ಪರಿಸ್ಥಿತಿ - 3
ನಂದಿನಿಯ
ಪರಿಚಯ ಹೆಚ್ಚು ಗಾಢವಾಗುತ್ತ ಸಾಗಿತ್ತು ಕಾಲ ಕಳೆದಂತೆ. ಆದರೆ ಹೇಮಂತನಿಗೆ ಅದು ಈ ರೀತಿ ತನ್ನ ಬಾಳಿನ
ಸುತ್ತ ಆವರಿಸುವ ರೇಷ್ಮೆ ಗೂಡಾಗಿ ಪರಿಣಮಿಸುತ್ತದೆಂಬ ಕಲ್ಪನೆಯಿರಲಿಲ್ಲ ಅಥವಾ ಯಾರಿಗೆ ಸಾಧ್ಯ? ನಿರ್ದಿಷ್ಟವಾದ
ಪರಿಚಯ. ಒಬ್ಬ ವ್ಯಕ್ತಿ ತನ್ನ ಬಗ್ಗೆ ಆಸ್ಥೆ ತೋರಿದರೆ ಗುಮಾನಿಯಿಂದ ನೋಡುವುದು ಸಾಧ್ಯವೇ? ಮನುಷ್ಯ-ಮನುಷ್ಯನ
ಸಂಬಂಧದಲ್ಲಿ ಬರೀ ವಿಶ್ವಾಸ, ಸ್ವಾರ್ಥರಹಿತ ಸ್ನೇಹ ಇರಲು ಸಾಧ್ಯವಿಲ್ಲವೇ? ಗಂಡು-ಹೆಣ್ಣಿನ ನಡುವೆ
ಸಹ ಸ್ನೇಹವಿರಲು ಯಾಕೆ ಆಗಬಾರದು? ಅವರಿಬ್ಬರ ನಡುವೆ ಲೈಂಗಿಕ ಸಂಬಂಧವಿರಲೇಬೇಕೇ ಅಥವಾ ಆ ಭಾವನೆಯಾದರೂ
ಕ್ರಿಯಾಶೀಲವಾಗಿರಬೇಕೇ ಹಿನ್ನೆಲೆಯಲ್ಲಿ? ಇಲ್ಲದಿದ್ದರೆ ಅವರ ಮಧ್ಯೆ ಪ್ರೀತಿ ಸುಳಿಯುವುದು ಅಸಾಧ್ಯವೇ?
ಗಂಡು-ಹೆಣ್ಣುಗಳ ಆಕರ್ಷಣೆಯ ಮೂಲ ಬಿಂದು ಮನಃಶಾಸ್ತ್ರಜ್ಞರ ಪ್ರಕಾರ ಲೈಂಗಿಕ ಆಕರ್ಷಣೆಯಾಗಿರಬಹುದು.
ಆದರೆ ಸಾಮಾಜಿಕ ಸ್ತರದಲ್ಲಿ ಅದರಿಂದ ಹೊರತಾಗಿರಲು ಸಾಧ್ಯವಿಲ್ಲವೇ? ಅಥವಾ ಪರಿಸರ ಹಾಗಿರಲು ಬಿಡುವುದಿಲ್ಲವೋ?
ನಂದಿನಿ
ಕೆಲವು ವೇಳೆ ಹೇಮಂತನಿಗೆ ಪತ್ರ ಬರೆಯುತ್ತಿದ್ದಳು; ಅದಕ್ಕೆ ಅವನು ಉತ್ತರ ಬರೆಯುತ್ತಿದ್ದ. ಹಾಗೆಯೇ
ಮಿಕ್ಕವರು ಕಾಗದ ಬರೆದರೂ ಉತ್ತರಿಸುವುದು ಅವನ ಪರಿಪಾಠ. ಶಿಸ್ತು ಅವನ ಜೀವನದ ಪ್ರಮುಖವಾದ ಪ್ರಭಾವ
ಬೀರುವ ಅಂಶ. ಅದು ಕೇವಲ ಶಿಸ್ತಲ್ಲ, ಅಂದರೆ ಕಟ್ಟುನಿಟ್ಟಾದ ಶಿಸ್ತಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ
ಹೇಗೆ ವರ್ತಿಸಬೇಕು ಎಂಬ ಬಗ್ಗೆ ಅವನ ವ್ಯಕ್ತಿತ್ವದಲ್ಲಿಯೇ ವಿವೇಕದ ಶಿಸ್ತಿನ ಕೀಲಿಕೈಯಿತ್ತು. ಹಾಗಾಗಿಯೇ
ಅವನು ಜನರಲ್ಲಿ ಆತ್ಮೀಯತೆಯುಂಟುಮಾಡಲು ಸಾಧ್ಯವಾಗಿದ್ದುದು. ನಂದಿನಿಯ ವ್ಯಕ್ತಿಪರಿಚಯವೂ ಇದ್ದುದರಿಂದ
ಇತರ ಮುಖತಃ ಪರಿಚಯವಿಲ್ಲದವರು ಬರೆದ ಕಾಗದದಂತೆ ಸಂಬಂಧರಹಿತ ವ್ಯವಹಾರವಾಗದೆ, ಅವಳ ಕಾಗದಗಳ ಹಿಂದೆ
ಅವಳ ಮುಖವೂ, ನಗುವೂ, ಹೂವಿನ ಕುಂಡಗಳಂತಹ ಕಣ್ಣುಗಳೂ ನಿಂತಿರುತ್ತಿದ್ದವು. ಗಾಗಿಯೇ ಅವನ ಉತ್ತರಗಳಲ್ಲಿ
ಹೆಚ್ಚು ಬಿಸುಪು ಇರುತ್ತಿತ್ತು, ಆರ್ದ್ರತೆಯೂ ಇರುತ್ತಿತ್ತು.
ನಂದಿನಿಯಲ್ಲಿ
ಹೇಮಂತನ ಬಗ್ಗೆ ಯಾವ ಬಗೆಯ ಭಾವನೆಗಳಿದ್ದವೋ? ಇದ್ದಾಗಲೇ ಹೇಳದವಳು ಸತ್ತ ನಂತರ ಹೇಳಿಯಾಳೇ? ಇತರರಿಗೆ
ಅವರ ನಡುವಣ ಸಂಬಂಧ ಎಂತಹುದೆಂದು ಹೇಗೆ ತಿಳಿಯಬೇಕು? ಅಥವಾ ಇದನ್ನು ಮನಿಸುವಷ್ಟರ ಮಟ್ಟಿಗೆ ಜನರ ನಡುವೆ
ಎದ್ದು ಕಾಣುವ ಸಂಬಂಧವೇ ಅವರದು, ಹೇಮಂತನಂತಹ ಹತ್ತಾರು ಜನಗಳಿಗೆ ಬೇಕಾದ ವ್ಯಕ್ತಿಯು ಯಾರ ಜೊತೆಗಾದರೂ
ಇದ್ದದ್ದು ಕಂಡರೆ ಅದಕ್ಕೆ ಸಲ್ಲದ ಬಣ್ಣಕಟ್ಟಲು ಸಾಧ್ಯವೇ? ನಳಿನಿಗೆ ಹಾಗನಿಸುತ್ತಿರಲಿಲ್ಲ, ಮದುವೆಯಾದ
ಹೊಸತರಲ್ಲೇನೋ ತನ್ನ ಗಂಡನ ಬಳಿ ಸುಳಿದಾಡುವ ಜನರ, ಅದರಲ್ಲೂ ಹೆಂಗಳೆಯರ ಬಗ್ಗೆ ಅಸಮಾಧಾನವಿರುತ್ತಿತ್ತು.
ಎಷ್ಟೋವೇಳೆ ಅಂತಹ ಸುಳಿದಾಟ ತಮ್ಮಿಬ್ಬರ ನಡುವಣ ಖಾಸಗೀ ಕ್ಷಣಗಳನ್ನು ಕಬಳಿಸಿಬಿಡುತ್ತಿದ್ದವಲ್ಲ; ಅದಕ್ಕೇ
ಮನುಷ್ಯ ಸಹಜ ಈರ್ಷೆ ಅವಳಲ್ಲಿ ಇಣುಕಿ ಹಾಕಿರಬಹುದು, ಆದರೆ ಬರಬರುತ್ತ ಅದಕ್ಕೆಲ್ಲ ನಳಿನಿ ಹೊಂದಿಕೊಂಡು
ಹೋದದ್ದು ಮಾತ್ರವೇ ಅಲ್ಲ, ತನ್ನ ಗಂಡ ಜನರ ದೃಷ್ಟಿಯಲ್ಲಿ ಗಣ್ಯನಾದವನೆಂಬಭಾವನೆ ಅವಳಲ್ಲಿ ಅವನ ಬಗ್ಗೆಹೆಚ್ಚು
ಅಭಿಮಾನವಿರಿಸಿಕೊಳ್ಳುವಂತೆಯೂ ಮಾಡಿತ್ತೆಂಬುದು ಸುಳ್ಳಲ್ಲ.
ಕಾಗದ
ಬರೆದರೆ ಉತ್ತರಿಸುವಂತೆಯೇ ಹೇಮಂತ ಮಾತಾಡಿಸಿಕೊಂಡು ಬಂದವರನ್ನು ಕಂಡು ಮೋರೆ ತಿರುಗಿಸದೆ ಮಾತಾಡಿ ಕಳಿಸುವ
ಸ್ವಭಾವದವನು, ಹರಟೆಪ್ರಿಯ. ನಿನ್ನನ್ನು ಕಾಣುವುದು ನನಗೆ ಸಂತೋಷದಾಯಕ, ನಿನ್ನೊಡನೆ ಮಾತಾಡುವುದು ನನಗೆ
ಹೆಮ್ಮೆ ಎಂದು ಯಾರಾದರೂ ತನಗೆ ಹೇಳಿದರೆ, ಎಂದರೆ ಆ ರೀತಿ ವರ್ತಿಸಿದರೆ ಎಂತಹವರಿಗೂ ಆನಂದವಾಗುವುದಿಲ್ಲವೇ?
ಅದರಲ್ಲೂ ಹೇಮಂತನಂತಹ ಯುವಕನಿಗೆ ನಂದಿನಿಯಂತಹ ಯುವತಿಯನ್ನು ಕಂಡಾಗ? ಪರಸ್ಪರ ಸಾಮೀಪ್ಯ ಅವರಲ್ಲಿ ನಿರ್ಮಲವಾದ
ಆನಂದವನ್ನು ಸಂವಹಿಸುತ್ತಿದ್ದಿರಬೇಕು, ಆದ್ದರಿಂದಲೇ ನಂದಿನಿ ತನ್ನನ್ನು ಕಾಣಲು ಬಂದಾಗ ಅವನಿಗೆ ಸಂತೋಷವೇ
ಆಗುತ್ತಿತ್ತು. ಮೊದಮೊದಲಿನ ಸಾಂಪ್ರದಾಯಿಕವೂ ಚುಟುಕೂ ಆದ ಸಂಭಾಷಣೆಗಳು ಬರಬರುತ್ತ ಹೆಚ್ಚು ಆತ್ಮೀಯವೂ
ದೀರ್ಘವೂ ಆಗಿ ಹರಟೆಗಳಾಗಿ ಪರಿಣಮಿಸಿದ್ದವು.
ಅವಳು
ತನ್ನನ್ನು ಕಾಣಲು ಬಂದಾಗ ತನಗಾಗಿಯೇ ಅವಳು ಬರುತ್ತಿದ್ದಾಳೆ ಎಂದು ಹೇಮಂತನಿಗೆ ಅನ್ನಿಸಲು ಕಾರಣವೇ
ಇರಲಿಲ್ಲ. ಏಕೆಂದರೆ ಅವಳೆಂದೂ ಉದ್ದೇಶಪೂರ್ವಕವಾಗಿ ಬಂದಂತೆ ತೋರ್ಪಡಿಸಿಕೊಂಡಿರಲಿಲ್ಲ. ಅವಳು ಇರುವುದು ತುಮಕೂರಿನಲ್ಲಿ, ಬೆಂಗಳೂರಿಗೆ ಬರುವುದು ಅಷ್ಟೇನೂ
ಸುಲಭವಲ್ಲ ಎಂದು ಅವನಿಗೂ ಅನ್ನಿಸಿತ್ತು. ಅದಕ್ಕೇ ಅವನೊಮ್ಮೆನಂದಿನಿಯನ್ನು ಕೇಳಿದ್ದ: “ಇದೇನ್ರಿ,
ತುಮಕೂರಲ್ಲಿದ್ದರೂ ಬೆಂಗಳೂರು ಅದರ ಬಡಾವಣೆಯೇನೋ ಅನ್ನುವ ಹಾಗೆ ಇಲ್ಲಿ ಸುತ್ತುತ್ತಾ ಇರ್ತೀರಿ? ನಿಮಗೆ
ಬಸ್ಸಿಗೆ ಕೊಡಕ್ಕೆ ಹಣ ಎಲ್ಲಿಂದ ಬರತ್ತೆ?”
“ಬಸ್ಸಲ್ಲಿ
ಬಂದರೆ ತಾನೇ?” ಅವಳ ನಗುವಿನಲ್ಲಿ ತುಂಟತನ.
“ಇನ್ನೇನು
ಹಾರಿಕೊಂಡು ಬರ್ತೀರಾ? ಗರಿಗಳೇನಾದರೂ ಇವೆಯಾ?
“ಗರಿ
ಅಲ್ಲ ಗರಿಗರಿ”
“ಏನು?”
“ದೋಸೆ”
ಅಂದಾಗ ಫಕ್ಕಂತ ಇಬ್ಬರೂ ನಕ್ಕಿದ್ದರು. ಎಲ್ಲ ಇವರ ಕಡೆ ನೋಡುವಂತಾಗಿತ್ತು. ಅವರು ಕೂತಿದ್ದುದು ಹೋಟೆಲಿನಲ್ಲಿ.
ಈಚೆಗೆ ಇಬ್ಬರೂ ಭೇಟಿಯಾದಾಗ ಕಾಫಿ ಕುಡಿದು ಸ್ವಲ್ಪ ಕಾಲ ಹರಟುವುದು ಇತ್ತು. ಸಂಜೆ ಅಥವಾ ಮಧ್ಯಾಹ್ನದ
ಹೊತ್ತೇ ಅವರ ಭೇಟಿ. ಏಕೆಂದರೆ ಸಂಜೆ ಆಫೀಸು ಮುಗಿಯುವ ಐದು ಗಂಟೆಯ ನಂತರ ಭೇಟಿಯಾದರೆ ಕಾಫಿ ಕುಡಿದು
ಅವಳು ಬಸ್‍ಸ್ಟ್ಯಾಂಡಿಗೆ ಹೋಗುತ್ತಿದ್ದಳೇನೋ. ತುಮಕೂರೇನು ಒಂದೂಕಾಲು ಗಂಟೆಯ ಪ್ರಯಾಣ. ಹೊತ್ತೇನೂ
ಆಗುವುದಿಲ್ಲವಲ್ಲ ಅಥವಾ ಶನಿವಾರಗಳಾದರೆ ಅರ್ಧ ಆಫೀಸು, ಎರಡು ಗಂಟೆಗೇ ಬಿಡುವಾಗುತ್ತದೆ. ಯಾವುದಾದರೂ
ಸಭೆಯೋ ವಿಚಾರಸಂಕಿರಣವೋ, ಸಾಹಿತ್ಯಕ ಚಟುವಟಿಕೆಯೋ ಎಲ್ಲರಿಗೂ ಬಿಡುವಾದ ಭಾನುವಾರಗಳಂದು ನಡೆಯುವುದು
ಸಾಮಾನ್ಯ ತಾನೆ? ಆಗೇನು ಬೆಳಿಗ್ಗಿನಿಂದಲೇ ಇವುಗಳಲ್ಲಿ ಭಾಗವಹಿಸುವುದು. ಹೀಗಾಗಿ ಹತ್ತು ನಿಮಿಷಗಳ
ಭೇಟಿ ಕಾಫಿ ಅವರಿಬ್ಬರ ನಡುವೆ ಸ್ನೇಹದ ಅರಾಲ್ಡೈಟ್ ಹಾಕಿತ್ತು ಎಂದರೆ ತಪ್ಪಲ್ಲ.
“ದೋಸೆ
ತಿಂತೀರಾ ಹಾಗಾದ್ರೆ?”
“ಕೊಡಿಸಿಬಿಡಿ
ನೋಡೋಣ, ತಿಂತೀನೋ ಇಲ್ಲವೋ ನೋಡಿ” ಇಂತಹ ಬಗೆಯ ಮಾತು ಹೇಮಂತನಿಗೆ ಪ್ರಿಯವಾದದ್ದು. ಪ್ರೀತಿಯ ಒತ್ತಾಯ,
ಸ್ನೇಹದ ಬಲವಂತ ಅವನ ಹೃದಯದಲ್ಲಿ ನೆಮ್ಮದಿಯ ತಂಗಾಳಿ. ಅದೂ ನಂದಿನಿ ಹೀಗೆ ಮಾತಾಡಿದಾಗ ಅವನ ಮನಸ್ಸಿಗೇನೋ
ಹಿತ. ನಳಿನಿಯ ಜೊತೆಗೂ ಹೋಟೆಲ್ಲಿಗೆ ಹೋಗುತ್ತಾನೆ; ಅವಳ ಜೊತೆ ಕೂಡ ಹರಟುತ್ತಾನೆ; ಅವಳನ್ನು ರೇಗಿಸುತ್ತಾನೆ,
ಆದರೆ ಎಷ್ಟೋ ವೇಳೆ ಅವರು ಸಿಡುಕುತ್ತಾಳೆ. ಇವನು ಅಸಮಾಧಾನ ಪಡುತ್ತಾನೆ. ಜೊತೆಗೆ ಬಂದು ಅಕ್ಕಪಕ್ಕದ
ಕುರ್ಚಿಗಳಲ್ಲಿ ಕೂತರೂ ಎಷ್ಟೋ ವೇಳೆ ತಿಂದು ಕುಡಿಯುವುದೇ ಹೊರತು ಮಾತುಕತೆ ಹರಟೆ ಗೇಲಿಗಳಿಗೆ ಆಸ್ಪದವೇ
ಇರುವುದಿಲ್ಲ. ಬರುವಾಗ ದಾರಿಯಲ್ಲೇ ಎಷ್ಟೋ ವೇಳೆ ಯಾವುದಾದರೂ ವಿಷಯಕ್ಕೆ ಮನಸ್ತಾಪ ಬಂದಿರುತ್ತದೆ.
ಹಾಗಾಗಿ ಹೋಟೆಲು ಅಂಥ ಸನ್ನಿವೇಶದಲ್ಲಿ ಕೇವಲ ತಿನ್ನುವ ತಾಣ. ಕವಿತಾಳೂ ಜೊತೆಗೆ ಬಂದಿದ್ದರೆ ಇವರಿಬ್ಬರ
ಧ್ರುವಗಳ ವಿರಸವನ್ನು ಕಂಡು ಮಿಕಿಮಿಕಿ ನೋಡುತ್ತಾಳೆ. ಅಂಥ ಸಂದರ್ಭಗಳಲ್ಲಿ ತಮ್ಮ ಜಗಳ ಅರ್ಥವಾಗಬಾರದೆಂದು
ತಾಯಿ ತಂದೆಯರು ಮಗಳೊಡನೆ ಮಾತುಕತೆಯಲ್ಲಿ ತೊಡಗುತ್ತಾರೆ. ಆದರೆ ತಮ್ಮಿಬ್ಬರಲ್ಲಿ ಮಾತಾಡಿಕೊಳ್ಳದೆ
ತನ್ನೊಡನೆಯೇ ಮಾತಾಡುವ ಅವರನ್ನು ಕಂಡು ಕವಿತಾಳಿಗೂ ಒಮ್ಮೊಮ್ಮೆ ಅನುಮಾನವುಂಟಾಗಬಹುದೇನೋ.
ಗಂಡ
ಹೆಂಡತಿಯರ ಸಂಬಂಧ ಎಷ್ಟೇ ಆಗಲಿ ಸಾಂಪ್ರದಾಯಿಕ ಚೌಕಟ್ಟಿನ ಕ್ಯಾಮರಾ ತೆಗೆದ ಚಿತ್ರ. ಗೆಳೆಯರ ನಡುವಣ
ಸಂಬಂಧ ಚೌಕಟ್ಟು ಇಲ್ಲದ ನಮ್ಮ ಕಣ್ಣಿನ ದೃಷ್ಟಿಯ ಚೌಕಟ್ಟಿನಲ್ಲಿ ತತ್ಕಾಲದಲ್ಲಿ ಇಡಬಹುದಾದ ಪ್ರಕೃತಿಯ
ದೃಶ್ಯ. ಅತ್ತಿತ್ತ ಸ್ವಲ್ಪ ಕಣ್ಣು ಅಲುಗಾಡಿದರೂ ಸಾಕು, ದೃಶ್ಯದಲ್ಲಿ ಸ್ವಲ್ಪ ಬದಲಾವಣೆ; ಹೀಗಾಗಿ
ಅದು ನವೋನವ. ಕ್ಷಣಕ್ಷಣಕ್ಕೂ ಹೊಸತಾಗುವ ಆಹ್ಲಾದಕಾರಿ ಜೀವಂತ ದೃಶ್ಯ. ಹೇಮಂತ ಲೇಖಕನಾಗಿ ಭಾವುಕನಾಗಿ
ಇಂತಹ ಸಂಬಂಧಗಳನ್ನು ಹೆಚ್ಚು ಮೆಚ್ಚುತ್ತಾನೆ. ಹೆಚ್ಚು ಕಾಲ ಇಂತಹ ಹರಟೆಗಳಲ್ಲಿ ತೊಡಗುವುದು ಅವನಿಗೆ
ಚೇತೋಹಾರಿಯಾದ ಅನುಭವ. ಜೊತೆಗೆ ಕಾದಂಬರಿಕಾರನಾದ್ದರಿಂದ ಜೀವನದ ಎಲ್ಲ ಗಳಿಗೆ ತನ್ನ ಅಭಿವ್ಯಕ್ತಿಯ
ಸಾಮಗ್ರಿಯಾಗಬಹುದು. ಕಂಡ ಪ್ರತಿ ದೃಶ್ಯ. ಆಡಿದ ಪ್ರತಿ ಮಾತು, ಪಡೆದ ಎಲ್ಲ ಪರಿಚಯ ಮನಸ್ಸಿನ ಉಗ್ರಾಣದಲ್ಲಿ
ತುಂಬಿಕೊಂಡು, ಬರೆಯತೊಡಗಿದಾಗ ಲೇಖನಿಯ ಮಸಿಯಾಗಿ ಇವೆಲ್ಲ ಬೇಕು ಬೇಕಾದಂತೆಹರಿಯುತ್ತವೆ, ಸೂಕ್ತ ರೀತಿಯಲ್ಲಿ
ಬದಲಾವಣೆ ಪರಿಷ್ಕರಣ ಇವುಗಳಿಗೊಳಗಾಗಿ.
ದೋಸೆ
ಬರುವವರೆಗೆ ವಡೆ ತಿನ್ನುತ್ತ ಕೂತಾಗ ಹೇಮಂತ ಕೇಳಿದ್ದ : “ನಾನು ಕೇಳಿದ್ದಕ್ಕೆ ಉತ್ತರ ಹೇಳಲೇ ಇಲ್ಲವಲ್ಲ?”
“ಏನು?”
“ಮರೆತೇಬಿಟ್ಟಿರಾ?
ತುಮಕೂರಿನಿಂದ ಇಲ್ಲಿಗೆ ಬೇಕಾದಾಗ ಬರ್ತೀರಲ್ಲ ಹೇಗೆ?”
ನಂದಿನಿ
ಈಗ ತಮಾಷೆಯಾಗೇನೂ ಮಾತಾಡಲಿಲ್ಲ. “ನಾನು ಬಸ್ಸಲ್ಲಿ ಬರೋದೇ ಇಲ್ಲ. ಟ್ರೈನ್‍ನಲ್ಲಿ ಪಾಸ್ ಮಾಡಿಸಿಬಿಟ್ಟಿದ್ದೀನಿ,
ಮೂರು ಸಲ ಬಸ್ಸಲ್ಲಿ ಬಂದು ಹೋಗುವ ಹಣ ಕೊಟ್ಟರೆ ಸಾಕು, ಇಡೀ ತಿಂಗಳು ಟ್ರೈನಿನಲ್ಲಿ ಓಡಾಡಬಹುದು. ಸಾವಿರಾರು
ಜನ ಪ್ರತಿನಿತ್ಯ ಬೆಂಗಳೂರು-ತುಮಕೂರು ನಡುವೆಗೆ ಪ್ರತಿನಿತ್ಯ ಆಫೀಸಿಗೆ ಬಂದು ಹೋಗಿ ಮಾಡ್ತಾರೆ.”
“ನೀವೇನೂ
ಯಾವುದೂ ಆಫೀಸಲ್ಲಿ ಇಲ್ಲವಲ್ಲ”
“ಇಲ್ಲದಿದ್ದರೇನು?
ಯಾವಾಗ ಬೇಕಾದರೂ ಬಂದು ಹೋಗೋ ಅಡ್ವಾಂಟೇಜ್ ಇರತ್ತಲ್ಲ”
“ಇಲ್ಲಿ
ಬಂದು ಏನು ಮಾಡ್ತೀರಿ?”
“ಈ
ಊರಲ್ಲಿರೋರು ಏನು ಮಾಡ್ತಾರೋ ಅದೇ”
“ಅಂದರೆ?”
“ಅಂದರೆ,
ಓಡಾಡೋದು, ತಿರುಗಾಡೋದು, ಸಿನಿಮಾ ನೋಡೋದು, ಕಾಲ ಕಳೆಯೋದು, ನಿಮ್ಮಂಥವರನ್ನು ಭೇಟಿಯಾಗೋದು.....”
“ದೋಸೆಗಿಟ್ಟಿಸಿಕೊಳ್ಳೋದು,
ಕಾಫಿ ಕುಡಿಯೋದು, ಬಿಲ್ಲು ಕೊಡಿಸೋದು.....” ಎಂದು ಅವಳ ಮಾತನ್ನು ಹೇಮಂತ ಮುಂದುವರಿಸಿದಾಗ ಮತ್ತೆ
ನಗುವಿನ ಪರಿಮಳ ವ್ಯಾಪಿಸುತ್ತದೆ. ‘ನಿಮ್ಮಂಥೋರನ್ನ ಭೇಟಿಯಾಗುವುದು’ ಎಂದು ಅವಳು ಏಕೆ ಹೇಳಿರಬಹುದು.
ನಿಮ್ಮನ್ನು ಎಂದೇನೂ ಹೇಳದೆ ಅವಳು ನಿಮ್ಮಂಥೋರನ್ನ ಅಂದಿರಬೇಕಾದರೆ ಏನಾದರೂ ಕಾರಣವಿರಬಹುದೇ! ಕೆದಕಿ
ಚೇಷ್ಟೆ ಮಾಡಬೇಕೆಂಬ ಚಪಲ ಹೇಮಂತನಲ್ಲಾಯಿತು.
“ನಿಮ್ಮಂಥೋರನ್ನ
ಭೇಟಿಯಾಗೋದು ಅಂದ್ರಲ್ಲ. ನಿಮ್ಮಂಥೋರು ಅನ್ನೋದನ್ನ ಸ್ವಲ್ಪ ಎಕ್ಸ್‍ಪ್ಲೈನ್ ಮಾಡಿ.” ಆ ಹೊತ್ತಿಗೆ
ಬೇರರ್ ತಂದಿಟ್ಟ ದೋಸೆಯ ತಟ್ಟೆಯನ್ನು ತನ್ನ ಕಡೆ ಎಳೆದುಕೊಂಡು, ಇನ್ನೊಂದನ್ನು ಮುಂದೆ ಕೂತಿದ್ದ ನಂದಿನಿಯೆಡೆಗೆ
ತಳ್ಳುತ್ತ ಹೇಮಂತ ಕೇಳಿದ.
“ಅಂದರೆ
ಕಾದಂಬರಿಕಾರರು, ನೋಡಲು ಚೆನ್ನಾಗಿರೋ ಯುವಕರು, ಮನಸ್ಸು ನಿರ್ಮಲವಾಗಿರೋ ಸ್ನೇಹಿತರು, ಉದಾರವಾಗಿ ದೋಸೆ
ತಿನ್ನಿಸುವ ವಿಶಾಲಹೃದಯಿಗಳು. ಆದರದಿಂದ ಹರಟೆ ಹೊಡೆದು ಸಂತೋಷಗೊಳಿಸುವ ಆತ್ಮೀಯರು.......” ಅವಳು
ಹೇಳುತ್ತ ಹೋದಂತೆ ಅವಳ ಕಣ್ಣುಗಳಲ್ಲಿ ವೋಲ್ಟೇಜ್ ಹೆಚ್ಚುತ್ತ ಹೋಗುತ್ತಿತ್ತು. ಹೊಳೆಹೊಳೆಯುವ ಅವಳ
ಗುಡ್ಡೆಗಳು ಜಾಜ್ವಲ್ಯಮಾನವಾಗುತ್ತಿದ್ದವು. ಇವುಗಳ ಸೌಂದರ್ಯವನ್ನು ಕಂಡು ಯಾರಾದರೂ ಕಣ್ಣು ಹಾಕಿದರೆ
ಕಾಪಾಡಲು ತಯಾರಾಗಿ ನಿಂತಿರುವಂತಿದ್ದ ರೆಪ್ಪೆಗಳು.
“ಹೋಲ್ಡಾನ್,
ಏನು ಕಿತ್ತೂರು ಎಕ್ಸ್‍ಪ್ರೆಸ್ ತರಹ.....”
“ಅಥವಾ
ಮಾಣಿ ತಿಂಡಿಗಳ ಪಟ್ಟಿ ಹೇಳೋ ಹಾಗೆ” ಅವಳ ಮಾತುಗಳು ಭಾವುಕತೆಯಿಂದ ಮೇಲೆ ಹಾರಾಡುತ್ತಿದ್ದವು. ಹೇಮಂತನ
ಮಾತಿನಿಂದಾಗಿ ಪ್ಯಾರಚೂಟಿನಿಂದ ಕೆಳಗೆ ನಿಧಾನವಾಗಿ ಇಳಿಯತೊಡಗಿದ್ದವು. ತಮ್ಮ ಮಾತಿನಿಂದಾಗಿ ಮತ್ತೆ
ಅವರಲ್ಲಿ ನಗುವುಕ್ಕಿತ್ತು. ಇಂತಹ ಸನ್ನಿವೇಶಗಳ ಸೌಂದರ್ಯಕ್ಕೆ ಎಣೆಯೆಲ್ಲಿ? ಪರಸ್ಪರರ ಹಿನ್ನೆಲೆಯನ್ನು
ದೃಷ್ಟಿಯಲ್ಲಿರಿಸಿಕೊಂಡು ಮಾತಾಡುವಾಗ ಇಂತಹ ಆನಂದ ಬಂದೀತೆ? ಇಂತಹ ಮಾತುಕತೆಗಳು ಅವರಿಬ್ಬರ ಪರಿಚಯವಾದನಂತರ
ಅದೆಷ್ಟೋ ಸಲ ನಡೆದಿದ್ದವು. ಅವರಿಬ್ಬರ ನಡುವೆ ಅಂಟಿದ ನಂಟು ಗಟ್ಟಿಯಾಗುತ್ತ ಸಾಗಿತ್ತು; ಆ ನಂಟು ಸಂತೋಷದ
ಕಾರಣವಾಗಿತ್ತು.
“ನನಗೂ
ನಿನಗೂ ಅಂಟಿದ ನಂಟಿನ ಕೊನೆಯ ಬಲ್ಲವರಾರು ಕಾಮಾಕ್ಷಿಯೇ!”
ಒಂದೆರಡು
ಸಲ ಸಿನಿಮಾಕ್ಕೂ ಅವರು ಹೋದದ್ದಿತ್ತು. ಶನಿವಾರ ಮಧ್ಯಾಹ್ನ ಒಂದು ಸಲ ತಾನು ಆಫೀಸು ಮುಗಿಸಿಕೊಂಡು ಬಸ್ಸಿಗಾಗಿ
ಕಾಯುತ್ತ ನಿಂತಿದ್ದಾಗ ಬಸ್ಸುಬರುವ ಮುಂಚೆಯೇ ನಂದಿನಿಬಂದದ್ದು ಹೇಮಂತನಿಗೆ ಚೆನ್ನಾಗಿ ನೆನಪಿದೆ. ಎಷ್ಟೋ
ವೇಳೆ ತನ್ನನ್ನು ಹುಡುಕಿಕೊಂಡೇ ಬರುತ್ತಾಳೇನೋ ಅಥವಾ ಇಲ್ಲಿ ಯಾರಾದರೂ ಬಾಯ್‍ಫ್ರೆಂಡ್ಸ್ ಅವಳಿಗೆ ಇರಬಹುದೊ?
“ಏನ್ರೀ
ಇಲ್ಲಿ?”
“ಯಾಕೆ
ಬೆಂಗಳೂರೇನು ನಿಮಗೆ ಮಾತ್ರ ಸೇರಿದ್ದೇನು?”
“ಏನೂ
ಇಲ್ಲ, ನೀವೇ ತೊಗೊಂಡು ಹೋಗಿ”
“ನನಗೆ
ಬೆಂಗಳೂರೇನು ಬೇಕಿಲ್ಲ, ಅಲ್ಲಿರೋ ಕೆಲವು ಜನಗಳು ಬೇಕು”
“ಯಾರು
ಬೇಕೋ ಕರಕೊಂಡು ಹೋಗಿ, ಲಕ್ಷಾಂತರ ಜನ ಇದ್ದಾರೆ ಇಲ್ಲಿ, ದೇಶಕ್ಕೇನೂ ತೊಂದರೆಯಾಗಲ್ಲ.”
“ಹಾಗಾದ್ರೆ
ನೀವೇ ಬನ್ನಿ” ಎಲ ಎಲಾ ಮಾತಿನಲ್ಲಿ ಎಂತಹ ಚಾಲಾಕಿ ಬಂದುಬಿಟ್ಟಿದೆ ಇವಳಿಗೆ ಅನ್ನಿಸಿತು ಹೇಮಂತನಿಗೆ.
ಸೌಂದರ್ಯ ಸ್ವರ್ಧೆಯಲ್ಲಿ ಭಾಗವಹಿಸುವುದಿರಲಿ, ನಾಲ್ಕು ಜನ ಯುವತಿಯರ ಜೊತೆ ಇದ್ದಾಗಲೂ ಎದ್ದು ಕಾಣಿಸುವ
ಚೆಲುವೆಯೇನಲ್ಲ ನಂದಿನಿ. ಅಂದರೆ ಅವಳು ಕುರೂಪಿಯಲ್ಲ. ಕಣ್ಣು-ಮೂಗು ನೇರವಾಗಿದೆ ಅನ್ನುತ್ತಾರಲ್ಲ ಅಂಥವಳು.
ಸ್ವಲ್ಪ ಕೃಷ್ಣವರ್ಣೆ. ಆದರೇನು ಆ ಕಣ್ಣುಗಳು; ತನ್ನ ಹೊಳಪಿನಿಂದ ಬೆಳಕು ಚೆಲ್ಲಿ, ಹತ್ತಿರ ಬಂದವರನ್ನು
ಬೆಚ್ಚಗಾಗಿಸುವ ದೀಪಗಳು! ಅಲ್ಲದೆ ಮುಖದ ಮೇಲೆ ತೇಲಾಡುವ ನಸುನಗೆಯ ಸುಗಂಧಭರಿತ ಬಳ್ಳಿ.
ಯಥಾಪ್ರಕಾರ
ಹೊರಟು ಹತ್ತಿರದ ಹೋಟೆಲಲ್ಲಿ ಕಾಫಿ ಕುಡಿಯುತ್ತ ಕುಳಿತರು. “ಯಾವಾಗ ಬಂದಿರಿ?”
“ಈಗ
ತಾನೇ ಬರ್ತಿದ್ದೀನಿ.”
“ಏನು
ಸಮಾಚಾರ”
“ಏನು
ಸಾರ್, ತುಮಕೂರಿನಿಂದ ಸಮಾಚಾರ ಹೊತ್ತು ತಂದು ಬೆಂಗಳೂರಲ್ಲಿ ಚೆಲ್ಲುವ ಪೋಸ್ಟ್ ವಾಹನವೇ ನಾನು”
“ಏನು
ಮಾತಾಡ್ತೀರ್ರೀ! ನಿಮ್ಮ ಕೈಲಿ ಮಾತಾಡೋದೆ ಬರಬರ್ತಾ ನನಗೆ ಕಷ್ಟವಾಗ್ತಿದೆ. ನಿಮ್ಮ ಮಾತುಗಾರಿಕೆಯ ಮುಂದೆ
ನಾನು ಸೋತು ಬಿಡ್ತೀನಿ.”
“ಹಾಗಾದ್ರೆ
ಸೋಲು ಒಪ್ಪಿಕೊಳ್ತೀರಾ”
“ಖಂಡಿತ,
ಸೋತಿರೋದೇ ನಿಜ, ಒಪ್ಪಿಕೊಳ್ಳೋದ್ರಲ್ಲೇನು”
“ಸೋತಿದ್ದಕ್ಕೆ
ಪಣ ಕೊಡಬೇಕಲ್ಲ.”
“ಏನು
ಕೊಡಬೇಕು?”
“ಎರಡು
ರೀತಿ, ಇನ್ ಕ್ಯಾಷ್ ಆರ್ ಕೈಂಡ್.” ಪೂರ್ವ ಯೋಜನೆಗೆ ಅನುಗುಣವಾಗಿ ಅವಳು ಮಾತಾಡುವಂತೆ ತೋರುವಷ್ಟರಮಟ್ಟಿಗೆ
ಅವಳ ಮಾತಿನ ಜೋಡಣೆ. ಇದನ್ನೆಲ್ಲ ಮನೆಯಲ್ಲಿ ಅಭ್ಯಾಸ ಮಾಡಿಕೊಂಡು ಬರುತ್ತಾಳೆಯೇ?
“ಏನದು
ಹೇಳಿ, ಕೊಟ್ಟುಬಿಡ್ತೀನಿ.”
“ಒಂದು
ಕ್ಯಾಷ್; ಹತ್ತು ರೂಪಾಯಿ; ಯಾಕೆ ಗೊತ್ತಾ? ಕೈಂಡ್‍ನಲ್ಲಿ ಪಣ ಕೊಡಕ್ಕೆ.”
“ಅಂದರೆ?”
ಇವಳ ಮಾತಿನ ಒಗಟಿನ ರೀತಿ ಹೇಮಂತನಿಗೆ ಅರ್ಥವಾಗಿರಲಿಲ್ಲ.
“ಏನೂ ಇಲ್ಲ. ಸಿನಿಮಾಕ್ಕೆ ಕರೆದುಕೊಂಡು ಹೋಗುವುದಾದರೆ ಎರಡೂ
ಕೊಟ್ಟ ಹಾಗಾಗುತ್ತೆ.”
“ಓ
ಅದಕ್ಕೇನು, ಯಾವತ್ತು ಹೋಗೋಣ?”
“ಇಂದಿನ
ದಿನವೇ ಶುಭ ದಿನವು, ಇಂದಿನ ವಾರ ಶುಭವಾರ.” ಅವಳ ಇಂಗಿತವನ್ನರಿತ ಹೇಮಂತ ಅವಳ ಮಾತಿಗೆ ಅನುಗುಣವಾಗಿ
ತಾನೂ ದನಿಗೂಡಿಸಿದ: “ನಾಳೆ ಒಪ್ಪುದು ನಮಗಿಂದೇ ಬರಲಿ; ಇಂದು ಬಪ್ಪುದು ನಮಗೀಗಲೆ ಬರಲಿ.”
ಒಂದು
ಕನ್ನಡ ಸಿನಿಮಾಕ್ಕೆ ಹೋಗಿದ್ದರು. ಕತ್ತಲೆಯಲ್ಲಿ ಕೂತಾಗ ಆಕಸ್ಮಿಕವೆಂಬಂತೆ ಎಷ್ಟೋ ಸಲ ಅವರಿಬ್ಬರ ಕೈಗಳು
ಪರಸ್ಪರ ತಾಕಿದ್ದವು. ಅಸ್ಪೃಶ್ಯರೇನಲ್ಲವಲ್ಲ. ಒಂದುಕಡೆ ಕೂತು ಸಾಕಾಗಿ ಇನ್ನೊಂದು ಕಡೆ ವಾಲಿದಾಗ;
ತೊಡೆಯ ಮೇಲಿರಿಸಿಕೊಂಡ ಕೈಯನ್ನು ತೆಗೆದು ಕುರ್ಚಿಯ ತೋಳಿನ ಮೇಲಿರಿಸಿದಾಗ, ಹೀಗೆ ಅವರ ಕೈಗಳು ತಾಕಿದ್ದವು,
ಭುಜಗಳು ಸೋಕಿದ್ದವು. ಮುಖ ಒಮ್ಮೆಲೇ ಪರಸ್ಪರರ ಕಡೆ ತಿರುಗಿದಾಗ ಉಸಿರುಗಳು ಮಧ್ಯೆ ಮಿಳಿತವಾಗಿದ್ದವು;
ಒಬ್ಬರ ಉಸಿರಿನ ಗಾಳಿ ಇನ್ನೊಬ್ಬರಲ್ಲಿ ಬಿಸಿ ತಾಕಿಸಿತ್ತು. ಅವಳು ಚಿತ್ರವನ್ನು ತದೇಕವಾಗಿ ನೋಡುತ್ತಿದ್ದಾಗ
ಹೇಮಂತ ಒಂದೆರಡು ಬಾರಿ ಅವಳ ಕಡೆಗೆ ನೋಡಿದ್ದ. ಪರದೆಯ ಕಡೆಯಿಂದ ಎದ್ದು ಬರುತ್ತಿದ್ದ ಬೆಳಕು ಇವಳ ಕಣ್ಣುಗಳ
ಮೇಲೆ ಬಿದ್ದು ಅಲ್ಲಿ ಪ್ರತಿಬಿಂಬಿಸುತ್ತಿದ್ದವು; ಸೂರ್ಯನ ಕಿರಣಗಳು ಇಬ್ಬನಿಯ ಮೇಲೆ ಬಿದ್ದು ದೀಪವುರಿಸಿದ
ಹಾಗೆ. ತನ್ನನ್ನು ನೋಡುತ್ತಿದ್ದ ಅರಿವಾಗಿ ಇವನೆಡೆಗೆ ತಿರುಗಿದ ನಂದಿನಿಗೆ ಅವನ ಕಣ್ಣುಗಳಲ್ಲಿ ಆ ಕತ್ತಲಲ್ಲೂ
ಏನು ಕಾಣಿಸಿತೋ. ಅವಳ ಕಣ್ಣ ದೀಪ್ತಿ ಹೆಚ್ಚಾಯಿತು, ತುಟಿಗಳ ಮೇಲೆ ನಸುನಗೆ ತೃಪ್ತಿಯಿಂದ ಓಲಾಡಿತ್ತು.
ಉಸಿರು ಪರಿಮಳಯುಕ್ತವಾಗಿತ್ತು. ದೇಹ ಲಘಿಮಾಶಕ್ತಿಯನ್ನು ಪಡೆದಂತಾಯಿತು.
* * *
ಮಾಧವರಾಯನ
ದುಃಖ ಹಿಂದೆ ಸರಿಯುತ್ತ ಅದರೆಡೆಯಲ್ಲಿ ಕೋಪ ಮನೆಮಾಡುತ್ತಿತ್ತು. ನಂದಿನಿ ಸತ್ತು ಆಗಲೇ ಸಾಕಷ್ಟು ದಿನಗಳಾಗಿದ್ದವು,
ತಂಗಿಯ ಸಂಸ್ಕಾರ ಮಾಡಬೇಕಾಗಿ ಬಂದ ತನ್ನ ದುರದೃಷ್ಟಕ್ಕೆ ಮಮ್ಮಲ ಮರುಗಿದ್ದ ಅವನು ,ಅತ್ತಿಗೆ - ನಾದಿನಿಯರ
ನಡುವಣ ವೈಮನಸ್ಸು ಅವನಿಗೆ ಅನೇಕ ಬಾರಿ ಬೇಸರ ಬರಿಸಿದ್ದುದು ನಿಜವಾದರೂ, ತಂಗಿಯ ಬಾಳು ಹಸನಾಗಬೇಕೆಂದೇ
ಅವನು ಹೃದಯದಲ್ಲಿ ಹಂಬಲಿಸಿದ್ದ. ತಂದೆ ಸತ್ತ ನಂತರ ಅವಳಿಗೆ ಅಣ್ಣನಾಗುವುದರೊಡನೆ ತಂದೆಯಾಗಿಯೂ ಜವಾಬ್ದಾರಿ
ವಹಿಸಿ ಅವಳನ್ನು ಜತನಮಾಡಿದ್ದ. ತನ್ನ ಆದಾಯದ ಮಿತಿಯಲ್ಲಿ ತಂಗಿಗೆ ತಂದುಕೊಡಬೇಕಾದುದನ್ನು ತಂದುಕೊಡುತ್ತಿದ್ದ.
ಸ್ಕೂಲಿನ ಸಂಬಳದ ಜೊತೆ ಹಲವಾರು ವಿದ್ಯಾರ್ಥಿಗಳಿಗೆ ಮನೆ ಪಾಠ ಹೇಳಿ ಸಂಪಾದಿಸುತ್ತಿದ್ದುದರಿಂದ ಇಬ್ಬರು
ಮಕ್ಕಳು, ತಾಯಿ, ತಂಗಿಯರ ಜೊತೆಗಿನ ಸಂಸಾರರಥ ಹೇಗೋ ಸಾಗುತ್ತಿತ್ತು.
ತಂಗಿಯ
ಮದುವೆಯ ಜವಾಬ್ದಾರಿ ಬೇರೆ ತನ್ನ ಮೇಲಿದ್ದುದರಿಂದ ಅದಕ್ಕಾಗಿ ಒಂದಷ್ಟು ಹಣ ಕೂಡಿಡಬೇಕಾಗಿತ್ತು. ಹೀಗಾಗಿ
ಬಹು ಎಚ್ಚರದಿಂದ ಖರ್ಚನ್ನು ನಿರ್ವಹಿಸಬೇಕಾಗಿತ್ತು. ಇಷ್ಟೆಲ್ಲ ಆದರೂ ಕೆಲವು ಬಾರಿ ನಂದಿನಿ ಬೇಜವಾಬ್ದಾರಿಯಿಂದ
ನಡೆದುಕೊಳ್ಳುತ್ತಾಳೆಂದು ಸಿಡುಕುತ್ತಿದ್ದ. ಅವಳೇನು ಚಿಕ್ಕ ಮಗುವೇ? ಬೆಂಗಳೂರಿಗೆ ರೈಲ್ವೆ ಪಾಸುಮಾಡಿಸಿ
ಬೇಕಾದಾಗ ಹೋಗಿ ಬರುವ ಅವಳು ಯಾವಾಗ ಜವಾಬ್ದಾರಿ ಕಲಿಯುವುದು? ಅವಳು ಟೈಲರಿಂಗ್ ಎಂದೋ ನಿಟ್ಟಿಂಗ್ ಎಂದೋ
ಸ್ವಲ್ಪ ಹಣ ಸಂಪಾದನೆ ಮಾಡುತ್ತಾಳೆ; ಕೆಲವು ಹುಡುಗರಿಗೆ ಪಾಠ ಹೇಳಿ ಗಳಿಸುತ್ತಾಳೆ. ಅವಳೇನೂ ದುಡಿದು
ಸಂಸಾರ ಸಾಕಬೇಕಾಗಿಲ್ಲವಲ್ಲ ಎಂಬ ಮಧ್ಯಮವರ್ಗದ ಮನೋಭಾವದಿಂದಾಗಿ ಮುಂದೆ ಅವಳು ಓದಲೇಬೇಕೆಂದು ಅವರು
ತೀರ್ಮಾನಿಸಿರಲಿಲ್ಲ. ಇಲ್ಲೇ ಓದುವಂತಿದ್ದರೆ ಅದೂ ಆಗಬಹುದಿತ್ತು. ಕೆಲಸಕ್ಕೇನೂ ಹೋಗಬೇಕಾಗಿಲ್ಲ; ಓದು
ಸಾಕು, ಇದೇ ಅವರ ತೀರ್ಮಾನ. ಆದರೂ ಅವಳು ತಾನು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ಉಳಿಸಿದರೆ ಅವಳ ಮದುವೆಗೇ
ಅನುಕೂಲವಾಗುತ್ತದೆ. ಹೀಗೆ ಅಂದಾಗ “ನಾನು ಖರ್ಚಾಗೋ ರೀತಿಯಲ್ಲಿ ಮದುವೇನೇ ಆಗಲ್ಲ ಕಣೋ” ಎನ್ನುತ್ತಿದ್ದಳು.
“ಖರ್ಚಿಲ್ಲದೆ
ಮದುವೆ ಹ್ಯಾಗೆ ಆಗತ್ಯೇ?”
“ಹಾಗಾದ್ರೆ
ಮದುವೇನೆ ಬೇಡ”
“ಮನೇಲೇ
ಕೂತಿರ್ತೀಯೇನು ಹಾಗಾದ್ರೆ?”
“ನಿಮ್ಮ
ಮನೇಲೇ ಏನೂ ಸದಾ ಕೂತಿರಲ್ಲಪ್ಪ. ಸಾಕಾದಾಗ ಹೇಳು ನನ್ನ ಪಾಡು ನಾನು ನೋಡಿಕೊಂಡು ಹೋಗ್ತೀನಿ.”
ಇಂಥ
ಮಾತುಗಳನ್ನು ನಂದಿನಿ ಸಿಟ್ಟಿನಿಂದ, ಅಸಮಾಧಾನದಿಂದೇನೂ ಆಡುತ್ತಿರಲಿಲ್ಲ. ಹಾಗಾಗಿದ್ದರೆ ದಬಾಯಿಸಬಹುದಿತ್ತು,
ವಾದಿಸಬಹುದಿತ್ತು, ಎದುರಿಸಬಹುದಿತ್ತು. ಅವಳು ಯಾವ ಮಾತಾಡಿದರೂ ಟಿಪಿಕಲ್ ಆದ ಮುಗುಳುನಗೆ ಅವಳ ತುಟಿಗಳ
ಮೇಲೆ. ದುರ್ಬಲರ ಅಸ್ತ್ರ ಅಂತಾರಲ್ಲ; ಅವಳ ಅಸ್ತ್ರ ಅದು. ವೀರಾವೇಶದಿಂದ ಸದೆಬಡಿಯಲು ಬಂದ ಯೋಧನನ್ನು
ಆ ನಗು ನಿಶ್ಯಸ್ತ್ರಗೊಳಿಸಿಬಿಡುತ್ತಿತ್ತು. ಆಗ್ನೇಯಾಸ್ತ್ರ ಉಗುಳುವ ಬೆಂಕಿಯಾರಿಸಲು ಅವಳ ನಗು ವಾರುಣಾಸ್ತ್ರ
ಸುರಿಸುವ ನೀರು. ಆ ನಗೆ ಶಾಶ್ವತವಾಗಿದೆ ಈಗ ನಂದಿನಿಯ ಚಿತ್ರದಲ್ಲಿ. ಆದರೆ ಎಂಥ ಸನ್ನಿವೇಶದಲ್ಲೂ ಒಂದೇರೀತಿ,
ವ್ಯತ್ಯಾಸವೇ ಇಲ್ಲ. ಕಣ್ಣು ಚಿತ್ರದಲ್ಲಿ ಅರಳಿದೆ, ಅದೂ ನಗುತ್ತಿವೆ. ಆದರೆ ಅವುಗಳು ಇನ್ನು ಕುಣಿಯಲಾರವು,
ಕುಣಿಸಲಾರವು; ಕಣ್ಣೀರು ಸುರಿಸಲಾರವು; ಕೋಪದ ಕಿಡಿ ಕಾರಲಾರವು; ಪ್ರೀತಿಯ ಶೀತಲೋಪಚಾರ ಮಾಡಲಾರವು.
ಅವಳಕಣ್ಣು ಚೌಕಟ್ಟು ಹಾಕಿದ ಭಾವಚಿತ್ರದಲ್ಲಿ ಅಮರವಾಗಿಬಿಟ್ಟಿವೆ!
ನಂದಿನಿಯ
ವಸ್ತುಗಳೆಲ್ಲ ಅವಳ ನೆನಪನ್ನೇ ಕೆದಕುವಾಗ ಮಾಧವರಾಯನಿಗಾಗಲೀ, ಅವಳ ತಾಯಿಗಾಗಲೀ ಅವಳನ್ನು ಮರೆಯುವುದು
ಸುಲಭವೇ? ಕಾಲ ಸರಿದಂತೆ ಇತರರ ಸಾವು ಅಸ್ಪಷ್ಟವಾಗಿಬಿಡುತ್ತದೆ. ಆದರೆ ಅವರ ಕಣ್ಣೀರಿನ ಬೆಂಕಿಯಾರಿದ್ದರೂ,
ಹೃದಯದಲ್ಲಿನ ಕೆಂಡ ಜೀವಂತವಾಗಿತ್ತು. ಅಣ್ಣನಿಗೆ ತಂಗಿಯ ಸಾವಿನ ನೋವು ಅದಕ್ಕೆ ಕಾರಣವಾದ ವ್ಯಕ್ತಿಯೆಂದು
ಭಾವಿಸಿದವನ ಮೇಲೆ ಕೋಪವಾಗಿ ಪರಿಣಮಿಸಿತ್ತು.
ನಂದಿನಿ
ಸತ್ತ ನಂತರ ದಿನದಿನಕ್ಕೆ ಅವಳ ಪುಸ್ತಕ, ಪೆಟ್ಟಿಗೆಯ ಸಾಮಾನು ಇವುಗಳನ್ನು ಪರಿಶೀಲಿಸುವಾಗ, ಹೇಮಂತ
ನಂದಿನಿಗೆ ಬರೆದ ಪತ್ರಗಳನ್ನು ಓದಿದಾಗ, ಅವಳ ಪರ್ಸಿನಲ್ಲಿ ಜೋಪಾನವಾಗಿದ್ದ ಹೇಮಂತನ ಫೋಟೋ ಕಂಡಾಗ,
ಅವನ ಹೆಸರಿರುವ ಕಡೆಯೆಲ್ಲ ತನ್ನ ಹೆಸರನ್ನು ಹೃದಯವನ್ನೇ ಕೆತ್ತು ಬರೆದಿರುವದು ಕಾಣಿಸಿದಾಗ, ಅವನ ಪುಸ್ತಕಗಳ
ಮೇಲೆ ಅವನ ಹಸ್ತಾಕ್ಷರ, ಅದರ ಮೇಲೆ ‘ಪ್ರೀತಿಯಿಂದ’ ಎಂಬ ಒಕ್ಕಣೆ ಕಂಡಾಗ ಮಾಧವರಾಯನಿಗೆ ಅನಿಸಿದ್ದು:
ನಂದಿನಿಯ ಸಾವಿಗೆ ಹೇಮಂತನೇ ಕಾರಣ. ಅವನು ತನ್ನ ತಂಗಿಯನ್ನು ಕೆಡಿಸಿಬಿಟ್ಟಿದ್ದಾನೆಂಬ ಮಟ್ಟಿಗೆ ಅನುಮಾನವೇನೂ
ಮಾಧವರಾಯನನ್ನು ಕಾಡಲಿಲ್ಲ. ವಿದ್ಯಾವಂತನಾದ ಆತ ಸುತ್ತಮುತ್ತಲ ಸಮಾಜವನ್ನು ನೋಡಿ ಅದನ್ನು ತಿಳಿಯಬಲ್ಲವನಾಗಿದ್ದ.
ಒಂದು ಗಂಡಿನ ಜೊತೆ ಒಂದು ಹೆಣ್ಣು ಮಾತಾಡಿಬಿಟ್ಟರೆ ‘ಎಲ್ಲ ಆಗಿಬಿಟ್ಟಿದೆ’ ಎಂಬ ದಿಢೀರ್ ತೀರ್ಮಾನಕ್ಕೆ
ಬರುವವನೇನಲ್ಲ ಅವನು. ಅಲ್ಲದೆ ಎಂದೂ ನಂದಿನಿ ರಾತ್ರಿ ತಡವಾಗಿ ಬಂದವಳಲ್ಲ. ಅವಳ ನಿರ್ಮಲ ನಗೆಯೇ ಅವಳ
ನಿರ್ಮಲ ಚಾರಿತ್ರ್ಯಕ್ಕೆ ಹೊರ ಚಿನ್ಹೆ ಎಂದಾತ ನಂಬಿದ್ದ.
ಹೇಮಂತ-ನಂದಿನಿಯರನ್ನು
ಒಂದು ಮಾಡಿದ್ದವಸ್ತುಗಳೆಲ್ಲ ಅವನು ಅವಳನ್ನು ನಂಬಿಸಿ ಮೋಸಮಾಡಿದ್ದಾನೆ ಎಂಬುದನ್ನು ಸಾಬೀತು ಮಾಡುತ್ತಿರುವಂತೆ
ಮಾಧವರಾವ್ ಭಾವಿಸಿದ್ದ. ಅವರಿಬ್ಬರು ಅನೇಕ ಸಲ ಭೇಟಿಯಾಗಿದ್ದುದನ್ನು ಅವನು ಊಹಿಸಿಕೊಳ್ಳಬಲ್ಲ. ತಾನು
ಮನೆಯಲ್ಲಿ ಇಲ್ಲದಾಗ ಹೇಮಂತನನ್ನು ಒಂದು ಬಾರಿ ನಂದಿನಿ ಮನೆಗೆ ಕರೆತಂದಿದ್ದ ವಿಷಯ ಗೊತ್ತಾಗಿತ್ತು.
“ತುಂಬ
ಒಳ್ಳೆಯ ಮನುಷ್ಯ, ನಿಗರ್ವಿ. ಅಷ್ಟು ಒಳ್ಳೆ ಕತೆಗಾರನಾದರೂ ಜಂಭವಿಲ್ಲದ ಸರಳ ವ್ಯಕ್ತಿ” ಎಂದು ಆ ದಿನರಾತ್ರಿ
ಮಗನ ಹತ್ತಿರ ಹೇಮಂತನನ್ನು ಹೊಗಳಿದ್ದ ತಾಯಿ ಈಗ, “ನನ್ನ ಮಗಳನ್ನು ನಂಬಿಸಿ ಅವಳನ್ನು ಕೊಂದುಬಿಟ್ಟ,
ಮುಂಡೇಮಗ” ಎಂದು ಶಾಪ ಹಾಕುವಷ್ಟರ ಮಟ್ಟಿಗೆ ಅವರ ಮೇಲೆ ಮಾಧವರಾಯನ ವಾದಸರಣಿ ಪರಿಣಾಮ ಬೀರಿತ್ತು. ತಮಗೆ
ಗೊತ್ತಿರುವಂತೆ ಬೇರೆ ಯಾರ ಜೊತೆಯಲ್ಲೂ ತೀರ ಸನಿಹದಲ್ಲಿ ಓಡಾಡುತ್ತಿರಲಿಲ್ಲ ನಂದಿನಿ; ಬೆಂಗಳೂರಿಗೆ
ಆಗಾಗ ಹೋಗುತ್ತಿದ್ದಳು; ಅವನನ್ನು ಭೇಟಿಯಾಗುವುದಕ್ಕಾಗಿಯೇ ಪಾಸ್ ಮಾಡಿಸಿದ್ದಳೇನೋ! ಈಗ ಅವನೇನೆಂದನೋ
ಅವಳು ಹೃದಯವಿದ್ರಾವಕವಾದ ರೀತಿಯಲ್ಲಿ ಸತ್ತಳು. ಕಡಲೆಪುರಿಯ ತರಹ ನಿದ್ದೆ ಮಾತ್ರೆಗಳ್ನು ನುಂಗಿ ರಾತ್ರಿ
ಮಲಗಿದ ನಂದಿನಿ ಬೆಳಗಿನ ಳೆಗೆ ಸತ್ತಿದ್ದಳು. ಹೇಮಂತ ಹೇಮಂತ ಎಂದು ಮಿಡಿಯುತ್ತಿದ್ದ ಅವಳ ಹೃದಯ ಶಾಂತವಾಗಿತ್ತು,
ತನ್ನಿಂದ ಬೆಳಕಿನ ಪ್ರವಾಹವನ್ನೆ ಹೊರಗೆ ನುಗ್ಗಿಸುತ್ತಿದ್ದ ಅವಳ ಕಣ್ಣುಗಳ ಬಾಗಿಲು ಮುಚ್ಚಿದ್ದವು;
ಮುಗುಳುನಗು ಹೂವಾಗುವ ಮೊದಲೇ ಒಣಗಿತ್ತು.
ಇಲ್ಲ,
ನಂದಿನಿಯನ್ನು ಬಲಿ ತೆಗೆದುಕೊಂಡ ಹೇಮಂತನಿಗೆ ತಕ್ಕಶಾಸ್ತಿ ಮಾಡಿಸಬೇಕು; ಅವನು ಮತ್ತೆಂದೂ ಇಂಥ ಕೆಲಸಕ್ಕೆ
ಕೈಹಾಕಬಾರದು; ಸಿಕ್ಕ ಸಿಕ್ಕ ಹುಡುಗಿಯರನ್ನು ನಂಬಿಸಿ ಕೈಕೊಡುವ ಅವನ ಕೈ ಕತ್ತರಿಸಬೇಕು ಇದು ಮಾಧವರಾವ್‍ನ
ಹೃದಯದ ಮಿಡಿತದ ಶ್ರುತಿ. ಯೋಚನೆಗಳ ಪ್ರವಾಹದಲ್ಲಿ ಸಿಕ್ಕಿದ ಮಾಧವರಾವ್ ಎದ್ದು ಏನೋ ನಿರ್ಧಾರದಿಂದ
ಬಟ್ಟೆ ಧರಿಸಿದ ಹೇಮಂತ ನಂದಿನಿಗೆ ಸಂಬಂಧಿಸಿದ ಪುಸ್ತಕ-ಕಾಗದ ಫೋಟೋಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು
ಹೊರಟ.
ತಾನು
ಹೇಮಂತನಿಗೆ ರೆದಿದ್ದ ಕಾಗದದ ಜ್ಞಾಪಕ ಬಂತು. ಮಾಧವರಾವ್‍ಗೆ ಹೋಗುತ್ತ ದಾರಿಯಲ್ಲಿ, ಅದರಿಂದ ಅವನ ಮೇಲೆ
ಏನಾದರೂ ಪರಿಣಾಮ ಬೀರುವುದೆಂದು ನಿರೀಕ್ಷಿಸುವಂತಿರಲಿಲ್ಲ. ಹಾಗೆ ಮಿಡಿಯುವ ಹೃದಯ ಅವನದಾಗಿದ್ದಿದ್ದರೆ
ನಂದಿನಿಯನ್ನು ನಂಬಿಸಿ ಕೊರಳು ಕೊಯ್ಯುತ್ತಿದ್ದನಾ ? ಅಲ್ಲದೆ ತನ್ನಿಂದಾಗಿ ಸತ್ತ ಅವಳ ಬಾಂಧವರನ್ನು
ಎದುರಿಸುವ ಧೈರ್ಯ ಅವನಿಗೆಲ್ಲಿದೆ? ಮುಗ್ಧನಾಗಿದ್ದರೆ ಓಡಿ ಬಂದು ತಮಗೆಲ್ಲ ಸಾಂತ್ವನದ ಮಾತುಗಳನ್ನಾದರೂ
ಆಡುತ್ತಿದ್ದ. ಅದಾವುದೂ ಅವನ ಮನಸ್ಸನ್ನು ತಟ್ಟಲಾರದು. ಹೇಮಂತ ರಾಕ್ಷಸ, ಪಿಶಾಚಿ, ರಕ್ತಹೀರುವ ಭೂತ;
ಇವೆಲ್ಲದರ ಜೊತೆಗೆ ಹೇಡಿ. ಇರಲಿ, ಬದ್ಮಾಷ್ ಸೂಳೇಮಗನಿಗೆ ಮಾಡಿಸುತ್ತೇನೆ ಎಂದು ಅವಡುಗಟ್ಟಿದಾಗ ಆ
ರಭಸಕ್ಕೆಂಬಂತೆ ಮಾಧವರಾಯನಕಾಲುಗಳಿಗೆ ವೇಗ ಬಂದಿತ್ತು.
ಆತ
ನೇರವಾಗಿ ಹೋದದ್ದು ತನಗೆ ಗುರುತಿರುವ ಒಬ್ಬ ಲಾಯರರ ಆಫೀಸಿಗೆ, ಗುರುತು ಎಂದರೆ ವೈಯಕ್ತಿಕವಾಗಿ ಗೊತ್ತಿದ್ದವರು
ಎಂದಲ್ಲ. ತಾನು ಯಾರ ಬಗ್ಗೆ ಕೇಳಿದನೋ ಅಂತಹ ವಕೀಲರ ಬಳಿಗೆ. ವಕೀಲರನ್ನು ಖುದ್ದಾಗಿ ತಿಳಿಯುವ ಮಟ್ಟಿಗೆ
ತಾನಾವುದೂ ಕೋರ್ಟು ವ್ಯವಹಾರದಲ್ಲಿ ತೊಡಗಿದವನಲ್ಲ. ಆಸ್ತಿಯೇ ಪಾಸ್ತಿಯೇ ಕೋರ್ಟುಕಚೇರಿಯಲ್ಲಿ ಅಲೆದಾಡಿಸುವ
ತಗಾದೆ ಬರಲು? ಅದೂ ಈಗ ಹೋಗಿದ್ದ ಲಾಯರ್ ವೆಂಕಟಕೃಷ್ಣ ಪ್ರಖ್ಯಾತ ಕಿಮಿನಲ್ ಲಾಯರ್. ಹೇಮಂತ ಒಬ್ಬಕ್ರಿಮಿನಲ್
ತಾನೇ? ಅವನಿಗೆತಕ್ಕ ಬುದ್ಧಿ ಕಲಿಸಲು ಕ್ರಿಮಿನಲ್ ಲಾಯರ್ ತಾನೇ ಬೇಕಾದದ್ದು. ಲಾಯರ್‍ಗೆಂದು ಹಣ ಸ್ವಲ್ಪ
ಖರ್ಚಾದರೂ ಪರವಾಗಿಲ್ಲ; ನಂದಿನಿಯ ಮದುವೆಗೆಂದು ಸಂಗ್ರಹಿಸುತ್ತ ಬಂದಿರುವ ಹಣದಲ್ಲಿ ಸ್ವಲ್ಪವನ್ನು
ಅವಳ ಆತ್ಮಕ್ಕೆ ಶಾಂತಿ ಸಿಗುವಂತೆ ಹೇಮಂತನಿಗೆ ಶಾಸ್ತಿಮಾಡಿಸಲು ಬಳಸಿದರಾಯಿತು. ಅವಳಿಗಾಗಿಟ್ಟಿದ್ದ
ಹಣ ಹೀಗೆ ವ್ಯಯಿಸುವ ಪರಿಸ್ಥಿತಿಯುಂಟಾಯಿತಲ್ಲ ಎಂಬ
ನೆನಪಿನಿಂದ ಮಾಧವರಾಯನ ಕಣ್ಣುಗಳು ತೇವಗೊಂಡವು. ಕ್ಷಣದಲ್ಲಿ ಆ ತೇವ ಕೋಪದ ಉರಿಯಿಂದ ಆವಿಯೂ ಆಗಿತ್ತು.
ಜನರು
ಹೆಚ್ಚಿರಲಿಲ್ಲ; ಆದರೆ ಹೋದ ತಕ್ಷಣ ವೆಂಕಟಕೃಷ್ಣ ಅವರನ್ನು ಕಾಣುವುದೂ ಸಾಧ್ಯವಾಗಲಿಲ್ಲ. ಹೊರಗೆ ಹಾಕಿದ್ದ
ಬೆಂಚಿನ ಮೇಲೆ ಕಾಯುತ್ತಿದ್ದ ಇತರರೊಂದಿಗೆ ಕೂತ. ಆ ಕಡೆ ಈ ಕಡೆ ಗಮನಹರಿಸಿದ. ಚಿಂತೆಯ ಮೂಟೆ ಹೊತ್ತ
ಜನಗಳು; ಪ್ರಾಯಶಃ ತಾವು ಮಾಡಿದ ಅಪರಾಧದಿಂದ ಪಾರಾಗಲು ಲಾಯರ್‍ರ ಕಾಲುಹಿಡಿದು ಅವರಿಗೆ ಮೇವಾಗಲು ಬಂದಿದ್ದವರಿರಬೇಕು
ಅವರೆಲ್ಲ. ತನ್ನನ್ನೂ ಅಂತಹ ಅಪರಾಧಿಯೇ ಎಂದು ಭಾವಿಸಿದರೆ? ಅಂತಹ ಸನ್ನಿವೇಶದಲ್ಲೂ ಈ ಆಲೋಚನೆಯಿಂದ
ನಗುಬಂತು. ಅಲ್ಲದೆ ಅವನ ಆಲೋಚನೆಯ ರೀತಿಯೂ ಕೊಂಚ ಬದಲಾಯಿಸಿತು. ಇವರಲ್ಲಿ ಕೆಲವರಾದರೂ ತನ್ನಹಾಗೆ ಅಪರಾಧಿಗಳಿಗೆ
ತಕ್ಕ ಶಿಕ್ಷೆ ವಿಧಿಸಲು ಪ್ರಯತ್ನ ಪಡುವವರಾಗಿರಬೇಕು ಎನ್ನಿಸಿತು.
ತನ್ನ
ಸರದಿ ಬಂದಾಗ ತುಂಬ ವಿಧೇಯತೆಯಿಂದ ಎದ್ದ ಮಾಧವರಾವ್ ಲಾಯರ್ ಕುಳಿತಿದ್ದ ಒಳಕೋಣೆಗೆ ಹೋದ. ಅವರು ಕುಳಿತಿದ್ದ
ಮೇಜಿನ ಕಡೆ ಅವರು ತೋರಿಸಿದ ಕುರ್ಚಿಯಲ್ಲಿ ಕುಳಿತ. ಅವರು ಇವನೆಡೆಗೆ ನೋಡುತ್ತ: “ಯಸ್, ವಾಟ್ ಕೆನ್
ಐ ಡೂ ಫಾರ್ಯೂ?” ಎಂಬ ಅವರ ಪ್ರಶ್ನೆಗೆ ನೇರವಾಗಿ ಉತ್ತರಿಸದೆ ಮಾಧವರಾವ್ ತನ್ನ ಪರಿಚಯ ಮಾಡಿಕೊಂಡ.
ನಂದಿನಿಯ ವಿಷಯವನ್ನು ಸ್ವಲ್ಪದರಲ್ಲಿ ವಿವರಿಸಿದ. ಹೇಮಂತನೇ ನಂದಿನಿಯ ಆತ್ಮಹತ್ಯೆಗೆ ಕಾರಣನೆಂದು ಪ್ರತಿಪಾದಿಸುವ
ವಾದ ಸರಣಿಯಿಂದ ಮಾತಾಡಿದ. ಈ ವಾದ ಕೇಳಿ ಹೇಮಂತನಿಗೆ ಶಿಕ್ಷೆ ವಿಧಿಸುವ ನ್ಯಾಯಾಧೀಶರೇ ಎದುರಿಗಿದ್ದಾರೆಂಬಂತೆ
ಇತ್ತು ಅವನ ಮಾತಿನ ರೀತಿ.
“ಆತ್ಮಹತ್ಯೆಯ
ವಿಚಾರ ಪೊಲೀಸರಿಗೆ ತಿಳಿಸಿದ್ದೀರಾ?” ಎಂದು ವೆಂಕಟಕೃಷ್ಣ ಕೇಳಿದಾಗ, ಹಾಗೆ ತಿಳಿಸಬೇಕಾದುದು ತಮ್ಮ
ಕರ್ತವ್ಯವೆಂಬುದೇ ಗೊತ್ತಿರಲಿಲ್ಲವಲ್ಲ ಎನಿಸಿ ಕಸಿವಿಸಿಯಾಯಿತು. ಏನೋ ಅಪರಾಧ ಮಾಡಿದವನ ಹಾಗೆ ತಲೆ
ಕೆಳಗೆ ಹಾಕಿ “ಇಲ್ಲ” ಎಂದಿದ್ದ.
“ತಾನು
ಆತ್ಮಹತ್ಯೆ ಮಾಡಿಕೊಳ್ತಾ ಇದ್ದೀನಿ ಅಂತ ನಿಮ್ಮ ತಂಗಿ ನೋಟ್ ಏನಾದ್ರೂ ಬರೆದಿಟ್ಟಿದ್ದರಾ?”ಇದಕ್ಕೆ
ತಕ್ಕ ಜೋಪಾನ ಮಾಡಿದ್ದೇನೆ ಎಂಬ ಸಮಾಧಾನ ಮಾಧವರಾಯನಿಗುಂಟಾಯಿತು. ಹೌದು, ಅವಳ ಕಾಗದವನ್ನು ಜೋಪಾನವಾಗಿ
ತೆಗೆದಿಟ್ಟಿದ್ದ. ಇಲ್ಲಿಗೂ ತಂದಿದ್ದ. ಅದನ್ನು ಇರಿಸಿದ್ದ ಕವರನ್ನು ಬ್ಯಾಗಿನಿಂದ ಹೊರತೆಗೆದು, ಕಾಗದ
ಬಿಡಿಸಿ ಅವರ ಮೇಜಿನ ಮೇಲಿಟ್ಟ. ಅದನ್ನು ಕೈಗೆತ್ತಿಕೊಂಡ ಲಾಯರ್ ಹಿಂದೆ ಮುಂದೆ ತಿರುಗಿಸಿದರು.
“ಇದರಲ್ಲೇನೂ
ಅಂಥ ವಿಷಯವಿಲ್ಲವಲ್ಲ ಮಿಸ್ಟರ್ ಇವರೇ. ತನ್ನ ಸಾವಿಗೆ ಯಾರೂ ಕಾರಣರಲ್ಲ ಅನ್ನೋ ತರಹವೇ ಇದೆಯಲ್ಲ.”
ಮಾಧವರಾವ್ ಮತ್ತೆ ವಾದಸರಣಿ ಪಂಜರದ ಬೀಗ ತೆರೆದು ಹೊರಬಿದ್ದ. ತಾನು ತಂದಿದ್ದ ಪುಸ್ತಕ ಪೇಪರ್ ಎಲ್ಲ
ಮೇಜಿನ ಮೇಲಿಟ್ಟು ವಿವರಿಸಿದ. ಅದನ್ನೆಲ್ಲ ಕುತೂಹಲದಿಂದ ನೋಡಿದ ವೆಂಕಟಕೃಷ್ಣ ಕೊನೆಯಲ್ಲಿ ಹೇಳಿದರು;
“ನೋಡಿ ಮೇಸ್ಟ್ರೇ. ಕೇಸ್ ಇದ್ದ ಹಾಗೆ ಇಲ್ಲ, ಇಲ್ಲಿ. ಅವರು ಬೆಂಗಳೂರಲ್ಲಿ ಅಂತೀರಿ ತಂಗಿ ಇಲ್ಲಿ,
ಸಂಬಂಧವಿಲ್ಲ, ಎವಿಡೆನ್ಸ್ ಇಲ್ಲ, ಏನೋಪ್ಪ. ಆದರೆ ಲಾಯರ್, ಏನೂ ಮಾಡಲಾರರು ಇಂಥ ಕಡೆ. ಸುಮ್ಮನೆ ನಿಮಗೆ
ಅಡ್ವೈಸ್ ಮಾಡಬೇಕೂಂತ ಇಷ್ಟು ಹೊತ್ತು ಮಾತಾಡಿಸಿದೆ, ಅಷ್ಟೆ. ಇದು ಪೊಲೀಸ್ ಕೇಸ್. ಈಗಲೂ ಹೋಗಿ ಪೊಲೀಸರಿಗೆ
ನಿಮ್ಮ ತಂಗಿಯ ಆತ್ಮಹತ್ಯೆಯ ವಿಚಾರ ತಿಳಿಸಿ, ಅವರಿಗೆ ನಿಮ್ಮ ತಂಗಿ ಬರೆದಿಟ್ಟ ಕಾಗದ ಒಪ್ಪಿಸಿ. ಆತ್ಮಹತ್ಯೆಗೆ
ಪ್ರಚೋದನೆ ನೀಡಿದವರ ವಿರುದ್ಧ ಪ್ರಾಸಿಕ್ಯೂಷನ್ ಕೇಸ್ ರಿಜಿಸ್ಟರ್ ಮಾಡಿಕೊಂಡು ಮುಂದುವರೆಯಬಹುದು.
ಇಂಡಿಯನ್ ಪೀನಲ್‍ಕೋಡ್ ಸೆಕ್ಷನ್ 306ರ ಪ್ರಕಾರ ಆತ್ಮಹತ್ಯೆಗೆ ಕಾರಣರಾದವರಿಗೆ ಹತ್ತು ವರ್ಷಗಳವರೆಗೂ
ಸಜೆ ಹಾಗೂ ದಂಡ ವಿಧಿಸೋದಕ್ಕೆ ಅವಕಾಶವಿದೆ. ಹಾಗಂತ ಕಂಪ್ಲೇಂಟ್ ಕೊಡಿ ಪೊಲೀಸ್ ಸ್ಟೇಷನ್ನಿನಲ್ಲಿ.
ನನ್ನ ಕೆಲಸವೇನೂ ಇಲ್ಲ ಇಲ್ಲಿ. ಬೇಕಾದರೆ, ಹಾಗೆ ಕೇಸ್ ಆದರೆ, ಆರೋಪಿಯ ಪರ ವಕಾಲತ್ತು ವಹಿಸಬಹುದು,
ಅಷ್ಟೆ” ಎಂದರು ನಗುತ್ತ, ಆದರೆ ತಾನು ಮಾಡಿದತಪ್ಪಿನ ಅರಿವಾದವರಂತೆ “ಐಯಾಮ್ ಸಾರಿ ಮಿಸ್ಟರ್ ಮಾಧವರಾವ್.
ಪ್ರಯತ್ನಪಡಿ. ಕೇಸೇ ಇದ್ದಂತಿಲ್ಲ. ಬೆಸ್ಟ್ ಆಫ್ ಲಕ್” ಎಂದು ಕೈಯೆತ್ತಿ ಆಡಿಸಿದರು.
“ಫೀಸು?”
ಎಲ್ಲದ್ದಕ್ಕೂ ಹಣ ಕೇಳುವ ಮಂದಿಯಲ್ಲವೇ ವಕೀಲರು. ಇಷ್ಟು ಮಾತಾಡಿದ್ದಕ್ಕೇ ಹಣ ಎಷ್ಟು ಕೇಳುವರೋ ಎಂಬ
ಅಳುಕಿನಿಂದಲೇ ಮಾಧವರಾವ್ ಕೇಳಿದ.
“ಎಂಥ
ಫೀಸು? ನಾನೇನು ಮಾಡಿದೆ ಅಂತ? ಹೋಗಿ ಬನ್ನಿ”
ಅಲ್ಲಿಂದ
ನೇರವಾಗಿ ಬಂದದ್ದು, ಪೊಲೀಸ್ ಸ್ಟೇಷನ್ನಿಗೆ. ಹೊರಗೆ ಬಂದೂಕು ಹಿಡಿದು ನಿಂತಿದ್ದ ಪೇದೆಯ ಹತ್ತಿರ ಹೋಗಿ
ವಿಚಾರಿಸಿದ. ಆತ್ಮಹತ್ಯೆ ಎಂಬ ಶಬ್ದ ಕೇಳಿದ ಕೂಡಲೇ ಅವನು ಕ್ರೈಂ ಸಬ್‍ಇನ್ಸ್‍ಪೆಕ್ಟರ್ ಕೂತಿದ್ದ ರೂಮಿನ
ಕಡೆ ತೋರಿಸಿದ. ಯಥಾಪ್ರಕಾರ ಪರಿಚಯವಾದ ಮೇಲೆ ತನ್ನ ಕಂತೆ ಬಿಚ್ಚಿದ ಮಾಧವರಾವ್.
ಇಲ್ಲೂ
ಅವನಿಗೆ ಎದುರಾದದ್ದು ಲಾಯರ್ ವೆಂಕಟಕೃಷ್ಣ ಹೇಳಿದ ಪರಿಸ್ಥಿತಿಯೇ, “ನಿಮ್ಮ ತಂಗಿ ಆತ್ಮಹತ್ಯೆಯ ವಿಷಯ
ಪೊಲೀಸರಿಗೆ ತಿಳಿಸಬೇಕಾಗಿತ್ತು. ಶವ ದಫನ್ ಮಾಡಕ್ಕೆ ಏನ್ಮಾಡಿದ್ರಿ?” ಇದು ಆತ್ಮಹತ್ಯೆ ಅಂತಹ ಅಕ್ಕಪಕ್ಕದವರಿಗೆ
ತಿಳಿಸಿದ್ದರೆ ತಾನೇ! ಅವರಿಗೆಲ್ಲ ತಿಳಿಸಿದ್ದದ್ದು ಏನೋ ಕಾಯಿಲೆಯಾಗಿತ್ತು ಎಂದು ಹೇಳಿ ಪರಿಚಯವಿದ್ದ
ಡಾಕ್ಟರರ ಹತ್ತಿರ ಮರಣದ ಬಗ್ಗೆ ಸರ್ಟಿಫಿಕೇಟ್ ತಗೊಂಡು ಬಂದು ಸಂಸ್ಕಾರ ಮುಗಿಸಿದ್ದರು. ಪೊಲೀಸರಿಗೆ
ತಿಳಿಸಬೇಕೆಂದು ಅನ್ನಿಸಲೂ ಇಲ್ಲ.
“ನೋ
ನೋ ನೀವು ಮಾಡಿದ್ದು ತಪ್ಪು, ಅಲ್ಲಿ ದಫನ್ ಮಾಡಿದ್ದೀರಿ ಇಲ್ಲಿ ಬಂದು ಅಬೆಟ್‍ಮೆಂಟ್ ಆಫ್ ಸೂಯಿಸೈಡ್
ಅಂತ ಯಾರ ಮೇಲೋ ಕಂಪ್ಲೇಂಟ್ ಕೊಡ್ತಾ ಇದ್ದೀರಿ. ಅದೂ ನಾರ್ಮಲ್ ಸಾವೂಂತ ಡಾಕ್ಟರ್ ಸರ್ಟಿಫಿಕೇಟ್ ತಗೊಂಡು.
ಈಗ ಆತ್ಮಹತ್ಯೆ ಅಂತ ಕಂಪ್ಲೇಂಟ್ ಕೊಟ್ಟರೆ ನೀವೇ ಸಿಕ್ಕಿಹಾಕಿಕೋತೀರಲ್ಲ ಮೇಷ್ಟ್ರೇ. ಮೇಷ್ಟ್ರುಗಳಿಗೆ
ವ್ಯವಹಾರಜ್ಞಾನ ಕಡಿಮೆ ಅನ್ನೋದು ಇದಕ್ಕೇ. ನಿಮ್ಮಂಥವರು ಪಾಪ ಏನೇನು ಅನುಭವಿಸಬೇಕೋ! ದಯವಿಟ್ಟು ಏನಾದರೂ
ಬರೆದುಕೊಟ್ಟು ಎಡವಟ್ಟು ಮಾಡಿಕೋಬೇಡಿ. ಆದದ್ದಾಯಿತು. ನಿಮ್ಮ ವಾದ ಕೇಳಿದ ಮೇಲೆ ಕೇಸ್ ಬಿಲ್ಡಪ್ ಮಾಡಕ್ಕೆ
ಅವಕಾಶವೂ ಇಲ್ಲ, ನಿಮ್ಮ ತಂಗಿ ಬರೆದಿಟ್ಟರೋ ಕಾಗದದಲ್ಲಿ ಅವರ ಹೆಸರಿಲ್ಲ. ಅವರೆಲ್ಲೋ ಒಂದು ದಿನ ನಿಮ್ಮ
ಮನೆಗೆ ಬಂದಿದ್ರು ಅಂತೀರಿ. ಬೆಂಗಳೂರಲ್ಲಿ ಭೇಟಿಯಾಗ್ತಿರಬಹುದು. ಅದಕ್ಕೇನು ಎವಿಡೆನ್ಸು? ಅಲ್ಲದೆ
ನೋಡಿ ಮಾತಾಡಿ ಬಿಟ್ಟಾಕ್ಷಣ ಅದನ್ನ ತಪ್ಪು ಅನ್ನಕ್ಕೆ ಸಾಧ್ಯವಾ? ಏನೋ ಅವರು ಬರೆದಿರೋ ಒಂದೆರಡು ಕಾಗದಗಳು
ನಿಮ್ಮ ಹತ್ತಿರ ಇದೆ. ಅವನ್ನೆಲ್ಲ ಓದಿದೆನಲ್ಲ. ಏನಿದೆ ಅದರಲ್ಲಿ? ಪ್ರೀತಿ, ಪ್ರೇಮ, ಮದುವೆ, ಯಾವುದರ
ಪ್ರಸ್ತಾಪಾನೂ ಇಲ್ಲ. ಒಂದಷ್ಟು ಕಣ್ಣನ್ನು,ಮುಗುಳುನಗೆಯನ್ನು ಹೊಗಳಿ ಬರೆದಿದ್ದಾನೆ ಅಂತ ಅವನನ್ನು
ಅರೆಸ್ಟ್ ಮಾಡಕ್ಕಾಗತ್ತಾ? ಆತ ಬೇರೆ ನಾವಲಿಷ್ಟ್ ಅಂತೀರಿ. ಒಬ್ಬ ಲೇಖಕನನ್ನ ಅರೆಸ್ಟ್ ಮಾಡಿದ್ರೆ ನಮ್ಮ
ಗತಿ ಏನು? ಅದಲ್ಲದೆ ಕೇಸೇ ಇಲ್ಲ. ನಿಜವಾಗಿಯೂ ಸರ್‍ಕಂಸ್ಟಾಂಷಿಯಲ್ ಎವಿಡನ್ಸ್ ಇದ್ದಿದ್ರೆ ಅವನೆಲ್ಲಿದ್ದರೂ
ಒಂದು ದಿವಸದಲ್ಲಿ ಹಿಡಿದುಹಾಕಿ ಏರೋಪ್ಲೇನ್ ಹಾಕಿಬಿಡಬಹುದಾಗಿತ್ತು, ನಿಮ್ಮ ಮಾತು ಕೇಳಿ ಅವರನ್ನು
ವಿಚಾರಿಸಕ್ಕೆ ಹೋದರೆ ಅವನೆಂಥ ಇನ್‍ಫ್ಲುಯನ್ಸ್ ಇರೋನೋ ಏನೋ ನನ್ನ ತಿಥಿ ಮಾಡ್ತಾರೆ. ಅಲ್ಲದೆ ಕೇಸೇ
ಇಲ್ಲವಲ್ಲ ಮೇಷ್ಟ್ರೆ. ಆದದ್ದಾಯಿತು, ನಿಮಗೆಅಷ್ಟು ಕೋಪ ಬಂದಿದ್ದರೆ, ಅವನೇ ನಿಮ್ಮ ತಂಗಿ ಸಾವಿಗೆ
ಕಾರಣ ಅಂಶ ಅನ್ನಿಸಿದರೆ ಒಂದು ಕೆಲಸ ಮಾಡಿ.....” ಎಂದರು ಸಬ್‍ಇನ್ಸ್‍ಪೆಕ್ಟರ್ ಮೇಜಿನ ಮೇಲಿದ್ದ ರೂಲು
ದೊಣ್ಣೆಯನ್ನು ತಿರುಗಿಸುತ್ತ.
ಏನೋ
ಉಪಾಯ ಹೇಳುತ್ತಾರೆಂಬ ಕಾತರದಿಂದ ಅವರೆಡೆಗೆ ಮಾಧವರಾವ್ ನೋಡಿದ. “ಒಂದು ಕೆಲಸಮಾಡಿ, ಯಾರನ್ನಾದರೂ ನಾಲ್ಕು
ಜನರನ್ನ ಕರೆದುಕೊಂಡು ಬೆಂಗಳೂರಿಗೆ ಹೋಗಿ ಯಾರಿಗೂ ತಿಳಿದ ಹಾಗೆ ಆ ನನ್ಮಗಂಗೆ ನಾಲ್ಕು ಬಿಟ್ಟು ಬನ್ನಿ!”
ಎಂದು ಮುಗುಳ್ನಕ್ಕರು ಎಸ್.ಐ. ಅದನ್ನು ಅವರು ತಮಾಷೆಗೆ ಹೇಳಿದ್ದು ಎಂದು ತಿಳಿಯದಿರುತ್ತದೆಯೇ. ಹೇಮಂತನೇ
ನಂದಿನಿಯ ಸಾವಿಗೆ ಕಾರಣ ಎಂಬುದಕ್ಕೆ ಸಾಸಿವೆ ಕಾಳಿನಷ್ಟೂ ಎವಿಡೆನ್ಸ್ ಇಲ್ಲ ಎಂದು ಹೇಳುತ್ತಾರೆ, ಜೊತೆಗೆ
ತನ್ನದೂ ಅಪರಾಧವಾಗಿಬಿಟ್ಟಿದೆ. ನಂದಿನಿಯ ಸಾವು ಸಹಜವಾದದ್ದೆಂದು ಡಾಕ್ಟರ್ ಸರ್ಟಿಫೀಕೇಟ್ ತೆಗೆದುಕೊಂಡು
ಸಂಸ್ಕಾರ ಮಾಡಿದ್ದಾಗಿದೆ. ಈಗ ದೂರನ್ನು ಬರೆದುಕೊಟ್ಟರೆ ತಾನಲ್ಲದೆ ಡಾಕ್ಟರ್ ಕೂಡ ಪರೀಕ್ಷೆ ಮಾಡದೆ
ಸರ್ಟಿಫಿಕೇಟ್ ಕೊಟ್ಟಿದ್ದಕ್ಕಾಗಿ ಪೊಲೀಸ್ ಕೇಸ್ ಎದುರಿಸಬೇಕಾಗುತ್ತದೆ. ಹೇಮಂತನನ್ನು ಶಿಕ್ಷಿಸುವುದಕ್ಕಾಗಿ
ಡಾಕ್ಟರನ್ನು ಬಲಿ ಕೊಡುವುದರ ಜೊತೆ ನಾನು ತಾನೇ ಅದನ್ನು ಎದುರಿಸಬಲ್ಲೆನೇ?
“ಥ್ಯಾಂಕ್ಸ್”ಎಂದು
ವಿನಯದಿಂದ ಎಸ್.ಐ.ಗೆ ವಂದಿಸಿದ ಮಾಧವರಾವ್ ಸ್ಟೇಷನ್ನಿನಿಂದ ಹೊರಬಿದ್ದು ಮನೆಯ ಕಡೆ ಹೊರಟಾಗ, ಪ್ರಾಣಿಯ
ಬೇಟೆಯಾಡಲು ಉಪಾಯ ಮಾಡುತ್ತಿದ್ದಾಗ ಆ ಪ್ರಾಣಿಯೇ ಹಿಂದಿನಿಂದ ತನ್ನನ್ನು ಹಿಡಿದುಬಿಟ್ಟಂತಾಗಿತ್ತು.
ಪೊಲೀಸ್ ದೂರು ಕೊಟ್ಟರೆ ಹೇಮಂತನನ್ನು ಅರೆಸ್ಟ್ ಮಾಡ್ತಾರೆ, ತನ್ನ ಹತ್ತಿರ ಇರೋ ದಾಖಲೆಗಳಿಂದ ಅವನನ್ನು
ಜೈಲಿಗೆ ಕಳಿಸಬಹುದು ಅಂತ ಕೋಪಾವಿಷ್ಟನಾಗಿ ಬಂದಿದ್ದರೆ ಈಗ ನನ್ನ ಅದೃಷ್ಟವನ್ನು ನಾನೇ ಹೊಗಳಿಕೊಳ್ಳುವಂತಾಗಿತ್ತು.
ಸಬ್‍ಇನ್ಸ್‍ಪೆಕ್ಟರ್ ಒಳ್ಳೆಯವನಾದ್ದರಿಂದ ಸರಿಹೋಯಿತು. ಇಲ್ಲದಿದ್ದರೆ ತನ್ನನ್ನು ಕಾಡಿಸಿ ಪೀಡಿಸಬಹುದಾಗಿತ್ತು.
ಏನೋ ಮೇಸ್ಟ್ರು ಎಂಬ ಕಾರಣಕ್ಕಾಗಿ ತನ್ನನ್ನು ಸತಾಯಿಸಲಿಲ್ಲ. ಈ ಅದೃಷ್ಟಕ್ಕೆ ಖುಷಿಪಡಬೇಕೇ ಅಥವಾ ಹೇಮಂತನ
ಮೇಲೆ ಬೇರೆ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ಸಾಧ್ಯವೇ ಎಂಬ ವಿಚಾರದ ಸುಳಿಯಲ್ಲಿ ಮಾಧವರಾವ್ ಸಿಕ್ಕಿದ.
* * *
ಗಾಢವಾದ
ಕತ್ತಲ ಕೆಸರಿನಾಳದಿಂದ ಬೆಳಕಿನ ತಾವರೆ ಅವಳ ಆಕಾರದಲ್ಲಿ ಮೂಡಿದಾಗ ಜೋಗ್ ಫಾಲ್ಸ್‍ನ ಹೋಟೆಲಿನಲ್ಲಿ
ಮಲಗಿದ್ದ ಹೇಮಂತ ಎಚ್ಚರಗೊಂಡ, ಪ್ರಾತರ್ವಿಧಿಗಳನ್ನೆಲ್ಲ ಒಂದಾದ ಮೇಲೊಂದರಂತೆ ಮುಗಿಸಿ ಉಡುಪು ಧರಿಸಿ
ಹೊರ ಬಂದಾಗ ಎಂಟೂವರೆಯಾಗಿತ್ತು. ತನ್ನ ರೂಮಿನಿಂದ ಇಪ್ಪತ್ತು ಹೆಜ್ಜೆಗಳಷ್ಟು ದೂರದ ರೆಸ್ಟೋರೆಂಟಿಗೆ
ಹೋಗಿ ಕಾಫಿ-ತಿಂಡಿಗಳನ್ನು ಪೂರೈಸಿ ಜಲಪಾತದೆಡೆಗೆ ಬಂದ. ಕಣ್ಣೀರ ಧಾರೆಯಂತೆ ನೀರು ಹರಿಯುತ್ತಿತ್ತು.
ಜಗತ್ಪ್ರಸಿದ್ಧವಾದ ಜಲಪಾತ. ಇಂದು ಬರಿದೋ ಬರಿದು. ಲಿಂಗನಮಕ್ಕಿ ಜಲಾಶಯದಲ್ಲಿ ಶರಾವತಿಯ ಬಂಧನವಾಗಿತ್ತು,
ಅದಕ್ಕೇ ಅವಳ ಕೈಕಾಲು ಕಟ್ಟಿ ಹಾಕಿದ್ದಾರೆನ್ನಿಸಿತು. ಬರಿದಾದ ಜಲಪಾತವನ್ನು ಕಂಡಾಕ್ಷಣ ಹೇಮಂತನಿಗೆ
ತನ್ನ ಜೀವನವೂಹಾಗೆಯೇ ಅನ್ನಿಸಿತು. ಒಂದು ಬರಿದು; ಇನ್ನೊಂದು ಪಾತ, ನಿಟ್ಟುಸಿರಿನ ಶಬ್ದಕೂಡ ಕೇಳಿಸಿತು.
ತಾನು ಕಟಕಟೆ ಹಿಡಿದು ನೋಡುತ್ತ ನಿಂತಾಗ ಸನಿಹ ಮತ್ತೊಬ್ಬರೂ ಬಂದು ನಿಂತಿದ್ದದ್ದು ಒಂದೆರಡು ಕ್ಷಣಗಳ
ನಂತರ ಅವನ ಲಕ್ಷ್ಯಕ್ಕೆ ಬಂತು.
“ನಮಗೆಲ್ಲರಿಗೆ
ಈಗ ಜೋಗದ ಜಲಪಾತದ ಸೌಂದರ್ಯವೆಂದರೆ ಚಿತ್ರಗಳಲ್ಲಿ ಅಷ್ಟೆ ಕಾಣಿಸೋದು” ಎಂದು ಆ ವ್ಯಕ್ತಿ ತನ್ನ ಕಡೆ
ನೋಡಿದರೂ ಸ್ವಗತವೆಂಬಂತೆ ಮಾತಾಡಿಕೊಂಡರು. ಧಾರಾಕಾರವಾಗಿ ಸುರಿಯುತ್ತಿದ್ದ ಜೋರಿನ ನೀರು ತನ್ನಶಕ್ತಿಯನ್ನೆಲ್ಲ
ಕಳೆದುಕೊಳ್ಳುತ್ತಿದ್ದುದನ್ನು ವಿಶ್ವೇಶ್ವರಯ್ಯನವರು ಮೊದಲ ಬಾರಿಗೆ ಕಂಡಾಗ “ಎಂತಹ ವ್ಯರ್ಥ!” ಎಂದುಕೊಂಡರಂತೆ.
ನೀರಿನ ರಭಸ ಉತ್ಪಾದಿಸಬಹುದಾಗಿದ್ದ ಅಗಾಧ ವಿದ್ಯುತ್ತಿನ ಸಾಧ್ಯತೆಯಿಂದಾಗಿ ಆ ಉದ್ಗಾರ ಹೊರಬಂದಿತ್ತು.
ವಿದ್ಯುತ್ ತಯಾರಾಗುತ್ತಿದೆ; ವ್ಯರ್ಥ ಕಡಿಮೆಯಾಗಿಸಬಹುದು. ಆದರೆ ಶರಾವತಿಯೇ ತನ್ನ ಜೀವನ ವ್ಯರ್ಥವಾಯಿತಲ್ಲ
ಎಂದು ಕೊರಗುವ ಹಾಗೆ ಅವಳ ಕೇಶಮುಂಡನ ಮಾಡಿಬಿಟ್ಟಿದ್ದಾರೆ ಎನ್ನಿಸಿತು ಹೇಮಂತನಿಗೆ.
“ಈಚಿನವರೆಗೆ
ಎರಡನೇ ಶನಿವಾರ - ಭಾನುವಾರಗಳಾದರೂ ನೀರು ಬಿಡ್ತಿದ್ದರಂತೆ; ಈಗ ಅದನ್ನೂ ನಿಲ್ಲಿಸಿಬಿಟ್ಟಿದ್ದಾರಂತೆ,”
ಆ ಪಕ್ಕದಲ್ಲಿದ್ದ ವ್ಯಕ್ತಿಯ ಜೊತೆಗೆ ತನಗರಿವಿಲ್ಲದೆಯೇ ಮಾತಿಗಿಳಿದಿದ್ದ. ಕೊನೆಯ ಪಕ್ಷ ಹೊರ ಜೀವನದಲ್ಲಿಯಾದರೂ
ಒಂಟಿತನದಿಂದ ಪಾರಾಗಲು ಅವನ ಮನಸ್ಸು ಹಾತೊರೆಯುತ್ತಿತ್ತೇನೋ.
“ಅಷ್ಟರಮಟ್ಟಿಗೆ
ನೀರು ವಿದ್ಯುತ್ ಉತ್ಪಾದನೆಗೆ ಕಡಿಮೆ ಆಗತ್ತಲ್ಲ” ಅವರೂ ದನಿಗೂಡಿಸಿದರು. ಶರಾವತಿ ಜಾರುತ್ತಿದ್ದರೆ
ನೋಡಲು ಬರುವ ಮಂದಿಗೇನು ಕಡಿಮೆಯೇ. ಜನ ಜಿಗಿಜಿಗಿ ಎಂದು ಓಡಾಡುತ್ತಿದ್ದ, ಶರಾವತಿಯ ಜಾರುವ ರಭಸದಿಂದಾದ
ಶಬ್ದ ಎಲ್ಲರಲ್ಲೂ ಮೌನವನ್ನು ಕಡ್ಡಾಯವಾಗಿ ಜಾರಿ ಮಾಡುತ್ತಿದ್ದ ಪರಿಸರ ಈಗ ಬಿಕೋ ಎನ್ನುವ ರೀತಿಯಾಗಿತ್ತು.
ಹಿಂದಿನ ವೈಭವ ಕಂಡವರಿಗೆ ಶರಾವತಿಯ ಈ ವೈಧ್ಯವ್ಯ ಅಳು ಬರಿಸುವ ದೃಶ್ಯವಾಗಿತ್ತು.
ಮಾತಿಗೆ
ಮಾತು ಬೆಳೆದಿತ್ತು. ಅವರಿಬ್ಬರೂ ಇನ್ನೊಂದು ಕಡೆಯಿಂದ ಜಲಪಾತದ ತಳದ ಕಡೆಗೆ ಇಳಿಯಲು ಹೊರಟರು. ಜನಸಂಚಾರ
ಕಡಿಮೆಯಾಗಿ ಹಾಗೆ ಇಳಿಯುವ ಜಾಗವೂ ಗಿಡಗಂಟೆಗಳಿಂದ ತುಂಬಿತ್ತು. ಎಚ್ಚರಿಕೆಯಿಂದ ಇಬ್ಬರೂ ಇಳಿಯುವಾಗ
ಅವರು ಪರಸ್ಪರ ಪರಿಚಯಕ್ಕಿಳಿದರು.
ಆತ
ಗುಂಜಾಳ ಎಂಬುವವರು. ಬಿಜಾಪುರದಲ್ಲಿ ಲೋಕಲ್ ಸೆಲ್ಫ್ ಡಿಸ್‍ಪೆನ್ಸರಿಯೊಂದರಲ್ಲಿ ಆಯುರ್ವೇದಿಕ್ ವೈದ್ಯರು,
ಬೆಂಗಳೂರಿಗೆ ಯಾವುದೋ ಕೆಲಸಕ್ಕೆಂದು ಹೋದವರು ಸುತ್ತಾಡಿಕೊಂಡು ವಾಪಸ್ಸು ಹೋಗುವ ದಾರಿಯಲ್ಲಿದ್ದವರು.
ಅವರು ಹೇಳುವ ಕತೆಯೆಷ್ಟು ನಿಜವೋ, ಹೇಮಂತನಿಗೇನು ಗೊತ್ತು. ಬೆಂಗಳೂರಿನಿಂದ ಬಿಜಾಪುರಕ್ಕೆ ನೇರ ಬಸ್ಸಿರುವಾಗ
ಹೀಗೆ ಜೋಗದ ಮೂಲಕ ಹೋಗುವ ಅವಶ್ಯಕತೆಯೆಲ್ಲಿದೆ? ಸುತ್ತಾಡಿಕೊಂಡು ಇದೊಂದೇ ಜಾಗಕ್ಕೇಕೆ ಬರಬೇಕು? ಯಾವ
ಕಾರಣದಿಂದಲಾದರೂ ತನ್ನಂತೆ ಬೇಸರಗೊಂಡ ಅವರೂ ಪರಿಚಯದ ಎಲ್ಲದರಿಂದ ದೂರವಾಗಿರಲು ಹೀಗೆ ಬಂದಿರಬಹುದೇ?
ಜೀವನ ಎಷ್ಟು ಕಟು, ಅದು ಮಧುರವಾದ ಕ್ಷಣಗಳಿಗಿಂತ ಕಟುವಾದ ಗಂಟೆಗಳನ್ನೇ ಮೂಟೆ ಕಟ್ಟಿಕೊಂಡಿದೆ. ಪ್ರತಿಯೊಬ್ಬ
ವ್ಯಕ್ತಿಗೆ ಏನಾದರೂ ನೋವು, ಮುಜುಗರ. ಜೀವನದ ಹೊಟ್ಟೆಯಲ್ಲಿ ನೋವಿನ ಜಂತು ಹುಳು ಸೇರಿ ವ್ಯಕ್ತಿಯ ಪಾಲಿನ
ಆಹಾರವನ್ನೆಲ್ಲ ತಾನೇ ನುಂಗುತ್ತದೆ, ವ್ಯಕ್ತಿಗೆ ಏನೂ ಮೈ ಹತ್ತದಂತೆ ಮಾಡಿಬಿಡುತ್ತದೆ.
ತನ್ನ
ಹೆಸರು ಮ್ಯಾಥೂಸ್ ಎಂದು ಹೇಳಿಕೊಂಡ ಹೇಮಂತ. ಗೋವಾದವನು ಮೂಲತಃ ಕನ್ನಡಿಗ. ಗೋವಾದ ಹೆಣ್ಣನ್ನೇ ಮದುವೆಯಾಗಿದ್ದಾನೆ.
ಯಾವುದೋ ಕಾರಣದಿಂದ ಕರ್ನಾಟಕಕ್ಕೆ ಬಂದಿದ್ದ: ಹಾಗೆಯೇ ಒಂದು ರೌಂಡ್ ಹೊಡೆದು ಹೋಗೋಣವೆಂದು ಇಲ್ಲೆಲ್ಲ
ಬಂದಿದ್ದಾನೆ. ಅಪದ್ಧಕ್ಕೆ ಅಪ್ಪಣೆಯೇ ಎಂದರೆ ಬಾಯಿಗೆ ಬಂದದ್ದೇ ಅನ್ನುತ್ತಾರಲ್ಲ ಹಾಗೆ. ಶೂನ್ಯಕ್ಕೆ
ಕೈಕಾಲು ತಗುಲಿಸಿದರಾಯಿತು ಕತೆಯಾಗುತ್ತದೆ.
ತಾನು
ಬಿಜಾಪುರಕ್ಕೆ ಹೋಗುವೆನೆಂದು ಆತ ಹೇಳಿದ್ದರಿಂದ ತಾನೂ ಅಲ್ಲಿಗೆ ಹೋದರಾಯಿತೆಂದು ಅಂದುಕೊಂಡಿದ್ದ ಹೇಮಂತ.
ಅಲ್ಲದೆ, ಕೂಡಲ ಸಂಗಮವು ಜಲರಾಶಿಯಲ್ಲಿ ಮುಳುಗುತ್ತಿತ್ತು. ಅದಕ್ಕಾಗಿ ಕೃಷ್ಣಮಲಪ್ರಭಗಳ ಸಂಗಮದಲ್ಲಿ
ಬಸವಣ್ಣನಿಗೆ ಪ್ರಿಯವಾದ ಸಂಗಮನಾಥನ ಮಂಟಪವನ್ನು ತಾನು ನೋಡಬೇಕೆನ್ನಿಸಿತು ಹೇಮಂತನಿಗೆ. ಸಂಗಮಕ್ಕೆ
ತಾನೂ ಬಂದು ಆಮೇಲೆ ಬಿಜಾಪುರಕ್ಕೆ ಹೋಗುತ್ತೇನೆಂದು ಗುಂಜಾಳರು ಹೇಳಿದಾಗ ಮುಂದೆಲ್ಲಿಗೆ ಎಂಬುದು ನಿರ್ಧಾರವಾದಂತಾಯಿತು.
ಅದು ನಾಳಿನ ಪ್ರಯಾಣ. ಈ ದಿನ ಪೂರ್ತಿ ಜೊತೆಯಾಗಿ ಈ ಸುತ್ತು ಅಲೆದಾಡಲು ನಿರ್ಧರಿಸಿದರು.
ಒಂಬೈ
ನೂರು ಅಡಿಯಷ್ಟು ಆಳದ ಕಮರಿಯಲ್ಲಿ ಇಳಿದು ಮೇಲೆ ಬರುವ ಹೊತ್ತಿಗೆ ಸಾಕಷ್ಟು ಸುಸ್ತಾಗಿತ್ತು; ಹಸಿವೂ
ಆಗಿತ್ತು.ಒಂದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಏನಾದರೂ ತಿಂದು ನೋಡಲು ಹೊರಡುವುದೆಂದು ಅವರು ತಮ್ಮ
ತಮ್ಮ ರೂಮುಗಳ ಕಡೆಗೆ ಹೊರಟರು. ಸ್ವಲ್ಪ ಹೊತ್ತಿನ ನಂತರ ಮತ್ತೆ ರೆಸ್ಟೋರೆಂಟ್ ಹತ್ತಿರ ಸೇರಲು ನಿಶ್ಚಯಿಸಿದ್ದರು.
ಅವರಿಬ್ಬರೂ
ರೆಡಿಯಾಗಿ ಬಂದು ಜೋಗದ ಕಾಲೋನಿಯ ಹತ್ತಿರ ಬಂದರು ಕಾಲ್ನಡಿಗೆಯಲ್ಲಿಯೇ. ನಿನ್ನೆ ರಾತ್ರಿ ಬಸ್ಸು ಇವನನ್ನು
ಹೊತ್ತು ತಂದಾಗ ಕಮರಿ - ದಿಣ್ಣೆ, ನೀರು-ನೆಲ, ಆಕಾಶ-ಗುಡ್ಡ,
ಕಪ್ಪು-ಬಿಳುಪು ಎಲ್ಲ ಮಂಗಮಾಯವಾಗಿ ಕಣ್ಣುಮುಚ್ಚಿತ್ತು. ಈಗ ಭೂಮಿ ತನ್ನ ಕಪ್ಪುವಸ್ತ್ರ ಸರಿಸಿ ತನ್ನ
ಮೈಸಿರಿಯನ್ನು ಜನರಿಗೆ ತೋರಿಸುತ್ತಿದೆ.
ಇಬ್ಬರೂ
ಪಾಸ್ ಪಡೆದು ಜನರೇಟರ್‍ಗಳಿಟ್ಟಿದ್ದ ಕಡೆ ಹೊರಟರು. ಯಥಾಪ್ರಕಾರ ಅಲ್ಲೂ ಅದೇ ಸ್ಥಿತಿಯೇ. ಹಿಂದಾದರೆ
ಜನರೇಟರ್‍ಗಳನ್ನು ನೋಡಲು ಒಂಬೈನೂರು ಅಡಿ ಆಳದ ಕಮರಿಯವರೆಗೆ ಟ್ರಾಲಿಯಲ್ಲಿ ಜನರನ್ನು ಕರೆದೊಯ್ಯುವ
ವ್ಯವಸ್ಥೆಯಿತ್ತು. ವ್ಯವಸ್ಥೆ ಈಗಲೂ ಇದೆ. ಆದರೆ ಕೆಲವು ತಿಂಗಳ ಹಿಂದೆ ಅಪಘಾತವಾಗಿ ಯಾರೋ ಸತ್ತಿದ್ದರಿಂದ
ಸಾರ್ವಜನಿಕರನ್ನು ಕೆಳಗೆ ಟ್ರಾಲಿಯಲ್ಲಿ ಒಯ್ಯುವ ಪರಿಪಾಟವನ್ನು ನಿಲ್ಲಿಸಿದ್ದಾರೆ. ಜಲಪಾತದಲ್ಲಿ ನೀರಿಲ್ಲ.
ಇಲ್ಲಿ ಕೆಳಗೆ ಹೋಗುವ ಅವಕಾಶವಿಲ್ಲ. ಅದೇನೋ ಅಂತಾರಲ್ಲ ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
ಅಂತ, ಹಾಗಾಯಿತು ಅನ್ನಿಸಿತು. ತಾನು ಪಾಪಿ, ನಿಜ. ಅದಕ್ಕೇ ನೀರಿಲ್ಲ, ಕೆಳಗೆ ಹೋಗುವಂತಿಲ್ಲ. ಅದಿಲ್ಲ,
ಇದಿಲ್ಲ. ಈಗ ಅಕಸ್ಮಾತ್ ತಾನು ಮನಸ್ಸು ಬದಲಾಯಿಸಿ ನಾಳೆ ಬಿಜಾಪುರಕ್ಕೆ ಹೋಗುವ ಬದಲು ಮಂಗಳೂರಿಗೋ,
ಕಾರವಾರಕ್ಕೋ, ಗೋಕರ್ಣಕ್ಕೋ ಹೋದರೆ ಸಮುದ್ರದಲ್ಲಿ ನೀರು ಇಂಗಿರುವುದೇನೋ ಎನಿಸಿದಾಗ ನಗು ಬಂತು. ಅದನ್ನು
ಕಂಡು ಗುಂಜಾಳರು, “ಏನು ಒಬ್ಬರೇ ನಗುತ್ತಿದ್ದೀರಲ್ಲ” ಎಂದರು.
“ಏನಿಲ್ಲ.
ಅಲ್ಲಿ ಅದಿಲ್ಲ, ಇಲ್ಲಿ ಇದಿಲ್ಲ. ಅಕಸ್ಮಾತ್ ಇಲ್ಲಿಂದ ಕೆಳಕ್ಕೆ ಹಾರಿದರೂ ಅಲ್ಲಿ ತಳವೇ ಇರುವುದಿಲ್ಲವೇನೋ”
ಎಂದು ನಕ್ಕ. ಅವರೂ ನಕ್ಕರು ಅಷ್ಟೆ. ಮುಂದೆ ಹೋದರು - ಲಿಂಗನಮಕ್ಕಿ ಕಡೆಗೆ. ಮಾರನೆಯ ದಿನ ಬೆಳಿಗ್ಗೆಯೇ
ಶಿವಮೊಗ್ಗೆಯ ಬಸ್ ಹಿಡಿದರು. ಅಲ್ಲಿಂದ ಬಾಗಲಕೋಟೆಗೆ, ಅಲ್ಲಿಂದ ಕೂಡಲಸಂಗಮಕ್ಕೆ ಹೋಗಿ ಬಂದು ಅನಂತರ
ಗುಂಜಾಳ ಬಿಜಾಪುರದ ಕಡೆ, ಹೇಮಂತ ಉರುಫ್ ಮ್ಯಾಥ್ಯೂಸ್ ತನಗೆ ತೋಚಿದ ಕಡೆಗೆ - ಇದು ಕಾರ್ಯಕ್ರಮ.
ಶಿವಮೊಗ್ಗೆಯಲ್ಲಿಳಿದು
ಒಂದು ಹೋಟೆಲ್ಲಿಗೆ ಹೋಗಿ ಊಟಮಾಡಿ ಮತ್ತೆ ಬಸ್‍ಸ್ಟ್ಯಾಂಡಿಗೆ ಬಂದರು. ಮತ್ತೆಲ್ಲಿಯಾದರೂ ರಮೇಶ್ ಸಿಕ್ಕಿಬಿಡುವನೇನೋ
ಎಂದು ಹೇಮಂತನಿಗೆ ಅಳುಕಾಯಿತು. ಸದ್ಯಕ್ಕೆ ಹಾಗಾಗಲಿಲ್ಲ. ಅತ್ತಿತ್ತ ಬೆದರಿದ ಎರಳೆಯಂತೆ ಕಣ್ಣುಗಳನ್ನಾಡಿಸುತ್ತ
ಕಾಲ ಕಳೆದದ್ದು ಸಾರ್ಥಕವಾಯಿತು. ಶಿವಮೊಗ್ಗ-ಬಾಗಲಕೋಟೆ ಎಕ್ಸ್‍ಪ್ರೆಸ್ ಬಸ್ ಹೊರಡುವವರೆಗೆ ಪರಿಚಯದ
ವ್ಯಕ್ತಿಗಳಾರೂ ಸಿಕ್ಕಲಿಲ್ಲ.
ವಿಚಿತ್ರವೆನ್ನಿಸಿತು.
ಈಗಾಗಲೇ ಪರಿಚಯವಾದ ವ್ಯಕ್ತಿಗಳ ಕಣ್‍ತಪ್ಪಿಸಿ ಓಡಾಡುತ್ತಿರುವ ತಾನು ನಿನ್ನೆ ಗುಂಜಾಳಂ ಪರಿಚಯಕ್ಕೆ
ಆತುರಪಟ್ಟದ್ದು ನೆನಪಾಯಿತು. ಜನರ ಜೊತೆಯಿಲ್ಲದಿದ್ದರೆ ಜೀವಕ್ಕೆ ಅದೆಷ್ಟು ಬೇಸರ, ಆದರೆ ಆ ಜನರಿಂದಲೇ
ತಾನೇ ಬೇಸರವಾಗುವುದು ಕೂಡ. ಮನುಷ್ಯ ಮನುಷ್ಯರ ನಡುವಣ ಸಂಬಂಧ ಎಷ್ಟ ಸೂಕ್ಷ್ಮ! ಜೀವನ ಸಹ್ಯವಾಗುವುದೂ
ಅದರಿಂದಲೇ, ಜೀವನ ಬೇಸರವೆನಿಸುವುದೂ ಅವರಿಂದಲೇ. ಜನರಿಂದ, ದೂರ ಹೋಗಲು ಬಯಸುವ ಮನಸ್ಸು ಜನರಾರಾದರೂ
ಮಾತಿಗೆ ಸಿಕ್ಕಿಯಾರೇ ಎಂದು ಹಂಬಲಿಸುತ್ತದೆ. ಒಳ್ಳೆ ಜನ ಎನ್ನಿಸಿತು.
ಮೊದಮೊದಲು
ಅದೂ ಇದೂ ಮಾತು, ಗುಂಜಾಳರೊಡನೆ; ಅವರೂ ತನ್ನ ವಿಷಯ ಹೆಕ್ಕಿ ತೆಗೆಯುವ ಗೋಜಿಗೆಹೋಗಲಿಲ್ಲ; ಇವನೂ ಸೂಕ್ಷ್ಮವಿಚಾರಗಳಿಗೆ
ಸಂಬಂಧಿಸಿದ ಪ್ರಶ್ನೆಗಳನ್ನುಹಾಕಿ ಹಿಂಸಿಸಲು ಹೋಗಲಿಲ್ಲ. ಪ್ರಾಯಶಃ ತಮ್ಮ ಸಂಬಂಧ ಇದೊಂದೇ ದಿನದ್ದು;
ಉಹ್ಞೂ ನಾಳೆ ಕೂಡಲ ಸಂಗಮಕ್ಕೆ ಹೋಗುವ ಕಾರ್ಯಕ್ರಮವೂ ಇದ್ದುದರಿಂದ ಎರಡು ದಿನಗಳದ್ದು. ಆನಂತರ ತಾವಿಬ್ಬರೂ
ಈ ಜನಸಾಗರದಲ್ಲಿ ಸೇರಿ ಕರಗಿಬಿಡುತ್ತೇವೆ. ಮತ್ತೆ ಎಲ್ಲಿಯಾದರೂ ಭೇಟಿಯಾದರೆ ಆಗಬಹುದು. ಆದರೆ ಆಕಸ್ಮಿಕವಾಗಿಯೇ
ಭೇಟಿಯಾದರೆ ಪರಸ್ಪರರನ್ನು ಮರೆತಿರಬಹುದು ಪರಸ್ಪರ ಅಡ್ರೆಸ್ ಪಡೆದು ಪರಿಚಯ ಮುಂದುವರಿಸುವುದರಲ್ಲಿ
ಇಬ್ಬರಿಗೂ ಆಸಕ್ತಿಯಿರದಿದ್ದುದು ಒಳ್ಳೆಯದಾಯಿತು. ತನ್ನ ವಿಳಾಸ ಕೇಳಿದ್ದರೆ ಸುಳ್ಳು ಅಡ್ರೆಸ್ ಒಂದನ್ನು
ಕೊಡಲೂ ಹೇಮಂತ ಅದನ್ನಾಗಲೇ ಮನಸ್ಸಿನಲ್ಲಿ ರೂಪಿಸಿಕೊಂಡಿದ್ದ. ಆದರೆ ಆ ಪ್ರಸಂಗ ಬರಲಿಲ್ಲ.
ಬಾಗಲಕೋಟೆ
ತಲುಪಿದಾಗ ಸಂಜೆ ಏಳು ಗಂಟೆಯಾಗಿತ್ತು. ಇಬ್ಬರೂ ಒಂದು ವಸತಿಗೃಹ ಹುಡುಕಿ ಹೊರಟರು. ಹತ್ತಿರದ ಬಿಜಾಪುರದವರಾದ
ಗುಂಜಾಳರಿಗೆ ಬಾಗಲಕೋಟೆ ಹೊಸದಲ್ಲ. ಹೀಗಾಗಿ ಹುಡುಕಿದರು ಎಂಬುದಕ್ಕಿಂತ ಅವರಿಗೆ ಪರಿಚಯವಿದ್ದ ಹೋಟೆಲಿಗೆ
ಹೋಗಿ ರೂಂ ಮಾಡಿದರು.
ಮಧ್ಯಾಹ್ನ
ಬಸ್ಸಿನಲ್ಲಿಯೇ ಸಾಕಷ್ಟು ನಿದ್ರೆಯಾಗಿತ್ತು. ಹಿಂದಿನ ದಿನದ ಜೋಗ್ ಸುತ್ತಾಟದಿಂದಾದ ಶ್ರಮ ರಾತ್ರಿಯ
ನಿದ್ದೆಯಿಂದ ಹೆಚ್ಚು ಕಳೆದಿತ್ತು. ಈ ದಿನದ ನಿದ್ದೆಯ ಸಾಕಷ್ಟು ಭಾಗ ಬಸ್ಸಿನಲ್ಲಿ ಆಗಿತ್ತು. ಇನ್ನು
ರಾತ್ರಿ ಸ್ವಲ್ಪ ತಡವಾಗಿ ಮಲಗಿದರೂ ಪರವಾಗಿಲ್ಲ. ಹೇಗಿದ್ದರೂ ಬಂದಿದ್ದೇನೆ ಈ ಕಡೆಯ ನಾಟಕವೊಂದನ್ನು
ನೋಡಬೇಕೆಂದು ಅನ್ನಿಸಿತು. ಗುಂಜಾಳರಿಗೆ ಈ ವಿಷಯ ತಿಳಿಸಿದಾಗ ಅವರು ಒಪ್ಪಿದರು. ರಾತ್ರಿ ಹತ್ತರಿಂದ
ಎರಡು ಗಂಟೆಯವರೆಗೆ ನಡೆಯುವ ನಾಟಕವಾದ್ದರಿಂದ ಪೂರ್ತಿ ನಿದ್ದೆ ಕೆಡಬೇಕಾಗಿಲ್ಲ.
ಬಾಗಲಕೋಟೆಯಲ್ಲಿ
ಆಗ ನಡೆಯುತ್ತಿದ್ದುದು ’ರೈತನ ಮಕ್ಕಳು’ ನಾಟಕ. ಬಹು ಜನಪ್ರಿಯವಾಗಿದ್ದ ನಾಟಕ; ಸಾಕಷ್ಟು ದೀರ್ಘಕಾಲದಿಂದ
ಆ ನಾಟಕದ ಪ್ರಯೋಗಗಳು ಅಲ್ಲಿ ನಡೆಯುತ್ತಿದ್ದವು. ರಾತ್ರಿಯ ಊಟ ಮುಗಿಸಿ ಪೇಟೆಯನ್ನೆಲ್ಲ ಒಂದು ಸುತ್ತು
ಹಾಕಿ ನಾಟಕ ಮಂದಿರದ ಹತ್ತಿರ ಬರುವ ವೇಳೆಗೆ ಸರಿಯಾದ ಸಮಯ; ಒಂಬತ್ತೂಕಾಲು. ಸ್ವಲ್ಪ ಬೇಗನೇ ಬಂದಂತಾಯಿತು.
ಆದರೆ ನಾಟಕಕ್ಕೆ ಜನ ತುಂಬಿಕೊಳ್ಳುವ ನಿರೀಕ್ಷೆಯಿತ್ತು. ವ್ಯಾಪಾರಕ್ಕೆಂದು ಬಂದ ಜನ ವಸತಿಗೃಹದಲ್ಲಿ
ರೂಂ ಮಾಡಿ ಹಣ ಕಳೆದುಕೊಳ್ಳುವ ಬದಲು ರಾತ್ರಿಯ ಮುಕ್ಕಾಲು ಪಾಲನ್ನು ಸ್ವಲ್ಪ ಹಣ ತೆತ್ತು ನಾಟಕ ಮಂದಿರದಲ್ಲೇ
ಕಳೆದು ಉಳಿದದ್ದನ್ನು ಹರಟೆಯಲ್ಲಿ ಕಳೆಯಬಹುದು. ಹೀಗಾಗಿ ಜನ ಜಾಸ್ತಿ. ಆದ್ದರಿಂದ ಕೊನೆಯ ನಿಮಿಷದವರೆಗೆ
ಕಾಯದೆ ಟಿಕೆಟ್ ತೆಗೆದುಕೊಂಡು ಒಳಗೇ ಸರಿಯಾದ ಜಾಗ ಹುಡುಕಿಕೊಂಡು ಕೂರುವುದು ಸರಿಯೆಂಬ ಗುಂಜಾಳರ ಮಾತಿನಂತೆ
ಆಯಿತು. ಅವರು ಹೇಳಿದಂತೆಯೇ ಜನ ಗುಂಪಾಗಿ ಬರತೊಡಗಿದರು. ಮುಂದಿನ ಮುಕ್ಕಾಲು ಗಂಟೆಯಲ್ಲಿ ಮುಕ್ಕಾಲು
ಹಾಲು ತುಂಬಿತ್ತು.
ನಾಟಕದ
ಕತೆ ಒಬ್ಬ ಹೆಣ್ಣುಮಗಳ ದುರಂತ ಜೀವನಕ್ಕೆ ಸಂಬಂಧಿಸಿದ್ದು. ಅನಿವಾರ್ಯವಾಗಿ ಶೀಲ ಕಳೆದುಕೊಳ್ಳಬೇಕಾದ
ಪರಿಸ್ಥಿತಿಗೊಳಗಾದ ಯುವತಿಯೊಬ್ಬಳು ಅನುಭವಿಸಿದ ದುರಂತಪೂರ್ಣ ಬಾಳಿನ ಕತೆ ಅದು. ನಾಟಕ ಚೆನ್ನಾಗಿರಲಿಲ್ಲ.
ಒಂದು ದೃಶ್ಯದಲ್ಲಿ ಗೋಳುಕರೆಯ ಸನ್ನಿವೇಶ; ಆದರೆ ಮುಂದಿನ ದೃಶ್ಯದಲ್ಲಿಯೇ ಪೋಲಿ ಮಾತುಗಳ ಅಸಂಬದ್ಧ
ಪ್ರಲಾಪದ ಉಪಕತೆಯ ಸನ್ನಿವೇಶ. ನಾಟಕದಲ್ಲಿ ಕಲೆಗಾರಿಕೆಯ ಅಂಶವೇ ಇರಲಿಲ್ಲ. ಅಶ್ಲೀಲ ಮಾತುಗಳನ್ನು ಕೇಳಿ
ಜನ ಘೊಳ್ಳೆಂದು ನಗುತ್ತಿದ್ದರು; ಅವರಿಗೆ ಖುಷಿಯಾಗುತ್ತಿತ್ತು. ಆದರೆ ಹೇಮಂತನಿಗೆ ಮುಜುಗರವಾಗುತ್ತಿತ್ತು.
ಮಧ್ಯೆ ಹಾಡು ಅನ್ನುವುದಕ್ಕಿಂತ ಅಬ್ಬರ.
ಆದರೆ
ನಾಟಕದಲ್ಲಿನ ನಾಯಕಿಯ ಗೋಳಿನ ಸನ್ನಿವೇಶ ಬಂದಾಗಲೆಲ್ಲ ಅವನಿಗೆ ನಂದಿನಿಯ ನೆನಪಾಗುತ್ತಿತ್ತು. ತನಗೆ
ದೂರಸಂಬಂಧ ಪಡೆದ ನಂದಿನಿಯೇ ನೆನಪಿಗೆ ಬರುತ್ತಾಳಲ್ಲ ಎಂಬ ಕಸಿವಿಸಿಯಾದ ಜಾಗ್ರತಪ್ರಜ್ಞೆ ನಳಿನಿಯನ್ನು
ನೆನಪಿಸಿಕೊಳ್ಳುತ್ತಿತ್ತು, ಜೊತೆಗೆ ಕವಿತಾ ಕೂಡ. ನಮ್ಮಂಥ ಗಂಡಸರಿಂದ ನಂದಿನಿ-ನಳಿನಿಯರಂತಹ, ಕೊನೆಗೆ
ಕವಿತಾಳಂತಹ ಮುಗ್ಧ ಹೆಣ್ಣುಗಳ ಬಲಿಯಾಗುತ್ತದಲ್ಲವೇ ಎನ್ನಿಸಿ ಅಳು ಬಂದಂತಾಯಿತು. ನನಗೀಗ ಏನಾದರೂ ಆದರೆ,
ಆದರೆ ಏನು ಈಗ ಏನೋ ಆಗಿದೆಯಲ್ಲ, ಅದರ ಪರಿಣಾಮವನ್ನು ಅದಕ್ಕೆ ಸಂಬಂಧಿಸಿರದ ನಳಿನಿ ಅನುಭವಿಸಬೇಕಲ್ಲ
ಅನ್ನಿಸಿತು. ತಾಯಿಯ ಕಣ್ಣೀರಿನಿಂದ ಕವಿತಾಳ ಮುಗ್ಧ ಹೃದಯ ಕೂಡ ಮರುಗುವಂತಾಗುತ್ತದೆ. ಆದರೇನು ಮಾಡುವುದು.
ಈ ಜೀವನದಲ್ಲಿನ ದುಃಖದ ಬಳ್ಳಿ ಕೊನರೊಡೆದು ಎಲ್ಲೆಲ್ಲಿಯೋ ಸುತ್ತಿ ಸುಳಿದು ಯಾರು ಯಾರ ಕಾಲುಗಳನ್ನೋ
ತೊಡರಿಸುತ್ತದೆ. ಯಾರ್ಯಾರ ಕೊರಳಿಗೋ ಉರುಳಾಗುತ್ತದೆ.
ಮಾರನೆಯ
ಬೆಳಿಗ್ಗೆಯೇ ಇಬ್ಬರೂ ಕೂಡಲಸಂಗಮದ ಕಡೆಗೆ ಹೊರಟರು. ಒಂದೇ ದಾರಿ; ಅದೇ ದಾರಿಯಲ್ಲಿ ಹೋಗಿ ವಾಪಸ್ಸು
ಬರಬೇಕು. ಅಲ್ಲಿ ಏನೂ ಸಿಕ್ಕಲಾರದು ಎಂದು ಗುಂಜಾಳ್ ತಿಳಿಸಿದ್ದರಿಂದ ಹೊಟ್ಟೆಗೆ ಆಧಾರವೊದಗಿಸಿಕೊಂಡು
ಹೋಗಿ ಬಸ್ಸಲ್ಲಿಕುಳಿತರು. ಮತ್ತೆ ಪ್ರಯಾಣ. ಇದಕ್ಕೆ ಕೊನೆಯಿಲ್ಲವೇ? ಯಾಕಿಲ್ಲ, ಇವತ್ತೇ ಬೇಕಾದರೆ
ಬೆಂಗಳೂರಿಗೆ ಹೋಗುತ್ತೇನೆಂದರೆ ತಡೆಯುವವರಾರು? ಆದರೆ ಬೆಂಗಳೂರಿಗೆ ಹೋದರೆ ಅಲ್ಲಿ ಎಷ್ಟು ಪ್ರಶ್ನೆಗಳನ್ನು
ಎದುರಿಸಬೇಕು, ತನಗೆ ಆ ಶಕ್ತಿಯಿದೆಯೇ? ಅಂದರೆ ಕೊನೆಯವರೆಗೆ ದೂರವೇ ಉಳಿಯಲು ಸಾಧ್ಯವೇ? ಹೆಂಡತಿ-ಮಗಳು,
ಕೆಲಸ, ಸಂಬಳ, ಬಂಧುಗಳು, ಕಾದಂಬರಿಗಳು, ಸಮಾರಂಭಗಳು- ಎಲ್ಲರಿಂದ ಎಲ್ಲದರಿಂದ ಬಿಡುಗಡೆ ಪಡೆಯಲು ಸಾಧ್ಯವೇ?
ನಂದಿನಿಯ ಪಂಜಿನ ಕಣ್ಣುಗಳು ಸುಡುವುದು ಅಲ್ಲವೇ? ಏನುಮಾಡುವುದು? ಎಷ್ಟು ದಿನವೆಂದು ಹೀಗೆ ತಿರುಗಾಟ?
ಅಶ್ವತ್ಥಾಮನಂತೆ ಮನಃಶಾಂತಿಯಿಲ್ಲದೆ ಅನಂತಕಾಲ ತಿರುಗಬೇಕಾದ ಚಿರಂಜೀವಿಯೇ ತಾನು? ತಾನೂ ನಂದಿನಿಯ ದಾರಿ
ಹಿಡಿಯಬಹುದೇ? ಆದರೆ ನನಗೆ ನಂದಿನಿಯ ಧೈರ್ಯವಿಲ್ಲ. ಸಾವನ್ನು ಪ್ರಜ್ಞಾಪೂರ್ವಕವಾಗಿ ಆಹ್ವಾನಿಸುವ,
ಅದನ್ನು ಧೈರ್ಯವಾಗಿ ಎದುರಿಸುವ ಶಕ್ತಿ ತನಗಿಲ್ಲವಲ್ಲ. ಆ ಕೋಮಲ ಮಾಂಸದ ನಲವತ್ತೈದು ಕೇಜಿ ತೂಕದ ಹೆಣ್ಣು
ದೇಹದಲ್ಲಿದ್ದ ಪ್ರಚಂಡ ಸಂಕಲ್ಪಶಕ್ತಿ ತನಗಿಲ್ಲವಲ್ಲ ಅಥವಾ ಬಂದದ್ದು ಬರಲಿ ಎಂದು ಜೀವನವನ್ನಾದರೂ ಎದುರಿಸುವುದು
ಸಾಧ್ಯವೇ? ಸಾಯಲು ಧೈರ್ಯವಿಲ್ಲದ, ಬದುಕುವ ಸಾಹಸವಿರದೆ ಜೀವಿಸುವುದೆಂದರೆ ಅದೆಂತಹ ನರಕ ಯಾತನೆ? ಕೊನೆಯ
ಪಕ್ಷ ನಂದಿನಿಗೆ ಬಂದಿತ್ತು; ಬದುಕುವ ಛಲವಿರದಿದ್ದರೂ ಸಾವನ್ನೆದುರಿಸುವ ಸಂಕಲ್ಪ.
ತಟ್ಟನೆ
‘ಸಂಕಲ್ಪ’ವೆಂಬ ಹೆಸರಿನ ತನ್ನ ಕಾದಂಬರಿ ನೆನಪಿಗೆ ಬಂದಿತ್ತು. ಅದರ ನಾಯಕಿಯ ಹೆಸರು ನಂದಿನಿಯೇ, ನಂದಿನಿ
ಪರಿಚಯವಾದ ಮೇಲೆಯೇ ಆ ಕಾದಂಬರಿ ಬರೆದದ್ದು. ಅವಳ ಕತೆಯೇನಲ್ಲ. ಆದರೆ ಕಾದಂಬರಿಯ ಪಾತ್ರಗಳಿಗೆ ಹೆಸರು
ಕೊಡಬೇಕಲ್ಲ; ಈ ಕಾದಂಬರಿಯ ನಾಯಕಿಯ ಹೆಸರೇನೆಂದು ಯೋಚಿಸಿದಾಗ ಹೊಳೆದದ್ದು ನಂದಿನಿ. ಅಷ್ಟರಮಟ್ಟಿಗೆ
ಆ ಕಾದಂಬರಿ ಬರೆಯುವ ವೇಳೆಗಾಗಲೇ ಅವಳು ಒಂದು ರೀತಿ ತನ್ನ ಮನಸ್ಸಿನಲ್ಲಿ ನೆಲೆಯೂರಿದ್ದಳು. ಅದನ್ನು
ಬರೆದಾಗಲೇ ಎರಡು ವರ್ಷಗಳಾಗಿವೆ. ಅನಂತರ ಅವಳ ಪರಿಚಯ ಇನ್ನಷ್ಟು ಗಾಢವಾಗಿತ್ತು; ಈಗ ಎಲ್ಲದಕ್ಕೂ ಮುಕ್ತಾಯವೂ
ಹಾಡಿಯಾಗಿದೆ. ಆದರೆ ಅವಳ ನೆನಪು ಈಗ ನನ್ನಲ್ಲಿ ಅಮರವಾಗಿದೆ.
‘ಸಂಕಲ್ಪ’
ಸಾವಿಗೆ ಸಂಬಂಧಿಸಿದ ಕಾದಂಬರಿಯಲ್ಲವೇ? ಅಲ್ಲಿ ಸಾವಿನ ಬಗ್ಗೆ ತನಗನ್ನಿಸಿದ ಭಾವನೆಗಳನ್ನೆಲ್ಲ ಹೇಮಂತ
ಕತೆಯ ರೂಪಕೊಟ್ಟು ಅಭಿವ್ಯಕ್ತಿಗೊಳಿಸಿದ್ದ. ಅವನಿಗೆ ಸಾವು ಎಂದರೆ ಏನೇನೋ ಕಲ್ಪನೆ ಅಷ್ಟೆ; ಸಾವು ಎಂದರೆ
ಏನೋ ಅವನಿಗೆ ಗೊತ್ತಿಲ್ಲ. ಆದರೆ ನಂದಿನಿ ಸಾವಿನ ಬಗ್ಗೆ ಯೋಚಿಸಿದಳೋ ಇಲ್ಲವೋ, ಸಾವನ್ನು ಅನುಭವಿಸಿದಳು,
ಅದನ್ನು ಎದುರಿಸಿದಳು. ಅವಳಿಗೆ ಅನುಭವ ಮುಖ್ಯವಾಯಿತು, ತನಗೆ ಭಾವನೆ ಮುಖ್ಯವಾಯಿತು. ಅಂದರೆ ನನಗಿಂತ
ಅವಳು ಜೀವನವನ್ನು ಪರಿಭಾವಿಸಿದ ರೀತಿ ಬೇರೆ. ತನ್ನ ಹಾಗೆ ಯಾವುದಾದರೊಂದು ವಿಷಯದ ಸುತ್ತ ಜೇಡರಬಲೆಯನ್ನು
ನೇಯುವ ಸ್ವಭಾವವಲ್ಲ ಅವಳದು; ದಿಢೀರೆಂದು ಬೇಕೆನಿಸಿದ್ದನ್ನು ಅಪ್ಪಿಕೊಳ್ಳುವ ಚಪಲೆಯೆಂದು ಕಾಣುತ್ತದೆ.
ನಂದಿನಿ
ನನ್ನನ್ನು ಪ್ರೀತಿಸಿದ್ದಳೇ? ಅಂದರೇನು, ಮದುವೆಯಾಗಬಯಸಿದ್ದಳೇ? ಮದುವೆ, ಪ್ರೀತಿ ಪರ್ಯಾಯ ಪದಗಳೇನೂ
ಅಲ್ಲ ಮದುವೆಯಾದವರು ಕಚ್ಚಾಡುತ್ತಾರೆ, ಕಾಣದವರನ್ನೂ ಕೆಲವರು ಪ್ರೀತಿಸುತ್ತಾರೆ, ಅಂದರೆ ಪ್ರೀತಿ ಎಂದರೆ
ಏನು? ಅವಳಿಗೇನಾಗಿತ್ತು? ತನ್ನಿಂದ ಏನಾದರೂ ನಿರೀಕ್ಷಿಸಿದ್ದಳೇ? ಅಥವಾ ತಾನೇಕೆ ಹಾಗೆ ಅಂದುಕೊಳ್ಳಬೇಕು?
ಅವಳ ಸಾವುತನ್ನಿಂದ ಎಂದು ಮಾಧವರಾವ್ ಹೇಳಿದರೇನಾಯಿತು. ಅದಕ್ಕೇ ಬೇರೆಯೇ ಆದ ಕಾರಣವಿರಬಹುದಲ್ಲ?
ಮುಳುಗಡೆಯಾಗಬಾರದೆಂದು
ಕೂಡಲಸಂಗಮನಾಥನ ಮಂಟಪದ ಸುತ್ತು ಗಟ್ಟಿಯಾದ ಸಿಮೆಂಟಿನ ವರ್ತುಲ ಕಟ್ಟಿದ್ದಾರೆ. ಸುತ್ತ ನೀರಿದ್ದರೂ
ಸೇತುವೆಯ ಮೇಲೆ ಸಾಗಿ ಒಳಗೆ ಇಳಿದರೆ ಸಂಗಮನಾಥನ ಮಂಟಪವನ್ನುಳಿಸಲು ಸರ್ಕಾರ ಈ ರೀತಿ ಆಲೋಚಿಸಿತ್ತು.
ಇನ್ನೂ ಕಟ್ಟುತ್ತಿದ್ದ ಆ ಸಿಮೆಂಟು ವರ್ತುಲದವರೆಗೆ ಕೆಲಸಗಾರರಿಗೆ ಕಟ್ಟಿದ್ದ ಕಟ್ಟಿಗೆ ಹಂದರದ ಮೇಲೆಯೇ
ಹೇಮಂತ-ಗುಂಜಾಳ ಇಬ್ಬರೂ ನಡೆದು ಹೋದರು. ಅದರ ಸಮೀಪ ಬಂದು ಆಳದ ಮಂಟಪದೆಡೆಗೆ ಆಗಲೇ ಕಟ್ಟಿ ಮುಗಿಸಿದ್ದ
ಮೆಟ್ಟಿಲುಗಳ ಮೇಲೆ ಇಳಿಯುತ್ತ ಸಾಗಿದರು. ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ತಾನು ಪಾತಾಳಕ್ಕೆ
ಹೋಗುತ್ತಿರುವಂತೆ ಹೇಮಂತನಿಗೆ ಅನ್ನಿಸಿತು. ಹಾಗೆ ಇಳಿಯುವಾಗ ಸುತ್ತಲಿನ ಸಿಮೆಂಟು ಗೋಡೆಗಳು ಬಾಯಿ
ಮುಚ್ಚಿಕೊಂಡುಬಿಟ್ಟರೇ? ಅನ್ನಿಸಿತು, ಭಯವೂ ಆಯಿತು.
* * *
No comments:
Post a Comment