ಪರಿಸ್ಥಿತಿ - 4
ಯಶೋದ
ನಂದಿನಿಯ ಸ್ನೇಹಿತೆ. ಅವಳಿಗಾಗಲೇ ಮದುವೆಯಾಗಿ ಮಗುವೂ ಇದೆ. ಜೊತೆಯಲ್ಲಿ ಓದಿದವರು, ಎಲ್ಲದರಲ್ಲೂ ಪಾಲುದಾರರು.
ನಂದಿನಿ ತನ್ನ ಹೃದಯಾಂತರಾಳವನ್ನೆಲ್ಲ ಬರಿದುಗೊಳಿಸುವವಳಲ್ಲ, ಯಾರ ಹತ್ತಿರವೂ. ಆದರೆ ನಂದಿನಿ ಹೇಮಂತನಿಗಾಗಿ
ಮಿಡಿಯುತ್ತಿದ್ದುದು ಅವಳಿಗೆ ಗೊತ್ತಿತ್ತು.
“ಅವರನ್ನು
ಲವ್ ಮಾಡ್ತಿದ್ದೀಯೇನೇ?” ಎಂದು ಒಮ್ಮೆ ಯಶೋದೆ ಕೇಳಿದಾಗ “ಮೆಚ್ಚೋದು ಅಂದ್ರೆ ಅದುಬಿಟ್ಟರೆ ಬೇರೆ ಥರವೇ
ಇಲ್ಲವಾ?” ಎಂದಿದ್ದಳು, ಲವ್ ಅನ್ನುವುದಕ್ಕೆ ಸಾಂಪ್ರದಾಯಿಕ ಅರ್ಥವನ್ನು ಯಶೋದ ನೀಡುತ್ತಿದ್ದಳೆಂದು
ಭಾವಿಸಿ.
“ಇನ್ನಾವ
ಥರ ನಿನ್ನದು?”
“ಅವರ
ಕಾದಂಬರಿ ಮೆಚ್ಚಿಕೊಂಡರೆ ನಿಂದೇನೋ ಕತೆ” ಮಾತಿನಲ್ಲಿ ಸಿಡುಕು ಕಾಣಿಸಿದ್ದರೂ ಅದು ಒಳಗಿನಿಂದ ಬಂದದ್ದಲ್ಲ
ಅನಿಸುವ ರೀತಿ.
ಹೇಮಂತನ
ಕಾದಂಬರಿಗಳನ್ನು ಒಂದಲ್ಲ, ನಾಲ್ಕು ಸಲ ಓದಿದ್ದಳೇನೋ ನಂದಿನಿ. ಯಾವ ಮಾತುಕತೆಯಾದರೂ ಸರಿ, ಯಾವುದಾದರೂ
ಪ್ರಸಂಗ ಬಂದಾಗ, ಹೇಮಂತನ ಯಾವುದಾದರೊಂದು ಕಾದಂಬರಿಯ ಸನ್ನಿವೇಶವೊಂದನ್ನು ನಿದರ್ಶನವಾಗಿ ಕೊಡುತ್ತಿದ್ದಳು.
ಕಾದಂಬರಿಯ ಪಾತ್ರಗಳಾಡುವ ಮಾತುಗಳನ್ನೂ ಅವಳು ಗಟ್ಟಿ ಮಾಡಿಕೊಂಡಿದ್ದಳೇನೋ ಅನ್ನುವಂತೆ ಸಂಭಾಷಣೆಗಳನ್ನು
ಉಲ್ಲೇಖಿಸುತ್ತಿದ್ದಳು. ಹೇಮಂತ, ಅವನ ಕಾದಂಬರಿಗಳು, ಅವನ ಪಾತ್ರಗಳು, ಅವನ ಬರವಣಿಗೆಯ ರೀತಿ, ಅವನ
ದೃಷ್ಟಿಕೋನ, ಚರ್ಚಿಸುವ ವಿಷಯಗಳು, ಹೇಮಂತನ ಫೋಟೋಗ್ರಾಫು-ಆಟೋಗ್ರಾಫು ಇಷ್ಟೇ. ಇವಳಿಗೆ ‘ಹೇಮಂತ್ ಮೇನಿಯ’
ಎಂದು ಯಶೋದ ಎಷ್ಟೋ ಬಾರಿ ಗೇಲಿ ಮಾಡಿದ್ದಳು.
“ನಿಂಗೇನೇ,
ಮದುವೆಯಾಗಿದ್ದೀಯ. ಮನೆಬಿಟ್ಟರೆ ಬೇರೆಯದರ ಬಗ್ಗೆ ಆಸಕ್ತಿಯೇ ಇಲ್ಲ. ಇಂಥವೆಲ್ಲ ಎಷ್ಟು ಚೆನ್ನಾಗಿರುತ್ತೆ
ಗೊತ್ತಾ?”
“ನೀನೂ
ಮದುವೆಯಾಗಿ ಬಿಡು. ನಿನಗಿವು ಯಾವುದೂ ಬೇಡವಾಗಿ ಬಿಡುತ್ತೆ ಆಗ” ಎಂದು ನಂದಿನಿಯನ್ನು ಛೇಡಿಸುತ್ತ ಒಮ್ಮೆ
ಯಶೋದ ಹೇಳಿದ್ದಳು.
“ಅದಕ್ಕೇ
ನಾನು ಮದುವೆಯಾಗದಿರುವುದು. ಆಸಕ್ತಿಯ ವ್ಯಾಪ್ತಿ ಕಡಿಮೆಯಾಗಿಬಿಡುತ್ತೆ. ಈಗಾದರೆ ನೋಡು ಜೀವನದ ಎಷ್ಟೊಂದು
ವಿಷಯದ ಬಗ್ಗೆ ಆಸಕ್ತಿ ಉಳಿಸಿಕೊಂಡಿದ್ದೀನಿ.”
“ಏನು
ಉಳಿಸಿಕೊಂಡಿದ್ದೀಯೆ? ನಿನಗಿರೋ ಆಸಕ್ತಿಯೆಲ್ಲ ಹೇಮಂತ. ಮಿಕ್ಕ ವಿಷಯ ಏನು ಬೇಕು ನಿಂಗೆ?”
“ಹೋಗೇ,
ನೀನೂ ಏನಾದರೊಂದು ಅನ್ನುತ್ತೀ”ಎಂದು ನಂದಿನಿ ಹೇಳಿದ್ದರೂ ಹೇಮಂತನೇ ಅವಳ ಜೀವನಾಸಕ್ತಿಯ ಕೇಂದ್ರಬಿಂದು
ಎಂದು ಯಶೋದ ಭಾವಿಸಿದ್ದಳು.
ಹೀಗಾಗಿ
ನಂದಿನಿಯ ಸಾವು ಅವಳಲ್ಲಿ ಅಪಾರ ಯಾತನೆಯನ್ನುಂಟು ಮಾಡಿತ್ತು. ಅವಳ ವಾದ ವೈಖರಿ ಇನ್ನೂ ಕಿವಿಗಳಲ್ಲಿ
ಗುಯ್‍ಗುಡುತ್ತದೆ. ಕೈಬಾಯಿ ಆಡಿಸುವ ದೃಶ್ಯ ಕಣ್ತುಂಬುತ್ತದೆ. ದೇಹದ ಬಳುಕಾಟದಿಂದ ಬೀಸುವ ಗಾಳಿ ಸುಳಿಯುತ್ತದೆ.
ಇಂಥ ನಂದಿನಿ ಸಾಯಲು ಏನು ಕಾರಣ? ಅವಳು ಸತ್ತ ಮೇಲೆ ಅವಳ ತಾಯಿಯನ್ನು ಸಮಾಧಾನಪಡಿಸಲು ಅನೇಕ ಬಾರಿ ಅವರ
ಮನೆಗೆಯಶೋದ ಹೋಗಿದ್ದಳು. ತಾಯಿಯ ಅಳಲನ್ನು ನೋಡಲಾರಳು, ತಾನು ಹೋದರೆ ನಂದಿನಿಯ ನೆನಪು ಅವರಿಗೆ ಮತ್ತಷ್ಟು
ತೀವ್ರವಾಗುತ್ತದೆಂದು ಅವಳಿಗೂ ಗೊತ್ತಿದೆ. ಅದರೆ ನಂದಿನಿಯ ಗುಂಗು ಅವಳನ್ನಿಲ್ಲಿ ಹಲವಾರು ಸಲ ಎಳೆದು
ತಂದಿತ್ತು.
ತಾಯಿ
ತಮ್ಮ ಅಳುವಿನ ಮಧ್ಯದ ಮಾತಿನಲ್ಲಿ ಎಷ್ಟೋಸಲ ಹೇಮಂತನಿಂದಲೇ ನಂದಿನಿ ಸತ್ತಳೆಂದು ಹೇಳಿದ್ದರು. ಅವರಣ್ಣನೂ
ಮನೆಯಲ್ಲಿದ್ದ. ನಂದಿನಿ ಹೇಮಂತರ ಕಥೆಯನ್ನು ಒಡಲಲ್ಲಿ ಹುದುಗಿಸಿಕೊಂಡಿರಬಹುದಾದ ವಸ್ತುಗಳನ್ನು ಅವಳ ಮುಂದೆ ರಾಶಿ
ಹಾಕಿ “ನೀವೇ ನೋಡಿ,ಅವನೇ ತಾನೇ ಕೊಲೆಪಾತಕಿ?” ಎಂದು ಕೇಳಿದ್ದ. ಯಶೋದೆಗೂ ಅನ್ನಿಸಿತ್ತು; ನಂದಿನಿ
ಹೇಮಂತನನ್ನು ಬಹುವಾಗಿ ಹಚ್ಚಿಕೊಂಡಿರಬೇಕು. ಏನೂ ಇಲ್ಲ ಎಂದು ಹೇಳಿದ್ದರೂ ನಂದಿನಿಗೆ ಹೇಮಂತನನ್ನು
ಮದುವೆಯಾಗುವ ಬಯಕೆಯಿದ್ದಿರಬೇಕು. ಅವನ ವಿಚಾರದಲ್ಲಿ ಅಮಿತವಾದ ಆಸಕ್ತಿಯಿಡಲು ಬೇರೆ ಇನ್ನಾವ ಕಾರಣವಿದ್ದೀತು?
ಅವನನ್ನು ತಾನು ಎಲ್ಲೋಒಂದು ಬಾರಿ ಕಂಡ ಜ್ಞಾಪಕವಿದ್ದರೂ ಆತನ ಮುಖಸ್ಪಷ್ಟವಾಗಿ ನೆನಪಿಗೆ ಬಾರದು. ಒಮ್ಮೆ
ಬೆಂಗಳೂರಿನಲ್ಲಿಯೇ ನಂದಿನಿ ಅವನಿಗೆ ತನ್ನಪರಿಚಯ ಮಾಡಿಸಿರಬೇಕು. ಅವನ ಚಹರೆ ನೆನಪಿಲ್ಲ; ಆದರೆ ಅವನು
ಸುಂದರನೆಂಬುದರಲ್ಲಿ ಸಂಶಯವಿರಲಿಲ್ಲ. ಅವನೊಡನೆ ಯಾವ ಬಗೆಯ ಸಂಬಂಧವಿರಿಸಿಕೊಂಡಿದ್ದಳೋ ನಂದಿನಿ. ಗಂಡಸರಿಗೇನು
ಸಿಕ್ಕ ಹೂವಿನ ಮೇಲೆ ಎರಗುವ ತವಕ. ಅವನಿಗೆ ಮದುವೆಯಾಗಿತ್ತೋ ಮಕ್ಕಳಿದ್ದವೋ ತಿಳಿಯದು. ಅವನ ಹಿನ್ನೆಲೆಯೇನು,
ಸ್ವಭಾವವೇನು ಅರಿಯದ ಮುಗ್ಧೆ ನಂದಿನಿ. ದೀಪದ ಹತ್ತಿರ ಹೋಗುವ ಮಳೆಯ ಹುಳುವಿನಂತೆ ಅವನ ಕಾರ್ಯಕ್ಷೇತ್ರದಲ್ಲಿ
ಕಾಲಿರಿಸಿದ್ದಳು, ಪ್ರಾಯಶಃ ಆ ಕಾರಣದಿಂದ ಸತ್ತಿದ್ದಳು. ನಂದಿನಿಯ ತಾಯಿ-ಅಣ್ಣ ಹೇಳಿರುವುದು ನಿಜವಿರಬೇಕು.
ಅವನು ಯಾವ ರೀತಿ ಇವಳನ್ನು ನಂಬಿಸಿದ್ದನೋ ಅಥವಾ ಇನ್ನೂ ಮುಂದುವರಿದಿತ್ತೋ ಇವರಸಂಬಂಧ? ಯಾರಿಗೆ ಗೊತ್ತು,
ಹೇಮಂತ ಗೋಮುಖವ್ಯಾಘ್ರನಂತೆ ಯಶೋದೆಗೆ ಕಾಣಿಸಿದ್ದ. ಕಾದಂಬರಿಗಳೆಂಬ ಗಾಳಗಳಿಂದ ಮುಗ್ಧರನ್ನು ಸಿಕ್ಕಿಸಿಕೊಂಡು
ಕಬಳಿಸುವ ಬೆಸ್ತ ಅವನು. ಅವನ ಮನೆ ಹಾಳಾಗ!
ಇವರೆಲ್ಲರ
ಆಲೋಚನೆಯಲ್ಲಿ ಸತ್ಯಾಂಶವೂ ಇದೆ, ತಪ್ಪು ಕಲ್ಪನೆಗಳೂ ಇವೆ. ನಂದಿನಿ ಹೊರಗೆ ಎಷ್ಟೇ ನಿರಾಕರಿಸುತ್ತಿದ್ದರೂ
ಹೇಮಂತನನ್ನು ಒಳಗೆ ಆರಾಧಿಸುತಿದ್ದಳು. ಈ ಯುವತಿಗೆ ಆರಾಧಿಸುವುದು ಎಂದರೇನು. ಅದೂ ಯುವಕನನ್ನು? ಅವನಿಗೆ
ತಾನು ಸಮರ್ಪಣನಾಗಬೇಕೆಂದೇ ಅಲ್ಲವೇ? ಎಂದರೆ ಎಲ್ಲ ಆರಾಧನೆಯ ಗುರಿ ಸರ್ವಸಮರ್ಪಣೆ, ತನ್ನದೆಲ್ಲ ಅವನಿಗೆ
ಸೇರಬೇಕು, ಅಷ್ಟೇಕೆ ತಾನೇ ಅವನಿಗೆ ಸೇರಬೇಕು ಎಂಬ ತನ್ನನ್ನು ಅವನಿಗಾಗಿ ಅವನಲ್ಲಿ ಇಲ್ಲವಾಗಿಸಿಕೊಳ್ಳುವ
ಹಂಬಲ. ಅಂದರೆ ಅವನನ್ನು ಮದುವೆಯಾಗಬೇಕು ಇಲ್ಲದಿದ್ದರೆ ಗಂಡಿನೊಂದಿಗೆ ಸೇರುವುದು ಹೇಗೆ, ಅವನಿಗೆ ಅರ್ಪಿತವಾಗುವುದುಹೇಗೆ
ಅಲ್ಲದೆ ತಾನುಳಿದು ಬೇರೆ ಯಾರೂ ಅವನಿಗೆ ಅರ್ಪಣೆಯಾಗತಕ್ಕದ್ದಲ್ಲ, ತಾನು ಅವನನ್ನು ಸೇರಬೇಕೆಂದರೂ ಮದುವೆಯ
ಹೊರಗೆಸೇರುವ ಮನೋಭಾವ ಅವಳದಲ್ಲ. ಎಲ್ಲ ಮಧ್ಯಮವರ್ಗದ ಯುವತಿಯರಿದ್ದ ಹಾಗೆ ಹೀಗಾಗಿ ಅವಳ ಮನಸ್ಸಿನಲ್ಲಿ
ಹೇಮಂತನಿಗೆ ಅರ್ಪಣವಾಗುವ ಬಯಕೆ ಮೊಟ್ಟೆಯಾಗಿ ಅವಳ ಸಕಲ ಬಾಹ್ಯಕ್ರಿಯೆಗಳೂ ಆಂತರಿಕ ಆಲೋಚನೆಗಳು ಅದನ್ನು
ಮರಿಯಾಗಿಸಲು ಕಾವು ಕೂರುತ್ತಿದ್ದವು.
ಮೊದಲ
ನೋಟ ಪರಿಚಯಕ್ಕೆ ತಿರುಗಿ, ಗಾಢವಾದ ಪರಿಚಯ ಸ್ನೇಹವಾಗಿ, ಸ್ನೇಹದ ಅಂಟು ಆಕರ್ಷಣೆಗೆ ದಾರಿಯಾಗಿ, ಕೊನೆಗೆ
ಎಲ್ಲರೂ ಹೇಳುವ ಹಾಗೆ, ಪ್ರೇಮವಾಗಿ ಅವಳಲ್ಲಿಯೂ ಕೆನೆಗಟ್ಟಿತ್ತು. ಆದರೆ ಪ್ರೇಮದ ದಾರಿ ಮಿಲನದ ದಾರಿ
ದೂರ. ಕಷ್ಟಕರ, ತುಂಬ ನಿಧಾನ ನಡಿಗೆ. ಅದರ ಮೇಲೆ ಹೀಗಾಗಿ ಅವಳ ಮನದಾಳದ ಬಯಕೆ ಮೇಲುಸ್ತರಕ್ಕೆ ಬರುವುದಕ್ಕೆ
ವರ್ಷಗಳೇ ಹಿಡಿದವು. ಆದರೆ ಹೃದಯದ ಗರ್ಭದಲ್ಲಾದ ಬೀಜಾಂಕುರ ವಿಕಾಸವಾಗುತ್ತ ನಡೆದಂತೆ ಅವನ ಜೊತೆಗಿನ
ಮಾತು, ಅವನ ಪುಸ್ತಕಗಳ ಓದು, ಅವನ ಕಣ್ಣ ಬೆಳಕು, ನೋಟ, ಅವನ ನೆನಪು ಎಲ್ಲ ಹೆಚ್ಚುಹೆಚ್ಚು ಮಾದಕವಾಯಿತು;
ಇವುಗಳ ಮಾದಕತೆಯೇ ಅವಳ ಹೃದಯದಲ್ಲಿನ ಮೊಳಕೆ ಹೆಚ್ಚಾಗಲು ಕುಡಿ ಒಡೆಯಲು ಗಟ್ಟಿಯಾಗಲು ಗಾಳಿ ಬೆಳಕುಗಳಾದವು.
ಗೊಬ್ಬರ-ಮಣ್ಣುಗಳಾದವು. ನೀರು-ಲವಣಗಳಾದವು.
ಪ್ರೇಮದ
ಸುಳಿಯಲ್ಲಿ ಸಿಕ್ಕಿದ ಯಾವ ಮನಸ್ಸು ನಿಂತಲ್ಲಿ ನಿಲ್ಲಲಾರದು. ಕುಳಿತಲ್ಲಿ ಕುಳ್ಳಿರಲಾರದು. ಸದಾ ಗಗನ
ಚುಂಬಿ ಕನಸುಗಳು, ಪಾತಾಳದಾಳದ ಕನಸುಗಳು. ಮನಸ್ಸಿನಲ್ಲಿ ಸದಾತಿ ಳಿಗೊಳ, ತೇಲುವ ರಾಜಹಂಸ, ಬೆಳದಿಂಗಳ
ಪೂರ, ಸುಗಂಧದ ತೇರು, ಆಪ್ಯಾಯತೆಯ ಪಲ್ಲಕ್ಕಿ.
ಅಂದೊಮ್ಮೆ
ಬೆಂಗಳೂರಿಗೆ ಬಂದಾಗ ಹೇಮಂತನನ್ನು ಕಾಣುವ ಆಸೆ ನಂದಿನಿಗಾಯಿತು. ಆಸೆಯುಂಟಾಗುವುದು ಎಂಬ ಮಾತಿಗೆ ಅರ್ಥವೇ
ಇಲ್ಲ. ಅವಳಲ್ಲಿನ ಪ್ರತಿಯೊಂದೂ ಆಸೆಯಾಗಿದ್ದವು, ಇನ್ನು ಹೊಸತಾಗಿ ಆಗುವುದು ಎಲ್ಲಿ. ಶನಿವಾರ ಬೇರೆ;
ಮಧ್ಯಾಹ್ನ ಎರಡಕ್ಕೇ ಅವರ ಆಫೀಸು ಮುಗಿಯುತ್ತದೆ. ಆಫೀಸು ಯಾವುದೆಂದು ತಿಳಿದಿದ್ದರೂ ಅಲ್ಲಿ ಹೋಗಿ ಕಾಣುವುದು
ಅವಳಿಗೆ ಸರಿಬರುತ್ತಿರಲಿಲ್ಲ. ಅದರಿಂದ ಹೇಮಂತನಿಗೆ ಮುಜುಗರವಾಗಬಹುದು. ಹೇಮಂತನಿಗೆ ಹೀಗಾಗಬಾರದು,
ಹಾಗಾಗಬೇಕು, ಇದು ಆತನಿಗೆ ಬೇಕು, ಅವನಿಗೆ ಸೇರದು - ಇದೇ ಅವಳ ಸಕಲ ಕ್ರಿಯೆಗಳ ಹಿಂದಿನ ವಿವೇಕಶಕ್ತಿ.
ಎಲ್ಲವನ್ನೂ ಅವಳು ಅಳೆಯುತ್ತಿದ್ದುದು ಅದೇ ಮಾನದಂಡದಿಂದ. ಮತ್ತೆ ಅದೆಷ್ಟು ಮಾಂತ್ರಿಕವಾಗಿತ್ತು! ಅವನು
ಚೆನ್ನಾದುದೆಂದು ಯಾವುದನ್ನಾದರೂ ಕರೆದರೆ, ಹಿಂದೆ ಅದನ್ನು ಅವಳು ತಿರಸ್ಕರಿಸಿದ್ದರೂ ನಂದಿನಿಗೆ ಅದರಲ್ಲಿ
ಚೆಲುವು ಕಾಣುತ್ತಿತ್ತು! ಇಷ್ಟಪಡದಿದ್ದರೆ ಅದೆಂತಹ ರಾಕ್ಷಸವಿಕಾರಿಯಾಗಿ ಕಾಣುತ್ತಿತ್ತು! ಆದ್ದರಿಂದ
ಹೇಮಂತನಿಗೆ ಸರಿಹೋಗಲಾರದೆಂದು ಅವನು ಬಸ್ಸಿಗಾಗಿ ಕಾಯುವ ಸ್ಟಾಪಿಗೆ ಬಂದಳು. ಆಗಿನ್ನೂ ಒಂದೂವರೆ. ಅರ್ಧ
ಬಸ್ ಸ್ಟಾಪ್ ತಲುಪುವುದರೊಳಗಾಗಿ ಅವನು ಬೇರೆ ಎಲ್ಲಾದರೂ ತಿರುಗಿಬಿಟ್ಟರೆ ಎನ್ನಿಸಿ ಮತ್ತೆ ಅಲ್ಲಿಂದ
ಹೊರಟು ಅವನ ಆಫೀಸ್ ಕಟ್ಟಡದ ಗೇಟಿನ ಕಡೆ ಮೈಯೆಲ್ಲ ಕಣ್ಣಾಗಿ ನಿಂತಳು - ಸ್ವಲ್ಪ ದೂರದಲ್ಲಿ.
“ಹೀಗೇ
ಬಂದಿದ್ದೆ, ನೋಡೋಣ ಅನ್ನಿಸಿತು, ಬಂದೆ” ಎಂದು ನಂದಿನಿ ಹೇಮಂತನಿಗೆ ತಾನು ಬಂದಾಗಲೆಲ್ಲ ಹೇಳುತ್ತಿದ್ದುದು
ರೂಢಿ. ಮೊದಮೊದಲು ಅದು ನಿಜವೂ ಆಗಿತ್ತು. ಆದರೆ ಮೊದಲಿನಕೆಲವುಆಕಸ್ಮಿಕ ಭೇಟಿಗಳ ನಂತರ ಬೇರೆ ಕೆಲಸಗಳ
ಜೊತೆಯಲ್ಲಿ ಇವನನ್ನು ಕಾಣುವುದೂ ನಿಧಾನವಾಗಿ ಸೇರಿತು. ಈಚೆಗೆ ಬೇರೆಲ್ಲವೂ ಆನುಷಂಗಿಕವಾಗಿ ಇವನನ್ನು
ಕಾಣುವುದೇ ಪ್ರಮುಖವಾಗ ತೊಡಗಿತ್ತೆಂಬುದು, ನಿಜ. ಅವಳ ಮೈಯನ್ನು ಜಿಗುಟಿದರೆ ಹಾಯ್ ಅನ್ನುತ್ತಿದ್ದಳು
ನಿಜ. ಆದರೆ ಅದು ಹೇಮಂತ ಎನ್ನುತ್ತಿತ್ತು ನಿಜವಾಗಿ. ಅವಳಿಗೆ ಗಾಯವಾದರೆ ಸುರಿಯುವ ರಕ್ತದಲ್ಲಿ ಹಿಮೋಗ್ಲೋಬಿನ್‍ಗಳ
ಬದಲು ಹೇಮಂತ ಕಣಗಳು ಸುರಿಯುತ್ತಿದ್ದವು. ಆಡುವ ಉಸಿರಾಟದಲ್ಲಿ ಹೇಮಂತಿಕೆ ಒಳಹೊರಗೆ ಸುಳಿದಾಡುತ್ತಿತ್ತು.
ಅವಳಲ್ಲಿ ಪ್ರಾಣ ಇರಲಿಲ್ಲ, ಹೇಮಂತ ಇತ್ತು!
ಭಕ್ತನ
ತಪಸ್ಸಿಗೆ ದೇವರು ಒಲಿಯುವಂತೆ ಹೇಮಂತ ಠಾಕೋಠೀಕಾಗಿ ಎರಡುಗಂಟೆ ಹತ್ತು ನಿಮಿಷಕ್ಕೆ ಆಫೀಸಿನ ಗೇಟು ದಾಟುತ್ತಿದ್ದ.
ಒಬ್ಬನೇ, ತನ್ನ ಸುದೈವವೇ ಅನ್ನಿಸಿತು ಅವಳಿಗೆ. ನಿಂತಲ್ಲಿಂದಲೇ ಕೈಆಡಿಸಿದಳು- ಮೇಲೆತ್ತಿ. ಅವನೂ ಇವಳನ್ನು
ಕಂಡ - ಕೈಯಾಡಿಸಿದ. ಇವಳ ದೇಹವೆಲ್ಲ ಕ್ಷೀರಸಾಗರವಾಯಿತು.
“ಏನು
ತುಮಕೂರು ಕಡೆ ಹೊರಟಿರಾ?” ಎಂದು ಹತ್ತಿರ ಬರುತ್ತಾ ಹೇಮಂತ, ಚೇಷ್ಟೆಯಿಂದ.
“ಈಗ
ಬರ್ತಾ ಇದ್ದೀನಿ. ಆಗಲೇ ಹೊರಡು ಅಂತೀರಲ್ಲ.” ನಂದಿನಿಗೆ ಇಂಥ ಮಾತು ಮುಂದುವರಿಯಲೆಂಬ ಆಸೆ. ಅದಕ್ಕೇ
ಹುಸಿಗೋಪ.
“ತುಮಕೂರಿಗೆ
ಹೋಗ್ತೀರಾ ಅಂದರೆ ಕೋಪ ಯಾಕ್ರೀ? ಅದೇನು ಹೋಗ ಬಾರದ ಜಾಗವಾ?”
“ಹೌದು
ಅದಕ್ಕೇ ಅಲ್ಲಿಂದ ಓಡಿ ಬಂದಿರೋದು.”
“ಅಂದರೆ
ಇಲ್ಲಿಗೆ ಬಂದದ್ದು ಇದು ಬರಬೇಕಾದ ಜಾಗ ಅಂತಲಾ?”
“ಹೌದು,
ಮತ್ತೆ.”
“ಯಾರೋ ಇರಬೇಕು,
ಇಲ್ಲಿ ನಿಮ್ಮನ್ನು ಮೂಗುದಾರ ಹಾಕಿ ಎಳೆದುಕೊಂಡು ಬರುವವರು.”
“ಖಂಡಿತಾ
ಇದ್ದಾರೆ.”
“ಯಾರವರು?”
“ಅದೆಲ್ಲ
ರಹಸ್ಯ.”
“ಮತ್ತೆ
ಅವರನ್ನು ಕಾಣದೆ ಇಲ್ಲಿ ನಿಂತಿರಲ್ಲ?”
ನಿಮ್ಮನ್ನೇ
ಕಾಣಲು ಬಂದೆ, ಬರುತ್ತಿದ್ದೆ, ಬರುತ್ತೇನೆ, ನೀವೇ ಅವರು ಎಂದು ಹೇಳಿದ್ದರೆ ಚೆನ್ನಾಗಿರುತ್ತಿತ್ತೇನೋ
ಅಥವಾ ಹಾಗೆ ಹೇಳಿದ್ದರೆ ಇಷ್ಟು ತಡವಾಗಿ ಹೇಳಬಾರದಿತ್ತು, ಒಂದೆರಡು ವರ್ಷಗಳಷ್ಟು ಮುಂಚೆಯೇ ಹೇಳಬೇಕಾಗಿತ್ತು,
ಆಗ ಗುಳ್ಳೆ ಒಡೆಯುತ್ತಿತ್ತು. ಗಾಯಬೇಗ ಮಾಯುತ್ತಿತ್ತು. ಆದರೆ ವಿಧಿ? ಅದೊಂದಿದೆಯೇ ಇದ್ದರೆ ಹೇಗೆ
ಎಳೆದು ತರುವುದು? ಅದರ ಉಪಟಳವೆಷ್ಟು, ಜನ್ನ ಹೇಳುತ್ತಾನಲ್ಲ “ಬಿದಿಯಂ ಮೂಗಂ ಕೊಯ್ದಿಟ್ಟಿಗೆಯೊಳ್ ಪೋಗೊರಸದೆ
ಕಂಡೆನಾದೊಡೇಂ ಬಿಟ್ಟಿಪೆನೇ?” ಬಿಸಾಕಿ ಗಾಜಿನಂತೆ ಒಡೆದುಬಿಡಬೇಕು. ಅದು ಹೇಗೆ ಸಾಧ್ಯ? ಕಾಣದೆ ಎಲ್ಲರ
ಜೀವನದಲ್ಲಿ ಸುಳಿದು ದಾಳಿಮಾಡುವ ವಿಧಿ ಎಂತಹ ಹೇಡಿತನದ್ದು? ಕಾಣದಂತೆ ಒಳಗೆ ನುಸುಳಿ ಹಿರಿದಾಗಿ ಬೆಳೆದು
ಲಂಕಿಣಿಯ ಹೊಟ್ಟೆಯೊಡೆದುಕೊಂಡು ಹೊರ ಬಂದನಂತಲ್ಲ ಆಂಜನೇಯ, ಹಾಗೆ ವಿಧಿ ಒಳಗಿನಿಂದಲೇ ಜನರನ್ನು ಕೊಲ್ಲುತ್ತದೆ.
“ಆಯಿತು
ಹೋಗ್ತೀನಿ, ಜೊತೆಗೆ ಮಿಕ್ಕವರನ್ನು ನೋಡಬಹುದಲ್ಲ”
“ಓಕೆ
ಮೇಡಂ” ಹೇಮಂತ ನಾಟಕೀಯವಾಗಿ ಭುಜ ಕುಣಿಸಿ ತೋಳುಗಳನ್ನು ವಿಶಾಲವಾಗಿ ಹರಡಿದ್ದ.
ಯಥಾಪ್ರಕಾರ
ಕಾಫಿ ಮಾತುಕತೆ, ಹರಟೆ,ಜೋಕು, ನಗು, ಇವೆಲ್ಲದರ ಮೆರವಣಿಗೆ.
“ಈಗೆಲ್ಲಿಗೆ?”
ಕೊನೆಯಲ್ಲಿ ಹೇಮಂತ ಕೇಳಿದ್ದ.
“ತುಮಕೂರಿಗೇ ಬನ್ನಿ.”
“ಅದು
ಹೋಗಬಾರದ ಜಾಗ ಅಂದಿರಿ ಸ್ವಲ್ಪಕಾಲದ ಹಿಂದೆ; ಈಗ ಅಲ್ಲಿಗೇ ಬನ್ನಿ ಅಂತಿದ್ದೀರಲ್ಲ” ಚೇಷ್ಟೆಮಾಡಿದ
ಒಂದು ಕ್ಷಣದನಂತರ ಏನೋ ಯೋಚಿಸಿ ಹೇಳಿದ. “ಅಂದಹಾಗೆ ಹೋಗಬಹುದಾದ ಜಾಗವೊಂದಿದೆ; ಈವೂರಲ್ಲಿಯೇ, ಅಲ್ಲಿಗೆ
ಹೋಗೋಣ, ನೀವು ಬರಬೇಕು” ಎಂದು ಒಗಟಿನಂತೆ.
ಹೇಮಂತ
ಹೋಗುವುದಾದರೆ ಎಲ್ಲಿಗಾದರೂ ಹೋಗಬಹುದು. ಅವನಿದ್ದ ಕಡೆಯೇ ಹೋಗಬಹುದಾದ ಜಾಗ, ಇಲ್ಲದ್ದೇ ಹೋಗಬಾರದ ಜಾಗ.
ಆದರೆ ಕುತೂಹಲಕ್ಕೆ ಕೇಳಿದಳು: “ಎಲ್ಲಿಗೆ ಹೋಗೋದು? ಆ ಪವಿತ್ರ ಸ್ಥಳ ಯಾವುದು?”
“ನಮ್ಮ
ಮನೆ” ಎಂದ ಹೇಮಂತ, ಅವಳ ಕುತೂಹಲ ಹೆಚ್ಚಾಯಿತು ಅಥವಾ ಇಷ್ಟು ದಿನ ಕೇಳಬೇಕೆಂದುಕೊಳ್ಳುತ್ತಿದ್ದ, ಆದರೆ
ಕೇಳಿರದಿದ್ದ ಪ್ರಶ್ನೆ ಅವಳ ಬಾಯಿಂದ ಹೊರಟಿತ್ತು; “ಯಾರಿದ್ದಾರೆ ಅಲ್ಲಿ?”
“ಅದೆಲ್ಲ
ಸಸ್ಪೆನ್ಸ್, ಬನ್ನಿ ಗೊತ್ತಾಗತ್ತೆ. ನಿಮ್ಮ ಮನೆಗೆ ಬಂದಿದ್ದೆನಲ್ಲ, ಇಂಥ ಪ್ರಶ್ನೆಗಳನ್ನು ಕೇಳಿದ್ದೆನೇನು?”
“ಸರಿ
ನೀವೆಲ್ಲಿ ಕರಕೊಂಡು ಹೋದರು ಬರ್ತೀನಿ, ಇನ್ನು ಮನೆಗೆ ಬಾ ಎಂದರೆ ಹೋಗಬಹುದಾದ ಸ್ಥಳ ಅದಕ್ಕಿಂತ ಉತ್ತಮವಾದದ್ದು
ಇನ್ನಾವುದಿದ್ದೀತು.” ಈ ಮಾತು ವಿಶೇಷವೆನ್ನಿಸಿತು ಹೇಮಂತನಿಗೆ, ಯಾಕೋ ತಿಳಿಯದು. ಅವಳಕಡೆ ತಿರುಗಿದ.
ಅಲ್ಲೇನಿದೆ ವಿಶೇಷ ಅಥವಾ ಎಂದಿನಂತೆ ಅಲ್ಲಿದ್ದುದು ಬರೀ ವಿಶೇಷ, ಅವಳಿಗೆ ವಿಶಿಷ್ಟವಾದವುಗಳು. ಅವಳ
ಪಂಜುಗಣ್ಣುಗಳು, ಮುಗುಳುನಗೆಯ ಪಾರಿವಾಳ.
ಬಸ್ಸು
ಬಿಟ್ಟು ರಿಕ್ಷಾ ಹಿಡಿದರು. ಅವರ ಹೃದಯದ ವೇಗಕ್ಕಿಂತ ಜೋರಾಗಿ ಅದು ಸಾಗಿ ಮನೆ ತಲುಪಿಸಿತ್ತು. ದಾರಿಯಲ್ಲೆಲ್ಲ
ಅವಳ ಮನಸ್ಸು ಉದ್ಯಾನವಾಗಿತ್ತು. ಅದೂ ಇಂದ್ರನ ನಂದನವನ, ಸಾರ್ವರ್ತುಕೋದ್ಯಾನ. ಎಲ್ಲ ಕಾಲದಲ್ಲೂ ಹೂ
ಹಣ್ಣು ಚಿಗುರುಗಳನ್ನು ಬಿಟ್ಟ ಮರಗಳು, ಬರೀ ಪರಿಮಳ ಸೂಸುವ ಹೂ ಬಳ್ಳಿಗಳು; ಹೆಚ್ಚುಬಿಸಿಯಾಗಿರದ ತುಂಬತಂಪಾಗಿಯೂ
ಇರದ ಸಮಶೀತೋಷ್ಣಕರವಾದ ಹಿತಕರ ಗಾಳಿ. ತಾನು ಮನೆಗೆ ಹೋದರೆ ತನ್ನನ್ನು ಎದುರುಗೊಳ್ಳುವುದು ಹೇಮಂತನ
ತಾಯಿಯಿರಬೇಕು. ಪಾಪ, ಅವರಿಗೆ ತಂದೆಯಿದ್ದಾರೋ ಇಲ್ಲವೋ. ಇದ್ದರೂ ಅಡ್ಡಿಯಿಲ್ಲ. ಅದರಿಂದ ತನಗೇನು.
ಅವರೂ ಮನೆಯಲ್ಲಿ ಹೋಗುವ ವೇಳೆಗೆ ಇದ್ದಾರು. ಒಳಗೆ ರೂಮಿನಲ್ಲಿ ಭಾಗವತ ಓದುತ್ತ. ಆದರೆ ನಾವು ಹೋದಾಗ
ಬಾಗಿಲು ತೆಗೆಯುವುದು ತಾಯಿಯೇ ತನ್ನ ಮಗನ ಜೊತೆಯಲ್ಲಿ ಬಂದ ಅಪ್ಸರೆ ಅವರ ಕಣ್ಣುಗಳಲ್ಲಿ, ಮುದಿಗಂಗಳಲ್ಲಿ
ದೀಪ ಹಚ್ಚುತ್ತಾಳೆ. “ನಮ್ಮಮನೆಗೆಸಾಯಂಕಾಲ ಲಕ್ಷ್ಮೀ ಬಂದ ಹಾಗೆ ಬಂದಿದ್ದೀಯ” ಎನ್ನುತ್ತಾರೆ “ಇಲ್ನೋಡಿ
ಅಂದ್ರೆ, ಯಾರು ಬಂದಿದ್ದಾರೇಂತ” ಎಂದು ಒಳಗಿರುವ ಯಜಮಾನರನ್ನು ಕರೆಯುತ್ತಾರೆ. ಒಳಗಿನಿಂದ ಬಂದ ಹೇಮಂತನ
ತಂದೆ ಕೈಲಿ ಕನ್ನಡಕ ಹಿಡಿದು ತನ್ನತ್ತಲೇ ದೃಷ್ಟಿ ಹಾಯಿಸುತ್ತಾರೆ. “ಕೂತ್ಕೊಮ್ಮ” ಎನ್ನುತ್ತಾರೆ.
ತಾನು ಸಂತೋಷವೇ ಹಿಡಿಯಾಗಿ ಕೂರುತ್ತೇನೆ. ತಿಂಡಿ-ಕಾಫಿ ಪ್ರೀತಿ-ವಿಶ್ವಾಸ, ಸಂಕೋಚ-ಆನಂದ, ಹಾರೈಕೆ-
ಆಶೀರ್ವಾದಗಳ ಸುರಿಮಳೆ ಸುರಿಯುತ್ತದೆ. ತಾನು ಬೇಸಿಗೆ ಕಾಲದ ಭೂಮಿ ಮೊದಲಮಳೆ ಬಂದಾಗ ಗಟಗಟ ಕುಡಿಯುವಂತೆ
ಅದನ್ನೆಲ್ಲ ಹೀರಿಬಿಡುತ್ತೇನೆ. ಮೈಯೆಲ್ಲ ಹಸಿರು ಸಸ್ಯರಾಶಿಯಿಂದ ಆವೃತವಾಗುತ್ತದೆ... “ಇನ್ನೇನು,
ಲಕ್ಷ್ಮಿ ಮನೆಗೆ ಬಂದಿದ್ದಾಳೆ, ಮನೆತುಂಬುವ ಲಕ್ಷ್ಮಿ” ಎಂದು ಹೇಮಂತನ ತಾಯಿ ಹೇಳುತ್ತಾರೆ “ನಿಮ್ಮಿಷ್ಟವೇ
ನನ್ನಿಷ್ಟ” ತಂದೆಯೂ ಗಂಭೀರವಾಗಿ ನುಡಿಯುತ್ತಾರೆ. ಉಳಿದಿರುವುದೇನು, ಹಸಿರುತೋರಣ, ಮಂಗಳವಾದ್ಯ, ಸಮಾರಾಧನೆಯೂಟ,
ಆಕಾಶದಲ್ಲಿ ತೇಲಾಟ ಸಿನಿಮಾ ರೀಲುಗಳಂತೆ ಅವಳಲ್ಲಿ ದೃಶ್ಯಪರಂಪರೆ ಮೂಡುತ್ತವೆ.
ಆದರೆ
ಭೂಮಿ ಆಕಾಶದಷ್ಟು ಮೆತುವಲ್ಲ, ಹೇಳಿದಷ್ಟು ಒಳಗೆ ಸೆಳೆದು ಕೊಳ್ಳುವ ವಿಶಾಲ ಹೃದಯಿಯಲ್ಲ, ಕಾಲಿಟ್ಟರೆ
ಗಟ್ಟಿ, ತಲೆಹಾಯ್ದರೆ ಏಟು. ಮನೆ ಬಂತು. ಅವಳೆಂದುಕೊಂಡಂತೆ ಬಾಗಿಲು ತೆರೆಯುತ್ತದೆ. ಆದರೆ ತೆರೆದಾಕೆ
ತುಂಬ ಲಕ್ಷಣವಾದ ಹೆಂಗಸು-ನಳಿನಿ, ಹಿಂದೆಯೇ ಕವಿತಾ - ಉರಿವ ಬತ್ತಿಯೊಡನೆ ಬರುವ ಬೆಳಕಿನಂತೆ.
“ಒಳಗೆ
ಬನ್ರೀ ನಿಂತೇ ಬಿಟ್ರಲ್ಲ, ಇವಳು ನನ್ನ ಶ್ರೀಮತಿ ನಳಿನಿ; ನಮ್ಮ ಬಳ್ಳಿಯ ಹೂವು ಕವಿತಾ” ಪರಿಚಯ ಮಾಡಿಕೊಡುತ್ತಿದ್ದರೂ
ಹಣ್ಣೆಂದು ಆಕಾಶಕ್ಕೆ ಹಾರಿ ಏಟು ತಿಂದು ಕೆಳಗೆ ದೊಪ್ಪೆಂದು ಬಿದ್ದ ಆಂಜನೇಯನಂತೆ ನಂದಿನಿಯ ಗಾಜುಬುರಡೆ
ಒಡೆದಿತ್ತು. ಮೂರು ನಾಲ್ಕು ವರ್ಷಗಳಿಂದ ತುಂಬ ಮುತುವರ್ಜಿಯಿಂದ ಬೆಳೆಸಿದ್ದ ಕನಸಿನ ಬಳ್ಳಿಯನ್ನು ವಾಸ್ತವತೆಯ
ಇಲಿ ಕಡಿದು ಹಾಕಿತ್ತು. ಹೇಮಂತ ತನಗಾಗಿಯೇ ಸೃಷ್ಟಿತನಾದವನು ಎಂದು ಕೊಂಡಿದ್ದ ನಂದಿನಿಗೆ ಆಘಾತವಾಗಿತ್ತು.
ಇದರ ಕಲ್ಪನೆ ಕೂಡ ಅವಳ ಬಳಿ ಸುಳಿದಿರಲಿಲ್ಲ.
ಏನೋ
ಮಾತಾಡಿ, ತಪ್ಪು ತಿಳಿದಾರೆಂದು ಕೊಟ್ಟದ್ದು ತಿಂದು ಕುಡಿದು ಏಕೋ ತಲೆನೋಯುತ್ತಿದೆಯೆಂದು ಮುಜುಗರದ
ಸಂದರ್ಭದಲ್ಲಿ, ಎಲ್ಲರೂ ನೆವ ಹೇಳುವಂತೆ ಹೇಳಿ ಕೊನೆಗೂ ಅಲ್ಲಿಂದ ಮೇಲೆದ್ದಳು.
ಅಷ್ಟು
ದೂರ ಬಿಡುವುದಕ್ಕೆಂದು ಜೊತೆಯಲ್ಲಿ ಬಂದ ಹೇಮಂತ ಹೋದರೆ ಸಾಕು ಎನ್ನಿಸಿತ್ತು.
ಅವಳಲ್ಲಿಯೇ
ಹುದುಗಿಕೊಂಡಿದ್ದ ಈ ರಹಸ್ಯ ಬೇರೆಯವರಿಗೆ ಹೇಗೆ ಗೊತ್ತಾಗಬೇಕು. ಹೇಮಂತನ ಮೇಲೆ ಗೂಬೆ ಕೂರಿಸುವ ಜನಕ್ಕೆ
ನಂದಿನಿಯ ಶವದಿಂದ ಮಾತು ಹೊರಡಿಸುವುದು ಸಾಧ್ಯವಾಗಿದ್ದರೆ ನಿಜ ತಿಳಿಯುತ್ತಿತ್ತು. ಸಾಕು ಇನ್ನು ಜೀವನ
ಅನ್ನಿಸಿತೇನೋ ನಂದಿನಿಗೆ. ಪರಿಣಾಮ ಕಡಲೆಪುರಿಗಳಂತೆ ನಿದ್ರೆಯ ಗುಳಿಗೆಗಳನ್ನು ನುಂಗುವ ದಾಹ.
* * *
ಹೇಮಂತನ
ಮೇಲೆ ಯಶೋದೆಗೆ ಬಂದಿದ್ದ ಸಿಟ್ಟು ಮಾಧವರಾಯನದಕ್ಕಿಂತ ಕಡಿಮೆ ಪ್ರಮಾಣದ್ದಲ್ಲ. ಈಗಾಗಲೇ ಮದುವೆಯಾಗಿ
ತನ್ನಂತೆ ತಾಯಿಯಾಗಬೇಕಾಗಿದ್ದ ನಂದಿನಿ ತನ್ನ ಬಾಳನ್ನು ಕೊನೆಗೊಳಿಸಿಕೊಂಡ ರೀತಿ ಅವಳ ಅಪ್ರತಿಮ ದುಃಖವೇ
ಅದಕ್ಕೆ ಕಾರಣವೆಂದು ಭಾವಿಸಿದ ಹೇಮಂತನ ರಾಕ್ಷಸತನದ ಬಗ್ಗೆ ಆಕ್ರೋಶವೂ ಮಿಳಿತವಾಗಿ ಅವಳನ್ನು ಸುಮ್ಮನೆ
ಕೂರದಂತೆ ಮಾಡಿತ್ತು. ಪಾಪ ಬಡಮೇಷ್ಟರಾದ ಮಾಧವರಾವ್ ಏನು ತಾನೇ ಮಾಡುತ್ತಾರೆ? ಬಡವನ ಕೋಪ ದವಡೆಗೆ ಮೂಲ
ತಾನೇ? ಅದಕ್ಕೆ ತಾನು ಏನಾದರೂ ಮಾಡಬೇಕು. ಈಗಿನ ಕಾಲದಲ್ಲಿಯೂ ಹೆಣ್ಣನ್ನು ಕೈಗೊಂಬೆಯಾಗೇ ಮಾಡಿಕೊಳ್ಳುವುದೆಂದರೇನು?
ಅದೂ ಹೇಮಂತನಂತಹ ವಿದ್ಯಾವಂತ, ಬರಹಗಾರ ಬೇರೆ! ಸೂಕ್ಷ್ಮವಾಗಿ ಸ್ಪಂದಿಸಬಲ್ಲ ಲೇಖಕ, ಇತರರ ನೋವಿಗೆ
ದನಿಯಾಗಬಲ್ಲವನು, ನೊಂದವರ ಕಣ್ಣೀರನ್ನೊರೆಸುವ ಕರವಸ್ತ್ರವಾಗಬೇಕಾದವನು ಹೀಗೆ ಮಾಡುವುದೆಂದರೆ! ಸಿನಿಮಾದಲ್ಲಿ
ತೋರಿಸುವ ಹಾಗೆ ಖಳರು ರೇಪ್ ಮಾಡುತ್ತಾರೆ; ಆದರೆ ಹೇಮಂತನಂತಹ ನಯವಂಚಕರು ತಮ್ಮ ಅದ್ಭುತ ನಟನೆಯಿಂದ
ಮರುಳು ಮಾಡಿ ಹೆಣ್ಣಿನ ಭಾವನೆಯ ಪದರುಗಳನ್ನು ಸುಲಿಯುತ್ತಾ ಹೋಗುತ್ತಾರೆ. ಹಿಂದಿನಿಂದ ಬಂದದ್ದೇ ಅಲ್ಲವೇ
ಇದು. ಮನುಷ್ಯ ಎಷ್ಟೇ ನಾಗರಿಕನಾಗಲೀ ಅವನ ಸ್ವಭಾವಮೂಲವಾದ ರಾಕ್ಷಸತನ ಗಂಡಸಿನಿಂದ ಬಿಟ್ಟು ಹೋಗಲಾರದೇನೋ?
ಹೆಣ್ಣನ್ನು ದೇವಿಯೆಂದು ವೈಭವೀಕರಿಸುವ ಈ ಲೇಖಕರು ತಮ್ಮ ಪರಿಚಯವಲಯದಲ್ಲಿ ಬಂದ ಮುಗ್ಧ ಬಾಲೆಯರನ್ನು
ಭಾವನಾವಿವಸ್ತ್ರರನ್ನಾಗಿ ಮಾಡುವ ದುಶ್ಯಾಸನರು. ಇಂಥವರಿಗೆ, ತಕ್ಕದ್ದು ಮಾಡಬೇಕು.
ಸಾಕಷ್ಟು
ಯೋಚಿಸಿದ ಮೇಲೆ ಯಶೋದೆಗೆ ಒಂದು ಮಾರ್ಗ ಹೊಳೆದಿತ್ತು. ಸಂವಿಧಾನಾತ್ಮಕಮಾರ್ಗದಿಂದ ಇಂಥ ದೌರ್ಜನ್ಯದ
ವಿರುದ್ಧ ಹೋರಾಡುವುದು. ಅಬಲೆಯರೆಂದು ಹೆಣ್ಣನ್ನು ಕರೆದೂ ಕರೆದೂ ಹಿಂದಿನಿಂದ ಅವಳ ತಲೆಯಲ್ಲಿ ಅದನ್ನೇ
ತುರುಕಿಬಿಟ್ಟಿದ್ದಾರೆ. ನಾವೀಗ ಆಕ್ರಮಣಶೀಲರಾಗಬೇಕು. ಆಗ ಸ್ವಲ್ಪವಾದರೂ ರಕ್ಷಣೆ ದೊರೆಯುತ್ತದೆ. ವಿದ್ಯಾವಂತೆಯೂ
ಚಿಂತನಪರೆಯೂ ಆದ ಯಶೋದೆಯ ವ್ಯಕ್ತಿತ್ವದಲ್ಲಿ ಮಿಳಿತವಾಗಿದ್ದದ್ದು ಸೌಜನ್ಯದ ಜೊತೆಗೆ ನಿಷ್ಠುರ ಸಂಕಲ್ಪ.
ಹಾಗಾಗಿ ಅವಳು ನಂದಿನಿಯನ್ನು ಮರಳಿ ಕರೆತರಲಾರಳು; ಮಾಧವರಾವ್ ಹಾಗೂ ಅವರ ತಾಯಿಯ ಹೃದಯದ ಗಾಯಕ್ಕೆ ಅವಳಲ್ಲಿ
ಔಷಧಿಯಿಲ್ಲ. ಆದರೆ ಇಂಥದ್ದು ಸಮಾಜದಲ್ಲಿ ಆಗಬಾರದು ಅಥವಾ ಆ ದಿಸೆಯಲ್ಲಿ ತನ್ನಂಥ ಹೆಣ್ಣುಗಳು ಕಾರ್ಯಪ್ರವೃತ್ತವಾಗಬೇಕು.
ದಿಟ್ಟೆಯಾದ ಯಶೋದೆಗೆ ಒಂದು ಮಾರ್ಗ ಕಾಣಿಸಿತು. ತನ್ನ ಆಕ್ರೋಶವನ್ನು ವ್ಯಕ್ತಗೊಳಿಸುವ ಬಗ್ಗೆ ಆಗ ಅವಳಿಗೆ
ನೆನಪಿಗೆ ಬಂದುದು ‘ಸಮತಾ’.
‘ಸಮತಾ’
ಒಂದು ಸ್ತ್ರೀಸಂಘಟನೆ. ಸ್ತ್ರೀಯರ ಬೌದ್ಧಿಕ ಸಾಂಸ್ಕೃತಿಕ ವಿಕಾಸಕ್ಕೆ ನೆರವಾಗುವ ಕಾರ್ಯಕ್ರಮಗಳನ್ನು
ರೂಪಿಸಿಕೊಂಡು ನೆರವೇರಿಸುವುದರ ಜೊತೆಗೆ, ಸ್ತ್ರೀಯರ ಘನತೆಗೆ ಕುಂದು ತರುವಂತಹ ಕಾರ್ಯಗಳ ವಿರುದ್ಧ
ಹೋರಾಡುವುದು, ಸಂವಿಧಾನದ ಚೌಕಟ್ಟಿನಲ್ಲಿ. ದೌರ್ಜನ್ಯಗಳನ್ನು ಬಯಲಿಗೆಳೆದು, ಸಾರ್ವಜನಿಕಾಭಿಪ್ರಾಯವನ್ನು
ಅದರ ವಿರುದ್ಧ ರೂಪಿಸುವುದು; ಸ್ತ್ರೀಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಸಲ್ಲದರ ವಿರುದ್ಧ ಪ್ರತಿಭಟನಾತ್ಮಕ
ಮನೋಭಾವನೆಯನ್ನು, ಸ್ಥೈರ್ಯವನ್ನು ತುಂಬುವುದು ಅದರ ಉದ್ದೇಶ. ಬೆಂಗಳೂರಿನಲ್ಲಿ ಅದರ ಕೇಂದ್ರವಿದ್ದರೂ
ತುಮಕೂರಿನಲ್ಲಿಯೂ ಒಂದು ಶಾಖೆಯಿದೆ, ರಾಜಧಾನಿಗೆ ಹತ್ತಿರವಿರುವುದರಿಂದ ತುಮಕೂರಿನಲ್ಲಿ ಹಮ್ಮಿಕೊಂಡ
ಕಾರ್ಯಕ್ರಮಗಳಿಗೆ ಪ್ರಚಾರ ಸಿಕ್ಕಿ ಜನರನ್ನು ತಲುಪಲು ಅದು ಸಹಾಯಕ, ಅಲ್ಲದೆ ಬೆಂಗಳೂರಿನಲ್ಲಿ ಏನಾದರೂ
‘ಸಮತಾ’ ಕೇಂದ್ರದ ಕಾರ್ಯಕ್ರಮವಾದರೆ ತುಮಕೂರಿನವರು ಅದರಲ್ಲಿ ಭಾಗವಹಿಸಲು ಹೋಗುವುದಾಗಲೀ, ಇಲ್ಲಿ ಏನಾದರೂ
ನಡೆದರೆ ಅಲ್ಲಿಂದ ಬರುವುದಾಗಲೀ ಸುಲಭ. ಹೀಗಾಗಿ ತುಮಕೂರಿನಲ್ಲಿಯೂ ‘ಸಮತಾ’ ಸಾಕಷ್ಟು ಕ್ರಿಯಾಶೀಲವಾಗಿರಲು
ಸಾಧ್ಯವಾಗಿತ್ತು.
ಮಹಾತ್ಮ
ಗಾಂಧಿ ರಸ್ತೆಯಲ್ಲಿ ಅಂಗಡಿ ಸಾಲುಗಳ ಮಹಡಿಮೇಲಿದ್ದ ‘ಸಮತಾ’ ಕಾರ್ಯಾಲಯಕ್ಕೆ ಬೆಳಿಗ್ಗೆಯೇ ಬಂದ ಯಶೋದಳನ್ನು
ಸ್ವಾಗತಿಸಿದ್ದು ಕಾರ್ಯದರ್ಶಿನಿ ಮಂಗಳಾ, ಅವರ ಮುಗುಳುನಗೆ. ಯಶೋದಳ ಮುಖದಲ್ಲಿದ್ದ ದುಗುಡದ ಕರಿನೆರಳು
ಅವಳಲ್ಲಿ ಚಿಂತೆಯನ್ನು ಮೂಡಿಸಿತು. ಮಂಗಳಾ ಬಗ್ಗೆ ಯಶೋದೆ ಕೇಳಿದ್ದಳೇ ಹೊರತು ಹೆಚ್ಚು ಪರಿಚಯವಿರಲಿಲ್ಲ.
ಒಂದೆರಡು ಬಾರಿ ನೋಡಿದ್ದ ನೆನಪು. ತುಂಬ ದಿಟ್ಟ ಹೆಂಗಸೆಂದು ಹೆಸರು ಪಡೆದಿದ್ದಳು. ಅಂದರೆ ಹೆಂಗಸರು
ಅವಳನ್ನು ದಿಟ್ಟೆಯೆಂದು ಕರೆದರೆ, ಗಂಡಸರಲ್ಲಿ ಕೆಲವರು ಅಮೆಜಾನ್ ಎಂದು ಹಾಸ್ಯ ಮಾಡುತ್ತಿದ್ದರು. ಅವಳ
ಮುಖವೂ ಹಾಗೆಯೇ ಸಾಂಪ್ರದಾಯಕವಾಗಿ ಹೆಣ್ಣಿನಲ್ಲಿ ನಿರೀಕ್ಷಿಸುವಂತಹ ಕೋಮಲತೆಯ ಬಳ್ಳಿಯಲ್ಲಿ ಬೆಳೆದಿರಲಿಲ್ಲ;
ಅದರ ಬದಲು ಹುಣಿಸೇ ಮರದ ಕಾಂಡದಂತಹ ಒರಟುತನ, ಗಡಸು ರೇಖೆಗಳು. ಗಂಡನನ್ನು ತೊರೆದು ಏಕಾಕಿಯಾಗಿ ತನ್ನ
ಮಕ್ಕಳನ್ನು ಬೆಳೆಸಿದ್ದಳು. ಈಗ ಅವರ ಇಬ್ಬರು ಗಂಡುಮಕ್ಕಳೂ ಸೇರಿ ತುಮಕೂರಿನ ಬಳಿಯ ಹಿರೇಹಳ್ಳಿಯಲ್ಲಿ
ಒಂದು ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಗಂಡನ ದಬ್ಬಾಳಿಕೆಯನ್ನು ಸಹಿಸದ ಮಂಗಳಾ
ಅವನನ್ನು ತೊರೆದು ಕೆಲಸಕ್ಕೆ ಸೇರಿ ಹೆಣ್ಣು ಸ್ವತಂತ್ರವಾಗಿ ಜೀವಿಸಬಲ್ಲಳೆಂದು ಸಾಬೀತು ಮಾಡಲು ಹುಟ್ಟಿದ್ದಳೇನೋ
ಎಂಬಂತೆ ಜೀವನವನ್ನು ನಡೆಸಿದಳು. ಗಂಡನನ್ನು ಬಿಟ್ಟು ಆಗಲೇ ಹದಿನೈದು ವರ್ಷಗಳಾದರೂ ಆಗಿವೆ. ಅಂಥ ಪ್ರಾಯದಲ್ಲಿಯೇ
ಗಂಡನಿಂದ ದೂರವಾದ ಮಂಗಳ ಹಾಸಿಗೆಯಲ್ಲಿ ಒಂಟಿಯಾಗಿಯೇ ಇಡೀ ಜೀವನವನ್ನು ಸವೆಸಿದ್ದಾಳೆಯೇ ಎಂದು ಕೆಲವರಿಗೆ
ಅಚ್ಚರಿ. ಮತ್ತೆ ಕೆಲವರು ‘ಅವರಿವರನ್ನು ಗಂಟುಹಾಕಿಕೊಂಡಿದ್ದಳು’ ಎಂದು ಕುಚೋದ್ಯ ಮಾಡುತ್ತಾರೆ. ಆದರೆ
ಇಂಥ ಬೆನ್ನ ಹಿಂದಿನ ಮಾತುಗಳಿಗೆ ಮಂಗಳ ಸೊಪ್ಪುಹಾಕುವವಳಲ್ಲ, ಅಂಥ ಚೇಷ್ಟೆಯ ಮಾತುಗಳನ್ನುಕೇಳಿದಾಗ
“ಯಾಕಾಗಬಾರದು? ಗಂಡಸರು ಮಾಡಬಹುದು, ನಾವು ಮಾಡಬಾರದಾ? ಅವರೇ ಹಿಂದಿನಿಂದ ನಿಯಮಗಳನ್ನು ಮಾಡಿದವರು
ತಮಗೆ ಬೇಕಾದ ಹಾಗೆ ಶಾಸ್ತ್ರಗಳನ್ನು ರಚಿಸಿ ನಮ್ಮ ತಲೆಯ ಮೇಲೆ ಹೊರಿಸಿದರು” ಎಂದು ನುಡಿಯುತ್ತಾಳೆ.
ಅವಳ ಕಠೋರ ಮುಖದಲ್ಲಿ ನಿರ್ದಾಕ್ಷಿಣ್ಯದ ಉಕ್ಕಿನ ಚೌಕಟ್ಟಿದೆ; ಆದರೆ ಮುಗುಳ್ನಕ್ಕಾಗಆ ಚೌಕಟ್ಟಿನ ಒಳಗೇ
ಮಾರ್ದವತೆಯ ಹೊಳಪು ಕಾಣುತ್ತದೆ.
“ಬನ್ನಿ,
ಕುಳಿತುಕೊಳ್ಳಿ. ನಿಮ್ಮನ್ನೆಲ್ಲೋ ನೋಡಿದ್ದೀನಲ್ಲ. ಈ ಊರಿನೋರೇ ಅಲ್ಲವಾ ನೀವು?” ಎಂದು ಆತ್ಮೀಯವಾಗಿ
ಮಂಗಳಾ ಮುಗುಳ್ನಗೆಯೊಡನೆ ಸ್ವಾಗತಿಸಿ ಎದುರಿಗಿದ್ದ ಕುರ್ಚಿಯನ್ನು ತೋರಿಸಿದಳು. ಅದರಲ್ಲಿ ಕೂತ ಯಶೋದೆ
ಸುತ್ತಲೂ ಕಣ್ಣಾಡಿಸುತ್ತ ಕೂತಳು. ಏನೋ ಫೈಲೊಂದನ್ನು ತೆಗೆದುಕೊಳ್ಳಲು ಮೇಲೆದ್ದಿದ್ದ ಮಂಗಳಾ ಬೀರುವಿನ
ಬಾಗಿಲು ತೆರೆದು ಅದನ್ನು ಹೊರತೆಗೆದು ಮೇಜಿನ ಮೇಲಿಟ್ಟು ಬೀರು ಬಾಗಿಲು ಹಾಕಿ ಸ್ವಸ್ಥಾನದಲ್ಲಿ ಕುಳಿತು,
ಯಶೋದೆಯ ಕಡೆ ನೋಡುತ್ತ ಗಂಭೀರವಾಗಿ “ಏನು ಸಮಸ್ಯೆ?” ಎಂದಳು.
ಇಲ್ಲಿಗೆ
ಬರುವವರು ಸಮಸ್ಯೆಯನ್ನು ಹೊತ್ತು ತರುವ ಮಹಿಳೆಯರು ಅಲ್ಲವೇ? ಸ್ತ್ರೀಯರೆಂದರೆ ಹೆಣ್ಣಾಳುಗಳು. ಹೆರಲು
ಇರುವವರು; ಮಕ್ಕಳನ್ನು ಹೇಗೋ ಹಾಗೆಯೇ ಸಮಸ್ಯೆಗಳನ್ನು. ಒಂದೇ ಎರಡೇ ಗಂಡನ ಕಿರುಕುಳ-ಹಿಂಸೆ, ಅತ್ತೆ
ಮಾವಂದಿರ ಕಾಟ, ದಾರಿಹೋಕರ ಕಾಟ, ಪೋಲಿಗಳ, ಕುಡುಕರ ಹಾವಳಿ, ವರದಕ್ಷಿಣೆಯ ರೋಗ - ನೂರೆಂಟು. ಆದಷ್ಟು
ಸಲಹೆ ನೀಡಿ ಅವರಲ್ಲಿ ಧೈರ್ಯತುಂಬಿ ಕಳಿಸುವ ಕೆಲಸವಷ್ಟೇ ಈಗ ನಡೆಯುತ್ತಿರುವುದು ‘ಸಮತಾ’ದಿಂದ. ಅನಾಥೆಯರ,
ಪರಿತ್ಯಕ್ತೆಯರ, ವಿವಾಹಪೂರ್ವದಲ್ಲಿ ತಾಯಿಯಾದವರ, ವಿಧವೆಯರ, ಪುನರ್ವಸತಿಯನ್ನು ಕಲ್ಪಿಸಲು ಬೆಂಗಳೂರಿನಲ್ಲಿ
ಎರಡು ವರ್ಷಗಳಿಂದ ಅಲ್ಲಿನ ಕೇಂದ್ರ ‘ಸಮತಾ’ ಒಂದು ‘ಅಭಯ’ ಎಂಬ ಧಾಮವನ್ನು ನಡೆಸುತ್ತಿದೆ. ತುಮಕೂರಿನಲ್ಲಿ
ಇನ್ನೂ ಆ ಏರ್ಪಾಟಿಲ್ಲ. ಆದರೆ ಅಲ್ಲಿಗೆ ಇಲ್ಲಿಂದಲೂ ಕೆಲವು ಮಹಿಳೆಯರನ್ನು ಕಳಿಸಿ ಅವಳಿಗೆ ವಸತಿ ಕಲ್ಪಿಸಿದೆ.
ಯಶೋದೆ ಇಲ್ಲಿಗೆ ಬಂದಿರಬೇಕಾದರೆ ಏನೋ ಸಮಸ್ಯೆಯಿರಬೇಕು ಎಂದು ಮಂಗಳಾ ಮಾಡಿದ ಊಹೆ ಆದ್ದರಿಂದಲೇ ತಾರ್ಕಿಕವಾಗಿತ್ತು.
ಆದರೆ ಸಮಸ್ಯೆ ತನ್ನ ವೈಯಕ್ತಿಕ ಬದುಕಿನದಲ್ಲ, ತನ್ನ ಸ್ನೇಹಿತೆಗೆ ಸಂಬಂಧಿಸಿದ್ದು ಎಂದು ಆಮೇಲೆ ತಿಳಿಯಿತು.
ವಿವರವಾಗಿ
ತನ್ನ ದೃಷ್ಟಿಯಲ್ಲಿ ನಡೆದಿರಬಹುದಾದುದನ್ನೆಲ್ಲ ಯಶೋದೆ ವಿವರಿಸಿದಳು. ನಂದಿನಿಯ ಮುಗ್ಧಜೀವನ ಹಾಳಾದ
ಬಗ್ಗೆ ತನ್ನ ಉತ್ಕಟ ಕೋಪವನ್ನು ವ್ಯಕ್ತಪಡಿಸಿದ್ದಳು. ಅವಳ ಕತೆಯನ್ನು ವಿವರಿಸುತ್ತಿದ್ದಾಗ ತನ್ನ ಸ್ನೇಹಿತೆಯ
ಮುಗ್ಧ ಮುಖ ಕಣ್ಣುಗಳಲ್ಲಿ ತೇಲಿ ಕಣ್ಣುಗಳು ತುಂಬಿ ಕಂಠದಲ್ಲಿ ಗೋಲಿ ಸಿಕ್ಕಿಕೊಂಡ ಹಾಗಾದರೆ, ಹೇಮಂತನ
ಅನ್ಯಾಯದ ಬಗ್ಗೆ ಹೇಳುವಾಗ ರೋಷ ಉಕ್ಕಿತ್ತು. ಅವನಿಗೆ ಬುದ್ಧಿ ಬರುವಂತೆ ಏನಾದರೂ ಮಾಡಬೇಕೆಂದು ಒತ್ತಾಯಿಸಿದಳು.
“ಅವನೇನು,
ಕಾದಂಬರಿಗಳನ್ನು ಬರೀ ತಾನೆ ಅಲ್ಲವೇ?”
“ಹೌದು,
ಮೇಡಂ”
“ನಾನೂ
ಅವನ ಹೆಸರು ಕೇಳಿದ್ದೀನಿ. ಸಮಾಜದಲ್ಲಿ ಎಂಥೆಂಥೋರು ಇರ್ತಾರೆ ನೋಡಿದಿರಾ? ಪ್ರಪಂಚದಲ್ಲಿ ಹೆಣ್ಣಿನ
ದೌರ್ಜನ್ಯದಿಂದಾಗಿ ಸತ್ತ ಒಬ್ಬ ಗಂಡನು ಇದ್ದಾನೆಯೇ? ನಡೆಯುವ ದೌರ್ಜನ್ಯವೆಲ್ಲ ಏಕಮುಖವಾದದ್ದು: ಗಂಡಸಿನ
ಕಡೆಯಿಂದ ಹೆಂಗಸಿನ ಮೇಲೆ; ಅಥವಾ ಕೆಲವು ವೇಳೆ ನಮ್ಮ ದುರಾದೃಷ್ಟದಿಂದ, ಗಂಡಸಿನೊಡನೆ ಶಾಮೀಲಾದ ಹೆಂಗಸರಿಂದ
ಹೆಂಗಸರ ಮೇಲೆ” ಹ್ಞೂ.... ಎಂದು ನಿಟ್ಟುಸಿರುಬಿಟ್ಟ ಮಂಗಳಾ ಏನು ಮಾಡಬಹುದೆಂದು ಯೋಚಿಸುತ್ತ ಕೂತಳು.
ಇಂತಹ ಯೋಚನೆಗಳಲ್ಲಿಯೇ ತಲೆಗೂದಲು ಬೆಳ್ಳಗಾಗಿರಬಹುದು.
ಅದಕ್ಕಾಗಿ ಯೋಚಿಸುವವಳಲ್ಲ ಆಕೆ. ಮಿಕ್ಕ ಮಹಿಳಾಸಮಾಜದ ಬೆಡಗುಗಾರ್ತಿ ಕಾರ್ಯದರ್ಶಿನಿ ಅಧ್ಯಕ್ಷರ ಹಾಗೆ,
ಕೃತಕ ವೇಷಭೂಷಣಗಳಿಂದ ಯೌವನವನ್ನು ಸುಡುಗಾಡಿನಿಂದ ಊರಿಗೆ ಎಳೆದು ತರುವ ಪ್ರಯತ್ನ ಅವಳು ಮಾಡುವುದಿಲ್ಲ.
ಹಾಗೆ ಮಾಡಿ ಗಂಡಸರ ಕಣ್ಣಿಗೆ ಚಂದ ಕಂಡು ಅವರಿಂದ ಹಿಂಸೆಯನ್ನು ಅನುಭವಿಸುವುದಷ್ಟಕ್ಕೇ ಏನು ಹೆಣ್ಣು
ಇರುವುದು? ಎಂದು ಅವಳ ವಾದ, ಅವಳ ಆಲೋಚನಾ ಮಾರುತಕ್ಕೆ ಅನುಗುಣವಾಗಿ ಅವಳ ಕೈಯಲ್ಲಿದ್ದ ಡಾಟ್‍ಪೆನ್
ಅಲೆಗಳಂತೆ ಅತ್ತಿತ್ತ ಅಲೆದಾಡುತ್ತಿತ್ತು.
ಕೊನೆಗೊಮ್ಮೆ
ತಲೆಯೆತ್ತಿ ಯಶೋದೆಯ ಕಡೆ ನೋಡಿ ಒಂದು ಸಲಹೆ ಮುಂದಿಟ್ಟಳು: “ಬೇಕಾದರೆ ಬಂದು ಡೆಮಾನ್‍ಸ್ಟ್ರೇಷನ್ ಮಾಡೋಣ.”
“ಯಾವ
ರೀತಿ?” ಇಂತಹ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸದ, ಅದಕ್ಕಿಂತ ಹೆಚ್ಚಾಗಿ, ಇವುಗಳನ್ನು ರೂಪಿಸುವ
ಅಭ್ಯಾಸವಿಲ್ಲದ ಯಶೋದೆಯ ಪ್ರಶ್ನೆ.
“ನಾವೇ
ಮಹಿಳೆಯರು ಸೇರಿ ಒಂದು ದಿನ ಊರಿನ ಬೀದಿಗಳಲ್ಲಿ ಮೆರವಣಿಗೆ ತೆಗೆಯೋಣ, ಒಂದು ಸಭೆ ಮಾಡೋಣ, ಜಿಲ್ಲಾಧಿಕಾರಿಗಳಿಗೆ
ತಪ್ಪಿತಸ್ಥನ ಮೇಲೆ ಕ್ರಮಕೈಗೊಳ್ಳುವಹಾಗೆ ಒತ್ತಾಯ ಮಾಡಿ ಒಂದು ಮನವಿಪತ್ರ ಸಲ್ಲಿಸೋಣ. ಸ್ಟೆಕ್ಟಾಕ್ಯುಲರ್
ಆಗಿ ಏನಾದರೂ ಆಗಬಹುದೆಂದು ನಾನು ಹೇಳುವುದಿಲ್ಲ. ಆದರೆ ಜನರಿಗೆ ಇಂಥ ವಿಷಯ ತಿಳಿಸಬೇಕು, ಅವರನ್ನು
ಎಚ್ಚರಿಸಬೇಕಾದ್ದು ನಮ್ಮ ಕರ್ತವ್ಯ ಅಲ್ಲವೇ?”
ನಿಜ,
ಮಂಗಳಾ ಹೇಳುತ್ತಿದ್ದುದನ್ನೇ ತಾನೂ ಆಲೋಚಿಸಿದ್ದು. ಹೇಮಂತ ನಂದಿನಿಯ ಸಾವಿಗೆ ಕಾರಣ, ನಿಜ. ಆದರೆ ಕಾನೂನಿಗೆ
ಅಂಥ ಅನಿಸಿಕೆಯಷ್ಟೇ ಸಾಲದಲ್ಲ, ಪುರಾವೆಗಳು ಬೇಕು, ಎಲ್ಲಿ ತರುವುದು? ತಮ್ಮ ಆಕ್ರೋಶದ ತೀವ್ರತೆಯು
ಇದರಿಂದ ಕಡಿಮೆಯಾಗುವುದರ ಜೊತೆ ಇಂಥ ವ್ಯಕ್ತಿಗಳಿಗೆ ಸ್ವಲ್ಪ ಭಯವಾದರೂ ಮೂಡಿ ಪರಿಸ್ಥಿತಿ ಸ್ವಲ್ಪವಾದರೂ
ಉತ್ತಮಗೊಳ್ಳಬಹುದು.
“ಒಂದು
ಕೆಲಸ ಮಾಡಿ ಇವತ್ತು ಸಂಜೆ ಬನ್ನಿ, ಸುಮಾರು ಆರು ಗಂಟೆ ಹೊತ್ತಿಗೆ. ನಮ್ಮಸಂಸ್ಥೆಯ ಆಕ್ಟಿವ್ ಸದಸ್ಯೆಯರು
ಬಂದಿರ್ತಾರೆ; ನಮ್ಮ ಅಧ್ಯಕ್ಷಿಣಿಯೂ ಇರ್ತಾರೆ. ಡೆಮಾನ್‍ಸ್ಟ್ರೇಷನ್ ಹೇಗೆ ಆಗಬೇಕು ಅನ್ನುವುದರ ವಿವರಗಳನ್ನು
ರೂಪಿಸೋಣ. ಆದರೆ ಏನಾದರೂ ಮಾಡಲೇಬೇಕು. ಪೂರ್ ನಂದಿನಿ” ಎಂದಾಗ ಅವಳಿಗೆ ನಮಸ್ಕಾರ ಹೇಳಿ ಯಶೋದೆ ಮನೆಗೆ
ಬಂದಳು. ಏನಾದರೂ ಆದರೆ ತನ್ನ ಗೆಳತಿಯ ಋಣ ಸ್ವಲ್ಪವಾದರೂ ತೀರಿಸಿದ ಹಾಗಾಗುತ್ತದೆ ಎಂಬ ಭಾವನೆ ಯಶೋದೆಗೆ
ಬಂದು ಹೃದಯದಲ್ಲಿ ಮಾಗಿಕಾಲದ ಬೆಳಗಿನ ಜಾವದ ಕೊರೆಯುವ ಚಳಿಗಾಳಿ ಬರಿಮೈಯ ಮೇಲೆ ಬೀಸಿದಂತಾಯಿತು.ಆದರೆ
ಆನಂತರ ಅವಳು ಬಿಟ್ಟ ನಿಟ್ಟುಸಿರು ಮಾತ್ರ ಸುಡುತ್ತಿತ್ತು.
ಯಶೋದೆ
ಹೋಗಿದ್ದುದು ಗುರುವಾರ. ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ‘ಸಮತಾ’ ಕಚೇರಿಯ ಮುಂಭಾಗದಿಂದ ಮೆರವಣಿಗೆ
ಪ್ರಾರಂಭವಾಯಿತು. ಫೋನಿನಲ್ಲಿ ಕೇಂದ್ರ ‘ಸಮತಾ’ವನ್ನು ಸಂಪರ್ಕಿಸಿದ್ದರಿಂದ ಬೆಂಗಳೂರಿನಿಂದಲೂ ಕೆಲವರು
ಬಂದಿದ್ದರು: ಒಂದೆರಡು ದಿನಗಳ ಕಾಲಾವಕಾಶವಿದ್ದುದರಿಂದ ಸಾಕಷ್ಟು ಘೋಷಣ ಪತ್ರಗಳನ್ನು ತಯಾರಿಸಿದ್ದರು;
ಘೋಷಣೆಗಳನ್ನು ಬರೆದಿದ್ದರು. ‘ಮಹಿಳೆಯ ಮೇಲಿನ ದೌರ್ಜನ್ಯ ನಿಲ್ಲಲಿ‘, ‘ಹೃದಯಹೀನ ಗಂಡಸರೇ, ನಿಮ್ಮಪೌರುಷಕ್ಕೆ
ಮಹಿಳೆಯೇ ಗುರಿಯಾಗಬೇಕೇ?’ ‘ಮುಗ್ಧನಂದಿನಿಯ ಸಾವಿಗೆ ಯಾರು ಹೊಣೆ?’ ‘ಹೇಮಂತ ಕಾದಂಬರಿಕಾರ; ಅದರೊಡನೆ
ಕೊಲೆಗಾರ’ ‘ನಂದಿನಿಯ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ’ ‘ನಂದಿನಿಯ ಆತ್ಮಹತ್ಯೆಗೆ
ಕಾರಣರಾದವರನ್ನು ಬಂಧಿಸಿ’ ಮುಂತಾದ ಘೋಷಣೆಗಳು. ಸಮತಾದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಗೃಹಿಣಿಯರು,
ವಿದ್ಯಾರ್ಥಿನಿಯರು, ನೌಕರಿಯಲ್ಲಿದ್ದ ಸ್ತ್ರೀಯರು ಎಲ್ಲ ಸೇರಿ ಸಾಯಂಕಾಲದ ಹೊತ್ತು ಕಾರ್ಯಾಲಯದಲ್ಲಿಯೇ
ಸಿದ್ಧಪಡಿಸಿದ್ದ ಪತ್ರಗಳು ಅವು. ಅವರಿಗೆಲ್ಲ ಎಂತಹ ಉತ್ಸಾಹ! ಹೆಂಗಸರೆಲ್ಲ ಒಂದಾದರೆ ಗಂಡಸರಿಗೆ ಧೈರ್ಯ
ಉಡುಗಿಯೇ ಹೋಗುತ್ತದೆ ಎನ್ನಿಸಿತು ಯಶೋದೆಗೆ.
ಮಹಾತ್ಮಗಾಂಧಿ
ರಸ್ತೆಯ ಮೂಲಕ ಹಾದು ಬಸ್‍ಸ್ಟಾಂಡಿನ ಮುಂಭಾಗ ದಾಟಿ ಜಿಲ್ಲಾಧಿಕಾರಿಗಳ ಕಚೇರಿಯ ಕಡೆ ಮೆರವಣಿಗೆ ಸಾಗಿತು.
ಮೆರವಣಿಗೆಯಲ್ಲಿ ಸಾಲಾಗಿ ನಡೆಯುತ್ತಿದ್ದ ಮಹಿಳೆಯರ ಸಂಖ್ಯೆ ಐವತ್ತಿರಬಹುದು ಅಷ್ಟೆ. ಅವರೆಲ್ಲ ತಮ್ಮ
ಎದೆಗಳ ಮೇಲೆ ಕಪ್ಪುಟೇಪು ಧರಿಸಿದ್ದರು. ಕೆಲವರು ಕೈಲಿ ಘೋಷಣ ಪತ್ರಗಳನ್ನು ಹಿಡಿದಿದ್ದರು. ಮುಂದೆ
ಮಂಗಳಾ, ‘ಸಮತಾ’ದ ತುಮಕೂರು ಶಾಖೆಯ ಅಧ್ಯಕ್ಷಿಣಿ ರುಕ್ಷ್ಮಿಣೀ ರಾವ್ ಹಿಂದೆ ಇಬ್ಬಿಬ್ಬರಂತೆ ಇತರ ಕಾರ್ಯಕರ್ತೆಯರು,
ಅವರಲ್ಲಿ ಯಶೋದೆ.
ಮೆರವಣಿಗೆ
ಸಾಗುತ್ತಿದ್ದಂತೆ ನಿಂತು ನೋಡುತ್ತಿದ್ದ ಜನಕ್ಕೆ ಹಿಂದಿನ ದಿನ ತಯಾರಿಸಿ ಸೈಕ್ಲೋಸ್ಟೈಲ್ ಮಾಡಿಸಿದ್ದ
ಕರಪತ್ತಗಳನ್ನು ಒಬ್ಬ ಕಾರ್ಯಕರ್ತೆ ಹಂಚುತ್ತಿದ್ದಳು. ಸುತ್ತಲೂ ನಿಂತಿದ್ದ ಜನ ಇವರು ಕೈಲಿಹಿಡಿದಿದ್ದ
ಘೋಷಣೆಗಳನ್ನು ಓದುತ್ತಿದ್ದರು. ಇವರು ಕೂಗುತ್ತಿದ್ದ ಘೋಷಣೆಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಕೆಲವರ
ಮುಖದಮೇಲೆ ನಸುನಗೆ, ಇನ್ನು ಕೆಲವರಲ್ಲಿ ಸಹಾನುಭೂತಿಯ ಲೇಪ, ಕೆಲವರು ಇವರ ಘೋಷಣೆಗಳಿಗೆ ದನಿಗೂಡಿಸುತ್ತಿದ್ದರು;
ಅದರಲ್ಲಿ ಕೆಲವು ಚೇಷ್ಟೆಕೋರ ವಿದ್ಯಾರ್ಥಿಗಳು ಇದ್ದರು. ಆದರೆ ಇಂತಹ ಹಾಸ್ಯ-ಚೇಷ್ಟೆಗಳನ್ನು ದಿಟ್ಟವಾಗಿ
ಎದುರಿಸಿ ಅಭ್ಯಾಸವಿದ್ದ ಅವರು ಅದಾವುದಕ್ಕೂ ಗಮನವೀಯದೇ ಸಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದಿದ್ದ
ದೊಡ್ಡ ಆಲದ ಮರದ ನೆರಳಿನಡಿ ಗುಂಪಾಗಿ ನೆರೆದರು.
ಅಲ್ಲಿ
ಸಭೆ: ಒಂದಿಬ್ಬರಿಂದ ಭಾಷಣ. ಇಂದಿನ ದಿನದ ಕಾರ್ಯಕ್ರಮಕ್ಕೆ ಕಾರಣ ಹಿನ್ನೆಲೆಗಳನ್ನು ಹೇಳಲು ಯಶೋದೆಗೇ
ಆಹ್ವಾನ ಬಂತು. ತನ್ನ ಗೆಳತಿಯ ಸ್ವಭಾವ-ಗುಣಗಳನ್ನು ವಿವರಿಸಿ ಅವಳ ಹೃದಯದಲ್ಲಿ ಹೇಮಂತನೆಂಬ ಲೇಖಕನೊಬ್ಬ
ಹೇಗೆ ಆಸೆಯ ಆಕಾಶಬುಟ್ಟಿಯಲ್ಲಿ ಗಾಳಿ ತುಂಬಿದ; ಕೊನೆಗೆ ಅದನ್ನು ಚುಚ್ಚಿ ಬುಟ್ಟಿ ಮುದುರಿಕೊಳ್ಳುವಂತೆ
ಮಾಡಿದ ಎಂಬುದನ್ನು ವಿವರಿಸಿದಳು; ನಿಮ್ಮಲ್ಲಿ ಕೆಲವರಾದರೂ ನಂದಿನಿಯನ್ನು ಕಂಡಿರಬೇಕು ಎಂದಳು. ಅವಳು
ನಮ್ಮೆಲ್ಲರಂತೆ ಎಂಜಿ ರಸ್ತೆಯ ಮೂಲಕ ಹಲವು ಬಾರಿ ಓಡಾಡಿದ್ದಾಳೆ, ಇಲ್ಲಿಯ ಅಂಗಡಿಗಳಲ್ಲಿ ವ್ಯಾಪಾರ
ಮಾಡಿದ್ದಾಳೆ, ಇಲ್ಲಿಯ ಗಾಳಿ ಸೇವಿಸಿದ್ದಾಳೆ; ಆದರೆ ಇಂದು ಅವಳು ಇಲ್ಲವಾಗಿದ್ದಾಳೆ; ಅಥವಾ ನಮ್ಮ ಕಾಲಡಿಯ
ಮಣ್ಣಾಗಿದ್ದಳೆ; ನಮ್ಮ ಉಸಿರಿನಲ್ಲಿ ಗಾಳಿಯ ಕಣವಾಗಿದ್ದಾಳೆ. ಆದರಿಂದ ಎಚ್ಚರಗೊಂಡ ನಾವು ಅವಳಿಗಾದ
ಅನ್ಯಾಯವನ್ನು ಪ್ರತಿಭಟಿಸೋಣ ಎಂದು ಕೇಳಿಕೊಂಡು ಮಾತು ಮುಗಿಸಿದ್ದಳು.
ಅವಳ
ಮಾತು ಮುಗಿದ ಮೇಲೆ ಮಂಗಳಾ ಹಾಗೂ ರುಕ್ಮಿಣೀರಾವ್ ಎರಡೆರಡು ಮಾತುಗಳನ್ನಾಡಿ ಒಟ್ಟಾರೆ ಸ್ತ್ರೀಯರು ಪಡುತ್ತಿದ್ದ
ಪಾಡನ್ನು ವಿವರಿಸಿದರು. ‘ಸಮತಾ’ದ ಉದ್ದೇಶ ಸಮತೆಯನ್ನು ಸ್ಥಾಪಿಸುವುದು: ಗಂಡಸರು- ಹೆಂಗಸರ ನಡುವೆ,
ವ್ಯಕ್ತಿ - ವ್ಯಕ್ತಿಯ ನಡುವೆ, ವರ್ಗ – ವರ್ಗದ ನಡುವೆ ಎಂದು ಬಿಡಿಸಿ ಹೇಳಿದರು. ಆಮೇಲೆ ಇಬ್ಬರು ಯುವತಿಯರು
ಒಂದು ಹಾಡು ಹೇಳಿದರು. ಅದು ಮನರಂಜಿಸುವ ಹಾಡಲ್ಲ, ನೆತ್ತರು ಕುದಿಸುವ ಹಾಡು, ಹೆಂಗಸರ ಕರುಣಾಜನಕ ಪರಿಸ್ಥಿತಿಯನ್ನು
ವರ್ಣಿಸುವ ಹಾಡು.
ಕೊನೆಯಲ್ಲಿ
ಮಂಗಳಾ, ರುಕ್ಮಿಣೀರಾವ್, ಯಶೋದ ಹಾಗೂ ಮತ್ತೊಬ್ಬ ತರುಣಿ ಹಿಂದಿನ ದಿನವೇ ತಯಾರಿಸಿ ಟೈಪು ಮಾಡಿಸಿದ್ದ
ಮನವಿ ಪತ್ರವನ್ನು ತೆಗೆದುಕೊಂಡು ಲ್ಲಾಧಿಕಾರಿಗಳ (ಕಚೇರಿಗೆ ರಜವಿದ್ದುದರಿಂದ) ಮನೆಗೆ ಹೋಗಿ ಅವರನ್ನು
ಭೇಟಿಮಾಡಲು ತೆರಳಿದಾಗ, ಮಿಕ್ಕ ಜನ ತಮ್ಮ ಕಾರ್ಯಗಳಿಗೆ ತೆರಳಿದರು.
ಜಿಲ್ಲಾಧಿಕಾರಿಗಳು
ಇವರನ್ನು ಸೌಜನ್ಯದಿಂದ ಬರಮಾಡಿಕೊಂಡರು. ಮನವಿಪತ್ರವನ್ನು ಪೂರ್ತಿ ಓದಿದರು. ಇವರು ವಿವರಿಸಿದ್ದನ್ನೆಲ್ಲ
ಕೇಳಿದರು. ಹೇಮಂತನ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಹಾಕಿದಾಗ ಮಿಕ್ಕವರಿಗೆ ಆ ವಿಷಯ ಹೆಚ್ಚು ತಿಳಿದಿರಲಿಲ್ಲವಾದ್ದರಿಂದ
ಯಶೋದೆ ಅವುಗಳಿಗೆ ಉತ್ತರವಿತ್ತಳು. ಹಾಗೆಯೇ ನಂದಿನಿಯ ಬಗೆಗಿನ ಪ್ರಶ್ನೆಗಳಿಗೂ ಉತ್ತರಿಸಿದಳು. ಕಾನೂನಿನ
ಚೌಕಟ್ಟಿನಲ್ಲಿ ಏನು ಮಾಡಬಹುದೋ ಅದನ್ನೆಲ್ಲ ಮಾಡುವುದಾಗಿ ಉತ್ತರಿಸಿದ ಜಿಲ್ಲಾಧಿಕಾರಿಗಳು ಮಾರನೆಯ
ದಿನವೇ ಎಸ್‍ಪಿಯನ್ನು ಕರೆಸಿ ಈ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಳ್ಳಬಹುದೆಂಬುದನ್ನು ಚರ್ಚಿಸುವುದಾಗಿ
ಆಶ್ವಾಸನೆಯಿತ್ತರು. ಅಲ್ಲಿಗೆ ಭೇಟಿ ಮುಕ್ತಾಯವಾಯಿತು.
* * *
ದೇವೇಂದ್ರಕುಮಾರ್
ಅವತ್ತು ಹೇಮಂತ ಹೋದ ಮೇಲೆ ಮೂರನೆಯ ಬಾರಿ ನಳಿನಿಯ ಮನೆಗೆ ಬಂದಿದ್ದ, ಈಗ ಅದು ಹೇಮಂತನ ಮನೆಯಲ್ಲ, ನಳಿನಿಯ
ಮನೆ! ಕವಿತಾಳಿಗೆಂದು ಒಂದು ಚಾಕಲೇಟ್ ಪೊಟ್ಟಣವನ್ನು ತಂದಿದ್ದ. ಅದರಿಂದ ಆಕರ್ಷಿತಳಾಗಿ ಕವಿತಾ ಅವನ
ತೊಡೆಯ ಮೇಲೆ ಕೂತಿದ್ದಳು. ಎದುರಿಗಿದ್ದ ಕುರ್ಚಿಯಲ್ಲಿದ್ದ ನಳಿನಿಗೆ ಆ ದೃಶ್ಯ ಕಂಡು ಹೇಗೆ ಹೇಗೋ ಆಯಿತು.
ತನ್ನ ತಂದೆಯ ತೊಡೆಯ ಮೇಲೆ ಕೂತು ಲಲ್ಲೆಗರೆಯುತ್ತಿದ್ದ ಕವಿತಾಳ ಹಿಂದಿನ ನೆನಪುಗಳು ಬಂದವು, ಹಾಗಾಗಿ
ಹೆಚ್ಚುದಿನಗಳಾಗಿಲ್ಲ ನಿಜ. ಒಂಬತ್ತು ದಿನಗಳ ಹಿಂದೆ ಹೇಮಂತ ಮನೆಯಲ್ಲಿದ್ದ, ತನ್ನೊಡನೆ ಮಗಳೊಡನೆ ಮಾತಾಡಿದ್ದ.
ಆದರೆ ಇಷ್ಟು ಕಡಿಮೆಯ ಅವಧಿಯಲ್ಲಿ ಕಣ್ಣ ಮುಂದಿದ್ದ ಅವನೀಗ ಕೇವಲ ಊಹೆಯಾಗಿಬಿಟ್ಟಿದ್ದಾನೆ. ಸಭೆ ಸಮಾರಂಭಗಳಲ್ಲಿ
ನೂರಾರು ಜನರ ಮುಂದೆ ರಾರಾಜಿಸುತ್ತಿದ್ದ ಹೇಮಂತ ಇಂದು ಪರಿಚಯದವರ ಕಣ್ತಪ್ಪಿಸಿ ಓಡಿಹೋಗಿದ್ದಾನೆ. ತನ್ನನ್ನು
ಅಪ್ಪಿ ಮಲಗಿದ್ದ ಅವನು ಈಗ ನೆನಪಿನ ಗೋಡೆಯ ಮೇಲಿನ ದೂಳಿನಿಂದ ಮಸುಕಾಗುತ್ತಿದ್ದಾನೆ. ಯಾಕೆ ಹೋದ. ಓಡಿಹೋದ,
ಪರಾರಿಯಾದ? ಕಳ್ಳತನ ಮಾಡಿದನೆ, ದರೋಡೆ ಮಾಡಿದನೆ, ಅತ್ಯಾಚಾರವೆಸಗಿದನೇ, ಕೊಲೆ ಮಾಡಿದನೇ? ಯಾಕೆಂದು
ಅವನು ಜನರಿಂದ ದೂರ ಹೋದ? ಇಲ್ಲಿದ್ದರೆ ಅವನಿಗೇನಾಗುತ್ತಿತ್ತು? ಯಾರೂ ಏನೂ ಅವನ ಬಗ್ಗೆ ದೂರು ಹೇಳುತ್ತಿಲ್ಲವಲ್ಲ,
ಅವನ ಮೇಲೆ ಯಾವುದೇ ಆರೋಪ ತಾನು ಕೇಳಿಲ್ಲ. ಯಾವುದೇ ಪುಕಾರೂ ಇಲ್ಲ; ಇಷ್ಟಾದರು ಅವನು ಕಣ್ಮರೆಯಾಗಲು
ಕಾರಣವೇನು? ಯಾವುದಾದರೂ ಮೋಹಿನಿ ಮೆಟ್ಟಿಕೊಂಡು ಅವನನ್ನು ಹಾರಿಸಿಕೊಂಡು ಹೋಯಿತೇ? ಪಿಶಾಚಿಹಿಡಿದಿದೆಯೇ?
ಹುಚ್ಚು ಹಿಡಿದಿದೆಯೇ? ಅಥವಾ ಯಾವಳನ್ನಾದರೂ ಪ್ರೀತಿಸಿ ಅವಳೊಡನೆ ಪರಾರಿಯಾಗಿದ್ದಾನೆಯೇ? ಯಾಕೆ ತಾನೇನು
ಕಡಿಮೆ ಮಾಡಿದ್ದೆ ಅವನಿಗೆ? ತನ್ನಲ್ಲೇನು ಯೌವನವಿಲ್ಲವೆ, ರೂಪವಿಲ್ಲವೇ, ಅವನೊಡನೆ ಕೂಡಬೇಕೆಂಬ ಉತ್ಸಾಹವಿಲ್ಲವೇ?
ಇಷ್ಟು ಸಾಲದೆಂದು ತಿಳಿದರೆ ಅವನು ಹೇಳಿದಂತೆ ಕುಣಿಯುತ್ತಿದ್ದೆನಲ್ಲ. ಅವನ ಮುಂದೆ ಬತ್ತಲಾಗಿ ತನ್ನ
ಮಾಂಸದ ಕಣಕಣವನ್ನು ಅವನಿಗೆ ಬಡಿಸುತ್ತಿದ್ದೆನಲ್ಲ. ಅಲ್ಲದೆ ಕವಿತಾಳಂಥ ಮೊಗ್ಗಿನ ಆಕರ್ಷಣೆಯಿಂದಲೂ
ಅವನು ವಿಮುಖವಾಗುವಷ್ಟು ಬೇಸರ ಏನಿರಬಹುದು ಅವನಿಗೆ? ಯಾವುದರ ಬಗ್ಗೆ ಬೇಸರ? ತನ್ನ ಬಗ್ಗೆಯೇ? ಸಂಸಾರದ
ಬಗ್ಗೆಯೇ? ಪ್ರಪಂಚದ ಬಗ್ಗೆಯೇ? ಇದ್ದಕ್ಕಿದ್ದ ಹಾಗೆ ಓಡಿಹೋದ ಹೇಮಂತ ನಾವೆಲ್ಲ ಅಪಾಯದ ಕುದುರೆಯೇರಿ
ಹಾರುತ್ತ ಕೃಷ್ಣಗಾರುಡಿಯಲ್ಲಿನ ಅರ್ಜುನ ಧೊಪ್ಪೆಂದು ಬೀಳುವಂತೆ ಮಾಡುವ ಅವಶ್ಯಕತೆಯೇನಿತ್ತು, ಯಾಕೆ
ಹೇಮಂತ ಅಷ್ಟೊಂದು ಕ್ರೂರಿಯಾದ?
“ಹೇಮಂತ
ಏನಾದರೂ ಪತ್ರ ಬರೆದಿದ್ದಾನೆಯೇ?” ಎಂದು ದೇವೇಂದ್ರಕುಮಾರ್ ಪ್ರಶ್ನಿಸಿದ್ದಕ್ಕೆ ಏನೆಂದು ಉತ್ತರ ಹೇಳಬೇಕು?
ಅವನು ಹೋದಮೇಲೆ ಪತ್ರ ಬರೆದಿರುವುದು ಎರಡುಬಾರಿ; ಒಂದೇ ಸಾಲು; ಎರಡು ಪುಟ್ಟ ವಾಕ್ಯಗಳು. ಯಾವ ವಿಷಯವನ್ನು
ತಿಳಿಸಿದ ಹಾಗಾಯಿತು? ಅಲ್ಲದೆ ಎರಡನೆ ಕಾಗದ ಬಂದು ಆಗಲೇ ಐದು ದಿನಗಳಾದವು. ಹತ್ತು ದಿನಗಳು ತಾನೇ ಹೇಮಂತ
ರಜೆ ಹಾಕಿದ್ದದ್ದು; ನಾಳೆಗೆ ಮುಗಿಯುತ್ತದೆ; ನಾಳಿದ್ದು ಆಫೀಸಿಗೆ ಹೋಗಬೇಕು. ಆದ್ದರಿಂದ ನಾಳೆ ಅವನು
ಬರಲೇಬೇಕು ಅನ್ನಿಸಿದರೂ, ಇಷ್ಟು ದಿನಗಳು ಹೇಳದೇ ಕೇಳದೆ ಓಡಿಹೋದ ಹೇಮಂತ ನಾಳೆ ಬಂದಾನೆಂದು ಹೇಗೆ ಹೇಳುವುದೆಂಬ
ಅನುಮಾನ ಬೇರೆ ಪ್ರಾರಂಭವಾಯಿತು. ಏಕೋ, ಕಾರಣ ಗೊತ್ತಿಲ್ಲ. ಆದರೆ ನಾಳೆ ಬರುವನೇ, ನಿಜವಾಗಿಯೂ ಬರುತ್ತಾನೆಯೇ?
“ಹ್ಞೂ”
ಎಂದಿದ್ದಳು ನಳಿನಿ. ಇನ್ನೇನು ತಾನೇ ಹೇಳಿಯಾಳು? ತನ್ನ ಗಂಡ ಮೊದಲು ತನಗಾದ ಮುಖ್ಯ ವಿಷಯಗಳನ್ನೆಲ್ಲ
ಹೇಳಿಕೊಳ್ಳುತ್ತಿದ್ದವನು ತನ್ನ ಕೈಯನ್ನು ಕತ್ತರಿಸಿ ಬಿಸಾಕಿದಂತೆ ನನ್ನಿಂದ ಇದ್ದಕ್ಕಿದ್ದಂತೆ ದೂರವಾಗಿದ್ದಾನೆ.
ದೈಹಿಕವಾಗಿ ಅವನು ದೂರವಾಗಿದ್ದರೆ ಪರವಾಯಿಲ್ಲ. ಅದು ಅನಿವಾರ್ಯ, ಬೇಕಾದಾಗ ಹತ್ತಿರ ಬರಬಹುದಲ್ಲ. ಆದರೆ
ಅವನು ತನ್ನ ಮನಸ್ಸಿನಿಂದಲೇ ನನ್ನನ್ನು ಕತ್ತರಿಸಿ ಹಾಕಿಬಿಟ್ಟಿದ್ದಾನೆ. ಇನ್ನೇನು ಜೀವನ ಸಂಗಾತಿಯಾದ
ತನಗೆ ಹೇಳದೆ ಕೇಳದೆ ಹೋಗಿರಬೇಕಾದರೆ ತನ್ನನ್ನು ಮಾನಸಿಕವಾಗಿ ದೂರೀಕರಿಸಿಬಿಟ್ಟಿದ್ದಾನೆ. ಆದರೆತಾನು
ಕರ್ತವ್ಯಚ್ಯುತಳಾಗಿ ಸಂಸಾರದ ಗುಟ್ಟನ್ನು ಅವರ ಎದುರು ಸುಲಿದು ಬಿಸುಡುವುದೇ? ಅದಕ್ಕೇ “ಹ್ಞೂ” ಅಂದಳು.
“ಏನು
ಬರೆದಿದ್ದಾನೆ?” ಹಿಂಡುವ ಪ್ರಶ್ನೆಗಳು. ಅವನು ಬರೆದಿದ್ದರೆ ತಾನೇ, ಏನು ಎಂದು ಹೇಳುವುದು? ಆದರೆ ಕಾಗದ
ಬರೆದಿದ್ದಾನೆ ಎಂದು ಸುಳ್ಳು ಹೇಳಿದ ಮೇಲೆ ಅದಕ್ಕನುಗುಣವಾಗಿ ಇನ್ನೊಂದು ಮರಿಹಾಕಬೇಕಲ್ಲ.
“ಏನಿಲ್ಲ
ತಮ್ಮ ಕೆಲಸವಿನ್ನೂ ಪೂರ್ತಿಯಾಗಿಲ್ಲ ಅಂತ.”
“ಹೌದು,
ನೋಡಿ. ಮರೆತಿದ್ದೆ. ನಿನ್ನೆ ಆಫೀಸಿಗೆ ಒಂದು ಟೆಲಿಗ್ರಾಂ ಕಳಿಸಿದ್ದ. ಇನ್ನೂ ಹತ್ತು ದಿನ ಲೀವ್ ಎಕ್ಸ್‍ಟೆಂಡ್
ಮಾಡಿ ಅಂತ” ದೇವೇಂದ್ರಕುಮಾರ್ ಹೇಳಿದ ಕ್ಷಣ ನಳಿನಿಗೆ ಬವಳಿ ಬಂದ ಹಾಗಾಯಿತು. ಇನ್ನೂ ಹತ್ತುದಿನ ರಜ,
ಅಂದರೆ ನಾಳೆ ಬರುವುದಿಲ್ಲ, ನಾನಂದುಕೊಂಡ ಹಾಗೆಯೇ ಆಗಿಬಿಡುತ್ತಿದೆಯಲ್ಲ. ಅಂದರೆ, ನಾನು ಅಂದುಕೊಂಡಂತೆ
ನಡೆದುಬಿಡುತ್ತದೆಯೇ, ರಜ ಕ್ಯಾನ್ಸಲ್ ಮಾಡಿ ನಾಳೆಯೇ ವಾಪಸು ಬರಲಿ ಎಂದರೆ ಬಂದು ಬಿಡುತ್ತಾರೆಯೇ?
“ಯಾಕಂತೆ?”
ತನಗೇ ಅರಿವಿಲ್ಲದಂತೆ ನಳಿನಿ ಕೇಳಿದ ಪ್ರಶ್ನೆ.
“ನಿಮಗೆ
ಏನೋ ಕೆಲಸ ಅಂತ ಬರ್ದಿದ್ದಾನೆ. ಅದಲ್ಲದೆ ಟೆಲಿಗ್ರಾಂ ಬೇರೆ. ಬರೀ ರಜ ಮುಂದುವರೆಸಿ ಅಂತ ಕೇಳಿರೋದು,
ಅಷ್ಟೆ.”
“ಯಾವ
ಊರಿಂದ” ಎಂದು ಹೇಳಹೊರಟು ಆಮೇಲೆ ಕೇಳಬಾರದಿತ್ತೇನೋ ಎಂದು ತುಟಿ ಕಚ್ಚಿದಳು.
“ನೀವೇನೋ
ಮೈಸೂರಿಗೆ ಹೋಗಿದ್ದಾನೆ ಅಂದ್ರಲ್ಲ. ಆದರೆ ಅವನು ಟೆಲಿಗ್ರಾಂ ಕಳಿಸಿರೋದು ಅದೇನೋ ಮುದ್ದೆಬಿಹಾಳ ಅಂತಲೋ
ಏನೋ - ಆ ಊರಿಂದ.” ನಳಿನಿಯ ಕಸಿವಿಸಿಯನ್ನು ಗಮನಿಸದೆ ಕವಿತಾಳ ಕೈಯನ್ನು ನೇವರಿಸುತ್ತಿದ್ದ ದೇವೇಂದ್ರಕುಮಾರ್
ಹೇಳುತ್ತಿದ್ದ. ಅವನಿಗೆ ಈ ಸಂಸಾರದ ಗುಟ್ಟೇನು ಗೊತ್ತು. “ಅಲ್ಲಿಗೆಯಾಕೆ ಹೋದನೋ. ಮೈಸೂರಿನಿಂದಲೇ ಅಲ್ಲಿಗೆ
ಹೋಗಿರಬೇಕು. ಏನು ಕೆಲಸವಿದೆಯೋ!”
“ಏನೋ”
ಏನೂ ಅರ್ಥವಾಗದೆ ಅವನ ಮಾತಿಗೆ ನಳಿನಿ ತನ್ನ ದನಿಗೂಡಿಸಿದಳು.
“ಅದೇನು ಬಿಜಾಪುರ
ಜಿಲ್ಲೆಯೋ ಬೀದರ್ ಜಿಲ್ಲೆಯೋ ಇರಬೇಕು.”
“ಇರಬೇಕು”
“ಕೊನೆ
ಪಕ್ಷ ಒಂದು ನಾನೂರೈವತ್ತು ಮೈಲಿಯಾದರೂ ದೂರವಿದೆ”
“ಹೌದೇನೋ.”
“ನಿಮಗೂ
ಕಾರಣ ತಿಳಿಸದೆ ಹೋಗಿದ್ದಾನಲ್ಲ. ಏನು ಕೆಲಸವಿರಬಹುದು ಅವನಿಗೆ, ಅದೂ ಮುದ್ದೇಬಿಹಾಳದಲ್ಲಿ” ಯೋಚನಾಮಗ್ನನಾಗಿದ್ದ
ದೇವೇಂದ್ರಕುಮಾರ್. ಏನು ಹೇಳಿಯಾಳು! ಆ ಊರಿಗೂ ಅವರಿಗೂ ಏನು ಸಂಬಂಧ? ಯಾರಿರಬಹುದು, ಅಲ್ಲಿ ಯಾವ ಕೆಲಸವಿದೆ
ಅಥವಾ ಇನ್ನು ಯಾತಕ್ಕೆ - ಬೇಸರ ಹೋಗಲಾಡಿಸಿಕೊಳ್ಳುವುದಕ್ಕೆ. ಎಂದರೆ ಅಲ್ಲಿ ಯಾಕೆ ಹೋದರು. ಇನ್ನೂ
ಹತ್ತು ದಿವಸರಜೆ ಮುಂದುವರಿಸಿರಬೇಕಾದರೆ ಅವರ ಬೇಸರ ಇನ್ನೂ ಕಳೆದಿಲ್ಲ. ಈ ಮುಂದಿನ ಹತ್ತು ದಿವಸದಲ್ಲಿಯಾದರೂ
ಅವರ ಬೇಸರ ಪರಿಹಾರವಾದೀತೇ? ಆಮೇಲೂ ಮತ್ತೆ ಹತ್ತು ದಿವಸ ರಜೆ ಮುಂದುವರಿಸಿದರೆ?
“ಇನ್ನೂ
ಎಷ್ಟು ದಿವಸ ರಜ ಇದೆ ಅವರಿಗೆ.”
“ಅದೇನು
ಅರ್ನ್ಡ್ ಲೀವ್. ಸಾಕಷ್ಟು ದಿನಗಳಿರತ್ತೆ, ಬೇಕಾದರೆ ಆಫೀಸಿನಲ್ಲಿ ವಿಚಾರಿಸಿಕೊಂಡು ಬಂದು ನಾಳೆ ತಿಳಿಸುತ್ತೇನೆ.”
ತಮ್ಮ ಮಾತುಕತೆಯಲ್ಲಿ ತನ್ನ ಪಾತ್ರವಿಲ್ಲದಿದ್ದುದನ್ನು ಕಂಡ, ಇದುವರೆಗೂ ಮೌನವಾಗಿದ್ದ ಕವಿತಾ, ತನ್ನ
ಸ್ನೇಹಿತೆ ಬಂದಳೆಂದು ಅವಳೆಡೆಗೆ ಹೋಗಲು ಇವನ ಕೈಯಿಂದ ಬಿಡಿಸಿಕೊಳ್ಳುವಾಗ ಅವಳನ್ನು ಹೋಗಗೊಟ್ಟು ಹೇಳಿದ
ದೇವೇಂದ್ರಕುಮಾರ್.
“ಅಯ್ಯೋ
ಏನೂ ಬೇಡ. ಸುಮ್ಮನೆ ಕೇಳಿದೆ ಅಷ್ಟೆ.”
“ಅಲ್ಲ.
ನಿಮಗೂ ಹೇಳದೆ ಇರಬಹುದಾದ ಕೆಲಸ ಯಾವುದು?” ಮತ್ತೊಮ್ಮೆ ತಲೆ ತುರಿಸಿಕೊಂಡ.
ನಳಿನಿಗೆ
ಮುಜುಗರವಾಯಿತು. ಜೊತೆಗೆ ಸಿಟ್ಟೂಬಂತು “ಯಾಕೋ ವಿಚಿತ್ರವಾಯಿತು ಇವರದು” ಎಂದುಕೊಂಡಳಂತೆ ತಟ್ಟಕ್ಕನೆ
ಏನೋ ನೆನಪಿಸಿಕೊಂಡವಳಂತೆ “ಆಫೀಸಿನಲ್ಲಿ ಇವರು ಮಾಡುವ ಕೆಲಸದ ರೀತಿ ಎಂಥದು?”
“ಎಂಥದು
ಅಂದರೆ, ಆಫೀಸ್ ಅಡ್ಮಿನಿಸ್ಟ್ರೇಷನ್; ಫೈಲುಗಳ ಜೊತೆ ಒಡನಾಟ” ಎಂದು ಮುಗುಳ್ನಕ್ಕ ಅವನು “ಯಾಕೆ” ಎಂದ.
“ಯಾಕಿಲ್ಲ,
ಹಣಗಿಣ ವ್ಯವಹಾರ....” ಎಂದೇನೋ ಹೇಳಹೋಗಿ ತಟಕ್ಕನೆ ನಳಿನಿಗೆ ತಪ್ಪಿನ ಅರಿವಾಗಿತ್ತು, ತನ್ನ ಗಂಡನ
ಹಣಕಾಸು ವ್ಯವಹಾರದ ಬಗ್ಗೆ ಬೇರೆಯವರ ಎದುರಿಗೆ ತಾನೇ ಅನುಮಾನ ಹೇಗೆ ವ್ಯಕ್ತಪಡಿಸಬಹುದು? ತನ್ನ ತಪ್ಪನ್ನು
ತಿದ್ದಿಕೊಳ್ಳುವಂತೆ “ಏನಿಲ್ಲ, ಬಿಡಿ” ಅಂದಳು, ಆದರೆ ಅವಳ ಮಾತು ಸಂದಿಗ್ಧವಾಗೇನೂ ಇರಲಿಲ್ಲ. ಅವಳಿಗಿದ್ದ
ಅನುಮಾನದ ಸ್ವರೂಪ ಎಂತಹುದೆಂಬುದು ಎಂತಹವರಿಗೂ ಅರ್ಥವಾಗುವಂತಿತ್ತು. “ಏನಿಲ್ಲ, ಬಿಡಿ” ಎಂದು ತಿದ್ದುಪಡಿಯಾಗಿ
ಹೇಳಿದರೇನು, ಬಿಡಲು ದೇವೇಂದ್ರಕುಮಾರ್ ತಯಾರಾಗಿರಲಿಲ್ಲ.
“ಛೆ
ಛೆ. ಅಂಥದ್ದೇನೂ ಇಲ್ಲ. ಆಫೀಸಿನಲ್ಲಿ ಹೇಮಂತ ಅಂದರೆ ಎಲ್ಲರಿಗೂ ಎಂತಹ ಗೌರವ ಅಂತೀರಿ. ಹಿರಿಯರಾಗಲಿ
ಕಿರಿಯಾಗಲಿ ಅವನಿಗೆ ಮರ್ಯಾದೆ ಕೊಡುವವರೇ, ಮೇಲಿನ ಆಫೀಸರ್‍ಗಳು ಕೂಡ ಹೇಮಂತ ಅಂದರೆ ಒಂದು ಬಗೆಯ ಗೌರವ
ಇಟ್ಟುಕೊಂಡಿದ್ದಾರೆ. ಕಾದಂಬರಿಕಾರನಾಗಿ ಅವನಿಗೆ ಪಬ್ಲಿಕ್ ಇಮೇಜ್ ಬೇರೆ ಇದೆಯಲ್ಲ. ಅದಕ್ಕೆ ಎಲ್ಲರಿಗೂ
ಅವನ ಬಗ್ಗೆ ಮರ್ಯಾದೆ.”
ಈ
ಮನುಷ್ಯ ಕೀಲಿ ಕೊಟ್ಟ ಬೊಂಬೆಯ ಹಾಗೆ ಮಾತಾಡುತ್ತಾನಲ್ಲ ಅನ್ನಿಸಿ, ಆ ಕ್ಷಣ ಅವನ ಬಗ್ಗೆಯೂ ಬೇಸರ ಬಂತು.
ಬೇಸರವೆಂಬುದು ಸಾಂಕ್ರಾಮಿಕ ರೋಗವೇನೋ! ಪಾಪ, ದೇವೇಂದ್ರಕುಮಾರ್ ತನ್ನ ಸಂಸಾರದ ಬಗ್ಗೆ ಅದೆಷ್ಟು ಕಾಳಜಿ
ವ್ಯಕ್ತಪಡಿಸುತ್ತಿದ್ದಾರೆ. ಸ್ನೇಹಿತನ ವರ್ತನೆ ಅವರಿಗೂ ಕಸಿವಿಸಿಯುಂಟುಮಾಡಿದೆ, ಇವರೇಕೆ ಹೀಗಾದರು!
“ಅವರಿಗೆಲ್ಲ
ನಮ್ಮ ನೆನಪೇ ತಪ್ಪಿಹೋಗಿರಬೇಕು” ಎಂದು ತನಗೇ ಎಂಬಂತೆ ಮೆಲುವಾಗಿ ಅಂದುಕೊಂಡಳು ನಳಿನಿ.
“ಛೆ,
ಹಾಗೇಕೆ ಹೇಳ್ತೀರಿ? ನಿಮಗೆ ಕಾರಣ ಹೇಳಿಲ್ಲ ಅಂತ ಬೇಜಾರಾಗಿದೆ ಅಷ್ಟೆ. ಲೋಕ ವ್ಯವಹಾರ ದೊಡ್ಡದು. ಹೇಮಂತನದು
ಏನು ಕೆಲಸವೋ ಏನೋ, ಬರ್ತಾನೆ ಬಿಡಿ ಕಾಗದ ಬಿರ್ದಿದಾನಲ್ಲ, ಬಿಡಿ,”
“ಸರಿಯೇ.”
ತನ್ನ ಅಸಮಾಧಾನವನ್ನು ಅದುಮಿಕೊಂಡಳು.
“ನಾನಿನ್ನು
ಬರ್ತೀನಿ. ಏನಾದರೂ ಸಹಾಯ ಬೇಕಿದ್ದರೆ ಹೇಳಿ. ಸಂಕೋಚಬೇಡ” ಎಂದು ಹೊರಟ. ಸುಮ್ಮನೆ ಗೋಣು ಆಡಿಸಿ ಅವನನ್ನು
ನಳಿನಿ ಬೀಳ್ಕೊಟ್ಟಳು.
ದಿನವೆಲ್ಲ
ಬೆಳಕಿನಲ್ಲಿ ಯೋಚನೆಗಳು ಕರಗಿ ಹೋಗಿರುತ್ತವೆಯೇನೋ ಆದರೆ ರಾತ್ರಿ ಸೊಳ್ಳೆಗಳಂತೆ ಗಪ್ಪಂತ ಮುತ್ತುತ್ತವೆ.
ಅದೂ ನಿದ್ದೆ ಮಾಡಲೆಂದು ಕಣ್ಣುಮುಚ್ಚಿದರೆ ಸಾಕು, ಕಿತ್ತು ತಿನ್ನುತ್ತವೆ. ಮನಸ್ಸಿನೊಳಗೆ ಯೋಚನೆಯ
ಸೊಳ್ಳೆಗಳಿಂದ ಪಾರಾಗಲು ಪರದೆಯಿಲ್ಲವಲ್ಲ. ನಳಿನಿಯಿಂದ ನಿದ್ದ ಗಾವುದ ದೂರ. ಕರೆದಷ್ಟೂ ಬಯಸಿದಷ್ಟೂ
ದೂರ ಹಾರುವ ಕಾಂಚನಮೃಗ. ಹೊರಳಾಡಿ ಮನಸ್ಸನ್ನು ಬೇರೆಕಡೆಗೆ ತಿರುಗಿಸಲು ಪ್ರಯತ್ನಿಸಿದರೂ ಮತ್ತೆ, ಸಿಹಿಯಂಟಿನ
ಸುತ್ತ ನೆರೆದ ನೊಣಗಳನ್ನು ಕೈಯಾಡಿಸಿ ಓಡಿಸಿದ ಮರುಕ್ಷಣವೇ ಗುಂಪುಗಟ್ಟುವಂತೆ ಯೋಚನೆಗಳು, ಆತಂಕಗಳು,
ಭಯಗಳು, ಅನುಮಾನಗಳು.
ತನ್ನನ್ನೂ
ಮರೆತುಬಿಡುವಷ್ಟು ಅವರಿಗೆ ಬೇಸರವಾಗಿರಬೇಕಾದರೆ ಅವರಿಗೇನೋ ಆಗಬಾರದ್ದು ಆಗಿರಬೇಕು. ಆದರೆ ಏನು, ಹೇಳಿಯಾದರೂ
ಹೇಳಿದರೂ ಪರಿಹಾರ ಹುಡುಕಬಹುದು, ತನ್ನ ಕೈಲಾಗದಿದ್ದರೆ ಯಾರಿಂದ ಸಾಧ್ಯವೋ ಅವರಿಂದಮಾಡಿಸಬಹುದು. ಆದರೆ
ಯಾಕೆ ಅವರು ಒಂಟಿಯಾದರು. ತಾನು ಸಂಗಾತಿಯಾಗಿ ಮಾಡಬೇಕಾದ ತನ್ನ ಕರ್ತವ್ಯವನ್ನು ಸರಿಯಾಗಿ ಮಾಡಿಲ್ಲವೇ,
ಹಾಗಿದ್ದರೆ ಅವರೇ ಹೇಳಿ ಇಂತಹದು ಬೇಕು ಎಂದು ಕೇಳಬಾರದಿತ್ತೇ? ಅದು ಬಿಟ್ಟುತೊರೆದು ಹೋಗಿಬಿಡುವುದೆಂದರೆ.
ನಳ ದಮಯಂತಿಯನ್ನು ಕಾಡಿನ ಮಧ್ಯೆ ಬಿಟ್ಟು ಹೋದನಂತಲ್ಲ ಹಾಗೆ. ಆದರೆ ಹಾಗೆ ಬಿಟ್ಟಿದ್ದರಿಂದ ಅವಳಿಗೆ
ಒಳ್ಳೆಯದಾದೀತು ಎಂದು ನಳನ ನಿರೀಕ್ಷೆಯಾಗಿತ್ತು. ಹೇಮಂತನಿಗೂ ಹಾಗೆಯೇ ಅನ್ನಿಸಿರಬಹುದಲ್ಲವೇ ಆದರೆ
ಹೆಂಡತಿಯ ಮನಸ್ಸು ನಳಿನಿಗೆ ಅರ್ಥವಾಗದಹಾಗೆ ಹೇಮಂತನಿಗೂ ಆಗಿಲ್ಲ. ಕಷ್ಟವೊ ಗಂಡನ ಜೊತೆಗಿದ್ದರೆ ಸಾಕು.
ಅದು ಬೇಕು, ಇದು ಬೇಕು ಎಂದು ಕೇಳಬಹುದು, ಆದರೆ ಗಂಡ ಜೊತೆಗಿಲ್ಲದಿದ್ದರೆ ಅವೆಲ್ಲ ಏಕೆ ಬೇಕು? ಆತನೊಬ್ಬ
ಇದ್ದರೆ ಸರಿ, ಅಷ್ಟೈಶ್ವರ್ಯವಿದ್ದಂತೆ. ಅದೇ ತಾನೇ ಸೌಭಾಗ್ಯ ಎಂದರೆ? ಹೇಮಂತ ಬರಲಿ ನನ್ನ ಎದೆಯಲ್ಲಿ
ಮುಚ್ಚಿಟ್ಟುಕೊಂಡುಬಿಡುತ್ತೇನೆ. ಎಲ್ಲಿಗಾದರೂ ಹೋಗುವುದಾದರೆ ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು
ಹೋಗುವಂತೆ ಹಟಹಿಡಿದರೆ ಆಯಿತು. ಕವಿತಾಳ ನಂತರ ಹುಟ್ಟಿದ ಕೂಸು ಎಂಬಂತೆ ಅವರನ್ನು ಜೋಪಾನಮಾಡಬೇಕು.
ದೇವರೇ? ಹೇಮಂತ ಇದೊಮ್ಮೆ ಬಂದುಬಿಡಲಿ. ಹಕ್ಕಿ ಇನ್ನೆಂದೂ ಹಾರದಂತೆ ಎಚ್ಚರವಹಿಸುತ್ತೇನೆ.
ಎಷ್ಟು
ಪ್ರಯತ್ನಪಟ್ಟರೂ ನಳಿನಿಯ ಬಾಯಿಂದ ಬಿಕ್ಕುವ ಸದ್ದು ಹೊರ ನೆಗೆಯುತ್ತದೆ. ಬಾಯಿ ಮುಚ್ಚಿಕೊಂಡರೇನು.
ಪಕ್ಕಕ್ಕೆತಿರುಗಿದರೇನು? ನಡುಮನೆಯಲ್ಲಿ ಮಲಗಿದ ವಿಶಾಲಾಕ್ಷಮ್ಮನಿಗೆ ಆ ಸದ್ದು ಕೇಳಿಸುತ್ತದೆ. ಮಾತಿಲ್ಲದೇ
ಎಲ್ಲ ನಾಟಕಕ್ಕೆ ಮೂಕಸಾಕ್ಷಿಯಾಗಿದ್ದ ಅವರಿಗೆ ಮಗಳ ಅಳಲು ತಿಳಿಯದೇ? ಎದ್ದು ಬಂದು ಮಗಳ ಮಗ್ಗುಲಾದ
ಮೈಮೇಲೆ ಪ್ರೀತಿಯಿಂದ ಕೈಯಾಡಿಸುತ್ತಾರೆ. ಅವರ ಸ್ಪರ್ಶದಿಂದ ನೀರಾದ ಹೃದಯ ಜೋರಾದ ಅಳುವಾಗಿ ನಳಿನಿಯಿಂದ
ಹೊಮ್ಮುತ್ತದೆ.
* * *
ಗುಂಜಾಳರು
ನಿನ್ನೆ ಸಾಯಂಕಾಲ ಕೂಡಲಸಂಗಮದಿಂದ ವಾಪಸು ಬಂದ ತಕ್ಷಣವೇ ವಿಜಾಪುರಕ್ಕೆ ಹೊರಟುಹೋಗಿದ್ದರು. ತಾತ್ಕಾಲಿಕವಾಗಿ
ಜೊತೆಯಾಗಿದ್ದ ಅವರು ಜೊತೆಯಲ್ಲಿದ್ದದ್ದು ಒಂದೆರಡೇ ದಿನವಾದರೂ ಜನ್ಮಾಂತರದ ಬಂಧುವಿನ ಹಾಗೆ ಆ ದಿನಗಳು
ಕ್ಷಣವೂ ಬೇರೆಯಿರದೆ ಜೊತೆಯಾಗಿಯೇ ಇದ್ದರು. ತನ್ನ ಬಂಧುಗಳನ್ನು ಬಿಟ್ಟು ಬಂದಿದ್ದ ತನಗೆ ಹೊಸ ಪರಿಚಯವಾಗಿ
ಈಗಾಗಲೇ ಮತ್ತೆ ದೂರವಾದ ಗುಂಜಾಳರು ಹತ್ತಿರವೆನ್ನಿಸಿದ್ದು ಒಂದು ವ್ಯಂಗ್ಯವೆನ್ನಿಸಿತು ಹೇಮಂತನಿಗೆ,
ತಾನೂಮಾರನೆಯ ಬೆಳಿಗ್ಗೆ ಎಲ್ಲಾದರೂ ಹೋಗಬೇಕು; ಸಾಕು ಬಾಗಲಕೋಟೆ ಎಂದು ನಿರ್ಧರಿಸಿದ.
ಬೆಳಿಗ್ಗೆ
ಎದ್ದು ಪ್ರಾತರ್ವಿಧಿ ಮುಗಿಸಿದ ಬೇರೆ ಯಾವುದಾದರೂ ರೆಸ್ಟೋರೆಂಟಿಗೆ ಹೋಗಿ ಒಳ್ಳೆಯ ಕಾಫಿಕುಡಿದು ಬರಬೇಕೆನ್ನಿಸಿ
ಹೊರಟ. ಈ ಭಾಗದಲ್ಲಿ ಕಾಫಿಯೆಂದರೆ ಬಾಯಲ್ಲಿಡುವಂತಿಲ್ಲ; ಟೀ ಆದರೆ ಪರವಾಯಿಲ್ಲ. ಆದರೆ ಟೀ ಕುಡಿದರೆ
ಕಾಫಿ ಕುಡಿದ ಮೊದಲಾಗಲೀ ತೃಪ್ತಿಯಾಗಲಿ ಬಾರದು. ಈಗಾಗಲೇ ಕಾಫಿ ಕುಡಿದು, ಒಳ್ಳೆಯ ಕಾಫಿ ಕುಡಿದು, ತುಂಬಾ
ದಿನವಾಗಿದೆಯೆನ್ನಿಸಿತು.ಇದ್ದುದರಲ್ಲಿ ಸುಮಾರು ರುಚಿಯ ಕಾಫಿಯ ಅನ್ವೇಷಣೆಗಾಗಿ ಹೊರಟ.
ಕಾಫಿ
ಕುಡಿಯುತ್ತಿದ್ದಂತೆಯೇ ಎದುರಿಗೆ ಒಬ್ಬರು ಬಂದು ಕುಳಿತರು; ಇವನನ್ನು ಕಂಡವರೇ “ಹಲೋ ಮಿ|. ಹೇಮಂತ,
ಏನಿಲ್ಲಿ?” ಎಂದರು. ತಾನಾಗಲೇ ಮಾಥ್ಯೂಸ್ ಆಗಿ ಪರಿಣಮಿಸಿ ತನ್ನ ಹೆಸರನ್ನೇ ಮರೆಯುತ್ತ ಬಂದಿದ್ದ ಹೇಮಂತನಿಗೆ
ಅವರು ಕರೆದದ್ದು ತನ್ನನ್ನಲ್ಲವೇನೋ ಎನಿಸುವಂತೆ ಒಂದು ಕ್ಷಣ ಗಲಿಬಿಲಿಗೊಳಗಾದ.
“ಯಾಕೆ
ಗುರ್ತ ಹತ್ತಲಿಲ್ಲೇನ್ರೀ?” ಗುರುತು ಹತ್ತದೆ ಏನು? ಆತ ಹಿರೇಮಠ, ವೈಎಸ್ ಹಿರೇಮಠ ಹೆಸರು ಚೆನ್ನಾಗಿಯೆ
ಜ್ಞಾಪಕವಿದೆ, ಎರಡೇ ತಿಂಗಳ ಹಿಂದೆ ಧಾರವಾಡದಲ್ಲಿ ನಡೆದ ‘ಲೇಖಕ ಓದುಗ’ ವಿಚಾರಸಂಕಿರಣದಲ್ಲಿ ಆತ ತನ್ನೊಡನೆ
ಭಾಗವಹಿಸಿದ್ದ. ವ್ಯವಸ್ಥಾಪಕರು ತಮ್ಮಿಬ್ಬರನ್ನು ಒಂದೇ ರೂಮಿನಲ್ಲಿ ಉಳಿಸಿದ್ದರು. ತಾನು ಅಂದು ‘ನನ್ನ
ಕಾದಂಬರಿಗಳು ರೂಪುಗೊಳ್ಳುವ ಬಗೆ’ ಎಂಬ ವಿಷಯವಾಗಿ ಪ್ರಬಂಧ ಮಂಡಿಸಿದ್ದ. ಒಂದು ಕಾದಂಬರಿ ಬೀಜರೂಪವಾಗಿ
ಹೊಳೆದು ಬೆಳೆಯುತ್ತ ನಡೆದು. ಬರಹರೂಪದಲ್ಲಿಳಿಸಿದಾಗ ಅದು ತಳೆಯುವ ರೂಪದವರೆಗೆ ವಿವರವಾಗಿ ಅನುಭವವನ್ನೇ
ಹೇಮಂತ ಬರಹವಾಗಿಸಿದ್ದ, ಅದನ್ನೇ ಅವನು ಮಾಡಬೇಕಾಗಿದ್ದದ್ದು. ಅವನ ಹಾಗೆಯೇ ಕವಿಯೊಬ್ಬರು ಕವಿತೆಯು
ರೂಪುಗೊಳ್ಳುವ ಬಗ್ಗೆ, ನಾಟಕಕಾರರು ನಾಟಕ ರಚನೆಯ ಬಗ್ಗೆ ಪ್ರಬಂಧಗಳನ್ನು ಬೇರೆ ಬೇರೆ ಗೋಷ್ಠಿಗಳಲ್ಲಿ
ಮಂಡಿಸಿದ್ದರು. ಒಬ್ಬೊಬ್ಬ ಸೃಜನಶೀಲ ಲೇಖಕನ ಪ್ರಬಂಧದೊಡನೆ ವಿಮರ್ಶಕನ ದೃಷ್ಟಿಯಲ್ಲಿ ಕಾದಂಬರಿ, ಕವಿತೆ,
ನಾಟಕವೆಂದು ಒಬ್ಬೊಬ್ಬ ವಿಮರ್ಶಕರು ಪ್ರಬಂಧಗಳನ್ನು ಮಂಡಿಸಬೇಕಾಗಿತ್ತು. ಹೀಗೆ ಒಟ್ಟು ಮೂರುಗೋಷ್ಠಿಗಳು.
ಮಧ್ಯಾಹ್ನದ ಎರಡನೇಗೋಷ್ಠಿಯಲ್ಲಿ ತನ್ನೊಡನೆ ‘ವಿಮರ್ಶಕನ ದೃಷ್ಟಿಯಲ್ಲಿ ಕಾದಂಬರಿ’ ಎಂಬ ವಿಚಾರದ ಮೇಲೆ
ಪ್ರಬಂಧವನ್ನು ಮಂಡಿಸಿದ್ದವನು ಹಿರೇಮಠ. ಆದ್ದರಿಂದ ಒಂದೇ ದಿನದಲ್ಲಿ ಅವರಿಬ್ಬರ ಪರಿಚಯ ತುಂಬ ಆಳವಾಗಿ
ಬೆಳೆದಿತ್ತು; ಆ ಹಿಂದೆ ಪರಸ್ಪರರ ಹೆಸರುಗಳನ್ನು ಕೇಳಿದ್ದರು. ಬರಹಗಳನ್ನು ಓದಿದ್ದರು, ಆದರೆ ವ್ಯಕ್ತಿಶಃ
ಪರಿಚಯವಾಗಿರಲಿಲ್ಲ. ಈಗಿನ ಗೋಷ್ಠಿಯಿಂದ ಪರಿಚಯ ಸ್ನೇಹವಾಗಲು ಕಾರಣವಾಯಿತು.
ಅಂದಿನ
ತನ್ನ ಪ್ರಬಂಧವಾಚನದ ನಂತರ ಪ್ರಶ್ನೋತ್ತರಗಳಾದವು. ತುಂಬ ಸ್ವಾರಸ್ಯಕರವಾಗಿತ್ತು. ಕೇಳುಗರ ಪ್ರಶ್ನೆಗಳಿಗೆ
ತನ್ನ ಅನುಭವವನ್ನೇ ನಿರೂಪಿಸಿ ಉತ್ತರಿಸುವುದು ತುಂಬ ರೋಚಕವಾಗಿತ್ತು. ಹಿರೇಮಠ ಕೂಡ ಒಳ್ಳೆಯ ಪ್ರಬಂಧ
ಬರೆದಿದ್ದ; ಆದರೆ ಅವನು ಎದುರಿಸಿದ ಪ್ರಶ್ನೆಗಳು ಇವನು ಉತ್ತರಿಸಬೇಕಾದ ಪ್ರಶ್ನೆಗಳಂತಿರಲಿಲ್ಲ. ಅದೊಂದು
ಬಗೆಯಲ್ಲಿ ಅಕ್ಯಾಡೆಮಿಕ್ ಸಂವಾದವಾಗಿತ್ತು, ಅಷ್ಟೇ. ರಾತ್ರಿಯೂ ಮಲಗುವ ಮುಂಚೆ ಸಾಹಿತ್ಯದ ಬಗ್ಗೆ ರೂಮಿನಲ್ಲಿ
ಚರ್ಚೆಮಾಡಿದ್ದರು.ತಾನು ಪ್ರಶ್ನೆಗಳಿಗೆ ಉತ್ತರವಿತ್ತಿದ್ದ ರೀತಿ ಹಿರೇಮಠನಿಗೆ ತುಂಬ ಖುಷಿಯಿತ್ತಿದ್ದಂತೆ
ಕಾಣಿಸಿತು.
ತನ್ನಕೈ
ಮುಂದೆ ನೀಡುತ್ತ ಅವನ ಕೈಕುಲುಕಿ, “ಹೇಗಿದ್ದೀರಿ?” ಎಂದು ಬಲವಂತವಾಗಿ ಎಳೆದು ತಂದ ಮುಗುಳ್ನಗೆಯೊಡನೆ.
ಬಿಟ್ಟನೆಂದರೆ ಬಿಡದೀಮಾಯೆ ಎನ್ನುವಂತೆ ತಾನು ಪರಿಚಯದ ವಾತಾವರಣದಿಂದ ದೂರವಾಗಲು ಓಡಿದಂತೆಲ್ಲ ಪರಿಚಯವೇ
ತನ್ನ ಬೆಂಬತ್ತುತ್ತಿದೆಯಲ್ಲ ಅನ್ನಿಸಿತು.
“ನೀವು
ಅರಾಮ ಅದೀರೇನ್ರೀ? ದಾಡಿ ಗೀಡಿ ಏನು ಮಾಡಿಲ್ಲಲ್ಲ, ದೀಕ್ಷಾ ತೊಗೋತೀರೇನು?” ಆತ್ಮೀಯನಾದ ವ್ಯಕ್ತಿ.
ಅಪರೂಪದ ವ್ಯಕ್ತಿ ಸಿಕ್ಕಿದ ಸಂತೋಷದಲ್ಲಿ ಹಿರೇಮಠ ಲಘುವಾಗಿದ್ದ. ಹೇಮಂತ ಸುಮ್ಮನೆ ನಕ್ಕಿದ್ದ.
“ಎಂದು
ಬಂದಿರಿ?”
“ಮೊನ್ನೆಯೇ
ಬಂದೆ, ರಾತ್ರಿ”
“ಛೆ,
ನಮ್ಮ ಮನೀ ಕಡೆ ಬರಬಾರದಿತ್ತೇನ್ರೀ?” ಎಂದ ಹಿರೇಮಠ ಲೊಚಗುಟ್ಟುತ್ತ, ಆತ ಇಲ್ಲಿದ್ದುದು ಹೇಮಂತನಿಗೆ
ಮರೆತೇ ಹೋಗಿತ್ತು ಅಥವಾ ಯಾರು ಎಲ್ಲಿದ್ದಾರೆ ಎಂಬುದನ್ನು ಅವನ ಮನಸ್ಸು ಮರೆಯಲು ಪ್ರಯತ್ನಿಸುತ್ತಿತ್ತು,
ಎಂದರೇ ಹೆಚ್ಚು ಸಮಂಜಸವಾದುದು. ಅವನ ಪ್ರಶ್ನೆಗೆ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ.
“ಯಾವ
ಲಾಜಿಂಗ್‍ದಲ್ಲಿ ಉಳಿದೀರಿ?”
“ಅದೋ
ಬೃಂದಾವನ ಲಾಜಿಂಗ್”
“ಬರ್ರಿ,
ಅಲ್ಲೆ ಕೂತು ಮಾತಾಡೋಣ, ಬಿಲ್ ತರ್ರಿಲ್ಲಿ” ಎಂದು ಅವನ ಬಿಲ್ಲನ್ನು ಕಸಿದುಕೊಂಡು ಹಣ ನೀಡಿದ ಹೀರೇಮಠ
ಇವನಿಗಿಂತ ಮುಂದಾಗಿಯೇ ಲಾಡ್ಜಿಂಗ್ ಕಡೆ ಹೊರಟ; ಅವನು ತನ್ನ ನಿಯಂತ್ರಕನೆಂಬಂತೆ ಹೇಮಂತ ಅವನನ್ನು ಹಿಂಬಾಲಿಸಿದ.
ಒಂದೇ ಸಮನೆ ಹಿರೇಮಠನ ಪ್ರಶ್ನೆಗಳು ಬಾಣಗಳಂತೆ ಬರುತ್ತಿದ್ದವು. ಅವನ್ನೆಲ್ಲ ಎದುರಿಸುವಲ್ಲಿ ಹೇಮಂತನಿಗೆ
ಸಾಕುಬೇಕಾಯಿತು. ಪ್ರೀತಿಯ ಮಾತುಗಳು ತನಗೆ ಕಹಿಯಾಗುವ ದುರದೃಷ್ಟಕರ ಪರಿಸ್ಥಿತಿಯಿಂದ ಅವನಿಗೆ ಕೆಡುಕೆನಿಸಿತು.
ಹಿರೇಮಠನ ಮಾತಿನಲ್ಲಿ ಕೃತಕತೆಯಿರದೆ ವಿಶ್ವಾಸದಿಂದ ತುಂಬಿತ್ತು; ಆತನ ಮಾತುಗಳೆಂದರೆ ಪಾಕದಲ್ಲಿ ನೆಂದು
ಮೆತ್ತಗಾದ ಜಾಮೂನು. ಒಳ್ಳೆಯ ಭಾಷಣ ಮಾಡದಿರಬಹುದು; ಆದರೆ ಪ್ರೀತಿಯ ಸಂಭಾಷಣೆ ಚೆನ್ನು.
ಅವನು
ಕೇಳಿದ್ದಕ್ಕೆಲ್ಲ ಉತ್ತರವನ್ನೇನೋ ನೀಡಿದ್ದ. ಆದರೆ ಎಷ್ಟಾದರೂ ಉತ್ಸಾಹ ಅವನನ್ನು ಆವರಿಸಲು ಸಾಧ್ಯವಿರಲಿಲ್ಲ.
ಸ್ವಲ್ಪಮಟ್ಟಿಗೆ ಹಿರೇಮಠ ಇದನ್ನು ಗಮನಿಸಿದ್ದರೂ ಕೇವಲ ಆಲಸ್ಯವೆಂದೇ ಭಾವಿಸಿದ. ತಾನೇ ಮಾತಾಡಿ ಗೆಲುವುಗೊಳಿಸಲು
ಪ್ರಯತ್ನಿಸಿದಂತಿತ್ತು.
“ಇದೇನು
ಇಷ್ಟು ದೂರ ಪ್ರಯಾಣ?”
“ಹೀಗೆ
ಕರ್ನಾಟಕದರ್ಶನ”
“ಎಷ್ಟು
ದಿನದಿಂದ?”
“ಆಗಲೇ
ಎಂಟು ದಿನಗಳಾದವು”
“ಒಬ್ಬರೇ
ಬಂದಿದ್ದೀರಿ”
“ಹೌದು”
ಚುಟುಕಾದ ಉತ್ತರ. ಇನ್ನೇನೆಂದಾನು?
ಲಾಡ್ಜಿಂಗ್‍ನ ರೂಮಿಗೆ ಬಂದ ಮೇಲೂ ಮಾತುಕತೆ ಮುಂದುವರಿದೇ
ಇತ್ತು. ಬರವಣಿಗೆಯ ಬಗ್ಗೆ, ಬೆಂಗಳೂರು ಬಗ್ಗೆ, ರಾಜಕೀಯದ ಬಗ್ಗೆ ಮಾತು. ಅರ್ಧಗಂಟೆಯಾದರೂ ಅವನು ಕೂತಿದ್ದ.
ಕೊನೆಯಲ್ಲಿ ಈ ದಿನ ತಮ್ಮ ಕಾಲೇಜಿಗೆ ಬಂದು ಮಾತನಾಡಲೇಬೇಕೆಂದು ಒತ್ತಾಯಪಡಿಸಿದ. ತಾನಿವತ್ತೇ ಮುಂದಕ್ಕೆ
ಪ್ರಯಾಣ ಮಾಡಬೇಕಾಗಿರುವುದರಿಂದ ಸಾಧ್ಯವಿಲ್ಲವೆಂದು ಹೇಮಂತ ಹಿರೇಮಠನ ಆಹ್ವಾನವನ್ನು ನಿರಾಕರಿಸಿದ.
ಆದರೆ ಅಷ್ಟಕ್ಕೇ ಬಿಡುವವನಲ್ಲ ಆತ. ಈಗ ಯಾವೂರಿಗೆ ಹೋಗಬೇಕೂಂತಿದ್ದೀರಿ ಎಂದಾಗ ಏನೂ ಯೋಚಿಸದಿದ್ದ ಹೇಮಂತ
ಉತ್ತರಿಸಲು ತಡಬಡಿಸುವಂತಾಯಿತು.
“ಅಂದ
ಮ್ಯಾಲ, ಕೆಲಸವೇನೂ ನಿಗದಿಯಾದದ್ದಿಲ್ಲ ಅಂದ್ಹಂಗಾತು. ಇವತ್ತು ಹೋಗೋದು ನಾಳೆ ಹೋಗ್ರಿ, ಬ್ಯಾಡಂದೋರು
ಯಾರು? ಇವತ್ತು ಮಾತ್ರ ಬರಲಿಕ್ಕೆಬೇಕು. ಹಾಂಗೇ ಬಿಡೋವನಲ್ಲ ನಾನು” ಎಂದು ಅವನು ಒಪ್ಪುವವರೆಗೂ ಠಿಕಾಣಿ
ಹೂಡುವವನಂತೆ ಸರಿಯಾಗಿ ಕೂತ. ವಿಧಿಯಿಲ್ಲದೆ ಒಪ್ಪಬೇಕಾಯಿತು. ಇಲ್ಲದಿದ್ದರೆ ವೈಯಕ್ತಿಕವಾದ ಪ್ರಶ್ನೆಗಳ
ಮೂಲಕ ತನ್ನ ಬಸಿರನ್ನೆಲ್ಲ ಬಗೆದು ಒಳಗಿನ ರಕ್ತಮಾಂಸಗಳನ್ನು ಚೆಲ್ಲುವಂತೆಲ್ಲಿ ಮಾಡುತ್ತಾನೋ. ಇದರ
ಬದಲು ತಾನು ವೇದಿಕೆಯ ಮೇಲಿಂದ ಏಕಮುಖವಾದ ಮಾತಿನ ಪ್ರವಾಹ ಹರಿಸುವುದೇ ಉತ್ತಮ ಎನ್ನಿಸಿತು.
ಆವತ್ತಿನ
ಕಾರ್ಯಕ್ರಮ ಎರಡು ಬಗೆಯದು; ಮಧ್ಯಾಹ್ನ ಹನ್ನೆರಡು ಗಂಟೆಗೆ ತಮ್ಮ ಕಾಲೇಜಿನ ಐಚ್ಚಿಕ ಕನ್ನಡ ವಿದ್ಯಾರ್ಥಿಗಳ
ಸಣ್ಣ ಸಭೆಯೊಂದರಲ್ಲಿ ಸಾಹಿತ್ಯಕ ಚರ್ಚೆ, ಒಂದು ಹತ್ತುನಿಮಿಷ ಏನಾದರೂ ಮಾತಾಡಿದಮೇಲೆ ವಿದ್ಯಾರ್ಥಿಗಳು
ಪ್ರಶ್ನೆಗಳನ್ನು ಕೇಳುವುದು; ಹೇಮಂತ ಉತ್ತರಿಸುವುದು. ಸಾಯಂಕಾಲ ಐದು ಗಂಟೆಗೆ ಸಾಹಿತ್ಯಕೂಟದ ಆಶ್ರಯದಲ್ಲಿ
ಸಭೆ. ಆಗ ಎಲ್ಲ ವಿದ್ಯಾರ್ಥಿಗಳೂ ಬರುತ್ತಾರೆ. ಕಾಲೇಜನ್ನು ನಡೆಸುತ್ತಿದ್ದ ಮಠದ ಸ್ವಾಮಿಗಳವರನ್ನು
ಕರೆದು ತರುತ್ತೇನೆಂದು ಹೇಳಿದ ಹಿರೇಮಠ.
ಅವನು ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದುದಲ್ಲದೆ
ವರ್ಚಸ್ವೀ ವ್ಯಕ್ತಿಯಾಗಿದ್ದ ಸ್ವಾಮಿಗಳೊಡನೆ ನಿಕಟ ಸಂಬಂಧದಿಂದಾಗಿ ಇತರರಿಗೂ ಬೇಕಾದವನಾಗಿದ್ದ. ವಿಮರ್ಶಕನೆಂಬುದರಿಂದಾಗಿ
ವಿದ್ಯಾರ್ಥಿಗಳಿಗೆ ಇವನನ್ನು ಕಂಡರೆ ತುಂಬ ಗೌರವ.
ಹನ್ನೊಂದುವರೆಗೆ
ಒಬ್ಬವಿದ್ಯಾರ್ಥಿಯನ್ನು ಕಳಿಸುವುದಾಗಿಯೂ ಅವನೊಡನೆ ಬರಬೇಕೆಂದೂ ಹೇಳಿದುದಲ್ಲದೆ, ತನ್ನನ್ನು ಬೀಳ್ಕೊಡಲು
ಬಂದ ಹೇಮಂತನಿಗೆ ಲಾಡ್ಜಿಂಗ್‍ನ ಖರ್ಚೆಲ್ಲವನ್ನು ತಾವು ವಹಿಸಿಕೊಳ್ಳುವುದಾಗಿ ಹೇಳಿದಾಗ ಹೇಮಂತ ಪ್ರತಿಭಟಿಸಿದ.
ಆದರೆ ಹಿರೇಮಠ ಸುಮ್ಮನಿರುವ ವ್ಯಕ್ತಿಯಲ್ಲ. ನೇರವಾಗಿ ಹೋಟೆlಲ್ ಮಾಲೀಕನಿದ್ದ ಗಲ್ಲದ ಬಳಿ ಹೋಗಿ “ಸಾಹೇಬ್ರ
ಬಿಲ್ ಪೂರ್ಣ ಮಠದ ಹೆಸರಿಗೆ ಬರಿಯಪ್ಪ ತಮ್ಮ” ಎಂದಿದ್ದ. “ಆಯಿತೇಳ್ರಿ” ಎಂಬ ಉತ್ತರ ಬಂದ ಮೇಲೆ ಹೇಮಂತನ
ಕಡೆ ತಿರುಗಿ “ನೀವು ಮಠದ ಗೆಸ್ಟ್‍ರೀ ಈಗ” ಎಂದು ಕಣ್ಣು ಮಿಟುಕಿಸಿದ.
ಊಟವನ್ನು
ಮುಗಿಸಿ ತಯಾರಾಗಿದ್ದ ಹೇಮಂತನನ್ನು ಕರೆದೊಯ್ಯಲು ಹಿರೇಮಠ ಹೇಳಿದ್ದಂತೆ ಒಬ್ಬವಿದ್ಯಾರ್ಥಿ ಹನ್ನೊಂದುವರೆಗೆ
ಬಂದು ಟಾಂಗಾದಲ್ಲಿ ಕಾಲೇಜಿಗೆ ಕರೆದುಕೊಂಡು ಹೋದ, ಸಾಕಷ್ಟು ದೊಡ್ಡದಾದ ಕಾಲೇಜು. ಊರಿನ ಹೊರ ಸೆರಗಿನ
ವಿಶಾಲವೂ ಪ್ರಶಾಂತವೂ ಆದ ತಾಣದಲ್ಲಿದ್ದ ಕಟ್ಟಡಗಳು ಆಕರ್ಷಕವಾಗಿದ್ದವು. ಮಧ್ಯೆ ಕಾಲೇಜಾದರೆ ಅದರ ಎಡಬದಿಯಲ್ಲಿ
ವಿದ್ಯಾರ್ಥಿನಿಲಯ, ಬಲಬದಿಯಲ್ಲಿ ಸಭಾಂಗಣ, ಸಂಜೆಯ ಸಭೆ ನಡೆಯಲಿದ್ದುದು ಅಲ್ಲಿಯೇ. ಬೆಂಗಳೂರಿನಲ್ಲಿ
ಬಹುಮಟ್ಟಿಗೆ ಕಾಲೇಜುಗಳೆಲ್ಲ ಬೀದಿಯಲ್ಲೇ ಇದ್ದು ವ್ಯಾಪಾರ ಕೇಂದ್ರಗಳಂತೆ ಕಾಣುತ್ತಿದ್ದುದಕ್ಕೆ ವ್ಯತಿರಿಕ್ತವಾಗಿ
ಈ ಕಾಲೇಜು ಅಭ್ಯಾಸಕ್ಕೆ ಯೋಗ್ಯವಾಗಿರುವುದು ಸುಸ್ಪಷ್ಟ.
ಇವನ
ಬರವನ್ನೇ ಎದುರು ನೋಡುತ್ತ ಪೋರ್ಟಿಕೋದಲ್ಲಿ ನಿಂತಿದ್ದ ಹಿರೇಮಠ ಮೊದಲು ಹೇಮಂತನನ್ನು ಕರೆದೊಯ್ದದ್ದು
ಪ್ರಿನ್ಸಿಪಾಲ್ ಅಕ್ಕಿಯವರ ಬಳಿಗೆ. ತಮ್ಮ ಕೆಲಸದ ಮಧ್ಯೆಯೇ ಇವನೊಡನೆ ಮಾತನಾಡುತ್ತ ಪ್ರಿನ್ಸಿಪಾಲರು
ಚಾ ತರಲು ಜವಾನನಿಗೆ ಆಜ್ಞೆ ಮಾಡಿದರು. ಅದೂ ಇದೂ ಮಾತುಕತೆ. “ಸಾಯಂಕಾಲ ಮತ್ತೆ ಕೂಡೋಣ” ಎಂದು ಅವರು
ನೀಡಿದ ಸೂಚನೆಯನ್ನು ಅನುಸರಿಸಿ ಹಿರೇಮಠ ಐಚ್ಛಿಕ ಕನ್ನಡ ವಿದ್ಯಾರ್ಥಿಗಳೆಲ್ಲ ಸೇರಿದ್ದ ಕೋಣೆಯೊಂದರ
ಕಡೆಗೆ ಹೇಮಂತನನ್ನು ಕರೆದೊಯ್ದ.
ಅವರಿಬ್ಬರಲ್ಲದೆ
ಕಾಲೇಜಿನ ಇತರ ಮೂವರು ಕನ್ನಡ ಅಧ್ಯಾಪಕರೂ ಸಾಹಿತ್ಯದಲ್ಲಿ ಆಸಕ್ತರಾದ ಬೇರೆ ಕೆಲವು ಅಧ್ಯಾಪಕರೂ ಜೊತೆಯಲ್ಲಿ
ಬಂದು ಕೋಣೆಯಲ್ಲಿ ಕಾಲಿರಿಸುವಾಗ ಸೇರಿದ್ದ ವಿದ್ಯಾರ್ಥಿಗಳೆಲ್ಲ ಎದ್ದು ನಿಂತರು. ಒಟ್ಟು ಎಪ್ಪತ್ತೆಂಬತ್ತು
ಮಂದಿಯಿರಬಹುದು, ಅರ್ಧಕ್ಕಿಂತ ತುಸು ಕಡಿಮೆ ಸಂಖ್ಯೆಯಲ್ಲಿದ್ದ ಹೆಣ್ಣುಮಕ್ಕಳು ಅಲ್ಲಿ ಸೇರಿದ್ದರು.
ಯಥಾಪ್ರಕಾರದ ತರಗತಿ ನಡೆಯುವ ಕೋಣೆ ಅದು. ಅಲ್ಲಿದ್ದ ಮೇಜಿನ ಹಿಂದೆ ಎರಡು ಕುರ್ಚಿಗಳನ್ನು ಹಾಕಿದ್ದರು.
ಹಿರೇಮಠ ಹೇಮಂತನನ್ನು ತನ್ನೊಡನೆ ಕುರ್ಚಿಗಳ ಕಡೆ ಕರೆದೊಯ್ದು ಒಂದರಲ್ಲಿ ಅವನು ಕೂತಾದ ಮೇಲೆ, ವಿದ್ಯಾರ್ಥಿಗಳೆಲ್ಲರೂ
ಕೂರುವಂತೆ ಸನ್ನೆಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಲು ತೊಡಗಿದ.
ಈಚೆಗೆ
ಸಾಗಿದ್ದ ಅಕಾಡೆಮಿಯಿಂದ ಕಳೆದ ವರ್ಷದ ಶ್ರೇಷ್ಠ ಕಾದಂಬರಿಗಾಗಿ ಹೇಮಂತನಿಗೆ ಲಭಿಸಿದ್ದ ಬಹುಮಾನಕ್ಕೆ
ಮೊದಲು ಅಭಿನಂದನೆ. ಆನಂತರ ಅವನ ಇತರ ಕೆಲವು ಕೃತಿಗಳ ವಿಷಯ ಎರಡೇ ಮಾತು. ಆಕಸ್ಮಿಕವಾಗಿ ಬಾಗಲಕೋಟೆಯಲ್ಲಿ
ಪ್ರತ್ಯಕ್ಷನಾದ ಹೇಮಂತರನ್ನು ಕರೆತಂದ ರೀತಿ ಇತ್ಯಾದಿಯಾಗಿ ಹೇಳಿ, ಹೇಮಂತ ಮಾತಾಡಿ ವಿದ್ಯಾರ್ಥಿಗಳ
ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಬಿನ್ನವಿಸಿಕೊಂಡ.
ತಮ್ಮ
ಮಾಸ್ತರರು ಮಾತಾಡುವುದನ್ನು ವಿದ್ಯಾರ್ಥಿಗಳು ಎಷ್ಟೋ ಸಾರಿ ಕೇಳಿದ್ದವರು. ಆದ್ದರಿಂದ ಹಿರೇಮಠ ಮಾತನಾಡುವಾಗ
ವಿದ್ಯಾರ್ಥಿಗಳು ಹೇಮಂತನನ್ನು ನೋಡಲು ತಲೆಯೆತ್ತುತ್ತಿದ್ದರು. ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು. ಹುಡುಗರಿಗಿಂತ ವಿದ್ಯಾರ್ಥಿನಿಯರು
ಅವನನ್ನು ಹೆಚ್ಚು ಮೆಚ್ಚಿಕೆಯಿಂದ ನೋಡುತ್ತಿದ್ದರು. ಅವರೆಲ್ಲ ಅವನ ಕಾದಂಬರಿಗಳೆಲ್ಲವನ್ನು ಓದಿರದಿದ್ದರೂ,
ಒಂದಿಬ್ಬರಾದರೂ ಒಂದೆರಡನ್ನು ಓದಿದ್ದರು, ಆದರೆ ಬಹುಮಂದಿ ಆತನ ಹೆಸರನ್ನು ಕೇಳಿಬಲ್ಲರು. ಹೀಗಾಗಿ ಅವರಿಗೆ
ಕುತೂಹಲ; ಜೊತೆಗೆ ಇತ್ತೀಚೆಗೆ ಬಹುಮಾನ ಬೇರೆ ಬಂದಿತ್ತು.
ಮಂತ
ಎದ್ದು ಕೋಣೆಯಲ್ಲಿದ್ದ ವಿದ್ಯಾರ್ಥಿಗಳ ಕಡೆಗೆ ಒಮ್ಮೆದೃಷ್ಟಿ ಹಾಯಿಸಿ ಮಾತಿಗೆ ತೊಡಗಿದ. ಹೆಚ್ಚು ಮಾತನಾಡದೆ,
ಪ್ರಶ್ನೋತ್ತರಕ್ಕೆ ಅವಕಾಶವೀಯುವೆನೆಂದು ಆಶ್ವಾಸನೆಯಿತ್ತು ಹತ್ತು - ಹದಿನೈದು ನಿಮಿಷಗಳ ಕಾಲ ಕಾದಂಬರಿಕಾರನಾಗಿ
ತಾನು ಎದುರಿಸುವ ಸಮಸ್ಯೆಗಳು, ಅವುಗಳನ್ನು ಬಗೆಹರಿಸಿಕೊಳ್ಳುವ ಬಗೆ, ಸೃಜನಶೀಲ ಲೇಖಕನಾಗಿ ಜೀವನದ ಪ್ರತಿ
ಘಟನೆ ತನಗೆ ಹೇಗೆ ಮುಖ್ಯವಾಗುತ್ತದೆ. ವ್ಯಕ್ತಿಗಳ ಸ್ವರೂಪ ಹೇಗೆ ಉಪಯುಕ್ತವಾಗುತ್ತದೆ - ಇತ್ಯಾದಿ
ಸಾಮಾನ್ಯ ಧಾಟಿಯಲ್ಲಿ ಮಾತನಾಡಿದ.
ಈ
ಮಾತುಗಳನ್ನೇ ಆಧಾರವಾಗಿರಿಸಿಕೊಂಡು ಪ್ರಶ್ನೆಗಳನ್ನು ಕೇಳಲು ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ಅವರೆಲ್ಲ
ಕನ್ನಡ ಸಾಹಿತ್ಯವನ್ನು ವಿಶೇಷವಾಗಿ ಅಭ್ಯಾಸ ಮಾಡುತ್ತಿದ್ದುದರಿಂದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ
ಕೇಳಲು ಕಷ್ಟವಿರಲಿಲ್ಲ. ನಾನಾ ತರಹದ ಪ್ರಶ್ನೆಗಳು; ಕೆಲವು ಸಾಹಿತ್ಯವನ್ನು ಕುರಿತು ವ್ಯಾಪಕ ರೀತಿಯ
ಪ್ರಶ್ನೆಗಳು. ’ಸಾಹಿತ್ಯವನ್ನು ಓದುವುದರಿಂದೇನು ಪ್ರಯೋಜನ?’ ‘ಕಾವ್ಯಕ್ಕೂ ಕಾದಂಬರಿಗೂ ಇರುವ ವ್ಯತ್ಯಾಸವೇನು?’
‘ಸಾಹಿತ್ಯವನ್ನು ಓದಿದರೆ ಅದು ಮನುಷ್ಯನ ನಡವಳಿಕೆಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ?’ ‘ಸಾಹಿತ್ಯ
ಮನುಷ್ಯನ ಮೇಲೆ ಕೆಟ್ಟ ಪರಿಣಾಮವನ್ನು ಬೀರಲು ಸಾಧ್ಯವಿಲ್ಲವೇ?’ ‘ಸಾಹಿತ್ಯಕ್ಕೂ ಜೀವನಕ್ಕೂ ಇರುವ ಸಂಬಂಧವೇನು?’
ಎಂಬಂತಹವು. ಪಾಠ ಮಾಡುವಾಗ ಉಪಾಧ್ಯಾಯರು ಇವುಗಳ ಬಗೆಗೆಲ್ಲ ಚರ್ಚೆ ಮಾಡಿರುತ್ತಾರೆ. ಆದರೆ ಅದು ಪರೀಕ್ಷೆಯ
ದೃಷ್ಟಿಯಿಂದ ಓದುವ ಓದು; ಜೊತೆಗೆ ಪಾಠ ಮಾಡುವವರು ಅಧ್ಯಾಪಕರು, ಸಿಲಬಸ್‍ಗೆ ಅನುಗುಣವಾಗಿ ಬೋಧಿಸಬೇಕಾದವರು.
ಹೇಮಂತ ಅಧ್ಯಾಪಕನಲ್ಲ. ಕಾದಂಬರಿಗಳನ್ನು ಬರೆಯುವ ಸೃಜನಶೀಲ ಲೇಖಕ. ಹೀಗಾಗಿ ಅವನ ಉತ್ತರಗಳ ಧಾಟಿ ಮತ್ತು
ಸ್ವರೂಪ ಸಾಮಾನ್ಯ ತರಗತಿಯ ಪಾಠಕ್ಕಿಂತ ಬೇರೆಯಾಗಿ ವಿದ್ಯಾರ್ಥಿಗಳಿಗೆ ಹೊಸ ಬಗೆಯೆನಿಸಿದವು.
ಸಾಮಾನ್ಯ
ಸ್ವರೂಪದ ಈ ಪ್ರಶ್ನೆಗಳಿಗಿಂತ ಸ್ವಾರಸ್ಯಕರವಾಗಿದ್ದುವೆಂದರೆ ಅವನ ಕಾದಂಬರಿಗಳ ಬಗ್ಗೆ ಕೆಲವು ವಿದ್ಯಾರ್ಥಿಗಳು
ಕೇಳಿದ ಅಥವಾ ಎಲ್ಲರೆದುರು ಕೇಳಲು ನಾಚಿಕೆಯಾಗಿ, ಬರೆದು ಕಳಿಸಿದ ಪ್ರಶ್ನೆಗಳು. ಅವುಗಳಿಗೆ ಉತ್ತರ
ನೀಡುವಾಗ ಹೇಮಂತನಿಗೆ ಹಿತವೆನಿಸಿತ್ತು. ಏಕೆಂದರೆ ಅವೆಲ್ಲ ಒಂದು ರೀತಿಯಲ್ಲಿ ತನ್ನನ್ನೇ ತೆರೆದುಕೊಳ್ಳಲು
ಸಹಾಯಕವಾಗುವ ಪ್ರಶ್ನೆಗಳು.
“ನಿಮ್ಮ
‘ಸಂಕಲ್ಪ’ ಕೃತಿಗೆ ಬಹುಮಾನ ಬಂದಿದೆಯಲ್ಲ. ನಂದಿನಿ ನೀವು ನಿಜ ಜೀವನದಲ್ಲಿ ಕಂಡ ವ್ಯಕ್ತಿಯೇ?” ಇಂತಹ
ಪ್ರಶ್ನೆ ಅವನನ್ನು ನಿಜವಾಗಿಯೂ ತಬ್ಬಿಬ್ಬುಗೊಳಿಸಿತ್ತು. ಹಾಗೆಯೇ ಕಾದಂಬರಿ ರೂಪುಗೊಂಡ ಭೂತಕಾಲದ ವಾಡೆಯೊಳಗೆ
ಇಳಿದು ಅಲ್ಲಿನ ಕಾಳುಗಳನ್ನು ಮತ್ತೆ ಹೊರಸುರಿಯುವ ಅನುಭವಕ್ಕೆ ಎಡೆಮಾಡಿಕೊಟ್ಟಿತ್ತು. ನಂದಿನಿ ಎಂಬ
ಹೆಸರಿನ ವ್ಯಕ್ತಿಗಳು ಇರಬಹುದು. ಆದರೆ ಯಾವ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಕಾದಂಬರಿಕಾರ ಚಿತ್ರಿಸಹೋಗುವುದಿಲ್ಲ.
ಯಾವುದಾದರೂ ಹೆಸರು ನೀಡುವಾಗ ತಟಕ್ಕನೆ ನೆನಪಿಗೆ ಬಂದ ಹೆಸರು ಇಡಬಹುದು ಅಥವಾ ತಾನು ಕಂಡ ವ್ಯಕ್ತಿಯೊಬ್ಬರನ್ನು
ನೆವವಾಗಿರಿಸಿಕೊಂಡು ಅದಕ್ಕೆ ತಾನು ಕಲ್ಪಿಸಿಕೊಂಡ ಪಾತ್ರದ ಗುಣಶೀಲಗಳ ರಕ್ತಮಾಂಸಗಳನ್ನು ತುಂಬಬಹುದು.
ಒಂದು ಪಾತ್ರದಲ್ಲಿ ಕಾದಂಬರಿಕಾರ ಕಂಡ ಹತ್ತಾರು ವ್ಯಕ್ತಿಗಳ ಗುಣಶೀಲಗಳು ಒಂದೊಂದಷ್ಟು ಸೇರಿ ರಸಪಾಕವಾಗಿರುತ್ತದೆ.
ಹಾಗಾಗಿ ಪಾತ್ರ ವ್ಯಕ್ತಿಯಲ್ಲ ಎಂದು ಉತ್ತರಿಸಿದ್ದ. ಸಹಜವಾಗಿಯೇ ಅವನಿಗೆ ನಂದಿನಿಯ ನೆನಪು ಬಂದಿತ್ತು.
ಆದರೆ ಯೋಚನೆಯ ಹುತ್ತದಲ್ಲಿಳಿದು ಹಾವುಗಳ ಬಾಯಿಗೆ ಸಿಕ್ಕಿಹಾಕಿಕೊಳ್ಳದೆ ಎದುರಿಗಿದ್ದವರಿಗೆ ವಿವರಿಸುವಾಗ
ಅವನಿಗೆ ಒಂದು ಬಗೆಯಲ್ಲಿ ಭಾರವನ್ನು ಇಳುಹಲು ಸಹಾಯಕವಾಗಿತ್ತು ಕೂಡ.
“ನಿಮ್ಮ
ಕಾದಂಬರಿಗಳಲ್ಲಿ ಬರುವ ಪ್ರೇಮ ಪ್ರಕರಣಗಳನ್ನು ಓದಿ ನಿಮ್ಮ ಮನೆಯವರು ಗಲಾಟೆ ಮಾಡುವುದಿಲ್ಲವೇ?” ಎಂದು
ಒಬ್ಬ ಹುಡುಗ ಪ್ರಶ್ನಿಸಿದಾಗ ಎಲ್ಲರೂ ಗೊಳ್ಳೆಂದು ನಕ್ಕಿದ್ದರು. ಹೇಮಂತನಿಗೂ ನಗು ಬಂದಿತ್ತು.
“ಹಾಗೆ
ಗಲಾಟೆಯಾದ್ದರಿಂದಲೇ ನಾನಿಲ್ಲಿಗೆ ಓಡಿ ಬಂದಿರುವುದು” ಎಂದು ಅವನು ಅಯತ್ನಕವಾಗಿ ಉತ್ತರಿಸಿದಾಗಿ ಇಡೀ
ಕೋಣೆ ಎಲ್ಲರ ನಗುವಿನ ದೋಣಿಯಲ್ಲಿ ವಿಹಾರ ಹೊರಟಿತು. ಉಲ್ಲಾಸಕರವಾದ ಗಾಳಿ ಬೀಸಿತ್ತು. ಆದರೆ ಮರುಕ್ಷಣವೇ
ಹೇಮಂತ ಎಂಥ ಕೆಲಸ ಮಾಡಿದೆ ಎಂದು ಪೇಚಾಡಿಕೊಂಡ. ಇತರರಾರು ಅವನನ್ನು ತಪ್ಪು ತಿಳಿಯಲು ಸಾಧ್ಯವೇ ಇರಲಿಲ್ಲ;
ಅವನ ಉತ್ತರ ಸಹಜವಾದ ಹಾಸ್ಯದ ಉತ್ತರವೆಂದೇ ಎಲ್ಲರೂ ಭಾವಿಸಿದರು. ಅವನ ತಕ್ಷಣದ ಉತ್ತರ ಅಂತಹ ಭಾವನೆಯನ್ನುಂಟು
ಮಾಡುವುದು ಸಹಜವೂ ಆಗಿತ್ತು.
ಈ
ಬಗೆಯ ಉತ್ತರಗಳಿಂದ ಹೇಮಂತ ಜನರನ್ನು ಉಲ್ಲಸಿತಗೊಳಿಸಬಲ್ಲನೆಂದು ಹಿರೇಮಠನಿಗೆ ಧಾರವಾಡದ ವಿಚಾರಗೋಷ್ಠಿಯಲ್ಲಿ
ಗೊತ್ತಾಗಿದ್ದುದರಿಂದಲೇ ಇಂತಹ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಆತ ಏರ್ಪಾಟು ಮಾಡಿದ್ದುದು. ಒಟ್ಟಿನಲ್ಲಿ
ಒಂದೂವರೆ ಗಂಟೆ ಸರಿದದ್ದು ಯಾರಿಗೂ ಗೊತ್ತಾಗಲಿಲ್ಲ.
ಸಾಯಂಕಾಲದ
ಕಾರ್ಯಕ್ರಮ ಔಪಚಾರಿಕವಾಗಿ ವೇದಿಕೆ, ಮೈಕು, ಅಧ್ಯಕ್ಷರು, ಸ್ವಾಗತ, ವಂದನಾರ್ಪಣೆಗಳ ಕಾರ್ಯಕ್ರಮವಾದದ್ದರಿಂದ
ಹೇಮಂತನಿಗೆ ವಿಶೇಷವೆನಿಸಲಿಲ್ಲ. ‘ಸಾಹಿತ್ಯವೇಕೆ ಜೀವನಕ್ಕೆ ಬೇಕು’ ವಿಚಾರದ ಬಗ್ಗೆಯೇ ಮುಕ್ಕಾಲುಗಂಟೆ
ಮಧ್ಯಾಹ್ನ ರೂಮಿನಲ್ಲಿ ತಾನು ಆಲೋಚಿಸಿದ್ದ ಅಂಶಗಳ ಆಧಾರದ ಮೇಲೆ ಮಾತನಾಡಿದ. ಸ್ವಾಮಿಗಳು ಒಂದೈದು ನಿಮಿಷ
ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲರು ಹೇಮಂತನ ಮಾತಿನ ವೈಖರಿಯನ್ನು ಹೊಗಳಿದರು; ಅವನು
ನೀಡಿದ ಹಿತವಚನಗಳನ್ನು ಹುಡುಗರು ಪಾಲಿಸಬೇಕೆಂದು ಸೂಚಿಸಿದರು.
ರಾತ್ರಿ
ಸಾಕಷ್ಟು ಹೊತ್ತು ಹಿರೇಮಠ, ಹೇಮಂತನೊಡನೆ ಕಳೆದು ತಾನಾಗಿ ಇಲ್ಲಿಗೆ ಬಂದವನು ಎಂದು ಹೇಮಂತ ಎಷ್ಟೇ ಹೇಳಿದರೂ
ಅವನ ಲಾಡ್ಜಿಂಗ್‍ನ ಬಿಲ್ಲನ್ನು ಪಾವತಿಮಾಡಿಸುವ ಏರ್ಪಾಟು ಮಾಡಿದ್ದಲ್ಲದೆ ನೂರೈವತ್ತು ರೂಪಾಯಿ ಸಂಭಾವನೆಯನ್ನು
ನೀಡಿದರು. ಬೆಂಗಳೂರಿನಿಂದ ತಮ್ಮಂಥ ಸಾಹಿತಿಗಳನ್ನು ಕರೆಸಲು ಸಾವಿರ ರೂಪಾಯಿಗಳೇ ಬೇಕಾಗುತ್ತದೆ; ಈಗ
ಇಷ್ಟು ಕಡಿಮೆ ಹಣಕ್ಕೆ ಸಾಧ್ಯವಾಯಿತಲ್ಲ ಎಂದು ಬಾಯಿ ತುಂಬ ಮಾತಾಡಿದರು.
ಅಪರಿಚಿತವಾದ
ವಾತಾವರಣ ಇದ್ದಕ್ಕಿದ್ದಂತೆ ಈ ಪರಿ ಹತ್ತಿರವಾಗಿಬಿಟ್ಟದ್ದು ಅಚ್ಚರಿಯದಾಗಿತ್ತು. ಹೇಮಂತ ಜೀವನದಲ್ಲಿನ
ಈ ನಿರ್ಮಲ ಮಮತೆಯಿಂದ ಭಾವುಕನಾಗಿ ಹೋಗಿದ್ದ; ತನ್ನ ಅನಿರ್ವಚನೀಯ ಒಂಟಿತನದ ಹಿನ್ನೆಲೆಯಲ್ಲಿ ಜರುಗಿದ
ಈ ಘಟನೆಯಲ್ಲಿ ಅವನ ಹೃದಯವನ್ನು ಒದ್ದೆಮಾಡಿತ್ತು. ರಾತ್ರಿ ಮಲಗಿದಾಗ ಅಳು ಬರಿಸುವಷ್ಟರಮಟ್ಟಿಗೆ ಅವನಿಗೆ
ದಿನದ ಆಗುಹೋಗುಗಳು ಪರಿಣಾಮ ಬೀರಿದ್ದವು.
* * *
No comments:
Post a Comment