ವಚನ ಚಳವಳಿ - ಕೆಲವು ವಾಸ್ತವಗಳು
ಭಕ್ತಿ ಚಳವಳಿ ಎನ್ನುವುದು
ಭಕ್ತಿಯನ್ನೇ ಏಕೈಕ ಗುರಿಯಾಗಿ ಹೊಂದಿದ ಆಂದೋಲನ. ಭಕ್ತಿ ಚಳವಳಿಯ ಮುಖ್ಯ ಆಶಯಗಳೆಂದರೆ ಭಕ್ತಿ ಮಾತ್ರವೇ
ಮೋಕ್ಷಸಾಧನೆಗೆ ಸಹಾಯಕವಾದುದು, ಯಜ್ಞ-ಯಾಗಾದಿಗಳಲ್ಲ ಅರ್ಥಾತ್ ಕ್ರಿಯಾಮಾರ್ಗವಲ್ಲ ಅಥವಾ ಜ್ಞಾನಮಾರ್ಗವಲ್ಲ
ಎಂಬ ನಂಬಿಕೆ (ಈ ರೀತಿಯಲ್ಲಿ ಅದು ವೈದಿಕ ಸಂಸ್ಕೃತಿಗೆ ಪರೋಕ್ಷವಾಗಿ ಸೆಡ್ಡು ಹೊಡೆದುದು ನಿಜ). ನಿಜವಾದ
ಗುರುವೊಬ್ಬನ ಅನುಸರಣೆಯ ಮೂಲಕ ಸಾಧನೆ; ಭಕ್ತಿಯ ನೆಲೆಯಲ್ಲಿ ಮೇಲು-ಕೀಳುಗಳ ನಿರಾಕರಣೆ; ಉಪವಾಸಾದಿ
ವ್ರತಾಚರಣೆಗಳು ಅರ್ಥವಿಹೀನವೆಂಬ ತಿಳಿವಳಿಕೆ; ಸಹನೆ-ಪ್ರೀತಿಗಳ ಅಳವಡಿಕೆ - ಇವುಗಳು ಭಕ್ತಿ ಚಳವಳಿಯ
ಪ್ರಮುಖ ನಿಲವುಗಳು. ಆಳ್ವಾರರು, ನಿಂಬಾರ್ಕ, ಕಬೀರ, ಚೈತನ್ಯ, ವಲ್ಲಭಾರ್ಯ, ಶಂಕರದೇವ ಮುಂತಾದವರು
ಭಕ್ತಿ ಚಳವಳಿಯ ಪ್ರತಿಪಾದಕರು. ಇವರೆಲ್ಲ ವೈದಿಕ ವ್ಯಾಪ್ತಿಯಲ್ಲಿಯೇ ಬಂದವರು; ಆದರೆ ಯಾರೂ ವೈದಿಕವ್ಯವಸ್ಥೆಯ
ವಿರುದ್ಧ ಸಂಘಟಿತ ಹೋರಾಟ ನಡೆಸಲಿಲ್ಲ. ಅಲ್ಲದೆ, ಈ ಚಳಿವಳಿಗಳಲ್ಲಿ ಮೊದಲು ಒಬ್ಬ ತೋರಿಸಿದ ದಾರಿಯನ್ನು
ಹಿಂಬಾಲಕರು ಅನುಸರಿಸಿದ ರೀತಿ ಕಂಡುಬರುತ್ತದೆ. ಕನ್ನಡ ನಾಡಿನಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳನ್ನು
ದ್ವೈತದ ಹಿನ್ನೆಲೆಯಲ್ಲಿ ಪ್ರತಿಪಾದಿಸಿದ ಹರಿದಾಸ ಆಂದೋಲನವೂ ಈ ಗುಂಪಿಗೇ ಸೇರುತ್ತದೆ. ಒಬ್ಬ ವ್ಯಕ್ತಿಯಿಂದ
ಆರಂಭಗೊಂಡು ವಿವಿಧ ಜನಗಳನ್ನು ತನ್ನ ವಲಯದಲ್ಲಿ ಒಳಗೊಳ್ಳುತ್ತ ಹೋಗುವುದು ಭಕ್ತಿ ಚಳವಳಿಯ ಸ್ವರೂಪ.
ಆದರೆ ದಕ್ಷಿಣದಲ್ಲಿ ಆಳ್ವಾರರು ಮತ್ತು ಹರಿದಾಸರು ಇದನ್ನು ಮುನ್ನಡೆಸಿದವರು. ಆಳ್ವಾರರು ರಾಮಾನುಜ
ಪರಂಪರೆಯವರಾದರೆ, ಹರಿದಾಸರು ಮಧ್ವಾಚಾರ್ಯ ಪರಂಪರೆಯವರು. ತ್ಯಾಗರಾಜರಂಥವರು ಭಕ್ತಿ ಪಾರಮ್ಯವನ್ನು
ಸಂಗೀತದ ಮೂಲಕ ಪ್ರಚುರಪಡಿಸಿದವರು. ಅಲ್ಲಿ ಭಕ್ತಿಯೇನೋ ಇದೆ, ಆದರೆ ಸಂಗೀತ ಮುಖ್ಯ; ಹೀಗಾಗಿ ಇದೊಂದು
ಸಂಗೀತದ ಮೂಲಕ ನಡೆಸಿದ ಆರಾಧನಾಕ್ರಮ, ಅಷ್ಟೆ. ಭಕ್ತಿಯಲ್ಲಿ ಮುಖ್ಯ ಮನೋಭಾವವೆಂದರೆ ಶರಣಾಗತಿ, ತನ್ನ
ವೈಯಕ್ತಿಕತೆಯನ್ನು ನೀಗಿಕೊಳ್ಳುವುದು, ತಾನು ದೇವರ ಭಾಗವೆಂಬ ಭಾವನೆಯನ್ನು ತಾಳಿ ಅವನೊಡನೆ ಬೆರೆಯುವ
ಗುರಿ ಉಳ್ಳದ್ದು. ಅಲ್ಲಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯೇನೂ ಇರುವುದಿಲ್ಲ. ಇದ್ದರೂ ಭಕ್ತಿನೆಲೆಯಲ್ಲಿ
ತಾರತಮ್ಯ ಮಾಡದಿರುವಂಥದೇ ಹೊರತು ಸಾಮಾಜಿಕ ಆಂದೋಲನವಾಗಿ ಅದು ರೂಪುಗೊಳ್ಳುವುದಿಲ್ಲ. ಸಾಮಾಜಿಕ ಕಟ್ಟುಪಾಡುಗಳ
ಬಗ್ಗೆ ಅವಜ್ಞೆಯಿರಬಹುದಾದರೂ ಅದು ವ್ಯಕ್ತಿನೆಲೆಯಲ್ಲಿಯೇ ಹೊರತು ಹೋರಾಟದ ನೆಲೆಯಲ್ಲಲ್ಲ. ಮುಖ್ಯ ಹರಿದಾಸರಲ್ಲಿ
ಒಬ್ಬನಾದ ಕನಕದಾಸ ವ್ಯವಸ್ಥೆಯ ವಿರುದ್ಧ ಅಸಮಾಧಾನ ತಾಳಿದ್ದಿರಬಹುದು, ಆದರೆ ಅದರ ಅಭಿವ್ಯಕ್ತಿ ಹೋರಾಟ
ರೂಪದಲ್ಲಿ ನಡೆಯದೆ, ಕೀರ್ತನೆಗಳಲ್ಲಿ ಕುಲನಿರಾಕರಣೆಯ ಮೂಲಕವಾಗಿ ಒಂದು ನೆಲೆಯಲ್ಲಿಯೂ, ಮತ್ತೊಂದರಲ್ಲಿ
ರೂಪಕಾತ್ಮಕವಾಗಿ ಜಾತಿ ತಾರತಮ್ಯವನ್ನು ಅಲ್ಲಗಳೆಯುವುದರ ಮೂಲಕವೂ ನಡೆಯಿತೆಂಬುದು ಸರ್ವವಿದಿತ. ಅಲ್ಲಿ
ವ್ಯಕ್ತಿ ನೆಲೆಯ ಮೋಕ್ಷ ಸಂಪಾದನೆ ಮುಖ್ಯವೇ ಹೊರತು ಸಾಮುದಾಯಕ ಸುಧಾರಣೆ ಅಲ್ಲ.
ಈ ಸಂಕ್ಷಿಪ್ತ ಹಿನ್ನೆಲೆಯಲ್ಲಿ
ಪರಿಭಾವಿಸಿದರೆ, ವಚನ ಚಳವಳಿಯು ಭಕ್ತಿ ಚಳವಳಿಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದರದ್ದು ಸಾರಾಸಗಟಾದ
ವೈದಿಕ ಸಂಸ್ಕೃತಿಯ ನಿರಾಕರಣೆ ಮಾತ್ರವಲ್ಲ, ಅದರ ವಿರುದ್ಧದ ಹೋರಾಟ. ಕ್ರಿಸ್ತಪೂರ್ವದಲ್ಲಿ ನಡೆದ ಜೈನ-ಬೌದ್ಧಗಳಂತೆ
ಅದರದ್ದೂ ವೈದಿಕದ ತಾರತಮ್ಯ ಧೋರಣೆಯ ತಿರಸ್ಕಾರ. ವಚನಗಳ ರಚನೆಯೇ ಪ್ರಾಯಶಃ ವೈದಿಕ ರಚನೆಯಾದ ಮಂತ್ರದ ವಿರುದ್ಧದ ಪ್ರತಿಭಟನೆ; ಸಿದ್ಧರಾಮ ಕವಚನ
ರಚನೆ ವಾಗ್ರಚನೆಯಲ್ಲಕಿ ಎನ್ನುತ್ತಾನೆ; ಮತ್ತೊಂದೆಡೆ 'ವಾಗ್ರಚನೆ ಕರ್ಣಾಟ' [ಕರ್ಣ+ಅಟ] ಎನ್ನುತ್ತಾನೆ.
ಇಂಪಾಗಿ ಹೇಳುವ ಛಂದೋಬದ್ಧ ರಚನೆಗಳಾದ ಮಂತ್ರಗಳಿಗೆ ಇವರು ಕಂಡುಕೊಂಡ ಪರ್ಯಾಯವೆಂದರೆ 'ಆನು ಒಲಿದಂತೆ
ಹಾಡುವ' ಸ್ವಚ್ಛಂದ ರಚನೆಗಳಾದ ವಚನ. 'ಎಮ್ಮ ವಚನದ ಸಾಸಿರ ಪಾರಾಯಣಕ್ಕೆ ಗಾಯತ್ರೀ ಲಕ್ಷ ಜಪ ಸಮಬಾರದಯ್ಯಾ'
ಎಂದು ಸಿದ್ಧರಾಮನೇ ಹೇಳುತ್ತಾನೆ. ಹಾಗೆಯೇ ದ್ವಿಜತ್ವ, ಮೂರ್ತಿಪೂಜೆ, ಪೂಜಾರಿಯ ಮೂಲಕ ಆರಾಧನೆ ಮುಂತಾದವನ್ನೂ
ವಚನ ಚಳವಳಿ ತಿರಸ್ಕರಿಸಿತು. ಈ ಚಳವಳಿಯು ವೈದಿಕ ಸಂಸ್ಕೃತಿಯು ದೂರವಿರಿಸಿದ್ದ ಜಾತಿಗಳ ಹೆಸರಿನ ನಾನಾ
ಸ್ತರದ ಅದ್ವಿಜವರ್ಗದ ಮತ್ತು ಕೆಳವರ್ಗದವರ ಒಕ್ಕೊರಲಿನ ಧಿಕ್ಕಾರದ ದನಿಯಾಗಿದೆ. ಈ ಹಿನ್ನೆಲೆಯಲ್ಲಿ
ವಚನ ಚಳವಳಿಯನ್ನು ಗಮನಿಸೋಣ. ಅದು ತೀವ್ರವಾಗಿ ವಿರೋಧಿಸಿದ್ದು ಯಜ್ಞಯಾಗಾದಿಗಳನ್ನು, ವರ್ಣವ್ಯವಸ್ಥೆಯನ್ನು
ಹಾಗೂ ಲಿಂಗತಾರತಮ್ಯವನ್ನು. ಅನೇಕರು ಯಜ್ಞಕ್ರಿಯೆಗಳನ್ನು ಹಿಂಸಾತ್ಮಕವೆಂದು ತಮ್ಮ ವಚನಗಳಲ್ಲಿ ಹೀಗಳೆದರು,
ಬ್ರಾಹ್ಮಣನನ್ನು ಗೇಲಿಮಾಡಿದರು, ವೇದಗಳನ್ನು ಟೀಕಿಸಿದರು, ಮೂರ್ತಿಪೂಜೆ, ದೇವಸ್ಥಾನನಿರ್ಮಾಣಗಳನ್ನು
ಖಂಡಿಸಿದರು. ದೇವಾಲಯಗಳಿಂದಾಗಿ ರೂಢಿಗೆ ಬಂದಿದ್ದ ಪುರೋಹಿತಶಾಹಿಯನ್ನು ನಿರಾಕರಿಸಿದರು. "ವೇದಂಗಳೆಂಬುವು
ಬ್ರಹ್ಮನ ಬೂತಾಟ, ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ, ಆಗಮಂಗಳೆಂಬವು ಋಷಿಗಳ ಮರುಳಾಟ, ಪುರಾಣಂಗಳೆಂಬವು
ಪೂರ್ವದವರ ಗೊಡ್ಡಾಟ - ಇಂತು ಇವನು ನೇತಿಗಳೆದು ನಿಜದಲ್ಲಿ ನಿಂದಿಪ್ಪಾತನೇ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು"
ಎಂಬ ಅಲ್ಲಮನ ವಚನವು ವೈದಿಕದ ಕಪಿಮುಷ್ಟಿಯ ಹಿಡಿತದಿಂದ ಪಾರಾಗಿ ಸಾಧನೆ ನಡೆಸಬೇಕಾದವನು ವೈದಿಕದ ಸಕಲವನ್ನೂ
ನೇತಿಗಳೆಯಬೇಕಾದ ಆವಶ್ಯಕತೆಯನ್ನು ಸ್ಪಷ್ಟಪಡಿಸುತ್ತದೆ.
ಜೈನ-ಬೌಧ್ಧಗಳು ವೈದಿಕದ ವರ್ಣತಾರತಮ್ಯ, ಆಶ್ರಮಪದ್ಧತಿ, ಯಜ್ಞಯಾಗಾದಿಗಳು
ಮುಂತಾದವುಗಳ ವಿರುದದ್ದೀ ಹಿಂದೆಯೇ ರಣಕಹಳೆಯನ್ನೂದಿದ್ದವು.
ಜೈನ-ಬೌಧ್ಧಗಳು ಧಾರ್ಮಿಕ ಚಳವಳಿಗಳಾದರೂ ನಿರೀಶ್ವರ ಮಾರ್ಗವನ್ನು ಬೋಧಿಸುವುದರ ಮೂಲಕವೇ ವೈದಿಕ ಪಾರಮ್ಯವನ್ನು
ಪ್ರಶ್ನಿಸಿದ್ದವು. ಯಾಕಂದರೆ ವೈದಿಕದ ಪ್ರಕಾರ ಮೋಕ್ಷಸಿದ್ಧಿ ಯಜ್ಞಗಳ ಮೂಲಕ ಮಾತ್ರವೇ ಆಗುವಂಥದು;
ಯಜ್ಞದಲ್ಲಿ ಭಾಗಿಯಾಗಲು ಶೂದ್ರನಿಗೆ ಅವಕಾಶವಿಲ್ಲ; ಹೀಗಾಗಿ ಮೋಕ್ಷಕ್ಕೆ ದ್ವಿಜರು ಮಾತ್ರವೇ ಅರ್ಹರು
ಎಂಬ ನಿಲವನ್ನವು ಖಂಡಿಸಿದುವು. ಆದರೆ ಜೈನ-ಬೌದ್ಧಗಳಲ್ಲಿ ಭಕ್ತಿಗೆ ಅವಕಾಶವಿಲ್ಲ; ಯಾಕಂದರೆ ಭಕ್ತಿಯ
ಮೂಲಕ ಒಲಿಸಿಕೊಳ್ಳಬೇಕಾದ ಹಾಗೂ ಕಾಣಬೇಕಾದ ವವೊಂದರ ಕಲ್ಪನೆಯನ್ನು ಎರಡೂ ಅಲ್ಲಗಳೆದವು. ಬೌದ್ಧದಲ್ಲಿ
ಬುದ್ಧಿಗೆ ಪ್ರಾಧಾನ್ಯ, ಪ್ರತಿಯೊಂದನ್ನೂ ಬೌದ್ಧಿಕ ವಿಶ್ಲೇಷಣೆಗೆ ಒಳಪಡಿಸಿ ಸೂಕ್ತವಾದುದನ್ನು ಸ್ವೀಕರಿಸುವ
ಮಾರ್ಗವನ್ನು ಬುದ್ಧ ಬೋಧಿಸಿದ. ಹಾಗೆಯೇ ತೀರ್ಥಂಕರತ್ವವೇ ಜೈನದ ಪರಮೋದ್ದೇಶ. ಬೌದ್ಧಿಕತೆಯ ಮೂಲಕ ಬುದ್ಧನಾಗುವುದು
ಒಂದರಲ್ಲಿ ಸಾಧ್ಯವಾದರೆ, ವ್ಯಕ್ತಿವಿಕಾಸದಿಂದ ತೀರ್ಥಂಕರತ್ವ ಮತ್ತೊಂದರಲ್ಲಿ ಸಾಧ್ಯ.
ಆದರೆ ವೈದಿಕದ ಪ್ರಾಬಲ್ಯ ಅನತಿ ಕಾಲದಲ್ಲಿಯೇ ಹೇಗೆ ಮರುಕಳಿಸಿತೆಂದರೆ
ಬೌದ್ಧ ಬಹುತೇಕ ಕಣ್ಮರೆಯಾಯಿತು, ಮತ್ತು ಜೈನ ಉಳಿದುಕೊಳ್ಳಲು ವೈದಿಕದ ದಟ್ಟ ಪ್ರಭಾವಕ್ಕೆ ಒಳಗಾಗಬೇಕಾಯಿತು.
ಪ್ರಾಯಶಃ ಏಳನೇ ಶತಮಾನದಲ್ಲಿದ್ದಿರಬಹುದಾದ ಶಂಕರಾಚಾರ್ಯ ಮೊತ್ತ ಮೊದಲ ಬಾರಿಗೆ ನಾಲ್ಕು ದಿಕ್ಕುಗಳಲ್ಲಿ
ನಾಲ್ಕು ವೈದಿಕ ಮಠಗಳನ್ನು ಸ್ಥಾಪಿಸುವುದರ ಮೂಲಕ ವೈದಿಕವನ್ನು ವ್ಯವಸ್ಥಿತ ಸಾಂಸ್ಥಿಕತೆಗೆ ಅಳವಡಿಸಿದಂತೆ
ಕಾಣುತ್ತದೆ. ಹೀಗಾಗಿ ಯೋಜಿತ ರೂಪದ ಸಂಟನೆ ಸಾಧ್ಯವಾಗಿ ತನ್ನ ವಿರುದ್ಧ ಎಂತಹ ಚಳವಳಿ ಬಂದರೂ ಅದನ್ನು
ಕಬಳಿಸುವಷ್ಟರ ಮಟ್ಟಿಗೆ ವೈದಿಕ ಪ್ರಬಲವಾಯಿತು. ವೈದಿಕವನ್ನು ತೀವ್ರವಾಗಿ ವಿರೋಧಿಸಿದ ಕಾರಣದಿಂದಾಗಿ
ಬೌದ್ಧವು ಕಾಲ್ತೆಗೆಯಬೇಕಾಯಿತು; ಆದರೆ ರಾಜಿಯಾಗಿ ಅಲ್ಲಿನ ಪೌರಾಣಿಕತೆ, ಮೂರ್ತಿಪೂಜೆ, ಧಾರ್ಮಿಕಾಚರಣೆ,
ವರ್ಣವ್ಯವಸ್ಥೆ ಮುಂತಾದವುಗಳನ್ನು ಅನುಸರಿಸಿದ ಜೈನ
ಉಳಿದುಕೊಂಡಿತು. ಮುಂದೆಯೂ ಅದು ವೈದಿಕ ಪ್ರಭಾವಕ್ಕೆ ಒಳಗಾಗುತ್ತಲೇ ಹೋಯಿತು. ಪಂಪನ 'ಆದಿಪುರಾಣ'ದಲ್ಲಿ
ಎರಡು ಪ್ರಸಂಗಗಳಿವೆ: ಒಂದು ಆದಿದೇವನು "ಅಖಿಳಕ್ಷತ್ರಿಯಸಮೂಹಕ್ಕೆ ಶಸ್ತ್ರಕರ್ಮಮುಮಂ, ವಣಿಗ್ವಂಶಕ್ಕೆ
ಪಾಶುಪಾಲಕೃಷಿ ಪಣ್ಯಕರ್ಮಂಗಳುಮಂ ಮತ್ತಂ ಸ್ಪೃಶ್ಯಾಸ್ಪೃಶ್ಯಕಾರುಗಳುಮೆಂದಿರ್ತೆರದ ಶೂದ್ರಸಂತತಿಗೆ
ಶುಶ್ರೂಷಾನಿಯೋಗಂಗಳುಮಂ ಯಥಾಯೋಗ್ಯಮುಪದೇಶಂಗೆಯ್ದು ವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ
ಕೊಳ್ಕೊಡೆಯುಮಂ" ನಿಯೋಜಿಸಿದ ಸನ್ನಿವೇಶ. ಜೈನದಲ್ಲಿ ಆರಂಭದಲ್ಲಿ ಒಪ್ಪಿಕೊಂಡದ್ದು ಮೂರುವರ್ಣಗಳನ್ನು;
ಅಲ್ಲಿ ಬ್ರಾಹ್ಮಣನಿಗೆ ಅವಕಾಶವಿಲ್ಲ. ಇನ್ನೊಂದು, ಅಂದರೆ ಬ್ರಾಹ್ಮಣ ವರ್ಣವು, ಮುಂದೆ ಅವನ ಮಗನಾದ
ಭರತನು ಸೂಕ್ಷ್ಮಮನಸ್ಸು ಹಾಗೂ ವಿವೇಚನೆಗಳನ್ನು ತೋರಿಸಿದ ಕೆಲವರನ್ನು "ಮೆಚ್ಚಿ ದಾನಸನ್ಮಾನಯೋಗ್ಯರಪ್ಪರೆಂದು
ಪದ್ಮನಿಧಿಯಂ ತರಿಸಿ ತಪನೀಯಸೂತ್ರದೊಳೇಕಾದಶೋತ್ತರ ದಶಾಂತಂಬರಂ ಅವರವರ ನೆಲೆಗಳೊಳ್ ಬ್ರಹ್ಮಸೂತ್ರಾಭಿಧಾನ
ಯಜ್ಞೋಪವೀತದಿಂ ಪವಿತ್ರಗಾರ್ತರ್ಮಾಡಿ" ಅವರಿಗೆ ಆರು ಆರ್ಯಷಟ್ಕರ್ಮಗಳನ್ನು ನಿಗದಿಪಡಿಸಿದನಂತೆ.
ಹೀಗೆ ಬ್ರಾಹಣವೂ ಸೇರಿ ವೈದಿಕದಲ್ಲಿದ್ದಂತೆ ಚಾತುರ್ವರ್ಣ್ಯ ಅಲ್ಲಿಯೂ ಕಾಲಿಟ್ಟಿತು. ಅಂದರೆ ಮೂಲದಲ್ಲಿ
ತಾನು ವಿರೋಧಿಸಿದ್ದ ಜೈನವು ವರ್ಣವ್ಯವಸ್ಥೆಯನ್ನು ಮತ್ತೆ ಸ್ವೀಕರಿಸಿತು, ವರ್ಣಸಂಕರವನ್ನು ನಿಷೇಧಿಸಿತು;
ಅಸ್ಪೃಶ್ಯತೆಗೂ ಅವಕಾಶವುಂಟಾಯಿತು.
ವಚನ ಚಳವಳಿಯು ವೈದಿಕದ ಎಲ್ಲ ಆಚರಣೆ-ಪರಿಕಲ್ಪನೆಗಳನ್ನು ವಿರೋಧಿಸಿತು.
ಮೊದಲ ಕೆಲವು ವಚನಕಾರರು ಅಜ್ಞೇಯತೆಯ ಮನೋಭಾವದವರಂತೆ ಕಾಣುತ್ತಾರೆ, ಅಥವಾ ಪ್ರಕೃತಿಯನ್ನೇ ದೇವರ ಸ್ವರೂಪವೆಂಬಂತೆ
ಭಾವಿಸಿರಬಹುದು. ಉದಾಹರಣೆಗೆ ಜೇಡರ ದಾಸಿಮಯ್ಯನ ವಚನವೊಂದನ್ನು ನೋಡಿ: "ಖಂಡಿತವಿಲ್ಲದ ಅಖಂಡಿತ
ನೀನೆ, ನಿನ್ನ ಕಂಡವರುಂಟೆ ಹೇಳಯ್ಯ; ಕಂಡೆನೆಂಬುವರೆಲ್ಲ ಬಂಜೆಯ ಮಕ್ಕಳು; ನೀ ನಿಂದ ಹೆಜ್ಜೆಯ ಕೆಳಗೆ
ಒಂದು ಬಿಂದು ಹುಟ್ಟಿ ಬೆಳಗುವ ಚಂದವ ಕಂಡು ಕಣ್ದೆರೆದೆ ಕಾಣ ರಾಮನಾಥ." ಆದರೆ ಇತರರು ದೈವದ ಇರುವಿಕೆಯನ್ನು
ಖಂಡಿತವಾಗಿ ನಿರಾಕರಿಸಲಿಲ್ಲ. ಅಷ್ಟೇ ಅಲ್ಲ, ವೈದಿಕ
ಇಷ್ಟು ಹೊತ್ತಿಗೆ ಮಾನ್ಯಮಾಡಿದ್ದ ಶಿವನನ್ನೇ ತನ್ನ ಪರಮವವನ್ನಾಗಿ ಸ್ವೀಕರಿಸಿದ್ದರಿಂದಾಗಿ ಲಿಂಗಾಯತವು
ವೈದಿಕಕ್ಕೆ ತೀವ್ರ ಪ್ರತಿಭಟನೆಯನ್ನು ಒಡ್ಡಲು ಸಾಧ್ಯವಾಗಲೇ ಇಲ್ಲ. ಕಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಕಿ
ಎಂಬಂತಹ ಮಾತುಗಳಿಂದಾಗಿ ವಚನಕಾರರು ದೇವಾಲಯಪೂಜೆಯನ್ನು ನಿರಾಕರಿಸಿದರೂ, 'ಇಷ್ಟಲಿಂಗ'ದ ಪೂಜೆಯನ್ನು
ಕಡ್ಡಾಯಗೊಳಿಸಿದರು. ಇದರಿಂದಾಗಿ ಪೂಜೆ ಮುಂದುವರಿದು, ಮುಂದೆ ದೇವಾಲಯಪದ್ಧತಿ ಮರುಕಳಿಸಲು, ಒಂದಿಲ್ಲೊಂದು
ರೀತಿಯ ಪುರೋಹಿತಶಾಹಿ ಹಿಂತಿರುಗಲು ಕಾರಣವಾಯಿತು. "ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ"
ಎಂಬ ಮೂಲಕ ಅಲ್ಲಮ ಸ್ಥಾವರಪೂಜೆಯನ್ನು ಬಲವಾಗಿ ನಿರಾಕರಿಸಿದ್ದು ನಿಜ; ಆದರೆ ವಚನಕಾರರೇ ಮಂತ್ರಗಳ ಬದಲು
ಆದ್ಯರ ವಚನಗಳು, ಸ್ಥಾವರಲಿಂಗದ ಬದಲು ಇಷ್ಟಲಿಂಗಪೂಜೆ, ತ್ರಿಮೂರ್ತಿ ಕಲ್ಪನೆಯ ಬದಲು ತ್ರಿವಿಧ ಹಾಗೂ
ನೇತ್ಯಾತ್ಮಕವಾದ ಪಂಚಪಾತಕದ ಬದಲು ಇತ್ಯಾತ್ಮಕವಾದ ಪಂಚಾಚಾರಗಳು, ದಾನದ ಬದಲು ದಾಸೋಹ ಮುಂತಾಗಿ ವೈದಿಕದ
ಕೆಲವು ಪರಿಕಲ್ಪನೆಗಳಿಗೆ ಪರ್ಯಾಯವನ್ನು ಸೂಚಿಸಿದ್ದರಿಂದ ಮುಂದೆ ಅದರಲ್ಲಿ ವೈದಿಕತ್ವದ ಅಂಶಗಳು ಸುಲಭವಾಗಿ
ನುಸುಳುವಂತಾಯಿತು.
'ಚತುರ್ವರ್ಣಾತೀತನೇ ವೀರಶೈವ ನೋಡಾ' ಎಂದು ಸಿದ್ಧರಾಮ ಹೇಳಿದರೂ
ಬಸವಾದಿಗಳ ಕಾಲದಲ್ಲಿಯೇ ಲಿಂಗಾಯತರಲ್ಲಿಯೂ ಜಾತಿತಾರತಮ್ಯಗಳು ಅಸ್ತಿತ್ವದಲ್ಲಿದ್ದುದು ವಚನಗಳಿಂದಲೇ
ತಿಳಿಯುತ್ತದೆ. ಪಂಚಾಚಾರಗಳಲ್ಲಿ ಒಂದಾದ ಶಿವಾಚಾರದ ಕಲ್ಪನೆಯೇ ಶಿವಭಕ್ತರಲ್ಲಿ ತಾರತಮ್ಯವನ್ನು ಮಾಡದಿರುವುದನ್ನು
ನಿಯಮಿಸುತ್ತದೆ. ಆದರೂ 'ಜಂಗಮದಲ್ಲಿ ಜಾತಿಯನ್ನರಸುವಾತನೇ ಗುರುದ್ರೋಹಿ' 'ಜಂಗಮದಲ್ಲಿ ಕುಲವುಂಟೆ'
ಮುಂತಾದ ಮಾತುಗಳು ಬಸವಾದಿಗಳ ಸಮ್ಮುಖದಲ್ಲಿಯೇ ಭಕ್ತರ ನಡುವೆ ಜಾತಿತಾರತಮ್ಮವಿದ್ದುದನ್ನು ಪುಷ್ಟೀಕರಿಸುತ್ತವೆ.
ಅಲ್ಲದೆ ವಚನಕಾರರಲ್ಲಿ ಕೆಲವರು ಜಾತಿಗಳನ್ನೇ ನಿರಾಕರಿಸದೆ ಅದಕ್ಕೆ ಹೊಸ ಬಗೆಯ ವ್ಯಾಖ್ಯಾನಗಳನ್ನು
ನೀಡಿ ಒಂದರ್ಥದಲ್ಲಿ ಜಾತಿ ಎಂಬ ಪರಿಕಲ್ಪನೆಯನ್ನು ಉಳಿಸಿಕೊಂಡರು. ಜೊತೆಗೆ ಲಿಂಗಾಯತವು ಕಶಕ್ತಿವಿಶಿಷ್ಟಾ್ವತಕಿವನ್ನು
ತನ್ನ ತಾತ್ವಿಕ ನೆಲೆಯನ್ನಾಗಿಸಿಕೊಂಡು, 'ಐಕ್ಯ'ದ ಮೂಲಕ ಮೋಕ್ಷವನ್ನು ಜೀವದ ಪರಮಗಂತವ್ಯವೆಂದು ಅನುಮೋದಿಸಿ,
ಆವರೆಗಿದ್ದ ವೈದಿಕದ ಅ್ವತ, ವಿಶಿಷ್ಟಾದ್ವೈತಗಳೊಡನೆ ಇದೂ ಒಂದು ಪ್ರಭೇದವಾದ ತಾತ್ವಕತೆಯೆನಿಸಿತು.
ಹದಿನೈದನೆಯ ಶತಮಾನದ ಹೊತ್ತಿಗೆ ಚಳವಳಿಯ ವೈದಿಕವಿರೋಧಿ ನಿಲವು ಸಂಪೂರ್ಣವಾಗಿ ಮಾಯವಾಗಿ, ವಿಜಯನಗರದ
ಕಾಲದಲ್ಲಿ ಹರಿದಾಸ ಚಳವಳಿಯ ಜೊತೆಜೊತೆಗೇ ಎರಡನೆಯ ವಚನ ರಚನೆಯ ಘಟ್ಟ ನಡೆದು, ಪೂರ್ತಿ ದೇವಾಲಯಸಂಸ್ಕೃತಿಗೆ
ಮರಳುವಂತಾಯಿತು. ವೈದಿಕಕ್ಕೆ ವಿರುದ್ಧವಲ್ಲದ ಪುರಾಣೀಕರಣ ಪ್ರಕ್ರಿಯೆಯೂ ನಡೆಯಿತು. ಹರಿಹರನ ಕಾಲದಲ್ಲಿ
ಪ್ರಾರಂಭವಾಗಿದ್ದ ಕಾವ್ಯ ಸಂಪ್ರದಾಯದ ಪ್ರಕಾರ ಶರಣರ ಹುಟ್ಟು ಕೈಲಾಸದಲ್ಲಿ ನಿರ್ಧರಿತವಾಗಿ, ಒಂದು
ರೀತಿ ಜನ್ಮಾಂತರದ ಕಲ್ಪನೆಯೂ ಮುಂದುವರಿಯಿತು. ವಿದ್ವಾಂಸರ ಅಭಿಪ್ರಾಯದಲ್ಲಿ ಹಿಂದಿದ್ದ ಬಹುಸಂಖ್ಯೆಯ
ಕಾಳಾಮುಖ ಮಠಗಳು ಲಿಂಗಾಯತ ಮಠಗಳಾದುವು. ಮತ್ತು ಈ ಮಠೀಕರಣದಿಂದಾಗಿ ಲಿಂಗಾಯತದ ಸಂಸ್ಥೀಕರಣ ಸಾಧ್ಯವಾಯಿತು;
ಎರಡನೆಯ ಘಟ್ಟದ ವಚನಕಾರರೆಲ್ಲ ಮಠಾಧಿಪತಿಗಳೇ ಎಂಬುದನ್ನು ಗಮನಿಸಬೇಕು.
ವಚನ ಚಳವಳಿಯು
ಮೂಲತಃ ವೈದಿಕವಿರೋಧೀ ನಿಲವು, ಅದರಲ್ಲೂ ಜಾತಿ ವಿರೋಧದ ನಿಲವು ತಾಳಿದ್ದುದು ಸ್ಪಷ್ಟವಾಗಿದೆ. ಆದರೆ
ಈ ಪ್ರಯತ್ನದ ಮಿತಿಯನ್ನೂ ನಾವರಿಯಬೇಕು. ಈ ಚಳವಳಿ ವೈದಿಕ ವ್ಯವಸ್ಥೆಗೆ ವಿರುದ್ಧವಾದುದಲ್ಲ ಎಂಬುದು
ಹೇಗೆ ಮೊಂಡು ವಾದವೋ, ಹಾಗೆಯೇ ವಚನಕಾರರ ನಿಲವು ಈ ಕಾಲದ ಆಧುನಿಕ ಮನೋಭಾವದ್ದು ಎನ್ನುವುದೂ ಅಷ್ಟೇ
ಸೀಮಿತ ತಿಳಿವಳಿಕೆಯಾಗುತ್ತದೆ. ವಚನಕಾರರು ವೈದಿಕದ ವಿರೋಧಿಗಳಾಗಿ ಅಲ್ಲಿನ ಅಸಮಾನತೆಗೆ ಕಾರಣವಾದ ಅಂಶಗಳನ್ನು
ಅಲ್ಲಗಳೆದು ಸಮಾನತೆಯ ನೆಲಗಟ್ಟಿನ ಹೊಸ ಸಮಾಜವೊಂದರ ನಿರ್ಮಾಣಕ್ಕೆ ಹೆಣಗಿದರೆಂಬುದು ನಿಜ. ಆದರೆ ಆ
ಪ್ರಯತ್ನ ತಮ್ಮ ನಂಬಿಕೆಯ ವ್ಯಾಪ್ತಿಗೆ ಬಂದವರನ್ನು ತಿದ್ದುವುದಕ್ಕೆ ಸೀಮಿತವಾಗಿತ್ತೇ ಹೊರತು ವ್ಯಾಪಕ
ಸಮಾಜ ಸುಧಾರಣೆಯ ಸ್ವರೂಪದ್ದಲ್ಲ ಎಂಬುದನ್ನು ಗಮನಿಸಬೇಕು. "ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನೊಂದೆ ಎಂಬೆ; ಹಾರುವ ಮೊದಲು ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂದೆ ಎಂಬೆ"
ಎಂಬ ವಚನದಲ್ಲಿ ಬಸವಣ್ಣನು ಜಾತಿಗಣನೆಯಿಲ್ಲದೆ ಶಿವಭಕ್ತರನ್ನು ಸಮಾನವಾಗಿ ಗೌರವಿಸುವ ಮತ್ತು ಭವಿಯಾದವರನ್ನು
ಅಲಕ್ಷಿಸುವ ಮನೋಭಾವನನ್ನು ತೋರ್ಪಡಿಸುತ್ತಾನೆ. ಹೀಗೆ ಮನುಷ್ಯಸಂಕುಲವನ್ನು ವಚನಕಾರರು ಭಕ್ತ-ಭವಿ ಎಂದು
ವಿಭಜಿಸಿದರು. ಚೆನ್ನಬಸವಣ್ಣನ "ವಾರವೇಳು ಕುಲ ಹದಿನೆಂಟು ಎಂಬರಯ್ಯಾ, ಅದ ನಾವು ಅಲ್ಲವೆಂಬೆವು;
ಹಗಲೊಂದು ವಾರ ಇರುಳೊಂದು ವಾರ, ಭಕ್ತನೊಂದು ಕುಲ ಭವಿಯೊಂದು ಕುಲ, ಇದು ನಾವು ಬಲ್ಲುದು ಕಾಣಾ ಕೂಡಲಚೆನ್ನಸಂಗಮದೇವಾ" ಎಂಬ ವಚನದಲ್ಲಿ ಈ ಮನೋಭಾವ ಮತ್ತಷ್ಟು ಸ್ಪಷ್ಟವಾಗಿದೆ. ಅಂದರೆ
ವಚನ ಚಳವಳಿಯ ಸುಧಾರಣೆ ಭಕ್ತ ವಲಯಕ್ಕೆ ಸೀಮಿತವಾಯಿತು, ಅದರ ಹೊರತಾದುದರ ಬಗ್ಗೆ ಅದರ ಗಮನವಿರಲಿಲ್ಲ.
ವೈದಿಕ ತಾರತಮ್ಯಕ್ಕೆ ಕಾರಣವಾದ ವರ್ಣವ್ಯವಸ್ಥೆಯು ಬಹುಹಿಂದೆಯೇ
ಜಾತಿವ್ಯವಸ್ಥೆಯಾಗಿ ಮಾರ್ಪಟ್ಟಿತ್ತು. ವೈದಿಕವನ್ನು ನಿರಾಕರಿಸುವ ಬಸವಾದಿಗಳು ಖಕಾಸಿ ಕಮ್ಮಾರನಾದ,
ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ; ಕರ್ಣದಲ್ಲಿ ಜನಿಸಿದವರುಂಟೇ ಜಗದೊಳಗೆ?ಖ
ಎಂಬಂತಹ ಮಾತುಗಳಿಂದ ಜಾತಿವ್ಯವಸ್ಥೆಯ ಕಾರಣ ವೃತ್ತಿ ಎಂಬುದನ್ನು ಗಮನಿಸಿದರು. ವೃತ್ತಿಯನ್ನು ಕಾಯಕವೆಂಬಂತೆ
ಪರಿಗಣಿಸಿ ಅದಕ್ಕೊಂದು ಧಾರ್ಮಿಕ ಮಹತ್ವವನ್ನು ಕಲ್ಪಿಸಿದರೂ, ಯಾವ ಜಾತಿಯವನು ಯಾವುದೇ ವೃತ್ತಿಯನ್ನು
ಅನುಸರಿಸಬಹುದೆಂಬ ಸ್ವಾತಂತ್ರ್ಯವನ್ನು ಪ್ರತಿಪಾದಿಸಲಿಲ್ಲ. ಈ ಸ್ವಾತಂತ್ರ್ಯವಿದ್ದುದಾದರೆ ಕೆಲವು
ಪೀಳಿಗೆಗಳ ನಂತರ ವೃತ್ತಿ-ಜಾತಿ ಸಮೀಕರಣ ಹೋಗಬಹುದಿತ್ತೇನೋ. ವೃತ್ತಿಯ ಪವಿತ್ರೀಕರಣದಿಂದಾಗಿ ಕುಲಾನುಗ
ವೃತ್ತಿಗಳನ್ನು ಅನುಸರಿಸುತ್ತಿದ್ದವರು ತಮ್ಮ ವೃತ್ತಿಯೂ ಕೀಳಲ್ಲ ಎಂಬ ತೃಪ್ತ ಮನೋಭಾವದಿಂದ ಅದೇ ವೃತ್ತಿಯಲ್ಲಿ
ಮುಂದುವರಿಯುವಂತಾಗಿ, ಮುಂದೆ ವೈದಿಕದ ನೆರಳು ದಟ್ಟವಾದಂತೆಲ್ಲ ವೃತ್ತಿ-ಜಾತಿ ಸಮೀಕರಣ ಗಟ್ಟಿಯಾಯಿತು.
ಇನ್ನು, ಲಿಂಗತಾರತಮ್ಯದ ಬಗ್ಗೆ. ವಚನಕಾರರು ಹೆಣ್ಣಿಗೆ ಗೌರವದ
ಸ್ಥಾನ ನೀಡಿದರು. "ಮೊಲೆಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು; ನಡುವೆ
ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ ಕಾಣ ರಾಮನಾಥ" ಎಂಬಂತಹ ಮಾತುಗಳು ಹನ್ನೆರಡನೆಯ ಶತಮಾಣದಲ್ಲಿ
ವ್ಯಾಪಕವಾಗಿ ಅನುರಣಿಸಿತು. ಖಒಡಲು ಬೇರುಳ್ಳನ್ನಕ್ಕ ಬೇರೊಂದು ಒಡೆಯರ ಕಟ್ಟಣೆ ಬೇಕುಖ ಎಂಬಂತಹ ಮಾತುಗಳಲ್ಲಿ
ಹೆಣ್ಣಿನ ಸ್ವತಂತ್ರ ವ್ಯಕ್ತಿತ್ವದ ಪರಿಕಲ್ಪನೆ ಇಣುಕಿದ್ದರೂ, "ಪರಮ ಪತಿವ್ರತೆಗೆ ಗಂಡನೊಬ್ಬ",
"ಪರಪುರುಷರ ಮುಖವ ನೋಡದಂತೆ ಮಾಡಾ, ಬಳಿಕ ನೀನೆಹಗೆಯಿರಿಸಿದಂತೆ ಇರಿಸಾ" ಎಂಬಂತಹ ಮಾತುಗಳಲ್ಲಿ
ವೈದಿಕದ ಪಾತ್ರವ್ರತ್ಯಕ್ಕೇ ಪ್ರಾಧಾನ್ಯವಿತ್ತುದನ್ನು ಕಾಣಬಹುದು. ವಚನಕಾರ್ತಿಯರ ವಚನಗಳಲ್ಲಿ ಸಮೃದ್ಧವಾಗಿ
ಆಧ್ಯಾತ್ಮಿಕ ವಿಚಾರಗಳು, ಅನುಭವಗಳು ಸುಳಿದಾಡುತ್ತವೆ; ಆದರೆ ಯಾವೊಬ್ಬ ವಚನಕಾರ್ತಿಯ ಒಂದೇ ಒಂದು ವಚನದಲ್ಲಿಯೂ
ಸಾಮಾಜಿಕ ಸಮಾನತೆಯ ಬಗ್ಗೆ ಮಾತಿಲ್ಲ. ಇದಕ್ಕೂ ವೈದಿಕ ಪ್ರಭಾವವೇ ಕಾರಣವೆನಿಸುತ್ತದೆ.
ಹೀಗಾಗಿ ಮೂಲದಲ್ಲಿ ವೈದಿಕವಿರೋಧಿ
ನೆಲೆಯಲ್ಲಿ ಆರಂಭಗೊಂಡ ವಚನ ಚಳವಳಿ ಜೈನ-ಬೌದ್ಧಗಳಂತೆ ನಿರೀಶ್ವರವಾದವನ್ನು ಸ್ವೀಕರಿಸದೆ, ಜೊತೆಗೆ
ಶಿವನನ್ನೇ ಪರಮವವೆಂದು ಸ್ವೀಕರಿಸಿ ವೈದಿಕಕ್ಕೆ ಬಹು ಹತ್ತಿರವಾಗಿ ಬರಬರುತ್ತ ಅನಿವಾರ್ಯವಾಗಿ ಅದರ
ಎಲ್ಲ ಆಯಾಮಗಳನ್ನೂ ತನ್ನಲ್ಲಿ ಅಳವಡಿಸಿಕೊಳ್ಳುವಂತಾಯಿತು. ಪ್ರಾಯಶಃ ಇದು ಅದರ ಅಸ್ತಿತ್ವಕ್ಕೆ ಅನಿವಾರ್ಯವಾಗಿದ್ದಿರಬಹುದು.
ಮೂಲ ಆಶಯದಲ್ಲಿ ವೈದಿಕೇತರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಈ ಚಳವಳಿಯು ಮೇಲೆ ಹೇಳಿದ ಕಾರಣಗಳಿಂದಾಗಿ
ಬರಬರುತ್ತ ವೈದಿಕದಲ್ಲೇ ಒಂದು ಜಾತಿ ಎಂಬಂತಾಗಿಬಿಟ್ಟಿತು. ಹೊರನೋಟಕ್ಕೆ ವೈದಿಕಾನುಯಾಯಿಗಳಿಗೂ ಲಿಂಗಾಯತರಿಗೂ
ಯಾವ ವ್ಯತ್ಯಾಸವೂ ಕಾಣಿಸುವುದೇ ಇಲ್ಲ. ಮೂಲದಲ್ಲಿ ಅವೈದಿಕವಾದರೂ ಅದರ ಎಲ್ಲ ವಿವರಗಳನ್ನು ಅಳವಡಿಸಿಕೊಂಡಿದ್ದರಿಂದಾಗಿ
ಸುಪ್ರಸಿದ್ಧ ಲಿಂಗಾಯತ ವಿದ್ವಾಂಸರೂ, ಕೆಲವು ಲಿಂಗಾಯತ ಮಠಾಧಿಪತಿಗಳೂ ಲಿಂಗಾಯತರೂ ಹಿಂದೂಗಳು (ವೈದಿಕರು?)
ಎಂದು ವಾದಿಸುವ ಹಾಗಾಗಿದೆ. ಸುಧಾರಣೆಯ ಕಾರ್ಯವು ಧಾರ್ಮಿಕ ಪರಿವಲಯದಲ್ಲಿ ನಡೆದಾಗ ಅದಕ್ಕೆ ತಮಗೆ ತಾವೇ
ಮಿತಿಗಳು ಪ್ರಾಪ್ತವಾಗಿಬಿಡುತ್ತವೆ; ಮತ್ತು ಬಹು ಬೇಗ ವ್ಯವಸ್ಥೆಯ ಭಾಗವಾಗಿಬಿಡುತ್ತದೆ. ಅದಕ್ಕೆ ವಚನ
ಚಳವಳಿಯೊಂದು ನಿದರ್ಶನ ಮಾತ್ರ.
No comments:
Post a Comment