Thursday 29 January 2015

ರಾಷ್ಟ್ರಕವಿ ಪಟ್ಟ

ಚರ್ಚೆ
ರಾಷ್ಟ್ರಕವಿ ಪಟ್ಟ

ಈಗ ಮತ್ತೊಮ್ಮೆ ಹುಡುಕಾಟ ಆರಂಭವಾಗಿದೆ, ಅದೇರಾಷ್ಟ್ರಕವಿಪಟ್ಟ ಯಾರಿಗೆ ಕಟ್ಟಬೇಕು ಎಂಬ ಬಗ್ಗೆ. ಒಂದು ವರ್ಷದ ಹಿಂದೆ ತೀರಿಕೊಂಡ ಡಾ. ಜಿ. ಎಸ್. ಶಿವರುದ್ರಪ್ಪನವರ ಸ್ಥಾನವನ್ನು ಭರ್ತಿ ಮಾಡಲು ರಾಜ್ಯ ಈಗ ಸರ್ಕಾರಆಯ್ಕೆ ಸಮಿತಿಎಂಬ ಪಟ್ಟದ ಆನೆಯನ್ನು ಕಳಿಸಿದೆ: ತಮ್ಮ ಕೊರಳಿಗೇ ಮಾಲೆ ಬಿದ್ದಂತೆ ಕೆಲವರಿಗೆ ಈಗಾಗಲೇ ಕನಸು ಬೀಳಲಾರಂಭಿಸಿರಬಹುದು. ಆದರೆ ಆನೆ ಮಾಲೆ ಹಿಡಿದು ದಿಕ್ಕು ತೋಚದೆ ರಾಷ್ಟ್ರಕವಿಗೆ ಇರಬೇಕಾದ ಅರ್ಹತೆಗಳೇನು ಎಂದು ಪಟ್ಟಿಮಾಡಿ, ತಮ್ಮ ಸಲಹೆ ನೀಡಬೇಕೆಂದು ಜನಗಳ ಬೆಂಬಲ ಕೋರಿದೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಕುರಿತು ಸಮಿತಿಯ ಪರವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪತ್ರಿಕೆಗಳಲ್ಲಿ ಜಾಹೀರಾತು ಮೂಲಕವಾಗಿಯೂ ಪ್ರಕಟಿಸಿದೆ; ಇಂಗ್ಲಿಷ್ ಪತ್ರಿಕೆಗಳಲ್ಲಿಯೂ. `ಸುವರ್ಣ ಕರ್ನಾಟಕ' ಸಂಭ್ರಮದ ಸನ್ನಿವೇಶದಲ್ಲಿಯೂ ಕನ್ನಡದ ಹಿರಿಯ ಕವಿಯೊಬ್ಬರಿಗೆ ರಾಷ್ಟ್ರಕವಿ ಎಂಬ ಪಟ್ಟ ಕಟ್ಟಲು ಸರ್ಕಾರ ಯೋಚಿಸುತ್ತಿದ್ದುದು ಜನರ ನೆನಪಿನಲ್ಲಿ ಇನ್ನೂ ಉಳಿದಿರಲಿಕ್ಕೆ ಸಾಕು. (ಹೀಗೆ ಮಾಡಲು ಈಗಿನಂತೆಯೇ ಆಗಲೂ ಸಾಹಿತ್ಯ ವಲಯದ ಕೆಲವರು ಸರ್ಕಾರವನ್ನು ಒತ್ತಾಯಿಸಿದ್ದು ಎಲ್ಲರಿಗೂ ತಿಳಿದ ವಿಷಯ). ಪ್ರಶಸ್ತಿಯು ಹತ್ತು ಲಕ್ಷ ರೂಪಾಯಿಗಳ ಮೊತ್ತವನ್ನು ಹೊಂದಿರುವುದಲ್ಲದೆ, ಇದಕ್ಕೆ ಆಯ್ಕೆಯಾದ ಸಾಹಿತಿಯು ಜೀವನಪರ್ಯಂತ ತನ್ನ ಹೆಸರಿಗೆ ರಾಷ್ಟ್ರಕವಿ ಎಂದು ಸೇರಿಸಿಕೊಳ್ಳಬಹುದು. ಅವರ ಎಲ್ಲ ಕೃತಿಗಳನ್ನೂ ಸರ್ಕಾರ ಮರು ಪ್ರಕಟಿಸಿ ಜನರಿಗೆ ಕಡಿಮೆ ದರದಲ್ಲಿ ನೀಡುವುದೂ ಸಂಪ್ರದಾಯ. ಈವರೆಗೆ ಕನ್ನಡದಲ್ಲಿ ಮೂವರು ರಾಷ್ಟ್ರಕವಿಗಳು ಆಗಿ ಹೋಗಿದ್ದಾರೆ: ಮೊದಲನೆಯವರು ಮದ್ರಾಸ್ ಪ್ರೆಸಿಡೆನ್ಸಿಯು ನೀಡಿದ್ದ ಪಟ್ಟವನ್ನು ಹೊತ್ತ ಮಂಜೇಶ್ವರ ಗೋವಿಂದ ಪೈ ಅವರು; ಎರಡನೆಯವರು ಕರ್ನಾಟಕ ಏಕೀಕರಣವಾದ ಬಳಿಕ ರಾಷ್ಟ್ರಕವಿ ಮತ್ತುಕರ್ನಾಟಕ ರತ್ನವಾದ ಕುವೆಂಪು ಅವರು. ಆನಂತರ ದೀರ್ಘಕಾಲದ ಬಿಡುವಿನ ಬಳಿಕ ಡಾ. ಜಿ. ಎಸ್. ಶಿವರುದ್ರಪ್ಪನವರು. ಅವರ ನಿಧನದಿಂದಾದ ತೆರವಿನಿಂದಾಗಿ ಪಟ್ಟವನ್ನು ತುಂಬಲು ಸರ್ಕಾರ ಈಗ ನಿರ್ಧರಿಸಿದೆ.
   ಬಗ್ಗೆ ಅನೇಕ ಸಂದೇಹಗಳು ನನ್ನನ್ನು, ನನ್ನಂತಹವರನ್ನು ಆಗ ಕಾಡಿದಂತೆಯೇ ಈಗಲೂ ಕಾಡುತ್ತಿವೆ. ನಮ್ಮಲ್ಲಿ ಅನೇಕ ಮಂದಿ ಜಗದ್ಗುರುಗಳಿದ್ದಾರೆ; ಆದರೆ ಇರುವುದು ಒಂದೇ ಜಗತ್ತು; ಹೀಗಾಗಿ ಅವರು ಯಾವ ಜಗತ್ತಿನ ಗುರುಗಳು ಎಂದು ಕವಿಯೊಬ್ಬರು ಗೇಲಿಮಾಡಿದ್ದರು. ಹಾಗೆಯೇ ಆಯ್ಕೆಯಾಗುವ ಕನ್ನಡದ ಕವಿ ಯಾವ ರಾಷ್ಟ್ರದ ಕವಿ ಎನ್ನಿಸಿಕೊಳ್ಳುತ್ತಾರೆ? ಆಯ್ಕೆಯಾದವರು, ಆಗುವವರು ಕರ್ನಾಟಕದ ರಾಷ್ಟ್ರಕವಿಯೇ? ಸಾಮಾನ್ಯವಾಗಿ ರಾಷ್ಟ್ರ ಎಂಬ ಪದವನ್ನು nation ಎಂಬ ಅರ್ಥದಲ್ಲಿ ಭಾರತವನ್ನು ಸೂಚಿಸಲು ಬಳಸುತ್ತಿದ್ದೇವೆ; ರಾಷ್ಟ್ರಗೀತೆ, ರಾಷ್ಟ್ರಪಿತ, ರಾಷ್ಟ್ರೀಯ ಇತ್ಯಾದಿ ರೂಪಗಳನ್ನು ನೋಡಬಹುದು; ಕರ್ನಾಟಕದಂತಹ ಘಟಕವನ್ನು ರಾಜ್ಯ ಎಂದು ಗುರುತಿಸಲಾಗುತ್ತದೆ. ಪ್ರಶಸ್ತಿಯನ್ನು ನೀಡುತ್ತಿರುವುದು ಕರ್ನಾಟಕ ಸರ್ಕಾರ; ಹೀಗಾಗಿ ಸಾಂಪ್ರದಾಯಿಕ ಅರ್ಥದಲ್ಲಿ ತೆಗೆದುಕೊಂಡರೆ ಅದು ಇಡೀ ರಾಷ್ಟ್ರವ್ಯಾಪ್ತಿಯ ಪ್ರಶಸ್ತಿಯನ್ನು ನೀಡಬಹುದೇ? ಅಥವಾ ನಮ್ಮ ಸರ್ಕಾರವೇನಾದರೂ ಕರ್ನಾಟಕವೇ ನಿಜವಾದ ಅರ್ಥದಲ್ಲಿ ರಾಷ್ಟ್ರ (nation), ಭಾರತವೇನಿದ್ದರೂ ಅಂಥ ಹಲವಾರು ರಾಷ್ಟ್ರಗಳ ಒಂದು ಒಕ್ಕೂಟ (federation) ಮಾತ್ರ ಎಂಬ ಸತ್ಯಾಂಶವನ್ನು ದೃಢಪಡಿಸಿಕೊಂಡು ಕಾರ್ಯ ಮಾಡುತ್ತಿದೆಯೇ? ಇಲ್ಲದಿದ್ದರೆ ಕವಿಗೆ ರಾಜ್ಯಕವಿ ಎನ್ನಬೇಕಾಗಿತ್ತು; ಅಥವಾ ನಾಡಗೀತೆ ಎಂಬಂತೆ `ನಾಡಕವಿ' ಎನ್ನಬೇಕಾಗಿತ್ತು. ನಮ್ಮ ಕವಿಯು ಇಡೀ ಭಾರತವ್ಯಾಪ್ತಿಯ ದರ್ಜೆಯವರು, ಔನ್ನತ್ಯವಿರುವವರು ಎಂಬ ಅಭಿಮಾನವನ್ನು ಇದು ಸೂಚಿಸಿದರೆ, ರಾಷ್ಟ್ರಕವಿ ಎಂದೇಕೆ, ವಿಶ್ವಕವಿ ಎಂದೇ ಕರೆಯಬಹುದಲ್ಲಕನ್ನಡ ಜಗತ್ತು ಎಂಬುದು ಸುಂದರ ಕಲ್ಪನೆ; ಆದ್ದರಿಂದ `ಜಗತ್ಕವಿ' ಎಂದೂ ಕರೆಯಬಹುದು. ರವೀಂದ್ರನಾಥ ಠಾಕೂರರನ್ನು `ವಿಶ್ವಕವಿ' ಎಂದು ಕರೆದುದಕ್ಕೆ ಅವರಿಗೆ ನೋಬೆಲ್ ಪ್ರಶಸ್ತಿ, ಅಂದರೆ ಜಾಗತಿಕ ಮಟ್ಟದ ಪ್ರಶಸ್ತಿ ಬಂದುದು ಕಾರಣವಾದಂತೆ, ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ ಕವಿ ರಾಷ್ಟ್ರಕವಿಯಾಗುವುದಿಲ್ಲವೇ? ಹಾಗಾದರೆ ಭಾರತ(ರಾಷ್ಟ್ರ)ಮಟ್ಟದಲ್ಲಿ ನೀಡಲಾಗುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿಗಳೆಲ್ಲ ರಾಷ್ಟ್ರಕವಿಗಳೇ ಅಲ್ಲವೇ, ಅಂತಹ ಸಾಹಿತಿಗಳು, ರಾಷ್ಟ್ರಸಾಹಿತಿಗಳಲ್ಲವೇ? ಕೇಂದ್ರ ಸರ್ಕಾರ ಕೊಡಮಾಡುವ `ಭಾರತರತ್ನ'ದಂತೆ ಹಿಂದೆ ಕರ್ನಾಟಕ ಸರ್ಕಾರ ತನ್ನ ಪರಿಧಿಯಲ್ಲಿ `ಕರ್ನಾಟಕರತ್ನ' ಪ್ರಶಸ್ತಿ ನೀಡಿತ್ತು. ಹಾಗೆಯೇ  ರಾಷ್ಟ್ರಕವಿ ಎಂಬುದರ ಬದಲು ಕರ್ನಾಟಕಕವಿ ಎಂಬ ಶಬ್ದ  ಸೂಕ್ತವಾಗಬಹುದೇ?
   ಇನ್ನೊಂದು ಸಮಸ್ಯೆ. ರಾಷ್ಟ್ರಕವಿಯನ್ನಾಗಿ ಆಯ್ಕೆಮಾಡುವುದು ಪದ್ಯ ಬರೆಯುವವರ ಪೈಕಿ ಮಾತ್ರವೇ? ಅತ್ಯಂತ ಶಕ್ತಿಶಾಲಿ ಗದ್ಯ ಬರೆದ ಸಾಹಿತಿಯೂ ಇದಕ್ಕೆ ಅರ್ಹನಾಗುವುದಿಲ್ಲವೇ? `ಗದ್ಯಂ ಕವೀನಾಂ ನಿಕಷಂ ವದಂತಿ' ಎಂಬ ಮಾತಿದೆ; ಗದ್ಯವು ಕವಿಯ ಯೋಗ್ಯತೆಯನ್ನು ಪರೀಕ್ಷಿಸುವ ಒರೆಗಲ್ಲು ಎಂಬುದು ಇದರರ್ಥ. ಅಂದರೆ ಗದ್ಯವೂ ಕಾವ್ಯವೇ; ಗದ್ಯ ಬರೆದವನೂ ಕವಿಯೇ. ಹಾಗೆಯೇ ನಾಟಕಕಾರರೂ; ನಾಟಕವನ್ನು ದೃಶ್ಯಕಾವ್ಯ ಎನ್ನುತ್ತಿದ್ದರಲ್ಲ. ಎಂದರೆ ಹಿಂದೆ ಕವಿ ಎಂಬುದು ಪದ್ಯ, ಗದ್ಯ, ನಾಟಕ ಮೂರನ್ನು ಬರೆದವರನ್ನೂ ಒಳಗೊಳ್ಳುತ್ತಿತ್ತು. ಹಾಗಾಗಿ ಗದ್ಯ-ನಾಟಕಗಳನ್ನು ಬರೆದವರನ್ನು ಪ್ರಶಸ್ತಿಯ ವ್ಯಾಪ್ತಿಯಿಂದ ಹೊರಗಿರಿಸುವುದು ಸರಿಯೇ? ಅಥವಾ ಗದ್ಯ ಲೇಖಕರನ್ನೂ ನಾಟಕಕಾರರನ್ನೂ ರಾಷ್ಟ್ರಕವಿ ಪ್ರಶಸ್ತಿಗೆ ಸೂಚಿಸಿದರೆ ಅದನ್ನು ಪರಿಗಣಿಸಲಾಗುತ್ತದೆಯೇ? ಅಥವಾ ಅವರೂ ಅರ್ಹತೆ ಪಡೆಯಲು ಒಂದಷ್ಟನ್ನಾದರೂ ಪದ್ಯ ಬರೆದಿರಬೇಕು ಎಂದು ನಿರೀಕ್ಷಿಸಲಾಗುತ್ತದೆಯೇ? ಅಥವಾ ಹೆಸರು ರಾಷ್ಟ್ರಕವಿ’ಯಾದರೂ ಒಟ್ಟಾರೆ ಶ್ರೇಷ್ಠ ಸಾಹಿತ್ಯ ರಚಿಸಿದವರನ್ನು ಪಟ್ಟಕ್ಕೆ ಆಯ್ಕೆಮಾಡಲಾಗುತ್ತದೆಯೇ? ಆಗ ಅಂಥವರುರಾಷ್ಟ್ರಕವಿಯಾಗುವುದರ ಬದಲುರಾಷ್ಟ್ರಲೇಖಕರಾಗುತ್ತಾರೇನೋ. ಈಗ ಆಯ್ಕೆ ಸಮಿತಿಯು ಇರಿಸಿಕೊಂಡಿರುವ ಮಾನದಂಡಗಳನ್ನು ಸರ್ಕಾರ ಸೂಚಿಸಿದೆಯೋ, ಅಥವಾ ಆಯ್ಕೆ ಸಮಿತಿಯೇ ಬಗ್ಗೆ ನಿರ್ಧಾರಗಳನ್ನು ಕೈಗೊಂಡಿದೆಯೋ?
   ರಾಷ್ಟ್ರಕವಿಯಾಗುವವರು ಸರ್ಕಾರದ ಕವಿಗಳಾಗುತ್ತಾರೆಯೇ? ಹಿಂದೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಎನ್‍ಟಿಆರ್ ಮುಖ್ಯಮಂತ್ರಿಯಾಗಿದ್ದಾಗ ಕೆಲವು ಮಂದಿ ಸಾಹಿತಿಗಳು, ಕಲಾವಿದರುಗಳಿಗೆ `ಆಸ್ಥಾನವಿದ್ವಾನ್' ಪಟ್ಟ ಕಟ್ಟಲಾಗುತ್ತಿತ್ತು; ಈಗಲೂ ಪರಿಪಾಟ ಅಲ್ಲಿ ಇದೆಯೋ ತಿಳಿಯದು. ಸಿನಿಮಾಗಳಲ್ಲಿ ರಾಜನ ಪಾರ್ಟು ಮಾಡಿ ಮಾಡಿ ತಮಗೆ ಪರಿಚಿತವಾಗಿದ್ದ ಪರಿಕಲ್ಪನೆಯನ್ನು ಎನ್‍ಟಿಆರ್ ಮುಖ್ಯಮಂತ್ರಿಯಾಗಿ ಜಾರಿಗೆ ತಂದುದು ಸರಿಯೇ! ವಿದ್ವಾಂಸರನ್ನು ತಮ್ಮ ಆಸ್ಥಾನದವರು ಎಂದು ತಿಳಿಯುವ ಮನೋಭಾವವೂ ಅವರದಾಗಿದ್ದಂತೆ ಕಾಣುತ್ತದೆನಮ್ಮ ಪಂಪನಂತಹ ಕವಿಯೂ ರಾಜರ ಆಸ್ಥಾನದಲ್ಲಿದ್ದು ಅವನಿಂದ ಅಗ್ರಹಾರ ಪಡೆದು ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿದ. ಪಂಪನಿಂದಾಗಿ ಅರಿಕೇಸರಿ ಅಜರಾಮರನಾದ. ಸರ್ಕಾರದ ರಾಷ್ಟ್ರಕವಿ ಪಟ್ಟ ಪಡೆಯುವವರು ಹೀಗೆಯೇ ಸರ್ಕಾರವನ್ನು ಸದಾ ಬೆಂಬಲಿಸುತ್ತಲೂ, ವೈಭವೀಕರಿಸುತ್ತಲೂ ಇರಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆಯೇ? ಅಂದರೆ ಪಟ್ಟಕ್ಕೆ ಬಂದ ಕವಿ ಸರ್ಕಾರದ ಕವಿಯಾಗುತ್ತಾರೆಯೇ? ಅವರು ಸರ್ಕಾರವನ್ನು ಟೀಕಿಸುವ ಅಧಿಕಾರವನ್ನು (ಹೊಂದಿದ್ದರೆ) ಮುಂದೆಯೂ ಉಳಿಸಿಕೊಳ್ಳಬಹುದೇ? ಅಥವಾ ಟೀಕಿಸುವ ಜಾಯಮಾನವಿಲ್ಲದವರನ್ನೇ ಅದಕ್ಕೆ ಆಯಬೇಕೆಂಬ ಸೂಚನೆಯೇನಾದರೂ ಇದೆಯೇ? ಅಲ್ಲದೆ, ಇಂತಹ ನಿರೀಕ್ಷೆಗಳಿದ್ದರೆ ಬೇರೊಂದು ಪಕ್ಷದ ಸರ್ಕಾರ ಬಂದಾಗ ಅವರ ನೀತಿ ಹೇಗಿರಬೇಕು?
ಇತರ ಪ್ರಶಸ್ತಿಗಳಂತೆ ರಾಷ್ಟ್ರಕವಿ ಪಟ್ಟಕ್ಕೆ ಕೃತಿಯೊಂದು ಆಧಾರವಾಗದೆ ಒಬ್ಬ ಸಾಹಿತಿಯ ಸಮಗ್ರ ಸಾಧನೆ ಅಳತೆಗೋಳಾಗಬೇಕಾಗುತ್ತದೆ. ಈಗ ಜನಗಳಿಂದ ಬರುವ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಜವಾಬ್ದಾರಿ ಮಾತ್ರ ಆಯ್ಕೆ ಸಮಿತಿಯದಾಗಿರುತ್ತದೇನೋ. ಈವರೆಗೆ ಬದುಕಿರುವವರಿಗೆ ಮಾತ್ರ ಪ್ರಶಸ್ತಿ ನೀಡುವ ಸಂಪ್ರದಾಯವಿದೆ; ಅರ್ಹರು ಸಿಗದಿದ್ದರೆ ಪ್ರಶಸ್ತಿಯನ್ನು ಕೊಡದಿರುವ ನಿರ್ಧಾರವನ್ನೂ ತೆಗೆದುಕೊಳ್ಳಬಹುದೆಂದು ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ. ಹಾಗಾದಾಗ ಮತ್ತೆ ನಮ್ಮ ನಾಡಿನ ಸಾಹಿತ್ಯವಲಯದಲ್ಲಿ ಶೂನ್ಯತೆ ಆವರಿಸಿಬಿಡಬಹುದು. ಆದ್ದರಿಂದ ಮುಂದೆ ಮರಣೋತ್ತರವಾಗಿಯೂ ನೀಡಬಹುದೆಂಬ ನಿರ್ಧಾರಕ್ಕೆ ಸಮಿತಿ ಬರಬಹುದೇ? ಸರ್ಕಾರವೇ ಕೊಡುವ ಪಂಪ ಪ್ರಶಸ್ತಿಗೆ ಇದುವರೆಗೆ ಕೆಲವರನ್ನು ಮರಣೋತ್ತರವಾಗಿ ಆಯ್ಕೆ ಮಾಡಲಾಗಿದೆ. ಇದನ್ನೂ ಹಾಗೆಯೇ ಮಾಡುವ ಅವಕಾಶವಿದ್ದರೆ ಮೊದಲ ಪ್ರಶಸ್ತಿಯನ್ನು ನಮ್ಮ ‘ಆದಿಕವಿ’ಯಾದ ಪಂಪನಿಗೇ ಕೊಡಬೇಕೆಂದು ನಾನು ಸಮಿತಿಗೆ ನಮ್ರನಾಗಿ ಸೂಚಿಸಬಯಸುತ್ತೇನೆ. (ಪಂಪ ಪ್ರಶಸ್ತಿಯನ್ನೂ ಮೊದಲು ಅವನಿಗೇ ಕೊಡಬೇಕಾಗಿತ್ತು ಎಂಬುದು ನನ್ನ ಅಭಿಮತ). ಪಟ್ಟವನ್ನು ಇನ್ನು ಮುಂದೆ ಸದರಿ ರಾಷ್ಟ್ರಕವಿಯು ತೀರಿಕೊಂಡ ದುರದೃಷ್ಟಕರ ಪ್ರಸಂಗದಲ್ಲಿ ಇಂತಿಷ್ಟು ಅವಧಿಯೊಳಗಾಗಿ ನೀಡುವ ನಿರ್ಧಾರವನ್ನೇನಾದರೂ ಸರ್ಕಾರ ಮಾಡಿದೆಯೇ, ಸಮಿತಿ ಕುರಿತೂ ಸಲಹೆ ನೀಡಬಹುದಲ್ಲವೇ? ಪ್ರಶಸ್ತಿಯ ಆಯ್ಕೆಗೆ ಈಗ ನಿರ್ಧರಿಸಿರುವಂತೆ ಜಾಹೀರಾತು ಮೂಲಕ ಜನಾಭಿಪ್ರಾಯ ಪಡೆಯುವ ಬದಲು ಒಂದು ಸಣ್ಣ ಗ್ಯಾಲಪ್ ನಡೆಸಿದ್ದರೆ ಹೇಗಾಗುತ್ತಿತ್ತು? ಟಿವಿ ವಾಹಿನಿಯೊಂದು ಹಿಂದೆ `ವರ್ಷದ ಕನ್ನಡಿಗ'ನನ್ನು ಆರಿಸಲು ನಡೆಸಿದಂತೆ ಇದಕ್ಕೂ ಜನಾಭಿಪ್ರಾಯ ಸಂಗ್ರಹ ಮಾಡಿದ್ದರೆ ಆಗುತ್ತಿತ್ತೇನೋ. ಪಟ್ಟಕ್ಕೆ ತಮಗೆ ಅರ್ಹತೆಯಿದೆಯೆಂದು ಭಾವಿಸುವ ಅಭ್ಯರ್ಥಿಗಳು ಜನರ ಮುಂದೆ  ತಮ್ಮ ಸಾಧನೆಯ ಬಗ್ಗೆ ಒಂದಷ್ಟು ವಿವರಿಸಿ ಹೇಳುವ ಅವಕಾಶವಿರುತ್ತಿತ್ತಲ್ಲ! ಬಾರಿ ಆಯ್ಕೆಯಾಗದವರು ಮುಂದಿನ ಬಾರಿಯಾದರೂ ಪಟ್ಟ ಸಿಕ್ಕೀತೇನೋ ಎಂದು ಆಸೆ ಹೊಂದಿರಬಹುದಾಗಿತ್ತು. ಏನೋ ನನಗೆ ಮತ್ತು ನನ್ನಂತಹವರಿಗೆ ವಿಷಯ ಗೊಂದಲಮಯವಾಗಿ ಕಾಣುತ್ತಿದೆ.
                                 ******
                                                             

No comments: