ಕನ್ನಡ ರಾಷ್ಟ್ರೀಯತೆ
ನಮ್ಮ ನಾಡಿನಲ್ಲಿಯೇ ಕನ್ನಡ ಮೂರನೇ
ದರ್ಜೆಗಿಳಿದಿದೆ; ಅಥವಾ ಏರಿದೆ! ನಮ್ಮ ಜನರೆಲ್ಲ ಗಡಿ ದಾಟಿ ಜಗತ್ತನ್ನು ಗೆಲ್ಲಲು ಇಂಗ್ಲಿಷ್ ಎಂಬ
ವಿಮಾನವನ್ನೇರಲು ತವಕಿಸುತ್ತಾರೆ; ಸ್ವಲ್ಪ ಕಡಿಮೆ ಎನಿಸಿದವರು ರಾಷ್ಟ್ರೀಯ ಮಟ್ಟಕ್ಕೇರಲು ಹಿಂದಿಯ
ರೈಲು ಹತ್ತುತ್ತಿದ್ದಾರೆ. ಮೊದಲ ರೀತಿಯವರಿಗೆ ನಮ್ಮ ರೊಟ್ಟಿ ಬೇಡ; ಅವರಿಗೆ ರುಚಿಸುವುದು ಪಿಜ್ಜ;
ಎರಡನೆಯವರಿಗೆ ರೋಟಿ. ಕುವೆಂಪು ಅವರು ಇಂಗ್ಲಿಷಷ್ ಎಂಬ ಪೂತನಿಯಿಂದ ಪಾರುಮಾಡಲು ದೇವರನ್ನು ಪ್ರಾರ್ಥಿಸುತ್ತಾರೆ; "ಉತ್ತರದ
ಗಂಗೆಯಲಿ ಕತ್ತೆ ಮಿಂತರಲು ದಕ್ಷಿಣದ ದೇಶಕದು ಕುದುರೆಯಹುದೇ?" ಎಂದು ಹಿಂದಿಯನ್ನು ಕುರಿತು ವ್ಯಂಗ್ಯವಾಡುತ್ತಾರೆ.
ಅವರ ಶತಮಾನೋತ್ಸವವನ್ನು ಆಚರಿಸುವ ನಾವು ಈ ವಿವೇಕವನ್ನು ಮಾತ್ರ ಮೈಗೂಡಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ.
ನಾವೇ ನಮ್ಮನ್ನು ಮೂರನೇ ದರ್ಜೆಗೆ ಇಳಿಸಿಕೊಂಡಿದ್ದೇವೆ. ಇದನ್ನು ಎದುರಿಸಲು ಇರುವ ಏಕೈಕ ದಾರಿಯೆಂದರೆ
ನಮ್ಮತನವನ್ನು ಬೆಳಗಿ ತೋರಿಸುವುದು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಸ್ವದೇಶೀ ಪ್ರಿಯರು ಮಾಡಿದ್ದು
ಪರಕೀಯವಾದುದರ ಎದುರು ನಮ್ಮದರ ಹಿರಿಮೆಯನ್ನು ಎತ್ತಿ ತೋರಿದ್ದು. ಈ ಸಂದಿಗ್ಧ ಸ್ಥಿತಿಯಲ್ಲಿ ನಾವು
ಮಾಡಬೇಕಾಗಿರುವುದು ಅದನ್ನೇ.
ಈಗ ನಾವು ಎದುರಿಸುತ್ತಿರುವುದು ಇರ್ಬಾಯ ಕತ್ತಿಯನ್ನು; ಜಾಗತೀಕರಣ
ಮತ್ತು ಸುಳ್ಳು ರಾಷ್ಟ್ರೀಯತೆ ಎಂಬವು. ನಮ್ಮತನ ಈ ಎರಡೂ ದ್ರಾವಕಗಳಲ್ಲಿ ಕರಗಿ ಹೋಗುತ್ತಿದೆ. ಜಾಗತೀಕರಣವೆಂದರೆ
ಅಮೆರಿಕೀಕರಣ; ಅಮೆರಿಕವು ಊರಗೌಡನಂತೆ ಜಗತ್ತಿನ ಎಲ್ಲ ದೇಶಗಳ ಮೇಲೆ ಹಿಡಿತ ಸಾಧಿಸಲು ಹುನ್ನಾರ ಮಾಡುತ್ತಿದ್ದರೆ,
ಉತ್ತರ ಭಾರತ ಈ ಉಪಖಂಡದ ವೈವಿಧ್ಯವನ್ನು ಹಿಂದಿ ಎಂಬ ನೀರನ್ನು ಚಿಮುಕಿಸಿ ಇಸ್ತ್ರಿ ಮಾಡಲು ರಾಷ್ಟ್ರೀಯತೆಯ
ಬಿಸಿಯನ್ನು ಹೆಚ್ಚಿಸುತ್ತಿದೆ. ಜಾಗತೀಕರಣದ ವಿಷವರ್ತುಲದಿಂದ ಪಾರಾಗುವುದು ಎಷ್ಟು ಜರೂರೋ ಅಷ್ಟೇ ತುರ್ತಿನಿಂದ
ಸುಳ್ಳು ಭಾರತೀಯ ರಾಷ್ಟ್ರೀಯತೆಯಿಂದಲೂ ನಾವು ಬಿಡುಗಡೆಗೊಳ್ಳಬೇಕಾಗಿದೆ. ವಿದೇಶಿ ಆಳ್ವಿಕೆಯನ್ನು ವಿರೋಧಿಸುವಾಗ
ಬ್ರಿಟಿಷರು ಆಕ್ರಮಿಸಿಕೊಂಡಿದ್ದ ಉಪಖಂಡವನ್ನು ಒಂದು ದೇಶ ಎಂದು ಬಿಂಬಿಸಲಾಯಿತು. ಆದರೆ ಇದೆಲ್ಲ ಎಂದೂ
ಒಂದಾಗಿರಲಿಲ್ಲ; ಅಥವಾ ಒಂದು ನಾಡು ಎಂಬ ಕಲ್ಪನೆಯೂ ಇರಲಿಲ್ಲ.
ಭರತಖಂಡ ಎಂಬುದು ಜಂಬೂದ್ವೀಪದ ಒಂದು ಭಾಗವೆಂಬ ಕಲ್ಪನೆಯಿತ್ತು;
ಆದರೆ ಇದು ಭೂಭಾಗವನ್ನು ಗುರುತಿಸಲು ಮಾಡಿದ ಪ್ರಯತ್ನವೇ ಹೊರತು, ಒಂದು ಘಟಕ ಎಂದು ಸೂಚಿಸುವುದಕ್ಕಲ್ಲ.
ನನಗೆ ತಿಳಿದ ಮಟ್ಟಿಗೆ ನಮ್ಮ ಪುರಾಣಗಳಲ್ಲಿ ಮೂವರು ಭರತರಿದ್ದಾರೆ: ರಾಮಾಯಣದ ಶ್ರೀರಾಮನ ತಮ್ಮ; ದುಷ್ಯಂತ-ಶಕುಂತಲೆಯರ
ಮಗ; ಮತ್ತು ಜೈನರ ಆದಿ ತೀರ್ಥಂಕರನಾದ ಪುರುದೇವನ ಮಗ. ಈ ಯಾರಿಂದಾಗಿ ಈ ನಾಡಿಗೆ ಭಾರತ ಎಂಬ ಹೆಸರು
ಬಂತೋ ಗೊತ್ತಿಲ್ಲ. ಹಿಂದೂ ಎಂಬ ಮಾತು ಸಿಂಧೂ ಎಂಬುದರ ವ್ಯತ್ಯಸ್ತ ರೂಪವಾಗಿ ಪರಕೀಯರು ಬಳಸಿದಂತೆಯೇ,
ಭಾರತ (ಬ್ರಿಟಿಷ್ ಆಳ್ವಿಕೆಯ ಉಪಖಂಡ ಎಂಬರ್ಥದಲ್ಲಿ) ಎಂಬ ಮಾತನ್ನೂ ಬಳಸಿದಂತಿದೆ.
ಕನ್ನಡ ನಾಡನ್ನು ಹಿಂದೆಂದೂ ಭಾರತದ ಒಂದು ಭಾಗವೆಂಬಂತೆ ಕಂಡಿರಲಿಲ್ಲ.
ಕನ್ನಡದ ಆದ್ಯ ಕೃತಿ 'ಕವಿರಾಜಮಾರ್ಗ'ದ ಪ್ರಸಿದ್ಧ ಪದ್ಯವನ್ನು ಪರಿಶೀಲಿಸಿ: "ಕಾವೇರಿಯಿಂದಮಾ
ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯವಿಲೀನ ವಿಶದವಿಷಯವಿಶೇಷಂ".
ಇಲ್ಲಿ ಹೇಳಿದ ನಮ್ಮ ನಾಡಿನ ಗಡಿಯನ್ನು ನಾನು ಪ್ರಸ್ತಾಪಿಸುತ್ತಿಲ್ಲ. ಪದ್ಯದ ಉತ್ತರಾರ್ಧವನ್ನು ಗಮನಿಸಿ;
ಕನ್ನಡ ಎಂಬುದು ಇಡೀ ವಸುಧಾವಲಯದಲ್ಲಿ ಸೇರಿರುವ ವಿಶದವೂ ವಿಶೇಷವೂ ಆದ ನಾಡು ಎಂದು ಕವಿ ಬಣ್ಣಿಸಿದ್ದಾನೆ.
ಆಂಡಯ್ಯ ಎಂಬ ಹದಿಮೂರನೇ ಶತಮಾನದ ಕವಿ ತನ್ನ 'ಕಬ್ಬಿಗರ ಕಾವ'ದಲ್ಲಿ "ಕನ್ನಡಮೆನಿಪ್ಪಾ ನಾಡು
ಚೆಲ್ವಾಯ್ತು" ಎನ್ನುತ್ತಾನೆ. 'ಕುಮಾರರಾಮ ಸಾಂಗತ್ಯ' ವನ್ನು ಬರೆದ ಹದಿನಾರನೆಯ ಶತಕದ ನಂಜುಂಡನೂ
ಕವಿರಾಜಮಾರ್ಗಕಾರನನ್ನೇ ಅನುಸರಿಸಿ "ಕಾವೇರಿಯಿಂದ ಗೋದಾವರಿವರೆಗಮಿರ್ದಾ ವಸುಧಾತಳವಳಯ ಭಾವಿಸೆ
ಕರ್ನಾಟ ಜನಪದವನಾವನೊಲಿದು ಬಣ್ಣಿಸುವನು" ಎನ್ನುತ್ತಾನೆ. ಇಲ್ಲಿ ನಾಡನ್ನು 'ಕನ್ನಡ' ಎಂಬುದರ
ಬದಲು 'ಕರ್ನಾಟ' ಎಂದು ಕರೆದಿದೆ. ನಾವು ಪ್ರಾಥಮಿಕ ಶಾಲೆಯಲ್ಲಿ ಓದಿದ್ದ 'ಗೋವಿನ ಕಥೆ'ಯ ಮೊದಲನೇ ಪದ್ಯವೇ
"ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳ್" ಎಂದಿದೆ. ಇಲ್ಲೆಲ್ಲ ಕರ್ನಾಟಕವನ್ನು
ಜಗತ್ತಿನ ಭಾಗವಾಗಿ ಪರಿಭಾವಿಸಲಾಗಿದೆಯೇ ವಿನಾ ಭಾರತದ ಭಾಗವಾಗಿ ಅಲ್ಲ, ಹಾಗಾಗಿರುವುದು ಈಚೆಗೆ, ಬ್ರಿಟಿಷರ
ನಂತರ.
ಎಂದರೆ ಈಗಿನ ಭಾರತ ಒಂದು ಟಕವಲ್ಲ; ಅನೇಕ ಸ್ವತಂತ್ರ ಟಕಗಳ ಸಮುದಾಯ,
ಒಕ್ಕೂಟ. ಭಾರತದ ಸಂವಿಧಾನದ ಮೊದಲ ಆಧ್ಯಾಯದ ಮೊದಲ ವಾಕ್ಯವೇ "India, that is Bharhat,
shall be a Union of States" ಎಂದಿದೆ. ಈ ಸೇರುವಿಕೆ ಸೋವಿಯತ್ ಒಕ್ಕೂಟದಲ್ಲಿದ್ದ
ತರಹದ್ದು; ವಿಶೇಷ ಸನ್ನಿವೇಶದಲ್ಲಿ ಒಂದಾದ ವಿವಿಧ ಸ್ವತಂತ್ರ ಟಕಗಳ ಒಕ್ಕೂಟ. ಅಂದರೆ ಕನ್ನಡ, ತಮಿಳು,
ತೆಲುಗು, ಬಂಗಾಳಿ, ಮರಾಠಿ ಮುಂತಾದ ಭಾಷಿಕ ವಲಯಗಳದ್ದು ನಿಜವಾದ ರಾಷ್ಟ್ರೀಯತೆ. ಭಾರತ ಏಕವಲ್ಲ, ಅನೇಕಗಳ
ಸೇರುವಿಕೆ. ಇದರ ಭೌತಿಕ ಸ್ವರೂಪ ವ್ಯತ್ಯಾಸಗೊಳ್ಳುವಂಥದು; ಸ್ವಾತಂತ್ರ್ಯಪೂರ್ವದಲ್ಲಿ "ಅಖಂಡ
ಭಾರತ"ದ ಕಲ್ಪನೆಯಿತ್ತು, ಆನಂತರದ ಭಾರತ ಬದಲಾಗಿದೆಯಲ್ಲ, ಹಾಗೆ.
ಒಕ್ಕೂಟದಲ್ಲಿ ವಿವಿಧ ಘಟಕಗಳ ಸ್ವಂತಿಕೆಗೆ ಮಾನ್ಯತೆಯಿರಬೇಕು;
ಅವುಗಳ ನಡುವೆ ಸಮಾನತೆ ಇರಬೇಕು. ಭಾರತವು ನಿಜವಾದ ಒಕ್ಕೂಟದ ಸ್ವರೂಪವನ್ನು ಪಡೆದಾಗ ಮಾತ್ರ ವಿವಿಧ
ಘಟಕಗಳ ನಡುವೆ ಸಮತೋಲನ-ಸಾಮರಸ್ಯಗಳು ಸಾಧ್ಯ. ಅದಕ್ಕೆ ಆವಶ್ಯಕವಾದದ್ದು ಅಧಿಕಾರ ವಿಕೇಂದ್ರೀಕರಣ; ಕೇಂದ್ರಕ್ಕೆ
ಇಡೀ ಭಾರತವ್ಯಾಪೀ ವಿಷಯಗಳ ಬಗ್ಗೆ ಮಾತ್ರ ಅಧಿಕಾರವಿರಬೇಕು; ಮಿಕ್ಕವೆಲ್ಲ ಕನ್ನಡ, ತಮಿಳು, ಬಂಗಾಳಿ
ಮುಂತಾದ ವಿವಿಧ ರಾಷ್ಟ್ರೀಯತೆಗಳಿಗೆ ದತ್ತವಾಗಬೇಕು. ಈ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನವಿರಬೇಕು; ಆಗ
ಆಯಾ ಭಾಷಿಕ ಜನರ ಸಮಾನ ಏಳಿಗೆಯೂ ಸಾಧ್ಯ. ಹೀಗಾಗಿ ನಾವು ಮಾಡಬೇಕಾಗಿರುವುದು ಈ "ಕನ್ನಡ ಪ್ರಜ್ಞೆ"ಯನ್ನು
ಬೆಳಗಿಸುವುದನ್ನು; ಕನ್ನಡ ರಾಷ್ಟ್ರೀಯತೆಯ ಸ್ವರೂಪವನ್ನು ಬಿತ್ತರಗೊಳಿಸುವುದನ್ನು. ಇದು ಕನ್ನಡಕ್ಕೆ
ಮಾತ್ರ ಸೀಮಿತವಾದದ್ದಲ್ಲ; ಈ ಒಕ್ಕೂಟದ ಎಲ್ಲ ಭಾಷಿಕ ರಾಷ್ಟ್ರೀಯತೆಗಳಿಗೂ ಈ ಮಾತು ಅನ್ವಯವಾಗುತ್ತದೆ.
ರಾಷ್ಟ್ರೀಯ ಪ್ರಜ್ಞೆಯುಳ್ಳ ಪ್ರಜ್ಞಾವಂತ ಜನರೆಲ್ಲ ಈ ದಿಸೆಯಲ್ಲಿ ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕಾದುದು
ಆವಶ್ಯಕವಾಗಿದೆ. ಕನ್ನಡ ಚಳವಳಿ ಇದನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳಬೇಕಿದೆ; ಆಗ ಮಾತ್ರ ಅದಕ್ಕೊಂದು
ಗಟ್ಟಿಯಾದ ತಾತ್ವಿಕ ನೆಲಗಟ್ಟು ದೊರೆಯುತ್ತದೆ.
-0-0-0-0-
No comments:
Post a Comment