Sunday, 5 October 2014

ಪರಿಸ್ಥಿತಿ - 1


(ಒಂದು ಕಿರು ಕಾದಂಬರಿ)

ಪರಿಸ್ಥಿತಿ - 1
ಮೊದಲು ಸ್ವಲ್ಪಕಾಲ ಸದ್ದು ಮಾಡಿದ ಕರೆಗಂಟೆಯನ್ನು ಗಮನಿಸದೇ ನಳಿನಿ ಹಾಗೇ ಮಲಗಿದ್ದಳು. ಮೇಲೇಳುವುದಕ್ಕೆ ಬೇಸರ, ಈ ಪರಿಸ್ಥಿತಿಯಲ್ಲಿ ತಾನು ಉತ್ಸಾಹದಿಂದಿರಲು ಹೇಗೆ ಸಾಧ್ಯ? ಅನ್ನುವ ಹಾಗಿಲ್ಲ; ಅನುಭವಿಸುವ ಹಾಗಿಲ್ಲ. ಎಲ್ಲಕಡೆ ಮೋಡ ಗವ್ವನೆ ಮುಸುಕಿದಂತೆ ಮನಸ್ಸು. ಯಾಕೆ ಹಾಗೆ ಮಾಡಿದರೋ ಅವರು - ತಿಳಿಯದಲ್ಲ. ತನ್ನ ನೆನಪಾಗಲೀ ಪುಟಾಣಿ ಕವಿತಾಳ ನೆನಪಾಗಲೀ ಅವರಿಗೆ ಬರದೇ ಇರಲಿಕ್ಕೆ ಸಾಧ್ಯವಿಲ್ಲ. ಇದನ್ನು ಮೀರಿ ಅವರು ಹೋಗಿರಬೇಕಾದರೇ? ಹೃದಯ ಒಳಗಿನಿಂದ ಕಿತ್ತು ಬರುವಂತಾಯಿತು. ಒಳಗಿನದನ್ನೆಲ್ಲ ಎಬ್ಬಿದಂತಾಯಿತು.
ಈ ಬಾರಿ ದೀರ್ಘವಾಗಿ ಕರೆಗಂಟೆಯ ಸದ್ದಾಯಿತು. ಅಂದರೆ ಬಂದವರು ಮಾತಾಡಿಕೊಂಡೇ ಹೋಗಬೇಕೆಂದು ನಿಶ್ಚಯಿಸಿದ್ದಾರೆಂದು ಕಾಣುತ್ತದೆ ಅಥವಾ ಯಾರಾದರು ಭಿಕ್ಷುಕರೋ, ಏನನ್ನಾದರೂ ಮನೆ ಮುಂದೆ ಮಾರಲು ಬಂದವರೋ ಇರಬಹುದೇ? ಅಮ್ಮ ಒಳಗಿರಬಹುದು. ಹೋಗಿ ಬಾಗಿಲು ತೆಗೆಯಬಹುದೆಂದು ನಳಿನಿ ಹಾಗೇ ಮಂಕುಬಡಿದು ಮಲಗಿದ್ದಳು.
ಮೂರನೇ ಬಾರಿಯೂ ಬೆಲ್ ಸದ್ದುಮಾಡಿದಾಗ ಅನಿವಾರ್ಯವಾಗಿ ತಾನು ಮೇಲೇಳಲೇಬೇಕಾಯಿತು. ಈ ಜನಗಳೆಂದರೆ ಎಷ್ಟೋ ವೇಳೆ ಪೀಡೆಗಳು, ಇಷ್ಟು ಬಾರಿ ಸದ್ದುಮಾಡಿದರೂ ಬಾಗಿಲು ತೆರೆಯದಿದ್ದುದರಿಂದ ಒಳಗೆ ಯಾರೂ ಇಲ್ಲವೆಂದೋ, ಇದ್ದರೂ ಯಾರನ್ನು ನೋಡುವ ಮನೋಭಾವದಲ್ಲಿಲ್ಲವೆಂದೋ ಅರ್ಥ ಮಾಡಿಕೊಂಡು ಹೋಗುವಷ್ಟು ತಿಳಿವಳಿಕೆಯಿಲ್ಲ ಎಂದು ಮನಸ್ಸಿನಲ್ಲೇ ಸಿಡುಕಿದಳು. ಕುಳಿತ ಜಾಗದಿಂದ ನಿಧಾನವಾಗಿ ಮೇಲೆದ್ದು ಕೂದಲನ್ನು ಕೈಗಳಿಂದಲೇ ಸರಿಮಾಡಿಕೊಂಡು ತಲೆಬಾಗಿಲ ಕಡೆ ನಡೆದಾಗ ಅವಳ ಕಣ್ಣುಗಳು ಹಾಲ್‍ನಲ್ಲಿ ತೂಗುಹಾಕಿದ್ದ ಗೋಡೆ ಗಡಿಯಾರದ ಕಡೆ ತಾನಾಗಿಯೇ ಹರಿಯಿತು ಆಗಲೇ ಸಂಜೆಯಾಗಿಬಿಟ್ಟಿದೆ; ಐದು ಗಂಟೆ!
ಬಾಗಿಲು ತೆರೆದಾಗ ಕಂಡದ್ದು ಇಬ್ಬರು ಯುವಕರು ಅವರ ಕಡೆ ನಳಿನಿಯ ಕಣ್ಣುಗಳು ಪ್ರಶ್ನಾರ್ಥಕವಾಗಿ ಸುಳಿದವು. ಅವರನ್ನು ಹಿಂದೆ ಕಂಡಿದ್ದ ನೆನಪು ಮಸುಕಾಗಿ ಅವಳ ಮನಸ್ಸಿನ ಮೇಲೆ ಸುಳಿದುಹೋಯಿತು. ಇರಬಹುದು; ಎಷ್ಟೋ ಜನ ಇವರನ್ನು ಕಾಣುವುದಕ್ಕೆ ಬರುತ್ತಾರಲ್ಲ ಅಂಥವರೇ ಇರಬೇಕು;
“ರೆಡಿಯಾಗಿದಾರಾ?” ಬಂದವರಲ್ಲಿ ಒಬ್ಬಾತ ಪ್ರಶ್ನೆ ಮಾಡಿದ. ಇಬ್ಬರೂ ಚೆನ್ನಾಗಿ ಉಡುಪು ಧರಿಸಿದ್ದ, ಹೊಳಪುಗಣ್ಣುಗಳ, ಉತ್ಸಾಹ ತುಂಬಿದಮುಖದ ತರುಣರು. ಇವಳಕಡೆ ಗೌರವಮಿಶ್ರಿತ ಭಾವನೆಯಿಂದಲೇ ನೋಡುತ್ತಿದ್ದರು.
“ಯಾರು?” ಅಪ್ರಯತ್ನವಾಗಿ ನಳಿನಿಯ ಬಾಯಿಂದ ಮಾತು ಬಂತು.
“ಇನ್ಯಾರು? ಮಿ. ಹೇಮಂತ್”ಎಂದ, ಅವರಲ್ಲಿ ಮತ್ತೊಬ್ಬ ತರುಣ.
“ಅವರಿಲ್ಲ”
“ಆ್ಞ...?” ಅವರಿಬ್ಬರೂ ಒಂದೇ ಬಾರಿಗೆ ಉದ್ಗರಿಸಿದರು. ಅವರಿಗೆ ಆಶ್ಚರ್ಯದ ಜೊತೆ ಸ್ವಲ್ಪ ಗಾಬರಿಯೂ ಆಯಿತೆಂದು ಕಾಣುತ್ತದೆ. ಈ ಉತ್ತರವು ನಿರ್ಮಿಸಿದ್ದ ಪರಿಸ್ಥಿತಿಗೆ ಹೊಂದಿಕೊಳ್ಳಲು ಅವರಿಗೆ ಒಂದರೆಕ್ಷಣ ಸಮಯ ಬೇಕಾಯಿತು.
“ಇವತ್ತು ಸಮಾರಂಭವಿದೆ. ಮಿಸ್ಟರ್ ಹೇಮಂತ್‍ರೇ ಮುಖ್ಯ ಅತಿಥಿಗಳು. ಸಂಜೆ ಆರು ಗಂಟೆಗೆ ಸಮಾರಂಭ” ಒಬ್ಬ ವಿವರಣೆಯನ್ನಿತ್ತ. “ಐದು ಗಂಟೆಗೆ ಕಾರು ತೆಗೆದುಕೊಂಡು ಬರ್ತೀವಿ ಅಂತ ಅವರಿಗೆ ಹೇಳಿದ್ದೆವು. ಹ್ಞೂ ಅಂದಿದ್ರು. ನಾಲ್ಕು ದಿನದ ಹಿಂದೆ ಆಹ್ವಾನ ಪತ್ರಿಕೆ ಕೊಟ್ಟು ಹೋಗಿದ್ದೆವಲ್ಲ. ನೀವೂ ಇದ್ದಿರಿ....?” ಇನ್ನೊಬ್ಬ ಮುಂದುವರೆಸಿದ.
ಹೌದು, ನೆನಪಿಗೆ ಬಂತು.ಇವರಿಬ್ಬರೇ ಆವತ್ತು ಬಂದಿದ್ದರು. ಅದಕ್ಕೇ ಅವರ ಮುಖಗಳು ನೆನಪಿನ ಮೇಲುಪದರದಲ್ಲೇ ಅವರನ್ನು ಕಂಡಾಕ್ಷಣ ಸುಳಿದವು. ಪಟಪಟ ಮಾತಾಡುತ್ತಿದ್ದ ತರುಣರು ಹೇಮಂತನ ಕೋಣೆಯಲ್ಲಿ ಕೂತು ಹತ್ತು ನಿಮಿಷ ಮಾತಾಡಿದ್ದರು. ಹೇಮಂತ ಅಲ್ಲಿಂದಲೇ “ನಳಿನೀ” ಎಂದು ಕೂಗಿದ್ದಾಗ ತಾನು ಎಂದಿನಂತೆ ಮೂರು ಸಣ್ಣ ಲೋಟಗಳಲ್ಲಿ ಕಾಫಿ ಸುರಿದು ಟ್ರೇಯಲ್ಲಿಟ್ಟು ತಂದುಕೊಟ್ಟಿದ್ದು ಅವಳಿಗೆ ನೆನಪಾಯಿತು. ಯಾವತ್ತೂ ಹಾಗೆಯೇ: ಯಾರಾದರೂ ಬಂದರೆ ಒಂದಷ್ಟು ಕಾಫಿಯನ್ನೂ ಕೊಡದೇ ಹಾಗೇ ಕಳಿಸುವ ಸ್ವಭಾವವಲ್ಲ ಹೇಮಂತನದು. ಅದಕ್ಕೇ ಒಂದು ದೊಡ್ಡ ಫ್ಲಾಸ್ಕಿನಲ್ಲಿ ಸದಾ ಕಾಫಿ ಸಿದ್ಧವಾಗಿಯೇ ಇರುತ್ತದೆ ಅಥವಾ ಇರುತ್ತಿತ್ತು. ಬಂದವರಿಗೆ ಉಪಚಾರಮಾಡುವುದಲ್ಲದೆ ಅವರು ಕರೆದ ಸಮಾರಂಭಕ್ಕೆ ಹೋಗಿ ಮಾತಾಡಿ ಬರುತ್ತಿದ್ದುದರಿಂದ ಹೇಮಂತನನ್ನು ಕಾಣಲು ಬರುವವರ ಸಂಖ್ಯೆಯು ಸಾಕಷ್ಟಿರುತ್ತಿತ್ತು. ಬಂದವರ ಜೊತೆ ತುಂಬ ಸೌಜನ್ಯದಿಂದ ಮಾತಾಡುತ್ತಿದ್ದುದರಿಂದ ಜನಕ್ಕೆ ಅವನನ್ನು ಕಂಡರೆ ಗೌರವದ ಜೊತೆ ಆತ್ಮೀಯತೆಯೂ ಇತ್ತು.
ಕಾಫಿ ತೆಗೆದುಕೊಂಡು ಹೋಗಿ ಕೊಟ್ಟಾಗ, ಅವರಿಬ್ಬರಿಗೂ ಕಾಫಿ ಕೊಟ್ಟು ತಾನೂ ಒಂದು ಲೋಟ ಹಿಡಿದು ಹೇಮಂತ್ ”ಇವರು ನನ್ನ ಶ್ರೀಮತಿ, ನಳಿನಿ” ಅಂತ ಪರಿಚಯ ಮಾಡಿಕೊಟ್ಟಿದ್ದ. ಅದು ಎಂದೂ ನಡೆಯುವ ಕಾರ್ಯವೇ. ಬಂದವರಿಗೆಲ್ಲ ತನ್ನನ್ನು ಪರಿಚಯ ಮಾಡಿಸುವುದು. “ಬಾ, ಇಲ್ಲೇ ಕೂತುಕೋ” ಎಂದು ಹೇಳುವುದು. ಆದರೆ ನಾನು ತಾನೇ ಅವರನ್ನು ಕಾಣಲು ಬರುವವರ ಜೊತೆಗೆಲ್ಲ ಹರಟೆ ಹೊಡೆಯುತ್ತ ಕೂಡುವುದು ಸಾಧ್ಯವೆ? ಕೆಲವೇಳೆ ಒಂದರೆಕ್ಷಣ ಕೂತ ಶಾಸ್ತ್ರಮಾಡಿ “ಈಗ ಬಂದೆ” ಅಂತಲೋ “ಒಳಗೆ ಸ್ವಲ್ಪ ಕೆಲಸ ಇದೆ, ಬರ್ತೀನಿ” ಅಂತಲೋ ಅವಳು ಅಲ್ಲಿಂದ ಕಾಲ್ತೆಗೆಯುತ್ತಿದ್ದಳು. ಅಲ್ಲಿ ಕೂತು ಅವರು ಮಾತಾಡುವ ವಿಷಯದಲ್ಲಿ ಬಾಯಿ ಹಾಕಲು ತನಗೆ ಅಷ್ಟೆಲ್ಲ ವಿಷಯ ಎಲ್ಲಿ ತಿಳಿದಿದೆಯೆನ್ನಿಸುತ್ತಿತ್ತು ಅವಳಿಗೆ. ಏನೇನೋ ಮಾತಾಡುತ್ತಾರೆ. ಬಂದವರು ಸಹಜವಾಗಿಯೇ ಸಾಹಿತ್ಯದ ವಿಷಯ ಹೆಚ್ಚು ಮಾತಾಡುತ್ತಾರೆ. ಇವರು ಕಾದಂಬರಿಗಳನ್ನು ಬರೆಯುತ್ತಾರಲ್ಲವೆ? ಆದರೆ ಎಷ್ಟೋ ಸಲ ಮಿಕ್ಕ ವಿಷಯಗಳು, ಪ್ರಪಂಚದಲ್ಲಿ ಏನೇನು ವಿಷಯಗಳಿವೆಯೋ, ಅವನ್ನೆಲ್ಲಾ ಚರ್ಚೆ ಮಾಡಲು ಹೇಮಂತನಿಗೆ ಬೇಸರವಿಲ್ಲ. ಬಂದವರು ಯಾವ ಕ್ಷೇತ್ರಕ್ಕೆ ಸೇರಿರುತ್ತಾರೆಯೋ ಅದಕ್ಕೆ ಸಂಬಂಧಿಸಿದ ವಿಷಯವನ್ನೆಲ್ಲ ಪ್ರಸ್ತಾಪ ಮಾಡುತ್ತಾರೆ. ಕೆಲವು ವೇಳೆ ವಿವರಣೆಗಳನ್ನು ಕೇಳುತ್ತಾರೆ. ಕೆಲವು ವೇಳೆ ತಮ್ಮ ಅಭಿಪ್ರಾಯ ಹೇಳುತ್ತಾರೆ. ಮತ್ತೆ ಕೆಲವು ವೇಳೆ ‘ಹಾಗಲ್ಲ, ಹೀಗೆ’ ಎಂದು ಚರ್ಚೆಯನ್ನು ಮಾಡುತ್ತಾರೆ.
ಸ್ನೇಹಿತರು ಬಂದಾಗ ಚರ್ಚೆ ಮಾಡುವಷ್ಟು ದೀರ್ಘಕಾಲ ಯಾರಾದರೂ ಸಮಾರಂಭಕ್ಕೆ ಅತಿಥಿಯಾಗಲು ಕರೆಯುವುದಕ್ಕೆ ಬಂದಾಗ ಮಾತನಾಡುವುದಿಲ್ಲ, ನಿಜ. ಎಷ್ಟೋ ವೇಳೆ ಅಂಥವರು ಮೊದಲ ಬಾರಿಗೆ ಭೇಟಿಯಾಗುತ್ತಿರುತ್ತಾರೆ. ಹಾಗಾಗಿ ಹಿತಮಿತವಾಗಿ ಅಂಥ ಸಮಯದಲ್ಲಿ ಮಾತು. ತಿಳಿದವರು ಬಂದರಂತೂ ಭಾರಿ ಬಿರುಸಿನಿಂದಲೇ ವಾಗ್ವಾದ.
ಈ ತರುಣರು ಬಂದದ್ದು ಸ್ಪಷ್ಟವಾಗಿ ನಳಿನಿಗೆ ನೆನಪಾಯಿತು. ತಾನು ಕಾಫಿ ಕೊಟ್ಟು ಒಂದರೆಕ್ಷಣ ಕುಳಿತಿದ್ದು ಕವಿತಾಳ ಧ್ವನಿ ಕೇಳಿದ ನೆಪದಿಂದ ಹೊರಬಂದಿದ್ದಳು. ಆದರೆ ಅವರು ಕೋಣೆಯಲ್ಲಿ ಮಾತಾಡುತ್ತಿದ್ದುದು ಹೊರಗೆ ಕೇಳಿಸುತ್ತಿತ್ತು. ಇವತ್ತು ಸಾಯಂಕಾಲ ಐದು ಗಂಟೆಗೆ ಬರುವುದಾಗಿ ಹೇಳುತ್ತಿದ್ದುದು ಕಿವಿಯಲ್ಲಿ ಮರುಕಳಿಸಿತು. ಆಮೇಲೆ ಅವನ ಟೇಬಲ್ ಮೇಲೆ ಆಹ್ವಾನ ಪತ್ರಿಕೆ ಬಿದ್ದಿದ್ದುದೂ ಕಾಣಿಸಿತ್ತು, ಟೇಬಲ್ ಮೇಲಿನ ಕಾಗದಗಳನ್ನು ಒಪ್ಪವಾಗಿ ಜೋಡಿಸುವ ತನ್ನ ಕೆಲಸ ಮಾಡಲು ರಾತ್ರಿ ಹೋದಾಗ. ಆದರೆ ಸಮಾರಂಭ ಎಲ್ಲಿ, ಏನು, ಯಾಕೆ ಯಾವುದೂ ಗೊತ್ತಿಲ್ಲ. ಇಂಥವು ಎಷ್ಟೋ ಹೇಮಂತನಿಗೆ. ತನ್ನ ಪಾಡಿಗೆ ತಾನು ಅವುಗಳಿಗೆ ಹೋಗಿ ಬರುವವನೇ ಹೊರತು, ಹೆಂಡತಿಯನ್ನು ಕರೆದೊಯ್ಯುತ್ತಿರಲಿಲ್ಲ. “ನಿನಗ್ಯಾಕೆ ಆ ಬಂಧನ ಹಾಯಾಗಿರು” ಎಂದು ಹೇಳುತ್ತಿದ್ದ, ಅಕಸ್ಮಾತ್ತಾಗಿ ತಾನೂ ಎಲ್ಲಾದರೂ ಬರುತ್ತೇನೆಂದರೆ. ಮೊದಮೊದಲು ಒಂದೆರಡು ಸಮಾರಂಭಗಳಿಗೆ ಅವರೊಡನೆ ತಾನೇ ಹೋಗಿದ್ದುದುಂಟು. ಆದರೆ ಅಲ್ಲಿ ತಾಳ್ಮೆಯಿಂದ ಕೂತಿರುವಷ್ಟು ಆಸಕ್ತಿ ತನಗೆ ಸಾಹಿತ್ಯದಲ್ಲಿ ಇಲ್ಲದ್ದರಿಂದ ಅದನ್ನೆಲ್ಲ ಗಂಡನಿಗೇ ಬಿಟ್ಟಿರುತ್ತಿದ್ದಳು. ಅವನ ಕಾದಂಬರಿಗಳನ್ನು ಮಾತ್ರ ಅವಳು ಓದುತ್ತಿದ್ದಳು.  ಹೇಮಂತ ಮಿಕ್ಕ ಏನೇನೋ ಬರೆದಿದ್ದಾನೆ. ಆದರೆ ಅದರಲ್ಲಿ ನಳಿನಿಗೆ ಆಸಕ್ತಿಯಿಲ್ಲ. ತನಗೆ ಅರ್ಥವಾಗದ ವಿಮರ್ಶೆ, ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದವು - ಇವೆಲ್ಲ ತನಗೆ ಸೇರುವುದಿಲ್ಲ. ಅವನು ಯಾವ ಯಾವ ಕಾದಂಬರಿಗಳನ್ನು ಬರೆದಿದ್ದಾನೆ, ಅವುಗಳ ಕಥೆಯೇನು ಎಂದು ಯಾವಾಗ ಬೇಕಾದರೂ ತಾನು ಹೇಳಬಲ್ಲಳೇ ಹೊರತು, ಹೇಮಂತ ಬೇರೆ ಏನನ್ನು ಬರೆದಿದ್ದಾನೆಂದು ಅವಳಿಗೆ ನೆನಪಿಲ್ಲ. ಅವನೇನೋ ಯಾವುದೇ ಬಗೆಯ ತನ್ನ ಹೊಸ ಪುಸ್ತಕ ಪ್ರಕಟವಾದಾಗ ನಳಿನಿಗೆ ತೋರಿಸುತ್ತಿದ್ದ; ಆದರೆ ಅದರ ಹೊರ ಆಕಾರ ಗಾತ್ರ ಇವು ಅರ್ಥವಾಗುತ್ತಿದ್ದವೇ ಹೊರತು ಒಳಗಿನ ವಿಷಯವನ್ನುತಾನು ಜೀರ್ಣಮಾಡಿಕೊಳ್ಳಲು ಸಾಧ್ಯವಿಲ್ಲ.
ಹೇಮಂತನ ನೆನಪು ಎಷ್ಟು ಭಾರ ಈಗ! ಅವಳ ಕಣ್ಣುಗಳ ದೀಪಗಳಲ್ಲಿ ಎಣ್ಣೆ ಕಡಿಮೆಯಾದಂತೆ ಮಂಕು ಆವರಿಸಿತು. ಬಿರುಗಾಳಿಗೆ ಸಿಕ್ಕಿ ಅವು ಆರಿಹೋಗಬಹುದೇನೋ ಎನ್ನುವಂತೆ ದೀಪ್ತಿ ತೀರ ಕಡಿಮೆಯಾಯಿತು. ಕಣ್ಣುಗಳು ತುಂಬಿ ಬಂದವು. ಉಗುಳು ನುಂಗಿದಳು. ಯಾಕೆ ಹೀಗೆ ಮಾಡಿದರು?
  ನಳಿನಿಯ ಮುಖದಲ್ಲಿ ಆಗುತ್ತಿದ್ದ ಮಾರ್ಪಾಟುಗಳನ್ನು ಗಮನಿಸುತ್ತಿದ್ದ ಈ ತರುಣನಿಗೆ ನಿಜವಾಗಿಯೂ ಒಂದು ಬಗೆಯ ಮುಜುಗರ ತಾವೇನಾದರೂ ತಪ್ಪುಮಾಡಿದೆವೋ ಎಂಬ ಭಾವನೆ.
“ಎಷ್ಟು ಹೊತ್ತಿಗೆ ಬರಬಹುದು?”
“ಅವರು ಊರಲ್ಲಿಯೇ ಇಲ್ಲ”
“ಆ್ಞ ಎಂಥ ಕೆಲಸವಾಯಿತು ಯಾವೂರಿಗೆ ಹೋಗಿದ್ದಾರೆ?”
ಏನೆಂದು ಉತ್ತರ ಕೊಡಬೇಕು ತಾನು? ಹೇಮಂತ ಯಾವ ಊರಿಗೆ ಹೋಗಿದ್ದಾರೆ, ಯಾಕೆ ಹೋಗಿದ್ದಾರೆ, ಯಾವತ್ತು ವಾಪಸ್ಸು ಬರುತ್ತಾರೆ? ಯಾರಿಗೆ ಗೊತ್ತು! ಹೀಗೆ ತಾನು ಉತ್ತರ ಕೊಡಲು ಸಾಧ್ಯವೇ? ಕೊಟ್ಟರೆ ಜನ ಏನೆಂದುಕೊಂಡಾರು? ಅವಳ ಮನಸ್ಸಿನಲ್ಲಿ ಗೊಂದಲದ ಬಗ್ಗಡವಾಯಿತು. ಏನು ಉತ್ತರ ಕೊಡಬೇಕೆಂಬುದೇ ತಿಳಿಯದಾದಷ್ಟು ಮಂಕಾಯಿತು ಬುದ್ಧಿ. ಅವಳ ಅದೃಷ್ಟಕ್ಕೆ ಅವಳ ತಾಯಿ ವಿಶಾಲಾಕ್ಷಮ್ಮ ಹೊರಗೆ ಹೋಗಿದ್ದವರು ಒಳಗೆ ಕಾಲಿರಿಸುತ್ತ ಈ ಮಾತು ಕೇಳಿಸಿಕೊಂಡರು. ಪರಿಸ್ಥಿತಿ ಎಂಥದೆಂದು ಒಂದು ಕ್ಷಣಕ್ಕೆ ಅರ್ಥವಾಯಿತು. ಅಳಿಯನನ್ನು ನೋಡಲು ಬರುವ ಜನ ಎಂಥವರು, ಅವರೊಡನೆ ಸಂಬಂಧವೆಂತಹುದು ಇತ್ಯಾದಿಯನ್ನು ಬಲ್ಲ ಅವರು “ಯಾವೂರಿಗೆಹೋಗಿದ್ದಾರೆ?” ಎಂಬ ಪ್ರಶ್ನೆಗೆ ತಾವೇ ಉತ್ತರಿಸಿದರು “ಮೈಸೂರಿಗೆ”
ಯಾವ ಊರಿಗೆ ಹೋಗಿದ್ದರೆ ತಾನೇ ಏನು? ಈಗ ಊರಲ್ಲಿಲ್ಲ ಮನೆಯಲ್ಲಿಲ್ಲ, ಅಂದರೆ ತಮ್ಮ ಸಮಾರಂಭಕ್ಕೆ ಬರುವುದು ಸಾಧ್ಯವಿಲ್ಲ. ಏನು ಮಾಡುವುದು!ಈ ಕಸಿವಿಸಿ ಬಂದ ತರುಣರ ಮುಖದ ಮೇಲೆ ಸುಳಿದಿದ್ದು ಅವರ ಕಣ್ಣುಗಳ ಪರದೆಯ ಮೇಲೆ ಮೂಡಿ ಬಂತು.
“ಏನೋ ಅರ್ಜೆಂಟ್ ಕೆಲಸ ಅಂತ ಹೋದರು; ಯಾವತ್ತು ಬರ್ತಾರೋ ಗೊತ್ತಿಲ್ಲ. ಹೋಗಿ ಆಗಲೇ ಮೂರು ದಿನವಾಯಿತು.” ಮತ್ತೆ ವಿಶಾಲಾಕ್ಷಮ್ಮ ಸರಸರ ಉತ್ತರಿಸಿದರು: ಇವರ ಪ್ರಶ್ನೆಗಳಿಗೆ ಉತ್ತರಿಸಿ, ನಳಿನಿಗೆ ಬೇಜಾರಾಗಬಹುದೆಂದು ಊಹಿಸಿ ಅವರು ಬಂದವರನ್ನು ಬೇಗೆ ಸಾಗಹಾಕಲು ಮಾಡಿದ ಉಪಾಯ ಅದು.
ಬಂದ ತರುಣರು ಪರಸ್ಪರ ನೋಡಿಕೊಂಡರು, ಅವರಲ್ಲಿ ಒಬ್ಬ ನಿರ್ಧಾರ ತೆಗೆದುಕೊಂಡವನಂತೆ “ಸರಿ, ಥ್ಯಾಂಕ್ಸ್ ನಾವು ಬರ್ತೀವಿ, ಬಂದಾಗ ಹೇಳಿಬಿಡಿ” ಎಂದು ತಿರುಗಿ ಹೆಜ್ಜೆ ಹಾಕಿದ, ಇನ್ನೊಬ್ಬ ತರುಣನೂ ಅವನನ್ನು ಹಿಂಬಾಲಿಸುತ್ತ “ಏನು ಮಾಡೋದು ಈಗ?” ಎಂಬ ಪ್ರಶ್ನೆಯು ಅವನ ಮನದಲ್ಲಿ ಉದಿಸಿ ಎನ್‍ಲಾರ್ಜ್ ಆಗಿ ಮುಖದ ಮುಂದೆ ಮೂಡಿಬಂದಂತೆ ಅಂದುಕೊಂಡ.
“ಏನು ಮಾಡುವುದು?”
ಸಮಾರಂಭದ ವ್ಯವಸ್ಥಾಪಕರಾದ ಆ ತರುಣರಿಗೆ ಮುಖ್ಯಅತಿಥಿಗಾಗಿ ಏನು ಮಾಡುವುದೆಂಬ ಸಮಸ್ಯೆ. ಪ್ರಾಯಶಃ ಸಮಾರಂಭಕ್ಕೆ ಬಂದ ಯಾರಾದರೂ ಒಬ್ಬರನ್ನು ವಿಶೇಷವಾಗಿ ಪ್ರಾರ್ಥಿಸಿಕೊಂಡು ಅದರಿಂದ ಕಾರ್ಯ ನೆರವೇರಿಸಬಹುದು ಅಥವಾ ಮುಖ್ಯ ಅತಿಥಿಗಳು ಭಾಷಣ ಮಾಡುವಷ್ಟು ಕಾಲವೂ ಯಾವುದಾದರೂ ಮನರಂಜನಾ ಕಾರ್ಯಕ್ರಮ ಹಾಕಿಕೊಳ್ಳಬಹುದು. ಆದರೆ ನಳಿನಿ ಏನು ಮಾಡಬಹುದು? ಅವಳ ತಲೆಯ ಜ್ವಾಲಾಮುಖಿ ಸಿಡಿಯಲಾರದು; ಒಳಗೆ ಯೋಚನೆ-ಆತಂಕಗಳ ಲಾವ ಸುತ್ತಿ ಸುಳಿದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುವಂಥದು.
ಹೇಮಂತನಿಗೆ ಏನಾಗಿತ್ತು? ಯಾಕೆ ಹೋದರು? ಅದೂ ಹೇಳದೇ ಕೇಳದೇ, ಒಂದು ಚೀಟಿ ಬರೆದಿಟ್ಟು “ಮನಸ್ಸಿಗೆ ತುಂಬ ಬೇಸರವಾಗಿದೆ ಕೆಲವು ದಿನ ಗುರಿಯಿಲ್ಲದೆ ಸುತ್ತಾಡಿಕೊಂಡು ಬರುತ್ತೇನೆ, ಖಂಡಿತ ಬರುತ್ತೇನೆ. ಈ ವಿಷಯಬೀದಿ ಮಾತಾಗದಿರಲಿ ಆಗಾಗ ಕಾಗದ ಬರೆಯುತ್ತೇನೆ” ಇಷ್ಟೆ ಚೀಟಿಯಲ್ಲಿ. ಅವರು ಹೊರಟಾಗ ತಾನು ಮನೆಯಲ್ಲಿಯೇ ಇದ್ದಿದ್ದರೆ ಹೀಗಾಗುತ್ತಿತ್ತೇ. ಆದರೆ ಅವರು ತಾನಿಲ್ಲದ ವೇಳೆಯನ್ನೇ ಆರಿಸಿಕೊಂಡು ಹೋಗಿರುವುದು ಖಚಿತ.
ಮೂರು ದಿನಗಳ ಹಿಂದೆ, ತಾನು ಎಂದಿನಂತೆಯೇ ಮಧ್ಯಾಹ್ನ ಸಂಗೀತದ ತರಗತಿಗೆ ಹೋಗಿದ್ದಳು. ಮನೆಯಲ್ಲಿ ಕೂತು ಬೇಸರವೆಂದು ಹತ್ತಿರವೆ ಇದ್ದ ಮಧ್ಯವಯಸ್ಸಿನ ವಿಧವೆ ಹೇಳಿಕೊಡುತ್ತಿದ್ದ ದೇವರ ನಾಮಗಳ ತರಗತಿಗೆ ಹೋಗುವ ಪರಿಪಾಟ ಅವಳದು.ತಾಯಿ ಹೊರಗೆ ಅಂಗಡಿಗೆಲ್ಲೋ ಹೋಗಿದ್ದಳೇನೋ, ಅವತ್ತು ಮಧ್ಯಾಹ್ನ ಅಳಿಯ ಬೇಗ ಮಧ್ಯಾಹ್ನವೇ ಮನೆಗೆ ಬಂದದ್ದು ಆಶ್ಚರ್ಯವುಂಟುಮಾಡಿದ್ದರೂ, ಏನುಕೆಲಸವೋಅಂದುಕೊಂಡು ಯಥಾಪ್ರಕಾರದಂತೆ ಹೆಚ್ಚು ಜನವಿರುವುದಿಲ್ಲವೆಂಬ ಕಾರಣದಿಂದ ಅಂಗಡಿಗೆ ಹೋಗಿದ್ದರು.
ನಳಿನಿ ವಾಪಸ್ಸು ಬಂದಾಗ ಹೇಮಂತ ಬೆಳಿಗ್ಗೆ ಹಾಕಿಕೊಂಡು ಹೋಗಿದ್ದ ಷೂಗಳು ಹೊರಗಿರುವುದನ್ನು ಕಂಡು ಆಗಲೇ ಬಂದು ಬಿಟ್ಟಿದ್ದಾರಲ್ಲ,ಇಷ್ಟು ಹೊತ್ತಿಗೆಮನೆಗೆ ಸಾಧಾರಣವಾಗಿ ಬರುವವರಲ್ಲ ಎಂಬ ಸಂದೇಹದಿಂದ, ಲಗುಬಗೆಯಲ್ಲಿ ಚಪ್ಪಲಿ ಕಳಚಿ ಹೇಮಂತನ ರೂಮಿನಲ್ಲಿ ಇಣುಕು ಹಾಕಿದಾಗ ಅವನು ಅಲ್ಲಿರಲಿಲ್ಲ. ಬೆಡ್‍ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿರಬಹುದೆಂದುಕೊಂಡು ಕೈಕಾಲು ತೊಳೆದುಕೊಂಡು ಬಂದ ನಳಿನಿ ಅಲ್ಲಿಗೆ ಬಂದರೆ ಅಲ್ಲೂ ಇಲ್ಲ. ಬಂದವರೇ ಹೊರಟು ಹೋಗಿರಬೇಕೇನೋ ಎಂದುಕೊಳ್ಳುತ್ತಾ ಅಡಿಗೆ ಮನೆಯಲ್ಲಿದ್ದ ತಾಯಿಯ ಹತ್ತಿರ ಕೇಳಿದ್ದಳು: ”ಅಮ್ಮಾ ಇವರು ಬಂದಿದಾರಾ?”
“ಬಂದರಲ್ಲ. ಮಲಗಿರಬಹುದು ನೋಡು.”
“ಉಹ್ಞು ,ಅಲ್ಲೂ ಇಲ್ಲ.”
“ಹಾಗಾದರೆ ನಾನು ಅಂಗಡಿಗೆ ಹೋದಾಗ ಎಲ್ಲಾದರೂ ಹೋದರೇನೋ?”
ಹೌದು ಹಾಗೆಯೇ ಕಾಣುತ್ತಿತ್ತು. ಮನೆಯಲ್ಲಿ ಎಲ್ಲೂ ಇಲ್ಲ.ಏನು ಕೆಲಸವೋ ಎಂದುಕೊಂಡು ನಳಿನಿ ತಾನು ಸೀರೆ ಬದಲಾಯಿಸಲು ಬೆಡ್‍ರೂಮಿಗೆ ಬಂದಿದ್ದಳು.ಬೇರೆ ಸೀರೆ ಉಡುತ್ತಿದ್ದಾಗ ಆಕಸ್ಮಿಕವಾಗಿ ತಲೆದಿಂಬಿನ ಮೇಲೆ ಮಡಿಸಿಟ್ಟ ಒಂದು ಕಾಗದ ಕಾಣಿಸಿತ್ತು. ಏನಿರಬಹುದೆಂದು ಲಗುಬಗೆಯಿಂದ ಸೀರೆ ಉಡುವುದನ್ನು ಪೂರೈಸಿ ಕಾಗದವನ್ನು ಬಿಡಿಸಿ ಓದುವಾಗ ಅವಳ ದೇಹದಲ್ಲೆಲ್ಲ ಕೊರೆಯುವ ಮಂಜಿನ ಹರಿದಾಟ. ಉಸಿರು ಮಾತ್ರ ಎಲ್ಲೂ ನಿಲ್ಲದೆ ಒಳಹೊರಗೆ ಓಡಾಡುವಂತಾಯಿತು. ಮೈಯೆಲ್ಲಾ ಬೆವರು.ಯಾಕೆ ಹೀಗೆ? ಅವಳಿಗೆ ಏನೂ ತೋಚದಂತೆ ಮನಸ್ಸು ಖಾಲಿ ಹಾಳೆಯಾಯಿತು. “ಅಮ್ಮಾ” ಎಂದುಬಾಯಿ ಕೂಗಿತ್ತು.
ಕೂಗಿದ ರೀತಿಯಿಂದ ಗಾಬರಿಯಾದ ವಿಶಾಲಾಕ್ಷಮ್ಮ ಒಳಗಿನಿಂದ ಭರಭರ ಬಂದಾಗ ಯಾಂತ್ರಿಕವಾಗಿ ಮಗಳು ನೀಡಿದ ಕಾಗದವನ್ನು ಅಷ್ಟೇ ಯಾಂತ್ರಿಕವಾಗಿ ತೆಗೆದುಕೊಂಡು ಓದಿದಾಗ ಅವರ ಮನಸ್ಸು ಬರಿದಾದ ಬಾವಿಯಾಯಿತು. ಏದುಸಿರು ಬಿಡುತ್ತಾ ತಾಯಿ,ಮಗಳು ಒಬ್ಬರನ್ನೊಬ್ಬರು ನೋಡಿಕೊಂಡರು. ಒಂದು ಚಿತ್ರದ ಕಣ್ಣು ಇನ್ನೊಂದು ಚಿತ್ರದ ಕಣ್ಣುಗಳನ್ನು ನೋಡಿದಂತಾಯಿತು. ಬಾಂಬುದಾಳಿಯ ನಂತರ ಸಿಡಿತಗಳೆಲ್ಲ ಮುಗಿದು ಕೇವಲ ಹೊಗೆಯಿಂದ ತುಂಬಿದ ವಾತಾವರಣವದು. ಉಸಿರಾಡಲು ಸಾಧ್ಯವಿಲ್ಲ. ಆಡದೆಯಿರಲು ಆಗುವುದಿಲ್ಲ. ಎಲ್ಲ ಮಸಕುಮಸಕು. ಅಳಿದದ್ದೇನೋ ಉಳಿದದ್ದೇನೋ. ಯಾರು ಕಾರಣರೋ ಇದಕ್ಕೆ? ಹೇಗೆ ಕೊನೆಯೋ ಈ ದಾಂಧಲೆಗೆ? ದೇವರೇ! ಇಬ್ಬರೂ ಪ್ರತಿಮೆಗಳಾಗಿಬಿಟ್ಟರು.
* * *
  ಬಸ್ ಹತ್ತಿ ಖಾಲಿಯಿದ್ದ ಸೀಟೊಂದರಲ್ಲಿ ಬಂದು ಕುಳಿತ ಹೇಮಂತ ಇನ್ನಾರಾದರೂ ಪರಿಚಯದವರಿದ್ದಾರೇನೋ ಎಂದು ಹುಲ್ಲೆಗಣ್ಣಿನಿಂದ ಒಮ್ಮೆ ಬಸ್ಸಲ್ಲಿ ದೃಷ್ಟಿಹಾಯಿಸಿ ಉಸ್ಸೆಂದು ನಿಟ್ಟುಸಿರುಬಿಟ್ಟ. ಕ್ಷಣಕ್ಕೊಂದು ಬಾರಿ ನಿಟ್ಟುಸಿರು ಬಿಡುವ ರೈಲ್ವೆಯ ಉಗಿ ಎಂಜಿನ್ನಾಗಿತ್ತು ಅವನ ಮೂಗು. ಆದರೆ ಚಲನೆಯಿಲ್ಲದ ಗಾಡಿಯಂತಾಗಿತ್ತು ಅವನ ದೇಹ. ಎಲ್ಲಿ ಹೋಗುತ್ತಿದ್ದೇನೆಂದು ಅರಿಯದೆ ಹೊರಬಿದ್ದಿದ್ದಾನೆ ಅವನು. ಬಸ್ಸಿನ್ನೂ ಬೆಂಗಳೂರಿನಿಂದ ಬಹುದೂರವೇನೂ ಬಂದಿಲ್ಲ. ಆದರೆ ತಾನು ಆಗಲೇ ಅದೆಷ್ಟು ದೂರ ಬಂದುಬಿಟ್ಟಿದ್ದೇನೆ ಎನ್ನಿಸಿತು ಅವನಿಗೆ. ತನ್ನ ಪಥದಲ್ಲಿ ಸುತ್ತುತ್ತಿದ್ದ ಬಾಹ್ಯಾಕಾಶ ನೌಕೆಯೊಂದು ದಾರಿಬಿಟ್ಟು ಹೋದ ಹಾಗಿತ್ತು ಅವನ ಪರಿಸ್ಥಿತಿ. ತನ್ನ ಜೀವನ ಕಕ್ಷೆಗೆ ಮತ್ತೆ ಮರಳುವುದೆಂದಿಗೆ ಅಥವಾ ಅದು ಎಂದಾದರೂ ಸಾಧ್ಯವಾದೀತೇ? ಭೂಮಿಯ ವಾತಾವರಣದಿಂದ ಹೊರಬಂದ ನಂತರ ಎಲ್ಲ ಪರಿಕರಗಳೂ ಕೆಲಸಗೇಡಿಯಾಗಿ ಪಥದಿಂದ ಹೊರಹೋಗಿ ಇನ್ನಾವುದೋ ಗ್ರಹದ್ದೋ ನಕ್ಷತ್ರದ್ದೋ ಗುರತ್ವವಲಯಕ್ಕೆ ಸಿಲುಕಿ ಅವಕ್ಕೆ ಬಡಿದು ತನ್ನ ಬಾಳು ನುಚ್ಚುನೂರಾಗಬೇಕೊ, ಉರಿದು ಬೂದಿಯಾಗಬೇಕೋ ತನ್ನ ಬಾಳ ಬಾಹ್ಯಾಕಾಶ ನೌಕೆ!
ಇದ್ದಕ್ಕಿದ್ದಂತೆ ತಾನು ಕಾಣೆಯಾಗಿದ್ದರಿಂದ,ತನ್ನ ಪತ್ರ ಓದಿನಳಿನಿಗೆ ಹೇಗಾಗಿರಬಹುದು? ಕಾಲ ಸರಿದರೂ ತಾನು ಬಾರದಿರುವುದರಿಂದ ಕವಿತಾ ತಾಯಿಯ ಬಳಿ ಎಂತಹ ಪ್ರಶ್ನೆಗಳ ಮಳೆ ಸುರಿಸುವಳೋ.ಆ ಪ್ರಶ್ನೆಗಳೆದ್ದು ತಾಯಿಯ ಹೃದಯಕ್ಕೆತಂಪೆರೆಯುವ ತಣ್ಣೀರಿನ ಮಳೆಯಲ್ಲ; ಎಲ್ಲವನ್ನು ಸುಟ್ಟು ಬೊಬ್ಬೆಯಾಗಿಸಿ ಉರಿಉರಿಯೆಂದು ಕಿರುಚುವ ಹಾಗೆ ಮಾಡುವ ಕುದಿಯುವ ನೀರಿನದು.ತನ್ನ ಜೀವನ ಸೌದೆಯಾಯಿತು: ತಾನೂ ಉರಿದು ಇತರರನ್ನೂ ಉರಿಸಿಬಿಡುತ್ತೇನೇನೋ?
ಈ ದಿನ ತಾನು ಲಗುಬಗೆಯಿಂದ ಮನೆಗೆ ಬಂದು ನಿರೀಕ್ಷಿಸಿದ ಹಾಗೆಯೇ ಮನೆಯಲ್ಲಿ ನಳಿನಿ-ಕವಿತಾರಿಲ್ಲದ ಸಮಯ ತನ್ನ ಇಡೀ ಯೋಜನೆ ಸುಸೂತ್ರವಾಗಿ ಸಾಗಲು ಸಹಾಯಕವಾಗಿತ್ತು. ಹಿಂದಿನ ದಿನದಿಂದಲೇ ತನ್ನ ಯೋಜನೆ ಪ್ರಾರಂಭವಾಗಿತ್ತು ಒಂದು ರೀತಿಯಲ್ಲಿ. ರಾತ್ರಿ ಗೋಡೆಯ ಬದಿಗೆ ಕವಿತಾಳನ್ನು ಮಲಗಿಸಿ ತನ್ನ ಪಕ್ಕ ಬಂದು ಮಲಗಿದ್ದ ನಳಿನಿಯನ್ನು ಅವನು ಅಪ್ಪಿಕೊಂಡು ಮುದ್ದಾಡಿದ್ದ ರೀತಿ. ಕತ್ತಲಾವರಿಸಿದ್ದರೂ ಸ್ಪಷ್ಟವಾಗಿ ಕಾಣುವ ಹಾಗೆ ವಿಚಿತ್ರವಾಗಿತ್ತು. ಅವಳು ಕೊಸರಿಕೊಂಡಷ್ಟೂ ಬಂಧಿಸುವ ಬಾಹುಗಳು. ಅವಕ್ಕೆಷ್ಟು ಬಲ! ನಳಿನಿಗೆ ಅನುಮಾನ ಬರಲು ಕಾರಣವಿರದಿದ್ದರೂ ಬೇರೆ ರೀತಿ ಅನ್ನಿಸಿರಬಹುದು. ಆದರೆ ಸಂಶಯ ತಾಳಿರಲಿಲ್ಲ ಅವಳು. ಆಪ್ಯಾಯಕರವಾಗಬೇಕಿದ್ದ ಈ ಅಪ್ಪುಗೆ ಧೃತರಾಷ್ಟ್ರನ ಅಪ್ಪುಗೆಯಾದೀತೆಂದು ಅವಳು ಭಾವಿಸಿರಲಿಲ್ಲ. ಇದರ ಹಿನ್ನೆಲೆಗಿದ್ದ ಹೇಮಂತನ ಮನಸ್ಸಿನಲ್ಲಿ ಸುಳಿಯುತ್ತಿದ್ದ ಆಲೋಚನೆಗಳ ಸುಳಿಗಾಳಿಯ ಅರಿವು ನಳಿನಿಗೆ ಹೇಗಾಗಬೇಕು? ತನ್ನಗಂಡವಿಚಿತ್ರ ಎನ್ನಿಸಿತ್ತು, ಅಷ್ಟೆ, ಅವಳಿಗೆ.
ಮುಂದಿನದು ಏನು ಎಂಬುದರ ಬಗ್ಗೆ - ಕೊನೆಯ ಪಕ್ಷ. ಮಾರನೆ ದಿನ ಮಧ್ಯಾಹ್ನ ತಾನು ಏನು ಮಾಡಬೇಕೆಂದು ನಿರ್ಧಾರ ಕೈಗೊಂಡಿದ್ದನೋ ಅದರ ಬಗ್ಗೆ ಸ್ಪಷ್ಟವಾಗಿ ಯೋಚಿಸಿಕೊಂಡಿದ್ದ. ಹೇಮಂತ ವಾಪಸು ಬರುವವರೆಗೂ ನೆನಪಿನ ಬುತ್ತಿಯನ್ನು ಹೊತ್ತುಕೊಂಡು ಹೋಗಲು ಹೀಗೆ ನಡೆದುಕೊಂಡಿದ್ದ. ಮುಂದೆ ಆ ದಿನಗಳ ಸಾಲಿನ ಅಪ್ಪುಗೆಯನ್ನೆಲ್ಲ ಇವತ್ತೇ ಬಳಸಿ ಬಿಡಲು ಯೋಚನೆ ಮಾಡಿದಂತಿತ್ತು. ಅಲ್ಲದೆ ನಳಿನಿಗೆ ತನ್ನ ಪ್ರೀತಿಪೂರದ ಗಾಂಜಾ ತಿನ್ನಿಸಿ ಮಾರನೆಯ ಮಧ್ಯಾಹ್ನದ ತೇಲಾಟಕ್ಕೆ ತಯಾರಾಗಬೇಕಾಗಿತ್ತು ನಾನು.
ಕವಿತಾಳದು ಮಲಗಿದ ನಿಮಿಷಕ್ಕೇ ಮೈಮರೆತು ಹೊಂಗನಸ ಸಾಮ್ರಾಜ್ಯವನ್ನು ಸೇರುವ ವಯಸ್ಸು. ಅವಳನ್ನು ತಲೆಗೂದಲಿನಿಂದ ಪಾದದ ಪ್ರತಿಬೆರಳಿನವರೆಗೂ ನೇವರಿಸಿ ಅದರ ಸ್ಪರ್ಶದ ಲೇಪನದಿಂದ ತನ್ನ ಕೈಗಳನ್ನು ಗಟ್ಟಿಗೊಳಿಸಿಕೊಂಡ ಹೇಮಂತ ಹೆಂಡತಿಯನ್ನು ಬರಸೆಳೆದಿದ್ದ. ತನ್ನ ನಡವಳಿಕೆ ವಿಚಿತ್ರವೆನಿಸುವಷ್ಟು ಕಾಲಾವಕಾಶ ನೀಡದೆ ಅವಳ ದೇಹವನ್ನು ಬರಬರನೆ ಬತ್ತಲುಗೊಳಿಸಿದ್ದ. ತಾನು ಬರಿಮೈಯಾಗಿ ಅವಳಲ್ಲಿ ಹುದುಗಿ ಹೋಗುವಂತೆ ಬೆಸೆದುಕೊಂಡ. ಕಗ್ಗತ್ತಲೆಯಲ್ಲೂ ಅವನ ಕೈಮೈ ನಳಿನಿಯ ದೇಹವನ್ನು ಅಂಗುಲಂಗುಲ ಪರೀಕ್ಷಿಸಿ ಚರ್ಮದೊಳಗೆ ಅದರತನವನ್ನು ಇಂಗಿಸಿಕೊಳ್ಳುತ್ತಿತ್ತು. ಗಂಡನ ಗಾಳಿ ಅವಳಲ್ಲಿಯೂ ಬಿಸಿಗಾಳಿಯ ಅಲೆಯನ್ನುಆರಾತ್ರಿಯ ಚಳಿಯಲ್ಲಿ ತೇಲಿಸಿ ಭ್ರಮಾಲೋಕವನ್ನು ಸೃಷ್ಟಿಸಿತ್ತು, ಅವಳ ದೇಹ ಹೇಮಂತನ ಮೈಗೆ ಪ್ರತಿಸ್ಪಂದಿಸುತ್ತ ಹೋಯಿತು. ತನ್ನತನವನ್ನು ಅವಳಲ್ಲಿ ಸುರಿದು ಎದ್ದ ಹೇಮಂತ ಬಟ್ಟೆ ಧರಿಸಿ ಬಚ್ಚಲಿಗೆ ಹೋಗಿಬಂದು ಅಂಗಾತ ಮಲಗಿದ್ದ.
ಪ್ರತಿ ರಾತ್ರಿಯಾದರೆ ಹೆಂಡತಿಯ ಸಂಗ ಅವನ ದೇಹಕ್ಕೆ ಮಾಂತ್ರಿಕ ಲೇಪದೊಂದಿಗೆ ನಿದ್ರಾಲೋಕಕ್ಕೆ ಕರೆದೊಯ್ಯುವ ನೌಕೆಯಾಗುತ್ತಿತ್ತು; ಬಹು ಬೇಗ ನಿದ್ದೆ ಆವರಿಸುತ್ತಿತ್ತು. ಆದರೆ ಇಂದು ಮಾತ್ರ ಅವನಲ್ಲಿ ನಿದ್ದೆ ಬರಲು ಹೆದರುತ್ತಿತ್ತು. ಕಣ್ಣುಗಳನ್ನು ಮುಚ್ಚಿಕೊಂಡರೂ ಅವನ ಅಂತಃಪಟಲದಲ್ಲಿ ಬಿರುಗಾಳಿಯ ಚಿತ್ರ ಕಾಣಿಸುತ್ತಿತ್ತು. ತನ್ನ ಜೀವನಕ್ಕೆ ಸಂಬಂಧಿಸಿದ ಹಾಗೆ ಸೈಕ್ಲೋನ್‍ ತೀವ್ರವಾಗತೊಡಗಿದಂತೆ ಅವನಿಗೆ ಅನ್ನಿಸತೊಡಗಿತ್ತು. ಸಾವಧಾನವಾಗಿ ಉಡುಪು ಧರಿಸಿ ಬಂದ ನಳಿನಿ ಪಕ್ಕದಲ್ಲಿ ಮಲಗಿದ್ದು ಹೇಮಂತನ ಅರಿವಿಗೆ ಬಂತು. ಹಿಂದಾಗಿದ್ದರೆ ಹಾಗೆ ನಿದ್ದೆ ಮಾಡಲು ಬಂದಾಗ ಅವಳ ಎದೆಯ ಮೇಲೆ ತನ್ನ ಬಾಹುಗಳ ರಕ್ಷಾಕವಚವನ್ನಿಟ್ಟು ಮಲಗುತ್ತಿದ್ದ ಅವನು ಈಗ ಮಾತ್ರ ಸುಮ್ಮನೆಯೇ ಇದ್ದ. ನಾಳಿನ ಕಾರ್ಯಕ್ರಮಕ್ಕೆ ಈಗ ಮಾಡಬೇಕಾದ ಸಿದ್ಧತೆಯನ್ನು ನಡೆಸಬೇಕಾದರೆ ನಳಿನಿ ಮಲಗಬೇಕು.
“ಏನಿವತ್ತು ರಾಯರು, ಭರ್ಜರಿ ಹೋರಾಟ ನಡೆಸಿದಿರಿ?” ಎಂದು ನಳಿನಿ ಕೇಳಿದ ಪ್ರಶ್ನೆ ಹೇಮಂತನಿಗೆ ಕೇಳಿಸಿತು. ಪ್ರಶ್ನೆ ಕೇಳುವಾಗ ಅವಳ ಕಣ್ಣುಗಳು ಹೇಗೆ ತೃಪ್ತಿಯಿಂದ ಉರಿಯುತ್ತಿವೆ! ಮುಖದ ಮೇಲೆ ಮುಗುಳ್ನಗೆಯ ಮಂದಮಾರುತ ಬೀಸುತ್ತಿದೆ ಎಂಬ ಚಿತ್ರ ಅವನ ಮನಸ್ಸಿನಲ್ಲಿ ತೇಲಿ ಬಂತು. ಆದರೆ ಅದಕ್ಕೆ ಉತ್ತರಿಸಿದರೆ, ಪ್ರಶ್ನೆಗಳು ಮರಿ ಹಾಕಲು ಆಸ್ಪದವಾಗುತ್ತವೆ. ಎಲ್ಲಿಗೆ ಕೊನೆಯಾಗುವುದೋ, ಬಲ್ಲವರಾರು? ತಾನು ಮಾತಿಗೆ ತೊಡಗಿದಂತೆ ಹೃದಯದ ಕಾಳುಗಳೆಲ್ಲ ಬಾಯಿಯ ಮೂಲಕ ಸುರಿದು, ಸುರಿದು ತನ್ನ ಯೋಜನೆಯ ಚೀಲ ಬರಿದಾದರೆ? ಉಹ್ಞು, ಅವಳಿಗೆ ಇದಾವುದೂ ಗೊತ್ತಾಗಕೂಡದು.ವಾಪಸು ಬಂದಮೇಲೆ ನೋಡೋಣ. ಪರಿಸ್ಥಿತಿ ತಿಳಿಯಾಗಿದ್ದರೆ ಹಿಂದಿನ ಅನಿಸಿಕೆಗಳ ರೀಲುಗಳನ್ನು ಬಿಚ್ಚಿತೋರಿಸಬಹುದು. ಈಗ ಬೇಡ. ಅದಕ್ಕೇ ಹೇಮಂತ ಅವಳ ಅ ಪ್ರಶ್ನೆಗೂ ಉತ್ತರಿಸಲಿಲ್ಲ. “ಹಿಂಡಿ ಹಿಪ್ಪೆ ಮಾಡಿಬಿಟ್ಟಿರಲ್ಲ”ಎಂಬ ಮೆಚ್ಚುಗೆಯ ಆಕ್ಷೇಪದ ಮಾತಿಗೂ ಮರುನುಡಿಯಲಿಲ್ಲ.
ನಿದ್ದೆಬಂದಿರಬೇಕು, ಇನ್ನೇನು ಮತ್ತೆ, ಇದ್ದಬದ್ದದ್ದನ್ನೆಲ್ಲ ಬರಿದುಗೊಳಿಸಿಕೊಂಡು ಮಲಗದೆ? ಎಂದುಕೊಂಡ ನಳಿನಿ ತಾನೂ ಕಣ್ಣು ಮುಚ್ಚಿದ್ದಳು.ಅವಳ ದೇಹಾಯಾಸ ನಿದ್ದೆಗೆ ಹೊದ್ದಿಕೆಯಾಯಿತು. ಕ್ಷಣದ ಹೊತ್ತಿನಲ್ಲಿಯೇ ನಿದ್ದೆಗೊಳಗಾದಳು.
ಇರಲಿ, ಅವಳಿಗೆ ಚೆನ್ನಾಗಿ ನಿದ್ದೆ ಹತ್ತಲಿ ಎಂದುಕೊಂಡ ಹೇಮಂತ ಕದಲದೆ ಸ್ವಲ್ಪ ಕಾಲ ಮಲಗಿದ್ದ. ಎಷ್ಟು ಹೊತ್ತೋ ಯಾರಿಗೆ ಗೊತ್ತು! ಅವನು ಯೋಚನೆಯ ಸುಳಿಗೆ ಸಿಕ್ಕಿ ಕಾಲಾತೀತನಾಗಿದ್ದ. ತಾನು ಹೋಗಬೇಕಾದುದರ ಕಾರಣ ನೆನಪಿಗೆ ಬಂದು ಎದೆಯಲ್ಲಿ ದೀಪಾವಳಿಯ ಢಮಢಮ ಶುರುವಾಯಿತು. “ಎತ್ತಣಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ?”ಅನ್ನಿಸಿತು. ಆದರೆ ತಾನು ನಡೆದದ್ದಕ್ಕೆಲ್ಲ ಒಂದು ರೀತಿ ಹೊಣೆಯಲ್ಲವೇ? ಏನೇನು ಆಗುತ್ತದೆಯೋ ತಾನು ಊಹಿಸುವುದಕ್ಕೂ ಸಾಧ್ಯವಾಗದು. ಮುಂದೆ ಏನೇನು ಮಾಡಬಹುದೆಂದು ಅವನು ತುಮಕೂರಿನಿಂದ ಬಂದ ಕಾಗದದಲ್ಲಿ ಬರೆದಿದ್ದಾನೆ; ಅವನು ನಂದಿನಿಯ ಅಣ್ಣನಂತೆ. ವಸಿಷ್ಠನ ಪ್ರಶಾಂತ ಆಶ್ರಮದ ಮೇಲೆ ವಿಶ್ವಾಮಿತ್ರ ಸೈನ್ಯಸಮೇತ ದಾಳಿ ಮಾಡಿದಂತೆ ತನ್ನ ಬಾಳಿನಲ್ಲಿ ಆ ಪತ್ರ ಬಂದಿದೆ. ದೀರ್ಘವಾದ ಪತ್ರ. ಮುಂದೆ ನಡೆಯಬಹುದಾದ ಬಾಂಬ್ ದಾಳಿಗಳ ಮುನ್ಸೂಚನೆ ಆ ಪತ್ರದಲ್ಲಿಯೇ ಅಥವಾ ಠೊಸ್‍ ಪಟಾಕಿಯೇ, ಹೇಗೆ ಹೇಳುವುದು?
ಕೊನೆಯ ಪಕ್ಷ, ಆ ಪತ್ರದ ಸುಂಟರಗಾಳಿಯಿಂದೆದ್ದ ಮಣ್ಣು ತನ್ನ ಮನಸ್ಸಿನ ತಳದಲ್ಲಿ ನೆಲೆಗೊಳ್ಳುವವರೆಗಾದರೂ ತಾನು ದೂರ ಹೋಗಬೇಕು. ಆ ಧೂಳು ಕಣ್ಣಿನಲ್ಲಿ ರಿಹೋಗದಂತೆ ಸುರಕ್ಷಿತವಾದೆಡೆಗೆ ಹೋಗಬೇಕು. ಸಾಧ್ಯವಾದರೆ ಆ ಧೂಳು ಎಂದೆಂದೂ ನಳಿನಿಗೆ ಅಂಟಬಾರದು. ಇಲ್ಲಿದ್ದರೆ ಇಡೀ ಮನೆಯೇ ಧೂಳಿನಿಂದ ಕೂಡಿಬಿಡಬಹುದೆಂಬ ಕಾರಣಕ್ಕಾಗಿಯೇ ಅಲ್ಲವೇ ತಾನು ಹೋಗಬೇಕಾಗಿರುವುದು? ಹೌದು, ಹೋಗಿಬಿಡುತ್ತೇನೆ. ಕೆಲವುಕಾಲ, ಸ್ವಲ್ಪಕಾಲ ಬೇರೆಯದೇ ವಾತಾವರಣದಲ್ಲಿ ಸುಳಿದಾಡಿದರೆ ಈ ಪ್ರಕ್ಷುಬ್ಧತೆ ಕಡಿಮೆಯಾಗಬಹುದು. ಯೋಚಿಸುತ್ತ ಮಲಗಿದ್ದ ಹೇಮಂತ ನಿಧಾನವಾಗಿ ‘ನಳಿನಿ’ ಎಂದು ಅವಳ ಕಿವಿಯ ಬಳಿ ಉಸಿರಿದ ಆದರೆ ಅವಳು ಇವನ ಹೃದಯ ಸಮುದ್ರದ ಬಿರು ಅಲೆಗಳ ಭೋರ್ಗರೆತವನ್ನು ಕೇಳಲಾಗದೆ ಪ್ರಶಾಂತವಾದ ಉದ್ಯಾನವನದಲ್ಲಿದ್ದಳು. ಅವಳಿಗೆ ನಿದ್ದೆ ಬಂದಿದೆಯೆಂಬುದನ್ನು ಖಚಿತಪಡಿಸಿಕೊಂಡ ಹೇಮಂತ, ನಿಧಾನವಾಗಿ ಮೇಲೆದ್ದ. ಬಟ್ಟೆಗಳಿದ್ದ ಬೀರುವಿನಕಡೆ ಹಜ್ಜೆಹಾಕಿದ, ಗಾಳಿಯ ಮೇಲೆ ನಡೆದಂತೆ. ಅದರ ಬಾಗಿಲು ತೆಗೆಯುವಾಗ ಅದು ತುಸುವಾಗಿ ಕಿರುಗುಟ್ಟಿ ಮುಲುಗಾಡಿತು. ಒಂದೊಂದಾಗಿ ಬಟ್ಟೆಗಳನ್ನು ನಾಲ್ಕೈದು ಜೊತೆ ನಿಧಾನವಾಗಿ ತೆಗೆದು ಮಡಿಸಿ ಒಂದೆಡೆ ಜೋಡಿಸಿದ. ಕೊನೆಗೆ ಬೀರುವಿನ ಒಳಗೂಡಿನಲ್ಲಿದ್ದ ಹಣವನ್ನು ತೆಗೆದು ಎಣಿಸಿದ. ಅಗಲವಾದ ನೂರು ರೂಪಾಯಿ ನೋಟುಗಳು ಅವನ ಅಂಗೈ ಮುಚ್ಚಿದ್ದವು. ಹತ್ತು ನೋಟುಗಳನ್ನು ತೆಗೆದುಕೊಂಡು ಸೂಟ್‍ಕೇಸಿನಲ್ಲಿ ಬದಿಯಲ್ಲಿದ್ದ ಅದರ ಗೋಡೆಗೆ ಅಂಟಿದ್ದ ಬಟ್ಟೆಯ ಚೀಲದಲ್ಲಿರಿಸಿದ. ಆಮೇಲೆ ಬಚ್ಚಲು ಮನೆಯತ್ತ ನಡೆದು, ಸ್ವಿಚ್ಚೊತ್ತಿದರೆ ಟಕ್ ಸದ್ದಾಗಬಹುದೆಂದು ಹಾಗೆಯೇ ಕತ್ತಲಲ್ಲಿ ಕೈಯಾಡಿಸಿ ಇದ್ದ ಮೂರು ನಾಲ್ಕು ಸೋಪ್ ಪೆಟ್ಟಿಗೆಗಳಲ್ಲಿ ಒಂದನ್ನು ತಂದ. ಬರುವಾಗ ಹಾಲಿನಲ್ಲಿ ಮಲಗಿದ್ದ ಅತ್ತೆಯ ಕಡೆ ಗಮನಹರಿಸಿದ, ಸಧ್ಯ, ಅವರು ನಿದ್ದೆಯಲ್ಲಿದ್ದಾರೆ ಅಥವಾ ಎದ್ದಿದ್ದರೂ ತನ್ನ ಮಲಗುವ ಕೋಣೆಯಲ್ಲಿ ಏನು ಮಾಡುತಿದ್ದೇನೆಂದು ಕಾಣಲಾಗದಅವರು ತಪ್ಪು ತಿಳಿಯಲು ಸಾಧ್ಯವಿಲ್ಲ.ಅವನು ಹೊಸದಾಗಿ ಕೊಂಡು ತಂದಿದ್ದ ಟೂಥ್‍ಬ್ರಶ್‍ ಅನ್ನು ಸೂಟ್‍ಕೇಸಿನ ಒಂದು ಗೋಡೆಯ ಬದಿ ಬಟ್ಟೆಗಳಡಿಯಲ್ಲಿ ತುರುಕಿ ಬಾಗಿಲು ಮುಚ್ಚಿದಾಗ ಹೊಟ್ಟೆ ತುಂಬಿದ ಅದು ಸುಲಭವಾಗಿ ತುಟಿಗಳೆರಡನ್ನು ಒಂದು ಮಾಡಲಿಲ್ಲ. ಅದನ್ನು ಹಾಗೆಯೇ ಮಂಚದಡಿ ಸರಿಸಿದ, ಹೇಮಂತ ನಿಧಾನವಾಗಿ ಬಂದು ಹೆಂಡತಿಯ ಪಕ್ಕದಲ್ಲಿ ಮಲಗಿದ.
ಅವಳ ಮೃದುವಾದ ಕೈ ತನ್ನ ಬರಿತೋಳಿಗೆ ತಾಕಿದಾಗ ಅಳು ಬಂದಹಾಗಾಯಿತು.ತಾನು ಹೋದದ್ದನ್ನು ತಿಳಿದು ಅವಳಿಗೆ ಹೇಗಾಗಬಹುದು? ನಾನು ನಾಳೆ ಸಿದ್ಧಪಡಿಸಿಡಬೇಕಾದ ಕಾಗದ ಹೇಗಿರಬೇಕು, ಎಷ್ಟು ಹ್ರಸ್ವವಾಗಿರಬೇಕು. ಅಲ್ಲಿನ ಪದಗಳು ತನ್ನ ಅಂತರಾಳವನ್ನು ಬಹಿರಂಗಪಡಿಸದಿದ್ದರೂ ಅವಳಿಗೆ ಸಮಾಧಾನಪಡಿಸಬೇಕಾದ ಬಗೆ ಹೇಗೆ ಎಂದು ಯೋಚಿಸುತ್ತ ಮಗ್ಗುಲಾಗಿದ್ದ.
ಯಾಂತ್ರಿಕವಾಗಿ ಹೇಮಂತನ ಕೈಗಳು ಎಡಬದಿಗೆ ಹಾಯ್ದವು ಕೂತವರಿಗೆ ತಾಕಿದವು. ಕಣ್ಣುರೆಪ್ಪೆಗಳನ್ನು ಪಟಪಟನೆ ನಾಲ್ಕೈದು ಬಾರಿ ಆಡಿಸಿದ ಮೇಲೆ ಅವನ ಕಣ್ಣ ಸುತ್ತಕುಳಿತ ಗುಂಗಿನಹುಳುಗಳು ಹಾರಿಹೋಗಿ ತಾನೆಲ್ಲಿದ್ದೇನೆ ಎಂಬ ವಾಸ್ತವತೆಯ ಅರಿವು ಅವನಿಗಾಯಿತು. ಹೊರಡುವುದಕ್ಕೆ ರಾತ್ರಿಯೇ ಸಿದ್ಧಪಡಿಸಿಕೊಂಡಿದ್ದದ್ದು ಒಳ್ಳೆಯದಾಯಿತು. ಮನೆಗೆ ಮಧ್ಯಾಹ್ನ ಬಂದ ವೇಳೆಯೂ ಸರಿಯಾಗಿತ್ತು. ಕವಿತಾ ಶಾಲೆಗೆ ಹೋಗಿರುವ ಹೊತ್ತು; ನಳಿನಿಯೂ ದೇವರನಾಮಗಳ ತರಗತಿಗೆ ಹೋಗಿರುವ ಸಮಯ, ಅದುತಿಳಿದೇ ಆ ಹೊತ್ತಿಗೆ ಅವನು ಮನೆಗೆ ಬಂದಿದ್ದ. ಅತ್ತೆ ಒಳಗಿದ್ದರು. ಅವರ ಕಣ್ಣಿಗೆ ಬೀಳುವಂತೆ ತಾನು ಸೂಟ್‍ಕೇಸ್‍ ಹಿಡಿದು ಹೊರಗೆ ಹೋಗದಿದ್ದರಾಯಿತು. ಇಲ್ಲದಿದ್ದರೆ ಪರವಾಗಿಲ್ಲ. ಅವರು ಮನೆಯ ಒಂದೆಡೆ, ತಾನು ಇನ್ನೊಂದೆಡೆ ಇದ್ದರು. ಮಾತುಕತೆ ತೀರಾಕಡಿಮೆ .ತಾನು ಬಂದದ್ದನ್ನು ನೋಡಿದ ಅತ್ತೆ ಮಾತಾಡದೆ ಒಳಗೆ ಹೋಗಿದ್ದರು: ಕಾಲು ತೊಳೆದು ಬರುವ ವೇಳೆಗಾಗಲೇ ಕಾಫಿ ತುಂಬಿದ ಲೋಟವನ್ನಿಟ್ಟು ಮೇಲೆ ಒಂದು ಕಾರ್ಡು ಮುಚ್ಚಿದ್ದರು. ಆಮೇಲೆ, ಸ್ವಲ್ಪಕಾಲದ ನಂತರ ಒಂದು ಪ್ಲಾಸ್ಟಿಕ್ ಬುಟ್ಟಿ ಹಿಡಿದು ಹೊರಗೆ ಹೋದರು ಅಂಗಡಿಗೆಂದು ಕಾಣುತ್ತದೆ. ತನಗೇನು ಹೇಳಲಿಲ್ಲ. ಹಾಗೆ ಹೇಳುವ ಅಭ್ಯಾಸವೂ ಇರಲಿಲ್ಲ. ತಾಯಿ ಮಗಳದೇ ಮಾತುಕತೆ ಅಥವಾ ಕವಿತಾಳೊಡನೆ, ತಾನು ಅತ್ತೆಯೊಡನೆ ಮಾತಾಡಿದ್ದು ಕಡಿಮೆ, ಏನಿದೆ ಅಂಥ ಮಾತಿಗೆ ಅವಕಾಶ.
ಅವರು ಅಡಿಗೆಯ ಮನೆಯಲ್ಲಿದ್ದರು. ತಾನು ಸೂಟ್‍ಕೇಸ್‍ ಹಿಡಿದು ಅವರಿಗೆ ಗೊತ್ತಾಗದಂತೆ ಬಾಗಿಲು ದಾಟಬೇಕೆಂದು ಅಂದುಕೊಂಡಿದ್ದ ಹೇಮಂತನಿಗೆ ಅವರು ಹೊರಗೆ ಹೋದದ್ದರಿಂದ ಒಳ್ಳೆಯದೇ ಆಯಿತು. ಹೊರಗೆ ಬಂದು ಅವರು ಯಾವ ಕ್ರಾಸ್‍ನಲ್ಲಿ ತಿರುಗುತ್ತಾರೆಂದು ನೋಡಿದ; ತಾನು ಬೇರೆಯ ದಾರಿ ಹಿಡಿಯಬೇಕೆಂದು ನಿರ್ಧರಿಸಿದ. ಸರ್ರನೆ ಒಳಬಂದು ಸೂಟ್‍ ಕೇಸ್‍ ಹಿಡಿದು, ಚಪ್ಪಲಿ ಮೆಟ್ಟಿ, ತಲೆಬಾಗಿಲನ್ನು ಪೂರ್ತಿ ಮುಂದುಮಾಡಿ ಚಿಲಕ ಹಾಕದೇ ಮನೆಯಿಂದ ಹೊರಬಿದ್ದು ಭರಭರನೆ ಎದುರು ದಾರಿಯಲ್ಲಿ ನಡೆದ. ನಳಿನಿ ಎದುರಾಗಿಬಿಟ್ಟರೆ ಎಂದು ಒಂದೆರಡು ಕ್ಷಣ ಎದೆಡವಗುಟ್ಟಿತು. ಆದರೆ ಹಾಗಾಗಲಿಲ್ಲ. ಯಾರಾದರೂ ಆಚೆ ಈಚೆ ಮನೆಯವರು ನೋಡಿದರೆ ಎಂದು ಅವನ ಕಣ್ಣುಗಳು ಬಾಗಿದ ತಲೆಯ ಕೆಳಗೆ ಸುಳಿದಾಡಿದವು. ಇಲ್ಲ, ಓಡಿಹೋಗಲು ಸರಿಯಾದ ಸಮಯ ಎನ್ನಿಸಿ ಆ ಪರಿಸ್ಥಿತಿಯಲ್ಲೂ ಮುಗುಳ್ನಗೆ ಮೂಡಿತು.
ಮೇನ್‍ರೋಡಿನಲ್ಲಿ ಸಿಕ್ಕಿದ ಮೊದಲನೆಯ ರಿಕ್ಷಾದಲ್ಲಿ ಆತುರವಾಗಿ ಸೂಟ್‍ಕೇಸ್‍ನೊಂದಿಗೆ ತನ್ನನ್ನು ತುರುಕಿಕೊಂಡು ‘ಬಸ್‍ಸ್ಟ್ಯಾಂಡ್’ ಎಂದ. ಅದು ವೇಗವಾಗಿ ಢರ್ ಎಂದು ಶಬ್ದಮಾಡುತ್ತ ಸಾಗಿದಂತೆ ತಾನು ಅಪರಿಚಿತತೆಯ ಕಡೆಗೆ ಅಮಾನವೀಯತೆಯ ಕಡೆಗೆ ಹೋಗುತ್ತಿರುವಂತೆ ಅನ್ನಿಸಿತು.
ಬಸ್‍ಸ್ಟ್ಯಾಂಡಿಗೆ ಬಂದಾಗ ಯಾರೋ “ಹಲ್ಲೋ” ಎಂದರು. ತಲೆಯೆತ್ತಿ ನೋಡಿದರೆ ತನ್ನ ಪರಿಚಯದ ಹಿರಿಯರು; ಬ್ಯಾಗ್ ಹಿಡಿದು ನಿಂತಿದ್ದರು. ಅವರೇ ಕೆದಕುವುದಕ್ಕಿಂತ ಮುಂಚೆ “ಯಾವ ಊರಿಗೆ?” ಅಂದ. “ತುಮಕೂರು”ಎಂದು ಉತ್ತರಿಸಿದಾಗ ಇದ್ದಕ್ಕಿದ್ದಂತೆ ಬೆದರಿಕೆಯುಂಟಾಯಿತು. “ನಾನು ಈ ಬಸ್ಸಿನಲ್ಲಿ ಹೋಗ್ತೀನಿ” ಎಂದು ಚಿತ್ರದುರ್ಗ ಎಂಬ ಕೆಂಪು ಬೋರ್ಡ್ ಹಾಕಿಕೊಂಡ ಬಸ್ಸಿನ ಡ್ರೈವರ್ ಹತ್ತುತ್ತಿದ್ದುದನ್ನು ಗಮನಿಸಿ ಆ ಕಡೆಗೆ ಓಡಿದ. ಓಡಿ ಬರುವ ಇವನನ್ನು ಕಂಡು ಆಗಲೇ ಮುಚ್ಚಿದ್ದ ಬಾಗಿಲನ್ನು ತೆರೆದ ಕಂಡಕ್ಟರ್ ಇವನು ಒಳಗೆ ಕಾಲಿಟ್ಟ ಮೇಲೆ ಬಾಗಿಲು ಹಾಕುತ್ತಾ “ರೈಟ್” ಎಂದ.
* * *
ಅವತ್ತು ಸಾಯಂಕಾಲ ಆಫೀಸಿನಿಂದ ಮನೆಗೆ ಬಂದಾಗ ಯಥಾಪ್ರಕಾರದಂತೆ ಒಂದೆರಡು ಪತ್ರಗಳು, ಪತ್ರಿಕೆಗಳು ಅಂಚೆಯಲ್ಲಿ ಒಂದು ಟೇಬಲ್ ಮೇಲಿದ್ದವು. ತನ್ನಸಾಯಂಕಾಲದ ಕಾಫಿ ಇತ್ಯಾದಿ ಮುಗಿಸಿ ಆರಾಮವಾಗಿ ಕುರ್ಚಿಯಲ್ಲಿ ಕುಳಿತು ಪತ್ರಗಳನ್ನು ನೋಡಲು ತೊಡಗಿದ್ದ, ಕೆಲವು ಪತ್ರಿಕೆಗಳು ಅವನ್ನು ಮಗುಚಿಮಗುಚಿಹಾಕಿದ್ದ, ಹೇಮಂತ. ಪತ್ರಗಳಲ್ಲಿ ಒಂದು ಯಾವುದೋ ಸಮಾರಂಭದ ಆಹ್ವಾನ ಪತ್ರಿಕೆ: ಇನ್ನೊಂದು ಲಕೋಟೆ. ಎಲ್ಲಿಂದ ಎಂಬ ಬಗ್ಗೆ ಲಕೋಟೆಯ ಹೊರಗೆ ಏನೂ ಇರಲಿಲ್ಲ. ಲಕೋಟೆ ಹರಿಯುವ ಮುಂಚಿ ಸುಳಿವು ಸಿಕ್ಕಿತೇನೋ ಎಂದು ಆಕಡೆ ಈ ಕಡೆ ತಿರುಗಿಸಿ ನೋಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಕತ್ತರಿಯಿಂದ ಲಕೋಟೆಯ ಬಲಭಾಗದಲ್ಲಿ ಎಚ್ಚರಿಕೆಯಿಂದ ಕತ್ತರಿಸಿದ ಒಳಗಿದ್ದ ಕಾಗದವನ್ನು ಹೊರತೆಗೆದು ಬಿಡಿಸಿದಾಗ ಗೊತ್ತಾಯಿತು, ಅದುಮೂರು-ನಾಲ್ಕುಪುಟಗಳಿದ್ದ ದೀರ್ಘಪತ್ರವೆಂದು. ಯಾರಾಗಿರಬಹುದು ಇಷ್ಟುದೀರ್ಘಕಾಗದ ಬರೆದಿರುವವರು ಎಂಬ ಕುತೂಹಲ ಯಾರಾದರೂ ಕತೆಗಿತೆ ಬರೆದು ಪರೀಶಿಲಿಸಲು ತನಗೆ ಕಳಿಸಿದ್ದಾರೋ ಎಂಬ ಭಾವನೆ ಬಂದು ತುಟಿಗಳ ಮೇಲೆ ಮುಗುಳ್ನಗೆ ಮೂಡಿತು.
ಆದರೆ ಕಾಗದವನ್ನು ಓದುತ್ತ ಹೊದಂತೆ ಹೇಮಂತನ ಮುಖದ ಮೇಲೆ ಚಿಂತೆಯ, ಆತಂಕದ, ನೋವಿನ ಗೆರೆಗಳು ಮೂಡಲಾರಂಭಿಸಿದವು; ಕೈ ಅದಿರಲು ಪ್ರಾರಂಭವಾಯಿತು; ತುಟಿ ಕಂಪಿಸಿ ಮೈ ನಿಧಾನವಾಗಿ ಬಿಸಿಯೇರತೊಡಗಿತ್ತು. ಅದನ್ನು ಪೂರ್ತಿ ಓದುವ ಹೊತ್ತಿಗೆ ಹೇಮಂತನಿಗೆ ಜ್ವರ ಬಂದಹಾಗಾಗಿತ್ತು. ಬಾಯಲ್ಲಿಯ ದ್ರವ ಒಣಗಿಹೋಗಿ ಕಹಿಯಾದ ಒಂದು ಲೇಪ ನಾಲಿಗೆಯ ಮೇಲೆ ಉಳಿದಿತ್ತು.ಎದೆಯಂತು ತಾಂಡವನೃತ್ಯದ ಭೂಮಿಕೆಯಾಗಿತ್ತು. ಅಯ್ಯೋ ದೇವರೆ, ಹೀಗೂ ಆಯಿತೇ ಎಂದು ಅನ್ನಿಸಿ ಅವನಿಗರಿವಿಲ್ಲದೆ ದೊಡ್ಡದಾದ ನಿಟ್ಟುಸಿರುಬಿಟ್ಟ. ಆ ನಿಟ್ಟುಸಿರಿನ ಶಾಖದಲ್ಲಿ ಅವನ ಮನಃಶ್ಶಾಂತಿ ಉರಿದುಹೋಗಿತ್ತು. ಅವನ ಲಘು ಮನಸ್ಸಿನ ಉಲ್ಲಾಸ ಬೂದಿಯಾಗಿತ್ತು.
ಕಾಗದ ಬಂದಿದ್ದುದು ತುಮಕೂರಿನಿಂದ, ಮಾಧವರಾವ್ ಎನ್ನುವವರದು. ಅವರು ಯಾರು ಹೇಗಿದ್ದಾರೆ ಎಂದು ಹೇಮಂತನಿಗೆ ತಿಳಿಯದು. ಅಥವಾ ಒಮ್ಮೆ ಯಾವಾಗಲಾದರೂ ಕಂಡಿರಬಹುದು, ನೆನಪಂತೂ ಬಾರದು. ಆದರೆ ಮಾಧವರಾವ್ ಬರೆದಿದ್ದುದು ತಮ್ಮ ಬಗ್ಗೆ ಅಲ್ಲ. ತಮ್ಮ ತಂಗಿಯಾದ ನಂದಿನಿಯ ಬಗ್ಗೆ.
ನಂದಿನಿಯೇನೂ ಹೇಮಂತನಿಗೆ ಅಪರಿಚಿತಳಲ್ಲ. ಆದರೆ ತೀರ ಪರಿಚಯ, ಆಪ್ತಳು ಎಂದೂ ಅರ್ಥವಲ್ಲ ಅಥವಾ ಹಾಗೆಂದು ಹೇಮಂತ ಭಾವಿಸಿದ್ದ. ಆದರೆ ಅಂದು ಬಂದ ಮಾಧವರಾಯನ ಪತ್ರದಿಂದಂತೂ ತಾನು ನಂದಿನಿಗೆ ಎಷ್ಟು ಆಪ್ತನಾಗಿದ್ದೆ ಎಂಬ ಅಂಶ ಗೊತ್ತಾಗಿ ಅದೊಂದು ಬಗೆಯಲ್ಲಿ ಆಘಾತಕರವಾಗಿ ಅವನ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ನಂದಿನಿ ತನ್ನ ಬರಹಗಳನ್ನು ಮೆಚ್ಚಿದ್ದ ಒಬ್ಬ ಓದುಗಳು. ಹೇಮಂತನ ಕಾದಂಬರಿಗಳು ಸಾಕಷ್ಟು ಜನಪ್ರಿಯವಾಗಿದ್ದವು. ಜನಪ್ರಿಯವೆಂದರೆ ತೀರ ಕಡಲೆಪುರಿಯಂತೆ ಮಾರಾಟವಾಗುವಂತಹ ರಚನೆಗಳಲ್ಲ ಅವು. ಆದರೆ ಸೂಕ್ಷ್ಮಹೃದಯದ ಆತ್ಮೀಯಸ್ಪಂದನಗಳುಳ್ಳ ಓದುಗರನ್ನು ತನ್ನ ತೆಕ್ಕೆಯಲ್ಲಿ ವಶಪಡಿಸಿಕೊಂಡು ಅವರ ಮನಸ್ಸಿನ ಮೇಲೆ ಬರಹ ಸಾಗಿದಂತೆ ವಿವಿಧ ರಾಗಗಳನ್ನು ಮಿಡಿಸಬಲ್ಲ ಚೈತನ್ಯ ಅವನ ಬರಹದ ವೈಶಿಷ್ಟ್ಯವಾಗಿತ್ತು. ಅವನ ಕಾದಂಬರಿಗಳನ್ನು ಮೆಚ್ಚಿ, ವಿಮರ್ಶಿಸಿ, ಟೀಕಿಸಿ ಕೆಲವು ಕಾಗದಗಳು ಬರುತ್ತಿದ್ದದ್ದು ಸಾಮಾನ್ಯ. ಅದೂ ಯಾವುದಾದರೊಂದು ಕಾದಂಬರಿ ಧಾರಾವಾಹಿಯಾಗಿ ಜನಪ್ರಿಯ ಪತ್ರಿಕೆಯಲ್ಲಿ ಪ್ರಕಟವಾದಾಗ ಅದು ಲಕ್ಷಾಂತರ ಓದುಗರನ್ನು ಸಂಪಾದಿಸಿಕೊಂಡು ಅವುಗಳಲ್ಲಿ ಕೆಲವರಾದರೂ ಕೃತಿಕಾರನ ಬಗ್ಗೆ ಆಸಕ್ತಿ ತಾಳುವಂತೆ ಮಾಡುತ್ತಿತ್ತು. ಅಂಥ ಕಾದಂಬರಿ ಪ್ರಕಟಣೆಯಕೊ ನೆಯ ಕಂತು ಬಂದ ಮೇಲೆ ಕೆಲವರು ಪತ್ರ ಬರೆಯುತ್ತಿದ್ದರು, ಮೆಚ್ಚಿ, ಟೀಕಿಸಿ, ಚರ್ಚಿಸಿ, ಕೊನೆಗೆ ಬೈದು. ಮೊದಮೊದಲು ಉತ್ಸಾಹದಿಂದ ಅವುಗಳನ್ನು ಜೋಪಾನವಾಗಿ ಒಂದೆಡೆ ಕಾಪಾಡುತ್ತಿದ್ದ ಹೇಮಂತ. ಈಚೆಗೆ ಅವನ್ನು ಅಷ್ಟಾಗಿ ಗಮನಿಸುವುದಿಲ್ಲ; ತನ್ನ ಕೃತಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ಮಾತ್ರ ಒಂದೆಡೆ ಸಂಗ್ರಹಿಸುತ್ತಿದ್ದ: ಅದರೊಡನೆ ಪ್ರಖ್ಯಾತ ಲೇಖಕರೋ, ವಿಮರ್ಶಕರೋ ಬರೆದ ಅಭಿಪ್ರಾಯದ ಪತ್ರಗಳನ್ನೂ ಇಟ್ಟುಕೊಳ್ಳುತ್ತಿದ್ದ. ಇತರರ ಕಾಗದಗಳು ಬೇರೆಲ್ಲ ಕಾಗದಗಳಂತೆ ಸೇರಬೇಕಾದ ಜಾಗಸೇರುತ್ತಿದ್ದವು. ಅಂತಹ ಓದುಗರಲ್ಲಿ ನಂದಿನಿಯೂಒಬ್ಬಳು. ಆದರೆ ಅಂತಹವಳಲ್ಲಿ ಒಬ್ಬಳುಎಂಬುದನ್ನು ಹೇಮಂತನ ಹೃದಯ ಒಪ್ಪುವುದಿಲ್ಲ. ಅಲ್ಲದೆ, ಅಷ್ಟೆಯೇ ಆಗಿದ್ದರೆ ಅವಳಣ್ಣ ಮಾಧವರಾವ್ ಬರೆದ ಪತ್ರ ಅವನ ಮನಸ್ಸನ್ನು ಅಷ್ಟು ಹಿಂಸೆ ಮಾಡುತ್ತಿರಲಿಲ್ಲ ಅಥವಾ ಅಷ್ಟೇ ಆಗಿದ್ದರೆ, ಮಾಧವರಾವ್ ಕೂಡ ಈ ಪತ್ರವನ್ನು ಬರೆಯುತ್ತಿರಲಿಲ್ಲ.
ಇಲ್ಲ, ನಂದಿನಿ ವಿಶೇಷಬಗೆಯ ಓದುಗಳು. ಆದರೆ ಅವಳು ಇಂತಹವಳೆಂಬ ಬಗ್ಗೆ, ಅವಳ ಮನಸ್ಸಿನಲ್ಲಿ ಏನಿತ್ತೆಂಬ ಬಗ್ಗೆ ಹೇಮಂತನಿಗೆ ಈವರೆಗೂ ಸ್ಪಷ್ಟವಾದ ಕಲ್ಪನೆಯಿರಲಿಲ್ಲ. ಅವಳಿಗೆ ತಾನು ಹಲವಾರು ಕಾಗದಗಳನ್ನು ಬರೆದಿರಬಹುದು. ಕೆಲವು ಓದುಗರು ಬರೆದ ಬುದ್ಧಿವಂತಿಕೆಯ ಪತ್ರಗಳಿಗೆ ಅವನು ಉತ್ತರವನ್ನೂ ಬರೆಯುತ್ತಿದ್ದ. ಕೆಲವು ವೇಳೆ ಪತ್ರ ವ್ಯವಹಾರ ನಡೆದು ಯಾವುದೋ ಹಂತಕ್ಕೆ ಚರ್ಚೆನಿಲ್ಲುತ್ತಿತ್ತು. ಕೆಲವರು ಉತ್ತರಿಸಲು ಅನುಕೂಲವಾಗುವಂತೆ ಸ್ವವಿಳಾಸದ ಲಕೋಟೆಯನ್ನು ತಮ್ಮ ಪತ್ರಗಳ ಜೊತೆಯಲ್ಲಿ ಇರಿಸುತ್ತಿದ್ದುದೂ ಉಂಟು. ಅಂತಹ ಓದುಗರಲ್ಲಿ ನಂದಿನಿ ಒಬ್ಬಳು. ಅವಳು ಕೇವಲ ಓದುಗಳಾಗಿರಲಿಲ್ಲ, ಒಂದು ರೀತಿಯಲ್ಲಿ ಹೇಮಂತನ ಅಭಿಮಾನಿಯಾಗಿದ್ದಳು, ‘ಫ್ಯಾನ್’ ಆಗಿದ್ದಳು. ಪ್ರಾಯಶಃ ಅಷ್ಟೇ ಆಗಿದ್ದರೆ ಅವನಿಗೂ ಅಭಿಮಾನವುಂಟಾಗುತ್ತಿತ್ತು.
ನಂದಿನಿಯನ್ನು ಕೆಲವು ಸಂದರ್ಭಗಳಲ್ಲಿ ಅವನು ಭೇಟಿಯಾದದ್ದೂ ಇದೆ. ಮೊದಮೊದಲು ಪತ್ರವ್ಯವಹಾರದಲ್ಲಿ ಅವರು ಒಮ್ಮೆ ಇದ್ದಕ್ಕಿದ್ದಂತೆ ಭೇಟಿಯಾದರು. ಇದ್ದಕ್ಕಿದ್ದಂತೆ ಎಂಬುದು ಹೇಮಂತನಿಗೆ ಅನ್ವಯಿಸುವ ಮಾತೇ ಹೊರತು, ನಂದಿನಿಯ ವಿಷಯಕ್ಕಲ್ಲ. ಪತ್ರವ್ಯವಹಾರ ಮಾಡುವಾಗ, ವ್ಯವಹಾರವೇನು ಬಂತು, ಬಂದ ಪತ್ರಗಳಿಗೆ ಒಂದೆರಡಕ್ಕೆ ಯಥಾಪ್ರಕಾರ ಉತ್ತರ ಬರೆದಿರಬಹುದಾದ ಹೇಮಂತನಿಗೆ ನಂದಿನಿಯ ಪರಿಚಯ ಹೇಗಿರಬೇಕು. ಅವಳಿಗಾದರೆ ಅವನು ಲೇಖಕ, ತನ್ನ ಮೆಚ್ಚಿನ ಲೇಖಕ. ತನ್ನ ಕಾದಂಬರಿಗಳ ಮೂಲಕ ತನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದ ಲೇಖಕ; ತನ್ನ ಬರವಣಿಗೆಯಿಂದ ಮನಸ್ಸಿನ ಹಾಳೆಯ ಮೇಲೆ ಭಾವನೆಗಳು ಬಣ್ಣದ ಗೆರೆಗಳೊಡನೆ ಆಕಾರತಳೆದು ಬರವಣಿಗೆಯ ಗತಿಯಿಂದ ಅವನ್ನೂ ಬದಲಾಯಿಸುತ್ತ ಬಂದ ಲೇಖಕ. ಮನಸ್ಸಿನ ಮೇಣವನ್ನು ಬರವಣಿಗೆಯೇ ಬೇಕಾದಂತೆ ಮೂರ್ತೀಕರಿಸಲು ಅವಳು ತನ್ನನ್ನು ತಾನೇ ಅವನ ಬರಹಗಳಿಗೆ ಒಪ್ಪಿಸಿಕೊಂಡಿದ್ದಳೆಂಬಷ್ಟರಮಟ್ಟಿಗೆ ಹೇಮಂತನ ಅಭಿಮಾನಿ ನಂದಿನಿ. ಆದರೆ ಈಗ ನಂದಿನಿಯೆಂದರೆ ಸ್ಪಷ್ಟವಾಗಿ ನೆನಪಿಗೆ ಬರುವಷ್ಟರಮಟ್ಟಿಗೆ ಹೇಮಂತನ ಮನಸ್ಸಿನಲ್ಲಿ ಒಂದು ಸ್ಥಾನ ಗಳಿಸಿದ್ದವಳು ಅವಳು. ಅಲ್ಲದೆ ಅವಳ ಮುಖ ಮತ್ತು ಒಟ್ಟುನಿ ಲುವುಗಳು ಈಗ ಅವನಿಗೆ ನೆನಪಿಸಿಕೊಂಡ ತಕ್ಷಣ ಮೂಡಬಲ್ಲಷ್ಟು ಪರಿಚಿತಳು. ಅವಳಿಗೆ ಹೇಮಂತನ ಮುಖಭಾವ ಮನಸ್ಸಿನ ಮೇಲೆಸ್ಥಾಯಿಯಾಗಿ ಉಳಿದಿತ್ತೆಂದು ಕಾಣುತ್ತದೆ.
ಬೇರೆಯ ಓದುಗರೊಂದಿಗೆ ಹೇಮಂತನ ಸಂಬಂಧ ಇಂತಹುದಲ್ಲ. ಏಕೆಂದರೆ ಬೇಕಾದಷ್ಟು ಓದುಗರಿಗೆ ಪತ್ರ ಬರೆದಿದ್ದಾನೆ, ಅವರನ್ನು ಕಂಡಿದ್ದಾನೆ. ತನಗೆ ಪರಿಚಯ ಸಾಕಷ್ಟು ಇದ್ದ ಕೆಲವು ಮಂದಿಯನ್ನು ಬಿಟ್ಟರೆ ಎಲ್ಲರ ಮುಖ ಪರಿಚಯವಿರಿಸಿಕೊಳ್ಳಲು ಅವನಿಗೆ ತಾನೇ ಹೇಗೆ ಸಾಧ್ಯ, ರಾಜ್ಯದ, ಅಷ್ಟೇ ಏಕೆ ಕನ್ನಡಿಗರಿರುವ ಬೇರೆ ರಾಜ್ಯಗಳ ಲಕ್ಷಾಂತರ ಮಂದಿ ಅವನ ಹೆಸರನ್ನು ಕೇಳಿರಬಹುದು, ಅಂದರೆ ಪತ್ರಿಕೆಗಳಲ್ಲಿ ಪುಸ್ತಕರೂಪದಲ್ಲಿ ಓದಿ ಅವನ ಬಗ್ಗೆ ಅಸ್ಪಷ್ಟವಾದ ಕಲ್ಪನೆಯನ್ನು ಮೂಡಿಸಿಕೊಂಡಿರುತ್ತಾರೆ. ಹೇಮಂತನ ಹೆಸರು ಕೇಳಿದೊಡನೆ ಅವನ ಮುಖ ಎದುರಿಗೆ ಬಂದು ನಿಲ್ಲುವ ಓದುಗರ ಸಂಖ್ಯೆ ಕಡಿಮೆಯೆಂದೇ ಹೇಳಬೇಕು, ಏಕೆಂದರೆ ಅವನು ತನ್ನ ಭಾವಚಿತ್ರವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಕಳಿಸುತ್ತಿರಲಿಲ್ಲ, ತಾನು ಚಲನಚಿತ್ರ ನಟರಂತೆ ತನ್ನ ದೇಹದ ಮೂಲಕ ಪರಿಚಯವಾಗಬೇಕಾಗಿಲ್ಲ, ತನ್ನ ಬರಹದ ಮೂಲಕ ಅವರನ್ನು ತಲುಪಿದರೆ ಸಾಕೆಂಬ ಅಭಿಪ್ರಾಯ ಅವನದ್ದು. ಹೀಗಾಗಿ ಎಷ್ಟೋ ವೇಳೆ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಅವನ ಭಾವಚಿತ್ರವನ್ನು ಕೇಳಿ ಬರೆದಿದ್ದರೂ, ಅವನು ಅದನ್ನು ನಿರಾಕರಿಸುತ್ತಿದ್ದ. ಹಾಗೆಯೇ ಪುಸ್ತಕಗಳ ವಿಷಯದಲ್ಲಿ. ಪುಸ್ತಕಗಳ ಬೆನ್ನಿಗೆ ಅವನ ಕೃತಿಗಳ ಪಟ್ಟಿ ಪ್ರಕಟವಾಗುತ್ತಿತ್ತು. ಇಲ್ಲಿ ಅಂತೂ ಪುಸ್ತಕದ ಬಗ್ಗೆ ಒಂದೆರಡು ಪ್ಯಾರಾಗಳ ಪರಿಚಯಾತ್ಮಕ ಬರಹವಿರುತ್ತಿತ್ತು. ಮೊದಮೊದಲಾದರೆ ಕೆಲವು ಪ್ರಸಿದ್ಧ ಲೇಖಕರು ತನ್ನ ಕೃತಿಯ ಬಗ್ಗೆ ಬರೆದ ಅಭಿಪ್ರಾಯ ಬ್ಲರ್ಬಾಗಿ ಪುಸ್ತಕದ ಬೆನ್ನಿಗೆಅಚ್ಚಾಗುತ್ತಿದ್ದವು. ಬರಬರುತ್ತ ಅದರಲ್ಲೂ ಅವನ ಆಸಕ್ತಿ ಕಮ್ಮಿಯಾಗಿ ತಾನು ಬರೆದ ಕೃತಿಯಷ್ಟೇ ಪ್ರಕಟವಾದರೆ ಸಾಕೆಂದು ಅವನ ಅಭಿಪ್ರಾಯವಾಗಿತ್ತು. ಪುಸ್ತಕದ ಬೆನ್ನು ಬೋಳಾಗಿರಬಾರದೆಂದು ಪ್ರಕಾಶಕರು ಇವನ ಕೃತಿಗಳ ಪಟ್ಟಿಯನ್ನು ಪ್ರಕಟಿಸಿರಬಹುದು, ಆದರೆ ಭಾವಚಿತ್ರವನ್ನು ಅಚ್ಚು ಮಾಡಿಸುತ್ತಿರಲಿಲ್ಲ. ಒಮ್ಮೆಮಾತ್ರ ಒಂದು ಪುಸ್ತಕದ ಬೆನ್ನಿಗೆ ಇವನ ಭಾವಚಿತ್ರವೂ ಅಚ್ಚಾಗಿತ್ತು. ಆಮೇಲೆ ಅದಕ್ಕೆ ಅವಕಾಶವಿತ್ತಿರಲಿಲ್ಲ, ಈಗ ಇವನ ಮುಖವೇ ಸಾಕಷ್ಟು ವ್ಯತ್ಯಾಸಗೊಂಡಿದೆ. ಈಗಿನ ಮುಖಗಳಲ್ಲಿ ಹೋಲಿಕೆಗಳಿವೆ, ಆದರೆ ಹಿಂದಿನ ಚಿತ್ರವನ್ನು ನೋಡಿ ಈಗ ಹೇಮಂತ ಹೇಗಿದ್ದಾನೆಂದು ಊಹಿಸಿಕೊಳ್ಳುವುದು ಸಾಧ್ಯವಿಲ್ಲ.ಆದ್ದರಿಂದ ಅವನ ಓದುಗರಲ್ಲಿ ಬಹುಮಂದಿ ಅವನ ಹೆಸರು ಕೇಳಿದರೆ ಅವನ ಕೃತಿಗಳನ್ನು ನೆನಪಿಗೆ ತಂದುಕೊಳ್ಳುವ ಮಟ್ಟಿಗೆ ಇದ್ದಾರೆಯೇ ವಿನಾ ಅವನ ಮುಖ ಮನಸ್ಸಿನಲ್ಲಿ ಸುಳಿಯಲು ಸಾಧ್ಯವಿಲ್ಲ. ಅಂದಮೇಲೆ ಆ ಓದುಗರಿಗೆ ಹೇಮಂತನ ಮುಖ ಪರಿಚಯ ಸಾಧ್ಯವೇ?
ಆದರೆ ನಂದಿನಿ ಇದಕ್ಕೆ ಹೊರತು. ನಂದಿನಿ ಒಮ್ಮೆ ಇವನನ್ನು ಕಂಡಾಗ ಇವನ ಭಾವಚಿತ್ರವನ್ನು ಕೊಡುವಂತೆ, ಪೀಡಿಸಿದ್ದಳು ಎಂದು ಹೇಳಬೇಕು, ಅಷ್ಟು ಒತ್ತಾಯ ಮಾಡಿದ್ದಳು. ಅವನು ಮೊದಲು ಮುಗುಳ್ನಗೆಯಿಂದ ಅದನ್ನು ಹಾರಿಸಿಬಿಟ್ಟಿದ್ದ. ಆದರೆ ಅವಳ ಒತ್ತಾಯ ಹೆಚ್ಚಾದಾಗ “ನಾನೇನು ಸಿನಿಮಾ ನಟನೇನ್ರಿ?” ಎಂದು ಹೇಳಿ ಗೇಲಿ ಮಾಡಿದ್ದ. ಅವಳು ಬಿಡಬೇಕಲ್ಲ. ಅವಳ ಒತ್ತಾಯಕ್ಕೆ ಕೊನೆಗೂ ಮಣಿದ ಹೇಮಂತ ಭಾವಚಿತ್ರವನ್ನು ಅಂಚೆಯಲ್ಲಿ ಕಳಿಸಿಕೊಡುವುದಾಗಿ ಹೇಳಿದ್ದ. ಹಾಗೆ ಕಳಿಸಿಯೂ ಕೊಟ್ಟಿದ್ದ. ಅವಳು ತುಮಕೂರಿನವಳು ತಾನೇ? ಆದ್ದರಿಂದ ಅಂಚೆಯಲ್ಲಿ ಕಳಿಸಿದ್ದ. ಅಷ್ಟೇಅಲ್ಲ ಅವನು ಭಾವಚಿತ್ರ ಕಳಿಸಲು ಒಪ್ಪಿದ್ದ ಮಾರನೇ ದಿನ - ಪ್ರಾಯಶಃ ಅವಳು ಅವನನ್ನು ಅಂದು ಬೆಂಗಳೂರಿನ ಸಮಾರಂಭವೊಂದರಲ್ಲಿ ಭೇಟಿ ಮಾಡಿದ್ದಳೆಂದು ಕಾಣುತ್ತದೆ. ಅವಳು ಲಕೋಟೆಯಲ್ಲಿ ಅವನ ಮಾತನ್ನು ನೆನಪಿಸಿ ಬರೆದು ಇರಿಸಿದ್ದ ಕಾಗದದ ಜೊತೆ ಸ್ವವಿಳಾಸದ ಲಕೋಟೆಯನ್ನು ಕಳಿಸಿದ್ದಳು. ಅವನು ಮಾತಿಗೆ ತಪ್ಪದೆ ತನ್ನ ಬಳಿಯಿದ್ದ ಭಾವಚಿತ್ರವೊಂದನ್ನು ಕಳಿಸಿದ್ದ.
ನಂದಿನಿಯನ್ನು ಹೇಮಂತ ಭೇಟಿಯಾದದ್ದು ಮೊದಲು ತುಮಕೂರಿನಲ್ಲಿಯೇ ಎಂದು ಕಾಣುತ್ತದೆ; ತಾನಾಗಿ ಅವನೇನೂ ಅವಳನ್ನು ಕಾಣಲು ಹೋದವನಲ್ಲ, ಅವನನ್ನು ನೋಡಿ ಮಾತಾಡಲು ಅವಳೇ ಒಂದು ಅವಕಾಶವನ್ನು ಒದಗಿಸಿಕೊಂಡಿದ್ದಳೆಂದು ಹೇಳುವುದು ಸರಿ. ಅವನು ಆ ದಿನ ತುಮಕೂರಿಗೆ ಹೋಗಿದ್ದುದು ಒಂದು ಸಮಾರಂಭಕ್ಕಾಗಿ; ಅಲ್ಲಿಯ ಕನ್ನಡಸಂಘದವರು ಏರ್ಪಡಿಸಿದ್ದ ಒಂದು ವಿಚಾರಸಂಕಿರಣದಲ್ಲಿ ಭಾಗವಹಿಸಲು. ಎಲ್ಲ ಮುಗಿದ ಮೇಲೆ ಅವನ ಬಳಿಗೆ ಇಪ್ಪತ್ತೆರಡು-ಇಪ್ಪತ್ತೈದು ವಯಸ್ಸಿನವಳಿರಬಹುದಾದ ಯುವತಿಯೊಬ್ಬಳು ಬಂದಿದ್ದಳು.ಆಗ ಅವನಿಗೆ ಅವಳು ಒಬ್ಬಳು ಯುವತಿ ಅಷ್ಟೆ, ಇನ್ನೂ ನಂದಿನಿಯಾಗಿ ತನ್ನ ಮನಸ್ಸಿನಲ್ಲಿಳಿದಿರಲಿಲ್ಲ ಅಥವಾ ತನ್ನ ಮನಸ್ಸಿನಲ್ಲಿ ಅವಳು ಇಳಿದಿರುವುದು ಈಗ ಗೊತ್ತಾಗುತ್ತಿದೆ, ಆಗ ಪ್ರಾರಂಭವಾಯಿತು, ತನ್ನ ಮನಸ್ಸಿನ ಮೇಲೆ ಚಿತ್ರ ಮೂಡಿಸುವುದಕ್ಕೆ.
ತನ್ನ ಬಳಿಗೆ ನಗುನಗುತ್ತ ಬಂದಿದ್ದ ಆ ಯುವತಿಯನ್ನು ನೋಡಿ ಹೇಮಂತನಿಗೆ ಸಂತೋಷವಾಯಿತು. ಯುವತಿಯ ಮಾತು ನಗು ಸಾಮಾನ್ಯ ಎಂಥವರಿಗೂ ಹಾಯೆನಿಸುತ್ತದಲ್ಲವೇ, ಇನ್ನುಹೇಮಂತನಿಗೆ? ಹೆಸರಿಗೆ ಅವನು ಹೇಮಂತನಿರಬಹುದು, ಆದರೆ ಅವನು ಚೈತ್ರಕ್ಕೆ ಹತ್ತಿರ, ಕೋಗಿಲೆಗೆ ಹತ್ತಿರ, ಬೆಳದಿಂಗಳಿಗೆ ಹತ್ತಿರ, ಗಿಡಮರಗಳ ಚೆಲ್ಲುವರಿದ ಹಸಿರಿನ ಹತ್ತಿರ. ಅಷ್ಟು ಮಾತ್ರಅಲ್ಲ, ಎಲ್ಲ ಯುವತಿಯರಿಗಿಂತ ಅವಳು ಭಿನ್ನ. ಅವನೇನು ಯುವತಿಯರನ್ನು ಕಾಣದವನೇನು? ಬೆಂಗಳೂರಿನಲ್ಲಿ ಎಲ್ಲೆಲ್ಲಿಯೂ ಗಂಡಸರು ಮುದುಕರು ಹುಡುಗರು ಬಸ್ಸುಕಾರುಗಳು ರಿಕ್ಷಾ ಸ್ಕೂಟರುಗಳು ಕಾಣಿಸಿಕೊಳ್ಳುವಂತೆಯೇ ಯುವತಿಯರೂ ಕಾಣಿಸುತ್ತಾರೆ ಬೀದಿಗಳಲ್ಲಿ, ಆಫೀಸುಗಳಲ್ಲಿ, ಸಿನಿಮಾಗಳಲ್ಲಿ - ಎಲ್ಲ ಕಡೆಯೂ. ಹೇಮಂತನಿಗೂ ಸಾಕಷ್ಟು ಯುವತಿಯರ ಪರಿಚಯವಿದೆ. ಅವನ ವಯಸ್ಸು ಮೂವತ್ತೇಳಾದರೂ ಒಂದೈದು ವರ್ಷ ಕಡಿಮೆಯೆನಿಸುವಂತೆ ಕಾಣುವ ರೀತಿ ಅವನ ಮುಖಚರ್ಯೆ. ಸರಳವಾದರೂ ಸದಭಿರುಚಿಯ ಉಡಿಗೆ, ಸೌಜನ್ಯ ಮೃದುಹಾಸ್ಯಗಳ ಮಾತುಕತೆ ಅವನನ್ನು ಅವನ ಸ್ನೇಹಿತರ ವಲಯದಲ್ಲಿಯೂ ಜನಪ್ರಿಯನಾಗಿಸಿದ್ದವು. ಜೊತೆಗೆ ಲೇಖಕ ಬೇರೆ.ಅದೂ ಕಾದಂಬರಿಕಾರ. ಹೀಗಾಗಿ ಅವನ ಕಾದಂಬರಿಗಳನ್ನು ಓದಿ ಮೆಚ್ಚಿದ್ದವರಲ್ಲಿ ಯುವತಿಯರೂ ಇದ್ದರು. ತಮ್ಮ ಮೆಚ್ಚಿಕೆಯನ್ನು ಗಂಡಸರಿಗಿಂತ ಹೆಚ್ಚಾಗಿ ಯುವತಿಯರು ತೋರಿಸಲು ಅವನ ವ್ಯಕ್ತಿತ್ವವೂ ಕಾರಣ.
ನಂದಿನಿ ಅಂದು ಮೊದಲ ಬಾರಿ ತನ್ನ ಮುಂದೆ ಬಂದು ನಿಂತಾಗಲೇ ಅವನಿಗೆ ಸಂತೋಷವಾಗಿತ್ತು. ಅದಕ್ಕೆ ಕಾರಣ ಅವಳ ಮುಗುಳ್ನಗೆಯಿರಬಹುದು. ಅದೂ ಎಂತಹ ಮುಗುಳು, ಸಂಪಗೆಯಂತೆ ಕಟುವಾಸನೆಯದಲ್ಲ, ಗುಲಾಬಿಯಂತೆ ಕಣ್ಸೆಳೆವ ಬಣ್ಣವಲ್ಲ, ತಾವರೆಯಂತೆ ವಿಶಾಲ ಆಕಾರವಲ್ಲ, ಕಂಪು ತನ್ನಿಂದ ಹೊರಟಿದೆಯೆಂಬುದರ ಸೂಚನೆಯನ್ನೇ ಕೊಡದೆ ತಾನು ಹಿಂದೆ ಸಂಕೋಚದಿಂದ ನಿಂತು ಸುವಾಸನೆಯನ್ನು ತಂಗಾಳಿಯಲ್ಲಿ ಸೇರಿಸಿ ಆಹ್ಲಾದಗೊಳಿಸುವ ಜಾಜಿ ಅವಳ ಮುಗುಳುನಗೆ. ಸರಳ ಆಕರ್ಷಕ....ನಿರುದ್ವಿಗ್ನ ಅವಳ ಕಣ್ಣುಗಳು. ಪ್ರಾಯಶಃ ಹೇಮಂತನನ್ನು ಇದೂ ಆಕರ್ಷಿಸಿರಬಹುದು. ಅವು ದೊಡ್ಡದಾಗಿದ್ದವು. ನಿಜ. ಆದರೆ ಅವುಗಳ ಹೊಳಪು ತನ್ನ ಶಾಖದಿಂದ ಸುಟ್ಟುಬಿಡುವ ಕಿಚ್ಚಿನಂತಹುದಲ್ಲ, ಖಯಾಲಿನಿಂದ ಇತರರು ಮೈಕಾಸಿಕೊಳ್ಳುವ ಬಿಸಿಪು ಆ ನೋಟದ್ದಲ್ಲ, ಡಿಸೆಂಬರ್ ತಿಂಗಳಿನ ಸೂರ್ಯಾಸ್ತದ ಸಮಯ ಇಡೀ ವಾತಾವರಣದಲ್ಲಿ ಹರಡಿರುವ ಸಂಜೆಗೆಂಪು ಇರುತ್ತದಲ್ಲ, ಆ ರೀತಿಯದು ಅವಳಕಣ್ಣ ಹೊಳಪು; ಮಾಗಿಯ ಮಧ್ಯಾಹ್ನದ ಶಾಖವನ್ನು ಕಳೆದುಕೊಂಡು ಮೃದುವಾಗಿ ನೇವರಿಸುವ ಸಾಯಂಕಾಲ ಸುರಿಯುವ ಮಂಜಿನಿಂದ ದೇಹ ಮುದುರಿಕೊಳ್ಳದಂತೆ ಬಿಸುಪಾಗಿಸುವ ಸಂಜೆಯ ಸೂರ್ಯನ ಹೊಂಗಿರಣಗಳಿರುತ್ತದಲ್ಲ ಅಂತಹ ಕಾಂತಿ. ಅಲ್ಲಿ ಉಕ್ಕುತ್ತಿತ್ತು ತುಂಬ ಹಿತಕರವಾದ ಸಂಜೆಯ ವಾಕಿಂಗಿನಂತೆ ಅವಳೊಡನೆ ಅಂದು ಮಾತನಾಡಿದ ರೀತಿ.
 ನಾನು ಬಂದೆ, ನಾನು ನೋಡಿದೆ, ನಾನು ಗೆದ್ದೆ - ಎಂದ ಹಾಗೆ ಅವಳು ಮೊದಲ ನೋಟದಲ್ಲಿ ತನ್ನಿಂದ ಮೆಚ್ಚುಗೆಯ ನಗುವನ್ನು ಸಂಪಾದಿಸಿದ್ದಳು. ನಾನು ಗೆದ್ದೆ ಎಂಬ ಅಹಂಕಾರದಿಂದ ಬಂದವಳಲ್ಲ ನಂದಿನಿ. ಹಾಗೆ ನೋಡಿದರೆ ಸೋತು ಬಂದಿದ್ದಳೇನೋ, ಆವತ್ತೇ. ಆದರೆ ಅದು ಈಗ ಗೊತ್ತಾಗುತ್ತಿದೆ. ಹಾಗೆ ಬಂದ ನಂದಿನಿ ತನ್ನ ಪರಿಚಯ ಮಾಡಿಕೊಂಡಳು. ಹಿಂದೆ ಒಂದೆರಡು ಬಾರಿ ಅವನಿಗೆ ಕಾಗದ ಬರೆದಿದ್ದುದನ್ನು ನೆನಪಿಸಿದಳು.ಕಾದಂಬರಿಗಳಬಗ್ಗೆ ಹೃದಯದ ಅಭಿಮಾನವನ್ನುಸುರಿದಳು. ಮನೆಗೆ ಬನ್ನಿ ಎಂದು ಕರೆದಿದ್ದಳು. ಆದರೆ ಬೆಂಗಳೂರಿನಿಂದ ಬಂದಿದ್ದ ಇತರ ಕೆಲವು ಅತಿಥಿಗಳೊಡನೆ ಕಾರಿನಲ್ಲಿ ಅವನು ಹೋಗುವವನಿದ್ದ, ಆದ್ದರಿಂದ ಮನೆಗೆ ಬರಲು ಸಾಧ್ಯವಿಲ್ಲ, ಇನ್ನೊಮ್ಮೆ ಎಂದಿದ್ದ. ಯಾರು ಕರೆದರೂ ಹೀಗೇ ಹೇಳಬೇಕು. ಉಪಚಾರಕ್ಕೆ ಮನೆಗೆ ಕರೆದರೆ, ಕರೆದವರ ಜೊತೆಗೆಲ್ಲ ಹೋಗಿಬಿಡಲು ಸಾಧ್ಯವೇ? ಆದರೆ ನಂದಿನಿಯು ಹೇಳಿದ್ದು ಉಪಚಾರದ ಮಾತು ಎಂದು ಅವನಿಗೆ ಅನ್ನಿಸಲಿಲ್ಲ ಅಥವಾ ಆಗಲೇ ಹೋಗಿ ಬಿಡಬೇಕು ಎನ್ನಿಸಿಬಿಡುವಂತಹ ಅದಮ್ಯ ಆಕರ್ಷಣೆಗೆ ಅವನು ಒಳಗಾಗಿದ್ದ ಎಂತಲೂ ಅಲ್ಲ. ಆದರೆ ಅವಳ ಹೃದಯದ ಭಾವನೆಗಳ ನಿಜತ್ವ ಅವನಿಗೆ ತಾಕಿತ್ತು; ಅವಳಿಂದ ಒಂದು ಬಗೆಯಲ್ಲಿ ಆಕರ್ಷಿತನಾಗಿದ್ದ ಎನ್ನೋಣ, ಬೇಕಾದರೆ.
ಆಕರ್ಷಣೆ ಎಂದರೆ ಏನೇನೋ ಅರ್ಥ ಬೇಡ. ಸಾಮಾನ್ಯ ನಿಲುವಿನಲ್ಲೂ ಸರಳತೆಯಲ್ಲೂ ಈ ಹುಡುಗಿ ಅವನಿಗೆ ತುಂಬ ಇಷ್ಟವಾದಳು. ಎಂತಹ ಇಷ್ಟ ಎಂದರೆ ಹೇಳುವುದು ಕಷ್ಟ. ಅವಳಿಗೆ ಏನನ್ನಿಸಿತ್ತೋ ಹೇಗೆ ಗೊತ್ತಾಗಬೇಕು? ಆದರೆ, ಎ ಥಿಂಗ್ ಆಫ್ ಬ್ಯೂಟಿ ಈಸ್ ಎ ಜಾಯ್ ಫಾರ್ ಎವರ್ ಅಂತಾರಲ್ಲ, ಹಾಗೆ ತನ್ನ ಸೌಂದರ್ಯದಿಂದಾಗಿಯೇ ಜನಕ್ಕೆ ಹತ್ತಿರವಾಗುವ ಹೂವುಗಳಂತೆ ಹೇಮಂತನಿಗೆ ನಂದಿನಿ ಇಷ್ಟವಾದಳು. ಬೇರೆ ರೀತಿಯಲ್ಲಿ ಅವಳನ್ನು ಬಳಸಿಕೊಳ್ಳುವಂತಹ ಅಭಿರುಚಿಯೇನೂ ಅವನದಲ್ಲ ಅಥವಾ ಅದು ಗೊತ್ತಿಲ್ಲ, ಆದರೆ ಸಮಾಜದ ಕಟ್ಟುಪಾಡು ಅವನಿಗೆ ಗೊತ್ತಿಲ್ಲವೇ?
* * *
ನಿನ್ನೆ ತಾನೇ ಹೇಮಂತನಿಂದ ಒಂದು ಕಾಗದ ಬಂದಿತ್ತು. ಒಂದೇ ಸಾಲಿನದು; “ನಾನು ಕ್ಷೇಮವಾಗಿದ್ದೇನೆ. ಕವಿತಾಳಿಗೆ ನನ್ನ ನೆನಪು ತಿಳಿಸು” ಇಷ್ಟೇ. ಹೇಮಂತ ಎಂದು ಹೆಸರು ಬರೆದಿದ್ದನೇ ಹೊರತು, ಅದು ಯಾವಾಗಲೂ ಮಾಡುವ ಅವನ ಸಹಿಯಾಗಿರಲಿಲ್ಲ. ಪ್ರಾಯಶಃ ತನ್ನತನಕ್ಕೆ ಹೊರತಾದ ಬರಹದಲ್ಲಿ ತನ್ನತನದ ಅಭಿವ್ಯಕ್ತಿಯ ಸಹಿ ಇರಬಾರದೆಂದು ಕೇವಲ ಹೆಸರು ಬರೆದಿದ್ದನೋ ಏನೋ. ಇದರಿಂದ ನಳಿನಿಗೆ ಸ್ವಲ್ಪವೇ ಸಮಾಧಾನವಾಗಿದೆ, ನಿಜ. ಕೊನೆಯ ಪಕ್ಷ ಅವರು ಆರೋಗ್ಯವಾಗಿದ್ದಾರೆಂಬ ಸುದ್ದಿ ಅವಳಿಗೆ ಒಂದಷ್ಟು, ಗೆಲುವನ್ನು ತಂದುಕೊಟ್ಟಿದೆ ಎನ್ನಲಾಗದಿದ್ದರೂ, ಮನೋಭಾರವನ್ನು ಕಡಿಮೆಮಾಡಲು ಸಹಕಾರಿಯಾಗಿದೆ ಎನ್ನಬಹುದು.
ಈ ಎರಡು ಪುಟ್ಟ ವಾಕ್ಯಗಳ, ಒಂದೇ ಸಾಲಿನ ಪತ್ರವನ್ನು ಅವನು ಬರೆದಿದ್ದುದುಕಾರ್ಡಿನಲ್ಲಲ್ಲ, ಲಕೋಟೆಯಲ್ಲಿ ಮಡಸಿಟ್ಟಿದ್ದ ಕಾಗದದಲ್ಲಿ. ಊರಿಲ್ಲ, ತಾರೀಕಿಲ್ಲ. ತಾನು ಯಾವ ಊರಿನಲ್ಲಿದ್ದಾನೆಂದು ತಿಳಿದರೆ ಅಲ್ಲಿಗೆ ಜನ ಅಟ್ಟಿಸಿಕೊಂಡು ಬಂದುಬಿಟ್ಟಾರು ಎಂದು ಆತನ ಭಯವಿರಬಹುದು; ದಿನಾಂಕವಿದ್ದರೆ, ಅವನು ಆ ಊರಿನಿಂದ ಆಜುಬಾಜು ಬೇರೆಲ್ಲಾದರೂ ಹೋಗಿರಬಹುದಾದ ಸುಳಿವು ನೀಡಿಬಿಟ್ಟರೇ ಎಂಬ ಅಳುಕೇ? ಇರಬಹುದು. ಕುತೂಹಲಕ್ಕೆ ನಳಿನಿ ಲಕೋಟೆಯನ್ನು ಅತ್ತಿತ್ತ ತಿರುಗಿಸಿ ನೋಡಿದ್ದಳು. ಈ ಊರಿನ ಅಂಚೆ ಮುದ್ರೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಂಚೆಚೀಟಿಗಳ ಮೇಲೆ ಒತ್ತಿದ್ದ ಮುದ್ರೆಯು ಯಾವ ಊರಿನದೆಂದು ತಿಳಿಯುವುದೇನೋ ಎಂಬ ಆಸೆಯಿಂದ ಅದನ್ನು ನೋಡಿದರೆ ಮಸಿ ತುಂಬಿ ಅಕ್ಷರಗಳೆಲ್ಲ ಕದಡಿ ಹೋಗಿದ್ದವು; ಕೊನೆಗೆ ಮಾತ್ರ ಇಂಗ್ಲಿಷಿನ ಎ.ಆರ್. ಎಂಬ ಅಕ್ಷರಗಳು ಕಾಣಿಸಿದ್ದವು. ಈ ಅಕ್ಷರಗಳಿಂದ ಕೊನೆಯಾಗುವ ಹೆಸರಿನ ಊರಿನಲ್ಲಿ ಲಕೋಟೆಯನ್ನು ಅಂಚೆಗೆ ಹಾಕಿರಬಹುದು. ಕೋಲಾರ್, ಧಾರವಾರ್, ಕಾರವಾರ್, ಬೀದರ್, ಸಂಕೇಶ್ವರ್, ಲಕ್ಷ್ಮೇಶ್ವರ್ - ಯಾವುದೇ ಊರು ಇರಬಹುದು ಅಥವಾ ಬೇರೆ ರಾಜ್ಯದ ಯಾವುದಾದರೂ ಊರೋ ಹೇಗೆ ತಿಳಿಯಬೇಕು. ಅದು ತಿಳಿದಿದ್ದರೂ ಮಾಡುವುದು ಅಷ್ಟರಲ್ಲಿಯೇ ಇದೆ. ಅಲ್ಲಿಗೆ ಹೋಗಿ ಅವನನ್ನು ಹಿಡಿಯಲಾದೀತೇ? ತಾವು ಹೋಗುವ ವೇಳೆಗೆ ಹಕ್ಕಿ ಬೇರೆ ಮರಕ್ಕೆ ಹಾರಿ ಹೋಗಿರಬಹುದು. ತಾನು ಕಾಗದ ಬರೆದದ್ದು ಯಾವ ಊರಿನಿಂದ ಎಂದು ಹೆಸರು ಬರೆಯದವನು ಅದನ್ನು ಯೋಚಿಸಲಾರನೇ. ಪ್ರಯಾಣ ಮಾಡುವಾಗ ರೈಲಲ್ಲೋ ಬಸ್ಸಲ್ಲೋ ಮಧ್ಯೆ ನಿಂತ ಒಂದು ಊರಲ್ಲಿ ಅಂಚೆ ಡಬ್ಬಿಗೆ ಹಾಕಿರಬಹುದಲ್ಲವೇ? ಒಟ್ಟಿನಲ್ಲಿ ತಾನೆಲ್ಲಿದ್ದೇನೆಂದು ಹೇಳಿಕೊಳ್ಳಲು ಅವನಿಗೆ ಇಷ್ಟವಿಲ್ಲ. ಏಕಾಂಗಿಯಾಗಿ, ಎಲ್ಲದರಿಂದ ದೂರವಾಗಿ ಹೋಗಬೇಕೆಂದು ಹೊರಟವನು ಹೇಮಂತ. ಅವನ ಹಿಂದೆ ಬೇಟೆಯಾಡುವವರ ಹಾಗೆ ಓಡುತ್ತ ಹೋಗುವುದು ಸಾಧ್ಯವಿಲ್ಲ.
ಪ್ರಯತ್ನ ಪಟ್ಟರೆ ಹೇಮಂತ ಎಲ್ಲಿದ್ದಾನೆಂದು ಪತ್ತೆ ಹಚ್ಚುವುದು ಈ ಯುಗದಲ್ಲಿ ಅಸಾಧ್ಯವೇನಲ್ಲ. ಪೊಲೀಸ್ ಠಾಣೆಗೆ ಹೋಗಿ ಒಂದು ದೂರು ಬರೆದು ಕೊಟ್ಟು. ಒಂದು ಭಾವಚಿತ್ರವನ್ನು ಕೊಟ್ಟರೆ ಒಂದೆರಡು ದಿವಸಗಳಲ್ಲೇ ಅವರು ಹೇಮಂತನನ್ನು ಪತ್ತೆಹಚ್ಚಿ ಬಿಡುತ್ತಾರೆ. ಅದು, ನಳಿನಿಗೆ ಗೊತ್ತಿದೆ. ಭಾರೀ ಬುದ್ಧಿವಂತಳಾಗದಿದ್ದರೂ ಅವಳು ಸಾಮಾನ್ಯ ಜ್ಞಾನವಿರುವ, ಸಾಕಷ್ಟು ಲೋಕ ವ್ಯವಹಾರಬಲ್ಲ, ಗ್ರಾಜುಯೇಟ್ ಆದವಳು. ಆದರೆ ಹಾಗೆ ಮಾಡಿದರೆ ಅದರಿಂದ ಹೇಮಂತನ ಮನಸ್ಸಿನ ಮೇಲಾಗುವ ಪರಿಣಾಮವನ್ನೂ ಅವಳು ಊಹಿಸಬಲ್ಲಳು. ಅವನು ಹೋಗುವಾಗ ಸ್ಪಷ್ಟವಾದ ಮಾತುಗಳಲ್ಲಿ ಬರೆದಿಟ್ಟು ಹೋಗಿದ್ದಾನಲ್ಲವೇ: “ಖಂಡಿತ ಬರುತ್ತೇನೆ” ಎಂದು, ಬರುತ್ತಾರೆ, ವಾಪಸು ಬರುತ್ತಾರೆ, ಆದರೆ ಯಾವಾಗ ಗೊತ್ತಿಲ್ಲ, ವಾಪಸು ಬಾರದೇ ಇರುವ ನಿರ್ಧಾರ ಅವರು ಮಾಡಿದ್ದರೆ ಹೀಗೇಕೆ ಬರೆಯಬೇಕಾಗಿತ್ತು? ಏಕೆಂದರೆ ಸಾಯಲು ನಿಶ್ಚಯಮಾಡಿದವನಿಗೆ ಪ್ರಾಣಕಳೆದುಕೊಳ್ಳಲು ಬೆಂಗಳೂರಿನಲ್ಲಿ ಆಸ್ಪದವಿಲ್ಲವೇ ಅಥವಾ ಇಲ್ಲಿ ಸಾಯಲು ಇರುವ ಮಾರ್ಗಗಳು ಬೇರೆಲ್ಲಿ ತಾನೇ ಇರಬಹುದು. ಜೇಜಾರು, ಗುರಿಯಿಲ್ಲದೆ ಸುತ್ತಾಡಿಕೊಂಡು ಬರುವೆನೆಂದು ಬರೆದ ಹೇಮಂತನ ಮನಸ್ಸನ್ನು ಕಾಡುವ ಸಮಸ್ಯೆ ಏನಿರಬಹುದು. ಅವನಿಗೆ ದೇಹಾಲಸ್ಯವಾದರೆ ಗತಿಯೇನು ಎಂಬುದುನಳಿನಿಯ ಸಮಸ್ಯೆ. ಇಷ್ಟುಸಲೀಸಾಗಿ ವಿಶ್ಲೇಷಣಾತ್ಮಕವಾಗಿ ನಳಿನಿಯ ಮನಸ್ಸು ಓಡುತ್ತದೆ ಎಂದೇನೂ ನಾವು ಭಾವಿಸಬೇಕಾಗಿಲ್ಲ. ಆಗಾಗ ಅವಳ ಮನಸ್ಸಿನಲ್ಲಿ ಆಲೋಚನೆಯ ತುಣುಕುಗಳು ಕಾಣಿಸಿಕೊಳ್ಳುತ್ತವೆ. ಅವನ ಮನಸ್ಸಿನ ಮೇಲೆ ಹೆಚ್ಚು ಕೆಟ್ಟ ಪರಿಣಾಮವುಂಟುಮಾಡುವ ರೀತಿಯಲ್ಲಿ ತಾನು ವರ್ತಿಸಬಾರದೆಂದಷ್ಟೇ ಅವಳು ತೀರ್ಮಾನಕ್ಕೆ ಬಂದದ್ದು.
“ಈ ವಿಷಯ ಬೀದಿ ಮಾತಾಗದಿರಲಿ” ಎಂಬುದು ಹೇಮಂತನ ಇಚ್ಛೆ. ಎಂದರೆ ಹೇಳದೆ ಕೇಳದೆ, ಗೊತ್ತುಗುರಿಯಿಲ್ಲದೆ, ಕಾರಣ ತಿಳಿಸದೆ ಅವನು ಹೋಗಿರುವ ವಿಚಾರ ಬೇರೆ ಯಾರಿಗೂ ಗೊತ್ತಾಗಬಾರದು. ಸಮಾಜದಲ್ಲಿ ಹೇಮಂತ ಒಬ್ಬಗಣ್ಯ ವ್ಯಕ್ತಿ. ತನ್ನ ಆಫೀಸಿನಲ್ಲಿ ಅವನು ಭಾರೀ ಅಧಿಕಾರವಿರುವವನಲ್ಲ, ಅಪಾರ ಹಣಗಳಿಸುವ ವ್ಯಕ್ತಿಯಲ್ಲ ಆದರೆ ಸಾಹಿತ್ಯವಲಯಗಳಲ್ಲಿ ಅವನಿಗೆ ಮನ್ನಣೆಯಿದೆ, ಅವನಿಗಿಂತ ಬಹುದೊಡ್ಡ ಲೇಖಕರಿದ್ದಾರೆ; ಅವನ ಬರಹವನ್ನು ಟೀಕೆ ಮಾಡುವವರು ಇರುವುದೂ ನಿಜ. ಆದರೆ ಇತರರ ಜೊತೆ ಸೌಜನ್ಯದಿಂದ ವರ್ತಿಸುವ, ತನಗನ್ನಿಸಿದ್ದನ್ನು ಅನ್ನಿಸಿದ ರೀತಿಯಲ್ಲಿ ಪ್ರಾಮಾಣಿಕವಾಗಿ ಬರೆಯುವ ಅವನನ್ನು ಮೆಚ್ಚಿಕೊಂಡವರ ಸಂಖ್ಯೆಯೂ ಕಡಿಮೆಯಲ್ಲ. ಅವನ ಕೃತಿಗಳ ನಿಜವಾದ ಸಾಹಿತ್ಯಕ ಮೌಲ್ಯವೆಷ್ಟು ಎಂದು ಈಗಲೇ ಯಾರೂ ತೀರ್ಮಾನಿಸಲಾರರು, ಹಾಗೆನೋಡಿದರೆ ಕೃತಿ ಹುಟ್ಟುವ ಕಾಲದಲ್ಲಿ ಅದು ಉಂಟುಮಾಡುವ ಪ್ರತಿಕ್ರಿಯೆಯ ಆಧಾರದ ಮೇಲೆಯೇ ಎಲ್ಲ ಕಾಲದಲ್ಲೂ ಅದಕ್ಕಿರಬಹುದಾದ ಬೆಲೆಯನ್ನು ನಿರ್ಧರಿಸುವುದು ಸಾಧ್ಯವಿಲ್ಲ .ಒಂದು ಕಾಲದಲ್ಲಿ ವಿಶೇಷ ಗಮನ ಸೆಳೆಯಲಾರದೇ ಹೋದ ಸಾಹಿತ್ಯಕೃತಿ ಬೇರೊಂದು ಕಾಲದಲ್ಲಿ ಮಾನ್ಯತೆ ಪಡೆದಿರಬಹುದು: ಹಾಗೆಯೇ ಸಮಕಾಲೀನರಿಂದ ಹೊಗಳಿಸಿಕೊಂಡ ಕೃತಿಯೊಂದು ಕಾಲ ಸರಿದಂತೆ ತನ್ನ ಪ್ರಭಾವ ವಲಯವನ್ನು ಮಸುಕುಗೊಳಿಸಿಕೊಂಡು ನಗಣ್ಯವಾಗಿರಲೂಬಹುದು. ಆದರೆ ಹೇಮಂತನ ಕೃತಿಗಳ ಮೌಲ್ಯವೆಂಥದ್ದೇ ಇರಲಿ, ಸಮಾಜದಲ್ಲಿ ಅವನೊಬ್ಬ ಸೃಜನಶೀಲ ವ್ಯಕ್ತಿಯಾಗಿದ್ದಾನೆ. ಇಷ್ಟೆಲ್ಲ ಸೂಕ್ಷ್ಮಗಳು ನಳಿನಿಗೆ ತಿಳಿಯದವಾದರೂ ತನ್ನ ಗಂಡನಿಗೆ ಸಾಕಷ್ಟು ಎತ್ತರದ ಸ್ಥಾನ ಸಮಾಜದಲ್ಲಿದೆಯೆಂದು ಅವಳು ಬಲ್ಲಳು. ಆದ್ದರಿಂದ ಅಂತಹವನ ಬಗ್ಗೆ ಪುಕಾರು ಹುಟ್ಟಿದರೆ ಮುಂದೆ ಕೆಡಕಾಗಬಹುದು. ಅವನಿಗೆ ಬೇಡವಾದ ಕೆಲಸ ತಾನು ಮಾಡಬಾರದು, ಅವನ ಮನಸ್ಸಿಗಾದ ಬೇಸರಕ್ಕೆ ತಾನು ಕಾರಣಳಾಗದಿದ್ದರೆ ಸಾಕು ಎಂದು ಅವಳು ಅಂದುಕೊಳ್ಳುತ್ತಾಳೆ. ಅಂತಹುದೇನನ್ನೂ ತಾನು ಮಾಡಿದ ನೆನಪು ಅವಳಿಗಿಲ್ಲ. ಹಾಗೆ ತಪ್ಪಿದೆನೆಂದು ಹೇಮಂತನಿಗೆ ಅನ್ನಿಸಿದಾಗ ಹಿಂದೆ ಅದೆಷ್ಟು ಸಲ ತನ್ನೊಡನೆ ಜಗಳವಾಡಿಲ್ಲ, ಈಗಲೂ ಹಾಗೆಯೇ ಮಾಡಬಹುದಾಗಿತ್ತು, ಅಲ್ಲದೆ, ಅವನು ಬರೆದ ಪತ್ರದಲ್ಲಿ ಅಂಥ ತನ್ನಿಂದಾಗಿರಬಹುದಾದ ಬೇಸರದ ಸುಳಿವೂ ಇಲ್ಲ. ಅವನಿಗೇನೂ ಆಗದೆ ಇರಲಿ ಎಂಬುದಷ್ಟೇ ಅವಳ ಪ್ರಾರ್ಥನೆ.
ಅವನು ಹೇಳದೇ ಕೇಳದೆ ಹೋಗಿರುವವಿಷಯ ತಿಳಿದಿರುವುರು ಅವನನ್ನು ಬಿಟ್ಟರೆ ತನಗೆ, ಅಮ್ಮನಿಗೆ - ಇಬ್ಬರಿಗೆ ಮಾತ್ರ. ಅಮ್ಮನೂ ಇದನ್ನು ಅರ್ಥಮಾಡಿಕೊಳ್ಳಬಲ್ಲವಳು. ತನ್ನ ಅಳಿಯನ ಸ್ಥಾನಮಾನದ ಬಗ್ಗೆ ವಿಶಾಲಾಕ್ಷಮ್ಮನವರಿಗೂ ಅರಿವಿಲ್ಲವೇ? ಅಷ್ಟೇ ಅಲ್ಲ, ಅವನನ್ನು ಕಾಣಲು ಬರುವ ಜನ ಹೇಮಂತನ ಬಗ್ಗೆ ತೋರುವ ಗೌರವ ಭಾವನೆಯಿಂದ ತನ್ನ ಅಳಿಯನ ಬಗ್ಗೆ ಆಕೆಗೆ ಹೆಮ್ಮೆಯೇ ಇದೆ. ತುಂಬ ಸೂಕ್ಷ್ಮವಾಗಿ, ಈಗಿನ ಕಾಲದ ಹುಡುಗರನ್ನು ಅರ್ಥಮಾಡಿಕೊಳ್ಳಲಾಗದಿದ್ದರೂ. ಅನವಶ್ಯಕವಾಗಿ ಗಂಡ-ಹೆಂಡತಿಯರ ನಡುವೆ ತಾನೇಕೆ ಮೂಗು ಹಾಕಬೇಕೆಂಬ ಅರಿವೂ ಆಕೆಗಿದೆ. ನಳಿನಿಯೇ ಸಮಾಧಾನದಿಂದ ಇರಬೇಕಾದರೆ ,ಅವಳಿಗಿಂತ ಹೇಮಂತನ ಸ್ವಭಾವ ತನಗೆ ಗೊತ್ತೇ? ಏನೋ ಹುಡುಗ, ಒಂದೆರಡು ದಿನಗಳ ನಂತರ ವಾಪಸ್ಸು ಬರುತ್ತಾನೆಂಬ ಭಾವನೆ ಅವರದ್ದು.
ಕವಿತಾಳಿಗೆ ತಂದೆ ಹತ್ತಿರ ಇಲ್ಲದಿರುವುದು ತುಂಬ ಬೇಸರವನ್ನು ಮಾಡಿತೆಂಬುದು ಸರಿಯೇ, ಆದರೆ ದೊಡ್ಡವರ ಈ ಸೂಕ್ಷ್ಮಗಳು ಅವಳಿಗೆ ಅರ್ಥವಾಗುವುದಿಲ್ಲ .ಅಪ್ಪ ಎಲ್ಲಿ ಎಂದು ಕೆಲವು ಸಲ ಕೇಳುತ್ತಾಳೆ “ಊರಿಗೆ ಹೋಗಿದ್ದಾರೆ” ಎಂದರೆ ಯಾವ ಊರಿಗೆ ಎಂದು ಮರುಪ್ರಶ್ನೆ ಹಾಕುತ್ತಾಳೆ. ಮೈಸೂರಿಗೆ ಎಂದೋ ಧಾರವಾಡಕ್ಕೆ ಎಂದೋ ಹೇಳಿದರೆ ಸುಮ್ಮನಾಗುತ್ತಾಳೆ; ಅಥವಾ ಅದೆಲ್ಲಿದೆ ಎಂದು ಕೇಳುತ್ತಾಳೆ, ನಳಿನಿ ಕರ್ನಾಟಕದ ಭೂಪಟ ಮುಂದೆ ಹಿಡಿದು “ಇಗೋ ಇದು ಬೆಂಗಳೂರು. ಇದೇ ಧಾರವಾಡ” ಎಂದು ಅದರಲ್ಲಿ ಗುರ್ತಿಸಿ ತೋರಿಸುತ್ತಾಳೆ. ಹಿಂದೆಯೂ ಒಮ್ಮೊಮ್ಮೆ ಒಂದೆರಡು ದಿನಗಳ ಮಟ್ಟಿಗೆ ಅಪ್ಪ ಬೇರೆ ಊರಿಗೆ ಹೋಗಿದ್ದ ವಿಷಯ ಅವಳಿಗೆ ನೆನಪಿದೆ, ಆದರೆ ಇಷ್ಟು ದಿನಗಳ ಕಾಲ ಹೋಗಿದ್ದುದು ಅವಳಿಗೆ ಬೇಜಾರಾಗಿದೆ. ಊರಿಂದ ಬರುವಾಗ ನಿನಗೆ ಅಪ್ಪ ಅದು ತಂದುಕೊಡ್ತಾರೆ, ಇದು ತಂದುಕೊಡ್ತಾರೆ ಎಂದರೆ ಅವಳು ಸುಮ್ಮನಾಗುತ್ತಾಳೆ. ಎಂಟು ವರ್ಷದ ಅವಳಿಗೆ ಆಟ-ನಿದ್ರೆ ಶಾಲೆಗಳಲ್ಲಿ ದಿನದ ಬಹುಭಾಗ ಕಳೆಯುವುದರಿಂದ ಯೋಚನೆಯಿಲ್ಲ.
ಇದ್ದಕ್ಕಿದ್ದಂತೆ ಕಾಗದ ಬರೆದಿಟ್ಟು ಹೇಮಂತ ಹೋದ ಮೂರನೆಯ ದಿನ ಅವರ ಸ್ನೇಹಿತರಿಗೇನಾದರೂ ಈ ವಿಷಯ ತಿಳಿದಿದೆಯೇ ಎಂದು ಕುತೂಹಲ, ಕಾತರಗಳಾಗಿದ್ದವು. ಬೇರೆಯವರಿಗೆ ತಿಳಿಸಿ ಹೋಗುವ ಹಾಗಿದ್ದರೆ ತನ್ನಿಂದೇಕೆ ಮುಚ್ಚಿಡುತ್ತಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲ ನಳಿನಿ ನೋಡೋಣವೆಂದು ಹೇಮಂತನ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದ ದೇವೇಂದ್ರಕುಮಾರನ ಮನೆಗೆ ಹೋಗಿದ್ದಳು - ಆತ ಆಫೀಸು ಮುಗಿಸಿಕೊಂಡು ಮನೆಗೆ ಬಂದಿರುವ ಸಮಯಕ್ಕೆ ಸರಿಯಾಗಿ. ಅವರ ಹೆಂಡತಿ ಪರಿಮಳ ಕೂಡ ತನ್ನನ್ನು ಮನೆಗೆಬನ್ನಿ ಎಂದು ಹೇಳುತ್ತಿದ್ದಳು. ಆಕೆಯೂ ಒಂದೆರಡು ಬಾರಿ ಗಂಡನೊಡನೆತನ್ನ ಮನೆಗೆ ಬಂದಿದ್ದರು. ಹೀಗಾಗಿ ಪರಿಚಯ ಚೆನ್ನಾಗಿದ್ದರೂ ತೀರ ಹತ್ತಿರದ ಸ್ನೇಹವೇನಲ್ಲ. ಕವಿತಾ ಜೊತೆಗಿದ್ದರೆ ಏನಾದರೂ ಹೇಳಿ ಪೇಚಿಗೆ ಸಿಕ್ಕಿಸಿಯಾಳೆಂದು ನಳಿನಿ ಮಗಳನ್ನು ಕರೆದುಕೊಂಡು ಹೋಗದೆ ಒಬ್ಬಳೇ ಶಾಂತಿನಗರದಲ್ಲಿದ್ದ ದೇವೇಂದ್ರಕುಮಾರನ ಮನೆಗೆ ಹೋಗಿದ್ದಳು.
ಇವಳನ್ನು ಕಂಡೊಡನೆ ತುಂಬ ಸಂಭ್ರಮದಿಂದ ಬರಮಾಡಿಕೊಂಡ ದಂಪತಿಗಳ ಉಪಚಾರವನ್ನು ಸಹಿಸಿಕೊಳ್ಳಬೇಕಾಯ್ತು ನಳಿನಿ. ಅವಳ ಸದ್ಯದ ಮಾನಸಿಕ ಸ್ಥಿತಿಯಲ್ಲಿ ಉಲ್ಲಾಸದಿಂದ ಹರಟೆ ಹೊಡೆಯುವ ಹಾಗೆ ಇಲ್ಲದಿದ್ದರೂ ತನ್ನ ಮನಸ್ಸಿನ ದುಗುಡವನ್ನು ಹೊರಗೆ ತೋರ್ಪಡಿಸಿಕೊಳ್ಳಬಾರದು: ಅಷ್ಟೇ ಅಲ್ಲ, ಅದರ ಸುಳಿವನ್ನು ನೀಡಬಾರದೆಂಬ ಎಚ್ಚರಿದಿಂದಲೇ ನಳಿನಿ ಮಾತಿನಲ್ಲಿ ಪಾಲುಗೊಂಡಳು.
“ಏನು ಒಬ್ಬರೇಬಂದಿರಲ್ಲ?” ಎಂದು ಕಾಫಿ ಕೊಡುತ್ತ ಪರಿಮಳ ಕೇಳಿದಾಗ, ತುಟಿಗೆ ಲೋಟ ತಂದ ನಳಿನಿ ಏನು ಉತ್ತರ ಕೊಡಬೇಕೆಂದು ತಿಳಿಯದೆಒಂದು ಕ್ಷಣತಡೆದಳು. ಪ್ರಶ್ನೆ ಅವಳಿಗೆ ಕೇಳಿಸಿತೋ ಇಲ್ಲವೋ ಎಂದು ದೇವೇಂದ್ರಕುಮಾರ್ ಭಾವಿಸಿರಬೇಕು. “ಹೇಮಂತ್ ಊರಲ್ಲಿಲ್ಲವೇನು?” ಎಂದು ಕೇಳಿದಾಗ ಅವಳಿಗೆ ಸ್ವಲ್ಪ ಸಲೀಸಾಯಿತು. ಅಂದರೆ ಇವರಿಗೆ ವಿಷಯ ತಿಳಿಯದು, ತಾನಂದುಕೊಂಡಂತೆಬೇರೆ ಯಾರಿಗೂ ತಿಳಿಯದು.
“ಇಲ್ಲ”
“ಯಾವೂರಿಗೆ ಹೋಗಿದ್ದಾನೆ?” ಏಕವಚನದ ಈ ಸ್ನೇಹಿತನಿಗೆ ಸಾಕಷ್ಟು ಸಮೀಪದವನೇ. ಆದರೆ ಮನಸ್ಸಿನ ದುಗುಡವನ್ನೆಲ್ಲ ಹಂಚಿಕೊಳ್ಳುವಷ್ಟು ಆತ್ಮೀಯನಲ್ಲ. ಅಲ್ಲದೆ, ಯಾರಿಗೂ ತನ್ನ ಮನಸಿಕ ಹೊರೆಯನ್ನು ವರ್ಗಾಯಿಸುವ ಸ್ವಭಾವವಲ್ಲ ಹೇಮಂತನದು. ತನ್ನ ಮನಸ್ಸಿನ ಎಲ್ಲ ಬಿರುಗಾಳಿ, ಉಲ್ಕಾಪಾತ, ಭೂಕಂಪಗಳಿಗೂ ತಾನೇ ಗುರಿಯಾಗುವಂತಹವನೇ ವಿನಾ ಮನಸ್ಸು ತೆರೆದು ಅವೆಲ್ಲ ಹೊರಗೆ ಹರಿದು ಇತರರನ್ನು ತಟ್ಟುವಂತೆ ಮಾಡುವವನಲ್ಲ.
“ಧಾರವಾಡಕ್ಕೆ ಹೋದರು. ಆದರೆ ಅಲ್ಲಿಂದ ಬೇರೆಲ್ಲಿಗೋ ಹೋಗ್ತಾರೇಂತ ಕಾಣತ್ತೆ” ಸ್ವಲ್ಪ ಯೋಚಿಸಿ ಉತ್ತರವಿತ್ತಳು.
“ಭಾರೀ ಕಾರ್ಯಕ್ರಮವೇ ಇರಬೇಕೂಂತ ಕಾಣುತ್ತೆ. ಹತ್ತು ದಿವಸಗಳಿಗೆ ರಜೆ ಹಾಕಿದ್ದಾನೆ”ಎಂದಾಗ ಒಂದು ವಿಷಯ ಹೊಸತಾಗಿ ನಳಿನಿಗೆ ತಿಳಿದಂತಾಯಿತು. ಹತ್ತು ದಿವಸಗಳ ರಜೆಗೆ ಬರೆದಿದ್ದಾನೆ. ಹಾಗಂದರೆ ಇನ್ನೊಂದೆಂಟು ಒಂಬತ್ತು ದಿವಸಗಳಲ್ಲಿ ಬಂದುಬಿಡುತ್ತಾನೆ. ಸ್ವಲ್ಪ ಸಂಭ್ರಮವಾದಂತೆನಿಸಿತು. ದೇವೇಂದ್ರಕುಮಾರನ ಮಾತಿಗೆ ಉತ್ತರವೆಂಬಂತೆ ಕಾಣಿಸಿಕೊಂಡ ಅವಳ ಮುಗುಳ್ನಗೆ ಅವಳ ಬಿಗಿಗೊಂಡ ಮನಸ್ಸು ಸ್ವಲ್ಪ ಸಡಿಲಗೊಂಡ ಸೂಚನೆ.
“ಅಂದ ಹಾಗೆ ಮರೆತಿದ್ದೆ” ಎಂದು ದೇವೇಂದ್ರಕುಮಾರ್ ಎದ್ದು ರೂಮಿಗೆ ಹೋಗಿ ವಾಪಸ್ಸು ಬಂದು “ಅವನು ಇದ್ದಕ್ಕಿದ್ದ ಹಾಗೆಯೇ ರಜೆ ಹಾಕಿದನಲ್ಲ. ಈ ಪ್ರೋಗ್ರಾಂ ದಿಢೀರ್ ಆಯಿತೂಂತ ಕಾಣುತ್ತೆ. ನನಗೆ ಒಂದೂವರೆ ಸಾವಿರ ರೂಪಾಯಿ ಚೆಕ್‍ಕೊಟ್ಟು ನನ್ನ ಹತ್ತಿರ ಒಂದು ಸಾವಿರ ರೂಪಾಯಿ ಕ್ಯಾಷ್ ತಗೊಂಡ. ಈ ಬ್ಯಾಂಕ್ ಚೆಕ್ ಕ್ಯಾಷ್ ಮಾಡಿಸಿ ನಿನ್ನ ಸಾವಿರ ರೂಪಾಯಿ ತಗೊಂಡು, ಮಿಕ್ಕ ಐನೂರನ್ನ ಮನೆಗೆ ತಲುಪಿಸು ಅಂತ ಹೇಳಿದ್ದ. ನೀವಿವತ್ತು ಬರದೇಇದ್ದರೆ ನಾನೇ ನಾಳೆ ನಿಮ್ಮ ಮನೆಯ ಕಡೆಬರ್ತಾ ಇದ್ದೆ, ಹೇಗೂ ನೀವೇ ಬಂದಿದ್ದೀರಲ್ಲ, ತಗೊಳ್ಳಿ”ಎಂದು ನೂರರ ಐದು ನೋಟುಗಳನ್ನು ಕೈಲಿ ಹಿಡಿದು ಇವಳ ಕಡೆ ಚಾಚಿದ್ದ.
“ದುಡ್ಡು ಕೊಟ್ಟಿರಿ ಅಂತ ಮನೆಗೆ ಬರುವುದು ನಿಲ್ಲಿಸಬೇಡಿ. ಪರಿಮಳಾನ್ನೂ ಕರೆದುಕೊಂಡು ನಾಳೆ ಬನ್ನಿ” ಎಂದು ಆಹ್ವಾನವಿತ್ತಳು ನಳಿನಿ.
“ಇನ್ನೊಂದು ಸಲ ಬರೋಣ, ಹೇಮಂತ ಬರಲಿ.”
“ಅವರು ಬಂದಾಗಲೂ ಬನ್ನಿ. ಪರಿಮಳಾ ನಮ್ಮಮನೆಗೆ ಬಂದು ತುಂಬ ದಿವಸವಾಯಿತು. ಅವರೂ ಮನೇಲಿಲ್ಲ, ಕೆಲಸವೂ ಹೆಚ್ಚಿಲ್ಲ.”
“ಯಾಕ್ರೀ ಯಜಮಾನರು ಮನೇಲಿದ್ದರೆ ಭಾರೀ ಕೆಲಸವೋ” ಎಂದು ತುಂಟ ನಗುವಿನೊಂದಿಗೆ ಪರಿಮಳ ಪ್ರಶ್ನೆಯೆಸೆದಳು.
ಹೌದಲ್ಲ, ಅದೇ ಅರ್ಥ ತನ್ನ ಮಾತಿನದು. ಯೋಚಿಸಿ ಮಾತನಾಡುವಷ್ಟು ನೆಮ್ಮದಿಯಾಗಲೀ, ಜೋಕುಗಳನ್ನು ಸಂತೋಷಿಸುವುದಾಗಲೀ ಸಾಧ್ಯವಿಲ್ಲದ ಈ ಸಮಯ ಅವಳಿಗೆ ಕಿರಿಕಿರಿಯಾಗತೊಡಗಿತ್ತು. ಆದರೆಯಾವುದನ್ನೂ ತೋರಿಸಿಕೊಳ್ಳುವಂತಿಲ್ಲ. ಉತ್ತರವಾಗಿ ಸುಮ್ಮನೆ ಮುಗುಳ್ನಕ್ಕಳು.
ಅದೂ ಇದೂಹರಟೆ ಹೊಡೆದು ಅಥವಾ ಅವರುಹೊಡೆದ ಹರಟೆಯಲ್ಲಿ ಸಿಕ್ಕಿಹಾಕಿಕೊಂಡು ಕೊನೆಗೆ ನಳಿನಿಯ ಬಿಡುಗಡೆಯಾಗುವ ಹೊತ್ತಿಗೆ ಸಂಜೆ ಏಳುಗಂಟೆಯಾಗಿತ್ತು. ಇನ್ನು ಹೊತ್ತಾಯಿತು ಎಂದು ಕುಂಕುಮ ತೆಗೆದುಕೊಂಡು ಹೊರಟು ನಿಂತಾಗ “ಕತ್ತಲಾಯಿತು, ಇವರು ಬಂದು ಮನೆಗೆ ಬಿಟ್ಟು ಬರ್ತಾರೆ” ಎಂದು ಪರಿಮಳ ಹೇಳಿದರೂ ಅದನ್ನು ನಳಿನಿನಿರಾಕರಿಸಿದಳು. “ಇನ್ನೂ ಏಳುಗಂಟೆ, ಅರ್ಧಗಂಟೆಗೆಲ್ಲ ಮನೆ ಸೇರಬಹುದು. ಬೇಕಾದಷ್ಟು ಬಸ್ಸುಗಳಿವೆಯಲ್ಲ.”
“ಹೋಗಲಿ ತಾಳಿ, ಬಸ್ ಸ್ಟಾಪಿನವರೆಗಾದರೂ ಬರುತ್ತೇವೆ” ಎಂದು ತಾವೂ ತಯಾರಾಗಿ ಆ ದಂಪತಿಗಳು ನಳಿನಿಯ ಜೊತೆ ಹೊರಟರು.
ಮೌನದಿಂದ ಸಾಗಿದಆ ನಡಿಗೆಯಲ್ಲಿ ನಳಿನಿಯ ಮನಸ್ಸಿನಲ್ಲಿಯ ಆಲೋಚನಾ ವೀಚಿಗಳು ಇತರರ ಮನಸ್ಸಿನ ದಡವನ್ನು ತಲುಪಲು ಸಾಧ್ಯವಿರಲಿಲ್ಲ. ಇಂಥ ಸನ್ನಿವೇಶದಲ್ಲಿ ಹೇಮಂತನಿದ್ದಿದ್ದರೆ ಹೇಗೆ ಮಾತಾಡುತ್ತಿದ್ದರು. ಅವರ ನಗುವಿನ ಅಲೆಗಳು ಎಲ್ಲೆಡೆಗೆ ಹರಡಿ ಉಲ್ಲಾಸದ ತಂಪನ್ನು ಎರಚುತ್ತಿದ್ದವು. ಈಗೆಲ್ಲಿದ್ದಾರೋ ಏನೋ. ಅವರಿಗೆ ಏನು ಬೇಸರವೋ. ತಾನು ತನ್ನ ಮನಸ್ಸನ್ನೆಲ್ಲ ಅಮ್ಮನ ಬಳಿಯೋ ಅವರ ಬಳಿಯೋ ಬರಿದುಗೊಳಿಸುವ ಹಾಗೆ ಹೇಮಂತ ಯಾಕೆ ಮಾಡುವುದಿಲ್ಲಎಂದೆಲ್ಲ ಯೋಚನೆಗಳ ಸಾಲು ಇವಳನ್ನು ಎದುರಿಸಿದಾಗ ಬಸ್ ಬಂತು.

* * *

No comments: