Tuesday, 22 October 2013

ವಚನ ಚಳವಳಿಯ ಜಾತಿನಿರ್ಮೂಲನೆಯ ನೆಲೆ

ವಚನ ಚಳವಳಿಯ ಜಾತಿನಿರ್ಮೂಲನೆಯ ನೆಲೆ


ಮಧ್ಯಯುಗದ ಕನ್ನಡ ನಾಡಿನ ವೈದಿಕ ಹಿಡಿತದಲ್ಲಿನ ಸಮಾಜದ ಬಹು ಮುಖ್ಯ ತಲ್ಲಣಗಳು ಎರಡು: ಜಾತಿವ್ಯವಸ್ಥೆ ಮತ್ತು ರಾಜತ್ವದ ದೈವೀಕರಣ. ಪಂಪನ 'ವಿಕ್ರಮಾರ್ಜುನ ವಿಜಯಂ' ಅನ್ನು ಒಳಹೊಕ್ಕು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ವೈದಿಕವನ್ನು ಧಿಕ್ಕರಿಸಿದ್ದ ಅವನ ಈ ಕಾವ್ಯದಲ್ಲಿ ಎಳೆಯಾಗಿ ಕಾಣಿಸಿಕೊಳ್ಳುವ ಈ ಎರಡರ ವಿರೋಧ ಅವನ ನಂತರದ ನೂರೈವತ್ತು ವರ್ಷಗಳಲ್ಲಿ ವಚನ ಚಳವಳಿಯ ಮುಖ್ಯ ಪ್ರಣಾಳಿಕೆಯೇ ಆಯಿತು. ಹಾಗೆ ನೋಡಿದರೆ ವಚನ ಚಳವಳಿಯದು ಸಾರಾಸಗಟಾದ ವೈದಿಕ ಸಂಸ್ಕೃತಿಯ ನಿರಾಕರಣೆ. ವಚನಗಳ ರಚನೆಯೇ ಪ್ರಾಯಶಃ ವೈದಿಕ  ರಚನೆಯಾದ ಮಂತ್ರದ ವಿರುದ್ಧದ ಪ್ರತಿಭಟನೆ; ಸಿದ್ಧರಾಮ 'ವಚನ ರಚನೆ ವಾಗ್ರಚನೆಯಲ್ಲ' ಎನ್ನುತ್ತಾನೆ; ಮತ್ತೊಂದೆಡೆ 'ವಾಗ್ರಚನೆ ಕರ್ಣಾಟ' [ಕರ್ಣ+ಅಟ] ಎನ್ನುತ್ತಾನೆ. ಇಂಪಾಗಿ ಹೇಳುವ ಛಂದೋಬದ್ಧ ರಚನೆಗಳಾದ ಮಂತ್ರಗಳಿಗೆ ಇವರು ಕಂಡುಕೊಂಡ ಪರ್ಯಾಯ 'ಆನು ಒಲಿದಂತೆ ಹಾಡುವ' ಸ್ವಚ್ಛಂದ ರಚನೆಗಳಾದ ವಚನ. 'ಎಮ್ಮ ವಚನದ ಸಾಸಿರ ಪಾರಾಯಣಕ್ಕೆ ಗಾಯತ್ರೀ ಲಕ್ಷ ಜಪ ಸಮಬಾರದಯ್ಯಾಕ' ಎಂದು ಸಿದ್ಧರಾಮನೇ ಹೇಳುತ್ತಾನೆ. ಹಾಗೆಯೇ ದ್ವಿಜತ್ವ, ಮೂರ್ತಿಪೂಜೆ, ಪೂಜಾರಿಯ ಮೂಲಕ ಆರಾಧನೆ ಮುಂತಾದವನ್ನೂ ವಚನ ಚಳವಳಿ ತಿರಸ್ಕರಿಸಿತು. ಈ ಚಳವಳಿಯು ವೈದಿಕ ಸಂಸ್ಕೃತಿಯು ದೂರವಿರಿಸಿದ್ದ ಜಾತಿಗಳ ಹೆಸರಿನ ನಾನಾ ಸ್ತರದ ಕೆಳವರ್ಗದವರ ಒಕ್ಕೊರಲಿನ ಧಿಕ್ಕಾರದ ದನಿಯಾಗಿದೆ. ವೈದಿಕದ ಕಪಿಮುಷ್ಟಿಯ ಹಿಡಿತದಿಂದ ಪಾರಾಗಬೇಕಾದವನು ವೈದಿಕದ ಸಕಲವನ್ನೂ ನೇತಿಗಳೆಯಬೇಕಾದ ಆವಶ್ಯಕತೆಯನ್ನು ಅಲ್ಲಮನ ಈ ವಚನ ಸ್ಪಷ್ಟಪಡಿಸುತ್ತದೆ.
     ವೇದಂಗಳೆಂಬವು ಬ್ರಹ್ಮನ ಬೂತಾಟ
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ
ಆಗಮಂಗಳೆಂಬವು ಋಷಿಯ ಮರುಳಾಟ
ಪುರಾಣಂಗಳೆಂಬವು ಪೂರ್ವದವರ ಗೊಡ್ಡಾಟ
ಇಂತಿವನರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು
ವಚನ ಚಳವಳಿಯು ಸಾಮಾಜಿಕ ಅಸಮಾನತೆಯ ಮೂಲ ಕಾರಣಗಳಾದ ವೈದಿಕ ಪರಿಕಲ್ಪನೆಯ ವರ್ಣ-ಜಾತಿಪದ್ಧತಿಯ ನಿರ್ಮೂಲನೆ, ರಾಜತ್ವ ವೀಕರಣದ ನಿರಾಕರಣೆ, ಮಾಯೆ ಎನ್ನಿಸಿಕೊಂಡಿದ್ದ ಹೆಣ್ಣಿನ ಆಧ್ಯಾತ್ಮಿಕ ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯಿತು. ವಚನಗಳಲ್ಲಿ ಕೇವಲ ಸಾಮಾಜಿಕ ವಿಷಯಗಳ ವಿಶ್ಲೇಷಣೆ ಮಾತ್ರವಿರದೆ ಮನುಷ್ಯ ಬದುಕಿನ ಹಲವು ಮಗ್ಗುಲುಗಳ ಬಗೆಗಿನ ಪರಿಭಾವನೆಯಿರುವುದರಿಂದ ಅದರಲ್ಲಿನ ಪ್ರತಿಭಟನೆಯ ತೀವ್ರತೆಯನ್ನು ವಚನಗಳ ಸಂಖ್ಯೆಯಿಂದ ಅಳೆಯಹೊರಡುವುದು ಬಾಲಿಶವಾದುದು. ವಚನಗಳ ಸಮಗ್ರ ತಿಳಿವಳಿಕೆಯಿರುವವರಿಗೆ ಅಲ್ಲಿನ ಜಾತಿವಿರೋಧದ ತೀವ್ರತೆ ಗಾಢವಾಗಿ ತಟ್ಟುತ್ತದೆ. ಬರೀ ವಿರೋಧಿಸಿದುದು ಮಾತ್ರವಲ್ಲದೆ, ಅದರ ಬಗೆಗಿನ ವೈಚಾರಿಕ ವಿಶ್ಲೇಷಣೆಯೂ ಹಲವೆಡೆಗಳಲ್ಲಿ ಹಿನ್ನೆಲೆಯಲ್ಲಿದೆ. ಬಸವಣ್ಣನ ಒಂದು ವಚನವು 'ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ, ಜಲಬಿಂದುವಿನ ವ್ಯವಹಾರ ಒಂದೇ, ಆಶೆಯಾಮಿಷ ರೋಷಹರುಷ ವಿಷಯಾದಿಗಳೆಲ್ಲ ಒಂದೇ; ಏನನೋದಿ ಏನ ಕೇಳಿ ಏನು ಫಲ! ಕುಲಜನೆಂಬುವುದಕ್ಕೆ ಆವುದು ದೃಷ್ಟ?' ಎಂದು ಹೇಳುತ್ತ, ಎಲ್ಲ ಮನುಷ್ಯರ ಹುಟ್ಟು-ಬದುಕುಗಳು ಒಂದೇ ಬಗೆಯದು ಎಂಬುದನ್ನು ಸ್ಪಷ್ಟಪಡಿಸುತ್ತದೆ; ಅದೇ ವಚನದಲ್ಲಿ ಮುಂದೆ 'ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವಾದ, ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ' ಎಂದು ಜಡಿದು ನುಡಿಯುವುದರ ಹಿಂದೆ ವೃತ್ತಿ ಮತ್ತು ಜಾತಿಗಳ ನಡುವಣ ಸಂಬಂಧವನ್ನು ಗುರುತಿಸಿರುವುದು ಕಾಣುತ್ತದೆ. 'ಚತುರ್ವರ್ಣಾತೀತನೆ ವೀರಶೈವ ನೋಡಾ' ಎಂಬ ಸಿದ್ಧರಾಮ ಜಾತಿಪದ್ಧತಿಯ ತಾಯಿಯಾದ ವರ್ಣಪದ್ಧತಿಯನ್ನೂ ಧಿಕ್ಕರಿಸುತ್ತಾನೆ. ಉರಿಲಿಂಗಪೆದ್ದಿ, ಕಾಳವ್ವೆ, ಅಂಬಿಗರ ಚೌಡಯ್ಯ ಮುಂತಾದವರ ಅನೇಕ ವಚನಗಳು ಬಹು ತೀವ್ರವಾಗಿ ಜಾತಿವ್ಯವಸ್ಥೆಯನ್ನು ಅಲ್ಲಗಳೆಯುತ್ತವೆ. ವಚನಗಳು ಜಾತಿಗಳನ್ನು ಅಲ್ಲಗಳೆಯುವುದಿಲ್ಲ ಎಂದು ವಾದಿಸುವವರಿಗೆ ಇವುಗಳ ಪರಿಚಯವಿಲ್ಲ ಎಂಬುದು ಸ್ಪಷ್ಟ.
ವಚನಕಾರರ ಜಾತಿನಿರ್ಮೂಲನೆಯ ಪ್ರಯತ್ನದ ಮತ್ತೊಂದು ಮಜಲೆಂದರೆ ಕಾಯಕದ ಪರಿಕಲ್ಪನೆ; ಎಲ್ಲ ಕಾಯಕಗಳೂ ಸಮಾನ ಪವಿತ್ರವೆಂದು ಸಾರುವ ಮೂಲಕ ಜಾತಿಗಳಿಗೆ ಕಾರಣವಾದ ವೃತ್ತಿಗಳ ಸಮಾನ ಗೌರವಾರ್ಹತೆಯನ್ನವರು ಸಾರಿದರು. ತನ್ನ ವೃತ್ತಿಯನ್ನು ಶ್ರದ್ಧೆಯಿಂದ ಮಾಡುವ ಮೂಲಕ ವ್ಯಕ್ತಿಯು ದೇವರನ್ನು ತನ್ನ ಹತ್ತಿರಕ್ಕೆ ಸೆಳೆದುಕೊಳ್ಳುವ ಸಾಮಥ್ರ್ಯವನ್ನು ಸಂಪಾದಿಸಿಕೊಳ್ಳುತ್ತಾನೆಂದರು. ಬಹುತೇಕ ಕಾಯಕ ಜೀವಿ ವಚನಕಾರರು ತಮ್ಮ ಆಧ್ಯಾತ್ಮಿಕ ಅನುಭವದ ಅಭಿವ್ಯಕ್ತಿಯ ರೂಪಕವಾಗಿ ಬಳಸಿಕೊಳ್ಳುವುದು ತಮ್ಮ ವೃತ್ತಿವಿವರಗಳನ್ನೇ ಎಂಬುದನ್ನು ಗಮನಸಬೇಕು.
ವಚನ ಚಳವಳಿಯು ರಾಜತ್ವವನ್ನು ದೈವೀಮೂಲವೆಂದು ನಂಬಿಸಿದ್ದ ವೈದಿಕದ ನಿಲವನ್ನು ಖಂಡಿಸಿತು. ರಾಜವ್ಯವಸ್ಥೆಯಲ್ಲಿ ನೌಕರಿಗಿದ್ದ ಬಸವಣ್ಣನೇ 'ನೆಲನಾಳ್ದನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ' ಎಂದೂ, 'ಕೂಡಸಂಗಮದೇವನುಳ್ಳನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ' ಎಂದೂ ಹೇಳು ಮಾತುಗಳು ಪ್ರಸಿದ್ಧವೇ ಆಗಿವೆ. ಕಾಯಕಜೀವಿಗಳೆಲ್ಲ ತಮ್ಮ ನಿಷ್ಠೆ ಶರಣನ ಪರವಾದುದೇ ಹೊರತು ವ್ಯವಸ್ಥೆಯ ಪರವಾದುದಲ್ಲವೆಂಬುದನ್ನು ಸ್ಪಷ್ಟಪಡಿಸುತ್ತಾರೆ. ಹಾಗೆಯೇ 'ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಕಾಸೆ ಮೀಸೆ ಬಂದರೆ ಗಂಡೆಂಬರು; ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ' ಎಂಬ ಜೇಡರ ದಾಸಿಮಯ್ಯನ ಮಾತು, ಮತ್ತದರ ಅನುರಣೆಯಾದ ಇನ್ನಿತರರ ಮಾತುಗಳಲ್ಲಿ ಗಂಡುಹೆಣ್ಣುಗಳ ನಡುವಣ ಮೂಲಭೂತ ಸಮಾನತೆಯನ್ನು ಸಾರಿದರು.
 ಈ ಮಾತುಗಳಿಂದ ವಚನ ಚಳವಳಿಯ ವೈದಿಕವಿರೋಧೀ ನಿಲವು, ಅದರಲ್ಲೂ ಜಾತಿ ವಿರೋಧ ಸ್ಪಷ್ಟವಾಗುತ್ತದೆ. ಆದರೆ ಈ ಪ್ರಯತ್ನದ ಮಿತಿಯನ್ನೂ ನಾವರಿಯಬೇಕು. ಈ ಚಳವಳಿ ವೈದಿಕ ವ್ಯವಸ್ಥೆಗೆ ವಿರುದ್ಧವಾದುದಲ್ಲ ಎಂಬುದು ಹೇಗೆ ಮೊಂಡು ವಾದವೋ, ಹಾಗೆಯೇ ವಚನಕಾರರ ನಿಲವು ಈ ಕಾಲದ ಆಧುನಿಕ ಮನೋಭಾವದ್ದು ಎನ್ನುವುದೂ ಅಷ್ಟೇ ಸೀಮಿತ ತಿಳಿವಳಿಕೆಯಾಗುತ್ತದೆ. ವಚನಕಾರರು ವೈದಿಕದ ವಿರೋಧಿಗಳಾಗಿ ಅಲ್ಲಿನ ಅಸಮಾನತೆಗೆ ಕಾರಣವಾದ ಅಂಶಗಳನ್ನು ಅಲ್ಲಗಳೆದು ಸಮಾನತೆಯ ನೆಲಗಟ್ಟಿನ ಹೊಸ ಸಮಾಜವೊಂದರ ನಿರ್ಮಾಣಕ್ಕೆ ಹೆಣಗಿದರೆಂಬುದು ನಿಜ. ಆದರೆ ಆ ಪ್ರಯತ್ನ ತಮ್ಮ ನಂಬಿಕೆಯ ವ್ಯಾಪ್ತಿಗೆ ಬಂದವರನ್ನು ತಿದ್ದುವುದಕ್ಕೆ ಮಾತ್ರವಾಗಿತ್ತೇ ಹೊರತು ವ್ಯಾಪಕ ಸಮಾಜ ಸುಧಾರಣೆಯಲ್ಲ ಎಂಬುದನ್ನು ಗಮನಿಸಬೇಕು. 'ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲರನೊಂದೆ ಎಂಬೆ; ಹಾರುವ ಮೊದಲು ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂದೆ ಎಂಬೆ' ಎಂಬ ವಚನದಲ್ಲಿ ಬಸವಣ್ಣನು ಜಾತಿಗಣನೆಯಿಲ್ಲದೆ ಶಿವಭಕ್ತರನ್ನು ಸಮಾನವಾಗಿ ಗೌರವಿಸುವ ಮತ್ತು ಭವಿಯಾದವರನ್ನು ಅಲಕ್ಷಿಸುವ ಮನೋಭಾವನನ್ನು ತೋರ್ಪಡಿಸುತ್ತಾನೆ. ಮನುಷ್ಯಸಂಕುಲವನ್ನು ವಚನಕಾರರು ಭಕ್ತ-ಭವಿ ಎಂದು ವಿಭಜಿಸಿದರು. ಚೆನ್ನಬಸವಣ್ಣನ ಒಂದು ವಚನ ಹೀಗಿದೆ: 'ವಾರವೇಳು ಕುಲ ಹದಿನೆಂಟು ಎಂಬರಯ್ಯಾ, ಅದ ನಾವು ಅಲ್ಲವೆಂಬೆವು; ಹಗಲೊಂದು ವಾರ ಇರುಳೊಂದು ವಾರ, ಭಕ್ತನೊಂದು ಕುಲ ಭವಿಯೊಂದು ಕುಲ, ನಾವು ಬಲ್ಲುದು' ಎಂಬುದರಲ್ಲಿ ಈ ಮನೋಭಾವ ಮತ್ತಷ್ಟು ಸ್ಪಷ್ಟವಾಗಿದೆ. ಅಂದರೆ ವಚನ ಚಳವಳಿಯ ಸುಧಾರಣೆ ಭಕ್ತ ವಲಯಕ್ಕೆ ಸೀಮಿತವಾಯಿತು, ಅದರ ಹೊರತಾದುದರ ಬಗ್ಗೆ ಅದರ ಗಮನವಿರಲಿಲ್ಲ. 
ವೀರಶೈವ ಲಿಂಗಾಯತದಲ್ಲಿ ಮತ್ತೆ ಜಾತಿವ್ಯವಸ್ಥೆ ಬಲಗೊಳ್ಳಲೇನು ಕಾರಣ? ಕಾಯಕದ ಕಾರಣದಿಂದ ಎಲ್ಲ ವೃತ್ತಿಗಳನ್ನೂ ಸಮಾನ ಪವಿತ್ರವೆಂದು ಕರೆದು, ವ್ಯಕ್ತಿ ತನ್ನ ಪರಂಪರಾಗತ ವೃತ್ತಿಯನ್ನೇ ಮುಂದುವರಿಸಿ ಅದಕ್ಕಂಟಿಕೊಂಡ ಜಾತಿ ಹಣೆಪಟ್ಟಿಯನ್ನು ಕಿತ್ತೊಗೆಯುವ ಅವಕಾಶವಿಲ್ಲದ್ದು, ಹಾಗೂ ಮೂರ್ತಿಪೂಜೆ, ಪುರೋಹಿತಶಾಹಿಯ ಪುನರುಜ್ಜೀವನ ಮುಂತಾದ ನೆಲೆಗಳಲ್ಲಿ ವೈದಿಕದ ದಟ್ಟ ನೆರಳಿನಡಿ ಬಂದುದು. ವಚನ ಚಳವಳಿ ಸಾಧಿಸಿದ್ದು ಕಡಮೆಯಲ್ಲ, ಆದರೆ ಅದು ಮತ್ತೊಂದು ಸಾಂಸ್ಥಿಕ ಧರ್ಮದ ಸ್ಥಾಪನೆಗೆ ಕಾರಣವಾಗಿ ಹಿಂಬಡ್ತಿ ಪಡೆಯಿತು. ಎಂತಹ ಸುಧಾರಣಾ ಕಾರ್ಯವೇ ಆಗಲಿ ಧಾರ್ಮಿಕ ಚೌಕಟ್ಟನ್ನು ಅಳವಡಿಸಿಕೊಂಡರೆ ಆಗುವ ಪರಿಣಾಮ ಬಹು ಸೀಮಿತವೆಂಬುದು ಇದರಿಂದ ಮನದಟ್ಟಾಗುತ್ತದೆ.
*****


No comments: