Thursday 21 November 2013

ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರಂ'

ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರಂ'


ಸಂಸ್ಕೃತದ ಪ್ರಾಚೀನ ಕಥಾಜಗತ್ತು:
ಜಗತ್ತಿನ ವಿವಿಧ ಭಾಷೆಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಕಥಾಸಾಹಿತ್ಯವಿರುತ್ತದೆ. ಯಾಕಂದರೆ ಕತೆ ಎಲ್ಲ ಕಾಲದ ಮನುಷ್ಯರ ಕುತೂಹಲವನ್ನು ಕೆರಳಿಸುವಂಥದು. ಹೀಗಾಗಿ ಕತೆಗಳು ಪ್ರಾಚೀನತಮ ಸಾಹಿತ್ಯ ಪ್ರಕಾರವಾಗಿರಬಹುದು. ಗ್ರಾಂಥಿಕ ರೂಪ ಬರುವುದಕ್ಕೂ ಮುಂಚೆ ಮೌಖಿಕವಾಗಿ ಕತೆಗಳು ಪೀಳಿಗೆಗಳಿಂದ ಪೀಳಿಗೆಗಳಿಗೆ ಹರಿದುಬಂದಿರುವುದು ಸಹಜವಾಗಿದೆ. ಹಾಗೆ ನೋಡಿದರೆ ಮಹಾಕಾವ್ಯಗಳೂ ಬೀಜರೂಪದಲ್ಲಿ ಕತೆಗಳೇ ಆಗಿರುತ್ತವೆ. ಕನ್ನಡಕ್ಕೆ ಮೊದಲು ಮಾದರಿಯಾಗಿದ್ದ ಸಂಸ್ಕೃತದಲ್ಲಿ ಕತೆಗಳು ವೇದಗಳಷ್ಟೇ ಪ್ರಾಚೀನವಾದವು ಎನ್ನಬಹುದು. ಅಲ್ಲದೆ ಮುಂದೆ ಬಂದ ಸಾಹಿತ್ಯದಲ್ಲಿ - ಅದರ ಮೂರು ಮುಖ್ಯ ಧಾರೆಗಳಾದ ವೈದಿಕ, ಬೌದ್ಧ ಮತ್ತು ಜೈನ - ಅಪಾರ ಪ್ರಮಾಣದ ಕಥಾಸಾಹಿತ್ಯವು ದೊರೆಯುತ್ತದೆ. ಋಗ್ವೇದದ 'ಸಂವಾದ ಸೂಕ್ತ'ವು ಚಮತ್ಕಾರಯುಕ್ತ ಕತೆಗಳಿಗೆ ಪ್ರಖ್ಯಾತವಾಗಿದೆ. ಜೊತೆಗೆ ಇತರ ಸೂಕ್ತಗಳಲ್ಲಿಯೂ ವಿವಿಧ ದೇವತೆಗಳಿಗೆ ಸಂಬಂಧಿಸಿದಂತೆ ಮನರಂಜಕವೂ ನೀತಿಬೋಧಕವೂ ಆದ ಆಖ್ಯಾನಗಳು ದೊರೆಯುತ್ತವೆ. ಈ ಆಖ್ಯಾನಗಳ ಸೂಚನೆಯು  ಋಕ್ಸಂಹಿತೆಯಲ್ಲಿ ಸಿಕ್ಕುತ್ತವೆ. ಇವುಗಳ ವಿಸ್ತೃತ ರೂಪಗಳು ಯಾಸ್ಕನ 'ನಿರುಕ್ತ' ದಲ್ಲಿ, ಶೌನಕನ 'ಬೃಹದ್ದೇವತಾ'ದಲ್ಲಿ, ಕಾತ್ಯಾಯನನ ಅರ್ವಾನುಕ್ರಮಣಿಯ ಮೇಲೆ ಷಡ್ಗುರುಶಿಷ್ಯನು ರಚಿಸಿರುವ 'ವೇದಾರ್ಥದೀಪಿಕಾ'ದಲ್ಲಿ ಮತ್ತು ಸಾಯಣನ ವೇದಭಾಷ್ಯಗಳಲ್ಲಿ ದೊರೆಯುತ್ತವೆ.
ಜೈನಸಾಹಿತ್ಯದಲ್ಲಿ ಪ್ರಾಕೃತ, ಸಂಸ್ಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿ ವಿಪುಲ ಕಥಾಸಾಹಿತ್ಯವು ದೊರೆಯುತ್ತದೆ. ಸಾಮಾನ್ಯವಾಗಿ ಜೈನ ಯತಿಗಳು ನೀತಿಬೋಧೆ ಮಾಡಲು ಬಳಸುವುದೇ ಕತೆಗಳನ್ನು. ಇವುಗಳ ಮೂಲರೂಪಗಳು ಚೂರ್ಣಿ, ನಿರ್ಯುಕ್ತಿ ಮುಂತಾದ ಗ್ರಂಥಗಳಲ್ಲಿ ದೊರಕುತ್ತವೆ. ಇವು ಬಹು ಪ್ರಾಚೀನವಾದವೆಂದು ಭಾವಿಸಲಾಗಿದೆ. ಆನಂತರ 'ಕಥಾಕೋಶ'ವೆಂಬ ಗ್ರಂಥವು ಜೈನರಲ್ಲಿ ಬಹಳ ವ್ಯಾಪಕವಾಗಿ ಬಳಕೆಯಲ್ಲಿತ್ತು. ಇನ್ನು, ಬೌದ್ಧಸಾಹಿತ್ಯದಲ್ಲಿನ 'ಜಾತಕ ಕತೆಗಳು' ತಮ್ಮ ಮನರಂಜಕತೆಯಿಂದಲೂ ಉಪದೇಶಾತ್ಮಕತೆಯಿಂದಲೂ ಬಹು ಜನಪ್ರಿಯವಾಗಿದ್ದವು. ಬುದ್ಧನಿಗೆ ಸಂಬಂಧಿಸಿದ ಅನೇಕ ಕತೆಗಳು ಇದರಲ್ಲಿ ಅಂತರ್ಗತವಾಗಿವೆ. ಜಾತಕ ಕತೆಗಳ ಸಂಖ್ಯೆ ಒಟ್ಟು 350. ಪ್ರಾಯಶಃ ಇದರಲ್ಲಿನ ಕತೆಗಳು ತನಗಿಂತಲೂ ಹಿಂದೆ ಪ್ರಚಲಿತವಿದ್ದ ಕತೆಗಳ ಪುನರ್ಕಥಾನಕಗಳಾಗಿವೆ ಎನಿಸುತ್ತದೆ.
ಬಹು ಹಿಂದಿನಿಂದ ಸಂಸ್ಕೃತ ಕಥಾಜಗತ್ತಿನಲ್ಲಿ ಪ್ರಚಲಿತವಾದ ಎರಡು ಕಥಾಚಕ್ರಗಳಿವೆ.: ಒಂದು, 'ಬೃಹತ್ಕಥಾ'; ಮತ್ತೊಂದು 'ಪಂಚತಂತ್ರ'. 'ಬೃಹತ್ಕಥಾ' ಮೂಲದಲ್ಲಿದ್ದುದು ಪೈಶಾಚೀ ಭಾಷೆಯಲ್ಲಿ, ಅದು ಈಗ ಉಪಲಬ್ಧವಿಲ್ಲ. ಇದರ ಕರ್ತೃ ಗುಣಾಢ್ಯ; ಇವನು ಸಾತವಾಹನ ರಾಜ್ಯದವನು; ಇವನು ಕ್ರಿ.ಶ. ಮೊದಲ ಅಥವಾ ಎರಡನೆಯ ಶತಮಾನದಲ್ಲಿದ್ದವನು ಎನ್ನಲಾಗಿದೆ. ಆ ಹೊತ್ತಿಗೆ ಸಮುದ್ರ ಪರ್ಯಟನವು - ವ್ಯಾಪಾರದ ಕಾರಣಕ್ಕಾಗಿ - ವ್ಯಾಪಕವಾಗಿತ್ತು. ವ್ಯಾಪಾರಿಗಳು ತಮ್ಮ ಪರ್ಯಟನೆಯಲ್ಲಿ ಕಂಡು ಕೇಳಿದ ವಿವಿಧ ಬಗೆಯ ಕತೆಗಳನ್ನು, ಟನೆಗಳನ್ನು ಇಲ್ಲಿಗೆ ಬಂದ ಮೇಲೆ ವರ್ಣಿಸುತ್ತಿದ್ದರು. ಇದರ ವಿವರಣೆಯೇ  'ಬೃಹತ್ಕಥಾ' . ಧನಪಾಲ, ಗೋವರ್ಧನಾಚಾರ್ಯ, ಸೊಡ್ಡಲ ದಂಡಿ ಮುಂತಾದವರು ಗುಣಾಢ್ಯನ  'ಬೃಹತ್ಕಥಾ' ವನ್ನು ಬಹಳವಾಗಿ ಪ್ರಶಂಸೆ ಮಾಡುವುದರಿಂದ, ಇದು ಈಗ ಸಿಕ್ಕದಿದ್ದರೂ, ಸಾಹಿತ್ಯ ವಲಯದಲ್ಲಿ ಬಹಳ ವ್ಯಾಪಕ ಪ್ರಭಾವವನ್ನು ಮಾಡಿದ್ದಿರಬೇಕು. ಇದರ ಮೂರು ಸಂಸ್ಕೃತ ರೂಪಗಳು ದೊರೆಯುತ್ತವೆ: 1) ಕಾಶ್ಮೀರದ ಕವಿ ಕ್ಷೇಮೇಂದ್ರನು (ಸುಮಾರು ಕ್ರಿ.ಶ. 1029-1064) ಬರೆದ 'ಬೃಹತ್ಕಥಾಮಂಜರಿ' 2) ಸೋಮದೇವನು (ಸುಮಾರು ಕ್ರಿ.ಶ. 1100) ಬರೆದ  'ಕಥಾಸರಿತ್ಸಾಗರ'; ಮತ್ತು 3) ಬುಧಸ್ವಾಮಿಯು (ಸುಮಾರು ಕ್ರಿ.ಶ. 941) ಬರೆದ ಬೃಹತ್ಕಥೆಯ 'ಶ್ಲೋಕಸಂಗ್ರಹ'. ಹೀಗಾಗಿ ಗುಣಾಢ್ಯನ  'ಬೃಹತ್ಕಥಾ'  ಸುಮಾರು ಹತ್ತು ಹನ್ನೊಂದನೆಯ ಶತಮಾನಗಳಲ್ಲಿ ಸಂಸ್ಕೃತಕ್ಕೆ ಭಾಷಾಂತರಗೊಂಡಿತೆಂಬುದು ವಿದಿತವಾಗುತ್ತದೆ.
ಗುಣಾಢ್ಯನ ಕಾಲದ ಬಗ್ಗೆ ನಿಶ್ಚಿತವಾದ ಅಭಿಪ್ರಾಯವಿಲ್ಲ. ಬಾಣ, ಸುಬಂಧು ಮತ್ತು ಹರ್ಷ - ಮೂವರೂ ಕ್ರ.ಶ. ಏಳನೆಯ ಶತಮಾನ - ಗುಣಾಢ್ಯನ ಹೆಸರನ್ನು ಹೇಳುತ್ತಾರೆ. ಅಂದರೆ ಅವನು ಆ ಕಾಲಕ್ಕೂ ಹಿಂದಿನವನು. ಗುಣಾಢ್ಯನ  'ಬೃಹತ್ಕಥಾ' ದ ಸಂಸ್ಕೃತದ ಭಾಷಾಂತರಗಳು ಜನ್ಮ ತಾಳಿದ್ದು ಕ್ರಿ.ಶ. ಹತ್ತು-ಹನ್ನೊಂದನೆಯ ಶತಮಾನಗಳಲ್ಲಿ, ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರ'ದ ರಚನೆಯ ಕಾಲ ಕ್ರಿ.ಶ. 1031; ಹೀಗಾಗಿ, ಅವನಿಗೆ ಮೂಲವಾಗಿದ್ದ ವಸುಭಾಗನ 'ಪಂಚತಂತ್ರ' ಆ ಹೊತ್ತಿಗಾಗಲೇ ದಕ್ಷಿಣ ಭಾರತದಲ್ಲಿ ಬಹು ಪ್ರಖ್ಯಾತವಾಗಿದ್ದಿರಬೇಕು; ಪ್ರಾಯಶಃ ವಿಷ್ಣುಶರ್ಮನ 'ಪಂಚತಂತ್ರ'ದ ಪರಿಚಯ ದಕ್ಷಿಣ ಭಾರತದವರಿಗೆ ಇರಲಿಲ್ಲ. ದುರ್ಗಸಿಂಹನು ಬಳಸಿಕೊಳ್ಳುವ ಸಂಸ್ಕೃತ ಶ್ಲೋಕಗಳು ವಸುಭಾಗನವೇ ಇರಬೇಕು: ಹಾಗಾಗಿ ವಸುಭಾಗನು ತನ್ನ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದಿರಬೇಕು. ಅವನು ಯಾವಾಗ ತನ್ನ ಕೃತಿಯನ್ನು ರಚನೆ ಮಾಡಿದ ಎಂದು ನಿರ್ಧರಿಸಲು ಸಾಧ್ಯವಿಲ್ಲವಾಗಿದೆ. ಆದರೆ ವಿದ್ವಾಂಸರು ಒಂದು ಊಹೆಯನ್ನು ಮಾಡುತ್ತಾರೆ. 'ಕವಿರಾಜಮಾರ್ಗಕಾರ'ನು ತನಗೂ ಹಿಂದೆ "ಗದ್ಯಾಶ್ರಮಪದ ಗುರುತಾಪ್ರಗೀತಿಯಂ" ಕೈಗೊಂಡವರನ್ನು ಹೆಸರಿಸುವಾಗ ಅವರಲ್ಲಿ ದುರ್ವಿನೀತನನ್ನೂ ಸೇರಿಸುತ್ತಾನೆ. ಅವನು ಗಂಗರಾಜನಾಗಿದ್ದ ದುರ್ವಿನೀತನೆಂದೂ, ಕ್ರಿ.ಶ. ಆರನೆಯ ಶತಮಾನದವನೆಂದೂ, ಅವನು  'ಬೃಹತ್ಕಥಾ'ವನ್ನು ಸಂಸ್ಕೃತಕ್ಕೆ ಅನುವಾದಿಸಿದುದಲ್ಲದೆ, ಒಂದು ವ್ಯಾಕರಣ ಗ್ರಂಥ ಹಾಗೂ 'ಕಿರಾತಾರ್ಜುನೀಯ'ದ ಹದಿನೈದನೆಯ ಸರ್ಗಕ್ಕೆ ವ್ಯಾಖ್ಯಾನವನ್ನೂ ರಚಿಸಿದಂತೆ ಒಂದು ಶಾಸನದಲ್ಲಿ ಉಕ್ತವಾಗಿರುವ ವಿಷಯವನ್ನು ರೈಸ್ ಅವರು ತಮ್ಮ ಗ್ರಂಥ 'Mysore and Coorg from the Inscriptonsಕ' ನಲ್ಲಿ (ಪು. 196) ಹೇಳುತ್ತಾರೆ. ಇದು ಸರಿಯಾದುದಾದರೆ ಕರ್ನಾಟಕದಲ್ಲಿ ಕ್ರಿ.ಶ. ಆರನೆಯ ಶತಮಾನದ ಹೊತ್ತಿಗೇ  'ಬೃಹತ್ಕಥಾ' ದ ಸಂಸ್ಕೃತ ಭಾಷಾಂತರ ಸಿದ್ಧಗೊಂಡಿತ್ತು ಎನ್ನಬೇಕಾಗುತ್ತದೆ.
ಕೊಂಗುನಾಡಿನ ಕೊಂಗುವೇಳಿರ್ ಎನ್ನುವವನು ತಮಿಳಿನಲ್ಲಿ ಬರೆದಿರುವ 'ಪೆರುಂಗತೈ' ಎಂಬ ಕೃತಿಯಲ್ಲಿ ಜೈನಮತದ ವಿಷಯಗಳು ಅಂತರ್ಗತವಾಗಿವೆಯೆಂದೂ, ಅದರ ಮೇಲೆ ದುರ್ವಿನೀತನ  'ಬೃಹತ್ಕಥಾ' ದ ಸಂಸ್ಕೃತ ಗ್ರಂಥದ ಪ್ರಭಾವವಿರಬೇಕೆಂದೂ ಸ್ವಾಮಿನಾಥ ಅಯ್ಯರ್ ಎಂಬ ವಿದ್ವಾಂಸರು ಊಹಿಸುತ್ತಾರೆ. ದುರ್ಗಸಿಂಹನ 'ಪಂಚತಂತ್ರ'ದಲ್ಲಿಯೂ ಜೈನಮತಸಂಬಂಧಿ ಅಂಶಗಳು ವಿಪುಲವಾಗಿ ದೊರೆಯುತ್ತವೆ, ಹೀಗಗಿ ವಸುಭಾಗನ 'ಪಂಚತಂತ್ರ'ವು ಜೈನಮತಾನುಸಾರಿಯಾಗಿದ್ದಿರಬಹುದಾದ ಸಾಧ್ಯತೆಗಳು ಹೆಚ್ಚೆಂದೂ, ಈ ಕಾರಣದಿಂದಲೇ ದುರ್ಗಸಿಂಹನು ಬ್ರಾಹ್ಮಣನಾಗಿದ್ದರೂ ಅವನ ಕಾವ್ಯದಲ್ಲಿ ಜೈನಸಬಂಧಿ ಅಂಶಗಳು ಕಾಣಿಸಿಕೊಳ್ಳುವುದೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಜಗತ್ತಿನಲ್ಲಿಯೇ ತುಂಬ ಪ್ರಖ್ಯಾತಿಯನ್ನು ಪಡೆದ 'ಪಂಚತಂತ್ರ'ದ ಕತೆಗಳು ಯಾವಾಗ ಮೂಡಿ ಬಂದುವು, ಅವುಗಳು ರೂಪ ಪಡೆದದ್ದು ಹೇಗೆ ಇತ್ಯಾದಿ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವುದು ಕಷ್ಟ. ಆದರೆ ಆ ಕತೆಗಳಿಗೆ ಸಾಕಷ್ಟು ಪ್ರಾಚೀನತೆಯಿದೆ ಎಂಬುದಂತೂ ಸ್ಪಷ್ಟ. ಅಲ್ಲದೆ ಆ ಕತೆಗಳಿಗೆ ಬೇರೆ ಬೇರೆ ದೇಶಗಳಲ್ಲಿ ಕಾಲಕಾಲಕ್ಕೆ ಅನೇಕ ಮಾರ್ಪಾಟುಗಳೂ ಉಂಟಾದವು. ಅಂದರೆ ಅನೇಕ ಪರಿಷ್ಕರಣ ಪ್ರಕ್ರಿಯೆಗಳಿಗೆ ಆ ಕತೆಗಳು ಒಳಗಾದವು. ಅವುಗಳಲ್ಲಿ ನಮಗೆ ತಿಳಿದಿರುವುದು ನಾಲ್ಕು: 1) ಪಹಲವಿ ಭಾಷೆಯಲ್ಲಿ ಕ್ರಿ.ಶ. ಆರನೆಯ ಶತಮಾನದಲ್ಲಿ ಅನುವಾದಗೊಂಡಿರುವ 'ಪಂಚತಂತ್ರ'. ಆದರೆ ಇದು ಈಗ ದೊರೆಯುವುದಿಲ್ಲ. ಆದರೂ ಅದರ ಸಿರಿಯನ್ ಮತ್ತು ಅರಬ್ಬೀ ಭಾಷೆಗಳ ಅನುವಾದಗಳು ದೊರೆಯುತ್ತವೆ. 2) ಗುಣಾಢ್ಯನ  'ಬೃಹತ್ಕಥಾ'  ಎಂಬ ಪೈಶಾಚೀ ಭಾಷೆಯ ಕೃತಿಯಲ್ಲಿ ಈ ಕತೆಗಳು ಅಂತರ್ಗತವಾಗಿದ್ದುವು; ಈ ಕೃತಿಯೂ ಈಗ ಉಪಲಬ್ಧವಾಗಿಲ್ಲ. ಆದರೆ ಕ್ಷೇಮೇಂದ್ರ ಎನ್ನುವವನು ಹನ್ನೊಂದನೆಯ ಶತಮಾನದಲ್ಲಿ ರಚಿಸಿರುವ 'ಬೃಹತ್ಕಥಾಮಂಜರೀ' ಮತ್ತು ಸೋಮದೇವನ  'ಕಥಾಸರಿತ್ಸಾಗರ'ಗಳಲ್ಲಿ ಇದರ ಸಂಸ್ಕೃತ ಅನುವಾದ ದೊರೆಯುತ್ತದೆ.  3) 'ತಂತ್ರಾಖ್ಯಾಯಿಕಾ' ಎಂಬ ಗ್ರಂಥವು 'ಪಂಚತಂತ್ರ'ದ ಮೂರನೆಯ ಪರಿಷ್ಕರಣ ಗ್ರಂಥ. ಅದರೊಡನೆ ಅದಕ್ಕೆ ಸಂಬಂಧಿಸಿದ ಒಂದು ಜೈನ ಕಥಾಸಂಗ್ರಹವೂ ಇದೆ. ಇದೇ ಈಗ ಪ್ರಚಲಿತವಾಗಿರುವ 'ಪಂಚತಂತ್ರ'ದ ಪ್ರಾತಿನಿಧಿಕ ರೂಪ. 4) ದಕ್ಷಿಣ ಪಂಚತಂತ್ರದ ಮೂಲರೂಪ. ಇದರ ಪ್ರತಿನಿಧಿಗಳಾಗಿ ನೇಪಾಳದ ಪಂಚತಂತ್ರ ಮತ್ತು 'ಹಿತೋಪದೇಶ'ಗಳು ದೊರೆಯುತ್ತವೆ. (1. ಬಲದೇವ ಉಪಾಧ್ಯಾಯ: ಸಂಸ್ಕೃತ ಸಾಹಿತ್ಯದ ಇತಿಹಾಸ: ಪು. 699]). ಹೀಗಾಗಿ 'ತಂತ್ರಾಖ್ಯಾಯಿಕಾ' ಎಂಬ ಹೆಸರಿನಿಂದ ಪ್ರಚಲಿತವಾದ ಪರಿಷ್ಕರಣವು ಇವುಗಳಲ್ಲೆಲ್ಲ ಅತ್ಯಂತ ಪ್ರಾಚೀನವಾದುದು.
ಪ್ರಸಿದ್ಧ ವಿದ್ವಾಂಸರಾದ ಎ. ವೆಂಕಟಸುಬ್ಬಯ್ಯನವರು ಈ ಕುರಿತು ತುಂಬ ಆಳವಾಗಿ ಅಧ್ಯಯನ ಮಾಡಿದವರು. ಪಂಚತಂತ್ರದದ ಮೂಲ ಸಂಪ್ರದಾಯಗಳನ್ನು ಗುರುತಿಸಲು ಅವರ ಪ್ರಕಾರ ಪಂಚತಂತ್ರದ ಸಂಪ್ರದಾಯಗಳನ್ನು ಎರಡು ವಿಭಾಗ ಮಾಡಿಕೊಳ್ಳುವುದು ಅನುಕೂಲಕರ: ಪ್ರಾಚೀನ ಮತ್ತು ಆರ್ವಾಚೀನ. ಕ್ರಿ.ಶ. 1200ಕ್ಕೂ ಈಚಿನವು ಆಧುನಿಕ ಸಂಪ್ರದಾಯದಲ್ಲಿ ಸೇರಿದರೆ ಆ ಕಾಲಕ್ಕೂ ಹಿಂದಿನವು ಪ್ರಾಚೀನ ಸಂಪ್ರದಾಯದವು. ಪ್ರಾಚೀನ ಸಂಪ್ರದಾಯದಲ್ಲಿ ಆರು ಬಗೆಗಳನ್ನವರು ಸೂಚಿಸುತ್ತಾರೆ: ಅವುಗಳೆಂದರೆ 1. ಕಾಶ್ಮೀರ ಪಂಚತಂತ್ರ. 2. ಲಾಟೀಯ ಪಂಚತಂತ್ರ. ಇದು ಸೌರಾಷ್ಟ್ರ ಮತ್ತು ಲಾಟೀಯ ದೇಶಗಳಲ್ಲಿ ದೊರೆಯುವ ಪಾಠ. ಇದನ್ನು ಹರ್ಟೆಲ್ ಎಂಬ ವಿದ್ವಾಂಸರು 'Textus Simplicitor' ಎಂದು ಕರೆಯುತ್ತಾರೆ. 3. ಲಾಟೀಯ ಪಂಚತಂತ್ರದ ಬೃಹತ್ಪಾಠ. ಪೂರ್ಣಭದ್ರನೆಂಬ ಜೈನಮುನಿಯೊಬ್ಬನು ಇದನ್ನು ರಚಿಸಿರುವುದರಿಂದ ಹರ್ಟೆಲ್ ಇದಕ್ಕೆ ಪೂರ್ಣಭದ್ರನ ಪಂಚತಂತ್ರ ಎಂದೇ ಹೆಸರು ಕೊಟ್ಟಿದ್ದಾರೆ. 4. ದಕ್ಷಿಣ ಪಂಚತಂತ್ರ. 5. ದಕ್ಷಿಣ ಪಂಚತಂತ್ರದ ಬೃಹತ್ಪಾಠ. ಮತ್ತು 6. 'ಕಲಿಲದ ಪದಮ್ನ' ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಅರಬ್ಬೀ ಪಂಚತಂತ್ರದ ಪ್ರಭೇದಗಳಿಗೆ ಮೂಲವಾದ ಪಹಲವಿ ಭಾಷೆಯ ಮೂಲ ಪಂಚತಂತ್ರ.
ಹರ್ಟೆಲ್ ಅಥವಾ ಇತರ ವಿದ್ವಾಂಸರು ಗಮನ ಹರಿಸದ ಮತ್ತೊಂದು ಪ್ರಮುಖ ಅಂಶದ ಕಡೆಗೆ ಎ. ವೆಂಕಟಸುಬ್ಬಯನವರು ಗಮನ ಹರಿಸಿದ್ದಾರೆ. ಅದೆಂದರೆ ಪಂಚತಂತ್ರದ ಕರ್ತೃತ್ವ ವಿಚಾರ. ಮೇಲೆ ಉಕ್ತವಾದ ಪಂಚತಂತ್ರದ ಎಲ್ಲ ಪ್ರಭೇದಳಲ್ಲಿ ಕರ್ತೃ ವಿಷ್ಣುಶರ್ಮ ಎಂದೇ ಇದೆ. ಆದರೆ ದಕ್ಷಿಣ ಭಾರತದಲ್ಲಿ ಮತ್ತು ಜಾವಾ, ಥಾಯ್ಲೆಂಡ್ ಮುಂತಾದ ದೇಶಗಳಲ್ಲಿ ಕಂಡುಬರುವ ಪಂಚತಂತ್ರಗಳಲ್ಲಿ ವಸುಭಾಗಭಟ್ಟನನ್ನು ಕರ್ತೃವೆಂದು ಹೆಸರಿಸಲಾಗಿದೆ. ಈ ಬಗ್ಗೆ ವೆಂಕಟಸುಬ್ಬಯನವರು ವಿಶೇಷ ಅಧ್ಯಯನ ನಡೆಸಿದ್ದಾರೆ. ವಸುಭಾಗಭಟ್ಟನ ಹೆಸರಿನಲ್ಲಿ ಎರಡು ಪಂಚತಂತ್ರ ಪ್ರಭೇದಗಳು ದೊರೆಯುತ್ತವೆ: 1. ಕನ್ನಡದ ದುರ್ಗಸಿಂಹ ಕವಿಯು ರಚಿಸಿರುವ 'ಕರ್ಣಾಟಕ ಪಂಚತಂತ್ರ' ಮತ್ತು ಜಾವಾ ದೀಪದ ಭಾಷೆಯಲ್ಲಿ ತಂತ್ರಿ, ತಂತ್ರಿಕಾಮಂದಕ, ತಂತ್ರಚರಿತ ಎಂಬ ಹೆಸರಿನಿಂದ ದೊರೆಯುವ ಕಥಾಗುಚ್ಛ (ಇದರ ಕಾಲ ಕ್ರಿ.ಶ. ಹನ್ನೆರಡನೆಯ ಶತಮಾನ). ಇವುಗಳ ಜೊತೆಗೆ ಈಗ ಇನ್ನೂ ಒಂದು ಪ್ರಭೇದವು ಭಾರತದಲ್ಲಿಯೇ ದೊರೆಯುತ್ತದೆ. ಅದೆಂದರೆ, ವಸುಭಾಗಭಟ್ಟನ ಹೆಸರಿನಲ್ಲಿರುವ ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿನ 'ತಂತ್ರೋಪಖ್ಯಾನ'. [2. ಎ. ವೆಂಕಟಸುಬ್ಬಯ್ಯ: ಕವಸುಭಾಗನ ಪಂಚತಂತ್ರಕಿ, ಅಭಿವಂದನೆ, ಪುಟ 512].  ಅದರ ಮಹತ್ವವನ್ನು ಕುರಿತು ಯು.ಎನ್. ಘೋಷಾಲ್ ಅವರು ಹೀಗೆ ಹೇಳಿದ್ದಾರೆ: "A new series called Bibliotheca Javanica has been started under the auspices of the venerable Batavia Society for the publication of old Javanese and Middle Javanese texts. .. .. The first consists of three Middle Javanese versions of stories and fables with parallel Siamese and Laotian version of the Panchatantra by Durgasimha." (U.N. Ghoshal:'Greater Indian Research': Progress of Indian Studies, ABOR - Silver Jubilee Volume, 1942: p. 307)
ವಿಷ್ಣುಶರ್ಮನ ಪಂಚತಂತ್ರದ ಮೂಲರೂಪವನ್ನು 'ತಂತ್ರಾಖ್ಯಾಯಿಕಾ' ತೋರಿಸುತ್ತದೆ ಎಂದು ಹರ್ಟೇಲ್ ಅಪ್ರಾಯಪಡುತ್ತಾರೆ. ಈ ಕೃತಿಯ ಉದ್ದೇಶ ರಾಜನೀತಿ ಶಿಕ್ಷಣವನ್ನು ನೀಡುವುದು. ಹೀಗಾಗಿ ಇದರಲ್ಲಿ ರಾಜನೀತಿಗೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳ ಅನೇಕ ಉಲ್ಲೇಖಗಳನ್ನು ನೀಡಲಾಗಿದೆ. ಕೌಟಿಲ್ಯನ 'ಅರ್ಥಶಾಸ್ತ್ರ'ದ ಅನೇಕ ಉದಾಹರಣೆಗಳು ಮತ್ತು ಹಲವಾರು ಪಾರಿಭಾಷಿಕ ಶಬ್ದಗಳ ಬಳಕೆಯೂ ಇದರಲ್ಲಿ ಕಂಡುಬರುವುದರಿಂದ, 'ತಂತ್ರಾಖ್ಯಾಯಿಕಾ' ಕೌಟಿಲ್ಯನ ಕಾಲಕ್ಕಿಂತ ಈಚಿನದಾದರೂ, ಅದರ ರಚನಾಕಾಲವನ್ನು ಕ್ರಿ.ಶ. 300 ರಿಂದ ಕ್ರಿ.ಶ. 400 ರ ನಡುವಣ ಕಾಲವೆಂದು ತೀರ್ಮಾನಿಸಬಹುದೆಂಬುದು ಬಲದೇವ ಉಪಾಧ್ಯಾಯ ಅವರ ಅಭಿಪ್ರಾಯ. 3. ಬಲದೇವ ಉಪಾಧ್ಯಾಯ: ಸಂಸ್ಕೃತ ಸಾಹಿತ್ಯದ ಇತಿಹಾಸ: ಪು. 701]. ಆದರೆ ಈ ಕೃತಿಯನ್ನು ಸಂಸ್ಕೃತದ ಅತ್ಯಂತ ಪ್ರಾಚೀನ ಸೃಜನಶೀಲ ಕೃತಿಯೆಂದು ಹೇಳುವ ಹರ್ಟೇಲ್ ಅವರ ಅಭಿಪ್ರಾಯವನ್ನವರು ವಿರೋಧಿಸುತ್ತಾರೆ. ಅಶ್ವೋಷನ ಕಬುದ್ಧಚರಿತೆಕಿ, ಮಹಾಭಾರತಗಳು ಅದಕ್ಕೂ ಪ್ರಾಚೀನವಾದ್ದರಿಂದ 'ತಂತ್ರಾಖ್ಯಾಯಿಕಾ'ವನ್ನು ಪಂಚತಂತ್ರದ ಪ್ರಾಚೀನತಮ ಪರಿಷ್ಟರಣ ಎಂದು ಮಾತ್ರ ಹೇಳಬಹುದೆನ್ನುತ್ತಾರೆ (4. ಅದೇ])
ಕ್ರಿ.ಶ. ಆರನೆಯ ಶತಮಾನದಲ್ಲಿಯೇ ಪಂಚತಂತ್ರವು ಪಹಲವಿ ಭಾಷೆಗೆ ಅನುವಾದಗೊಳ್ಳಬೇಕಾದರೆ 'ತಂತ್ರಾಖ್ಯಾಯಿಕಾ' ಆ ಹೊತ್ತಿಗೇ ತುಂಬ ಪ್ರಸಿದ್ಧ ಗ್ರಂಥವಾಗಿದ್ದಂತೆ ತೋರುತ್ತದೆ. ಆ ಯುಗದಲ್ಲಿ ಬ್ರಾಹ್ಮಣರಿಗೆ ಬಹಳ ಆದರವಿತ್ತು ಎಂಬುದು ಇಲ್ಲಿನ ಅನೇಕ ಮಾತುಗಳಲ್ಲಿ ಪ್ರತಿಧ್ವನಿತವಾಗಿದೆ. ಪುರುಷಾರ್ಥಸಿದ್ಧಿಯನ್ನು ಅಪೇಕ್ಷಿಸುವ ವ್ಯಕ್ತಿಯು ರಾಜ, ಸ್ತ್ರೀ ಮತ್ತು ಬ್ರಾಹ್ಮಣರನ್ನು ರಿಕ್ತಪಾಣಿಯಾಗಿ ನೋಡಬಾರದು ಎಂಬ ಅಭಿಪ್ರಾಯ ಇದರಲ್ಲಿದೆ. ಇದರಲ್ಲಿ 'ತಂತ್ರೋಪಾಖ್ಯಾನ'ದಲ್ಲಿನಂತೆ ಎಲ್ಲಿಯೂ ಬೌದ್ಧಧರ್ಮದ ಪ್ರಭಾವ ಕಂಡುಬರುವುದಿಲ್ಲ. ಹಾಗಾಗಿ ಇದರಲ್ಲಿ ಸಂಪೂರ್ಣ ವೈದಿಕ ಪರಿವೇಷವನ್ನೇ ನಾವು ಕಾಣುವುದು. ಇಲ್ಲಿ ಪ್ರತಿಪಾದಿತವಾದ ನೈತಿಕ ವಿಚಾರಗಳು ವೈದಿಕಧರ್ಮಾನುಸಾರಿಯಾದವು. ಇಲ್ಲಿನ ಸೂಕ್ತಿಗಳು ಹರಿತವಾದವು. ಇದರ ಮೇಲೆ ಆಧರಿತವಾದ ಅನೇಕ ಪಂಚತಂತ್ರ ಪರಿಷ್ಕರಣಗಳು ಉಪಲಬ್ಧವಿವೆ. ಇದರಲ್ಲಿ ಎರಡು ಪರಿಷ್ಕರಣಗಳನ್ನು ಡಾ, ಹರ್ಟೇಲ್ ಅಂಗೀಕರಿಸುತ್ತಾರೆ. 1) ಸರಳ ಪಂಚತಂತ್ರ ಮತ್ತು, 2) ಅಲಂಕೃತ ಪಂಚತಂತ್ರ. ಪಹಲವಿ ಅನುವಾದಕ್ಕೆ ಮೂಲವಾಗಿರುವುದು ಸರಳ ಪಂಚತಂತ್ರವೇ. ಆನಂತರದ ಪರಿಷ್ಕರಣಗಳ ಕತೆಗಳು ಮತ್ತು ಸೂಕ್ತಿಗಳು ಹೆಚ್ಚಿವೆ. ಪ್ರಾಚೀನ ಪಂಚತಂತ್ರದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದ ಪ್ರಭಾವ ದಟ್ಟವಾಗಿದೆ: ಆನಂತರದ ಪರಿಷ್ಕರಣಗಲ್ಲಿ ಕಾಮಂದಕನ ನೀತಸಾರದ ಪ್ರಭಾವ ಹೆಚ್ಚು ಮತ್ತು ಅವುಗಳನ್ನೇ ಪ್ರಮಾಣವೆಂದು ಅಂಗೀಕರಿಸಿ ಉದಾಹರಿಸಿರುವುದು ಕಂಡುಬರುತ್ತದೆ. ಎಷ್ಟೋ ವೇಳೆ ಕತೆಗಳಿಗೆ ಪೂರಕವಾಗಿರದಿದ್ದರೂ ಸೂಕ್ತಿಗಳ ಉಲ್ಲೇಖವಿರುವುದು ಕಂಡುಬರುತ್ತದೆ. ಕೀಲ್ಹಾರ್ನ್ ಮತ್ತು ಬ್ಹೂಲರ್ ಅವರಿಂದ ಸಂಪಾದಿತವಾದ ಪಂಚತಂತ್ರದಲ್ಲಿನ 869 ಸೂಕ್ತಿಗಳಲ್ಲಿ 381 ಸೂಕ್ತಿಗಳು ರಾಜನೀತಿಗೆ ಸಂಬಂಧಿಸಿದವು, 388 ವ್ಯಾವಹಾರಿಕ ಜ್ಞಾನವನ್ನು ಹೇಳುವಂಥವು ಮತ್ತು 180 ಮಾತ್ರವೇ ನೈತಿಕ ಮೌಲ್ಯವನ್ನು ಉಪದೇಶಿಸುವಂಥವು.
ಅಲಂಕೃತ ಪಂಚತಂತ್ರದ ಪರಿಷ್ಕರಣವನ್ನು ಸಿದ್ಧಪಡಿಸಿದವನು ಪೂರ್ಣಭದ್ರನೆಂಬ ಜೈನ ವಿದ್ವಾಂಸ. ಇದರ ಕಾಲ ಸು. ಕ್ರಿ.ಶ. 1200. ಇದೇ ಈಗ ಪ್ರಚಲಿತವಾಗಿರುವ ಪಂಚತಂತ್ರಕ್ಕೆ ಮೂಲವಾದುದು. ಈ ವಿದ್ವಾಂಸನು ಗ್ರಂಥವನ್ನು ಆಮೂಲಾಗ್ರವಾಗಿ ಪರಿಷ್ಕರಣಕ್ಕೆ ಒಳಗುಮಾಡಿದ್ದಾನೆ. ಪ್ರತಿ ಅಕ್ಷರ, ಪದ್ಯ, ವಾಕ್ಯ, ಕತೆ ಮತ್ತು ಶ್ಲೋಕವನ್ನು ತಾನು ಪರಿಷ್ಕರಿಸಿರುವುದಾಗಿ ಆತ ಹೇಳಿಕೊಳ್ಳುತ್ತಾನೆ. ಹಿಂದಿನ ಪಾಠಗಳಿಗಿಂತ ಇದು ಹೆಚ್ಚು ವಿಸ್ತೃತವಾಗಿರುವುದರಿಂದ ಇದನ್ನು ವಿದ್ವಾಂಸ ವಲಯದಲ್ಲಿ 'ಅಲಂಕೃತ ಪರಿಷ್ಕರಣ'ವೆಂದು ಕರೆಯಲಾಗಿದೆ. ಈ ಎರಡೂ ಸಂಸ್ಕರಣಗಳ ವಿಷಯದಲ್ಲಿ ಜೈನ ವಿದ್ವಾಂಸರು ಮಹತ್ವದ ಪಾತ್ರವನ್ನು ವಹಿಸಿರುವುದು ಕಂಡುಬರುತ್ತದೆ. ಈ ಎರಡು ರೂಪಗಳಿಂದಲೇ ಮುಂದಿನ ಪಂಚತಂತ್ರ ಪಾಠಗಳು ಸಿದ್ಧಗೊಂಡದ್ದು. ಅಂತಹುದರಲ್ಲಿ ಒಂದು 'ಪಂಚಾಖ್ಯಾನೋದ್ಧಾರ' ಎಂಬುದು. ಇದನ್ನು ಜೈನ ಯತಿಯಾದ ಮೇವಿಜಯ ಎಂಬುವವನು ಕ್ರಿ.ಶ. 1670 ರ ಹೊತ್ತಿಗೆ ಸಿದ್ಧಪಡಿಸಿದ. ಹುಡುಗರಿಗೆ ಶಿಕ್ಷಣ ನೀಡುವ ಮೂಲಗ್ರಂಥವಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಇದನ್ನು ಸಿದ್ಧಪಡಿಸಲಾಗಿದೆ.
ವಿಷ್ಣುಶರ್ಮಕೃತ ಪಂಚತಂತ್ರದ ಮೂಲ ರೂಪವೂ - ಅಂದರೆ ಪಹಲವಿ ಭಾಷೆಯ ಮೂಲಪ್ರತಿ - ನಮಗೆ ದೊರೆತಿಲ್ಲ. ಹಾಗೆಯೇ ವಸುಭಾಗಭಟ್ಟನ ಪಂಚತಂತ್ರದ ಮೂಲವೂ ಸಮಗ್ರವಾಗಿ ದೊರೆತಿಲ್ಲ. ತ್ರಿವೇಂದ್ರಂನ ಸಂಸ್ಕೃತ ಗ್ರಂಥಮಾಲೆಯಲ್ಲಿ ಪ್ರಕಟವಾಗಿರುವ 'ತಂತ್ರೋಪಖ್ಯಾನ'ವು ವಸುಭಾಗಭಟ್ಟ ಸಂಪ್ರದಾಯದ್ದೆಂದು ಜಾರ್ಜ್ ಟಿ. ಆರ್ಟೋಲಾ ಅವರು ಅಭಿಪ್ರಾಯಪಡುತ್ತಾರೆ. ಲಾವೋಸ್ ಪಂಚತಂತ್ರದಲ್ಲಿ ಪಾಲಿಯ ಕೆಲವು ಶ್ಲೋಕಗಳು ಉಲ್ಲೇಖಗೊಂಡಿವೆ, ಹೀಗಾಗಿ ಒಂದು ವರ್ಗದ ಪಂಚತಂತ್ರಗಳ ಮೇಲೆ ಬೌದ್ಧಮತದ ಪ್ರಭಾವ ಆಗಿದೆಯೆಂಬುದು ಹಾಗೂ ಇದಕ್ಕೂ ಭಾರತದ ಪಂಚತಂತ್ರಕ್ಕೂ ಸಂಬಂಧವಿರುವುದೂ ಸ್ಪಷ್ಟವಾಗುತ್ತದೆ. ಆದರೆ ವಸುಭಾಗಭಟ್ಟ ಸಂಪ್ರದಾಯದ ಪಂಚತಂತ್ರದ ಮೂಲವೇ ನಮಗೆ ಸಿಗದಿರುವಾಗ ಇದಕ್ಕೂ ಅದಕ್ಕೂ ಇರಬಹುದಾದ ಸಂಬಂಧವನ್ನು ತಿಳಿಯುವುದು ಅಸಾಧ್ಯ. ಹೀಗಾಗಿ ಎಚ್.ಬಿ. ಸರ್ಕಾರ್ ಎಂಬ ವಿದ್ವಾಂಸರು ವಿಷ್ಣುಶರ್ಮ ಸಂಪ್ರದಾಯದ ಪಂಚತಂತ್ರವಲ್ಲದೆ ಭಾರತದಲ್ಲಿ ಮತ್ತೊಂದು ಸಂಪ್ರದಾಯವಿರಬೇಕೆಂದು ಹೇಳುತ್ತಾರೆ. (H.B. Sarkar: Indian Influence of Java and Bali: p. 360).
ಪಂಚತಂತ್ರದ ಪ್ರಪಂಚ ಪರ್ಯಟನೆಯ ಕತೆ
'ಪಂಚತಂತ್ರ'ವು ಅಂತೂ ಪ್ರಪಂಚದಾದ್ಯಂತ ಹೇಗೋ ಪ್ರಚಲಿತಕ್ಕೆ ಬಂದು ಹಲವಾರು ಭಾಷೆಗಳಿಗೆ ಭಾಷಾಂತರಗೊಂಡು ಹಲವಾರು ಶತಮಾನಗಳಿಂದ ಜನಜನಿತವಾಗಿದೆ. ಆದರೆ ಈ ಕೃತಿಯು ಜಗತ್ತಿನಾದ್ಯಂತ ಹೇಗೆ ಪ್ರಯಾಣ ಮಾಡಿತು, ಅದಕ್ಕೆ ಕಾರಣವೇನು ಎಂಬ ಪ್ರಶ್ನೆ ಏಳುವುದು ಸಹಜ. ಆ ಬಗ್ಗೆ ಕುತೂಹಲಕಾರಕ ಕತೆಯೊಂದು ಪ್ರಚಲಿತವಾಗಿದೆ. ಕ್ರ.ಶ. ಆರನೆಯ ಶತಮಾನದಲ್ಲಿ ಪರ್ಷಿಯದಲ್ಲಿ ಅನುಶಿರ್ವನ್ ಎಂಬ ರಾಜನೊಬ್ಬನಿದ್ದ.   ಅವನ ಬಳಿ ಇಪ್ಪತ್ತೈದು ಮಂದಿ ವೈದ್ಯಪಂಡಿತರಿದ್ದರು. ಅವರಲ್ಲಿ ಗ್ರೀಕರೂ, ಭಾರತೀಯರೂ ಮತ್ತು ಪರ್ಷಿಯನ್ನರು ಸೇರಿದ್ದರು. ಆದರೆ ರಾಜನಿಗೆ ಅಚ್ಚುಮೆಚ್ಚಿನ ವೈದ್ಯನೆಂದರೆ ಬುರ್ಜೊಯ್ ಅನ್ನುವವನು. ಸತ್ತವರನ್ನು ಮರಳಿ ಜೀವಂತಗೊಳಿಸುವ 'ಸಂಜೀವಿನಿ' ಎಂಬ ಮೂಲಿಕೆಯ ಬಗ್ಗೆ ಅವನು ಕೇಳಿ ತಿಳಿದಿದ್ದ. ಆದರೆ ಈ ಮೂಲಿಕೆಯು ಭಾರತದ ಪರ್ವತಪ್ರದೇಶಗಳಲ್ಲಿ ಮಾತ್ರವೇ ದೊರೆಯುತ್ತದೆಂಬುದೂ ಅವನ ಕಿವಿಗೆ ಬಿದ್ದಿತ್ತು. ಆ ಪವಾಡ ಮೂಲಿಕೆಯನ್ನು ತರಲು ತಾನು ಭಾರತಕ್ಕೆ ಹೋಗಲು ಅನುಮತಿಯನ್ನು ನೀಡಬೇಕೆಂದು ಬುರ್ಜೊಯ್ ರಾಜನನ್ನು ಕೇಳಿಕೊಂಡ. ಈ ಮೂಲಿಕೆಯ ವಿಷಯವನ್ನು ಕೇಳಿದ ರಾಜನಿಗೂ ತುಂಬ ಕುತೂಹಲವುಂಟಾಯಿತು. ಹೀಗಾಗಿ ಭಾರತದಲ್ಲಿದ್ದ ತನ್ನೊಬ್ಬ ಗೆಳಯ ರಾಜನಿಗೆ ಪತ್ರವೊಂದನ್ನು ಬರೆದು ಬುರ್ಜೊಯ್ ಕೈಯಲ್ಲಿತ್ತು ಭಾರತಕ್ಕೆ ಹೋಗಿಬರಲು ಅವನಿಗೆ ಅನುಮತಿ ನೀಡಿದ. ಹೀಗೆ ರಾಜನ ಕಾಗದವನ್ನು ಹೊತ್ತ ಬುರ್ಜೊಯ್ ಭಾರತದತ್ತ ಪಯಣ ಬೆಳೆಸಿದ.
ಆ ಭಾರತೀಯ ರಾಜನಿಗೆ ತನ್ನ ಗೆಳೆಯ ಅನುಶಿರ್ವನ್ನ ಪ್ರತಿನಿಧಿಯಾಗಿ ಬಂದಿದ್ದ ಬುರ್ಜೊಯ್ ಬಗ್ಗೆ ಆದರವುಂಟಾಗಿ ಅವನನ್ನು ಸಂತೋಷದಿಂದ ಬರಮಾಡಿಕೊಂಡು, ಅವನ ಅನ್ವೇಷಣೆಯಲ್ಲಿ ಎಲ್ಲ ಸಹಾಯವನ್ನೂ ಒದಗಿಸುವುದಾಗಿ ಆಶ್ವಾಸನೆಯಿತ್ತ. ಬುರ್ಜೊಯ್ ಸಂಜೀವಿನಿಯ ಹುಡುಕಾಟಕ್ಕಾಗಿ ಹೊರಟ. ಹಿಮಾಲಯದ ಪರ್ವತ ಪ್ರದೇಶಗಳಿಗೆ ಹೋದ ಅವನು ಅಲ್ಲಿ ವಾಸಿಸುತ್ತಿದ್ದ ಹಲವಾರು ಮಂದಿಯನ್ನು ಸಂಜೀವಿನಿಯ ಬಗ್ಗೆ ವಿಚಾರಿಸಿದ. ಎಷ್ಟು ಕಾಲ ಕಳೆದರೂ, ಯಾರನ್ನು ವಿಚಾರಿಸಿದರೂ ಸಂಜೀವಿನಿಯನ್ನು ಕಾಣುವುದು ಅವನಿಗೆ ಸಾಧ್ಯವಾಗಲಿಲ್ಲ. ನಿರಾಶೆಯಿಂದ ಅವನು ತನ್ನ ಸ್ವದೇಶಕ್ಕೆ ಮರಳಬೇಕೆಂದು ನಿರ್ಧರಿಸಿದ ಹೊತ್ತಿನಲ್ಲಿ ಅವನಿಗೆ ಒಬ್ಬ ವಯಸ್ಸಾದ ಋಷಿಯೊಬ್ಬನ ಭೇಟಿಯಾಯಿತು. ಅವನ ಬಳಿ ಬುರ್ಜೊಯ್ ತನ್ನ ಅನುಭವವನ್ನು ನಿವೇದಿಸಿಕೊಂಡ. ಆ ಋಷಿಯು ಮುಗುಳ್ನಕ್ಕು, "ಅಯ್ಯಾ ಬುರ್ಜೊಯ್, ಪ್ರಾಚೀನರ ಈ ಅನ್ಯಾರ್ಥಕ ರೂಪಕದ ಅರ್ಥ ನಿನಗೆ ತಿಳಿಯಲಿಲ್ಲವೇ? ಪರ್ವತ ಎಂದರೆ ಜ್ಞಾನಿಗಳು ಎಂದರ್ಥ, ಸತ್ತವರು ಎಂದರೆ ಅಜ್ಞಾನಿಗಳು ಎಂದರ್ಥ. ಸತ್ತವರಿಗೆ ಸಂಜೀವಿನಿ ಜೀವ ಕೊಡುತ್ತದೆ ಎಂದರೆ ಜ್ಞಾನಿಗಳು ತಮ್ಮ ನೀತಿಗಳಿಂದ ಅಜ್ಞಾನಿಗಳಿಗೆ ತಿಳಿವನ್ನು ನೀಡುತ್ತಾರೆ ಎಂಬುದನ್ನು ನಮ್ಮ ಪ್ರಾಚೀನರು ಹೀಗೆ ಹೇಳಿದ್ದಾರೆ, ಅಷ್ಟೆ. ಈ ನೀತಿಗಳೆಲ್ಲ 'ಪಂಚತಂತ್ರ' ಎಂಬ ಒಂದು ಗ್ರಂಥದಲ್ಲಿ ಅಡಕವಾಗಿವೆ. ಅದು ರಾಜನ ಭಂಡಾರದಲ್ಲಿಯೇ ಇದೆ. ಹೋಗಿ ಆ ಪುಸ್ತಕವನ್ನೋದು, ಆಗ ನಿನಗೆ ಆ ಕಿಮೂಲಿಕೆಕಿ ಸಿಗುತ್ತದೆ" ಎಂದು ವಿವರಿಸಿದ.
ರಾಜನ ಬಳಿಗೆ ಮರಳಿ ಬಂದ ಬುರ್ಜೊಯ್ ಋಷಿ ಹೇಳಿದ್ದ ಪುಸ್ತಕವನ್ನೋದಬೇಕೆಂಬ ತನ್ನ ಅಪೇಕ್ಷೆಯನ್ನು ವನಲ್ಲಿ ತೋಡಿಕೊಂಡ. ಮೊದಮೊದಲು ರಾಜನು ಹಿಂದೆಮುಂದೆ ನೋಡಿದರೂ ಕೊನೆಗೆ ತನ್ನ ಮುಂದೆಯೇ ಅವನು ಆ ಪುಸ್ತಕವನ್ನೋದಬೇಕೆಂಬ ಷರತ್ತಿನೊಡನೆ ಅದಕ್ಕೆ ಅವಕಾಶ ನೀಡಿದ. ಆ ಬಳಿಕ ಬುರ್ಜೊಯ್ ಕ್ರಮವಾಗಿ ಪುಸ್ತಕವನ್ನೋದುತ್ತ ಬಂದ. ಅಂದು ಓದಿದ ವಿಷಯವನ್ನು ಅಂದೇ ಮನನ ಮಾಡಿಕೊಳ್ಳುತ್ತಿದ್ದ. ಅಲ್ಲದೆ ಅಂದಿನ ಓದು ಮುಗಿದು ಮನೆಗೆ ಮರಳಿದಾಗ ಅದನ್ನು ಬರೆದಿಡುತ್ತಿದ್ದ. ಹೀಗೆ ಅವನು ಇಡೀ ಪುಸ್ತಕವನ್ನು ಕಂಠಗತಮಾಡಿಕೊಂಡು ಬರೆದಿಟ್ಟುಕೊಂಡ.
ಹೀಗೆ 'ಪಂಚತಂತ್ರ'ದೊಂದಿಗೆ ಬುರ್ಜೊಯ್ ತೃಪ್ತಿಯಿಂದ ಪರ್ಷಿಯಕ್ಕೆ ಮರಳಿ ರಾಜನ ಮುಂದೆ ಹಾಜರಾದ. ತನ್ನೆಲ್ಲ ಅನುಭವಗಳನ್ನೂ ಬಿತ್ತರಿಸಿದ ಅವನು ಕೊನೆಗೆ ತಾನು ಬರೆದಿಟ್ಟುಕೊಂಡು ಬಂದಿದ್ದ 'ಪಂಚತಂತ್ರ'ವನ್ನು ರಾಜನಿಗೆ ತೋರಿಸಿದ. ರಾಜನಿಗೆ ಅದನ್ನು ಕಂಡು ಸಂತೋಷವಾಯಿತು. ಅದಕ್ಕಾಗಿ ಏನು ಪರಿತೋಷಕ ಕೊಡಲಿ ಎಂದು ಕೇಳಿದ. ಆಗ ಬುರ್ಜೊಯ್ ಹೇಳಿದ್ದೆಂದರೆ, "ಪ್ರಭು, ಈ ಗ್ರಂಥದ ಅನುವಾದದಲ್ಲಿ ನನ್ನ ಬಗ್ಗೆಯೂ ಒಂದು ಕಥನವನ್ನು ಸೇರಿಸಬೇಕು, ಅಷ್ಟೇ ನನ್ನ ಅಪೇಕ್ಷೆ" ಎಂದು ಹೇಳಿದ. ರಾಜ 'ತಥಾಸ್ತು' ಎಂದ.
ಈ ರೀತಿಯಲ್ಲಿ ಪರ್ಷಿಯವನ್ನು ತಲುಪಿದ 'ಪಂಚತಂತ್ರ'ವು ಪಹಲವಿ ಭಾಷೆಗೆ ಮೊದಲು ಅನುವಾದಗೊಂಡಿತು. ಆ ಅನುವಾದದಲ್ಲಿ ಬುರ್ಜೊಯ್ ಕೈಗೊಂಡ ಭಾರತ ಪರ್ಯಟನದ ಬಗೆಗಿನ ಕಥನವೂ ಸೇರಿಕೊಂಡಿತು. ಈ ಗ್ರಂಥವನ್ನು ಪರ್ಷಿಯದ ಆನಂತರದ ರಾಜರೆಲ್ಲ ಬಹು ಎಚ್ಚರಿಕೆಯಿಂದ ಜತನಮಾಡಿಕೊಂಡು ಬಂದರು. ಅದನ್ನು ಇಬ್ನ್ ಉಲ್ ಮುಖಫಾ ಅರಬ್ಬೀ ಭಾಷೆಗೆ ಅನುವಾದಿಸಿದ. ಭಾರತದ ಭಾಷೆಯಿಂದ ಪಹಲವಿಗೆ ಅನುವಾದಗೊಂಡ ಈ ಕೃತಿಯನ್ನು ಇರಾಕ್, ಸಿರಿಯ ಮತ್ತು ಹೆಜಾಜ್ ಜನರಿಗೆ ಅನುಕೂಲವಾಗಲೇಂದು ಅವರೆಲ್ಲರ ಭಾಷೆಯಾದ ಅರಬ್ಬಿಯಲ್ಲಿ ತಾನಿದನ್ನು ಭಾಷಾಂತರಿಸಿರುವುದಾಗಿ ಮುಖಫಾ ಹೇಳಿಕೊಂಡಿದ್ದಾನಂತೆ. ಅಮೀರ್ ನಸರ್ ಇಬ್ನ್ ಅಹಮದ್ನ ಆಜ್ಞಾನುಸಾರ ರುಡಾಕಿ ಅದನ್ನು ಪರ್ಷಿಯನ್ ಭಾಷೆಗೆ ಪದ್ಯರೂಪದಲ್ಲಿ ಭಾಷಾಂತರಿಸಿದ.
ಪಂಚತಂತ್ರವು ಪಹಲವಿ ಭಾಷೆಗೆ ಭಾಷಾಂತರಗೊಂಡದ್ದು ಕ್ರಿ.ಶ. 550 ರಲ್ಲಿ, ಅದರ ಶಿಷೀಕೆ 'ಕರಟಕ್ ವಾ ದಮನಕ್' ಎಂದು. ಸಿರಿಯಾಕ್ ಭಾಷೆಗೆ ಅದನ್ನು ಬುಡಾ ಅಬ್ದುಲ್ ಇನು ಕ್ರಿ.ಶ. 570 ರಲ್ಲಿ ಅನುವಾದಿಸಿದ. ಇಬ್ನ್ ಉಲ್ ಮುಖಫಾ ಅದನ್ನು ಅರಬ್ಬೀ ಭಾಷೆಗೆ ಅನುವಾದಿಸಿದ್ದು ಕ್ರಿ.ಶ. 750 ರಲ್ಲಿ. ಅವನು ತನ್ನು ಅನುವಾದಕ್ಕಿತ್ತ ಹೆಸರು 'ಕಲಿಲ ವಾ ದಿಮ್ನಾಹ್' ಎಂದು. ಬುರ್ಜೊಯ್ ಮಾಡಿದ್ದ ಪಹಲವಿ ಭಾಷಾಂತರವು ಎಲ್ಲಿಯೋ ಕಳೆದು ಹೋಯಿತು, ಆದರೆ ಅದು ಕಣ್ಮರೆಯಾಗುವ ಮುಂಚೆ ರುಡಾಕಿ ಅದನ್ನು ಪರ್ಷಿಯನ್ ಭಾಷೆಗೆ ಕ್ರಿ.ಶ. 940 ರಲ್ಲಿ ಭಾಷಾಂತರಿಸಿದ.
ಮುಂದೆಯೂ 'ಪಂಚತಂತ್ರ'ದ ಅನುವಾದ ಕಾರ್ಯ ನಡೆಯುತ್ತ ಸಾಗಿತು. ಹನ್ನೊಂದನೆಯ ಶತಮಾನದಲ್ಲಿ ಸಾಇಮಿಅನ್ ಸೇಠ್ ಎಂಬುವವನು ಇದನ್ನು ಅರಬ್ಬೀಯಿಂದ ಯುನಾನಿ ಭಾಷೆಗೆ ಅನುವಾದಿಸಿದ. ಈ ಯುನಾನಿ ಭಾಷಾಂತರದಿಂದಲೇ ಲ್ಯಾಟಿನ್, ಜರ್ಮನ್, ಮತ್ತು ಸ್ಲಾವ್ ಭಾಷೆಗಳಲ್ಲಿನ ಅನೇಕ ಅನುವಾದಗಳು ಹೊರಬಂದಿರುವುದು. ಮೊದಲು, ಐಂಟೋನಿಯನ್ ವಾನ್ಫೋರ್ ಎಂಬಾತನು ಇದನ್ನು ಅರಬ್ಬೀ ಭಾಷೆಯಿಂದ ನೇರವಾಗಿ ಜರ್ಮನ್ ಭಾಷೆಗೆ ಭಾಷಾಂತರಿಸಿದ. ಈ ಅನುವಾದವು ಜರ್ಮನ್ ಸಾಹಿತ್ಯದ ಮೇಲೆ ನಾನಾ ರೀತಿಯ ಪ್ರಭಾವ ಬೀರಿದೆಯಂತೆ. ಜಾನ್ ಆಫ್ ಕೇಪುಅ ಎಂಬ ವಿದ್ವಾಂಸನು ಭಾಷಾಂತರಿಸಿದ್ದ ಲ್ಯಾಟಿನ್ 'ಪಂಚತಂತ್ರ'ವನ್ನು ಡೋನಿ ಎಂಬುವವನು ಇಟಾಲಿಯನ್‍ಗೆ ಮಾಡಿದ ಭಾಷಾಂತರವು ಕ್ರಿ.ಶ. 1552 ರಲ್ಲಿ ಮುದ್ರಿತವಾಗಿದೆ. ಇದನ್ನು ಸರ್ ಥಾಮಸ್ ನಾರ್ತ್ ಕಮಾರಲ್ ಫಿಲಾಸಫಿ ಆಫ್ ದೋನಿಕಿ ಎಂಬ ಹೆಸರಿನಿಂದ ಇಂಗ್ಲಿಷ್ಗೆ ಅನುವಾದಿಸಿದ. ಇದು 1590 ರಲ್ಲಿ ಮೊದಲ ಬಾರಿಗೆ, ಕ್ರಿ.ಶ. 1601 ರಲ್ಲಿ ಮತ್ತೆ ಲಂಡನ್‍ನಿಂದ ಪ್ರಕಟಗೊಂಡಿತು. ಈ ರೀತಿ ಪಹಲವಿಯ ಅನುವಾದದಿಂದ, ಅದರಿಂದ ಹೀಬ್ರೂ ಭಾಷಾಂತರ, ಅದರಿಂದ ಲ್ಯಾಟಿನ್, ಅದರಿಂದ ಇಟಾಲಿಯನ್, ಅಲ್ಲಿಂದ ಇಂಗ್ಲಿಷ್ - ಹೀಗೆ ಅನುವಾದ ಕಾರ್ಯ ಸಾಗಿ ಬಂತು. ಹೀಬ್ರೂ  ಭಾಷಾಂತರದಿಂದ ಮತ್ತೆ ಪಾರ್ಸಿ ಅನುವಾದವು ಕಾಣಿಸಿಕೊಂಡಿತು. ಇದು ಮುಂದೆ ತುರ್ಕಿ ಭಾಷೆಯಲ್ಲಿನ ಅನೇಕ ಅನುವಾದಗಳಿಗೆ ಎಡೆಮಾಡಿಕೊಟ್ಟಿತು. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು 'ಅನ್ವರಿ ಸುಹೇಲಿ' ಎಂಬುದು. ಹುಸೇನ್ ಇಬ್ನ್ ಅಲೀಲ್ಬಾಜ್ ಎಂಬ ಪಾರ್ಸಿ ಕವಿಯು ಇದನ್ನು ರಚಿಸಿದವನು. ಇದರ ಪ್ರಭಾವ ಆ ಭಾಷೆಯ ಸೃಜನಶಿಲ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿದೆಯಂತೆ. ಹೀಗೆ 'ಪಂಚತಂತ್ರ'ವು ಮೂಲ ಪರಿಷ್ಕರಣವು ಕಣ್ಮರೆಯಾದ 1200 ವರ್ಷಗಳ ಬಳಿಕವೂ ಅನುವಾದಗೊಳ್ಳುತ್ತಲೇ ಬಂದಿದೆ, ಈಗಲೂ ಆ ಕಾರ್ಯ ಮುಂದುವರಿದಿದೆ.
ಜಗತ್ತಿನ ವಿವಿಧ ದೇಶಗಳಲ್ಲಿ ಸುಮಾರು 90 ಪಂಚತಂತ್ರದ ಪರಿಷ್ಕರಣಗಳಿವೆಯಂತೆ. ಅಲ್ಲದೆ, ಪಂಚತಂತ್ರದ ಕತೆಗಳು ಜಗತ್ತಿನ ಸುಮಾರು 200 ಭಾಷೆಗಳಲ್ಲಿ ಅನುವಾದಗೊಂಡೋ ರೂಪಾಂತರಗೊಂಡೋ ಪ್ರಚಲಿತವಾಗಿವೆಯಂತೆ. ಚೀನ ಜಪಾನ್ ಮತ್ತಿತರ ಅನೇಕ ನೈರುತ್ಯ ಏಷ್ಯಾ ದೇಶಗಳಲ್ಲಿ ಪಂಚತಂತ್ರದ ಕತೆಗಳು ಬುದ್ಧನ ಬಗೆಗಿನ ಕತೆಗಳಾದ ಜಾತಕ ಕತೆಗಳೊಡನೆ ಮಿಳಿತಗೊಂಡಿವೆ. ಉದಾಹರಣೆಗೆ, 'ಹಾರಿಹೋದ ಪಾರಿವಾಳಗಳು' ಕತೆಯು ಸಮ್ಮೇದನ ಜಾತಕದ 33 ನೆಯ ಕತೆಯಲ್ಲಿಯೂ, 'ಕೊಕ್ಕರೆ ಮತ್ತು ಏಡಿ' ಕತೆಯು ಬಕ ಜಾತಕದ 38 ನೆಯ ಕತೆಯಲ್ಲಯೂ, 'ಮೂರ್ಖ ಕಪಿ' ಕತೆಯು ಅರ್ಮದಶಾಕ ಜಾತಕದ 46 ನೆಯ ಕತೆಯಾಗಿಯೂ, 'ಹುಲಿಯ ಚರ್ಮ ಹೊದ್ದ ಕತ್ತೆ' ಕತೆಯು ಸಿಂಹಕಮ್ಮ ಜಾತಕದ 189 ನೇ ಕತೆಯಾಗಿಯೂ, 'ಋಷಿಯ ಮಗಳ ಮದುವೆ' ಕತೆಯು ಸಾಧುಶಿಲಾ ಜಾತಕದ 200 ನೇ ಕತೆಯಾಗಿಯೂ, 'ಕೋತಿ ಮತ್ತು ಮೊಸಳೆ' ಕತೆಯು ಸುಮುರ ಜಾತಕದ 208 ನೆ ಕತೆಯಾಗಿಯೂ ಕಾಣಿಸಿಕೊಳ್ಳುತ್ತವೆಯೆಂದು ವಿದ್ವಾಂಸರು ಗುರತಿಸಿದ್ದಾರೆ. ಇವಲ್ಲದೆ ಇನ್ನೂ ಅನೇಕ ಕತೆಗಳು ವಿವಿಧ ಜಾತಕ ಕತೆಗಳಲ್ಲಿ ಪುನರವತಾರಮಾಡಿವೆಯೆಂಬುದು ಅವರ ಅಭಿಮತ.
ಈಸೋಪನ ನೀತಿಕತೆಗಳಲ್ಲಿಯೂ 'ಪಂಚತಂತ್ರ'ದ ಕತೆಗಳಿಗೆ ಸಂವಾದಿಯಾದವು ಕೆಲವಿವೆ. 'ಸಿಂಹ ಮತ್ತು ಇಲಿ' ಕತೆಯು ಎರಡರಲ್ಲಿಯೂ ಒಂದೇ ರೀತಿಯಾಗಿದೆ. 'ಆನೆ ಮತ್ತು ಇಲಿಗಳು' ಮತ್ತು 'ಸಿಂಹ ಮತ್ತು ಮೊಲ'ನ ಕತೆಗಳು ಈಸೋಪ್‍ನ 'ನರಿ ಮತ್ತು ಪಾರಿವಾಳಗಳು' ಕತೆಯಲ್ಲಿ ಪ್ರತಿಬಿಂಬಗೊಂಡಿವೆ.
ಫ್ರೆಂಚ್ ಭಾಷೆಯಲ್ಲಿ ಲ ಫಾಂಟೇನ್ ತನ್ನ ನೀತಿಕತೆಗಳ ಸಂಕಲನದಲ್ಲಿ 'ಪಂಚತಂತ್ರ'ದ ಅನೇಕ ಕತೆಗಳನ್ನು ಅಳವಡಿಸಿಕೊಂಡಿದ್ದಾನೆ. ಎಡ್ವರ್ಡ್ ಡೆನಿಸನ್ ರಾಸ್‍ನ 'ಕಥಾಸಾಗರ'ದಲ್ಲಿ (ಸೋಮದೇವನ ಕಥಾಸರಿತ್ಸಾಗರದ ಅನುವಾದ) 'ಪಂಚತಂತ್ರ'ದ ಅನೇಕ ಕತೆಗಳಿವೆ.
ಅಲ್ಲದೆ, ವಿವಿಧ ಭಾಷೆಗಳಿಗೆ ಭಾಷಾಂತರಗೊಳ್ಳುವಾಗ 'ಪಂಚತಂತ್ರ'ದ ಅನೇಕ ಕತೆಗಳು ಸ್ಥಳೀಯ ಪರಿಸರಕ್ಕೆ ಅನುಗುಣವಾಗಿ ರೂಪಾಂತರಗೊಂಡಿರುವುದೂ ಉಂಟು. ಉದಾಹರಣೆಗೆ 'ಕೋತಿ ಮತ್ತು ಮೊಸಳೆ' ಕತೆಯನ್ನು ಪರ್ಷಿಯನ್ ಭಾಷೆಗೆ ಅನುವಾದಿಸುವಾಗ ಮೊಸಳೆಯ ಬದಲು ಆಮೆ ಬಂದಿದೆ.
'ಪಂಚತಂತ್ರ' ಕತೆಗಳ ಅತ್ಯಂತ ಪ್ರಮುಖವಾದ ಲಕ್ಷಣವೆಂದರೆ ಅದರಲ್ಲಿನ ಪ್ರಾಣಿಸಂಬಂಧೀ ಕತೆಗಳು. ಅರ್ನೆಸ್ಟ್ ರೈಸ್ ಎಂಬ ವಿದ್ವಾಂಸ ಹೀಗೆನ್ನುತ್ತಾನೆ: "ಪ್ರಾಣಿ ಕತೆಗಳು ಈಸೋಪ್‍ನಿಂದಲೂ ಆರಂಭಗೊಳ್ಳಲಿಲ್ಲ, ಗ್ರೀಕ್ ಭಾಷೆಯಲ್ಲಿಯೂ ಅಲ್ಲ. ಇದನ್ನು ಮೊದಲು ಕಾಣಬೇಕಾದರೆ ನಾವು ಪೂರ್ವಕ್ಕೇ ಹೋಗಬೇಕು, ಅದರಲ್ಲಿಯೂ ಭಾರತಕ್ಕೆ". ಡಾ. ವಿಂಟರ್ನಿಟ್ಸ್ ವ್ಯಾಪಕ ಸಂಶೋಧನೆಗಳನ್ನು ನಡೆಸಿ ಗ್ರೀಕ್ ಭಾಷೆಯ ಈಸೋಪ್‍ನ ಕತೆಗಳ ಮೂ;ಲವನ್ನು ಪಂಚತಂತ್ರದಲ್ಲಿ ಗುರುತಿಸಿ ಉದಾಹರಣೆಗಳ ಮೂಲಕ ಸಮರ್ಥಿಸಿದ.  ಇವು ಮಧ್ಯಯುಗದಲ್ಲಿ 'ಬಿದಾಪಈ ಕತೆಗಳು'ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡುವು. ಅಲ್ಲದೆ ಕ್ರೈಸ್ತ ಗುರುಗಳ ನಡುವೆ ವಿರಾಜಮಾನವಾದವು. 'ಬರ್ಲಾಮ್ ಮತ್ತು ಜೋಸಫ್' ಕತೆಯು ಎಷ್ಟು ಜನಜನಿತವಾಯಿತೆಂದರೆ ಇಲ್ಲಿನ ಪಾತ್ರಗಳನ್ನು ಕ್ರೈಸ್ತ ಗುರುಗಳ ಜೊತೆಗೇ ಪರಿಗಣಿಸಲಾಯಿತು.
ಪಂಚತಂತ್ರದ ಕತೆಗಳು ಮಧ್ಯಯುಗದ ಯೂರೋಪ್ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿದೆ. ಮಧ್ಯಯುಗದಲ್ಲಿನ ಬಹು ಜನಪ್ರಿಯವಾಗಿದ್ದ 'ಗೇಷ್ಟಾರೋಮನಾರೂಮ್' ಮತ್ತು 'ಡೆಕಾಮೆರಾನ್' ಕಥಾಸಂಗ್ರಹಗಳು ಪಂಚತಂತ್ರದಿಂದ ಪ್ರಭಾವಿತವಾದವು, ಬೊಕೇಷಿಯೊ, ಛಾಸರ್, ಲ ಫಂತೆ ಮುಂತಾದ ಕತೆಗಳಲ್ಲಿ, ಹಾಗೂ ಗ್ರಿಮ್ ಸಹೋದರರ ಕತೆಗಳಲ್ಲಿ ಇರದ ಕಥಾಸೂತ್ರವೇ ಇದೆಯೆಂದು ವಿದ್ವಾಂಸರು ಗುರುತಿಸುತ್ತಾರೆ.   ಬೊಕಾಷಿಯೋನ ಇಟಾಲಿಯನ್ ಕೃತಿ 'ಡೆಕಾಮೆರಾನ್'; ಜೆಫ್ರಿ ಛಾಸರ್ ಇಂಗ್ಲಿಷ್‍ನ ಬಹು ಮಹತ್ವದ ಕೃತಿ 'ಕ್ಯಾಂಟರ್ಬರಿ ಟೇಲ್ಸ್'ನ ಲೇಖಕ, ಲ ಫಾಂತೇನ್ ಫ಼್ರೆಂಚ್ನ ಪ್ರಖ್ಯಾತ ಕವಿ. ಇವನು ಹದಿನೇಳನೆಯ ಶತಮಾನದಲ್ಲಿ ಕಲ್ಪಿತ ಕತೆಗಳ ಹನ್ನೆರಡು ಪದ್ಯ ಕಥನಗಳ ಸಂಪುಟಗಳನ್ನು ರಚಿಸಿದ್ದಾನೆ. ಅದರ ಎರಡನೆಯ ಆವೃತ್ತಿಯ ಮುನ್ನುಡಿಯಲ್ಲಿ ತನ್ನ ಕತೆಗಳಿಗೆ ಭಾರತೀಯ ಸಾಹಿತ್ಯದಿಂದ ದೊರೆತ ಸ್ಫೂರ್ತಿಯನ್ನು ವಿವರಿಸಿದ್ದಾನೆ. ಹೀಗೆ 'ಪಂಚತಂತ್ರ'ವು ಕಾಲಕಾಲಕ್ಕೆ ಜಗತ್ತಿನ ವಿವಿಧೆಡೆಗಳಿಗೆ ಪಯಣ ಬೆಳೆಸಿ ತನ್ನ ವ್ಯಾಪಕ ಪ್ರಭಾವವನ್ನು ಬೀರಿದೆ.
ವಸುಭಾಗಭಟ್ಟ ಸಂಪ್ರದಾಯದ 'ಪಂಚತಂತ್ರ':
'ಪಂಚತಂತ್ರ'ವನ್ನು ರಚಿಸಿದವನು ವಿಷ್ಣುಶರ್ಮ ಎಂಬುದು ಸಾಮಾನ್ಯ ತಿಳಿವಳಿಕೆ. ಅನೇಕ ಹಸ್ತಪ್ರತಿಗಳಲ್ಲಿಯೂ ಅವನ ಹೆಸರಿನ ಉಲ್ಲೇಖವಿದೆ. ಮೊದಮೊದಲು ಇನ್ನೊಂದು ಪಂಚತಂತ್ರ ಸಂಪ್ರದಾಯವಿದೆ ಎಂಬುದು ವಿದ್ವಾಂಸರಿಗೂ ತಿಳಿದಿರಲಿಲ್ಲ. ಆದರೆ ದಕ್ಷಿಣ ಭಾರತದಲ್ಲಿ ಮತ್ತು ಜಾವಾ, ಲಾವೋಸ್, ಸಯಾಮ್ ಮುಂತಾದ ಕಡೆಗಳಲ್ಲಿ ಪ್ರಚಲಿತವಿರುವುದು ವಸುಭಾಗಭಟ್ಟ ಸಂಪ್ರದಾಯದ ಪಂಚತಂತ್ರ ಕತೆಗಳು ಎಂಬುದು ಆನಂತರ ಬೆಳಿಕಿಗೆ ಬಂದ ವಿಷಯವಾಗಿದೆ.
ಕನ್ನಡದಲ್ಲಿ ಹದಿನೇಳನೇ ಶತಮಾನದವರೆಗೂ ಇದ್ದುದು ವಸುಭಾಗಭಟ್ಟಕೃತ ಪಂಚತಂತ್ರದ ರೂಪ ಮಾತ್ರವೇ. ಕ್ರಿ.ಶ. 1650 ರ ಹೊತ್ತಿಗೆ ಶಂಕರಕವಿ ಎಂಬುವವನೊಬ್ಬ ರಚಿಸಿರುವ ಪಂಚತಂತ್ರ ಕನ್ನಡ ಕೃತಿಯು ವಿಷ್ಣುಶರ್ಮನ ಸಂಪ್ರದಾಯದ ಪಂಚತಂತ್ರ ಕತೆಗಳನ್ನೊಳಗೊಂಡಿದೆ. ಇದನ್ನು ಜಾನ್ ಗ್ಯಾರೆಟ್ ಮತ್ತು ಎಂ.ಡಿ. ಸಿಂಗರಾಚಾರಿ ಅವರುಗಳು ಸಂಪಾದಿಸಿ ಕ್ರಿ.ಶ. 1864 ರಲ್ಲಿ ಪ್ರಕಟಿಸಿದ್ದಾರೆ. ಮುಂದೆ ಹತ್ತೊಂಬತ್ತನೆಯ ಶತಮಾನದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ವಿಷ್ಣುಶರ್ಮನ ಪಂಚತಂತ್ರವನ್ನು ಕನ್ನಡದಲ್ಲಿ ರಚಿಸಿದ್ದಾನೆ. ಇದು ಎ. ವೆಂಕಟಸುಬ್ಬಯ್ಯನವರಿಂದ ಸಂಪಾದಿತವಾಗಿ 1893 ರಲ್ಲಿ ಮದ್ರಾಸಿನಲ್ಲಿ ಪ್ರಕಟಗೊಂಡಿದೆ.  ಅಲ್ಲಿಯವರೆಗೆ ಕನ್ನಡ ನಾಡಿನಲ್ಲಿ ಪ್ರಚಲಿತವಿದ್ದ ಪಂಚತಂತ್ರವು ವಸುಭಾಗಭಟ್ಟ ಕೃತವಾದುದರ ಅನುವಾದವಾದ ಕವಿ ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರ' ಮಾತ್ರ.
ದುರ್ಗಸಿಂಹನು 'ಕರ್ಣಾಟಕ ಪಂಚತಂತ್ರ' ದಲ್ಲಿ ಐದಾರು ಕಡೆಗಳಲ್ಲಿ  ವಸುಭಾಗಭಟ್ಟನ ಹೆಸರು ಹೇಳಿದ್ದಾನೆ. ಇದರಲ್ಲಿ ವಸುಭಾಗಭಟ್ಟನೇ ಕೃತಿ ಕರ್ತೃ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆಯೇ ಜಾವಾ ದ್ವೀಪದ ಭಾಷೆಯಲ್ಲಿರುವ 'ತಂತ್ರಿ' ಎಂಬ ಕಥಾಗುಚ್ಛ ಇದಕ್ಕೆ ತಂತ್ರಿಕಾಮಂದಕ, ತಂತ್ರಿವಾಕ್ಯ ಅಥವಾ ತಂತ್ರಿಚರಿತ ಎಂಬ ಹೆಸರುಗಳು ಇವೆ. ಇದು ಪಂಚತಂತ್ರದ ಭಾಷಾಂತರವಾಗಿರದಿದ್ದರೂ ಅದರಲ್ಲಿರುವ ಕತೆಗಳೆಲ್ಲ ಅದರಲ್ಲಿನವೇ. ಇದು ಗದ್ಯ, ಕದರಿ ಛಂದಸ್ಸಿನಲ್ಲಿರುವುದು ಮತ್ತು ಡೆಮುಂಗ್ ಎಂಬ ಛಂದಸ್ಸಿನಲ್ಲಿರುವುದು ಎಂದು ಮೂರು ಬಗೆಯಾಗಿದೆ. ಮೂರನೆಯ ವಿಧದ ಕತಂತ್ರಿಕಿಯಲ್ಲಿ "ಬನ್ನಂಗ ಚರಿತ ಶ್ಲೋಕ ವೆಕಾಸ್ ಇಂಗ ತಂತ್ರಿ ಪ್ರಕ್ರಿಯಾ ಶ್ರೀ ಬಸುಭಾಗ ನಂದಕ ಕರುಣಾರನಿಪುನ್" ಎಂಬ ಪದ್ಯಭಾಗದಲ್ಲಿ ವಸುಭಾಗನ ಹೆಸರಿನ ಉಲ್ಲೇಖವಿದೆ. ಉಳಿದೆರಡು ಗ್ರಂಥಗಳಲ್ಲಿಯೂ ಸುಮಾರು ಇಪ್ಪತ್ತು ಕಡೆಗಳಲ್ಲಿ ವಸುಭಾಗನ ಹೆಸರಿನ ಉಲ್ಲೇಖವಿದ್ದರೂ ಅದು ಕೃತಿಕರ್ತೃವಿನದು ಎಂದು ಯಾರಿಗೂ ಈಚಿನವರೆಗೆ ಹೊಳೆದಿರಲಿಲ್ಲ. ಲಾವೋಸ್ ದೇಶದ 'ಪಂಚತಂತ್ರ'ವನ್ನು ಸಂಪಾದಿಸಿದವರು ಡಾ. ಜನ್ ಬ್ರೆಂಗೆ ಮತ್ತು ಡಾ. ಲೂಯಿ ಫಿನೋ. ಡಾ. ಜನ್ ಬ್ರೆಂಗೆ ಅವರು 1908 ರಲ್ಲಿ ಕಪಂಚತಂತ್ರದ ಲಾವೋಸ್ ಆವೃತ್ತಿಕಿ (Une Version Laotienne du Panchatantra) ಎಂಬ ಹೆಸರಿನಿಂದ 'ಜರ್ನಲ್ ಏಷಿಯಾಟಿಕ್' ಪತ್ರಿಕೆಯಲ್ಲಿ ಪ್ರಕಟಿಸಿದರು. ಆ ಮುಂಚೆಯೇ ಇದರ ಮೂರನೇ ಒಂದು ಭಾಗದಷ್ಟನ್ನು ಡಾ. ಜನ್ ಬ್ರೆಂಗೆ ಅವರೇ 'Contre et Legender du pays Laotian' ಎಂಬ ಹೆಸರಿನಿಂದ ಫ್ರೆಂಚ್ ಭಾಷೆಯಲ್ಲಿ ಅನುವಾದಿಸಿ ಪ್ರಕಟಿಸಿದ್ದರು. ಈ ಅನುವಾದದಲ್ಲಿ 'ವಸುಫಖ' ಎಂಬ ಹೆಸರು ಉಲ್ಲೇಖಗೊಂಡಿದೆ. ಬೇರೆಯವರಿರು ಇದು ಅರ್ಥವಾಗದ ಅಕ್ಷರಗುಂಫವೆಂದು ಬಗೆದಿದ್ದಾಗ ಡಾ. ಅರ್ಟೋಲ ಎಂಬ ವಿದ್ವಾಂಸರು ಇದು ವಸುಭಾಗ ಎಂಬ ಪದದ ವ್ಯತ್ಯಸ್ತ ರೂಪವೆಂದು ಪ್ರತಿಪಾದಿಸಿದರು. ಇದನ್ನು ಎ. ವೆಂಕಟಸುಬ್ಬಯ್ಯನವರು ಒಪ್ಪುತ್ತಾರೆ.
ಥಾಯ್ಲಂಡ್‍ನಲ್ಲಿ ವಸುಭಾಗನ 'ತಂತ್ರೋಪಾಖ್ಯಾನ'ದ ಹಲವಾರು ಹಸ್ತಪ್ರತಿಗಳು ದೊರೆಯುತ್ತವಂತೆ. ಇದಕ್ಕೆ 'ನಂಗ್ ತಂತೈ' ಎಂಬ ಹೆಸರೂ ಇದೆ. ಇದರ ಮೊದಲ ಭಾಗವು ಫ್ರೆಂಚ್ ಭಾಷೆಗೂ ಅನುವಾದಗೊಂಡಿದೆ. ಮಲಯ್ ಭಾಷೆಯಲ್ಲಿ ಇದರ ಎರಡು ರೂಪಗಳು ದೊರೆಯುತ್ತವೆ. ಒಂದು ಪಂಕಜ್ ತಂದರನ್ ಎಂಬುವವನದಾದರೆ, ಎರಡನೆಯದು ಅಬ್ದುಲ್ಲಾ ಖಾದಿರ್ನದು. ಸಂಸ್ಕೃತದಲ್ಲಿ 'ತಂತ್ರೋಪಖ್ಯಾನ'ವೆಂಬ ಕೃತಿಯೊಂದು ದೊರೆಯುತ್ತದೆ; ಇದನ್ನು ಪಂಡಿತ ಸಾಂಬಶಿವಶಾಸ್ತ್ರಿಯವರು ಸಂಪಾದಿಸಿದ್ದು ಅದನ್ನು ಕೇರಳ ವಿಶ್ವವಿದ್ಯಾಲಯ ಪ್ರಕಟಿಸಿದೆ. ಇದರಲ್ಲಿ ವಸುಭಾಗನ ಹೆಸರಿನ ಉಲ್ಲೇಖವಿದೆ. ಇದರಲ್ಲಿ ಮೂರು ಪ್ರಕರಣಗಳಿವೆ: ನಂದಕ ಪ್ರಕರಣ, ಪಕ್ಷಿ ಪ್ರಕರಣ, ಮತ್ತು ಮಂಡೂಕ ಪ್ರಕರಣ. ಅದರಲ್ಲಿ 111 ಶ್ಲೋಕಗಳಿದ್ದು, ಅವುಗಳಲ್ಲಿ 57 ಕಥಾಸಂಗ್ರಹ ಶ್ಲೋಕಗಳು ಮತ್ತು 47 ಆಖ್ಯಾನಶ್ಲೋಕಗಳು ಮತ್ತು ಉಳಿದ ಏಳು ಮಂಗಳ ಮತ್ತು ಉಪೋದ್ಘಾತ ಶ್ಲೋಕಗಳು. ಈ ಕೃತಿಯ ಕರ್ತೃವು ವಸುಭಾಗಭಟ್ಟನೆಂದು ಅದರಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ ಮೂವತ್ತೆಂಟು ಕತೆಗಳ ಕೊನೆಯಲ್ಲಿ 'ವಸುಭಾಗಃ ಶ್ಲೋಕಮವೋಚತ್' ಎಂದು ಹೇಳಿದೆ. ಹೀಗಾಗಿ ಇದು ವಸುಭಾಗಭಟ್ಟಕೃತವೆಂದು ಎ. ವೆಂಕಟಸುಬ್ಬಯನವರು ತೀರ್ಮಾನಿಸುತ್ತಾರೆ. ಈ ಗ್ರಂಥದ ಕೊನೆಯಲ್ಲಿ 'ತಂತ್ರೋಪಖ್ಯಾನೇ ಮಂಡೂಕ ಪ್ರಕರಣಂ ಸಮಾಪ್ತಂ' ಎಂಬ ಮಾತಿದೆಯೇ ಹೊರತು ಗ್ರಂಥ ಮುಗಿತಾಯದ ಮಾತುಗಳಿಲ್ಲ. ಹೀಗಾಗಿ ಇದು ಅಸಮಗ್ರವೆನ್ನಿಸುತ್ತದೆ. ಆದರೆ ಹಿಂದೆ ಹೇಳಿದ 'ನಂಗ್ ತಂತೈ' ಯಲ್ಲಿ ನಾಲ್ಕು ಪ್ರಕರಣಗಳಿವೆ, ಮೂರರ ನಂತರ ಪಿಶಾಚ ಪ್ರಕರಣವೆಂಬ ನಾಲ್ಕನೆಯ ಭಾಗವೂ ಇದೆ. ಈ ಕೃತಿಗೆ 'ತಂತ್ರೋಪಖ್ಯಾನ'ವೇ ಮೂಲವಾಗಿದ್ದಿರಬೇಕು. ಹೀಗೆ ಪ್ರಕರಣಗಳನ್ನೊಳಗೊಂಡ ಪಂಚತಂತ್ರ ಕತೆಗಳ ಗುಂಫನವು ಸಂಸ್ಕೃತದಲ್ಲಿ 'ತಂತ್ರೋಪಖ್ಯಾನ' ಮಾತ್ರವೇ ಇರುವುದು. ಸಂಸ್ಕೃತದಲ್ಲಿ ವಸುಭಾಗಭಟ್ಟನ ಪಂಚತಂತ್ರದಂತಹ ಕೃತಿ ಇದೊಂದೇ ಆಗಿರುವುದರಿಂದಲೂ ಮತ್ತು ದಕ್ಷಿಣ ಭಾರತದ ಏಕಮೇವ ಕಥಾಸಂಗ್ರಹವಾಗಿಯೂ ಇದಕ್ಕೆ ವಿಶೇಷ ಮಹತ್ವವಿದೆಯೆಂದು ಡಾ. ಅರ್ಟೋಲಾ ಅಭಿಪ್ರಾಯಪಡುತ್ತಾರೆ.
'ತಂತ್ರೋಪಾಖ್ಯಾನ'ದ ಒಂದು ತಮಿಳು ಭಾಷಾಂತರ ದೊರೆಯುತ್ತದೆ. ಇಲ್ಲಿಯೂ ಸಂಸ್ಕತ ಮೂಲದಲ್ಲಿನಂತೆ ವಸುಭಾಗಭಟ್ಟನ ಹೆಸರು ಉಲ್ಲೇಖಗೊಂಡಿದೆ. ಡಾ, ಅರ್ಟೋಲ ಅವರ ಅಭಿಪ್ರಾಯದಲ್ಲಿ ಈ ತಮಿಳು ಭಾಷಾಂತರವು ಮೂಲಕ್ಕೆ ದುರ್ಗಸಿಂಹನ 'ಕರ್ನಾಟಕ ಪಂಚತಂತ್ರ'ಕ್ಕಿಂತಲೂ ಹೆಚ್ಚು ನಿಷ್ಠವಾಗಿದೆ. ಈ ಎಲ್ಲ ಆಕರಗಳನ್ನು ಪರಿಶೀಲಿಸಿದಾಗ ಕಥೆಗಾರನು ವಸುಭಾಗಭಟ್ಟ ಎಂಬುದನ್ನು ಸಂಪೂರ್ಣ ನಿಖರವಾಗಿ ಸೂಚಿಸುವ ಏಕೈಕ ಕೃತಿಯೆಂದರೆ ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರ'. "ವಸುಭಾಗಭಟ್ಟಕೃತಿಯಂ ವಸುಧಾಧಿಪಹಿತಮನಖಿಲವಿಬುಧಸ್ತುತಮಂ ಪೊಸತಾಗಿರೆ ವಿರಚಿಸುವೆಂ ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ" ಎಂಬ ಪದ್ಯವು ಮೂಲ ಕರ್ತೃವು ವಸುಭಾಗಭಟ್ಟನೆಂದೂ, ತಾನದನ್ನು ನೇರವಾಗಿ ಭಾಷಾಂತರಿಸದೆ ಹೊಸತಾಗಿಯೇ ನಿರೂಪಿಸುವೆನೆಂದೂ ಸ್ಪಷ್ಟಪಡಿಸುತ್ತದೆ.
ವಸುಭಾಗಭಟ್ಟನು ಪಂಚತಂತ್ರವನ್ನು ಬರೆದಿರುವನೆಂಬುದು ಖಚಿತವಾಗಿದ್ದರೂ ಆತನ ಬಗ್ಗೆ ನಮಗೆ ದೊರಕುವ ವಿವರಗಳು ತೀರ ಕಡಿಮೆಯೆಂದೇ ಹೇಳಬೇಕು. ಅವನ ಕಾಲ ದೇಶದ ಬಗ್ಗೆಯಾಗಲೀ, ಮತ ಸ್ವಭಾವಗಳ ಬಗ್ಗೆಯಾಗಲೀ ನಮಗೆ ಯಾವುದೇ ಮಾಹಿತಿ ಸಿಕ್ಕುವುದಿಲ್ಲ. ಹೀಗಾಗಿ ನಾವು ಅವನ ಬಗೆಗಿನ ಅಲ್ಪಸ್ವಲ್ಪ ಮಾಹಿತಿಯನ್ನು ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರ' ಮತ್ತು ಇತರ ಹಲವು ಗ್ರಂಥಗಳಂದ ಸಂಗ್ರಹಿಸಿಕೊಳ್ಳಬೇಕಾಗಿದೆ. ದುರ್ಗಸಿಂಹನು ಅವನನ್ನು "ಸಮಸ್ತ ಶಾಸ್ತ್ರ ವಿಚಾರಸಾರನುಂ ಚತುರುಪಧಾವಿಶುದ್ಧನುಂ ಬುದ್ಧಿವೃದ್ಧನುಂ ಅನೇಕ ಶಿಷ್ಯವಿಖ್ಯಾತಕೀರ್ತಿಯುಂ ಭದ್ರಮೂರ್ತಿಯುಂ" ಎಂದು ವರ್ಣಿಸುತ್ತಾನೆ. ಅವನು ಶಾಲಿವಾಹನ ಚಕ್ರವರ್ತಿಯ ಆಸ್ಥಾನಕವಿಯಾಗಿದ್ದ  ಗುಣಾಢ್ಯನು ಪೈಶಾಚೀ ಭಾಷೆಯಲ್ಲಿ ರಚಿಸಿದ್ದ ಕೃತಿಯನ್ನು ಸಂಸ್ಕೃತದಲ್ಲಿ ಹೇಳಿರಬೇಕಾದರೆ, ಅವನಿಗೆ ಪೈಶಾಚೀ ಭಾಷೆಯ ಪರಿಚಯವೂ ಆಳವಾಗಿತ್ತು. ಪೈಶಾಚೀ ಭಾಷೆ ಎಂದರೆ ಅದೊಂದು ಪ್ರಾಕೃತ ಭಾಷೆ. ತಂತ್ರೋಪಾಖ್ಯಾನದಲ್ಲಿ ಅವನನ್ನು 'ಭಗವಾನ್ ವಸುಭಾಗ' ಎಂದು ಪೂಜ್ಯಭಾವನೆಯಿಂದ ಕರೆಯಲಾಗಿದೆ. ಆದರೆ ಅವನ ಮತ ಯಾವುದೆಂದು ತಿಳಿಯುವುದಿಲ್ಲ. ಅವನು ಬ್ರಾಹ್ಮಣ ಎಂದು ಕೆಲವು ವಿದ್ವಾವಂಸರು ಅಭಿಪ್ರಾಯಪಟ್ಟರೆ, ಮತ್ತೆ ಕೆಲವರು ಅವನು ಜೈನನಿದ್ದಿರಬೇಕೆಂದು ಊಹಿಸುತ್ತಾರೆ. ದುರ್ಗಸಿಂಹನ ಕೃತಿಯಲ್ಲಿ ಕಾಣಸಿಗುವ ಜೈನ ಪ್ರಭಾವವು ಮೂಲದಲ್ಲಿಯೂ ಇತ್ತೋ ತಿಳಿಯದು. ಪ್ರಾಯಶಃ ಅವನು ಜೈನಬ್ರಾಹ್ಮಣನಾಗಿದ್ದಿರಬೇಕೆಂಬ ಅಭಿಪ್ರಾಯವೂ ಇದೆ.
ವಸುಭಾಗಭಟ್ಟನ ಕಾಲ ಯಾವುದೆಂಬುದೂ ತಿಳಿಯದು. ಅವನ ಬಗ್ಗೆ ತಿಳಿದದ್ದೇ ತಡವಾದ್ದರಿಂದ ಅವನ ಬಗೆಗಿನ ಚರ್ಚೆಗಳು ತೀರ ಕಡಿಮೆ. ಅವನು ಗುಣಾಢ್ಯನ ಪೈಶಾಚೀ ಭಾಷೆಯ ಕೃತಿಯನ್ನು ಸಂಸ್ಕೃತದಲ್ಲಿ ಬರೆದದ್ದರಿಂದ ಅವನು ಗುಣಾಢ್ಯನಿಗಿಂತ ಈಚಿನವನೆಂಬುದು ಸ್ಪಷ್ಟ. ಗುಣಾಢ್ಯನ ಕಾಲ ಕ್ರಿ.ಶ. ಮೊದಲ ಶತಮಾನವಿರಬೇಕು. ಯಾಕಂದರೆ ಅವನು ಶಾಲಿವಾಹನನ ಆಸ್ಥಾನ ಕವಿಯಾಗಿದ್ದವನು ಎಂದು ದುರ್ಗಸಿಂಹ ಹೇಳುತ್ತಾನೆ. ವಸುಭಾಗ ಸಂಪ್ರದಾಯದ 'ತಂತ್ರಿ ಕಾಮಂದಕ' ದಲ್ಲಿನ ಪೀಠಿಕಾ ಭಾಗದಲ್ಲಿ ಸಮುದ್ರಗುಪ್ತನ ಹೆಸರು ಬರುತ್ತದೆ. ಹೀಗಾಗಿ 'ತಂತ್ರಿ ಕಾಮಂದಕ'ವು ಕ್ರಿ.ಶ. 400 ರ ನಂತರ ರಚಿತವಾಗಿರಬೇಕೆಂದು ಸರ್ಕಾರ್ ಅವರ ಅಭಿಪ್ರಾಯ. ಆದರೆ ದೂರ ಏಷ್ಯಾ ದೇಶಗಳ ಭಾಷೆಗಳಲ್ಲಿ ಈ ಕೃತಿ ಅನುವಾದಗೊಳ್ಳುವಷ್ಟು ತನ್ನ ಪ್ರಚುರತೆಯನ್ನು ಹಿಗ್ಗಲಿಸಿಕೊಳ್ಳಲು 200-300 ರ್ವಗಳು ಬೇಕಾಗಿದ್ದರೆ, ಮೂಲ ಕೃತಿಯ ಕಾಲ ಕ್ರಿ.ಶ. ಒಂದನೆಯ ಅಥವಾ ಎರಡನೆಯ ಶತಮಾನವಾಗಿದ್ದಿರಬಹುದು. ವಿಷ್ಣುಶರ್ಮ ಸಂಪ್ರದಾಯದ ಪಂಚತಂತ್ರದ ಮೊದಲ ಸರಳಾನುವಾದ ಕ್ರಿ.ಶ. 6 ನೆಯ ಶತಮಾನದಲ್ಲಿ ರಚಿತವಾಯಿತು: ಆದರೆ ವಸುಭಾಗನ ಸಂಪ್ರದಾಯದ ಪಂಚತಂತ್ರದ ಅನುವಾದ ಅದಕ್ಕೂ ಮುಂಚೆ, ಅಂದರೆ ಕ್ರಿ.ಶ. ಐದನೆಯ ಶತಮಾನದಲ್ಲಿ. ಹೀಗಾಗಿ ವಸುಭಾಗನ ಕೃತಿ ವಿಷ್ಣುಶರ್ಮನ ಕೃತಿಗಿಂತ ಹಿಂದಿನದಿರಬಹುದೇ ಎಂಬ ಅನುಮಾನವೂ ಬರುತ್ತದೆ. ಅಂದರೆ ವಸುಭಾಗ ವಿಷ್ಣುಶರ್ಮನಿಗಿಂತ ಪ್ರಾಚೀನನೇ?
ಈ ಬಗ್ಗೆ ಡಾ. ವರದರಾಜ ಹುಯಿಲಗೋಳರು ಇನ್ನೊಂದು ಊಹೆಯನ್ನು ಮಾಡುತ್ತಾರೆ. ದುರ್ಗಸಿಂಹನ ಪಂಚತಂತ್ರದಲ್ಲಿ ವಿಕ್ರಮಾದಿತ್ಯದೇವ ಅರಸನನ್ನು ಕುರಿತು ವಿಷ್ಣುಶರ್ಮನ ಪಂಚತಂತ್ರದಲ್ಲಿಲ್ಲದ ಹಲವು ವಾಕ್ಯಗಳು ಕೆಲವೆಡೆ ಬಂದಿವೆ, 'ವಿಕ್ರಮಾದಿತ್ಯ ದೇವನಿನ್ನುಮೀ ಲೋಕಂ ಪದಪುದು', 'ವಿಕ್ರಮಾದಿತ್ಯನಂ ಕಂಡು' ಎಂಬ ವಾಕ್ಯಗಳಿವೆ. ಈ ವಿಕ್ರಮಾದಿತ್ಯನ ಹೆಸರು ಅನೇಕ ಕತೆಗಳಲ್ಲಿ ಬರುವ ವಿಕ್ರಮಾದಿತ್ಯನದೇ? ಅಥವಾ ಕ್ರಿಪೂ 58 ರಲ್ಲಿ ಶಕೆಯನ್ನು ಆರಂಭಿಸಿದ ವಿಕ್ರಮಾದಿತ್ಯನದೇ? ಈ ಪಂಚತಂತ್ರದಲ್ಲಿಯೂ ವಿಕ್ರಮದೇವನನ್ನು ಅನೇಕ ಕಡೆಗಳಲ್ಲಿ ಸ್ತುತಿಸಲಾಗಿದೆ. "ಸಕಲ ಜಗಜ್ಜನ ಸಂಸ್ತೂಯಮಾನ ಗುಪ್ತಾನ್ವಯ ಜಲಧರಮಾರ್ಗ ಗಭಸ್ತಿಮಾಲಿಯಂ" ಎಂಬ ಮಾತು ದುರ್ಗಸಿಂಹನಲ್ಲಿ ಬಂದಿದೆ. ಇವನು ಗುಪ್ತ ವಂಶದ ವಿಕ್ರಮಾದಿತ್ಯನೇ ಆಗಿರಬಹುದು. 'ತಂತ್ರಿ ಕಾಮಂದಕ'ದಲ್ಲಿ ಸಮುದ್ರಗುಪ್ತನ ಹೆಸರು ಬರುತ್ತದೆ; ದುರ್ಗಸಿಂಹ ವಿಕ್ರಮಾದಿತ್ಯ ಗುಪ್ತನ ಹೆಸರು ಹೇಳುತ್ತಾನೆ. ಅಂದರೆ ವಸುಭಾಗನ ಪಂಚತಂತ್ರದ ಕಾಲ ಗುಪ್ತರ ಕಾಲ, ಅಂದರೆ ಸುಮಾರು ಕ್ರಿ.ಶ. 4ನೆಯ ಶತಮಾನವಿರಬಹುದೇ? ಎಂದು ಅವರು ತರ್ಕಿಸುತ್ತಾರೆ. ಜೊತೆಗೆ, ದುರ್ಗಸಿಂಹನು ಚಂದ್ರಗುಪ್ತನಿಗೆ "ಸಮಸ್ತಧಾರಣಿಯನಿತ್ತು ನೆಗ್ತಯನಾಂತ ವಿಷ್ಣುಗುಪ್ತಂಗೆ ಎಣೆಯಾರೊ ನೀತಿವಿದರ್ ಅರ್ಣವವೇಷ್ಟಿತ ವಿಶ್ವಧಾತ್ರಿಯೊಳ್" ಎನ್ನುತ್ತಾನೆ.
ಇನ್ನು, ವಸುಭಾಗನ ಜೀವಿತ ಪ್ರದೇಶವಾವುದು ಎಂಬ ಪ್ರಶ್ನೆ. ಇವನ ಪಂಚತಂತ್ರ ದಕ್ಷಿಣ ಭಾರತ ಹಾಗೂ ಆಗ್ನೇಯ ಏಷ್ಯಾ ದೇಶಗಳಲ್ಲಿ. ಉತ್ತರ ಭಾರತದಲ್ಲಿ ಇವನ ಕೃತಿಯ ಒಂದು ಪ್ರತಿಯೂ ದೊರೆತಿಲ್ಲ. ಹಾಗಾಗಿ ವಸುಭಾಗ ದಕ್ಷಿಣ ಭಾರತದವನಿರಬಹುದು. ಇವನು ಅನುಸರಿಸಿದ ಪೈಶಾಚೀ ಭಾಷೆಯ ಕೃತಿಯನ್ನು ರಚಿಸಿದ ಗುಣಾಢ್ಯನಿದ್ದುದು ಗೋದಾವರಿ ನದಿ ತೀರದಲ್ಲಿದ್ದ ಪ್ರತಿಷ್ಠಾನ ಅಥವಾ ಈಗಿನ ಪೈಠಣ ಎಂದು ತಿಳಿಯುತ್ತದೆ. ವಸುಭಾಗ ಆ ಕತೆಗಳನ್ನು ಕೇಳಿ ಆಕರ್ಷಿತನಾಗಿ ಅದನ್ನು ಸಂಸ್ಕೃತದಲ್ಲಿ ರಚಿಸಿದ. ಪ್ರಾಯಶಃ ಇವನೂ ದಕ್ಷಿಣ ಭಾರತದವನಿರಬೇಕು. "ಕರ್ನಾಟಕ ಪ್ರದೇಶದ ಆದಿಕವಿ ಗುಣಾಢ್ಯ" ಎಂಬ ಡಾ. ವಿ.ಆರ್. ಉಮರ್ಜಿ ಅವರ ಮಾತನ್ನು ಅನುಸರಿಸಿ ಹುಯಿಲಗೋಳರು ಇವನು ಕಾವೇರಿ-ಗೋದಾವರಿ ನಡುವಣ ಪ್ರದೇಶದಲ್ಲಿದ್ದಿರಬಹುದೆಂದು ಊಹಿಸುತ್ತಾರೆ. ಅಂದರೆ ಗುಣಾಢ್ಯ ಮತ್ತು ವಸುಭಾಗ ಇಬ್ಬರೂ ದಕ್ಷಿಣದವರು ಎಂದಂತಾಯಿತು. ಪ್ರಾಯಶಃ ಅದಕ್ಕೇ ಈ ಕೃತಿಯ ಪ್ರತಿಗಳು ಉತ್ತರದಲ್ಲಿ ದೊರೆಯುವುದಿಲ್ಲ.
ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರ'
ದುರ್ಗಸಿಂಹನು ವಸುಭಾಗನ ಪಂಚತಂತ್ರವನ್ನೇ ಕನ್ನಡದಲ್ಲಿ ಬರೆಯಲು ಏಕೆ ಆರಿಸಿಕೊಂಡಿರಬಹುದು? ಪ್ರಾಯುಶಃ ದುರ್ಗಸಿಂಹನ ಕಾಲದಲ್ಲಿ ಕನ್ನಡ ನಾಡಿನಲ್ಲಿ ವಿಷ್ಣುಶರ್ಮನ ಪಂಚತಂತ್ರ ಪ್ರಚಲಿತವಾಗಿರಲಿಲ್ಲ. ಹಿಂದಿನ ಯಾವ ಕನ್ನಡ ಕವಿಗಳೂ ಸಂಸ್ಕೃತ ಕವಿಗಳ ಹೆಸರು ಹೇಳುವಾಗ ವಿಷ್ಣುಶರ್ಮನ ಹೆಸರನ್ನು ಉಲ್ಲೇಖಿಸುವುದಿಲ್ಲ. ಅಷ್ಟೇಕೆ, ದುರ್ಗಸಿಂಹನು ಕೂಡ ಕಾಳಿದಾಸ, ಬಾಣ, ನಾರಾಯಣ, ಧನಂಜಯ, ವಾಮನ, ಭಲ್ಲಟ, ಭಾಮಹ, ಭೀಮ, ಭವಭೂತಿ, ಭಾಸ, ಭಾರವಿ, ಭಟ್ಟಿ, ಶ್ರೀಮಾ, ಹರ್ಷ, ರಾಜಶೇಖರ, ಕಾಮಂದಕ, ದಂಡಿ - ಈ ಸಂಸ್ಕೃತ ಕವಿಗಳ ಹೆಸರನ್ನು ಹೇಳುತ್ತಾನೆಯೇ ಹೊರತು ವಿಷ್ಣುಶರ್ಮನ ಹೆಸರನ್ನು ಹೇಳುವುದಿಲ್ಲ. ಹಾಗಾಗಿ ಅವನಿಗೆ ವಿಷ್ಣುಶರ್ಮನ ಹೆಸರೇ ತಿಳಿದಿಲ್ಲದಿರಬಹುದು. ದುರ್ಗಸಿಂಹನ ಕಾಲದಲ್ಲಿ ಕನ್ನಡ ನಾಡಿನಲ್ಲಿ ಜೈನಮತದ ಪ್ರಾಬಲ್ಯವಿದ್ದು, ತಾನು ಕಂಡ ಮೂಲದಲ್ಲಿದ್ದುದರ ಜೊತೆಗೆ ತನ್ನ ಕಾಲದ ಜೈನಮತದ ಪ್ರಭಾವವೂ ಅವನ ಕೃತಿಯಲ್ಲಿ ಕಾಣಿಸಿಕೊಂಡಿರಬಹುದು. ದುರ್ಗಸಿಂಹನು ಜಗದೇಕಮಲ್ಲನ ಸಂಧಿವಿಗ್ರಹಿಯಾಗಿದ್ದು, ರಾಜನೀತಿಗೆ ಸಂಬಂಧಿಸಿದ ಪಂಚತಂತ್ರವು ಸಹಜವಾಗಿಯೇ ಅವನಲ್ಲಿ ಆಸಕ್ತಿಯನ್ನುಂಟುಮಾಡಿರಬೇಕು.
ವಿಷ್ಣುಶರ್ಮ ಮತ್ತು ವಸುಭಾಗ ಇವರಿಬ್ಬರ ಪಂಚತಂತ್ರಗಳಲ್ಲಿಯೂ, ಹೆಸರೇ ತಿಳಿಸುವಂತೆ, ಐದು ತಂತ್ರಗಳಿವೆ. ತಂತ್ರವೆಂದರೆ ಭಾಗ ಎಂದಾದರೂ ಆಗಬಹುದು, ಅಥವಾ ಇವೆಲ್ಲ ರಾಜನೀತಿಗೆ ಸಂಬಂಧಿಸಿರುವುದರಿಂದ ರಾಜತಂತ್ರಗಳು ಎಂದಾದರೂ ಆಗಬಹುದು. ವಿಷ್ಣುಶರ್ಮನ ದಾಕ್ಷಿಣಾತ್ಯ ಪಂಚತಂತ್ರದಲ್ಲಿ ಪೀಠಿಕಾಭಾಗದಲ್ಲಿ ಈ ಶ್ಲೋಕವಿದೆ:
ಮಿತ್ರಭೇದಃ ಸುಹೃಲ್ಲಾಭಃ ಸಂಧಿವಿಗ್ರಹ ಏವಚ
ಲಬ್ಧನಾಶಂ ಅಸಂಪ್ರೇಕ್ಷ್ಯ ಕಾರ್ತಿವಂ ಪಂಚತಂತ್ರಕಂ
ಈ ಹೆಸರುಗಳು ವಿವಿಧ ಪಂಚತಂತ್ರಗಳಲ್ಲಿ ಬೇರೆ ಬೇರೆಯವಾಗಿದ್ದರೂ ಒಂದೇ ಅರ್ಥವುಳ್ಳವು. ಇಲ್ಲಿರುವುದು ಮಿತ್ರಭೇದ, ಮಿತ್ರಸಂಪ್ರಾಪ್ತಿ, ಕಾಕೋಲುಕೀಯ, ಲಬ್ಧಪ್ರಣಾಶಂ ಮತ್ತು ಅಪರೀಕ್ಷಿತ ಕಾರಕಂ ಎಂಬ ಭಾಗಗಳು. ಆದರೆ ವಸುಭಾಗಭಟ್ಟನ ಪಂಚತಂತ್ರದಲ್ಲಿ (ದುರ್ಗಸಿಂಹನಲ್ಲಿ) ಈ ಶ್ಲೋಕವಿದೆ:
ಭೇದಃ ಪರೀಕ್ಷಾ ವಿಶ್ವಾಸಃ ಚತುರ್ಥಂ ವಂಚನಂ ತಥಾ
ಮಿತ್ರಕಾರ್ಯಂ ಚ ಪಂಚೈತೇ ಕಥಾಸ್ತಂತ್ರಾರ್ಥ ಸಂಜ್ಞಕಾಃ
ಅಂದರೆ ಇಲ್ಲಿನ ವಿಭಾಗಗಳೆಂದರೆ, ಭೇದಪ್ರಕರಣ, ಪರೀಕ್ಷಾವ್ಯಾವರ್ಣನ, ವಿಶ್ವಾಸ ಪ್ರಕರಣ, ವಂಚನಾ ಪ್ರಕರಣ ಮತ್ತು ಮಿತ್ರಕಾರ್ಯವರ್ಣನ. ಈ ವಿಭಾಗ ಕ್ರಮದಲ್ಲಿನ ವ್ಯತ್ಯಾಸವೆಂದರೆ, ವಿಷ್ಣುಶರ್ಮನಲ್ಲಿನ ಐದನೆಯ ಭಾಗವು ದುರ್ಗಸಿಂಹನಲ್ಲಿ ಎರಡನೆಯ ಪ್ರಕರಣವಾಗಿ ಬಂದಿದೆ; ಹಾಗೆಯೇ ವಿಷ್ಣುಶರ್ಮನಲ್ಲಿನ ಎರಡನೆಯ ಭಾಗವು ದುರ್ಗಸಿಂಹನಲ್ಲಿ ಐದನೆಯ ಪ್ರಕರಣವಾಗಿದೆ. ಆದರೆ ಎರಡರಲ್ಲಿಯೂ ಇರುವ ಮೊದಲ ಪ್ರಕರಣದಲ್ಲಿ ಸ್ವಲ್ಪವೇ ವ್ಯತ್ಯಾಸವಿರುವುದನ್ನು ಗಮನಿಸಬಹುದು. ಅಲ್ಲದೆ, ಭಾಗಗಳಿಗೆ ಕೊಟ್ಟಿರುವ ಹೆಸರುಗಳು ಬೇರೆಯಾಗಿದ್ದರೂ ವಸ್ತು ಒಂದೇ ಆಗಿರುತ್ತವೆಂಬುದು. ಈ ವ್ಯತ್ಯಾಸಕ್ಕೆ ಕಾರಣಗಳೇನಿರಬಹುದು? ವಸುಭಾಗನು ವಿಷ್ಣುಶರ್ಮನ ಪಂಚತಂತ್ರವನ್ನು ನೋಡಿದ್ದನೇ ತಿಳಿಯದು. ನೋಡಿಯೂ ಭಾಗಗಳ ಹೆಸರುಗಳು ಮತ್ತು ಕ್ರಮವನ್ನು ವ್ಯತ್ಯಾಸ ಮಾಡಿಕೊಂಡಿದ್ದರೆ ಅದಕ್ಕೊಂದು ಉದ್ದೇಶವನ್ನು ಆರೋಪಿಸಬಹುದಾಗಿತ್ತು. ಆದರೆ ಇಬ್ಬರೂ ಮೂರನೆಯ ಮೂಲವೊಂದರಿಂದ ಮೌಖಿಕ ಕತೆಗಳನ್ನು ಅರಿತು ಬೇರೆ ಬೇರೆಯಾಗಿಯೇ ಬರಹರೂಪದಲ್ಲಿ ನಿರೂಪಣೆ ಮಾಡಿದ್ದರೆ ಅದಕ್ಕೆ ಕಾರಣವನ್ನು ಹುಡುಕುವುದು ವ್ಯರ್ಥವೇ ಸರಿ. ಏಕೆಂದರೆ ಒಟ್ಟು ಐದು ಪ್ರಕರಣಗಳನ್ನು ತಮಗೆ ತೋಚಿದ ರೀತಿಯಲ್ಲಿ ಜೋಡಿಸಿಕೊಂಡಿದ್ದಾರೆಂದು ಹೇಳಬಹುದು, ಅಷ್ಟೆ. ಏಕೆಂದರೆ ಇಲ್ಲಿರುವ ಕತೆಗಳು ನಿರ್ದಿಷ್ಟ ಆನುಪೂರ್ವಿಗೆ ಒಳಗಾದವಲ್ಲ, ಹಾಗೆಯೇ ವಿಭಾಗಗಳಲ್ಲಿ ಆಂತರಿಕ ಏಕಸೂತ್ರತೆ ಯಾವುದೂ ಇಲ್ಲ. ಆದರೆ ಇವೆರಡೂ ಸಂಪ್ರದಾಯಗಳನ್ನು ಅನುಸರಿಸಿರುವ ಇತರ ಗ್ರಂಥಗಳಲ್ಲಿ ಇವುಗಳ ಹೆಸರುಗಳು ಆನುಪೂರ್ವಿಯೂ ಬದಲುಗೊಂಡಿರುವುದನ್ನು ಕಾಣಬಹುದು. ಅದಕ್ಕೆ ಆಯಾ ಲೇಖಕರ ನಿರ್ಧಾರ ಕಾರಣವೇ ಹೊರತು ಅದಕ್ಕೊಂದು ಕಾರಣ ಹುಡುಕಬೇಕೇ ಎನ್ನುವುದು ಪ್ರಶ್ನಾರ್ಹ.
ದುರ್ಗಸಿಂಹನು ವಸುಭಾಗನನ್ನು ಅನುಸರಿಸಿದ್ದರೂ ಅವನ ಕೃತಿಯನ್ನು ಯಥಾವತ್ತಾಗಿ ಅನುವಾದ ಮಾಡಿಲ್ಲವೆಂಬುದಕ್ಕೆ ಅನೇಕ ಕಾರಣಗಳನ್ನು ಕೊಡಬಹುದು.
ವಸುಭಾಗಭಟ್ಟ ಕೃತಿಯಂ
ವಸುಧಾಧಿಪಹಿತಮನಖಿಲ ವಿಬುಧಸ್ತುತಮಂ
ಪೊಸತಾಗಿರೆ ವಿರಚಿಸುವೆಂ
ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ
ಎಂದು ದುರ್ಗಸಿಂಹನು ಹೇಳಿಕೊಂಡಿರುವುದರಿಂದ ಇದು ವಸುಭಾಗನ ಪಂಚತಂತ್ರವನ್ನು ಆಧರಿಸಿದ ಸ್ವತಂತ್ರ ಕೃತಿ ಎಂಬುದು ಅವನ ಮಾತಿನ ಅರ್ಥವಿದ್ದಂತೆ ತೋರುತ್ತದೆ. ಕತೆಗಳು ಅವೇ ಆದರೂ ನಿರೂಪಣಾಕ್ರಮ ಸ್ವಂತದ್ದಿರಬೇಕು. ಕತೆಗಳಲ್ಲಿಯೂ ತನ್ನ ವಿವೇಚನೆಗೆ ಅನುಗುಣವಾಗಿ ಮೂಲಕ್ಕಿಂತ ಭಿನ್ನವಾದ ಆಯ್ಕೆ ಮಾಡಿದ್ದಾನೆಯೋ ತಿಳಿಯದು. ಆದರೆ ಕಥಾಮುಖ ಮತ್ತು ಪ್ರಕರಣಗಳು ವಿಷ್ಣುಶರ್ಮನ ಪಂಚತಂತ್ರದಂತೆಯೇ ಇವೆಯೆಂದು ಡಾ.. ಅರ್ಟೋಲಾ ಹೇಳುತ್ತಾರೆ. ವಸುಭಾಗನ ಮೂಲವಾಗಿದ್ದಿರಬಹುದಾದ 'ತಂತ್ರೋಪಾಖ್ಯಾನ'ದಲ್ಲಿ ಇರುವುದು ಮೂರೇ ಪ್ರಕರಣಗಳು: ನಂದಕ ಪ್ರಕರಣ, ಪಕ್ಷಿ ಪ್ರಕರಣ ಮತ್ತು ಮಂಡೂಕ ಪ್ರಕರಣ. ಆದರೆ ದುರ್ಗಸಿಂಹನಲ್ಲಿ ಐದು ಪ್ರಕರಣಗಳಿವೆ. ಅಲ್ಲದೆ ಮಿತ್ರಭೇದದಿಂದ ಆರಂಭಗೊಳ್ಳುವ ದುರ್ಗಸಿಂಹನ ಕೃತಿ ಮಿತ್ರಕಾರ್ಯದಲ್ಲಿ ಮುಗಿಯುವುದು ಒಂದು ರೀತಿಯಲ್ಲಿ ಅರ್ಥಪೂರ್ಣವೂ ಅಗಿದೆ.
ಪಂಚತಂತ್ರದ ಕತೆಗಳು ಆರಂಭಗೊಳ್ಳುವ ಮುನ್ನ ಒಂದು ಕಥಾಮುಖವಿರುತ್ತದೆ. ಒಂದು ರೀತಿಯಲ್ಲಿ ಇದು ಪೀಠಿಕೆಯಿದ್ದಂತೆ. ಮುಂದೆ ಬರುವ ಕತೆಗಳ ಉದ್ದೇಶಗಳನ್ನಿದು ಸ್ಪಷ್ಟಪಡಿಸುತ್ತದೆ. ಇದರ ಬಗ್ಗೆ ವರದರಾಜ ಹುಯಿಲಗೋಳರು ಹೀಗೆನ್ನುತ್ತಾರೆ: ಖಈ ಕಥಾಮುಖಗಳ ಮಹತ್ವ ಹೀಗಿದೆ: 1. ಕಥಾಮುಖಗಳು ಗ್ರಂಥಕ್ಕೆ ಪ್ರಸ್ತಾವನೆ ಇದ್ದ ಹಾಗೆ. 2) ಕೆಲವೊಂದು ಪಂಚತಂತ್ರಗಳಲ್ಲಿ ಕಥಾಮುಖಗಳು ಬೇರೆ ರೀತಿಯವಿರುವುದರಿಂದ ಈ ಕಥಾಮುಖಗಳು ಗ್ರಂಥದ ಸಂಪ್ರದಾಯವನ್ನು ತಿಳಿದುಕೊಳ್ಳಲು ನೆರವಾಗುವುವು. 3) ಪಂಚತಂತ್ರ ಕಥೆಗಳಲ್ಲಿರುವ ಮೂಲ ತತ್ವಗಳನ್ನು ತಿಳಿದುಕೊಳ್ಳಲೂ ಇವು ಸಹಾಯಕವಾಗುವುಚು. 4) ಇದೂ ಒಂದು ಕಥೆ, ಮುಖ್ಯ ಕಥೆ. ಈ ದೊಡ್ಡ ಪೆಟ್ಟಿಗೆಯಲ್ಲಿಯೇ ಉಳಿದೆಲ್ಲ ಕಥೆಗಳೂ ಚಿಕ್ಕ ಪೆಟ್ಟಿಗೆಗಳಾಗಿ ಒಳಸೇರಿವೆ. ಈ ಕಥಾಮುಖ ಚಿಕ್ಕದಾಗಿ ಬಂದರೂ, ದೊಡ್ಡದು! ಕಥೆಗಳ ಚೌಕಟ್ಟಿನ ಕಥೆಯಿದು!ಖ (ಪಂಚತಂತ್ರ ಸಮೀಕ್ಷೆ: ಪು. 84])
ವಿಷ್ಣುಶರ್ಮ ಸಂಪ್ರದಾಯದ ಪಂಚತಂತ್ರಗಳಲ್ಲಿನ ಕಥಾಮುಖ ಹೀಗಿರುತ್ತದೆ: ಮಹಿಲಾರೋಪ್ಯ ಎಂಬ ನಗರ ಅದರ ಅರಸ ಅಮರಶಕ್ತಿ. ಅವನಿಗೆ ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ ಎಂಬ ಮೂವರು ಮಕ್ಕಳು. ಇವರು ದಡ್ಡರಾಗಿದ್ದರು. ಅವರಿಗೆ ತಿಳಿವಳಕೆ ಬರುವ ಉಪಾಯವಾವುದೆಂದು ಅರಸ ಒಮ್ಮೆ ಸಭೆಯಲ್ಲಿ ಕೇಳಿದ. ಅಲ್ಲಿದ್ದ ನೂರೈದು ಮಂದಿ ಪಂಡಿತರಲ್ಲಿ ಒಬ್ಬ ನಾನಾ ಶಾಸ್ತ್ರಗಳನ್ನು ಕಲಿಯಲು ತುಂಬ ವರ್ಷಗಳೇ ಬೇಕು ಎಂದ. ಅದಕ್ಕೆ ಸುಮತಿ ಎಂಬ ಮಂತ್ರಿಯು, ಅಷ್ಟು ದೀರ್ಘ ಕಲ ತೆಗೆದುಕೊಳ್ಳದೆ ಬೇಗ ತಿಳಿವಳಕೆ ನೀಡುವ ವ್ಯವಸ್ಥೆಯಾಗಬೇಕು ಎಂದು ಸಲಹೆಯಿತ್ತ. ಆಗ ಸಕಲಶಾಸ್ತ್ರಪಾರಂಗತನಾದ ವಿಷ್ಣುಶರ್ಮನು ರಾಜಕುವರರಿಗೆ ಆರು ತಿಂಗಳಲ್ಲಿ ತಾನು ನೀತಿವಿದರನ್ನಾಗಿ ಮಾಡುವೆನೆಂಬ ಭರವಸೆ ನೀಡಿದ; ಇದನ್ನು ಮಾಡಲಾಗದಿದ್ದರೆ ತಾನು ತನ್ನ ಹೆಸರನ್ನೇ ಬದಲಿಸುವುದಾಗಿ ಪ್ರತಿಜ್ಞೆ ಮಾಡಿದ. ಅವನಿಗಾಗ ಎಂಬತ್ತು ವರುಷ ವಯಸ್ಸು. ಆರು ತಿಂಗಳಲ್ಲಿ ರಾಜಪುತ್ರರಿಗೆ ನ್ಯಾಯಶಾಸ್ತ್ರ ಕಲಿಸುವುದಾಗಿ ಆಶ್ವಾಸನೆಯಿತ್ತ. ರಾಜನಿಗೆ ಇದರಲ್ಲಿ ನಂಬಿಕೆ ಬರಲಿಲ್ಲ, ಆದರೂ ನೋಡೋಣವೆಂದು ರಾಜಕುಮಾರರನ್ನು ವಿಷ್ಣುಶರ್ಮನ ಮೇಲ್ವಿಚಾರಣೆಗೆ ಒಪ್ಪಿಸಿದ. ಅವರಿಗಾಗಿ ಮಿತ್ರಭೇದ, ಮಿತ್ರಪ್ರಾಪ್ತಿ, ಕಾಕೋಲಕೀಯ, ಲಬ್ಧಪ್ರಣಾಶ ಮತ್ತು ಅಪರೀಕ್ಷಿತಕಾರಕ ಎಂಬ ಐದು ತಂತ್ರಗಳನ್ನು ಕತೆಗಳ ಮೂಲಕವಾಗಿ ತಿಳಿಯ ಹೇಳಿದ. ಹೀಗೆ ಪಂಚತಂತ್ರ ನೀತಿಶಾಸ್ತ್ರವು ರಚನೆಗೊಂಡಿತಂತೆ. ಕಥಾಮುಖವು ದೊರೆತಿರುವ ಎಲ್ಲ ವಿಷ್ಣುಶರ್ಮ ಸಂಪ್ರದಾಯದ ಪಂಚತಂತ್ರಗಳಲ್ಲೂ ಹೀಗೇ ಇದೆ.
ವಸುಭಾಗಭಟ್ಟ ಸಂಪ್ರದಾಯದ ಕಥಾಮುಖವನ್ನು ನಾವು ಅದರ ಅತ್ಯಂತ ಸಮರ್ಥ ಪ್ರತಿನಿಧಿಯಾದ ದುರ್ಗಸಿಂಹನ ಕಥಾಮುಖದ ಪರಿಚಯದಿಂದ ನೋಡೋಣ. ಜಂಬೂದ್ವೀಪದ ಭರತವರ್ಷದ ಸಕಲಜಗತೀಜನಸ್ತುತ್ಯವಾದ ದಾಕ್ಷಿಣಾತ್ಯ ಎಂಬ ಜನಪದವಿತ್ತು. ಅದರ ರಾಜಧಾನಿ ಸೌರೂಪ್ಯಪುರ. ಅದೊಂದು ಸಮೃದ್ಧವಾದ ನಗರ. ಅದರ ಅರಸು 'ಪ್ರಕಟಿತಾಶೇಷಶಾಸ್ತ್ರಾಗಮ'ನಾದ ಅಮರಶಕ್ತಿ. ಅವನಿಗೆ ಅನೇಕಶಕ್ತಿ, ವಸುಶಕ್ತಿ ಮತ್ತು ರುದ್ರಶಕ್ತಿಗಳೆಂಬ ಮೂವರು ಗಂಡುಮಕ್ಕಳು. ಅವರೆಲ್ಲರೂ "ಪ್ರಶಮಿತಗುಣರ್, ಅವಿನಯರ್ಕಳ್ ಚಿತ್ತೋನ್ಮತ್ತರ್, ಅಖಿಲವಿಷಯಕ್ರೀಡಾವಶಗತಸುತರ್". ಒಮ್ಮೆ ಓಲಗದಲ್ಲಿ ಅರಸು ಹೀಗೆಂದು ಘೋಷಿಸಿದ: "ಇವರಂ ಶ್ರುತವಿನಯಸಂಪನ್ನರಪ್ಪರಂತು ಮಾೞ್ಪೆನೆಂಬವಂ ಉಳ್ಳೊಡೆ ಆತಂ ಏನಂ ಬೇಡಿದೊಡಂ ಕುಡುವೆಂ". ಆಗ ಅಲ್ಲಿ ಸೇರಿದ್ದ ಪಂಡಿತರುಗಳಲ್ಲಿ ಒಬ್ಬನು ಎದ್ದು ನಿಂತು "ಇವರಂ ನೀತಿವಿದರಪ್ಪಂತು ತಿಳಿಪುವಂದಂ ಮುದುಗುದುರೆಯಂ ತಿರ್ದುವಂತಕ್ಕುಂ" ಎಂದು ಹೇಳಿದ. ಆದರೆ ಅಲ್ಲಿಯೇ ಇದ್ದ "ಸಮಸ್ತಶಾಸ್ತ್ರವಿಚಾರಸಾರನುಂ ಚತುರುಪಧಾವಿಶುದ್ಧನುಂ ಬುದ್ಧಿವೃದ್ಧನುಂ ಅನೇಕಶಿಷ್ಯವಿಖ್ಯಾತಕೀರ್ತಿಯುಂ ಭದ್ರಮೂರ್ತಿಯುಂಕ" ಆಗಿದ್ದ ವಸುಭಾಗಭಟ್ಟನು, "ದೇವ ಭವದೀಯ ಸುತರಂ ಮೂವರುಮಂ ಜಡರಂ ಆಂ ಆರು ತಿಂಗಳ್ಗೆ ಜಯಶ್ರೀವರ ಸಮಸ್ತನೃಪವಿದ್ಯಾವರರಪ್ಪಂತು ಮಾಡುವೆಂ" ಎಂದು ಹೇಳಿ ಹಾಗೆ ತನ್ನಿಂದ ಮಾಡಲಾಗದಿದ್ದರೆ ತಾನು ತಪ್ಪಸ್ಸಿಗೆ ಹೋಗುವುದಾಗಿಯೂ ಘೋಷಿಸಿದ. ರಾಜನಿಗೆ ಸಂತಸವಾಯಿತು. ತನ್ನ ಮಕ್ಕಳನ್ನು ವಸುಭಾಗಭಟ್ಟನ ವಶಕ್ಕೊಪ್ಪಿಸಿದ. ಒಳ್ಳೆಯ ದಿನ ತನ್ನ ಬೋಧನೆಯನ್ನು ಆರಂಭಿಸಿದರೂ, ಆ ಹುಡುಗರು ಹೇಳಿದುದಾವುದನ್ನೂ ಕಲಿಯುತ್ತಿರಲಿಲ್ಲ. ಏನು ಮಾಡಬೇಕೆಂದು ತೋಚದೆ ವಸುಭಾಗ ಚಿಂತಾಕ್ರಾತನಾದ. ಹುಡುಗರು ಧೂರ್ತ ಗೋವಳಕರನ್ನು ಕೂಡಿಕೊಂಡು ಬೇಟೆಗೆ ಹೋಗಲು ಸಜ್ಜಾದರು. ವಸುಭಾಗನು ತಾನೂ ಅವರೊಡನೆ ಹೊರಟ. ಒಂದು ಹಾಸ್ಯರಸಭರಿತವಾದ ಕತೆಯನ್ನು ಹೇಳಿ ಈ ಹುಡುಗರ ಮನೋಧರ್ಮವನ್ನು ಕಂಡುಕೊಳ್ಳುತ್ತೇನೆಂದು ದಾರಿಯಲ್ಲಿ ಯೋಚಿಸಿದ ವಸುಭಾಗ, ಮುಂದೆ ಸಾಗುತ್ತಲೇ ತಾನೊಂದು ಕತೆ ಹೇಳುವುದಾಗಿ ತಿಳಿಸಿದಾಗ ಹುಡುಗರು ಒಪ್ಪಿದರು. ಅವನು ಹೇಳಿದ ಕಿರುಗತೆಯಿದು: ಸಿರಿವಾಸಿ ಎಂಬ ಊರು. ಅಲ್ಲಿ ಸಿರಿವಂತ ಎಂಬ ರೈತ. ತನ್ನ ಹೊಲದಲ್ಲಿ ಕಬ್ಬು ಬೆಳೆದು, ಹೊಲದ ಸುತ್ತ ಬಲವಾದ ಬೇಲಿ ಹಾಕಿದ. ಒಂದು ನರಿ ಒಂದು ಕಳ್ಳದಾರಿ ಹುಡುಕಿ ಪ್ರತಿ ರಾತ್ರಿ ಬಂದು ಕಬ್ಬು ತಿನ್ನುತ್ತಿತ್ತು. ಆ ನರಿಯ ಕಾಟಕ್ಕೆ ಬೇಸತ್ತು ಅದನ್ನು ಕೊಲ್ಲುವ ಉಪಾಯವೊಂದನ್ನು ರೈತ ಮಾಡಿದ. ಒಂದೆಡೆ ಬೇಲಿಯನ್ನು ಅಗಲವಾಗಿ ಕಿತ್ತು, ಆ ಸಂಜೆ ಬುತ್ತಿಯೊಡನೆ ಬಂದು ಅಲ್ಲಿ ಹೆಣದಂತೆ ನಿಶ್ಚೇಷ್ಟಿತನಾಗಿ ಬಿದ್ದುಕೊಂಡ. ನರಿ ಬಂದು ಇವನನ್ನು ನೋಡಿ ಅದು ಆಲೋಚಿತೊಡಗಿತು. ಇವನು ತನ್ನನ್ನು ಕೊಲ್ಲಲು ಈ ಉಪಾಯ ಹೂಡಿರಬಹುದೇ ಎಂದು ಅನುಮಾನಗೊಂಡು, ಇವನು ನಿಜವಾಗಿ ಸತ್ತಿರುವುದೇ ಆದರೆ ಇವನ ಮನೆಯವರು ಅಳುತ್ತಿರುತ್ತಾರೆ, ಇಲ್ಲದಿದ್ದರೆ ಇವನು ನಟನೆ ಮಾಡುತ್ತಿದ್ದಾನೆ ಎಂದು ನಿಶ್ಚೈಸಿ ಊರೊಳಕ್ಕೆ ಬಂತು. ಆದರೆ ಎಲ್ಲಿಯೂ ಇವನ ಬಗ್ಗೆ ಯಾರೂ ದುಃಖಿತರಾಗಿರಲಿಲ್ಲ. ಹಾಗಾಗಿ ಇವನು ನಟನೆ ಮಾಡುತ್ತಿದ್ದಾನೆಂದು ಬಗೆದು ನರಿ ಹೊರಟುಹೋಗಿ ತನ್ನ ಪ್ರಾಣ ಉಳಿಸಿಕೊಂಡಿತು. ಈ ಕತೆ ಹುಡುಗರಿಗೆ ರುಚಿಸಿತು. ಇನ್ನೊಂದು ಕತೆ ಹೇಳಿ ಎಂದು ಕೇಳಿದರು. ಹೇಳಿದ ಕತೆಯನ್ನು ನೀವು ಮತ್ತೆ ಹೇಳಲು ಶಕ್ಯವಾದರೆ ಬೇಕಾದಷ್ಟು ಕತೆಗಳನ್ನು ಹೇಳುತ್ತೇನೆ ಎಂದು ವಸುಭಾಗ ಆಶ್ವಾಸನೆಯಿತ್ತ. ಮೂವರೂ ಅವನು ಹೇಳಿದ್ದ ಕತೆಯನ್ನು ಖಇಂಬಾಗಿ ಸಂಭಾವಿಸಿಖ ಹೇಳಿದರು. ವಸುಭಾಗನಿಗೆ ಸಂತೋಷವಾಯಿತು. "ಅರ್ಥಶಾಸ್ತ್ರಾಭಿಪ್ರಾಯೋಪಾಯಂಗಳಪ್ಪ ಅವೈದು ಕಥೆಗಳಂ ಪೇಳ್ದು ತಿಳಿಪಿ ಸತ್ಪಾತ್ರಂ ಮಾಡಿ ತಾನುಂ ಸ್ವಾರ್ಥಸಿದ್ಧಿಯೊಳ್ ಕೂಡಿದಂ". ಅವನು ರಾಜಪುತ್ರರಿಗೆ ಹೇಳಿದ ಕತೆಗ ಪಂಚತಂತ್ರ. ಅಂದರೆ, ವಸುಭಾಗಭಟ್ಟನು ರಾಜಕುಮಾರರಿಗೆ ಆವಶ್ಯಕವಾದ  ಅರ್ಥಶಾಸ್ತ್ರದ ಪ್ರಮುಖ ನೀತಿಗಳನ್ನೊಳಗೊಂಡ ಕತೆಗಳನ್ನು ಹೇಳಿದ. ಇವನ ಉದ್ದೇಶ ಮನರಂಜನೆಯಲ್ಲ, ಅಥವಾ ಸಾಮಾನ್ಯವಾದ ನೀತಿಯ ಉಪದೇಶವಲ್ಲ; ಬದಲು ರಾಜಕೀಯದಲ್ಲಿ ಅನುಕೂಲಕರವಾದ ನೀತಿಗಳನ್ನು ಹೇಳುವುದು.
ಪ್ರಾಯಶಃ ಈ ಕಥಾಮುಖವನ್ನು ವಿಭಿನ್ನ ಭಾಷಾಂತರಕಾರರು ತಮಗೆ ಸರಿತೋರಿದ ರೀತಿಯಲ್ಲಿ ಬದಲಿಸಿಕೊಂಡಿರುವಂತೆ ಕಾಣುತ್ತದೆ. ವಸುಭಾಗಭಟ್ಟನು ಪಂಚತಂತ್ರ ಮತ್ತು ಪೂರ್ಣಭದ್ರನಿಂದ ಪರಿಷ್ಕರಣಗೊಂಡ ತಂತ್ರೋಪಾಖ್ಯಾನ - ಈ ಎರಡರ ಕಥಾಮುಖಗಳನ್ನು ಒಟ್ಟುಗೂಡಿಸಿ ತನ್ನ ಕಥಾಮುಖವನ್ನು ರೂಪಿಸಿಕೊಂಡಿರುವನೆಂದು ಅರ್ಟೋಲಾ ಅವರು ಹೇಳುತ್ತಾರೆ. ಅವರನ್ನು ತಿದ್ದುವುದು ಹೇಗೆ ಎಂದು ಚಿಂತಾಕ್ರಾಂತನಾದ ವಸುಭಾಗನು ಒಂದು ಕತೆ ಹೇಳಿ, ಅದನ್ನವರು ಸಮರ್ಪಕವಾಗಿ ಮತ್ತೆ ನಿರೂಪಣೆ ಮಾಡಿ, ಹುಡುಗರಿಗೆ ಕತೆ ಹಿಡಿಸುವುದರ ಜೊತೆಗೆ, ಕತೆಯನ್ನು ಗಮನವಿಟ್ಟು ಕೇಳುವರೆಂದು ನಿಶ್ಚಿತಪಡಿಸಿಕೊಂಡು, ಆ ಮೂಲಕವೇ ತಾನು ಅವರಿಗೆ ನೀತಿಬೋಧನೆ ಮಾಡಬಹುದೆಂದು ತೀರ್ಮಾನಿಸಿದನೆಂದು ಹೇಳುವ ಪರಿ ಸಮರ್ಪಕವಾಗಿದೆ.
'ಪಂಚತಂತ್ರ'ದ ಸ್ವರೂಪ
ಪ್ರತಿ ತಂತ್ರದ ಆರಂಭದಲ್ಲಿಯೂ ಒಂದು ಮುಖ ಕತೆಯಿರುತ್ತದೆ. ಅದೊಂದು ಬಗೆಯ ಪೀಠಿಕಾಕತೆ. ಮುಂದಿನ ಕತೆಗಳು ಅದರಿಂದಲೇ ಹೊಮ್ಮುವಂತಿರುತ್ತದೆ. ಸಹಜವಾಗಿಯೇ ಈ ಕತೆಗಳು ಎರಡೂ ಸಂಪ್ರದಾಯದ ಪಂಚತಂತ್ರಗಳಲ್ಲಿ ಭಿನ್ನವಾಗಿವೆ. ನಮಗೀಗ ಪ್ರಸ್ತುತವಾದ ದುರ್ಗಸಿಂಹನ 'ಕರ್ಣಾಟಕ ಪಂಚತಂತ್ರ'ದ ವಿವಿಧ ತಂತ್ರಗಳ ಆರಂಭ ರೀತಿಯನ್ನೂ, ಮುಖ ಕತೆಗಳ ಸ್ವರೂಪವನ್ನೂ ಪರಿಚಯ ಮಾಡಿಕೊಳ್ಳೋಣ. ಪ್ರತಿ ತಂತ್ರಕ್ಕೂ ತನ್ನದೇ ಆದ ಉದ್ದೇಶವಿರುತ್ತದೆ, ಅದನ್ನು ಪ್ರತಿಪಾದಿಸುವ ಕತೆಗಳೆ ಮುಂದೆ ಆ ತಂತ್ರದಲ್ಲಿ ಬರುವುದು. ದುರ್ಗಸಿಂಹನು ನರಿಯ ಕತೆಯನ್ನು ಹೇಳಿದ ಬಳಿಕ, ನೇರವಾಗಿ ಕಥಾಪ್ರಪಂಚಕ್ಕೆ ಕಾಲಿಡುತ್ತಾನೆ. ಮೊದಲಿಗೆ ವಿವಿಧ ತಂತ್ರಗಳ ಸ್ವರೂಪವನ್ನು ಒಂದೊಂದೇ ವಾಕ್ಯದಲ್ಲಿ ಹೀಗೆ ವಿವರಿಸುತ್ತಾನೆ: "ಅತಿಸ್ನೇಹಿತರೊಳ್ ಪೃಥಗ್ಭಾಗಮಂ ಮಾಳ್ಪುದೇ ಭೇದಮೆಂಬುದು: ಆವ ಕಾರ್ಯಮುಮಂ ವಿಚಾರಪೂರ್ವಕಮಲ್ಲದೆ ನೆಗಳಲಾಗದು ಎಂಬುದನಱಿಪುವುದದು ಪರೀಕ್ಷೆಯೆಂಬುದು; ಎಂತುಂ ನಂಬದರಂ ನಂಬುವಂತೆ ನುಡಿದೊಡಂಬಡಿಸಿಯೊಳಪೊಕ್ಕು ನೆಗಳ್ವುದು ವಿಶ್ವಾಸಮೆಂಬುದು; ಪೆರರ ಬಗೆಯಱಿದು ಸಂಧಾನಂಗೆಯ್ದು ವಂಚಿಸುವುದು ವಂಚನೆಯೆಂಬುದು; ಅನ್ಯರೆಲ್ಲರುಮಂ ಅತಿಸ್ನೇಹದಿಂ ತನ್ನವರಂ ಮಾಡಿಕೊಳ್ವುದು ಮಿತ್ರಕಾರ್ಯಮೆಂಬುದು. ಇಂತು ಐದು ತಂತ್ರಗಳ ಪ್ರಕಾರಂ:.
ಪ್ರತಿ ತಂತ್ರದ ಆರಂಭಕ್ಕೆ ಒಂದು ಶ್ಲೋಕವಿರುತ್ತದೆ. ಅದರಲ್ಲಿಯೇ ಒಂದು ಕತೆ ಬೀಜರೂಪದಲ್ಲಿ ಅಡಗಿರುತ್ತದೆ. ಆ ಶ್ಲೋಕವನ್ನು ಹೇಳಿದ ಬಳಕ, "ಆ ಕಥಾಪ್ರಪಂಚಮೆಂತೆಂದೊಡೆ" ಅಥವಾ "ಆ ಕಥಾಪ್ರಪಂಚಮೆಂತೆನೆ" ಎಂದು ಕತೆಯನ್ನು ಹೇಳಲು ತೊಡಗುತ್ತದೆ. ಮುಂದೆ ಒಂದು ಮುಖ್ಯಕತೆ ಬರುತ್ತದೆ: ಅವೆಂದರೆ ಅನುಕ್ರಮವಾಗಿ, ಎತ್ತಿಗೂ ಸಿಂಹಕ್ಕೂ ಉಂಟಾದ ಸ್ನೇಹವನ್ನು ನರಿ ಕೆಡಿಸಿದ ಕತೆ, ಬ್ರಾಹ್ಮಣನು ಪರೀಕ್ಷಿಸದೆಯೇ ಮುಂಗುರಿಯನ್ನು ಕೊಂದ ಕತೆ, ನಂಬಿಕೆ ಬರುವಂತೆ ಮಾಡಿ ಕಾಗೆಯೊಂದು ಗೂಗೆಗಳ ಗುಹೆಯನ್ನು ಸುಟ್ಟ ಕತೆ, ಮೊಸಳೆಯನ್ನು ಕಪಿ ವಂಚಿಸಿದ ಕತೆ ಹಾಗೂ ಕಾಗೆ ಆಮೆ ಸಾರಂಗ ಇಲಿ ಇವುಗಳ ವಿಶೇಷ ಸ್ನೇಹದ ಕತೆಗಳು ಬಂದಿವೆ. ಆ ಮುಖಕತೆಯಾದ ಬಳಿಕ ಮತ್ತೊಂದು ಮಗುದೊಂದು ಕತೆ ಪರಸ್ಪರ ಸಂಬಂಧವಿರುವಂತೆ ಹೆಣೆದುಕೊಂಡು ಸಾಗುತ್ತವೆ. ಪ್ರತಿ ತಂತ್ರದಲ್ಲಿರುವುದು ಕತೆಗಾರನ ಪ್ರಕಾರ 'ಕಥಾಪ್ರಪಂಚ', ತನ್ನಲ್ಲಿಯೇ ವಿಶಿಷ್ಟ ಆಕಾರ, ಉದ್ದೇಶಗಳನ್ನೊಳಗೊಂಡು ಸುಸಂಬದ್ಧವಾದ ಕಥಾಗುಚ್ಛ. ಕತೆಯೊಳಗೊಂದು ಕತೆ - ಇದು ಇಲ್ಲಿನ ಕಥಾತಂತ್ರ. ಮೊದಲ ತಂತ್ರವಾದ 'ಮಿತ್ರಭೇದ'ವು ಅತ್ಯಂತ ದೀರ್ಘವಾದುದು; ಇದರಲ್ಲಿ ಇಪ್ಪತ್ತಾರು ಕತೆಗಳಿವೆ; ಎರಡನೆಯದು 'ಪರೀಕ್ಷಾವ್ಯಾವರ್ಣನಂ', ಅದರಲ್ಲಿರುವುದು ನಾಲ್ಕು ಕತೆಗಳು; ಮೂರನೆಯದಾದ 'ವಿಶ್ವಾಸ ಪ್ರಕರಣಂ' ಹನ್ನೆರಡು ಕತೆಗಳನ್ನೊಳಗೊಂಡಿದೆ; ನಾಲ್ಕನೆಯ ತಂತ್ರ 'ವಂಚನಾಪ್ರಕರಣಂ' ಒಂದು ಕತೆ ಮಾತ್ರ; ಹಾಗೂ ಐದನೆಯದಾದ 'ಮಿತ್ರಕಾರ್ಯಪ್ರಕರಣಂ'ನಲ್ಲಿ ನಾಲ್ಕು ಕತೆಗಳಿವೆ. ಹೀಗಾಗಿ ದೀರ್ಘತೆಯ ದೃಷ್ಟಿಯಿಂದ ಅನುಕ್ರಮವಾಗಿ ಒಂದು, ಮೂರು, ಎರಡು ಮತ್ತು ಐದು ಹಾಗೂ ನಾಲ್ಕು ಇವೆ. ಆದರೆ ಇವುಗಳಲ್ಲಿ ಕೆಲವು ಆನುಷಂಗಿಕ ಕತೆಗಳೂ ಇವೆ. ಹೀಗಾಗಿ ಕಥಾಮುಖ, ಮುಖಕತೆ, ಕತೆಗಳು ಹಾಗೂ ಆನುಷಂಗಿಕ ಕತೆಗಳು - ಇವೆಲ್ಲ ಸೇರಿ ಒಟ್ಟು ಅರವತ್ತೈದು ಕತೆಗಳಾಗುತ್ತವೆ ಎಂದು ಎ. ವೆಂಕಟಸುಬ್ಬಯ್ಯನವರು ಲೆಕ್ಕಹಾಕಿದ್ದಾರೆ. ಎಷ್ಟೋ ಕತೆಗಳಲ್ಲಿ ತನ್ನ ಕಾಲದಲ್ಲಿ ಪ್ರಚಲಿತವಿದ್ದ ಜಾನಪದ ಕತೆಗಳ ಅಂಶಗಳೂ ಅಂತರ್ಗತವಾದಂತಿವೆ.
ಹೇಳಲಾದ ಕತೆಗಳಲ್ಲಿ ಯಥೇಚ್ಛವಾಗಿ ಸಂಸ್ಕೃತದ ಶ್ಲೋಕಗಳೂ ಸೂಕ್ತಿಗಳೂ ಬಳಕೆಯಾಗಿವೆ. ಇದರೆಲ್ಲಿ ಒಟ್ಟು 230 ಶ್ಲೋಕಗಳೂ 157 ಸುಭಾಷಿತಗಳು ಇವೆ; ಶ್ಲೋಕಗಳೆಲ್ಲ ಪ್ರಾಚೀನ ಗ್ರಂಥಗಳಿಂದ ಆಯ್ದುಕೊಂಡವು. ಆದರೆ 230 ರಲ್ಲಿ ಕೇವಲ 100 ಶ್ಲೋಕಗಳು ಮಾತ್ರ ಇತರ ಪಂಚತಂತ್ರಗಳಲ್ಲಿ ಬಳಕೆಗೊಂಡಿವೆಯೆಂದು ವೆಂಕಟಸುಬ್ಬಯ್ಯನವರು ತಿಳಿಸುತ್ತಾರೆ. ಉಳಿದವು ಎಲ್ಲಿನವು ಎಂದು ಗುರುತಿಸಲಾಗಿಲ್ಲ. ದುರ್ಗಸಿಂಹ ಸ್ವಂತದ 458 ಪದ್ಯಗಳನ್ನು ರಚಿಸಿದ್ದಾನೆ; ಅವುಗಳಲ್ಲಿ ಬಹುಪಾಲು ಕಂದಪದ್ಯಗಳಾಗಿದ್ದರೂ, ಮಿಕ್ಕವು ವಿವಿಧ ಛಂದಸ್ಸುಗಳಲ್ಲಿ ರಚಿತವಾಗಿವೆ. ಎಲ್ಲಕ್ಕಿಂತ ಮುಖ್ಯವಾದುದು ದುರ್ಗಸಿಂಹನ ಗದ್ಯ. ಅವನ ನಿರೂಪಣೆಯ ಬಹುಭಾಗ ಸಾಗುವುದು ಗದ್ಯದಲ್ಲಿಯೇ.
ದುರ್ಗಸಿಂಹನ ಬಗ್ಗೆ
ದುರ್ಗಸಿಂಹನು ತನ್ನ ವಿಷಯವನ್ನು ಸಾಕಷ್ಟು ವಿವರವಾಗಿಯೇ ಹೇಳಿಕೊಂಡಿದ್ದಾನೆ. ಅವನು ಹನ್ನೊಂದನೆಯ ಶತಮಾನಕ್ಕೆ ಸೇರಿದವನು. "ಕರ್ಣಾಟಕ ಧಾತ್ರೀತಿಳಕಂ ಅಖಿಳಜಗತೀಖ್ಯಾತಂ" ಆದುದು ಕಿಸುಗಾಡನಾಡು. ಆ ನಾಡಿನ "ವಿಪುಳಶ್ರೀನಿಳಯಮೆನಿಸಿ"ದ ಅಗ್ರಹಾರ ಸಯ್ಯಡಿ. ಅಲ್ಲಿಯ "ಧರಾಮರರ್ ಉತ್ಸಾಹದೆ ಮಾಡುತಿರ್ದ ಮಖಸಂದೋಹಂಗಳಿಂ"ದ ಅದು ಶೋಭಿಸುತ್ತಿತ್ತು. ಅದರಲ್ಲಿ "ತರ್ಕವ್ಯಾಕರಣವಾತ್ಸಾಯನಾದ್ಯಶೇಷ ವಿದ್ಯಾಪ್ರಕರ"ನಾದ ದುರ್ಗಸಿಂಹ ಎಂಬ ಬ್ರಾಹ್ಮಣನಿದ್ದ. ಆತನ ಪತ್ನಿ ರೇವಕಬ್ಬೆ. ಆ ದಂಪತಿಗಳಿಗೆ ದುರ್ಗಮಯ್ಯನು ಮಗನಾಗಿ ಜನಿಸಿದ. ಅವನಾದರೋ "ಸಕಲವೇದಾಧ್ಯಯನಮುಖರಪವಿತ್ರಾನನ"ನಾದವನು ಹಾಗೂ "ತರ್ಕ ವ್ಯಾಕರಣ ಕಾವ್ಯ ನಾಟಕ ಭರತವಾತ್ಸ್ಯಾಯನನಾದಿ ಅಶೇಷ ವಿದ್ಯಾಸಮುದ್ರತರಣ ಗುಣೈಕಪುಣ್ಯ"ನಾಗಿದ್ದ. ಆ ವಿಪ್ರೋತ್ತಮನ ಮಗ ಈಶ್ವರಾರ್ಯ; ಅವನ ಹೆಂಡತಿ "ಪತಿಭಕ್ತಿಯೊಳ್ ಆ ಸೀತೆಗೆ ಅರುಂಧತಿಗೆ ಕುಭೃಜ್ಜಾತೆಗೆ" ಸಮಾನಳಾಗಿದ್ದ ರೇವಕಬ್ಬೆ. ಅವರ ಮಗನೇ "ಗುಣಾಧಾರಂ ಧೀರಂ ಉದಾರಚಾರುಚರಿತಂ ವಿದ್ವಜ್ಜನೈಕಾಶ್ರಯಂ" ಆಗಿದ್ದ ದುರ್ಗಸಿಂಹ. ಅವನು ಕಮ್ಮೆಕುಲಪ್ರದೀಪನೆನಿಸಿಕೊಂಡಿದ್ದ. ಅವನು ಸಯ್ಯಡಿಯಲ್ಲಿ ಚಕ್ರವರ್ತಿಯ ಬೆಸದಿಂದ ಹರಿಹರಭವನಗಳನ್ನು ಕಟ್ಟಿಸಿದ. ಅವನನ್ನು ವಿದ್ವಜ್ಜನರು "ಅನವದ್ಯಾಚರಣಕ್ಕುದಾಹರಣಂ ಉದ್ಯತ್ ಕೀರ್ತಿಗಾಧಾರಂ ಆಳ್ದನ ಕಾರ್ಯಕ್ಕೆ ಮರುತ್ತನೂಜಂ" ಎನಿಸಿದ್ದ. ಅವನು "ಅವಿಂಗೆ ಆಗರಂ ಒಳ್ಗುಣಕ್ಕೆ ಕಣಿ" ಎನಿಸಿದ್ದವನು. ಅವನು ಪತಿಹಿತದಲ್ಲಿ "ಇನನಿಂ ಏಕದಂತನಿಂ ಪವನಜನಿಂ ಖಗರಾಜನಿಂ ಈ ದುರ್ಗಂ ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ" ಆಗಿದ್ದ. ಅವನ ದೈವ ಮುರಹರ. ಅವನ ಗುರುಗಳು ಮಹಾಯೋಗಿಗಳಾಗಿದ್ದ ಶಂಕರಭಟ್ಟರು. ಅವನಿಗೆ ಆಶ್ರಯದಾತನಾದವನು "ಶ್ರೀಚೋಳಕಾಳಾನಲಂ ಧರಣೀಶಾಗ್ರಣಿ ಚಕ್ರವರ್ತಿತಿಲಕಂಕ" ಆಗಿದ್ದ ಜಯಸಿಂಹ.
ಜಯಸಿಂಹನು "ಚಾಳುಕ್ಯರಾಜಾನ್ವಯ ಪ್ರಸ್ತುತ್ಯೋದಯಶೈಲಭಾನು". ಅವನು "ಸತ್ಯಾಶ್ರಯಕುಲತಿಲಕಂ ಸಮಸ್ತಭುವನಾಧಾರಂ" ಆಗಿದ್ದ ಆ ಚಾಳುಕ್ಯರಾಜನು ಜಯಂತೀಪುರದಲ್ಲಿ ಆಳುತ್ತಿದ್ದ. ಆ ಚಕ್ರವರ್ತಿಯ ದಂಡನಾಯಕನಾಗಿದ್ದವನು ಶ್ರೀಸಿಂಹಸನ್ನಾಹ ಎಂಬುವವನು. ದಿಕ್ಕರಿಗಳಲ್ಲಿ ಐರಾವತದ ಹಾಗೆ, ದೇವತೆಗಳಲ್ಲಿ ಇಂದ್ರನ ಹಾಗೆ, ಚಕ್ರವರ್ತಿಗಲ್ಲಿ ಜಗದೇಕಮಲ್ಲನ ಹಾಗೆ, ಪರ್ವತಗಳಲ್ಲಿ ಮೇರುವಿನ ಹಾಗೆ ಇದ್ದವನು. ಅವನ 'ತಚ್ಚರರಣಭೃಂಗ'ನಾಗಿದ್ದವನು 'ಕೋದಂಡರಾಮಾಧಿಪ' ಎಂಬ ಹೆಸರು ಪಡೆದಿದ್ದ ಕುಮಾರಸ್ವಾಮಿ. ಅವನು ವಿಕ್ರಮದಲ್ಲಿ ಪರಶುರಾಮನಿಗೂ ಮಿಗಿಲು. ಅವನು ಪಂಡಿತರಿಗೂ ವೈತಾಳಿಕರಿಗೂ ಗಾಯಕರಿಗೂ ಅರ್ಥಜನಗಳಿಗೂ ಕಲ್ಪವೃಕ್ಷದಂತಿದ್ದ ಉದಾರಿ. ಅವನು ಮುದದಿಂದ ಕೊಡಿಸಲು ದುರ್ಗಸಿಂಹನು ಜಯಸಿಂಹನಲ್ಲಿ ಸಂಧಿವಿಗ್ರಹಿಯಾದ.
"ದುರ್ಗಸಿಂಹನ ಪದ್ಯಗಳು ಸೂಕ್ತಿಸುಧಾರ್ಣವದಲ್ಲಿ ಸಿಕ್ಕುವುದರಿಂದಲೂ ಅಭಿನವ ಪಂಪ (ನಾಗಚಂದ್ರ)ನನ್ನು ಇವನು ಸ್ತುತಿಸುವುದಿಂದಲೂ ಈತನು 1139 ರಿಂದ 1149 ರವರೆಗೆ ಆಳಿದ ಚಾಲುಕ್ಯ ಜಗದೇಕಮಲ್ಲನಲ್ಲಿ ಸಂಧಿವಿಗ್ರಹಿಯಾಗಿರಬೇಕೆಂದೂ ಆದುದರಿಂದ ಇವನ ಕಾಲವು ಕ್ರಿ.ಶ. 1145 ಇರಬೇಕೆಂದೂ" ಆರ್, ನರಸಿಂಹಾಚಾರ್ ನಿರ್ಣಯಿಸುತ್ತಾರೆ. ನಾ. ಶ್ರೀ. ರಾಜಪುರೋಹಿತರು ದುರ್ಗಸಿಂಹನು ಒಂದನೆಯ ಜಯಸಿಂಹನ ಕಾಲದಲ್ಲಿದ್ದವನೆಂದು ಸೂಚಿಸಿದ್ದರು. ಅದಕ್ಕೆ ಪೂರಕವಾಗಿ ಆನಂತರ ಬಿಹಾರದ ಆರಾದಲ್ಲಿ ದೊರೆತ ಹಸ್ತಪ್ರತಿಯೊಂದರಲ್ಲಿ, ದುರ್ಗಸಿಂಹನು 'ಕರ್ಣಾಟಕ ಪಂಚತಂತ್ರ'ವನ್ನು ಬರೆದು ಮುಗಿಸಿದುದು "ಪ್ರಜಾಪತಿ ಸಂವತ್ಸರ ಚೈತ್ರಮಾಸ ಸಿತಪಕ್ಷ ದ್ವಾದಶೀ ತಾರಕಾಪತಿವಾರಂ" ಎಂದಿದೆ. ಇದು ಶಾಲಿವಾಹನ ಶಕ 933, ಅಂದರೆ ಈ ತೇದಿಯು ಕ್ರಿ.ಶ. 1031 ನೇ ಮಾರ್ಚಿ 8 ನೆಯ ತಾರೀಕು ಸೋಮವಾರವಾಗುತ್ತದೆ ಎಂದು ಗೋವಿಂದ ಪೈ ಅವರು ನಿರ್ಧರಿಸಿ ಹೇಳಿದ್ದಾರೆ. ಹೀಗಾಗಿ ಇದು ದುರ್ಗಸಿಂಹನ ಕಾಲವಾಗಿತ್ತೆಂದು ಹೇಳಬಹುದು. ಅವನು ಕ್ರಿ.ಶ. 1018 ರಿಂದ 1042 ರವರೆಗೆ ಆಳಿದ ಮೊದಲನೆಯ ಜಯಸಿಂಹನ ಕಾಲದವನೆಂಬುದು ಈಗ ನಿಶ್ಚಿತವಾಗಿದೆ.
ದುರ್ಗಸಿಂಹನು ಸಂಸ್ಕೃತ ಹಾಗೂ ಕನ್ನಡದ ಪ್ರಾಚೀನ ಕವಿಗಳನ್ನೂ ಪಂಡಿತರನ್ನೂ ನೆನೆಸಿಕೊಂಡಿದ್ದಾನೆ. ಲೋಕಾಗಮಜ್ಞರೂ ಅಖಿಳ ಕಳಾಕುಶಲರೂ ಉಪೇತವಿದ್ಯರೂ ಅನವದ್ಯವಚಃಶ್ರೀಕಾಂತದಯಿತರೂ ಆದ ಕವಿಗಳು ವಾಲ್ಮೀಕಿ ವ್ಯಾಸರುಗಳನ್ನು ಮೊದಲು ನೆನೆಸಿಕೊಂಡು, ಆ ಬಳಿಕ 'ಮೃದುಮಧುರಗಭೀರತರ ಪ್ರಸನ್ನ ಕವಿತಾಗುಣ'ವನ್ನು ಹೊಂದಿದ್ದ ಗುಣಾಢ್ಯ, 'ವರವಾಗ್ವಿಲಾಸ'ದ ವರರುಚಿ, 'ಕಳಾಪರಿಣತ'ನಾದ ಕಾಳಿದಾಸ, 'ಕವಿಚಕ್ರವರ್ತಿ' ಬಾಣ, 'ಕವಿರಾಜದರ್ಪವಿದಾರಣಚತುರ'ನಾಗಿದ್ದ ನಾರಾಯಣ, 'ರಾಘವಪಾಂಡವೀಯ'ವನ್ನು ಬರದ ಧನಂಜಯ, ವಾಮನ ಭಲ್ಲಟ ಭಾಮಹ ಭೀಮ, ಭವಭೂತಿ, ಭಾಸ, ಭಾರವಿ, ಭಟ್ಟಿ, ಶ್ರೀಮಾಘ, ರಾಜಶೇಖರ, ಕಾಮಂದಕರನ್ನು 'ಎಸೆವ ಸೂಕ್ತಿ'ಗಳಿಗಾಗಿ. ಆನಂತರ ದಂಡಿ - ಈ ಸಂಸ್ಕೃತ ಕವಿ ನಾಟಕಕಾರರು ಮತ್ತು ಪಂಡಿತರನ್ನು ನೆನೆದಿದ್ದಾನೆ. 'ಕವಿಮಾರ್ಗ' (ಕವಿರಾಜಮಾರ್ಗ?)ದ ಶ್ರೀವಿಜಯ, 'ಮಾಳವೀಮಾಧವಮಂ ವಿರಚಿಸಿದ' ಕನ್ನಮಯ್ಯ, 'ಪೊಸತೆನಿಪ ದೇಸಿಯಿಂ .. .. ನೆಗಳ್ದ' ಅಸಗ, ಮನಸಿಜ, ಚಂದ್ರಭಟ್ಟ, 'ಕವಿಚಕ್ರವರ್ತಿ' ಪೊನ್ನ, 'ಗೀರ್ಗುಂಫದ ಪೆಂಪ'ನ್ನು ಪಡೆದಿದ್ದ ಪಂಪ, 'ದಂಡನಾಯಕ' ಗಜಾಂಕುಶ, 'ಮನುಗಂ ವ್ಯಾಸಂಗಂ ಮಿಗಿಲೆನಿಸಿದ' ಕವಿತಾವಿಳಾಸ - ಈ ಕನ್ನಡ ಕವಿಗಳನ್ನು ಸ್ಮರಿಸಿಕೊಂಡಿದ್ದಾನೆ. ಅಲ್ಲದೆ, ದುರ್ಗಸಿಂಹನು ನಾಭೆಯ, ಸುರಾಮಾತ್ಯ, ಇಂದ್ರ, ನದೀನಂದನ (ಭೀಷ್ಮ?), ಉದ್ಧವ, ಮನು, ವಿಶಾಲಾಕ್ಷ, ಇಭದಂತ, ಕುಬೇರ, ಅಜಾತಪ್ರಿಯಪುತ್ರ  - ಎಂಬ ನೀತಿವಿದರು 'ನೀತಿಜ್ಯೋತಿನಿರ್ಣೀತಿ'ಯನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿದ್ದಾನೆ. "ಚಂದ್ರಗುಪ್ತಂಗೆ ಸಮಸ್ತ ಧಾರಿಣಿಯನಿತ್ತು ನೆಗೞ್ತೆಯನಾಂತ ವಿಷ್ಣಗುಪ್ತ"ನಿಗೆ ಎಣೆಯಾದ ನೀತಿವಿದರಿಲ್ಲ ಎಂದು ವಿಶೇಷವಾಗಿ ಸ್ತುತಿಸಿದ್ದಾನೆ. ಅಲ್ಲದೆ, "ಉತ್ಸವದಿಂ ತಿರ್ದಿದ" ಶ್ರೀವಾದಿರಾಜ ಮುನಿಪುಂಗವರನ್ನು ಅವನು ವಿಶೇಷವಾದ ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾನೆ. ಹಾಗೆಯೇ ಶುಕ್ರ, ಶಕ್ರ, ಗುರು, ಪರಾಶರ, ಬಾಹುದಂತಿ, ನಂದ, ವಿಶಾಲಾಕ್ಷ, ಕುಬೇರ, ಆಭಿರ, ಚಾಣಕ್ಯ -  ಇವರನ್ನು "ಪುರಾಣಾಚಾರ್ಯ ಕೃತನಯಶಾಸ್ತ್ರಪ್ರಯೋಗಪ್ರವೀಣರು" ಎಂದಿದ್ದಾನೆ. ಹೀಗೆ ದುರ್ಗಸಿಂಹನ ಓದು ವಿಸ್ತಾರವಾದುದು, ಅವನಿಗೆ ಕಾವ್ಯ ಮತ್ತು ಶಾಸ್ತ್ರಗಳೆರಡರಲ್ಲಿಯೂ ಆಸಕ್ತಿಯಿದ್ದುದರಿಂದಲೂ, ತನ್ನ ವೃತ್ತಿಯೇ ರಾಜನೀತಿಯದಾದ್ದರಿಂದಲೂ ಇದು ಅವನಿಗೆ ಸಹಜವೇ ಆಗಿತ್ತು. ಅಭಿರುಚಿ, ಅನುಭವ - ಇವೆರಡೂ ಸೇರಿ 'ಕರ್ಣಾಟಕ ಪಂಚಂತಂತ್ರ'ವು ವಿಶೇಷ ಪಾಕವನ್ನು ಪಡೆಯಿತು ಎಂದು ಹೇಳಬಹುದು.
'ಕರ್ಣಾಟಕ ಪಂಚತಂತ್ರ'ದ ರಚನಾ ವೈಶಿಷ್ಟ್ಯ
ಕನ್ನಡದಲ್ಲಿ ಆ ಹಿಂದೆ 'ವಡ್ಡಾರಾಧನೆ' ಮತ್ತು 'ಚಾವುಂಡರಾಯಪುರಾಣ'ದಂತಹ ಗದ್ಯಕಥಾಗುಚ್ಛಗಳಿದ್ದುವು ಆದರೆ ಅವುಗಳ ಸ್ವರೂಪವೇ ಬೇರೆ. ಅವೆರಡೂ ಸ್ಪಷ್ಟವಾಗಿ ಧಾರ್ಮಿಕ ದೃಷ್ಟಿಕೋನದ ಕೃತಿಗಳು. ಜನಜನಿತವಾಗಿದ್ದ ಕತೆಗಳನ್ನು ಸ್ವಂತ ಮಾತುಗಳಲ್ಲಿ ಪುನಾನಿರೂಪಿಸುವ ಕ್ರಮ ಅಲ್ಲಿದೆ. ವಡ್ಡಾರಾಧನೆಯ ಕತೆಗಳು ಬಹು ಹಿಂದಿನಿಂದಲೂ ಮೌಖಿಕ ಪರಂಪರೆಯಿಂದ ಬರೆಹಕ್ಕೆ ಅಲ್ಲಿಂದ ಮತ್ತೆ ಮೌಖಿಕತೆಗೆ ತಿರುಗುತ್ತ ಕೊನೆಗೆ, ಗಾಹೆಗಳ ಆಕಾರದ ಬೀಜರೂಪದಲ್ಲಿ ಸಿದ್ಧಗೊಂಡು, ಅಲ್ಲಿನ ಗಾಹೆಗಳಲ್ಲಿ ಅಡಕವಾದ ಕತೆಗಳನ್ನು ಲೇಖಕನು ತನ್ನ ಸ್ವಂತ ಕಥನಕೌಶಲದಿಂದ ನಿರೂಪಿಸಿದ್ದಾನೆ. ಹಾಗಾಗಿ ಅದು ಅನುವಾದವಲ್ಲ. ಅಲ್ಲಿನ ಕತೆಗಳಿಗೆಲ್ಲ ಒಂದೇ ಚೌಕಟ್ಟಿದೆ; ಅದೆಂದರೆ ಉಪಸರ್ಗಗಳನ್ನೆದುರಿಸಿ ಪರೀಷಹಗಳನ್ನು ಗೆದ್ದು ಕೇವಲಿಗಳಾದವರ ಕತೆಗಳು ಅವು. ಹೀಗಾಗಿ ಅಲ್ಲಿನ ಎಲ್ಲ ಕತೆಗಳ ಉದ್ದೇಶವೂ ಒಂದೇ. ಜೊತೆಗೆ ನಿರೂಪಣೆಯಲ್ಲಿಯೂ ಒಂದು ಬಗೆಯ ನಿರ್ದಿಷ್ಟ ಧಾಟಿಯನ್ನು ಕಾಣಬಹುದು: ಕತೆಗಳ ಆರಂಭ, ವ್ಯಕ್ತಿಸ್ವರೂಪದ ವರ್ಣನೆ, ಹೆಣ್ಣಿನ ಸೌಂದರ್ಯದ ವರ್ಣನೆ, ವಿದ್ಯೆ-ಕೌಶಲ ಮುಂತಾದವುಗಳ ವಿವರ, ಕಥಾನಾಯಕನು ಪರೀಷಹಗಳನ್ನು ಎದುರಿಸುವ ಬಗೆ ಹಾಗೂ ಕತೆ ಅಂತ್ಯಗೊಳ್ಳುವ ರೀತಿ ಇವೆಲ್ಲ ಸಿದ್ಧಮಾದರಿಯವು. ಪ್ರಾಯಶಃ ಅವು ವಡ್ಡಾರಾಧನೆಯ ಲೇಖಕನಿಂದಲೇ ಸಿದ್ಧಗೊಂಡವೆನನ್ನಿಸುತ್ತದೆ. ಆದರೆ ಅಲ್ಲಿನ ಗದ್ಯ ಕನ್ನಡದ ಮಟ್ಟಿಗೆ ತೀರ ಹೊಸದು. ಅಲ್ಲಿವರೆಗೆ ಕನ್ನಡದ ಚಂಪೂ ಕೃತಿಗಳು ವಚನ ಎಂಬ ಹೆಸರಿನಿಂದ ಗದ್ಯವನ್ನು ಬಳಸಿಕೊಂಡ ಬಗೆಗಿಂತ ತುಂಬ ಆರ್ದ್ರಸ್ವರೂಪದ್ದು. ಇಷ್ಟರ ಮಟ್ಟಿಗಲ್ಲದಿದ್ದರೂ, ತನ್ನದೇ ಆದ ರೀತಿಯಲ್ಲಿ 'ಚಾವುಂಡರಾಯಪುರಾಣ'ವು ಗದ್ಯವನ್ನು ಇಡೀ ಕಥನಕ್ಕೆ ಬಳಸಿಕೊಂಡು ಹೊಸ ಹಾದಿಯನ್ನು ತುಳಿಯಿತು. ತ್ರಿಷಷ್ಟಿಶಲಾಕಾಪುರುಷರ ಕತೆಗಳನ್ನು ನಿರೂಪಿಸುವ ಇಲ್ಲಿನದು ನೇರವಾದ ಧಾರ್ಮಿಕ ಉದ್ದೇಶ, ಅದಕ್ಕನುಗುಣವಾದ ಗಂಭೀರ ಶೈಲಿಗಳು ಅಲ್ಲಿನ ನಿರೂಪಣೆಯ ಮುಖ್ಯಾಂಶಗಳು
ಅವುಗಳ ಬಳಿಕ ಬಂದ ದುರ್ಗಸಿಂಹನ 'ಪಂಚತಂತ್ರ'ವು ಹಿಂದೆ ಪ್ರಚಲಿತವಾಗಿದ್ದ ಕತೆಗಳನ್ನೇ ಪುನಾನಿರೂಪಿಸಿವೆ. 'ವಡ್ಡಾರಾಧನೆ'ಯ ಕರ್ತೃವು ತನ್ನ ಗಾಹೆಗಳ ಆಕರವನ್ನು ಹೇಳಿಲ್ಲ; ಆದರೆ ದುರ್ಗಸಿಂಹ ತನ್ನ ಕೃತಿಗೆ ಆಧಾರ ವಸುಭಾಗನ ಕೃತಿಯೆಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಆದರೆ ತನ್ನ ಕೃತಿಯು ನೇರ ಅನುವಾದವಲ್ಲ ಎಂಬುದು "ಪೊಸತಾಗಿರೆ ವಿರಚಿಸುವೆಂ" ಎಂಬ ಮಾತಿನಿಂದ ತಿಳಿಯುತ್ತದೆ. ಆದರೆ ಪೊಸತು ಎಂಬುದರ ನಿರ್ದಿಷ್ಟ ಅರ್ಥವೇನು? ವಡ್ಡಾರಾಧನೆಯಂತೆಯೇ ಇಲ್ಲಿಯೂ ಮೂಲ ಬೀಜರೂಪದಲಿದ್ದ ಕತೆಗಳನ್ನು ಮಾತ್ರ ಸ್ವೀಕರಿಸಿ ಇಡೀ ಕಥನವನ್ನು ಸ್ವಂತ ಮಾತುಗಳಲ್ಲಿ ಹೇಳಿದೆಯೆಂದೇ? ಏಕೆಂದರೆ ಇಲ್ಲಿಯೂ ಪ್ರತಿಯೊಂದು ಪ್ರಕರಣದ ಮೊದಲಿಗೆ ಆ ಪ್ರಕರಣದ ಸ್ವರೂಪ-ಉದ್ದೇಶಗಳನ್ನು ಒಂದು ಶ್ಲೋಕದಲ್ಲಿ ಕೊಟ್ಟು, ಕನ್ನಡದಲ್ಲಿ ಅದರ ತಾತ್ಪರ್ಯವನ್ನಿತ್ತು, ಆ ಬಳಿಕ ಆ 'ಕಥಾಪ್ರಪಂಚಮೆಂತೆದೊಡೆ', 'ಆ ಕಥಾಪ್ರಪಂಚಮೆಂತೆನೆ' ಮುಂತಾಗಿ ಹೇಳಿ ಕತೆಯನ್ನು ನಿರೂಪಿಸುವ ಕ್ರಮ ಇಲ್ಲಿನದು. ಇಡೀ ಕಥಾನಿರೂಪಣಕ್ರಮವೇ ತನ್ನದಾದ್ದರಿಂದ ದುರ್ಗಸಿಂಹನು 'ಪೊಸತಾಗಿರೆ ವಿರಚಿಸುವೆಂ' ಎಂದು ಹೇಳಿಕೊಂಡಿರಬಹುದೇ? ಅಥವಾ ಇನ್ನಾವ ರೀತಿಯಲ್ಲಿ ಅದು ಹೊಸದು? ಇಲ್ಲಿನ ಕಥನಶೈಲಿಯು ಅನನ್ಯವಾಗಿದೆ. ಇದಂತೂ ಭಾಷಾಂತರವಾಗಿರಲಿಕ್ಕಿಲ್ಲ; ಹೀಗಾಗಿ ಗದ್ಯದ ದೃಷ್ಟಿಯಿಂದ ತನ್ನ ವಿರಚನೆ ಹೊಸದು ಎಂದು ಹೇಳಿಕೊಂಡಿರಬಹುದು? ಕತೆಗಳ ಸ್ವರೂಪವನ್ನು ಮಾತ್ರ ವಸುಭಾಗನಿಂದ ಸ್ವೀಕರಿಸಿ ದುರ್ಗಸಿಂಹನು ಅವುಗಳಿಗೆ ತನ್ನದೇ ಆದ ನಿರೂಪಣೆಯ ಆಕಾರವನ್ನಿತ್ತಿರುವ ಸಂಭವ ಹೆಚ್ಚು.
ದುರ್ಗಸಿಂಹ ಬರುವ ಹೊತ್ತಿಗೆ ಆಗಿಹೋಗಿದ್ದ ಕನ್ನಡ ಕವಿಗಳಲ್ಲಿ ಬಹುತೇಕ ಜೈನರು. ಮೊದಲನೆಯ ನಾಗವರ್ಮ ಮಾತ್ರ ಅವನಿಗಿಂತ ಮುಂಚೆ ಬರೆದ ಬ್ರಾಹ್ಮಣ ಕವಿ. ಅವನು ಆರಿಸಿಕೊಂಡಿದ್ದು ಅದ್ಭುತರಮ್ಯ ಪ್ರಣಯಕತೆಯನ್ನು, ಮಾಡಿದ್ದು ಅದರ ಅನುವಾದವನ್ನು (ತುಂಬ ವಿವೇಚನಾಯುತವಾಗಿ ಅದನ್ನು ಸಂಗ್ರಹಿಸಿಕೊಂಡಿದ್ದರೂ). ದುರ್ಗಸಿಂಹ ಆರಿಸಿಕೊಂಡದ್ದೂ ಒಂದು ಸಂಸ್ಕೃತಮೂಲದ ಕಥಾಗುಚ್ಛವನ್ನು. ತಡವಾಗಿ ಕನ್ನಡದಲ್ಲಿ ಬರವಣಿಗೆಗ ಆರಂಭಿಸಿದ ಬ್ರಾಹ್ಮಣ ಕವಿಗಳಿಗೆ ಮತಪ್ರಚಾರದ ತುರ್ತೇನೂ ಇರಲಿಲ್ಲ; ಹೀಗಾಗಿ ಅವರು ಮತಧಾರ್ಮಿಕತೆಗೆ ಮಹತ್ವ ನೀಡದೆ ಲೌಕಿಕ ಪ್ರಪಂಚವನ್ನು ಆರಿಸಿಕೊಂಡರು. 'ಕರ್ಣಾಟಕ ಕಾದಂಬರಿ'ಯಲ್ಲಿ ಜನ್ಮಾಂತರದ ಕತೆಗಳು ಬಂದರೂ ಮೂಲತಃ ಅದೊಂದು ಪ್ರಣಯಕತೆ. ದುರ್ಗಸಿಂಹನದು ಅಂತಹ ರೀತಿಯ ಒಂದೇ ನೀಳ್ಗತೆಯಲ್ಲ, ಕಥೆಗಳ ಗುಚ್ಛ, ನಿರೂಪಣೆಯಲ್ಲಿ ಮತ್ತು ಆಶಯದಲ್ಲಿ ಪರಸ್ಪರ ಸಂಬಂಧವಿರುವ ಕತೆಗಳ ಮಾಲೆ, ಅಥವಾ ಐದು ಮಾಲೆಗಳು. ದುರ್ಗಸಿಂಹ ಇಂಥದೊಂದು ಪ್ರಯತ್ನಕ್ಕೆ ಕೈಹಾಕಿದ್ದರಲ್ಲಿ ವಿಶೇಷ ಉದ್ದೇಶವೇನಾದರೂ ಇತ್ತೇ? ಆಗಲೇ ಹೇಳಿದಂತೆ ಬ್ರಾಹ್ಮಣನಾದ ಅವನಿಗೆ ವೈದಿಕಮತ ಪ್ರಚಾರದ ತುರ್ತು ಇರಲಿಲ್ಲ; ಅವನ ಸ್ವಭಾವವೇ ಪ್ರಾಯಶಃ ಲೌಕಿಕವಾದುದು; ಅಲ್ಲದೆ ಅವನ ತಂದೆಯೂ ಲೌಕಿಕಶಾಸ್ತ್ರಗಳಲ್ಲಿ ವಿಶೇಷ ಪರಿಣತಿಯನ್ನು ಪಡೆದಿದ್ದವನು;  ಆ ಕಾರಣದಿಂದಲೇ ಅವನು ರಾಜಾಶ್ರಯವನ್ನು ಪಡೆದು ಆಸ್ಥಾನಕವಿಯಾಗುವುದರ ಬದಲು ರಾಜನ ಬಳಿ ಸಂಧಿವಿಗ್ರಹಿಯಾಗುವ ವೃತ್ತಿಯನ್ನು ಆರಿಸಿಕೊಂಡ. ಆ ಕಾಲಕ್ಕೆ ತನ್ನ ವೃತ್ತಿ-ಮನೋವೃತ್ತಿಗಳಿಗೆ ಅನುಗುಣವಾಗಿದ್ದ 'ಪಂಚತಂತ್ರ'ವನ್ನು (ಆಗ ದಕ್ಷಿಣದಲ್ಲಿ ಪ್ರಚಲಿತವಾಗಿದ್ದ ಏಕೈಕ ಸಂಪ್ರದಾಯವಾದ ವಸುಭಾಗನದನ್ನು) ಕನ್ನಡದಲ್ಲಿ ನಿರೂಪಿಸುವ ಆಯ್ಕೆ ಅವನದಾಗಿರಬೇಕು.
ಅರಮನೆಯೊಡನೆ ನೇರವೂ ಆಪ್ತವೂ ಆದ ಸಂಪರ್ಕ ಹೊಂದಿದ್ದ ದುರ್ಗಸಿಂಹನಿಗೆ ರಾಜಕುಟುಂಬಗಳ ಒಳಹೊರಗುಗಳ ಪರಿಚಯ ಆಳವಾಗಿ ಇದ್ದಿರಲಿಕ್ಕೆ ಸಾಕು. ಪರ್ಯಾಯವಾಗಿ ಅವರಿಗೆ ಅನುಕೂಲವಾಗಲೆಂಬ ಉದ್ದೇಶವೂ ಅವನಿಗಿದ್ದಿರಬಹುದು. ಹಾಗಾಗಿ ತನ್ನ ಯಜಮಾನನಿಗೆ ಅರ್ಥವಾಗುವ ಮಾತ್ರವಲ್ಲ, ಸ್ಪಷ್ಟವಾಗಿ ತಿಳಿಯುವ, ವಸ್ತುವುಳ್ಳ ಕೃತಿಯನ್ನು ರಚಿಸುವುದು ಅವನ ಉದ್ದೇಶವಾಗಿರಬಹುದು. ಈ ಕೃತಿಯ ಉದ್ದೇಶವೇ ನೀತಿನಿರೂಪಣೆ; ಆದರೆ ಅವು ಎಲ್ಲರಿಗೂ ಬೇಕಾದ ಬಗೆಯ ನೀತಿಯಲ್ಲ; ಆಳುವವರಿಗೆ ಆವಶ್ಯವೆಂದು ಆಗ ಭಾವಿಸಲಾಗಿದ್ದ ಬಗೆಯ ರಾಜನೀತಿ. ಅಲ್ಲದೆ ಈ ಕತೆಗಳು ಪುಟ್ಟಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದವೇನಲ್ಲ. ಇಲ್ಲಿನ ಬಹುತೇಕ ಕತೆಗಳಲ್ಲಿ ಪ್ರಾಣಿ-ಪಕ್ಷಿಗಳು ಪಾತ್ರಗಳಾಗಿ ಬಂದರೂ ಅವು ಆಡುವುದು ಮಾಡುವುದೂ ಎಲ್ಲ ಮನುಷ್ಯಸಹಜ ಭಾಷೆಯನ್ನೇ ಚಟುವಟಿಕೆಗಳನ್ನೇ ಹೊರತು ತಮಗೇ ವಿಶಿಷ್ಟವಾದವನ್ನಲ್ಲ. ಮಕ್ಕಳಗೆ ಪ್ರಾಣಿಪಕ್ಷಿಗಳೆಂಬ ಕಾರಣದಿಂದ ಇವುಗಳಲ್ಲಿ ಆಸಕ್ತಿಯುಂಟಾಗಬಹುದಾದರೂ, ಇಲ್ಲಿನ ತಂತ್ರಗಳು ಪ್ರಾಯಶಃ ಅವರ ಮಟ್ಟಕ್ಕೆ ಮೀರಿದವು. 'ಪಂಚತಂತ್ರ'ದ ಕಥಾಮುಖವೇ ಕೃತಿಯ ಆಶಯವನ್ನು ಸ್ಪಷ್ಟಪಡಿಸುತ್ತದೆ. ವಸುಭಾಗಭಟ್ಟನು ಈ ಕತೆಗಳನ್ನು ಹೇಳಿದುದು ಸೌರೂಪ್ಯಪುರದ ರಾಜನಾದ ಅಮರಶಕ್ತಿಯ ಮುವರು ಮಕ್ಕಳಾದ ಅನೇಕಶಕ್ತಿ, ವಸುಶಕ್ತಿ ಮತ್ತು ರುದ್ರಶಕ್ತಿಗಳನ್ನು ತಿದ್ದಲು. ಅವರು ಚಿಕ್ಕ ಮಕ್ಕಳಲ್ಲ, ಬೆಳೆದವರು. ಅದೂ ಹಾದಿ ತಪ್ಪಿದ್ದವರು: ಕವಿಯೇ ವರ್ಣಿಸುವಂತೆ ಅವರು ಮೂವರೂ "ಅತ್ಯಂತ ಯೌವನಮದವಿಕಾರವಿಕೃತವೇಷರುಂ ನೀತಿಶಾಸ್ತ್ರಸದ್ಭಾವನಾಬಹಿರ್ಮುಖರುಂ ವೃದ್ಧೋಪಸೇವಾಮೃತಾಸ್ವಾದನಾತಿದೂರರುಂ ವಿವೇಕವಿಕಳಮತಿಗಳುಮಪ್ಪ"ವರು ಹಾಗೂ "ಯೌವನಮದೋನ್ಮತ್ತರುಂ ದುರ್ಮುಖರುಂ ಚಂಚಳಚಿತ್ತರುಂ ಆಗಿರ್ದಪ್ಪರ್". ಅವರನ್ನು ಆರು ತಿಂಗಳಲ್ಲಿ ತಾನು ತಿದ್ದುತ್ತೇನೇಂದು ವಸುಭಾಗಭಟ್ಟ ರಾಜನಿಗೆ ಆಶ್ವಾಸನೆ ಕೊಡುವುದು ಹೀಗೆ: "ಆರು ತಿಂಗಳ್ಗೆ ಜಯಶ್ರೀವರ ಸಮಸ್ತ ನೃಪವಿದ್ಯಾವರರಪ್ಪಂತು ಮಾಡುವೆಂ" ಎಂದು. ಅವರನ್ನು ಕರೆದುಕೊಂಡು ಹೊರಟ ವಸುಭಾಗನು ಆಕಸ್ಮಿಕವಾಗಿ ಅವರಿಗೆ ಕತೆಗಳು ರುಚಿಸುತ್ತವೆಂಬುದನ್ನು ಕಂಡುಕೊಂಡು ಕತೆಗಳ ಮೂಲಕ ಅವರನ್ನು ತಿದ್ದಲು ಮನಸ್ಸು ಮಾಡುತ್ತಾನೆ. ಅದಕ್ಕಾಗಿ ಅವನು ಆರಿಸಿಕೊಂಡದ್ದು ಗುಣಾಢ್ಯನು ಪೈಶಾಚೀ ಭಾಷೆಯಲ್ಲಿ ಹೇಳಿದ್ದ 'ಬೃಹತ್ಕಥೆ'ಗಳಲ್ಲಿ ಕೆಲವನ್ನು. ಈ ಕತೆಗಳನ್ನು ಮೊದಲು ಹೇಳಿದ್ದವನು ತನಗೆ ಕತೆಯನ್ನು ಹೇಳಲು ಗಿರಿಜೆ ಕೇಳಿಕೊಂಡಾಗ ಅವಳ ತೃಪ್ತಿಗಾಗಿ ಸಾಕ್ಷಾತ್ ಪರಶಿವ. ಅಲ್ಲಿದ್ದು ಇವನ್ನೆಲ್ಲ ಕೇಳಿಸಿಕೊಂಡಿದ್ದ ಪುಷ್ಪದಂತನೆಂಬ ಗಣಪ್ರಧಾನನು, ಕಾರಣಾಂತರದಿಂದ ಮಾನವಜನ್ಮ ತಾಳಿ ಶಾಲಿವಾಹನ ಚಕ್ರವರ್ತಿಯ ಆಸ್ಥಾನದಲ್ಲಿ ಗುಣಾಢ್ಯನೆಂಬ ಕವಿಯಾಗಿದ್ದವನು. ವಸುಭಾಗನು ಆ ಕಥಾಸಮುದ್ರದಲ್ಲಿ 'ಪಂಚರತ್ನಮಪ್ಪೈದು' ಕತೆಗಳನ್ನು ಆರಿಸಿಕೊಂಡು ಸಂಸ್ಕೃತದಲ್ಲಿ ಹೇಳಿದ. ಅದನ್ನೇ ದುರ್ಗಸಿಂಹ ಕನ್ನಡದಲ್ಲಿ ಈಗ ಹೇಳುತ್ತಿರುವುದು.
ಅಂದರೆ, ಇವು ಐದೇ ಕತೆಗಳು; ಒಂದೊಂದು ತಂತ್ರಕ್ಕೆ ಒಂದರಂತೆ. ಆದರೆ ಒಂದೊಂದರಲ್ಲಿಯೂ ಅನೇಕ ಕತೆಗಳು ಬರುತ್ತವೆ. ಅವೆಲ್ಲ ಪರಸ್ಪರ ಸಂಬಂಧವುಳ್ಳವು. ಹೀಗಾಗಿ ಇಲ್ಲಿನ ಕತೆಗಳ ಸಂಖ್ಯೆ ಎಷ್ಟೆಂದು ಹೇಳುವುದು ಸ್ವಲ್ಪ ಗೊಂದಲದ ವಿಚಾರ. ಆದರೆ 'ಪಂಚತಂತ್ರ'ದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದ ಎ. ವೆಂಕಟಸುಬ್ಬಯ್ಯನವರ ಪ್ರಕಾರ, ದುರ್ಗಸಿಂಹನಲ್ಲಿರುವುದು ಅರವತ್ತೈದು ಕತೆಗಳು. ಪ್ರಾಯಶಃ ಎಲ್ಲ ಸಣ್ಣ ಪುಟ್ಟ ನಿರೂಪಣೆಯನ್ನೂ ಒಂದು ಕತೆ ಎಂದು ಅವರು ಪರಿಗಣಿಸಿದಂತಿದೆ. ಇಲ್ಲಿನ ಕಥಾತಂತ್ರವೆಂದರೆ ಇಡೀ ನಿರೂಪಣೆ ಒಂದು ಕತೆಯಿಂದಲೇ ಆರಂಭಗೊಳ್ಳುವುದು. ಅಂದರೆ ಒಂದು ದಿವಸ ಕೈಲಾಸದಲ್ಲಿ ಗಿರಿರಾಜತನೂಜೆ ತನಗೊಂದು ಅಪೂರ್ವ ಕತೆಯನ್ನು ಹೇಳಬೇಕೆಂದು ಹರನನ್ನು ಕೇಳುವುದು, ಅವನು ಹೇಳಿದ ಕತೆಯನ್ನು ಅಲ್ಲಿದ್ದು ಕೇಕೊಂಡಿದ್ದ ಪುಷ್ಪದತ್ತನೆಂಬ ಗಣಪ್ರಧಾನನು, ಕಾರಣಾಂತರದಿಂದ ಗುಣಾಢ್ಯನೆಂಬ ಸತ್ಕವಿಯಾಗಿ ಹುಟ್ಟಿದವನು, ಪೈಶಾಚಿಕ ಭಾಷೆಯಲ್ಲಿ 'ಬೃಹತ್ಕಥೆ'ಗಳಾಗಿ ಬರೆದಿಟ್ಟ; ಅವುಗಳಲ್ಲಿ ರತ್ನಸದೃಶವಾದ ಐದನ್ನು ವಸುಭಾಗ ಸಂಸ್ಕೃತದಲ್ಲಿ ಬರೆದ; ಅದನ್ನೇ ಈಗ ದುರ್ಗಸಿಂಹ ಹೇಳಿರುವುದು. ಇದು ಇಡೀ ಗ್ರಂಥಕ್ಕೆ ಪೀಠೀಕಾರೂಪವಾದ ಒಂದು ಕತೆ. ಆ ಬಳಿಕ ವಸುಭಾಗಭಟ್ಟನ ಕೃತಿಯನ್ನು ತಾನು ಪೊಸತಾಗಿರೆ ವಿರಚಿಸುವ ಪ್ರಯತ್ನಮಾಡಿರುವುದಾಗಿ ಹೇಳಿ, "ಆ ಕಥಾಪ್ರಪಂಚವೆಂತೆಂದೊಡೆ" ಎಂದು ಕಥನಕ್ಕೆ ಆರಂಭಿಸುತ್ತಾನೆ. ಹಿಂದೆ ನೋಡಿರುವಂತೆ.  "ಆ ಕಥಾಪ್ರಪಂಚವೆಂತೆಂದೊಡೆ" "ಆ ಕಥಾಪ್ರಪಂಚವಮೆಂತೆನೆ" ಎಂಬ ವಾಕ್ಯಗಳು ಪ್ರತಿ ತಂತ್ರದ ಆರಂಭದಲ್ಲಿಯೂ ಅದಕ್ಕೆ ಸಂಬಂಧಿಸಿದ ಕತೆಗಳನ್ನು ಆರಂಭಿಸುವ ಮುಂಚೆ ಕವಿ ಹೇಳುವ ಮಾತು. ಅಂದರೆ, ಒಂದೊಂದು ತಂತ್ರಕ್ಕೆ ಸಂಬಂಧಿಸಿದ ಕತೆಗಳೆಲ್ಲ ಸೇರಿ ಒಂದು 'ಕಥಾಪ್ರಪಂಚ'ವಾಗುತ್ತದೆ. ಹೀಗಾಗಿ ಕಥಾಪ್ರಪಂಚ ಎಂದರೆ ಕವಿಯ ಪ್ರಕಾರ, ಪರಸ್ಪರ ಹೆಣೆದುಕೊಂಡ ಕತೆಗಳ ಒಂದು ಗುಚ್ಛ. ಹರಗಿರಿಜೆಯರ ಪ್ರಸಂಗದ ನಂತರ ಬರುವುದು 'ಪಂಚತಂತ್ರ'ದ ಹಿನ್ನೆಲೆಯಾಗಿ ಬರುವ ಅಮರಶಕ್ತಿ ಎಂಬ ರಾಜ ಮತ್ತವನ ಉಡಾಳ ಮಕ್ಕಳ ಕತೆ. ಆ ಮಕ್ಕಳಿಗೆ ತಿಳಿವಳಿಕೆ ಬರುವಂತೆ ಮಾಡುವ ಜವಾಬ್ದಾರಿ ಹೊತ್ತ ವಸುಭಾಗನು ಕತೆಗಳ ಮೂಲಕ ಅವರನ್ನು ತಿದ್ದಲು ಮೊದಲೇ ನಿರ್ಧರಿಸಿರಲಿಲ್ಲ. ಮಾತನ್ನೇನೋ ಕೊಟ್ಟದ್ದಾಗಿತ್ತು; ಆ ಹುಡುಗರೊಡನೆ ಬರುವಾಗ ಅವರ ನಡವಳಿಕೆಯನ್ನು ನೋಡಿ ವಸುಭಾಗನಿಗೆ ಇವರನ್ನು ತಿದ್ದುವುದು ಹೇಗೆಂಬ ಚಿಂತೆಯಾಯಿತು. ದಾರಿಯಲ್ಲಿ ಹೋಗುವಾಗ ಅವರನ್ನು ಹದ್ದುಬಸ್ತಿನಲ್ಲಿಡಲು ಕತೆ ಹೇಳುವ ಪ್ರಯತ್ನ ಮಾಡಿ ಸಿರಿವಾಸಿಯ ನರಿಯ ಕತೆಯನ್ನು ಹೇಳಿದ. ಹುಡುಗರು ಅದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದಾಗ, ಅಂದರೆ ಇನ್ನೊಂದು ಕತೆ ಹೇಳಿ ಎಂದು ಕೇಳಿಕೊಳ್ಳುವುದು ಅವನಲ್ಲಿ ಹೊಸ ಆಲೋಚನೆ ಬರುವಂತೆ ಮಾಡಿತು. ಅದಕ್ಕಾಗಿ ತಾನು ಹೇಳಿದ ಕತೆಯನ್ನು ಮತ್ತೆ ಹೇಳಲು ಕೇಳಿ ಅವರು ಮೂವರು "ಕಥೆಯನಿಂಬಾಗಿ ಸಂಭಾಳಿಸಿಖ" ಹೇಳಿದರಂತೆ. ಈಗ ಅವರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉಪಾಯ ಹೊಳೆಯಿತು. ಇಲ್ಲಿಯವರೆಗಿನದು 'ಪೀಠಿಕಾ ಪ್ರಕರಣ'; ಇದರಲ್ಲಿಯೇ ಮೂರು ಕತೆಗಳಿವೆ.
ಕವಿ ಮತ್ತೆ ಮತ್ತೆ ಹೇಳುವುದು ಎಂದರೆ ಇಲ್ಲಿರುವುದು ಐದು ಕತೆಗಳು ಎಂಬ ಮಾತನ್ನು. ಒಂದೊಂದರಲ್ಲಿಯೂ ಇರುವ ಕತೆಗಳು ಮೂಲತಃ ಸ್ವತಂತ್ರವಲ್ಲ: ಆಯಾ ತಂತ್ರದ ಮೂಲ ಕತೆಗೆ ಆನುಷಂಗಿಕವಾಗಿ ಬರುವಂಥವು. ಪ್ರತಿ ತಂತ್ರದ ಆರಂಭದಲ್ಲಿಯೂ ಅಡಕವಾಗಿ ಕತೆಯೊಂದನ್ನೊಳಗೊಂಡ ಒಂದು ಸಂಸ್ಕೃತ ಶ್ಲೋಕವಿರುತ್ತದೆ, ದುರ್ಗಸಿಂಹನು ಅದರ ತಾತ್ಪರ್ಯವನ್ನು ಕನ್ನಡದಲ್ಲಿ ನೀಡಿ, ಆ ಮುಂದೆ ಅದನ್ನು ವಿಸ್ತರಿಸುತ್ತಾನೆ. ಅದು ಆರಂಭವಾಗುವುದು ಉಜ್ಜಯಿನಿಯ ವರ್ಧಮಾನನ ಕತೆಯಿಂದ. ಅವನು ಧನಸಂಪಾದನೆಗಾಗಿ ವ್ಯಾಪಾರ ಮಾಡಲು ಪರದೇಶಕ್ಕೆ ಹೊರಡುವುದು, ಮಾರ್ಗಮಧ್ಯದಲ್ಲಿನ ಅಡವಿಯಲ್ಲಿ ಸಂಜೀವಕನೆಂಬ ಎತ್ತು ತೊಡೆ ಮುರಿದು ಮುಂದೆ ಹೋಗಲಾಗದುದು, ವರ್ಧಮಾನನು ನಾಲ್ವರು ಸೇವಕರಿಗೆ ಅದನ್ನು ನೋಡಿಕೊಳ್ಳಲು ಹೇಳಿ ಮುಂದೆ ಸಾಗುವುದು, ಆ ಸೇವಕರು ಕಾಡಿನಲ್ಲಿರಲಾಗದೆ ಅಲ್ಲಿಂದ ಹೊರಟು ಸಂಜೀವಕ ಒಡೆಯನ ಬಳಿ ಬಂದು ಸತ್ತಿತೆಂದು ಸುಳ್ಳು ಹೇಳುವುದು, ಅದನ್ನು ಕೇಳಿದ ವರ್ತಕನು ವಿಷಾದದಿಂದ ಮುಂದೆ ಸಾಗುವುದು - ಇಷ್ಟು ಪೀಠಿಕೆಯಾಗಿ ಬರುತ್ತದೆ. ಮುಂದೆ ಬರುವುದು ಕಾಡಿನಲ್ಲಿ ಆ ಸಂಜೀವಕ ಬಾಳಿದ ಕತೆ. ಕಾಡಿನಲ್ಲಿದ್ದ ಪಿಂಗಳಕ ಎಂಬ ಸಿಂಹವು ದೂರದಲ್ಲಿ ಸಂಜೀವಕ ಮಾಡಿದ ಗುಟುರನ್ನು ಕೇಳಿ ಭಯಪಟ್ಟುದು, ಅದರಿಂದ ಭೀತನಾಗಿದ್ದ ರಾಜನನ್ನು ಕಂಡ ಮಂತ್ರಿಗಳಾದ ಇಬ್ಬರು ನರಿಗಳಲ್ಲಿ ಒಂದಾದ ಕರಟಕ ರಾಜನ ಕಷ್ಟ ವಿಚಾರಿಸಲು ಮುಂದಾದಾಗ, ದಮನಕನೆಂಬ ಮತ್ತೊಂದು ನರಿಮಂತ್ರಿಯು ಕೇಳದಿರುವುದೇ ಸರಿ ಎಂಬ ತನ್ನ ಮಾತನ್ನು ಸಮರ್ಥಿಸಿಕೊಳ್ಳಲು 'ಕಚದ್ರುಮನ ಕತೆ'ಯನ್ನು ಹೇಳುತ್ತದೆ. ಅದರಲ್ಲಿನ ನೀತಿಗನುಗುಣವಾಗಿ ಪ್ರತಿಯೊಂದನ್ನೂ ದೂರ ನಿಂತು ನೋಡುವುದೇ ಸರಿ, ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ವಿವರಿಸಲು ಕರಟಕನು 'ಕೀಲನುರ್ಚಿದ ಕೋಡಗನ ಕಥೆ'ಯನ್ನು ಹೇಳಿ "ಉದರಂಭರಣಮಾತ್ರಮಪ್ಪಂತೆ ರಾಜಾನುಸೇವನಂಗೆಯ್ದಿರ್ಪೆವು" ಎನ್ನುತ್ತದೆ. ಅದನ್ನೊಪ್ಪದ ದಮನಕನು, ಆ ನೀತಿಯು ಸರಿಯಲ್ಲವೆಂದೂ ಆಳುವವನು ಎಂಥವನೇ ಆಗಲಿ ಅವನ ಹಿತವನ್ನು ಯೋಚಿಸಬೇಕು ಎಂದು ಪಿಂಗಳಕನನ್ನು ಭಯದ ಕಾರಣವೇನೆಂದು ವಿಚಾರಿಸಿದಾಗ ಗುಟುರಿನ ವಿಷಯ ತಿಳಿಸಿ, ಶಬ್ದವೇ ಅಷ್ಟು ಭಯಂಕರವಾಗಿರಬೇಕಾದರೆ ಅದನ್ನು ಮಾಡಿದ ಪ್ರಾಣಿ ಮತ್ತೆಷ್ಟು ಉಗ್ರವಾಗಿರಬೇಕು, ಹಾಗಾಗಿ ಆ ಕಾಡನ್ನೇ ಬಿಟ್ಟು ಹೋಗುವ ತನ್ನ ಆಲೋಚನೆಯನ್ನು ಪಿಂಗಳಕನು ಮುಂದಿಡುತ್ತಾನೆ. ಅದನ್ನು ಸಮರ್ಥಿಸಲು 'ನರಿಯುಂ ಬಿಲನುಂ' ಎಂಬ ಕತೆಯನ್ನು ಹೇಳುತ್ತದೆ. ಹೀಗೆಯೇ ಮುಂದಿನ ಕತೆಗಳು ಒಂದರೊಳಗೊಂದು ತಳುಕು ಹಾಕಿಕೊಂಡು ಮುಂದುವರಿಯುವುದರಿಂದ ಇಲ್ಲಿರುವುದು ಐದೇ ಕತೆಗಳು ಎಂದು ಕವಿಯು ಸೂಚಿಸುವುದು.
ಕಥನದ ನಡುವೆ ತಾನು ಹೇಳುವ ಮಾತಿಗೆ ಪೂರಕವಾಗಿ ಸಮಯಕ್ಕೆ ಸೂಕ್ತವಾದ ನಾಣ್ಣುಡಿ ಮತ್ತು ನೀತಿವಾಕ್ಯಗಳನ್ನು ಇಲ್ಲಿನ ಪ್ರತಿ ಪಾತ್ರವೂ ಹೇಳುತ್ತದೆ.  ಹೀಗೆ ಹೇಳುವುದೇ ಇಲ್ಲಿನ ಕಥನಕ್ರಮಕ್ಕೆ ಒಂದು ಅಧಿಕೃತತೆಯನ್ನು ಒದಗಿಸುತ್ತದೆ. ಹಾಗೆಯೇ ಪ್ರಾಚೀನ ರಾಜನೀತಿ ಗ್ರಂಥಗಳಿಂದ ಸಮಯೋಚಿತವಾದ ಶ್ಲೋಕಗಳನ್ನೂ ಹೇಳಿಕೆಗಳನ್ನೂ ನೀಡುವ ಮೂಲಕ ಹೇಳಲಾದ ಕತೆಯ ಹಿಂದಿನ ನೀತಿಯನ್ನು ಸ್ಪಷ್ಟಪಡಿಸಿ, ಕತೆಗಳನ್ನು ಅರ್ಥಮಾಡಿಕೊಳ್ಳಬೇಕಾದ ಪರಿಯ ಬಗ್ಗೆಯೂ ವಿವರಣೆ ನೀಡಿದಂತಾಗುತ್ತದೆ. ತನ್ನ ಕಾಲಕ್ಕೆ ಒಪ್ಪಿತವಾಗಿದ್ದ ರಾಜನೀತಿಯ ಸ್ವರೂಪವನ್ನು ವಿವರಿಸುವುದೇ ಕತೆಗಾರನ ಆಶಯ. ಆದರೆ ಪ್ರತಿಯೊಂದು ನೀತಿಗೂ ಅನೇಕ ಮುಖಗಳಿರುತ್ತವೆ; ಅವುಗಳನ್ನೆಲ್ಲ ಪರಿಶೀಲಿಸಿ ಕಾಲಕ್ಕನುಗುಣವಾದ ನಿರ್ಣಯವನ್ನು ತೆಗೆದುಕೊಳ್ಳುವುದೇ ರಾಜನೀತಿಜ್ಞನ ರೀತಿ. ಹೀಗಾಗಿ ಒಂದು ಸನ್ನಿವೇಶವನ್ನು ವಿವಿಧ ದೃಷ್ಟಿಕೋನಗಳಿಂದ ಪರಿಭಾವಿಸಿ ಅಂತಿಮ ತೀರ್ಮಾನಕ್ಕೆ ಬರಬೇಕಾದ ಬಗೆಯನ್ನು ನಿದರ್ಶನಸಮೇತ ಮಂಡಿಸುವುದೇ ಇಲ್ಲಿನ ಕ್ರಮ. ಈ ಹೆಣಿಕೆಯ ಕಾರಣದಿಂದಲೇ ಇಲ್ಲಿನ ಕತೆಗಳಿಗೆ ಅರ್ಥವಂತಿಕೆ ಉಂಟಾಗುವುದು. ಕತೆಗಳನ್ನು ಬಿಡಿಬಿಡಿಯಾಗಿ ನೋಡಿದಾಗಲೂ ಅವುಗಳು ಸ್ವಾರಸ್ಯಕರವಾಗಿಯೇ ಕಾಣುತ್ತವೆ, ಆದರೆ ಅದರ ಪ್ರಸ್ತುತತೆ ಇರುವುದು ಅದನ್ನು ನಿರೂಪಿಸುವ ಹಿನ್ನೆಲೆಗೆ ಅನುಗುಣವಾಗಿರುವ ಅದರ ಬಗೆಯಲ್ಲಿ. ಹೀಗಾಗಿ ಕೇವಲ ಮನರಂಜನೆಗಾಗಿ ಇಲ್ಲಿನ ಕತೆಗಳಿಲ್ಲ; ಒಂದೊಂದು ಕತೆಗೂ ತನ್ನದೇ ಆದ ಒಂದು ದೃಷ್ಟಿಕೋನವಿದೆ, ಅದರ ನಿರೂಪಣೆಗೆ ಸಮರ್ಥನೆಯಿದೆ.
'ಕರ್ಣಾಟಕ ಪಂಚತಂತ್ರ'ದ ಗದ್ಯದ ಮಹತ್ವ
ಕನ್ನಡ ಗದ್ಯದ ಬೆಳವಣಿಗೆಯಲ್ಲಿ 'ಪಂಚತಂತ್ರ'ಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಈ ಕೃತಿಯನ್ನು ಚಂಪೂ ಎಂದು ಸಾಮಾನ್ಯವಾಗಿ ಗುರುತಿಸುತ್ತೇವಾದರೂ, ಅದರ ಸ್ವರೂಪ ಇತರ ಚಂಪೂ ಕೃತಿಗಳಿಗಿಂತ ಭಿನ್ನವಾದುದು. ಇದುವರೆಗಿನ ಚಂಪೂ ಕೃತಿಗಳೆಲ್ಲ ಏಕಕತಾನವನ್ನು ಪಡೆದಂಥಹವು, ಅಂದರೆ ಒಂದೇ ಕತೆಯನ್ನು ವಿವರವಾಗಿ ನಿರೂಪಿಸುವ ಕ್ರಮ, ಆದರೆ 'ಪಂಚತಂತ್ರ' ಇದಕ್ಕೆ ಹೊರತಾಗಿದೆ. ಇಲ್ಲಿನ ಕತೆಗಳು ಬಿಡಿಬಿಡಿಯಾದವು; ಒಂದೊಂದು ತಂತ್ರದಲ್ಲಿಯೂ ಒಂದರಿಂದ ಇನ್ನೊಂದು ಕತೆ ಹುಟ್ಟಿದರೂ, ಆ ಕತೆಯೇ ಅಲ್ಲಿ ಅನಿವಾರ್ಯವಲ್ಲ; ಬೇರೊಂದು ಅಂತಹ ಕತೆಯನ್ನು ಹಾಕಿದರೂ ಹೊಂದುತ್ತದೆ. ಹಿಂದಿನ ಚಂಪೂಕೃತಿಗಳ ಮುಖ್ಯ ಲಕ್ಷಣ ಗದ್ಯಪದ್ಯಸಮಾಗಮವಾಗಿದ್ದರೂ, ಅಲ್ಲೆಲ್ಲ ಬಹುಪಾಲು ಪದ್ಯ, ಅಲ್ಪಸ್ವಲ್ಪ ಗದ್ಯ ಇರುತ್ತಿತ್ತು. ಪದ್ಯದಲ್ಲಿ ಬಿಗಿಯಾದ ರಚನೆ, ಗದ್ಯದಲ್ಲಿ ಸಡಿಲವಾದ ರಚನೆ; ಅಲ್ಲಿನ ಗದ್ಯದಲ್ಲಿ ನಿಯಮಿತ ಗಾತ್ರವಿರುವುದಿಲ್ಲ. ಚಿಕ್ಕ ವಾಕ್ಯಖಂಡ, ಒಂದೇ ವಾಕ್ಯ, ವಾಕ್ಯವೇಷ್ಟನ ಮತ್ತು ದೀರ್ಘ ಗದ್ಯ - ಯಾವುದಾದರೂ ಅಲ್ಲಿರುತ್ತದೆ; ಗದ್ಯದ ಗಾತ್ರ ಇಷ್ಟೇ ಇರಬೇಕೆಂಬ ನಿಯಮವಿಲ್ಲ. ಪದ್ಯವು ಹೆಚ್ಚು ಕಾವ್ಯಾತ್ಮಕತೆಯಿಂದ ಕೂಡಿದ್ದರೆ, ಗದ್ಯದಲ್ಲಿ ನಿರೂಪಣಾಪ್ರಾಧಾನ್ಯವಿರುತ್ತದೆ ಎಂದು ಅನ್ನಿಸಿದರೂ ಅದೂ ಒಂದು ನಿರ್ದಿಷ್ಟ ಲಕ್ಷಣದಂತೆ ಕಾಣುವುದಿಲ್ಲ. ಅಂದರೆ ಚಂಪೂಕವಿಗಳಲ್ಲಿ ಒಬ್ಬೊಬ್ಬರೂ ತಮ್ಮ,ದೇ ಆದ ರೀತಿಯಲ್ಲಿ ಗದ್ಯವನ್ನು ಬಳಸುತ್ತಾರೆ. ಆದರೆ ಒಟ್ಟಾರೆ ಚಂಪೂಕಾವ್ಯಗಳಲ್ಲಿ ಗದ್ಯಕ್ಕೆ ಎರಡನೆಯ ಸ್ಥಾನ ಎಂಬುದಂತೂ ನಿಸ್ಸಂದೇಹವಾದ ಅಂಶ.
ಇಂಥ ಸನ್ನಿವೇಶದಲ್ಲಿ ದುರ್ಗಸಿಂಹ ತನ್ನ 'ಪಂಚತಂತ್ರ'ದಲ್ಲಿ ಗದ್ಯಕ್ಕೇ ಹೆಚ್ಚಿನ ಮಾನ್ಯತೆ ನೀಡಿರುವುದು ಕಂಡುಬರುತ್ತದೆ. ನೀತಿನಿರೂಪಣೆಯ ಉದ್ಧೇಶದಿಂದ ಹೇಳಿದ ಕತೆಗಳಾದ್ದರಿಂದ ಕಾವ್ಯಾತ್ಮಕತೆಗಿಂತ ಸುಲಲಿತ ಸಂವಹನ ಪ್ರಮುಖ ಉದ್ದೇಶ. ಹಾಗಾಗಿ ಇಲ್ಲಿನ ಗದ್ಯಪ್ರಾಚುರ್ಯವು ವಸ್ತುವಿಗೆ ಅನುಗುಣವಾಗಿದೆ. ಅಲ್ಲದೆ, ಇದು ಕಿರಿಯರಿಗೆ ಹೇಳಿದ ಕತೆಗಳು, ಭಾವನೆಗಿಂತ ಆಲೋಚನೆಗೆ ಇಲ್ಲಿ ಪ್ರಾಮುಖ್ಯ. ಭಾವನೆಯ ಭಾಷೆಯಾದ ಪದ್ಯಕ್ಕಿಂತ ವಿಚಾರಪ್ರಾಧಾನ್ಯವಾದ ಗದ್ಯ ಇಲ್ಲಿ ಅಪೇಕ್ಷಣೀಯ. ಆದರೆ ಇಲ್ಲಿಯೂ ಪದ್ಯ ಮತ್ತು ಗದ್ಯಗಳಿಗೆ ನಿರ್ದಿಷ್ಟ ಕಾರ್ಯವಿದೆಯೆಂದು ನಿಖರವಾಗಿ ಹೇಳಲಾಗುವುದಿಲ್ಲ ಸಂಸ್ಕೃತದ ಶ್ಲೋಕ ಮತ್ತು ಸುಭಾಷಿತಗಳನ್ನಿಲ್ಲಿ ಅವುಗಳ ವಿಚಾರದ ಅಧಿಕೃತತೆಗಾಗಿ ಬಳಸಲಾಗಿದೆ. ಹಲವು ಕಡೆಗಳಲ್ಲಿ ಕತೆಗಳು ಪದ್ಯಗಳೊಂದಿಗೆ ಆರಂಭವಾಗುತ್ತವೆ. ಈ ಪದ್ಯಗಳು ಷಟ್ಪದಿಗಳಲ್ಲಿನ ಸೂಚನಾಪದ್ಯದಂತೆ ಮುಂದೆ ಬರುವ ವಿಷಯದ ಸಂಗ್ರಹರೂಪವೇನೂ ಆಗಿರುವುದಿಲ್ಲ. ಉದಾಹರಣೆಗೆ 'ಕೀಲನುರ್ಚಿದ ಕೋಡಗನ ಕಥೇ'ಯು ಆರಂಭಗೊಳ್ಳುವುದು ಒಂದು ಕಂದಪದ್ಯದಿಂದ. ಆದರೆ ಇದೇನೂ ಇಡೀ ಕತೆಯನ್ನು ಹಿಡಿದಿಟ್ಟುಕೊಂಡ ಪದ್ಯವಲ್ಲ; ಅದರ ಬದಲು ಕತೆಯ ಆರಂಭ ಅಷ್ಟೆ. "ಗಿರಿನಗರಮೆಂಬ ಪೊೞಲೊಳ್ ಧರೆಗಧಿನಾಥಂ ಸುಶರ್ಮನೆಂಬಂ ಲೋಕೋತ್ತರಮಾಗೆ ದೇವತಾಮಂದಿರಮಂ ಮಾಡಿಸುತಿರ್ಪಿನಂ ಕೆಲವು ದಿನಂ" ಎಂದು ಆರಂಭವಾಗುವ ಈ ಪದ್ಯದ ನಂತರ ಕತೆ ಮುಂದೆ ಅನೇಕ ಸಂಸ್ಕೃತ ಉಲ್ಲೇಗಳನ್ನೊಳಗೊಂಡು ಗದ್ಯಪದ್ಯಗಳೆರಡರಲ್ಲಿಯೂ ಮುಂದುವರಿಯುತ್ತದೆ. ಸಂಸ್ಕೃತ ಉಲ್ಲೇಖಗಳಿಗಿರುವಂತೆ ಖಚಿತ ಉದ್ದೇಶ ನಿರೂಪಣೆಯ ನಡುವಣ ಪದ್ಯಗಳಿಗಿಲ್ಲ. ಪೂರ್ತಿ ಗದ್ಯದಲ್ಲಿಯೇ ನೀರೂಪಿಸಿದ್ದರೂ ಆಗಬಹುದಿತ್ತು. ಪ್ರಾಯಶಃ ವೈವಿಧ್ಯಕ್ಕಾಗಿ, ಮತ್ತು ಮನಸೆಳೆಯುವುದಕ್ಕಾಗಿ ಕವಿ ಪದ್ಯಗಳನ್ನು ತಂದಿರಬಹುದು. ನಮ್ಮ ಅನೇಕ ಜಾನಪದ ನಿರೂಪಣೆಗಳ ಶೈಲಿಯು ಇದರ ಮೇಲೆ ಪ್ರಭಾವ ಬೀರಿ ಮಧ್ಯೆ ಮಧ್ಯೆ ಪದ್ಯ (ಅಲ್ಲಾದರೆ ಹಾಡು)ವನ್ನು ಬಳಸುವ ಪರಿಪಾಟ ಉಂಟಾಗಿರಬಹುದು. ಮೂಲ ಹೇಗಿತ್ತೋ ತಿಳಿಯದ್ದರಿಂದ ಇದು ವಸುಭಾಗನ ಶೈಲಿಯೋ ದುರ್ಗಸಿಂಹನದ್ದೋ ಎಂದು ಖಚಿತವಾಗಿ ಹೇಳುವುದಕ್ಕಾಗುವುದಿಲ್ಲ. ವಸುಭಾಗನನ್ನು ಅನುಸರಿಸಿರಬಹುದಾದರೂ ದುರ್ಗಸಿಂಹನು ತನ್ನ ಕಾಲದ ಜನಪ್ರಿಯ ನಿರೂಪಣಾಕ್ರಮದಿಂದ ಪ್ರಭಾವಿತನಾಗಿರಬಹುದು.
'ಪಂಚತಂತ್ರ'ವು ತನ್ನ ಹಿಂದಿನ ಚಂಪೂ ಕೃತಿಗಳಿಗಿಂತ ಹೆಚ್ಚು ಪ್ರಮಾಣದ ಗದ್ಯವನ್ನು ಬಳಸಿಕೊಂಡಿದೆಯೆಂಬ ಕಾರಣವಷ್ಟೇ ಇದರ ವೈಶಿಷ್ಟ್ಯವಲ್ಲ. ಅದನ್ನು ಬಳಸಿಕೊಂಡಿರುವ ರೀತಿ, ಇಲ್ಲಿನ ಗದ್ಯಶೈಲಿ ಮತ್ತು ಅದರ ಹೊಸತನ ಇವುಗಳು ಮುಂದೆಯೂ ಪ್ರಭಾವ ಬೀರುವಷ್ಟು ಪರಿಣಾಮಕಾರಿಯಾಗಿವೆ. ಕತೆಯ ವಸ್ತು ಎಷ್ಟು ಮುಖ್ಯವೋ ಅದರ ನಿರೂಪಣಾ ಕ್ರಮವೂ ಅಷ್ಟೇ ಮುಖ್ಯ ಎಂಬುದು ಕವಿಗೆ ತಿಳಿದಿದೆ. ಹಾಗೆ ನೋಡಿದರೆ, ಕತೆಯಲ್ಲಿ ಏನು ಹೇಳಬೇಕು ಎಂಬುದಕ್ಕಿಂತ ಅದನ್ನು ಹೇಗೆ ಹೇಳಬೇಕು ಎಂಬುದೇ ಮುಖ್ಯವಾಗುತ್ತದೆ. ತನ್ನ ನಿರೂಪಣೆಯನ್ನು ಪೂರ್ತಿ ಕೇಳುವಂತೆ ಮಾಡುವ ರೀತಿ ಕತೆಗಾರನಿಗೆ ಬೇಕಾದ ಗುಣ. ಹಾಗಾಗಿ ಶೈಲಿಗೆ ಇಲ್ಲಿ ಮೊದಲ ಮಣೆ. ಕನ್ನಡ ಗದ್ಯ ಹಿಂದೆ ಪೆಡಸಾಗಿತ್ತು. ಎಷ್ಟೋ ಕಡೆಗಳಲ್ಲಿ ಪದ್ಯಕ್ಕಿಂತ ಹೆಚ್ಚಿನ ಗೋಜಲು ಗದ್ಯದಲ್ಲಿರುತ್ತಿತ್ತು. ಆದರೆ ದುರ್ಗಸಿಂಹನ ಗದ್ಯ ಸ್ಫಟಿಕಸ್ಪಷ್ಟವಾದುದು. ಅನೇಕ ಕಡೆಗಳಲ್ಲಿ ಗದ್ಯದಲ್ಲಿಯೇ ಕಥೆ ಆರಂಭಗೊಳ್ಳತ್ತದೆ, ಅದೂ ಎಂದಿನ ಕತೆ ಹೇಳುವ ಧಾಟಿಯಲ್ಲಿ. ಉದಾಹರಣೆಗೆ 'ಸೊಸೆಯ ಮಾತಂ ಕೇಳದತ್ತೆಯ ಕಥೆ' ಎಂಬುದು ಈ ರೀತಿ ಶುರುವಾಗುತ್ತದೆ: "ಸಾಲಗ್ರಾಮಮೆಂಬ ಮಹಾಗ್ರಹಾರದೊಳ್ ಗ್ರಾಮಾಧಿಪತಿಯ ಸತಿ ಸುಮತಿಯೆಂಬಳ್. ಆಕೆ ಒಂದು ದಿವಸಂ ತನ್ನ ಸೊಸೆಯಪ್ಪ ಸೌಮಿತ್ರಿಗೆ ಇಂತೆಂದಳ್: 'ಆಂ ನೆರೆಯೂರ್ಗೆ ಪೋಗಿ ಬಂದಪೆಂ, ನೀಂ ಮನೆಯಂ ಸುಯ್ದಾನಂ ಮಾಡಿಕೊಂಡಿರು' ಎಂದು ಪೇಳ್ದು ಪೋದಳ್. ಅನ್ನೆಗಂ ಸೌಮಿತ್ರಿಯಲ್ಲಿಗೆ ಒರ್ವ ಪಾರ್ವಂ ಬಂದು, 'ಮಗಳೆ, ನೀನಿಂದು ಪನ್ನಿರ್ವರ್ ಪಾರ್ವರ್ಗೆ ಸಾರಮಪ್ಪ ಕ್ಷೀರಭೋಜನಮಂ ಮಾಡಿಸಿದೆಯಪ್ಪೊಡೆ ನಿನಗೆ ಕನಕಲಾಭಮುಂ ಪುತ್ರಲಾಭಮುಂ ಮನೋರಥಸಿದ್ಧಿಯುಂ ಅಕ್ಕುಂ' ಎನೆ, ಸೌಮಿತ್ರಿ ಸುಮತಿಯಪ್ಪುದಂ ತನ್ನ ಮನದೊಳಿಂತೆಂದಳ್" ಇಲ್ಲಿನ ಒಂದೆರಡು ಕಡೆ ಪದವಿಭಾಗ ಮಾಡಿ ಲೇಖನಚಿಹ್ನೆಗಳನ್ನು ಅಳವಡಿಸಿದೆ, ಅಷ್ಟೆ. ಹೀಗಾಗಿ ಎಂತಹ ಸರಳವಾದ, ನೇರವಾದ ನಿರೂಪಣಾಶೈಲಿ ಇಲ್ಲಿನದು ಎಂಬುದು ವೇದ್ಯವಾಗುತ್ತದೆ.
ಹಿಂದೆಯೇ ಗಮನಿಸಿದಂತೆ ಕೆಲವೆಡೆ ಪದ್ಯದಿಂದ ಕತೆ ಆರಂಭಗೊಳ್ಳುತ್ತದೆ. ನಿದರ್ಶನಕ್ಕೆ 'ದುಷ್ಟಬುದ್ಧಿಯುಂ ಧರ್ಮಬುದ್ಧಿಯುಂ' ಎಂಬ ಕತೆಯನ್ನು ನೋಡಿ. ಮೊದಲಿಗೆ "ನ್ಯಗ್ಭೂತಸುರಪುರಂ ಸುವಣಿಗ್ಭಾಸಿ ಸಮಸ್ತವಸ್ತು ಪರಿಪೂರ್ಣಂ ಸಮ್ಯಗ್ಭವನರುಚಿರಮುತ್ತರ ದಿಗ್ಭಾಗದೊಳುಂಟು ಮಧುರೆಯೆಂಬುದು ನಗರಂ" ಎಂಬ ಕಂದ ಬಂದು ಆಮೇಲೆ, "ಅಂತಾ ನಗರದೊಳಗೆ ಧರ್ಮಬುದ್ಧಿಯುಂ ದುಷ್ಟಬುದ್ಧಿಯುಮೆಂಬಿರ್ವರ್ವಣಿಕ್ಪುತ್ರರ್" ಎಂದು ಮುಂದುವರಿಯುತ್ತದೆ, ಆರಂಭದ ಪದ್ಯ ಗದ್ಯಕ್ಕಿಂತ ಭಿನ್ನವಾಗೇನೂ ಇಲ್ಲ.. ಅಷ್ಟೇ ಸರಳವಾಗಿಯೂ ನೇರವಾಗಿಯೂ ಇದೆ. ಹೀಗಾಗಿ ದುರ್ಗಸಿಂಹನು ಆರಂಭದಲ್ಲಿ ಪದ್ಯ ಬಳಸುವುದು ವೈವಿಧ್ಯಕ್ಕಾಗಿಯೇ ವಿನಾ ಅದಕ್ಕೆ ವಿಭಿನ್ನ ಕಾರ್ಯವಿದೆ ಎಂಬುದಕ್ಕಲ್ಲ.
ದುರ್ಗಸಿಂಹನ ಗದ್ಯವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಬಗೆಯ ಪಾಕವನ್ನು ಸೃಷ್ಟಿಸಿತೆಂದು ಹೇಳಬೇಕು. 'ವಡ್ಡಾರಾಧನೆ' ಮತ್ತು 'ಚಾವುಂಡರಾಯಪುರಾಣ'ದಂತಹ ಕೃತಿಗಳು ಸಂಪೂರ್ಣ ಗದ್ಯದಲ್ಲಿ ಆವರೆಗೆ ಬಂದಿದ್ದರೂ ಅವು ಪ್ರೌಢಗದ್ಯವನ್ನು ಬಳಸಿಕೊಂಡವು. ಆದರೆ ದುರ್ಗಸಿಂಹನು ವೃತ್ತಗಳನ್ನು ಬರೆಯುವಾಗ ಪ್ರೌಢವಾಗಿ ಬರೆದರೂ ಗದ್ಯನಿರೂಪಣೆಯಲ್ಲಿ ದೇಸಿಯ ಪ್ರಭಾವಕ್ಕೊಳಗಾಗಿದ್ದಾನೆ. ಉದಾಹರಣೆಗೆ ಕೆಳಗಿನ ಭಾಗವನ್ನು ನೋಡಬಹುದು (ಇದು 'ನರಿಯೂ ಭೇರಿಯೂ' ಎಂಬ ಕತೆಯ ಭಾಗ):
ಪಾವೃಡದ ಮೇಪಟಲಾಂತರಿತೇಂದುವಿಭಾಸಿಯುಂ ಸುರಾ
ಜೀವಜಃ ಕದಂಬವನಕೈರವಚಾರು ಕಳಿಂದಕನ್ಯಕಾ
ಜೀವನವರ್ಧಿತಾಯತ ತಮಾಲವನಾಂತರದಲ್ಲಿ ನಿಂದ ಸಂ
ಜೀವಕನಂ ಮೃಗೇಂದ್ರಸಚಿವಾಗ್ರಣಿ ಕಂಡನಖಂಡಸತ್ತ್ವನಂ
ವ|| ಅಂತುಕಂಡು ಮುನ್ನಮಡವಿಯೊಳ್ ಪಡೆವ ಬೀಡಿನೆೞ್ತುಗಳಂ ದೂರದೊಳ್ ನೋಡಿಯುಂ ಸಮೀಪದೊಳಾಡಿಯುಂ ಅವುದಾಗಿಯುಂ ಸಂಜೀವಕಂ ಸ್ವೇಚ್ಛಾವಿಹಾರದಿಂ ವರ್ಣಗಂಧಗತಿಸ್ವರಂಗಳಿನಪೂರ್ವಾಂಗನಪ್ಪುದಂ ಕಿದು ಬೇಗಂ ಸಂದೆಗಂಬಟ್ಟು ಸಮೀಪಕ್ಕೆ ಬಂದು ನಿಶ್ಚಯಮೆೞ್ತಪ್ಪುದನದು ನರಿ ಹರಿಯ ಮರುಳ್ತನಕ್ಕೆ ನಕ್ಕು ನಾನೀಯೆೞ್ತನೆೞ್ತಂ ಕಂಡೆನೆಂದು ನಿಷ್ಕಪಟವೃತ್ತಿಯಿಂ ಕೂರ್ತು  ನಮ್ಮರಸಂಗೆ ಪೇೞ್ವೆನಪ್ಪೊಡೆ ನಾನೇತರ್ಕಂ ಬಾರ್ತೆಯಾಗಲಱಿಯೆಂ ಅಱಿಂದರಸಂಗೆ ನಾನೇ ಮುಖ್ಯಪ್ರಧಾನನಾಗಿರ್ಪ್ಪೊಡಂ ಕೃಪೆಯಂ ಪಡೆವೆನಪ್ಪೊಡಂ ಇದೇಕಾರಣಮೆಂದದು ಇದಂ ಪಿರಿದುಮಾಡಿ ಪೇೞ್ವೆನೆಂಬ ಬಗೆ ಮನದೊಳ್ ಮಿಗೆಯುಮದಾಕ್ಷಣದೊಳಲ್ಲಿಂ ತಳರ್ದು
ಈ ಕಾರಣದಿಂದ ಸ್ಪಷ್ಟವಾಗಿ ಪದ್ಯಗದ್ಯಗಳ ರಚನೆಗಳಲ್ಲಿನ ಭಾಷಾವ್ಯತ್ಯಾಸವನ್ನು ಗುರುತಿಸುವ ಹಾಗಾಯಿತು. ಇತರ ಚಂಪೂಕೃತಿಗಳಲ್ಲಿನ ಗದ್ಯಪದ್ಯಗಳ ಶೈಲಿಯು ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತಿದ್ದು, ಇಲ್ಲಿನ ಈ ವ್ಯತ್ಯಾಸದಿಂದ ಒಂದು ರೀತಿಯಲ್ಲಿ ನಿರೂಪಣೆಯು ಏಕತಾನತೆಯಿಂದ ಪಾರಾಗಿ ವೈವಿಧ್ಯಪೂರ್ಣವಾಗುವಂತಾಯಿತು. ಪ್ರಾಯಶಃ ವೃತ್ತಗಳ ರಚನೆಯಲ್ಲಿ ಕವಿಯು ಸಂಸ್ಕೃತಭೂಯಿಷ್ಠತೆಯನ್ನು ಉಳಿಸಿಕೊಳ್ಳಲು ಕಾರಣ ಅಕ್ಷರ ಛಂದಸ್ಸು ಮೂಲತಃ ಸಮಾಸಯುಕ್ತಶೈಲಿಯ ಸಂಸ್ಕತಕ್ಕೆ ತಕ್ಕನಾಗಿದ್ದು, ಕನ್ನಡದಲ್ಲಿ ಬರೆಯುವಾಗಲೂ ಆ ಬಿಗಿಯನ್ನುಳಿಸಿಕೊಳ್ಳುವುದು ಅನಿವಾರ್ಯವಾಗಿದ್ದುದು. ದುರ್ಗಸಿಂಹನು ಇದನ್ನರಿತು ಮೌಖಿಕ ಕಥಾನಿರೂಪಣೆಯಲ್ಲಿ ಆಡುಮಾತಿನ ನಿರೂಪಣೆಯ ನಡುವೆ ಛಂದೋಯುಕ್ತವಾದ ಹಾಡುಗಳನ್ನು ಹೇಳುವಾಗಿನ ಶೈಲಿಯನ್ನು ತನ್ನ ನಿರೂಪಣೆಯಲ್ಲಿ ಅಳವಡಿಸಿಕೊಂಡಿರಬಹುದು.
ಸಾಮಾನ್ಯವಾಗಿ ಚಂಪೂಕೃತಿಗಳಲ್ಲಿನ ಗದ್ಯವು ನಿರ್ದಿಷ್ಟ ಕಾರ್ಯವನ್ನೇನೂ ನಿರ್ವಹಿಸಲು ಬಳಕೆಗೊಂಡಂತೆ ಕಾಣುವುದಿಲ್ಲ. ಭಾವನಾಪ್ರಧಾನ ಅಭಿವ್ಯಕ್ತಿಗೆ ಪದ್ಯವನ್ನೂ ಯಾಂತ್ರಿಕ ನಿರೂಪಣೆಗೆ ಗದ್ಯವನ್ನೂ ಬಳಸಿಕೊಳ್ಳುವುದು ಇಲ್ಲಿನ ರೀತಿ ಎಂದು ಭಾವಿಸಲಾಗಿದೆಯಾದರೂ. ಇದನ್ನು ಎಲ್ಲ ಕಡೆಯೂ ಅನ್ವಯಿಸಲು ಸಾಧ್ಯವಿಲ್ಲ. ಪಂಪನಂತಹ ಕವಿಗಳು ಎಷ್ಟೋ ಕಡೆ ಬಳಸುವ ಗದ್ಯವೂ ಪದ್ಯದಂತೆಯೇ ಭಾವೋತ್ಕಟತೆಯನ್ನು ಪ್ರದರ್ಶಿಸುತ್ತವೆ. ಉದಾಹರಣೆಗೆ 'ಪಂಪಭಾರತ'ದ ಈ ಭಾಗವನ್ನು ನೋಡಿ: "ಎಂದು ವಿಳಯಕಾಳ ಜಳನಿಧರನಿನಾದದಿಂ ಗಿರಿ ತಾಟಿಸಿದಂತಾನುಂ ನೆಲಂ ಮೊೞಗಿದಂತಾನುಂ ಗಜಱಿ ಗರ್ಜಿಸಿ ನುಡಿದು ಮಹಾಪ್ರತಿಜ್ಞರೂಢನಾದ ಭೀಮಸೇನನ ನುಡಿಯಂ ಕೇಳ್ದು ಕೌರವರ್ ಕಡಲ ನಡುವಣ ಪರ್ವತದಂತಳ್ಕಾಡೆ ಕುರುವೃದ್ಧನುಂ ಬುದ್ಧಿವೃದ್ಧನುಮಪ್ಪ ಗಾಂಗೇಯಂ ಧೃತರಾಷ್ಟ್ರಂಗಿಂತೆಂದಂ" ಆದರೆ 'ಪಂಚತಂತ್ರ'ದಲ್ಲಿ ಗದ್ಯಪದ್ಯಗಳ ನಡುವಣ ವ್ಯತ್ಯಾಸ ಎದ್ದು ಕಾಣುವಂತಹುದು. ಇದರಿಂದ ದುರ್ಗಸಿಂಹ ಅವೆರಡರ ನಡುವಣ ಕಾರ್ಯವನ್ನು ನಿರ್ದಿಷ್ಟಗೊಳಸಿದ್ದಾನೆ. ಸಾಮಾನ್ಯ ಚಂಪೂಕವಿಗಳು ಗದ್ಯದಲ್ಲಿಯೂ ತಂದ ಪೆಡಸುತನಕ್ಕೆ ಇಲ್ಲಿ ಅವಕಾಶವಿಲ್ಲ. ಅದಕ್ಕೆ ಕಾರಣ ವಸ್ತುವೂ ಹೌದು ಎಂಬುದನ್ನು ಮರೆಯುವಂತಿಲ್ಲ. ಅಂದರೆ ಲೇಖಕನಿಗೆ ವಸ್ತುವಿನ ಸ್ವರೂಪದ ಎಚ್ಚರವೇ ಅವನ ಗದ್ಯಶೈಲಿಯನ್ನು ನಿಯಂತ್ರಿಸುವ ಸಾಧನವಾಗಿದೆಯೆನ್ನಬಹುದು.
ಚಂಪೂ ಎಂದರೆ ಪ್ರೌಢಿಮೆಯನ್ನು ಪ್ರದರ್ಶಿಸುವ ಅವಕಾಶ ಎಂದೇ ಬಹು ಮಂದಿ ಕವಿಗಳು ಭಾವಿಸಿದ್ದರು. ಪಂಪನಂತಹ ಶಕ್ತಿವಂತನು ಮಾತ್ರ ಇಡೀ ಚಂಪೂವಿಗೆ ದೇಸಿಯ ಲೇಪನವನ್ನು ಮಾಡಿ ಅದನ್ನು ಹೃದಯಕ್ಕೆ ಹತ್ತಿರವಾಗುವಂತೆ ಮಾಡಬಲ್ಲವನಾಗಿದ್ದ. ಆದರೆ ಅವನ ನಂತರದ ಚಂಪೂಕವಿಗಳು ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಇದೊಂದು ಅವಕಾಶ ಎಂದೇ ಭಾವಿಸಿದರು. ದುರ್ಗಸಿಂಹನ ನಂತರ ಬಂದ ರುದ್ರಭಟ್ಟನ 'ಜಗನ್ನಾಥವಿಜಯ'ದ ಶೈಲಿಯನ್ನು ಗಮನಿಸಿದರೆ ಈ ಭಾವನೆಯು ಹೇಗೆ ವ್ಯಾಪಕವಾಗಿತ್ತೆಂಬುದನ್ನು ನೋಡಬಹುದು. 'ಜಗನ್ನಾಥವಿಜಯ'ದ ಮೊದಲ ಆಶ್ವಾಸದ ಮೊದಲ ಐದು ಪದ್ಯಗಳಿಗೆ ಸಂಸ್ಕೃತದಲ್ಲಿ 'ಪಂಚಪಾಷಾಣವ್ಯಾಖ್ಯೆ'ಯನ್ನು ಬರೆಯುವಂತಹ ರೀತಿಯಿದ್ದುದು ಮಾತ್ರವಲ್ಲ, ಅವನ ಗದ್ಯದ ಒಂದು ತುಣುಕು ಹೀಗಿದೆ: "ಅಂತು ಭುಜಬಲಾಡಂಬರದಿನಂಗಳಂ ಕಳೆದುಕೊಳ್ವುದುಂ ಅಂಬರಂಬರಂ ಸಿಡಿಲ್ದೆೞ್ದು ದುರ್ಧರಕೋಪಾಟೋಪದಿಂ ಭಯಂಕರಾಕಾರನಾಗಿ ರಂಗಕಾರಂ ಸ್ವಕೀಯ ನಿಷ್ಠುರಭುಜಾಸ್ಪಾಲನದಿನೀ ಗೋಪಾಲ ಬಾಲಕರಂ ಮಚ್ಚಿಸುವೆನೆಂದು ತಕ್ಕುಮಿಕ್ಕು ಬರೆ". ಹೀಗಾಗಿ ಶೈಲಿಯು ವಸ್ತುವಿಗನುಗುಣವಾಗಿರಬೇಕೆಂಬ ಔಚಿತ್ಯಪ್ರಜ್ಞೆಯನ್ನು ಮಿಕ್ಕವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದುರ್ಗಸಿಂಹನು ಎಚ್ಚರದಿಂದ ಕಾಯ್ದುಕೊಂಡಿದ್ದಾನೆ ಎನ್ನಬಹುದು.
ದುರ್ಗಸಿಂಹನ ಗದ್ಯ ಅನೇಕವೇಳೆ ನೇರವೂ ಸರಳವೂ ಆದ ವಸ್ತುಸ್ಥಿತಿ ನಿರೂಪಣೆಯಷ್ಟೇ ಆಗಿರುತ್ತದೆ. ಇದರಿಂದ ಅವನ ಕಥನಕ್ಕೆ ವೇಗವೂ ಪ್ರಾಪ್ತವಾಗುತ್ತದೆ. ಸಂಸ್ಕೃತ ಶ್ಲೋಕವೊಂದಕ್ಕೆ ಅವನ ಟೀಕೆ ಹೀಗಿದೆ: "ತಗರ್ ಕಾದುವಲ್ಲಿ ನಡುವೊಕ್ಕು ನರಿ ಸತ್ತುದು. ಆಷಾಢಭೂತಿಯಿಂ ದೇವಶರ್ಮನಪ್ಪೆನ್ನ ಧನಂ ಪೋದುದು. ಸಾಲಿಗನ ಕೈಯೊಳ್ ದೂದವಿಯಪ್ಪವಳ್ ವೃಥಾ ಮೂಗಂ ಕೊಯಿಸಿಕೊಂಡಳ್. ಆ ಮೂರನರ್ಥಂಗಳ್ ತಮ್ಮಿಂ ತಾವೆ ಮಾಡಿಕೊಂಡುವು. ಎಂದಿಂತಿವರ ವೃತ್ತಾಂತಮಂ ಧರ್ಮಾದಿಕರಣರ್ಗೆ ದೇವಶರ್ಮಂ ಪೇೞ್ದು ನಾವಿದನ ಸಾವಂ ಮಾಣಿಸಿದಂ". ಅಂತೆಯೇ ಕಥನಕ್ರಮದಲ್ಲಿಯೂ ಈ ಸರಳ ನೇರ ನಿರೂಪಣೆ ವ್ಯಾಪಕವಾಗಿದೆ ಎಂಬುದು ಇಲ್ಲಿನ ವೈಶಿಷ್ಟ್ಯ. 'ಕಾಗೆ ಕೃಷ್ಣಸರ್ಪನಂ ಕೊಂದ ಕಥೆ' ಆರಂಭಗೊಳ್ಳುವುದು ಹೀಗೆ: "ಮಹಾನದೀತೀರದೊಳಿರ್ಪುದೊಂದು ಮಹಾವಟವಿಟಪಿ ಕೋಟರಮೆ ಕುಲಾಯಮಾಗಿ ಕಾಕಮಿಥುನಮಿರ್ಕುಂ ಅವರ ತತ್ತಿಗಳನಾ ಮರದ ಮೊದಲ ಪುತ್ತಿನೊಳಿರ್ಪುದೊಂದು ಪಾವು ಪಲಕಾಲಂ ತಿನುತ್ತಿರೆ ಆ ವಾಯಸಂ ತಪ್ತಾಯಸರಸಮಂ ಕುಡಿದಂತೆ ಮಲಮಲನೆ ಮರುಗಿ ಸೈಱಿಸಲಾರದೆ ಈ ಪಾವಿಂಗಾನಾವುದಾನುಮೊಂದುಪಾಯದೊಳ್ ಸಾವಂ ಮಾೞ್ಪೆನೆಂದು ತನಗೆ ಪರಮಮಿತ್ತರನಪ್ಪುದೊಂದು ಜಂಬುಕನಲ್ಲಿಗೆ ವಂದು ಶೋಕಂಗೆಯ್ಯೆ ... .." ಇಲ್ಲಿಯೂ ಕಥನಕ್ರಮ ನೇರವಾಗಿಯೂ ನಿರಾಡಂಬರವಾಗಿಯೂ ಕ್ಷಿಪ್ರಗತಿಯುಳ್ಳದ್ದೂ ಆಗಿದೆ ಎಂಬುದನ್ನು ಗಮನಿಸಬೇಕು. ಜೊತೆಗೆ ಸಹಜ ಮಾತುಗಾರಿಕೆಯಲ್ಲಿ ಚಿಕ್ಕ ಚಿಕ್ಕ ವಾಕ್ಯಗಳ ಸರಣಿ ಭಾವನೆಗೆ ಒಂದು ಬಗೆಯ ತೀವ್ರತೆಯನ್ನೂ ತಂದುಕೊಡುತ್ತದೆ ಎಂಬುದಕ್ಕೆ "ಸೇವಾವೃತ್ತಿ ಕಷ್ಟಂ. ರಾಜಸೇವೆಯೆಂಬುದು ಜೀವನೋಪಾಯಕ್ಕೆ ಕಾರಣಂ. ಎನಗೆ ಜೀವಿತಂ ಪುಲ್ಲುಂ ನೀರುಂ; ಇವುಗಳುಳ್ಳೊಡೆ ಸಾಲ್ಗುಂ. ಅವೀಗಳೆಲ್ಲಿಯುಂ ಸುಲಭಂ. ಅದಂ ಓಲಗದೊಳಪ್ಪ ಸೌಖ್ಯಂ ಬಾರ್ತೆಯಿಲ್ಲಂ" ಎಂಬಂತಹ ರಚನೆಗಳನ್ನು ನೋಡಬಹುದು.
ದುರ್ಗಸಿಂಹ ತನ್ನ ಕಾಲದ ದೇಸಿಯ ದಟ್ಟ ಪ್ರಭಾವಕ್ಕೊಳಗಾಗಿದ್ದಾನೆ. ತಾನು ಆರಿಸಿಕೊಂಡಿರುವುದು ಸಾಂಪ್ರದಾಯಿಕ ವಸ್ತುವಾಗಿರದೆ ಜನರ ನಡೆನುಡಿಗಳನ್ನು ಪರ್ಯಾಯವಾಗಿ ವಿಡಂಬಿಸುವಂತಹದಾಗಿರುವುದರಿಂದಾಗಿ ಇದು ಅವನಿಗೆ ಅನಿವಾರ್ಯವೂ ಆಗಿತ್ತು. ಇತರ ಕವಿಗಳು ಮತಧಾರ್ಮಿಕ ಕಾರಣಗಳಿಂದ ಜನರನ್ನು ತಲುಪಬೇಕಾದ ಅನಿವಾರ್ಯತೆಯನ್ನು ಹೊಂದಿದ್ದರೆ, ದುರ್ಗಸಿಂಹನಿಗೆ ವಸ್ತುವೇ ಜನಸಾಮಾನ್ಯರ ಬದುಕಾದದ್ದರಿಂದ ಇದು ಮತ್ತಷ್ಟು ಆವಶ್ಯಕವಾಯಿತು. ಅದರಂತೆ ಅವನು ಸಾಮಾನ್ಯರ ಮಾತುಗಾರಿಕೆಯನ್ನು ತನ್ನ ಬರವಣಿಗೆಯಲ್ಲಿ ಅಳವಡಿಸಿಕೊಳ್ಳುವಂತಾಗಿ ಆಡುಮಾತಿನ ಸೊಗಡನ್ನು ಬರವಣಿಗೆಯಲ್ಲಿ ತರಲು ಪ್ರಯತ್ನ ಮಾಡಿದ್ದಾನೆ. ಅಂದಿನ ಸಾಮಾನ್ಯರ ಮಾತಿನ ಧಾಟಿಯನ್ನು ದುರ್ಗಸಿಂಹನ ಗದ್ಯದಲ್ಲಿ ಹಲವು ಕಡೆಗಳಲ್ಲಿ ಗಮನಿಸಬಹುದು. ಉದಾಹರಣೆಗೆ ಈ ವಾಕ್ಯವನ್ನು ನೋಡಬಹುದು: "ನಿನ್ನ ಮನೆಯೆಂಬುದೆನ್ನ ಮನೆ, ಎನ್ನ ಮನೆಯೆಂಬುದು ನಿನ್ನ ಮನೆ. ನೀಂ ಬೇಂ ಬೇಂಬ ಭಿನ್ನ ಬುದ್ಧಿ ನಿನಗಂ ನನಗಂ ಬೇಡ".  ಈ ವಾಕ್ಯಗಳನ್ನೂ ಗಮನಿಸಿ: "ನಿನ್ನ ಬೇಟದ ಮಿಂಡನಾವಂ ಅವನಂ ಪೇಳ್"; "ಒರ್ಬ ತಾಯ್ಗಂ ತಂದೆಗಂ ಪುಟ್ಟಿದೆನಾದೊಡೆ ನಾಂ ಪತಿವ್ರತೆಯಾದೊಡೆ, ಮನೆದೈವಂಗಳೆನಗೆ ಸನ್ನಿದಮಾದೊಡೆ ಎನ್ನ ಮೂಗು ಮುನ್ನಿನಂತಾಗಲಿ". ಈ ವಾಕ್ಯಗಳಂತೂ ಅಪ್ಪಟ ಸಾಮಾನ್ಯರ ಆಡುಮಾತು. ಅಂದರೆ ಅನವಶ್ಯಕ ಆಡಂಬರಗಳಿಗೆ ದುರ್ಗಸಿಂಹ ಅವಕಾಶ ಕೊಡದೆ ಗದ್ಯವನ್ನು ಜನರ ಮಾತಿಗೆ ಹತ್ತಿರವಾಗುವಂತೆ ಮಾಡುತ್ತಾನೆಂಬುದು ಕನ್ನಡ ಗದ್ಯದ ಬೆಳವಣಿಗೆಯಲ್ಲಿ ಬಹು ಮುಖ್ಯವಾದ ಒಂದು ಹಂತವೆನ್ನಬಹುದು. ಆಡುಮಾತಿನಲ್ಲಿ ದಿನಿತ್ಯವೂ ಬಳಕೆಗೊಳ್ಳುವ ಗಾದೆ ನಾಣ್ಣುಡಿಗಳಿಗೆ ತನ್ನದೇ ಅದ ಸ್ಥಾನವಿರುತ್ತದೆ. ಹೀಗಾಗಿ ಇಲ್ಲಿಯೂ ಅವುಗಳ ಬಳಕೆ ಯಥೋಚಿತವಾಗಿದೆ. ಇಲ್ಲಿ ಬಳಕೆಯಾಗಿರುವ 'ಕೇದಗೆಯನೇಱಿದ ಕೋಡಗದಂತೆ', 'ಪೊಕ್ಕಿಱಿಯಲ್ ಪೋಗಿ ಮೂಗಿಱಿವಡೆದರ್", 'ಪಡೆಯಪೋದ ಬಡಸೂಳೆ ತನ್ನ ಕನ್ನಡಿಯಂ ಕಿಡಿಸಿ ಬಂದಳ್', 'ಆಡಿದವಳಾಡಿ ಪೋದಳ್ ನೋಡಲ್ ಬಂದಪವಳ್ಗೆ ಮೂಗು ಪೋಯ್ತೆಂಬಿನಂ', 'ಕೋಡಗದೆರ್ದೆ ಕೊಂಬಿನ ಮೇಲೆ', 'ಮುಱಿದ ಬಿಲ್ಗೆ ಮೂವರಂಜಿದರ್" ಮುಂತಾದ ಗಾದೆ-ನಾಣ್ಣುಡಿಗಳನ್ನು ಉಲ್ಲೇಖಿಸಬಹುದು.
ದುರ್ಗಸಿಂಹನ ಗದ್ಯದ ಒಂದು ಮುಖ್ಯ ನೆಲೆ ಅಣುಕು ವೀರತೆ. ಇದರಿಂದ ಪರಿಸ್ಥಿತಿಯ ಟೊಳ್ಳುತನ ಅರಿವಾಗುತ್ತದೆ. ಇಲ್ಲಿಯ ಕತೆಗಳಲ್ಲಿ ಹೆಚ್ಚು ಪಾಲಿನವು ಪ್ರಾಣಿಪಕ್ಷಿಗಳಿಗೆ ಸಂಬಂಧಿಸಿದವುಗಳಾದರೂ, ಅವುಗಳೆಲ್ಲ ಅನ್ಯೋಕ್ತಿಗಳಗಿ ಮನುಷ್ಯರ ನಡವಳಿಕೆಗೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ಬದುಕಿನ ಟಕ್ಕು, ಮೋಸ, ವಂಚನೆ ಸಣ್ಣತನದಂತಹ ಗುಣಗಳನ್ನು ದುರ್ಗಸಿಂಹನ ಈ ಅಣುಕು ವೀರಶೈಲಿಯು ಸಮರ್ಥವಾಗಿ ಸೆರೆಹಿಡಿಯುತ್ತದೆ. ಸತ್ತ ಎತ್ತಿನ ಹೊಟ್ಟೆಯೊಳಗೆ ಅಡಗಿದ್ದ ನರಿಯು ಹೊರಬರಲಾರದೆ ಒದ್ದಾಡುತ್ತಿದ್ದರೂ, "ಬ್ರಾಹ್ಮಣೋತ್ತಮನಪ್ಪ ನಾವೊಂದು ಪಾಪನಿವಾರಣಾರ್ಥಮಾಗಿ ಗೋವಿನ ಜಠರಮಂ ಪೊಕ್ಕಿರ್ದೆವು" ಎಂದು ಹೇಳುವುದು, ಇದಕ್ಕೆ ವಿರುದ್ಧವಾಗಿ ಮೃಗರಾಜನಾದ ಸಿಂಹವು ಗೂಳಿಯ ಗುಟುರನ್ನು ಕೇಳಿ ಹೆದರಿಕೊಂಡು ಕಾಡನ್ನೇ ಬಿಟ್ಟು ಹೋಗಲು ಆಲೋಚಿಸುವುದು, ದೀರ್ಘಕಾಲ ಆಹಾರ ಸಿಕ್ಕದ ಹಾವೊಂದು ಹೇಗೆ ಆಹಾರವನ್ನು ಪಡೆಯಬೇಕೆಂದು ಆಲೋಚಿಸಿ ಕಪ್ಪೆಗಳ ವಿಶ್ವಾಸ ಸಂಪಾದನೆ ಮಾಡಲು ಪ್ರಯತ್ನಿಸುವುದು, ಮೊಲವು ಉಪಾಯಮಾಡಿ ಕ್ರೂರ ಸಿಂಹದಿಂದ ಪಾರಾಗುವುದು - ಇಂತಹವು ಮನುಷ್ಯಸ್ವಭಾವದ ವಿವಿಧ ಮುಖಗಳನ್ನು ತೋರಿಸುತ್ತದೆ. ಈ ಅಣುಕು ಗಾಂಭಿರ್ಯದ ಮತ್ತೊಂದು ಬಗೆಯನ್ನು ನೋಡಿ: "ಎನ್ನ ಪೆಂಡತಿ ಪತಿವ್ರತೆ, ಪರಪುರುಷನ ಮುಖಾವಲೋಕಂಗೆಯ್ಯಳ್ ಅದು ಕಾರಣದಿಂದೀ ಶಿಶು ಗಂಡುಗೂಸಪ್ಪುದಂ ನೋಡಿದೊಡೆ ದೋಷಮೆಂದು ತನ್ನ ಮುಖಮಂ ಮುಚ್ಚಿಕೊಂಡು ಮೊಲೆಯೂಡಿದಪಳ್". ಹಾಗೆಯೇ 'ರಾಸಭೀವಿಲಾಸಿಯರ್' ಮುಂತಾದ ಕೂಡುಪದಗಳು.
ದುರ್ಗಸಿಂಹನ ಸಹಜವೂ ಸಂಕ್ಷಿಪ್ತವೂ ಆದ ವರ್ಣನೆಗಳು ಕತೆಗಳ ಧಾಟಿಯನ್ನು ನಿರ್ಧರಿಸುತ್ತವೆ. ಸಿಂಹವನ್ನು ಮೊಲವು ಕೊಂದ ಕತೆಯಲ್ಲಿ ಸಿಂಹಕ್ಕೆ ಆಹಾರವಾಗಬೇಕಾದ ಸರದಿ ತನಗೆ ಬಂದ ದಿನ ಸಿಂಹದೆಡೆಗೆ ಹೋಗುತ್ತ ನಡೆಯುವ, ಇದ್ದಕ್ಕಿದ್ದಂತೆ ಅದಕ್ಕೆ ಸಿಂಹದಿಂದ ಪಾರಾಗುವ ಉಪಾಯ ಹೊಳೆಯುವ ಪರಿಯನ್ನು ಕವಿ ಚಿತ್ರಿಸುವ ರೀತಿಯಿದು:  "ಪೆಱಗಂ ನೋಡುತ್ತುಂ, ಭಯಾತುರನಂತೆ ಬಂದು ಮರಣಭ್ರಾಂತಿಯಂ ಚಿಂತಿಸಿ ಬರುತ್ತುಂ, ತೊಟ್ಟನೆ ಪುರಾಣ ಕೂಪಮಂ ಕಂಡು, ತೃಷೆಯಿಂ ನೀರ್ಗುಡಿಯವೇೞ್ಕೆದು ನೋಡಿ, ಏಱಿ ಇಱಿಯಲುಂ ಬಾರದ ಸ್ವಚ್ಛಜಲದೊಳ್ ತನ್ನ ಪ್ರತಿಬಿಂಬಮಂತು ಬಿಂಬಿಸುವುದಂ ಕಂಡು, ಈ ಸಿಂಹಮಮನಿಲ್ಲಿಯೆ ಕೊಲಲುಂ ಗೆಲಲುಂ ಸಾಲ್ಗುಂ ಎಂದು ಉತ್ಸಾಹ"ದಿಂದ ಮುಂದುವರಿಯಿತಂತೆ. ಭಯಭೀತವಾದ ಮೊಲಕ್ಕೆ ಸಾಯುವ ಗಳಿಗೆಯಲ್ಲಿಯೂ ಬಾಯಾರಿಕೆಯನ್ನು ತಣಿಸಿಕೊಳ್ಳುವ ಆಸೆಯುಂಟಾಗುವುದು, ನೀರು ಸಿಕ್ಕದಿದ್ದರೂ ಬದುಕುಳಿಯುವ ಮಾರ್ಗವು ಹೊಳೆದುದು ಇಲ್ಲಿ ಒಂದೇ ವಾಕ್ಯದಲ್ಲಿ ಸಮರ್ಥವಾಗಿ ಚಿತ್ರಿತವಾಗಿದೆ. ಶಿವಭೂತಿಯ ಕತೆಯಲ್ಲಿ ನೀರು ಕುಡಿಯ ಹೋಗಿದ್ದ ಬೇಟೆಗಾರ, ಹುಲಿ, ಕೋತಿ ಮತ್ತು ಹಾವು ಬಾವಿಯಲ್ಲಿ ಬೀಳುವುದು, ಅವುಗಳನ್ನು ಶಿವಭೂತಿಯೆಂಬ ಬ್ರಾಹ್ಮಣನು ಕಾಪಾಡುವುದೂ ವಸ್ತುವಾದರೂ, ಅಲ್ಲಿನ ವಿವಿಧ ಪ್ರಾಣಿಗಳ ಮೂಲಕ ಮನೋಭಾವವೈವಿಧ್ಯವನ್ನು ಕತೆಗಾರ ಚಿತ್ರಿಸುತ್ತಾನೆ. ತನ್ನನ್ನು ನೀರಿನಿಂದ ಮೇಲೆತ್ತಿದ ವ್ಯಕ್ತಿಗೆ ನಮಸ್ಕರಿಸಿದ ಹುಲಿಯು, "ನಿಮ್ಮಡಿಗಳ ಕೃಪೆಯಿಂ ಮೃತ್ಯುಮುಖದಿಂ ಪೊಱಮಟ್ಟು ಬರ್ದುಂಕಿದೆಂ. ಈ ತೋರ್ಪ ಪಿರಿಯ ಗಿರಿಯ ತೞ್ಪಲ ಗುಹೆಯೊಳಿರ್ದಪೆಂ. ಅಲ್ಲಿಗೆ ಬನ್ನಿಂ. ನಿಮಗಮೌಲ್ಯಮಪ್ಪ ವಸ್ತುಗಳನೀವೆಂ" ಎನ್ನುತ್ತದೆ. ಕೋತಿಯು "ನಿಮ್ಮಡಿ. ನಿಮ್ಮ ಪ್ರಸಾದದಿಂದೆನಗೆ ಪುನರ್ಜನ್ಮಮಾದುದು. ಆಂ ಬದರಿಕಾಶ್ರಮದುಪವನದೊಳಿರ್ಪೆಂ. ಅಲ್ಲಿಗೆತ್ತಾನುಂ ಬಂದಿರಪ್ಪೊಡೆನ್ನಾರ್ಪ ಶಕ್ತಿಯಿಂ ಭಕ್ತಿಗೆಯ್ವೆನೆಂದು" ಹೇಳುತ್ತದೆ.  ಹಾಗೆಯೇ ಹಾವು ಹೊರಗೆ ಬಂದು "ನಿಮ್ಮಡಿ. ನೀಮೆನಗೆ ಪ್ರಾಣೋಪಕಾರಂಗೆಯ್ದಿರ್. ನಿಮಗೇನಾನುಮಧ್ವಾನಮಾದಾಗಳೆನ್ನಂ ನೆನೆದೊಡಾಂ ಬಂದು ದೇವರ ಸೇವೆಯಂ ಮಾಡಿ ಪೋಪೆಂ" ಎನ್ನುತ್ತದೆ. ಕೊನೆಗೆ ಹೊರಬಂದ ಬೇಡನೂ, "ಆಂ ಪದ್ಮನಗರದೊಳಿರ್ಪೆಂ. ನೀಮೆತ್ತಾನುಂ ಬಾರ್ತೆಯಪ್ಪೊಡೆ ಅಲ್ಲಿಗೆ ಬನ್ನಿಂ ಎನ್ನಾರ್ಪನಿತು ಶಕ್ತಿಯೊಳುಪಕರಿಸಿದಪ್ಪೆಂ" ಎನ್ನುತ್ತಾನೆ. ಮಾತುಗಳ ಹೊರರೀತಿ ಒಂದೇ ಬಗೆಯದಾಗಿದ್ದರೂ, ಅವುಗಳಲಿನ ಅಂತರಾರ್ಥ ಹೇಗೆ ಸ್ವಭಾವಾನುಸಾರಿಯಾಗಿ ಭಿನ್ನವಾಗುತ್ತದೆಂಬ ರೀತಿಯೂ ಕತೆ ಮುಂದುವರಿದಂತೆ ಅನಾವರಣಗೊಳ್ಳುತ್ತದೆ. ಅಲ್ಲದೆ, ಮನುಷ್ಯ ತನ್ನ ಬುದ್ಧಿಮತ್ತೆಯಿಂದಾಗಿಯೇ ಮಿಕ್ಕ ಪ್ರಾಣಿಗಳಿಗಿಂತ ಹೆಚ್ಚು ಕ್ರೂರಿಯಾಗಬಲ್ಲ ಸಾಧ್ಯತೆಯನ್ನೂ ಈ ಕತೆ ಒಳಗೊಂಡಿದೆ.
ಅನೇಕ ಕಡೆಗಳಲ್ಲಿ ದುರ್ಗಸಿಂಹನ ಕಥನವು ಸಂಭಾಷಣೆಯ ಮೂಲಕ ಹೆಚ್ಚು ಆಕರ್ಷಕವಾಗುತ್ತದೆ. ನಿದರ್ಶನಕ್ಕೆ 'ಮೊಸಳೆಯಂ ಕಪಿ ವಂಚಿಸಿದ ಕತೆ' ಎಂಬುದರ ಒಂದು ಭಾಗವನ್ನು ನೊಡಬಹುದು. " 'ಎಲೆ ಗಾವಿಲಾ, ಕೋಡಗದೆರ್ದೆ  ಕೊಂಬಿನ ಮೇಲೆ ಎಂಬುದು ಪ್ರಸಿದ್ಧಂ. ಇದಂ ನೀಂ ಮುನ್ನ ಕೇಳ್ದಱಿವುದಿಲ್ಲಕ್ಕುಮೇ? ಮೇಣ್ ಹಿತ್ತಲ ಗಿಡ ಮರ್ದಲ್ಲ ಎಂದೇಳಿದಂಗೆಯ್ದೆಯಕ್ಕುಂ. ಅದಲ್ಲದಿಂದು ಈ ಹದನಂ ಎನಗಲ್ಲಿಯೆ ಪೇೞ್ವೆಯಪ್ಪೊಡೆ ಎನ್ನೆರ್ದೆಯಂ ಆಗಳೆ ಕೊಂಡು ಬರ್ಪೆನಂತುಮಲ್ಲದೆ ಎನ್ನ ಪ್ರಾಣಮುಂ ಎನ್ನೊಡವುಟ್ಟಿದಳ ಅಧ್ವಾನಕ್ಕಿಲ್ಲಪ್ಪೊಡೆ ವಾರ್ತೆಯೇಂ?' ಎಂದು 'ಮಹಾಪ್ತರ್ಗಲ್ಲದೆ ಔಷಧದಾನಮಂ ಕುಡುವುದುತ್ತಮ ಪಕ್ಷಮೆಂಬುದುಂಟು. ಎನ್ನ ತಂಗೆ ವ್ಯಾಧಿತೆ ಗಡಂ. ಅದರ್ಕೆ ಔಷಧಂ ಎನ್ನಲ್ಲಿಯೆ ಉಂಟು ಗಡ. ಇಂತಪ್ಪ ಸೈಪು ಸಮನಿಸುತ್ತು ಅದಱಿಂದಂ ಮರ್ದಂ ಕೊಂಡು ಇರ್ದ ಪೊೞ್ತಿರ್ದಂತೀಗಳೆ ಬಂದಪೆಂ ಮಗುೞ್' ಎನೆ ಕ್ರಕಚನಿಂಂದಂ: 'ಅಂತಪ್ಪೊಡೆ ಸುಹೃದ್ದರ್ಶನಮೌಷಧಂ ಎಂಬುದುಂಟು ಈಗಳಾಕೆಯನಾರೈದು ಪೋಪಂ' ಎಂದೊಡೆ, 'ಇದಾವ ಬುದ್ಧಿ, ನೀಂ ತರ್ಪೆಯೆಂಬಾಸೆಯಿಂ ಜೀವಮಂ ಪಿಡಿದಿರ್ಪಳ್ ನೀಂ ಬಱಿದೆ ಬಂದುದನಱಿದಾಗಳೆ ಮನವಿವಿಕ್ಕಿದಳಪ್ಪೊಡೆ ಬೞಿಕಸಾಧ್ಯಮಕ್ಕುಂ'. ಇದು ನಾಟಕೀಯ ಸಂಭಾಷಣೆಯಾಗಿರದೆ ಸಹಜ ಮಾತುಗಾರಿಕೆಯಗಿ ಅಂದಿನ ಕನ್ನಡದ ಬನಿಯನ್ನು ಬರಹಕ್ಕಿಳಿಸುವ ಪ್ರಯತ್ನವಾಗಿದೆ ಎನ್ನಬಹುದು. ಜೊತೆಗೆ ಇಲ್ಲಿ ಬಳಕೆಯಾದ ಗಾದೆಗಳು ಎಷ್ಟು ಸಮಂಜಸವೂ ಸಕಾಲಿಕವೂ ಆಗಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅಲ್ಲದೆ ಸಾಮಾನ್ಯ ಮಾತಿನ ನುಡಿಗಟ್ಟುಗಳ ರಾಶಿಯೇ ದುರ್ಗಸಿಂಹನ ಕಥನದಲ್ಲಿ ಇಡಿಕಿರಿದಿವೆ. 'ಕಲಹಕ್ಕೆ ಕಚ್ಚೆಯಂ ಕಟ್ಟುವ ಕಚ್ಛಪನ ಕಥೆಯಂತಾದುದು', 'ನುಚ್ಚುನುರಿಯಾಗಿ', 'ಸಾಯೆ ಸದೆಬಡಿದು', 'ಕಳ್ಳರಂ ಕಂಡ ಬೆಳ್ಳಾಳಂತೆ ಬೆದಱಿ', 'ಕಣ್ಣಂ ತಿಣ್ಣಂ ಮುಚ್ಚಿಕೊಂಡಿರು', 'ಎಡೆವೊತ್ತ ಒಲೆಯ ಕಲೆಮುಟ್ಟಲ್ ಪೆತ್ತಂತೆ', 'ಪಂದೆಯನೆ ಪಾವಡರ್ದಂತೆ', 'ಒರ್ಮೆ ಕಂಡವರ್ ಮತ್ತೊರ್ಮೆ ಕಂಡೊಡೆ ನಂಟರ್' ಮುಂತಾದ ನುಡಿಗಟ್ಟುಗಳು ಇಲ್ಲಿ ಅಸಂಖ್ಯವಾಗಿವೆ.
ದುರ್ಗಸಿಂಹನ ಕಥನಲ್ಲಿ ದೀರ್ಘ ವರ್ಣನೆಗಳಿಗೂ ಸೂಕ್ಷ್ಮ ಭಾವನೆಗಳಿಗೂ ಅಷ್ಟಾಗಿ ಅವಕಾಶವಿಲ್ಲ. ವರ್ಣನೆಯು ಹಿನ್ನೆಲೆಯನ್ನು ರಚಿಸುವ ಆವಶ್ಯಕತೆಯಿರುವೆಡೆ ಅದು ಎಷ್ಟು ತಕ್ಕುದಾಗಿ ಬರುವುದು ಎಂಬುದನ್ನು ನಾವು ಗಮನಿಸಬೇಕು. ಈ ಉದಾಹರಣೆಯನ್ನು ನೋಡಿ: "ಆ ಸಿಂಗಂ ಮುನ್ನಿನಿರ್ಪಂದಮಲ್ಲದೆ ಶಿಲಾತಳದ ಮೇಲೆ ಕಾಲುಮಂ ಬಾಲಮಂ ಉಡುಗಿ ಅಡಂಗಿಸಿ, ಕಿವಿಯಂ ಕತ್ತರಿಸಿ, ಶರೀರಮಂ ಸಂಕೋಚಿಸಿ, ನಟ್ಟ ದಿಟ್ಟಿಗಳ್ವೆರಸು ನಿನ್ನನೆ ನೋಡುತ್ತುಮಿರ್ಕುಂ" ಎಂಬಲ್ಲಿ ವರ್ಣಿತವಾದ ಸಿಂಹದ ಚಿತ್ರವು ಕಣ್ಣಿನ ಮುಂದೆ ಬಂದು ನಿಲ್ಲುತ್ತದೆ. ಹಾಗೆಯೇ ಮೊಲದ ಮಾತನ್ನು ಕೇಳಿ ಮತ್ತೊಂದು ಸಿಂಹದ ವಿಷಯ ತಿಳಿದ ಸಿಂಹವು ಕೋಪಗೊಳ್ಳುವ ಬಗೆ ಇದು: "ಕೇಸರಿಯಾಸುರಂ ಮಸಗಿ ಕ್ಷುಧಾಗ್ನಿಯೊಡನೆ ಕೋಪಾಗ್ನಿ ಪೆರ್ಚಿ ಮೊದಲ ಮಾತಿನ ಬಲೆಯೊಳ್ ಸಿಲ್ಕಿ, ಸಿಂಗಮಿರ್ಪೆಡೆಯಂ ತೋರು". ಇಲಿಯನ್ನು ಭಯಂಕರವಾಗಿ ವರ್ಣಿಸಿದ್ದನ್ನು ಕೇಳಿ ಸಿಂಹವು ಕ್ಷಣಕಾಲ ಗಾಬರಿಗೊಂಡು ಆ ಬಳಿಕ ಚೇತರಿಸಿಕೊಂಡುದನ್ನು ಈ ವರ್ಣನೆ ಅದೆಷ್ಟು ಸಮಂಜಸವಾಗಿ ಹಿಡಿದಿಡುತ್ತದೆ, ನೋಡಿ: "ಪಿಂಗಳಕಂ ಭಗ್ನಮನನಾಗಿ ಕಿಱಿದು ಬೇಗಂ ಪಂದೆಯಂ ಪಾವಡರ್ದಂತೆ ಮೇಗುಸಿರ್ವಿಟ್ಟು ಹಮ್ಮದಂಬೋಗಿ ಮುಮ್ಮನೆ ಬೆಮರ್ತು ತನ್ನಿಂ ತಾಂ ಚೇತರಿಸಿಕೊಂಡು ಕಾತರತೆಯಂ ಮಾಣ್ದು ಸಮನಕಂಗೆ ಪಿಂಗಳಕನಿಂತೆಂದಂ". ಇದಕ್ಕೆ ವ್ಯತಿರಿಕ್ತವಾಗಿ ಕವಿಯು ರಾಜನ ವರ್ಣನೆ ಮಾಡುವ ರೀತಿಯಿದು: "ರಾಜಾಧಿರಾಜನಂ ವಿಭವಾಧರೀಭೂತ ನಳನಹುಷಭರತ ಭಗೀರಥ ಹರಿಶ್ಚಂದ್ರಾದಿ ಪುರಾತನ ಮಹೀಪಾಲಚರಿತ್ರನಂ ಕರಾಳಧಾರಾವಿದಾರಿತಮದನವದರಾತಿ ಮಂಡಲೇಶ್ವರ ಪ್ರಚಂಡಶುಂಡಾಲನಂ" ಇತ್ಯಾದಿ ಎಂದಿನ ಸಂಸ್ಕೃತಭೂಯಿಷ್ಠ ವರ್ಣನೆಗಳು ಅಲ್ಲಲ್ಲಿವೆ, ಆದರೆ ಸಮಯೋಚಿತವಾಗಿವೆ.
ದುರ್ಗಸಿಂಹನ ಬರವಣಿಗೆಯ ಮತ್ತೊಂದು ಮುಖ್ಯಾಂಶ ಒಂದೇ ಅರ್ಥದ ನಾನಾ ಪದಗಳನ್ನು ಬಳಸುವುದು. ಹುಲಿ, ಕಪಿ, ಕತ್ತೆ ಮುಂತಾದವನ್ನು ವಿವಿಧ ಸಮಾನಾರ್ಥಕ ಪದಗಳಿಂದ ಸೂಚಿಸಿ ಗದ್ಯದ ಏಕರೂಪತೆಯನ್ನು ಮುರಿಯುವುದರ ಜೊತೆಗೆ ವಸ್ತುನಿರೂಪಣೆಗೆ ನಾವೀನ್ಯವನ್ನು ತಂದಿದ್ದಾನೆ. ಇಲ್ಲಿನ ಪ್ರಾಣಿಪಕ್ಷಿಪಾತ್ರಗಳಿಗೆ ಇಟ್ಟಿರುವ ಹೆಸರು ಪ್ರಾಯಶಃ ಮೂಲದಲ್ಲಿವೇ ಆಗಿರಬಹುದಾದ ಸಾಧ್ಯತೆಗಳಿವೆ: ಏಕೆಂದರೆ ವಿಷ್ಣುಶರ್ಮ ಸಂಪ್ರದಾಯದ ಕತೆಗಳಲ್ಲಿಯೂ ಇಂಥವೇ ಹೆಸರುಗಳಿವೆ. ಹೀಗಾಗಿ ಅವುಗಳಲ್ಲಿನ ಸೊಬಗು ಮೂಲಕ್ಕೇ ಸಲ್ಲಬೇಕಾದುದು ಸಮಂಜಸವಾದುದು. ಆದರೆ ಸಂಸ್ಕೃತ ಲೋಕ ಮತ್ತು ಸುಭಾಷಿತಗಳನ್ನು ಕನ್ನಡಕ್ಕೆ ತರುವಾಗ ದುರ್ಗಸಿಂಹ ಬಳಸುವ ವಾಕ್ಯಗಳು ಭಾಷಾಂತರವೆನಿಸದಷ್ಟು ಕನ್ನಡತನದಿಂದ ಕೂಡಿರುತ್ತವೆ. 'ಎನ್ನೆವರಂ ಜೀವಿಸುವುದನ್ನೆವರಂ ಸುಖಂಬಡೆವುದು', 'ಅತಿಬುದ್ಧಿಯುಳ್ಳವರಾದೊಡಂ ಶಾಸ್ತ್ರಚಿಂತನೆಯಂ ಮಾಡವೇೞ್ಕುಂ', 'ವಿಶ್ವಾಸಿಸಿದವರೊಳ್ ವಂಚನೆಯನೆಸಗುವುದಾವ ಪ್ರೌಢಿಮೆ', 'ಬಲ್ಲವರುಪಾಯಮಂ ಚಿಂತಿಸುವುದು, ಮೇಲೆ ಬರ್ಪಪಾಯಮಂ ಚಿಂತಿಸುವುದು", 'ತನ್ನ ಕಾರ್ಯವನ್ನಬರ ಹಗೆಯನು ಹೆಗಲಲಾದರೂ ಹೊತ್ತುಕೊಂಡಿಹುದು' ಇಂತಹವು ಇಡೀ ಗ್ರಂಥದುದ್ದಕ್ಕೂ ಕಾಣಸಿಗುತ್ತವೆ.
ಒಟ್ಟಾರೆ, ದುರ್ಗಸಿಂಹನು ತನ್ನ ಕಾಲದ ಸಾಹಿತ್ಯ ಪರಿಸರದಲ್ಲಿದ್ದ ಮತಧಾರ್ಮಿಕತೆ ಮತ್ತು ರಾಜತ್ವವೈಭವೀಕರಣಗಳ ಗುಂಗಿನಿಂದ ಹೊರಬಂದು ನೂರಕ್ಕೆ ನೂರು ಲೌಕಿಕೋದ್ದೇಶದ ವಸ್ತುವನ್ನು ಆರಿಸಿಕೊಂಡು ಬಿರುಬೇಸಗೆಯಲ್ಲಿ ತಂಪು ಗಾಳಿ ಬೀಸುವಂತೆ ಮಾಡಿದ್ದಾನೆ. ಇದರಲ್ಲಿ ಎಲ್ಲಿಯೂ ಯಾರನ್ನೂ ಓಲೈಸುವ ಉದ್ದೇಶವಿರದಿರುವುದೇ ಕೃತಿಯ ಮತ್ತು ಕೃತಿಕಾರನ ಹಿರಿಮೆಯನ್ನು ಹೆಚ್ಚಿಸಿದೆ. ಕಾವ್ಯವೆಂದರೆ ಚಂಪೂ ಪ್ರಕಾರ ಎಂಬ ಕಾಲದಲ್ಲಿ ಇವನೂ ಚಂಪೂ ಪ್ರಕಾರವನ್ನು ಆರಿಸಿಕೊಂಡಿದ್ದರೂ, ಅದರಲ್ಲಿನ ಗದ್ಯಕ್ಕೆ ಮೇಲು ಸ್ಥಾನವನ್ನು ಕಲ್ಪಿಸಿ, ಕನ್ನಡ ಗದ್ಯಕ್ಕೆ ಹೊಸದೊಂದು ಜೀವ ತುಂಬಿದ್ದಾನೆ. ಇವನ ಮಾರ್ಗವನ್ನು ಮುಂದೆ ನಯಸೇನನು ಅನುಸರಿಸಿದ್ದುದು ತನ್ನ ಕಾಲಕ್ಕೇ ಈ ಕೃತಿ ಮಾಡಿದ ಪ್ರಭಾವದ ಕುರುಹಾಗಿದೆ. ನಯಸೇನನು ಮತ್ತೆ ಧಾರ್ಮಿಕ ವಿಷಯಕ್ಕೆ ಮರಳಿದರೂ, ತನ್ನ ಹಿಂದಿನ ಕವಿಗಳಂತೆ ನೀಳ ಕಥಾನಕವೊಂದನ್ನಾರಿಸಿಕೊಳ್ಳದೆ, ಚಿಕ್ಕ ಚಿಕ್ಕ ಕತೆಗಳ ಮೂಲಕ ಉದ್ದೇಶ ಸಾಧನೆ ಮಾಡಿಕೊಳ್ಳವ ಪ್ರಯತ್ನ ಮಾಡಿರುವುದರ ಹಿಂದೆ ದುರ್ಗಸಿಂಹನ ಪ್ರಭಾವ ಎದ್ದು ಕಾಣುವಂತಿದೆ. ಇವರಿಬ್ಬರ ಕೃತಿಗಳಲ್ಲಿ ಬರುವ ಕೆಲವು ಕತೆಗಳ ಸಾಮ್ಯವು ಅಚ್ಚರಿಗೊಳಸುವಂತಹುದು. ಸಾಮಾನ್ಯತೆಯನ್ನು ಪ್ರೀತಿಸಿದ ಇವರಿಬ್ಬರೂ ಜಾನಪದ ಕತೆ ಮತ್ತು ಕತೆಗಾರಿಕೆಗಳಿಂದ ತಮ್ಮ ತಮ್ಮ ಕೃತಿಗಳಿಗೆ ಎರವಲು ಪಡೆದಿರಬಹುದಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಗಾದೆಗಳ ಬಳಿಕೆ, ವಿಡಂಬನೆಯ ಶೈಲಿ, ಗದ್ಯಬಾಹುಳ್ಯ ಮತ್ತು ದೇಸಿಯ ಒಲವುಗಳನ್ನು ತೋರಿಸಿಕೊಂಡಿರುವುದರಲ್ಲಿ ನಯಸೇನ ದುರ್ಗಸಿಂಹನಿಗಿಂತ  ಒಂದು ಹೆಜ್ಜೆ ಮುಂದೆ ಇಟ್ಟಿರುವುದು ಎದ್ದು ಕಾಣುವಂತಹುದು. ಆದರೆ ಅವನಿಗೆ ಸ್ಫೂರ್ತಿಯನ್ನು ನೀಡಿರುವುದು ದುರ್ಗಸಿಂಹನ ಶೈಲಿ ಮತ್ತು ಗದ್ಯಪ್ರೀತಿ ಎಂಬುದನ್ನು ಮರೆಯುವಂತಿಲ್ಲ. ಆದರೆ ಇವರ ಗದ್ಯ ಪರಂಪರೆ ಮುಂದುವರಿಯಲಿಲ್ಲ ಎಂಬುದೇ ಸಾಹಿತ್ಯವು ಮತ್ತೆ ಪಂಡಿತಪ್ರಿಯವಾಯಿತು ಎಂಬುದಕ್ಕೆ ಸಾಕ್ಷಿಯಾಗಿದೆ. ಇಡೀ ಪ್ರಪಂಚದಲ್ಲಿಯೇ ಸಮಗ್ರವಾಗಿ ವಸುಭಾಗ ಸಂಪ್ರದಾಯದ 'ಪಂಚತಂತ್ರ'ವು ಸಮಗ್ರವಾಗಿ ಸಿಕ್ಕುವುದು ಇಲ್ಲಿ ಮಾತ್ರ. ಹೀಗಾಗಿ 'ಕರ್ಣಾಟಕ ಪಂಚತಂತ್ರ'ಕ್ಕೆ ಪಂಚತಂತ್ರದ ಇಹಾಸದಲ್ಲಿ ಒಂದು ಮಹತ್ವದ ಸ್ಥಾನವಿದೆ.





No comments: