Saturday, 1 November 2014

ಪರಿಸ್ಥಿತಿ - 5

ಪರಿಸ್ಥಿತಿ - 5
ಯಶೋದ ಮೆರವಣಿಗೆಗೆ ಕಾರಣಳಾದದ್ದಷ್ಟೇ ಅಲ್ಲದೆ ನಂದಿನಿಯ ಕುರಿತು ಒಂದು ಪುಟ್ಟ ಲೇಖನವನ್ನೂ ಬರೆದು ಪ್ರಸಿದ್ಧ ಪತ್ರಿಕೆಯೊಂದರ ‘ಓದುಗರ ಅನಿಸಿಕೆ’ ವಿಭಾಗಕ್ಕೆ ಕಳಿಸಿದಳು. ಅದು ಬಹುಬೇಗ ಪ್ರಕಟವಾಗಿ ಹೇಮಂತನ ಪರಿಚಯವಿದ್ದವರೆಲ್ಲ ಮಾತಾಡಿಕೊಳ್ಳುವಂತಾಗಿತ್ತು. ಅವನು ಊರುಬಿಟ್ಟು ಹೋಗಿರುವ ವಿಷಯ ತಿಳಿದವರಿಗಂತೂ ಚರ್ಚೆಗೆ ಕಾರಣವಾಗಿತ್ತು. ತುಮಕೂರಿನಲ್ಲಂತೂ ಒಂದು ಬಗೆಯಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿಬಿಟ್ಟಿತ್ತು.
‘ಸಮತಾ’ ನಡೆಸಿದ ಮೆರವಣಿಗೆ, ಸಭೆ, ಮನವಿ ಪತ್ರಗಳ ಕಾರಣದಿಂದಾಗಿ ಪರಿಸ್ಥಿತಿ ವ್ಯತ್ಯಾಸವಾಗಿತ್ತು. ಜಿಲ್ಲಾಧಿಕಾರಿಗಳು ಮಾತು ಕೊಟ್ಟಿದ್ದಂತೆ ಮಾರನೆಯ ದಿನವೇ ಎಸ್.ಪಿ. ಯವರನ್ನು ಕರೆಸಿ ಅವರಿಗೆ ಮನವಿ ಪತ್ರದ ವಿಷಯ ತಿಳಿಸಿ ಆ ವಿಚಾರದಲ್ಲಿ ಮುಂದುವರೆಯಬೇಕೆಂದು ಹೇಳಿದರು. ಎಸ್.ಪಿ. ಸರ್ಕಲ್ ಇನ್ಸ್‍ಪೆಕ್ಟರ್‍ಗೆ ಅವರು ಸಬ್-ಇನ್ಸ್‍ಪೆಕ್ಟರ್ ಅವರಿಗೆ ಈ ಬಗ್ಗೆ ಸೂಚನೆ ನೀಡಿದ್ದರಿಂದ ಪೊಲೀಸರು ಇಲಾಖೆ ನಂದಿನಿಯ ಸಾವಿನಬಗ್ಗೆ ಆಸಕ್ತಿ ವಹಿಸುವಂತಾಯಿತು.
ಈ ಮಧ್ಯೆಪತ್ರಿಕೆಯಲ್ಲಿ ಪ್ರಕಟವಾದ ಯಶೋದಾಳ ಪತ್ರದಿಂದಾಗಿ ಬೆಂಗಳೂರಿನ ಕೇಂದ್ರ ‘ಸಮತಾ’ ಕೂಡ ಒಂದು ಕಾರ್ಯಕ್ರಮ ರೂಪಿಸಿಕೊಳ್ಳಲು ಮುಂದಾಯಿತು. ಕಚೇರಿಗಳೆಲ್ಲ ಕೆಲಸ ಮಾಡುವ ಒಂದು ದಿನ ಮೈಸೂರು ಬ್ಯಾಂಕಿನ ಚೌಕದಿಂದ ವಿಧಾನಸೌಧದವರೆಗೆ ಮೆರವಣಿಗೆಯ ವ್ಯವಸ್ಥೆಯಾಯಿತು. ಆ ದಿನ ಆಸಕ್ತರು ಮೆರವಣಿಗೆಯಲ್ಲಿ ಬಂದು ಭಾಗವಹಿಸಲು ಸೂಚಿಸಿ ಅಂದು ಬೆಳಿಗ್ಗೆಯೇ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುವಂತೆ ಏರ್ಪಾಟು ಮಾಡಿದ್ದರು. ತುಮಕೂರಿನ ಮೆರವಣಿಗೆಯ ವಿಚಾರ ಅಲ್ಲಿಯ ಪತ್ರಿಕೆಯಾದ ‘ತುಮಕೂರು ಟೈಮ್ಸ್’ನಲ್ಲಿಯಷ್ಟೇ ಪ್ರಕಟವಾಗಿ ಅದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿರಲಿಲ್ಲ. ಹಾಗಾಗಿ ಕೇಂದ್ರ ’ಸಮತಾ’ದ ಪದಾಧಿಕಾರಿಗಳು ಒಂದೆರಡು ಪ್ರಮುಖ ಪತ್ರಿಕಾ ಕಚೇರಿಗಳಿಗೆ ಖುದ್ದಾಗಿ ಹೋಗಿ ಸಂಪಾದಕರನ್ನು ಭೇಟಿಯಾಗಿ ಮೆರವಣಿಗೆ - ಸಭೆಗಳನ್ನು ವರದಿ ಮಾಡಲು ವರದಿಗಾರರನ್ನು ಕಳಿಸಿಕೊಂಡುವಂತೆ ಪ್ರಾರ್ಥಿಸಿಕೊಂಡರು. ಈ ಖುದ್ದು ಭೇಟಿ ಫಲಪ್ರದವಾಯಿತು. ರೋಚಕ ಸುದ್ದಿಗಳಿಗಾಗಿ ಚಾತಕಪಕ್ಷಿಗಳಂತೆ ಕಾಯುವ ಪತ್ರಕರ್ತರು ಬಂದದ್ದಲ್ಲದೆ, ಒಂದಿಬ್ಬರು ಫೋಟೋಗ್ರಾಫರರು ಬಂದರು.
ಹೆಂಗಸರ ಸಭೆ-ಮೆರವಣಿಗೆಯಾದುದರಿಂದ ವಿಶೇಷ ಆಕರ್ಷಣೆ ಬೇರೆ, ಹೀಗಾಗಿ ಕೇಂದ್ರ ಸಮತಾ ಕಾರ್ಯಕ್ರಮ ಮುಖ್ಯ ಸುದ್ದಿಯಾಯಿತು. ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗಬಾರದೆಂದು ನಿಶ್ಚಯಿಸಿದ್ದರು ವ್ಯವಸ್ಥಾಪಕರು. ದೌರ್ಜನ್ಯಕ್ಕೊಳಗಾದ ನಂದಿನಿಯಂಥ ಮುಗ್ಧ ಹೆಂಗಸರ ಬಾಯಿಲ್ಲದ ಸ್ಥಿತಿಯನ್ನು ಸಂಕೇತಿಸಲು ಈ ಏರ್ಪಾಟು. ಆದರೆ ಮೆರವಣಿಗೆಯ ಮತ್ತೊಂದು ತುದಿಯಲ್ಲಿ ವಿಧಾನಸೌಧದ ಮುಂದೆ ‘ಹೈಡ್ ಪಾರ್ಕ್’ ಎಂದು ಅಡ್ಡ ಹೆಸರು ಪಡೆದ ಕಬ್ಬನ್ ಪಾರ್ಕಿನ ಮೂಲೆಯಲ್ಲಿ ಸಭೆ ನಡೆಯಲಿತ್ತು. ಈ ಮೆರವಣಿಗೆಯಲ್ಲಿ ಭಾಗವಹಿಸಲು ವಿಚಾರವಾದಿಗಳಾದ ಕೆಲವರು ಪುರುಷರನ್ನೂ ಆಹ್ವಾನಿಸಲಾಗಿತ್ತು. ಅವರಲ್ಲಿ ಕೆಲವರು ಸಭೆಯನ್ನುದ್ದೇಶಿಸಿ ಮಾತನಾಡುವವರೂ ಇದ್ದರು.
ಆದರೆ ಸಭೆ ಮೆರವಣಿಗೆಗಳು ಯಾತಕ್ಕೆ ನಡೆದಿವೆಯೆಂಬ ಹಿನ್ನೆಲೆಯನ್ನು ಕೇಳಿದ ಒಂದಿಬ್ಬರು ಇವುಗಳಲ್ಲಿ ಭಾಗವಹಿಸಲು ಸ್ವಲ್ಪ ಹಿಂದೆಗೆದರು. ಏನು ನಡೆಯಿತು ಎಂಬ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ನಂದಿನಿಯೆಂಬ ಯುವತಿ ತುಮಕೂರಿನಲ್ಲಿ ಸತ್ತದ್ದು ಮಾತ್ರ ನಿಜ. ಆದರೆ ಅದರ ಹಿನ್ನೆಲೆಯೇನೋ ತಿಳಿಯದು; ಅಲ್ಲದೆ ಅವರ ಬಾಂಧವರು ಯಾರೂ ಪೊಲೀಸರಿಗೆ ದೂರಿತ್ತಿಲ್ಲ. ಹೀಗಾಗಿ ಇವರು ಪ್ರಚಾರ ಮಾಡುತ್ತಿರುವಂತೆ ಹೇಮಂತ ಈ ಸಾವಿಗೆ ಯಾವುದಾದರೂ ರೀತಿಯಲ್ಲಿ ಸಂಬಂಧ ಹೊಂದಿದ್ದಾನೆಂದು ನಂಬುವುದು ಹೇಗೆ? ಆಹ್ವಾನಿತರಾದ ಕೆಲವರಿಗೆ ಹೇಮಂತ ಗೊತ್ತು. ಸಂಭಾವಿತನೆಂಬಂತೆಯೇ ಅವನು ಕಂಡಿದ್ದ. ಯಾವಾಗಲಾದರೂ ಆತನ ನಡವಳಿಕೆಯಲ್ಲಿ ಇಂಥ ಕ್ರೌರ್ಯ ಅಡಗಿರಬಹುದೆಂಬ ಸುಳಿವು ಸಿಗಲೂ ಸಾಧ್ಯವಿರಲಿಲ್ಲ. ನಂದಿನಿಯಂಥ ಮುಗ್ಧ ಯುವತಿಯ ಸಾವಿಗೆ ಹೇಗೆ ಸಹಾನುಭೂತಿ ತೋರಿಸಬೇಕಾದ್ದು ನ್ಯಾಯವೋ, ಹಾಗೆಯೇ ಹೇಮಂತನಂಥ ವ್ಯಕ್ತಿಯ ಚಾರಿತ್ರ್ಯವಧೆಗೆ ಕಾರಣವಾಗಬಹುದಾದ ಇಂತಹ ಸಭೆ ಮೆರವಣಿಗೆಗಳನ್ನು ತುಂಬ ಜವಾಬ್ದಾರಿಯಿಂದ ವ್ಯವಸ್ಥೆ ಮಾಡಬೇಕೆಂದು ಕೆಲವರು ವಾದಿಸಿದರೂ “ನೀವೆಷ್ಟಾದರೂ ಗಂಡಸರು, ಎಲ್ಲ ಒಂದೇ” ಎಂಬ ಹೆಂಗಸರನೇಕರ ಟೀಕೆಗೆ ಅಂತಹವರು ಗುರಿಯಾದರು. ಬ್ಲಾಕ್‍ಷೀಪ್ ಎಂದರು, ವ್ಯವಸ್ಥೆಯ ಬೆಂಬಲಿಗರೆಂದರು.
ವ್ಯವಸ್ಥಾಪಕರಿಗೆ ಉತ್ಸಾಹವಿದ್ದುದರಿಂದ ಕಾರ್ಯಕ್ರಮ ಜರುಗಿತು. ಮೈಸೂರು ಬ್ಯಾಂಕ್ ಚೌಕದ ಹತ್ತಿರ ಸುಮಾರು ನೂರು ಜನ ಸಂಜೆ ಐದು ಗಂಟೆಯ ವೇಳೆಗೆ ಸೇರಿದರು. ಇಂಥ ಕಾರ್ಯಕ್ರಮಗಳ ಸುದ್ದಿ ಪ್ರಕಟವಾದಂತೆ ಯಥಾಪ್ರಕಾರ ಒಂದೆರಡು ಪೊಲೀಸ್ ವ್ಯಾನುಗಳು ಬಂದುನಿಂತವು. ಏನಾದರೂ ದಿನವೂ ಇಂಥವು ಆಗುತ್ತಲೇ ಇರುತ್ತದೆಂಬ ಭಾವನೆಯಿಂದ ನೂರಾರು ಜನ ಆ ಕಡೆ ಗಮನವೇ ಹರಿಸದೆ ತಮ್ಮ ತಮ್ಮ ಓಡಾಟ ಕೆಲಸಕಾರ್ಯಗಳಲ್ಲಿ ತೊಡಗಿದ್ದರು. ಕೆಲವರಿಗೆ ಹೆಂಗಸರ ಈ ಚಟುವಟಿಕೆಗಳು ಮೋಜಿನವಾಗಿ ಕಂಡವು.
ಐದೂಕಾಲರ ಹೊತ್ತಿಗೆ ಮೂರು ಮೂರು ಜನರ ಸಾಲು ಸಿದ್ಧವಾಯಿತು. ಮುಂದಾಳುಗಳೆನಿಸಿಕೊಂಡ ಕೆಲವರು ಎಲ್ಲರಿಗೂ ಕಪ್ಪು ಬಟ್ಟೆಯ ಪೀಸನ್ನು ಪ್ರತಿಯೊಬ್ಬರಿಗೂ ನೀಡಿ ಬಾಯಿಗೆ ಕಟ್ಟಿಕೊಳ್ಳಬೇಕೆಂದು ಸೂಚಿಸಿದರು. ಪೊಲೀಸರು ಅನುಮತಿಯಿತ್ತಿದ್ದ ಮಾರ್ಗದಲ್ಲಿಯೇ ಸಾಗಬೇಕೆಂದೂ, ಘೋಷಣೆಗಳನ್ನು ಕೂಗಬಾರದೆಂದೂ, ರಸ್ತೆಯ ಬದಿಯಲ್ಲಿ ಮಾತ್ರ ನಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದೂ ಸೂಚನೆಗಳನ್ನು ನೀಡಿದ ಬಳಿಕ ಮೌನ ಮೆರವಣಿಗೆ ಪ್ರಾರಂಭವಾಯಿತು. ತುಮಕೂರಿನ ಮೆರವಣಿಗೆಯಲ್ಲಿ ಬಳಸಲಾದ ಘೋಷಣಾ ಫಲಕಗಳನ್ನು ಇಲ್ಲಿಗೆ ತಂದಿದ್ದರು; ಜೊತೆಗೆ ಹೊಸದಾಗಿ ಮತ್ತೆ ಕೆಲವನ್ನು ಬರೆಸಿದ್ದರು. ಹಾಗಾಗಿ ಘೋಷಣೆಗಳನ್ನು ಕೂಗದಿದ್ದದೂ ಫಲಕಗಳು ಕತೆ ಹೇಳುತ್ತ ಅಥವಾ ಕತೆ ಕಟ್ಟತ್ತ ವಾತಾವರಣವನ್ನು ತುಂಬಿಕೊಂಡವು.
ಮೆರವಣಿಗೆ ವಿಧಾನಸೌಧಕ್ಕೆ ನೇರವಾಗಿ ಹೋಗುವಂತಿರಲಿಲ್ಲ. ಕೃಷ್ಣ ರಾಜೇಂದ್ರ ವೃತ್ತದಿಂದ ನೇರವಾಗಿ ಕಬ್ಬ ನ್‍ಪಾರ್ಕ್ ಹೊತ್ತು ನಿಗದಿತವಾದ ಮೂಲೆಯಲ್ಲಿ ಸಮಾವೇಶಗೊಳ್ಳಲು ಮಾತ್ರ ಪೊಲೀಸರು ಅನುಮತಿ ನೀಡಿದ್ದರು, ಅದಕ್ಕನುಗುಣವಾಗಿ ನಿಧಾನವಾಗಿ ಸಾಗಿದ ಮೆರವಣಿಗೆ ಆಫೀಸು ಮುಗಿಸಿ ಮನೆ ಕಡೆಗೆ ಸಾಗುತ್ತಿದ್ದ ನೌಕರರ ಗಮನ ಸೆಳೆಯುತ್ತ, ಕೆಲವರು ಕುತೂಹಲ ಕೆರಳಿಸುತ್ತ ಕೊನೆ ತಲುಪಿದಾಗ ಆರುಗಂಟೆಯೇ ಆಗಿತ್ತು.
ಸಭೆಯಲ್ಲಿ ಮಾತನಾಡಬೇಕೆಂದು ಇಬ್ಬರು ಮೂವರನ್ನು ಕೋರಿಕೊಳ್ಳಲಾಗಿತ್ತು. ಅವರ ಭಾಷಣಗಳು ನಡೆಯುತ್ತಿರುವಾಗ ತಾವು ತಯಾರಿಸಿಕೊಂಡು ಬಂದಿದ್ದ ಮನವಿಪತ್ರವನ್ನು ಗೃಹಸಚಿವರಿಗೆ ಸಮರ್ಪಿಸಲು ಮುಖ್ಯವಾದ ನಾಲ್ಕೈದು ಮಂದಿ ಹೋಗುವುದೆಂದು ತೀರ್ಮಾನವಾಯಿತು. ಸಂಜೆ ಆರು ಗಂಟೆಯಾಗಿದ್ದುದರಿಂದಾಗಿ ಕಚೇರಿಯಲ್ಲಿ ಮಂತ್ರಿಗಳು ಇರುವುದು ಸಾಧ್ಯವಿರಲಿಲ್ಲ. ಹೀಗಾಗಿ ಹತ್ತಿರವೇ ಇದ್ದ ಅವರ ಮನೆಗೆ ಹೋಗಿ, ಅವರಿಲ್ಲದಿದ್ದರೆ ಅವರ ಕಾರ್ಯದರ್ಶಿಗಳಿಗೆ ಮನವಿಯರ್ಪಿಸಿ ಬರುವುದೆಂದು ಒಪ್ಪಿ ಕೆಲವರು ಹೊರಟರು.
ಯಥಾಪ್ರಕಾರ ಭಾಷಣಕಾರರೆಲ್ಲ ಗಂಡಸರ ದೌರ್ಜನ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಹೆಂಗಸರೆಲ್ಲ ಒಂದಾಗಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿ, ಹೋರಾಟಕ್ಕೆ ಎಂದೆಂದಿಗೂ ಗೆಲುವು ಸಿಕ್ಕಿಯೇ ತೀರುತ್ತದೆ. ಏಕೆಂದರೆ ನಾವು ಮಾಡುತ್ತಿರುವ ಹೋರಾಟ ಮುಗ್ಧರ ಪರವಾಗಿ, ಶೋಷಿತರ ರಕ್ಷಣೆಗಾಗಿ ಸದುದ್ದೇಶದಿಂದ ಎಂದು ಸಾರಿದಾಗ ಕಿವಿಗಡಚಿಕ್ಕುವ ಚಪ್ಪಾಳೆಯ ಸದ್ದು ಕತ್ತಲಾವರಿಸುತ್ತಿದ್ದ ಆಕಾಶದಲ್ಲಿ ಸೇರುತ್ತಿತ್ತು.
ಮಾರನೆಯ ಬೆಳಿಗ್ಗೆ ಕೆಲವು ಪತ್ರಿಕೆಗಳ ಒಳಪುಟಗಳಲ್ಲಿ ಸಭೆ- ಮೆರವಣಿಗೆಗಳ ಸುದ್ದಿ ಪ್ರಕಟವಾಗಿತ್ತು. ಒಂದೆರಡು ಪತ್ರಿಕೆಗಳಲ್ಲಿ ಸುದ್ದಿಯೊಡನೆ ಚಿತ್ರವೂ ಪ್ರಕಟವಾಗಿತ್ತು. ಇದರಿಂದಾದ ಮಹತ್ತರ ಪರಿಣಾಮವೆಂದರೆ ಗೃಹಮಂತ್ರಿಗಳು ಮತ್ತೊಮ್ಮೆ ಮನವಪತ್ರದಲ್ಲಿ ನಮೂದಿತವಾಗಿದ್ದ ವಿಷಯದ ಬಗ್ಗೆ ತನಿಖೆ ನಡೆಸಲು ತುಮಕೂರು ಎಸ್.ಪಿ. ಯವರಿಗೆ ಆದೇಶ ನೀಡಿದ್ದರು. ಅದು ಯಥಾಪ್ರಕಾರ ಏಣಿಯಲ್ಲಿ ಕೆಳಗಡೆಗೆ ಇಳಿದು ಬಂದು ನವೋದಯ ನಗರದ ಕ್ರೈಂ ಸಬ್ ಇನ್ಸ್‍ಸ್ಪೆಕ್ಟರ್ ಅವರನ್ನು ತಲುಪಿತ್ತು.
ಜಿಲ್ಲಾಧಿಕಾರಿಗಳಿಂದ ಬಂದ ಸೂಚನೆಯನುಸರಿಸಿ ಆತ ಹಿಂದೆಯೇ ತುಮಕೂರಿನ ‘ಸಮತಾ’ದ ಪದಾಧಿಕಾರಿಗಳನ್ನು ಕರೆಸಿ ಲಿಖಿತವಾದ ಕಂಪ್ಲೇಂಟ್ ಕೊಡಲು ಹೇಳಿದ್ದರು. ಮನವಿಪತ್ರಗಳನ್ನು ಸಲ್ಲಿಸಿದ್ದರೂ ತಮ್ಮ ದಾಖಲೆಗಾಗಿ ಅದು ಅವಶ್ಯಕವೆಂದು ವಾದಿಸಿದಾಗ, ನಂದಿನಿಯೆಂಬ ಯುವತಿಯು ಇಂಥ ತಾರೀಖು ಸತ್ತಿರುವ ರೀತಿಯು ಅನುಮಾನಾಸ್ಪದ ರೀತಿಯದೆಂದೂ, ಆ ಬಗ್ಗೆ ಅನುಮಾನಪಡಲು ಕಾರಣಗಳಿವೆಯೆಂದೂ ತಿಳಿಸಿ, ಆ ವಿಚಾರವಾಗಿ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಲು ಅನುಕೂಲವಾಗುವ ರೀತಿ ಕ್ರಮ ಕೈಗೊಳ್ಳುವಂತೆ ಕೋರಿ ರುಕ್ಮಿಣೀರಾವ್, ಮಂಜುಳಾ, ಯಶೋದಾ ಸಹಿ ಹಾಕಿದ ದೂರೊಂದನ್ನು ಬರೆದುಕೊಡಲಾಯಿತು.
ಸರಿ, ಮುಂದಿನ ತನಿಖೆ ಕೂಡ ಆರಂಭವಾಯಿತು. ಈಗ ತಾನಾಗಿ ನವೋದಯನಗರದ ಕ್ರೈಂ ಸಬ್ ಇನ್ಸ್‍ಪೆಕ್ಟರು ಮಾಧವರಾಯನಿಗೆ ಹೇಳಿಕಳಿಸಿದರು. ಅವರು ನೀಡಿದ ಹೇಳಿಕೆಯನ್ನು ದಾಖಲು ಮಾಡಿಕೊಂಡರು. ಒಬ್ಬ ಪೊಲೀಸ್ ಪೇದೆಯನ್ನು ಅವನ ಮುಂದೆಯೇ ಕಳಿಸಿ ಮಾಧವರಾವ್ ಇದ್ದ ಮನೆಯ ಆಜೂಬಾಜೂ ಇದ್ದ ಕೆಲವರನ್ನು ಕರೆತರಲು ಕಳಿಸಿದರು. ಪೊಲೀಸರಿಂದ ಕರೆಬಂದದ್ದರಿಂದ ಗಾಬರಿಯಾದ ಕೆಲವರು ಮುಖದಲ್ಲಿ ಆತಂಕದ ಮೂಟೆಹೊತ್ತು ಬಂದು ಸಬ್‍ಇನ್ಸ್‍ಪೆಕ್ಟರರ ಮುಂದೆ ನಂದಿನಿಯ ಸಾವಿಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ವಿವರಿಸಿದರು. ಅವರಾರಿಗೂ ಏನಾದರೂ ವಿಷಯ ಗೊತ್ತಿದ್ದರೆ ತಾನೇ? ಗೊತ್ತಿಲ್ಲ ಎಂಬುದೇ ದಾಖಲಾಯಿತು.
ನಂದಿನಿಯ ಸಾವಿನ ಬಗ್ಗೆ ಸರ್ಟಿಫಿಕೇಟ್ ನೀಡಿದ್ದ ಡಾಕ್ಟರ್ ಮುರುಳಿಯವರಿಗೂ ಕರೆ ಹೋಯಿತು. ಅವರು ತಮ್ಮ ಸ್ಕೂಟರಲ್ಲಿ ಬಂದು, ಕುಳಿತಿದ್ದ ಮಾಧವರಾಯನನ್ನು ಕೆಂಗಣ್ಣಿನಿಂದ ನೋಡಿ ತಮ್ಮ ಹೇಳಿಕೆಯನ್ನು ನೀಡಿದರು.
ನಂದಿನಿಯ ಸಾವಿನ ರೀತಿ ಅನುಮಾನಾಸ್ಪದ ಎಂಬ ದೂರಿನ ದಾಖಲೆಯೊಂದಿಗೆ ಇನ್ನೆರಡೂ ಮೊಕದ್ದಮೆಗಳನ್ನು ಸಬ್‍ಇನ್ಸ್‍ಪೆಕ್ಟರ್ ದಾಖಲು ಮಾಡಿಕೊಂಡರು. ಅವುಗಳೆಂದರೆ: ಅಪರಾಧವೆಂದು ಗೊತ್ತಿದ್ದರೂ, ಅದನ್ನು ಪೊಲೀಸರಿಗೆ ತಿಳಿಸದೆ ಗೌಪ್ಯವಾಗಿ ಆತ್ಮಹತ್ಯೆ ಮಾಡಿಕೊಂಡ ನಂದಿನಿಯ ಶವಸಂಸ್ಕಾರ ಮಾಡಿದ್ದ ಮಾಧವರಾವ್ ವಿರುದ್ಧ ಇಂಡಿಯನ್ ಪೀನಲ್ ಸೆಕ್ಷನ್ ಇನ್ನೂರೆಡರ ಪ್ರಕಾರ ಒಂದು ಮೊಕದ್ದಮೆ; ನಂದಿನಿಯ ಸಾವು ಅನುಮಾನಾಸ್ಪದವಾದ ರೀತಿಯಲ್ಲಿಸಂಭವಿಸಿದ್ದರೂ, ಅವಳದು ಸಹಜವಾದ ಸಾವೆಂದು ಸುಳ್ಳು ಸರ್ಟಿಫಿಕೇಟ್ ನೀಡಿದ್ದಕ್ಕಾಗಿ ಡಾ. ಮುರುಳಿಯವರ ರುದ್ಧ ಐ.ಪಿ.ಸಿ. ಸೆಕ್ಷನ್ ನೂರತೊಂಬತ್ತೇಳರ ಪ್ರಕಾರ ಇನ್ನೊಂದು ಮೊಕದ್ದಮೆ.
* * *
ರಜೆಯನ್ನು ಮುಂದುವರೆಸಬೇಕೆಂದು ಆಫೀಸಿಗೆ ತಂತಿ ಕಳಿಸಿದ್ದ ಹೇಮಂತ ತನಗೂ ಒಂದು ಕಾಗದವನ್ನು ಬರೆದಾನೆಂದು ನಳಿನಿ ನಿರೀಕ್ಷಿಸಿದ್ದಳು. ಆದರೆ ದೇವೇಂದ್ರಕುಮಾರ್ ಬಂದು ಆ ವಿಷಯ ತಿಳಿಸಿ ಹೋಗಿ ಮೂರು- ನಾಲ್ಕು ದಿನಗಳಾಗಿದ್ದರೂ ತನಗೆ ಕಾಗದಬರಲೇ ಇಲ್ಲ; ಅಷ್ಟೆ ಅಲ್ಲ, ಒಂದು ಚುಟುಕಾದ ಎರಡು ಪತ್ರಗಳ ವಿನಾ ಬೇರೇನೂ ಇಲ್ಲ. ತನ್ನ ಬಗ್ಗೆ ಇಷ್ಟೊಂದು ಅಸಡ್ಡೆ ಮಾಡುವ ಗಂಡನ ಬಗ್ಗೆ ನಳಿನಿಗೆ ತುಂಬ ಕೋಪ ಬಂತು. ಹಣಕಾಸು ವ್ಯವಹಾರದಲ್ಲಿಯೇನೂ ತೊಡಕು ಮಾಡಿಕೊಂಡಿಲ್ಲವೆಂದೂ, ಅದಕ್ಕೆ ಆಫೀಸಿನಲ್ಲಿ ಆಸ್ಪದವೇ ಇಲ್ಲವೆಂದೂ ದೇವೇಂದ್ರಕುಮಾರನಿಂದ ತಿಳಿದರೂ ರಹಸ್ಯವಾಗಿರುವ ಹೇಮಂತನ ವ್ಯವಹಾರ ನಳಿನಿಯಲ್ಲಿ  ಅನುಮಾನಗಳನ್ನೇಳಿಸಿತು. ಇನ್ನಾವುದಾದರೂ ಚಾಳಿಗೆ ಬಿದ್ದಿರಬಹುದೇ ಅಂಥದ್ದೇನಾದರು ರಹಸ್ಯಮಯ ವ್ಯವಹಾರಗಳನ್ನು ನಡೆಸುವುದಕ್ಕಾಗಿಯೇ ಹೋಗಿರಬಹುದು. ಗಂಡಸರ ಎಲ್ಲ ವ್ಯವಹಾರಗಳು ಹೆಂಗಸರಿಗೆ ತಿಳಿಸಬೇಕಿಲ್ಲ, ನಿಜ, ಆದರೆ ತಾನು ಹೋಗುವ ಊರು ಯಾವುದೆಂಬುದರ ಬಗ್ಗೆಯಾದರೂ ಮಾಹಿತಿ ಬೇಡವೇ. ಅಕಸ್ಮಾತ್ ಏನಾದರೂ ಆದರೆ ಸಂಪರ್ಕಿಸುವಂತಿರಬೇಡವೇ? ಹೋಗಲಿ, ವಿವರವಾದ ಪತ್ರಗಳನ್ನಾದರೂ ಬರೆದರೇ ಎಂದರೆ ಅದೂ ಇಲ್ಲ. ಬೇಸರ ಎಂದು ಬರೆದಿಟ್ಟಿದ್ದಾರೆ, ಯಾವ ಬಗೆಯ ಬೇಸರವಿರಬಹುದು ಅದು ಅಥವಾ ಆ ನೆವವೊಡ್ಡಿದರೆ ತನ್ನ ಅನುಕಂಪ ಗಳಿಸಿಕೊಳ್ಳಲು ಸಹಾಯಕವಾಗಬಹುದೆಂದು ಭಾವಿಸಿ ಹಾಗೆ ಬರೆದಿಟ್ಟು ಹೋಗಿರಬಹುದೇ? ಹೋದ ಹಿಂದಿನ ದಿನದವರೆಗೂ ಅವರಿಗೆ ಬೇಸರದ ಲಕ್ಷಣಗಳೇ ಕಾಣಿಸಿರಲಿಲ್ಲವಲ್ಲ; ಅಥವಾ ಬೇಸರದ ಗೆರೆಗಳು ಮುಖದಲ್ಲಿ ಮೂಡಿರಬಹುದು, ಅದನ್ನು ತಾನು ಗಮನಿಸಿರಲಿಕ್ಕಿಲ್ಲ. ಆದರೆ ಕಾರ್ಮೋಡವಂತೂ ಮುಖವನ್ನು ಮುಸುಕಿರಲಿಲ್ಲ. ಇಷ್ಟಾದರೂ ದೀರ್ಘಕಾಲ ಕಣ್ಮರೆಯಾಗಿ ಹೋಗುವ ನಿರ್ಧಾರವನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡು, ಸರಿಯಾಗಿರುವಂತೆ ನಾಟಕವಾಡಿದರೆ? ಯಾಕೋ ಹೇಮಂತನೆಂದರೆ, ಅವನ ನಡವಳಿಕೆಯ ರೀತಿಯೆಂದರೆ, ಕೊನೆಯೇ ಇರದ ಕತ್ತಲ ಗವಿ. ಹೋದಷ್ಟು ಬಾಯಿ ತೆರೆಯುತ್ತಾ ಸಾಗುತ್ತದೆ. ಸಾಗಿದಷ್ಟು ಕತ್ತಲೆಯನ್ನುಗುಳುತ್ತ ಆವರಿಸುತ್ತದೆ.
ಇಲ್ಲ, ತನ್ನನ್ನು ಅಸಡ್ಡೆ ಮಾಡಿದ ಅವನನ್ನು ಅವನ ಪಾಡಿಗೇ ಇರಲು ಬಿಟ್ಟು ತಾನು ಇಲ್ಲಿ ಕಾದ ಕಾವಲಿಯ ಮೇಲೆ ಕುಳಿತಿರಬೇಕೇ ಎನ್ನಿಸಿತು ನಳಿನಿಗೆ. ಉಹೂ, ಕೊನೆಗೊಂದು ಸಲ ತನ್ನ ಸಮಾಧಿಯಿಂದ ಅವನು ಹೊರಬಂದುಬಿಡಲಿ, ತಾನು ಅವನನ್ನು ಹೊರಗೆಳೆಯಲೇಬೇಕು. ನಾನವಳ ಹೆಂಡತಿಯಾಗಿರುವವರೆಗೂ ಅವನ ಆಗು-ಹೋಗುಗಳ ಬಗ್ಗೆ ತನಗೆ ಗೊತ್ತಾಗಲೇಬೇಕು, ಅವನ ವ್ಯವಹಾರಗಳನ್ನೆಲ್ಲ ತಿಳಿಯುವ ಹಕ್ಕು ತನಗಿದೆ. ತಾನಾಗಿಯೇ ಹೇಳದಿದ್ದರೆ ನಾನೇ ಬಯಲು ಮಾಡಬೇಕು, ಇನ್ನು ಸಾಕು ತನ್ನ ಮೌನ, ನಳಿನಿ ಸರಸರನೆ ಬೇರೆ ಸುಮಾರಾದೊಂದು ಸೀರೆಉಟ್ಟು, ತಲೆ ಬಾಚಿಕೊಂಡು ಕೈಲಿ ಪರ್ಸ್ ಹಿಡಿದು ನಡೆದಳು. ತಾನಿಲ್ಲೇ ಹೋಗಿಬರುವುದಾಗಿಯೂ, ತಲೆ ಬಾಗಿಲು ಹಾಕಿಕೊಳ್ಳುವಂತೆಯೂ ತಾಯಿಗೆ ಹೇಳಿ ನಡೆದಳು.
  ಅವಳು ಹೋಗಲು ನಿರ್ಧರಿಸಿದ್ದುದು ಪೊಲೀಸ್ ಠಾಣೆಗೆ. ತನ್ನ ಗಂಡ ಇಷ್ಟು ದಿನಗಳಾದರೂ ಸುಳಿವು ನೀಡದೆ ಕಣ್ತಪ್ಪಿಸಿಕೊಡು ಓಡಾಡುತ್ತಿದ್ದಾನೆ. ಊರಿಗೆ ಹೋಗಿದ್ದೇನೆಂದು ಬರೆದಿಟ್ಟು ಮನೆ ಬಿಟ್ಟು ಹೋದ ಹೇಮಂತ ಏನಾದರೂ ಈ ವೂರಲ್ಲಿಯೇ ಬೇರೊಂದು ಮೂಲೆಯಲ್ಲಿಯೂ ಇರಬಹುದು. ಅಂತೂ ಪೊಲೀಸರಿಗೆ ದೂರು ಕೊಟ್ಟರೆ ಒಂದೆರಡು ದಿನಗಳಲ್ಲಿ ಹೇಮಂತ ರಹಸ್ಯ ಜಾಗದಿಂದ ಮೇಲೆದ್ದು ಬರಲೇಬೇಕು. ಪೊಲೀಸರು ತನ್ನನ್ನು ಪ್ರಶ್ನಿಸುವುದರಿಂದ ಮುಜುಗರವಾಗಿ ತಾನು ಮಾಡಿದ ತಪ್ಪಿನ ಅರಿವಾಗಬೇಕು ಅವನಿಗೆ; ಇನ್ನೆಂದೂ ಹೀಗೆ ಮಾಡಬಾರದು ಅಥವಾ ಈಗಾಗಲೇ ಅವನು ಎಲ್ಲ ಮುಜುಗರಗಳಿಗೆ ಹೊರತಾಗುವಷ್ಟು ಜಡ್ಡುಗಟ್ಟಿ ಹೋಗಿರಬಹುದೇ? ತೀವ್ರ ವೈರಾಗ್ಯವೇನಾದರೂ ಬಂದು, ಸಾಮಾನ್ಯವಾಗಿ ಕಾದಂಬರಿಗಳಲ್ಲಿ ಚಿತ್ರಿಸುವಂತೆ, ಸನ್ಯಾಸಿಯಾಗಿ ಹಿಮಾಲಯದ ತಪ್ಪಲುಗಳಲ್ಲಿ ಓಡಾಡುತ್ತಿರಬಹುದೇ? ಅವನಿಗೆ ಅಂಥ ವೈರಾಗ್ಯ ಬರುವುದಕ್ಕೆ ಕಾರಣವೇನಿರಬಹುದು? ನಿಜವಾಗಿಯೂ ಅವನಲ್ಲಿ ವೈರಾಗ್ಯ ಬೆಳೆದು ಹೆಮ್ಮರವಾಗಿದ್ದರೆ, ಅವನು ಕಣ್ಮರೆಯಾದ ಹಿಂದಿನ ರಾತ್ರಿ ತನ್ನ ಮೇಲೆ ಆಕ್ರಮಣ ಮಾಡಿದ ರೀತಿಯ ಅರ್ಥವೇನು? ಅವತ್ತಿನ ಗಂಡನ ಹುರುಪು ನೆನಪಿಗೆ ಬಂದು ಆ ವೇಳೆಯಲ್ಲಿಯೂ ನಳಿನಿಗೆ ನಗು ಬಂತು. ಅವನಿಗೆ ಸಂಸಾರದ ಬಗ್ಗೆ ವೈರಾಗ್ಯ ಮಾತ್ರ ಬಂದಿರಲು ಸಾಧ್ಯವಿಲ್ಲ ಎಂಬ ಭಾವನೆಯ ಹೊರರೂಪ ಆ ನಗು. ಏನಾದರಾಗಲಿ ಹೇಮಂತನ ಜುಟ್ಟು ಹಿಡಿದು ಈವತ್ತು ಮೇಲಕ್ಕೆತ್ತುತ್ತೇನೆ ಎಂದು ನಿರ್ಧರಿಸಿ ಮುಂದುವರಿದಳು.
“ಏನೇ ನಳಿನಿ, ಚೆನ್ನಾಗಿದ್ದೀಯಾ?” ಎಂದು ಕರೆದಾಗಲೇ ಅವಳಿಗೆ ಬಾಹ್ಯಪ್ರಪಂಚದ ಅರಿವಾದದ್ದು, ರಸ್ತೆಯಲ್ಲಿ ಸಾಗುವಾಗ, ಆಚೆ ಈಚೆ ನೋಡಿ ವಾಹನಗಳು ಹೋದ ನಂತರ ನಡೆಯುವಾಗ. ಎದುರು ಬಂದವರಿಗೆ ಡಿಕ್ಕಿ ಹೊಡೆಯದಂತೆ ನಡೆಯುವಾಗ ಅವಳಲ್ಲಿ ಕೆಲಸ ಮಾಡುತ್ತಿದ್ದುದು ಅಭ್ಯಾಸವೇ ಹೊರತು ಬುದ್ಧಿಪೂರ್ವಕ ವರ್ತನೆಯಲ್ಲ. ಹೀಗಾಗಿ ಅವಳು ಪ್ರಪಂಚದ ನಡುವೆಯೇ ಸಾಗುತ್ತಿದ್ದರೂ ತನ್ನದೇ ಯೋಚನೆಗಳ ಚಿಪ್ಪಿನಲ್ಲಿ ಹುದುಗಿಕೊಂಡಿದ್ದಳು.
ಕತ್ತೆತ್ತಿ ನೋಡಿದರೆ ಮಾಲಿನಿ. ತಾನು ಹಿಂದೆ ರಾಜಾಜಿ ನಗರದಲ್ಲಿ ಮನೆ ಮಾಡಿದ್ದಾಗ ತಮ್ಮ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದಳು. ಕೆಲವಾರು ವರ್ಷಗಳ ನೆರಹೊರಿಕೆಯ ಕಾರಣ, ಅವರಿಬ್ಬರೂ ಸುಮಾರು ಓರಗೆಯವರಾದುದರಿಂದಲೂ, ಏಕವಚನ ಹಿಂದೆಯೇ ಪ್ರಾರಂಭವಾಗಿತ್ತು. ತಾವಿನ್ನು ರಾಜಾಜಿ ನಗರದಲ್ಲಿದ್ದಾಗಲೇ ಮಾಲಿನಿಯ ಗಂಡನಿಗೆ ಬೇರೊಂದೂರಿಗೆ ವರ್ಗವಾಗಿತ್ತು. ಅವರಿದ್ದುದು ಬ್ಯಾಂಕಿನಲ್ಲಿ ಆಫೀಸರಾಗಿ. ತಾಯಿ ಮನೆ ಬೆಂಗಳೂರೇ ಆದರೂ ಗಂಡನಿಗೆ ವರ್ಗವಾದರೆ ಅವನ ಜೊತೆಗೆ ಹೋಗಬೇಕಲ್ಲ, ಆಮೇಲೆ ತಾನೂ ರಾಜಾಜಿನಗರ ಬಿಟ್ಟು ಜಯನಗರಕ್ಕೆ ಮನೆ ಬದಲಾಯಿಸಿದ್ದರು,
ಬಹಳ ದಿನಗಳ ನಂತರ ಅವಳನ್ನು ಕಂಡ ಸಂಭ್ರಮವಿದ್ದರೂ ಅದರ ಹೊಳಪನ್ನು ಮನಸ್ಸಿನಲ್ಲಿ ಕೊರೆಯುತ್ತಿದ್ದ ಚಿಂತೆಯ ಮೋಡಗಳು ಕಬಳಿಸಿದ್ದವು. ಆದರೂ ತುಟಿಗಳ ಮೇಲೆ ನಗೆ ತಂದುಕೊಂಡು, “ಏನು ಮಾಲಿನಿ, ಇಲ್ಲಿ? ಇಷ್ಟು ಅಪರೂಪ?” ಎಂದು ಪ್ರಶ್ನಿಸಿದಳು.
“ನನ್ನ ತಂಗಿಗೆ ಮದುವೆ ಕಣೇ. ನಮ್ಮಮ್ಮ ಈಗ ಸ್ವಂತ ಮನೇಲಿದ್ದಾರೆ ಜೆ.ಪಿ. ನಗರದಲ್ಲಿ, ನಾಲ್ಕನೇ ಹಂತದಲ್ಲಿ.”
“ಯಾವತ್ತು ಮದುವೆ?”
“ಮದುವೆ ಆಗಿ ಮೂರು ದಿನ ಆಯ್ತು. ನೀವೆಲ್ಲಿದ್ದೀರೋ ಗೊತ್ತೇ ಇಲ್ಲವಲ್ಲ. ಅದೂ ನಾನು ಇರೋದು ಈಗ ಸಕಲೇಶಪುರದಲ್ಲಿ. ಅದಕ್ಕೇ ಇನ್ವಿಟೇಷನ್ ಕಳಿಸಕ್ಕೆ ಆಗಲಿಲ್ಲ.”
“ಪರವಾಗಿಲ್ಲ ಬಿಡು.”
ಮಾತಾಡುತ್ತಲೇ ಇದ್ದಳು ಮಾಲಿನಿ. “ಅಯ್ಯಾ, ನೀ ಕೇಳಿದಡೆ ಕೇಳು ಕೇಳದಿರ್ದಡೆ ಮಾಣು, ನಾನಿನ್ನ ಸ್ತುತಿಸಲಲ್ಲದೆ ಸೈರಿಸಲಾರೆನಯ್ಯಾ“ ಎಂದು ಮಹಾದೇವಿಯಕ್ಕ ಹೇಳಿದ ಹಾಗೆ ನಳಿನಿ ಆಸಕ್ತಿ ತೋರಿಸುತ್ತಿದ್ದಾಳೆಯೇ ಇಲ್ಲವೇ ಎಂಬುದನ್ನು ಗಮನಿಸದೆ ಅವಳ ಮಾತುಗಳ ಧಾರೆ ಸ್ವಾತಿಮಳೆಯಂತೆ ಜರೋ ಎಂದು ಸುರಿಯುತ್ತಿತ್ತು. ತನ್ನ ತಂಗಿ ನಿರ್ಮಲ ಎಂಥ ಲಕ್ಕೀ ಕಣೇ. ತಾನು ಕೆಲಸ ಮಾಡ್ತಾ ಇದ್ದ ಕಂಪನಿ ಮ್ಯಾನೇಜರನ್ನೇ ಬಲೆಗೆ ಹಾಕಿಕೊಂಡುಬಿಟ್ಟಳು. ಸದ್ಯ ಅವರದೂ ತಮ್ಮದೂ ಜಾತಿ ಒಂದೇ, ಉಪ ಜಾತಿ ಬೇರೆ ಇರಬಹುದು; ಬೇರೆ ಜಾತಿ ಆಗಿಬಿಟ್ಟಿದ್ದಿದ್ದರೆ ಅಪ್ಪ ಅಮ್ಮನಿಗೆ ಶಾಕ್ ಆಗಿಬಿಡ್ತಿತ್ತು, ಅವರಿಗೆ ಈಗಲೇ ನಾಲ್ಕು ಸಾವಿರ ರೂಪಾಯಿ ಸಂಬಳ; ಮನೇಲಿ ಫೋನು ಇದೆ-ಕಂಪೆನೀದೆ. ಇನ್ನೇನು ವಿದೇಶಕ್ಕೆ ಹೋದರೂ ಹೋಗಬಹುದು, ನಿರ್ಮಲಳನ್ನು ಕರೆದುಕೊಂಡೇ ಹೋಗ್ತಾರೇನೋ. ಎಷ್ಟೊಂದು ಹ್ಯಾಂಡ್‍ಸಮ್ಮಾಗಿದ್ದಾರೆ ಗೊತ್ತಾ? ಅಷ್ಟಾದರೂ ಎಂಥ ಸರಳವಾದ ನಡವಳಿಕೇಂತ. ತನ್ನ ಕಂಡರಂತೂ ಅತ್ತಿಗೆ ಅತ್ತಿಗೇಂತ ತುಂಬ ಗೌರವದಿಂದ ಮಾತನಾಡಿಸ್ತಾರೆ. ಮಾತು ಸಾಗಿಯೇ ಇತ್ತು. ಕೊನೆಗೆ “ಅಂತೂ ನಿರ್ಮಲ ತುಂಬ ಪುಣ್ಯವಂತೆ” ಎಂಬ ಷರಾ ಬರೆದಳು.
“ಎಲ್ಲ ಅವರವರು ಪಡೆದುಬಂದದ್ದು” ಎಂದು ನಳಿನಿ ಉದ್ಗಾರ ತೆಗೆದಾಗ ಹಿಂದಿನಿಂದಲೇ ನಿಟ್ಟುಸಿರು ಬಂದಿತ್ತು ನಿಧಾನವಾಗಿ ನೀಳವಾಗಿ, ಸಾರಂಗಿಯ ನಾದವನ್ನು ಹಿಂಬಾಲಿಸುವ ತಬಲದ ಧ್ವನಿಯಂತೆ.
“ನಿನಗೇನಮ್ಮ ಕಡಿಮೆಯಾಗಿರೋದು? ಅಂದಹಾಗೆ ಕಂಗ್ರಾಟ್ಸ್, ಕಣೇ ನಿಮ್ಮ ಯಜಮಾನ್ರ ಕಾದಂಬರೀಗೆ ಬಹುಮಾನ ಬಂತಲ್ಲ. ಎಂಥ ಲಕ್ಕೀನೇ ನೀನು, ಗ್ರೇಟ್‍ರೈಟರ್ ಹೆಂಡತಿ.” ಎಂದು ತುಟಿ ಗುಂಡಾಗಿಸಿ ಉದ್ಗಾರ ತೆಗೆದಳು ಮಾಲಿನಿ. ನನ್ನ ಅದೃಷ್ಟಕ್ಕೆ ಪಾರವೇ ಇಲ್ಲ; ಅಥವಾ ಅದೇ ಪೊಲೀಸ್ ಸ್ಟೇಷನ್ ಎಂದು ನಳಿನಿಗನ್ನಿಸಿತು. ಆದರೆ ಲೋಕದಲ್ಲಿ ಅನ್ನಿಸಿದ್ದನೆಲ್ಲ ಆಡುವ ಹಾಗಿಲ್ಲ, ಆಡಿದ ಹಾಗೆ ಅನ್ನಿಸಿರುವುದೇ ಇಲ್ಲ. ಮರ್ಯಾದೆ, ಗೌರವ ಮಣ್ಣು ಮಸಿ. ಅಂತೂ ಯಾವಾಗಲೂ ಒಳಗು-ಹೊರಗುಗಳ ಎರಡು ಬೇಳೆಗಳನ್ನು ಹೇಗೋ ಅಂಟಿಸಿಕೊಂಡ ಕಾಳು ಜೀವನವೆಂದೂ ಮತ್ತೆ ನಿಟ್ಟುಸಿರು. ಆದರೆ ಇತರರಿಗೆ ಗೊತ್ತಾಗದಂತೆ ನಿಟ್ಟುಸಿರು ಬಿಡುವುದು ಬರಬರುತ್ತ ಅಭ್ಯಾಸವಾಗುತ್ತದೆ, ಕಣ್ಣು ರೆಪ್ಪೆ ಮಿಟುಕಿಸುವ ಹಾಗೆ, ಆಲೋಚನೆಗೆ ಅಡ್ಡಗಟ್ಟೆಹಾಕಿ ಅದರ ಮೇಲೆ ಮಾತಿನ ಗಾಡಿ ಓಡಿಸುವ ಹಾಗೆ. ಆದರೂ ಶಿಷ್ಟಾಚಾರಕ್ಕೆ ನಳಿನಿ ಮುಗುಳ್ನಕ್ಕಳು.
“ಎಷ್ಟು ಕಾದಂಬರಿ ಬರೆದಿದ್ದಾರೆಯೇ?”
“ಆರೋ ಎಂಟೋ ಇರಬೇಕು.”
“ನಿಂಗೇ ಗೊತ್ತಿಲ್ಲವಾ? ನಾನಾಗಿದ್ದಿದ್ದರೆ ಅವರು ಹೇಳ್ತಾ ಹೋದಂತೆ ನಾನು ಬರಕೋತಾ ಹೋಗ್ತಿದ್ದೆ. ಸ್ವತಃ ಬರೆಯಕ್ಕೆ ಬರದೇ ಇದ್ದರೂ ಗಂಡನಿಗೆ ಸಹಾಯವಾಗಬಹುದಲ್ಲ.” ತಂಗಿ ನಿರ್ಮಲನ ಗಂಡನ ಸ್ವಭಾವ ಉತ್ತಮವಾದದ್ದು, ಹೇಮಂತ ಗ್ರೇಟ್; ಇವಳ ಗಂಡನ ಬಗ್ಗೆಯೇನಾದರೂ ಬೇಸರವಿದೆಯೇ? ಇರಬಹುದು, ಅಂತೂ ತನಗೆ ದೊರಕಿದ ವಸ್ತುವೊಂದನ್ನುಳಿದು ಮಿಕ್ಕದ್ದೆಲ್ಲ ಶ್ರೇಷ್ಠವೆನ್ನಿಸುವುದು ಮಾನವ ಸ್ವಭಾವವಿರಬೇಕು. ಯಾರನ್ನೋ ಗಂಡನನ್ನಾಗಿ ಪಡೆದು ಅರ್ಧ ದಾರಿ ತುಳಿದ ಮೇಲೆ ಅವನನ್ನು ಆಗಿದ್ದರೆ ಚೆನ್ನಾಗಿತ್ತೇನೋ, ಇವನನ್ನು ಆಗಿದ್ದರೆ ಒಳ್ಳೆಯದಾಗುತ್ತಿತ್ತೇನೋ ಎಂದು ಎಲ್ಲರಿಗೂ ಅನ್ನಿಸುತ್ತದೆಂದು ಕಾಣುತ್ತದೆ. ಆದರೆ ಅರ್ಧದಾರಿ ಬಂದ ಮೇಲೆ ಹಿಂತಿರುಗುವಂತಿಲ್ಲ, ಜೀವನವೆಂಬುದು ಕಿರಿದಾದ ಸೇತುವೆ; ಜೀವನದ ಮೋಟರನ್ನು ತಿರುಗಿಸಿಕೊಂಡು ಹಿಂದೆ ಸಾಗಲು ಸಾಧ್ಯವಾಗುವುದಿಲ್ಲ; ಸೇತುವೆಯ ಆ ತುದಿಗೆ ಹೋಗಿ ಹಿಂದೆ ಬರುವಂತಿಲ್ಲ.
  ಮಾಲಿನಿ ಏನೇನೋ ಮಾತಾಡಿದಳು; ನಳಿನಿ ಏನೋ ಮಾತಾಡಿದಳು, ಕೊನೆಗೂ ನಳಿನಿಯ ನಿರುತ್ಸಾಹ ಮಾಲಿನಿಯ ಗಮನಕ್ಕೆ ಬಂತೇನೋ.“ಏನೇ ನಳಿನಿ, ಹೀಗಾಗಿಬಿಟ್ಟಿದ್ದೀಯಲ್ಲ. ಸೊರಗಿ ಹೋದ ಹಾಗೆ ಕಾಣಿಸ್ತೀ” ಎಂದಳು.
“ಎಂಥದೂ ಇಲ್ಲ. ನನಗೇನಾಗಿದೆ ಧಾಡಿ.”
“ನಮ್ಮಮ್ಮನ ಮನೆಗೆ ಬಾರೆ. ನಿಧಾನವಾಗಿ ಕೂತು ಹರಟೆ ಹೊಡೆಯೋಣ ನಿಮ್ಮ ಮನೆ ಅಡ್ರೆಸ್ ಕೊಡು. ಒಂದಿನ ಬಿಡುವಾಗಿ ಬರ್ತೀನಿ.” ಎನ್ನುತ್ತ ತನ್ನ ಪರ್ಸಿಂದ ಒಂದುಚೂರು ಕಾಗದವನ್ನು ಯಾವುದರಿಂದಲೋ ಹರಿದು, ತನ್ನ ತಾಯಿಯ ಮನೆಯ ವಿಳಾಸ, ಸಕಲೇಶಪುರದ ತನ್ನ ವಿಳಾಸ ಕೊಟ್ಟು, ನಳಿನಿಯ ಅಡ್ರೆಸ್ ತಾನೇ ಬರೆದುಕೊಂಡಳು.
ಈಗಲೇ ಅಮ್ಮನ ಮನೆಗೆ ಬಾರೆಂದು ಎಲ್ಲಿ ಗಂಟು ಬೀಳುವಳೋ ಎಂದು ಹೆದರಿದ್ದ ನಳಿನಿಗೆ ಹಾಗೇನಾಗದ್ದರಿಂದ ಬಿಡುಗಡೆಯ ಭಾವನೆ ಬಂತು. ಅಂತೂ ಕೊನೆಗೊಮ್ಮೆ ಅವಳಿಂದ ತಪ್ಪಿಸಿಕೊಂಡಾಗ ತಾನೆಲ್ಲಿಗೆ ಹೊರಟಿದ್ದೆ ಎಂಬುದೇ ನೆನಪಿಗೆ ಬರದಾಗಿತ್ತು. ಅಷ್ಟರಮಟ್ಟಿಗೆ ಸುರಿದಿತ್ತು ಮಾಲಿನಿಯ ಮಾತಿನ ಬಿರುಮಳೆ. ಒಂದು ಕ್ಷಣ ನೆನಪಿಸಿಕೊಂಡು ಪೊಲೀಸ್ ಠಾಣೆಯ ಕಡೆ ನಡೆದಳು. ಆದರೆ ಮನೆಯಿಂದ ಹೊರಟಾಗ ಅವಳಲ್ಲಿದ್ದ ಉದ್ವೇಗ ಈಗ ಕಡಿಮೆಯಾಗಿತ್ತೆಂದು ಕಾಣುತ್ತದೆ, ಅದಕ್ಕೆ ಅನುಗುಣವಾಗಿ ಎಂಬಂತೆ ಹೆಜ್ಜೆಗಳು ಮೆದುವಾಗತೊಡಗಿದ್ದವು.
ನಳಿನಿಯಂತಹ ಹೆಂಗಸರು ಪೊಲೀಸ್ ಠಾಣೆಗೆ ಬರುವುದು ಅಪರೂಪವೇನೋ. ಅದಕ್ಕೇ ಠಾಣೆಯ ಜನರೆಲ್ಲ ಇವಳನ್ನೇ ಆಶ್ಚರ್ಯದಿಂದ ಎಂಬಂತೆ ನೋಡಿದರು. ಅಲ್ಲಿದ್ದ ಪೇದೆಯೊಬ್ಬನನ್ನು ಕುರಿತು ಇನ್ಸ್‍ಪೆಕ್ಟರ್ ಎಲ್ಲಿರುತ್ತಾರೆ ಎಂದು ಕೇಳಿ ತಿಳಿದು ಅಲ್ಲಿಗೆ ಹೋದಳು. ಯಾವುದೋ ಪೇದೆಯೊಡನೆ ಗಟ್ಟಿಯಾಗಿ ಮಾತಾಡುತ್ತಿದ್ದ ಎಸ್.ಐ. ಇವಳನ್ನು ಕಂಡೊಡನೆ ತನ್ನ ಧ್ವನಿಯನ್ನು ಸಂಪೂರ್ಣವಾಗಿ ಕುಗ್ಗಿಸಿದ್ದರು. “ಹ್ಞೂ ಹೋಗು” ಅವನಿಗೆ ಆಜ್ಞಾಪಿಸಿ ಇವಳಕಡೆ ತಿರುಗಿ “ಕುತ್ಕೊಳೀಮ್ಮ. ಏನು ಬೇಕಾಗಿತ್ತು?”ಎಂದು ಬಹಳ ಮೃದುವಾಗಿ ಪ್ರಶ್ನಿಸಿದರು. ಕ್ಷಣದ ಹಿಂದೆ ಅವರು ಎಸೆದಿದ್ದ ಸಿಡಿಲುಗಳೆಲ್ಲ ಈಗ ಮೊಗ್ಗುಗಳಾಗಿ ರೂಪ ಬದಲಾಯಿಸಿಬಿಟ್ಟಿದ್ದವು. ಅವಳ ಆಗಮನದಿಂದ ಕಾಠಿನ್ಯ, ಕರ್ಕಶತೆ, ರೌದ್ರಗಳು ಠಾಣೆಯಿಂದ ಪಲಾಯನಮಾಡಿ ಎಲ್ಲ ಜಿಂಕೆಯ ಸ್ವಭಾವವನ್ನು ಪಡೆದಂತೆ ತೋರಿತು.
  ನಳಿನಿ ಬಹು ಮೆದುವಾಗಿ ತನ್ನ ಸಮಸ್ಯೆಯನ್ನು ವಿವರಿಸತೊಡಗಿದಳು. ಅವಳ ಧ್ವನಿಗೆ ಅನುಗುಣವಾಗಿಯೇ ಎಸ್.ಐ. ತಮ್ಮ ಧ್ವನಿಯನ್ನು ಹೊಂದಿಸಿಕೊಂಡು ಪ್ರಶ್ನೆಗಳನ್ನು ಕೇಳಿದರು. ಎಲ್ಲವನ್ನು ತಿಳಿಸದುಕೊಂಡ ಅವರ ಮುಖದಮೇಲೆ ಮುಗುಳ್ನಗೆ ಮೂಡಿತ್ತು. “ಅವಸರ ಮಾಡಬೇಡೀಮ್ಮ. ನಿಮ್ಮಂಥ ಸಂಭಾವಿತರ ಮನೆಯ ವಿಷಯ ಪೊಲೀಸ್ ಠಾಣೆ ಸೇರೋದಕ್ಕೆ ಮುಂಚೆ ತುಂಬ ಯೋಚನೆ ಮಾಡಿರಬೇಕು”ಎಂದು ಅವಳಿಗೆ ಬುದ್ಧಿವಾದ ಹೇಳಿದರು. ಈಗ ಅವರ ಮುಖವೂ ಗಂಭೀರವಾಗಿತ್ತು, ಹೇಮಂತ ಹೋಗುವ ದಿನ ಬರೆದಿಟ್ಟಿದ್ದ ಚೀಟಿಯನ್ನು ನಳಿನಿ ಮೇಜಿನ ಮೇಲಿಟ್ಟಿದ್ದಳು; ಅದನ್ನೇ ನೋಡುತ್ತ “ಪಾಪ, ಏನು ಕಷ್ಟವಿದೆಯೋ ಅವರ ಮನಸ್ಸಿಗೆ, ಹೋಗಿದ್ದಾರೆ. ಅದಕ್ಕೇಕೆ ಯೋಚನೆ ಮಾಡ್ತೀರಿ, ಅಂಥಾದ್ದೇನೂ ಆಗಿರಲ್ಲ ಬಿಡಿ. ನೀವೀಗ ದೂರು ಅಂತ ಕೊಟ್ಟರೆ, ಅದನ್ನೆಲ್ಲ ನಾನಾ ಕಡೆಗಳಿಗೆ ನಾನು ತಿಳಿಸಬೇಕು. ಅದು ಕಷ್ಟ ಅಂತಲ್ಲ. ಆದರೆ ಗುಮಾನಿಯಿಂದ ನಮ್ಮ ಜನ ನೋಡ್ತ ನಿಮ್ಮೆಜಮಾನ್ರನ್ನ ಪ್ರಶ್ನಿಸಿದರೆ ಅವರ ಮನಸ್ಸಿಗೆ ಏನಾಗಬಹುದು ಯೋಚನೆ ಮಾಡಿ. ಈ ಪ್ರಚಾರದಿಂದ ಮನೆ ವಿಷಯ ಬಯಲಾದರೆ ಆಮೇಲೆ ರಿಪೇರಿ ಮಾಡೋದು ಕಷ್ಟ.ನಮ್ಮ ಮನೇಲೂ ಇಂಥದ್ದೆಲ್ಲ ಇರತ್ವೆ, ಆದರೇನು ಹೊಂದಿಕೋಬೇಕು. ಹೇಗೂ ಇನ್ನು ಹತ್ತು ದಿನ ರಜ ಎಕ್ಸ್‍ಟೆಂಡ್ ಮಾಡಿದ್ದಾರೆ ಅಂದ್ರಲ್ಲ. ಅಷ್ಟು ದಿನ ಕಾಯಿರಿ ಆಗಲೂ ಅವರು ಬರದಿದ್ದರೆ ಮುಂದುವರಿಯೋರಂತೆ, ಆಗಬಹುದಾ?” ಎಂದು ಬುದ್ಧಿವಾದ ಹೇಳಿದಾಗ ನಳಿನಿ ಕೋಲೆ ಬಸವನಂತೆ ಗೋಣುಹಾಕಿ ಎದ್ದು ನಿಂತು “ಥ್ಯಾಂಕ್ಸ್, ಸರ್” ಎಂದು ಹೇಳಿ ಹೊರಬಂದಳು.
ಅವಳ ಮನಸ್ಸು ತಿಳಿಯಾಗಿತ್ತು ಎಂದೇನೂ ಅಲ್ಲ. ಅವರು ಹೇಳಿದಂತೆ ಕಂಪ್ಲೇಂಟ್ ಕೊಡುವುದಕ್ಕೆ ತಕ್ಕಂತೆ ಪರಿಸ್ಥಿತಿ ಇನ್ನೂ ಪಕ್ವವಾಗಿರಲಿಲ್ಲವೆಂದು ಗೋಚರಿಸಿತು. ಏನೋ ಮಾಡುವುದಕ್ಕೆ ಹೊರಟಿದ್ದೆನಲ್ಲ ಎಂದು ಮುಜುಗರವಾಯಿತು. ಪೊಲೀಸ್ ಕಂಪ್ಲೇಂಟ್‍ ಕೊಡುವುದರ ಜತೆಗೆ, ಯಾವುದಾದರೂ ಪೇಪರ್‍ನಲ್ಲಿ ಅವರ ಫೋಟೋ ಹಾಕಿಸಿ ‘ಕಾಣೆಯಾಗಿದ್ದಾರೆ’ ಎಂದು ಜಾಹೀರಾತು ಕೊಟ್ಟುಬಿಡಲೇ ಎಂಬಷ್ಟು ಮಟ್ಟಿಗೆ ಅವಳ ದುಮ್ಮಾನ ತೀವ್ರವಾಗಿತ್ತು. ಹೇಮಂತನ ಬಗ್ಗೆ ಕೋಪ ಬಂದಿತ್ತು. ಹಾಗೇನಾದರೂ ಮಾಡಿದ್ದರೆ, ಅವನ ಚಿತ್ರ ಪೇಪರ್‍ನಲ್ಲಿಕಂ ಡು ಯಾವುದೋ ಊರಿನ ಜನ ಮಾರ್ಕೆಟ್‍ನಲ್ಲಿಯೋ ರೈಲ್ವೆ ಸ್ಟೇಷನ್ನಿನಲ್ಲಿಯೋ ಬಸ್‍ಸ್ಟಾಂಡಲ್ಲಿಯೋ ಸಿನಿಮಾ ಹತ್ತಿರವೋ ಹೇಮಂತನನ್ನು ಗುರುತಿಸಿ; ಅವನು ಏನು ಮಾಡಿ ಓಡಿಬಂದಿದ್ದಾನೋ ಎಂದು ಸುತ್ತ ಘೇರಾಯಿಸಿ ಎಳೆದುಕೊಂಡು ಪೊಲೀಸ್ ಠಾಣೆಗೆ ಒಯ್ಯುವ ದೃಶ್ಯ; ಅಲ್ಲಿ ಇನ್ಸ್‍ಪೆಕ್ಟರ್ ಮುಂದೆ ಬಲಿಗೆ ಸಿದ್ಧವಾದ ಕುರಿಯ ಹಾಗೆ ತಲೆ ಬಾಗಿ ನಿಂತು ಇರುವುದಕ್ಕಿಂತ ಸಾಯುವುದೇ ಮೇಲು ಎಂಬಂತೆ ಒಳಗೊಳಗೇ ದುಃಖದ ಹಗೇವಿನಲ್ಲಿ ಬೇಯುವ ಹೇಮಂತನ ಮುಖದ ದೃಶ್ಯ ಅವಳ ಕಣ್ಣು ಮುಂದೆ ಬಂದು “ಅಯ್ಯೋ ದೇವರೇ, ಎಂಥ ಕೆಲಸ ಮಾಡಿಬಿಡ್ತಿದ್ದೆ” ಎಂಬ ಭಾವನೆಯಿಂದ ಕಂಠ ಬಿಗಿದು ಬಂದು ಒತ್ತಿದ್ದ ಕಣ್ಣಿನಿಂದ ಬಿದ್ದ ಹನಿ ಮುತ್ತು ಫುಟ್‍ಪಾತಿನ ಮಣ್ಣ ಮೇಲೆ ಫಳಕ್ಕನೆ ಬಿದ್ದು ಹರಡಿಕೊಂಡಿತು.
* * *
ಇಲ್ಲಿ ಯಾರಾದರೂ ಪರಿಚಯದವರು ಸಿಕ್ಕಿಬಿಟ್ಟಾರೆಂಬ ಗಾಬರಿಯಿಂದೆಂಬಂತೆ ಮಾರನೆಯ ಬೆಳಗ್ಗೆಯೇ ಪ್ರಾತರ್ವಿಧಿಗಳನ್ನು ಮುಗಿಸಿದ ಹೇಮಂತ ಗಂಟುಮೂಟೆ ಕಟ್ಟಿ ಮುಂದೆ ಹೊರಡಲು ಅನುವಾದ. ಇನ್ನೂ ಹತ್ತು ದಿನಗಳ ಕಾಲ ರಜೆ ಹಾಕಿಯಾಗಿತ್ತು. ಆಮೇಲೇನು? ನೋಡೋಣ. ಇನ್ನೊಂದೆರಡು ದಿನ, ಮನಸ್ಸು ಸ್ವಾಸ್ಥ್ಯಕ್ಕೆ ಬರಬಹುದು. ಈಗಾಗಲೇ ಕೊಂಚಮಟ್ಟಿಗೆ ಹಗುರವಾಗಿದೆಯೆನ್ನಿಸಿ, ಆಮೇಲೆ ಊರಿಗೆ ಹೋಗಿಬಿಡುವುದು. ರಜ ಮುಂದುವರಿಸಿರುವ ಅವಧಿ ಪೂರ್ತಿ ಓಡಾಡಬೇಕೆಂದು ಎಲ್ಲಿದೆ? ಅಲ್ಲದೆ ಎಷ್ಟು ದಿವಸವಾದರೂ ಓಡಾಡುತ್ತಿರಲು ಸಾಧ್ಯವೇ? ಹಣ ಬೇರೆ ಬೇಕಲ್ಲ. ಸಂಪಾದನೆ ಮಾಡುವಾಗಲೇ ಜೀವನಕ್ಕೆ ಸಾಕಾಗದಿರುವಾಗ, ಸುಮ್ಮನೆ ಕೂತರೆ ಗತಿ. ಎಷ್ಟು ದಿನ ಅಂತ ರಜ ಹಾಕಲು ಸಾಧ್ಯ. ಇರುವ ರಜ ಮುಗಿದ ಮೇಲೂಗೈರುಹಾಜರಾದರೆ,ಕಾನೂನು ಪ್ರಕಾರ ಕ್ರಮ ಕೈಗೊಂಡು ಕಂಪೆನಿ ತನ್ನನ್ನು ಕೆಲಸದಿಂದ ತೆಗೆದು ಹಾಕಬಹುದು. ಆಮೇಲೆ ಗತಿ. ಹಾಗೆಲ್ಲ ಮಾಡಿಕೊಳ್ಳುವುದಕ್ಕೆ ತನಗೆ ಆಗಿರುವುದಾದರೂ ಏನು. ನಂದಿನಿಯ ಸಾವಿಗೆ ತಾನು ಸುತರಾಂ ಕಾರಣವಲ್ಲವೆಂದು ಹೇಳಲಾಗದೇನೋ, ಆದರೆ ನೇರವಾಗಿ ಅಂಥದ್ದಕ್ಕೆ ಆಸ್ಪದವೀಯುವ ಕೆಲಸ ತನ್ನಿಂದಾಗಿಲ್ಲವಲ್ಲ. ತಾನೇಕೆ ಹೆದರಬೇಕು. ಒಮ್ಮೆ ತುಮಕೂರಿಗೂ ಹೋಗಿ ನಂದಿಯ ಅಣ್ಣ-ತಾಯಿ ಇವರನ್ನು ಕಂಡು ತನ್ನ ಸಂತಾಪ ಸೂಚಿಸಿ, ಅವಳ ಅಣ್ಣನ ಕೋಪಕ್ಕೆ ಕಾರಣವಿಲ್ಲ ಎಂದು ವಿವರಿಸಿ ಬಂದರಾಯಿತು. ನಂದಿನಿ ಆತ್ಮಹತ್ಯೆ ಮಾಡಿಕೊಂಡ ವಿಷಯವಂತೂ ತನ್ನ ಹೃದಯದ ಒಂದು ಭಾಗವನ್ನು ಕತ್ತರಿಸಿತ್ತು ನಿಜ. ಆದರೇನು ಮಾಡುವುದು?
ಬಾಗಲಕೋಟೆಯಲ್ಲಿ ಮೂರು ದಿನಗಳೇ ಉಳಿದಂತಾಯಿತು.ಆದರೆ ಅದರ ಖರ್ಚೆಲ್ಲವನ್ನು ಹಿರೇಮಠ ಮಠದವರ ಕೈಯಲ್ಲಿ ಕೊಡಿಸಿದ್ದ. ಸುಮಾರು ನೂರೋ ನೂರಿಪ್ಪತ್ತೋ ಆಗುತ್ತಿತ್ತೇನೋ. ಅಲ್ಲದೆ ನೂರೈವತ್ತು ರೂಪಾಯಿ ದಕ್ಷಿಣೆ ಬೇರೆ ಕೊಡಿಸಿದ್ದಾರೆ. ಒಟ್ಟಲ್ಲಿ ಕನಿಷ್ಠವೆಂದರೆ ಇನ್ನೂರೈವತ್ತು ರೂಪಾಯಿಯಷ್ಟು ಲಾಭವಾಯಿತು. ಇನ್ನೊಂದೆರಡು ದಿನ ಪ್ರವಾಸ ಮಾಡಲು ಅದರಿಂದ ಅನುಕೂಲವಾಯಿತಲ್ಲ. ಹೌದು. ಇನ್ನು ಮುಂದಿನದು ಪ್ರವಾಸವೇ. ಹೃದಯದ ಬಡಿತ ಪೂರ್ತಿ ನಾರ್ಮಲ್‍ಗೆ ಬರುವವರೆಗೆ ಪ್ರಕೃತಿಯ ಮಡಿಲಲ್ಲಿ ಹಾಯಾಗಿದ್ದು ಹೋಗಿಬಿಡೋಣ.
ಬಸ್‍ಸ್ಟಾಂಡಲ್ಲಿ ಕಂಡದ್ದು ಹುಬ್ಬಳ್ಳಿಯ ಬಸ್. ಅದನ್ನೇರಿ ಕುಳಿತ. ಸ್ವಲ್ಪ ಕಾಲದಲ್ಲಿಯೇ ಅದು ಹೊರಟು ಬಿಸಿಲು ಹೆಚ್ಚಾದಂತೆ ಮಿರಮಿರ ಮಿಂಚುತ್ತಿದ್ದ ಟಾರು ರಸ್ತೆಯ ಮೇಲೆ ಓಡತೊಡಗಿತ್ತು. ತಾನು ಬೆಂಗಳೂರು ದಿಕ್ಕಿನಲ್ಲಿ ಹೋಗುತ್ತಿದ್ದುದರ ಅರಿವಾದಾಗ ಹೇಮಂತನ ಮುಖದ ಮೇಲೆ ನಗೆ ಮೂಡಿತ್ತು. ಇನ್ನು ಕೆಲವೇ ದಿನ, ಅಲ್ಲಿಗೇ ಹೋಗುವೆ, ತಾನು ವಾಪಸಾದರೆ ನಳಿನಿ ಹೇಗಾಡಬಹುದು. ಅವಳ ಕೋಪದ ಸ್ವರೂಪವನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದ. ಹೇಗೆ ಅವಳನ್ನು ಸಮಾಧಾನ ಮಾಡಬಹುದು? ಕವಿತಾ ಹಾಕುವ ಪ್ರಶ್ನೆಗಳಿಗೆ ಉತ್ತರಿಸುವುದು ತನ್ನಿಂದ ಸಾಧ್ಯವಾಗುವುದೇ? ಅವಳಿಗೆ ಹೋಗುವಾಗ ಏನನ್ನಾದರೂ ತೆಗೆದುಕೊಂಡು ಹೋಗಬೇಕು. ಅವರಿಬ್ಬರೂ ತನ್ನ ಬಗ್ಗೆ ವಿಚಾರ ತಿಳಿಯದೆ ಹೇಗಿರಬಹುದು? ನಳಿನಿಯಂತೂ ತನ್ನ ಆಲೋಚನೆಯಲ್ಲಿಯೇ ಸೊರಗಿರಬಹುದೇನೋ. ರಜ ದಿನಗಳಲ್ಲಿಯಾದರೂ ತನ್ನೊಡನೆ ಕುಳಿತು ಊಟ ಮಾಡಬೇಕೆಂದು ತನಗಾಗಿ ಕಾಯುತ್ತಿದ್ದಳು. ಈಗ ಏನೂ ಹೇಳದೆ ಬಂದಿರುವ ತನ್ನ ಬಗ್ಗೆ ಯೋಚನೆಗಳ ಸಿಂದಬಾದ್ ಮುದುಕ ಅವಳ ಹೆಗಲೇರಿ ನಜ್ಜುಗುಜ್ಜಾಗಿಸಲು ಪ್ರಯತ್ನಿಸುತ್ತಾನೆ. ಕಾಗದವನ್ನಾದರೂ ಬರೆಯಬಹುದಿತ್ತೇನೋ. ಇನ್ನೇನು ಒಂದೆರಡು ದಿನಗಳಲ್ಲಿ ಮನೆಗೇ ಹೋಗುತ್ತೇನೆ. ಇನ್ನೇಕೆ ಕಾಗದ? ಕಾಗದ ತಲುಪುವ ವೇಳೆಗೆ ತಾನೇ ಹೋಗಿರುತ್ತೇನೆಂದು ಕಾಣುತ್ತದೆ. ಹಾಗೆಯೇ ಜೋಂಪು ಹತ್ತಿದ ಹೇಮಂತನಿಗೆ ಎಚ್ಚರವಾದದ್ದು ಬಸ್ಸು ಹುಬ್ಬಳ್ಳಿಯಲ್ಲಿ ಬಂದು ನಿಂತಾಗಲೇ.
ಲಗುಬಗೆಯಿಂದ ಇಳಿದು ವೇಳೆ ನೋಡಿಕೊಂಡ. ಆಗಲೇ ಒಂದು ಗಂಟೆಯಾಗಿತ್ತು. ಅಲ್ಲಿಯೇ ಇದ್ದ ಬಸ್‍ಸ್ಟಾಂಡ್ ಹೋಟೆಲಿನಲ್ಲಿ ಊಟ ಮುಗಿಸೋಣವೆಂದು ಹೋದ. ಮುಖ,ಕೈಗಳನ್ನು ತೊಳೆದು ಮೂಲೆಯೊಂದರಲ್ಲಿ ಕೂತು ಹೊಟ್ಟೆ ತುಂಬಿಸಿಕೊಂಡು ಹೋಟೆಲಿಂದ ಹೊರಬಂದ ಮೇಲೆ ಅವನಿಗೆ ಎದುರಾದದ್ದು ಮುಂದೆಲ್ಲಿಗೆ ಹೋಗುವುದು ಎಂಬ ಪ್ರಶ್ನೆ. ಸಾವಕಾಶವಾಗಿ ಬಸ್‍ಗಳ ವೇಳಾಪಟ್ಟಿಯನ್ನು ನೋಡುತ್ತ ನಿಂತ. ಕೈಗಡಿಯಾರ ನೋಡಿಕೊಂಡ ಒಂದೂವರೆ ಗಂಟೆ ಮಧ್ಯಾಹ್ನ. ಹೆಚ್ಚು ಹೊತ್ತು ಕಾಯದೆ ಹಾಗೆ ಹೋಗಬೇಕಾದರೆ ಇಷ್ಟರಲ್ಲಿಯೇ ಹೊರಡುವ ಬಸ್ ಯಾವುದಿದೆ, ಯಾವ ಊರಿಗೆ ಎಂದು ಪರಿಶೀಲಿಸುತ್ತ ನಿಂತ. ಎರಡೂ ಕಾಲಿಗೆ ಕಾರವಾರಕ್ಕೆ ಎಕ್ಸ್‍ಪ್ರೆಕ್ಸ್ ಬಸ್ ಇತ್ತು. ವಿಚಾರಣೆಯ ಕೌಂಟರಿಗೆ ಹೋಗಿ ಕಾರವಾರದ ಎಕ್ಸ್‍ಪ್ರೆಕ್ಸ್‍ಗೆ ಸೀಟು ರಿಸರ್ವ್ ಮಾಡುತ್ತಾರೆಯೇ ಎಂದು ವಿಚಾರಿಸಿದ. ಆ ಗಾಡಿ ಬೆಳಗಾವಿಯಿಂದ ಬರುವುದೆಂದೂ ಗಾಡಿಯಲ್ಲಿಯೇ ಟಿಕೆಟ್ ಕೊಡುವುದಾಗಿಯೂ ಉತ್ತರ ಬಂತು. ಅದರಲ್ಲಿ ಹೋಗುವುದು ಎನಿಸಿ, ನೆನಪಿಗೆ ಬಂದು ಗೋಕರ್ಣಕ್ಕೆ ನೇರ ಬಸ್ಸಿದೆಯೇ ಎಂದು ವಿಚಾರಿಸಿದ. ನೇರವಾಗಿ ಗೋಕರ್ಣಕ್ಕೆ ಹೋಗುವ ಬಸ್ಸು ಬೆಳಿಗ್ಗೆಯೇ ಹೋಯಿತೆಂದೂ ಕಾರವಾರದ ಬಸ್ಸಲ್ಲಿ ಹೋಗಿ ಅಂಕೋಲದಲ್ಲಿಳಿದರೆ ಮುಂದೆ ಬೇಕಾದಷ್ಟು ಬಸ್ ಸೌಕರ್ಯವಿರುವುದಾಗಿಯೂ ತಿಳಿದು ಬಂತು.ಅದೇ ಸರಿಯಾದ ಬಸ್ ಹಾಗಾದರೆ, ಗೋಕರ್ಣಕ್ಕೆ ಹೋಗಿಬಿಡೋಣ. ಹೇಗಿದ್ದರೂ ಆ ಊರು ನೋಡಿಲ್ಲ ಎಂದು ನಿರ್ಧರಿಸಿ ಬೆಂಚಿನ ಮೇಲೆ ಕೂತ.
ಹತ್ತು ಹದಿನೈದು ನಿಮಿಷಗಳಾದ ಮೇಲೆ ಇವನು ವಿಚಾರಿಸಿಕೊಂಡಿದ್ದ ಟ್ರಾಫಿಕ್ ಸೂಪರ್‍ವೈಸರ್ ’ಕಾರವಾರದ ಗಾಡಿ ಬಂದಿದೆ ನೋಡಿ’ ಎಂದು ಎಚ್ಚರಿಸಿದಾಗ ಹೇಮಂತ ಆ ಕಡೆ ಸೂಟ್‍ಕೇಸ್ ಹಿಡಿದು ಹೊರಟ. ಹುಬ್ಬಳ್ಳಿಗೆಂದು ಬಂದ ಜನ ಇಳಿದಿದ್ದರು; ಇಲ್ಲಿಂದ ಹೋಗುವ ಕೆಲವು ಮಂದಿ ಕಂಡಕ್ಟರನ ಮುಂದೆ ನಿಂತು ಟಿಕೇಟು ಪಡೆಯುತ್ತಿದ್ದರು. ಹೆಚ್ಚು ರಷ್ ಇರಲಿಲ್ಲ. ಸೆಮಿಲಕ್ಸುರಿ ಗಾಡಿ ಬೇರೆ. ದರ ಜಾಸ್ತಿಯೆಂದು ಸಾಮಾನ್ಯರು ಈ ಬಸ್ ಹತ್ತುವುದಿಲ್ಲವೇನೋ. ಅಂತೂ ಅಂಕೋಲಕ್ಕೆ ಟಿಕೆಟ್ ಪಡೆದು ಕೊಂಡು ಬಸ್ ಏರಿ ಖಾಲಿ ಜಾಗ ಯಾವುದೆಂದು ಪರಿಶೀಲಿಸುತ್ತ, ಅಕ್ಕಪಕ್ಕದವರನ್ನು ವಿಚಾರಿಸಿ, ಯಾರೂ ಕೂತಿರದಿದ್ದ ಒಂದು ಸೀಟಿನಲ್ಲಿ ಕುಳಿತುಕೊಂಡ.
ಎರಡೂಕಾಲು ಸಮೀಪಿಸಿತು.ಡ್ರೈ ವರ್ ತನ್ನ ಆಸನವೇರಿ ಬಂದು ಹಾರನ್ ಮಾಡಿ, ಕೆಳಗಿದ್ದ ಪ್ರಯಾಣಿಕರು ಮೇಲೇರಲು ಸೂಚನೆ ಕೊಟ್ಟ. ಇದುವರೆಗೆ ಕೆಳಗಿದ್ದವರು ಲಗುಬಗೆಯಿಂದ ಒಳ ಸೇರಿದರು,ಕೊಂಚ ದೂರ ಹೋಗಿದ್ದವರು ಆತುರಾತುರವಾಗಿ ಬಂದರು. ಎಲ್ಲ ಪ್ರಯಾಣಿಕರೂ ಬಂದರೆಂಬುದನ್ನು ಖಚಿತಪಡಿಸಿಕೊಂಡ ಕಂಡಕ್ಟರ್ ಬಸ್ ಹೊರಡಲು ಶಿಳ್ಳೆ ಊದುವ ಹೊತ್ತಿಗೆ ಕೊನೆಯಲ್ಲೊಬ್ಬ ಏದುಸಿರು ಬಿಡುತ್ತ ಬಂದು ಕೈ ಚಾಚಿದ. ಬಾಗಿಲು ತೆರೆದಾಗ ಒಳಕ್ಕೆ ನುಸುಳಿ ತನ್ನ ಸೀಟಿನ ಕಡೆ ಹೋಗುವಾಗ ಸಹಜವಾಗಿ ಅವನ ಕಡೆಗೆ ಹೇಮಂತ ನೋಡಿದ.
ಈತನನ್ನೆಲ್ಲೋ ನೋಡಿದ್ದೇನಲ್ಲ ಎನ್ನಿಸಿತು. ಕೆಡುಕೆನಿಸಿತು ಕೂಡ. ಇನ್ನೇನಾಗಲಿದೆಯೋ; ಆದುದಾಗಲಿ ತಾನೇನು ಮಾಡಿದ್ದೇನೆಂಬ ಧೈರ್ಯವೂ ಬಂತು. ಆ ಧೈರ್ಯ ಬಂದುದರಿಂದಲೇ ಎಂಬಂತೆ ಅವನತ್ತ ಮತ್ತೊಮ್ಮೆ ನೋಡಿದ. ಈಗ ಅವನೂ ಹೇಮಂತನ ಕಡೆ ನೋಡಿ ಕಣ್ಣರಳಿಸಿ “ಹೇಮಂತ್!” ಎಂದು ಆಶ್ಚರ್ಯ ಸೂಚಿಸಿ ಇವನೆಡೆಗೆ ಬಂದ. “ಎಲ್ಲಿಗೆ?” ಎಂದ. ಗೋಕರ್ಣಕ್ಕೆ ಎಂದಾಗ, “ಹಾಗಾದರೆ ಅಂಕೋಲದಲ್ಲಿ ಇಳಿಯುವವರಲ್ಲವೇ?” ಎಂದು ಹೇಳಿ “ನನ್ನ ಊರೇ ಅಂಕೋಲ” ಅಂದ. ತನ್ನ ಪಕ್ಕದ ಜಾಗೆಯಲ್ಲಿ ಕೂತ ಪ್ರಯಾಣಿಕರೊಬ್ಬರನ್ನು ಕೇಳಿಕೊಂಡು ಹೇಮಂತ ಕೂತಿದ್ದ ಜಾಗಕ್ಕೆ ವರ್ಗಾಯಿಸಿ, ಅವನನ್ನು ತನ್ನ ಪಕ್ಕದಲ್ಲಿಯೇ ಬಂದು ಕೂರಲು ಕೇಳಿದ್ದ. ಆಯಿತು ಎಂದುಕೊಂಡು ಅವನ ಜೊತೆಯ ಪ್ರಯಾಣಕ್ಕೆ ಸಿದ್ಧವಾದವನಂತೆ ತುಟಿ ಕಚ್ಚುತ್ತ ಹೇಮಂತ ಬಂದು ಕೂತ.
ಆದರೆ ಅವನು ಯಾರೆಂದು ತನಗೆ ನೆನಪಿಗೆ ಫಕ್ಕನೆ ಬರುತ್ತಿಲ್ಲ; ಆತನೇನೋ ಕಂಡ ತಕ್ಷಣವೇ ತನ್ನ ಹೆಸರು ಹಿಡಿದು ಕರೆದ ಎನ್ನಿಸಿ ಕಸಿವಿಸಿಯಾಯಿತು. ಪಕ್ಕದಲ್ಲಿ ಬಂದು ಕೂತಾಗ “ಏನು ಗೋಕರ್ಣಕ್ಕೆ, ಯಾತ್ರೆಯಾ?” ಎಂದು ಇವನೆಡೆಗೆ ತಿರುಗಿ ನಕ್ಕ. “ಸುಮ್ಮನೆ”ಎಂದ. ಹೇಮಂತ ಯಾರಿವನು ಎಂದು ನೆನಪಿಸಿಕೊಳ್ಳಲು ಅವನ ಮನಸ್ಸೀಗ ತೊಡಗಿತ್ತು. ಇವನ ಯೋಚನಾಪರತೆಯನ್ನು ಕಂಡ ಆ ವ್ಯಕ್ತಿ ಇವನ ಸಮಸ್ಯೆಯನ್ನು ಅರ್ಥಮಾಡಿಕೊಂಡವನಂತೆ “ನಾನಾರು, ನೆನಪು ಬರಲಿಲ್ಲವಾ?” ಎಂದ. ಹೇಮಂತ ಏನೆಂದಾನು, “ಹಾಗೇನಿಲ್ಲ” ಎಂದು ತಡವರಿಸಿದ.
“ಗೊತ್ತಾಯಿತು ಬಿಡಿರಿ ನೆನಪು ಉಳಿದಿರಲಿಕ್ಕಿಲ್ಲ ಬಹಳ ದಿನವಾಯಿತಲ್ಲ, ನೋಡಿ. ನಾನೂ ಬೆಂಗಳೂರಿನಿಂದ ಊರಿಗೆ ಬಂದು ಎರಡು ವರ್ಷಗಳೇ ಆದುವು.”
ಅಂದರೆ ಈತನನ್ನು ಬೆಂಗಳೂರಲ್ಲಿ ಕಂಡದ್ದು ಖಚಿತವಾದಂತಾಯಿತು. ನೆನಪಿಸಿಕೊಳ್ಳುತ್ತ ಹೋದಂತೆ ತಟ್ಟಕ್ಕನೆ ಹೊಳೆಯಿತು. ಶಶಿಧರ್ ಭಟ್. ಬೆಂಗಳೂರಲ್ಲಿ ವರದಿಗಾರನಾಗಿದ್ದ. ಬೆಂಗಳೂರು ಬಿಟ್ಟು ಎರಡು ವರ್ಷವಾಯಿತೆಂದು ಅವನೇ ಹೇಳಿದನಲ್ಲ. ಪ್ರಾಯಶಃ ‘ಜನಧ್ವನಿ’ ಪತ್ರಿಕೆಯ ವರದಿಗಾರ. ಬೇಕಾದಷ್ಟು ಸಲ ಸಭೆ-ಸಮಾರಂಭಗಳಲ್ಲಿ ವರದಿ ಮಾಡಲು ಬಂದಾಗ ಭೇಟಿಯಾದದ್ದು ನೆನಪಾಯಿತು.
  “ಭಟ್ ತಾನೇ”
“ಜ್ಞಾಪಕಕ್ಕೆ ಬಂತಲ್ಲ. ಭಟ್, ಶಶಿಧರ ಭಟ್,” ನಕ್ಕ.
“ಈಗ ಬೆಂಗಳೂರಲ್ಲಿ ಇಲ್ಲವಾ ಹಾಗಾದರೆ?”
“ಊಹೂ, ಆ ಪೇಪರ್ ಒಡೆಯರ ಕೂಡ ಜಗಳ ಮಾಡಿದೆ. ಭಾರಿ ದಬ್ಬಾಳಿಕೆ ತಂದು. ಸಂಪಾದಕರನ್ನು ಕೂಡ ಕೇರ್ ಮಾಡುವವನಲ್ಲ ಅವ. ಇನ್ನು ವರದಿಗಾರರೆಂದರೆ. ಅದಕ್ಕೇ ಬಿಟ್ಟೆ.” ಎಲ್ಲ ವರದಿಗಾರರಂತೆಯೇ ದಾಷ್ಟೀಕ ತುಂಬಿದ ಧ್ವನಿಯಿಂದ ಆತ ಮಾತನಾಡುತ್ತಿದ್ದ.
“ಈಗೆಲ್ಲಿದ್ದೀರಿ?”
“ಅಂಕೋಲದಲ್ಲಿ, ಅದೇ ನನ್ನೂರು. ಅಲ್ಲಿಯೇ ಸಮೀಪ ಒಂದಷ್ಟು ತೋಟ ತುಡಿಕೆ ಉಂಟು; ಜತೆಗೆ ಮಂಗಳೂರಿಂದ ‘ಕರಾವಳಿ’ ಪೇಪರ್ ಬರ್ತದಲ್ಲ; ಅದಕ್ಕೆ ವರದಿಗಾರ ಕೂಡ. ಇನ್ನೊಂದೆರೆಡು ವರುಷ ಕಳೀಲಿ ನಾನೇ ಒಂದು ಪೇಪರ್ ಮಾಡಬೇಕಂತ ಇದ್ದೇನೆ” ಭೂತ - ವರ್ತಮಾನ ಭವಿಷ್ಯತ್ತುಗಳ ಸುದ್ದಿಯನ್ನೆಲ್ಲ ರಪರಪನೆ ರಾಚುತ್ತಿದ್ದ.
“ಎಷ್ಟು ಸರ್ಕುಲೇಷನ್ನಿದೆ ನಿಮ್ಮ ಪೇಪರ್?”
“ಕರಾವಳಿಯಲ್ಲಿ? ಇರಬಹುದು, ಒಂದೈವತ್ತು ಸಾವಿರ. ಬೆಂಗಳೂರಲ್ಲಿ ಹೆಚ್ಚಿಲ್ಲ. ಅಲ್ಲಿಗೆ ಬರೋ ಹೊತ್ತಿಗೆ ಸಂಜೆಯಾಗಿರ್ತದೆ, ಆದರೆ ನಮ್ಮ ಕಡೆಯಲ್ಲೆಲ್ಲ ಅದರದ್ದೇ ಆರ್ಭಟ ಮಾರಾಯರೇ” ಎಂದು ಮತ್ತೆ ನಕ್ಕ ಶಶಿಧರ ಭಟ್.
“ನೀವು ಪೇಪರ್ ಶುರುಮಾಡಿದರೆ ಅದರ ಆರ್ಭಟ ಕಡಿಮೆಯಾಗುತ್ತಲ್ಲ” ಎಂದು ಹೇಳಿ ಹೇಮಂತ ನಸುನಕ್ಕ.
“ನಾನು ಮಾಡೋದಾದರೆ ದಿನಪತ್ರಿಕೆ ಮಾಡುವವನಲ್ಲ, ವಾರಪತ್ರಿಕೆ ಮಾಡುವವ. ಜನಕ್ಕೆ ಒಂದಷ್ಟು ತಿಳಿವಳಿಕೆ ಕೊಡಬೇಕಾದರೆ ಅದೇ ಸರಿ. ನಿಧಾನವಾಗಿ ಓದ್ತಾರೆ, ದಿನಪತ್ರಿಕೆಯಾದರೆ ಸಂಜೆಗೇ ಅದು ಹಳಸಾಗ್ತದೆ.” ಅವನು ಹೇಳಿದ್ದು ನಿಜ ಎನ್ನಿಸಿ ತಟ್ಟನೆನೆನಪಿಗೆ ಬಂತು; ನಿನ್ನೆ-ಇಂದು ಪತ್ರಿಕೆಗಳನ್ನೇ ನೋಡಿಲ್ಲ ಎಂದು. ಅಂಕೋಲದಲ್ಲಿ ಒಂದು ಪತ್ರಿಕೆ ತಗೊಂಡರಾಯಿತು ಎಂದುಕೊಂಡ.
ಕಾಲ ಹೋಗುವುದಕ್ಕೆಂದು ಪತ್ರಿಕೆಯ ಬಗ್ಗೆ ಹೇಮಂತ ವಿವರಗಳನ್ನು ಕೇಳುತ್ತಿದ್ದ - ಶಶಿಧರ ಭಟ್ ಪ್ರಾರಂಭಿಸಲಿದ್ದ ಪತ್ರಿಕೆಗೆ ಸಂಬಂಧಿಸಿದಂತೆ ಡೆಮಿ ಅರ್ಧ ಆಕಾರದ್ದು, ಪ್ರಾರಂಭಕ್ಕೆ ಎಂಟು ಪುಟಗಳಂತೆ, ಬರಬರುತ್ತ ಇಪ್ಪತ್ತು ಮಾಡಲು ಆಲೋಚನೆಯಿದೆಯಂತೆ. ಒಂದಷ್ಟು ಜಾಹೀರಾತು ದೊರಕಿದರೆ ಪರವಾಯಿಲ್ಲ. ಇನ್ನೊಂದು ವರುಷ ಬಿಟ್ಟು ಆ ಕಾರ್ಯಕ್ಕೆ ತೊಡಗುವನಂತೆ. ಅಂಕೋಲೆಯಲ್ಲಿ ಮಾಡಿದರೆ ತನ್ನೂರಿನ ಸುತ್ತಮುತ್ತಲ ಜನರ ಪ್ರೋತ್ಸಾಹ ದೊರೆಯುತ್ತದೆ; ಮುಂಬೈಯಲ್ಲಿ ಓದುಗರು ಸಿಗುತ್ತಾರೆ. ವಾರಪತ್ರಿಕೆ ಯಾದ್ದರಿಂದ ಒಂದೇ ದಿನ ಎಲ್ಲ ಕಡೆ ಬಿಡುಗಡೆ ಮಾಡುವುದು ಸಾಧ್ಯವಾಗುತ್ತದೆ, ಸುದ್ದಿಯಾದರೆ ಹಳೆಯದಾಗುತ್ತಲ್ಲ, ಲೇಖನಗಳು ಏನೋ ಪರವಾಗಿಲ್ಲ ಪೂರ್ವಭಾವಿಯಾಗಿ ಆ ದಿಸೆಯಲ್ಲಿ ಯೋಚನೆ  ಪ್ರಾರಂಭಿಸಿದ್ದಾನಂತೆ. ಯಾರೋ ಬೆಳಗಾವಿಯಲ್ಲಿ ಒಂದು ಪ್ರೆಸ್ ಮಾರಾಟಕ್ಕಿದೆಯೆಂದು ಹೇಳಿದ್ದರು; ಒಳ್ಳೆಯ ಕಂಡೀಷನ್‍ದಲ್ಲಿದೆ; ತೃಪ್ತಿಯಾದರೆ ಸೋವಿ ಬೆಲೆಗೆ ಕೊಡಿಸುತ್ತೇನೆ ನೋಡಿಕೊಂಡು ಬನ್ನಿ ಎಂದಿದ್ದರಿಂದ ಅಲ್ಲಿಗೆ ಹೋಗಿಬಂದಿದ್ದ. ಪ್ರೆಸ್ ಚೆನ್ನಾಗಿದೆ; ಚೌಕಾಶಿ ಮಾಡಿ ವ್ಯಾಪಾರ ಕುದುರಿದರೆ ಕೊಂಡುಕೊಳ್ಳುವವ. ಸದ್ಯಕ್ಕೆ ಜಾಬ್ ಕೆಲಸ ಪ್ರಾರಂಭಿಸಿ ನಿಧಾನಕ್ಕೆ ಪತ್ರಿಕೆ ತರಲು ಅದರಿಂದ ಅನುಕೂಲವಾಗುತ್ತದೆ ಎಂದೆಲ್ಲ ವಿವರಿಸಿದ್ದ.
ಮಾರ್ಗ ಮಧ್ಯದಲ್ಲೆಲ್ಲೋ ಸಣ್ಣ ತೊಂದರೆಯಿಂದಾಗಿ ಬಸ್ ಮುಂದಿನ ನಿಲ್ದಾಣದವರೆಗೂ ನಿಧಾನವಾಗಿ ಸಾಗಿತು. ಅಲ್ಲಿ ಬಸ್ ನಿಲ್ಲುವ ಪರಿಪಾಠವಿಲ್ಲದಿದ್ದರೂ ರಿಪೇರಿಗಾಗಿ ಒಂದು ಗಂಟೆಯೆಂದು ತಡವಾಯಿತು. ರಿಪೇರಿ ಯಾಗುವವರೆಗೂ ಇಬ್ಬರೂ ಬೇರೆಯವರಂತೆ ಕೆಳಗಿಳಿದಿದ್ದರು, ಹರಟೆ ಹೊಡೆದಿದ್ದರು; ಅಥವಾ ಭಟ್ಟನ ಮಾತಿನ ಮಳೆಗೆ ಹೇಮಂತ ದೋಣಿಯಾಗಿದ್ದ. ಅವನು ಮೊದಮೊದಲು ಹೇಳಿದ್ದನ್ನೆಲ್ಲ ಕುತೂಹಲದಿಂದ ಕೇಳಿದ್ದರೂ ಬರುಬರುತ್ತ ವಿಷಯ ಸೋರಿ ಹೋಗಿ ಶಬ್ದಮಾತ್ರ ಕೇಳಿಸುತ್ತಿತ್ತು, ಕಾಫಿ ಕುಡಿದರು. ಅವನು ಸಿಗರೇಟು ಕೊಂಡು ತಂದು ಇವನಿಗೂ ನೀಡಿದ್ದರಿಂದ ಹೊರಕ್ಕಿಳಿಯದೆ ಹೊಗೆ ಸೇದಿದ್ದ.
ಮತ್ತೆ ಬಸ್ ಹೊರಟಿತು, ಕೈಗಡಿಯಾರ ನೋಡಿಕೊಡ ಭಟ್ಟ “ಅಂಕೋಲ ತಲುಪುವ ಹೊತ್ತಿಗೆ ರಾತ್ರಿ ಎಂಟೂವರೆ-ಒಂಬತ್ತಾಗುತ್ತದೆ ಮಾರಾಯರೇ, ನೀವು ಅಲ್ಲಿಂದ ಗೋಕರ್ಣಕ್ಕೆ ಹೋಗಲು ಬಸ್ಸಂತೂ ಆ ಹೊತ್ತಿಗೆ ಸಿಗಲಾರದು. ವ್ಯಾನು ಸಿಕ್ಕರೂ ಸಿಕ್ಕಬಹುದು. ಆದರೆ ಜನರಿಲ್ಲದಿದ್ದರೆ ವ್ಯಾನ್ ಓಡಿಸೋದಿಲ್ಲ. ಇವತ್ತು ಅಂಕೋಲದಲ್ಲೇ ಉಳಿದುಬಿಡಿ”ಎಂದು ಸೂಚಿಸಿದ. ಅವನು ಹೇಳಿದ್ದು ಸರಿಯೆನಿಸಿತು. ಹನ್ನೊಂದೋ ಹನ್ನೊಂದೂವರೆಗೋ ಗೋಕರ್ಣ ತಲುಪಿ ಉಳಿಯುವ ವ್ಯವಸ್ಥೆಗಾಗಿ ಪರದಾಡಬೇಕೇಕೆ, ರಾತ್ರಿ ಉಳಿಯಲು ಗೋಕರ್ಣವಾದರೇನು, ಅಂಕೋಲ ಆದರೇನು? ಅಡ್ಡಾದಿಡ್ಡಿ ಓಡಾಡುವವನಿಗೆ ನಿಯಮವೇನಿರಲಾರದಲ್ಲವೇ? ಇವನ ಯೋಚನೆ ಕಂಡ ಶಶಿಧರ್ ಭಟ್ಟನೇ ಹೇಳಿದ. “ಏನೂ ಯೋಚನೆ ಮಾಡಬೇಡಿ ಮಾರಾಯರೇ. ನಾನು ನಮ್ಮ ಮನೆಗೆ ಕರೀತಿಲ್ಲ. ಮನೆಯವರಾರೂ ಇಲ್ಲ, ಊರಿಗೆ ಹೋಗಿದ್ದಾರೆ, ಇಲ್ಲದಿದ್ದರೆ ಕರೆಯಬಹುದಿತ್ತು. ಒಂದು ಲಾಡ್ಜಿಂಗ್ ತೋರಿಸಿ, ಒಳ್ಳೆಯ ವ್ಯವಸ್ಥೆ ಮಾಡ್ಲಿಕ್ಕೆ ಹೇಳ್ತೇನೆ” ಎಂದಾಗ ಅದೇ ಸರಿಯಾದುದು ಎನಿಸಿ “ಆಗಲಿ” ಎಂದು ಒಪ್ಪಿಕೊಂಡ.
ಕೊನೆಯ ಸೀಟುಗಳಲ್ಲಿ ಕುಳಿತಿದ್ದರಿಂದ ಎಲ್ಲರೂ ಇಳಿಯುವ ತನಕ ಕಾದಿದ್ದು ಬಸ್ಸು ಬಾಗಿಲಿಗೆ ಅವರಿಬ್ಬರೂ ಬಂದರು. ಹೇಮಂತ ಇಳಿಯುವಾಗ ಬಾಗಿಲಿನ ಬದಿಯ ಸೀಟಿನ ಕೆಳಗೆ ವರ್ತಮಾನ ಪತ್ರಿಕೆಯೊಂದು ಮಡಿಸಿ ಬಿದ್ದಿತ್ತು. ಇವತ್ತು ಪೇಪರ್ ನೋಡಿಲ್ಲದಿದ್ದುದು ನೆನಪಾಗಿ ಅದನ್ನೆತ್ತಿಕೊಂಡೇ ಇಳಿದು, ಅದರ ದಿನಾಂಕ ನೋಡಿದ. ಆವತ್ತಿಂದೇ. ಒಳ್ಳೆಯದಾಯಿತೆನಿಸಿತು. ಗಡಿಯಾರ ಆಗಲೇ ಒಂಬತ್ತೂಕಾಲು ತೋರಿಸುತ್ತಿತ್ತು. ಶಶಿಧರ್‍ಭಟ್ ನಿರ್ದೇಶನದಲ್ಲಿ ವಸತಿಗೃಹವೊಂದರ ಕಡೆ ನಡೆದ, ಎಲ್ಲ ವ್ಯವಸ್ಥೆಯಾಗಿ ರೂಮಿಗೆ ಬಂದಾಗ ಇನ್ನೇನು ಬೀಳ್ಕೊಳ್ಳಬೇಕು. ಎಂದಾಗ “ಅಂದ ಹಾಗೆ ಮಿ. ಹೇಮಂತ್. ನಿಮ್ಮೊಡನೆ ನಾಳೆ ಮುಂಜಾನೆ ಒಂದು ನಾಲ್ಕು ಮಾತನಾಡಕ್ಕೆ ಅವಕಾಶ ಕೊಡಿ. ಹೇಗಿದ್ದರೂ ನಿಮ್ಮ ಕಾದಂಬರಿಗೆ ಪ್ರಶಸ್ತಿ ಬಂದಿದೆಯಲ್ಲ. ಒಂದು ಸಂದರ್ಶನ ಅಂತ ’ಕರಾವಳಿ’ಯಲ್ಲಿ ಹಾಕಿಬಿಡ್ತೇನೆ. ಪತ್ರಕರ್ತರಾದ ನಮಗೆ ಓದೋದಕ್ಕೆ ಟೈಂ ಸಿಕ್ಕುವುದಿಲ್ಲ. ನನ್ನ ಹೆಂಡತಿ ನಿಮ್ಮ ಕಾದಂಬರಿ ಓದಿರಬೇಕೂಂತ ಕಾಣ್ತದೆ.”
“ಅಯ್ಯೋ ಅವೆಲ್ಲ ಯಾಕೆ? ಬಂದಿರೋದು ಒಂದು ಬಹುಮಾನ. ಯಾವ ಮಹಾ ದೊಡ್ಡದು?” ಸಂಕೋಚದಿಂದ ಹೇಮಂತ ಹೇಳಿದ.
“ನಿಮಗೆ ದೊಡ್ಡದಿರಲಿಕ್ಕಿಲ್ಲ. ಜನಕ್ಕೆ ದೊಡ್ಡದು. ಏನೂ ಅಲ್ಲದಿದ್ದರೆ ಶ್ರೇಷ್ಠ ಕಾದಂಬರಿ ಅಂತ ಬಹುಮಾನ ಕೊಡ್ತಾರಾ?” ಅವನ ವಾದ ಸರಣಿ ತಳ್ಳಿಹಾಕುವಂತಿರಲಿಲ್ಲ.
“ಆಯಿತು. ನಾಳೆ ಬೆಳಿಗ್ಗೆ ಆದರೆ ಸಭೆಗಿಭೆ ಯಾವುದೂ ಮಾಡಬೇಡಿ”
“ಅಂಥದ್ದೇನಿಲ್ಲ. ಮಾರಾಯರೆ, ನಮ್ಮದೇನಿದ್ದರೂ ವರದಿ ಮಾಡುವ ವ್ಯವಸಾಯ ಹೊರತು ಭಾಷಣ ಏರ್ಪಾಡು ಮಾಡೋದಲ್ಲ. ನಾಳೆ ಬೆಳಿಗ್ಗೆ ಎಂಟರ ಹೊತ್ತಿಗೆ ಬರ್ತೀನಿ, ತಯಾರಾಗಿರಿ ಒಂದು ಕ್ಯಾಮೆರಾ ತಂದು ಒಂದು ಚಿತ್ರ ತೆಗೀತೀನಿ. ಚಿತ್ರಸಮೇತ ಸಂದರ್ಶನ ‘ಕರಾವಳಿ’ಯಲ್ಲಿ ಬರಲಿ.”
  ಸಂದರ್ಶನ ಪತ್ರಿಕೆಯಲ್ಲಿ ಬರಲಿ, ಬಿಡಲಿ ಈಗ ಭಟ್ಟ ಹೋಗಲಿ ಅನ್ನಿಸಿತು ಹೇಮಂತನಿಗೆ, ಒಂಬತ್ತು ಮುಕ್ಕಾಲು ಸಮೀಪಿಸುತ್ತಿದ್ದರೂ ಈ ವರದಿಗಾರನಿಗೆ ವೇಳೆಯಾದಂತೆ ಕಾಣಿಸುವುದಿಲ್ಲ ಅಥವಾ ವರದಿಗಾರರಿಗೆ ಸಮಯವೆಂಬುದೆಲ್ಲಿ, ಸರಿರಾತ್ರಿಯಲ್ಲಿ ವರದಿ ಮಾಡಬೇಕಾದ ಘಟನೆಗಳು ನಡೆಯಬಾರದೆಂದಿಲ್ಲವಲ್ಲ.
ಕೊನೆಗೂ ಭಟ್ ಹೊರಟ ಮೇಲೆ ಬಟ್ಟೆ ಬದಲಾಯಿಸಿದ ಹೇಮಂತ ಊಟ ಸಿಕ್ಕುವುದೇನೋ ಎಂದು ಮಹಡಿಯ ಮೇಲಿದ್ದ ತನ್ನ ರೂಮಿನಿಂದ ಕೆಳಗಿನ ಡೈನಿಂಗ್ ಹಾಲ್ ಕಡೆ ಕಾಲುಹಾಕಿದ.
* * *
  ಬೆಂಗಳೂರಿನಲ್ಲಿ ಕೇಂದ್ರ ‘ಸಮತಾ’ದವರು ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆ ಸಭೆಗಳು ನಡೆದ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದಾಗ ಅದರಲ್ಲಿ ಹೆಸರಿಸಲ್ಪಟ್ಟ ವ್ಯಕ್ತಿಗಳನ್ನು ಬಲ್ಲ ವೃತ್ತಗಳಲ್ಲಿ ಸ್ವಲ್ಪ ಅಲ್ಲೋಲ ಕಲ್ಲೋಲವುಂಟಾಯಿತು. ಹೇಮಂತನ ಆಫೀಸಿನಲ್ಲಿ ಅದರ ಬಗ್ಗೆ ಚರ್ಚೆಗಳಾದವು. “ಎಂತೆಂತ ಜನರಿರುತ್ತಾರೆ, ಹೊರಗಡೆ ಅವರ ಪ್ರಭಾವ ಇಂತಹುದೆಂದು ಅರ್ಥವಾಗುವುದೇ ಇಲ್ಲ” ಎಂದು ವ್ಯಂಗ್ಯದಿಂದ ಕೆಲವರು ಟೀಕೆ ಮಾಡಿದರೆ, “ಪಾಪ ಹೇಮಂತನ ಬಗ್ಗೆ ಇಂತಹ ಕತೆ ಹುಟ್ಟಬಾರದಿತ್ತು” ಎಂದು ಕೆಲವರು ಲೊಚಗುಟ್ಟಿದರು.
“ಕತೆ ಅಂತ ಹೇಗೆ ಹೇಳ್ತೀರಿ. ನಿಜವಾಗಿಲ್ಲದಿದ್ದರೆ ಅಷ್ಟೊಂದು ಜನ ಸೇರಿ ಮೆರವಣಿಗೆ ಇವನ್ನೆಲ್ಲ ಮಾಡಕ್ಕಾಗ್ತಿತ್ತಾ?” ಇನ್ಯಾರದೋ ಪ್ರಶ್ನೆ.
“ಕೆಲವು ಸಂಸ್ಥೆಗಳ ಜನ ಇರೋದೇ ಬ್ಲಾಕ್‍ಮೇಲ್ ಮಾಡಕ್ಕೆ ಕಣ್ರೀ. ಇಲಿ ಹೋದರೆ ಹುಲಿ ಹೋಯ್ತೂಂತ ಸುದ್ದಿ ಹಬ್ಬಿಸಿ ತಾವು ಹಿರಿದು ಕೊಳ್ಳೋಕೆ ಪ್ರಯತ್ನಪಡ್ತಾರೆ” ಇನ್ನೊಬ್ಬರ ಷರಾ.
“ಏನಾದರೂ ಸ್ವಲ್ಪ ಇರದಿದ್ದರೆ ಹೀಗೇ ಯಾರಿಗಾದರೂ ಇದನ್ನೆಲ್ಲ ಏರ್ಪಾಟು ಮಾಡಕ್ಕೆ ಸಾಧ್ಯವಾಗತ್ತೇ?”
“ಏನೋಪ್ಪ ಅಂತೂ ಹೇಮಂತ ಅದಕ್ಕೇ ರಜೆ ಹಾಕಿದ್ದಾನೋ ಏನೋ” ಮಗದೊಬ್ಬರ ಅನುಮಾನ.
“ಆ ಹುಡುಗಿ ಆತ್ಮಹತ್ಯೆಗೆ ಕಾರಣ ಅಂತ ಪ್ರೈಮಾಫೇಸಿ ಕೇಸಿದೇಂತ ಪೊಲೀಸರಿಗೆ ಅನ್ನಿಸಿದರೆ ಅರೆಸ್ಟ್ ಮಾಡಬಹುದು ಅಂತ ಕಾಣತ್ತೆ.”
“ಬೇರೆ ಕಡೆ ಹೋದರೆ ತಪ್ಪಿಸಿಕೊಳ್ಳಕ್ಕೆ ಆಗುತ್ತಾ? ಪೊಲೀಸಿನೋರಿಗೆ ರೈಟ್ ಆಫ್ ಅರೆಸ್ಟ್ ಇದ್ದೇ ಇರತ್ತೆ, ಎಲ್ಲಿದ್ರೂ ಅರೆಸ್ಟ್ ಮಾಡಬಹುದು.”
ಒಬ್ಬೊಬ್ಬರದು ಒಂದೊಂದು ರೀತಿಯ ಮಾತು, ಟೀಕೆ, ಟಿಪ್ಪಣಿ, ಕೆಲವರಿಗೆ ತಾತ್ಸಾರ, ಮತ್ತೆ ಕೆಲವರಿಗೆ ಕುತೂಹಲ, ಮತ್ತೆ ಹಲವರಿಗೆ ಮೋಜು ವಿವಿಧ ಮನೋವೃತ್ತಿಯವರಿಗೆ ಬೇಕಾದಂತೆ ಮಾತಾಡಲು ಗ್ರಾಸವಾಗುವುದೇ ಇಂತಹ ಘಟನೆಗಳ ಹಣೆಯಬರಹ. ಹೇಮಂತನ ಬಗ್ಗೆಯಾರದು ಎಂಥ ಅಭಿಪ್ರಾಯವೆಂಬುದು ಒಂದು ರೀತಿಯಲ್ಲಿ ಹೊರಸೆಳೆಯುವುದಕ್ಕೆ ಈ ವರದಿ ಕಾರಣವಾಗಿತ್ತು.
ಆದರೆ ಹೇಮಂತನಿಗೆ ತೀರ ಹತ್ತಿರದವನಾಗಿದ್ದ ದೇವೇಂದ್ರಕುಮಾರನಂತಹವರಿಗೆ ಇದು ಬಿಸಿ ತುಪ್ಪವಾಯಿತು. ಅವನದೇನೂ ತಪ್ಪಿಲ್ಲವೆಂದು ವಾದಿಸಹೋದರೆ ತಾನೇ ಲೇವಡಿಗೆ ಗುರಿಯಾಗಬೇಕಾದ ಪರಿಸ್ಥಿತಿಯುಂಟಾಗುತ್ತದೆ. ಅವನದೇನೂ ತಪ್ಪಿಲ್ಲವೆಂದು ವಾದಿಸುವುದು ತಾನೇ ಹೇಗೆ? ಹೇಮಂತ ಇದ್ದಕ್ಕಿದಂತೆ ಹೋದಾಗ ಅವನಿಗೆ ಅಂತಹ ಅನುಮಾನವೇನೂ ಬಂದಿರಲಿಲ್ಲ. ಏಕೆಂದರೆ ಯರಿಗಾದರೂ ತುರ್ತಾಗಿ ಕೆಲಸ ಒದಗಿಬರುವುದು ಸಹಜ. ಅಲ್ಲದೆ ಯಾವಾಗಲೂ ಇತರರಿಗೆ ಹೇಳಬಹುದಾದ ಕೆಲಸಗಳೇ ಬರುತ್ತವೆಂದು ಹೇಳಲಾದೀತೇ? ಆದರೆ ನಳಿನಿಗೂ ಕಾರಣ ಹೇಳದೇ ಹೋಗಿದ್ದಾನೆಂದು ತಿಳಿದ ಮೇಲೆ ಅವನಿಗೇನೋ ಅನುಮಾನ ಬಂದಂತಾಯಿತು; ಅಥವಾ ಈಗ ಸುದ್ದಿ ಓದಿದ ಮೇಲೆ ಹಾಗನ್ನಿಸಲು ಪ್ರಾರಂಭವಾಗಿದ್ದಿತೇನೋ. ನಳಿನಿಯೂ ಒಂದು ಥರ ಮೋರೆ ಮಾಡಿಕೊಂಡಿರುತ್ತಿದ್ದಳಲ್ಲ ತಾನವಳನ್ನು ಕಂಡಾಗಲೆಲ್ಲ ಎಂದು ಅವನಿಗೆ ಅನ್ನಿಸತೊಡಗಿತ್ತು. ಅವಳಿಗಾದರೂ ಹೇಳಿ ಹೋಗಿದ್ದಾನೆಯೋ ಇಲ್ಲವೋ; ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಾನೇನೋ. ಇಂಥ ಕಾರಣಗಳಿದ್ದರೆ ಹೆಂಡತಿಯಾದರೇನು, ಹೇಳಿಹೋಗಲು ಸಾಧ್ಯವೇ? ಅವನು ಓಡಿ ಹೋಗಿಬಿಟ್ಟರೆ ತಾನೇ ಏನು, ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಎಷ್ಟು ದಿನವೆಂದು ಕಣ್ಮರೆಯಾಗಿರುವುದು, ಈಗ ಇಪ್ಪತ್ತು ದಿನಕ್ಕೆ ರಜೆ ಹಾಕಿದಂತಾಗಿತ್ತು. ಅದಾದ ಮೇಲೆ ಬರಲೇಬೇಕಲ್ಲವೇ; ಎಷ್ಟು ದಿನಬೇಕಾದರೂ ಯಾರು ರಜಾ ಕೊಡುತ್ತಾರೆ? ಛಿ, ಅವನು ಯಾಕೆ ಹೀಗೆ ಮಾಡಿದ ಎಂದು ದೇವೇಂದ್ರಕುಮಾರನಿಗೆ ಅನ್ನಿಸುತ್ತಿತ್ತು.
ಕೆಲವೊಮ್ಮೆ ಅವನಿಗೆ ಹೇಮಂತನನ್ನು ನೆನೆಸಿಕೊಂಡು ಕನಿಕರವೂ ಆಗುತ್ತಿತ್ತು. ತನ್ನ ಸ್ನೇಹಿತ ಅಂತಹವನೇ? ಎಲ್ಲೆಲ್ಲಿಯೂ ಹೇಗೆ ಸೌಜನ್ಯದಿಂದ ನಡೆದುಕೊಳ್ಳುವವನು ಅವನು, ಇದ್ದಕ್ಕಿದ್ದಂತೆ ಹೀಗೆ ನಂದಿನಿಯಂತಹ ಯುವತಿಗೆ ಮೋಸಮಾಡಿ ಓಡಿಹೋಗಲುಸಾಧ್ಯವೇ? ಮೋಸ ಮಾಡುವುದಾಗಲೀ, ಅಪರಾಧಗೈವುದಾಗಲೀ, ಪರೋಪಕಾರವೆಸಗುವುದಾಗಲಿ, ಸೌಜನ್ಯದ ನಡತೆಯಾಗಲಿ ದಿಢೀರನೆವ್ಯಕ್ತಿಯೊಬ್ಬನಲ್ಲಿ ಮೂಡಿಬರಲಾರದು; ಅದು ಸ್ವಭಾವದ ಫಲ. ಮೋಸಗಾರನ ಲಕ್ಷಣವೆಂದರೆ ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ವ್ಯಕ್ತಿಗೆ ಮೋಸಮಾಡುವುದು. ಪ್ರಪಂಚದಲ್ಲಿ ಎಲ್ಲರ ಬಗ್ಗೆ ಒಳಿತನ್ನು ಆಲೋಚಿಸುತ್ತ ಒಬ್ಬರಿಗೆ ಮಾತ್ರ ಕೈಕೊಡುವುದು ಸಾಧ್ಯವೇ? ಅಥವಾ ಮೋಸದ ತೀವ್ರತೆಯಲ್ಲಾದರೂ ಒಂದು ಮಟ್ಟವಿರುತ್ತದೇನೋ! ಏನೋ ಸಣ್ಣಪುಟ್ಟ ಸುಳ್ಳು ಹೇಳುವುದು ಎಲ್ಲರಿಗೂ ಇರುವಂತಹ ರೋಗವೇ? ಯಾರು ಅದರಿಂದ ಮುಕ್ತರಾಗಿರುವವರು? ಹರಿಶ್ಚಂದ್ರನೆನಿಸಿಕೊಂಡವನೂ ಮುಜುಗರವಾಗುವ ಸಂದರ್ಭಗಳಲ್ಲಿ ಸಣ್ಣ ಸುಳ್ಳು ಹೇಳಬಹುದು. ಹಾಗೆಯೇ ಅವನನ್ನು ಸುಳ್ಳುಗಾರನೆಂದು ಕರೆಯಲಾದೀತೇ? ಹಾಗೆಯೇ ಮೋಸವೂ, ಅಪರಾಧವೂ.!
ಅಥವಾ ಹೆಣ್ಣಿನ ಆಕರ್ಷಣೆ ಎಂಥವನನ್ನೂ ಬಲೆಗೆ ಹಾಕಿಕೊಂಡು ಬಿಡಬಹುದು, ಬಲಿ ತೆಗೆದುಕೊಂಡೂ ಬಿಡಬಹುದು. ನಂದಿನಿ ಯುವತಿಯಂತೆ, ಅವಿವಾಹಿತೆಯಂತೆ, ಅವಳಿಗೆ ಇವನು ಯಾವ ರೀತಿ ಆಕರ್ಷಣೆಯೊಡ್ಡಿದನೋ ಅಥವಾ ಅವಳೇ ಇವನಿಗೆ ಆಮಿಷವೊಡ್ಡಿರಬಹುದೇ? ಅವಳದು ತಪ್ಪಿರಬಹುದೆಂದು ಯಾರೂ ಯೋಚಿಸುವುದೇ ಇಲ್ಲವೇನೋ. ಯಾಕೆಂದರೆ, ಸತ್ತವರು ಎಂದಿಗೂ ಸುಳ್ಳುಗಾರರಲ್ಲ, ಮೋಸಗಾರರಲ್ಲ. ಎಲ್ಲರೂ ಸತ್ತ ವ್ಯಕ್ತಿಗೆ ಸಹಾನುಭೂತಿ ವ್ಯಕ್ತಪಡಿಸುವವರೇ. ಬದುಕಿದವನನ್ನು ಸಾಯುವಂತೆ ಟೀಕೆ ಮಾಡುವುದು, ಅವನು ಸತ್ತರೆ ಆಮೇಲೆ ಅವನ ಬಗ್ಗೆಯೂ ಸಂತಾಪದಿಂದ ಲೊಚಗುಟ್ಟುವುದೇ ಈ ಜನಗಳ ಹಣೆಯಬರಹವೇನೋ. ಹೇಮಂತನಾದರೂ ಯಾಕೆ ಎಚ್ಚರದಿಂದ ಇರಬಾರದಿತ್ತು. ಏನು ಎಡವಟ್ಟು ಮಾಡಿಕೊಂಡಿದ್ದಾನೋ ಏನೋ. ಆ ಸತ್ತ ಹುಡುಗಿಯ ಮನೆಯವರು ದೂರುಕೊಟ್ಟಿದ್ದರೆ ಪೊಲೀಸರು ಹೇಮಂತನ ಮನೆಗೆ ಬಂದು ಪ್ರಶ್ನಿಸುತ್ತಿರಲಿಲ್ಲವೇ? ಅಥವಾ ಬಂದು ಹೋಗಿದ್ದರೂ ನಳಿನಿ ಅದನ್ನು ತನ್ನಿಂದ ಮುಚ್ಚಿಟ್ಟಿರಬಹುದೇ? ಇರಲಾರದು. ಮನೆಗೆ ಹೋಗಿ ತನಿಖೆ ಮಾಡುವ ಪೊಲೀಸರು ಆಫೀಸಿಗೂ ಬರದಿರುತ್ತಾರೆಯೇ? ಮನೆಯಲ್ಲಿ ದೊರೆಯದ ಅನೇಕ ವಿವರಗಳು ಕಚೇರಿಯಲ್ಲಿ ದೊರೆಯಬಾರದೆಂದಿಲ್ಲವಲ್ಲ ಆದರೆ ಅವರೆಂದೂ ಆಫೀಸಿಗೆ ಬಂದಿರಲಿಲ್ಲ.
  ಹೇಮಂತ ರಜ ತೆಗೆದುಕೊಂಡಾಗಿನಿಂದ ತಾನು ಕ್ರಮವಾಗಿ ಆಫೀಸಿಗೆ ಹೋಗುತ್ತಿದ್ದುದರಿಂದ ಅದರ ಖಚಿತವಾದ ಮಾಹಿತಿ ಅವನಿಗಿತ್ತು. ಏನಾಯಿತೋ, ಸತ್ಯ ಬಲ್ಲವರು ಯಾರು? ಸತ್ತವಳು ಮಾತ್ರ ಸತ್ಯ ತಿಳಿದವಳಾಗಿರಬೇಕು, ಆದರೆ ಅಮ್ಮ ಏನೂ ಹೇಳಲಾರಳು. ಹೇಮಂತ ಏನು ಹೇಳಿದರೂ ಈ ಪರಿಸ್ಥಿತಿಯಲ್ಲಿ ನಿಜವಾಗಲಾರದು. ಅಯ್ಯೋ ಪಾಪ. ನಳಿನಿಯ ಗತಿಯೇನು? ವಾಪಸು ಬಂದ ಮೇಲೆ ಹೇಮಂತ ಆಫೀಸಿನಲ್ಲಿ ಹೇಗೆ ಮುಖವಿರಿಸಿಕೊಂಡು ಬರುತ್ತಾನೆಯೋ? ಪೊಲೀಸು ಕೇಸು ಆಗದಿದ್ದರೂ ಅವನು ಏನೂ ಆಗಿಲ್ಲವೆಂಬಂತೆ ಓಡಾಡಿಕೊಂಡಿರಲು ಸಾಧ್ಯವೇ. ದೇವೇಂದ್ರಕುಮಾರನಂತಹವರಿಗೆ ದಿಕ್ಕೇ ತೋಚದು. ಸುತ್ತಲ ಜನ ಅನ್ನುವುದನ್ನು ಕೇಳಿಸಿಕೊಳ್ಳಲಾರರು; ಅವರನ್ನು ಸುಮ್ಮನಿರಿಸಲಾರರು.
ಆಫೀಸಿನ ಪರಿಸ್ಥಿತಿಯಿಂತಹುದಾದರೆ ಸಾಹಿತ್ಯಕ ವಲಯಗಳಲ್ಲಿ ಕೂಡ ಇದರಪರಿಣಾಮಗಳಿರುತ್ತವೆಯಲ್ಲ. ಅವನನ್ನು ಬಲ್ಲ ಸ್ನೇಹಿತರು, ಇತರ ಲೇಖಕರು, ಅವನನ್ನು ಮೆಚ್ಚಿಕೊಂಡ ಓದುಗರು ಎಲ್ಲ ಈ ವಿಷಯ ಚರ್ಚಿಸಲು ತೊಡಗಿದರು. ಅಲ್ಲಿಯೂ ಪರ ವಿರೋಧ ತಟಸ್ಥ ನಿಲುವುಗಳು ಕಾಣಿಸಿಕೊಂಡವು. ಯಾರಿಗೂ ಸತ್ಯ ತಿಳಿಯದು, ಸತ್ಯ ತಿಳಿದವರು ಹೇಳಲಾರರು, ಏನಾದರೂ ಹೇಳುವವರು ಹೇಳುವುದು ಸತ್ಯವಲ್ಲ. ಪರಿಮಿತ ವಲಯದಲ್ಲಿ ಈ ಸುದ್ದಿ ಮೆಲುವಾದ ಭೂಕಂಪವನ್ನೇ ಉಂಟುಮಾಡಿತ್ತೆಂದರೆ ಅತಿಶಯೋಕ್ತಿಯಲ್ಲ.
* * *
ಹೇಮಂತನ ಮನೆಗೆ ಬರುವುದೂ ‘ಜನಧ್ವನಿ’ ಪತ್ರಿಕೆಯೇ. ಆದರೆ ಅವಳು ನಿಧಾನವಾಗಿ ಪೇಪರ್ ಓದುವ ಅಭ್ಯಾಸದವಳು. ಊಟಮಾಡಿ ಹಾಸಿಗೆಯ ಮೇಲುರುಳಿ, ಪೇಪರ್ ಮೇಲೆ ಕಣ್ಣಾಡಿಸುತ್ತಿರುವಾಗ ಪತ್ರಿಕೆಯ ಐದನೆಯ ಪುಟದಲ್ಲಿನ ವರದಿ ಓದಿದಾಗ ಅವಳ ಎದೆ ಡವಡವವೆನ್ನಲು ಪ್ರಾರಂಭಿಸಿತ್ತು. ಅಯ್ಯೋ, ದೇವರೆ, ಹೀಗೂ ಆಗಿರಬಹುದೇ? ಇಲ್ಲಿ ಬಂದಿರುವ ಹೇಮಂತ ತನ್ನ ಹೇಮಂತನೇ, ಅವನು ಓಡಿಹೋಗಿರುವುದು ಇದೇ ಕಾರಣಕ್ಕಾಗಿಯೇ? ಅವನೇಕೆ ಈ ರೀತಿಯಾಗಿಬಿಟ್ಟ. ತಾನವನಿಗೆ ಕಡಿಮೆ ಮಾಡಿದ್ದೇನು? ಅಥವಾ ಸಾಕಾಗಲಿಲ್ಲವೆಂದರೆ ಸೂಳೆಯ ಹತ್ತಿರ ಹೋಗಿದ್ದರಾಗುತ್ತಿರಲಿಲ್ಲವೇ? ಮದುವೆಯಾಗದ ಹುಡುಗಿಯನ್ನು ನಂಬಿಸಿ ದ್ರೋಹ ಮಾಡುವಂತಹ ನೀಚ ಗಂಡಸೆ ತನ್ನಗಂಡ ಹೇಮಂತ?
  ಇದ್ದಕ್ಕಿದ್ದಂತೆ ಅವನೊಡನೆ ಹತ್ತು ವರ್ಷಗಳ ಕಾಲ ಬಾಳಿದ್ದ ಅವಳಿಗೆ ಅವನ ಬಗ್ಗೆ ಭಯವಾಗತೊಡಗಿತ್ತು. ಅವನೊಡನೆ ಅದೆಷ್ಟು ರಾತ್ರಿಗಳನ್ನು ಅವಳು ಕಳೆದಿರಲಿಲ್ಲ. ಅವನ ಸಾಮೀಪ್ಯ ಅವಳಿಗೆಷ್ಟು ಆಪ್ಯಾಯಕಾರಿ ಯಾಗಿತ್ತು, ಚೇತೋಹಾರಿಯಾಗಿತ್ತು, ಈಗ ಎಂತಹ ಸುದ್ದಿಗೆ ಕಾರಣವಾಗಿಬಿಟ್ಟಿದ್ದಾನೆ! ಅವನು ಲೇಖಕನೆಂಬ ಬಗ್ಗೆ ತಾನು ತಳೆದ ಹೆಮ್ಮೆಯೆಷ್ಟು,ಈಗ ಇದ್ದಕ್ಕಿದ್ದಂತೆ ಅವನ ಹೆಂಡತಿಯಾಗಿರುವುದಕ್ಕಾಗಿ ನಳಿನಿಗೆ ಹೇಸಿಕೆಯಾಗತೊಡಗಿತು. ತನಗೆ ಏನಾಗುತ್ತಿದೆಯೋ ಅವಳಿಗೆ ತಿಳಿಯುತ್ತಿಲ್ಲ, ಅಳುವುದಕ್ಕೂ ಆಗದ ಆಳವಾದ ದುಗುಡ ಅವಳ ನರನರವನ್ನೆಲ್ಲ ನಿಷ್ಕಿೃಯವನ್ನಾಗಿ ಮಾಡಿಬಿಟ್ಟಿತು.
ಸುಮ್ಮನೆ ಎದ್ದು ಪೇಪರ್ ತಗೊಂಡು ಹೋಗಿ ಮೌನವಾಗಿ ತಾಯಿಯ ಮುಂದೆ ಹಿಡಿದಳು. “ಏನು?” ಎನ್ನುವಂತೆ ಅವಳ ಕಡೆ ನೋಡುತ್ತ ವಿಶಾಲಾಕ್ಷಮ್ಮ ಪೇಪರ್ ತೆಗೆದುಕೊಂಡು ಮುಂದಕ್ಕೆ ಹರವಿಕೊಂಡು ಕನ್ನಡಕ ತೆಗೆದು ಹಾಕಿಕೊಂಡು ಸುದ್ದಿ ಓದತೊಡಗಿದ್ದರು. ಕ್ಷಣಕ್ಷಣಕ್ಕೂ ಅವರ ಮುಖದಲ್ಲಿ ಚಿಂತೆಯ ಗೆರೆಗಳು ದಟ್ಟವಾದವು. ಕೊನೆಗೆ ತಡೆಯಲಾಗದಂತೆ ಕನ್ನಡಕದೊಳಗಡೆಯೇ ಕಣ್ಣೀರು ಅಡ್ಡವಾಗಿ ದೃಷ್ಟಿಯನ್ನು ಮಸುಕಾಗಿಸಿತು.
ತಾಯಿ ಪೇಪರ್ ಓದುವಾಗ ಶೂನ್ಯದೃಷ್ಟಿಯಿಂದ ನೋಡುತ್ತ ಕುಳಿತ ನಳಿನಿಯ ಗಮನ ಇದ್ದಕ್ಕಿದ್ದಂತೆ ತಲೆಬಾಗಿಲ ಬಳಿ ಬಿದ್ದಿದ್ದ ಪತ್ರಿಕೆಯೆಂಬಂತೆ ಕಾಣುತ್ತಿದ್ದ ಕಾಗದದ ಕಡೆ ಬಿತ್ತು. ಪೋಸ್ಟಲ್ಲಿ ಬಂದಿದ್ದಿತೇನೋ. ಸರಕ್ಕನೆ ಎದ್ದು ಹೋಗಿ ಅದನ್ನು ಕೈಗೆತ್ತಿಕೊಂಡಳು. ಅವಳೆಂದುಕೊಂಡಂತೆಯೇ ಅಂಚೆಯಲ್ಲಿ ಬಂದಿದ್ದ ಒಂದು ಪತ್ರಿಕೆ ಅದು. ಸರಿಯಾಗಿ ತನ್ನ ಮನೆಯ ವಿಳಾಸ ಹೊತ್ತು ಬಂದಿತ್ತು; ಹೆಸರು ಮಾತ್ರ ಹೇಮಂತನದು. ಪೇಪರನ್ನು ಸುತ್ತಿದ್ದ ಬಾದಾಮಿ ಹಾಳೆಯ ಮೇಲೆ ವಿಳಾಸದ ಬದಿಗೆ ‘ಒಳ ವಿಚಾರ’ ಎಂದು ಪತ್ರಿಕೆಯ ವಿಳಾಸ ಅಚ್ಚಾಗಿತ್ತು. ಎಂದೂ ತಾನು ಕಂಡಿರದ ಪೇಪರ್ ಅದು. ಏನು ತೋಚಿತೋ ಸುತ್ತಿದ್ದ ವಿಳಾಸದ ಹಾಳೆಯನ್ನು ಹರಿದು ಪೇಪರ್ ಬಿಡಿಸಿ ನೋಡತೊಡಗಿದಳು ನಳಿನಿ. ಏನೇನೋ ವಿಚಿತ್ರಶೀರ್ಷಿಕೆಗಳು. ಇದನ್ನಾರು ತನಗೆ ಕಳಿಸಿರಬಹುದು? ಪೇಪರ್‍ನ ರೀತಿ ನೋಡಿದರೆ ವಿಚಿತ್ರವಾಗಿತ್ತು. “ಹರಿದಾಸಪ್ಪನ ದಗಲಬಾಜಿ” “ಮಂತ್ರಿ ಮಾದಪ್ಪರಾತ್ರಿ ಮಾಡುವುದೇನು?” “ತಾರೆ ವಿಕಾಸಿನಿ ಯಾರ ಜೊತೆ ಮಲಗುತ್ತಾಳೆ” ಇಂತಹ ವಾಕರಿಕೆ ಬರಿಸುವಂತಹ ಶೀರ್ಷಿಕೆಗಳಡಿ ಲೇಖನಗಳು. ಹಾಗೆಯೇ ಕಣ್ಣಾಡಿಸುತ್ತ ಹಾಳೆ ಬಿಡಿಸಿ ನೋಡುತ್ತಾ ಹೋದಳು. ಒಂದೆಡೆ ಅವಳ ಕಣ್ಣಿಗೆ ರಾಚುವಂತೆ ಒಂದು ಶೀರ್ಷಿಕೆಯಿತ್ತು. “ನಂದಿನಿಯ ಸಾವಿಗೆ ಕಾರಣನಾದ ಹೇಮಂತನ ಜಾತಕ” ಅವಳ ಎದೆಯ ತುಡಿತ ಇದ್ದಕ್ಕಿದ್ದಂತೆ ತೀವ್ರವಾಯಿತು. ನೋಡಿದ ಕಡೆಯಲ್ಲೆಲ್ಲ ಹೇಮಂತ ಪೈಶಾಚಿಕ ಕೃತ್ಯ ನಡೆಸಿದ್ದಾನೇನೋ ಅನ್ನಿಸಿತು. ಆ ಶೀರ್ಷಿಕೆಯಡಿಯ ಬರಹ ಓದುತ್ತಾ ಹೋದಂತೆ ನಳಿನಿಯ ಜಂಘಾಬಲ ಉಡುಗಿ ಹೋದಂತೆ ಭಾಸವಾಗಹತ್ತಿತ್ತು.
ಕಾದಂಬರಿಕಾರನಾದ ಹೇಮಂತ ಅನೇಕ ವರ್ಷಗಳಿಂದ ನಂದಿನಿಯ ಜೊತೆ ಸಂಬಂಧವಿರಿಸಿಕೊಂಡಿದ್ದ. ತನಗೆ ಮದುವೆಯೇ ಆಗಿಲ್ಲವೆಂದು ಆ ಮುಗ್ಧ ಯುವತಿಯನ್ನು ನಂಬಿಸಿ ಅವಳನ್ನು ಒಲಿಸಿಕೊಂಡಿದ್ದ. ಹೇಮಂತನ ಬೆಣ್ಣೆಯಂತಹ ಮಾತಿಗೆ. ವಿಸ್ಕಿಯಂತಹ ರೂಪಕ್ಕೆ ಮರುಳಾದ ನಂದಿನಿ ಅವಳು ಹೇಳಿದ್ದನ್ನೆಲ್ಲ ನಂಬಿ ತನ್ನದೆಂಬ ಎಲ್ಲವನ್ನೂ (ಈ ಮಾತುಗಳು ದಪ್ಪ ಅಕ್ಷರಗಳಲ್ಲಿ ಮುದ್ರಿತವಾಗಿದ್ದವು) ಅವನಿಗೆ ಅರ್ಪಿಸಿದ್ದಳು. ಅವನಿಗಾಗಿ ರೈಲ್ವೆಪಾಸು ಮಾಡಿಸಿ ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದಳು. ಅವಳನ್ನು ಹೇಮಂತ ಕರೆದೊಯ್ಯದ ಹೋಟೆಲಿಲ್ಲ, ಪಾರ್ಕಿಲ್ಲ, ಬೆಂಗಳೂರಿನಲ್ಲಿ. ಅವನಿಗಾಗಿ ನಂದಿನಿ ತನ್ನ ಒಡವೆಗಳನ್ನು ಮಾರಿ ಸುಪ್ರೀತಗೊಳಿಸಲು ಪ್ರಯತ್ನಿಸಿ ಕೊನೆಗೆ ಎಲ್ಲವನ್ನೂ ಕಳೆದುಕೊಂಡಳು. ಇಂತಹ ಪಿಶಾಚಿಯಾದ ಹೇಮಂತ ಎಷ್ಟು ಮಂದಿ ಅಮಾಯಕರನ್ನು ಈ ರೀತಿ ಮೋಸಗೊಳಿಸಿ ಕೆಡಿಸಿದ್ದಾನೋ ಏನೋ. ತಕ್ಷಣ ಅವನನ್ನು ಬಂಧಿಸಿಐ.ಪಿ.ಸಿ. ಮುನ್ನೂರ ಅರನೇ ಸೆಕ್ಷನ್ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು. ಇದುವರೆಗೆ ತಡೆದ ಪೊಲೀಸರು ಅವನಿಂದ ಲಂಚ ಪಡೆದಿದ್ದಾರೆಂಬುದೂ ತನಿಖೆಯಾಗಲಿ - ಎಂದೆಲ್ಲ ಅಸಹ್ಯಕರ ಶೈಲಿಯ ಬರವಣಿಗೆ ನಳಿನಿಯಲ್ಲಿ ವಾಂತಿ ಬರುವಂತೆ ಮಾಡಿತ್ತಲ್ಲದೆ ಹೇಮಂತ ಎಂತಹ ರಾಕ್ಷಸನೆಂಬ ಅರಿವನ್ನೂ ಉಂಟುಮಾಡಿತು.
‘ಅಯ್ಯೋ’ ಎನ್ನುತ್ತ ಓಡಿಹೋಗಿ ರೂಮಿನ ಚಿಲಕಹಾಕಿಕೊಂಡು ಮಂಚದ ಮೇಲುರುಳಿಕೊಂಡಳು, “ಹಲ್ಕಾ ಸೂಳೆಮಗ ಎಂತೆಂತ ಹಕೆಲಸ ಮಾಡಿಬಿಟ್ಟಿದ್ದಾನೆ” ಎಂದು ರೋಷದಿಂದ ಅವಡುಗಚ್ಚಿದಳು. ದುಃಖಕ್ಕಿಂತ ಹೇಮಂತನ ಬಗ್ಗೆ ತನ್ನ ದ್ವೇಷ, ಅವನ ಮೇಲಿನ ಕೋಪ ನಳಿನಿಯ ರಕ್ತದ ಕಣಗಳನ್ನೆಲ್ಲ ವಿಷಮಯವಾಗಿ ಮಾಡಿತ್ತು, ‘ಮುಂಡೇಮಗ ಯಾವುದಾದರೂ ಬಸ್ಸಿಗೆ ಸಿಕ್ಕಿ ಸತ್ತುಹೋಗಿದ್ದರೆ ಚೆನ್ನಾಗಿತ್ತು, ಈ ರೀತಿ ಸುದ್ದಿಯಾಗುವುದಕ್ಕೆ ಬದಲಾಗಿ’ ಅನ್ನಿಸಿತು. ತಾನೇ ಸತ್ತಿದ್ದರೆ ಚೆನ್ನಾಗಿತ್ತು. ಅವನು ವಾಪಸು ಬಂದರೆ ತಾನು ಅವನೊಡನೆ ಜೀವಿಸಲಾದೀತೇ?. ಇದ್ದಕ್ಕಿದ್ದಂತೆ ಅವಳ ಕಲ್ಪನೆಯಲ್ಲಿ ಹೇಮಂತನಿಗೆ ಕೋರೆಹಲ್ಲುಗಳು ಕಾಣಿಸಿಕೊಂಡು ತುಟಿ ಮೀರಿ ಬೆಳೆದವು; ಕೈಯ ಉಗುರುಗಳು ನೀಳವಾಗಿ ಬಾಣಗಳಾದವು; ಕಣ್ಣ ಮೇಲಿನ ರೆಪ್ಪೆ ಪೊದೆಯಾಗಿ ಬೆಳೆದು ಅದರೊಳಗೆ ಹಾವುಗಳು ಹರಿಯಲಾರಂಭಿಸಿದವು. ವಿಕಟವಾಗಿ ನಗುತ್ತ ತನ್ನತ್ತ ಸುಳಿಯುವ ಅವನು ತನ್ನನ್ನೆಂದಿದ್ದರೂ ಬಿಡದೆ ನುಂಗಿಹಾಕುತ್ತಾನೆಂಬ ಭಯ ಅವಳನ್ನು ಆವರಿಸಿತು!
ಅವನಿಗೇಕೆ ತಾನು ಆಹುತಿಯಾಗಬೇಕು, ಅವನೊಡನೆ ಇನ್ನು ಬಾಳು ಸಾಧ್ಯವಿಲ್ಲ. ರಜ ಮುಗಿದ ಮೇಲೆ ಮರಳುವ ಅವನನ್ನಿನ್ನು ತಾನು ಕಂಡು ಬದುಕುವುದು ಅಸಾಧ್ಯ, ಅವನ ಕೈಗೆ ಸಿಕ್ಕಿ ಪ್ರತಿಕ್ಷಣವೂ ಅಪಾರ ಹಿಂಸೆಯನ್ನು ಅನುಭವಿಸಿ ಸಾಯುವುದಕ್ಕಿಂತಲೂ ಒಮ್ಮೆಲೇ ಸತ್ತು ಬಿಡುವುದು ವಾಸಿಯೆನ್ನಿಸಿತು. ಹೌದು, ಹಾಗೆ ಮಾಡುವುದೇ ಸರಿ, ತಾನಿನ್ನು ಬದುಕಿರಬಾರದು, ಅವನಿಗೆ ನಾಚಿಕೆಯಿಲ್ಲದಿದ್ದರೆ, ತಾನು ತಲೆಯೆತ್ತಿ ಬಾಳಲು ಇನ್ನು ಸಾಧ್ಯವಾದೀತೇ? ಛೆ, ಇನ್ನು ಒಂದು ಕ್ಷಣವಾದರೂ ತಾನು ಬದುಕಿರಬಾರದು, ಯಾವ ಸೌಭಾಗ್ಯಕ್ಕೆಂದು ತಾನು ಬದುಕುವುದು, ಅತ್ಯಾಚಾರವೆಸಗುವ ಗಂಡನೊಡನೆ ಮಲಗಿ ತಾನು ಅತ್ಯಾಚಾರಕ್ಕೊಳಗಾಗಬೇಕೇ? ಅವನು ನನ್ನ ಶತ್ರು; ಅವನನ್ನು ಮುಗಿಸಿಬಿಡಲು ತನಗೆ ಶಕ್ತಿಯಿಲ್ಲದಾಗ, ಅವನ ಅತ್ಯಾಚಾರಕ್ಕೆ ತಾನು ಬಲಿಯಾಗಲೆಂದೇ ಬದುಕಿರಬೇಕೇ? ಉಹು. ಸಾಧ್ಯವಿಲ್ಲ. ಈ ಕ್ಷಣ ಸಾಯಬೇಕು.
ತಟಕ್ಕನೆ ಮೇಲೆದ್ದ ನಳಿನಿ ಮಂಚದ ಅಂಚಿನ ಮೇಲೆ ನಿಂತು ಅಟ್ಟದ ಕಡೆ ವಾಲಿ ಅದರ ಮೇಲೆ ಕೈಯಾಡಿಸುತ್ತ ಒಂದು ಡಬ್ಬಿ ತೆಗೆದು ಹಾಸಿಗೆಯ ಮೇಲೆ ಬಿಸಾಕಿದಳು. ಅದರಲ್ಲಿ ಟಿಕ್-20ಯ ಒಂದು ಸಣ್ಣ ಸೀಸೆ ಇವಳನ್ನು ಆಹ್ವಾನಿಸುತ್ತ ಹೊರಬಂದಿತು. ಸರಕ್ಕನೆ ಅದನ್ನೆತ್ತಿಕೊಂಡ ನಳಿನಿ ಮುಚ್ಚಳ ತೆಗೆದು ಬಿಸಾಕಿದಳು, ಸೀಸೆಯ ಒಳಗಿರುವುದನ್ನೆಲ್ಲ ಬಾಯಲ್ಲಿ ಸುರಿದು ಕೊಂಡಳು, ಹಾಸಿಗೆಯಮೇಲೆ ಬಿದ್ದುಕೊಂಡಳು.
ಸ್ವಲ್ಪ ಹೊತ್ತಾದಮೇಲೆ ಹೊರಗೆ ಬಾಗಿಲು ಬಡಿಯುವ ಸದ್ದು, ಹೆಣ ಸಾಗಿಸುವಾಗ ಬಡಿಯುವ ತಮಟೆಯ ಸದ್ದಿನಂತೆ ಜೋರಾಗಿ ಕೇಳಿಸತೊಡಗಿತು. ಆದರೆ ಒಳಗೆಲ್ಲ ಉರಿ, ನೋವು, ಅಸಾಧ್ಯ ಯಾತನೆ, ಒಡಲಲ್ಲಿ ಕೆಂಡ ಸುರಿದಂತೆ, ಮೈಮೇಲೆ ಪಟಾಕಿಗಳನ್ನೆಸೆದುಕೊಂಡು ಅವೆಲ್ಲಕ್ಕೂ ಬೆಂಕಿ ತಾಕಿಸಿದಂತೆ ಏನೇನೋ ಆಗುತ್ತಿದೆ. ಕಣ್ಣು ಕಿವಿಗಳೆಲ್ಲ ತಮ್ಮ ಸ್ಥಳ ಬದಲಾಯಿಸಿ ದೇಹದಿಂದ ಹರಿದುಕೊಂಡು ಹೊರಬಂದಂತೆ ಕೈಕಾಲು ಜಾಡಿಸುವಂತೆ ಊರಿ, ಮೈಯೆಲ್ಲ ಬೆವರು, ಕೊರಳಲ್ಲಿ ಉರಿ, ಯಾರೋ ಕತ್ತನ್ನು ಬಲವಾಗಿ ಹಿಸುಕುವ ಅನುಭವ, ಮುಚ್ಚಿದ ಕಣ್ಗೊಳಗೆ ಪ್ರೇತನೃತ್ಯ, ಬಾಯಲ್ಲಿ ನೊರೆ, ಹಳೆಯ ಕುಂಕುಮ ಬೆವರಿಂದ ಕರಗಿ ರಕ್ತವಾಗಿದೆ, ಅಸ್ತವ್ಯಸ್ತವಾದ ಮಾಂಗಲ್ಯ ಕೊರಳಲ್ಲಿ ಅನಾಥವಾಗಿದೆ.
ಎಷ್ಟು ಬಾಗಿಲು ಬಡಿದರೂ ತೆಗೆಯದ್ದರಿಂದ ಗಾಬರಿಯಾದ ವಿಶಾಲಾಕ್ಷಮ್ಮ ‘ಅಯ್ಯಯ್ಯೋ, ಬನ್ರಪ್ಪ, ನಳಿನಿ ಏನೋ ಮಾಡಿಕೊಂಡಿದ್ದಾಳೆ’ ಎನ್ನುತ್ತ ಮನೆ ಬಾಗಿಲಿನಿಂದ ಹೊರಬಂದು ಅಕ್ಕಪಕ್ಕದವರ ಮನೆಯ ಮುಂದೆ ಕಿರುಚಾಡ ತೊಡಗಿದರು, ಕ್ಷಣದಲ್ಲಿ ಹತ್ತಾರು ಜನಗಳು ಸೇರಿದರು, ಶ್ರಾದ್ಧದ ದಿನದಂದು ಪಿತೃಗಳಿಗೆ ಹಾಕಿದ್ದ ಪಿಂಡವನ್ನುಣ್ಣಲು ಗುಂಪುಗೂಡಿ ಕಾಕಾ ಎಂದು ಸದ್ದು ಮಾಡುವ ಕಾಗೆಗಳ ಕಲರವದಂತೆ ಜನಗಳ ಮಾತು, ಓಡಾಟ, ಹೆಜ್ಜೆಗಳ ಸದ್ದು, ಕೂಗಾಟ.
ಯಾರೋ ಬಂದರು, ಒದ್ದು ನೋಡಿದರು, ಬಾಗಿಲು ತೆರೆಯಲಿಲ್ಲ. ಇನ್ನಾರೋ ತಮ್ಮದೇ ಮನೆಯೆಂಬಂತೆ ಅಡಿಗೆಯ ಮನೆಯೊಳಕ್ಕೆ ನುಗ್ಗಿ ಹಾರೆ ತಂದು ದಢಾರೆಂದು ಕದಗಳೆರಡು ಸೇರಿದ್ದ ಕಡೆ ಚಚ್ಚಿದರು, ಬಡ ಪೆಟ್ಟಿಗೆ ಬಗ್ಗುವ ಬಾಗಿಲಲ್ಲಿ ಅದು ದಢಾರ್......ದಢಾರ್ ಎಂದು ಹಲವು ಬಾರಿ ಜೋರಾಗಿ ಹೊಡೆದಾಗ ಕದಗಳ ಮಧ್ಯೆಸೇರಿಸಿದ್ದ ಹಲಗೆ ಬಿರಿಯಿತು. ಸಾಕೆಂದು ಅಲ್ಲಿಯೇ ಮತ್ತೆರಡು ಏಟು ಹಾಕಿ ರಂಧ್ರಮಾಡಿ ಒಳಗೆ ಕೈಹಾಕಿ ಚಿಲಕ ತೆಗೆದಾಗ ಎಲ್ಲರೂ ಒಳನುಗ್ಗಿದರು, ನೋಡುತ್ತಾರೆ; ನಳಿನಿ ಹಾಸಿಗೆಯ ಮೇಲೆ ಅಸ್ತವ್ಯಸ್ತವಾಗಿ ಮಲಗಿದ್ದಾಳೆ. ಕಣ್ಣು ಮುಚ್ಚಿದ್ದರೂ ದುಃಸ್ವಪ್ನ ಕಂಡವಳಂತೆ ಬೆದರಿವೆ. ಮೈಯೆಲ್ಲ ಬೆವರು ,ಭಯ ನೀರಾದಂತೆ ಕಾಣುತ್ತಿದೆ. ಹೊಟ್ಟೆಯಲ್ಲಿ ಯುದ್ಧ ನಡೆಯುತ್ತಿರುವಂತೆ ಕೊಸರಿಕೊಂಡು ಒದ್ದಾಡುತ್ತಿದ್ದಾಳೆ.
“ಏನು ಮಾಡಿಕೊಂಡೆಯೇ?” ವಿಶಾಲಾಕ್ಷಮ್ಮ ಮಗಳ ಬಳಿ ಹೋಗಿ ತಲೆಯೆತ್ತಿ ಪ್ರಶ್ನಿಸಿದರೆ ಉತ್ತರವಿಲ್ಲ. ನಮ್ಮ ಮಾತು ಅವಳಿಗೆ ಕೇಳಿಸಿತೇ? ಗೊತ್ತಿಲ್ಲ. “ಅಯ್ಯೋ ಏನು ಮಾಡಲಪ್ಪಾ” ಅವರು ಚೀರುತ್ತಾರೆ, ಅಸಹಾಯಕತೆಯೇ ಮುದಿಯಾದಂತೆ ನರೆ ಕೂದಲ ಆ ಹೆಂಗಸು ಕರುಣೆಯನ್ನೇ ಉಟ್ಟಿದ್ದಾರೆ.
“ಸುಮ್ಮನಿರ್ರಮ್ಮ ಏನಾಗಿಲ್ಲ. ಉಸಿರಾಡುತ್ತಿದ್ದಾರೆ. ಪ್ರಾಣ ಉಳಿಸೋದನ್ನು ಯೋಚನೆ ಮಾಡೋಣ” ಎಂದು ಒಬ್ಬರು ವಿವೇಕ ಹೇಳುತ್ತಾರೆ.
“ಬೆಳಿಗ್ಗೆ ಪೇಪರ್‍ನಲ್ಲಿ ಒಂದು ಸುದ್ದಿ ಓದಿ ಹೀಗೆ ಮಾಡಿಕೊಂಡರೇನೊ” ಬಂದಾಕೆಯೊಬ್ಬಳು ಅನುಮಾನಿಸುತ್ತಾಳೆ.
  “ಅವನಿಗೇನಪ್ಪ ಬಂತು ದೊಡ್ಡ ರೋಗ; ಚಿನ್ನದಂತಹ ಹೆಂಡತಿ, ಮುತ್ತಿನಂತಹ ಮಗಳು” ಮತ್ತೊಬ್ಬಳು ಶಾಪ ಹಾಕುತ್ತಾಳೆ.
“ಅಂತಹವರ ಜೊತೆ ಬಾಳಕ್ಕೂ ಪಡೆದುಬಂದಿರಬೇಕಲ್ಲವಾ?” ಎಂದು ಮಗದೊಬ್ಬಳು ದನಿಗೂಡಿಸುತ್ತಾಳೆ.
“ಸುಮ್ಮನಿರ್ತೀರೋ ಇಲ್ಲವೋ, ಜಾಗಬಿಡಿ, ಸಾಯ್ತಾ ಇರುವಾಗ ನಿಮ್ಮದು ಮಾತುಬೇರೆ” ಯಾರೋ ಮಧ್ಯವಯಸ್ಸಿನ ಗಂಡಸೊಬ್ಬ ತನ್ನ ಗಡಸು ಧ್ವನಿಯಿಂದ ಆಜ್ಞೆ ಮಾಡಿದಾಗ ಇಡೀ ವಾತಾವರಣ ಹತೋಟಿಗೆ ಸಿಕ್ಕುತ್ತದೆ.
“ಬೇಗ ಸ್ಕೂಟರಲ್ಲಿ ಹೋಗಿ ಒಂದು ಟ್ಯಾಕ್ಸಿ ತಗೊಂಬಾರಯ್ಯ” ಆ ಗಂಡಸು ಮತ್ತೊಬ್ಬ ಗಂಡಸಿಗೆ, ಯುವಕನಿಗೆ ಆದೇಶವೀಯುತ್ತಾನೆ. ಆ ಆಜ್ಞೆಗಾಗಿಯೇ ಕಾದಿದ್ದವನಂತೆ ಯುವಕ ಬಿಟ್ಟ ಬಾಣದಂತೆ ಹೊರಗೆ ಓಡುತ್ತಾನೆ. ಒಂದು ನಿಮಿಷದಲ್ಲಿಯೇ ಸ್ಕೂಟರ್‍ ಸ್ಟಾರ್ಟಾದ ಸದ್ದು ಕೇಳಿ ಹೊರಟು ಕಿವಿಮರೆಯಾಗುತ್ತದೆ. ಸ್ವಲ್ಪ ನೀರು ತನ್ನಿ, ಫ್ಯಾನ್ ಹಾಕಿ, ಬೆಳಕು ಬಿಡಿ ಕತ್ತಲು, ಯಾರು ಯಾರಿಗೋ ಆಜ್ಞೆ ಮಾಡುತ್ತಾರೆ, ಪಿಟ್ಟೆನ್ನದೆ ಆ ಮಾತುಗಳನ್ನು ಇತರರು ಪಾಲಿಸುತ್ತಾರೆ. ಹಾಸಿಗೆಯ ಒಂದು ಮೂಲೆಯಲ್ಲಿ ತನ್ನೊಡಲಿನಲ್ಲಿದ್ದ ಬೆಂಕಿಯನ್ನು ನಳಿನಿಯ ಬಾಯಿಗೆ ಸುರಿದಿದ್ದ ಟಿಕ್-20 ಸೀಸೆ ಮೂಕಸಾಕ್ಷಿಯಾಗಿ ಮುದುಡಿಕೊಂಡು ಮಲಗಿದ್ದನ್ನು ಯಾರೋ ಕಂಡು ಅದನ್ನು ಕೈಗೆತ್ತಿಕೊಂಡು ನೋಡುತ್ತಾರೆ, ಇತರಿಗೆ ತೋರಿಸುತ್ತಾರೆ. ಎಲ್ಲ ಅನಾಹುತಕ್ಕೂ ಕಾರಣವಾದ ಆ ಸೀಸೆ ಮಾತಾಡದಿದ್ದರೂ ಕತೆ ಹೇಳುತ್ತದೆ.
ಟ್ಯಾಕ್ಸಿ ಬಂದಾಗ ಒಂದಿಬ್ಬರು ನಳಿನಿಯನ್ನು ಅನಾಮತ್ತಾಗಿ ಎತ್ತಿಕೊಂಡು ಹೊರಬಂದು ಹಿಂದಿನ ಬಾಗಿಲು ತೆರೆದು ಮಲಗಿಸುತ್ತಾರೆ, ಜೊತೆಗೆ ವಿಶಾಲಾಕ್ಷಮ್ಮನನ್ನು ಕೂಡಿಸಿ ಒಬ್ಬ ಗಂಡಸು ಡ್ರೈವರನ ಪಕ್ಕ ಕೂತು ನರ್ಸಿಂಗ್‍ಹೋಂಗೆ ಹೋಗು ಎಂದು ವಿಳಾಸ ತಿಳಿಸುತ್ತಾರೆ. ಟ್ಯಾಕ್ಸಿ ಹೋಗುವಾಗ ಮುಂದೆ ಕೂತ ಗಂಡಸು -ಅವನಾರೋ ಯಾರಿಗೆ ಗೊತ್ತು - “ಏನೂ ಭಯವಿಲ್ಲ ಬಿಡೀಮ್ಮ ಇನ್ನೂ ಹೆಚ್ಚು ಹೊತ್ತಾಗಿಲ್ಲ, ಪ್ರಾಣಕ್ಕೆ ಯಾವ ಅಪಾಯವೂ ಇಲ್ಲ”ಎಂದು ಸಾಂತ್ವನ ಮಾತುಗಳನ್ನಾಡುತ್ತಾನೆ.
ಸದ್ಯಕ್ಕೆ ನಳಿನಿಯ ಮನೆ ನೆರೆಹೊರೆಯವರ ಸುಪರ್ದಿನಲ್ಲಿ ಹೋಗುತ್ತದೆ. ‘ಪಾಪ ಮಗು ಸ್ಕೂಲಿಂದ ಬರೋ ಹೊತ್ತಾಯಿತೆಂದು’ ಗೃಹಿಣಿಯೊಬ್ಬಳು ಕಾಯುತ್ತ ನಿಲ್ಲುತ್ತಾಳೆ.
* * *
ಎಂಟು ಗಂಟೆಗೆ ಶಶಿಧರ ಭಟ್ ಬರುತ್ತೇನೆಂದು ಹೇಳಿದ್ದರಿಂದ ಹೇಮಂತ ಎದ್ದೊಡನೆ ಗಡಿಬಿಡಿಯಿಂದ ಪ್ರಾತರ್ವಿಧಿಗಳನ್ನೆಲ್ಲ ಪೂರೈಸಿದ. ಭಟ್ಟನೇ ಕರಕೊಂಡು ಬಂದು ತೋರಿಸಿದ್ದ ಈ ಹೋಟೆಲು ತುಂಬ ಅನುಕೂಲಕರವಾಗಿತ್ತು. ಅಂಕೋಲದಂತಹ ಊರಿನಲ್ಲಿ ಯಾವ ಯಾವುದು ಎಲ್ಲಿದೆ, ಯಾವ ಹೋಟೆಲು ಚೆನ್ನಾಗಿದೆ. ಯಾವ ಊರಿಂದ ಯಾವ ಊರಿಗೆ ಹೇಗೆ ಹೋಗುವುದು ಇವುಗಳನ್ನೆಲ್ಲ ಅಪರಿಚಿತವಾಗಿ ಬಂದು ಪತ್ತೆ ಹಚ್ಚುವುದು ಕಷ್ಟದ ಕೆಲಸ, ತಾನೇನೋ ಗೋಕರ್ಣವೆಂದರೆ ಬಹಳ ಸಮೀಪವೇನೋ ಎಂದು ಬಗೆದಿದ್ದ. ರಾತ್ರಿಯೇ ಅಲ್ಲಿಗೆ ತಲುಪುತ್ತೇನೆಂದು ಹೊರಟಿದ್ದವನು. ಬಸ್ ತಡವಾಗಿದ್ದುದರಿಂದ ಇಲ್ಲಿಯೇ ಉಳಿಯುವ ಸಲಹೆಯನ್ನು ಭಟ್‍ ಕೊಟ್ಟಿದ್ದ. ಅವನಿಲ್ಲದೆ ತಾನೇ ತಡವಾಗಿ ಅಂಕೋಲೆಗೆ ಬಂದಿಳಿದಿದ್ದರೆ? ಆ ಹೊತ್ತಲ್ಲಿ ವಿಚಾರಿಸಿಕೊಂಡು ಯಾವುದೋ ಗಬ್ಬು ಲಾಡ್ಜಿಂಗಿಗೆ ಹೋಗಬೇಕಾಗಿತ್ತೋ ಏನೋ. ಆದರೆ ಭಟ್ ಸಿಕ್ಕಿದ್ದರಿಂದ ಒಳ್ಳೆಯದೇ ಆಯಿತು. ಬಾಗಲಕೋಟೆಯಲ್ಲಿ ಹಿರೇಮಠ ಸಿಕ್ಕಿದ್ದರಿಂದ ಮನಸ್ಸಿನ ಭಾರ ಸ್ವಲ್ಪ ಇಳಿದಿತ್ತು; ಇವತ್ತು ಹಾಗೆಯೇ ಆಗಿಬಿಟ್ಟರೆ ಸಾಕು. ದಿನವಿಡೀ ಭಟ್ಟನನ್ನು ಜೊತೆಗೇ ಕರೆದೊಯ್ದು ಗೋಕರ್ಣದರ್ಶನ ಮಾಡುವುದು, ಆಮೇಲೆ ನೋಡೋಣ; ಒಂದೆರಡು ದಿನಗಳಲ್ಲಿಯೇ ಬೆಂಗಳೂರು ಎಂದು ಆಲೋಚಿಸುತ್ತಲೇ ಪ್ರಾತರ್ವಿಧಿಗಳನ್ನು ಪೂರೈಸಿದ್ದ.
ಬಟ್ಟೆ ಧರಿಸಿ ಸಿದ್ಧವಾದಾಗ ಗಂಟೆಯೆಷ್ಟಿರಬಹುದೆಂದು ಗಡಿಯಾರ ನೋಡಿಕೊಂಡ; ಅದು ನಾಲ್ಕು ಗಂಟೆಯನ್ನು ಶಾಶ್ವತವಾಗಿ ತೋರಿಸುತ್ತ ನಿಶ್ಚಲವಾಗಿತ್ತು.ಕೆ ಳಗೆ ಹೋಗಿ ರಿಸೆಪ್‍ಷನ್ನಿನಲ್ಲಿ ತೂಗುಹಾಕಿದ್ದ ಗೋಡೆ ಗಡಿಯಾರದತ್ತ ನೋಡಿದ ಹೇಮಂತ; ಬೆಳಿಗ್ಗೆ ಏಳೂ ನಲವತ್ತು. ಇನ್ನೂ ಸ್ವಲ್ಪ ಟೈಮಿದೆ ಎಂದುಕೊಂಡು ರೂಮಿಗೆ ಗಡಿಯಾರ ಅಲುಗಾಡಿಸಿದ, ಉಹ್ಞೂ ಅದಕ್ಕೆ ಜೀವ ಹೋದಂತಿತ್ತು. ಆಟೋಮ್ಯಾಟಿಕ್‍ ಗಡಿಯಾರವಾದದ್ದುದರಿಂದ ಕೀ ಕೊಡದೆ ನಿಂತುದರಲ್ಲಿ, ಏನೋ ಕೆಟ್ಟಿದೆ ಎಂದುಕೊಂಡು ಅದನ್ನು ಪ್ಯಾಂಟ್ ಜೇಬಿಗೆ ಸೇರಿಸಲು ಹೊರಟವನು ಮನಸ್ಸು ಬದಲಾಯಿಸಿ ಕೈಗೇ ಕಟ್ಟಿಕೊಂಡ, ಗಡಿಯಾರ ಹಸ್ತಭೂಷಣ ಎನ್ನಿಸಿ ನಗು ಬಂತು. ಹಾಗೇ ಕಣ್ಣಾಡಿಸಿದಾಗ ನಿನ್ನೆ ರಾತ್ರಿ ಬಸ್ಸಿನಿಂದ ಇಳಿಯುವಾಗ ಸೀಟಿನಡಿ ಸಿಕ್ಕಿದ್ದ ಪತ್ರಿಕೆಯು ತಲೆದಿಂಬಿನ ಬಳಿ ಇದ್ದುದ್ದರ ಕಡೆ ಗಮನ ಹೋಯಿತು.ರಾತ್ರಿ ಅದನ್ನು ಓದಲಾಗಿರಲಿಲ್ಲ; ಬಂದಾಗಲೇ ಒಂಬತ್ತೂ ಮುಕ್ಕಾಲು, ಎಲ್ಲ  ರೆಡಿ ಮಾಡಿಕೊಂಡು ಆರಾಮವಾಗುವ ಹೊತ್ತಿಗೆ ಹತ್ತೂಕಾಲು, ಊಟದ ಶಾಸ್ತ್ರ ಮುಗಿಸಿ ಬಂದಿದ್ದನಲ್ಲ. ಕಣ್ಣಿಗೆ ಮೆತ್ತಿಕೊಂಡು ಬರುತ್ತಿದ್ದುದರಿಂದ ಈಗೇನು ಎಂದುಕೊಂಡು ದೀಪವಾರಿಸಿ ಮಲಗಿಕೊಂಡಿದ್ದ. ದಿನವೆಲ್ಲ ಪ್ರಯಾಣಮಾಡಿ ದೇಹ ಆಯಾಸಗೊಂಡಿದ್ದುದರಿಂದ ತಕ್ಷಣ ನಿದ್ದೆ ಹತ್ತಿತ್ತು. ಎದ್ದಾಗ ಬೆಳಕು ಹರಿದಿತ್ತು.
 ನಿನ್ನೆ ಬೆಳಿಗ್ಗೆ ಬಾಗಲಕೋಟೆಯಲ್ಲಿದ್ದ. ಅಲ್ಲಿನ ವಾತಾವರಣ, ಕಣ್ಣಿಗೆ ಕಾಣುತ್ತಿದ್ದ ಊರಿನ ಪರಿಗೂ ಈಗ ಅಂಕೋಲೆಯ ವಾತಾವರಣ-ರೀತಿಗಳೂ ಎಷ್ಟು ವ್ಯತ್ಯಾಸವೆನ್ನಿಸಿತು. ನಿನ್ನೆ ಅಲ್ಲಿ ಎದ್ದಾಗಲೂ ಸೂರ್ಯ ಇದೇ ರೀತಿ ಹೊಂಗಿರಣಗಳನ್ನು ಎರಚಿದ್ದ ಭೂಮಿಯ ಮೇಲೆ; ಇಲ್ಲೂ ಅಷ್ಟೆ. ಭೂಮಿಯ ಮೈ ವ್ಯತ್ಯಾಸವಾದರೇನು, ಸೂರ್ಯ ಒಂದೇ ಎನ್ನಿಸಿತು. ಬಾಲಗಕೋಟೆ ಮೂರು ದಿನಗಳಲ್ಲಿ ತನ್ನ ಪರಿಚಯದ ಊರೇ ಏನೋ ಎನ್ನುವಂತೆ ಹತ್ತಿರವಾಗಿತ್ತು. ಈಗ ನೋಡಿದರೆ ಅದು ದೂರ ಸರಿದಿದೆ. ಎರಡು ದಿನ ಇಲ್ಲಿದ್ದರೆ ಅಂಕೋಲೆ ತನ್ನ ಊರೇ ಅನ್ನಿಸಬಹುದೇನೋ. ಸಾಮೀಪ್ಯದಿಂದ ತನ್ನದು ಅನ್ನಿಸುತ್ತದೆಯೋ ಮೂಲಭೂತವಾಗಿ ಯಾವ ಊರಿಗೂ ಯಾವ ವ್ಯಕ್ತಿಗೂ ಸಂಬಂಧವಿಲ್ಲವೇನೋ ಅನ್ನಿಸಿತು. ಬರಿಯ ಊರಿನ ಬಗ್ಗೆಯೇಕೆ, ವ್ಯಕ್ತಿ-ವ್ಯಕ್ತಿಗಳ ನಡುವಣ ಸಂಬಂಧವೂ ಹಾಗೆಯೇ ಅಲ್ಲವೇ? ಭೌತಿಕ ಸಾಮೀಪ್ಯದಿಂದ ಆತ್ಮೀಯತೆ ಬರಬಹುದು, ಭಯವಾಗಬಹುದು. ದೂರವಿದ್ದರೆ ಕಾಲಕ್ರಮೇಣ ಎಂಥ ಹತ್ತಿರದವರೂ ಮರೆತು ಹೋಗುತ್ತಾರೇನೋ. ಔಟ್ ಆಫ್ ಸೈಟ್; ಔಟ್ ಆಫ್ ಮೈಂಡ್ ಅಂತಾರಲ್ಲ. ಹಾಗೆ ಅನ್ನಿಸಿತು. ತಕ್ಷಣ ನಳಿನಿಯ ನೆನಪು ಬಂದು ಹಿಂದೆಯೇ ನಂದಿನಿ. ನಂದಿನಿ ಭೌತಿಕವಾಗಿ ದೂರವಾಗಿರುವುದರಿಂದ ಇನ್ನು ಕೆಲವು ದಿನಕಾಡಿ ಮನಸ್ಸಿನಿಂದ ದೂರವಾಗುತ್ತಾಳೆ. ಇನ್ನೆರಡು ದಿನಕ್ಕೆ ಬೆಂಗಳೂರಿಗೆ ಹೋದರೆ ತಾತ್ಕಾಲಿಕವಾಗಿ ದೂರವಿರುವ ನಳಿನಿ ಮತ್ತೆ ಹತ್ತಿರವಾಗುತ್ತಾಳೆ. ನಳಿನಿಯಲ್ಲೇ ನಂದಿನಿ ಅಂತರ್ಗತವಾಗಿ ಒಂದೇ ಆಗಿಬಿಡುತ್ತಾರೇನೋ.
ಕಾಲ ಬದಿ ಅಸ್ತವ್ಯಸ್ತವಾಗಿ ಬಿದ್ದಿದ್ದ ಬೆಡ್‍ಶೀಟನ್ನು ನೀಟಾಗಿ ಮಡಿಸಿ ಹಾಕಿ ಉರುಳಿಕೊಂಡು ಪೇಪರ್‍ ತೆಗೆದುಕೊಂಡು ತೇದಿ ನೋಡಿದ. ಹೌದು, ನಿನ್ನೆಯದೇ. ಮೊನ್ನೆ ಪೇಪರ್‍ ಕೂಡ ನೋಡಿರಲಿಲ್ಲ. ಹೋಗಲಿ ಏನಾಯಿತು? ನಿನ್ನೆ-ಮೊನ್ನೆಯನ್ನು ದಾಟಿಕೊಂಡು ಬಂದಿರುವುದರಿಂದ ಇದೇ ಸಾಕು. ಇವತ್ತು ನಿನ್ನೆಯನ್ನು ದಾಟಿಕೊಂಡು ಬಂದಿದೆ. ಆದ್ದರಿಂದ ಇವತ್ತಿನ ಪೇಪರ್ ನೋಡಿದರೆ ಸಾಕಲ್ಲವೇ ಎಂದುಕೊಂಡು ತನ್ನ ತರ್ಕಕ್ಕೆ ತಾನೇ ನಕ್ಕ ಹೇಮಂತ.
  ಇದೆಯಲ್ಲ ಎಂದು ಪೇಪರನ್ನು ನೋಡುತ್ತ ಹೋದ. ಮೊದಲ ಪುಟದ ಮೇಲೆ ಕಣ್ಣಾಡಿಸಿ ಶಶಿಧರ್ ಭಟ್ ಬಂದಾನೆಂದು ಬೇಗ ಬೇಗ ಪುಟ ತಿರುವತೊಡಗಿದ. ಬೆಂಗಳೂರಿನ ‘ಜನಧ್ವನಿ’ಯೇ ಅದು.ಪ್ರಾಯಶಃ ಅದು ಬಿಟ್ಟು ಹೋದವ್ಯಕ್ತಿ ಬೆಳಗಾವಿಯಲ್ಲೋ ಹುಬ್ಬಳ್ಳಿಯಲ್ಲೋ ನಿನ್ನೆ ಕೊಂಡುಕೊಂಡಿರಬೇಕು. ಅಂದರೆ ಇದು ಡಾಕ್ ಎಡಿಷನ್ನಿನದು. ಬೆಂಗಳೂರಲ್ಲಿ ನಿನ್ನೆ ಪ್ರಕಟವಾದ ಸುದ್ದಿ ಇದರಲ್ಲಿ ನಿನ್ನೆ ಬಂದಿರಬೇಕು. ಅಲ್ಲವೆ, ಬೆಂಗಳೂರಿನಲ್ಲಿ ಅದರ ಹಿಂದಿನ ದಿನ ನಡೆದ ವಿಷಯ ಮೊನ್ನೆ ಪ್ರಕಟವಾಗಿರುತ್ತದೆ. ಅಂದರೆ ಕಾಲದ ದೃಷ್ಟಿಯಿಂದ ಬೆಂಗಳೂರಿನ ತನ್ನ ಸಂಬಂಧ ವಿಷಯಗಳಿಗೆ ಸಂಬಂಧಿಸಿದಂತೆ ಮೂರು ದಿನಗಳ ಹಿಂದಿನದು ಎಂದುಕೊಂಡೇ ಪುಟಗಳನ್ನು ತಿರುವಿದ್ದ. ಐದನೆಯ ಪುಟದಲ್ಲಿ ಪ್ರಕಟವಾಗಿದ್ದ ಒಂದು ಚಿತ್ರ ಕಣ್ಣಿಗೆ ಬಿತ್ತು. ಕಣ್ಣು ನಾಟಿತು; ಹೆಂಗಸರೇ ಹೆಚ್ಚಾಗಿದ್ದ ಮೆರವಣಿಗೆಯೆಂದು ಅರ್ಥವಾಯಿತು; ಏಕೆಂದರೆ ಅವರಲ್ಲಿ ಕೆಲವರು ಕೈಯಲ್ಲಿ ಘೋಷಣಾಫಲಕಗಳನ್ನು ಹಿಡಿದಿದ್ದರು. ಅವುಗಳಲ್ಲಿ ಏನು ಬರೆದಿತ್ತೆಂದು ಕಾಣುವಂತಿರಲಿಲ್ಲ. ತೀರ ಸಣ್ಣವಾಗಿ ಬಂದಿದ್ದುದಲ್ಲದೆ, ಮಸಿ ತುಂಬಿ ಓದಲಾಗುತ್ತಿರಲಿಲ್ಲ. ಕೆಳಗೆ ಶೀರ್ಷಿಕೆಯಿತ್ತು. “ಮಹಿಳಾ ದೌರ್ಜನ್ಯವನ್ನು ಪ್ರತಿಭಟಿಸಿ ನಗರದಲ್ಲಿ ನಡೆದ ‘ಸಮತಾ’ ದವರ ಮೆರವಣಿಗೆಯ ಒಂದು ನೋಟ.”
ಏನು ದೌರ್ಜನ್ಯ, ಏನು ಪ್ರತಿಭಟನೆಯೆಂಬ ಕುತೂಹಲದ ಜೊತೆಗೆ ಎದೆಬಡಿತ ತೀವ್ರವಾಯಿತು. ಚಿತ್ರದ ಕೆಳಗೆ ಮುದ್ರಿತವಾಗಿದ್ದ ವರದಿಯನ್ನು ಓದತೊಡಗಿದಂತೆ ಅವನ ಮುಖಕಪ್ಪಿಡುತ್ತ ಹೋಯಿತು. ಒಂದೆರಡು ಬಾರಿ ನಂದಿನಿಯ ಹೆಸರೂ ತನ್ನ ಹೆಸರೂ ಅಚ್ಚಾಗಿತ್ತು. ಪೂರ್ತಿ ಓದುವ ಮುಂಚೆಯೇ ಅವನಿಗೆ ವಿಷಯ ಅರಿವಾಯ್ತು. ನಂದಿನಿಯ ಆತ್ಮಹತ್ಯೆಗೆ ಕಾರಣವಾದ ತನ್ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಡೆದ ಮೆರವಣಿಗೆಯದು! ಅಂದರೆ, ಈಗ ತಾನು ಎಲ್ಲರ ಕಣ್ಣಿನಲ್ಲೂ ಅಪರಾಧಿ, ನಂದಿನಿಯ ಆತ್ಮಹತ್ಯೆಗೆ ಪ್ರೇರಕ ಅಥವಾ ಕೊಲೆಗಡಕ. ನಂದಿನಿ ಸತ್ತದ್ದು ತುಮಕೂರಿನಲ್ಲಿ, ಮೆರವಣಿಗೆ ನಡೆದಿದ್ದುದು ಬೆಂಗಳೂರಲ್ಲಿ. ಅಲ್ಲಿಂದ ಇಲ್ಲಿಗೆ ಸುದ್ದಿ ಮಾತ್ರವಲ್ಲದೆ ಪ್ರತಿಭಟನೆ ಹರಿದು ಬಂದಿದೆಯೆಂದ ಮೇಲೆ ವಿಷಯ ಜನಜನಿತವಾಗಿರಬೇಕು, ತುಮಕೂರಲ್ಲೂ ನಡೆಯಿತೇನೋ, ಮೈಸೂರಲ್ಲಿ ಮೊನ್ನೆ ಆಗಿರಬೇಕು, ನಿನ್ನೆ ಧಾರವಾಡದಲ್ಲಿ, ಪ್ರಾಯಶಃ ಈ ದಿನ ಮಂಗಳೂರಲ್ಲಿ ತನ್ನ ವಿರುದ್ಧ ಪ್ರತಿಭಟನೆ ನಡೆಯಬಹುದು. ಎಲ್ಲೆಡೆ ತನಗೆ ಪ್ರತಿಭಟನೆ, ಹೀಗೆಲ್ಲ ನಡೆದಿರಬೇಕಾದರೆ ತನ್ನ ವಿರುದ್ಧ ಪೊಲೀಸರಿಗೆ ದೂರು ಹೋಗಿರಬೇಕು. ‘ನಿನ್ನತಕ್ಕ ಶಾಸ್ತಿಮಾಡಿಸುತ್ತೇನೆ’ ಎಂದು ಕಾಗದದಲ್ಲಿ ಬರೆದ ಮಾಧವರಾವ್ ತನ್ನ ಮೇಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿರಬೇಕು. ಎಲ್ಲ ಕಡೆ ಪೊಲೀಸರು ವಿಷಯ ತಿಳಿಸಿ ತನ್ನ ಸೆರೆಗೆ ಆದೇಶ ನೀಡಿರಬೇಕು. ತನ್ನನ್ನು ಕಂಡ ಪೊಲೀಸರು ಮುಖ ನೋಡಿದರೆ ಹೇಮಂತನೇ ಇವನು ಎಂದು ತಿಳಿಯಲಾರರೇ?
ಹೇಮಂತ ತನ್ನ ಕೊಲೆಗಡುಕುತನ ತನ್ನ ಮೋರೆಯ ಮೇಲೆ ಕೈಯೆತ್ತಿ ಕರೆಯುತ್ತಿದೆಯೇನೋ, ಹೊರಗೆ ಹೋದರೆ ಪೊಲೀಸರು ಕೈಕೋಳ ತೊಡಿಸಿ ಅರೆಸ್ಟ್ ಮಾಡುತ್ತಾರೆ. ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತ ಠಾಣೆಗೆ ಕರೆದೊಯ್ಯುತ್ತಾರೆ. ಎರಡೂ ಬದಿಗಳಲ್ಲಿ ಜನ ನಿಂತು ನೋಡುತ್ತಾರೆ. ಏನು ವಿಚಾರವೆಂದು ಪೇದೆಗಳನ್ನು ಪ್ರಶ್ನಿಸುತ್ತಾರೆ. ತನ್ನ ವಿಷಯವೆಲ್ಲ ಜನರಿಗೆ ತಿಳಿಯುತ್ತದೆ. “ಇವನ ಮನೆ ಕಾಯವಾಗ, ನೋಡಕ್ಕೆ ಎಂಥ ಸಂಭಾವಿತನಂತೆ, ಮಾಡಿರೋದು ಹಲ್ಕ ಕೆಲಸ. ಚಮಡ ಸುಲೀಬೇಕು ಇಂಥ ಬೇವರ್ಸಿ ನನ್ನ ಮಕ್ಕಳದು” ಎಂದು ಎಲ್ಲರೂ ಕ್ಯಾಕರಿಸಿ ಮುಖದ ಮೇಲೆ ಉಗುಳುತ್ತಾರೆ. ಹೊರಗೆ ಹೋಗದೆ ಇಲ್ಲಿಯೇ ಅಡಗಿಕೊಂಡುಬಿಡಲೇ ಇನ್ನೇನು ಎಂಟು ಗಂಟೆಯಾಗಿರಬೇಕು. ಶಶಿಧರ್‍ ಭಟ್ ಬರುತ್ತಾನಲ್ಲ.
ತನ್ನನ್ನು ಸಂದರ್ಶನ ಮಾಡಲು ಬರುತ್ತೇನೆಂದು ಅವನು ಹೇಳಿದ್ದು ಇದಕ್ಕೇ ಇರಬೇಕು. ನಿನ್ನೆ ಅವನು ’ಜನಧ್ವನಿ’ಯನ್ನು ನೋಡಿಯೇ ಇರುತ್ತಾನೆ. ಅವನೇ ಪತ್ರಕರ್ತ. ಇತರ ಪತ್ರಿಕೆಗಳಲ್ಲಿ ಏನು ಸುದ್ದಿ ಪ್ರಕಟವಾಗಿದೆಯೆಂದು ಓದದೇ ಇರುತ್ತಾನೆಯೇ, ಆದರೆ ಒಂದು ಸುಳಿವಾದರೂ ಈ ವಿಷಯ ನೀಡಿದನೇ ಅವನು? ಅಥವಾ ವಿಷಯ ಅವನಿಗೆ ಗೊತ್ತಿಲ್ಲವೊ? ಗೊತ್ತಿದ್ದರೆ ನಿನ್ನೆಯೇ ತನ್ನನ್ನು ನೇರವಾಗಿ ಪೊಲೀಸ್ ಠಾಣೆಗೇಕೆ ಎಳೆದುಕೊಂಡು ಹೋಗಲಿಲ್ಲ?. ಆ ಇಲ್ಲ, ಅವನು ಪತ್ರಕರ್ತ, ತನ್ನನ್ನು ಪೊಲೀಸರಿಗೆ ಒಪ್ಪಿಸುವುದಕ್ಕಿಂತ ತನ್ನ ಬಗ್ಗೆ ರೋಚಕವಾಗಿ ಸುದ್ದಿ ಮಾಡಲು ಅವನ ಹವಣಿಕೆಯಿರಬೇಕು. ಅದಕ್ಕಾಗಿಯೆ ತನಗೆ ಬಹುಮಾನ ಬಂದ ವಿಷಯದ ನೆಪವೊಡ್ಡಿ ನಯವಾಗಿ ತನ್ನನ್ನು ಸಂದರ್ಶನಕ್ಕೆ ಒಪ್ಪಿಸಿದ. ಅವನಿಂದ ತಪ್ಪಿಸಿಕೊಳ್ಳಬೇಕಲ್ಲ.
ಆದುದಾಗಲಿ ಎಂದು ಬಟ್ಟೆಗಳನ್ನು ಗಡಿಬಿಡಿಯಿಂದ ಜೋಡಿಸಿ ಸೂಟ್‍ಕೇಸಲ್ಲಿ ತುರುಕಿದ. ಬೇಗ ಬಾಗಿಲು ಮುಚ್ಚಿ, ರೂಮಿಗೆ ಬೀಗ ಹಾಕಿ ದಡದಡ ಮೆಟ್ಟಿಲಿಳಿದು ರಿಸೆಪ್‍ಷನ್ನಿಗೆ ಬಂದ. ಇವನು ಬಂದ ರೀತಿ ನೋಡಿ ಮಾಲೀಕ ಗಾಬರಿಯಾದ “ಯಾಕೆ ಮಾರಾಯರೇ?” ಎಂದು ಪ್ರಶ್ನಿಸಿದ. ಅವನೂ ತನ್ನ ವಿಷಯ ನಿನ್ನಿನ ಪೇಪರಲ್ಲಿ ಓದಿರಬಹುದು ಎನ್ನಿಸಿತು, ತನ್ನ ಫೋಟೋ ಪ್ರಕಟವಾಗದ್ದರಿಂದ ತಾನೇ ಹೇಮಂತ ಎಂದು ಗುರುತಿಸಲಾರ ಅಥವಾ ಶಶಿಧರ ಭಟ್ ರಾತ್ರಿ ಪಿಸುಗುಟ್ಟಿ ತನ್ನ ಮೇಲೆ ನಿಗಾ ಇಡಲು ಈತನಿಗೆ ಹೇಳಿ ಹೋಗಿರಬಹುದೇ? ಕುಡಿನೋಟದಿಂದ ಅವನ ಕಡೆ ನೋಟ ಹಾಯಿಸಿದ. ಎದುರಿಗೆ ನಿಂತ ಇವನನ್ನು ಅವನು ನೋಡುತ್ತಿರಲಿಲ್ಲ; ಗಲ್ಲದೊಳಗೆ ಏನೋ ಹುಡುಕುತ್ತಿದ್ದ. ಇಲ್ಲ, ಅವನಿಗೆ ಗೊತ್ತಿಲ್ಲ, ಸದ್ಯ ಪಾರಾದೆ, ತಕ್ಷಣ ಎಲ್ಲರಿಂದ ದೂರ ಹೋಗಬೇಕು ಅಂದುಕೊಂಡ.
“ಎಷ್ಟು ದುಡ್ಡು ಕೊಡಬೇಕು? ಒಂದು ರಾತ್ರಿ ರೂಂಗೆ, ಒಂದು ಊಟಕ್ಕೆ?” ಬಡಬಡ ಕೇಳಿದ.
“ಯಾಕೆ ಮಾರಾಯರೆ ನಮ್ಮ ಭಟ್ಟರು ಬರ್ತೇಂತ ಹೇಳಿದ್ದರಲ್ಲ” ಎಂದು ಅವನು ಪ್ರಶ್ನಿಸಿದ.
“ಇಲ್ಲ ಅರ್ಜೆಂಟ್ ಹೋಗಬೇಕು”
“ಸರಿ ಮಾರಾಯರೆ” ಎಂದು ಹಣ ಪಡೆದು ಚಿಲ್ಲರೆ ನೀಡಿದ.
ಹೋಟೆಲಿನಿಂದ ಹೊರಬರುವಾಗ ಆಕಡೆ ಈ ಕಡೆ ಗಮನ ಹರಿಸಿದ. ಶಶಿಧರ ಭಟ್ಟನೇನಾದರೂ ಕಾಣಿಸಬಹುದೇ ಎಂದು, ಇಲ್ಲ. ದೇವರ ದಯೆ. ಅವನಿಂದ ಪಾರಾದರೆ ಸಾಕು ಅಥವಾ ಪಾರಾಗಿ ಎಲ್ಲಿಗೆ ಹೋಗುವುದು? ಎಲ್ಲ ಕಡೆ ತನ್ನ ವಿಷಯ ಜನಜನಿತವಾಗಿದೆಯಲ್ಲ .ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ನಳಿನಿ ಪೊರಕೆ ಸಿದ್ಧವಾಗಿಟ್ಟುಕೊಂಡು ನಿಂತಿರಬಹುದೇನೋ; ತಾನು ಮನೆಗೆ ಹಿಂತಿರುಗಿದರೆ ರಪರಪನೆ ಬಡಿಯುತ್ತಾಳೇನೋ, ಕವಿತಾಳಿಗೆ “ಕ್ಯಾಕರಿಸಿ ಉಗಿಯೇ” ಎಂದು ಹೇಳಿಕೊಡುತ್ತಾಳೇನೋ. ಆಫೀಸಿನಲ್ಲಿ? ಇನ್ನು ತನಗೆಲ್ಲಿ ಆಫೀಸು. ತಾನು ಕ್ರಿಮಿನಲ್. ಕೆಲಸದಿಂದ ತೆಗೆದು ಹಾಕುತ್ತಾರೆ.ಜೈಲಿನಲ್ಲಿ ಅವರು ಹಾಕಿದ ಮುದ್ದೆ ಅನ್ನ ತಿನ್ನುತ್ತ ಬಾಳು ನೂಕಬೇಕು. ತನ್ನ ಕೈಲಿ ಕಲ್ಲು ಒಡೆಸುತ್ತಾರೇನೋ, ಸೌದೆ ಸೀಳಿಸುತ್ತಾರೇನೋ, ಇಟ್ಟಿಗೆ ಹೊರಿಸುತ್ತಾರೇನೋ. ತನ್ನ ಬಾಳು ಇನ್ನು ಅವರಿವರ ಉಗುಳನ್ನು ನುಂಗಿ ನಡೆಯಬೇಕು.
ದಾರಿ ನಡೆಯುತ್ತ ಬಂದಂತೆ ಹೊಳೆಯುವ ಬೆಳಗಿನ ಸೂರ್ಯ ಕಿರಣಗಳೂ ಕಪ್ಪಿಟ್ಟವು. ಪೂರ್ಣ ಸೂರ್ಯಗ್ರಹಣವಾಗಿ ಕತ್ತಲಾವರಿಸಿತೆಂಬಂತೆ ಕಾಣಿಸಿತು. ಸೂರ್ಯನನ್ನೂ ನುಂಗಿ ಗ್ರಹಣಕ್ಕೆ ಕಾರಣವಾಗುವ ರಾಹು ತಾನು ರಾಕ್ಷಸ ತನ್ನನ್ನು ಭೂಮಿಯೂ ಹೂತರೆ ಕಬಳಿಸಲಾರಳು; ಸುಟ್ಟರೆ ಬೆಂಕಿ ಸುಡಲಾರದು ಏನು ಮಾಡುವುದು, ಎಲ್ಲಿ ಹೋಗುವುದು? ತನ್ನ ಪರಿಚಯದ ಜನರೆಲ್ಲ ತನ್ನನನು ಏನೆಂದು ಕಂಡಾರು, ಹೇಗೆ ಮಾತಾಡಿಸಿಯಾರು? ಆಪ್ತರೆಲ್ಲ ಅಪರಿಚಿತರಾಗಿಬಿಡುತ್ತಾರೆ. ಮೇಲಿನಿಂದ ಯಾವುದಾದರೂ ಪಿಶಾಚಿ ಹದ್ದಿನಂತೆ ಹಾರಿಬಂದು ಹೊತ್ತುಕೊಂಡು ಹೋಗಬಾರದೇ! ಕಾಳ ಸರ್ಪವೊಂದು ಕಚ್ಚಿ ಕೊಲ್ಲಬಾರದೇ! ತಾನಾಗಿ ಸಾಯಲಾರೆ. ಸಾಯಲು ಪ್ರಯತ್ನಿಸುವುದಾದರೂ ಹೇಗೆ? ಏನು ಮಾಡಿದರೆ ತಕ್ಷಣ ಸಾಯಬಹುದು. ಶರಣರ ಗುಣ ಮರಣದಲ್ಲಿ ನೋಡು ಅಂತ ಗಾದೆಯಿದೆಯಲ್ಲ. ಉತ್ತಮರಾದವರು ನೋವಿಲ್ಲದೆ ಸಾಯುತ್ತಾರೆ, ತಾನು ಹಾಗೆ ಸಾಯಲಾರೆ, ಹಿಂಸೆ ಅನುಭವಿಸಬೇಕು. ಆಮೇಲೆ ನಿಧಾನವಾಗಿ ಸಾಯಬೇಕು. ಸಾವಿನ ಕರಾಳ ದಾಡೆಗಳು ಅವನನ್ನು ಚುಚ್ಚಬಂದಂತೆ ಭಯವಾಯಿತು. ಬೆವರಲು ತೊಡಗಿದ್ದ; ಬಾಯ ದ್ರವವೆಲ್ಲ ಆರಿಹೋಯಿತು.
“ನಿಲ್ಲಿ ಮಾರಾಯರೇ, ಯಾಕೆ ಆಗಲೇ ಹೊರಟಿರಲ್ಲ.” ಎಂದು ಕೂಗಿದಂತಾಯಿತು. ಉದ್ದೇಶವಿರದಿದ್ದರೂ ಅವನ ಕತ್ತು ಹಿಂದೆ ತಿರುಗಿತು. ಶಶಿಧರಭಟ್ಟ ಭರಭರ ಹಿಂಬಾಲಿಸುತ್ತಿದ್ದಾನೆ. ಅವನ ತಲೆಯೆಲ್ಲ ಕೆದರಿಕೊಂಡು ಮುಳ್ಳುಹಂದಿಯಂತೆ ಕಾಣುತ್ತದೆ, ಕೈಕಾಲುಗಳು ಚಲಿಸುತ್ತ ಬೃಹದಾಕಾರದ ಏಡಿಯು ಧಾವಿಸಿಬರುತ್ತಿರುವಂತೆ ತೋರುತ್ತಿದೆ. ಅವನ ಬಗಲಿನ ಚೀಲ ಆಕಡೆ ಈಕಡೆ ಸುಳಿಯುತ್ತ ತನ್ನ ಜೀವವನ್ನೇ ತುಂಬಿಕೊಳ್ಳಲು ಬಂದ ಭೂತದಂತೆ ಕಣ್ಣು ಸುಡುತ್ತಿದೆ. ಇಲ್ಲ ಸತ್ತರೂ ಸರಿ, ಭಟ್ಟನಿಗೆ ಸಿಕ್ಕಬಾರದೆಂಬ ನಿರ್ಧಾರದಿಂದ ಹೇಮಂತನ ಕಾಲುಗಳು ಮುಂದುವರಿದವು.
“ಐದು ಮಿನಿಟು ಲೇಟಾದರೆ ಓಡಿ ಬರೋದಾ ಮಾರಾಯರೇ? ನಾನು ಗೋಕರ್ಣ ತಲುಪಿಸ್ತೇನೆ. ಆಯ್ತಾ” ಎಂಬ ಭಟ್ಟನ ಧ್ವನಿ ಗಾಳಿಯಲ್ಲಿ ಕರಗಿತ್ತೇ ವಿನಾ ಹೇಮಂತನ ಕಿವಿ ತಲುಪಲಿಲ್ಲ. ರಸ್ತೆಯಿರುವಷ್ಟು ಕಾಲ ಅವನ ಕಾಲಿಗೆ ದಾರಿ ಗೊತ್ತು.
ಇದೇನು ವಿಚಿತ್ರ ಈ ಮನುಷ್ಯ ಅನ್ನಿಸಿತು ಶಶಿಧರ ಭಟ್‍ಗೆ, ಏನಾಗಿದೆ ಈತನಿಗೆ? ಇವನು ಹೇಮಂತ ಹೌದು ಅಲ್ಲವೋ ಎಂಬ ಅನುಮಾನ ಬಂದು ಕಣ್ಣುಜ್ಜಿಕೊಂಡು ನೋಡಿದ, ಅವನೇ?ಒಮ್ಮೆ ಮೋರೆ ಇತ್ತ ತಿರುವಿದ್ದನಲ್ಲ, ಸ್ಪಷ್ಟವಾಗಿ ಕಾಣಿಸಿತ್ತು. ಹೋಟೆಲಿಗೆ ಹೋದರೆ ಹೇಮಂತ ಆಗಲೇ ರೂಂ ಖಾಲಿ ಮಾಡಿರುವುದು ತಿಳಿಯಿತು. ತನಗೆ ಸಿಕ್ಕದೆ ಎಲ್ಲಿ ಹೋದಾನೆಂದು ದಡದಡ ಬಂದಿದ್ದ ಅವನು. ಆದರೆ ಹೇಮಂತ ಈ ರೀತಿ ನಡೆದುಕೊಳ್ಳುತ್ತಿದ್ದಾನಲ್ಲ. ಅವನು ಮೋರೆ ಈಕಡೆ ತಿರುಗಿಸಿದಾಗ ಅವನು ಹೆದರಿದಂತೆ ಕಾಣಿಸಿತ್ತಲ್ಲ. ಏನಾಗಿರಬಹುದು? ಯಾಕೆ ಈ ಮನುಷ್ಯ ಹೀಗಾಡುತ್ತಿದ್ದಾನೆ.  ನೋಡಿಯೇ ಬಿಡುವಾ. ಅವನ ಕಾಲಿಗೆ, ಈ ನಿರ್ಧಾರ, ವೇಗ ಇಮ್ಮಡಿಸುವಂತೆ ಮಾಡಿತ್ತು.
 ಒಮ್ಮೊಮ್ಮೆ ಅರ್ಧ ಕತ್ತು ತಿರುಗಿಸಿ ಹಿಂಬಾಲಿಸುತ್ತಿದ್ದಾನೆಂದು ಖಚಿತ ಮಾಡಿಕೊಳ್ಳುತ್ತ ಹೇಮಂತ ದಾಪುಗಾಲು ಹಾಕುತ್ತ ನಡೆದರೆ ಹಿಂದೆ ಶಶಿಧರ ಭಟ್ಟ. ಒಂದಿಬ್ಬರು ದಾರಿಹೋಕರು ಇವರ ಕಡೆ ಅಚ್ಚರಿಯಿಂದ ನೋಡಿದ್ದು ಉಂಟು. ಏನು ವ್ಯವಹಾರವೋ ಎಂದು ಅವರು ತಮ್ಮ ತಮ್ಮ ದಾರಿ ಹಿಡಿದಿದ್ದರು. ದಾರಿಹೋಕರಿಗೆ “ಅವರನ್ನುಹಿಡಿಯಿರಿ” ಎಂದು ಕೂಗಿ ಹೇಳಲೇ ಎಂಬ ಯೋಚನೆ ಭಟ್ಟನಿಗೆ ಒಮ್ಮೆ ಬಂತು. ಛೆ, ಯಾವ ಕಾರಣದಿಂದಲೋ ತನ್ನಿಂದ ತಪ್ಪಿಸಿಕೊಳ್ಳುವವನಂತೆ ಹೇಮಂತ ಹೋಗುತ್ತಿದ್ದಾನೆ. ಹಿಡಿಯಿರಿ ಎಂದರೆ ಜನ ಕಳ್ಳನೋ ಕೊಲೆಗಾರನೋ ಎಂದು ಭಾವಿಸಿ ಹಿಡಿದು ನಿಲ್ಲಿಸುವುದೇ ಅಲ್ಲ ನಾಲ್ಕು ಬಡಿದರೂ ಸರಿಯೇ. ಸೂಕ್ಷ್ಮಜ್ಞನಾದ ಹೇಮಂತನಿಗೆ ಅದರಿಂದ ಎಷ್ಟು ಅವಮಾನವಾಗಬೇಡ. ಉಹ್ಞೂ, ಅದು ಸರಿಯಲ್ಲ ಎಂದು ತಾನೇ ಆಪ್ತನಾಗಿ ವಿಚಾರ ತಿಳಿಯಬೇಕೆಂದು ಆತ ನಿರ್ಧರಿಸಿದ.
ಇದ್ದಕ್ಕಿದ್ದಂತೆ ಒಂದೆಡೆ ಕಿರುದಾರಿಯಲ್ಲಿ ಹೇಮಂತ ತಿರುಗಿದ. ಆದರೆ ಅದೇ ಊರಿನವನಾದ ಶಶಿಧರ ಭಟ್ಟನಿಗೆ ದಾರಿ ಹೇಳಿಕೊಡಬೇಕೇ! ಒಂದು ಬೇಲಿ ದಾಟಿ ಹತ್ತಿರದ ದಾರಿ ಹಿಡಿದು ಎರಡೇ ನಿಮಿಷ ನಡೆದಾಗ ಹೇಮಂತನಿಗೆ ಎದುರಾಗಿಯೇ ಬಂದಿದ್ದ. ಹಿಂದೆ ಬಂದಾನೆಂದು ಭಾವಿಸಿರದಿದ್ದ ಹೇಮಂತನಿಗೆ ಭಟ್ಟ ಎದುರಾದಾಗ ಗಾಬರಿಯಾಯಿತು. ಕೈಯಲ್ಲಿ ಸೂಟ್‍ಕೇಸ್ ಹಿಡಿದು ಪಕ್ಕ ತಿರುಗಿ ಓಡತೊಡಗಿದ. ಅವನ ಹಿಂದೆ ಶಶಿಧರ್‍ ಭಟ್ಟನೂ ಓಡತೊಡಗಿದ. ಒಮ್ಮೆ ಚೀಲದಲ್ಲಿರಿಸಿಕೊಂಡಿದ್ದ ಕ್ಯಾಮೆರಾ ತೆಗೆದು ಫೋಕಸ್ ಮಾಡುತ್ತ ಒಂದು ಕ್ಷಣ ನಿಂತಾಗಲೇ ಅವನು ಕತ್ತು ಹಿಂದಿರುಗಿಸಿ ನೋಡಿ ತನ್ನಚಿತ್ರ ತೆಗೆಯುತ್ತಾನೆಂದು ಬೆದರಿ ಕಲ್ಲೊಂದನ್ನೆತ್ತಿ ಭಟ್ಟನೆಡೆಗೆ ಬೀಸಿ ಒಗೆದ. ಸುಮಾರು ದೂರವಿದ್ದುದರಿಂದ ಅದು ಇವನನ್ನು ತಾಕದೆ, ಬಂದ ದಾರಿಯಲ್ಲಿ ಮುಕ್ಕಾಲು ಭಾಗಕ್ಕೇ ಸುಸ್ತಾಗಿ ಏದುಸಿರು ಬಿಡುತ್ತ ಬಿದ್ದುಕೊಂಡಿತು. ಇವನು ಹುಚ್ಚನೇ ಆಗಿದ್ದಾನಲ್ಲ ಎನ್ನಿಸಿತು ಭಟ್ಟನಿಗೆ. ಅವನ ಕುತೂಹಲ ತುಂಬಿದ ವರದಿಗಾರತನ ಅವನನ್ನು ಹಿಂಬಾಲಿಸಲು ಪ್ರಚೋದಿಸಿತ್ತು.
ಓಡಿ ಓಡಿ ಬಂದಷ್ಟೂ ಅವರ ನಡುವಣ ಅಂತರ ಅಷ್ಟೇ ಉಳಿದಿತ್ತು. ಎಷ್ಟು ಓಡಿದರೋ, ಈಗ ರಸ್ತೆಯ ಮೇಲೆ ಬಂದಿದ್ದರು ಅಥವಾ ಹೇಮಂತ ಬಂದಿದ್ದ, ಅವನ ದಾರಿಯನ್ನು ನಿಷ್ಠೆಯಿಂದ ಭಟ್ ಅನುಸರಿಸಿದ್ದ, ಅವರು ಹೋಗುತ್ತಿದ್ದುದ್ದು ಈಗ ಒಂದು ಕಿರುದಾರಿ, ಊರಾಗಲೇ ಹಿಂದೆ ಸರಿದು ಎರಡು ನಿಮಿಷಗಳಾಗಿದ್ದವು. ಡಾಂಬರು ಹಾಕಿದ ರಸ್ತೆ, ಆಕಡೆ ಈಕಡೆ ತಾವರೆಗಳಂತಿದ್ದ ಹೂಗಳು ಎಲೆಗಳ ನಡುನಡುವೆ ಅರಳಿನಿಂತಿದ್ದ ವಿಸ್ತಾರವಾದ ಕುಂಟೆಗಳ ನಡುವಿನ ದಾರಿ ಅಥವಾ ಒಂದೇ ಆಗಿದ್ದ ಕೆರೆಯ ಮಧ್ಯೆ ಏರಿ ಮಾಡಿ ದಾರಿಯನ್ನು ನಿರ್ಮಿಸಿದ್ದಿರಬೇಕು. ಮುಂದೆ ಹೇಮಂತ, ಹಿಂದೆ ಭಟ್ಟ - ನಡೆಯುತ್ತಾರೆ, ಓಡುತ್ತಾರೆ. ಸಿಕ್ಕಿದನೆಂದು ಭಾವಿಸಿದರೆ ದೂರ ಸರಿಯುತ್ತಾನೆ, ದೂರವಾದನೆಂದು ವೇಗ ಹೆಚ್ಚು ಮಾಡಿದರೆ ತಾನೂ ವೇಗವಾಗಿ ಓಡುತ್ತಾನೆ.
ಈಗಂತೂ ಶಶಿಧರ ಭಟ್ಟನಿಗೆ ಗಾಬರಿಯಾಯಿತು. ಎದುರಿನಿಂದ ಒಂದು ಬಸ್ ವೇಗವಾಗಿ ಬರುತ್ತಿತ್ತು. ಆದರೆ ಹೇಮಂತ ಹಿಂದೆ ಮುಂದೆ ನೋಡುತ್ತಾ ಹೋಗುತ್ತಿದ್ದ. ಬಸ್ಸಿಗೆಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಾನೆಯೋ ಎಂಬ ಗಾಬರಿಯಾಗಿ ಜೋರಾಗಿ ಓಡಿದ ಭಟ್. ಅದನ್ನು ಕಂಡ ಹೇಮಂತ ಹಿಂದೆಮುಂದೆಂಬಂತೆ ಓಡುತ್ತಿದ್ದ. ಕೊನೆಗೊಮ್ಮೆ ಬಸ್ ಬಂತು, ಜೋರಾಗಿ. ಅದರಿಂದ ತಪ್ಪಿಸಿಕೊಳ್ಳಲೆಂಬಂತೆ ಹೇಮಂತ ರಸ್ತೆಯ ತುದಿಯಲ್ಲಿ ಓಡತೊಡಗಿದ.... ಟಳ್ ಎಂದು ಏನನ್ನೋ ಎಡವಿ ಧೊಪ್ಪನೆ ಪಕ್ಕದಲ್ಲಿದ್ದ ಕೆರೆಗೆ ಬಿದ್ದ. ಇಳಿಜಾರಾಗಿ ಕಟ್ಟಿದ್ದ ಏರಿಯ ಕಲ್ಲುಗಳ ಮೇಲೆ ಸರಸರ ಉರುಳಿ ಡಬ್ ಎಂದು ತಲೆ ಬಾಚುಗಲ್ಲಿಗೆ ಬಡಿದಾಗ ದೇಹ ನಿಂತಿತು. ಆ ಬಾಚುಗಲ್ಲೇ ಅದನ್ನು ತಡೆದು ಮುಂದೆ ಉರುಳದಂತೆ ಮಾಡಿತ್ತು.
ಆದ ಆಕಸ್ಮಿಕವನ್ನು ಕಂಡು ಎದೆಯು ವೇಗವಾಗಿ ಬಡಿಯುತ್ತಿರುವಂತೆಯೇ ಅದಕ್ಕಿಂತ ವೇಗವಾಗಿ ಓಡಿಬಂದ ಭಟ್ ಹತ್ತಿರ ಬಂದ. ಅವನು ಬರುವ ಕ್ಷಣಕ್ಷಣಕ್ಕೂ ತನಗೂ ಹೇಮಂತನಿಗೂ ನಡುವೆಯಿದ್ದ ಅಂತರ ಕಡಿಮೆಯಾಗುತ್ತಿತ್ತು. ಅವನು ಬಿದ್ದ ಸ್ಥಳಕ್ಕೆ ಭಟ್ಬರುವ ಹೊತ್ತಿಗೆ ಆಗಲೇ ಒಂದು ನಿಮಿಷವಾಗಿತ್ತೇನೋ. ಕಾಲ ಸರಿದಿತ್ತಲ್ಲ. ಕಾಲು ನೀರಲ್ಲಿ; ತಲೆ ಬಾಚುಗಲ್ಲಿನ ತುದಿಯಲ್ಲಿ; ಹೇಮಂತನ ದೇಹ ಅಸ್ತವ್ಯಸ್ತವಾಗಿ ಬಿದ್ದಿತ್ತು. ಅವನ ತಲೆಯಿದ್ದ ಭಾಗ ನಿಧಾನವಾಗಿ ಕೆಂಪಾಗತೊಡಗಿತ್ತು. ಅವನ ಚಾಚಿದ್ದ ಎಡಗೈನ ಕೊನೆಗೆ ಕಟ್ಟಿಕೊಂಡಿದ್ದ ವಾಚು ನಾಲ್ಕುಗಂಟೆಯನ್ನು ತೋರಿಸುತ್ತಿತ್ತು; ಹೇಮಂತ ಕಾಲಾತೀತನಾಗಿದ್ದ.
* * *
ಮಾರನೆಯ ದಿನ ‘ಕರಾವಳಿ’ ಪತ್ರಿಕೆಯ ಮುಖಪುಟದಲ್ಲಿ ನೇರವಾಗಿ ಶಶಿಧರ ಭಟ್ ಕಳಿಸಿದ್ದ ಚಿತ್ರಸಹಿತವಾದ ವರದಿ ಬಾಕ್ಸ್‍ನಲ್ಲಿ ಪ್ರಕಟವಾಗಿತ್ತು; “ಕಾದಂಬರಿಕಾರನ ದುರ್ಮರಣ” ಎಂಬ ಶೀರ್ಷಿಕೆಯಡಿಯಲ್ಲಿ; “ಅಂಕೋಲ. ಡಿಸೆಂ 9; ಕನ್ನಡದ ಜನಪ್ರಿಯ ಕಾದಂಬರಿಕಾರ ಶ್ರೀ ಹೇಮಂತರು ಇಂದು ನಗರದ ಹೊರವಲಯದಲ್ಲಿ ಕರುಣಾಜನಕ ರೀತಿಯಲ್ಲಿ ದುರ್ಮರಣಕ್ಕೀಡಾದರೆಂದು ವರದಿಮಾಡಲು ವಿಷಾದಿಸುತ್ತೇವೆ. ನಮ್ಮ ಪತ್ರಿಕೆಯ ವರದಿಗಾರರಿಗೆ ಇಂದು ಸಂದರ್ಶನ ನೀಡುವುದಾಗಿ ಒಪ್ಪಿದ್ದ ಅವರು ಇದ್ದಕ್ಕಿದ್ದಂತೆ ಬುದ್ಧಿಭ್ರಮಣೆಗೊಂಡವರ ಹಾಗೆ ಓಡುತ್ತ ಬಂದು ಊರ ಹೊರಗಿನ ರಸ್ತೆಯ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದರು; ಬಿದ್ದ ರಭಸಕ್ಕೆ ತಲೆಯು ಬಾಚುಗಲ್ಲೊಂದಕ್ಕೆ ಬಡಿದುದರಿಂದ ಮರಣ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಅಂಕೋಲೆಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಮುಂದಿನ ತನಿಖೆಯಲ್ಲಿ ತೊಡಗಿದ್ದಾರೆ.”
ಇದೇ ಸಾರಾಂಶದ ಸುದ್ದಿಯು ಸುದ್ದಿಸಂಸ್ಥೆಯೊಂದರ ಮೂಲಕ ಬೆಂಗಳೂರು ತಲುಪಲು ಒಂದು ದಿವಸ ತಡವಾದುದರಿಂದ ಅದು ಬೆಂಗಳೂರಿನ ಪತ್ರಿಕೆಗಳಲ್ಲಿ ಪ್ರಕಟವಾದದ್ದು ಅದರ ಮಾರನೆಯ ದಿನ.
*******


No comments: