Monday 2 December 2013

ಮರಳುಗಾಡಿನಲ್ಲಿ ಸಾವು

ಮರಳುಗಾಡಿನಲ್ಲಿ ಸಾವು

ವಿಲ್ಲ ಕ್ಯಾದರ್ ಅವರ 'A Death in the Desert' ಕತೆಯ ಅನುವಾದ


ರೈಲಿನಲ್ಲಿ ತನ್ನ ಎದುರುಗಡೆಯ ಸ್ಥಳದಲ್ಲಿ ಕುಳಿತಿದ್ದ ವ್ಯಕ್ತಿಯು ತನ್ನನ್ನು ಒಂದೇ ಸಮನಾಗಿ ನೋಡುತ್ತಿರುವ ವಿಷಯವು ಎವರೆಟ್ ಹಿಲ್‍ಗಾರ್ಡ್‍ಗೆ ಅರಿವಿತ್ತು. ಅವನೊಬ್ಬ ದೃಢಕಾಯನಾದ ಭಾರಿ ಆಸಾಮಿ, ಅವನ ಮಧ್ಯದ ಬೆರಳಿನಲ್ಲಿ ವಜ್ರದ ಉಂಗುರವು ಥಳಥಳಿಸುತ್ತಿತ್ತು; ಅವನೊಬ್ಬ ಯಾವುದೋ ಬಗೆಯ ಪ್ರವಾಸೀ ಮಾರಾಟಗಾರನಿರಬೇಕೆಂದು ಎವರೆಟ್‍ಗೆ ಅನ್ನಿಸಿತು. ಅವನನ್ನು ನೋಡಿದರೆ ಎಲ್ಲರೊಂದಿಗೂ ಹೊಂದಿಕೊಳ್ಳಬಲ್ಲ ವ್ಯಕ್ತಿಯೆಂಬ ಭಾವನೆ ಬರುತ್ತಿತ್ತು. ಜಗತ್ತಿನ ಎಲ್ಲ ಕಡೆ ಸುತ್ತಾಡಿ ಯಾವುದೇ ಸಂದರ್ಭದಲ್ಲೂ ಸಮಚಿತ್ತವನ್ನು ಕಾಪಾಡಿಕೊಳ್ಳುವ ಸಾಮಥ್ರ್ಯ ಸಂಪಾದಿಸಿದ್ದನೆಂದು ಅನ್ನಿಸುತ್ತಿತ್ತು.
ರೈಲ್ವೆಯಲ್ಲಿರುವ ಎಲ್ಲರೂ 'ಹೈ ಲೈನ್ ಫ಼್ಲೈಯರ್' ಎಂದು ಅಣಕಿಸಿ ಕರೆಯುತ್ತಿದ್ದ ಈ ರೈಲು ಮಧ್ಯಾಹ್ನದ ಬಿರುಬಿಸಿಲಲ್ಲಿ ಹೋಲ್ಡ್ರಿಜ್ನಿಂದ ಚೆಯೆನ್ಗೆ ಹೋಗುವ ವೈವಿಧ್ಯರಹಿತ ಮರಳುಗಾಡಿನ ನಡುವೆ ಸಾವಧಾನವಾಗಿ ಸಾಗಿತ್ತು. ಆ ಗೌರವರ್ಣದ ವ್ಯಕ್ತಿ ಮತ್ತು ತಾನು ಅಲ್ಲದೆ ಆ ಗಾಡಿಯಲ್ಲಿದ್ದವರೆಂದರೆ 'ಎಕ್ಸ್ಪೊಸಿಷನ್ ಆಫ್ ಶಿಕಾಗೊ'ಗೆ ಭೇಟಿ ನೀಡಿದ್ದ ಕೊಳಕು ಬಟ್ಟೆ ಧರಿಸಿದ್ದ ಇಬ್ಬರು ಹುಡುಗಿಯರು; ತಾವು ಮೊದಲ ಬಾರಿಗೆ ಕೊಲೊರಾಡೊ ಹೊರಗೆ ಕೈಗೊಂಡಿದ್ದ ಮೊದಲ ಪ್ರವಾಸದ ಖರ್ಚುವೆಚ್ಚಗಳ ಬಗ್ಗೆ ಅವರು ಚರ್ಚಿಸುತ್ತಿದ್ದರು. ಇರಿಸುಮುರಿಸಿಗೊಳಗಾಗಿದ್ದ ಈ ನಾಲ್ಕೂ ಮಂದಿ ಪ್ರಯಾಣಿಕರನ್ನು ನಯವಾದ ಹಳದಿಯ ದೂಳಿನ ಲೇಪ ಆವರಿಸಿತ್ತು, ಕೂದಲು ಮತ್ತು ಕಣ್ಣುರೆಪ್ಪೆಗಳಿಗಂತೂ ಚಿನ್ನದ ಹುಡಿಯಂತೆ ಅಂಟಿಕೊಂಡು ಜೋತುಬಿದ್ದಿತ್ತು. ತಾವು ಹಾದು ಬಂದಿದ್ದ ಹಳ್ಳಿಪ್ರದೇಶದ ದಾರಿಗುಂಟ ಆ ದೂಳು ಮೋಡಗಳಂತೆ ತೇಲಿ ಬಂದು, ಸೇಜ್ಬ್ರಷ್ ಗಿಡ ಮತ್ತು ಮರಳುದಿಬ್ಬಗಳ ಹಾಗೆ ಕಾಣುವಂತೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಮಾರ್ಪಡಿಸಿತ್ತು. ಈ ಬೂದು ಹಳದಿ ಮರಳುಗಾಡು ವೈವಿಧ್ಯವನ್ನು ತಾಳುತ್ತಿದ್ದುದು ಅಲ್ಲಲ್ಲಿ ಪಾಳುಬಿದ್ದ ಊರುಗಳ ದೃಶ್ಯಗಳಿಂದ ಹಾಗೂ ನೀಲಹುಲ್ಲಿನ ನಡುವೆ ಬೆಳೆದ ಸ್ಪಿಂಡಲ್ ಮರಗಳು ಮತ್ತು ಬಳ್ಳಿಗಳು ಬೆಳೆದಿದ್ದ ಕೆಂಪು ಸ್ಟೇಷನ್ ಪೆಟ್ಟಿಗೆಗಳಂತಿದ್ದ ಮನೆಗಳಿಂದ ಅಷ್ಟೆ. ಆ ಗೊಂದಲಮಯ ಮರಳುಗಾಡಿನಲ್ಲಿ ಹಸುರು ಓಯಸಿಸ್ಗಳು ಅಂದರೆ ಇವು ಮಾತ್ರ.
ಓರೆಯಾದ ಸೂರ್ಯಕಿರಣಗಳು ಗಾಡಿಯ ಕಿಟಕಿಗಳ ಮೂಲಕ ಬಿರುಸಾಗಿ ತಿವಿಯುತ್ತಿದ್ದವು. ಆ ಗೌರವರ್ಣದ ವ್ಯಕ್ತಿ ಮಹಿಳೆಯರ ಅನುಮತಿ ಕೋರಿ ತನ್ನ ಕೋಟ್ ತೆಗೆದು, ಒಳಗೆ ಧರಿಸಿದ್ದ ಲ್ಯಾವೆಂಡರ್ ಬಣ್ಣದ ಗೆರೆಗಳಿದ್ದ ಷರ್ಟ್ ಸ್ಲೀವ್ ಹಾಗೂ ಕಾಲರ್‍ನಲ್ಲಿ ಜಾಗರೂಕತೆಯಿಂದ ಸಿಕ್ಕಿಸಿದ್ದ ಕಪ್ಪು ರೇಷ್ಮೆ ಕರವಸ್ತ್ರದೊಡನೆ ಕೂತ. ಹಾಲ್ರಿಟ್‍ನಲ್ಲಿ ರೈಲು ಹತ್ತಿದ ಕಾಲದಿಂದಲೂ ಅವನಿಗೆ ಎವರೆಟ್ ಬಗ್ಗೆ ಆಸಕ್ತಿಯಿದ್ದಂತಿತ್ತು. ಹೀಗಾಗಿ ಅವನೆಡೆಗೆ ಒಂದೇ ಸಮನೆ ಕುತೂಹಲದಿಂದ ನೋಡುತ್ತ ಅಥವಾ ಏನನ್ನೋ ನೆನಪಿಸಿಕೊಳ್ಳಲು ಪ್ರಯತ್ನಪಡುತ್ತಿರುವವನಂತೆ ಯೋಚಿಸುತ್ತ ಕಿಟಕಿಯ ಹೊರಗೆ ದೃಷ್ಟಿ ಹರಿಸುತ್ತ ಕೂತಿದ್ದ. ತನ್ನ ಕಡೆಗೆ ಅವನು ಕುತೂಹಲ ದೃಷ್ಟಿಯಿಂದ ಗಮನ ಹರಿಸುತ್ತಿದ್ದುದನ್ನು ಅರಿತಿದ್ದ ಎವರೆಟ್‍ಗೆ ಅದರಿಂದುಂಟಾಗುತ್ತಿದ್ದ ಇರುಸುಮುರುಸು ಅಥವಾ ಮುಜುಗರವು ಕ್ರಮೇಣ ಇಲ್ಲವಾಗಿತ್ತು. ಇದರಿಂದ ತೃಪ್ತಿಗೊಂಡಂತೆ ಆ ವ್ಯಕ್ತಿಯು ತನ್ನ ಸೀಟಿಗೆ ಆರಾಮವಾಗಿ ಒರಗಿಕೊಂಡು, ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡು ಕೂತ. ಅಲ್ಲದೆ 'ಸ್ಪ್ರಿಂಗ್ ಸಾಂಗ್' ಅನ್ನು ಮೆಲುವಾಗಿ ಸಿಳ್ಳೆ ಹಾಕಲು ತೊಡಗಿದ; ಆ ಹಾಡು ಹತ್ತು ಹನ್ನೆರಡು ವರ್ಷಗಳ ಹಿಂದೆ ಅದರ ಸಂಗೀತ ಸಂಯೋಜಕನಿಗೆ ದಿಡೀರನೆ ಕೀರ್ತಿ ತಂದಿತ್ತಿದ್ದ 'ಪ್ರಾಸರ್ಪೈನ್' ಗೀತನಾಟಕದ ಒಂದು ಗೀತ. ಎವೆರೆಟ್ ಮೆಕ್ಸಿಕೋದಲ್ಲಿದ್ದಾಗ ಈ ಹಾಡನ್ನು ಗಿಟಾರ್ ವಾದನದ ಮೂಲಕ ಬಾನುಲಿಯಲ್ಲೂ, ಕಾಲೇಜಿನ ಸಂಗೀತ ಕಾರ್ಯಕ್ರಮದಲ್ಲಿ ಮ್ಯಾಂಡೋಲಿನ್ ವಾದನದಲ್ಲಿಯೂ, ನ್ಯೂ ಇಂಗ್ಲಂಡ್‍ನ ಹಳ್ಳಿಗಳಲ್ಲಿ ಸಣ್ಣ ಪಿಯಾನೋಗಳಲ್ಲಿಯೂ ಕೇಳಿದ್ದ, ಅಲ್ಲದೆ ಎರಡು ವಾರಗಳ ಹಿಂದೆಯಷ್ಟೇ ಅದು ಡೆನ್ವರ್‍ನ ವೆರೈಟಿ ಯೇರ್ಟ್‍ನಲ್ಲಿ ಕಿಂಕಿಣಿ ವಾದನದಲ್ಲಿ ಕೂಡ ಕಿವಿಗೆ ಬಿದ್ದಿತ್ತು. ತನ್ನ ತಮ್ಮನ ಇದರ ಪಿರುಕಣಿಯಿಂದ ಪಾರಾಗುವುದು ಅವನಿಗೆ ಕಷ್ಟವಾಗಿತ್ತು. ಏಡ್ರಿಯನ್ಸ್ ಅಟ್ಲಾಂಟಿಕ್‍ನ ಆ ತೀರದಲ್ಲಿ ವಾಸಿಸಬಹುದಾಗಿತ್ತು; ಅಲ್ಲಾದರೆ ಅವನ ಪ್ರೌಢ ಸಾಧನೆಗಳಲ್ಲಿ ತಾರುಣ್ಯದ ಇಂತಹ ಎಳಸುತನವನ್ನು ಮರೆಯಬಹುದಾಗಿತ್ತು; ಆದರೆ ಅವನ ತಮ್ಮನ 'ಪ್ರಾಸರ್ಪೈನ್'ನಿಂದ ಪಾರಾಗಲು ಸಾಧ್ಯವಾಗಿರಲಿಲ್ಲ. ಈಗ ಇಲ್ಲಿ ನೋಡಿದರೆ ಕೊಲೆರಾಡೋ ಮರಳುಗಾಡಿನಲ್ಲಿ ಮತ್ತೆ ಅದು ತಲೆಯೆತ್ತಿದೆ!  ಎವೆರೆಟ್ಗೆ 'ಪ್ರಾಸರ್ಪೈನ್' ಬಗ್ಗೆ ಹೇಸಿಕೆಯೇನೂ ಇರಲಿಲ್ಲ; ಅದನ್ನು ಬರೆದವನು ಮಹಾಪ್ರತಿಭಾವಂತನೇ ಸರಿ, ಆದರೆ ಅದು ಪ್ರತಿಭಾವಂತನಾದವನು ಆದಷ್ಟು ಬೇಗ ಮೀರಿ ನಿಲ್ಲಬೇಕಾದಂತಹುದು.
ಎವರೆಟ್ ತನ್ನ ದೇಹವನ್ನು ತುಸು ನೆಟ್ಟಗೆ ಮಾಡಿಕೊಂಡು ಎದುರುಗಡೆ ಕೂತಿದ್ದ ತನ್ನ ಸಹಪ್ರಯಾಣಿಕನೆಡೆಗೆ ಕಿರುನಗೆ ಬೀರಿದ. ತಕ್ಷಣವೇ ಆ ಧಡೂತಿ ಮನುಷ್ಯ ಮೇಲೆದ್ದು ಹತ್ತಿರ ಬಂದು ಹಿಲ್‍ಗಾರ್ಡ್‍ಗೆ ಎದುರಾಗಿದ್ದ ಸೀಟಿನಲ್ಲಿ ದೊಪ್ಪನೆ ಕೂತ. "ತುಂಬ ದೂಳು, ಅಲ್ವಾ? ನನಗೇನೋ ಇದು ಪರವಾಗಿಲ್ಲ, ಅಭ್ಯಾಸವಾಗಿ ಹೋಗಿದೆ. ನಾನು ಹುಟ್ಟಿ ಬೆಳೆದದ್ದೇ ಬ್ರಿಯರ್ ಪ್ರದೇಶದಲ್ಲಿ, ಅಂದರೆ ಬ್ರೇರ್ ರಾಬಿಟ್‍ನಲ್ಲಿ ಬೆಳೆದೋನು. ನೀವು ಯಾರಿರಬಹುದೂಂತ ತುಂಬ ಹೊತ್ತಿನಿಂದ ಜ್ಞಾಪಿಸಿಕೋತಿದ್ದೀನಿ; ನಿಮ್ಮನ್ನು ಹಿಂದೆ ಎಲ್ಲೋ ನೋಡಿದ ಹಾಗಿದೆ."
"ಥ್ಯಾಂಕ್ ಯೂ. ನನ್ನ ಹೆಸರು ಹಿಲ್ಗಾರ್ಡ್ ಅಂತ, ನೀವು ಪ್ರಾಯಶಃ ಭೇಟಿಯಾಗಿರೋದು ನನ್ನ ತಮ್ಮನನ್ನಿರಬೇಕು, ಅವನ ಹೆಸರು ಏಡ್ರಿಯನ್. ನಾನು ಅವನೇ ಅಂತ ಎಷ್ಟೋ ಜನ ತಪ್ಪು ತಿಳೀತಾರೆ" ಎನ್ನುತ್ತ ತನ್ನ ಕಾರ್ಡೊಂದನ್ನು ಎವರೆಟ್ ತೆಗೆದ.
ಆ ಪ್ರಯಾಣಿಕ ತನ್ನ ಮೊಣಕಾಲಿನ ಮೇಲೆ ತನ್ನ ಬಲಗೈಯನ್ನು ಜೋರಾಗಿ ಅಪ್ಪಳಿಸಿಕೊಂಡಾಗ ಬೆರಳಲ್ಲಿದ್ದ ರತ್ನದ ಉಂಗುರ ಮಿರಮಿರ ಮಿಂಚಿತು.
"ಓ, ಹಾಗಾದ್ರೆ ನನಗನ್ನಿಸಿದ್ದು ಸರಿ. ನೀವು ಏಡ್ರಿಯನ್ ಹಿಲ್ಗಾರ್ಡ್ ಅಲ್ಲದಿದ್ದರೆ, ನೀವು ಅವರ ಹಾಗೆಯೇ ಇರೋರು. ನನ್ನ ಲೆಕ್ಕಾಚಾರ ತಪ್ಪಾಗಲು ಸಾಧ್ಯವಿಲ್ಲ ಅಂತ ಅಂದ್ಕೊಂಡೆ. ನಾನು ನೋಡಿದ್ದು ಅವರನ್ನಿರಬಹುದೇ! ಆಡಿಟೋರಿಯಮ್‍ನಲ್ಲಿ ನಡೆಯೋ ಅವರ ಯಾವ ಕಚೇರಿಯನ್ನೂ ಮಿಸ್ ಮಾಡ್ಕೊಂಡೋನಲ್ಲ ನಾನು. ಒಂದು ಸಲ ಶಿಕಾಗೋ ಪ್ರೆಸ್ ಕ್ಲಬ್‍ನಲ್ಲಿ ಅವರು ಪ್ರಾಸರ್ಪೈನ್‍ನ ಈ ಹಾಡನ್ನು ಪಿಯಾನೋದಲ್ಲಿ ನುಡಿಸಿದ್ರು. ನಾನು ಮೊದಲು ಅಲ್ಲಿ ನಮ್ಮ ಕಂಪನಿಯ ಜಾಹೀರಾತು ವಿಭಾಗದಲ್ಲಿದ್ದೆ, ಆಮೇಲೆ ಅದರ ಪ್ರಕಟಣ ವಿಭಾಗದ ಪರವಾಗಿ ಪ್ರವಾಸ ಕೈಗೊಂಡೆ. ಹಾಗಾದ್ರೆ ನೀವು ಹಿಲ್ಗಾರ್ಡ್ ಅವರ ಅಣ್ಣ! ಇಲ್ಲಿ ನಿಮ್ಮ ಜೊತೆ ಅಕಸ್ಮಾತ್ ಈ ಗಾಡಿ ಹತ್ತಿದೆ, ಪತ್ರಿಕೆಯ ಒಳ್ಳೆ ಕಟ್ಟುಕತೆ ಇದ್ದ ಹಾಗಿದೆ, ಅಲ್ವಾ!"
ಆತ ನಕ್ಕ, ಎವರೆಟ್‍ಗೆ ಒಂದು ಸಿಗಾರ್ ನೀಡಿದ. ಆಮೇಲೆ ಎವರೆಟ್ ಜೊತೆ ಜನ ಯಾವಾಗಲೂ ಪ್ರಸ್ತಾಪಿಸುತ್ತ ಇದ್ದ ವಿಷಯದ ಮೇಲೆಯೇ ಪ್ರಶ್ನೆಗಳ ಮಳೆ ಸುರಿಸಿದ. ಬಹಳ ಕಾಲ ಆದಮೇಲೆ ಆ ಪ್ರವಾಸೀ ಮಾರಾಟಗಾರ ಹಾಗೂ ಇಬ್ಬರೂ ಹುಡುಗಿಯರು ಕೊಲೆರಾಡೋ ಸ್ಟೇಷನ್‍ನಲ್ಲಿ ಇಳಿದುಕೊಂಡರು; ಮುಂದೆ ಎವರೆಟ್ ಒಬ್ಬನೇ ಚೆಯೆನ್‍ಗೆ ಪ್ರಯಾಣ ಮುಂದುವರಿಸಿದ.
ಒಂಬತ್ತು ಗಂಟೆಯ ಹೊತ್ತಿಗೆ ರೈಲು ಚೆಯಿನ್ ಬಂದು ತಲುಪಿತು, ಸುಮಾರು ನಾಲ್ಕು ಗಂಟೆಗಳಷ್ಟು ಕಾಲ ತಡವಾಗಿ. ಅದರ ಮಂದಗತಿಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ; ಆದರೆ ಸ್ಟೇಷನ್ ಮಾಸ್ಟರ್ ಮಾತ್ರ ಅಷ್ಟು ಹೊತ್ತಿನವರೆಗೂ, ಅದೂ ಆ ಬೇಸಿಗೆಯ ರಾತ್ರಿ, ಕಚೇರಿಯಲ್ಲಿ ಕೂತಿರುವಂತಾದುದರಿಂದ ಗೊಣಗಾಡಿಕೊಂಡ. ಎವೆರೆಟ್ ರೈಲಿನಿಂದಿಳಿದು ಪ್ಲಾಟ್‍ಫಾರಂ ಉದ್ದಕ್ಕೂ ನಡೆದು ಹಳಿ ದಾಟುವ ಸ್ಥಳದಲ್ಲಿ ನಿಂತುಕೊಂಡ; ಅವನಿಗೆ ಯಾವ ದಿಕ್ಕಿನತ್ತ ಹೋದರೆ ಉಳಿದುಕೊಳ್ಳುವ ಹೋಟೆಲು ಸಿಕ್ಕುತ್ತದೆ ಎಂಬುದು ತಿಳಿಯದಾಗಿತ್ತು. ಆದರೆ ಆ ಜಾಗದಲ್ಲಿ ನಾಲ್ಕು ಗಾಲಿಯ ಕುದುರೆ ಗಾಡಿಯೊಂದು ನಿಂತಿತ್ತು, ಕುದುರೆಯ ಲಗಾಮುಗಳನ್ನು ಮಹಿಳೆಯೊಬ್ಬಳು ಹಿಡಿದಿದ್ದಳು. ಅವಳು ಬಿಳಿಯ ಉಡುಪು ಧರಿಸಿದ್ದಳು, ಅವಳ ಆಕಾರವು ಪ್ರಯಾಣಿಕರ ಪೀಠಕ್ಕೆ ಅಡ್ಡಲಾಗಿ ನೆರಳಾಗಿತ್ತು. ಆದರೆ ಆ ಜಾಗ ಅವಳ ಮುಖ ಕಾಣದಷ್ಟೇನೂ ಕತ್ತಲಿನಿಂದ ಕೂಡಿರಲಿಲ್ಲ. ಅವಳನ್ನು ಎವರೆಟ್ ಗಮನಿಸಿರಲಿಲ್ಲ, ಆದರೆ ಎದುರು ಭಾಗದಿಂದ ರೈಲ್ವೆ ಎಂಜಿನ್ನೊಂದು ಚುಕುಪುಕುಗುಟ್ಟುತ್ತ ಬಂದಾಗ ಅದರ ಮುಖದೀಪದ ಪ್ರಖರವಾದ ಬೆಳಕು ಅವನ ಮುಖದ ಮೇಲೆ ಬಿತ್ತು. ಆ ಕ್ಷಣ ಕುದುರೆ ಗಾಡಿಯ ಹೆಂಗಸು ಸಣ್ಣದಾಗಿ ಚೀತ್ಕರಿಸಿ ತನ್ನ ಕೈಲಿ ಹಿಡಿದಿದ್ದ ಲಗಾಮನ್ನು ಕೆಳಕ್ಕೆ ಬಿಟ್ಟಳು. ಎವೆರೆಟ್ ಮುಂದೆ ನಡೆದು ಕುದುರೆಯ ಮುಖವನ್ನು ಹಿಡಿದುಕೊಂಡ. ಅದು ತನ್ನ ಕಿವಿಗಳನ್ನು ಮೇಲೆತ್ತಿ ಆಶ್ಚರ್ಯಭರಿತ ಅಸಹನೆಯಿಂದ ತನ್ನ ಬಾಲವನ್ನು ಬಿರುಸಾಗಿ ಅಲ್ಲಾಡಿಸಿತು. ಆ ಹೆಂಗಸು ತನ್ನ ಮುಖವನ್ನು ಭುಜಗಳ ಹಾಗೂ ಒತ್ತಿಕೊಂಡಿದ್ದ ಕರವಸ್ತ್ರದ ನಡುವೆ ಇಟ್ಟುಕೊಂಡು ನಿಶ್ಚಲಳಾಗಿ ಕುಳಿತೇ ಇದ್ದಳು. ಮತ್ತೊಬ್ಬ ಹೆಂಗಸು ಡಿಪೋ ಒಳಗಿನಿಂದ ಹೊರಬಂದು, "ಕ್ಯಾದರೀನ್, ಏನಾಯ್ತಮ್ಮಾ!" ಎಂದು ಕೂಗುತ್ತ ಕುದುರೆ ಗಾಡಿಯೆಡೆಗೆ ಆತುರದಿಂದ ನುಗ್ಗಿದಳು.
ಎವೆರೆಟ್ ಭಯ ಮುಜುಗರಗಳಿಂದ ಒಂದು ಕ್ಷಣ ಹಿಂದೆಮುಂದೆ ನೋಡಿ ಆ ಬಳಿಕ ತನ್ನ ಹ್ಯಾಟ್ ತೆಗೆದು ಮುಂದೆ ನಡೆದ. ಅತ್ಯಂತ ಅಸಾಧ್ಯವಾದ ಜಾಗಗಳಲ್ಲಿಯೂ ಅಕಸ್ಮಾತ್ತಾಗಿ ಏನೋ ಕಾಣುವುದು ಅವನಿಗೆ ಹೊಸದೇನಾಗಿರಲಿಲ್ಲ, ಆದರೆ ಈ ರಾತ್ರಿಯಲ್ಲಿ ಕೇಳಿದ ಕೂಗು ಅವನನ್ನು ಅಲ್ಲಾಡಿಸಿಬಿಟ್ಟಿತ್ತು.
ಮಾರನೆಯ ಬೆಳಿಗ್ಗೆ ಎವರೆಟ್ ಬೆಳಗಿನ ತಿಂಡಿ ತಿನ್ನುತ್ತಿರುವಾಗ, ಮುಖ್ಯ ಪರಿಚಾರಕ ಅವನ ಕುರ್ಚಿಯ ಮುಂದೆ ಬಾಗಿ, ಅವನನ್ನು ಕಾಣಲೆಂದು ವ್ಯಕ್ತಿಯೊಬ್ಬರು ಬಂದು ಹೋಟಲಿನ ಪಾರ್ಲರ್‍ನಲ್ಲಿ ಕಾಯುತ್ತಿರುವುದಾಗಿ ಪಿಸುಗುಟ್ಟಿದ. ಎವರೆಟ್ ಕಾಫಿ ಕುಡಿದು ಸೂಚಿಸಿದ್ದ ದಿಸೆಯೆಡೆಗೆ ಹೊರಟ, ತನ್ನನ್ನು ಕಾಣಲೆಂದು ಬಂದ ವ್ಯಕ್ತಿ ತಳಮಳದಿಂದ ಶತಪದ ತುಳಿಯುತ್ತಿರುವುದು ಕಾಣಿಸಿತು. ಅವನ ರೀತಿಯನ್ನು ನೋಡಿದರೆ ಆತ ಎದೆಯಲ್ಲಿ ತಲ್ಲಣವನ್ನು ತುಂಬಿಕೊಂಡಂತೆ ತೋರುತ್ತಿತ್ತು, ಆದರೆ ಆತ ನರಗಳು ಉಬ್ಬಿಕೊಂಡ ದೇಹವುಳ್ಳವನೇನಾಗಿರಲಿಲ್ಲ. ಆತನದು ಮಧ್ಯಮ ಎತ್ತರಕ್ಕಿಂತ ತುಸು ಕುಳ್ಳು, ಚೌಕಾಕಾರದ ಭುಜಗಳು, ಗಟ್ಟಿಮುಟ್ಟಾದ ದೇಹ. ದಟ್ಟವಾದ ಆದರೆ ಉದ್ದವಲ್ಲದ ಕೂದಲು ಕಿವಿಗಳ ಬಳಿ ಬೆಳ್ಳಗಾಗಲು ತೊಡಗಿತ್ತು, ಆತನ ಕಂಚು ಬಣ್ಣದ ಮುಖದ ತುಂಬ ಗೆರೆಗಳಿದ್ದವು. ಚೌಕವಾಗಿದ್ದ ಕಂದು ಕೈಗಳನ್ನಾತ ಬೆನ್ನ ಹಿಂದೆ ಕಟ್ಟಿಕೊಂಡಿದ್ದ. ತನ್ನ ಭುಜಗಳನ್ನಾತ ನಿಮಿರಿಸಿಕೊಂಡಿದ್ದ ರೀತಿಯಿಂದ ಆತ ಜವಾಬ್ದಾರಿಯ ಅರಿವಿರುವ ವ್ಯಕ್ತಿಯಂತೆ ಕಾಣುತ್ತಿದ್ದ. ಆದರೆ ಅಂಥವನು ಎವರೆಟ್‍ ಅನ್ನು ಬರಮಾಡಿಕೊಳ್ಳಲು ತಿರುಗಿದಾಗ ಅವನ ಮಾತಿನಲ್ಲಿ ಒಂದು ಬಗೆಯ ಅಕಾರಣ ಹಿಂಜರಿಕೆಯಿತ್ತು.
"ಗುಡ್ ಮಾರ್ನಿಂಗ್ ಮಿಸ್ಟರ್ ಹಿಲ್‍ಗಾರ್ಡ್" ಎಂದು ತನ್ನ ಕೈಯನ್ನಾತ ಮುಂದಕ್ಕೆ ಚಾಚಿದ. "ಹೋಟಲಿನ ರಿಜಿಸ್ಟರಿನಲ್ಲಿ ನಿಮ್ಮ ಹೆಸರಿದ್ದುದನ್ನು ನೋಡಿದೆ. ನನ್ನ ಹೆಸರು ಗೇಲಾರ್ಡ್ ಅಂತ. ನಿನ್ನೆ ರಾತ್ರಿ ನನ್ನ ತಂಗಿ ಜೋರಾಗಿ ಕೂಗಿ ನಿಮ್ಮನ್ನು ಗಾಬರಿಗೊಳಿಸಿದಳೂಂತ ಕಾಣತ್ತೆ, ಅಲ್ವಾ ಮಿ. ಹಿಲ್ಗಾರ್ಡ್. ಅದಕ್ಕೇ ನಿಮ್ಮ ಕ್ಷಮೆ ಕೇಳೋಣಾಂತ ಬಂದೆ" ಎಂದು ವಿವರಿಸಿದ.
"ಅದೇ, ಕುದುರೆ ಗಾಡಿಯಲ್ಲಿದ್ದ ಹುಡುಗಿ? ಆಕೆ ಹಾಗೆ ಕಿರಿಚಿಕೊಳ್ಳೋದಕ್ಕೆ ನಾನೇನಾದ್ರೂ ಕಾರಣವೋ ಏನೋ ಅನ್ನೋದು ನಂಗೆ ಗೊತ್ತಿಲ್ಲ. ಹಾಗೇನಾದ್ರೂ ಆಗಿದ್ದರೆ ಕ್ಷಮೆ ಕೇಳ್ಬೇಕಾದೋನು ನಾನೇ."
ಆ ವ್ಯಕ್ತಿಯ ಕಡುಗಂದು ಮುಖ ಸ್ವಲ್ಪ ಬೆಳ್ಳಗಾಯಿತು.

"ಅದಕ್ಕೆ ನೀವೇನು ಮಾಡಕ್ಕಾಗತ್ತೆ, ಸರ್, ನನಗೆ ಅರ್ಥವಾಗತ್ತೆ. ನನ್ನ ತಂಗಿ ನಿಮ್ಮ ಅಣ್ಣನ ಶಿಷ್ಯೆಯಾಗಿದ್ದೋಳು. ನೀವು ನಿಮ್ಮಣ್ಣನ ಥರವೇ ಇದ್ದೀರಿ. ಹಾಗಾಗಿ ರೈಲು ಎಂಜಿನ್ನಿನ ದೀಪ ಬಿದ್ದಾಗ ನಿಮ್ಮನ್ನ ನೋಡಿ ಅವಳು ದಿಗ್ಭ್ರಮೆಗೊಂಡಳು."
ಎವರೆಟ್ ತನ್ನ ಕುರ್ಚಿಯಲ್ಲೇ ತಿರುಗಿಕೊಂಡ. "ಓ! ಕ್ಯಾದರೀನ್! ಅದು ಸಾಧ್ಯವಾ! ಈ ವಿಷಯ ಹೇಳಿ ನೀವು ನನಗೆ ಆಶ್ಚರ್ಯ ಉಂಟುಮಾಡ್ತಿದ್ದೀರಿ. ನಾನು ಚಿಕ್ಕವನಾಗಿದ್ದಾಗಲೇ ಆಕೆಯ ಪರಿಚಯ ಇತ್ತು. ಆಕೆ ಇಲ್ಲಿ.. .." ಎಂದು ಮೌನ ತಾಳಿದ.
"ಏನು ಮಾಡ್ತಿದಾಳೇಂತಾನಾ?" ಎಂದು ಗೇಲಾರ್ಡ್ ಎಂದು ಆ ಮೌನವನ್ನು ಮುರಿದ. "ನೀವು ವಿಷಯದ ಅಂತರಂಗಕ್ಕೇ ಬಂದುಬಿಟ್ಟಿರಿ. ನನ್ನ ತಂಗಿಗೆ ತುಂಬ ದಿನದಿಂದ ಮೈ ಸರಿಯಾಗಿರ್ಲಿಲ್ಲ."
"ಹೌದಾ? ಈ ವಿಷಯ ನಂಗೆ ಗೊತ್ತೇ ಇರ್ಲಿಲ್ಲ. ಆಕೆ ಬಗ್ಗೆ ಕೊನೆಯ ಸಲ ನಂಗೆ ಗೊತ್ತಾದದ್ದು ಲಂಡನ್‍ನಲ್ಲಿ ಹಾಡಿದಾಗ. ನಮ್ಮಣ್ಣನಿಗೂ ನಂಗೂ ಪತ್ರ ವ್ಯವಹಾರ ಬಹಳ ಅಪರೂಪ. ಅಲ್ಲದೆ ಅಲ್ಲಿ ಬರೆಯೋದೆಲ್ಲ ಕುಟುಂಬಕ್ಕೆ ಸಂಬಂಧಿಸಿದ್ದೇ ಹೊರ್ತು ಬೇರೆಯದು ಇಲ್ಲವೇ ಇಲ್ಲ ಅನ್ನಬಹುದು. ನಿಮ್ಮ ತಂಗಿ ಅನಾರೋಗ್ಯದ ವಿಷಯ ಕೇಳಿ ತುಂಬ ಬೇಜಾರಾಗ್ತಿದೆ. ಅದಕ್ಕೆ ಕಾರಣ ನೀವು ತಿಳಿದಿರೋದಕ್ಕಿಂತ ಹೆಚ್ಚಿನದು."
ಚಾರ್ಲೀ ಗೇಲಾರ್ಡ್‍ನ ಮುಖದ ಗೆರೆಗಳು ಸ್ವಲ್ಪ ಸಡಿಲಗೊಂಡವು.
"ಮಿ. ಹಿಲ್‍ಗಾರ್ಡ್, ನಾನು ಹೇಳೋಕೆ ಪ್ರಯತ್ನಪಡ್ತಿರೋದೂಂದ್ರೆ, ಅವಳು ನಿಮ್ಮನ್ನು ನೋಡ್ಬೇಕೂಂತ ಇಷ್ಟಪಡ್ತಿದಾಳೆ. ಇದನ್ನು ಹೇಳಕ್ಕೆ ನಂಗೆ ಸಂಕೋಚ, ಆದ್ರೆ ಆ ಬಗ್ಗೆ ಅವಳು ತುಂಬ ದೃಢವಾಗಿದಾಳೆ. ನಾವಿರೋದು ಊರಿಂದ ಅನೇಕ ಮೈಲಿಗಳಾಚೆ. ನನ್ನ ಗಾಡಿ ಕೆಳಗಿದೆ, ನಿಮಗೆ ಅನುಕೂಲವಾದಾಗ ಕರ್ಕೊಂಡು ಹೋಗ್ತೀನಿ."
"ಈಗಲೇ ನಾನು ಬರಬಲ್ಲೆ, ಅದು ನಿಜಕ್ಕೂ ಸಂತೋಷದ ವಿಷ್ಯ. ಆಗಬಹುದು ತಾನೇ? ನನ್ನ ಹ್ಯಾಟು ತಗೊಂಡು ನಿಮ್ಮ ಜೊತೆ ಬಂದ್ಬಿಡ್ತೀನಿ, ಒಂದು ನಿಮಿಷ" ಎಂದು ತಕ್ಷಣವೇ ಎವರೆಟ್ ಮರುನುಡಿದ.
ಎವರೆಟ್ ಮಹಡಿಯಿಂದ ಕೆಳಗಿಳಿದು ಬಂದಾಗ ಬಾಗಿಲ ಬಳಿ ಒಂದು ಗಾಡಿ ನಿಂತಿರುವುದು ಕಾಣಿಸಿತು. ಅವನು ಕೂತ ಮೇಲೆ ಚಾರ್ಲೀ ಗೇಲಾರ್ಡ್ ತನ್ನ ಜಾಗದಲ್ಲಿ ಆರಾಮವಾಗಿ ಕೂತು ಕೈಲಿ ಲಗಾಮುಗಳನ್ನು ಹಿಡಿದು ಸಮಾಧಾನದ ನಿಟ್ಟುಸಿರು ಬಿಟ್ಟ.
"ನೀವು ನನ್ನ ತಂಗೀನ ನೋಡೋದಕ್ಕೆ ಮುಂಚೆ ನಾನು ಅವಳ ಬಗ್ಗೆ ಕೆಲವು ವಿಷ್ಯ ಹೇಳ್ಬೇಕು. ಆದರೆ ಹೇಗೆ ಆರಂಭಿಸಬೇಕೂಂತಾನೇ ಗೊತ್ತಾಗ್ತಾ ಇಲ್ಲ. ಅವಳು ನಿಮ್ಮಣ್ಣ ಮತ್ತು ಅತ್ತಿಗೇರ ಜೊತೆ ಯೂರೋಪ್‍ನಲ್ಲೆಲ್ಲ ಪ್ರವಾಸ ಮಾಡಿದಳು, ಬೇಕಾದಷ್ಟು ಕಡೆ ಅವರ ಕಚೇರಿಗಳಲ್ಲಿ ಹಾಡಿದಳು. ಆದರೆ ಅವಳ ಬಗ್ಗೆ ನಿಮಗೆ ಎಷ್ಟು ಗೊತ್ತಿದ್ಯೋ ನಂಗೆ ತಿಳೀದು."
"ತುಂಬ ಸ್ವಲ್ಪ. ಗೊತ್ತಿರೋದೂಂದ್ರೆ, ಆಕೇನ ನಮ್ಮಣ್ಣ ತನ್ನ ಶಿಷ್ಯರಲ್ಲೆಲ್ಲ ತುಂಬ ಪ್ರತಿಭಾವಂತೆ ಅಂತ ಭಾವಿಸಿದ್ದದ್ದು. ಜೊತೆಗೆ, ನಾನು ಆಕೇನ ನೋಡಿದಾಗ ಆಕೆ ತುಂಬ ಚಿಕ್ಕ ಹುಡುಗಿ, ತುಂಬ ಚೆಲುವೆ, ಸ್ವಲ್ಪ ಕಾಲ ನನ್ನ ತಲೇಲಿ ದುಃಖ ತುಂಬ್ಕೊಂಡಿದ್ದೆ."
ತನ್ನ ದುಃಖದ ವಿಷ್ಯ ಕೇಳಿ ಗೇಲಾರ್ಡ್ ಆ ಬಗ್ಗೆ ತುಂಬ ಯೋಚಿಸುತ್ತಿದ್ದ ಹಾಗೆ ಕಾಣಿಸಿತು. ಅವನ ಸಂಕೋಚ ಸ್ವಭಾವ ಹಾಗೂ ಪ್ರಮಾಣಪ್ರಜ್ಞೆ ಮಿತಿಮೀರಿದ ಹಾಗಿತ್ತು. ಅವನ ತೊಂದರೆ ಅಂದರೆ ಜಗತ್ತಿನ ಒಂದು ಪ್ರಮುಖ ವಿಷಯ. :ಅದೇ ಎಲ್ಲದಕ್ಕೂ ಕಾರಣ" ಎಂದ ತನ್ನ ಚಾವಟಿಯಿಂದ ಕುದುರೆಯನ್ನ ತಿವಿದ.
"ನೀವು ಅಂದ ಹಾಗೆ, ಅವಳು ದೊಡ್ಡ ವ್ಯಕ್ತಿ. ಅವಳೇನೂ ಉನ್ನತ ಕುಟುಂಬದಿಂದ ಬಂದೋಳಲ್ಲ. ಮೊದಲಿನಿಂದಲೂ ಅವಳು ತನ್ನ ದಾರಿ ತಾನೇ ನೋಡ್ಕೋಬೇಕಾಗಿತ್ತು. ಶಿಕಾಗೋಗೆ ಹೋದಳು, ಆಮೇಲೆ ನ್ಯೂಯಾರ್ಕ್ಗೆ, ಅದೂ ಆದ ಮೇಲೆ ಯೂರೋಪ್. ಎಲ್ಲ ಕಡೆ ಮಿಂಚಿನ ಸಂಚಾರ ಮಾಡಿದಳು. ಅದನ್ನವಳು ತುಂಬ ಇಷ್ಟಪಡ್ತಿದ್ದಳು. ಆದರೆ ಈಗವಳು ಸಾಯ್ತಾ ಬಿದ್ದಿದಾಳೆ, ಬಿಲದಲ್ಲಿರೋ ಇಲಿ ಹಾಗೆ, ತನ್ನ ಜಗತ್ತಿನಿಂದ ಹೊರಗೆ, ಮತ್ತೆ ಅವಳು ನಮ್ಮ ಜಗತ್ತಿಗೆ ಬರೋ ಸ್ಥಿತೀಲಿಲ್ಲ. ನಾವು ಬೇರೆ ಬೇರೆಯಾಗಿ ಬೆಳೆದ್ವಿ ಗ ಮೈಲಿಗಳ ದೂರ ಗ ಅವಳು ತುಂಬ ಅಸುಖಿ ಅಂತ ನನಗನ್ನಿಸತ್ತೆ."
"ನೀವು ಕೇಳ್ತಾ ಇರೋದು ಒಂದು ದುರಂತ ಕತೆ, ಮಿ. ಗೇಲಾರ್ಡ್" ಎಂದ ಎವರೆಟ್. ಎದುರುಗಡೆ ಬೆಟ್ಟಗಳಂಚಿನ ತೇಪೆಯಾಗಿ ಕಾಣಿಸುತ್ತಿದ್ದ ನೀಲಿ ಆಗಸದ ಕೆಳಗೆ ಕೆಂಪು ಹುಲ್ಲು ಬೆಳೆದ ದೂಳು ತುಂಬಿದ ಬಯಲು ಪ್ರದೇಶಗಳ ಮೂಲಕ ಹಾದು ಇಷ್ಟು ಹೊತ್ತಿಗಾಗಲೇ ಅವರು ಹಳ್ಳಿ ಪ್ರದೇಶವನ್ನು ತಲುಪಿದ್ದರು.
ತನ್ನ ಜಾಗದಲ್ಲಿ ಸರಿಯಾಗಿ ಕೂತು ಹೇಳಿದ: "ದುರಂತವಾ! ದೇವರೇ, ದುರಂತ ಎಂಥದು ಅಂತ ಯಾರಿಗೂ ಯಾವತ್ತೂ ಗೊತ್ತಾಗದಷ್ಟು. ನಾನು ಬದುಕಿರೋದು ಆ ದುರಂತದಲ್ಲೇ, ತಿನ್ನೋದು ದುರಂತವನ್ನೇ, ಮಲಗೋದೂ ಅದರ ಜೊತೇನೇ. ಹೀಗಾಗಿ ಎಲ್ಲದರ ಮೇಲೂ ನನ್ನ ಹಿಡಿತವೇ ತಪ್ಪಿಹೋಗಿದೆ. ಅವಳು ಸಾಕಷ್ಟು ದುಡ್ಡು ಸಂಪಾದಿಸಿದ್ದಳು, ಆದರೆ ಅದನ್ನೆಲ್ಲ ಆಸ್ಪತ್ರೆಗೆ ಹೋಗಕ್ಕೇ ಖರ್ಚು ಮಾಡಿದಳು. ಅದಕ್ಕೆ ಕಾರಣ ಅವಳ ಶ್ವಾಸಕೋಶ. ಅವಳನ್ನ ಎಲ್ಲಿಗೆ ಬೇಕಾದ್ರೂ ಕರ್ಕೊಂಡು ಹೋಗಕ್ಕೆ ಬೇಕಾದಷ್ಟು ಹಣ ನನ್ನ ಹತ್ರ ಇದೆ. ಆದರೆ ಅದರಿಂದೇನೂ ಪ್ರಯೋಜನವಾಗಲ್ಲ ಅಂತ ವೈದ್ಯರು ಹೇಳ್ತಾರೆ. ಸುಧಾರಿಸಿಕೊಳ್ಳೋ ಯಾವ ಸಣ್ಣ ನಿರೀಕ್ಷೆಯೂ ಇಲ್ಲವಂತೆ. ಹೇಗೋ ದಿನಗಳನ್ನು ನೂಕೋದು, ಅಷ್ಟೆ. ನನ್ನ ಹತ್ತಿರ ಬಂದಾಗ ಅವಳಿದ್ದ ಪರಿಸ್ಥಿತಿ ವಾಸ್ತವವಾಗಿದ್ದುದಕ್ಕಿಂತ ಅರ್ಧದಷ್ಟು ಗಂಭೀರ ಅಂತಾನೂ ನಂಗೆ ತಿಳೀಲಿಲ್ಲ. ತಾನು ನಿಶ್ಶಕ್ತಳಾಗಿದ್ದೀನಿ ಅಂತ ಕಾಗದ ಬರೆದಳು. ಈಗ ಅವಳು ನಮ್ಮ ಜೊತೆ ಇದಾಳೆ, ಅವಳು ಎಲ್ಲಿ ಬೇಕಾದ್ರೂ ಇದಕ್ಕಿಂತ ಹೆಚ್ಚು ಸುಖವಾಗಿರಬಹುದು. ಆದರೆ ಬೇರೆಲ್ಲೂ ಹೋಗಲ್ಲ ಅಂತ ಹೇಳ್ತಾಳೆ. ಇಲ್ಲಿ ಹೇಗೋ ಕಾಲ ಹಾಕ್ಕೊಂಡಿರೋದು ಸುಲಭ, ಪೂರ್ವಕ್ಕೆ ಹೋಗೋದು ಅಂದ್ರೆ ಪ್ರತಿಕ್ಷಣ ಸಾಯೋದು ಅಂತಾಳೆ. ನಾನು ಒಂದು ಕಾಲದಲ್ಲಿ ಅಯೋವದಲ್ಲಿನ ಬರ್ಡ್ ಸಿಟಿಯಲ್ಲಿ ಬ್ರೇಕ್ಮನ್ ಆಗಿದ್ದೆ, ಅವಳನ್ನು ಭುಜದ ಮೇಲೆ ಕೂರಿಸಿಕೊಂಡು ಹೋಗ್ಬೋದಾಗಿತ್ತು, ಅಷ್ಟು ಚಿಕ್ಕೋಳು. ನನ್ನ ತಿಂಗಳ ಸಂಪಾದನೆಯಾಗಿದ್ದ ಎಂಬತ್ತು ಡಾಲರ್‍ನಲ್ಲೇ ಎಲ್ಲ ನಡೀಬೇಕಾಗಿತ್ತು. ಆದರೆ ಈಗ ಅವಳು ಬಯಸಿದ್ದನ್ನೆಲ್ಲ ಕೊಡಿಸೋ ಅಂಥ ಸಾಮರ್ಥ್ಯ ನಂಗೆ ಬಂದಿದೆ, ಸ್ವಲ್ಪ ಆಸ್ತೀನೂ ಮಾಡ್ಕೊಂಡಿದ್ದೀನಿ. ಆದರೆ ಅವಳಿಗೆ ಒಂದು ರಾತ್ರಿ ಹಾಯಾಗಿ ನಿದ್ದೆ ಬರೋ ಹಾಗೆ ಮಾಡಕ್ಕಾಗ್ತಾ ಇಲ್ಲ ನಂಗೆ."
ಚಾರ್ಲೀ ಗೇಲಾರ್ಡ್ನ ಪ್ರಾಪಂಚಿಕ ಸ್ಥಿತಿ ಈಗ ಎಂಥದೇ ಆಗಿರಲಿ ಅವನು ತನ್ನ ಬ್ರೇಕ್‍ಮನ್ನ ಹೃದಯವನ್ನು ಹಾಗೂ ಭಾವನೆಗಳ ಪ್ರಾಮಾಣಿಕ ಅಭಿವ್ಯಕ್ತಿಯನ್ನೂ ತನ್ನೊಡನೆ ಮೇಲಕ್ಕೇರಿಸಿಕೊಂಡು ಬಂದಿದ್ದಾನೆ ಎಂಬುದು ಎವರೆಟ್‍ಗೆ ಸ್ಪಷ್ಟವಾಯಿತು.
ಗೇಲಾರ್ಡ್ ತನ್ನ ಮಾತನ್ನು ಮುಂದುವರಿಸಿದ: "ಅವಳು ತನ್ನ ಕುಟುಂಬವನ್ನು ಮೀರಿ ಬೆಳೆದಿದ್ದಾಳೆಂಬುದನ್ನು ನೀವು ಅರ್ಥಮಾಡಿಕೋಬಹುದು. ನಾವೆಲ್ಲ ತೀರ ಸಾಮಾನ್ಯ ಮನುಷ್ಯರು, ರೈಲು ಕೆಲಸಗಾರರು. ನನ್ನ ತಂದೆ ಒಬ್ಬ ಕಂಡಕ್ಟರ್ ಆಗಿದ್ದರು. ನಾವಿನ್ನೂ ಮಕ್ಕಳಾಗಿದ್ದಾಗಲೇ ಅವರು ಹೋಗಿಬಿಟ್ಟರು. ನನ್ನ ಇನ್ನೊಬ್ಬ ತಂಗಿ ಮ್ಯಾಗಿ ನನ್ನ ಜೊತೇನೇ ಇದ್ದಾಳೆ; ನಾನಿನ್ನೂ ಜೀವನದಲ್ಲಿ ಸರಿಯಾಗಿ ನೆಲೆಗೊಳ್ಳುತ್ತಿದ್ದ ಕಾಲದಲ್ಲಿ ಅವಳು ಟೆಲೆಗ್ರಾಫ್ ಆಪರೇಟರ್ ಆಗಿದ್ದಳು. ನಮಗೆ ಹೇಳಿಕೊಳ್ಳುವಂತಹ ವಿದ್ಯೆ ಏನೂ ಇಲ್ಲ. ನನಗೆ ಕಾಗುಣಿತವೇ ಸರಿಯಾಗಿ ಬರದೇ ಇರೋದರಿಂದ ಉಕ್ತಲೇಖನ ತೆಗೆದುಕೊಳ್ಳೊ ಒಬ್ಬನನ್ನ ನಾನು ಇರಿಸಿಕೊಳ್ಳಬೇಕಾಯ್ತು. ದೇವರು ನನಗೆ ಸರಿಯಾದ ಕಾಗುಣಿತವನ್ನೇ ಕರುಣಿಸಲಿಲ್ಲ. ಕೇಟ್ಳ ಬದುಕಿನಲ್ಲಿ ಮುಖ್ಯವಾಗಿರೋ ವಿಷಯವೆಲ್ಲ ನನಗೆ ಗ್ರೀಕ್ ಇದ್ದ ಹಾಗೆ. ಹೀಗಾಗಿ ಇಷ್ಟನ್ನು ಬಿಟ್ಟರೆ ನಮಗೆಲ್ಲ ಸಾಮಾನ್ಯವಾಗಿರೋ ವಿಷಯವೇ ಇಲ್ಲ ಅನ್ನಬಹುದು. ಇರೋ ಒಂದೇ ಸಮಾನ ವಿಷಯ ಅಂದ್ರೆ ನಾವೆಲ್ಲ ಚಿಕ್ಕವರಾಗಿದ್ದಾಗ ಒಟ್ಟಿಗೇ ಇದ್ದ ಕಾಲದಲ್ಲಿ ಕೇಟ್ ಬರ್ಡ್ ಸಿಟಿಯ ಚರ್ಚ್ ಸಂಗೀತ ಮೇಳದಲ್ಲಿ ಹಾಡಿದ್ದಳು ಅನ್ನೋದು ಮಾತ್ರ. ಆದರೆ, ಮಿ. ಹಿಲ್‍ಗಾರ್ಡ್ ಅವರೇ, ತನ್ನ ಆಸಕ್ತಿಯ ವಿಷಯಗಳಲ್ಲಿ ಪರಿಚಯ ಇರೋ ಜನಗಳ ಬಗ್ಗೆ ತಿಳಿವಳಿಕೆ ಇರೋ ನಿಮ್ಮಂಥ ಒಬ್ಬ ವ್ಯಕ್ತಿಯನ್ನ ನೋಡಿದರೂ ಅದೇ ಅವಳ ಮನಸ್ಸಿಗೆ ಈಗ ಸ್ವಲ್ಪ ಹಾಯನ್ನಿಸೋದು."
ಅನೇಕ ಅಂತಸ್ತುಗಳೂ ಗುಂಡಗಿನ ಗೋಪುರವೂ ಇದ್ದ ಎದ್ದು ಕಾಣುವಂತೆ ಬಣ್ಣ ಬಳಿದಿದ್ದ ಮನೆಯೊಂದರ ಮುಂದೆ ಬಂದಾಗ ಚಾರ್ಲೀ ಗೇಲಾರ್ಡ್ನ ಕೈಲಿದ್ದ ಕಡಿವಾಣಗಳು ಸಡಿಲಾದುವು. ಎವರೆಟ್ ಕಡೆ ತಿರುಗಿ ಗೇಲಾರ್ಡ್, "ಇಗೋ ಬಂದೇಬಿಟ್ಟೆವು. ನಾವು ಒಬ್ಬರನ್ನೊಬ್ಬರು ಅರ್ಥಮಾಡ್ಕೊಂಡಿದ್ದೀವಿ ಅಂತ ಕಾಣತ್ತೆ" ಎಂದ.
ಅವರು ಒಳಕ್ಕೆ ಹೋಗುವಾಗ ಬಾಗಿಲಲ್ಲಿ ಎದುರಾದವಳು ಸಣಕಲಾದ ಬಣ್ಣಗೆಟ್ಟ ಒಬ್ಬ ಹೆಂಗಸು. ಅವಳ ಕಡೆ ತೋರಿಸಿ, "ನನ್ನ ತಂಗಿ, ಮ್ಯಾಗಿ" ಎಂದು ಗೇಲಾರ್ಡ್ ಪರಿಚಯ ಮಾಡಿಕೊಟ್ಟ. ಹಿಲ್‍ಗಾರ್ಡ್ ಅನ್ನು ಕೋಣೆಯೊಳಕ್ಕೆ ಕರೆದೊಯ್ಯುವಂತೆ ಆಕೆ ಅಣ್ಣನಿಗೆ ಹೇಳಿದಳು. ಕ್ಯಾದರೀನ್ ಅಲ್ಲಿಯೇ ಎವರೆಟ್‍ ಅನ್ನು ಏಕಾಂತವಾಗಿ ಭೇಟಿಮಾಡಲು ಬಯಸಿದ್ದಳು.
ಎವರೆಟ್ ಸಂಗೀತ ಕೋಣೆಯೊಳಕ್ಕೆ ಕಾಲಿಟ್ಟಾಗ ಅವನು ಆಶ್ಚರ್ಯದಿಂದ ಉದ್ಗರಿಸುವಂತಾಯಿತು; ವ್ಯೋಮಿಂಗ್ನ ನಿಗಿನಿಗಿ ಹೊಳೆಯುವ ಬಿಸಿಲಿನಿಂದ ತನಗೆ ಪರಿಚಯವಿರುವ ನ್ಯೂಯಾರ್ಕ್ನ ಸ್ಟುಡಿಯೋ ಒಂದರಲ್ಲಿ ಪ್ರವೇಶಿಸುತ್ತಿರುವ ಅನುಭವ ಅವನಿಗಾಗಿತ್ತು. ಬ್ಯಾಂಕ್ ಮತ್ತು ಅಂಗಡಿಗಳು ಹಾಗೂ ಮನೆಗಳ ವಠಾರದ ಮೇಲೆ ತಾನು ಕಂಡಿದ್ದ ಎತ್ತರವಾದ ಸೂರಿನ ಅಸಂಖ್ಯಾತ ಸ್ಟುಡಿಯೋಗಳಲ್ಲಿ ಇದು ಯಾವುದನ್ನು ಹೋಲುತ್ತಿತ್ತು ಎಂದು ಅವನ ವಿಸ್ಮಯಗೊಂಡ. ನಂಬಲಾರದ ಮನಃಸ್ಥಿತಿಯಲ್ಲಿ ಅವನು ಕಿಟಕಿಯ ಹೊರಗೆ ರಾಕಿ ಪರ್ವತಪಂಕ್ತಿಯಲ್ಲಿ ಕೊನೆಗಂಡಿದ್ದ ಬೂದು ಬಣ್ಣದ ಬಯಲಿನ ಕಡೆಗೆ ಕಣ್ಣಾಡಿಸಿದ.
ತೀರ ಪರಿಚಿತವೆನಿಸುವ ಆ ಕೋಣೆಯ ಕಾಡುವ ಪರಿಸರವು ಅವನನ್ನು ಗೊಂದಲಗೊಳಿಸಿತು. ತನಗೆ ಗೊತ್ತಿರುವ ಯಾವುದಾದರೂ ನಿರ್ದಿಷ್ಟ ಸ್ಟುಡಿಯೋ ಒಂದರ ನಕಲೇ ಅದು, ಅಥವಾ ವಿಶಿಷ್ಟವೂ ಗಾಢ ನೆನಪನ್ನು ಕೆದಕುವಂಥದೂ ಆದ ಪರಿಸರವುಳ್ಳ ವ್ಯೋಮಿಂಗ್‍ನಲ್ಲಿನ ಸ್ಟುಡಿಯೋನೇ ಇದು? ಅಕಸ್ಮಾತ್ತಾಗಿ ಅವನ ಕಣ್ಣು ಪಿಯಾನೋ ಇದ್ದ ಕಡೆ ಮೇಲೆ ತನ್ನ ಅಣ್ಣನ ದೊಡ್ಡ ಚಿತ್ರದ ಮೇಲೆ ಬಿತ್ತು. ಆಮೇಲೆ ಮಿಕ್ಕದ್ದೆಲ್ಲ ಅವನಿಗೆ ಸ್ಪಷ್ಟವಾಯಿತು: ಇದು ತನ್ನ ಅಣ್ಣನ ಕೋಣೆಯೇ, ಅನುಮಾನವಿಲ್ಲ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಏಡ್ರಿಯನ್ಸ್ ಸ್ಥಾಪಿಸಿದ್ದ ಅನೇಕ ಸ್ಟುಡಿಯೋಗಳಲ್ಲಿ ಇದು ಒಂದರ ತದ್ವತ್ ನಕಲಾಗಿಲ್ಲದಿದ್ದರೂ, ಅದನ್ನು ಮನಸ್ಸಿಗೆ ತರುವ ಮತ್ತು ಹೊಸತಾಗಿಸಿದವನು ಹಚ್ಚಿದ ಬಣ್ಣವನ್ನು ಹೊರತುಪಡಿಸಿದರೆ, ಅದೇ ಧಾಟಿಯಲ್ಲಿದ್ದುದು ಸ್ಪಷ್ಟವಾಗಿತ್ತು. ಕೋಣೆಯ ಪ್ರತಿಯೊಂದು ವಿವರವೂ ಏಡ್ರಿಯನ್ಸ್ನ ಅಭಿರುಚಿಯನ್ನು ಅಳವಡಿಸಿಕೊಂಡು ಅವನ ವ್ಯಕ್ತಿತ್ವವನ್ನೇ ಉಸಿರಾಡುತ್ತಿತ್ತು.
ಗೋಡೆಯ ಮೇಲಿದ್ದ ಛಾಯಾಚಿತ್ರಗಳಲ್ಲಿ ಒಂದು ಕ್ಯಾದರೀನ್ ಗೇಲಾರ್ಡ್‍ದೇ, ಗೇಲಾರ್ಡ್ ಅವಳ ಪರಿಚಯವನ್ನು ಹೊಂದಿದ್ದ ಕಾಲದಲ್ಲಿ ತೆಗೆದಂತಹುದೇ. ಅವಳ ಕಣ್ಣಿನ ಮಿಂಚು, ಸ್ಕರ್ಟ್ನ ಸರಸರ ಸದ್ದು ಅವನ ಹುಡುಗು ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವನ್ನುಂಟುಮಾಡುತ್ತಿದ್ದ ಕಾಲ ಅದು.  ಈಗಲೂ, ಆ ಚಿತ್ರದ ಮುಂದೆ ನಿಂತಾಗ ಅವನಲ್ಲಿ ಒಂದು ಬಗೆಯ ಇರುಸುಮುರುಸು ಉಂಟಾಯಿತು. ಯೌವನದಲ್ಲೇ ವಯಸ್ಸಾಗಿದ್ದ ಹೆಂಗಸಿನ ಮುಖ ಅದು, ಪೂರ್ತಿ ಬದಲಾಗಿದ್ದ ಹಾಗೂ ಕೊಂಚ ಗಡುಸಾಗಿದ್ದ ಮುಖ. ಅವಳು ಎದುರಿಸುತ್ತಿದ್ದಳೆಂದು ಅವಳ ಅಣ್ಣ ಹೇಳಿದ್ದುದನ್ನು ಅದು ವಿವರಿಸುವಂತಿತ್ತು. ಅವಳ ಬಿಚ್ಚುಮನಸ್ಸಿನ ಆತ್ಮವಿಶ್ವಾಸದ ಸ್ನೇಹಪರತೆಯ ಕಣ್ಣುಗಳು ಅವಳ ಬಾಯಿಯ ಪಕ್ಕದ ಆಳವಾದ ಗೆರೆಗಳು ಹಾಗೂ ಅವಳ ತುಟಿಗಳ ಕೊಂಕುಗಳಿಂದ ವಿಶಿಷ್ಟವಾಗಿದ್ದವು; ಅವುಗಳಲ್ಲಿ ಎದ್ದು ಕಾಣುತ್ತಿದ್ದುದು ವಿಷಾದ ಮತ್ತು ಹತಾಶೆ. ಜಗತ್ತಿನ ಬಗ್ಗೆ ಅವಳಿಗೆ ಇದ್ದುದ್ದು ನಿಶ್ಚಿತವಾಗಿ ವಿಶ್ವಾಸಕ್ಕಿಂತ ಸದ್ಭಾವನೆಯೇ. ಅವಳ ಮುಗುಳ್ನಗೆಯ ಕೆಚ್ಚು ಕೂಡ ಅತೃಪ್ತಿಯೇ ಎನ್ನಬಹುದಾದ ಅವಳ ಆತ್ಮತುಮುಲದ ನೆರಳನ್ನು ಮರೆಮಾಚಲಾಗಿರಲಿಲ್ಲ.  ಆ ಹೆಂಗಸಿನ ಪ್ರಮುಖ ಆಕರ್ಷಣೆಯೆಂದರೆ, ಎವರೆಟ್‍ಗೆ ಪರಿಚಯವಾದ್ದಂತೆಯೇ, ಅವಳ ಅಪೂರ್ವ ಸೊಬಗಿನ ನಿಲವು ಮತ್ತವಳ ಕಣ್ಣುಗಳು. ಆ ಕಣ್ಣುಗಳಲ್ಲಿ ಹೂಬಿಸಿಲಿನಲ್ಲಿರುವಂತಹ ಜೀವಂತಿಕೆಯನ್ನುಂಟುಮಾಡುವ ಬಿಸುಪು; ಅವುಗಳಲ್ಲಿ ಜಗತ್ತಿನ ಬಗೆಗಿನ ಚಿರಂತನ ಗೌರವ ಭಾವನೆಯ ಹೊಳಪು ತುಂಬಿತ್ತು. ಅವಳ ಮುಖವಂತೂ ಪರಿಪೂರ್ಣ ಆಕಾರ ಹೊಂದಿ ಸಮಚಿತ್ತದ ಹೆಮ್ಮೆಯಿಂದ ಕೂಡಿದ್ದ ನೆನಪು ಎವರೆಟ್ನ ನೆನಪಲ್ಲಿ ಬೇರೂರಿತ್ತು. ಅವಳಲ್ಲಿ ಸದಾ ಒಂದು ಬಗೆಯ ಗಾಂಭೀರ್ಯ ಆವರಿಸಿದ್ದು, ಅವಳ ನಿರ್ಲಿಪ್ತತೆ, ತಾನೊಬ್ಬಳೇ ಏಕಾಂಗಿಯಾಗಿ ನಿಲ್ಲುವ ಸ್ಥೈರ್ಯ ಇವುಗಳ ಬಗೆಗಿನ ಅವನ ಅನಿಸಿಕೆಯನ್ನು ಆ ಚಿತ್ರವು ಮರುಕಳಿಸುವಂತೆ ಮಾಡಿತ್ತು.
ಎವರೆಟ್ ಬೆನ್ನ ಮೇಲೆ ಕೈಗಳನ್ನಿಟ್ಟುಕೊಂಡು, ತಲೆಯನ್ನು ಓರೆಯಾಗಿರಿಸಿಕೊಂಡು ಇನ್ನೂ ಆ ಚಿತ್ರದ ಮುಂದೆಯೇ ನಿಂತಿದ್ದ; ಆಗ ಬಾಗಿಲು ತೆರೆದ ಸದ್ದು ಕೇಳಿಸಿತು. ತೀರ ನೀಳವಾಗಿದ್ದ ಒಬ್ಬ ಹೆಂಗಸು ತನ್ನ ಕೈಗಳನ್ನು ಚಾಚಿಕೊಂಡು ಅವನೆಡೆಗೆ ಬಂದಳು. ಮಾತನಾಡಲು ತೊಡಗುವ ಮುಂಚೆ ಆಕೆ ಸ್ವಲ್ಪ ಕೆಮ್ಮಿದಳು. ಆನಂತರ ನಗುತ್ತ ತನ್ನ ಮೆಲುವಾದ ಸಿರಿವಂತವಾದರೂ ಕೊಂಚ ಗೊಗ್ಗರದ ದನಿಯಲ್ಲಿ, "ನಾನು ಕೆಮ್ಮಿಕೊಂಡು ಹೇಗೆ ಬಂದೆ ನೋಡಿ; ನೀವು ಬಂದದ್ದು ತುಂಬ ಸಂತೋಷ, ಮಿ. ಹಿಲ್‍ಗಾರ್ಡ್" ಎಂದಳು.
ತನ್ನ ಕುರಿತು ಮಾತಾಡುತ್ತಿದ್ದರೂ ಅವಳು ತನ್ನ ಕಡೆ ನೋಡದ ಬಗ್ಗೆ ಎವರೆಟ್‍ಗೆ ಅರಿವಿತ್ತು. ಇಲ್ಲಿಗೆ ಬರಲು ತನಗೂ ಸಂತೋಷವಾಗಿದೆ ಎಂಬುದನ್ನು ತಿಳಿಸಿ, ತನಗೆ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಭರವಸೆ ತಂದಿದೆ ಎಂದ. ತನ್ನ ನಿಡುಗಾಲದ ಅನಾರೋಗ್ಯದಿಂದಾದ ದಾಂಧಲೆ ಎಷ್ಟು ಎಂಬುದನ್ನು ತಾನು ಪರಿಗಣಿಸಿಲ್ಲ. ಅವಳ ಬಿಳಿ ಗೌನಿನ ಸಡಿಲವಾದ ನಿರಿಗೆಗಳನ್ನು ಆಕೆಯ ಕೃಶವಾದ ದೇಹವನ್ನು ಮರೆಮಾಚಲೆಂದೇ ವಿನ್ಯಾಸಗೊಳಿಸಿದಂತಿತ್ತು, ಆದರೆ ಕಾಯಿಲೆಯಿಂದಾದ ಹಾವಳಿ ನೇರವಾಗಿ ಎದ್ದು ಕಾಣುವ ಹಾಗೆ ಆಕೆಯ ಮೇಲೆ ವಿಕೃತಿಯನ್ನು ಮೂಡಿಸಿತ್ತು. ಈ ಕರುಣಾಜನಕ ವಸ್ತುಸ್ಥಿತಿಯನ್ನು ಮರೆಮಾಚಲೂ ಸಾಧ್ಯವಿರಲಿಲ್ಲ, ಹೋಗಲಾಡಿಸಲೂ ಸಾಧ್ಯವಿರಲಿಲ್ಲ. ಆಕೆಯ ಅಮೋಘ ಭುಜಗಳು ಬಾಗಿದ್ದವು, ನಡಿಗೆಯಲ್ಲಿ ಅತ್ತಿತ್ತ ಓಲಾಡುವ ಅಸಮತೆಯಿತ್ತು, ತೋಳುಗಳು ಪ್ರಮಾಣರಹಿತವಾಗಿ ಉದ್ದವಿದ್ದ ಹಾಗೆ ಕಾಣುತ್ತಿದ್ದವು, ಆಕೆಯ ಕೈಗಳಂತೂ ಬೆಳ್ಳಗೆ ಪಾರದರ್ಶಕವಾಗಿದ್ದು ಮುಟ್ಟಲು ತಣ್ಣಗಿದ್ದುವು. ಆದರೆ ಆಕೆಯ ಮುಖದ ಮೇಲಾಗಿದ್ದ ಪರಿಣಾಮ ಇಷ್ಟೊಂದು ಢಾಳವಾಗಿರಲಿಲ್ಲ; ಹೆಮ್ಮೆಯಿಂದ ತಲೆಯೆತ್ತಿರುವುದು, ಪ್ರೇಮಲ ದೃಷ್ಟಿಯ ನಿರಾಳ ಕಣ್ಣುಗಳು, ಆಕೆಯ ಕದಪುಗಳ ಸುಸೂಕ್ಷ್ಮ ಬಣ್ಣ ಗ ಇವೆಲ್ಲ ಹಟದಿಂದೆಂಬಂತೆ ಉಳಿದುಕೊಂಡಿದ್ದುವು, ಆದರೆ ಅವುಗಳ ತೀವ್ರತೆ ಕಡಿಮೆ, ಹಾಗೂ ವಯಸ್ಸಿನ ಪ್ರಭಾವ ಮತ್ತು ವಿಷಾದದಿಂದ ಕೂಡಿ ಮೆಲುವಾಗಿದ್ದವು.
ಆಕೆ ಬಂದು ದಿವಾನ್ ಮೇಲೆ ಕೂತು ಒಂದು ಬಗೆಯ ಅಂಜಿಕೆಯಿಂದೆಂಬಂತೆ ದಿಂಬುಗಳನ್ನು ಸರಿಪಡಿಸತೊಡಗಿದಳು. "ನಾನು ನೋಡಲು ಉಲ್ಲಾಸದಾಯಕವಾಗೇನೂ ಉಳಿದಿಲ್ಲ, ನೀವು ಆ ಬಗ್ಗೆ ಬಿಚ್ಚು ಮನಸ್ಸಿನಿಂದಿರಬೇಕು, ಸೂಕ್ಷ್ಮವಾಗಿರಬೇಕು, ಅದಕ್ಕೆ ತಕ್ಷಣವೇ ಹೊಂದಿಕೋಬೇಕು. ಯಾಕಂದರೆ ನಮಗೆ ಹೆಚ್ಚು ಸಮಯ ಇಲ್ಲ. ನಾನೇನಾದ್ರೂ ನಿಮಗೆ ಸ್ವಲ್ಪ ಕಿರಿಕಿರಿ ಅನ್ನಿಸಿದರೆ ದಯವಿಟ್ಟು ಬೇಸರಮಾಡಿಕೋಬೇಡಿ. ನನಗಂತೂ ಈಗ ಎಂದಿಗಿಂತ ಹೆಚ್ಚು ಅಂಜಿಕೆ ಅನ್ನಿಸ್ತಿದೆ."
"ನಿಮಗೆ ದಣಿವಾಗಿದ್ದರೆ ದಯವಿಟ್ಟು ನನ್ನ ಜೊತೆ ಇರೋ ತೊಂದರೆ ತೊಗೋಬೇಡಿ. ನಾನು ನಾಳೆ ಬೇಕಾದ್ರೂ ಬರ್ತೀನಿ" ಎಂದ ಎವರೆಟ್.
"ಅಯ್ಯೋ ದೇವರೆ, ಖಂಡಿತ ಇಲ್ಲ." ಎಂದವಳು ತನ್ನ ವ್ಯಕ್ತಿತ್ವದ ಭಾಗವಾಗಿದ್ದ ವಿನೋದಪರತೆಯನ್ನು ನೆನಪಿಸಿ ತಕ್ಷಣವೇ ನುಡಿದಳು. "ಒಂಟಿತನವೇ ನನಗೆ ಸಾವಿಗಿಂತ ಹೆಚ್ಚಾಗಿ ಕಾಡ್ತಿರೋದು. ಒಂಟಿತನ, ಕೆಟ್ಟ ಜನ. ಇವತ್ತು ಬೆಳಿಗ್ಗೆ ಗುರುಗಳು ಕಾಯಿಲೆಯಾದೋರ ಪರ ಪ್ರಾರ್ಥನೆ ಮಾಡೋದರಲ್ಲಿ ತೃಪ್ತಿ ಪಡದೆ, ನನ್ನನ್ನ ಕೂಗಿ ಕರೆದರು. ಅವರಾಗ ತಮ್ಮ ಬೈಸಿಕಲ್ ಮೇಲೆ ಹೋಗ್ತಿದ್ದೋರು ನನ್ನನ್ನ ತಡೆಯೋದು ತಮ್ಮ ಕರ್ತವ್ಯವೇನೋ ಅನ್ನೋ ಹಾಗೆ ಮಾಡಿದರು. ಅವರಿಗೆ ನನ್ನ ವೃತ್ತಿ ಬಗ್ಗೆ ಸಮಾಧಾನವಿಲ್ಲ, ನನ್ನ ಹಿಂದಿನ ಬದುಕು ಕತ್ತಲುಮಯ ಅಂತ ಅವರ ನಂಬಿಕೆ. ಅವರು ಮಾತಾಡಿದ್ದರಲ್ಲಿ ತುಂಬ ತಮಾಷೆಯಾದ್ದು ಅಂದ್ರೆ ನನ್ನ ವೃತ್ತಿ ಬಗ್ಗೆ ನೆಪ ಹೇಳಿ ಕ್ಷಮೆ ತೋರಿಸಿ, ನನ್ನ ಪ್ರತಿಭೆಯನ್ನು ಉದಾತ್ತವಾದ ರೀತಿಯಲ್ಲಿ ಬಳಸಿಕೊಳ್ಳೋ ಸೂಚನೆ ನೀಡಿ ನನ್ನ ಮನಶ್ಶಾಂತಿಗೆ ತೇಪೆ ಹಾಕೋಕೆ ಪ್ರಯತ್ನಪಟ್ಟರು."
ಎವರೆಟ್ ನಕ್ಕ. "ಓ! ಅಂಥ ಘನ ಗಂಭೀರ ವ್ಯಕ್ತಿಯನ್ನು ಭೇಟಿ ಮಾಡೋಕೆ ನಾನಂತೂ ಸಿದ್ಧನಿಲ್ಲ, ಅಂಥ ಸಂದರ್ಭವನ್ನು ನಾನು ತಡಕೊಳ್ಳಲಾರೆ. ಹೆಚ್ಚು ಅಂದ್ರೆ, ಕೆಳ ವಿನೋದಕ್ಕಿಂತ ನಾನು ಹೆಚ್ಚು ಮೇಲೇರಲಾರೆ. ನೀವು ನಿಮ್ಮ ಪ್ರತಿಭೇನ ಯಾವ ಉದಾತ್ತ ಉದ್ದೇಶಕ್ಕೆ ಬಳಸಬೇಕೂಂತ ತೀರ್ಮಾನಿಸಿದ್ದೀರಿ ಹಾಗಾದ್ರೆ?"
ನೂಕಿಬಿಡೋ ರೀತಿಯಲ್ಲಿ ತನ್ನ ಕೈಗಳನ್ನು ಎತ್ತಿದ ಕ್ಯಾದರೀನ್ ಉದ್ಗರಿಸಿದಳು: "ನಾನು ಅವರಾರಿಗೂ ಸಮ ಅಲ್ಲ, ತೀರ ಕಡಿಮೆ ಉದಾತ್ತವಾದುದಕ್ಕೂ ಸಲ್ಲದೋಳು, ಆ ರೀತಿ ಬಗ್ಗೆ ನಾನು ಯೋಚನೇನೇ ಮಾಡಲ್ಲ."
ಒಮ್ಮೆ ನಕ್ಕು ಮತ್ತೆ ಹಿಂಜರಿಕೆಯಿಂದಲೇ ಮುಂದುವರಿಸಿದಳು: "ಆ ಪಾದ್ರಿಯೇನೂ ಅಂಥ ಕೆಟ್ಟೋರಲ್ಲ. ಅವರ ಇಂಗ್ಲಿಷ್ ನನಗೆ ಕಿರಿಕಿರಿ ಮಾಡೋದಿಲ್ಲ. ಅವರು ಗಿಬ್ಬನ್ನ 'ಡಿಕ್ಲೈನ್ ಅಂಡ್ ಫಾಲ್'ನ ಐದು ಸಂಪುಟಗಳನ್ನೂ ಓದಿದಾರೆ. ಇದು ಸಾಮಾನ್ಯವೇನಲ್ಲ. ಜೊತೆಗೆ ಅವರು ನ್ಯೂಯಾರ್ಕ್‍ಗೆ ಬೇರೆ ಹೋಗಿ ಬಂದಿದಾರೆ, ಇದೂ ದೊಡ್ಡ ವಿಷಯಾನೇ. ಆದರೆ ಕಾಲ ಹೇಗೆ ಕಳೆದುಹೋಗ್ತಿದೆ! ನ್ಯೂಯಾರ್ಕ್ ವಿಷಯ ಏನು? ನೀವು ಅಲ್ಲಿಂದ್ಲೇ ಬಂದಿದೀರಿ ಅಂತ ಚಾರ್ಲೀ ಹೇಳಿದ. ಈಗ ಅದು ಹೇಗೆ ಕಾಣತ್ತೆ, ಅದರ ವಾಸನೆ ಎಂಥದು, ರುಚಿ ಯಾವ ಥರದ್ದು? ಜೆರ್ಸಿ ಫೆರಿಯ ವಿಹಾರ ಅಂದ್ರೆ ನನಗೆ ಸೀಸೆ ತುಂಬ ಇರೋ ಕಾಡ್ಲಿವರ್ ಎಣ್ಣೆ ಇದ್ದ ಹಾಗೆ. ರಿಯಾಲ್ಟೋನಲ್ಲಿ ಈಗ ಮುಖ್ಯವಾಗಿ ಓಡಾಡೋರು ಯಾರು? ಅವರು ಉಡೋ ಉಡುಪು ಎಂಥದು? ಮ್ಯಾಡಿಸನ್ ಚೌಕ ಈಗಲೂ ಹಸುರು ಹಸುರಾಗಿದೆಯಾ? ಅಥವಾ ಅವೆಲ್ಲ ಕಂದು ಬಣ್ಣಕ್ಕೆ ತಿರುಗಿವ್ಯೋ, ಧೂಳು ತುಂಬಿಕೊಂಡಿವ್ಯೋ? ಸಿಟ್ಟು ತರಿಸೋ ಈ ಋತುಮಾನಗಳ ಬದಲಾವಣೆಗಳಲ್ಲೂ ಗಾರ್ಡನ್ ಯೇಟರ್ನ  ಡಯಾನಾ ಇನ್ನೂ ತನ್ನ ಕನ್ಯಾ ಸಂಕಲ್ಪಗಳನ್ನೇ ಮುಂದುವರಿಸಿದಾಳೋ? ಗೊಂದಲಗೊಂಡ ಆಕಾಂಕ್ಷಿಗಳು ಹೇಗೆ ತಯಾರಿ ಮಾಡ್ಕೋತಾರೆ? ಜನ ಈಗ ನಾಟಕಶಾಲೆಗಳಲ್ಲಿ ಏನು ನೋಡೋದಕ್ಕೆ ಇಷ್ಟಪಡ್ತಾರೆ? ಆ ಜಗತ್ತಿನಲ್ಲಿ ಜನ ಈಗ ಏನು ತಿಂದು ಕುಡಿಯೋದಕ್ಕೆ ಇಷ್ಪಡ್ತಾರೆ? ಈಗ ಅದೆಲ್ಲ ನದಿ ತೀರದ ಬತೇರಿಯ ನನ್ನ ಹಂಬಲಗಳು, ನೆನವರಿಕೆಗಳು! ಹಾರ್ಲೆಮ್ನಲ್ಲಿ ಸತ್ತರೆ ಎಷ್ಟು ಚೆನ್ನಾಗಿರತ್ತೆ!" 
ಅವಳ ಮಾತನ್ನು ತುಂಡರಿಸಿದ್ದು ಒತ್ತರಿಸಿಕೊಂಡು ಬಂದ ಕೆಮ್ಮು. ಅವಳಿಗಾದ ತೊಂದರೆಯಿಂದ ಗಲಿಬಿಲಿಗೊಂಡ ಎವರೆಟ್ ಹರಟಲು ತೊಡಗಿದ, ತಾನು ಊರಲ್ಲಿ ಭೇಟಿ ಮಾಡಿದ್ದ ವೃತ್ತಿಪರರು, ಈ ಚಳಿಗಾಲದಲ್ಲಿ ಕಂಡು ಬಂದ ಸಂಗೀತ ಕಚೇರಿಗಳ ಪ್ರವೃತ್ತಿಗಳು ಇವುಗಳ ಬಗ್ಗೆ. ಮೆಟ್ರೋಪಾಲಿಟನ್ನಲ್ಲಿ ರೀಯಿನ್ಗೋಲ್ಡ್ ಪ್ರದರ್ಶಿಸಿದಾಗ ಬಳಸಿದ್ದ ಹೊಸ ಯಂತ್ರಸಾಧನಗಳ ಸ್ವರೂಪವನ್ನು ಯಾವುದೋ ಹಳೆಯ ಕಾಗದದ ಕವರಿನ ಹಿಂಬದಿಯಲ್ಲಿ ತನ್ನ ಜೇಬಿನಲ್ಲಿದ್ದ ಪೆನ್ಸಿಲ್ಲಿನಿಂದ ಗೆರೆಗಳನ್ನು ಎಳೆದು ತೋರಿಸಿದ. ಆಗೆಲ್ಲ ಅವಳು ತನ್ನನ್ನೇ ತದೇಕವಾಗಿ ಗಮನಿಸುತ್ತ ಇದ್ದದ್ದು, ತನ್ನ ಮಾತನ್ನ ಕೇಳಿಸಿಕೊಳ್ಳುತ್ತಿದ್ದುದು ಗೋಡೆಗಳು ಮಾತ್ರ ಎಂಬುದು ಅವನ ಅರಿವಿಗೆ ಬಂತು.
ಕ್ಯಾದರೀನ್ ದಿಂಬುಗಳಿಗೆ ಒರಗಿಕೊಂಡಿದ್ದಳು, ಚಿತ್ರಕಾರನೊಬ್ಬ ಚಿತ್ರಗಳನ್ನು ನೋಡುವ ಹಾಗೆ ಅವನನ್ನೇ ಅರೆತೆರೆದ ಕಣ್ಣುಗಳಿಂದ ನೋಡುತ್ತಿದ್ದಳು. ತನ್ನ ವಿವರಣೆಯನ್ನು ಅವನು ಅರೆಬರೆ ಮುಗಿಸಿ ಕಾಗದದ ಕವರನ್ನ ತನ್ನ ಜೇಬಿನಲ್ಲಿರಿಸಿಕೊಂಡ. ಅವನು ಹಾಗೆ ಮಾಡುತ್ತಿರುವಾಗ ಅವಳು ಮೆಲುವಾಗಿ ಪಲುಕಿದಳು: "ನೀವು ಏಡ್ರಿಯನ್ಸ್ ಥರವೇ ಅದ್ಭುತವಾಗಿದ್ದೀರಾ!" ಅದನ್ನು ಕೇಳಿ, ಸಂಭವಿಸಿದ್ದ ಯಾವುದೋ ಗಂಡಾಂತರವೊಂದು ಕರಗಿ ಹೋದಂತೆ ಅವನಿಗನ್ನಿಸಿತು.
ಅವನು ಮುಖವನ್ನು ಅವಳ ಕಡೆಗೆ ತಿರುಗಿಸಿ ನಕ್ಕ, ಅದರಲ್ಲಿದ್ದ ಹೆಮ್ಮೆಯ ಲೇಪದಲ್ಲಿ ಹುಡುಗುತನದ ಹಗುರತೆಯಿತ್ತು. "ಹೌದಲ್ವಾ! ಅದೆಲ್ಲ ಎಷ್ಟು ಅಸಂಗತ ಅಲ್ವಾ? ನೆಪೋಲಿಯನ್ ಥರಾ ಕಾಣ್ಸೋ ಅಷ್ಟೇ ಅಸಂಗತ ಅದು. ಆದರೂ ಅದರಲ್ಲಿ ಸ್ವಲ್ಪ ಅನುಕೂಲವೂ ಇದೇ ಅನ್ನಿ. ಅದರಿಂದ ಅವನ ಅನೇಕ ಗೆಳೆಯರು ನನ್ನೂ ಇಷ್ಟಪಡೋ ಹಾಗಾಗಿದೆ, ನಿಮಗೂ ಹಾಗೆ ಆಗಿರಬಹುದು!"
ಕ್ಯಾದರೀನ್ ಮುಗುಳ್ನಕ್ಕು, ಅವನ ಕಡೆ ತಿರುಗಿ ತನ್ನ ರೆಪ್ಪೆಗಳಡಿಯಿಂದ ಅವನೆಡೆಗೆ ಅರ್ಥಪೂರ್ಣ ನೋಟವೊಂದನ್ನು ಬೀರಿದಳು. "ಓ, ಬಹಳ ಹಿಂದೆ ಅದು ಹಾಗೇ ಆಗಿತ್ತು. ನೀವು ಆವಾಗ ಅದೆಷ್ಟು ತುಂಟತನದಿಂದ ಕೂಡಿದ ಯುವಕರಾಗಿದ್ದಿರಿ! ನೀವು ಜನಗಳ ಕಡೆ ನೋಡ್ತಾ ಇದ್ದ ರೀತಿ ಎಂಥದು! ನಿಮ್ಮ ಕಡೆಯೂ ಅವರು ಹಾಗೇ ನೋಡಿದರೆ ನೀವು ಲಜ್ಜೆಯಿಂದ ಎಲ್ಲೋ ನೋಡ್ತಾ ಇದ್ದಿರಲ್ಲ! ಆವತ್ತು, ರಿಹರ್ಸಲ್ ಆದ್ಮೇಲೆ ರಾತ್ರಿ ನೀವು ನನ್ನನ್ನು ಮನೇವರೆಗೂ ಬಂದು ಬಿಟ್ಟರಲ್ಲ, ಒಂದು ಮಾತೂ ಆಡದೆ, ಜ್ಞಾಪ್ಕಾ ಇದ್ಯಾ?"
"ಅದು ಮೆಚ್ಚಿಕೆಯ ಮೌನ" ಎಂದ ಎವರೆಟ್. "ತೀರ ಒರಟು, ಜೊತೆಗೆ ಬಾಲಿಶವಾದ್ದು. ಆದರೆ ಪ್ರಾಮಾಣಿಕವಾದ್ದು, ಸ್ವಲ್ಪವೂ ವಿಷಾದವಿಲ್ಲದ್ದು. ನಿಮಗೇನಾದ್ರೂ ಅನುಮಾನ ಉಂಟಾಗಿತ್ತೋ ಏನೋ? ನೀವು ಪ್ರೌಢತೆಯಿಂದ ಕೂಡಿ ಪ್ರಾಪಂಚಿಕವಾಗಿದ್ದೋರ ಹಾಗೆ ಕಾಣಿಸಿದ್ದಿರಿ ನಂಗೆ".
"ನಾನು ಹಾಗೆ ನಟಿಸ್ತಿದ್ದೆ ಅನ್ನಿಸತ್ತೆ. ಕಾಲೇಜು ಹುಡುಗರು ಹಾಡುಗಾರರ ಜೊತೆ ತೋರಿಸಿಕೊಳ್ಳೋ ಹಾಗೆ, ಒಂದು ಮಣ್ಣಿನ ಪಾತ್ರೆ ನಕ್ಷತ್ರವನ್ನ ಪ್ರೀತಿಸೋ ಥರ. ಆದರೆ ನೀವೂ ಹಾಗೆ ಅಂದ್ಕೊಂಡದ್ದು ನೋಡಿ ನನಗೆ ಆಶ್ಚರ್ಯವಾಯ್ತು. ಯಾಕೇಂದ್ರೆ ನಿಮ್ಮ ಅಣ್ಣ ಸಾಕಷ್ಟು ಮಂದಿ ವಿದ್ಯಾರ್ಥಿಗಳನ್ನು ನೋಡಿದೋರು. ಅಥವಾ ನಿಮಗೆ ಸರ್ವಭಕ್ಷಕ ಸಾಮರ್ಥ್ಯವಿತ್ತೋ, ಸಂದರ್ಭಕ್ಕನುಗುಣವಾಗಿ ಹಿಗ್ಗೋ ಶಕ್ತಿ ಇತ್ತೋ?"
"ನನ್ನ ತಾರುಣ್ಯದ ದಿನಗಳ ತಪ್ಪುಗಳನ್ನು ಒಪ್ಪಿಕೊಳ್ಳೋ ಹಾಗೆ ಮಾಡೋ ರೀತಿ ಪ್ರಶ್ನೆಗಳನ್ನ ಕೇಳ್ಬೇಡಿ. ಅವುಗಳಲ್ಲಿ ಕೆಲವದರ ಬಗ್ಗೆ ನನಗೆ ಈಗಲೂ ಪರಿತಾಪವಿದೆ. ಆದರೆ ನೀವು ತಿಳಕೊಂಡಿರೋ ರೀತೀಲಿ ನಾನು ಅಂಥ ಸೂಕ್ಷ್ಮಜ್ಞನಾಗೇನೂ ಇರ್ಲಿಲ್ಲ. ನಮ್ಮಣ್ಣನ ವಿದ್ಯಾರ್ಥಿಗಳು ಬಂದು ಹೋಗ್ತಾ ಇದ್ದದ್ದನ್ನ ನಾನು ನೋಡ್ತಿದ್ದೆ ನಿಜ, ಅಷ್ಟೇ, ಹೆಚ್ಚೇನಿಲ್ಲ. ಕೆಲವು ಸಲ ಪಕ್ಕವಾದ್ಯ ನುಡಿಸೋದಕ್ಕೆ ಹೇಳ್ತಾ ಇದ್ದರು, ಅಥವಾ ರಿಹರ್ಸಲ್ ಮಾಡೋವಾಗ ಯಾರಾದ್ರೂ ಬರದೇ ಇದ್ರೆ ಆ ಜಾಗದಲ್ಲಿ ನನ್ನನ್ನ ನಿಲ್ಲಿಸ್ತಾ ಇದ್ರು, ಇಲ್ಲವೇ ಕೋಪ ಮಾಡಿಕೊಂಡು ಎದ್ದು ಹೋಗೋ ತಾರಸ್ಥಾಯಿ ಹಾಡುಗಾರ್ತೀಗೆ ಗಾಡಿ ಗೊತ್ತುಮಾಡಿಕೊಡೋದಕ್ಕೆ ಕಳಿಸ್ತಾ ಇದ್ರು, ಅಷ್ಟೆ. ಆದರೆ ಅವರಾರು ನನ್ನ ಬಗ್ಗೆ ಹೆಚ್ಚು ಯೋಚನೆ ಮಾಡ್ತಿರ್ಲಿಲ್ಲ, ಮಾಡ್ತಿದ್ರೆ ನೀವು ಹೇಳಿದ್ರಲ್ಲ, ಅಣ್ಣನ ಹಾಗೆ ಕಾಣ್ತೀನಿ ಅಂತ, ಅಷ್ಟರ ಮಟ್ಟಿಗೆ ಮಾತ್ರ" ಎಂದು ನುಡಿದ ಎವರೆಟ್ ವಿಷಾದದಿಂದ ಕೂಡಿದ ನಗೆ ಸೂಸುತ್ತ.
ಯೋಚನಾಗ್ರಸ್ತಳಾದ ಕ್ಯಾದರೀನ್, "ಹೌದು, ಆಗಲೂ ನಾನದನ್ನ ಗಮನಿಸಿದ್ದೆ. ನಿಮಗೆ ವಯಸ್ಸಾಗ್ತಾ ಆಗ್ತಾ ಅದೂ ಹೆಚ್ಚಾಗ್ತಾ ಇದ್ದ ಹಾಗಿದೆ. ನಿಮ್ಮಿಬ್ಬರ ಜೀವನ ರೀತಿ ಬೇರೆ ಬೇರೆ ಥರವೇ ಇದ್ರೂ, ಹಾಗಿರೋದು ನಿಜವಾಗಲೂ ಆಶ್ಚರ್ಯ ಹುಟ್ಟಿಸೋ ಆಂಥದು. ನಿಮ್ಮಿಬ್ಬರ ಮಧ್ಯದ ಹೋಲಿಕೆ ಬರೀ ಕುಟುಂಬದ ಸದಸ್ಯರ ಮಧ್ಯೆ ಇರತ್ತಲ್ಲ ಅಂಥದು ಮಾತ್ರ ಅಲ್ಲ, ಬದಲಿಸಿಕೊಳ್ಳಬಹುದಾದ ವ್ಯಕ್ತಿತ್ವಗಳ ರೀತಿ ಅದು. ನಿಮ್ಮ ಮುಖ ನೋಡಿದರೆ ಅವರ ವ್ಯಕ್ತಿತ್ವ ಕಾಣಿಸೋದು, ಒಂದು ಸ್ವರದ ಕೀಲಿ ಒತ್ತಿದರೆ ಇನ್ನೊಂದು ಸ್ವರ ಹೊಮ್ಮೋ ರೀತಿ. ನಾನದನ್ನ ಖಚಿತವಾಗಿ ಇಂಥದೇ ಅಂತ ಹೇಳ್ತಾ ಇಲ್ಲ, ಅದು ನಂಗೆ ಸಾಧ್ಯವಿಲ್ಲ. ಆದರೆ ಅದು ಅಸಾಮಾನ್ಯವಾದ್ದು, ಜೊತೆಗೆ ಒಂಥರ ವಿಲಕ್ಷಣವಾದ್ದು ಕೂಡ" ಎಂದು ನಗುತ್ತ ನುಡಿದು ತನ್ನ ಮಾತುಗಳನ್ನು ನಿಲ್ಲಿಸಿದಳು.
"ನಂಗೆ ನೆನಪಿದೆ" ಎಂದು ಮಾತಿಗೆ ತೊಡಗಿದ ಎವರೆಟ್ ಗಂಭೀರವಾಗಿ, ತನ್ನ ತಲೆಯನ್ನು ಸೀಟಿಗೆ ಆನಿಸಿಕೊಂಡು ತನ್ನ ಕೈಬೆರಳುಗಳ ನಡುವೆ ಪೆನ್ಸಿಲ್ಲನ್ನು ತಿರುಗಾಡಿಸುತ್ತ. ಅವನು ಕೂತಿದ್ದುದು ಕೆಂಪು ಬ್ಲೈಂಡ್ ಸ್ವಲ್ಪ ಮೇಲೆತ್ತಿದ ಕಿಟಕಿಯ ಕೆಳಗೆ. ಗಾಳಿ ಬೀಸಿದಂತೆಲ್ಲ ಓಲಾಡುತ್ತಿದ್ದ ಬ್ಲೈಂಡ್ನ ನಡುವೆ ಮರುಭೂಮಿಯ ಕೋರೈಸುವ ದೃಶ್ಯ, ಕಣ್ಣು ಹಾಯಿಸುವವರೆಗೂ ಹಬ್ಬಿದ್ದ ಹಳದಿಯ ಹರಹು, ಕರಾಳ ಮೌನದಲ್ಲಿ ಹುದುಗಿದ ತೆರೆಗಳಿಲ್ಲದ ಸಮುದ್ರದ ಹಾಗೆ, ಕಾಣುತ್ತಿತ್ತು. ಅಲ್ಲಲ್ಲಿ ಮಾತ್ರ ಕಡು ಗುಲಾಬಿಯ ನೆರಳು, ದಿಗಂತದೆಡೆ ಪರ್ವತಗಳು ಮತ್ತು ಹಿಮಾಚ್ಛಾದಿತ ಶಿಖರಗಳ  ಹೊರಗೆರೆಯಾಚೆ ಬಿಳಿಮೋಡಗಳಂತಹ ಬೆಳ್ಳಗಿನ ತೇಪೆಗಳು ಹಬ್ಬಿದ್ದವು. "ನಂಗೆ ನೆನಪಿದೆ ನಾನಿನ್ನೂ ಆಗ ಚಿಕ್ಕ ಹುಡುಗ. ನಾನಾಗ ಆ ವಿಷಯದ ಬಗ್ಗೆ ತುಂಬ ಸೂಕ್ಷ್ಮವಾಗಿದ್ದೆ. ಅದು ನಂಗೆ ಇಷ್ಟವಾಗ್ತಿರಲಿಲ್ಲ ಅಂತಲೋ, ಹಾಗಿಲ್ಲದಿದ್ರೆ ಬೇರೆ ರೀತೀನ ಇಷ್ಟಪಡ್ತಿದ್ದೆ ಅಂತಲೋ ಖಚಿತವಾಗಿ ಹೇಳಲಾರೆ, ಆದರೆ ಅದು ಹುಟ್ಟಿನ ಮಚ್ಚೆಯ ಹಾಗೆ ಅಥವಾ ಹಗುರವಾಗಿ ಮಾತನಾಡಬಾರದ ಹಾಗೆ ಕಾಣ್ತಿತ್ತು. ಸಹಜವಾಗಿಯೇ ಜನಗಳಿಗೆ ನನಗಿಂತ ಏಡ್‍ ಮೇಲೇನೇ ಹೆಚ್ಚು ಅಕ್ಕರೆ. ಅದರಿಂದ ಕೆಲವು ಸಲ ನನ್ನ ಮನಸ್ಸಿನಲ್ಲಿ ನಾನು ಪ್ರತಿಫಲಿತ ಬೆಳಕೇನೋ ಅನ್ನಿಸ್ತಿತ್ತು. ಆ ಭಾವನೆ ನನ್ನ ಮತ್ತು ಅಮ್ಮನ ಸಂಬಂಧದಲ್ಲೂ ಪ್ರವೇಶಿಸಿತ್ತು. ತೀರ ಚಿಕ್ಕವನಾಗಿದ್ದಾಗಲೇ ಏಡ್‍ ವಿದೇಶಕ್ಕೆ ಓದಕ್ಕೆ ಅಂತ ಹೋದ. ಅದರಿಂದ ಅಮ್ಮನಿಗೆ ತುಂಬ ಬೇಜಾರಾಗಿತ್ತು. ಅವಳು ಮಾಡ್ತಿದ್ದುದೆಲ್ಲ ನಮ್ಮಿಬ್ಬರಿಗೋಸ್ಕರವಾಗಿಯೇ, ಆದರೆ ಏಡ್‍ಗೋಸ್ಕರ ಅವಳು ಎಲ್ಲವನ್ನೂ ಆಹುತಿ ಕೊಡೋದಕ್ಕೆ ಸಿದ್ಧವಾಗಿದ್ದಳೇನೋ ಅನ್ನಿಸ್ತಿತ್ತು. ನಾನಿನ್ನೂ ತುಂಬ ಚಿಕ್ಕೋನು, ಆಗ. ಬೇಸಗೆ ಸಾಯಂಕಾಲ ಅವಳು ಮನೆ ಮುಂದೆ ಒಬ್ಬಳೇ ಕೂತಿರೋವಾಗ ಕೆಲವು ಸಲ ನನ್ನ ಕರೀತಿದ್ದಳು, ಬಾಗಿಲ ಸಂದೀ ಮೂಲಕ ಬೀಳ್ತಿದ್ದ ಬೆಳಕಿನ ಕಡೆಗೆ ನನ್ನ ಮುಖ ತಿರುಗಿಸಿಕೊಂಡು ಮುತ್ತು ಕೊಡ್ತಿದ್ದಳು. ಆಗ ಅವಳ ಮನಸ್ಸಿನಲ್ಲಿ ಏಡ್ರಿಯನ್ಸ್ ಬಂದಿದಾನೇಂತ ನನಗನ್ನಿಸ್ತಿತ್ತು."
"ಬಡಪಾಯಿ ಪ್ರಾಣಿ, ಪಾಪ!" ಎಂದು ಉದ್ಗರಿಸಿದಳು ಕ್ಯಾದರೀನ್, ಎಂದಿಗಿಂತ ತುಸು ಹೆಚ್ಚೇ ಅನ್ನಿಸಿದ ಗೊಗ್ಗರು ದನಿಯಲ್ಲಿ. ಖಎಲ್ಲರಿಗೂ ಏಡ್ರಿಯನ್ಸ್ ಅಂದ್ರೆ ಅದೆಷ್ಟು ಮಮತೆ! ಅವರ ಬಗೆಗಿನ ಇತ್ತೀಚಿನ ವಿಷ್ಯ ಹೇಳಿ ಈಗ. ಅವರ ಬಗ್ಗೆ ಪೇಪರ್ನಲ್ಲಿ ಆಗೀಗ ಓದಿರೋದು ಬಿಟ್ರೆ ಒಂದು ವರ್ಷದಿಂದೀ ಅವರ ವಿಷ್ಯ ಗೊತ್ತೇ ಆಗಿಲ್ಲ. ಆಗ ಅವರು ಆಲ್ಜೀರಿಯದಲ್ಲಿದ್ರು, ಶೆಲಿಫ಼್ನಲ್ಲಿ, ಅರೇಬಿಯನ್ ಉಡುಪು ಹಾಕ್ಕೊಂಡು, ಹಗಲು ರಾತ್ರಿ ಕುದುರೆ ಸವಾರಿ ಮಾಡ್ತಾ. ತನ್ನ ಎಂದಿನ ಉತ್ಸಾಹದಿಂದ ಅವರು ಮಹಮ್ಮದೀಯ ಧರ್ಮವನ್ನು ಒಪ್ಪಿಕೊಂಡು ಸಾಧ್ಯವಾದಷ್ಟೂ ಅರಬ್ಬಿಯವನ ಹಾಗೆ ಬದುಕೋಕೆ ನಿರ್ಧಾರ ಮಾಡಿದ್ರು. ಅವರು ನೋಡಿದ್ದು ಅದೆಷ್ಟು ದೇಶಗಳನ್ನ, ಬದಲಾಯಿಸಿದ್ದು ಅದೆಷ್ಟು ಧರ್ಮಗಳನ್ನ! ಆಶ್ಚರ್ಯ ಅನ್ನಿಸತ್ತೆ. ಆ ಹೊತ್ತಲ್ಲಿ ಅವರು ತಮಗೋಸ್ಕರವಾಗಿ ಅರಬ್ಬನ ಥರ ನಡಕೋತಿದ್ರು ಅಂತ ಕಾಣತ್ತೆ. ಅದೆಷ್ಟು ವಾರಗಳ ಕಾಲ ಅವರು ಹದಿನಾರನೇ ಶತಮಾನದ ಫ್ಲಾರೆನ್ಸ್‍ನ ಡ್ಯೂಕ್ ಆಗಿದ್ದುದು ನನಗೆ ನೆನಪಿದೆ."
"ಅದೇ ಏಡ್ರಿಯನ್ಸ್, ಚೆಕ್‍ಗಳನ್ನ ಬರೆಯೋದಕ್ಕೂ ತನ್ನ ಉಡುಪಿಗೆ ಅಳತೆ ಕೊಡೋದಕ್ಕೂ ಅವನಿಗೆ ಸಮಯ ಇರ್ತಿರ್ಲಿಲ್ಲ. ಅವನು ಅರಬ್ ಆಗಿದ್ದಾಗ ಅವನ ಸುದ್ದಿ ನನಗೇನೂ ಕಿವಿಗೆ ಬಿದ್ದಿರ್ಲಿಲ್ಲ. ಅದು ನಂಗೆ ತಪ್ಪಿ ಹೋಯ್ತು" ಅಂದ ಎವರೆಟ್ ತಮಾಷೆಯಿಂದ.
"ಆಗವರು ಪಿಯಾನೋದಲ್ಲಿ ನುಡಿಸೋದಕ್ಕೇಂತ ಒಂದು ಆಲ್ಜೀರಿಯನ್ ರಾಗಮಾಲಿಕೇನ ಸಿದ್ಧಪಡಿಸ್ತಿದ್ರು. ಇಷ್ಟು ಹೊತ್ತಿಗೆ ಅದು ಪ್ರಕಾಶಕರ ಕೈ ತಲುಪಿರಬೇಕು. ಅವರ ಕಾಗದಕ್ಕೆ ಉತ್ತರ ಬರೆಯೋಕ್ಕೆ ಆಗದಿರೋಷ್ಟು ಕಾಯಿಲೆಯಿಂದ ನರಳ್ತಿದ್ದೆ ನಾನು. ಹೀಗಾಗಿ ಅವರ ಸಂಪರ್ಕ ತಪ್ಪಿಹೋಯ್ತು."
ಎವರೆಟ್ ತನ್ನ ಜೇಬಿನಿಂದ ಒಂದು ಕಾಗದವನ್ನು ಹೊರತೆಗೆದ. ಖಇದು ಒಂದು ತಿಂಗಳ ಹಿಂದೆ ಬಂತು. ಅದರಲ್ಲಿರೋದು ಮುಖ್ಯವಾಗಿ ಅವನ ಹೊಸ ಅಪೆರಾ ಬಗ್ಗೆ, ಮುಂದಿನ ಚಳಿಗಾಲದಲ್ಲಿ ಅದನ್ನ ಲಂಡನ್‍ನಲ್ಲಿ ಪ್ರದರ್ಶನ ಮಾಡ್ತಾರೆ. ನಿಮಗೆ ಬಿಡುವಾದಾಗ ಅದನ್ನು ಓದಿ.ಖ
"ಇದನ್ನ ನಾನು ಒಂದು ಒತ್ತೆಯ ಥರ ಇಟ್ಕೋತೀನಿ, ಯಾಕೇಂದ್ರೆ ಆಗ ನೀವು ಮತ್ತೆ ಬರ್ತೀರ. ಈಗ ನೀವು ನಂಗೋಸ್ಕರ ನುಡಿಸಬೇಕು. ನಿಮಗಿಷ್ಟವಾದ್ದು, ಜಗತ್ತಿನಲ್ಲಿ ಹೊಸತೇನಾದ್ರೂ ಇದ್ರೆ, ನಾನು ಕೇಳೋದಕ್ಕೆ ಅವಕಾಶ ಮಾಡಿಕೊಡಿ. ಈ ಒಂಬತ್ತು ತಿಂಗಳು ನಾನು 'ದ ಬ್ಯಾಗೇಜ್ ಕೋಚ್ ಅಹೆಡ್' ಮತ್ತು 'ಶಿ ಈಸ್ ಮೈ ಬೇಬೀಸ್ ಮದರ್' ಬಿಟ್ಟು ಬೇರೇನನ್ನೂ ಕೇಳೇ ಇಲ್ಲ."
ಅವನು ಪಿಯಾನೋ ಮುಂದೆ ಕುಳಿತ. ಕ್ಯಾದರೀನ್ ಅವನ ಹತ್ತಿರವೇ ಕುಳಿತಳು. ಅವರಣ್ಣನ ಥರವೇ ಇರೋ ಅವನ ರೂಪದ ಗುಂಗು ಅವಳನ್ನಾವರಿಸಿಬಿಟ್ಟಿತ್ತು; ಅದು ಯಾವಾವುದರಲ್ಲಿ ಅನ್ನೋದನ್ನು ಕಂಡುಕೊಳ್ಳುವ ಪ್ರಯತ್ನ ಅವಳದು. ಪ್ರಾಯಶಃ ಒಬ್ಬ ಶಿಲ್ಪಿ ಕಲ್ಲಿನಲ್ಲಿ ಕಡೆದ ವಿಗ್ರಹದ ತದ್ವತ್ತನ್ನು ಒರಟೊರಟಾಗಿ ಕಾಷ್ಠದಲ್ಲಿ ಕೆತ್ತಿದ ಹಾಗೆ ಅಂದುಕೊಂಡಳು. ಇವನು ಏಡ್ರಿಯನ್ಸ್‍ಗಿಂತ ಸ್ವಲ್ಪ ಧಡೂತಿ; ಇವನ ಭುಜಗಳಾದರೋ ಇನ್ನೂ ದೊಡ್ಡವು ಮತ್ತು ಹೆಚ್ಚು ತೂಕದವು, ಆದರೆ ಅವನ ಅಣ್ಣನವು ಸಪೂರವಾಗಿ, ಕೊಂಚ ಹೆಂಗಸರದ ತರಹ. ಇವನ ಮುಖವೂ ಅಣ್ಣನದರ ತರಹವೇ ಗುಂಡುಗಿನದು, ಆದರೆ ನಿರಂತರ ಮುಖಕ್ಷೌರದ ಕಾರಣದಿಂದಾಗಿ ಬಾಯಿಯ ಹತ್ತಿರ ಬೂದುಕಪ್ಪು ಬಣ್ಣವಾಗಿತ್ತು. ಇವನ ಕಣ್ಣುಗಳು ಚಂಚಲವಾಗಿ ಏಪ್ರಿಲ್ ಬಣ್ಣದವು, ಅವು ಯೋಚನಾಗ್ರಸ್ತವಾಗಿ ಕೊಂಚ ಮಂಕಾಗದ್ದುವು. ಏಡ್ರಿಯನ್ಸ್ದವಾದರೆ ಸದಾ ಕೋರೈಸುವ ದೀಪ್ತಿಯುಳ್ಳದ್ದು, ನಿನ್ನೆ ಏನು ಸೂಸುತ್ತ ಇದ್ದುವೋ ಈಗ ಅದಕ್ಕಿಂತ ಭಿನ್ನವಾಗಿರೋದನ್ನು ಅಭಿವ್ಯಕ್ತಿಗೊಳಿಸುವಂಥದು. ಆದರೆ ಈ ಕಕ್ಕುಲತೆಯ ಮನುಷ್ಯನನ್ನು ನೋಡಿದರೆ ಇವನ ಗಾಂಭೀರ್ಯ ಸೂಚಿಸುವ ಕಣ್ಣುಗಳು ಯಾವಾಗಲೂ ಆ ಕಾವ್ಯಾತ್ಮಕ ತಾರುಣ್ಯಭರಿತ ಕಣ್ಣುಗಳ ನೆನಪನ್ನು ತರುತ್ತವೆ ಅನ್ನುವುದನ್ನು ವಿವರಿಸುವುದು ಕಷ್ಟ. ಇವರಿಗಿಂತ ಸುಮಾರು ಹತ್ತು ವರ್ಷದಷ್ಟೇ ಹಿರಿಯರಾದರೂ, ಈಗಾಗಲೇ ಅವರ ಕೂದಲಲ್ಲಿ ಬೆಳ್ಳಿ ಗೆರೆಗಳು ಕಾಣಿಸಿಕೊಂಡಿದ್ದರೂ, ಏಡ್ರಿಯನ್ಸ್ನ ಮುಖ ಇಪ್ಪತ್ತು ವರ್ಷದವನದರಂತಿತ್ತು, ಅಷ್ಟು ಲವಲವಿಕೆಯದು, ಮಾತಿನಲ್ಲಿ ಹೇಳುವುದಕ್ಕೆ ಮುಂಚೆಯೇ ಅವನ ಆಲೋಚನೆಗಳನ್ನು ತಿಳಿಸಿಬಿಡುವಂಥವು. 'ಇನ್ ದ ವೇಲ್ ಆಫ್ ಟೆಂಪಲ್' ಅನ್ನು ಹಾಡಿದ ಕುರಿ ಕಾಯೋ ಹುಡುಗನೊಬ್ಬ ಕಿರುವರೆಯದ ಹಿಲ್‍ಗಾರ್ಡ್‍ನ ಹಾಗೆಯೇ ಕಾಣುತ್ತಾನೆಂದು ಒಮ್ಮೆ ತನ್ನ ತುಂಬು ಹಾಡುಗಾರಿಕೆಯ ವಿಧಾನಕ್ಕೆ ಹೆಸರಾದ ಒಬ್ಬಳು ತಾರಕಂಠದ ಗಾಯಕಿ ಹೇಳಿದ್ದಳು. ಒಂದು ನೂರು ಮಂದಿ ನಾಚಿಕೆ ಸ್ವಭಾವದ ಹೆಂಗಸರಾದರೂ ಈ ಮಾತನ್ನು ಬಳಸಿಕೊಂಡಿರಬೇಕು.
ಆ ರಾತ್ರಿ ಇಂಟರ್ ಓಷನ್ ಹೌಸ್ನ  ವರಾಂಡದಲ್ಲಿ ಎವರೆಟ್ ಸಿಗರೇಟು ಸೇದುತ್ತ ಕುಳಿತಿದ್ದಾಗ ಅವನ ತಲೆಯಲ್ಲಿ ನೆನಪುಗಳ ಬುತ್ತಿ ಬಿಚ್ಚಿಕೊಂಡಿತ್ತು. ಕ್ಯಾದರೀನ್ ಗೇಲಾರ್ಡ್‍ಳ ಬಗೆಗಿನ ತನ್ನ ವ್ಯಾಮೋಹ, ತನ್ನ ಬಾಲಿಶ ಪ್ರಣಯ ಪ್ರಸಂಗಗಳಲ್ಲಿ ಅತ್ಯಂತ ಗಂಭೀರವಾದ್ದು, ಅದೊಂದು ದರ್ಶನ, ಅವನ ಬ್ರಹ್ಮಚಾರಿ ಕನಸುಗಳನ್ನು ಬಹು ಕಾಲ ಗರಿಗೆದರುವಂತೆ ಮಾಡಿತ್ತು. ಭಾವನೆಗಳಿಗೆ ಸಂಬಂಧ ಪಟ್ಟಂತೆ ಅವನದು ತೀರ ಪುಕ್ಕಲ ಸ್ವಭಾವ, ಹೀಗಾಗಿ ಅವನು ಹೆಂಗೆಳೆಯರ ಸಹವಾಸದಿಂದ ದೂರವೇ ಇರುತ್ತಿದ್ದ. ಅವೆಲ್ಲ ನಡೆದು ನಾಶಗೊಂಡು ಈಗ ದೂರ ಸರಿದಿವೆ, ಆನಂತರ ಅವನ ಜೀವನದಲ್ಲಿ ಬಂದ ಹೆಂಗಸು ದೂರವಾಗಿ ತನ್ನಲ್ಲಿ ವಯಸ್ಸಾದ ಸೊರಗಿಹೋ ಭಾವನೆಯನ್ನು ಉಂಟುಮಾಡಿದ್ದಾಳೆ. ಅವನ ಮನಸ್ಸಿನಲ್ಲಿ 'ಬೆಚ್ಚಗಿನ ಜಾಗದಲ್ಲಿ ಕೂತು ಯಾವುದೇ ಬಯಕೆಯಿಲ್ಲದೆ ಹೆಣ್ಣುಗಳ ಮುಖವನ್ನು ನೆನಪಿಸಿಕೊಳ್ಳುವ' ಆಲೋಚನೆ ಸುಳಿದಾಗ, ತನಗೆ ಎಂಬತ್ತು ವರ್ಷ ವಯಸ್ಸಾಯಿತೇನೋ ಅನ್ನಿಸಿತು.
ತನ್ನ ಅಣ್ಣನ  ಜೊತೆ ತಾನಿದ್ದಾಗ, ಅವನ ಸ್ಟುಡಿಯೋದಲ್ಲಿ ಕ್ಯಾದರೀನ್ ಗೇಲಾರ್ಡ್ ಕಾರ್ಯನಿರತವಾಗಿದ್ದಾಗ, ತಾನೆಷ್ಟು ಖಿನ್ನನಾಗುತ್ತಿದ್ದೆ ಎಂಬುದರ ನೆನಪು ಮರುಕಳಿಸಿತು. ಹಾಗೆಯೇ ನ್ಯೂಯಾರ್ಕ್ನ ಕೊನೆಯ ಕಚೇರಿ ನಡೆದ ರಾತ್ರಿ ತಾನು ಏಡ್ರಿಯನ್‍ನನ್ನು ಎಷ್ಟು ನೋಯಿಸಿದ್ದೆ ಎಂಬುದೂ ನೆನಪಿಗೆ ಬಂತು. ತಾನು ತನ್ನ ಜಾಗದಲ್ಲಿ ಕುಳಿತಿದ್ದ; ಕೊನೆಯ ಗಾಯನ ನಡೆದ ಮೇಲೆ ತನ್ನ ಅಣ್ಣ ಮತ್ತು ಕ್ಯಾದರೀನ್‍ರನ್ನು ಜನ ಮತ್ತೆ ಮತ್ತೆ ರಂಗದ ಮೇಲೆ ಬರುವಂತೆ ಮಾಡಿದ್ದರು, ಗುಲಾಬಿಗಳು ಫುಟ್‍ಲೈಟ್‍ನ ಮೇಲೆಯೇ ಬೀಳುತ್ತ ಕೊನೆಗೆ ಪಿಯಾನೋದ ಅರ್ಧದಷ್ಟು ಎತ್ತರದ ರಾಶಿಯಾಗಿತ್ತು. ಆ ಇಬ್ಬರ ತರುಣ ಹೃದಯಗಳಲ್ಲಿ ಚಿಮ್ಮುತ್ತಿದ್ದ ಹೆಮ್ಮೆಯ ಬಗ್ಗೆ, ಪರಸ್ಪರರ ಸಾಧನೆಯ ಬಗ್ಗೆ, ಹಾಡಿನ ಮೂಲಕವೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಸ್ಪರ್ಧೆಗಿಳಿಯುತ್ತಿದ್ದ ರೀತಿಯ ಬಗ್ಗೆ, ತನ್ನ ಖಿನ್ನಗೊಂಡ ಮನಸ್ಸಿನಲ್ಲಿ ಆಲೋಚನೆಗಳು ಮುಸುರಿಕೊಂಡಿದ್ದವು. ತಾನೊಬ್ಬನೇ ಹೋಟೆಲಿಗೆ ಹಿಂದಿರುಗಿದ್ದ, ಮಧ್ಯರಾತ್ರಿ ಕಳೆದ ಮೇಲೂ ಕಿಟಕಿಯ ಬಳಿ ಕೂತು ಮ್ಯಾಡಿಸನ್ ಸ್ಕ್ವೇರ್ನೇ ದಿಟ್ಟಿಸುತ್ತ ಕುಳಿತಿದ್ದ, ತಾನು ಒಳಹೋಗಲಾರದ ಬಾಗಿಲನ್ನು ಇನ್ನೆಂದೂ ಬಡಿಯಬಾರದು ಎಂದು ತೀರ್ಮಾನಿಸಿದ; ಚೆಲುವಾದ ಸೃಷ್ಟಿಗಳ ವೈಭವೋಪೇತ ಸುಂದರ ಜಗತ್ತು ತನ್ನಂತಹವರ ಹಾದಿಯ ಆಚೆಯೇ ಬಿದ್ದಿವೆ ಎಂಬ ಅರಿವು ಹಿಂದೆಂದಿಂಗಿಂತಲೂ ಗಾಢವಾಗಿ ಅವನ ಮನಸ್ಸನ್ನು ತುಂಬಿತ್ತು. ತನಗೂ ಈ ಹೆಣ್ಣಿಗೂ ಸಮಾನವಾಗಿರುವಂತಹವು ನಂದಿನ ವಿಷಯಗಳೇ ಹೊರತು ಅವಕ್ಕಿಂತ ಹೆಚ್ಚಿನವಲ್ಲ ಎಂದು ತನ್ನಲ್ಲಿ ಮನವರಿಕೆ ಮಾಡಿಕೊಂಡ.
ಚೆಯಿನ್‍ನಲ್ಲಿ ಎವರೆಟ್ನ ವಾಸ್ತವ್ಯ ಮೂರು ವಾರಗಳಷ್ಟಾಯಿತು, ತಾನು ಭಯಪಟ್ಟುದಕ್ಕಿಂತ ಭಿನ್ನವಾದ ರೀತಿಯಲ್ಲಿ ಬಿಡುಗಡೆ ಸಾಧ್ಯವಿಲ್ಲವೆಂದು ಅವನಿಗನ್ನಿಸಿತ್ತು. ವ್ಯೋಮಿಂಗ್‍ನ ಬೆಳಗುವ ಮತ್ತು ಕುಳಿರ್ಗಾಳಿ ಬೀಸುವ ಮಾಗಿಯ ದಿನಗಳು ಬೇಗನೇ ಸರಿದುಹೋದವು. ಪ್ರವಾಸವನ್ನು ಕರಾವಳಿಯ ಕಡೆ ಬೇಗ ಕೈಗೊಳ್ಳುವಂತೆ ಪ್ರೇರಿಸುವ ಪತ್ರಗಳೂ ಟೆಲಿಗ್ರಾಂಗಳೂ ಬಂದವು, ಆದರೆ ಅವನು ಮಾತ್ರ ಈ ಮಾರಾಟ ಕಾರ್ಯವನ್ನು ಮುಂದಕ್ಕೆ ಹಾಕುವ ದೃಢವಾದ ತೀರ್ಮಾನ ಕೈಗೊಂಡ. ಚಾರ್ಲೀ ಗೇಲಾರ್ಡ್‍ನ ಕುದುರೆಗಳನ್ನು ಸವಾರಿ ಮಾಡುವುದರಲ್ಲಿಯೋ, ಬೆಟ್ಟಗಳಲ್ಲಿ ಕೈಗೊಂಡ ಮೀನುಗಾರಿಕೆಯಲ್ಲಿಯೋ ಅವನ ಬೆಳಗುಗಳು ಕಳೆದರೆ, ರಾತ್ರಿಯ ಹೊತ್ತು ಪತ್ರಗಳನ್ನು ಬರೆಯುವುದರಲ್ಲಿಯೂ ಪುಸ್ತಕ ಓದುವುದರಲ್ಲಿಯೂ ಕಳೆದು ಹೋಗುತ್ತಿದ್ದವು. ಮಧ್ಯಾಹ್ನ ಪೂರ್ತಿ ಸಾಮಾನ್ಯವಾಗಿ ತನ್ನ ಕಚೇರಿ ಕರ್ತವ್ಯದ ಕಡೆಗೆ ಗಮನ ಹರಿಸುತ್ತಿದ್ದ. ನಾವು ಬದುಕಿನಲ್ಲಿ ನಿರ್ವಹಿಸಬೇಕಾದ ಪಾತ್ರಗಳ ಬಗ್ಗೆ ವಿಧಿ ಖಚಿತವಾದ ನಿರ್ಧಾರಗಳನ್ನು ಮಾಡುತ್ತದೆ ಎಂದು ಅವನಿಗನ್ನಿಸಿತು. ದೃಶ್ಯಗಳು ಬದಲಾಗುತ್ತವೆ, ನಿರ್ವಹಣೆ ವ್ಯತ್ಯಾಸಗೊಳ್ಳುತ್ತವೆ, ಆದರೆ ತಾವೆಲ್ಲ ಮೊದಲಿಂದ ಕೊನೆಯವರೆಗೋ ಒಂದೇ ಬಗೆಯ ನಟನೆಯಲ್ಲಿ ತೊಡಗಿದ್ದೆವು ಎಂಬ ಅರಿವು ಕೊನೆಯಲ್ಲುಂಟಾಗುತ್ತದೆ. ಎವರೆಟ್ ಜೀವನಪೂರ್ತಿ ತಾತ್ಕಾಲಿಕ ಪಾತ್ರವನ್ನೇ ವಹಿಸುವಂತಾಗಿತ್ತು. ಹುಡುಗನಾಗಿದ್ದಾಗ ಒಮ್ಮೆ ತಾನು ಕನ್ನಡಿಗಳ ಚಕ್ರವ್ಯೂಹಕ್ಕೆ ಹೋದುದು ನೆನಪಿಗೆ ಬಂತು: ಒಂದು ಕಡೆಯಿಂದ ಇನ್ನೊಂದು ತಿರುಗಿದಾಗಲೂ ಅವನ ಮೂಗು ಕನ್ನಡಿಯ ತನ್ನ ಮೂಗಿಗೇ ಡಿಕ್ಕಿ ಹೊಡೆಯುತ್ತಿತ್ತು; ಆದರೆ ಅದು ತನ್ನ ಮುಖವಾಗಿರಲೇ ಇಲ್ಲ, ತನ್ನ ಅಣ್ಣನದು. ಅವನ ಕೆಲಸ ಯಾವುದೇ ರೀತಿಯದಾಗಿರಲಿ, ಪೂರ್ವಕ್ಕೋ ಪಶ್ಚಿಮಕ್ಕೋ ಪಯಣ, ನೆಲದ ಮೇಲಾಗಬಹುದು ಸಮುದ್ರಮಾರ್ಗವಾಗಿಯಾಗಬಹುದು, ತಾನು ಯಾವಾಗಲೂ ಅಣ್ಣನ ಕೆಲಸದಲ್ಲಿಯೇ ತೊಡಗಿರುತ್ತಿದ್ದೆ. ತನ್ನದು ಸದಾ ಕಾಲ ಏಡ್ರಿಯನ್ಸ್ ಹಿಲ್‍ಗಾರ್ಡ್ನ ಹೊಳೆಯುವ ತೊರೆಯು ಉರುಬನ್ನು ಹೆಚ್ಚಿಸುವ ಒಂದು ಉಪನದಿಯ ಬದುಕಾಗಿತ್ತು. ತನ್ನ ತಮ್ಮನ ಬಿರುವೇಗವು ದೂರ ಸರಿಸಿ ಮರೆತುಹೋಗಿದ್ದ ಗಾಸಿಯನ್ನು ಆದಷ್ಟೂ ಮಾಯುವಂತೆ ಮಾಡುವ ಕರ್ತವ್ಯವನ್ನು ಅವನು ಮರೆತದ್ದು ಅದೇ ಮೊದಲನೆಯ ಬಾರಿಯೇನಾಗಿರಲಿಲ್ಲ. ಸಂದರ್ಭವನ್ನು ವಿಶ್ಲೇಷಣೆ ಮಾಡುವ ಅಥವಾ ಅದನ್ನು ಖಚಿತವಾಗಿ ನಿರೂಪಿಸುವ ಪ್ರಯತ್ನವನ್ನವನು ಮಾಡಲೇ ಇಲ್ಲ; ಆದರೆ ಕ್ಯಾದರೀನ್ ಗೇಲಾರ್ಡ್ ಅವನಿಗೆ ಆವಶ್ಯಕ ಎಂಬುದನ್ನು ಗುರುತಿಸಿದ ಈ ಹೆಂಗಸು ಸಾಯಲು ನೆರವಾಗುವುದಕ್ಕೆ ಅದನ್ನು ಕಮಿಷನ್ ಎಂದು ಸ್ವೀಕರಿಸಿದ. ತನ್ನ ಮೇಲಿನ ಅವಳ ನಿರೀಕ್ಷೆಗಳು ಅವನಿಗೆ ದಿನೇ ದಿನೇ ಭಾರವಾಗುತ್ತಿರುವುದನ್ನು ಅವನು ಅನುಭವಿಸಿದ; ಅವಳ ಆವಶ್ಯಕತೆಯು ಅವನಿಗೆ ಬರಬರುತ್ತ ಹೆಚ್ಚು ತೀವ್ರವೂ ಖಂಡಿತವೂ ಆಗುತ್ತ ಹೋಯಿತು; ಅವಳೊಂದಿಗಿನ ತನ್ನ ವಿಚಿತ್ರ ಸಂಬಂಧದಲ್ಲಿ ತನ್ನ ವ್ಯಕ್ತಿತ್ವವು ವಹಿಸುವ ಪಾತ್ರವು ದಿನೇ ದಿನೇ ಕಡಿಮೆಯಾಗುತ್ತ ನಡೆದಿರುವಂತೆ ತೋರಿತು. ಅವಳಿಗೆ ನೆಮ್ಮದಿಯನ್ನು ತರುವ ತನ್ನ ಸಾಮರ್ಥ್ಯವು ತನ್ನ ಅಣ್ಣನೊಡನೆ ತಾನು ಹೊಂದಿರುವ ಸಂಬಂಧದ ಕೊಂಡಿಯನ್ನು ಅವಲಂಬಿಸಿದೆ ಎಂಬುದು ಅವನಿಗೆ ಮನವರಿಕೆಯಾಯಿತು. ತನ್ನ ಹಿಕ ಹೋಲಿಕೆಯು ಅವಳಿಗೆ ಹೇಗೆ ಮುಖ್ಯ ಎಂಬುದನ್ನವನು ಅರ್ಥಮಾಡಿಕೊಂಡ. ತನ್ನ ಪಕ್ಕದಲ್ಲಿ ಕುಳಿತುಕೊಂಡು ತನ್ನ ಯಾವುದಾದರೂ ನಿಲವು, ಪರಿಚಿತವಾದ ಮುಖಭಾವ, ನೆಳಲುಬೆಳಕಿನ ಮಾಯೆಯಲ್ಲಿ ತಾನು ತನ್ನ ಅಣ್ಣನ ಹಾಗೆಯೇ ಕಾಣುವೆನೇನೋ ಎಂದು ಅವಳು ತನ್ನನ್ನು ಗಮನಿಸುತ್ತಿದ್ದುದೂ ಅವನಿಗೆ ತಿಳಿಯಿತು. ಅವಳು ಬದುಕಿರುವುದೇ ಇದನ್ನವಂಬಿಸಿ, ಅವಳ ರೋಗ ಇದರಿಂದಾಗಿಯೇ ಸಹ್ಯವಾಗಿದೆ ಎಂಬುದೂ ಅವನಿಗೆ ಗೊತ್ತಾಯಿತು. ಇವೆಲ್ಲವೂ ಅವಳಲ್ಲಿ ಅಣ್ಣನ ಹೋಲಿಕೆಯ ಅಲೆಗಳನ್ನೆಬ್ಬಿಸಿ, ಅದರ ನಂತರ ಅವಳ ಮರಣೋನ್ಮುಖ ಇಂದ್ರಿಯಗಳ ಕ್ಷೋಭೆಯಿಂದುಂಟಾಗುವ ಆಯಾಸದ ಪರಿಸ್ಥಿತಿಯಲ್ಲಿ ಅವಳು ಆಳವಾದ ಹಾಯಾದ ನಿದ್ದೆಗೆ ಸರಿದು ತನ್ನ ತಾರುಣ್ಯ, ಕಲೆ, ಹಿಂದೆ ಫ್ಲಾರೆನ್ಸ್ನ ಉದ್ಯಾನದಲ್ಲಿ ಕಳೆದ ದಿನಗಳು ಇವುಗಳ ಕನಸು ಕಾಣುತ್ತ ಸಾವಿನ ಕಟುತನವನ್ನು ನೀಗಿಕೊಳ್ಳುತ್ತಿದ್ದಳು ಎಂಬುದೂ ಅರಿವಿಗೆ ಬಂತು.
ಅವನನ್ನು ತೀವ್ರ ದಿಗ್ಭ್ರಮೆಗೊಳಗಾಗಿಸಿದ ಪ್ರಶ್ನೆಯೆಂದರೆ, "ನಾನು ಎಷ್ಟರಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ, ತಾನು ಎಷ್ಟನ್ನು ತಿಳಿಯಬೇಕೆಂಬುದು ಅವಳ ಬಯಕೆ" ಎಂಬುದು. ಕ್ಯಾದರೀನ್ ಗೇಲಾರ್ಡ್‍ಳನ್ನು ಮೊದಲ ಭೇಟಿ ಮಾಡಿದ ನಂತರ ಕೆಲವು ದಿನಗಳ ಬಳಿಕ, ಅವಳಿಗೆ ಪತ್ರ ಬರೆಯುವಂತೆ ತನ್ನ ಅಣ್ಣನಿಗೆ ಅವನು ಕೇಬಲ್ ಕಳಿಸಿದ. ಅವಳು ಕಾಯಿಲೆಯಿಂದಾಗಿ ಸಾವಿನ ದವಡೆಯಲ್ಲಿದ್ದಾಳೆ ಎಂಬುದನ್ನಷ್ಟೇ ತಿಳಿಸಿದ್ದ; ಏಡ್ರಿಯನ್ಸ್ ಸೂಕ್ತವಾದ ರೀತಿಯಲ್ಲಿ ಸಾಂತ್ವನ ಹೇಳುವನೆಂಬ ನಂಬಿಕೆ ಅವನಿಗಿತ್ತು, ಅಂತಹ ಕೌಶಲ ಅಣ್ಣನಿಗಿತ್ತು. ಏಡ್ರಿಯನ್ಸ್ ಎಲ್ಲ ಸಂದರ್ಭಗಳಲ್ಲೂ ಸೂಕ್ತವಾದ ಮಾತುಗಳನ್ನಾಡುತ್ತಿದ್ದ, ಸಮಯಕ್ಕೆ ಅನುಗುಣವಾಗಿ, ಪ್ರಸನ್ನತೆಯಿಂದ, ಪ್ರಿಯವಾದ ರೀತಿಯಲ್ಲಿ. ಅವನ ಮಾತುಗಾರಿಕೆ ಆಯಾ ಕ್ಷಣ ಆಯಾ ಸಂದರ್ಭಕ್ಕೆ ಅನುರೂಪವಾದ ಬಣ್ಣವನ್ನು ತಾಳುತ್ತಿದ್ದವು. ಹೀಗಾಗಿ ಅವುಗಳಲ್ಲಿ ಕಾಟಾಚಾರವಾಗಲೀ ಚರ್ವಿತಚರ್ವಣವಾಗಲೀ ಕಾಣುತ್ತಿರಲಿಲ್ಲ. ಆ ಕ್ಷಣದ ಭಾವಸತ್ವವನ್ನು, ಆ ಸಂದರ್ಭದ ಲಾಲಿತ್ಯವನ್ನು ಗ್ರಹಿಸಿಕೊಳ್ಳುತ್ತಿದ್ದ. ಮೇಲಾಗಿ ಅವನು ಕೈಗೊಳ್ಳುತ್ತಿದ್ದುದೇ ಸಮಂಜಸ ಕಾರ್ಯವನ್ನು, ಸಮಯಕ್ಕೆ ಅನುಗುಣವಾಗಿ, ಪ್ರಸನ್ನತೆಯಿಂದ, ಪ್ರಿಯವಾದ ರೀತಿಯಲ್ಲಿ ಗ ಆದರೆ, ತನ್ನ ಐಹಿಕ ಪರಿಸರವು ಸುಂದರವಾಗಿರಬೇಕೆಂಬ ಉದ್ದೇಶದಿಂದ ತನ್ನ ಮನಸ್ಸಿಗೆ ಬಂದ ಜನರನ್ನು ಸಂಪ್ರೀತಗೊಳಿಸಲೆಂದು ಕೈಗೊಂಡ ಅಸಮಂಜಸ ನಿರ್ಧಾರಗಳ ಹೊರತಾಗಿ. ತನ್ನ ಸಂಪನ್ನ ವ್ಯಕ್ತಿತ್ವದ ಆತ್ಮೀಯತೆ ವರ್ಚಸ್ಸುಗಳನ್ನು, ಗೀತಕಾರ-ಹಾಡುಗಾರರ ಗೌರವವನ್ನು ಸುತ್ತುಮುತ್ತಲ ಜನರ ಮೇಲೆ ಉದಾರತೆಯಿಂದ ಧಾರೆಯೆರೆಯುತ್ತಿದ್ದ, ಜನರು ಬಳಿಯಿಲ್ಲದಿದ್ದಾಗ ಅದನ್ನೆಲ್ಲ ಮರೆತುಬಿಡುತ್ತಿದ್ದ. ಇದು ಏಡ್ರಿಯನ್ಸ್‍ಗಿದ್ದ ವರ.
ಎವರೆಟ್ ಕೇಬಲ್ ಕಳಿಸಿದ ಮೂರು ವಾರಗಳ ಬಳಿಕ, ಪ್ರತಿನಿತ್ಯದಂತೆ ಢಾಳಾದ ಬಣ್ಣ ಬಳಿದ ಆ ಮನೆಗೆ ಹೋಗಿದ್ದಾಗ, ಕ್ಯಾದರೀನ್ ಶಾಲಾಬಾಲಕಿಯಂತೆ ಜೋರಾಗಿ ನಗುತ್ತಿದ್ದುದು ಕಾಣಿಸಿತು. ಅವನಿನ್ನೂ ಗಾಯನಕೋಣೆಗೆ ಕಾಲಿಡುತ್ತಿರುವಾಗಲೇ, "ನಮ್ಮ ಭೇಟಿಗಳು ಹೆಯಿನ್ನ 'ಫ್ಲಾರೆಂಟೈನ್ ನೈಟ್ಸ್' ಹಾಗೆ ಇವೆ, ಆದರೆ ಹೆಯಿನ್‍ನ ಹಾಗೆ ಪೂರ್ತಿ ನೀವೇ ಮಾತಾಡೋದಕ್ಕೆ ಅವಕಾಶ ಕೊಡಲಾರೆ ಅನ್ನೋದನ್ನು ಯಾವತ್ತಾದ್ರೂ ಯೋಚಿಸಿದ್ದೀರಾ?" ಎಂದು ಕೇಳಿದಳು. ಅವನನ್ನು ಬರಮಾಡಿಕೊಳ್ಳಲೆಂದು ತನ್ನ ತೋಳನ್ನು ಎಂದಿಗಿಂತ ಹೆಚ್ಚು ಮುಂದೆ ಚಾಚಿ ಅವನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದಳು. "ಬದುಕಿರೋ ಜನಗಳಲ್ಲೆಲ್ಲ ಅತ್ಯಂತ ಕರುಣಾಮಯಿ ನೀವು, ಖಂಡಿತ" ಎಂದಳು ಕೋಮಲವಾಗಿ.
ತನ್ನ ಕೈಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಎವರೆಟ್ನ ಬೂದುಬಣ್ಣದ ಮುಖ ತುಸುವೇ ಬಣ್ಣವೇರಿತು, ಯಾಕಂದರೆ ಅವಳು ಈಗ ನೋಡುತ್ತಿರುವುದು ತನ್ನನ್ನೇ ಹೊರತು ತನ್ನ ಅಣ್ಣನ ವಿಲಕ್ಷಣ ನೆರಳನ್ನಲ್ಲ ಎಂಬ ಭಾವನೆ ಅವನ ಮನಸ್ಸಿನಲ್ಲಿ ಬಂತು. "ಯಾಕೆ, ನಾನೇನು ಮಾಡಿದ್ದೀನಿ? ನಿನ್ನೆಯಿಂದ ನಿಮಗೆ ಕ್ಯಾಂಡಿಯನ್ನಾಗಲೀ ಶಾಂಪೇನನ್ನಾಗಲೀ ಕಳಿಸಿದ ನೆನಪಿಲ್ಲವಲ್ಲ!" ಎಂದ ಏನೂ ಗೊತ್ತಿಲ್ಲದವನಂತೆ.
ಆಗವಳು ಪುಸ್ತಕವೊಂದರ ಹಾಳೆಗಳ ನಡುವಿನಿಂದ ವಿದೇಶೀ ಅಂಚೆ ಗುರುತಿದ್ದ ಪತ್ರವೊಂದನ್ನು ಹೊರತೆಗೆದು, ಮುಗುಳ್ನಗುತ್ತ ಅವನ ಮುಂದೆ ಹಿಡಿದಳು. "ಅವರು ಬರೆಯೋ ಹಾಗೆ ಮಾಡಿದೋರು ನೀವೇ; ಹಾಗೇನೂ ಮಾಡಲಿಲ್ಲ ಅಂತ ಹೇಳ್ಬೇಡಿ, ಯಾಕಂದ್ರೆ ಅದು ನಂಗೆ ನೇರವಾಗಿ ಬಂದಿದೆ, ನೀವೇ ನೋಡಿ ಬೇಕಾದ್ರೆ; ನಾನು ಅವರಿಗೆ ಕೊಗೆ ಕೊಟ್ಟಿದ್ದದ್ದು ಫ್ಲಾರಿಡಾದ ಒಂದೂರಿನ ನನ್ನ ವಿಳಾಸಾನ. ನಿಮ್ಮ ಈ ಉಪಕಾರಾನ ಸ್ವರ್ಗದಲ್ಲಿದ್ರೂ ನೆನಪಿಸ್ಕೋತೀನಿ. ಆದರೆ ನೀವು ಅವರಿಗೆ ಒಂದನ್ನ ಮಾಡಕ್ಕೆ ಮಾತ್ರ ಹೇಳಲಿಲ್ಲ, ಯಾಕೇಂದ್ರೆ ನಿಮಗೆ ಅದೇನು ಅಂತಲೇ ಗೊತ್ತಿಲ್ಲ, ಪಾಪ. ಅವರು ತಮ್ಮ ಇತ್ತೀಚಿನ ಕೃತಿಯನ್ನ ಕಳಿಸಿದಾರೆ, ಹೊಸ ಸೊನಾಟ ಅದು, ಅವರ ಕೆಲಸಗಳಲ್ಲೆಲ್ಲ ಅತ್ಯಂತ ಮಹತ್ವಾಕಾಂಕ್ಷೆಯದು. ಅದು ತೀರ ತಲೆ ಚಿಟ್ಟು ಹಿಡಿಸೋ ಅಷ್ಟು ಸಂಕೀರ್ಣವಾಗಿದೆ ಅನ್ನೋದೇನೋ ನಿಜವೇ, ಆದ್ರೂ ನೀವೀಗ ಅದನ್ನ ನಂಗೋಸ್ಕರ ನೇರವಾಗಿ ನುಡಿಸ್ಬೇಕು. ಅದಕ್ಕಿಂತ ಮೊದಲು ಈ ಕಾಗದ, ಅದನ್ನ ನನಗಾಗಿ ಜೋರಾಗಿ ಓದಿ."
ಬೆನ್ನ ಹಿಂದೆ ಪೇರಿಸಿಕೊಂಡಿದ್ದ ದಿಂಬುಗಳ ಮೇಲೆ ಒರಗಿಕೊಂಡು ಕಿಟಕಿಯ ಹತ್ತಿರ ಕ್ಯಾದರೀನ್ ಕುಳಿತಿದ್ದ ಸೀಟಿಗೆದುರಾಗಿ ಎವರೆಟ್ ಕುಳ್ಳಗಿನ ಒಂದು ಕುರ್ಚಿಯಲ್ಲಿ ಕುಳಿತ. ಕಾಗದವನ್ನು ಬಿಡಿಸಿದ. ಅರೆಮುಚ್ಚಿದ್ದ ಅವನ ಕರುಣಾದ್ರ್ರ ಕಣ್ಣುಗಳು ಕಾಗದ ಉದ್ದವಾಗಿದ್ದುದನ್ನು ಕಂಡು ತೃಪ್ತಿಗೊಂಡವು. ತುಂಬ ಕುಶಲತೆಯಿಂದ ಕೂಡಿ ಕೋಮಲಭಾವನೆಗಳನ್ನು ತುಂಬಿಕೊಂಡಿತ್ತು. ತನ್ನ ಆಳು, ಲಾಯದ ಹುಡುಗನ ಜೊತೆ, ದೋಣಿಯ ಅಂಬಿಗ ಹಾಗೂ ಅವನಿಗಾಗಿ ಸಂತರಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಭಿಕ್ಷುಕಿಯ ಜೊತೆಗೂ ಏಡ್ರಿಯನ್ಸ್ ನವಿರಾಗಿ ನಡೆದುಕೊಳ್ಳುತ್ತಿದ್ದವನು. ಕಾಗದದಲ್ಲಿ ಅದನ್ನೂ ಮೀರಿದ ಕೋಮಲತೆಯಿತ್ತು.
ಕಾಗದ ಬಂದಿದ್ದುದು ಗ್ರೆನಡಾದಿಂದ, ಪೇಷಿಯೋ ಡೈ ಲಿಂಡ್ರಾಕ್ಸಾದ ಅರಮನೆಯಲ್ಲಿ ಕಾರಂಜಿಯ ಪಕ್ಕದಲ್ಲಿ ಕೂತುಕೊಂಡು ಬರೆದದ್ದು. ದಕ್ಷಿಣದ ಸುಗಂಧಭರಿತ ಗಾಳಿ ಭಾರವಾಗಿತ್ತು, ಅದರ ಬೀಸುವಿಕೆ ಹರಿಯುವ ನೀರು ದಡಕ್ಕೆ ಅಪ್ಪಳಿಸುತ್ತಿರುವಂತಿತ್ತು, ಬಹಳ ಹಿಂದೆ ಫ್ಲಾರೆನ್ಸ್ನ ಉದ್ಯಾನದಲ್ಲಿದ್ದಂತೆಯೇ. ಆಕಾಶ ನಿಗಿನಿಗಿ ಹೊಳೆಯುವ ಹಾಗೆ ಕಾದ ಒಂದು ಮಹಾ ನೀಲಪರ್ವತದಂತಿತ್ತು. ಅವನ ಸುತ್ತ ಮಹಾ ಕಮಾನುಗಳು ಲಲಿತವಾದ ನೀಲಿಮ ಛಾಯೆಯನ್ನು ಬೀರಿದ್ದವು. ಒಂದು ಕಾಗದದ ಅಂಚಿನಲ್ಲಿ ಅವನು ಅದನ್ನೆಲ್ಲ ಒಂದು ರೇಖಾಕಾರವಾಗಿ ಚಿತ್ರಿಸಿದ್ದ. ಅರೇಬಿಕ್ ಅಲಂಕರಣಗಳು ಅವನ ಸುತ್ತ ಅಪವಿತ್ರ ಮಾಂತ್ರಿಕತೆಯನ್ನು ಪಸರಿಸಿತ್ತು, ಗಾಕ್ ಕಲೆಯ ಅತಿರೇಕದ ಉತ್ಪ್ರೇಕ್ಷೆಗಳು ಬೇಗ ಮರೆತುಹೋಗುವ ದುಃಸ್ವಪ್ನಗಳಂತಿದ್ದವು. ಮೊದಲು ಅರಮನೆಯೇ ತುಂಬ ಪರಿಚಿತವೆಂಬಂತೆ ಕಾಣಿಸಿತ್ತು, ದಷ್ಟಪುಟ್ಟ ಕಂದುಮೈಯ ದಾಸ ಫರ್ಡಿನಂಡ್ ಶತಮಾನಗಳ ಹಿಂದೆ ಸವಾರಿ ಬಂದಿದ್ದುದಕ್ಕಿಂತ ಮುಂಚೆಯೇ ತಾನು ಅಲ್ಲಿನ ಪರಿಸರದಲ್ಲಿ ಓಡಾಡಿದ್ದೆನೆನ್ನಿಸಿತ್ತು, ಕಾಗದದ ತುಂಬ ತನ್ನ ಕೆಲಸದ ಬಗೆಗಿನ ಆತ್ಮವಿಶ್ವಾಸ ತುಂಬಿಕೊಂಡಿತ್ತು, ತಾವು ಜೊತೆಯಾಗಿ ಓದುತ್ತಿದ್ದು ಆನಂತರ ಒಟ್ಟಾಗಿ ಕಾರ್ಯ ನಿರ್ವಹಿಸಿದ್ದ ದಿನಗಳ ಹಾಗೂ ಅವಳ ಕೆಲಸದ  ತೆಳು ನೆನಪುಗಳು ಅದರಲ್ಲಿ ಚೆಲ್ಲವರಿದಿತ್ತು, ಅದನ್ನೆಲ್ಲ ತುಂಬ ಆಪ್ತತೆಯಿಂದ ಅವನು ನೆನಪಿಸಿಕೊಂಡಿದ್ದ, ಹೋದೆಡೆಯಲ್ಲೆಲ್ಲ ಆ ಕುರಿತು ಮೆಚ್ಚಿಕೆಯ ಮಾತುಗಳನಾಡಿದ್ದ.
ಕಾಗದವನ್ನು ಮಡಿಸುತ್ತಿದ್ದಂತೆ ಏಡ್ರಿಯನ್ಸ್ ಅದಕ್ಕೆ ಆವಶ್ಯಕವಾಗಿದ್ದ ಪಾವನತೆಯನ್ನು ತಂದಿತ್ತಂತೆ, ತನ್ನದೇ ಅದ್ಭುತ ರೀತಿಯಲ್ಲಿ ಸನ್ನವೇಶಕ್ಕೆ ಸ್ಪಂದಿಸಿದ್ದಂತೆ ಎವರೆಟ್‍ಗೆ ಅನ್ನಿಸಿತು. ಉದ್ದಕ್ಕೂ ಅಹಮಹಿಮಿಕೆಯಿಂದ, ಕೊಂಚ ಅನುಗ್ರಹಪೂರ್ವವಾಗಿದೆಯೇನೋ ಅನ್ನಿಸುವಂತಹ ಧಾಟಿಯಿಂದ ಕಾಗದವು ಕೂಡಿದ್ದರೂ, ಅವಳಿಗೆ ಬೇಕಾದ ರೀತಿಯಲ್ಲೇ ಇತ್ತು. ತನ್ನ ಅಣ್ಣನ ಆಕರ್ಷಕತೆ, ತೀವ್ರತೆ ಮತ್ತು ಸಾಮರ್ಥ್ಯಗಳು ಅವನನ್ನಾವರಿಸಿದವು; ತಾನು ಹಾದುಹೋದ ಹಾದಿಯಲ್ಲಿ ಎದುರಾದ ಎಲ್ಲವನ್ನೂ ನುಂಗಿಕೊಳ್ಳುತ್ತ, ಇತರವನ್ನು ನುಂಗಿದುದಕ್ಕಿಂತ ಹೆಚ್ಚು ದೃಢತೆಯಿಂದ ತನ್ನನ್ನೇ ನುಂಗಿಕೊಳ್ಳುತ್ತ ಸಾಗಿದ ಏಡ್ರಿಯನ್ಸ್ನ ಬೆಂಕಿ ಬಿರುಗಾಳಿಯ ಉಚ್ಛ್ವಾಸದ ಅನುಭವ ಅವನಿಗಾಯಿತು. ಆನಂತರ ಅವನು ತನ್ನ ಮುಂದೆ ಉರಿದುಹೋಗಿ ಬಿಳಿಪಾಗಿ ಬಿದ್ದಿದ್ದ ಕೊಳ್ಳಿಯ ಕಡೆಗೆ ನೋಡಿ, ಖಅವನ ಥರವೇ, ಅಲ್ಲವಾ?" ಎಂದ ಶಾಂತವಾಗಿ.
"ಅವರ ಕಾಗದಕ್ಕೆ ನಾನು ಉತ್ತರ ಬರೆಯೋಕೆ ಸಾಧ್ಯವಾಗದೇನೋ ಅನ್ನಿಸತ್ತೆ, ಆದರೆ ನೀವು ಅವರನ್ನು ಮುಂದಿನ ಸಲ ನೋಡಿದಾಗ ನನ್ನ ಪರವಾಗಿ ನೀವದನ್ನು ಮಾಡಿ, ದಯವಿಟ್ಟು. ನನ್ನ ಪರವಾಗಿ ನೀವು ಏನೇನೋ ವಿಷಯಗಳನ್ನ ಅವರಿಗೆ ತಿಳಿಸ್ಬೇಕು, ಆದರೂ ಅವನ್ನೆಲ್ಲ ಈ ಮಾತಲ್ಲಿ ಹೇಳ್ಬಹುದೂಂತ ಅನ್ನಿಸತ್ತೆ: ಅವರು ತಮಗೆ ಸಾಧ್ಯವಾದ ಎತ್ತರಕ್ಕೆ ಉನ್ನತೋನ್ನತವಾಗಿ ಬೆಳೀಬೇಕು, ನಮ್ಮಿಬ್ಬರಿಗೂ ಅರ್ಧ ಮುಖ್ಯ ಆಕರ್ಷಣೆಯಾದ ಅವರಿಗಿಷ್ಟವಾದ ಹುಡುಗುತನವನ್ನು ಕಳೆದುಕೊಂಡರೂ ಪರವಾಗಿಲ್ಲ. ಗೊತ್ತಾಯಿತಾ?"
"ನೀವು ಹೇಳ್ತಿರೋದು ನಂಗೆ ಪೂರ್ತಿ ಗೊತ್ತಾಯಿತು. ನನಗೂ ಎಷ್ಟೋ ಸಲ ಹಾಗೇ ಅನ್ನಿಸಿದೆ. ಆದರೂ ಇವನ್ನೆಲ್ಲ, ಹೀಗೆ ಮಾಡು ಹಾಗಿರು ಅಂತ ಅಂಥೋರಿಗೆ ಹೇಳೋದು ಕಷ್ಟ" ಎಂದ ಎವರೆಟ್ ಯೋಚಿಸುತ್ತ.
ಕ್ಯಾದರೀನ್ ಮೊಣಕೈಗಳನ್ನೂರಿ ಮೇಲೆದ್ದಳು, ಅವಳ ಮುಖ ಶ್ರದ್ಧೆಯ ದೀಪ್ತಿಯಿಂದ ಬೆಳಗುತ್ತಿತ್ತು. "ಓ, ಅವರಿಗೆ ಹೇಳೋದೆಲ್ಲ ವ್ಯರ್ಥ ಅನ್ನಿಸತ್ತೆ ನಂಗೆ. ಮೂರ್ಖನಿಗೂ, ಅರ್ಥ ಮಾಡಿಕೊಳ್ಳಲಾರದೋರಿಗೂ ಪೋಲುಮಾಡಿದರೂ ಅವರೆಲ್ಲ ತಾವಂದುಕೊಂಡಂತೆ ಭಾವಿಸುವವರೇ. ಅವರು ಅಮೃತಶೀಲೆಯನ್ನೇ ಹೊತ್ತಿಸಬಲ್ಲರು, ಮಣ್ಣಲ್ಲಿ ಬೆಂಕಿ ಉರಿಸಬಲ್ಲರು, ಆದರೆ ಹಾಗೆ ಮಾಡೋದು ಎಷ್ಟು ಸರಿ?"
"ಸಾಕು, ಸಾಕು" ಎಂದು ಆಕ್ಷೇಪಣೆಯ ಧ್ವನಿಯಿಂದ ತಡೆದ ಎವರೆಟ್ ಅವಳ ಉದ್ವೇಗವನ್ನು ಕಂಡು. "ಆ ಹೊಸ ಸೊನಾಟ ಎಲ್ಲಿ? ಅವನೇ ಮಾತಾಡಲಿ."
ಪಿಯಾನೋ ಮುಂದೆ ಕೂತು ಅವನು ಮೊದಲ ನಡೆಯನ್ನು ನುಡಿಸಿದ, ಅದು ಏಡ್ರಿಯನ್ಸ್ನ ಧ್ವನಿಯೇ, ಅವನದೇ ಮಾತು ಅನ್ನಿಸಿತು. ಆ ಸೊನಾಟ ಅಲ್ಲಿಯವರೆಗೆ ಅವನು ಮಾಡಿದ್ದ ಕಾರ್ಯಗಳಲ್ಲೆಲ್ಲ ಅತ್ಯಂತ ಮಹತ್ವವಾದುದಾಗಿತ್ತು, ಶುದ್ಧ ಭಾವಗೀತಾತ್ಮಕತೆಯಿಂದ ಅವನು ಮತ್ತಷ್ಟು ಆಳವಾದ ಉದಾತ್ತವಾದುದರ ಕಡೆಗೆ ಹೊರಳಿದುದರ ಸಂಕೇತವಾಗಿತ್ತು. ಎವರೆಟ್ ತುಂಬ ಜಾಣ್ಮೆಯಿಂದ, ಯಾವುದನ್ನೂ ನಿರ್ದಿಷ್ಟವಾಗಿ ಮಾಡಿ ಪೂರೈಸಲಾಗದ ವ್ಯಕ್ತಿಗಳಿಗೆ ವಿಶಿಷ್ಟವಾದ ಸಹಾನುಭೂತಿಪರ ಗ್ರಹಿಕೆಯಿಂದ ನುಡಿಸಿದ. ಅದನ್ನು ಮುಗಿಸಿ ಕ್ಯಾದರೀನ್ ಕಡೆಗೆ ಕಣ್ಣು ಹೊರಳಿಸಿದ.
"ಎಷ್ಟೊಂದು ಎತ್ತರಕ್ಕೆ ಬೆಳೆದುಬಿಟ್ಟಿದಾರೆ! ಕಳೆದ ಮೂರು ವರ್ಷಗಳಲ್ಲಿ ಅವರು ಏನೆಲ್ಲ ಮಾಡಿಬಿಟ್ಟಿದಾರೆ! ಬರೀ ರಾಗದ್ವೇಷಗಳ ದುರಂತಮಯತೆಯನ್ನು ಮಾತ್ರ ಅವರು ರಚಿಸ್ತಿದ್ರು; ಆದರೆ ಇದು ಆತ್ಮದ ದುರಂತ, ಆತ್ಮಕ್ಕೇ ಅಂಟಿಕೊಂಡಿರುವ ನೆರಳು. ಇದು ಪ್ರಯತ್ನ ಮತ್ತು ಪರಾಭವಗಳ ದುರಂತ, ಇದನ್ನೇ ಕೀಟ್ಸ್ ನರಕ ಅಂತ ಕರೆದದ್ದು. ಇದು, ರೇಸ್ಕೋರ್ಸ್ ಪಕ್ಕ ಕೂತು, ಹಾದು ಹೋಗೂ ಕುದುರೆಗಳ ಗೊರಸು ಶಬ್ದಗಳನ್ನು ಕೇಳಿ ಕೇಳಿ ಸವೆದು ಹೋಗಿರೋ ನನ್ನ ದುರಂತವೂ ಹೌದು. ಅಯ್ಯೋ ದೇವರೆ, ಓಡುವ ಕುದುರೆಗಳ ರಭಸಗತಿಯೇ!"
ಅವಳು ಆ ಕಡೆ ಮುಖ ತಿರುಗಿಸಿ ತನ್ನ ಸಣಕಲು ಕೈಗಳಿಂದ ಮುಚ್ಚಿಕೊಂಡಳು. ತಕ್ಷಣ ಎವರೆಟ್ ಅವಳನ್ನು ಹಾದು ಹೋಗಿ ಮೊಣಕಾಲೂರಿ ಕೂತ. ಅವನಿಗೆ ಪರಿಚಿತವಾದ ದಿವಸದಿಂದ ಹಿಂದೆಂದೂ, ಆಗಾಗ್ಗೆ ವ್ಯಂಗ್ಯದ ಮಾತುಗಳನ್ನಾಡುತ್ತಿದ್ದುದರ ಹೊರತಾಗಿ, ತನ್ನ ಸೋಲಿನ ಕಹಿಯ ಬಗ್ಗೆ ಅವಳು ತೋರಿಸಿಕೊಂಡಿರಲಿಲ್ಲ. ಅವಳ ಸ್ಥೈರ್ಯವನ್ನು ಕಂಡು ಅವನಿಗೆ ಹೆಮ್ಮೆಯೆನಿಸಿತ್ತು, ಹೀಗಾಗಿ ಈ ರೀತಿ ಅವಳನ್ನು ನೋಡುವುದು ನೋವಿನ ಸಂಗತಿಯಾಗಿತ್ತು.
"ದಯವಿಟ್ಟು ಬೇಡ, ಅದನ್ನ ನಾನು ಸಹಿಸಲಾರೆ, ನಿಜವಾಗಿಯೂ ತಡೆದುಕೊಳ್ಳಲಾರೆ, ಅಷ್ಟು ವ್ಯಥೆ ನಂಗೆ. ನೀವು ಹಾಗೆಲ್ಲ ಮಾತಾಡಬಾರದು, ತುಂಬ ಖೇದದ ವಿಷಯ ತುಂಬ ದೊಡ್ಡದು" ಎಂದು ನುಡಿದ.
ತನ್ನ ಮುಖವನ್ನವಳು ಅವನ ಕಡೆ ತಿರುಗಿಸಿದಾಗ ಅದರ ಮೇಲಿದ್ದುದು ಹಳೆಯ, ಧೈರ್ಯಸ್ಥ, ಸಿನಿಕತನದ, ಸುರಿಸಲಾರದ ಕಣ್ಣೀರಿಗಿಂತಲೂ ಹೆಚ್ಚು ಕಹಿಯಾದ ಮಂದಹಾಸ. ಖಉಹ್ಞೂ, ನಾನಷ್ಟು ಕ್ಷುದ್ರಳಾಗಲಾರೆ; ಬೇರೆ ಉತ್ತಮ ಜೊತೆಗಾರರಿಲ್ಲದ ರಾತ್ರಿಯ ಉಸ್ತುವಾರಿಗೆ ನಾನದನ್ನು ಮೀಸಲಿಟ್ಟಿರುತ್ತೇನೆ. ಈಗ ನೀವು ನಂಗೋಸ್ಕರ ಇನ್ನೊಂದು ವರಸೆ ಮದ್ಯವನ್ನು ಬೆರೆಸಿ. ಹಿಂದೆ, ಬ್ರನ್ನ್‍ಹಿಲ್ಡ್ ಅನ್ನು ಹಾಡಬಾರದೇನೋ ಅನ್ನುವ ಪರಿಸ್ಥಿತಿಯಲ್ಲಿ ಹಾಡಬೇಕಾಗಿದ್ದಾಗ, ಉಪವಾಸವಿದ್ದು ಏನು ಕುಡಿಯಬಹುದು ಏನು ಬಾರದೂಂತ ಯೋಚನೆ ಮಾಡ್ತಿದ್ದೆ. ಆದರೆ ಒಡೆದ ಸಂಗೀತ ಪೆಟ್ಟಿಗೆಗಳು ಬೇಕಾದ್ದನ್ನ ಕುಡೀಬಹುದು, ಅದರಿಂದ ದೇಹ ಹಾಳಾಗತ್ತೇಂತ ಯಾರೂ ತಲೆಕೆಡಿಸ್ಕೊಳಲ್ಲ. ಮೊದಲಿಗೆ ಆ ವಿಷಯದ ಬಗ್ಗೆ ಮತ್ತೆ ಯೋಚ್ನೆ ಮಾಡಿ. ಕನಿಷ್ಠ ಪಕ್ಷ, ಅದಂತೂ ಹೊಸದಲ್ಲ. ಎಷ್ಟೋ ವರ್ಷಗಳ ಹಿಂದೆ ನಾವು ವೆನಿಸ್ನಲ್ಲಿದ್ದಾಗ ಅದು ಅವರ ಮನಸ್ನಲ್ಲಿ ಗುಯ್ಗುಟ್ತಿತ್ತು, ಊಟಕ್ಕೆ ಕೂತಾಗ ಮೇಜಿನ ಮೇಲೆ ಕೈಯಿಂದ ಅದಕ್ಕೆ ತಕ್ಕ ತಾಳ ಹಾಕ್ತಿದ್ರು. ಮಾಗಿ ಇನ್ನೇನು ಮುಗೀತಾ ಬಂದಾಗ ಅದರ ಬಗ್ಗೆ ಆಗ ತಾನೆ ಕೆಲಸ ಶುರುಮಾಡಿದ್ದರು, ಆದರೆ ಏಡ್ರಿಯಾಟಿಕ್ನ ನಿರ್ವಿಣ್ಣತೆ ಅವರ ಉತ್ಸಾಹ ತಗ್ಗಿಸಿತ್ತು, ಚಳಿಗಾಲದಲ್ಲಿ ಫ್ಲಾರೆನ್ಸ್ ಗೆ ಹೋಗೋದಕ್ಕೆ ನಿರ್ಧಾರ ಮಾಡಿದ್ರು, ಆದರೆ ಅವರು ಕಾಯಿಲೆ ಬಿದ್ದಾಗ ಅದರ ಸಂಬಂಧ ತಪ್ಪಿಹೋಯಿತು. ಆ ಭಯಂಕರ ದಿನಗಳು ನಿಮಗೆ ನೆನಪಿದೆಯಾ? ಅವರನ್ನ ಇಷ್ಟಪಡೋರೆಲ್ಲ ಅವರನ್ನ ಅವರಿಂದಲೇ ಕಾಪಾಡೋದಕ್ಕೆ ಸಮರ್ಥರಲ್ಲವಲ್ಲ! ಫ್ಲಾರೆನ್ಸ್‍ನಲ್ಲಿ ಅವರು ಹಾಸಿಗೆ ಹಿಡಿದಿದಾರೆ ಅನ್ನೋ ವಿಷಯ ತಿಳಿದಾಗ ನಾನು ನೈಸ್ನಲ್ಲಿದ್ದೆ, ಯಾವುದೋ ಕಾರ್ಯಕ್ರಮ ಕೊಡ್ತಾ. ಅವರ ಹೆಂಡತಿ ಅವರನ್ನ ಪ್ಯಾರಿಸ್ಗೆ ಕರೆದೊಯ್ಯುತ್ತ ಇದ್ದರು, ಆದರೆ ನಾನು ಅವರನ್ನ ಮೊದಲು ಕಂಡೆ. ನಾನು ಅಲ್ಲಿ ತಲುಪಿದ್ದು ಸಾಯಂಕಾಲ, ಭಯಂಕರ ಕುಂಭದ್ರೋಣ ಮಳೆ. ಚಳಿಗಾಲಕ್ಕೇಂತ ಅವರು ಅಲ್ಲಿ ಒಂದು ಹಳೆ ಅರಮನೆ ತಗೊಂಡಿದ್ರು, ನಾನು ಅಲ್ಲಿನ ಲೈಬ್ರರೀನಲ್ಲಿ ಅವರನ್ನ ನೋಡಿದೆ, ಅದೊಂದು ಉದ್ದವಾದ ಕತ್ತಲ ಕೋಣೆ, ಅದರ ತುಂಬ ಹಳೇ ಲ್ಯಾಟಿನ್ ಪುಸ್ತಕಗಳು, ಭಾರಿ ಮರದ ಮೇಜುಕುರ್ಚಿಗಳು, ಕಂಚಿನ ವಿಗ್ರಹಗಳು. ಕೋಣೆಯ ಒಂದು ಮೂಲೇಲಿ ಸೌದೆ ಒ - ಪಕ್ಕದಲ್ಲಿ ಅವರು ಕೂತಿದ್ರು, ಓ ಸೊರಗಿ ಹೋಗಿದ್ರು, ಮುಖದಲ್ಲಿ ಕಳೇನೇ ಇರ್ಲಿಲ್ಲ. ಕಾಯಿಲೆ ಬಿದ್ದಾಗ ಅವರು ಹಾಗೇ ಕಾಣ್ತಿದ್ದದ್ದು, ಅಲ್ಲವಾ! ನಿಮಗೆ ಅದು ಜ್ಞಾಪಕ ಇರೋದು ಸಹಜವೇ! ಕೆಂಪು ಜಾಕೆಟ್ ಕೂಡ ಅವರ ಮುಖಕ್ಕೆ ಕಾಂತಿ ಕೊಡಕ್ಕೆ ಸಾಧ್ಯವಾಗಿರ್ಲಿಲ್ಲ. ತಮಗೆಂಥ ಕಾಯಿಲೆ ಅನ್ನೋದನ್ನ ನಂಗೆ ಹೇಳ್ಬಾರದೂ ಅನ್ನೋದೇ ಅವರು ಆಡಿದ ಮೊದಲ ಮಾತು! ಆದರೆ ಅವತ್ತು ಬೆಳಿಗ್ಗೆ ಅವರು ತಮ್ಮ 'ಸವನೀರ್ಸ್ ದೋತಮ್'ಗೆ ಸ್ವರಪ್ರಸ್ತಾರ ಹಾಕಿ ಪೂರೈಸಿದ್ರು. ನಾನು ಅವರನ್ನ ತುಂಬ ಇಷ್ಟದಿಂದ ನೆನಪಿಸ್ಕೊಳ್ಳೋ ರೀತೀಲಿ ಅವರಿದ್ರು; ಪ್ರಶಾಂತವಾಗಿ, ಸಂತೋಷದಿಂದ, ದಣಿವಿನಿಂದ ಕೂಡಿರದ ಎಂದಿನ ಲವಲವಿಕೆಯಿಂದಲ್ಲ, ಕೊನೆಗೂ ಒಂದು ಒಳ್ಳೆ ಕೆಲಸವನ್ನು ಮಾಡಿ ಮುಗಿಸಿದಾಗ ಬರುತ್ತಲ್ಲ ದೈವಿಕ ದಣಿವು, ಅದರಿಂದ ತೃಪ್ತಿ ಹೊಂದಿ. ಹೊರಗಡೆ, ಮಳೆ ರಭಸವಾಗಿ ಸುರೀತಿತ್ತು, ಭೂವಿಯ ಸಮಸ್ತರ ನೋವಿಗಾಗಿ ನರಳ್ತಾ ಗಾಳಿ ಬೀಸ್ತಿತ್ತು, ನಡುಗ್ತಿದ್ದ ಆಲಿವ್ ರೆಂಬೆಗಳಲ್ಲೂ ಆ ಹಳೇ ಜನವಿಹೀನ ಅರಮನೆಯ ಗೋಡೆಗಳಲ್ಲೂ ಬಿಕ್ಕುತ್ತಿತ್ತು. ಆ ರಾತ್ರಿ ನನ್ನ ನೆನಪಲ್ಲಿ ಹೇಗೆ ಉಕ್ಕಿ ಬರ್ತಾ ಇದೇಂತ! ಕೋಣೇಲಿ ದೀಪವೇ ಇರ್ಲಿಲ್ಲ, ಉರೀತಿದ್ದ ಸೌದೆಯ ಬೆಳಕು ಕಂಚಿನ ಡಾಂತೆ ವಿಗ್ರಹದ ಉಬ್ಬುಗಳ ಮೇಲೆ ಶೋಧನಲೋಕದ ಜ್ವಾಲೆಗಳ ಪ್ರತಿಫಲನದ ಹಾಗೆ ಹೊಳೀತಿತ್ತು, ನೀಳವಾದ ಕಪ್ಪು ನೆರಳುಗಳನ್ನು ನಮ್ಮ ಮೇಲೆಲ್ಲ ಬೀಳಿಸಿ. ಆನಂತರ ಅದರ ಬೇಳಕು ಕತ್ತಲೇಲಿ ನುಗ್ಗಕ್ಕೆ ಸಾಧ್ಯವಾಗಿರ್ಲಿಲ್ಲ. ಉರೀನೇ ನೋಡ್ತಾ ಏಡ್ರಿಯನ್ಸ್ ಕೂತಿದ್ರು, ಸ್ವಂತ ಜೀವನದ ದಣಿವೆಲ್ಲ, ಅವರ ಬದುಕಿನ ಹಾಗೆ ತಮ್ಮದನ್ನು ರೂಪಿಸ್ಕೊಳಕ್ಕೆ ಆಸೆ ಪಟ್ಟು ಹೆಣಗಿದೋರು ಅನುಭವಿಸೋ ದಣಿವೂ ಸೇರಿದಂತೆ, ಅವರ ಕಣ್ಣುಗಳಲ್ಲಿ ತುಂಬಿಕೊಂಡಿತ್ತು. ಜಗತ್ತಿನ ನೋವನ್ನೆಲ್ಲ ತುಂಬಿಕೊಂಡ ಗಾಳಿ ಕೋಣೆಯೊಳಕ್ಕೂ ಹೇಗೋ ನುಸುಳಿಕೊಂಡು ಬಂದಿತ್ತು, ನಮ್ಮ ಕಣ್ಣುಗಳಲ್ಲಿ ತಣ್ಣನೆ ಮಳೆ ಸೇರಿಕೊಂಡಿತ್ತು, ನಮ್ಮಿಬ್ಬರಲ್ಲೂ ಒಟ್ಟಿಗೇ ಅಲೆಗಳು ನುಗ್ಗಿಕೊಂಡು ಬಂದವು - ಭಯಂಕರವಾದ, ಅಸ್ಪಷ್ಟವಾದ, ಸಾರ್ವತ್ರಿಕ ನೋವು, ಬದುಕುಸಾವುಗಳ ಕತ್ತರಿಸುವ ಭಯ ಮತ್ತು ದೇವರು ಹಾಗೂ ಭರವಸೆಗಳದ್ದು; ಹಡಗಿನ ಸಮಸ್ತವೂ ಒಡೆದು ಛಿದ್ರವಾದಾಗ ಸಾಗರದ ಮಧ್ಯದಲ್ಲಿ ಓಲಾಡೋ ಮರದ ತೊಲೆಗೆ ನಾವಿಬ್ಬರೂ ಜೋತುಬಿದ್ದ ಹಾಗಿತ್ತು. ರಭಸವಾಗಿ ಬೀಸಿಕೊಂಡು ಬಂದ ಗಾಳಿ ತಲೆಬಾಗಿಲನ್ನು ತೆರೆದುಕೊಂಡು ನುಗ್ಗಿ ಗೋಡೆಗಳನ್ನೂ ನಡುಗಿಸಿಬಿಡ್ತು. ಆಗ ಆಳುಗಳು ದೀಪ ಹಿಡಿದುಕೊಂಡು ಓಡಿ ಬಂದ್ರು, ಮೇಡಂ ವಾಪಸ್ಸು ಬಂದಿದಾರೇಂತ ಹೇಳಿದ್ರು, 'ಆ ರಾತ್ರಿ ಪುಸ್ತಕದ ಓದನ್ನ ಮುಂದುವರಿಸಲಿಲ್ಲ ನಾವು'".
ಕೊನೆಯ ಸಾಲನ್ನವಳು ಒಂದು ಬಗೆಯ ವಿಷಾದಭರಿತ ವಿನೋದದಿಂದ ನುಡಿದಳು, ಗಾಢವಾದ ಲವಲವಿಕೆಯ ಮಂದಹಾಸದಲ್ಲಿ ತನ್ನ ದೌರ್ಬಲ್ಯವನ್ನು ಮುಚ್ಚಿದ್ದಳು, ಹಳೆಯ ವಸ್ತುವನ್ನು ಹೊಳೆಯುವ ಬಟ್ಟೆಯಲ್ಲಿ ಸುತ್ತಿಟ್ಟ ಹಾಗೆ. ವ್ಯಂಗ್ಯದ ಮುಗುಳ್ನಗುವನ್ನವಳು ಎಷ್ಟೋ ವರ್ಷಗಳಿಂದ ಮುಖವಾಡದ ಹಾಗೆ ಧರಿಸಿದ್ದವಳು, ಅದಕ್ಕೆ ತಕ್ಕ ಹಾಗೆ ಅವಳ ಮುಖದ ಗೆರೆಗಳೂ ಸಂಪೂರ್ಣವಾಗಿ ಬದಲುಗೊಂಡಿದ್ದವು. ಹೀಗಾಗಿ ಅವಳು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಕಾಣುತ್ತಿದ್ದುದು ತನ್ನನ್ನಲ್ಲ, ಹರಿತ ವಿಮರ್ಶಕಳನ್ನು, ತನ್ನ ಬಗ್ಗೆಯೇ ಕಟಕಿಯಾಡಿಕೊಳ್ಳುವ ತಮಾಷೆಯ ವೀಕ್ಷಕಿಯನ್ನು. ಎವರೆಟ್ ತನ್ನ ತಲೆಯನ್ನು ಕೈಯ ಮೇಲಿಟ್ಟುಕೊಂಡು ರಗ್ ಕಡೆಯೇ ನೋಡುತ್ತ ಕೂತ. "ನೀವೆಷ್ಟು ನೋವನ್ನು ನುಂಗಿಕೊಂಡಿದ್ದೀರಿ!" ಎಂದ.
"ಹೌದು, ನೋವು" ಎಂದು ಸಮಾಧಾನದ ನಿಟ್ಟುಸಿರೊಂದನ್ನು ಬಿಡುತ್ತ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು; ನಿಶ್ಚಲಳಾಗಿ ಮಲಗಿಕೊಂಡೇ ಮಾತನ್ನು ಮುಂದುವರಿಸಿದಳು: "ನಾನು ನೋವನನ್ನನುಭವಿಸಿದ್ದೀನಿ ಅನ್ನೋದು ನಿಮಗೆ ತಿಳೀತಲ್ಲ, ಅದು ಎಷ್ಟು ಸಮಾಧಾನ ತಂದಿದೆ ಅನ್ನೋದನ್ನ ನೀವು ಊಹಿಸಿಕೊಳ್ಳಲಾರಿರಿ; ಯಾರಿಗಾದರೂ ಅದನ್ನು ಹೇಳಿಕೊಳ್ಳೋದು ಅಂದ್ರೆ ಅದೆಷ್ಟು ನೆಮ್ಮದಿ! ಜೋರಾಗಿ ಕೂಗಿ ಜಗತ್ತಿಗೆ ಅದನ್ನ ಸಾರಿ ಹೇಳಬೇಕೂಂತ ನಿದ್ದೆ ಬರದೇ ಇದ್ದ ರಾತ್ರಿಗಳಲ್ಲೆಲ್ಲ ಅನ್ನಿಸ್ತಿತ್ತು. ಅದನ್ನ ಹೊಟ್ಟೆಯೊಳಗಿಟ್ಟುಕೊಂಡು ನಾನು ಸಾಯಲಾರೆ ಅನ್ನಿಸ್ತಿತ್ತು, ಒಂದಲ್ಲ ಒಂದು ರೀತಿ ಅದು ಹೊರಕ್ಕೆ ಬರ್ಬೇಕಾಗಿತ್ತು. ನಿಮಗೀಗ ತಿಳೀತಲ್ಲ, ನನ್ನ ಬೇಗುದಿ ಅದೆಷ್ಟು ಕಡಿಮೆಯಾಯ್ತು ಅಂತ ಹೇಳಿದ್ರೆ ನೀವು ನಂಬೋದಿಲ್ಲ".
ಎವರೆಟ್ ಅಸಹಾಯಕನಾಗಿ ನೆಲವನ್ನೇ ನೋಡುತ್ತ ಕೂತ. "ನನಗೆಷ್ಟು ತಿಳೀಬೇಕು ಅನ್ನೋದು ನಿಮ್ಮ ಆಸೆಯೋ ನಂಗೆ ಗೊತ್ತಿಲ್ಲ" ಎಂದ.
"ಆವತ್ತು ನೀವು ಚಾರ್ಲೀ ಜತೆ ಬಂದ್ರಲ್ಲ, ಆಗ ನಿಮ್ಮ ಮುಖ ಮೊದಲ ಸಲ ನೋಡಿದಾಗಿನಿಂದ ನಿಮಗೆ ತಿಳೀಬೇಕು ಅಂತ ನಾನು ಬಯಸಿದೆ. ಬೇಕಾದಾಗ ನಾನದನ್ನ ಮರೆಮಾಚಬಲ್ಲೆ ಅನ್ನೋದು ನನಗೆ ಹೆಮ್ಮೆ ಅನ್ನಿಸ್ತಿದೆ, ಪ್ರಾಯಶಃ ಹೆಂಗಸರು ಯೋಚನೆ ಮಾಡೋದೇ ಹಾಗೆ ಅನ್ನಿಸತ್ತೆ. ಸೂಕ್ಷ್ಮವಾಗಿ ನೋಡಬಲ್ಲವರಿಗೆ ಅದು ಗೊತ್ತಾಗಿರಬಹುದು, ಆದರೆ ವಿವೇಚನಾಶಕ್ತಿ ಇರೋರಿಗೆ ಔಚಿತ್ಯ ಅನ್ನೋದು ಗೊತ್ತಿರತ್ತೆ, ಜೊತೆಗೆ ಅವರು ಕರುಣೆಯುಳ್ಳವರೂ ಆಗಿರ್ತಾರೆ; ಯಾಕೇಂದ್ರೆ ವಿವೇಚನೆ ಬರಕ್ಕೆ ಮೊದಲು ನಾವೊಂದಷ್ಟು ಕಷ್ಟ ಸಹಿಸಿಕೊಂಡಿರ್ಬೇಕು. ನೀವು ತಿಳ್ಕೋಬೇಕೂಂತ ಆಸೆಪಟ್ಟೆ; ನೀವು ಅವರ ತರಹವೇ, ಹೀಗಾಗಿ ಅದನ್ನ ಅವರಿಗೆ ಹೇಳೋ ಹಾಗೇನೇ. ಈಗದು ಒಂದಲ್ಲ ಒಂದು ದಿನ ಅವರಿಗೆ ತಿಳಿಯುತ್ತೆ, ಆಗ ಅವರ ಸಹಾನುಭೂತಿಯಿಂದ ನಾನಷ್ಟು ಪಾವನವಾಗ್ತೀನಿ, ಯಾಕೇಂದ್ರೆ ಸತ್ತವರ ಬಗ್ಗೆ ಕರುಣೆ ತೋರ್ಸೋದು ಹೇಗೆ! ಬದುಕಿನಲ್ಲಿ ತುಂಬ ಮುಖ್ಯ ಅಂತ ನನಗೇನನ್ನಿಸತ್ತೋ ಅದು ಅವರಿಗೆ ಗೊತ್ತಾಗ್ಬೇಕು. ಒಟ್ಟಾರೆ, ನನಗೆ ಆ ಬಗ್ಗೆ ನಾಚಿಕೆ ಇಲ್ಲ. ನಾನು ಧೀರೋದಾತ್ತವಾಗಿ ಹೋರಾಡಿದ್ದೀನಿ".
"ಅವನಿಗೆ ಇದೆಲ್ಲ ಗೊತ್ತೇ ಇಲ್ವಾ?" ಎಂದು ಕೇಳಿದ ಎವರೆಟ್ ಗಾಢವಾದ ದನಿಯಿಂದ.
"ಓ! ನೀವು ಅಂದುಕೊಂಡ ಹಾಗೆ ಯಾವತ್ತೂ ಇಲ್ಲ. ಹೆಣ್ಣುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅಲ್ಲಿ ಹುದುಗಿರೋ ಪ್ರೀತೀನ ಕಾಣಬಲ್ಲ ಶಕ್ತಿ ಅವರಿಗಿದೆ; ಅದು ಅಲ್ಲಿ ಕಾಣಿಸದೇ ಇದ್ದಾಗ ತಾನೇನೋ ತಪ್ಪು ಮಾಡಿದೆ ಅನ್ನೋ ಅರಾಧಪ್ರಜ್ಞೆ ಅವರನ್ನ ಕಾಡ್ತಾ ಇತ್ತು. ಮೂರ್ಖತನ ಅಥವಾ ಮಂಕುತನ ಇಲ್ಲದಿರೋ ಅಥವಾ ವಯಸ್ಸಾಗಿಲ್ಲದಿರೋ ವಿಕಾರವಾಗಿಲ್ಲದಿರೋ ಎಲ್ಲರನ್ನೂ ಇಷ್ಟಪಡೋ ಸ್ವಭಾವ ಅವರದು. ತಾರುಣ್ಯ, ಲವಲವಿಕೆ ಇದ್ದು, ಒಂದಷ್ಟು ಮಾತುಗಾರಿಕೆ ಚಾಲಾಕಿತನ ಇದ್ದರೆ ಅಂಥವರ ಹತ್ತಿರ ಇರೋಕೆ ಇಷ್ಟ ಪಡೋ ಅಂಥೋರು ಏಡ್ರಿಯನ್ಸ್. ಬೇರೆಯವರ ಹಾಗೆ ನಾನೂ ಇದನ್ನ ಅನುಭವಿಸಿದ್ದೀನಿ; ಮಂದಹಾಸಗಳು, ಸಾಹಸಪ್ರವೃತ್ತಿ, ತಮಾಷೆಯಿಂದ ಕೂಡಿರೋ ಮಾತು ಇವನ್ನೆಲ್ಲ ನಾನೂ ಕಂಡಿದ್ದೀನಿ. ಅದೆಲ್ಲ ಸ್ಕೂಲಿನ ಭಾನುವಾರದ ಪ್ರವಾಸದ ಹಾಗೆ; ಚೆನ್ನಾಗಿರೋ ಬಟ್ಟೆ ಹಾಕ್ಕೊಂಡು, ಮುಖದ ಮೇಲೆ ನಗು ತುಂಬಿಕೊಂಡು ನನ್ನ ಸರಿತೀಗೆ ನಾನು ಕಾದಿದ್ದೀನಿ. ಅವರ ಕರುಣೆಯೇ ತಡೆಯಕ್ಕೆ ಆಗದರೋಂಥದು. ಆ ಶಿಕ್ಷೇನ ಅನುಭವಿಸ್ತಾ ನಾನು ಬದುಕಿನ ಬಹು ಭಾಗ ಕಳೆದಿದ್ದೀನಿ".
"ದಯವಿಟ್ಟು ಸಾಕು, ಅವನ ಬಗ್ಗೆ ದ್ವೇಷ ಉಂಟಾಗೋ ಹಾಗೆ ಮಾಡ್ತೀರಿ ನೀವು" ಎಂದ ಎವರೆಟ್ ವ್ಯಥೆಯಿಂದ.
ಕ್ಯಾದರೀನ್ ನಕ್ಕು, ತನ್ನ ಕೈಲಿದ್ದ ಬೀಸಣಿಗೆ ಜೊತೆ ಅಧೈರ್ಯದಿಂದ ಆಡುವುದಕ್ಕೆ ಶುರುಮಾಡಿದಳು. "ಅದರಲ್ಲಿ ಅವರ ತಪ್ಪು ಅಣುವಿನಷ್ಟೂ ಇಲ್ಲ; ಅದರ ವ್ಯಂಗ್ಯ ಅಂದ್ರೆ ಇದೇ. ಅವರನ್ನ ಭೇಟಿಯಾಗೋಕೆ ಮುಂಚೆಯೇ ಇದೆಲ್ಲ ಶುರುವಾಗಿತ್ತು. ಕಷ್ಟಪಟ್ಟು ಅವರ ಹತ್ತಿರ ಹೋದೆ, ನನ್ನ ಪತನವನ್ನ ಸಾಕಷ್ಟು ದುರಾಸೆಯಿಂದಲೇ ಹೀರಿದೆ".
ಎವರೆಟ್ ಹಿಂದೆಮುಂದೆ ನೋಡುತ್ತ ಎದ್ದು ನಿಂತ. "ಈಗ ನಾನು ಹೋಗ್ಬೇಕು, ನೀವು ಹೇಳೊದನ್ನ ಇನ್ನು ನಾನು ಕೇಳಕ್ಕೆ ಸಾಧ್ಯವಿಲ್ಲ".
ತನ್ನ ಕೈಯನ್ನು ಚಾಚಿ ಅವನದನ್ನು ಹುಡುಗಾಟದಿಂದ ಹಿಡಿದುಕೊಂಡಳು. "ಇಂಥದರ ಬಗ್ಗೆ ನೀವು ಮೂರು ವಾರಗಳಷ್ಟು ಕಾಲ ವ್ಯರ್ಥ ಮಾಡಿಕೊಂಡಿರಿ, ಅಲ್ಲವಾ? ಇದರಿಂದ ನಿಮಗೆ ಎಂಥದೋ ಕಿರೀಟವೇನೂ ಬರ್ಲಿಲ್ಲ, ಆದರೆ ಇದರಿಂದ ಸ್ವರ್ಗದ ವೈಭವವೇ ನನ್ನ ಮೇಲೆ ಸುರಿದ ಹಾಗಾಯ್ತು. ಅಲ್ಲದೆ  ಇದಕ್ಕಿಂತ ಹೀನಾಯವಾದದ್ದನ್ನ ಎದುರಿಸೋ ಸಾಮಥ್ರ್ಯ ಬಂದ ಹಾಗಾಯ್ತು."
ಎವರೆಟ್ ಅವಳ ಪಕ್ಕ ಮಂಡಿಯ ಮೇಲೆ ಕೂತು ಗದ್ಗದ ಸ್ವರದಿಂದ ತಡೆತಡೆದು ಹೇಳಿದ: "ನಾನು ಊರಿಗೆ ಹೋಗದೇ ಇದ್ದುದಕ್ಕೆ ಕಾರಣ ನಿಮ್ಮ ಜೊತೆ ಇರ್ಬೇಕೂಂತ, ಅಷ್ಟೆ. ನಾನಿನ್ನೂ ಚಿಕ್ಕ ಹುಡುಗನಾಗಿದ್ದಾಗ ಮೊದಲ ಬಾರಿಗೆ ನಿಮ್ಮನ್ನ ನ್ಯೂಯಾರ್ರ್ಕ್‍ನಲ್ಲಿ ನೋಡೋದಕ್ಕೆ ಮುಂಚೆ ನಾನು ಯಾವುದೇ ಹೆಣ್ಣಿನ ಬಗ್ಗೆ ಯೋಚನೆ ಮಾಡ್ದೋನಲ್ಲ. ನೀವು ನನ್ನ ಬದುಕಿನ ಒಂದು ಭಾಗ, ಬೇಕೂಂದಿದ್ರೂ ನಿಮ್ಮನ್ನ ಬಿಟ್ಟು ಹೋಗಕ್ಕೆ ನನ್ನ ಕೈಲಾಗ್ತಿರ್ಲಿಲ್ಲ".
ಅವಳು ತನ್ನ ಕೈಗಳನ್ನು ಅವನ ಭುಜಗಳ ಮೇಲಿಟ್ಟು ತನ್ನ ತಲೆಯಲ್ಲಾಡಿಸಿದಳು. "ಉಹ್ಞೂ, ಇಲ್ಲ, ದಯವಿಟ್ಟು ಹಾಗೆ ಹೇಳ್ಬೇಡಿ. ನಾನೆಷ್ಟು ದುರಂತವನ್ನೀಗಾಗಲೇ ಕಂಡಿದ್ದೀನಿ ಅನ್ನೋದು ದೇವರಿಗೆ ಗೊತ್ತು. ತೆರೆ ಬೀಳೋ ಹೊತ್ತಲ್ಲಿ ಮತ್ತಷ್ಟನ್ನ ತೋರಿಸಬೇಡಿ. ಬೇಡ, ಅದು ಹುಡುಗನೊಬ್ಬನ ಕಲ್ಪನೆ ಮಾತ್ರವಲ್ಲ, ನಿಮ್ಮ ದೈವಿಕ ಕರುಣೆ ಮತ್ತು ನನ್ನ ಕರುಣಾಜನಕ ಸ್ಥಿತಿಗಳೆರಡೂ ಒಂದು ಕ್ಷಣ ಸೇರಿ ನೆನಪಿಗೆ ಬಂದಿವೆ. ಯಾರೂ ಸಾಯುವವರನ್ನು ಪ್ರೇಮಿಸಲಾರರು, ಗೆಳೆಯರೇ. ಬಾಲ್ಯದ ಅಂತಹ ಕಲ್ಪನಾವಿಲಾಸವೇನಾದರೂ ಇನ್ನೂ ಕೊಂಚ ಉಳಿದಿದ್ದರೆ, ಇದು ಅದನ್ನ ಹೋಗಲಾಡಿಸಲಿ, ಆಗ ಸರಿಹೋಗತ್ತೆ. ಈಗ ಹೋಗಿ, ಮತ್ತೆ ನಾಳೆ ಬರುವಿರಂತೆ, ಎಲ್ಲಿವರೆಗೆ ನಾಳೆಗಳಿರುತ್ತೋ ಅಲ್ಲೀವರೆಗೆ, ಬರ್ತೀರಿ ತಾನೇ?" ಅವಳ ಆತ್ಮವನ್ನು ಮುಸುಕಿದ್ದ ಮುಖವಾಡವನ್ನು ಕೆತ್ತೆಸೆದು ಧೈರ್ಯ ಹಾಗೂ ಹತಾಶೆಗಳೆರಡನ್ನೂ ಅನಾವರಣಗೊಳಿಸಿ, ಅನಂತ ನಿಷ್ಠೆ ಮತ್ತು ಕೋಮಲತೆಗಳು ತುಂಬಿದ್ದ ಮುಗುಳ್ನಗುವನ್ನು ಸೂಸುತ್ತ ಅವನ ಕೈಯನ್ನು ತನ್ನದರಲ್ಲಿ ಹಿಡಿದು, ಅತ್ಯಂತ ಮೆಲುದನಿಯಲ್ಲಿ ಹೇಳಿದಳು:
"ಎಂದೆಂದಿಗೂ, ಎಂದೆಂದಿಗೂ ವಿದಾಯ, ಕ್ಯಾಸಿಯಸ್;
ಮತ್ತೆ ನಾವು ಭೇಟಿಯಾಗಬಹುದು, ಅದಕೆ ಮಂದಹಾಸವಿರಲಿ;
ಭೇಟಿಯಾಗದಿದ್ದರೇನು, ಈ ವಿಯೋಗ ಹೇಳಿ ಮಾಡಿದಂತಹುದು".
ಅವಳ ಸ್ಥೈರ್ಯ ತಾರಗೆಯೊಂದರ ಮಿನುಗಿನಂತೆ ಪರಿಶುದ್ಧ ಬೆಳಕಾಗಿತ್ತು, ಅವನು ಹೊರಹೊರಟ.
ಏಡ್ರಿಯನ್ಸ್ ಹಿಲ್‍ಗಾರ್ಡ್ ಪ್ಯಾರಿಸ್‍ನಲ್ಲಿ ನೀಡಿದ ಆರಂಭಿಕ ಕಾರ್ಯಕ್ರಮ ಆ ರಾತ್ರಿ ನಡೆಯುತ್ತಿದ್ದಾಗ, ಎವರೆಟ್ ವ್ಯೋಮಿಂಗ್‍ನ ಹೊಲದ ಮನೆಯಲ್ಲಿನ ಹಾಸಿಗೆಯ ಪಕ್ಕ ಕುಳಿತು, ನಾವೆಲ್ಲ ಒಂದಲ್ಲ ಒಂದು ದಿನ ರಕ್ತಮಾಂಸಗಳೊಡನೆ ಪೂರ್ಣವಾಗಿ ಬಿಡುಗಡೆಗೊಂಡು ಮುಕ್ತರಾಗುವ ಹೋರಾಟವನ್ನು ಕಣ್ಣಾರೆ ಕಾಣುತ್ತ ಕುಳಿತಿದ್ದ. ಆಕೆಯ ಪ್ರಶಾಂತ ಆತ್ಮವು ಆಗಲೇ ನಿರ್ಗಮಿಸಿ ಬಿರುಗಾಳಿಯಿಂದ ಪಾರಾಗಿ ನೆಲೆಯನ್ನು ಕಂಡುಕೊಂಡಿದೆಯೇನೋ, ಅವಳಲ್ಲಿನ ಪಶುಜೀವ ಸಾವಿನೊಡನೆ ಪಟ್ಟುಬಿಡದೆ ಹೋರಾಡುತ್ತಿದೆಯೇನೋ ಎಂದೂ ಅವನಿಗೆ ಆಗಾಗ ಅನ್ನಿಸುತ್ತಿತ್ತು. ಕರುಣಾಜನಕವೂ ಕರುಣಾಮಯವೂ ಆದ ಭ್ರಮೆಯಲ್ಲಿ ಅವಳು ತೇಲಾಡುತ್ತಿದ್ದಳು, ತಾನು ಪುಲ್‍ಮನ್ ರೈಲುಗಾಡಿಯಲ್ಲಿ ನ್ಯೂಯಾರ್ಕ್‍ಗೆ, ತನ್ನ ಬದುಕು ಕೆಲಸಗಳಿಗೆ ಮರಳಲೆಂದು ಪಯಣಿಸುತ್ತಿರುವೆನೇನೋ ಅಂದುಕೊಳ್ಳುತ್ತಿದ್ದಳು. ತನ್ನ ಅರೆಪ್ರಜ್ಞೆಯಿಂದ ಎಚ್ಚೆತ್ತಾಗ ಅವಳು ಕೇಳಿದ್ದು ಜೆರ್ಸಿ ಅರ್ಧ ಗಂಟೆಯ ಬಳಿಕ ನಗರವನ್ನು ಬಿಟ್ಟ ಮೇಲೆ ತನ್ನನ್ನು ಎಚ್ಚರಿಸುವಂತೆ ಹಮಾಲನಿಗೆ ಹೇಳಲು, ಅಥವಾ ಪ್ರಯಾಣ ತಡವಾಗುತ್ತಿದೆಯೆಂದೋ ರಸ್ತೆ ಸರಿಯಿಲ್ಲವೆಂದೋ ದೂರಲು. ಮಧ್ಯರಾತ್ರಿ ಅವಳ ಬಳಿ ಇದ್ದದ್ದು ಎವರೆಟ್ ಮತ್ತು ನರ್ಸ್ ಮಾತ್ರ. ಬಡಪಾಯಿ ಚಾರ್ಲೀ ಗೇಲಾರ್ಡ್ ಹೊರಗಡೆ ಕುರ್ಚಿಯೊಂದರ ಮೇಲೆ ಒರಗಿ ಮಲಗಿದ್ದ. ಪಟಪಟನೆ ಉರಿಯುತ್ತಿದ್ದ ರಾತ್ರಿ ದೀಪವನ್ನು ಒಂದೇ ಸಮನೆ ನೋಡುತ್ತ ಕುಳಿತ ಎವರೆಟ್ನ ಕಣ್ಣುಗಳು ನೋಯತೊಡಗಿದವು. ಅವನ ತಲೆ ತೂಕಡಿಕೆಯಿಂದ ಹಾಸಿಗೆಯ ಅಂಚಿಗೆ ಆಗಾಗ ಪಟ್ಟನೆ ಬೀಳುತ್ತ, ಕೊನೆಗೊಮ್ಮೆ ಯಾತನೆಯ ಗಾಢ ನಿದ್ದೆಯಲ್ಲಿ ಮುಳುಗಿತು. ಅವನಿಗೆ ಪ್ಯಾರಿಸ್ನಲ್ಲಿ ನಡೆಯುತ್ತಿದ್ದ ಏಡ್ರಿಯನ್ಸ್ನ ಕಾರ್ಯಕ್ರಮದ್ದೇ, ಮಂದಹಾಸ ಗೆಲವುಗಳನ್ನು ತನ್ನ ಉಲ್ಲಾಭರಿತ ಮುಖದಲ್ಲಿ ಹೊತ್ತ ಹಾಗೂ ತಲೆಗೂದಲಲ್ಲಿ ಬೆಳಿಗೆರೆಗಳಿದ್ದ ಗಾಯಕ ಏಡ್ರಿಯನ್ಸ್ನದೇ ಕನಸು. ಅವನಿಗೆ ಚಪ್ಪಾಳೆಗಳ ಸದ್ದು ಕೇಳುತ್ತಿತ್ತು, ವೇದಿಕೆಯ ಫುಟ್‍ಲೈಟ್ಳ ಮೇಲೆ ಬಂದು ಪಿಯಾನೋದ ಅರ್ಧದಷ್ಟು ಎತ್ತರಕ್ಕೆ ರಾಶಿಯಾಗಿ ಬೀಳುತ್ತ, ಎಲ್ಲೆಂದರಲ್ಲಿ ಕಳೆಗಳು ಹಾರಿಹೋಗಿ ನೆಲದ ಮೇಲೆಲ್ಲ ಕೆಂಬಣ್ಣದ ಕಲೆಗಳನ್ನು ಬಿತ್ತರಿಸುತ್ತಿದ್ದ ಗುಲಾಬಿಗಳು ಕಾಣುತ್ತಿದ್ದವು. ಈ ಗುಲಾಬಿ ಹಾದಿಯಲ್ಲಿ ತನ್ನ ತರುಣ ಹೆಜ್ಜೆಗಳನ್ನಿಡುತ್ತ, ಮುಖ್ಯ ಗಾಯಕಿಯ ಕೈಹಿಡಿದು ಏಡ್ರಿಯನ್ಸ್ ಬಂದ, ಈ ಸಲ ಅವಳು ಕಪ್ಪುಕಣ್ಣುಗಳ ಸುಂದರಿ, ಸ್ಪಾನಿಶ್ ಚೆಲುವೆ.
ನರ್ಸ್ ಅವನ ಭುಜವನ್ನು ಮುಟ್ಟಿದಳು; ಗಾಬರಿಗೊಂಡು ಎಚ್ಚೆತ್ತ. ತನ್ನ ಕೈಗಳಿಂದ ಅವಳು ದೀಪವನ್ನು ಮರೆಮಾಡಿಕೊಂಡಿದ್ದಳು. ಕ್ಯಾದರೀನ್‍ಳಿಗೆ ಪ್ರಜ್ಞೆ ಬಂದಿತ್ತು, ಮಾತ್ರವಲ್ಲದೆ ಎಚ್ಚರಗೊಂಡು ಹೊರಳಾಡುತ್ತಿದ್ದಳು. ಅವಳನ್ನು  ಮೇಲೆತ್ತಿ ತನ್ನ ಭುಜಕ್ಕೆ ಅನಿಸಿಕೊಂಡು ಗಾಳಿ ಹಾಕತೊಡಗಿದ. ಅವಳು ತನ್ನ ಕೈಗಳನ್ನು ಹಗುರವಾಗಿ ಅವನ ತಲೆಯಲ್ಲಿ ಆಡಿಸಿ ಎಂದೂ ಅಳದ ಮತ್ತು ಅನುಮಾನಿಸದ ಹಾಗೆ ಕಾಣುತ್ತಿದ್ದ ತನ್ನ ಕಣ್ಣುಗಳಿಂದ ಅವನ ಮುಖವನ್ನೇ ದಿಟ್ಟಿಸುತ್ತ ಕೂತಳು. "ಏಡ್ರಿಯನ್ಸ್, ಪ್ರಿಯ, ನನ್ನ ಮುದ್ದೇ" ಎಂದು ಪಿಸುಗುಟ್ಟಿದಳು.
ಅವಳ ಅಣ್ಣನನ್ನು ಕರೆತರಲು ಎವರೆಟ್ ಹೊರಗೆ ಹೋದ, ಆದರೆ ಅವರು ಮತ್ತೆ ಒಳಗೆ ಬರುವ ಹೊತ್ತಿಗೆ ಕ್ಯಾದರೀನ್‍ಳ ಕಲೆಯ ಹುಚ್ಚು ತನ್ನ ಕತೆ ಮುಗಿಸಿತ್ತು.
ಎರಡು ದಿನಗಳ ಬಳಿಕ ಸ್ಟೇಷನ್ನ ಪಕ್ಕದಲ್ಲಿ ಶತಪದ ತುಳಿಯುತ್ತಿದ್ದ, ಪಶ್ಚಿಮಾಭಿಮುಖವಾಗಿ ಹೋಗುವ ಗಾಡಿ ಕಾಯುತ್ತ. ಚಾರ್ಲೀ ಗೇಲಾರ್ಡ್ ಕೂಡ ಅವನ ಬದಿಗಿದ್ದ, ಆದರೆ ಅವರಿಬ್ಬರ ನಡುವೆ ಮಾತಿಗೆ ವಸ್ತುವೇ ಇರಲಿಲ್ಲ. ಎವರೆಟ್ನ ಸಾಮಾನುಗಳನ್ನೆಲ್ಲ ಗಾಡಿಯಲ್ಲಿ ಒಟ್ಟಿಯಾಯಿತು, ಅವನ ಹೆಜ್ಜೆಗಳು ಬಿರುಸುಗೊಂಡುವು, ಹಳಿಯ ಕಡೆಗೇ ಮತ್ತೆ ಮತ್ತೆ ನೋಡುತ್ತ, ರೈಲು ಬರುವುದನ್ನೇ ಕಾಯುತ್ತಿದ್ದ ಅವನ ಕಣ್ಣುಗಳಲ್ಲಿ ಅಸಹನೆ ಮಡುಗಟ್ಟಿತ್ತು. ಗೇಲಾರ್ಡ್ನ ಅಸಹನೆ ಕೂಡ ಅವನದಕ್ಕಿಂತ ಕಡಿಮೆಯಾದುದೇನಾಗಿರಲಿಲ್ಲ. ತೀರ ಹತ್ತಿರವಾಗಿದ್ದ ಈ ಇಬ್ಬರೂ ಪರಸ್ಪರ ನೋವುಂಟುಮಾಡುವವರಾಗಿ ಅಸಾಧ್ಯರಾಗಿಬಿಟ್ಟಿದ್ದರು, ವಿದಾಯದ ಗಳಿಗೆಗಾಗಿ ಕಾಯುತ್ತಿದ್ದರು.
ಬುಸುಗುಟ್ಟುತ್ತ ಬಂದ ರೈಲು ನಿಂತಾಗ, ಕೆಳಗಿಳಿಯುತ್ತಿದ್ದ ಜನಗಳ ನಡುವೆಯೇ ಎವರೆಟ್ ಗೇಲಾರ್ಡ್ನ ಕೈಗಳನ್ನದುಮಿದ. ಕರಾವಳಿಯತ್ತ ಪಯಣ ಬೆಳೆಸಿದ್ದ ಜರ್ಮನ್ ಅಪೆರಾ ತಂಡದದವರು ತಮ್ಮ ಉಪಾಹಾರಕ್ಕಾಗಿ ತವಕದಿಂದ ಓಡಿದರು. ಜರ್ಮನ್ ಉಪಭಾಷೆಯಲ್ಲಿ ಯಾರೋ ಅಚ್ಚರಿ ಸೂಚಿಸಿದ ಉದ್ಗಾರ ಕೇಳಿ ಬಂತು; ತನ್ನಿಂದ ಒಂದೇ ಸಮನೆ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ನೋಟದ ಒಬ್ಬ ಧಡೂತಿ ಹೆಂಗಸು ಅತ್ಯಂತ ಅನಿರೀಕ್ಷಿತ ಸ್ಥಳದಲ್ಲಿ ಅವನ ಕಡೆ ಧಾವಿಸಿದಳು, ಆಶ್ಚರ್ಯ ಸಂತೋಷಾತಿರೇಕದಿಂದ ಗವಸು ಹಾಕಿದ್ದ ತನ್ನ ಕೈಗಳಿಂದ ಅವನ ತೋಳನ್ನು ಹಿಡಿದೆಳೆದಳು.
"ಅಯ್ಯೋ ದೇವರೇ, ಏಡ್ರಿಯನ್ಸ್, ಪ್ರೀತಿಯ ಗೆಳೆಯ" ಎಂದು ಜೋರಾಗಿ ಭಾವವಶಳಾಗಿ ಕೂಗಿದಳು.
ಎವರೆಟ್ ತಕ್ಷಣವೇ ತನ್ನ ತೋಳನ್ನು ಬಿಡಿಸಿಕೊಂಡು ನಾಚಿಕೆಯಿಂದ ತನ್ನ ಹ್ಯಾಟ್ ಮೇಲೆತ್ತಿದ. "ದಯವಿಟ್ಟು ಕ್ಷಮಿಸಿ, ಮೇಡಂ, ನನ್ನನ್ನ ನೀವು ಏಡ್ರಿಯನ್ಸ್ ಹಿಲ್‍ಗಾರ್ಡ್ ಅಂತ ತಪ್ಪು ತಿಳಿದಿರೋ ಹಾಗೆ ಕಾಣತ್ತೆ. ನಾನು ಅವನ ತಮ್ಮ" ಎಂದ ಶಾಂತನಾಗಿ, ಖಿನ್ನಳಾದ ಆ ಗಾಯಕಿಯಿಂದ ತಿರುಗಿ ತನ್ನ ಗಾಡಿಯ ಕಡೆ ಧಾವಿಸುತ್ತ.
======
    



No comments: