Sunday, 12 October 2014

ಪರಿಸ್ಥಿತಿ - 2

ಪರಿಸ್ಥಿತಿ - 2
ಹೊರಟಾಗ ಸೂಟ್‍ಕೇಸಿನಲ್ಲಿ ಹಾಕಿಕೊಂಡಿದ್ದದ್ದು ಕೆಲವು ಪ್ಯಾಂಟು, ಷರ್ಟುಗಳು ಹಾಗೂ ಒಂದು ಪಂಚೆ ಅಷ್ಟೆ. ಗಡಿಬಿಡಿಯಲ್ಲಿ, ಗಾಬರಿಯಲ್ಲಿ, ರಣರಂಗವಾಗಿದ್ದ ಮನಸ್ಸಿನ ಆ ಪರಿಸ್ಥಿತಿಯಲ್ಲಿ ಕೂಲಂಕಷವಾಗಿ ಪ್ರಯಾಣಕ್ಕೆ ಏನೇನು ಬೇಕು ಎಂದು ಆಲೋಚಿಸಿ ವಸ್ತುಗಳನ್ನು ಪೆಟ್ಟಿಗೆಯಲ್ಲಿ ಹಾಕಲು ಸಾಧ್ಯವೇ? ಸಾಧಾರಣ ಸನ್ನಿವೇಶವಾಗಿದ್ದರೆ, ಯಾವುದಾದರೂ ಊರಿಗೆ ಹೋಗುವಾಗ ನಳಿನಿಯೇ ಪ್ಯಾಕಿಂಗ್ ಕಾರ್ಯವನ್ನು ಮಾಡಿಬಿಡುತ್ತಿದ್ದಳು. ಒಂದು ಸಣ್ಣ ವಿಕ್ಸ್ ಡಬ್ಬಿಯಲ್ಲಿ ಸ್ವಲ್ಪ ಬ್ರಿಲ್‍ಕ್ರೀಂ ಹಾಕಿಡುತ್ತಿದ್ದಳು; ಕೊಬ್ಬರಿ ಎಣ್ಣೆಯಾದರೆ ಕರಗುತ್ತದೆ, ಬಟ್ಟೆ ಹಾಳಾಗಬಹುದು ಎಂದು. ಸಣ್ಣ ಟೂಥ್‍ಪೇಸ್ಟ್ ಟ್ಯೂಬನ್ನು ತರಿಸಿಡುತ್ತಿದ್ದಳು. ಟವಲಿನ ಜೊತೆಗೆ ಒಂದೆರಡು ನ್ಯಾಪ್‍ಕಿನ್  ಇಡುತ್ತಿದ್ದಳು. ಎಷ್ಟು ಜೊತೆ ಬಟ್ಟೆಗಳಿವೆಯೋ ಅಷ್ಟು ಕರ್ಚೀಫ್‍ಗಳನ್ನು ಮಡಿಸಿಡುತ್ತಿದ್ದಳು. ಇವೆಲ್ಲ ಪಾಂಕ್ತವಾಗಿ ಅವಳು ಪ್ಯಾಕ್ ಮಾಡುತ್ತಿದ್ದ ರೀತಿ. ಆದರೆ ತಾನು ಬಂದದ್ದು ಅಥವಾ ಓಡಿ ಬಂದದ್ದು ಎನ್ನಬೇಕೇ, ಎಂಥ ಪರಿಸ್ಥಿತಿಯಲ್ಲಿ?
ಹೇಮಂತ ಬಸ್ ಇಳಿದವನೇ ನೇರವಾಗಿ ಹತ್ತಿರವಿದ್ದ ಒಂದು ಬಟ್ಟೆ ಅಂಗಡಿಗೆ ಹೋಗಿದ್ದ. ಎರಡು ಮಧ್ಯಮ ಅಳತೆಯ ಟವಲ್‍ಗಳನ್ನು, ಒಂದೆರಡು ಕರ್ಚೀಫುಗಳನ್ನು ಕೊಂಡಿದ್ದ. ಹಣವನ್ನು ತುಂಬ ಎಚ್ಚರಿಕೆಯಿಂದ ಖರ್ಚುಮಾಡಬೇಕು; ಎಷ್ಟು ದಿನಗಳೋ ಈ ಅಜ್ಞಾತವಾಸ. ಏನಾದರು ಹಣ ಕಳೆದುಹೋದರೆ ಮನೆಗೆ ಬರೆದು ತರಿಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದಾಗ ಹೇಮಂತನಿಗೆ ಆ ಸ್ಥಿತಿಯಲ್ಲೂ ತಮಾಷೆಯೆನಿಸಿತು. ಯಾರಿಗೂ ತಾನೆಲ್ಲಿದ್ದೇನೆಂದು ತಿಳಿಯದಂತೆ ಎಚ್ಚರಿಕೆ ವಹಿಸಿ ತನಗೆ ಇಂತಹ ವಿಳಾಸಕ್ಕೆ ಹಣ ಕಳಿಸಿ ಎಂದು ಬರೆದರೆ? ದೀರ್ಘವಾದ ನಿಟ್ಟುಸಿರು ಹೊರಟಿತ್ತು. ಜೋಪಾನವಾಗಿ ಹಣವನ್ನು ಒಂದು ಕವರಿನಲ್ಲಿ ಹಾಕಿ ಸೂಟ್‍ಕೇಸಿನಲ್ಲಿ ಇಟ್ಟಿದ್ದ; ತನಗೆ ತಕ್ಷಣ ಬೇಕಾಗಬಹುದಾದ ಹಣವನ್ನು ಜೇಬಿನಲ್ಲಿರಿಸಿಕೊಂಡಿದ್ದ. ಈಗ ಇದ್ದುಬದ್ದುದನ್ನೆಲ್ಲ ಚೆನ್ನಾಗಿ ಖರ್ಚುಮಾಡಿಬಿಟ್ಟರೆ ಕೊನೆಗೆ ಫುಟ್‍ಪಾತಿನ ಮೇಲೆ ಮಲಗುವ ಪರಿಸ್ಥಿತಿ ಬರಬಹುದು. ಈ ಯೋಚನೆ ಬಂದಾಗ ಎದೆಯಲ್ಲಿ ಹಿಮದ ಸರಳನ್ನು ನೆಟ್ಟಂತೆ ಕೊರೆಯುವ ಅನುಭವವಾಯಿತು. ಎಂದೆಂದಿಗೂ ತಾನು ಮನೆಗೆ ವಾಪಸಾಗದ ಪರಿಸ್ಥಿತಿ ಬರಬಹುದೇ? ಸುಮ್ಮನಿರಲು ಮನಸ್ಸಿಗೆ ಸಾಧ್ಯವಿಲ್ಲ. ಆದರಪರದೆಯ ಮೇಲೆ ಏನೇನೋ ಲೆಕ್ಕಾಚಾರದ ಅಂಕಿಗಳು ಮೂಡುತ್ತಿದ್ದವು. ಅವನ್ನೆಲ್ಲ ಒರಸಿ ಹಾಕಿದಂತೆ ತಲೆ ಕೊಡವಿಕೊಂಡ ಮರುಕ್ಷಣವೇ ಮನಸ್ಸಿನ ಟಿ.ವಿ. ಸ್ಕ್ರೀನಿನ ಮೇಲೆ ಹೊಸ ಲೆಕ್ಕಾಚಾರದ ಅಂಕಿಗಳು; ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು.
ತನ್ನ ಬಳಿ ಇದ್ದ ಹಣಕ್ಕೂ ತನ್ನ ಅಜ್ಞಾತವಾಸದ ಅವಧಿಗೂ ಇದ್ದ ಸಂಬಂಧ ಅರಿವಾದಾಗ ಅವನು ಸಣ್ಣ ಹೋಟೆಲಿಗೆ ಹೋಗಲು ನಿರ್ಧರಿಸಿದ್ದ. ಚಿತ್ರದುರ್ಗವನ್ನು ಹಿಂದೆ ಅವನು ಕಂಡಿದ್ದವನೇ. ಆದರೆ ಅಲ್ಲಿನ ಹೋಟೆಲುಗಳ ಪರಿಚಯ ಅವನಿಗೆ ಹೇಗಾಗಬೇಕು. ಆಗಲೇ ಸಾಕಷ್ಟು ಸಮಯವಾಗಿದ್ದುದರಿಂದ ಹತ್ತಿರದ ಊಟದ ಹೋಟೆಲೊಂದಕ್ಕೆ ಹೋಗಿ ಊಟ ಮಾಡಿ ರಿಕ್ಷಾ ಹತ್ತಿದ್ದ. ಇದ್ದುದರಲ್ಲಿ ಸುಮಾರಾದ ಹೋಟೆಲಲ್ಲಿ ವಸತಿ ಮಾಡುವುದು ಅವನ ಉದ್ದೇಶ.
ರಿಸೆಪ್ಷನ್‍ನಲ್ಲಿ ಮಾಡಬೇಕಾದ ವಿಧಿಗಳನ್ನು ಪೂರೈಸಿದ ಮೇಲೆ ಹುಡುಗ ಹೊತ್ತು ತಂದ ಸೂಟ್‍ಕೇಸನ್ನು ನಿಗದಿಯಾದ ರೂಂನಲ್ಲಿ ಇರಿಸಿ ಹೋದ. ಬಟ್ಟೆ ಬದಲಾಯಿಸಿದ ಹೇಮಂತ ತನ್ನ ವಿಧಿಯನ್ನು ಹಳಿದುಕೊಳ್ಳುತ್ತ ಹಾಸಿಗೆಯ ಮೇಲೆ ಒರಗಿದ. ಅಷ್ಟು ಸುಲಭದಲ್ಲಿ ನಿದ್ರೆ ಬರುತ್ತದೆಯೇ? ಯಾವಾಗ ಬೇಕೆನಿಸುತ್ತದೆಯೋ ಆವಾಗ ಬಾರದಿರುವುದೇ ನಿದ್ರೆಯ ವೈಶಿಷ್ಟ್ಯವೇನೋ, ಏನಾದರೂ ಬರೆಯಬೇಕೆಂದು ಕೂತಾಗ ಮಾತ್ರ ಕಣ್ಣುಗಳು ಎಳೆದೊಯ್ಯುತ್ತವೆ. ವಿಚಿತ್ರವೆನ್ನಿಸಿತು.
ಬೆಳಿಗ್ಗೆ ಎದ್ದವನೇ ಮುಖ ತೊಳೆದು ರೂಮಿನಿಂದ ಬಂದು ಕಾರಿಡಾರಿನಲ್ಲಿ ನಿಂತುಕೊಂಡ. ತಾನುಳಿದುಕೊಂಡಿದ್ದ ಹೋಟೆಲಿನ ಪರಿಸರ ಎಂತಹುದೆಂದು ತಿಳಿಯಲು ಸುತ್ತಲೂ ಕಣ್ಣು ಹರಿಸಿದ. ಊರಿನ ಹೊರ ಸೆರಗಿಗೆ ಅದು ಹೊಂದಿಕೊಂಡಿತ್ತು. ಮಧ್ಯಮ ಗಾತ್ರದ, ಕೇವಲ ವಸತಿ ಮಾತ್ರ ಇದ್ದ ಹೋಟೆಲು ಅದು. ಹೀಗಾಗಿ ಊಟ-ತಿಂಡಿಗಾಗಿ, ಕಾಫಿಗೆ ಕೂಡ ಹೊರಗೆ ಹೋಗಬೇಕಾಗಿತ್ತು. ಕಾಫಿಬೇಕಾದರೆ ಹುಡುಗ ತಂದು ಕೊಡುತ್ತಾನೆ ಬೇರೆ ರೆಸ್ಟೋರೆಂಟ್‍ನಿಂದ ಎಂಬ ವಿಷಯ ತಿಳಿಯಿತು. ಹಾಳಾಗಲಿ, ತಾನೇ ಹೋದರಾಯಿತು ಎಂದುಕೊಂಡು ಬೇಗ ಬೇಗ ಹಲ್ಲುಜ್ಜಿ, ಸ್ನಾನದ ಶಾಸ್ತ್ರ ಮುಗಿಸಿ, ಬಟ್ಟೆ ಧರಿಸಿ ಹೊರಬಂದ.
ಪ್ರಶಾಂತವಾದ ಬೆಳಗಿನಲ್ಲಿ ದುರ್ಗದ ಹೊರವಲಯದ ನೀಳವಾದ ಆ ರಸ್ತೆ ಆರಾಮವಾಗಿ ಕಾಲುಚಾಚಿ ಮಲಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಹೋಗುತ್ತಿರುವ ಮಂದಿ. ಸೈಕಲ್ಲು, ಆಗೊಮ್ಮೆ ಈಗೊಮ್ಮೆ ಬಂದು ಹಾದುಹೋಗುವ ಕಾರು ರಿಕ್ಷಾ ಬಸ್‍ಗಳು. ಗಲಿವರನು ಬಿದ್ದು ಮಲಗಿದ್ದಾಗ ಅವನಮೈಮೇಲೆ ಓಡಾಡಿದ ಲಿಲಿಪುಟ್ಟರನ್ನು ನೆನಪಿಗೆ ತರುತ್ತಿತ್ತು. ಯಾರು ಹೋದರೂ ಏನು ಹರಿದರೂ ಸ್ಪಂದಿಸದ ಹಾದಿ; ಅಥವಾ ತನ್ನ ಗರ್ಭದಲ್ಲಿ ನನ್ನಂಥ ವ್ಯಕ್ತಿಗಳು ಅದೆಷ್ಟು ಜನ ಹಾದು ಹೋದದ್ದನ್ನು ಅಡಗಿಸಿಕೊಂಡಿದೆಯೋ? ಸೂರ್ಯನ ಹಿತವಾದ ಬಿಸುಪಿನ ಕಿರಣಗಳು ಎಲ್ಲವನ್ನೂ ಪ್ರೀತಿಯಿಂದ ಮೈದಡವುತ್ತಿದ್ದವು.
ತಿಂಡಿ ತಿಂದು ಕಾಫಿಕುಡಿದಾದ ಮೇಲೆ ಬೆಟ್ಟದ ಕಡೆಗೆ ನಿಧಾನವಾಗಿ ಕಾಲುಹಾಕಿದ ಹೇಮಂತ, ತಾನು ಎಂಥ ಪರಿಸ್ಥಿತಿಯಲ್ಲಿ ಬೆಟ್ಟ ನೋಡುತ್ತಿದ್ದೇನೆ ಎಂಬುದು ನೆನಪಿಗೆ ಬಂದಾಗ ದಿಗಿಲುಗೊಂಡ. ಯಾವುದಾದರೂ ಸಂಘ ತನ್ನನ್ನು ಸಮಾರಂಭಕ್ಕೆ ಚಿತ್ರದುರ್ಗಕ್ಕೆ ಆಹ್ವಾನಿಸಿದ್ದರೆ ತಾನು ಹೇಗೆ ಇಲ್ಲಿ ಬರಬಹುದಿತ್ತು, ನಳಿನಿ-ಕವಿತಾರ ಸಂಗಡ, ಸ್ನೇಹಿತರ ಸಂಗಡ, ಇಲ್ಲಿ ಹೇಗೆ ಓಡಾಡಬಹುದಾಗಿತ್ತು, ಚಿತ್ರದುರ್ಗದ ಬೆಟ್ಟದಂತಹ ಸ್ಥಳಗಳು ಕುತೂಹಲ ತುಂಬಿದ ಕಣ್ಣುಗಳಿಗೆ ಅಚ್ಚರಿಯನ್ನು ಲೇಪಿಸುವ ಅಂಜನವಾಗುವುದರ ಜೊತೆಗೆ, ಹೊಸಪ್ರೇಮಿಗಳ ಹೃದಯದ ಬೆಸುಗೆಯನ್ನು ಗಟ್ಟಿಗೊಳಿಸುವ ತವರ-ನವಾಸಾಗರವಾಗುತ್ತದೆ; ಜೀವನದಲ್ಲಿ ಬೇಸತ್ತವರಿಗೆ ಮುಕ್ತಿಗೊಳಿಸುವ ರೀತಿಯಲ್ಲಿ ಬಾಯ್ದೆರೆದು ನುಂಗಲು ಹವಣಿಸುತ್ತದೆ. ತನ್ನದು ಇಂತಹ ಪರಿಸ್ಥಿತಿಯೇ?
ಮಾಧವರಾವ್ ತನಗೆ ಬರೆದಿದ್ದ ಕಾಗದದಲ್ಲಿ ಹೇಳಿದಂತೆ ತಾವು ದುರಂತಕ್ಕೆ ಕಾರಣವೇ? ಆ ಕಾಗದವನ್ನು ಜೋಪಾನವಾಗಿ ಮಡಿಸಿಟ್ಟುಕೊಂಡು ತನ್ನ ಜೊತೆಯಲ್ಲಿಯೇ ತೆಗೆದುಕೊಂಡು ಬಂದಿದ್ದ. ಹೇಮಂತ ಬೆಟ್ಟದಮೇಲೆ ನಿಧಾನವಾಗಿ ಹತ್ತುತ್ತಿದ್ದ, ಅವನು ಕಾಗದದ ನೆನಪು ಬಂದ ಕೂಡಲೆ ಹತ್ತಿರದ ಒಂದು ಬಂಡೆಯ ಮೇಲೆ ಕುಳಿತು ಜೇಬಿಗೆ ಕೈ ಹಾಕಿ ಹೊರತೆಗೆದ ಕಾಗದವನ್ನು ಬಿಡಿಸಿ ನಿಧಾನವಾಗಿ ಓದತೊಡಗಿದ: ತನ್ನ ಭವಿಷ್ಯದ ರೂಪುರೇಷೆಗಳನ್ನೆಲ್ಲ ವಿವರಿಸಿರುವ ಜಾತಕಫಲವೇನೋ ಅದು ಎಂಬಂತೆ.
“ಮೋಸಗಾರ ಹೇಮಂತ, ನೀನು ಮಹಾ ಸಾಹಿತಿಯಿರಬಹುದು ಆದರೆ ಮುಗ್ಧಜನರನೇಕರ ಬಾಳುಗಳನ್ನು ಹಾಳುಮಾಡುವ ಅನಿಷ್ಟ ವ್ಯಕ್ತಿಯೆಂಬುದು ನಮ್ಮ ಕುಟುಂಬದ ದುರಂತದ ಕತೆಯಿಂದ ಗೊತ್ತಾಗುತ್ತದೆ. ಇಂತಹ ಎಷ್ಟು ದುರಂತಗಳಿಗೆ ನೀನು ಕಾರಣನಾಗಿದ್ದೀಯೋ ತಿಳಿಯದು. ಆದರೆ ಮುಖವಾಡ ಧರಿಸಿ, ಸೌಜನ್ಯದ ಕೈಮಸಕಿನಲ್ಲಿಯೇ ಅನೇಕರ ಜೀವನವನ್ನು ಹಾಳುಮಾಡುವ ಧೂರ್ತ ನೀನು. ನೀನು ನಮ್ಮ ಕುಟುಂಬದಲ್ಲಿ ಮಾಡಿರುವ ದಾಂಧಲೆಯ ರೀತಿ ಎಂತಹುದೆಂಬುದರ ಅರಿವಿದೆಯೇ? ಅಥವಾ ಇಂತಹ ಅನೇಕ ಅನಾಹುತಗಳಿಗೆ ಕಾರಣವಾಗಿರಬಹುದಾದ ನಿನಗೆ ಇವೆಲ್ಲ ಏನೂ ಪರಿಣಾಮವುಂಟು ಮಾಡದಿರಬಹುದು.
“ನಂದಿನಿ ಎಂಬ ಯುವತಿಯ ನೆನಪು ನಿನಗಿದೆಯೇ? ಏಕೆಂದರೆ ಬೇಕಾದಾಗ ಬಳಸಿಕೊಂಡು ಬಿಸಾಡಬಹುದಾದ ಟಿಶ್ಯೂ ಪೇಪರ್ ತಾನೇ ನಂದಿನಿಯೆಂದರೆ? ಆದ್ದರಿಂದ ಅದನ್ನು ಬಿಸುಟ ಕ್ಷಣದಲ್ಲಿಯೇ ಅದರ ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳಬಹುದು. ಅವಳು ನಮಗೆ ಎಷ್ಟು ಸಹಾಯಕವಾದ, ಪ್ರೀತಿಪಾತ್ರಳಾಗಿದ್ದ ಹುಡುಗಿಯಾಗಿದ್ದಳು ಗೊತ್ತೇ? ಅವಳ ಮನಸ್ಸಿನಲ್ಲಿ ಇಲ್ಲದ ಆಸೆ ಹುಟ್ಟಿಸಿ, ಅವಳ ಕಲ್ಪನೆಗಳ ಗರಿಗೆದರಿಸಿ, ಕೊನೆಗೆ ಧೊಪ್ಪನೆ ಕೆಳಕ್ಕೆ ಬೀಳುವ ಹಾಗೆನಿನ್ನ ಮಾಂತ್ರಿಕ ಶಕ್ತಿಯಿಂದ ಮಾಡಿದವನು ನೀನು. ಸುತ್ತು ಬಳಸು ಮಾತೇಕೆ? ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಯ್ಯೋ ದೇವರೇ, ಅವಳಿಗೇನು ಕಡಿಮೆಯಾಗಿತ್ತು. ಅವಳ ಮದುವೆಯನ್ನು ನಿಶ್ಚಯಗೊಳಿಸಿದ್ದೆವಲ್ಲ. ಜೀವನ ಬೇಸರವೆನಿಸುವಂತೆ ನಿನ್ನಮಂಕು ಬೂದಿಯನ್ನು ಅವಳ ಮೇಲೆರಚಿ ಎಂತಹ ದುಷ್ಟ ಸಂತೋಷವನ್ನು ಪಡೆಯುತ್ತೀಯ ನೀನು?
“ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ನನ್ನ ಸಾವಿಗೆ ಜೀವನದಲ್ಲಿ ಜಿಗುಪ್ಸೆ ಹಾಗೂ ನನ್ನ ದುರದೃಷ್ಟಗಳೇಕಾರಣ’ ಎಂದೇನೋ ಅವಳು ಬರೆದಿಟ್ಟು ಹೋಗಿ ಒಂದು ರೀತಿಯಿಂದ ನಮ್ಮನ್ನೆಲ್ಲ ಪಾರು ಮಾಡಿದ್ದಾಳೆ. ಆದರೆ ಅವಳಿಗೆ ಜೀವನದಲ್ಲಿ ಏನು ಜಿಗುಪ್ಸೆ ಬಂತು; ಯಾವ ದುರದೃಷ್ಟ ಅವಳದು? ಆ ದುರದೃಷ್ಟ ನೀನೇ ಎಂಬುದು ಖಂಡಿತ. ಅವಳಿಗೆ ಸಂಬಂಧಿಸಿದ ವಸ್ತುಗಳನ್ನೆಲ್ಲ ಪರಿಶೀಲಿಸಿ ಅವಳ ದುರಂತಕ್ಕೆ ಕಾರಣವೇನೆಂದು ತಿಳಿಯುವ ಪ್ರಯತ್ನ ಮಾಡಿದೆವು. ಎಲ್ಲೆಡೆಗೂ ತೆಗೆದುಕೊಂಡು ಹೋಗುತ್ತಿದ್ದ ಅವಳ ಪರ್ಸಿನಲ್ಲಿ ಏನಿತ್ತು ಗೊತ್ತೆ? ನಿನ್ನ ಫೋಟೋ! ಅದರ ಬೆನ್ನಿಗೆ ಅವಳದೇ ಫೋಟೋ ಅಂಟಿಸಿಕೊಂಡಿದ್ದಾಳೆ. ಅಂದರೆ ನಿನ್ನ-ಅವಳ ಸಂಬಂಧದ ಬಗ್ಗೆ ಅವಳ ಕಲ್ಪನೆಯೇನಿತ್ತೆಂಬುದು ಅರ್ಥವಾಗುವುದಿಲ್ಲವೇ? ಆದರೆ ಅವಳೆಷ್ಟು ಮುಗ್ಧಳಾಗಿದ್ದಳು. ಅವಳ ಈ ಮಗುತನದ ಮೇಲೆ ನೀನು ಕಲ್ಲುಚಪ್ಪಡಿ ಎಳೆದೆಯಲ್ಲ. ಹಲವಾರು ಪುಸ್ತಕಗಳಲ್ಲಿ ನಿನ್ನ ಹೆಸರನ್ನು ಅದೆಷ್ಟು ಮುತುವರ್ಜಿಯಿಂದ ಬರೆದಿದ್ದಾಳೆ. ನಿನ್ನಕಾದಂಬರಿಗಳನ್ನು ಕೊಂಡಿಟ್ಟುಕೊಂಡಿರುವುದಷ್ಟೇ ಅಲ್ಲ, ನಿನ್ನ ಹೆಸರಿದ್ದ ಕಡೆಗೆಲ್ಲ ತನ್ನ ಹೆಸರನ್ನು ಬರೆದಿಟ್ಟುಕೊಂಡಿದ್ದಾಳೆ. ಹೀಗೇಕೆ ಮಾಡಿದೆ ನೀನು? ಓಹ್, ನಾನು ದುಃಖದಿಂದ ದೀನನಾಗುತ್ತಿದ್ದೇನೆಂದು ಭಾವಿಸಬೇಡ. ಇಗೋ ಕಣ್ಣೀರೊರೆಸಿಕೊಳ್ಳುತ್ತೇನೆ. ಆದರೆ ನಿನ್ನನ್ನು ಸುಮ್ಮನೆ ಮಾತ್ರ ಬಿಡುತ್ತೇನೆಂದು ಭಾವಿಸಬೇಡ. ನನ್ನದು ಸರ್ಪಸೇಡು ಎಂದು ತಿಳಿದುಕೋ. ನಿನಗೆ ತಕ್ಕದ್ದು ಮಾಡುತ್ತೇನೆ. ನಂದಿನಿ ಸತ್ತದ್ದಕ್ಕೆ ನೀನೇ ಕಾರಣ. ನೀನು ಕೊಲೆಪಾತಕಿ, ನಿನಗೆ ಶಿಕ್ಷೆಯಾಗುವಂತೆ ಮಾಡುವುದೇ ನನ್ನ ಉದ್ದೇಶ, ಗುರಿ....”
ಇನ್ನೂ ಏನೇನೋ ಉದ್ವಿಗ್ನಕರವಾದ ಮಾತುಗಳು ಮುಂದುವರಿದಿದ್ದವು. ಓದುತ್ತಿದ್ದ ಹೇಮಂತನ ಕಣ್ಣುಗಳಲ್ಲಿ ನೀರಿನ ತೆರೆ ಕವಿಯಿತು. ನಂದಿನಿ ತನ್ನ ಬಗ್ಗೆ ಇಂತಹ ಕಲ್ಪನೆಗಳನ್ನಿರಿಸಿಕೊಂಡಿದ್ದಳೆಂದು ತನಗೆ ತಿಳಿಯದೇ ಹೋಯಿತು. ತಿಳಿದಿದ್ದರೆ ಅದಕ್ಕೆ ಪುಷ್ಟಿಕೊಡುವ ಹಾಗೆ ತಾನು ವರ್ತಿಸುತ್ತಿರಲಿಲ್ಲ. ತನಗೇನು ಜವಾಬ್ದಾರಿಯಿಲ್ಲವೇ? ಬೆಡಗಿನ ಮಾತಿನಿಂದ ಆಕರ್ಷಿಸಿ ಮರಳುಗೊಳಿಸುವ ಕೀಳುವ್ಯಕ್ತಿಯೇ ತಾನು? ತಾನೆಂದಾದರೂ ಅವಳೊಡನೆ ಪ್ರೋತ್ಸಾಹಕರವಾಗಿ ವರ್ತಿಸಿದ್ದೇನೆಯೇ? ಅಥವಾ ಅವಳಿಗೆ ತಪ್ಪು ಅಭಿಪ್ರಾಯ ಬರುವ ಹಾಗೆ ಅವಳೊಡನೆ ಮಾತಾಡಿದ್ದೇನೆಯೇ? ಎಷ್ಟು ನೆನಪಿಸಿಕೊಂಡರೂ ತನ್ನದು ತಪ್ಪು ಎಂದೇನೂ ಅನ್ನಿಸುವುದಿಲ್ಲವಲ್ಲ. ಎಷ್ಟೋ ಜನ ಯುವತಿಯರು ತನ್ನೊಡನೆ ಮಾತನಾಡಿಲ್ಲವೇ? ಅವರೆಲ್ಲ ಹೀಗೆಯೇ ತನ್ನೊಡನೆ ಸಂಬಂಧ ಕಲ್ಪಿಸಿಕೊಂಡಿದ್ದಾರೆಯೇ. ದುರಂತಕ್ಕೆ ಒಳಗಾಗಿದ್ದಾರೆಯೇ?
ನಂದಿನಿ - ಎಂತಹ ಆಹ್ಲಾದಕರವಾದ ವ್ಯಕ್ತಿತ್ವ ಅವಳದು! ವಸಿಷ್ಠನ ಬಳಿಯಿದ್ದ ಧೇನು ನಂದಿನಿಯಂತೆ. ಹೌದು, ಸಂತೋಷ ನೀಡುವ ವ್ಯಕ್ತಿತ್ವ ಅವಳದು. ತನ್ನ ಸುತ್ತಲೂ ಸುಗಂಧ ಹರಿಸುವ ಶ್ರೀಗಂಧ ಅವಳು. ಬೆಳಗಿನ ಮಂಜಿನ ತಂಪು, ಸಂಜೆಯ ಬಿಸಿಲಿನ ಬಿಸಿಪು, ಮಲ್ಲಿಗೆಯ ನರುಗಂಪು, ಸೂರ್ಯೋದಯದ ವರ್ಣವೈಭವಗಳೆಲ್ಲ ಸೇರಿ ಆದವಳು ಅವಳು. ಹೀಗೆ ಅವಳ ಬಗ್ಗೆ ತಾನು ಆತ್ಮೀಯತೆಯನ್ನು ಪಡೆದದ್ದೆ ತಪ್ಪೇನು? ಅಥವಾ ಗಂಡು-ಹೆಣ್ಣೆಂದರೆ ಇಂಥ ಸಾಮೀಪ್ಯ ಇರಲೇಬಾರದೇ? ಗಂಡ-ಹೆಂಡಿರು ಮಾತ್ರವೆ ಪ್ರೀತಿಯಿಂದ ಇರಬೇಕೇನು? ಅವಳು ತಾನೇ ತನ್ನ ಬಗ್ಗೆ ಯಾಕೆ ಇಂತಹ ಭಾವನೆ ಹೊಂದಿದಳು. ತನ್ನ ಕಾದಂಬರಿಗಳನ್ನು ಮೆಚ್ಚಿದ ಅವಳ ಮಾತುಗಳು ನನಗೆ ಸಂತಸದಾಯಕವಾಗಿದ್ದವು ನಿಜ, ಆದರೆ ಅದರಿಂದ ನನ್ನ ಮನಸ್ಸಿನಲ್ಲಿ ಅವಳ ಬಗ್ಗೆ ಅವಳಿಗನ್ನಿಸಿದ ಭಾವನೆಗಳು ಕೀಳುಮಟ್ಟದವೇ. ಗಂಡಸಾದ ತನಗೆ ಹೆಂಗಸರ ಬಳಿ ಮಾತನಾಡುವಾಗ  ಸಂತೋಷವಾಗುವುದಿಲ್ಲವೆಂದು ಹೇಳಲಾರೆ. ತನ್ನನ್ನು ಯುವತಿಯರು  ಅಭಿಮಾನದಿಂದ ಕಾಣುತ್ತಾರೆಂಬುದು ಅಭಿಮಾನ ಉಕ್ಕಿಸುತ್ತದೆಂಬುದೂ ಸತ್ಯ. ಆದರೆ ನಂದಿನಿಯನ್ನು ತಾನು ಟಿಶ್ಯೂ ಪೇಪರಿನಂತೆ ಬಳಸಿಕೊಳ್ಳುವ ಹಂಚಿಕೆ ಹಾಕಿದ್ದೆನೆ? ಅವಳೇನಾದರೂ ತನ್ನನ್ನು ಪ್ರಶ್ನಿಸಿದ್ದರೆ ಈ ವಿಷಯವಾಗಿ ನಾನೇನು ಹೇಳುತ್ತಿದ್ದೆ? ಅವಳು ನನ್ನನ್ನು ಬಯಸಿದ್ದರೆ ನಾನು ಅವಳನ್ನು ಬಯಸುತ್ತಿದ್ದೆನೆ? ಹಾಗೆ ಬಯಸ್ಸಿದ್ದರೂ ಅದು ತಪ್ಪಾಗುತ್ತಿತ್ತೆ? ಒಂದು ಗಂಡು ಒಂದು ಹೆಣ್ಣು ಪರಸ್ಪರ ಹತ್ತಿರ ಬರುವುದು ಸಹಜ; ಹಾಗೆ ಒಂದು ಪಕ್ಷ, ಸಂಬಂಧವಿರಿಸಿಕೊಂಡರೂ ಅದನ್ನು ತಪ್ಪು ಎಂದು ನಾನು ಭಾವಿಸುವುದಿಲ್ಲ. ತಪ್ಪು ಎಂಬುದು ಸಾಪೇಕ್ಷವಾದದ್ದು: ಅಲ್ಲದೆ ಈ ದರಿದ್ರ ಸಮಾಜದ, ತಪ್ಪು ಮಾನದಂಡಗಳಿಂದ ಅಳೆಯುವಂತಹದ್ದು. ಆದರೆ ಅವಳು ತನ್ನನ್ನು ಬಯಸಿದುದೇ ತನಗೆ ಗೊತ್ತಿಲ್ಲ. ತಾನು ಪ್ರಾಮಾಣಿಕನೆಂಬುದನ್ನು ಹೇಗೆ ಸಾಬೀತುಗೊಳಿಸುವುದು? ಪ್ರಾಮಾಣಿಕನಾದ ವ್ಯಕ್ತಿ ತನ್ನ ನಿಜವನ್ನು ಜಾಹೀರು ಮಾಡಿಕೊಳ್ಳಬೇಕಾದ ಪರಿಸ್ಥಿತಿಗಿಂತ ಸೋವಿನ ಸಂಗತಿ ಬೇರಾವುದಾದರೂ ಇದ್ದೀತೇ? ನನ್ನನ್ನು ಬಯಸಿದ ನಂದಿನಿಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಳು. ನಾನು ಅವಳನ್ನು ಕೆಡಿಸಿಬಿಟ್ಟಿದ್ದೇನೆಂದು ಮಾಧವರಾವ್ ಭಾವಿಸಿದ್ದಾನೋ ಹೇಗೆ? ನಂದಿನಿ ಸಾಮೀಪ್ಯ ಸುಖದ ತಂಗಾಳಿಯಾದರೂ ತಾನು ಅವಳನ್ನು ಆ ರೀತಿ ಬಳಸಿಕೊಳ್ಳುವ ಆಲೋಚನೆ ಎಂದೂ ತಾಳಿದ್ದಿಲ್ಲ. ಎಷ್ಟಾದರೂ ತಾನೂ ಸಾಮಾಜಿಕ ಕಟ್ಟುಪಾಡುಗಳಿಂದ ನಿಯಂತ್ರಿತನಾದ ವ್ಯಕ್ತಿ ತಾನೇ?
ಏನೇ ಆಗಲಿ, ನಂದಿನಿಯೆಂಬ ಹೂವು ಒಣಗಿ ತೊಟ್ಟು ಕಳಚಿ ಬಿತ್ತು. ಅವಳಲ್ಲಿ ಹೂವಿನ ಮಾರ್ದವತೆಗಿಂತ ಬೇವಿನ ದೃಢತೆ ಹೆಚ್ಚಿದ್ದಿದ್ದರೆ ಎಷ್ಟು ಚೆನ್ನಾಗಿತ್ತು? ತಾನು ನಂದಿನಿಯ ಸಾವಿಗೆ ಕಾರಣವೆಂಬ ಆರೋಪವಷ್ಟೇ ತನ್ನನ್ನು ದಿಕ್ಕುಗೆಡಿಸಿದೆಯೇ? ನಾನುಪರಿತಾಪಪಡಬೇಕಾದದ್ದು ಈ ಮಿಥ್ಯಾರೋಪದ ಕಾರಣಕ್ಕಾಗಿಯೋ ಅಥವಾ ನಂದಿನಿ ಸಾಯಬಾರದಿತ್ತು ಎಂಬ ಪ್ರಾಮಾಣಿಕವಾದ ಅನುಕಂಪದಿಂದಲೋ. ಅವಳ ಸಾವಿಗೆ ಅಳಬೇಕೇ ವಿನಾ ನನ್ನ ಮೇಲಿನ ಮಿಥ್ಯಾರೋಪಕ್ಕಲ್ಲ ಎಂಬುದು ನಿಜವಾದರೂ, ನಾನು ಬದುಕಲು ಹವಣಿಸಿ ಅವಳನ್ನು ಹಿಂದೂಡುವಂತೆ ಮಾಡುವ ಈ ಲೋಕವ್ಯವಹಾರ ಎಷ್ಟೊಂದು ಕ್ರೂರವಾದದ್ದು?
* * *
  ಮಾರನೆಯ ದಿನ ಚಂದ್ರವಳ್ಳಿಯನ್ನು ನೋಡಲು ಹೇಮಂತ ಹೋಗಿದ್ದ. ಹಿಂದಿನ ದಿನವೆಲ್ಲ ಬೆಟ್ಟದಲ್ಲಿಯೇ ಕಾಲ ಕಳೆದಿದ್ದ. ಅಲ್ಲದೆ ಚಂದ್ರವಳ್ಳಿ ಇದ್ದುದು ಇನ್ನೊಂದು ದಿಕ್ಕಿನಲ್ಲಿ. ಹೀಗಾಗಿ ಅಲ್ಲಿ ನಾಳೆ ಹೋಗೋಣವೆಂದು ನಿರ್ಧರಿಸಿದ್ದ. ಹೋಟಲಿನ ಮಾಲೀಕ ಹೇಳಿದ್ದುದರಿಂದಾಗಿ ಒಂದು ಟಾರ್ಚ್ ಕೊಂಡು ತಂದು ಅದರೊಡನೆ ಚಂದ್ರವಳ್ಳಿಯ ಕಡೆ ನಡೆಯುತ್ತಿದ್ದ ಹೇಮಂತನ ಮನಸ್ಸು ಪ್ರಕ್ಷುಬ್ಧ ಸಾಗರವಾಗಿತ್ತು.
ತಾನು ಬೆಟ್ಟ ನೋಡಿದೆ; ಚಂದ್ರವಳ್ಳಿ ನೋಡಲು ಹೋಗುತ್ತಿದ್ದೇನೆ, ಒಂದು ರೀತಿಯಲ್ಲಿ ಸೈಟ್ ಸೀಯಿಂಗ್ ಟೂರ್ ಅಲ್ಲವೇ ತನ್ನದು? ನಾನೀಗ ನಂದಿನಿಯ ನೆನಪು ಹೊತ್ತು, ಅವಳ ಶವವನ್ನೇ ಹೆಗಲ ಮೇಲೆ ಹೊತ್ತು ಇವೆಲ್ಲವನ್ನೂ ನೋಡಲು ಹೋಗುತ್ತಿದ್ದೇನೆಂಬ ಭಾವನೆಯಿಂದ ಹೇಮಂತನ ನಾಲಿಗೆ ಕಹಿಯಾಯಿತು. ತಾನು ಕೊಲೆಗಡಕನೇ ಮಾಧವರಾವ್‍ ಹೇಳಿದ ಹಾಗೆ? ನಂದಿನಿ ತನ್ನನ್ನು ಅಷ್ಟೇಕೆ ಹಚ್ಚಿಕೊಂಡಳು; ಅಥವಾ ಅವಳೇಕೆ ತನಗನ್ನಿಸಿದ ಭಾವನೆಯನ್ನು ನನ್ನೊಡನೆ ಹಂಚಿಕೊಳ್ಳಲಿಲ್ಲ. ಎಲ್ಲ ರಹಸ್ಯಮಯವಾಗಿದೆಯಲ್ಲ ಅಥವಾ ನಂದಿನಿಯ ಸಾವಿಗೆ ಮತ್ತೆ ಯಾವುದಾದರೂ ಕಾರಣವಿದೆಯೇ, ಇರಬಹುದೇ? ನನ್ನ ಫೋಟೋ ಜೊತೆಗೆ ತನ್ನ ಚಿತ್ರವನ್ನು ಅವಳು ಅಂಟಿಸಿಕೊಂಡುಬಿಟ್ಟಾಕ್ಷಣವೇ ನಾನೇ ಅವಳ ಸಾವಿಗೆ ಕಾರಣವೆಂದು ಹೇಳುವುದು ಹೇಗೆ? ಅವಳೇ ಬರೆದಿಟ್ಟ ಪತ್ರದ ಪ್ರಕಾರ ಜೀವನದಲ್ಲಿ ಜಿಗುಪ್ಸೆ ಹಾಗೂ ದುರದೃಷ್ಟ ಅವಳ ಸಾವಿಗೆ ಕಾರಣವಲ್ಲವೇ? ಅವಳ ಜಿಗುಪ್ಸೆ ಯಾವುದರಿಂದ ಆದದ್ದಿರಬಹುದು? ಅವಳ ದುರದೃಷ್ಟದ ರೀತಿ ಎಂತಹುದಿರಬಹುದು? ಅವಳೇನಾದರೂ ಬೇರೊಬ್ಬ ವ್ಯಕ್ತಿಯನ್ನು ಪ್ರೇಮಿಸಿದ್ದಳೇ? ಅವಳ ಮದುವೆ ಏರ್ಪಾಟಿನ ಬಗ್ಗೆಯೂ ಮಾಧವರಾವ್ ಬರೆದಿದ್ದಾನಲ್ಲ; ಅದಕ್ಕೇ ತನಗಿಷ್ಟವಿಲ್ಲದ ಮದುವೆಯನ್ನು ನಿವಾರಿಸಿಕೊಳ್ಳಲು ನಂದಿನಿ ಆತ್ಮಹತ್ಯೆ ಮಾಡಿಕೊಂಡಳೇ? ಅಥವಾ ಅವಳು ಪ್ರೇಮಿಸಿದ ವ್ಯಕ್ತಿಯೇ ಅವಳಿಗೆ ಮೋಸಮಾಡಿರಬಹುದೇ? ಅಂದರೆ ಅದು ಕೇವಲ ಮಾನಸಿಕ ಪ್ರೇಮವೋ, ದೈಹಿಕ ಸಂಬಂಧದ ನೆಲೆಯನ್ನೂ ಅದು ತಲುಪಿತ್ತೋ? ಈ ಸಾಯುವಜನವೇಕೆಕೊನೆಯ ಪಕ್ಷ ಇಂಥ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಬಾರದು? ಕಾಗದ ಬರೆದಿಟ್ಟು ಸತ್ತ ನಂದಿನಿ, ಸಾವಿನ ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಿದ್ದರೆ ತನಗೆ ಇಂಥ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಮನಸ್ಸಿನ ಅಂತರಾಳವನ್ನು ಬದುಕಿರುವವರು ಹೇಳಿಕೊಳ್ಳುವುದಕ್ಕೆ ನಾಚಿಕೆ ಸಂಕೋಚಗಳು ಅಡ್ಡಿಯಾಗಬಹುದು. ಆದರೆ  ಸಾಯುವ ವ್ಯಕ್ತಿಗೆ ಅಥವಾ ಸಾವು ತನ್ನನ್ನು ಆವರಿಸಿರುವ ವ್ಯಕ್ತಿಗೆ, ನಾಚಿಕೆಯೆಂತಹುದು? ಸಾವಿನ ಅಂಚಿನಲ್ಲಿರುವ ವ್ಯಕ್ತಿ ಹೀಗೆ ಸಾವಧಾನವಾಗಿ ಯೋಚಿಸಬಲ್ಲನೇ? ಸಾವಿನ ನೆನಪಿನಿಂದಲೇ ತನ್ನ ಮೈ ಬೆವರುತ್ತದೆ, ನಡಿಗೆ ನಿಧಾನವಾಗುತ್ತದೆಯಲ್ಲ, ಸಾಯುವಾಗ ನಂದಿನಿಗೆ ಏನು ಅನ್ನಿಸಿರಬಹುದು? ಸಾವಿಗಿಂತಲೂ ಭಯಂಕರವಾದದ್ದು ಸಾವಿನ ಕಲ್ಪನೆ ಎಂಬ ಮಾತು ಸತ್ಯವಿರಬಹುದು, ಸಾಯುವ ನಿರ್ಧಾರದ ಸ್ವರೂಪ ಹೇಗಿರಬಹುದು? ಸಾಯಬೇಕೆಂದು ಅವಳು ನಿರ್ಧಾರ ತೆಗೆದುಕೊಂಡಾಗ ಅವಳಿಗೇನೆನ್ನಿಸಿರಬಹುದು? ಹೇಗೂ ಸಾಯುವ ಅವಳು ಅಪರಾಧಿಯಾಗಿದ್ದಿದ್ದರೆ, ಅವನನ್ನು ಲೋಕಕ್ಕೆಲ್ಲ ಸಾರಿ ಸಾಯಬಾರದಿತ್ತೇ? ತನ್ನ ಸಾವೇ ಪ್ರತೀಕಾರವಾಗಬೇಕೆಂಬುದು ಅವಳ ಅನಿಸಿಕೆಯಿರಬಹುದು; ಆದರೆ ಆ ಪ್ರತೀಕಾರಕ್ಕೆ ತೊಡಗಲು ಕಾರಣನಾದ ವ್ಯಕ್ತಿಗೆ ಬದುಕಿರುವಾಗಲೇ ಶಿಕ್ಷೆಯಾದರೂ ಆಗುತ್ತಿತ್ತು. ತನ್ನಂಥ ನಿರಪರಾಧಿಗಳ ಮೇಲೆ ಸಲ್ಲದ ಆರೋಪಬರುವುದು ತಪ್ಪುತ್ತಿತ್ತು. ಹಾಗಾದರೆ, ಅವಳೇನಾದರೂ ಪತ್ರದಲ್ಲಿ ತನ್ನ ಸಾವಿಗೆ ಹೇಮಂತನೇ ಕಾರಣವೆಂದು ಬರೆದಿಟ್ಟುಬಿಟ್ಟಿದ್ದರೆ! ಅಯ್ಯಯ್ಯೋ, ಅವಳು ಹಾಗೆ ಮಾಡದಿದ್ದುದೇ ಸರಿಯಾಯಿತೇನೋ, ಮಾಧವರಾವ್‍ ತನ್ನನ್ನು ಕೊಲೆಗಡುಕನೆಂದು ಕರೆಯಬಹುದು, ಆದರೆ ತಾನು ನಿರಪರಾಧಿ ಎಂದು ಹೇಳಿಕೊಳ್ಳಲಾದರೂ ಈಗ ಅವಕಾಶವಿದೆ, ಅವಳು ಬರೆದಿಟ್ಟುಬಿಟ್ಟಿದ್ದರೆ? ಸದ್ಯ ಹಾಗಾಗಲಿಲ್ಲವಲ್ಲ.
ಅವಳ ಜಿಗುಪ್ಸೆಗೆ ತನ್ನ ಕಾಣಿಕೆಯೂ ಸಂದಿದೆಯೇ? ಇತರ ಯುವತಿಯರೊಡನೆ ತಾನು ಪಡೆದ ಪರಿಚಯದಂತೆಯೇ ನಂದಿನಿಯ ಜೊತೆಯ ಸಂಬಂಧವೂ ಎಂದು ನಾನಂದುಕೊಂಡರೂ ಅನೇಕ ಸನ್ನಿವೇಶಗಳಲ್ಲಿ ತಾವು ಇನ್ನೂ ಹತ್ತಿರ ಬಂದಿರಲಿಲ್ಲವೇ? ಅವಳೇ ತನ್ನನ್ನು ಅನೇಕ ಬಾರಿ ಹುಡುಕಿಕೊಂಡು ಬಂದಿದ್ದಳು; ಮನೆಗಲ್ಲ, ಆಫೀಸಿಗಲ್ಲ, ಸಭೆ-ಸಮಾರಂಭಗಳಲ್ಲಿನ ಜಾಗಕ್ಕೆ. “ನಾನು ಇಲ್ಲಿರುತ್ತೇನೆಂದು ನಿಮಗೆ ಹೇಗೆ ಗೊತ್ತಾಯಿತು?” ಎಂದರೆ “ನಗರದಲ್ಲಿ ಇಂದು ಕಾಲಂನಲ್ಲಿ ನಿಮ್ಮ ಸಮಾರಂಭ ಇದ್ದದ್ದು ತಿಳಿಯಿತಲ್ಲ ಸರ್” ಎಂದು ನಗುತ್ತಿದ್ದಳು. ಸಮಾರಂಭಗಳಲ್ಲಿ ಮುಂದಿನ ಸಾಲಿನಲ್ಲಿಯೇ ಕುಳಿತು ಆಸಕ್ತಿಯಿಂದ ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು. ಹಾರ ಹಾಕುವಾಗ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದಳು; ಆಗೆಲ್ಲ ಅವಳ ಮುಖದ ಮೇಲೆ ಬೆಳದಿಂಗಳಿನ ಹಾಗೆ ನಗು ಹರಡಿರುತ್ತಿತ್ತು.
ತುಮಕೂರು ಅವಳ ಊರು ಎಂದು ಹಿಂದೆಯೇ ಹೇಳಿದೆಯಲ್ಲ. ನವೋದಯ ನಗರದಲ್ಲಿ ಅವಳ ಮನೆ. ಒಮ್ಮೆತಾನೂ ಅವಳ ಮನೆಗೆ ಹೋಗಿದ್ದುದು ನೆನಪಿಗೆ ಬಂತು. ತುಮಕೂರಿನಲ್ಲಿಯೇ ಒಂದು ಸಮಾರಂಭಕ್ಕೆ ತಾನು ಹೋಗಿದ್ದೆ; ರಾಜ್ಯೋತ್ಸವದಂತಹ ಸಮಾರಂಭವಿರಬೇಕು. ಬೆಂಗಳೂರಿಗೇ ಬರುವವಳು ತುಮಕೂರಿನಲ್ಲಿಯೇ ತನ್ನನ್ನು ಕಾಣುವ ಅವಕಾಶವಿದ್ದರೆ ಬಿಟ್ಟಾಳೆಯೇ? ಬಂದಿದ್ದಳು. ಸಮಾರಂಭದ ಕೊನೆಗೆ ತಮ್ಮ ಮನೆಗೆ ಬರಬೇಕೆಂದು ದುಂಬಾಲು ಬಿದ್ದಿದ್ದಳು. ಬೆಳಗಿನ ಸಮಾರಂಭ; ಯಾವುದೋ ಶಾಲೆಯಲ್ಲಿ. ಹೀಗಾಗಿ ಬೇಕಾದಷ್ಟು ಹಗಲು ಇನ್ನೂ ಇತ್ತು. ಅವಳ ಮನೆಗೆ ಹೋಗಿ ಬರುವುದರಲ್ಲಿ ಯಾವ ತೊಂದರೆಯೂ ಕಾಣಿಸಲಿಲ್ಲ. ಅವಳೇ ಒಂದು ರಿಕ್ಷಾ ಕರೆದು ಸಂಭ್ರಮದಿಂದ ಕೂತು “ಬನ್ನಿ” ಎಂದು ಒಳಗೆ ಆಹ್ವಾನಿಸಿದ್ದಳು. (ಹೃದಯದೊಳಕ್ಕೂ ತನ್ನನ್ನು ಆಹ್ವಾನಿಸಿಕೊಂಡಿದ್ದಳೋ ಏನೋ!)
ಅವರ ಮನೆ ಮಧ್ಯಮ ವರ್ಗದವರ ಮನೆ. ಸುಸಂಸ್ಕೃತ ಕುಟುಂಬ. ವಿದ್ಯಾವಂತಿಕೆಯೂ ತ ಮಟ್ಟಿಗಿನದು. ಅವಳು ಬಿ.ಎ. ಓದಿ ಮುಗಿಸಿದ್ದಳು. ಕನ್ನಡ ಬೇರೆ ಒಂದು ಐಚ್ಛಿಕ ವಿಷಯ. ಹಾಗಾಗಿ ಸಾಹಿತ್ಯದ ಹಿನ್ನೆಲೆಯ ಅರಿವೂ ಅವಳಿಗಿತ್ತು. ನನ್ನ ಬಗ್ಗೆ ವಿಶೇಷ ಅಭಿಮಾನವುಂಟಾಗಲು ಏನು ಕಾರಣವೋ. ರಿಕ್ಷಾದಲ್ಲಿ ಕುಳಿತು ಅದು ಸಾಗುವಾಗ ಅವಳು ಅನೇಕ ಪ್ರಶ್ನೆಗಳನ್ನು ಕೇಳಿದ್ದಳು.
“ನಿಮ್ಮ ಯಾವ ಕಾದಂಬರಿಯನ್ನೂ ಟೆಕ್ಸ್ಟ್ ಬುಕ್ಕಾಗಿ ಯಾಕೆ ಇಟ್ಟಿಲ್ಲ ಸಾರ್?”
ಅವಳ ಪ್ರಶ್ನೆಗೆ ಏನೆಂದು ಉತ್ತರ ಹೇಳುವುದು? ನಾನು ನಗುತ್ತ “ಟೆಕ್ಸ್ಟ್ ಆಗುವಂಥ ಮಟ್ಟದ ಯಾವ ಕಾದಂಬರಿಯನ್ನೂ ನಾನು ಬರೆದಿಲ್ಲವಲ್ಲ” ಎಂದಿದ್ದೆ.
“ಅದೆಲ್ಲ ಸುಳ್ಳು. ನಿಮ್ಮ ‘ದುರಂತ’ ಕಾದಂಬರಿ ಎಂಥ ಚೆನ್ನಾಗಿದೆ. ‘ವ್ಯವಹಾರದ ಸುಳಿಯಲ್ಲಿ’ ಕೂಡ ಫ ಸ್ಟ್‍ಕ್ಲಾಸಾಗಿದೆ. ನಿಮ್ಮ ಪುಸ್ತಕಗಳು ಎಷ್ಟು ಗ್ರೇಟ್ ಅಂತ ನಿಮಗೇಗೊತ್ತಿಲ್ಲ ಸಾರ್” ಅಂದಿದ್ದಳು. ಸುಳ್ಳೋ ನಿಜವೋ, ನನ್ನ ಕಾದಂಬರಿಗಳನ್ನು ಅವಳು ಗ್ರೇಟ್ ಎಂದಿದ್ದು ಕೇಳಿ ಒಂದು ಕ್ಷಣ ಗಾಬರಿಯಾಯಿತು. ಆದರೆ ಅದರ ಬೆನ್ನಲ್ಲೇ ಹೆಮ್ಮೆಯೂ ಬೀಗುತ್ತ ಬಂದಿತ್ತು.
“ಪಠ್ಯಪುಸ್ತಕವಾದರೆ ದುಡ್ಡು ಬೇಕಾದಷ್ಟು ಬರುತ್ತಲ್ಲ, ಸಾರ್. ಅದಕ್ಕೇ ಅದರಲ್ಲಿ ರಾಜಕೀಯ. ಬೇಕಾದೋರ ಪುಸ್ತಕಗಳನ್ನೇ ಪ್ರಿಸ್‍ಕ್ರೈಬ್ ಮಾಡ್ತಾರೆ” ಎಂದು ಹೇಳಿ “ನಿಮಗೆ ಪಠ್ಯಪುಸ್ತಕ ಸಮಿತಿಯಲ್ಲಿ ಯಾರ ಪರಿಚಯವೂ ಇಲ್ಲವೇ ಸಾರ್?” ಎಂದು ಪ್ರಶ್ನಿಸಿದ್ದಳು.
“ಯಾಕೆ? ಯಾರದಾದೂ ಇನ್‍ಫ್ಲುಯೆನ್ಸ್‍ನಿಂದ ಟೆಕ್ಸ್ಟ್ ಮಾಡಿಸಿಕೋ ಅಂತ ಹೇಳ್ತಾ ಇದ್ದೀರಾ? ಅಂದರೆ ಯೋಗ್ಯತೆ ಮೇಲಿಂದ ಆಗೋಹಾಗಿಲ್ಲ ಅಂತ ತಾನೇ?” ಎಂದು ಛೇಡಿಸಿದ್ದೆ.
“ಖಂಡಿತಾ ಇಲ್ಲ ಸಾರ್. ಪಠ್ಯವಾದರೇ ಒಳ್ಳೆಯ ಪುಸ್ತಕ ಅಂತ ಏನೂ ಅಲ್ಲವಲ್ಲ. ಹೋಗಲಿ ಸಿನಿಮಾಕ್ಕೆ ಕತೆ ಬರೀರಿ ಸಾರ್, ಹಣವೂ ಬರುತ್ತೆ, ಪ್ರಸಿದ್ಧೀನೂ ಸಿಗುತ್ತೆ” ಅವಳ ಉತ್ಸಾಹ ಮಳೆಗಾಲದ ನದಿಗಳದ್ದು. ತಾನು ಅಭಿಮಾನವಿರಿಸಿಕೊಂಡ ವ್ಯಕ್ತಿಯ ಶ್ರೇಯಸ್ಸು ಬಯಸುವ ಮನಸ್ಸಿನ ನೈರ್ಮಲ್ಯ ಕಂಡು ಕಂಠ ತುಂಬಿಬರುವಂತಾಗುತ್ತದೆ. ನನಗೆ ಹಣ, ಕೀರ್ತಿ ಬಂದರೆ ನಂದಿನಿಗೇನು ಬಂದಂತೆ? ತಾನು ಅವುಗಳನ್ನು ಬಯಸದೆ, ನನಗೆ ಅವು ಬರಬೇಕೆಂದು ಹಾರೈಸುವ, ಪರರ ಶುಭ ಹಾರೈಸುವ ಪ್ರವೃತ್ತಿಯನ್ನು ಪಡೆದ ಮನಸ್ಸಿನ ಸಂಸ್ಕಾರವೆಂತಹದಿರಬಹುದು. ನಾನೇ ಹಾಗೆ ಬೇರೆಯವರ ಒಳಿತನ್ನು ಅಷ್ಟು ನಿರ್ಮಲವಾಗಿ, ಸ್ವಾರ್ಥರಹಿತವಾಗಿ ಹಾರೈಸಲು ಶಕ್ಯವೇ? ನಾನು ಕಾದಂಬರಿ ಬರೆದು ದೊಡ್ಡವನೆನಿಸಿಕೊಂಡಿರಬಹುದು, ಆದರೆ ಅವಳು ನನಗಿಂತ ಅಭಿರುಚಿಯಲ್ಲಿ, ಉನ್ನತಿಯಲ್ಲಿ ತುಂಬ ಹಿರಿಯಳಲ್ಲವೇ?
“ನಿಮ್ಮಂಥ ನಾಲ್ಕು ಮಂದಿ ಅಭಿಮಾನಿ ಓದುಗರಿದ್ದರೆ ಸಾಕು ನಂದಿನಿ. ಬೇರೇನು ಬೇಕು?” ಅವಳ ಪ್ರೀತಿಯ ಪೂರದಲ್ಲಿ ಕೊಚ್ಚಿ ಹೋಗುತ್ತಿದ್ದ ನಾನೂ, ಅದೇ ಶ್ರುತಿಗನುಗುಣವಾಗಿ ಹೇಳಿದ್ದೆ. ಹಾಗೆ ಹೇಳುತ್ತ ಅವಳ ಮುಖದ ಕಡೆ ನಾನು ನೋಡುವಾಗ ನನ್ನ ಕಣ್ಣುಗಳಲ್ಲಿ ಮಾರ್ದವತೆಯಿದ್ದದ್ದು ಅವಳಿಗೆ ಕಾಣಿಸಿರಬಹುದು.ಆದರೆ ನನ್ನ ಅನುಭವಕ್ಕೂ ಅದು ಬಂದಿತ್ತು. ನಂದಿನಿ ಎಂದು ಮೆದುವಾಗಿ ಅವಳ ಹೆಸರು ಕರೆದಾಗ ಅವಳು ಅದನ್ನು ಹೃದಯಕ್ಕೆ ಒತ್ತಿಕೊಳ್ಳುವವಳಂತೆ, ಕಣ್ಣೊಳಗಿನ ಅಕ್ಷಿಪಟಲದ ಮೇಲೆ ಮೆತ್ತಿಕೊಳ್ಳುವವಳಂತೆ ಕಣ್ಮುಚ್ಚಿಕೊಂಡದನ್ನು ಗಮನಿಸಿದ್ದೆ.
ಹೀಗೆ ಹರಟುತ್ತಾ ರಿಕ್ಷಾದಂತಹ ಒರಟು ವಾಹನ ಆಕಾಶದಲ್ಲಿ ತೇಲುತ್ತಿರುವಂತಹ ಅನುಭವದಲ್ಲಿ ದಾರಿ ಸಾಗಿ ಮನೆಗೆ ಬಂದೆವು. ಅವಳಿಗೆ ತಂದೆಯಿರಲಿಲ್ಲ, ತಾಯಿ, ಅಣ್ಣ, ಅವರ ಸಂಸಾರದ ಜೊತೆ ಅವಳಿದ್ದುದು. ಇವರಿಬ್ಬರೇ ತಾಯ್ತಂದೆಯರಿಗೆ ಮಕ್ಕಳು. ಆ ಅಣ್ಣನೇ ಮಾಧವರಾವ್. ಹೈಸ್ಕೂಲಿನಲ್ಲಿ ಮೇಷ್ಟರು. ಚಿಕ್ಕಸಂಸಾರ. ಮನೆಯ ಒಪ್ಪ ಓರಣಗಳು ಆ ಸಂಸಾರದ ಸಂಸ್ಕೃತಿಯನ್ನು ಸಾರಿ ಹೇಳುತ್ತಿದ್ದವು.
ನಾವು ಮನೆಗೆ ಬಂದಾಗ ಮಾಧವರಾವ್ ಮನೆಯಲ್ಲಿರಲಿಲ್ಲ; ಸ್ಕೂಲಿಗೆ ಹೋಗಿದ್ದರು. ಅವಳಲ್ಲದೆ ನಂದಿನಿಯ ತಾಯಿ-ಅತ್ತಿಗೆಯರೂ ನನ್ನ ಕೆಲವು ಕಾದಂಬರಿಗಳನ್ನು ಓದಿದವರಾದ್ದರಿಂದ ನಾನು ಅವರಿಗೆ ಪರಿಚಿತನಾಗಿಯೇ ಇದ್ದೆ. ತುಂಬ ವಿಶ್ವಾಸದಿಂದ ಅವರು ಮಾತಾಡಿದ್ದರು. ನಂದಿನಿಯ ಉತ್ಸಾಹಕ್ಕಂತೂ ಮೇರೆಯಿರಲಿಲ್ಲ. ಸ್ಕೂಲಿಗೆ ಹೋಗಿ ಅಣ್ಣನನ್ನು ಕರೆದುಕೊಂಡು ಬರುತ್ತೇನೆ ಎಂದು ಹೊರಟಾಗ ನಾನೇ ಬೇಡವೆಂದಿದ್ದೆ. ಇನ್ನೊಮ್ಮೆ ಬರುತ್ತೇನೆ ಎಂದು ಆಶ್ವಾಸನೆ ನೀಡಿದ್ದೆ. “ಇನ್ನೇನು ನಾನು ನಿಮ್ಮ ಮನೆಯವನೇ ಆಗಿಬಿಟ್ಟಿದ್ದೀನಲ್ಲ, ಎಷ್ಟು ಸಲ ಬೇಕಾದರೂ ಬರುತ್ತೇನೆ” ಎಂದಿದ್ದೆ. ಇಂತಹ ನನ್ನ ಮಾತುಗಳೇ ಅವಳನ್ನು ತಪ್ಪು ದಾರಿಗೆಳೆದಿರಬಹುದೇ? ಅವಳು ನನ್ನ ಬಗ್ಗೆ ನನಗರಿವಿಲ್ಲದ ಭಾವನೆಗಳನ್ನು ಹೊಂದಲು ಅದರಿಂದ ಪ್ರೋತ್ಸಾಹ ದೊರಕಿರಬಹುದೇ? ಆದರೆ ನಾನು ತಾನೇ ಏನು ಮಾಡಲಿ? ಜನರ ಜೊತೆ ಆತ್ಮೀಯತೆಯಿಂದ ಮಾತನಾಡುವುದು ತಪ್ಪೇ? ಅವರಿಗೆ ನಾನು ಹತ್ತಿರವಾಗಬೇಕೆಂಬ ನನ್ನ ಪ್ರಾಮಾಣಿಕ ಆಕಾಂಕ್ಷೆ ಅಪಾಯಕಾರಿಯೇ!
ತುಂಬ ಬಲವಂತ ಮಾಡಿದ ಮೇಲೆ ನಾನು ಅವರ ಮನೆಯಲ್ಲಿಯೇ ಊಟ ಮಾಡಿದ್ದೆ. ನಾನೆಷ್ಟು ಬಲವಂತ ಮಾಡಿದರೂ ನನ್ನ ಜೊತೆ ನಂದಿನಿ ಊಟಕ್ಕೆ ಕೂತುಕೊಳ್ಳದೆ, ತಾನೇ ಬಡಿಸಿದ್ದಳು. ಅವಳ ನಡಿಗೆ, ನಗು, ಪ್ರತಿಯೊಂದು ಚಲನವು ನಂದಿನಿಯನ್ನು ಲಾಸ್ಯಗಾರ್ತಿಯನ್ನಾಗಿಸಿತ್ತು. ಇವಳ ಉತ್ಸಾಹ ಕಂಡು ಹುಡುಗ ಎಂಬ ಅಭಿಮಾನಪೂರ್ವಕ ಮುಗುಳ್ನಗೆಯಿಂದ ಅವರ ತಾಯಿಪಕ್ಕದಲ್ಲಿ ನಿಂತು ಉಪಾಚಾರದಲ್ಲಿ ತೊಡಗಿದ್ದರು. ಅತ್ತಿಗೆ ಹೊರಗೆಲ್ಲೋ ಕೆಲಸದಲ್ಲಿ ತೊಡಗಿದ್ದಿರಬಹುದು. ಅವಳು ಬಡಿಸಿದ ಪ್ರತಿಯೊಂದರಲ್ಲೂ ನಂದಿನಿ ತನ್ನ ಪ್ರೀತಿಯನ್ನು ಉಣಬಡಿಸುತ್ತಿದ್ದಳೇನೋ.
ಊಟವಾದ ಮೇಲೆ ಇದೂ ಅದೂ ಮಾತುಕತೆ. ಮುಂದೇನು ಬರೀತೀರಾ? ಅದರಕಥಾವಸ್ತುವೇನು? ಕತೆನಡೆಯುವ ಸ್ಥಳವಾವುದು? ಪ್ರಶ್ನೆ “ಓನಿಮ್ಮ ಮುಂದೆ ಏನಾದರೂಮಾತನಾಡುವುದೇ ಕಷ್ಟ. ನಿಮ್ಮ ಮುಂದಿನ ಕಾದಂಬರಿಯಲ್ಲಿ ಅದನ್ನೆಲ್ಲ ಬರೆದೇಬಿಡ್ತೀರೋ ಏನೋ!” ಎಂಬ ಹುಸಿ ಗಾಬರಿ, ನಸುನಗೆ.
ನಂದಿನಿಗೆ ದಿನವೆಲ್ಲ ಡುವು. ಬಿ.ಎ. ಆದಮೇಲೆ ಮುಂದೆ ಓದುವುದೆಂದರೆ ಬೆಂಗಳೂರು; ಬೆಳಿಗ್ಗೆ ಮನೆ ಬಿಟ್ಟು ರಾತ್ರಿ ಮನೆ ಸೇರಲು ತಯಾರಾಗಿದ್ದರೆ ಎಂ.ಎ. ಓದಲು ಸಾಧ್ಯವಿತ್ತು. ಬೆಂಗಳೂರಲ್ಲೇ ಅವಳು  ಬೇರೆಯಾಗಿರಲು ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅಡಚಣೆ. ಅಲ್ಲದೆ, ಬೆಂಗಳೂರಲ್ಲೂ ವಿಶ್ವವಿದ್ಯಾನಿಲಯ ಊರಿನಿಂದ ದೂರ. ತುಮಕೂರಿನಿಂದ ನಿತ್ಯ ಓಡಾಟ ಅಸಾಧ್ಯ, ಅದು ಹೆಣ್ಣು ಹುಡುಗಿ. ಹೀಗಾಗಿ ಬಿ.ಎ. ಆಗಿ ಐದಾರು ವರ್ಷಗಳೇ ಆಗಿದ್ದರೂ ಮನೆಯಲ್ಲಿಯೇ ಇದ್ದಾಳೆ. ನಂದಿನಿ ಟೈಲರಿಂಗ್, ನಿಟ್ಟಿಂಗ್ ಅಂತ ಅದೂ ಇದೂ ಹವ್ಯಾಸ ಕಾಲಕಳೆಯಲು, ಹಾಡು ಕಲಿಯಲು ಕಂಠ ಮಧುರವಾಗಿಲ್ಲವೆಂದು ಅವಳೇ ಹೇಳಿದ್ದಳು.
“ನೀವು ಮಾತಾಡಿದರೇ ಕೋಗಿಲೆ ಹಾಡಿದ ಹಾಗೆ ಆಗುತ್ತೆ, ಯಾಕೆ ಮಧುರವಾಗಿಲ್ಲ” ಎಂದಿದ್ದೆ ನಾನು. ಅದು ಹಾಸ್ಯದ ಮಾತಾಗಿರಬಹುದು, ಆದರೆ ಅಭಿಮಾನ ಅದಕ್ಕೆ ಹತ್ತಿಕೊಂಡಿತ್ತು.
“ನಡೆದರೆ ನವಿಲಿನ ನರ್ತನದ ಹಾಗೂಇರುತ್ತಾ?” ಎಂದು ಗಕ್ಕನೆ ನಂದಿನಿ ಕೇಳಿದ್ದಳು ನಗುತ್ತ, ನಾಚುತ್ತ. ಎಲ ಎಲಾ, ಎಂತಹ ಪ್ರಶ್ನೆ? ಇಂಥ ವರ್ಣನೆಗಳನ್ನೆಲ್ಲ ಸಾಹಿತ್ಯದ ವಿದ್ಯಾರ್ಥಿನಿಯಾದ ಅವಳು ಅನೇಕ ಕಾವ್ಯಗಳಲ್ಲಿ ಓದಿದ್ದವಳು. ನನ್ನ ಮಾತು ಹೇಗೆ ಸಾಮಯಿಕವಾಗಿ ಬಂತೋ ಅವಳೂ ಹಾಗೆಯೇ ಹಾಸ್ಯಪೂರಿತವಾಗಿ ಕೇಳಿದಳೋ ಅಥವಾ ತನ್ನ ವಿಷಯವಾಗಿ ನಾನು ಆ ರೀತಿಯ ಭಾವನೆಯಿಂದ ಕಾಣಬೇಕೆಂದು ನಂದಿನಿ ಬಯಸಿದ್ದಳೋ! ಪೂರ್ ಗರ್ಲ್!
ನಾನು ಅವರ ತಾಯಿಯ ಜೊತೆ ಮಾತನಾಡುತ್ತ ಕುಳಿತಿದ್ದಾಗ, ಸರ್ರನೆ ಒಳಗೆ ಹೋಗಿ ರೂಮಿನಿಂದ ಒಂದು ಕಡೆ ಪುಸ್ತಕಗಳನ್ನು ಎದೆಗೆ ಒತ್ತಿಕೊಂಡು ಬಂದಳು.ಹಾಗೆ ಎದೆಗೊತ್ತಿಕೊಂಡದ್ದು ಅವು ಬೀಳದ ಹಾಗೆ ಹಿಡಿಯಲು ಅನುಕೂಲವೆಂದು ಇರಬಹುದು ಅಥವಾ ಹೃದಯಕ್ಕೆ ಅವು ಎಷ್ಟು ಸಮೀಪ ಎಂಬುದನ್ನು ಸಂಕೇತಿಸಲೂ ಇರಬಹುದು. ಏಕೆಂದರೆ ಅವಳು ಹಾಗೆ ಹೊತ್ತು ತಂದದ್ದು ನನ್ನ ಕಾದಂಬರಿಗಳನ್ನೇ. ಅವನ್ನೆಲ್ಲ ಮೇಜಿನ ಮೇಲೆ ಇರಿಸಿ ಒಂದೊಂದಾಗಿ ಎತ್ತಿಕೊಡುತ್ತ “ದಯವಿಟ್ಟು ನಿಮ್ಮ ಹಸ್ತಾಕ್ಷರ ಹಾಕಿಕೊಡಿ” ಎಂದು ಕೇಳಿದ್ದಳು. ನಾನು ಮೊದಲ ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಆಟೋಗ್ರಾಫ್ ಮಾಡುತ್ತ “ನೀವು ದುಡ್ಡು ಕೊಟ್ಟು ಪುಸ್ತಕ ತಗೊಂಡಿದ್ದೀರ ಕಾಂಪ್ಲಿಮೆಂಟರಿ ಏನಲ್ಲವಲ್ಲ ಹಸ್ತಾಕ್ಷರ ಹಾಕಿಕೊಡಲು”ಎಂದೆ.
“ದುಡ್ಡಿಗೇನು ಬೆಲೆ ಸಾರ್. ನಿಮ್ಮ ಹಸ್ತಾಕ್ಷರಕ್ಕೆ ಎಷ್ಟು ಬೆಲೇಂತ ನಿಮಗೆ ಗೊತ್ತಿಲ್ಲ” ಅಂದಿದ್ದಳು ನಂದಿನಿ.
“ಎಷ್ಟು?”
       “ಅದು ಅಮೂಲ್ಯ, ಅಂದರೆ ಬೆಲೆ ಕಟ್ಟಲು ಸಾಧ್ಯವಿಲ್ಲ”
“ಅಮೂಲ್ಯ ಎಂದರೆ ಬೆಲೆ ಇಲ್ಲದ್ದು ಅಂತ ಅರ್ಥ”
“ಆದರೆ ನಿಮ್ಮ ಹಸ್ತಾಕ್ಷರ ಎಲ್ಲ ಪುಸ್ತಕದಲ್ಲೂ ಇರೋದು ನೋಡಿದರೆ ನನ್ನ ಸ್ನೇಹಿತರೆಲ್ಲ ನನ್ನನ್ನು ಎಷ್ಟು ಲಕ್ಕೀ ಅಂತ ಅಂದುಕೋತಾರೆ ಗೊತ್ತಾ?” ಎಂದಿದ್ದಳು ತನ್ನ ತಟ್ಟೆಗಣ್ಣುಗಳನ್ನು ಹಿಗ್ಗಿಸಿ.
ನೆನಪುಗಳು ಹೃದಯವನ್ನು ಉಳಿಯಿಂದ ಕೆತ್ತುತ್ತವೆ. ನೆನಪು ಬಾಳಿನ ಬುತ್ತಿ ಎಂದು ಅನ್ನುತ್ತಾರೆ. ಆದರೆ ಇಂಥ ಸಂದರ್ಭಗಳಲ್ಲಿ ಇಂಥ ನೆನಪುಗಳು ಹೃದಯದ ಬಾಣಲೆಯಲ್ಲಿ ಕಾದ ಮರಳಿದ ಮೇಲೆ ಹಾಕಿದ ಹುರುಳಿಯಂತೆ ಚಿಟಪಟಗುಟ್ಟುತ್ತ ಹಾರಿ ಮೈ ಮೇಲೆಬಿದ್ದು ಸುರ್ ಎಂದು ಸುಡುತ್ತವೆ.
ಚಂದ್ರವಳ್ಳಿಯ ಗುಡ್ಡಗಳನ್ನೆಲ್ಲ ಸುತ್ತಿ, ಬೆವರೊರೆಸಿಕೊಂಡು ಕೊನೆಗೆ ಮಯೂರಶರ್ಮನ ಗುಹೆ ಎನ್ನುತ್ತಾರಲ್ಲ ಅಂಥ ಗುಹೆಗೆ ಹೋದ ಹೇಮಂತ. ಹೇಗೂ ಟಾರ್ಚ್ ತಂದಿದ್ದನಲ್ಲ; ಅದರಿಂದ, ಟಾರ್ಚ್ ಇಲ್ಲದ್ದರಿಂದ ಗುಹೆಯನ್ನು ನೋಡಲು ಸಾಧ್ಯವಾಗದೆ ಹಾಗೇ ಹಿಂದಿರುಗಬೇಕಲ್ಲ ಎಂದು ಪರಿತಪಿಸುತ್ತಿದ್ದ ಐದಾರು ಮಂದಿ ಗಂಡಸರು-ಹೆಂಗಸರಿದ್ದ ಗುಂಪಿಗೂ ಅನುಕೂಲವಾಯಿತು. ತನಗೂ ಕಂಪನಿ ಸಿಕ್ಕಿದಂತಾಯಿತೆಂದುಕೊಂಡು ಅವರ ಜೊತೆ ಗುಹೆಯಲ್ಲಿ ಹೊಕ್ಕಾಗ ಗಬಕ್ಕನೆಗುಹೆ ತಮ್ಮನ್ನು ನುಂಗಿ ಹಾಕಿದಂತೆ ಎನ್ನಿಸಿತು. ಗುಂಪಿನಲ್ಲಿ ಬಂದಿದ್ದವರಲ್ಲಿ ಒಬ್ಬಾತ ಈ ಮೊದಲೇ ಈ ಗುಹೆಯನ್ನು ನೋಡಿದ್ದನಾದ್ದರಿಂದ ಏನೇನೋ ವಿವರಣೆ ನೀಡುತ್ತ ಮುಂದುವರಿದ. ಹಾಗೆ ತಾನು ಟಾರ್ಚ್‍ನ ಬೆಳಕು ಬಿಟ್ಟು ಗುಂಪಿನವರು ಬರಲು ಸಹಾಯಕನಾಗುತ್ತಿದ್ದ. ಅವನ ವಿವರಣೆಯಿಂದ ತನಗೇನೂ ಸಹಾಯಕವಾಗಲಿಲ್ಲ. ಏಕೆಂದರೆ ಅವನ ಮಾತು ತನ್ನ ಕಿವಿಯ ಮೇಲೆಬಿದ್ದು ಒಳಗೆ ಸರಿಯದೆ ಹಾಗೆ ಉರುಳಿ ಹೊರಗೆ ಚೆಲ್ಲಿಬಿಡುತ್ತಿದ್ದವು.
ಯಾಂತ್ರಿಕವಾಗಿ ಮುಂದುವರಿಯುತ್ತಿದ್ದ ಹೇಮಂತನ ಮನಸ್ಸಿನಲ್ಲಿ ತನ್ನೊಬ್ಬನ ಜೊತೆಯಲ್ಲಿ ಬಾರೆಂದರೆ ನಂದಿನಿ ಈ ಗುಹೆಗೆ ಬರುತ್ತಿದ್ದಳೇ? ಬರುತ್ತಿದ್ದಳೇನೋ. ಅವಳಿಗೆ ತನ್ನಲ್ಲಿ ಅದಮ್ಯವಾದ ವಿಶ್ವಾಸ, ನಂಬಿಕೆ, ಭಕ್ತಿ. ತನ್ನ ದುರದೃಷ್ಟದ ರೂಪವೇ ಈ ಹೇಮಂತ ಎಂದು ಅವಳಿಗೆ ಅರಿವಾದ ನಂತರ ನಾನು ಕರೆದಿದ್ದರೆ ಬರುತ್ತಿದ್ದಳೆ? ನಾನು ಮೋಸಗಾರನೆಂದು ತಿಳಿದು ಮುಖದಮೇಲೆ ಉಗುಳುತ್ತಿದ್ದಳೋ? ಅಥವಾ ನೀನೇನಾದರೂ ಮಾಡು ನಿನ್ನ ಸಾಮೀಪ್ಯ ಸಾಕು ಎಂದುಬಿಡುತ್ತಿದ್ದಳೋ. ಅವಳಿಗೆತನ್ನ ಬಗ್ಗೆ ಅಂಥ  ಭಾವನೆಯಿದ್ದಿದ್ದರೆ ಅವಳೇಕೆ ಬಂದು ಹಾಗೆ ಹೇಳಲಿಲ್ಲ? ಅಂತಹ ಶರಣಾಗತಿಯ ಕಾಲದಲ್ಲಿ ತಾನು ಹೇಗೆ ಅವಳನ್ನು ಕಾಣಬಹುದಿತ್ತು. ನಾನು ಏಕಪತ್ನೀ ವ್ರತಸ್ಥನೆಂದು ಹೇಳಿ ದೂರ ಸರಿಯುತ್ತಿದ್ದೆನೋ, ಅಥವಾ ಪ್ರೀತಿ ಮುಖ್ಯವೆಂದು ಅವಳನ್ನು ಬಾಳಿನಲ್ಲಿ ಗಂಟುಹಾಕಿಕೊಳ್ಳುತ್ತಿದ್ದೆನೋ ಆಗ ನಳಿನಿ-ಕವಿತಾ? ಅವರನ್ನು ತೊರೆಯುವ ಧೈರ್ಯ-ಶಕ್ತಿ ತನಗಿದೆಯೇ? ನಳಿನಿಯ ಬದಲು ನಂದಿನಿಯಿದ್ದಿದ್ದರೆ?
ಛೆ, ಏನೇನೋ ಹಾಳು ಯೋಚನೆಗಳ ಗುಂಗಾಡಿ ಸಾಲು-ಕಿವಿಯಲ್ಲಿ ಗುಂಯ್‍ಗುಟ್ಟುತ್ತವೆ, ಕಿರಿಕಿರಿಯುಂಟುಮಾಡುತ್ತವೆ. ಸಾಯುವುದಕ್ಕೆ ಗಟ್ಟಿಮನಸ್ಸು ಮಾಡಿದ ನಂದಿನಿ ನನ್ನನ್ನು ಬಯಸಿದ್ದರೆ ನನಗೆ ಹೇಳಿಬಿಡಬೇಕಾಗಿತ್ತು. ಪ್ರೀತಿಗಾಗಿ ಬರುವ ಕಷ್ಟಗಳನ್ನೆಲ್ಲ ಎದುರಿಸಿ ಅವಳೊಡನೆ ಬಾಳುವ ನಿರ್ಧಾರ ಕೈಗೊಳ್ಳಬಹುದಾಗಿತ್ತು ಅಥವಾ ಅವಳೊಡನೆ ತಾನೂ ಸಾಯಬಹುದಾಗಿತ್ತು. ಸಾಯುವಂತಿದ್ದರೆ ಈಗಲೂ ಅಡ್ಡಿಯೇನಿದೆ? ಆದರೆ ಅವಳ ಸಾವಿಗೆ ತಾನು ಕಾರಣನಾಗಿದ್ದರೆ ತಾನೇ? ಅದಕ್ಕೆ ಬೇರೆಯೇ ಕಾರಣವಿರಬೇಕು. ಗುಹೆಯ ಕತ್ತಲಿನಲ್ಲಿ ಟಾರ್ಚಿನ ಬೆಳಕು ಕರಗುತ್ತಿತ್ತು.
* * *
ಎಂದಿನಂತೆ ನಳಿನಿ ಪೇಪರ್‍ಗಳನ್ನು ಒಳಗೆ ತಂದಿಟ್ಟು ಮುಖ ತೊಳೆದುಬಂದು, ಆ ಹೊತ್ತಿಗಾಗಲೇ ವಿಶಾಲಾಕ್ಷಮ್ಮ ಸಿದ್ಧಪಡಿಸಿದ್ದ ಕಾಫಿಯನ್ನು ಕುಡಿದು ತಾಯಿಗೆ ಸಹಾಯಮಾಡಲುತೊಡಗಿದಳು. ಕವಿತಾ ಇನ್ನೂ ಮಲಗಿದ್ದಾಳೆ. ತಂದೆ ಈಗಕೆಲವು ದಿನಗಳಿಂದ ಹತ್ತಿರವಿಲ್ಲದ್ದರಿಂದಾಗಿ ಅವಳಿಗೆ ಒಂದು ಥರ ಮಂಕು ಹಿಡಿದಿದೆಯೇನೋ ಎನ್ನುವಂತಾಗಿದೆ. ಹೇಮಂತ ಮಗಳನ್ನು ತುಂಬ ಅಕರಾಸ್ತೆಯಿಂದ ಆಟವಾಡಿಸುತ್ತಿದ್ದ. ಪಕ್ಕದಲ್ಲಿ ಮಲಗಿಸಿಕೊಂಡುಕತೆ ಹೇಳುತ್ತಿದ್ದ. ಕೂದಲು ನೇವರಿಸುತ್ತ ಪ್ರಪಂಚದ ಅನೇಕ ವಿಷಯಗಳನ್ನು ವಿವರಿಸುತ್ತಿದ್ದ. ತಾಯಿಯೂ ಹಾಗೆ  ಮಾಡುವುದಿಲ್ಲವೆಂದಲ್ಲ. ಆದರೆ ತಾಯಿಗಿಂತ ತಂದೆಗೇ ಕವಿತಾ ಹೆಚ್ಚು ಹೊಂದಿಕೊಂಡಿದ್ದಳು. ಎಲ್ಲ ಮನೆಗಳಲ್ಲಿಯೂ ತಂದೆ ಹೆಣ್ಣುಮಕ್ಕಳಿಗೆ ತಾನೇ ಹೆಚ್ಚು ನಂಟು? ಗಂಡು ಮಗುವಾದ ಮೇಲೆ ಅವನು ನಿನಗೆ ಜೋತುಬೀಳುತ್ತಾನೆ, ನನಗೆ ಕೇರೇ ಮಾಡುವುದಿಲ್ಲ ಎಂದು ಆಗಾಗ ಹೇಮಂತ ಛೇಡಿಸುತ್ತಿದ್ದನಾದರೂ, ಆ ಇನ್ನೊಂದು ಮಗು ಇನ್ನೂ ಆಗಿರಲಿಲ್ಲ. ಕವಿತಾಳಿಗೆ ಆಗಲೇ ಎಂಟು ವರ್ಷ. ಮಧ್ಯೆ ತನಗೇ ಏನೋ ತೊಂದರೆಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಳು ನಳಿನಿ. ಮುಂದೆ ಮಗು ಆಗಿರಲಿಲ್ಲ. ಆಗುವುದಿಲ್ಲ ಎಂದೇನು ವೈದ್ಯರು ಹೇಳದಿದ್ದರೂ ಮುಂದೆ ಸಂಶಯ ನಿವಾರಣೆಗಾಗಿ ಪದೇಪದೇ ಡಾಕ್ಟರ ಹತ್ತಿರ ಹೋಗಿ ನಳಿನಿ ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ. ತಾನಾಗಿ ಆದರೆ ಆಗಲಿ ಎಂಬ ಭಾವನೆ, ಕವಿತಾ ಸಾಕು, ಮನೆಗೆ ಬೆಳಕಾಗಿದ್ದಾಳೆ ಎನ್ನಿಸಿತ್ತು ಹೇಮಂತನಿಗೇನೋ. ಅಥವಾ ಆ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿರಲಿಲ್ಲ ಎಂದರೂ ಸರಿ. ಅಲ್ಲದೆ, ಅವನ ಓಡಾಟ ಚಟುವಟಿಕೆಗಳ ಪೂರದಲ್ಲಿ ಜೀವನ ಭರದಿಂದ ಸಾಗುತ್ತಿತ್ತು; ಇಂಥ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಮೇಯವಿರಲಿಲ್ಲ.
ಎಂಟು ಗಂಟೆಯಾಗಿರಬಹುದು ಮನೆಯ ಬೆಲ್ ಸದ್ದುಮಾಡಿತು. ನಳಿನಿ ತಾನೇ ಹೋಗಿ ಬಾಗಿಲು ತೆರೆದಳು. ಬಂದಿದ್ದವನು ದೇವೇಂದ್ರಕುಮಾರ್ “ಓ ಬನ್ನಿ......” ಎನ್ನುತ್ತ ನಳಿನಿ ಅವನನ್ನು ಸ್ವಾಗತಿಸಿ ಒಳಕ್ಕೆ ಹೋದಳು. ಮುಂದಲೆ ಕೂಡಬಾಚಿಕೊಂಡಿಲ್ಲ ಎಂಬ ಸಂಕೋಚದಿಂದ ಹೆಚ್ಚಿಗೆ ಮಾತಾಡಿಸದೆ ಒಳ ಬಂದ ನಳಿನಿ ಕನ್ನಡಿಯ ಮುಂದೆ ನಿಂತು ಬಾಚಣಿಗೆಯಿಂದ ಹಾರಾಡುವ ಕೂದಲುಗಳನ್ನು ತಹಬಂದಿಗೆ ತಂದು, ಹೊಸದಾಗಿ ಒಂದಷ್ಟು ಕುಂಕುಮ ಧರಿಸಿ ಬಂದು ದೇವೇಂದ್ರಕುಮಾರನನ್ನು ಮಾತಾಡಿಸತೊಡಗಿದಳು.
“ಎಷ್ಟು ಬೇಗ ಬಂದಿರಿ....” ಎಂದು ಅನುಮಾನದ ಸ್ವರದಿಂದ ಪ್ರಶ್ನಿಸಿದಳು. ಹೇಮಂತನ ವಿಚಾರವೇನಾದರೂ ಮಾತನಾಡಲು ಬಂದಿದ್ದಾನೆಯೋ ಏನೋ? ಏನು ಸುದ್ದಿ ತಂದಿರಬಹುದು. ತನಗೇನೋ ಅವನು ಹೋದನಂತರ ಎರಡನೆಯ ಪತ್ರಬರೆದಿದ್ದ; ಆದರೆ ಯಥಾಪ್ರಕಾರದ ಒಂದು ಸಾಲು, ಎರಡು ವಾಕ್ಯ ಯಾವೂರಿಂದಲೋ ಏನೋ ಇವನಿಗೇನಾದರೂ ಪತ್ರ ಬರೆದಿರಬಹುದೇ? ತನಗೆ ಹೇಳಲಾಗದ ಸಂಗತಿ ಇವನ ಹತ್ತಿರ ಏಕೆ ಹೇಳುತ್ತಾನೆ ಅಥವಾ ಈತನಿಗೆ ಹೇಳಿದರೆ ನನಗೂ ತಿಳಿಯಬಹುದೆಂದು ಹೇಮಂತನಿಗೆ ಗೊತ್ತಿಲ್ಲವೇ? ತನಗೇ ನೇರವಾಗಿ ಬರೆಯದುದನ್ನು ಇವನಿಗೆ ಬರೆದಿರುವ ಸಂಭವ ಕಡಿಮೆ ಎನ್ನಿಸಿ ಒಂದು ರೀತಿಯಲ್ಲಿ ಸಮಾಧಾನದ ಗಾಳಿಯಾಡಿತು. ಆದರೆ ಕುತೂಹಲ ಧುತ್ತೆಂದು ಹೆಡೆಯೆತ್ತಿತು.
“ನಳಿನಿ..... ಇಲ್ಲಿ ಬಾ” ತಾಯಿ ಕಾಫಿಯ ಲೋಟ ಹಿಡಿದು ಅಡಿಗೆ ಮನೆಯ ಬಾಗಿಲಿನಲ್ಲಿ ನಿಂತು ಕರೆದಾಗ “ಬಂದೆ” ಎನ್ನುತ್ತ ನಳಿನಿ ಅತ್ತ ಸಾಗಿದಳು. ಅವಳು ಬರುವವರೆಗೂ ಆ ಕಡೆ ಈ ಕಡೆ ಕತ್ತಾಡಿಸಿ ಕಣ್ಣಿಗೆ ಬಿದ್ದ ವಸ್ತುಗಳನ್ನು ಪರೀಕ್ಷಿಸುತ್ತ ದೇವೇಂದ್ರಕುಮಾರ್ ಕುಳಿತಿದ್ದ. ಅವಳು ತಂದಿತ್ತ  ಕಾಫಿಯನ್ನು ತೆಗೆದುಕೊಳ್ಳುತ್ತ “ಇದೇನು ಬರೀ ಕಾಫಿ? ಸ್ವೀಟ್ಸ್ ಕೊಡಿಸಬೇಕು” ಎಂದ ಮುಗುಳ್ನಗುತ್ತ. ಬೆಳಿಗ್ಗೆ ಎದ್ದ ತಕ್ಷಣ ದಿಢೀರನೆ ಬಂದು ಏನೇನೋ ಒಗಟಿನ ಮಾತಾಡುತ್ತಿದ್ದಾನಲ್ಲ ಎಂದು ನಳಿನಿಗೆ ಸ್ವಲ್ಪ ಸಿಡುಕು ಬಂತು. ಶರತ್ ಕಾಲದ ಆಕಾಶದಲ್ಲಿನ ಮೋಡದ ಎಳೆಯಂತೆ ಅವಳ ಮುಖದ ಮೇಲೆ ಅಸಮಾಧಾನ ಕಾಣಿಸಿತು.
“ವಿಷಯನಿಜವಾಗಿಯೂ ಗೊತ್ತಿಲ್ಲವಾ?” ಎಂದ.
ಇದ್ಯಾಕೆ ಈ ಮನುಷ್ಯ ಹೀಗೆ ಕಾಡಿಸುತ್ತಾನೆ. ಹರಟೆ ಹೊಡೆಯುವ ಕಾಲವೇ ಇದು. ಇನ್ನೂ ಎಲ್ಲ ಗುಬ್ಬಚ್ಚಿಗಳೂ ಗೂಡುಬಿಟ್ಟಿಲ್ಲ, ಅಷ್ಟು ಬೇಗ ಬಂದಿದ್ದಾನೆ. ಇಲ್ಲಿ ಪತ್ತೇದಾರಿ ಕಾದಂಬರಿ ತರಹ ರಹಸ್ಯವಾಗಿ ಮಾತನಾಡುತ್ತಿದ್ದಾನಲ್ಲ.
“ಇವತ್ತಿನ ಪೇಪರ್ ತಗೊಂಬನ್ನಿ” ಎಂದು ಹೇಳಿ ಬೇಗ ಬೇಗ ಕಾಫಿ ಹೀರಿ, ನಳಿನಿ ಪೇಪರ್ ತರುವ ವೇಳೆಗೆ ಲೋಟ ಕೆಳಗಿಟ್ಟ ದೇವೇಂದ್ರ ಕುಮಾರ್ ಪೇಪರ್ ತೆಗೆದುಕೊಂಡು ಬಿಡಿಸಿ ಮೂರನೇ ಪುಟ ತೋರಿಸಿದ.
“ಓ ಹೌದಾ?” ಈಗ ನಳಿನಿಯ ಮುಖದಮೇಲೆ ಹಿಮಗಾಲದ ಮೊದಲ ಸೂರ್ಯಕಿರಣಗಳಂತೆ ಮಸುಕಾದ ಮಂದಹಾಸ ಕಾಣಿಸಿತು. ಹೇಮಂತನ ಕಾದಂಬರಿ ‘ಸಂಕಲ್ಪ’ಕ್ಕೆಕಳೆದ ವರ್ಷದ ಶ್ರೇಷ್ಠ ಕಾದಂಬರಿಯೆಂದು ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿತ್ತು. ಸಂತಸದ ವಿಚಾರವೇ.
ಕಾದಂಬರಿ ಮುಂದೆ ಬಂದಿತಾದರೂ ಕಾದಂಬರಿಕಾರ ಮರೆಯಾಗಿದ್ದಾನೆ. ಬಹುಮಾನ ಬಂದಿದ್ದಕ್ಕೆ ತಾನು ಸಂತೋಷಪಡಬೇಕೆ, ಹೇಮಂತ ಇನ್ನೂ ಬಾರದಿದುದಕ್ಕೆ ಪರಿತಾಪಪಡಬೇಕೆ? ಮತ್ತೆ ಅವಳ ಮುಖದ ಮೇಲೆ ಮ್ಲಾನತೆಯ ಕರಿಮುಸುಕು.
“ಎರಡು ಸಾವಿರ ರೂಪಾಯಿ ಬೇರೆ, ಹೊಡೆದನಲ್ಲ ಜಾಕ್‍ಪಾಟ್” ಎಂದ ದೇವೇಂದ್ರಕುಮಾರ್. ಬೆಳಿಗ್ಗೆ ಎದ್ದ ತಕ್ಷಣ ಸ್ನೇಹಿತನಿಗೆ ಬಂದ ಬಹುಮಾನದ ವಿಷಯ ಓದಿ ಸಂತೋಷಗೊಂಡಿದ್ದ ಅವನು ಸರ್ರನೆ ಇಲ್ಲಿಗೆ ಬಂದಿದ್ದ. ಹೇಮಂತ ಈ ಹೊತ್ತಿಗೆ ಬಂದಿದ್ದರೂ ಬಂದಿರಬಹುದು ಎಂದು ಅವನೆಣಿಕೆಯಾಗಿತ್ತು. ಆದರೆ ಮನೆಗೆ ಬಂದಾಗ ಅವನಿನ್ನೂ ಬಂದಿಲ್ಲವೆಂದು ಆತನಿಗೆ ಅನ್ನಿಸಿತ್ತು. ಯಾಕೋ ಗೊತ್ತಿಲ್ಲ, ಅವನಿದ್ದಿದ್ದರೆ ಮನೆಯ ಚಹರೆ ಬೇರೆ ರೀತಿಯಿರುತ್ತಿತ್ತೇನೋ. ಅವನ ವಿಷಯಈಗ ನೆನಪಿಗೆ ಬಂದು ದೇವೇಂದ್ರಕುಮಾರ್ “ಯಾವತ್ತು ಬರ್ತಾನಂತೆ” ಎಂದು ಕೇಳಿದ ನಳಿನಿಯ ಕಡೆ ತಿರುಗಿ.
  “ಇನ್ನೊಂದೆರಡು ದಿವಸವಾಗಬಹುದು” ಎಂದಳು ತನಗೆ ಗೊತ್ತಿರುವಂತೆ. ಇನ್ನೇನು ಹೇಳಬೇಕು ಅವಳು ಗಂಡನ ವಿಷಯ, ಆಗುಹೋಗು ತನಗೆ ತಿಳಿಯದೆಂದು ಹೇಳಬೇಕೇ ನಾಚಿಕೆಯಲ್ಲದೆ? ಇನ್ನೂಮೂರು ನಾಲ್ಕು ದಿನ ರಜೆ ಉಳಿದಿರಬಹುದೆಂದು ಲೆಕ್ಕ ಹಾಕಿದ ಅವಳ ಸುಪ್ತ ಮನಸ್ಸು ಈ ಉತ್ತರ ಕೊಡಲು ಪ್ರಚೋದಿಸಿತ್ತು. ಯಾಕೋ ಉತ್ಸಾಹರಾಹಿತ್ಯವೇ ಆಡಳಿತ ನಡೆಸುತ್ತಿದೆ ಇಲ್ಲಿ ಎಂಬ ಭಾವನೆ ದೇವೇಂದ್ರನಿಗೆ ಬಂದು ಹೊರಡಲು ಸಿದ್ಧನಾದ. ಹೆಚ್ಚು ಉಪಚಾರವಿಲ್ಲದೆ, ವಿಶೇಷ ಮಾತುಕತೆಯಿಲ್ಲದೆ ಅವನನ್ನು ನಳಿನಿ ಬೀಳ್ಕೊಟ್ಟಳು.
ಸಂತೋಷದ ಸಂಗತಿಯೂ ಮುದ ಆವರಿಸದಿರಲು ಕಾರಣವೇನು ಎಂಬ ಅನುಮಾನ ಅವನಿಗೆ ಬರಲು ಕಾರಣವಿರಲಿಲ್ಲ. ಹಿನ್ನೆಲೆಯ ಅರಿವಿದ್ದರೆ ತಾನೇ ಹಾಗೆ ಸಂದೇಹ ಬರಲು. ಏನೋ ಎಂದುಕೊಂಡು ಅವನು ಹೊರಟ. ತನ್ನ ಉತ್ಸಾಹಕ್ಕೆ ಅನುಗುಣವಾದ ಉಲ್ಲಾಸ ಕಾಣಿಸದಿದ್ದುದಕ್ಕೆ ಅವನ ಮನಸ್ಸಿನಲ್ಲೆಲ್ಲೋ ಅಸಮಾಧಾನ ಸುಳಿದಾಡಿರಬೇಕು. ಅವನು ಹೋಗುವವರೆಗೆ ತಲೆ ಬಾಗಿಲಿನಲ್ಲಿ ನಿಂತಿದ್ದ ನಳಿನಿ ಒಳಗೆ ಬಂದು ಕುರ್ಚಿಯಲ್ಲಿ ಕುಳಿತು ಪೇಪರ್ ಮತ್ತೆ ತೆಗೆದು ನೋಡಿದಳು. ಪ್ರತಿ ದಿನ ಎದ್ದ ತಕ್ಷಣ ಮುಖ ತೊಳೆದು ಪೇಪರ್ ಓದುವ ಪರಿಪಾಟ ಹೇಮಂತನದು. ಮೊದಲನೆಯ ಡೋಸ್ ಕಾಫಿ ಹೀರುತ್ತ ವರ್ತಮಾನ ಪತ್ರಿಕೆಗಳ ಮೇಲೆ ಕಣ್ಣು ಹಾಯಿಸುತ್ತ ಕುಳಿತಿರುತ್ತಿದ್ದ ಹೇಮಂತನ ಚಿತ್ರ ಅವಳ ಮನಸ್ಸಿನ ಪರದೆಯ ಮೇಲೆ ಮೂಡಿತು. ಯಾವುದಾದರೂ ರಜೆಯಿದ್ದ ಮಾರನೆಯ ದಿನ ಪತ್ರಿಕೆಗಳು ಬಾರದಾಗ ಹೇಮಂತ ಚಡಪಡಿಸುತ್ತಿದ್ದ. ಅಷ್ಟರಮಟ್ಟಿಗೆ ಪೇಪರ್‍ನ ಚಟಕ್ಕೆ ಒಳಗಾಗಿದ್ದ ಅವನು.
ಅವನು ಆಫೀಸಿಗೆ ಹೋಗುವವರೆಗೆ ನಳಿನಿ ತಾಯಿಗೆ ಸಹಾಯ ಮಾಡುತ್ತಿದ್ದಳು. ಅಡಿಗೆಯನ್ನು ತಾಯಿ ಮಾಡಿದರೂ ಹೆಚ್ಚಿನ ಸುತ್ತು ಕೆಲಸ ಅವಳದೇ. ಒಕ್ಕಲಗಿತ್ತಿಗೆ ಪಾತ್ರೆ ಹಾಕುವುದು, ತರಕಾರಿ ಹೆಚ್ಚುವುದು,ಅಕ್ಕಿ ಆರಿಸುವುದು ಇತ್ಯಾದಿ. ಅಲ್ಲದೆ ಗಂಡ-ಮಗಳ ಬಟ್ಟೆಗಳನ್ನು ತೆಗೆದಿರಿಸಿ, ಕವಿತಾಳನ್ನು ಶಾಲೆಗೆ ರವಾನಿಸುವ ಸಲುವಾಗಿ ಪುಸ್ತಕ ಜೋಡಿಸಿ ಬ್ಯಾಗಲ್ಲಿಟ್ಟು, ಅವಳ ಬಾಕ್ಸ್‍ನಲ್ಲಿ ಪೆನ್ಸಿಲ್ ಜೀವಿದ್ದು ಇದೆಯೇ, ಹೋಂವರ್ಕ್ ಮಾಡಿದ್ದಾಳೆಯೇ ಇತ್ಯಾದಿ ವಿವರಗಳನ್ನು ಪರಿಶೀಲಿಸುವ ಹೊಣೆಯೂ ಅವಳದೇ. ತಂದೆ-ಮಗಳಿಗೆ ಬಡಿಸಿ ಅವರು ಹೋದ ಮೇಲೆ ನಿಧಾನವಾಗಿ ತಾನು ಇನ್ನೊಂದಷ್ಟು ಕಾಫಿ ಹೀರುತ್ತ ಪೇಪರ್ ಮೇಲೆ ಕಣ್ಣಾಡಿಸುವ ರೂಢಿ ಅವಳದು.
  ಮೂರನೆಯ ಪುಟಕ್ಕೇ ದೇವೇಂದ್ರ ತೋರಿಸಿದ ಕಾಲಂನಲ್ಲಿ ತನ್ನ ಕಣ್ಣು ಇಟ್ಟು ನಳಿನಿ ಓದತೊಡಗಿದಳು. ಪ್ರತಿವರ್ಷ ಕೊಡುವಂತೆ ವಿವಿಧ ಸಾಹಿತ್ಯಪ್ರಕಾರಗಳಿಗಿಂತ ಕಾದಂಬರಿ ಹೆಚ್ಚು ಜನಪ್ರಿಯವಾದ್ದರಿಂದಲೋ ಏನೋ ಅಕಾಡೆಮಿ ಕೂಡ ಕಾದಂಬರಿಯನ್ನು ಪಟ್ಟಿಯಲ್ಲಿ ಮೊದಲ ಹೆಸರಾಗಿ ಪ್ರಕಟಿಸಿತ್ತು. ‘ಸಂಕಲ್ಪ’ ಲೇಖಕರು ಹೇಮಂತ್, ಅವರಿಗೆ ಇದೇನು ಹೊಸದಲ್ಲವಲ್ಲ ಅಂದುಕೊಂಡಳು ನಳಿನಿ, ಮೂರುವರ್ಷದ ಹಿಂದೆಯೂ ಒಂದು ಬಹುಮಾನ ಬಂದಿತ್ತು. ಆದರೆ ಸಾಹಿತ್ಯ ಅಕಾಡೆಮಿಯದಲ್ಲ, ಯಾವುದೋ ಪತ್ರಿಕೆ ನಡೆಸಿದ ಕಾದಂಬರಿ ಸ್ಪರ್ಧೆಯ ಬಹುಮಾನ. ಹಾಗಾದರೆ ಹೇಮಂತನ ಕಾದಂಬರಿಗಳು ಉತ್ತಮವಾದವು ಎಂಬ ಭಾವನೆ ಅವಳಲ್ಲಿ ಸುಳಿದು ತನ್ನ ಹೇಮಂತ ಎಂಬ ಹೆಮ್ಮೆ ಎದೆಯುಬ್ಬಿಸಿತ್ತು.
ಇನ್ನೊಮ್ಮೆ ಕಾದಂಬರಿಯ ಹೆಸರು ನೋಡಿದಳು ’ಸಂಕಲ್ಪ’. ನಿಧಾನವಾಗಿ ಪೇಪರನ್ನು ಕೈಲಿ ಹಿಡಿದುಕೊಂಡು ಮೇಲೆದ್ದ ನಳಿನಿ ರೂಮಿಗೆ ಹೋಗಿ ಪುಸ್ತಕಗಳ ಜೊತೆಗೆ ಜೋಡಿಸಿ ತಕ್ಷಣ ಸಿಗಲು ಅನುಕೂಲವಾಗುವಂತೆ ಒಟ್ಟಿಗೆ ಇರಿಸಿದ್ದ ಹೇಮಂತನ ಕಪಾಟಿನ ಒಂದು ಮೂಲೆಯಲ್ಲಿ ಒಂದೊಂದಾಗಿ ಪುಸ್ತಕಗಳ ಪಕ್ಕಕ್ಕೆ ಅಚ್ಚಿಸಿದ್ದ ಹೆಸರನ್ನು ದುತ್ತ ಬೆರಳಿನಿಂದ ಅತ್ತ ಸರಿಸಿದ ನಳಿನಿ ‘ಸಂಕಲ್ಪ’ ಸಿಕ್ಕಿದಾಗ ಅದನ್ನೆತ್ತಿಕೊಂಡಳು. ಪೇಪರನ್ನು ಮೇಜಿನ ಮೇಲೆಸೆದುನಿಂತುಕೊಂಡೇ ಆ ಕಾದಂಬರಿಯನ್ನುಅತ್ತಿತ್ತ ತಿರುಗಿಸಿ ನೋಡಿದಳು. ಒಂದು ಹೆಣ್ಣಿನ ಎದ್ದು ಕಾಣುವ ಹಿನ್ನೆಲೆಯನ್ನು ಏನೇನೋ ಡಿಸೈನ್ ಬಿಡಿಸಿದ್ದ ರಕ್ಷಾಕವಚದ ಮೇಲುಭಾಗದಲ್ಲಿ ದೊಡ್ಡದಾಗಿ ಕಾದಂಬರಿಯ ಹೆಸರಿತ್ತು. ಕವಚದ ಕೆಳಭಾಗದ ಬಲತುದಿಯಲ್ಲಿ ಹೇಮಂತನ ಹೆಸರು ಎದ್ದು ಕಾಣುವ ಹಾಗೆ ಹಿನ್ನೆಲೆಗಿದ್ದ ಬಣ್ಣ ಕಾಂಟ್ರಾಸ್ಟ್ ಬಣ್ಣದಲ್ಲಿ ಬರೆದಿತ್ತು. ಪುಸ್ತಕದ ಬೆನ್ನಿಗೆ ಅದರ ಬಗ್ಗೆ ಪರಿಚಯಾತ್ಮಕವಾದ ನಾಲ್ಕುಮಾತುಗಳು ಮುದ್ರಿತವಾಗಿದ್ದವು.
ಸಂಕಲ್ಪದ ಮೊದಲ ಪುಟವನ್ನು ತಿರುಗಿಸಿ ನೋಡಿ ಮೊದಲ ಪ್ಯಾರಾ ಓದಿದಳು, ಕಸಿವಿಸಿಯಾಯಿತು. ಸಾವಿನಬಗ್ಗೆ ಕಾದಂಬರಿಯ ನಾಯಕಿ ತನ್ನ ಮನಸ್ಸಿನಲ್ಲಿ ಭಾವನೆಗಳನ್ನು ಪರೀಕ್ಷಿಸುವ ವಿವರಣೆಯಿತ್ತು ಅಲ್ಲಿ. ಹೌದು, ತಾನೂ ಅದನ್ನು ಓದಿದ ನೆನಪು ನಳಿನಿಗೆಈಗ ಸ್ಪಷ್ಟವಾಗತೊಡಗಿತು: ಸಾವು-ಕಾಮ ಇವುಗಳು ಪರಸ್ಪರ ಅನ್ಯೋನ್ಯ ಸಂಬಂಧ ಹೊಂದಿವೆಯೆಂಬಂತೆ ಕತೆ ಹೆಣೆದಿದ್ದ ಕಾದಂಬರಿಯದು. ಜೀವನದಲ್ಲಿ ಅತ್ಯಂತ ಖಾಸಗಿಯಾದ ಹಾಗೂ ಆನಂದದಾಯಿಯಾದ ಕಾಮ ಹೇಗೆ ಜೀವನದ ಅತ್ಯಂತ ದುಃಖಕರ ಸನ್ನಿವೇಶವನ್ನು ಸೃಷ್ಟಿಸಬಹುದು, ಹೇಗೆಅದು ಸಾವಿನ ಇನ್ನೊಂದು ದಡವಾಗುವುದು ಎಂಬುದೇ ಅಲ್ಲಿನ ಕೇಂದ್ರ ಭಾವನೆ. ಮಾದ್ರಿ ಪಾಂಡುವಿನ ಕತೆಯನ್ನು ಕಾದಂಬರಿಯಲ್ಲಿ ಒಂದು ಭಾಗ ಒಳಗೊಂಡಿದ್ದು ಅವಳ ನೆನಪಿಗೆ ಬಂತು. ಕಾದಂಬರಿಯ ನಾಯಕ-ನಾಯಕಿಯರ ಜೀವನ ಕೂಡ ಅವರಿಬ್ಬರ ಕಾಮಸಂಬಂಧ ಬಿಗಡಾಯಿಸಿದ್ದರಿಂದ ಪರಸ್ಪರ ದುಃಖಕಾರಿಯಾದ ಕತೆ ಅದು. ಕಾದಂಬರಿಯಲ್ಲಿ ಸಾವು ಘಟಿಸುವುದಿಲ್ಲ, ನಿಜ ಆದರೆ ಕಾಮದ ಬೆನ್ನಲ್ಲಿ ಸಾವು ಸರ್ಪಗಾವಲಿರುವ ಅನುಭವವಾಗುತ್ತದೆ. ಕಾದಂಬರಿಯ ಬಗ್ಗೆ ಪೇಪರ್‍ಗಳಲ್ಲಿ ಒಂದು ವಿಮರ್ಶೆಯನ್ನೂ ಹೇಮಂತ ನಳಿನಿಗೆ ತೋರಿಸಿದ್ದ. ತುಂಬ ಪ್ರಸಿದ್ಧರೆನಿಸಿಕೊಂಡ ವಿಮರ್ಶಕರು ಬಹಳ ಒಳ್ಳೆಯ ಮಾತುಗಳನ್ನು ‘ಸಂಕಲ್ಪ’ದ ಬಗ್ಗೆ ಬರೆದಿದ್ದರು. ಅಲ್ಲಿದ್ದ ವಿಶ್ಲೇಷಣೆ ತಾನಾಗಿ ನಳಿನಿಗೆ ಹೊಳೆಯುವಷ್ಟು ಸೂಕ್ಷ್ಮತೆ ಅವಳದಲ್ಲ, ಆದರೆ ಅದನ್ನು ಓದಿದ ಮೇಲೆ ಅದನ್ನೆಲ್ಲ ಕಾದಂಬರಿಯಲ್ಲಿ ಗುರುತಿಸಲು ಅವಳು ಪ್ರಯತ್ನಿಸಿದ್ದಳು.
ಅಲ್ಲಲ್ಲಿ ಕಣ್ಣಾಡಿಸಿ ಪುಸ್ತಕವನ್ನು ಮುಚ್ಚಿದಾಗ ಯಾಕೋ ಬೆಳಕು ತೂರಿ ಬರುತ್ತಿರುವ ದಿಡ್ಡಿಬಾಗಿಲನ್ನು ಇದ್ದಕ್ಕಿದ್ದಂತೆ ಧಡಾರೆಂದು ಮುಚ್ಚಿದಂತೆ ಅವಳಿಗೆ ಅನುಭವವಾಯಿತು. ಪುಸ್ತಕವನ್ನು ತೆಗೆದುಕೊಂಡು ಅಡುಗೆ ಮನೆಯಲ್ಲಿದ್ದ ವಿಶಾಲಾಕ್ಷಮ್ಮನ ಹತ್ತಿರ ಬಂದಳು.
“ಅಮ್ಮಾ ನೋಡು, ಅವರಈ ಪುಸ್ತಕಕ್ಕೆ ಬಹುಮಾನ ಬಂದಿದೆ” ಎನ್ನುತ್ತ ಅದನ್ನು ಅವರೆಡೆಗೆ ಚಾಚಿದಳು.ಇವಳು ಏನು ಹೇಳುತ್ತಿದ್ದಾಳೆಂದು ತಕ್ಷಣ ಅರ್ಥವಾಗದ ಅವರು “ಏನು?” ಎಂದರು ಇವಳೆಡೆ ತಿರುಗಿ. ನಳಿನಿ ಮತ್ತೆ ತಾನೆಂದ ಮಾತನ್ನು ಹೇಳಿದಾಗ ಅವರು ಪುಸ್ತಕ ಹಿಡಿದು ತಿರುಗಿಸಿ ನೋಡಿದರು. ಪ್ರಾಯಶಃ ಕನ್ನಡಕವಿಲ್ಲದೆ ಅವರಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲವೇನೋ. ಅವರು ಒಂದೆರಡು ಬಾರಿ ಅಳಿಯನ ಪುಸ್ತಕಗಳತ್ತ ಕಣ್ಣು ಹಾಯಿಸಿದವರೇ, ಅವರಿಗೆ ಅದರಲ್ಲಿ ರುಚಿ ಹತ್ತಿರಲಿಲ್ಲ ಅಥವಾ ರುಚಿ ಕಾಣುವ ವಯಸ್ಸು ಮೀರಿತ್ತೇನೋ, ಇಲ್ಲ ರುಚಿ ಕಾಣುವ ಮನೋಭಾವವೇ ಅವರದಲ್ಲವೆಂದು ಕಾಣುತ್ತದೆ.
“ಸಂತೋಷಾಮ್ಮ” ಎಂದು ಅವರ ಬಾಯಲ್ಲಿ ಹೇಳಿದರೂ ನಿಟ್ಟುಸಿರು ಹೊರಬಿದ್ದಿತು. ಪರಿಸ್ಥಿತಿಯಲ್ಲಿ ಅವರು ಸಿಕ್ಕಿದವರಲ್ಲವೇ ತಾಯಿ-ಮಗಳು ಮೂಕವಾಗಿ ನಿಂತಿರುವಾಗಲೇ ಕವಿತಾ ಪ್ರವೇಶಿಸಿದ್ದರಿಂದ ಮೂಕನು ವಾಚಾಳಿಯಾಗುವ ಪವಾಡ ಸಂಭವಿಸಿತು, ಅರ್ಥಾತ್ ಮಾತು ಮತ್ತೆ ಚೇತನಗೊಂಡಿತು.  
ರಾತ್ರಿ ಬೆಡ್‍ಲೈಟ್‍ನ ಮಿತವಾದ ಬೆಳಕಲ್ಲಿಅಂ ಗಾತಳಾಗಿ ಮಂಚದ ಮೇಲೆ ಕವಿತಾಳ ಪಕ್ಕದಲ್ಲಿ ಮಲಗಿದ್ದ ನಳಿನಿಗೆ ಸೊಳ್ಳೆಪರದೆಯಂತೆಯೇ ಎಲ್ಲವನ್ನು ಆವರಿಸಿದ್ದ ಆವರಣದ ಅನುಭವ ಮನಸ್ಸಿಗಾಯಿತು. ಗೋಡೆಯ ಕಡೆ ನೋಡಿದಾಗ ಮಿಕ್ಕ ಕಡೆ ಮಂದಪ್ರಕಾಶವನ್ನು ಹರಡಿದ್ದರೂ ಬೆಡ್ಡಲೈಟಿನ ನೆರಳು ಗೋಡೆಯ ಮೇಲೆ ನೀಳವಾಗಿ ವಿಚಿತ್ರ ಆಕಾರದಲ್ಲಿ ಚಾಚಿಕೊಂಡಿತ್ತು. ಕಿಟಕಿಯ ಕಡೆ ಅವಳು ಕಣ್ಣು ಹೊರಳಿಸಿದಾಗ ಹೊರಗೆ ಕತ್ತಲೆ ಇಡೀ ಮನೆಯನ್ನು ಸುತ್ತುಗಟ್ಟಿ ಹೊರಗೆ ಯಾರೂ ಹೋಗದಂತೆ ತಡೆಯುತ್ತಿದ್ದ ರೀತಿ ಗೋಚರವಾಯಿತು.
ಹೇಮಂತ ತಾನು ಹೋಗುವ ಮುನ್ನಾ ದಿನದ ರಾತ್ರಿ ತನ್ನನ್ನು ತನ್ನ ದಾಳಿಗೆ ಒಳಗುಮಾಡಿಕೊಂಡಿದ್ದದ್ದು ನೆನಪಾಯಿತು. ತಟಕ್ಕನೆ ಸಂಕಲ್ಪ ಕಾದಂಬರಿಯಲ್ಲಿ ದೀರ್ಘವಾಗಿ ವಿವರಿಸಿದ್ದ ಮಾದ್ರಿ ಪಾಂಡುವಿನ ಪ್ರಸಂಗವೂ ನೆನಪಾಯಿತು. ಪಾಂಡುವೂ ಹೀಗೆಯೇ ಮಾದ್ರಿಯ ಮೇಲೆ ಆಕ್ರಮಣವನ್ನು ನಡೆಸಿದ್ದನೇ? ಥಟ್ಟನೆ ಅದರಒಟ್ಟುಪರಿಣಾಮಅವಳ ಸುಪ್ತಪ್ರಜ್ಞೆಯಲ್ಲಿ ಹೊಳೆದು ಎದೆಯಲ್ಲಿ ನಡುಕವುಂಟಾಯಿತು, ಕಾಮ-ಸಾವು ಇವುಗಳ ಅನ್ಯೋನ್ಯ ಸಂಬಂಧ ಹೇಗೆ ಮೂರ್ತೀಕರಿಸುತ್ತದೋ ಏನೋ ಎನ್ನುವಂತಹ ಅತ್ಯಂತ ಅಸ್ಪಷ್ಟ ಭಯ ಅವಳನ್ನಾವರಿಸಿತು. ಪಕ್ಕದಲ್ಲಿ ಮುದುರಿ ಮಲಗಿದ್ದ ಕವಿತಾಳ ಸಪೂರ ದೇಹದ ಮೇಲೆ ತಾಯ್ತನದ ಬೆರಳುಗಳು ಪ್ರೀತಿಯನ್ನು ಮಿಡಿದವು. ಏನೇನೊ ಆಲೋಚನೆಗಳು ತನ್ನ ತಲೆಯನ್ನು ಪ್ರವೇಶಿಸದಿರಲಿ ಎನ್ನುವಂತೆ ಮುಸುಕು ಹಾಕಿಕೊಂಡಾಗ ಬೆಡ್‍ಲೈಟ್‍ನ ಮಂದಪ್ರಕಾಶವೂ ಹೋಗಿ ಪೂರ್ತಿ ಕತ್ತಲೆಯಾವರಿಸಿತು.
* * *
ದುರ್ಗದ ಬಸ್‍ಸ್ಟ್ಯಾಂಡಲ್ಲಿ ನಿಂತುಕೊಂಡು ಯೋಚನಾಮಗ್ನನಾಗಿದ್ದ ಹೇಮಂತ. ಅವನ ಕೈನಲ್ಲಿನ ವಿಐಪಿ ಸೂಟ್‍ಕೇಸ್ ಅವನು ತಲೆಯಲ್ಲಿ ಹೊತ್ತ ಭಾರಕೈಗೆ ಇಳಿದು ಬಂದಂತಿತ್ತು. ಕಪ್ಪಾದ ಸೂಟ್‍ಕೇಸ್ ಅಲ್ಲಲ್ಲಿ ಗೀಚು ಗಾಯದಿಂದ ವಿಕಾರವಾಗಿತ್ತು, ಮೆತ್ತಿಕೊಂಡಿದ್ದ ಕೊಳೆ ಬೇರೆ. ಹೇಮಂತನ ಮುಖ ಇನ್ನೇನು? ಬೆರಣಿ ಮೆತ್ತಿ ವಿಕಾರವಾದ ಗೋಡೆಯಂತೆ ಗಡ್ಡ ಕುರುಚಲಾಗಿ ಬೆಳೆದಿತ್ತು. ಕಣ್ಣುಗಳಂತೂ “ಇದು ಪಾತಾಳಕ್ಕೆ ಬಾಗಿಲ್” ಎಂದು ವೈಶಂಪಾಯನ ಸರೋವರವನ್ನು ಪಂಪ ವರ್ಣಿಸುತ್ತಾನಲ್ಲ, ಹಾಗೆ, ಆಳವಾಗಿ ಕತ್ತಲನ್ನು ಹುಡುಕಿಕೊಂಡು ಹೋಗುವಂತಿದ್ದವು.
ಇಲ್ಲಿ ಸಾಕೆನಿಸಿತ್ತು, ಅಲ್ಲದೆ ಯಾರಾದರೂ ಸಿಕ್ಕಿಬಿಟ್ಟರೆ ಗತಿಯೇನು ಎಂದೂ ಅವನಿಗೆ ಅನ್ನಿಸಿತು. ಎರಡು ಮೂರು ದಿನ ಇಲ್ಲಿ ಓಡಿಯಾಡಿಯಾಗಿದೆ, ಬೇರೆಲ್ಲಿ ಈ ಊರಲ್ಲಿ ತಿರುಗಾಡುವುದು ಎಂದು. ಪ್ರವಾಸಿಗನಂತೆ ಇಲ್ಲಿ ನೋಡಬೇಕಾದ್ದನ್ನೆಲ್ಲ ನೋಡಿದ್ದಾನೆ. ಆದರೆ ಅವನ ಪ್ರವಾಸದ ರೀತಿ ಬೇರೆ, ಭಿನ್ನ. ಗುರಿಯಿಲ್ಲ, ನೋಡಬೇಕಾದುದನ್ನು ನೋಡಬೇಕೆಂಬುದಕ್ಕಾಗಿ ನೋಡುತ್ತಿಲ್ಲ. ಮುಂದೆ ಎಲ್ಲಿಗೆ ಎಂದು ತಿಳಿಯದಿದ್ದರೂ ಹೊರಟಿದ್ದಾನೆ. ಯಾವೂರಾದರೂ ಆದೀತು. ಆದರೆ ತೀರ ಹಳ್ಳಿಯೊಂದಕ್ಕೆ ಹೋಗಿ ಅಲ್ಲಿ ಮಲಗುವುದೆಲ್ಲಿ, ಹೋಟೆಲ್ಲೇ ಇರದಿದ್ದರೆ ಊಟವೆಲ್ಲಿ, ಅಂಗೈಯಗಲದ ಊರಲ್ಲಿ ತಿರುಗಾಡುವುದೆಲ್ಲಿ. ಹಾಗಾಗಿ ಸುಮಾರಾದ ದೊಡ್ಡ ಊರು ಅಥವಾ ನೋಡಲು, ತಿರುಗಾಡಲು ಏನಾದರೂ ಇದೆ ಎಂಬ ನೆಪವಿರುವ ಊರು ತನ್ನ ಗುರಿಯಾಗಿದೆ ಆತನಿಗೆ. ಕರ್ನಾಟಕದ ವಿವಿಧ ಸ್ಥಳಗಳನ್ನು ನೆನಪಿಸಿಕೊಂಡಿದ್ದರೆ ಸಾಲಾಗಿ ಸಾಲಂಕೃತ ಕನ್ಯೆಯರಂತೆ ಊರುಗಳು ಸೌಂದರ್ಯದಲ್ಲಿ ಒಂದನ್ನೊಂದು ಮೀರಿಸಿ ನಿಲ್ಲುತ್ತಿದ್ದವು. ಆದರೆ ಅವನಿಗೆ ಬೇಕಾದುದು ಅದಲ್ಲ. ತನ್ನನ್ನು ಯಾರೂ ಗುರುತಿಸದ, ಮಾತನಾಡಿಸದ, ತನ್ನನ್ನು ಕಬಳಿಸಿ ವ್ಯಕ್ತಿತ್ವವನ್ನು ಒರೆಸಿಹಾಕಬಲ್ಲ ಸ್ಥಳಗಳು ಅವನಿಗೆ ಬೇಕಾಗಿದ್ದುದು.
ದಾವಣಗೆರೆಗೆ ಹೋಗುವ ಕೆಲವು ಬಸ್ಸುಗಳಿದ್ದವು. ಆದರೆಅಲ್ಲಿ ಹೋಗಿ ಮಾಡುವುದೇನು ಅನ್ನಿಸಿತು. ದಾಂಡೇಲಿಗೆ ಹೋಗುವ ಒಂದು ಎಕ್ಸ್‍ಪ್ರೆಸ್ ಬಸ್ ಇನ್ನೇನು ಹೊರಡುವುದರಲ್ಲಿತ್ತು. ಬೆಂಗಳೂರಿನಿಂದ ಬಂದಿದ್ದ ಬಸ್ ಅದು: ಬೆಂಗಳೂರು - ದಾಂಡೇಲಿ ಎಂದು ದೊಡ್ಡದಾಗಿ ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡ್ ಇವನ ಕಡೆ ಕಣ್ಸನ್ನೆ ಮಾಡುತ್ತಿತ್ತು. ಬೆಂಗಳೂರು ಕಣ್ಣಿಗೆ ಬಿದ್ದಾಗ ಅವನಿಗೆ ಕಸಿವಿಸಿಯಾಯಿತು. ಅಪರಾಧ ಪ್ರಜ್ಞೆಯುಂಟಾಯಿತು. ಯಾವುದೋ ಕಾಲದ ವೈರಿ ಇದ್ದಕ್ಕಿದ್ದಂತೆ ತನ್ನೆದುರು ನಿಂತಂತೆ ಭಾಸವಾಯಿತು. ಹಾಗೆಯೇ ತನ್ನ ಜೀವವನ್ನೇ ಮುಷ್ಟಿಯಲ್ಲಿ ಆ ವೈರಿ ಹಿಡಿದಿದ್ದಾನೆ ಎಂದು ಅನ್ನಿಸಿತು. ಬೆಂಗಳೂರೆಂದರೆ ಏನು? ನಳಿನಿ - ಕವಿತಾ ಮೂರಕ್ಷರಗಳ ಎರಡು ಹೆಸರುಗಳಷ್ಟೇ. ಆದರೆ ಆ ಸಂಗೀತದ ಸೂತ್ರ ಬಲೆಗಟ್ಟಿರುವ ಲಕ್ಷಾವಧಿ ವಿಕಾರಸ್ವರಗಳ ಹಿಮ್ಮೇಳ? ದೀರ್ಘವಾದ ಶ್ವಾಸ ಅವನ ಪ್ರಾಣವನ್ನೇ ಹಾರಿಸಿಕೊಂಡು ಹೋಗಿಬಿಡಬಹುದೇನೋ ಎಂಬಂತೆ ಹೊರಬಂತು.
ತನ್ನ ತಲೆಯಲ್ಲಿ ತುಂಬಿದ್ದ ತಿಮಿಂಗಿಲಗಳಿಂದ ಪಾರಾಗಲು ಹೇಮಂತ ಬೇರೊಂದೆಡೆ ಕಣ್ಣು ಹಾಯಿಸಿದ. ಇನ್ನೊಂದು ಬಸ್ಸು: ಈ ಸಲ, ಖಾಸಗೀ ಬಸ್ಸು,ಹಸುರು ಬಣ್ಣದ್ದುಬೋರ್ಡ್ ನೋಡಿದ: ಚಿತ್ರದುರ್ಗ- ಶಿವಮೊಗ್ಗ. ಸೀಟುಗಳು ಬೇರೆ ಇದ್ದವು. ಅದರೆಡೆಗೆ ಸಾಗಿದ. ಆಗಬಹುದು, ಬರಿಯ ಹಾಳೆಯ ಮೇಲೆ ಯಾವ ಗೆರೆಯಾದರೇನು? ಅರ್ಥವಂತಿಕೆಯಿರಬೇಕೆಂದರೆ ನಿರ್ದಿಷ್ಟ ಗೆರೆಗಳನ್ನು ಬರೆಯಬೇಕೇ ಹೊರತು, ಗೀಚುವುದಾದರೆ ಹೇಗಾದರೂ ಸರಿಯೇ.
ಬಸ್ ಹತ್ತಿ ವಿಚಾರಿಸಿದ, ಹೊರಡಲು ಹದಿನೈದು ನಿಮಿಷಗಳಿದ್ದವು, ಆರಾಮವಾಗಿ ಕಿಟಕಿಯ ಸೀಟು ಸಿಕ್ಕಿತು. ಹಿಂದೊಮ್ಮೆ ಶಿವಮೊಗ್ಗೆಗೆ ನಳಿನಿಯ ಜೊತೆ ಹೋಗಿದ್ದ. ಮದುವೆಯಾದ ಹೊಸತು ಅದು. ಹನಿಮೂನು ಹನಿಸನ್ನು ಇವುಗಳ ಆಧುನಿಕ ವ್ಯಕ್ತಿಯಲ್ಲ ಆತ ಅಥವಾ ನಳಿನಿ. ಯಾರದೋ ಮದುವೆಗೆಂದು ಹೋಗಿದ್ದುದು. ಭರ್ರೆಂದು ಗಾಳಿ ಬೀಸುತ್ತ ಪುಟಾಣಿ ಹುಡುಗರಂತೆ ಓಡುತ್ತಿದ್ದ ಬಸ್ಸಲ್ಲಿ ಕಿಟಕಿಯ ಬಳಿ ನಳಿನಿ. ಪಕ್ಕದಲ್ಲಿ ತಾನು ಹೊರನಿಂದ ಒಳಗೆ ಕಿಟಕಿಯ ಮೂಲಕ ತೂರಿಬರುತ್ತಿದ್ದ ಗಾಳಿಅವಳ ಮುಂಗೂದಲುಗಳನ್ನು ತನಗಿಷ್ಟ ಬಂದಂತೆ ಕುಣಿಸುತ್ತಿತ್ತು. ಅವಳ ಮೇಲೆ ಬೀಸಿ ತನ್ನ ಬಳಿ ಬರುತ್ತಿದ್ದ ಗಾಳಿ ಇನ್ನಷ್ಟು ಆಹ್ಲಾದಕಾರಿಯಾಗಿತ್ತು. ಹೇಮಂತನಿಗೆ ಬಸ್ ಪಕ್ಕಕ್ಕೆ ತಿರುಗಿದಾಗ ಅವಳ ಮೇಲೆ ಧಡಕ್ಕನೆ ಬೀಳುತ್ತಿದ್ದ ತಾನು, ಈ ಕಡೆ ತಿರುಗಿದಾಗ ತನ್ನ ಮೇಲೆ ಅವಳ ಇಡೀ ಅಸ್ತಿತ್ವ ಮುಗುಚಿ ಬೀಳುವ ಹಾಗೆ ಒರಗುತ್ತಿದ್ದ ನಳಿನಿ. ಪ್ರಪಂಚದ ಸಾರವೆಲ್ಲ ಆ ಎರಡು ಸೀಟುಗಳಲ್ಲಿ ಕೂತ ಹಾಗಿದ್ದವು.
ನಳಿನಿಯ ನೆನಪು ಕಾಡಿಸಿದಾಗ ಅವನಿಗೆ ಆಶ್ಚರ್ಯವಾಯಿತು. ಅವಳ ನೆನಪು ನನ್ನನ್ನು ಕಾಡಿರಬೇಕೆ? ದೇಹದ ಸಾರವೆಲ್ಲ ಹೊರಚೆಲ್ಲಿದಾಗ ಗ್ಲೂಕೋಸ್‍ನ ಹನಿಹನಿ ಚೈತನ್ಯ ಸಂಚಾರ ಮಾಡಿಸಿದಂತೆ ಉಲ್ಲಾಸವುಕ್ಕಿಸುತ್ತಿದ್ದ ನಳಿನಿಯ ನೆನಪು ತನ್ನನ್ನೇಕೆ ಕಾಡಿಸುತ್ತಿದೆ ಎನ್ನಿಸಿ ಅವನಿಗೆ, ತನಗೇನೋ ರೋಗ ಬಂದಿದೆ ಎನ್ನಿಸಿತು. ಮಗು ಸ್ಲೇಟಿನ ಮೇಲೆ ಪರಪರಗೀಚಿ ಆನಂದಿಸುವಾಗ, ಕಲ್ಲು ಬಳಪದ ಗೀಚು ಕಿರಕಿರನೆ ಕಿವಿಗಳಿಗೆ ತೊಂದರೆಯುಂಟುಮಾಡಿದಂತೆ ಆಲೋಚನೆಗಳು. ಇನ್ನೂ ಹದಿನೈದು ನಿಮಿಷಗಳಿವೆಯಂತಿಲ್ಲ ಬಸ್ ಹೊರಡಲು ಎಂದು ಅವನ ಮನಸ್ಸು ಪಲಾಯನದ ಉಪಾಯ ಸೂಚಿಸಿತು. ಕೂತಿದ್ದ ಹೇಮಂತ ಕಿಟಕಿಯ ಕೆಳಗಿದ್ದ ಬಸ್ ಗೋಡೆಗೆ ತನ್ನ ಸೂಟ್‍ಕೇಸ್ ಒರಗಿಸಿಟ್ಟು ಹಿಂದಿನ ಸೀಟಲ್ಲಿ ಕೂತಿದ್ದ ಗೃಹಸ್ಥರ ಕಡೆ ತಿರುಗಿ “ಒಂದು ನಿಮಿಷ ಸಾರ್. ಒಂದು ತೊಟ್ಟು ಕಾಫಿ ಕುಡಿದು ಬರ್ತೀನಿ, ನನ್ನ ಸೂಟ್‍ಕೇಸ್ ಕಡೆಗಮನವಿರಲಿ” ಎಂದ. “ಹೋಗಿಬನ್ನಿ ಸಾರ್, ಪರವಾಯಿಲ್ಲ”ಎಂದು ಅವರು ಹೇಳಿದಾಗ ಬಸ್ಸಿನಿಂದಿಳಿದು ಹೋಟೆಲ್ ಕಡೆ ಕಾಲು ಹಾಕಿದ.
 ಕಾಫಿ ಕುಡಿದು ಬಂದರೂ ಇನ್ನೂ ಐದು ನಿಮಿಷಗಳಿದ್ದವು. ರಸ್ತೆಯ ಬದಿಯಲ್ಲೇ ನಿಂತು ಆಚೆ-ಈಚೆ ನೋಡತೊಡಗಿದ. ಜನಗಳ ಓಡಾಟ. ತರಾತುರಿ, ವಿವಿಧ ವಸ್ತುಗಳು, ವಾಹನಗಳು - ಎಲ್ಲ ಅಪರಿಚಿತ ಲೋಕದ ನಿರ್ಜೀವ ಬೊಂಬೆಗಳಂತೆ ಅವನಿಗೆ ತೋರಿದವು. ಬರೀ ಜನಜಂಗುಳಿ - ತನ್ನಪರಿಚಯದ ವ್ಯಕ್ತಿಗಳಿಲ್ಲ. ಪರಿಚಯವೆಂದರೆ ಈಗ ಅವನಿಗೆ ಗಾಬರಿ ಬೇರೆ. ಅಕಸ್ಮಾತ್ ಯಾರಾದರೂ ನೀವು ಯಾರು ಎಂದರೆ ಏನು ಹೆಸರು ಹೇಳಬೇಕು ಎಂದು ಆತನಾಗಲೇ ನಿರ್ಧರಿಸಿದ್ದ. ತಾನೀಗ ಸಿ.ಕೆ. ಮಾಥ್ಯೂಸ್. ಒಂದು ಸೆಕೆಂಡರಿ ಶಾಲೆಯಲ್ಲಿ ಟೀಚರ್, ಗೋವೆಯಲ್ಲಿ. ತಾನು ಕರ್ನಾಟಕದವನೇ. ಊರಿಗೆ ಹೋಗಿ ಮತ್ತೆ ಗೋವೆಗೆ ಹೋಗುವ ಮಾರ್ಗದಲ್ಲಿದ್ದೇನೆ. ಹೊಸ ಮುಖವಾಡ ಸುರಕ್ಷಿತವಾದದ್ದು, ಅಪಾಯಗಳಿಂದ ರಕ್ಷಿಸುವಂಥಾದ್ದು. ಲೋಕದಲ್ಲಿ ಸ್ವಂತ ಮುಖಕ್ಕಿಂತ ಮುಖವಾಡವೇ ಎಷ್ಟೋ ಸಲ ಮೇಲೆನ್ನಿಸಿ ಅವನಿಗೆ ನಗುಬಂದಿತ್ತು. ಆದರೆ ಆ ನಗುವೆಂತಹುದು “ಹುಣ್ಣೆಮೆ ಚಂದಿರನ ಹೆಣ ತೇಲಿತೋ ಮುಗಿಲಾಗ ಹಗಲ!” ಅನ್ನುವಂತಹುದು.
ಬಸ್‍ ಸ್ಟಾರ್ಟ್ ಆದಾಗ ಹತ್ತಿ ಕುಳಿತ ಹೇಮಂತನಿಗೆ ಬಸ್ ವೇಗಕ್ಕನುಗುಣವಾಗಿ ಹಿಂದಕ್ಕೆ ಓಡಿ ಬಂದು ಆವರಿಸುತ್ತಿದ್ದ ಗಾಳಿ ಹಾಯೆನಿಸಿತು. ಅದೂ ಮಧ್ಯಾಹ್ನ ಒಂದೂವರೆಯ ಸಮಯದ ಬೇಗೆಯಲ್ಲಿ ಗಾಳಿ ಅಪೇಕ್ಷಣೀಯ ಅತಿಥಿ. ಬುರ್ ಎಂಬ ಶ್ರುತಿಯೊಡನೆ ಸಾಗುವ ಬಸ್ಸಿನ ಶಬ್ದ ಅವನ ಮೇಲೆ ಮಂಕುಬೂದಿಯೆರಚಿ ಕಣ್ಮುಚ್ಚುವಂತೆ ಮಾಡಿತು.
ಯಾವುದೋ ಊರಲ್ಲಿ ಬಸ್ ನಿಂತಾಗ ಬೇರೆಯವರಂತೆ ತಾನೂ ಇಳಿದು ಕಾಫಿ-ತಿಂಡಿ ಮುಗಿಸಿ ಬಂದು ಮತ್ತೆ ಕೂತ. ನಿರಂತರ ಪಯಣ, ಕೊನೆಯಿಲ್ಲದ ಗತಿ, ಆಕಾರವಿಲ್ಲದ ಬಾಳು, ಗುರಿಯಿಲ್ಲದ ಆಟ. ಕಣ್ಣು ಮಂಪರು ಹರಿಯುವುದರೊಡನೆ ಮತ್ತೆ ಚಿಂತೆಗಳ ಗುಂಗುಂ ಗಾನ, ಆದರೆ ಅಪಸ್ವರ.
ಊರು ಬಿಟ್ಟು ಎಷ್ಟೋ ದಿನವಾದಂತೆ ಭಾಸವಾಗುತ್ತಿದೆ. ಬೆಂಗಳೂರಲ್ಲಿ ಏನೇನು ಆಗಿದೆಯೋ? ತಾನಿಲ್ಲದೆ ಏರುಪೇರಾಗಲು ಸಾಧ್ಯವೇ? ಇತರರ ಜೀವನದಲ್ಲಿ ಹಾಗಾಗುವುದಾದರೆ ನಳಿನಿ, ಕವಿತಾಳ ಜೀವನ ಒಂದಷ್ಟು ಅಸ್ತವ್ಯಸ್ತಗೊಂಡೀತು, ಅದು ತಾತ್ಕಾಲಿಕ, ಸಾಕಷ್ಟು ದೀರ್ಘಕಾಲ ತಾನಿಲ್ಲದೆ ಜೀವಿಸದ ಅವರಿಗೆ ಮತ್ತೆ ತಾನು ಹೋದರೆ ಅಪರಿಚಿತನೆನಿಸಿಬಿಡಬಹುದಲ್ಲವೆ? ಕಾಲದ ಮಹಿಮೆ ಅಂತಹದು! ಎರಡು ವರ್ಷಬಿಟ್ಟು ತಾನು ಹೋದರೆ ಕವಿತಾ, ತನ್ನ ಮಗಳು, ತನ್ನನ್ನು ಗುರುತಿಸದೆ ಹೋಗಬಹುದು, ನಳಿನಿ ತನ್ನ ಸುಳಿವೇ ಸಿಕ್ಕದಿದ್ದರೆ ಏನು ಮಾಡುತ್ತಾಳೆ? ಈಗ ತಾನೊಂದೆರಡು ಕಾಗದ ಹಾಕಿದ್ದೇನೆ, ಇನ್ನು ಬರೆಯದೇ ಇದ್ದರೆ? ಪೊಲೀಸರಿಗೆ ತಿಳಿಸಬಹುದು. ಪೋಲೀಸರಿಗೆ ಸಿಕ್ಕದಂತೆ ತಾನು ಸುಳಿದಾಡುವುದು ಸಾಧ್ಯವಾಯಿತೆನ್ನೋಣ, ಆಗೇನು ಮಾಡುತ್ತಾಳೆ. ಒಂದೆರಡುದಿನ ಕಣ್ಣೀರು ಸುರಿಸುತ್ತಾಳೆ, ಜೋರಾಗಿ, ರಭಸದಿಂದ, ಕೆನ್ನೆಗಳ ಮೇಲೆ ಧಾರಾಕಾರವಾಗಿ ಕಣ್ಣೀರು. ಬರುಬರುತ್ತ ರಿಸರ್ವಾಯರ್‍ನಲ್ಲಿ ನೀರು ಕಡಿಮೆಯಾಗಬೇಕಲ್ಲವೇ? ಗಾಳಿಗೊಡ್ಡಿದ ಕೆನ್ನೆಯ ಮೇಲಿನ ನೀರೂ ಆವಿಯಾಗುತ್ತದೆ, ಕೈಯಿಂದ ಒರೆಸಿಕೊಂಡರೆ ಕಣ್ಣೀರಿನ ಕಲೆ ಕೂಡಉಳಿಯುವುದಿಲ್ಲ. ಮುಖ ತೊಳೆದು ಪೌಡರ್ ಲೇಪಿಸಿಕೊಂಡರೆ, ಹೊಸದೇ ಮುಖವಾಗಿಬಿಡುತ್ತದಲ್ಲ. ನಾಲ್ಕು ವರ್ಷ ತಡೆದ ಅವಳ ದೈಹಿಕ ಕಾಮನೆಗಳು ಮತ್ತೆ ಪುಟಿಯುತ್ತವೆ. ಮೂರು ವರ್ಷದ ಬರಗಾಲದನಂತರ ಬಂದ ಮಳೆಯಲ್ಲಿ ನೆಂದ ನೆಲ ತನ್ನ ಬಸಿರಿನಿಂದ ಮಿಗಿಲಾಗಿ ಹಸಿರಾದ ಸಸ್ಯರಾಶಿಯನ್ನು ಹೆರುವ ಹಾಗೆ, ಅದೂ ಸರಿಯೇ ಅವಳು ತನಗಾಗಿ ಜೀವಮಾನವಿಡೀ ಕಾಯಬೇಕೇ, ಕಾದು ಸಾಯಬೇಕೇ? ತನ್ನ ಅವಳ ಮಿಲನ ಅಥವಾ ಯಾವುದೇ ಇಬ್ಬರ ಸೇರುವಿಕೆ ಬಹುಪಾಲು ಆಕಸ್ಮಿಕವಲ್ಲವೇ? ಒಬ್ಬರಿಲ್ಲದಿದ್ದರೆ ಇನ್ನೊಬ್ಬರು. ಅಂದರೆ ನಮ್ಮ ಸಂಬಂಧದ ಹಿಂದೆ ಸುಸಾಂಗತ್ಯದ ಸೂತ್ರವೆಲ್ಲಿದ್ದೀತು; ಇರಲಾರದು.
ನಳಿನಿಯ ಬಗ್ಗೆಯೂ ಯಾಕೆ ಏನೇನೋ ಯೋಚನೆಗಳು! ಮನಸ್ಸು ರೇಷ್ಮೆ ಬಟ್ಟೆಯಂತೆ ನಿಜ, ಆದರೆ ಒತ್ತಡಗಳಿಗೆ ಸಿಕ್ಕಿ ಆ ಬಟ್ಟೆ ಮುದುರಿಕೊಳ್ಳುತ್ತದೆ. ನೆರಿಗೆಗಳು ಬೀಳುತ್ತವೆ. ವಿವೇಕದಿಂದ ಮತ್ತೆ ಇಸ್ತ್ರಿಮಾಡಿ ಧರಿಸಬೇಕು. ಏನಾದರೇನು ಒಂದು ಕ್ಷಣಕ್ಕೆ ಮತ್ತೆ ಸುಕ್ಕುಗಳು ಬೀಳುತ್ತವೆ.
ಪಶ್ಚಿಮದ ಕಡೆಗೆ ಓಡುತ್ತಿದ್ದ ಬಸ್ ಮುಳುಗಲಿದ್ದ ಸೂರ್ಯನ ಬಿಂಬದಂತೆ ಕಾಣುತ್ತಿತ್ತು. ಸೂರ್ಯ ಇನ್ನೇನು ತಳಾತಳದ ಕಮರಿಯಲ್ಲಿ ಬೀಳುತ್ತಾನೆ, ಅದನ್ನು ಹಿಂಬಾಲಿಸಿದ ತಾವು ದಢಾರೆಂದು ಅದೇ ಕಮರಿಯಲ್ಲಿ ಬೀಳಬೇಕು. ಈಗ ಗಾಳಿಯ ಜೊತೆಯಲ್ಲಿ ಹೊರಗಿನಿಂದ ಕತ್ತಲೂ ಬಸ್ಸನ್ನು ಪ್ರವೇಶಿಸುತ್ತಿತ್ತು. ಎಲ್ಲ ಮೈತೆರೆದಿದ್ದ ಸುತ್ತಣ ಪ್ರಕೃತಿ ಚಿಪ್ಪಿನೊಳಗೆ ಸೇರಿ ಗೂಢವಾಗತೊಡಗಿತು.
ಶಿವಮೊಗ್ಗದಲ್ಲಿ ಬಸ್ ಇಳಿದಾಗಸಾಯಂಕಾಲ ಎಂಟು ಗಂಟೆಯ ಸಮಯ. ಸೂಟ್‍ಕೇಸ್ ಹೊತ್ತು ಇನ್ನೇನು ಯಾವುದಾದರೊಂದು ವಸತಿಗೃಹ ಹಿಡಿದು ಹೊರಡಬೇಕು. ಅಷ್ಟರಲ್ಲಿ ಹಿಂದಿನಿಂದ ಬೆನ್ನ ಮೇಲೆ ಯಾರೋ ಗುದ್ದಿದರು. ತಿರುಗಿ ನೋಡಿದರೆ ಹಳೆಯ ಗೆಳೆಯ, ಕಾಲೇಜಿನ ಕ್ಲಾಸ್‍ಮೇಟ್ ರಮೇಶ್. ತಾನು ಆತ್ಮೀಯರನ್ನು ತೊರೆದು ಒಂದು ದೂರದ ಸ್ನೇಹಿತನನ್ನು ಕಂಡದ್ದರಿಂದ ಹಿಗ್ಗಬೇಕೆ? ಹೇಮಂತನಿಗೆ ಗೊಂದಲವಾಯಿತು.
“ಏನು ಇಲ್ಲಿ? ಯಾವ ಊರು?” ಎಂದ. ಹಾಗೆ ತಾನೇ ಮೊದಲು ಕಂಡ ಪರಿಚಯಸ್ಥರ ವಿಚಾರ ಕೇಳಿ ತಿಳಿಯುವಷ್ಟು ಎಚ್ಚರ ಅವನಿಗಿದೆ. ಅದರಿಂದ ಅನುಕೂಲವಾಯಿತು.
“ನಾನಿಲ್ಲೇ ಕಣಯ್ಯ ಇರೋದು ಈಗ”
“ಅಂದರೆ?”
“ನಾನು ಸೇಲ್ಸ್‍ಟ್ಯಾಕ್ಸ್ ಡಿಪಾರ್ಟ್‍ಮೆಂಟಿನಲ್ಲಿರೋದು ಗೊತ್ತಿಲ್ಲವಾ ನಿಂಗೆ? ಹಿಂದೆ ಹಾಸನದಲ್ಲಿದ್ದೆ. ಈಗ ಆರು ತಿಂಗಳ ಹಿಂದೆ ಇಲ್ಲಿಗೆ ವರ್ಗವಾಯಿತು. ನಮ್ಮ ತಂಗಿ-ಭಾವ ಬರ್ತಾರೆ ಊರಿಂದ, ಕರ್ಕೊಂಡು ಹೋಗಕ್ಕೆ ಬಂದೆ” ಎಂದು ಪ್ರಪಂಚದ ಯಾವ ಕೀಟವೂ ಕಚ್ಚದವನ ಹಾಗೆ ಪಟಪಟ ಮಾತಾಡಿದ ರಮೇಶ. ತಾನೇ ಅವನ ವಿಷಯಮೊದಲು ವಿಚಾರಿಸಿದ್ದು ಒಳ್ಳೆಯದಾಯಿತು. ಇಲ್ಲೇ ಇರುತ್ತೀನಿ ಅಂದಿದ್ದರೆ ಅಥವಾ ಲಾಡ್ಜಿಂಗ್ ಹುಡುಕಿಕೊಂಡು ಹೋಗುವಾಗ ದಾರಿಯಲ್ಲಿ ರಮೇಶ್ ಸಿಕ್ಕಿದ್ದರೆ ತನ್ನ ಮನೆಗೇ ಬಾ ಎಂದು ಕರೆಯುತ್ತಿದ್ದ. ಏನೇನೋ ಬೆದಕುವ ಪ್ರಶ್ನೆಗಳು, ಗುಟ್ಟು-ರಟ್ಟು. ಸಮಾಧಾನದ ನಿಟ್ಟುಸಿರು ಹೊರಬಿತ್ತು.
“ಸರಿ ಒಳ್ಳೇದು” ಒಣಕಲು ಮಾತುಗಳು.
“ನೀನೇನು ಇಲ್ಲಿ?”
ಉತ್ತರಕ್ಕಾಗಿ ಆ ಕಡೆ ಈ ಕಡೆ ನೋಡಿದ. ಪ್ರಪಂಚದಲ್ಲಿ ಈಗ ಹೇಮಂತನಿಗೆ ಎಲ್ಲ ದಿಕ್ಕುಗಳಲ್ಲೂ ಕಿತ್ತು ತಿನ್ನುವ ಪ್ರಶ್ನೆಗಳೇ ಚೆಲ್ಲಾಡಿದ್ದವು; ಕಾಲಿಟ್ಟರೆ ಜಾರುವ ರಾಗಿ ಕಾಳುಗಳು. ಆದರೆ ಈಗ ನೋಡಿದರೆ ಅಲ್ಲೊಂದು ಉತ್ತರವೂ ಕಾಣಿಸಿತು. ಪ್ರಕಾಶಮಾನವಾದ ಬೆಳಕಿನಲ್ಲಿ ಬಸ್‍ನ ಹಣೆಯಲ್ಲಿ ಜೋಗ ಎಂದು ಬರೆದ ಬೋರ್ಡ್ ಅವನಿಗೆ ಈಜು ಬುರುಡೆಯಾಯಿತು.
“ಜೋಗಕ್ಕೆ ಹೊರಟಿದ್ದೇನೆ.”
“ಅಲ್ಲೇನು ಕೆಲಸ?”
“ಯಾವುದೋ ಸಮಾರಂಭ, ಭಾಷಣ” ಬುರುಡೆ ಬಿಟ್ಟ. ನಿಜವೊಂದನ್ನುಳಿದು ಏನು ಬೇಕಾದರೂ ಹೇಳುವ ಸ್ವಾತಂತ್ರ್ಯವಿದೆಯಲ್ಲ ಅವನಿಗೆ.
  “ಏನು, ಬೆಂಗಳೂರಿನಿಂದ ಬರ್ತಿದ್ದೀಯೇನು ಈಗ?”
“ಹ್ಞೂ” ಮಾತು ಸಾಕಾಗಿತ್ತು. “ಬರ್ತೀನಿ. ಬಸ್ ಹೊರಡೋ ಹಾಗಿದೆ. ಆಲ್ ದಿ ಬೆಸ್ಟ್” ಎಂದು ಕೂಗುತ್ತ ಹೇಮಂತ ಜೋಗಕ್ಕೆ ಹೊರಟು ನಿಂತ  ಬಸ್ ಕಡೆ ಧಾವಿಸಿದ. ಆಗಲೇ ಎಂಟೂವರೆ ಸಮೀಪಿಸಿತ್ತು. ಈಗ ಜೋಗಕ್ಕೆ ಹೋದರೆ ತಲುಪುವುದು ಎಷ್ಟು ಹೊತ್ತಿಗೆ? ವಿಚಾರಿಸಿದಾಗ ಹತ್ತೂವರೆ ಎಂದು ತಿಳಿಯಿತು. ರಮೇಶನ ಕಣ್ಣು ತಪ್ಪಿಸಿ ಮತ್ತೊಂದು ಮಾರ್ಗವಾಗಿ ಯಾವುದಾದರೂ ವಸತಿಗೃಹಕ್ಕೆ ಹೋಗಲೇ ಎಂದು ಹೇಮಂತ ಆಲೋಚಿಸಿದ. ಅಕಸ್ಮಾತ್ ರಮೇಶ ನಾಳೆಸಿ ಕ್ಕಿಬಿಟ್ಟರೆ? ಬೇಡ ಎಂದು ಬಸ್ಸಲ್ಲಿ ಕೂತ.
ಮತ್ತೆ ಢುರ್ ಶಬ್ದ ಗಾಳಿಯ ತೀಡುವಿಕೆ. ಜೊತೆಗೆ ಕಾಡಿನಲ್ಲಿ ಓಡುವ ಬಸ್ ಕತ್ತಲನ್ನು ಸೀಳಿಕೊಂಡು ಹೋಗುತ್ತಿತ್ತು. ಕತ್ತಲು ತನ್ನೆಲ್ಲ ಕರ್ಕಶ ಧ್ವನಿಯಿಂದ ಹೆದರಿಸುವ ಹಾಗೆ ಜೀರುಂಡೆಯ ಧ್ವನಿ, ಬೇರೆ ಕೀಟಗಳ ಶಬ್ದ. ಕಿಟಕಿಯ ಮೂಲಕ ಹೊರಗೆ ನೋಡಿದರೆಕಗ್ಗತ್ತಲ ಬೆಟ್ಟ. ಒಮ್ಮೊಮ್ಮೆ ಮಾತ್ರ ಅಲ್ಲೊಂದು ಇಲ್ಲೊಂದು ಮಿಣುಕುವ ಬಿಂದುಗಳು. ತನ್ನ ಒಳಗೂ ಬಸ್ಸಿನ ಹೊರಗೂ ವ್ಯತ್ಯಾಸವಿದ್ದಂತಿಲ್ಲವೆನ್ನಿಸಿತು ಹೇಮಂತನಿಗೆ. ತನ್ನ ಒಡಲಲ್ಲೂ ಕೀಟಗಳ ಕಿರಿಚಾಟ, ಮಿಣುಕು ಬಿಂದುಗಳು ಮಾತ್ರಈಗ ಇದ್ದಂತೆಯೇ ಇಲ್ಲ. ಒಂದೇ ಸಮನೆ ಹಾರುವ ಬಸ್ಸು ಧೈರ್ಯದಿಂದ ಕತ್ತಲ ಸಾಗರದಲ್ಲಿ ಬಿದ್ದಿತ್ತು. ಜೋಗಕ್ಕೆ ತಲುಪುವುದು ಅನಂತದಲ್ಲಿದೆಯೇನೋ ಎಂಬ ಭಾವನೆಯುಂಟುಮಾಡುವಂತೆ ಪಯಣ.
ಜೋಗ ತಲುಪಿದಾಗ ಗಂಟೆ ನೋಡಿಕೊಂಡ, ಹತ್ತೂಮುಕ್ಕಾಲು. ಎಲ್ಲಿ ನೋಡಿದರೂ ಕತ್ತಲು. ವಿದ್ಯುತ್ ಉತ್ಪಾದಿಸುವ ಈ ಜಾಗದಲ್ಲಿ ಕತ್ತಲೆ ಹೆಪ್ಪುಗಟ್ಟಿದೆಯಲ್ಲ ಅನ್ನಿಸಿತು. ಸುತ್ತಮುತ್ತಲೂ ಹೋಟೆಲಿನಂತಹ ಜಾಗವೂ ಕಾಣಿಸದು. ಈ ಪ್ರದೇಶಕ್ಕೆಲ್ಲ ತಾನು ಯಾವಾಗಲೋ ಹಿಂದೆ ಬಂದಿದ್ದಿರಬಹುದು.ಆದರೆ ಎಲ್ಲಿ ಏನು ಸಿಕ್ಕುತ್ತದೆಯೆಂಬ ವಿವರ ತನಗೆ ಈಗ ತಿಳಿಯದು. ಅಲ್ಲದೆ, ಕಾಲ ಸರಿದಂತೆ ವ್ಯತ್ಯಾಸಗಳು ಬೇರೆ ಆಗುತ್ತವಲ್ಲ. ಬಸ್‍ಸ್ಟ್ಯಾಂಡಿನ ಪಕ್ಕದಲ್ಲಿನ ಕಟ್ಟಡದಲ್ಲಿ ದೀಪ ಉರಿಯುತ್ತಿತ್ತು. ಅಲ್ಲಿ ವಿಚಾರಿಸೋಣವೆಂದು ಅದರ ಹತ್ತಿರ ಬಂದ. ಹೊರಗೆ ಬೀಡಿ ಸೇದುತ್ತಿದ್ದ ಪೊಲೀಸ್ ಪೇದೆಯನ್ನು ಕಂಡಾಗ ಅದು ಪೊಲೀಸ್‍ ಠಾಣೆ ಎಂಬುದು ಗೊತ್ತಾಯಿತು. ಪೊಲೀಸ್‍ನ ನೆನಪು ಆಕಾರ ಮೂಡಿದೊಡನೆ ಭಯವಾಯಿತು. ತನಗೇಕೆ ಭಯ, ತಾನು ಅಪರಾಧಿಯಲ್ಲವಲ್ಲ, ಮನಸ್ಸು ಹಿಗ್ಗು ಮುಗ್ಗಾಗಿದೆ - ನೇರಗೊಳಿಸಿಕೊಳ್ಳಲು ತಾನೇ ಬಂದಿರುವುದು. ಸ್ವಲ್ಪ ಧೈರ್ಯವನ್ನು ಮೂಲೆಯಿಂದ ಮೂಗುದಾರ ಹಿಡಿದು ಎಳೆದು ತಂದ. ಪೇದೆಯ ಬಳಿಗೆ ಹೋಗಿ “ಇಲ್ಲಿ ಯಾವುದಾದರೂ ಲಾಡ್ಜ್ ಇದೆಯೇ?” ಎಂದ.
“ಇಲ್ಲಿ ಯಾವುದೂ ಇಲ್ಲವಲ್ಲ ಸಾರ್. ಫಾಲ್ಸ್‍ಗೆ ಹೋಗಬೇಕೊ? ಎಲ್ಲ ಬಸ್ಸುಗಳು ಬಂದು ಹೋಗಿಬಿಟ್ಟಿವೆಯಲ್ಲ” ಎಂದು ಕನಿಕರದ ಧ್ವನಿಯಿಂದ ಹೇಳಿದ. ಈಗೇನು ಮಾಡುವುದೆಂಬ ಪ್ರಶ್ನೆ ಪ್ರತ್ಯಕ್ಷವಾಗಿ ಕತ್ತಲನ್ನು ದಟ್ಟವಾಗಿಸಿತ್ತು. ಒಂದುಕ್ಷಣ ಸುಮ್ಮನಿದ್ದ ಪೇದೆ ಏನೋ ನೆನಪಿಸಿಕೊಂಡವನಂತೆ “ಸಾರ್, ಇವತ್ತು ಶನಿವಾರ ಅಲ್ಲವಾ ಇಲ್ಲಿ ಸಿನಿಮಾ ನಡೀತಿದೆ. ಹನ್ನೊಂದೂವರೆ ಹೊತ್ತಿಗೆ ಬಿಡತ್ತೆ, ಆಗ ಜನಗಳನ್ನು ಕರೆದುಕೊಂಡುಹೋಗಲು ಫಾಲ್ಸ್‍ಗೆ ಬಸ್ಸಿಗೆ, ಕಾದಿರಿ” ಎಂದಾಗ ಕತ್ತಲಲ್ಲಿ ಮಿಣುಕು ಕೇಂದ್ರವೊಂದು ಕಾಣಿಸಿದಂತಾಯಿತು.
ಬಸ್‍ಸ್ಟಾಂಡಲ್ಲಿ ಒಂದು ಜಿಂಕ್‍ಶೀಟನ ಸೂರಿನ ಕೆಳಗೆ ನಿಂತ, ಆಗಲೇ ಮಂಜು ಸುರಿಯತೊಡಗಿತ್ತು. ಆಕಾಶದಲ್ಲಿ ನಕ್ಷತ್ರಗಳು ಕಣ್ಣುಪಿಳುಕಿಸುತ್ತ ದಿಕ್ಕುತೋಚದೆ ನಿಂತಿದ್ದವು, ಗಾಳಿ ಬಯಲಲ್ಲಿ ಓಡಿ ಬಂದು ಡಿಕ್ಕಿ ಹೊಡೆಯುತ್ತಿತ್ತು. ಚಳಿ ಅನ್ನಿಸಿತು. ಕೊಂಚದೂರದಲ್ಲಿ ಬುಡ್ಡಿದೀಪ ಹಚ್ಚಿದ್ದ ಒಂದು ಪುಟ್ಟ ಡಬ್ಬಿ ಅಂಗಡಿಯತ್ತ ಹೋಗಿ ಹೇಮಂತ “ಒಂದು ಸಿಗರೇಟ್ ಕೊಡಮ್ಮ” ಎಂದ “ಯಾವುದು?” “ಯಾವುದಾದರೂ ಕೊಡು.” ತಾನು ಸಿಗರೇಟು ಸೇದುವ ಅಭ್ಯಾಸದವನಲ್ಲ, ಮಾಡಲು ಏನೂ ತೋಚದೆ ಸಿಗರೇಟು ಸೇದಲು ತೊಡಗಿದ್ದ, ಅಷ್ಟೆ.
ನಿಧಾನವಾಗಿ, ಒಬ್ಬೊಬ್ಬರಂತೆ ಮಂದಿ ಬಸ್‍ಸ್ಟಾಂಡಲ್ಲಿ ಸೇರತೊಡಗಿದರು. ಬಸ್ ಬರುವುದು ಹಾಗಾದರೆ ಗ್ಯಾರಂಟಿ ಎನ್ನಿಸಿ ಸದ್ಯಕೊಂದು ದಾರಿ ಕಂಡಂತಾಯಿತು. ಯಾವುದೋ ಜ್ಞಾನದಲ್ಲಿ ಹೊಗೆ ಗಂಟಲಲ್ಲಿ ಇಳಿಬಿಟ್ಟುಕೊಂಡದ್ದರಿಂದ ಕೆಮ್ಮು ಬಂತು. ಕೆಂಪಗೆ ತುದಿಯಲ್ಲಿ ಉರಿಯುತ್ತಿದ್ದ ಸಿಗರೇಟಿನ ಕೆಂಡ ಹತ್ತಿರ ಹಿಡಿದ ಬೆರಳುಗಳಿಗೆ ಬಿಸುಪನ್ನು ಸ್ವಲ್ಪ ಸ್ವಲ್ಪವಾಗಿ ರವಾನಿಸುತ್ತಿತ್ತು.
ಬಸ್ ಬಂದು ನಿಂತಾಗ ಜನರೆಲ್ಲ ಹತ್ತಿದರು. ಅದು ಕೆಲಸಗಾರರನ್ನು ಕರೆದೊಯ್ಯುವ ಬಸ್ಸು, ಚಾರ್ಜಿಲ್ಲ. ಶನಿವಾರಗಳಂದು ಪುಕ್ಕಟ್ಟೆ ಸಿನಿಮಾ. ಅಲ್ಲಿ ವಾಸಿಸುವವರು ವಿದ್ಯುತ್ ತಯಾರಕಾ ಘಟಕದ ನೌಕರರು. ಅಲ್ಲಿರುವುದು ಕಾಲೋನಿ ಅಲ್ಲವೇ? ಹೀಗಾಗಿ ಬೇರೆ ಮನರಂಜನೆಗೆ ಅವಕಾಶವಿಲ್ಲದ್ದರಿಂದ ಮಂಡಳಿಯಿಂದಲೇ ಸಿನಿಮಾ ಪ್ರದರ್ಶನವಾದ ಮೇಲೆ ಪುಕ್ಕಟೆ ವಾಹನ ಸೌಲಭ್ಯ, ತಾನೂ ಅವರಲ್ಲಿ ಒಬ್ಬನಾಗಿ ಕಂಡಕ್ಟರಿಲ್ಲದ ಬಸ್ಸಲ್ಲಿ ಪುಕ್ಕಟ್ಟೆ ಪ್ರಯಾಣಮಾಡಲನುವಾದ ಹೇಮಂತ.
  ಒಂದೋ ಎರಡೋ ಕಡೆ ನಿಂತ ಬಸ್ಸು ಐದೇ ನಿಮಿಷದಲ್ಲಿ ಗುರಿ ತಲುಪಿಸಿತ್ತು. ಎಲ್ಲ ಇಳಿದರು. ತಾನೂ ಇಳಿದ, ಆದರೆ ಅಲ್ಲಿ ಏನೂ ಕಾಣದು, ಕರೆಂಟ್ ಹೋಗಿತ್ತು. ಯಾರನ್ನೋ ಕೇಳುತ್ತ ಹೋಟೆಲಿನ ಕಡೆ ಕಾಲು ಹಾಕುತ್ತ ನಡೆದ ಹೇಮಂತ ಕ್ಷಣದಲ್ಲಿ ಮಿಕ್ಕವರ ಪಾಲಿಗೆ ಕತ್ತಲಲ್ಲಿ ಸೇರಿದವನಾಗಿಬಿಟ್ಟ.

* * *

No comments: