Tuesday 22 October 2013

ಮೊದಲನೆಯ ನಾಗವರ್ಮನ 'ಕರ್ನಾಟಕ ಕಾದಂಬರಿ'


ಮೊದಲನೆಯ ನಾಗವರ್ಮನ 'ಕರ್ನಾಟಕ ಕಾದಂಬರಿ'


ಕನ್ನಡದ ಚಂಪೂ ಕಾವ್ಯಧಾರೆ ಮೂರು ಮುಖ್ಯ ಟಿಸಿಲುಗಳಲ್ಲಿ ಹರಿದಿದೆ: ಜೈನ, ಬ್ರಾಹ್ಮಣ ಮತ್ತು ವೀರಶೈವ. ಜೈನರು ಕನ್ನಡದಲ್ಲಿ ಕಾವ್ಯರಚನೆ ಮಾಡಿದವರಲ್ಲಿ ಮೊತ್ತ ಮೊದಲಿಗರೆಂಬುದು ಸರ್ವವಿದಿತವಾದ ವಿಷಯ. ಅದಕ್ಕೆ ಕಾರಣ ಪ್ರಾಯಶಃ ಅವರು ತಮ್ಮ ಮತಧರ್ಮದ ಬಗ್ಗೆ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕೆಂಬ ತುಡಿತ. ಜೈನವು ಆರಂಭಗೊಂಡದ್ದೇ ಪ್ರಾಕೃತದಂತಹ ಜನಭಾಷೆಯ ಮೂಲಕ. ಒಂದು ಹಂತದಲ್ಲಿ ಅದು ಸಂಸ್ಕೃತಕ್ಕೆ ತಿರುಗಿದರೂ, ಕನ್ನಡದಂತಹ ಜನಭಾಷೆಗಳ  ಮೂಲಕ ಮತ್ತೆ ಅದು ಜನಮುಖಿಯಾಯಿತು. ಜೈನ ಚಂಪೂ ಕವಿಗಳು ಹಳೆಯ ವಸ್ತುವಿಷಯಗಳನ್ನು ಆರಿಸಿಕೊಂಡು ಕಾವ್ಯರಚನೆ ಮಾಡಿದರೂ ಅದರಲ್ಲಿ ಹೊಸತನ ಮತ್ತು ಬದುಕಿನ ಅದೃಷ್ಟ ಶಕ್ತಿಗಳ ಬಗ್ಗೆ ಚಿಂತನೆ ನಡೆಸಿದರು. ಆನಂತರ ಬಂದವರು ಬ್ರಾಹ್ಮಣ ಕವಿಗಳು; ಅವರಿಗೆ ತಮ್ಮ ವೈದಿಕ ಮತವನ್ನು ಜನಸಾಮಾನ್ಯರಲ್ಲಿ ಪ್ರಚುರಗೊಳಿಸುವ ಉದ್ದೇಶವಿರಲಿಕ್ಕೆ ಸಾಧ್ಯವಿರಲಿಲ್ಲ. ಏಕೆಂದರೆ ವೈದಿಕ ಸಂಸ್ಕೃತನಿಷ್ಠವಾದದ್ದು, ಜನಸಾಮಾನ್ಯದೂರವಾದದ್ದು; ತನ್ನನ್ನು ಇಡೀ ಜನಸಮೂಹದಿಂದ ಬೇರ್ಪಡಿಸಿಕೊಂಡು ಅವರೆಲ್ಲರಿಗಿಂತ ತಾನು ಮಿಗಿಲೆಂಬ ಹಮ್ಮು ಬೆಳೆಸಿಕೊಳ್ಳುವುದಲ್ಲದೆ ಅವರ ಮೇಲೆ ಹಿಡೊತವನ್ನು ಸಾಧಿಸಿಕೊಂಡಿತ್ತು. ಹೀಗಾಗಿ ಕನ್ನಡದಲ್ಲಿ ಮೊದಲ ಬಾರಿಗೆ ಕಾವ್ಯರಚನೆ ಮಾಡಿದ ಬ್ರಾಹ್ಮಣ ಕವಿಗಳು ಜನರನ್ನು ತಲುಪಬೇಕೆಂಬ ತುರ್ತಿನಿಂದ ಪ್ರೇರಿತರಾದವರಲ್ಲ, ಆದರೆ ತಮ್ಮ ತಾಯಿನುಡಿಯಾದ ಕನ್ನಡದ ಬಗೆಗಿನ ಪ್ರೇಮ ಅವರನ್ನು ಈ ಕಾರ್ಯಕ್ಕೆ ತೊಡಗಿಸಿರಬೇಕು. ಅಲ್ಲದೆ, ಸಂಸ್ಕೃತದಲ್ಲಿ ಬರೆದರೆ ಎಷ್ಟು ಜನರನ್ನು ತಲುಪಬಹುದು ಎಂಬ ಅನುಮಾನವೂ ಅವರನ್ನು ಕಾಡಿರಬಹುದು; ಜೊತೆಗೆ ಇದಾಗಲೇ ಕನ್ನಡ ವಾತಾವರಣ ನಾಡಿನುದ್ದಕ್ಕೂ ಹರಡಿತ್ತು. ಹೀಗಾಗಿ ಬ್ರಾಹ್ಮಣ ಕವಿಗಳು ಕನ್ನಡದಲ್ಲಿ ಬರೆಯಲು ಅನಿವಾರ್ಯವಾಗಿಯೇ ತೊಡಗಿರಬಹುದು. ಆದರೆ ಅವರು ಆರಂಭಮಾಡಿದ್ದು ಧಾರ್ಮಿಕ ಬರವಣಿಗೆಯಿಂದಲ್ಲ, ಧರ್ಮೇತರ ವಸ್ತುವಿನೊಡನೆ. ನಮಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಕಾವ್ಯರಚನೆ ಮಾಡಿದ ಮೊದಮೊದಲ ಬ್ರಾಹ್ಮಣ ಕವಿಗಳು ನಾಲ್ವರು: ಮೊದಲನೆಯ ನಾಗವರ್ಮ, ದುರ್ಗಸಿಂಹ, ರುದ್ರಭಟ್ಟ ಮತ್ತು ದೇವಕವಿ; ಅವರ ಕಾವ್ಯಗಳು ಅನುಕ್ರಮವಾಗಿ ಕಕರ್ಣಾಟಕ ಕಾದಂಬರಿಕಿ, ಕಪಂಚತಂತ್ರಕಿ, ಕಜನ್ನಾಥವಿಜಯಕಿ ಮತ್ತು ಕಕುಸುಮಾವಳಿಕಿ. ಅವುಗಳಲ್ಲಿ ಕಜನ್ನಾಥವಿಜಯಕಿವು ಧಾರ್ಮಿಕತೆಯನ್ನು ಮೀರಿದ ಭಕ್ತಿಕಾವ್ಯ. ಇನ್ನುಳಿದವು ಲೌಕಿಕ ವಸ್ತುವನ್ನೊಳಕೊಂಡವು. ಮೊದಲೆರಡು ಸಂಸ್ಕೃತದಿಂದ ಬರಮಾಡಿಕೊಂಡ ಅನುವಾದ ಕೃತಿಗಳಾದರೆ, ಕೊನೆಯೆರಡು ಸ್ವತಂತ್ರ ಕಲ್ಪನೆಗಳು.
ಈ ಹಿನ್ನೆಲೆಯಲ್ಲಿ ನೋಡಿದರೆ ಮೊದಲನೆಯ ನಾಗವರ್ಮನು ಕನ್ನಡದ ಮೊತ್ತ ಮೊದಲ ಬ್ರಾಹ್ಮಣ ಕವಿ ಎಂಬುದು ತಿಳಿಯುತ್ತದೆ. (ನಾಗವರ್ಮ ಎಂಬ ಹೆಸರಿನ ಕವಿಗಳು ಕನ್ನಡದಲ್ಲಿ ಎಷ್ಟು ಮಂದಿಯಿದ್ದಾರೆ ಎಂಬುದೂ ವಿದ್ವಾಂಸರಲ್ಲಿ ಚರ್ಚೆಯ ವಿಷಯವಾಗಿದೆ: ಇಬ್ಬರೋ, ಮೂವರೋ, ನಾಲ್ವರೋ? 'ವತ್ಸರಾಜಚರಿತ'ದ ನಾಗವರ್ಮ, 'ಛಂದೋಂಬುಧಿ'ಯ ನಾಗವರ್ಮ, 'ಕಾವ್ಯಾವಲೋಕನ', 'ವಿವರ್ಧಮಾನಪುರಾಣ' ಮೊದಲಾದ ಕೃತಿಗಳ ನಾಗವರ್ಮ, 'ಚಂದ್ರಚೂಡಾಮಣಿಶತಕ'ದ ನಾಗವರ್ಮ, 'ಅಭಿಧಾನ ರತ್ನಮಾಲಾ' ಟೀಕೆಯ ನಾಗವರ್ಮ ಹೀಗೆ ಹಲವರು). ಅವನಲ್ಲಿ ನಮಗೆ ಪ್ರಸ್ತುತನಾದವನು ಮೊದಲನೆಯ ನಾಗವರ್ಮ. ಆದರೆ ಅವನ ಕಾಲವಾವುದೋ ಖಚಿತವಿಲ್ಲ; ಕಾವ್ಯದಲ್ಲೆಲ್ಲೂ ತನ್ನ ಕಾಲ ಮತ್ತು ಹಿನ್ನೆಲೆಗಳ ಬಗ್ಗೆ ಅವನು ಹೇಳಿಕೊಂಡಿಲ್ಲ. ಕ್ರಿಶ ಹತ್ತನೆಯ ಶತಮಾನದ ಕೊನೆಯ ಹಾಗೂ ಹನ್ನೊಂದರ ಮೊದಲ ಭಾಗದಲ್ಲಿ ಅವನು ಜೀವಿಸಿದ್ದನೆಂಬ ಅಭಿಪ್ರಾಯ ಮಾನ್ಯವಾಗಿದೆ. ಅವನ ಕೃತಿ ಸೃಜನಶೀಲ ಕಾವ್ಯವಾದ 'ಕರ್ಣಾಟಕ ಕಾದಂಬರಿ'. 'ಕರ್ಣಾಟಕ ಕಾದಂಬರಿ'ಯ ಮೊದಲ ಪದ್ಯದಲ್ಲಿ ಚಂದ್ರನನ್ನು ಸ್ತುತಿಸಿರುವುದಲ್ಲದೆ, ಮತ್ತೊಂದರಲ್ಲಿ ತನ್ನ 'ಕೃತಿಪತಿ' ಚಂದ್ರನೆಂದು ಹೇಳಿಕೊಳ್ಳುತ್ತಾನೆ. ತನ್ನ ಆಶ್ರಯದಾತನಾದ ಚಂದ್ರನೆಂಬ ರಾಜನ್ನು ಚಂದ್ರಾಪೀಡನ ಜೊತೆಯಲ್ಲಿ ಸಮೀಕರಿಸಿರಬಹುದಾದ ಸಾಧ್ಯತೆಯನ್ನು ಕೆಲವರು ಮಂಡಿಸುತ್ತಾರೆ (ಕಾವ್ಯದ ಕೊನೆಯಲ್ಲಿ "ಕಾದಂಬರಿ ಪಸರಿಸಿ ರಾಜೇಂದ್ರಚಂದ್ರಾಂಕನೊಳ್ ಸಂಗತಿವೆತ್ತಾದಂ ತ್ರಿಲೋಕೀ ಸಹಚರಿಯೆನೆ ತಾಂ ಸಂದುದಾಚಂದ್ರತಾರಂಬರಂ" ಎಂಬ ಸಾಲಿನ ಆಧಾರದ ಮೇಲೆ). ತನ್ನ ಕವಿತೆಯನ್ನು ಮೆಚ್ಚಿ ಭೋಜರಾಜನು ಶಾಸನಪೂರ್ವಕವಾಗಿ ಕಳಿಂಗ, ಕಾಂಭೋಜದ ಕುದುರೆಗಳನ್ನು ತನಗೆ ಬಳುವಳಿ ನೀಡಿದನೆಂದು ಕವಿ ಹೇಳಿಕೊಳ್ಳುವುದರಿಂದ ಭೋಜನೆಂಬ ರಾಜನೂ ಇವನಿಗೆ ಪ್ರೋತ್ಸಾಹವಿತ್ತಿರಬೇಕು. ಕಾವ್ಯದಲ್ಲಿ ಅಲ್ಲಲ್ಲಿ 'ತ್ರಿಭುವನ' 'ತ್ರೈಲೋಕ್ಯ' 'ಜಗದೇಕ' 'ವಿಕ್ರಮಾಂಕ' ಎಂಬ ಶಬ್ದಗಳು ಹೆಚ್ಚಾಗಿ ಬಳಕೆಯಲ್ಲಿರುವುದರಿಂದ ಇವನ ಆಶ್ರಯದಾತನಾಗಿದ್ದವನು ಚಾಳುಕ್ಯಚಕ್ರವರ್ತಿಗಳ ಸಾಮಂತನಾಗಿದ್ದ ಕೊಲ್ಲಾಪುರ-ಕರ್ಹಾಡ ಪ್ರಾಂತ್ಯದಲ್ಲಿ ಆಳುತ್ತಿದ್ದ ಚಂದ್ರನೆಂಬುವವನು; ಇವನ ಕಾವ್ಯವನ್ನು ಪ್ರೋತ್ಸಾಹಿಸಿ ಕುದುರೆಗಳನ್ನುತ್ತವನು ಧಾರಾಪುರದಲ್ಲಿ ಆಳುತ್ತಿದ್ದ ಭೋಜರಾಜ ಎಂಬುವವನು - ಎಂದು ಹಲವರು ತೀರ್ಮಾನಿಸುತ್ತಾರೆ. ನಾಗವರ್ಮ ತನ್ನನ್ನು 'ಬುಧಾಬ್ಜವನ ಕಳಹಂಸ' ಎಂದು ಕರೆದುಕೊಳ್ಳುತ್ತಾನೆ. ಪ್ರಾಯಶಃ ಇದು ಇವನ ಬಿರುದು; ಜೊತೆಗೆ 'ಕವಿರಾಜಹಂಸ' ಎಂಬುದೂ ಅವನ ಬಿರುದಾಗಿದ್ದಂತೆ ಕಾಣುತ್ತದೆ. 'ಛಂದೋಂಬುಧಿ' ಎಂಬ ಛಂದಶ್ಶಾಸ್ತ್ರ ಕುರಿತ ಗ್ರಂಥವೂ ಅವನದೇ ಎಂಬ ಅಭಿಪ್ರಾಯವಿದೆ. ಆದರೆ ಆ ಬಗ್ಗೆ ಖಚಿತಾಭಿಪ್ರಾಯವಿಲ್ಲ; ಅದು ಬೇರೆಯ ನಾಗವರ್ಮನದೇ ಇರಬಹುದು. ಏಕೆಂದರೆ 'ಛಂದೋಂಬುಧಿ'ಯಲ್ಲಿ ಮೊದಲಿಗೆ ತನ್ನ ಸ್ವವಿವರಗಳನ್ನೆಲ್ಲ ಕೃತಿಕರ್ತೃ ನೀಡುತ್ತಾನೆ. ಆ ಪ್ರಕಾರ ಈ ನಾಗವರ್ಮನು ವೆಂಗಿನಾಡುವಿನ ಏಳು ವಿಶೇಷ ಗ್ರಾಮಗಳಲ್ಲಿ ಒಂದಾದ ವೆಂಗಿಪಳು ಎಂಬ ಊರಿನವನು. ಅಲ್ಲಿನ ಮಹಾ ಪಂಡಿತ ವೆಣ್ಣಮಯ್ಯ, ಅವನ ಮಗ ದಾಮಮಯ್ಯ, ಅವನ ಮಗ ವೆಣ್ಣಮಯ್ಯ, ಅವನ ಮಗನೇ ನಾಗವರ್ಮ. ಅವನ ಅರಸ ರಕ್ಕಸಗಂಗ, ಪ್ರಸಿದ್ಧರಾದ ಅಜಿತಸೇನರು ಗುರುಗಳು, ಸಲಹಿದವನು ಚಾವುಂಡರಾಯ ಇತ್ಯಾದಿ. ಈ ವಿವರಗಳೂ ಕಕಾದಂಬರಿಕಿಕಾರನ ವಿವರಗಳೂ ಭಿನ್ನವಾಗಿರುವುದು ಸ್ಪಷ್ಟವಾಗಿದೆ. ಆದರೆ ಈ ಎರಡೂ ಕೃತಿಗಳನ್ನು ಬರೆದವನು ಒಬ್ಬನೇ: ಆ ನಾಗವರ್ಮನು ಮೊದಲು ಚಾವುಂಡರಾಯನ ಆಸ್ಥಾನದಲ್ಲಿದ್ದು, ಆನಂತರ ಕೊಲ್ಲಾಪುರ-ಕರ್ಹಾಡನ ಚಂದ್ರಭೂಪಾಲನ ಆಶ್ರಯಕ್ಕೆ ಬಂದನೆಂದೂ, ಆನಂತರ ಭೋಜನಿಂದಲೂ ಗೌರವಿಸಲ್ಪಟ್ಟನೆಂದೂ ಕೆಲವರು ಹೇಳುತ್ತಾರೆ.
 'ಕರ್ಣಾಟಕ ಕಾದಂಬರಿ' ಸ್ವತಂತ್ರ ಕಾವ್ಯವಲ್ಲ ಎಂಬುದನ್ನಾಗಲೇ ಗಮನಿಸಿದ್ದೇವೆ; ಅದು ಬಾಣಭಟ್ಟ (ಭೂಷಣಭಟ್ಟ)ನ ಸಂಸ್ಕೃತ ಗದ್ಯಕಾವ್ಯದ ವಿವೇಚನಾಯುತವಾಗಿ ಸಂಗ್ರಹಗೊಂಡ ಚಂಪೂರೂಪದ ಅನುವಾದ. ಮೂಲ ಸಂಸ್ಕೃತವು ಗದ್ಯಕಾವ್ಯ. ಅದನ್ನು ಬರೆದವನು ಬಾಣ. ಇವನು ಕ್ರಿಶ 606 ರಿಂದ 647 ರವರೆಗೆ ಆಳಿದ ಶ್ರೀಹರ್ಷ ಅಥವಾ ಎರಡನೇ ಶಿಲಾದಿತ್ಯನ ಕಾಲದಲ್ಲಿದ್ದವನು. ಬ್ರಾಹ್ಮಣನಾದ ಈ ಕವಿ ಎರಡು ಕೃತಿಗಳ ಕರ್ತೃ: 'ಹರ್ಷಚರಿತೆ' ಮತ್ತು 'ಕಾದಂಬರಿ'; ಎರಡೂ ಗದ್ಯಕೃತಿಗಳೇ. ಇವಲ್ಲದೆ ಬಾಣನು ಇನ್ನೂ ಕೆಲವು ಕೃತಿಗಳನ್ನು ರಚಿಸಿದನೆಂದು ಹೇಳುವರಾದರೂ ಅದರ ಬಗ್ಗೆ ಒಮ್ಮತವಿಲ್ಲ. ಹೀಗಾಗಿ ಖಚಿತವಾಗಿ ಅವನದೆಂದು ಹೇಳಬಹುದಾದುದು ಈ ಎರಡನ್ನು ಮಾತ್ರ. ಮೊದಲನೆಯದು 'ಹರ್ಷಚರಿತೆ', ಎಂಟು ಆಶ್ವಾಸಗಳಿಂದ ಕೂಡಿದ ಹರ್ಷನ ಬಗೆಗಿನ ಕೃತಿ (ಆದರೂ ಕತೆ ಅಪೂರ್ಣವಾಗಿದೆ). ಎರಡನೆಯದೇ 'ಕಾದಂಬರಿ'. ಇದರಲ್ಲಿ ಎರಡು ಭಾಗಗಳಿವೆ: 'ಪೂರ್ವಭಾಗ' ಮತ್ತು 'ಉತ್ತರಭಾಗಕ'; ಮೊದಲ ಭಾಗವನ್ನು ಬಾಣನೇ ಬರೆದು ತೀರಿಕೊಂಡ; ಹಾಗಾಗಿ ಉತ್ತರಭಾಗವನ್ನು ಅವನ ಮಗ ಭೂಷಣ ಅಥವಾ ಪುಲಿಂದ ಎಂಬುವವನು ಬರೆದನಂತೆ. ಆದರೆ ಎರಡನೆಯ ಭಾಗವು ಮೊದಲ ಭಾಗದಷ್ಟು ಉಜ್ವಲವಾದ ರಚನೆಯಾಗಿಲ್ಲ ಎಂಬುದು ಸಂಸ್ಕೃತ ಕಾವ್ಯಪ್ರೇಮಿಗಳ ಮಾತು. 'ಕಾದಂಬರಿ'ಯ ಕತೆಯು ಸ್ವಂತ ಸೃಷ್ಟಿಯೇನಲ್ಲ. ಅದರ ಮೂಲ ಗುಣಾಢ್ಯನ 'ಬೃಹತ್ಕಥಾ' ಇರಬಹುದು ಎಂದು ಹೇಳುತ್ತಾರೆ; ಆದರೆ 'ಬೃಹತ್ಕಥಾ' ಸಿಕ್ಕಿಲ್ಲ. ಅದು ಪೈಶಾಚೀ ಭಾಷೆಯಲ್ಲಿದ್ದಿತೆಂದು (ಪ್ರಾಕೃತದ ಒಂದೆ ಪ್ರಭೇದ) ತಿಳಿದುಬರುತ್ತದೆ. ಕತೆಯನ್ನು 'ಕಥಾಸರಿತ್ಸಾಗರ'ದಿಂದ ತೆಗೆದುಕೊಂಡಿರಬೇಕೆಂದೂ ಅಭಿಪ್ರಾಯವಿದೆ. ಬಾಣ ಮುಖ್ಯವಾಗಿ ಹೆಸರಾಗಿರುವುದು ಅವನ ಗದ್ಯಶೈಲಿಯಿಂದ; ಅವನ "ಬರವಣಿಗೆಯೂ ಅಷ್ಟೇನೂ ತಿಳಿಯಾಗಿರದೆ ಪಂಡಿತರಿಗೂ ಅನೇಕವೇಳೆ ಕ್ಲಿಷ್ಟವೇ ಆಗುತ್ತದೆ" ಎಂದು ಕೆಲವರ ಅಭಿಪ್ರಾಯವಾದರೂ, ಅವನ ಬರವಣಿಗೆಯಲ್ಲಿ "ಒಂದೇ ತೂಕದ ಪದವೃಂದಗಳು, ಕಾಣದಂತೆ ಕಿವಿಗಿಂಪಾಗಿರುವ ಪ್ರಾಸದ ಸಮಾನಶ್ರುತಿ" ಅವನ ಗದ್ಯದ ವಿಶೇಷಗಳೆಂದೂ ಕೆಲವರು ಬಣ್ಣಿಸುತ್ತಾರೆ. "ಬಾಣನ ಶಬ್ದಭಂಡಾರದ ಸಂಗ್ರಹ ಅಮೇಯ. ಶಬ್ದಪುನರುಕ್ತಿಯಿಲ್ಲದೆ ಅವನು ಒಂದೇ ಅರ್ಥವನ್ನು ಇಪ್ಪತ್ತು ವಾಕ್ಯಗಳಲ್ಲಿ ಹೊಸಹೊಸವೆನಿಸುವಂತೆ ಹೇಳಬಲ್ಲನು." ತನ್ನೆರಡೂ ಕೃತಿಗಳನ್ನು ಸಂಸ್ಕೃತ ಗದ್ಯದಲ್ಲಿ ಬರೆಯುವ ಮೂಲಕ ಅವನು ಒಂದು ಹೆದ್ದಾರಿಯನ್ನು ನಿರ್ಮಿಸಿದ: 'ಗದ್ಯಂ ಕವೀನಾಂ ನಿಕಷಂ ವದಂತಿ' (ಗದ್ಯವು ಕವಿಯ ಯೋಗ್ಯತೆಯ ಒರೆಗಲ್ಲು) ಮತ್ತು 'ಬಾಣೋಚ್ಚಿಷ್ಟಂ ಜಗತ್ ಸರ್ವಂ' (ಜಗತ್ತಿನ ಬರವಣಿಗೆಯೆಲ್ಲವೂ ಬಾಣನ ಎಂಜಲು) ಎಂಬಂತಹ ಮಾತುಗಳಿಗೆ ಅವನು ಕಾರಣನಾದವನು.
ಕಾದಂಬರಿಯನ್ನು ಇಡಿಯಾಗಿ ತೆಗೆದುಕೊಂಡು ಅದನ್ನು ಪರಿಶೀಲಿಸಬೇಕು. ಏಕೆಂದರೆ ಕನ್ನಡದ ನಾಗವರ್ಮನು ಎರಡನ್ನೂ ತನಗೆ ಸೂಕ್ತ ಕಂಡಂತೆ ಕನ್ನಡದಲ್ಲಿ ಚಂಪೂರೂಪವಾಗಿ ತಂದಿದ್ದಾನೆ. ಹೀಗಾಗಿ ಇದರ ಶೈಲಿಯಲ್ಲಿ ಏಕರೂಪತೆಯಿದೆ. ನಮ್ಮ ಕವಿ ಮೂಲದಂತೆ ಇದನ್ನು ಗದ್ಯರೂಪದಲ್ಲಿ ಏಕೆ ಬರೆಯಲಿಲ್ಲವೋ ತಿಳಿಯದು, ಹಾಗೇನಾದರೂ ಬರೆದಿದ್ದರೆ ಕನ್ನಡದಲ್ಲಿ ಇದಕ್ಕೆ ಮತ್ತಷ್ಟು ಮಹತ್ವವುಂಟಾಗುತ್ತಿತ್ತು. ಆ ಕಾಲದಲ್ಲಿ ಕನ್ನಡ ಕವಿಗಳು ಅನುಸರಿಸುತ್ತಿದ್ದುದು ಚಂಪೂಮಾರ್ಗವನ್ನು; ಹಾಗಾಗಿ ಕನ್ನಡ ಕಾವ್ಯವನ್ನು ಬರೆಯಹೊರಟ ನಾಗವರ್ಮನೂ ಚಂಪೂವಿನಲ್ಲೇ 'ಕಾದಂಬರಿಕ'ಯನ್ನು ಕನ್ನಡಿಸಿರಬೇಕು. 'ಕರ್ಣಾಟಕ ಕಾದಂಬರಿ'ಯಲ್ಲಿ ಕಥಾವತರಣಂ, ಚಂದ್ರಾಪೀಡನ ಜನನ ಮತ್ತು ಬಾಲ್ಯ, ಚಂದ್ರಾಪೀಡನ ಜೈತ್ರಯಾತ್ರೆ, ಮಹಾಶ್ವೇತೆಯ ಸಂದರ್ಶನ, ಮಹಾಶ್ವೇತೆಯ ವೃತ್ತಾಂತ, ಕಾದಂಬರಿಯ ಪ್ರಥಮ ಸಂದರ್ಶನ, ಕಾದಂಬರಿಯ ದ್ವಿತೀಯ ಸಂದರ್ಶನ, ಚಂದ್ರಾಪೀಡನ ಪುನರಾಗಮನ, ಚಂದ್ರಾಪೀಡನ ಪ್ರಾಣವಿಯೋಗ ಮತ್ತು ಚಂದ್ರಾಪೀಡ-ಕಾದಂಬರಿಯರ ಪುನಸ್ಸಮಾಗಮ ಎಂಬ ಹತ್ತು ಆಶ್ವಾಸಗಳಿವೆ: ಮಧ್ಯೆ ಮಧ್ಯೆ ಗದ್ಯಭಾಗಗಳನ್ನೊಳಗೊಂಡಂತೆ ಒಟ್ಟು 1391 ಪದ್ಯಗಳಿವೆ.  ಅವನ ಶೈಲಿ ಪೆಡಸಾದುದಲ್ಲ, ಚಂಪೂ ರೂಪವನ್ನು ಗಮನಿಸಿದಾಗ "ನಾಗವರ್ಮನು ಸಾಧ್ಯವಾದಮಟ್ಟಿಗೂ ಸರಳವಾದ ಕನ್ನಡದಲ್ಲಿಯೇ ಗ್ರಂಥರಚನೆ ಮಾಡಿದ್ದಾನೆ .. .. ಕಥೆ ಹೇಳುವಾಗ ಅವನ ಶೈಲಿ ತುಂಬಾ ತಿಳಿಯಾಗಿರುತ್ತದೆ. ವರ್ಣನೆಗಳು ಬಂದಾಗ ಸಂಸ್ಕೃತವನ್ನು ತುಂಬಿ ಸಮಾಸಗಳನ್ನು ಹೆಣೆಯುವುದು ಕಂಡುಬರುತ್ತದೆ. ಇದು ಹೆಚ್ಚಾಗಿ ಕಂಡುಬರುವುದು ಗದ್ಯದಲ್ಲಿ." ಅವನು ತನ್ನ ಕಥನದಲ್ಲಿ ಕೆಲವು ವೇಳೆ ಮೂಲದಲ್ಲಿರುವುದನ್ನು ಬಿಡುತ್ತಾನೆ; ಮತ್ತೆ ಕೆಲವೆಡೆ ಮೂಲದಲ್ಲಿಲ್ಲದ್ದನ್ನು ಸೇರಿಸಿಯೂ ಬಿಡುತ್ತಾನೆ. "ಒಟ್ಟಿನಲ್ಲಿ ಹೇಳುವುದಾದರೆ, ನಾಗವರ್ಮನು ಮೂಲಗ್ರಂಥವನ್ನು ಹೆಜ್ಜೆಹೆಜ್ಜೆಗೂ ಅನುಸರಿಸಿದ್ದಾನೆ. ಆದರೂ ಅವನದು ಕಮಕ್ಕೀಕಾ ಮಕ್ಕಿಕಿ ಪರಿವರ್ತನವಲ್ಲ." ಇಷ್ಟು ಕವಿಕಾವ್ಯ ವಿಚಾರದ ಹಿನ್ನೆಯಲ್ಲಿ ಈಗ 'ಕರ್ಣಾಟಕ ಕಾದಂಬರಿ'ಯನ್ನು ಸ್ವಲ್ಪ ವಿಶದವಾಗಿ ಪರಿಶೀಲಿಸಬಹುದು.
'ಕಾದಂಬರಿ'ಯದು ತುಂಬ ಹೃದ್ಯವಾದ ಕಥಾನಕ; ರಮ್ಯ ವಸ್ತು, ಎಲ್ಲರಿಗೂ ಪ್ರಿಯವಾಗುವಂಥದು. ಖಈ ಕಲ್ಪನಾರಾಜ್ಯದಲ್ಲಿ ಹರ್ಷಚರಿತೆಯಂತೆ ಲೌಕಿಕವಾದ ವೀರಕರುಣಾದಿಗಳಿಗೆ ಎಡೆಯಿಲ್ಲ. ಇಲ್ಲಿ ಶೃಂಗಾರಕ್ಕೇ ಪ್ರಧಾನ ಪಟ್ಟ; ಉಳಿದುದೆಲ್ಲವೂ ಅದರ ಅಧೀನ. ಈ ಶೃಂಗಾರದಲ್ಲಿ ಕೂಡ ಪ್ರಾಪಂಚಿಕವಾದ ಕ್ಷುದ್ರಸಂಗತಿಗಳಿಗೆ ಸ್ಥಾನವಿಲ್ಲ. ಇಲ್ಲಿಯ ನಾಯಕರು ಪ್ರಥಮಾನುರಾಗದ ಬೇಗೆಯನ್ನು ಪ್ರೇಯಸಿಯ ಆಗಮನದವರೆಗೆ ಕೂಡ ತಡೆಯಲಾರದೆ ಪ್ರಾಣವನ್ನೇ ಬಿಟ್ಟುಬಿಡುವಂತಹ ಮೃಣಾಲಕೋಮಲಹೃದಯರು. ಪ್ರೇಯಸಿಯರಾದರೂ ಪ್ರೇಮಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡುವಂತಹ ದೇವಿಯರು.ಖ ರಮ್ಯವಾಗಿರುವುದರ ಜೊತೆಗೆ ಈ ಕಾವ್ಯದ ಕಥನವು ಗೋಜಲಿನಿಂದ ಕೂಡಿ ಬುದ್ಧಿ ಚುರುಕುಗೊಳ್ಳುವಂತೆಯೂ ಮಾಡುತ್ತದೆ; ಜೊತೆಗೆ ಕೌತುಕವನ್ನು ಹುಟ್ಟಿಸುವಂತಹದೂ ಆಗಿದೆ; ಹೊಸ ಬಗೆಯ ನಿರೂಪಣೆಯಿಂದ ಓದುಗರ ಮನಸ್ಸನ್ನು ತಣಿಸುವಂಥದೂ ಆಗಿದೆ.
ಕಾವ್ಯದ ನಿರೂಪಣೆಯ ವಿಧಾನವನ್ನು ಅನುಸರಿಸಿಯೇ ಈ ಸ್ವಾರಸ್ಯಕರ ಕತೆಯನ್ನು ಹೀಗೆ ಸಂಗ್ರಹಿಸಬಹುದು: ಮಾಳವದೇಶದ ರಾಜಧಾನಿ ವಿದಿಶೆ, ಅದರ ರಾಜ ಶೂದ್ರಕ. ಒಂದು ದಿನ ಬೆಳಿಗ್ಗೆ ರಾಜ ಒಡ್ಡೋಲಗದಲ್ಲಿದ್ದಾಗ ಒಬ್ಬ ಸುಂದರ ಚಂಡಾಲ ಕನ್ಯೆ ರಾಜನ ಅನುಮತಿಯೊಂದಿಗೆ ಓಲಗಕ್ಕೆ ಬರುತ್ತಾಳೆ. ತಾನು ಅಮೂಲ್ಯರತ್ನವೆಂದು ಭಾವಿಸಿದ್ದ ಗಿಳಿಯೊಂದು ಅವಳು ತಂದಿದ್ದ ಚಿನ್ನದ ಪಂಜರದಲ್ಲಿರುತ್ತದೆ. ಪಂಜರವನ್ನು ಅವಳು ರಾಜನ ಮುಂದಿಟ್ಟಾಗ ಅದು ಕಆರ್ಯೆಕಿ ಎಂಬ ಪದ್ಯಜಾತಿಯಲ್ಲಿ ಪದ್ಯವೊಂದನ್ನು ಕಟ್ಟಿ ರಾಜನನ್ನು ಹೊಗಳುತ್ತದೆ. ಇದರಿಂದ ರಾಜ ಮತ್ತು ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ! ಕುತೂಹಲದಿಂದ ಅದರ ಕತೆಯೇನೆಂದು ರಾಜ ವಿಚಾರಿಸುತ್ತಾನೆ. ಆಗಲೇ ವೇಳೆಯಾದ್ದರಿಂದ ಸ್ನಾನ ಊಟಗಳನ್ನು ಮುಗಿಸಿ, ಗಿಳಿಗೂ ಅದರ ವ್ಯವಸ್ಥೆ ಮಾಡಿ, ಎಲ್ಲ ಮುಗಿದ ಮೇಲೆ ರಾಜ ಮತ್ತೆ ಸಭೆಗೆ ಬಂದಾಗ ಗಿಳಿ ತನ್ನ ಕತೆಯನ್ನು ಹೇಳಲು ತೊಡಗುತ್ತದೆ.
ಗಿಳಿ ಹೇಳಿದ ಕತೆ: ವಿಂಧ್ಯಾಟವಿಯಲ್ಲಿನ ದಂಡಕಾರಣ್ಯದಲ್ಲಿ ಅಗಸ್ತ್ಯಾಶ್ರಮವಿದೆ; ಅದರ ಹತ್ತಿರವೇ ಪಂಪಾಸರೋವರ; ಅದರ ದಡದಲ್ಲಿ ದೊಡ್ಡ ಬೂರುಗದ ಮರವೊಂದಿದೆ. ತುಂಬ ಎತ್ತರವಾಗಿ, ರೆಂಬೆಕೊಂಬೆಗಳಿಂದ ವಿಸ್ತಾರವಾಗಿದ್ದುದಲ್ಲದೆ ತನ್ನ ಅಸಂಖ್ಯ ಪೊಟರೆಗಳಿಂದಾಗಿ ಗಿಳಿಗಳ ಆವಾಸಸ್ಥಾನವೂ ಆಗಿತ್ತು ಆ ಮರ. ಅಂತಹ ಒಂದು ಪೊಟರೆಯಲ್ಲಿ ನ್ನ ತಂದೆ ತನ್ನೊಡನೆ ವಾಸವಾಗಿದ್ದ; ತನ್ನ ಪ್ರಸವಕಾಲದಲ್ಲೇ ತಾಯಿ ತೀರಿಕೊಂಡಿದ್ದಳು. ತನ್ನ ರೆಕ್ಕೆಗಳಿನ್ನೂ ಬಲಿತಿರಲಿಲ್ಲ, ಹಾರುವ ಚೈತನ್ಯವಿರಲಿಲ್ಲ. ಹೀಗಾಗಿ ಮರಿಯನ್ನು ತಂದೆಯೇ ಮಮತೆಯಿಂದ ಸಲಹುತ್ತಿದ್ದ. ಒಂದು ದಿನ ಬೇಡರ ಗುಂಪೊಂದು ಮಹಾ ಶಬ್ದದಿಂದ ಆ ಪ್ರದೇಶವನ್ನು ಹೊಕ್ಕಿತು. ಯುವಕರು ಅನೇಕ ಪ್ರಾಣಿಗಳನ್ನು ಬೇಟೆಯಾಡಿ ಅಲ್ಲಿಂದ ಮುಂದೆ ಸಾಗಿದರು;ದರೆ ಅವರಲ್ಲೊಬ್ಬ ತೀರ ಮುದಿಯಾಗಿದ್ದ ಬೇಡನಿಗೆ ಏನೂ ಸಿಗದೆ ಹೋಗಿತ್ತು. ಹೀಗಾಗಿ ಅಲ್ಲಿಯೇ ಉಳಿದು ನಿಧಾನವಾಗಿ ಮರ ಹತ್ತಿ ಪೊಟರೆಗಳಲ್ಲಿ ಎಲೆಗಳ ಕಾಯಿಗಳ ನಡುವೆ ಹುದುಗಿದ್ದ ಗಿಳಿಗಳನ್ನು ಹೊರತೆಗೆದು ಅವುಗಳ ಕತ್ತು ಹಿಚುಕಿ ಕೆಳಕ್ಕೆ ಬಿಸಾಡಿ, ತನ್ನ ಕೆಲಸ ಮುಗಿಯಿತೆನಿಸಿದಾಗ ಕೆಳಗಿಳಿದು ಅಲ್ಲಿ ಬಿದ್ದಿದ್ದ ಗಿಳಿಗಳನ್ನೆಲ್ಲ ಬಾಚಿಕೊಂಡು ಚೀಲದಲ್ಲಿ ತುಂಬಿಕೊಂಡು ಹೋದ. ಅವನು ತಾವಿದ್ದ ಪೊಟರೆಗೂ ಕೈಹಾಕಿದ್ದ, ತಂದೆಯ ಕತ್ತನ್ನು ತಿರುಚಿ ಕೆಳಗೆ ಬಿಸಾಡಿದ್ದ. ತಾನು ತಂದೆಯ ರೆಕ್ಕೆಗಳಲ್ಲಿ ಮರೆಯಾಗಿ ಹುದುಗಿದ್ದ ಕಾರಣ ಮುದಿ ಬೇಡನಿಗೆ ತನ್ನ ಇರವು ತಿಳಿಯಲಿಲ್ಲ. ಹೀಗಾಗಿ ತಂದೆಯ ದೇಹದೊಡನೆ ತನ್ನನ್ನೂ ಕೆಳಕ್ಕೆ ಎಸೆದಾಗ ಬೀಳುವ ರಭಸಕ್ಕೆ ತಾನು ತಂದೆಯಿಂದ ಬೇರ್ಪಟ್ಟು ದೂರದಲ್ಲಿ ಬೀಳಬೇಕಾಯಿತು. ತೆವಳಿ ತೆವಳಿ ತಾನು ಮತ್ತಷ್ಟು ದೂರ ಹೋಗಿ ಬೇಡನಿಂದ ಪಾರಾದೆ. ಬಾಯಾರಿಕೆಯಿಂದ ತಲ್ಲಣಿಸುತ್ತಿದ್ದಾಗ ಮಧ್ಯಾಹ್ನದ ಹೊತ್ತಿಗೆ ಒಬ್ಬ ಮುನಿಕುಮಾರ (ಹಾರೀತ) ತನ್ನನ್ನು ಕಂಡು ಕರುಣೆಯಿಂದ ನೀರ್ದಾಣಕ್ಕೆ ಕರೆದೊಯ್ದು ಮೈತೊಳೆದು ನೀರು ಕುಡಿಸಿದಾಗ ತನಗೆ ಹೊಸಚೈತನ್ಯವುಂಟಾಯಿತು. ಆನಂತರ ತನ್ನನ್ನು ಆತ ತಮ್ಮ ತಂದೆಯಾದ ಜಾಬಾಲಿಯಿದ್ದ ಆಶ್ರಮಕ್ಕೆ ಕರೆದೊಯ್ದ. ತನ್ನನ್ನು ನೋಡಿದ ಕ್ಷಣವೇ ಜಾಬಾಲಿಯು ಗಂಭಿರವಾದ ಧ್ವನಿಯಿಂದ ಖಇವನು ಹಿಂದಿನ ಪಾಪಫಲವನ್ನು ಅನುಭವಿಸುತ್ತಿದ್ದಾನೆ; ಮೋಹಕ್ಕೆ ಸಿಲುಕಿ ಈ ಕೆಳಜಾತಿಯಲ್ಲಿ ಹುಟ್ಟಿದ್ದಾನೆಖ ಎಂದು ಹೇಳಿದಾಗ ಅಲ್ಲಿದ್ದವರೆಲ್ಲ ಗಿಳಿಯ ಕತೆ ಏನೆಂದು ಕುತೂಹಲಗೊಂಡರು. ಜಾಬಾಲಿ ಹೇಳತೊಡಗಿದ.
ಜಾಬಾಲಿ ಹೇಳಿದ ಕತೆ: ಆವಂತಿ ಎಂಬುದು ದೇಶ, ಉಜ್ಜಯಿನಿ ಅದರ ರಾಜಧಾನಿ, ತಾರಾಪೀಡನೆಂಬ ರಾಜ ಅದನ್ನಾಳುತ್ತಿದ್ದರೆ, ಶುಕನಾಸನೆಂಬ ಮಂತ್ರಿ ಅವನಿಗೆ ಆಪ್ತಸಚಿವನಾಗಿದ್ದ. ತಾರಾಪೀಡನ ಹೆಂಡತಿ ವಿಲಾಸವತಿಯಾದರೆ ಶುಕನಾಸನ ಪತ್ನಿ ಮನೋರಮೆ. ಅವರಿಬ್ಬರಿಗೂ ಕ್ರಮವಾಗಿ ಚಂದ್ರಾಪೀಡ ಮತ್ತು ವೈಶಂಪಾಯನ ಎಂಬ ಮಕ್ಕಳಾದರು, ಜೊತೆಗೆ ಬೆಳೆಬೆಳೆಯುತ ಇಬ್ಬರೂ ಒಟ್ಟಿಗೇ ವಿದ್ಯೆ ಕಲಿತರು, ಗಾಢಸ್ನೇಹಿತರಾದರು. ಇಬ್ಬರಿಗೂ ಹದಿನಾರು ತುಂಬಿತು. ಚಂದ್ರಾಪೀಡನಿಗೆ ರಾಜ ಯೌರಾಜ್ಯಾಭಿಷೇಕವನ್ನು ಮಾಡಿ ಇಂದ್ರಾಯುಧ ಎಂಬ ದಿವ್ಯಾಶ್ವವನ್ನು ರಾಜನೂ, ಪತ್ರಲೇಖೆ ಎಂಬ ಸೇವಕಿಯನ್ನು ರಾಣಿಯೂ ಬಳುವಳಿಯಾಗಿ ಕೊಟ್ಟರು. ಅವಳು ರಾಜಕುಮಾರನ ತಾಂಬೂಲಕರಂಕವಾಹಿನಿಯಾದಳು. ಯುವರಾಜ ದಿಗ್ವಿಜಯ ಯಾತ್ರೆ ಕೈಗೊಂಡ, ಆಪ್ತ ಗೆಳೆಯ ವೈಶಂಪಾಯನ ಅವನ ಜೊತೆಗೆ ಹೊರಟ.
ಯಾತ್ರೆಯ ಕೊನೆಯ ದಿನಗಳು; ಪಾಳೆಯ ಕೈಲಾಸಪರ್ವತದ ಬಳಿ ಬೀಡು ಬಿಟ್ಟಿತು. ಒಂದು ಬೆಳಿಗ್ಗೆ ಚಂದ್ರಾಪೀಡ ಒಬ್ಬನೇ ತನ್ನ ಕುದುರೆಯೇರಿ ವಿಹಾರಕ್ಕೆ ಹೊರಟ, ಅಲ್ಲಿ ವಿಲಕ್ಷಣವಾದ ಕಿನ್ನರ ಮಿಥುನವೊಂದು ಕಣ್ಣಿಗೆ ಬಿತ್ತು, ಅದನ್ನು ಹಿಡಿಯಬೇಕೆಂದು ಚಂದ್ರಾಪೀಡ ಕುದುರೆಯನ್ನು ಜೋರಾಗಿ ಆಯೆಡೆಗೆ ಓಡಿಸಿದ. ಆದರೆ ಸ್ವಲ್ಪ ಕಾಲದಲ್ಲಿಯೇ ಅದು ಪರ್ವತಪಂ್ತಯಲ್ಲಿ ಕಣ್ಮರೆಯಾಯಿತು. ಆ ಹೊತ್ತಿಗೆ ಯುವರಾಜ ದಣಿದಿದ್ದ; ಕುದುರೆಯೂ ಬಳಲಿತ್ತು. ದಣಿವಾರಿಸಿಕೊಂಡು ಹೋಗೋಣವೆಂದು ನೀರ್ದಾಣಕ್ಕಾಗಿ ಹುಡುಕಿದ. ಅನತಿ ದೂರದಲ್ಲಿ ಅಚ್ಚೋದ ಎಂಬ ಸರೋವರ ಕಾಣಿಸಿತು. ಅಲ್ಲಿಗೆ ಹೋಗಿ ಕುದುರೆಗೆ ನೀರು ಕುಡಿಸಿ ಹುಲ್ಲು ಮೇಯಲು ಬಿಟ್ಟು, ತಾನೂ ನೀರು ಕುಡಿದು ವಿಶ್ರಮಿಸಿಕೊಳ್ಳಲು ಅನುವಾದ. ಆ ಕಡುಮೌನದ ಕಾಡಿನಲ್ಲಿ ಇಂಪಾದ ಗಾನವೊಂದು ಕೇಳಿಬಂತು. ಕುತೂಹಲದಿಂದ ಮೇಲೆದ್ದ ಚಂದ್ರಾಪೀಡ ಆ ದನಿಯನ್ನು ಹಿಂಬಾಲಿಸಿ ಹೊರಟ. ಕೊಂಚ ದೂರ ಹೋದ ಮೇಲೆ ಅವನಿಗೊಂದು ಸಿದ್ಧಾಯತನ ಕಾಣಿಸಿತು. ಅಲ್ಲೊಂದು ಚತುರ್ಮುಖ ಲಿಂಗ, ಮುಂದೆ ಕಣ್ಮುಚ್ಚಿ ವೀಣಾನಾದದೊಡನೆ ತನ್ನ ಇಂಪಾದ ಕಂಠ ಬೆರೆಸಿ ನವಯೌನಭರಿತೆಯಾದ ಯುವತಿ ಹಾಡುತ್ತಿದ್ದಳು. ಅವಳು ಉಟ್ಟಿದುದು ಅಚ್ಚ ಬಿಳಿಯ ಪತ್ತಲ, ಕೊರಳಲ್ಲಿ ಜಪಸರ. ಯುವರಾಜ ಆಕೆ ಹಾಡುವುದನ್ನು ನಿಲ್ಲಿಸುವ ತನಕ ಕಾದ. ಆಕೆ ಹಾಡು ಮುಗಿಸಿ ಲಿಂಗಕ್ಕೆ ಪ್ರದಕ್ಷಿಣೆ ಬರುವಾಗ ಚಂದ್ರಾಪೀಡ ಅವಳ ಕಣ್ಣಿಗೆ ಬಿದ್ದ. ಅವನನ್ನು ಸ್ವಾಗತಿಸಿ ಆತ್ಮೀಯತೆಯಿಂದ ಅತಿಸತ್ಕಾರಮಾಡಿದಳು. ಮೊದಲು ಅಳುಕಿನಿಂದ ಕೂಡಿದ್ದ ಚಂದ್ರಾಪೀಡ ಅವಳ ಆದರವನ್ನು ಕಂಡು ಧೈರ್ಯಗೊಂಡು ಆ ಕಿರುವಯಸ್ಸಿಗೇ ತಾಪಸವೃತ್ತಿಯನ್ನು ಕೈಗೊಂಡುದೇಕೆಂದು ಕುತೂಹಲದಿಂದ ಕೇಳಿದ. ಅವಳ ಕಣ್ಣಿನಲ್ಲಿ ನೀರು ತುಂಬಿತು, ದನಿ ಗದ್ಗದವಾಯಿತು. ಕೊನೆಗೆ ಸಾವರಿಸಿಕೊಂಡು ತನ್ನ ಹೆಸರು ಮಹಾಶ್ವೇತೆಯೆಂದು ಹೇಳಿ ತನ್ನ ಕತೆಯನ್ನು ಹೇಳತೊಡಗಿದಳು.
ಮಹಾಶ್ವೇತೆ ಹೇಳಿದ ಕತೆ: ತಾನು ಹಂಸ ಮತ್ತು ಗೌರಿ ಎಂಬ ಹೆಸರಿನ ಅಪ್ಸರದಂಪತಿಯ ಒಬ್ಬಳೇ ಮಗಳು. ಬಹುಕಾಲದ ನಂತರ ಹುಟ್ಟಿದ ಮಗಳೆಂಬ ಕಾರಣದಿಂದ ತಾಯ್ತಂದೆಯರ ಪ್ರೀತಿ ಕಡಲಾಗಿತ್ತು. ತನಗೆ ಯೌವನ ಬಂತು. ಒಮ್ಮೆ ತಾನು ತಾಯಿಯೊಡನೆ ಸ್ನಾನಮಾಡಿ ಬರಲು ಅಚ್ಚೋದ ಸರೋವರಕ್ಕೆ ಬಂದಳು. ದಾರಿಯಲ್ಲೊಬ್ಬ ಸುಂದರ ಮುನಿಕುಮಾರನ ಭೇಟಿಯಾಯಿತು; ಕಂಡ ಕ್ಷಣವೇ ಅವನ ಬಗ್ಗೆ ಗಾಢಪ್ರೀತಿಯುಂಟಾಯಿತು. ಋಷಿಕುಮಾರ ಅಲ್ಲವೇ, ಅವನಿಗೆ ನಮಸ್ಕಾರ ಮಾಡುವ ನೆವದಲ್ಲಿ ಅವನ ಪಾದಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡಳು. ಹೊರಗೆ ನಮಸ್ಕಾರ, ಒಳಗೆ ಕಾಮವಿಕಾರ! ಈ ಸನ್ನವೇಶದಿಂದಾಗಿ ಅವನಿಗೂ ಇವಳ ಬಗ್ಗೆ ಅನುರಾಗವುಂಟಾಗಿ ಆತನೂ ಮೋಹಪರವಶನಾದ. ಪಕ್ಕದಲ್ಲೇ ಇದ್ದ ಅವನ ಗೆಳೆಯನನ್ನು (ಕಪಿಂಜಲ) ಈ ಮುನಿಕುಮಾರನ ವಿಷಯ ಕೇಳಿದಾಗ ಅವನು ಶ್ವೇತಕೇತುವಿನ ಮಗ ಪುಂಡರೀಕನೆಂಬ ವಿಷಯ ತಿಳಿಯಿತು. ಮಾತಾಡುವ ನೆವದಿಂದ ಅವನ ಕಿವಿಯಲ್ಲಿದ್ದ ಸುಂದರವಾದ ಕುಸುಮಮಂಜರಿಯ ವಿಷಯ ಕೇಳಿದಾಗ ಪುಂಡರೀಕ ಅದನ್ನು ತೆಗೆದು ಮಹಾಶ್ವೇತೆಯ ಕಿವಿಗೆ ತೊಡಿಸಲು ಹೋದ. ಕನ್ನೆಯ ಕೆನ್ನೆಯ ಸ್ಪರ್ಶಸುಖದಿಂದ  ಅವನ ಕೈ ನಡುಗಿ ಕೈಲಿದ್ದ ಜಪಸರ ಜಾರಿ ಬಿತ್ತು. ಅದನ್ನು ತಾನೆತ್ತಿಕೊಂಡು ಕೊರಳಲ್ಲಿ ಧರಿಸಿ ಮಹಾಶ್ವೇತೆ ಸುಖಿಸಿದಳು. ಇದನ್ನೆಲ್ಲ ಕಂಡ ಕಪಿಂಜಲನು ತನ್ನ ಗೆಳೆಯನನ್ನು ಗದರಿಕೊಂಡ. ಆಗ ಮುನಿಕುಮಾರ ಕೋಪಗೊಂಡಂತೆ ಮಹಾಶ್ವೇತೆಯ ಬಳಿ ಹೋಗಿ ತನ್ನ ಜಪಸರವನ್ನು ವಾಪಸು ಕೊಡಲು ಕೇಳಿದ; ಗಾಬರಿಯಿಂದ ಮಹಾಶ್ವೇತೆ ಜಪಸರಕ್ಕೆ ಬದಲಾಗಿ ತಾನು ಹಾಕಿಕೊಂಡಿದ್ದ ಹಾರವನ್ನು ತೆಗೆದುಕೊಟ್ಟುಬಿಟ್ಟಳು. ಅನ್ಯಚಿತ್ತನಾಗಿದ್ದ ಪುಂಡರೀಕ ಅದನ್ನೇ ಜಪಸರವೆಂದು ಭಾವಿಸಿ ತೆಗೆದುಕೊಂಡ.
ತಾನು ವಾಪಸ್ಸು ಮನೆಗೇನೋ ಬಂದಳು; ಆದರೆ ಮನಸ್ಸು ಮಾತ್ರ ಮುನಿಕುಮಾರನಲ್ಲಿಯೇ ಉಳಿದುಬಿಟ್ಟಿತ್ತು. ಅವನು ಹೋದ ದೆಸೆಯನ್ನೇ ತಾನು ಮೂಕವಾಗಿ ನೋಡುತ್ತ ಕೂತಿದ್ದಾಗ, ಸ್ನಾನಕ್ಕಾಗಿ ಹಿಂದೆ ಉಳಿದಿದ್ದ ಮಕರಿಕೆ ಎಂಬ ಸೇವಕಿ ಮುನಿಕುಮಾರನು ಕಳಿಸಿದ್ದ ಪ್ರೇಮಪತ್ರವನ್ನು ತಂದುಕೊಟ್ಟಳು. ಸೊಕ್ಕಿದವಳಿಗೆ ಕಳ್ಳು ಕುಡಿಸಿದಂತಾಯಿತು. ಹೇಗೋ ಸಂಜೆಯವರೆಗೂ ಕಾಲ ತಳ್ಳಿದಳು. ಆ ಹೊತ್ತಿಗೆ ಪುಂಡರೀಕನ ಗೆಳೆಯ ಕಪಿಂಜಲ ಗಾಬರಿಯಿಂದ ಬಂದು ಗೆಳೆಯನ ಮದನಾವಸ್ಥೆಯನ್ನು ಮನಕರಗುವಂತೆ ವರ್ಣಿಸಿ ಅವನನ್ನುಳಿಸಲೋಸುಗ ಬೇಗ ಬರಬೇಕೆಂದು ಕೇಳಿಕೊಂಡು, ಯಾರಿಗೂ ಕಾಣಿಸದಂತೆ ಹೊರಟು ಹೋದ. ಅಷ್ಟು ಹೊತ್ತಿಗೆ ತಾಯಿ ಬಂದಳು. ಆಕೆಯನ್ನು ಹೇಗೋ ಸಾಗಹಾಕಿದ ಮಹಾಶ್ವೇತೆ ತರಳಿಕೆಯೊಡನೆ ಮುನಿಕುಮಾರನಿದ್ದ ಜಾಗಕ್ಕೆ ಹೊರಟಳು. ದಾರಿಯಲ್ಲಿ ಅಪಶಕುನಗಳ ಸರಮಾಲೆ. ಅವಳಿಗೆ ದಿಗಿಲಾಯಿತು. ಗಾಬರಿಯಿಂದ ಹೋಗಿ ನೋಡಲು ಪುರುಷನೊಬ್ಬನ ಅಳಲು ಕೇಳಿಬಂತು. ಅವನು ಕಪಿಂಜಲ; ತನ್ನ ಗೆಳೆಯ ಗತಜೀವನಾಗಿದ್ದರಿಂದ ರೋದಿಸತೊಡಗಿದ್ದ. ಮೊದಲ ಕಣ್ಣ ಬೇಟದಲ್ಲಿಯೇ ತಾನು ವರಿಸಿಬಿಟ್ಟಿದ್ದ ಪತಿ ಅವನು ಎಂಬ ಭಾವನೆ ಅವಳದು; ಹೀಗಾಗಿ ಮಹಾಶ್ವೇತೆ ಸಹಗಮನಕ್ಕಾಗಿ ಚಿತೆಯೇರ್ಪಡಿಸಲು ತರಳಿಕೆಗೆ ಸೂಚಿಸಿದಳು. ಆಗ ಒಂದು ಅಚ್ಚರಿ! ಖಮಗಳೇ ಸಾಯಬೇಡ, ನೀನು ಮುಂದೆ ಇವನೊಡನೆ ಕೂಡುವೆಖ ಎಂಬ ಅಶರೀರವಾಣಿಯಾಯಿತು. ಅಷ್ಟರಲ್ಲಿ ಯಾವುದೋ ದಿವ್ಯಶರೀರವೊಂದು ಪುಂಡರೀಕನ ದೇಹವನ್ನು ಎತ್ತಿಕೊಂಡು ಆಕಾಶಕ್ಕೆ ಹಾರಿತು. ಅದನ್ನು ಕಂಡ ಕಪಿಂಜಲನು ಖನನ್ನ ಗೆಳೆಯನನ್ನು ಎತ್ತಿಕೊಂಡು ಎಲ್ಲಿ ಹೋಗುತ್ತೀ?ಖ ಎಂದು ಕೋಪದಿಂದ ಕಿರುಚಿ ಆಕಾಶಕ್ಕೆ ನೆಗೆದು ಅವನೂ ಕಣ್ಮರೆಯಾಗಿಬಿಟ್ಟ. ತರಳಿಕೆ ತನಗೆ ಸಮಾಧಾನ ಹೇಳಿ, ಸ್ನಾನ ಮಾಡಿಸಿದಳು. ಪುಂಡರೀಕನನ್ನು ಮತ್ತೆ ಕೂಡುವ ಆಸೆಯಿಂದ ನಾರುಮಡಿ-ಜಪಸರ ಧರಿಸಿ ತಪಶ್ಚರಣೆಯಲ್ಲಿರುವುದಾಗಿ ಮಹಾಶ್ವೇತೆ ತಿಳಿಸಿದಳು. ಇದನ್ನೆಲ್ಲ ಕೇಳಿದ ಚಂದ್ರಾಪೀಡನು ಹಾಗಾದರೆ ತರಳಿಕೆ ಎಲ್ಲೆಂದು ಪ್ರಶ್ನಿಸಿದಾಗ ಮಹಾಶ್ವೇತೆ ಹೀಗಂದಳು: "ನನ್ನ ಪ್ರಿಯ ಗೆಳತಿ ಕಾದಂಬರಿ; ಗಂಧರ್ವ ರಾಜ ಚಿತ್ರರಥ ಮತ್ತವನ ಮನದನ್ನೆ ಮದಿರಾದೇವಿಯ ಏಕೈಕ ಪುತ್ರಿ. ನಾನು ಪುಂಡರೀಕನನ್ನು ಸೇರುವವರೆಗೂ ತಾನು ಮದುವೆಯಾಗುವುದಿಲ್ಲವೆಂದು ಹಟಹಿಡಿದಿದ್ದಾಳಂತೆ. ಅವಳ ತಾಯ್ತಂದೆಯರು ಇದರಿಂದ ದುಃಖಿತರಾಗಿದ್ದಾರೆ. ಅವಳನ್ನು ಮದುವೆಯಾಗುವಂತೆ ಓಲೈಸಲೋಸುಗ ನನ್ನ ಪರವಾಗಿ ತರಳಿಕೆಯನ್ನು ಕಳಿಸಿದ್ದೇನೆ. ಅವಳು ಹೋದ ಕೊಂಚ ಹೊತ್ತಿಗೇ ನೀವು ಬಂದಿರಿ" ಎಂದಳು
ಜಾಬಾಲಿ ಮುಂದುವರಿಸಿದ ಕತೆ: ಮಾರನೆಯ ಬೆಳಿಗ್ಗೆ ತರಳಿಕೆ ಹಿಂದಿರುಗಿ ಬಂದಳು. ಕಾದಂಬರಿಯ ಹಟ ತೀರದೆಂದು ತಿಳಿಸಿದಾಗ ಮಹಾಶ್ವೇತೆ ತಾನೇ ಕಾದಂಬರಿಯಿದ್ದ ಹೇಮಕೂಟಕ್ಕೆ ಹೋಗಲು ನಿರ್ಧರಿಸಿ, ಜೊತೆಯಲ್ಲಿ ಬಂದು ಕಾದಂಬರಿಗೆ ಬುದ್ಧಿ ಹೇಳಬೇಕೆಂದು ಚಂದ್ರಾಪೀಡನನ್ನು ಪ್ರಾಸಿದಳು. ಯುವರಾಜ ಅದಕ್ಕೆ ಒಪ್ಪಿದ. ತನ್ನ ಗೆಳೆತಿಯ ಬಳಿ ಕರೆದೊಯ್ದು ಮಹಾಶ್ವೇತೆಯು ಚಂದ್ರಾಪೀಡನನ್ನು ಅವಳಿಗೆ ಪರಿಚಯಿಸಿದಳು. ಕಾದಂಬರಿ-ಚಂದ್ರಾಪೀಡರು ಕಂಡ ಕ್ಷಣದಿಂದ ಪರಸ್ಪರರಲ್ಲಿ ಅನುರಕ್ತರಾದರು. ಮಹಾಶ್ವೇತೆಯನ್ನು ಕಾಣಲು ಚಿತ್ರರಥ ಬಂದಾಗ ಪ್ರೇಮಿಗಳ ಮೊದಲ ಭೇಟಿ ಮುಕ್ತಾಯವಾಯಿತು. ಮಹಾಶ್ವೇತೆಯ ಮದುವೆಯಾಗುವವರೆಗೂ ತಾನು ಕನ್ಯೆಯಾಗಿಯೇ ಇರುತ್ತೇನೆಂಬ ಹಟತೊಟ್ಟ ತನ್ನಲ್ಲಿ ಈ ಮೋಹ ತುಂಬಿಕೊಂಡಿತಲ್ಲ ಎಂದು ಕಾದಂಬರಿ ಮುಜುಗರಪಟ್ಟಳು. ರಾತ್ರಿ ಚಂದ್ರಾಪೀಡ ಕಾದಂಬರಿಯ ಧ್ಯಾನದಲ್ಲಿಯೇ ಇದ್ದಾಗ, ಕಾದಂಬರಿಯು ತನ್ನ ಪ್ರೇಮಕಾಣಿಕೆಯಾಗಿ ಕಳಿಸಿದ್ದ 'ಶೇಷ' ಎಂಬ ಮುತ್ತಿನ ಹಾರವನ್ನು ಮದಲೇಖೆಯೆಂಬ ಅವಳ ಸೇವಕಿಯಿಂದ ಸ್ವೀಕರಿಸಿದ. ಬೆಳುದಿಂಗಳು ಎಲ್ಲೆಡೆ ಪಸರಿಸಿದ್ದಾಗ ಕಾದಂಬರಿ ಮಿತಪರಿವಾರದೊಡನೆ ಬಂದು ಸ್ವಲ್ಪ ಕಾಲ ಮಾತಾಡಿ ಹಿಂದಿರುಗಿದಳು. ಈ ಆಗುಹೋಗುಗಳು ಚಂದ್ರಾಪೀಡನಲ್ಲಿ ವಿಸ್ಮಯವುಂಟುಮಾಡಿದವು.
ಮಾರನೆಯ ಬೆಳಿಗ್ಗೆ ಎದ್ದ ಚಂದ್ರಾಪೀಡ ಪ್ರಾತರ್ವಿಧಿಗಳನ್ನು ಪೂರೈಸಿ ಮಹಾಶ್ವೇತೆ-ಕಾದಂಬರಿಯರ ಅಪ್ಪಣೆ ಪಡೆದು, ಬಹು ಕಾಲ ಬಿಟ್ಟು ಬಂದಿದ್ದ ತನ್ನ ಪರಿವಾರವನ್ನು ಸೇರಲು ಅಚ್ಛೋದ ಸರೋವರದ ಕಡೆಗೆ ಹೊರಟ. ಆ ಹೊತ್ತಿಗೆ ಅವನನ್ನು ಹುಡುಕಿಕೊಂಡು ಅವನ ಪರಿವಾರವೂ ಅಲ್ಲಿಗೆ ಬಂದಿತ್ತು. ಮಾರನೆಯ ಬೆಳಗು ಹರಿಯುವ ಹೊತ್ತಿಗೆ ಕೇಯೂರಕನೆಂಬ ಸೇವಕನು ಬಂದು ಚಂದ್ರಾಪೀಡ ಹೇಮಕೂಟದಲ್ಲಿಯೇ ಮರೆತುಬಂದಿದ್ದ ಶೇಷವನ್ನೂ ಇತರ ಕಾಣಿಕೆಗಳನ್ನೂ ಕೊಟ್ಟು, ಮರಳಿ ಬರುವಂತೆ ಆಕೆ ಚಂದ್ರಾಪೀಡನನ್ನು ಬಿನ್ನೈಸಿಕೊಂಡುದನ್ನು ಕೇಳಿ ಮತ್ತೆ ಪತ್ರಲೇಖೆಯೊಡನೆ ಹೇಮಕೂಟಕ್ಕೆ ಹೊರಟ. ಅಲ್ಲಿ ಸೇರಿದ ಬಳಿಕ ಕಾದಂಬರಿಯೊಡನೆ ಸ್ವಲ್ಪ ಹೊತ್ತು ಪ್ರಣಯಾಲಾಪದಲ್ಲಿ ತೊಡಗಿದ್ದು, ಅವಳ ಇಚ್ಛೆಯಂತೆ ಪತ್ರಲೇಖೆಯನ್ನು ಅಲ್ಲಿಯೇ ಬಿಟ್ಟು ಚಂದ್ರಾಪೀಡ ತನ್ನ ಪಾಳೆಯಕ್ಕೆ ಹಿಂದಿರುಗಿದ. ಆ ಹೊತ್ತಿಗೆ ದೂತನ ಮೂಲಕ ಉಜ್ಜಯಿನಿಗೆ ವಾಪಸಾಗುವಂತೆ ತಾಯ್ತಂದೆಯರು ಕಳಿಸಿದ್ದ ಸಂದೇಶವನ್ನು ಕೇಳಿದ ಚಂದ್ರಾಪೀಡ ಪತ್ರಲೇಖೆಯನ್ನು ಕರೆತರಲು ಮೇನಾದನೆಂಬ ಸೇವಕನಿಗೆ ಹೇಳಿ, ಪರಿವಾರವನ್ನು ನಿಧಾನವಾಗಿ ಕರೆತರುವಂತೆ ವೈಶಂಪಾಯನನಿಗೆ ತಿಳಿಸಿ ತಾನು ರಾಜಧಾನಿಗೆ ಮರಳಿದ. ಆದರೆ ಅವನ ಮನಸ್ಸು ಕಾದಂಬರಿಯ ಹಂಬಲದಿಂದ ವಿಹ್ವಲವಾಗಿತ್ತು. ಕೆಲವು ದಿನಗಳ ಬಳಿಕ ಪತ್ರಲೇಖೆ ವಾಪಸಾದಳು; ಕಾದಂಬರಿಯ ತೀವ್ರ ವಿರಹವೇದನೆಯನ್ನು ವರ್ಣಿಸಿದಳು. ಮರುದಿನ ಬೆಳಿಗ್ಗೆ ಕೇಯೂರಕ ಬಂದು ಅವನು ಮರೆತು ಬಂದಿದ್ದ ಶೇಷವನ್ನೂ ಕಾದಂಬರಿ ಕಳಿಸಿದ್ದ ಇತರ ಕಾಣಿಕೆಗಳನ್ನೂ ತಂದು ಚಂದ್ರಾಪೀಡನಿಗೆ ಅರ್ಪಿಸಿದ. ಆತನೂ ಕಾದಂಬರಿಯ ಪರಿತಾಪವನ್ನು ವರ್ಣಿಸಿದ. ಅವನ ಉದ್ವೇಗ ಇಮ್ಮಡಿಗೊಂಡಿತು. (ಇಲ್ಲಿಗೆ ಮೂಲದಲ್ಲಿ ಬಾಣಭಟ್ಟ ರಚಿಸಿದ್ದ ಭಾಗವು ಮುಕ್ತಾಯಗೊಳ್ಳುತ್ತದೆ; ಮುಂದಿನ ಕಥನ ಬಾಣನ ಮಗ ಭೂಷಣನ ರಚನೆ). ಅವಳನ್ನು ನೋಡಲು ತಾನೇ ಬರುವುದಾಗಿ ಹೇಳಿ ಪತ್ರಲೇಖೆ ಮತ್ತು ಕೇಯೂರಕರಿಬ್ಬರನ್ನೂ ಕಾದಂಬರಿಯ ಬಳಿ ಕಳಿಸಿದ.
ದಿನಗಳು ಉರುಳಿದುವು; ಆದರೆ ವೈಶಂಪಾಯನನ ಸುಳಿವೂ ಇಲ್ಲ, ಸೈನ್ಯಪರಿವಾರವೂ ವಾಪಸಾಗಲಿಲ್ಲ! ಚಂದ್ರಾಪೀಡನು ಕಳವಳಪಡುತ್ತಿರುವಾಗ ಒಂದು ದಿನ ಹಿಂತಿರುಗಿ ಬಂದ ಸೇನಾಪರಿವಾರದವರು ವೈಶಂಪಾಯನನು ವಿಚಿತ್ರ ಸ್ಥಿತಿಯಲ್ಲಿದ್ದಾನೆಂದೂ, ಅಲ್ಲಿಂದ ಹಿಂತಿರುಗಲು ಇಷ್ಟಪಡುತ್ತಿಲ್ಲವೆಂದೂ ತಿಳಿಸಿದರು. ವೈಶಂಪಾಯನನನ್ನು ಕರೆತರಲು ತಾನೇ ಹೋಗಲು ನಿಶ್ಚಯಿಸಿ ತಾಯ್ತಂದೆಯರ ಅನುಮತಿ ಪಡೆದು ಕೈಲಾಸ ಪರ್ವತದ ಕಡೆಗೆ ಹೊರಟ. ಎಲ್ಲಿ ಹುಡುಕಾಡಿದರೂ ಗೆಳೆಯನ ಸುಳಿವೇ ಇಲ್ಲ! ಕೊನೆಗೆ ಚಂದ್ರಾಯುಧವನ್ನೇರಿದ ಚಂದ್ರಾಪೀಡನು ಮಹಾಶ್ವೇತೆಯ ಆಶ್ರಮಕ್ಕೆ ಬಂದ. ಅಲ್ಲವಳು ಕಣ್ಣೀರು ಸುರಿಸುತ್ತ ಕೂತಿದ್ದಳು. ಕಾದಂಬರಿಗೇನೋ ಆಪತ್ತು ಒದಗಿದೆ ಎಂದು ಅವನು ಭಾವಿಸಿದ. ಆದರೆ ಅವಳು ತನ್ನ ಕಣ್ಣೀರಿಗೆ ಕೊಟ್ಟ ಕಾರಣವೇ ಬೇರೆ: ಚಂದ್ರಾಪೀಡ ಉಜ್ಜಯಿನಿಗೆ ಹೋದ ಮೇಲೆ ತಾನು ಇಲ್ಲಿ ತಪಶ್ಚರಣಕ್ಕಾಗಿ ಆಗಮಿಸಿದಳೆಂದೂ, ಒಂದು ದಿನ ಚಂದ್ರಾಪೀಡನ ವಯಸ್ಸಿನ ಬ್ರಾಹ್ಮಣ ಯುವಕನೊಬ್ಬನು ಬಂದು ತನ್ನನ್ನು ಕಣ್ಣುಗಳಿಂದಲೇ ಹೀರುವಂತೆ ನೋಡುತ್ತ ತನ್ನಂತಹ ಸುಂದರ ಯುವತಿಯು ತಪಸ್ಸಿಗೆ ತೊಡಗುವುದೇ ಎಂದು ಕೇಳಿದ, ಪುಂಡರೀಕನ ವಿರಹದಿಂದ ಮನನೊಂದಿದ್ದ ತಾನು ಇದರಿಂದ ಕುಪಿತಳಾಗಿ ಅವನನ್ನು ತನ್ನ ಬಳಿ ಸುಳಿಯಲು ಅವಕಾಶ ನೀಡದಂತೆ ತಡೆ ಎಂದು ತರಳಿಕೆಗೆ ಹೇಳಿ ತಾನೆ ಬೇರೆಡೆಗೆ ಹೋದೆ. ಆದರೆ ತರಳಿಕೆಯಿಂದ ತಪ್ಪಿಸಿಕೊಂಡು ಅಲ್ಲಿಗೂ ಅವನು ಬಂದುದಲ್ಲದೆ ಪದೇ ಪದೇ ಚಪಲಮಾತುಗಳನ್ನಾಡುತ್ತ ತನ್ನ ಹಿಂದೆಯೇ ಸುಳಿಯುತ್ತಿದ್ದ. ಈ ಯುವಕನ ಕಾಟವನ್ನು ತಾಳಲಾರದೆ, ಗಿಳಿಯಂತೆ ಗಳಹುತ್ತಿದ್ದ ಅವನು ಗಿಳಿಯಾಗಿಯೇ ಹುಟ್ಟಲಿ ಎಂದು ಶಪಿಸಲು, ಅವನು ಕೂಡಲೇ ನಿಶ್ಚೇಷ್ಟಿತನಾಗಿ ಕೆಳಗೆ ಬಿದ್ದ. ಆನಂತರ ಅವನು ಚಂದ್ರಾಪೀಡನ ಗೆಳೆಯ ವೈಶಂಪಾಯನನೆಂಬ ವಿಷಯ ಪರಿಜನರಿಂದ ತಿಳಿಯಿತು ಎಂದಳು. ತನ್ನ ಗೆಳೆಯನ ವಿಷಯ ಕೇಳಿದ ಕೂಡಲೇ ಚಂದ್ರಾಪೀಡ ಎದೆಯೊಡೆದು ಆಾತದಿಂದ ಕೆಳಕ್ಕೆ ಕುಸಿದ. ಇದನ್ನು ಕಂಡು ಮಹಾಶ್ವೇತೆ ಮೂರ್ಚೆ ಹೋದಳು. ತರಳಿಕೆ ರೋದಿಸತೊಡಗಿದಳು.
ಚಂದ್ರಾಪೀಡನು ಮಹಾಶ್ವೇತೆಯ ಆಶ್ರಮಕ್ಕೆ ಬಂದ ವಿಷಯವನ್ನು ಕೇಳಿದ ಕಾದಂಬರಿ ಹಾಗೂ ಪತ್ರಲೇಖೆಯರೂ ಅಲ್ಲಿಗೆ ಬಂದವರು ನಡೆದಿರುವ ಟನೆಯಿಂದ ತಾವೂ ಮೂರ್ಚೆಗೊಂಡು ಬಿದ್ದರು. ಕೊಂಚ ಕಾಲದ ಬಳಿಕ ಕಾದಂಬರಿ ಎಚ್ಚೆತ್ತ ಮೇಲೆ ಪ್ರಾಣತ್ಯಾಗಕ್ಕೆ ಸಿದ್ಧಳಾದಳು. ಅಷ್ಟರಲ್ಲಿ ಆಗಸದಲ್ಲಿ ಚಂದ್ರಕಿರಣಗಳಿಂದ ಕೂಡಿದ ಪ್ರಭಾಪುಂಜವೊಂದು ಮೂಡಿ, ಅದರಿಂದ ಖಪುಂಡರೀಕನ ದೇಹವೂ ಮಹಾಶ್ವೇತೆಯ ಸಮಾಗಮಕ್ಕಾಗಿ ಇನ್ನೂ ಬೆಳಗುತ್ತಿದೆ; ಹಾಗೆಯೇ ಈ ಚಂದ್ರಾಪೀಡನ ದೇಹವೂ ನಿತ್ಯವಾದದ್ದು, ಕೆಲಕಾಲಾನಂತರ ಆತನು ಕಾದಂಬರಿಯೊಡನೆ ಸೇರುತ್ತಾನೆ. ಹೀಗಾಗಿ ಅವನ ಈ ದೇಹವನ್ನು ಜೋಪಾನವಾಗಿ ಕಾಯಬೇಕುಖ ಎಂಬ ದಿವ್ಯಧ್ವನಿ ಕೇಳಿಸಿತು. ಸ್ವಲ್ಪ ಹೊತ್ತಿನ ಬಳಿಕ ಪತ್ರಲೇಖೆಯೂ ಮೂರ್ಚೆಯಿಂದ ಎದ್ದಳು. ತಕ್ಷಣವೇ ಚಂದ್ರಾಯುಧದ ಬಳಿ ಹೋಗಿ ಅದರೊಡನೆ ನಡೆದು ಅಚ್ಚೋದ ಸರೋವರದಲ್ಲಿ ಹಾರಿಕೊಂಡಳು. ಈ ಆಶ್ಚರ್ಯವೆಲ್ಲ ಆದುದನ್ನು ಕಂಡು ಸಾವರಿಸಿಕೊಳ್ಳುವಷ್ಟರಲ್ಲಿ ಸರೋವರದಿಂದ ಕಪಿಂಜಲನು ಎದ್ದು ಬಂದು ಮಹಾಶ್ವೇತೆಗೆ ಹೀಗೆಂದು ಹೇಳಿದ: "ಪುಂಡರೀಕನು ವಿರಹಾಧಿಕ್ಯದಿಂದ ಪ್ರಾಣಸಂಕಟದಲ್ಲಿದ್ದಾಗ ಹೆಮ್ಮೆಯಿಂದ ನಗುತ್ತಿದ್ದಂತೆ ಕಾಣಿಸಿದ ಚಂದ್ರನಿಗೆ ಅವನು ಕನೀನು ಎರಡು ಸಲ ಮನುಷ್ಯನಾಗಿ ಹುಟ್ಟುಕಿ ಎಂದು ಶಪಿಸಿದನಂತೆ; ಅದರಿಂದ ಕೋಪಗೊಂಡ ಚಂದ್ರನು 'ನೀನೂ ನನ್ನೊಡನೆ ಹುಟ್ಟಿ ಅದರಲ್ಲಿ ಭಾಗಿಯಾಗು' ಎಂದು ಮರುಶಾಪವಿತ್ತು ಪುಂಡರೀಕನ ದೇಹವನ್ನು ದೇಹವನ್ನು ತೆಗೆದುಕೊಂಡು ಹೋಗಿ ಚಂದ್ರಲೋಕದಲ್ಲಿರಿಸಿ ಕಾಪಾಡುತ್ತಿದ್ದಾನೆ. ಶ್ವೇತಕೇತುವಿನ ಬಳಿ ಹೋಗಿ ಆಯುಷ್ಕಾಮದಾನಯಾಗಗಳನ್ನು ಮಾಡಲು ಚಂದ್ರ ತನ್ನನ್ನು ಕಳಿಸಿದ. ಆತುರದಿಂದ ಬರುತ್ತಿರುವಾಗ ತಿಳಿಯದೆ ತಾನು ವೈಮಾನಿಕನೊಬ್ಬನನ್ನು ದಾಟಿಬಿಟ್ಟೆ; ಅದರಿಂದ ಕುಪಿತನಾದ ಅವನು 'ನೀನು ಕುದುರೆಯ ಜನ್ಮವನ್ನು ತಾಳು' ಎಂದು ಶಾಪವಿತ್ತ. ಕುದುರೆಯಾದಾಗಲೂ ನನ್ನ ಗೆಳೆಯನೊಡನೆ ಇರುವಂತೆ ಅನುಗ್ರಹಿಸು ಎಂದು ಕೇಳಿಕೊಂಡಾಗ ವೈಮಾನಿಕ ಹಾಗೆಯೇ ಆಗಲೆಂದು ಕರುಣಿಸಿದ. ಅದರಂತೆ ನಾನು ಚಂದ್ರಾಪೀಡನಿಗೆ ವಾಹನವಾದೆ, ಈಗ ಅಚ್ಛೋದ ಸರೋವರದಲ್ಲಿ ಮುಳುಗಿದ ಕ್ಷಣವೇ ತನಗೆ ಕುದುರೆಯ ರೂಪು ಹೋಗಿ ತನ್ನ ಹಿಂದಿನ ಸ್ವರೂಪ ಬಂದಿದೆ. ಈಗ ಶ್ವೇತಕೇತುವಿನ ಬಳಿ ಹೋಗುತ್ತಿದ್ದೇನೆ" ಎಂದು ಹೇಳಿ ಅಲ್ಲಿಂದ ಹೊರಟ. ಆಗ ಮಹಾಶ್ವೇತೆ ಕಾದಂಬರಿಯನ್ನು ಕುರಿತು, ತಾವಿಬ್ಬರೂ ಈಗ ಒಂದೇ ಸ್ಥಿತಿಯಲ್ಲಿರುವವರು, ಈಗ ಚಂದ್ರನನ್ನು ಇಬ್ಬರೂ ಪೂಜಿಸೋಣ, ಅವನು ಕರುಣೆ ತೋರುತ್ತಾನೆ ಎನ್ನಲು ಒಪ್ಪಿದ ಗೆಳತಿಯೊಡನೆ ಹಾಗೇ ಮಾಡಲು ತೊಡಗಿದಳು. ಈ ಕಡೆ ಚಂದ್ರಾಪೀಡನಿಗೊದಗಿದ ಗತಿಯನ್ನು ಕೇಳಿದ ಚಂದ್ರಾಪೀಡ ಮತ್ತು ವೈಶಂಪಾಯನರ ತಾಯ್ತಂದೆಗಳು ಅಲ್ಲಿಗೆ ಬಂದರು. ಹೀಗೆ ಪುಂಡರೀಕನು ಶ್ವೇತಕೇತು-ಲಕ್ಷ್ಮಿ ದಂಪತಿಯರಿಗೆ ಮಗನಾಗಿ ಹುಟ್ಟಿ ಕಾಮಪರವಶತೆಯ ಕಾರಣದಿಂದ ದೇವತ್ವದಿಂದ ಚ್ಯುತನಾಗಿ ಶುಕನಾಸನಿಗೆ ವೈಶಂಪಾಯನನಾಗಿ ಮತ್ತೆ ಹುಟ್ಟಿದರೂ ಈಗ ಮಹಾಶ್ವೇತೆಯ ಶಾಪದಿಂದ ಗಿಳಿಯಾಗಿದ್ದಾನೆ ಎಂದು ಜಾಬಾಲಿಯು ತನ್ನ ಕಥನವನ್ನು ಮುಗಿಸಿದ.
ಗಿಳಿ ಹೇಳಿದ ತನ್ನ ಮುಂದಿನ ಕತೆ: ಜಾಬಾಲಿ ಋಷಿ ಹೀಗೆ ನನ್ನ ಕತೆಯನ್ನು ಹೇಳಿದಾಗ ತನಗೆ ಜನ್ಮಾಂತರದ ನೆನಪುಂಟಾಯಿತು, ಹಿಂದೆ ತಾನು ಕಲಿತಿದ್ದ ವಿದ್ಯೆಯೆಲ್ಲ ಮರುಕಳಿಸಿತು. ಆಗ ಅವರನ್ನು "ಜ್ಞಾನೋದಯವಾದರೆ ವಿರಕ್ತಿ ಹೆಚ್ಚುವುದೆಂದು ಹೇಳುತ್ತಾರೆ. ಆದರೆ ನನಗೆ ಮಹಾಶ್ವೇತೆಯ ಬಗೆಗಿನ ಮೋಹ ಹೆಚ್ಚಾಗುತ್ತಿದೆ. ಚಂದ್ರಾಪೀಡ ಎಲ್ಲಿದ್ದಾನೆ?" ಎಂದು ಕೇಳಿದೆ. ಅವರು ನಾನು ಹಾರಲಾರೆನಾದ್ದರಿಂದ, ಗರಿಗಳು ಬಲಿತ ಮೇಲೆ ಹೋಗಬೇಕೆಂದೂ ಈಗ ಸುಮ್ಮನಿರಬೇಕೆಂದೂ ಹೇಳಿ ಹೊರಟುಹೋದರು. ಸ್ವಲ್ಪ ಹೊತ್ತಾದ ಮೇಲೆ ನನ್ನ ಗೆಳೆಯನಾದ ಕಪಿಂಜಲನು ಬಂದು ಪೂರ್ವ ವೃತ್ತಾಂತವನ್ನೆಲ್ಲ ತಿಳಿಸಿ, ತನ್ನ ತಂದೆ ಶ್ವೇತಕೇತು ಆಯುಷ್ಕಾಮ ಹೋಮವನ್ನು ಮಾಡುತ್ತಿರುವುದಾಗಿಯೂ, ತಾಯಿಯಾದ ಲಕ್ಷ್ಮಿ ಅವರಿಗೆ ಪರಿಚಾರಕಿಯಾಗಿರುವಳೆಂದೂ ತಿಳಿಸಿ, ಆ ಯಾಗ ಮುಗಿಯುವವರೆಗೆ ನಾನು ಹಾರಲಾರೆನೆಂದೂ ತಿಳಿಸಿ ಹೊರಟುಹೋದ. ಕೆಲ ಕಾಲದ ಬಳಿಕ ತನಗೆ ಹಾರುವ ಶಕ್ತಿ ಬಂತು. ಚಂದ್ರಾಪೀಡ ಎಲ್ಲಿರುವನೆಂಬ ವಿಷಯವೂ ತನಗೆ ತಿಳಿಯಿತು. ಅವನನ್ನು ನೋಡುವ ಆತುರದಿಂದ ಒಂದು ದಿನ ಜಾಬಾಲಿಗಳ ಆಶ್ರಮದಿಂದ ತಪ್ಪಿಸಿಕೊಂಡು ಹೊರಟು ಬಂದೆ. ಹಾಗೇ ಹಾರುತ್ತ ಬಂದು ಗಿಡದ ಮೇಲೆ ಮಲಗಿದೆ. ಎಚ್ಚರವಾದಾಗ ತಾನು ಯಾರೋ ಬೀಸಿದ್ದ ಬಲೆಯಲ್ಲಿ ಸಿಕ್ಕಿಬಿದ್ದಿದ್ದೆ. ನನ್ನನ್ನು ಹಿಡಿದವನೊಬ್ಬ ಚಂಡಾಲ. 'ನಾನು ನನ್ನ ಗೆಳೆಯನನ್ನು ನೋಡಲು ಆತುರನಾಗಿದ್ದೇನೆ. ಅವನ ಬಳಿ ಹೋಗಲು ಇನ್ನೂ ಬಹು ದೂರ ಹಾರಬೇಕಾಗಿದೆಯಾದ್ದರಿಂದ ಬಿಟ್ಟುಬಿಡು' ಎಂದು ಅವನನ್ನು ಬಹುವಿಧವಾಗಿ ಕೇಳಿಕೊಂಡೆ. ಅವನು ಮಾತ್ರ ತನ್ನ ಮನವಿಯನ್ನು ಕೇಳದೆ ತನ್ನನ್ನೆತ್ತಿಕೊಂಡು ಹೊಲೆಯರ ಹಟ್ಟಿಗೆ ಹೋಗಿ ಚಂಡಾಲಕನ್ಯೆಯೊಬ್ಬಳಿಗೆ ತನ್ನನ್ನು ಕೊಟ್ಟ. ಅವಳು ತನ್ನನ್ನೊಂದು ಪಂಜರದಲ್ಲಿಟ್ಟಳು. ಕೆಲವು ದಿನಗಳು ಕಳೆದವು. ಇವಳಾರು, ತನ್ನನ್ನು ಇವಳೇಕೆ ಹಿಡಿದಿದ್ದಾಳೆ ಎಂಬುದಾವುದೂ ನಗೆ ತಿಳಿಯದಾಯಿತು - ಎಂದು ಹೇಳಿ ಗಿಳಿ ತನ್ನ ಕಥನವನ್ನು ಮುಗಿಸಿತು. ಹೀಗೆ ಗಿಳಿ ತನ್ನ ಕತೆಯನ್ನು ನಿರೂಪಿಸಲು ಶೂದ್ರಕನಿಗೆ ಬಹಳ ವಿಸ್ಮಯವುಂಟಾಯಿತು. ಅವನು ಚಂಡಾಲಕನ್ಯೆಯನ್ನು ಕರೆಸಿ ವಿಚಾರವೇನೆಂದು ಕೇಳಿದ. ಆಗ ಆ ಚಂಡಾಲಕನ್ಯೆಯು ಶೂದ್ರಕನು ಬೇರಾರೂ ಆಗಿರದೆ ಚಂದ್ರಾಪೀಡನಾಗಿದ್ದ ಚಂದ್ರನೆಂದೂ, ಗಿಳಿಯೇ ಶಾಪಕ್ಕೊಳಗಾಗಿ ವೈಶಂಪಾಯನನಾಗಿದ್ದ ಪುಂಡರೀಕನೆಂದೂ, ತಾನು ಈ ರೂಪವನ್ನು ತಾಳಿದ ಲಕ್ಷ್ಮಿಯೆಂದೂ ಹೇಳಿ ಶ್ವೇತಕೇತುಗಳ ಆಜ್ಞೆಯಂತೆ ಆಯುಷ್ಕಾಮ ಹೋಮವು ಮುಗಿಯುವವರೆಗೂ ಗಿಳಿಯನ್ನು ಸೆರೆಹಿಡಿದು ಜೋಪಾನವಾಗಿರಿಸಿದ್ದೆನೆಂದೂ, ಯಜ್ಞ ಕೊನೆಗೊಂಡ ಮೇಲೆ ತಾನೀಗ ಗಿಳಿಯನ್ನು ಇಲ್ಲಿಗೆ ತಂದೆನೆಂದೂ ಹೇಳಿ ಈಗ ಅವರು ತಮ್ಮ ದೇಹಗಳನ್ನು ತೊರೆದು ತಮ್ಮ ಹಿಂದಿನ ದಿವ್ಯದೇಹಗಳನ್ನು ಹೊಂದಿ ಇಷ್ಟಜನರೊಡನೆ ಸೇರಬಹುದೆಂದೂ ವಿವರಿಸಿ ಆಕಾಶಕ್ಕೆ ಹಾರಿ ಮಿಂಚಿನಂತೆ ಕಣ್ಮರೆಯಾದಳು. ರಾಜನೂ ಗಿಳಿಯೂ ತಮ್ಮ ತಮ್ಮ ದೇಹಗಳನ್ನು ತ್ಯಜಿಸಿದರು. ಈ ಕಡೆ ಚಂದ್ರಾಪೀಡನ ದೇಹದಲ್ಲಿ ಮತ್ತೆ ಚೈತನ್ಯವುಂಟಾಗಿ ಅವನು ಎದ್ದು ಕೂತರೆ, ಅತ್ತ ಚಂದ್ರಲೋಕದಿಂದ ಪುಂಡರೀಕನೂ ಬಂದ. ಅಷ್ಟು ಹೊತ್ತಿಗೆ ತಾರಾಪೀಡ-ವಿಲಾಸವತಿಯರರೂ ಶುಕನಾಸ-ವಿಲಾಸವತಿಯರೂ ಬಂದರು. ಹೇಮಕೂಟದಿಂದ ಕಾದಂಬರಿಯ ತಾಯ್ತಂದೆಯರೂ ಹೇಮಕೂಟಕ್ಕೆ ಬಂದರು. ಆನಂತರ ಚಂದ್ರಾಪೀಡ-ಕಾದಂಬರಿ ಹಾಗೂ ಪುಂಡರೀಕ-ಮಹಾಶ್ವೇತೆಯರ ಮದುವೆ ನಡೆದು ಎಲ್ಲವೂ ಸುಖಾಂತವಾಯಿತು.
ಹೀಗೆ 'ಕಾದಂಬರಿ' ಕಾವ್ಯವು ತೊಡಕಿನ ಕತೆಯಿಂದ ಕೂಡಿದ್ದರೂ ಅದ್ಭುತರಮ್ಯತೆಯಿಂದ ಆಹ್ಲಾದಕಾರಿಯಾದ ಕಥಾನಕವಾಗಿದೆ. ಕತೆಯೊಳಗೆ ಕತೆಯಿದ್ದು ಈ ಕಾವ್ಯವು ವಿಸ್ಮಯ ಹುಟ್ಟಿಸುತ್ತದೆ. ಜೊತೆಗೆ ಇದರೊಡನೆ ಮೂಲದಲ್ಲಿ ಬರುವುದು ದೀರ್ಘ ವರ್ಣನೆಗಳು. ರಾಜನ ಓಲಗ, ಹಿಕ ವ್ಯಾಯಾಮ, ಸ್ನಾನ, ಊಟ, ಋಷ್ಯಾಶ್ರಮಗಳು, ಬೇಟೆ, ಬೇಟೆಗಾರರ ರೂಪ, ಸರೋವರಗಳು, ಜೈತ್ರಯಾತ್ರೆ, ಹಗಲು-ರಾತ್ರಿಗಳು ಮುಂತಾದವುಗಳನ್ನೂ ಬಾಣ ಸಾಕಷ್ಟು ರ್ದೀವಾಗಿಯೇ ವರ್ಣಿಸುತ್ತಾನಂತೆ. ಕವಿ ಶಬ್ದಧಾರಾಳಿ; ಒಂದು ಮಾತಿನ ಎಡೆಯಲ್ಲಿ ಹತ್ತು ಮಾತು ಬಳಸಬಲ್ಲ ಚತುರ. ಜೊತೆಗೆ ದೀರ್ಘ ಸಮಾಸ ಪದಗಳು ಬೇರೆ; ಕಗ್ಗಾಡಿನಲ್ಲಿ ಹೊಗಬೇಕಾದ ತೊಡಕು ಎಷ್ಟೋ ವೇಳೆ ಬಾಣಗದ್ಯದಿಂದ ಉಂಟಾಗುತ್ತದಂತೆ. ಪ್ರತಿ ವರ್ಣನೆಯಲ್ಲಿಯೂ ಕುಸುರಿ ಕೆಲಸ, ಸೂಕ್ಷ್ಮ ನಿರೀಕ್ಷಣೆಯ ವಿವರಗಳು, ಮಾತಿನ ಕೌಶಲ ಎದ್ದು ಕಾಣುತ್ತವೆ. ಮಾತುಗಳನ್ನು ಶಬ್ದಚಿತ್ರವನ್ನಾಗಿಸಬಲ್ಲ ಕಲೆಗಾರ ಅವನು; ಈ ವಿಷಯದಲ್ಲಿ ಅವನನ್ನು ಸರಿಗಟ್ಟುವವರು ಸಂಸ್ಕೃತ ಸಾಹಿತ್ಯದಲ್ಲಿಯೇ ಮತ್ತೊಬ್ದನಿಲ್ಲವೆಂಬ ಹೆಗ್ಗಳಿಕೆ ಬಾಣನದು. ಕವಿಯ ಮತ್ತೊಂದು ಗುಣವೆಂದರೆ ಸ್ತ್ರೀಪುರುಷರ ಹೃದಯದ ಭಾವನೆಗಳನ್ನು ಅವುಗಳ ನವಿರಿಗೆ ಅನುಗುಣವಾಗಿ ಚಿತ್ರಿಸುವುದು. ಎಲ್ಲ ಭಾವಸೂಕ್ಷ್ಮಗಳು, ಚಿತ್ತವಿಕಾರಗಳು ಮಾತಾಗಿ ಈ ಕಾವ್ಯದಲ್ಲಿ ಕಣ್ಮುಂದೆ ನಿಲ್ಲುತ್ತವೆ. ಆ ಕಾರಣಕ್ಕಾಗಿಯೇ, ಕನಿಷ್ಠ ಪಕ್ಷ, ವರ್ಣನೆಯ ಮಟ್ಟಿಗಾದರೂ, 'ಬಾಣೋಚ್ಛಿಷ್ಟಂ ಜಗತ್ಸರ್ವಂ' ಎಂಬ ಮಾತು ನಿಜವೆಂದು ಸಂಸ್ಕೃತ ವಿದ್ವಾಂಸರ ಅಭಿಪ್ರಾಯ. ಆದರೂ ಕೆಲವೊಮ್ಮೆ ಅವನ ವರ್ಣನೆಗಳು ಮಿತಿಮೀರುತ್ತವೆ, ಕೆಲವು ವೇಳೆ ಅನೌಚಿತ್ಯದಿಂದ ಕೂಡಿರುತ್ತವೆ, ಉದಾಹರಣೆಗೆ ರೆಕ್ಕೆಯಿನ್ನೂ ಬಲಿಯದ ಗಿಳಿಮರಿಯು ಬೇಟೆಯ ಸೂಕ್ಷ್ಮಗಳನ್ನೆಲ್ಲ ವಿವರಿಸುವುದು. ಉತ್ಪ್ರೇಕ್ಷೆಗಳಂತೂ ಕಾವ್ಯದುದ್ದಕ್ಕೂ ಇಡಿಕಿರಿದಿವೆ.
ಪ್ರಾಯಶಃ ಈ ಭಾವನೆ ನಾಗವರ್ಮನನ್ನೂ ಕಾಡಿತೋ ಏನೋ; ಆದ್ದರಿಂದಲೇ ಅವನು ವರ್ಣನೆಗಳ ವಿಷಯದಲ್ಲಿ ಹೆಚ್ಚು ಮುತುವರ್ಜಿ ವಹಿಸಿ, ಬೇಡದ್ದನ್ನು ಬಿಟ್ಟು, ಬೇಕಾದ ಕಡೆ ಹ್ರಸ್ವಗೊಳಿಸಿ, ಆವಶ್ಯಕವೆನಿಸಿದ ಕಡೆ ಮೂಲದ ವಿವರಗಳಿಗೆ ಮತ್ತಷ್ಟು ವಿವರಗಳನ್ನು ಜೋಡಿಸಿ ಒಂದು ಬಗೆಯ ಸಮತೋಲವನ್ನು ಸಾಧಿಸಲು ಪ್ರಯತ್ನಿಸಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾನೆ. ಇಬ್ಬರಿಂದ ರಚಿತವಾಗಿ ಶೈಲಿಗಳಲ್ಲಿ ಭಿನ್ನತೆಯಿದ್ದ ಮೂಲವನ್ನು ಒಬ್ಬನೇ ಕನ್ನಡಿಸಿರುವುದರಿಂದ ನಿರೂಪಣೆಗೆ ಏಕರೂಪತೆ ಬಂದಿದೆ, ಭಾಷೆ ಒಂದೇ ರೀತಿಯಲ್ಲಿ ಬಳಕೆಯಾಗಿದೆ. ಮೂಲದಲ್ಲಿನ ವರ್ಣನೆ ಮತ್ತು ನಿರೂಪಣೆಗಳೆರಡನ್ನೂ ಮನನ ಮಾಡಿಕೊಂಡು ಆದಷ್ಟೂ ಅವುಗಳ ಮೂಲಭಾವವನ್ನು ಉಳಿಸಿಕೊಂಡು ಅವನ್ನೆಲ್ಲ ಕನ್ನಡ ಪದ್ಯಗಳಲ್ಲಿ ಪಡಿಮೂಡಿಸಿರುವುದು ನಾಗವರ್ಮನ ಹಿರಿಮೆಯೇ ಆಗಿದೆ. ಅನುವಾದ ಹೇಗಿರಬೇಕೆಂಬುದಕ್ಕೆ 'ಕರ್ಣಾಟಕ ಕಾದಂಬರಿ' ಒಂದು ಮಾದರಿಕೃತಿಯಾಗಿದೆ. ನಮ್ಮ ಕವಿಯ ವಿಶೇಷ ಗುಣವೆಂದರೆ ಭಾವನೆಗೆ ಅನುಗುಣವಾದ ಲಾಲಿತ್ಯಪೂರ್ಣ ಭಾಷೆಯನ್ನು ಬಳಸುವುದು. ಹೇಳಿ ಕೇಳಿ ಇದು ಮಾರ್ಗಕಾವ್ಯ, ಅದೂ ಪೆಡಸು ಗದ್ಯದ ಸಂಸ್ಕೃತ ಕೃತಿಯ ಭಾಷಾಂತರ. ಆದ್ದರಿಂದ ಅವನೂ ಮಾರ್ಗದ ಸಮಾಸಭೂಯಿಷ್ಠ ಭಾಷೆಯನ್ನು ಕೆಲವೊಮ್ಮೆ ಕನ್ನಡದಲ್ಲಿ ತರಬೇಕಾಯಿತು. ಸಂಸ್ಕೃತದ ವರ್ಣಛಂದಸ್ಸು ಪದ್ಯದ ಪ್ರತಿ ಪಾದದಲ್ಲಿನ ವರ್ಣಸಂಖ್ಯೆ ಮತ್ತು ಅವುಗಳ ಖಚಿತ ವಿನ್ಯಾಸ (ಗುರುಲಘುಗಳ ಬಳಕೆ) ಇವುಗಳ ಕಾರಣದಿಂದ ಅದನ್ನು ಸಾಧಿಸಲು ಸಮಾಸರಚನೆ ಸಂಸ್ಕೃತದಲ್ಲಿ ಆವಶ್ಯಕವೇನೋ. ಇದು ಕನ್ನಡ ಜಾಯಮಾನಕ್ಕೆ ವ್ಯತಿರಿಕ್ತವಾದುದು. ಕನ್ನಡ ಸರಳನುಡಿಗಳಿಂದ ಕೂಡಿರುವಂಥದು, ಪದಗಳನ್ನು ಹೆಣೆದಾಗಲೂ ಎರಡು ಮೂರು ಪದಗಳು ಸೇರಬಹುದೇ ಹೊರತು ಅನೇಕ ಪಾದಗಳಲ್ಲಿ ಹರಿಯುವ ರ್ದೀಸಮಾಸ ಇಲ್ಲಿ ಆವಶ್ಯಕವೂ ಇಲ್ಲ, ಸಾಧ್ಯವೂ ಇಲ್ಲ. ಹೀಗಾಗಿ ನಾಗವರ್ಮ ವರ್ಣನೆಗಳ ಸಂದರ್ಭದಲ್ಲಾದರೂ ಸಮಾಸಯುಕ್ತವಾದ ಸಂಸ್ಕೃತಭೂಯಿಷ್ಠ ಶೈಲಿಯನ್ನು ಅನುಸರಿಸುವುದು ಅನಿವಾರ್ಯವಾಯಿತು. ಆದರೆ ಕತೆಯ ನಿರೂಪಣೆಯುಲ್ಲಿಯೂ, ಸಂಭಾಷಣೆಗಳಲ್ಲಿಯೂ ಸರಳ ಕನ್ನಡವನ್ನೇ ಬಳಸುತ್ತಾನೆ; ಅದಕ್ಕನುಗುಣವಾದ ಕಂದವನ್ನೇ ಉಪಯೋಗಿಸಿತ್ತಾನೆ. ಏಕೆಂದರೆ ಕಂದದ ರಚನೆಯಲ್ಲಿ ರ್ದೀವಾದ ಪಾದಗಳುಳ್ಳ ವೃತ್ತದಲ್ಲಿನಂತೆ ಸಮಾಸಯುಕ್ತತೆ ಬೇಕಾಗುವುದಿಲ್ಲ.
ಈಗ ಕೆಲವು ಉದಾಹರಣೆಗಳೊಡನೆ 'ಕರ್ಣಾಟಕ ಕಾದಂಬರಿ'ಯ ವರ್ಣನಾ ವೈಖರಿಯನ್ನು ನೋಡೋಣ. ಗಿಳಿ ವಾಸಿಸುತ್ತಿದ್ದ ಬೂರುಗಮರದ ಸಮೀಪವಿದ್ದ ಅಗಸ್ತ್ಯಾಶ್ರಮದ ಬಳಿಯ ಪಂಪಾ ಸರೋವರದ ವರ್ಣನೆ ಹೀಗಿದೆ:
ಕಡಲಂ ಪೀರ್ದನಗಸ್ತ್ಯನೆಂಬ ಪುರುಡಿಂ ಮತ್ತೊಂದನಬ್ಜೋದ್ಭವಂ
ಪಡೆದಂ ಪೆರ್ಗಡಲಂ ಮಹಾಪ್ರಳಯದೊಳ್ ದಿಕ್ಸಂಧಿಗಳ್ ಬಂಧಮಂ
ಬಿಡೆ ಬೀಳ್ದತ್ತಿಳೆಗಾಗಸಂ ಧರಣಿಯಂ ಪೆರ್ಬಂದಿಯಂ ಕಿಳ್ತೆತ್ತಿದೊಂ
ದೆಡೆ ನೀರ್ ತೀವಿತು ಎನಲ್ಕೆ ಪೆಂಪುವಡೆಗುಂ ಗುಣ್ಪಿಂದೆ ಪಂಪಾಸರಂ
(ಪಂಪಾ ಸರೋವರದ ಆಳವು ಎಷ್ಟಿತ್ತೆಂದರೆ, ಅಗಸ್ತ್ಯ ಋಷಿಯು ಸಮುದ್ರವನ್ನೆಲ್ಲ ಒಂದೇ ಕುಡಿತೆಯಲ್ಲಿ ಕುಡಿದುಬಿಟ್ಟನಲ್ಲ ಎಂಬ ಪೈಪೋಟಿಯಿಂದ ಬ್ರಹ್ಮನು ಮತ್ತೊಂದು ದೊಡ್ಡ ಸಮುದ್ರವನ್ನು ಸೃಷ್ಟಿಸಿದ ಹಾಗಿತ್ತು; ಪ್ರಳಯಕಾಲದಲ್ಲಿ ದಿಕ್ಕುಗಳಲ್ಲಿ ಕಾಣಿಸಿಕೊಂಡ ಬಿರುಕುಗಳ ಮೂಲಕ ಆಕಾಶವೇ ಕಳಚಿಬಿತ್ತೋ ಎನ್ನುವ ಹಾಗಿತ್ತು; ವರಾಹಾವತಾರದಲ್ಲಿ ವಿಷ್ಣವು ಭೂಮಿಯನ್ನೆತ್ತಿದಾಗ ಆ ಜಾಗದಲ್ಲಿ ನೀರು ತುಂಬಿಕೊಂಡು ಈ ಸರೋವರವಾಯಿತೋ ಎನ್ನುವಂತಿತ್ತು!) ಆಶ್ಚರ್ಯಕರವಾಗಿ, ಈ ಪದ್ಯವು ವೃತ್ತವೇ ಆಗಿದ್ದರೂ ಪದಗಳ ಹೆಣಿಗೆ ಪೆಡಸಿಂದ ಕೂಡಿರದೆ ಹಳಗನ್ನಡದಲ್ಲಿ ಸಾಧಿಸಬಹುದಾದ ಸರಳತೆಯನ್ನು ಒಳಗೊಂಡಿರುವುದು ಕವಿಯ ಭಾಷೆಯ ಮೇಲಿನ ಹಿಡಿತಕ್ಕೆ ಹಿಡಿದ ಕನ್ನಡಿಯಾಗಿದೆ.
ಹಾಗೆಯೇ ಚಂದ್ರಾಪೀಡ ಕಂಡ ಅಚ್ಛೋದ ಸರೋವರದ ವರ್ಣನೆಯಿರುವುದು ಹೀಗೆ:
ಎಲೆ! ತಾರಾಗಂ ಹರಂ ಕಣ್ಣಿಡೆ ಕರಗಿದುದು! ಅಂತಲ್ತು ರುದ್ರಾಟ್ಟಹಾಸಂ
ಜಲಮಾದತ್ತು! ಅಲ್ತು, ಚಂದ್ರಾತಪಂ ಅಮೃತರಸಾಕಾರಮಾಯ್ತು! ಅಲ್ತು, ಹೈಮಾ
ಚಲಂ ಅಂಭೋರೂಪದಿಂದಂ ಪರಿಣಮಿಸಿದುದು! ಅಂತಲ್ತು, ನೈರ್ಮಲ್ಯಶೋಭಾ
ಕಲಿತಂ ತ್ರೈಲೋಕ್ಯಲಕ್ಷ್ಮೀ ಮಣಿಮುಕುರಮೆನಲ್ ಚೆಲ್ವದಾಯ್ತಬ್ಜಷಂಡಂ!
(ಎಲೆಲೆ! ಹರನು ತನ್ನ ಮೂರನೆಯ ಕಣ್ಣನ್ನು ತೆರೆದಾಗ ಇಡೀ ಹಿಮಾಲಯವೇ ಕರಗಿ ನೀರಾಗಿರಬೇಕು; ಉಹ್ಞೂ, ರುದ್ರನ ಅಟ್ಟಹಾಸವೇ ನೀರಾಗಿರಬೇಕು; ಅದೂ ಅಲ್ಲ, ಬೆಳುದಿಂಗಳೆ ನೀರಿನ ರೂಪದಲ್ಲಿ ಮಡುಗಟ್ಟಿರಬೇಕು; ಅದೂ ಅಲ್ಲ, ಹಿಮಾಲಯ ಪರ್ವತವು ನೀರಿನ ರೂಪದಲ್ಲಿ ಇಲ್ಲಿ ಅವತರಿಸಿರಬೇಕು; ಅಲ್ಲಲ್ಲ, ಇದು ತ್ರಿಲೋಕಲಕ್ಷ್ಮಿಯು ತನ್ನ ಚೆಲುವನ್ನು ನೋಡಿಕೊಳ್ಳಲು ಸೃಷ್ಟಿಸಿಕೊಂಡ ರನ್ನಗನ್ನಡಿಯಾಗಿರಬೇಕು!) ಕವಿಯ ಕಲ್ಪನೆಗೆ ರೆಕ್ಕೆಪುಕ್ಕ ಮೂಡಿಬಿಟ್ಟಿದೆಯಿಲ್ಲಿ. ಷೇಕ್ಸ್‍ಪಿಯರ್‍ನ ನಾಟಕವೊಂದರಲ್ಲಿ ಬರುವಂತೆ ಇಲ್ಲಿಯೂ ಕವಿಯ ಕಣ್ಣು ಯಾವುದೋ ಒಂದು ಉತ್ಕಂಠಿತೆಯಲ್ಲಿ ತೇಲುಗಣ್ಣುಮೇಲುಗಣ್ಣಾಗಿ ಇಹಪರಗಳೆರಡ್ಕೂ ಸಂಚರಿಸಿರಬೇಕು. ಎಂಥ ಕಲ್ಪನೆ! ಅದೂ ಇಲ್ಲಿನ ಅಮೂರ್ತವಾದ ಕಲ್ಪನೆಗಳ ಚೆಲುವನ್ನು ಪರಿಭಾವಿಸಿ: ರುದ್ರನ ಅಟ್ಟಹಾಸ (ಬರಿ ನಗುವಲ್ಲ) ಕರಗಿ ನೀರಾಯಿತೋ ಎಂಬ ಮಾತು! ಇದನ್ನು ಬರೆಯುವಾಗ ಕವಿಮನಸ್ಸು ಖಂಡಿತ ನೆಲದ ಪರಿವೆಯನ್ನು ಪೂರ್ತಿ ಕಳೆದುಕೊಂಡಿರಬೇಕು. ಅಲ್ಲದೆ ದೂರ ಕುದುರೆಯೇರಿ ಬಂದು ದಣಿವಿನಿಂದ ಕೂಡಿದ ಚಂದ್ರಾಪೀಡನ ಮನಸ್ಸಿಗೆ ಇದನ್ನು ಕಂಡಾಗ ಉಂಟಾದ ವಿಸ್ಮಯ, ಸಂತೋಷ-ಸಮಾಧಾನದ ಭಾವಗಳು ಈ ಪದ್ಯದಲ್ಲಿ ಮೂಡಿವೆ. ಇಲ್ಲಿನ ಮಾತುಗಳ ಜೋಡಣೆಯಾದರೂ ಎಷ್ಟು ಸುಂದರ! ಭಾವಕ್ಕನುಗುಣವಾದ ಭಾಷೆ.
ಗಿಳಿಯ ಮರಿಯು ವಾಸಿಸುತ್ತಿದ್ದ ಬೂರುಗದ ಮರದ ಬಳಿಕೆ ಬಂದ ಮುದಿಬೇಡನ ವ್ಯಕ್ತಿಚಿತ್ರ ಕಣ್ಣಿಗೆ ಕಟ್ಟುತ್ತದೆ:
ಜರೆಯಿಂದಂ ಪುರ್ಬು ಜೋಲಲ್ ತೆರೆ ತರತರದಿಂದುಣ್ಮಿಪೊಣ್ಮಲ್ಕೆ ಗಂಟಲ್
ಮುರಿದತ್ತೊಂದೊಂದಳ್ ತಳ್ತೊಗೆಯೆ ಸೆರೆಗಳೊತ್ತಂಬದಿಂ ಬರ್ಪ ಕೆಮ್ಮಿಂ
ಬಿರಿಯಲ್ ಬೆಟ್ಟಂಗಳ್ ಆ ಬಟ್ಟೆಯೊಳಿನಿತಡಗುಂ ತನ್ನ ಕೆಯ್ಸಾರದೆಂದಾ
ತುರಿಸುತ್ತುಂ ಭ್ರಾಂತಿಯಿಂದೆನ್ನಯ ಮರದಡಿಯೊಳ್ ನಿಂದನೊರ್ವ ಪುಳಿಂದಂ
(ಮುಪ್ಪಿನಿಂದಾಗಿ ಹುಬ್ಬು ಜೋಲಾಡುತ್ತಿತ್ತು, ಚರ್ಮದ ಸುಕ್ಕು ಹೊಮ್ಮುತ್ತಿತ್ತು, ಬಾಗಿದ ಕತ್ತಿನ ನರಗಳ ಒತ್ತಡದಿಂದ ಬರುವ ಕೆಮ್ಮಂತೂ ಬೆಟ್ಟಗಳೇ ಬಿರುಕುಬಿಡುವುಷ್ಟು ಜೋರಾಗಿತ್ತು! ತನಗೆ ಆ ಹಾದಿಯಲ್ಲಿ ಸ್ವಲ್ಪವಾದರೂ ಮಾಂಸ ಸಿಕ್ಕುತ್ತದೋ ಇಲ್ಲವೋ ಎಂಬ ಕಳವಳದಿಂದ ಆ ಮುದಿಬೇಡನು ನಾವಿದ್ದ ಮರದಡಿಯಲ್ಲಿ ನಿಂತಿದ್ದ).
ಮುದಿಬೇಡನು ಬೂರುಗದ ಮರವನ್ನು ಹತ್ತಿಬಂದು ಗೂಡುಗಳಲ್ಲಿದ್ದ ಹಕ್ಕಿಗಳನ್ನು ತೆಗೆತೆಗೆದು ಕತ್ತು ಹಿಚುಕಿ ಕೆಳಕ್ಕೆ ಬಿಸಾಡುವಾಗ ಅವನು ಮರಿಗಳ ಬಗ್ಗೆಯೂ ಕರುಣೆ ತೋರಲಿಲ್ಲ. ಅಲ್ಲಿ ವಾಸಿಸುತ್ತಿದ್ದ ಗಿಳಿಮರಿಗಳ ಸ್ವರೂಪವನ್ನು ವರ್ಣಿಸುವ ಈ ಪದ್ಯ ತನ್ನ ಶಬ್ದವಿನ್ಯಾಸದ ಮೂಲಕವೇ ಅವುಗಳ ಕೋಮಲತೆ, ಲಾಲಿತ್ಯಗಳನ್ನು ಎದೆಗೆ ಮುಟ್ಟುವಂತೆ ಅನುಭವಕ್ಕೆ ತರುತ್ತದೆ:
ಜಳಜದ ಮೊಗ್ಗೆಯಂತೆ ಮುಗುಳಂತೆ ಎಳ ಎಕ್ಕೆಯ ಕಾಯ್ಗಳಂತೆ ಶಾ
ಲ್ಮಲಿ ಕುಸುಮಂಗಳಂತೆ ತರು ನೀಡನಿಕಾಯದಿನೆಲ್ಲವಾಗಾಗಳಾ
ಗಳೆ ಗಱಿವೊಯ್ವ ಕಣ್ದೆವ ತುಪ್ಪುಡರ್ಚುವ ಕೆಂಪನಾಳ್ವ ಕೋ
ಮಳ ಶುಕಶಾಬಕಪ್ರಕರಮಂ ತೆಗೆದಂ ದಯೆಗೆಟ್ಟು ಲುಬ್ಧಕಂ
(ತಾವರೆಯ ಮೊಗ್ಗುಗಳಂತೆ, ಅರೆಬಿರಿದ ಹೂಗಳಂತೆ, ಎಳತಾದ ಎಕ್ಕೆಯ ಕಾಯಿಗಳಂತೆ, ಶಾಲ್ಮಲಿಯ ಹೂಗಳಂತೆ ಇದ್ದ ಇನ್ನೂ ಈಗ ತಾನೇ ಗರಿಮೂಡುತ್ತಿರುವ ಕಣ್ಣುಬಿಟ್ಟು ನೋಡಲು ಕಲಿಯುತ್ತಿರುವ ಪುಕ್ಕಗಳಿನ್ನೂ ಪೂರ್ತಿ ಮೂಡದೆ ಮೊಳಯುತ್ತಿರುವ ಕೆಂಪಕುಕೊಕ್ಕಿನಿಂದ ಆಕರ್ಷಕವಾದ ಪುಟಾಣಿ ಗಿಳಿಮರಿಗಳ ಗುಂಪನ್ನೂ ದಯೆಯಿಲ್ಲದ ಆ ಬೇಡನು ತೆಗೆತೆಗೆದು ಎಸೆದನು)
ತಂದೆಯನ್ನು ಕಳೆದುಕೊಂಡು, ಬೇಡನಿಂದ ಅದೃಷ್ಟವಶಾತ್ ಉಳಿದ ಗಿಳಿಮರಿಯು ಬಾಯಾರಿಕೆಯಿಂದ ಬಳಲಿದ್ದರೂ ತೆವಳುತ್ತ ಅವನಿಂದ ದೂರ ಹೋದ ದೃಶ್ಯ:
ಗಱಿ ಪಾರಲ್ಕಿಲ್ಲ ಕಾಲುಂ ಬಲಿಯವು ನಡೆಯಲ್ ಬೆಟ್ಟಿತೆಂಬಂತೆ ಮೂಗಂ
ಮುಱಿವನ್ನಂ ಮುಗ್ಗುತ್ತ ಎಡಬಲದೊಳಗಾಂ ಬೀೞುತುಂ ಪಕ್ಕಗೂಡಾ
ಗೊಱಗುತ್ತುಂ ಪೋಗಿ ಮಧ್ಯಾಹ್ನದ ಬಿಸಿಲ್ ಅೞುರಲ್ ಕಣ್ಮಲರ್ ನಟ್ಟು ಸುಯ್ಗಳ್
ಪೊಱಪೊಟ್ಟೊಂದೊಂದನಟ್ಟುತ್ತಿರೆ ಪಿರಿದುಮೞಲ್ದೆನ್ನೊಳಿಂತೆಂದೆನಾಗಳ್
(ಹಾರಲು ರೆಕ್ಕೆಗಳಿಲ್ಲ, ನಡೆಯಲು ಇನ್ನೂ ಕಾಲು ಬಲಿತಿಲ್ಲ, ಆಗಾಗ ಮುಗ್ಗರಿಸಿ ಕೊಕ್ಕು ನೋವಾಗುವಂತೆ ಪಕ್ಕದಲ್ಲುರುಳಿ ನಡೆಯುತ್ತ, ಮಧ್ಯಾಹ್ನದ ಬಿರುಬಿಸಿಲಿನಿಂದ ಕಣ್ಣುಗಳು ಮುಚ್ಚಿ ನಿಟ್ಟುಸಿರು ಹೊಮ್ಮಿ ನೋವನ್ನನುಭವಿಸಿ ಈ ರೀತಿ ಹೇಳಿಕೊಂಡೆನು)
ಬದುಕುವ ಆಸೆಯಿಂದ ಕೂಡಿ ದಣಿವನ್ನು ಮೀರಿ ಮಹಾಶ್ವೇತೆ ಎಂಬ ಹೆಸರಿಗೆ ಅನ್ವರ್ಥವಾಗಿದ್ದ ರೂಪಿನ ತರುಣಿಯನ್ನು ಚಂದ್ರಾಪೀಡನು ಮೊದಲ ಬಾರಿ ಕಂಡಾಗ ಕವಿ ಅವಳ ಸಾತ್ವಿಕ ಚೆಲುವನ್ನು ಬಣ್ಣಿಸುವ ಪರಿ ಇದು:
ಕಡೆದರೊ ಶಂಖದಿಂ ತೆಗೆದರೊ ನವಮೌಕ್ತಿಕದಿಂ ಮೃಣಾಳದಿಂ
ಪಡೆದರೊ ದಂತದಿಂದೆಸೆಯೆ ಮಾಡಿದರೋ ರುಚಿರೋಜ್ಜ್ವಲಾಂಗಮಂ
ಬಿಡದಮೃತಾಂಶುರಶ್ಮಿಗಳ ಕುಂಚಿಗೆಯಿಂದಮೆ ಕರ್ಚಿ ಪಾರದಂ
ದೊಡೆದರೊ ಪೇೞೆನಲ್ ಕರಮೆ ಕಣ್ಗೆಸೆದಿರ್ದುದು ರೂಪು ಕಾಂತೆಯಾ
(ಬೆಳ್ಳಗೆ ತಳತಳಿಸುವ ಅವಳ ಶರೀರವು ಶಂಖದಿಂದ ಕಡೆದು ಮಾಡಿದ್ದಾರೋ ಎನ್ನುವಂತೆ, ಹೊಸ ನಳನಳಿಸುವ ತಾವರೆಯ ದಂಟಿನಿಂದ ರೂಪಿಸಿರುವಂತೆ, ಹೊಸಮುತ್ತುಗಳಿಂದ ನಿರ್ಮಿಸಿರುವಂತೆ, ಕಾಂತಿಮಯವಾದ ದೇಹವನ್ನು ದಂತದಿಂದ ಕೆತ್ತನೆ ಮಾಡಿದ್ದಾರೆಯೋ ಎಂಬಂತೆ, ಬೆಳುದಿಂಗಳ ಕಾಂತಿಯೆಂಬ ಕುಂಚದಿಂದ ತೊಳೆದು ಪಾದರಸದಿಂದ ಲೇಪನಮಾಡಿದಂತೆ ಶೋಭಿಸುತ್ತಿತ್ತು!)
ಇವೆಲ್ಲ ಒಂದು ರೀತಿಯ ಹೊರರೂಪಿನ ವರ್ಣನೆಗಳು; ಅವುಗಳಲ್ಲಿಯೂ ಕವಿಯು ತೋರುವ ಅನನ್ಯ ಕುಸುರಿಗೆಲಸವನ್ನು ಕಾಣಬಹುದು. ಜೊತೆಗೆ ಈ ಕವಿ ಸೂಕ್ಷ್ಮ ವಿಷಯಗಳನ್ನೂ ಅವುಗಳಿಗನುಗುಣವಾದ ಸೂಕ್ಷ್ಮತೆಯಿಂದಲೂ ಭಾವಾನುಸಾರಿ ಭಾಷೆಯ ಮೂಲಕವೂ ನವಿರಾಗಿ ಚಿತ್ರಿಸಬಲ್ಲ. ಅಂತಹುದೊಂದು ಚಿತ್ರ ಜಾಬಾಲಿ ಋಷಿಯ ವ್ಯಕ್ತಿತ್ವದ ವರ್ಣನೆಯಲ್ಲಿದೆ:
ತನುವೆರಸುಯ್ಯಲ್ ಮುನಿಗಳನ್
ಅನಲಂ ಸ್ವರ್ಗಕ್ಕೆ ಸೇತುಗಟ್ಟಿದನೆನೆ ಪಾ
ವನ ಹೋಮಧೂಮಮೊಗೆಯಲ್
ಮುನಿಪಾಶ್ರಮಮೆನಗೆ ಕಾಣಲಾದತ್ತಾಗಳ್
(ಜಾಬಾಲಿಋಷಿಗಳನ್ನು ದೇಹಸಮೇತವಾಗಿ ಸ್ವರ್ಗಕ್ಕೆ ಕರೆದೊಯ್ಯಲು ಅಗ್ನಿಯು ಸೇತುವೆಯನ್ನು ಕಟ್ಟಿದ್ದಾನೆಯೋ ಎಂಬಂತೆ ಪಾವನವಾದ ಯಜ್ಞದ ಹೊಗೆಯು ಆಕಾಶಕ್ಕೆ ಅಡರುತ್ತಿದ್ದುದು ಕಾಣುತ್ತಿತ್ತು!)
ಮಹಾಶ್ವೇತೆ ಮೊದಲ ಬಾರಿಗೆ ಪುಂಡರೀಕನನ್ನು ಕಂಡು ಮೋಹಗೊಂಡು ಅವನ ನೆನಪಿನಲ್ಲೇ ಮನೆಗೆ ಬಂದು ಹಗಲಿಡೀ ಅವನ ಧ್ಯಾನದಲ್ಲಿದ್ದು ಸುತ್ತಲ ಆಗುಹೋಗಳನ್ನು ಮಾತ್ರವಲ್ಲದೆ ತನ್ನ ಬಗ್ಗೆಯೂ ಆಲೋಚನೆ ಮಾಡಲಾರದ ಸ್ಥಿತಿಯನ್ನು ಅವಳು ಅನುಭವಿಸುವುದು ಹೀಗೆ:
ಮನೆಗೇಂ ಬಂದೆನೋ ಬಾರೆನೋ ಸಖಿಯರೊಳ್ ಕೂಡಿರ್ದೆನೋ ಕೂಡದಿ
ದಿರ್ದೆನೊ ಮೇಣ್ ನಿದ್ರೆಯೊಳಿರ್ದೆನೊ ಪಿರಿದುಮಳೞ್ಚತ್ತಿರ್ದೆನೋ ಮೌನಮಿ
ರ್ದೆನೊ ಮಾತಾಡುತುಮಿರ್ದೆನೋ ವ್ಯಸನದೊಳ್ ಸಂದಿರ್ದೆನೋ ರಾಗಮಿ
ರ್ದೆನೊ ಪೇೞಾಂ ನಗುತಿರ್ದೆನೋ ಮನದೊಳಂದಾಸಸತ್ತೞುತ್ತಿರ್ದೆನೋ
ಅನುವಾದವೇ ಅನವಶ್ಯವೆಂಬಷ್ಟು ಸರಳವಾದ ನೇರವಾದ, ಜೊತೆಗೆ ಅಲಂಕಾರಗಳೇ ಇಲ್ಲದ ಈ ಬರವಣಿಯಾದರೂ ಅದೆಷ್ಟು ಪ್ರಭವಶಾಲಿಯಾಗಿದೆ! ಎತ್ತಿ ತೋರಿಸಲು ಹೊಸತನವೇನಿಲ್ಲ; ಆದರೆ ಅದರ ಸಂವಹನಸಾಮರ್ಥ್ಯವನ್ನು ಅಳೆಯಲಸಾಧ್ಯ. ಪ್ರತಿಭಾಶಾಲಿಯಾದ ಕವಿಯ ಕೈಯಲ್ಲಿ ನೇರಮಾತು ಕೂಡ ಕಾವ್ಯವಾಗುವ ಪರಿಯಿದು.
ಚಂದ್ರಾಪೀಡನನ್ನು ತನ್ನರಮನೆಯಲ್ಲಿ ಮೊದಲ ಬಾರಿಗೆ ನೋಡಿದ ಸಂದರ್ಭದಲ್ಲಿ ಮಹಾಶ್ವೇತೆ ತನ್ನನ್ನವನಿಗೆ ಪರಿಚಯಿಸಿ ಕೊಟ್ಟು ಅವನಿಗೆ ತಾಂಬೂಲವನ್ನು ನೀಡಲು ಹೇಳಿದಾಗ ಮೊದಲು ನಾಚಿಕೆಯಿಂದ ಹಿಂಜರಿದರೂ ಆನಂತರ ಹಾಗೆ ಮಾಡುವಾಗ ಮುಂದೆ ಚಾಚಿದ ಅವನ ಬೊಗಸೆ ಅವಳ ಕೈಗಳನ್ನು ತಾಗುತ್ತದೆ. ಮೊದಲ ನೋಟದಲ್ಲೇ ಅವನಿಗೆ ಮನತೆತ್ತಿರುವ ಆಕೆಯ ಸರ್ವಸ್ವವೀಗ ಅವನಿಗೆ ಅರ್ಪಿತಗೊಳ್ಳುವಂತೆಯೂ ಮತ್ತವನು ಅದನ್ನು ಸ್ವೀಕರಿಸಿದಂತೆಯೂ ಭಾಸವಾಗುವ ಕ್ಷಣದ ವರ್ಣನೆ ಹೀಗಿದೆ:
ಎನಸುಂ ಮುಂದೆ ನಖಾಂಶು ನಿಳ್ಕೆ ನೃಪಹಸ್ತಾನ್ವೇಷಣಂಗೆಯ್ವವೋಲ್
ನಿನಗೆನ್ನಂ ಬಿಡದುಣ್ಮಿದೀ ಬೆಮರೆ ಕೆಯ್ನೀರಾಗಿರಲ್ ತೋರ್ಕೆಗೊ
ಟ್ಟನನಂಗಂ ಪಿಡಿ ನಿನ್ನ ಕಯ್ಯೆಡೆಯನೊಂದಿರ್ದಪ್ಪುದಿದೆನ್ನ ಜೀ
ವನವೆಂಬಂದದಿನಿಕ್ಕಿದಳ್ ನಡುಗುತುಂ ತನ್ವಂಗಿ ತಾಂಬೂಲಮಂ
(ತನ್ನ ಉಗುರಿನ ಕಾಂತಿಯು ಕೊಂಚ ಮುಂದೆ ಚಾಚಿಕೊಂಡಿರಲು, ಚಂದ್ರಾಪೀಡನ ಕೈ ಎಲ್ಲಿದೆಯೆಂದು ತನ್ನ ಕೈ ಹುಡುಕುತ್ತಿರುವಂತೆಯೂ, ಒಂದೇ ಸಮನೆ ಉಕ್ಕುತ್ತಿರುವ ಬೆವರ ಹನಿಗಳೇ ಧಾರೆಯ ನೀರಾಗಿರಲು ಮನ್ಮಥನು ನನ್ನನ್ನು ನಿನಗೆ ಕಾಣಿಕೆಯಾಗಿ ಅರ್ಪಿಸುತ್ತಿದ್ದಾನೆ ಅದನ್ನು ಸ್ವೀಕರಿಸು ಎಂಬಂತೆಯೂ, ಇನ್ನು ನನ್ನ ಪ್ರಾಣವು ನಿನ್ನ ಕೈಯಲ್ಲಿದೆ ಎಂದು ಇರಿಸುವಂತೆಯೂ ಆ ಕೃಶಾಂಗಿಯು ತಾಂಬೂಲವನ್ನು ಅವನ ಕೈಯಲ್ಲಿರಿಸಿದಳು.) ನೀಡುವಿಕೆ ವಸ್ತುರೂಪದಲ್ಲ, ಚೈತ್ನನ್ಯರೂಪದ್ದು ಎಂಬುದನ್ನೂ, ಅರ್ಪಿಸಿಕೊಳ್ಳುವ ಮತ್ತು ಹೃತ್ಪೂರ್ವಕವಾಗಿ ಸ್ವೀಕರಿಸುವ ಕೃತ್ಯಗಳು ಒಮ್ಮೆಗೇ ನಡೆಯುವುದನ್ನೂ ಈ ಪದ್ಯ ನವುರಾಗಿ ಬಣ್ಣಿಸುತ್ತದೆ. ಮೊದಲ ನೋಟದ ಪ್ರಣಯದ ಕ್ಷಣದ ಭಾವಚಿತ್ರ ಇದು! ಇಂಥ ಚಿತ್ರಗಳು ಇಡೀ ಕಾವ್ಯದ ಉದ್ದಕ್ಕೂ ಹರಡಿವೆ. ಕಾವ್ಯದುದ್ದಕ್ಕೂ ಇರುವುದು ಕೋಮಲ ಭಾವಗಳ ನವಿರು ನರ್ತನ. ಎಲ್ಲಿಯೂ ಆರ್ಭಟವಿಲ್ಲ, ಎಲ್ಲಿಯೂ ತೋರಿಕೆಯಿಲ್ಲ, ಎಲ್ಲಿಯೂ ವೈಭವವಿಲ್ಲ. ದಿವ್ಯ ಪ್ರಶಾಂತತೆ ಕಾವ್ಯವನ್ನಾವರಿಸಿರುವ ಪರಿವೇಷ, ಅರ್ಪಣೆ ಮರುಅರ್ಪಣೆಗಳ ಕ್ಷಣಗಳೇ ಇಲ್ಲಿರುವಂಥವು. ಅನುಭವವನ್ನು ಆವರಿಸುವ ಭಾವ, ಭಾವಕ್ಕನುಗುಣವಾದ ಭಾಷೆ, ಭಾಷೆಯ ಕೋಮಲತೆ ಈ ಕಾವ್ಯದ ಪ್ರಮುಖ ಗುಣ. ಮೂಲ ಹೇಗಿದೆಯೋ ತಿಳಿಯದು. ಅಲ್ಲಿನ ಗದ್ಯ ಮರಗಿಡಬಳ್ಳಿಗಳು ಒಂದಕ್ಕೊಂದು ಹೆಣೆದುಕೊಂಡು ದುರ್ಗಮವಾಗಿಸಿದ ದಟ್ಟ ಕಾಡಿನಂತಹುದು ಎಂದು ಹೇಳುತ್ತಾರೆ. ಅಲ್ಲಿ ಅಂಥ ಸನ್ನಿವೇಶಗಳು ಕಡಿಮೆ. ಆದರೆ ಇಲ್ಲಿಯೂ ಕೆಲವು ವೇಳೆ ತೀರ ಕಠಿಣವಾದ ಭಾಷೆಯ ಪ್ರಯೋಗವಿದೆ. ಉದಾಹರಣೆಗೆ ಈ ಕೆಳಗಿನ ಪದ್ಯ:
ಇದೆ ಪರ್ವಿತ್ತು ಮತಂಗಜೋಚ್ಚಲಿತ ಕಂಜಾಳೀರಜಸ್ತೋಮಮಿಂ
ತಿದೆ ತೀಡಿತ್ತು ವರಾಹಸಂಕುಳ ದಳನ್ನುಸ್ತೋತ್ಕರಾಮೋದಮಿಂ
ತಿದೆ ಬಂದತ್ತಿಭಯೂಥನಾಥ ದಳಿತೋದ್ಯತ್ಸಲ್ಲಕೀ ಗಂಧಮಿಂ
ತಿದೆ ತೋತ್ತು ಮದಾಂಧಸೈರಿಭಖುರಪ್ರೋದ್ಭೂತರೇಣುವ್ರಜಂ
ಕ್ರಿಯಾಪದಗಳನ್ನು ಬಿಟ್ಟರೆ ಉಳಿದೆಡೆ ಪ್ರತಿಸಾಲಿನಲ್ಲಿಯೂ ಹರಡಿಕೊಂಡಿರುವುದು ಒಂದೊಂದು ರ್ದೀ ಸಮಾಸ! ಈ ಪದ್ಯವನ್ನು ಕುರಿತು ವೆಂಕಣ್ಣಯ್ಯನವರು ಉದ್ಗರಿಸುವ ರೀತಿಯಿದು: "ಕನ್ನಡ ಪರಿವರ್ತನಕ್ಕಿಂತಲೂ ಸಂಸ್ಕೃತ ಮೂಲವೇ ಸುಲಭವಾಗಿರುವುದಲ್ಲವೇ!" ಎಂದು. ಆದರೆ ಇಂತಹ ಎಡೆಗಳು ತೀರ ಅಪರೂಪ. ಜೊತೆಗೆ ಎಲ್ಲಿಯೂ ಭೀಕರತೆ ರೌದ್ರ ದ್ವೇಷ ಮತ್ಸರದಂತಹ ಭಾವಗಳೇ ಇಲ್ಲದಿರುವುದರಿಂದ ಇಡೀ ಕಾವ್ಯದ ವಾತಾವರಣ ಆಹ್ಲಾದಕರವಾಗಿರುವುದರ ಜೊತೆಗೆ, ವಿರಹ ಉದ್ವೇಗಗಳ ಕ್ಷಣಗಳಲ್ಲಿ ಮಾತ್ರ ತೀವ್ರ ವೇದನೆ ವ್ಯಕ್ತವಾಗುತ್ತದೆ. ಆದರೆ ಆ ವೇದನೆ ಪ್ರೇಮಮೂಲವಾದುದೇ ಹೊರತು ದುಃಖಮೂಲವಾದುದಲ್ಲ.
ಕಾದಂಬರಿ ಕಾವ್ಯವು ಅನೇಕ ಅಂಶಗಳಿಂದ ವಿಶಿಷ್ಟ ರಚನೆ. ಅಲ್ಲಿಯವರೆಗಿನ ಕಾವ್ಯಗಳೆಲ್ಲ ಪುರುಷಪ್ರಧಾನ ಅಥವಾ ನಾಯಕಪ್ರಧಾನ ಕತೆಗಳಿಂದ ಕೂಡಿದವು. ಆದರೆ ಕಾದಂಬರಿ ಮಾತ್ರ ಸ್ತ್ರೀಪಾತ್ರ ಪ್ರಧಾನವಾದುದು. ಇಲ್ಲಿ ಪ್ರಧಾನಪುರುಷರು ಬಂದರೂ ಖಳನಾಯಕರಿಲ್ಲ, ಖಳನಾಯಕಿಯರೂ ಇಲ್ಲ. ಪರಸ್ಪರ ಪೈಪೋಟಿಯಿದ್ದರೆ ತಾನೇ ಸಂರ್ಷ; ಇಲ್ಲಿರುವುದು ಸಹಯೋಗ, ಸಹಾನುಭೂತಿ, ಸಹಬಾಳ್ವೆ; ಇರುವಂಥದೂ ಇಲ್ಲಿರುವುದು ವ್ಯಕ್ತಿಸಂಘರ್ಷವಲ್ಲ, ಭಾವತುಮುಲ, ಅದೂ ಮಾನವನಿರ್ಮಿತವಾದುದಲ್ಲ, ಮಾನವಾತೀತ ಕಾರಣದಿಂದಾದುದು. ಅಲ್ಲದೆ, ಕಾವ್ಯದ ಹೆಸರು ಕಾದಂಬರಿ ಎಂದಿದ್ದರೂ ಅವಳನ್ನು ನಾಯಕಿ ಎಂದು ಕರೆಯಲು ಸಾಧ್ಯವಿಲ್ಲ; ಏಕೆಂದರೆ ಕಾವ್ಯದುದ್ದಕ್ಕೂ ಓದುಗರನ್ನು ಹೆಚ್ಚು ಸೆರೆಹಿಡಿಯುವವಳು ಮಹಾಶ್ವೇತೆ. ಅಲ್ಲದೆ, ಅವರಿಬ್ಬರೂ ಅಭಿನ್ನರಂತೆ ವರ್ತಿಸುತ್ತಾರೆ; ಒಬ್ಬರ ವಿರಹದಲ್ಲಿ ಮತ್ತೊಬ್ಬರೂ ನವೆಯುತ್ತಾಳೆ, ಒಬ್ಬಳಂತೆ ಇನ್ನೊಬ್ಬಳೂ ತ್ಯಾಗಕ್ಕೆ ಸಿದ್ಧಳಾಗುತ್ತಾಳೆ. ಸ್ತ್ರೀಮಾತ್ಸರ್ಯಕ್ಕೆ ಇಲ್ಲಿ ಅವಕಾಶವೇ ಇಲ್ಲ. ಅಥವಾ ಒಟ್ಟಾರೆ ಮಾತ್ಸರ್ಯಕ್ಕೇ ಈ ಕಾವ್ಯದಲ್ಲಿ ಎಡಯಿಲ್ಲ. ತಾರಾಪೀಡ-ಶುಕನಾಸರೂ ಆಪ್ತರು, ಅವರ ನಡುವೆ ರಾಜ-ಮಂತ್ರಿ ಸಂಬಂಧಕ್ಕಿಂತ ಮಿಗಿಲಾದುದು ಸ್ನೇಹ. ಅಂತೆಯೇ ಅವರ ಮಕ್ಕಳಾದ ಚಂದ್ರಾಪೀಡ-ವೈಶಂಪಾಯನರ ನಡುವಣದ್ದೂ ಅಂತಸ್ತನ್ನು ಮೀರಿದ ಅಂತರಂಗ. ಪುಂಡರೀಕ-ಕಪಿಂಜಲರದಂತೂ ಬೆಸುಗೆಗೊಂಡ ಜೀವಗಳು. ಈ ಎರಡೂ ಜೋಡಿಗಳು ಜನ್ಮಾಂತರದಲ್ಲೂ ತಮ್ಮ ಗೆಳೆತನವನ್ನು ಬಿಟ್ಟುಕೊಡದವರು. ಪತ್ರಲೇಖೆ, ಮಕರಿಕೆ, ತರಳಿಕೆಯಂತಹ ಸೇವಕಿಯರನ್ನೂ ಅವರ ಯಜಮಾನರುಗಳು ಒಂದು ರೀತಿಯಲ್ಲಿ ಸಮಾನರಂತೆಯೇ ಕಾಣುವವರು. ಅಲ್ಲಿ ಆಜ್ಞೆಗಳಿಲ್ಲ, ಅಂತರಂಗದ ಕೋರಿಕೆಗಳಿವೆ, ದರ್ಪವಿಲ್ಲ ಅನುಕಂಪವಿದೆ. ಎರಡೂ ಕಡೆ. ಮಾಡುವ ಸೇವೆ ಬರೀ ಸೌಜನ್ಯಪೂರ್ಣ ಮಾತ್ರವಲ್ಲ, ಯಜಮಾನ-ಯಜಮಾನಿತಿಗೆ ಒಳಿತಾಗಬೇಕೆಂಬ ಕಕ್ಕುಲತೆಯಿಂದ ಮಾಡುವ ಸಹಾಯ. ತಂದೆತಾಯಿಗಳಿಗೆ ಗ ತಾರಾಪೀಡ-ವಿಲಾಸವತಿ, ಶುಕನಾಸ-ಮನೋರಮೆ, ಹಂಸ-ಗೌರಿ, ಚಿತ್ರರಥ-ಮದಿರಾದೇವಿ - ಮಕ್ಕಳು ತಮ್ಮ ಹತೋಟಿಯಲ್ಲಿರಬೇಕೆಂಬ ಚಪಲವಿಲ್ಲ, ಅವರ ಸುಖಕ್ಕಾಗಿಯೇ ಹಾತೊರೆಯುವವರು. ಮಕ್ಕಳೂ ತಾಯ್ತಂದೆಯರ ಮಾತನ್ನು ಉಲ್ಲಂಿಸುವವರಲ್ಲ, ತಮ್ಮ ಹೃದಯದ ಸೆಳೆತಕ್ಕೆ ಬೆಲೆಗೊಟ್ಟವರು. ಎರಡು ಪೀಳಿಗೆಗಳ ನಡುವೆ ಇರುವುದು ಅಂತರವಲ್ಲ, ಬೆಸೆಯುವ ಪ್ರೀತಿಸೇತು. ಹೀಗಾಗಿ ಇಲ್ಲಿಯ ಪಾತ್ರಗಳಲ್ಲಿ ಅಂತಸ್ತಿನ ಭೇದವೂ ಇಲ್ಲ, ವರ್ಗತಾರತಮ್ಯವೂ ಇಲ್ಲ, ಜಾತಿಭೇದವೂ ಇಲ್ಲ. ಇದೊಂದು ಜಾತ್ಯತೀತ ವರ್ಗಾತೀತ ಪ್ರೇಮದ ಕತೆ. ಇಲ್ಲಿ ಮನುಷ್ಯರಿದ್ದಾರೆ, ಗಂಧರ್ವರಿದ್ದಾರೆ, ಅಪ್ಸರೆಯರಿದ್ದಾರೆ, ಆದರೆ ಅವರೆಂದೂ ಇನ್ನೊಬ್ಬರ ಪ್ರೇಮಸಂಬಂಧದಲ್ಲಿ ಈ ತಾರತಮ್ಯವನ್ನು ನುಸುಳಗೊಡರು. ಪ್ರೇಮದ ಅಂತಹ ದಿವ್ಯಸ್ವರೂಪವನ್ನು ಕವಿಪ್ರತಿಭೆ ಗುರುತಿಸಿದೆ. ಬಾಣನ ಕಾಲದಲ್ಲಿ (ಕ್ರಿಶ ಏಳನೆಯ ಶತಮಾನದ ಮೊದಲರ್ಧ) ಆ ಮುಂದೆ ಆದಂತೆ ಜಾತಿ ಕಟ್ಟುಪಾಡುಗಳು ತೀವ್ರವಾಗಿರಲಿಲ್ಲವೇನೋ. (ಆದರೆ ನಾಗವರ್ಮನ ಕಾಲಕ್ಕೆ ಜಾತಿ ಕಟ್ಟುಪಾಡುಗಳು ಅನುಲ್ಲಂನೀಯವಾಗಿತ್ತು). ಅಥವಾ ಗಂಡುಹೆಣ್ಣಿನ ನಡುವಣ ಪ್ರೇಮವು ಎಲ್ಲ ನಿಯಮಗಳಿಗೂ ಅತೀತವಾದುದು ಎಂಬುದು ಕವಿಪ್ರತಿಭೆಯ ಕಾಣ್ಕೆಯೇನೋ. ಇದೊಂದು ಬಗೆಯಲ್ಲಿ ಮಾನವಾತೀತ ಪ್ರೇಮಕಥಾನಕವಾದ್ದರಿಂದ ನಾಗವರ್ಮ ಬ್ರಾಹ್ಮಣನಾದರೂ ಕನ್ನಡಿಸಲು ಈ ಕಾವ್ಯವನ್ನು ಆಯ್ಕೆ ಮಾಡಿಕೊಂಡಿರಬಹುದು.
ಇಲ್ಲಿ ಶಾಪದ ಪ್ರಸಂಗಗಳಿವೆ, ಆದರೆ ಅವುಗಳು ದ್ವೇಷಪ್ರೇರಿತವಲ್ಲ. ಮಹಾಶ್ವೇತೆ ವೈಶಂಪಾಯನನಿಗೆ ಗಿಳಿಯಾಗೆಂದು ಶಾಪವಿತ್ತುದು ಅವನು ತನ್ನ ಮೂಲಪ್ರೇಮವನ್ನು ತನ್ನ ಚಪಲವಾಕ್ಯಗಳಿಂದ ಕೆಣಕುತ್ತಾನೆಂಬುದೇ ಹೊರತು, ಅವನ ಮೇಲಣ ಸಹಜಕೋಪದಿಂದಲ್ಲ, ಅವನು ಚಂದ್ರಾಪೀಡನ ಗೆಳೆಯನೆಂದು ತಿಳಿದ ಬಳಿಕ ಅವಳು ಅನುಭವಿಸುವ ಯಾತನೆಯೆಂತಹುದು! ಪುಂಡರೀಕನು ವಿರಹಸಂಕಟವನ್ನು ಅನುಭವಿಸುವ ಸನ್ನಿವೇಶದಲ್ಲಿ ತನ್ನನ್ನು ಕಂಡು ನಗುತ್ತಿರುವಂತೆ ತೋರಿದ ಚಂದ್ರನಿಗೆ ಶಾಪನೀಡುವ ಪ್ರಸಂಗ ನೋಡೋಣ: ಅಲ್ಲಿ ಚಂದ್ರನೇನೂ ನಗುತ್ತಿರಲಿಲ್ಲ, ಆದರೆ ತನ್ನ ಆಂತರ್ಯದ ಸಂಕಟ ಅವನು ಶಾಪ ಕೊಡುವಂತೆ ಮಾಡಿತು, ಚಂದ್ರನೂ ನೀನೂ ಜೊತೆಯಾಗಿ ಹುಟ್ಟು ಎಂದು ಮರುಶಾಪವಿತ್ತನಲ್ಲ, ಅದರ ಫಲಿತವೇನು, ಗೆಳೆಯರಿಬ್ಬರೂ ಜನ್ಮಾಂತರದಲ್ಲೂ ಜೊತೆಯಾಗಿ ಇರುವಂತಾದುದು! ಅಲ್ಲದೆ ಚಂದ್ರ ಪುಂಡರೀಕನ ದೇಹವನ್ನು ಮರಳಿ ಜೀವ ತಾಳುವವರೆಗೂ ರಕ್ಷಿಸಿದ, ಆಯುಷ್ಕಾಮಯಾಗವನ್ನು ಮಾಡುವಂತೆ ಕಪಿಂಜಲನ ಮೂಲಕ ಶ್ವೇತಕೇತುವಿಗೆ ಹೇಳಿಕಳಿಸಿದ. ವೈಮಾನಿಕನನ್ನು ದಾಟಿಕೊಂಡು ಹೋದ ಕಪಿಂಜಲನಿಗೆ ಶಾಪವಿತ್ತ ವೈಮಾನಿಕನು ಅವನು ಚಂದ್ರಾಪೀಡನ ಕುದುರೆಯಾದ ಇಂದ್ರಾಯುಧವಾಗಿ ಹುಟ್ಟಲು ಕಾರಣನಾದ. ಶಾಪವಿದ್ದರೂ ಅವುಗಳ ಪರಿಣಾಮ ಶುಭಕಾರಕವೇ.
ಪುಂಡರೀಕನ ಅತೀವ ವಿರಹದಿಂದಾಗಿ ಅವನ ದೇಹದಿಂದ ಜೀವವೇನೋ ಹೋಯಿತು; ಆದರೆ ಅದು ಮಹಾಶ್ವೇತೆಯ ಮೋಹವನ್ನು ಪಕ್ವಗೊಳಿಸಿ ಪ್ರೇಮವಾಗುವಂತೆ ಮಾಡುವ ಸಾಧನವಾಯಿತು. ಹಾಗೆಯೇ ಚಂದ್ರಾಪೀಡನ ದೇಹದಿಂದ ಹೋದ ಜೀವ. ತಮ್ಮ ನಲ್ಲರು ಸತ್ತರೆಂದು ಭಾವಿಸಿದ ಮಹಾಶ್ವೇತೆ ಕಾದಂಬರಿಯರಿಬ್ಬರೂ ಸಹಗಮನಕ್ಕಾಗಿ ಸಿದ್ಧರಾಗುತ್ತಾರೆ; ಅಂದರೆ ಕಂಡ ಕ್ಷಣದಿಂದಲೇ ಅವರು ತಮ್ಮ ಗಂಡಂದಿರೆಂಬ ಭಾವನೆ ಹೊಂದುತ್ತಾರೆ. ಮದುವೆ ಎಂಬುದು ಪ್ರೇಮಾಂಕುರವಾಗುವ ಗಳಿಗೆಯೇ ಹೊರತು ಶಾಸ್ತ್ರಾನುಗುಣವಾದ ಮುಹೂರ್ತಾವಲಂಬಿಯಲ್ಲ. ಹೀಗೆ ಇಲ್ಲಿನ ಸಂಬಂಧಗಳು ಮಾನವಕೃತ ಕೃತಕ ಬಂಧಗಳಿಂದ ಮುಕ್ತವಾದವು. ಇಂಥ ಸ್ಥಿತಿ ಇದ್ದರೆ ಎಷ್ಟು ಚಂದ ಅನ್ನಿಸುವಂಥದು! ಹಾಗಾಗಿ ಇಲ್ಲಿನದು ವಾಸ್ತವಸತ್ಯವಲ್ಲ, ಆದರ್ಶಸ್ಥಿತಿ. ಇಲ್ಲಿನ ಪ್ರೇಮ ಮುಕ್ತವಾದುದು, ಆದರೆ ನಿಯಂತ್ರಿತವಾದುದು, ಆಳವಾದುದು. ಆಳಗೊಂಡ ಪ್ರೇಮಕ್ಕೆ ಚ್ಯುತಿ ಬಾರದಂತೆ ಟನೆಗಳೆಲ್ಲ ಜರುಗಿ ಕೊನೆಗೆ ಎರಡೂ ಜೋಡಿಗಳು ಒಂದಾಗುತ್ತವೆ. ಇಲ್ಲಿನ ಪ್ರೇಮಿಗಳು ಜನ್ಮಾಂತರಗಳಷ್ಟು ರ್ದೀಕಾಲ ವಿರಹ ಅನುಭವಿಸಬೇಕು; ಅದಕ್ಕೆ ಕಾರಣ ಒಗರಾದ ಕಾಮ ಸಿಹಿಯಾದ ಪ್ರೇಮವಾಗಿ ಮಾರ್ಪಡಲು. ಆ ಸಂಧಿಕಾಲದ ನೋವೇ ತಪಸ್ಸು; ಇಂಥ ಪ್ರೇಮದ ಸನ್ನಿವೇಶದಲ್ಲಿ ವಿರಹದ ನೋವಿಗಿಂತ ಮಿಗಿಲಾದ ತಪಸ್ಸಿರಬಹುದೇ; ಕತಪಕೆ ಬೇರೆ ಕೋಡೆರಡೊಳವೇ?ಕಿ ಇಲ್ಲಿನ ಜನ್ಮಾಂತರವೆಂಬುದು ಸಾಂಕೇತಿಕವಾಗಿ ಆ ಸ್ಥಿತಿಯ ಸ್ವರೂಪವರ್ಣನೆಯಾಗಬಹುದು. ಅಂದರೆ ಅತಿಮಾನುಷ ಆವರಣ-ಟನೆಗ ಸಾಂಕೇತಿಕತೆಯನ್ನು ಸೂಕ್ತವಾಗಿ ಅರ್ಥವಿಸಿದಾಗ ಕಾವ್ಯದ ಹೊಸ ಹೊಳಪು ಗೋಚರಿಸುತ್ತದೆ. ಗಿಳಿಯಾಗುವುದು ಎಂದರೆ ಗಿಳಿಯೇ ಆಗುವುದು ಎಂದಾಗದೆ, ಗಿಳಿಯಂತೆ ಅಸಹಾಯಕವಾದ, ರೆಕ್ಕೆಯಿದ್ದರೂ ಹಾರಲಾಗದ ಆದ ಬಲಿತಾಗ ಹಾರಬಹುದಾದ, ಅಂತಹ ಹಂತ ಬರುವುದು ನಿಶ್ಚಿತವಾದರೂ ಯಾವಾಗ ಎಂಬುದು ನಿಶ್ಚಿತವಿಲ್ಲದಿರುವ ಪರಿಸ್ಥಿತಿಯಲ್ಲಿ ಬೇಯುವ ಮನಸ್ಸಿನ ಸಂಕೇತವಾಗಬಹುದು. ಆದರೆ ಹೀಗೆ ವಿವರಿಸಿಬಿಟ್ಟರೆ ಕಾವ್ಯ ಹೃದಯಕ್ಕೆ ಬಾರದು.
ಈ ಕತೆಯ ಸ್ವರೂಪವನ್ನು ಗಮನಿಸಿದರೆ ಜಾನಪದಮೂಲ ಇದಕ್ಕಿರಬಹುದು ಎನಿಸುತ್ತದೆ. ಸಂಸ್ಕೃತದ ಅನೇಕ ಕಾವ್ಯಗಳಿಗೆ ವಸ್ತು ಸಿಕ್ಕಿರುವುದು 'ಬೃಹತ್ಕಥೆ' ಮತ್ತು 'ಕಥಾಸರಿತ್ಸಾಗರ'ದಿಂದ. ಅಲ್ಲಿರುವುದು ಬಹುತೇಕ ಕಲ್ಪಕ ಕತೆಗಳು. ಕಾದಂಬರಿಯ ಗ್ರಾಂಕ ಮೂಲ ಯಾವುದೇ ಇರಲಿ, ಅದಕ್ಕೂ ಜಾನಪದ ಕಥಾಕಣಜವೇ ಆಕರವಾಗಿರುವಂತೆ ತೋರುತ್ತದೆ. ಯಾಕಂದರೆ, ಕಾದಂಬರಿ ಕತೆಯ ಗೋಜಲು ವಿನ್ಯಾಸ, ಪ್ರಾಣಿ-ಮನುಷ್ಯ ಪರಸ್ಪರ ರೂಪಪರಾವರ್ತನ, ಶಾಪ-ಅನುಗ್ರಹ ಇಂಥವುಗಳೆಲ್ಲ ಜಾನಪದಸಂಪ್ರದಾಯವನ್ನು ನೆನಪಿಸುತ್ತವೆ. ಇಂಥ ಕಥೆಗಳು ಸಾಂಕೇತಿಕವಾದವು; ಅವುಗಳಿಗೆ ಅರ್ಥ ಹೇಳುವುದಕ್ಕಿಂತ ಅವುಗಳ ಸಂದೇಶವನ್ನು ಅನುಭವಿಸಿ ಎದೆಗೆ ತಂದುಕೊಳ್ಳುವುದು ಆವಶ್ಯಕ. ಕತೆಯ ಅರ್ಥವಲ್ಲ ಮುಖ್ಯವಾದುದು, ಅದು ತಂದುಕೊಡುವ ಅನುಭವ. (ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ!) ಕೇಳಿದಾಗಲೇ ಇಂಥ ಕತೆಗಳು ಎದೆಯನ್ನು ತಾಗುತ್ತವೆ. ಜಾನಪದ ಮನಸ್ಸಿಗೆ ಇವೆಲ್ಲ ನೇರವಾಗಿ ಸಂವಹಿಸುತ್ತವೆ. ಜಾನಪದದ ಕತೆಗಳಲ್ಲಿಯೂ ಇದೇ ವಿನ್ಯಾಸವೇ ಇರುವುದು. ಒಟ್ಟಾರೆ ಗಂಡುಹೆಣ್ಣುಗಳ ನಡುವಣ ಆಕರ್ಷಣೆಯ ನೆಲೆಗಳನ್ನು ಚಿತ್ರಿಸುವ ಈ ಕತೆಯೇ ಮನಮುಟ್ಟುವಂಥದು. ಬಾಣ ಅದನ್ನು ಮತ್ತಷ್ಟು ಹರಿತವಾದ ಕಲ್ಪನೆಯ ಬಣ್ಣದಿಂದ ಮಿರುಗುಗೊಳಿಸುತ್ತಾನೆ. ಕವಿಯೊಬ್ಬನ ಕೌಶಲವಿರುವುದು ಅವನು ಏನು ಹೊಸದನ್ನು ಹೇಳುತ್ತಾನೆ ಎಂಬುದರಲ್ಲಲ್ಲ, ಎಷ್ಟು ತಾಜಾ ಆಗಿ ಅದನ್ನು ನಿರೂಪಿಸುತ್ತಾನೆ ಎಂಬುದರಲ್ಲಿ. ಕಕಾವ್ಯಂ ಭವತಿ ನವ್ಯಂ ಗ್ರಥನಕೌಶಲಾತ್ಕಿ ಎಂಬ ಮಾತೇ ಇದೆಯಲ್ಲ. ಹೊಸತಾಗಿ ಕಟ್ಟುವ ಕ್ರಮದಲ್ಲಿಯೇ ಕವಿಯ ಪ್ರತಿಭೆ ಅಡಗಿರುವುದು. ಆ ದೃಷ್ಟಿಯಿಂದ ಕಾದಂಬರಿ ಅತ್ಯಂತ ಹೃದ್ಯವಾದ, ಸಕಲಜನಪ್ರಿಯವಾದ ರಚನೆ. ಹೀಗಾಗಿಯೇ ಅದಕ್ಕೆ ಸಂಸ್ಕೃತದಲ್ಲಿ ಮಾನ್ಯತೆಯ ಸ್ಥಾನ ಸಿಕ್ಕಿರುವುದು. ಕನ್ನಡ ಕವಿ ನಾಗವರ್ಮನ ಪುನಾಸೃಷ್ಟಿ ಸ್ವತಂತ್ರ ಕಾವ್ಯದ ಹೊಸತನವನ್ನೆಲ್ಲಿಯೂ ಬಿಟ್ಟುಕೊಡುವುದಿಲ್ಲ. ಇಬ್ಬರ ಕೈಚಳಕದಿಂದಾಗಿ ಮೂಲದಲ್ಲಿಲ್ಲದ ಇಡಿತನ ಕನ್ನಡದಲ್ಲಿ ಕಾಣುವುದು ಒಂದೇ ಕೈವಾಡವಿರುವುದರಿಂದ, ಮೂಲವನ್ನು ಗ್ರಹಿಸಿ ಕನ್ನಡ ಪದ್ಯವಾಗಿಸುವ ಕೌಶಲದಿಂದ, ವಿವೇಚನಾಯುತವಾಗಿ ಕಥಾನುಗುಣವಾದ ವರ್ಣನೆಗಳನ್ನು ತಂದಿರುವುದರಿಂದ ಮತ್ತು ಭಾವಾನುಗುಣವಾದ ಹದವಾದ ಭಾಷೆಯ ಬಳಕೆಯಿಂದ.
ಇಂಥ ಕಾವ್ಯಕ್ಕೆ ಮಿತಿಗಳು ಇಲ್ಲವೆಂದಲ್ಲ, ಇರುತ್ತವೆ. ಇಲ್ಲಿಯ ಅನುಭವವಲಯ ಬಹು ಸೀಮಿತವಾದದ್ದು; ಇಲ್ಲಿನದು ಯೌವನದಲ್ಲಿನ ಗಂಡು-ಹೆಣ್ಣುಗಳ ಸಹಜ ಆಕರ್ಷಣೆಯ ಕಾಮನಬಿಲ್ಲಿನ ಜಗತ್ತು. ಅಷ್ಟರ ಮಟ್ಟಿಗೆ ಮಾತ್ರ ಅದರ ವ್ಯಾಪ್ತಿ: ಆ ಹೊರಗಿನ ಬದುಕಲ್ಲ. ಇದೆಷ್ಟೇ ಮುಖ್ಯವಾದರೂ, ಮೂಲಭೂತವಾದರೂ ಬದುಕು ಇಷ್ಟೇ ಅಲ್ಲವಲ್ಲ. ಪಾತ್ರಗಳು ಇಲ್ಲಿ ಅನುಭವಿಸುವ ಅನುಭವಗಳೆಲ್ಲ ಈ ಆಕರ್ಷಣೆಯ ಸುತ್ತಲೂ ಇರುವ ಅದರ ವಿವಿಧ ಛಾಯೆಗಳವು, ಆದರೆ ಇಡೀ ಬದುಕು ಅದಕ್ಕೆ ಹೊರತಾಗಿ ಮಹಾವಿಸ್ತಾರವಾದ ವಲಯವನ್ನೊಳಗೊಂಡುದು. ಇಲ್ಲಿನ ವಿರಹದುಃಖ ಬೇರೆ; ವಿಶಾಲ ಬದುಕಿನ ದುಃಖದ ಪರಿಗಳು ಬೇರೆ, ಇಲ್ಲಿನ ಸಂತಸದ ರೀತಿಗಿಂತ ಆ ಜಗತ್ತಿನ ಸಂತೋಷದ ಕ್ಷಣಗಳ ಅನುಭವ ಭಿನ್ನ. ಇಲ್ಲಿಲ್ಲದ ಅಸಂಖ್ಯಾತ ಭಾವಕ್ಷಣಗಳು ವಿಶಾಲ ಬದುಕಿನಲ್ಲಿ ವ್ಯಕ್ತಿಯೊಬ್ಬನಿಗೆ ಉದ್ದಕ್ಕೂ ಅನುಭವಕ್ಕೆ ಬರುತ್ತವೆ. ಇಲ್ಲಿನ ತಪ್ಪಸ್ಸಿನ ರೂಪ ಬೇರೆ, ಮನುಷ್ಯ ತನ್ನ ಜೀವನವಿಡೀ ಒಳಗೊಳ್ಳಬೇಕಾದ ತಾಪದ ಬಗೆಗಳು ಬೇರೆ. ಪ್ರೇಮಿಗಳ ಪುನಸ್ಸಮಾಗಮದ ಸಾರ್ಥಕ್ಯ ಒಂದು ಬಗೆಯದಾದರೆ, ವ್ಯಕ್ತಿಯೊಬ್ಬನ ಜೀವಿತ ಕಾಲದಲ್ಲಿ ಸಾರ್ಥಕ್ಯಭಾವನೆಯನ್ನು ತಂದುಕೊಡುವ ಕ್ಷಣಗಳ ರೀತಿ ಬೇರೆ. ಅಂದರೆ ಇಲ್ಲಿನ ಪ್ರಪಂಚ ಸೀಮಿತವಾದುದು. ಹೀಗಾಗಿ ಈ ಕಾವ್ಯ ಓದುಗನಲ್ಲಿ ಮಧುರತೆಯನ್ನು, ಸಿಹಿನೋವನ್ನು ಉಂಟುಮಾಡುವುದರಲ್ಲಿ ಸಫಲವಾದರೂ ಜೀವನದ ಅಗಾಧತೆಯ ಸ್ವರೂಪವನ್ನಾಗಲೀ, ಅದರ ಗಾಢತೆಯ ತೀವ್ರತೆಯ ರೀತಿಯನ್ನಾಗಲೀ ಅನುಭವಕ್ಕೆ ತಂದು ಓದುಗನನ್ನು ಅಲುಗಾಡಿಸಿಬಿಡುವಷ್ಟೇನೂ ವ್ಯಾಪವಾದುದಲ್ಲ. ಆದರೆ ಇದು ಕಾವ್ಯದ ಆಶಯವೂ ಅಲ್ಲ, ಓದುಗನ ನಿರೀಕ್ಷೆಯೂ ಅಲ್ಲ. ಆದ್ದರಿಂದಲೇ ನಾವು ಹೇಳಬಹುದಾದ ಮಾತೆಂದರೆ ತನ್ನ ಸೀಮಿತ ಆಶಯವನ್ನು ಸಾರ್ಥಕಗೊಳಿಸಿರುವ 'ಕಾದಂಬರಿ' ಒಂದು ಹೃದ್ಯ ಕೃತಿ.
******






No comments: