Friday 30 January 2015

ಯಾವುದು ರಾಷ್ಟ್ರಭಾಷೆ?

ಚರ್ಚೆ
[ಇಷ್ಟರಲ್ಲೇ ಸೇರಲಿರುವ ಕರ್ನಾಟಕದ ಶಾಸನಸಭೆಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ನಮ್ಮ ಘನತೆವೆತ್ತ(!) ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡುವರಂತೆ! ಐಎಎಸ್ ಅಧಿಕಾರಗಳಿಗೆ ರಾಜ್ಯಭಾಷೆಯನ್ನು ಕಲಿಸಿ ಆಯಾ ರಾಜ್ಯಗಳಿಗೆ ಹಾಕುವಂತೆ ಇನ್ನು ಮುಂದೆ ರಾಜ್ಯಪಾಲರಾಗಿ ಬರುವವರು ಆಯಾ ರಾಜ್ಯದ ಅಧಿಕೃತ ಭಾಷೆಯ ಸ್ವಲ್ಪವಾದರೂ ತಿಳಿವಳಿಕೆಯಿರುವಂತೆ ತರಬೇತಿಗೊಳಿಸಿ ಕಳಿಸುವುದರತ್ತ ಕೇಂದ್ರ ಸರ್ಕಾರವು ಗಮನ ಹರಿಸಬೇಕು. ಇಲ್ಲದಿದ್ದರೆ ಅಂಥವರು square peg in a round hole ಅಥವಾ round peg in a square hole ಆಗಿಬಿಡುತ್ತಾರೆ. ಈ ಹಿನ್ನೆಯಲ್ಲಿ ನಾನು ಇಪ್ಪತ್ತೈದು ವರ್ಷಗಳ ಹಿಂದೆ {1990} ಬರೆದು ನಾನೂ ಒಬ್ಬ ಸಂಚಾಲಕನಾಗಿದ್ದ ಸಾಹಿತಿಗಳ ಕಲಾವಿದರ ಬಳಗವು ಪ್ರಕಟಿಸಿದ ‘ಕನ್ನಡತನ ಮತ್ತು ಭರತೀಯತೆ’ ಎಂಬ ನಾಲ್ಕು ಕಿರು ಲೇಖನಗಳ ಸಂಕಲನದ ಪ್ರಸ್ತುತಕ್ಕೆ ಬೇಕಾದ ಮೂರು ಲೇಖನಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ನಮ್ಮ ನಾಡಿನಲ್ಲಿನ ಕನ್ನಡದ ಸ್ಥಿತಿ ಇಪ್ಪತ್ತೈದು ವರುಷಗಳ ಹಿಂದಿದ್ದುದಕ್ಕಿಂತ ಈಗ ಮತ್ತಷ್ಟು ಹದಗೆಟ್ಟಿರುವುದು ಕಾಣಿಸುತ್ತದೆ. ಇನ್ನಾದೂ ಈ ಕಡೆಗೆ ಕನ್ನಡ ಜನ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಕೊನೆ ಟಿಪ್ಪಣಿಗಳನ್ನು ಈಗ ಸೇರಿಸಲಾಗಿದೆ.]

ಭಾರತವು ಅನುಸರಿಸಬೇಕಾದ ಭಾಷಾನೀತಿ
       ಭಾರತವು ಸಂಪದ್ಭರಿತವೂ, ಧಾರಣಶಕ್ತಿಯಲ್ಲಿ ಮಿಗಿಲಾದವೂ ಆದ ಅನೇಕ ಭಾಷೆಗಳನ್ನು ಹೊಂದಿದೆ. ಪ್ರತಿ ಭಾಯನ್ನಾಡುವ ಜನರು ಕೋಟಿಗಟ್ಟಲೆ ಇದ್ದಾರೆ; ಈ ಎಲ್ಲ ಭಾಷೆಗಳಲ್ಲಿಯೂ ಅನೇಕ ಶತಮಾನಗಳಲ್ಲಿ ಹರಿದು ಬಂದ ಶ್ರೀಮಂತ ಸಾಹಿತ್ಯವಾಹಿನಿಯಿದೆ. ಅಲ್ಲದೆ ಹಿಂದೆ ಇವೆಲ್ಲ ಆಯಾ ಜನರ ಎಲ್ಲ ವ್ಯವಹಾರಗಳಿಗೆ ಸಮರ್ಥ ಮಾಧ್ಯಮವಾಗಿದ್ದವು. ಕನ್ನಡವೂ ಭರತದ ಅತ್ಯಂತ ಪ್ರಮುಖ ಭಾಷೆಗಳಲ್ಲಿ ಒಂದು.
       ಕನ್ನಡ ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರಿಂದ ಎಲ್ಲ ವ್ಯವಹಾರಗಳಿಗೆ ಬಳಸಲ್ಪಟ್ಟು ಸಮೃದ್ಧವಾದ ಭಾಷೆ. ಆಧ್ಯಾತ್ಮಿಕ ವಿಚಾರಗಳನ್ನು ಸಂಸ್ಕೃತದಲ್ಲಿ ಮಾತ್ರ ಹೇಳಲು ಸಾಧ್ಯ ಎಂಬ ಭಾವನೆಯಿದ್ದಾಗಲೇ ವಚನಕಾರರು ಅದನ್ನೂ ಕನ್ನಡದಲ್ಲಿ ಬಳಸಿ ಈ ಭಾಷೆಯ ಸಂವಹನಶೀಲತೆಯ ಆಳವನ್ನು ಸಾಬೀತುಗೊಳಿಸಿದರು.. ಇನ್ನು ಲೌಕಿಕ ವ್ಯವಹಾರಗಳಲ್ಲಿ ಕನ್ನಡ ಇದುವರೆಗೂ ಈ ನಾಡಿನಲ್ಲಿ ತಾನೇ ತಾನಾಗಿ ಮೆರೆಯುತ್ತಿತ್ತು.ಕರ್ನಾಟಕದಲ್ಲಿ ದೊರೆಯುವ ಶಸನಗಳು ಇದನ್ನು ರುಜುವಾತುಗೊಳಿಸುತ್ತವೆ.
       ಇಂಥ ಕನ್ನಡ ನಮ್ಮ ಸಂವಿಧಾನದ ಕೃಪೆಯಿಂದಾಗಿ ಒಂದು ಪ್ರಾದೇಶಿಕ ಭಾಷೆಯಾಗಿ ಕರ್ನಾಟಕದಲ್ಲಿಯೇ ನೆಲೆ ಕಳೆದುಕೊಳ್ಳುತ್ತಿದೆ ಎಂಬುದು ತುಂಬ ಖೇದದ ಸಂಗತಿ. ಹಿಂದೆಲ್ಲ ಬಳಕೆಗೊಂಡು ಯಶಸ್ವಿಯೆನಿಸಿದ ಭಾಷೆಗೆ ಈಗ ಅನೇಕರ ದೃಷ್ಟಿಯಲ್ಲಿ ಶಕ್ತಿಯಿಲ್ಲ! ಇದಕ್ಕೆ ಕಾರಣವೇನು? ಕನ್ನಡದಂತಹ ಭಾಷೆಗಳು ಹಿಂದೆ ಸರಿದು ಜನಮನ್ನಣೆಯಿಂದ ದೂರ ಸರಿಯಲು ಯಾರು ಹೊಣೆಗಾರರು? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ನಾವೀಗ ಉತ್ತರ ಕಂಡುಕೊಳ್ಳಬೇಕಾಗಿದೆ.
       ದೇವರು-ಧರ್ಮಗಳ ಭಾಷೆಯೆಂಬ ಕಾರಣದಿಂದ ಹಿಂದೆ ಅಂಥ ವಿಷಯಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ಹೇಳದೆ ಸಂಸ್ಕೃತ ಯಾಜಮಾನ್ಯ ವಹಿಸಿತು. ಬ್ರಿಟಿಷರು ಬಂದು ಇಂಗ್ಲಿಷನ್ನು ಗೊಟ್ಟ ಹಾಕಿ ಬಲವಂತದಿಂದ ನಮ್ಮ ಗಂಟಲಲ್ಲಿ ತಮ್ಮ ಪ್ರಭುಶಕ್ತಿಯ ಕಾರಣದಿಂದ ಸುರಿ ಮೇಲೆ, ಮೊದಮೊದಲು ಮ್ಲೇಚ್ಛರ ಭಾಷೆಯೆಂದು ಸಂಪ್ರದಾಯಸ್ಥರಿಂದ ಮೂಗುಮುರಿಸಿಕೊಂಡರೂ, ಬರಬರುತ್ತ ಆಳುವವರ ಭಾಷೆಯಾದ್ದರಿಂದ ಅದು ದೈವತ್ವಕ್ಕೇರಿತು. ಕರ್ಣಾಟಕ ದುರದೃಷ್ಟದಿಂದ ಹರಿದು ಹಂಚಿಹೋದ ಮೇಲೆ ಆ ಬೇರೆ ಬೇರೆ ತುಂಡುಗಳು ಯಾವ ಭಾಷೆಯ ಯಾಜಮಾನ್ಯವಿದ್ದ ಪ್ರಾಂತಕ್ಕೆ ಸೇರಿದ್ದವೋ ಆ ಭಾಷೆಗೆ ಎರಡನೆಯದಾಗಿ ಬಾಳಿತು. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಗಾಂಧಿಯಂತಹವರು ಜನರನ್ನು ಒಂದುಗೂಡಿಸಬೇಕೆಂದು ದೇಶಕ್ಕೆಲ್ಲ ಒಂದು ಭಾಷೆಯಿರಬೇಕೆಂಬ ವಾದವನ್ನು ಮಂಡಿಸಿದರು. ಇದೇ ವಾದದ ಗುಂದಿನಲ್ಲಿ ರಚಿತವಾದ ಸ್ವತಂತ್ರ ಭಾರತದ ಸಂವಿಧಾನವು ಹಿಂದಿಯನ್ನು ಅಧಿಕೃತ ಭಾಷೆಯೆಂದು ಮಾಡಿ, ಇತರ ಭಾರತೀಯ ಭಾಷೆಗಳನ್ನು ಪಕ್ಕವಾದ್ಯಗಳ ಮಟ್ಟಕ್ಕೀಳಿಸಿತು. ಇದು ಸ್ವತಂತ್ರ ಭಾರತದಲ್ಲಿ ಎಷ್ಟು ದೂರ ಮುಂದಕ್ಕೆ ಹೋಗಿದೆಯೆಂದರೆ ಅದನ್ನು ರಾಷ್ಟ್ರಭಾಷೆ ಎಂದು ಬೇರೆ ಕರೆಯಲಾಯಿತು. ಹಿಂದೆ ಬ್ರಿಟಿಷರಿದ್ದಾಗ ನಮ್ಮ ಭಾಷೆಗಳನ್ನು ಅವರು ದೇಶೀಯ ಅಥವಾ ಸ್ಥಳೀಯ ಭಾಷೆಗಳು (vernaculars) ಎಂದು ಕರೆದರು. ಹಾಗೆಯೇ ಈಗ ಇವುಗಳನ್ನು ಪ್ರಾದೇಶಿಕ ಭಾಷೆಗಳು (regional languages) ಎಂದು ನಮ್ಮ ಸಂವಿಧಾನ ಕರೆದಿದೆ. ಒಂದು ರಾಷ್ಟ್ರವೆಂದರೆ ಒಂದು ರಾಷ್ಟ್ರಧ್ವಜ, ಒಂದು ರಾಷ್ಟ್ರಪಕ್ಷಿ, ಒಂದು ರಾಷ್ಟ್ರಭಾಷೆ ಇರಬೇಕೆಂಬುದು ದೇಶಭಕ್ತರ ವಿಚಾರ. ಹಾಗಾಗಿ ನಮ್ಮ ಹಿಂದಿನ ಪ್ರಧಾನ ಮಂತ್ರಿಗಳು ಒಂದೆಡೆ ಮಾತನಾಡುತ್ತ ‘ಒಂದು ದೇಶ, ಒಂದು ಭಾಷೆ’ ಸೂತ್ರವನ್ನು ಹೇಲಿದರು. ಎಂದರೆ ಅವರ ಮನಸ್ಸಿನಲ್ಲಿ ಭಾರತ ಒದು ದೇಶ, ಹಿಂದಿ ಅದರ ಭಾಷೆ ಎಂಬ ಇಂಗಿತವಿತ್ತು. ಮಿಕ್ಕ ಭಾಷೆಗಳು ಏಕಿರಬೇಕು ಎಂಬುದು ಅವರ ಭಾವನೆ. ಇವರು ನಮ್ಮ ಪ್ರಧಾನಿ, ಕನ್ನಡಿಗರ ಪ್ರಧಾನಿ, ಮರಾಠಿಗಳ ಪ್ರಧಾಣೀ, ¨ಗಾಳಿಗಳ ಪ್ರಧಾನಿ - ಹೀಗೆ! ಈ ಭಾವನೆಯೇ ಮುಂದುವರೆದು ನಮ್ಮ ರಾಷ್ಟಕ್ಕೆ ರಾಷ್ಟ್ರಪ್ರಾಣಿ, ರಾಷ್ಟ್ರಧಾನ್ಯ, ರಾಷ್ಟ್ರವೃಕ್ಷ, ರಾಷ್ಟ್ರತರಕಾರಿ, ರಾಷ್ಟ್ರವಂಶ, ರಾಷ್ಟ್ರವ್ಯಕ್ತಿ ಇತ್ಯಾದಿಗಳನ್ನೂ ಅನುಸರಿಸವ ಪರಿಪಾಟ ಮುಂದುವರಿಯಬಹುದು. ಇವುಗಳ ಹೊರತು ಉಳಿದವು ಬೇಕಿಲ್ಲ, ಆದ್ದರಿಂದ ಇರದಿದ್ದರೂ ಒಳ್ಳೆಯದು ಎಂದು ವಾದಿಸುವುದರ ಜೊತೆಗೆ, ಅಂತಹ ಸ್ಥಿತಿಯುಂಟಾಗುವಂತೆ ಶ್ರಮಿಸಲೂಬಹುದು!
       ರಾಷ್ಟ್ರದ ಐಕ್ಯತೆಯ ದೃಷ್ಟಿಯಿಂದ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಕರೆದದ್ದರಿಂದ ಹಿಂದಿ ಜನರು ಪ್ರಥಮದರ್ಜೆ ಪ್ರಜೆಗಳು; ಅದರಿಂದಾಗಿ ಅವರು ರಾಷ್ಟ್ರದಲ್ಲಿ ಎಲ್ಲಿ ಹೋದರೂ ತಮ್ಮ ಮಾತೃಭಾಷೆಯಲ್ಲಿ ವ್ಯವಹರಿಸುವ ಅನುಕೂಲತೆಯಿರಬೇಕು. ಆದ್ದರಿಂದ ಎಲ್ಲರೂ ಆ ಭಾಷೆಯನ್ನು ಕಲಿತರೆ ದೇಶದ ವ್ಯವಹಾರ ಸುಗಮವಲ್ಲವೇ! ಆದ್ದರಿಂದ ಎಲ್ಲರೂ ಈ ಭಾಷೆಯನ್ನು ಕಡ್ಡಾಯವಾಗಿ ಕಲಿಯಬಕು ಎಂಬುದೂ ಭಾವೈಕ್ಯಜೀವಿಗಳ ವಾದವಾಗಿದೆ. ಈ ಕಡ್ಡಾಯ ಬೋಧನೆಯನ್ನು ಸಾಮಗಗೊಳಿಸಲು ‘ತ್ರಿಭಾಷಾಸೂತ್ರ’ವೆಂಬ ಒಂದು ಆಯುಧವನ್ನ ಬೇರೆ ಸಿದ್ಧಗೊಳಿಸಲಾಗಿದೆ. ನಾವು ಈ ಆಯುಧಕ್ಕೆ ತಲೆಯೊಡ್ಡುತ್ತ ಪಾವನರಾಗುತ್ತಲೂ ಇದ್ದೇವೆ.1
       ಹಿಂದಿಯನ್ನು ದೇಶದ ಏಕೈಕ ಅಧಿಕೃತ ಭಾಷೆಯೆಂದು ಸಾರುವುದರ ಮೂಲಕ ನಮ್ಮ ಸಂವಿಧಾನ ಈ ದೇಶದ ಜನರನ್ನು ಕುರಿಗಳು ಮತ್ತು ಕುರುಬರು ಎಂದು ವಿಂಗಡಿಸಿದಂತಾಗಿದೆ. ಹಿಂದಿಯ ಕಾರಣದಿಂದ ಹಿಂದಿ ಸ<ಸ್ಕೃತಗೆ ಹೆಗ್ಗಳಿಕೆ ಬಂದಿದೆ. ನಮ್ಮ ಯುವಜನರು ಧರಿಸುವ ಉಡುಪು ನೋಡಿ: ಉತ್ತರ ಭಾರತದ ಜನರನ್ನು ಅನುಕರಿಸುವುದನ್ನು ಕಾಣಬಹುದು. ಹಿಂದಿ ಸಿನಿಮಗಳಿಗೆ ಆದ್ಯತೆ; ಹಿಂದಿ ಹಾಡುಗಳು ಹೆಚ್ಚು ಇಂಪು. ದೂರದರ್ಶನ-ಆಕಾಶವಾಣಿಗಳಂತೂ ಹಿಂದಿಯನ್ನು ಕೇಳಿಸಿ ಕೇಳಿಸಿ ಮಿದುಳಿಗೆ ಇಳಿಸುತ್ತಿವೆ. ಹಿಂದಿಯ ಯಾಜಮಾನ್ಯವೆಂದರೆ ಹಿಂದಿ ಜನಗಳ ಯಾಜಮಾನ್ಯ ತಾನೇ? ಹಿಂದಿಯನ್ನು ಮಾತೃಭಾಷೆಯಾಗಿ ಹೊಂದದ, ಅಥವಾ ಕನಿಷ್ಠಪಕ್ಷ ಹಾಗೆ ಒಪ್ಪಿಕೊಳ್ಳದವನು ಪ್ರಧಾನಮಂತ್ರಿಯಾಗಲು ಸಾಧ್ಯವೇ? ದೊಡ್ಡ ದೊಡ್ಡ ಹಿಂದಿ ರಾಜ್ಯಗಳೆರಡು ಮನಸ್ಸು ಮಾಡಿದರೆ ಇಡೀ ರಾಷ್ಟ್ರದ ರಾಜಕಾರಣವನ್ನು ವ್ಯತ್ಯಾಸಮಾಡಲು ಸಾಧ್ಯವಿದೆ.
       ತ್ರಿಭಾಷಾ ಸೂತ್ರವೆಂಬುದು ಒಂದು ಮೋಸದ ತಂತ್ರವಾಗಿದೆ. ತಮಿಳುನಾಡು ತಮಿಳು-ಇಂಗ್ಲಿಷ್‍ಗಳ ದ್ವಿಭಾಷಾ ನೀತಿಯನ್ನು ಅನುಸರಿಸಲು ನಿರ್ಧರಿಸಿರುವುದರಿಂದಾಗಿ ಈ ಪ್ರಹಾರದ ತೀಕ್ಷ್ಣತೆ ಅಲ್ಲಿ ಕಡಿಮೆ. ಆದರೆ ನಾವು ಈ ತ್ರಿಭಾಷಾ ಸೂತ್ರದ ತ್ರಿಶೂಲಕ್ಕೆ ಸಿಕ್ಕಿಬಿದ್ದಿದ್ದೇವೆ. ನಮ್ಮ ಮಕ್ಕಳು ಕನ್ನಡದ ಜೊತೆಗೆ ರಾಷ್ಟ್ರಭಾಷೆಯಾದ ಹಿಂದಿ ಹಾಗೂ ಅಂತಾರಾಷ್ಟ್ರ ಭಾಷೆಯಾದ ಇಂಗ್ಲಿಷ್ ಇವುಗಳನ್ನು ಕಲಿಯಬೇಕು. ಆನರ ದೃಷ್ಟಿಯಲ್ಲಿ ಈ ಕ್ರಮದಲ್ಲಿಯೇ ಅವುಗಳ ಮಹತ್ವವೂ ಹೆಚ್ಚುತ್ತದೆ. ನಮ್ಮ ಜನರಲ್ಲಿ ಬಹುಸಂಖ್ಯೆಯಲ್ಲಿ ಕರ್ನಾಟಕವನ್ನು ಬಿಟ್ಟು ಹೋಗಲು ಕಾತರರಾಗಿರುವುದರಿಂದ ಕನ್ನಡವನ್ನು ಬಿಟ್ಟು ಉಳಿದೆರಡು ಭಾಷೆಗಳನ್ನು ಕಲಿಯಲು ಅತೀವ ಉತ್ಸಾಹ-ಶ್ರದ್ಧೆಗಳನ್ನು ತೋರಿಸುತ್ತಾರೆ! ದುರದೃಷ್ಟವಶಾತ್ ಕರ್ನಾಟಕದಲ್ಲಿ ನೆಲಸಲೇಬೇಕಾಗಿ ಬಂದರೆ ಕನ್ನಡ ಮಾತನಾಡಲು ಬರುತ್ತದಲ್ಲ, ಕಲಿಯುವುದು ಇನ್ನೇನಿದೆ ಎಂಬ ಭಾವನೆಯುಳ್ಳವರಾಗಿದ್ದಾರೆ. ಇಡೀ ರಾಷ್ಟ್ರವನ್ನಾಳುವ ಭಾಷೆ ತಮ್ಮ ಮಾತೃಭಾಷೆಯಾದ್ದರಿಂದ ಹಿಂದಿ ಜನರು ಅಕಸ್ಮಾತ್ ದೇಶ ಬಿಟ್ಟು ಹೋದರೆ ಬೇಕಾದೀತೆಂದು ಒಂದಷ್ಟು ಇಂಗ್ಲಿಷ್ ಕಲಿಯುತ್ತಾರೆ. ಅವರಿಗೆ ಮೂರನೆಯ ಭಾಷೆಯ ಆವಶ್ಯಕತೆಯೇ ಕಾಣಿಸುವುದಿಲ್ಲ. ಈಚೆಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿಯವರು ತಮ್ಮ ರಾಜ್ಯದಿಂದ ಇಂಗ್ಲಿಷನ್ನು ಓಡಿಸಲು ಪಣತೊಟ್ಟು, ಬಂದ ಟೀಕೆಗಳ ಬಗ್ಗೆ ಮಾತನಾಡುತ್ತ ತಮ್ಮ ರಾಜ್ಯವೂ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡು ಅನುಷ್ಠಾನಗೊಳಿಸುತ್ತಿದೆಯೆಂದು ಸಾರಿದ್ದಾರೆ. ಅಲ್ಲಿ ಬಹುಮಂದಿ ವಿದ್ಯಾರ್ಥಿಗಳ ಮೂರನೆಯ ಭಾಷೆ ಸಂಸ್ಕೃತ! ಅದನ್ನು ಕಲಿಯುವುದೆಂದರೇನು? ಶ್ರದ್ಧೆಯಿಂದ ಕರತಲಾಮಲಕ ಮಾಡಿಕೊಳ್ಳಲು ಕಷ್ಟಪಡುವುದೆಂದಲ್ಲ. ಸಂಸ್ಕೃತ ಹೇಳಿಕೇಳಿ ದೇವಭಾಷೆ. ದೇವರ ಹಾಗೇ ಆ ಭಾಷೆಯೂ, ಉತ್ತರಗಳನ್ನು ಯಾವ ಭಾಷೆಯಲ್ಲಿ ಬೇಕಾದರೂ ಬರೆಯಬಹುದು. ಹೇಗೆ ಬರೆದರೂ ದೇವಭಾಷೆ ಕರತಲಾಮಲಕವೇ! ಆದ್ದರಿದಲೇ ಕನ್ನಡಿಗ ವಿದ್ಯಾರ್ಥಿಗಳೂ ಶಾಲೆ-ಕಾಲೇಜುಗಳಲ್ಲಿ ಅದನ್ನು ಮೊದಲ ಭಾಷೆಯಾಗಿಯೇ ಆರಿಸಿಕೊಳ್ಳುತ್ತಾರೆ. ಇಂಥ ಮೋಸ ಬೇರೊಂದಿದೆಯೇ?
       ನಮ್ಮ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯುವುದು; ಹಿಂದಿ ಜನ ಸುಲಭವಾಗಿ ತಮ್ಮ ಭಾಷೆ ಕಲಿತು, ಇಂಗ್ಲಿಷನ್ನು ಹಗೂ ಹೀಗೂ ಕಲಿತು ದೇಶವಾಳುವುದು. ನಮ್ಮ ಹುಡುಗರು ಎಷ್ಟೇ ಕಷ್ಟಪಟ್ಟು ಓದಿ ಹಿಂದಿ ಕಲಿತರೂ ಅದನ್ನು ಮಾತೃಭಾಷೆಯಾಗಿ ಹೊಂದಿದವರ ಜೊತೆ ಸ್ಪರ್ಧಿಸಲು ಸಾಧ್ಯವೇ? ನವಿಲು ಹೇಗೆ ಕುಣಿದರೂ ನರ್ತನವೇ: ಅದನ್ನು ಕೆಂಬೂತ ನೋಡಿ ಎಷ್ಟೇ ಕಷ್ಟಪಟ್ಟು ಕುಣಿಯಲು ಪ್ರಯತ್ನಿಸಿದರೆ ತಾನೇ ಏನು ಫಲ? ನಮ್ಮ ಮಾತನ್ನು ಹಿಂದಿ ಎಂದು ಅವರು ತಾನೇ ಮಾನ್ಯ ಮಾಡಬೇಕು? ಹಾಗೂ ನಾವು ಅವರ ಕೃಪೆಯಲ್ಲಿಯೇ ಬಾಳಬೇಕು.
       1962 ರಲ್ಲಿ ತಮಿಳುನಾಡಿನಲ್ಲಿ ದೊಡ್ಡ ಹಿಂದಿವಿರೋಧಿ ಚಳವಳಿ ನಡೆದಾಗ ನೆಹರೂ ಒಂದು ಆಶ್ವಾಸನೆ ಕೊಟ್ಟರು: ದಕ್ಷಿಣದವರು ತಾವಾಗಿ ಹಿಂದಿಯನ್ನು ಒಪ್ಪಿಕೊಳ್ಳುವವರೆಗೆ (ದಕ್ಷಿಣವೆಂದರೆ ತಮಿಳರು ಮಾತ್ರ, ಏಕೆಂದರೆ ಮಿಕ್ಕವರು ಅದನ್ನು ಪ್ರಸಾದವೆಂಬಂತೆ ಸ್ವೀಕರಿಸಿ ಸೇವಿಸುತ್ತಿದ್ದಾರೆ!) ಇಂಗ್ಲಿಷ್ ಕೂಡ ಸಹಭಾಷೆ(Associate Language)ಯಾಗಿ ಮುಂದುವರೆಯುತ್ತದೆ ಎಂದು. ಇದೊಂದು ನಯವಂಚಕ ಆಶ್ವಾಸನೆ. ಹಿಂದಿಯ ಜೊತೆಯಲ್ಲಿ ಇಂಗ್ಲಿಷ್ ಇರುತ್ತದೆ, ಅದನ್ನು ಬಳಸಬೇಕೆಂದಿಲ್ಲ. ಅಲ್ಲದೆ, ಇತರ ಭಾಷೆಗಳ ಸ್ಥಾನವೇನೂ ವ್ಯತ್ಯಾಸವಾಗುವುದಿಲ್ಲ. ಇಂಗ್ಲಿಷ್ ಜೊತೆಯಲ್ಲಿದ್ದರೂ ಹಿಂದಿಯ ಬಳಕೆಗೆ ಅಡ್ಡಿಯಿಲ್ಲ. ಮುಖ್ಯಮಂತ್ರಿಗಳ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಹಿಂದಿಯಲ್ಲಿ ಮಾತನಾಡುತ್ತಾರೆ; ವಿರೋಧಿಸುವಂತಿಲ್ಲ, ಸಂವಿಧಾನದಲ್ಲಿ ಹೇಲಿದೆ. ಸಂಸತ್ತಿನಲ್ಲಿ ಮಂತ್ರಿಗಳು ಹಿಂದಿಯಲ್ಲಿ ಉತ್ತರ ಕೊಡುತ್ತಾರೆ. ಆ ಭಾಷೆ ಅರ್ಥವಾಗದಿದ್ದರೆ ದೆಹಲಿಯಲ್ಲಿ ನಡೆಯುವ ಆ ಸಭೆಯಲ್ಲಿ ಕುಳಿತುಕೊಳ್ಳುವ ಅರ್ಹತೆ ಸದಸ್ಯರಿಗೆ ಹೇಗೆ ತಾನೇ ಬಂದೀತು? ಭಂಡತನದಿಂದ ಹೇಲಿದರೆ ಇಂಗ್ಲಿಷಿನಲ್ಲಿಯೂ ಉತ್ತರ ಕೊಡುವ ‘ವ್ಯವಸ್ಥೆ’ಯಾಗುತ್ತದೆ.
       ಕೇಂದ್ರ ಸರ್ಕಾರದ ಕಚೇರಿಗಳು ಕೇಂದ್ರವಲ್ಲದ ಸ್ಥಳಗಳಲ್ಲೂ ಇವೆ. ಇಲ್ಲೆಲ್ಲ ದ್ವಿಭಾಷಾ ನೀತಿ ಅನುಸರಿಸಬೇಕು: ಹಿಂದಿ ಮತ್ತು ಇಂಗ್ಲಿಷ್. ಕೆಲವು ವೇಳೆ ಪ್ರಾದೇಶಿಕ ಭಾಷೆಯನ್ನು ಸಾರ್ವಜನಿಕ ವ್ಯವಹಾರ ಹೆಚ್ಚಿರುವ ಕಡೆ ಬಳಸಬಹುದು. ಬ್ಯಾಂಕಿಗೆ ಹೋದರೆ ಇಂಗ್ಲಿಷ್-ಹಿಂದಿಗಳ ನಮೂನೆಗಳನ್ನು ಒದಗಿಸುತ್ತಾರೆ. ನೀವು ಪ್ರತಿಭಟಿಸಿದರೆ ಕನ್ನಡದಲ್ಲೂ ಚಲನ್‍ಗಳನ್ನು ತುಂಬಬಹುದು, ಚೆಕ್‍ಗಳನ್ನು ಬರೆಯಬಹುದು ಎನ್ನುತ್ತಾರೆ. ಆದರೆ ಆದಾಯ ತೆರಿಗೆ ಇಲಾಖೇಗೆ ಹೋಗಿ ತೆರಿಗೆ ಫಾರಂಗಳು ಇಂಗ್ಲಿಷ್-ಹಿಂದಿಗಳಲ್ಲಿರುತ್ತವೆ (ದಕ್ಷಿಣದಲ್ಲಿ ಹಿಂದಿಯನ್ನು ಯಾರೂ ಬಳಸುವುದಿಲ್ಲ. ಆದರೆ ಫಾರಂಗಳ ಆರ್ಧಭಾಗವನ್ನು ಹಿಂದಿ ಆಕ್ರಮಿಸಿರುತ್ತದೆ. ಇವತ್ತಲ್ಲ ನಾಳೆ ಅದು ‘ನಮ್ಮ’ ಭಾಷೆ ತಾನೇ!) ಕನ್ನಡ ಮಾತ್ರ ಬಲ್ಲವನು ಅಲ್ಲಿ ಹೋದರೆ ಅವನು ಅನಕ್ಷರಸ್ಥನೆಂಬಂತೆ ಕಕಾಬಿಕ್ಕಿಯಾಗಬೇಕಾಗುತ್ತದೆ. ಕನ್ನಡದ ಬದಲು ಹಿಂದಿಯನ್ನೋ ಇಂಗ್ಲಿಷನ್ನೋ ತಾನು ಹುಟ್ಟಿದಂದಿನಿಂದಲೇ ಕಲಿತಿದ್ದರೆ ಚೆನ್ನಾಗಿತ್ತು ಎಂದು ಅವನಿಗನ್ನಿಸಬೇಕು. ಅಥವಾ ಕೆಲಸಕ್ಕೆ ಬಾರದ ದರಿದ್ರ ಕನ್ನಡ ನನ್ನ ಮನೆ ಮಾತಾಗದೆ ಹಿಂದಿಯೋ ಇಂಗ್ಲಿಷೋ ಆಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವನು ಕಸಿವಿಸಿಪಡಬೇಕು! ಪ್ರಾಯಶಃ ನಮ್ಮ ಸರ್ಕಾರ ಬಯಸುವ ಪ್ರತಿಕ್ರಿಯೆಯೇ ಅದು.
       ಎಲ್ಲ ಕಡೆಗಳಲ್ಲಿಯೂ ರಾಷ್ಟ್ರಭಾಷೆಯೆಂಬ ಹೆಸರಿನಲ್ಲಿ ಹಿಂದಿಯ ಹೇರಿಕೆ ಸೂಕ್ಷ್ಮವಾಗಿ ಹಾಗೂ ಒರಟುತನದಿಂದ, ನೇರವಾಗಿ-ಪರೋಕ್ಷವಾಗಿ, ಹೊರಗೆ ಹಾಗೂ ಒಳಗೆ, ಹೇಗೆ ನಡೆಯುತ್ತಿದೆಯೆಂಬುದರ ನೆನಪು ಮನಸ್ಸಿನಲ್ಲಿ ಕುದಿಯುತ್ತಿರುವುದರಿಂದಲೇ ಹಿಂದಿಯ ಬಗ್ಗೆ ಬರೆಯುವಾಗ ಮೊನಚಾಗಿ ವ್ಯಂಗ್ಯ ಮೂಡುತ್ತದೆ. ಹಿಂದಿ ಕನ್ನಡದಂತೆಯೇ ಒಂದು ಭಾಷೆ; ಅದರ ಬಗ್ಗೆ ನಾವು ದ್ವೇಷ ಸಾಧಿಸಬೇಕಾಗಿಲ್ಲ; ಆದರೆ ಅದರ ವಿಷಯದಲ್ಲಿ ನಮಗೆ ದ್ವೇಷಭಾವನೆ ಬರಲು ಕಾರಣವೇನು? ಕಾರಣವೇನೆಂದರೆ, ಅದು ನಮ್ಮ ಮೇಲೆ ಯಜಮಾನಿಕೆ ನಡೆಸುತ್ತ ‘ನಮ್ಮತನ’ದ ಭಾಷೆಯನ್ನು ತಾತ್ಸಾರಕ್ಕೀಡುಮಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವುದು; ಅದರ ಮೂಲಕವಾಗಿ ನಮ್ಮನ್ನೇ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ನಿರ್ಧರಿಸಿರುವುದು.
       ಈ ಕಾರಣದಿಂದಲೇ ಹಿಂದಿಗೆ ವಿರುದ್ಧವಾಗಿ ನಾವು ಇಂಗ್ಲಿಷನ್ನು ಒಡ್ಡುವ ಪರಿಸ್ಥಿತಿಯುಂಟಾಗಿದೆ. ಈಗಾಗಲೇ ಇಂಗ್ಲಿಷ್ ಮೇಲು ಹಂತದ ವ್ಯವಹಾರದಲ್ಲಿ ನೆಲೆ ನಿಂತಿರುವುದು ಒಂದು; ಇಂಗ್ಲಿಷ್ ಎಲ್ಲ ಭಾಗದ ಜನರಿಗೂ ಸಮಾನ ಸೌಲಭ್ಯ-ಸಮಾನ ಕಷ್ಟವನ್ನು ಉಂಟುಮಾಡುವ ಭಾಷೆಯಾಗಿರುವುದು ಎರಡು;. ಹಿಂದಿಗೆ ಇಂಗ್ಲಿಷ್ ಒಂದು ಪ್ರಬಲ ಪ್ರತಿಪಕ್ಷವಾಗಬಹುದಾದುದು ಮೂರು _ ಈ ಮೂರು ಕಾರಣಗಳಿಂದ ಹಿಂದಿಯ ವಿರೋಧವು ಇಂಗ್ಲಿಷ್ ಪರವಾಗಿ ಮಾತನಾಡುವಂತೆ ಮಾಡಿದೆ. ಈ ಹಂತದಲ್ಲಿ ನಾವು ಯಾವ ಭಾಷಾನೀತಿಯು ಹೆಚ್ಚು ಸಮರ್ಪಕ ವ್ಯವಸ್ಥೆಯನ್ನು ಉಂಟುಮಾಡುವುದು ಎಂದು ಯೋಚಿಸಬೇಕಾಗಿದೆ.
       ಎಲ್ಲಿ ವೈವಿಧ್ಯವಿದೆಯೋ ಅಂತಹ ಸಂದರ್ಭಗಳಲ್ಲಿ ಸಮಾನತೆಯ ವಾತಾವರಣವನ್ನು ಸೃಷ್ಟಿಸುವುದರ ಮೂಲಕ ಮಾತ್ರ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯ. ನಮ್ಮ ದೇಶದ ವಿವಿಧ ಪ್ರಜೆಗಳ ವಿಂಗಡಣೆಗೂ ಭಾಷೆಗಳು ಆಧಾರ (ಪ್ರಪಂಚದ ಎಲ್ಲೆಡೆಯೂ ಹೀಗೆಯೇ). ಪ್ರಾದೇಶಿಕ ಸಮತೋಲನವು ಸಮಾನಾವಕಾಶ-ಸಮಾನ ಹಕ್ಕುಗಳ ಆಧಾರದ ಮೇಲೆ ರಚಿತವಾದ ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಮಾತ್ರ ಉಂಟಾಗಲು ಸಾಧ್ಯ. ಭಾಷೆಗಳ ವಿಷಯದಲ್ಲಿಯೂ ಇದು ಸತ್ಯ. ಭಾರತದ ಸಂವಿಧಾನವು ತನ್ನ ಎಚಿಟನೇ ಪರಿಶಿಷ್ಟದಲ್ಲಿ ಹಲವಾರು ಭಾಷೆಗಳನ್ನು ಮಾನ್ಯ ಮಾಡಿದೆ (ಇದರಲ್ಲಿ ಯಾರ ದಿನಬಳಕೆಯ ಭಾಷೆಯೂ ಅಲ್ಲದ ಸಂಸ್ಕೃತವೂ ಸೇರಿದೆ!) ಹಿಂದಿಯು ವಾಸ್ತವವಾಗಿ ಆರೆಂಟು ಭಾಷೆಗಳನ್ನು ಒಂದೇ ಎಂದು ಪರಿಗಣಿಸಿದ್ದರಿಂದ ಆದುದು. ಏನೇ ಆಗಲಿ, ಎಲ್ಲ ಭಾಷೆಗಳಿಗೂ ಸಮಾನತೆ ಇದೇ ಈ ತಿಕ್ಕಾಟಕ್ಕೆ ಪರಿಹಾರ.2
       ನಮ್ಮ ಭಾಷೆಗಳ ಕಲಿಕೆಯ ಅಥವಾ ಬಳಕೆಯ ರೀತಿಯೂ ಹಂ ಹಂತದಲ್ಲಿ ವಿಶಾಲವಾಗುತ್ತ ಹೋಗುವಂಥದು. ತನ್ನ ಊರಿನಲ್ಲಿಯೇ ಬೆಳೆದು, ಬಾಳಿ, ಸಾಯುವವರೇ ಮ್ಮ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವುದು. ಅಂತವರ ಮೇಲೆ ಎರಡು-ಮೂರು ಭಾಷೆಗಳನ್ನು ಹೇರುವುದು ಕ್ರೂರತನವಾಗುತ್ತದೆ. ಹಾಗಾಗಿ ಅಕ್ಷರಜ್ಞಾನವೆಂದರೆ ಪರಿಸರ ಭಾಷೆಯ ಅಕ್ಷರಜ್ಞಾನ ಎಂದೇ ಅರ್ಥ. ಭಾಷೆಗಳ ಆಧಾರದ ಮೇಲೆ ವಿಂಗಡಣೆಗೊಂಡಿರುವ ಈ ದೇಶದ ರಾಜ್ಯಗಳಲ್ಲಿ ಸಕಲ ವ್ಯವಹಾರವೂ ಆ ರಾಜ್ಯದ ಭಾಷೆಯಲ್ಲಿಯೇ ನಡೆಯಬೇಕು. ಹಿಂದೆ ಒಂದೆಡೆ ಪ್ರತಿಪಾದಿಸಿರುವಂತೆ, ಅಂತರರಾಜ್ಯ ವಲಸೆಯನ್ನು ತಡೆಗಟ್ಟುವುದು ಹಾಗೂ ದ್ವಿಪೌರತ್ವ ಪದ್ಧತಿಯು ಜಾರಿಯಾದರೆ, ಎಲ್ಲೂ ಭಾಷಾ ಅಲ್ಪಸಂಖ್ಯಾತರೆಂಬ ವರ್ಗವೇ ಇರುವುದಿಲ್ಲ. ಹಾಗಾಗಿ ರಾಜ್ಯಗಳಲ್ಲಿ ಆಯಾ ಭಾಷೆಯೇ ಸಾರ್ವತ್ರಿಕ, ಸಾರ್ವಭೌಮ. ಆ ಭಾಷೆಯೊಂದನ್ನು ಕಲಿತೇ ಎಲ್ಲ ವ್ಯವಹಾರಗಳಲ್ಲೂ ನೇರವಾಗಿ ಭಾಗಿಯಾಗುವ ಅವಕಾಶವು ಆ ಸಂದರ್ಭದಲ್ಲಿ ಮಾತ್ರ ಸಾಮಾನ್ಯನಿಗೆ ದೊರೆಯುತ್ತದೆ. ನಿಜವಾದ ಅರ್ಥದಲ್ಲಿ ಶ್ರೀಸಾಆನ್ಯನಿಗೆ ಮಾನ್ಯತೆ, ಆಡಳಿತದಲ್ಲಿ ನೇರ ಭಾಗವಹಿಸುವಿಕೆ ಇವು ದೊರೆಯುತ್ತವೆ.
       ವಿದ್ಯಾಭ್ಯಾಸದ ಒಂದು ಹಂತದವರೆಗೆ ಪರಿಸರ ಅಥವಾ ರಾಜ್ಯಭಾಷೆಯನ್ನು ಮಾತ್ರ ಕಲಿಸಿ, ಅದರ ಮೂಲಕವೇ ವಿಷಯಗಳನ್ನು ತಿಳಿಸುವುದರಿಂದ ಹೆಚ್ಚು ವಿಷಯಗಳನ್ನು ವಿದ್ಯಾರ್ಥಿಯು ತಿಳಿಯಲು ಸಾಧ್ಯವಾಗುತ್ತದೆ. ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಹೋಗುವವರು ಹೆಚ್ಚು ಮಹತ್ವಾಕಾಂಕ್ಷಿಗಳು, ‘ಸೀಮೋಲ್ಲಂಘನ’ದ ಕನಸೂ ಅವರಲ್ಲಿರಬಹುದು. ಹೀಗಾಗಿ ಅವರು ಎಲ್ಲಿ ಹೋಗಬಯಸುವರೋ, ಯಾರೊಡನೆ ವ್ಯವಹರಿಸಬಯಸುವರೋ ಅದಕ್ಕನುಗುಣವಾದ ಭಾಷೆಯನ್ನು ಕಲಿಯುವ ಆಯ್ಕೆ ಅವರಿಗೆ ಇರಬೇಕು. ನೆರಗೊರೆಯ ರಾಜ್ಯಗಳ ಭಾಷೆಗಳು, ರಾಷ್ಟ್ರದ ಹೊರಗಿನ ಭಾಷೆಗಳು ಇವುಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗಿತ್ತು, ನಮ್ಮ ಸಂಪನ್ಮೂಲಗಳಿಗೆ ಅನುಗುಣವಾಗಿ ಅವುಗಳ ಕಲಿಕೆಗೆ ವ್ಯವಸ್ಥೆ ಮಾಡಬೇಕು, ಮತ್ತು ಹೆಚ್ಚು ಭಾಷೆಗಳನ್ನು ಕಲಿಯುವ ತವಕವುಳ್ಳ ‘ಭಾಷಾಪಿಪಾಸು’ಗಳಿಗೆ ಮುಂದಿನ ಹಂತಗಳಲ್ಲಿ ಅವಕಾಶವೊದಗಿಸಬೇಕು.
       ರಾಜ್ಯಮಟ್ಟದ ನಂತರದ ವ್ಯವಹಾರಗಳು ಹೇಗೆ, ಯಾವ ಭಾಷೆ ಅಥವಾ ಭಾಷೆಗಳ ಮೂಲಕ ನಡೆಯಬೇಕು ಎಂಬುದು ಮುಂದಿನ ಪ್ರಶ್ನೆ. ಈ ಸಂದರ್ಭದಲ್ಲಿ ಉತ್ರ ಪ್ರದೇಶದ ಮುಖ್ಯಮಂತ್ರಿಗಳ ಒಂದು ಮಾತು ನೆಪಾಗುತ್ತದೆ: ಇಂಗ್ಲಿಷನ್ನು ಆಡಳಿತದಿಂದ ಓಡಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ತಮಿಳುನಾಡು ಮುಖ್ಯಮಂತ್ರಿಗಳು ತಮ್ಮ ಸರ್ಕಾರಕ್ಕೆ ಉತ್ತರ ಪ್ರದೇಶ ಸರ್ಕಾರದಿಂದ ಹಿಂದಿಯಲ್ಲಿ ಪತ್ರ ಬಂದರೆ ಅದಕ್ಕೆ ಉತ್ತರಿಸಲಾಗುವುದಿಲ್ಲ ಎಂದ ಪ್ರಸಂಗ ಅದು. ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಉತ್ತರಿಸುತ್ತ, ತಮಿಳುನಾಡಿನಿಂದ ತಮ್ಮ ಸರ್ಕಾರಕ್ಕೆ ಇಂಗ್ಲಿಷಿನಲ್ಲಿ ಪತ್ರ ಬಂದರೆ ತಾವು ತಮಿಳಿನಲ್ಲಿಯೇ ಮಾರುತ್ತರ ಕಳಿಸುವ ಏರ್ಪಾಟು ಮಾಡುತ್ತೇವೆಂದು ಹೇಳಿದರು. ರಾಜ್ಯಮಟ್ಟದಲ್ಲಿ ಜನಭಾಷೆಯಾದ ಹಿಂದಿಯನ್ನು ಮಾನ್ಯಮಾಡುವ ಮನೋಭಾವದೊಂದಿಗೇ, ತನ್ನ ಭಾಷೆಗೆ ನೀಡುವಷ್ಟೇ ಮಾನ್ಯತೆಯನ್ನು ನೆರೆರಾಜ್ಯದ ಜನಭಾಷೆಗೆ ನೀಡುವುದು ತಮ್ಮ ಆಶಯವೇ ಹೊರತು ಪರಭಾಷೆಯಾದ, ದಾಸ್ಯದ ಸಂಕೇತವಾದ ಇಂಗ್ಲಿಷ್‍ಗೆ ಅಲ್ಲ ಎಂಬ ಭಾವನೆಯನ್ನವರು ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ ಈ ಉತ್ತರ ರಾಷ್ಟ್ರಮಟ್ಟದಲ್ಲಿ ವಿವಿಧ ಭಾರತೀಯ ಭಾಷೆಗಳಿಗೆ ಕಲ್ಪಿಸಬೇಕಾದ ಸ್ಥಾನದ ಬಗ್ಗೆ ಉಪಯುಕ್ತ ಸುಳಿವು ನೀಡುತ್ತದೆ. ತಮಿಳಿನಲ್ಲಿ ಬಂದ ಪತ್ರಕ್ಕೆ ತಮಿಳಿನಲ್ಲಿ, ಕನ್ನಡದಲ್ಲಿ ಬಂದ ಪತ್ರಕ್ಕೆ ಕನ್ನಡದಲ್ಲಿ, ಬಂಗಾಳಿಯಲ್ಲಿ ಬಂದ ಪತ್ರಕ್ಕೆ ಬಂಗಾಳಿಯಲ್ಲಿ ಉತ್ತರಿಸುವ ವ್ಯವಸ್ಥೆ ಮಾಡುವುದು ಒಂದು ರಾಜ್ಯ ಸಕಾರಕ್ದಕೆ, ಯಾವುದೇ ರಾಜ್ಯಸಕಾರಕ್ಕೆ, ಕಷ್ಟವಲ್ಲ. ಆಯಾ ಪ್ರದೇಶದ ಭಾಷೆಯ ಜೊತೆಗೆ ವಿವಿಧ ಪ್ರದೇಶ ಭಾಷೆಗಳಲ್ಲಿ ಒಂದರ ಮೇಲೆ ಪ್ರಭುತ್ವವನ್ನು ಪಡೆದ ಕೆಲವರನ್ನು ನೇಮಿಸಿಕೊಂಡರೆ ಸಾಕು, ಈ ಕಾರ್ಯ ನೆರವೇರುತ್ತದೆ. ರಾಜ್ಯಕ್ಕೆ ಸಾಧ್ಯವಾಗುವಂತಹುದು ಕೇಂದ್ರ ಸಕಾರಕ್ಕೆ ಸಾಧ್ಯವಾಗಲಾರದೇ? ಸಾಧ್ಯ ಮತ್ತು ಸಾಧ್ಯವಾಗಬೇಕು. ಎಂದರೆ ಕೇಂದ್ರ ಬಹುಭಾಷಾಕೇಂದ್ರವಾಗಬೇಕು.
       ಸಂಯುಕ್ತರಾಜ್ಯ ವ್ಯವಸ್ಥೆಯಲ್ಲಿ ಬಹುಪಾಲು ಅಧಿಕಾರಗಳೆಲ್ಲ ರಾಜ್ಯಮಟ್ಟದವರೆಗೆ ಹಂಚಿಕೆಗೊಂಡಿರುತ್ತದೆ (ಇಂಥ ವ್ಯವಸ್ಥೆಯನ್ನು ಜಯಪ್ರಕಾಶ ನಾರಾಯಣ್ ಪ್ರತಿಪಾದಿಸಿದ್ದರು). ದೇಶವ್ಯಾಪಿಯಾದ ಕೆಲವು ವಿಷಯಗಳು ಮಾತ್ರ ಕೇಂದ್ರ ಸರ್ಕಾರದ ನೇರ ಹತೋಟಿಯಲ್ಲಿರುತ್ತದೆ. ಆದ್ದರಿಂದ ವ್ಯವಹಾರವು ಸೀಮಿತವಾದ ಪ್ರಮಾಣಕ್ಕೆ ಇಳಿಯುತ್ತವೆ. ಕೇಂದ್ರಸರ್ಕಾರ ಏನೇನನ್ನು ಜನರಿಗೆ ಹೇಲಬಯಸುತ್ತದೋ ಅದನ್ನೆಲ್ಲ ಜನರ ಭಾಷೆಗಳಲ್ಲಿಯೇ ಏಕಕಾಲಕ್ಕೆ ಹೇಲುವುದು ಕಷ್ಟವಲ್ಲ. ಕೇಂದ್ರದಲ್ಲಿ, ರಾಜ್ಯಗಳಲ್ಲಿರುವಂತೆಯೇ, ಬುಭಾಷಾ ಪರಿಣತರನ್ನು ನೇಮಿಸಿಕೊಂಡರೆ ಸಾಕು, ವ್ಯವಹಾರವೂ ಸುಗಮವಾಗುತ್ತದೆ. ಜನಸಾಮಾನ್ಯನ ವ್ಯವಹಾರದಲ್ಲಿ ಕೇಂದ್ರ ದ ಸುಳಿವೇ ಇರುವುದಿಲ್ಲ. ಹೀಗಾಗಿ ಸಾಮಾನಯ ಮನುಷ್ಯನು ಅಪರೂಪದ ಸನ್ನಿವೇಶದಲ್ಲಿ ಹೊರತು ಕೇಂದ್ರದೊಡನೆ ನೇರವಾಗಿ ವ್ಯವಹರಿಸುವ ಆವಶ್ಯಕತೆಯೇ ಇರುವುದಿಲ್ಲ. ಅಲ್ಲದೆ ಹಾಗೆ ವ್ಯವಹರಿಸಿದರೂ ಆತನ ಭಾಷೆಯಲ್ಲಿಯೇ ವ್ಯವಹರಿಸಬಹುದಾದ ಅವಕಾಶ ಈ ಅಪೇಕ್ಷಣಿಯ ವ್ಯವಸ್ಥೆಯಲ್ಲಿರುತ್ತದೆ.
       ಕೇಂದ್ರದ ಹತೋಟಿಯಲ್ಲಿ ಬರುವ ಕ್ಷೇತ್ರಗಳು ತಮ್ಮಲ್ಲಿ ಯಾವ ಭಾಷೆಯಲ್ಲಿ ವ್ಯವಹರಿಸಬೇಕು ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಉದ್ಭವಿಸುವುದು ಸಹಜ. ಯಾವುದೇ ಭಾರತೀಯ ಭಾಷೆಯನ್ನು ಬಳಸಿದರೆ ಇತರ ಭಾಷೆಗಳವರಿಗೆ ಅಸಮಾಧಾನ ಖಂಡಿತ. ಇಂಗ್ಲಿಷ್ ಪರಕೀಯರ ಭಾಷೆಯಾದ್ದರಿಂದ ಅದನ್ನು ಬಳಸುವುದು ತಾಯ್ವಿಕವಾಗಿ ಸರಿಯಲ್ಲ. ಆದರೆ ಇಂಗ್ಲಿಷ್ ಎಲ್ಲ ಭಾರತೀಯರಿಗೂ ಹೊಸ ಭಾಷೆಯಾದ್ದರಿಂದ ಅದರ ಬಳಕೆ ಎಲ್ಲರಿಗೂ ಸಮಾನವಾದ ಸೌಲಭ್ಯವನ್ನೂ ಕಷ್ಟವನ್ನೂ ಉಂಟುಮಾಡುತ್ತದೆ. ಹೀಗಾಗಿ ಗೊಣಗಾಟವಿರಲಾರದು. ಅಥವಾ ಸಂಸ್ಕೃತದಂತಹ ಭಾಷೆಯನ್ನು ಬಳಸಬಹುದೇ? ಸಂಸ್ಕೃತ ಕೇವಲ ಗ್ರಾಂತಿಕ ಭಾಷೆ; ಆಡುಭಾಷೆಯೂ ಅಲ್ಲ, ವ್ಯವಹಾರದ ಭಾಷೆಯೂ ಅಲ್ಲ. ಅದನ್ನು ವ್ಯವಹಾರದ ಮಟ್ಟದಲ್ಲಿ ಬಳಸುವ ಹಾಗೆ ಪುನರುಜ್ಜೀವನಗೊಳಿಸಿದರೆ ಹೇಗೆ? ಸಂಸ್ಕೃತದ ಬಗ್ಗೆ ಮತ್ತೊಂದು ವಾದವೂ ಸಾಧ್ಯ. ಅದು ನಮ್ಮ ಧಾರ್ಮಿಕ ಗ್ರಂತಗಳ ಭಾಷೆಯಾಗಿದ್ದು ಬಹುಸಂಖ್ಯಾತರನ್ನು ಕತ್ತಲಲ್ಲಿಟ್ಟ ಶೋಷಕರ ಭಾಷೆ. ಆ ಕಾರಣದಿಂದ ಬಹುಸಂಖ್ಯಾತರು ಆ ಭಾಷೆಯನ್ನು ಕಲಿಯುವುದರಿಂದಲೂ ಬಹಿಷ್ಕರಿಸಲ್ಪಟ್ಟಿದ್ದರು. ಹೀಗಾಗಿ ಅನೇಕರು ಸಂಸ್ಕೃತದ ಪುನರುಜ್ಜೀವನಕ್ಕಾಗಲೀ ಬಳಕೆಗಾಗಲೀ ಸಮ್ಮತಿಸಲಾರರು. ಹಾಗಾದರೆ ರಾಷ್ಟ್ರದ ತುದಿಲ್ಲಿ ಯಾವ ಭಾಷೆಯನ್ನು ಅಂಗೀಕರಿಸಬೇಕೆನ್ನುವುದು ತುಂಬ ಜಟಿಲವಾದ ಸಮಸ್ಯೆಯೇ. ಆದರೆ ಜನಸಾಮಾನ್ಯನ ವ್ಯವಹಾರದಲ್ಲಿ ಅವನ ಭಾಷೆಯೊಂದನ್ನುಳಿದು ಮತ್ತೊಂದು ಭಾಷೆಯೇ ಇಲ್ಲದಿದ್ದಾಗ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೆಲವೇ ಕೇಂದ್ರ ನಿಯಂತ್ರಿತಕ್ಷೇತ್ರಗಳಲ್ಲಿ ಯಾವ ಭಾಷೆ ಬಳಕೆಯಾದರೂ ಅದು ತೀವ್ರವಾದ ಆಕ್ಷೇಪಕ್ಕೆ ಕಾರಣವಾಗಲಾರದು. ಏಕೆಂದರೆ ಆ ಭಾಷೆಯನ್ನು ತಿಳಿಯದಿರುವುದು ಅಥವಾ ಅದು ತಮ್ಮದಲ್ಲವೆನ್ನುವುದು ಬಹುಪಾಲು ಜನರ ಜೀವನದಲ್ಲಿ ಯಾವ ವ್ಯತ್ಯಾಸವನ್ನೂ ಮಾಡಲಾರದು.
       ಇರಲಿ, ಕೇಂದ್ರದ ಅತ್ಯಂತ ಸೀಮಿತ ವಲಯದ ಭಾಷೆ ಸದ್ಯಕ್ಕೆ ಇಂಗ್ಲಿಷ್ ಆಗಬಹುದು.3  ಇದರಿಂದ ದೇಶದ ಹೊರಗಿನ ವಿಷಯಗಳಿಗೂ ಸಾಕಷ್ಟು ಪ್ರವೇಸ ದೊರೆಯುತ್ತದೆ. ಆದರೆ ಅತ್ಯಂತ ಜರೂರಾಗಿ ಆಗಬೇಕಾದದ್ದು ಪ್ರದೇಶ ಭಾಷೆಗಳಲ್ಲಿಯೇ ಎಲ್ಲ ವ್ಯವಹಾರಗಳೂ ಸಾಧ್ಯವಾಗಬೇಕಾದ ವ್ಯವಸ್ಥೆ. ಎಂದರೆ ಸಂಪೂರ್ಣ ವಿಕೇಂದ್ರೀಕೃತವಾದ ರಾಜಕೀಯ ವ್ಯವಸ್ಥೆ; ರಕ್ಷಣೆ, ವಿದೇಶಾಂಗ ವ್ಯವಹಾರ, ಅಂತರರಾಜ್ಯ ವಿಷಯಗಳ ಹೊರತು ಮಿಕ್ಕೆಲ್ಲ ಅಧಿಕಾರ ರಾಜ್ಯಕ್ಕೆ ನೀಡಲಾಗುವ ವ್ಯವಸ್ಥೆ ಒಂದು; ಅಂತರರಾಜ್ಯ ವಲಸೆಗೆ ಕಡಿವಾನ ಹಾಕಿ, ಒಂದು ರಾಜ್ಯದ ಎಲ್ಲ ವ್ಯವಹಾರ-ಆಡಳಿತ, ಶಿಕ್ಷಣ, ಸಮೂಹ ಮಾಧ್ಯಮ ಎಲ್ಲ ಕಡೆ ಆಯಾ ಪರಿಸರ ಭಾಷೆಯಲ್ಲಿಯೇ ನಡೆದಾಗ ಭಾಷಾವಿವಾದ ಬಹುಪಾಲು ಪರಿಹಾರಗೊಂಡಂತೆಯೇ. ವಿದ್ಯಾರ್ಥಿಗೆ ಪರಿಸರ ಭಾಷೆಯ ಕಲಿಕೆ ಸಾರ್ವತ್ರಿಕ; ಒಂದು ಹಂತದ ನಂತರ ಎರಡನೆಯ ಆಯ್ಕೆಯ ಭಾಷೆಯ ಕಲಿಕೆಗೆ ಅವಕಾಶ; ತುಂಬ ಮಹತ್ವಾಕಾಂಕ್ಷಿಗಳಿಗೆ ಮತ್ತೂ ಭಾಷೆಗಳನ್ನು ಕಲಿಯುವ ಏರ್ಪಾಡು ಅತಿ ಮೇಲಿನ ಹಂತದಲ್ಲಿ. ಈ ವ್ಯವಸ್ಥೆ  ಸರ್ವೋತ್ಕೃಷ್ಟ ಹಾಗೂ ಸರ್ವಸಮ್ಮತವಾದ ವ್ಯವಸ್ಥೆ ಆಗಬಲ್ಲುದು.
       ಈ ಬಗೆಯ ಏರ್ಪಾಟು ನಮ್ಮ ಆದರ್ಶ, ಈ ಕ್ಷಣಕ್ಕೆ ಇದು ಸಾಧ್ಯವೇ ಎನ್ನಿಸಬಹುದು. ಯಾವ ಏರ್ಪಾಟಾದರೂ ತಕ್ಷಣವೇ ಆಗಲಾರದು. ಸಾರ್ವತ್ರಿಕ ಮಾನ್ಯತೆ ಪಡೆಯಲಾರದು. ಆದರೆ ಕಾಲ ಕಳೆದಂತೆ, ವ್ಯಸ್ಥೆಯು ತಳವೂರಿದಂತೆ ಸರಿಹೋಗಬಹುದು. ಈ ದಿಸೆಯಲ್ಲಿ ನಾವು ಆಲೋಚಿಸಲು, ಚರ್ಚಿಸಲು, ಕಾಲುಹಾಕಲು ತೊಡಗುವುದು ಕ್ಷೇಮಕರ
------

        1.   ಕುವೆಂಪು ‘ತ್ರಿಭಾಷಾ ಸೂತ್ರವನ್ನು ‘ಭಾಷಾತ್ರಿಶೂಲ’ ಎಂದು ಕರೆದರು. 
 ಕುವೆಂಪು “ಉತ್ತರದ ಕತ್ತೆಯದು ಗಂಗೆ ಮಿಂದೈತರಲು ದಕ್ಷಿಣದ ದೇಶಕದು ಕುದುರೆಯಹುದೇ!” ಎಂದು ಹಿಂದಿಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ.
3. 3.  ಇಂಗ್ಲಿಷ್ ಪರಕೀಯ ಭಾಷೆ ಎಂಬುದು ನಿಜ, ಆದರೆ ಹಿಂದಿಯೂ ಕನ್ನಡಿಗರಿಗೆ ಪರಕೀಯ ಭಾಷೆಯೇ. ಆದರೆ ಇಂಗ್ಲಿಷ್‍ನಲ್ಲಿ ಕನ್ನಡದಲ್ಲಿ ದೊರೆಯದ ಜ್ಞಾನ ಸಿಕ್ಕುತ್ತದೆ;  ಹೀಗಾಗಿ ಅದು ಅಪೇಕ್ಷಣೀಯ.

No comments: