆ ತುಪ್ಪುಳುಗಂಬಳಿ ಹೊದ್ದ ಬಿಳಿಗಡ್ಡದ ಒಬ್ಬ ಮುದುಕ
ಕೈಯಿಂದ ಗಾಳಿಗಡ್ಡಲಾಗಿ ಕದವೊಂದನ್ನು ಹಿಡಿದುಕೊಂಡು ಬಾಗಿಲಿಂದ ಹೊರಬಂದ; ಅವನ ಹಿಂದೆ ಕೆಂಪು
ಅಂಗಿ ತೊಟ್ಟ ಒಬ್ಬ ಹುಡುಗ.
“ಓ, ನೀನಾ ಆಂಡ್ರೆವಿಚ್” ಎಂದು ಕೇಳಿದ ಆ ಮುದುಕ.
“ಹೌದಣ್ಣ, ನಾವು ದಾರಿ ತಪ್ಪಿಬಿಟ್ವಿ! ಗೊರ್ಯಾಶ್ಕಿನ್‍ಗೆ
ಹೋಗಬೇಕೂಂತ ಹೊರಟ್ವಿ, ಆದ್ರೆ ಇಲ್ಲಿಗೆ ಬಂದು ಸೇರಿದ್ವಿ. ಇಲ್ಲಿಂದೇನೋ ಹೊರಟ್ವಿ ಆದ್ರೆ ಮತ್ತೆ
ದಾರಿ ತಪ್ಪಿತು” ಎಂದ ವಾಸಿಲಿ ಆಂಡ್ರೆವಿಚ್.
“ನೋಡಿದ್ರಾ, ಹೇಗೆ ದಾರಿ ತಪ್ಪಿದಿರಿ ಅಂತ! ಪೆಟ್ರುಷ್ಕಾ,
ಹೋಗಿ ಗೇಟ್ ತೆಗಿ!” ಎಂದ ಕೆಂಪು ಅಂಗಿ ತೊಟ್ಟ ಹುಡುಗನ ಕಡೆ ತಿರುಗಿ.
“ಸರಿ” ಎನ್ನುತ್ತ ಲವಲವಿಕೆಯ ಮಾತಾಡಿ ಆ ಹುಡುಗ ಗೇಟ್
ತೆಗೆದು ಮತ್ತೆ ಒಳಕ್ಕೆ ಓಡಿದ.
“ನಾವೇನೂ ರಾತ್ರಿ ಇಲ್ಲೇ ಉಳ್ಕೊಳ್ಳೋದಿಲ್ಲ” ಎಂದ ವಾಸಿಲಿ
ಆಂಡ್ರೆವಿಚ್.
“ಇಷ್ಟು ಹೊತ್ತಲ್ಲಿ ಎಲ್ಲಿಗೆ ಹೋಗ್ತೀರಿ? ರಾತ್ರಿ ಇಲ್ಲೇ
ಇರೋದು ಒಳ್ಳೇದು!”
“ಉಳ್ಕೊಳ್ಳೋದೇನೋ ಸಂತೋಷದ ವಿಷಯವೇ, ಆದ್ರೆ
ಹೋಗ್ಲೇಬೇಕಾಗಿದೆ. ಒಂದು ವ್ಯವಹಾರ, ಅದಕ್ಕೇ ನಿರ್ವಾಹವಿಲ್ಲ.”
“ಸರಿ, ಸ್ವಲ್ಪ ಬೆಚ್ಚಗಾದ್ರೂ ಮಾಡ್ಕೊಳಿ. ಟೀಗೆ ಎಸರು
ಈಗಷ್ಟೇ ಸಿದ್ಧವಾಗಿದೆ.”
“ಬೆಚ್ಚಗೆ ಮಾಡ್ಕೊಳ್ಳೋದಾ? ಸರಿ, ಹಾಗೇ ಆಗಿ.
ಕಗ್ಗತ್ಲೆಯೇನೂ ಆಗೋದಿಲ್ಲ. ಬೆಳುದಿಂಗಳು ಇರತ್ತೆ, ದಾರಿ ಚೆನ್ನಾಗಿ ಕಾಣತ್ತೆ. ಬಾ, ನಿಕಿಟ,
ಒಳ್ಗೆ ಹೋಗೆ ಸ್ವಲ್ಪ ಹಾಯಾಗೋಣ” ಎಂದ ವಾಸಿಲಿ ಆಂಡ್ರೆವಿಚ್.
“ಆಗಬಹುದು. ದೇಹ ಬೆಚ್ಚಗೆ ಮಾಡ್ಕೊಳ್ಳೋಣ” ಎಂದು ನಿಕಿಟ
ಉತ್ತರವಿತ್ತ. ಅವನು ಚಳಿಯಿಂದ ಸೆಡೆತಿದ್ದ, ತನ್ನ ಕೈಕಾಲುಗಳನ್ನು ಬೆಚ್ಚಗೆ ಮಾಡಿಕೊಳ್ಳುವುದು
ಆವಶ್ಯಕವಾಗಿತ್ತು.
ಮುದುಕನ ಜೊತೆ ವಾಸಿಲಿ ಆಂಡ್ರೆವಿಚ್ ಕೋಣೆಯೊಳಕ್ಕೆ ಹೋದ;
ಪೆಟ್ರುಷ್ಕಾ ತೆರೆದಿದ್ದ ಗೇಟ್ ಒಳಕ್ಕೆ ನಿಕಿಟ ಗಾಡಿ ತಂದು ಹುಡುಗ ಹೇಳಿದಂತೆ ಮುಂಚಾವಣಿಯ
ಹತ್ತಿರ ನಿಲ್ಲಿಸಿದ. ನೆಲವೆಲ್ಲ ಗೊಬ್ಬರದಿಂದ ತುಂಬಿತ್ತು. ಕುದುರೆಯ ತಲೆಯ ಮೇಲಿನ ನೀಳವಾದ
ಸರಗುಣಿಕೆ ತೊಲೆಗೆ ಸಿಕ್ಕಿಹಾಕಿಕೊಂಡಿತು, ಕೋಳಿಗಳು ಹುಂಜಗಳು ನಿದ್ದೆಗೆ ತೊಡಗಿದ್ದುವು,
ನಸುಗೋಪದಿಂದ ತೊಲೆಗೆ ತಮ್ಮ ಪಂಜಗಳನ್ನು ಬಿಗಿಗೊಳಿಸಿ ಕ್ಲಕ್‍ಕ್ಲಕ್‍ಗುಟ್ಟಿದುವು. ಕ್ಷೋಭೆಗೊಂಡ
ಕುರಿಗಳು ಸಂಕೋಚಗೊಂಡು ಗಟ್ಟಿಯಾದ ಗೊಬ್ಬರದ ಮೇಲೆ ಗೊರಸು ಮೆಟ್ಟಿ ಪಕ್ಕಕ್ಕೆ ಸರಿದುವು. ನಾಯಿ
ಕೋಪ ಭಯಗಳಿಂದ ಒಂದೇ ಸಮನೆ ಗುರುಗುಟ್ಟುತ್ತ ಪುಟ್ಟ ಮರಿಯ ಹಾಗೆ ಕ್ಷೀಣವಾಗಿ ಬೊಗಳತೊಡಗಿತು.
ನಿಕಿಟ ಅವುಗಳೆಲ್ಲದರ ಜೊತೆ ಮಾತಾಡಿದ, ಕ್ಷಮೆ ಕೇಳಿದ,
ಹೆಚ್ಚು ತೊಂದರೆ ಕೊಡುವುದಿಲ್ಲವೆಂದು ಆಶ್ವಾಸನೆಯಿತ್ತು, ಕಾರಣವಿಲ್ಲದೆ ಭಯಗೊಂಡ ಕುರಿಗಳನ್ನು
ಝಂಕಿಸಿ, ನಾಯಿಯನ್ನು ಸಮಾಧಾನಪಡಿಸಿ ಕುದುರೆಯನ್ನು ಕಟ್ಟಿ ಹಾಕಿದ.
“ಈಗ ಸರಿಹೋಯ್ತು” ಎನ್ನುತ್ತ ತನ್ನ ಬಟ್ಟೆಗಳ ಮೇಲಿದ್ದ
ಹಿಮವನ್ನು ಜಾಡಿಸಿಕೊಂಡ. “ನೋಡು ಹೇಗೆ ಬೊಗಳತ್ತೆ” ಎಂದ ನಾಯಿಯ ಕಡೆ ತಿರುಗಿ. “ಸಮ್ನಿರು,
ಮುಂಡೇದೆ, ಯಾವ ಪ್ರಯೋಜನವೂ ಇಲ್ದೆ ಕಷ್ಟಪಡ್ತಿದ್ದೀ. ನಾವೇನು ಕಳ್ಳರಲ್ಲ, ಸ್ನೇಹಿತ್ರು .. ..”
“ಇವು ಮೂರೂ ಮನೆಗೆ ಬುದ್ಧಿ ಹೇಳೋರು ಅಂತಾರೆ” ಎಂದ ಹುಡುಗ.
ನಿಕಿಟ ಹೊರಗಿದ್ದ ಜಾರುಬಂಡಿಯನ್ನು ತನ್ನ ಬಲಿಷ್ಠ ತೋಳುಗಳಿಂದ ಮುಂಚಾವಣಿಯ ಕೆಳಗೆ ದಬ್ಬಿದ.
“ಅದು ಹ್ಯಾಗೆ ಬುದ್ಧಿ ಹೇಳೋದು?” ಎಂದು ಕೇಳಿದ ನಿಕಿಟ.
“ಹಾಗಂತ ಪುಸ್ತಕದಲ್ಲಿ ಪ್ರಿಂಟಾಗಿದೆ. ಕಳ್ಳ ಮನೆ ಒಳಕ್ಕೆ
ನುಗ್ಗಿದರೆ, ‘ಎಚ್ಚರವಾಗಿರು’ ಅಂತ ನಾಯಿ ಬೊಗಳತ್ತೆ; ‘ಎದ್ದೇಳು, ಮನೆಗೊಬ್ಬ ಬೇಕಾದ ಅತಿಥಿ
ಬರ್ತಿದಾನೆ, ಬರಮಾಡಿಕೊಳ್ಳಕ್ಕೆ ಸಿದ್ಧನಾಗು’ ಅಂತ ಕೋಳಿ ಕೂಗತ್ತೆ” ಎಂದ ಹುಡುಗ ಮುಗುಳ್ನಗುತ್ತ.
ಪೆಟ್ರುಷ್ಕನಿಗೆ ಓದುವುದು ಬರೆಯುವುದು ಗೊತ್ತಿತ್ತು,
ಶಾಲೆಯಲ್ಲಿ ಇರಿಸಿದ್ದ ಒಂದೇ ಪುಸ್ತಕವಾದ ಪೌಲ್‍ಸನ್ ಪಠ್ಯವನ್ನು ಗಟ್ಟಿಮಾಡಿಕೊಂಡಿದ್ದ; ಸಮಯ
ಸಿಕ್ಕಾಗಲೆಲ್ಲ ಸರಿಯಾದ ಮಾತುಗಳನ್ನು ಅಲ್ಲಿಂದ ತೆಗೆದು ಹೇಳುವುದು ಅಂದರೆ ಅವನಿಗಿಷ್ಟ, ಅದರಲ್ಲೂ
ಕುಡಿಯುವುದಕ್ಕೆ ಏನಾದರೂ ಇವತ್ತಿನ ಹಾಗೆ ಸಿಕ್ಕಿದ ಸಂದರ್ಭದಲ್ಲಿ.
“ಹೌದ್ಹೌದು” ಎಂದ ನಿಕಿಟ.
“ನಿಮಗೆ ತುಂಬ ಚಳಿಯಾಗ್ತಿರ್ಬೇಕು” ಪೆಟ್ರುಷ್ಕ ಕೇಳಿದ.
“ನಿಜ, ಹಾಗೇ ಆಗ್ತಿದೆ” ಎಂದ ನಿಕಿಟ. ಆಮೇಲೆ ಅವರು
ಅಂಗಳವನ್ನು ದಾಟಿ ಮನೆಯೊಳಕ್ಕೆ ಹೋದರು.
4
ವಾಸಿಲಿ ಆಂಡ್ರೆವಿಚ್ ಬಂದಿದ್ದ ಮನೆ ಹಳ್ಳಿಯ
ಸಿರಿವಂತ ಮನೆಗಳಲ್ಲೊಂದು. ಈ ಕುಟುಂಬಕ್ಕೆ ಐದು ಹಿಡುವಳಿಗಳಿದ್ದುವು, ಜೊತೆಗೆ ಗುತ್ತಿಗೆ
ನೀಡಿದ್ದ ಕೆಲವು ಹೊಲಗಳು. ಅವರ ಬಳಿ ಆರು ಕುದುರೆಗಳು, ಮೂರು ಹಸುಗಳು, ಎರಡು ಕರುಗಳು ಹಾಗೂ
ಸುಮಾರು ಇಪ್ಪತ್ತು ಕುರಿಗಳೂ ಇದ್ದುವು. ಈ ಸಂಸಾರದಲ್ಲಿ ಇಪ್ಪತ್ತೆರಡು ಮಂದಿಯಿದ್ದರು: ನಾಲ್ಕು
ಮಂದಿ ಮದುವೆಯಾಗಿದ್ದ ಗಂಡು ಮಕ್ಕಳು, ಆರು ಮೊಮ್ಮಕ್ಕಳು (ಅವರಲ್ಲೊಬ್ಬ ಪೆಟ್ರುಷ್ಕ,
ಮದುವೆಯಾಗಿದ್ದವನು), ಇಬ್ಬರು ಮರಿಮಕ್ಕಳು, ಮೂರು ಮಂದಿ ಅನಾಥರು ಮತ್ತು ಮೂವರು ಕೂಸುಗಳನ್ನು
ಹೊಂದಿದ್ದ ನಾಲ್ವರು ಸೊಸೆಯಂದಿರು. ಇನ್ನೂ ಒಡೆಯದಿದ್ದ ಅವಿಭಕ್ತ ಕುಟುಂಬಗಳಲ್ಲಿ ಅದೂ ಒಂದು,
ಆದರೆ ಇಲ್ಲಿಯೂ ಮುಂದೊಂದು ದಿನ ವಿಘಟನೆಗೆ ಕಾರಣವಾಗಬಹುದಾದ ಬಿರುಕುಗಳು ಕಾಣಿಸಿಕೊಂಡಿದ್ದುವು,
ಅದರ ಮೂಲ ಹೆಣ್ಣುಮಕ್ಕಳೇ, ಎಂದಿನಂತೆ. ಇಬ್ಬರು ಗಂಡುಮಕ್ಕಳು ಮಾಸ್ಕೋದಲ್ಲಿದ್ದರು, ಸರಕನ್ನು
ನೀರಸಾಗಣೆ ಮಾಡುವವರಾಗಿ; ಒಬ್ಬ ಸೈನ್ಯದಲ್ಲಿದ್ದ. ಸದ್ಯ ಮನೆಯಲ್ಲಿದ್ದವರೆಂದರೆ ಮುದುಕ, ಅವನ
ಹೆಂಡತಿ, ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಅವರ ಎರಡನೆಯ ಮಗ, ರಜೆಗಾಗಿ ಮಾಸ್ಕೋದಿಂದ
ಬಂದಿದ್ದ ಹಿರಿಯ ಮಗ, ಮಿಕ್ಕ ಹೆಂಗಸರು ಮತ್ತು ಮಕ್ಕಳು. ಕುಟುಂಬದ ಇವರಲ್ಲದೆ, ಮಕ್ಕಳಲ್ಲಿ
ಒಬ್ಬನಿಗೆ ಗಾಡ್ದರ್ ಆಗಿದ್ದ ನೆರೆಯ ಸಂದರ್ಶಕನೊಬ್ಬನೂ ಇದ್ದ.
ಕೋಣೆಯ ಮೇಜಿನ ಮೇಲೆ ಮುಸುಕಿದ್ದ ಒಂದು ದೀಪ
ನೇತಾಡುತ್ತಿತ್ತು, ಅದರಡಿ ಟೀಗೆ ಸಂಬಂಧಿದಿದ ವಸ್ತುಗಳ ಮೇಲೆ ಬೆಳಕು ಚೆಲ್ಲಿತ್ತು. ಒಂದು ವೋಡ್ಕಾ
ತುಂಬಿದ ಸೀಸೆ, ಮತ್ತು ಕೆಲವು ತಿನಿಸುಗಳು. ಇಟ್ಟಿಗೆ ಗೋಡೆಗಳನ್ನಲ್ಲದೆ, ದೂರದ ಮೂಲೆಯಲ್ಲಿ ನೇತು
ಹಾಕಿದ್ದ ವಿಗ್ರಹ ಮತ್ತದರ ಬದಿಗಳಲ್ಲಿದ್ದ ಚಿತ್ರಗಳ ಮೇಲೂ ಬೆಳಕು ಬಿದ್ದಿತ್ತು. ಮೇಜಿನ
ಮುಂಭಾಗದಲ್ಲಿ ಕಪ್ಪು ತುಪ್ಪುಳುಗಂಬಳಿ ಹೊದ್ದ ವಾಸಿಲಿ ಆಂಡ್ರೆವಿಚ್ ಕೂತ, ತನ್ನ ಹಿಮಗಟ್ಟಿದ
ಮೀಸೆಯನ್ನು ಕಡಿಯುತ್ತ, ಸುತ್ತಲೂ ತನ್ನ ದೊಡ್ಡ ಹದ್ದಿನಂತಹ ಕಣ್ಣುಗಳನ್ನು ಹಾಯಿಸುತ್ತ. ಅವನ
ಪಕ್ಕದಲ್ಲಿ ಮನೆಯ ಯಜಮಾನನಾದ ಬಕ್ಕತಲೆಯ ಬಿಳಿಗಡ್ಡದ, ಮನೆಯಲ್ಲೇ ನೂತ ಅಂಗಿ ತೊಟ್ಟ, ಮುದುಕ ಕೂತ.
ಅವನ ಪಕ್ಕ ಕೂತವನು ಮಾಸ್ಕೋದಿಂದ ರಜೆಗೆಂದು ಬಂದಿದ್ದ ಅವನ ಮಗ, ತೆಳುವಾದ ಪ್ರಿಂಟೆಡ್ ಅಂಗಿ
ತೊಟ್ಟಿದ್ದ ಬಲಿಷ್ಠ ಬೆನ್ನು ವಿಶಾಲವಕ್ಷದ ಯುವಕ. ಆಮೇಲೆ ಎರಡನೆಯ ಮಗ, ಅವನ ಭುಜಗಳೂ
ಹರವಾಗಿದ್ದವು, ಈಗ ಮನೆಯ ವ್ಯವಹಾರ ನಿಭಾಯಿಸುತ್ತಿದ್ದವನು. ಆ ಬಳಿಕ ಕೂತಿದ್ದವನು ತೆಳುವಾದ
ಕೆಂಚು ಕೂದಲ ರೈತ, ನೆರೆಯವನು.
ವೋಡ್ಕ ಕುಡಿದು ಏನೋ ಒಂದಷ್ಟು ತಿಂದು, ಇನ್ನೇನು
ಟೀ ತೆಗೆದುಕೊಳ್ಳುವುದರಲ್ಲಿದ್ದರು, ಪಕ್ಕದಲ್ಲೇ ನೆಲದ ಮೇಲಿನ ಅಗ್ಗಿಷ್ಟಿಕೆಯ ಪಕ್ಕದಲ್ಲಿ ಹಬೆ
ಸೂಸುತ್ತಿದ್ದ ಟೀ ಎಸರಿನ ಪಾತ್ರೆಯಿತ್ತು. ಅಗ್ಗಿಷ್ಟಿಕೆಯ ಜಾಗದ ಮೇಲ್ಭಾಗದ ಅಟ್ಟದ ಮೇಲೆ ಮಕ್ಕಳು
ಕೂತಿರುವುದು ಕಾಣಿಸುತ್ತಿತ್ತು. ಕೆಳ ಅಟ್ಟದಲ್ಲಿ ಒಬ್ಬ ಹೆಂಗಸು ತೊಟ್ಟಿಲೊಂದರ ಪಕ್ಕ
ಕೂತಿದ್ದಳು. ಮುಖದ ತುಂಬ ಅಲ್ಲದೆ ತುಟಿಗಳೂ ಸುಕ್ಕುಗಟ್ಟಿದ್ದ ಮುದಿ ತಾಯಿ ವಾಸಿಲಿ ಆಂಡೆವಿಚ್‍ಗೆ
ಬಡಿಸುತ್ತಿದ್ದಳು.
ನಿಕಿಟ ಮನೆಯೊಳಗೆ ಪ್ರವೇಶಿಸಿದಾಗ ಆಕೆ ವೋಡ್ಕ
ತುಂಬಿದ ದಪ್ಪ ಗಾಜಿನ ಬಟ್ಟಲನ್ನು ಅತಿಥಿಗೆ ನೀಡುತ್ತಿದ್ದಳು.
“ಬೇಡ ಅನ್ನಬೇಡಿ, ವಾಸಿಲಿ ಆಂಡ್ರೆವಿಚ್,
ತಗೊಳ್ಳಲೇಬೇಕು! ಹಬ್ಬ ಸಂತೋಷ ತರಲಿ, ಕುಡಿಯಿರಿ” ಎಂದಳು.
ವೋಡ್ಕ ಕಂಡದ್ದು ಮತ್ತದರ ವಾಸನೆ, ಅದೂ ತನಗೆ ಚಳಿ ಹತ್ತಿ
ದಣಿದಿರುವಾಗ, ನಿಕಿಟನ ಮನಸ್ಸನ್ನು ಕಲಕಿತು. ಮುಖ ಗಂಟುಹಾಕಿಕೊಂಡು ತನ್ನ ಟೋಪಿ ಮತ್ತು ಕೋಟಿನ
ಮೇಲಿದ್ದ ಹಿಮವನ್ನು ಕೊಡವಿ, ಯಾರನ್ನೂ ಗಮನಿಸದವನಂತೆ ವಿಗ್ರಹದ ಪಕ್ಕ ಹೋಗಿ ನಿಂತು, ಎದೆಯ ಮೇಲೆ
ಮೂರು ಬಾರಿ ಶಿಲುಬೆಯಾಕಾರ ಮಾಡಿಕೊಂಡು ತಲೆಬಾಗಿದ. ಆಮೇಲೆ, ಮನೆಯ ಯಜಮಾನನ ಕಡೆ ತಿರುಗಿ ಅವನಿಗೆ
ಮೊದಲು ತಲೆಬಾಗಿ, ಆಮೇಲೆ ಮೇಜಿನ ಮುಂದೆ ಕೂತಿದ್ದವರಿಗೆಲ್ಲ ವಂದಿಸಿದ; ಆಮೇಲೆ ಅಗ್ಗಿಷ್ಟಿಕೆಯ
ಪಕ್ಕದಲ್ಲಿ ‘ಹಬ್ಬ ಹರುಷ ತರಲಿ” ಎಂದು ಹೇಳುತ್ತಿದ್ದ ಹೆಂಗಸರಿಗೆ ಬಾಗಿ ವಂದಿಸಿ, ಮೇಜಿನ ಕಡೆ
ನೋಡದೆ ಹೊದ್ದಿದ್ದ ಬಟ್ಟೆಗಳನ್ನು ತೆಗೆಯಲು ತೊಡಗಿದ.
“ಮೈಮೇಲೆಲ್ಲ ಬಿಳಿ ಮಂಜು ಕೂತಿದೆಯಲ್ಲ!” ಎಂದ ಹಿರಿಯ ಮಗ,
ನಿಕಿಟನ ಮುಖ, ಗಡ್ಡ, ಕಣ್ಣುಗಳ ಕಡೆ ನೋಡುತ್ತ.
ನಿಕಿಟ ತನ್ನ ಕೋಟನ್ನು ತೆಗೆದು, ಮತ್ತೆ ಒದರಿ,
ಅಗ್ಗಿಷ್ಟಿಕೆ ಮೇಲೆ ತೂಗುಹಾಕಿ ಮೇಜಿನ ಬಳಿ ಬಂದ. ಅವನಿಗೂ ವೋಡ್ಕ ಕೊಟ್ಟರು. ಒಂದು ಕ್ಷಣ
ಅವನಲ್ಲಿ ನೋವು ತುಂಬಿದ ಹಿಂಜರಿಕೆ ಕಾಣಿಸಿತು; ಬಟ್ಟಲನ್ನು ಮೇಲೆತ್ತಿ ತಿಳಿಯಾದ ಸುವಾಸಿತ
ಪಾನೀಯವನ್ನು ಗಂಟಲಿಗಿಳಿಸಬೇಕೆಂಬಷ್ಟರಲ್ಲಿ ವಾಸಿಲಿ ಆಂಡ್ರೆವಿಚ್ ಕಡೆಗೆ ದೃಷ್ಟಿ ಬೀರಿ, ತನ್ನ
ಪ್ರತಿಜ್ಞೆಯನ್ನು ನೆನಪಿಸಿಕೊಂಡ, ಕುಡಿತಕ್ಕಾಗಿ ತನ್ನ ಷೂಗಳನ್ನು ಮಾರಿದ್ದುದೂ ನೆನಪಾಯಿತು,
ಚಿಲ್ಲರೆ ಸಾರಾಯಿ ಮಾರಾಟಗಾರ ಮನಸ್ಸಿನಲ್ಲಿ ಸುಳಿದುಹೋದ, ಬೇಸಿಗೆ ಹೊತ್ತಿಗೆ ಕುದುರೆಯೊಂದನ್ನು
ತೆಗೆದುಕೊಡುವುದಾಗಿ ತಾನು ಮಾತು ಕೊಟ್ಟಿದ್ದ ಮಗನ ನೆನಪು ಬಂತು; ನಿಟ್ಟುಸಿರುಬಿಟ್ಟು, ವೋಡ್ಕ
ಬೇಡವೆಂದ.
“ನಾನು ಕುಡಿಯೋದಿಲ್ಲ, ನಿಮ್ಮ ಒಳ್ಳೆತನಕ್ಕೆ ನಮಸ್ಕಾರ”
ಎಂದ ಮುಖ ಗಂಟಿಕ್ಕಿಕೊಂಡು, ಆಮೇಲೆ ಎರಡನೆಯ ಕಿಟಕಿಯ ಬಳಿಯಿದ್ದ ಬೆಂಚಿನ ಮೇಲೆ ಹೋಗಿ ಕೂತ.
“ಯಾಕೆ?” ಎಂದ ಹಿರಿಯ ಸೋದರ.
“ನಾನು ಕುಡಿಯೋದಿಲ್ಲ” ಎಂದ ನಿಕಿಟ ತನ್ನ ಮುಖವನ್ನು
ಮೇಲೆತ್ತದೆ, ತನ್ನ ಗಡ್ಡ ಮೀಸೆಗಳ ಕಡೆ ಕುಡಿನೋಟ
ಬೀರಿ,
ಅವುಗಳ ಮೇಲೆದ್ದ ಹಿಮದ ಹಳುಕುಗಳನ್ನು ತೆಗೆದುಹಾಕುತ್ತ.
“ಅವನಿಗೆ ಅದು ಸರಿಹೋಗಲ್ಲ” ಎಂದ ವಾಸಿಲಿ
ಆಂಡ್ರೆವಿಚ್ ತನ್ನ ಬಟ್ಟಲಿನ ಪಾನೀಯ ಮುಗಿಸಿ ಕುರುಕುಲು ತಿಂಡಿ ಮೆಲ್ಲತ್ತ.
“ಸರಿ, ಸ್ವಲ್ಪ ಟೀ ತಗೋ ಹಾಗಾದ್ರೆ, ಮೈಗೆ ಚಳಿ
ಹತ್ತಿರಬೇಕು. ಇನ್ನೂ ಪಾತ್ರೇಲಿ ನೀರು ಕುದ್ದಿಲ್ವಾ?” ಎಂದಳು ಮಿದು ಹೃದಯದ ಮನೆಯೊಡತಿ.
“ರೆಡಿಯಾಯ್ತು” ಎಂದಳು ಯುವತಿಯರಲ್ಲಿ ಒಬ್ಬಳು.
ತನ್ನ ಮೇಲುವಸ್ತ್ರದಿಂದ ಕುದಿಯುತ್ತಿದ್ದ ನೀರಿದ್ದ ಪಾತ್ರೆಯನ್ನು ಕೆಳಗಿಳಿಸಿ ಕಷ್ಟದಿಂದಲೇ
ಅದನ್ನು ತಂದು ಮೇಜಿನ ಮೇಲಿಟ್ಟಳು.
ಈ ಮಧ್ಯೆ, ತಾವು ಹೇಗೆ ದಾರಿ ತಪ್ಪಿದ್ದು, ಈ ಹಳ್ಳಿಗೆ
ಎರಡು ಸಲ ಬಂದದ್ದು, ದಾರಿಯಲ್ಲಿ ಕುಡುಕ ರೈತರು ಎದುರಾದದ್ದು - ಎಲ್ಲವನ್ನೂ ವಾಸಿಲಿ ಆಂಡ್ರೆವಿಚ್
ವಿವರಿಸುತ್ತಿದ್ದ. ಮನೆಯವರಿಗೆ ಆಶ್ಚರ್ಯವಾಯಿತು, ಅವರೆಲ್ಲಿ ದಾರಿ ತಪ್ಪಿದ್ದು, ಅದು ಹೇಗಾಯ್ತು,
ಆ ಅಮಲೇರಿದ್ದ ರೈತರು ಯಾರು ಎಂದೆಲ್ಲ ಹೇಳಿ ಅವರು ಮುಂದೆ ಯಾವ ದಾರಿಯಲ್ಲಿ ಮುಂದುವರಿಯಬೇಕು
ಅನ್ನುವುದನ್ನು ವಿವರಿಸಿದರು.
“ಇಲ್ಲಿಂದ ಒಂದು ಸಣ್ಣ ಮಗುವಾದರೂ ಮೊಲ್ಶನೋವ್ಕಾಗೆ ದಾರಿ
ತೋರ್ಸತ್ತೆ. ನೀವು ಮಾಡಬೇಕಾದ್ದಿಷ್ಟೇ: ದೊಡ್ಡದಾರಿಯಲ್ಲಿ ಬಲಕ್ಕೆ ತಿರುಗಿ; ಅಲ್ಲೊಂದು ಪೊದೆ
ಇದೆ; ನೀವು ಅಲ್ಲೀವರೆಗೆ ಕೂಡ ಹೋಗಿರ್ಲಿಲ್ಲಾಂತ ಕಾಣತ್ತೇ” ಎಂದ ನೆರೆಮನೆಯವನು.
“ಇವತ್ತು ರಾತ್ರಿ ಇಲ್ಲೇ ಇರೋದು ವಾಸಿ. ನಿಮಗಾಗಿ ಮನೆ
ಹೆಂಗಸರು ಹಾಸಿಗೆಗಳನ್ನು ಸಿದ್ಧಪಡಿಸಿಕೊಡ್ತಾರೆ” ಎಂದಳು ಯಜಮಾನಿತಿ ಮನವೊಲಿಕೆಯ ರೀತಿಯಲ್ಲಿ.
“ಬೆಳಿಗ್ಗೆ ಎದ್ದ ತಕ್ಷಣವೇ ಹೋಗ್ಬಹುದು, ಆಗ ವಾತಾವರಣ
ಹಿತವಾಗಿರತ್ತೆ” ಎಂದ ಮುದುಕ, ತನ್ನ ಹೆಂಡತಿ ಹೇಳಿದ ಮಾತನ್ನು ಅನುಮೋದಿಸುತ್ತ.
“ಇಲ್ಲ ಮಾರಾಯರೇ, ಬಹಳ ಮುಖ್ಯವಾದ ವ್ಯವಹಾರ! ಒಂದು ಗಂಟೆ
ತಡವಾದ್ರೆ ಒಂದು ವರ್ಷವಾದ್ರೂ ಸರಿಪಡಿಸೋದಕ್ಕಾಗಲ್ಲ” ಎಂದ ವಾಸಿಲಿ ಆಂಡ್ರೆವಿಚ್, ಅವನ
ಮನಸ್ಸಲ್ಲಿ ತೋಪು ಮತ್ತದನ್ನು ಕಬಳಿಸಲು ಪ್ರಯತ್ನಿಸುತ್ತಿದ್ದ ವ್ಯಾಪಾರಿಗಳು ಸುಳಿದುಹೋದರು.
“ಈಗಲೇ ಅಲ್ಲಿಗೆ ಹೊರಟುಬಿಡ್ತೀವಿ, ಆಗದೇ?” ಎಂದ ನಿಕಿಟನ ಕಡೆ ತಿರುಗಿ.
ನಿಕಿಟ ಸ್ವಲ್ಪ ಹೊತ್ತು ಉತ್ತರಿಸಲಿಲ್ಲ, ತನ್ನ
ಗಡ್ಡಮೀಸೆಗಳನ್ನಾವರಿಸಿದ್ದ ಹಳುಕುಗಳನ್ನು ತೆಗೆಯುತ್ತ.
“ಇನ್ನೊಂದು ಸಲ ದಾರಿ ತಪ್ಪದಿದ್ರೆ ಆಗ್ಬಹುದು” ಎಂದ
ನಿರುತ್ಸಾಹಿತನಾಗಿ.
ಅವನು ನಿರುತ್ಸಾಹಿತನಾಗಲು ಕಾರಣ ಮನಸ್ಸು ಒಂದಷ್ಟು
ವೋಡ್ಕಕ್ಕಾಗಿ ಹಂಬಲಿಸುತ್ತಿದ್ದುದು. ಅದನ್ನು ಅಡಗಿಸಬಲ್ಲದ್ದು ಅಂದರೆ ಟೀ, ಇನ್ನೂ ಅವನಿಗೆ ಟೀ
ಕೊಟ್ಟಿರಲಿಲ್ಲ.
“ನಾವು ಆ ತಿರುವನ್ನು ತಲುಪಬೇಕು ಅಷ್ಟೆ, ಆಮೇಲೆ ದಾರಿ
ತಪ್ಪಕ್ಕೆ ಸಾಧ್ಯವೇ ಇಲ್ಲ. ಆಮೇಲೆ ರಸ್ತೆ ಪೂರ್ತಿ ಕಾಡಿನ ಮಧ್ಯೆ ಹಾದು ಹೋಗತ್ತೆ” ಎಂದ ವಾಸಿಲಿ
ಆಂಡ್ರೆವಿಚ್.
“ನಿಮ್ಮಿಷ್ಟ ಇದ್ದ ಹಾಗೆ ಆಗ್ಲಿ, ಯಜಮಾನ್ರೇ.
ಹೋಗಲೇಬೇಕಾದ್ರೆ ಹೊರಟುಬಿಡೋಣ.” ಎಂದ ನಿಕಿಟ ತನಗೆ ಈ ಹೊತ್ತಿಗೆ ಕೊಟ್ಟದ್ದ ಟೀ ಬಟ್ಟಲನ್ನು
ಬಾಯಿಗಿರಿಸಿಕೊಳ್ಳುತ್ತ.
“ಟೀ ಕುಡಿದು ಹೊರಟುಬಿಡೋಣ.”
ನಿಕಿಟ ಬೇರೇನೂ ಹೇಳದೆ ತನ್ನ ತಲೆಯಾಡಿಸಿದ. ಬಹು
ಎಚ್ಚರಿಕೆಯಿಂದ ಒಂದಷ್ಟು ಟೀಯನ್ನು ಸಾಸರ್‍ಗೆ ಬಸಿದುಕೊಂಡು ತನ್ನ ಕೈಗಳನ್ನು ಆವಿಯ ಮೇಲೆ
ಹಿಡಿದುಕೊಂಡು ಬಿಸಿಪುಗೊಳಿಸಿಕೊಂಡ; ಅವನ ಕೈಬೆರಳುಗಳು ದುಡಿಮೆಯಿಂದ ಊದಿಕೊಂಡಿದ್ದವು. ಆಮೇಲೆ
ಒಂದು ತುಂಡು ಸಕ್ಕರೆಯನ್ನು ಕಚ್ಚಿಕೊಂಡು, ಆತಿಥೇಯರ ಕಡೆ ತಿರುಗಿ “ನಿಮಗೆ ಒಳ್ಳೆಯದಾಗಲಿ” ಎಂದು
ಹಬೆಯಾಡುತ್ತಿದ್ದ ಪಾನೀಯವನ್ನು ಗುಟುಕರಿಸಿದ.
“ಯಾರಾದ್ರೂ ಆ ತಿರುವಿನವರೆಗೆ ಬಂದಿದ್ರೆ ಚೆನ್ನಾಗಿತ್ತು”
ಎಂದ ವಾಸಿಲಿ ಆಂಡ್ರೆವಿಚ್.
“ಆಗ್ಬಹುದು, ಅದಕ್ಕೇನಂತೆ. ಪೆಟ್ರುಷ್ಕ ನಿಮ್ಮ ಜತೆ
ಅಲ್ಲೀವರೆಗೂ ಬರ್ತಾನೆ, ಬಿಡಿ” ಎಂದ ಹಿರಿಯ ಮಗ.
“ಸರಿ ಹಾಗಾದ್ರೆ, ಕುದುರೇನ ಗಾಡಿಗೆ ಹೂಡು ಮರಿ,
ಅದಕ್ಕಾಗಿ ಕೃತಜ್ಞನಾಗಿರ್ತೀನಿ ನಿಂಗೆ.”
“ಓ, ಅದೆಲ್ಲ ಏನು ಮಹಾ ಬಿಡಿ, ಆ ಕೆಲಸಾನ
ಸಂತೋಷವಾಗಿ ಮಾಡ್ತಾನೆ” ಎಂದಳು ಆ ಕರುಣಾಮಯಿ ಹೆಂಗಸು.
“ಪೆಟ್ರುಷ್ಕ, ಹೋಗು, ಕುದುರೆ ಹೂಡು” ಎಂದ
ಹಿರಿಯಣ್ಣ.
“ಸರಿ” ಎಂದ ಪೆಟ್ರುಷ್ಕ ಮುಗುಳ್ನಗೆಯೊಂದಿಗೆ;
ಸರ್ರನೆ ಮೊಳೆಗೆ ಸಿಕ್ಕಿಸಿದ್ದ ತನ್ನ ಟೋಪಿಯನ್ನು ತೆಗೆದುಕೊಂಡು ಗಾಡಿ ಕಟ್ಟಲು ಹೋದ.
ಕುದುರೆಯನ್ನು ಸಿದ್ಧಪಡಿಸುತ್ತಿರುವಾಗ ಇವರ ಮಾತು
ವಾಸಿಲಿ ಆಂಡ್ರೆವಿಚ್ ಕಿಟಕಿಯವರೆಗೆ ಬಂದಾಗ ನಿಂತಿದ್ದ ಕಡೆಗೇ ಮರಳಿತ್ತು. ಮುದುಕ ಊರ ಹಿರಿಯನಾದ
ನೆರೆಯವನಿಗೆ ತಮ್ಮ ಮೂರನೇ ಮಗನ ಹೆಂಡತಿಗೆ ತಾನು ಒಂದು ಫ಼್ರೆಂಚ್ ಶಾಲನ್ನು
ಕಳಿಸಿದ್ದರೂ ಅವನು ಮಾತ್ರ ಈ ಹಬ್ಬಕ್ಕೆ ತನಗೇನೂ ಕಳಿಸದ ಬಗ್ಗೆ ದೂರುತ್ತಿದ್ದ.
“ಈಗಿನ ಕಾಲದ ಮಕ್ಕಳು ತಂದೆತಾಯಿಗಳ ಕೈಗೇ
ಸಿಕ್ಕೋದಿಲ್ಲ” ಎಂದ ಮುದುಕ.
“ಅಲ್ದೆ ಅವರು ಇರೋದು ಹೇಗೆ! ಅವರನ್ನು
ಹಿಡಿಯೋಕ್ಕೆ ಆಗಲ್ಲ! ಅವರಿಗೆ ಎಲ್ಲ ಗೊತ್ತು. ಆ ಡೆಮೋಚ್ಕಿನ್ ಅವರಪ್ಪನ ತೋಳನ್ನೇ ಮುರಿದ. ಬಹಳ
ಜಾಣರಾಗಿರೋದ್ರಿಂದ ಹೀಗೋ ಏನೋ.”
ನಿಕಿಟ ಎಲ್ಲವನ್ನೂ ಕೇಳಿಸಿಕೊಂಡ, ಅವರ ಮುಖಗಳನ್ನು
ಗಮನಿಸಿದ, ಅವರ ಮಾತುಕತೆಯಲ್ಲಿ ತಾನೂ ಸೇರಿಕೊಳ್ಳಬೇಕೆಂಬ ತವಕ ಉಂಟಾಯಿತು, ಆದರೆ ಟೀ
ಕುಡಿಯೋದ್ರಲ್ಲಿ ಅವನು ನಿರತನಾಗಿಬಿಟ್ಟಿದ್ದ, ಹೀಗಾಗಿ ಬರೀ ತಲೆಯಲ್ಲಾಡಿಸಿ ಅವರ ಮಾತುಗಳಿಗೆ
ಒಪ್ಪಿಗೆ ಕೊಟ್ಟ. ಒಂದಾದ ಮೇಲೊಂದು ಬಟ್ಟಲು ಟೀಯನ್ನು ಬರಿದುಮಾಡಿ ಮೈಯನ್ನೆಲ್ಲ ಬಿಸಿಪುಗೊಳೊಸಿಕೊಂಡ,
ಈಗವನಿಗೆ ಆರಾಮ ಅನ್ನಿಸಿತು. ಅದೇ ವಿಷಯದ ಬಗ್ಗೆ –
ಒಡೆದ ಸಂಸಾರಗಳಿಂದಾಗುವ ಹಾನಿ - ಮಾತು ಬಹಳ ಹೊತ್ತು ಮುಂದುವರಿಯಿತು. ಅದೇನೂ ತಲೆಬುಡ ಇಲ್ಲದ
ಮಾತುಕತೆಯಾಗಿರಲಿಲ್ಲ, ಮನೆ ಒಡೆದುಹೋಗುವ ಪ್ರಶ್ನೆ ಅದು. ಬೇರೆ ಮನೆ ಮಾಡುವ ಒತ್ತಾಯ ಹಾಕಿದ್ದ
ಎರಡನೇ ಮಗ ಮುಖ ಕೆಳಗೆ ಹಾಕಿಕೊಂಡು ಮಾತನ್ನಾಡದೆ ಅಲ್ಲೇ ಕುಳಿತಿದ್ದ.
ಆ ಕಹಿ ವಿಷಯ ಎಲ್ಲರನ್ನೂ ಆವರಿಸಿತ್ತು, ಆದರೆ
ಮನೆಯ ಮರ್ಯಾದೆಯ ಕಾರಣದಿಂದಾಗಿ ಅವರು ಯಾರೂ ಹೊರಗಿನವರ ಮುಂದೆ ಆ ವಿಷಯ ಹೆಚ್ಚು ಚರ್ಚೆ
ಮಾಡಲಿಲ್ಲ. ಆದರೂ ಆ ಮುದುಕ ತಡೆದುಕೊಳ್ಳಲಾಗದೆ, ಕಣ್ಣಲ್ಲಿ ನೀರನ್ನು ತುಂಬಿಕೊಂಡು, ತಾನು
ಬದುಕಿರುವವರೆಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಮ್ಮ ಮನೆ ಒಡೆಯುವುದಕ್ಕೆ ಅವಕಾಶ
ಕೊಡುವುದಿಲ್ಲವೆಂದು ಹೇಳಿ, ಬೇರೆಯೇ ಆದರೆ, ಅವರೆಲ್ಲ ಬೀದಿಯಲ್ಲಿ ಭಿಕ್ಷೆ ಬೇಡುವಂತಾಗುತ್ತದೆಂದು
ನುಡಿದ.
“ಮಾಟ್ವೀವ್ ಮನೆ ಆಯ್ತಲ್ಲ ಹಾಗೇನೇ ನಮಗೂ ಆಗತ್ತೆ;
ಎಲ್ಲ ಒಡೆದುಹೋಗಿದಾರೆ, ಯಾರ ಹತ್ರವೂ ಏನೂ ಉಳಿದಿಲ್ಲ” ಎಂದ ನೆರೆಯವನು.
“ನಮಗೂ ಹೀಗೇ ಆಗ್ಬೇಕೂನ್ನೋದೇನಪ್ಪ ನಿನ್ ಇಷ್ಟ?”
ಎಂದ ಮುದುಕ ತನ್ನ ಎರಡನೆಯ ಮಗನ ಕಡೆ ತಿರುಗಿ.
ಮಗ ಏನೂ ಹೇಳಲಿಲ್ಲ, ಅಲ್ಲಿನ ಮೌನ ಮುಜುಗರ
ತರಿಸುವಂಥದ್ದು. ಪೆಟ್ರುಷ್ಕ ಬಂದು ಆ ಮೌನವನ್ನು ಮುರಿದ, ಕುದುರೆಯನ್ನು ಸಿದ್ಧಪಡಿಸಿ ಕೆಲವು
ನಿಮಿಷಗಳ ಹಿಂದೆ ಗುಡಿಸಿಲಿಗೆ ಬಂದಿದ್ದವನು ಮಾತುಗಳನ್ನೆಲ್ಲ ಮುಗುಳ್ನಗುತ್ತ ಕೇಳಿಸಿಕೊಂಡು
ನಿಂತಿದ್ದ.
“ನಮ್ಮ ಪುಸ್ತಕದಲ್ಲಿ ಒಂದು ಕತೆ ಇದೆ: ಒಬ್ಬ ತಂದೆ ತಮ್ಮ
ಮಕ್ಕಳಿಗೆ ಕಡ್ಡಿಗಳ ಒಂದು ಕಟ್ಟು ಕೊಟ್ಟು ಮುರೀರಿ ನೋಡೋಣ ಅಂತ ಹೇಳಿದನಂತೆ, ಆದರೆ ಹಾಗೆ
ಮಾಡಕ್ಕೆ ಯಾರಿಗೂ ಆಗಲಿಲ್ಲ, ಆದರೆ ಕಟ್ಟನ್ನು ಬಿಚ್ಚಿ ಒಂದೊಂದೇ ಕಟ್ಟಿ ಬೇರೆ ಮಾಡಿದಾಗ
ಸುಲಭವಾಗಿ ಮುರಿಯಕ್ಕೆ ಸಾಧ್ಯವಾಯಿತಂತೆ. ಅದೇ ಕತೇನೇ ಇಲ್ಲೂ” ಎಂದು ಜೋರಾಗಿ ನಕ್ಕ. “ನಾನು
ಸಿದ್ಧವಾಗಿದೀನಿ” ಅಂದ.
“ನೀನು ಸಿದ್ಧವಾಗಿದ್ರೆ ಹೊರಡೋಣ. ಬೇರೆಯಾಗೋ ವಿಷಯ,
ನೀನದಕ್ಕೆ ಅವಕಾಶ ಕೊಡ್ಬೇಡ ತಾತ. ನಿನ್ನ ಯಜಮಾನಿಕೇನಲ್ಲ್ಲಿ ಎಲ್ಲರೂ ಸೇರಿ ಇಷ್ಟೆಲ್ಲ
ಸಂಪಾದಿಸಿದ್ರಿ. ಊರ ಪಂಚಾಯಿತಿದಾರರ ಹತ್ರ ಹೋಗು; ಏನು ಮಾಡ್ಬೇಕು ಅಂತ ಹೇಳ್ತಾರೆ.”
“ಅವರೇನೋ ಹಾಗೆ ಮಾಡ್ತಾರೆ. ಆದ್ರೆ ಅವರ ಹತ್ರ ಹೋಗಿ ಏನೂ
ಮಾಡೋಹಾಗಿಲ್ಲ. ಇವರನ್ನ ದೆವ್ವ ಮೆಟ್ಕೊಂಡ ಹಾಗಿದೆ.”
ಈ ಮಧ್ಯೆ ಐದನೇ ಕಪ್ ಟೀ ಮುಗಿಸಿದ್ದ ನಿಕಿಟ ಬಟ್ಟಲನ್ನು
ಬೋರಲು ಹಾಕದೆ ಪಕ್ಕಕ್ಕಿರಿಸಿದ, ಆರನೇ ಬಟ್ಟಲು ಟೀ ಕೊಡುವರೇನೋ ಎಂಬ ಆಸೆ ಅವನಿಗೆ. ಆದರೆ
ಪಾತ್ರೆಯಲ್ಲಿ ಏನೂ ಉಳಿದಿರಲಿಲ್ಲ, ಹೀಗಾಗಿ ಯಜಮಾನಮ್ಮ ಅದಕ್ಕೆ ಏನನ್ನೂ ಬಗ್ಗಿಸಲಿಲ್ಲ. ಅಲ್ಲದೆ,
ವಾಸಿಲಿ ಆಂಡ್ರೆವಿಚ್ ತನ್ನ ವಸ್ತುಗಳನ್ನೆಲ್ಲ ಜೋಡಿಸಿಕೊಳ್ಳುತ್ತಿದ್ದ, ಹೀಗಾಗಿ ಏನೂ
ಮಾಡುವುದಕ್ಕಾಗದೆ ನಿಕಿಟ ಮೇಲೆದ್ದು ತನ್ನ ವಸ್ತುಗಳನ್ನೂ ಜೋಡಿಸಿಕೊಳ್ಳಬೇಕಾಯಿತು. ಸಕ್ಕರೆ
ಬೋಗುಣಿಯಲ್ಲಿ ತಾನು ಹೊರಗಿಟ್ಟಿದ್ದ ಸಕ್ಕರೆ ಉಂಡೆಗಳನ್ನು ತೆಗೆದು ಹಾಕಿ, ಬೆವರುತ್ತಿದ್ದ ತನ್ನ
ಮುಖವನ್ನು ತೊಟ್ಟಿದ್ದ ತುಪ್ಪುಳುಗಂಬಳಿಯ ಚುಂಗಿನಿಂದಲೇ ಒರೆಸಿಕೊಂಡು ತನ್ನ ಓವರ್‍ಕೋಟ್ ಧರಿಸಿದ.
ಎಲ್ಲ ಸಿದ್ಧವಾಗಿ ನೀಳ ಉಸಿರೊಂದನ್ನು ಬಿಟ್ಟ, ಆತಿಥೇಯರಿಗೆ
ಕೃತಜ್ಞತೆ ಹೇಳಿ ಬರ್ತೀನಿ ಎಂದು ಬೆಳಕು ತುಂಬಿದ್ದ ಬೆಚ್ಚಗಿನ ಆ ಕೋಣೆಯಿಂದ ಹೊರಬಿದ್ದು ಕತ್ತಲು
ಕತ್ತಲಾಗಿದ್ದ ತಲೆಬಾಗಿಲ ದಾರಿಯಲ್ಲಿ ಬಂದ. ಅಲ್ಲಾಡುತ್ತಿದ್ದ ಕಿಟಕಿಯ ಬಿರುಕುಗಳ ಮೂಲಕ ಗಾಳಿ
ಬೀಸುತ್ತಿತ್ತು. ಅಲ್ಲಿಂದ ಅಂಗಳಕ್ಕೆ ಸಾಗಿದ.
ಪೆಟ್ರುಷ್ಕ ತನ್ನ ತುಪ್ಪುಳುಗಂಬಳಿಯನ್ನು ಹೊದ್ದು ಲಾಯದ
ಮಧ್ಯದಲ್ಲಿ ನಿಂತುಕೊಂಡ ತನ್ನ ಪಠ್ಯಪುಸ್ತಕದ ಪದ್ಯವೊಂದನ್ನು ಗುನುಗುತ್ತಿದ್ದವನು ಮುಗುಳ್ನಗುತ್ತ
ಹೇಳಿದ:
ಆಗಸವಡಗಿದೆ
ಕಾವಳ ಬಿರುಗಾಳಿಯಲಿ
ಹಿಮಸುಳಿಗಳು
ಬೀಸುತ ಬಿರುಸಾಗಿ
ಗುಟುರುತ್ತಿದೆ
ಗೂಳಿಯ ಹಾಗೊಮ್ಮೆ
ಈಗದು
ಅಳುತಿದೆ ಮಗುವಿನ ರೀತಿ
ನಿಕಿಟ ಅದನ್ನೊಪ್ಪುವಂತೆ ತಲೆಯಾಡಿಸುತ್ತ ಲಗಾಮುಗಳನ್ನು
ಸರಿಪಡಿಸಿಕೊಂಡ
ವಾಸಿಲಿ ಆಂಡ್ರೆವಿಚ್‍ನನ್ನು ಬೀಳ್ಕೊಟ್ಟ ಮುದುಕ ಅವನಿಗೆ
ದಾರಿ ತೋರಿಸಲು ತಲೆಬಾಗಿಲವರೆಗಿನ ದಾರಿಯಲ್ಲಿ ಲಾಟೀನು ಹಿಡಿದು ಬಂದ. ಆದರೆ ಬಂದ ತಕ್ಷಣವೇ ಅದು
ಆರಿ ಹೋಯಿತು. ಗಾಳಿ ಹೆಚ್ಚು ಬಿರುಸಾಗಿರುವುದು ಅಂಗಳದಲ್ಲೇ ತಿಳಿಯುತ್ತಿತ್ತು.
‘ಏನು ಮಾಡೋದು, ಈ ಹವಾಗುಣ ಇದೇ ಥರಾನೇ! ನಾವು ಅಲ್ಲಿಗೇ
ತಲಪ್ತೀವೋ ಇಲ್ಲವೇ ಇಲ್ವೋ. ಆದರೆ ಹೋಗದೆ ಬೇರೆ ದಾರಿ ಇಲ್ಲ. ವ್ಯವಹಾರ! ಅಲ್ಲದೆ, ಸಿದ್ಧ ಬೇರೆ
ಆಗಿಬಿಟ್ಟಿದ್ದೀವಿ, ಕಳಿಸ್ಕೊಡಕ್ಕೆ ಹುಡುಗ ಕುದುರೆ ಸಿದ್ಧಪಡ್ಸಿಕೊಂಡು ನಿಂತಿದಾನೆ. ದೇವರ
ದಯೆಯಿದ್ರೆ ಹೋಗಿ ತಲಪ್ತೀವಿ!’ ಎಂದುಕೊಂಡ ವಾಸಿಲಿ ಆಂಡ್ರೆವಿಚ್.
ಅವರು ಹೋಗದೇ ಇರುವುದೇ ವಾಸಿ ಎಂದು ಮುದುಕ ಕೂಡ ಆಲೋಚಿಸಿದ,
ಆದರೆ ಈಗಾಗಲೇ ಅವರನ್ನು ಒಪ್ಪಿಸುವುದಕ್ಕೆ ಪ್ರಯತ್ನಪಟ್ಟು ವಿಫಲವಾಗಿದೆ.
“ಮತ್ತೆ ಅವರಿಗೆ ಹೇಳೋದ್ರಿಂದ ಪ್ರಯೋಜನವಿಲ್ಲ. ನನಗೆ
ವಯಸ್ಸಾಗಿರೋದ್ರಿಂದ ಭಯಪಡ್ತೀನೋ ಏನೋ. ಅವರು ಕ್ಷೇಮದಿಂದ ಹೋಗಿ ತಲುಪ್ತಾರೆ. ಕೊನೆ ಪಕ್ಷ
ನಾವಾದ್ರೂ ಸರಿಯಾದ ಹೊತ್ತಿಗೆ ಮಲಗಕ್ಕೆ ಅನುಕೂಲವಾಗತ್ತೆ’ ಎಂದುಕೊಂಡ ಮುದುಕ.
ಪೆಟ್ರುಷ್ಕನಿಗೆ ಯಾವ ಅಪಾಯವೂ ಕಾಣಲಿಲ್ಲ. ಅವನಿಗೆ ರಸ್ತೆ
ಮತ್ತದರ ಸುತ್ತುಮುತ್ತಲೆಲ್ಲ ಚೆನ್ನಾಗಿ ಗೊತ್ತಿತ್ತು.
ಗೂಳಿಯ ಹಾಗೆ ಗುಟುರು ಹಾಕುವ ಹಿಮಸುಳಿಗಳ ಬಗೆಗಿನ ಸಾಲುಗಳು ಹೊರಗೆ ಏನಾಗ್ತಿದೆ
ಎನ್ನುವುದನ್ನು ಸಮರ್ಪಕವಾಗಿ ವರ್ಣಿಸುತ್ತಿದ್ದವು, ಅದರಿಂದ ಅವನಿಗೆ ಖುಷಿ ಅನ್ನಿಸಿತು.
ನಿಕಿಟನಿಗೆ ಹೊರಡುವ ಮನಸ್ಸೇ ಇಲ್ಲ, ಆದರೆ ಅವನಿಗೆ ತನ್ನ ಅಭಿಪ್ರಾಯಕ್ಕೆ ಅಂಟಿಕೊಳ್ಳೋ ಜಾಯಮಾನವೇ
ಇರಲಿಲ್ಲ, ಬೇರೆಯವರ ಸೇವೆಯೇ ಅವನ ದೀರ್ಘಕಾಲದ ಅನುಭವ. ಹೀಗಾಗಿ ಪ್ರಯಾಣ ಮುಂದುವರಿಯುವುದಕ್ಕೆ
ಯಾವ ಅಡ್ಡಿಯೂ ಇರಲಿಲ್ಲ.
5
ವಾಸಿಲಿ ಆಂಡ್ರೆವಿಚ್ ತಮ್ಮ ಸ್ಲೆಜ್ ಹತ್ತಿರ ಹೋಗಿ
ನೋಡಿದರೆ ಕತ್ತಲಲ್ಲಿ ಅದನ್ನು ಹುಡುಕುವುದೇ ಕಷ್ಟವಾಯಿತು. ಕೊನೆಗೆ ಪತ್ತೆ ಹಚ್ಚಿ ಲಗಾಮು
ಹಿಡಿದುಕೊಂಡ.
“ಮುಂದಕ್ಕೆ ಹೋಗು” ಎಂದು ಕಿರುಚಿದ.
ಪೆಟ್ರುಷ್ಕ ತನ್ನ ಕುಳ್ಳು ಜಾರುಬಂಡಿಯಲ್ಲಿ ಬಾಗಿ
ಕುಳಿತು ಕುದುರೆಯನ್ನು ಚಲಾಯಿಸಿದ. ಸ್ವಲ್ಪ ಕಾಲ ಕೆನೆಯುತ್ತಿದ್ದ ಮುಖೋರ್ಟಿ ತನ್ನ ಮುಂದೊಂದು
ಹೆಣ್ಣು ಕುದುರೆಯಿರುವುದರ ವಾಸನೆ ಹಿಡಿದು ಅದರ ಹಿಂದಕ್ಕೆ ನಡೆಯಿತು; ಎರಡೂ ರಸ್ತೆಯಲ್ಲಿ
ಸಾಗತೊಡಗಿದುವು. ಅವರು ಮತ್ತೆ ಹಳ್ಳಿಯ ಹೊರವಲಯದ ಕಡೆಗೆ ಹಿಂದಿನ ದಾರಿಯಲ್ಲೇ ಗಾಡಿ ಓಡಿಸಿದರು;
ಆದರೆ ಒಣಗಲು ಹಗ್ಗದ ಮೇಲೆ ಹಾಕಿದ್ದ ಹಿಮಗಟ್ಟಿದ್ದ ಬಟ್ಟೆಗಳ ಸಾಲಿದ್ದ ಅಂಗಳವನ್ನು ದಾಟಿದರೂ
ಬಟ್ಟೆಗಳು ಕಾಣಲಿಲ್ಲ. ಗುಡಿಸಿಲ ಸೂರಿನವರೆಗೂ ಬೀಳುತ್ತಿದ್ದ ಮಂಜು ಅವನ್ನೆಲ್ಲ
ಮುಸುಕಿಬಿಟ್ಟಿತ್ತು, ಅಲ್ಲಿಂದ ಕೊನೆಯಿಲದ್ಲದಂತೆ ಮಂಜು ಸುರಿಯುತ್ತಿತ್ತು. ಮುಂದೆ ಹೋದರೆ ಅದೇ
ನರಳುವ, ಶಿಳ್ಳೆ ಹಾಕುವ ವಿಲೋ ಮರಗಳನ್ನು ತೂಗಾಡಿಸುವ ಗಾಳಿಯ ಬೀಸಾಟ. ಈ ರೀತಿ ಅವರು ಮೇಲೂ ಕೆಳಗೂ
ಆವರಿಸಿದ್ದ ಮಂಜಿನ ಸಾಗರವನ್ನು ಹೊಕ್ಕರು. ಗಾಳಿ ಎಷ್ಟು ಬಿರುಸಾಗಿತ್ತೆಂದರೆ ಪ್ರಯಾಣಿಕರು ಒಂದು
ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ತಿರುಗುವಂತಾಗುತ್ತಿತ್ತು, ಸ್ಲೆಜ್‍ಗಳನ್ನು
ತಿರುಗುಮುರುಗಾಗಿಸುತ್ತಿತ್ತು, ಕುದುರೆಗಳನ್ನು ಪಕ್ಕಕ್ಕೆ ಸರಿಸಿಬಿಡುತ್ತಿತ್ತು. ಪೆಟ್ರುಷ್ಕ
ತನ್ನ ಕುದುರೆಯನ್ನು ಚಲಾಯಿಸುತ್ತ ದಾಪುಗಾಲಿಡುತ್ತ ಮುಂದೆ ಸಾಗುತ್ತ ಜೋರಾಗಿ ಕೂಗಾಡುತ್ತಿದ್ದ.
ಮುಖೋರ್ಟಿ ಅದರ ಹಿಂದೆ ನುಗ್ಗುತ್ತಿತ್ತು.
ಇದೇ ರೀತಿ ಸುಮಾರು ಹತ್ತು ನಿಮಿಷಗಳು ಸಾಗಿದ
ಮೇಲೆ, ಪೆಟ್ರುಷ್ಕ ಹಿಂದಕ್ಕೆ ತಿರುಗಿ ಏನೋ ಕೂಗು ಹಾಕಿದ. ವಾಸಿಲಿ ಆಂಡ್ರೆವಿಚ್‍ಗಾಗಲೀ
ನಿಕಿಟನಿಗಾಗಲೀ ಗಾಳಿಯ ರಭಸದಿಂದಾಗಿ ಏನೂ ಕೇಳಿಸದಂತಾಗಿತ್ತು, ಆದರೆ ತಾವು ತಿರುವಿಗೆ
ಬಂದಿದ್ದೇವೆಂಬುದು ತಿಳಿಯಿತು. ಪೆಟ್ರುಷ್ಕ ವಾಸ್ತವವಾಗಿ ಬಲಕ್ಕೆ ತಿರುಗಿದ್ದ, ಈಗ ಗಾಳಿಯು
ಪಕ್ಕದಿಂದ ಅವರ ಮುಖಗಳಿಗೇ ರಾಚುತ್ತಿತ್ತು. ಮಂಜಿನ ತೆರೆಯ ಮೂಲಕ ಏನೋ ಕಪ್ಪಗಿನ ವಸ್ತು
ಬಲಭಾಗದಲ್ಲಿ ಅವರಿಗೆ ಗೋಚರಿಸಿತು. ಅದೇ ತಿರುವುನಲ್ಲಿದ್ದ ಪೊದೆ.
“ಸರಿ ಹಾಗಾದ್ರೆ, ಒಳ್ಳೇದಾಗಲಿ!”
“ಥ್ಯಾಂಕ್ ಯೂ, ಪೆಟ್ರುಷ್ಕ!”
“ಆಗಸವಡಗಿದೆ ಕಾವಳ ಬಿರುಗಾಳಿಯಲಿ” ಎಂದು ಕೂಗುತ್ತ
ಪೆಟ್ರುಷ್ಕ ಕಣ್ಮರೆಯಾದ.
“ಅವನಲ್ಲೊಬ್ಬ ಕವಿಯಿದ್ದಾನೆ!” ಎಂದು ಉದ್ಗರಿಸಿದ ವಾಸಿಲಿ
ಆಂಡ್ರೆವಿಚ್ ಲಗಾಮುಗಳನ್ನೆಳೆಯುತ್ತ.
“ಹೌದು, ಬಹಳ ಒಳ್ಳೇ ಹುಡುಗ, ನಿಜವಾದ ಒಕ್ಕಲುಮಗ” ಎಂದ
ನಿಕಿಟ.
ಅವರು ಮುಂದೆ ಸಾಗಿದರು.
ತನ್ನ ಮೈಯ ಸುತ್ತಲೂ ಕೋಟನ್ನು ಬಿಗಿಗೊಳಿಸಿಕೊಳ್ಳುತ್ತ
ನಿಕಿಟ ತಲೆಯನ್ನು ಹೆಗಲ ಮೇಲೆ ಎಷ್ಟು ಒತ್ತಾಗಿ ಒತ್ತಿಕೊಂಡು ಕೂತನೆಂದರೆ ಅವನ ಕಿರು ಗಡ್ಡ ತನ್ನ
ಕೊರಳನ್ನಾವರಿಸಿತು. ಮನೆಯಲ್ಲಿ ಟೀಯನ್ನು ಮಸ್ತು ಕುಡಿದು ತಂದುಕೊಂಡಿದ್ದ ಮೈಯ ಬಿಸುಪನ್ನು
ಕಡಿಮೆಗೊಳಿಸಿಕೊಳ್ಳದಂತೆ ಸುಮ್ಮನೆ ಕೂತ. ಅವನೆದುರಿಗೆ ಜಾರುಬಂಡಿಯ ಮೂಕಿಯಿಂದಾದ ನೇರ ಗೆರೆಗಳು
ಕಾಣುತ್ತಿದ್ದುವು; ಬಹಳ ಜನ ಓಡಾಡೋ ರಸ್ತೆಯೇನೋ ಅದು ಎಂಬ ಭ್ರಮೆಯನ್ನದು
ಅವನಲ್ಲುಂಟುಮಾಡುತ್ತಿತ್ತು. ಕುದುರೆಯ ಅತ್ತಿತ್ತ ಆಡುತ್ತಿದ್ದ ಬಾಲದ ಬದಿಗಿನ ಪಿರ್ರೆಗಳು
ಒಂದೆಡೆ ಕಾಣಿಸುತ್ತಿದ್ದರೆ, ಮತ್ತೊಂದೆಡೆ ಮುಂದೆ ಅದರ ಓಲಾಡುವ ಕತ್ತು ಮತ್ತು ಮೂಕಿಯ ಎತ್ತರದ
ಅಂಚು ಕಾಣಿಸುತ್ತಿದ್ದವು. ಆಗಾಗ ಅವನಿಗೆ ದಾರಿಯ ಗುರುತುಗಳು ಕಣ್ಣಿಗೆ ಬೀಳುತ್ತಿದ್ದವು,
ಇದರಿಂದಾಗಿ ತಾವಿನ್ನೂ ರಸ್ತೆಯಲ್ಲೇ ಸಾಗುತ್ತಿದ್ದೇವೆಂಬ ಭರವಸೆಯನ್ನು ಹುಟ್ಟಿಸುತ್ತಿದ್ದವು,
ಹೀಗಾಗಿ ಯಾವ ಯೋಚನೆಗೂ ಆಸ್ಪದವಿರಲಿಲ್ಲ.
ವಾಸಿಲಿ ಆಂಡ್ರೆವಿಚ್ ಜಾರುಬಂಡಿಯನ್ನು ಮುಂದೆ
ಚಲಾಯಿಸುತ್ತ. ರಸ್ತೆಯನ್ನನುಸರಿಸಲು ಕುದುರೆಯ ಹೊಣೆಗೇ ಬಿಟ್ಟಿದ್ದ. ಆದರೆ ಹಳ್ಳಿಯಲ್ಲೊಂದಷ್ಟು
ಹೊತ್ತು ವಿಶ್ರಾಂತಿ ಪಡೆದಿದ್ದರೂ ಮುಖೋರ್ಟಿ ಮಾತ್ರ ಒಲ್ಲದ ಮನಸ್ಸಿನಿಂದೆಂಬಂತೆ ಓಡುತ್ತಿತ್ತು,
ಅಲ್ಲದೆ ಈಗೊಮ್ಮೆ ಆಗೊಮ್ಮೆ ದಾರಿಬಿಟ್ಟು ಹೋಗುತ್ತಿದ್ದಂತೆಯೂ ತೋರುತ್ತಿತ್ತು. ಹೀಗಾಗಿ ವಾಸಿಲಿ
ಆಂಡ್ರೆವಿಚ್ ಅದನ್ನು ಪದೇ ಪದೇ ಸರಿದಾರಿಗೆ ತರಬೇಕಾಗುತ್ತಿತ್ತು.
“ಬಲಗಡೆ ಒಂದು ತೋರುಗಂಬ ಇದೆ, ಇನ್ನೊಂದು ಅಲ್ಲಿ, ಅಲ್ಲೇ
ಮೂರನೇದು” ಎಂದ ವಾಸಿಲಿ ಆಂಡ್ರೆವಿಚ್ ಎಣಿಸುತ್ತ ಹೋದ. ತನ್ನ ಮುಂದೇನೋ ಕಪ್ಪಗೆ ಕಾಣಿಸಿದ್ದರಿಂದ
‘ಇಲ್ಲಿ ಕಾಡು ಬೇರೆ ಇದೆ’ ಎಂದುಕೊಂಡ. ಆದರೆ ಅವನಿಗೆ ಕಾಡಿನಂತೆ ಕಾಣಿಸಿದ್ದು ಒಂದು ಪೊದೆ
ಅಷ್ಟೆ. ಆ ಪೊದೆಯನ್ನವರು ದಾಟಿ ಮುಂದೆ ಸುಮಾರು ನೂರು ಗಜಗಳಷ್ಟು ದೂರ ಸಾಗಿದರು, ಆದರೆ ಅಲ್ಲಿ
ನಾಲ್ಕನೇ ತೋರುಗಂಬವಾಗಲೀ ಕಾಡಾಗಲೀ ಕಾಣಿಸಲಿಲ್ಲ.
‘ನಾವು ಆದಷ್ಟು ಬೇಗ ಕಾಡನ್ನು ತಲುಪಬೇಕು’ ಎಂದುಕೊಂಡ
ವಾಸಿಲಿ ಆಂಡ್ರೆವಿಚ್. ಕುಡಿದಿದ್ದ ಟೀ ಮತ್ತು ವೋಡ್ಕಾದಿಂದ ಉದಿಸಿದ್ದ ಚೈತನ್ಯದಿಂದಾಗಿ ನಿಲ್ಲದೆ
ಲಗಾಮುಗಳನ್ನಾಡಿಸಿದ, ವಿಧೇಯತೆಯಿಂದ ಕುದುರೆ ಒಡೆಯನ ಆಣತಿಯನ್ನು ಪಾಲಿಸಿತು. ಒಮ್ಮೆ ತೂಗಾಡುತ್ತ,
ಒಮ್ಮೆ ನಿಧಾನಗತಿಯಲ್ಲಿ ಮುಂದರಿಯುತ್ತ ಯಜಮಾನ ಸೂಚಿಸಿದ ದಾರಿಯಲ್ಲಿ ಸಾಗಿತ್ತು, ಆದರೆ ತಾನು
ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲವೆಂದು ತಿಳಿದಂತಿತ್ತು. ಹೀಗೇ ಹತ್ತು ನಿಮಿಷ ಸಾಗಿದ ನಂತರವೂ
ಕಾಡು ಕಂಡುಬರಲಿಲ್ಲ.
“ಓ, ಈಗ ಮತ್ತೆ ದಾರಿ ತಪ್ಪಿಬಿಟ್ಟಿದ್ದೀವಲ್ಲ” ಎಂದ
ವಾಸಿಲಿ ಆಂಡ್ರೆವಿಚ್ ಕುದುರೆಯನ್ನು ಜಗ್ಗಿ ನಿಲ್ಲಿಸಿ.
ನಿಕಿಟ ಮಾತನಾಡದೆ ಸ್ಲೆಜ್‍ನಿಂದ ಹೊರಬಂದ. ಗಾಳಿ ರಭಸವಾಗಿ
ಬೀಸಿ ಮೈಗೇ ಮೆತ್ತಿಹಾಕಿದಂತಿದ್ದ ಜೊತೆಗೆ ಹರಿದುಹೋದಂತಿದ್ದ ತನ್ನ ಕೋಟನ್ನು ಭದ್ರವಾಗಿ
ಹಿಡಿದುಕೊಂಡು, ಒಂದು ಕಡೆಯಿಂದ ಇನ್ನೊಂದು ಕಡೆ ತಿರುಗುತ್ತ ಹಿಮದಲ್ಲಿಯೇ ದಾರಿ ಹುಡುಕಲು ತೊಡಗಿದ. ಮೂರು ನಾಲ್ಕು
ಬಾರಿ ಅವನು ಕಣ್ಮರೆಯಾಗಿದ್ದ. ಕೊನೆಗೆ ಅವನು ವಾಪಸಾಗಿ ವಾಸಿಲಿ ಆಂಡ್ರೆವಿಚ್‍ನಿಂದ ಲಗಾಮನ್ನು
ತನ್ನ ಕೈಗೆ ತೆಗೆದುಕೊಂಡ.
“ನಾವು ಬಲಗಡೆಗೆ ಹೋಗ್ಬೇಕು” ಎಂದ ಗಡುಸಾಗಿ, ಖಚಿತ
ದನಿಯಿಂದ ಅ ಕಡೆ ಕುದುರೆಯನ್ನು ತಿರುಗಿಸುತ್ತ.
“ಬಲಗಡೆಗೆ ಹೋಗ್ಬೇಕಾದ್ರೆ, ಬಲಕ್ಕೇ ಹೋಗು” ಎಂದ ವಾಸಿಲಿ
ಆಂಡ್ರೆವಿಚ್, ನಿಕಿಟನಿಗೆ ಲಗಾಮುಗಳನ್ನೊಪ್ಪಿಸಿ. ಕೈಗಳನ್ನು ಗವಸುಗಳೊಳಗೆ
ಬಿಗಿಗೊಳಿಸಿಕೊಳ್ಳುತ್ತ.
ನಿಕಿಟ ಉತ್ತರ ಕೊಡಲಿಲ್ಲ.
“ಅಯ್ಯಾ ಗೆಳೆಯ, ಸ್ವಲ್ಪ ಉತ್ಸಾಹ ತಗೋ” ಎಂದ ಕುದುರೆಯನ್ನು
ಕುರಿತು. ಆದರೆ ಲಗಾಮುಗಳನ್ನು ಆಡಿಸುತ್ತಿದ್ದರೂ ಮುಖೋರ್ಟಿ ಮಾತ್ರ ನಿಧಾನಗತಿಯಿಂದಲೇ ಮುಂದೆ
ಸಾಗಿತು.
ಕೆಲವು ಕಡೆ ಹಿಮ ಅದರ ಮೊಣಕಾಲವರೆಗೂ ತುಂಬಿತ್ತು, ಅದರ
ಗತಿಗೆ ಅನುಗುಣವಾಗಿ ಜಾರುಬಂಡಿ ಬಿಟ್ಟೂ ಬಿಟ್ಟೂ ಹೋಗುತ್ತಿತ್ತು.
ಗಾಡಿಯ ಮುಂಭಾಗದಲ್ಲಿ ಸಿಕ್ಕಿಸಿದ್ದ ಚಾವಟಿಯನ್ನು ಕೈಗೆ
ತೆಗೆದುಕೊಂಡ ನಿಕಿಟ ಕುದುರೆಯ ಬೆನ್ನ ಮೇಲೊಮ್ಮೆ ಝಾಡಿಸಿದ. ಚಾವಟಿ ಏಟಿನ ರುಚಿಯೇ ಕಾಣದಿದ್ದ ಈ
ಜಾಣ ಕುದುರೆ ಮುಂದಕ್ಕೆ ಚಿಮ್ಮಿ ನಾಗಾಲೋಟ ಶುರುಮಾಡಿತು. ಆಮೇಲೆ ತಕ್ಷಣವೇ ಜಗ್ಗು ನಡೆಗೆ ಬಂದು
ಕೊನೆಗೆ ನಿಧಾನವಾಗಿ ನಡೆಯತೊಡಗಿತು. ಹೀಗೇ ಐದು ನಿಮಿಷ ಹೋಗಿರಬೇಕು. ಕತ್ತಲು ಬೇರೆ, ಹಿಮ
ಮೇಲುಗಡೆಯಿಂದ ಸುರಿಯುತ್ತಿದ್ದು ಕೆಳಗಡೆಯಿಂದ ಚಿಮ್ಮುತ್ತಿತ್ತು. ಇದರಿಂದ ಜಾರುಬಂಡಿಯ ಮೂಕಿಯೇ
ಆಗಾಗ ಕಾಣದಾಗಿಬಿಡುತ್ತಿತ್ತು. ಗಾಡಿ ಕೆಲವೊಮ್ಮೆ ನಿಂತೇ ಬಿಟ್ಟಂತಾಗಿ, ನೆಲ ಹಿಂದೆ ಸರಿಯುವಂತೆ
ಕಾಣುತ್ತಿತ್ತು. ಇದ್ದಕ್ಕಿದ್ದಂತೆ ಕುದುರೆ ನಿಂತುಬಿಟ್ಟಿತು, ಅದರ ಮುಂದೇ ಏನೋ ಇರುವುದು ಅದರ
ಕಣ್ಣಿಗೆ ಬಿದ್ದಂತಿತ್ತು. ನಿಕಿಟ ಲಗಾಮುಗಳನ್ನು ಬಿಟ್ಟು ಮತ್ತೆ ಕೆಳಕ್ಕೆ ಚಿಮ್ಮಿ, ಕುದುರೆ
ತಟಕ್ಕನೆ ನಿಂತುದರ ಕಾರಣವೇನಿರಬಹುದೆಂದು ನೋಡಲು ಹೋದ. ಆದರೆ ಕುದುರೆಯ ಮುಂದೆ ಇನ್ನೂ ಹೋಗಿ
ನಿಂತಿರಲಿಲ್ಲ, ಅಷ್ಟರಲ್ಲೇ ಜಾರಿ ಮುಂದಿದ್ದ ಇಳಿಜಾರಿನಲ್ಲಿ ಉರುಳಿಕೊಂಡು ಹೋದ.
“ಹೋ ಹೋ ಹೋ” ಎಂದು ಕೂಗಿಕೊಂಡ ಬಿದ್ದ ತಕ್ಷಣ,
ಬೀಳುವುದರಿಂದ ತಪ್ಪಿಸಿಕೊಳ್ಳಬೇಕೆಂದು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಜಾರುತ್ತ
ಬಂದು ತುಂಬಿಕೊಂಡಿದ್ದ ಹಿಮದ ದಟ್ಟ ಕುಳಿಯೊಂದರಲ್ಲಿ ಕಾಲು ಸಿಕ್ಕಿಹಾಕಿಕೊಂಡು ನಿಂತ.
ಜಾರಿ ಬಿದ್ದಿದ್ದ ಹಿಮದ ಅರುಗು ಆ ಕುಳಿಯ ಬದಿಯಲ್ಲಿ
ಜೋತಾಡುತ್ತಿದ್ದು, ನಿಕಿಟ ಬಿದ್ದುದರಿಂದ ಸಡಿಲುಗೊಂಡು ಅವನ ಮೇಲೇ ಸುರಿದು ಅವನ ಕಾಲರ್ ಒಳಗೆಲ್ಲ
ಸೇರಿಕೊಂಡುಬಿಟ್ಟಿತು.
“ಏನು ಕೆಲಸ ಮಾಡಿಬಿಟ್ಟೇ ನಾನು!” ಎಂದು ಆ ಹಿಮಪಾತವನ್ನು
ಕುರಿತು ಬೈದುಕೊಂಡ ನಿಕಿಟ ತನ್ನ ಕಾಲರಿನೊಳಕ್ಕೆ ತೂರಿದ್ದ ಹಿಮವನ್ನು ಹೊರಗೆ ಹಾಕಲು ತೊಡಗಿದ.
“ನಿಕಿಟ, ಏಯ್ ನಿಕಿಟ” ಎಂದ ಮೇಲಿನಿಂದ ವಾಸಿಲಿ
ಆಂಡ್ರೆವಿಚ್ ಕೂಗಿದ.
ಆದರೆ ನಿಕಿಟ ಉತ್ತರಿಸಲಿಲ್ಲ. ತನ್ನ ಮೇಲಿನ ಹಿಮವನ್ನು
ಜಾಡಿಸಿ ತೆಗೆಯುವುದರಲ್ಲಿ ಅವನು ನಿರತನಾಗಿ, ಎಲ್ಲೋ ಬಿದ್ದಿದ್ದ ಚಾವಟಿಯನ್ನು ಹುಡುಕುತ್ತಲಿದ್ದ.
ಚಾವಟಿಯನ್ನು ಕಂಡ ಮೇಲೆ ಕುಳಿಯ ಮೇಲೆ ಹತ್ತುವುದಕ್ಕೆ ಪ್ರಯತ್ನಿಸಿದ, ಆದರೆ ಅದು
ಸಾಧ್ಯವಾಗಲಿಲ್ಲ, ಮತ್ತೆ ಕೆಳಕ್ಕೇ ಜಾರಿದ. ಹೀಗಾಗಿ ಮೇಲೆ ಹತ್ತುವುದಕ್ಕಾಗಿ ಕುಳಿಯ ಆಚೆಯ ಬದಿಗೆ
ಹೋಗಬೇಕಾಗಿ ಬಂತು. ಸುಮಾರು ಏಳು ಗಜ ದೂರದಷ್ಟು ಮುಂದೆ ತುಂಬ ಪ್ರಯಾಸದಿಂದ ಕುಳಿಯಿಂದ ಮೇಲೆ ಬರಲು
ಕೈಕಾಲುಗಳನ್ನು ಬಳಸಿಕೊಂಡು ತೆವಳಿಕೊಂಡೇ ಬರಬೇಕಾಯಿತು. ಆದರೆ ಅಲ್ಲಿರಬೇಕಾಗಿದ್ದ ಕುಳಿಯ
ಬದುವಾಗಲೀ ಕುದುರೆಯಾಗಲೀ ಕಾಣಿಸಲಿಲ್ಲ. ಹೀಗಾಗಿ ಎದುರುಗಾಳಿಗೆ ಸಿಕ್ಕಿ ಮುಂದುವರಿದಾಗ, ವಾಸಿಲಿ
ಆಂಡ್ರೆವಿಚ್ ತನ್ನ ಹೆಸರು ಹಿಡಿದು ಕೂಗಿದ್ದೂ, ಕುದುರೆ ಕೆನೆದಿದ್ದೂ ಕೇಳಿಸಿತು.
“ಬಂದೆ, ಬಂದ್ಬಿಟ್ಟೆ! ಯಾಕೆ ಸುಮ್ನೆ ಕಿರಿಚ್ತಾ
ಇದ್ದೀರಾ?” ಎಂದು ಗೊಣಗಿಕೊಂಡ.
ಜಾರುಬಂಡಿಯ ಹತ್ತಿರ ಬಂದಾಗಲೇ ಅವನಿಗೆ ಕುದುರೆ ಹಾಗೂ ಅದರ
ಪಕ್ಕದಲ್ಲಿ ದೈತ್ಯನ ಹಾಗೆ ನಿಂತಿದ್ದ ವಾಸಿಲಿ ಆಂಡ್ರೆವಿಚ್ ಕಾಣಿಸಿದ್ದು.
“ಇಷ್ಟು ಹೊತ್ತು ಎಲ್ಲಿ ಕಣ್ಮರೆಯಾಗಿದ್ದೆ? ಮತ್ತೆ
ಗ್ರಿಶ್ಕಿನೋಗೆ ವಾಪಸ್ಸು ಹೋಗ್ಬೇಕಾಗತ್ತೆ, ಅಷ್ಟೆ” ಎಂದು ಬೈದ. “ಹೋಗೋದಾದ್ರೆ ಸಂತೋಷವೇ,
ಯಜಮಾನ್ರೇ. ಆದ್ರೆ ಯಾವ ದಿಕ್ಕಿಗೆ ಹೋಗ್ಬೇಕೂಂತ? ಇಲ್ಲಿ ನೋಡಿದ್ರೆ ಇಷ್ಟೊಂದು ಕೊರಕಲಿದೆ,
ಅದರಲ್ಲೇನಾದ್ರೂ ಒಂದ್ಸಲ ಬಿದ್ರೆ ಹೊರಕ್ಕೆ ಬರಕ್ಕಾಗಲ್ಲ. ಅಲ್ಲಿ ನಾನು ಎಷ್ಟು ಜೋರಾಗಿ ಬಿದ್ದೆ
ಅಂದ್ರೆ ಮೇಲೆದ್ದು ಬರೋದು ಕಷ್ಟವಾಗಿಬಿಡ್ತು.”
“ಏನು ಮಾಡೋದೀಗ? ಇಲ್ಲಿ ಉಳಿದುಕೊಳ್ಳಕ್ಕೆ ಆಗಲ್ಲ, ನಾವು
ಯಾವ ದಿಕ್ಕಿಗೆ ಹೋಗ್ಬೇಕೋ ಗೊತ್ತಾಗ್ತಿಲ್ಲವಲ್ಲ!” ಎಂದ ವಾಸಿಲಿ ಆಂಡ್ರೆವಿಚ್.
ನಿಕಿಟ ಮಾತಾಡಲಿಲ್ಲ. ಗಾಳಿಗೆ ಬೆನ್ನು ಒಡ್ಡಿಕೊಂಡು
ಜಾರುಬಂಡಿಯಲ್ಲಿ ಕೂತು, ತನ್ನ ಬೂಟುಗಳನ್ನು ಕಳಚಿ, ಅದರಲ್ಲಿದ್ದ ಹಿಮದ ತುಣುಕುಗಳನ್ನು
ಹೊರಚೆಲ್ಲಿದ. ಜಾರುಬಂಡಿಯ ಅಡಿಯಲ್ಲಿದ್ದ ಒಂದಷ್ಟು ಹುಲ್ಲನ್ನು ತೆಗೆದುಕೊಂಡು ತನ್ನ ಎಡ
ಬೂಟಿನೊಳಕ್ಕೆ ಎಚ್ಚರಿಕೆಯಿಂದ ತೂರಿಸಿದ.
ವಾಸಿಲಿ ಆಂಡ್ರೆವಿಚ್ ಕೂಡ ಸುಮ್ಮನಾಗಿದ್ದ, ನೋಡಿದ್ರೆ
ಎಲ್ಲವನ್ನೂ ನಿಕಿಟನ ವಿವೇಚನೆಗೇ ಬಿಟ್ಟಹಾಗಿತ್ತು. ಮತ್ತೆ ತನ್ನ ಬೂಟುಗಳನ್ನು ಹಾಕಿಕೊಂಡ ನಿಕಿಟ
ಜಾರುಬಂಡಿಯೊಳಕ್ಕೆ ಕಾಲುಗಳನ್ನೆಳೆದುಕೊಂಡು ಮತ್ತೆ ಕೈಯಲ್ಲಿ ಲಗಾಮುಗಳನ್ನು ತೆಗೆದುಕೊಂಡು
ಕುದುರೆಯನ್ನು ಕಮರಿಯ ಅಂಚಿನಲ್ಲೇ ಮುಂದರಿಸಿದ. ಆದರೆ ಇನ್ನೂ ಒಂದು ನೂರು ಗಜ ಮುಂದಕ್ಕೆ
ಹೋಗಿರಲಿಲ್ಲ, ಮತ್ತೆ ಕುದುರೆ ನಿಂತುಬಿಟ್ಟಿತು. ಅದರ ಮುಂದೇನೇ ಕಮರಿ!
ನಿಕಿಟ ಮತ್ತೆ ಹೊರಬಂದು ಹಿಮದಲ್ಲೇ ತಟ್ಟಾಡಿಕೊಂಡು ಹೋದ.
ಸಾಕಷ್ಟು ಹೊತ್ತು ಹೀಗೆ ಮಾಡಿದ ಮೇಲೆ, ತಾನು ಹೊರಟಿದ್ದ ಕಡೆಗೆ ಮತ್ತೆ ವಾಪಸು ಬಂದ.
“ವಾಸಿಲಿ ಆಂಡ್ರೆವಿಚ್, ಎಲ್ಲಿದ್ದೀರಾ?”
“ಇಲ್ಲಿದ್ದೀನಿ, ಈಗೇನ್ಮಾಡೋದು” ಎಂದ ಅವನು.
“ನಂಗೇನೂ ತೋಚ್ತಾನೇ ಇಲ್ಲ. ತುಂಬ ಕತ್ತಲೆ ತುಂಬಿಕೊಂಡಿದೆ,
ಇಲ್ಲಿ ನೋಡಿದರೆ ಬರೀ ಕಮರಿಗಳು. ಎದುರುಗಾಳಿಗೆ ಮುಖ ಮಾಡಿ ಕಡೆ ಹೋಗ್ಬೇಕು ಬೇರೆ.”
ಮತ್ತೆ ಅವರು ಹೊರಟರು. ಮತ್ತೆ ನಿಕಿಟ ಹಿಮದಲ್ಲಿ ಜಾರಿದ,
ಮತ್ತೆ ಮೇಲಕ್ಕೆ ಹತ್ತಿ ದಟ್ಟಡಿಯಿಡುತ್ತ ಬಂದು ಸುಸ್ತಾಗಿ ಜಾರುಬಂಡಿ ಬದಿಗೆ ಕುಸಿದು ಕುಳಿತ.
“ಏನಪ್ಪಾ ಮಾಡೋದು ಈಗ?” ಎಂದು ಕೇಳಿದ ವಾಸಿಲಿ
ಆಂಡ್ರೆವಿಚ್.
“ನಂಗೆ ಸುಸ್ತಾಗಿಬಿಟ್ಟಿದೆ, ಕುದುರೆ ಬೇರೆ ಮುಂದಕ್ಕೆ
ಹೋಗ್ತಾ ಇಲ್ಲ.”
“ಹಾಗಾದ್ರೆ ಗತಿ ಏನು?”
“ಒಂದ್ನಿಮಿಷ ತಾಳಿ”
ಮತ್ತೆ ನಿಕಿಟ ಹೋಗಿ ಈ ಸಲ ಬೇಗನೇ ವಾಪಸು ಬಂದ.
“ನನ್ನ ಹಿಂದೇನೇ ಬನ್ನಿ” ಎಂದು ಕುದುರೆಯ ಮುಂದುಗಡೆಗೆ
ಹೋಗುತ್ತ.
ವಾಸಿಲಿ ಆಂಡ್ರೆವಿಚ್ ಆಜ್ಞೆಗಳನ್ನೀಯುವ ಸ್ಥಿತಿಯಲ್ಲಿರದೆ,
ನಿಕಿಟ ಹೇಳಿದ ಹಾಗೆ ಕೇಳಬೇಕಾಗಿತ್ತು.
“ಈ ಕಡೆ, ಹೀಗೆ ಬನ್ನಿ” ಎಂದು ಕೂಗಿದ ನಿಕಿಟ, ತಕ್ಷಣ
ಬಲಗಡೆಗೆ ತಿರುಗಿ, ಲಗಾಮುಗಳನ್ನು ಹಿಡಿದುಕೊಂಡು ಹಿಮದ ಒಟ್ಟಿಲಿನ ಕಡೆಗೆ ಮುಖೋರ್ಟಿಯನ್ನು
ಎಳೆದೊಯ್ದ.
ಮೊದಲು ಕುದುರೆ ಹಿಂಜರಿಯಿತು, ಆಮೇಲೆ ಕುಳಿಯನ್ನು ಹಾರುವ
ನಿರೀಕ್ಷೆಯಿಂದ ಮುಂದೆ ಜರುಗಿದರೂ, ಶಕ್ತಿಯಿಲ್ಲದೆ ಕೊರಳವರೆಗೂ ಅದರಲ್ಲಿ ಕುಸಿಯಿತು.
“ಹೊರಗೆ ಬನ್ನಿ!” ಇನ್ನೂ ಸ್ಲೆಜ್‍ನಲ್ಲೇ ಕುಳಿತಿದ್ದ
ವಾಸಿಲಿ ಆಂಡ್ರೆವಿಚ್ ಅನ್ನು ನಿಕಿಟ ಕರೆದ. ತನ್ನ ಕೈಯಲ್ಲಿ ಮೂಕಿಯೊಂದನ್ನು ಹಿಡಿದು ಕುದುರೆಯ
ಸಮೀಪಕ್ಕೆ ಎಳೆದ. “ಕಷ್ಟ ಕಣಪ್ಪ, ಏನ್ಮಾಡ್ತೀ!” ಎಂದು ಮುಖೋರ್ಟಿಗೆ ಹೇಳುತ್ತ, “ಏನ್ಮಾಡೋದು,
ಬೇರೇ ದಾರೀನೇ ಇಲ್ಲ. ಒಂದು ಸಲ ಪ್ರಯತ್ನ ಮಾಡು, ಒಂದೇ ಒಂದು ಸಣ್ಣ ಪ್ರಯತ್ನ!” ಎಂದು ಕೂಗಿದ.
“ಇಗೋ ನೋಡಣ್ಣ, ಹೀಗಾದ್ರೆ ಸರಿಹೋಗಲ್ಲ” ಎಂದು ಅದನ್ನು
ಜರೆದ ನಿಕಿಟ “ಇನ್ನೊಂದ್ಸಲ ಪ್ರಯತ್ನಪಡು!” ಎಂದ.
ನಿಕಿಟ ಮತ್ತೆ ತನ್ನ ಪಕ್ಕದಲ್ಲಿ ಮೂಕಿಯನ್ನು ಬಿಗಿಯಾಗಿ
ಹಿಡಿದುಕೊಂಡ, ವಾಸಿಲಿ ಆಂಡ್ರೆವಿಚ್ ಇನ್ನೊಂದು ಕಡೆ ಹಾಗೆ ಮಾಡಿದ.
ಮುಖೋರ್ಟಿ ತನ್ನ ತಲೆಯನ್ನು ಮೇಲೆತ್ತಿ ತಟಕ್ಕನೆ ಮುಂದೆ
ಚಿಮ್ಮಿತು.
“ಹಾಗೆ! ಹಾಗೆ! ಭಯಪಡ್ಬೇಡ, ಬಿದ್ದೇನೂ ಬೀಳಲ್ಲ” ಎಂದು
ನಿಕಿಟ ಕೂಗಿದ.
ಒಂದು ಚಿಮ್ಮು, ಎರಡನೆಯದು, ಮೂರನೆಯದು, ಅಂತೂ ಕೊನೆಗೆ
ಮುಖೋರ್ಟಿ ಆ ಹಿಮದ ಒಟ್ಟಿಲಿನಿಂದ ಹೊರಬಂದು, ಜೋರಾಗಿ ಉಸಿರುಬಿಡುತ್ತ ತಲೆ ಕೊಡವಿ ಮೈಮೇಲಿನ
ಹಿಮವನ್ನು ಕೊಡವಿಕೊಂಡಿತು.
“ಸ್ವಲ್ಪ ಉಸಿರಾಡ್ತೀನಿ!” ಎಂದುಕೊಂಡು ಹಳ್ಳಿಯಲ್ಲಿ ತನ್ನ
ತುಪ್ಪುಳುಗಂಬಳಿಯ ಕಾಲರ್‍ಗೆ ಸುತ್ತಿಕೊಂಡಿದ್ದ ಬಟ್ಟೆಯನ್ನು ಬಿಚ್ಚಿದ.
“ಇಲ್ಲಿ ಸರಿಯಾಗಿದೆ, ನೀವಲ್ಲಿ ಕೂತ್ಕೊಳ್ಳಿ, ನಾನು
ಕುದುರೆಯನ್ನು ನಡೆಸ್ತೀನಿ” ಎಂದು ನಿಕಿಟ ಸೂಚಿಸಿದ. ವಾಸಿಲಿ ಆಂಡ್ರೆವಿಚ್ ಕೂತಿದ್ದಂತೆಯೇ
ಕುದುರೆಯ ಕಡಿವಾಣ ಹಿಡಿದು ಜಾರುಬಂಡಿಯನ್ನು ಸುಮಾರು ಹತ್ತು ಹೆಜ್ಜೆಯಿಟ್ಟು ಒಂದು ಏರನ್ನು
ಹತ್ತಿಸಿ ಮುನ್ನಡೆಸಿ ನಿಂತ.
ನಿಕಿಟ ನಿಂತಿದ್ದ ಜಾಗ ಬೆಟ್ಟದಿಂದ ಇಳಿದುಬರುತ್ತಿದ್ದ
ಹಿಮವು ಅವರನ್ನು ಸಂಪೂರ್ಣವಾಗಿ ಹೂತುಹಾಕಿಬಿಡಬಹುದಾದಂತಹ ಗುಂಡಿಯೇನಾಗಿರಲಿಲ್ಲ. ಆದರೂ ಅದು
ಕಮರಿಯ ಅಂಚಿನಲ್ಲಿ ಗಾಳಿಯಿಂದ ರಕ್ಷಿಸಿತ್ತು. ಗಾಳಿ ಬೀಸುವ ರಭಸ ಕೆಲವೊಮ್ಮೆ
ಕಡಿಮೆಯಾಯಿತೆನಿಸುತ್ತಿದ್ದರೂ, ಅದು ಹೆಚ್ಚು ಕಾಲ ಮುಂದುವರಿಯಲಿಲ್ಲ; ಆ ವಿನಾಯಿತಿಯನ್ನು ಅಳಿಸಿಹಾಕಲೆಂಬಂತೆ
ಗಾಳಿಯು ಮಹಾ ಬಿರುಸಿನಿಂದ ಬೀಸಿ ಗಿರ್ರನೆ ತಿರುಗುತ್ತಿತ್ತು. ಆ ರಭಸ ಒಂದು ಕ್ಷಣ
ಅವರನ್ನಾವರಿಸಿತು; ಆಗ ವಾಸಿಲಿ ಆಂಡ್ರೆವಿಚ್ ತನ್ನ ಉಸಿರನ್ನು ಬಿಗಿಹಿಡಿದು, ಈ ಹೊತ್ತಿಗೆ
ಸ್ವಲ್ಪ ಸುಧಾರಿಸಿಕೊಂಡಿದ್ದವನು, ಸ್ಲೆಜ್‍ನಿಂದ ಹೊರಬಂದು, ತಾವೀಗ ಏನು ಮಾಡಬೇಕೆಂದು
ವಿಚಾರಿಸುವುದಕ್ಕಾಗಿ, ನಿಕಿಟ ಇದ್ದ ಜಾಗಕ್ಕೆ ಹೋದ. ಅವರಿಬ್ಬರೂ ತಮಗರಿವಿಲ್ಲದಂತೆಯೇ ಬಾಗಿ
ಹಿಮಗಾಳಿಯ ಬಿರುಸು ಕಡಿಮೆಯಾಗುವವರೆಗೂ ಕಾದರು. ಮುಖೋರ್ಟಿ ಕೂಡ ಅಸಮಾಧಾನದಿಂದ ತನ್ನ
ಕಿವಿಗಳೆರಡನ್ನೂ ಹಿಂದಕ್ಕೆ ಮಡಿಚಿಕೊಂಡಿತು. ಗಾಳಿಯ ಬಿರುಸು ಕೊಂಚ ಕಡಿಮೆಯಾದ ತಕ್ಷಣವೇ ನಿಕಿಟ
ತನ್ನ ಕೈಗವಸುಗಳನ್ನು ತೆಗೆದು ತನ್ನ ಬೆಲ್ಟಿನಲ್ಲಿ ಸಿಕ್ಕಿಸಿಕೊಂಡು, ಅವುಗಳ ಮೇಲೆ ಉಸಿರು
ಬಿಟ್ಟು ಮೂಕಿಯ ಕಟ್ಟುಗಳನ್ನು ಬಿಚ್ಚತೊಡಗಿದ.
“ಏನು ಮಾಡ್ತಾ ಇದ್ದೀಯಾ ನೀನು?” ಎಂದ ವಾಸಿಲಿ
ಆಂಡ್ರೆವಿಚ್.
“ಕುದುರೆಯನ್ನು ಗಾಡಿಯಿಂದ ಬಿಚ್ತಿದ್ದೀನಿ.
ಇನ್ನೇನ್ಮಾಡ್ಲಿ? ನನ್ನ ಕೈಲಿ ಶಕ್ತೀನೇ ಉಳಿದಿಲ್ಲ” ಎಂದ ನಿಕಿಟ ಸಬೂಬು ಹೇಳುವವನಂತೆ.
“ನಾವೆಲ್ಲಿಗಾದ್ರೂ ಹೋಗೋಕ್ಕಾಗೋದಿಲ್ವಾ?”
“ಉಹ್ಞೂ, ಆಗಲ್ಲ. ಹಾಗೆ ಮಾಡಿದ್ರೆ ಕುದುರೆ ಸಾಯತ್ತೆ,
ಅಷ್ಟೆ. ಪಾಪ, ಮೂಕ ಪ್ರಾಣಿ ಈಗಾಗ್ಲೇ ಬಸವಳಿದುಬಿಟ್ಟಿದೆ” ಎಂದ ನಿಕಿಟ ಕುದುರೆಯ ಕಡೆ
ತೋರಿಸುತ್ತ. ಪಾಪ, ಅದಾದರೋ ದೈನ್ಯದಿಂದ ಏನು ಬರುತ್ತೋ ಎಂದು ಕಾಯುತ್ತಿತ್ತು, ಅದರ ಪಕ್ಕೆಗಳು
ಜೋರಾದ ಉಸಿರಾಟದಿಂದ ಮೇಲುಕೆಳಗಾಗುತ್ತಿದ್ದವು. “ನಾವು ರಾತ್ರಿ ಪೂರ್ತಿ ಇಲ್ಲೇ ಇರ್ಬೇಕು” ಎಂದ ಅವನು,
ಯಾವುದೋ ಹೋಟಲಲ್ಲಿ ಉಳಿದುಕೊಳ್ಳುವವನ ಹಾಗೆ. ಕುದುರೆಯ ಕೊರಳ ಪಟ್ಟಿಗಳನ್ನು ಸಡಿಲಗೊಳಿಸಲು ಹೋದ.
ಬಕಲ್‍ಗಳನ್ನು ಬಿಚ್ಚಿದ.
“ಹಾಗೆ ಮಾಡಿದ್ರೆ ಹೆಪ್ಪುಗಟ್ಟಿ ಹೋಗ್ತೀವಿ” ಎಂದ ವಾಸಿಲಿ
ಆಂಡ್ರೆವಿಚ್.
“ಸರಿಯೇ. ಆದ್ರೆ ಈಗ ವಿಧಿಯೇ ಇಲ್ಲವಾಗಿದೆ.”
6
ತೊಟ್ಟಿದ್ದ ಎರಡು ಫ಼ರ್ ಕೋಟ್‍ಗಳಿಂದಾಗಿ ವಾಸಿಲಿ
ಆಂಡ್ರೆವಿಚ್‍ಗೆ, ಅದರಲ್ಲೂ ಹಿಮದ ಒಟ್ಟಿನಲ್ಲಿ ಸೆಣೆಸಾಡಿದ ಬಳಿಕ, ಸಾಕಷ್ಟು ಬೆಚ್ಚಗಿತ್ತು.
ಆದರೆ ರಾತ್ರಿಯನ್ನೆಲ್ಲ ತಾವಿರುವ ಜಾಗದಲ್ಲೇ ಕಳೆಯಬೇಕಾದ ಅನಿವಾರ್ಯತೆಯ ಕಲ್ಪನೆಯಿಂದ ಅವನ
ಬೆನ್ನಿನಲ್ಲಿ ತಣ್ಣನೆಯ ಚಳುಕು ಉಂಟಾಯಿತು. ತನ್ನನ್ನು ಸಮಾಧಾನಪಡಿಸಿಕೊಳ್ಳಲು ಅವನು
ಜಾರುಬಂಡಿಯಲ್ಲಿ ಕೂತು, ಸಿಗರೇಟ್ ಮತ್ತು ಬೆಂಕಿಪೊಟ್ಟಣವನ್ನು ಹೊರತೆಗೆದ.
ಈ ಮಧ್ಯೆ ನಿಕಿಟ ಮುಖೋರ್ಟಿಯ ಲಗಾಮುಗಳನ್ನು
ಕಳಚಿದ್ದ. ಅದರ ನಡುಪಟ್ಟಿ ಬೆನ್ನುಪಟ್ಟಿಗಳನ್ನು ಸಡಿಲಿಸಿ, ಲಗಾಮುಗಳನ್ನು ತೆಗೆದು,
ಕೊರಳಪಟ್ಟಿಯನ್ನು ಸಡಿಲಗೊಳಿಸಿದ; ಆಮೇಲೆ ಮೂಕಿಯ ದಿಂಡನ್ನು ತೆಗೆದ; ಹಾಗೆ ಮಾಡುವಾಗ ಉದ್ದಕ್ಕೂ
ಅದರೊಡನೆ ಮಾತಾಡುತ್ತ ಉತ್ತೇಜಿಸುತ್ತಿದ್ದ.
“ಹೊರಗೆ ಬಾ, ಈ ಕಡೆ” ಎಂದು ಕುದುರೆಯನ್ನು
ಮೂಕಿಯಿಂದ ಹೊರಕ್ಕೆ ಎಳೆದ. “ಈಗ ನಿನ್ನನ್ನ ಇಲ್ಲಿ ಕಟ್ಟಿಹಾಕ್ತೀನಿ, ಮುಂದೆ ಸ್ವಲ್ಪ ಹುಲ್ಲು
ಹಾಕ್ತೀನಿ, ನಿನ್ನ ಕಡಿವಾಣ ಬಿಚ್ತೀನಿ. ಹೊಟ್ಟೆಗೆ ಏನಾದ್ರೂ ಬಿದ್ರೆ ಸ್ವಲ್ಪ ಹಾಯಾ ಅನಿಸತ್ತೆ.”
ಆದರೆ ಮುಖೋರ್ಟಿ ಮಾತ್ರ ತಹತಹಪಡುತ್ತಿತ್ತು,
ನಿಕಿಟನ ಮಾತುಗಳ ಅದಕ್ಕೆ ಸಮಾಧಾನ ನೀಡುವಂತಿರಲಿಲ್ಲ.
ಈಗೊಂದು ಹೆಜ್ಜೆ ಆಗೊಂದು ಹೆಜ್ಜೆ ಇಟ್ಟು ಸ್ಲೆಜ್‍ಗೆ ಒತ್ತಾಗಿ ನಿಂತು, ಗಾಳಿಗೆ
ಬೆನ್ನೊಡ್ಡಿ ನಿಕಿಟನ ಕೋಟಿನ ತೋಳುಗಳಿಗೆ ತಲೆಯನ್ನುಜ್ಜತೊಡಗಿತು. ಆಮೇಲೆ, ತನ್ನ ಮುಂದೆ ಹರವಿದ
ಹುಲ್ಲನ್ನು ನಿರಾಕರಿಸಿ ನಿಕಿಟನ ಮನಸ್ಸಿಗೆ ನೋವುಂಟುಮಾಡಬಾರದೆಂಬಂತೆ, ಸ್ಲೆಜ್‍ನೊಳಗಿನಿಂದ ಒಂದು
ಹಿಡಿ ಹುಲ್ಲನ್ನು ಕಚ್ಚಿ ಎಳೆದು, ತಕ್ಷಣವೇ ಈಗ ತಿನ್ನುವ ಹೊತ್ತಲ್ಲವೆಂದು ಅನ್ನಿಸಿದ ಹಾಗೆ,
ಅದನ್ನುಗುಳಿತು. ಉಗುಳಿದ್ದನ್ನು ಗಾಳಿ ತಕ್ಷಣವೇ ಚೆಲ್ಲಾಪಿಲ್ಲಿ ಮಾಡಿ ಹೊತ್ತುಕೊಂಡು ಹೋಯಿತು,
ಸ್ವಲ್ಪ ಹೊತ್ತಲ್ಲೇ ಅದನ್ನು ಹಿಮ ಆವರಿಸಿತು.
“ಈಗ ಒಂದು ಗುರುತನ್ನು ಇಡೋಣ” ಎಂದುಕೊಳ್ಳುತ್ತ
ನಿಕಿಟ ಗಾಳಿಗೆದುರಾಗಿ ಜಾರುಬಂಡಿಯ ಮುಂಭಾಗವನ್ನು ತಿರುಗಿಸಿ, ಮೂಕಿಯನ್ನು ದಾರದಿಂದ ಕಟ್ಟಿ,
ಜಾರುಬಂಡಿಯ ಮುಂಭಾಗದಲ್ಲಿ ನಿಲ್ಲಿಸಿದ. “ಈಗ ಸರಿಹೋಯ್ತು. ಅದನ್ನು ಹಿಮ ಮುಚ್ಚಿಬಿಟ್ಟರೆ,
ಜನಗಳಿಗೆ ಮೂಕಿ ಕಾಣ್ಸತ್ತೆ, ಪಕ್ಕದಲ್ಲಿ ಹೋಗ್ತಾರೆ” ಅಂದುಕೊಂಡ. ಆಮೇಲೆ ತನ್ನ ಕೈಗವಸುಗಳನ್ನು
ಪರಸ್ಪರ ಅಪ್ಪಳಿಸಿ ತೊಟ್ಟುಕೊಂಡ. “ಹಿರಿಯರು ನಮಗೆ ಕಲಿಸಿದ್ದು ಇದೇ.”
ಈ ಮಧ್ಯೆ ವಾಸಿಲಿ ಆಂಡ್ರೆವಿಚ್ ತನ್ನ ಕೋಟನ್ನು
ಸಡಿಲಿಸಿ, ಅದನ್ನು ಮರೆಯಾಗಿ ಹರವಿ, ಒಂದಾದ ಮೇಲೊಂದರಂತೆ ಸ್ಟೀಲ್ ಪಟ್ಟಣದ ಮೇಲೆ ಕಡ್ಡಿ ಗೀರಿದ,
ಆದರೇನು ಒಂದೂ ಹತ್ತಿಕೊಳ್ಳಲಿಲ್ಲ. ಅವನ ಕೈಗಳು ನಡುಗುತ್ತಿದ್ದವು, ಗೀರಿದ ಕಡ್ಡಿಗಳು ಇಲ್ಲವೇ
ಹತ್ತಿಕೊಳ್ಳಲಿಲ್ಲ, ಅಥವಾ ಹತ್ತಿಕೊಂಡರೂ ಗಾಳಿಯಿಂದಾಗಿ ಸಿಗರೇಟಿಗೆ ಬೆಂಕಿ ತಾಕಿಸುವ
ಹೊತ್ತಿನೊಳಗೆ ಆರಿಹೋಗುತ್ತಿತ್ತು. ಕೊನೆಗೂ ಒಂದು ಕಡ್ಡಿ ಉರಿಯತೊಡಗಿತು, ಕೋಟಿನ ತುಪ್ಪುಳ,
ಚಿನ್ನದ ಉಂಗುರವಿದ್ದ ಅವನ ಬಾಗಿದ ಬೆರಳು ಹಾಗೂ ಹಾಸಿದ್ದ ತುಪ್ಪುಳಗಂಬಳಿಯ ಕೆಳಗಿನಿಂದ
ಮೇಲೆದ್ದಿದ್ದ ಹುಲ್ಲನ್ನು ಒಂದು ಕ್ಷಣ ಬೆಳಗಿತು. ಸಿಗರೇಟು ಹತ್ತಿಕೊಂಡದ್ದರಿಂದ ಆತುರಾತುರವಾಗಿ
ಒಂದೆರಡು ಬಾರಿ ದಮ್ಮು ಎಳೆದು, ಬಾಯಲ್ಲಿ ಹೊಗೆ ತುಂಬಿಕೊಂಡು ಮೀಸೆಯ ಮೂಲಕ ಹೊರಗೆ ಬಿಟ್ಟ. ಮತ್ತೆ
ದಮ್ಮು ಎಳೆಯುವವನು, ಆದರೆ ಬಿರುಗಾಳಿ ಸಿಗರೇಟಿನ ಉರಿಯುವ ತುದಿಯನ್ನು ಮುರಿದು ಬೀಳಿಸಿ ಹಿಂದೆ
ಹುಲ್ಲನ್ನು ಮಾಡಿದ್ದ ಹಾಗೆಯೇ ದೂರಕ್ಕೆಲ್ಲೋ ಒಯ್ದು ಹಾಕಿತು.
ಆದರೆ ಎಳೆದಿದ್ದ ಕೆಲವು ದಮ್ಮುಗಳೇ ಅವನಿಗೆ
ಆರಾಮವೆನ್ನಿಸಲು ಸಾಕಾಗಿದ್ದವು.
“ಈ ರಾತ್ರಿ ನಾವಿಲ್ಲೇ ಕಳೀಬೇಕಾದ್ರೆ, ಹಾಗೇ
ಮಾಡ್ಬೇಕು, ನಿರ್ವಾಹವಿಲ್ಲ!” ಎಂದ ವಾಸಿಲಿ ಆಂಡ್ರೆವಿಚ್ ನಿರ್ಧಾರದಿಂದ. “ಆದರೆ ಒಂದು ಸ್ವಲ್ಪ ನಿಲ್ಲು, ನಾನೊಂದು ಒಳ್ಳೆ ಬಾವುಟ
ಸಿದ್ಧಮಾಡ್ತೀನಿ” ಎಂದು ತನ್ನ ಕೊರಳ ಸುತ್ತ ಕಟ್ಟಿಕೊಂಡು ಸ್ವಲ್ಪ ಹೊತ್ತಿಗೆ ಮುಂಚೆ ಬಿಚ್ಚಿ
ಜಾರುಬಂಡಿಯಲ್ಲಿ ಬಿಸಾಕಿದ್ದ ಒಂದು ಕರ್ಚೀಫ್ ತೆಗೆದುಕೊಂಡು, ತನ್ನ ಗವಸುಗಳನ್ನು ತೆಗೆದು,
ಜಾರುಬಂಡಿಯ ಮುಂಭಾಗದಲ್ಲಿ ಬಂದು ನಿಂತು ತುದಿಯನ್ನು ಎಟುಕಿಸಿಕೊಳ್ಳುವಂತೆ ಮೇಲೆ ಚಾಚಿಕೊಂಡು,
ಅದಕ್ಕೆ ಕರ್ಚೀಫ್ ಅನ್ನು ಬಿಗಿಯಾಗಿ ಕಟ್ಟಿದ.
ಆ ಕರ್ಚೀಫ್ ತಕ್ಷಣವೇ ಪಟ ಪಟ ಹಾರಾಡಲು ತೊಡಗಿತು,
ಒಮ್ಮೆ ಮೂಕಿಗೆ ಆತುಕೊಂಡು, ಮರುಕ್ಷಣವೇ ಹೊರಕ್ಕೆ ಹರವಿಕೊಂಡು ಹಾರುತ್ತ.
“ನೋಡು, ಬಾವುಟ ಎಷ್ಟು ಚೆನ್ನಾಗಿದೆ!” ಎಂದು
ವಾಸಿಲಿ ಆಂಡ್ರೆವಿಚ್ ತನ್ನ ಕೆಲಸಕ್ಕೆ ತಾನೇ ಮೆಚ್ಚಿಕೆ ಸೂಸುತ್ತ ಬಂದು ಜಾರುಬಂಡಿಯಲ್ಲಿ ಹೋಗಿ
ಸೇರಿಕೊಂಡ. “ಒಳಗೆ ಇಬ್ಬರೂ ಬೆಚ್ಚಗಿರಬಹುದು; ಆದರೆ ಒಳಗೆ ಇಬ್ಬರಿಗೆ ಸಾಕಾಗೋ ಅಷ್ಟು ಜಾಗ ಇಲ್ಲ”
ಎಂದುಕೊಂಡ.
“ನಾನೊಂದು ಜಾಗ ಹುಡುಕ್ಕೋತೀನಿ. ಆದ್ರೆ ಮೊದಲು
ಕುದುರೆಗೆ ಏನಾದ್ರೂ ಹೊದ್ದಿಸ್ಬೇಕು. ಎಷ್ಟು ಕಷ್ಟಪಟ್ಟಿದೆ ಬಡಪ್ರಾಣಿ!” ಎಂದ ನಿಕಿಟ ವಾಸಿಲಿ
ಆಂಡ್ರೆವಿಚ್ ಅಡಿಯಲ್ಲಿದ್ದ ಹಾಸುಗಂಬಳಿಯನ್ನು ಹೊರತೆಗೆದ.
ಆ ಹಾಸುಗಂಬಳಿಯನ್ನು ಎರಡು ಮಡಿಕೆಯಾಗಿ ಮಡಿಸಿ
ಮುಖೋರ್ಟಿಗೆ ಹೊದ್ದಿಸಿದ.
“ಮುಂದೇನು, ಇನ್ನು ಸ್ವಲ್ಪ ಬೆಚ್ಚಗಿರ್ಬೋದು!”
ಎಂದು ಅದನ್ನು ಕಟ್ಟಿದ್ದ ದಾರವನ್ನು ಮೇಲಿಟ್ಟ. ಆ ಕೆಲಸ ಮುಗಿಸಿದ ಅವನು ಸ್ಲೆಜ್ ಬಳಿ ವಾಪಸಾಗಿ
ವಾಸಿಲಿ ಆಂಡ್ರೆವಿಚ್‍ಗೆ ಹೀಗೆಂದ: “ನಿಮಗೆ ಆ ಗೋಣಿಚೀಲ ಬೇಕಾ, ಬೇಡ ಅಲ್ವಾ? ಸ್ಪಲ್ಪ ಹುಲ್ಲು
ತೊಗೋತೀನಿ.”
ವಾಸಿಲಿ ಆಂಡ್ರೆವಿಚ್‍ನ ಅಡಿಯಲ್ಲಿದ್ದ ಇವನ್ನು
ತೆಗೆದುಕೊಂಡ ನಿಕಿಟ ಜಾರುಬಂಡಿಯ ಹಿಂಭಾಗಕ್ಕೆ ಹೋದ; ತನಗಾಗಿ ಹಿಮದಲ್ಲಿ ಒಂದು ಬಿಲವನ್ನು
ತೋಡಿಕೊಂಡ, ಅದರಲ್ಲಿ ಹುಲ್ಲು ಹಾಕಿ, ತನ್ನ ಕೋಟನ್ನು ಬಿಗಿಯಾಗಿ ಸುತ್ತಿಕೊಂಡು, ತಲೆಯ ಮೇಲೆ
ಗೋಣಿಚೀಲ ಹೊದ್ದು, ತನ್ನ ಟೋಪಿಯನ್ನು ಕೆಳಕ್ಕೆ ಸರಿಸಿಕೊಂಡು, ಬಿಲದಲ್ಲಿ ಹರಡಿದ್ದ ಹುಲ್ಲಿನ
ಮೇಲೆ ತಾನು ಕುಳಿತುಕೊಂಡು, ಜಾರುಬಂಡಿಯ ಮರದ ಹಿಂಬದಿಗೆ ಒರಗಿಕೊಂಡು ಗಾಳಿ-ಹಿಮಗಳಿಂದ ತನಗೆ
ರಕ್ಷಣೆ ಒದಗಿಸಿಕೊಂಡ.
ನಿಕಿಟ ಮಾಡುತ್ತಿರುವುದಕ್ಕೆ ತನ್ನ ಒಪ್ಪಿಗೆಯಿಲ್ಲವೆಂಬಂತೆ ವಾಸಿಲಿ ಆಂಡ್ರೆವಿಚ್
ತಲೆಯನ್ನು ಅಲ್ಲಾಡಿಸಿ, ಅವನ ಮೂರ್ಖತನಕ್ಕೂ ತಿಳಿವಳಿಕೆ ಸಾಲದ್ದಕ್ಕೂ ಅಸಂತೃಪ್ತಿ ವ್ಯಕ್ತಪಡಿಸಿ
ತಾನು ರಾತ್ರಿ ಉಳಿಯಲು ಸಿದ್ಧತೆ ನಡೆಸಿದ.
ಜಾರುಬಂಡಿಯ ಕೆಳಗೆ ಉಳಿದಿದ್ದ ಹುಲ್ಲನ್ನು ಸಮವಾಗಿ
ಹರಡಿಕೊಂಡ ಅವನು, ಹೆಚ್ಚಾಗಿ ಪಕ್ಕಗಳಲ್ಲಿರಿಸಿಕೊಂಡು ಸ್ವಲ್ಪ ಮೆತುವಾಗಿಸಿಕೊಂಡ. ಆನಂತರ
ತೋಳುಗಳಲ್ಲಿ ಕೈಗಳನ್ನು ಸೇರಿಸಿ, ಎದುರಿಗೆ ಬೀಸುತ್ತಿದ್ದ ಗಾಳಿಯಿಂದ ತಪ್ಪಿಸಿಕೊಳ್ಳಲು
ತಲೆಯನ್ನು ಜಾರುಬಂಡಿಯ ಒಂದು ಭಾಗದಲ್ಲಿರಿಸಿಕೊಂಡು ಉರುಳಿಕೊಂಡ.
ಅವನಿಗೆ ನಿದ್ದೆ ಮಾಡುವುದು ಬೇಕಿರಲಿಲ್ಲ. ಮಲಗಿಕೊಂಡು
ಯೋಚಿಸತೊಡಗಿದ: ಅವನಿಗೆ ಬರುತ್ತಿದ್ದ ಯೋಚನೆಯೆಂದರೆ ಒಂದೇ ವಿಷಯದ್ದು; ಅದೆಂದರೆ, ತನ್ನ ಬದುಕಿನ
ಸಂತೋಷ ಮತ್ತು ಹಿರಿಮೆಗಳು, ತಾನೆಷ್ಟು ದುಡ್ಡು ಮಾಡಿದ್ದೇನೆ, ಮತ್ತು ಮುಂದೆ ಎಷ್ಟು ಸಂಪಾದನೆ
ಮಾಡಬಹುದು, ತನ್ನ ಪರಿಚಯದ ಇತರರು ಎಷ್ಟು ಹಣ ಮಾಡಿದ್ದಾರೆ, ಮಾಡುತ್ತಿದ್ದಾರೆ, ತಾನೂ ಅವರಂತೆಯೇ
ಹೇಗೆ ಹೆಚ್ಚು ಸಂಪಾದನೆ ಮಾಡುವುದು – ಇದೇ.
ಗೊರ್ಯಾಚ್ಕಿನ್ ತೋಪನ್ನು ಕೊಳ್ಳುವುದು ಅವನಿಗೆ ಅತ್ಯಂತ ಮಹತ್ವದ ವಿಷಯವಾಗಿತ್ತು. ಆ
ವ್ಯವಹಾರದಿಂದ ತಾನು ಸುಮಾರು ಹತ್ತು ಸಾವಿರ ರೂಬಲ್‍ಗಗಳನ್ನು ಗಳಿಸಬಹುದೆಂಬುದು ಅವನ ಲೆಕ್ಕಾಚಾರ.
ಕಳೆದ ಮಾಗಿಕಾಲದಲ್ಲಿ ತಾನು ನೋಡಿದ್ದ ಆ ಜಾಗ, ಆ ಐದು ಎಕರೆ ಜಾಗದಲ್ಲಿ ತಾನು ಎಣಿಸಿದ್ದ ಮರಗಳು – ಎಲ್ಲ ಎಷ್ಟು ಬೆಲೆಬಾಳುತ್ತದೆಂದು ಅವನ ಮನಸ್ಸು ಲೆಕ್ಕ
ಹಾಕಲು ತೊಡಗಿತು.
‘ಓಕ್ ಮರಗಳನ್ನು ಸ್ಲೆಜ್ ಓಡಿಸುವವರು ಕೊಳ್ಳುತ್ತಾರೆ.
ಇನ್ನೂ ಬಲಿಯದ ಮರಗಳನ್ನು ಬಿಟ್ಟರೂ, ದೆಸ್ಯಾತಿನ್‍ಗೆ ಇನ್ನೂ ಮೂವತ್ತು ಸಜೀನ್‍ಗಳಷ್ಟು ಸೌದೆ
ಸಿಕ್ತದೆ. ಅಂದ್ರೆ, ಪ್ರತಿ ದೆಸ್ಯಾತಿನ್‍ಗೂ ಇನ್ನೂರಿಪ್ಪತ್ತೈದು ರೂಬಲ್‍ಗಳಷ್ಟು ಲಾಭ.
ಐವತ್ತಾರು ದೆಸ್ಯಾತಿನ್‍ಗಳೂಂದ್ರೆ ಐದು ಸಾವಿರದ ಆರುನೂರು, ಐದು ಸಾವಿರದ ಆರುನೂರು, ಅಲ್ದೆ ಐನೂರ
ಅರವತ್ತು, ಇನ್ನೂ ಐನೂರ ಅರವತ್ತು, ಆಮೇಲೆ ಐವತ್ತರೈದಲ .. ..’ ಎಂದುಕೊಂಡ. ಒಟ್ಟು ಲೆಕ್ಕ
ಹಾಕಿದರೆ ಹನ್ನೆರಡು ಸಾವಿರ ರೂಬಲ್‍ಗಳಿಗಿಂತ ಹೆಚ್ಚು, ಆದರೆ ಮಣಿಕಟ್ಟಿಲ್ಲದೆ ನಿಖರವಾಗಿ
ಲೆಕ್ಕಾಚಾರ ಮಾಡುವುದಕ್ಕೆ ಸಾಧ್ಯವಿಲ್ಲ. ‘ಕನಿಷ್ಠ ಹತ್ತು ಸಾವಿರವಂತೂ ಬರತ್ತೆ, ಖಾಲಿ ಜಾಗ
ಮಧ್ಯೆ ಮಧ್ಯೆ ಇರೋದ್ರಿಂದ ಎಂಟು ಸಾವಿರ ಕೊಡ್ತೀನಿ. ಸರ್ವೇಯರ್‍ನ ಕೈ ಬೆಚ್ಚಗೆ ಮಾಡ್ತೀನಿ -
ಒಂದು ನೂರು ಅಥವಾ ನೂರೈವತ್ತು ರೂಬಲ್ ಕೊಟ್ಟರಾಯ್ತು -
ಆಗ ಅವನು ಖಾಲಿ ಜಾಗಾನ ಐದು ದೆಸ್ಯಾಟಿನ್ ಅಂತ ಲೆಕ್ಕ ಹಾಕಿ ಉತ್ತಾರ ಹಾಕ್ತಾನೆ. ಅಂದ್ರೆ
ಎಂಟು ಸಾವಿರ ಅಂತ ಅವನು ನಿಗದಿಪಡಿಸ್ತಾನೆ. ಮೂರು ಸಾವಿರ ತಕ್ಷಣ ನಗದು. ಅದಕ್ಕವನು
ಒಪ್ಪಿಕೋತಾನೆ; ಭಯವಿಲ್ಲ! ತನ್ನ ಮೊಣಕೈಯಿಂದ ಜೇಬಲ್ಲಿ ಇಟ್ಟುಕೊಂಡಿದ್ದ ಹಣವನ್ನು ಒತ್ತಿಕೊಂಡ.
‘ನಾವು ತಿರುವನ್ನು ಹೇಗೆ ತಪ್ಪಿಸಿಕೊಂಡ್ವೋ ದೇವರೇ ಬಲ್ಲ.
ಅಲ್ಲಿ ಕಾಡು, ಕಾವಲುಗಾರನ ಗುಡಿಸಲು, ನಾಯಿಗಳು ಬೊಗಳು – ಇರಬೇಕಲ್ಲ. ಆದರೆ ಈ ನಾಯಿಗಳು ಬೇಕಾದಾಗ ಬೊಗಳೊಲ್ಲ.’ ಕಿವಿಯಿಂದ ಕಾಲರ್ ಅನ್ನು
ತಿರುಗಿಸಿ ಆಲಿಸಿದ, ಆದರೆ ಹಿಂದಿನಂತೆಯೇ ಗಾಳಿಯ ಶಿಳ್ಳೆ, ಕರ್ಚೀಫ್‍ನ ಪಟಪಟ ಹಾರಾಟದ ಸದ್ದು,
ಜಾರುಬಂಡಿಯ ಮರದ ಭಾಗಗಳ ಮೇಲೆ ಹಿಮ ಬೀಳುತ್ತಿದ್ದ ತೊಟತೊಟ ಶಬ್ದ ಮಾತ್ರ ಕೇಳಿಸುತ್ತಿತ್ತು.
ಮತ್ತೆ ಕಿವಿ ಮುಚ್ಚಿಕೊಂಡ
‘ಹೀಗಾಗತ್ತೆಂತ ಗೊತ್ತಿದ್ದಿದ್ರೆ ರಾತ್ರಿ ಅಲ್ಲೇ ಉಳುಕೋತಾ
ಇದ್ದೆ. ಇರಲಿ, ಪರವಾಯಿಲ್ಲ, ನಾಳೆ ಅಲ್ಲಿಗೆ ಹೋಗ್ತೀವಲ್ಲ. ಒಂದೇ ದಿನ ತಾನೇ ತಡವಾಗಿರೋದು,
ಬೇರೆಯೋರು ಯಾರೂ ಇಂಥ ಹವಾಮಾನದಲ್ಲಿ ಪ್ರಯಾಣ ಮಾಡಲ್ಲ’ ಅಂದುಕೊಂಡ ಅವನಿಗೆ, ತನ್ನ ಎತ್ತುಗಳಿಗಾಗಿ
ಕಸಾಯಿಯಿಂದ ಒಂಬತ್ತನೇ ತಾರೀಕು ಬರಬೇಕಾದ ಬಾಕಿ ಹಣ ನೆನಪಿಗೆ ಬಂತು. “ತಾನೇ ಬರ್ಬೇಕು ಅಂತ ಇದ್ದ
ಅವನು, ಆದ್ರೆ ಬಂದ್ರೆ ನಾನು ಸಿಕ್ಕಲ್ಲ, ನನ್ನ ಹೆಂಡತೀಗೋ ದುಡ್ಡನ್ನು ಹೇಗೆ ತಗೋಬೇಕೂಂತ
ಗೊತ್ತಾಗಲ್ಲ. ಸರಿಯಾಗಿ ಯಾವ ಕೆಲಸ ಮಾಡಕ್ಕೂ ಅವಳಿಗೆ ಗೊತ್ತಾಗಲ್ಲ’ ಅನ್ನಿಸಿತು, ಹಿಂದೆಯೇ
ಹಿಂದಿನ ದಿನ ತಮ್ಮ ಮನೆಯಲ್ಲಿ ನಡೆದಿದ್ದ ಪಾರ್ಟಿಯಲ್ಲಿ ತಮ್ಮ ಅತಿಥಿಯಾಗಿ ಬಂದಿದ್ದ ಪೋಲೀಸ್
ಅಧಿಕಾರಿಯನ್ನು ಹೇಗೆ ಸತ್ಕರಿಸಬೇಕು ಅನ್ನೋದು ಅವಳಿಗೆ ಗೊತ್ತಿಲ್ಲದಿದ್ದುದು ನೆನಪಾಯಿತು.
‘ಎಷ್ಟಾದ್ರೂ ಆಗಲಿ ಅವಳು ಹೆಂಗಸು! ಇದನ್ನೆಲ್ಲ ನೋಡಕ್ಕೆ ಅವಳಿಗೆ ಎಲ್ಲಿ ಅವಕಾಶ? ನಮ್ಮಪ್ಪನ
ಕಾಲ್ದಲ್ಲಿ ನಮ್ಮ ಮನೆ ಹೇಗಿತ್ತು? ಒಬ್ಬ ರೈತನ ಮನೆ ತರಹ, ಅಷ್ಟೆ. ಒಂದು ಓಟ್‍ಮಿಲ್ ಮತ್ತು ಇನ್ – ಇದ್ದ ಆಸ್ತಿ ಅಂದ್ರೆ ಅಷ್ಟೆ. ಕಳೆದ ಹದಿನೈದು ವರ್ಷದಲ್ಲಿ
ನಾನೇನು ಮಾಡಿದ್ದೀನಿ ಮನೇಲೆ ಅಂದ್ರೆ, ಒಂದು ಅಂಗಡಿ, ಎರಡು ಪ್ರವಾಸಿ ಹೋಟಲ್‍ಗಳು, ನಾಲ್ಕು ಮಿಲ್‍ಗಳು,
ಒಂದು ಕಿರಾಣಿ ಅಂಗಡಿ, ಗುತ್ತಿಗೆ ಕೊಟ್ಟಿರೋ ಎರಡು ಜಮೀನು, ಕಬ್ಬಿಣದ ಸೂರಿರೋ ದೊಡ್ಡ ಮನೆ’
ಎಂದುಕೊಂಡ ಹೆಮ್ಮೆಯಿಂದ. “ಈಗ ಮನೆ ಅಪ್ಪನ ಕಾಲ್ದಲ್ಲಿದ್ದ ಹಾಗಿಲ್ಲ! ನಮ್ಮ ಊರಿನ
ಸುತ್ತುಮುತ್ತಲೆಲ್ಲ ಜನ ಯಾರ ಬಗ್ಗೆ ಮಾತಾಡ್ಕೋತಾರೆ! ಬ್ರೆಖ್ಯುನೊವ್ ಬಗ್ಗೆ. ಯಾಕೆ? ಯಾಕೇಂದ್ರೆ
ನಾನು ವ್ಯವಹಾರಕ್ಕೆ ಅಂಟಿಕೊಂಡಿರೋನು ಅಂತ. ಕಷ್ಟ ಪಡ್ತೀನಿ, ಬರೀ ನಿದ್ದೆ ಹೊಡೀತ ತಮ್ಮ ಕಾಲ
ಕಳೆಯೋ ಮೂರ್ಖರ ರೀತಿ ಅಲ್ಲ ನಾನು, ರಾತ್ರಿಯೆಲ್ಲ ನಿದ್ದೆ ಕೆಡ್ತೀನಿ. ಹವಾ ಹೇಗಿದ್ರೂ ಹೊರಗೆ
ಹೋಗ್ತೀನಿ, ಆದ್ರಿಂದ ವ್ಯವಹಾರ ಕುದುರುತ್ತೆ. ದುಡ್ಡು ಮಾಡೋದೂಂದ್ರೆ ತಮಾಷೆ ಅಂದ್ಕೊಂಡಿದಾರೆ
ಅವರೆಲ್ಲ. ಉಹ್ಞೂ, ತೊಂದ್ರೆ ತಗೋಬೇಕು, ತಲೆ ಓಡಿಸ್ಬೇಕು! ರಾತ್ರಿ ಮನೆ ಹೊರಗೆ ಇವತ್ತಿನ ಹಾಗೆ
ಕಷ್ಟಗಳು ಬರತ್ವೆ, ಅಥವಾ ರಾತ್ರಿಯೆಲ್ಲ ನಿದ್ದೆ ಕಟ್ಟಿರ್ಬೇಕು, ತಲೇಲಿ ಬರೋ ಆಲೋಚನೆಗಳೆಲ್ಲ
ಒಂದು ರೂಪಕ್ಕೆ ಬರೋವರೆಗೂ’ ಎಂದು ಹೆಮ್ಮೆಯಿಂದ ಅಂದುಕೊಂಡ. ‘ಅದೃಷ್ಟ ಇದ್ರೆ ಎಲ್ಲ ಆಗತ್ತೆ ಅಂದ್ಕೋತಾರೆ
ಜನ. ಮಿರೋನೋವ್ ಮನೆಯವರೀಗ ಕೋಟ್ಯಾಧಿಪತಿಗಳು. ಯಾಕೆ? ಕಷ್ಟಪಟ್ಟರೆ ದೇವರು ಕೊಡ್ತಾನೆ. ಅವನು
ಆರೋಗ್ಯ ಕೊಡ್ಬೇಕು ಅಷ್ಟೆ.’ ಆರಂಭದಲ್ಲಿ ಏನೂ ಇಲ್ಲದಿದ್ದ ಮೊರೋನೋವ್ ಥರ ತಾನೂ
ಕೋಟ್ಯಧಿಪತಿಯಾಗಬಹುದು ಅನ್ನುವ ಕಲ್ಪನೆಯೇ ವಾಸಿಲಿ ಆಂಡ್ರೆವಿಚ್‍ನಲ್ಲಿ ಸಡಗರ ತುಂಬಿತು, ಈಗ
ಯಾರದಾದರೂ ಜೊತೆಯಲ್ಲಿ ಮಾತಾಡಬೇಕು ಎಂದು ಅವನಿಗನ್ನಿಸಿತು. ಆದರೆ ಯಾರೂ ಜೊತೇಲಿ ಇಲ್ಲವಲ್ಲ ...
ಗೊರ್ಯಾಚ್ಕಿನ್ ಅನ್ನು ತಲುಪಿಬಿಟ್ಟಿದ್ರೆ ಭೂಮಾಲೀಕನ ಜೊತೆ ಮಾತಾಡಿ ತನ್ನ ಜಾಣ್ಮೆ
ತೋರಿಸಬಹುದಾಗಿತ್ತು.
ಜಾರುಬಂಡಿಯನ್ನ ಬಾಗಿಸಿ ಅದಕ್ಕೆ ಹಿಮ ರಾಚುವ ಹಾಗೆ ಬೀಸುವ
ಗಾಳಿಯ ರಭಸ ನೋಡಿ, ‘ಈ ಗಾಳಿ ನೋಡು ಹೇಗೆ ಬೀಸತ್ತೇಂತ! ಈ ಹಿಮ ನಮ್ಮನ್ನ ಎಷ್ಟು ಮಟ್ಟಿಗೆ
ಮುಚ್ಚಿಬಿಡತ್ತೆ ಅಂದ್ರೆ ಬೆಳಗ್ಗೆ ಎದ್ದು ಬರಕ್ಕೆ ಆಗಕೂಡದು, ಹಾಗೆ!’ ಅಂದುಕೊಂಡ. ಸ್ವಲ್ಪ
ಮೇಲೆದ್ದು ಸುತ್ತಲೂ ನೋಡಿದ. ಗವ್ವಂತ ತುಂಬಿದ್ದ ಕತ್ತಲೆಯಲ್ಲಿ ಅವನಿಗೆ ಕಾಣಿಸಿದ್ದು ಮುಖೋರ್ಟಿಯ
ಕಪ್ಪಾದ ತಲೆ, ಪಟಪಟ ಅಂತ ಹೊಡಕೋತ ಇದ್ದ ಅದರ ಬೆನ್ನ ಮೇಲೆ ಹೊದಿಸಿದ್ದ ಹಾಸುಗಂಬಳಿ ಮತ್ತದರ
ದಪ್ಪನಾದ ಹುರಿಬಾಲ. ಉಳಿದಂತೆ, ಹಿಂದೆ ಮುಂದೆ, ಅದೇ ಬದಲಾಗುತ್ತಿದ್ದ ಬಿಳಿಪು ಕತ್ತಲೆ, ಈಗ
ತಿಳಿಯಾದ ಹಾಗೆ ಕಾಣಿಸಿ ಮತ್ತೆ ಕೆಲವು ಸಲ ಕವಿಯುವ ಕಗ್ಗತ್ತಲು.
‘ನಾನು ನಿಕಿಟನ ಮಾತು ಕೇಳಿ ಕೆಟ್ಟೆ, ನಾವು ಮುಂದೆ
ಹೋಗಿಬಿಡಬೇಕಾಗಿತ್ತು, ಎಲ್ಲೋ ಒಂದು ಕಡೆ ಹೋಗ್ಬಿಡ್ತಿದ್ದಿವಿ, ಗ್ರಿಶ್ಕಿನೋಗೆ ಹೋಗಿದ್ದಿದ್ರೂ
ರಾತ್ರಿ ತಾರಾಸ್ ಅವರ ಮನೆಯಲ್ಲಿದ್ದುಬಿಡಬಹುದಾಗಿತ್ತು. ಈಗಾದರೋ, ರಾತ್ರಿಯೆಲ್ಲ ಇಲ್ಲೇ ಕೂತು
ಕಳೀಬೇಕು. ನಾನೇನು ಯೋಚ್ನೆ ಮಾಡ್ತಿದ್ದೇ? ಹ್ಞಾ, ಕಷ್ಟಪಡೋರಿಗೇ ದೇವ್ರು ಸಂಪತ್ತು ಕೊಡೋದು,
ಉಂಡಾಡಿಗಳಿಗಲ್ಲ, ನಿದ್ದೆ ಹೊಡೆಯೋ ಸೋಮಾರಿಗಳಿಗಲ್ಲ, ಮೂರ್ಖರಿಗಲ್ಲ. ಈಗ ಒಂದು ಸಿಗರೇಟು
ಹಚ್ಚಬೇಕು!’
ಮತ್ತೆ ಕುಳಿತುಕೊಂಡ ಅವನು, ತನ್ನ ಸಿಗರೇಟ್
ಕೇಸನ್ನು ಹೊರತೆಗೆದು, ಹೊಟ್ಟೆಮೇಲೆ ಮಲಗಿ, ಕಡ್ಡಿ ಗೀರಿ ತನ್ನ ಕೋಟಿನ ಚುಂಗಿನಿಂದ
ಮರೆಮಾಡಿಕೊಂಡ. ಆದರೆ ಗಾಳಿ ಹೇಗೋ ದಾರಿಮಾಡಿಕೊಂಡು ನುಗ್ಗಿ ಎಷ್ಟು ಸಲ ಕಡ್ಡಿ ಗೀರಿ
ಹೊತ್ತಿಸಿದರೂ ಆರಿಸಿಬಿಡುತ್ತಿತ್ತು. ಕೊನೆಗೆ ಒಂದು ಕಡ್ಡಿ ಉರಿಯಕ್ಕೆ ತೊಡಗಿತು, ಅದರಿಂದ
ಸಿಗರೇಟು ಹೊತ್ತಿಸಿಕೊಂಡ. ತನಗೆ ಬೇಕಾದುದನ್ನು ಮಾಡಿದ ಗೆಲವು ಅವನನ್ನು ತುಂಬಿತ್ತು, ತನಗಿಂತ
ಗಾಳಿಯೇ ಹೆಚ್ಚು ಹೊಗೆ ಕುಡಿದಿದ್ದರೂ, ಎರಡು ಮೂರು ದಮ್ಮು ಎಳೆದು ಹೆಚ್ಚು ಉತ್ತೇಜಿತನಾದ. ಮತ್ತೆ
ಹಿಂದಿನಂತೆ ಒರಗಿ ಕೂತ, ಮೈಮೇಲೆ ಸರಿಯಾಗಿ ಹೊದ್ದ, ಮತ್ತೆ ಯೋಚನೆ-ನೆನಪುಗಳಲ್ಲಿ ಮುಳುಗಿದ. ಆದರೆ
ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಅವನು ನಿದ್ದೆಯ ಆಳದಲ್ಲಿ ಬಿದ್ದ.
ಇದ್ದಕ್ಕಿದ್ದ ಹಾಗೆ ಏನೋ ತನ್ನನ್ನು ನೂಕಿದ ಹಾಗೆ
ಅನ್ನಿಸಿ ಎಚ್ಚರಗೊಂಡ. ತನ್ನ ಕೆಳಗಿದ್ದ ಹುಲ್ಲನ್ನು ಎಳೆದದ್ದು ಮುಖೋರ್ಟಿಯೋ, ಆಥವಾ ತನ್ನೊಳಗಿನ
ಏನೋ ಒಂದು ತನ್ನನ್ನು ಗಾಬರಿಗೊಳಿಸಿತೋ, ಅಂತೂ ಅವನು ಎಚ್ಚೆತ್ತು ಕೂತ. ಅವನ ಹೃದಯ ಹೆಚ್ಚೆಚ್ಚು
ಜೋರಾಗಿ ಬಡಿದುಕೊಳ್ಳತೊಡಗಿತು, ಇದರಿಂದ ಜಾರುಬಂಡಿ ತನ್ನಡಿಯಲ್ಲಿ ನಡುಗುತ್ತಿದೆಯೇನೋ ಅನ್ನಿಸಿತು.
ತನ್ನ ಕಣ್ಣುಗಳನ್ನು ಬಿಟ್ಟ. ಆದರೆ ಸುತ್ತಲೂ ಎಲ್ಲ ಹಿಂದಿದ್ದಂತೆಯೇ ಇದ್ದುವು. ‘ಈಗ ಸ್ವಲ್ಪ
ತಿಳಿಯಾಗಿದೆ, ಇನ್ನೇನು ಸ್ವಲ್ಪ ಹೊತ್ತಲ್ಲೇ ಬೆಳಕು ಹರಿದುಬಿಡತ್ತೆ’ ಅನ್ನಿಸಿತು. ಆದರೆ ಆಕಾಶ
ತಿಳಿಯಾಗಿರುವುದು ಚಂದ್ರ ಕಾಣಿಸಿಕೊಂಡಿರುವುದರಿಂದ ಎಂಬುದು ಗೊತ್ತಾಯಿತು. ಮೇಲೆದ್ದು ಕೂತು
ಮೊದಲು ಕುದುರೆಯ ಕಡೆ ಕಣ್ಣೋಡಿಸಿದ. ಗಾಳಿಗೆ ಬೆನ್ನೊಡ್ಡಿಕೊಂಡು ಮುಖೋರ್ಟಿ ನಿಂತಿತ್ತು, ಪಾಪ
ನಡುಗುತ್ತಿತ್ತು. ಪೂರ್ತಿ ಹಿಮ ಆವರಿಸಿದ್ದ ಒಂದು ಕಡೆಯ ಹಾಸುಗಂಬಳಿ ಹಿಂದಕ್ಕೆ ಸರಿದು
ಪಿರ್ರೆಯಿಂದ ಕೆಳಗಿಳಿದಿತ್ತು. ಮುಂಗೂದಲು ಹಾಗೂ ಜೂಲು ತೊನೆದಾಡುತ್ತಿದ್ದ ಅದರ ತಲೆ
ಹಿಮಾಚ್ಛಾದಿತವಾಗಿ ಈಗ ಹೆಚ್ಚು ಸ್ಪಷ್ಟವಾಗಿ ಕಾಣುತ್ತಿತ್ತು. ವಾಸಿಲಿ ಆಂಡ್ರೆವಿಚ್ ಜಾರುಬಂಡಿಯ
ಹಿಂದಕ್ಕೆ ಒರಗಿಕೊಂಡು ಹಿಂದೆ ದೃಷ್ಟಿ ಹಾಯಿಸಿದ. ನಿಕಿಟ ಹಿಂದೆ ಇದ್ದ ಭಂಗಿಯಲ್ಲೇ ಇನ್ನೂ
ಕೂತಿದ್ದ. ಅವನನ್ನು ಮುಚ್ಚಿದ್ದ ಗೋಣಿಪಟ್ಟೆ, ಅವನ ಕಾಲುಗಳ ಮೇಲೆ ದಟ್ಟವಾಗಿ ಹಿಮ ಬಿದ್ದಿತ್ತು.
‘ಈ ಬಡಪಾಯಿ ಮೈಯೆಲ್ಲ ಹಿಮಗಟ್ಟಿ ಸತ್ತೇಬಿಡ್ತಾನೋ
ಏನೋ! ಅವನ ಬಟ್ಟೆಗಳೋ ಹರಿದು ಜೂಲಾಗಿವೆ. ಅವನಿಗೇನಾದ್ರೂ ಆದ್ರೆ ನಾನೇ ಹೊಣೆಗಾರನಾಗಬೇಕಾಗತ್ತೆ.
ಎಂಥ ಕೆಲಸಕ್ಕೆ ಬಾರದ ವಿದ್ಯೆ ಇಲ್ಲ ಜನ’ ಅಂದುಕೊಂಡ ವಾಸಿಲಿ ಆಂಡ್ರೆವಿಚ್. ಕುದುರೆಯ ಮೈಮೇಲಿದ್ದ
ಹಾಸುಗಂಬಳಿಯನ್ನು ತೆಗೆದು ನಿಕಿಟನಿಗೆ ಹೊದಿಸಬೇಕೆನಿಸಿತು ಅವನಿಗೆ; ಆದರೆ ಗಾಡಿ ಇಳಿದು ಹೊರಗೆ
ಹೋಗಲು ತುಂಬ ಚಳಿ, ಜೊತೆಗೆ ಕುದುರೇನೇ ಚಳಿಯಿಂದ ಸತ್ತುಹೋಗಿಬಿಟ್ಟರೆ! ‘ನನ್ನ ಜೊತೆ ಅವನನ್ನು
ಕರ್ಕೊಂಡು ಬಂದ ನಾನೆಂಥ ಮೂರ್ಖ!’ ಎಂದುಕೊಂಡ. ತಾನು ಪ್ರೀತಿಸದ ಹೆಂಡತಿಯ ಜ್ಞಾಪಕ ಬಂತು, ತಾನು
ಹಿಂದಿದ್ದ ಜಾರುಬಂಡಿಯ ಮುಂಭಾಗಕ್ಕೆ ಜರುಗಿಕೊಂಡ. “ನಮ್ಮ ಮಾವನೂ ಹಿಂದೊಂದು ಸಲ ಹೀಗೇನೇ
ರಾತ್ರೀನೆಲ್ಲ ಕಳೆದಿದ್ದ, ಆದ್ರೂ ಅವಂಗೇನೂ ಆಗಿರಲಿಲ್ಲ’ ಎಂಬುದು ನೆನಪಿಗೆ ಬಂತು. ತಕ್ಷಣವೇ
ಇನ್ನೊಂದು ಪ್ರಸಂಗ ನೆನಪಿಗೆ ಬಂತು –
‘ಆದ್ರೆ ಸೆಬಾಸ್ಟಿಯನ್‍ನ ಒಳಗಿಂದ ಮೇಲೆತ್ತಿದಾಗ ಅವನು ಸತ್ತಿದ್ದ - ಹೆಪ್ಪುಗಟ್ಟಿದ್ದ
ಹೆಣವಾಗಿದ್ದ. ಇವತ್ತು ರಾತ್ರಿ ಗ್ರಿಶ್ಕಿನೋದಲ್ಲೇ ಇದ್ದಿದ್ರೆ ಈ ಅವಸ್ಥೆ ಬರ್ತಿರ್ಲಿಲ್ಲ!’
ಯಾವೆಡೆಯಲ್ಲಿಯೂ - ಕತ್ತು, ಮಂಡಿ, ಪಾದಗಳು - ತುಪ್ಪುಳದ
ಬಿಸಿಪು ಯಾವ ರೀತಿಯಲ್ಲೂ ವ್ಯರ್ಥವಾಗದಂತೆ ಸುತ್ತಲೂ ಕೋಟನ್ನು ಬಿಗಿಗೊಳಿಸಿಕೊಳ್ಳುತ್ತ, ಮತ್ತೆ
ಕಣ್ಮುಚ್ಚಿಕೊಂಡು ನಿದ್ದೆ ಮಾಡಲು ಪ್ರಯತ್ನಿಸಿದ. ಆದರೆ ಎಷ್ಟು ಪ್ರಯತ್ನಪಟ್ಟರೂ ಜೋಂಪು ಕೂಡ
ಹತ್ತಲಿಲ್ಲ, ತದ್ವಿರುದ್ಧವಾಗಿ ಇನ್ನೂ ಹೆಚ್ಚು ಎಚ್ಚರವಾದಂತಾಯಿತು. ಮತ್ತೆ ತನ್ನ ಲಾಭ ಮತ್ತು
ತನಗೆ ಬರಬೇಕಾದ ಬಾಕಿಗಳ ಕುರಿತೇ ಯೋಚಿಸಲುತೊಡಗಿದ. ತನ್ನ ಬಗ್ಗೆ ತನ್ನಲ್ಲೇ ಬಡಾಯಿ ಕೊಚ್ಚಿಕೊಳ್ಳುತ್ತ
ತನ್ನ ಮತ್ತು ತನ್ನ ಇರುವಿಕೆಯ ಬಗ್ಗೆ ಸಂತುಷ್ಟನಾಗಲು ನೋಡಿದ, ಆದರೆ ಯಾವ ಮಾಯದಲ್ಲೋ ಬಂದು
ಆವರಿಸುತ್ತಿದ್ದ ಭಯ ಮತ್ತು ತಾವು ಗ್ರಿಶ್ಕಿನೋದಲ್ಲಿಯೇ ಉಳಿಯಲಿಲ್ಲವಲ್ಲ ಎಂಬ ಭಾವನೆ ಅವನ
ಮನಸ್ಸನ್ನು ತಲ್ಲಣಗೊಳಿಸುತ್ತಿದ್ದುವು.
‘ಒಂದು ಬೆಂಚಿನ ಮೇಲೆ ಬೆಚ್ಚಗೆ ಮಲಗಿಕೊಂಡಿದ್ದರೆ ಎಷ್ಟು
ಚೆನ್ನ!’ ಬೀಸುವ ಗಾಳಿಯಿಂದ ಪಾರಾಗಲು ಕಾಲುಗಳಿಗೆ ಮತ್ತಷ್ಟು ಬಿಗಿಯಾಗಿ ಸುತ್ತಿಕೊಂಡು ಹೆಚ್ಚು
ಆರಾಮದಾಯಕವಾದ ಭಂಗಿಯಲ್ಲಿ ಕುಳಿತುಕೊಳ್ಳಲು ಮಾಡುವ ಪ್ರಯತ್ನದಲ್ಲಿ ಅನೇಕ ಸಲ ಮಗ್ಗುಲು ಬದಲಿಸಿ
ಕಣ್ಣುಗಳನ್ನು ಮುಚ್ಚಿಕೊಂಡು ಅಲ್ಲಾಡದೆ ಕುಳಿತ. ಒಂದೇ ಕಡೆ ಕುಳಿತಿದ್ದರಿಂದಾಗಿ ಗಟ್ಟಿ
ಬೂಟುಗಳಲ್ಲಿನ ಕಾಲುಗಳು ನೋಯತೊಡಗಿತ್ತು, ಎಲ್ಲೋ ಒಂದೆಡೆಯಿಂದ ಗಾಳಿ ಬೀಸಿ ಚಳಿ
ಹೆಚ್ಚುತ್ತಿತ್ತು. ಹೀಗೆ ಅಲ್ಲಾಡದೆ ಒಂದೇ ಕಡೆ ಸ್ವಲ್ಪ ಹೊತ್ತು ಕೂತಿದ್ದು ಮತ್ತೆ ಅವನ
ಮನಸ್ಸಿನಲ್ಲಿ ತಾನು ಗ್ರಿಶ್ಕಿನೋದಲ್ಲೇ ಉಳಿದುಕೊಂಡಿದ್ದರೆ ಇಷ್ಟು ಹೊತ್ತಲ್ಲಿ ನಿರುಮ್ಮಳವಾಗಿ
ನಿದ್ದೆ ಮಾಡಬಹುದಾಗಿತ್ತೆಂಬ ಯೋಚನೆ ಮನಸ್ಸನ್ನು ಕಲಕಿತು. ಮತ್ತೆ ಎದ್ದು ಕುಳಿತ, ಮಗ್ಗುಲು
ಬದಲಿಸಿದ, ಮುದುರಿಕೊಂಡು ಮತ್ತೆ ಕೂತ.
ದೂರದಲ್ಲಿ
ಕೋಳಿ ಕೂಗು ಕೇಳಿಸಿತೆಂಬ ಭ್ರಮೆ ಒಮ್ಮೆ ಉಂಟಾಯಿತು. ಅವನಿಗೆ ಸಂತೋಷವಾಯಿತು, ಕೋಟ್‍ನ ಕಾಲರನ್ನು
ಕೆಳಗಿಳಿಸಿ ಕತ್ತು ನೋಯುವಂತೆ ಚಾಚಿಕೊಂಡ ಆಲಿಸಿದ, ಆದರೆ ಎಷ್ಟೇ ಪ್ರಯತ್ನಪಟ್ಟರೂ, ಗಾಡಿಯ ಮೂಕಿಯ
ಮಾಲೆ ಶಿಳ್ಳೆ ಹೊಡೆಯುತ್ತ ಬೀಸುತ್ತಿದ್ದ ಗಾಳಿ, ಹಾರಾಡುತ್ತಿದ್ದ ಕರ್ಚೀಫಿನ ಪಟಪಟ, ಜಾರುಬಂಡಿಯ
ಚೌಕಟ್ಟಿಗೆ ಬಡಿಯುತ್ತಿದ್ದ ಹಿಮಗಳ ಸದ್ದುಗಳ
ಹೊರತು ಬೇರೇನೂ ಕೇಳಿಸಲಿಲ್ಲ.
ಮೊದಲಿಂದ ಕೂತಂತೆಯೇ ನಿಕಿಟ ಈಗಲೂ ಕೂತಿದ್ದ, ಅಲ್ಲಾಡದೆ
ಮಾತ್ರವಲ್ಲ, ಒಂದೆರಡು ಬಾರಿ ಮಾತಾಡಿಸಲು ಪ್ರಯತ್ನಿಸಿದ ವಾಸಿಲಿ ಆಂಡ್ರೆವಿಚ್‍ನ ಮಾತಿಗೂ
ಉತ್ತರಿಸದೆ ಕೂತಿದ್ದ. “ಅವನಿಗೆ ಕೇಳಿಸ್ತಿಲ್ಲ, ನಿದ್ದೆ ಹೋಗಿದಾನೋ ಏನೋ” ಎಂದುಕೊಂಡ ವಾಸಿಲಿ
ಆಂಡ್ರೆವಿಚ್ ಚಡಪಡಿಕೆಯಿಂದ ದಪ್ಪ ಹಿಮದ ಹೊದಿಕೆಯು ಮುಸುಕಿದ್ದ ಜಾರುಬಂಡಿಯ ಹಿಂಭಾಗ ಹಾಗೂ
ನಿಕಿಟನ ಕಡೆ ನೋಡಿದ.
ಮತ್ತೆ ಇಪ್ಪತ್ತು ಇಪ್ಪತ್ತೈದು ಬಾರಿ ವಾಸಿಲಿ ಆಂಡ್ರೆವಿಚ್
ಕೂತ, ಎದ್ದ. ರಾತ್ರಿ ಮುಗಿಯುವುದೇ ಇಲ್ಲ ಎನಿಸಿತು. ‘ಇನ್ನೇನು ಬೆಳಗಾಗತ್ತೇಂತ ಕಾಣತ್ತೆ, ನನ್ನ
ಗಡಿಯಾರವನ್ನ ನೋಡಿಕೊಳ್ಳೋಣ. ಆದ್ರೆ ಗುಂಡಿ ಬಿಚ್ಚಿದ್ರೆ ಚಳಿ ಹೆಚ್ಚಾಗತ್ತೆ, ಬೆಳಗಾಗ್ತಿದೆ
ಅನ್ನೋದು ಗೊತ್ತಾದ್ರೆ ಎಷ್ಟೋ ಹಾಯನಿಸತ್ತೆ. ಗಾಡಿ ಕಟ್ಟಬಹುದು’ ಅಂದುಕೊಂಡ ಸುತ್ತಲೂ ನೋಡುತ್ತ.
ತನ್ನ ಮನದಾಳದಲ್ಲಿ ಬೆಳಿಗ್ಗೆ ಅಷ್ಟು ಹತ್ತಿರವಿಲ್ಲ ಎಂಬ
ಅರಿವು ವಾಸಿಲಿ ಆಂಡ್ರೆವಿಚ್‍ಗೆ ಗೊತ್ತಿತ್ತು, ಆದರೆ ಕಾಲ ಸರಿಯುತ್ತ ಅವನಲ್ಲಿ ಭಯ ಹೆಚ್ಚಾಗುತ್ತಿತ್ತು,
ಆದರೂ ಎದ್ದು ನೋಡಬೇಕೆನ್ನುವ ಇದು ಆತ್ಮವಂಚನೆ ಎನ್ನುವ ಭಾವನೆಯ ತುಯ್ದಾಟದಲ್ಲಿ ಸಿಲುಕಿದ. ತನ್ನ
ತುಪ್ಪುಳುಗಂಬಳಿಯನ್ನು ಎಚ್ಚರದಿಂದ ಸಡಿಲಗೊಳಿಸಿಕೊಂಡು ಒಳಗೆ ಕೈ ತೂರಿಸಿದ, ಆದರೆ ಎಷ್ಟು
ಹೊತ್ತಾದರೂ gತನ್ನ ವೇಸ್ಟ್ ಕೋಟನ್ನು ಕೈ ತಲುಪಲಿಲ್ಲ. ಬಹಳ ಪ್ರಯಾಸದಿಂದ ಎನಾಮಲ್‍ನ ಹೂ
ವಿನ್ಯಾಸವಿದ್ದ ತನ್ನ ಬೆಳ್ಳಿಯ ಗಡಿಯಾರವನ್ನು ಹೊರತೆಗೆಯುವುದರಲ್ಲಿ ಕೊನೆಗೂ ಸಫಲನಾಗಿ, ಗಂಟೆ
ಎಷ್ಟೆಂದು ನೋಡಿಕೊಳ್ಳಲು ಯತ್ನಿಸಿದ. ಆದರೆ ಬೆಳಕಿಲ್ಲದೆ ಏನೂ ಕಾಣುತ್ತಿರಲಿಲ್ಲ. ಸಿಗರೇಟು
ಹೊತ್ತಿಸಿಕೊಂಡಾಗಿನಂತೆ ಮತ್ತೆ ಮೊಳಕಾಲು-ಮೊಳಕೈಗಳ ಮೇಲೆ ಭಾರ ಊರಿ ಕೂತು ಬೆಂಕಿಕಡ್ಡಿಯನ್ನು
ಹೊರತೆಗೆದು ಗೀರಲು ಪ್ರಯತ್ನಿಸಿದ. ಈ ಸಲ ಅವನು ಹೆಚ್ಚು ಮುತುವರ್ಜಿ ವಹಿಸಿದ್ದ, ಬೆರಳುಗಳಿಂದ
ಮುಟ್ಟಿ ಮುಟ್ಟಿ ಹೆಚ್ಚು ಗುಂಡಗಿನ ತಲೆಯ ಕಡ್ಡಿಯನ್ನು ಆಯ್ದುಕೊಂಡು ಮೊದಲ ಗೀರಿನಲ್ಲಿಯೇ
ಹೊತ್ತಿಸಲು ಸಫಲನಾದ. ಆ ಬೆಳಕಿನಲ್ಲಿ ತಲೆ ಬಾಗಿಸಿ ಗಡಿಯಾರದ ಕಡೆ ನೋಡಿದರೆ, ತನ್ನ ಕಣ್ಣನ್ನೇ
ಅವನು ನಂಬಲಾಗಲಿಲ್ಲ! ಮಧ್ಯರಾತ್ರಿಗಿನ್ನೂ ಹತ್ತು ನಿಮಿಷಗಳಿದ್ದುವು. ಅಂದರೆ ಬಹುತೇಕ ರಾತ್ರಿ ಅವನೆದುರಿಗೆ
ಅಟ್ಟಹಾಸ ಮಾಡುತ್ತ ನಿಂತಿತ್ತು.
“ಓ, ಈ ರಾತ್ರಿ ಎಷ್ಟು ನೀಳವಾದ್ದು!” ಅಂದುಕೊಂಡ.
ಬೆನ್ನಲ್ಲಿ ಚಳುಕು ಹರಿದುಹೋದಂತಾಯಿತು. ಮತ್ತೆ ತನ್ನ ತುಪ್ಪುಳು ಕೋಟನ್ನು ಬಿಗಿಗೊಳಿಸಿಕೊಂಡು,
ಜಾರುಬಂಡಿಯ ಒಂದು ಮೂಲೆಗೆ ಆತುಕೊಂಡು ತಾಳ್ಮೆಯಿಂದ ಬೆಳಕು ಹರಿಯುವುದನ್ನು ಕಾಯಬೇಕೆಂದುಕೊಂಡು
ಕೂತ. ಆದರೆ ಇದ್ದಕ್ಕಿದ್ದಂತೆ, ಗಾಳಿಯ ಏಕತಾನದ ಬೀಸುವಿಕೆಯನ್ನು ಮೀರಿಸುವಂತೆ ಅವನಿಗೆ ಸ್ಪಷ್ಟವೂ
ಗುರುತಿಸಬಹುದಾದುದೂ ಆದ ಹೊಸ ಪ್ರಾಣಿಯ ದನಿಯೊಂದು ಕೇಳಿಸಿತು. ನಿಧಾನವಾಗಿ ದನಿ ಹೆಚ್ಚತೊಡಗಿತು.
ಅದು ತೋಳನ ಊಳುವಿಕೆಯೆಂಬುದರಲ್ಲಿ ಅನುಮಾನವೇ ಇರಲಿಲ್ಲ. ದನಿ ಎಷ್ಟು ಹತ್ತಿರವಾಯಿತೆಂದರೆ, ತನ್ನ
ದವಡೆಗಳ ಚಲನೆಯಿಂದ ಬೇರೆ ರೀತಿ ಊಳಲು ತೊಡಗಿದ್ದನ್ನು ಗಾಳಿ ಹೊತ್ತು ತಂದಿತು. ವಾಸಿಲಿ
ಆಂಡ್ರೆವಿಚ್ ತನ್ನ ಕೋಟಿನ ಕಾಲರ್ ಅನ್ನು ಹಿಂದೆ ಸರಿಸಿಕೊಂಡು ಕಿವಿಗೊಟ್ಟು ಕೇಳಿಸಿಕೊಂಡ.
ಮುಖೋರ್ಟಿ ಕೂಡ ತನ್ನ ಕಿವಿಗಳನ್ನಾಡಿಸುತ್ತ ಗಮನಕೊಟ್ಟು ಆಲಿಸುತ್ತಿತ್ತು. ತೋಳನ ಊಳುವಿಕೆ
ನಿಂತಾಗ ಕುದುರೆ ನಿಂತ ಕಾಲನ್ನು ಬದಲಿಸಿಕೊಂಡು ಅಪಾಯಸೂಚನೆಯಂತೆ ಕೆನೆಯಿತು. ಇದಾದ ಮೇಲೆ ವಾಸಿಲಿ
ಆಂಡ್ರೆವಿಚ್‍ಗೆ ನಿದ್ದೆ ಹತ್ತಿರ ಸುಳಿಯಲಿಲ್ಲ, ಸಮಾಧಾನ ಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ. ತನ್ನ
ಬಗ್ಗೆ – ವ್ಯವಹಾರ, ಹೆಸರುವಾಸಿತನ, ತನ್ನ
ಸಂಪತ್ತು - ಯೋಚಿಸಲು ಹೊರಟಷ್ಟೂ ಭಯ ಹಾಗೂ ಗ್ರಿಶ್ಕಿನೋದಲ್ಲಿ ತಾನು ರಾತ್ರಿ
ಉಳಿದುಕೊಳ್ಳಲಿಲ್ಲವಲ್ಲ ಎಂಬ ಭಯ ಆವರಿಸಿಕೊಂಡು ಅವನ ಯೋಚನೆಯಲ್ಲಿ ಸಿಲುಕಿಕೊಳ್ಳುತ್ತಿತ್ತು.
“ಕಾಡು ಮನೆ ಹಾಳಾಗ! ದೇವರ ದಯೆಯಿಂದ ಅದಿಲ್ಲದೆ ಎಲ್ಲ
ಸರಿಯಾಗಿತ್ತು. ಇವತ್ತೊಂದು ರಾತ್ರಿ ಕಳೆದರೆ ಸಾಕಾಗಿದೆ! ನಾನು ಸ್ವಲ್ಪ ವೋಡ್ಕ ಕುಡಿದಿದ್ದೆ
ಸದ್ಯ.” ಎಂಬ ಆಲೋಚನೆ ಬಂದು, ಏನಾಗುತ್ತಿದೆ ಎನ್ನಿಸಿದಾಗ ತಾನು ನಡುಗುತ್ತಿರುವುದು ಗಮನಕ್ಕೆ
ಬಂತು, ಆದರೆ ಅದು ಚಳಿಯ ಕಾರಣದಿಂದಾದ್ದೋ ಭಯದಿಂದಾದ್ದೋ ತಿಳಿಯದಾಯಿತು. ಮೈಮೇಲೆ ಬಿಗಿಯಾಗಿ
ಹೊದ್ದುಕೊಂಡು ಮೊದಲಿನ ಹಾಗೆ ಮಲಗಲು ಪ್ರಯತ್ನಿಸಿದ, ಆದರೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಒಂದೇ
ಭಂಗಿಯಲ್ಲಿ ಕುಳಿತಿರಲೂ ಆಗದಾಯಿತು. ಮೇಲೆದ್ದು ತನ್ನಲ್ಲುಂಟಾಗಿದ್ದ ಭಯವನ್ನು
ಹೋಗಲಾಡಿಸಿಕೊಳ್ಳಲು ಏನಾದರೂ ಮಾಡಬೇಕೆನ್ನಿಸಿತು, ಆದರೆ ಅದರ ಮುಂದೆ ತಾನು ಅಸಹಾಯಕನೆನ್ನಿಸಿತು.
ಪುನಃ ಸಿಗರೇಟು ಬೆಂಕಿಕಡ್ಡಿಗಳನ್ನು ಹೊರತೆಗೆದು ನೋಡಿದರೆ, ಉಳಿದಿದ್ದುದು ಮೂರು ಕಡ್ಡಿಗಳು
ಮಾತ್ರ, ಅದೂ ಚೆನ್ನಾಗಿಲ್ಲದವು. ತುದಿಯಲ್ಲಿದ್ದ ರಂಜಕ ಉಜ್ಜಿಹೋಗಿ ಅವು ಹೊತ್ತಿಕೊಳ್ಳಲೇ ಇಲ್ಲ.
“ಇದರ ಮನೆ ಹಾಳಾಗ! ದರಿದ್ರದ್ದು, ಬೇವಾರ್ಸೀದು!’ ಎಂದು
ಗೊಣಗಿಕೊಂಡ. ತನ್ನ ಶಾಪ ಯಾರಿಗೆ ತಟ್ಟಬೇಕು ಗೊತ್ತಾಗದೆ ನಜ್ಜುಗುಜ್ಜಾಗಿದ್ದ ಸಿಗರೇಟುಗಳನ್ನು
ಎಸೆದ. ಕಡ್ಡಿಪೆಟ್ಟಿಗೆಯನ್ನೂ ಇನ್ನೇನು ಎಸೆದುಬಿಡುವುದರಲ್ಲಿದ್ದ, ಆದರೆ ತನ್ನ ಬೆರಳುಗಳ
ಚಲನೆಯನ್ನು ಗಮನಿಸಿ ಅದನ್ನು ಮತ್ತೆ ಜೇಬಿನಲ್ಲಿರಿಸಿಕೊಂಡ. ಅವನು ಎಂಥ ತಳಮಳಕ್ಕೊಳಗಾದ ಎಂದರೆ
ಒಂದೆಡೆ ಕುಳಿತುಕೊಳ್ಳಲು ಅವನಿಂದ ಸಾಧ್ಯವಾಗಲಿಲ್ಲ. ಸ್ಲೆಜ್‍ನಿಂದ ಕೆಳಗಿಳಿದು ಗಾಳಿಗೆ ಬೆನ್ನು
ತಿರುಗಿಸಿನಿಂತುಕೊಂಡು ತನ್ನ ಬೆಲ್ಟನ್ನು ಸೊಂಟದಲ್ಲಿ ಮತ್ತಷ್ಟು ಕೆಳಗೆ ಸರಿಸಿ ಬಿಗಿದುಕೊಂಡ.
“ಮಲಗಿ ಸಾವಿಗಾಗಿ ಕಾಯುತ್ತ ಕೂರುವುದರಿಂದೇನು ಪ್ರಯೋಜನ?
ಕುದುರೆಯನ್ನೇರಿ ದೌಡಾಯಿಸಿಬಿಡುವುದು ಉತ್ತಮ!” ಎಬ ಆಲೋಚನೆ ಇದ್ದಕ್ಕಿದ್ದ ಹಾಗೆ
ಅವನಲ್ಲುದಿಸಿತು. “ಬೆನ್ನ ಮೇಲೆ ಏನಾದ್ರೂ ಇದ್ರೆ ಕುದುರೆ ಓಡತ್ತೆ” ಅನ್ನಿಸಿದಾಗ, ನಿಕಿಟನ
ನೆನಪು ಬಂದು, “ಅವನಿಗೇನು, ಬದುಕೋದು ಸಾಯೋದು ಎರಡೂ ಒಂದೇ. ಅವನ ಜೀವನಕ್ಕೇನು ಬೆಲೆ ಇದೆ? ತನ್ನ
ಬದುಕಿನ ಬಗ್ಗೆ ಅವನಿಗೆ ಅಭಿಮಾನ ಎಲ್ಲಿ? ಆದರೆ ನನಗೆ ಬದುಕೋದಕ್ಕೆ ಏನೋ ಒಂದಷ್ಟಿದೆ, ದೇವರ ದಯೆ”
ಎಂದುಕೊಂಡ.
ಕುದುರೆಯನ್ನು ಬಿಚ್ಚಿ, ಅದರ ಕೊರಳಿಗೆ ಕಡಿವಾಣ ಹಾಕಿ ಹತ್ತಲು ಪ್ರಯತ್ನಪಟ್ಟ, ಆದರೆ
ತನ್ನ ಕೋಟು ಮತ್ತು ಬೂಟುಗಳ ಭಾರದಿಂದ ಸಾಧ್ಯವಾಗಲಿಲ್ಲ. ಆಮೇಲೆ ಸ್ಲೆಜ್‍ನೊಳಕ್ಕೆ ಪ್ರಯಾಸದಿಂದ
ಹತ್ತಿ ಅಲ್ಲಿಂದ ಕುದುರೆಯ ಬೆನ್ನೇರಲು ನೋಡಿದ, ಆದರೆ ಅದೂ ಸಾಧ್ಯವಾಗಲಿಲ್ಲ. ಕೊನೆಗೆ
ಮುಖೋರ್ಟಿಯನ್ನು ಜಾರುಬಂಡಿಯ ಹತ್ತಿರಕ್ಕೆಳೆದುಕೊಂಡು, ಬಹು ಎಚ್ಚರದಿಂದ ಅದರ ಒಂದು ತುದಿಯಲ್ಲಿ
ನಿಂತು ಕುದುರೆಯ ಬೆನ್ನ ಮೇಲೆ ಹೊಟ್ಟೆ ಅಡಿಯಾಗಿ ಬೀಳುವಂತೆ ಹಾರಿದ. ಸ್ವಲ್ಪ ಹೊತ್ತು ಹಾಗೇ
ಬಿದ್ದುಕೊಂಡಿದ್ದು ಸ್ವಲ್ಪ ಮುಂದಕ್ಕೆ ಸರಿದುಕೊಂಡು ಒಂದು ಕಾಲನ್ನು ಆ ಕಡೆ ಇರಿಸಿಕೊಂಡು
ಪಾದಗಳನ್ನು ಜೋತಾಡುತ್ತಿದ್ದ ಕುದುರೆ ಪಿರ್ರೆಯ ಪಟ್ಟಿಯಲ್ಲಿ ಪಾದಗಳನ್ನಿರಿಸಿಕೊಂಡು ಕೊನೆಗೂ
ಸವಾರಿಗೆ ಸಿದ್ಧನಾದ. ಸ್ಲೇಜ್‍ನ ಅಲುಗಾಡುವ ಸದ್ದಿನಿಂದ ನಿಕಿಟ ಎಚ್ಚರಗೊಂಡ. ಮೇಲೆದ್ದಾಗ,
ಅವನೇನೋ ಹೇಳಿದ ಹಾಗೆ ವಾಸಿಲಿ ಆಂಡ್ರೆವಿಚ್‍ಗೆ ಭಾಸವಾಯಿತು. “ನಿನ್ನಂಥ ಮೂರ್ಖನ ಮಾತು ಕೇಳಬೇಕಾ!
ನಾನಿಲ್ಲಿ ವ್ಯರ್ಥವಾಗಿ ಬಿದ್ದು ಸಾಯ್ಬೇಕಾ?” ಎಂದ ಉದ್ಗರಿಸಿದ ವಾಸಿಲಿ ಆಂಡ್ರೆವಿಚ್. ತನ್ನ
ತುಪ್ಪುಳುಗಂಬಳಿಯ ಸಡಿಲಗೊಂಡ ತುದಿಗಳನ್ನು ಮೊಣಕಾಲ ಕೆಳಗೆ ಸಿಕ್ಕಿಸಿಕೊಂಡು, ಕುದುರೆಯನ್ನು
ತಿರುಗಿಸಿ ಸ್ಲೆಜ್‍ನಿಂದ ದೂರವಾಗಿ ಕಾಡು ಮತ್ತು ಅಲ್ಲಿ ಕಾವಲುಗಾರನ ಗುಡಿಸಲಿದ್ದ ಕಡೆಗೆ
ದೌಡಾಯಿಸಿದ.
7
ಗೋಣಿಬಟ್ಟೆಯಲ್ಲಿ ತನ್ನನ್ನು ಸುತ್ತಿಕೊಂಡು
ಸ್ಲೆಜ್‍ನ ಹಿಂಭಾಗದಲ್ಲಿ ಕೂತಿದ್ದ ನಿಕಿಟ ಅಲುಗಾಡಿರಲಿಲ್ಲ. ಪ್ರಕೃತಿಯೊಡನೆ
ಸಂಪರ್ಕವಿಟ್ಟುಕೊಂಡು ಬದುಕು ಎಲ್ಲರಂತೆಯೇ ಅವನೂ ಗಂಟೆಗಳಗಟ್ಟಲೆ, ಅಷ್ಟೇಕೆ ದಿನಗಟ್ಟಲೆ
ಕೂಡ, ತಳಮಳಿಸದೆ ಇರಿಸುಮುರಿಸಿಗೊಳಗಾಗದೆ ಕಾಯುವ
ತಾಳ್ಮೆಯನ್ನು ಹೊಂದಿದ್ದ. ಯಜಮಾನರು ತನ್ನನ್ನು ಕರೆಯುವುದು ಅವನಿಗೆ ಕೇಳಿಸಿತ್ತು, ಆದರೆ ಅದಕ್ಕೆ
ಉತ್ತರಿಸದಿರಲು ಕಾರಣ ಅವನಿಗೆ ಚಲಿಸಲು ಅಥವಾ ಮಾತನಾಡಲು ಇಷ್ಟವಿರಲಿಲ್ಲ. ಟೀ ಕುಡಿದಿದ್ದರಿಂದಾಗಿ
ಅವನಲ್ಲಿ ಸ್ವಲ್ಪ ಚೈತನ್ಯವುಂಟಾಗಿದ್ದರೂ, ಹಿಮದ ಒಟ್ಟಿಲನ್ನು ಏರುವ ಬಲಿಷ್ಠ ಹೋರಾಟದ
ಸಾಹಸದಿಂದಲೂ ಉಂಟಾದ ಮೈಬಿಸುಪು ಹೆಚ್ಚು ಕಾಲ ಉಳಿಯಲಾರದೆಂಬುದು ಅವನಿಗೆ ತಿಳಿದಿತ್ತು; ಅಲ್ಲದೆ
ಮತ್ತೆ ಓಡಾಡುವುದಕ್ಕೆ ತನ್ನಲ್ಲಿ ಶಕ್ತಿ ಇಲ್ಲವೆಂಬ ಅರಿವು ಅವನಿಗಿತ್ತು. ಚಾವಟಿಯಿಂದ
ಬಾರಿಸಿದರೂ ಮುಂದಕ್ಕೆ ಒಂದು ಅಡಿಯನ್ನೂ ಇಡಲಾರದ ಕುದುರೆಯ ಪರಿಸ್ಥಿತಿಯೇ ಅವನದೂ ಆಗಿತ್ತು. ಅಂಥ
ಸ್ಥಿತಿಯಲ್ಲಿ ಕುದುರೆg ಮತ್ತೆ ಕಾರ್ಯನಿರ್ವಹಿಸಬೇಕಾದರೆ ಅದಕ್ಕೆ ಮೇವುಣಿಸಬೇಕೆಂಬ ಪ್ರಜ್ಞೆ
ಒಡೆಯನಿಗಿರುತ್ತದೆ. ತೂತಿದ್ದ ಬೂಟಿನಲ್ಲಿ ಅವಿತಿದ್ದ ಅವನ ಕಾಲಿಗೆ ಆಗಲೇ ಜೋಮು ಹಿಡಿದಿತ್ತು,
ಅವನ ಕಾಲ ಹೆಬ್ಬೆರಳು ಎಲ್ಲ ಸಂವೇದನೆಯನ್ನು ಕಳೆದುಕೊಂಡಿತ್ತು. ಅಲ್ಲದೆ, ಅವನ ಇಡೀ ಮೈ
ಹೆಚ್ಚೆಚ್ಚು ತಣ್ಣಗಾಗುತ್ತಿತ್ತು.
ತಾನು ಆ ರಾತ್ರಿ ಸಾಯಬಹುದು, ಅಷ್ಟೇಕೆ ಸತ್ತೇ
ಹೋಗುತ್ತೇನೆ ಎಂಬ ಆಲೋಚನೆಯು ಅವನಲ್ಲಿ ಬಂತು, ಆದರೆ ಅದು ಭಯವನ್ನಾಗಲೀ ನೋವನ್ನಾಗಲೀ
ಉಂಟುಮಾಡುವಂತೆ ಕಾಣಲಿಲ್ಲ. ಅದೇನೂ ಅವನಿಗೆ ಅಸಂತೋಷಕರವಾಗೇನೂ ತೋಚದಿದ್ದುದು ವಿಶೇಷ, ಯಾಕಂದರೆ
ಅವನ ಜೀವನ ಪೂರ್ತಿ ದೀರ್ಘ ಕಾಲದ ಬಿಡುವನ್ನು ಪಡೆದಿರಲಿಲ್ಲ, ಅದಕ್ಕೆ ವ್ಯತಿರಿಕ್ತವಾಗಿ
ಕೊನೆಯಿರದ ಈ ದುಡಿಮೆ ಅವನಿಗೆ ಸಾಕೆನಿಸಿತ್ತು. ಭಯವಾಗದಿರಲು ಕಾರಣವೆಂದರೆ, ವಾಸಿಲಿ ಆಂಡ್ರೆವಿಚ್
ಅಡಿ ತಾನು ಮಾಡಿದ ಕೆಲಸಗಳಲ್ಲದೆ, ಯಾವಾಗಲೂ ‘ಆ’ ದೊಡ್ಡ ಒಡೆಯನ ಅಧೀನದಲ್ಲಿರಬೇಕಾದ ಅರಿವು
ಅವನದಾಗಿತ್ತು. ‘ಅವನೇ’ ತಾನೇ ಈ ಬದುಕನ್ನು ಕೊಟ್ಟು ತನ್ನನ್ನಿಲ್ಲಿ ಕಳಿಸಿದ್ದು, ಹೀಗಾಗಿ
ಸಾವಿನಲ್ಲಿಯೂ ಅವನ ಶಕ್ತಿಯ ಹಿಡಿತದಲ್ಲಿಯೇ ತಾನಿರುತ್ತೇನೆ, ಅವನೆಂದೂ ತನ್ನನ್ನು
ದುರುಪಯೋಗಕ್ಕೊಳಗುಮಾಡುವುದಿಲ್ಲವೆಂಬ ನಂಬಿಕೆ ಅವನದಾಗಿತ್ತು. “ಅಭ್ಯಾಸಬಲದಿಂದ ತನಗೆ
ಒಗ್ಗಿಹೋಗಿರುವುದನ್ನು ಬಿಟ್ಟುಕೊಡಬೇಕಾಗುವುದು ಕರುಣಾಜನಕವೇ ಸರಿ. ಆದರೆ ಏನೂ
ಮಾಡುವಂತಿಲ್ಲವಲ್ಲ, ಹೀಗಾಗಿ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತೇನೆ.”
“ಪಾಪಗಳು?” ಎಂಬ ಆಲೋಚನೆ ಬಂತು. ತನ್ನ ಕುಡುಕತನ,
ಅದಕ್ಕಾಗಿ ಖರ್ಚು ಮಾಡಿರುವ ಹಣ, ತನ್ನ ಹೆಂಡತಿಗೆ ಕೊಟ್ಟ ಕಿರುಕುಳ, ಶಾಪಹಾಕಿದ್ದು, ಚರ್ಚ್
ಅನ್ನು ಉಪವಾಸವ್ರತವನ್ನು ಉಪೇಕ್ಷೆ ಮಾಡಿದ್ದು, ತಪ್ಪೊಪ್ಪಿಗೆಯಲ್ಲಿ ಪಾದ್ರಿಗಳು ತನ್ನ
ತಪ್ಪುಗಳಿಗಾಗಿ ಝಂಕಿಸಿದ್ದು – ಎಲ್ಲ
ನೆನಪಿಗೆ ಬಂತು, “ಅವೆಲ್ಲ ಪಾಪಕರ್ಮಗಳೇ, ನಿಜ.
ಆದರೆ ಅವುಗಳನ್ನು ನಾನೇ ಆವಾಹಿಸಿಕೊಂಡಿದ್ದೆನೇ? ಆ ದೇವರು ನನ್ನನ್ನು ಸೃಷ್ಟಿಸಿದ್ದೇ ಹಾಗೆ.
ಆದರೇನು, ಅವು ಪಾಪಕರ್ಮಗಳೇ ತಾನೇ? ಅವುಗಳಿಂದ ಪಾರಾಗೋದು ಹೇಗೆ?”
ಹೀಗೆ ಅವನಿಗೆ ಆ ರಾತ್ರಿ ತನಗೆ ಒದಗಬಹುದಾದ ಗತಿಯ
ಬಗ್ಗೆ ಆಲೋಚನೆ ಬಂತು. ಆನಂತರವೇ ಅವನಲ್ಲಿ ಇತರ ಆಲೋಚನೆಗಳು ಮೂಡಿದ್ದು, ಆದರೆ ತಾವಾಗಿ ಬಂದ
ನೆನಪುಗಳಿಗೆ ತನ್ನನ್ನವನು ಒಪ್ಪಿಸಿಕೊಂಡ. ಒಮ್ಮೆ ಮಾರ್ತಾ ತನ್ನ ಬದುಕಿನಲ್ಲಿ ಬಂದದ್ದು, ಇತರ
ಕೆಲಸಗಾರರ ಜೊತೆ ಸೇರಿ ಕುಡಿಯಲು ತೊಡಗಿದ್ದು, ತಾನೇ ಅದನ್ನು ಬಿಟ್ಟದ್ದು, ಈಗಿನ ತಮ್ಮ ಪ್ರಯಾಣ,
ತಾರಾಸ್ ಅವರ ಮನೆಗೆ ಹೋದದ್ದು, ಅಲ್ಲಿ ಯಜಮಾನರು ಸಂಸಾರ ಒಡೆಯುವುದನ್ನು ಹೇಳಿದ್ದು, ತನ್ನ ಮಗನ
ಬಗ್ಗೆ ವಿವರಿಸಿದ್ದು, ಮುಖೋರ್ಟಿಯ ಮೈಯನ್ನು ಹಾಸುಗಂಬಳಿಯಿಂದ ಹೊದಿಸಿದ್ದು, ಆಮೇಲೆ ತಮ್ಮ
ಯಜಮಾನರು ಜಾರುಬಂಡಿಯೊಳಗೆ ಮಲಗಿ ಮಗ್ಗುಲು ಬದಲಿಸುತ್ತ ಅದು ಕಿರುಗುಟ್ಟುವಂತೆ ಮಾಡಿದ್ದು -
ಹೀಗೆ. “ಅಲ್ಲಿಂದ ಹೊರಟು ಬಂದದ್ದರಿಂದ ಈಗ ನಿಮಗೇ ಪಶ್ಚಾತ್ತಾಪವಾಗಿದೆ, ಅಲ್ಲವೇ? ಅವರದರಂಥ
ಬದುಕನ್ನು ಬಿಟ್ಟು ಹೋಗುವುದು ಕಷ್ಟವೇ ಸರಿ! ಅದು ನಮ್ಮದರಂತಲ್ಲ.”
ಆಮೇಲೆ ಈ ಎಲ್ಲ ನೆನಪುಗಳು ಅವನಲ್ಲಿ
ಗೊಂದಲವನ್ನುಂಟುಮಾಡಿ ಅವನ ತಲೆಯಲ್ಲಿ
ಒಂದರೊಳಗೊಂದು ಬೆರೆತುಹೋದುವು, ಅವನಿಗೆ ನಿದ್ದೆ ಹತ್ತಿತು.
ಆದರೆ ವಾಸಿಲಿ ಆಂಡ್ರೆವಿಚ್ ಕುದುರೆಯನ್ನೇರಿ
ನಿಕಿಟ ಒರಗಿ ಮಲಗಿದ್ದ ಜಾರುಬಂಡಿಯ ಹಿಂಬದಿಯನ್ನು ಜರುಗಿಸಿ ಅದು ತನ್ನಿಂದ ದೂರ ಹೋಗಿ ಅವನ
ಬೆನ್ನಿಗೆ ಅದರ ಜಾರುತುಂಡೊಂದು ತಗುಲಿ ನೋವಾದಾಗ ಅವನಿಗೆ ಎಚ್ಚರವಾಗಿತ್ತು, ಆಗ ಬೇಕಿರಲಿ
ಬೇಡವಾಗಿರಲಿ ಅವನು ತಾನು ಕುಳಿತ ಭಂಗಿಯನ್ನು ಬದಲಿಸಲೇಬಾಕಾಯಿತು. ಕಷ್ಟಪಟ್ಟು ತನ್ನ ಕಾಲುಗಳನ್ನು
ನಿಗುಚಿ, ಅವುಗಳ ಮೇಲಿದ್ದ ಹಿಮವನ್ನು ಕೊಡವಿಕೊಂಡು ಮೇಲೆದ್ದ. ತಕ್ಷಣ ನೋವಿನ ಚಳುಕೊಂದು ಇಡೀ
ಮೈಯಿನ ಆಳಕ್ಕಿಳಿಯಿತು. ಏನು ನಡೆಯುತ್ತಿದೆ ಎಂಬುದು ಅರಿವಿಗೆ ಬಂದು, ಕುದುರೆಗೀಗ ಆವಶ್ಯಕವಾಗಿರದ
ಹಾಸುಗಂಬಳಿಯನ್ನು ತನಗೆ ಕೊಟ್ಟರೆ ಅದನ್ನು ಹೊದ್ದುಕೊಳ್ಳುತ್ತೇನೆಂದು ವಾಸಿಲಿ ಆಂಡ್ರೆವಿಚ್
ಅನ್ನು ಕೇಳಿದ್ದ.
ಆದರೆ ವಾಸಿಲಿ ಆಂಡ್ರೆವಿಚ್ ನಿಲ್ಲಲಿಲ್ಲ, ಹಿಮದ
ಪುಡಿಯಲ್ಲಿ ಅದೃಶ್ಯನಾಗಿಬಿಟ್ಟಿದ್ದ.
ಒಬ್ಬನೇ ಉಳಿದ ನಿಕಿಟ ಈಗ ತಾನು ಮಾಡಬೇಕಾದ್ದು
ಏನೆಂದು ಒಂದು ಕ್ಷಣ ಚಿಂತಿಸಿದ. ಮತ್ತೆ ಮನೆಯನ್ನು ಹುಡುಕಿಕೊಂಡು ಹೋಗುವಷ್ಟು ಚೈತನ್ಯ
ತನ್ನಲ್ಲುಳಿದಿರಲಿಲ್ಲ. ತನ್ನ ಹಿಂದಿನ ಜಾಗದಲ್ಲಿ ಕುಳಿತಿರಲೂ ಸಾಧ್ಯವಿಲ್ಲ. ಅದರಲ್ಲಿ ಈಗಾಗಲೇ
ಹಿಮ ತುಂಬಿಕೊಂಡಿತ್ತು. ಜಾರುಬಂಡಿಯ ಒಳಗೂ ಬೆಚ್ಚಗಿರಲಾರದೆಂದು ಅವನಿಗನ್ನಿಸಿತು, ಯಾಕಂದರೆ
ಹೊದ್ದುಕೊಳ್ಳಲು ತನ್ನ ಬಳಿ ಏನೂ ಇರಲಿಲ್ಲ, ತಾನು ತೊಟ್ಟಿರುವ ತುಪ್ಪುಳುಗಂಬಳಿಯಾಗಲೀ ಕೋಟಾಗಲೀ
ತನ್ನನ್ನು ಬಿಸುಪಾಗಿಡಲು ಅಸಮರ್ಥವಾಗಿತ್ತು. ಮೈಮೇಲೆ ಏನೂ ಇಲ್ಲವೇನೋ ಎಂಬಷ್ಟು ಚಳಿ ಆಯಿತು;
ಅಂಗಿಯೊಂದನ್ನು ಬಿಟ್ಟು ಬೇರೇನೂ ಮೈಮೇಲಿಲ್ಲವೇನೋ ಎಂಬ ಅನುಭವ ಬಂತು. ಭಯವಾಯಿತು. “ದೇವರೇ,
ಸ್ವರ್ಗದೊಡೆಯನೇ!” ಎಂದು ಗೊಣಗಿಕೊಂಡ; ಆದರೆ ತಾನು ಒಂಟಿಯಾಗೇನೂ ಇಲ್ಲ, ತನ್ನೊಡನೆ ‘ಒಬ್ಬ’
ಇದ್ದಾನೆ, ತನ್ನ ಅಳಲನ್ನು ಕೇಳಿಸಿಕೊಳ್ಳುತ್ತಾನೆ, ತನ್ನನ್ನವನು ಕೈಬಿಡುವುದಿಲ್ಲ ಎಂಬ ಪ್ರಜ್ಞೆ
ಅವನಿಗೆ ಸಾಂತ್ವನ ನೀಡಿತು. ಒಂದು ನೀಳವಾದ ಉಸಿರುಬಿಟ್ಟು ಗೋಣಿತಾಟನ್ನು ತಲೆಯ ಮೇಲೆ ಹೊದ್ದು
ಸ್ಲೆಜ್‍ನೊಳಗೆ ಸೇರಿಕೊಂಡು ತನ್ನ ಯಜಮನ ಮಲಗಿದ್ದ ಜಾಗದಲ್ಲಿ ಉರುಳಿಕೊಂಡ.
ಆದರೆ ಸ್ಲೆಜ್‍ನೊಳಗೂ ಅವನಿಗೆ ಬೆಚ್ಚಗಾಗಲಿಲ್ಲ.
ಮೊದಲು ಮೈಯೆಲ್ಲ ನಡುಗಿತು, ಆನಂತರ ನಡುಕ ನಿಂತು ನಿಧಾನವಾಗಿ ತನ್ನ ಪ್ರಜ್ಞೆ ಕಳೆದುಕೊಂಡ. ತಾನು
ಸಾಯುತ್ತಿದ್ದೇನೋ ನಿದ್ದೆ ಹೋಗುತ್ತಿದ್ದೇನೋ ಎಂಬುದು ಖಚಿತವಾಗಿ ಗೊತ್ತಾಗದಿದ್ದರೂ ಅವನು
ಎರಡಕ್ಕೂ ಸಮಾನವಾಗಿ ಸಿದ್ಧನಾದ.
8
ಈ ಮಧ್ಯೆ ವಾಸಿಲಿ ಆಂಡ್ರೆವಿಚ್ ತನ್ನ ಕಾಲು ಮತ್ತು
ಲಗಾಮುಗಳ ತುದಿಯಿಂದ ಕುದುರೆಯನ್ನು ಯಾವುದೋ ಕಾರಣದಿಂದ ಕಾಡು ಮತ್ತು ಕಾಲವಲುಗಾರನ ಗುಡಿಸಲು ಯಾವ
ಕಡೆಗಿದೆ ಎಂದು ಭಾವಿಸಿದ್ದನೋ ಆ ದಿಕ್ಕಿಗೆ ಓಡಿಸಿದ. ಅವನ ಕಣ್ಣನ್ನು ಹಿಮ
ಮೆತ್ತಿಕೊಳ್ಳುತ್ತಿತ್ತು, ಗಾಳಿ ಅವನನ್ನು ಹಿಡಿದು ನಿಲ್ಲಿಸಲು ಹಟತೊಟ್ಟಿದೆಯೋ ಎಂಬಂತೆ
ಬೀಸುತ್ತಿತ್ತು, ಆದರೆ ಇವನು ಮುಂದಕ್ಕೆ ಬಾಗಿಕೊಂಡು, ಕೋಟನ್ನು ಮತ್ತೆ ಮತ್ತೆ ಎಳೆದುಕೊಂಡು,
ತಾನು ಸರಿಯಾಗಿ ಕುಳಿತುಕೊಳ್ಳಲು ಅಡ್ಡಿಪಡಿಸುತ್ತಿದ್ದ ತಣ್ಣಗಿನ ಗಾಡಿಗೆ ಕಟ್ಟುವ ಉಪಕರಣ ಮತ್ತು
ತನ್ನ ಕಾಲುಗಳ ನಡುವೆ ತೂರಿಸಿಕೊಳ್ಳುತ್ತ ಓಡುವಂತೆ ಒಂದೇ ಸಮನೆ ಕುದುರೆಯನ್ನು
ಉತ್ತೇಜಿಸುತ್ತಿದ್ದ. ಮುಖೋರ್ಟಿ ಕಷ್ಟವಾದರೂ ಯಜಮಾನ ಅಪೇಕ್ಷಿಸಿದ್ದ ದಿಕ್ಕಿನೆಡೆಗೆ
ವಿಧೇಯತೆಯಿಂದ ಜಗ್ಗುಹೆಜ್ಜೆ ಹಾಕುತ್ತಿತ್ತು.
ವಾಸಿಲಿ ಆಂಡ್ರೆವಿಚ್ ಹೀಗೆ ಸುಮಾರು ಐದು ನಿಮಿಷಗಳ
ಕಾಲ ತಾನಂದುಕೊಂಡು ಕಡೆಯಲ್ಲಿ ನೇರವಾಗಿ, ಕುದುರೆಯ ತಲೆ ಮತ್ತು ಹಿಮವಿಸ್ತಾರಗಳ ಹೊರತಾಗಿ
ಬೇರೇನನ್ನೂ ಕಾಣದೆ, ಕುದುರೆಯ ಕಿವಿಗಳು ಮತ್ತು ತನ್ನ ಕೋಟಿನ ಕಾಲರ್‍ಗಳೆಡೆಯಲ್ಲಿ ಗಾಳಿಯ
ಶಿಳ್ಳೆಯನ್ನಷ್ಟೇ ಕೇಳುತ್ತ ಮುಂದೆ ಸಾಗಿದ.
ಇದ್ದಕ್ಕಿದ್ದಂತೆ ತನ್ನ ಮುಂದೆ ಏನೋ ಕಪ್ಪು ತೇಪೆ
ಕಾಣಿಸಿದಂತೆ ಆಯಿತು. ಅವನ ಹೃದಯ ಆನಂದದಿಂದ ತೊನೆದಾಡಿತು, ಅದರೆಡೆಗೇ ಸವಾರಿ ಮುಂದುವರಿಸಿದ, ಅವನ
ಕಲ್ಪನೆಯಲ್ಲಿ ಆಗಲೇ ಹಳ್ಳಿಯ ಮನೆಯೊಂದರ ಬಿಳಿ ಗೋಡೆ ಕಾಣತೊಡಗಿತ್ತು. ಆದರೆ ಆ ಕಪ್ಪು ತೇಪೆ
ಒಂದೆಡೆಯೇ ಸ್ಥಿರವಾಗಿರದೆ ಚಲಿಸುತ್ತಿತ್ತು; ಅದು ಹಳ್ಳಿಯಾಗಿರದೆ, ಎರಡು ಹೊಲಗಳ ಮಧ್ಯದ ಹಿಮದ
ನಡುವೆ ಬಿರುಸಾಗಿ ಬೀಸುತ್ತ ನುಗ್ಗಿ ಶಿಳ್ಳೆ ಹಾಕುತ್ತಿದ್ದ ಗಾಳಿಯಿಂದಾಗಿ ಒಂದೇ ಸಮನೆ
ಅತ್ತಿಂದಿತ್ತ ಓಲಾಡುತ್ತ ನಿಂತಿದ್ದ ಮಾಚಿಪತ್ರೆಯ ನೀಳವಾದ ಕೊಂಬೆಗಳಾಗಿದ್ದವು. ಗಾಳಿಯ
ಹೊಡೆತಕ್ಕೆ ಸಿಕ್ಕು ಜರ್ಜರಿತಗೊಂಡು ನಿಂತಿದ್ದ ಆ ಮಾಚಿಪತ್ರೆಯ ಗಿಡವನ್ನು ನೋಡಿ ವಾಸಿಲಿ ಆಂಡ್ರೆವಿಚ್
ಕಾರಣವಿಲ್ಲದೆ ನಡುಗಿದ, ಕುದುರೆಯನ್ನು ಮತ್ತಷ್ಟು ಜೋರಾಗಿ ಓಡುವಂತೆ ಉತ್ತೇಜಿಸಿದ; ಆ ಮಾಚಿಯ
ಗಿಡದ ಹತ್ತಿರ ಬರುವವರೆಗೆ ತನ್ನ ಚಲನೆಯ ದಿಕ್ಕು ಬದಲಾಗಿದೆ ಎಂಬುದನ್ನವನು ಗಮನಿಸದೆ ತದ್ವಿರುದ್ಧ
ದಿಕ್ಕಿನಲ್ಲಿ ಚಲಿಸುತ್ತಿದ್ದ; ಆದರೆ ಅವನ ಮನಸ್ಸಿನಲ್ಲಿ ಗುಡಿಸಲಿದ್ದ ಜಾಗದ ಕಡೆಗೇ
ಸಾಗುತ್ತಿದ್ದೇನೆಂದು ಭ್ರಮಿಸಿದ್ದ.. ಕುದುರೆ ಬಲಗಡೆಗೆ ತುಡಿಯುತ್ತಿದ್ದರೆ, ಅವನು ಎಡಕ್ಕೆ
ಎಳೆಯುತ್ತಿದ್ದ.
ಮತ್ತೆ ಎಂಥದೋ ಕಪ್ಪಾದುದು ಮುಂದಿರುವುದು ಅವನ
ಕಣ್ಣಿಗೆ ಬಿತ್ತು. ಮತ್ತೆ ಅವನ ಎದೆ ಕುಣಿಯಿತು, ಖಂಡಿತ ಈ ಸಲ ಅದು ಹಳ್ಳಿಯೆಂದು ಅವನ ಮನಸ್ಸು
ಹೇಳಿತು. ಆದರೆ ಮತ್ತದೇ ಮಾಚಿಪತ್ರೆಯ ಗಿಡಗಳು ಹುಲುಸಾಗಿ ಬೆಳೆದಿದ್ದ ಹೊಲದ ಗಡಿಭಾಗ! ಹಿಂದಿನ
ರೀತಿಯಲ್ಲೇ ಗಿಡವು ಗಾಳಿಯಿಂದ ಜೋರಾಗಿ ತೊನೆದಾಡುತ್ತಿತ್ತು, ಇದರಿಂದ ಅವನ ಮನಸ್ಸಿನಲ್ಲಿ ಅಕಾರಣ
ಭಯ ಹುಟ್ಟಿತು. ಆದರೆ ಅದು ಕೇವಲ ಗಿಡಗಳು ಮಾತ್ರವಾಗಿರದೆ, ಅದರ ಪಕ್ಕದಲ್ಲೇ ಹಿಮ ಆವರಿಸಿದ್ದ
ಕೊಂಚ ಓಡಾಡಿದ ಗುರುತಿದ್ದ ಕುದುರೆಯ ಜಾಡು ಆಗಿತ್ತು. ವಾಸಿಲಿ ಆಂಡ್ರೆವಿಚ್ ನಿಂತುಕೊಂಡು ಕೆಳಗೆ
ಬಾಗಿ ಎಚ್ಚರಿಕೆಯಿಂದ ಗಮನಿಸಿದ. ಅದು ಭಾಗಶಃ ಹಿಮ ಆವರಿಸಿದ್ದ ಕುದುರೆಯ ಜಾಡೇ ಆಗಿತ್ತು, ಅಂದರೆ
ತನ್ನ ಕುದುರೆಯ ಗೊರಸುಗುರುತಿನ ಜಾಡೇ ಅದಾಗಿತ್ತು! ತಾನು ಅಲ್ಲೇ ಸುತ್ತುತ್ತಿದ್ದೆ ಎಂಬುದರ
ಅರಿವಾಯಿತವನಿಗೆ. ‘ನಾನು ಹೀಗೇ ಸತ್ತುಹೋಗಿಬಿಡ್ತೀನಿ’ ಅನ್ನಿಸಿ, ತನ್ನ ಭಯವನ್ನು
ಹತ್ತಿಕ್ಕಿಕೊಳ್ಳುವುದಕ್ಕಾಗಿ ಕುದುರೆಯನ್ನು ಮತ್ತಷ್ಟು ಉತ್ತೇಜಿಸಿ ಹಿಮಾಚ್ಛಾದಿತ ಕತ್ತಲಲ್ಲಿ
ಇಣುಕಿ ನೋಡುತ್ತ ಮುಂದೆ ಸರಿದಾಗ, ಅವನಿಗೆ ಸರಿದಾಡುವ ಬೆಳಕಿನ ಬೆಳಕಿನ ಬಿಂದುಗಳಷ್ಟೇ
ಕಾಣಿಸಿದವು. ಒಮ್ಮೆ ಅವನಿಗೆ ನಾಯಿಗಳ ಬೊಗಳೋ ತೋಳಗಳೋ ಊಳೋ ಕೇಳಿಸಿದಂತಾಯಿತು. ಆದರೆ ಆ ಸದ್ದುಗಳು
ಎಷ್ಟು ಕ್ಷೀಣವಾದುವೂ ದೂರದಿಂದ ಬಂದುವೂ ಆಗಿದ್ದುವೆಂದರೆ, ತನಗೆ ಸದ್ದು ಕೇಳಿಸಿತೋ, ಅದು ಕೇವಲ
ತನ್ನ ಭ್ರಮೆಯೋ ಎಂಬ ಅನುಮಾನ ಅವನಿಗೇ ಉಂಟಾಯಿತು. ನಿಂತು ಸದ್ದನ್ನು ಕಿವಿಗೊಟ್ಟು ಆಲಿಸಿದ.
ಇದ್ದಕ್ಕಿದ್ದ ಹಾಗೆ ವಾಸಿಲಿ ಆಂಡ್ರೆವಿಚ್‍ನ ಕಿವಿಯ
ಹತ್ತಿರ ಕಿವುಡಾಗಿಸುವಂಥ ಧ್ವನಿ ಕೇಳಿಸಿತು, ಅವನಡಿಯಲ್ಲಿದ್ದ ಸಕಲವೂ ನಡುಗಿ ಭಯದಿಂದ ಕಂಪಿಸಿತು.
ಮುಖೋರ್ಟಿಯ ಕೊರಳನ್ನವನು ಅವುಚಿ ಹಿಡಿದುಕೊಂಡ, ಆದರೆ ಅದರ ಮೈಯೆಲ್ಲ ಕಂಪಿಸುತ್ತಿತ್ತು, ಆ ಭಯಂಕರ
ಕೂಗು ಮತ್ತಷ್ಟು ಹೆಚ್ಚಾಯಿತು. ಕೆಲವು ಕ್ಷಣಗಳ ಕಾಲ ವಾಸಿಲಿ ಆಂಡ್ರೆವಿಚ್‍ಗೆ ತನ್ನನ್ನು
ಸ್ತಿಮಿತಕ್ಕೆ ತಂದುಕೊಳ್ಳುವುದಕ್ಕಾಗಲೀ ಏನಾಯಿತೆಂದು ಅರಿಯುವುದಕ್ಕಾಗಲೀ ಸಾಧ್ಯವಾಗಲಿಲ್ಲ. ಆ
ಧ್ವನಿ ಬೇರೇನೂ ಆಗಿರದೆ, ಮುಖೋರ್ಟಿಯೇ ತನ್ನನ್ನು ಸಮಾಧಾನಪಡಿಸಿಕೊಳ್ಳಲೋ ಸಹಾಯಕ್ಕೆಂದೋ ಮಾಡಿದ
ಭಾರಿ ಕೆನೆತವಾಗಿತ್ತು, ಅಷ್ಟೆ. “ಥೂ, ಮುಂಡೇದೇ! ಹೇಗೆ ಹೆದರಿಸಿಬಿಟ್ಟೆ ನನ್ನ, ದರಿದ್ರದ್ದೇ!”
ಎಂದ ಬೈದ. ಕಾರಣವನ್ನು ತಿಳಿದ ಮೇಲೂ ಭಯದಿಂದ ನಡುಗುತ್ತಿದ್ದ ಅವನ ಮೈ ಸುಧಾರಿಸಿಕೊಳ್ಳಲಿಲ್ಲ.
“ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಂಡು ಸರಿಯಾಗಿ
ಯೋಚಿಸ್ಬೇಕು” ಎಂದುಕೊಂಡ, ಆದರೂ ಅವನು ನಿಲ್ಲದೆ ಕುದುರೆಯನ್ನು ಮುಂದಕ್ಕೆ ಹೋಗಗೊಟ್ಟ, ಹಾಗೆ
ಮಾಡುವಾಗ ತಾನು ಗಾಳಿಗನುಸಾರವಾಗಿ ಹೋಗುವುದರ ಬದಲು ಅದಕ್ಕೆ ವಿರುದ್ಧವಾಗಿ ಸಾಗುತ್ತಿರುವುದನ್ನು
ಗಮನಿಸಲಿಲ್ಲ. ಅವನ ದೇಹ, ಅದೂ ಕುದುರೆಯನ್ನು ಗಾಡಿಗೆ ಹೂಡಿದ್ದ ಜಾಗವನ್ನು ತಾಕುತ್ತಿದ್ದು ತನ್ನ
ಕೋಟಿನಿಂದ ಮುಚ್ಚಿಕೊಳ್ಳಲಾಗದಿದ್ದ ತನ್ನ ಕಾಲುಗಳ ನಡುವೆ ಯಾತನೆಯಿಂದ ಕೂಡುವಷ್ಟು
ತಣ್ಣಗಾಗುತ್ತಿತ್ತು, ಅದೂ ಕುದುರೆ ನಿಧಾನವಾಗಿ ನಡೆಯುವಾಗ. ಅವನ ಕಾಲುಗಳೂ ತೋಳುಗಳೂ ನಡುಗಿದವು,
ಉಸಿರಾಟ ತೀವ್ರವಾಯಿತು. ಈ ಕೊನೆಯಿರದ ಹಿಮವಿಸ್ತಾರದಲ್ಲಿ ತಾನು ಕ್ಷಯಿಸಿಹೋಗುತ್ತಿರುವ ಭಾವನೆ
ಆಗಿ ಅದರಿಂದ ಪಾರಾಗುವ ದಾರಿ ಕಾಣದಾಯಿತು.
ತಾನು ಕೂತಿದ್ದ ಕುದುರೆ ಇದ್ದಕ್ಕಿದ್ದಂತೆ ಯಾವುದರಿಂದಲೋ
ಮುಗ್ಗರಿಸಿ ಹಿಮರಾಶಿಯಲ್ಲಿ ತನ್ನ ಮಗ್ಗುಲಿಗೆ ಬಿದ್ದು ಕುಸಿಯತೊಡಗಿತು. ವಾಸಿಲಿ ಆಂಡ್ರೆವಿಚ್
ತಕ್ಷಣ ಅದರಿಂದ ಹಾರಿದ, ಹಾಗೆ ಮಾಡುವಾಗ ತನ್ನ ಕಾಲನ್ನಿರಿಸಿಕೊಂಡಿದ್ದ ಕುದುರೆ ಪಿರ್ರೆಯ
ಪಟ್ಟಿಯನ್ನೆಳೆದು ಅದರ ಮೇಲೆಯೇ ಉರುಳಿಕೊಂಡ. ಅವನು ಹಾರಿಕೊಂಡ ತಕ್ಷಣವೇ ಕುದುರೆ ಮೇಲೇಳಲು ಹೆಣಗಿ
ಮುಂದಕ್ಕೆ ಜಾರಿ ಒಂದಾದ ಮೇಲೊಂದು ಹಾರು ಹಾರಿ ಮತ್ತೆ ಕೆನೆದು, ಹಾಸುಗಂಬಳಿ ಮತ್ತು ಪಿರ್ರೆಯ
ಪಟ್ಟಿಯನ್ನೆಳೆದುಕೊಂಡು ದೌಡಾಯಿಸಿ ಕಣ್ಮರೆಯಾಯಿತು. ಆ ಹಿಮದ ಒಟ್ಟಿಲಲ್ಲಿ ವಾಸಿಲಿ ಆಂಡ್ರೆವಿಚ್
ಒಂಟಿಯಾಗಿ ಬಿದ್ದಿದ್ದ.
ಅವನೇನೋ
ಅದನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದ, ಆದರೆ ಹಿಮದ ಗುಳಿ ಆಳವಾಗಿದ್ದುದಲ್ಲದೆ ಅವನ ಕೋಟಿನ
ಭಾರ ಹೆಚ್ಚಾಗಿದ್ದು, ಪ್ರತಿ ಹೆಜ್ಜೆಯಿಟ್ಟಾಗಲೂ ಮೊಳಕಾಲವರೆಗೆ ಹಿಮದಲ್ಲಿ ಹೂತುಕೊಂಡು ಇಪ್ಪತ್ತು
ಹೆಜ್ಜೆಗಳನ್ನಿಡುವಷ್ಟರಲ್ಲಿ ಉಸಿರು ಕಟ್ಟಿಕೊಂಡಂತಾಗಿ ನಿಂತುಬಿಟ್ಟ. ಕುರುಚಲುಕಾಡು, ಎತ್ತುಗಳು,
ಗುತ್ತಿಗೆ ಕೊಟ್ಟ ಜಮೀನು, ಅಂಗಡಿ, ಹೋಟಲು, ಕಬ್ಬಿಣದ ಸೂರುಳ್ಳ ಮನೆ, ಕಟ್ಟಿಗೆ, ತನ್ನ
ಉತ್ತರಾಧಿಕಾರಿ - ಎಲ್ಲ ನೆನಪಿಗೆ ಬಂದವು. “ಅವನ್ನೆಲ್ಲ ಹೇಗೆ ಬಿಟ್ಟಿರುವುದು? ಇದಕ್ಕೇನು ಅರ್ಥ?
ಹಾಗಾಗಬಾರದು!” ಮನಸ್ಸಿನಲ್ಲಿ ಈ ಆಲೋಚನೆಗಳೆಲ್ಲ ಹಾದುಹೋದುವು. ಆಮೇಲೆ ಅವನ ನೆನಪಿಗೆ ಬಂದದ್ದು
ಹಿಮದಲ್ಲಿ ತೊನೆದಾಡುತ್ತಿದ್ದ ಮಾಚಿಪತ್ರೆ ಗಿಡಗಳು; ಅವುಗಳನ್ನು ಅವನು ಎರಡು ಬಾರಿ ಹಾದು
ಬಂದಿದ್ದ; ಅವನನ್ನು ಎಂಥ ಭಯ ಹಿಡಿದಿಟ್ಟಿತ್ತೆಂದರೆ ತನಗೆ ಆಗುತ್ತಿರುವುದು ನಿಜ ಎಂಬ ಬಗ್ಗೆ
ಅವನಿಗೆ ನಂಬಿಕೆ ಬಾರದಾಯಿತು. “ಇದೇನು ಕನಸೇ?” ಎನ್ನಿಸಿ ಎಚ್ಚರಗೊಳ್ಳಲು ಪ್ರಯತ್ನಿಸಿ ವಿಫಲನಾದ.
ಮುಖಕ್ಕೆ ರಾಚಿ, ತನ್ನನ್ನಾವರಿಸಿ, ಗವಸು ಕಳಚಿಹೋಗಿದ್ದ ಬಲಗೈ ಚಳಿ ಹೆಚ್ಚಿದಾಗ ಇದು ನಿಜವಾದ ಹಿಮ ಅನ್ನಿಸಿತು; ಇದು ನಿಜವಾದ ಹಿಮಭೂಮಿ, ತಾನಲ್ಲಿ ಮಾಚಿಪತ್ರೆ ಗಿಡದಂತೆ ಒಂಟಿಯಾಗಿ
ಅನಿವಾರ್ಯವೂ ಶೀಘ್ರವೂ ಆದ ನಿರರ್ಥಕ ಸಾವನ್ನೆದುರಿಸುತ್ತಿರುವವನು ಎಂಬ ಅರಿವುಂಟಾಯಿತು.
“ಸ್ವರ್ಗದ ರಾಣಿಯೇ, ಸಂಯಮ ಬೋಧಿಸಿದ ಫಾದರ್ ನಿಕೊಲಸ್‍ನೇ!”
ಎಂದುಕೊಂಡ, ಹಿಂದಿನ ದಿನ ನಡೆದ ಪ್ರಾರ್ಥನೆಯ ಸನ್ನಿವೇಶ, ಕಪ್ಪು ಮುಖ ಹೊಳಪಿನ ಚೌಕಟ್ಟಿನ
ಅಲ್ಲಿದ್ದ ಪವಿತ್ರ ವಿಗ್ರಹ, ಆ ವಿಗ್ರಹದೆದುರು ಹೊತ್ತಿಸಿಡಲು ತಾನು ಮಾರಿದ್ದ ಮೇಣದ ಬತ್ತಿಗಳು,
ಸ್ವಲ್ಪವೂ ಉರಿಯದ ಅವುಗಳನ್ನು ತಕ್ಷಣ ತನ್ನ ಬಳಿಗೆ ವಾಪಸು ತಂದದ್ದು, ಅವುಗಳನ್ನೆಲ್ಲ ತನ್ನ
ಉಗ್ರಾಣದಲ್ಲಿರಿಸಿದ್ದು – ಎಲ್ಲ ನೆನಪಿಗೆ
ಬಂದುವು. ತನ್ನನ್ನು ಕಾಪಾಡಬೇಕೆಂದು ಪವಾಡಪುರುಷ ನಿಕೊಲಸ್ ಅನ್ನು ಪ್ರಾರ್ಥಿಸತೊಡಗಿದ,
ಕೃತಜ್ಞತಾಪೂಜೆ ಸಲ್ಲಿಸಿ ಕೆಲವು ಮೇಣದ ಬತ್ತಿಗಳನ್ನು ನೀಡುವುದಾಗಿ ಹರಕೆ ಹೊತ್ತ. ಆದರೆ ಆ
ವಿಗ್ರಹ, ಅದರ ಚೌಕಟ್ಟು, ಮೇಣದ ಬತ್ತಿಗಳು, ಪುರೋಹಿತರು, ಕೃತಜ್ಞತಾಪೂಜೆ – ಇವೆಲ್ಲ ಚರ್ಚ್‍ನಲ್ಲಿ ಬಹು ಮುಖ್ಯವಾದುವಾದರೂ, ತನಗೆ ಅವು
ಏನೂ ಮಾಡಲಾರವು; ಅಲ್ಲದೆ ಮೇಣದ ಬತ್ತಿಗಳು ಹಾಗೂ ಪೂಜೆಗಳಿಗೂ ತನ್ನ ಈಗಿನ ದುರವಸ್ಥೆಗೂ ಏನೇನೂ
ಸಂಬಂಧವಿರಲಾರದೆಂಬುದು ಅವನಿಗೆ ಸ್ಪಷ್ಟವಾಗಿಯೂ ನಿಸ್ಸಂಶಯವಾಗಿಯೂ ಅರ್ಥವಾಗಿತ್ತು. “ನಾನು
ನಿರಾಶನಾಗಬಾರದು! ಹಿಮದಲ್ಲಿ ಹುದುಗಿಹೋಗುವ ಮುಂಚೆಯೇ ನಾನೀಗ ಕುದುರೆಯ ಜಾಡನ್ನು ಹಿಡಿದು
ಹೋಗಬೇಕು. ಅದು ನನಗೆ ದಾರಿ ತೋರಿಸುತ್ತದೆ, ಅಥವಾ ಅದನ್ನು ನಾನು ಹಿಡಿಯಬೇಕು. ಯಾವುದಕ್ಕೂ
ಆತುರಪಡಬಾರದು, ಹಾಗೇನಾದ್ರೂ ಮಾಡಿದ್ರೆ ಹಿಮದಲ್ಲಿ ಹೂತುಹೋಗಿ ಮತ್ತಷ್ಟು ಕಷ್ಟಕ್ಕೆ
ಸಿಕ್ಕಿಹಾಕ್ಕೋತೀನಿ.”
ಸಮಚಿತ್ತತೆಯಿಂದ ಹೋಗಬೇಕೆಂದು ನಿರ್ಧರಿಸಿದರೂ, ಜೋರಾಗಿ
ಹೆಜ್ಜೆ ಹಾಕುವುದಷ್ಟೇ ಅಲ್ಲ, ಓಡಲೂ ತೊಡಗಿದ; ಹೀಗಾಗಿ ಮತ್ತೆ ಮತ್ತೆ ಕುಸಿಯುತ್ತಿದ್ದ. ಆ
ಹೊತ್ತಿಗಾಗಲೇ ಕುದುರೆಯ ಗೊರಸು ಗುರುತುಗಳು ಹಿಮ ದಟ್ಟವಾಗಿ ಬಿದ್ದಿರದ ಕಡೆಗಳಲ್ಲಿಯೂ ಅಲ್ಲಲ್ಲಿ
ಅಳಿಸಿಹೋಗಿದ್ದುವು. “ನಾನು ಕೆಟ್ಟೆ! ಗುರುತು ಪತ್ತೆ ಆಗಲಾರದು, ಕುದುರೆಯನ್ನು ಹಿಡಿಯಲಾರೆ”
ಎಂದುಕೊಂಡ ವಾಸಿಲಿ ಆಂಡ್ರೆವಿಚ್. ಆದರೆ ಆ ಹೊತ್ತಿಗೆ ಸರಿಯಾಗಿ ಕಪ್ಪಗೆ ಏನೋ ಕಾಣಿಸಿತು.
ನೋಡಿದರೆ, ಮುಖೋರ್ಟಿ! ಅಷ್ಟೇ ಅಲ್ಲ, ಜೊತೆಗೆ ಮೂಕಿ, ಅದರ ತುದಿಗೆ ಕಟ್ಟಿದ್ದ ಕರ್ಚೀಫ್ ಸಮೇತ
ಜಾರುಬಂಡಿ ಕೂಡ. ಗೋಣಿತಾಟು ಮತ್ತು ಒಂದು ಕಡೆ ತಿರುಚಿಕೊಂಡಿದ್ದ ಪಿರ್ರೆಯ ಪಟ್ಟಿಗಳು. ಮುಖೋರ್ಟಿ
ನಿಂತಿದ್ದುದು ಹಿಂದಿದ್ದ ಜಾಗದಲ್ಲಲ್ಲ, ಮೂಕಿಯ ಹತ್ತಿರ; ತಾನು ಪಾದಗಳನ್ನಿರಿಸಿಕೊಂಡಿದ್ದ
ಲಗಾಮುಗಳು ಜಾರುತ್ತಿರಲು ಕುದುರೆ ತಲೆಯನ್ನು ಕೊಡವುತ್ತಿದೆ. ನೋಡಿದರೆ, ಹಿಂದೆ ನಿಕಿಟ
ಕುಸಿದುಬಿದ್ದಿದ್ದ ಹಿಮದ ಗುಂಡಿಯಲ್ಲೇ ತಾನೀಗ ಬಿದ್ದಿದ್ದುದು ಎಂಬ ಅರಿವು ವಾಸಿಲಿ ಆಂಡ್ರೆವಿಚ್‍ಗೆ
ಉಂಟಾಯಿತು. ಮುಖೋರ್ಟಿ ತನ್ನನ್ನೀಗ ಹೊರಟ ಎಡೆಗೇ ಜಾರುಬಂಡಿಯ ಹತ್ತಿರ ಕರೆತಂದಿತ್ತು, ತಾನು
ಕುದುರೆಯಿಂದ ಕೆಳಗೆ ಬಿದ್ದಿದ್ದುದು ಈ ಜಾಗದಿಂದ ಕೇವಲ ಐವತ್ತು ಹೆಜ್ಜೆಗಳಷ್ಟು ದೂರ, ಅಷ್ಟೆ!
9
ಮತ್ತೆ ಸ್ಲೆಜ್ ಬಳಿಗೇ ಬಂದ ವಾಸಿಲಿ ಆಂಡ್ರೆವಿಚ್
ಅದನ್ನು ಹಿಡಿದುಕೊಂಡು, ಉಸಿರು ತೆಗೆದುಕೊಳ್ಳಲು ಹಾಗೂ ಸಮಸ್ಥಿತಿಗೆ ಬರಲು, ಸುಮಾರು ಹೊತ್ತು
ಅಲ್ಲಾಡದೆ ನಿಂತುಕೊಂಡ. ನಿಕಿಟ ತನ್ನ ಮೊದಲಿನ ಜಾಗದಲ್ಲಿರಲಿಲ್ಲ, ಆದರೆ ಆಗಲೇ ಹಿಮ ಮುಸುಕಿದ್ದ
ಏನೋ ಒಂದು ಜಾರುಬಂಡಿಯಲ್ಲಿ ಮುದುರಿಕೊಂಡಿತ್ತು, ಅದು ನಿಕಿಟನೇ ಇರಬೇಕೆಂದೆಉ ವಾಸಿಲಿ
ಆಂಡ್ರೆವಿಚ್ ತೀರ್ಮಾನಿಸಿದ. ಅವನ ಭಯಾನಕತೆ ಈಗ ದೂರವಾಗಿತ್ತು, ಅದೇನಾದರೂ ಉಳಿದುಕೊಂಡಿದ್ದರೆ
ಕುದುರೆಯ ಮೇಲೆ ಹೋಗುವಾಗ ಅದರಲ್ಲೂ ಹಿಮದ ಕುಳಿಯಲ್ಲಿ ತಾನೊಬ್ಬನೇ ಬಿದ್ದಾಗ ಆಗಿದ್ದ ಹಿಂದಿನ
ಭಯಾನಕತೆ ಮತ್ತೆ ಮರುಕಳಿಸೀತೆಂಬುದರ ಬಗ್ಗೆ. ಏನಾದರಾಗಲೀ ಆ ಭಯಾನಕತೆ ಮತ್ತೆ
ಕಾಣಿಸಿಕೊಳ್ಳಬಾರದಿತ್ತು, ಅದನ್ನು ದೂರಸರಿಸಲು ತಾನೀಗ ಏನಾದರೂ ಮಾಡಬೇಕಾಗಿತ್ತು -
ಯಾವುದರಲ್ಲಾದರೂ ತೊಡಗಿಸಿಕೊಳ್ಳಬೇಕು. ಅವನು ಮಾಡಿದ ಮೊದಲ ಕೆಲಸವೆಂದರೆ ಗಾಳಿಗೆ ಬೆನ್ನೊಡ್ಡಿ
ನಿಂತು ತನ್ನ ತುಪ್ಪುಳುಕೋಟನ್ನು ಸಡಿಲಿಸಿಕೊಂಡದ್ದು. ಮತ್ತೆ ಉಸಿರನ್ನು ಸಲೀಸುಗೊಳಿಸಿಕೊಂಡ ಮೇಲೆ
ತನ್ನ ಬೂಟುಗಳಲ್ಲಿ ಹಾಗೂ ಎಡ ಗವಸಿನಲ್ಲಿ (ಅವನ ಬಲ ಗವಸು ಎಲ್ಲೋ ಕಳೆದುಹೋಗಿತ್ತು, ಪ್ರಾಯಶಃ
ಹಿಮದಲ್ಲಿ ಹೂತುಹೋಗಿದ್ದಿರಬೇಕು) ತುಂಬಿಕೊಂಡಿದ್ದ ಹಿಮವನ್ನು ಕೊಡವಿಕೊಂಡ. ಆಮೇಲೆ ಅಂಗಡಿಯಿಂದ
ಹೊರಟು ರೈತರಿಗೆ ದವಸವನ್ನು ಕೊಳ್ಳಲು ಹೋಗುವಾಗಿನ ಅಭ್ಯಾಸಬಲದಂತೆ ತನ್ನ ಸೊಂಟಪಟ್ಟಿಯನ್ನು
ಕೆಳಕ್ಕೆ ಸರಿಸಿ ಬಿಗಿಗೊಳಿಸಿಕೊಂಡು ಕಾರ್ಯಪ್ರವೃತ್ತನಾಗಲು ಸಿದ್ಧನಾದ. ಅವನಿಗೆ ತೋಚಿದ ಮೊದಲ
ಕೆಲಸವೆಂದರೆ ಮುಖೋರ್ಟಿಯ ಕಾಲನ್ನು ಲಗಾಮುಗಳಿಂದ ಬಿಡಿಸುವುದು. ಆ ಕೆಲಸ ಮಾಡಿ, ಮೊದಲಿದ್ದಂತೆಯೇ
ಕುದುರೆಯನ್ನು ಜಾರುಬಂಡಿಯ ಮುಂಭಾಗದಲ್ಲಿದ್ದ ಕಬ್ಬಿಣದ ಸಲಾಕಿಗೆ ಕಟ್ಟಿಹಾಕಿ, ಪಿರ್ರೆಯ
ಪಟ್ಟಿಯನ್ನು ಸರಿಯಾಗಿ ಮಾಡಿ, ಹಾಸುಗಂಬಳಿಯಿಂದ ಅದರ ಬೆನ್ನಿಗೆ ಹೊದಿಸಿದ. ಆದರೆ ಆ ಹೊತ್ತಿಗೆ
ಸ್ಲೆಜ್‍ನಲ್ಲಿ ಏನೋ ಮಿಸುಕಾಡುತ್ತಿರುವಂತೆ ಕಾಣಿಸಿತು; ನಿಕಿಟನ ತಲೆ ಮುಸುಕಿದ್ದ ಹಿಮದಿಂದ
ಮೇಲಕ್ಕೆದ್ದು ಕಾಣಿಸಿತು. ಅರ್ಧ ಹೆಪ್ಪುಗಟ್ಟಿದ್ದ ನಿಕಿಟ ತುಂಬ ಕಷ್ಟಪಟ್ಟು ಮೇಲೆದ್ದು
ವಿಚಿತ್ರವಾಗಿ ನೊಣಗಳನ್ನು ಓಡಿಸುವ ರೀತಿಯಲ್ಲಿ ತನ್ನ ಮೂಗಿನ ಮುಂದೆ ಕೈಯನ್ನು ತಂದುಕೊಂಡ. ತನ್ನ
ಕೈಯಾಡಿಸಿ ಏನೋ ಹೇಳಿದ, ತನ್ನನ್ನು ಅವನು ಕರೆಯುತ್ತಿರುವನೆಂಬ ಭಾವನೆ ವಾಸಿಲಿ ಆಂಡ್ರೆವಿಚ್‍ಗಾಯಿತು.
ಇನ್ನೂ ಅಸ್ತವ್ಯಸ್ತವಾಗಿದ್ದ ತನ್ನ ಬಟ್ಟೆಗಳನ್ನು ಸರಿಪಡಿಸಿಕೊಳ್ಳದೆ ಅವನು ಜಾರುಬಂಡಿಯ ಬಳಿ
ಹೋದ.
“ಏನದು? ಏನು ಹೇಳಿದೆ ನೀನು?”
“ನಾನು ಸಾ ... ಯ್ತಿದ್ದೀನಿ, ಅಷ್ಟೆ. ನನಗೆ
ಕೊಡಬೇಕಾಗಿರೋ ... ಬಾಕಿಯನ್ನು ನನ್ನ ಮಗನಿಗೆ ಕೊಟ್ಬಿಡಿ, ... ಅಥ್ವಾ ... ಹೆಂಡತಿಗೆ ...
ಕೊಟ್ಟರೂ ... ಪರವಾಯಿಲ್ಲ” ಎಂದ ನಿಕಿಟ ಬಿಟ್ಟು ಬಿಟ್ಟು, ತುಂಬ ಕಷ್ಟಪಟ್ಟು.
“ಯಾಕೆ, ನಿಜವಾಗ್ಲೂ ಹೆಪ್ಪುಗಟ್ಟಿಹೋಗಿದ್ದೀಯಾ?”
ಎದು ವಿಚಾರಿಸಿದ ವಾಸಿಲಿ ಆಂಡ್ರೆವಿಚ್.
“ಇದು ನನ್ನ ಸಾವು ಅಂತ ಅನ್ನಿಸ್ತಿದೆ. ನನ್ನ
ಕ್ಷಮಿಸಿಬಿಡಿ ... “ ಎಂದ ನಿಕಿಟ ಅಳು ಬೆರೆತ ದನಿಯಲ್ಲಿ, ಮುಖದ ಮುಂದಿನ ನೊಣಗಳನ್ನು ಓಡಿಸುವ
ರೀತಿಯಲ್ಲಿ ಕೈಯಾಡಿಸುತ್ತ.
ವಾಸಿಲಿ ಆಂಡ್ರೆವಿಚ್ ಮೂಕನಾಗಿ ಸುಮ್ಮನೆ ನಿಂತ
ಒಂದರೆಕ್ಷಣ. ಆಮೇಲೆ ಇದ್ದಕ್ಕಿದ್ದಂತೆ - ಒಳ್ಳೆಯ ವ್ಯಾಪಾರ ಮಾಡುವಾಗ ಕೈಗಳನ್ನು
ಹೊಡೆದುಕೊಳ್ಳುವಂತೆ - ನಿರ್ಧಾರದಿಂದ ಒಂದು ಹೆಜ್ಜೆ ಹಿಂದೆ ಸರಿದು ತನ್ನ ತೋಳನ್ನು ಹಿಂದೆ
ಸರಿಸಿಕೊಂಡು ನಿಕಿಟನನ್ನು ಮುಸುಕಿದ್ದ ಹಾಗೂ ಸ್ಲೆಜ್‍ನಲ್ಲಿದ್ದ ಹಿಮವನ್ನು ತೊಡೆದು ಹಾಕಿದ.
ಇಷ್ಟು ಮಾಡಿ ತರಾತುರಿಯಿಂದ ತನ್ನ ಸೊಂಟಪಟ್ಟಿಯನ್ನು ತೆಗೆದು, ಫ಼ರ್ ಕೋಟನ್ನು ತೆಗೆದು,
ನಿಕಿಟನನ್ನು ಕೆಳಗೆ ತಳ್ಳಿ ಅವನ ಮೇಲೆ ಮಲಗಿ, ಫ಼ರ್ ಕೋಟ್ ಮಾತ್ರವಲ್ಲ, ಬಿಸುಪಿನಿಂದ ಕೂಡಿದ್ದ
ತನ್ನ ಇಡೀ ದೇಹದಿಂದ ಅವನನ್ನು ಮುಸುಕಿದ. ತನ್ನ ಕೋಟಿನ ಚುಂಗುಗಳನ್ನು ಸರಿಸಿ ನಿಕಿಟ ಮತ್ತು
ಸ್ಲೆಜ್‍ನ ಬದಿಗಳಿಗೆ ಕಟ್ಟಿ, ತನ್ನ ಮೊಣಕಾಲುಗಳಿಂದ ಅವುಗಳನ್ನು ಹಿಡಿದುಕೊಂಡು ವಾಸಿಲಿ
ಆಂಡ್ರೆವಿಚ್ ಹಾಗೇ ಮುಖಡಿಯಾಗಿ ಮಲಗಿದ. ಇಷ್ಟು ಆದಾಗ ಅವನಿಗೆ ಕುದುರೆಯ ಸದ್ದು ಕೇಳಿಸಲಿಲ್ಲ,
ಗಾಳಿಯ ಶಿಳ್ಳೆಯೂ ಕೇಳಿಸಲಿಲ್ಲ, ಕೇಳಿಸುತ್ತಿದ್ದುದು ನಿಕಿಟ ಉಸಿರಾಟದ ಸದ್ದು ಮಾತ್ರ. ಮೊದಲು
ದೀರ್ಘ ಕಾಲ ಚಲನೆಯಿಲ್ಲದೆ ಮಲಗಿದ್ದ ನಿಕಿಟ, ಆನಂತರ ನೀಳವಾದ ಉಸಿರುಬಿಟ್ಟು ಅಲ್ಲಾಡಿದ.
“ನೋಡಿದ್ಯಾ, ಸಾಯ್ತಿದ್ದೀನಿ ಅಂದ್ಯಲ್ಲ! ಹಾಗೇ
ಮಲಗಿಕೊಂಡು ಬೆಚ್ಚಗಾಗು, ಇರಬೇಕಾದ್ದು ಹೀಗೆ!” ಎಂದು ವಾಸಿಲಿ ಆಂಡ್ರೆವಿಚ್ ಶುರುಮಾಡಿದ.
ಆದರೆ ತನಗೇ ಅಚ್ಚರಿಯಾಗವಂತೆ ಮುಂದೇನೂ
ಮಾತನಾಡಲಾಗಲಿಲ್ಲ, ಅವನ ಕಣ್ಣುಗಳಲ್ಲಿ ನೀರು ತುಂಬಿ ಕೆಳದವಡೆ ಜೋರಾಗಿ ಬಡಿದುಕೊಳ್ಳತೊಡಗಿತು.
ಮಾತನಾಡುವುದನ್ನು ನಿಲ್ಲಿಸಿ ತನ್ನ ಗಂಟಲಲ್ಲಿನ ಉಗುಳನ್ನು ನುಂಗಿಕೊಂಡ. “ನಾನು ತುಂಬ ಭಯದಿಂದ
ತತ್ತರಿಸಿಹೋಗಿ ದುರ್ಬಲನಾದೆ” ಎಂದುಕೊಂಡ. ಆದರೆ ಈ ದೌರ್ಬಲ್ಯ ಅಸಂತೋಷಕರವಲ್ಲದ್ದು ಮಾತ್ರವಲ್ಲದೆ
ಅವನಿಗೆ ವಿಶಿಷ್ಟವಾದೊಂದು ಸಂತೋಷವನ್ನೂ ನೀಡಿತ್ತು, ಅಂಥ ಅನುಭವ ಅವನಿಗೆ ಹಿಂದೆಂದೂ ಆಗಿರಲಿಲ್ಲ.
“ಇರಬೇಕಾದ್ದು ಹೀಗೆ!” ಅಂದುಕೊಂಡ ಅವನಿಗೆ
ಅಪರೂಪವೂ ವಿಸ್ಮಯಕರವೂ ಆದ ಮೃದುತೆಯ ಅನುಭವ ಉಂಟಾಯಿತು. ತುಂಬ ಹೊತ್ತು ಹಾಗೆಯೇ ಮಲಗಿದ್ದ ಅವನು,
ತನ್ನ ಕೋಟಿನ ತುಪ್ಪುಳಕ್ಕೆ ಕಣ್ಣುಗಳೊನ್ನರೆಸಿಕೊಂಡು, ಗಾಳಿ ಸಡಿಲಗೊಳಿಸಿದ್ದ ಬಲಭಾಗದ ಚುಂಗನ್ನು
ಮೊಳಕಾಲಿಗೆ ಸಿಕ್ಕಿಸಿಕೊಂಡ.
ತನ್ನ
ಆನಂದದ ಅನುಭವವನ್ನು ಯಾರಿಗಾದರೂ ಹೇಳಿಕೊಳ್ಳಬೇಕೆಂಬ ಬಲವಾದ ತುಡಿತ ಅವನಲ್ಲುಂಟಾಯಿತು. “ನಿಕಿಟ!”
ಎಂದ.
“ಈಗ ಹಾಯಾಗಿದೆ, ಬೆಚ್ಚಗಿದೆ!” ಕೆಳಗಿನಿಂದ ದನಿ
ಹೊರಬಿತ್ತು.
“ನೋಡು, ಗೆಳೆಯ, ನಾನು ಹಾಳಾಗಿ ಹೋಗ್ತಿದ್ದೆ. ನೀನು
ಹೆಪ್ಪುಗಟ್ಟಿಬಿಡ್ತಿದ್ದೆ, ನಾನು .. ..”
ಮತ್ತೆ ಅವನ ದವಡೆ ಕಂಪಿಸಿತು, ಕಣ್ಣುಗಳಲ್ಲಿ
ಹನಿಗಟ್ಟಿದವು, ಮುಂದೇನೂ ಮಾತನಾಡಲಾಗಲಿಲ್ಲ.
“ಆದದ್ದಾಯಿತು. ನನಗೆ ನನ್ನ ಬಗ್ಗೆ ವಿಚಾರ ತಿಳಿಯಿತು”
ಎಂದುಕೊಂಡ.
ಸುಮ್ಮನಾಗಿ, ಹಾಗೆ ಬಹು ಕಾಲ ಮಲಗಿದ್ದ.
ಅವನನ್ನು ನಿಕಿಟ ಕೆಳಗಿನಿಂದ ಬಿಸಿಪುಗೊಳಿಸಿದ್ದರೆ,
ತುಪ್ಪುಳು ಕೋಟು ಮೇಲಿನಿಂದ ಬೆಚ್ಚಗಿರಿಸಿತ್ತು. ನಿಕಿಟನ ಪಕ್ಕಗಳಲ್ಲಿ ಸುತ್ತಲೂ ಕೋಟಿನ
ಚುಂಗುಗಳನ್ನು ಮುಚ್ಚಿದ್ದ ಹಾಗೂ ಗಾಳಿಯಿಂದಾಗಿ ಹೊದಿಕೆ ಕಳಚಿದ್ದ ಕಾಲುಗಳು ಚಳಿಗುಟ್ಟಲು
ತೊಡಗಿದುವು, ಅದರಲ್ಲೂ ಗವಸು ಇಲ್ಲದಿದ್ದ ಬಲಗೈ. ತನ್ನ ಕಾಲುಗಳ ಬಗ್ಗೆಯಾಗಲೀ ಕೈಗಳ
ಬಗ್ಗೆಯಾಗಲೀ ಅವನಿಗೆ ಯೋಚನೆ ಬರಲಿಲ್ಲ, ಅವನ
ತಲೆಯಲ್ಲಿ ಸುಳಿಯುತ್ತಿದ್ದ ಯೋಚನೆಯೆಂದರೆ ತನ್ನ ಕೆಳಗೆ ಮಲಗಿದ್ದ ಬಡಪಾಯಿಯನ್ನು ಹೇಗೆ ಬೆಚ್ಚಗಿರಿಸುವುದೆಂಬ
ಪ್ರಶ್ನೆ. ಮುಖೋರ್ಟಿಯ ಕಡೆ ಅನೇಕ ವೇಳೆ ಅವನ ಗಮನ ಹರಿದಿತ್ತು, ಪಾಪ ಅದರ ಬೆನ್ನ ಮೇಲೆ
ಹೊದಿಕೆಯಿಲ್ಲದಿರುವುದು ಅವನ ಕಣ್ಣಿಗೆ ಬಿತ್ತು; ಹಾಸುಗಂಬಳಿ ಮತ್ತು ಪಿರ್ರೆಯ ಪಟ್ಟಿಗಳು
ಹಿಮದಲ್ಲಿ ಬಿದ್ದಿದ್ದುವು. ತಾನೇ ಮೇಲೆದ್ದು ಅದಕ್ಕೆ ಹೊದಿಸಬೇಕಾಗಿತ್ತು, ಆದರೆ ನಿಕಿಟನನ್ನು
ಬಿಟ್ಟೇಳಲು ಮನಸ್ಸು ಬರಲಿಲ್ಲ, ಕ್ಷಣಮಾತ್ರವಾದರೂ ತಾನಿದ್ದ ಆನಂದದ ಅನುಭವವನ್ನು ಕದಡಲು ಅವನು
ಇಷ್ಟಪಡಲಿಲ್ಲ. ಅವನ ಮನಸ್ಸಿನಲ್ಲಿ ಭಯದ ಲೇಶವಾದರೂ ಉಳಿದಿರಲಿಲ್ಲ.
“ಇನ್ನು ಭಯವಿಲ್ಲ, ಈ ಸಲ ಅವನನ್ನು ಕಳೆದುಕೊಳ್ಳಬಾರದು!”
ಎಂದುಕೊಂಡ, ನಿಕಿಟನನ್ನು ಬೆಚ್ಚಗಿರಿಸಿರುವುದನ್ನು ನೆನೆದು, ವ್ಯವಹಾರದಲ್ಲಿ ತನ್ನ ಚಾಕಚಕ್ಯತೆಯ
ಬಗ್ಗೆ ಹೆಮ್ಮೆಪಟ್ಟಂತೆಯೇ.
ಆ ರೀತಿ ವಾಸಿಲಿ ಆಂಡ್ರೆವಿಚ್ ಒಂದು ಗಂಟೆ, ಎರಡು, ಮೂರು
ಗಂಟೆಗಳ ಕಾಲ ಮಲಗಿದ್ದ, ಅವನಿಗೆ ಕಾಲ ಸರಿದದ್ದೇ ಗೊತ್ತಾಗಲಿಲ್ಲ. ಹಿಮಗಾಳಿ, ಜಾರುಬಂಡಿಯ ಮೂಕಿ,
ತನ್ನ ಕಣ್ಣೆದುರಿಗೆ ಕಾಣಿಸಿದ್ದ ಮೂಕಿತುದಿಯ ಅಲುಗಾಟ – ಇವೆಲ್ಲ ಮೊದಮೊದಲು ಅವನ ಮನಸ್ಸಿನಲ್ಲಿ ಸುಳಿದುಹೋದುವು, ಆಮೇಲೆ ನೆನಪಿಗೆ
ಬಂದದ್ದು ತನ್ನ ಕೆಳಗೆ ಮಲಗಿದ್ದ ನಿಕಿಟ, ಆಮೇಲೆ ಹಬ್ಬ, ತನ್ನ ಹೆಂಡತಿ, ಪೋಲೀಸ್ ಅಧಿಕಾರಿ, ಮೇಣದ
ಬತ್ತಿಗಳ ಪೆಟ್ಟಿಗೆ – ಇವೆಲ್ಲ
ಬೆಸೆದುಕೊಳ್ಳತೊಡಗಿದುವು. ಮತ್ತೆ ನೆನಪಾದದ್ದು, ಆಮೇಲೆ ಪೆಟ್ಟಿಗೆಯ ಕೆಳಗೆ ಮಲಗಿದ ನಿಕಿಟ,
ಆನಂತರ ರೈತರು, ಗಿರಾಕಿಗಳು ಮತ್ತು ವ್ಯಾಪಾರಿಗಳು, ಆಮೇಲೆ ಬಿಳಿಪು ಗೋಡೆಗಳ ಕಬ್ಬಿಣದ ಸೂರಿನ
ತನ್ನ ಮನೆಯ ಕೆಳಗೆ ಮಲಗಿದ ನಿಕಿಟ – ಎಲ್ಲ
ಅವನ ಕಲ್ಪನೆಯಲ್ಲಿ ಸುಳಿದಾಡಿದುವು. ಕಾಮನಬಿಲ್ಲಿನ ಬಣ್ಣಗಳೆಲ್ಲ ಅಂತಿಮವಾಗಿ ಬಿಳಿಯಲ್ಲಿ
ಸೇರಿಹೋಗುವಂತೆ ಆಮೇಲೆ ಈ ಅನಿಸಿಕೆಗಳೆಲ್ಲ ಒಂದು ಶೂನ್ಯದಲ್ಲಿ ಸೇರಿಹೋಗಿ ನಿದ್ರೆಯಲ್ಲಿ
ಮುಳುಗಿದ.
ನಿಡುಗಾಲ ಯಾವುದೇ ಕನಸುಗಳಿಲ್ಲದೆ ಅವನು ನಿದ್ರಿಸಿದ, ಆದರೆ
ಬೆಳಗಿನ ಜಾವಕ್ಕೆ ನಸು ಮುಂಚೆ ಕಲ್ಪನೆಗಳು ಮರುಕಳಿಸಲು ತೊಡಗಿದುವು. ತಾನು ಮೇಣದ ಬತ್ತಿಗಳ ಪೆಟ್ಟಿಗೆಯ
ಪಕ್ಕದಲ್ಲಿ ನಿಂತಂತೆಯೂ, ತಿಖೋನ್‍ನ ಹೆಂಡತಿ ಚರ್ಚ್ ಹಬ್ಬಕ್ಕಾಗಿ ಐದು ಕೊಪೆಕ್‍ಗೆ ಮೇಣದ
ಬತ್ತಿಯನ್ನು ಕೇಳಿದಂತೆಯೂ ಅವನಿಗೆ ಅನುಭವವಾಯಿತು. ಒಂದು ಮೇಣದ ಬತ್ತಿಯನ್ನು ತೆಗೆದು
ಕೊಡಬೇಕೆಂದು ಅವನಿಗನ್ನಿಸಿತು, ಆದರೆ ಕೈಗಳೇ ಮೇಲೇಳಲಿಲ್ಲ, ಕೈಗಳು ಕೋಟು ಜೇಬುಗಳಲ್ಲಿ
ಭದ್ರವಾಗಿದ್ದುವು. ಪೆಟ್ಟಿಗೆಯ ಸುತ್ತ ಸುಳಿದಾಡಬೇಕೆನಿಸಿತು, ಆದರೆ ಕಾಲುಗಳು ಅಲುಗಾಡಲಿಲ್ಲ.
ಶುಭ್ರವಾದ ಗೊಲೋಶ್‍ಗಳು ಕಲ್ಲಿನ ನೆಲಗಟ್ಟಿಗೆ ಅಂಟಿಕೊಂಡಿದ್ದುವು, ಅದನ್ನು ಮೇಲೆತ್ತಲಾಗಲೀ
ಅವುಗಳಿಂದ ಕಾಲುಗಳನ್ನು ಹೊರತೆಗೆಯಲಾಗಲೀ ಸಾಧ್ಯವಾಗಲಿಲ್ಲ. ಆಮೇಲೆ ಇದ್ದಕ್ಕಿದ್ದಂತೆ ಮೇಣದ ಬತ್ತಿಯ ಪೆಟ್ಟಿಗೆ
ಪೆಟ್ಟಿಗೆಯಾಗಿರದೆ ಹಾಸಿಗೆಯಾಗಿಬಿಟ್ಟಿತ್ತು. ಆಗ ತಾನು ಮನೆಯ ಹಾಸಿಗೆಯ ಮೇಲೆ ಮಲಗಿರುವಂತೆ
ಅನುಭವವಾಯಿತು. ಮಲಗಿದ್ದರೂ ಮೇಲೇಳಲು ಸಾಧ್ಯವಾಗಲಿಲ್ಲ. ಏಳಲೇಬೇಕಾಗಿತ್ತು, ಯಾಕಂದರೆ ಪೋಲೀಸ್
ಅಧಿಕಾರಿ ಇವಾನ್ ಮ್ಯಾಟ್ವೀಚ್ ಇಷ್ಟರಲ್ಲೇ ತನ್ನನ್ನು ಬಂದು ಕಾಣುವವನಿದ್ದ, ಕಾಡಿನ ಬಗ್ಗೆ
ಚೌಕಾಶಿ ಮಾಡುವುದಕ್ಕೋ ಮುಖೋರ್ಟಿಯ ಪಟ್ಟಿಗಳನ್ನು ಸರಿಪಡಿಸಲೋ ತಾನವನೊಡನೆ ಹೋಗಬೇಕಾಗಿತ್ತು.
ತನ್ನ ಹೆಂಡತಿಯನ್ನು, “ನಿಕೊಲಯೇವ್ನಾ, ಅವರಿನ್ನೂ
ಬಂದಿಲ್ವಾ?” ಎಂದು ಕೇಳಿದ, “ಉಹ್ಞೂ, ಬಂದಿಲ್ಲ” ಎಂದುತ್ತರಿಸಿದಳು ಆಕೆ. ಯಾರೋ ತನ್ನ ಮನೆಯ
ಮುಂದೆ ಗಾಡಿಯಲ್ಲಿ ಬಂದಂತಾಯಿತು. “ಅವರೇ ಇರ್ಬೇಕು.” “ಅಲ್ಲ, ಗಾಡಿ ಮುಂದೆ ಹೋಯ್ತು.”
“ನಿಕೊಲಯೇವ್ನಾ, ನಿನ್ನೇ ಕೇಳ್ತಿರೋದು, ಅವರಿನ್ನೂ ಬರಲಿಲ್ಲ?” “ಉಹ್ಞೂ.” ಅವನಿನ್ನೂ
ಹಾಸಿಗೆಯಲ್ಲೇ ಮಲಗಿದ್ದ, ಮೇಲೇಳಲು ಆಗುತ್ತಿರಲಿಲ್ಲ, ಆದರೆ ಕಾಯುತ್ತಲೇ ಇದ್ದ. ಈ ಕಾಯುವಿಕೆ
ವಿಲಕ್ಷಣವಾದ್ದು, ಆದರೂ ಸಂತೋಷದಾಯಕವಾದ್ದು. ಆಮೇಲೆ ಇದ್ದಕ್ಕಿದ್ದಂತೆ ಅವನ ಸಂತೋಷ
ಪೂರ್ಣಗೊಂಡಿತು; ತಾನು ನಿರೀಕ್ಷಿಸುತ್ತಿದ್ದವನು ಬಂದಿದ್ದ, ಆದರೆ ಪೋಲಿಸ್ ಅಧಿಕಾರಿ ಇವಾನ್
ಮ್ಯಾಟ್ವೀಚ್ ಅಲ್ಲ, ಬೇರೆ ಯಾರೋ – ಆದರೂ ತಾನು
ನಿರೀಕ್ಷಿಸುತ್ತಿದ್ದುದು ಅವನನ್ನೇ. ಬಂದವನೇ ತನ್ನನ್ನು ಕರೆದ; ಅವನೇ ತನಗೆ ನಿಕಿಟನ ಮೇಲೆ ಮಲಗಲು
ಹೇಳಿದ್ದವನು. ಅವನು ಬಂದನಲ್ಲ ಎಂದು ವಾಸಿಲಿ ಆಂಡ್ರೆವಿಚ್ ಸಂತಸಗೊಂಡ.
“ಇಗೋ ಬಂದೆ” ಎಂದ ಸಂತಸದಿಂದ, ಅದೇ ಕೂಗು ಅವನ್ನು
ಎಚ್ಚರಗೊಳಿಸಿತು; ಆದರೆ ಅವನು ಎಚ್ಚರಗೊಂಡಾಗ ಬಂದಿದ್ದವನು ತಾನು ನಿದ್ದೆಮಾಡಲು ತೊಡಗಿದಾಗ
ಬಂದಿದ್ದವನಲ್ಲವೇ ಅಲ್ಲ. ಮೇಲೆ ಏಳಲು ನೋಡಿದ, ಸಾಧ್ಯವಾಗಲಿಲ್ಲ; ತೋಳುಗಳನ್ನಾಡಿಸಲು
ಪ್ರಯತ್ನಿಸಿದ, ಆಗಲಿಲ್ಲ, ಕಾಲುಗಳು ಕೂಡ ಮೇಲೇಳಲಾರದಾದುವು, ತಲೆ ತಿರುಗಿಸಲು ನೋಡಿದರೆ ಅದೂ
ಆಗಲಿಲ್ಲ. ಅವನಿಗೆ ಅಚ್ಚರಿಯನೋ ಆಯಿತಾದರೂ ಇದರಿಂದ ತಳಮಳವೇನಾಗಲಿಲ್ಲ. ಇದು ಸಾವು ಎಬುದು ಅವಬಿಗೆ
ಮನವರಿಕೆಯಾಗಿತ್ತು, ಇದರಿಂದ ಕೂಡ ಅವನು ವಿಚಲಿತಗೊಳ್ಳಲಿಲ್ಲ. ನಿಕಿಟ ತನ್ನ ಕೆಳಗೆ ಮಲಗಿರುವುದೂ
ಮೈ ಬೆಚ್ಚಗಾಗಿ ಅವನು ಬದುಕಿರುವುದೂ ನೆನಪಿಗೆ ಬಂತು. ತಾನೇ ನಿಕಿಟ ಮತ್ತು ನಿಕಿಟನೇ ತಾನು
ಎಂಬಂತೆ, ತನ್ನ ಜೀವ ತನ್ನ ಮೈಯಲ್ಲಿಲ್ಲದೆ ನಿಕಿಟನಲ್ಲಿರುವಂತೆ ತೋರಿತು. ನಿಕಿಟನ ಉಸಿರಾಟವನ್ನು
ಕಿವಿಗೊಟ್ಟು ಆಲಿಸಿದ, ಅವನು ಮೆಲ್ಲಗೆ ಗೊರಕೆ ಹೊಡೆಯುತ್ತಲೂ ಇದ್ದ. “ನಿಕಿಟ ಬದುಕಿದ್ದಾನೆ,
ಹೀಗಾಗಿ ನಾನೂ ಬದುಕಿದ್ದೀನಿ!” ಎಂದು ಸಡಗರದಿಂದ ಅಂದುಕೊಂಡ.
ಅವನಿಗೆ ತನ್ನ ಹಣ, ಅಂಗಡಿ, ಮನೆ, ಕೊಡುವ-ಮಾರುವ ವ್ಯವಹಾರ,
ಮೊರ್ಡಿನೋವ್‍ನ ಕೋಟ್ಯಂತರ ಆಸ್ತಿ – ಎಲ್ಲ
ನೆನಪಾಯಿತು. ವಾಸಿಲಿ ಬ್ರೆಖ್ಯುನೊವ್ ಎಂಬ ಹೆಸರಿನ ವ್ಯಕ್ತಿ ಇವೆಲ್ಲದರಿಂದ ಯಾಕೆ
ಗಾಸಿಗೊಳಗಾಗಿದ್ದ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಅವನಿಗೆ ಕಷ್ಟವಾಯಿತು.
“ಯಾಕೆ ಅಂದ್ರೆ, ಅವನಿಗೆ ನಿಜವಾದದ್ದೇನು ಅಂತ ಅರ್ಥ
ಆಗಿರ್ಲಿಲ್ಲ, ಅಷ್ಟೆ” ಎಂದು ವಾಸಿಲಿ ಬ್ರೆಖ್ಯುನೊವ್‍ಗೆ ಸಂಬಂಧಿಸಿದಂತೆ ಭಾವಿಸಿದ. “ಅವನಿಗೆ
ಗೊತ್ತಿರ್ಲಿಲ್ಲ, ಆದರೆ ನನಗೀಗ ಗೊತ್ತಾಗಿದೆ, ಖಂಡಿತವಾಗಿ. ಈಗ ನನಗೆ ಗೊತ್ತು!” ಹಿಂದೆ
ಕರೆದಿದ್ದವನ ಧ್ವನಿ ಮತ್ತೆ ಕೇಳಿಸಿತು. “ಇಗೋ ಬಂದೆ, ಬರ್ತಿದ್ದೀನಿ!” ಎಂದು ಸಂತೋಷದಿಂದ
ಉತ್ತರಿಸಿದ, ಅವನ ಇರುವಿಕೆಯೆಲ್ಲ ಸಂತಸದಿಂದ ತುಂಬಿತ್ತು. ತನಗೀಗ ಬಿಡುಗಡೆ, ತನ್ನನ್ನು ಯಾವುದೂ
ಹಿಂದಕ್ಕೆ ಸೆಳೆಯಲಾರದು ಎನಿಸಿತು. ಆಮೇಲೆ ಅವನು ಮತ್ತೇನನ್ನೂ ನೋಡಲಿಲ್ಲ, ಕೇಳಲಿಲ್ಲ, ಅಥವಾ
ಬೇರೇನೂ ಅನ್ನಿಸಲಿಲ್ಲ.
ಸುತ್ತಲೂ ಇನ್ನೂ ಸುಳಿಹಿಮ ಆವರಿಸುತ್ತಿತ್ತು. ಅದೇ ಹಿಮದ
ಸುಳಿಗಾಳಿ ಮೇಲೇರಿ ಸತ್ತ ವಾಸಿಲಿ ಆಂಡ್ರೆವಿಚ್‍ನ ತುಪ್ಪುಳುಕೋಟನ್ನು ಮುಚ್ಚಿತು. ನಡುಗುವ
ಮುಖೋರ್ಟಿ, ಜಾರುಬಂಡಿ, ಕಾಣಿಸಲಾರದಾದವು; ಅದರಡಿಯಲ್ಲಿ ಮಲಗಿದ್ದ ನಿಕಿಟ ಸತ್ತ ತನ್ನ ಒಡೆಯನ
ದೇಹದಡಿ ಬೆಚ್ಚಗೆ ಮಲಗಿದ್ದ.
10
ಬೆಳಗು ಹರಿಯುವ ಮೊದಲೇ ನಿಕಿಟನಿಗೆ ಎಚ್ಚರವಾಯಿತು,
ತನ್ನ ಬೆನ್ನಿನಿಂದ ಹರಿದು ಬರುತ್ತಿದ್ದ ಚಳಿ ಅವನನ್ನೆಚ್ಚರಿಸಿತ್ತು, ತನ್ನ ಯಜಮಾನರ ಗಿರಣಿಯಿಂದ
ಹಿಟ್ಟಿನ ಮೂಟೆಗಳನ್ನು ಹೊತ್ತ ಗಾಡಿಯ ಮೂಕ ತಾನು ಬರುತ್ತಿದ್ದುದಾಗಿಯೂ, ತೊರೆಯನ್ನು ಹಾಯುವಾಗ
ಸೇತುವೆ ದಾರಿತಪ್ಪಿ ಗಾಡಿ ಹೂತುಕೊಂಡಂತೆಯೂ ಅವನಿಗೆ ಕನಸು ಬಿದ್ದಿತ್ತು. ಗಾಡಿಯಡಿಯಲ್ಲಿ
ನುಸುಳಿಕೊಂಡು ಬಂದ ತಾನು ಅದರ ಹಿಂಭಾಗವನ್ನು ಹಿಡಿದು ಮೇಲೆತ್ತಿದಂತೆ ಅನಿಸಿತ್ತು. ಆದರೆ
ವಿಚಿತ್ರವೆಂದರೆ ಗಾಡಿ ಚಲಿಸಲೇ ಇಲ್ಲ, ತನ್ನ ಬೆನ್ನಿಗೇ ಅಂಟಿಕೊಂಡು ಅದನ್ನು ಎತ್ತಲೂ ಆರದೆ
ಅದರಡಿಯಿಂದ ಹೊರಬರಲೂ ಆಗದೆ ಒದ್ದಾಡುವಂತಾಗಿತ್ತು. ಅವನ ತೊಳ್ಳುಗಳೆರಡೂ ಭಾರದಿಂದ
ಕುಸಿಯುತ್ತಿದ್ದವು. ಅದೆಂಥ ಅನುಭವ! ಹೇಗಾದರೂ ತೆವಳಿಕೊಂಡ ಹೊರಬರಬೇಕಾಗಿತ್ತು. ತನ್ನ ಮೇಲೆ
ಗಾಡಿಯನ್ನು ಒತ್ತುತ್ತಿದ್ದವರನ್ನು ಕುರಿತು “ಸಾಕು!” ಎಂದು ಕೂಗಿದ; “ಮೂಟೆಗಳನ್ನು
ಹೊರತೆಗೆಯಿರಿ!” ಎಂದು ಕೂಗಿದ, ಆದರೆ ಗಾಡಿ ಹೆಚ್ಚು ಹೆಚ್ಚು ಶೀತಲವಾಗಿ ತನ್ನನ್ನು
ಅದುಮುತ್ತಿತ್ತು. ಆಮೇಲೆ ಅದೇನೋ ವಿಲಕ್ಷಣ ಸದ್ದು, ಬಾಗಿಲು ಬಡಿದಂತೆ. ಅವನಿಗೀಗ ಪೂರ್ತಿ
ಎಚ್ಚರವಾಯಿತು, ಎಲ್ಲ ನೆನಪಿಗೆ ಬಂತು. ಆ ಶೀತಲ ಗಾಡಿ ಎಂದರೆ ತನ್ನ ಮೇಲೆ ಬೋರಲಾಗಿ ಮಲಗಿದ್ದ
ತನ್ನ ಯಜಮಾನನ ಕೊರಡಿನಂತಾಗಿದ್ದ ಹೆಣ. ಬಡಿದ ಶಬ್ದ ಮಾಡಿದ್ದುದು ಮಿಖೋರ್ಟಿ, ತನ್ನ ಗೊರಸಿನಿಂದ
ಎರಡು ಬಾರಿ ಜಾರುಬಂಡಿಗೆ ಒದ್ದಿತ್ತು.
“ಆಂಡ್ರೆವಿಚ್, ಆಂಡ್ರೆವಿಚ್!” ಎಂದು ನವಿರಾಗಿ
ಕೂಗಿದ ನಿಕಿಟ. ನಿಧಾನವಾಗಿ ಅವನಿಗೆ ಸತ್ಯವು ಅನಾವರಣಗೊಳ್ಳುತ್ತಿತ್ತು. ಅವನ ಬೆನ್ನನ್ನು
ನೇರವಾಗಿ ಕೂರಿಸಲು ಪ್ರಯತ್ನಿಸಿದ. ಆದರೆ ವಾಸಿಲಿ ಆಂಡ್ರೆವಿಚ್ ಉತ್ತರಿಸಲಿಲ್ಲ, ಅವನ ಹೊಟ್ಟೆ
ಮತ್ತು ಕಾಲುಗಳು ಸೆಡೆತುಹೋಗಿ, ತಣ್ಣಗಿದ್ದು, ಕಬ್ಬಿಣದ ತುಂಡಿನಂತೆ ಭಾರವಾಗಿದ್ದುವು.
“ಅವರು ಸತ್ತಿರಬೇಕು! ಅವರ ಆತ್ಮಕ್ಕೆ
ಶಾಂತಿಯಿರಲಿ!” ಎಂದುಕೊಂಡ ನಿಕಿಟ.
ತನ್ನ ತಲೆ ತಿರುಗಿಸಿ, ಸುತ್ತಲಿನ ಹಿಮವನ್ನು
ಕೈಗಳಿಂದ ತೆಗೆದುಹಾಕಿ ಅವನು ಕಣ್ಣುಗಳನ್ನು ತೆಗೆದ. ಬೆಳಗಾಗಿತ್ತು; ಹಿಂದಿನಂತೆಯೇ ಗಾಳಿ ಬಂಡಿಯ
ಮೂಕಿಯ ನಡುವೆ ಶಿಳ್ಳೆ ಹಾಕುತ್ತಿತ್ತು, ಯಥಾಪ್ರಕಾರ ಹಿಮ ಸುರಿಯುತ್ತಿತ್ತು, ಆದರೆ ಜಾರುಬಂಡಿಯ
ಚೌಕಟ್ಟಿಗೆದುರಾಗಿರಲಿಲ್ಲ, ಆದರೂ ಜಾರುಬಂಡಿ ಮತ್ತು ಕುದುರೆಗಳನ್ನು ಸದ್ದಿಲ್ಲದೆ ಹೆಚ್ಚೆಚ್ಚು
ಆವರಿಸುತ್ತಿತ್ತು. ಕುದುರೆಯ ಅಲುಗಾಟವಾಗಲೀ ಅದರ ಉಸಿರಾಟದ ಸದ್ದಾಗಲೀ ಕೇಳಿಸುತ್ತಿರಲಿಲ್ಲ.
“ಅದೂ ಸೆಡೆತುಹೋಗಿರಬೇಕು!” ಎಂದುಕೊಂಡ ನಿಕಿಟ
ಮುಖೋರ್ಟಿಯ ಕುರಿತು. ನಿಕಿಟನನ್ನು ಎಚ್ಚರಗೊಳಿಸಿದ್ದ ಅದು ಬಂಡಿಗೆ ಒದೆದಿದ್ದ ಗೊರಸಿನ ಸದ್ದು
ಸಾಯುವ ಮೊದಲು ಮುಖೋರ್ಟಿ ಕೊರಡುಗಟ್ಟುವ ಮುನ್ನ ನಡೆಸಿದ್ದ ಕೊನೆಯ ಪ್ರಯತ್ನವಾಗಿತ್ತು.
“ಅಯ್ಯೋ ದೇವರೇ, ನೀನು ನನ್ನನ್ನೂ
ಕರೆಯುತ್ತಿರಬಹುದು! ನಿನ್ನ ಇರಾದೆ ತಾನೇ ನಡೆಯುವುದು. ಆದರೆ ಇದು ವಿಚಿತ್ರವಾಗಿದೆ ... ಯಾರೂ
ಎರಡು ಬಾರಿ ಸಾಯಲಾರರು, ಒಂದು ಬಾರಿ ಮಾತ್ರ. ಅದು ಬೇಗ ಬರಬಾರದೇ!” ಎಂದುಕೊಂಡ ನಿಕಿಟ.
ಮತ್ತೆ ತನ್ನ ತಲೆ ಮೇಲೆತ್ತಿ ಕಣ್ಣುಗಳನ್ನು
ಮುಚ್ಚಿಕೊಂಡು ಪ್ರಜ್ಞಾಹೀನನಾದ, ತಾನೀಗ ಖಂಡಿತವಾಗಿ ಕೊನೆಗೂ ಸಾಯುತ್ತಿದ್ದೇನೆ ಎಂದು ಅವನಿಗೆ
ಮನವರಿಕೆಯಾಗಿತ್ತು.
ಆ ದಿನ ಇನ್ನೂ ಮಧ್ಯಾಹ್ನ ಸಮೀಪಿಸಿರಲಿಲ್ಲ,
ರಸ್ತೆಯಿಂದ ಎಪ್ಪತ್ತು ಗಜಗಳಷ್ಟೂ, ಹಳ್ಳಿಯಿಂದ ಅರ್ಧ ಮೈಲಿಯಷ್ಟೂ ದೂರವಿರದಿದ್ದ ಆ ಜಾಗದಲ್ಲಿ
ರೈತರು ತಮ್ಮ ಗೋರುಸಲಿಕೆಗಳಿಂದ ವಾಸಿಲಿ ಆಂಡ್ರೆವಿಚ್ ಮತ್ತು ನಿಕಿಟರನ್ನು ಹಿಮರಾಶಿಯಿಂದ
ಮೇಲೆತ್ತಿದರು.
ಹಿಮ ಜಾರುಬಂಡಿಯನ್ನು ಪೂರ್ತಿ
ಮುಚ್ಚಿಬಿಟ್ಟಿತ್ತು, ಆದರೆ ಮೂಕಿ ಮತ್ತದರ ತುದಿಗೆ ಕಟ್ಟಿದ್ದ ಕರ್ಚೀಫ್ ಇನ್ನೂ ಕಣ್ಣಿಗೆ
ಬೀಳುತ್ತಿತ್ತು. ಹೊಟ್ಟೆಯವರೆಗೆ ಹಿಮದಲ್ಲಿ ಹುದುಗಿದ್ದ ಹಾಸುಗಂಬಳಿ ಮತ್ತು ಪಿರ್ರೆಯ ಪಟ್ಟಿಗಳು
ಜೋತಾಡುತ್ತ ಇದ್ದ ಮುಖೋರ್ಟಿ ಬೆಳ್ಳಗೆ ಕಾಣುತ್ತಿತ್ತು, ಅದರ ತಲೆ ಸೆಡೆತುಹೋಗಿದ್ದ ಕೊರಳಿಗೆ
ಆತುಕೊಂಡಿತ್ತು, ಅದರ ಮೂಗಿನ ಹೊಳ್ಳೆಗಳಿಂದ ಹಿಮಕಣಗಳು ಜೋತಾಡುತ್ತಿದ್ದುವು, ಅದರ ಕಣ್ಣುಗಳನ್ನು
ಕಣ್ಣೀರಿನಂತೆ ಹಿಮಮಣಿಗಳು ತುಂಬಿದ್ದುವು, ಅದೊಂದು ರಾತ್ರಿಯಲ್ಲೇ ಅದೆಷ್ಟು ಕೃಶವಾಗಿತ್ತೆಂದರೆ
ಬರಿ ಮೂಳೆ-ಚಕ್ಕಳವಾಗಿಬಿಟ್ಟಿತ್ತು.
ವಾಸಿಲಿ ಆಂಡ್ರೆವಿಚ್ ಹೆಪ್ಪುಗಟ್ಟಿದ ಶವದಂತೆ
ಗಡುಸಾಗಿದ್ದ; ನಿಕಿಟನ ಮೇಲಿನಿಂದ ಅವನನ್ನು ಕೆಳಗುರುಳಿಸಿದಾಗ ಅವನ ಕಾಲುಗಳು ಹಿಂದಿನಂತೆಯೇ
ಅಗಲಿಸಿಕೊಂಡೇ ಇದ್ದುವು, ತೋಳುಗಳು ಚಾಚಿಕೊಂಡಿದ್ದುವು. ಊದಿದ್ದ ಅವನ ಹದ್ದಿನ ಕಣ್ಣುಗಳು, ಮೀಸೆ
ಮುಚ್ಚಿದ್ದ ಅವನ ತೆರೆದ ಬಾಯಿ - ಹಿಮದಿಂದ ತುಂಬಿದ್ದವು. ಚಳಿಯಿಂದ ಸೆಡೆತಿದ್ದರೂ ನಿಕಿಟ ಇನ್ನೂ
ಬದುಕಿದ್ದ. ಅವನಿಗೆ ಎಚ್ಚರವಾದಾಗ ತಾನು ಸತ್ತಿರುವುದಾಗಿಯೂ, ತನ್ನ ಸುತ್ತಮುತ್ತ
ನಡೆಯುತ್ತಿರುವುದು ಈ ಲೋಕದಲ್ಲಲ್ಲ, ಪರಲೋಕದಲ್ಲಿ ಎಂದು ಭಾವಿಸಿದ್ದ. ತನ್ನನ್ನು ಹೊರತೆಗೆದು,
ತನ್ನ ಮೇಲಿದ್ದ ಕೊರಡುಗಟ್ಟಿದ್ದ ವಾಸಿಲಿ ಆಂಡ್ರೆವಿಚ್‍ನ ಹೆಣವನ್ನು ಉರುಳಿಸುವಾಗ ಮಾಡುತ್ತಿದ್ದ
ರೈತರ ಕೂಗು ಕೇಳಿದ ಅವನಿಗೆ ಪರಲೋಕದಲ್ಲೂ ರೈತರು ಇಲ್ಲಿನಂತೆಯೇ ಸದ್ದು ಮಾಡುವವರಂತೆ, ಅವರಿಗೂ
ಇಂತಹುದೇ ದೇಹಗಳಿರುವಂತೆ ಭಾಸವಾಯಿತು. ಆದರೆ ತಾನಿನ್ನೂ ಈ ಲೋಕದಲ್ಲಿಯೇ ಇರುವೆನೆಂಬ ತಿಳಿವಳಿಕೆ
ಮೂಡಿದಾಗ, ಅದರಲ್ಲೂ ತನ್ನ ಕಾಲ್ಬೆರಳುಗಳು ಸೆಡೆತುಕೊಂಡಿರುವುದನ್ನು ಕಂಡು
ಅವನಿಗೆ
ಸಂತಸಕ್ಕಿಂತ ದುಃಖವೇ ಹೆಚ್ಚಾಯಿತು,
ನಿಕಿಟ ಎರಡು ತಿಂಗಳು ಆಸ್ಪತ್ರೆಯಲ್ಲಿದ್ದ. ಅವನ
ಮೂರು ಕಾಲ್ಬೆರಳುಗಳನ್ನು ಕತ್ತರಿಸಿ ಹಾಕಿದ್ದರು, ಆದರೆ ಮಿಕ್ಕವು ಉಳಿದವು, ಹೀಗಾಗಿ ಅವನು
ಎಂದಿನಂತೆ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಲು ಅಡ್ಡಿಯಾಗಲಿಲ್ಲ. ಹೀಗೇ ಇಪ್ಪತ್ತು
ವರ್ಷಗಳುರುಳಿದುವು, ಮೊದಲು ಹೊಲದಲ್ಲಿ ಕೂಲಿ ಕೆಲಸ ಮಾಡುತ್ತ, ವಯಸ್ಸಾದ ಮೇಲೆ ಕಾವಲುಗಾರನಾಗಿ.
ಅವನಿಚ್ಛೆಯಂತೆಯೇ ಮನೆಯಲ್ಲಿ ಸತ್ತ, ಅದೂ ಇದೇ ವರ್ಷ, ತನ್ನ ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು
ದೇವರ ವಿಗ್ರಹದ ಕೆಳಗೆ. ಸಾಯುವ ಮುಂಚೆ ತನ್ನ ಹೆಂಡತಿಯ ಕ್ಷಮೆ ಕೇಳಿದ, ಹೆಂಡಗಾರನ ಜೊತೆ ಇದ್ದ
ಅವಳ ತಪ್ಪನ್ನು ಕ್ಷಮಿಸಿದ. ಅವನು ಮಕ್ಕಳು ಮೊಮ್ಮಕ್ಕಳಿಗೂ ವಿದಾಯ ಹೇಳಿದ. ತನ್ನನ್ನು
ನೋಡಿಕೊಳ್ಳಬೇಕಾದ ಜವಾಬ್ದಾರಿಯಿಂದ ತನ್ನ ಮಗ ಮತ್ತು ಸೊಸೆಯನ್ನು ಮುಕ್ತಗೊಳಿಸುತ್ತಿರುವೆನೆಂಬ
ಭಾವನೆಯಿಂದ ನಿರಾಳವಾದ ಸಾವನ್ನಪ್ಪಿದ. ಸಾಕಾಗಿ ಹೋದ ಈ ಬದುಕಿನಿಂದ ಪಾರಾಗಿ ಪ್ರತಿ ವರ್ಷ ಪ್ರತಿ
ಗಂಟೆ ಹೆಚ್ಚೆಚ್ಚು ಸ್ಪಷ್ಟವಾಗಿಯೂ ಅಪೇಕ್ಷಣೀಯವಾಗಿಯೂ ಇರುವ ಮುಂದಿನ ಲೋಕಕ್ಕೆ ಸಾಗುತ್ತಿದ್ದ.
ಇಲ್ಲಿ ಸತ್ತ ನಂತರ ಅಲ್ಲಿ ಎಚ್ಚರಗೊಂಡ. ಅವನೇನು ಇಲ್ಲಿಗಿಂತ ಉತ್ತಮವಾಗಿದ್ದಾನೆಯೋ
ಕಷ್ಟವನ್ನೆದುರಿಸುತ್ತಿರುವನೋ. ಅವನಿಗೇನು ನಿರಾಸೆಯಾಗಿದೆಯೋ ಅವನ ನಿರೀಕ್ಷೆಯಂತೆಯೇ ಇದೆಯೋ – ಎಲ್ಲ ನಮಗೆ ಸದ್ಯದಲ್ಲಿಯೇ ಗೊತ್ತಾಗುತ್ತದೆ. (1895) *****
No comments:
Post a Comment