Tuesday, 18 September 2018

ವಚನಕಾರರಲ್ಲಿ ಭಕ್ತಿ ಸೃಜನಶೀಲವಾಗುವ ಪರಿ

                                         ವಚನಕಾರರಲ್ಲಿ ಭಕ್ತಿ ಸೃಜನಶೀಲವಾಗುವ ಪರಿ


                ಹನ್ನೆರಡನೆಯ ಶತಮಾನದ ವಚನ ಚಳವಳಿಯನ್ನು ಕೆಲವರು ಭಕ್ತಿ ಚಳವಳಿಯೆಂದು ಕರೆಯುತ್ತಾರೆ. ನಾನಿದನ್ನು ಒಪ್ಪುವುದಿಲ್ಲ. ಭಕ್ತಿಚಳವಳಿ ಎಂದರೇನು? ಭಕ್ತಿ ಚಳವಳಿಯ ಸ್ವರೂಪ ಲಕ್ಷಣಗಳನ್ನು ಶ್ರೇಯ ಆಚಾರ್ಯ ಹೀಗೆ ಪಟ್ಟಿಮಾಡುತ್ತಾರೆ: 1. ಭಕ್ತಿ ಎಂದರೆ ದೇವರ ಬಗೆಗಿನ ಎರಡಿಲ್ಲದ ನಿಷ್ಠೆ; ಭಕ್ತಿಯ ಗುರಿ ದೇವರ ಕೃಪೆಯನ್ನು ಸಂಪಾದಿಸುವುದು. 2. ಭಕ್ತಿಚಳವಳಿಯು ದೇವರನ್ನೊಲಿಸಿಕೊಳ್ಳುವ ಸಾಧನಗಳಾಗಿ ಆಚರಣೆಗಳು ಹಾಗೂ ಯಜ್ಞಯಾಗಾದಿಗಳನ್ನು ನಿರಾಕರಿಸಿ, ಹೃದಯ-ಮನಸ್ಸುಗಳ ಪರಿಶುದ್ಧತೆ ಹಾಗೂ ಮಾನವೀಯತೆಗಳಿಗೆ ಒತ್ತು ನೀಡುತ್ತದೆ. ಅದರಲ್ಲಿ ಸರಳ ಭಕ್ತಿಗೆ ಆದ್ಯತೆ. 3. ಭಕ್ತಿ ಚಳವಳಿಯು ಮುಖ್ಯವಾಗಿ ಏಕದೇವೋಪಾಸನೆಯ ನೆಲೆಯದು; ಭಕ್ತರು ಒಬ್ಬ ದೇವರನ್ನು ಆರಾಧಿಸುವವರು - ಸಗುಣ ಮತ್ತು ನಿರ್ಗುಣ ಎರಡೂ ರೀತಿಗಳಲ್ಲಿ. ವೈಷ್ಣವರು ಸಗುಣೋಪಾಸಕರು; ಅವರಲ್ಲಿ ರಾಮಮಾರ್ಗಿಗಳು ಮತ್ತು ಕೃಷ್ಣಮಾರ್ಗಿಗಳು - ಇಬ್ಬರೂ ವಿಷ್ಣುವಿನ ಅವತಾರಗಳು - ಎಂಬ ಎರಡು ಪ್ರಭೇದಗಳುಂಟು; ನಿರ್ಗುಣೋಪಾಸಕರು ವಿಗ್ರಹಾರಾಧನೆಯ ವಿರೋಧಿಗಳು; ಅವರ ಪ್ರಕಾರ ದೇವರು ಸರ್ವಾಂತರ್ಯಾಮಿ 4. ಸಗುಣ-ನಿರ್ಗುಣೋಪಾಸಕರಿಬ್ಬರೂ ಉಪನಿಷತ್ತುಗಳ ಅದ್ವೈತ ತಾತ್ವಿಕತೆಯಲ್ಲಿ ನಂಬಿಕೆಯಿಟ್ಟವರು. ಆದರೆ ವಿವಿಧ ಭಕ್ತಿ ಪಂಥಗಳಲ್ಲಿ ಈ ವಿಷಯದ ಅಲ್ಪಭೇದಗಳುಂಟು. 5. ಉತ್ತರ ಹಾಗೂ ದಕ್ಷಿಣ ಭಾರತದ ಭಕ್ತಿ ಚಳವಳಿಯ ನಂತರ ಜ್ಞಾನವು ಭಕ್ತಿಯ ಭಾಗ; ಅದನ್ನು ಗುರುವಿನ ಮೂಲಕ ಪಡೆಯಬೇಕು. ಹೀಗಾಗಿ ಗುರುಸೇವೆಗೆ ಪ್ರಾಧಾನ್ಯ. 6. ಭಕ್ತಿ ಚಳವಳಿಯು ಸಮಾನತೆಯ ನೆಲೆಗಟ್ಟಿನ ಮೇಲೆ ನಿಂತದ್ದು; ಹೀಗಾಗಿ ಜಾತಿ-ಮತಭೇದಗಳನ್ನು ತಿರಸ್ಕರಿಸುವಂಥದು; ಭಕ್ತಸಂತರು ಸಾಮಾಜಿಕ ಐಕ್ಯದ ಪ್ರತಿಪಾದಕರು; ಹೀಗಾಗಿ ಅದರಲ್ಲಿ ಕೆಳವರ್ಗದವರಿಗೆ, ದಲಿತರಿಗೆ ಅವಕಾಶವಿರುತ್ತದೆ. 7. ಭಕ್ತಿಚಳುವಳಿಯು ಪುರೋಹಿತಶಾಹಿಯನ್ನೂ ನಿರಾಕರಿಸುತ್ತದೆ. ಭಕ್ತಿ ಮತ್ತು ಸ್ವಪ್ರಯತ್ನಗಳಿಂದ ದೇವರನ್ನು ಕಾಣಬಹುದೆಂಬುದು ಅವರ ಪ್ರತಿಪಾದನೆ. ಹೀಗಾಗಿ ಇಲ್ಲಿ ಯಜ್ಞಯಾಗಾದಿಗಳಿಗೂ ಧಾರ್ಮಿಕ ಆಚರಣೆಗಳಿಗೂ ಅವಕಾಶವಿಲ್ಲ. 8. ಭಕ್ತಸಂತರು ಜನತೆಯ ನುಡಿಯ ಮೂಲಕ ತಮ್ಮ ಬೋಧನೆಗಳನ್ನು ಪ್ರಚಾರಮಾಡಿದರು; ಈ ಮೂಲಕ ಜನಭಾಷೆಗಳಿಗೆ ಅಪಾರ ಕೊಡುಗೆಯನ್ನು ಕೊಟ್ಟರು.
ಇವುಗಳ ಜೊತೆಗೆ ಶ್ರೇಯ ಆಚಾರ್ಯ ಅವರು ಮಹತ್ವದ ಒಂದು ಅಂಶವನ್ನು ಮುಂದಿಡುತ್ತಾರೆ. ಭಕ್ತಿಚಳವಳಿಯ ಮೂಲೋದ್ದೇಶಗಳು ಎರಡು: ಒಂದು, ಇಸ್ಲಾಮಿಕ್ ಆಕ್ರಮಣವನ್ನು ಎದುರಿಸಿ ಮತಾಂತರವನ್ನು ತಡೆಗಟ್ಟುವುದು; ಹಾಗೂ ಎರಡು, ಹಿಂದೂ-ಮುಸ್ಲಿಮರಲ್ಲಿ ಸಾಮರಸ್ಯವನ್ನು ಸಾಧಿಸುವುದು. ಸಂಗ್ರಹವಾಗಿ ಹೇಳಬಹುದಾದರೆ, ಭಕ್ತಿಚಳವಳಿ ಎನ್ನುವುದು ಭಕ್ತಿಯನ್ನೇ ಏಕೈಕ ಗುರಿಯಾಗಿ ಹೊಂದಿದ ಆಂದೋಲನ. ಭಕ್ತಿಚಳವಳಿಯ ಮುಖ್ಯ ಆಶಯಗಳೆಂದರೆ ಭಕ್ತಿ ಮಾತ್ರವೇ ಮೋಕ್ಷಸಾಧನೆಗೆ ಸಹಾಯಕವಾದುದು. ಯಜ್ಞಯಾಗಾದಿಗಳಲ್ಲ, ಅರ್ಥಾತ್ ಕ್ರಿಯಾಮಾರ್ಗವಲ್ಲ ಅಥವಾ ಜ್ಞಾನಮಾರ್ಗವಲ್ಲ ಎಂಬ ನಂಬಿಕೆ (ಈರೀತಿಯಲ್ಲಿ ಅದು ವೈದಿಕ ಸಂಸ್ಕೃತಿಗೆ ಪರೋಕ್ಷವಾಗಿ ಸೆಡ್ಡು ಹೊಡೆದುದು ನಿಜ). ಆಳ್ವಾರರು, ನಿಂಬಾರ್ಕ, ಕಬೀರ, ಚೈತನ್ಯ, ವಲ್ಲಭಾರ್ಯ, ಶಂಕರದೇವ ಮುಂತಾದವರು ಭಕ್ತಿಚಳವಳಿಯ ಪ್ರತಿಪಾದಕರು. ಇವರೆಲ್ಲ ವೈದಿಕ ವ್ಯಾಪ್ತಿಯಲ್ಲಿಯೇ ಬಂದವರು. ಯಾರೂ ವೈದಿಕ ವ್ಯವಸ್ಥೆಯ ವಿರುದ್ಧವಿದ್ದವರೂ ಅಲ್ಲ, ಆ ಬಗ್ಗೆ ಸಂಘಟಿತ ಹೋರಾಟವನ್ನೂ ನಡೆಸಲಿಲ್ಲ. ಅಲ್ಲದೆ, ಈ ಚಳಿವಳಿಗಳಲ್ಲಿ ಮೊದಲು ಒಬ್ಬ ತೋರಿಸಿದ ದಾರಿಯನ್ನು ಹಿಂಬಾಲಕರು ಅನುಸರಿಸಿದ ರೀತಿ ಕಂಡುಬರುತ್ತದೆ. ಕನ್ನಡನಾಡಿನಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳನ್ನು ದ್ವೈತದ ಹಿನ್ನೆಲೆಯಲ್ಲಿ ಪ್ರತಿಪಾದಿಸಿದ ಹರಿದಾಸ ಆಂದೋಲನವೂ ಈ ಗುಂಪಿಗೇ ಸೇರುತ್ತದೆ. ಒಬ್ಬ ವ್ಯಕ್ತಿಯಿಂದ ಆರಂಭಗೊಂಡು ವಿವಿಧ ಜನಗಳನ್ನು ತನ್ನ ವಲಯದಲ್ಲಿ ಒಳಗೊಳ್ಳುತ್ತ ಹೋಗುವುದು ಭಕ್ತಿಚಳವಳಿಯ ಸ್ವರೂಪ. ದಕ್ಷಿಣದಲ್ಲಿ ವಿಷ್ಣು ಆರಾಧಕರಾದ ಆಳ್ವಾರರು ಮತ್ತು ಹರಿದಾಸರು ಇದನ್ನು ಮುನ್ನಡೆಸಿದವರು. ಆಳ್ವಾರರು ರಾಮಾನುಜ ಪರಂಪರೆಯವರಾದರೆ, ಹರಿದಾಸರು ಮಧ್ವಾಚಾರ್ಯ ಪರಂಪರೆಯವರು. ಭಕ್ತಿಯಲ್ಲಿ ಮುಖ್ಯ ಮನೋಭಾವವೆಂದರೆ ಶರಣಾಗತಿ. ತನ್ನ ವೈಯಕ್ತಿಕತೆಯನ್ನು ನೀಗಿಕೊಳ್ಳುವುದು, ತಾನು ದೇವರ ಭಾಗವೆಂಬ ಭಾವನೆಯನ್ನು ತಾಳಿ ಅವನೊಡನೆ ಬೆರೆಯುವ ಗುರಿ ಉಳ್ಳದ್ದು. ಅಲ್ಲಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯೇನೂ ಇರುವುದಿಲ್ಲ. ಇದ್ದರೂ ಭಕ್ತಿನೆಲೆಯಲ್ಲಿ ತಾರತಮ್ಯ ಮಾಡದಿರುವಂಥದೇ ಹೊರತು ಸಾಮಾಜಿಕ ಆಂದೋಲನವಾಗಿ ಅದು ರೂಪುಗೊಳ್ಳುವುದಿಲ್ಲ. ಸಾಮಾಜಿಕ ಕಟ್ಟುಪಾಡುಗಳ ಬಗ್ಗೆ ಅವಜ್ಞೆಯಿರಬಹುದಾದರೂ ಅದು ವ್ಯಕ್ತಿ ನೆಲೆಯಲ್ಲಿಯೇ ಹೊರತು ಹೋರಾಟದ ನೆಲೆಯಲ್ಲಲ್ಲ. ಮುಖ್ಯ ಹರಿದಾಸರಲ್ಲಿ ಒಬ್ಬನಾದ ಕನಕದಾಸ ವ್ಯವಸ್ಥೆಯ ವಿರುದ್ಧ ಅಸಮಾಧಾನ ತಾಳಿದ್ದಿರಬಹುದು. ಆದರೆ ಅದರ ಅಭಿವ್ಯಕ್ತಿ ಹೋರಾಟದ ರೂಪದಲ್ಲಿ ನಡೆಯದೆ, ಒಂದು ನೆಲೆಯಲ್ಲಿ ಕೀರ್ತನೆಗಳಲ್ಲಿ ಕುಲನಿರಾಕರಣೆಯ ಮೂಲಕವಾಗಿಯೂ, ಮತ್ತೊಂದರಲ್ಲಿ – ರಾಮಧಾನ್ಯಚರಿತೆಯಲ್ಲಿ - ರೂಪಕಾತ್ಮಕವಾಗಿ ಜಾತಿ ತಾರತಮ್ಯವನ್ನು ಅಲ್ಲಗಳೆಯುವುದರ ಮೂಲಕವೂ ನಡೆಯಿತೆಂಬುದು ಸರ್ವವಿದಿತ. ಅಲ್ಲಿ ಭಗವಂತನ ಕರುಣೆಯ ಸಂಪಾದನೆ ಮತ್ತು ವ್ಯಕ್ತಿನೆಲೆಯ ಮೋಕ್ಷಸಂಪಾದನೆ ಮುಖ್ಯವೇ ವಿನಾ ಸಾಮಾಜಿಕ ಬಿಡುಗಡೆಯಲ್ಲ.
ಈ ಹಿನ್ನೆಲೆಯಲ್ಲಿ ವಚನ ಚಳವಳಿಯು ಒಂದು ಭಕ್ತಿ ಚಳವಳಿ ಎಂಬ ವಾದವನ್ನಿಷ್ಟು ಪರಿಶೀಲಿಸೋಣ. ಭಕ್ತಿ ಚಳವಳಿಯ ಲಕ್ಷಣಗಳೆಂದು ಮೇಲೆ ಹೇಳಿರುವುದರಲ್ಲಿ ಬಹುಪಾಲು ವಚನ ಚಳವಳಿಯಲ್ಲಿ ಕಾಣಬರುವುದಿಲ್ಲ. ಅಂದಾಕ್ಷಣ ವಚನ ಚಳವಳಿಯಲ್ಲಿ ಭಕ್ತಿಗೆ ಸ್ಥಾನವಿಲ್ಲ ಎಂದಲ್ಲ ನನ್ನ ಅಭಿಪ್ರಾಯ. ಆದರೆ ಭಕ್ತಿಯೇ ಅಲ್ಲಿನ ಮುಖ್ಯ ಆಶಯವಾಗಿರಲಿಲ್ಲ; ಅದು ಒಟ್ಟು ಆಶಯದ ಒಂದು ಭಾಗವಾಗಿತ್ತು, ಅಷ್ಟೆ. ಭಕ್ತಿಯಿಲ್ಲದಿದ್ದರೆ ಭಕ್ತ ಹೇಗಾದಾನು, ಸರಿಯೇ. ಆದರೆ ಸಾಮಾನ್ಯ ನೆಲೆಯಲ್ಲಿ ಭಕ್ತಿ ಎಂಬುದು  ಶರಣಾಗತಿಯ ಸ್ಥಿತಿಯನ್ನು ಸೂಚಿಸುವಂತೆ ತೋರುತ್ತದೆ. ಭಜ್ಎಂಬ ಸಂಸ್ಕೃತ ಧಾತುವಿಗೆ ಭಾಗವಾಗಿರುಎಂಬ ಅರ್ಥವೂ ಇದೆ. ಆ ಧಾತುವಿನಿಂದ ನಿಷ್ಪನ್ನವಾದ ಭಕ್ತಿಎಂಬ ಪದವನ್ನು ನಾವು ಹೀಗೆ ಅರ್ಥೈಸಬಹುದೇನೋ: ನಾನು ಯಾವುದರ ಭಾಗವೋ ಆ ಸೃಷ್ಟಿಯ (ದೇವರ) ಬಗೆಗಿನ ನನ್ನ ಭಾವನೆ ಅಥವಾ ಅದನ್ನು ಕುರಿತ ಅನುಸಂಧಾನ. ಭಕ್ತಿ ತನ್ನ ಆತ್ಯಂತಿಕ ಸ್ಥಿತಿಯಲ್ಲಿ ಇಡಿಯೊಡನೆ ಸೇರುವ ಬಿಡಿಯ ಬಯಕೆಯೇ ಅಲ್ಲವೇ? ಷಟ್‍ಸ್ಥಲಗಳನ್ನು ಕುರಿತ ವಚನಕಾರರ ಹೇಳಿಕೆಗಳು ಈ ಅನುಸಂಧಾನದ ವಿವಿಧ ನೆಲೆಗಳನ್ನೇ ಕುರಿತವುಗಳು ತಾನೇ? ಹಾಗಾಗಿ ಭಕ್ತಿಗೆ ವಚನಕಾರರಲ್ಲಿ ಒಂದು ಬಗೆಯಲ್ಲಿ ಪ್ರಾಮುಖ್ಯವಿರುವುದು ನಿಜವೇ. ಆದರೆ ಆ ಚಳವಳಿಯ ಮುಖ್ಯ ಆಶಯ ಅದೇ ಅಲ್ಲ. ಮತ್ತೊಂದು ಮಾತು: ವಚನಕಾರರಿಗೆ ಭಕ್ತಿ ಎಂಬುದು ವೈಯಕ್ತಿಕ ತುರ್ತು; ‘ತಾನುಂಬ ಊಟ’ ‘ತನ್ನಾಶ್ರಯದ ರತಿಸುಖಇದ್ದ ಹಾಗೆ. ಅದಕ್ಕೊಂದು ಸಾಮೂಹಿಕ ರೂಪ ಬರಲು ಹೇಗೆ ತಾನೇ ಸಾಧ್ಯ? (ಆದ್ದರಿಂದಲೇ ವಚನಕಾರರು ದೇವಸ್ಥಾನದ ವ್ಯವಸ್ಥೆಯನ್ನು ನಿರಾಕರಿಸಿದ್ದು). ಸಾಮೂಹಿಕತೆಯಿಲ್ಲದೆ ಚಳವಳಿ ಸಾಧ್ಯವಿಲ್ಲ. ಹೀಗಾಗಿಯೂ ವಚನ ಚಳವಳಿ ಭಕ್ತಿ ಚಳವಳಿಯಲ್ಲ, ಅದೊಂದು ವ್ಯವಸ್ಥೆಯ ವಿರುದ್ಧದ ಪ್ರತಿಭಟನೆ; ಆ ವ್ಯವಸ್ಥೆಯನ್ನು ಹೊಸ ಬಗೆಯಲ್ಲಿ ಪುನಾರೂಪಿಸುವ ಛಲ ಹೊತ್ತದ್ದು; ಅದರದ್ದು ಪರ್ಯಾಯದ ಹುಡುಕಾಟ
ನಾನಾಗಲೇ ಶ್ರುತಪಡಿಸಿದಂತೆ ಭಕ್ತಿ ವಚನಕಾರರಿಗೆ ವೈಯಕ್ತಿಕ ಅನುಭವದ ನೆಲೆಯಲ್ಲಿ ಮುಖ್ಯವಾಯಿತು. ಆದರೆ ಭಕ್ತಿ ಒಂದು ಬಗೆಯಲ್ಲಿ ತೊಡಗಿಕೊಳ್ಳುವುದಲ್ಲ, ಪಡೆದುಕೊಳ್ಳಬೇಕೆಂಬ ತಹತಹವುಳ್ಳುದಲ್ಲ; ಎಲ್ಲವನ್ನೂ ಒಪ್ಪಿಸಿಬಿಡುವುದು, ತಾನು ದೈವದ ಕೃಪೆಗೆ ಒಳಗಾಗುವುದು (ದಾಸನ ಮಾಡಿಕೊ ಎನ್ನ”). ಹಾಗಾಗಿ ಅಲ್ಲಿ ಅನುಭವಕ್ಕೆ ಮಾನ್ಯತೆಯೇ ಹೊರತು ಕ್ರಿಯೆಗಲ್ಲ. ಭಕ್ತಿಯಲ್ಲಿ ಛಲವಿಲ್ಲ, ಪ್ರತಿಭಟನೆಯ ಅಂಶವಂತೂ ಇಲ್ಲವೇ ಇಲ್ಲ; ಅಲ್ಲಿ ದೈವದ ಕೃಪೆಗಾಗಿ ಹಂಬಲ. ಅದಕ್ಕಾಗಿ ದೈವಸ್ತುತಿಗೆ ಪ್ರಾಮುಖ್ಯ, ನಾಮಸ್ಮರಣೆಗೆ ಪ್ರಾಧಾನ್ಯ (ನೀನ್ಯಾಕೋ ನಿನ್ನ ಹಂಗ್ಯಾಕೋ| ನಿನ್ನ ನಾಮದ ಬಲವೊಂದಿದ್ದರೆ ಸಾಕೋ”. ಅವರು ದೇವರ ನಾಮಸ್ಮರಣೆಯ ಪ್ರಾಧಾನ್ಯ ಕುರಿತು ಜನರಿಗೆ ಬೋಧನೆ ಮಾಡಿದರು; ಆದರೆ ವಚನಕಾರರು ತಮ್ಮ ಭಕ್ತಿಯ ಅನುಭವವನ್ನು ವಚನಗಳ ಮೂಲಕ ನಿವೇದಿಸಿಕೊಂಡರು. ಅಂದರೆ ಕಾರ್ಯರೂಪದ ಭಕ್ತಿನಿವೇದನೆ ಭಕ್ತಿಚಳವಳಿಯಲ್ಲಿ ಕಾಣುವುದಿಲ್ಲ. ಆದರೆ ಭಕ್ತಿ ಎನ್ನುತ್ತ ಮೂಗು ಮುಚ್ಚಿ ಕುಳಿತುಕೊಳ್ಳುವುದನ್ನು ವಚನಕಾರರು ಒಪ್ಪುವುದಿಲ್ಲ; ಭಕ್ತ ಬದುಕಲು ಏನಾದರೂ ಉತ್ಪಾದಕವಾದುದನ್ನು ಮಾಡಬೇಕು; ಅದನ್ನೇ ಅವರು ಕಾಯಕಎಂದುದು. ಭಕ್ತಿಗಿಂತ ಕಾಯಕ ಮುಖ್ಯ; ಕಾಯಕವಿಲ್ಲದ ಭಕ್ತಿ ನಿರರ್ಥಕ. ಕಾಯಕದ ಹೊತ್ತಿನಲ್ಲಿ ಭಕ್ತಿಗಷ್ಟೇ ಅಲ್ಲ, ಶಿವನಿಗೇ ಮಾನ್ಯತೆಯಿಲ್ಲ. ಶೂನ್ಯಸಂಪಾದನೆಯ ನುಲಿಯ ಚಂದಯ್ಯನ ಪ್ರಸಂಗವನ್ನೇ ನೋಡಿ: ಚಂದಯ್ಯನ ಕಾಯಕ ಕಾಲದಲ್ಲಿ ಪರೀಕ್ಷೆ ಮಾಡಲು ಬಂದ ಶಿವ ತಾನೇ ಎಡವಟ್ಟಿಗೆ ಒಳಗಾಗುತ್ತಾನೆ. ಕೊರಳಿಂದ ನೀರಿಗೆ ಬಿದ್ದ ಕುರುಹನ್ನು ಚಂದಯ್ಯ ಗಮನಿಸಿರಬಹುದು, ಆದರೆ ಅದರಿಂದಾಗೇನೂ ವಿಚಲಿತನಾಗಲಿಲ್ಲ; ಅದನ್ನು ಅವಗಣಿಸಿ ತನ್ನ ಪಾಡಿಗೆ ತಾನು ಕಾಯಕದಲ್ಲಿ ತೊಡಗಿದ. ಪೆಚ್ಚಾದ ಶಿವ ಮಾನವರೂಪಿನಿಂದ ಬಂದು ತನ್ನ ಕೈಬಿಡಬೇಡವೆಂದು ಭಕ್ತನನ್ನೇ ಬೇಡುವ ಸ್ಥಿತಿ ಬಂತು. ಆಗಲೂ ಜಗ್ಗದ ಚಂದಯ್ಯ ಕೊನೆಗೆ ಒಪ್ಪಿದ್ದು ತನ್ನಂತೆ ಕಾಯಕದಲ್ಲಿ ತೊಡಗಿಕೊಂಡರೆ ಲಿಂಗವನ್ನು ಧರಿಸಲು. ಇಲ್ಲಿನ ಭಕ್ತ-ಶಿವರ ಸಂಬಂಧ ಎಂತಹುದು ನೋಡಿದಿರಾ? ಭಕ್ತ ಹಾಕಿದ ಷರತ್ತಿಗೆ ಒಪ್ಪದಿದ್ದರೆ ಶಿವನಿಗೇ ಬಹಿಷ್ಕಾರ!
ಹರಿಹರನ ಕುಂಬಾರ ಗುಂಡಯ್ಯನ ರಗಳೆಯನ್ನು ನೋಡಿ: ಗುಂಡಯ್ಯನೇನೂ ಶಿವನನ್ನು ಬರುವಂತೆ ಬೇಡಿಕೊಂಡು ಹಾಡಲಿಲ್ಲ; ತನ್ನ ಕಾಯಕದಲ್ಲಿ ತನ್ಮಯನಾಗಿ ತೊಡಗಿದ್ದ. ಅದು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಶಿವ ತಾನೇ ಅಲ್ಲಿಗೆ ಬಂದ, ಗುಂಡಯ್ಯನ ಕಾಯಕತನ್ಮಯತೆಗೆ ಭಂಗ ತಾರದೆ (ಹಾಗೆ ಮಾಡಲು ಹೆದರಿ!) ಅವನ ಬಡಿತದ ತಾಳಕ್ಕನುಗುಣವಾಗಿ ಕುಣಿಯತೊಡಗಿದ. ಅಂದರೆ ಭಕ್ತನ ಕಾಯಕರೂಪದ ಭಕ್ತಿ ಶಿವನನ್ನೇ ಕುಣಿಸುವಂಥದು, ಶಿವನ ಕೃಪೆಗಾಗಿ ತಾನು ಕುಣಿಯುವಂಥದಲ್ಲ. ಈ ಗುಂಡಯ್ಯನ ರೀತಿಯನ್ನು ಭಕ್ತ ಕುಂಬಾರನ ಭಕ್ತಿಯೊಡನೆ ಹೋಲಿಸಿ. ಅಲ್ಲಿ ಶಿವ ಭಕ್ತನಿಗೆ ಕೃಪೆ ತೋರಿಸಿ ರಾತ್ರಿಯ ಹೊತ್ತಿನಲ್ಲಿ ಅವನ ಕೆಲಸವನ್ನು ತಾನು ಮಾಡಿ ಮುಗಿಸುತ್ತಾನೆ. ನಮ್ಮ ಕುಂಬಾರ ತಾನೇ ಕಾಯಕ ಮಾಡುತ್ತಾನೆ; ಅದರಿಂದಲೇ ಶಿವನನ್ನು ಕುಣಿಸುತ್ತಾನೆ. ತನ್ನ ಕೆಲಸವನ್ನು ಶಿವ ಮಾಡಲೆಂದು ಅವನು ನಿರೀಕ್ಷಿಸುವುದಿಲ್ಲ. ಇಲ್ಲಿ ಕಾಯಕದಲ್ಲೇ ಭಕ್ತಿ ಅಡಗಿದೆ, ಅಥವಾ ಕಾಯಕದಿಂದಾಗಿ ಅಸ್ತಿತ್ವ ಪಡೆದುಕೊಂಡಿದೆ. ಹರಿಹರನ ಎಲ್ಲ ರಗಳೆಗಳ ಪರಿಯೂ ಇದೇ. ತೋರಿಕೆಯಾಗದ ಭಕ್ತಿ ತೋರುವುದು ಕಾಯಕದ ಮೂಲಕ. ಅಂದರೆ ಭಕ್ತಿ ಇಲ್ಲಿ ಕ್ರಿಯಾವಿಮುಖವಾಗದೆ ಕ್ರಿಯಾಮುಖಿಯಾಗಿದೆ; ಆಥವಾ ಲೌಕಿಕವಾಗಿ ಅನುತ್ಪಾದಕವಾಗದೆ ಉತ್ಪಾದನೆಗೆ ತೊಡಗಿದೆ. ಐಹಿಕತೆಯನ್ನು ತೊರೆಯದೆ ಅದನ್ನು ಉತ್ತಮಪಡಿಸುವುದರಲ್ಲಿ ತೊಡಗಿಕೊಂಡಿದೆ. ಹರಿಹರನ ಪುರಾತನರ ರಗಳೆಗಳ ಒಟ್ಟು ಧ್ವನಿ ಇದೇ: ಅವುಗಳಲ್ಲಿನ ನಾಯಕರ ವೃತ್ತಿವೈವಿಧ್ಯ ಬೆರಗುಗೊಳಿಸವಂಥದು. ಅವರಲ್ಲಿ ಬೇಸಾಯಗಾರರಿದ್ದಾರೆ, ಬೆಸ್ತರಿದ್ದಾರೆ, ಕೂಲಿಗಳಿದ್ದಾರೆ, ಮೆಟ್ಟು ಹೊಲಿಯುವವರಿದ್ದಾರೆ, ಅಗಸರಿದ್ದಾರೆ, ಕುಂಬಾರರಿದ್ದಾರೆ, ಬೇಡರಿದ್ದಾರೆ, ದನಕಾಯುವವರಿದ್ದಾರೆ. ವಚನ ಚಳವಳಿಯು ಇಂಥ ಕಾಯಕಜೀವಿಗಳ ಚಳವಳಿ ತಾನೇ; ಅವರಿಗೆ ಆಡಿ ತೋರಿಸುವುದಕ್ಕಿಂತ ಮಾಡಿ ತೋರಿಸುವುದರಲ್ಲೇ ಆಸಕ್ತಿ. ಇವರೆಲ್ಲರ ವೃತ್ತಿಮಹಿಮೆಯನ್ನು ತೋರಿಸಲು ಶಿವ ವೇಷಧರಿಸಿ ಬಂದು ಎಲ್ಲರ ವೃತ್ತಿನಿಷ್ಠೆಯ ಮುಂದೆ ಸೋಲುತ್ತಾನೆ. ಶಿವನನ್ನು ಸೋಲಿಸಬಲ್ಲುದು ವೃತ್ತಿನಿರತೆಯೇ ಎಂಬುದು ಎಲ್ಲ ಕಾಲಕ್ಕೂ ಸಲ್ಲುವ ಮೌಲ್ಯ. ಭಕ್ತನನ್ನು ಪರೀಕ್ಷಿಸಲು ಬರುವ ಶಿವನನ್ನು ಈ ಭಕ್ತರು ಎದುರಿಸುವುದು ತಮ್ಮ ಕಾರ್ಯತತ್ಪರತೆಯಿಂದಲೇ ಹೊರತು ಭಜನೆಯಿಂದಲ್ಲ, ಹೊಗಳಿಕೆಯಿಂದಲ್ಲ. ಹೀಗಾಗಿ ಭಕ್ತಿ ಅಂದರೆ ಉತ್ಪಾದಕತೆಯೇ ಹೊರತು ಮೂಗು ಹಿಡಿದು ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ: ಐಹಿಕದಲ್ಲಿ ನಿರಾಸಕ್ತವಾಗುವುದಲ್ಲ, ಕಾಯಕದ ಮೂಲಕ ಇಹವನ್ನು ಪರವಾಗಿಸಿಕೊಳ್ಳಬಲ್ಲ ಕೌಶಲ.
ದುಡಿದು ಅಪಾರ ಸಂಪಾದನೆ ಮಾಡುವುದು ಕಾಯಕದ ಉದ್ದೇಶವಲ್ಲ; ಅದು ಏಕಮುಖಿಯಾದುದಲ್ಲ, ಅದಕ್ಕೆ ಮೂರು ಮುಖಗಳು: ತತ್ಪರತೆಯಿಂದ ದುಡಿಯುವುದು, ದುಡಿತಕ್ಕೆ ತಕ್ಕಷ್ಟನ್ನು ಮಾತ್ರ ಪಡೆಯುವುದು (ಹಾಗ ಬೆಲೆಬಾಳುವ ಹಗ್ಗಕ್ಕೆ ಬಸವಣ್ಣ ಕೊಟ್ಟನೆಂದು ಮಾನವರೂಪಿ ಶಿವ ಹೊನ್ನನ್ನು ತಂದಾಗ ಚಂದಯ್ಯ ಅದನ್ನು ವಾಪಸ್ಸು ಕೊಡಲು ಹೇಳಿದ ಸನ್ನಿವೇಶವನ್ನು ನೆನಪಿಸಿಕೊಳ್ಳಿ), ಮತ್ತು ತನ್ನ ಬದುಕಿಗೆ ಸಾಕಾಗಿ ಉಳಿದುದನ್ನು ತ್ರಿವಿಧ ದಾಸೋಹದಲ್ಲಿ ವಿನಿಯೋಗಿಸುವುದು (ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದು”). ದಾಸೋಹ ದಾನಕ್ಕಿಂತ ಭಿನ್ನ; ದಾನ ಮಾಡುವಾಗ, ಗಾದೆಯ ಮಾತಿನಂತೆ, ಕೊಡುವವನ ಕೈ ಮೇಲೆ ತೆಗೆದುಕೊಳ್ಳುವವನ ಕೈ ಕೆಳಗೆ. ಆದರೆ ದಾಸೋಹವೆಂದರೆ ದಾಸಃ+ಅಹಂ’ (ನಾನು ಸೇವಕ ಎಂಬ ವಿನಮ್ರ ಭಾವ), ನೀಡುವುದು ಕೈಂಕರ್ಯ ಎಂಬ ವಿನೀತತೆ. ಕೊಡುವವನು ಬಾಗಬೇಕೆಂಬುದು ಇಲ್ಲಿನ ವಿಶಿಷ್ಟ ಪರಿ. ಹಣವನ್ನು ಕಡಬಡ್ಡಿಗೆ ಕೊಡುವುದನ್ನಾಗಲೀ, ಕೂಡಿಡುವುದನ್ನಾಗಲೀ ವಚನಕಾರರು ಒಪ್ಪುವುದಿಲ್ಲ. ಬದುಕಿಗೆ ಸಾಕಾದ ಹೆಚ್ಚಿನದನ್ನು ತ್ರಿವಿಧಕ್ಕೆ ನೀಡಬೇಕು. ಗುರುಲಿಂಗಜಂಗಮಗಳಲ್ಲಿ ಲಿಂಗ ವಸ್ತುರೂಪಿಯಾದುದು, ಆದರೆ ಅದಕ್ಕೆ ವಸ್ತುರೂಪದಲ್ಲಿ ಏನನ್ನೂ ನೀಡಲು ಸಾಧ್ಯವಿಲ್ಲ, ಭಾವನೆಯನ್ನು ಮಾತ್ರ ನೀಡಬಹುದು. ಆದರೆ ಗುರುಜಂಗಮರು ಜೀವರೂಪಿಗಳು, ಭಾವದ ಜೊತೆಗೆ ಅವರಿಗೆ ವಸ್ತುರೂಪದಲ್ಲಿಯೂ ನೀಡಬೇಕು. ಜಂಗಮಎಂದರೆ ಚೈತನ್ಯಶೀಲವಾದುದು. ಅಂದರೆ ತನ್ನನ್ನು ಹೊರತುಪಡಿಸಿದ ಜೀವರಾಶಿಗೆ ತನ್ನ ಕೈಲಾದ ಕೊಡುಗೆ ನೀಡಬೇಕೆಂಬ ತಹತಹ ಇದು. ಇದರಿಂದ ಸಂಪತ್ತು ಕೇಂದ್ರೀಕರಣಗೊಳ್ಳುವುದಿಲ್ಲ ಮತ್ತು ಸಂಪತ್ತಿನ ತೃಪ್ತಿದಾಯಕ ಹಂಚಿಕೆಗೆ ಇದು ಸಹಾಯಕ. ಇಂತಹ ಕಾಯಕವೇ ಶಿವನನ್ನು ಕುಣಿಸುವುದು, ಶಿವನನ್ನು ಮಣಿಸುವುದು. (ಕಾರ್ಯಶೀಲತೆಯ ದೃಷ್ಟಿಯಿಂದ) ಋಣಾತ್ಮಕವಾದ ಭಕ್ತಿ ವಚನಕಾರರ ಪರಿಕಲ್ಪನೆಯಲ್ಲಿ ಧನಾತ್ಮಕಗೊಳ್ಳುವುದು ಹೀಗೆ. ಹಾಗೆ ಕಾಯಕದಲ್ಲಿ ತೊಡಗಿದವರೇ ನಿಜವಾದ ಭಕ್ತರು. ಬಹುಪಾಲು ವಚನಕಾರರ ಹೆಸರುಗಳ ಹಿಂದಿನ ವಿಶೇಷಣ ಅವರ ಕಾಯಕಸೂಚಿಯಾಗಿರುವುದನ್ನು ಗಮನಿಸಿ (ನುಲಿಯ ಚಂದಯ್ಯ, ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ ಇತ್ಯಾದಿ). ಭಕ್ತಿಭಂಡಾರಿ ಎನ್ನಿಸಿಕೊಂಡ ಬಸವಣ್ಣನಷ್ಟೇ ದೊಡ್ಡ ಭಕ್ತನಲ್ಲ,. ಇವರೆಲ್ಲ ಅಷ್ಟೇ ದೊಡ್ಡವರು. ಅಲ್ಲದೆ ಭಕ್ತಿ ಭಂಡಾರಿ ಎಂಬುದು ಭಂಡಾರಿ ಕಾಯಕ ಮಾಡುತ್ತಿದ್ದ ಬಸವಣ್ಣನ ಕಾಯಕದ ವಿಶೇಷಣ, ಅಷ್ಟೆ.
******
                                                                                                                                               

No comments: