Saturday, 20 September 2014

ಶೋಧನೆ - 3

ಶೋಧನೆ - 3

ಬರೋದು ಎಷ್ಟು ಹೊತ್ತಾಗುತ್ತೋ, ಆದ್ದರಿಂದ ಊಟಮಾಡಿಕೊಂಡೇ ಹೋಗೋಣ ಅಂತ ಪ್ರಭಾಕರರಾವ್ ನಿನ್ನೆಯೇ ಹೇಳಿದ್ದರು; ಅದೂ ನಿಜವೇ ಅನ್ನಿಸಿತ್ತು. ನನ್ನ ಜೊತೆಯಲ್ಲಿ ಅವರೂ ಒಣಗುವ ಹಾಗೆ ಆಗಬಾರದಲ್ಲ. ಆದ್ದರಿಂದಲೇ ಸುಮಾರು ಹತ್ತುಗಂಟೆಯ ಹೊತ್ತಿಗೆ ಸಿದ್ಧವಾಗಿರ್ತೀನಿ, ಬನ್ನಿ ಅಂತ ಹೇಳಿದ್ದುದು. ಅಷ್ಟರೊಳಗೆ ಲಾಂಡ್ರೀಗೂ ಟೈಲರಿಂಗ್ ಶಾಪಿಗೂ ಹೋಗಿಬಿಟ್ಟು ಬರೋಣ ಅಂದುಕೊಂಡೆ; ಅದಕ್ಕೂ ಪ್ರಭಾಕರರಾವ್ ಜೊತೆಗೇಕೆಬೇಕು, ಅಲ್ಲದೆ ಈಗ ಹೇಗಿದ್ದರೂ ಹತ್ತು ಗಂಟೇವರೆಗೆ ಕೆಲಸವಿಲ್ಲವಲ್ಲ ಅಂದುಕೊಂಡೆ. ಶರ್ಟಿನ ಮೇಲಿದ್ದ ಲೇಬಲ್ಲಿನ ಗುರುತನ್ನು ಬರೆದುಕೊಂಡಿದ್ದೆ, ಹಾಗೆಯೇ ಲಾಂಡ್ರಿಯ ಗುರುತನ್ನೂ.
ಎಂಟುಗಂಟೆಗೇ ಹೊರಟೆ. “ಬೇಗ ಬಂದ್ಬಿಡ್ತೀನಿ ಊಟ ಮಾಡಿಕೊಂಡು ಹೋಗ್ತೀನಿ, ಅಡಿಗೆ ಮಾಡಿಟ್ಟಿರು' ಅಂತ ರಮಂಗೆ ಹೇಳಿದೆ. ಅವಳಿಗೆ ಶಶಿಯ ವಿಚಾರ ತಲಾಷ್ ಮಾಡೋದಕ್ಕೆ ನಾನು ಓಡಾಡ್ತಿದ್ದೀನಿ ಅಂತ ಅಷ್ಟೇ ಗೊತ್ತು. ಪೇಪರಿನ ಸುದ್ದಿಯನ್ನಾಗಲೀ, ನಿನ್ನೆ ಪೋಲೀಸ್ ಕಮಿಷನರ್ ಆಫೀಸಿನಲ್ಲಿ ಗೊತ್ತಾದ ವಿಚಾರವಾಗಲೀ ಅವಳಿಗೆ ತಿಳಿದಿರಲಿಲ್ಲ. ಎಲ್ಲವೂ ಖಾತರಿ ಆಗೋದಕ್ಕೆ ಮುಂಚೆಯೇ ಯಾಕೆ ಸುದ್ದಿ ತಿಳಿಸಬೇಕು ಅಂತ ನಾನೂ ಪ್ರಭಾಕರರಾವ್ ಯೋಚನೆ ಮಾಡಿದ್ದೆವು. ಅವಳೂ ಹೆಚ್ಚು ಕೆದಕಿರಲಿಲ್ಲ. ಸ್ವಲ್ಪ ಕೇಳಿದಾಗ ನಾನು ಮೌನವಾಗಿದ್ದನ್ನು ಕಂಡು ಹೆಚ್ಚು ಚುಚ್ಚಿ ಕೇಳಿದರೆ ರೇಗಿಯಾನೆಂಬ ಅಳುಕು ಇದ್ದಂತೆ ಕಾಣುತ್ತದೆ. ನಾನು ಸೈಕಲ್ ಹತ್ತಿ ಹೊರಟೆ.
ಲಾಂಡ್ರಿ ಎಲ್ಲಿತ್ತೂಂತ ಗೊತ್ತಿತ್ತು. ದೂರವೇನಲ್ಲ, ನಮ್ಮ ಮನೆಯಿರುವ ಬೀದಿಯ ಹಿಂದಿನದಲ್ಲ ಅದರ ಹಿಂದಿನ ಬೀದಿಯಲ್ಲಿತ್ತು. ನಾನು ಅದನ್ನು ನೋಡಿದ್ದೇನೆ. ಇಷ್ಟು ಹೊತ್ತಿಗೇ ಅಂಗಡಿ ತೆಗೆದಿರುತ್ತೋ ಇಲ್ಲವೋ ಅಂದುಕೊಂಡೇ ಬಂದೆ. ಆದರೆ ಲಾಂಡ್ರಿ ತೆಗೆದಿತ್ತು. ನಾನು ನಿನ್ನೆಯೇ ಅಂದುಕೊಂಡ ಹಾಗೆ ಅದುಪದ್ಮಾ ಲಾಂಡ್ರಿ.' ಅಲ್ಲಿ ಹೆಂಗಸೊಬ್ಬಳಿದ್ದಳು. ಅವಳನ್ನು ಏನೂಂತ ಕೇಳುವುದು? ಬರಿಯ ಲಾಂಡ್ರಿಯ ಇನಿಶಿಯಲ್ ಯಾವುದು ಅಂತ ಕೇಳುವುದೇ? ಹೀಗೆ ಕೇಳಿದರೆ ಅವಳಿಗೆ ಭಯವಾಗಿ ಹೇಳದೇ ಇದ್ದರೆ! ಅಂಥದ್ದೇನೂ ಆಗದೇ ಇರಬಹುದು. ಆದರೆ ನನಗೇ ಒಂದು ರೀತಿ ಸಂಕೋಚ. ಹತ್ತಿರ ಹೋಗಿಏನಮ್ಮ, ನನ್ನ ತಮ್ಮ - ಶಶಿಧರ ಅಂತ - ಬಟ್ಟೆ ಏನಾದರೂ ಕೊಟ್ಟಿದ್ದನಾ?" ಅಂದೆ ನನ್ನ ಉದ್ದೇಶವೆಂದರೆ ಹಾಗೆ ಕೇಳುತ್ತ ಅಲ್ಲೇ ಇರಬಹುದಾದ ಯಾವುದಾದರೂ ಬಟ್ಟೆಯನ್ನು ಸುಮ್ಮನೆ ಪರಿಶೀಲಿಸಿ ನೋಡಿ ಇನಿಶಿಯಲ್ ಬರೆದ ರೀತಿಯನ್ನು ನೋಡಿ ನೆನಪಿನಲ್ಲಿ ಇಟ್ಟುಕೊಳ್ಳುವುದು. ಸಶಿ ಬಟ್ಟೆಯನ್ನು ಒಗೆಯುವುದಕ್ಕೆ ಕೊಟ್ಟಿರಲಾರನೆಂದು ನನ್ನ ಅನಸಿಕೆಯಾಗಿತ್ತು. ಆದರೆ ನಾನು ಹಾಗೆ ಕೇಳಿದ್ದೇ ತಡ ಬಹಳ ನಿಸ್ಸಂದೇಹವಾಗಿಹೌದು ಸ್ವಾಮಿ, ಆಗಲೇ ಕೊಟ್ಟು ಒಂದು ವಾರ ಆಯ್ತು. ಯಾಕೆ ಸ್ವಾಮಿಯೋರು ತಗೊಂಡೇ ಓಗ್ಲಿಲ್ಲ? ಊರಲಿಲ್ಲವ್ರಾ?' ಎಂದು ಕೇಳಿದಾಗ ನನಗೆ ಗಾಬರಿಯೇ ಆಯಿತು. ಯಾರನ್ನಿವಳು ನನ್ನ ತಮ್ಮ ಎಂದು ತಿಳಿದಿದ್ದಾಳೋ ಅನಿಸಿನಾನು ಹೇಳ್ತಾ ಇರೋದು ಮುಂದಿನ ಬೀದಿ ಅಲ್ಲ, ಅದರ ಮುಂದಿನ ಬೀದೀಲಿ ಎಡಗಡೆ ನಾಲ್ಕನೇ ಮನೇಲಿರೋರ ವಿಷಯ..." ಎಂದೆ ಅನುಮಾನದಿಂದ, “ಗೊತ್ತು ಬಿಡಿ ಸ್ವಾಮಿ" ಅಂದಳು. ಒಳಗೆ ಹೋಗಿ ಪ್ಯಾಂಟೊಂದು-ಶರ್ಟೊಂದನ್ನು-ಇಸ್ತ್ರಿ ಮಾಡಿಟ್ಟಿತ್ತು-ತಂದು ಕೊಟ್ಟಳು. ನನಗೆ ಗುರುತು ನೋಡೋ ಅವಸರ, ಜೊತೆಗೆ ಬಟ್ಟೆಗಳು ಶಶಿಯವೇ ಅಲ್ಲವೇ ಅಂತ ನೋಡೋದಕ್ಕಾಗಿ. ಶರ್ಟ್ ಮಡಿಕೆ ಬಿಚ್ಚಿ ಹಿಡಿದು ನೋಡಿದೆ. ಅಳತೆ ಅವನದೇ ಶರ್ಟ್ ಅಂತ ಹೇಳ್ತಿತ್ತು. “, ಮಡಿಕೆ ಬಿಚ್ಚಿದಿರಾ?" ಅಂದಳು. “ಅವಂದೋ ಅಲ್ಲವೋ ಅಂತ ನೋಡಕ್ಕೆ" ಅಂದೆ. “ಅವರದ್ದೇ ಸ್ವಾಮೀ ನಂಗೊತ್ತಿಲ್ಲವಾ? ನಿಮ್ಮ ಮನೆಯೋರೆಲ್ಲ ಗೊತ್ತು ಬಿಡಿ" ಅಂದು ಶರ್ಟನ್ನು ಮತ್ತೆ ತಗೊಂಡು ಮಡಿಸಿಕೊಟ್ಟಳು; ದುಡ್ಡು ಕೊಟ್ಟು ಬಂದೆ.
ಸೈಕಲ್ ಕ್ಯಾರಿಯರ್ಗೆ ಬಟ್ಟೆಗಳನ್ನು ಸಿಕ್ಕಿಸಿ ಟೈಲರ್ಶಾಪ್ ಕಡೆ ನಿಧಾನವಾಗಿ ನಡೆದೆ. ಶಾಪ್ ಯಾವ ಬೀದಿಯಲ್ಲಿದೆ ಅಂತ ಕೇಳಿದ್ದೆ. ಶಶಿ ಯಾವಾಗಲೂ ಬಟ್ಟೆ ಹೊಲಿಸೋ ಅಂಗಡಿ ಇಂಥ ಕಡೆ ಇದೇಂತ ನಾನು ಕೇಳಿದ್ದೆ. ಆದರೆ ನನ್ನ ಟೈಲರ್ ಬೇರೆ. ಆದ್ದರಿಂದ ಅವನ ಹತ್ತಿರ ಹೋಗೋ ಪ್ರಮೇಯ ಬಂದಿರಲಿಲ್ಲ. ಶಾಪಿನ ಹೆಸರು ತಿಳಿದಿತ್ತಲ್ಲ. ಹುಡುಕೋಣವೆಂದುಕೊಂಡು ಹೋದೆ. ಬರೋ ಹೊತ್ತಿಗೆ ಇನ್ನೂ ಅಂಗಡಿ ತೆಗೆದಿರಲಿಲ್ಲ. ಗಡಿಯಾರ ನೋಡಿಕೊಂಡೆ; ಇನ್ನೂ ಎಂಟೂ ಇಪ್ಪತ್ತೈದು. ಎಷ್ಟು ಹೊತ್ತಿಗೆ ತೆಗೀತಾನೋ ಅಂತ ಬೇಜಾರಾಯಿತು. ಅಂಗಡಿ ಬಾಗಿಲ ಹತ್ತಿರ ಒಂದು ಸಣ್ಣ ಬೋರ್ಡ್ ಹಾಕಿತ್ತು. ಬರೆದದ್ದೇನು ಅಂತ ದೂರದಿಂದ ಕಾಣ್ತಾ ಇರಲಿಲ್ಲ. ಹತ್ತಿರ ಹೋಗಿ ನೋಡಿದೆ. ಕೆಲಸದ ವೇಳೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1; ಸಾಯಂಕಾಲ 5 ರಿಂದ 9 ಗಂಟೆ ಅಂತ ಬರೆದಿತ್ತು. ಇನ್ನೂ ಮೂವತ್ತೈದು ನಿಮಿಷ ಕಾಯೋದು ಹೇಗೆ; ಒಂದು ಲೋಟ ಕಾಫಿ ಆದರೂ ಕುಡಿದುಬರೋಣ ಎಂದುಕೊಂಡು ಹತ್ತಿರವಿರ ಬಹುದಾದ ಹೋಟಲ್ ಕಡೆ ಹೊರಟೆ. ಕಾಲ ಕಳೆಯುವುದೇ ಸದ್ಯದ ಉದ್ದೇಶ ವಾದ್ದರಿಂದ ಸೈಕಲ್ ನೂಕಿಕೊಂಡೆ ಬೀದಿಯ ಕೊನೆಯಲ್ಲಿದ್ದ ಹೋಟಲೊಂದಕ್ಕೆ ಬಂದು ಕಾಫಿಗೆ ಆರ್ಡರ್ ಮಾಡಿದೆ. ಅವನೋ ದರಿದ್ರದವನು, ಹೇಳಿದ ಒಂದೇ ನಿಮಿಷಕ್ಕೆ ಕಾಫಿ ತಂದಿಟ್ಟ. ನಿಧಾನವಾಗಿ ಕುಡಿದರೂ ಐದೇ ನಿಮಿಷದಲ್ಲಿ ಕಾಫಿ ಕುಡಿದಾಗಿತ್ತು. ಸುಮ್ಮನೇ ಮೇಲೆ ನೋಡುತ್ತ ಕೂತೆ.
ಹಾಗೂ ಹೀಗೂ ಗಡಿಯಾರ ಒಂಬತ್ತು ತೋರಿಸುವವರೆಗೂ ಕೂತಿದ್ದು ಮೇಲೆದ್ದೆ. ಅಂಗಡಿಗಳೋರಿಗೆ ಹೇಳೋರು ಕೇಳೋರು ಯಾರು? ಹಾಕಿ ಕೊಂಡಿರೋ ಸಮಯಕ್ಕೆ ಬಾಗಿಲು ತೆಗೆದರೂ ಆಯಿತು, ಬಿಟ್ಟರೂ ಆಯಿತು. ಬೇಜಾರಾದರೆ ಒಂದು ದಿನ ಅಂಗಡಿಯನ್ನು ತೆಗೆಯದೇ ಇದ್ದರೂ ಕೇಳುವವ ರಾರು. ಮನುಷ್ಯ ಏನು ಮಾಡುತ್ತಾನೆಯೋ ಎಂದು ಗೊಣಗಿಕೊಂಡೇ ಅಂಗಡಿಯ ಹತ್ತಿರ ಬಂದಾಗ, ಬಾಗಿಲು ತೆಗೆದಿದ್ದದ್ದು ಕಾಣಿಸಿತು; ಸಧ್ಯ ಅಂದುಕೊಂಡೆ. ಅಂಗಡಿಗೆ ಬರುವಷ್ಟರಲ್ಲಿ ಅವನಾಗಲೇ ಬಾಗಿಲು ತೆಗೆದು ಸಾಕಷ್ಟು ಹೊತ್ತಾಗಿರುವವನಂತೆ ಸೆಟಲ್ ಆಗಿದ್ದ. ಅಂಗಡಿಯಲ್ಲೆಲ್ಲ ಹೊಸದಾಗಿ ಹಚ್ಚಿಟ್ಟಿದ್ದ ಊದುಕಡ್ಡಿಯ ವಾಸನೆ, ಫೋಟೋಕ್ಕೆ ಹಾಕಿದ್ದ ಹೊಸ ಹೂವಿನ ಪರಿಮಳ ಹರಡಿತ್ತು. ಇನ್ನೂ ಒಂದು ಹತ್ತು ನಿಮಿಷ ಮುಂಚೆಯೇ ಬರಬಹುದಾಗಿತ್ತೇನೋ ಅಂದುಕೊಂಡೆ.
 “ನಮಸ್ಕಾರ" ಅಂದೆ. “ನಮಸ್ಕಾರ ಸಾರ್, ಬನ್ನಿ."
ಒಂದು ವಿಷಯ ತಿಳಿಕೋಬೇಕಾಗಿತ್ತು. ನಿಮ್ಮ ಹತ್ತಿರ" ಅಂದೆ.
ಯಾವ ಡಿಪಾರ್ಟ್ಮೆಂಟಿನೋರು ಸಾರ್, ತಾವು?" ಅಂದ ಭಯಭಕ್ತಿಯಿಂದ.
ನಾನು ಯಾವ ಡಿಪಾರ್ಟ್ಮೆಂಟಿನಿಂದಲೂ ಬಂದಿಲ್ಲ. ನನ್ನ ತಮ್ಮ ಶಶಿಧರ ಅಂತ, ನಿಮ್ಮ ಹತ್ತಿರಾನೇ ಬಟ್ಟೆ ಹೊಲಿಸ್ತಾ ಇದ್ದನಂತೆ...." ಎಂದೆ.

ಯಾವ ಶಶಿಧರ ಸಾರ್, ಅದೇ ಗುಂಗುರು ಕೂದಲು ಸ್ವಲ್ಪ ಬೆಳ್ಳಗೆ."
ಹೌದು, ಅದೇ ಕಡೆ ಹೋದರೆ, ದೇವಸ್ಥಾನದ ಹತ್ತಿರವೇ ನಮ್ಮ ಮನೆ."
ಸರಿ ಸಾರ್, ಏನು ವಿಷಯ, ಅವರೆಲ್ಲಿ ಹೋದರು ಸಾರ್?"
ಎಲ್ಲೂ ಹೋಗಿಲ್ಲ. ಅವನು ಸ್ವಲ್ಪ ಕಾಲದ ಮುಂಚೆ ನಿಮ್ಮ ಹತ್ತಿರ ಶರ್ಟ್ ಏನಾದ್ರೂ ಹೊಲಿಸಿದ್ದನೇನು?" ಎಂದೆ ಸ್ವಲ್ಪ ಅಸಹನೆಯಿಂದ.
ಏನೂ ಕೊಟ್ಟಿರಲಿಲ್ಲವಲ್ಲ ಸಾರ್."
ತೀರ ಈಚೆಗೆ ಅಲ್ರೀ. ಈಗೊಂದು ತಿಂಗಳೋ ಎರಡು ತಿಂಗಳೋ ಹಿಂದೆ ಶರ್ಟ್ ಹೊಲಿಯಕ್ಕೆ ಹಾಕಿದ್ದನಾ?"
ಏನು ಸಮಾಚಾರ ಸಾರ್?" ಎಂದ. ಅವನ ಮಾತಿನ ಧಾಟಿಯಲ್ಲಿ ಕುಚೋದ್ಯವೇನಾದರೂ ಇದೆಯೇ ಎಂಬ ಅನುಮಾನ ಬಂದು ಅವನ ಕಡೆ ನೋಡಿದೆ. ಏನೋ ಅವನು ಅರ್ಥವಾಗುವಂತೆ ಕಾಣಲಿಲ್ಲ.
ಯಾವುದಕ್ಕೋ ಬೇಕಾಗಿತ್ತು. ಸ್ವಲ್ಪ ನಿಮ್ಮ ಪುಸ್ತಕ ತೆಗೆದು ನೋಡಿ ಹೇಳಿ" ಎಂದೆ. ನನ್ನ ಧ್ವನಿಯಲ್ಲಿ ನನಗೇ ಅಷ್ಟು ಪರಿಚಿತವಲ್ಲದ ಅಧಿಕಾರವಾಣಿಯಿತ್ತು, ದರ್ಪವಿತ್ತು. ಅಂಗಡಿ ದೊಡ್ಡದೇನಲ್ಲ. ಇವನೊಬ್ಬನೇ ಟೈಲರ್ ಅಂತ ಕಾಣಿಸುತ್ತೆ. ಒಂದೇ ಮೆಶಿನ್ ಇತ್ತು. ಜೊತೆಗೆ ಒಬ್ಬ ಹುಡುಗ ಸಹಾಯಕ್ಕಿದ್ದ. ಅವನು ಹೊಲಿಗೆಗೆ ಬಟ್ಟೆಗಳನ್ನು ತೆಗೆದುಕೊಳ್ಳುವಾಗ ರಸೀತಿ ಪುಸ್ತಕದಲ್ಲಿ ಬರೆಯದೆ ಒಂದು ರಿಜಿಸ್ಟರಿನಲ್ಲಿ ಬರೆಯುತ್ತಿದ್ದುದು ಅವನು ಟೇಬಲ್ ಮೇಲೆ ಇಟ್ಟುಕೊಂಡಿದ್ದ ಪುಸ್ತಕವೇ ಸೂಚಿಸುತ್ತಿತ್ತು. ನನ್ನ ಮಾತು ಕೇಳಿ ವಿಧೇಯನಾಗಿ ಟೈಲರ್ ಪುಸ್ತಕದ ಹಾಳೆಗಳನ್ನು ತೆಗೆದು ಒಂದೊಂದಾಗಿ ಹೆಸರುಗಳನ್ನು ನೋಡುತ್ತ ಹೋದ. ನಾನೂ ಸ್ವಲ್ಪ ವಾರೆಯಾಗಿ ಕತ್ತು ಬಗ್ಗಿಸಿ ಶಶಿಯ ಹೆಸರಿಗಾಗಿ ರಿಜಿಸ್ಟರಿನ ಹಾಳೆಗಳ ಮೇಲೆ ಕಣ್ಣೋಡಿಸಿದೆ, ಕೊನೆಗೂ ಸಿಕ್ಕಿತು. ಈಗ್ಗೆ ಒಂದೂವರೆ ತಿಂಗಳ ಹಿಂದೆ ಒಂದು ಶರ್ಟ್ ಹೊಲಿಸಿದ್ದ. ಅವನ ಹೆಸರಿದ್ದ ಕಾಲಮ್ಮಿನಲ್ಲಿ ಶರ್ಟ್ ಬಟ್ಟೆಯ ಚೂರನ್ನು ಸ್ಟೇಪ್ಲರ್‍ನಿಂದ ಸೇರಿಸಲಾಗಿತ್ತು. ಕಮೀಷನರ್ ಆಫೀಸಿನಲ್ಲಿ ನಾನು ಕಂಡಿದ್ದ ಶರ್ಟ್ ಹೊಸದಿದ್ದ ಹಾಗೆ ಕಂಡಿತ್ತಲ್ಲ. ಅದೇ ಇರಬೇಕು ಇದು. ಬಣ್ಣವೂ ಅದೇ ಎಂದು ಕಾಣುತ್ತದೆ. ಸರಿಯಾಗಿ ನೆನಪಿಲ್ಲ. “ ಬಟ್ಟೆ ಚೂರು ಕೊಡಿ" ಎಂದೆ. ಅವನು ಪಿನ್ ನಿಧಾನವಾಗಿ ತೆಗೆದು ಅದನ್ನು ಕೊಟ್ಟ, “ಥ್ಯಾಂಕ್ಸ್" ಎಂದು ಹೊರಡಲನುವಾದೆ, ಅವನು ಯಾವುದೋ ಭಯ ಅನುಮಾನಗಳಿಂದ ನೋಡಿದ. ನಾನದನ್ನು ಗಮನಿಸದವನಂತೆ ಸೈಕಲ್ ಹತ್ತಿದೆ.
ಸರಸರ ಒಂದಷ್ಟು ಊಟದ ಶಾಸ್ತ್ರ ಮುಗಿಸಿ ಬಟ್ಟೆ ಧರಿಸಿ ರೆಡಿಯಾಗಿ ನಿಂತೆ. ಇವತ್ತೂ ನನ್ನ ಜೊತೆಯಲ್ಲಿ ಬನ್ನಿ ಅಂತ ಪ್ರಭಾಕರರಾಯರಿಗೆ ಹೇಗೆ ಹೇಳೋದು ಎಂಬ ಯೋಚನೆ ನಿನ್ನೆಯೇ, ಪೋಲೀಸರನ್ನು ವಿಚಾರಿಸಿ ವಾಪಸಾಗುವಾಗ ನನ್ನ ಮನಸ್ಸನ್ನು ಕಾಡುತ್ತಿತ್ತು. ಯಾಕೋ ನಾನೊಬ್ಬನೇ ವಿಚಾರವನ್ನು ತೃಪ್ತಿಕರವಾಗಿ ನಿಭಾಯಿಸಬಲ್ಲೆ ಎಂಬ ಧೈರ್ಯ ನನಗಿರಲಿಲ್ಲ. ಎಷ್ಟಾದರೂ ಶಶಿಯ ವಿಚಾರ, ಅದೂ ಅವನ ಸಾವಿಗೆ ಸಂಬಂಸಿದ್ದು. ನಾನು ನಿರ್ವಿಕಾರವಾಗಿ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲು ಸಾಧ್ಯವಿಲ್ಲ, ಯಾವ ಯಾವ ವಿಷಯ ಕೇಳಿ ತಿಳಿದುಕೊಳ್ಳಬೇಕು ಎಂಬ ಸಮಚಿತ್ತವಿರಲಿಕ್ಕೆ ಸಾಧ್ಯವಿಲ್ಲ ಅನ್ನಿಸಿತ್ತು. ಆದರೆ ಎರಡನೆಯ ದಿನವೂ ಪ್ರಭಾಕರರಾಯರಿಗೆ ರಜಹಾಕಿ ಅಂತ ಹೇಗೆ ಹೇಳುವುದು? ಆದರೆ ಅವರೇನಾಳೆ ಹತ್ತಕ್ಕೆ ಹೊರಡೋಣ"ವೆಂದು ನನ್ನ ಸಮಸ್ಯೆ ಪರಿಹಾರ ಮಾಡಿದ್ದರು. “ನಂಗೋಸ್ಕರ ನೀವು ಎರಡು ದಿನ ರಜ ಹಾಳುಮಾಡಿಕೊಳ್ಳಬೇಕಾಯಿತಲ್ಲ" ಎಂದಿದ್ದೆ. “ರಜದ ಮನೆ ಹಾಳಾಯ್ತು. ಅದಿರೋದೇ ಅಂಥ ಕೆಲಸಕ್ಕೆ. ಶಶಿ ನಂಗೆ ತಿಳೀದ ಹುಡುಗನೇ. ಒಬ್ಬರ ಕಷ್ಟದಲ್ಲಿ ಆಗದಿದ್ದರೆ ಏನು ಬಂದಂತಾಯಿತು" ಎಂದು ಸಮಾಧಾನ ಮಾಡಿದ್ದರು. ಪಾಪ, ಆತ ತುಂಬ ಒಳ್ಳೆಯ ಮನುಷ್ಯ ಅಂದುಕೊಂಡೆ.
ಪೋಲೀಸ್ ಕಮೀಷನರ್ ಆಫೀಸು ತಲುಪಿ ಸಂಬಂಧಪಟ್ಟ ಇನ್ಸ್ಪೆಕ್ಟರ್ ಹತ್ತಿರ ಬಂದು ನಮಸ್ಕಾರ ಮಾಡಿದೆವು. “ಏನು ಸಮಾಚಾರ?" ಅಂದರು. ನಾನು ಜೇಬಲ್ಲಿ ಇಟ್ಟುಕೊಂಡು ಬಂದಿದ್ದ ಟೈಲರ್ ಶಾಪಿನಿಂದ ತಂದ ಬಟ್ಟೆಯ ಚೂರನ್ನು ಹೊರ ತೆಗೆದು ಟೇಬಲ್ ಮೇಲಿಟ್ಟು ವಿಚಾರ ಹೇಳಿದೆ. ಇನ್ಸ್ಪೆಕ್ಟರ್ ಒಳಗಿನಿಂದ ಬಟ್ಟೆಗಳನ್ನು ತರಿಸಿದರು. ಶರ್ಟ್ ಬಣ್ಣ, ಬಟ್ಟೆ ಚೂರಿನ ಬಣ್ಣ ಒಂದೇ ಆಗಿತ್ತು. ಆದರೆ ಶರ್ಟಿನ ಬಣ್ಣ ಸ್ವಲ್ಪವೇ ಮಾಸಲಾಗಿತ್ತು. ಹಾಗಾದರೆ ಬಟ್ಟೆಗಳು ಅವನವೇ ಅಂತ ತೀರ್ಮಾನಿಸಬೇಕು. “ನಿಮ್ಮ ತಮ್ಮನೇ ಇರಬೇಕು, ಬಿಡಿ. ಇನ್ನಾವುದೂ ಕ್ಲೈೀಮ್ಸ್ ಬಂದಿಲ್ಲ" ಅಂದರು ಇನ್ಸ್ಪೆಕ್ಟರು. ಪ್ರಭಾಕರರಾಯರು ಬಟ್ಟೆ ಚೂರು ಶರ್ಟುಗಳನ್ನು ಹತ್ತಿರವಿಟ್ಟು ಪರೀಕ್ಷೆ ಮಾಡಿದರು; ನಿಟ್ಟುಸಿರು ಬಿಟ್ಟರು. ನನ್ನ ಬಾಯಿಂದಲೂ ನಿಟ್ಟುಸಿರು ಬಂತು. ಶಶಿಯ ಪ್ಯಾಂಟಿನ ಜೇಬಲ್ಲಿ ಕೆಲವು ಚಿಲ್ಲರೆ ನಾಣ್ಯಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲವಂತೆ. ಯಾವುದೇ ಕುರುಹು ಸಿಕ್ಕಲಿಲ್ಲ; ಬಾಡಿ ಬೇರೆ ಆಗಲೇ ಡೀಕಂಪೋಸ್ ಆಗಲು ತೊಡಗಿತ್ತು. ನಾವೇ ಬಾರದಿದ್ದರೆ ಅವನ ವಿಚಾರ ತಿಳಿಯುತ್ತಲೇ ಇರಲಿಲ್ಲವೇನೋ ಅನ್ನಿಸಿತು. ಪೇಪರಿನ ಸುದ್ದಿ ಓದದೇ ಇದ್ದಿದ್ದರೆ, ಶಶಿ ಎಲ್ಲೋ ಹೋಗಿದ್ದಾನೆ ಅಂತ ತಿಳಿಕೊಂಡೇ ಕಾಲ ಸವೆಸಬೇಕಾಗಿತ್ತು. ಅಂತೂ ಇದು ಅವನದೇ ದೇಹ, ಹಾಗಾದರೆ ಎಂದು ತೀರ್ಮಾನಿಸದೆ ವಿಧಿ ಇರಲಿಲ್ಲ.
ಸ್ವಲ್ಪ ಹೊತ್ತಾದ ಮೇಲೆ ಇನ್ಸ್ಪೆಕ್ಟರ್ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿದೆ" ಅಂದರು. ನಂಗೆ ಕುತೂಹಲ ಆಯಿತು, ಕತ್ತು ಮುಂದೆ ಚಾಚಿದೆ. ಅವರು ಫೈಲನ್ನು ನಮ್ಮ ಮುಂದೆ ತಳ್ಳಿದರು. ತಲೆ ನೇರವಾಗಿ ಪೆಟ್ಟು ಬಿದ್ದು ಸಾವುಂಟಾಗಿದೆ ಎಂದು ಅಲ್ಲಿ ಬರೆಯಲಾಗಿತ್ತು. ಹೊಟ್ಟೆಯಲ್ಲಿ ವಂಡು ನೀರಿತ್ತಂತೆ. ಪ್ರಾಯಶಃ ಬಾವಿಯಲ್ಲಿ ಡೈವ್ ಮಾಡುವಾಗ ನೇರವಾಗಿ ಹೆಚ್ಚು ಆಳವಿಲ್ಲದ ಬಾವಿಯ ತಳಕ್ಕೆ ಹೋಗಿ ಅಲ್ಲಿರಬಹುದಾದ ಕಲ್ಲಿಗೆ ತಲೆ ತಾಕಿದೆ; ತಳ ತಾಕಿದ್ದರಿಂದ ನೀರು ವಂಡಾಗಿ ಅದನ್ನು ಕುಡಿದಿರಬೇಕು ಎಂದು ತೀರ್ಮಾನಿಸಲಾಗಿತ್ತು. ಹೊಟ್ಟೆಯಲ್ಲಿ ಜೀರ್ಣವಾಗದ ಸ್ವಲ್ಪ ಆಹಾರಾಂಶಗಳೂ ಇತ್ತು ಎಂದಿದ್ದರು. ಕೊನೆಯಲ್ಲಿದೇರ್ ಈಸ್ ನೋ ಅಟಾಪ್ಸಿಕಲ್ ಎವಿಡೆನ್ಸ್ ಟು ಸಸ್ಪೆಕ್ಟ್ ಫೌಲ್ ಪ್ಲೇ" ಎಂದು ಬರೆದು ಡಾಕ್ಟರು ಸಹಿ ಹಾಕಿದ್ದರು. ವಾಕ್ಯವನ್ನು ಓದಿದ ಮೇಲೆ ನಿಟ್ಟುಸಿರು ಬಂತು.
ಕಂಗ್ರಾಜುಲೇಶನ್ಸ್ ರಿಪೋರ್ಟ್ ತುಂಬ ಕ್ಲಿಯರ್ರಾಗಿದೆ. ಅವರೇನಾದರೂ ಕೊಕ್ಕೆ ಹಾಕಿದ್ರೆ ನಿಮಗೆ ಕಷ್ಟವಾಗೋದು" ಎಂದು ಇನ್ಸ್ಪೆಕ್ಟರು ಕೈಚಾಚಿದರು. ಯಾಂತ್ರಿಕವಾಗಿ ನನ್ನ ಕೈ ಅವರದನ್ನು ಹಿಡಿಯಿತು. ಆದರೆ ಯಾತಕ್ಕೆ ಇನ್ಸ್ಪೆಕ್ಟರು ನನ್ನ ಕಂಗ್ರಾಜುಲೇಟ್ ಮಾಡಿದ್ದು. ಶಶಿಧರ, ಸತ್ತದ್ದಕ್ಕೋ, ಅವನಿಂದ ನನಗೆ ಯಾವ ತೊಂದರೆಯೂ ಆಗದಂತೆ ಪ್ರಾಣ ಬಿಟ್ಟಿದ್ದಕ್ಕೋ? ಕಣ್ಣು ಮಂಜಾಯಿತು. ಹಾಳು ಹುಡುಗ ಏನೋ ಮಾಡಿಕೊಂಡನಲ್ಲ. ನಾನೇ ಅದಕ್ಕೆ ಕಾರಣವೇನೋ! ತಲೆ ತಗ್ಗಿಸಿದ್ದನ್ನು ಮೇಲಕ್ಕೆತ್ತಿ ಇನ್ಸ್ಪೆಕ್ಟರಿಗೆ ತೋರಿಸುವ ಧೈರ್ಯ ಉಂಟಾಗಲಿಲ್ಲ. ಪ್ರಭಾಕರರಾಯರು ನನ್ನ ಬೆನ್ನು ನೇವರಿಸುತ್ತಿದ್ದರು. ಇನ್ಸ್ಪೆಕ್ಟರುನಿಮ್ಮ ದುಃಖ| ನನಗೆ ಅರ್ಥವಾಗತ್ತೆ. ತಮ್ಮನನ್ನು ಕಳಕೊಳ್ಳೋದೂಂದ್ರೆ ಸಾಮಾನ್ಯವೆ?" ಅಂದರು. ತಮ್ಮನನ್ನು ನಾನು ಕಳಕೊಂಡನೋ ಅಥವಾ ನಾನೇ ಕಳೆದೆನೋ ಅನ್ನಿಸಿತು.
ಈಗ ಸಮಾಧಾನ ತಂದುಕೊಳ್ಳಲೇಬೇಕು ನೀವು. ಪೋಸ್ಟ್ ಮಾರ್ಟಂ ವರದಿಯಲ್ಲೇನಾದರೂ ಸಂಶಯದ ಅಂಶಗಳು ಇದ್ದಿದ್ದರೆ ನಿಮ್ಮ ಪರಿಸ್ಥಿತಿ ಎಷ್ಟು ಕಷ್ಟ ಆಗೋದು" ಎಂದರು ಇನ್ಸ್ಪೆಕ್ಟರು.
ಸಾರ್, ನೀರಲ್ಲಿ ಬೀಳೋದಕ್ಕೂ ಎಪಿಲೆಪ್ಟಿಕ್ ಅಟ್ಯಾಕ್ ಆಗೋದಕ್ಕೆ ಕಾಕತಾಳ ಏನಾದರೂ ಆಗಿ, ಏಟು ಬಿದ್ದು ನೀರು ಕುಡಿದು ಹೋಗಿರಬಹುದಲ್ಲವೇ?" ಎಂದೆ ಮೆಲ್ಲಗೆ. ಯಾಕೆ ನಾನು ಅಟ್ಯಾಕ್ ವಿಚಾರವನ್ನೇ ಪ್ರಮುಖವಾಗಿ ಮತ್ತೆ ಮತ್ತೆ ಎತ್ತುತ್ತೇನೆ ಎಂದು ನನಗೇ ಅರ್ಥ ಆಗುವುದಿಲ್ಲವಲ್ಲ!
ಅದೆಲ್ಲ ಯಾಕಿವಾಗ? ಕ್ಲಿಯರ್ ರಿಪೋರ್ಟ್ ಬಂದಿದೆ. ಇಲ್ಲದ ಕಾಂಪ್ಲಿಕೇಶನ್ ಯಾಕೆ ನಾವೇ ತಂದುಕೋಬೇಕು, ಅಲ್ಲವಾ?"
ನಿಜ ಸಾರ್." ಎಂದು ಹೇಳಿ ತಲೆ ಕೆಳಗೆ ಹಾಕಿದೆ.
ಮನೆಯಿಂದ ಹೊರಡುವಾಗಲೇ ಪ್ರಭಾಕರರಾಯರ ಸಲಹೆಯಂತೆ ಒಂದಷ್ಟು ದುಡ್ಡು ತಂದಿದ್ದೆ. ಮೆಲ್ಲಗೆ ಇನ್ನೂರು ರೂಪಾಯಿಗಳನ್ನುತೆಗೆದುಕೊಂಡು ಆಕಡೆ ಈಕಡೆ ನೋಡಿ ಯಾರೂ ಇಲ್ಲದ್ದನ್ನು ಕಂಡು ಮೇಜಿನ ಮೇಲಿಟ್ಟೆ. “ಏನಿದು?" ಎಂದರು ಕಣ್ಣರಳಿಸಿ.
ತಾವು ತುಂಬ ಉಪಕಾರ ಮಾಡಿದಿರಿ ಸಾರ್. ಇಲ್ಲದಿದ್ದರೆ ಇನ್ನೇನು ಫಜೀತಿ ಆಗ್ತಿತ್ತೋ" ನನ್ನ ಪರವಾಗಿ ಪ್ರಭಾಕರರಾವ್ ಉತ್ತರಿಸಿದರು.
ನನ್ನ ಕೆಲಸ ನಾನು ಮಾಡಿದ್ದೀನಿ ಬಿಡಿ. ಅಲ್ಲದೆ ರಿಪೋರ್ಟ್ ಕ್ಲಿಯರ್ ಆಗಿದೆಯಲ್ಲ. ಇನ್ನೊಂದು ವಿಚಾರ ನೋಡಿ. ಎಪಿಲೆಪ್ಟಿಕ್ ಆಗಿರೋರ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದಗಿರಬೇಕು ನಾವೂನು. ಮೂರ್ಛೆ ರೋಗ ಇದ್ದವರು ಆಕ್ಸಿಡೆಂಟಾಗಿ ಸತ್ತರು ಅಂತಲೋ ಬಿದ್ದು ಸತ್ತರು ಅಂತಲೋ ಪ್ರಚಾರ ಮಾಡಿದರೆ ಅಂಥ ಪೇಶಂಟ್ಗಳು ಇರೋರ ಮನೆಯವರು ಪ್ಯಾನಿಕಿ ಆಗ್ತಾರೆ ಅನವಶ್ಯಕವಾಗಿ" ಅಂದರು.
ತುಂಬ ಥ್ಯಾಂಕ್ಸ್ ಸಾರ್" ಅಂದೆ.
ನಿಧಾನವಾಗಿ ದುಡ್ಡನ್ನು ತೆಗೆದು ಕೊಂಡ ಇನ್ಸ್ಪೆಕ್ಟರು ಪ್ಯಾಂಟು ಜೇಬಲ್ಲಿಡುತ್ತ, “ಥ್ಯಾಂಕ್ಯೂ" ಎಂದರು.
ಸರ್ಟಿಫಿಕೇಟ್ ತೆಗೆದುಕೊಂಡು ಮನೆಯ ಕಡೆ ಹೊರಟೆವು. ನನಗೀಗ ಸೂತಕ ಅನ್ನಿಸಿತು, ತಮ್ಮ ಸತ್ತ ಸೂತಕ, ಸತ್ತ ದಿನದಿಂದ ಹನ್ನೊಂದು ದಿನಗಳವರೆಗೆ. ಆದರೆ ಅವನು ಸತ್ತದ್ದು ಯಾವತ್ತು, ಮನೆಬಿಟ್ಟು ಹೋದ ದಿನವೇ, ಎಷ್ಟು ಹೊತ್ತಿಗೆ? ನಿನ್ನೆಯೂ ಸೂತಕವಿತ್ತಲ್ಲ. ಆದರೆ ಮನೆಗೆ ಹೋದ ತಕ್ಷಣ ರಮಂಗೆಮೊದಲು ಊಟ ಹಾಕು" ಅಂತ ಅವರವಸರವಾಗಿ ಊಟ ಮಾಡಿದ್ದೆ. ಹಸಿವು ತಾಳಲಾರದೆ. ಇವತ್ತು ಹೊತ್ತಾಗಬಹುದು ಅಂತ ಮೊದಲೇ ಊಟ ಮುಗಿಸಿ ಬಂದಿದ್ದೀನಿ. ಯಾವುದು ಹೆಚ್ಚು ಇವೆರಡರಲ್ಲಿ; ಹಸಿವೆಯ ಬಾಧೆಯೋ, ಸಾವಿನ ದುಃಖವೋ ಅನ್ನಿಸಿತು. ಆದರೆ ನಿನ್ನೆ ದೇಹ ಶಶಿಯದೇ ಅಂತ ಖಂಡಿತವಾಗಿರಲಿಲ್ಲವಲ್ಲ ಎಂಬ ಸಮಾಧಾನವೂ ಹಿಂದೆಯೇ ಬಂತು.
ದಾರಿಯಲ್ಲಿ ಬರುವಾಗ ಯೋಚನೆಗಳ ಸರಮಾಲೆ. ಶಶಿ ಮುಂಜಿಯಾದ ವನಲ್ಲ. ಯಾವ ಕರ್ಮಗಳನ್ನೂ ಮಾಡಬೇಕಾಗಿಲ್ಲ. ಆದರೆ ಅವನಿಗೆ ಊಟ- ತಿಂಡಿಯೆಂದರೆ ಪ್ರಾಣ. ಅವನ ಸ್ನೇಹಿತರು, ನನ್ನ ಸ್ನೇಹಿತರುಗಳಿಗೆ ಹದಿಮೂರನೇ ದಿನ ಊಟ ಹಾಕಿಸಿ ಅವನ ಆತ್ಮಕ್ಕೆ ಶಾಂತಿಯಾಗುವಂತೆ ಮಾಡಬೇಕು ಅನ್ನಿಸಿತು. ಆದರೆ ಇದ್ದಾಗ ಅವನ ಆತ್ಮಕ್ಕೆ ಶಾಂತಿಯಿತ್ತೇ? ನಾನೇ ಅವನಿಗೆ ಅಶಾಂತಿಯುಂಟುಮಾಡಿ ಈಗ ಸತ್ತ ಮೇಲೆ ಬೇರೆ ಯಾರಿಗೋ ಊಟ ಹಾಕಿ ಶಾಂತಿ ತಂದುಕೊಡಲು ಪ್ರಯತ್ನಿಸುತ್ತಿದ್ದೀನಲ್ಲ. ಎಂಥ ವಿರೋಧಾಭಾಸ! ಆದರೆ ಅವನ ಬಗ್ಗೆ ನನಗೆ ಪ್ರೀತಿಯಿರಲಿಲ್ಲವೇ? ನನ್ನ ಕಣ್ಣುಗಳ ಹಾಗೆ ನೋಡಿಕೊಂಡಿದ್ದೆ. ನನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಅವನ ಆರೋಗ್ಯದ ಬಗ್ಗೆ ಗಮನಹರಿಸಿದ್ದೆ. ಕೊನೆಗೂ ನನ್ನ ಮೇಲೆ ಸೇಡು ತೀರಿಸಿಕೊಳ್ಳೋ ಹಾಗೆ ಸತ್ತ ಅವನು.
ಅವನ ಹೆಸರು ಶಾಶ್ವತವಾಗಿರೋ ಹಾಗೆ ಏನಾದರೂ ಮಾಡಬೇಕು. ಯಾವುದಾದರೂ ಹಾಸ್ಟಲಿನಲ್ಲಿ ಒಬ್ಬ ಹುಡುಗನಿಗೆ ಬೇಕಾಗುವಷ್ಟು ಬಡ್ಡಿ ಬರುವಂತೆ ಒಂದು ನಿಯನ್ನು ಸ್ಥಾಪಿಸಬಹುದು. ಅಥವಾ ಬಡ ವಿದ್ಯಾರ್ಥಿಗೆ ಸ್ಕಾಲರ್ಶಿಪ್ ಕೊಡುವುದೇ? ಅವನು ಓದಿದ ಸ್ಕೂಲಿನಲ್ಲಿ ಪ್ರತಿವರ್ಷ ಅತ್ಯಂತ ಮೇಧಾವಿ ಹುಡುಗನಿಗೆ ಬಹುಮಾನ ಕೊಡುವ ಏರ್ಪಾಟು ಮಾಡಿ ಒಂದು ಪುದುವಟ್ಟು ಇಡಬಹುದಲ್ಲ. ಅವನು ಸಾಯುವುದಕ್ಕಿಲ್ಲ ಇನ್ನೂ, ಆಗಲೇ ಅವನ ಸ್ಮಾರಕದ ಬಗ್ಗೆ ಯಾಕೆ ಯೋಚಿಸಬೇಕು? ಹೇಗಿದ್ದರೂ ಅವನದೇ ಸಾಕಷ್ಟು ಹಣ ಬರುತ್ತದೆ? ಎಷ್ಟು ಬರಬಹುದು? ನನಗೇ ಗೊತ್ತಿರುವಂತೆ ಅವನ ಇನ್ಶೂರೆನ್ಸ್ ಹಣ ಹದಿನೈದು ಸಾವಿರ ರೂಪಾಯಿ. ಪ್ರಾವಿಡೆಂಟ್ ಫಂಡ್ ಹಣ ಎಷ್ಟಿರಬಹುದು? ನಾಲ್ಕೈದು ಸಾವಿರ ಇರಬಹುದೇ? ಸ್ನೇಹಿತರಿಗೆ ಯಾರಿಗಾದರೂ ಸಾಲಗೀಲ ಕೊಟ್ಟಿದ್ದನೇನೋ. ಅವರು ಯಾರು ನಿಯತ್ತಾಗಿ ಅದನ್ನೀಗ ವಾಪಸ್ಸು ಕೊಡುತ್ತಾರೆ. ಇಪ್ಪತ್ತಂತೂ ಗ್ಯಾರಂಟಿ ತಾನೇ? ಒಂದು ಸೈಟು ಬರಬಹುದೇ? ಎಂಥಾ ಉಚ್ಛ ಮನುಷ್ಯ ನಾನು! ಅವನು ಸತ್ತ ಸೂತಕವೇ ಹೋಗಿಲ್ಲ. ಆಗಲೇ ಇಂಥ ಯೋಚನೆ ಬರುತ್ತಿದೆಯಲ್ಲ. ಆದರೆ ಅವನು ಸತ್ತ ದುಃಖ ನನಗಿಲ್ಲವೇ, ಇದನ್ನೂ ನಾನೇ ತಾನೇ? ತೀರ್ಮಾನಿಸಬೇಕಾದೋನು! ಅವನ ದುಡ್ಡಿನ ಮೇಲೆ ನನಗೆ ಹಕ್ಕಿಲ್ಲವೇ? ಇಷ್ಟು ದಿನ ಅವನನ್ನು ನಾನು ನೋಡಿಕೊಂಡೆನಲ್ಲ, ಅವನು ಸತ್ತ ಅಂತ. ಅವನ ಸಾವಿನ ಹಿನ್ನೆಲೆಯಲ್ಲಿ ನಾನು ಅವನೊಡನೆ ಆಡಿದ ಜಗಳವಿರಬಹುದು. ಅಂತ ಅವನ ಮೇಲಿದ್ದ ಪ್ರೀತಿ ನಾಶವಾಗುತ್ತದೆಯೇ, ಹಕ್ಕು ಹಾಳಾಗಿ ಹೋಗುತ್ತದೆಯೇ?ಇದ್ಯಾಕೆ ರೀತಿ ನನ್ನ ಮನಸ್ಸು ಆಲೋಚನೆ ಮಾಡುತ್ತಿದೆ. ಛೆ, ತುಂಬ ಸಣ್ಣ ಬುದ್ಧಿ ನನ್ನದು, ಎಂದು ಕೊಂಡು ತಲೆ ಝಾಡಿಸುತ್ತೇನೆ.
ತುಂಬ ತಲೇಗೆ ಹಚ್ಚಿಕೊಳ್ಳಬೇಡಿ. ಋಣಾನುಬಂಧವಿದ್ದಷ್ಟೇ ಲಭ್ಯ" ಎಂದರು ಪ್ರಭಾಕರರಾಯರು. ನನ್ನ ಮನಸ್ಸಿನಲ್ಲಿ ನಡೆಯುತ್ತಿದ್ದ ವಿಚಾರದ ಸುಳಿವು ಸಿಕ್ಕಿ ಅವರೇನಾದರೂ ವ್ಯಂಗ್ಯದಿಂದ ಮಾತುಗಳನ್ನಾಡಿದರೋ ಎಂಬ ಅನುಮಾದಿಂದ ಅವರೆಡೆಗೆ ನೋಡುತ್ತೇನೆ. ಅವರು ಭುಜ ಹಿಡಿದುಕೊಂಡು ಅದುಮುತ್ತಾರೆ, ಸಹಾನುಭೂತಿಯಿಂದ. ನನ್ನ ಕಣ್ಣಿನಲ್ಲಿ ನೀರು ತುಂಬುತ್ತದೆ.
ಮನೆಯ ಹತ್ತಿರ ಬಂದಾಗ ಪ್ರಭಾಕರರಾಯರನ್ನು ಬೀಳ್ಕೊಡುತ್ತೇನೆ. ಮನೆಗೆ ಬಂದಾಗ ನನ್ನ ಮುಖಭಾವವಿರುವ ರೀತಿಯಿಂದ ರಮ ಆತಂಕದ ಮುಖ ಮಾಡಿಕೊಂಡು ಎದುರುಗೊಳ್ಳುತ್ತಾಳೆ. ಅವಳನ್ನು ಕಂಡು ನನ್ನ ಕಣ್ಣೀರು ಹೆಚ್ಚಾದಂತೆ ಎನಿಸುತ್ತದೆ. ತಲೆ ಕೆಳಗೆ ಹಾಕಿಕೊಂಡು ಬಂದು ನೇರವಾಗಿ ನನ್ನ ರೂಮು ಹೊಕ್ಕು ಕುರ್ಚಿಯಲ್ಲಿ ಕುಸಿಯುತ್ತೇನೆ. ಅವಳೂ ನನ್ನ ಹಿಂಬಾಲಿಸಿ ಬರುತ್ತಾಳೆ. “ಏನಾದರೂ ಗೊತ್ತಾಯಿತಾ?" ಎಂದು ಕೇಳುತ್ತಾಳೆ. '“ಎಲ್ಲ ಆಯಿತು. ಇನ್ನೇನಿದೆ ಗೊತ್ತಾಗೋದಕ್ಕೆ" ಅಂತ ಸಿಡುಕಿನ ಮನಸ್ಸು ಅಂದು ಕೊಂಡರೂ ಅವಳ ಕೈಗೆ ಸರ್ಟಿಫಿಕೇಟ್ ಕೊಡುತ್ತೇನೆ, ಮಾತನಾಡದೆ.
ಏನಾಯಿತು?" ಎನ್ನುತ್ತಾಳೆ.
ಬಾವಿಯಲ್ಲಿ ಅವನ ಹೆಣ ತೇಲ್ತಿತ್ತು."
ನೀವು ನೋಡಿದ್ರಾ?"
ಸರಿ, ನಿಧಾನವಾಗಿ ಕತೆಯೆಲ್ಲ ಹೇಳುತ್ತೇನೆ. “ಅವನದೇ ಅಂತ ಹ್ಯಾಗೆ ಗ್ಯಾರಂಟಿ" ಅನ್ನುತ್ತಾಳೆ. ಅಳುಮುಖದಿಂದ, ಇನ್ನೂ ವಿಶದವಾಗಿ ನಡೆದ ಸಮಾಚಾರವನ್ನೆಲ್ಲ ಹೇಳುತ್ತೇನೆ. ಅವಳು ಮುಸುಮುಸು ಅಳುತ್ತ ಮೂಲೆ ಸೇರುತ್ತಾಳೆ. ಮಕ್ಕಳು ಇನ್ನೂ ಸ್ಕೂಲಿನಿಂದ ಬಂದಿಲ್ಲ. ಮನೆಯಲ್ಲಿ ಶ್ಮಶಾನ ಮೌನ, ಬಿಕೋ ಅನ್ನುತ್ತಿದೆ. ಏನು ಮಾಡಬೇಕೆಂದು ತೋಚುವುದಿಲ್ಲ.
ಯಾರೋ ಹೊರಗಡೆ ಬಾಗಿಲು ತಟ್ಟಿದ ಸದ್ದಾಗುತ್ತದೆ. ರಮ ಹಾಗೇ ಕೂತಿರುತ್ತಾಳೆ. ನಾನು ಅವಳ ಕಡೆ ನೋಡುತ್ತೇನೆ; ಮತ್ತೊಂದು ಬಾರಿ ಶಬ್ದ. ಅವಳು ನಿಧಾನವಾಗಿ ಮೇಲೆದ್ದು ಹೊರಗೆ ನಡೆಯುತ್ತಾಳೆ. ಬಾಗಿಲು ಮುಂದು ಮಾಡಿದ್ದನ್ನು ತೆಗೆದು ನೋಡುತ್ತಾಳೆ. ಯಾರೋ ಗುರುತಿನವರು, ಏನು ಕೇಳಲು ಬಂದಿದ್ದಾರೋ? ನಾನೂ ಇಣುಕಿ ನೋಡುತ್ತೇನೆ.
ಯಾಕ್ರೀ ರಮ ಹೀಗಿದ್ದೀರಾ? ಏನಾಯಿತು?" ಆಕೆ ವಿಚಾರಿಸುತ್ತಾರೆ.
ನಮ್ಮ ಶಶಿ ಹೋಗಿಬಿಟ್ಟ ಕಣ್ರೀ" ಮಾತುಗಳನ್ನು ಹೇಳುವಾಗ ರಮಳ ಕಂಠ ಗದ್ಗದವಾಗುತ್ತಿದೆ. ಅಳು ತುಂಬಿಕೊಂಡು ಹೊರಬರುತ್ತಿದೆ.
ಅಯ್ಯೋ ಪಾಪವೇ, ಏನಾಗಿತ್ತು?"
ಬಾವಿಯಲ್ಲಿ ಜಾರಿ ಬಿದ್ದನಂತೆ" ರಮ ಕೂಡ ಏನನ್ನೋ ಹೇಳುತ್ತಿದ್ದಾಳಲ್ಲ. ದುಃಖದಲ್ಲಿಯೂ ಇಂತಹ ವಿಚಾರಗಳ ಬಗ್ಗೆ ಮನಸ್ಸು ಎಚ್ಚರ ವಹಿಸುತ್ತದೆಯೇ, ಅಥವಾ ರಮ ತನಗೇ ತಿಳಿಯದೆ ಹೀಗೆ ಹೇಳುತ್ತಾಳೆಯೋ!"
ಛೆ, ಛೆ, ಛೆ ಹೀಗಾಗಬಾರದಿತ್ತು. ಚಿನ್ನದಂಥ ಹುಡುಗ" ಎಂದು ಲೊಚಗುಟ್ಟಿಕೊಂಡುಬರ್ತೀನ್ರಿ, ಪಾಪ," ಎಂದು ಹೇಳಿ ಹೋಗುತ್ತಾರೆ.
ಮಕ್ಕಳು ಶಾಲೆಯಿಂದ ಬರುತ್ತವೆ. ಹೊತ್ತಿಗಾಗಲೇ ಪಕ್ಕದ ಮನೆಯವರನ್ನು ಕರೆದು ಒಲೆ ಉರಿ ಹಾಕಲು ಹೇಳಿರುತ್ತಾಳೆ ರಮ, ಮೊದಲು ತಾನು ನೀರು ಹಾಕಿಸಿಕೊಂಡು ಆಮೇಲೆ ನನಗೆ ಮಕ್ಕಳಿಗೆ ನೀರು ಹಾಕಲು ರಮ ಸಿದ್ಧಳಾಗುತ್ತಾಳೆ. ಮಕ್ಕಳಿಗೆ ವಿಚಾರ ಏನೆಂದು ಹೇಳುವುದು? ಎರಡು ಮೂರು ದಿನಗಳಿಂದ ಅವೇನೋಶಶಿ ಎಲ್ಲಿ?" ಎಂದು ಕೇಳಿವೆ. ಆದರೆ ನಾವಿಬ್ಬರೂಎಲ್ಲೋ ಹೋಗಿದ್ದಾನೆ" ಎಂದು ಬಾಯಿ ಮುಚ್ಚಿಸಿದ್ದೆವು. ಈಗನೀರು ಹೊಕ್ಕಬೇಕು, ಏನನ್ನೂ ಮುಟ್ಟಬೇಡಿ" ಎಂದು ಅವರಮ್ಮ ಹೇಳಿದಾಗ ಅವಕ್ಕೆ ಅರ್ಥವಾಗುವುದಿಲ್ಲ. “ಯಾಕೆ?" ಎಂಬ ಸಹಜ ಪ್ರಶ್ನೆ ಹಿಂಬಾಲಿಸುತ್ತದೆ. ನಾನು ಸುಷ್ಮಳನ್ನು ತಬ್ಬಿಕೊಂಡುಶಶಿ ಹೋಗಿಬಿಟ್ಟ" ಎನ್ನುತ್ತೇನೆ. “ಎಲ್ಲಿಗೆ ಹೋದ?" ಎಂಬ ಅವಳ ಪ್ರಶ್ನೆಗೆ ಏನನ್ನಬೇಕು? “ಸತ್ತುಹೋದ" ಎಂದು ಹೇಳುತ್ತೇನೆ ಅವಳಿಗೆ ಸ್ವಲ್ಪ ಅರ್ಥವಾಗಬಹುದೇನೋ ಸಾವು ಅಂದರೆಹೋ" ಎಂದು ಜೋರಾಗಿ ಅಳಲು ತೊಡಗುತ್ತಾಳೆ. ಪೃಥ್ವಿಗೆ ಏನೂ ಅರ್ಥವಾಗುವುದಿಲ್ಲ. ಆದರೆ ಅಕ್ಕ ಹೇಳುವುದನ್ನು ಕಂಡು ತಾನೂ ಅಳುವುದಕ್ಕೆ ಪ್ರಾರಂಭ ಮಾಡುತ್ತಾನೆ.
ನೀರು ಹಾಕಿಕೊಂಡು ಬೇರೆ ಬಟ್ಟೆ ಧರಿಸಿ ಹಾಲಿನಲ್ಲಿ ಕೂತುಕೊಳ್ಳುತ್ತೇನೆ. ಪಕ್ಕದ ಮನೆಯವರೇ ರಾತ್ರಿಯ ಅಡಿಗೆ ಮಾಡಲು ತೊಡಗಿ ಅಡುಗೆ ಮನೆಯಲ್ಲಿರುತ್ತಾರೆ. ಪೃಥ್ವಿ ಎದ್ದು ಒಳಗಡೆ ಹೋಗಲು ಪ್ರಯತ್ನ ಮಾಡಿದಾಗ ಅವರಮ್ಮ ಎಳೆದುಕೊಂಡುಎಲ್ಲೂ ಹೋಗಬೇಡ. ಯಾರನ್ನು ಮುಟ್ಟಬಾರದು. ಇಲ್ಲೇ ಕುಕ್ಕರು ಬಡಿ" ಎಂದು ಕೂಡಿಸಿಕೊಳ್ಳುತ್ತಾಳೆ. ಪರಿಸ್ಥಿತಿಯ ಗಾಂಭೀರ್ಯ ಅರ್ಥವಾಗಿರಬೇಕೇನೋ ಮಕ್ಕಳಿಬ್ಬರೂ ಆಕಾಶ ಕಳಚಿ ಬಿದ್ದವರಂತೆ ಮೂಲೆಯಲ್ಲಿ ಗುಮ್ಮನೆ ಕೂತುಕೊಳ್ಳುತ್ತಾರೆ. ಮಾತಿಲ್ಲ, ಕತೆಯಿಲ್ಲ. ಒಳಗೆ ಪಕ್ಕದ ಮನೆಯಾಕೆ ಕೆಲಸ ಮಾಡುತ್ತಿದ್ದಾಗ ಆಗುವ ಶಬ್ದ ಮಾತ್ರ ಕೇಳಿಸುತ್ತದೆ. ನಮಗೆ ಸಾವಿನ ಸೂತಕ ದುಃಖ ಅಂಟಿಕೊಂಡಿರುವಾಗಲೂ ಒಳಗೆ ನಮಗಾಗಿ ಅಡುಗೆ ಸಿದ್ಧವಾಗುತ್ತಿದೆ! ತಮ್ಮ ಸತ್ತ? ದುಃಖದಿಂದ ಊಟವೇ ಬೇಕಾಗದ ಹಾಗೆ ಯಾಕೆ ಆಗುತ್ತಿಲ್ಲ. ನಮ್ಮದು ಕಪಟ ದುಃಖವೋ ಎನ್ನಿಸುತ್ತದೆ. ಮಧ್ಯಾಹ್ನ ಅನಿಸಿದ್ದ ಪ್ರಶ್ನೆಯು ಬೃಹದಾಕಾರ ಪಡೆಯುತ್ತದೆ. ಯಾವುದು ಹೆಚ್ಚು; ಸಾವೋ, ಬದುಕೋ?
ಸಾಯಂಕಾಲವಾಗುತ್ತ ಬಂದಂತೆ ವಿಷಯ ತಿಳಿದ ಹಲವಾರು ಮಂದಿ ಪರಿಚಿತರು ಬರುತ್ತಾರೆ. ಅಯ್ಯೋ ಪಾಪ ಎನ್ನುತ್ತಾರೆ. ಏನಾಗಿತ್ತು ಎನ್ನುತ್ತಾರೆ. ಅವನೇ ಬಿದ್ದನೊ ಆಕಸ್ಮಿಕವೊ? ಯಾವತ್ತೂ ಹೋದದ್ದು. ಈಗ ಸ್ವಲ್ಪ ದಿವಸಗಳಿಂದ ಮನೇಲಿರಲಿಲ್ಲ, ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗುತ್ತದೆ. ಅವನು ಸಾಯುವುದಿರಲಿ, ಇವರೆಲ್ಲ ನಮ್ಮ ಪ್ರಾಣಾನೇ ಹಿಂಡ್ತಿದಾರೆ ಅನ್ನಿಸಿ ಬೇಸರ ವಾಗುತ್ತದೆ. ಮೊದಲೇ ಇದರಿಂದ ನಜ್ಜುಗುಜ್ಜಾಗಿರುವ ನಾವು ಇವರ ಪ್ರಶ್ನೆಗಳ ಬಾಣಗಳನ್ನೇ ಎದುರಿಸಬೇಕಲ್ಲ. ಎಂದು ಸಿಟ್ಟು ಬರುತ್ತದೆ. ದುಃಖಗೊಳ್ಳುವ ಪರಿಸ್ಥಿತಿಯಲ್ಲಿ ಸಿಟ್ಟು ಬರುವುದೇಕೆ ಎಂಬ ಪ್ರಶ್ನೆ ನನ್ನೆದುರು. ಜನರೂ ಪಾಪ ನಮ್ಮ ದುಃಖದಲ್ಲಿ ಸಹಾನುಭೂತಿ ತೋರಿಸಲು ಬಂದವರೇ ಅಲ್ಲವೇ? ಏನೋ ಯಾಕೆ ಸತ್ತ ಎಂಬ ಬಗ್ಗೆ ವಿಚಾರ ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಪ್ರಶ್ನೆಗಳನ್ನು ಹಾಕುತ್ತಾರೆ. ಅದಕ್ಕೇ ಬೇಸರ ಮಾಡಿಕೊಂಡರೆ ಹೇಗೆ? ಇಂಥ ಪರಿಸ್ಥಿತಿಬೇರೆಯವರಿಗೆ ಉಂಟಾದಾಗ ನಾವೇ ಬಗೆಯ ಪ್ರಶ್ನೆಗಳನ್ನು ಹಾಕುವುದಿಲ್ಲವೇ? ಆದರೀಗ ತಿಳಿಯುತ್ತಿದೆ ಇಂಥ ಪ್ರಶ್ನೆಗಳು ಸಂಬಂಧಪಟ್ಟವರಿಗೆ ಎಂಥ ಕಿರಿಕಿರಿಯುಂಟುಮಾಡುತ್ತದೆಂದು. ಒಬ್ಬರಿಬ್ಬರಾದರೆ ಸರಿ, ಹತ್ತಾರು ಜನ ಬಂದು ಕೇಳಿದ   ಪ್ರಶ್ನೆಗಳನ್ನೇ ಕೇಳಿದಾಗ ಹೇಳಿದ್ದನ್ನೇ ಹೇಳುವುದು ಅಂದರೆ? ಮೊದಲನೆಯವನಿಗೆ ಹೇಳುವಾಗ ಕಂಠ ಗದ್ಗದವಾಗಿದ್ದ ತೀವ್ರತೆ ಎರಡನೆಯವನಿಗೆ ಹೇಳುವಾಗ ಕಡಿಮೆಯಾಗುತ್ತದೆ. ಬರಬರುತ್ತ ಭಾವನೆಯೇ ಇಲ್ಲದೆ ಕೇವಲ ವರದಿಯಾಗಿ, ಕೊನೆಗೆ ಹೇಳಿದ್ದನ್ನೇ ಹೇಳಲು ಬೇಸರವಾಗುತ್ತದೆ. ಉತ್ತರಿಸಲು ಇಷ್ಟವಾಗದೆ ಸಿಟ್ಟೇ ಬರುತ್ತದೆ. ಅಂತೂ ದುಃಖಕ್ಕೂ ಸಿಟ್ಟಿಗೂ ಏನೋ ಸಂಬಂಧವಿದೆ!
ರಾತ್ರಿ ಪಕ್ಕದ ಮನೆಯಾಕೆ ಬಡಿಸಿದ್ದನ್ನು ಊಟ ಮಾಡಿ ಎಲ್ಲರೂಹಾಲಿನಲ್ಲೇ ಮಲಗಲು ಸನ್ನಾಹ ನಡೆಸುತ್ತೇವೆ. ನಾಳೆಯಿಂದ ಇನ್ನೂ ಅಷ್ಟು ದಿನ ಹೀಗೆ ಬೇರೆಯವರ ಕೈಲಿ ಅಡುಗೆ ಮಾಡಿಸಿಕೊಂಡು ನಾವು ಊಟ ಮಾಡಬೇಕೆ? ಯಾಕೆ? ಸೂತಕವೆಂದು ತಾನೆ? ಸೂತಕದಲ್ಲಿ ನಾವೇ ಎಂದಿನಂತಿದ್ದರೆ ಯಾಕಾಗುವುದಿಲ್ಲ? ರಮಳೇ ಅಡುಗೆ ಮಾಡುವುದು, ಎಂದಿನಂತೆ ರೂಮಿನಲ್ಲಿ ಮಂಚದ ಮೇಲೆ ಮಲಗುವುದು, ಎಲ್ಲೆಂದರಲ್ಲಿ ಓಡಾಡಿಕೊಂಡಿರುವುದರಿಂದ ಏನಾಗುತ್ತದೆ? ಹಾಗೆ ನೋಡಿದರೆ ನಾಲ್ಕೈದು ದಿನಗಳಿಂದಲೂ ನಮಗೆ ಸೂತಕವೇ ತಾನೇ? ಶಶಿ ಸತ್ತದ್ದು ಬಹುಮಟ್ಟಿಗೆ ಅವನು ಮನೆಬಟ್ಟು ಹೋದ ದಿನವೇ; ಆದರೆ ಇಷ್ಟು ದಿನ ನಾವು ಏನೂ ಮನಸ್ಸಿಗೆ ತಂದುಕೊಳ್ಳದೆ ಯಥಾ ಪ್ರಕಾರ ಇದ್ದೆವಲ್ಲ, ಅದರಿಂದ ಏನಾಯಿತು? ಮಕ್ಕಳು ಜಮಖಾನೆಯ ಮೇಲೆ ಮಲಗುವಂತೆ ರಮ ವ್ಯವಸ್ಥೆ ಮಾಡಿದ್ದಾಳೆ. ನಾವು ಚಾಪೆಯ ಮೇಲೆ - ಹೊದ್ದುಕೊಳ್ಳಲು ಒಂದೆರಡು ಬೆಡ್ಶೀಟ್ಗಳನ್ನು ಬಿಟ್ಟರೆ ಏನಿಲ್ಲ - ಮಕ್ಕಳಿಗೆ ಮೈಕೈ ನೋಯುವು ದಿಲ್ಲವೇ? ಎಂದಿನಂತೆ ಇದ್ದರೆ ಏನಾದೀತು? ಹೀಗಿದ್ದರೆ ಮಾತ್ರವೇ ನಮ್ಮ ದುಃಖ ಕಾಣುವುದು? ದುಃಖ ಕಾಣಬೇಕೆ? ಹಾಗಾದರೆ ಶಶಿ ಸತ್ತಿದ್ದರಿಂದ ನಮಗೆ ದುಃಖವುಂಟಾಗಿದೆಯೆಂದು ಬೇರೆಯವರಿಗೆ ತೋರಿಸಿಕೊಳ್ಳಬೇಕೆ? ಇಲ್ಲದೆಯೂ ತೋರಿಸಿಕೊಳ್ಳಬಹುದಲ್ಲ. ಅಂತೂ ನಮ್ಮ ಭಾವನೆಗಳು ನಮ್ಮವೇ ಅಲ್ಲ ಹಾಗಾದರೆ, ಬೇರೆಯವರಿಗಾಗಿಯೇನೋ ವಿಧಿಗಳು!
ಪಾಪ ನಮ್ಮ ಮನೆ ಕೆಲಸ ಯಾಕೆ ಮಾಡಬೇಕು ಆಕೆ? ನೀನೇ ನಾಳೆಯಿಂದ ಅಡಿಗೆ ಮಾಡಿದರಾಗಲ್ಲವಾ?" ಎಂದೆ ರಮಳತ್ತ ತಿರುಗಿ.
ನೀವು ಸರಿ, ಸೂತಕದಲ್ಲಿ ಎಲ್ಲ ಮುಟ್ಕೊಳ್ಳೋದು ಹೇಗೆ?"
ನಮ್ಮ ಪಾಡಿಗೆ ನಾವಿದ್ದರಾಯಿತು. ಹೊರಗಡೆ ಬಾಗಿಲು ಹಾಕಿದ್ದು ಒಳಗೆ ಕೆಲಸ ಮಾಡ್ತಿರೋದು. ಯಾರು ಬಂದು ತನಿಖೆ ಮಾಡ್ತಾರೆ? ಪಾಪ, ಮಕ್ಕಳು ನೋಡು ಎಷ್ಟು ಕಷ್ಟಪಡಬೇಕು."
ಪಡಲಿ ಬಿಡಿ. ಒಂದೆರಡು ದಿನ ತಾನೇ."
ಇದರಲ್ಲೇನೇ ತಪ್ಪು, ಈಗ ಐದು ದಿನದ ಹಿಂದೇನೇ ಅವನು ಹೋದ. ಇರ್ಲಿಲ್ವ, ಏನಾಯಿತು?"
ಗೊತ್ತಾಗಿರಲಿಲ್ಲ. ಇದ್ವು. ಈಗೆಲ್ಲ ವಿಚಾರ ತಿಳಿದಿದೆಯಲ್ಲ."
ಏನೋ ಮುಟ್ಕೊಂಬಿಟ್ಟರೆ ಏನಾಗತ್ತೆ ಮಹಾ, ಈಗಾಗಲೇ ಸ್ನಾನ ಬೇರೆ ಮಾಡಿದ್ದೀವಿ."
ನೀವು ಸುಮ್ನಿರಿ, ದೊಡ್ಡೋರು ಮಾಡಿರೋದನ್ನ ಹಾಗೆಲ್ಲ ತಪ್ಪಿಸೋದಕ್ಕೆ ಸಾಧ್ಯ ಏನು?"
ಏನಾಗತ್ತೆ?"
ರಮ ಉತ್ತರಿಸಲಿಲ್ಲ. ಮೂತಿ ಊದಿಸಿಕೊಂಡಳು.

- - -

ಅವನನ್ನ ಸಾಗಹಾಕಿ ಸಾಗಹಾಕಿ ಅಂತ ಹಗಲೆಲ್ಲ ರಮ ಹಾಡುತ್ತಾ ಹಾಡುತ್ತಾ ಇದ್ದಳಲ್ಲ. ಅವನು ತೀರಿಹೋದ ಅಂತ ತಿಳಿದ ಮೇಲೆ ಅಷ್ಟೊಂದು ಅತ್ತಳು. ಅದೇನು ಹೊರ ನೋಟಕ್ಕೋ, ಅಥವಾ ನಿಜವಾಗಿಯೂ ಅವಳ ಮನಸ್ಸಿಗೆ ಅವನ ಸಾವು ತಟ್ಟಿದೆಯೋ? ಅವಳೂ ಅವನನ್ನು ಸುಮಾರು ವರ್ಷದಿಂದ ಒಂಥರ ನೋಡಿಕೊಂಡಿದ್ದಾಳೆ ಅಲ್ಲವೇ? ಅವನ ಊಟ ತಿಂಡಿ ತಯಾರಿ ಎಲ್ಲ ಅವಳದೇ. ಅಲ್ಲದೆ ಯಾರ ಸಾವಾದರೂ ಮಿಕ್ಕವರನ್ನೂ ಒಂದು ಕ್ಷಣವಾದರೂ ಸಹಾನುಭೂತಿಪರರನ್ನಾಗಿ ಮಾಡುತ್ತೇನೋ. ಅಂಥದರಲ್ಲಿ ತನ್ನ ಕಣ್ಣ ಮುಂದೆ ಮೊನ್ನೆ ಮೊನ್ನೆಯವರೆಗೂ ಇದ್ದವನು ಈಗ ಇಲ್ಲವೇ ಇಲ್ಲ ಅಂದರೆ ಮನಸ್ಸಿಗೆ ಏನಾಗಬೇಡ? ಆದರೆ ಅವಳು ನೋಡಿಕೊಂಡದ್ದು, ಅವನ ಅಡಿಗೆ- ತಿಂಡಿ ತಯಾರಿಸಿದ್ದು ಅವಳ ಕರ್ತವ್ಯದ ಒಂದು ಭಾಗ ತಾನೇ? ಅವನನ್ನು ನೋಡಿಕೊಳ್ಳುವ ನನ್ನ ಜವಾಬ್ದಾರಿಯ ಪಾಲು. ನನ್ನ ಮದುವೆಯಾದ ಕ್ಷಣದಿಂದಲೇ ಅವಳದೂ ಆಯಿತಲ್ಲವೇ? ಅಡಿಗೆಯೇನೊ ಮಾಡಿ ಬಡಿಸುತ್ತಿದ್ದಳು, ಎಂದೂ ನೇರವಾಗಿ ಅವನನ್ನು ನೋಡಿಕೊಂಡವಳೇನಲ್ಲ. ಅಟ್ಯಾಕ್ ಆದಾಗಲೂ ಅವಳಿಗೆ ಅವನನ್ನು ಹಿಡಿದುಕೊಳ್ಳಲು ಭಯ. ಯಾಕೆ ಸಹಾನುಭೂತಿಯುಂಟಾಗಬೇಕಾದ ಸ್ಥಳದಲ್ಲೂ ಭಯವುಂಟಾಗುವುದು? ಅಥವಾ ಭಯದಿಂದಲೇ ನಮ್ಮ ಸಹಾನುಭೂತಿಯೂ ಹೊಮ್ಮುತ್ತದೆಯೋ? ಕಷ್ಟದಲ್ಲಿರುವವರಿಗೆ ನಾವು ಸಹಾನುಭೂತಿಯನ್ನು ವ್ಯಕ್ತಪಡಿಸುವುದ ಹಿಂದೆ ನಾವು ಕಷ್ಟಕ್ಕೆ ಹೆದರಿಕೊಳ್ಳುವುದು, ಅಂಥದ್ದೇನಾದರೂ ಆದರೆ ನಮ್ಮ ಬಗ್ಗೆ ಇತರರು ಅನುಕಂಪ ವ್ಯಕ್ತಪಡಿಸಲೆಂಬ ಹಂಬಲವಿರುತ್ತದೆಯೇ?
ಶಶಿಗೆ ಮೂರ್ಛೆ ಬರುವುದಲ್ಲದೆ ನಮ್ಮೆಲ್ಲರಿಗೆ ಬರುವ ಹಾಗೆಯೇ ಇತರ ಚಿಕ್ಕ ಪುಟ್ಟ ಅಸ್ವಾಸ್ಥ್ಯಗಳೂ ಬರುವುದು ಸಹಜತಾನೆ? ಹಾಗೆಯೇ ಅವನಿಗೊಂದು ಬಾರಿ ಫ್ಯಾರಾ ಟೈಫಾಯ್ಡ್ ಬಂತು. ಅವನು ಜ್ವರದ ತಾಪದಿಂದ ಕನವರಿಸಿಕೊಂಡ ನರಳುತ್ತಿದ್ದರೂ ರಮ ಎಂದೂ ಅವನ ಶುಶ್ರೂಷೆ ಮಾಡಿರಲಿಲ್ಲ. ಹಾಗಂತ ಅವನ ಕಡೆ ಕಣ್ಣೆತ್ತಿ ನೋಡಿರಲಿಲ್ಲ ಅಂಥ ಅರ್ಥವಲ್ಲ. ಅವನಿಗೆ ಬೇಕಾದ ಬೋರ್ನ್ವೀಟಾ, ಕಾಪಿ, ಗಂಜಿ-ಅಂತ ಆಹಾರವನ್ನು ಹೇಳಿದಾಗಲೆಲ್ಲ ತಯಾರಿಸುತ್ತಿದ್ದಳು. ಆದರೆ ಜ್ವರ ಜಾಸ್ತಿಯಾದಾಗ ಅವನ ಹಣೆಗೆ ತಣ್ಣೀರು ಬಟ್ಟೆ ಹಾಕುವುದೋ ಅವನನ್ನು ಎತ್ತಿ ಕುಳ್ಳರಿಸಿ ಆಹಾರ ಸೇವಿಸುವಂತೆ ಮಾಡುವುದೋ ಕಾರ್ಯಗಳಲ್ಲಿ ಅವಳೆಂದೂ ತಾನಾಗಿ ಮುಂದೆ ಬಂದಿರಲಿಲ್ಲ. ನಾನೇ ಕೆಲವು ವೇಳೆ ನನಗೊಬ್ಬನಿಗೇ ಕಷ್ಟವೆನಿಸಿದಾಗ ಅವಳನ್ನು ಕರೆದು, “ಇಲ್ಲಿ ಹಿಡಕೋ,' “ಅದನ್ನು ಕೊಡು', “ಇದನ್ನು ತಗೊಂಬಾ' ಅಂತ ಹೇಳುತ್ತಿದ್ದೆ. ಅವಳು ಅವುಗಳನ್ನೆಲ್ಲ ಮಾಡೇನೋ ಮಾಡುತ್ತಿದ್ದಳು. ಆದರೆ ಅವಳ ಮುಖದಲ್ಲಿ ತುಂಬಿಸುತ್ತಿದ್ದುದುನಿರ್ಭಾವ ಅಥವಾ ಮುಖವಾಡದ ಹಿಂದೆ ಅಸಮಾಧಾನವೂ ತುಂಬಿಕೊಂಡಿರುತ್ತಿತ್ತೋ? ಇಷ್ಟಾದರೂ ಆಮೇಲೆ ಅವನ ಬಗ್ಗೆ ಅಸಮಾಧಾನಗೊಂಡು ಮಾತಾಡೋವಾಗ ಅವನಿಗೆ ನಾನೇನು ಕಡಿಮೆ ಸೇವೆ ಮಾಡುತ್ತಿದ್ದೇ ವೆಯೇ? ಸ್ವಲ್ಪವಾದರೂ ಗೌರವ ಇರಬೇಡವೇ?" ಅನ್ನುತ್ತಿದ್ದಳು. “ಮಹಾ ಸೇವೆ ನೀನು ಮಾಡಿರೋದು" ಅಂತ ನಾನೇನಾದರೂ ಚುಡಾಯಿಸಿದರೆ, “ನಾನು ಮಾಡಿರೋದು ಹಾಳಾಗಲಿ, ನೀವು ಮಾಡಿರೋದಕ್ಕಾದರೂ ಬೆಲೆ ಬೇಡವೇ?" ಎನ್ನುತ್ತಿದ್ದಳು.
ಆದರೆ ನನ್ನ ಇಬ್ಬರು ಮಕ್ಕಳಿಗೂ ಅವನ ನರಳಾಟದಿಂದ ತುಂಬ ವೇದನೆ ಆಗಿದ್ದುದು ಸ್ಪಷ್ಟವಿತ್ತು. ಬಂದವರ ಮುಂದೆಲ್ಲಪಾಪ, ನಮ್ಮ ಚಚಿಗೆ ಜ್ವರ" ಎಂದು ಪೃಥ್ವಿ ತುಂಬ ಅನುತಾಪಪೂರ್ವಕ ಮಾತುಗಳಲ್ಲಿ ತಿಳಿಯಪಡಿಸುತ್ತಿದ್ದ. ಸುಷ್ಮಾ ಕೂಡ ಅವನನ್ನು ದೂರದಿಂದಲೇ ಕಂಡು ಮರುಕ ವ್ಯಕ್ತಪಡಿಸುತ್ತಿದ್ದಳು. “ತುಂಬ ನೋವಾಗುತ್ತೇನೋ?" ಅಮ್ಮನಿಗೆ ಹೇಳಿ ಹಾಲು ತಗೊಂಬರ್ಲಾ?" ಎಂಬ ಉಪಚಾರ ಮಾಡುತ್ತಿದ್ದಳು. ಆದರೆ ತೀರ ಸಮೀಪಕ್ಕೆ ಸುಳಿಯದ ಹಾಗೆ, ಅವನ ಹಾಸಿಗೆಯಲ್ಲಿ ಕುಳಿತುಕೊಳ್ಳದ ಹಾಗೆ, ಅವನನ್ನು ಮುಟ್ಟದ ಹಾಗೆ ರಮ ಎಚ್ಚರವಹಿಸಿ ನೋಡಿಕೊಂಡಿದ್ದಳು. ಶಶಿಯೇನು ಮಗುವೇ. ವರ್ತನೆಯ ಹಿಂದಿರುವ ಮನೋಭಾವ ಅರ್ಥವಾಗದವನೇ. ಇವಳು ಕೆಲವು ವೇಳೆ ಪ್ರಕಟವಾಗಿಯೇ ಅವನನ್ನು ತೋರ್ಪಡಿಸುವುದು ಕಂಡು ಅವನ ಮನಸ್ಸಿಗೆ ಬೇಗುದಿಯಾಗದೇ ಎಂದು ನನಗನ್ನಿಸುತ್ತಿತ್ತು. “ಮಕ್ಕಳು ಅವನ ಹತ್ತಿರ ಹೋಗದ ಹಾಗೆ ಯಾಕೆ ಮಾಡ್ತೀಯ?" ಎಂದು ಮೇಲುಧ್ವನಿಯಲ್ಲಿ ಕೇಳಿದರೆ, “ಇವಕ್ಕೂ ಜ್ವರಗಿರ ಅಂತ ತಗುಲಿದರೆ ಗತಿಯೇನು? ಇವನ ನರಳಾಟವನ್ನೇ ನೋಡಕ್ಕೆ ಆಗಲ್ಲ, ಇನ್ನು ಎಳೆಯ ಜೀವಗಳು, ಅವುಗಳ ಸಂಕಟ ನೋಡೋದು" ಎಂದು ಹೇಳುತ್ತಿದ್ದಳು. ಅದರಲ್ಲಿ ತಪ್ಪೇನು ಇಲ್ಲ, ನಿಜ, ಆದರೆ ಮಕ್ಕಳ ಬಗ್ಗೆ ಜಾಗ್ರತವಾಗಿ ರುವ ರೀತಿಯೊಂದಿಲ್ಲವೇ? ಏನೋ ಅಗ್ನಿಕುಂಡದಿಂದ ದೂರವಿರಿಸಬೇಕೆಂಬ ರೀತಿಯಲ್ಲಿ ಮಕ್ಕಳನ್ನು ತಡೆಹಿಡಿಯುವುದು ಯಾವ ನ್ಯಾಯ? ಒಂದೆರಡು ಬಾರಿ ಮಕ್ಕಳು ಅವನ ಪಕ್ಕದಲ್ಲಿ ಕೂತರೆ ಅವನ ಕಾಯಿಲೆ ಅವಕ್ಕೆ ಬರುತ್ತದೆಯೇ? ಹಾಗಿದ್ದಿದ್ದರೆ ಒಬ್ಬರಿಂದೊಬ್ಬರಿಗೆ ಇನ್ನೊಬ್ಬರಿಗೆ ಮತ್ತೊಬ್ಬರಿಗೆ ಕಾಯಿಲೆ ಅಂಟಿ ಲೋಕದಲ್ಲಿರುವ ಪ್ರತಿಯೊಬ್ಬರೂ ಕಾಯಿಲೆಯಿಂದ ನರಳಬೇಕಾಗಿತ್ತಲ್ಲ. ಇವಳದೇಕೋ ಅತಿಯಾಯಿತು ಅನ್ನಿಸುತ್ತಿತ್ತು
ಅವನು ಜ್ವರದ ಕಾಲದಲ್ಲಿ ಒಮ್ಮೆ ಅನ್ನ ತಿನ್ನಿಸಿದಾಗ ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲವನ್ನೂ ವಾಂತಿ ಮಾಡಿಕೊಂಡು ಬಿಟ್ಟಿದ್ದ. ರಮಳನ್ನು ಕೂಗಿದೆ. ಅವಳು ಬಂದು ಆಗಿದ್ದ ರಾದ್ಧಾಂತ ನೋಡಿದಳು; ಶರ್ಟೆಲ್ಲ ವಾಂತಿ ಆಗಿತ್ತು. ಕಾಲಮೇಲೆ ಹೊದ್ದುಕೊಂಡಿದ್ದ ಬೆಡ್ಶೀಟ್ ಮೇಲೆಲ್ಲಾ ವಾಂತಿಯಾಗಿತ್ತು. ನೋಡಿ ಹಣೆ ಬಡಿದುಕೊಂಡಳು; “ಕರ್ಮ, ಕರ್ಮ" ಅಂತ ಗೊಣಗಿಕೊಂಡಳು. ಒಳಗಿನಿಂದ ಬೋಸಿಯಲ್ಲಿ ನೀರು ತಂದು ನನ್ನ ಮುಂದಿಟ್ಟಳು. ನಾನು ಅವನ ಮುಖ ಒರೆಸಿದೆ. ಶರ್ಟು ಬಿಚ್ಚಲು ನೆರವಾಗಿ ಬೇರೆ ಅಂಗಿ ತೊಡಿಸಿದೆ. ಒಂದು ಕ್ಷಣ ಬೇರೆಡೆ ಕೂತಿರುವಂತೆ ಹೇಳಿ ಹಾಸಿಗೆಯನ್ನೆಲ್ಲ ಮತ್ತೊಮ್ಮೆ ಸಿದ್ಧಪಡಿಸಿ ಕರೆತಂದು ಮಲಗಲು ಅವನಿಗೆ ನೆರವಾಗಿದ್ದೆ. ರಮ ತಾನಾಗಿ ಕೆಲಸಕ್ಕೆ ಮುಂದೆ ಬರಲಿಲ್ಲ. “ಇವಳು ಸಾಯೋ ಕಾಲಕ್ಕೆ ಯಾರೂ ನೋಡಿಕೊಳ್ಳಕ್ಕೆ ಬೇಕಾಗಲ್ಲವೇನೋ. ನೋಡೋಣ" ಎಂಬ ಕಡು ಭಾವನೆಯಿಂದ ಅವಳನ್ನು ಕಡೆಗಣಿಸಿ ನಾನೇ ಅದನ್ನೆಲ್ಲ ನಿರ್ವಹಿಸಿದ್ದೆ. ಮಕ್ಕಳು ಇದನ್ನೆಲ್ಲ ನೋಡುತ್ತಿದ್ದರೂ ತಾಯಿಯ ಆಜ್ಞೆಯಿಂದ ದೂರದಲ್ಲೆ ನಿಂತು ನೋಡುತ್ತಿದ್ದವು. ಬೆಡ್ಶೀಟನ್ನು ಒಗೆಯಲು ಹಾಕುವುದಕ್ಕೆಂದು ತೆಗೆದೊಯ್ಯುವಾಗ ಮೂಗು ವಾಸನೆ ಸಹಿಸದ ಥರ ಮಾಡಿಕೊಂಡು ಎಡಗೈ ಹೆಬ್ಬೆರಳು ತೋರು ಬೆರಳುಗಳ ತುದಿಯಲ್ಲಿ ಅದನ್ನೆತ್ತಿ ಕೊಂಡು ಹೊರಟಳು. ಬೆರಳ ಬಲ ಭಾರವಾದ ಬೆಟ್ಶೀಟನ್ನು ಹಿಡಿಯಲು ಸಮರ್ಥವಾಗದೆ ಕೆಳಕ್ಕೆ ಬಿದ್ದು ವಾಂತಿಯ ಅಗಳು ನೆಲಕ್ಕೆ ಬಿದ್ದವು. “ಸರಿಯಾಗಿ ತಗೊಂಡು ಹೋಗೋದು ಆಗದಿದ್ದರೆ ಅಲ್ಲಿ ಬಡಿದಿದೆ. ನಾನೇ ಆಮೇಲೆ ಎತ್ತಿಕೊಂಡು ಹೋಗ್ತೀನಿ ಎಂದು ಕಿರುಚಿದ್ದೆ. ಮರುಮಾತಾಡದೆ ಸರಿಯಾಗಿ ತಗೊಂಡು ಹೋಗಿದ್ದಳು.

- - -

ಮಕ್ಕಳಿಗೆ ಇರುವ ಸಹಾನುಭೂತಿಯ ಶುದ್ಧತೆ ನಮ್ಮ ಭಾವನೆಯಲ್ಲಿ ಇರುವುದಿಲ್ಲವೇಕೆ ಎಂದು ಎಷ್ಟೋ ಬಾರಿ ಅನ್ನಿಸುತ್ತದೆ. ಶಶಿಯ ಸೇವೆ ಮಾಡುವ ನಾನು ಎಲ್ಲರ ಶುಶ್ರೂಷೆಯನ್ನೂ ಹೀಗೆಯೇ ಮಾಡುತ್ತೇನೆಯೇ? ಸೇವೆ ಮಾಡುವುದರ ಹಿಂದೆ ಆತ್ಮೀಯತೆಯೇ ಅಲ್ಲವೇ ಕೆಲಸ ಮಾಡುವುದು? ರಮಂಗೆ ಶಶಿಯ ಬಗ್ಗೆ ನನಗಿರುವಷ್ಟು ಆತ್ಮೀಯತೆ ಬರಲು ಸಾಧ್ಯ ಇಲ್ಲದ್ದು ಸಹಜವಲ್ಲವೇ? ಶಶಿಯ ಯೋಗಕ್ಷೇಮ ನನ್ನ ಕರ್ತವ್ಯವಾಗಿದ್ದಂತೆ ಅವಳ ಸ್ವಂತ ಕರ್ತವ್ಯವಲ್ಲ. ನನ್ನ ಎಲ್ಲದರಲ್ಲೂ ಭಾಗಿಯಾದ ಅವಳು ನನ್ನ ಕರ್ತವ್ಯದಲ್ಲಿಯೂ ಭಾಗಿಯೇ ಹೊರತು ಇದು ಅವಳದೇ ಆದ ಕರ್ತವ್ಯವಲ್ಲ. ಅಲ್ಲದೆ ಕರ್ತವ್ಯದ ಪರಿಕಲ್ಪನೆ ನಮ್ಮ ಸಾಮಾಜಿಕ ಪದ್ಧತಿಗಳನ್ನು ಅವಲಂಬಿಸಿದೆಯಲ್ಲವೇ? ಹೆಂಡತಿ ಗಂಡನಿಗೆ ನೆರವಾಗಬೇಕು, ಆದ್ದರಿಂದ ಅವಳನ್ನು ಗಂಡ ಸಾಕುತ್ತಾನೆ. ನಮ್ಮ ಸಮಾಜ ವ್ಯವಸ್ಥೆಯಲ್ಲಿ, ನನ್ನ ಕರ್ತವ್ಯದಲ್ಲಿ ರಮ ಭಾಗಿಯಾಗುತ್ತಾಳೆ. ಅವಳ ಕರ್ತವ್ಯದಲ್ಲಿ ನಾನು ಭಾಗಿಯೇ? ಅಂದರೆ ಅವರ ಮನೆಯವರಿಗಾಗಿಯಾದರೂ ರೀತಿಯ ಕಾಯಿಲೆ ಕಸಾಲೆ ಬಂದರೆ, ಬೇರೆ ರೀತಿಯ ಕಷ್ಟವುಂಟಾದರೆ ನಾನು ಸಹಾಯಕ್ಕೆ ಬಿಡುಮನಸ್ಸಿನಿಂದ ಹೋಗುತ್ತೇನೆಯೇ? ಆಗಾಗ್ಗೆ ಕಾಗದ ಬರೆದಾಗಅಲ್ಲಿ ಎಲ್ಲ ಕ್ಷೇಮವೆಂದು ನಂಬಿದ್ದೇನೆ" ಎಂದು ಹೇಳುವಷ್ಟನ್ನು ಬಿಟ್ಟು ಇನ್ನು ಯಾವ ರೀತಿಯಲ್ಲಿ ರಮಳ ತಾಯಿತಂದೆಗಳ ಬಗ್ಗೆ, ಅವರ ಸಂಸಾರದ ಬಗ್ಗೆ ನೆರವಾಗಿದ್ದೇನೆ? ಅವಳ ತಾಯಿ ಒಮ್ಮೆ ಬಚ್ಚಲ ಮನೆಯಲ್ಲಿ ಜಾರಿ ಬಿದ್ದು ಇಪ್ಪತ್ತು ದಿನ ನರಳಿದರು. ರಮನ್ನ ಒಂದಷ್ಟು ದಿನ ಕಳಿಸಿಕೊಡಿ ಎಂದು ಮಾವ ಬರೆದಿದ್ದರು. ರಮ ಅದನ್ನು ಓದಿ ಗೋಳಾಡಿದ್ದಳು. ತೌರಿಗೆ ಹೋಗ್ತೀನಿ ಎಂದು ಹಟಮಾಡಿ ಹೋಗಿದ್ದಳು. ಆದರೆ ಒಂದು ವಾರವಾಗುವುದರೊಳಗೆ ಅವಳಿಗೆ ಕಾಗದ ಬರೆದು ಜೊತೆಯಲ್ಲಿ ಕರೆದುಕೊಂಡು ಹೋಗಿರುವ ಮಕ್ಕಳ ಸ್ಕೂಲು ಹೋಗುತ್ತದೆ. ಜೊತೆಗೆ ನನಗೂ ಕಷ್ಟವಾಗುತ್ತದೆ ಬಾ ಎಂದು ಬರೆದು ವಾಪಸು ಕರೆಸಿಕೊಂಡಿದ್ದೆ. ನಾನು ಅವಳ ಭಾವನೆಯಲ್ಲಿ ಸಂಪೂರ್ಣ ತಾದಾತ್ಮ್ಯ ಪಡೆಯಲು ಸಾಧ್ಯ ಇಲ್ಲದಾಗ, ಶಶಿಯ ಬಗ್ಗೆ ನನಗಿರುವ ಕಕ್ಕುಲತೆಯಂತೆಯೇ ಅವಳೂ ಭಾವನೆ ಹೊಂದಿರಬೇಕೆಂದು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿಯಾದ್ದು?
ನಾನು ಶಶಿಯ ಸೇವೆ ಮಾಡುತ್ತೇನೆ ಎಂದಾಕ್ಷಣ ಅದು ಸಂಪೂರ್ಣವಾಗಿ, ಕಾವ್ಯಗಳಲ್ಲಿ ಬರುವಂತಹ ನಿಷ್ಕಲ್ಮಷ ಪ್ರೀತಿಯ ಕುರುಹಾಗುತ್ತದೆಯೇ? ಕೆಟ್ಟವಾಸನೆ ಬಂದಾಗ, ಅಸಹ್ಯವಾದದ್ದನ್ನು ಕಂಡಾಗ ಮೂಗು ಕಳವಳಿಸುತ್ತದೆ. ಕಣ್ಣು ಮುಚ್ಚುತ್ತದೆ. ಅದನ್ನೇ ತಿರಸ್ಕಾರವೆಂದೇಕೆ ಭಾವಿಸಬೇಕು? ಅಲ್ಲದೆ ಶಶಿ ಒಂದು ರೀತಿಯಲ್ಲಿ ನನ್ನ ಜೀವನದ ಅನಿವಾರ್ಯ ಅಂಗವಾಗಿದ್ದಾನೆ. ಬೊಜ್ಜು ಹೊಟ್ಟೆಯಿರುವವನು ಅದನ್ನು ಹೊತ್ತುಕೊಂಡೇ ಎಲ್ಲೆಡೆ ಓಡಾಡಬೇಕು. ಅದೆಷ್ಟು ಭಾರವಾದರೂ, ಅದರ ಇರುವಿಕೆ ಎಷ್ಟೇ ಬೇಸರ ತರುವಂತಹುದಾದರೂ ಅದನ್ನು ಹೋಗಲಾಡಿಸಿಕೊಳ್ಳುವುದು ಅಸಾಧ್ಯ. ಹಾಗೆಯೇ ಶಶಿ ನನ್ನ ಜೀವನದಲ್ಲಿ. ಹೀಗಾಗಿ ನಾನು ಶಶಿಯನ್ನು ನೋಡಿಕೊಳ್ಳುತ್ತಿರುವುದು ಪ್ರೀತಿಯ ಭರಪೂರದ ಭಾವನೆಯಿಂದಲೋ ಅಥವಾ ನನ್ನ ಮನಸ್ಸಿನಾಳದಲ್ಲಿ ಇರುವುದ ಅನಿವಾರ್ಯವಾದದ್ದನ್ನು ಸಹಿಸಿಕೊಳ್ಳದೇ ವಿಯಿಲ್ಲವೆಂಬ ಭಾವನೆಯೋ? ವಾಟ್ ಕೆನಾಟ್ ಬಿ ಕ್ಯೂರ್ಡ್ ಮಸ್ಟ್ ಬಿ ಎನ್ಡ್ಯೂರ್ಡ್ ಅಲ್ಲವೇ? ಹೀಗಾಗಿ ಎಲ್ಲ ಸೇವೆಯ ಹಿಂದೆ ಪ್ರೀತಿ ನೆಲಸಿದೆಯೆಂಬುದು ಸರಿಯಿಲ್ಲವೇನೋ.
ಇನ್ನು, ಒಂದು ಸೇವೆಯನ್ನೋ ಶುಶ್ರೂಷೆಯನ್ನೋ ದೀರ್ಘಕಾಲ ಮಾಡುತ್ತ ಹೋದರೆ ಅದರ ಹಿಂದಿರುವ ಭಾವನೆ ಕಾಲಕ್ರಮೇಣ ಬತ್ತಿ ಹೋಗುವುದು ಸಹಜ. ಡಾಕ್ಟರು ನರ್ಸುಗಳು ರೋಗಿಗಳು ಶುಶ್ರೂಷೆ ನಡೆಸುತ್ತಾರಲ್ಲ. ನಮಗೆ ಅತ್ಯಂತ ಪ್ರಿಯವಾದ ವೃತ್ತಿಗಳಲ್ಲೂ ಅಸಹ್ಯಪಡುವ ಅಂಶಗಳನ್ನು, ತಮಗೆ ಶಾರೀರಿಕ ಮಾನಸಿಕ ಸಂಬಂಧವಿಲ್ಲದಿದ್ದರೂ ನಿರ್ವಿಕಾರವಾಗಿ ಸಹಿಸಿಕೊಳ್ಳುತಾರಲ್ಲ. ಅವರ ಸೇವೆಯ ಹಿಂದೆ ಭಾವನೆಯ ಆದ್ರ್ರತೆಯಿರುವುದಿಲ್ಲ. ಕೆಲವು ವೇಳೆ ಭಾವನೆಯಿದ್ದರೆ ಸೇವೆಯ ರೀತಿ ಅಸಮರ್ಪಕವಾಗಿ ಬಿಡಬಹುದು. ಅಷ್ಟು ಕಾರಣದಿಂದಲೇ ಡಾಕ್ಟರು ನರ್ಸುಗಳು ಮಾಡುವುದು ಸೇವೆಯಲ್ಲ ಎನ್ನಲಾದೀತೆ? ಸೇವೆ ಪ್ರೊಫೆಷನಲೈಸ್ಡ್ ನಿಜ; ಸೇವೆಗಾಗಿ ಅವರು ವೇತನ ಪಡೆಯುತ್ತಾರೆಂಬುದೂ ನಿಜ. ಆದರೆ ಅದು ಉಪಯುಕ್ತವಾಗದೇನೂ ಹೋಗುವುದಿಲ್ಲವಲ್ಲ. ಶಶಿಯ ಶುಶ್ರೂಷೆಯಲ್ಲಿ ನನಗೆ ಸಂತೋಷ ಇದೆಯೇ? ಅದನ್ನು ಹೇಳಿಕೊಳ್ಳುವ ಧೈರ್ಯ ನನಗಿಲ್ಲ. ಹಾಗಾದರೆ ನನ್ನ ಸೇವಾ ರೀತಿಯೂ ನಿರ್ವಿಕಾರವಾದದ್ದೇ. ದೀರ್ಘ ಸಹಚರ್ಯದಿಂದ ತಾನಾಗಿಯೇ ಉಂಟಾಗುವ ನಿರ್ಲಿಪ್ತತೆ ರಮಳಲ್ಲಿ ಬರಲು ಸಾಧ್ಯವಾಗದ್ದು ಅಕ್ಷಮ್ಯವೇನಲ್ಲ. ಅಲ್ಲದೆ ಶಶಿ- ಒಂದು ರೀತಿಯ ಸಾಂಸಾರಿಕ ಪರಿಸರದಲ್ಲಿ- ಅವಳ ಎದುರಿನ ದಡಕ್ಕೆ ಸೇರಿದವನು; ಆದ್ದರಿಂದ ತನ್ನವನು ಎನ್ನಿಸಿಕೊಳ್ಳಲಾರ. ಜೊತೆಗೆ ತನ್ನ ಮಕ್ಕಳ ಬಗ್ಗೆ ಎಲ್ಲ ತಾಯಿಯರಿಗೆ ಸಹಜವಾದ ಕಾಳಜಿಯಿಂದಾಗಿ ಪೂರ್ವಗ್ರಹದಿಂದಾಗಿ ಅವಳ ವರ್ತನೆ ನನಗೆ ಸ್ವಲ್ಪ ಕಠಿಣವೆಂಬಂತೆ ಕಾಣಬಹುದೇನೋ!
ನಾನೇ ಎಷ್ಟೋ ವೇಳೆ ಶಶಿಯ ಬಗ್ಗೆ ಕಹಿಯಾದ ರೀತಿಯಲ್ಲಿ ನಡೆದು ಕೊಂಡದ್ದೂ ಉಂಟಲ್ಲವೇ? ಹೀಗನ್ನಿಸಿದಾಗ ಆವತ್ತಿನ ಘಟನೆಯೊಂದು ಮನಸ್ಸಿನಲ್ಲಿ ರೀಲು ಬಿಚ್ಚಿಕೊಳ್ಳುತ್ತದೆ. ಶಶಿಗೆ ಹೀರೆಕಾಯಿಯೆಂದರೆ ಆಗದು. “ಎಲ್ಲ ತರಕಾರಿಗಳನ್ನೂ ತಿನ್ನಬೇಕು ಕಣೋ. ನಿನ್ನಂತೆ ಕಾಯಿಲೆ ಇರೋರು ಅದು. ಬೇಡ ಇದು ಬೇಡ ಅನ್ನಬಾರದು" ಎಂದು ಎಷ್ಟೋ ಸಲ ಅವನಿಗೆ ಬುದ್ಧಿ ಹೇಳಿದ್ದೆ. ಶಶಿಯದು ಏತಿ ಎಂದರೆ ಪ್ರೇತಿ ಅಂತಾರಲ್ಲ. ಅಂತಹ ಸ್ವಭಾವ. ತನಗೆ ಬೇಡ ಎಂದರೆ ಬೇಡವೇ ಬೇಡ ಎಂಬ ಹಟ. “ಒಂದುಸಲ ಬಾಯಿಗಿಟ್ಟುಕೊಂಡು ನೋಡಯ್ಯ ಸೇರದಿದ್ದರೆ ಬಿಟ್ಟುಬಿಡುವೆಯಂತೆ ಎಂದು ಹೇಳಿದರೂ ಕೇಳ; ತಾನು ಅಂದುಕೊಂಡದ್ದೇ ಸರಿ ಎಂಬ ಶಠತನ, ಆದರೆ ವಿಚಿತ್ರವೆಂದರೇ ನಮ್ಮ ಸುಷ್ಮಂಗೆ ಹೀರೇಕಾಯಿ ಅಂದರೆ ಪ್ರಾಣ. ಅವರ ಕ್ಲಾಸಲ್ಲಿ ಟೀಚರ್ರು ಯಾವ ಯಾವ ತರಕಾರಿಯಲ್ಲಿ ಯಾವ ಯಾವ ವಿಟಮಿನ್ನುಗಳಿರುತ್ತೆ, ಯಾವ ವಿಟಮಿನ್ನಿನಿಂದ ದೇಹಕ್ಕೆ ಯಾವ ಪುಷ್ಟಿ ಸಿಕ್ಕತ್ತೆ ಎಂದೆಲ್ಲ ಹೇಳುತ್ತಾರಂತೆ ಅದಕ್ಕೇ ಅವಳು ನಿತ್ಯ ಊಟಕ್ಕೆ ಕೂತಾಗ ಒಂದಷ್ಟು ಆರೋಗ್ಯದ ಪಾಠ ಮಾಡುತ್ತಾಳೆ. ಹುಳಿಗೋ ಪಲ್ಯಕ್ಕೋ ತೊವ್ವೆಗೋ ಹಾಕಿರುವ ತರಕಾರಿ ಯಾವುದೆಂದು ತಿಳಿದು ಅದರ ಪೌಷ್ಟಿಕಾಂಶದ ಬಗ್ಗೆ ಲೆಕ್ಚರ್ ಹೊಡೆಯೋದು ರೂಢಿ. ಅವರ ಟೀಚರ್ನಿಂದಾಗಿ ಅವಳಂತೂ ಎಲ್ಲ ತರಕಾರಿಗಳನ್ನೂ ತಿನ್ನುತ್ತಾಳೆ; ಹೀರೇಕಾಯಿ ಅಂದರೆ ಅವಳಿಗೆ ವಿಶೇಷ ಮಮತೆ. ವಿಶೇಷ ಪ್ರೀತಿಗೆ ಅವರ ಟೀಚರ್ ಕಾರಣವಾಗಿರಲಾರರು.
ಹೀರೇಕಾಯಿ ಅವಳಿಗೆ ಇಷ್ಟ ಅನ್ನುವ ಕಾರಣದಿಂದ ರಮ ಅವತ್ತು ಅದರ ತೊವ್ವೆ ಮಾಡಿದ್ದಳು. ಹಾಗಂತ ಅದನ್ನ ಶಶಿಗೆ ಬಲವಂತವಾಗಿ ತಿನ್ನಿಸುವ ಪ್ರಯತ್ನವೇನೂ ಮಾಡಲಿಲ್ಲ. ಆದರೆ ಅವತ್ತು ಕ್ಯಾರಿಯರ್ಗೆ ಊಟ ಕಲಸಿ ಹಾಕುವಾಗ, ಒಂದೇ ಸೌಟಿಂದ ಹುಳಿ ತೊವ್ವೆಗಳೆರಡನ್ನೂ ಉಪಯೋಗಿಸಿದ್ದಳೋ ಏನೋ, ಅವನ ಹುಳಿಯನ್ನದ ಡಬ್ಬಿಯಲ್ಲಿ ಒಂದೆರಡು ಹೀರೇಕಾಯಿ ಹೋಳುಗಳಿದ್ದುವಂತೆ. ರಮಳೇನೂ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದಾಳೆನ್ನಲು ಸಾಧ್ಯವಿರಲಿಲ್ಲ. ಯಾರು ಮಾಡಿದರೂ ಗಡಿಬಿಡಿಯಲ್ಲಿ ರೀತಿ ಆಗುವಂಥದೇ. ಆದರೆ ಅವತ್ತು ಮಧ್ಯಾಹ್ನ ಕ್ಯಾರಿಯರ್ ಹುಡುಗ ಡಬ್ಬಿಯನ್ನು ವಾಪಸ್ ಮನೆಗೆ ತಂದುಕೊಟ್ಟಾಗ ನೋಡಿದರೆ ಕಳಿಸಿದ್ದ ಅನ್ನಪೂರ್ತಿ ಹಾಗೇ ಇತ್ತಂತೆ, ಮಂಜ್ಜಿಗೆ ಅನ್ನವನ್ನು ಕೂಡ ಅವನು ಮುಟ್ಟಿರಲಿಲ್ಲ.
ಸರಿ, ಸಂಜೆ ಆಫೀಸಿನಿಂದ ಬಂದಾಗ ರಮ ದೂರು ನೀಡಿದಳು. ಅವಳೂ ಸಾಮಾನ್ಯಳೇನಲ್ಲ. ನಾನು ಬರುವವರೆಗೆ ಕ್ಯಾರಿಯರ್ ತೊಳೆದು ಕೂಡ ಇಡದೆ ಶಶಿ ಹೇಗೆ ವಾಪಸ್ಸು ಕಳಿಸಿದ್ದನೋ ಅದೇ ರೀತಿಯೇ ಇಟ್ಟಿದ್ದಳು. ಅದನ್ನ ತಂದು ನನ್ನ ಮುಂದೆ ಡಬ್ಬಿಗಳಲ್ಲಿ ಬೇರೆ ಬೇರೆಯಾಗಿರಿಸಿ ತೋರಿಸಿದಳು. “ಏನೇ ಇದು!"
ನೋಡಿ, ಅಷ್ಟು ಕಷ್ಟಪಟ್ಟು ಟೈಮಿಗೆ ಸರಿಯಾಗಿ ಅಡಿಗೆ ಮಾಡಿ ಕಳಿಸಿದರೆ ರಾಜಕುಮಾರರು ಹೀಗೆ ವಾಪಸ್ಸು ಕಳಿಸಿದ್ದಾರೆ?" ಎಂದಳು ಮಗುಮ್ಮಾಗಿ.
ಯಾರು ಶಶೀನಾ?"
ಮತ್ತಿನ್ನಾರು? ಅವನಲ್ಲದೆ ಇನ್ಯಾರಿದ್ದಾರೆ ರಾಜಕುಮಾರರು ನಮ್ಮ ಮನೇಲಿ" ಎಂದು ಮೂತಿ ಊದಿಸಿದಳು.
ಯಾಕಂತೆ."
ನೀವೇ ವಿಚಾರಿಸಿ" ಎಂದು ಹೊರಟೇಬಿಟ್ಟಳು. ಮನೆಗೆ ಕಾಲಿಡುವುದಕ್ಕಿಲ್ಲ, ರೀತಿಯ ಫಿರ್ಯಾದುಗಳ ವಿಚಾರಣೆ ಮಾಡುವುದು ಯಾರಿಂದಾಗುತ್ತದೆ? ನನ್ನ ಸಹನೆಗಾದರೂ ಮಿತಿಯಿರಬೇಡವೇ?
ಲೋ, ಶಶಿ, ಬಾರೋ ಇಲ್ಲಿ" ಎಂದೆ. ಅನು ತಲೆಬಾಚಿಕೊಳ್ಳುತ್ತಿದ್ದವನು ಕೈಯಲ್ಲಿ ಬಾಚಣಿಗೆ ಹಿಡಿದೇ ರೂಮಿನಿಂದ ಹೊರಗೆ ಬಂದ.
ಏನೋ ಇದು? ಯಾಕೋ ಊಟ ಮಾಡಲಿಲ್ಲ?"
ನೋಡು ನಿಂಗೇನು ಕಾಣಿಸಲ್ಲವಾ?" ಅಂದ. ನನ್ನ ಕಂಡರೆ ಇವನಿಗೆಷ್ಟು ತಿರಸ್ಕಾರ. ಏನಾದರೂ ಕೇಳಿದರೆ ನೀನೇ ನೋಡಿಕೋ ಎಂದು ಹೇಳುತ್ತಾನಲ್ಲ. ಕೋಪ ಬಂತು. “ಯಾಕೆ ಊಟ ಮಾಡ್ಲಿಲ್ಲ ಅಂದರೆ ಏನೋ ಹೇಳ್ತಾನೆ! ಬೊಗಳೋ" ಎಂದೆ ಗಟ್ಟಿಯಾಗಿ. ಅವನು ದಾರಿಗೆ ಬಂದ.
ನೋಡು ಮತ್ತೆ, ನಂಗೆ ಸೇರಲ್ಲ ಅಂತ ಗೊತ್ತಿದ್ದರೂ ಹೀರೇಕಾಯಿ ಅಡಿಗೆ ಮಾಡಿ ಕಳಿಸಿರೋದು? ನಾನು ಊಟ ಮಾಡೋದು ಅತ್ತಿಗೆಗೆ ಬೇಕಿಲ್ಲ" ಎಂದು ವಿವರಣೆ ನೀಡಿದ.
ಇದನ್ನು ಒಳಗಿನಿಂದಲೇ ಕೇಳಿಸಿಕೊಂಡ ರಮ ಬಂದಳು. ಬರುತ್ತ ಒಳಗಿನಿಂದ ಅಡಿಗೆ ತುಂಬಿದ್ದ ಪಾತ್ರೆಗಳನ್ನು ಒಂದೊಂದಾಗಿ ತಂದು ನನ್ನ ಮುಂದೆ ಸಾಲಾಗಿರಿಸಿದಳು ನೆಲದ ಮೇಲೆ. ಮೂಕಳಾಗಿ ಅವಳು ಮಾಡುತ್ತಿದ್ದ ಕೆಲಸ ನನ್ನ ರೇಗಿಸಿತ್ತು. “ಏನೇ ಇದೆಲ್ಲ ರಾದ್ಧಾಂತ" ಎಂದೆ. ಕೊನೆಯ ಪಾತ್ರೆಯನ್ನು ತಂದು ನೆಲದ ಮೇಲಿಟ್ಟು ಒಂದೊಂದರ ಮುಚ್ಚಳವನ್ನೇ ತೆಗೆದು ಇದು ನೋಡಿ, ಅನ್ನ. ಇದು ಹುರುಳೀಕಾಯಿ ಹುಳಿ. ಇದು ಹೀರೇಕಾಯಿ ತೊವ್ವೆ - ಎಂದು ತೋರಿಸಿಸುಷ್ಮಂಗೇ ಇಷ್ಟವಲ್ಲಾಂತ ಹೀರೇಕಾಯಿ ತೊವ್ವೆನೇನೋ ಮಾಡಿದೆ. ಆದರೆ ಇಲ್ಲಿ ನೋಡಿ ಅದು ಬೇರೆಯೇ ಇದೆ. ಏನೋ ಕಲಸುವಾಗ ಒಂದೆರಡು ಹೀರೇಕಾಯಿ ಹೋಳು ಹುಳಿ ಅನ್ನದಲ್ಲಿ ಹೇಗೋ ಸೇರ್ಕೊಂಡಿದೆ. ಅದಕ್ಕೆ ನಾನೇನು ಮಾಡಲಿ" ಎಂದಳು. ಅವಳು ತಂದಿಟ್ಟ ಪಾತ್ರೆಗಳಿಂದ, ನೀಡಿದ ವಿವರಣೆಯಿಂದ ಅವಳಲ್ಲಿ ತಪ್ಪಿಲ್ಲ ಎಂದು ತಿಳಿಯಿತು, ನನ್ನ ಮುಖ ಗಡುಸಾಗಿ ಶಶಿಯ ಕಡೆ ತಿರುಗಿತು. ನಾನು ನನ್ನ ಕಡೆಗೆ ಬಂದಿದ್ದೇನೆ ಎಂಬುದನ್ನು ರಮ ತಿಳಿದಳೇನೋ. “ಏನೋ ಒಂದೆರಡು ಹೋಳು ಬಿದ್ದರೆ ಅವನು ಊಟ ಮಾಡಬಾರದು ಅಂತ ನಾನು ಹಾಗೆ ಕಳ್ಸಿದ್ದೀನಿ ಅಂತಾನಲ್ಲ" ಎಂದು ಅಳುವಿನ ಮಧ್ಯೆ, ಹೇಳಿದಳು. ನನ್ನ ಪರಿಸ್ಥಿತಿ ತೀರ ಕಷ್ಟದ್ದು!
ನೀನೇನು ಎಳೇ ಮಗುನೇನೋ, ಹೋಳನ್ನೆಲ್ಲ ತೆಗೆದು ತಿಂದಿದ್ದರೆ ಏನಾಗ್ತಿತ್ತು" ಎಂದು ಶಶಿಯನ್ನು ಕೇಳಿದೆ.
ನನಗೆ ಅದು ಸೇರಲ್ಲ" ಎಂದು ಹಾಡಿದ ರಾಗವನ್ನೇ ಹಾಡಿದ ಅವನದು ಯಾವತ್ತೂ ಇದೇ ಗೋಳು.
ನಿಂಗೆ ಬೇಕಾದ್ದನ್ನು ಮಾತ್ರವೇ ಮಾಡಬೇಕಾ? ಬೇರೆಯೋರಿಗೆ ಇಷ್ಟವಾದದ್ದನ್ನ ಅಡಿಗೆ ಮಾಡುವ ಅಧಿಕಾರ ಅವಳಿಗೆ ಇಲ್ಲವಾ? ಇದೇನು ನಿಮ್ಮಪ್ಪನ ಮನೇನಾ?" ಎಂದಿದ್ದೆ ಸಿಟ್ಟಿನಿಂದ.
ನಂಗೆ ಸೇರಲ್ಲ ಅಂತ ಗೊತ್ತಿದ್ದೂ, ಹೋಳನ್ನ ಯಾಕೆ ಸೇರಿಸ್ಬೇಕು? ನಾನು ಊಟ ಮಾಡಬಾರದೂಂತ ತಾನೇ!" ಅವನ ಮೊಂಡುವಾದದಿಂದ ನನಗೆ ಬೇಸರವಾಯಿತು.
ನೋಡಿದಿರಾ? ನಿಮ್ಮೆದುರಿಗೇನೇ ಹೇಗೆ ಮಾತಾಡ್ತಾನೆ! ಅವನಿಗೆ ಎಷ್ಟು ಮಾಡಿದರೂ ಅಷ್ಟೇನೇ. ನಾಯೀನ ಸಿಂಹಾಸನದ ಮೇಲೆ ಕೂಡಿಸಿದಂತೆ" ಎಂದು ಒಳಗೆ ಹೋದಳು. ಅವಳ ಮೇಲೆ ಇಲ್ಲದ ಆರೋಪ ಹೊರಿಸುತ್ತಾನೆ ಇವನು! ತಿಳಿದು ಮಾಡಿದ್ದಲ್ಲ ಎಬುದು ಸ್ಪಷ್ಟವಾಗಿಯೇ ಇದೆ. ಆದರೂ ಇವನ ಹಟಮಾರಿತನ ಹೇಳಿದ್ದನ್ನೇ ಸಾಸುವಂತೆ ಮಾಡುತ್ತಿದೆಯಲ್ಲ!
ನಾಳೆಯಿಂದ ಊಟಾನೇ ಕಳಿಸಬೇಡ ಕಣೆ. ಇವತ್ತು ಎಲ್ಲಿ ತಿಂದನೋ ಅಲ್ಲೇ ತಿಂದುಕೋತಾನೆ" ಎಂದು ರೇಜಿಗೆಯಿಂದ ಹೇಳಿ ಮುಂದಿನ ಕೆಲಸಕ್ಕೆ ಮೇಲೆದ್ದೆ. ಇವರಿಬ್ಬರ ಮಧ್ಯೆ ನಾನು ನರಳುವ ಹಾಗೆ ಆಯಿತಲ್ಲ. ನಾನೇನು ಕರ್ಮ ಮಾಡಿದ್ದಕ್ಕೆ ಜನ್ಮದಲ್ಲಿ ಶಿಕ್ಷೆ ಅನ್ನಿಸಿತ್ತು.
ಮಾರನೇ ದಿನ ರಾತ್ರಿ ರಮ ಎಲ್ಲರಿಗೂ ತಟ್ಟೆ ಹಾಕಿದಳು. ಮಕ್ಕಳು ಬಂದರು. ಶಶಿ ಬರಲಿಲ್ಲ. ಸ್ವಲ್ಪ ಹೊತ್ತು ಕಾದೆವು. “ಊಟಕ್ಕೆ ಬಾರೋ" ಅಂತ ಕೂಗಿದೆ. ಮಕ್ಕಳನ್ನು ಎಬ್ಬಿಸಿಅವನನ್ನು ಕರಕೊಂಡು ಬಾ" ಅಂತ ಹೇಳಿಕಳಿಸಿದೆ. ಅವನು ಬರಲಿಲ್ಲ. ನಾನೇ ಎದ್ದು ಅವನ ರೂಮಿಗೆ ಹೋದೆ. ಮುಸುಕು ಹಾಕಿಕೊಂಡು ಮಲಗಿಯೇಬಿಟ್ಟಿದ್ದ. “ಯಾಕೋ?" ಎಂದೆ. “ಹಸಿವಿಲ್ಲ" ಎಂದ. “ಯಾಕೆ ಹಸಿವಿಲ್ಲ? ಮಧ್ಯಾಹ್ನ ಊಟ ಮಾಡಿದ್ದು ತಾನೇ?"
ಸಾಯಂಕಾಲ ತಿಂಡಿ ತಿಂದುಕೊಂಡು ಬಂದೆ."
ಅದ್ಯಾಕೆ ತಿಂಡಿ ತಿನ್ನಬೇಕಾಗಿತ್ತು? ಮನೆಗೆ ಬಂದು ಊಟ ಮಾಡೋದು ಗೊತ್ತಿರಲಿಲ್ಲವಾ? ತಿಂದರೂ ಹೊಟ್ಟೆ ಬಿರಿಯಾ ಯಾಕೆ ತಿನ್ನಬೇಕು?"
ಯಾಕೆ ಅಂದ್ರೆ, ಇಲ್ಲಿ ಬಂದು ಉಪವಾಸ ಬೀಳಬೇಕಾ?" ಎಂದ ಮುಸುಕು ತೆರೆದು. ಅವನ ಮಾತು ಅರ್ಥವಾಗಲಿಲ್ಲ.
ಯಾಕೆ ಉಪವಾಸ ಬೀಳಬೇಕು? ದಿನಾನು ನಿಂಗೆ ಊಟ ಹಾಕಲ್ಲವಾ ಇಲ್ಲಿ. ಯಾವತ್ತೂ ಇಲ್ಲದ್ದು ಇವತ್ತೇನು ಸ್ಪೆಷಲ್ಲು?"
ಏನು ಸ್ಪೆಷಲ್ಲೋ ನಿನ್ನ ಹೆಂಡತೀನೇ ಕೇಳು" ಎಂದ. ತನಗೆ ರಮ ಸಂಬಂಧವಿಲ್ಲದವಳಂತೆನಿನ್ನ ಹೆಂಡತೀನ' ಎಂದು ಲಘುವಾಗಿ ಕರೆದದ್ದು ನನಗೆ ಸಹಿಸಲಾಗಲಿಲ್ಲ.
ಜ್ಞಾನ ಬೇಡವೇನೋ ನಿಂಗೆ ಅತ್ತಿಗೇನ ಹೀಗಾ ಕರೆಯೋದು? ಅತ್ತಿಗೆ ಅಂದರೆ ತಾಯಿ ಸಮಾನ" ಅಂದೆ.
ತಾಯಿ ಆಗಿದ್ದಿದ್ದರೆ ಮಕ್ಕಳನ್ನೇನೂ ಉಪವಾಸ ಸಾಯ್ಸಲ್ಲ" ಎಂದ.
ಅದಕ್ಕೇ, ಊಟಕ್ಕೆ ಬಾ ಅಂತಿರೋದು."
ಇದು ನೀನು ಕರೆಯೋದು ಅಷ್ಟೆ." ಅವನ ಮಾತು ವಿಚಿತ್ರವಾಗಿತ್ತು. ನಾನು ಕರೆದರೆ ಸಾಲದೆ, ಇನ್ನಾರು ಕರೆಯಬೇಕು ಇವನನ್ನು?
ಏನೋ ಇದು ರಗಳೆ. ಮೇಳದ ಸಮೇತ ಬಂದು ನಿನ್ನ ಕರಕೊಂಡು ಹೋಗಬೇಕಾಗ? ನಿನ್ನ ದಿನ ಯಾರು ಕರೀತಿದ್ದದ್ದು?"
ಪ್ರತಿದಿನದ ಹಾಗಲ್ಲವಲ್ಲ ಇವತ್ತು?" “ಇನ್ನೆಂಥದು ಮತ್ತೆ?"
ಅವರನ್ನೇ ಕೇಳು."
ಪುನಃ ಮಾತು ಪ್ರಾರಂಭವಾದ ಕಡೆಗೆ ಹೊರಳ್ತಾ ಇದೆ. ಇದಕ್ಕೆ ಕೊನೆಯೇ ಇಲ್ಲವೇ ಅನ್ನಿಸಿತು.
ಏನೇ ಇದು ಮತ್ತೆ ನಿಮ್ಮದು" ಅಂದು ಒಳಗಿದ್ದ ರಮಳ ಕಡೆ ಮುಖ ಮಾಡಿ ಕೂಗಿದೆ. ಅವಳು ಬಂದಳು. ಹಿಂದೆಯೇ ಮಕ್ಕಳೂ ಎದ್ದು ಬಂದಿದ್ದವು. ಅವರಿಗಂತೂ ದೃಶ್ಯಗಳು ತುಂಬ ಪರಿಚಿತವಾದುವೇ.
ಏನೇ ಇವನು ಹೇಳ್ತಾ ಇರೋದು?" 
ಏನೋಪ್ಪ ನಿಮ್ಮ ಅಣ್ಣ-ತಮ್ಮಂದಿರ ರಹಸ್ಯ ನಂಗೇನು ಗೊತ್ತು ಎಂದಳು ವ್ಯಂಗ್ಯವಾಗಿ. ಇಬ್ಬರೂ ಒಂದೊಂದು ತುದಿಯಲ್ಲಿ ನಿಂತು ನನ್ನನ್ನು ಆಟವಾಡಿಸ್ತಾ ಇದಾರೆ ಇವರು. ಇಬ್ಬರ ಮಾತುಗಳೂ ಒಗಟುಗಳೇ. ನನ್ನ ಸಹನೆಯ ಕಟ್ಟೆ ಒಡೆದಿತ್ತು. ಶಶಿಯ ಹತ್ತಿರ ಹೋಗಿ ಅವನ ಹೊದಿಕೆಯೆಳೆದು, ಅವನ ರಟ್ಟೆ ಹಿಡಿದು ಮೇಲೆತ್ತಿನನ್ನ ಏನೂಂತ ತಿಳಿದಿದ್ದೀರಿ ನೀವು? ಬೇವಾರ್ಸಿ ಸೂಳೇಮಕ್ಕಳ" ಎಂದು ಅವನ ಮೇಲೆ ಕೈಯೆತ್ತಿದೆ.  ಆಗವನು ಮಾತಿಗೆ ಇಳಿದ.
ಹಾಗಾದ್ರೆ ಮಧ್ಯಾಹ್ನ ಯಾಕೆ ಕ್ಯಾರಿಯರ್ ಊಟ ಕಳಿಸಲಿಲ್ಲವಂತೆ" ಅಂದ. ನಾನು ಎಲ್ಲ ಉದ್ವೇಗ ಕಳೆದುಕೊಂಡು ಜರ್ರನೆ ಇಳಿದುಹೋದೆ. ನನ್ನ ಕೋಪ ರಮಳ ಕಡೆಗೆ ತಿರುಗಿತು. “ಇವನು ಹೇಳೋದು ನಿಜವಾ?"
ನೀವೇ ನಿನ್ನೆ ಹೇಳಿದ್ರಿ, ಅವನಿಗೆ ಊಟ ಕಳಿಸಬೇಡ ಅಂತ. ಅದಕ್ಕ ಕಳಿಸಲಿಲ್ಲ" ಅಂದಳು ತಣ್ಣಗೆ.
ಏನೋ ಕೋಪದಲ್ಲಿ ಕಳಿಸಬೇಡಾಂತ ಹೇಳಿದರೆ ಯೋಚನೆ ಮಾಡದೆ ಕಳಿಸದೇ ಇದ್ದು ಬಿಡೋದಾ!" ನನ್ನ ಮಾತಿನ ಕಾವು ಮತ್ತೆ ಏರಿತ್ತು.

ನೀವು ಕೋಪದಲ್ಲಿ ಬೇಡಾಂತೀರಿ. ಕಳಿಸಿದರೆ ತಿರುಗಾ ಕೋಪ ಮಾಡಿಕೊಂಡು ಯಾಕೆ ಕಲಿಸಿದೆ ಅಂದ್ರೆ ನಾನೆಲ್ಲಿ ಹೋಗಬೇಕು. ಒಂದೊಂದು ಕ್ಷಣಕ್ಕೆ ಒಂದೊಂದು ಮಾತಾಡಿದರೆ ಹೇಗೆ ನಾನು ಸಂಸಾರ ಮಾಡಿ ಸಾಯೋದು?"
ಒಟ್ನಲ್ಲಿ ನನ್ನ ತಲೆಯ ಮೇಲೇ ಗೂಬೆ ಕೂತುಕೊಂಡಿತು. ಯಾವುದೋ ಕೋಪದ ಭರದಲ್ಲಿ ಒಂದು ಮಾತಾಡಿದರೆ ಅದರ ಹಿಂದಿನ ಭಾವನೆಯೇನು ಅಂತ ಅರ್ಥಮಾಡಿಕೊಳ್ಳದೆ ಮಕ್ಕಿಕಾಮಕ್ಕಿ ನಡೆದುಕೊಂಡರೆ ಗತಿಯೇನು? ಅವನ ಮೇಲಿನ ಕೋಪದಿಂದ ಹೀಗೆ ಮಾಡಿ ನನ್ನನ್ನೇ ರಮ ಜವಾಬ್ದಾರನನ್ನಾಗಿ ಮಾಡುತ್ತಿದ್ದಾಳಲ್ಲ. ಇದು ಯಾವತ್ತು ಕೊನೆಯಾಗೋದು? ನಾವು ರೀತೀನೇ ಜಗಳ ಆಡ್ತಾ ಇದ್ದರೆ ಮಕ್ಕಳ ಮನಸ್ಸಿನ ಮೇಲೆ ಎಂಥ ಪರಿಣಾವುಂಟಾಗುತ್ತೆ; ಮುಂದೆ ಅವರು ನಮ್ಮ ಬಗ್ಗೆ ಯಾವ ರೀತಿ ಆಲೋಚನೆ ಮಾಡ್ತಾರೆ?
ನಾನೊಂದು ಹೇಳಿದರೆ ಅದರ ಅಕ್ಷರಾರ್ಥವನ್ನು ಹಿಡಿದು ನನ್ನ ಭಾವನೆ ತುಂಬಿ ಇವಳು ಹೇಗೆ ಕೋಪ ತೀರಿಸಿಕೊಡಳು. ನಮ್ಮ ಮತ್ತು ಭಾವನೆ ಬೇರೆಯಾದರೆ ನಮಗೇ ಅದು ಹೇಗೆ ಬೂಮರಾಂಗ್ ಆಗಬಹುದು. ಯಾಕೆ ಹೀಗೆ ಆಗತ್ತೆ. ಜಗಳ ಅಂದ್ರೆ ಅದೇ ಅಲ್ಲವೆ. ಕೋಪ ಒಂದೇ ಅಲ್ಲಿ ನಿಜ. ಅದನ್ನು ಹೊರಹಾಕುವ ಭಾಷೆಗೆ ಅಲ್ಲಿ ಬೆಲೆಯೇ ಇಲ್ಲ. ಆದರೆ ಜಗಳದಿಂದ ಎಳೆಯ ಮನಸ್ಸಿಗೆ ಅದೆಂಥ ಅನರ್ಥಕಾರಿ ಪರಿಣಾಮವಾಗತ್ತೆ. ನಮ್ಮ ಜಗಳ ಯಾವತ್ತು ನಿಲ್ಲತ್ತೆ? ಇಲ್ಲ ಇವನು ದೂರ ಹೋಗಬೇಕು. ಇವಳು ಹೋಗಬೇಕು. ಇವಳು ಹೋದರೆ ಮಕ್ಕಳ ಗತಿಯೇನು? ಇನ್ನೊಂದು ಮದುವೆಯಾಗಿ ಮಕ್ಕಳನ್ನ ಸಾಕಬೇಕೆ? ಆಗ ಮಲಮಕ್ಕಳು-ಮಲತಾಯಿ ಸಮಸ್ಯೆ ಬೇರೆ ಹೊಸದಾಗಿ ಸೇರಿ ಕೊಳ್ಳುತ್ತಲ್ಲವೆ? ಜೊತೆಗೆ ರಮ ನನಗೆ ಬೇಕಾದೋಳಲ್ಲವೇ? ಅಷ್ಟು ಸುಲಭವಾಗಿ ಇವಳನ್ನು ನಾನು ಕಳಕೊಳ್ಳೋದು ಸಾಧ್ಯವೇ? ಅದರ ಪರಿಣಾಮಗಳನ್ನ ನಾನು ಎದುರಿಸಬಲ್ಲೆನೇ? ಇಷ್ಟು ವರ್ಷಕಾಲ ನನ್ನ ಮೈಯ ಬಿಸುಪನ್ನು ಕೊಟ್ಟು ಜೀವನ ಹಗುರಮಾಡಿದ ಅವಳ ಬಗ್ಗೆ ಇಂಥ ಭಾವನೆ ನನಗೆ ಬರಬಹುದೇ?

- - -

ಶಶಿ ಹೋಗೋದೂಂದ್ರೆ ಅರ್ಥ ಏನು? ಸಾಯೋದೆ? ಅವನು ಬೇರೆ ಕಡೆ ಹೋದರೆ ಅಲ್ಲಿನ ಸುದ್ದಿ ಕೇಳುತ್ತಲೇ ಇರಬೇಕು. ಹಾಗೂ ನಮ್ಮ ಮನಸ್ಸಿನ ಕಿರಿಕಿರಿ ಹೋಗುವುದಿಲ್ಲ. ಅಂದರೆ ಅವನು ಸತ್ತರೆ.... ಅನ್ನೋ ಅರ್ಥ ನನ್ನ ಮನಸ್ಸಿನಲ್ಲಿ ಸುಳಿಯುತ್ತಿದೆಯೇ? ನನ್ನ ಸಂಸಾರವಷ್ಟೇ ಉಳಿಯುತ್ತದೆ. ಅವನೂಂದ್ರೆ ಒಂದು ರೀತಿ ಲಯಬಿಲಿಟಿ ಮಾತ್ರವೇ ಹಾಗಾದರೆ? ಜಗಳವೂ ಇಲ್ಲದ, ಜವಾಬ್ದಾರಿಯೂ ಇಲ್ಲದ, ಸಂಪೂರ್ಣ ನಮಗೆ ನಾವೇ ಇರಬಹುದಾದ ಪರಿಸ್ಥಿತಿ ಇದರಿಂದಾಗಬಹುದಲ್ಲವೇ? ನನ್ನ ಮನದಾಳದಲ್ಲಿ ಅವನು ಬೇಡವೆಂಬ ಭಾವನೆ ಇದೆಯೇ? ಇದ್ದಕ್ಕಿದ್ದಂತೆ ಜವಾಬ್ದಾರಿ ಸ್ವಾತಂತ್ರ್ಯ ಲಭಿಸಿದರೆ ಜೀವನ ಹಗುರ ಆಗುವುದಲ್ಲ! ಥೂ ನನ್ನ ಮನಸ್ಸಿಗಿಷ್ಟು ಬೆಂಕಿ ಹಾಕ! ಏನು ಯೋಚನೆ ನನ್ನದು. ಅವನು ಜೀವನದ ಜವಾಬ್ದಾರಿ ಅಂದರೆ ದುಡ್ಡು ತಗೊಂಡು ಜತೆಯಲ್ಲಿಟ್ಟುಕೊಳ್ಳುತ್ತ ಊಟ ಹಾಕೋದಲ್ಲವೇ? ಸ್ವಲ್ಪ ಎಚ್ಚರ ವಹಿಸಿದರಾಯಿತು. ಆದರೆ ಇವನ ಜವಾಬ್ದಾರಿ ಇಷ್ಟೆಯೇ? ಅಷ್ಟೆ ಆಗಿದ್ದಿದ್ದರೆ ಇಷ್ಟೆಲ್ಲ ರಾದ್ಧಾಂತಗಳು ಏಕಾಗಬೇಕಾಗಿತ್ತು. ಮನುಷ್ಯರು ಒಟ್ಟಿಗೇ ಒಂದೇ ಮನೆಯಲ್ಲಿ ಬಾಳುವುದು ಎಂದರೆ ಬರೀ ಊಟಮಾಡುವುದಲ್ಲವಲ್ಲ. ಒಂದು ಸಣ್ಣ ವಿಷಯ ಎಲ್ಲರ ತಲೆ ಬಿಸಿಮಾಡಿ ಜೀವನವನ್ನು ಅದೆಷ್ಟು ಕಹಿಯಾಗಿ ಮಾಡುತ್ತದಲ್ಲ. ಏನು ಮಾಡಲು ಹೋದರೂ ನಮ್ಮ ಮೇಲೆ ಸವಾರಿ ಮಾಡುತ್ತವೆ ಸಮಸ್ಯೆಗಳು. ಇದರಲ್ಲಿ ಸೇರಿಕೊಳ್ಳದೆ ನಿರ್ಲಿಪ್ತನಾಗಿರಲು ಸಾಧ್ಯವಿಲ್ಲ. ಸೇರಿಕೊಂಡು ಸುಳಿಗೆ ಬೀಳಲೂ ಆಗುವುದಿಲ್ಲ.
ಹಳೆಯ ನೆನಪುಗಳೆಲ್ಲ ಬಂದು, ಹಾಗಾದರೆ ಶಶಿ ಸತ್ತ. ನಾನು ಸ್ವತಂತ್ರನಾಗಿದ್ದೇನೆಯೇ ಎನಿಸುತ್ತದೆ. ಇನ್ನು ಮೇಲೆ ಅವನ ಮಾತ್ರೆ ಔಷಗಳ ಎಚ್ಚರ ವಹಿಸಬೇಕಾಗಿಲ್ಲ; ಕ್ಯಾರಿಯರ್ ಕಳಿಸುವ ಜವಾಬ್ದಾರಿಯನ್ನು ರಮ ವಹಿಸುವ ಹಾಗಿಲ್ಲ. ಅವನ ಹತ್ತಿರ ಹೋದರೆ ತನ್ನ ಮಕ್ಕಳಿಗೆ ರೋಗ ಅಂಟುತ್ತದೇನೋ ಎಂಬ ಭೀತಿ ಅವಳಿಗಿರಬೇಕಾಗಿಲ್ಲ. ಅವನಿಗೆ ಅಟ್ಯಾಕ್ ಬಂದು ಹಿಡಿದುಕೊಳ್ಳುವ ಪ್ರಮೇಯ ನನಗಿಲ್ಲ. ನಾವಿಬ್ಬರೂ ಜಗಳ ಆಡಲು ಇನ್ನು ಶಶಿ ಕಾರಣವಾಗಲಾರ. ಅಂತೂ ಅವನು ಸತ್ತು ನನ್ನ ಭಾರ ಇಳಿಸಬೇಕಾಯಿತೇ? ಒಂಥರ ಅವನದು ತ್ಯಾಗವೆ ಎನಿಸಿ ಅವನ ಮುಖ ಮನಸ್ಸಿನಲ್ಲಿ ಮೂಡಿ ಕಣ್ಣುಗಳಲ್ಲಿ ನೀರು ತುಂಬುತ್ತದೆ. ನಾವು ಹೊಂದಿಕೊಳ್ಳಲಾರದೆ ಆದ ಜಗಳಗಳಿಗೆ ಅವನೇ ಕಾರಣವೆಂದು ಹೇಳುವುದು ಸರಿ ಆದೀತೇ? ಅವನು ಎಳಸು ನಿಜ, ವಿಚಿತ್ರ ನಿಜ, ಆದರೆ ಅವನು ನಮ್ಮ ಜೀವನದಲ್ಲಿ ಮುಳ್ಳು ಎಂಬುದು ಸರಿಯೇ? ಅವನಿಗೆ ನಾನೆಷ್ಟು ಅನ್ಯಾಯ ಮಾಡಿದೆ? ನನ್ನಿಂದಲೇ ಅಲ್ಲವೇ ಅವನು ಸತ್ತದ್ದು? ನನ್ನ ಕೋಪ ಅವನನ್ನು ಸಾವಿಗೆ ನೂಕಿತಲ್ಲವೇ?
ಅನಿಸಿಕೆಗಳು ನನ್ನನ್ನು ನುಗ್ಗುನುರಿ ಮಾಡುತ್ತಿವೆ. ನಿದ್ದೆ ಬಾರದೆ ಆಚೆ ಈಚೆ ಹೊರಳಾಡುತ್ತೇನೆ. ನಿಟ್ಟುಸಿರು ಹೊಮ್ಮುತ್ತದೆ. ರಮಳೂ ಪಕ್ಕ ಬದಲಾಯಿಸಿಫ್ಚ್" ಎಂದು ಲೊಚಗುಟ್ಟಿಕೊಳ್ಳುತ್ತಾಳೆ.
ಯಾಕೆ ನಿದ್ದೆ ಬರಲಿಲ್ಲವೇ?" ಎಂದು ಕೇಳುತ್ತೇನೆ.
 ಮೌನ.
ನಿದ್ದೆ ಬರಲಿಲ್ಲವಾ?" ಎನುತ್ತೇನೆ ಮತ್ತೆ.
ಅವನು ಸತ್ತು ನಮ್ಮ ಮೇಲೆ ಅಪವಾದ ಬರೋಹಾಗಾಯಿತು" ಎಂದಳು ನನ್ನ ಪ್ರಶ್ನೆಯನ್ನು ಗಮನಕ್ಕೆ ತೆಗೆದುಕೊಳ್ಳದೆ.
ಯಾಕೆ ಅಪವಾದ ಬರತ್ತೆ?"
ಇನ್ನೇನು? ಇಷ್ಟು ದಿನ ನೋಡಿಕೊಂಡರೂ, ಅವನು ಸತ್ತ ರೀತಿ ನೋಡಿ ಜನ ಏನಂದುಕೊಳ್ಳುವುದಿಲ್ಲ."
ಏನಂದುಕೊಳ್ತಾರೆ?"
ಮನೇಬಿಟ್ಟು ಹೋಗಿ ಬಾವಿಯಲ್ಲಿ ಬಿದ್ದು ಸತ್ತ. ಅವರಣ್ಣ ಅತ್ತಿಗೆ ಕೊಡೋ ಹಿಂಸೆ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡ ಅನ್ನಲ್ವಾ?"
ಪೋಸ್ಟ್ ಮಾರ್ಟಂ ರಿಪೋರ್ಟ್ ಕ್ಲಿಯರ್ ಆಗಿದೆಯಲ್ಲ."
ಎಲ್ಲರಿಗೂ ಪೋಸ್ಟ್ಮಾರ್ಟಂ ರಿಪೋರ್ಟನ್ನು ತೋರಿಸ್ತಾ ಹೋಗ್ತೀರಾ? ದುಡ್ಡು ಕೊಟ್ಟು ಸರ್ಟಿಫಿಕೇಟ್ ತಗೊಂಡಿದ್ದಾರೆ ಅಂತ ಅಂತಾರೆ ಜನ."
ಅಂದುಕೊಳ್ಳಲಿ ಬಿಡು. ಎಲುಬಿಲ್ಲದ ನಾಲಿಗೆ' ಎಂದು ಮಲಗುವವನಂತೆ ಈಚೆ ಮಗ್ಗುಲಿಗೆ ತಿರುಗುತ್ತೇನೆ.
‘ಅಂದುಕೊಳ್ಳಲಿ' ಬಿಡು ಎಂದರೂ ಹಾಗೆ ಬಿಡಲು ಸಾಧ್ಯವೇ? ನಾನು ಇನ್ಸ್ಪೆಕ್ಟರಿಗೆ ಇನ್ನೂರು ರೂಪಾಯಿ ಕೊಟ್ಟದ್ದು ಯಾಕೆ? ನಮಗೆ ವಾಸ್ತವ ಸಂಗತಿಯೇ ಮುಖ್ಯವಾದರೆ ಯಾಕೆ ಹೀಗೆ ಮಾಡಬೇಕು? ಜೀವನದಲ್ಲಿ ಮುಕ್ಕಾಲು ಪಾಲಿನ ನಮ್ಮ ಚರ್ಯೆಗಳು ಬೇರೆಯವರಿಗಾಗಿಯೇ ಅಲ್ಲವೇ? ಜನ ಏನಂದುಕೊಳ್ಳುತ್ತಾರೋ ಅಂತಲೇ ನಮ್ಮ ಜೀವನವೆಲ್ಲ ರೂಪುಗೊಳ್ಳುವುದಲ್ಲವೇ? “ಅಂದುಕೊಳ್ಳಲಿ ಬಿಡು' ಎಂದಷ್ಟು ಸುಲಭವಾಗಿ ಜನಗಳು ನಮ್ಮ ಬಗ್ಗೆ ಅಂದುಕೊಳ್ಳುವುದನ್ನು ಕಡೆಗಣಿಸಲು ಯಾಕೆ ಸಾಧ್ಯವಾಗುವುದಿಲ್ಲ? ಶಶಿಯ ಹೊಟ್ಟೆಯಲ್ಲಿ ಜೀರ್ಣವಾಗದ ಸ್ವಲ್ಪ ಆಹಾರಾಂಶಗಳಿದ್ದವು ಎಂದು ಪೋಸ್ಟ್ ಮಾರ್ಟಂ ರಿಪೋರ್ಟಿನಲ್ಲಿತ್ತು. ಇಲ್ಲಿಂದ ಆವತ್ತು ಬೆಳಿಗ್ಗೆ ಎದ್ದುಹೋದವನು ತಿಂಡಿಗಿಂಡಿಯೇನಾದರೂ ತಿಂದುಕೊಂಡು ಹೋದನೇನೋ. ಎಲ್ಲವೂ ಪೂರ್ವ ಯೋಜನೆಯಂತೆಯೇ ಆಗಿರಬೇಕು. ಅವನು ಹಿಂದೆ ಬಾಣಸವಾಡಿಯ ಬಾವಿಯನ್ನು ಕಂಡಿದ್ದಿರಬೇಕು. ಅದೇಕೆ ಅವನ ಮನಸ್ಸಿನಲ್ಲಿ ಮೂಡಿ ನಿಂತಿತ್ತು? ಇಲ್ಲಿಂದ ಅಷ್ಟು ದೂರ ಹೋಗುವವರೆಗೆ ಸಾಯಬೇಕೆಂಬ ದೃಢ ನಿರ್ಧಾರ ಅವನಲ್ಲಿರಬೇಕಾದರೆ ಅವನದಿನ್ನೆಂತಹ ಕಲ್ಲು ಮನಸ್ಸು! ರಿಪೋರ್ಟು ಏನಾದರೂ ಹೇಳಿಕೊಳ್ಳಲಿ. ಶಶಿ ಆತ್ಮಹತ್ಯೆಯನ್ನೇ ಮಾಡಿಕೊಂಡು ಸತ್ತನೆಂದೇ ನನಗನ್ನಿಸುತ್ತಿದೆ. ಆದೆ ಈಜುವುದಕ್ಕೆ ಇಳಿಯುವವನ ಹಾಗೆ ಬಟ್ಟೆಗಳನ್ನೆಲ್ಲ ಬಿಚ್ಚಿಟ್ಟು ಬರಿಯ ಚಡ್ಡಿಯಲ್ಲಿ ಬಾವಿಗೆ ಹಾರಿದ್ದಾನೆ. ಅವನ ಮನಸ್ಸಿನಲ್ಲಿ ಸಾವಿನ ಭಯ ಸುಳಿಯಲಿಲ್ಲವೇ? ಅವನದು ಸಾವಿನ ಭಯವನ್ನೂ ಮೀರಿದ ನಿರ್ಧಾರವೇ? ಅಥವಾ ಸಾವೇ ಮೇಲು ಎಂದು ನಿರ್ಧರಿಸುವಂತಹ ಮಾನಸಿಕ ಯಾತನೆಯನ್ನು ಅವನು ಅನುಭವಿಸಿರಬಹುದೇ? ನೀರಿಗೆ ಬೀಳುವಾಗಲಾದರೂ ಅವನಿಗೆ ಏನೂ ಅನಿಸದಿರುವುದೆಂದರೆ! ನೇರವಾಗಿ ತಲೆಗೆ ಏಟು ಬಿದ್ದು ಅವನು ಸತ್ತನೆಂಬ ರಿಪೋರ್ಟು ಸರಿಯಿರಬಹುದು. ಆದರೆ ಸಾಯುವುದಕ್ಕೆಂದೇ ನೇರವಾಗಿ ತಲೆಯನ್ನು ಕೊಟ್ಟು ಬಿದ್ದನೇ? ತಲೆಗೆ ಪೆಟ್ಟು ಬಿದ್ದು ಸತ್ತಿದ್ದರೂ ಅದರ ಹಿಂದೆಯೇ ಸಾವು ನಿಶ್ಚಿತವಾಗಿತ್ತೆನಿಸುತ್ತದೆ. ಬಿದ್ದ ತಕ್ಷಣ ಸತ್ತಿರಲಾರ. ಅವನೇನಾದರೂ ನೋವು ಅನುಭವಿಸುತ್ತ. ಏಟಿನ ತೀವ್ರತೆಯಿಂದಾಗಿ ಮೇಲೆ ಬಾರದೆ ನೀರು ಕುಡಿದು ಸತ್ತನೇ? ಯಾತನೆಯನ್ನವನು ಹೇಗೆ ಅನುಭವಿಸಿರ ಬಹುದು! ಆಗೆಲ್ಲ ನಮ್ಮ ನೆನಪು ಅವನಿಗೆ ಬಂದಿರಬಹುದೇ? ಆತ್ಮಹತ್ಯೆಯನ್ನು ಎದುರಿಸುವ ಧೈರ್ಯ ಅವನಿಗೆ ಬಂದಿರುವುದು ದಿನದ ಹಿಂದಿನ ರಾತ್ರಿ ನಡೆದ ಜಗಳದಿಂದಿರಬೇಕು. ಆದ್ದರಿಂದ ಸಾಯುವವರೆಗೆ ನಮ್ಮ ನೆನಪು ಅವನಿಗಿದ್ದೇ ಇರಬೇಕು. ಸಾಯುವ ಕ್ಷಣದಲ್ಲಿ ನನ್ನ ಬಗ್ಗೆ ಅವನೇನೂ ಯೋಚಿಸಿರಬಹುದು? ಸೇಡುತೀರಿಸಿಕೊಂಡನೆಂಬ ತೃಪ್ತಿಯೇ. ನನಗೆ ಆಗ ಬಹುದಾದ ಮಾನಸಿಕ ನೋವನ್ನು ಕಲ್ಪಿಸಿಕೊಂಡ ಆನಂದವೇ, ಬೇರೆಯವರು ಅವನ ಸಾವಿಗೆ ನನ್ನನ್ನೇ ಕಾರಣನೆಂದು ದೂಷಿಸಿಕೊಳ್ಳುವ ಚಿತ್ರದಿಂದ ಸೇಡಿನ ಅಟ್ಟಹಾಸವೇ, ಅಥವಾ ಇದಾವುದೂ ಇರದ ನಿರ್ಲಿಪ್ತತೆಯೇ?
ನಾನೂ ಹತ್ತಿರದಿಂದ ಇಬ್ಬರು ಆಪ್ತರ ಸಾವುಗಳನ್ನು ಕಂಡವನು. ಅಮ್ಮ ಸತ್ತಾಗ ನಾನು ಮನೆಯಲ್ಲೇ ಇದ್ದರೂ ಅದರ ನೆನಪು ಹೆಚ್ಚಾಗಿ ಉಳಿದಿಲ್ಲ. ತುಂಬ ವರ್ಷಗಳಾಗಿವೆ ಅವಳು ಸತ್ತು. ಆದರೆ ಅಪ್ಪನ ಸಾವನ್ನು ಒಂದು ರೀತಿ ಪ್ರತಿಕ್ಷಣವೂ ಕಂಡಿದ್ದೇನೆ ಎನ್ನಬಹುದು. ಸುಮಾರು ಐದು ತಿಂಗಳು ಲಕ್ವ ಹೊಡೆದು ಸಾವಿನ ಜೊತೆ ಹೋರಾಡುತ್ತಾ ಬದುಕಿದ್ದರು. ಒಂದೇ ಕಡೆ ಮಲಗಿ ಜೀವನ ಸಾಗಿಸುವ ದುರ್ಭರ ಪರಿಸ್ಥಿತಿ. ಪ್ರತಿಯೊಂದಕ್ಕೂ ಇನ್ನೊಬ್ಬರ ನೆರವು ಬೇಕು, ಆಸರೆ ಬೇಕು. ಒಂದು ಕಡೆಯಿಂದ ಇನ್ನೊಂದು ಮಗ್ಗುಲಿಗೆ ಹೊರಳಬೇಕಾದರೆ ಕಷ್ಟ. ಎಷ್ಟೋ ಸಲ ತಮ್ಮ ಪರಿಸ್ಥಿತಿಯಿಂದ ಜಿಗುಪ್ಸೆಗೊಂಡವರಂತೆಬೇಗ ಸ್ವಾಮಿಯ ಪಾದ ಸೇರಿದರೆ ಸಾಕು" ಎನ್ನುತ್ತಿದ್ದರು. “ನಿಮಗೆಲ್ಲ ಎಷ್ಟು ಭಾರವಾಗಿಬಿಟ್ಟೆ" ಎಂದು ಕೆಲವೊಮ್ಮೆ ಕಣ್ಣೀರು ಸುರಿಸುತ್ತಿದ್ದರು. “ಯಾವ ಪಾಪಕ್ಕೆ ಶಿಕ್ಷೆ ಅಂತ ರೀತಿ ದೇವರು ಕಾಡಿಸುತ್ತಿದ್ದಾನೆ" ಎಂದು ಪರಿತಪಿಸುತ್ತಿದ್ದರು.
ಅವರು ಹೀಗೆ ನರಳುತ್ತ ಬಿದ್ದಿರುವಾಗ ಒಂದು ದಿನ ಅವರ ಆಪ್ತ ಸ್ನೇಹಿತರೊಬ್ಬರ ಸಾವಿನ ವಿಷಯ ತಿಳಿದಿತ್ತು. ಅದನ್ನವರಿಗೆ ಹೇಳಿದಾಗ ಜೋರಾಗಿ ಅತ್ತುಬಿಟ್ಟಿದ್ದರು. ನನ್ನ ಇಡೀ ಜೀವನದಲ್ಲಿ ಅವರು ರೀತಿ ಗಟ್ಟಿಯಾಗಿ ಅತ್ತಿದ್ದನ್ನು ಕಂಡಿರಲಿಲ್ಲ. ಅಮ್ಮ ಸತ್ತಾಗಲೂ ಅವರು ಎಲ್ಲೋ ಮೂಲೆಯೊಂದರಲ್ಲಿ ಉಸಿರು ಬಿಗಿ ಹಿಡಿದು ಕೂತಿದ್ದ ದೃಶ್ಯ ತುಂಬ ಮಸುಕಾಗಿ ನನ್ನ ನೆನಪಿನಲ್ಲಿದೆ. ಆದರೆ ಸ್ನೇಹಿತನ ಸಾವು ಅವರಿಗೇಕೆ ಅಂತಹ ದುಃಖವನ್ನು ತಂದಿರಬಹುದು? ಅಳುವ ರೀತಿಯಿಂದ ದುಃಖದ ಆಳವನ್ನು ಅಳೆಯಲಾಗುವುದಿಲ್ಲ ಎಂಬುದು ನಿಜ. ಅಮ್ಮ ಸತ್ತಾಗ ಅವರಿಗೆ ಕಡಿಮೆ ದುಃಖವಾಯಿತೆಂದು ಹೇಳಲು ಸಾಧ್ಯವೇ? ಎಷ್ಟೋ ವರ್ಷ ಕಷ್ಟ ಸುಖಗಳಲ್ಲಿ ಭಾಗಿಯಾದ ಅತ್ಯಂತ ಆಪ್ತಳು ಸತ್ತಾಗ ಅವನರಿಗೆ ಸ್ನೇಹಿತ ಸತ್ತಾಗ ಆಗುವುದಕ್ಕಿಂತ ಕಡಿಮೆ |ದುಃಖವಾಯಿತೆಂದು ಹೇಳಲು ಬರುವುದಿಲ್ಲ. | ಪ್ರಾಯಶಃ ಆಗ ಅವರಿಗೆ ಹೆಚ್ಚು ಧಾರಣಶಕ್ತಿಯಿತ್ತೇನೋ! ವಯಸ್ಸು ಹೆಚ್ಚಾದಂತೆ, ದೇಹ ಶಿಥಿಲ ಆದಂತೆ ಅಂಥ ಧಾರಣಶಕ್ತಿ ಕಡಿಮೆಯಾಗುವುದೇ? ಅಂದರೆ ವಯಸ್ಸಿಗೂ ಸಾವಿಗೂ ಸಂಬಂಧವಿರುವುದು ಕಂಡ ವಿಷಯವೇ!
ಸ್ನೇಹಿತರ ಸಾವಿನ ಸುದ್ದಿ ಕೇಳಿ ಅಪ್ಪ ಅತ್ತಾಗ ಅವರ ಮನಸ್ಸಲ್ಲಿ ಸುಳಿದಾಡುತ್ತಿದ್ದ ಭಾವನೆ ಯಾವುದು? ಸ್ನೇಹಿತನ ಸಾವೇ ದುಃಖವುಂಟುಮಾಡಿತೇ? ಅಥವಾ ತಾನು ಹೀಗೆ ಕಷ್ಟದಿಂದ ನರಳುತ್ತಿದ್ದೇನೆ, ನನಗಿನ್ನೂ ಬಿಡುಗಡೆಯಾಗಿಲ್ಲವಲ್ಲ ಎಂಬ ಕೊರಗೇ? ಅಥವಾ ಸ್ನೇಹಿತನ ಸಾವು ತಮ್ಮದೇ ಸಾವಿನ ಬಗ್ಗೆ ಅವರಲ್ಲಿ ನೆನಪು ಉಂಟುಮಾಡಿ ಅದನ್ನು ಎದುರಿಸಲಾಗದ ಭಯದಿಂದ ಅತ್ತರೇ? ಭಯ, ದುಃಖ - ಎರಡು ಭಾವನೆಗಳು ಎಷ್ಟೊಂದು ಅನನ್ಯವಾದದಲ್ಲವೇ?
ದೀರ್ಘಕಾಲ ನರಳುತ್ತ ಕೆಲಸಕ್ಕೆ ಬಾರದೆ ಮಲಗಿದ್ದ ಅಪ್ಪನಿಗೆ ನಿಜವಾಗಿಯೂ ಸಾವು ಬರಬಾರದೇ ಎಂಬ ಹಂಬಲವುಂಟಾಗಿರಬಹುದೇ? ನನಗೆಷ್ಟೋ ಸಲ ಅನ್ನಿಸಿದೆ: ಸಾವಿನ ಭಯ ಬೇಕಾದಷ್ಟು ಇದ್ದರೂ, ಅದು ಅನಿವಾರ್ಯವಾಗಿರುವುದರಿಂದ ಒಪ್ಪಿಕೊಳ್ಳಲೇಬೇಕು. ಒಪ್ಪಿಕೊಳ್ಳುವುದಿಲ್ಲ ಎಂಬುದು ಸಾಧ್ಯವೇ ಇಲ್ಲವಲ್ಲ. ಆದ್ದರಿಂದ ತಾನೇ ತಾನಾಗಿ ನನಗೆ ಗೊತ್ತಾಗದ ಹಾಗೆ ಸಾವು ಬರಬೇಕು. ಮಲಗಿದ್ದಾಗ ನಿದ್ದೆಯಲ್ಲಿ ಸಾಯಬೇಕು. ಎಂಬ ಆಸೆ ಎಲ್ಲರಂತೆ ನನಗೂ ಆಗಾಗ ಬಂದುಂದುಂಟು. “ಅನಾಯಾಸ ಮರಣ' ಎಂಬ ನಮ್ಮ ಹಿಂದಿನವರ ಆದರ್ಶವೆಂದರೆ ಇದೇ ಅಲ್ಲವೇ? ಬೇರೆಯವರಿಗೆ ಹೊರೆಯಾಗಿ ಒಂದೆಡೆ ಮಲಗಿಕೊಂಡೇ ಬದುಕು ನೂಕಬೇಕೆಂಬ ಕಾರಣಕ್ಕಿಂತ ನಾನು ಸಾಯಲಿದ್ದೇನೆ ಎಂಬ ಪ್ರಜ್ಞೆಯಿಂದಾಗುವ ಭಯವನ್ನು ಅನುಭವಿಸಲಾರದ್ದ ರಿಂದಲೇ ಆದರ್ಶವುಂಟಾಗಿರುವುದು? ಸಾಯುವುದು ಒಂದು ಬಗೆಯ ಅನುಭವ ನಿಜ. ಆದರೆ ಅದರ ಬಗೆಯೇನೆಂದು ಹೇಳಲಾಗದ ರೀತಿ ಅದರದ್ದು. ಅಂದರೆ ಸಾವು ಭಯಂಕರವಲ್ಲ. ಅದರ ಆಲೋಚನೆ ಭಯ ತರುವಂಥದ್ದು.
ನಾನೆಷ್ಟೋ ಬಾರಿ ಆಲೋಚಿಸಿದ್ದೇನೆ, ಬೇರೆಯವರಿಗೆ ಹೊರೆಯಾಗಿಬಾಳುವ ಪರಿಸ್ಥಿತಿ ಬಂದರೆ ಬೇಗ ಸಾಯುವ ಹಾಗೆ ಏನಾದರೂ ಮಾಡಿಕೊಳ್ಳಲು ಸಾಧ್ಯ ಆಗದೇ? ಬೇರೆಯವರು; ಅವರಷ್ಟೇ ಆಪ್ತರಾಗಲೀ ದೀರ್ಘಕಾಲ ಸೇವೆ ಮಾಡಬೇಕೆಂದರೆ, ಅಸಹ್ಯ ಹುಟ್ಟಿಸುವ ಕೆಲಸಗಳನ್ನು ನಿರ್ವಹಿಸಬೇಕೆಂದರೆ ಬೇಸರಗೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಪ್ರಾಯಶಃ ನಮಗೆ ಇಂಥ ಕೆಲಸ ಮಾಡಬೇಕಾದಾಗ ಉಂಟಾಗುವ ಬೇಸರದ ಆಧಾರದಿಂದಲೇ ಅಲ್ಲವೇ ಬಗೆಯ ತೀರ್ಮಾನಗಳುಂಟಾಗುವುದು. ಆಪ್ತರು ಕಷ್ಟ ಅನುಭವಿಸುವಾಗನೆರವಾಗುವುದಕ್ಕೆ ಮಿತಿಯೂ ಉಂಟು. ನಾವೇನೇ ಮಾಡಲಿ ಬಾಹ್ಯ ಪರಿಚರ್ಯೆ ಮಾಡಬಹುದಷ್ಟೆ; ಅವರ ನೋವು, ಭಯ, ಆತಂಕಗಳನ್ನು ನಾವು ತಡೆಯುವುದು ಸಾಧ್ಯವಿಲ್ಲ. ಹೀಗಾಗಿ ನಮ್ಮ ಅನುಭವಗಳು ಸಂಪೂರ್ಣವಾಗಿ ನಮ್ಮವೇ. ಮನಸ್ಸು ನಿರುಮ್ಮಳವಾಗಿದ್ದಾಗ ಬರುವ ಆಲೋಚನೆಗಳ ಕಾರಣದಿಂದಲೇ, ಅದನ್ನು ಊಹಿಸಿಕೊಳ್ಳಬಲ್ಲ ಸಾಧ್ಯತೆಯಿರುವುದರಿಂದಲೇ ಅನಾಯಾಸ ಮರಣವು ಉಂಟಾಗಬೇಕು ಅನಿಸುವುದು. ನಿಡುಗಾಲ ಹೊರೆಯಾಗುವ ಕಾಲ ಬಂದಾಗ ಸಾವನ್ನು ತ್ವರಿತಗೊಳಿಸಿಕೊಳ್ಳುವ ಸಾಧ್ಯತೆಯಿಲ್ಲವೇ ಎಂದು ಆಲೋಚಿಸುವುದು.
ಈಗೇನೋ ನನಗೆ ಹಾಗನ್ನಿಸಬಹುದು; ಆದರೆ ಹಾಗೆ ಮಲಗಿಕೊಂಡು ನರಳುವ ಅಪ್ಪನಿಗೆ ಹಾಗನ್ನಿಸಲು ಸಾಧ್ಯವೇ? ಅಥವಾ ನಾನೇ ರೀತಿ ಮಲಗುವ ಸ್ಥಿತಿಯೊದಗಿದರೆ ಹಾಗನ್ನಿಸುತ್ತದೆಯೇ? ಜೀವಿಸಬೇಕೆಂಬ ಹಂಬಲ ಎಂಥ ಕಾಲದಲ್ಲೂ ಇರುತ್ತದೆಂದು ಹೇಳುವರಲ್ಲ. ಜೀವನದ ಹಂಬಲ, ಸಾವು ಇವುಗಳ ನಡುವಣ ಹೋರಾಟವೇ ನರಳುವಿಕೆಯೆಂದು ಹೇಳಬಹುದೇನೋ. ಎಲ್ಲೋ ಕೆಲವು ದುರ್ಬಲ ಕ್ಷಣಗಳಲ್ಲಿ ಸಾವನ್ನು ತಂದುಕೊಳ್ಳಬಹುದು ಅಥವಾ ಆದರ್ಶದ ಹುಸಿ ಹಿನ್ನೆಲೆಯಲ್ಲಿ ಸಾವು ಸಹ್ಯವಾಗಬಹುದು. ಆದರೆ ಎರಡೂ ಅಸಹಜ ಸನ್ನಿವೇಶಗಳೇ. ಸಾಧಾರಣ ಪರಿಸ್ಥಿತಿಯಲ್ಲಿ ಬದುಕಬೇಕೆಂಬುದೇ ನಿಸರ್ಗ ನಿಯಮ ತಾನೇ? ಮರ ಕಡಿದರೆ, ಚಿಗುರಿಕೊಳ್ಳುವಷ್ಟು ಅದಮ್ಯ ಜೀವನದ ಬಯಕೆ. ಹೀಗಿದ್ದಾಗ ಬೇಗ ಸಾಯಬೇಕು ಎಂದು ಅನ್ನಿಸಲಾರದೇನೋ.
ಒಮ್ಮೆ ನನಗೆ ಪರಿಚಯದ ಬಯಾಲಜಿ ಲೆಕ್ಚರರ್ ಒಬ್ಬರನ್ನು ಕೇಳಿದ್ದೆ; ಜೀವ ವಿಜ್ಞಾನವು ಸಾವನ್ನು ಹೇಗೆ ವಿವರಿಸುತ್ತದೆ ಎಂದು. “ಕಂಪ್ಲೀಟ್ ಸೆಸೇಷನ್ ಆಫ್ ಕೆಟಬಾಲಿಕ್ ಅಂಡ್ ಆನಬಾಲಿಕ್ ಆಕ್ಟಿವಿಟೀಸ್ ಇನ್ ದಿ ಬಾಡಿ" ಎಂದು ಒಂದೇ ವಾಕ್ಯದಲ್ಲಿ ಹೇಳಿದ್ದರು. ದೇಹದಲ್ಲಿ ಪ್ರತಿಕ್ಷಣ ನಡೆಯುವ ರಚನಾತ್ಮಕ, ವಿನಾಶಾತ್ಮಕ ಕ್ರಿಯೆ ಸಂಪೂರ್ಣವಾಗಿ ನಿಲ್ಲುವುದನ್ನು ಸಾವು ಎಂದು ವರ್ಣಿಸಿದರೆ ಏನು ಹೇಳಿದ ಹಾಗಾಯಿತು? ಸತ್ತರೆ ದೇಹದಲ್ಲಿ ಯಾವ ಕ್ರಿಯೆಯೂ ಆಗದು ಎಂಬುದು ಎಲ್ಲರಿಗೂ ತಿಳಿದ ಅಂಶವೇ ಅಲ್ಲವೇ! ಹೀಗೆ ವಿವರಿಸುವುದು ಎಷ್ಟು ಸುಲಭ; ಆದರೆ ಅದರ ಅನುಭವ, ಕಲ್ಪನೆ ಅದೆಷ್ಟು ಸಂಕೀರ್ಣ, ದುಸ್ಸಾಧ್ಯ.
ಅಪ್ಪ ತಮ್ಮ ನರಳುವಿಕೆಯ ಅವಯಲ್ಲಿ ಎಷ್ಟೋ ಬಾರಿ ಶಶಿಯ ಬಗ್ಗೆ ನನಗೆ ಹೇಳುತ್ತಿದ್ದರು; ಅವನನ್ನು ತಾವು ತೀರಿಕೊಂಡ ಮೇಲೆ ಚೆನ್ನಾಗಿ ನೋಡಿಕೋ. ಬೇರೆಡೆಗೆ ಕಳಿಸಿಬಿಡಬೇಡ ಎಂದು. ತಾನು ಅಂತಹ ಸಂದರ್ಭಗಳಲ್ಲೆಲ್ಲ ಅವರಿಗೆ ಸಮಾಧಾನ ಹೇಳಿದ್ದೆ, ಆಶ್ವಾಸನೆಯಿತ್ತಿದ್ದೆ. ನಾನಿರುವವರೆಗೂ ಅವನನ್ನು ಜೊತೆಯಲ್ಲಿ ಇಟ್ಟುಕೊಂಡಿರುತ್ತೇನೆಂದು ಅವರ ಕೈ ಹಿಡಿದು ನಂಬಿಕೆ ಬರುವಂತಹ ರೀತಿಯಲ್ಲಿ ಮಾತುಕೊಟ್ಟಿದ್ದೆ, ನನಗೆ ಅನೇಕ ವೇಳೆ ಅನ್ನಿಸುವುದೇನೆಂದರೆ ನಾನು ಸತ್ತ ಮೇಲೆ ಪ್ರಪಂಚ ಏನಾದರೇ ಏನು? ಎಂದು. ಪ್ರಪಂಚ ಚೆನ್ನಾಗಿರುವುದು. ಇನ್ನೇನೇನು ಜಗತ್ತಿನಲ್ಲಿ ಇದೆಯೋ ಅವೆಲ್ಲ ನಾನು ಬದುಕಿರುವವರೆಗೂ ಮಾತ್ರ ನನಗೆ ರೆಲೆವೆಂಟ್ ಅಲ್ಲವೇ? ಎಲ್ಲವನ್ನೂ ನೋಡುವುದು ನಮ್ಮ ನಮ್ಮ ವೈಯಕ್ತಿಕ ಬದುಕಿನ ಹಿನ್ನೆಲೆಯಲ್ಲಿ ಮಾತ್ರ. ಹೀಗಾಗಿ ನಾನು ಸತ್ತಮೇಲೆ ಪ್ರಪಂಚವೇನಾಗ ಬಹುದು ಎಂಬುದು ಅಪ್ರಸ್ತುತವಾದದ್ದು. ಹಾಳಾಗಿ ಹೋಗಲಿ, ನನಗಾಗಬೇಕಾದದ್ದೇನು? ಎನ್ನಿಸುತ್ತಿತ್ತು. ಆದರೆ ಸಾಮಾನ್ಯವಾಗಿ ಸಾಯುವಾಗ ಉಳಿದವರಿಗೆಏನೇನೋ ಹೇಳಿಹೋಗುವರಲ್ಲ, ಯಾಕೆ? ಸತ್ತಮೇಲೆ ತನ್ನನ್ನು ಯಾರೂ ನೆನಸಿ ಕೊಳ್ಳದಿರಬಹುದು ಎಂಬ ಕಲ್ಪನೆ ಹೆಚ್ಚು ಯಾತನೆಯನ್ನು ನೀಡುವಂತಹ ದೇನೋ. ಒಂದು ರೀತಿ ಸಾವು ಎಂದರೆ ಯಾವ ಕುರುಹೂ ಇಲ್ಲದ ಮರೆ ಆಗುವುದೇ! ಹಾಗಾಗಿ ತಮ್ಮನ್ನು ಸಾವಿನ ನಂತರವೂ ನೆನಪು ಮಾಡಿಕೊಳ್ಳುತ್ತಿರಲಿ ಎಂದೇ ರೀತಿ ಆಸೆಗಳನ್ನು ಹಂಬಲುಗಳನ್ನು ವ್ಯಕ್ತಪಡಿಸುತ್ತಾರೇನೋ? ಒಂದು ರೀತಿಯಲ್ಲಿ ಸಾರ್ವತ್ರಿಕವಾಗಿ ಹಂಬಲದ ಹಿನ್ನೆಲೆಯೇ ತಿಥಿಯ ಆಚರಣೆಯಲ್ಲಿರಬಹುದು.
ಅಪ್ಪ ಸತ್ತಮೇಲೆ ಅವರನ್ನು ಸುಡುವಾಗ, ಚಿತೆಯ ಸುತ್ತು ತಿರುಗುವಾಗಲೂ ಏನೇನೋ ಆಲೋಚನೆಗಳು ಮೂಡುತ್ತಿದ್ದುದು ನೆನಪಾಗುತ್ತದೆ. ಬೆಂಕಿಯಲ್ಲಿದ್ದರೂ ಏನೂ ಆಗದ ಪರಿಸ್ಥಿತಿಯೆಂದರೆ ಹೇಗಿರಬಹುದು? ಸಾವು ನಮ್ಮನ್ನು ಹೇಗೆ ಬಂಸಿಬಿಡುತ್ತದೆ! ಇದು ನಮ್ಮೆಲ್ಲ ಶಕ್ತಿ ಸಾಮಥ್ರ್ಯ ಆಸೆ- ಆಕಾಂಕ್ಷೆಗಳ ಬೇಲಿಕಟ್ಟು. ಆದರೆ ನಮ್ಮ ಸಾಧನೆಯನ್ನೆಲ್ಲ ನಮ್ಮನ್ನಿದು ಕಬಳಿಸುವ ಮುನ್ನವೇ ಮಾಡಬೇಕು. ಹಾಗಾಗಿ ನಮ್ಮ ಎಲ್ಲ ಕ್ರಿಯಾಶೀಲತೆಗೆ ಸಾವು ಒಂದು ಪ್ರಚೋದಕಶಕ್ತಿ ಆಗುತ್ತದೆ. ಅಪ್ಪ ಸತ್ತ ದುಃಖಕ್ಕಿಂತ ಏನೇನೋ ಯೋಚನೆ ಬರುತ್ತದೆ ಅನ್ನಿಸಿತ್ತು ಅಂತಹ ಸಮಯಗಳಲ್ಲಿ.
ಮೇಲೆ ಅಪ್ಪನ ಕರ್ಮಗಳು. ಏನೇನೊ ವಿಗಳು, ಪುರೋಹಿತ್ಯ ಮಂತ್ರ ಹೇಳಿದ್ದು, ನಾನು ಯಾಂತ್ರಿಕವಾಗಿ ಮಾಡಿದ್ದು. ದಕ್ಷಿಣೆ, ದುಡ್ಡು, ಖರ್ಚು, ಸಾವಿನ ಸಂದರ್ಭದಲ್ಲೂ ಇವಕ್ಕೆಲ್ಲ ಹೊಂದಿಸಬೇಕಾದ ಹಣದ ಯೋಚನೆ. ನಾವು ಸಾವಿನ ಭಯದಿಂದ ಜೀವನವನ್ನು ಎಷ್ಟು ಕಾಂಪ್ಲಿಕೇಟ್ ಮಾಡಿಕೊಂಡು ಬಿಟ್ಟಿದ್ದೇವೆ! ದುಃಖಕ್ಕಿಂತ ಹೆಚ್ಚಾಗಿ ತಾಪತ್ರಯವೇ ಕಾಡುತ್ತದಲ್ಲವೇ? ಆಪ್ತರನ್ನು ಕಳೆದುಕೊಂಡ ಬೇಗುದಿಗಿಂತ ಯಾಂತ್ರಿಕ ಆಚರಣೆಗಳು ನಮ್ಮನ್ನು ಆವರಿಸುತ್ತವಲ್ಲ; ವಿಗಳನ್ನೆಲ್ಲ ಮಾಡದಿದ್ದರೆ ಸದ್ಗತಿಯಿಲ್ಲವಂತೆ! ದುರ್ಮರಣವನ್ನು ಪಡೆದವರಿಗೆ, ಸಂಸ್ಕಾರಕ್ರಿಯೆ ನಡೆಯದವರಿಗೆ ವ್ಯಂತರ ಸ್ಥಿತಿಯುಂಟಾಗುತ್ತದಂತೆ. ಅದೆಂಥ ಸ್ಥಿತಿ. ಶಶಿಗೆ ಎರಡೂ ಇಲ್ಲ. ಬಹುತೇಕ ಅವನದು ಆತ್ಮಹತ್ಯೆ. ಹಾಗಾಗದಿದ್ದರೂ ಅಸಹಜ ಮರಣಮುಂಜಿಯಾಗದಿದ್ದುದರಿಂದ ಅಪರಕರ್ಮಗಳನ್ನು ಮಾಡಬೇಕಾಗಿಲ್ಲ. ಆದ್ದರಿಂದ ಅವನೂ ವ್ಯಂತರನಾಗುತ್ತಾನೆಯೆ? ಹಾಗಂದರೇನು? ದೇಹವಿಲ್ಲದ ಜೀವ ಇನ್ನಾವುದೋ ರೂಪದಲ್ಲಿರುವುದು ಸಾಧ್ಯವೇ?


No comments: