Saturday 2 November 2013

ಆಧ್ಯಾತ್ಮಿಕತೆ

ಈಚೆಗೆ 'ಗುರುಗಳ" ಹಾವಳಿ ಹೆಚ್ಚುತ್ತಿದೆ; ಎಲ್ಲ ಮಾಧ್ಯಮಗಳಲ್ಲೂ ಅವರೇ ವಿಜೃಂಭಿಸುತ್ತಿದ್ದಾರೆ. ತಾವು ಮೋಕ್ಷದ ದಾರಿಯನ್ನು ತೋರಿಸುವೆವೆಂದು ಹೇಳಿಕೊಂಡು ಸಮಾಜವನ್ನು ಲೂಟಿ ಮಾಡುತ್ತಿದ್ದಾರೆ. ಎಷ್ಟೋ ಇಂಥ 'ಗುರುಗಳ' ನಾನಾ ಬಗೆಯ ಅನೈತಿಕತೆಯ ಬಗ್ಗೆ ಇದೇ ಮಾಧ್ಯಮಗಳು ಎತ್ತಿ ತೋರಿಸಿದ್ದರೂ ಅವರನ್ನು ಏನೂ ಮಾಡಲಾಗುತ್ತಿಲ್ಲ; ಬದಲಾಗಿ ಅವರ ಪ್ರಭಾವ ಻ಷ್ಟರ ಮಟ್ಟಿಗೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ತಮ್ಮ ಆಧ್ಯಾತ್ಮಿಕ ಉನ್ನತಿಗೆ ಇವರು ಕಾರಣರೆಂಬ ಜನರ ಭ್ರಮೆ. ಸಾಮಾನ್ಯರು ತಮ್ಮ 'ಬುದ್ಧಿ'ಯನ್ನು ಬಳಸಿಕೊಂಡು ಸೃಷ್ಟಿಯ ನಿಗೂಢತೆಯ ಬಗ್ಗೆ  ಒಂದು ನಿಲವಿಗೆ ಬರುವುದು ಸಮಂಜಸವಾದುದು. ಇದನ್ನೇ ಬುದ್ಧ ಹೇಳಿದುದು

ಆಧ್ಯಾತ್ಮಿಕತೆ
                                                                    
ಮನುಷ್ಯನ ವ್ಯಕ್ತಿತ್ವದಲ್ಲಿ ಎರಡು ಮುಖ್ಯ ವಲಯಗಳಿವೆ: ಪಂಚೇಂದ್ರಿಯಗಳ ಮೂಲಕ ಗಮ್ಯವಾಗುವ, ಮತ್ತು ಮೂಲಕ ಮನಸ್ಸಿನಲ್ಲಿ ಒಂದು ನಿಲವನ್ನು ತಳೆಯುವುದು ಮೊದಲನೆಯದಾದರೆ; ಎರಡನೆಯದು, ತರ್ಕಕ್ಕೆ ಸಿಕ್ಕದ, ಕೇವಲ ಅನುಭವಗಮ್ಯವಾದ ವಲಯ. ಒಂದನ್ನು ಆಧಿಭೌತಿಕ ಮತ್ತೊಂದನ್ನು ಆಧ್ಯಾತ್ಮಿಕ ಎಂದು ಬೇಕಾದರೆ ಕರೆಯಬಹುದು. ಇಂದ್ರಿಯಾನುಭವಗಳನ್ನೂ ಮನುಷ್ಯ ಬುದ್ಧಿಯ ನೆರವಿನಿಂದ ನಿಶ್ಚಿತಜ್ಞಾನವನ್ನಾಗಿ ಮಾಡಿಕೊಂಡು ತನ್ನ ಅರಿವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದಲೇ ವಿಜ್ಞಾನ-ತಂತ್ರಜ್ಞಾನಗಳು ತಮ್ಮ ಪರಿಧಿಯನ್ನು ನಿರಂತರವಾಗಿ ವಿಸ್ತರಿಸಿಕೊಳ್ಳುತ್ತಿವೆ. ಆದರೆ ಆಧ್ಯಾತ್ಮಿಕತೆ ಎಂಬುದರ ಸ್ವರೂಪವೇನು ಎಂಬುದನ್ನು ಖಚಿತವಾಗಿ ನಿರ್ವಚಿಸಲು ಸಾಧ್ಯವಿಲ್ಲ
ವಿಜ್ಞಾನಗಳು ತಾರ್ಕಿಕತೆಯನ್ನು ಅನುಸರಿಸಿ ಪ್ರತಿಪಾದಿಸುವ ದಾರಿಯನ್ನನುಸರಿಸುವ ಕಾರಣದಿಂದ ಅಂತಿಮವಾಗಿ ತಲುಪುವ ನಿಲವು ದಾರಿಯನ್ನು ಹಿಡಿಯುವ ಯಾರಿಗಾದರೂ ಸಾಧ್ಯ. ಹೀಗಾಗಿಯೇ ಅದು ಸಾರ್ವತ್ರಿಕವಾಗುವುದು. ಹೊರಡುವ ಬಿಂದುವಿನ ಕಾರಣದಿಂದಲೋ, ಅನುಸರಿಸುವ ಮಾರ್ಗದ ಅಲ್ಪಭಿನ್ನತೆಯಿಂದಲೋ ಅದರ ನಿಲವುಗಳು ಬದಲಾವಣೆಗೊಳ್ಳುವುದು ಸಹಜ; ಆದರೆ ಸಮರ್ಪಕ ಪ್ರತಿಪಾದನೆಯಿಂದ ಅದು ಒಪ್ಪಿತಗೊಳ್ಳುತ್ತದೆ, ಆದ್ದರಿಂದಲೇ ವಿಜ್ಞಾನದ ಸಿದ್ಧಾಂತಗಳು ಬದಲಾವಣೆಗೊಳ್ಳುತ್ತವೆ. ಮುಕ್ತತೆ, ಅಂದರೆ ಒಂದು ನಿಲವು ಅದಕ್ಕಿಂತ ಮತ್ತಷ್ಟು ಸಪರ್ಮಕವಾದ ಇನ್ನೊಂದು ನಿಲವು ಪ್ರತಿಪಾದಿತವಾಗುವವರೆಗೆ ಮಾತ್ರ ಸತ್ಯ ಎಂದು ಒಪ್ಪಿಕೊಳ್ಳುವ ಮುಕ್ತತೆ ವಿಜ್ಞಾನದ ಅತ್ಯಂತ ಮುಖ್ಯವಾದ ಗುಣ. ಇದರಿಂದಾಗಿ ಅಲ್ಲಿ ಒಪ್ಪುವ ಮತ್ತು ಒಪ್ಪಿಸುವ ಸಾಧ್ಯತೆ ಇದೆ.
ಆದರೆ ಆಧ್ಯಾತ್ಮಿಕತೆಯ ಪರಿ ಬೇರೆ. ಅದು ಕೇವಲ ಅನುಭವಜನ್ಯ ಸಂಗತಿಗಳನ್ನು ಕುರಿತು ಮಾತ್ರ ತನ್ನ ವಲಯದಲ್ಲಿ ಹೊಂದಿರುವಂಥದು. ಅಲ್ಲಿಯೂ ತರ್ಕ ಇದೆಯೆಂಬ ಭ್ರಮೆ ಕೆಲವು ವೇಳೆ ಉಂಟಾಗಬಹುದಾದರೂ, ಅದು ಹೊರಡುವುದು ನಂಬಿಕೆಯನ್ನೇ ಆಧರಿಸಿದ ಒಂದು ಬಿಂದುವಿನಿಂದ. ಹೀಗಾಗಿ ಅಲ್ಲಿ ನಂಬುವುದೇ ಮುಖ್ಯ. ನಂಬಿಕೆ ಜರುಗಿದರೆ ಇಡೀ ಸೌಧ ಕುಸಿಯುತ್ತದೆ. ವಿಜ್ಞಾನಕ್ಕೂ ನಿಲುಕದ ಅನೇಕ ಅನುಭವಗಳು ಇರುವುದರಿಂದ ಆಧ್ಯಾತ್ಮಿಕತೆ ಎಂಬುದು ಗುಮ್ಮವನ್ನು ಸೃಷ್ಟಿಸುತ್ತದೆ. ತಾವೇ ಒಂದು ನಿಲವಿಗೆ ಬರಲಾರದ ಜನರು ಬೇರಾವನೋ ಗೌರವಾರ್ಹನೆಂದು ಭಾವಿಸಲಾದವನನ್ನು ಅನುಸರಿಸುತ್ತಾರೆ. ಬದುಕಿನ ನಿಗೂಢಗಳು ಉಂಟುಮಾಡುವ ಭಯದ ಕಾರಣದಿಂದ ನಂಬಿಕೆ ಬಲವಾಗುತ್ತದೆ. ನಂಬಿಕೆಯ ಹುಲ್ಲುಕಡ್ಡಿಯನ್ನಾಧರಿಸಿ ಭಯವನ್ನು ಸಾಂತ್ವನಗೊಳಿಸಿಕೊಳ್ಳುವ ಪರಿಪಾಟ ಬೆಳೆಯುತ್ತದೆ. ಇದರಿಂದಾಗಿ ಸಾಮಾನ್ಯರಲ್ಲಿ ಬದುಕಿನ ನಿಗೂಢಗಳ ಬಗ್ಗೆ ಆಸಕ್ತಿ ತಾಳುವಂತೆ ಮಾಡಿ ಚಿಂತಿಸುವಂತೆ ಮಾಡುವ ಬದಲು ಭಯ ಸೃಷ್ಟಿಸಿ ಅಥವಾ ಭಯದ ವಾತಾವರಣವನ್ನುಂಟುಮಾಡಿ, ಅದರ ನಿವಾರಣೆಗೆ ತಾವು ಹೇಳುವ ಮಾರ್ಗಗಳ ಬಗ್ಗೆ ನಂಬಿಕೆಯುಂಟುಮಾಡುವ ದಂಧೆ ನಿರಂತದವಾಗಿ ನಡೆಯುತ್ತಲೇ ಬಂದಿದೆ.
ವಿಜ್ಞಾನದಿಂದ ಸಕಲವನ್ನೂ ವಿವರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ವೈಜ್ಞಾನಿಕತೆಯನ್ನು ನಿರಾಕರಿಸುವಂತೆ ಮಾಡಿ, ಜನ ಮೌಢ್ಯಮೂಲವಾದ ನಂಬಿಕೆಯನ್ನಾಧರಿಸುವಂತೆ ಮಾಡುವ ಕಾರ್ಯ ಕ್ರೂರವಾದದ್ದು. ತರ್ಕಾತೀತವಾದುದರ ಬಗ್ಗೆ ಚಿಂತಿಸಿ, ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಒಂದು ವೈಯಕ್ತಿಕ ನಿಲವನ್ನು ತಲುಪುವುದು ಸಮಂಜಸವಾದ ಆಧ್ಯಾತ್ಮಿಕ ಮಾರ್ಗ ಎಂಬುದು ನನ್ನ ಅನಿಸಿಕೆ. ಅದು ಇನ್ನೊಬ್ಬರ ಅನುಕರಣೆಯಿಂದಲೋ ಅನುಸರಣೆಯಿಂದಲೋ ಅಸಾಧ್ಯ. ಆದರೆ ವಾಸ್ತವತೆ ಅದಕ್ಕೆ ತದ್ವಿರುದ್ಧವಾಗಿದೆ. ಅಧ್ಯಾತ್ಮಿಕತೆಯ ಹೆಸರಿನಲ್ಲಿ ಚಿಂತನೆಯ ಪ್ರವೃತ್ತಿಯನ್ನು ಹಾಳುಮಾಡಿ ಜನ ತಮ್ಮನ್ನು ಹಿಂಬಾಲಿಸುವಂತೆ ಮಾಡುವ ಮೋಸಗಾರಿಕೆಯೇ `ಆಧ್ಯಾತ್ಮಿಕ ಗುರು'ಗಳೆನ್ನಿಸಿಕೊಂಡ ಹಲವರು ಮಾಡಿಕೊಂಡು ಬಂದಿರುವ ಕಾರ್ಯ. ಹೀಗಾಗಿಯೇ ಕ್ಷೇತ್ರದಲ್ಲಿ ನಡೆಯುವಷ್ಟು ಮೊಸಕಾರ್ಯಗಳು ವ್ಯಾಪಾರದ ಕ್ಷೇತ್ರದಲ್ಲಿಯೂ ನಡೆಯಲಾರವು. ಆಧ್ಯಾತ್ಮಿಕತೆಯನ್ನು ಪುಣ್ಯಪಾಪಗಳ ಜಿಜ್ಞಾಸೆಯನ್ನಾಗಿ ಮಾಡಿ, ಹೀಗೆ ಮಾಡುವುದು ಪುಣ್ಯ, ಹಾಗೆ ಮಾಡುವುದು ಪಾಪ ಎಂದು ಬೋಧನೆ ಮಾಡುತ್ತ, ಗುರುಗಳು ಜನರಲ್ಲಿ ಬದುಕಿನಿಂದ ವಿಮುಖಗೊಳ್ಳುವ ಪ್ರವೃತ್ತಿಯನ್ನು ಹೆಚ್ಚಿಸುತ್ತ, ಅಥವಾ ಇಲ್ಲಿನ ಬದುಕಿನ ಋಜುತ್ವಕ್ಕಿಂತ ಇನ್ನೊಂದು ಲೋಕದ ಸುಖದ ಬಗ್ಗೆ ಇಲ್ಲಸಲ್ಲದ್ದನ್ನು ಬಿತ್ತುತ್ತ, ಅದರ ಲಾಭವನ್ನು ತಾವು ಪಡೆಯುತ್ತಾರೆ. ಬರಿ ಇಷ್ಟೇ ಅದರೆ ಅದೊಂದು ಬಗೆ. ಇದರೊಡನೆ, ಪುಣ್ಯಪಾಪಗಳ ನಿರ್ವಚನದ ಹಿನ್ನೆಲೆಯಲ್ಲಿ, ಪಾಪಗಳನ್ನು ಪುಣ್ಯಗಳನ್ನಾಗಿಸಿಕೊಳ್ಳುವ ಅಪಮಾರ್ಗಗಳನ್ನು ಅನುಸರಿಸಲೂ ಬೋಧನೆ ಮಾಡುತ್ತಾರೆ. ತನ್ನ ಅಪಕಾರ್ಯದ ಫಲವನ್ನು ನಿವಾರಿಸಿಕೊಳ್ಳಲು ಪುಣ್ಯಕಾರ್ಯವೆಂಬ ಮತ್ತೊಂದು ಘೋರ ಅಪಕಾರ್ಯ ನಡೆಸಲು ಉತ್ತೇಜಿಸಿ ಪರಂಪರೆ ಮುಂದುವರೆಯಲು ಗುರುಗಳು ಕಾರಣರಾಗುತ್ತಾರೆ.
ಮನುಷ್ಯನ ಎಲ್ಲ ಆನುಭವಿಕ ಆವಶ್ಯಕತೆಗಳಿಗೂ ವಿಜ್ಞಾನದಲ್ಲಿ ಉತ್ತರವಿಲ್ಲ ಎಂಬುದು ನಿಜ. ಆದರೆ ಅದಕ್ಕೆ ಉತ್ತರ ವೈಯಕ್ತಿಕತೆಯಲ್ಲಿದೆಯೇ ವಿನಾ ಸಾಂಿಕತೆಯಲ್ಲಿಲ್ಲ. ತನ್ನ ನಿಲವನ್ನು ತಾನೇ ತಲುಪಬೇಕು. ಇದಕ್ಕೆ ಚಿಂತನೆ ಮುಖ್ಯ. ಹಾಗಾಗಿ ನೇರ ಅರಿವಿಗೆ ನಿಲುಕದ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಗಾಢವಾಗಿ ಚಿಂತಿಸುವುದೇ ನಿಜವಾದ ಆಧ್ಯಾತ್ಮಿಕತೆ. ಅದು ಸಂಪೂರ್ಣವಾಗಿ ಅಂತರ್ಮುಖಿಯಾದದ್ದು. ಕೆಲವು ಆಧ್ಯಾತ್ಮಿಕ ಗುರುಗಳೂ ಇದನ್ನು ಹೇಳುತ್ತಾರೆ. ಆದರೆ ವಿಚಿತ್ರವೆಂದರೆ, ಪ್ರತಿಯೊಬ್ಬನೂ ತನ್ನದೇ ದಾರಿಯನ್ನು ಕಂಡುಕೊಳ್ಳಬೇಕೇ ವಿನಾ ಇನ್ನೊಬ್ಬನನ್ನು ಅನುಸರಿಸುವುದಲ್ಲ ಎಂದು ಬೋಧಿಸುವವನಿಗೂ ಅಪಾರ ಶಿಷ್ಯಸ್ತೋಮವಿರುತ್ತದೆ! ಸ್ತೋಮ ತನ್ನ ಗುರುವಿನ ಬೋಧನೆಗಳನ್ನು ಪ್ರಚಾರ ಮಾಡುತ್ತ ತಮ್ಮ ಪಂಥಾನುಯಾಯಿಗಳನ್ನು ಹೆಚ್ಚುಮಾಡುವ ಕಾರ್ಯದಲ್ಲಿ ತೊಡಗಿರುತ್ತದೆ. ಬೇರೆಯವರು ಹೇಳುವುದನ್ನು ಕೇಳಿಯೂ, ತನ್ನದೇ ನಿಲವನ್ನು ಹೊಂದುವುದು ಗಟ್ಟಿಯಾದ ಆಧ್ಯಾತ್ಮಿಕತೆ.
ತಾರ್ಕಿಕತೆ-ಮುಕ್ತತೆಗಳ ಆಧಾರದ ಮೇಲೆ ಸಾಗುವ ವೈಜ್ಞಾನಿಕತೆ ಜನರಿಗೆ ಉಪಯುಕ್ತವಾದುದನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆದರೆ ಪರಹಿತವನ್ನೇ ತನ್ನ ಧ್ಯೇಯವೆಂದು ಸಾರಿಕೊಳ್ಳುವ ಆಧ್ಯಾತ್ಮಿಕತೆ, ಮತ್ತದರ ಒರಟು ಬಾಹ್ಯರೂಪವಾದ ಧಾರ್ಮಿಕತೆಗಳು ಜನರಲ್ಲಿ ಮೌಢ್ಯವನ್ನು, ಅನುಕರಣಶೀಲತೆಯನ್ನು, ಜೀವಪರಾ್ಮಖತೆಯನ್ನು, ಭಯವನ್ನು ಬಿತ್ತುವುದು ವಿಪರ್ಯಾಸವೇ ಸರಿ. ವಿಜ್ಞಾನ ತನ್ನ ಪರಿಧಿಯನ್ನು ಹೆಚ್ಚು ಹೆಚ್ಚು ವಿಸ್ತರಿಸಿಕೊಳ್ಳುತ್ತ ಸಾಗಿರುವ ಇಂದಿನ ದಿನಮಾನಗಳಲ್ಲಿಯೇ ಆಧ್ಯಾತ್ಮಿಕ ಗುರುಗಳ ಸಂಖ್ಯೆಯೂ, ಅವರ ಶಿಷ್ಯಸ್ತೋಮದ ಗಾತ್ರವೂ ಹೆಚ್ಚಾಗುತ್ತಿರುವುದು ಮತ್ತಷ್ಟು ವಿಪರ್ಯಾಸಕರವಾದ ವಿಷಯ.
ಹಿಂದೆಯೇ ಹೇಳಿದಂತೆ ಮನುಷ್ಯನ ಆಧಿಭೌತಿಕ ಮತ್ತು ಆಧ್ಯಾತ್ಮಿಕ ಹಸಿವುಗಳನ್ನು, ಆವಶ್ಯಕತೆಯನ್ನು ಪೂರೈಸಿಕೊಳ್ಳಲು ನನಗೆ ಕಾಣುವ ಮಾರ್ಗಗಳು ಎರಡು; ಅವರೆಡೂ ಭಿನ್ನ. ಒಂದು ಸಾರ್ವತ್ರಿಕವಾದದ್ದು, ಮತ್ತೊಂದು ಕೇವಲ ವೈಯಕ್ತಿಕವಾದದ್ದು. ಆಧಿಭೌತಿಕ, ಅಂದರೆ ಭೌತಜಗತ್ತಿನ ಬಗೆಗಿನ ಸತ್ಯಗಳನ್ನು ಅಥವಾ ತಾರ್ಕಿಕತೆಯ ಮೂಲಕ ತಲುಪಬಹುದಾದ ನಿಲವುಗಳನ್ನು ಅರಿಯಲು ಅತ್ಯುತ್ತಮ ಮಾರ್ಗವೆಂದರೆ ವೈಜ್ಞಾನಿಕ ಮನೋಭಾವವನ್ನು ಅನುಸರಿಸುವುದು. ಅದನ್ನು ಮೀರಿದ ವಲಯದ ಬಗ್ಗೆ ಸ್ವತಂತ್ರವಾಗಿ ಚಿಂತಿಸಿ ತನ್ನದೇ ಆದ ನಿಲವನ್ನು ತಾಳುವುದು ಆಧ್ಯಾತ್ಮಿಕತೆ. ವೈಜ್ಞಾನಿಕತೆಯಲ್ಲಿ ನಿಶ್ಚಿತ ಲಕ್ಷಣಗಳಿರುವುದರಿಂದ ತಲುಪುವ ನಿಲವುಗಳಲ್ಲಿ ಸಾಮ್ಯವಿರುತ್ತದೆ. ಆದರೆ ಆನುಭವಿಕತೆಯ ಬಗ್ಗೆ ಪ್ರತಿಯೊಬ್ಬನದೂ ಒಂದು ಭಿನ್ನ ಮಾರ್ಗ. ಯಾವ ಗುರುವನ್ನೂ ಅನುಸರಿಸದೆ ತನ್ನ ಚಿಂತನೆಯನ್ನೇ ನಂಬುವುದು ನಿಜವಾದ ಆಧ್ಯಾತ್ಮಿಕತೆ. ಎರಡು ಕಡೆಯೂ ವ್ಯಕ್ತಿ ಹೆಜ್ಜೆಹೆಜ್ಜೆಗೂ ಭಯಭಕ್ತಿಗಳಿಂದ ಅನುಸರಿಸಬೇಕಾದ ಗುರುವಿನ ಆವಶ್ಯಕತೆ ನನಗೆ ಕಾಣಿಸುವುದಿಲ್ಲ.
-0-0-0-0-
                                                      






No comments: