ಪಂಪನ 'ಆದಿಪುರಾಣ'ದಲ್ಲಿ ಜೀವ ಮಾಗುವ ಪರಿ
ಬದುಕಿನ ಸಾಫಲ್ಯದ
ಬಗ್ಗೆ, ಜೀವನ ಸಾರ್ಥಕತೆಯ ಬಗ್ಗೆ ನಾವು ಮಾತನಾಡುತ್ತೇವೆ. ಪ್ರಾಕೃತಿಕ ಜೈವಿಕ ಕ್ರಿಯೆಯಾದ ಸಂತಾನಾಭಿವೃದ್ಧಿಯಲ್ಲದೆ
ನಮ್ಮ, ಅಂದರೆ ಮಾನವನ ಬದುಕಿನ ಗುರಿಯೇನು ಆಥವಾ ಅದಕ್ಕೊಂದು ಗುರಿ ಇದೆಯೇ? ಗುರಿ ಎಂಬುದು ಇರುವುದು
ನಿಶ್ಚಿತವಾದರೆ ಅದರ ಸ್ವರೂಪವೇನು? ಅಂಥ ಗುರಿ ಮಾನವನ ಬಾಳಿಗೆ ಮಾತ್ರ ಅನ್ವಯಿಸುವಂಥದೇ ಅಥವಾ ಮಿಕ್ಕ
ಜೀವಜಾತಿಗಳಿಗೂ ಗುರಿ ಎಂಬುದಿದೆಯೇ - ಇಂಥ ಪ್ರಶ್ನೆಗಳ ಮಾಲೆಯು ಅನಾದಿ ಕಾಲದಿಂದಲೂ ಮಾನವನನ್ನು ಕಾಡುತ್ತಲೇ
ಬಂದಿದೆ. ಇತರ ಪ್ರಾಣಿಗಳ ಬಗ್ಗೆ ನಾವೇನೂ ಹೇಳಲಾರೆವು, ಆ ಬಗ್ಗೆ ಹೇಳುವುದಾದರೆ ಆಯಾ ಪ್ರಾಣಿಗಳೇ ಹೇಳಬೇಕು.
ಹೀಗಾಗಿ ನಾವು ಮಾನವ ಕುಲದ ಗುರಿಯ ಬಗ್ಗೆ ಮಾತ್ರ ಆಲೋಚನೆ ಮಾಡಬಹುದೇನೋ? ಆಲೋಚನೆ ಎಂದೆ, ಇರುವುದೆಲ್ಲ
ನಮ್ಮ ಕದೃಷ್ಟಿಕಿಯಲ್ಲಿ ಇರುವುವು, ನಮ್ಮ ಅನಿಸಿಕೆಯ ಹೊರತಾಗಿ ಅದು ಇದೆಯೋ ಇಲ್ಲವೋ ಪತ್ತೆ ಹಚ್ಚುವುದು
ಹೇಗೆ. ಆಲೋಚನೆ ಇಲ್ಲದಿದ್ದರೆ ಇರುವಿಕೆಯೂ ಇಲ್ಲ. “Cogito, ergo, sum” ಅಂದರೆ ನಾನು ಯೋಚಿಸುತ್ತೇನೆ, ಆದ್ದರಿಂದ, ನಾನು ಇದ್ದೇನೆ ಎಂದು ಡೆಕಾರ್ಟ್
ಹೇಳಿದನಂತೆ. ಎಲ್ಲ ಇರುವಿಕೆಯೂ ನಮ್ಮ ಆಲೋಚನೆಯಿಂದ ಹುಟ್ಟಿದಂಥವೇ ಎನ್ನಬಹುದೇನೋ. ಆದ್ದರಿಂದ ಮಾನವ
ಬದುಕಿನ ಗುರಿಯೂ ನಮ್ಮ ಆಲೋಚನೆಯ ಫಲವೇ. ಅಲ್ಲದೆ ಎಲ್ಲರೂ ಒಂದೇ ಬಗೆಯಲ್ಲಿ ಈ ಗುರಿಯನ್ನು ನಿರ್ದೇಶಿಸುವುದಿಲ್ಲ,
ಅಥವಾ ಎಲ್ಲ ಮಾನವರ ಆದರ್ಶವೂ ಒಂದೇ ರೂಪದ್ದಲ್ಲ, ಏಕೆಂದರೆ ಇಡೀ ಮಾನವ ಕುಲದ ಆದರ್ಶ ಇಂಥದು ಎಂದು ಎಲ್ಲರ
ಪರವಾಗಿ ಯಾರೋ ಒಬ್ಬ ಹೇಗೆ ನಿರ್ಧರಿಸಬಲ್ಲ? ಹಾಗೆಂದು ಎಷ್ಟು ಜನರಿದ್ದಾರೆಯೋ ಅಷ್ಟೊಂದು ಗುರಿಗಳಿರುವಂತೆ
ನಮಗೆ ಕಾಣುವುದಿಲ್ಲ. ಯಾಕೆಂದರೆ ಎಲ್ಲರೂ ಆಲೋಚಿಸುವುದಿಲ್ಲವಲ್ಲ, ಅಥವಾ ಈ ಕುರಿತು ಆಲೋಚನೆ ಮಾಡಲಾರರೇನೋ.
ಹಾಗಾಗಿ ಯಾವನೋ ಆಳವಾಗಿ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದು “ಇದು ಮಾನವನ ಗುರಿ” ಎಂದು ಹೇಳಿ ಅದನ್ನು
ಇತರರ ಬಳಿ ವಿವರಿಸಿದಾಗ ಅನೇಕರು ಅದರ ತಾರ್ಕಿಕತೆಯಿಂದಲೋ, ರೋಚಕತೆಯಿಂದಲೋ, ಅದು ನೀಡಬಹುದಾದ ಭರವಸೆಯಿಂದಲೋ
ಪ್ರಭಾವಿತರಾಗಿ “ಹೌದು, ಇದು ನಮ್ಮ ಆದರ್ಶ, ಇದನ್ನು ಸಾಧಿಸುವುದು ನಮ್ಮ ಬಾಳಿನ ಗುರಿ” ಎಂದು ಒಪ್ಪಬಹುದು.
ಇಂಥ ಪ್ರಭಾವಶಾಲಿಗಳಾದ ಅನೇಕ ಚಿಂತಕರು ಬಂದು ಹೋಗಿರುವುದರಿಂದ ವಿವಿಧ ಬಣದವರಿಗೆ ವಿಭಿನ್ನ ಗುರಿಗಳು
ಇರುವಂತೆ ನಂಬುತ್ತೇವೆ. ಜೀವನದ ಆತ್ಯಂತಿಕ ಗುರಿ ಯಾವುದು, ನಾವು ತಲುಪಬೇಕಾದ ಬಿಂದು ಯಾವುದು ಎಂದರೆ
ಒಬ್ಬರು, ಮೋಕ್ಷ ಎನ್ನಬಹುದು, ಮತ್ತೊಬ್ಬರು, ನಿರ್ವಾಣ ಎನ್ನಬಹುದು, ಮಗುದೊಬ್ಬರು ಪ್ರಪತ್ತಿ ಎನ್ನಬಹುದು,
ಇನ್ನೂ ಒಬ್ಬರು ಸಾಮರಸ್ಯ ಎನ್ನಬಹುದು. ಇಂಥ ಗುರಿಗಳನ್ನು ನಾವು ತಲುಪಬೇಕಾಗಿರುವುದು ಇಲ್ಲಿ ಬದುಕಿರುವಾಗಲೋ
ಅಥವಾ ತೀರಿದ ಬಳಿಕವೋ ಎಂಬುದೂ ನಮ್ಮ ಮುಂದೆ ಏಳುವ ಪ್ರಶ್ನೆ. ಇಲ್ಲಿಯೇ ಇದನ್ನು ಸಾಧಿಸಬಹುದಾದರೆ,
ಅದನ್ನು ತಲುಪಿದ್ದೇವೆ ಎಂದು ತೀರ್ಪು ಕೊಡುವವರು ಯಾರು? ಅಥವಾ ತೀರಿದ ಮೇಲೆ ಅದನ್ನು ತಲುಪಬಹುದೇ ಹೊರತು
ಇರುವಾಗಲಲ್ಲ, ಬದುಕಿರುವಾಗ ಆ ಗುರಿ ತಲುಪಲು ಸಾಧನೆ ಮಾಡಬೇಕು ಎಂದು ಹೇಳಿದರೆ, ಅದನ್ನು ಒಬ್ಬ ಅಥವಾ
ಒಂದು ಚೇತನ ತಲುಪಿದೆಯೋ ಇಲ್ಲವೋ ಎಂದು ನಿರ್ಧರಿಸುವುದು ಹೇಗೆ? ಆ ಬಗ್ಗೆ ಖಚಿತವಾಗಿ ನಮಗೆ ತಿಳಿವಳಿಕೆಯನ್ನು
ಯಾರು ಕೊಡಬೇಕು? ಬರೀ ಪ್ರಶ್ನೆಗಳು, ಪ್ರಾಯಶಃ ಬದುಕಿನ ಬಹು ಪ್ರಮುಖವಾದ ವಿಷಯಗಳಿಗೆ ಸಂಬಂಧಿಸಿದಂತೆ
ಪ್ರಶ್ನೆಗಳು ಮಾತ್ರ ಸಾಧ್ಯ, ಉತ್ತರ ನಮ್ಮ ಆಲೋಚನೆಗೆ ತಕ್ಕಂತೆ.
ಈ ಸಂದರ್ಭದಲ್ಲಿ ನನಗೆ ಬಸವಣ್ಣನ ಒಂದು ವಚನ ನನ್ನ ನೆನಪಗೆ ಬರುತ್ತದೆ. ಅದು ಹೀಗಿದೆ:
ಭಕ್ತಿಯೆಂಬ ಪೃಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ
ತನಗೆ ಬೇಕೆಂದು ಎತ್ತಿಕೊಂಡ.
ಮರದ ರೂಪಕದ ಮೂಲಕ ತನ್ನ ಪರಿಕಲ್ಪನೆಯ ಮಾನವನ
ಆಯುಷ್ಯದ ಸಾರ್ಥಕ್ಯವನ್ನು ಕುರಿತು ವಚನಕಾರ ಇಲ್ಲಿ ಮಾತನಾಡುತ್ತಿದ್ದಾನೆ. ಒಂದು ಬೀಜದ ಸಾರ್ಥಕ್ಯವಿರುವುದು
ಅದು ಕ್ರಮೇಣ ತನ್ನ ಆವರಣ ಆಕಾರ ಸತ್ವಗಳನ್ನು ಬದಲಿಸಿಕೊಳ್ಳುತ್ತ ಕೊನೆಗೆ ಹಣ್ಣಾಗಿ ತೊಟ್ಟು ಕಳಚಿ
ಬೀಳುವುದರಲ್ಲಿ, ಆಗ ಕೂಡಲಸಂಗಮದೇವ ಆ ಹಣ್ಣನ್ನು ತನಗೆ ಬೇಕು ಎಂದು ಎತ್ತಿಕೊಳ್ಳುವುದರಲ್ಲಿ. ಇಡೀ
ಮನುಷ್ಯ ಸಂಕುಲವೇ ಒಂದು ಮರ, ವ್ಯಕ್ತಿಯೇ ಬೀಜ, ಆ ಬೀಜದ ಸಾರ್ಥಕ್ಯವಿರುವುದು ಯಜಮಾನ ಪ್ರೀತಿಯಿಂದ
ಎತ್ತಿಕೊಳ್ಳುವಂತೆ ಪೂರ್ಣ ಮಾಗಿ ಕೆಳಕ್ಕೆ ಬೀಳುವುದರಲ್ಲಿ. ಬೀಜ ಹಣ್ಣಾಗುವ ಪರಿಯಲ್ಲಿ, ಅಂದರೆ ಜೀವ
ಮಾಗುವ ಪ್ರಕ್ರಿಯೆಯಲ್ಲಿ ಮೂರು ಮುಖ್ಯ ಹಂತಗಳನ್ನು ವಚನಕಾರ ಇಲ್ಲಿ ಗುರುತಿಸುತ್ತಿದ್ದಾನೆ. ಅವುಗಳೆಂದರೆ:
ಭಕ್ತಿ, ವಿಚಾರ ಮತ್ತು ಆಚಾರ ಎಂಬ ನೆಲೆಗಳು. ಮೊದಲು ನಂಬಿಕೆ, ಆನಂತರ ಅದರ ಫಲವಾಗಿ ಪಡೆದ ತಿಳಿವಳಿಕೆ,
ಅದಕ್ಕೆ ಅನುಸಾರವಾಗಿ ಮಾಡುವ ಸಾಧನೆ. ಭಕ್ತಿ ಅಥವಾ ನಂಬಿಕೆಯೇ ಇದರ ನೆಲೆಗಟ್ಟು, ಅದಿಲ್ಲದಿದ್ದಲ್ಲಿ
ಈ ಪರಿಯ ಗುರಿ ಎಂಬುದು ಇರಲು ಸಾಧ್ಯವಿಲ್ಲ. ಮಾನವನ ಬಾಳಿಗೆ ಗುರಿಯೊಂದಿದೆಯೆಂದು ಹೇಳುವವರೆಲ್ಲರಲ್ಲಿಯೂ
ಆಯಾ ಗುರಿಯ ಬಗೆಗಿನ ನಂಬಿಕೆ ಸಮಾನ: ಆದರೆ ಬಾಳಿನ ಗುರಿ ಯಾವುದು ಎಂಬ ಬಗೆಗಿನ ತಿಳಿವಳಿಕೆಯ ವಿಭಿನ್ನತೆಯ
ಕಾರಣದಿಂದ ಬೇರೆ ಬೇರೆ ಪಂಥಗಳವರು ಬೇರೆ ಬೇರೆ ಬಗೆಯಾಗಿ ಬದುಕಿನ ಗುರಿಯನ್ನು ಗುರುತಿಸುತ್ತಾರೆ.
ಈ ತಾತ್ವಿಕತೆಯ ಹಿನ್ನೆಲೆಯಲ್ಲಿ ನಾನು ಪಂಪನ ‘ಆದಿಪುರಾಣ’ದ ಬಗ್ಗೆ ಪ್ರಸ್ತಾಪಿಸುತ್ತೇನೆ.
ಪಂಪನ ಕಾಲ ಕ್ರಿ.ಶ. ಹತ್ತನೆಯ ಶತಮಾನ; ಕನಿಷ್ಠ ಪಕ್ಷ, ಕನ್ನಡ ನಾಡಿನ ಮಟ್ಟಿಗೆ, ನಂಬಿಕೆಗಳ ಪಲ್ಲಟದ
ಕಾಲವೇನೋ. ಅದರಿಂದಾಗಿಯೇ ಪಂಪನ ತಂದೆ ಭೀಮಪಯ್ಯ ಬ್ರಾಹ್ಮಣನಾಗಿದ್ದವನು ಜೈನ ಮತಾವಲಂಬಿಯಾದ. ಪಂಪ ತನ್ನ
ಸುಮಾರು ಮೂವತ್ತೊಂಬತ್ತು-ನಲವತ್ತರ ಪ್ರಾಯದಲ್ಲಿ ಮೊದಲ ಕಾವ್ಯವಾದ ‘ಆದಿಪುರಾಣ’ವನ್ನು ಬರೆದ. ಅವನು
ಆರಿಸಿಕೊಂಡದ್ದು ಇಪ್ಪತ್ತನಾಲ್ಕು ಮಂದಿ ತೀರ್ಥಂಕರರಲ್ಲಿ ಮೊದಲನೆಯವನಾದ ಆದಿದೇವ ಅಥವಾ ವೃಷಭನಾಥನ
ಕಥಾನಕವನ್ನು. ಜೈನರಲ್ಲಿ ದೇವರ ಬಗ್ಗೆ ಶ್ರದ್ಧೆಯಿಲ್ಲ, ಸಾಧನೆಯಿಂದ ಆದರ್ಶವನ್ನು ತಲುಪಿದ ತೀರ್ಥಂಕರರು
ಅವರಿಗೆ ಪೂಜ್ಯರು. ತೀರ್ಥಂಕರ ಎಂದರೆ ಬದುಕನ್ನು ಪವಿತ್ರ ತೀರ್ಥವನ್ನಾಗಿ ಮಾಡಿಕೊಂಡವನು. ದೇಹ ಮತ್ತು
ಮನಸ್ಸುಗಳನ್ನು ಶುಭ್ರಗೊಳಸಿ ಬಾಳನ್ನು ಉನ್ನತಿಗೇರಿಸಿಕೊಂಡವನು. ಅಂತಹವನ ಬಗ್ಗೆ ತನ್ನ ಕಾವ್ಯವಿದ್ದರೂ
ಪಂಪ ಮೂಲತಃ ಒಬ್ಬ ಕವಿ, ಹೀಗಾಗಿ ಅವನು ಈ ಕಾವ್ಯವನ್ನು ರಚಿಸಿದ್ದು ಇಬ್ಬಗೆಯ ಗುರಿಗಳ ಸಾಧನೆಗಾಗಿ.
ಅವನೇ ಹೇಳಿಕೊಳ್ಳುತ್ತಾನೆ
ಇದುವೆ ಸುಕವಿಪ್ರಮೋದ
ಪ್ರದಂ ಇದುವೆ ಸಮಸ್ತ ಭವ್ಯಲೋಪ್ರಮದ
ಪ್ರದಂ ಎನೆ ನೆಗೞ್ದ ಆದಿಪುರಾ
ಣದೊಳ್ ಅಱಿವುದು ಕಾವ್ಯಧರ್ಮಮಂ ಧರ್ಮಮುಮಂ
ಎಂದು. ತನ್ನ ರಚನೆಯು ಕವಿಹೃದಯದ ಜನರಿಗೂ ಭವ್ಯಜನ
ಅಂದರೆ ಜೈನರಿಗೂ ಸಂತೋಷ ತರುತ್ತದೆ ಎಂಬವುದು ಅವನ ವಿಶ್ವಾಸ. ಪಂಪನದೇ ಆಯ್ಕೆಯೆಂದರೆ, ತನ್ನ ಕಾವ್ಯವು
ಹವಿಹೃದಯದವರಿಗೆ ಸಂತೋಷವುಂಟುಮಾಡವುದು ಮೊದಲ ಗುರಿ, ಜೈನರಿಗೆ ಸಂತೋಷಕರವಾಗಬೇಕಾದುದಕ್ಕೆ ಎರಡನೆಯ
ಸ್ಥಾನ. ಏಕೆಂದರೆ ತನ್ನ ಕಾವ್ಯದಲ್ಲಿ ಓದುಗರು ಅರಿಯಬೇಕಾದುದು ಕಾವ್ಯಧರ್ಮವನ್ನು, ಜೊತೆಗೆ ಧರ್ಮವನ್ನೂ.
ಆದರೆ ಈ ಎರಡರ ನಡುವಣ ವ್ಯತ್ಯಾಸವೇನು ಎಂಬುದನ್ನು ಕವಿ ಸ್ಪಷ್ಟಪಡಿಸುವುದಿಲ್ಲ. ಆದರೆ ನಾವು ಅದನ್ನು
ಅರ್ಥವಿಸಬೇಕಾಗುತ್ತದೆ; ಇಲ್ಲದಿದ್ದರೆ ಕವಿಯ ಆಶಯವನ್ನು ತಿಳಿಯಲು ಸಾಧ್ಯವಿಲ್ಲ. ತೀರ್ಥಂಕರನ ಚರಿತೆಯನ್ನು
ಜೈನಮತದ ಚೌಕಟ್ಟು ಮತ್ತು ಪರಿಭಾಷೆಯ ಹಿನ್ನೆಲೆಯಲ್ಲಿ ನಿರೂಪಿಸಿದ್ದರೂ, ಅದು ಮತಧರ್ಮಾತೀತವಾಗಿ ಎಲ್ಲ
ಕವಿಮನೋಭಾವದವರಿಗೆ ಸಂತೋಷ ತರಬೇಕು ಎಂಬುದು ಕವಿಯ ಆಶಯ. ಹಾಗಾದರೆ ಕಾವ್ಯಧರ್ಮ ಎಂದರೇನು? ಇದೂ ವ್ಯಾಖ್ಯಾನಕ್ಕೆ
ಬಿಟ್ಟ ವಿಚಾರ. ಹಾಗಾಗಿ ಅದಕ್ಕೆ ನನ್ನದೇ ಅರ್ಥವನ್ನು ನೀಡಿ ಮುಂದುವರಿಯಬೇಕು. ನನ್ನ ಪ್ರಕಾರ, ಬದುಕಿನ
ನಿಗೂಢಗಳನ್ನು ವೈಯಕ್ತಿಕ ಅನುಭವದ ಮೂಲಕ ಶೋಧಿಸುವುದೇ ಕಾವ್ಯದ ಕೆಲಸ. ಹಾಗಾಗಿ ಬದುಕು ಒಂದೆಡೆ ಜೈನಮತದ
ಪಾರಂಪರಿಕ ಕಲ್ಪನೆಯ ಪ್ರಕಾರ ಹೇಗೆ ಸಾರ್ಥಕವಾಗುತ್ತದೆ ಎಂಬುದನ್ನು ಹೇಳುವುದರ ಜೊತೆಗೆ, ಎಲ್ಲ ಮಾನವರಿಗೂ
ಅನ್ವಯಿಸುವಂತೆ ಬದುಕಿನ ಸಾರ್ಥಕ್ಯದ ಸ್ವರೂಪವೇನು ಎಂಬುದನ್ನು ತನ್ನ ತಿಳಿವಳಿಕೆ ಮತ್ತು ಅನುಭವಗಳ
ಹಿನ್ನೆಲೆಯಲ್ಲಿ ಶೋಧಿಸುವುದು ಈ ರಚನೆಯ ಹಿಂದಿರುವ ಕವಿಯ ಮೂಲ ಆಶಯ.
‘ಆದಿಪುರಾಣ’ದಲ್ಲಿ
ಮೂರು ಭಾಗಗಳಿವೆ: ನಡುವಿನದು ತೀರ್ಥಂಕರ ಜನ್ಮದ ಕಥಾನಕ; ಅದು ಜೈನಕಲ್ಪನೆಯಂತೆ ಗರ್ಭಾವತರಣ, ಜನನ,
ಪರಿನಿಷ್ಕ್ರಮಣ, ಕೇವಲಜ್ಞಾನ ಮತ್ತು ಪರಿನಿರ್ವಾಣಗಳೆಂಬ ಐದು ಹಂತಗಳ ಮೂಲಕ (ಇದನ್ನು ‘ಪಂಚಕಲ್ಯಾಣ’ಗಳೆಂದು
ಕರೆಯುತ್ತಾರೆ) ನಿರೂಪಿತವಾಗಿದ್ದರೆ; ಮೊದಲಿನ ಭಾಗ ಅವನ ಹಿಂದಿನ ಹತ್ತು ಜನ್ಮಗಳ ಅಥವಾ ಭವಾವಳಿಯ ಕತೆ;
ಮೂರನೆಯದು, ಅವನ ಮುಂದಿನ ಪೀಳಿಗೆಯಾದ ಅವನ ಮಕ್ಕಳ ಕತೆ. ಈ ಮೂಲಕ ಇಡೀ ಕಥಾನಕಕ್ಕೆ ಒಂದು ಏಕಕೇಂದ್ರ
ಲಭ್ಯವಾಗುತ್ತದೆ. ಎಲ್ಲವನ್ನೂ ಒಟ್ಟಾರೆ ಪರಿಭಾವಿಸಿದಾಗ, ಇಲ್ಲಿನ ಜನ್ಮಾಂತರದ ಕತೆಗಳು ಒಬ್ಬನೇ ವ್ಯಕ್ತಿಯ
ಬೆಳವಣಿಗೆಯ ವಿವಿಧ ಹಂತಗಳನ್ನು ಸೂಚಿಸುತ್ತದೆ, ಅವನ ಮಕ್ಕಳ ಕತೆ ಅವನ ವ್ಯಕ್ತಿತ್ವದ ಮತ್ತೊಂದು ವಲಯದ
ಅಭಿವ್ಯಕ್ತಿಯಾಗುತ್ತದೆ. ಹೀಗಾಗಿ ಇದು ವ್ಯಕ್ತಿತ್ವವಿಕಾಸದ ಕತೆ. ಋಷಭನಾಥನಿಗೆ ನೇರವಾಗಿ ಸಂಬಂಧಿಸಿದ
ಮೊದಲೆರಡು ಭಾಗಗಳು ಭೋಗನಿರಸನವನ್ನೂ, ಅವನ ಮಕ್ಕಳಿಗೆ ಸಂಬಂಧಿಸಿದ ಮೂರನೆಯ ಭಾಗವು ಅಹಂಕಾರನಿರಸನವನ್ನೂ
ಸೂಚಿಸುತ್ತದೆ ಎಂದು ವಿಮರ್ಶಕರು ಈಗಾಗಲೇ ಗುರುತಿಸಿದ್ದಾರೆ. ಅದು ಸರಿಯೇ. ವ್ಯಕ್ತಿಯ ವ್ಯಕ್ತಿತ್ವದ
ವಿಕಸನ ಎಂದರೆ ಭೋಗ-ಅಹಂಕಾರಗಳನ್ನು ದೂರೀಕರಿಸುವುದೇ ಆಗಿದೆ. ಹಾಗೆ ಸಂಪೂರ್ಣವಾಗಿ ಮಾಡುವುದರ ಮೂಲಕವಾಗಿಯೇ
ತೀರ್ಥಂಕರ ಚೇತನವು ತನ್ನ ಬದುಕನ್ನು ತೊಳೆದು ಪವಿತ್ರವನ್ನಾಗಿ ಮಾಡುತ್ತದೆ. ಕವಿಯ ಆಶಯವೂ ಇದೇ ಅಗಿದೆ:
ತೀರ್ಥಂಕರನ ಬಾಳು ಎಂದರೆ ಕೇವಲ ಜೈನ ಪರಿಕಲ್ಪನೆಗೆ ಅನುಗುಣವಾಗಿರುವುದು ಮಾತ್ರವಲ್ಲದೆ, ಜೈನ ಆವರಣವನ್ನು
ಕಳಚಿದರೆ ಋಷಭನಾಥನ ಬದುಕು ಒಟ್ಟಾರೆ ಮನುಷ್ಯನ ಬದುಕು ಸಾರ್ಥಕವಾಗುವುದರ ಪರಿಯನ್ನು ಸಂಕೇತಿಸುತ್ತದೆ
ಎಂಬುದು. ಇದೇ ಪ್ರಾಯಶಃ ಪಂಪನ ಮನಸ್ಸಿನಲ್ಲಿದ್ದ ಕಾವ್ಯಧರ್ಮದ ಸ್ವರೂಪ.
ಜಯವರ್ಮನೆಂಬುವನು
ಮಹಾಬಳ, ಲಲಿತಾಂಗ, ವಜ್ರಜಂ, ಆರ್ಯ, ಶ್ರೀಧರದೇವ, ಸುವಿಧಿ, ಅಚ್ಯುತೇಂದ್ರ, ವಜ್ರನಾಭಿ, ಅಹಮಿಂದ್ರ
ಗ ಈ ಜನ್ಮಗಳನ್ನು ಪೂರೈಸಿ ಹತ್ತನೆಯ ಜನ್ಮದಲ್ಲಿ ಆದಿನಾಥ ಹುಟ್ಟುತ್ತಾನೆ. ಇವರೆಲ್ಲ ರಾಜರು, ಚಕ್ರವರ್ತಿಗಳು,
ಅಷ್ಟೇ ಅಲ್ಲ, ಅವರ ವಾಸ ವಿವಿಧ ದೇವಲೋಕಗಳಲ್ಲಿ, ಎಲ್ಲ ಬಗೆಯ ಭೋಗಸುಖಗಳನ್ನು ಯಥೇಚ್ಛವಾಗಿ ಸವಿಯುವವರು.
ಜನ್ಮದಿಂಂದ ಜನ್ಮಕ್ಕೆ ಭೋಗಲಾಲಸೆಯ ತೀವ್ರತೆಯು ಕಡಿಮೆಗೊಳ್ಳುವ ಪ್ರಕ್ರಿಯೆಯ ಮೂಲಕ ಇದರ ಅಶಾಶ್ವತತೆಯನ್ನೂ
ಅಸಾರ್ಥಕತೆಯನ್ನೂ ಚಿತ್ರಿಸುವುದು ಇಲ್ಲಿನ ಪರಿ. ಹಾಗೆ ನೋಡಿದರೆ, ತೀರ್ಥಂಕರನ ಕಥೆಯು ಚಿತ್ರಣಗೊಳ್ಳುವ
ಐದು ಹಂತಗಳು ಎಲ್ಲರ ಬದುಕಿನಲ್ಲೂ ಇರುವ ಹಂತಗಳೇ. ಜೀವ ಗರ್ಭದಲ್ಲಿ ಸೇರುವುದು, ಹುಟ್ಟು, ಒಂದು ಸನ್ನಿವೇಶದಲ್ಲಿ
ಬದುಕಿನ ನಶ್ವರತೆಯ ಬಗ್ಗೆ ಬರಬಹುದಾದ ತಿಳಿವು, ವ್ಯಕ್ತಿಯ ಅಸಹಾಯಕತೆಯ ಪರಿಜ್ಞಾನ ಮತ್ತು ಸಾವು -
ಇವೆಲ್ಲ ಎಲ್ಲರಿಗೂ ಇದ್ದದ್ದೇ. ಏರುಂಜವ್ವನದಲ್ಲಿರುವ ಭೋಗಪ್ರಿಯತೆ ವಯಸ್ಸಾದಂತೆ ತಾನಾಗಿ ಕಡಿಮೆಯಾಗುವುದು,
ಇಂದ್ರಿಯಗಳ ಪಟುತ್ವ ಮೊನಚನ್ನು ಕಳೆದುಕೊಳ್ಳುವುದು ಇವೆಲ್ಲ ಎಲ್ಲರ ಬದುಕಿನ ವಿವಿಧ ಮಜಲುಗಳೇ. ಆದರೆ
ತೀರ್ಥಂಕರನ ಸತ್ವ ದೊಡ್ಡದು, ಮತ್ತು ಅರಿವಿನ ಹಿನ್ನೆಯಲ್ಲಿ ಅದನ್ನು ಸಾಧಿಸಲು ಪ್ರಯತ್ನಿಸುವುದು ಗ
ಇದರಿಂದಾಗಿ ಅದು ಭಿನ್ನವಾಗುತ್ತದೆ. ಹತ್ತು ಜನ್ಮಗಳಲ್ಲಿ ಭೋಗಲಾಲಸೆಯು, ದೊಡ್ಡ ವಿಚಾರಗಳು ಕಿವಿಯ
ಮೇಲೆ ಬೀಳುವ ಮೂಲಕ ಉಂಟಾಗುವ, ತಿಳಿವಳಿಕೆಯ ಕಾರಣದಿಂದಾಗಿ ಕಡಿಮೆಯಾಗುತ್ತ ಹೋಗುವ ಮತ್ತು ಅದರ ಸ್ವರೂಪ
ಬದಲಾವಣೆಗೊಳ್ಳುವ ಸೂಕ್ಷ್ಮತೆಗಳು ಪಂಪನ ನಿರೂಪಣೆಯ ಹೈಲೈಟ್‍ಗಳು.
ಇದನ್ನು ಭೋಗನಿರಸನದ ಪ್ರಕ್ರಿಯೆಯ ಮೂರು ಮಜಲುಗಳನ್ನು ಪರಿಶೀಲಿಸುವ ಮೂಲಕ ತಿಳಿಯಬಹುದು.
ಮೊದಲನೆಯ ಹಂತ ಮಹಾಬಳನದು: ಅವನ ಭೋಗಾಪೇಕ್ಷೆಯ ತೀವ್ರತೆ ಎಷ್ಟೆಂದರೆ ವಯಸ್ಸಾದರೂ ಅವನ ಲಾಂಪಟ್ಯ ಕಡಿಮೆಯಾಗದ
ಪ್ರಮಾಣದ್ದು. ಅವನ ಅಮಾತ್ಯರಲ್ಲೊಬ್ಬನಾದ ಸ್ವಯಂಬುದ್ಧ ಎನ್ನುವವನು ತನ್ನ ರಾಜ ಇಳಿವಯಸ್ಸಿನಲ್ಲಿಯೂ
ಹೊಂದಿದ್ದ ಲಾಂಪಟ್ಯವನ್ನು ಕಂಡು ಈ ರೀತಿ ಕಳವಳ-ಅಚ್ಚರಿಗಳಿಗೊಳಗಾಗುತ್ತಾನೆ:
ಮುಸು ಮುತ್ತಂತೆ ತೆರಳ್ದ ತನ್ನ ಮೊಗಂ ಕಂಡಳ್ಕನೋ ಕೂಡೆ ಜೋ
ಲ್ದು ಸಡಿಲ್ದಿರ್ದ ಒಡಲ ಅಳ್ಳೆತನಮಂ ಕಾಣನೋ ಸಂತತ
ವ್ಯಸನೋದ್ರೇಕದ ಕುಂದಂ ಏನೊಣರನೋ ಶಕ್ತಿಕ್ಷಯಂ ಕಾಣನೋ
ಬಿಸುಡಂ ಮುನ್ನಿನ ತನ್ನ ಲಂಪಳಿಕೆಯಂ ಮತ್ತಂ ಜರಾಜರ್ಜರಂ
(ಮುದಿತನದಿಂದ ಮುದ್ದೆಯಾಗಿ ಕಪಿಯದರಂತೆ ಕಾಣುವ
ತನ್ನ ಮುಖವನ್ನು ಕಂಡೂ ಅಳುಕನಲ್ಲ! ಜೋತುಬಿದ್ದಿರುವ ತನ್ನ ಮೈಯ ಅಳ್ಳೆಗಳ ಟೊಳ್ಳುತನವನ್ನು ಗಮನಿಸದೆ
ಇರುವನಲ್ಲ! ವ್ಯಸನೋದ್ರೇಕದಿಂದ ಆದ ಕುಂದನ್ನು ಅವನು ಕಾಣನೇ! ಶಕ್ತಿಯು ಕಡಿಮೆಯಾಗಿರುವುದನ್ನು ಅನುಭವಿಸನೇ!
ಮುಪ್ಪಿನಿಂದ ತರತರಿಸುತ್ತಿದ್ದರೂ ಲಂಪಟತೆಯನ್ನು ಮಾತ್ರ ಬಿಡನಲ್ಲ!)
ಮಹಾಬಳನ ಈ ಸಾಮಾನ್ಯ ಭೋಗಾಪೇಕ್ಷೆಯು ಸ್ವಲ್ಪ ಉತ್ತಮಗೊಂಡು ಮುಂದಿನ ಲಲಿತಾಂಗನ ಜನ್ಮದಲ್ಲಿ
ಮನಃಪ್ರಿಯೆಯಾದ ಸ್ವಯಂಪ್ರಭೆಯಲ್ಲಿನ ತೀವ್ರಾನುರಕ್ತಿಯಾಗಿ
ಮಾರ್ಪಡುತ್ತದೆ. ರ್ದೀಕಾಲ ದೇವಲೋಕದಲ್ಲಿ ಅವಳೊಡನೆ ಲೈಂಗಿಕಸುಖವನ್ನು ಅನುಭವಿಸಿದ ಬಳಿಕ ಅವನಿಗೆ ಸ್ವರ್ಗಚ್ಯುತಿಯಾಗುವ
ಕಾಲ ಸನ್ನಿಹಿತವಾಗುತ್ತದೆ. ಆಗ ಅವನು ತನ್ನ ಸುಖವು ಕೊನೆಗೊಳ್ಳುವುದಲ್ಲ ಎಂಬ ಅಳಲಿನಿಂದ ಈ ರೀತಿ ಪ್ರಲಾಪಿಸುತ್ತಾನೆ:
ಸಂತಸದ ಅಂತವನೆಯ್ದಿ ಸುರತಾಮೃತದೊಳ್ ತಣಿದು ಅೞ್ಕಱಿಂ ಜಿಗಿ
ಲ್ದಂತಿರೆ ಪತ್ತಿ ಮೆಯ್ಗಳ್ ಎರಡಾದೊಡಂ ಏನಸುವೊಂದೇ ನೋೞ್ಪೊಡೆ
ಎಂಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆ ಎನ್ನಂ ಉಯ್ವ
ಅಂತಕನೆಂಬ ಬೂತನೆಲೆ ಮಾಣಿಸಲಾಗದೇ ಪೇೞ್ ಸ್ವಯಂಪ್ರಭೇ
(ಸುರತಸುಖದಲ್ಲಿ ಸಂತೋಷದ ತುತ್ತತುದಿಯನ್ನು
ಮುಟ್ಟಿ ನಮ್ಮ ಮನಸ್ಸುಗಳು ತಣಿದು, ದೇಹಗಳು ಎರಡಾದರೂ ಪ್ರಾಣ ಒಂದೇ ಎಂಬ ರೀತಿಯಲ್ಲಿ ಅವು ಒಂದರೊಡನೊಂದು
ಬೆಸೆದುಕೊಂಡಿವೆ ಎಂಬಂತೆ ನಿನ್ನೊಡನೆ ಭೋಗಿಸಲು ಅವಕಾಶವೀಯದೆ ಯಮನೆಂಬ ಭೂತವು ನನ್ನನ್ನು ಎಳೆದೊಯ್ಯುತ್ತಿರುವಾಗ
ನಿನಗೆ ಬಿಡಿಸಲಾಗದೆ ಸ್ವಯಂಪ್ರಭೇ!)
ಅವನಂತೆಯೇ ಅವನ ನಲ್ಲೆ ಸ್ವಯಂಪ್ರಭೆ ಅವನ ಬಗ್ಗೆ ಇಟ್ಟಿರುವ ಪ್ರೀತಿಯೂ. ಲಲಿತಾಂಗ-ಸ್ವಯಂಪ್ರಭೆಯರ
ಅನುರಾಗ ಎಷ್ಟು ತೀವ್ರವೆಂದರೆ ಅದು ಮುಂದಿನ ಜನ್ಮದಲ್ಲಿಯೂ ಮುಂದುವರಿಯುತ್ತದೆ. ಬೇರೆ ಬೇರೆ ಕಡೆಗಳಲ್ಲಿ
ಅವರು ವಜ್ರಜಂಘ ಮತ್ತು ಶ್ರೀಮತಿಯರಾಗಿ ಹುಟ್ಟುತ್ತಾರೆ. ಪ್ರಾಪ್ತವಯಸ್ಕರಾಗುತ್ತಾರೆ. ಆದರೆ ಅವರಿಬ್ಬರನ್ನೂ
ಹಿಂದಿನ ಜನ್ಮದ ನೆನಪು ಕಾಡುತ್ತದೆ. ಶ್ರೀಮತಿ ತನ್ನ ಪೂರ್ವಜನ್ಮದ ನೆನಪಿನಿಂದಲೇ ವಜ್ರಜಂಘನ ಚಿತ್ರವನ್ನು
ಬರೆಯುತ್ತಾಳೆ, ಅದರಿಂದಾಗಿ ಅವರಿಬ್ಬರೂ ಮತ್ತೆ ಒಂದಾಗುವಂತಾಗುತ್ತದೆ. ಆ ಬಳಿಕ ಅವರಿಬ್ಬರೂ ಗಾಢ ಪ್ರೇಮದಿಂದ
ಕೆಲಕಾಲ ಬಾಳುತ್ತಾರೆ. ಒಂದು ರಾತ್ರಿ ಅವರ ಮಲಗುವ ಮನೆಯನ್ನು ಸಿದ್ಧಪಡಿಸಿದ ಸೇವಕನು ಕೃಷ್ಣಾಗುರುವಿನ
ಧೂಪವನ್ನು ಕೆಂಡದಲ್ಲಿ ಹಾಕಿ ಗವಾಕ್ಷಿಯನ್ನು ತೆರೆಯುವುದನ್ನು ಮರೆತು ಹೋಗುತ್ತಾನೆ. ಗಂಡಹೆಂಡಿರಿಬ್ಬರೂ
ಒಳಬಂದು ಅಪ್ಪಿಕೊಂಡು ಮಲಗುತ್ತಾರೆ. ಒಳಗೆ ಕೃಷ್ಣೋರಗನಂತೆ ಅಗರುವಿನ ಹೊಗೆ ಎಲ್ಲೆಡೆ ಆವರಿಸಿ ಅವರಿಬ್ಬರೂ
ನಿದ್ರಾಪರವಶರಾಗಿರುವಾಗ ಉಸಿರುಕಟ್ಟಿ ಅಪ್ಪಿಕೊಂಡಿರುವಂತೆಯೇ ಸಾಯುತ್ತಾರೆ. ಆ ದೃಶ್ಯವನ್ನು ಕವಿ ಹೀಗೆ
ವರ್ಣಿಸಿ ಉದ್ಗರಿಸುತ್ತಾನೆ:
ಬಿಡದೆ ಪೊಗೆ ಸುತ್ತೆ ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮಂ ಅಂದು
ಒಡಗಳೆದರ್ ಓಪರ್ ಓಪರೊಳ್
ಒಡಸಾಯಲ್ ಪಡೆದರ್ ಇನ್ನವೇಂ ಸಯ್ಪು ಒಳವೇ
(ದಟ್ಟವಾಗಿ ಅಗರುವಿನ ಹೊಗೆ ಅವರಿಸಿ ಆ ಪ್ರಾಣವಲ್ಲಭರು
ಜೊತೆಗೆ ಅಪ್ಪುಗೆಯಲ್ಲಿಯೇ ಸತ್ತರು. ಅದಕ್ಕಿಂತ ಪುಣ್ಯವಿನ್ನೇನಿದೆ!)
ಮೊದಲು ಕೇವಲ ಲೈಂಗಿಕ ಅಪೇಕ್ಷೆಯಾಗಿದ್ದುದು ಜನ್ಮಾಂತರದಲ್ಲಿ ಕ್ರಮೇಣ ಅನುರಾಗವಾಗಿ
ಗಾಢ ಪ್ರೇಮವಾಗಿ ಮಾರ್ಪಟ್ಟಿದೆ. ಹೀಗೆ ಭವಾವಳಿಯು ಮುಂದುವರಿದು ಹತ್ತನೆಯ ಜನ್ಮದಲ್ಲಿ ಈ ಚೇತನ ನಾಭಿರಾಜ-ಮರುತಾದೇವಿಯರ
ಮಗ ಆದಿನಾಥ ಅಥವಾ ಋಷಭನಾಗಿ ಜನ್ಮ ತಳೆಯುತ್ತದೆ. ಇದು ಎಲ್ಲರಂತಹ ಮನುಷ್ಯ ಜನ್ಮವೇ, ಹೊರಗೆ ನೋಡಲು.
ಆದರೆ ಒಳಗೆ ಪಕ್ವತೆಯನ್ನು ಪಡೆದಂತಹುದು. ಈ ಜನ್ಮದಲ್ಲಿಯೂ ಅವನು ಯಥಾಪ್ರಕಾರವೇ ಬೆಳೆಯುತ್ತಾನೆ. ಅವನಿಗೆ
ಯೌವನೋದಯವಾಗುತ್ತದೆ, ಮಗನಿಗೆ ಮದುವೆ ಮಾಡುವ ಅಪೇಕ್ಷೆ ತಂದೆತಾಯಿಗಳಿಗೆ. ಅವನ್ನು ಕೂಡಿಸಿಕೊಂಡು ತಂದೆ
ಹೀಗೆ ಕೇಳಿಕೊಳ್ಳುತ್ತಾನೆ:
ಶಾಂತಾತ್ಮಾ ಮದುವೆ ನಿಲ್ ನೀಂ
ಇಂತೆನ್ನ ಗೃಹಸ್ಥಧರ್ಮದಿಂದಂ ನೀನೆಂ
ತಂತೆ ಸಲೆ ನೆಗೞ್ದ ಜಗತೀ
ಸಂತತಿ ನಿಲೆ ನಿನ್ನ ಧರ್ಮಸಂತತಿ ನಿಲ್ಗುಂ
(ಶಾಂತಾತ್ಮನೇ ಮದುವೆಯಾಗು. ನನ್ನ ಹಾಗೆ ನೀನೂ
ಗೃಹಸ್ಥಧರ್ಮವನ್ನು ಅನುಸರಿಸಿದರೆ ಜಗತ್ತಿಗೂ ಸಂತತಿಯು ನಿಲ್ಲುತ್ತದೆ, ನಿನಗೂ ಧರ್ಮಸಂತತಿಯೂ ನಿಲ್ಲುತ್ತದೆ).
ಅದಕ್ಕನುಗುಣವಾಗಿ ಆದಿನಾಥ ಮದುವೆಯಾಗುತ್ತಾನೆ. ಈಗ ಅವನಲ್ಲಿ ಭೋಗಾಪೇಕ್ಷೆಯೂ ಇಲ್ಲ, ಅನುರಾಗವೂ ಇಲ್ಲ,
ಅವನು ಮದುವೆಯಾಗುವುದು ಗೃಹಸ್ಥಧರ್ಮಪಾಲನೆಗಾಗಿ ಮಾತ್ರ. ಮುಂದೆ ಅವನು ಅರಮನೆಯಲ್ಲಿ ನಡೆಯುವ ನೀಲಾಂಜನೆ
ಎಂಬುವವಳ ನೃತ್ಯವನ್ನು ನೋಡುತ್ತಿರುವಾಗ, ಅವಳು ನರ್ತಿಸುತ್ತಲೇ ಬಿದ್ದು ಸಾಯುತ್ತಾಳೆ, ಇಂದ್ರ ರಸಭಂಗವಾಗದಿರಲೆಂದು
ಯಾರಿಗೂ ತಿಳಿಯದಂತೆ ಅವಳಂತೆಯೇ ಮತ್ತೊಬ್ಬಳನ್ನು ಕ್ಷಣಾರ್ಧದಲ್ಲಿ ಸೃಷ್ಟಿಸಿ ನೃತ್ಯ ಮುಂದುವರಿಯುವಂತೆ
ಮಾಡುತ್ತಾನೆ. ಈ ಬದಲು ಬೇರಾರಿಗೂ ತಿಳಿಯದಿದ್ದರೂ ಆದಿನಾಥನ ಸೂಕ್ಷ್ಮತೆಯಿಂದ ಅವನ ಅರಿವಿಗೆ ಬಂದು,
ಅವನ ಪಕ್ವ ಜೀವದಲ್ಲಿ ಮಡುಗಟ್ಟಿದ್ದ ವೈರಾಗ್ಯಪರತೆಯು ಹೊರಬರಲು ನೆಪವಾಗುತ್ತದೆ. ಅವನು ದೀಕ್ಷೆ ವಹಿಸಿ
ತಪಸ್ಸಿಗೆ ತೆರಳುತ್ತಾನೆ.
ಹೀಗೆ ಜನ್ಮಾಂತರಗಳ ಚಿತ್ರಣದ ಮೂಲಕ ಭೋಗನಿರಸನವನ್ನು ನಿರೂಪಿಸುವ ಕವಿಯು ಮುಂದೆ ಅವನ
ಮಕ್ಕಳೇ ಆದ ಭರತ ಮತ್ತು ಬಾಹುಬಲಿಗಳು ರಾಜ್ಯಕ್ಕಾಗಿ ಹೋರಾಡುವ ಪ್ರಸಂಗವನ್ನು ಚಿತ್ರಿಸುವ ಮೂಲಕ ಅಹಂಕಾರದ
ಎರಡು ಮಗ್ಗುಲುಗಳನ್ನು ನಮ್ಮ ಮುಂದಿಡುತ್ತಾನೆ. ಹಿರಿಯನೆಂಬ ಕಾರಣದಿಂದ ಚಕ್ರವರ್ತಿಯಾದ ಅಣ್ಣ ಭರತನ
ದಬ್ಬಾಳಿಕೆಯನ್ನು ತಮ್ಮ ಬಾಹುಬಲಿ ಪ್ರತಿಭಟಿಸಿ ಅವನೊಡನೆ ಯುದ್ಧಕ್ಕೆ ನಿಲ್ಲುತ್ತಾನೆ. ತಿಳಿವಳಿಕಸ್ಥರು
ಅವರಿಗೆ ಸಾಮಾನ್ಯ ಯುದ್ಧವನ್ನು ಬಿಟ್ಟು ಪರಸ್ಪರ ಬಲಪ್ರದರ್ಶನಕ್ಕೆ ಏರ್ಪಾಟು ಮಾಡುತ್ತಾರೆ. ದೃಷ್ಟಿಯುದ್ಧ,
ಜಲಯುದ್ಧ ಮತ್ತು ಮುಷ್ಟಿಯುದ್ಧ - ಈ ಮೂರರಲ್ಲಿಯೂ ಹೆಚ್ಚು ಎತ್ತರವಾಗಿದ್ದ ತಮ್ಮ ಬಾಹುಬಲಿ ಅಣ್ಣನನ್ನು
ಮಣಿಸುತ್ತಾನೆ. ತೀವ್ರ ಅವಮಾನ, ಆಕ್ರೋಶಗಳಿಂದ ಕೂಡಿದ ಭರತ ತಮ್ಮನನ್ನು ಕೊಲ್ಲಲು ಸಿದ್ಧನಾಗುತ್ತಾನೆನೀ
ಇಡೀ ಬೆಳವಣಿಗೆಯು ಬಾಹುಬಲಿಯಲ್ಲಿ ಐಹಿಕತೆಯ ಬಗ್ಗೆ ತೀವ್ರ ಜಿಹಾಸೆ ತಳೆಯುವಂತೆ ಮಾಡುತ್ತದೆ. ತಾನು
ಯುದ್ಧದಲ್ಲಿ ಗೆದ್ದ ರಾಜ್ಯವನ್ನು ಅಣ್ಣನಿಗೇ ಕೊಟ್ಟು ಹೇಳುವ ಮಾತುಗಳಿವು:
ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಂ ಈ ಭಟಖಡ್ಗಮಂಡಲೋ
ತ್ಪಲವನ ವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮಂ ಅಯ್ಯನಿತ್ತುದುಮಂ ಆಂ ನಿನಗಿತ್ತೆಂ ಇದೇವುದಣ್ಣ ನೀನ್
ಒಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗೞ್ತೆ ಮಾಸದೇ
(ಸೈನಿಕರ ಖಡ್ಗಸಮೂಹವೆಂಬ ಸರೋವರದಲ್ಲಿ ಸುಳಿದಾಡುವ
ದುಂಬಿಯಂತಹ ರಾಜ್ಯಲಕ್ಮಿಯು ನಿನ್ನ ಎದೆಯಲ್ಲಿಯೇ ಶಾಶ್ವತವಾಗಿ ನೆಲಸಲಿ. ಇದರಿಂದ ಏನಾದೀತು! ಅಲ್ಲದೆ,
ಅಣ್ಣನಾದ ನೀನು ಒಲಿದ ಹೆಣ್ಣಿಗಾಗಲೀ ಮಣ್ಣಿಗಾಗಲೀ ಆಸೆಪಟ್ಟರೆ ನನಗೆ ಕೆಟ್ಟ ಹೆಸರು ಬಾರದೇ). ಆ ಬಳಿಕ
ಅವನು ತಪಸ್ಸಿಗೆ ತೆರಳುತ್ತಾನೆ. ಭರತ ಚಕ್ರವರ್ತಿಯಾಗಿ ಮುಂದುವರಿದರೂ ಕ್ರಮೇಣ ಅವನೂ ಪಕ್ವಗೊಳ್ಳುತ್ತಾನೆ.
ಈ ಅಣ್ಣತಮ್ಮದಿರ ಮೂಲಕ ಕವಿ ಅಹಂಕಾರದ ಎರಡು ಮಗ್ಗುಲುಗಳ ಪರಿಚಯ ಮಾಡಿಸುತ್ತಿದ್ದಾನೆ. ಇಬ್ಬರೂ ಒಬ್ಬನ
ಮಕ್ಕಳು. ಭರತನ ಅಹಂಕಾರದ ಸ್ವರೂಪವು ಮಿಕ್ಕವರನ್ನೆಲ್ಲ ಗೆದ್ದು ತನ್ನ ಹಿರಿಮೆಯನ್ನು ಸ್ಥಾಪಿಸಬೇಕೇಂಬ
ಬಗೆಯದಾದದರೆ, ಬಾಹುಬಲಿಯದು ಯಾರಿಗೂ ಬಾಗೆನೆಂಬ ಸ್ವಾಭಿಮಾನಸ್ವರೂಪದ್ದು. ಒಂದು ಎಲ್ಲರ ಮೇಲೆ ತನ್ನ
ಅಧಿಕಾರವನ್ನು ಸ್ಥಾಪಿಸುವ ಬಗೆಯದಾದರೆ, ಮತ್ತೊಂದು ತನ್ನತನವನ್ನು ಬಲಿಗೊಡದೆ ಎಲ್ಲರಿಗಿಂತ ತಾನು ಭಿನ್ನ
ಎಂಬುದನ್ನು ತೋರಿಸುವುದು. ಎರಡೂ ಒಂದೇ ಭಾವನೆಯ ಮಗ್ಗಲುಗಳು. ಅಲ್ಲದೆ ಇವರಿಬ್ಬರೂ ಆದಿನಾಥನ ಮಕ್ಕಳು,
ಅಂದರೆ ಅವನಿಂದಾದವರು, ಅಂದರೆ ಅವನತನದ ಹೊರರೂಪಗಳು. ಹೀಗೆ ‘ಆದಿಪುರಾಣ’ವನ್ನು ಒಂದು ಚೇತನದ ಮಹಾಪಯಣ
ಎಂದು ಪರಿಭಾವಿಸಿದರೆ, ಒಂದೆಡೆ ತನ್ನ ಸುಖದಲ್ಲಿ ಕೇಂದ್ರೀಕೃತವಾಗುವ ಭೋಗಾಕಾಂಕ್ಷೆ, ಮತ್ತೊಂದೆಡೆ
ತನ್ನ ಹಿರಿಮೆಯ ಭಾವನೆಯ ಅಹಂಕಾರ - ಇವೆರಡೂ ಅದೇ ಚೇತನದ್ದೇ. ಪ್ರಾಯಶಃ ಆ ಕಾರಣಕ್ಕಾಗಿಯೇ ಕವಿ ಆದಿನಾಥ
ಕೇವಲಜ್ಞಾನವನ್ನು ಪಡೆದು ಕೊನೆಗೆ ಪರಿನಿರ್ವಾಣ ಹೊಂದುವ ಸನ್ನಿವೇಶವನ್ನು ಭರತ-ಬಾಹುಬಲಿಗಳ ಯುದ್ಧದ
ನಂತರವೇ ಚಿತ್ರಿಸುವುದು. ಭೋಗ-ಅಹಂಕಾರಗಳೂ ಬೇರೆ ಬೇರೆಯಲ್ಲ, ಒಂದೇ ಸ್ವಕೇಂದ್ರಿತ ಆಲೋಚನೆಯ ಎರಡು
ಮಗ್ಗುಲಗಳು; ಎರಡರಲ್ಲಿಯೂ ತಾನೇ ಕೇಂದ್ರ, ಅನ್ಯವನ್ನು ಕಡೆಗಣಸಿ ತನ್ನ ಬಗ್ಗೆ ಮಾತ್ರ, ತನ್ನ ಸುಖವನ್ನು
ಮಾತ್ರ, ತನ್ನ ಶ್ರೇಷ್ಠತೆಯನ್ನು ಮಾತ್ರ ಆಲೋಚಿಸುವ ಪರಿ. ತೀರ್ಥಂಕರತ್ವ ಪ್ರಾಪ್ತವಾಗಬೇಕಾದರೆ ಇವೆರಡೂ
ಸಂಪೂರ್ಣವಾಗಿ ಇಲ್ಲವಾಗಬೇಕು.
ಪಂಪನ ವಿಷಯದಲ್ಲಿ
ನಾವು ಒಂದಂಶವನ್ನು ಗಮನಿಸಬೇಕು, ಅಥವಾ ಇದು ಜೈನ ಮನೋಭಾವವೂ ಇದ್ದೀತು. ಅವನು ಭೋಗ, ಎಂದರೆ ಲೈಂಗಿಕತೆಯನ್ನು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ.
‘ಆದಿಪುರಾಣ’ವನ್ನು ಬರೆದಾಗ ಪಂಪನಿಗೆ ಮೂವತ್ತೊಂಬತ್ತು-ನಲವತ್ತು ವರ್ಷಗಳು, ಅಂದರೆ ಎಲ್ಲ ಚೈತನ್ಯಗಳೂ
ತಮ್ಮ ಉಚ್ಛ್ರಾಯಸ್ಥಿತಿಯಲ್ಲಿರುವ ವಯಸ್ಸು. ಈ ಕಾವ್ಯದ ಆರಂಭದಲ್ಲಿ ಪಂಪ ತನ್ನ ರೂಪದ ಬಗ್ಗೆ, ರಸಿಕತೆಯ
ಬಗ್ಗೆ ದೀರ್ಘವಾಗಿ ಹೇಳಿಕೊಳ್ಳುತ್ತಾನೆ. ಮುಂದೆ ಅವನು ಬರೆದ ಅವನ ಪ್ರಕಾರ ‘ವಿಕ್ರಮಾರ್ಜುನ ವಿಜಯ’ದಲ್ಲಿಯಂತೂ
ಕಾವ್ಯದ ಆರಂಭದಲ್ಲಿನ ಪ್ರಾರ್ಥನೆಯಲ್ಲಿಯೂ, ಕೊನೆಯ ಫಲಶ್ರುತಿಯಲ್ಲಿಯೂ ಅವನು ಅಪೇಕ್ಷಿಸುವುದು ಮಿಕ್ಕೆಲ್ಲದರ
ಜೊತೆಗೆ ಭೋಗವನ್ನೇ. ಕಾವ್ಯದ ಆರಂಭದಲ್ಲಿ ಅವನು ಪ್ರಾರ್ಥಿಸುವುದು ಐವರು ದೇವತೆಗಳನ್ನು, ಅವರಲ್ಲಿ
ಒಬ್ಬನೆಂದರೆ ಸಹಜ ಮನೋಜ, ಅವನನ್ನು ಕವಿ ಕೇಳಿಕೊಳ್ಳುವುದು “ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ”
ಎಂದು. ಹಾಗೆಯೇ ಕಾವ್ಯದ ಕೊನೆಯ ಫಲಶ್ರುತಿಯ ಪದ್ಯದಲ್ಲಿ ‘ಲೋಕಪೂಜ್ಯವಾದ’ ಭಾರತವನ್ನು ಓದಿದವರಿಗೆ,
ಕೇಳಿದವರಿಗೆ, ಬರೆದವರಿಗೆ ಅವನ ಪ್ರಕಾರ ಸಿಕ್ಕುವ ಫಲಗಳೆಂದರೆ “ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಂ
ಇಷ್ಟಾಂಗನಾಸುರತಂ ಕಾಂತಿ ಅಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ”. ಹಾಗಾಗಿ ಪಂಪನ ದೃಷ್ಟಿಕೋನ
ಅನುಭವಿಸುವ ಮೊದಲೇ ಐಹಿಕತೆಯನ್ನು ನಿರಾಕರಿಸುವಂಥದಾಗಿರದೆ, ಅವುಗಳನ್ನು ಆರೋಗ್ಯಕರವಾಗಿ ಅನುಭವಿಸುತ್ತ
ಕ್ರಮೇಣ ಅವುಗಳನ್ನೇ ಹಿರಿಯ ಆದರ್ಶಗಳಾಗಿ ಮಾರ್ಪಡಿಸಿಕೊಳಬೇಕು, ಇಹವೇ ಪರವಾಗಿ ಅರಳಬೇಕು ಎಂಬುದು.
ಇದೇ ಕವಿಯ ಕಾವ್ಯವು ಕಂಡುಕೊಂಡ ‘ಕಾವ್ಯಧರ್ಮ’ ಇದೇ ಅನ್ನಿಸುತ್ತದೆ.
ಆಧುನಿಕ ಮನೋವಿಜ್ಞಾನದ
ಕೆಲವು ಪರಿಕಲ್ಪನೆಗಳೂ ಇವಕ್ಕೆ ಸಂವಾದಿಯಾಗಿವೆ ಎಂದು ನನ್ನ ಭಾವನೆ. ನನ್ನ ಸೀಮಿತ ತಿಳಿವಳಿಕೆಯಲ್ಲಿ
ವ್ಯಕ್ತಿತ್ವದ ಎರಡು ಪ್ರಮುಖ ಅಂಶಗಳು ಮೂಲಕಾಮ (libido) ಮತ್ತು ಅಹಂಕಾರ (ego) - ಇವುಗಳು. ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ಆ
ಮೂಲಕಾಮವು ಬದುಕಿನ ಮೂಲ ಶಕ್ತಿ, ಆದರೆ ಅವನೇ sublimation ಎಂಬ ಪರಿಕಲ್ಪನೆಯ ಮೂಲಕ ಅದು ಉದಾತ್ತಗೊಳ್ಳುವ ಪರಿಯನ್ನು ಪ್ರತಿಪಾದಿಸುತ್ತಾನೆ.
ಯೂಂಗ್ ಲಿಬಿಡೊ ಎಂಬುದು ಮಾನವನ ಸೃಜನಶಕ್ತಿಯೆಂದು ಹೇಳುತ್ತಾನೆ, ಅದರಿಂದಲೇ ಕಲೆ, ಸಾಹಿತ್ಯ ಮುಂತಾದವು
ಹೊಮ್ಮುವುದು. ಹೀಗಾಗಿ ಆಧುನಿಕ ಪರಿಭಾಷೆಯ ದೃಷ್ಟಿಯಿಂದಲೂ ಕಆದಿಪುರಾಣಕಿವನ್ನು ಅರ್ಥವಿಸಿಕೊಳ್ಳುವುದು
ಅನುಕೂಲ. ಮುಕ್ತಿ, ತೀರ್ಥಂಕರತ್ವ, ಪ್ರಪತ್ತಿ - ಇವನ್ನೆಲ್ಲ ಕಂಡವರಾರು? ಹಿಂದೆಯೇ ಹೇಳಿದಂತೆ ನಾವು
ಹೊರಡುವ ಆಲೋಚನೆಯ ನೆಲೆಯೇ ನಮ್ಮ ನಿಲವಿನ ಸ್ವರೂಪವನ್ನು ನಿರ್ಧರಿಸುವುದು. ಬದುಕಿನ ಗುರಿಯನ್ನು ಬೇರೆ
ಬೇರೆಯವರು ವಿಭಿನ್ನವಾಗಿ ಪರಿಭಾವಿಸಲು ಕಾರಣ ಅವರ ಆಲೋಚನೆಯ ವಿಭಿನ್ನ ನೆಲೆಗಳು. ಅವುಗಳಲ್ಲಿ ಯಾವುದು
ಸಮರ್ಪಕವೋ ಯಾರಿಗೆ ಗೊತ್ತು? ಸ್ವಕೇಂದ್ರಿತವಾದ ಪ್ರಜ್ಞೆಯು ಸುತ್ತಲೂ ಹರಡಿಕೊಂಡಾಗ ಉಂಟಾಗುವ ಅನುಭವವೇ
ಬೇರೆ. ತನ್ನ ಚೈತನ್ಯವನ್ನು ಸರ್ವಹಿತಕ್ಕಾಗಿ ಬಳಸಿದಾಗ ಉಂಟಾಗುವ ಕೃತಕೃತ್ಯ ಭಾವನೆಯೇ ಬೇರೆ. ಇಂಥ
ಕೃತಕೃತ್ಯತೆಯನ್ನು ಅನುಭವಿಸುವ ಕ್ಷಣವು ಬದುಕಿನ ಸಾರ್ಥಕ ಕ್ಷಣ. ಬದುಕಿನುದ್ದಕ್ಕೂ ಇದೇ ಬಗೆಯಲ್ಲಿ
ಮುನ್ನಡೆಯುವುದು ಪ್ರಾಯಶಃ ಬದುಕಿನ ಸಾರ್ಥಕ್ಯವೇನೋ.
*******
No comments:
Post a Comment