Monday 2 December 2013

ಭರತಪ್ಪನ ಸಂಸಾರ ಸಾಂಗತ್ಯ

                                 ಭರತಪ್ಪನ ಸಂಸಾರ ಸಾಂಗತ್ಯ

                                    Things fall apart,
                                                            The centre cannot hold” 

     -           Chinua Achebe

           
ಬಹು  ಪುರಾತನ ಭರತಪ್ಪನ ಮನೆತನ
ಆರಂಭ ಪುರಾಣ ಕಾಲ;
ಜಗದಗಲದ ನೆಲ, ಮುಗಿಲೆತ್ತರ ಮಾನ
ಚರಿತೆಯು ಸಾಗರದಾಳ !                                           1

ತುಂಬ ವಿಸ್ತಾರವು ಭರತಪ್ಪನ ಹೊಲ:
ಬೆಟ್ಟತಪ್ಪಲಿನಿಂದ ಜಲಕೆ,
ಪಡುವು ಸೂರ್ಯನ, ತಾಣ ಮೂಡು ಬ್ರಹ್ಮನ ನೆಲ
ಇದೆ ಚಕ್ಕುಬಂದಿಯು ಅದಕೆ                                         2

ಹತ್ತಾರು ಹೆಂಡಿರು ನೂರಾರು ಮಕ್ಕಳು
ಮಿಗಿಲಿವ ಭರತ ಭೂಪತಿಗೆ;
ನಾನಾ ದೇಶದ ಹೆಣ್ಣುಮಕ್ಕಳು ಸಿಕ್ಕರು
ತುಂಬಿರುವರು ಎದೆಯೊಳಗೆ                                         3

ಮೊದಲೆಷ್ಟೊ ವರುಷವು ಸರಿದವು, ಎಲ್ಲರು
ಹೊಂದಾಣಿಕೆಯ ಕಾಲ ಕಳೆದು;
ಸವತಿಯರಾಗಲು ಗಂಧವಾರಣೆಯರು
ಕಲುಷಿತ ಸಂಶಯ ಬೆಳೆದು                                          4

ಈ ದೊಡ್ಡ ಸಂಸಾರ ಪ್ರತಿಕ್ಷಣ ವಿಸ್ತಾರ
ಸಾಗರದಲೆಗಳ ಹಾಗೆ,
ಬೆಳ್ನೊರೆ ಸುರಿಸುತ್ತ ಏರಿ ಅಷ್ಟೆತ್ತರ
ಹಾಯುತ್ತ ಮೇಲಕ್ಕೆ ಕೆಳಗೆ                                          5

ಎಷ್ಟೋ ಕಷ್ಟಗಳೆಷ್ಟೊ ಪ್ರಶ್ನೆಗಳು
ಮನೆಯಲ್ಲಿ ಜನ ಹೆಚ್ಚಿದಾಗ;
ಸಿಡುಕು ಸೆಡವುಗಳು ಗೊಣಗುಟ್ಟು ಬೈಗುಳು
ಇರದೆ ಮುಂಗಾರ್ ಸುರಿವಾಗ?                                      6

ಮಕ್ಕಳೆಲ್ಲರು ರಾಮಚಂದ್ರರಾಗುವರೇನು?
ಜೊತೆಯಲ್ಲಿ ಲಕ್ಷ್ಮಣ ಭರತ
ಶತ್ರುಘ್ನರಲ್ಲದೆ ಪಾಂಡವಸೂನು-
ಗಳೆಲ್ಲರು ಕೌರವಸಹಿತ                                             7

ಈ ರೀತಿ ಸಂಸಾರ ಬೆಳೆಯಲು ಅಕರಾಳ
ಭಾರತಾಯಣವಾಯ್ತು ಮನೆಯು:
ಪಿಸುದನಿಯೂ ಕೂಡ ಆಕಾಶಕೇಳುವುದು,
ಗುದ್ದು ಕೊಟ್ಟರೆ ಸಿಡಿಮದ್ದು                                          8

ಹಿರಿಯಾಕೆ ಉತ್ತರೆ ಹಸ್ತಿನಿ ಹೆಂಗಸು
ಯಜಮಾನಗು ಯಜಮಾನಿ;
ಸವತಿ ಸುಂದರಿಯರ ಕಂಡರೆ ಮುನಿಸು
ಅವರ ಮೇಲಿವಳ ಗುಮಾನಿ                                         9

ಕೈ ಬೆರಳುಗಳಲ್ಲಿ ಹೆಬ್ಬೆಟ್ಟಿನ ಹಾಗೆ
ಮನೆವಾರ್ತೆಯೊಳಗೆಲ್ಲವಿವಳು;
ಆಕಾಶದುದ್ದಕು ತುಂಬಿದ್ದರೂ ಚುಕ್ಕೆ
ಚಂದ್ರನಂತೆಯೆ ಹೊಳೆವವಳು                                        10

ಉತ್ತರೆ ಕಟಿಯಲ್ಲಿ ಬೀಗದೆಸಳುಗಳು
ಕಣ್ಣಲ್ಲಿ ಕುಹಕ ಫಳಫಳ
ನಡೆವಾಗ ಹೆಮ್ಮೆ ಸಪ್ಪುಳದ ಹೊಂಬಳೆಗಳು
ಮೂಗಿನ ನತ್ತು ಥಳಥಳ                                            11

ಉತ್ತರೆಗಿಂತಲೂ ತಮ್ಮ ತಾಯಂದಿರು
ಯಾವ ಕಾರಣದಿಂದ ಕಡಿಮೆ
ಹಿನ್ನೆಲೆ ಶ್ರೀಮಂತ ಪ್ರೌಢ ರೂಪಸಿಯರು
ಮನೆಗೆ ಬೇಕಾದಷ್ಟು ದುಡಿಮೆ                                        12

ತಾವೆಲ್ಲ ಮಲಗಿದ್ದು ತಾಯಿಯ ಮಡಿಲಲ್ಲಿ,
ಗುಟುಕಿಂದ ತುಂಬಿತ್ತು ಒಡಲು
ಗಾಯಕೆ ತಾಯಿಯ ಮಮತೆಯ ಲೇಪನ,
ಕಲಿಸಿದ್ದು ಆಕೆಯೆ ತೊದಲು                                         13

ತಮ್ಮ ತಾಯಂದಿರ ಕೋಣೆಗಳಲ್ಲಿಯು
ಉತ್ತರೆಯ ಪಾರುಪತ್ಯ;
ಎಲ್ಲರರ ಮೇಲೆಯು ಅವಳ ಮೈನೆರಳು
ಇತರರ ಸ್ವಂತಿಕೆ ಹತ್ಯ                                              14

ಇಷ್ಟಾದರೂ ತಮ್ಮ ತಂದೆಯಾಗಿದ್ದಾನೆ
ಏತಕೆ ಉತ್ತಾನಪಾದ?
ಧ್ರುವನಂತೆ ಆತ್ಮಶಕ್ತಿಯ ತೋರಿಸುತ್ತೇವೆ
ಬಂದರೆ ಬರಲಪವಾದ                                             15

        ಸಿಡುಕು ಸೆಡವುಗಳು ಹೊಡೆದಾಟ ಬೈದಾಟ
ಒಳಗುದಿ ಬೆಳೆದಂತೆ ಛಲವು;
ತಂದೆಗೆ ಎದುರಾಗಿ ಬೀರುವ ಕಡುನೋಟ
ಎಲ್ಲಿ ಹೋಯಿತು ಮಕ್ಕಳೊಲವು?                                     16

ಕಳಚಿ ಬಿದ್ದೀತೆಂದು ಚಕ್ರಕ್ಕೆ ಇಡುವರು
ಕಾಲಿಗಿಕ್ಕುವರೆ ಕಡಾಣಿ?
ತನ್ನ ಕಾಲುಗಳಿಂದ ಅವಳಂತೆ ನಡೆವರೆ
ಹೇಳುವಳೆಂದು ಮಹಾರಾಣಿ!                                        17

ನಾವೇನು ಮಕ್ಕಳೆ ಮೈ ಮನ ಪಟುವಾಗಿ
ಬೆಳೆದಿರುವೆವು ಹಿಂದಿಗಿಂತ;
ನಮ್ಮ ತಾಯಂದಿರು ಈ ಮನೆ ತುಂಬಲು
ಆದನು ತಂದೆ ಶ್ರೀಮಂತ                                           18

ಅಕ್ಕಿ ಕೊಟ್ಟೂ ಎಂಜಲುಣ್ಣುವ ಈ ರೀತಿ
ತಮಗೇಕೆ ಎರಡನೆ ಜಾಗ,
ತಂದೆಗಿಂತಲು ಬೇಕು ನಮಗೆ ತಾಯಿಯ ಪ್ರೀತಿ
ದೂರ ಸರಿಯುತ್ತೇವೆ ಬೇಗ!                                         19

ಮನೆಯಲ್ಲಿ ಮಕ್ಕಳ ರಾದ್ಧಾಂತವಾಗಲು
ತಂದೆಗೆ ಯೋಚನೆಯಾಯ್ತು
ಸಿದ್ಧಾಂತದ ಅಂಟು ಒಂದುಗೂಡಿಸುವುದೆ
ಒಡೆದ ಮನಸ್ಸುಗಳನ್ನು?                                            20

ಕಿರಿಯರಿಗಿತ್ತರೆ ಸಲಿಗೆ ಕೆಟ್ಟಾರೆಂದು
ಭರತಪ್ಪನ ಕೈಯ ಬಿಗಿತ
ತಲೆಯು ಚಿಟ್ಟೆನ್ನುತ ಹಿಡಿದ ಕೈಯೇ ನೊಂದು
ಸಡಿಲವು ಮನೆಯಾಡಳಿತ                                           21

ಹಿಂದೊಮ್ಮೆ ಮನೆತನವೊಡೆದದ್ದು ನೆನಪಲ್ಲಿ
ಬೇರೆಯಾದದ್ದು ದಾಯಾದಿ;
ಮಕ್ಕಳ ಮುನಿಸಿಂದ ತನ್ನ ಕಣ್ಣೆದುರಲ್ಲಿ
ಬಂದೀತು ಮತ್ತೊಂದು ಸರದಿ                                        22

ಹೆದರಿಕೆಯೀ ರೀತಿ ಕಾಡಲು ತಂದೆಗೆ
ನಿದ್ದೆಯಿರದ ರಾತ್ರಿಗಳು,
ಮಂಪರೇರಲು ಇದ್ದಕಿದ್ದಂತೆ ಎಚ್ಚರ
ಕಡಿದು ನೆಮ್ಮದಿಯ ಸೂತ್ರಗಳು!                                       23

ಒಬ್ಬ ಗಂಡಸಿಗೊಬ್ಬಳೇ ಹೆಂಡಿರಾದರೆ
ಉಳಿವುದು ಸುಖದಾಂಪತ್ಯ;
ಹುಟ್ಟಿದ ಮಕ್ಕಳು ಒಗ್ಗೂಡಿ ಬೆಳೆದರೆ
ಆಗ ಸಂಸಾರ ಸಾಂಗತ್ಯ                                             24

ಎಲ್ಲ ಮಕ್ಕಳು ಮನೆ ವಾರಸುದಾರರು
ಅವರಿಗೆ ಸಮಸಮ ಹಕ್ಕು;
ತಂದೆಪ್ರೀತಿಯು ಎಲ್ಲ ಸುತರಿಗೆ, ಸೂರ್ಯನು
ಬೆಳಗಿಸಿದಂತೆಲ್ಲ ದಿಕ್ಕು                                              25

ಈ ಮನೆಯುಳಿಯಲು ಇರುವುದೊಂದೇ ದಾರಿ
ಎಲ್ಲರಿಗೂ ಹೊಣೆ ಹಂಚಿ
ಮಕ್ಕಳೆಲ್ಲರು ಸಮನಾಗಿ ಬಾಧ್ಯಸ್ಥರು
ಬಳಸಲಿ ಹೊನ್ನಿನ ಸಂಚಿ                                            26

ಇಲ್ಲದಿದ್ದರೆ ಮನೆಯೊಡೆದೀತು, ಬಿಟ್ಟೀತು
ಮನೆಯ ಗೋಡೆಗಳಲ್ಲಿ ಬಿರುಕು;
ಸೋರೀತು ಸೂರು, ಮುರಿದೀತು ಬಾಗಿಲು-
ಒಡೆಯುವ ಗತಿ ಸದಾ ಚುರುಕು                                      27

ಬಂದೀತೆ ಬುದ್ಧಿಯು ವಾಸ್ತವ ಪ್ರಜ್ಞೆಯು
ಕಣ್ಣಿನ ಪೊರೆ ಹರಿದೀತೆ;
ನಿಂತೀತೆ ಕಪಿಮುಷ್ಟಿ, ಹೆಬ್ಬೆಟ್ಟಿನಾಜ್ಞೆಯು
ಮನೆಯ ಗೌರವ ಉಳಿದೀತೆ?                                       28

ಊರಿನ ಹಿರಿಯರ ಹಿತನುಡಿಗಳಿಗೆ
ಭರತಪ್ಪನ ಕಿವಿ ಮಂದ;
ತಲೆತಾಕಲು ಬುದ್ಧಿ ಬರುವುದು ಬಾಳಿಗೆ
ಕೊನೆಯೆಂದೊ ಈ ಸುಳಿಯಿಂದ!                                     29


-0-0-0-0-0-






       

No comments: