Friday 19 June 2015

ರುದ್ರಭಟ್ಟ ಮತ್ತು 'ಜಗನ್ನಾಥ ವಿಜಯ'

ರುದ್ರಭಟ್ಟ ಹಾಗೂ ‘ಜಗನ್ನಾಥ ವಿಜಯ’
      ಕನ್ನಡದ ಚಂಪೂ ಪರಂಪರೆಯಲ್ಲಿ ರುದ್ರಭಟ್ಟ ಅಥವಾ ರುದ್ರ ಎಂಬ ಹೆಸರಿನ ಕವಿಯಿಂದ ರಚಿತವಾದ ‘ಜಗನ್ನಾಥ ವಿಜಯ’ವು ಒಂದು ಗಮನಾರ್ಹ ಕೃತಿ. ಈತನು ಹದಿನೆಂಟು ಆಶ್ವಾಸಗಳ ದೀರ್ಘ ಕಾವ್ಯವನ್ನು ರಚಿಸಿದ್ದರೂ, ಅಲ್ಲೆಲ್ಲಿಯೂ ತನ್ನ ಕಾಲದ ಬಗ್ಗೆಯಾಗಲೀ ಸ್ವಂತ ಜೀವನವಿವರಗಳನ್ನಾಗಲೀ ಕೊಟ್ಟಿಲ್ಲ. ಬೇರೆ ಆಧಾರಗಳಿಂದ ಇವನ ಕಾಲವನ್ನು ವಿದ್ವಾಂಸರು ಊಹಿಸುತ್ತಾರೆ. ರುದ್ರಭಟ್ಟನು ತನ್ನ ಕಾವ್ಯದಲ್ಲಿ ಕರಣಪಾರ್ಯನನ್ನು ಹೊಗಳಿರುವುದರಿಂದ, ಆತನ ಕಾಲವಾದ ಕ್ರಿಶ 1145 ರಿಂದ ಈಚೆಗೆ ಇವನು ಜೀವಿಸಿದ್ದುದು ಸ್ಪಷ್ಟವಾಗುತ್ತದೆ; ಹಾಗೆಯೇ ಕ್ರಿಶ ಸುಮಾರು 1200ರ ಹೊತ್ತಿಗೆ ಬದುಕಿದ್ದ ದೇವಕವಿಯು ತನ್ನ ‘ಕುಸುಮಾವಳಿ’ ಎಂಬ ಕಾವ್ಯದಲ್ಲಿ ರುದ್ರಭಟ್ಟನನ್ನು ಸ್ತುತಿಸಿರುವುದರಿಂದ ಇವನು ಆ ಕಾಲಕ್ಕೆ ಹಿಂದೆ ಬದುಕಿದ್ದಿರಬೇಕು. ಎಂದರೆ ರುದ್ರಭಟ್ಟನು ಕ್ರಿಶ 1145-1200 ರ ನಡುವೆ ಇದ್ದಿರಬೇಕು. ಈ ಕಾವ್ಯದಲ್ಲಿ ದೊರೆಯುವ ಆಂತರಿಕ ಪ್ರಮಾಣಗಳಿಂದ ಇವನ ಕಾಲವನ್ನು ಮತ್ತಷ್ಟು ಖಚಿತವಾಗಿ ನಿರ್ಧರಿಸಲು ಸಾಧ್ಯವಿದೆ. “ಚಂದ್ರಮೌಳಿ ಪ್ರಮುಖ ನಿಖಿಲ ವಿದ್ವಜ್ಜನಂ ಮೆಚ್ಚೆ ರುದ್ರಾಂಕನೆ ಪೇೞ್ದಂ; ದೇವಚೂಡಾಮಣಿ ಮಣಿಮುಕುರಂ ವಿಷ್ಣು ಕೈಕೊಳ್ವೆನ್” ಎಂದು ಹೇಳುವಲ್ಲಿ ಚಂದ್ರಮೌಳಿ ಎಂಬ ವಿದ್ವಾಂಸನು ತನ್ನ ಕಾವ್ಯವನ್ನು ಮೆಚ್ಚಿದಂತೆ ತಿಳಿಸಿದ್ದಾನೆ. ಶ್ರವಣಬೆಳ್ಗೊಳದ ಶಾಸನದಲ್ಲಿ ಹೊಯ್ಸಳ ವೀರಬಲ್ಲಾಳನ ಮಂತ್ರಿಯೂ ಶ್ರೇಷ್ಠ ವಿದ್ವಾಂಸನೂ ಆದ ಚಂದ್ರಮೌಳಿಯೆಂಬುವವನ ಉಲ್ಲೇಖವಿದೆ. ರುದ್ರಭಟ್ಟನು ವೀರಬಲ್ಲಾಳನ ಕಾಲದಲ್ಲಿ ಜೀವಿಸಿದ್ದನೆನ್ನಲು ‘ಜಗನ್ನಾಥ ವಿಜಯ’ದ ಮೊದಲನೆಯ ಆಶ್ವಾಸದ ಮೂರನೆಯ ಪದ್ಯದಲ್ಲಿನ ಶ್ಲೇಷಯುಕ್ತವಾದ ಈಶ್ವರನ ಸ್ತುತಿಯು ಸಹಾಯಕವಾಗಿದೆ. ಈ ಪದ್ಯದಲ್ಲಿ ಬರುವ ‘ಅರಿಕಾಮಧ್ವಂಸಿ’, ‘ರಾಜರಾಜಪ್ರತಿಷ್ಠ’, ‘ಉಮಾಕಾಮಿನೀಜೀವಿತೇಶ’ ಮುಂತಾದ ವಿಶೇಷಣಗಳು ವೀರಬಲ್ಲಾಳನಿಗೂ ಅನ್ವಯಿಸುವ ಮಾತುಗಳಾಗಿವೆ. ಈ ಎಲ್ಲ ಕಾರಣಗಳಿ<ದ ರುದ್ರಭಟ್ಟನ ಕಾಲವು ಕ್ರಿಶ 1185 ರ ಸುಮಾರಿನದು ಎಂದು ವಿದ್ವಾಂಸರು ತೀರ್ಮಾನಿಸುತ್ತಾರೆ. ರುದ್ರಭಟ್ಟ್ನು ‘ರಸಕಲಿಕೆ’ ಎಂಬ ಲಕ್ಷಣಗ್ರಂಥವನ್ನೂ ಬರೆದಿದ್ದಾನೆ. ಆದರೆ ಅದರಲ್ಲಿ ಕವಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ, ‘ಜಗನ್ನಾಥವಿಜಯ’ದಿಂದಲೇ ಆತನ ವೈಶಿಷ್ಟ್ಯಗಳನ್ನು ಗುರುತಿಸಬೇಕು.
ಚಂಪೂ ಪ್ರಕಾರಕ್ಕೂ ಜೈನಕವಿಗಳಿಗೂ ಅವಿನಾ ಸಂಬಂಧ. ರುದ್ರಭಟ್ಟನಿಗಿಂತ ಮುಂಚೆ ಮೊದಲನೆಯ ನಾಗವರ್ಮ, ದುರ್ಗಸಿಂಹ ಮುಂತಾದ ಬ್ರಾಹ್ಮಣ ಕವಿಗಳಿದ್ದರೂ ಅವರು ಸಂಸ್ಕೃತ ಕಾವ್ಯಗಳನ್ನು ಕನ್ನಡದಲ್ಲಿ ಚಂಪೂ ರೂಪದಲ್ಲಿ ಅನುವಾದಿಸಿದವರು; ಅಥವಾ ಚಂದ್ರರಾಜ, ಚಾವುಂಡರಾಯರಂತೆ ಶಾಸ್ತ್ರಗ್ರಂಥಗಳನ್ನು ರಚಿಸಿದವರು. ಹೀಗಾಗಿ ಸ್ವತಂತ್ರವೂ ದೀರ್ಘವೂ ಆದ ಕನ್ನಡ ಚಂಪೂ ಕಾವ್ಯವನ್ನು ಬರೆದ ಬ್ರಾಹ್ಮಣ ಕವಿಗಳಲ್ಲಿ ರುದ್ರಭಟ್ಟನು ಮೊದಲನೆಯವನೂ ಆಗಿದ್ದಾನೆ, ಗಣ್ಯನೂ ಆಗಿದ್ದಾನೆ. ಕಾವ್ಯಪ್ರಾರಂಭದಲ್ಲಿ ಈತನು ಶಾಂತಿವರ್ಮ, ಗುಣವರ್ಮ, ಪಂಪ, ಪೊನ್ನ ಮುಂತಾದ ಜೈನ ಚಂಪೂಕವಿಗಳನ್ನು ಹೊಗಳಿದ್ದಾನೆ; ಅಂತೆಯೇ, ‘ವಿಕ್ರಮಾರ್ಜುನ ವಿಜಯ’, ‘ಸಾಹಸಭೀಮ ವಿಜಯ’ ಎಂದು ಪಂಪರನ್ನರು ತಮ್ಮ ಕಾವ್ಯಶೀರ್ಷಿಕೆಗಳನ್ನು ನೀಡಿದಂತೆಯೇ ರುದ್ರಭಟ್ಟನು ತನ್ನ ಕಾವ್ಯವನ್ನು ‘ಜಗನ್ನಾಥವಿಜಯ’ವೆಂದು ಕರೆದಿದ್ದಾನೆ. ಹೀಗೆ ಆ ಕವಿಗಳ ಮಾರ್ಗದಲ್ಲಿ ತಾನು ಹೋಗುತ್ತಿರುವ ಅರಿವು ಆತನಿಗಿದೆ. ಇಷ್ಟಾದರೂ ಅವನು ಪಂಪರನ್ನರಂತೆ ತನ್ನ ಕಾವ್ಯದಲ್ಲಿ ರಾಜಕೀಯಶ್ಲೇಷೆಯನ್ನು ತಂದಿಲ್ಲ. ಕಾವ್ಯದ ಮೊದಲ ಐದು ಪದ್ಯಗಳಲಲ್ಲಿ ದೇವತಾಸ್ತುತಿ-ರಾಜಪ್ರಶಂಸೆಗಳೆರಡೂ ಸೇರಿದೆಯೇ ಹೊರತು ಕಾವ್ಯದ ಒಡಲೆಲ್ಲ ಕಾವ್ಯನಾಯಕನಾದ ಕೃಷ್ಣನ ಕತೆಗೇ ಮೀಸಲು.
ಕನ್ನಡದಲ್ಲಿ ಕೃಷ್ಣಕತೆಯ ಪರಂಪರೆಗೂ ರುದ್ರಭಟ್ಟನೇ ಹಾದಿ ತೋರಿದ್ದಾನೆ. ಮುಂದೆ ಚಾಟುವಿಠ್ಠಲನಾಥ, ಕನಕದಾಸರು ಭಾಗವತವನ್ನಾಧರಿಸಿದ ಕೃಷ್ಣಚರಿತೆಯನ್ನು ಬರೆದರು; ಚಿಕುಪಾಧ್ಯಾಯನು ವಿಷ್ಣುಪುರಾಣವನ್ನು ಬರೆದನು. ಇವರಿಗೆಲ್ಲ ರುದ್ರಭಟ್ಟ ಒಂದು ರೀತಿಯಲ್ಲಿ ಮಾರ್ಗಪ್ರವರ್ತಕ. ಈತನು ತನ್ನ ಕಾವ್ಯದ ಬಗ್ಗೆ, ಎಲ್ಲ ಕವಿಗಳೂ ತೋರ್ಪಡಿಸುವಂತೆ, ವಿನಯವನ್ನು ಪ್ರಕಟಿಸುತ್ತಾನೆ, ಹೆಗ್ಗಳಿಕೆಯನ್ನೂ ಹೇಳಿಕೊಳ್ಳುತ್ತಾನೆ. “ರಸಿಕರಿನ್ ಎಯ್ದೆ ಇರ್ದಿದೊಡಲ್ಲದೆ ನಿಲ್ಲದು ಚಿತ್ತಂ; ಅಂತೆ ತಿರ್ದಿಸುವುದೆ ನಲ್‍ನಯಂ; ಬೆಳಗೆ ಕನ್ನಡಿ, ಸೋದಿಸೆ ಪೊನ್, ವಿರಾಜಿಪಂತೆಎಸೆದು ಬೞಿಕ್ಕೆ ಮತ್ಕೃತಿ ಚಮತ್ಕೃತಿಯಂ ಧರೆಗುಂಟುಮಾಡುಗುಂ” ಎನ್ನುವ ಕವಿಯು, “ರುದ್ರಭಟ್ಟನ ಕವಿತಾರಸಂ ಮನಮನಿರ್ಕುಳಿಗೊಳ್ವುದು ಸಜ್ಜನರ್ಕಳಾ” ಎಂದೂ ಹೇಳಿಕೊಳ್ಳುತ್ತಾನೆ.
‘ಜಗನ್ನಾಥವಿಜಯ’ವು ವಿಷ್ಣುಪುರಾಣದ ಐದು-ಆರನೆಯ ಅಂಶಗಳಲ್ಲಿರುವ ಕೃಷ್ಣಕತೆಯನ್ನು ಅವಲಂಬಿಸಿ ಬರೆದ ಪ್ರೌಢಕಾವ್ಯ. ಆದರೆ ಭಾಗವತ, ಮಹಾಭಾರತಗಳಲ್ಲಿನ ಕೃಷ್ಣಪಾತ್ರದ ಪ್ರಭಾವವೂ ಈ ಕಾವ್ಯದ ಮೇಲಾಗಿದೆ. ಕೃಷ್ಣಜನನದಿಂದ ಆರಂಭವಾಗುವ ಈ ಕಾವ್ಯವು ಸಾಲ್ವವಧೆಯವರೆಗೂ ಹದಿನೆಂಟು ಆಶ‍್ವಾಸಗಳಲ್ಲಿ ಸಾಗುತ್ತದೆ. ಏಕೋತ್ತರಶತಕೃತ್ಯಗಳ ಮೂಲಕ ವ್ಯಕ್ತವಾಗುವ ಕೃಷ್ಣನ ಅಲೌಕಿಕತೆಯನ್ನು ಚಿತ್ರಿಸಿ ಕೃಷ್ಣಭಕ್ತಿಯನ್ನು ಮೆರೆಯುವುದು ಈ ಕಾವ್ಯದ ಒಂದು ಮುಖವಾದರೆ, ವಿಷ್ಣುತತ್ವದ ಮೂಲಕ ತ್ರಿಮೂರ್ತ್ಯಾತ್ಮಕ ಪರತತ್ವದ ಪ್ರತಿಪಾದನೆ ಮಾಡುವುದು ಇನ್ನೊಂದು ಮುಖ. “ಕಾವ್ಯಸಮಾಧಿಯಿಂ ಪರಂಜ್ಯೋತಿ ಮುಕುಂದನನ್ ಎನ್ನ ಬಗೆಯೊಳ್ ನಿಲೆ ನಿರ್ಮಳತತ್ವಬೋಧಮ್ ಉದ್ಯೋತಿಪುದು ಎಂಬುದಂ ಬಯಸೆ ಪೇೞ್ ಒಡರ್ಚಿದೆನ್ ಈ ಪ್ರಬಂಧಮಂ” ಎಂದು ಕವಿಯೇ ಹೇಳಿಕೊಂಡಿದ್ದಾನೆ. ಹಾಗೆಯೇ “ಜಗಮಂ ನುಂಗುವ ಶೂಲಿ ನೀನೆ, ಜಗಮಂ ಮಾೞ್ಪ ಅಬ್ಜಜಂ ನೀನೆ; ತಜ್ಜಗಮಂ ರಕ್ಷಿಪ ವಿಷ್ಣು ನೀನೆ, ಜಗಮುಂ ಪೋ ನೀನೆ; ಸರ್ವೇಶ, ಸರ್ವಗ, ಸರ್ವಾತ್ಮಕ, ಸರ್ವಭೂತಮಯ, ನಿನ್ನಿಂ ಭಿನ್ನಮಾಗಿರ್ಪ ವಸ್ತುಗಳಿಲ್ಲ” ಎಂದು ನಾರದನ ಬಾಯಲ್ಲಿ ತನ್ನ ನಂಬಿಕೆಯನ್ನು ಕವಿ ಉಚ್ಚರಿಸುತ್ತಾನೆ.
ಕೃಷ್ಣನು ವಿಷ್ಣುವಿನ ಅವತಾರ ತಾನೇ? ಅವತಾರದ ಉದ್ದೇಶ ಭೂಭಾರವನ್ನು ಇಳಿಸುವುದು.: “ಸುತನಪ್ಪೆಂ ದೇವಕಿಗೆ ಆಂ; ಕತಿಪಯ ದಿನಮ್ ಒಲ್ದು ರಮಿಯಿಪೆಂ ಗೋಕುಲದೊಳ್; ದಿತಿಸುತರಂ ಕಂಸಾದ್ಯರಂ ಅತಿಬಲರಂ ಕೊಲುವೆನ್, ಇಳಿಪುವೆಂ ಭೂಭಾರಮಂ” ಎಂದು ವಿಷ್ಣುವೇ ತನ್ನ ಅವತಾರದ ಉದ್ದೇಶವನ್ನು ಹೇಳಿಕೊಳ್ಳುತ್ತಾನೆ.. ನಮ್ಮ ಪುರಾಣಗಳಲ್ಲಿ ಬರುವ ಈ ಅವತಾರ, ರಾಕ್ಷಸಸಂಹಾರ ಇವುಗಳು ದೈವೀಶಕ್ತಿ-ಆಸುರೀಶಕ್ತಿಗಳ, ಎಂದರೆ ಒಳಿತು-ಕಡಕುಗಳ ಸಂಘರ್ಷದ ಪ್ರತಿಮೆಗಳು. ಪ್ರಕೃತಿ-ಪ್ರಕೃತಿವಿರೋಧೀ ಶಕ್ತಿಗಳ ಸಂಘರ್ಷವೂ ಇದಾಗಿದೆ. ಹೀಗೆ ಅವತಾರ ಮಾಡುವ ದೈವಶಕ್ತಿಯು ಮಾನುಷಲೋಕದಲ್ಲಿ ತನ್ನ ಅದ್ಭುತ ಕೃತ್ಯಗಳ ಮೂಲಕ ಭಕ್ತಿಪ್ರಚೋದಕವಾಗುವುದು; ಹಾಗೆಯೇ ಪ್ರತಿಪಾದನಾವೈಶಿಷ್ಟ್ಯದಿಂದ ದೈವೀಶಕ್ತಿಯು ಒಂದೇ, ಅದು ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳಬಹುದಷ್ಟೆ ಎಂಬ ತಾತ್ವಿಕತೆಯನ್ನು ಮನದಟ್ಟುಮಾಡಿಸುವುದು ಈ ಎರಡನ್ನೂ ರುದ್ರಭಟ್ಟ ತನ್ನ ಕಾವ್ಯದಲ್ಲಿ ಮೇಳೈಸಿದ್ದಾನೆ.
ವಿಷ್ಣುಪುರಾಣ-ಭಾಗವತಗಳ ಕೃಷ್ಣನಿಗೆ ಪ್ರಮುಖವಾಗಿ ಎರಡು ಮುಖಗಳಿವೆ: ಒಂದು, ಎಲ್ಲರನ್ನೂ ಆಕರ್ಷಿಸುವ ಮೋಹಕ ವ್ಯಕ್ತಿತ್ವ; ಎರಡು, ದುಷ್ಟರನ್ನು ಧ್ವಂಸಗೊಳಿಸುವ ಕಾಠಿನ್ಯಪೂರಿತ ವ್ಯಕ್ತಿತ್ವ. ಮೊದಲನೆಯದು, ತನ್ನ ಲಾಲಿತ್ಯ-ಕೋಮಲತೆಗಳಿಂದ ಎಲ್ಲರೆನ್ನೂ ಮನಸೆಳೆದರೆ, ಇನ್ನೊಂದು ತನ್ನ ಭಯಂಕರತೆಯಿಂದ ಜನರನ್ನು ದುಷ್ಟದೂರರನ್ನಾಗಿ ಮಾಡುವುದು. ಒಂದು ಕುಸುಮಕೋಮಲ, ಮತ್ತೊಂದು ವಜ್ರಕಠಿಣ. ಈ ಕಾರಣದಿಂದಲೇ ಎಲ್ಲ ಪೌರಾಣಿಕ ಕಥಾನಕಗಳಂತೆ ‘ಜಗನ್ನಾಥವಿಜಯ’ವು ಕೃಷ್ಣನ ಈ ಇಮ್ಮುಖದ ವ್ಯಕ್ತಿತ್ವವನ್ನು ಅತಿಶಯೋಕ್ತಿ, ಅದ್ಭುತತೆಗಳ ಮೂಲಕ ಚಿತ್ರಿಸುತ್ತದೆ. ಇಲ್ಲಿಯ ವಿಶೇಷವೆಂದರೆ, ಈ ಎರಡೂ ಶಕ್ತಿಗಳು ಮೇಳೈಸಿರುವುದು ಬಾಲಕೃಷ್ಣನಲ್ಲಿ. ಮನದಲ್ಲಿ ಪ್ರೇಮಲ ಭಾವವುಳ್ಳವರಿಗೆ ಕೃಷ್ಣ ಮನಮೋಹಕ ಬಾಲಕ; ದುಷ್ಟಭಾವ ಹೊಂದಿದವರಿಗೆ ಅವನು ಮಾರಕ. ಇದು ಪ್ರಕೃತಿಯ ಸ್ವರೂಪವೂ ಹೌದು ತಾನೇ? ವಿನೀತರಾಗಿ ಹೋದವರಿಗೆ ಪ್ರಕೃತಿ ಎಲ್ಲ ಸೌಖ್ಯವನ್ನು ನೀಡುವ ಕೊಡುಗೈ ದಾನಿ; ಕತ್ತರಿಸ ಹೋಗುವ ಕೈಗಳಿಗೆ ವಿಷಸರ್ಪ.
ಭಕ್ತಿಯೆಂದರಾದರೂ ಏನು? ಪ್ರಾಯಶಃ ಅದು ಪ್ರಕೃತಿ-ಮಾನವರ ನಡುವಣ ವಿವಿಧ ನೆಲೆಗಳ ಸಂಬಂಧದ ಶೋಧನೆ. ಭಕ್ತಿ ಎಂಬ ಶಬ್ದ ‘ಭಜ್’ (ಎಂದರೆ ಭಾಗವಾಗು) ಎಂಬಂರ್ಥವನ್ನುಳ್ಳ ಧಾತುವಿನಿಂದ ಬಂದದ್ದು. ಪ್ರಾಯಶಃ ಭಕ್ತಿ ಎಂದರೆ ತಾನು ಯಾವುದರ ಭಾಗವೋ ಆ ‘ಇಡಿ’ಯನ್ನು ಕುರಿತು ಹೊಂದಿರುವ ತಾದಾತ್ಮ್ಯಭಾವ ಎಂದು ಅರ್ಥಮಾಡಬಹುದೇನೋ. ಹೀಗಾಗಿ, ಭಕ್ತಿ ಎಂಬುದು ತಾನೂ ಒಂದು ಭಾಗವಾಗಿ ಸೇರಿರುವ ಪ್ರಕೃತಿಯನ್ನು ಕುರಿತು, ತಮ್ಮಿಬ್ಬರ ನಡುವಣ ಸಂಬಂಧದ ಸ್ವರೂಪವನ್ನು ಕುರಿತು ನಡೆಸುವ ಶೋಧನೆಯ ಒಂದು ನೆಲೆ ಎಂಬರ್ಥವನ್ನು ಪಡೆದಿರುವಂತೆ ತೋರುತ್ತದೆ. ಪ್ರಕೃತಿಯ ಒಟ್ಟುತನವನ್ನೇ ದೇವರೆಂದು ಪರಿಭಾವಿಸಿದ್ದರಿಂದ ಜೀವ-ದೇವರ ಸಾಹಚರ್ಯಸ್ವರೂಪವಾದ ಭಾವನೆಯೇ ಭಕ್ತಿ ಎನ್ನಿಸಿಸಿತೇನೋ. ಈ ಪರಸ್ಪರ ಸೌಹಾರ್ದದ ಸಂಬಂಧವು ವಿವಿಧ ನೆಲೆಗಳಲ್ಲಿ ಪ್ರಕಟಗೊಳ್ಳುತ್ತದೆ. ಮನುಷ್ಯ-ಮನುಷ್ಯನ ನಡುವಣ ವಿವಿಧ ಬಗೆಯ ಸೌಹಾರ್ದಸಂಬಂಧಗಳಂತೆಯೇ ಭಕ್ತಿಯನ್ನೂ ಪರಿಭಾವಿಸಲಾಗಿದೆ. ನಮ್ಮ ಪರಂಪರೆಯಲ್ಲಿ ‘ನವವಿಧ ಭಕ್ತಿ’, ‘ದ್ವಾದಶ ಭಕ್ತಿ’ ಮುಂತಾದ ಕಲ್ಪನೆಗಳಿವೆಯಲ್ಲ, ಅವು ಮಾನವರ ನಡುವಣ ವಿವಿಧ ಬಗೆಯ ಬಾಂಧವ್ಯದ ಬಗೆಗಳೇ ಅಲ್ಲವೇ? ಇಂತಹ ಒಂದು ಸಂಬಂಧ ವಾತ್ಸಲ್ಯ. ‘ಜಗನ್ನಾಥ ವಿಜಯ’ವು ಕೃಷ್ಣನ ಬಗ್ಗೆ ವಾತ್ಸಲ್ಯಭಾವವುಕ್ಕಿಸಿ, ಆ ಕೃಷ್ಣ ಯಾವುದರ ಸಂಕೇತವಾಗಿದ್ದಾನೆಯೋ ಅಂತಹ ದೈವದಲ್ಲಿ ಭಕ್ತಿಯನ್ನುಂಟುಮಾಡುವ ಆಶಯವನ್ನು ಹೊಂದಿದೆ. ಈ ಪ್ರಯತ್ನವು ಅನೇಕ ಸಂದರ್ಭಗಳಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಕಂಡಿದೆ.
ಎಷ್ಟೋ ವೇಳೆ ಕೃಷ್ಣನ ಬಾಲಲೀಲೆಗಳನ್ನು ‘ಬಾಲಲೀಲೆ’ ಎನ್ನುವುದು ಕಷ್ಟ. ುದಾಹರಣೆಗೆ, ತುಂಟ ಕೃಷ್ಣನ ಸೊಂಟಕ್ಕೆ ಹಗ್ಗ ಬಿಗಿದು ಇನ್ನೊಂದು ತುದಿಯನ್ನು ಒರಳೊಂದಕ್ಕೆ ಕಟ್ಟಿ ಹೋಗುತ್ತಾಳೆ, ಯಶೋದೆ. ಅವನು ಒರಳನ್ನೆಳೆದುಕೊಂಡೇ ಮುಂದೆ ಹೋದಾಗ ಅದು ಎರಡು ಭಾರಿ ಮತ್ತಿಯ ಮರಗಳ ನಡುವೆ ಸಿಕ್ಕಿಹಾಕಿಕೊಳ್ಳುತ್ತದೆ. ಅವನು ಜೋರಾಗಿ ಎಳೆದಾಗ ಆ ಮರಗಳು ಬೇರುಸಹಿತ ಕಿತ್ತು ಬಿದ್ದುವಂತೆ! ಇನ್ನೊಂದನ್ನು ನೋಡಿ: ಕೃಷ್ಣನು ಮಣ್ಣು ತಿಂದನೆಂದು ಬಲರಾಮ ತಾಯಿಗೆ ದೂರು ಕೊಡುವ ಪ್ರಸಂಗ. ತಾಯಿ ಕೃಷ್ಣನನ್ನು ಕೇಳೂತ್ತಾಳೇ: “ಹರಿ ನೀಂ ಮಣ್ ತಿಂದೆ?” “ತಿನ್ನೆಂ ಜನನಿ, ಪುಸಿದನೆ ಎಮ್ಮಗ್ರಜಂ” “ತೋಱು ವಕ್ತ್ರಾಂತಮಂ” “ನೋಡು” ಎಂದು ಬಾಯನ್ನು ಆ ಎಂದು ತೆರೆದಾಗ ಅಲ್ಲಿ ಸಕಲ ಸೃಷ್ಟಿಯೇ ಕಂಡಿತಂತೆ! ಇಂತಹ ಕಡೆಗಳಲ್ಲಿ ಸಾಮಾನ್ಯ ಮಕ್ಕಳು ಮಾಡುವ ಚೇಷ್ಟೆಯ ಸ್ವರೂಪ ಕಂಡರೂ ಅಲ್ಲಿ ಅದ್ಭುತತೆ ಅಡಗಿದೆ. ಈ ಕತೆಗಳು ನಮಗೆ ಹೊಸವಲ್ಲ, ಯಾವುದಾದರೂ ಮಾಧ್ಯಮದ ಮೂಲಕ ಕೇಳೀರುತ್ತೇವೆ. ಆದರೆ ಭಕ್ತಿಯಿರುವುದರಿಂದ ಪದೇ ಪದೇ ಕೇಳಿದರೂ ಹಳತು ಎನಿಸುವುದಿಲ್ಲ. ಇಂಥ ಪ್ರಸಂಗಗಳು ಪ್ರಿಯವಾಗುವುದು ಕವಿಯ ವೊಇಶಿಷ್ಟ ನಿರೂಪಣೆಯಿಂದಲೋ, ಕೇಳುಗರಿಗೆ ಭಕ್ತಿಯಿರುವುದರಿಂದಲೋ! ನಮ್ಮ ಮಕ್ಕಳ ತುಂಟತನದ ವಾತ್ಸಲ್ಯಪೂರಿತ ನೆನಪೇ ಪ್ರಾಯಶಃ ಈ ಸಹಜ ಸನ್ನಿವೇಶಗಳು ನಮಗೆ ಪ್ರಿಯವಾಗುವಂತೆ ಮಾಡುವುದು ಎನಿಸುತ್ತದೆ.
ಮಕ್ಕಳನ್ನು ಮಲಗಿಸುವಾಗ ಎಲ್ಲ ತಾಯಂದಿರೂ ಮಾಡುವಂತೆ ಯಶೋದೆ ಕತೆ ಹೇಳುವ ಪ್ರಸಂಗದ ಬರ್ಣನೆಯಂತಹ ಕಡೆ ರುದ್ರಭಟ್ಟ ಚಮತ್ಕಾರವನ್ನೂ ಸೇರಿಸುತ್ತಾನೆ. ಅಲ್ಲದೆ ಚಿಕ್ಕ ಚಿಕ್ಕ ಸಂಭಾಷಣೆಗಳನ್ನು ಹೆಣೆಯುವುದರ ಮೂಲಕ ಈ ವೃತ್ತವನ್ನು ನಾಟಕೀಯ ಸನ್ನಿವೇಶವನ್ನಾಗಿಸುವ ಪರಿ ನೋಡಿ. ಹೇಳುತ್ತಿರುವುದು ಶ್ರೀರಾಮನ ಕತೆಯನ್ನು: ‘ಕತೆಯಂ ಕೇಳೆಲೆ ಕಂದ”, “‘ಹ್ಞೂ”, “ರಘುಜನೆಂಬಂ”, “‘ಹ್ಞೂ”, “ಸಕಾಂತಂ ವನಸ್ಥಿತನಾದಂ ಗುರು ಪೇೞೆ”, “‘ಹ್ಞೂ”, “ದಶಶಿರಂ ಕೊಂಡೊಯ್ದನ್ ಆ ರಾಮನಾ ಸತಿಯಂ ತಾನ್” ಎಂದು ಹೇಳಿದಾಗತನ್ನ ಹಿಂದಿನ ಜನ್ಮವನ್ನು ನೆನೆದ ಶ್ರೀಕೃಷ್ಣನು ರಾವಣನ ಹೆಸರು ಕೇಳಿದಾಗ ಕತೆಗೆ ಪ್ರತಿಕ್ರಿಯಿಸುವ ರೀತಿಯಲ್ಲಿ “‘ಹ್ಞೂ” ಎನ್ನದೆ “ಹ್ಞುಂ” ಎಂದು ಔಡುಗಚ್ಚಿ ಹೂಂಕರಿಸುತ್ತಾನಂತೆ!
ಕೃಷ್ಣನ ಬಗ್ಗೆ ವಾತ್ಸಲ್ಯಕ್ಕೂ ಮುಂದಿನ ಹೆಜ್ಜೆಯಾದ ಪ್ರೇಮಲಭಾವವನ್ನು ಉಂಟುಮಾಡುವುದು ಅವನು ಸ್ತ್ರೀಯರೊಡನೆ ನಡೆಸುವ ಚೇಷ್ಟೆ ಸಲ್ಲಾಪಗಳು. ಗೋಪಿಕೆಯರು ಕೃಷ್ಣನ ಕೊಳಲಗಾನದಿಂದ ಆಕರ್ಷಿತರಾಗುವ ಸನ್ನಿವೇಶ, ಕೊಳಲಿನ ಊದುವಿಕೆ, ಕೃಷ್ಣನ ನೃತ್ಯ, ಕೈಪರೆಯ ತಾಳಕ್ಕೆ ಕೃಷ್ಣನು ರಿಂಗಣಗುಣಿಯುವ ರೀತಿ ಇಲ್ಲೆಲ್ಲ ನಮಗೆ ಸುಪರಿಚಿತವಾದ ರೀತಿಯಲ್ಲಿ ಪ್ರಸಂಗವರ್ಣನೆಯಿದೆ. ಭಾಗವತದ ಕೃಷ್ಣನ ಕತೆಯನ್ನು ಕನ್ನಡಿಗರಿಗೆ ಮೊದಲು ಪರಿಚಯಿಸಿದ ಶ್ರೇಯಸ್ಸು ರುದ್ರಭಟ್ಟನದು. ಇಂಥ ಕಡೆಗಳಲ್ಲಿ ವಿಷ್ಣುಪುರಾಣ, ಭಾಗವತಗಳ ಆಧಾರವಿದ್ದರೂ ಅವುಗಳನ್ನು ತಕ್ಕ ರೀತಿಯಲ್ಲಿ ಮಾರ್ಪಡಿಸಿಕೊಂಡು ನಿರ್ವಹಿಸುವ ರೀತಿ ಇವನದೇ. ಹೀಗಾಗಿ ಕನ್ನಡಿಗರ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಇರುವ ಈ ಕೃಷ್ಣಸಂಬಂಧೀ ಬಾಲಲೀಲೆಗಳು ರುದ್ರಭಟ್ಟನ ಪ್ರಯತ್ನದ ಫಲವೇ ಆಗಿದೆ.
ಯಕ್ಷಗಾನ-ಬಯಲಾಟಗಳಲ್ಲಿ ನಮ್ಮ ಜಾನಪದರು ಕಂಡರಸಿಕೊಳ್ಳುವ ಕೃಷ್ಣನ ಪಾತ್ರವು ರುದ್ರಭಟ್ಟನ ಪ್ರಭಾವದಿಂದಲೇ ಮೂಡಿದೆಯೆಂಬುದರಲ್ಲಿ ಸಂದೇಹವಿಲ್ಲ. ಅಥವಾ ಇದು ಅದರ ವ್ಯತಿರಿಕ್ತ ಬಗೆಯದೋ? ಅಂದರೆ ತನ್ನ ಕಾಲದಲ್ಲಿಜನಜನಿತವಾಗಿದ್ದ ಕೃಷ್ಣ ಬಾಲಲೀಲೆಗಳ ಸ್ವರೂಪವನ್ನು ಇವನೇ ತನ್ನ ಪ್ರೌಢ ಕಾವ್ಯದಲ್ಲಿ ಅಳವಡಿಸಿಕೊಂಡಿರಬಾರದೇಕೆ? ಇದಕ್ಕೆ ಉದಾಹರಣೆಯೆಂದರೆ ಬಹಳ ಜನಪ್ರಿಯವಾಗಿರುವ ಪಾರಿಜಾತಹರಣದ ಪ್ರಸಂಗ. ವಿಷ್ಣುಪುರಾಣದಲ್ಲಿ ಬರುವ ಕಥಾಹಂದರದ ಮೇಲೆ ತನ್ನ ಕಲ್ಪನೆಯ ಬಳ್ಳಿಯನ್ನು ಹಬ್ಬಿಸಿ ರುದ್ರಭಟ್ಟನು ಈ ಪ್ರಸಂಗವನ್ನು ರಮಣೀಯವಾಗಿಸಿದ್ದಾನೆ, ನಾರದ ತನ್ನ ಕಲಹಪ್ರಿಯತೆಯಿಂದ ಕೃಷ್ಣ-ಸತ್ಯಭಾಮೆಯರಲ್ಲಿ ಪಾರಿಜಾತದ ಕಾರಣದಿಂದ ವಿರಸವನ್ನುಂಟುಮಾಡುವ ಹೊಸ ಪ್ರಸಂಗವನ್ನು ರುದ್ರಭಟ್ಟ ಕಲ್ಪಿಸಿಕೊಂಡಿದ್ದಾನೆ. ಇದು ವಿಷ್ಣುಪುರಾಣದಲ್ಲಿಯೂ ಇಲ್ಲ, ಭಾಗವತದಲ್ಲಿಯೂ ಇಲ್ಲ. ಇಂಥಲ್ಲೇ ರುದ್ರಭಟ್ಟನ ಸ್ವೋಪಜ್ಞತೆ.
ಇನ್ನು ‘ಜಗನ್ನಾಥ ವಿಜಯ’ದಲ್ಲಿ ಬರುವ ಕೃಷ್ಣನ ಪರಾಕ್ರಮದ ಸ್ವರೂಪದ ಬಗ್ಗೆ. ಬಾಲಕೃಷ್ಣನೇ ದುಷ್ಟಸಂಹಾರ ಮಾಡಿದರೂ, ಆ ಕೃತ್ಯಗಳನ್ನು ‘ಬಾಲಲೀಲೆ’ ಎನ್ನಲಾಗದು; ಅಲ್ಲೆಲ್ಲ ಅದ್ಭುತ ತುಂಬಿಕೊಂಡಿದೆ.ಕೃಷ್ಣನ ದುಷ್ಟಮರ್ದನಕಾರ್ಯದ ವಿವಿಧ ಮುಖಗಳನ್ನು ಕಾವ್ಯವವು ಉತ್ಪ್ರೇಕ್ಷೆಯ ಮೂಲಕ ಕಟ್ಟಿಕೊಡುತ್ತದೆ. ಉದಾಹರಣೆಗೆ ಪೂತನಿಯ ಹತ್ಯೆ, ಕುವಲಯಾಪೀಡ ವಧೆ ಇವುಗಳನ್ನು ನೋಡಬಹುದು. ಪೂತನಿಯು ಯಶೋದೆಯ ರೂಪದಲ್ಲಿ ಶಿಶು ಕೃಷ್ಣನನ್ನು ಕೊಲ್ಲಲು ಬಂದಳು ಎಂಬಂತೆ ರುದ್ರಭಟ್ಟನ ಕಲ್ಪನೆಯಿದೆ.ಒಂದು ಪದ್ಯದಲ್ಲಿ ಈ ಪ್ರಸಂಗವನ್ನು ಕವಿ ನಿರ್ವಹಿಸುತ್ತಾನೆ:
ಪ್ರಣಯಾಲಂಬಿನಿಯಂತೆ ಪೂತನೆ ಯಶೋದಾಕಾರದಿಂ ಬಂದು
ನಿರ್ಘೃಣೆ ನಂಜೂಡಿದ ತನ್ನ ಪೆರ್ಮೊಲೆಯನೂಡಲ್,
ಬಾಲಕಂ ನೆತ್ತರಂ ನಣನಂ ಖಂಡಮಂ ಎಯ್ದೆ ಪಿಂಡಿ
ಪಿಳಿದು ಉಂಡು, ಓಹೋಹೋ ಹಾ ಮಾಣ್ ಎಂದು
ಒರಲುತ್ತೆ ಬೀಳೆ ತವೆ ಪೀರ್ದಂ ಪೂತನಾ ಜೀವಮಂ
ಕುವಲಯಾಪೀಡ ದೈತ್ಯ ಗಜರೂಪೀ ರಾಕ್ಷಸ. ಆ ಆನೆಯ ಎರಡು ದಂತಗಳನ್ನು ಬಲವಾಗಿ ಹಿಡಿದು, ಎದೆಗೆ ಜೋರಾಗಿ ಒದೆದು, ದಂತಗಳನ್ನು ಕಿತ್ತು ಕೆಳಗುರುಳಿದ ಆ ದಂತಗಳಿಂದಲೇ ಹೊಡೆದು ಕೊಲ್ಲುವುದನ್ನು ಒಂದೇ ಉಸುರಲ್ಲಿ ಪದ್ಯವಾಗಿಸಿದ್ದಾನೆ ಕವಿ. ಇಷ್ಟೇ ಅದ್ಭುತವೆಂಬ ರೀತಿಯಲ್ಲಿ ಶಕಟ, ಧೇನುಕ, ಪ್ರಳಂಬ, ಅರಿಷ್ಟ, ಕೇಶಿ ಮುಂತಾದ ರಾಕ್ಷಸರನ್ನೆಲ್ಲ ಕೃಷ್ಣನು ಕೊಲ್ಲುವ ಪ್ರಸಂಗಗಳೂ ಇಲ್ಲಿವೆ. ಅಂತೆಯೇ ಕಂಸವಧೆ, ಚಾಣೂರ ಮರ್ದ, ಜರಾಸಂಧ ಹತ್ಯೆ, ನರಕಾಸುರ ಸಂಹಾರ, ನಿಕುಂಭ-ಬಾಣಾಸುರಮರ್ದನಗಳ ಸನ್ನಿವೇಶಗಳಲ್ಲಿ ಕೃಷ್ಣನು ತನ್ನ ಪರಾಕ್ರಮವನ್ನು ಮೆರೆಯುವ ಚಿತ್ರಗಳಿವೆ.
       ಇದು ವಿಷ್ಣುವಿನ ಅವತಾರಿಯಾದ ಕೃಷ್ಣನ ಕತೆಯಾದ್ದರಿಂದ ಏರಿಳಿತಗಳಿಲ್ಲದ, ತೊಳಲಾಟಗಳಿಲ್ಲದ ಏಕಮುಖ ಚಿತ್ರಣದಿಂದ ಕೂಡಿದೆ. ಎಲ್ಲ ಪ್ರಸಂಗಗಳೂ ಕೃಷ್ಣಸಹಕಾರಿಗಳಾಗಿ ಅವನ ಅವತಾರದ ಉದ್ದೇಶವಾದ ದುಷ್ಟಮರ್ದನದೆಡೆಎ ಸಾಗುತ್ತವೆ. ಇಂತಹ ಕಾವ್ಯವಸ್ತುವನ್ನು ಪಡೆದ ಕಾರಣ ಕಾವ್ಯ ವೈವಿಧ್ಯಮಯ ಭಾವನೆಗಳಿಂದ ಕೂಡಿರಲು ಸಾಧ್ಯವಿಲ್ಲ. ಮಹಾಭಾರತದಲ್ಲಿಯಂತೆ ಇಲ್ಲಿ ನೂರಾರು ಮನೋಭಾವಗಳೂ, ಹತ್ತಾರು ಮಾನವಸಹಜ ಸನ್ನಿವೇಶಗಳೂ, ತುಯ್ದಾಟ-ತೊನೆದಾಟಗಳೂ ಅವಕಾಶ ಪಡೆದಿಲ್ಲ. ಅದ್ಭುತ ಕೃತ್ಯಗಳಿಂದಾಗಿ ಓದುಗರಲ್ಲಿ ಬೆರಗನ್ನುಂಟುಮಾಡುವುದೂ, ಅದರಿಂದ ಕಾವ್ಯನಾಯಕನ ಬಗ್ಗೆ ಭಯ, ಅದರಿಂದ ಹೊಮ್ಮುವ ಭಕ್ತಿಗಳು ಇಲ್ಲಿನ ುದ್ದಿಷ್ಟ ಪ್ರತಿಕ್ರಿಯೆಗಳು. ಆದರೂ ರುದ್ರಭಟ್ಟ ಕ್ವಚಿತ್ತಾಗಿ ತನ್ನತನವನ್ನು ತೋರಿಸಿಕೊಳ್ಳುತ್ತಾನೆ. ಹೆಣ್ಣುಜಿಂಕೆಯೊಂದು ಮರಿಗೆ ಮೊಲೆಯೂಡಲು ಹಾತೊರೆಯುತ್ತದೆ; ಗಂಡುಜಿಂಕೆ ಆ ಹೆಣ್ಣಿನೊಡನೆ ಕೂಡಲು ತಹತಹಿಸುತ್ತದೆ. ಆ ಗಳಿಗೆಗೆ ಕಿರಾತನೊಬ್ಬ ಭಲ್ಲೆಯಿಂದ ಆ ಹೆಣ್ಣುಜಿಂಕೆಗೆ ದೇಹ ಇಬ್ಭಾಗವಾಗುವಂತೆ ಹೊಡೆಯುತ್ತಾನೆ. ಆ ಸನ್ನಿವೇಶದಲ್ಲಿಯೂ ಆ ಜಿಂಕೆ ಮರಿಗೆ ಮೊಲೆಯೂಡುತ್ತ, ಗಂಡಿನೊಡನೆ ನೆರೆಯುತ್ತ ಸಾಯುತ್ತದೆ. ಈ ಚಿತ್ರವನ್ನು ಬೇಟೆಯೊಂದರ ವರ್ಣನೆ ಮಾಡುತ್ತ ನೀಡಿ, “ಕೇವಲಮೇ ದೇಹಿಗೆ ಸಂಸೃತಿ ಮೋಹಬಂಧನಂ” ಎಂದು ಉದ್ಗಾರ ತೆಗೆಯುತ್ತಾನೆ!
       ರುದ್ರಭಟ್ಟನ ಕಾವ್ಯವು ಹದಿನೆಂಟು ಆಶ್ವಾಸಗಳುಳ್ಳ ದೀರ್ಘ ರಚನೆ. ಹತ್ತಾರು ಸನ್ನಿವೇಶಗಳು ವಿವರವಾಗಿಯೂ, ಹಲವಾರು ಸನ್ನಿವೇಶಗಳು ಸಂಕ್ಷಿಪ್ತವಾಗಿಯೂ ಇಲ್ಲಿ ಚಿತ್ರಿತವಾಗಿವೆ. ಅವನ ವಸ್ತು ಭಕ್ತಿ ಹಾಗೂ ತಾತ್ವಿಕತೆ. ತಾನೇ ಹೇಳಿಕೊಂಡಂತೆ ವಿದ್ವಜ್ಜನರಿಗೆ ಮೆಚ್ಚಿಕೆಯಾಗುವ ಶೈಲಿ ಅವನದು. ಹೆಚ್ಚು ಕಡೆಗಳಲ್ಲಿ ಅದು ಪ್ರೌಢವಾಗಿದೆ. ಕಾವ್ಯದ ಮೊದಲ ಐದು ಪದ್ಯಗಳಲ್ಲಿನ ಕಗ್ಗಂಟಾಗಿರುವ ಶ್ಲೇಷಾರ್ಥವನ್ನು ವಿವರಿಸಲು ‘ಪಂಚಪಾಷಾಣವ್ಯಾಖ್ಯಾನ’ವೆಂಂಬ ಹೆಸರಿನ ವ್ಯಾಖ್ಯಾನಗ್ರಂಥವೊಂದನ್ನು ಯಾರೋ ಒಬ್ಬ ಪಂಡಿತನು ಸಂಸ್ಕೃತದಲ್ಲಿ ಬರೆದಿದ್ದಾನಂತೆ. ಅಂದಮೇಲೆ ರುದ್ರಭಟ್ಟನ ಶೈಲಿಯ ಕಲ್ಪನೆಯುಂಟಾಗಬಹುದು. ಚಂಪೂರೂಪದಲ್ಲಿದೆ ಎಂಬ ಕಾರಣಕ್ಕಾಗಿ ಈ ಕಾವ್ಯ ಕಠಿಣವಾಗಿಲ್ಲ. ಪಂಪರನ್ನರು ಕಠಿಣಶೈಲಿಯ ಉಪಾಸಕರಲ್ಲ. ರುದ್ರಭಟ್ಟನ ಗಮನವೇ ವಿದ್ವಾಂಸರ ಕಡೆಗಿದ್ದುದರಿಂದಹೀಗಾಗಿದೆ. ಆದರೆ ಆತನ ಆಸೆ ದೊಡ್ಡದು. ಕಾವ್ಯದ ಕೊನೆಯ ಪದ್ಯದಲ್ಲಿ
ಬಾಡಿದ ಕೆಯ್ಗೆ ಕೊಳ್ಗೆ ಮಳೆ ಸಸ್ಯಕುಲಂ ಸತತಂ ಸುಭಿಕ್ಷಮಂ
ಮಾಡುಗೆ ಗೋಧನಾಳಿ ಕೊಡವಾಲ್ಗಱೆ ಗೋಪರನಂಗರಾಗದೊಳ್
ಕೂಡುಗೆ ರುದ್ರಭಟ್ಟ ಕೃತಿ ವೈಷ್ಣವಕಾವ್ಯರಸಾರ್ಣವಂ ತುಳುಂ
ಕಾಡುಗೆ ಭೂಮಿ ನಿಲ್ವಿನಂ ಅಹರ್ಪತಿ ನಿಲ್ವಿನಂ ಇಂದು ನಿಲ್ವಿನಂ
(ಬಾಡಿದ ಹೊಲಕ್ಕೆ ಮಳೆಯಾಗಲಿ, ಸಸ್ಯಸಂಕುಲವು ಸುಭಿಕ್ಷವನ್ನುಂಟುಮಾಡಲಿ, ಗೋವುಗಳು ಸಮೃದ್ಧವಾಗಿ ಹಾಲುಗರೆಯಲಿ, ಪ್ರಿಯರ ಅನುರಾಗವು ಕೈಗೂಡಲಿ, ರುದ್ರಭಟ್ಟನ ವೈಷ್ಣವಕಾವ್ಯವೆಂಬ ಸಮುದ್ರವು ಈ ಕಾವ್ಯವು ಭೂಮಿ ಇರುವವರೆಗೂ, ಸೂಯ‍್ ಬೆಳಗುವವರೆಗೂ, ಚಂದ್ರ ನಿಂತಿರುವವರೆಗೂ ತುಳುಕಾಡಿ ಎಲ್ಲೆಡೆ ಚಾಚಲಿ) ಎಂಬ ಹಾರೈಕೆಯನ್ನು ವ್ಯಕ್ತಪಡಿಸುತ್ತಾನೆ.

*****

No comments: