Monday, 10 October 2016

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ

         ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ

        ನಾನಾ ಕಾರಣಗಳಿಗಾಗಿ ಜನರು ತಮ್ಮ ಸಹಜ ನೆಲೆಯಿಂದ ಬೇರೆಡೆಗೆ ವಲಸೆ ಹೋಗುತ್ತಿದ್ದುದು ಮೊದಲಿನಿಂದಲೂ ಸಾಮಾನ್ಯ; ಬರ, ಅತಿವೃಷ್ಟಿ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳು, ಯುದ್ಧಭೀತಿ, ಸಾಂಕ್ರಾಮಿಕ ರೋಗಗಳಂತಹ ಅಸಾಮಾನ್ಯ ಪರಿಸ್ಥಿಗಳು ವಲಸೆಗೆ ಕಾರಣವಾಗುತ್ತಿದ್ದವು. ಬಹುಪಾಲು ಸಂದರ್ಭಗಲಳ ಹೀಗೆ ಬೇರೆಡೆಗೆ ಹೋಗಿ ಬದುಕಿದವರು ತಮ್ಮ ನೆಲೆಗಳಲ್ಲಿ ಸಹಜ ಸ್ಥಿತಿ ಮರಳಿದಾಗ ತಾವೂ ಅಲ್ಲಿಗೆ ಮರಳುತ್ತಿದ್ದರು. ನೆಲಕ್ಕೂ ಜನಕ್ಕೂ ಇರುವ ಸಹಜ ಕರುಳಸಂಬಂಧ ಅಂತಹುದು. ಜೊತೆಗೆ ಭೌಗೋಳಿಕ ಪರಿಸ್ಥಿತಿಗೂ ಅಲ್ಲಿನ ಜನಗಳಿಗೂ ಅವರ ಬದುಕಿನ ರೀತಿಗೂ ಅನನ್ಯ ನಂಟು ಇದ್ದು ಸಹಜ ಸಮತೋಲನವಿರುವುದೇ ಇದಕ್ಕೆ ಕಾರಣ. ಆದರೆ ಆಧುನಿಕತೆ, ವಿಶೇಷವಾಗಿ ಔದ್ಯೋಗೀಕರಣ, ಅದರಲ್ಲೂ ಈ ಕಾಲು ಶತಮಾನದಿಂದೀಚೆಗಿನ ಜಾಗತೀಕರಣವೆಂಬ ಪೀಡೆಯಿಂದಾಗಿ ಅಸಹಜ ವಲಸೆಗೆ ಅವಕಾಶವಾಗಿ ಇಂತಹ ಸಾಂಸ್ಕೃತಿಕ ಸಮತೋಲನದಲ್ಲಿ ಏರುಪೇರಾಗುತ್ತಿದೆ; ಆಧುನಿಕ ಪಿಡುಗುಗಳಾದ ವಾಯುಮಾಲಿನ್ಯ, ಪರಿಸರ ಮಾಲಿನ್ಯ ಜಲಮಾಲಿನ್ಯಗಳಂತೆ ಸಾಂಸ್ಕೃತಿಕ ಮಾಲಿನ್ಯವೂ ನಮ್ಮತನದ ಸಹಜತೆಯನ್ನು ಬಲಿತೆಗೆದುಕೊಳ್ಳುತ್ತಿದೆ.
        ಜಾಗತೀಕರಣಕ್ಕೆ ಹಿಂದೆ ಸಂಸತ್ತಿನಲ್ಲಿ ಒಪ್ಪಿತವಾದ ಉದ್ಯೋಗ ವಿನಿಮಯ ಕೇಂದ್ರಗಳು ಎಲ್ಲ ರಾಜ್ಯಗಳಲ್ಲೂ ಇದ್ದುವು: ಅವುಗಳ ಮೂಲ ಉದ್ದೇಶವೆಂದರೆ ರಾಜ್ಯದ ಅರ್ಹ ಅಭ್ಯರ್ಥಿಗಳಿಗೆ ಆಯಾ ರಾಜ್ಯಗಳಲ್ಲಿ ಅವರವರ ವಿದ್ಯಾರ್ಹತೆ, ಅನುಭವ, ಕೌಶಲಗಳಿಗೆ ಅನುಗುಣವಾದ ಉದ್ಯೋಗಗಳನ್ನು ಪಡೆಯಲು ಸರ್ಕಾರವೇ ಸೂಕ್ತ ಮಾರ್ಗದರ್ಶನ ಹಾಗೂ ನೆರವು ನೀಡುವುದು. ಅದಕ್ಕಾಗಿ ರಾಜ್ಯದೆಲ್ಲೆಡೆ ಉದ್ಯೋಗ ವಿನಿಮಯ ಕೇಂದ್ರಗಳಿರುತ್ತಿದ್ದುವು. ಹೀಗಿದ್ದಾಗಲೂ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕನ್ನಡಿಗರಿಗೆ ಅವಕಾಶಗಳು ತಪ್ಪುತ್ತಿದ್ದುವು; ಬೇರೆ ರಾಜ್ಯಗಳವರು ಬೆಂಗಳೂರಿನ ತಮ್ಮ ನಂಟರ ಮನೆಗಳ ವಿಳಾಸಗಳನ್ನಿತ್ತು ತಾವೂ ಇದೇ ಸ್ಥಳದವರೆಂದು ಬಿಂಬಿಸಿಕೊಂಡು ಇಲ್ಲಿನ ಸಹಜ ನಿವಾಸಿಗಳ ಅವಕಾಶಗಳನ್ನು ತಮ್ಮ ಹಣಬಲ ಮತ್ತು ವಶೀಲಿಗಳಿಂದ ಕಸಿದುಕೊಳ್ಳುತ್ತಿದ್ದರು. ಇದರ ವಿರುದ್ಧ ನಾವೇ ಹೋರಾಟ ಮಾಡಿದ್ದೇವೆ; ಬೆಂಗಳೂರಿನಲ್ಲಿನ ಉದ್ಯೋಗಗಳಿಗೆ ಬೆಂಗಳೂರಿನ ಉದ್ಯೋಗ ವಿನಿಮಯ ಕೇಂದ್ರಗಳಿಂದ ಮಾತ್ರವಲ್ಲದೆ, ರಾಜ್ಯದ ಇತರೆಡೆಗಳ ಕೇಂದ್ರಗಳಿಂದಲೂ ಸೂಕ್ತ ಅಭ್ಯರ್ಥಿಗಳ ಪಟ್ಟಿಗಳನ್ನು ತರಿಸಿಕೊಂಡು ಸಂದರ್ಶನವನ್ನು ಮಾಡಬೇಕೆಂಬುದು ನಮ್ಮ ಒತ್ತಾಯವಾಗಿತ್ತು. ಹೀಗಿದ್ದೂ ಕೇಂದ್ರ ಸರ್ಕಾರದ ಕಾರ್ಖಾನೆಗಳಲ್ಲಿ, ಕಚೇರಿಗಳಲ್ಲಿ ಬೇರೆಯವರೇ ಹೇಗೋ ಬಂದು ತುಂಬಿರುತ್ತಿದ್ದರು. ಈ ಕಾರಣಕ್ಕಾಗಿಯೇ ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದಾಗ ಸಾಹಿತಿಗಳ ಕಲಾವಿದರ ಬಳಗ ಇತರರ ಜೊತೆ ಸೇರಿ ಹೋರಾಟ ಮಾಡಿ ಕೇಂದ್ರ ಸರ್ಕಾರಗಳಲ್ಲಿನ ಉದ್ಯಮಗಳಲ್ಲಿ ಕನ್ನಡಿಗರ ಉದ್ಯೋಗ ಪರಿಸ್ಥಿತಿಯನ್ನು ಅಭ್ಯಸಿಸಿ ಅವುಗಳಲ್ಲಿ ಕನ್ನಡಿಗರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಲು ಸಲಹೆಗಳನ್ನು ನೀಡಲು ಸರೋಜಿನಿ ಮಹಿಷಿ ಸಮಿತಿಯನ್ನು ನೇಮಿಸಲು ಒತ್ತಾಯಿಸಿ ಸಫಲವಾದದ್ದು. ಆ ಸಮಿತಿಯು ನಿಡುಗಾಲ ಪ್ರವಾಸ ಕೈಗೊಂಡು ಆಧ್ಯಯನಶೀಲವಾದ ವರದಿಯನ್ನಿತ್ತು, ಹದಿನೈದು ವರ್ಷಗಳಿಗಿಂತ ಕಡಿಮೆಯಲ್ಲದ ಅವಧಿಯಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವ ಹಾಗೂ ಕನ್ನಡವನ್ನು ಓದು ಬರೆದು ಮಾತನಾಡಬಲ್ಲ ವ್ಯಕ್ತಿಗಳನ್ನು ಕನ್ನಡಿಗರೆಂದು ಗುರುತಿಸುವಂತೆ ಹಾಗೂ ಸಾಮಾನ್ಯ ದರ್ಜೆಯ ಹುದ್ದೆಗಳಿಗೆ ಇಂತಹವರನ್ನು ಶೇಕಡ ಎಂಬತ್ತಕ್ಕೆ ಕಡಿಮೆಯಿಲ್ಲದಷ್ಟು ಪ್ರಮಾಣದಲ್ಲಿ ನೇಮಿಸಿಕೊಳ್ಳಬೇಕೆಂಬ ಮುಖ್ಯ ಸಲಹೆಯಿತ್ತಿತು. ಇದು ನಡೆದದ್ದು 1983-85 ರ ನಡುವಣ ಅವಧಿಯಲ್ಲಿ.
        ಆದರೆ ಈ ಸಲಹೆಯು ಜಾರಿಗೆ ಬಂದು ಫಲ ಕೊಡಲು ತೊಡಗುವ ಮುಂಚೆಯೇ 1991 ರಲ್ಲಿ ಭಾರತ ಸರ್ಕಾರವು ಗ್ಯಾಟ್ ಒಪ್ಪಂದಕ್ಕೆ ಸಹಿಮಾಡಿ ನಮ್ಮನ್ನು ಗಾಳಕ್ಕೆ ಸಿಲುಕಿಸಿ, ಜಾಗತೀಕರಣದ ಜೊತೆಯಲ್ಲಿ ಉದಾರೀಕರಣ ಮತ್ತು ಖಾಸಗೀಕರಣಗಳು ಸೇರಿಕೊಂಡು ತನ್ನ ಜನರ ಕತ್ತನ್ನು ಹಿಸುಕಲು ಅವಕಾಶ ನೀಡತೊಡಗಿದ್ದು. ಆನಂತರ ದುರಾಸೆಯ ದೆಸೆಯಿಂದ ಸರ್ಕಾರಿ ಉದ್ಯಮಗಳನ್ನೆಲ್ಲ ಖಾಸಗೀ ಒಡೆತನಕ್ಕೆ ಒಪ್ಪಿಸುತ್ತ, ಅವರಿಂದ ಅಧಿಕಾರಸ್ಥರು ನಜರನ್ನು ಒಪ್ಪಿಸಿಕೊಳ್ಳುವ ಪರಿಪಾಟ ಭರದಿಂದ ಸಾಗಿತು. ಅಂದಿನಿಂದ ಈಗಲೂ ಕಾರ್ಪೊರೇಟ್‍ಗಳ ಬಿಗಿಹಿಡಿತದಲ್ಲಿ ರಾಜ್ಯ ಸರ್ಕಾರಗಳೂ, ಕೇಂದ್ರ ಸರ್ಕಾರವೂ ಸಿಲುಕಿಕೊಳ್ಳುವುದರ ಜೊತೆಗೆ, ಯುವಜನರನ್ನು ಹಣದಾಸೆಗೆ ಬಲಿಬೀಳುವಂತೆ ಮಾಡಿ, ಬದುಕಿಗಿಂತ ದುಡ್ಡು ದೊಡ್ಡದೆಂಬ ಪಾಠವನ್ನು ಕಲಿಸಿ ಬದುಕನ್ನು ಹಾಳುಮಾಡುತ್ತ ಬಂದಿದೆ. ಎಲ್ಲ ಸರ್ಕಾರಗಳೂ ಹೊರದೇಶಗಳಿಂದ ನಮ್ಮ ದೇಶಕ್ಕೆ ಬಂಡವಾಳ ಹರಿದು ಬರುವಂತೆ ಮಾಡುವಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಮನೆಬಾಗಿಲುಗಳನ್ನು ಕಾಯುತ್ತಿವೆ. ಎಡ ಪಕ್ಷಗಳು ಅಧಿಕಾರದಲ್ಲಿದ್ದ ಬಂಗಾಳ ಮತ್ತು ಕೇರಳಗಳಂತಹವೂ ಹೊರದೇಶಗಳ ಬಂಡವಾಳಗಾರರನ್ನು ತಮ್ಮ ರಾಜ್ಯಗಳಲ್ಲಿ ಬಂಡವಾಳ ಹೂಡುವಂತೆ ಮಂಡಿಯೂರಿ ಬೇಡಿಕೊಳ್ಳಲು ಮೇಳಗಳನ್ನು ನಡೆಸುತ್ತಿವೆ; ಇದಕ್ಕಾಗಿ ತಮ್ಮತಮ್ಮಲ್ಲಿ ಪೈಪೋಟಿಯನ್ನೂ ನಡೆಸುತ್ತಿವೆ. ಈಚೆಗೆ ಮಂತ್ರಪೂತ ಭಾರತ ಸರ್ಕಾರವು ‘make in India’ ಎಂಬ ದಿವ್ಯಮಂತ್ರವನ್ನು ಜಪಿಸುತ್ತ, ಜೀವವಿಮೆಯಂತಹ ಜನರ ಬದುಕು-ಸಾವುಗಳಿಗೆ ಸಂಬಂಧಿಸಿದಂತಹ ಕ್ಷೇತ್ರಗಳಲ್ಲಿಯೂ ನೇರ ವಿದೇಶೀ ಬಂಡವಾಳ ಹೂಡಿಕೆಗೂ ದೇಶದ ಬಾಗಿಲನ್ನು ತೆರೆದಿಟ್ಟು ಕೂತಿದೆ. ತನ್ನ ಪ್ರಜೆಗಳೆಲ್ಲರಿಗೂ ಅನ್ನ, ಅಕ್ಷರ, ಆರೋಗ್ಯಗಳನ್ನು ಒದಗಿಸುವ ಕರ್ತವ್ಯ ಹೊತ್ತ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತು ಇವೆಲ್ಲ ಉಳ್ಳವರ ಪಾಲಾಗುವಂತೆ ಕಣ್ಣಿಗೆ ಎಣ್ಣೆಹಾಕಿಕೊಂಡು ಪಾಲಿಸುತ್ತ ಬಂದಿವೆ, ಬರುತ್ತಿವೆ.
        ಬಹುರಾಷ್ಟ್ರೀಯ ಕಂಪನಿಗಳು ವಿದೇಶಗಳ ಆವಶ್ಯಕತೆಗಳನ್ನು ಪೂರೈಸುವ ಕೈಂಕರ್ಯ ಹೊತ್ತು ತಾವು ಲಾಭ ಮಾಡಿಕೊಳ್ಳುತ್ತ ಸಾಮಾನ್ಯರ ಬದುಕುಗಳನ್ನು ಛಿದ್ರಗೊಳಿಸುತ್ತಿವೆ. ನಮ್ಮ ಸರ್ಕಾರಗಳು ರೈತರ ಸಾಗುವಳಿ ಭೂಮಿಯನ್ನು ಎಸ್ ಇ ಜ಼ಡ್ ನಿರ್ಮಾಣದ ಹೆಸರಿನಲ್ಲಿ ಖರೀದಿಸಿ ರೈತರನ್ನು ಭೂ ಒಡೆತನದಿಂದ ಬಿಡಿಸಿ, ಇಂಥ ಕಂಪನಿಗಳಿಗೆ ಕೊಟ್ಟು, ಅವರಿಗೆ ತೆರಿಗೆ ವಿನಾಯಿತಿ ನೀಡಿ ವಿದ್ಯುತ್ತನ್ನು ಒದಗಿಸಿ, ನೀರನ್ನು ಕೊಟ್ಟು ಆದಾಯವನ್ನು ನಿರೀಕ್ಷಿಸುತ್ತವೆ. ಅದೂ ಈ ಕಂಪನಿಗಳೆಲ್ಲ ಬೆಂಗಳೂರಿನಂತಹ ಸ್ಥಳಗಳಲ್ಲಿಯೇ ಆಗಬೇಕು; ವಿದೇಶೀ ಒಡೆಯರ ಕಾರುಗಳು ಯಜಮಾನರನ್ನು ಅಲ್ಪಸ್ವಲ್ಪವೂ ಓಲಾಡಿಸದೆ ಓಡಾಡಿಸಲು ರಸ್ತೆಗಳನ್ನು ಸಜ್ಜುಗೊಳಿಸುತ್ತ, ಅವುಗಳನ್ನು ಅಗಲಮಾಡಿ, ಅವರ ಬಿಳಿ ಕಾಲರಿನ ಜೀತದಾಳುಗಳು ವಾಸಿಸಲು ಅನುಕೂಲವಾಗುವಂತಹ ಹತ್ತಾರು ಅಂತಸ್ತುಗಳ ಸಾವಿರಾರು ಮನೆಗಳಿರುವ ವಠಾರಗಳನ್ನು ನಿರ್ಮಿಸುವ ಡೆವಲಪರ್‍ಗಳನ್ನು ಪೋಷಿಸುತ್ತ ಸಾಮಾನ್ಯರ ಕುಡಿಯುವ ನೀರಿಗೂ ಬರ ಉಂಟಾಗುವಂತೆ ಮಾಡಲು ನಮ್ಮ ಸರ್ಕಾರಗಳು ಹೆಣಗುತ್ತಿವೆ. ರೈತಾಪಿ ಬದುಕು ಸಾಲಮಯವಾಗುವಂತೆ ಮಾಡಿ, ಹಳ್ಳಿಗಳ ಯುವಕರು ಬೇಸಾಯಕ್ಕೆ ರೋಸಿ ತಾಪೇದಾರಿಯನ್ನು ಹುಡುಕಿಕೊಂಡು ದೂರದ ನಗರಗಳಿಗೆ ಬರುವುದು, ನಗರದ ವಿದ್ಯಾವಂತ ಯುವಜನರು ತಮ್ಮ ತಾಯ್ತಂದೆಯರನ್ನು ವೃದ್ಧಾಶ್ರಮಗಳಿಗೆ ಸೇರಿಸಿ ವಿದೇಶಗಳಿಗೆ ಹೋಗುವುದು ಇದರಿಂದಾಗಿ ಹಳ್ಳಿಗಳಲ್ಲಿಯೂ ಬರೀ ಮುದುಕರೇ ಉಳಿಯುವಂತಾಗಿದೆ; ನಗರಗಳ ವಿದ್ಯಾವಂತ ಕುಟುಂಬಗಳಲ್ಲಿಯೂ ಮುದುಕರೇ ಉಳಿಯುವಂತಹ ಪರಿಸ್ಥಿತಿ ಒದಗಿದೆ. ಇದನ್ನೇ ನಮ್ಮ ಸರ್ಕಾರಗಳು ‘ಅಭಿವೃದ್ಧಿ’ ಎಂದು ಕನವರಿಸುವುದು; ಇದಕ್ಕಾಗಿಯೇ ಲಕ್ಷಾಂತರ ಕೋಟಿ ಹಣವನ್ನು ತೆಗೆದಿರಿಸುವುದು. ಹೀಗೆ ನಮ್ಮ ಕುಟುಂಬಜೀವನ ಹಾಳಾಗಿ, ‘ಸಂಬಂಜ ಅನ್ನೋದು ದೊಡ್ಡದುಕನಾ’ ಎಂಬಂತಹ ಮಾತುಗಳು ಅರ್ಥವಿಹೀನವಾಗಿ ಹೋಗಿದೆ.
        ಬಹುರಾಷ್ಟ್ರೀಯ ಕಂಪನಿಗಳ ಮುಖ್ಯ ಉದ್ದೇಶ ಲಾಭ ಗಳಿಸುವುದು. ಅವರು ಇಲ್ಲಿ ಬಂಡವಾಳ ಹೂಡುವುದು ಇಲ್ಲಿನ ಜನರ ಉದ್ಧಾರಕ್ಕಲ್ಲ; ನಮ್ಮ ಜನಪ್ರತಿನಿಧಿಗಳಿಗೇ ಬೇಕಿಲ್ಲದ ಜನರ ಉದ್ಧಾರ ಇವರಿಗೇಕೆ ಬೇಕು ಹೇಳಿ? ನಮ್ಮ ಹುಡುಗರು ರಾತ್ರಿ ಪಾಳಿ ಮಾಡಿ ವಿದೇಶೀಯರ ವ್ಯಾವಹಾರಿಕ ವಿಚಾರಣೆಗಳಿಗೆ ಅವರ ಉಚ್ಚಾರಣೆಯ ಇಂಗ್ಲಿಷನ್ನೇ ಕಲಿತು ಉತ್ತರಿಸುವುದು, ಹಣಕ್ಕಾಗಿ ಉಸಿರುಗಟ್ಟಿ ದುಡಿಯುತ್ತ ಮಾನಸಿಕ ಒತ್ತಡ ತಡೆಯದೆ ಹೆಚ್ಚು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತ, ಕ್ರೌರ್ಯದ ಪ್ರತಿರೂಪವನ್ನು ಹೊತ್ತು ಬೇಗುದಿಪಡುವಂತೆಯೂ ಆಗಿದೆ. ಜೊತೆಗೆ ಮೆರಿಟ್ ಎಂಬ ಸುಳ್ಳು ಮಾತನ್ನು ಬಳಸಿಕೊಂಡು ದೂರದೂರುಗಳ ಯುವಕರನ್ನೇ ನೇಮಿಸಿಕೊಂಡು ಇಂಥ ಕಂಪನಿಗಳು ಸ್ಥಳೀಯರನ್ನು ವಂಚಿಸುತ್ತಿವೆ. ಇಲ್ಲಿನವರನ್ನೇ ನೇಮಿಸಿಕೊಂಡರೆ ಅವರೆಲ್ಲ ತಮ್ಮ ಭಾಷೆಯ ಕಾರಣದಿಂದ ಒಗ್ಗಟ್ಟಾಗಿ ತಮ್ಮ ಶೋಷಣೆಯನ್ನು ಪ್ರತಿಭಟಿಸುತ್ತಾರೆಯೋ ಎಂಬ ಪುಕ್ಕಲು ಅವರು ಈ ರೀತಿ ಮಾಡುವಂತೆ ತೋರುತ್ತದೆ. ಹೀಗೆ ಬೇರೆ ಬೇರೆ ಕಡೆಯಿಂದ ಇಲ್ಲಿ ಬಂದು ನೌಕರಿ ಪಡೆದವರು ತಮ್ಮ ಅತೀವ ದುಡಿಮೆಯ ಕಾರಣದಿಂದಲೂ, ಕೃತಕ ಬದುಕಿನ ಕಾರಣದಿಂದಲೂ ಸ್ಥಳೀಯ ಜನರೊಡನೆ ಬೆರೆಯದೆ ತಮ್ಮದೇ ದ್ವೀಪಗಳಲ್ಲಿ ಬದುಕುತ್ತಿರುತ್ತಾರೆ; ಜನಸಂದಣಿಯಲ್ಲಿದ್ದೂ ಕಡು ಒಂಟಿತನಕ್ಕೆ ಬಲಿಯಾಗುತ್ತಾರೆ, ದೈಹಿಕ ಆಕರ್ಷಣೆಯಿಂದ ಗಂಡುಹೆಣ್ಣುಗಳು ಒಂದಾದರೂ ಬಹುಬೇಗ ಭ್ರಮನಿರಸನಗೊಂಡು ಪರಸ್ಪರರ ವಂಚನೆ ಮತ್ತು ಕೊಲೆಗಳಿಗೆ ಕೈಹಾಕುತ್ತಾರೆ. ‘ಇಲ್ಲಿರಲಾರದ ಅಲ್ಲಿಗೆ ಹೋಗಲಾರದ’ ಇಂಥವರ ಇಬ್ಬಂದಿತನ ಇಲ್ಲಿನವರ ಬದುಕನ್ನು ಹಸನುಗೆಡಿಸಲು ಸಾಕು. ಎಷ್ಟೋ ಸಂದರ್ಭಗಳು ಇವುಗಳಿಂದ ಸ್ಥಳೀಯರೊಡನೆ ಘರ್ಷಣೆಗಿಳಿಯಲೂ ಕಾರಣವಾಗುವುದನ್ನು ಕಾಣಬಹುದು. ಅಲ್ಲದೆ, ಅವರ ಕೈಯಲ್ಲಿ ಹಣ ಝಣಝಣಿಸುತ್ತಿರುವುದರಿಂದ ಇಲ್ಲಿನವರ ಬಗೆಗೆ ಕೀಳುಭಾವನೆಯಿಂದ ಕೂಡಿರುವುದರಿಂದಲೂ ಇಂಥ ತಿಕ್ಕಾಟಗಳು ಸಾಮಾನ್ಯ. ಸ್ಥಳೀಯರು ಹೊರಗಿನವರನ್ನು ಸೌಜನ್ಯದಿಂದ ಕಾಣಬೇಕೆಂಬುದು ಸರಿಯಾದರೂ, ಹೊರಗಿನವರು ಇಲ್ಲಿನ ಜನಗಳ ಜೊತೆ ಬೆರೆತು ಅವರ ನುಡಿಯನ್ನು ಕಲಿತು, ತಮ್ಮ ತಮ್ಮ ಮನೆಗಳ ಗೋಡೆಗಳ ನಡುವೆ ಹೇಗೇ ಇದ್ದರೂ, ಹೊರಗೆ ಬಂದಾಗ ಸ್ಥಳೀಯ ವಾತಾವರಣದ ಸಮತೋಲನವನ್ನು ಹದಗೆಡಿಸದಂತೆ ಬಾಳಬೇಕಾದುದು ಆವಶ್ಯಕ. ಕುಡಿಯುವ ನೀರಿಗೇ ತತ್ವಾರವಾಗಿ ತಮಿಳುನಾಡಿಗೆ ನೀರು ಬಿಡುವ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರತಿಭಟಿಸಲು ನಮ್ಮ ಸಂಘಟನೆಗಳು ‘ಕರ್ನಾಟಕ ಬಂದ್’ ಮಾಡಿದಾಗ ಒಬ್ಬ ಉದ್ದಿಮೆಗಾರ್ತಿ ‘ಇದು ಬೆಂಗಳೂರಲ್ಲ ಬಂದ್‍ಳೂರು’ ಎಂದು ಗೇಲಿ ಮಾಡಿದ್ದು, ಮತ್ತೆ ಯಾರೋ ಉದ್ದಿಮೆದಾರ ಇದರಿಂದ ಬ್ರ್ಯಾಂಡ್ ಬೆಂಗಳೂರಿನ ಇಮೇಜು ಕೆಡುತ್ತದೆ ಎಂದು ಆತಂಕಿಸಿದ್ದೂ ‘ನಮ್ಮೊಡನಿದ್ದೂ ನಮ್ಮಂತಾಗದ’ ಅವರ ಮನೋಭಾವವನ್ನು ಪ್ರತೀಕಿಸುತ್ತದೆ. ಇಂಗ್ಲಂಡ್‍ನಲ್ಲಿ ವಾಸಿಸುವವರಿಗೆ ಇಂಗ್ಲಿಷ್ ಭಾಷೆ ಬರಬೇಕು ಎಂಬ ಮಾತು ಹಿಂದೆ ಕೇಳಿದ್ದೆವು; ಈಗ ನಾನು ಹೇಳುತ್ತಿರುವುದು ಇಂಥ ಮಾತನ್ನೇ: ಕನ್ನಡ ನಾಡಿನಲ್ಲಿ ಬದುಕುವವರು ಕನ್ನಡ ಬಲ್ಲವರಾಗಿರಬೇಕು. ಗೋಕಾಕ್ ಚಳವಳಿಯ ಕಾಲದಲ್ಲಿ ನಮ್ಮ ಘೋಷಣೆಗಳಲ್ಲಿ ಒಂದು ಎಂದರೆ, “ಕನ್ನಡ ಕಲಿಯಿರಿ, ಇಲ್ಲವೇ ತೊಲಗಿರಿ” ಎಂಬುದು.
        ಇಂತಹ ಸ್ಥಳಿಯ-ಪರಕೀಯ ಘರ್ಷಣೆ ನಮ್ಮ ನಾಡಿಗೆ ಮಾತ್ರ ಸೀಮಿತವೇನಲ್ಲ, ಇಂಗ್ಲಂಡ್-ಅಮೆರಿಕಗಳಂತಹ ಕಡೆಗಳಲ್ಲಿಯೂ ಪರಕೀಯರ ಮೇಲೆ ಆಕ್ರಮಣ ಮಾಡುವುದು ಇದೇ ಕಾರಣದಿಂದ; ಹೊರಗಿನವರಿಂದ ತಮ್ಮ ಬದುಕು ಏರುಪೇರಾಗುತ್ತಿದೆ ಎಂಬ ಆತಂಕದಿಂದ. ವಿದೇಶಗಳಲ್ಲಿ ದುಡಿಯಲು ಹೋಗಿರುವ ಕನ್ನಡಿಗರು ಕನ್ನಡ ಸಮ್ಮೇಳನಗಳನ್ನು ನಡೆಸುವುದು ಅಲ್ಲಿನವರ ದೃಷ್ಟಿಯಲ್ಲಿ ತಾವು ಕೂಲಿಗಳು ಮಾತ್ರ ಎಂಬ ತಿಳಿವಳಿಕೆಯನ್ನು ಹೋಗಲಾಡಿಸಲು ತಮ್ಮ ಭಾಷೆಯ ಮೂಲಕ ತಮಗೂ ಒಂದು ವಿಶಿಷ್ಟ ಸಾಂಸ್ಕೃತಿಕ-ಭಾಷಿಕ-ಜಾನಾಂಗಿಕ ಅಸ್ಮಿತೆಯಿದೆ ಎಂಬುದನ್ನು ತೋರಿಸಲು ಎಂದೇ ನನ್ನ ನಂಬಿಕೆ. ಇಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳು ವಿದೇಶಗಳಲ್ಲಿ ಭಾರತದ ಯುವಕರನ್ನು ನೌಕರಿಗೆ ನೇಮಿಸಿಕೊಳ್ಳುವ ಬಗ್ಗೆ ಈಗ್ಗೆ ಹಲವಾರು ವರ್ಷಗಳಿಂದ ಅಲ್ಲಿನ ರಾಜಕೀಯ ನಾಯಕರು ಹುಯ್ಯಲೆಬ್ಬಿಸುವುದನ್ನು ನಾವೆಲ್ಲ ಪತ್ರಿಕೆಗಳಲ್ಲಿ ಓದಿದ್ದೇವೆ. ಇನ್ನು ಕೆಲವು ತಿಂಗಳುಗಳಲ್ಲಿ ನಡೆಯಲಿರುವ ಅಮೆರಿಕೆಯ ಅಧ್ಯಕ್ಷಗಿರಿಯ ಒಬ್ಬ ಹುದ್ದರಿಯಾದ ಟ್ರಂಪ್ ಇತ್ತೀಚೆಗೆ “Accuses Hillary of Ties with TCS, HCL That have ‘Stolen US Jobs’ [‘ಟೈಮ್ಸ್ ಆಫ಼್ ಇಂಡಿಯಾ’] ಎಂದು ಆಕ್ಷೇಪಿಸಿದ್ದಾನೆ. ನಾನು ಟ್ರಂಪ್‍ನ ಅಭಿಮಾನಿಯೂ ಅಲ್ಲ, ಅವನ ಪರವಾಗಿಯೂ ಇಲ್ಲ. ಹಾಗೆಯೇ ಅದೇ ಪತ್ರಿಕೆಯಲ್ಲಿನ ಮತ್ತೊಂದು ದಿನದ ವರದಿಯ  ಶೀರ್ಷಿಕೆಯೇ “Beijing jittery about job loss due to ‘Make in India’ drive” ಎಂದಿದೆ. ಅಂದರೆ ನಮ್ಮ ಯುವಕರಿಗೆ ದಕ್ಕಬೇಕಾದ ನೌಕರಿಗಳನ್ನು ಪರಕೀಯರು ಕಬಳಿಸುತ್ತಿದ್ದಾರೆ ಎಂಬ ನಮ್ಮ ಆಕ್ಷೇಪ ನಮ್ಮ ಸಂಕುಚಿತತೆಯಿಂದ ಬಂದದ್ದಲ್ಲ, ಒಡಲುರಿಯಿಂದ ಬಂದದ್ದು; ಇಂಥದು ಎಲ್ಲೆಡೆಯಲ್ಲಿಯೂ ಇದೆ.
ಅಮೆರಿಕದ ಹಿಂದಿನ ಅಧ್ಯಕ್ಷೀಯ ಚುನಾವಣೆಯ ಕಾಲದಲ್ಲಿ ಇಂಥ ಭಾವನೆ ಮೇಲೆದ್ದು ಸ್ಥಳೀಯರಿಗೆ ಇಂತಿಷ್ಟು ನೌಕರಿ ಮೀಸಲಿಡಬೇಕು ಎಂಬ ಕೂಗು ಎದ್ದಿದ್ದಾಗ, ಇನಫೋಸಿಸ್‍ನ ಮಾನ್ಯ ನಾರಾಯಣ ಮೂರ್ತಿಯವರು ತಾವು ದನ್ನು ಪಾಲಿಸಲು ಸಿದ್ಧರಿರುವುದಾಗಿ ಹೇಳಿದ್ದರೆಂಬುದು ನನ್ನ ನೆನಪಿನಲ್ಲಿದೆ. ಆದರೆ ಅವರು ಇದನ್ನು ಇಲ್ಲಿ ಜಾರಿಗೆ ತರಲು ಇಷ್ಟವಿಲ್ಲ. ಯಾಕಂದರೆ ಬಹಳ ಜನಗಳಲ್ಲಿರುವಂತೆ ಅವರಿಗೂ ಸ್ಥಳೀಯರು ಎಂದರೆ ‘ಭಾರತ’ದವರು ಎಂದೇ ಅನ್ನಿಸುತ್ತದೆ. ಇದು ಸರಿಯಲ್ಲ; ಭಾರತ ‘ಏಕತೆಯಲ್ಲಿ ಅನೇಕತೆ’ಯನ್ನು ಹೊಂದಿರುವಂಥದಲ್ಲ; ಬದಲಾಗಿ ಅನೇಕವು ಒಂದಾಗಿ ಸೇರಿರುವಂತಹವು. ಇಲ್ಲಿನ ಪ್ರತಿ ಭಾಷಿಕ ಘಟಕಕ್ಕೂ ತನ್ನದೇ ಆದ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜ್ಯಗಳ ಹೆಸರುಗಳು ಆಯಾ ರಾಜ್ಯದ ಜನಭಾಷೆಯೊಡನೆ ನೆಲಮೂಲ ಸಂಬಂಧವನ್ನು ಹೊಂದಿರುವಂಥದು; ಕನ್ನಡ ನಮ್ಮ ನಾಡಿನ ಹೆಸರೂ ಹೌದು, ನುಡಿಯ ಹೆಸರೂ ಹೌದು, ಜನಪದದ ಹೆಸರೂ ಹೌದು. “ನಾಡದಾ ಕನ್ನಡದೊಳ್” “ಕನ್ನಡಮೆನಿಪ್ಪಾ ನಾಡು” ಎಂಬಂತಹ ಸಾವಿರಾರು ವರ್ಷಗಳ ಹಿಂದಿನ ಮಾತುಗಳು ನಾಡಿಗೂ ನುಡಿಗೂ ಇರುವ ನಂಟನ್ನು ಸೂಚಿಸುತ್ತವೆ. ಭಾರತ ಈಗ ಒಂದು nation state ಆಗಿರಬಹುದು, ಅಂದರೆ ರಾಜಕೀಯವಾಗಿ ಒಂದಾಗಿರಬಹುದು; ಆದರೆ ಸಾಂಸ್ಕೃತಿಕವಾಗಿ ಅದು ಒಂದೇ ಅಲ್ಲ, ಹಲವುಗಳ ಕೂಟ. ಕನ್ನಡ ಸಾಹಿತ್ಯದಲ್ಲಂತೂ ಎಲ್ಲಿಯೂ ಭಾರತ ಎಂಬ ಕಲ್ಪನೆಯಿಲ್ಲ: ಭರತಖಂಡ, ಭರತವರ್ಷ ಎಂಬ ಪೌರಾಣಿಕ ನುಡಿಗಳಿವೆ, ಅಷ್ಟೆ. ‘ಕವಿರಾಜಮಾರ್ಗ’ದ ಪ್ರಸಿದ್ಧ ಪದ್ಯವನ್ನು ನೆನಪಿಸಿಕೊಳ್ಳಿ: “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯವಿಲೀನವಿಶದವಿಷಯವಿಶೇಷಂ”. ಅಂದರೆ ಕನ್ನಡವೆಂಬ ನಾಡಿನಲ್ಲಿ ಬದುಕಿರುವ ಜನಪದವು ಜಗತ್ತಿನಲ್ಲಿ ವಿಶಿಷ್ಟವಾದುದು ಎಂದು; ಜಗತ್ತು=ಕನ್ನಡ ನಾಡುಗಳ ನಡುವೆ ಭರತದ ಪ್ರಸ್ತಾಪವಿಲ್ಲ. ಹೀಗಾಗಿ ನಾನು ‘ಕನ್ನಡನಾಡಿನ ಸ್ಥಳೀಯರು’ ಎನ್ನುವಾಗ ಕನ್ನಡಿಗರು ಎಂಬುದು ನನ್ನ ಅರ್ಥ; ಇದು ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಭಾಷಿಕರು ಎಂಬುದೇ ಆಗಿದೆ.
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಎಂದರೆ ನಮ್ಮ ಈಗಿನ ಸಂವಿಧಾನ ಒಪ್ಪುವುದಿಲ್ಲ. ಇಂಡಿಯದಲ್ಲಿ ಸೇರಿರುವ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಸ್ವತಂತ್ರ ಅಸ್ತಿತ್ವವಿದೆ; ಆ ಅಸ್ಮಿತೆ ಹಾಗೇ ಉಳಿದಾಗ ಮಾತ್ರ ದೇಶ ಒಂದಾಗಿರಬಲ್ಲುದು. ಹೀಗಾಗಿ ಅಲ್ಲಿನ ಅನೇಕ ಅಂಶಗಳನ್ನು ನಾವು ಬದಲಾಯಿಸಬೇಕಾಗಿದೆ.  ಇಂಡಿಯವನ್ನು “Union of States”  ಎಂಬ ನಮ್ಮ ಸಂವಿಧಾನದಲ್ಲಿನ ನುಡಿಯನ್ನು “Union of Republics” ಎಂದು ಬದಲಾಯಿಸಬೇಕಾಗುತ್ತದೆ. ಈ ದೇಶವನ್ನು ಒಂದು ಒಕ್ಕೂಟ ಎಂದು ಕರೆಯಲಾಗುತ್ತಿದ್ದರೂ, ವಾಸ್ತವದಲ್ಲಿ ಹಾಗಿಲ್ಲ. ಎಪ್ಪತ್ತರ ದಶಕದಲ್ಲಿ ಜಯಪ್ರಕಾಶ ನಾರಾಯಣರು ಪ್ರತಿಪಾದಿಸಿದ “ಅಧಿಕಾರ ವಿಕೇಂದ್ರೀಕರಣ” ಆಗಬೇಕು: ಕೇಂದ್ರಕ್ಕೆ ದೇಶಕ್ಕೆಲ್ಲ ಸಮಾನವಾದ ಅಂಶಗಳ ಮೇಲಿನ ಅಧಿಕಾರ ಮಾತ್ರ ಉಳಿದು, ಮಿಕ್ಕೆಲ್ಲ ಅಧಿಕಾರಗಳು ರಾಜ್ಯಗಳಿಗೆ ದತ್ತವಾಗಬೇಕು. ಆಗ ದೇಶ ನಿಜವಾದ ಒಕ್ಕೂಟವೆನಿಸಿಕೊಳ್ಳುತ್ತದೆ, ಅದರಲ್ಲಿ ಸೇರಿಕೊಂಡಿರುವ ವಿವಿಧ ಘಟಕಗಳ ನಡುವಣ ಹೊಂದಾಣಿಕೆ ಮತ್ತು ಸಮತೋಲನ ಸಂಭವಿಸುತ್ತದೆ. ಹಾಗಾಗಬೇಕಾದರೆ ಪೌರತ್ವದ ಕಲ್ಪನೆಯಲ್ಲಿಯೂ ವ್ಯತ್ಯಾಸವಾಗಬೇಕು: ಇಂಡಿಯದಲ್ಲಿ ಜನಿಸಿದವನು ಎಲ್ಲಿ ಬೇಕಾದರೂ ವಾಸಿಸಬಹುದು, ಯಾವುದೇ ಧರ್ಮವನ್ನವಲಂಬಿಸಬಹುದು, ಯಾವುದೇ ವೃತ್ತಿ ಮಾಡಬಹುದು, ಸರಿಯೇ; ಸರೋಜಿನಿ ಮಹಿಷಿ ವರದಿಯಲ್ಲಿ ವ್ಯಾಖ್ಯಾನಿಸಿರುವ ರೀತಿಯಲ್ಲಿ ಅವನು ಕನ್ನಡ ನಾಡಿನಲ್ಲಿ ಕನ್ನಡಿಗನಾಗಬೇಕು, ಅಸ್ಸಾಮಿನಲ್ಲಿ ಅಸ್ಸಾಮೀಯನಾಗಿರಬೇಕು, ಒಡಿಶದಲ್ಲಿ ಒರಿಯ ಆಗಿರಬೇಕು; ಹಾಗಿಲ್ಲದಿದ್ದರೆ ಅಂಥವರಿಗೆ ಮತದಾನದ ಹಕ್ಕು ಇರಬಾರದು. ಇಂಥ ‘ದ್ವಿಪೌರತ್ವ’ ನೀತಿಯನ್ನು ನಾನು ಮೂರು ದಶಕಗಳಿಂದ ಪ್ರತಿಪಾದಿಸುತ್ತ ಬಂದಿದ್ದೇನೆ. ಸರೋಜಿನಿ ಮಹಿಷಿ ವರದಿಯಲ್ಲಿ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಯಾವ ಬಗೆಯ ಪ್ರಾತಿನಿಧ್ಯ ಮತ್ತು ಮೀಸಲಾತಿ ಸೂಚಿತವಾಗಿದೆಯೋ ಅದನ್ನು ಬಹುರಾಷ್ಟ್ರೀಯ ಕಂಪನಿಗಳಿಗೂ ಅನ್ವಯಿಸಬೇಕು. ಅಷ್ಟು ಮಾತ್ರವಲ್ಲ, ಕೇಂದ್ರ ಸರ್ಕಾರದ ಕಚೇರಿಗಳಲ್ಲಿಯೂ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು, ಅಲ್ಲಿ ಕನ್ನಡದಲ್ಲಿ ವ್ಯವಹರಿಸಲು ಅವಕಾಶವಿರಬೇಕು; ಉತ್ತರಗಳು ಕನ್ನಡದಲ್ಲಿಯೇ ದೊರಕಬೇಕು.
ಇಷ್ಟಲ್ಲದೆ, ಅಬ್ದುಲ್ ಕಲಾಂ ಅವರು ತಮ್ಮ ‘India 2020 – A Vision for a New Millenium’ ಪುಸ್ತಕದಲ್ಲಿ ಕಂಡ ಕನಸಿನಂತೆ ದೇಶದ ಎಲ್ಲೆಡೆ ಹರಡಿರುವ ಹಳ್ಳಿಗಳ ನಡುವಣ ಸಂಪರ್ಕಜಾಲವನ್ನು ಹದಗೊಳಿಸಬೇಕು. ಅವುಗಳ ಸಮೀಪಕ್ಕೆ ಬಹುರಾಷ್ಟ್ರೀಯ ಕಂಪೆನಿಗಳನ್ನು ವರ್ಗಾವಣೆಗೊಳಿಸಿ, ತಮ್ಮ ಸ್ವಂತಕ್ಕೆ ಅವು ಕಲ್ಪಿಸಿಕೊಳ್ಳುವ ಅನುಕೂಲಗಳ ಕೊಂಚ ಭಾಗವಾದರೂ ಹತ್ತಿರದ ಹಳ್ಳಿಯವರಿಗೂ ದೊರೆಯುವಂತೆ ಮಾಡಿದರೆ, ಯುವಕರ ನಗರವ್ಯಾಮೋಹ ಕಡಿಮೆಯಾಗಿ ಕಂಪೆನಿಗಳ ಇರುವಿಕೆಗೆ ಒಂದಷ್ಟು ಸಾರ್ಥಕ್ಯವಾದರೂ ಉಂಟಾಗುತ್ತದೆ. ಅಮೆರಿಕನ್ ಮಾದರಿಯ ಸ್ಮಾರ್ಟ್ ಸಿಟಿಗಳ ನಿರ್ಮಾಣವನ್ನು ಕೈಬಿಟ್ಟು ಗಾಂಧಿಯವರ ಗ್ರಾಮಸ್ವರಾಜ್ಯ ಪರಿಕಲ್ಪನೆಗೆ ಹತ್ತಿರವಾಗಬಹುದಾದ ಗ್ರಾಮ ಸ್ವಯಂಪೂರ್ಣತೆಗೆ ಅವಕಾಶವೊದಗಿ, ಈ ಕಂಪೆನಿಗಳಲ್ಲಿ ಕೆಲಸ ಮಾಡುವ ಯುವಕರು, ಹಿಂದೆ ಹೇಳಿದ ಉದ್ಯೋಗ ವಿನಿಮಯ ಕೇಂದ್ರಗಳ ಕಲ್ಪನೆಗನುಗುಣವಾಗಿ ಸ್ಥಳೀಯ ವಿದ್ಯಾವಂತರು ಎಲ್ಲಿಯೇ ಓದಿರಲಿ ತಮ್ಮ ಊರುಗಳ ಸಮೀಪಕ್ಕೆ ಬಂದು ತಮ್ಮ ಜನರೊಡನೆ ಬದುಕುವಂತಾದರೆ ಕುಟುಂಬಗಳ ಛಿದ್ರೀಕರಣವೂ ತಕ್ಕಮಟ್ಟಿಗೆ ಕಡಿಮೆಯಾಗಬಹುದು. ದೇಶವನ್ನು ಒಂದು ಎಂದು ಹೇಳುವ ದೇಶಭಕ್ತರು ದೇಶಕ್ಕೆಲ್ಲ ಅನುಕೂಲಕರವಾಗಿ ಅನ್ವಯಿಸುವ ಶಿಕ್ಷಣನೀತಿ, ಭಾಷಾನೀತಿ, ಉದ್ಯೋಗನೀತಿ, ಜಲನೀತಿಗಳನ್ನು ರೂಪಿಸಿ ಒಕ್ಕೂಟದ ಎಲ್ಲ ಘಟಕಗಳ ಒಪ್ಪಿಗೆ ಪಡೆದು ಜಾರಿಗೊಳಿಸಿದರೆ, ರಾಜ್ಯಗಳ ನಡುವಣ ತಿಕ್ಕಾಟವನ್ನೇ ಬಂಡವಾಳವಾಗಿ ಮಾಡಿಕೊಂಡು ಆಳುವ ಈಗಿನಂತೆ ಕೇಂದ್ರೀಕೃತ ವ್ಯವಸ್ಥೆಗೆ ಕಡಿವಾಣ ಬೀಳಬಹುದು. ಇವೆಲ್ಲಕ್ಕೆ ಅನುಗುಣವಾದ ತಿದ್ದುಪಡಿಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡು ಒಕ್ಕೂಟದ ಎಲ್ಲ ಘಟಕಗಳಲ್ಲಿ ಇದು ಜಾರಿಯಾದರೆ ಜೈವಿಕ ಸಮತೋಲನದ ಹಾಗೆಯೇ ಸಾಂಸ್ಕೃತಿಕ-ಭಾಷಿಕ-ಜಾನಾಂಗಿಕ ಸಮತೋಲನ ಉಂಟಾಗುತ್ತದೆ, ನಮ್ಮವರ ಬದುಕು ಕೊಂಚ ಹಸನಾಗುತ್ತದೆ. 
******
[2016 ರ ಅಕ್ಟೋಬರ್ 8 ಮತ್ತು 9 ರಂದು ದೆಹಲಿ ಕನ್ನಡ ಸಂಘದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ‘ಹೊರನಾಡ ಕನ್ನಡಿಗರ ಸಮಾವೇಶ’ ದಲ್ಲಿ 9 ರಂದು ನಡೆದ  ‘ರಾಷ್ಟ್ರೀಯ ಉದ್ಯೋಗ ನೀತಿ’ ಎಂಬ ಗೋಷ್ಠಿಯಲ್ಲಿ ಮಂಡಿಸಿದ ಪ್ರಬಂಧ]
                                                               


No comments: