ಶೋಧನೆ - 2
ಅಂದುಕೊಂಡಿದ್ದಂತೆ ನಿನ್ನೆ ರಾತ್ರಿಯೇ ಒಂದು ಕಂಪ್ಲೇಂಟನ್ನು ತಯಾರುಮಾಡಿದ್ದೆ. ಇಷ್ಟು ವರ್ಷ ವಯಸ್ಸಿನ, ಇಷ್ಟು ಅಳತೆ ಎತ್ತರವಿರುವ ನನ್ನ ತಮ್ಮ ಮೂರು ದಿನಗಳಿಂದ ಕಾಣೆಯಾಗಿದ್ದಾನೆ ಎಂದು ಅದರ ಒಕ್ಕಣೆ. ಆದರೆ ಏನೋ ನೆನಪಿಗೆ ಬಂದು ಅದನ್ನು ಹರಿದು ಮೊದಲಿನಿಂದ ಬರೆದೆ; ಅವನಿಗೆ ತುಂಬ ದಿನಗಳಿಂದ ಫಿಟ್ಸ್ ಕಾಯಿಲೆಯಿತ್ತು ಎಂಬುದನ್ನು ಸೇರಿಸಿ ಬರೆದೆ. ಪಕ್ಕದ ಮನೆಯ ಪ್ರಭಾಕರರಾಯರಿಗೆ ಮೊದಲೇ ತಿಳಿಸಿದ್ದೆ; ನನ್ನ ಜೊತೆಯಲ್ಲಿ ಪೋಲೀಸ್ ಸ್ಟೇಷನ್ವರೆಗೂ ಬರಬೇಕು ಎಂದು. ನಾನೊಬ್ಬನೇ ಓಡಾಡಲಾರನೇನೋ ಅನ್ನಿಸಿತ್ತು; ಒಬ್ಬರಿಗಿಂತ ಇಬ್ಬರು ಮೇಲು ಎಂದುಕೊಂಡು ಅವರನ್ನು ಒಪ್ಪಿಸಿದ್ದೆ,
ಬೆಳಗ್ಗೆ ಎದ್ದವನೇ ರೆಡಿಯಾಗತೊಡಗಿದೆ. ಯಾಕೋ ದಿನಕ್ಕಿಂತ ಇವತ್ತು ಲೇಟಾಗಿ ಎಚ್ಚರವಾಗಿತ್ತು. ರಮ ಕೂಡ ಎಬ್ಬಿಸಲಿಲ್ಲ. ಅವಳಿಗೆ ಈ ವಿವರವನ್ನೆಲ್ಲ ಹೇಳಿರಲಿಲ್ಲ. ಆದಷ್ಟು ಮಟ್ಟಿಗೆ, ಮೂರು ದಿನಗಳಿಂದ ಶಶಿ ಮನೆಗೆ ಬಂದಿಲ್ಲ ಎಂಬ ವಿಚಾರವು ಇತರರಲ್ಲಿ ಹಬ್ಬಬಾರದೆಂದು ನಿಗಾ ವಹಿಸಿದ್ದೆ; ಸುಮ್ಮನೆ ಮನೆಯ ವಿಷಯವೆಲ್ಲ ಬೀದಿಗುಲ್ಲು ಏಕಾಗಬೇಕು. ಕಂಪ್ಲೇಂಟ್ ವಿಚಾರವನ್ನೂ ಅಷ್ಟೊಂದು ವಿವರವಾಗಿ ರಮಾಗೆ ಹೇಳಿರಲಿಲ್ಲ. ಬಾರದಿದ್ದರೆ ಪೋಲೀಸರಿಗೆ ವಿಚಾರ ತಿಳಿಸಬೇಕೆಂದೇನೋ ಒಮ್ಮೆ ಸೂಚಿಸಿದ್ದೆ, ಅಷ್ಟೆ. ಪ್ರಭಾಕರರಾವ್ಗೆ ಎಂಟೂವರೆ ಗಂಟೆಗೇ ಮನೆ ಬಿಡೋಣವೆಂದು ಹೇಳಿದ್ದೆ. ಸ್ಟೇಷನ್ನಿಗೆ ಹೋಗಿ ಕಂಪ್ಲೇಟ್ ಕೊಟ್ಟು ವಾಪಸ್ಸು ಬಂದರೆ ಆಫೀಸಿಗೆ ಹೋಗಲು ಅವರಿಗೆ ಅನುಕೂಲವಾಗುತ್ತದೆ.
ಮೊದಲು ಒಂದು ಲೋಟ ಕಾಫಿ ಕುಡಿದು ಶೇವ್ ಮಾಡಕೊಂಡು ಸ್ನಾನಕ್ಕೆ ಹೊರಟೆ. ಹಂಡೆಯಲ್ಲಿ ನೀರು ಮರಳುತ್ತಿತ್ತು. ನನಗೆ ಸ್ವಲ್ಪ ಬಿಸಿಬಿಸಿಯೇ ಆಗಬೇಕು ಸ್ನಾನದ ನೀರು. ಶಶಿ ಎಂದೂ ಬಿಸಿ ನೀರು ಸ್ನಾನ ಮಾಡಿದವನಲ್ಲ. ಬಿಸಿನೀರಿಗಿಂತ ತಣ್ಣೀರು ವಾಸಿಯೆಂದು ಡಾಕ್ಟರು ಹೇಳಿದ್ದರು. ಮಿದುಳಿನ ವಿದ್ಯುತ್ ಡಿಸ್ಚಾರ್ಜ್ನ್ನು ಸ್ವಲ್ಪವಾದರೂ ತಣಿಸಬಹುದೆಂದು ತಣ್ಣೀರು ಸ್ನಾನವನ್ನೇ ಮಾಡಬೇಕೆಂದು ಸಲಹೆಯಿತ್ತಿದ್ದರು. ಆದರೆ ಶಶಿಯದು ಸ್ವಲ್ಪ ಪರುಠಾವಣೆ ಹೆಚ್ಚು. ಮೈಗೆ ಸಾಬೂನು ಎರಡೆರಡು ಬಾರಿ ಹಾಕಿಕೊಂಡು ತಿಕ್ಕಿ ತಿಕ್ಕಿ ಸ್ನಾನಮಾಡುವವನು. ಬೇರೆಯವರಂತೆ ಏನಾದರೂ ಗುನುಗಿಕೊಂಡು ಸ್ನಾನಮಾಡುವ ಸ್ವಭಾವವಲ್ಲ ಅವನದು: ಹೀಗಾಗಿ ಹೆಚ್ಚು ಹೊತ್ತು ಅವನು ಬಚ್ಚಲಮನೆಯಲ್ಲಿದ್ದರೆ ಎಷ್ಟೋ ಸಲ ಗಾಬರಿಯಾಗಬೇಕು. ಅಂತಹ ಸ್ನಾನದ ವೈಖರಿ ಅವನದು.
ಇನ್ನೂ ಟೈಮಿದೆಯಲ್ಲ ಎಂದುಕೊಂಡು ಸ್ನಾನಮಾಡುತ್ತಿದ್ದೇನೆ.
ಅಷ್ಟರಲ್ಲಿ ರಮ ಬಂದು ಬಾಗಿಲು ತಟ್ಟಿದಳು. “ಏನೇ?" ಎಂದು ಸಿಡುಕಿದೆ. “ಪ್ರಭಾಕರ ರಾವ್ ಬಂದಿದಾರೆ ಕಣ್ರೀ" ಅಂದಳು. “ಟೈಂ ಎಷ್ಟು?" ಎಂದೆ, “ಎಂಟಕ್ಕೆ ಹತ್ತು ನಿಮಿಷವಿದೆ" ಅಂದಾಗ ಅದ್ಯಾಕೆ ಪ್ರಭಾಕರರಾವ್ ಇಷ್ಟು ಬೇಗ ಬಂದರು ಅಂದು ಕೊಂಡೆ, ಎಂಟೂವರೆಗಲ್ಲವೇ ಹೋಗೋಣ ಅಂದಿದ್ದು. ಎಂಟು ಗಂಟೆ ಅಂದುಕೊಂಡೇನಾದರೂ ಬೇಗ ಬಂದರೋ ಅನ್ನಿಸಿತು. “ಕೂತಿರು ಅಂತ ಹೇಳು, ಕಾಫಿ ಕೊಡು" ಅಂದೆ ಒಳಗಿನಿಂದಲೇ. ಅವಳು ಹೋದಳೆಂದು ಕಾಣಿಸುತ್ತದೆ. ಹಾಲಿನಿಂದ ಅವಳು ಪ್ರಬಾಕರರಾವ್ ಮಾತನಾಡುತ್ತಿದ್ದ ಶಬ್ದ ಮೆಲ್ಲಗೆ ಕೇಳಿಸುತ್ತಿತ್ತು. ಇನ್ನೂ ಬೇಕಾದಷ್ಟೂ ಸಮಯವಿದ್ದರೂ ಅವರು ಬಂದು ಕಾಯುತ್ತಿದ್ದಾರೆ ಪಾಪ, ಅವರನ್ನೇಕೆ ಕಾಯಿಸಬೇಕು. ಬೇರೆ ಏನಾದರೂ ಕೆಲಸವಿರಬಹುದು ಅದಕ್ಕೇ ಇನ್ನೂ ಬೇಗ ಹೋಗೋಣವೆಂದು ಬಂದಿರಬೇಕು ನಾಪತ್ತೆಯಾಗಿರುವವನು ನನ್ನ ತಮ್ಮ ಅವನನ್ನು ಹುಡುಕಲು ನನಗಿಂತ ಮೊದಲು ಅವರೇ ತಯಾರಾಗಿ ಬಂದಿದ್ದಾರೆ, ನಾನಿನ್ನೂ ಸಾವಕಾಶವಾಗಿದ್ದೇನಲ್ಲ ಅನ್ನಿಸಿ ನಾಚಿಕೆಯಾಯಿತು.
“ಐ ಯಾಮ್ ಸಾರಿ, ನಿಮ್ಮನ್ನು ಕಾಯಿಸಿ ಬಿಟ್ಟೆ" ಎಂದು ಹೇಳಿಕೊಂಡೇ ಬಚ್ಚಲು ಮನೆಯಿಂದ ಹಾಲಿನ ಕಡೆ ಅವಸರವಸರವಾಗಿ ಬಂದೆ. ಪ್ರಭಾಕರರಾವ್ ಕುರ್ಚಿಯಲ್ಲಿ ಕೂತಿದ್ದರು. ಆದರೆ ನಾನು ನಿರೀಕ್ಷಿಸಿದ ಹಾಗೆ ಅವರು ತಯಾರಾಗಿ ಬಂದಿರಲಿಲ್ಲ. ಪಂಚೆ ಬನೀನುಗಳಲ್ಲಿಯೇ ಇದ್ದರು. ಇದ್ಯಾಕೆ ಇವರು ಹೀಗೆ ಅಂದುಕೊಂಡೆ. “ಇದೇನು ಪ್ರಭಾಕರ ರಾವ್, ಹೀಗೆ?" ಎಂದೆ ಕುತೂಹಲದಿಂದ, ಏನಿಲ್ಲ ಒಂದು ವಿಷಯ....' ಅಂದರು ಅನುಮಾನಿಸುತ್ತ. ಓ, ಇವರಿಗೆ ಜೊತೆಗೆ ಬರಕ್ಕಾಗಲ್ಲವೇನೊ ಅದಕ್ಕೇ ಹೀಗೆ ರಾಗವೆಳೆಯುತ್ತಿದ್ದಾರೆ.
ಇವರು ಬರಲು ಆಗದಿದ್ದರೆ ಇನ್ಯಾರನ್ನು ಕರೆದುಕೊಂಡು ಹೋಗುವುದು ಎಂಬ ಚಿಂತೆಯಲ್ಲಿ ಮುಳುಗಿದೆ. ಅದೇ ಗುಂಗಿನಲ್ಲಿ ಬಟ್ಟೆ ಹಾಕಿಕೊಳ್ಳಲು ನನ್ನ ರೂಮಿನ ಕಡೆ ಧಾವಿಸಿದೆ. ಪ್ರಭಾಕರರಾವ್ ನನ್ನನ್ನು ಹಿಂಬಾಲಿಸಿದರು. ಇನ್ನೇನಾದರೂ ಗುಟ್ಟಿನ ಸಮಾಚಾರವಿರಬಹುದೇ ಎಂಬ ಅನುಮಾನವಾಯಿತು. ಅವರ ಮುಖವನ್ನು ನೋಡಿದೆ. ಅವರು ಆ ಕಡೆ ಈ ಕಡೆ ನೋಡಿದರು. ರಮಳಾಗಲೀ ಮಕ್ಕಳಾಗಲೀ ಇರಲಿಲ್ಲ. ನಾನು ಬಂದದ್ದು ಕಂಡು ರಮ ಒಳಗೆ ಹೋಗಿದ್ದಳು. ಮಕ್ಕಳೆಲ್ಲಿದ್ದರೋ; ಪ್ರಾಯಶಃ ಎಂದಿನಂತೆ ಕಾಫಿ ಕುಡಿದು ಪಕ್ಕದ ಮನೆಗೆ ಹೋಗಿರಬೇಕು. ಯಾರೂ ಇಲ್ಲದ್ದನ್ನು ಕಂಡು ಅವರು ಮೆಲುದನಿಯಲ್ಲಿ “ಇವತ್ತಿನ ಪೇಪರ್ ನೋಡಿದಿರಾ?" ಎಂದರು. ಹೌದು ಬೆಳಿಗ್ಗೆ ತಡವಾಗಿ ಎದ್ದದ್ದು. ಬೇಗ ಹೋಗಬೇಕೆಂಬ ತರಾತುರಿ ಇವುಗಳಿಂದ ಪೇಪರ್ ನೋಡಿರಲಿಲ್ಲ. ಪ್ರತಿನಿತ್ಯ ಮುಖ ತೊಳೆದು ಪೇಪರೋದುತ್ತಿದ್ದ ಹವ್ಯಾಸದ ನನಗೆ ಇವತ್ತು ಪೇಪರಿನ ನೆನಪೇ ಬಂದಿರಲಿಲ್ಲ. “ಇಲ್ಲ, ಏನಾದರೂ ವಿಶೇಷವಿದೆಯೇನು?" ಎಂದು ಕೇಳಿದೆ ಕುತೂಹಲದಿಂದ.
ಅವರ ಕೈಯಲ್ಲಿ ಪೇಪರಿತ್ತು. ಬಾಗಿಲನ್ನು ನಿಧಾನವಾಗಿ ಮುಂದೆ ಮಾಡಿ ಬಂದರು. ಕುರ್ಚಿಯಲ್ಲಿ ಕುಳಿತರು. “ಬಟ್ಟೆ ಹಾಕಿಕೊಳ್ಳಿ" ಅಂದರು. “ಯಾಕೆ, ಏನು ಹೇಳಿ, ಆಮೇಲೆ ಬಟ್ಟೆ ಹಾಕಿಕೊಂಡರಾಯಿತು" ಎಂದು ಅವರ ಬಳಿಗೆ ಹೋದೆ. ಅವರು ಪೇಪರನ್ನು ತೆಗೆದು ಒಳಗಿನ ಯಾವುದೋ ಒಂದು ಪುಟದ ಒಂದು ಕಾಲಂ ಕಡೆ ಬೆರಳು ಬಡಿದು “ನೋಡಿ" ಅಂದರು. ಗುರುತಿಸಲಾಗದ ಶವವೊಂದರ ಪತ್ತೆ ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಅದರ ಕಡೆಗೆ ಕಣ್ಣೋಡಿತು: ಅದರಲ್ಲಿದ್ದ ವಿಷಯವಿಷ್ಟು: ಸುಮಾರು ಮೂವತ್ತೆರಡು- ಮೂವತ್ತಮೂರು ವರ್ಷ ವಯಸ್ಸಿನ ಗಂಡಸಿನ ದೇಹವೊಂದು ಬಾಣಸವಾಡಿಯ ಹತ್ತಿರದ ಒಂದು ಬಾವಿಯಲ್ಲಿ ತೇಲುತ್ತಿದ್ದುದು ಪತ್ತೆಯಾಗಿದೆ. ಅದನ್ನು ಗುರುತಿಸ ಲಾಗಲಿಲ್ಲ. ವ್ಯಕ್ತಿಗೆ ಸಂಬಂಸಿದೆಯೆಂದು ನಂಬಲಾದ ಬಟ್ಟೆಗಳು ಪೋಲೀಸರ ವಶದಲ್ಲಿವೆ. ಸಂಬಂಧಪಟ್ಟವರು ಯಾರಾದರೂ ಇದ್ದರೆ ಪೋಲೀಸರನ್ನು ಸಂಪರ್ಕಿಸ ತಕ್ಕದ್ದು ಎಂದು ಪ್ರಿಂಟಾಗಿತ್ತು. ಎದೆ ಧಸಕ್ಕೆಂದು ಸಿಡಿಲು ಬಡಿದಂತಾಯಿತು. ವಯಸ್ಸು ನೋಡಿದರೆ ಶಶಿಯ ವಯಸ್ಸಿಗೆ ಹತ್ತಿರವೇ, ಆದರೆ ಬಾಣಸವಾಡಿಯಲ್ಲಿ, ನಮ್ಮ ಮನೆಯಲ್ಲಿ, ಅಲ್ಲಿಗೆ ಅವನೇಕೆ ಹೋಗಿರುತ್ತಾನೆ ಎಂಬ ಸಂಶಯ ಕಾಡಿತು. ಆದರೆ ಇಲ್ಲದ ಅಧೈರ್ಯ ನನ್ನನ್ನಾವರಿಸಿತು. ನನ್ನ ದೃಷ್ಟಿ ಪ್ರಭಾಕರರಾಯರ ಕಡೆ ಹರಿಯಿತು. ನನ್ನನ್ನು ಪ್ರಾಯಶಃ ನೋಡುತ್ತಿದ್ದ ಅವರು ನಾನು ಅವರತ್ತ ಮುಖ ಮಾಡಿದ ಕೂಡಲೇ “ನೋಡಿ, ಈ ಸುದ್ದಿ ಓದಿದಾಗ ನಿಮಗೆ ತೋರಿಸಬೇಕು ಅಂತ ಬಂದೆ. ಇದು ಶಶಿಗೆ ಸಂಬಂಧಪಟ್ಟದ್ದು ಹೌದೋ ಅಲ್ಲವೋ ಯಾರಿಗೆ ಗೊತ್ತು. ನೀವು ರೆಡಿಯಾಗಿ. ನಾನು ಒಂದೈದು ನಿಮಿಷದಲ್ಲಿ ಬಂದ್ಬಿಡ್ತೀನಿ" ಅಂದರು. ನಾನು “ಹ್ಞೂ" ಎಂದು ಮೆಲ್ಲಗೆ ಉಸುರಿದೆ. ಅವರು ಹೊರಟರು. ನಾನು ಬೇಗ ಡ್ರೆಸ್ ಮಾಡಿಕೊಳ್ಳತೊಡಗಿದೆ.
- - -
ತರಾತುರಿಯಿಂದ ತಲೆ ಬಾಚಿಕೊಂಡೆ. “ಏನಾದರೂ ತಿಂಡಿ ಮಾಡಲೇನು?" ಎಂದು ರಮ ಕೇಳಿಕೊಂಡು ಬಂದಳು. “ಏನೂ ಬೇಡ" “ಇನ್ನೂ ಇಪ್ಪತ್ತು ನಿಮಿಷ ಇದೆ ಕಣ್ರೀ. ಎಂಟೂವರೆಗೆ ತಾನೇ ಎಲ್ಲೋ ಹೋಗ್ಬೇಕು ಅಂತಿದ್ದದ್ದು, ಪ್ರಭಾಕರರಾಯರು ಈಗ ಹೋಗಿದ್ದಾರೆ. ಅವರು ಬರೋದರೊಳಗೆ ಏನಾದರೂ ಮಾಡಬಹುದು" ಎಂದಳು. ಅವಳ ಮಾತು ಕೇಳಿ ಸಿಟ್ಟು ಬಂತು. “ಏನೂ ಬೇಡಾಂತ ಹೇಳ್ಲಿಲ್ಲವೇನೇ. ಸುಮ್ಮನೆ ಯಾಕೆ ಹರಟುತ್ತೀ" ಎಂದು ಸಿಡುಕಿದೆ. “ಹೋಗಲಿ ಬಿಡಿ" ಎಂದು ಪೆಚ್ಚಾಗಿ ಒಳಹೋದಳು. ಅವಳಿಗೆ ವಿಷಯ ಗೊತ್ತಾಗಿದ್ದರೆ ಇಷ್ಟೊತ್ತಿಗೆ ರಂಪ ಮಾಡಿ ಬಿಡುತ್ತಿದ್ದಳು. ಪ್ರಭಾಕರರಾವ್ ಹೊರಗಿನಿಂದ. ಕೂಗುತ್ತಿದ್ದುದು ಕೇಳಿಸಿತು. “ಬನ್ನಿ. ರೆಡಿಯಾಗಿದೀನಿ, ಹೋಗೋಣ."
ರಮಳಿಗೆ “ನಾನೆಷ್ಟು ಹೊತ್ತಿಗೆ ಬರುತ್ತೇನೋ ಯಾತಕ್ಕೂ ಕಾಯಬೇಡ" ಎಂದು ಹೇಳಿ ಹೊರಟೆ. ಹೊರಗೆ ಬಂದಾಗ ಮನೆಯೊಳಗಿದ್ದಾಗ ಉಂಟಾದಷ್ಟು ತಹತಹ ಇಲ್ಲವೆನಿಸಿತು. ಜೊತೆಗೆ ಪ್ರಭಾಕರರಾವ್ ಇದ್ದುದರಿಂದ ಏನೋ ಧೈರ್ಯವುಂಟಾದ ಹಾಗೆ ಕಾಣಿಸಿತು. ಒಂದಷ್ಟು ದೂರ ಹೋಗಿ ಮನೆ ಮರೆಯಾದ ಮೇಲೆ ಅವರು “ಕಂಪ್ಲೇಂಟ್ ಬರೆದಿದ್ದೀರೋ ಇಲ್ಲ ಅಲ್ಲೇ ಬರಕೊಡ್ತೀರೋ?" ಎಂದು ಪ್ರಶ್ನಿಸಿದರು.
“ನಿನ್ನೆ ರಾತ್ರೀನೇ ಬರದಿಟ್ಟಿದ್ದೆ" ಎಂದು ಜೇಬುಗಳನ್ನು ತಡಕಾಡಿ ಅದನ್ನು ಹೊರತೆಗೆದು ಮಡಿಕೆಗಳನ್ನು ಬಿಚ್ಚಿ ಅವರ ಕೈಗೆ ಇತ್ತೆ. ಅವರು ಓದಿಕೊಂಡು “ಒಂದ್ಕೆಲಸ ಮಾಡಿ" ಎಂದರು. ನಾನವರ ಕಡೆ ನೋಡಿದೆ.
”ಇದನ್ನು ಮೊದಲೇ ಕೊಡಬೇಡಿ. ಪೇಪರ್ನಲ್ಲಿ ಸುದ್ದಿ ಬಂದಿದೆಯಲ್ಲ. ಅದರ ವಿಷಯ ಕೇಳಿ ತಿಳಿದುಕೊಳ್ಳೋಣ. ಆ ಮೇಲೆ ಇದು" ಎಂದು ಅದರ ಮೇಲೆ ಬೆರಳಿಂದ ಬಡಿದು ಹೇಳಿದರು.
“ಹ್ಞೂಂ" ಎಂದು ಮುಂದೆ ಸಾಗಿದೆ.
ನಮ್ಮ ಏರಿಯಾದ ಪೋಲೀಸ್ ಸ್ಟೇಷನ್ನಿಗೆ ಬಂದೆವು. ಹೊರಗಡೆ ಒಬ್ಬ ಕಾನ್ಸ್ಟೇಬಲ್ ನಿಂತಿದ್ದ. ನಮ್ಮನ್ನು ಕಂಡೊಡನೆ “ಏನು ಬೇಕಾಗಿತ್ತು ಸಾರ್?" ಅಂದ.
“ಇನ್ಸ್ಪೆಕ್ಟರ್ ಇದಾರಾ?" “ಮನೆಯಲ್ಲಿದಾರೆ: ಬತ್ತಾರೆ, ಕುಂತ್ಕಳಿ."
“ಎಷ್ಟು ಹೊತ್ತಾಗತ್ತೆ ಅವರು ಬರೋದು?"
“ಪಕ್ಕದಾಗೇ ಅವರ ಮನೆ ಸಾರ್. ಶಿವಪೂಜೆ ಮುಗಿಸಿ ಬಂದ್ಬಿಡ್ತಾರೆ" ಎಂದು ಹೇಳಿ ನಮ್ಮನ್ನು ಒಂದು ಬೆಂಚಿನ ಕಡೆ ಕಳಿಸಿದ.
ಮತ್ತೆ ಕಾಯುವ ಕೆಲಸ. ಅಂತೂ ಇಂತೂ ಒಂದು ಇಪ್ಪತ್ತು ನಿಮಿಷವಾದ ಮೇಲೆ ಇನ್‍ಸ್ಪೆಕ್ಟರ್‍ರ ಸವಾರಿ ಬಂತು. ಅವರು ರೂಮಿನಲ್ಲಿ ಹೋಗಿ ಕೂತು ಕೊಂಡ ಮೇಲೆ ನಾವಿಬ್ಬರೂ ಹಿಂಬಾಲಿಸಿದೆವು, ನಮಸ್ಕಾರ ಮಾಡಿದೆವು. ತಲೆ ಹೀಗಾಡಿಸಿ ಬನ್ನಿ ಅಂದರು, ಒಳಹೊಕ್ಕಾಗ ಅವರು ತೋರಿಸಿದ, ಅವರ ಟೇಬಲ್ಲಿನ ಮುಂದಿದ್ದ ಕುರ್ಚಿಗಳಲ್ಲಿ ಕೂತೆವು. “ಏನಾಗಬೇಕಾಗಿತ್ತು?"
ಎಂಬ ಪ್ರಶ್ನೆ ಕಿವಿಗೆ ಬಿದ್ದಾಗ ನಾನು ಪ್ರಭಾಕರ ರಾಯರ ಮುಖ ನೋಡಿದೆ. ಅವರೂ ನನ್ನೆಡೆಗೆ ತಿರುಗಿದರು. ನನ್ನ ಮುಖವನ್ನು ಓದಿದವರ ಹಾಗೆ ಅವರು ತಮ್ಮ ಪ್ಯಾಂಟಿನ ಹಿಪ್ ಪಾಕೆಟ್ನಲ್ಲಿದ್ದ ಕಾಗದ ತೆರೆದರು. ಅದು ನಮ್ಮ ಸುದ್ದಿಯ ಭಾಗವಿದ್ದ ನ್ಯೂಸ್ ಪೇಪರ್ ಕಟಿಂಗ್. ಅದನ್ನು ಬಿಚ್ಚಿ ಇನ್ಸ್ಪೆಕ್ಟರ್ ಕಡೆ ಚಾಚುತ್ತ “ಸಾರ್, ಈ ನ್ಯೂಸ್ ವಿಷಯದ ಬಗ್ಗೆ ನಿಮ್ಮ ಆಫೀಸಿನಲ್ಲಿ ಮಾಹಿತಿಯಿದೆಯಾ?" ಎಂದರು.
ಇನ್ಸ್ಪೆಕ್ಟರ್ ಪೇಪರ್ ಕಟಿಂಗ್ ಕೈಗೆತ್ತಿಕೊಂಡು ಅದನ್ನು ಓದಿದರು. ಕಾನ್ಸ್ಟೇಬಲ್ ಒಬ್ಬನನ್ನು ಕರೆದು ಯಾವುದೋ ಫೈಲ್ ಎತ್ತಿಕೊಡಲು ಹೇಳಿ ಮತ್ತೆ ಪೇಪರಿನ ಭಾಗ ಓದಲು ತೊಡಗಿದರು, ಅದನ್ನು ಹಿಂದೆ ಮುಂದೆ ತಿರುಗಿಸಿದರು. ಫೈಲಿನಲ್ಲಿ ಒಂದೆರಡು ಹಾಳೆಗಳನ್ನು ತಿರುಗಿಸಿ, ಪೇಪರ್ ಕಟಿಂಗಂನತ್ತ ನೋಡಿ, ಒಂದು ಕಾಗದವನ್ನು ಓದುತ್ತ “ಯಾಕೆ ನಿಮ್ಮ ಮನೆಯಲ್ಲಿ ಯಾರಾದರೂ ನಾಪತ್ತೆಯಾಗಿದ್ದಾರಾ?" ಅಂದರು. ಪ್ರಭಾಕರರಾವ್ ಕಡೆ ನೋಡುತ್ತ. ಅವರು ನನ್ನ ಕಡೆ ನೋಡಿ “ಇವರ ತಮ್ಮ ಸರ್" ಎಂದರು.
“ಕಂಪ್ಲೇಂಟ್ ಯಾಕೆ ಮೊದಲೇ ಕೊಡಲಿಲ್ಲ?" ಎಂದರು. ಅವರ ಧ್ವನಿ ಅನವಶ್ಯಕವಾಗಿ ಗಡುಸಾಗಿತ್ತೆಂದು ನನಗೆ ತೋರಿತು.
“ಎಲ್ಲೋ ಹೋಗಿರಬೇಕೆಂದುಕೊಂಡೆವು ಸಾರ್" ಎಂದೆ.
“ಅಲ್ರೀ, ಮೂರು ದಿನದಿಂದ ಮನೆಗೆ ಬರ್ಲಿಲ್ಲ. ಎಲ್ಲಿ ಹೋಗ್ತೀನಿಂತ ಹೇಳಿ ಹೋಗಿಲ್ಲ. ಸ್ವಲ್ಪ ಮುಂಚೇನೆ ನಿಗಾ ವಹಿಸಬೇಕಾಗಿತ್ತು, ಅಲ್ವ?" ಎಂದು ಪ್ರಶ್ನಾರ್ಥಕವಾಗಿ ನಮ್ಮೆಡೆ ನೋಡಿ “ಏನಾದರೂ ವೈಮನಸ್ಯ ಉಂಟಾಗಿತ್ತ?" ಎಂದರು. ನಾನು ಸಣ್ಣಗೆ ಬೆವರಿದೆ. ಗಂಟಲು ಕಟ್ಟಿಕೊಂಡಂತಾಯಿತು. ಉತ್ತರ ಬರಲು ತಡವಾದುದನ್ನು ಕಂಡು ಪ್ರಭಾಕರ ರಾವ್ ನನ್ನ ಕಡೆ ನೋಡಿದರು. ನಾನು ಧೈರ್ಯ ತಂದುಕೊಂಡು “ಅವನು ಎಪಿಲೆಪ್ಟಿಕ್ ಪೇಷಂಟ್ ಸಾರ್" ಎಂದೆ. ಹ್ಞೂ ಎಂದುಕೊಂಡರು, ಒಂದು ಕ್ಷಣದ ನಂತರ. “ಮತ್ತೆ ಮನೇಲಿ ಎಲ್ಲಿ ಹೋಗ್ತೀನಿ ಅಂತ ಹೇಳಿ ಹೋಗ್ಲಿಲ್ಲ ಅಂತ ಹೇಳಿದ್ರೀ" ಅಂದರು. ಈಗ ನನಗೆ ಜ್ಞಾಪಕಕ್ಕೆ ಬಂತು. “ಹಾಗಲ್ಲ ಸರ್, ಅವನು ಫ್ಯಾಕ್ಟರೀಗೆ ಹೋಗೋದಕ್ಕೆಂತ ಹೊರಟ. ಆದರೆ ಮೂರು ದಿವಸದಿಂದ ಮನೆಗೆ ಬರಲಿಲ್ಲ. ಹಿಂದೆ ಒಂದು ಸಾರಿ ಹೀಗೇನೆ ಅವರ ಸ್ನೇಹಿತನ ರೂಮಿನಲ್ಲೇ ಮಲಗಿದ್ದ. ಈಗಲೂ ಹಾಗೇನೇ ಅಂತ ಅಂದು ಕೊಂಡಿವಿ.”
“ಹಿಂದೆ ಎಷ್ಟು ದಿವಸ?"
“ಒಂದು ದಿನ."
“ಮತ್ತಿವಾಗ ಮೂರು ದಿನವಾಗಿದೆಯಲ್ಲ. ಹೋಗಲಿ ಫ್ಯಾಕ್ಟರೀಲಿ ವಿಚಾರಿಸಿದಿರಾ?" ಏನು ಹೇಳುವುದೋ ದಿಕ್ಕು ತೋಚದಾಯಿತು. ಅವನುಫ್ಯಾಕ್ಟರೀಗೆ ಹೋಗೇ ಇಲ್ಲವಲ್ಲ, ಆದರೆ ಅದನ್ನು ಹೇಗೆ ಹೇಳುವುದು “ಇಲ್ಲ ಸಾರ್" ಅಂತ, ಸುಳ್ಳು ಹೇಳಿದೆ.
“ಅವನೇನು ಮಗೂನೆ ಸಾರ್, ಮೂವತ್ನಾಲ್ಕು ವರ್ಷ. ಎಲ್ಲಾದಕ್ಕೂ ಅಣ್ಣಂಗೆ ಹೇಳೇ ಹೋಗ್ಬೇಕು ಅಂತ ನಿಯಮ ಹೇಗೆ ಮಾಡೋದು?" ಪ್ರಭಾಕರರಾವ್ ವಿವರಣೆ ನೀಡಿದರು.
“ಅವನಿಗೆ ಆಗಾಗ ಮೂರ್ಚೆ ಬರ್ತಿತ್ತು ಸಾರ್, ಅದಕ್ಕೇ ಹೆದರಿಕೆಯಾಗ್ತಿದೆ" ಎಂದೆ.
“ಸರಿ" ಎಂದು ಇನ್ಸ್ಪೆಕ್ಟರು, ನಮ್ಮೆಡೆಯೇ ನೋಡುತ್ತ “ನಮ್ಮಲ್ಲಿ ಡೀಟೈಲ್ಸ್ ಇಲ್ಲ. ಪೇಪರ್‍ನಲ್ಲಿ ಬಂದಿರೋ ಅಷ್ಟೆ ಸುದ್ದಿ ನಮಗೂ ತಲುಪಿಸಿದಾರೆ. ಎಲ್ಲ ವಿಚಾರಾನೂ ಕಮೀಷನರ್ ಆಫೀಸಲ್ಲಿ ಸಿಕ್ಕತ್ತೆ, ಅಲ್ಲಿ ವಿಚಾರಿಸಬೇಕು" ಎಂದರು.
“ಅಲ್ಲಿಗೇ ಹೋಗ್ತೀವಿ ಸಾರ್" ಎಂದು ಮೇಲೆದ್ದೆವು. ಕೈಮುಗಿದು ಅಲ್ಲಿಂದ ಬೀಳ್ಕೊಂಡೆವು. ಆ ಇನ್‍ಸ್ಪೆಕ್ಟರನ ಮಾತಿನ ರೀತಿ ಕಂಡು ಎದೆ ಝಲ್ಲೆನ್ನುತ್ತಿತ್ತು. ಹೊರಗೆ ಬಂದಾಗ ಹಾಯೆನಿಸಿತು.
ಸದ್ಯ, ಕಮೀಷನರ್ ಆಫೀಸಿನಲ್ಲಿ ನಮಗೆ ಬೇರೆ ರೀತಿಯ ಸ್ವಾಗತ ದೊರಕಿತು. ಈ ಕೇಸ್‍ನ ಡೀಲ್ ಮಾಡ್ತಿದ್ದ ಇನ್ಸ್ಪೆಕ್ಟರ ಹತ್ತಿರ ಹೋದಾಗ ಅವರು, “ಪ್ಲೀಸ್ ಕಮಿನ್" ಎಂದು ಹೇಳಿ, “ವಾಟ್ ಕೆನ್ ಐ ಡೂ ಫಾರ್ ಯು?" ಎಂದರು. ಅವರು ಹಾಗೆ ಹೇಳಿದ ಧಾಟಿಯಿಂದಲೇ ನನಗೆ ಸ್ವಲ್ಪ ಧೈರ್ಯವುಂಟಾಯಿತು. ಏನೇನೋ ಪ್ರಶ್ನೆಗಳನ್ನು ಆ ಹಿಂದಿನ ಇನ್ಸ್ಪೆಕ್ಟರ ಹಾಗೆ ಹಾಕಿ ಕೊಲ್ಲುತ್ತಾರೇನೋ ಅಂದುಕೊಂಡಿದ್ದ ನನಗೆ ಸಮಾಧಾನ ಬಂತು. ಅವರು ಪ್ರಶ್ನೆ ಕೇಳಿದಾಗ ಯಥಾ ಪ್ರಕಾರ ನನ್ನ ಮುಖ ಪ್ರಭಾಕರರಾವ್ ಕಡೆ ತಿರುಗಿತು, ಅವರೇ ಅದರ ಪ್ರಸ್ತಾಪ ಮಾಡಿದರು.
ಪ್ರಭಾಕರರಾವ್ ಸುದ್ದಿಯ ವಿಚಾರ ಹೇಳಿ ಮುಗಿಸಿದ ಮೇಲೆ ನಾನು “ನನ್ನ ತಮ್ಮನಿಗೆ ಏಪಿಲೆಪ್ಸಿ ಸಾರ್. ತುಂಬ ಆತಂಕ ಅದಕ್ಕೋಸ್ಕರವೇ" ಅಂದೆ. “ನ್ಯಾಚುರಲ್" ಅಂದರು. “ಡೀಟೈಲ್ಸ್ ಬೇಕಲ್ಲ ಸಾರ್" ಎಂದೆ. ಅವರೇ ಎದ್ದು ಒಂದು ಫೈಲು ತೆಗೆದು ಆ ವಿಚಾರ ಹೇಳತೊಡಗಿದರು. ಮೊನ್ನೆ ಮಧ್ಯಾಹ್ನ ಯಾರೋ ಕಮೀಷನರ್ ಆಫೀಸಿಗೆ ಫೋನ್ ಮಾಡಿದರಂತೆ. ಬಾಣಸವಾಡಿಯ ಹನುಮಂತರಾಯನ ಗುಡಿಯಿದೆಯಲ್ಲ. ಅದರ ಕಾಂಪೌಂಡಿನ ಆಚೆ ಯಾರದೋ ಬಟ್ಟೆಗಳು ಮಡಿಸಿಟ್ಟಿದ್ದು ಕಾಣಿಸುತ್ತಿದೆಯೆಂದು ಹೇಳಿದ. “ಅದಕ್ಕೇನ್ರೀ" ಎಂದಾಗ, ಹತ್ತಿರದಲ್ಲೇ ಒಂದು ದೊಡ್ಡ ಬಾವಿಯಿದೆ. ಅಲ್ಲಿ ಯಾರಾದರೂ ಸ್ನಾನಗೀನ ಮಾಡಕ್ಕೇಂತ ಇಳಿದಿರಬಹುದು ಅಂತ ಅನುಮಾನ ಅಂದರು. ನೀವ್ಯಾರು ಮಾತಾಡೋದು ಅಂದಾಗ ದೇವಸ್ಥಾನದ ಅರ್ಚಕರ ಮಗ ಅಂತ ಹೇಳಿದರು. ಈಗಲೇ ಬರ್ತೀವಿ ಅಂತ ಅವರಿಗೆ ದೇವಸ್ಥಾನದಲ್ಲಿಯೇ ಇರಕ್ಕೆ ಹೇಳಿ ಇನ್ಸ್ಪೆಕ್ಟರು ಒಬ್ಬ ಪಿ. ಸಿ. ಜೊತೆಗೆ ಹೋದರಂತೆ.
ಅರ್ಚಕರ ಮಗ ವಿದ್ಯಾವಂತ. ಅದಕ್ಕೇ ಬಟ್ಟೆಯನ್ನು ಮುಟ್ಟಿರಲಿಲ್ಲ. ಅದು ಸುಲಭವಾಗಿ ಯಾರ ಕಣ್ಣಿಗೂ ಕಾಣಿಸುವ ಜಾಗದಲ್ಲಿ ಇರಲಿಲ್ಲ. ಮಧ್ಯಾಹ್ನ ಯಾಕೋ ಆ ಕಡೆ ಹೋದಾಗ ಅಲ್ಲಿ ಬಟ್ಟೆಗಳು ಮಡಿಸಿಟ್ಟದ್ದು ಕಾಣಿಸಿತು. ಹತ್ತಿರ ಹೋಗಿ ನೋಡಿದಾಗ, ಮಂಡಿಸಿದ್ದರೂ, ನೆಟ್ಬನಿಯನ್ನು ಷರ್ಟು, ಪ್ಯಾಂಟುಗಳೆಂದು ತಿಳಿಯುತ್ತಿತ್ತು. ಬಾವಿಯ ಕಡೆ ನೋಡಿದರೆ ಯಾರೂ ಸ್ವಲ್ಪ ಮುಂಚೆ ಇಳಿದ ಸುಳಿವು ಕಾಣಲಿಲ್ಲವಂತೆ. ಏನಾದರೂ ಆಗಲಿ ಅಂತ ಪೋಲೀಸರಿಗೆ ಫೋನ್ ಮಾಡಿದ್ದನಂತೆ. ಬಟ್ಟೆಗಳನ್ನು ಪೋಲೀಸರು ವಶಕ್ಕೆ ತೆಗೆದುಕೊಂಡರು. ಅರ್ಚಕರ ಮಗನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡರು. ಯಾರಾದರೂ ಬಾವಿಗೆ ಯಾವುದೇ ಕಾರಣದಿಂದ ಇಳಿದಿದ್ದರೂ ಹೊರಗೆ ಬಂದಿದ್ದರೆ ಬಟ್ಟೆ ಹಾಕಿಕೊಂಡು ಹೋಗಬೇಕಾಗಿತ್ತು ಏನೋ ಆಗಿದೆಯೆನ್ನಿಸಿ ಇನ್ಸ್ಪೆಕ್ಟರು ಅವತ್ತೆಲ್ಲ ಈ ಬಾವಿಯನ್ನು ಕಾಯಬೇಕೆಂದು ಪಿ.ಸಿ.ಗೆ ಹೇಳಿಬಂದರಂತೆ. ಪಿ.ಸಿ. ರಾತ್ರಿ ದೇವಸ್ಥಾನದಲ್ಲಿಯೇ ಮಲಗಿದ್ದನಂತೆ, ಬೆಳಿಗ್ಗೆ ಎದ್ದು ಮುಖ ತೊಳೆದು ಅರ್ಚಕರ ಮನೆಯವರು ಕೊಟ್ಟ ಕಾಫಿ ಕುಡಿದು ಬಂದು ಬಾವಿಯನ್ನು ನೋಡಿದರೆ ಒಂದು ಹೆಣ ತೇಲುತ್ತಿತ್ತಂತೆ! ಸರಿ ಅವನು ಫೋನ್ ಮಾಡಿದ. ಇನ್ಸ್ಪೆಕ್ಟರು ಅಲ್ಲಿಗೆ ಹೋದರು. ಜನರ ಗುಂಪು ಸೇರಿತು. ಬಾವಿಯಿಂದ ಹೆಣ ತೆಗೆಸಿದರು. ಮಹಜರು ನಡೆಸಿ ದೇಹದ ಫೋಟೋಗಳನ್ನು ತೆಗೆದುಕೊಂಡು ಅದನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದರು.
ನನಗೆ ಕುತೂಹಲ ಭಯ ಎಲ್ಲ ಉಂಟಾಯಿತು. ಒಮ್ಮೆಗೆ “ಫೋಟೋ ನೋಡಬಹುದೇ ಸಾರ್" ಎಂದೆ. “ಶೂರ್" ಎನ್ನುತ್ತ
ಫೈಲಿನಲ್ಲಿ ಇಟ್ಟಿದ್ದ ಎರಡು ಚಿತ್ರಗಳನ್ನು ನಮ್ಮ ಕಡೆಯಿಟ್ಟರು. ಒಂದು ದೇಹದ ಮುಂಭಾಗದ ಚಿತ್ರ, ಇನ್ನೊಂದು ಎಡಭಾಗದಿಂದ ತೆಗೆದದ್ದು. ಮುಖವೆಲ್ಲ ಊದಿತ್ತು. ದೇಹವಂತೂ ದಪ್ಪಗೆ ಆಗಿತ್ತು. ಯಾರ ಮುಖವೆಂದು ಗುರುತಿಸುವುದು ಕಷ್ಟವೇ ಸರಿ. ಮುಖದ ಎದುರಿಂದ ತೆಗೆದ ಫೋಟೋನ ಸೂಕ್ಷ್ಮವಾಗಿ ಗಮನಿಸಿದೆ. ಶಶಿಯ ಎಡಗಣ್ಣಿನ ಕೆಳಗೆ ಒಂದು ಮಚ್ಚೆ ಇತ್ತು. ಅಷ್ಟೇನೂ ದೊಡ್ಡದಲ್ಲ. ಅಂಥದೆ ಗುರುತು ಫೋಟೋದಲ್ಲಿ ಕಾಣಿಸುತ್ತಿದೆ ಎನ್ನಿಸಿತು. ಹಾಗಾದರೆ ಶಶಿಯದೇ ಇರಬಹುದೇ ಈ ದೇಹ ಅನ್ನಿಸಿತು. ಮುಖವನ್ನೆಲ್ಲ ಗಮನಿಸಿದೆ. ಬೇರೆ ಕಡೆಯೂ ಅಂತಹ ಕಲೆಗಳು ಸಣ್ಣದಾಗಿರುವಂತೆ ತೋರುತ್ತದಲ್ಲ ಅನ್ನಿಸಿತು. ಅವನದಿರಲಾರದು. ಆದರೆ ಅವನ ಹಣೆಯ ಮೇಲ್ಭಾಗದ ಕೂದಲ ರೀತಿ ಶಶಿಯದೇ ಇದ್ದ ಹಾಗಿದೆ. ಯಾಕೋ ಗೊಂದಲವೆನ್ನಿಸಿ ನಿಟ್ಟುಸಿರುಬಿಟ್ಟೆ.
“ಐಡೆಂಟಿಫೈ ಮಾಡಕ್ಕಾಗತ್ತಾ?" ಅಂದರು ಇನ್ಸ್ಪೆಕ್ಟರ್.
“ಕಷ್ಟ ಅಲ್ಲವಾ?" ಎಂದರು ಪ್ರಭಾಕರರಾವ್ ನನ್ನೆಡೆ ತಿರುಗಿ.
“ಏನೋ ಸಾರ್. ಯಾಕೋ ಕನ್ಫ್ಯೂಸ್ ಆಗ್ತಿದೆ. ಒಂದು ಸಲ ಅವನದೇ ಅನ್ನಿಸಿದರೆ ಇನ್ನೊಂದು ಸಲ ಅವನದಲ್ಲವೇನೋ ಅನ್ನಿಸತ್ತೆ" ಎಂದು ಸಂಶಯ ವ್ಯಕ್ತಪಡಿಸಿದೆ.
“ಬಾಡಿ ಇಲ್ಲವಾ ಸಾರ್' ಅಂದೆ.
“ಉಹ್ಞೂ" ಅಂದರು. ಬಾವಿಯಲ್ಲಿ ತೇಲುವ ಹೊತ್ತಿಗೇ ಮೈಯೆಲ್ಲ ಊದಿಕೊಂಡಿರತ್ತೆ. ನೀರು ಕುಡಿದು ಹೊಟ್ಟೆ ಉಬ್ಬರಿಸಿರತ್ತೆ. ದೇಹ ನೀರಲ್ಲಿ ತೇಲೋದು ಅಂದರೆ ಬಿದ್ದು ಮೂರು ದಿನವಾಗಿದೆ ಸುಮಾರು ಅಂತ ತಾನೇ, ಅಷ್ಟರಲ್ಲಿ ದೇಹ ಎಲ್ಲ ಡೀಕಂಪೋಸ್ ಆಗಕ್ಕೆ ತೊಡಗಿರತ್ತೆ. ಹೆಚ್ಚು ಕಾಲ ಇಟ್ಟರೆ ಕೊಳೆತು ವಾಸನೆ ಬಂದು ಅಧ್ವಾನವಾಗತ್ತೆ. ಯಾರಾದರೂ ತಪ್ಪಿಸಿಕೊಂಡಿದ್ರೆ, ಕಾಣೆಯಾಗಿದ್ರೆ ಕಂಪ್ಲೇಂಟ್ ಕೊಟ್ಟಿರುತ್ತಾರೆ. ಬಂದು ವಿಚಾರಿಸ್ತಾರೆ ಅಂತ ಡೀಟೈಲ್ಸ್ ಎಲ್ಲ ಪೋಲೀಸ್ ಸ್ಟೇಷನ್ಗಳಿಗೆ ಕಳಿಸುವುದು ರೂಢಿ" ಅಂದರು. “ನೀವು ಕಂಪ್ಲೈಂಟ್ ಕೊಡಲಿಲ್ಲವಾ?" ಅಂದರು ಹಿಂದಿನ ಇನ್ಸ್ಪೆಕ್ಟರಿಗೆ ಹೇಳಿದ್ದನ್ನೇ ಮತ್ತೊಮ್ಮೆ ಹೇಳಿದೆ.
“ಪಾಪ" ಅಂದರು. “ನೋಡಿ, ದೇಹ ಇಟ್ಕೊಳ್ಳಕ್ಕೆ ಆಗಲ್ಲವಲ್ಲ" ಅಂತ ಅದನ್ನು ಸಂಸ್ಕಾರಕ್ಕೆ ಒಳಗುಮಾಡಿದ್ದಾಗಿ ಹೇಳಿದರು. ನಾನೂ ನಿಮ್ಮವನೇ ಅಂದರು. ನಾನೇ ಖುದ್ದಾಗಿ ಬಾಡೀನ ನೋಡಿದೆ. ಕಿವಿ ಚುಚ್ಚಿತ್ತು. ಹಿಂದೂ ಅಂತ ತೀರ್ಮಾನ ಮಾಡಿದೆ; ಆದರೆ ಮೈಮೇಲೆ ಜನಿವಾರವಿರಲಿಲ್ಲ ನೋಡಿ, ಯಾರೋ ಎನ್. ಬಿ. ಅಂತ ಅಂದ್ಕೊಂಡೆ. ಪಾಪ, ಬ್ರಾಹ್ಮಣ ಅಂತ ಗೊತ್ತಾಗಿದ್ದಿದ್ರೆ ಕ್ರಿಮೇಟ್ ಮಾಡಿಸ್ಬೋದಾಗಿತ್ತು. ಆದರೆ ಈಗ ಅದನ್ನು ಬರಿ ಮಾಡ್ಸಿದ್ದೀವಿ" ಅಂದರು. “ಎಲ್ಲಿ ಸಾರ್?" ಎಂದು ಪ್ರಭಾಕರರಾವ್ ಕೇಳಿದ್ದಕ್ಕೆ ಜಾಗ ಹೇಳಿದರು. “ಬೇಕಾದರೆ, ಈಗಲೂ ಮ್ಯಾಜಿಸ್ಟ್ರೇಟ್ ಆರ್ಡರ್ ತಗೊಂಡು ಎಕ್ಸ್‍ಹ್ಯೂಮ್ ಮಾಡಿಸಬಹುದು, ಸುಡಲೇ ಬೇಕು ಅಂದರೆ" ಅಂದರು. ಒಳಗೆ ಹೂತಿರೋ ದೇಹವನ್ನು ತೆಗೆದರೆ ಹೇಗೆ ಕಾಣಿಸಬಹುದು. ನಾನು ಕೊನೆಯದಾಗಿ ನೋಡಿದ್ದ ಶಶಿಯ ಮುಖಕ್ಕೂ ಈ ಫೋಟೋಗೂ ಹೋಲಿಕೆಯೇ ಕಾಣ್ತಿಲ್ಲ. ಇನ್ನು ನೆಲದಲ್ಲಿ ಹೂತು ಬಿಟ್ಟಿದ್ದಾರೆ ಬೇರೆ. “ಅಂತದ್ದೇನು ನೆಸೆಸಿಟಿ ಇಲ್ಲ ಸಾರ್, ಅವನಿಗೆ ಇನ್ನೂ ಉಪನಯನವಾಗಿರಲಿಲ್ಲ" ಅಂದರು ಪ್ರಭಾಕರರಾವ್. ನನ್ನ ಮನಸ್ಸನ್ನ ಅರ್ಥಮಾಡಿಕೊಂಡವರ ಹಾಗೆ ಅವರಿಗೆ ಮನಸ್ಸಿನಲ್ಲೇ ವಂದಿಸಿದೆ. “ಯೂ ಆರ್ ರೈಟ್. ಅಲ್ದೆ ಮ್ಯಾಜಿಸ್ಟ್ರೇಟ್ ಆರ್ಡರ್ ಗೀರ್ಡರು ಅಂದ್ರ ಬರೀ ಕಾಂಪ್ಲಿಕೇಷನ್ ಯಾಕೆ? ನೀವೂ ನಮ್ಮೋರು ಅಂತ ಹೇಳ್ತೀನಿ, ಆದದ್ದಾಯಿತು, ಸುಡೋದೋ ಹೂಳೋದೋ ಒಂದು ಆಗಿದೆಯಲ್ಲ" ಅಂದರು.
ನನಗಿನ್ನೂ ಅನುಮಾನ. ಈ ದೇಹ ಅವನದೇ ಹೌದು ಅಂತ ಅನ್ನಿಸ್ತಾ ಇದೆ. ಆದರೆ ಪೂರ್ತಿ ಖಾತರಿಯಾಗಿಲ್ಲ. ಆದರೂ ಶಶಿಯೇ ಸತ್ತಿರೋನು ಅನ್ನೋ ರೀತಿಯಲ್ಲಿ ಮಾತಾಡ್ತಿದ್ದೀನಲ್ಲ ಅನ್ನಿಸಿ. “ಬಟ್ಟೆಗಳನ್ನು ನೋಡಬಹುದೇ ಸಾರ್" ಎಂದೆ. ಇನ್ಸ್ಪೆಕ್ಟರು ಬಟ್ಟೆಗಳನ್ನು ಒಳಗಿನಿಂದ ತರಿಸಿದರು. ಒಂದೊಂದಾಗಿ ಪರಿಶೀಲನೆ ನಡೆಸಿದೆವು; ನಾನೂ ಪ್ರಭಾಕರರಾವ್. ಶರ್ಟ್, ಪ್ಯಾಂಟು, ನೆಟ್ಬನೀನು. ಅವನ ಬಟ್ಟೆಗಳನ್ನು ನಾನು ಯಾಕೆ ಅಷ್ಟೊಂದು ಸೂಕ್ಷ್ಮವಾದ ವಿವರಗಳ ಸಮೇತ ಜ್ಞಾಪಕ ಇಟ್ಟುಕೋಬೇಕು. ಅಳತೆ ನೋಡಿದರೆ ಅವನಿಗೆ ಸರಿಹೋಗೋ ಹಾಗೆಯೇ ಇದೆ. ಆದರೆ ಅವನದೇ ಅಂತ ಹೇಗೆ ಹೇಳೋದು. ಆ ಪ್ಯಾಂಟು ಸ್ವಲ್ಪ ಹಳೆಯದು. ಅಂಥ ಬಣ್ಣದ್ದನ್ನು ಅವನು ಹಾಕಿಕೊಂಡಿದ್ದ ನೆನಪೇನೋ ಬರತ್ತೆ, ಆದರೆ ಆ ಬಣ್ಣದ ಪ್ಯಾಂಟು ಅವನೊಬ್ಬನ ಹತ್ತಿರವೇ ಇರತ್ತೇನು? ಖಾತರಿಯಾಗಿ ಅವನದೇ ಅಂತ ಹೇಳೋದು ಹೇಗೆ? ಆದರೆ ಶರ್ಟು ಸ್ವಲ್ಪ ಹೊಸತು. ಒಂದೆರಡು ಬಾರಿ ಮಾತ್ರ ಒಗೆತಕ್ಕೆ ಹಾಕಿರಬೇಕು. ಒಂದು ಕಡೆ ಕಾಲರಿನ ಹಿಂಭಾಗದಲ್ಲಿ ಶರ್ಟು ಹೊಲಿದ ಟೈಲರ್ ಶಾಪಿನ ಲೇಬಲ್ ಇತ್ತು. ಅದರ ಕೆಳಗೇ ಪಿ.ಎಲ್. ಎನ್ನುವ ಮಡಿವಾಳನ ಗುರುತಿತ್ತು. ಪಿ.ಎಲ್. ಮಾತ್ರ ನನ್ನ ಜ್ಞಾಪಕಕ್ಕ ಬಂತು. ಅವನು ನಮ್ಮನೆ ಹಿಂದಿನ ಬೀದಿಯಲ್ಲಿದ್ದ. ಅಗಸರವನ ಅಂಗಡಿಗೇ ಬಟ್ಟೆ ಒಗೆಯಕ್ಕೆ ಕೊಡ್ತಿದ್ದದ್ದು. ಪದ್ಮಾ ಲಾಂಡ್ರಿ ಅಂತಲೋ ಪದ್ಮನೀ ಲಾಂಡ್ರಿ ಅಂತಲೋ ಇರಬೇಕು. ನನ್ನ ಬಟ್ಟೆಗಳನ್ನು, ಮಕ್ಕಳ ಬಟ್ಟೆಗಳನ್ನು ರಮನೇ ಒಗೀತಿದ್ದಳು. ಶಶಿ ಬಟ್ಟೆಗಳನ್ನು ಒಗೆಯಕ್ಕೆ ಟೈಮಿಲ್ಲ ಅಂತ ಲಾಂಡ್ರಿಗೆ ಕೊಡ್ತಾ ಇದ್ದ. ಅದೇ ಲಾಂಡ್ರಿ ಹೌದು. ಇದು ಅವನ ಶರ್ಟೇ ಅನ್ನಿಸುತ್ತೆ. ಟೈಲರ್ ಶಾಪಿಗೆ ಹೋಗಿ ಅವನು ಅಲ್ಲೇ ಬಟ್ಟೆ ಹೊಲಿಸ್ತಿದ್ದನೇನೋ ವಿಚಾರಿಸಬೇಕು. ಅಂದರೆ ಈ ದೇಹ ಶಶಿಯದೇ ಅಂತ ತೀರ್ಮಾನಿಸಬಹುದೆ? ನೂರಕ್ಕೆ ನೂರರಷ್ಟು ಖಾತರಿಯಾಗಿ ಹೇಳಬಹುದೇ?
“ಪೋಸ್ಟ್ಮಾರ್ಟಂ ರಿಪೋರ್ಟ್ ಹೇಗಿದೆ ಸಾರ್?" ಎಂದು ಕೇಳಿದೆ. “ಏನೋ ಹೆಡ್ ಇಂಜರಿ ಅಂದರು ಡಾಕ್ಟರು. ಡೀಟೇಲ್ಡ್ ರಿಪೋರ್ಟ್ ಇವತ್ತು ಸಾಯಂಕಾಲ ಬರಬಹುದು. ಯಾಕೆ, ಗುರುತು ಸಿಕ್ಕಲಿಲ್ಲವಾ ಬಟ್ಟೆಯಿಂದಲೂ?" ನನ್ನ ಅನುಮಾನಗಳನ್ನು ಹೇಳಿದೆ. ಅವನದೇ ಇದ್ದ ಹಾಗಿದೆ ಅಂದೆ. “ಇನ್ಯಾರೂ ಬಂದಿಲ್ಲ, ಬೇರೆ, ಅವರದೇ ಇರಬಹುದು ಹೌ ಸ್ಯಾಡ್" ಎಂದರು ಪ್ರಭಾಕರ ರಾಯರು. ಇನ್‍ಸ್ಪೆಕ್ಟರ್‍ನ ಕೇಳಿ ಈಸಿಕೊಂಡು ಒಂದು ತುಂಡು ಪೇಪರ್ನಲ್ಲಿ ಟೈಲರ್ ಶಾಪಿನ ಲೇಬಲ್ ಮೇಲಿದ್ದ ಹೆಸರು, ಲಾಂಡ್ರಿಯ ಇನಿಷಿಯಲ್ಗಳನ್ನು ಗುರುತು ಹಾಕಿಕೊಂಡೆ- ದಯವಿಟ್ಟು ಈ ವಿಷಯದಲ್ಲಿ ಹೆಲ್ಪ್ ಮಾಡಬೇಕು ಸಾರ್" ಎಂದು ಇನ್‍ಸ್ಪೆಕ್ಟರ್‍ನ ಕೇಳಿಕೊಂಡೆ.
“ಡೆಫನೆಟ್ಲೀ, ನಾವಿರೋದೇ ಅದಕ್ಕೆ. ಅಲ್ಲದೆ ನೀವು ನಮ್ಮವರು ಬೇರೆ, ಯಾವುದೂ ಕಾಂಪ್ಲಿಕೇಷನ್ ಬರದ ಹಾಗೆ ತೀರ್ಮಾನ ಮಾಡೋಣ. ನಾಳೆ ಬನ್ನಿ. ಅಷ್ಟು ಹೊತ್ತಿಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿರುತ್ತೆ. ಡೆತ್ ಸರ್ಟಿಫಿಕೇಟ್ ಮಾಡಿಸಿಕೊಟ್ಟರೆ ಸಾಕು. ಇನ್ನೇನೂ ಸಮಸ್ಯೆಗಳು ಬರಲ್ಲ" ಅಂದರು. ನಮ್ಮ ಅಡ್ರಸ್ ತೆಗೆದುಕೊಂಡರು. ನಾವು ಅಲ್ಲಿಂದ ಹೊರಟೆವು.
ಮನೆಗೆ ಬಂದಾಗ ಮಧ್ಯಾಹ್ನ ಮೂರು ಗಂಟೆ. ಹೊಟ್ಟೆಗೆ ಏನೂ ಇಲ್ಲ. ಮೈಕೈಯೆಲ್ಲ ನೋವು ಬೇರೆ, ರಮ ಆತಂಕದಿಂದ ಕಾಯ್ತಾ ಇದ್ಲು. “ಯಾಕೆ ಇಷ್ಟೊತ್ತು, ಏನಾಯ್ತು." ಎಂಬ ಪ್ರಶ್ನೆ ನನ್ನ ಎದುರಿಸ್ತು. “ಮೊದಲು ಊಟ ಹಾಕು" ಎಂದು ಒಂದಷ್ಟು ಅನ್ನವನ್ನ ಗಬಗಬ ತಿಂದೆ. ಹಾಗೂ ಅನಿಸ್ತು. ಶಶಿಧರ ಸತ್ತಿದಾನೆ. ನಾನು ಸ್ನಾನ ಕೂಡ ಮಾಡದೆ ಊಟ ಮಾಡಿದ್ದೀನಲ್ಲ. ಆದರೆ ಆ ದೇಹ ಶಶಿಯದೇ ಅಂತ ನಿರ್ಧಾರವಾಗಿಲ್ಲವಲ್ಲ ಪೂರ್ತಿಯಾಗಿ ಅಂತ, ನನ್ನ ನಾನೇ ಸಮಾಧಾನ ಮಾಡಿಕೊಂಡೆ.
ಊಟವಾದ ಮೇಲೆ ರಮಾಗೆ ಎಲ್ಲ ವಿಚಾರ ಹೇಳ್ದೆ. ಅವಳೂ ಗಾಬರಿಯಾದಂತೆ ಕಾಣಿಸಿತು. “ಅಯ್ಯೋ ದೇವರೇ" ಅಂದಳು. ಇವೆಲ್ಲ ಬೂಟಾಟಿಕೆಯೇ ಅನ್ನಿಸಿತು. ಅವಳ ಮನಸ್ಸಲ್ಲಿಯೇ ಏನಿದೆಯೋ. ಇದನ್ನು ಅವಳು ನಿರೀಕ್ಷಿಸ್ತಾ ಇದ್ದಳೇ ಅಥವಾ ಇದಕ್ಕಾಗಿ ನಿರೀಕ್ಷಣೆ ಮಾಡ್ತಾ ಇದ್ದಳೇ ಅರ್ಥ ಮಾಡಿಕೊಳ್ಳೋದು ಎಷ್ಟು ಕಷ್ಟ ಅನ್ನಿಸಿತು. ಅವಳಿಗೆ ಶಶಿಧರ ಸತ್ತರೆ ಸಮಾಧಾನ ವಾಗತ್ತೇನೋ ಅಂದ್ಕೊಂಡೆ. ಒಂಥರ ಅವನ ಸಾವಿಗೆ ಅವಳೇ ಕಾರಣವೇನೋ ಎಂಬ ಅನುಮಾನ ಬಂತು. ನಾನಲ್ಲವೇ ಅವನನ್ನು ಹೊಡೆದದ್ದು? ಆದರೆ ಆ ಜಗಳದ ವಿಚಾರವನ್ನ ಪೋಲೀಸರಿಗೆ ಹೇಳಲಿಲ್ಲವಲ್ಲ. ಯಾಕೆ ಹೇಳಲಿಲ್ಲ ನಾನು ಅಂತ ಕೇಳಿಕೊಂಡೆ. ಹೊಳೆಯಲಿಲ್ಲ. ನನ್ನ ಮನಸ್ಸಿನಲ್ಲಿ ಏನಿದೆ ಅಂತ ನನಗೇ ಗೊತ್ತಿಲ್ಲ. ಇನ್ನು ರಮಳ ಬಗ್ಗೆ ನಾನು ತೀರ್ಪುಕೊಡೋದು ಯಾವ ನ್ಯಾಯ ಅನ್ನಿಸಿತು.
- - -
ನಾಳೆ ಪೂರ್ತಿ ಪೋಸ್ಟ್ ಮಾರ್ಟಂ ರಿಪೋರ್ಟ್ನಲ್ಲಿ ಏನು ಬಂದಿರತ್ತೋ ಏನು ಕತೆಯೋ, ಶಶಿಯನ್ನು ಯಾರಾದರೂ ಕೊಲೆ ಮಾಡಿರಬಹುದು ಅಂತ ಅನ್ನಲು ಕಾರಣವೇ ಇಲ್ಲ. ಅವನಿಗಾಗದವರು, ಅದೂ ಕೊಲೆ ಮಾಡುವಷ್ಟು ದ್ವೇಷ ಇಟ್ಟುಕೊಂಡವರು ಯಾರಾದರೂ ಇರಬಹುದು ಅನ್ನೋ ಅನುಮಾನದ ಕಣ ಕೂಡ ಬರಲು ಸಾಧ್ಯವಿಲ್ಲ. ಎಲ್ಲರ ಜೊತೆಯಲ್ಲಿ ಅವನು ಚೆನ್ನಾಗಿದ್ದವನು ಅವನಿಗಾದರೂ ಅಷ್ಟು ತೀವ್ರವಾಗಿ ದ್ವೇಷಿಸುವುದು ಸಾಧ್ಯವಿತ್ತೇ? ಅಲ್ಲದೆ ಬಾವಿಯಲ್ಲಿ ಬಟ್ಟೆ ಸಮೇತ ಬೀಳದೆ ಬಟ್ಟೆಗಳನ್ನೆಲ್ಲ ಕಳಚಿ ಓರಣವಾಗಿ ಮಡಿಸಿಟ್ಟಿದೆಯಲ್ಲ. ಕೊಲೆ ಮಾಡಿದ್ದರೆ ಹೊಡೆದು ಹಾಗೆಯೇ ಎಸೆಯ ಬೇಕಾಗಿತ್ತಲ್ಲವೇ? ಅಥವಾ ಹೊಡೆದು ಅನುಮಾನ ಬಾರದಿರಲೀಂತ ಅವರೇ ಬಟ್ಟೆ ಕಳಚಿ ಮಡಿಸಿಟ್ಟು ಬಾವಿಗೆ ದೇಹವನ್ನು ಎಸೆದಿರಬಹುದೇ? ಆದರೆ ಅಂತಹ ಶತ್ರುಗಳಾರೂ ಇರಲಿಕ್ಕೆ ಸಾಧ್ಯವೇ ಇಲ್ಲವಲ್ಲ ಇವನಿಗೆ. ದುಡ್ಡಿಗಾಗಿ ಕೊಲೆ ಮಾಡಿರಬಹುದು ಅನ್ನೋದಕ್ಕೆ ಅವನೆಂದೂ ಹಣವನ್ನು ಹೆಚ್ಚಾಗಿ ಇಟ್ಟುಕೊಂಡು ಹೋದವನೇ ಅಲ್ಲ. ಹೊರಗಡೆ ಹೋಗುವಾಗ, ಅವನು ಆವತ್ತು ಮನೆ ಬಿಟ್ಟದ್ದು ಬೆಳಗಿನ ಜಾವ. ನಾನು ಕಂಡಹಾಗೆ ಅವನ ಹತ್ತಿರ ನಗದು ಹೆಚ್ಚಿರಲಾರದು. ಅಲ್ಲದೆ ಅವನು ಬಾಣಸವಾಡಿಗೆ ಯಾಕೆ ಹೋದ? ಏನೋ ಅರ್ಥವೇ ಆಗಲ್ಲ.
ಅವನು ಆತ್ಮಹತ್ಯೆಯೇನಾದರೂ ಮಾಡಿಕೊಂಡಿರಬಹುದೇ? ಅವನಿಗೆ ಹಿಂದಿನ ರಾತ್ರಿ ಬೇಜಾರಾಗಿರಬೇಕು ಅನ್ನುವುದರಲ್ಲಿ ಅನುಮಾನವೇ ಇಲ್ಲ. ಅವನ ಅತ್ತಿಗೆಗಿಂತ ನಾನೇ ಹೆಚ್ಚು ಕ್ರೂರವಾಗಿದ್ದೆನಲ್ಲ; ಎಷ್ಟೊಂದು ಹೊಡೆದುಬಿಟ್ಟೆ! ಅವನಂತೂ ಒಂದು ಮಾತೂ ಆಡಲಿಲ್ಲ. ಗಂಟಲು ತುಂಬ ತುಂಬಿಕೊಂಡವನೇ ಹಾಗೇ ಇದ್ದ. ನನ್ನ ಕಡೆ ಒಂದೆರಡು ಬಾರಿ ನೋಡಿದ್ದ ಅಷ್ಟೆ, ಅವನ ನೋಟದಲ್ಲಿ ಏನು ಭಾವನೆ ತುಂಬಿತ್ತು ಅನ್ನುವುದನ್ನು ನನಗೆ ತಿಳಿಯಲು ಸಾಧ್ಯವೇ ಇಲ್ಲ: ಆಗಂತೂ ನಾನು ಕೋಪದಿಂದ ಕುದಿಯುತ್ತಿದ್ದೆ. ಈಗ ಅವನ ಮುಖದ ರೀತಿಯನ್ನು ಕಲ್ಪನೆಮಾಡಿಕೊಳ್ಳುವುದು ಸಾಧ್ಯವಿಲ್ಲ. ಸದ್ಯ ಏನೂ ಬರೆದು ಜೇಬಲ್ಲಿಟ್ಟುಕೊಂಡಿರಲಿಲ್ಲವಲ್ಲ. ಏನಾದರೂ ಚೀಟಿ ಬರೆದು ನಾನು ಹೊಡೆದ ವಿಷಯ, ರಮ ಕೊಡುತ್ತಿದ್ದ ಕಿರುಕುಳದ ವಿಷಯ ವಿವರವಾಗಿ ತಿಳಿಸಿದ್ದಿದ್ದರೆ! ನಾನು ಅಷ್ಟು ಹೊಡೆದರೂ ಮರುಮಾತಾಡದೆ ಸಹಿಸಿಕೊಂಡನಲ್ಲ. ರೊಚ್ಚಿನಿಂದ ತನ್ನ ಸಾವಿಗೆ ನಾವೇ ಕಾರಣ ಅಂತ ಬರೆದಿಟ್ಟಿದ್ದರೆ ಏನಾಗುತ್ತಿತ್ತೋ. ಅವನು ಸಾಯುವಾಗಲೂ ತನಗೆ ತಿಳಿದಂತೆ ತನ್ನ ಸುಳಿವು ನೀಡುವ ಯಾವ ಕುರುಹನ್ನೂ ಇಡದೆ ಹೋಗಿದ್ದಾನಲ್ಲ. ಇದೆಲ್ಲ ಮುಂದಾಲೋಚನೆಯೇ? ಕೋಪದಲ್ಲಿ ಎಲ್ಲವನ್ನೂ ಮರೆತು ಹೊಡೆಯುತ್ತಿದ್ದ ನಾನು ಒಂದು ಕಡೆ ನಿಂತಿದ್ದರೆ, ಇನ್ನೊಂದು ಕಡೆ ಅವನು ಏಟು ತಿನ್ನುತ್ತ ಸಾಯುವುದು ಹೇಗೆ ಎಂದು ಆಲೋಚನೆ ಮಾಡುತ್ತಿದ್ದೇನೆ? ಯಾಕೋ ಅವನ ಈ ರೀತಿಯ ಮುಂದೆ ನಾನು ತುಂಬ ಚಿಕ್ಕವನಾಗಿಬಿಡುತ್ತಿದ್ದೇನೆ. ಬುದ್ಧಿ ಅವನಿಗಿಂತ ಹೆಚ್ಚಾಗಿದ್ದರೂ ವಿವೇಕ ಮಾತ್ರ ನನಗೆ ತುಂಬ ಕಡಮೆಯಲ್ಲವೇ?
ಶಶಿ ತನ್ನ ವಿಷಯ ಏನೂ ಬರೆದಿಡದೆ ಹೋಗಿದ್ದರೇನಾಯ್ತು, ಪೋಸ್ಟ್ಮಾರ್ಟಂ ರಿಪೋರ್ಟಿನಲ್ಲಿ ತಿಳಿಯುತ್ತದಲ್ಲ, ಅದು ಆತ್ಮಹತ್ಯೆಯೇ ಎಂದು. ಹಾಗೇನಾದರೂ ರಿಪೋರ್ಟಿನಲ್ಲಿದ್ದರೇನು
ಗತಿ! ಪೋಲೀಸರು ಮತ್ತೆ ಇನ್ವೆಸ್ಟಿಗೇಷನ್ ಮುಂದುವರಿಸುತ್ತಾರೆ. ಮನೆಯವರೆಲ್ಲರ ಹೇಳಿಕೆ ತಗೋತಾರೆ; ನೆರೆಹೊರೆಯ ಮನೆಯವರ ಹೇಳಿಕೆಗಳನ್ನೂ ಖಂಡಿತ ಪಡೆಯುತ್ತಾರೆ. ನಮ್ಮ ಸಂಸಾರದ ಚರಿತ್ರೆಯೆಲ್ಲ ದಾಖಲಾಗುತ್ತೆ. ಅಕ್ಕ ಪಕ್ಕದವರು ನಮ್ಮ ಜಗಳದ ಬಗ್ಗೆ ಹೇಳದೇ ಇರುತ್ತಾರೆಯೇ! ನಾವೆಷ್ಟು ಕೆಳದನಿಯಿಂದ ಜಗಳವಾಡಿದ್ದರೂ ಪಕ್ಕದ ಮನೆಗೆ ನಮ್ಮ ಮನೆಯ ಗೋಡೆ ಅಂಟಿಕೊಂಡಿದೆಯಲ್ಲ, ಅವರಿಗೆ ಕೇಳಿಸದಿರು ತ್ತದೆಯೇ? ಖಂಡಿತ ನಮ್ಮ ಜಗಳದ ಬಗ್ಗೆ, ಆಗಾಗ್ಗೆ ಅತ್ತಿಗೆ-ಮೈದುನರಿಗೆ ಆಗುತ್ತಿದ್ದ ಜಗಳ, ನಾನು ಗಟ್ಟಿಯಾಗಿ ಕೂಗುತ್ತಿದ್ದ ಪ್ರಸಂಗಗಳು (ದರಿದ್ರ, ನನಗೆ ಸಿಟ್ಟು ಬಂದರೆ ಯಾವಾಗಲೂ ಅಟ್ಟ ಹಾರಿಹೋಗುವ ಹಾಗೇ ಕೂಗುವುದು. ನನ್ನ ಗಂಟಲೊಂದಷ್ಟು ಇಂಗಿಹೋಗಬೇಕು), ಆವತ್ತಿನ ಹಿಂದಿನ ರಾತ್ರಿಯ ಸುದೀರ್ಘ ಜಗಳ - ಎಲ್ಲ ವಿಚಾರವನ್ನೂ ಪೋಲೀಸರಿಗೆ ನೆರೆಹೊರಯವರು ಹೇಳಬಹುದು. ನಾನು ಕೋಲಿನಿಂದ ಹೊಡೆದಾಗ ಅವನ ಮೈಮೇಲೆ ಬಾಸುಂಡೆಗಳೆದ್ದಿರಬಹುದೇ? ಗೆಣ್ಣಿನಂತಹ ಕಡೆ ಏಟು ಬಿದ್ದು ರಕ್ತ ಒಸರಿರಬಹುದೇ? ಹಾಗೇನಾದರೂ ಆಗಿದ್ದರೆ ನನ್ನನೇ ಕೊಲೆಗಾರನೆಂದು ಪೋಲೀಸರು ಕೇಸು ಹಾಕಬಹುದಲ್ಲವೇ? ಎದೆಯ ನಡುಕ ತಡೆಯಲು ಅಸಾಧ್ಯವಾಗುತ್ತದೆ. ಕಣ್ಣು ತುಂಬಿ ಬರುತ್ತಿದೆ. ಶಶಿ ಏನೋ ಮಾಡಿಕೊಳ್ಳಲು ಹೋಗಿ ನನ್ನ ಜೀವಕ್ಕೆ ಮುಳುವು ಆಗುತ್ತಿದ್ದಾನಲ್ಲ. ನಾನೇನು ಅಂಥದ್ದು ಮಾಡಿದ್ದು ಅವನಿಗೆ? ಏಟು ಕೊಟ್ಟೆ ನಿಜ. ಆದರೆ ನಾನು ಅಂತಹ ಪರಿಸ್ಥಿತಿಯಲ್ಲಿರಲಿಲ್ಲವೆ?
ರಮ-ಶಶಿ ಇವರ ಮಧ್ಯೆ ಸಿಕ್ಕು ನಾನು ನುಗ್ಗಾಗಲಿಲ್ಲವೇ? ಶಶಿಗೆ ನಾನೇನೂ ಉಪಕಾರ ಮಾಡಿಲ್ಲವೇ! ಇಷ್ಟು ವರ್ಷ ಅವನನ್ನು ಜೋಪಾನ ಮಾಡಿದವನು ನಾನು ತಾನೆ? ಅವನ ಮೇಲೆ ಸಿಟ್ಟು ಮಾಡಿಕೊಳ್ಳುವುದಕ್ಕೆ ನನಗೆ ಹಕ್ಕಿಲ್ಲವೇ? ಒಂದೆರಡು ಏಟು ಕೊಡುವ ಅಧಿಕಾರ ನನಗಿಲ್ಲವೇ? ನನ್ನ ಮಕ್ಕಳಿಗೇ ಒಂದೆರಡು ಬಾರಿ ಹೊಡೆದಿಲ್ಲವೇ? ಅವರುಗಳ ಮೇಲೆ ಕೋಪ ಮಾಡಿಕೊಂಡ ಪ್ರಸಂಗಗಳಿಗೇನು ಕಡಮೆಯೇ? ನಾನು ಶಶಿಯನ್ನು ಹೊಡೆದದ್ದು ಅವನು ಸಾಯಲಿ ಎಂದೇ? ಅವನನ್ನು ಸಾಯಿಸಬೇಕೆಂದಿದ್ದರೆ ಕ್ಷೇಮವಾಗಿ ಬೇರೆ ಕಡೆ ಇರಲು ಹೇಳಿದ್ದರೆ ಆಗುತ್ತಿರಲಿಲ್ಲವೇ? ರಮಳಿಗೂ ಸಂತೋಷ ಆಗುತ್ತಿತ್ತು. ಇವನನ್ನು ಹೊಡೆದು ಅಪಖ್ಯಾತಿಯನ್ನು ಪಡೆಯುವುದೂ ತಪ್ಪುತ್ತಿತ್ತು. ಹೋಗು ಎಂದವಳು ರಮ, ಇವನು ಹೊರಡುವುದಕಕೇ ತಯಾರಾದ. ಅದನ್ನು ಬೇಡ ಎಂದೇ ತಾನೇ ನಾನು ತಡೆದದ್ದು. ಅವನು ಕ್ಕರಿಸಲು ತೊಡಗಿದಾಗ ಅಣ್ಣ ಎಂಬ ಅಧಿಕಾರದಿಂದ, ಇಷ್ಟು ದಿನ ನೋಡಿಕೊಂಡ ನೈತಿಕ ಹಿನ್ನೆಲೆಯಿಂದ, ನನ್ನ ಬಳಿಯೇ ಇರಲಿ, ಅವನಿಗಿನ್ನಾರು ದಿಕ್ಕು ಎಂಬ ಕಕ್ಕುಲತೆಯಿಂದ ತಾನೇ ನಾನು ಹೊಡೆದದ್ದು. ಪ್ರೀತಿ ಎಲ್ಲಿರತ್ತೋ ಅಲ್ಲಿ ದಂಡಿಸುವ ಅಧಿಕಾರವೂ ಇರುತ್ತದಲ್ಲವೇ? ಅವನು ಹಾಳಾಗಿ ಹೋಗಲಿ ಎಂದು ನನ್ನ ಮನಸ್ಸಿನಲ್ಲಿದ್ದರೆ ಆತನನ್ನು ಅವನ ಪಾಡಿಗೆ ಬಿಡಬಹುದಾಗಿತ್ತು. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂದು ಸುಮ್ಮನಿರಬಹು ದಾಗಿತ್ತು. ಶಶಿಗೂ ಈ ವಿಚಾರವೆಲ್ಲ ತಿಳಿಯದೇ? ಅವನಿಗೆ ಖಂಡಿತ ನನ್ನ ಪ್ರೀತಿಯ ಬಗ್ಗೆ ಖಾತರಿಯಿತ್ತು. ಅದಕ್ಕೆ ಏನೂ ಸುಳುಹು ಕೊಡದೆ ಸಾಯಲು ಹೋಗಿದ್ದಾನೆ. ಇಲ್ಲದಿದ್ದರೆ ದ್ವೇಷ ತೀರಿಸಿಕೊಳ್ಳುತ್ತಿರಲಿಲ್ಲವೆ. ಕೊನೆಯ ಪಕ್ಷ ಸಾವಿನಲ್ಲಿ!
ಮೈಮೇಲಿನ ಗಾಯ, ಗುರುತುಗಳು ಏನಾದರೂ ರಿಪೋರ್ಟಿನಲ್ಲಿ ನಮೂದಾದರೆ ನನ್ನ ಗತಿಯೇನು? ನನ್ನ ಮೇಲೆ, ರಮಳ ಮೇಲೂ ಇರಬಹುದು, ಕೊಲೆಯ ಆಪಾದನೆ ಬರುತ್ತದೆ. ನನ್ನಂತೂ ಜೈಲಿಗೇ ಹಾಕುತ್ತಾರೇನೋ! ನಾನೇ ತಾನೇ ಹೊಡೆದದ್ದು? ಆಗ ರಮ, ಮಕ್ಕಳ ಗತಿಯೇನು? ಎಲ್ಲಿಗೆ ಹೋಗಬೇಕು ಅವರು? ಜೈಲು ಎಂದರೆ ಕೆಲಸವಿಲ್ಲ! ಆಪಾದನೆ ರುಜುವಾತಾದರೆ! ಅಯ್ಯೋ ದೇವರೇ, ಏನೆಲ್ಲ ಅನಾಹುತ ಆಗುತ್ತಿದೆ. ಈ ರೀತಿ ಆಗುವುದೆಂದು ಕನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲವಲ್ಲ.
ಏನೋ ಹೆಡ್ ಇಂಜುರಿ ಎಂದು ಡಾಕ್ಟರು ಹೇಳಿದರು ಅಂತ ಪೋಲೀಸ್ ಇನ್ಸ್ಪೆಕ್ಟರು ತಿಳಿಸಿದ್ದರು. ಮೈಮೇಲೆ ಗಾಯದ ಗುರುತುಗಳು ಕಾಣಿಸಲಿಲ್ಲ ವೇನೋ, ಅಥವಾ ಹಾಗೆ ಕಾಣಿಸಿಕೊಂಡಿದ್ದರೂ ತಲೆಗೆ ಏಟು ಬಿದ್ದ ರೀತಿಯಲ್ಲೇ ಮೈನ ಹಲವಾರು ಕಡೆ ಬಿದ್ದಿರಬಹುದಲ್ಲ, ಅದರಿಂದ ಕಲೆ ಉಳಿದಿರಬಹುದು. ನಮ್ಮ ಜಗಳದ ವಿಷಯ, ಶಶಿಯನ್ನು ನಾನು ಹೊಡೆದ ವಿಷಯ ಸದ್ಯ ಹೇಳಲಿಲ್ಲವಲ್ಲ, ಅಕಸ್ಮಾತ್ ನನ್ನ ಪ್ರಾಮಾಣಿಕತೆಯ ಹುಚ್ಚಿನಿಂದೇನಾದರೂ ಆ ವಿಚಾರ ಬಾಯಿಬಿಟ್ಟಿದ್ದರೆ ನಿಜವಾಗಿಯೂ ನನ್ನ ಗೋರಿ ನಾನೇ ತೋಡಿಕೊಳ್ಳುತ್ತಿದ್ದೆ.
ಹಾಳಾಯಿತು ಆ ಪ್ರಾಮಾಣಿಕತೆ. ಈಗ ಮೈ ಮೇಲೆ ಗಾಯದ ಗುರುತು ಕಂಡರೂ ಅದಕ್ಕೆ ನಾನು ಹೊಣೆ ಎಂದು ಹೇಳುವ ಹಾಗಿಲ್ಲ. ದೇವರು ದೊಡ್ಡವನು, ಎಲ್ಲವನ್ನೂ ಹೇಳದ ರೀತಿಯಲ್ಲಿ ನನ್ನ ಬಾಯಿ ತಡೆದು ಕಾಪಾಡಿದ!
ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರುಜುವಾತಾದರೆ ಆಗ ನನ್ನ ಗತಿಯೇನಾಗಬಹುದು? ಜಗಳದ ವಿಷಯ ಯಾರೂ ಹೇಳದೆ, ಅವನು ಯಾಕೋ ತಾನಾಗಿ ಸತ್ತಿದ್ದಾನೆ ಎಂದು ತೀರ್ಮಾನವಾದರೆ ನನ್ನ ಸ್ಥಾನವಾವುದು? ಪೋಲೀಸರು ಮತ್ತಷ್ಟು ತನಿಖೆ ನಡೆಸಬಹುದು. ಯಾರೂ ಏನೂ ಹೇಳಲಿಲ್ಲವೆಂದು ಕೊಳ್ಳೋಣ. ಅಕ್ಕಪಕ್ಕದ ಮನೆಯವರೆಲ್ಲ ಒಳ್ಳೆಯವರು. ನನ್ನ ಬಗ್ಗೆ ಅಭಿಮಾನವಿಟ್ಟಿದ್ದಾರೆ, ಅದು ನನ್ನ ಪುಣ್ಯ, ಪ್ರಭಾಕರರಾವ್ ನನಗೆಷ್ಟು ಸಹಾಯ ಮಾಡುತ್ತಿದಾರೆ! ಹಾಗಾಗಿ ಯಾರೂ ನನಗೆ ಕೆಡುಕಾಗುವಂಥದು ಏನೂ ಹೇಳಲಾರರೇನೋ. ನಾಳೆ ರಿಪೋರ್ಟ್ ನೋಡಿ, ಅದರಲ್ಲಿ ಆತ್ಮಹತ್ಯೆ ಎಂದು ತೀರ್ಮಾನಿಸಿದ್ದರೆ ಇವರಿಗೆಲ್ಲ ಒಂದು ಮಾತು ಹೇಳಿದರೆ ಸಾಕೇನೋ. ವಿಚಾರ ಕಾಂಪ್ಲಿಕೇಟ್ ಆಗಲಾರದು. ಹಾಗೆ ನಾನು ಇನ್ವಾಲ್ವ್ ಆಗದ ಹಾಗೆ ಶಶಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತೀರ್ಮಾನವಾದರೆ ನನಗೆ ಶಿಕ್ಷೆ ಕೊಡುತ್ತಾರೆಯೇ? ಈ ಬಗ್ಗೆ ನನಗೆ ಕಾನೂನು ಗೊತ್ತಿಲ್ಲ. ಏನಾಗತ್ತೋ ನೋಡಬೇಕು.
ಇನ್ಸ್ಪೆಕ್ಟರ ಮಾತಿನ ಧಾಟಿ ನೋಡಿದರೆ ಆತ ನಮ್ಮ ಬಗ್ಗೆ ತುಂಬ ಸಹಾನುಭೂತಿಯಿಂದ ಇರುವ ಹಾಗೆ ಕಾಣುತ್ತದೆ. ಎಲ್ಲ ಸರಿಯಾಗಿ ಮುಗಿದುಹೋದರೆ ಆತನಿಗೆ ಏನಾದರೂ ಸನ್ಮಾನ ಮಾಡಬೇಕು. ಎಂಥ ಒಳ್ಳೆ ಮನುಷ್ಯ! ಮಧ್ಯಾಹ್ನ ನಮ್ಮವರು ನಮ್ಮವರು ಅಂತ ಹೇಳುತ್ತಿದ್ದಾಗ ನನಗೆ ಒಂದು ರೀತಿ ಕಸಿವಿಸಿಯಾಗಿತ್ತು ನಿಜ, ಆದರೆ ಈಗ ಆತನ ಆ ಭಾವನೆಯೇ ನಮ್ಮನ್ನು ಕಾಪಾಡುವ ಹಾಗೆ ಕಾಣುತ್ತಿದೆ. ಹೇಗೋ ಅಂತೂ ದಡ ಕಂಡರೆ ಸಾಕು. ಅನದು ಅಸಾಮಾನ್ಯ ಸಾವೇನಲ್ಲ ಎಂದು ತೀರ್ಮಾನವಾಗಿಬಿಟ್ಟರೆ ಎಂಥ ದೊಡ್ಡ ಹೊರೆ ಇಳಿದ ಹಾಗಾಗುತ್ತದೆ!
ಅವನ ಡೆತ್ ಸರ್ಟಿಫಿಕೇಟ್ ಸಿಕ್ಕರೆ ಶಶಿಯ ಪ್ರಾವಿಡೆಂಟ್ ಹಣ ಇನ್ಶೂರೆನ್ಸ್ ದುಡ್ಡು ನನಗೇ ಬರುತ್ತದಲ್ಲವೇ? ಅವನು ತನ್ನ ಇನ್ಶೂರೆನ್ಸ್ ಪಾಲಿಸಿಯಲ್ಲಿ ನನ್ನ ಹೆಸರನ್ನೇ ನಾಮಿನಿಯಾಗಿ ಹಾಕಿದ್ದು ನನಗೆ ಚೆನ್ನಾಗಿ ಗೊತ್ತಿದೆ. ನಾನೇನೂ ಅವನನ್ನು ಇನ್ಶೂರ್ ಮಾಡಿಸು ಅಂತ ಹೇಳಿರಲೇ ಇಲ್ಲ, ಅವನಾಗವನೇ ಮಾಡಿಸಿಕೊಂಡದ್ದು. ವ್ಯವಹಾರವೆಲ್ಲ ನನ್ನ ಕಣ್ಣ ಮುಂದೆಯೇ ನಡೆಯಿತು. ನಮ್ಮ ಗುರುತಿನೊಡನೆ ಅವನಿಗೆ ಪಾಲಿಸಿ ಕೊಡಿಸಿದ್ದು. ಹೆಂಡತಿಯ ಹೆಸರಲ್ಲಿ ಇನು ಬಿಸಿನೆಸ್ ಮಾಡ್ತಿದ್ದ. ಎಷ್ಟೋ ಜನರ ಹಾಗೆ, ನನ್ನದಂತೂ ವಿಮೆ ಇತ್ತಲ್ಲ, ಶಶಿಯದು ಮಾಡಿಸಿ ಅಂತ ಹೇಳಿದಾಗ, ಅವನ್ನೇ ಕೇಳಿ ಅಂತ ನಾನು ಹೇಳಿದ್ದೆ. ಅವನು ಒಪ್ಪಿಕೊಂಡಿದ್ದ. ಹೆಚ್ಚಿನ ಹಣಕ್ಕೆ ಇನ್ಶೂರ್ ಮಾಡಿಸಿದ್ದ.
ಫಾರಂ ತುಂಬುವಾಗ ನನಗೆ ಜ್ಞಾಪಕಕ್ಕೆ ಬಂದಿತ್ತು. ಮೂರ್ಚೆ ರೋಗ ಇರುವವರಿಗೆ ವಿಮೆ ಮಾಡಿಸಲು ಕಾನೂನು ಅಡ್ಡಿ ಬಾರದೆ ಎಂದು. ನಾನು ಓದಿದ ಹಲವಾರು ಪುಸ್ತಕಗಳಲ್ಲಿ ಈ ವಿಷಯದ ಪ್ರಸ್ತಾಪ ಇತ್ತು. ಎಷ್ಟೋ ದೇಶಗಳಲ್ಲಿ ಅಂತಹ ರೋಗಿಗಳಿಗೆ ವಿಮೆಯ ಅವಕಾಶವಿಲ್ಲವಂತೆ. ಯಾಕೆಂದರೆ ಮೂರ್ಚೆ ಬರುವುದಕ್ಕೆ ನಿಯತಿಯಿಲ್ಲದ್ದರಿಂದ ಆಕಸ್ಮಿಕಗಳಲ್ಲಿ ಸಿಲುಕಿ ಅಂತಹ ರೋಗಿಗಳು ಸಾಯಬಹುದಾದ ಸಾಧ್ಯತೆಗಳು ಹೆಚ್ಚು. ಹೀಗಾಗಿ ಇನ್ಶೂರೆನ್ಸ್ ಕಂಪನಿಗಳು ಅಂತಹ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತವೆ ಎಂದು. ಆದರೆ ಕೆಲವು ದೇಶಗಳಲ್ಲಿ ಹೆಚ್ಚಿನ ಔದಾರ್ಯ ತೋರಿಸಿದ್ದಾರಂತೆ. ಮೂರ್ಚೆ ಬರುವುದು ಹತೋಟಿಯಲ್ಲಿದೆ ಅಂತ ವೈದ್ಯರು ಸರ್ಟಿಫಿಕೇಟ್ ಕೊಟ್ಟರೆ ಸ್ವಲ್ಪ ಹೆಚ್ಚಿನ ಪ್ರೀಮಿಯಂ ದರ ಹಾಕಿ ಇನ್ಶೂರ್ ಮಾಡಿಸುತ್ತಾರಂತೆ, ನಮ್ಮಲ್ಲಿ ಹೇಗಿದೆಯೋ ಕಾನೂನು, ನನಗೆ ತಿಳಿಯದು. ಬೇರೆ ದೇಶಗಳಲ್ಲಿ ಕಂಪೆನಿಗಳು ಖಾಸಗಿಯವಾದ್ದರಿಂದ ಹೆಚ್ಚು ನಿರ್ಬಂಧಗಳಿರಬಹುದು, ಆದರೆ ನಮ್ಮಲ್ಲಿ ಲೈಫ್ ಇನ್ಶೂರೆನ್ಸ್ ರಾಷ್ಟ್ರೀಕರಣವಾಗಿರುವುದರಿಂದ, ಸ್ವಲ್ಪ ವಿನಾಯಿತಿ ತೋರಿಸುವ ಕಾನೂನುಗಳಿರಬಹುದು. ಇಂತಹ ಕಾಯಿಲೆಯವರ ಬಗ್ಗೆ ಹೆಚ್ಚಿನ ಭದ್ರತೆಯೊದಗಿಸಿಕೊಡುವ ಉದ್ದೇಶದಿಂದ ವಿನಾಯಿತಿ ಇರಬಹುದು. ಆದ್ದರಿಂದಲೇ ಈ ವಿಚಾರ ಆಗ ಪ್ರಸ್ತಾಪ ಮಾಡಿದ್ದೆ. ಈ ವಿಷಯ ಕೇಳಿದ ಏಜಂಟ್ಗೆ ಒಂದು ಕ್ಷಣ ಗೊಂದಲ. ಆ ಏಜಂಟ್‍ಗೇ ಈ ವಿಚಾರದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಏಜಂಟರಿಗೆಲ್ಲ ಕಾನೂನಿನ ನಿಖರವಾದ ಪರಿಚಯ ಎಲ್ಲಿರಲು ಸಾಧ್ಯ? ಅದಕ್ಕೇ ಅವನು “ಈ ವಿಚಾರ ಹೇಳೋದೇ ಬೇಡ ಸುಮ್ನಿರಿ" ಎಂದ.
“ಈಗ ಆ ವಿಚಾರ ಹೇಳದೆ, ಆಮೇಲೆ ಅದು ತಪ್ಪೂಂತ ಗೊತ್ತಾದರೆ ನಮ್ಮ ಮೇಲೆ ಅಪವಾದ. ಜೊತೆಗೆ ಕಟ್ಟಿದ ದುಡ್ಡೂ ಹೋಗತ್ತಲ್ಲ" ಎಂದಿದ್ದೆ.
“ಒಂದ್ಸಲ ಪಾಲಿಸಿ ಬಂದಾದ ಮೇಲೆ ಇದರ ಬಗ್ಗೆ ಯಾರು ಸಾರ್ ಹೇಳಕ್ಕೆ ಹೋಗ್ತಾರೆ ಕೆಲಸವಿಲ್ಲದೆ?"
“ಮೆಡಿಕಲ್ ಎಕ್ಸಾಮಿನೇಷನ್ ಮಾಡಿಸಬೇಕಲ್ಲ. ಅದರಲ್ಲಿ ಒಂದು ಕಾಲಂ ಇರೋ ಹಾಗೆ ನೆನಪು. ಕ್ರಾನಿಕ್ ರೋಗಗಳು ಏನಾದರೂ ಇದೆಯೇ ಅಂತ. ಆಗ ಏನ್ಮಾಡ್ತೀರಿ?"
“ಅದಕ್ಕೆ ಯಾಕೆ ಸಾರ್ ಯೋಚನೆ ಮಾಡ್ತೀರಿ? ನಮ್ಮ ಎಕ್ಸಾಮಿನರ್ ತುಂಬ ಒಳ್ಳೇ ಮನುಷ್ಯ. ಅದೂ ಅಲ್ಲದೆ ಇವರಿಗೆ ಎಪಿಲೆಪ್ಸಿ ಇದೇಂತ ನೋಡಿ ಬಿಟ್ಟಾಕ್ಷಣ ಎಲ್ಲಿ ಗೊತ್ತಾಗತ್ತೆ. ನೀವು ಹೇಳದೇ ಇದ್ದರೆ, ಎರಡೇ ನಿಮಿಷ ಈ ಮೆಡಿಕಲ್ ಎಕ್ಸಾಮಿನೇಷನ್ನು, ಹೈಟು, ವೈಟು, ಚೆಸ್ಟು, ಮಿಕ್ಕಿದ್ದೆಲ್ಲ ನಾರ್ಮಲ್, ಕ್ರಾನಿಕ್ ಡಿಸೀಸ್ ಕಾಲಂ ಬಂದಾಗ “ಏನಾದರೂ ಇದೆಯಾ?' ಅಂತ ಕೇಳ್ತಾರೆ ಡಾಕ್ಟ್ರು. ‘ಇಲ್ಲ’ ಅಂದರೆ ಆಯಿತು ಎಂದು ನಕ್ಕಿದ್ದ, ನಾನ್ಯಾಕೆ ಅಡ್ಡಿ ಮಾಡಬೇಕು? ಪಾಪ, ಶಶಿಗೆ ಒಂದಷ್ಟು ಆಪದ್ಧನವಾಗತ್ತೆ ಅದರಿಂದ ಎಂದು ಸುಮ್ಮನಾಗಿದ್ದೆ.
“ಅವನಿಗೆ ಕೆಲಸ ಸಿಕ್ಕಿದ್ದೂ ಈ ರೀತಿ ಮುಚ್ಚು ಮರೆಯಿಂದಲೇ ತಾನೆ? ಹಾಗೆ ಮುಚ್ಚುಮರೆ ಮಾಡಬೇಕಾಗಿಯೂ ಬಂದಿತ್ತು. ಅನಿವಾರ್ಯವಾಗಿ, ಶಶಿ ಡ್ರಾಫ್ಟ್ಸ್‍ಮನ್ ಕೋರ್ಸ್ ಮುಗಿಸಿದ ಮೇಲೆ ಅವನ ಕೆಲಸದ ಪ್ರಶ್ನೆ ಬಂದಿತ್ತು. ಕೆಲವು ಕಡೆಗಳಲ್ಲಿ ಅರ್ಜಿ ಹಾಕಬೇಕಾಗಿ ಬಂದಾಗ ಅದರ ಕಾಲಂ ಭರ್ತಿ ಮಾಡುವಾಗ ಈ ವಿಚಾರವನ್ನು ಪ್ರಾಮಾಣಿಕವಾಗಿ ನಮೂದಿಸಿತ್ತು. ಆದರೆ ಅಂತಹ ಕಂಪನಿಗಳು ಈ ರೋಗವಿದೆ ಅನ್ನೋ ಕಾರಣವನ್ನೇ ಕೊಟ್ಟು ಇವನಿಗೆ ಕೆಲಸ ಕೊಟ್ಟಿರಲಿಲ್ಲ. ತನ್ನ ಕೆಲಸ ಮಾಡುವುದರಲ್ಲಿ ಶಶಿಯೇನೂ ಕಳಪೆಯಲ್ಲ. ಅವನಿಗೆ ಇಮ್ಯಾಜಿನೇಷನ್ ಇಲ್ಲದಿರಬಹುದು. ಆದರೆ ಹೇಳಿದಷ್ಟು ಕೆಲಸವನ್ನು ಅಚ್ಚುಕಟ್ಟಾಗಿ, ಚಾಚೂ ತಪ್ಪದೆ ಮಾಡುವ ಸ್ವಭಾವ ಅವನದು. ಅವನು ಡ್ರಾಯಿಂಗ್ ಬರೆಯುತ್ತಿದ್ದುದೂ ಹಾಗೆಯೇ. ತುಂಬ ನೀಟಾಗಿ ಮಾಡುತ್ತಿದ್ದ. ಕೆಳಗಿನ ಹಂತಗಳಲ್ಲಿ ಆಗಬೇಕಾದ ಕೆಲದ ರೀತಿ ಇದೇ ತಾನೇ? ಮೇಲಿನೋರು ಏನೋ ಹೇಳಿದರೆ ಇವನು ತನ್ನ ಐಡಿಯಾನೆಲ್ಲ ತುರುಕಿ ಕೆಲಸ ಹಾಳುಮಾಡಿದರೆ? ಅದರ ಬದಲು ಹೇಳಿದಷ್ಟು ಮಾಡಿದರೆ ಎಲ್ಲ ಸುಗಮ. ಆ ಅರ್ಥದಲ್ಲಿ ನೋಡಿದರೆ ಶಶಿ ತುಂಬ ಒಳ್ಳೆಯ ಕೆಲಸಗಾರ. ಆದರೆ ಅವನ ದುರದೃಷ್ಟ ಈ ಕಾಯಿಲೆ ಅಂಟಿಕೊಂಡಿದೆ. ಅದೇ ಕಾರಣದಿಂದಾಗಿ ಅವನಿಗೆಲ್ಲೂ ಕೆಲಸ ಸಿಕ್ಕದಿದ್ದರೆ ಗತಿಯೇನು? ಅವನ ಪಾಡು ಅವನು ನೋಡಿಕೊಳ್ಳಬಹುದಾದ ಅವಕಾಶ ತಪ್ಪಿಹೋಗುತ್ತದಲ್ಲ. ನಾನೇನೋ ಅವನನ್ನ ಇರೋವರೆಗೂ ಕಾಪಾಡಿಕೊಂಡು ಹೋಗಬೇಕು ಎಂದು ನಿರ್ಧರಿಸಿದ್ದೆ ನಿಜ. ಆದರೆ ಪರಿಸ್ಥಿತಿ ಹೇಗೆ ಬರುತ್ತೋ ಕಂಡವರಾರು? ಅವನಿಗಿಂತ ಮುಂಚೆ ನಾನೇ ಸಾಯುವ ಹಾಗಾದರೆ? ಅವನನ್ನು ಮುಂದೆ ನೋಡಿಕೊಳ್ಳುವರಾರು? ಕೆಲಸವಿದ್ದು, ಹಣ ಸಂಪಾದನೆ ಮಾಡಿದರೆ. ದುಡ್ಡಿಗಾಗಿ ಅವನನ್ನು ನೋಡಿಕೊಳ್ಳುವವರು ಯಾರಾದರೂ ಬರ್ತಾರೆ. ಅಥವಾ ಎಷ್ಟೋ ಸಲ ಯೋಚನೆ ಮಾಡಿದ ಹಾಗೆ ಅವನು ಮದುವೇನೂ ಮಾಡಿಕೋಬಹುದು.
ನಾನೇನೋ ಆಗ ಅವನನ್ನು ನೋಡಿಕೊಳ್ಳೋ ನಿರ್ಧಾರವನ್ನು ಕೈಗೊಂಡಿದ್ದೆ ನಿಜ. ಆದರೆ ನನ್ನ ಮನಸ್ಸೇ ಮುಂದೆ ಏನಾಗತ್ತೊ ಹೇಳುವವರಾರು? ನನ್ನ ಸಂಸಾರದ ಸ್ಥಿತಿ ಯಾವ ಬದಲಾವಣೆಗಳನ್ನು ಕಾಣುತ್ತೋ. ನಮ್ಮಿಬ್ಬರ ಸಂಬಂಧ ಇದೇ ರೀತಿ ಇರೋದಕ್ಕೆ ಸಾಧ್ಯ ಅಂತ ಯಾರು ಖಂಡಿತವಾಗಿ ಹೇಳೋರು? ಅಲ್ಲದೆ ಅವನು ಕೆಲಸಮಾಡದೆ ಮನೇಲಿ ಕೂತು ಏನು ಮಾಡಬೇಕು? ಅವನು ಕಲಿತದ್ದು ವ್ಯರ್ಥವಾಗೋದು ಒಂದು ಕಡೆ, ಸೋಮಾರಿತನದಿಂದ ಕಾಲ ಕಳೆಯಬೇಕಾಗಿ ಬಂದದ್ದು ಇನ್ನೊಂದು ಕಡೆ, ಈಗೆಲ್ಲ ಅವನು ಮನೇಲಿರೋದು ಅಂದ್ರೆ ಸಾಯಂಕಾಲ, ರಾತ್ರಿ, ಅಷ್ಟು ಹೊತ್ತು ಮನೇಲಿರೋದನ್ನೇ ಎಷ್ಟೋ ಸಲ ಸಹಿಸದ ಈ ರಮ, ಇನ್ನು ಅವನು ಇಪ್ಪತ್ನಾಲ್ಕು ಗಂಟೇನೂ ಮನೇಲೇ ಬಿದ್ದಿರೋ ಹಾಗೆ ಆದರೆ? ಅದೂ ಸಂಪಾದನೆಯಿಲ್ಲದೆ ದೇವರೇ ಗತಿ. ಅದಕ್ಕೇ ಇವೆಲ್ಲ ಯೋಚನೆಗಳನ್ನು ಮಾಡಿ ಹೇಗೋ ಅವನಿಗೊಂದು ಕೆಲಸಾಂತ ಕೊಡಿಸಬೇಕು ಎಂಬ ನಿರ್ಧಾರ ನಾನು ಆಗ ಕೈಗೊಂಡದ್ದು; ಒಳ್ಳೇದೇ ಆಯಿತು.
ಈಗ ಶಶಿ ಕೆಲಸಕ್ಕಿದ್ದ ಫ್ಯಾಕ್ಟರಿಯಲ್ಲಿ ಅವನಿಗೆ ಕೆಲಸ ಸಿಕ್ಕಿದ್ದೂ ಈ ರೀತಿ ಮುಚ್ಚು ಮರೆಯಿಂದಲೇ. ಇದು ಅರ್ಧ ಸರ್ಕಾರದ್ದು ಬೇರೆ. ಪೂರ್ತಿ ಖಾಸಗಿಯಾದ ಕಡೆಗಳಲ್ಲಿರೋ ಹಾಗೇ ತುಂಬ ಸ್ಟ್ರಿಕ್ಟ್, ಭಾರೀ ಲಂಚಕೊಟ್ಟು ಶಶಿಯನ್ನು ಅಲ್ಲಿ ಸೇರಿಸಿದ್ದೆ.
ದುಡ್ಡು ಹೊಂದಿಸಲು ರಮಳಿಂದ ದೊರೆತ ಸಹಾಯ ಕೂಡ ಮರೆಯುವಂಥದ್ದಲ್ಲ. ಮದುವೆಯ ತನ್ನ ಕೆಲವು ಒಡವೆಗಳನ್ನು ಕೊಟ್ಟು ಬ್ಯಾಂಕಲ್ಲಿಟ್ಟು ಹಣ ತರುವಂತೆ ಅವಳಾಗಿಯೇ ಹೇಳಿದಳು. ಅವಳೇನೂ ಮನುಷ್ಯಳಲ್ಲವೇ? ಕಷ್ಟ ಸುಖ ಅರಿಯದವಳೇ. ಆದರೆ ಮಕ್ಕಳಾದ ಮೇಲೆ ಅವಳ ಮನಸ್ಸು ಕೊಂಚ ಬದಲಾಯಿಸಿತೇನೋ. ಮಕ್ಕಳಿಗೇನಾದರೂ ಆಗಬಹುದೆಂಬ ಅವಳ ಭಯ ಅಸಹಜವೇನಲ್ಲವಲ್ಲ, ಅಂತೂ ಅವಳ ಔದಾರ್ಯ ಯೋಚನೆಗೀಡಾಗಿದ್ದ ನನಗೆ ಅನಿರೀಕ್ಷಿತವಾಗಿದ್ದಷ್ಟೇ ಅಲ್ಲ. ನನ್ನ ಹೊರೆಯನ್ನು ಬಹು ಮಟ್ಟಿಗೆ ಕಡಿಮೆ ಮಾಡಿತ್ತು.
ಇಷ್ಟೆಲ್ಲ ಸುಳ್ಳೋ ಪಳ್ಳೋ ಹೇಳಿ, ಲಂಚ ರುಷುವತ್ತು ಕೊಟ್ಟು ನಾನು ಶಶಿಯನ್ನು ಒಂದು ನೆಲೆಗೆ ತಂದದ್ದು ಅವನನ್ನು ಕೊಲ್ಲುವುದಕ್ಕೇನಾ? ಯಾರಾದರೂ ಹಾಗಂದುಕೊಂಡರೆ ನನಗೆ ತುಂಬ ಅನ್ಯಾಯ ಮಾಡಿದ ಹಾಗೆ. ಅವನ ಸಾವು ಅಸಹಜವಾದದ್ದು ಅಂತಲೇನಾದರೂ ತೀರ್ಮಾನವಾಗಿ ನನಗೆ ಅದರಿಂದ ತೊಂದರೆಯಾದರೆ ಇದಕ್ಕಿಂತ ದೊಡ್ಡ ದುರಂತ ಇರಲಾರದು. ಆದರೆ ಪ್ರೀತಿ-ಕಕ್ಕುಲತೆಗೆ ಇಷ್ಟರಮಟ್ಟಿಗಿನ ಅನ್ಯಾಯವಾಗಲಾರದು. ಇನ್‍ಸ್ಪೆಕ್ಟರ್‍ನ ಮಾತಿನ ಧಾಟಿಯಲ್ಲಿ ಸಾಂತ್ವನದ ರೀತಿಯಿತ್ತೇ ಹೊರತು ಹೆದರಿಸುವ ಬಗೆಯಿರಲಿಲ್ಲ. ಹೇಗೋ ಅಂತೂ ಇದು ಪಾರುಗಂಡರೇ ಸಾಕು.
ಈ ಶವ ಶಶಿಯದೇ ಆಗಿಲ್ಲದಿರಬಹುದು. ಯಾರಿಗೆ ಗೊತ್ತು? ಅವನು ಬೇರೆಲ್ಲೋ ಹೋಗಿ ಬದುಕಿರಬಹುದು; ಒಂದಷ್ಟು ದಿನವಾದ ಮೇಲೆ ಬರಬಹುದು; ನಾಳೆಯೇ ಬರಬಹುದು. ಈವತ್ತು ರಾತ್ರಿಯೇ ಕಾಣಿಸಿಕೊಂಡರೆ? ಅದೆಂಥ ಅನಿರೀಕ್ಷಿತ ಪರಿಣಾಮವುಂಟುಮಾಡಬಹುದು?
ಅವನು ಚೆನ್ನಾಗಿರಲಿ, ದೇವರೇ. ಆದರೆ ಪ್ಯಾಂಟು ಶರ್ಟುಗಳು ಅವನವೇ ಇದ್ದ ಹಾಗಿವೆಯಲ್ಲ. ನಾಳೆ ಕಮಿಷನರ್ ಆಫೀಸಿಗೆ ಹೋಗುವುದಕ್ಕೆ ಮುಂಚೆ ಲಾಂಡ್ರಿ ಮತ್ತು ಟೈಲರಿಂಗ್ ಶಾಪುಗಳನ್ನು ಕಂಡು ಈ ವಿಚಾರ ಖಚಿತಪಡಿಸಿಕೊಳ್ಳಬೇಕು.
- - -
ಶಶಿಗೆ ಹಣದ ಬಗ್ಗೆ ವ್ಯಾಮೋಹ ಹೆಚ್ಚೆಂದು ಎಂಥವರಿಗೂ ತಿಳಿಯುತ್ತದೆ. ತಿಂಗಳಿಗೆ ಇಂತಿಷ್ಟೆಂದು ನನಗೆ ಹಣಕೊಡುವುದನ್ನು ಬಿಟ್ಟರೆ ಅವನಿನ್ನೆಂದೂ ಹೆಚ್ಚಿನ ವಸ್ತುವನ್ನು ಮನೆಗೆ ತಂದವನಲ್ಲ. ಮನೆಗೊಂದು ತರಕಾರಿಯೆಂದೋ ಹಣ್ಣೆಂದೋ ಅಪರೂಪದ ವಸ್ತುವೆಂದೋ ಯಾವತ್ತೂ ಕೊಂಡು ಬಂದಿಲ್ಲ. ಕೊನೆಗೆ ಮಕ್ಕಳಿಗೆ ಎಂದು ಒಂದಷ್ಟು ಮಿಠಾಯಿಗಳನ್ನು ಅಪರೂಪಕ್ಕೂ ತರುವಂತಹ ಬುದ್ಧಿ ಅವನಲ್ಲೆಂದೂ ಹುಟ್ಟಿರಲಿಲ್ಲ. ಎಷ್ಟೋ ವೇಳೆ ಆ ಹುಡುಗರ ಕೈಲಿದ್ದ ಚಿಲ್ಲರೆ ಕಾಸಿಂದ ಪೆಪ್ಪರಮಿಂಟು ಚಾಕಲೇಟುಗಳನ್ನು ಕೊಳ್ಳಲು ಅವಕ್ಕೆ ಪುಸಲಾಯಿಸಿ ತಾನೊಂದಷ್ಟು ಗಿಲಿಬುಕೊಂಡುದನ್ನು ನಾನೇ ಕಂಡಿದ್ದೇನೆ. ಅವನ ಈ ರೀತಿ ತಮಾಷೆಯದಾಗಿರಬಹುದು ಆದರೆ ಅದು ಅವನ ಇನ್ನೊಂದು ಮುಖವನ್ನೂ ಸೂಚಿಸುತ್ತದೆಂಬುದರಲ್ಲಿ ಸಂಶಯವಿಲ್ಲ.
ನಾನೆಂದೂ ಇದಕ್ಕಾಗಿ ಅವನನ್ನು ದೂರಿದವನಲ್ಲ, ವ್ಯಂಗ್ಯದ ಮಾತೂ ಆ ಬಗ್ಗೆ ನನ್ನ ಬಾಯಿಂದ ಬಂದಿಲ್ಲವೆಂದು ಖಂಡಿತವಾಗಿ ಹೇಳಬಲ್ಲೆ. ಇನ್ನೂ ರಮಾ ಆ ಬಗ್ಗೆ ಕೆಲವೇಳೆ ತಮಾಷೆಯಾಗಿಯೋ, ಮತ್ತೆ ಕೆಲವು ಸಂದರ್ಭಗಳಲ್ಲಿ ನೇರವಾಗಿ ಚುರುಕಾಗಿಯೋ ಹೇಳಿದ್ದಾಳೆ. ನಾನೆಷ್ಟಾಗಲೀ ಅವನನ್ನು ಮೊದಲಿನಿಂದ ಬಲ್ಲವನು; ಜೊತೆಯಲ್ಲಿ ಬೆನ್ನಲ್ಲಿ ಬಿದ್ದವನು. ಅವನ ಸ್ವಭಾವ, ಅವನಿರುವ ವಿಚಿತ್ರ ಪರಿಸ್ಥಿತಿ ನನಗೆ ಇತರರೆಲ್ಲರಿಗಿಂತ ಚೆನ್ನಾಗಿ ತಿಳಿದಿದೆ, ಆ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡುವುದಿರಲಿ, ಕಷ್ಟದ ಪ್ರಸಂಗಗಳಲ್ಲಿ ಪ್ರತಿಫಲವಿಲ್ಲದೆ ಅವನಿಗೆ ಸಹಾಯ ಮಾಡಿದ್ದೇನೆ. ಸಾಮಾನ್ಯವಾಗಿ ಅವನ ಔಷಗಳನ್ನು ಶಶಿಯೇ ತರುತ್ತಿದ್ದುದು. ಆದರೆ ಅವನು ಔಷಯನ್ನು ಕ್ರಮ ತಪ್ಪದೆ ತೆಗೆದುಕೊಳ್ಳಬೇಕೆಂಬ ಬಗ್ಗೆ ನನಗೆ ಹೆಚ್ಚು ಕಾತರವಿದ್ದು ಎಷ್ಟೋ ವೇಳೆ ಇನ್ನೊಂದೆರಡು ದಿನಗಳಲ್ಲಿ ಮುಗಿಯುತ್ತದೆ ಎನಿಸಿದಾಗ, ಮರೆತು ಹೋದೀತು ಎಂದು ನಾನೇ ಅವನ ಔಷಧಿಯನ್ನು ತಂದದ್ದುಂಟು, ಹಾಗೆಯೇ ಹಬ್ಬ ಹರಿದಿನಗಳಲ್ಲಿ ಮಕ್ಕಳಿಗೆ ನಮಗೆ ಎಂದು ಬಟ್ಟೆ ತೆಗೆದುಕೊಂಡಾಗ ಅವನೊಬ್ಬನನ್ನು ದೂರವಿರಿಸುವ ಮುಜುಗರವುಂಟಾಗಿ ಅವನಿಗಾಗಿ ಬಟ್ಟೆ ಹರಿಸಿದ ಪ್ರಸಂಗಗಳುಂಟು.
ಅಷ್ಟೇ ಅಲ್ಲ, ಎರಡು ವರ್ಷಗಳ ಹಿಂದೆ ಅವರ ಫ್ಯಾಕ್ಟರಿಯಲ್ಲಿ ದೀರ್ಘ ಕಾಲದ ಮುಷ್ಕರ ಹಿಂಸಾಚಾರಗಳೆಲ್ಲ ನಡೆದವು; ಅಂಥ ಸಂದರ್ಭಗಳಲ್ಲಿ ಏನಾದೀತೋ ಎಂಬ ಭಯದಿಂದ ಫ್ಯಾಕ್ಟರಿಗೆ ಹೋಗಬೇಡವೆಂದು ನಾನು ತಡೆದಿದ್ದೆ. ಮುಂದೆ ಎರಡು ತಿಂಗಳ ಕಾಲ ಲಾಕ್ಔಟ್ ಘೌಷಣೆಯಾಗಿ ಅವನಿಗೆ ಸಂಬಳ ಬಾರದಾದಾಗ ಅವನನ್ನು ಹಣ ಹೇಗಾದರೂ ಕೊಡು ಎಂದು ಹೇಳಿದವನಲ್ಲ. ಯಾವತ್ತೂ ದುಡ್ಡು ಕೊಡಲಿಲ್ಲವಲ್ಲಾ ಎಂದು ಅವನಿಗೆ ನಾನು ಹೇಳಿದ್ದೇ ಇಲ್ಲ. ಆದರೆ ಅವನೂ ಸಾಮಾನ್ಯವಾಗಿ ಸಂಬಳದ ದಿನ ಸಾಯಂಕಾಲ ನಿಯತವಾದ ಹಣವನ್ನು ನನಗೆ ತಂದೊಪ್ಪಿಸುತ್ತಿದ್ದ; ಇದನ್ನು ಹೇಳದೆ ಇದ್ದರೆ ಅವನಿಗೆ ಅನ್ಯಾಯ ಮಾಡಿದಂತಾದೀತು.
ಮಿಕ್ಕ ದುಡ್ಡನ್ನು ಅವನು ಹೇಗೆ ಖರ್ಚು ಮಾಡುತ್ತಿದ್ದನೋ, ಆ ತನಿಖೆಗೆ ನಾನೆಂದೂ ಕೈಹಾಕಿರಲಿಲ್ಲ. ಬಟ್ಟೆ ಬರೆ, ಓಟಾಟ ಎಂದು ಪ್ರತಿ ನಿತ್ಯದ ವೆಚ್ಚ ಅವನಿಗೊಂದಷ್ಟು ಇದ್ದೇ ಇರುತ್ತದಲ್ಲ. ಆದರೂ ಸುಮಾರು ಹಣ ಉಳಿಯುತ್ತದೆಂದು ಬಲ್ಲೆ. ಅದನ್ನು ಹೇಗೆ ಬೇಕಾದರೂ ವಿತರಣೆ ಮಾಡಿಕೊಳ್ಳುವ ಅಧಿಕಾರ ಅವನಿಗಿದೆ ಎಂದು ನಾನು ಸುಮ್ಮನಿರುತ್ತಿದ್ದೆ. ಅವನು ಹಣವನ್ನು ತನ್ನ ಸ್ನೇಹಿತರಲ್ಲಿಯೇ ಬಡ್ಡಿಗಾಗಿ ಕೊಡುತ್ತನೆಂದು ಕೇಳಿದ್ದೆ. ಅದನ್ನಿನ್ನು ವಿಚಾರಿಸಲು ಹೋದರೆ ನನ್ನ ಬಗ್ಗೆ ತಪ್ಪು ತಿಳಿದಾನೆನ್ನುವುದಲ್ಲದೆ,
ಅವನ ಮನಸ್ಸಿಗೆಬೇಸರವಾದೀತೆಂಬ
ಕಾರಣದಿಂದ ಅದನ್ನು ವಿಚಾರಿಸುವ ಗೋಜಿಗೇ ಹೋಗಿರಲಿಲ್ಲ. ಈ ವ್ಯವಹಾರದ ಬಗ್ಗೆ ನನಗಿಂತ ರಮಾಗೆ ಚೆನ್ನಾಗಿ ಗೊತ್ತಿದ್ದಂತೆ ತೋರುತ್ತದೆ. ಅವನ ಜಿಪುಣತನ, ಸಂಗ್ರಹ ಬುದ್ಧಿಯನ್ನು ಕಂಡು ರಮ ಶಶಿಯನ್ನು “ಜಿಪುಣ ಶೆಟ್ಟೀ'ಯೆಂದೇ ಅಡ್ಡ ಹೆಸರಿನಿಂದ ಕರೆಯುತ್ತಿದ್ದಳು. ಆದರೆ ನನ್ನ ಸ್ವಭಾವ ತಿಳಿದ ಅವಳು ನನ್ನಲ್ಲಿ ಆ ವಿಷಯ ಹೆಚ್ಚೇನನ್ನೂ ಹೇಳುತ್ತಿರಲಿಲ್ಲ.
ಅವನ ಬಡ್ಡಿ ವ್ಯವಹಾರದ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಾದದ್ದು ಅವನ ಸ್ನೇಹಿತನೊಬ್ಬನ ಮೂಲಕ. ಒಮ್ಮೆ ಒಂದೆರಡು ದಿನಗಳು ಶಶಿ ಯಾಕೋ ಮಂಕಾಗಿದ್ದಾನೆಂದು ಅನ್ನಿಸಿತ್ತು. ಪ್ರತಿನಿತ್ಯ ಅವನ ಓಡಾಟದ ರೀತಿ ಕಂಡ ನನಗೆ ವ್ಯತ್ಯಾಸ ಗೊತ್ತಾಗದೇ? ರಮಳಿಗೂ ಹಾಗನ್ನಿಸಿರಬೇಕು. ಆದರೆ ಅವಳು ಅಂತಹದನ್ನೆಲ್ಲ ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳುವವಳಲ್ಲ. ಶಶಿ ಎಷ್ಟಾದರೂ ನನಗಿಂತ ಅವಳಿಗೆ ದೂರ. ಅವನ ಕಾಯಿಲೆ ನರಳಿಕೆ ದುಃಖನೋವುಗಳ ಬಗ್ಗೆ ಅವಳು ಸೂಕ್ಷ್ಮ ಪ್ರತಿಕ್ರಿಯೆ ಪರಿತಾಪ ತೋರುವುದಿಲ್ಲವೆಂದು ಅವಳ ಬಗ್ಗೆ ಎಷ್ಟೋ ಸಾರಿ? ನನಗೆ ಬೇಸರವಾಗಿದೆ. ಆದರೆ ಅದನ್ನೆಲ್ಲ ಹೇಳಿ ಕಲಿಸುವ ಹಾಗಿಲ್ಲವಲ್ಲ. ಹೃದಯಕ್ಕೆ ತಾಗದಿದ್ದರೇ ಏನು ಮಾಡುವುದು? ನನಗೆ ಅವತ್ತೆರಡು ದಿನ ಅವನ ಮಂಕು ಮುಖ ಎದ್ದು ಕಾಣಿಸಿತ್ತು. ಯಾಕೆ ಎಂದು ವಿಚಾರಿಸಿದ್ದೆ. ಏನಿಲ್ಲ ಎಂದು ಮುಖ ಕೊಟ್ಟು ಮಾತಾಡದೆ ಜಾರಿಕೊಂಡಿದ್ದ. “ಮೈಗಿಯ್ ಸರಿಯಾಗಿಲ್ಲವೇನೋ? ಎಂದು ಬಲವಂತ ಪಡಿಸಿ ಕೇಳಿದಾಗ “ನಂಗೇನೋ ಆಗಿದೆ. ನೀನು ಸುಮ್ಮನಿರು ಸಾಕು' ಎಂದು ಸಿಡುಕಿದ್ದ. ನಾನು ಸುಮ್ಮನಾಗಿದ್ದೆ.
ಆಮೇಲೆ ಒಂದೆರಡು ದಿನದ ಬಳಿಕ ಪೇಟೆಯಲ್ಲಿ ಅವನ ಆಫೀಸಿನವರೊಬ್ಬರು ಸಿಕ್ಕಿದ್ದರು. ಪರಸ್ಪರ ಕುಶಲಗಳಾದ ಮೇಲೆ ಅವರು ಮಾತಿಗೆ ಮಾತು ಬಂದು ಶಶಿಯ ಸಮಾಚಾರ ಹೇಳಿದ್ದರು. ನನಗೆ ಆ ವಿಚಾರತಿಳಿದಿದೆಯೆಂಬಂತೆ ಸಹಾನುಭೂತಿ ವ್ಯಕ್ತಪಡಿಸಲು ಆ ಮಾತುಗಳನ್ನು ಆತ ಹೇಳಿದ್ದು ಸ್ಪಷ್ಟವಾಗಿತ್ತು. ನಾನು ಅವರನ್ನು ಕಾಫಿಗೆ ಬನ್ನಿರೆಂದು ಹತ್ತಿರದ ಹೋಟೆಲಿಗೆ ಕರೆದುಕೊಂಡು ಹೋಗಿದ್ದಾಗ ಅವರು ಮಧ್ಯೆ, “ಪಾಪ, ಶಶಿಧರ್ಗೆ ಒಳ್ಳೆ ಮೋಸವಾಯಿತು" ಅಂದರು.
“ಏನು ಸಮಾಚಾರ? ಯಾಕೆ?"
“ಅದೇ ಸಾರ್, ಅವರು ಕೊಟ್ಟಿದ್ದ ದುಡ್ಡಿಗೆ ಮೋಸವಾಯ್ತಲ್ಲ" ಅಂದರು.
“ಯಾವ ದುಡ್ಡು?" ಎಂದೆ.
“ತಮಗೆ ಗೊತ್ತೇ ಇಲ್ಲವಾ ಸಾರ್! ನಮ್ಮ ಆಫೀಸಿನ ಶ್ರೀನಿವಾಸ ಅನ್ನೋರಿಗೆ ಅವರು ಬಡ್ಡೀಗೆ ಅಂತ ದುಡ್ಡು ಕೊಟ್ಟಿದ್ದರಲ್ಲ ಅದು."
ಯಾರಿಗೋ ದುಡ್ಡು ಕೊಟ್ಟಿದ್ದಾನೆ, ಅವರು ಕೈಕೊಟ್ಟಿದ್ದಾರೆ ಅಂತ ಗೊತ್ತಾಯಿತಲ್ಲ; ಕುತೂಹಲವುಂಟಾಯಿತು. ಮುಂದಿನ ವಿಚಾರ ತಿಳಿಯಬೇಕು ಎನ್ನಿಸಿತು. ಆದರೆ ಈ ಸಮಾಚಾರ ನನಗೆ ಗೊತ್ತಿಲ್ಲವೆಂದು ತಿಳಿದು ಅವರ ಮುಖ ಪೆಚ್ಚಾಯಿತು; ಗೊಂದಲಕ್ಕೆ ಬಿದ್ದರು. ಹೇಳಬಾರದ್ದನ್ನು ಹೇಳಿದೆನೇನೋ ಎಂಬ ಭಾವನೆಯವರಲ್ಲುಂಟಾದಂತಿತ್ತು. ಅವರಿಗೆ ಮುಜುಗರವಾಗಬಾರದೆಂದು ಅವರಿಗೆ ಮುಜುಗರವಾಗಬಾರದೆಂದು ಒಂದು ಕಡೆ, ವಿಷಯ ತಿಳಿದುಕೊಳ್ಳಬೇಕೆಂದು ಇನ್ನೊಂದು ಕಡೆ ಸ್ವಲ್ಪ ನಟನೆ ಮಾಡಿದೆ.
“ಓ, ಅದಾ? ಸರಿ, ಸರಿ. ಅವನೇನೋ ಹೇಳ್ತಾ ಇದ್ದ. ನಾನೇ ಬೇರೆ ಕಡೆ ಗಮನ ಹರಿಸ್ತಿದ್ದಾಗ ಹೇಳಿದ್ದರಿಂದ ಎಲ್ಲ ಕೇಳಿಸ್ಕೊಳ್ಳಿಲ್ಲ"
ಎಂದು ವಿಷಯ ನನಗೆ ಸ್ವಲ್ಪ ತಿಳಿದಿದೆಯೆಂದು ತೋರಿಸಿಕೊಂಡು ಮಿಕ್ಕ ವಿಚಾರವನ್ನೆಲ್ಲ ಎಳೆಎಳೆಯಾಗಿ ಕೇಳಿ ತಿಳಿದುಕೊಂಡೆ.
ಅವರ ಆಫೀಸಿನಲ್ಲಿ ಒಂದು ವರ್ಷದಿಂದ ಶ್ರೀನಿವಾಸ ಎನ್ನುವ ಹುಡುಗನೊಬ್ಬ ಟೆಂಪೋರರಿಯಾಗಿ ಕೆಲಸಮಾಡುತ್ತಿದ್ದನಂತೆ ಅವನೂ ಡ್ರಾಫ್ಟ್ಮನ್ನೇ ಅಂತೆ. ಒಂದು ವರ್ಷದ ಪರಿಚಯ. ಅವನೂ ತುಂಬ ತಮಾಷೆ ಆಸಾಮಿ. ಒಂದೆರಡು ತಿಂಗಳ ಹಿಂದೆ ಶಶಿಧರನನ್ನು ಪುಸಲಾಯಿಸಿ ತಿಂಗಳಿಗೆ ನೂರಕ್ಕೆ ಎರಡು ರೂಪಾಯಿ ಬಡ್ಡಿ ಕೊಡುತ್ತೇನೆಂದು ಎರಡು ಸಾವಿರ ರೂಪಾಯಿ ಸಾಲ ತಗೊಂಡಿದ್ದನಂತೆ. ಒಂದು ವಾರದ ಹಿಂದೆ ಅವನು ನಾಪತ್ತೆ ಆದನಂತೆ. ಆಮೇಲೆ ವಿಷಯ ತಿಳೀತು. ಅವನಿಗೆ ಕೊಯಮತ್ತೂರಿನ ಕಾರ್ಖಾನೆಯೊಂದರಲ್ಲಿ ಪರ್ಮನೆಂಟ್ ಕೆಲಸ ಸಿಕ್ಕಿದೆ ಅಂತ. ಅವರ ಮನೆಗೆ ಹುಡುಕಿಕೊಂಡು ಹೋದರೆ, ಅವನಿರಲಿಲ್ಲ. ಆಗಲೇ ಹೊರಟುಬಿಟ್ಟಿದ್ದ. ಇಲ್ಲಿನದು ಟೆಂಪೋರರಿ, ಒಂದನೇ ತಾರೀಕು ಸಂಬಳ ತೆಗೆದುಕೊಂಡು ಒಂದುವಾರ ರಜ ಹಾಕಿದನಂತೆ. ಆಮೇಲೆ ಬರಲೇ ಇಲ್ಲ. ಇಲ್ಲಿನ್ನೇನೂ ಅವನ ಮೇಲೆ ಹಿಡಿತವಿಲ್ಲ. ಪ್ರಾಯಶಃ ಆ ಕಾರ್ಖಾನೆಗೆ ಹಾಕಿದ್ದ ಅರ್ಜಿಯಲ್ಲಿ ತಾನು ನಿರುದ್ಯೋಗಿ ಅಂತಲೇ ಹಾಕಿಕೊಂಡಿದ್ದನೇನೋ. ಶಶಿಗೆ ಸಿಕ್ಕಿದ್ದು ಒಂದು ತಿಂಗಳ ಬಡ್ಡಿ ನಲವತ್ತು ರೂಪಾಯಿ ಅಷ್ಟೆ. ಇನ್ನಿವನು ಅವನನ್ನು ಹುಡುಕಿಕೊಂಡು ಕೊಯಮತ್ತೂರಿಗೆ ಹೋಗೋದೆ? ಅಲ್ಲಿ ಸಿಕ್ಕದಿರಬಹುದು. ಸಿಕ್ಕಿದರೂ ಇವನು ದುಡ್ಡು ಕೊಟ್ಟಿದ್ದಕ್ಕೆ ದಾಖಲೆಯಿಲ್ಲವಲ್ಲ, ಎಲ್ಲಿ ಕೊಟ್ಟಿದ್ದೀಯಾ ಅಂತ ಕೇಳಿದರೆ ಮುಗಿಯಿತಲ್ಲ ವಸೂಲಿಯ ಕೆಲಸ! ತಮಗೂ ಅದಕ್ಕೂ ಸಂಬಂಧವಿಲ್ಲವೆಂದಿದ್ದರು
ಮನೆಯವರು.
ಈ ಬಗ್ಗೆ ಶಶಿಯ ಹತ್ತಿರ ವಿಚಾರಿಸೋಣವೇ ಅಂದುಕೊಂಡೆ. ಅವನು ಈ ವಿಷಯ ತುಂಬ ಹಚ್ಚಿಕೊಂಡಂತೆ ತೋರುತ್ತದೆ. ಈವರೆಗೂ ಅಂಥ ವಿಚಾರಗಳಲ್ಲಿ ನಾನು ಕೈಹಾಕಿಲ್ಲ. ಇವತ್ತು ಯಾಕೆ ವಿಚಾರಿಸಬೇಕು. ಅವನು ಕಳೆದುಕೊಂಡದ್ದು ಅವನದೇ ಹಣ, ನನ್ನದಲ್ಲವಲ್ಲ. ಅದರ ಮೇಲೆ ನನಗೆ ಯಾವ ಅಧಿಕಾರವೂ ಇಲ್ಲ. ಅದನ್ನೆಲ್ಲ ಕೇಳಿ ಅವನ ಮನಸ್ಸಿಗೆ ಮತ್ತಷ್ಟು ಬೇಸರವನ್ನೇಕೆ ಉಂಟುಮಾಡಬೇಕೆಂದು ಸುಮ್ಮನಾದೆ. ಆದರೆ ವಿಷಯ ನನ್ನ ಬಾಯಲ್ಲೇ ಇರಲಿಲ್ಲ. ಯಾವಾಗಲೋ ಏಕಾಂತದ ಕ್ಷಣದಲ್ಲಿ ರಮಳ ಹತ್ತಿರ ಇದನ್ನೆಲ್ಲ ಗಂಟುಬಿಚ್ಚಿದ್ದೆ. ಅವಳು ಎಲ್ಲ ಕೇಳಿಯಾದ ಮೇಲೆ “ಹಾಗೆ ಆಗಬೇಕು ಜಿಪುಣಶೆಟ್ಟಿಗೆ. ಒಂದು ದಿವಸ ಮಕ್ಕಳಿಗೆ ಒಂದು ಚಾಕಲೇಟ್ ತಂದು ಕೊಡದೆ ಕಾಸಿಗೆ ಕಾಸು ಗಂಟುಹಾಕಿದ್ದ. ಸರಿಯಾಗಿ ಬುದ್ಧಿ ಬರಬೇಕು ಅವಂಗೆ" ಎಂದು ಖಾರವಾಗಿ ಮಾತಾಡಿದ್ದಳು. ಇವಳ ಹತ್ತಿರ ಹೇಳಿದ್ದು ಸರಿಯಾಗಲಿಲ್ಲ ಎಂದು ಆಗ ಗೊತ್ತಾಯಿತು.
ಇದನ್ನೆಲ್ಲ ಅವಳೇ ಅನಂತರ ಮೈದುನನನ್ನು ಕೇಳಿದ್ದಳು ಅಂತ ತೋರುತ್ತೆ. ಒಂದು ದಿನ ಶಶಿ ನನ್ನನ್ನು “ನಾನು ಸಾಲ ಕೊಟ್ಟಿದ್ದು ಮುಳುಗಿತು ಅಂತ ನಿನಗಾರು ಹೇಳಿದರು" ಅಂತ ಕೇಳಿದ. ನನಗಾಗಲೇ ಅದು ಅರ್ಧಂಬರ್ಧ ಮರೆತು ಹೋಗಿತ್ತು. “ಯಾವ ಸಾಲ?" ಅಂದೆ.
“ನಮ್ಮ ಆಫೀಸಿನೋನಿಗೆ ಕೊಟ್ಟ ಸಾಲದ್ದು" ಅಂದ. ಆಗ ಜ್ಞಾಪಕಕ್ಕೆ ಬಂತು. “ಅದಾ, ನಿಮ್ಮ ಆಫೀಸಿನ ನಿನ್ನ ಸ್ನೇಹಿತ ಹೇಳಿದರು."
“ಯಾವ ಸ್ನೇಹಿತ?" ಅವನದು ಯಾವಾಗಲೂ ಈ ರೀತಿಯ ಪಾಟೀ ಸವಾಲಿನ ವೈಖರಿಯೇ.
“ಅವರ ಹೆಸರು ಗೊತ್ತಿಲ್ಲ ಕಣೋ."
“ಹೇಗಿದ್ದರು ಅವರು?"
“ಸ್ವಲ್ಪ ಬೆಳ್ಳಗಿದ್ದಾರಲ್ಲ ಅವರು" ಎಂದೆ.
“ಬೆಳ್ಳಗೆ ದಪ್ಪಗಿರೋರೋ, ಸಣಕಲಾಗಿ ಎತ್ತರವಾಗಿರೋರೋ?" ನನಗೆ ಅಷ್ಟೆಲ್ಲ ವಿವರಗಳು ಸ್ಪಷ್ಟವಾಗಿ ನೆನಪಿರಲಿಲ್ಲ.
“ಹೋಗೋ ಯಾರೋ ಒಬ್ಬರು. ಇವಾಗ್ಯಾಕೆ ಅವೆಲ್ಲ. ಆಯ್ತಲ್ಲ ಇನ್ನೂ ಆಕಾಶ ತಲೆಮೇಲೆ ಬಿದ್ದೋನ ಹಾಗಿರಬೇಡ" ಎಂದೆ. ಅವನು ಸುಮ್ಮನೇನೋ ಆದ. ಮುಖ ಮಾತ್ರ ದಿನಪೂರ್ತಿ ಉರುಂ ಅಂತಿತ್ತು.
ಶಶಿಗೆ ಯಾಕೆ ಹಣದ ಬಗ್ಗೆ ಅಷ್ಟೊಂದು ವ್ಯಾಮೋಹ; ಅದನ್ನು ಮರಿ ಹಾಕಿಸಬೇಕೆನ್ನುವ ಚಪಲ ಎಂದು ನನಗೆ ಹಲವು ಬಾರಿ ಯೋಚನೆ ಬಂದಿದೆ. ಅವನು ಯಾರಿಗಾಗಿ ಕೂಡಿಹಾಕಬೇಕು? ಅಥವಾ ಕೂಡಿಸಿಡುವ ಮನೋಭಾವದವರಿಗೆ ಅದಕ್ಕೊಂದು ಕಾರಣವೇ ಬೇಕಿಲ್ಲವೇನೋ! ಮುಂದೆ ಕಾಯಿಲೆಯ ಮನುಷ್ಯನಾದ ನನಗೆ ಆಪದ್ಧನವಿರವೆಂಬ ದೂರಾಲೋಚನೆಯಿಂದ ಹೀಗೆ ಮಾಡುತ್ತಾನೆಯೇ ಅವನು? ಅವನ ಪ್ರಾವಿಡೆಂಟ್ ಹಣ, ಇನ್ಶೂರೆನ್ಸ್, ದುಡ್ಡು. ಬೋನಸ್ಸು ಇಷ್ಟು ಸಾಲದೆ? ಬಡ್ಡಿಗೆ ಕೊಟ್ಟು ಹಣ ಬೆಳೆಸಬೇಕೆ?" ನನಗೇ ಕೊಡೋ ಒಂದು ಸೈಟಾದರೂ ಕೊಂಡುಕೋತೀನಿ. ಒಂದು ವರ್ಷ ನೀನು ಕೊಡೋ ದುಡ್ಡು ಒಟ್ಟಿಗೇ ಕೊಡು, ತಿಂಗಳು ತಿಂಗಳು ಕೊಡಬೇಡ" ಎಂದು ಕೇಳಬೇಕೆನ್ನುವ ತುಂಟತನ ನನ್ನಲ್ಲಿ ಹೊಕ್ಕಿತ್ತು. ಆದರೆ ವ್ಯವಹಾರ ಬೇರೆಯವರ ಜೊತೆಗಿರಲಿ, ಅವನೊಡನೆ ಬೇಡ ಎಂದು, ಸುಮ್ಮನಾಗಿದ್ದೆ.
ಅವನು ಇನ್ನಾವ ಸುಖವೂ ಪಡಲಾರ, ಪಾಪ. ತನ್ನ ಆಸೆ-ಆಕಾಂಕ್ಷೆಗಳನ್ನೆಲ್ಲ ದುಡ್ಡಿನಲ್ಲಿಯೇ ಕಾಣ್ತಿದ್ದನೇನೋ. ! ಎಲ್ಲ ಅನಿಸಿಕೆಗಳನ್ನೂ ದುಡ್ಡಿನಲ್ಲಿ ಜೋಪಾನ ಮಾಡುವ ಬುದ್ಧಿಯೇ? ನೆರವೇರದ ಆಸೆ, ಸುತ್ತುವರಿದ ಕಾಯಿಲೆ ಕೀಳರಿಮೆ ಇವುಗಳು ಬದಲಿಗೆ ಹಣದ ರಾಶಿಯಿಂದ ಕಾಂಪನ್ಸೇಟ್ ಮಾಡುವುದು ಅವನ ಈ ಚರ್ಯೆಯ ಹಿಂದಿರುವ ಮನೋಭಾವವೇ ಎಂಬ ಆಲೋಚನೆ ನನಗಾಗುತ್ತದೆ. ಅದು ಪ್ರಾಯಶಃ ಅವನಿಗೆ ಹೆಮ್ಮೆಯ ಪ್ರತೀಕ; ದುಡ್ಡು ಬೆಳೆದಷ್ಟೂ ಅವನಿಗೆ ಸುಖವಿರಬಹುದು.
ಆದರೆ ಈ ರೀತಿ ಹಣ ಕೂಡಿಹಾಕುವುದೆಂದರೆ? ನನಗೆ, ಮಕ್ಕಳಿಗೆ ಬೇಡ. ತಾನಾದರೂ ಧಾರಾಳಿಯಾಗಿದ್ದಾನೆಯೇ ಎಂದರೆ ಅದೂ ಇಲ್ಲ. ಇವನ ಬಟ್ಟೆಬರೆ ನೋಡಿ ಎಷ್ಟೋ ಸಲ ಬೈದಿದ್ದೇನೆ. ಯಾಕೆ ಹೀಗೆ ಇವನು ಶಾಬಿಯಾಗಿರಬೇಕು, ಅಂಥ ದರಿದ್ರವೇನೂ ಇಲ್ಲವಲ್ಲ! ಒಂದಷ್ಟು ಒಳ್ಳೆ ಬಟ್ಟೆ ಹೊಲಿಸಿಕೊಳ್ಳಬಾರದೇ? ಬಾಯಿಬಿಟ್ಟು ಹೇಳಿದರೂ “ಇರಲಿ ಬಿಡೋ ನನಗೇನು" ಎಂದು ಹಾರಿಕೆಯ ಉತ್ತರ ಕೊಡುವವನು. ಯಾಕೆ ಒಳ್ಳೆಯ ಬಟ್ಟೆ ಧರಿಸಬಾರದು? ಅವನಿಗಿಂತ ಕಡಿಮೆ ಸಂಪಾದಿಸುವವರು, ಹೆಚ್ಚು ತಾಪತ್ರಯವಿರುವವರು ಅವನಿಗಿಂತ ಚೆನ್ನಾಗಿ ಉಡುಪು ಧರಿಸುತ್ತಾರೆ, ಇವನಿಗೇನು ಧಾಡಿ. ಎಷ್ಟೋ ಸಲ ಅವನಿರುವ ರೀತಿಯಲ್ಲಿ ಇವನು ನನ್ನ ತಮ್ಮ ಎಂದು ಕಾಣದವರು ನಂಬಲಾರದಷ್ಟು ಮಟ್ಟಿಗೆ ಕೊಳಕಾಗಿರುತ್ತಾನೆ. ಇವನಿಗೆ ಉಂಟಾಗುವ ಅಟ್ಯಾಕ್ಗಳಿಂದ ಅವನ ನವುರುತನ, ಸೂಕ್ಷ್ಮತೆ, ಸೌಂದರ್ಯಪ್ರಿಯತೆಗಳು ಹೊರಟುಹೋಗಿವೆಯೇ? ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಚಪಲೂ ಅವನಲ್ಲಿ ಉಂಟಾಗದೆ? ಇತರರು ತನ್ನ ಬಟ್ಟೆ ಬರೆ ರೀತಿ ನೀತಿ ನೋಡಿ ಹೊಗಳಿದರೆ ಅವನಿಗೆ ಸಂತೋಷ ವಾಗುವುದಿಲ್ಲವೆ? ಅವನಿಗೆ ಈ ಬಗೆಯ ಆಸೆಗಳೇ ಉದಿಸುವುದಿಲ್ಲವೇ? ಬರೀ ಹಣ ಕೂಡಿಡುವ ಬುದ್ಧಿ ಮಾತ್ರ ಯಾಕೆ ಬೆಳೆಯಬೇಕು; ತನಗೆ ಉಪಯೋಗಕ್ಕೆ ಬಾರದ ರೀತಿಯಲ್ಲಿ ಹಣವನ್ನು ಕೂಡಿಡುವ ವಿಚಿತ್ರ ಮನೋಭಾವಕ್ಕೆ ಏನನ್ನಬೇಕೋ ತಿಳಿಯದು.
ಚೆನ್ನಾಗಿ ಉಡುಪು ಧರಿಸಿ, ಅಲಂಕಾರ ಮಾಡಿಕೊಂಡು ಹೆಣ್ಣುಗಳ ಗಮನವನ್ನಾದರೂ ಸೆಳೆಯಬೇಕೆಂಬ ಬಯಕೆ ಅವನಿಗೇಕೆ ಉಂಟಾಗುವುದಿಲ್ಲ? ಮಿಕ್ಕೆಲ್ಲ ರೀತಿಯಲ್ಲಿ ಅವನು ನಾರ್ಮಲ್ ಆದ ಮೇಲೆ ಈ ರೀತಿ ಅನ್ನಿಸಬೇಕಲ್ಲ. ಇದೇನು ತನ್ನ ಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದರಿಂದ
ಉಂಟಾದ ನಿರಾಶೆಯ ಪರಿಣಾಮವೋ, ವೈರಾಗ್ಯವೋ? ಆದರೆ ಕೂಡಿಹಾಕಲು ಈ ವೈರಾಗ್ಯ ಅಡ್ಡಿ ಬರುವುದಿಲ್ಲವೆ?
ಹೆಣ್ಣಿನ ವಿಚಾರ ಬಂದಾಗ ಆವತ್ತು ನಡೆದ ಪ್ರಸಂಗವೊಂದು ನೆನಪಿಗೆ ಬರುತ್ತದೆ. ರಾತ್ರಿ ಮಕ್ಕಳು ಮಲಗಿದ ಮೇಲೆ ನನ್ನ ರಮಳ ಏಕಾಂತತೆಗೆ ರಂಗು ಬಂದಿತ್ತು. ಆ ಕ್ಷಣದಲ್ಲಿ ಲೋಕದ ಎಲ್ಲ ತಾಪತ್ರಯಗಳೂ ಮರೆತು ಹೋಗುತ್ತದಲ್ಲ! ಮಕ್ಕಳಿಗೆ ಸರಿಯಾಗಿ ಹೊದ್ದಿಸಿ ನಮ್ಮ ಸರಸ ಪ್ರಾರಂಭಿಸಿದ್ದೆವು. ಎಷ್ಟೋ ವೇಳೆ, ಅನಿರೀಕ್ಷಿತವಾಗಿ ಇಂಥ ಕ್ಷಣಗಳು ಹೆಚ್ಚು ಮಾಧುರ್ಯದಿಂದ ಕೂಡುತ್ತವೆ. ವಿನಾ ಕಾರಣ ನಮ್ಮ ಕ್ರಿಯೆಯಲ್ಲಿ ಹೆಚ್ಚಿನ ಉತ್ಸಾಹ ಕಾಣುತ್ತದೆ. ಅಂದೂ ಹಾಗೆಯೇ ಆಗಿತ್ತು. ಇಬ್ಬರೂ ಪೂರ್ತಿ ಬತ್ತಲಾಗಿದ್ದೆವು. ಎಷ್ಟೋ ಹೊತ್ತಿನ ತನಕ ಹಾಯಾಗಿ ಹಾಗೇ ಮಲಗಿದ್ದೆವು. ಎಲ್ಲ ಪೂರ್ತಿಯಾದ ಮೇಲೆ ಸದ್ದಾಗದಂತೆ ರಮ ಬೋಲ್ಟು ತೆಗೆದಳು. ತನ್ನ ಸೀರೆಯನ್ನು ಸುಮ್ಮನೆ ಮೈಮೇಲೆ ಎಳೆದುಕೊಂಡು ಬಚ್ಚಲ ಮನೆಯ ಕಡೆಗೆಂದು ಹೊರಟಳು. ರೂಮಿನಿಂದ ಹಾಲಿಗೆ ಕಾಲಿಟ್ಟದ್ದೇ ಕ್ಷಣ “ಯಾರು?" ಎಂದು ಕೂಗಿದಳು. ಅವಳ ಧ್ವನಿಯಲ್ಲಿ ಅನಿರೀಕ್ಷಿತವಾದದ್ದನ್ನು ಕಂಡಾಗಿನ ಗಾಬರಿಯ ಜೊತೆಗೆ ಭಯವೂ ಸ್ಪಷ್ಟವಾಗಿ ಮೂಡಿತ್ತು. “ನಾನು ಎಂಬ ಮೆಲ್ಲಗಿನ ಧ್ವನಿ ಕೇಳಿತು. ನಾನು ಸರಸರ ಬಟ್ಟೆ ಧರಿಸಿ ಹೊರಗೆ ಬಂದೆ. ಅಲ್ಲಿ ನಿಂತಿದ್ದವನು ಶಶಿಧ¿! ಹಾಲಿನಲ್ಲಿ ಲೈಟು ಹಾಕಿರಲಿಲ್ಲ. ಇವನಿಗಿಲ್ಲೇನು ಕೆಲಸ. ಕತ್ತಲೆಯಲ್ಲಿ ಯಾಕೆ ಕೂತಿದ್ದಾನೆ ಎಂಬ ವಿಚಾರವೂ ಬಂತು.
“ಇಲ್ಲ್ಯಾಕೆ ನಿಂತಿದ್ದೀಯೊ ಕತ್ತಲಲ್ಲಿ?" ಎಂದಳು ರಮ ಸಿಡುಕಿನಿಂದ. ಯಾರನ್ನೂ ನಿರೀಕ್ಷಿಸದೆ ಯದ್ವಾತದ್ವ ಬಂದ ಅವಳ ಅವಸ್ಥೆಯಲ್ಲಿ ಕೋಪವಲ್ಲದೆ ಇನ್ನೇನೂ ಬರಲು ಸಾಧ್ಯ?
“ನೀರು ಬೇಕಾಗಿತ್ತು, ಅಡಿಗೆ ಮನೆಗೆ ಹೋಗಾಕೆ ಬಂದೆ" ಎಂದ.
“ಲೈಟು ಹಾಕಿ ಹೋಗೋದಲ್ಲವಾ? ನಿನಗೆ ವಯಸ್ಸು ಬಂದದ್ದು ದಂಡ" ಎಂದು ಮತ್ತೆ ಬೈಯುತ್ತಲೇ ರೂಮಿನೊಳಗೆ ಬಂದು ಸೀರೆಯನ್ನು ಸರಿಯಾಗಿ ಉಡಲು ತೊಡಗಿದ್ದಳು.
“ಸರಿ, ಮಲಕ್ಕೋ ಹೋಗು" ಎಂದು ಅವನನ್ನು ಕಳಿಸಿಬಂದೆ, ಮಾತಾಡದೆ ಹೋದ.
ಪುನಃ ಮಲಗಿಕೊಂಡ ಮೇಲೆ ರಮಳ ಕ್ಯಾತೆ ಪ್ರಾರಂಭವಾಯಿತು. ಅವನು ಎಲ್ಲವನ್ನೂ ಬಾಗಿಲ ಸಂದಿಯಿಂದ ನೋಡಲೆಂದೇ ಕತ್ತಲಲ್ಲಿ ಗೊತ್ತಾಗದ ಹಾಗೆ ಕೂತಿದ್ದ ಎಂದು ಅವಳು ತಕರಾರು ಹೂಡಿದಳು. “ನೀವೊಬ್ಬರು, ಇಷ್ಟು ವರ್ಷವಾದರೂ, ಈಗಲೂ ಎಲ್ಲ ಸಾಂಗವಾಗಿ ಆಗಬೇಕು. ಲೈಟು ಬೇರೆ ಯಾಕೆ ಹಾಕ್ಕೋ ಬೇಕಾಗಿತ್ತು ರೂಮಲ್ಲಿ?" ಎಂದು ಗೊಣಗಿದಳು. ನನಗೆ ಆ ಸ್ಥಿತಿಯಲ್ಲೂ ತಮಾಷೆ ಅನ್ನಿಸಿತು, ನನಗೊಬ್ಬನಿಗೆ ಮಾತ್ರ ಸಾಂಗವಾಗಿ ಆಗಬೇಕೆಂದು ಆರೋಪಿಸುವ ಇವಳು ಎರಡೇ ಕ್ಷಣಗಳ ಹಿಂದೆ ಹೇಗೆ ತನ್ನನ್ನು ಪೂರ್ತಿ ನನ್ನಲ್ಲಿ ಸೇರಿಸಿಕೊಂಡು ಬಿಟ್ಟಿದ್ದಳು! “ಪಾಪ, ನಿನಗಾಗಲೇ ಋಷಿ ಪಂಚಮಿ ಯೋಚನೆ" ಎಂದು ಚುಡಾಯಿಸಿದೆ. “ನೀವೋ ನಿಮ್ಮ ದರಿದ್ರ ತಮಾಷೆಯೋ" ಎಂದು ಮತ್ತಷ್ಟು ಸಿಡುಕಿದಳು. “ಅವನಿಗೇನು ಧಾಡಿ, ಈ ರೀತಿ ಮಾಡೋಕೆ, ಮದುವೆ ಮಾಡಿಕೊಂಡು ಸಾಯಬಾರದೇ" ಎಂದಳು. “ಹಿಂಗೆ ನೋಡುತ್ತ ನಮ್ಮ ಮರ್ಯಾದೆಯನ್ನೇಕೆ ಕಳೆಯಬೇಕು" ಎಂದಳು. “ನೋಡಲಿ ಬಿಡೆ, ನಮಗೇನು ನಷ್ಟ?" ಎಂದೆ; ಇನ್ನೂ ನಾನು ಹಾಸ್ಯದ ಮೂಡಿನಲ್ಲಿಯೇ ಇದ್ದೆ. “ನಿಮಗೆ ಸ್ವಲ್ಪವಾದರೂ ಮರ್ಯಾದೆ ಬೇಡವೇ?" ಎಂದು ಮೂತಿ ತಿವಿದಳು. “ಎಲ್ಲಾದರೂ ಬೇರೆ ಕಡೆಗೆ ಸಾಗ ಹಾಕಿ ಅವನ್ನ" ಎಂದು ಅದೆಷ್ಟನೆಯ ಬಾರಿಯೋ ಹೇಳಿದಾಗ ಮಾತ್ರ ನಾನು ಗಂಭೀರನಾದೆ. “ದಯವಿಟ್ಟು ಸಾಕುಮಾಡು. ನಿನ್ನ ಪುರಾಣ ಸುರುಮಾಡಬೇಡ" ಎಂದು ಗದರಿದೆ. ನನ್ನ ಧ್ವನಿಯಲ್ಲಿದ್ದ ಕಾಠಿಣ್ಯವನ್ನು ಗಮನಿಸಿ ರಮ ಸುಮ್ಮನಾದಳು.
ನನಗೆ ನಿದ್ರೆ ಬಾರದೆ ಶಶಿಯ ನಡವಳಿಕೆಯ ಬಗ್ಗೆಯೇ ಯೋಚಿಸುವಂತಾಯಿತು. ಇಂಥ ದೃಶ್ಯಗಳನ್ನು ಕಂಡು ರೋಮಾಂಚನಗೊಂಡು ತೃಪ್ತಿ ಪಡೆಯು ತ್ತಾನೆಯೇ ಅವನು. ಆದರೆ ನಮ್ಮನ್ನೇ ತನ್ನ ಮನರಂಜನೆಯ ಸಾಮಗ್ರಿಯಾಗಿ ಶಶಿ ಬಳಸಿಕೊಂಡನೆಂದು ಸ್ವಲ್ಪ ಕಸಿವಿಸಿಯಾಯಿತು. ನಿಜವಾಗಿಯೂ ರಮ ಹೇಳಿದ ಹಾಗೆ ಅವನು ಮಾಡಿದ್ದನೇ? ಅಥವಾ ನೀರು ಕುಡಿಯಲೆಂದು ಅಡಿಗೆ ಮನೆಗೆ ಹೋಗಿಬಂದನೇ? ಯಾವತ್ತೂ ಅವು ಮಲಗಿದ ಮೇಲೆ ಮಧ್ಯ ಏಳುವ ಅಭ್ಯಾಸದವನಲ್ಲ. ಅದೂ ಮಲಗಿ ಗಂಟೆ ಗಟ್ಟಲೆಯೇನಾಗಿಲ್ಲ ಇನ್ನೂ. ಅಂಥದರಲ್ಲಿ ಅವನ ಮಾತನ್ನು ನಂಬುವುದು ಹೇಗೆ? ತನ್ನ ರೂಮಿನ ಲೈಟು ಹಾಕಿಲ್ಲ, ಹಾಲಿನ ಲೈಟಿಲ್ಲ, ನೀರು ತುಂಬಿ ಕೊಂಡ ಸದ್ದಿಲ್ಲ?! ಆದರೂ ಅವನ ವಿವರಣೆಯನ್ನು ನಂಬಬೇಕೆ? ರಮ ಹೇಳಿದ ಹಾಗೆ ನಮ್ಮನ್ನು ಈ ರೀತಿ ನೋಡಲೆಂದೇ ಹೊಂಚುಹಾಕಿ ಕಾಯುತ್ತಿದ್ದನೇನೋ. ರಮ ಸದ್ದಾಗದಂತೆ ಬಾಗಿಲು ತೆರೆದಿದ್ದರಿಂದಾಗಿ ಅವನು ಸರಕ್ಕನೆ ಹೋಗಿಬಿಡಲು ಸಾಧ್ಯವಾಗಲಿಲ್ಲ ವೇನೋ. ಹೀಗೆ ನೋಡಬೇಕು ಎಂಬ ಆಸೆ ನಮಗೂ ಆಗುತ್ತದಲ್ಲ, ಅದರಲ್ಲಿ ಅಸಹಜವಾದದ್ದೇನಿಲ್ಲ. ಸಿನಿಮಾದಲ್ಲಿ ಪ್ರಣಯ ದೃಶ್ಯಗಳನ್ನು ಕಾಣುವಾಗ ರಮಳೇ ನನ್ನತ್ತ ವಾಲಿ ಅಂಟಿಕೊಂಡು ಕೂತು ನನ್ನ ಬೆರಳಿಗೆ ತನ್ನ ಬೆರಳು ಹೆಣೆಯುವ ಆಟವಾಡುತ್ತಾಳೆ! ಸರಿಯೇ, ಆದರೆ ಶಶಿ ನಮ್ಮನ್ನು ಈ ರೀತಿ ಕಾಣಬಾರದಿತ್ತು. ಎಷ್ಟು ದಿನಗಳಿಂದ ಹೀಗೆ ನೋಡುತ್ತಿದ್ದಾನೋ, ನಮ್ಮ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತ್ತಿರುವನೇನೋ, ಏನೋ ವಿಚಿತ್ರ ಅವನ ನಡತೆ! ಹೇಳೋ ಹಾಗಿಲ್ಲ, ಅನುಭವಿಸುವ ಹಾಗಿಲ್ಲ.
ಅವನಲ್ಲಿ ಆಸೆಗಳಿವೆ, ಆದರೆ ಅವುಗಳನ್ನು ಪೂರೈಸಿಕೊಳ್ಳುವ ರೀತಿ ವಿಚಿತ್ರ. ಅದನ್ನೇ ಅಲ್ಲವೇ ಅಬ್ನಾರ್ಮಾಲಿಟಿ ಎನ್ನುವುದು? ಅವನ ಒಂದೇ ಹವ್ಯಾಸ ಅಂದರೆ ದೋಸೆಗಳನ್ನು ತಿನ್ನುವುದು; ಮನೆಯಲ್ಲಲ್ಲ, ಹೋಟೆಲಿನಲ್ಲಿ, ಮಸಾಲೆ ದೋಸೆಗಳನ್ನು! ಹಲವಾರು ಬಾರಿ ಅವನಿಗೆ ನಾನು ಹೇಳಿದ್ದೆ – ಮೊದಲು ಮೊದಲು ಹೋಟೆಲಿನ ತಿಂಡಿ, ಅದರಲ್ಲೂ ಎಣ್ಣೆಯ ಪದಾರ್ಥಗಳನ್ನು ತಿನ್ನಬೇಡವೆಂದು. ಆಲೂಗಡ್ಡೆಯಂತಹ ವಾಯುವಿನ ತಿಂಡಿಗಳನ್ನು ತಿಂದರೆ ಅವನ ಮೂರ್ಛೆ ಜಾಸ್ತಿಯಾಗುತ್ತದೇನೋ ಎಂಬ ಹೆದರಿಕೆಯಿತ್ತು. ಮೂರ್ಛೆ ರೋಗಕ್ಕೆ “ವಾಯು ಬರುವುದು' ಎಂದೂ ಕೆಲವರು ಹೇಳುತ್ತಾರಲ್ಲ. ಆದ್ದರಿಂದ ವಾಯುಪದಾರ್ಥಗಳನ್ನು ತಿಂದರೆ ಕಾಯಿಲೆ ಜಾಸ್ತಿಯಾದೀತೆಂದು ನಿರ್ಬಂಧ ಹಾಕುತ್ತಿದ್ದೆ. ಆದರೆ ಡಾಕ್ಟರರಿಂದ ಈ ವಿಚಾರವಾಗಿ ವಿವರಣೆ ಪಡೆದೆ, ಅದಕ್ಕೂ ಇದಕ್ಕೂ ಸಂಬಂಧವಿಲ್ಲವೆಂದು ಹೇಳಿದ್ದರು. ಈ ರೋಗ ಮಿದುಳಿಗೆ ಸಂಬಂ ಸಿದ್ದು ಮಾತ್ರ, ಹೊಟ್ಟೆಯ ಆಹಾರ ಈ ರೋಗಕ್ಕೂ ಸಂಬಂಧವೇ ಇಲ್ಲವೆಂದಮೇಲೆ ಶಶಿಗೆ ಹೋಟೆಲಿಗೆ ಹೋಗಬೇಡವೆಂದು ಅಡ್ಡಿಪಡಿಸುತ್ತಿರಲಿಲ್ಲ.
ಅವನಿಗೆ ತುಂಬ ಫೇವರಿಟ್ ಆದ ಹೋಟೆಲೊಂದಿದೆಯಂತೆ. ಚಾಮರಾಜಪೇಟೆಯಲ್ಲೋ ಚಾಮರಾಜ ರೋಡಿನಲ್ಲೋ, ಅಲ್ಲಿಗೆ ಹೋದರೆ ಸಾಕು. ಇವನನ್ನು ತುಂಬ ದಿನದಿಂದ ಕಾಣುತ್ತಿದ್ದ ಮಾಣಿ ಎರಡು ಮಸಾಲೆ ದೋಸೆಗಳನ್ನು ತಂದಿಡುತ್ತಿದ್ದನಂತೆ, ತಾನಾಗಿಯೇ.
ಬರೀ ಮಸಾಲೆ ದೋಸೆಗಳನ್ನು ಮಾತ್ರವಲ್ಲ ಯಾವುದನ್ನು ತಿನ್ನುವುದರಲ್ಲೂ ಇವನದು ಅಂಥ ರೀತಿಯೇ. ಹೈಸ್ಕೂಲಿನಲ್ಲಿ ಓದಿದ್ದ ಸದ್ಯದ ನೆನಪು ಇವನ ಊಟದ ರೀತಿ ಕಂಡು: “ಅರ್ಧಭಾಗ ವೃಕೋದರಂಗೆ" ಎಂದೋ ಏನೋ ಭೀಮನಿಗೆ, ಪಾಂಡವರೆಲ್ಲರಿಗೂ ಎಂದು ಇರಿಸಿದ್ದ ಅಡಿಗೆಯ ಅರ್ಧ ಭಾಗವನ್ನು ಅವನ ತಾಯಿ ಬಡಿಸುತ್ತಿದ್ದಳಂತೆ. ಒಂದು ರೀತಿ ಹಾಗೆಯೇ ಇವನ ಊಟ. ನಾವಿಬ್ಬರೂ, ಮಕ್ಕಳಿಬ್ಬರೂ ತಿನ್ನುವಷ್ಟು ತಿನ್ನುತ್ತಾನೆ. ಎಂದು ರಮ ಹೇಳುತ್ತಿದ್ದಳು. ಆಗ ನಾನು ಗದರಿಕೊಳ್ಳುತ್ತಿದ್ದೆ.
ಆದರೆ ನನ್ನ ಮನಸ್ಸಿನಲ್ಲಿದ್ದದ್ದೂ ಅದೇ ಭಾವನೆಯಲ್ಲವೇ? ಸಿಹಿ ತಿಂಡಿಗಳನ್ನು ಅವನು ತಿನ್ನುತ್ತಿದ್ದ ರೀತಿಯನ್ನು ಕಂಡರೇ ನನಗೆ ವಾಕರಿಕೆ ಬರುತ್ತಿತ್ತು. ಎಂಟು-ಹತ್ತು ಲಾಡುಗಳನ್ನು ತಿನ್ನುತ್ತಿದ್ದ. ಒಂದೊಂದು ಲಾಡುವನ್ನು ಪೂರ್ತಿ ಬಾಯೊಳಗಿಟ್ಟುಕೊಂಡು ಮಕ್ಕಳಿಗೆ ರಂಜನೆಯೊದಗಿಸುತ್ತಿದ್ದ.
ಜಾಮೂನುಗಳಾದರೆ ಲೆಕ್ಕವಿಲ್ಲ. “ಅವನು ತಿನ್ನೋ ಊಟಕ್ಕೂ ಅವನು ಕೊಡೋ ದುಡ್ಡಿಗೂ ಅರ್ಥಾತ್ ಸಂಬಂಧವಿಲ್ಲ " ಎಂದು ರಮ ಹೇಳುತ್ತಿದ್ದಳು. ಹಾಗೆಯೇ ಇವನ ನಿದ್ದೆಯ ವೈಖರಿ ಕೂಡ. ರಾತ್ರಿ ಮಲಗಿದವನೆಂದರೆ ಬೆಳಗ್ಗೆಯೇ ಎಚ್ಚರ; ಮಧ್ಯದಲ್ಲಿ ಏಳುವಂತೆಯೇ ಕಂಡಿರಲಿಲ್ಲ. ನನಗಂತೂ? ಅವನ ನಿದ್ದೆಯನ್ನು ನಾನೂ ಪೋ್ರೀತ್ಸಾಹಿಸುತ್ತಿದ್ದೆ.
ಮಿದುಳಿಗೆ ದಣಿವಾಗಿ, ದೇಹಕ್ಕೆ ಆಯಾಸವಾದರೆ ಎಲ್ಲಿ ರೋಗ ಕೆರಳುತ್ತದೋ ಎಂಬ ಭಯ ನನಗೆ. ಮೂಛೆರ್Éಯೆಂದರೆ ಮಿದುಳಿನ ವಿದ್ಯುತ್‍ನ ಅಕೋತ್ಪಾದನೆ, ಆದ್ದರಿಂದ ಅದನ್ನು ಆದಷ್ಟೂ ಶಾಂತಿಸ್ಥಿತಿಯಿಂದಿಡಬೇಕೆಂದು ಭಾವಿಸಿ ಅವನನ್ನು ರಾತ್ರಿ ಹನ್ನೊಂದರ ನಂತರ ಯಾವ ಕಾರಣಕ್ಕೂ ಎಚ್ಚರದಿಂದಿರಲು ಬಿಡುತ್ತಿರಲಿಲ್ಲ. ರಾತ್ರಿಯ ಸಿನಿಮಾಗಳಂತೂ ಅವನಿಂದ ದೂರಾ. ನನ್ನ ಮೀರಿಹೋದರೆ ಮನೆಯ ಬಾಗಿಲು ತೆಗೆಯುವುದಿಲ್ಲವೆಂದು ಹೆದರಿಸಿದ್ದೆ; ಅವನೆಂದೂ ಹಾಗೆ ಮಾಡಿ ನನ್ನನ್ನು ನಿಷ್ಠುರನನ್ನಾಗಿ ಮಾಡಿರಲಿಲ್ಲ. ಬೇರೆ ಯಾವುದಾದರೂ ಊರಿಗೆ ಹೋದಾಗಲೂ ಅಷ್ಟೆ. ಅವನಿಗಾಗಿ ಹೆಚ್ಚಿನ ಎಚ್ಚರ ವಹಿಸಿ ಬೇಗ ನಿದ್ದೆ ಮಾಡಲು ಏರ್ಪಾಡು ನಡೆಸುತ್ತಿದ್ದೆ. ಸ್ನೇಹಿತರ ಜೊತೆಗೇನಾದರೂ ಅವನು ಟ್ರಿಪ್ಗಿಪ್ ಹೋಗುವಾಗಲಂತೂ ಅವನ ಸ್ನೇಹಿತರಿಗೂ ಎಚ್ಚರ ಹೇಳಿಕಳುಹಿಸುತ್ತಿದ್ದೆ.
ಎಲ್ಲೂ ಹೋಗಬೇಡ. ಏನೂ ಮಾಡಬೇಡ ಎಂದು ಎಲ್ಲದಕ್ಕೂ ಅಡ್ಡಿ ಮಾಡಿದರೆ ಇಂಥ ರೋಗಿಗಳ ವ್ಯಕ್ತಿತ್ವ ಮತ್ತಷ್ಟು ಕುಂಠಿತಗೊಳ್ಳುತ್ತದೆ. ತಾವು ಎಲ್ಲದಕ್ಕೂ ಅನರ್ಹರು ಎಂಬ ಭಾವನೆ ಬೆಳೆದು ಕೀಳರಿಮೆಯುಂಟಾಗಿ ಅವರ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಆದ್ದರಿಂದ ಸ್ವತಂತ್ರವಾಗಿ ಬೆಳೆಯಲು, ಸ್ವಲ್ಪಮಟ್ಟಿಗಿನ ಸಾಹಸ ಕಾರ್ಯದಲ್ಲಿ ಭಾಗವಹಿಸಲು ಈ ರೋಗಿಗಳನ್ನು ಉತ್ತೇಜಿಸಬೇಕು. ಆದರೆ ಇಷ್ಟೆಲ್ಲದರ ಮೇಲೆ ಉಸ್ತುವಾರಿ ಅಗತ್ಯವೆಂದು ಡಾಕ್ಟರುಗಳು ಹೇಳುತ್ತಿದ್ದುದನ್ನು ಕೇಳಿದ್ದ ನಾನು ಅವನ ನಾರ್ಮಲ್ ಚಟುವಟಿಕೆಗಳಿಗೆ ಅಡ್ಡಿಯುಂಟುಮಾಡಲು ಪ್ರಯತ್ನಿಸಿದವನಲ್ಲ. ಆದರೆ ಮಿತಿಯಲ್ಲಿಡಲು ನಿಗಾ ವಹಿಸಿದ್ದೆ.
ಮೂರ್ಚೆ ರೋಗಿಗಳಿಗೆ ನೀರು ಬೆಂಕಿಯೆಂದರೆ ಒಂದು ಬಗೆಯ ವಿಲಕ್ಷಣ ಆಕರ್ಷಣೆಯಂತೆ. ಅದಕ್ಕೇ ಅವನನ್ನು ಎಂದೂ ಒಲೆಯ ಮುಂದೆ ಒಂಟಿಯಾಗಿರಲು ಬಿಟ್ಟಿರಲಿಲ್ಲ ನಾನು. ಆದರ ನೀರಿಗೆ ಮಾತ್ರ ಅವನು ಬಲು ಹತ್ತಿರ. ಶಶಿಗೆ ಚೆನ್ನಾಗಿ ಈಜು ಬರುತ್ತಿತ್ತು. ಆಗಾಗ್ಗೆ ಊರ ಹೊರಗಿದ್ದ ದೊಡ್ಡ ಬಾವಿಗಳಿಗೆ ಸ್ನೇಹಿತರ ಪಟಾಲಂ ಜೊತೆ ಹೋಗಿ ಈಜಿ ಬರುತ್ತಿದ್ದ. ಹಲವಾರು ಮಂದಿ ಸ್ನೇಹಿತರಿಗೆ ಅವನೇ ಈಜು ಕಲಿಸಿದ್ದನಂತೆ. ಹೀಗಾಗಿ ನೀರು ಎಂದರೆ ಶಶಿಗೆ ಪಂಚಪ್ರಾಣ. ಆದರೆ ಅವನ ಪಂಚಪ್ರಾಣಗಳೆಲ್ಲ ನೀರಲ್ಲೇ ಮುಳುಗುವಂತಾಯಿತೇ? ಅಷ್ಟು ಚೆನ್ನಾಗಿ ಈಜಲು ಬರುತ್ತಿದ್ದರೂ ನೀರಿನಲ್ಲಿ ಅವನು ಮುಳುಗಿ ಸತ್ತದ್ದು ಹೇಗೆ? ಅವನನ್ನು ಇದುವರೆಗೆ ಹಗುರವಾಗಿ ತೇಲಿಸುತ್ತಿದ್ದ ನೀರು ಈಗ ಅವನನ್ನೇಕೆ ಮುಳುಗಿಸಿತು? ನೀರಲ್ಲಿ ಬಿದ್ದವನು ಎಂಥವನಾದರೂ ಕೈಕಾಲು ಬಡಿಯುತ್ತಾ ನೆಂದ ಮೇಲೆ, ಈಜಲು ಚೆನ್ನಾಗಿ ಕಲಿತ ಶಶಿ ಬಿದ್ದಾಕ್ಷಣವೇ ಮೇಲೇಕೆ ತೇಲಲಿಲ್ಲ? ಕೈಕಾಲುಗಳನ್ನು ಆಡಿಸಲೇಬಾರದು, ತೇಲಬಾರದು ಎಂಬ ನಿರ್ಧಾರದಿಂದ ಅವನು ನೀರಲ್ಲಿ ಬಿದ್ದನೆ? ಇಂತಹ ಮಾನುಷ ನಿರ್ಧಾರವನ್ನು ಮೀರಿದ್ದಲ್ಲವೇ ನೀರಲ್ಲಿ ಬಿದ್ದಾಗ ಕೈಕಾಲಾಡಿಸುವುದರ ಮೂಲಕ ಬಚಾವಾಗಲು ಪ್ರಯತ್ನಿಸುವ ಜೀವ ಶಕ್ತಿಯ ನಿಶ್ಚಯ? ಏನಾದರೂ ಭಾರವಾದುದನ್ನು ಸೊಂಟಕ್ಕೆ ಕಟ್ಟಿಕೊಂಡು ಬಿದ್ದನೇ? ಆದರೆ ಹೆಣ ಮೂರು ದಿನಗಳ ನಂತರ ಮೇಲೆ ತೇಲಲು ಸಾಧ್ಯವಾಯಿತೇಕೆ? ಆತ್ಮಹತ್ಯೆಯನ್ನೇ ಮಾಡಿಕೊಳ್ಳಬೇಕೆಂಬ ನಿರ್ಧಾರದಿಂದ ಶಶಿ ಹೊರಟಿದ್ದರೆ ನೀರನ್ನೇ ಏಕೆ ಆರಿಸಿಕೊಂಡ? ಅವನನ್ನು ಸದಾ ಸೆಳೆಯುತ್ತಿದ್ದ ನೀರಿನ ಅದಮ್ಯ ಆಕರ್ಷಣೆ ಅವನನ್ನು ಈ ರೀತಿ ಸಾಯಲು ಪ್ರೇರೇಪಿಸಿತೇ? ಅಥವಾ ಇದು ಆಕಸ್ಮಿಕ ಮರಣವೊ? ಚೆನ್ನಾಗಿ ಈಜು ಬಂದರೂ ಅವನು ಸಾಯಲು ಕಾರಣವೇನು? ಹೆಡ್ ಇಂಜುರಿಯೆಂದು ಇನ್ಸ್ಪೆಕ್ಟರ್ ಹೇಳಿದ್ದರಲ್ಲ. ಬಿದ್ದಾಗ ತಲೆಗೇನಾದರೂ ತಗುಲಿ ತಲೆಯೊಡೆದು ಸತ್ತನೇ? ಅಥವಾ ನೀರಲ್ಲಿ ಬಿದ್ದಾಗಲೇ ಅವನಿಗೆ ಅಟ್ಯಾಕ್ ಉಂಟಾಗಿ ನೀರು ಕುಡಿದು ಸಾಯುವ ಹಾಗಾಯಿತೇ? ಅವನು ಹೇಗೂ ಸತ್ತಿರಬಹುದು. ಅದು ಅಷ್ಟೊಂದು ಗಾಢಸಮಸ್ಯೆಯಾಗಿ ಕಾಡುವುದಿಲ್ಲ. ಅವನು ಬಾಣಸವಾಡಿಗೆ ಹೋದದ್ದೇಕೆ? ಅವನು ಮನೆ ಬಿಟ್ಟದ್ದು ನಸುಕಿನಲ್ಲಿ. ಆ ಹೊತ್ತಿಗೇ ಅಲ್ಲಿ ಯಾಕೆ ಹೋದ? ನನಗೆ ತಿಳಿದಂತೆ ಅವನಿಗೆ ಅಆಲ್ಲಿ ಯಾರೂ ಗುರುತಿದ್ದಂತೆ ಕಾಣದು. ಅಥವಾ ಮನೆಯನ್ನು ಬಿಟ್ಟು ಹೊರಟವನು ನೇರವಾಗಿ ಅಲ್ಲಿಗೆ ಹೋಗಲಿಲ್ಲವೋ? ಇನ್ನೆಲ್ಲಾದರೂ ಹೋಗಿ ನಿಧಾನವಾಗಿ ಅಲ್ಲಿಗೆ ಹೋಗಿರ ಬಹುದೇ? ಆ ಬಾವಿಯನ್ನು ಅವನು ಮೊದಲೇ ಕಂಡಿದ್ದನೇ? ಅದನ್ನೇ ಅರಸಿಕೊಂಡು ಹೋದದ್ದೇಕೆ? ಬಾಣಸವಾಡಿಯ ಬಾವಿ ಮತ್ತು ಶಶಿ - ಈ ಇಬ್ಬರ ಸಂಬಂಧ ವಿನಾಕಾರಣವುಂಟಾಗಿ ಈ ರೀತಿ ಪರಿಸಮಾಪ್ತಿಯಾದದ್ದರ ಹಿಂದೆ ಏನೇನಾಗಿರಬಹುದು? ಬರೀ ಯೋಚನೆ, ಯೋಚನೆ, ತಲೆ ಚಿಟ್ಟು ಹಿಡಿಯುತ್ತದೆ!
No comments:
Post a Comment