Friday 19 August 2016

ಕನ್ನಡ ಚಳವಳಿ: ಸ್ವರೂಪ ಮತ್ತು ವ್ಯಾಪ್ತಿ

ಕನ್ನಡ ಚಳವಳಿ: ಸ್ವರೂಪ ಮತ್ತು ವ್ಯಾಪ್ತಿ

       ಸಾಮಾನ್ಯವಾಗಿ ಕನ್ನಡ ಚಳವಳಿಯನ್ನು ಇಪ್ಪತ್ತನೆಯ ಶತಮಾನಕ್ಕೆ ಸೀಮಿತಗೊಳಿಸಿಕೊಳ್ಳುತ್ತೇವೆ. ಮೊದಲು ಕರ್ನಾಟಕ ಏಕೀಕರಣ ಚಳವಳಿ, ಆಮೇಲೆ ಕನ್ನಡ ಭಾಷೆಯ ಮೇಲ್ಮೆಗಾಗಿ ನಡೆದ ಚಳವಳಿಗಳನ್ನು ನೆನೆಯುತ್ತೇವೆ. ಆದರೆ ಕನ್ನಡ ಚಳವಳಿಯು ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳಿಗೂ ಮೀರಿದ ಹಳಮೆಯನ್ನು ಹೊಂದಿದೆ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಸಂಸ್ಕೃತ-ಪ್ರಾಕೃತಗಳಂತಹ ವಿವಿಧ ಧಾರ್ಮಿಕ ಭಾಷೆಗಳೊಡನೆ ತಮ್ಮ ಅಸ್ತಿತ್ವಕ್ಕಾಗಿ ಮೊದಲು ಸೆಣಸಿ, ಆಮೇಲೆ ತಮ್ಮ ಮೇಲ್ಮೆಗಾಗಿ ಕನ್ನಡದಂತಹ ಜನಭಾಷೆಗಳು ಹೋರಾಡಬೇಕಾಯಿತು. ಚಳವಳಿಯು ಎಲ್ಲ ಕಾಲದಲ್ಲೂ ಭಾಷೆಯ ಹೆಸರಿನಲ್ಲಿಯೇ ನಡೆಯಿತೆಂದೇನೂ ಅಲ್ಲ. ಯಾಕಂದರೆ ಜನಭಾಷೆಯು ಜನರ ಆಶೋತ್ತರಗಳನ್ನು ಪ್ರತೀಕಿಸುವುದರಿಂದ, ಎಲ್ಲ ಜನಪರ ಚಳವಳಿಗಳೂ ಆಯಾ ಜನರ ಭಾಷೆಗಳ ಪರವಾಗಿಯೂ ನಿಂತಿರುತ್ತವೆ.
       ‘ಚಳವಳಿ’ ಎಂಬ ಪದವು ತುಂಬ ವ್ಯಾಪಕ ಅರ್ಥವನ್ನು ಪಡೆದಿದೆ. ಕನ್ನಡದ ಈ ಪದವು ಸಂಸ್ಕೃತದ ‘ಚಲನ’ ಮತ್ತು ‘ವಲನ’ ಎಂಬೆರಡು ಪದಗಳ ಸಮಸ್ತರೂಪದ ತದ್ಭವವಾಗಿದೆ. ‘ಚಲನ’ವು ಮುಂದಕ್ಕೆ ಸಾಗುವ ಕ್ರಿಯೆಯನ್ನು ಸೂಚಿಸಿದರೆ, ‘ವಲನ’ವು ಅಕ್ಕಪಕ್ಕದಲ್ಲಿ ಸಾಗುವುದನ್ನು ಬಿಂಬಿಸುತ್ತದೆ. ಹಾಗಾಗಿ ಚಳವಳಿ ಎಂಬ ಶಬ್ದವು ಕಾಲಕ್ರಮದಲ್ಲಿ ಮುಂದಕ್ಕೂ, ವ್ಯಾಪಕತೆಯಲ್ಲಿ ಆಚೀಚೆಗೂ ಹರಡುವುದನ್ನು ಹೇಳುತ್ತದೆ. ಯಾವುದೋ ಒಂದು ಉದ್ದೇಶ ಅಥವಾ ಆದರ್ಶದ ಸಾಕಾರಕ್ಕಾಗಿ ದೀರ್ಘಕಾಲ ನಡೆಯುವ ಜನರ ಪ್ರಜ್ಞಾಪೂರ್ವಕ ಪ್ರಯತ್ನವು ಒಂದೆಡೆಯಾದರೆ, ಪ್ರತಿ ಹಂತದಲ್ಲೂ ಒಂದು ಸಮುದಾಯವನ್ನು ವ್ಯಾಪಿಸುವುದು ಚಳವಳಿಯ ಮುಖ್ಯ ಲಕ್ಷಣ. ಹಿಂದೆಯೇ ಹೇಳಿದಂತೆ, ಅದು ತಂತಾನೆಯೂ ರೂಪುಗೊಳ್ಳಬಹುದು. ಹಾಗಾಗಿ ಚಳವಳಿಯು ವೈಯಕ್ತಿಕ ಆಶೋತ್ತರಗಳನ್ನು ಹೊಂದದೆ, ಸಾಮುದಾಯಿಕ ಆಕಾಂಕ್ಷೆಯ ಪೂರೈಕೆಗಾಗಿ ನಡೆಯುವ ಪ್ರಯತ್ನವಾಗಿರುತ್ತದೆ, ಇಂಗ್ಲಿಷ್‍ನ ಮೂವ್‍ಮೆಂಟ್ ಎಂಬುದು ಚಳವಳಿಗೆ ಸಂವಾದಿಯಾದ ಪದ. ಅದಕ್ಕೂ ಇದೇ ಅರ್ಥವೇ ಇದೆ. ಈ ಅರ್ಥದಲ್ಲಿ ‘ಕನ್ನಡ ಚಳವಳಿ’ ಎಂದರೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕನ್ನಡದ ಹಿತಾಸಕ್ತಿಯನ್ನು ಕಾಪಾಡಲು ನಡೆಯುವ ಸಾಮೂಹಿಕವಾದ ಮತ್ತು ಕಾಲಗತಿಯಲ್ಲಿ ಮುಂದೆ ಸಾಗುವ ಆಲೋಚನೆಗಳ ಪ್ರಕ್ರಿಯೆಯನ್ನು ಸೂಚಿಸುತ್ತದೆ ಎನ್ನಬಹುದು.
ಕನ್ನಡ ಎಂಬುದು ಹಿಂದೆ ನಾಡು ನುಡಿ ಹಾಗೂ ನಾಡವರ ಸಮುದಾಯವನ್ನು ಸೂಚಿಸುವ ಪದವಾಗಿತ್ತು. ಕನ್ನಡದ ಅತ್ಯಂತ ಪ್ರಾಚೀನ ಉಪಲಬ್ಧ ಕೃತಿಯಾದ ‘ಕವಿರಾಜಮಾರ್ಗ’ದಲ್ಲಿ ಬರುವ “ಕಾವೇರಿಯಿಂದಮಾ ಗೋದಾವರಿವರರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯವಿಲೀನ ವಿಶದ ವಿಷಯ ವಿಶೇಷಂ” ಎಂಬ ಪದ್ಯದಲ್ಲಿ ಕನ್ನಡ ಎಂಬುದು ನಾಡನ್ನೂ ನಾಡವರನ್ನೂ ಸೂಚಿಸುತ್ತದೆ; ಅಲ್ಲದೆ ಅದನ್ನು ಒಟ್ಟು ಜಗತ್ತಿನ ಹಿನ್ನೆಲೆಯಲ್ಲಿ ವಿಶಿಷ್ಟವಾದುದಾಗಿ ಗುರುತಿಸುತ್ತಿದೆ. ಅದೇ ಕೃತಿಯಲ್ಲಿ ಬರುವ ‘ಅತಿಶಯಮೀ ಕನ್ನಡಕ್ಕೆ ಸತತಂ ಪ್ರಾಸಂ’, ‘ಪೇೞ್ವೆನಿನಿಸಂ ಕನ್ನಡದೊಳ್’, ‘ಕನ್ನಡಂಗಳ್’ ಎಂಬಂತಹ ಮಾತುಗಳು ನುಡಿಯನ್ನು ಸೂಚಿಸುತ್ತವೆ. ಅಂದರೆ ಕನ್ನಡ ನುಡಿ, ಅದನ್ನಾಡುವ ಜನರು ಹಾಗೂ ಆ ಜನರಿರುವ ನೆಲ - ಈ ಮೂರನ್ನೂ ಕನ್ನಡವು ಒಳಗೊಳ್ಳುತ್ತದೆ. ಆದ್ದರಿಂದ ‘ಕನ್ನಡ ಚಳವಳಿ’ಯು ಎಲ್ಲ ಬಗೆಯ ಕನ್ನಡ ಜನಪರ ಚಳವಳಿಗಳನ್ನೂ ತನ್ನಲ್ಲಿ ಅಡಕಗೊಳಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಕನ್ನಡ ನುಡಿಯು ಸ್ವತಂತ್ರ ಅಸ್ತಿತ್ವವನ್ನು ಗುರುತಿಸಿಕೊಂಡ ಕಾಲದಿಂದ ಹಿಡಿದು ಇಂದಿನವರೆಗೆ ನುಡಿಯ ಕಾರಣ ನಡೆದ ಸಮಸ್ತ ಪ್ರಯತ್ನಗಳನ್ನೂ, ಕನ್ನಡ ನಾಡಿನಲ್ಲಿ ನಡೆದ ಎಲ್ಲ ಜನಹಿತ ಕಾರ್ಯಗಳನ್ನೂ, ಕನ್ನಡ ನಾಡವರ ಜೀವನದ ವಿವಿಧ ಮಗ್ಗುಲುಗಳು ಧರಿಸಿದ ಕಾಲಾನುಗತ ಸ್ವರೂಪಗಳನ್ನೂ ‘ಕನ್ನಡ ಚಳವಳಿ’ ಒಳಗೊಳ್ಳುತ್ತದೆ ಎಂದು ಹೇಳಿದಂತಾಯಿತು. ಹಾಗಾಗಿ, ಕನ್ನಡ ಚಳವಳಿಯು ಕನ್ನಡ ನುಡಿಯು ತನ್ನನತವನ್ನು ತೋರಿಸಿಕೊಂಡ ಮೊದಲ ಕ್ಷಣದಿಂದಲೇ ಆರಂಭವಾಯಿತು ಎಂದು ಹೇಳಬಹುದು; ಅಂದಿನಿಂದ ಮುಂದೆ ಇಂದಿನವರೆಗೆ ಅದು ಪಡೆದ ವಿವಿಧ ಸ್ವರೂಪಗಳ ಹಿಂದಿನ ಕಾರಣಗಳು, ಕನ್ನಡ ನುಡಿಯನ್ನಾಡುವ ಜನರ ಬದುಕಿನಲ್ಲಿ ಅದು ಹಾಸುಹೊಕ್ಕಾಗಿ ಆ ಸಮುದಾಯದ ಅಭಿವ್ಯಕ್ತಿಗೆ ವಾಹಕವಾದ ಬಗೆ ಮತ್ತು ಅದು ತಾಳಿದ ಕಾಲಾನುಕ್ರಮ ಸ್ವರೂಪಗಳು, ಮತ್ತು ಆ ಭಾಷೆಯನ್ನಾಡುವ ಜನರ ಆಶೋತ್ತರಗಳು ಬಹಿರಂಗವಾಗಿ ಕಣಿಸಿಕೊಂಡ ರೀತಿಗಳು ಇವೆಲ್ಲವೂ ಸೇರುತ್ತವೆ.
ಅಂದರೆ, ಕನ್ನಡ ಜನಪದವು ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಸಾಂಸ್ಕೃತಿಕ ಬದುಕಿನ ವಿವರಸಮಸ್ತವನ್ನೂ ‘ಕನ್ನಡ ಚಳವಳಿ’ ಒಳಗೊಳ್ಳುತ್ತದಾದ್ದರಿಂದ ಇದರ ಆರಂಭವನ್ನು ಕನ್ನಡ ಭಾಷೆ ಕಾಣಿಸಿಕೊಂಡ ಕಾಲದಿಂದ ನಾವು ಗುರುತಿಸಬೇಕಾಗುತ್ತದೆ. ಕನ್ನಡ ಭಾಷೆ ಇತರ ಪ್ರಬಲವಾದ ಭಾಷೆಗಳ ಜೊತೆ ಸೆಣಸಿ ಒಂದು ಸಮುದಾಯದ ಅಭಿವ್ಯಕ್ತಿ ವಾಹಕವಾಗಿ ರೂಪಗೊಂಡದ್ದರ ಹಿನ್ನೆಯಲ್ಲಿ ಆ ಭಾಷೆಯನ್ನಾಡುವ ಜನರ ಸಾಮೂಹಿಕ ಸಂಕಲ್ಪ ಕ್ರಿಯಾಶೀಲವಾಗಿರುತ್ತದೆಂಬುದರಲ್ಲಿ ಸಂಶಯವಿಲ್ಲ. ಕ್ರಿಸ್ತಶಕದ ನಾಲ್ಕನೆಯ ಅಥವಾ ಮೂರನೆಯ ಶತಮಾನ ಪೂರ್ವದಲ್ಲಿ ಕನ್ನಡವು ಇತರ ಭಾಷೆಗಳನ್ನು ಅವಲಂಬಿಸದೆ ಸ್ಪಷ್ಟ ಸ್ವತಂತ್ರ ಹೆಜ್ಜೆಗಳನ್ನಿಡಲು ಸಾಧ್ಯವಾದದ್ದು ಅದನ್ನು ದಿಟ್ಟವಾಗಿ ಬಳಸತೊಡಗಿದ ಜನಸಮುದಾಯದ ಸಂಕಲ್ಪಶಕ್ತಿಯ ಕಾರಣದಿಂದ. ದ್ರಾವಿಡ ಭಾಷಾಬಳಗಕ್ಕೆ ಸೇರಿದ ಕನ್ನಡವು ಮೂಲತಃ ‘ಮೂಲದ್ರಾವಿಡ’ ಎಂದು ಸಾಂಕೇತಿಕವಾಗಿ ಕರೆಯುವ ಭಾಷೆಯಿಂದ ಟಿಸಿಲೊಡೆದು ಸ್ವತಂತ್ರ ಅಸ್ತಿತ್ವವನ್ನು ಸಾರಿತು. ಅದು ಜನರ ಬಾಯಲ್ಲಿ ನಲಿದಾಡಿ, ಬರಹದಲ್ಲಿ ರೂಪುವಡೆದು ಕಾಲಕಾಲಕ್ಕೆ ಬೇರೆ ಬೇರೆ ಸ್ವರೂಪಗಳನ್ನು ತಾಳಿತು. ಇದು ಭಾಷೆಯ ಬೆಳವಣಿಗೆಗೆ ಸಂಬಂಧಿಸಿದ ವಿಷಯ. ಇದು ಕನ್ನಡ ಜನರ ಸುತ್ತಮುತ್ತಲಿದ್ದ ಇತರ ಭಾಷೆಗಳಿಂದ ಶಬ್ದಗಳನ್ನು ನೇರವಾಗಿ ಹಾಗೂ ತದ್ಭವಗಳ ಮೂಲಕ ಪಡೆದುದಲ್ಲದೆ (ಹಾಗೂ ತನ್ನದನ್ನೂ ಆ ನುಡಿಗಳಿಗೆ ನೀಡುತ್ತ), ತನ್ನ ಜಾಯಮಾನಕ್ಕೆ ತಕ್ಕಂತೆ ಅವುಗಳನ್ನು ಬದಲಾಯಿಸಿಕೊಂಡಿತು; ಅವುಗಳ ಮೂಲಕ ತನ್ನ ಅರ್ಥಪ್ರಪಂಚವನ್ನು ಹಿಗ್ಗಲಿಸಿಕೊಂಡಿತು; ತನ್ನ ಅಭಿವ್ಯಕ್ತಿಸಾಮಥ್ರ್ಯವನ್ನು ಬಲಪಡಿಸಿಕೊಂಡಿತು. ಇದನ್ನೇ ನಾವು ಭಾಷಾಚರಿತ್ರೆ ಎಂದು ಕರೆಯುವುದು. ಭಾಷೆಯ ಬಾಹ್ಯ ಸ್ವರೂಪದಲ್ಲಿ ಆಗುವ ವ್ಯತ್ಯಾಸಗಳಿಗೆ ಅದನ್ನಾಡುವ ಜನರ ಉಚ್ಚಾರಣಾವೈಶಿಷ್ಟ್ಯ, ಧ್ವನಿಸಂವಿಧಾನ, ಅರ್ಥಗ್ರಹಣ ಚೈತನ್ಯವಿಶೇಷ, ಅಭಿವ್ಯಕ್ತಿಸ್ವರೂಪ ಇವೆಲ್ಲವೂ ಕಾರಣವಾಗುತ್ತವೆ.
ಜನಸಮುದಾಯವು ಸಾಹಿತ್ಯದ ಮೂಲಕ ಬಹು ಮುಖ್ಯವಾಗಿ ತನ್ನ ಅಂತರಂಗಸೂಕ್ಷ್ಮವನ್ನು ಹೊರಹೊಮ್ಮಿಸುತ್ತದೆ. ಸಾಹಿತ್ಯವೂ ಇಬ್ಬಗೆಯದು: ಮೌಖಿಕ ಮತ್ತು ಗ್ರಾಂಥಿಕ. ಮೂಲತಃ ಪ್ರತಿ ಭಾಷೆಯ ಮೂಲ ಸಾಹಿತ್ಯವು ಬಾಯಿಮಾತಿನ ಜನಪದ ಸಾಹಿತ್ಯವಾಗಿಯೇ ಹೊಮ್ಮಿರುವುದು. ತನ್ನ ದೈನಂದಿನ ಬದುಕಿನ ಅನಿಸಿಕೆ-ಅನುಭವ, ಆಕಾಂಕ್ಷೆ-ಆಕ್ಷೇಪ, ಆಚಾರ-ವಿಚಾರ, ನಂಬಿಕೆ-ನಡವಳಿಕೆ ಇವನ್ನೆಲ್ಲ ಕನ್ನಡ ಜನಪದವು ನಾನಾ ಬಗೆಯಲ್ಲಿ ಹಾಡು, ಕತೆ, ಒಗಟು, ಗಾದೆ, ನಾಟಕ, ಕಾವ್ಯಗಳ ಮೂಲಕ ಹೊರಹಾಕಿದೆ. ಅದುವರೆಗೆ ಮೂಕವಾಗಿದ್ದ ಒಂದು ಸಮುದಾಯವು ತನ್ನದೇ ನುಡಿಯಲ್ಲಿ ತನ್ನೆಲ್ಲ ಅನುಭವಗಳನ್ನು ಹೊಮ್ಮಿಸಿ ಅದಕ್ಕೆ ಸ್ಪಷ್ಟರೂಪವನ್ನು ಕೊಡಲು ಮಾಡಿದ ನಿರ್ಧಾರ ಸಾಮಾನ್ಯವಾದುದಲ್ಲ; ಏಕೆಂದರೆ ಅದರ ಹಿಂದೆ ಕಾರ್ಯಶೀಲವಾಗಿದ್ದದ್ದು ಅದರ ನಿರ್ಧಾರಕಶಕ್ತಿ; ತಾನೂ ಹೇಳಬೇಕಾದದ್ದು ಇದೆ ಮಾತ್ರವಲ್ಲ, ಅದನ್ನು ಧರಿಸುವ ಶಕ್ತಿ ತನ್ನ ನುಡಿಗಿದೆ ಎಂಬ ಸ್ಥೈರ್ಯ ಕೆಲಸ ಮಾಡಿರಲಿಕ್ಕೆ ಸಾಕು. ಜನಪದ ಸಾಹಿತ್ಯದಲ್ಲಿರುವುದು ಈ ಸಾಮೂಹಿಕ ಸಂವೇದನೆಯೇ. ಒಂದು ರೀತಿ ದಿನನಿತ್ಯದ ಅನುಭವದ್ರವ್ಯಕ್ಕೆ ಇದು ಭಾಷೆಯ ಉಡುಗೆಯನ್ನು ತೊಡಿಸುವಂಥದು. ಈ ನಿರ್ಧಾರವನ್ನು ನಾವು ಚಳವಳಿ ಎಂದು ಕರೆದಿರುವುದು. ಇಲ್ಲಿ ಅದನ್ನು ಜೋರಾಗಿ ಘೋಷಿಸುವ ರೀತಿಯಿಲ್ಲದಿರಬಹುದು. ಆದರೆ ಕನ್ನಡವು ಹಾಡಾಗಿ ಹೊಮ್ಮುವುದರ ಮೂಲಕ, ಕತೆಯಾಗಿ ಹರಿಯುವುದರ ಮೂಲಕ, ಬಯಲಾಟ-ಯಕ್ಷಗಾನಗಳಾಗಿ ಅಭಿನಯರೂಪ ತಾಳುವುದರ ಮೂಲಕ ಅದನ್ನಾಡುವ ಸಮುದಾಯಸಂಕಲ್ಪ ಕೆಲಸ ಮಾಡಿದೆ.
ಕಲಿತ, ಅಂದರೆ ಹೆಚ್ಚು ಪರಿಷ್ಕಾರಕ್ಕೆ ಒಳಗಾದ ಜನರಿಗೂ ತಮ್ಮ ತುಡಿತಗಳಿಗೆ ಭಾಷಾಸ್ವರೂಪದಲ್ಲಿ ಅಭಿವ್ಯಕ್ತಿ  ನೀಡುವ ತುರ್ತು ಇರುತ್ತದೆ. ಅದು ಹೊರಬಂದಾಗ, ಮೊದಲು ವಾಕ್‍ರೂಪದಲ್ಲಿ ಬಂದಿರಬಹುದಾದರೂ, ಆನಂತರ ಬರಹಕ್ಕೆ ಇಳಿಯುತ್ತದೆ. ಇದಕ್ಕೆ ಪ್ರಚಾರಸಾಧ್ಯತೆ ಹೆಚ್ಚು. ಏಕೆಂದರೆ, ಅಕ್ಷರವನ್ನು ಧರಿಸಿಬಿಟ್ಟಾಗ ಅನುಭವಕ್ಕೆ ಅಮರತ್ವ ಪ್ರಾಪ್ತವಾಗುತ್ತದೆ. ತನ್ನ ಕಾಲದ ಇತರತ್ರವಿರುವ ಜನ ಮಾತ್ರವಲ್ಲ, ತಾನು ಹೋದರೂ ಮುಂದಿನ ಪೀಳಿಗೆಗಳು ತನ್ನ ಬರಹವನ್ನು ಓದುವ ಸಾಧ್ಯತೆಯಿರುವುದರಿಂದಾಗಿ ಗ್ರಾಂಥಿಕ ಸಾಹಿತ್ಯವು ಒಗ್ಗೂಡುತ್ತ ಸಾಗುತ್ತದೆ, ಹಳ್ಳಕೊಳ್ಳಗಳನ್ನು ಸೇರಿಸಿಕೊಳ್ಳುತ್ತ ಹಿಗ್ಗುತ್ತ ಮುಂದರಿಯುವ ನದಿಯ ಹಾಗೆ. ಇದರಿಂದ ಈ ಬಗೆಯ ಸಾಹಿತ್ಯವು ಮುಂದಿನ ಪೀಳಿಗೆಗಳ ಚಿಂತನೆಯನ್ನು ಕೆದಕಿ ಪ್ರತಿಕ್ರಿಯಾರೂಪದಲ್ಲಿ ಮಾರ್ಪಡುತ್ತ ಮುಂದುವರಿಯುತ್ತದೆ. ಅಮೂರ್ತವಾದ ಅನುಭವ-ವಿಚಾರಗಳಿಗೆ ಮೂರ್ತಸ್ವರೂಪವನ್ನು ನೀಡಬಲ್ಲ ಸಾಮಥ್ರ್ಯ ಭಾಷೆಗಿರುವುದಿಂದಾಗಿ ಹಿಂದಿನವರ ಅನಿಸಿಕೆಗಳ ಬಗ್ಗೆ ಆಲೋಚಿಸಿ ಸಮಕಾಲೀನ ಚಿಂತನೆಯ ಬಲದಿಂದ ಹೊಸ ರೂಪ ನೀಡಲು ಅವಕಾಶವಾಗುತ್ತದೆ. ಆದ್ದರಿಂದಲೇ ಗ್ರಾಂಥಿಕ ಸಾಹಿತ್ಯದಲ್ಲಿ ಒಂದು ಪರಂಪರೆಯನ್ನು, ನಿರ್ದಿಷ್ಟ ಹಾದಿಯ ಬೆಳವಣಿಗೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಅದರಲ್ಲಿ ಖಚಿತವಾದ ಮುಂದುವರಿಕೆಯಿರುತ್ತದೆ. ಬರಹದ ಸಾಹಿತ್ಯವು ಆ ಕಾರಣದಿಂದಲೇ ಬಹುಬೇಗ ತನ್ನ ಕಾಲದ ಸಾಮುದಾಯಿಕ ಆಶೋತ್ತರಗಳನ್ನು ತನ್ನ ಗರ್ಭದಲ್ಲಿ ಧರಿಸಲು ಸಾಧ್ಯ. ಕನ್ನಡ ನಾಡಿನ ಇಂತಹ ಬರವಣಿಗೆಯು ಆರಂಭಗೊಂಡಿದ್ದರ ನಿರ್ದಿಷ್ಟ ಉಲ್ಲೇಖ ನಮಗೆ ದೊರೆಯುವುದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿ ಎಂಬ ಹಳ್ಳಿಯಲ್ಲಿ ದೊರಕಿರುವ ಕ್ರಿಸ್ತಶಕ ಸುಮಾರು 450 ರದ್ದು ಎಂದು ವಿದ್ವಾಂಸರು ಹೇಳುವ ಶಾಸನದಲ್ಲಿ (ಆ ಹಿಂದಿನ ಶಾಸನಗಳೂ ಸಿಕ್ಕಿವೆ ಎಂಬುದು ಕೆಲವರ ವಾದ). ಅಂದಿನಿಂದ ಇಲ್ಲಿಯವರೆಗೆ ಕನ್ನಡ ಬರವಣಿಗೆಯು ಇಮ್ಮುಖವಾಗಿ ತನ್ನ ವಿರಾಟ್ ರೂಪವನ್ನು ತೋರಿಸುತ್ತ ಬಂದಿದೆ: ಒಂದು, ಶಾಸನಗಳು, ಎರಡು ಸಾಹಿತ್ಯ ಕೃತಿಗಳು.
ಶಾಸನಗಳೆಂದರೆ ಸಾರ್ವಜನಿಕ ತಿಳಿವಳಿಕೆಗಾಗಿ ಬರೆಸಿರುವ ಬರಹಗಳು. ಯಾವ ಯಾವ ಅಂಶಗಳನ್ನು ಸಮಕಾಲೀನ ಮಾತ್ರವಲ್ಲ, ಮುಂದಿನ ಪೀಳಿಗೆಗಳ ಜನರೂ ತಿಳಿದುಕೊಳ್ಳಬೇಕೋ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಸಿಡುವ ರೂಢಿ ಬಂತು. ಕರ್ನಾಟಕದಲ್ಲಾದರೆ, ಬಂಡೆಗಲ್ಲುಗಳು ಹೇರಳವಾಗಿರುವುದರಿಂದಾಗಿ, ಅವುಗಳ ಮೇಲೆ ಶಾಸನಗಳನ್ನು ಕೆತ್ತಿಸುತ್ತಿದ್ದರು. ‘ಶಾಸನ’ ಎಂದರೆ ಕಾನೂನು, ಜನ ಪರಿಪಾಲಿಸಬೇಕಾದ ನಿಯಮಗಳು. ಎಲ್ಲವನ್ನೂ ನಮ್ಮ ಪ್ರಾಚೀನರು ಶಾಸನಗಳಾಗಿ ಕೆತ್ತಿಸುತ್ತಿದ್ದರು. ಅದು ಗುಡಿಯೊಂದಕ್ಕೆ ನೀಡಿದ ಒಂದು ದಾನವಾಗಿರಬಹುದು, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಕಾರಣದಿಂದ ಮಠವೊಂದಕ್ಕೆ ಕೊಟ್ಟ ದತ್ತಿಯಾಗಿರಬಹುದು, ಯುದ್ಧ-ತುರುಗೋ¿õï-ಪೆಣ್ಬುಯ್ಯಲ್-ಮಾಸ್ತಿ ಮುಂತಾದ ಜನಮನ್ನಣೆಯ ಕೆಲಸ ಮಾಡಿ ಸತ್ತ ಧೀಮಂತರ ಸ್ಮಾರಕಗಳಾಗಿರಬಹುದು. ಇವೆಲ್ಲವೂ ಜನರ ತಿಳಿವಿಗೆ ಬರಬೇಕು; ಅವುಗಳಲ್ಲಿ ಕೆಲವು ಜನ ಪರಿಪಾಲಿಸಬೇಕಾದದ್ದಾದರೆ, ಮತ್ತೆ ಕೆಲವು ಆದರ್ಶವೆಂಬಂತೆ ಅನುಸರಿಸಬೇಕಾದವು. ಇಂತಹ ಸುಮಾರು ಮೂವತ್ತು ಸಾವಿರ ಶಾಸನಗಳು ಕನ್ನಡದಲ್ಲಿವೆ, ಪ್ರಕಟಗೊಂಡಿವೆ. ಕನ್ನಡದಲ್ಲಿ ಶಾಸನ ಬರೆಸುವ ರೂಢಿ ಬಂದದ್ದು ಸಹಜವಾಗಿಯೇ ಅದು ಸಾಮಾನ್ಯ ವ್ಯವಹಾರದ ಭಾಷೆಯಾಗಿ ರೂಪುಗೊಂಡಿರುವಾಗ. ಆಗಲೇ ಹೇಳಿದಂತೆ, ಹಲ್ಮಿಡಿ ಶಾಸನದ ಕಾಲಕ್ಕಾಗಲೇ ಕನ್ನಡ ದಿನಬಳಕೆಯ ಭಾಷೆಯಾಗಿತ್ತು. ಒಂದು ಸಮುದಾಯದ ಸರ್ವವ್ಯವಹಾರಗಳ ಮಾಧ್ಯಮವಾಗಿ ಕನ್ನಡ ಬಳಕೆಗೊಳ್ಳಬೇಕಾದರೆ ಅದರ ಹಿಂದೆ ಕನ್ನಡ ಜನತೆಯ ಸಾಮುದಾಯಿಕ ಆಶಯ ಮತ್ತು ಪ್ರಯತ್ನಗಳು ಕ್ರಿಯಾಶೀಲವಾಗಿರಲೇಬೇಕು. ಬರಬರುತ್ತ ಶಾಸನಗಳ ಸಂಖ್ಯೆ ಹೆಚ್ಚುತ್ತ ಕನ್ನಡವು ರಾಜ್ಯಗಳ ಆಡಳಿತ ಭಾಷೆಯಾಗಿ ವ್ಯಾಪಕತೆಯನ್ನು ಪಡೆಯುತ್ತ ನಡೆದಿತ್ತು. ಎಲ್ಲ ಬಗೆಯ ವ್ಯವಹಾರಗಳಿಗೆ ಬೇಕಾದ ಸಂವಹನಶಕ್ತಿಯನ್ನು ಕನ್ನಡವು ಪಡೆದಿತ್ತೆಂಬ ಅರಿವು ಬರಬೇಕಾದರೆ ನಮ್ಮ ಶಾಸನಸಂಪದವನ್ನು ಅವಲೋಕಿಸಬೇಕು. ಇದರ ಚರಿತ್ರೆಯನ್ನು ನಾವು ಗುರುತಿಸಬೇಕಾಗುತ್ತದೆ. ಇದೂ ಕನ್ನಡ ಚಳವಳಿಯ ಒಂದು ಮುಖ್ಯ ಭಾಗವೇ. ಏಕೆಂದರೆ ಸಮಷ್ಟಿ ಬದುಕಿನ ಭಾಗವಾಗಿ ಮಾತ್ರ ಶಾಸನಗಳು ಬರುವುದು. ಈ ಕಾರ್ಯವು ಕನ್ನಡದ ಮಟ್ಟಿಗೆ ಕನಿಷ್ಠ ಪಕ್ಷ ಒಂದು ಸಾವಿರದ ಆರುನೂರು ವರ್ಷಗಳ ಹಿಂದೆಯೇ ಆರಂಭವಾಯಿತು.
ಸಾಮಾನ್ಯವಾಗಿ ಶಾಸನಗಳಲ್ಲಿ ಅದು ಜನ್ಮ ತಾಳಿದ ಕಾಲದ ವಿವರಗಳು ದೊರಕುತ್ತವೆ. ಒಂದು ದಾನ ಶಾಸನವಿದೆ ಎಂದುಕೊಳ್ಳೋಣ: ಯಾರೋ ಒಬ್ಬ ಯಾವುದೋ ಒಂದು ದೇವಾಲಯಕ್ಕೆ ಅಂಗಭೋಗ-ರಂಗಭೋಗ-ಖಂಡತ್ರುಟಿತ ಜೀರ್ಣೋದ್ಧಾರ ಕಾರ್ಯಗಳಿಗೆ ಒಂದು ತುಂಡು ಭೂಮಿಯನ್ನು ಬಿಟ್ಟು, ಅದರ ಉತ್ಪತ್ತಿಯನ್ನು ಈ ಕಾರ್ಯಗಳಿಗೆ ಬಳಸಿಕೊಳ್ಳಬೇಕೆಂಬ ತನ್ನ ಆಶಯವನ್ನು ಶಾಸನವೊಂದರಲ್ಲಿ ಬರೆಸಬೇಕು ಎಂದುಕೊಳ್ಳೋಣ. ಸಾಮಾನ್ಯವಾದ ಪದ್ಧತಿಯೆಂದರೆ, ತಾನು ಹಾಗೆ ಮಾಡುತ್ತಿರುವ ಕಾಲದಲ್ಲಿ ತಾನು ವಾಸಿಸುವ ಪ್ರಾಂತವನ್ನು ಆಳುವ ದೊರೆ, ಅವನ ವಿಶಿಷ್ಟತೆಗಳು ಇವುಗಳನ್ನೆಲ್ಲ ಹೇಳಿ, ತಾನು ಬಿಟ್ಟ ದತ್ತಿಯ ವಿವರಗಳನ್ನು ಕೊಡುವುದು ರೂಢಿ. ಹೀಗಾಗಿ, ಆ ಕಾಲದ ರಾಜಕೀಯ ಸಾಂಸ್ಕೃತಿಕ ವಿವರಗಳು ಶಾಸನಗಳಿಂದ ಸ್ವಲ್ಪಮಟ್ಟಿಗೆ ಲಭ್ಯವಾಗುತ್ತವೆ. ನಮ್ಮ ನಾಡಿನ ಸಾಂಸ್ಕೃತಿಕ ಬದುಕಿನ ಚರಿತ್ರೆಯನ್ನು ಬರೆಯಲು ನಮಗಿರುವ ಬಹು ಮುಖ್ಯ ಆಕರವೆಂದರೆ ಶಾಸನಗಳೇ. ಈಗಾಗಲೇ ಶಾಸನಗಳನ್ನೇ ಆಧಾರವಾಗಿಟ್ಟುಕೊಂಡು ಹತ್ತಾರು ಮಹಾಪ್ರಬಂಧಗಳು ಹಾಗೂ ನೂರಾರು ಲೇಖನಗಳು ರಚಿತವಾಗಿರುವುದು ಇದಕ್ಕೆ ಸಾಕ್ಷಿ. ಸಮಕಾಲೀನ ಸಾಂಸ್ಕೃತಿಕ ವಿವರಗಳು ಶಾಸನಗಳಲ್ಲಿ ದೊರೆಯುತ್ತವೆ ಎಂಬ ಮಾತಿಗೆ ನಿದರ್ಶನವಾಗಿ ಕನ್ನಡದ ಸಿಕ್ಕಿರುವ ಶಾಸನಗಳಲ್ಲಿ ಅತ್ಯಂತ ಹಳೆಯದಾದ ಹಲ್ಮಿಡಿ ಶಾಸನವನ್ನೇ ನೋಡೋಣ. ಇದಕ್ಕೆ ಕನ್ನಡ ಲಿಪಿಯಲ್ಲಿ ಕನ್ನಡ ನುಡಿಯಲ್ಲಿ ರಚಿತವಾದ ಅತ್ಯಂತ ಹಳೆಯ ಬರಹ ಎಂಬ ಹೆಗ್ಗಳಿಕೆಯಿದೆ. ಅಲ್ಲದೆ, ಇದರಲ್ಲಿ ಉಕ್ತವಾಗಿರುವುದು ‘ಬಾಳ್ಗಳ್ಚು’ ಎಂಬ ಆಚರಣಾವಿಶೇಷ. ಒಬ್ಬ ರಾಜನಿಗೆ ನಿಷ್ಠನಾದ ಯೋಧನೊಬ್ಬ ವೀರಾವೇಶದಿಂದ ಕದನಲ್ಲಿ ಹೋರಾಡಿ ತನ್ನ ಒಡೆಯನ ಗೆಲವಿಗೆ ಮುಖ್ಯ ಕಾಋಣನಾಗಿದ್ದಾನೆ; ಅವನನ್ನು ಸನ್ಮಾನಿಸಲು ರಾಜ ಒಂದು ಬಹಿರಂಗ ಸಮಾರಂಭವನ್ನು ಏರ್ಪಡಿಸಿದ್ದಾನೆ; ಅದರಲ್ಲಿ ಶತ್ರುಗಳ ಕತ್ತುಗಳನ್ನು ಕತ್ತರಿಸಿ ಅವರ ರಕ್ತ ಮೆತ್ತುಕೊಂಡಿರುವ ವೀರನ ಕತ್ತಿಯನ್ನು ಎಲ್ಲರ ಸಮ್ಮುಖದಲ್ಲಿ ತೊಳೆದು (ಬಾಳ್+ಕಳ್ಚು = ಕತ್ತಿಯನ್ನು ತೊಳೆಯುವುದು) ವೀರನಿಗೆ ಗೌರವ ಅರ್ಪಿಸುವುದು; ಕೃತಜ್ಞತಾಪೂರ್ವಕವಾಗಿ ಅವನಿಗೆ ಉಡುಗೊರೆಯನ್ನು ನೀಡುವುದು. ಇಂತಹ ನೂರಾರು ವಿವರಗಳು ಶಾಸನಗಳಲ್ಲಿ ದೊರೆತು ಜನಸಾಮಾನ್ಯರ ಬದುಕಿನ ಎಳೆಗಳನ್ನು ಬಿಚ್ಚಿಡುತ್ತವೆ. ಅದೇ ಒಂದು ಅದ್ಭುತ ಪ್ರಪಂಚ
ಕನ್ನಡ ಬರಹದಲ್ಲಿ ಬಳಕೆಗೆ ಬರುವುದಕ್ಕು ಮುಂಚೆ ಸಂಸ್ಕೃತ-ಪ್ರಾಕೃತಗಳು ವಿಜೃಂಭಿಸುತ್ತಿದ್ದವು. ಆಗಿನ ಮಟ್ಟಿಗೆ ಅವು ಮೇಲ್ವರ್ಗದವರ ಭಾಷೆಗಳು; ವಿದ್ವಾಂಸರ ಮಾಧ್ಯಮಗಳು. ಕನ್ನಡ ಜನಪದರ ಸಂವೇದನೆಗಳು ಬಲಗೊಳ್ಳುತ್ತ ಹೋದಂತೆ ಅವುಗಳ ಜಾಗದಲ್ಲಿ ಕನ್ನಡ ಬಳಕೆಗೆ ಬಂತು. ಮೊದಲು ಶಾಸನದಲ್ಲಿ, ಆನಂತರ ಗ್ರಂಥಗಳಲ್ಲಿ. ಹೀಗೆ ಕನ್ನಡದಲ್ಲಿ ಗ್ರಂಥರಚನೆ ಮಾಡಲು ತೊಡಗಿದ್ದೂ ಜನರ ಸಂಕಲ್ಪಸಾಮಥ್ರ್ಯದಿಂದಾಗಿಯೇ. ಇದನ್ನೂ ನಾವು ಚಳವಳಿಯ ಗೆಲವು ಎಂದು ತಿಳಿಯಬೇಕು. ಕನ್ನಡದಲ್ಲಿ ಹೇಳಿದರೆ, ಬರೆದರೆ ಹೆಚ್ಚು ಜನರನ್ನು, ಅದರಲ್ಲೂ ಸಾಮಾನ್ಯರನ್ನು ತಲುಪುತ್ತದೆ ಎಂಬ ತಿಳಿವಳಿಕೆ ವಿದ್ಯಾವಂತರಲ್ಲಿ ಮೂಡಿದುದು ಒಂದು, ಹಾಗಾಗಲು ಕನ್ನಡ ಜನತೆ ತಮ್ಮತನವನ್ನು ಸ್ಥಾಪಿಸಿಕೊಂಡದ್ದು ಮತ್ತೊಂದು ಕಾರಣವಾಗಿ ಕನ್ನಡ ಗ್ರಂಥರೂಪವನ್ನು ತಾಳಿ ಮುಂದುವರೆಯಿತು. ಆದರೆ ಹಾಗೆ ಬರೆದವರೂ ವಿದ್ಯಾವಂತರಾಗಿದ್ದುದು ಮಾತ್ರವಲ್ಲದೆ, ಸಂಸ್ಕೃತ-ಪ್ರಾಕೃತಗಳನ್ನು ಬಲ್ಲವರೇ ಆಗಿದ್ದರು. ಹಾಗಾಗಿ ಅವರಿಗೆ ಬರೆಯಲು ಮೇಲ್ಪಂಕ್ತಿ ಆ ಭಾಷೆಗಳಿಂದಲೇ ಸುಲಭವಾಗಿ ದೊರೆಯಿತು. ಕನ್ನಡದ ಮೊದಲ ಸಾಹಿತ್ಯ ಪ್ರಕಾರವಾದ ಚಂಪೂ ಬಂದದ್ದು ಹೀಗೆ. ಆದರೆ ಮುಂದೆ ಅದು ಜನಸಾಮಾನ್ಯರ ಸಂವೇದನೆಗಳನ್ನು ಅಷ್ಟಾಗಿ ಒಳಗೊಳ್ಳಲಾರದೆಂಬ ಭಾವನೆ ಬಂದುದರ ಜೊತೆಗೆ, ಸಾಮಾನ್ಯರಾದ ಕೆಳವರ್ಗದ ಜನರು ಮೇಲ್ವರ್ಗಗಳ ವೈದಿಕ ಕಪಿಮುಷ್ಠಿಗೆ ಸಿಲುಕಿ ಜರ್ಜರಿತಗೊಂಡದ್ದನ್ನು ಗುರುತಿಸಿದ ಹಲವರು ಸಾಮೂಹಿಕವಾಗಿ ಪ್ರಯತ್ನಿಸಿ ಸಾಮಾನ್ಯರಲ್ಲಿ ಸಮಾನತೆ-ಸರಳತೆ-ಸುಲಿಗೆರಹಿತತೆ ಮುಂತಾದವುಗಳ ಆಶಯದಿಂದ ನಡೆಸಿದ ಚಳವಳಿಯೇ ವಚನ ಚಳವಳಿ. ಅದರ ಪ್ರಮುಖವಾದ ಒಂದು ಸಾಧನೆಯೆಂದರೆ ಅದರಲ್ಲಿ ಭಾಗವಹಿಸಿದವರು ತಮ್ಮೆಲ್ಲ ಅನಿಸಿಕೆ ಅನುಭವಗಳನ್ನು ಆಡುನುಡಿಗೆ ಹತ್ತಿರವಾದ ಕನ್ನಡದಲ್ಲಿ ಹೇಳಿದುದು. ಕನ್ನಡಕ್ಕೆ ಎಷ್ಟು ಸಾಮಥ್ರ್ಯವಿದೆಯೆಂಬುದನ್ನು ವಚನಕಾರರು ಸಾಬೀತುಪಡಿಸಿದರು. ಎಲ್ಲಿಯೂ ಕನ್ನಡ ಎಂಬ ಶಬ್ದವನ್ನು ಭಾಷೆಯ ಅರ್ಥದಲ್ಲಿ ಬಳಸದಿದ್ದರೂ ತಮ್ಮೆಲ್ಲ ಅಭಿವ್ಯಕ್ತಿಗೂ ಕನ್ನಡವನ್ನೇ ಬಳಸುವುದರ ಮೂಲಕ ಕನ್ನಡ ಚಳವಳಿಯನ್ನೂ ದೊಡ್ಡ ಬಗೆಯಲ್ಲಿ ನಡೆಸಿದರು. ವಚನವು ಸಾಹಿತ್ಯ ಎಂಬ ಹೆಸರಿನಿದ ಹುಟ್ಟದಿದ್ದರೂ ಮುಂದೆ ಅದರ ಪ್ರಭಾವವಲಯದಲ್ಲಿ ಬಂದ ಲೇಖಕರು ಜನರ ಭಾಷೆಗೆ ಹತ್ತಿರವಾದ ರೀತಿಯಲ್ಲಿ ಕಾವ್ಯ ಬರೆಯಲು ತೊಡಗಿದರು. ಸಂಸ್ಕೃತ ಯಾಜಮಾನ್ಯದ ಚಂಪೂ ಪ್ರಕಾರದ ಬದಲಾಗಿ ರಗಳೆ ಷಟ್ಪದಿಗಳನ್ನು ಬರೆದರು. ಮೇಲು ನೋಟಕ್ಕೆ ಆದ ಬದಲಾವಣೆಗಳ ಹಿಂದೆ ಜನಪರ ಧೋರಣೆಯಿದ್ದುದು ಸ್ಪಷ್ಟವಾಗಿದೆ. ಸಾಮಾನ್ಯರಲ್ಲಿ ಆತ್ಮವಿಶ್ವಾಸವು ತುಂಬಿಕೊಂಡಂತೆಲ್ಲ ಜನಭಾಷೆಯಾದ ಕನ್ನಡಕ್ಕೆ ಹೆಚ್ಚೆಚ್ಚು ಮಾನ್ಯತೆ ಬಂತು.
ಮುಂದೆಯೂ ಈ ಜನಪರತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯಶೀಲವಾಯಿತು. ಹಾಗೆ ಆಗಲು ಕಾರಣ ಬದುಕಿನ ದೃಷ್ಟಿಕೋನವು ಸಾಮಾನ್ಯ ಜನರನ್ನು ಒಂದಿಲ್ಲೊಂದು ಬಗೆಯಲ್ಲಿ ತನ್ನ ಪ್ರಜ್ಞೆಯ ಕೇಂದ್ರಕ್ಕೆ ತಂದುಕೊಂಡದ್ದು. ‘ಹರಿದಾಸ ಚಳವಳಿ’ ಬೇರೊಂದು ಬಗೆಯಲ್ಲಿ ಸಾಮಾಜಿಕ ಚಳವಳಿಯೂ ಆಯಿತು. ಅದುವರೆಗೆ ಕನ್ನಡ ಕೆಳವರ್ಗದವರ ಭಾಷೆ ಎನ್ನಿಸಿಕೊಂಡಿದ್ದುದು, ಇದರಿಂದಾಗಿ ಮೇಲ್ವರ್ಗದವರೂ ಕನ್ನಡವನ್ನು ಮಾನ್ಯ ಮಾಡಬೇಕಾದ ಆವಶ್ಯಕತೆಯನ್ನು ಅರಿತುಕೊಳ್ಳುವಂತೆ ಮಾಡಿತು. ದೇವಸ್ಥಾನಗಳಲ್ಲಿ ಪೂಜೆಯ ಕಾಲದಲ್ಲಿ ಸಂಸ್ಕೃತದ ಜೊತೆಗೆ ಕನ್ನಡ ಹಾಡುಗಳು ಮೆರೆಯತೊಡಗಿದವು. ಒಂದು ರೀತಿಯಲ್ಲಿ ಶೂದ್ರವರ್ಗವು ಗರ್ಭಗುಡಿಯನ್ನು ಪ್ರವೇಶಿಸಿದ ರೀತಿ ಇದು. ಜೊತೆಜೊತೆಗೇ ಹೊಸ ಬಗೆಯ ವಚನಗಳೂ, ಸಾಮಾನ್ಯ ವರ್ಗದವರ ತತ್ವಪದಗಳೂ ನಾಡಿನೆಲ್ಲೆಡೆ ನಲಿಯತೊಡಗಿದವು. ಅಲ್ಲದೆ ಜನಪದರ ಹಾಡಿನ ಮಟ್ಟುಗಳ ಆಧಾರವಾಗಿದ್ದ ತ್ರಿಪದಿ ಸಾಂಗತ್ಯಗಳು ಬರವಣಿಗೆಯಲ್ಲಿಯೂ ಮೂಡತೊಡಗಿದ್ದು ಜನಸಾಮಾನ್ಯರ ಗೆಲವಿನ ಮುಂದಿನ ಮಜಲಾಯಿತು. ಜೊತೆಗೇ ವಚನ ಚಳವಳಿಯ ಕಾಲದಲ್ಲಿ ಬರೆಯತೊಡಗಿದ್ದ ಹೆಣ್ಣುಮಕ್ಕಳಂತೆಯೆ ಈ ಕಾಲದಿಂದ ಮುಂದೆ ಹಲವಾರು ಬರಹಗಾರ್ತಿಯರೂ ಶೂದ್ರರೂ ಕಾಣಿಸಿಕೊಂಡರು.
ಬ್ರಿಟಿಷರು ಬಂದು ನಮ್ಮನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡದ್ದು ನಿಜವಾದರೂ, ಇಂಗ್ಲಿಷ್‍ನ ಕಲಿಕೆಯಿಂದಾಗಿ ಆರಂಭಗೊಂಡ ಚಿಂತನಕ್ರಾಂತಿ ಬಹು ಮಹತ್ವದ್ದು. ಇಂಗ್ಲಿಷ್ ಸಾಹಿತ್ಯದಲ್ಲಿನ ವೈವಿಧ್ಯಕ್ಕೆ ಮಾರು ಹೋಗಿ ಬಗೆಬಗೆಯ ಪ್ರಕಾರಗಳನ್ನು ಕನ್ನಡದಲ್ಲಿಯೂ ಬರಹಗಾರರು ತರುವುದರ ಜೊತೆಗೆ, ಪಾಶ್ಚಾತ್ಯ ಪ್ರಭಾವದಿಂದ ವೈಜ್ಞಾನಿಕತೆ, ವೈಚಾರಿಕತೆ ಹಾಗೂ ಪ್ರಜಾಪ್ರಭುತ್ವದ ಬಹು ಮುಖ್ಯ ಮೌಲ್ಯವಾದ ಸಮಾನತೆ ಈ ಆಶಯಗಳನ್ನು ಸಾಹಿತ್ಯ ತನ್ನೊಡಲಲ್ಲಿ ತುಂಬಿಕೊಳ್ಳತೊಡಗಿತು. ಕನ್ನಡದ ಮಹತ್ವ ಕನ್ನಡ ಜನರಿಗೆ ಅರ್ಥವಾಗತೊಡಗಿತು. ಹಾಗಾಗಿ ಒಂದು ಭಾಷೆಯನ್ನಾಡುವ ಜನ ಶೋಷಣೆಯಿಲ್ಲದೆ ಬಾಳ್ವೆ ಮಾಡಬೇಕಾದರೆ ಜನಭಾಷೆಗೆ ಮನ್ನಣೆ ಆವಶ್ಯಕವೆಂಬ ತಿಳಿವಳಿಕೆ ಆಳವಾಗಿ, ಆಡಳಿತವೆಲ್ಲ ಕಲಿಕೆಯೆಲ್ಲ ವ್ಯವಹಾರವೆಲ್ಲ ಕನ್ನಡದಲ್ಲಿಯೇ ನಡೆಯಲು ಅನುಕೂಲವಾಗುವ ದೃಷ್ಟಿಯಿಂದ ಬೇರೆ ಬೇರೆ ಭಾಗಗಳಲ್ಲಿದ್ದ ಕನ್ನಡಿಗರನ್ನೆಲ್ಲ ಒಂದೇ ರಾಜ್ಯದ ವ್ಯಾಪ್ತಿಗೆ ತರಬೇಕೆಂಬ ಆಶಯವುಳ್ಳ ಕರ್ನಾಟಕ ಏಕೀಕರಣವೆಂಬ ರಾಜಕೀಯ ಚಳವಳಿಯೂ ತೀವ್ರತೆಯನ್ನು ಪಡೆಯಿತು. ಹೀಗಾಗಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಒಂದಕ್ಕೊಂದು ಸೇರಿಕೊಂಡಿರುವ ಮುಪ್ಪುರಿಯ ಪರಿಕಲ್ಪನೆ ಬಲವಾಯಿತು.
ರಾಜಕೀಯವಾಗಿ ಕನ್ನಡ ನಾಡು 1956 ರವರೆಗೆ ಎದೂ ಒಂದು ಘಟಕವಾಗಿರದಿದ್ದರೂ ಕನ್ನಡ ಮಾತನಾಡುವ ಜನರದ್ದು ಬೇರೆಯದೇ ಆದ ಅಸ್ತಿತ್ವ ಎಂಬ ಪ್ರಜ್ಞೆಯು ಮೊದಲಿನಿಂದಲೂ ಇದ್ದುದಕ್ಕೆ ಸೂಚನೆ ‘ಕವಿರಾಜಮಾರ್ಗ’ದಲ್ಲಿಯೇ ಇದೆಯೆಲ್ಲ. ಅಂದರೆ, ರಾಜಕೀಯವಾಗಿ ಒಂದಾಗಿರಲಿ ಬಿಡಲಿ ಸಾಂಸ್ಕೃತಿಕವಾಗಿ ನಾವೆಲ್ಲ ಒಂದು ಎಂಬ ಭಾವನೆ ಒಂದು ಸಾವಿರದ ಇನ್ನೂರು ವರ್ಷಗಳ ಹಿಂದಿನ ಬರವಣಿಗೆಯಲ್ಲೇ ಇದೆ, ಭಾವನೆ ಇನ್ನೂ ಹಳೆಯದಿರಬೇಕು. ಕಾವೇರಿಯಿಂದ ಗೋದಾವರಿಯವರೆಗಿನ ನಾಡನ್ನು ಕನ್ನಡ ಎಂದು ಅಲ್ಲಿ ಕರೆದಿದೆಯಲ್ಲ, ಆಗೇನೂ ಆ ಕಾಲದ ಚಕ್ರವರ್ತಿಯಾಗಿದ್ದ ಅಮೋಘವರ್ಷ ನೃಪತುಂಗನ ಆಳ್ವಿಕೆಗೆ ಆ ಭಾಗವೆಲ್ಲ ಒಳಗಾಗಿರಲಿಲ್ಲ. ಯಾಕೆಂದರೆ ದಕ್ಷಿಣದಲ್ಲಿ ಕನ್ನಡವು ಕಾವೇರಿಯ ಅಂಚಿನಿಂದಾಚೆಗೂ ಇತ್ತು. ಆದರೆ ಕನ್ನಡ ಜನರು ಭಾವನಾತ್ಮಕವಾಗಿ ಒಂದು ಎಂಬ ಪ್ರಜ್ಞೆಗೆ ಈ ಮಾತು ಸಾಕ್ಷಿ. ಅಲ್ಲದೆ ಕನ್ನಡ ನಾಡಿನ ಬೇರೆ ಬೇರೆ ಭಾಗಗಳನ್ನು ಆಳಿದ ದೊರೆಗಳೆಲ್ಲ ಕನ್ನಡಪರವಾಗಿಯೇ ಇದ್ದರು, ಕನ್ನಡ ಕವಿಗಳಿಗೆ ಆಶ್ರಯವಿತ್ತರು, ಶಾಸನಗಳನ್ನು ಕನ್ನಡದಲ್ಲಿಯೇ ಬರೆಸಿದರು, ನಿರೂಪಗಳನ್ನು ಕನ್ನಡದಲ್ಲಿಯೇ ಕಳಿಸಿದರು. ಈಚೆಗಂತೂ ಕನ್ನಡ ಸಮುದ್ರದಾಚೆಗೂ ಹಬ್ಬಿದೆ. ವಿದೇಶಗಳ ಕನ್ನಡ ಹಾಗೂ ಕನ್ನಡಿಗರ ಸಂಘಟನೆಗಳು ಅಲ್ಲೆಲ್ಲ ಕನ್ನಡ ದೀವಿಗೆಯನ್ನು ಪಟುಗೊಳಿಸುತ್ತಲಿವೆ.
ಆಧುನಿಕ ಯುಗದಲ್ಲಿ, ಅಂದರೆ ಹತ್ತೊಂಬತ್ತನೇ ಶತಮಾನದ ಎರಡನೆಯ ಭಾಗದಿಂದ ಹೊಸ ಚಿಂತನಕ್ರಮದತ್ತ ಹೊರಳಿದ ಕನ್ನಡ ಜನಪದವು ಪಾಶ್ಚಾತ್ಯ ಪ್ರಭಾವಕ್ಕೆ ತನ್ನನ್ನು ಒಡ್ಡಿಕೊಂಡಿದ್ದರೂ ಆಂತರ್ಯದಲ್ಲಿ ಸ್ವಕೀಯತೆಯ ಗೂಡನ್ನು ಭದ್ರಪಡಿಸಿಕೊಳ್ಳುವ ರೋಚಕ ಸನ್ನಿವೇಶಗಳೂ ಕನ್ನಡ ಚಳವಳಿಯ ಫಲವೇ ಆಗಿದೆ. ಕನ್ನಡ ಸಂಸ್ಕೃತಿಯು ನಿಚ್ಚಳವಾಗಿ ಕಾಣಿಸಿಕೊಂಡ ಕ್ರಿಸ್ತಶಕಪರ್ವ ವರ್ಷಗಳಿಂದ ಸಂಗೀತ, ಜಾನಪದ, ನೃತ್ಯ, ಭಾಷೆ, ಬದುಕುಗಳಿಗೆ ಸಂಬಂಧಿಸಿದ ಎಲ್ಲವೂ - ಕನ್ನಡಿಗರು ತಮ್ಮತನವನ್ನು ಗಟ್ಟಿಗೊಳಿಸಿಕೊಳ್ಳಲು ಮಾಡಿದ ನೇರ ಹೋರಾಟಗಳು ಮತ್ತು ಪರೋಕ್ಷ ಪ್ರಯತ್ನಗಳು ಎಲ್ಲವೂ ಕನ್ನಡ ಚಳವಳಿಯ ವಿವಿಧ ರೂಪಗಳೇ ಆಗಿವೆ. ಕನ್ನಡ ಜನಸಮುದಾಯ ಬದುಕುಳಿಯಬೇಕಾದರೆ ಈ ಬಗೆಯ ಅನಂತರೂಪದ ಚಳವಳಿ ಮುಂದುವರಿಯುತ್ತಲೇ ಇರಬೇಕು.
*******
                                               


No comments: