Sunday, 28 September 2014

ಶೋಧನೆ - 4

ಶೋಧನೆ - 4

ಪ್ರಭಾಕರರಾಯರು ಹೇಳಿದ್ದರು. ಸೂತಕ ಕಳೆದ ಮೇಲೆ ಶಶಿಯ ಹೆಸರಲ್ಲಿ ಒಂದಷ್ಟು ಜನಕ್ಕೆ ಊಟಕ್ಕೆ ಹಾಕಬೇಕೆಂದು. ಆಗಬಹುದು ಎಂದಿದ್ದೆ. ಅದಕ್ಕೇನು? ಆದರೆ ಸಂತೋಷದ ಕಾರಣದಿಂದ ಬೇರೆಯರಿಗೆ ನೀಡುವ ಔತಣಕ್ಕೂ ಸತ್ತವರ ಹೆಸರಲ್ಲಿ ಊಟ ಹಾಕುವುದಕ್ಕೂ ವ್ಯತ್ಯಾಸವಿಲ್ಲವೇ? ಹಾಗೆ ನೋಡಿದರೆ ನನಗೆ ಸತ್ತವರ ನೆನಪು ಹಸಿಯಿರವಾಗ, ಅವರ ಹೆಸರಲ್ಲಿ, ಸಿಹಿತಿಂಡಿಗಳನ್ನು ತಿನ್ನುವುದು ಎಂದರೆ ಯಾಕೋ ಹೇಸಿಕೆಯೆನಿಸುತ್ತಿದೆ. ಭೂತತೃಪ್ತಿಯಾಗಬೇಕಂತೆ. ನನಗೇನು ಅನ್ನಿಸುತ್ತದೆ ಎನ್ನುವುದು ಇಂಥ ಸಂದರ್ಭಗಳಲ್ಲಿ ಮುಖ್ಯವಾಗುವುದಿಲ್ಲ; ಎಲ್ಲರೂ ಹೇಗೆ ಮಾಡುತ್ತಾರೋ ಹಾಗೆ ಮಾಡುವುದು. ಪ್ರತಿಕ್ಷಣಕ್ಕೂ ಇದಕ್ಕೇನು ಅರ್ಥ, ಸಂಕೇತ ಎಂದು ವಿಚಾರಿಸುವುದಕ್ಕೂ ಮಿತಿ ಇಲ್ಲವೇ? ಹಾಗಾಗಿ, ಪ್ರಭಾಕರರಾವ್ ಸೂಚಿಸಿದ್ದಕ್ಕೆ ನಾನು ತಕ್ಷಣ ಸಮ್ಮತಿಯಿತ್ತಿದ್ದೆ.
ಮೊದಲು ಎರಡೇ ದಿನ ರಜ ಹಾಕಿದ್ದವನು, ಶಶಿಯ ವಿಚಾರ ಎಲ್ಲ ತೀರ್ಮಾನವಾದಾಗ ಹದಿನೈದು ದಿನಗಳ ರಜ ಮಂಜೂರು ಮಾಡಿಸಿಕೊಂಡಿದ್ದೆ. ಹತ್ತು ದಿನಗಳು ಸೂತಕ ಕಳೆಯಬೇಕು. ವೈಕುಂಠಸಮಾರಾಧನೆಯಾಗಬೇಕು ಎಂದು. ಸೂತಕ ಸಮಾರಾಧನೆಯ ಏರ್ಪಾಟಿಗೆ ತೊಡಗುತ್ತೇನೆ. ಅಡಿಗೆಯವರು ಬಂದಿರುವುದನ್ನು ಕಂಡು; ರಾಶಿ ರಾಶಿ ತರಕಾರಿ, ಧಾನ್ಯಗಳು, ತೆಂಗಿನಕಾಯಿ, ಬೆಲ್ಲ, ಮುಂತಾದುವನ್ನು ನೋಡಿ ಹುಡುಗರಿಗೆ ಸಂಭ್ರಮ. ಅವು ಇವತ್ತು ಹಬ್ಬವೆಂದೇ ತಿಳಿದಿವೆಯೋ ಏನೋ! ಒಳಹೊರಗೆ ಓಡಾಡುತ್ತವೆ; ಎಲ್ಲದಕ್ಕೂ ಕೈಹಾಕುತ್ತವೆ. ಇಷ್ಟು ದಿನ ಎಲ್ಲೂ ಹೋಗದಂತೆ ಹಾಲು ಬಿಟ್ಟು ಮನೆಯ ಇನ್ನೆಲ್ಲೂ ಸುಳಿಯದಂತೆ ಅವರಮ್ಮ ನಿರ್ಬಂಧ ಹಾಕಿದ್ದುದು ಇವತ್ತು ತೆಗೆದಿದೆಯಲ್ಲ. ಅದರ ಸಂಭ್ರಮವೂ ಇರಬಹುದು. ಪೋಲೀಸ್ ಕಮೀಷನರ ಆಫೀಸಿನಲ್ಲಿಯ ಕೆಲಸಗಳೆಲ್ಲ ಮುಗಿದ ಮೇಲೆ ನಡುವೆ ಒಂದೆರಡು ದಿನ ಕೆಲಸವೇ ಇಲ್ಲ. ಮನೆಯಲ್ಲಿ ಕೂತು ಏನು ಮಾಡುವುದು? ಯೋಚನೆ ಮಾಡುತ್ತ ಕೂರುವುದು ಸಾಧ್ಯವೇ? ಹನ್ನೊಂದನೇ ದಿನಕ್ಕೆ ಜನಗಳನ್ನು ಕರೆಯಬೇಕಲ್ಲ, ಅದಕ್ಕಾಗಿ ಓಡಾಡುವುದು ಇದ್ದೇ ಇತ್ತು. ಅದಕ್ಕೆ ಒಂದು ದಿನ ಸಾಕು. ಅದಕ್ಕೇ ಕುತೂಹಲದಿಂದ ಬಾಣಸವಾಡಿಗೆ ಒಂದು ಬೆಳಿಗ್ಗೆಹೋಗಿರುತ್ತೇನೆ. ಅವನನ್ನು ಆಹುತಿ ತೆಗೆದುಕೊಂಡ ಬಾವಿ ಹೇಗಿರಬಹುದು. ಪರಿಸರ ಎಂಥದ್ದು ಎಂಬ ಬಗ್ಗೆ ತಲೆಯಲ್ಲಿ ಕಲ್ಪನೆಗಳು.
ಒಬ್ಬನೇ ಬಾಣಸವಾಡಿಯ ದೇವಸ್ಥಾನದ ಹತ್ತಿರ ಬಂದೆ. ಅಷ್ಟೇನೂ ಜನರಿರದ ದೇವಾಲಯವದು. ಆದರೆ ದೇವಸ್ಥಾನ ದೊಡ್ಡ ಪ್ರಾಕಾರದ ಒಳಗಿದೆ. ಶಶಿಯ ದೇಹ ತೇಲಿದ ವಿಷಯವನ್ನು ಮೊದಲು ತಿಳಿಸಿದ್ದವನು ಗುಡಿಯ ಅರ್ಚಕರ ಮಗನಂತೆ. ಅವನನ್ನು ಕಂಡು ವಿಚಾರವನ್ನೇಕೆ ತಿಳಿಯಬಾರದೆಂದು ಯೋಚಿಸಿ ನೇರವಾಗಿ ಅವರ ಮನೆಗೆ ಹೋದೆ. ಅರ್ಚಕರ ಮನೆ ದೇವಾಲಯದ ಪ್ರಾಕಾರದೊಳಗೇ ಇದೆ ಎಂದು ತಿಳಿದುಕೊಂಡಿದ್ದೆ. ನನಗೆ ಸೂತಕ ಬೇರೆ, ಒಳಗೆ ಹೋಗಬಾರದೇನೋ ಎಂದುಕೊಂಡು ಹೊರಗಿನಿಂದಲೇ ಮನೆಯವರನ್ನು ಕರೆಯತೊಡಗಿದೆ. ಆದರೆ ಏನೆಂದು ಕರೆಯುವುದು? ಅಲ್ಲಿನವರು ಯಾರೂ ನನಗೆ ಪರಿಚಿತರಲ್ಲವಲ್ಲ! “ಸ್ವಾಮಿ" ಎಂದು ಕೂಗಿದೆ. ಹತ್ತಿರ ಮನೆಗಳಿರಲಿಲ್ಲ. ನಾನು ದೇವಸ್ಥಾನದ ಹೊರಗೆ ನಿಂತುಕೊಂಡು ಕೂಗಿದ್ದರಿಂದ ಒಳಗಿನವರಿಗೆ ಕೇಳಿಸಲಿಲ್ಲವೇನೋ, ಜೊತೆಗೆ ಸ್ವಲ್ಪ ಬಯಲು ಬೇರೆ ಉತ್ತರ ಬರಲಿಲ್ಲ. ಮತ್ತೊಂದೆರಡು ಬಾರಿ ಕೂಗಿದೆ. ಸುಸ್ತಾಗಿ ಸುಮ್ಮನಾದೆ.
ಒಂದೆರಡು ನಿಮಿಷಗಳಾದ ಮೇಲೆ ಐವತ್ತು ವರುಷಗಳಾಗಿರಬಹುದಾದ ಒಬ್ಬರು ಬ್ರಾಹ್ಮಣರು ಹೊರಗೆ ಬಂದರು. ನನ್ನ ಕಡೆ ನೋಡಿದರು, “ಯಾರು ಬೇಕು?" ಎಂದರು.
ತಮ್ಮ ಮಗ ಇದ್ದಾರಾ?" ಅಂದೆ. ಇವರ ಮಗನೇ ಪೋಲೀಸರಿಗೆ ವಿಷಯ ತಿಳಿಸಿರಬೇಕೆಂದು ಅನ್ನಿಸಿತ್ತು. ಆದರೆ ಅವರು ಕಕ್ಕಾವಿಕ್ಕಿಯಾದರು.
ಅವರು ಊರಲ್ಲಿಲ್ಲವಲ್ಲ, ಯಾರು ನೀವು?"
ಅವರನ್ನು ಸ್ವಲ್ಪ ಕಾಣಬೇಕಾಗಿತ್ತು. ಯಾವ ಊರಿಗೆ ಹೋಗಿದ್ದಾರೆ?"
ಅವನು ಇರುವುದೇ ನಾಗಪುರದಲ್ಲಿ" ಎಂದಾಗ ನನಗೆ ನಿಜವಾಗಿ ಗಾಬರಿಯಾಯಿತು. ಕಕ್ಕಾವಿಕ್ಕಿಯಾಗುವ ಸರದಿ ಈಗ ನನ್ನದಾಗಿತ್ತು.
ಯಾವತ್ತು ಬರುತ್ತಾರೆ?" ವಿಷಯ ತಿಳಿದುಕೊಂಡೇ ಹೋಗೋಣ ವೆಂದುಕೊಂಡೆ.
ಯಾಕೆ, ಅವನೆಲ್ಲಿ ಬರುತ್ತಾನೆ ಈಗ! ಒಂದು ವರ್ಷಕ್ಕೋ ಆರು ತಿಂಗಳಿಗೋ ಒಂದು ಸಾರಿ ಬರುತ್ತಾನೆ. ಯಾಕೆ ತಾವೇನಾದರೂ ಅವನ ಸ್ನೇಹಿತರೇನು? "
ಹಾಗಲ್ಲ, ಒಂದು ವಿಷಯ ತಿಳಿದುಕೊಳ್ಳಬೇಕಾಗಿತ್ತು."
ಯಾವ ವಿಚಾರ?" ಎಂದರು. ಇವರ ಹತ್ತಿರ ವಿಷಯವನ್ನು ಪ್ರಸ್ತಾಪ ಮಾಡಬಹುದೇ ಬೇಡವೇ ಎಂಬ ಅನುಮಾನ ಬಂತು ನನಗೆ. ಆರು ತಿಂಗಳಿಗೋ ವರ್ಷಕ್ಕೋ ಬರುವ ಮಗ, ನಾಗಪುರದಲ್ಲಿದ್ದಾರೆ. ಅಂದರೆ ಕಮೀಷನರ್ ಆಫೀಸಿಗೆ ತಿಳಿಸಿದವರು ಇವರ ಮಗ ಇರಲಾರರು. ನಾನು ತಪ್ಪಿ ಬಂದಿರಬೇಕು ಎನಿಸಿತು.
ಬಾಣಸವಾಡಿ ದೇವಸ್ಥಾನ ಅಂದರೆ ಇದೇ ಏನು?"
ಹೌದು, ಆದರೆ ಏನಾಗಬೇಕಾಗಿತ್ತು. ಅಂತ ಹೇಳಲೇ ಇಲ್ಲವಲ್ಲ?"
ಗುಡಿಯ ಅರ್ಚಕರ ಮನೆಯೆಂದರೆ....."
ನಮ್ಮದೇನೆ? ಸರಿಯಾಗಿಯೇ ಬಂದಿದೀರಿ, ವಿಚಾರವೇನು?"
ನಾನು ಅನುಮಾನದಿಂದಲೇ ವಿಚಾರ ಹೇಳಲು ತೊಡಗಿದೆ. ಹೇಗೆ ಪ್ರಸ್ತಾಪ ಮಾಡಲಿ ಎಂಬ ಯೋಚನೆಯಲ್ಲಿ ಬಿದ್ದೆ.
ಗುಡಿಯ ಹತ್ತಿರ ಒಂದು ಬಾವಿಯಿದೆಯಂತಲ್ಲ, ಅದೆಲ್ಲಿ?"
ಕಡೆ" ಅಂತ ಕೈ ತೋರಿಸಿದರು.“ಸುಮಾರು ಒಂದು ವಾರದ ಹಿಂದೆ ಅದರಲ್ಲಿ ಒಂದು ಹೆಣ ತೇಲುತ್ತಿದ್ದುದನ್ನು ಯಾರೋ ಪೋಲೀಸರಿಗೆ ತಿಳಿಸಿದರಂತಲ್ಲ."
ಹೌದು, ನಾನೇ. ಯಾಕೆ ತಾವೇನಾದರೂ ಮಫ್ತಿ ಪೋಲೀಸರೇನು?"
ಹಾಗೇನಿಲ್ಲ. ನಾನು ಹಾಗೆ ಸತ್ತೋನ ದುರದೃಷ್ಟ ಅಣ್ಣ" ಎಂದೆ. ಈಮಾತು ನನಗೆ ಅಪರಿಚಿತವೆನಿಸಿತ್ತು. ದುರದೃಷ್ಟವಂತ ಇತ್ಯಾದಿ ನಾಟಕೀಯ ಮಾತುಗಳೇಕೆ ನನ್ನ ಬಾಯಿಂದ ಹೊರಬೀಳುತ್ತಿವೆ?
. ಇನ್ನೇನೋ ಪೋಲೀಸು ತನಿಖೆ ಏನೋ ಅಂದುಕೊಂಡೆ. ಹೌದು, ನಾನೇ ಪೋಲೀಸರಿಗೆ ಫೋನ್ ಮಾಡಿದ್ದು."
ಅಂದರೆ ಇವರೇ ಅರ್ಚಕರ ಮಗ; ಇವರ ತಂದೆ ಹಾಗಾದರೆ ಇನ್ನೂ ಬದುಕಿದ್ದು ಅರ್ಚಕ ವೃತ್ತಿಯಲ್ಲಿರಬೇಕು. ಇವರೇ ಪೂಜೆ ಮಾಡುತ್ತಿರಬಹುದಾದರೂ, ತಂದೆ ಬದುಕಿರುವುದರಿಂದ ಅರ್ಚಕರ ಮಗನೆಂದು ಕರೆಸಿಕೊಳ್ಳುತ್ತಿ ದ್ದಾರೆ. “ಬನ್ನಿ ಒಳಗೆ" ಎಂದರು. “ಇಲ್ಲ, ನನಗಿನ್ನೂ ಮೈಲಿಗೆ" ಅಂದೆ, “ಹೌದಲ್ಲ, ಅದು ಆಗಿ ಇನ್ನೂ ಎಂಟು ದಿನ ಆಗಿರಬಹುದಷ್ಟೆ" ಅಂದುಕೊಂಡರು.
ಏನು ವಿಚಾರ ತಿಳಿದುಕೋಬೇಕಾಗಿತ್ತು? ಏನಾದರೂ ತೊಂದರೆಯೇ?"
ಹಾಗೇನಿಲ್ಲ. ಎಲ್ಲ ಸರಿಹೋಗಿದೆ. ಆದರೆ ಅವನು ಬಿದ್ದ ಬಾವಿ ನೋಡಿಕೊಂಡು ಹೋಗೋಣ ಅಂತ ಬಂದೆ."
ಪಾಪ, ತಮ್ಮ ದುಃಖ ನನಗೆ ಅರ್ಥವಾಗತ್ತೆ, ಕಡೆ ಬನ್ನಿ  ನೋಡುವಿರಂತೆ" ಎಂದು ದೇವಸ್ಥಾನದ ಇನ್ನೊಂದು ಬದಿಗೆ ಕರೆದುಕೊಂಡು ಹೋದರು. ನಾನು ಹಿಂಬಾಲಿಸಿದೆ.
ಒಂದು ಕಡೆಯಲ್ಲಿ ದೇವಸ್ಥಾನ. ಇನ್ನೊಂದು ಕಡೆಯಲ್ಲಿ ತೋಟ. ನಡುವೆ ಬಾವಿ. ಏಕಾಂತ ಸ್ಥಳವೇ. ಜನಗಳ ಸಂಚಾರ ಹೆಚ್ಚೇನೂ ಇರಲಿಲ್ಲ. ಆದರೆ ದಾರಿಯಲ್ಲಿ ಹೋಗುವವರಿಗೆ ಬಾವಿ ಕಾಣಿಸುತ್ತದೆ. ನಾನು ಹೋದಾಗ ಅದಾಗಲೇ ಹನ್ನೊಂದು ಗಂಟೆಯಾದ್ದರಿಂದ ಜನಸಂಚಾರವಿತ್ತು: ಅವನು ಬಿದ್ದಾಗ ತೀರ ಬೆಳಿಗ್ಗೆಯೇನೋ; ಜನರು ಓಡಾಡುತ್ತಿದ್ದಿರಲಾರರು. ದೊಡ್ಡದಾದ ಬಾವಿ; ನೀರು ಅಷ್ಟೇನೂ ಮೇಲಿರಲಿಲ್ಲ; ಭರ್ಜರಿಯಾದ ಕಲ್ಲು ಕಟ್ಟಡ ಕಟ್ಟಲಾಗತ್ತು. ಆದರೂ ಉಪಯೋಗ ಪಡೆಯುತ್ತಿದ್ದುದು ಕಡಮೆಯೆಂದು ಕಾಣುತ್ತದೆ. ಶಿಥಿಲವಾಗುತ್ತಿತ್ತು. ಕಟ್ಟಡದೊಳಗಿಂದಲೇ ಚಾಚಿಕೊಂಡ ಕಲ್ಲಿನ ಮೆಟ್ಟಿಲುಗಳು. ಸ್ವಲ್ಪ ಎತ್ತರವೇ; ಸಲೀಸಾಗಿ ಹತ್ತಿಕೊಂಡು ಬರುವುದಾಗಲೀ, ಇಳಿಯುವುದಾಗಲೀ ಸುಲಭವಲ್ಲ, ಹಾಗೆಯೇ ಮೆಟ್ಟಿಲುಗಳು ತಳದವರೆಗೂ ಹೋಗಿರಬಹುದು.
ನೀರು ಎಷ್ಟಿರಬಹುದು?"
ಇರಬಹುದು, ಒಂದು-ಒಂದೂವರೆ ಆಳುದ್ದ. ಹಿಂದೆ ಇದು ದೇವಸ್ಥಾನಕ್ಕೇ ಸೇರಿದ್ದು. ಈಗ ತಕರಾರಿನಲ್ಲಿದೆ, ತೋಟದವನು ಬಾವಿ ತಮ್ಮ ಹಿರೀಕರದ್ದು ಅಂತ ದಾವಾ ಹಾಕಿದ್ದಾನೆ" ಎಂದರು ಅರ್ಚಕರ ಮಗ.
ಮಳೆಗಾಲದಲ್ಲಿ ನೀರು ಬಾವಿಯ ತುಂಬ ಬರುತ್ತೇಂತ ಕಾಣುತ್ತೆ."
ಹೌದು, ಹೌದು. ಈಗ ಯಾರೂ ನೋಡಿಕೊಳ್ಳೋರು ಇಲ್ಲ. ಬೇಕಾದಷ್ಟು ಹೂಳು ಬಿದ್ದುಬಿಟ್ಟಿದೆ." ಶಶಿಯ ತಲೆ ಹೋಗಿ ಹಾಗೆ ಬಿದ್ದಿರಬಹು ದಾದ ಹೂಳು ಅಂದರೆ ಕಲ್ಲುಗಳಿಗೆ ಬಡಿದಿರಬಹುದು; ಅಥವಾ ಚಾಚು ಮೆಟ್ಟಿಲಿಗೆ ತಾಕಿರಬಹುದು. ನಿಟ್ಟುಸಿರುಬಿಟ್ಟೆ.
ಬೆಳಗ್ಗಿನ ಹೊತ್ತೂ ಜನರ ಸಂಚಾರ ಕಡಮೆಯೇನೋ?"
ಹೌದು, ನೋಡಿ, ಇಲ್ಲಿ ಹೆಚ್ಚು ಮನೆಗಳಿಲ್ಲ, ಅಂಗಡಿಮುಂಗಟ್ಟಿಲ್ಲ, ಊರಿಂದ ದೂರ ಬೇರೆ. ಅದಕ್ಕೆ" ಅಂದರು, ಅದು ಕಾಣಿಸುತ್ತಿತ್ತು. ಸುತ್ತಲೂ ಕಣ್ಣು ಹಾಯಿಸಿದೆ. ಇಂಥ ಜಾಗದ ಪರಿಚಯ ಶಶಿಗೆ ಮೊದಲೇ ತಿಳಿದಿದ್ದಿರಬೇಕು; ಇಲ್ಲವಾದರೆ ನೇರವಾಗಿ ಇಲ್ಲಿಗೇ ಹೇಗೆ ಬರುತ್ತಾನೆ. ಅವನದೆಲ್ಲ ಲೆಕ್ಕಾಚಾರದ ಕೆಲಸ ಹಾಗಾದರೆ.
ಅವರು ನನ್ನ ಕಡೆ ನೋಡಿದರು. ಏನಾದರೂ ತನಿಖೆಯ ಪ್ರಶ್ನೆಗಳನ್ನು ಹಾಕುತ್ತಾರೇನೋ ಅಂದುಕೊಂಡು, ಅವುಗಳನ್ನು ಎದುರಿಸಬೇಕಾದ ಮುಜುಗರ ದಿಂದ ತಪ್ಪಸಿಕೊಳ್ಳಲು ನಾನೇ ಕೇಳಿದೆ: “ತಾವೇನಾ ಅದನ್ನ ಕಂಡವರು?"
ಛೆ ಛೆ, ನಾನು ದೇಹವನ್ನೇನೂ ನೋಡಲಿಲ್ಲ. ಯಾಕೋ ಕಡೆ ಹೋಗಬೇಕಾಗಿ ಬಂತು ಅಂತ ನಡೆದುಬರುತ್ತಿರುವಾಗ ಇಗೋ ನೋಡಿ, ಕಲ್ಲಿನ ಮೇಲೆ ಲಕ್ಷಣವಾಗಿ ಮಡಿಸಿಟ್ಟ ಬಟ್ಟೆಗಳು ಒಂದೆರಡು ಕಾಣಿಸಿದವು. ನಾನೂ ಯೋಚನೆ ಮಾಡಿದೆ. ಇಲ್ಲಿಗೆ ಬಂದು ಬಟ್ಟೆಗಳನ್ನು ಯಾಕೆ ಬಿಚ್ಚಿಟ್ಟಿದ್ದಾರೆ ಅಂತ. ನೀರೇನು ಅಷ್ಟು ಕೆಟ್ಟಿಲ್ಲ, ನೀವು ಕಾಣೋ ಹಾಗೇನೆ. ಯಾವಾಗಲೋ ಒಂದಿಬ್ಬರು ಸ್ನಾನ ಮಾಡೋದು ಉಂಟು. ಆದರೆ ಹಾಗೇನಾದರೂ ಯಾರಾದರೂ ಬಂದಿದ್ದರೆ ವ್ಯಕ್ತಿ ಕಾಣಿಸಬೇಕಾಗಿತ್ತು. ಆದರೆ ಬಟ್ಟೆ ಕಂಡದ್ದರಿಂದ ಅನುಮಾನ ಬಂತು, ಪೋಲಿಸರಿಗೆ ಹೇಳೋದು ವಾಸಿ ಅನ್ನಿಸ್ತು. ಆಗ ಸುಮಾರು ಮಧ್ಯಾಹ್ನ ಒಂದು ಗಂಟೆ ನೋಡಿ" ಅಂದರು.
ನಾನು ಹ್ಞೂಂ ಅನ್ನುತ್ತಿದ್ದೆ.
ಮದುವೆ ಆಗಿತ್ತಾ?" ತನಿಖೆ ಪ್ರಾರಂಭ ಆಯಿತು ಅಂದುಕೊಂಡೆ. ನಾನು ಕೇಳುವ ವಿಷಯ ಅವರು ಹೇಳಬೇಕು. ಆದರೆ ಅವರೇನೂ ಕೇಳಬಾರದು ಎಂದು ಹೇಗೆ ಹೇಳಲಾದೀತು. ಪ್ರಶ್ನೆಗಳನ್ನು ಹೇಗೆ ನಿವಾರಿಸಿಕೊಳ್ಳುವುದು?
ಉಹ್ಞೂಂ" ಎಂದೆ.
ದೇವರು ದೊಡ್ಡೋನು. ಅದೂ ಆಗಿದ್ದಿದ್ರೆ ಉಳಿದೋರನ್ನ ನೋಡೋದು ಕಷ್ಟವಾಗ್ತಾ ಇತ್ತು" ಅಂದರು.
ನಿಜ" ಅಂದೆ ಅನ್ಯಮನಸ್ಕನಾಗಿ.
ಏನು ಮಾಡೋಕಾಗತ್ತೆ ಹೇಳಿ, ಎಲ್ಲ ದೈವಸಂಕಲ್ಪ. ಆತ ಒಂದು ರೀತಿ ದೈವಸಾನ್ನಿಧ್ಯದಲ್ಲಿ ಸತ್ತಿದಾನೆ, ಅಲ್ಲೇ ಹೋಗಿರ್ತಾನೆ. ಅವರ ಹಿರಿಯರಾದ ನಿಮಗೆ ಆಗೋ ದುಃಖ ಸಹಜವೇ. ಆದರೆ, ಏನು ಮಾಡಕ್ಕಾಗತ್ತೆ? ಎಲ್ಲ ಅವನ ಇಚ್ಛೆ" ಒಂದು ಕೈ ಮೇಲೆ ತೋರಿಸಿ, ವಾಪಸಾಗಲು ತಿರುಗಿದರು. ನಾನೂ ಹಿಂಬಾಲಿಸಿದೆ. ಹೆಚ್ಚು ತನಿಖೆಯ ಬುದ್ಧಿಯವರಲ್ಲ ಅನ್ನಿಸಿ ಸಮಾಧಾನವಾಯಿತು. ಮತ್ತೆ ಮೌನವಾಗಿಯೇ ದೇವಸ್ಥಾನದವರೆಗೂ ಬಂದೆವು.
ತುಂಬ ಉಪಕಾರವಾಯಿತು. ತಾವು ಸುದ್ದಿ ಕೊಡದಿದ್ದರೆ ಅವನ ವಿಚಾರ ನನಗೆ ತಿಳೀತಾನೇ ಇರಲಿಲ್ಲ."
ಎಲ್ಲ ಋಣಾನುಬಂಧ, ಮೇಲಾಗಿ ಅವನ ಇಚ್ಛೆ." ಅವರಿಂದ ಬೀಳ್ಕೊಂಡು ಬಂದಿದ್ದೆ.
ಮಾರನೆಯ ದಿನ ಪೋಲೀಸ್ ಇನ್ಸ್ಪೆಕ್ಟರ್ ಹೇಳಿದ್ದ, ಶಶಿಯ ದೇಹವನ್ನು ಹೂಳಿದ್ದ ಶ್ಮಶಾನದ ಬಳಿಗೆ ಹೋಗಿ ಬಂದಿದ್ದೆ. ಅವರಿಗೆ ಹತ್ತಿರವಾದ ಶ್ಮಶಾನದಲ್ಲಿ ಹೂತಿದ್ದರು. ಹುಡುಕಿಕೊಂಡು ಹೋದೆ. ದೊಡ್ಡ ಕಲ್ಲಿನ ಕಾಂಪೌಂಡಿನ ಒಳಗಿದ್ದ ಸ್ಮಶಾನವದು. ಎಷ್ಟೋ ಸಮಾಗಳು, ಕೆಲವು ಸುಂದರವಾಗಿ, ಕಪ್ಪುಕಲ್ಲು- ಅಮೃತಶಿಲೆ ಇವುಗಳಿಂದ ನಿರ್ಮಿತವಾಗಿದ್ದವು. ಇನ್ನು ಕೆಲವು ಕೇವಲ ಒರಟಾದ ಬಂಡೆಗಳಿಂದ ನಿರ್ಮಿತವಾದದ್ದು. ಸಮಾಯ ರೀತಿಯಿಂದಲೇ ಸತ್ತವರ ಆರ್ಥಿಕ ಪರಿಸ್ಥಿತಿಯನ್ನು ತಿಳಿಯಬಹುದಾಗಿತ್ತು. ಭೂಮಿಯ ಮೇಲ್ಮೈಯಿಂದ ಕೆಳಗೆ ಎಲ್ಲ ಒಂದೇ. ಆದರೆ ಮೇಲ್ಮೈ ಮೇಲೆ ವ್ಯತ್ಯಾಸಗಳು ಕಾಣುತ್ತಿದ್ದವು. ಏನೇನೋ ಬರಹಗಳು. ಸತ್ತವರ ಹೆಸರು, ಸತ್ತ ತಾರೀಕು, ಕೆಲವದರ ಮೇಲೆ ಇನ್ನೇನೊ ವಾಕ್ಯಗಳು. ಒಂದಷ್ಟು ಕಡೆಯಲ್ಲಿ ಗಿಡಗಳು. ಅವೇ ಬೆಳೆದಿದ್ದುದೋ, ಹಾಕಿದ್ದುದೋ?
ನನ್ನ ಮನಸ್ಸಿಗೆ ಒಂದು ಆಲೋಚನೆ ಬಂತು. ಸುತ್ತಲೂ ನೋಡಿದೆ. ಗಿಡಗಳೇನೋ ಇದ್ದವು. ಸ್ಪಷ್ಟವಾಗಿ ಶ್ಮಶಾನದ ಆವರಣದೊಳಗೆ ಬೆಳೆದ ಮರಗಳನ್ನು ಸತ್ತವರ ಪೈಕಿಯ ಜನ ನೆಟ್ಟಿದ್ದಿರಬೇಕೆನಿಸಿತು. ಮನೆ ಆವರಣದಿಂದ ಹೊರಗೆ ಬಂದು ಕಣ್ಣಾಡಿಸಿದೆ. ಕಾಂಪೌಂಡಿಗೆ ಅಂಟಿಕೊಂಡಂತೆ ಒಂದು ಕಡೆ ಒಂದು ಎಳೆಯ ಅರಳಿಯ ಸಸಿ ಬೆಳೆದಿದ್ದುದು ಕಾಣಿಸಿತು. ಅದರ ಬಳಿ ಹೋದೆ. ಚೂಪಾದ ಕಲ್ಲೊಂದರಿಂದ ಅದರ ಬುಡದ ಸುತ್ತಲೂ ಕೆದಕಿದೆ; ಸ್ವಲ್ಪ ಪ್ರಯತ್ನ ಪಟ್ಟಮೇಲೆ ಬುಡವನ್ನು ಕೀಳುವುದು ಸಾಧ್ಯವಾಯಿತು. ಅದನ್ನು ತೆಗೆದುಕೊಂಡು ಮತ್ತೆ ಆವರಣದೊಳಗೆ ಹೋಗಿ, ಇನ್ಸ್ಪೆಕ್ಟರು ಹೇಳಿದ್ದ ಜಾಗಕ್ಕಾಗಿ ಹುಡುಕಿದೆ.
ಒಂದು ಮೂಲೆಯಲ್ಲಿ ಸುತ್ತಲೂ ಹುಲ್ಲು ಬೆಳೆದಿದ್ದು, ಹೊಸದಾಗಿ ಕೆತ್ತಿದಂತೆ ಕಾಣುವ ಆಯಾಕಾರದ ಜಾಗ ಕಾಣಿಸಿತು. ಅದೇ ಇರಬೇಕು ಅದೇ ಎಂದು ಸ್ಪಷ್ಟಮಾಡಿಕೊಳ್ಳಲು ಸುತ್ತಲೂ ಒಂದಷ್ಟು ತಾರಾಡಿಕೊಂಡು ನೋಡಿ ಬಂದೆ; ಇನ್ಸ್ಪೆಕ್ಟರು ಹೇಳಿದ್ದ ಗುರುತನ್ನು ಜ್ಞಾಪಿಸಿಕೊಡೆ. ಅದೇ ಎಂಬುದು ಸ್ಪಷ್ಟವಾಯಿತು. ಜಾಗದಲ್ಲಿ ಶಶಿ ಬೆಚ್ಚಗೆ ಮಲಗಿದ್ದಾನಲ್ಲವೇ ಎನ್ನಿಸಿತು. ಮೈನಡುಕವುಂಟಾಯಿತು. ನಿಧಾನವಾಗಿ ಅದರತ್ತ ಕಾಲೆಳೆಯುತ್ತ ನಡೆದೆ. ಯಾಕೋ ಕಣ್ಣು ತುಂಬಿಕೊಂಡು ಬಂತು. ಚೂಪು ಕಲ್ಲೊಂದರಿಂದ ಕೆತ್ತಿದ್ದ ಸ್ಥಳದಲ್ಲೇ ಸಣ್ಣ ಗುಂಡಿ ಮಾಡಲು ಪ್ರಯತ್ನಿಸಿದೆ, ಕೆಲವೇ ದಿನಗಳ ಹಿಂದೆ ಹೂಳಲು ಗುಂಡಿ ತೋಡಿ ಮುಚ್ಚಿದ್ದಲ್ಲವೇ? ಇನ್ನೂ ಮಣ್ಣು ಸಡಿಲವಾಗಿತ್ತು. ಗುಂಡಿ ತೋಡುವುದು ಸುಲಭವಾಯಿತು. ಅದರಲ್ಲಿ ಅರಳಿಯ ಸಸಿಯನ್ನು ಇಟ್ಟು ಗುಂಡಿ ಮುಚ್ಚಿದೆ. ಹತ್ತಿರದಲ್ಲಿ ನೀರಿದೆಯೇ ಎಂದು ನೋಡಿದೆ. ಕಾಣಿಸಲಿಲ್ಲ. ಅರಳಿಯ ಮರವೇನೂ ಎಲ್ಲಾದರೂ ಬೆಳೆಯುತ್ತದೆ. ಇದೂ ಬೆಳೆಯಬಹುದು ಅಂದು ಕೊಂಡೆ. ಒಂದಷ್ಟು ದಿನಗಳಾದ ನಂತರ ಬಂದು ಮತ್ತೊಮ್ಮೆ ನೋಡಿಕೊಂಡು ಹೋಗಬೇಕು, ಸಸಿ ಬೆಳೆದಿರುತ್ತದೆಯೋ ಏನೋ ಅಂದುಕೊಂಡು ಮನೆಗೆ ವಾಪಸು ಬಂದೆ. ವಿಚಾರಗಳನ್ನು ರಮಳಿಗೆ ಹೇಳಲಿಲ್ಲ; ಅವಳೇನು ಅನ್ನುತ್ತಾಳೋ ಎಂಬ ಅಳುಕಿರಬೇಕು ನನಗೆ.
ಶಶಿಯ ಆಫೀಸಿನ ಜನ ಬರುತ್ತಾರೆ, ಗೋವಿಂದಯ್ಯ ಬರುತ್ತಾರೆ. ನನ್ನ ಸ್ನೇಹಿತರು, ಬಾಂಧವರು ಸೇರುತ್ತಾರೆ. ನನ್ನ ಕಂಡು ಕನಿಕರದ ಮುಖ ಮಾಡಿಕೊಳ್ಳು ತ್ತಾರೆ. “ವೆರಿ ಸಾರಿ ಸಾರ್" ಎನ್ನುತ್ತಾರೆ. ಫ್ಯಾಕ್ಟರಿಯ ಯೂನಿಯನ್ನಲ್ಲಿ ಸಭೆ ಸೇರಿ ಮಾಡಿದ ಸಂತಾಪ ಸಂದೇಶವನ್ನು ಅದರ ಪರವಾಗಿ ತಲುಪಿಸುತ್ತಾರೆ. ಮೃದುವಾಗಿ ಕೈಹಿಸುಕುತ್ತಾರೆ. ಸಮಾಧಾನ ಮಾಡುತ್ತಾರೆ.
ಪಾಪ, ಶಶಿಧರ್ ಆಫೀಸಲ್ಲಿ ತುಂಬ ಜಾಲಿಯಾಗಿರುತ್ತಿದ್ದರು. ಅವರು ಒಂದು ದಿನ ಬರದೇ ಇದ್ದರೆ ಬಿಕೋ ಅನ್ನಿಸುತ್ತಿತ್ತು, ಎಂದೊಬ್ಬರು ಹೇಳುತ್ತಾರೆ. ನಿಜವಾಗಿಯೂ ಶಶಿ ತಮಾಷೆಯಾಗಿರುತ್ತಿದ್ದನೇ, ಅಥವಾ ಇದೆಲ್ಲ ಬರಿಯ ಉಪಚಾರದ ಮಾತುಗಳೋ? ಆದರೆ ಅವನ ಆಫೀಸಿನ ಜೊತೆಗಾರರು ಅವನಿಗೆ ತುಂಬ ಸಹಾಯ ಮಾಡಿದ್ದರೆಂಬುವ ವಿಷಯ ನನಗೆ ತಿಳಿಯದ್ದೇನಲ್ಲ. ಎಷ್ಟೋ ದಿನ ಕೆಲಸ ಮಾಡುತ್ತಿರುವಾಗಲೇ ಶಶಿಗೆ ಅಟ್ಯಾಕ್ಗಳು ಬಂದು ನರಳುವಾಗ ಜೊತೆಗಾರರು ಅವನಿಗೆ ಶುಶ್ರೂಷೆ ಮಾಡಿದ್ದರು. ಶಶಿಯೇ ಅಂಥ ಒಂದೆರಡು ಪ್ರಸಂಗಗಳನ್ನು ಹೇಳಿದ್ದ. ನಮ್ಮ ಮನೆಗೆ ಆಗಾಗ್ಗ ಬರುತ್ತಿದ್ದ ಅವನ ಸ್ನೇಹಿತರು ಅವನ ಕಾಯಿಲೆಯ ಬಗ್ಗೆ ಅಸಹ್ಯಪಟ್ಟುಕೊಂಡಿದ್ದಂತೆ ಕಂಡಿರಲಿಲ್ಲ. ಎಷ್ಟೋ ಸಾರಿ ನನಗನ್ನಿಸುತ್ತಿತ್ತು; ಆಫೀಸಿನವರಿಗೆ ಅದೆಲ್ಲಿಯ ಕರ್ಮ, ಅವನ ಕಾಯಿಲೆಯ ಉಪದ್ರವವನ್ನು ಸಹಿಸಿಕೊಳ್ಳುವುದು ಎಂದು. ನಮ್ಮ ಸಂಸಾರದಲ್ಲಿ ಹುಟ್ಟಿದ ಆಕಸ್ಮಿಕ ಕಾರಣದಿಂದಾಗಿ ಅವನ ಉಸ್ತುವಾರಿ ನನಗೆ ಗಂಟು ಬಿದ್ದಂತೆ, ಅವನ ಆಫೀಸಿನಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿಯಿಂದಾಗಿ ಜೊತೆಗಾರರು ಇದನ್ನು ಅನುಭವಿಸಬೇಕಾಗಿತ್ತು.
ನಮಗೇ ಅವರಿಲ್ಲ ಅಂದರೆ ನಂಬಕ್ಕಾಗ್ತಾ ಇಲ್ಲ. ಇನ್ನು ನಿಮಗೆ ಹೇಗೆ ಆಗ್ತಾ ಇರಬಹುದು" ಎಂದು ಮತ್ತೊಬ್ಬ ಆಫೀಸಿನ ಸ್ನೇಹಿತರು ನನ್ನ ಬಗ್ಗೆ ಅನುತಾಪ ವ್ಯಕ್ತಪಡಿಸಿದರು.
ಒಬ್ಬರಿಗೆ ಒಂದು ದಿವಸ ಮನಸ್ಸು ನೋಯಿಸಿದವರಲ್ಲ, ಶಶಿಧರ್" ಎಂದರು ಇನ್ನಾರೋ. “ತುಂಬ ಒಳ್ಳೆಯ ಹುಡುಗ, ಆದರೆ ಅವನ ಹಣೆಯಲ್ಲಿ ಎಂಥ ಸಾವು ಬರೆದಿತ್ತು, ನೋಡಿ ಪಾಪ" ಎಂದರು ಹಿರಿಯರೊಬ್ಬರುಅಲ್ಲಿಗೇಕೆ ಹೋದರೋ ಗೊತ್ತಾಗಲ್ಲವಲ್ಲ" ಎಂದರು ಯಾರೋ. “ಅವರಿಗೆ ಕಾಯಿಲೆಯೊಂದಿಲ್ಲದಿದ್ದರೆ ಅವರ ಜೀವನ ತುಂಬ ಚೊಕ್ಕವಾಗ್ತಿತ್ತು. ಎಲ್ಲಿ ಗಂಟು ಬಿತ್ತೋ! ರೋಗ" ಎಂದ ಸತ್ತ ಶಶಿಯ ರೋಗದ ಬಗ್ಗೆ ಮಗದೊಬ್ಬರು.
ಎಲ್ಲರೂ ಒಳ್ಳೆಯ ಮಾತಾಡುವವರೇ ಯಾರ ಬಾಯಿಂದಲೂ ಕೆಟ್ಟ ಅಭಿಪ್ರಾಯ ಇಲ್ಲ. ನನ್ನ ಬಗ್ಗೆ ಕೋಪವಿಲ್ಲ. ಯಾರೂ ನಾನೇ ಅವನ ಸಾವಿಗೆ ಕಾರಣವೆಂದು ದೂರಲಿಲ್ಲ! ಆದರೆ ರಮ ಆವತ್ತು ಅಂದಂತೆ ಮನಸ್ಸಿನಲ್ಲಿಯೇ ನನ್ನ ಬಗ್ಗೆ ಅನುಮಾನವನ್ನು ಪಡಲಾರರೇ? ಹೊರಗೆ ಎಲ್ಲರದೂ ಅನುತಾಪದ ಮಾತು. ಅಂಥವರ ಮನಸ್ಸಿನಾಳದ ಅಭಿಪ್ರಾಯವನ್ನು ತಿಳಿಯುವುದು ಹೇಗೆ? ಅಥವಾ ಏಕಾದರೂ ಅದನ್ನು ತಿಳಿಯಬೇಕು. ಎಲ್ಲರ ಮನಸ್ಸು ಇನ್ನೆಲ್ಲರಿಗೂ ಸಾಧ್ಯವಿದ್ದಿದ್ದರೆ, ಹಾಗೆ ತಿಳಿದುಕೊಳ್ಳುತ್ತ ಹೋದಂತೆ ನಮ್ಮ ಜೀವನ ಈಗಿರುವಂತೆ ಇರಲು ಸಾಧ್ಯವಾಗುತ್ತಿತ್ತೇ. ಎಷ್ಟೊಂದು ತೊಂದರೆಗಳಾಗುತ್ತಿದ್ದುವೋ ಏನೋ. ಒಂದು ರೀತಿ ನಮ್ಮ ಮನಸ್ಸುಗಳು ಬೇರೆಯವರಿಗೆ ಕಾಣಿಸದೇ ಇರುವುದರಿಂದ, ಅಷ್ಟೇಕೆ ನಮಗೇ ಗೊತ್ತಾಗದಿರುವುದರಿಂದ, ಜೀವನದಲ್ಲಿ ಎಷ್ಟೋ ಸಮಸ್ಯೆಗಳು ಉದ್ಭವವಾಗದೇ ಉಳಿದಿವೆ. ತೋರಿಕೆಯೇ ನಮಗೆ ಪ್ರಧಾನವಾಗಿಬಿಟ್ಟಿದೆ. ಆದ್ದರಿಂದ ನಮ್ಮ ಜೀವನದಲ್ಲಿ ಹೊರ ನಡತೆಗೇ ಪ್ರಾಮುಖ್ಯ ಜಾಸ್ತಿ. ಮನಸ್ಸಿನ ರಹಸ್ಯಮಯತೆಯಿಂದಲೇ ಮನುಷ್ಯರಲ್ಲಿ ಇನ್ನೂ ಆತ್ಮೀಯತೆ ಸ್ನೇಹಗಳು, ಉಳಿದಿರಲು ಸಾಧ್ಯವಾಗಿದೆ. ಹಾಗೆ ನೋಡಿದರೆ ಇಡೀ ಪ್ರಕೃತಿಯು ಸುಂದರವಾಗಿರುವುದು ಸೃಷ್ಟಿಯ ರಹಸ್ಯಮಯತೆಯಿಂದಲೇ ಅನ್ನಿಸುತ್ತದೆ.
ಪಾಪ, ನೀನೂ ಸಾಧ್ಯವಾದಷ್ಟು ಮಾಡಿದಿರಿ. ನಮ್ಮ ಕೈಮೀರಿದರೆ ಏನು ಮಾಡಲು ಸಾಧ್ಯ." “ನೀವೊಳ್ಳೆ ರಾಮಲಕ್ಷ್ಮಣರಿದ್ದಂತೆ ಇದ್ದೀರಿ" ಎಲ್ಲ ಬಗೆಯ ಮಾತುಗಳನ್ನು ನನ್ನ ಮುಖದೆದುರು ಆಡಿದಾಗ ಏನು ಹೇಳಬೇಕೆಂದೇ ನನಗೆ ತೋಚುವುದಿಲ್ಲ. ಏನು ಹೇಳಿದರೂ ಕೃತಕವೆನ್ನಿಸುತ್ತದೆ ಎಂಬ ಭಾವನೆಯುಂಟಾ ಗುತ್ತದೆ. ಅವರ ಮಾತುಗಳಿಗೆ ನಾನು ಏನೂ ಹೇಳದಾಗ ಅವರ ಮನಸ್ಸಿನಲ್ಲಿ ಎಂತೆಂತಹ ಅನ್ನಿಸಿಕೆಗಳುಂಟಾಗುತ್ತವೆಯೋ!
ಎಲ್ಲ ಆಗುವ ಹೊತ್ತಿಗೆ ಸಾಯಂಕಾಲ ನಾಲ್ಕು ಗಂಟೆ. ಮನೆಯೆಲ್ಲ ಗಲೀಜು, ವಸ್ತುಗಳು ಚೆಲ್ಲಾಪಿಲ್ಲಿ. ಮೈಕೈಯೆಲ್ಲ ನೋವು, ಒಡೆತು ತಲೆಭಾರ. ಎಲ್ಲಾದರೂ ಒಂದು ಕಡೆ ಹೋಗಿ ಕೈಕಾಲು ಚಾಚಿ ಮಲಗಿದರೆ ಹಾಯಾಗಿರುತ್ತದೆ ಎನ್ನಿಸುತ್ತದೆ. ಆದರೆ ಹಾಗೆ ಮಲಗಲು ಸಾಧ್ಯವಿಲ್ಲ. ಇನ್ನೂ ಇವನ್ನೆಲ್ಲ ಎತ್ತಿ ಸರಿಪಡಿ ಸುವವರೆಗೆ ವಿಶ್ರಾಂತಿ ಸಾಧ್ಯವಿಲ್ಲ. ರಮ ಕೂಡ ತುಂಬ ಆಯಾಸಪಟ್ಟಿದ್ದಾಳೆ. ಬೆವರುಗಟ್ಟಿದ ಹಣೆ, ನಿಧಾನವಾದ ನಡಿಗೆ, ಕಂದಿಹೋದ ಕಣ್ಣುಗಳು ಅದನ್ನು ಸಾರುತ್ತದೆ. ಇವತ್ತು ಕಳೆದರೆ ನಾಳೆಯಿಂದ ಬೇರೇನೂ ಕೆಲಸವಿಲ್ಲ. ಇನ್ನೂ ನಾಲ್ಕು ದಿನ ರಜ ಬೇರೆ ಉಳಿದಿವೆ. ಎಲ್ಲೂ ಹೋಗದೆ ಆರಾಮವಾಗಿ ವಿಶ್ರಾಂತಿ ಪಡೆಯಬೇಕು ಅನ್ನಿಸುತ್ತದೆ. ನೆನಪು ಅದರೊಳಗಿನ ಶಶಿಯ ಒಂದು ಫೋಟೋ ಹುಡುಕಿ ಅದನ್ನು ಎನ್ಲಾರ್ಜ್ ಮಾಡಿಸಿ ಕಟ್ಟು ಹಾಕಿಸಿ ತರಬೇಕು. ಅಪ್ಪ ಅಮ್ಮನ ಮಧ್ಯೆ ಇರುವಂತೆ ಅವರಿಬ್ಬರದರ ಮಧ್ಯೆ ಅವನ ಫೋಟೋ ಹಾಕಬೇಕು ಎಂಬ ಅರಿವಾಗುತ್ತದೆ. ಇದೊಂದು ರೀತಿಯ ನಾಟಕವೇನೋ? ಏನೋ ಎಲ್ಲರೂ ಆಡಿದ ಹಾಗೆಯೇ ನಾನೂ ನಾಟಕವಾಡಬೇಕಾಗುತ್ತದೆ. ಪ್ರತಿನಿತ್ಯ ಅಪ್ಪ ಅಮ್ಮರ ಫೋಟೋಗಳಿಗೆ ಊದಿನಕಡ್ಡಿ ಹಚ್ಚಿ ಹೂವಿಡುತ್ತೇನೆ. ಹೇಗೋ ಬಹುಕಾಲದಿಂದ ಪದ್ಧತಿ ಬಂದುಬಿಟ್ಟಿದೆ. ಬೆಳಿಗ್ಗೆ ಎದ್ದು ಸ್ನಾನಮಾಡಿದ ಮೇಲೆ ತಟ್ಟನೆ ಯಾಂತ್ರಿಕವಾಗಿ ಮಾಡುವ ಕೆಲಸವೇ ಅದು. ಯಾವತ್ತಾದರೂ ಮರೆತರೆ ಏನೋ ಹೊರೆಯಾದಂಥ ಭಾವನೆ ಸ್ವಲ್ಪ ಹೊತ್ತು ಮನಸ್ಸನ್ನು ಕಾಡಿ, ಆಮೇಲೆ ನೆನಪಾಗುತ್ತದೆ. ಅದೊಂದು ರೀತಿಯ ಪೂಜೆಯೇ ಅಲ್ಲವೇ? ಆದರೆ ಶಶಿ ತಮ್ಮ, ಅಪ್ಪ-ಅಮ್ಮರ ಫೋಟೋಗಳ ನಡುವೆ ಇಟ್ಟು ಅವನ ಚಿತ್ರಕ್ಕೂ ಹೂವಿಡಬೇಕೆ? ಕಿರಿಯರಿಗೆ ನಮಸ್ಕಾರ ಮಾಡಿದರೆ ಅವರಿಗೆ ಶ್ರೇಯಸ್ಸಲ್ಲವಂತೆ. ಇನ್ನು ಶಶಿಯ ಫೋಟೋಕ್ಕೆ ಹೂವಿಟ್ಟರೆ ಅವನಿಗೆ ಶ್ರೇಯಸ್ಸಾಗುತ್ತದೆಯೇ? ಇನ್ನೆಂಥ ಶ್ರೇಯಸ್ಸು ಅವನಿಗೆ; ಏನೋ ಅರ್ಥವಾಗದು! ಅಥವಾ ಸತ್ತವರು ವಯಸ್ಸನ್ನು ಮೀರಿದವರಾಗಿ ಎಲ್ಲರ ನಮಸ್ಕಾರಕ್ಕೂ ಅರ್ಹರಾಗುವರೇನೋ. ಫೋಟೋನ ಬೇರೆಡೆ ಹಾಕಬೇಕು. ಹಾಗಾದರೆ ಅವನ ಫೋಟೋನ ಹಾಲ್ನಲ್ಲಿಯೇ ಹಾಕೋಣ, ಬಂದವರಿಗೆ ಎದ್ದು ಕಾಣುತ್ತದೆ.
ಇನ್ನ ನಾಳೆಯಿಂದ ಅವನ ಜವಾಬ್ದಾರಿ ಇಲ್ಲವೇ ಇಲ್ಲ. ಇವತ್ತಿನವರೆಗೆ ಕೊನೆಯ ಪಕ್ಷ ವಿಗಳನ್ನು ನೆರವೇರಿಸುವ ಜವಾಬ್ದಾರಿಯಾದರೂ ಇತ್ತು, ಇನ್ನು ಮೇಲೆ ಅದೂ ಇಲ್ಲ. ಅವನ ಹೆಸರಿನಲ್ಲಿರುವ ದುಡ್ಡು ತಂದು ನಾವು ಮಜಾ ಮಾಡಬಹುದು. ಸೈಟು ತೆಗೆದುಕೊಳ್ಳಬಹುದು, ಬಟ್ಟೆ ತರಬಹುದು, ಯಾವುದಾದರೂ ಊರಿಗೂ ಹೋಗಬಹುದು. ಅಡ್ಡಿ ಆತಂಕಗಳಿಲ್ಲದೆ ಮನೆಯಲ್ಲಿ ಯಾರು ಯಾರಿದ್ದೀರಿ ಅಂದರೆ ಇನ್ನು ಮುಂದೆ ನಾನು, ನನ್ನ ಹೆಂಡತಿ ರಮ, ಮಗಳು ಸುಷ್ಮ, ಮಗ ಪೃಥ್ವೀ- ಇಷ್ಟೇ ಜನ, ನಾಲ್ಕೇ ಜನ. ನನ್ನ ತಮ್ಮ ಸತ್ತುಹೋದ. ಈಗ ನಮ್ಮ ಮನೆಯಲ್ಲಿ ನಾಲ್ಕೇ ಜನ!
- - -
ಶಶಿಯದು ತುಂಬ ಹಟ. ಅವನ ಹಟಮಾರಿತನಕ್ಕೆ ಅಮ್ಮನೂ ಕಾರಣಳೆಂದರೆ ತಪ್ಪಲ್ಲ. ಕಿರಿಯ ಮಗನೆಂಬ ಸಹಜ ಮಮತೆಯ ಜೊತೆಗೆ, ಅವನಿಗೆ ಕಾಯಿಲೆ ಕಾಣಿಸಿಕೊಂಡ ಮೇಲೆ ಅವಳ ಪ್ರೀತಿಗೆ ಕನಿಕರವೂ ಸೇರಿತ್ತು. ಅದಕ್ಕೇ ಅವನನ್ನು ತುಂಬ ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದಳು. ತಾನಿರುವ ತನಕ. ಪ್ರತಿನಿತ್ಯ ಅವನನ್ನು ಸ್ಕೂಲಿಗೆ ಕಲಿಸುವಾಗ ಅವಳು ತೆಗೆದುಕೊಳ್ಳುತ್ತಿದ್ದ ಎಚ್ಚರ ಅನನ್ಯ. ಬೇರೆ ಯಾರಿಗಾದರೂ ಅವನನ್ನು ಸ್ಕೂಲಿಗೆ ಬಿಡುವ ಕೆಲಸ ವಹಿಸಿದರೆ ಅಷ್ಟು ನಿಗಾವಹಿಸಲಾರರೆಂದು ತಾನೇ ಬೆಳಿಗ್ಗೆಯೆದ್ದು ಬಡಬಡ ಕೆಲಸ ಮಾಡುತ್ತ, ಕೆಲಸದ ಮಧ್ಯೆಯೇ ಬಿಡುವು ಮಾಡಿಕೊಂಡು ಅವನನ್ನು ಸ್ಕೂಲಿನವರೆಗೂ ಬಿಟ್ಟುಬರುತ್ತಿದ್ದಳು. ಅವನ ಶಾಲೆ ಬಿಡುವ ಹೊತ್ತಿಗೆ ತಾನೇ ಹೋಗಿ ಕರೆತರುತ್ತಿದ್ದಳು: ಮಧ್ಯೆ ಬಿಡುವಿನ ವೇಳೆಯಲ್ಲಿ ಊಟ ತಿನ್ನಿಸಿ ಬರುತ್ತಿದ್ದಳು. ಅವನು ದೊಡ್ಡವನಾದಂತೆ ತೀರ ಇಷ್ಟರಮಟ್ಟಿಗೆ ನೋಡಿಕೊಳ್ಳದೇ ಇದ್ದರೂ ಯಾವಾಗಲೂ ಅವನ ಧ್ಯಾನವೇ.
ಚಿಕ್ಕವನಾಗಿದ್ದಾಗ ಪ್ರತಿನಿತ್ಯ ಸ್ಕೂಲಿಗೆ ಸಲೀಸಾಗಿ ಹೋಗುವಂತೆ ಮಾಡಲು ಅವನಿಗೆ ಕಾಸು ಕೊಟ್ಟು ರಮಿಸುತ್ತಿದ್ದಳು. ಚಿಲ್ಲರೆಯಿಲ್ಲವೆಂದು ಒಂದು ದಿನ ಕೊಡದಿದ್ದರೆ ಸ್ಕೂಲಿಗೇ ಹೋಗುತ್ತಿರಲಿಲ್ಲ. ಚಂಡಿ ಹಿಡಿಯುತ್ತಿದ್ದ. ಪುನಃ ತಾನು ಕಲಿಸಿದ ವಿದ್ಯೆ ತನ್ನನ್ನೇ ಸುತ್ತುತ್ತಿತ್ತು. ಮಾರನೆಯ ದಿನ ಅವನಿಗೆ ಕೊಡಬೇಕಾದ ಚಿಲ್ಲರೆ ಇದೆಯೇ ಎಂದು ಹಿಂದಿನ ರಾತ್ರಿಯೇ ಎಚ್ಚರವಹಿಸಿ ನೋಡಿಕೊಳ್ಳುವಷ್ಟರ ಮಟ್ಟಿಗೆ ಅಭ್ಯಾಸ ಮುಂದುವರೆದಿತ್ತು. ಇಲ್ಲದಿದ್ದರೆ ಮಾರನೆಯ ಬೆಳಿಗ್ಗೆ ಅವನ ರಾದ್ಧಾಂತವನ್ನು ಎದುರಿಸುವವರಾರು? ಇಷ್ಟಾದರೂ ಅವನನ್ನು ಅಮ್ಮ ಬೇಸರದಿಂದ ಒಂದು ಸಲವೂ ಕಂಡ ನೆನಪಿಲ್ಲ, ಅವನು ಚಂಡಿ ಹಿಡಿದು ತಾನು ಸಮಾಧಾನಮಾಡಲಾಗದಿದ್ದರೆ ತಾನೇ ಕಣ್ಣೀರು ಹಾಕುತ್ತಿದ್ದಳೇ ವಿನಾ, ಕೋಪದಿಂದ ಅವನ ಮೇಲೆ ಯಾವತ್ತೂ ಕೈಯೆತ್ತುತ್ತಿರಲಿಲ್ಲ. ಅಮ್ಮ ದುಡ್ಡು ಕೊಟ್ಟು ಕೊಟ್ಟು ಬಾಲ್ಯದಿಂದ ಅವನಿಗೆ ದುಡ್ಡಿನ ವ್ಯಾಮೋಹ ಬೆಳೆಸಿದಳೇನೋ ಎಂದೂ ಕೆಲವೊಮ್ಮೆ ಅನ್ನಿಸುತ್ತದೆ. ದೊಡ್ಡವನಾದ ಮೇಲೆಯೂ ಅವನು ಹಣ ಕೂಡಿ ಹಾಕುವ ಪ್ರವೃತ್ತಿಗೆ ಬಲಿ ಬಿದ್ದದ್ದು ಇದರಿಂದಾಗಿಯೇ ಇರಬಹುದು. ಅಮ್ಮ ಹಣವನ್ನು ಖರ್ಚು ಮಾಡುವ ಅವಕಾಶವನ್ನು ಮಾತ್ರ ಕೊಡುತ್ತಿರಲಿಲ್ಲ. ಏನು ಹೊರಗೆ ತಿಂದರೆ ಏನಾಗುವುದೋ ಎಂಬ ಭಯದಿಂದ ಹೊರಗಿನ ತಿಂಡಿ ತಿನ್ನಲು ಅಮ್ಮ ಆಸ್ಪದವೀಯುತ್ತಿರಲಿಲ್ಲ. ಅವನಿಗೆ ಏನು ಬೇಕೆಂದೂ ತಾನೇ ಮಾಡಿಕೊಡುತ್ತಿದ್ದಳು. ಹೀಗಾಗಿ ಅವನು ತನಗೆ ಕೊಟ್ಟ ಹಣವನ್ನು ಕೂಡಿ ಹಾಕಿ ಜೋಪಾನ ಮಾಡಬೇಕಾಗಿತ್ತೇ ಹೊರತು ಖರ್ಚು ಮಾಡುವ ಹವ್ಯಾಸಕ್ಕೆ ಅವಕಾಶವಿರಲಿಲ್ಲ. ನಾಣ್ಯದ ಚಟ ಅವನು ಬೆಳೆದ ಮೇಲೂ ಇತ್ತು. ಅವನ ಸಾವಿಗೆ ಕಾರಣವಾಗಿರ ಬಹುದಾದ ಅಥವಾ ಅದರ ಹಿಂದಿನ ಮನೋಭಾವದ ಬಗ್ಗೆ ಏನಾದರೂ ಸುಳಿವು ಸಿಕ್ಕಿತೇನೋ ಎಂದು ಅವನ ರೂಮನ್ನೆಲ್ಲ ಶೋಸಿದಾಗ ಒಂದು ಕಡೆ ಡಬ್ಬಿಯೊಂದರಲ್ಲಿ ಇಪ್ಪತ್ತೈದು ಐವತ್ತು ಪೈಸೆಗಳ ನಾಣ್ಯ ಸಂಗ್ರಹವಿದ್ದದ್ದು ಕಾಣಿಸಿತು. ದೊಡ್ಡವನಾದರೂ ಪೈಸೆಯ ಝಣತ್ಕಾರ ಅವನನ್ನು ಪುಲಕಿತಗೊಳಿಸು ತ್ತಿತ್ತೇನೋ! ಅಥವಾ ಅದರ ಶಬ್ದದಲ್ಲಿ ಅಮ್ಮನ ಸಾಂತ್ವನದ ನುಡಿಗಳೇ ಅವನ ಕಿವಿಗೆ ಬೀಳುತ್ತಿತ್ತೇನೋ.
ಹಟ ಅಮ್ಮ ಸತ್ತ ಮೇಲೆ ಅದೇ ರೀತಿ ಮುಂದುವರೆಯಲು ಹೇಗೆ ಸಾಧ್ಯ? ಅವಳು ಹೋದ ಮೇಲೆ ಅವನ ಸ್ವಭಾವದಿಂದ ಉಳಿದವರಿಗೆ ತುಂಬ ಕಿರಿಕಿರಿ ಆಗುತ್ತಿತ್ತು. ನಾನಿನ್ನೂ ಆಗ ದೊಡ್ಡವನಲ್ಲ. ಅವನ ಜವಾಬ್ದಾರಿ ನನ್ನ ಮೇಲೆ ಬಿದ್ದಿರಲಿಲ್ಲ. ಆದರೆ ಅಪ್ಪನ ಆಗಿನ ಅವಸ್ಥೆ ಹೇಳತೀರದು. ಅಡಿಗೆ ಕೆಲಸಗಳನ್ನು ಅಪ್ಪನೇ ಮಾಡಿ ಆಫೀಸಿಗೆ ಹೋಗಬೇಕಾಗಿತ್ತು. ನಾನೂ ಅಪ್ಪನ ಕೆಲಸಗಳಲ್ಲಿ ನೆರವಾಗುತ್ತಿದ್ದೆ. ಎಷ್ಟೋ ವೇಳೆ ಅಪ್ಪನ ಬದಲು ನಾನೇ ಅಡುಗೆ ಮಾಡಬೇಕಾಗಿತ್ತು. ಹಲವಾರು ವರ್ಷಗಳ ಅಭ್ಯಾಸದಿಂದಾಗಿ ನನಗೆ ಅಡಿಗೆಯ ಕೆಲಸ ಕರಗತವಾಗಿತ್ತು. ಈಗಲೂ ರಮ ಮಾಡುವ ಅಡಿಗೆಗಿಂತ ನಾನೇ ಚೆನ್ನಾಗಿ ಅಡುಗೆ ಮಾಡುತ್ತೇನೆಂಬ ಭರವಸೆ ನನಗಿದೆ, ಅಲ್ಲದೆ ಅಡುಗೆ ಮನೆಯನ್ನು ಅವಳು ಅಚ್ಚುಕಟ್ಟಾಗಿ ಇಟ್ಟುಕೊಳ್ಳದಿದ್ದುದನ್ನು ಕಂಡರೆ ನಾನು ಸಿಡಿಮಿಡಿಗೊಳ್ಳುತ್ತೇನೆ. ಅಪ್ಪ ಕಲಿಸಿಕೊಟ್ಟ ವಿದ್ಯೆ ಅದು. ರಜಾ ದಿನಗಳಲ್ಲಿ ಕೆಲವು ವೇಳೆ ನನ್ನ ಬಾಯಿ ಚಪಲ ತೀರಿಸಿಕೊಳ್ಳಲು ನಾನೇ ಸೌಟು ಹಿಡಿದು ವಿಶೇಷವಾದದ್ದೇನಾದರೂ ಈಗಲೂ ಮಾಡುತ್ತೇನೆ. ಇದನ್ನು ಬಲ್ಲ ನನ್ನ ಕೆಲವರು ಸ್ನೇಹಿತರು ಹಾಸ್ಯಮಾಡುತ್ತಿದ್ದರು. “ಅಕಸ್ಮಾತ್ ನಿನ್ನ ಕೆಲಸವೇನಾದರೂ ಹೋದರೂ ಮದುವೆ ಮುಂಜಿಗಳಲ್ಲಿ ಅಡಿಗೆ ಕೆಲಸ ಮಾಡಿಕೊಂಡೇ ನೀನು ಜೀವನ ಸಾಗಿಸಬಹುದು" ಎನ್ನುತ್ತಿದ್ದರು.
ಅಪ್ಪನಿಗೆ ರೀತಿ ಹೊರಗೆಲಸ ಒಳಗೆಲಸಗಳ ಒತ್ತಡದ ಜೊತೆಗೆ ಇವನ ರೋಗದ ಕಾಳಜಿ ಮತ್ತು ಹಟಗಳು ತುಂಬ ಮಾನಸಿಕ ನೋವನ್ನುಂಟು ಮಾಡುತ್ತಿದ್ದಿರಬೇಕು. ಆದರೆ ಅವರದೆಂದೂ ತಮ್ಮ ದುಃಖವನ್ನು ಹೊರ ಹಾಕುವ ಸ್ವಭಾವವಲ್ಲ. ಒಳಗೇ ನವೆಯುವವರು, ತನ್ನ ಹಟದಿಂದ ತಿನ್ನುತ್ತಿದ್ದ ತಿಂಡಿಯ ಪ್ಲೇಟು ಕೈಲ್ಲಿದ್ದ ಪುಸ್ತಕ ಇವುಗಳನ್ನೆಲ್ಲ ಅಪ್ಪನ ಮೇಲೆ ಶಶಿ ಎಸೆದು ರಂಪಮಾಡುತ್ತಿದ್ದ. ಸುಧಾರಿಸುವಷ್ಟರ ಮಟ್ಟಿಗೆ ಪ್ರಯತ್ನ ಮಾಡಿ ಸಾಧ್ಯವಾಗದಿದ್ದರೆ ನನ್ನನ್ನು ಕರೆದುಇವನನ್ನು ಕರೆದುಕೊಂಡು ಹೋಗಪ್ಪ" ಎನ್ನುತ್ತಿದ್ದರು. ನಾನು ದೊಡ್ಡವನಾದ್ದ ರಿಂದ ಅಂಥ ಪ್ರಸಂಗಗಳಲ್ಲಿ ಬಲಪ್ರಯೋಗ ಮಾಡಿ ಎಳೆದುಕೊಂಡುಹೋಗುತ್ತಿದ್ದೆ. ಮೊದಲಿನಿಂದ ಅವನನ್ನು ರೀತಿ ನಾನೇ ಪಳಗಿಸಿದವನು. ಅವನ ತಾಪ ಆರಬೇಕಾದರೆ ನಾನೇ ಬರಬೇಕು. ಅಭ್ಯಾಸಬಲವೋ ಅಥವಾ ವಾಸ್ತವತೆಯ ಅರಿವೋ ಅಂತೂ ಅವನು ನನಗೆ ಮಾತ್ರ ಬಗ್ಗುತ್ತಿದ್ದುದು. ಇದು ಈವರೆಗೂ ಮುಂದುವರೆದಿತ್ತು. ಅವನ ಸ್ನೇಹಿತ ಗೋವಿಂದಯ್ಯ ಬೆಳಿಗ್ಗೆ ಹೇಳಿದ್ದರಲ್ಲ; “ನಮ್ಮ ಅಣ್ಣನಿಗೆ ಬೇಜಾರಾಯಿತು. ಅಂತ ಅನ್ನಿಸೋವರೆಗೂ ನಾನಿರೋದು, ಅಷ್ಟೇ" ಅಂತ. ಅಂದರೆ, ನನಗೆ ಅವನ ಬಗ್ಗೆ ಬೇಜಾರಾಗಿದೆಯೆಂದು ಖಾತರಿಯಾದ್ದರಿಂದ ಅವನು ಹೋಗಿಬಿಟ್ಟನೇನೋ? ನನ್ನ ಹತೋಟಿಯಲ್ಲಿದ್ದೂ ಇದ್ದೂ ಅವನು ತನ್ನ ಮನಸ್ಸನ್ನೂ ನನಗೆ ಅಡಿಯಾಳಾಗಿಸಿ ಬಿಟ್ಟಿದ್ದನೇನೋ.
ಇಷ್ಟಾದರೂ ಅವನ ಹಟ ಮಾತ್ರ ಮುಂದುವರಿದೇ ಇತ್ತು. ಆದರೆ ಮೊದಲಿನ ರೀತಿಯಲ್ಲಿ ಉಳಿದುಬರಲು ಸಾಧ್ಯವಿಲ್ಲವಲ್ಲ. ಹೀಗಾಗಿ ಅನೇಕ ರೂಪ ರೀತಿಗಳನ್ನು ಪಡೆದುಕೊಂಡಿತ್ತು. ಈಗೊಂದು ವರುಷದ ಕೆಳಗೆ ನಡೆದ ಘಟನೆಯಿದು. ಅವತ್ತೊಂದು ಭಾನುವಾರ. ನನ್ನ ಸ್ನೇಹಿತರೊಬ್ಬರು - ನನಗಿಂತ ತುಂಬ ಹಿರಿಯರು - ತಮ್ಮ ಮಗನ ಮದುವೆಗೆ ಆಹ್ವಾನಿಸಲು ನಮ್ಮ ಮನೆಗೆ ಬಂದರು. ಶಶಿ ಮನೆಯಲ್ಲಿರಲಿಲ್ಲ. ರಜವಾದ್ದರಿಂದ ಯಾರೋ ಸ್ನೇಹಿತರೆಂದು ಹುಡುಕಿಕೊಂಡು ಹೋಗಿದ್ದ. ಸ್ನೇಹಿತರಿಗೂ ಶಶಿಯ ಬಗ್ಗೆ ವಾತ್ಸಲ್ಯ. ಹೆಚ್ಚು ಪರಿಚಯವಿಲ್ಲದಿದ್ದರೂ ಯಾವಾಗಲೋ ಒಮ್ಮೊಮ್ಮೆ ನಮ್ಮ ಮನೆಗೆ ಬರುತ್ತಿದ್ದವರು. ಅವನ ಸ್ಥಿತಿಯಿಂದ ಕನಿಕರಸಹಿತವಾದ ವಾತ್ಸಲ್ಯವೇನೋ. ಶಶಿಯನ್ನು ಮದುವೆಗೆ ಕರೆದುಕೊಂಡು ಬರಲು ಹೇಳಿದರು.
ಹೇಳ್ತೀನಿ, ಆದರೆ ಅವನ ಸ್ವಭಾವ ನಿಮಗೆ ಗೊತ್ತಲ್ಲ, ಏನು ಮಾಡ್ತಾನೋ" ಎಂದಿದ್ದೆ ಅನುಮಾನದಿಂದ, ಇಂತಹ ಸಮಾರಂಭಗಳಿಗೆ ಶಶಿ ಎಂದೂ ಬಂದವನಲ್ಲ. ಅದಕ್ಕೆ ಅವನ ಮನಸ್ಥಿತಿ ಕಾರಣವಿರಬೇಕು. ಮೊದಮೊದಲು ಅವನಲ್ಲಿ ಧೈರ್ಯ-ಆತ್ಮವಿಶ್ವಾಸಗಳನ್ನು ಮೂಡಿಸಲು ಅವನನ್ನು ನಮ್ಮ ಜೊತೆಯಲ್ಲಿ ಎಲ್ಲೆಡೆಗೂ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದೆ. ನನ್ನ ಒತ್ತಾಯದಿಂದ ಬಂದರೂ ಅನ್ಯಮನಸ್ಕನಾಗಿರುತ್ತಿದ್ದ. ಸ್ವಲ್ಪ ಸಮಯದ ಬಳಿಕ ನೆವಹೇಳಿ ತಪ್ಪಿಸಿಕೊಳ್ಳುತ್ತಿದ್ದ; ಇನ್ನೂ ಕೆಲವು ಕಾಲವಾದ ಮೇಲೆ ಬರುವುದಿಲ್ಲವೆಂದು ಒರಟಾಗಿಯೇ ಹೇಳಿಬಿಡುತ್ತಿದ್ದ. ಅದಕ್ಕೇ ಅವರಿಗೆ ನಾನು ಏನೂ ಖಂಡಿತ ಹೇಳಲಿಲ್ಲ.
ಹಾಗಾದರೆ ಹೇಗೆ? ಖಂಡಿತ ಕರೆದುಕೊಂಡು ಬರಬೇಕು. ನಾನು ಹೇಳಿದೆ ಅಂತ ಹೇಳಿ ಬಂದೇ ಬರ್ತಾನೆ" ಎಂದು ನನಗೇ ಇಲ್ಲದ ಆತ್ಮವಿಶ್ವಾಸದಿಂದ ಹೇಳಿದರು.
ಏನೋ ಹೇಳ್ತೀನಿ. ಕೊನೆಗೂ ಏನ್ಮಾಡ್ತಾನೋ."       
ಎಳಕೊಂಡು ಬನ್ನಿ. ನೀವು ಖಂಡಿತವಾಗಿ ಹೇಳಿದರೆ ಅವನು ಇಲ್ಲಾನ್ನಲ್ಲ. ಅಣ್ಣ ಹಾಕಿದ ಗೆರೆ ದಾಟಲ್ಲ."
ಆಗಲಿ" ಎಂದು ಮಾತು ಬೆಳೆಸದೆ ಅವರನ್ನು ಕಳಿಸಿಕೊಟ್ಟಿದ್ದೆ.
ಆದರೆ ನಮ್ಮ ದೇವರ ಸತ್ಯ ನನಗೆ ತಿಳಿಯದೇ? ಮದುವೆಗೆ ಹೋಗಲು ರೆಡಿಯಾದೆವು. ಅವತ್ತೂ ಇನ್ನೊಂದು ಭಾನುವಾರ; ಅದೂ ಸಾಯಂಕಾಲ; ಆರತಕ್ಷತೆಗೆ ಹೋಗುತ್ತಿದ್ದುದು. ಬೆಳಿಗ್ಗೆಯೇ ವಿಚಾರ ಹೇಳಿದ್ದೆ ಶಶಿಗೆ. ಅವನುನೋಡೋಣ" ಎಂದಿದ್ದ. ಅವನ ಮಾತಿನ ರೀತಿಯಿಂದ ಇವತ್ತು ಯಾಕೋ ಮೆತ್ತಗಿದ್ದಾನೆ ಅನ್ನಿಸಿತು, ಬರಬಹುದು ಅಂದುಕೊಂಡೆ. ಸಾಯಂಕಾಲ ನಾನು- ರಮ ಮಕ್ಕಳು ಸಿದ್ಧರಾದೆವು. ಅವನೂ ವೇಳೆ ತಿಳಿದಿದ್ದುದರಿಂದ ರೆಡಿಯಾಗಿರ ಬಹುದು ಅಂದುಕೊಂಡು ರೂಮಲ್ಲಿ ಇಣುಕಿ ಹಾಕಿದರೆ ಹೇಗಿದ್ದನೋ ಹಾಗೇ ಇದ್ದಾನೆ. “ಬೇಗ ಏಳೋ" ಎಂದೆ.
ಯಾಕೆ?"
ಇದೇನು ಹೀಗೆ ಕೇಳ್ತೀಯ? ಬೆಳಿಗ್ಗೆ ಹೇಳಿರಲಿಲ್ಲವಾ ಮದುವೆಗೆ ಹೋಗಬೇಕು ಅಂತ."
ನಾನು ಬರಲ್ಲ ಕಣೋ."
ಕಂಡಿತ ಕರಕೊಂಬರಬೇಕು ಅಂತ ಹೇಳಿದಾರೆ."
ಅವರು ಹೇಳಿಬಿಟ್ಟರೆ ಬಂದುಬಿಡಬೇಕಾ?"
ದೊಡ್ಡೋರು ವಿಶ್ವಾಸದಿಂದ ಕರೆದು ಹೋಗಿದ್ದಾರೆ. ಅವರ ವಯಸ್ಸಿಗಾದರೂ ಬೆಲೆ ಕೊಟ್ಟು ಬಾ" ಅಂದೆ.
ದೊಡ್ಡೋರಾಗಿಬಿಟ್ಟರೆ... ಸಾಯಿ ಅಂದರೆ ಸಾಯಬೇಕಾ?" ಅಂದ. ಅವನ ಮಾತೇ ಹೀಗೆ ಏನೋ ಹೇಳಿದರೆ ಇನ್ನೇನೊ ಹೇಳುವವನು ಮಾತು ಕೇಳಿ ರಮಂಗೆ ಕೋಪ ಬಂತು. “ಬರದಿದ್ದರೆ ಹಾಳಾಗಿ ಹೋಗಲಿ, ನೀವು ಬನ್ನಿ ಹೊತ್ತಾಗುತ್ತೆ" ಅಂತ ಕಿರುಚಿದಳು.
ಕರಕೊಂಡು ಬಂದೇ ಬರ್ತೀನೀಂತ ನಾನು ಹೇಳಿದ್ದೀನಲ್ಲೋ?"
ನನ್ನ ಕೇಳಿ ಹೇಳಿದೆಯೇನು ನೀನು?" ಎಂದು ವಾಗ್ವಾದವನ್ನು ಮುಂದುವರೆಸುವ ಮನೋಭಾವವನ್ನು ತೋರಿಸಿದ. ಅವನ ಹಟ ಕಂಡು ನನ್ನ ಹಟಮಾರಿತನವೂ ಜಾಗ್ರತವಾಯಿತು. ಅಲ್ಲದೆ ಅಲ್ಲಿಗೆ ಹೋದ ಮೇಲೆ ಇನ್ನು ಅವರ ಪ್ರಶ್ನೆಗಳನ್ನೆಲ್ಲ ಎದುರಿಸಬೇಕು, ಏನಾದರೂ ನೆಪಗಳನ್ನು ಕಂಡುಹಿಡಿದು ಸುಳ್ಳು ಹೇಳುತ್ತ ಹೋಗಬೇಕು. ಅನೇಕ ವೇಳೆ ರೀತಿಯ ಪ್ರಸಂಗಗಳನ್ನು ಇವನಿಂದಾಗಿ ಎದುರಿಸಿದ್ದುದರಿಂದ ಇವನನ್ನು ಕರೆದುಕೊಂಡೇ ಹೋಗಬೇಕು ಇವತ್ತು ಅಂದುಕೊಂಡೆ. ಮಾತಾಡದೆ ಅವನು ಒಗೆದು ಇಸ್ತ್ರೀ ಮಾಡಿಟ್ಟ ಬಟ್ಟೆಗಳನ್ನು ತಂದು ಅವನ ಮುಂದಿಟ್ಟುಏಳು, ಬೇಗ ಮುಖ ತೊಳಕೊಂಡು ಬಂದು ರೆಡಿಯಾಗು" ಎಂದೆ. ನನ್ನ ಮಾತಿನಲ್ಲಿ ಆಜ್ಞೆಯ ಧಾಟಿಯಿತ್ತು. ಅದೇಕೋ ಇಂತಹ ಸಂದರ್ಭಗಳಲ್ಲಿ ಅವನು ಮೆತ್ತಗಾಗುತ್ತಿದ್ದ. ಅನುನಯದಿಂದ ಹೇಳಿದರೆ ಕೇಳದವನು ಆಜ್ಞೆಗೆ ಬಗ್ಗುತ್ತಿದ್ದ.
ಬೇಡ ಅಂದರೆ ಯಾಕೋ ಬಲವಂತ ಮಾಡೋದು?" ಎಂದ ಮೆತ್ತಗೆ.
ಸುಮ್ಮನೆ ಮೇಲೇಳು, ನೀನೇನು ಜಸ್ತಿ ಹೊತ್ತಿರಬೇಕಾ ಅಲ್ಲಿ? ಹೋಗಿ ಮುಖ ತೋರಿಸಿ ಬಂದರೆ ಆಯಿತು" ಎಂದೆ.

ಹಾಗಾದರೆ ಮುಖ ತೋರಿಸಿ ವಾಪಾಸು ಬಂದುಬಿಡ್ತೀನಿ" ಎಂದ ನನ್ನ ಮಾತಿನ ಜಾಡನ್ನು ಹಿಡಿದು.
ಹ್ಞೂ ಕಣೋ, ಹಾಗೇ ಮಾಡುವೆಯಂತೆ. ಮೊದಲು ಏಳು" ಎಂದೆ. ಅವನು ಎದ್ದ.
ನಾನು ರಮ ಮಕ್ಕಳು ಆಗಿದ್ದಿದ್ದರೆ ರಿಕ್ಷಾದಲ್ಲಿ ಸರ್ರಂತ ಹೋಗಿ ಬರಬಹುದಾಗಿತ್ತು. ಆದರೆ ಇವನು ಬೇರೆ ಇದ್ದುದರಿಂದ ಎರಡು ರಿಕ್ಷಾಗಳು ಆಗಬೇಕು. ಅಥವಾ ಬಸ್ಸಲ್ಲಿ ಹೋಗಬೇಕು. ಎರಡು ರಿಕ್ಷಾಗಳಿಗೆಂದರೆ ತುಂಬ
ದುಡ್ಡಾಗುತ್ತೆ. ಬಸ್ಸಲ್ಲೇ ಹೋಗಿಬರೋಣ; ಅಂಥ ರಶ್ ಇರೋ ಹೊತ್ತೇನಲ್ಲ ಅಂತ ತೀರ್ಮಾನಿಸಿ ಬಸ್ಸ್ಟಾಪಿನ ಕಡೆಗೆ ಹೊರಟೆವು. ಹೆಚ್ಚು ಹೊತ್ತು ಕಾಯಬೇಕಾಗಿಲ್ಲ. ಬೇಗನೇ ಮದುವೆಯ ಚಪ್ಪರ ತಲುಪಿದ್ದೆವು.
ಛತ್ರದ ಹೊರಬಾಗಿಲಲ್ಲಿ ಸ್ವಾಗತಿಸುತ್ತ ಓಡಾಡುತ್ತಿದ್ದ ಸ್ನೇಹಿತರಿಗೆ ಸಂತೋಷವಾಯಿತು, ಶಶಿಯನ್ನು ನೋಡಿ, “ನೋಡಿದಿರಾ ನಾನು ಹೇಳಲಿಲ್ಲವಾ? ನಾನು ಹೇಳಿದರೆ ಬರ್ತಾನೆ ಅಂತ" ಎಂದು ವಿಜಯದ ನಗೆ ಬೀರಿದರು. ನಾನೂ ಸುಮ್ಮನೆ ನಕ್ಕೆ, ಶಶಿ ಸರಸರ ಗಂಡು-ಹೆಣ್ಣುಗಳು ಆರತಕ್ಷತೆಗೆ ಕೂತಿದ್ದ ಕಡೆ ಹೋದ. ಹುಡುಗನೂ ಅವನಿಗೆ ಸ್ವಲ್ಪ ಪರಿಚಯದವನೇ, ನಾವು ನಿಧಾನವಾಗಿ ಹೋಗುತ್ತಿದ್ದರೆ ಅವನು ಮುಂದೆ ಹೋದ, ಗಂಡು-ಹೆಣ್ಣು ಎದ್ದು ನಿಂತರು. “ಹ್ಯಾಪಿ ಮ್ಯಾರೀಡ್ ಲೈಫ್ ಕಣ್ರೀ"ಎಂದು ಹಾರೈಸಿದ. ಮಾತು ಕೇಳಿಸಿದವು, ಗಂಡಿನ ಕೈಕುಲುಕಿ, ಹೆಣ್ಣಿಗೆ ನಮಸ್ಕಾರ ಮಾಡಿದ್ದು ಕಾಣಿಸಿತು. ಇನ್ನೂ ನಾವು ಅಲ್ಲಿ ತಲುಪೇ ಇಲ್ಲ, ಅವನು ಎದುರಾಗಿ ವಾಪಸ್ಸಾಗುತ್ತಿದ್ದ. ನಾನು ಅವನನ್ನೇ ನೋಡುತ್ತಿದ್ದೆ. ಪುನಃ ಪ್ರವೇಶದ ಕಡೆಗೆ ಅವನು ತಲುಪಿದಾಗ ಹಿರಿಯ ಸ್ನೇಹಿತರುಏನಪ್ಪಾ, ಕಡೆ ಬರ್ತಿದ್ದೀ ಒಳಗೇ ನಡಿ" ಅಂದರು.
ಮುಖ ತರಿಸಿಬಿಟ್ಟು ಬಾ ಸಾಕು ಅಂದಿದ್ದ ಅಣ್ಣ; ಮುಖ ತೋರಿಸಿಯಾಯ್ತಲ್ಲ ಹೋಗ್ತೀನಿ" ಎಂದು ಹೊರಟೇಬಿಟ್ಟ!
ಇಂಥ ಕಸಿವಿಸಿಗೊಳ್ಳುವ ಪ್ರಸಂಗಗಳು ಬರಬಾರದೆಂದು ಮುಂದೆ ಅವನಿಗೆ ಬಲವಂತ ಮಾಡುತ್ತಲೇ ಇರಲಿಲ್ಲ. ವಿಚಾರಗಳಲ್ಲಿ, ಅವನಿಗೇನು ನಮ್ಮ ಇಕ್ಕಟ್ಟಿನ ಸ್ಥಿತಿ ಅರ್ಥವಾಗುತ್ತದೆಯೋ ಇಲ್ಲವೊ ಎಂಬುದೇ ತಿಳಿಯದು. ಮಿಕ್ಕೆಲ್ಲಸಂದರ್ಭಗಳಲ್ಲಿ ಸರಿಯಾಗಿರುತ್ತಾನೆ. ನಮ್ಮ ಸ್ಥಿತಿ ಅರ್ಥ ಮಾಡಿಕೊಳ್ಳಲಾರನೇ? ತನ್ನ ಹಟಸಾಧನೆಗಾಗಿ ನಮ್ಮನ್ನು ಪೇಚಿಗೆ ಸಿಕ್ಕಿಸುತ್ತಾನಲ್ಲ. ಅವನಿಗೆ ತನ್ನ ಹಟವನ್ನು ಗೆಲ್ಲುವುದು ಮುಖ್ಯವಾಗುವುದೇ ಹೊರತು, ಅದರಿಂದಾಗುವ ಪರಿಣಾಮ ಗಳಲ್ಲಿನ ಸೂಕ್ಷ್ಮಗಳನ್ನು ಗಮನಿಸಲಾರದಷ್ಟು ಅವನ ಮನಸ್ಸು ಹಾಳಾಗಿರಬಹುದು.
ಅವನ ಹಟದಿಂದ ಪೇಚಿನ ಪ್ರಸಂಗಗಳಿದ್ದಂತೆ ಕೆಲವೇಳೆ ಸಹಾಯಕವಾಗುವ ಪರಿಸ್ಥಿತಿಗಳೂ ಉಂಟಾಗುತ್ತಿದ್ದವು. ಏನನ್ನಾದರೂ ಅವನು ಮನಸ್ಸಿಗೆ ತಂದುಕೊಂಡರೆ ಅದನ್ನು ಮಾಡಿ ಪೂರೈಸಲೇಬೇಕು ಎನ್ನುವ ಯಮ ನಿರ್ಧಾರ ಅವನದು. ಮೇಲೆ ಹೇಳಿದ ಘಟನೆಗಿಂತಲೂ ಮುಂಚೆ ನಡೆದ ಒಂದು ಪ್ರಸಂಗ, ನಾವೆಲ್ಲ ಎರಡು ದಿನ ಮಂತ್ರಾಲಯದ ಯಾತ್ರೆಗೆ ಹೋಗಿದ್ದೆವು, ನಾನೂ ಆಗ ಅವನಿಗೆನೀನೂ ಬಾ" ಎಂದು ಹೇಳಿದ ಕ್ಷಣವೇ ಅವನೂ ಒಪ್ಪಿಕೊಂಡಿದ್ದ. ದೇವರ ಸ್ಥಳವೆಂಬ ಭಕ್ತಿಯಿಂದಿರಬೇಕು, ಅನಿಗೆ ದೇವರು ದಿಂಡಿರುಗಳಲ್ಲಿ ಭಾರೀ ಭಕ್ತಿ. ಪ್ರತಿನಿತ್ಯ ಬೆಳಗ್ಗೆ ಯಾವುದೋ ಹಲವು ಶ್ಲೋಕಗಳನ್ನು ರೂಮಲ್ಲಿ ಒಬ್ಬನೇ ಕೂತು ಹೇಳಿಕೊಳ್ಳುತ್ತಿದ್ದ; ಇದು ಒಂದು ದಿನ ತಪ್ಪಿದ್ದನ್ನು ಕಾಣೆ. ರೂಮು ಬಾಗಿಲು ಹಾಕಿಕೊಂಡು ಒಬ್ಬನೇ ಹೇಳಿಕೊಳ್ಳುತ್ತಿದ್ದ. ಆಗ ಚಿಲುಕ ಹಾಕಿಕೊಳ್ಳಬೇಡವೆಂದು ನಾನು ಹೇಳುತ್ತಿದ್ದೆ. ಪ್ರಾರ್ಥನೆಯ ಪರಿಪಾಠ ಅವನು ಅಪ್ಪನಿಂದ ಕಲಿತದ್ದು. ಅಪ್ಪ ಕೂಡ ಹೀಗೆಯೇ ಬೆಳಿಗ್ಗೆ ಪ್ರಾರ್ಥನಾ ಶ್ಲೋಕಗಳನ್ನು ಹೇಳಿಕೊಳ್ಳುವ ಪರಿಪಾಠ. ಅದನ್ನು ಇವನಿಗೂ ಕಲಿಸಿದ್ದರು. ಇದರಿಂದ ಅವನ ಆರೋಗ್ಯ ಸುಧಾರಿಸಬಹುದೆಂಬ ನಂಬಿಕೆಯಿತ್ತೇನೋ ಭಕ್ತಿಯಿಂದಾಗಿ ಶಶಿ ನಮ್ಮ ಜತೆ ಬರು ಒಪ್ಪಿಕೊಂಡಿದ್ದ. ಅವನು ಬರೊಲ್ಲವೆಂದರೆ ಏನು ಮಾಡಬೇಕೆಂಬ ಯೋಚನೆ ನನ್ನ ಕಾಡುತ್ತಿತ್ತು. ಒಬ್ಬನನ್ನೇ ಬಿಟ್ಟು ಹೋಗುವಂತಿಲ್ಲ. ಅವನು ಬರುವುದಿಲ್ಲವೆಂದು ರಮಳ ಹರಕೆಯನ್ನು ಕಡೆಗಣಿಸಿ ಸಮಸ್ಯೆ ತಂದುಕೊಳ್ಳುವಂತಿಲ್ಲ. ತುಂಬ ಕಳವಳ ವುಂಟಾಗಿತ್ತು. ಅವನು ಏನು ಮಾಡಿದರೂ ಬರುವುದಿಲ್ಲವೆಂದು ಹಟ ಹಿಡಿದರೆ ಗೋವಿಂದಯ್ಯನಿಗೆ ಹೇಳಿ, ಅವರ ರೂಮಿನಲ್ಲಿ ಮಲಗಲು ಅವಕಾಶ ಮಾಡಿ ಕೊಡಿರೆಂದು ಕೇಳಬೇಕಂದಿದ್ದೆ. ಆದೆ ಜೊತೆಗೆ ಬರಲು ಶಶಿ ಒಪ್ಪಿದ್ದ ರಿಂದ ಸಮಸ್ಯೆ ತಾನಾಗಿಯೇ ಪರಿಹಾರವಾಗಿತ್ತು; ಇಷ್ಟು ಸುಲಭವಾಗಿ ಪರಿಹಾರವಾದದ್ದು ನೆಮ್ಮದಿಯೆನಿಸಿತ್ತು.
ಎರಡು ದಿನಗಳ ಕಾಲ ಮಂತ್ರಾಲಯದಲ್ಲಿ ಹಾಯಾಗಿದ್ದೆವು. ಜೊತೆಗೇ ಅವನನ್ನು ಸ್ನಾನಕ್ಕೆಂದು ಕರೆದುಕೊಂಡು ಹೋಗುತ್ತಿದ್ದೆವು. ನಾವೆಲ್ಲ ದಡದಲ್ಲಿ ನಿಂತು ಸ್ನಾನಮಾಡಿದರೆ, ಸೊಂಟದವರೆಗಿನ ನೀರಲ್ಲಿ ನಿಂತರೆ, ಅವನು ಆಳವಿದ್ದ ಕಡೆ ಹೋಗಿ ಈಜುತ್ತಿದ್ದ. ಆಗ ಫೆಬ್ರುವರಿ ತಿಂಗಳಾದ್ದರಿಂದ ನದಿಯಲ್ಲಿ ತುಂಬ ನೀರಿರಲಿಲ್ಲ. ಎಲ್ಲೋ ಒಂದೆರಡು ಸೀಳುಗಳಲ್ಲಿ ನೀರು ಹರಿಯುತ್ತಿತ್ತು. ಆದರೆ ಒಂದೆರಡು ಆಳವಾದ ಕಡೆಗಳಲ್ಲಿ ನೀರು ನಿಂತು ಕೆರೆಗಳಂತಾಗಿದ್ದವು. ಅಲ್ಲಿ ಹೋಗಿ ಶಶಿ ಈಜುತ್ತಿದ್ದ. ನಾವೂ ಗಾಬರಿಯಿಂದ ಅವನು ಹೋದ ಜಾಗಕ್ಕೇ ಹೋಗಿ ದಡದಲ್ಲಿ ನಿಂತು ಸ್ನಾನ ಮಾಡಿದ್ದೆವು. ಅವನಿಗೆ ಅಷ್ಟು ಚೆನ್ನಾಗಿ ಈಜು ಬರುವುದೆಂದು ನನಗೆ ಗೊತ್ತಾದದ್ದು ಆಗಲೇ. ಆದರೆ ನದಿಯಲ್ಲಿ - ಅದೂ ಸ್ಥಳದಲ್ಲಿ ಬಂಡೆಗಳು ಹೆಚ್ಚು. ಈಜುವಾಗ ಬಂಡೆಗಳಿಗೆ ಡಿಕ್ಕಿ ಹೊಡೆಕೊಂಡಾ ನೆಂದು ಹೆಚ್ಚು ಹೊತ್ತು ಬಿಡದೆ ಬೇಗ ಎಬ್ಬಿಸಿಕೊಂಡು ಬರುತ್ತಿದ್ದೆವು.
ಮಂತ್ರಾಲಯದಿಂದ ವಾಪಸ್ಸು ಬಂದದ್ದು ಮಧ್ಯಾಹ್ನದ ಬಸ್ಸಲ್ಲಿ. ರಾತ್ರಿ ಹನ್ನೊಂದೂವರೆಗೆ ಬೆಂಗಳೂರಿಗೆ ಬಂದಿತ್ತು. ಯಾವುದೋ ಪ್ರೈವೇಟು ಬಸ್ಸಾದ್ದರಿಂದ ಕಲಾಸಿಪಾಳ್ಯದ ಬಸ್ಟ್ಯಾಂಡಿನಲ್ಲಿ ಇಳಿಸಿದ್ದರು. ಬೆಂಗಳೂರನ್ನು ಬಸ್ಸು ಒಂಬತ್ತೂವರೆಗೆ ತಲುಪುವುದೆಂದು ಹೇಳಿದ್ದರಿಂದ ಆಬಸ್ಸಲ್ಲಿ ಬಂದಿದ್ದೆವು. ಅಷ್ಟು ಹೊತ್ತಿಗೆ ಬಸ್ಸುಗಳಲ್ಲದಿದ್ದರೆ ರಿಕ್ಷಾಗಳಾದರೂ ಸಿಕ್ಕುತ್ತವೆ. ಏನಿಲ್ಲವೆಂದರೂ ಹತ್ತೂವರೆಯೊಳಗಾಗಿ ಮನೆ ತಲುಪಬಹುದಲ್ಲ ಅನ್ನಿಸಿತ್ತು. ಆದರೆ ದಾರಿಯ ಮಧ್ಯದಲ್ಲಿ ಬಸ್ಸು ಕೆಟ್ಟು ರಿಪೇರಿ ಎಂದು ಎರಡು ಬಾರಿ ನಿಂತುಬಿಟ್ಟಿತ್ತು. ಎಲ್ಲ ಸರಿಮಾಡಿಕೊಂಡು ಇಲ್ಲಿ ಬರುವ ವೇಳೆಗೆ ಹೊತ್ತಾಗಿತ್ತು. ಸಧ್ಯ ದಾರಿಯಲ್ಲಿ ಇನ್ನೇನಾದರೂ ಆಗದೆ, ಅಲ್ಲೇ ರಾತ್ರಿಯೆಲ್ಲ ಕಳೆಯುವ ಹಾಗಾಗದೆ ಊರು ತಲುಪಿದೆವಲ್ಲ ಎಂಬುದೇ ಸಮಾಧಾನದ ವಿಷಯ.
ಹೊತ್ತಿಗೆ ಬಸ್ಸಂತೂ ಸಾಧ್ಯವಿಲ್ಲ. ನಮ್ಮ ಲಗ್ಗೇಜುಗಳೊಡನೆ ಬಸ್ಸಲ್ಲಿ ಹೋಗುವುದು ಸಾಧ್ಯವೂ ಇಲ್ಲ. ಇನ್ನು ರಿಕ್ಷಾ ಎಂದರೆ ಅಲ್ಲಿ ಇದ್ದುದು ಕೆಲವೇ ರಿಕ್ಷಾಗಳು. ನಾವು ಬಸ್ಸಿನ ಟಾಪಿನಿಂದ ಸಾಮಾನುಗಳನ್ನು ಇಳಿಸಿಕೊಳ್ಳುವ ಹೊತ್ತಿಗೆ ಬಹುಪಾಲು ಪ್ರಯಾಣಿಕರು ರಿಕ್ಷಾಗಳನ್ನು ತಗೊಂಡು ಹೋಗಿ ಬಿಟ್ಟಿದ್ದರು. ಇದ್ದಕೆಲವರು ರಿಕ್ಷಾಗಳವರು ಗಾಂಚಾಲಿ ಮಾಡತೊಡಗಿದರು. “ಆಕಡೆ ಬರುವುದಿಲ್ಲ." “ಇಷ್ಟು ಹತ್ತಿರವಾದರೆ ಬರುವುದಿಲ್ಲ." “ಇಷ್ಟು ಕೊಡಿ ಅಷ್ಟು ಕೊಡಿ" ಎಂಬ ಮಾತುಗಳು. ಹೊತ್ತು ಜಾಸ್ತಿಯಾಗಿದ್ದರೂ ತುಂಬ ದೂರವಿರದ ನಮ್ಮ ಮನೆಗೆ ವಿಪರೀತ ಬಾಡಿಗೆ ಕೇಳುತ್ತಾರೆಂದು ಒಂದಿಬ್ಬರನ್ನು ಬೇಡವೆಂದು ಕಳಿಸಿಬಿಟ್ಟೆವು. ಮಾತುಕತೆಗಳೆಲ್ಲ ಹೆಚ್ಚಾಗಿ ಶಶಿಯದೇ. ತುಂಬ ಹಣ ಕೇಳುತ್ತಾನೆ ಎಂಬ ಕಾರಣಕ್ಕಾಗಿ ಅಲ್ಲಿದ್ದ ಕೊನೆಯ ರಿಕ್ಷಾವನ್ನೂ ಅವು ತಿರಸ್ಕರಿಸಿ ಕಳಿಸಿಬಿಟ್ಟಿದ್ದ. ಆಮೇಲೆ ಎಷ್ಟು ಹೊತ್ತಾದರೂ ರಿಕ್ಷಾಗಳು ಸಿಗಲಿಲ್ಲ. ಹಾಳಾಗಿ ಹೋಗಲಿ ಅಂತ ರಿಕ್ಷಾದಲ್ಲಿ ಹೋಗಿಬಿಡಬೇಕಾಗಿತ್ತು. ಜಿಪುಣ ಶಶಿ ಮಧ್ಯೆ ಬಾಯಿ ಹಾಕಿ ಎಲ್ಲ ಹಾಳು ಮಾಡುತ್ತಾನೆ ಅನ್ನಿಸಿ ಬೇಸರವಾಯಿತು.
ನಡೆಯಕ್ಕೆ ತಯಾರಾಗಿದ್ದೀರಾ" ಎಂದ. ಮನೆ ದೂರವೇನಲ್ಲ. ಅಬ್ಬಬ್ಬ ಎಂದರೆ ಒಂದು ಮೈಲಿಯಾಗಬಹುದು. ಹೇಗಾದರೂ ಮನೆ ತಲುಪಬೇಕಲ್ಲ. ನಡೆಯಲು ಸಿದ್ಧ. ಆದರೆ ಲಗ್ಗೇಜು? ಅದರ ಯೋಚನೆ ಬೇಡವೆಂದ. ಎಲ್ಲವನ್ನು ತಾನೇ ಹೊತ್ತುಕೊಂಡು ನಮ್ಮನ್ನು ಮುಂದಿಟ್ಟುಕೊಂಡು ಹೊರಟೇಬಿಟ್ಟ. ಸುಷ್ಮಾ ನಡೆಯಬಲ್ಲವಳು ಪೃಥ್ವಿಯನ್ನು ನಾನಷ್ಟು ಹೊತ್ತು, ರಮ ಅಷ್ಟು ಹೊತ್ತು ಎತ್ತಿಕೊಂಡು ನಡೆದೆವು. ಅಷ್ಟಕ್ಕೇ ನಮ್ಮ ಕೈಗಳು ಕಳಚಿ ಹೋಗಿವೆ ಏನೋ ಅನ್ನಿಸುತ್ತಿತ್ತು. ಆದರೆ ಶಶಿ ಅಷ್ಟೊಂದು ಸಾಮಾನು ಹೊತ್ತು, ಆಯಾಸ ಆಗಿದ್ದರೂ ತೋರಗೊಡದೆ, “ನಾನು ತಾನೇ ರಿಕ್ಷಾ ತಪ್ಪಿಸಿದ್ದು. ಆದ್ದರಿಂದ ತಪ್ಪಿಗೆ ನಾನೇ ಸಾಮಾನು ಹೊರಬೇಕು" ಎಂದು ನಮ್ಮ ಕೈಲಿ ಒಂದು ಸಾಮಾನೂ ಹೊರಿಸದೆ ಮನೆಯವರೆಗೂ ತಂದಿದ್ದ. ಅಂಥ ಹಟ ಅವನದು!
ಹಟಮಾರಿತನ ಎಂಬುದೇ ಇನ್ನೊಂದು ಹಂತದಲ್ಲಿ ದೃಢ ನಿರ್ಧಾರ ಎಂದಾಗುತ್ತದೆಯಲ್ಲವೇ? ಅಂಥ ನಿರ್ಧಾರದಿಂದಲೇ ಅಲ್ಲವೇ ಅವನು ಈಗ ಸತ್ತಿರುವುದು. ಸಾವನ್ನು ತಂದುಕೊಳ್ಳಬಲ್ಲ ನಿರ್ಧಾರ ಎಂದರೆ ಹೇಗಿರಬೇಕು!

- - -

ಯಾವುದೋ ಹಬ್ಬದ ದಿನವೊಂದರಲ್ಲಿ ಪೃಥ್ವಿಗೆ ಅವರಮ್ಮ ಹೊಸ ಉಂಗುರ ಒಂದನ್ನು ಹಾಕಿದ್ದಳು. ಸಾಯಂಕಾಲ ಶಶಿ ಪೃಥ್ವಿಯನ್ನು ಹೊರಗೆಲ್ಲೋ ಸ್ವಲ್ಪ ಹೊತ್ತು ಕರೆದುಕೊಂಡು ಹೋಗಿದ್ದನಂತೆ, ನಾನೂ ಆಗ ಮನೆಯಲ್ಲಿರಲಿಲ್ಲ. ಎತ್ತಲೋ ಹೋಗಿದ್ದವನು ಮನೆಗೆ ಬಂದಾಗ ರಮಳ ಸಹಸ್ರನಾಮ ಪ್ರಾರಂಭವಾಗಿತ್ತು, ಅವನು ಮಗುವನ್ನು ಕರೆದುಕೊಂಡು ಹೋದುದರಿಂದಲೇ ಅವಳಿಗೆ ಅಸಮಾಧಾನವಾಗಿತ್ತು. ಅದರ ಜೊತೆಗೆ ಹೊಸ ಉಂಗುರವೊಂದನ್ನು ಹಾಕಿಕೊಂಡ ಮಗುವನ್ನು ಕರೆದುಕೊಂಡು ಹೋಗಿದ್ದ. ಅವನು ಮನೆಗೆ ಮಗುವನ್ನು ವಾಪಸು ಕರೆದುಕೊಂಡು ಬಂದಾಗ ರಮ ನೋಡುತ್ತಾಳೆ, ಮಗುವಿನ ಕೈಬೆರಳಲ್ಲಿದ್ದ ಉಂಗುರವಿಲ್ಲ! ಅವಳಿಗೆ ಗಾಬರಿಯಾಯಿತು. ಎಲ್ಲಿ ಎಂದು ಶಶಿಯನ್ನು ಕೇಳಿದಳು. “ನನಗೇನು ಗೊತ್ತು" ಎಂದ.
ಎಂಥ ಬೇಜವಾಬ್ದಾರೀನೋ ನಿಂದು. ಮಗು ಬೆರಳಲ್ಲಿದ್ದ ಉಂಗುರ ಎಲ್ಲಿ ಹೋಯಿತು. ಅಂದರೆ ಎಷ್ಟು ಸುಲಭವಾಗಿ ನಂಗೇನು ಗೊತ್ತು ಅಂತೀಯಲ್ಲ!"
ಇನ್ನೇನು ಮಾಡಬೇಕಾಗಿತ್ತು?"
ಎಲ್ಲಿ ಹೋಯಿತೂಂತ ಹುಡುಕಿ ತರಬೇಕಾಗಿತ್ತು."

ಅವನ ಕೈಯಲ್ಲಿ ಉಂಗುರವೇ ಇರಲಿಲ್ಲ, ನಾನು ಕರಕೊಂಡು ಹೋದಾಗ" ಎಂದ ಶಶಿ.
ಸಾಯಂಕಾಲ ನಾಲ್ಕು ಗಂಟೆಗೆ ಹಾಕಿದ್ದೆ. ನೋಡ್ತಾನೇ ಇದ್ದೆನಲ್ಲ. ಇನ್ನೆಲ್ಲಿಗೆ ಹೋಗುತ್ತೆ."
ಮತ್ತೆ, ಎಲ್ಲಿಗೆ ಹೋಗುತ್ತೆ?"
ನಿನ್ನ ತಲೆ ಮಗೂನ ಹೊರಗೆ ಕರಕೊಂಡು ಹೋಗಿ ಕಳಕೊಂಡು ಬಂದಿದ್ದೀಯ. ಈಗ ನೋಡಿದರೆ ತಲೆಹರಟೆ ಮಾತಾಡ್ತಿದ್ದೀಯ."
ಇಲ್ಲ ಅತ್ತಿಗಮ್ಮನೋರೆ, ಪೃಥ್ವೀನ ಕರಕೊಂಡು ಹೋದಾಗ ಅವನ ಕೈಯಲ್ಲಿ ಉಂಗುರ ಇರಲಿಲ್ಲ. ನಾನು ನೋಡಿದ್ದ ಜ್ಞಾಪಕವೇ ಬರದು!"
ನಿಂಗೆ ಜ್ಞಾಪಕ ಬರುತ್ತ. ಜವಾಬ್ದಾರಿ ಇಲ್ಲದೋನು."
ಅವಳಷ್ಟು ಮಾತಾಡಿದರೂ ಪೃಥ್ವಿಯ ಬೆರಳಲ್ಲಿ ಉಂಗುರವಿರಲಿಲ್ಲ ಎಂಬುದೇ ಅವನ ವಾದ. ಅವಳ ವಿರುದ್ಧ ಇನ್ನಾವುದೇ ಮಾತುಗಳನ್ನಾಡಲಿಲ್ಲ. ರಮಂಗೂ ಇಂಥವನ ಜೊತೆ ಯುದ್ಧ ಮಾಡುವುದು ಕಷ್ಟವೇ. ಅವನೂ ಇವಳ ಹಾಗೆಯೇ ಮಾತಾಡುತ್ತಿದ್ದರೆ ಅವಳಿಗೆ ಇನ್ನಷ್ಟು ಹುರುಪು-ಹುಮ್ಮಸ್ಸು ಬರಬಹುದಾಗಿತ್ತು. ಜಗಳಕ್ಕೆ ರಂಗೇರುತ್ತಿತ್ತು. ಆದರೆ ಅವನದು ಒಂದೇ ಮಾತು; “ನಾನು ಕರಕೊಂಡು ಹೋದಾಗ ಅವನ ಕೈಯಲ್ಲಿ ಉಂಗುರ ಇರಲಿಲ್ಲ."
ಕರಕೊಂಡು ಹೋಗಬೇಡಾಂತ ಬಡಕೋತೀನಿ. ಕೇಳಲ್ಲ, ಎಲ್ಲಾದರೂ ಎತ್ತಿ ಹಾಕಿದರೇನು ಗತಿ ಅಂತ ಒಂದು ಭಯ. ಹೀಗೆ ಬೇರೆ ಮಾಡಿಬಿಡ್ತಾನೆ." ಅಂತ ರಮ ಗೊಣಗಾಡಿಕೊಂಡಳು. ಅವಳು ಎಷ್ಟು ಹೊತ್ತೂಂತ ಮಾತಾಡುತ್ತಾಳೆ, ಉರುಂ ಅಂತ ಮುಖ ಮಾಡಿಕೊಂಡು ಪೃಥ್ವಿಯನ್ನೇ ಪ್ರಶ್ನೆ ಮಾಡುವುದಕ್ಕೆ ತೊಡಗಿದಳು. ಆದರೆ ಅವನಿಗೆ ಚಿನ್ನದ ಬೆಲೆಯೂ ಗೊತ್ತಿಲ್ಲ. ಅದು ಏನಾಯಿತೆಂಬ ಪರಿವೆಯೂ ಇಲ್ಲ. ಹೀಗಾಗಿ ಅವಳ ಪ್ರಶ್ನಾವಳಿಗೆ ಅವನಿಂದ ಯಾವುದೇ ಉತ್ತರವಿಲ್ಲ. ಬರೀ ಪಿಳಿಪಿಳಿ ಕಣ್ಣು ಬಿಡುತ್ತಾನೆ, ಅಷ್ಟೆ. “ಹಬ್ಬದ ದಿನ ಏನಾದರೂ ಇಂಥ ಗೋಳು ಆಗಲೇಬೇಕು. ಏನು ದರಿದ್ರ ಸಂಸಾರವೋ" ಅಂದುಕೊಂಡು ಹಾರಾಡುತ್ತಿದ್ದಳು.
ಹೊತ್ತಿಗೆ ನಾನು ಹೊರಗಡೆಯಿಂದ ಮನೆಗೆ ಬಂದೆ. ಮನೆಯ ಪರಿಸ್ಥಿತಿ ಗಂಭೀರ ಆಗಿತ್ತು. ಏನೋ ಆಗಿದೆ ಅಂದುಕೊಂಡೆ. “ಮುಖ ನೋಡಿದವಳೇ ಮೂತಿ ಸೊಟ್ಟಗೆ ಮಾಡಿದಳು ರಮ. ನಾನು ತಮಾಷೆಯಿಂದಏನು ಸಮಾಚಾರ, ಮೈಮೇಲೆ ಬಂದಿರೋ ಹಾಗಿದೆ ಅಮ್ಮಾವ್ರಿಗೆ?" ಎಂದೆ. ಹಾಗಂದಿದ್ದೇ ಅವಳಲ್ಲಿ ಹುದುಗಿಕೊಂಡಿದ್ದ ಮಾತುಗಾರಿಕೆಯೆಲ್ಲ ಜಾಗ್ರತವಾಯಿತು. “ಇನ್ನೆಷ್ಟು ದಿನವೋ ಕರ್ಮ ಅನುಭವಿಸೋದು ನಾವು" ಎಂದಳು.
ಯಾಕೆ, ಏನಾಯಿತು?"
ಆಗೋದೇನು? ಇದ್ದುದರಲ್ಲಿ ಇಲಿ ಕಚ್ಚಿಕೊಂಡುಹೋಯಿತೂಂತ ಆಯಿತು ಸಾಲದಾ?"
ಏನಾಯಿತು, ಹೇಳು" ಅಂದೆ.
ವಿಚಾರ ತಿಳಿಸಿದಳು. ನನಗೆ ಪರಿಸ್ಥಿತಿ ಅರ್ಥವಾಯಿತು. ಸಾಯಂಕಾಲ ಮನೆ ಬಿಡುವಾಗ ಪೃಥ್ವಿಯ ಕೈಬೆರಳಲ್ಲಿದ್ದ ಉಂಗುರ ಕಂಡಿದ್ದೆ. ಅದು ಅವನಿಗೆ ಸಡಿಲ ಆಗಿದ್ದುದು ನನ್ನ ಗಮನಕ್ಕೆ ಬಂದಿತ್ತು. ಇನ್ನು ಎಲ್ಲಾದರೂ ಕಳೆದುಕೊಂಡು ಬಿಟ್ಟಾನೆಂದು ನಾನೇ ಅದನ್ನು ಬೆರಳಿಂದ ಕಳಚಿ ಆಮೇಲೆ ಒಂದಷ್ಟು ದಾರ ಸುತ್ತಿ ಹಾಕೋಣ ಎಂದು ಬೀರುವಿನಲ್ಲಿಟ್ಟಿದ್ದೆ. ಆದರೆ ರಮಂಗೆ ವಿಚಾರ ಹೇಳುವುದು ಮರೆತು ಹೋಗಿತ್ತು. ಕಳೆದೇನೂ ಹೋಗಿಲ್ಲವಲ್ಲ. ಒಂದಷ್ಟು ತಮಾಷೆ ನೋಡೋಣವೆಂದು ಆಗಲೇ ವಿಷಯ ಬಾಯಿ ಬಿಡಲಿಲ್ಲ.
ಎಲ್ಲಿ ಹೋಯಿತಂತೆ?" ಎಂದೆ.
ಅದನ್ನೇ ನಾನೂ ಕೇಳ್ತಿರೋದು. ಅವನ್ನೆಲ್ಲೋ ಮಗೂನ ಕರಕೊಂಡು ಹೊರಗೆ ಹೋಗಿದ್ದ. ಬಂದಾಗ ನೋಡಿದರೆ ಇಲ್ಲವೇ ಇಲ್ಲ!"
ಅವನು ಕರಕೊಂಡು ಹೋಗುವಾಗ ಕೈಯಲ್ಲಿ ಉಂಗುರ ಇದ್ದದ್ದನ್ನು ನೋಡಿದ್ದೆಯೇನೇ ನೀನು?"
ಸಾಯಂಕಾಲ ನಾನೇ ತೋಡಿಸಿದೋಳು ಅಂತೀನಿ" ಆಗಲೇ ಅಸಹನೆ. “ಅದು ಸರಿಯೇ. ಆದರೆ ಅವನು ಮಗೂನ ಕರಕೊಂಡು ಹೋಗೋ ಮುಂಚೆ ಮಗು ಕೈಲಿ ಉಂಗುರ ಇದ್ದದ್ದನ್ನು ನೋಡಿದೆಯಾ?"
ಆಗ ಅವನ ಕೈಲಿ ಉಂಗುರ ಇರಲಿಲ್ಲ ಕಣೋ ಅಣ್ಣ" ಎಂದ ಇದುವರೆಗೂ ಸುಮ್ಮನಿದ್ದ ಶಶಿ.
ನೀನು ಸುಮ್ನಿರೋ. ಏನೇ ನೋಡಿದ್ಯಾ?"
ಇಪ್ಪತ್ತನಾಲ್ಕು ಗಂಟೆಯೂ ನಾನೇ ನೋಡಿಕೋತಾ ಇರಬೇಕಾ! ಬೇರೇನೂ ಕೆಲಸ ಇಲ್ಲವಾ ನಂಗೆ!"
ಅವನು ಮಗೂನ ಕರಕೊಂಡು ಹೋಗೋಕ್ಕೆ ಮುಂಚೇನೆ ಕಳೆದುಹೋಗಿರಬಹುದಲ್ಲವಾ?"
ಅವನೆಲ್ಲಿ ಹೋಗಿದ್ದ ಅಂತೀನಿ, ಕಳಕೊಳ್ಳೋದಕ್ಕೆ ಮನೇಲೇ ಇದ್ದ."
ಯಾಕೆ ಮನೇ ಒಳಗೇ ಎಲ್ಲಾದರೂ ಬಿದ್ದಿರಬಾರದೇನು?"
ಅಂತೂ ನೀವು ಯಾವತ್ತೂ ಅವನ ಕಡೇನೇ. ಹೊಸ ಉಂಗುರ ಕಳಕೊಂಡು ಬಂದಿದ್ದಾನೆ. ಅವನ್ನ ಒಂದು ಮಾತು ಅಂತಾ ಇಲ್ಲ; ಅವನೂ ನಿಮಗೆ ಸರಿಯಾಗಿದಾನೆ. ಸಂಪಾದನೆ ಮಾಡೋನು. ಕಳೆದು ಹಾಕಿರೊ ಜವಾಬ್ದಾರಿ ತಗಂಡು ಹೊಸದು ಮಾಡಿಸೋಣ ಅಂತ ಹೇಳೋ ಬುದ್ಧೀನೂ ಇಲ್ಲ, ಮಾಡಿಸದೇ ಇದ್ದರೆ ಹೋಗಲಿ."
ನಾನು ಕಳೆದು ಹಾಕಿಲ್ಲದೇ ಇರೋವಾಗ ಮಾಡಿಸ್ತೀನಿ ಅಂತ ಯಾಕೆ ಹೇಳಬೇಕು?" ಎಂದ ಶಶಿ.
ಎಲ್ಲ ನೆಗೆದುಬಿದ್ದು ಹೋಗಲಿ ಬಿಡಿ. ಎಲ್ಲ ನನ್ನ ಮೇಲೇನೇ ಗೂಬೆ ಕೂರಿಸೋದು" ಅಂತ ಕಣ್ಣೊರೆಸಿಕೊಂಡು ಒಳಗೆ ಹೋಗಲು ತಿರುಗಿದಳು. ಇನ್ನು ತಮಾಷೆ ಸಾಕು ಅನ್ನಿಸಿತು. ಒಳಗೆ ಹೋಗಿ ಬೀರುವಿನಲ್ಲಿಟ್ಟಿದ್ದ ಉಂಗುರ ತಂದು ರಮಳ ಮುಂದೆ ಅಂಗೈಯಲ್ಲಿಟ್ಟುಕೊಂಡು ಹಿಡಿದೆ. ಅವಳ ಕಣ್ಣರಳಿತು. “ಎಲ್ಲಿತ್ತು?"ಅಂದಳು. ವಿಚಾರ ಹೇಳಿದೆನಿಮ್ಮ ತಮಾಷೆ ಗಿಷ್ಟು ಬೆಂಕಿ ಬಿತ್ತು. ಎಲ್ಲ ರಾದ್ಧಾಂತವಾಗೋವಾಗ ನಿಮಗೆ ಹಾಸ್ಯ" ಅಂದಳು. “ಸಾರಿ ಅಂತ ಶಶಿ ಹತ್ರ ಹೇಳು" ಅಂದೆ. “ನಾನ್ಯಾಕೆ ಹೇಳಲಿ ಇದೆಲ್ಲಕ್ಕೂ ನೀವೇ ತಾನೇ ಕಾರಣ. ನೀವೇ ಹೇಳಿಕೊಳ್ಳಿಬೇಕಾದರೆ" ಅಂದಳು.
ನಿಜವಾದ ವಿಚಾರ ತಿಳಿದಮೇಲೂ ಶಶಿ ಅವರತ್ತಿಗೆಯನ್ನು ತೆಗಳುವ ಕೆಲಸಕ್ಕಾಗಲೀ, ಹೀಯಾಳಿಸುವುದಕ್ಕಾಗಲೀ ಕೈಹಾಕಲಿಲ್ಲ. ಅಷ್ಟೆಲ್ಲ ಅನಿಸಿಕೊಂಡರೂ, ತನ್ನದು ತಪ್ಪಿರಲಿಲ್ಲವೆಂದು ತಿಳಿದ ಮೇಲೆಯೂ ಅವನ ಕಣ್ಣುಗಳು ಕಿಡಿಕಾರಲಿಲ್ಲ. ರಮನೀವೇ ಸಾರಿ ಹೇಳಿಕೊಳ್ಳಿ ಬೇಕಾದರೆ" ಅಂತ ಹೇಳಿದ್ದರೂ ಅವಳ ಮುಖದಲ್ಲಿ ಒಂದು ಬಗೆಯ ನಾಚಿಕೆ ಮನೆಮಾಡಿಕೊಂಡಿತ್ತು. ಶಶಿಯನ್ನು ಎದುರಿಸಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ ಎಂಬಂತೆ ಕಾಣುತ್ತಿತ್ತು. ಆದರೆ ಶಶಿಯ ಸಹನೆ ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಅಂತೂ ಬೇರೆಯವರಿಗಾಗಿ ಕೆಲವೇಳೆ ತಾನು ನೋಯುತ್ತಿದ್ದ ನಮ್ಮ ಶಶಿ. ಅವನ ಸಾವೂ ಅದೇ ರೀತಿಯದು ಏನೋ. “ಅಣ್ಣನಿಗೆ ಬೇಜಾರಾಗಿದೆಯೆಂದು ಗೊತ್ತಾದರೆ ನಾನಿರುವುದಿಲ್ಲ" ಎಂದು ಹೇಳುತ್ತಿದ್ದನಂತೆ ಅವರಿವರ ಹತ್ತಿರ, ಈಗ ಹೋಗಿಬಿಟ್ಟಿದ್ದಾನೆ. ಅಂದರೆ ನನಗೆ ಅವನ ಬಗ್ಗೆ ಬೇಜಾರಾಗಿದೆ ಎಂದು ಅವನು ತೀರ್ಮಾನಿಸಿ ಹೋಗಿ ಬಿಟ್ಟಿದ್ದಾನೆ. ಇನ್ನು ನಮಗೆ ಬೇಸರಕ್ಕೆ ಕಾರಣವಿಲ್ಲ. ಅವನು ಅನುಭವಿಸುವುದಕ್ಕೆ ಅವಕಾಶವಿಲ್ಲ ಎಂಬ ವ್ಯಂಗ್ಯಮನಸ್ಸಲ್ಲಿ ಕಹಿಯಾಗುತ್ತದೆ. ಮಗ್ಗುಲಾಗಿ ಮಲಗುತ್ತೇನೆ.
ಗಾಢವಾಗಿ ನಿದ್ದೆ ಬರುತ್ತದೆ. ಇಷ್ಟು ದಿವಸದ ಆಯಾಸವೆಲ್ಲ ಈವೊತ್ತಿನ ನಿದ್ದೆಯಿಂದಲೇ ಮಂಗಮಾಯವಾಗಿ ಬಿಡುತ್ತದೆ ಎನ್ನುವ ಭಾವನೆ ಬರುವಂತಹ ಗಾಢವಾದ ನಿದ್ದೆ. ಜೇನುತುಪ್ಪದಲ್ಲಿ ನಾಲಗೆಯನ್ನು ಮುಳುಗಿಸಿದಷ್ಟು ಮಧುರ ವಾದ ನಿದ್ದೆ, ಇಂಥ ನಿದ್ದೆ ಮಾಡಿ ಎಷ್ಟು ಕಾಲವಾಗಿತ್ತೋ, ಯುಗವಾಗಿತ್ತೋ? ಪ್ರಾಯಶಃ ಜನ್ಮದಲ್ಲಿಯೇ ನಾನಿಂತಹ ನಿದ್ದೆಯನ್ನು ಮಾಡಿರಲಿಲ್ಲ ಎಂಬಂತಹ ಸವಿನಿದ್ದೆ!
ಮಧ್ಯೆ ಯಾರೋ ಬಾಗಿಲನ್ನು ಟಕ್ ಟಕ್ ಎಂದು ಬಡಿಯುವ ಸದ್ದು ಕೇಳಿಸಿದುದರಿಂದ ಎಚ್ಚರವಾಗುತ್ತದೆ. ಎಂಥ ನಿದ್ದೆ ಕೆಟ್ಟುಹೋಯಿತಲ್ಲ ಎಂಬ ಬೇಸರದ ಬೇವು ಮನಸ್ಸನ್ನು ಆವರಿಸುತ್ತದೆ. ಆದರೆ ಇನ್ನು ಮಂಪರು, ಏಳಲು ಬೇಜಾರು. ಯಾವ ಸದ್ದೂ ಇರಲಾರದು. ನನ್ನ ಭ್ರಮೆ ಇರಬೇಕು ಎಂದು ಕಣ್ಮುಚ್ಚಿ ಮಲಗುತ್ತೇನೆ, ಎರಡೇ ಕ್ಷಣ. ಮತ್ತೆ ಮತ್ತೆ ಸದ್ದು ಕೇಳಿಸುತ್ತದೆ, ಎಚ್ಚರವಾಗುತ್ತದೆ. ಏನಿರಬಹುದು? ಯಾರಾದರೂ ಗುರುತಿನವರು ಬಂದಿರಬಹುದೇ? ಅಥವಾ ಕಳ್ಳನಾದರೂ ಪೋಲೀಸು ಕಂಡನೆಂದು ಅಡಗಿಕೊಳ್ಳಲು ಪ್ರಯತ್ನಿಸಿ ಇಲ್ಲಿ ಬಂದಿದ್ದಾನೆಯೇ? ಯಾಕೋ ಭಯ. ಬಾಗಿಲು ತೆಗೆದರೆ ಏನು ಗ್ರಹಚಾರವೋ, ಎಂದು ಮುಸುಕ ಹಾಕಿ ಮತ್ತೆ ಮಲಗುತ್ತೇನೆ. ಆದರೆ ಸದ್ದು ಮಾತ್ರ ನಿಲ್ಲುವುದಿಲ್ಲ, ನನಗೆ ನಿದ್ದೆ ಬರಲು ಬಿಡುವುದಿಲ್ಲ. ಯಾರಿರಬಹುದು, ಹೀಗೆ ಕಾಟ ಕೊಡುತ್ತಿದ್ದಾರೆ! ದಿನವಾದರೂ ಕಣ್ತುಂಬ ನಿದ್ದೆ ಮಾಡಲು ಅವಕಾಶವಾಗುತ್ತಿಲ್ಲವಲ್ಲ. ಕೋಪ, ಬೇಸರ, ಮತ್ತೆ ಮತ್ತೆ ಸದ್ದು. ಸ್ವಲ್ಪ ದೀರ್ಘಕಾಲ ಸದ್ದಿಲ್ಲ. ಸದ್ಯ ಶನಿ ತೊಲಗಿತು - ಎಂದು ಮಲಗಲು ಪ್ರಯತ್ನಿಸುತ್ತೇನೆ. ಆದರೆ ಈಗ ಬಾಗಿಲು ಬಡಿತ ಸದ್ದು ಬರದೆ, ಮಲಗಿದ್ದ ಮಂಚದ ಹತ್ತಿರ ಇದ್ದ ಕಿಟಕಿಯ ಕಡೆಯಿಂದ ಯಾರೋ ಕೂಗುವ ಸದ್ದು, “ಬಾಗಿಲು ತೆಗಿ, ಬಾಗಿಲು ತೆಗಿ" ನನ್ನ ಎದೆ ಡವಡವ ಹೊಡೆದುಕೊಳ್ಳಲು ಪ್ರಾರಂಭವಾಗುತ್ತದೆ. ಸ್ವರ ಪರಿಚಿತವಾಗಿರುವುದೇ ಅನ್ನಿಸಿತು. ಆದರೆ ಮುಖ ಕಾಣಿಸದ ಹಾಗೆ ಮುಸುಕು ಹಾಕಿಕೊಂಡ ವ್ಯಕ್ತಿ, ಕಣ್ಣುಗಳು, ಕಾಣಿಸುವಷ್ಟು ಮಾತ್ರ ಜಾಗ. ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಇವನು? ಇಲ್ಲಿಗೇಕೆ ಬಂದ. ಧ್ವನಿ ಗುರುತಿನವನಿದ್ದಂತೆ ಕಾಣಿಸುತ್ತದೆ. ಆದರೆ ವ್ಯಕ್ತಿ ಯಾರೆಂದು ಗೊತ್ತಾಗದಲ್ಲ. ಹಾಳಾಗಲಿ, ನನಗೆ ನಿದ್ದೆಬೇಕು, ಆಗಲೇ ಬಂದಿತ್ತಲ್ಲ ಅಂಥ ನಿದ್ದೆ ಮಾಡಬೇಕು. ಈಚೆಗೆ ಹೊರಳಿ ಮಲಗಲು ಯತ್ನಿಸುತ್ತೇನೆ. ಮತ್ತೆ ಅದೇ ಧ್ವನಿ, ಕೂಗು; “ಬಾಗಿಲು ತೆಗಿ, ತೆಗಿ" ಯಾರಿರಬಹುದು? ಭಯ ಅಷ್ಟೊಂದಿಲ್ಲ ಈಗ, ಧ್ವನಿ ಪರಿಚಯದ್ದು, ಗಾಬರಿಗೆ ಕಾರಣವಿಲ್ಲ ಎನಿಸುತ್ತದೆ. ಕುತೂಹಲ, ನೋಡೇ ಬಿಡೋಣ ಎಂದು ಎದ್ದು ಕಿಟಕಿಯ ಹತ್ತಿರ ಹೋಗಿ ಮುಖ ಸರಳುಗಳಿಗೆ ಆನಿಸಿ ನೋಡುತ್ತೇನೆ. ಅದೇ ವ್ಯಕ್ತಿ, ಮೈತುಂಬ ಹೊದ್ದಿದೆ. ಕಣ್ಣು ಮಾತ್ರ ಕಾಣಲಿಕ್ಕಾಗು ವಷ್ಟು ಜಾಗ ಮುಖದಲ್ಲಿ, ಕೈಬೀಸಿಬಾಗಿಲು ತೆಗಿ ಬಾ" ಎನ್ನುತ್ತದೆ. “ಎಲ್ಲೋ ವ್ಯಕ್ತಿಯನ್ನು ನಾನು ನೋಡಿದ್ದೇನಲ್ಲ ಎನಿಸಿ ಸಹಾಯ ಮಾಡೋಣವೆಂಬ ಮನಸ್ಸಾಗುತ್ತದೆ. ನಿಧಾನವಾಗಿ ಮಂಚವನ್ನು ಸುತ್ತಿಕೊಂಡು ರೂಮುಬಿಟ್ಟು ಹೊರಕ್ಕೆ ಬರುತ್ತೇನೆ. ಬೇರೆಲ್ಲರೂ ನಿದ್ದೆಯಲ್ಲಿದ್ದಾರೆ. ಅವರಿಗೇನು ಪ್ರಾಣವಿದೆಯೋ ಇಲ್ಲವೋ ಎನ್ನುವಷ್ಟರಮಟ್ಟಿಗಿನ ನಿದ್ದೆ. ಅವರಿಗೂ ಎಚ್ಚರವಾಗಿ ರಾದ್ಧಾಂತವಾಗಿಬಿಟ್ಟರೆ! ಅವರಿಗೆ ಹಾಗೆ ನಿದ್ದೆ ಬಂದಿರುವುದೇ ಒಳ್ಳೆಯದಾಯಿತು. ಅಂಬೆಗಾಲಿಡುತ್ತಾ ಬಂದು ಹೊರಗಿನ ಚಿಲಕವನ್ನು ಸದ್ದಾಗದಂತೆ ತೆಗೆಯುತ್ತೇನೆ. ವ್ಯಕ್ತಿ ಒಳಗೆ ಬರುತ್ತದೆ. ಮಾತನಾಡಬೇಡವೆಂದು ಬಾಯಿಯ ಮೇಲೆ ಬೆರಳಿಟ್ಟು ತೋರಿಸುತ್ತದೆ. ನಾನು ಮಾತನಾಡಬೇಕೆಂದರೂ ಈಗ ಬಾಯಿ ಬರುತ್ತಿಲ್ಲ, ವ್ಯಕ್ತಿ ಒಳಗಡೆ ಬರಲು ಸನ್ನೆ ಮಾಡುತ್ತಾ ತಾನು ಮೊದಲಾಗಿ ಒಳಗೆ ಹೋಗುತ್ತದೆ. ನನಗೆ ಕುತೂಹಲ. ನಿದ್ದೆ ಹಾರಿಹೋಗಿದೆ, ಈಗ ಅದರ ಬದಲು ಕುತೂಹಲವೇ ತುಂಬಿಕೊಂಡಿದೆ ಒಳಗೆ ಬಂದಾಗಏನು, ಯಾರು ನೀನು?" ಎನ್ನುತ್ತೇನೆ.
ಗೊತ್ತಾಗಲಿಲ್ಲವಾ?"
ಉಹ್ಞೂ. ಧ್ವನಿ ಪರಿಚಿತವಾದದ್ದೆನ್ನಿಸುತ್ತಿದೆ. ಆದರೆ ಯಾರೂಂತ ಗೊತ್ತಾಗ್ತಾ ಇಲ್ಲವಲ್ಲ" ಎನ್ನುತ್ತೇನೆ ಪಿಸುಮಾತಿನಲ್ಲಿ.
ಗೊತ್ತಾಗತ್ತೆ. ಗೊತ್ತಾಗತ್ತೆ" ಎಂದು ವ್ಯಕ್ತಿ ತನ್ನ ತಲೆಯ ಮೇಲಿನ ಮುಸುಕು ತೆಗೆಯುತ್ತದೆ. ಶಶಿ. ನಮ್ಮ ಶಶಿ. ನನಗೆ ಸಂತೋಷವಾಗುತ್ತದೆ. “ನೀನು ಸತ್ತು ಹೋಗಿದ್ದೀ ಅಂತ ತಿಳಿಕೊಂಡಿದ್ದೆನಲ್ಲೋ. ಒಳ್ಳೇದಾಯಿತು. ಸದ್ಯ ಬದುಕಿದ್ದೀಯಲ್ಲ" ಎಂದು ಅವನನ್ನು ಹಿಡಿದುಕೊಳ್ಳಲು ಮುಂದಾಗುತ್ತೇನೆ.
ದೂರ ನಿಲ್ಲು" ಈಗ ಶಶಿಯ ಧ್ವನಿ ಗಡುಸಾಗಿದೆ. ಕೋಪದಿಂದ ಕೂಡಿದಂತೆ ಕಠಿಣವಾಗಿದೆ.
ಯಾಕೋ ಶಶಿ. ನಾನೇನು ಮಾಡಲಿ? ಬಾವಿಯಲ್ಲಿ ತೇಲುತ್ತಿದ್ದ ಹೆಣ ನಿನ್ನದೇ ಅಂತ ರುಜುವಾತಾಗುವಷ್ಟು ದಾಖಲೆ ಸಿಕ್ಕಿದುವಲ್ಲ."
ಸುಳ್ಳು. ಸರಸರಾಂತ ನೀನೇ ಹೆಣ ನನ್ನದು ಅಂತ ತೀರ್ಮಾನ ಮಾಡಿ ನನ್ನನ್ನು ಸಾಯಿಸಿಬಿಟ್ಟೆ."
ಏನು ಮಾತಾಡ್ತೀಯೋ ಶಶಿ. ನಿನ್ನ ನಾನು ಸಾಯಿಸಿದ್ದೇನೆ?"
ಬರೀ ಸಾಯಿಸೋದಲ್ಲ. ಈಗ ನನ್ನ ಕೋಪ ಹೋಗಿದೆ. ಈಗ ಹೋದರೆ ಸತ್ತವನು ನೀನು ಎಂದು ಫ್ಯಾಕ್ಟರಿಯೋರು ಓಡಿಸುತ್ತಾರೆ. ನನಗೆ ಈಗ ಕೆಲಸವಿಲ್ಲ. ಬದುಕೋದು ಹೇಗೆ?"
 “ನೀನು ಕೆಲಸಕ್ಕೆ ಹೋಗೋದು ಯಾಕೋ?"
ಈಗ ಬೂಟಾಟಿಕೆ ಮಾತಾಡ್ತೀಯ. ನಾನು ಸತ್ತೇಂತ ಎಲ್ಲರಿಗೂ ತಿಳಿಸಿ. ನಾನು ಬಂದರೂ ನಂಬದೆ ಇರೋ ಹಾಗೆ ಮಾಡಿ ಈಗ ಎಂತಹ ಬೆಣ್ಣೇಲಿ ಕೂದಲು ತೆಗೆಯೋ ಮಾತಾಡ್ತಿದ್ದೀಯ! ಹ್ಞೂ" ಎಂದು ಹೂಂಕರಿಸಿ ಮುಂದೆ ಬರುತ್ತಾನೆ ಶಶಿ.
ಏನು ಮಾತೂಂತ ಆಡ್ತೀಯೋ ಶಶಿ. ನಿನ್ನ ಸಾಯಿಸೋದರಿಂದ ನನಗೆ ಬರೋ ಲಾಭವೇನು. ಇದ್ಯಾಕೆ ಹೀಗೆ ಮಾತಾಡಿ ನನ್ನ ಕೊಲ್ತೀಯಾ?"
ಕೊಲ್ಲದೇ! ನನ್ನ ಸಾಯಿಸೋದರಿಂದ ನಿನಗೆ ಲಾಭವಿಲ್ಲವಾ? ನನ್ನ ಪ್ರಾವಿಡೆಂಟ್ ಫಂಡ್ ದುಡ್ಡು. ಇನ್ಶೂರೆನ್ಸ್ ದುಡ್ಡು ಇವನ್ನೆಲ್ಲ ಲಪಟಾಯಿಸೋಕ್ಕೆ. ಎರಡುದಿನ ನಾನು ಕಾಣಿಸಲಿಲ್ಲಾಂತ, ಸತ್ತೇ ಹೋದೆ ಅಂತ ಸುದ್ದೀನ ಎಲ್ಲ ಕಡೆ ಹರಡಿಬಿಟ್ಟಿದ್ದೀಯಾ. ಬದ್ಮಾಷ್ ನೀನು, ಅಣ್ಣ ಅಲ್ಲ."
ಅವನ ಮಾತನ್ನು ಜೋರಾಗಿ ಪ್ರತಿಭಟಿಸಬೇಕು. ಅಂತ ಕಿರುಚಲು ಪ್ರಯತ್ನಿಸುತ್ತೇನೆ. ಅವನು ಅದಕ್ಕೆ ಅವಕಾಶ ಕೊಡದೆ ನನ್ನ ಗಂಟಲನ್ನು ಹಿಡಿದುಬಿಡುತ್ತಾನೆ. ಉಸಿರು ಕಟ್ಟಿದಂತಾಗುತ್ತದೆ, ಅವನ ಕೈಗಳನ್ನು ದೂರ ಸರಿಸಲು ಪ್ರಯತ್ನಿಸುತ್ತೇನೆ. ಎಂಥ ಕಪಿಮುಷ್ಠಿ ಅವನದು! ಕೈಗಳೋ ಕಬ್ಬಿಣದಷ್ಟು ಗಟ್ಟಿಯಾಗಿವೆ. ಕ್ಷಣಕ್ಷಣಕ್ಕೂ ಅವನ ಹಿಡಿತ ಜೋರಾಗುತ್ತಿದೆ. ಕಣ್ಣುಗಳು ದೃಷ್ಟಿ ಕಳೆದುಕೊಳ್ಳಲು ತೊಡಗಿವೆಯೇನೋ ಎಂಬ ಅನಿಸಿಕೆ. ಶಶಿ ಯಾಕೆ ಹೀಗಾಗಿ ಬಿಟ್ಟ. ನಾನು ಮಾಡಿದ್ದಾದರೂ ಏನು? ಈಗ ಅವನು ಬದುಕಿ ನಾನು ಸಾಯುವಂತಾಗುತ್ತಿದೆಯೇನೋ ಅವನು ಜೊತೆಯಲ್ಲಿರೋವರೆಗೂ ಹೇಗೆ ನೋಡಿಕೊಂಡೆ. ನನ್ನ ಸ್ವಂತ ಸುಖ, ಸಂಸಾರದ ಶಾಂತಿ ಇವನ್ನೆಲ್ಲ ಬಲಿಕೊಟ್ಟು ಅವನನ್ನು ಸುಖವಾಗಿಡಲು ಪ್ರಯತ್ನಿಸಿದೆ. ಆದರೆ ಈಗ ನನ್ನ ಮೇಲೆ ಇವನು ಹೊರಿಸುತ್ತಿರುವ ಆರೋಪವೆಂಥದು. ನಾನೇ ಅವನನ್ನು ಸಾಯಿಸಿಬಿಟ್ಟನಂತೆ, ಹಾಗಾದರೆ ಅವನು ಯಾಕೆ ಮನೇಬಿಟ್ಟು ಹೋಗಿಬೇಕಾಗಿತ್ತು. ಬೇಗ ಬಂದಿದ್ದರೆ ಸಮಸ್ಯೆಯಿರುತ್ತಿರಲಿಲ್ಲವಲ್ಲ. ಈಗ ಅವನು ಒಪ್ಪಿ ಬಂದರೂ ಅವನನ್ನು ಜೊತೆಯಲ್ಲಿರಿಸಿಕೊಳ್ಳುವುದು ಹೇಗೆ? ರಾಕ್ಷಸನಾಗಿ ಬಿಟ್ಟಿದ್ದಾನೆ. ಜೊತೆಗಿದ್ದರೆ ನಮ್ಮಗಳ ರಕ್ತವನ್ನೇ ಹೀರಿಬಿಡ್ತಾನೆ. ಅವನು ಹೋದ ಅಂತ ದುಃಖವಿತ್ತು. ಆದರೆ ಈಗಿನ ಇವನ ಆಟಾಟೋಪ ನೋಡಿದರೆ ಇವನು ಯಾಕೆ ಬದುಕಿದ್ದಾನೆ ಅನ್ನಿಸತ್ತೆ. ಅಯ್ಯೋ, ನಿಜವಾಗಿ ಇವನು ಸತ್ತೇಹೋಗಿದ್ದರೆ ಚೆನ್ನಾಗಿತ್ತು. ನನ್ನೇ ಬಲಿ ತಗೋಳಕ್ಕೆ ಬಂದಿದ್ದಾನಲ್ಲ ಇವನು. ನಾನು ಸತ್ತರೆ ರಮಳನ್ನು, ಮಕ್ಕಳನ್ನು ಹೇಗೆ ಗೋಳಾಡಿಸ್ತಾನೋ ಇವನು. ಇಲ್ಲ, ಇವನನ್ನು ಸುಮ್ಮನೆ ಬಿಡಬಾರದು. ನಾನೇ ಕೊಂದು ಬಿಡಬೇಕು. ಅದಕ್ಕೆ ಮೊದಲು ಇವನ ಬಿಗಿ ಹಿಡಿತದಿಂದ ಹೇಗಾದರೂ ಬಿಡಿಸಿಕೋಬೇಕು ಎಂದು ಜಾಡಿಸಿ ಒದೆಯುತ್ತೇನೆ. ಕಬ್ಬಿಣಕ್ಕೆ ಒದ್ದಂತೆ ಕಾಲೆಲ್ಲ ನೋವು, ಅಸಾಧ್ಯ ನೋವು!
ಎಚ್ಚರವಾಗಿ ಕಣ್ಣು ಬಿಡುತ್ತೇನೆ. ಪೃಥ್ವಿಯ ಕಾಲು ನನ್ನ ಕೊರಳ ಮೇಲೆ ಬಿದ್ದಿದೆ. ಅದನ್ನು ದೂರ ಸರಿಸಿ ಯೋಚಿಸುತ್ತೇನೆ. ನಾನು ಕಂಡದ್ದು ಕನಸು ಎಂಬುದು ಗೊತ್ತಾಗುತ್ತದೆ. ನನ್ನ ಬಲಪಾದ ನೋಯುತ್ತಿದೆ ಕನಸಿನಲ್ಲಿ, ಒದ್ದದ್ದು ನಿಜ, ಮಂಚದ ತುದಿಗೆ ಒದ್ದಿದ್ದೇನೆ ಎಂಬ ಅರಿವಾಗುತ್ತದೆ. ಅಬ್ಬಾ, ಎಂಥ ಕನಸು! ಅಲ್ಲಿ ಶಶಿ ಹೇಗೆ ರಾಕ್ಷಸನಂತೆ ಕಾಣಿಸಿದ; ಈಗಲೂ ಎದೆ ಡವಗುಟ್ಟುತ್ತಿದೆ. ಮೈ ಬೆವರಿದೆ. ದುರ್ಮರಣಕ್ಕೆ ಒಳಗಾದವರು ದೆವ್ವಗಳಾಗಿ ಕಾಡುತ್ತಾರೆ ಎಂದು ಹೇಳುತ್ತಾರಲ್ಲ. ಅದು ರೀತಿಯಲ್ಲಿಯೇ ಇರಬಹುದೇ ಎಂಬ ವಿಚಾರಕ್ಕೆ ಒಳಗಾಗುತ್ತೇನೆ ಎಷ್ಟು ಪ್ರಯತ್ನಪಟ್ಟರೂ ನಿದ್ದೆ ಬಾರದಾಗುತ್ತದೆ.
******


No comments: