Sunday, 7 September 2014

ಶೋಧನೆ - ಒಂದು ಕಿರು ಕಾದಂಬರಿ



(ಈ ಕಾದಂಬರಿಯು 1980 ನೇ ಇಸವಿಯಲ್ಲಿ 'ಸುಧಾ' ವಾರಪತ್ರಿಕೆಯು ನಡೆಸಿದ 'ಯುಗಾದಿ ಕಾದಂಬರಿ ಸ್ಪರ್ಧೆ'ಯಲ್ಲಿ ಮೊದಲ ಬಹುಮಾನ ಪಡೆದು ಆ ಪತ್ರಿಕೆಯಲ್ಲೇ ಧಾರಾವಾಹಿಯಾಗಿ ಪ್ರಕಟಗೊಂಡಿತು. ಅನತಿ ಕಾಲದಲ್ಲಿಯೇ ಪುಸ್ತಕರೂಪದಲ್ಲಿ ಪ್ರಕಟವಾಗಿ ಎರಡನೆಯ ಮುದ್ರಣವನ್ನೂ ಕಂಡಿತು. ಇದೀಗ ದೀರ್ಘ ಅವಧಿಯ ನಂತರ ಮೂರನೆಯ ಮುದ್ರಣ ಹೊರಬಂದಿದೆ. ಈ ಕಾದಂಬರಿಗೆ ಬೆನ್ನುಡಿ ಬರೆದಿದ್ದ ಡಾ. ಜಿ.ಎಸ್. ಶಿವರುದ್ರಪ್ಪನವರು ಹೀಗೆ ಬರೆದಿದ್ದರು: "ಮಾನವೀಯ ಸಂಬಂಧಗಳ ಹಿಂದಿರುವ ಹಲವು ಎಳೆಗಳನ್ನು ಅತ್ಯಂತ ಕುತೂಹಲಕರವಾಗಿ ಮತ್ತು ಸ್ವಾರಸ್ಯವಾಗಿ ನಿರೂಪಿಸುವ ಈ ಕೃತಿ ನಾರಾಯಣ ಅವರ ಕಲೆಗಾರಿಕೆಗೆ ಹಿಡಿದ ಕನ್ನಡಿಯಾಗಿದೆ.")


ಶೋಧನೆ - 1
ಶಶಿಧರನ ಬಗ್ಗೆ ನನ್ನ ಕೋಪ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಎಲ್ಲದಕ್ಕೂ ಒಂಥರ ಹಟ ಮಾಡ್ತಾನೆ; ಇವನನ್ನು ಕಟ್ಟಿಕೊಂಡು ಜೀವನ ಪೂರ್ತಿ ಏಗಬೇಕಲ್ಲ, ಅದು ಹೇಗಾಗುತ್ತೋ ಅನ್ನುವ ಯೋಚನೆ ಬಾಧಿಸತೊಡಗಿತು. ಆದರೆ ಅವನನ್ನ ಬೇರೆ ಕಳಿಸೋದಕ್ಕೆ ಮಾತ್ರ ಸಾಧ್ಯವಿಲ್ಲ. ಪಾಪ, ನನ್ನನ್ನು ಬಿಟ್ಟರೆ ಅವನಿಗೆ ಇನ್ಯಾರಿದ್ದಾರೆ? ಅದೂ ಜೀವನವಿಡೀ ಯಾರಾದರೂ ಅವನನ್ನ ನೋಡಿಕೊಳ್ಳೋಕೆ ಒಪ್ಪಿಕೋತಾರೆಯೇ? ಎಷ್ಟಾದರೂ ಅವನು ತನ್ನ ಬೆನ್ನಿಗೆ ಬಿದ್ದ ತಮ್ಮ, ಕಷ್ಟವೋ ಸುಖವೋ ನಾನೇ ಅವನ ಬಗ್ಗೆ ಜಾಗ್ರತೆ ವಹಿಸಬೇಕು. ಜವಾಬ್ದಾರಿಯಿಂದ ನಾನಂತೂ ದೂರ ಸರಿಯೋ ಹಾಗೇ ಇಲ್ಲ. ನಾನು ದೂರ ಹೋಗಬೇಕಂತ ಅನಿಸಿದರೂ ಹಾಗೆ ಮಾಡಲು ಹೇಗೆ ಸಾಧ್ಯ? ಜನ ಏನಂದಾರು? ಅಲ್ಲದೆ ಅವನೆಲ್ಲೋ ನರಳ್ತಾ ಇದ್ದರೆ ನನ್ನ ಮನಸ್ಸು ಸಮಾಧಾನದಿಂದ ಇರಕ್ಕೆ ಸಾಧ್ಯವೇ ಅನ್ನಿಸುತ್ತೆ.
ಆದರೆ ಹೀಗೆಲ್ಲ ಮಾಡ್ತಾ ಇದ್ದರೆ ನಾನು ತಾನೆ ಹೇಗೆ ತುಟಿ ಕಚ್ಚಿಕೊಂಡು ಅನುಭವಿಸ್ತಾ ಇರೋದು? ಇನ್ನೂ ಹುಡುಗ ಆಡಿದ ಹಾಗೆ ಆಡ್ತಾನಲ್ಲ, ಜವಾಬ್ದಾರಿ ಬೇಡವೇ? ಯಾಕೋ ಬೇಜಾರಾಗತ್ತೆ. ಇವಳೂ ಹಾಗೇನೆ ಆಡ್ತಾಳೆ. ಅವನನ್ನ ಕಂಡರೆ ಸೈರಣೆ ಇಲ್ಲ. ಮುಂಚೇನೇ ಎಲ್ಲ ಹೇಳಿದ್ರೂ ಅವಳು ಮಾಡ್ತಾಳಲ್ಲ. ಸಣ್ಣದಕ್ಕೆಲ್ಲ ಅವನನ್ನ ಕೆರಳಿಸೋದು; ನನ್ನ ಇಕ್ಕಟ್ಟಿಗೆ ಸಿಕ್ಕಿಸೋದು. ಇವರಿಬ್ಬರ ಮಧ್ಯೆ ಸಿಕ್ಕಿಕೊಂಡು ನಾನು ನೋಯಬೇಕು. ಯಾರ ಕಡೆ ವಹಿಸಿಕೊಳ್ಳೋದು? ಅವನಂತೂ ಕಾಯಿಲೆ ಮನುಷ್ಯ, ಜೀವನಪೂರ್ತಿ ಬೆನ್ನುಬಿಡದ ಪ್ರಾರಬ್ಧ ಕಾಯಿಲೆ ಅವನಿಗೆ. ಅದರಿಂದ ಅವನ ಮಿದುಳಿನ ಮೇಲೆ ಪರಿಣಾಮ ಆಗಿರುತ್ತೆ. ಚಿಕ್ಕ ಚಿಕ್ಕ ವಿಷಯಗಳಿಗೆಲ್ಲಾ ಉದ್ವಿಗ್ನನಾಗ್ತಾನೆ. ಆದರೆ ಇವಳಿಗೇನು ಧಾಡಿ? ವಿವೇಕ ತಂದುಕೊಂಡು ನಡಕೋಬಾರದೆ. ಒಟ್ಟಿನಲ್ಲಿ ನನ್ನ ಪರಿಸ್ಥಿತಿ ತುಂಬ ಕಷ್ಟದ್ದು.
ಇವಳಂತೂ ಇನ್ನೂ ಗುಂ ಅಂತಾನೇ ಇದ್ದಾಳೆ, ಮೂರು ದಿನದಿಂದ. ಅವಳ ಮುಖ ಕಂಡರೆ ಉರಿದು ಹೋಗುತ್ತೆ ನಂಗೆ. ಆದರೆ ಅವಳು ಎಷ್ಟಾದರೂ ಹೊರಗಿನೋಳು. ಅಣ್ಣಂಗೂ ಅತ್ತಿಗೆಗೂ ವ್ಯತ್ಯಾಸ ಇರಲ್ವೆ? ಅವನ ಜವಾಬ್ದಾರಿ ನಂದು; ನೇರವಾಗಿ ಸಂಬಂಧಿಸಿದೋನು ಅವನು ನಂಗೆ. ಇವಳಿಗಾದರೆ ನನ್ನ ಮೂಲಕ ತಾನೇ ಸಂಬಂಧಿಯಾಗಿರೋದು? ಜೀವನಪೂರ್ತಿ ಅವಳೂ ನವೀಬೇಕಲ್ಲ. ಹಾಗಾಗಿ ಕೆಲವು ಸಲ ಅವಳಿಗೂ ರೇಗುವುದುಂಟು. ಶಶಿಧರನಾದರೂ ಚಿಕ್ಕ ಹುಡುಗ ಅಲ್ವಲ್ಲ. ಪರಿಸ್ಥಿತಿ ಅರ್ಥಮಾಡಿಕೋಬಾರದೇ? ನಮ್ಮ ಜತೇಲಿ ಅಲ್ಲದೆ ಬೇರೆ ಕಡೆ ಇರಕ್ಕೆ ಸಾಧ್ಯ ಇಲ್ಲ ಅಂತ ಅವನಿಗೇನು ಗೊತ್ತಾಗದೆ? ಕಾಯಿಲೆ ಇದ್ದರೇನಾಯ್ತು; ಪೂರ್ತಿ ಬುದ್ಧಿ ಏನೂ ಇಲ್ಲದೆ ಹೋಗಿಲ್ಲವಲ್ಲ? ತೀರ ಎಳಸಾಗಿ ಆಡ್ತಾನೆ, ಮಾತೆತ್ತಿದರೆ ಮನೆಬಿಟ್ಟು ಹೋಗೋದು.
ಆವತ್ತೂ ಹಾಗೇ ಆಗಿತ್ತಲ್ಲ. ನಾನು ಆಫೀಸಿಂದ ಬರೋ ಹೊತ್ತಿಗೆ ಸರಿಯಾಗಿ ಶುರುವಾಗಿತ್ತು ಯುದ್ಧ. ಮೊದಲೇ ತಲೆ ಚಿಟ್ಟುಹಿಡಿಸಿಕೊಂಡು ಆಫೀಸಿನಿಂದ ಬಂದರೆ ಮನೇಲಿ ಬೇರೆ ಕುರುಕ್ಷೇತ್ರ. ಶಶಿ ಕೆಲಸ ಮುಗಿಸಿಕೊಂಡು ಬಂದೋನೇ ಅಡಿಗೆ ಮನೇಗೆ ಹೋಗಿ ಇದ್ದಬದ್ದ ತಿಂಡೀನೆಲ್ಲ ತಿಂದು ಬಿಟ್ಟಿದ್ದನಂತೆ. ಅವನಿಗೋ ಮೊದಲೇ ಹೊಟ್ಟೆ ಜಾಸ್ತಿ. ಹೋಟಲುಗೀಟಲಲ್ಲಿ ತಿನ್ನಬೇಡಾಂತ ನಾನೇ ಅವನಿಗೆ ಹೇಳ್ತಿದ್ದೆನಲ್ಲ. ಎಣ್ಣೇದೋ ಕರಿದದ್ದೋ ತಿಂದರೆ ಜಾಸ್ತಿಯಾಗಬಹುದು ಅಂತ ನಾನೇ ಅವನಿಗೆ ಹೇಳಿದ್ದು ನಿಜ. ಆದ್ದರಿಂದ ಬೆಳಿಗ್ಗೆ ಕ್ಯಾರಿಯರ್ ಊಟವಾದ ಮೇಲೆ ಅವನಿಗೆ ತಿನ್ನಕ್ಕೆ ಏನೂ ಇಲ್ಲ. ಹೊಟ್ಟೆ ಹಸಿಯದೆ ಏನಾಗುತ್ತೆ? ಬಂದ, ತಿಂದ. ಕೇಳಬಹುದಾಗಿತ್ತು ಅವನ ಅತ್ತಿಗೇನಎಲ್ಲಾರದೂ ತಿಂಡಿ ಆಗಿದ್ಯಾ' ಅಂತ. ಆದರೆ ನನಗೇಂತ ಇಟ್ಟಿದ್ದ ತಿಂಡೀನೂ ತಿಂದುಬಿಟ್ಟಿದ್ದ. ಸರಿ, ಇವಳಿಗೆ ಪತಿಪ್ರೇಮ ವಿಪರೀತವಾಯಿತು. ಅವನನ್ನ ಬೈಯ್ಯಕ್ಕೆ ಶುರು. ‘ಅವರು ದುಡಿದುಕೊಂಡು ಬರ್ತಾರೆ. ಬರೋ ಹೊತ್ತಿಗೇಂತ ತಿಂಡಿ ಮಾಡಿಟ್ಟರು ಹೇಳದೇ ಕೇಳದೆ ಎಲ್ಲಾ ಮುಗಿಸಿಬಿಡೋದೇ?’ ಅಂತ ಅವಳಂದಳು. ‘ಅವನು ಹೋಟಲಲ್ಲಿ ತಿಂತಾನೇ ಸುಮ್ನಿರಿ, ನಾನೆಲ್ಲೂ ತಿನ್ನೋಹಾಗಿಲ್ಲವಲ್ಲ’ ಅಂತ ಶಶಿ.
ಇಲ್ಲೇನೋ ಇರತ್ತೇಂತ ಬಂದು. ಇಲ್ಲದ್ದು ನೋಡಿ, ಅದೇ ಹಾದೀಲೇ ಹೊರಗಡೆ ಹೋಗಬೇಕೇನು?"
ಏನು ಹೋದರೆ? ಅವನೇನು ಮುದುಕನ?"
ಅಣ್ಣನ ಬಗ್ಗೆ ಎಷ್ಟು ಅಸಡ್ಡೆ ನೋಡು? ಅವರಿಲ್ಲದಿದ್ದರೆ ನಿನ್ನ ಯಾರು ನೋಡ್ಕೋತಾ ಇದ್ರು?" ಅಂತ ಇವಳ ವಾದ. ಅವನೇನೂ ಮಾತಲ್ಲಿ ಕಡಿಮೆ ಇಲ್ಲದೋನು. ಮಾತಿಗೆ ಮಾತು ಬೆಳೀತು. ಇಬ್ಬರೂ ಜೋರು ಮಾಡಿದ್ದರು; ನಾನು ಬಂದೆ. ಮೊದಲೇ ದಣಿದಿದ್ದೆ, ಹಸಿದಿದ್ದೆ, ಇಲ್ಲಿ ಬಂದರೆ ಗೋಳು. “ಏನ್ರೇ ನಿಮ್ದು?" ಸಿಡುಕಿದೆ.
ರಮಾ ಹೇಳಿದಳು. ಅವನೂ ಮಧ್ಯೆ ಬಾಯಿ ಹಾಕಿದ. ವಿಷಯ ಗೊತ್ತಾಯಿತು. “ಹೋಗಲಿ ಬಿಡು, ಇವತ್ತು ಸಾಯಂಕಾಲ ತಿಂಡಿ ತಿನ್ನದೇ ಇದ್ರೆ ಸಾಯಲ್ಲವಲ್ಲ" ಎಂದೆ ಒರಟಾಗಿ.
ಅಂತೂ ನೀವೂ ನನ್ನೇ ಅಂತೀರಲ್ಲ" ಅಂದಳು. ಒಂದು ಕ್ಷಣ ನಿಜ ಅನ್ನಿಸಿತು. ಗಂಡನಿಗೇಂತ ಮಾಡಿಟ್ಟಿದ್ದನ್ನ ತಿಂದರೆ ಯಾವ ಹೆಂಡತಿಗಾದ್ರೂ ಕೋಪ ಬರಬಹುದಲ್ಲವೇ ಅನ್ನಿಸಿತು.
ಕೇಳಿ ಹೇಳಿ ಅಲ್ಲವೇನೋ ಕೆಲಸ ಮಾಡಬೇಕಾದದ್ದು?" ಅಂದೆ ಶಶಿಧರನ ಕಡೆ ತಿರುಗಿ.
ಎಲ್ಲಾದಕ್ಕೂ ಯಾಕೆ ಕೇಳ್ಬೇಕು. ನಮ್ಮ ಮನೆ ಅಲ್ವಾ ಇದು."
ನಿಮ್ಮ ಮನೇ ಆದ್ರೇ ಮಾಡಿ ಹಾಕೋಳು ನಾನೇ ತಾನೆ?" ಅಂದಳು ರಮಾ ಸಿಡುಕಿನಿಂದ.
ಬಿಟ್ಟಿ ಏನೂ ತಿನ್ನಲ್ಲವಲ್ಲ ನಾನು?"
ಹಾಗಾದ್ರೆ ಹೋಟಲಿಗೆ ಹೋಗಿ ಇರು, ಇಲ್ಲೇಕಿದ್ದೀಯಾ?"
ಹಾಗೆ ಹೇಳೋದಾದ್ರೆ ಅವನು ಹೇಳ್ಲಿ. ಅವನು ತಾನೇ ಮನೆ ಯಜಮಾನ" ಅತ್ತಿಗೆ ಬಗ್ಗೆ ಇವನಿಗೆ ಉದಾಸೀನವೇ ಅನ್ನಿಸ್ತು ನಂಗೆ.
ಬಾಯಿ ಮುಚ್ಕೊಳೊ. ಮಾಡೋದೆಲ್ಲ ಮಾಡಿ ಈಗ ಅವಳನ್ನೇ ದಬಾಯಿಸ್ತಾ ಇದ್ದಾನೆ. ಸ್ವಲ್ಪವೂ ಬುದ್ಧಿ ಇಲ್ಲ" ಎಂದು ಗದರಿದೆ.
ತಿಂತಾ ಇದ್ದದ್ದನ್ನ ನಿಲ್ಲಿಸಿದ, ಪ್ಲೇಟು ದೂರ ಇಟ್ಟ.
ಎಲ್ಲಾದಕ್ಕೂ ಕೋಪ ಬೇರೆ, ಮಾಡೋದು ಮಾತ್ರ ಕಂತ್ರಿ ಕೆಲಸ" ಅಂತ ಗೊಣಗಿಕೊಂಡೆ. ದಡಬಡ ಚಪ್ಪಲಿ ಮೆಟ್ಟಿಕೊಂಡು ಶಶಿ ಹೊರಗ್ಹೋಗಿದ್ದ.
ರಾತ್ರಿ ಎಷ್ಟು ಹೊತ್ತಾದರೂ ಬರದೆ ಇದ್ದಾಗ ನಂಗೆ ಗಾಬರಿಯಾಯ್ತು. ಆದರೆ ಪಕ್ಕದಲ್ಲಿದ್ದ ರಮಾಅವನಿಗೇನೂ ಆಗಿರಲ್ಲ ಧಾಡಿ, ಸುಮ್ನಿರಿ" ಅಂದಳು. ಇವಳಿಗೆ ನನ್ನ ತಮ್ಮನ ಬಗ್ಗೆ ಅಸಡ್ಡೆ ಅಂತ ಅಸಮಾಧಾನವಾಯಿತು, ಆದರೆ ಅವಳ ಮೈಯ ಬಿಸಿ ನನ್ನನ್ನ ಕರಗಿಸ್ತಾ ಇತ್ತು. ಸುಖದ ಆಯಾಸದಿಂದ ನಿದ್ದೆ ಬಂದಿತ್ತು.
ಮಾರನೇ ಬೆಳಿಗ್ಗೆ ಐದೂವರೆಗೆ ಶಶಿ ಬಂದು ಬಾಗಿಲು ತಟ್ಟಿದ್ದ. ನಾನೇ ಬಾಗಿಲು ತೆಗೆದಿದ್ದೆ. ಅವನ ಮೇಲೆ ಸಿಟ್ಟು ಅಸಮಾಧಾನಗಳು ಇದ್ದರೂ, ಅವನ ಮುಖ ಕಂಡ ಮೇಲೆ ನನ್ನ ಆತಂಕ ಕಡಿಮೆಯಾಗಿ ಏನೂ ಮಾತನಾಡದೇ ಅವನನ್ನು ಒಳಗೆ ಬರಮಾಡಿಕೊಂಡಿದ್ದೆ. ಅವನು ನೇರವಾಗಿ ಟವಲು ತೆಗೆದುಕೊಂಡು ಬಚ್ಚಲ ಮನೆಗೆ ಹೋಗಿ ದಡದಡಾಂತ ಒಂದು ಬಕೆಟ್ ತಣ್ಣೀರು ಸುರಿದುಕೊಂಡು ಕೆಲಸಕ್ಕೆ ಹೊರಟಿದ್ದ.
ಸಂಜೆ ವಿಚಾರಿಸಿದಾಗ ಗೊತ್ತಾಯಿತು ಹಿಂದಿನ ರಾತ್ರಿಯೆಲ್ಲ ಉಪವಾಸ ಇದ್ದನಂತೆ. ಅವನ ಆಫೀಸಿನ ಸ್ನೇಹಿತ ಗೋವಿಂದಯ್ಯ ಅನ್ನುವವನ ರೂಮಲ್ಲಿ ಮಲಗಿಕೊಂಡಿದ್ದನಂತೆ. ಮನೆ ಜಗಳಾನೆಲ್ಲ ಬೇರೆಯವರ ಹತ್ತಿರವೆಲ್ಲ ಹೇಳಿಕೊಂಡಿದ್ದಾನೇನೋ ಅಂತ ಅಸಮಾಧಾನವಾಯಿತು. ಆದರೆ ಹಿಂದಿನ ದಿನದ ಹಾಗೇ ಆಗಬಾರದೆಂದು ಬಾಯಿಮುಚ್ಚಿಕೊಂಡಿದ್ದೆ.
ಸರಿ, ಈಗಲೂ ಹಾಗೆಯೇ ಆಗಿರಬಹುದು ಅನ್ನಿಸಿತು. ಆದರೆ ಅವನು ಮನೆಬಿಟ್ಟು ಹೋಗಿ ಇವತ್ತಿಗೆ ಮೂರನೇ ದಿನ. ಹೋದ ದಿನ ರಾತ್ರಿಯೆಲ್ಲ ಅವನ ಮೇಲೆ ನನಗೆ ವಿಪರೀತ ಸಿಟ್ಟು ಬಂದಿತ್ತು. ಮನೆ ಬಿಟ್ಟು ಹೋಗಿ ಎಲ್ಲಾದಕ್ಕೂ ಹೆದರಿಸ್ತಾನೆ ಅಂತ ರೋಸಿಹೋಗಿತ್ತು. ಆದರೂ ನಾನಷ್ಟು ಕೋಪ ಮಾಡಿಕೊಳ್ಳಬಾರದಿತ್ತು ಅಂತಲೂ ಅನ್ನಿಸಿತ್ತು. “ಎಲ್ಲಿ ಹೋಗ್ತಾನೆ ಬಿಡಿ. ಗೋವಿಂದಯ್ಯನೋ ಪಾವಿಂದಯ್ಯನೋ ಇದಾನಲ್ಲ. ಅವನ ಪ್ರಾಣ ಸ್ನೇಹಿತ, ಅವನ ಮನೇಲಿ ಬಿದ್ದುಕೊಂಡಿರ್ತಾನೆ" ಅಂತ ತಿರಸ್ಕಾರದಿಂದ ಅಂದಾಗ ರಮಳ ಮೇಲೆ ಕಿಡಿಗಣ್ಣು ಹಾಯಿಸಿದ್ದೆ. ಆದರೆ ತನ್ನ ಮೃದುವಾದ ಸ್ಪರ್ಶದಿಂದ ನನಗವಳು ಮಂಕುಹಿಡಿಸಿಬಿಡುತ್ತಾಳೆ. ಮನಸ್ಸಿಗೆ ಬೇಸರವಾದಾಗ ಅವಳು ಹೆಚ್ಚು ಬೇಕು ಅನ್ನಿಸತ್ತೆ. ಅವಳನ್ನ ಹಿಂಡಿ ಹಿಂಡಿ ಹೀರಿಬಿಡ್ತೀನೇನೋ ಎನಿಸುವ ಹಾಗೆ; ಅಂಥ ಸಂದರ್ಭಗಳಲ್ಲಿ ಅವಳನ್ನ ಸೇರ್ತೀನಿ. ಅವತ್ತೂ ಹಾಗೆಯೇ ಆಯಿತು.
ಮಾರನೇ ದಿನ ಕೂಡ ಬರದೇ ಇದ್ದಾಗ ಆತಂಕವಾಯಿತು. ಎಲ್ಲಿ ಹಾಳಾಗಿ ಹೋದ ಇವನು? ಏನೋ ಒಂದು ರಾತ್ರಿಯಾಗಿದ್ದರೆ ಪರವಾಯಿಲ್ಲ, ಎರಡು ದಿನವಾದರೂ ಬರಲಿಲ್ಲವಲ್ಲ ಅಂತ ದುಮುಗುಟ್ಟುವಂತಾಯಿತು. ದಿನ ದಿನಕ್ಕೆ ಇವನ ಕಾಟ ಜಾಸ್ತಿ ಆಗ್ತಿದೆಯಲ್ಲ ಅನ್ನಿಸಿತು. ಇವತ್ತು ಬಂದರೆ ಇನ್ನೂ ಒಂದೆರಡು ಒದೆತ ಕೊಟ್ಟು ಬುದ್ಧಿ ಕಲಿಸಬೇಕು ಅಂತ ನಿರ್ಧರಿಸಿದ್ದಾಯಿತು. ರಮಳಿಗೂ ಒಂಥರ ಆತಂಕವಾಗಿತ್ತೇನೋ; ನಿನ್ನೆ ರಾತ್ರಿ ಉತ್ಸಾಹದಿಂದ ಇರಲೇ ಇಲ್ಲ. ನನಗೆ ಅವಳ ಬಗ್ಗೆಯೇ ಕೋಪ ಉಕ್ಕಿತ್ತು. ಆದರೆ ಶಶಿ ಮೇಲೆ ಜೋರು ಮಾಡಿದ ಹಾಗೆ ಇವಳ ಮೇಲೆ ಯಾಕೆ ರೇಗಲಾರೆ? ಇವಳಿಗೆ ನಾನು ದಾಸನಾಗಿ ಬಿಟ್ಟಿದ್ದೇನೆಯೋ ಎಂಬ ಚಿಂತೆ ಮೂಡುತ್ತದೆ. ಹಾಳಾಗಿಹೋಗಲಿ ಎಂದು ಹೊದಿಕೆ ಮುಸುಕಿ ಹಾಕಿಕೊಂಡಿದ್ದೆ.
ಇವತ್ತಂತೂ ಮೂರನೇ ದಿನ ಅವನು ಹೋಗಿ, ಮೊನ್ನೆ ಅವನು ಮನೆ ಬಿಟ್ಟಾಗ ಇನ್ನೂ ನಸುಕು ನಸುಕು. ಫ್ಯಾಕ್ಟರೀಗೆ ಹೋಗೋ ಹೊತ್ತೂಂತ ಕಾಣತ್ತೆ ಸುಮಾರು. ಅಂದರೆ ಎರಡು ಹಗಲುಗಳು, ಎರಡು ರಾತ್ರಿ ಅಂದ ಹಾಗಾಯಿತು, ಏನು ಹುಡುಗಾಟವಾಡ್ತಾನೆ ಬೋಳಿಮಗ. ಜವಾಬ್ದಾರೀನೇ ಬೇಡವೇ ಇವನಿಗೆ. ನನಗೆ ಎಷ್ಟು ಕಳವಳವಾಗುತ್ತೆ ಅನ್ನೋ ಯೋಚನೆಯೇ ಇವನಿಗೆ ಬಾರದೇ? ಇವನನ್ನ ನಿವಾರಿಸಿಕೊಳ್ಳೋ ಹಾಗೂ ಇಲ್ಲ, ಇರಿಸಿಕೊಳ್ಳೋ ಹಾಗೂ ಇಲ್ಲ - ಅನ್ನೋ ಸ್ಥಿತೀಲಿದ್ದೀನಿ ನಾನು. ಇವತ್ತು ಬರಲಿ ಮಾಡ್ತೀನಿ. ಆದರೆ ಇವತ್ತು ಬರದಿದ್ದರೆ? ಎದೆ ತುಂಬ ಜೋರಾಗಿ ಡವಡವಗುಟ್ಟಲು ಶುರುವಾಗುತ್ತೆ. ಬರದೆ ಎಲ್ಲಿಗೆ ಹೋಗ್ತಾನೆ ಅನ್ನುವ ತಿರಸ್ಕಾರವೂ ಮೂಡುತ್ತೆ. ಆದರೆ ಇವತ್ತೂ ಬರದಿದ್ದರೆ ಏನು ಮಾಡೋದು? ಇವತ್ತೆಲ್ಲ ಯಾಕೆ ಕಾಯಬೇಕು? ಗೋವಿಂದಯ್ಯನನ್ನು ವಿಚಾರಿಸಿದರೆ ಆಯಿತು. ಮಧ್ಯಾಹ್ನ ಅವನರೂಮಿನ ಕಡೆ ಆಫೀಸಿಂದಬರೋವಾಗ ಹಾಗೇ ಹೋಗಿ ಬರಬೇಕು ಎಂದು ನಿರ್ಧರಿಸುತ್ತೇನೆ. ಅವನ ರೂಮು ನಾನು ಎಂದೂ ಕಂಡವನಲ್ಲ. ಎಲ್ಲೋ ಅರಳೇಪೇಟೆಯಲ್ಲಿ ಅಂತ ಶಶಿ ಹೇಳಿದ್ದ ನೆನಪು. ಅದಾವುದೋ ಗಲ್ಲಿಯಂತೆ, ಹೋಗಿ ವಿಚಾರಿಸಿಕೊಂಡು ಬರಬೇಕು. ದರದರಾಂತ ಎಳಕೊಂಡು ಬಂದು ಇನ್ನು ಥರ ಮಾಡಬೇಡ ಅಂತ ಚೆನ್ನಾಗಿ ಹೇಳಬೇಕು. ಒಳ್ಳೆ ಪ್ರಾರಬ್ಧ ನನ್ನದು. ಸುಮ್ಮನೆ ಬೇರೆಯವರಿಗಾಗಿ ಒದ್ದಾಡೋದೇ ನನ್ನ ಕರ್ಮವಾಗಿಬಿಟ್ಟಿದೆ. ಎಂದಿಗೆ ಕೊನೇನೊ ಇದೆಲ್ಲ ಗೋಳಿಗೆ!
ಆಫೀಸಲ್ಲೆಲ್ಲ ಶಶಿಯದೇ ಯೋಚನೆ. ಯಾಕೆ ಹೀಗೆ ಮಾಡಿದ? ಇಷ್ಟೊಂದು ಛಲ ಮಾಡ್ತಾರಾ ಯಾರಾದರೂ? ಅದೂ ನನ್ನ ಮೇಲೆ, ಅವನನ್ನ ಹೇಗೆ ನೋಡ್ಕೋತಿದೀನಿ ನಾನು. ನನ್ನಂಥ ಅಣ್ಣ ಅವನಿಗೆ ಬೇರೆ ಸಿಕ್ತಾರಾ? ಯಾವ ಅಣ್ಣನೂ ತನ್ನ ತಮ್ಮನನ್ನು ಥರ ನೋಡ್ಕೊಳಕ್ಕೆ ಸಾಧ್ಯ ಇಲ್ಲ. ಎಲ್ಲಾರೂ ಹೇಳಿದ್ದನ್ನ ನಾನೇ ಕೇಳಿದ್ದೇನೆ. ಮಗನಿಗಿಂತ ಜೋಪಾನವಾಗಿ ಅವನನ್ನು ಕಾಣುತ್ತಿದ್ದೀನಿ. ಅವನು ದುಡ್ಡೇನೋ ಕೊಡ್ತಾನೆ, ನಿಜ, ಅದು ಅವನ ಊಟ ವಸತಿಗಾಯಿತು. ಆದರೆ ನಾನು ತೋರಿಸೋ ವಿಶ್ವಾಸಕ್ಕೆ ಅವನು ಬೆಲೆ ಕೊಡೋದಕ್ಕೆ ಸಾಧ್ಯವೇ? ಸ್ವಲ್ಪವೂ ಕೃತಜ್ಞತೆಯಿಲ್ಲವೇ ಅವನಿಗೆ?
ಪಾಪ, ಅವನ ಸ್ಥಿತಿ ನೋಡಿದರೆ ಎಂತಹವರಿಗೂ ಕನಿಕರವೆನ್ನಿಸತ್ತೆ. ಜೀವನಪೂರ್ತಿ ಅವನು ರೋಗದಿಂದ ಮುಕ್ತನಾಗೋಹಾಗಿಲ್ಲ. ಫಿಟ್ಸ್ ಅಂದರೇನು ಸಾಮಾನ್ಯವೇ? ಯಾವಾಗ ಬರುತ್ತೋ? ಎಲ್ಲಿ ಬರುತ್ತೋ ಕಂಡವರಾರು? ಪ್ರತಿದಿನ ಕರಾರುವಾಕ್ಕಾಗಿ ಮಾತ್ರೆ ನುಂಗಿದರೂ ಅದು ಕೆಲವು ಸಲ ಬಂದೇಬಿಡುತ್ತೆ. ಅವನಿಗಿಂತ ಮಾತ್ರೆ ನುಂಗಿಸೋ ವಿಚಾರದಲ್ಲಿ ಆಸಕ್ತಿ ಹೆಚ್ಚು. ಪ್ರತಿದಿನ ರಾತ್ರಿ ಮಾತ್ರೆ ತಗೊಂಡ್ಯಾ ಅನ್ನೋ ಮಂತ್ರ ಜಪಿಸಿ ಜಪಿಸಿ ಅಭ್ಯಾಸವಾಗಿಬಿಟ್ಟಿದೆ. ಮಾತ್ರೆ ತಗೊಂಡರೂ ಪೂರ್ತಿ ನಿಂತಿಲ್ಲವಲ್ಲ, ಇನ್ನೆಂಥ ದ್ರಾಬೆ ಕಾಯಿಲೆ ಅದು ಅನ್ನಿಸತ್ತೆ. ಯಾಕೋ ಪ್ರಾರಬ್ಧ ಕರ್ಮ ಅಂತಾರಲ್ಲ. ಅಂಥದೇನಾದರೂ ಇರಬಹುದೇ ಅನ್ನೋ ಅನುಮಾನವಾಗುತ್ತೆ. ಇದು ಶಶಿಯ ಪ್ರಾರಬ್ಧ ಕರ್ಮವೋ, ನನ್ನದೋ? ಅವನಿಗಿಂತ ನಾನೇ ಹೆಚ್ಚು ಕನಿಕರಕ್ಕೆ ಅರ್ಹನೇನೋ. ನಾವು ನಾವೇ ಎಲ್ಲೂ ಹೋಗೋ ಹಾಗಿಲ್ಲ. ಎಷ್ಟೋ ಸಲ ನಾನು ಮಕ್ಕಳು ರಮ ಎಲ್ಲಾದರೂ ಹೋಗಬೇಕೂಂತ ಅನ್ನಿಸಲ್ಲವೇ ನನಗೆ? ಇನ್ನು ರಮಂಗೆ ಹೇಗೆ ಅನ್ನಿಸಬಹುದು? ಪಾಪ. ಅವಳೂ ಪರಿಸ್ಥಿತೀನ ಅರ್ಥಮಾಡಿಕೋತಾಳೆ. ಮದುವೆಗೆ ಮುಂಚೆ ಅವಳಿಗೆ ಎಲ್ಲ ವಿವರಿಸಿದ್ದು ಒಳ್ಳೇದಾಯಿತು; ನನಗೆ ಜವಾಬ್ದಾರಿ ಸ್ವಲ್ಪ ಕಡಿಮೆ. ಅವಳಿಗೇನೂ ನಮ್ಮನೆ ವಿಚಾರ ತಿಳಿಯದ್ದೇನಲ್ಲ. ನಂಟರಲ್ಲದಿದ್ದರೂ ಅವರ ಮನೆಯೋರೆಲ್ಲ ಪರಿಚಯದವರೇ. ಇನ್ನಾರು ಅವರ ಮನೆಯೋರು ಅಂದರೆ ಅವರಪ್ಪ, ಅಮ್ಮ, ಅವರಣ್ಣ ಅಷ್ಟೇ. ಅವರೂ ಈಗ ಹೈದರಾಬಾದಿನಲ್ಲಿದ್ದಾರೆ. ರಮ ಒಂಟಿ ತನಾನ ಅನುಭವಿಸುತ್ತಾಳೆ ಏನೋ. ಯಾಕೇಂದ್ರೆ ನಾನು ಹೆಚ್ಚು ಭಾಗ ಹೊರಗೇ ಕಾಲ ಕಳೆಯುವವನು, ಎಲ್ಲ ದುಡಿಯಬೇಕಾದ ಗಂಡಸರೂ ಅಷ್ಟೇ ತಾನೇ. ಇನ್ನು ಮನೇಲಿರೋವಾಗ ಶಶಿಯ ಚಿಂತೆ.
ಇವನು ಎಲ್ಲೀಗೆ ಹೋದ. ಹಾಳು ಗೋವಿಂದಯ್ಯನಾದರೂ ಬಂದು ಹೇಳಿ ಹೋಗೋದು ಬೇಡವೇ? ಒಂದೆರಡು ಸಲ ಅವನ ರೂಮಲ್ಲೇ ಇವನಿಗೇನಾದರೂ ಅಟ್ಯಾಕ್ ಆಗಬೇಕು, ಆಗ ಮುಂದಿನ ಸಲದಿಂದ ಅವನೇ ತನ್ನ ರೂಮಿಗೆ ಇವನನ್ನ ಸೇರಿಸ್ತಾನೋ ಇಲ್ಲವೋ. ಅವನಿಗೆ ಫಿಟ್ಸ್ ಬರೋ ವಿಚಾರ ವೇನೂ ಅವನಿಗೆ ತಿಳಿಯದ್ದಲ್ಲ ಅನ್ನಿಸತ್ತೆ. ಆಫೀಸಿನಲ್ಲಿ ಎಷ್ಟೋ ಸಲ ಬಂದಿರ್ಬೇಕು. ಸ್ನೇಹಿತರು ಅವನಿಗೆ ಉಪಚಾರ ಮಾಡಿದ್ದನ್ನ ಶಶಿಯೇ ಒಂದೆರಡು ಸಲ ಹೇಳಿದ್ದನಲ್ಲ. ಹಾಗೇ ಆದರೆ, ಗೋವಿಂದಯ್ಯ ಒಬ್ಬನೇ ಇದ್ದಾಗ ಏನಾದ್ರೂ ಅಟ್ಯಾಕ್ ಬಂದಿದ್ರೆ, ಇವನು ಇನ್ನೆಲ್ಲಿಗೆ ಹೋಗ್ತಾನಂತೆ ಇನ್ನು ಮೇಲೆ. ಬುದ್ಧಿ ಬರಬೇಕು ಇವನಿಗೆ.
ಸಾಯಂಕಾಲ ಮನೆಗೆ ಬಂದರೆ, ನಾನು ಮಧ್ಯಾಹ್ನವೆಲ್ಲ ಯೋಚನೆ ಮಾಡ್ತಿದ್ದ ಗೋವಿಂದಯ್ಯಾನೇ ಅಲ್ಲಿ ಕೂತಿದ್ದಾನೆ! ನನ್ನ ಕಂಡು ನಮಸ್ಕಾರ ಮಾಡಿದ.
ಯಾವಾಗ ಬಂದ್ರಿ?"
ಈಗ ತಾನೇ ಬಂದೇ ಸಾರ್, ಅಮ್ಮ ಒಳಗೆ ಕರದ್ರು. ನೀವೂ ಬಂದ್ರಿ" ಅಂದ.
ಏನು ಸಮಾಚಾರ?" ಅಂದೆ. ಹಾಗೆ ನೋಡಿದರೆ ಹೇಳೋ ಸಮಾಚಾರ. ಅದೂ ಗೋವಿಂದಯ್ಯನನ್ನ ವಿಚಾರಿಸೋ ಸಮಾಚಾರ ನನ್ನ ಬಳಿಯೇ ಇದ್ದದ್ದು, ಆದರೆ ಅದನ್ನ ಅವನೇ ಹೇಳಕ್ಕೆ ಬಂದಿದ್ದಾನೆ. ಶಶಿ ಏನಾದರೂ ಹೇಳಿ ಕಳ್ಸಿರಬೇಕು. ಅಲ್ಲ, ಎಂಥ ದುಷ್ಟ ಅವನು. ಹೇಳಿ ಬೇರೆ ಕಳಿಸೋದು! ಮನೇ ಗುಟ್ಟು ರಟ್ಟುಮಾಡಬಾರದೂಂತ ಅವನಿಗೆ ತಿಳಿಯೋದಿಲ್ಲವೇ? ವಿಪರೀತ ಕೋಪ ಬಂತು. ಆದರೆ ಬೇರೆಯೋರ ಮುಂದೆ ನನ್ನ ಸಿಟ್ಟನ್ನು ಯಾಕೆ ತೋರಿಸಿಕೋಬೇಕು? ಶಶಿಗೆ ಬುದ್ಧಿ ಇಲ್ಲಾಂದರೆ ನನಗೂ ಇಲ್ಲವೇ. ಇರಲಿ, ಅವನೇನು ಹೇಳಿಕಳ್ಸಿದಾನೋ ನೋಡೋಣ ಅನ್ನಿಸಿಏನು ಸಮಾಚಾರ?" ಪುನಃ ಕೇಳಿದೆ.
ಏನಿಲ್ಲ ಸಾರ್. ಶಶಿಧರ್ಗೆ ಈಗೊಂದು ಎರಡು ದಿನದಿಂದ ನಮ್ಮ ಬಾಸ್ ಹೇಳಿ ಕಳಿಸ್ತಿದಾರೆ. ಆದರೆ ಅವರ್ಯಾಕೋ ಮೂರು ದಿನದಿಂದ ಆಫೀಸಿಗೇ ಬಂದಿಲ್ಲ. ಏನು ವಿಚಾರ ತಿಳಕೊಂಡು ಹೋಗೋಣ ಅಂತ ಬಂದೆ." ನನ್ನ ಎದೆ ಮಾತು ಕೇಳಿ ಧಸಕ್ಕೆಂದಿತು. ಅಯ್ಯೋ ದೇವರೇ, ಅವನ ವಿಚಾರ ಏನೋ ಹೇಳ್ತಾನೆ ಅಂತ ನಾನಿದ್ದರೆ, ಇನ್ನೊಂದು ಸಮಸ್ಯೇನ ತಂದು ಹಾಕ್ತಾ ಇದಾನಲ್ಲ ಈತ! ಹಾಗಾದರೆ ಶಶಿಯ ವಿಷಯ ಇವನಿಗೆ ಗೊತ್ತಿಲ್ಲ. ಇವನ ರೂಮಿಗೇ ಹೋಗಿ ಇದ್ದಿದ್ರೆ ಇವನು ಯಾಕೆ ಇಲ್ಲಿ ಬರ್ತಾ ಇದ್ದ.
ರಮ ಗೋವಿಂದಯ್ಯನ ಮಾತು ಕೇಳಿ ಅಡಿಗೆ ಮನೆಯಿಂದ ಹೊರಗೆ ಬಂದು ಏನೋ ಮಾತಾಡಕ್ಕೆ ಬಾಯಿ ತೆರೆಯುತ್ತಾಳೆ. ಯಾರಿಗೂ ಗೊತ್ತಾಗದ ವಿಚಾರ ಡಾಣಾ ಡಂಗುರ ಏಕೆ ಮಾಡಬೇಕೂಂತ ನಾನು ಅವಳಿಗೆ ಕಣ್ಸನ್ನೆ ಮಾಡಿ ಸುಮ್ಮನಿರಿಸುತ್ತೇನೆ. ವಿಷಯ ನಾನು ತಿಳಿದಿರೋದಕ್ಕಿಂತ ಗೂಢವಾಗಿದೆ. ಎದೆಯ ಶಬ್ದ ನನಗೇ ಕೇಳಿಸುವಷ್ಟು ಜೋರಾಗುತ್ತದೆ. ಅವನು ಎಲ್ಲೋ ಹೋಗಿರೋ ವಿಚಾರ ಗುಲ್ಲಾಗುವುದಕ್ಕಿಂತ ಮುಂಚೆ ಶಶಿಯನ್ನು ಎಳೆದು ಕರಕೊಂಡು ಬರಬೇಕು. ಹೇಗೆ, ಎಲ್ಲೀಂತ ಹೋಗೋದು; ಅವನಿಗೇನಾದರೂ ಆಗಿದೆಯೇ? ಊರು ಬಿಟ್ಟೇ ಹೋಗಿದ್ದಾನೆಯೇ? “ಅವನಿಗೆ ಹೇಳ್ತೀನಿ" ಅಂತ ಮಾತು ಜಾರಿಸಿ ಗೋವಿಂದಯ್ಯನನ್ನು ಬೇಗ ಸಾಗಹಾಕುತ್ತೇನೆ. ಅವನಿಗಾಗಿ ತಂದ ಕಾಫಿಯನ್ನು ರಮ ವಾಪಸು ತೆಗೆದುಕೊಂಡು ಹೋಗಬೇಕಾಗುತ್ತದೆ. ಬಟ್ಟೆ ಬದಲಾಯಿಸುವುದರಲ್ಲಿ, ಕಾಫಿ ತಿಂಡಿ ಸೇವನೆಯಲ್ಲಿ ಗಡಿಬಿಡಿ. ಯಾಕೆ ಹೀಗೆಲ್ಲ ಆಗ್ತಿದೆ? ಎಲ್ಲಿ ಹೋದ ಅವನು? ಬಡಪಾಯಿ ಎಷ್ಟು ಕಷ್ಟಪಡ್ತಾನೋ, ಏನೋ. ಏನಾದರೂ ಆಗಿ ಹೋದರೆ? ಅವತ್ತು ಆಗಿತ್ತಲ್ಲ ಹಾಗೇನಾದರೂ ಆಗಿದ್ದರೆ, ಇನ್ನೂ ತೀವ್ರವಾಗಿ.
ಅವನು ಮೊದಮೊದಲು ಫ್ಯಾಕ್ಟರಿಗೆ ಹೋಗ್ತಿದದ್ದು ಬೈಸಿಕಲ್ ಮೇಲೆಯೇ. ನಾನು ಬೇಡಾಂತ ಎಷ್ಟೋ ಸಾರಿ ಹೇಳಿದ್ದರೂ ಕೇಳ್ತಿರಲಿಲ್ಲ, ಅವನು, ಕೆಟ್ಟ ಹಟ ಕೆಲವು ಸಾರಿ. ತಾನೂ ಸುಖಪಡಲಾರ. ನಮಗೂ ಪ್ರಾಣಕ್ಕೆ ತರ್ತಾನೆ. ಒಂದು ಭಾನುವಾರ ಮಧ್ಯಾಹ್ನ ಯಾರೋ ಇಬ್ಬರು ಅಪರಿಚಿತರು ಅವನನ್ನ ಟ್ಯಾಕ್ಸಿಯಲ್ಲಿ ಮನೆಗೆ ಕರಕೊಂಡು ಬಂದರು. ನೋಡಿದರೆ ಮೈಕೈ ಎಲ್ಲಾ ಗಾಯ! ನನಗೆ ಗಾಬರಿಯಾಗಿತ್ತು. ಹಣೆಗೆ ಪಟ್ಟಿ ಕಟ್ಟಿದೆ. ಕೈಗೆ ಬ್ಯಾಂಡೇಜು ಹಾಕಿದೆ! ಮಂಕಾಗಿ ಬಂದ. ಏನು ಸಮಾಚಾರ ವಿಚಾರಿಸಿದೆ.
ನಡೆದದ್ದಿಷ್ಟು: ಅವತ್ತು ಭಾನುವಾರ. ರಜವಾದ್ದರಿಂದ ಮೆಜೆಸ್ಟಿಕ್ ಹತ್ತಿರ ಯಾವುದೋ ಸಿನಿಮಾ ಒಂದಕ್ಕೆ ಹೋಗಿದ್ದನಂತೆ. ಮುಗಿಸಿಕೊಂಡು ಸೈಕಲ್ ಹತ್ತಿ ಮನೆ ಕಡೆ ಬರ್ತಿದ್ದ. ಕಾರ್ಪೊರೇಷನ್ ಹತ್ತಿರ ನಾಲ್ಕು ದಾರಿಗಳು ಸೇರುತ್ತವಲ್ಲ, ಅಲ್ಲಿ ಆಕ್ಸಿಡೆಂಟ್ ಆಯ್ತಂತೆ. ಕೆಂಪು ದೀಪ ಬಂತು ಹಸಿರು ದೀಪ ಕಾಯ್ತಾ ಎಲ್ಲ ವಾಹನಗಳೂ ನಿಂತಿದ್ವು. ಹಸಿರು ಬಂತು. ಎಲ್ಲರೂ ಹೊರಟು ಒಂದು ನಿಮಿಷವಾಗಿರ್ಬೇಕು, ಇನ್ನೂ ಐವತ್ತು ಅಡಿ ಬಂದಿರಲಿಲ್ಲ. ಇವನು ಸೈಕಲ್ಲಿಂದ ಬಿದ್ದ. ಭರೋ ಅಂತ ಬರ್ತಿದ್ದ ಹತ್ತಾರು ವಾಹನಗಳು ಇದ್ದಕ್ಕಿದ್ದಂತೆ ಅಸ್ತವ್ಯಸ್ತವಾಯಿತು. ಇದನ್ನು ನಿರೀಕ್ಷಿಸದೇ ಇದ್ದ ವಾಹನ ಚಾಲಕರು ತಕ್ಷಣ ನಿಂತರು. ಆದರೆ ಒಂದು ಕಾರು, ಇನ್ನೇನು ಇವನ ಮೇಲೆ ಹರೀಬೇಕು, ತಕ್ಷಣ ಬಲಗಡೆ ತಿರುಗಿ ಇವನ ಕಾಲ ಮೇಲೆ ಹರಿದಿತ್ತು. ಜನಗುಂಪು ಸೇರಿದರು. ಪೋಲೀಸಿನೋನು ಬಂದ, ನೋಡಿದರೆ ಇವನ ಕಣ್ಣುಗಳು ತೇಲುಗಣ್ಣಾಗಿವೆ, ಬಾಯಲ್ಲಿ ನೊರೆ ಕಾಣಿಸಿಕೊಂಡಿದೆ. ಎಲ್ಲರಿಗೂ ಗೊತ್ತಾಯಿತು ಫಿಟ್ಸ್ ಬಂದಿದೆ ಅಂತ. ಫುಟ್ಪಾತ್ ಮೇಲೆ ಕರಕೊಂಡು ಹೋಗಿ ಮಲಗಿಸಿದರು. ತಣ್ಣೀರು ಚಿಮುಕಿಸಿದರು, ಗಾಳಿ ಹಾಕಿದರು. ಎರಡು ನಿಮಿಷದಲ್ಲಿ ಇವನು ಎದ್ದು ಕೂತ, ಜ್ಞಾನ ಬಂತು. ಅದರ ಜೊತೆಗೇ ಮೈ-ಕೈಲಿ ಗಾಯಗಳಾದದ್ದರ ನೋವಿನ ಅರಿವು.
ಪೋಲೀಸ್ ಕಾನ್ಸ್ಟೇಬಲ್ ವಿಷಯ ಅರ್ಥಮಾಡಿಕೊಂಡ., ಇದು ಆಕ್ಸಿಡೆಂಟಲ್ಲ, ಫಿಟ್ಸ್ನಿಂದಾಗಿ ಬಿದ್ದದ್ದು ಅಂತ ಕೇಸು ಗೀಸೂಂತ ಹೋಗಲಿಲ್ಲ. ಕಾರಿನವನು ಗಾಬರಿಗೊಂಡಿದ್ದ. ಕಾರಿನ ಯಜಮಾನನೇ ಕಾರನ್ನು ಮನೆಗೆ ಕಳಿಸಿ, ಇವನನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ತನ್ನ ಜೊತೆಗಾರನ ಸಂಗಡ ಶಶಿಯನ್ನು ಇಲ್ಲಿ ಕರಕೊಂಡು ಬಂದದ್ದು. ಇನ್ನೂ ಅವರಿಬ್ಬರ ಮುಖದ ಮೇಲೆ ಗಾಬರಿ ಹೋಗಿರಲಿಲ್ಲ. ನಾನು ಅವರಿಗೆ ಥ್ಯಾಂಕ್ಸ್ ಹೇಳಿ ಟ್ಯಾಕ್ಸಿ ಚಾರ್ಜು ಕೊಡಲು ಹೋದೆ. ಅವರು ಅದನ್ನು ಒಪ್ಪಲಿಲ್ಲ. “ನಾವು ಬೆಳಿಗ್ಗೆ ಎದ್ದ ಘಳಿಗೆ ಚೆನ್ನಾಗಿತ್ತು ಸಾರ್. ಪೂರ್ತಿ ಇವರು ಸಿಕ್ಕಿಹಾಕಿಕೊಂಡುಬಿಡಬೇಕಾಗಿತ್ತು, ಏನೋ ಅದು ತಪ್ಪಿತು. ನಮ್ಮ ತಪ್ಪೇನೂ ಇಲ್ಲದೆ ಕೋರ್ಟು ಕಚೇರಿ ಅಂತ ಅಲೀಬೇಕಾಗಿತ್ತು, ಇಲ್ಲದಿದ್ದರೆ. ಇವರಿಗೆ ತಾನೇ ಏನೇನಾಗ್ತಿತ್ತೊ; ದೇವರು ದೊಡ್ಡೋನು" ಅಂದರು. “ಇನ್ನು ಮೇಲೆ ಸೈಕಲ್ ತುಳೀಬೇಡೀಂತ ಹೇಳಿ ಸಾರ್, ಕಾಯಿಲೆ ಇರೋರು ಹೀಗೆ ಒಂಟಿಯಾಗಿ ಸೈಕಲ್ ಮೇಲೆ ಬರಬಾರ್ದು" ಅಂದರು. ನನಗೆ ಅವಮಾನವಾಯ್ತು. ನನಗೆ ಮಾನ ತರಲ್ಲ ಇವನು ಅನ್ನಿಸಿ ಶಶಿಯ ಮೇಲೆ ಕೋಪ ಬಂತು.
ಅವರನ್ನು ಕಳಿಸಿಕೊಟ್ಟಮೇಲೆ ಶಶಿಯನ್ನ ಚೆನ್ನಾಗಿ ಬೈದೆ. ಮೊದಲೇ ಗಾಯದ ನೋವಿನಿಂದ ನರಳುತ್ತಿದ್ದ ಅವನಿಗೆ ನನ್ನ ಚುಚ್ಚು ಮಾತುಗಳು ಹೆಚ್ಚು ನೋವುಂಟು ಮಾಡಿರಬೇಕು. “ಕಾರಿಗೆ ಪೂರ್ತಿ ಸಿಕ್ಕಿ ನಾನು ಸತ್ತೇ ಹೋಗಿದ್ದಿದ್ದರೆ ಚೆನ್ನಾಗಿತ್ತು" ಎಂದುಕೊಂಡದ್ದು ಕೇಳಿ ನನ್ನ ಕೋಪವೆಲ್ಲ ಜರ್ರನೆ ಇಳಿದುಹೋಗಿತ್ತು. ಆದರೆ ಸೈಕಲ್ ಇನ್ನು ಮೇಲೆ ತುಳಿಯಬಾರದೆಂದು ಅವನಿಗೆ ಕಟ್ಟಪ್ಪಣೆ ಮಾಡಿದ್ದೆ. ನುಗ್ಗಾಗಿದ್ದ ಸೈಕಲನ್ನು ರಿಪೇರಿ ಮಾಡಿಸಿದರೆ ತಾನೇ ಇವನು ತುಳಿಯೋದು ಎಂದು ಅದನ್ನು ಹಾಗೆಯೇ ಅಟ್ಟದ ಮೇಲೆ ಎಸೆದಿದ್ದೆ.
ಏನಾದರೂ ಇಂಥದ್ದು ಆಗಿಹೋಗಿದೆಯೇ? ಎಲ್ಲಿ ಹೋದ ಅವನು. ಅವನು ಒಬ್ಬನೇ ತನ್ನನ್ನು ನಿಭಾಯಿಸಿಕೊಳ್ಳಬಲ್ಲನೆ. ಏನಾದ್ರೂ ಅಣ್ಣ ಅಂತ ವಾಪಸು ಬಂದಿದ್ದರಾಗುತ್ತಿತ್ತಲ್ಲ. ಇನ್ನೆಲ್ಲಾದರೂ ಆಕ್ಸಿಡೆಂಟೋ ಗೀಕ್ಸಿಡೆಂಟೋ ಆಗಿ ಕೈಕಾಲು ಮುರಿದುಕೊಂಡರೇನು ಗತಿ? ಡ್ರಾಪ್ಟ್ಸ್ಮನ್ಗೆ ಕೈತಾನೇ ಮುಖ್ಯ. ಡ್ರಾಯಿಂಗ್ ಮಾಡಬೇಕಲ್ಲ. ಅದೇ ಊನವಾದರೆ ಇವನಿಗೆ ಕೆಲಸ ಉಳಿಯುವುದು ಹೇಗೆ? ಸಂಪಾದನೆ ಮಾಡಿದರೇ ಗತಿ, ಇನ್ನು ಸಂಪಾದನೆಯಿಲ್ಲದೆ ಯಾವಾಗಲೂ ಮನೇಲೇ ಬಿದ್ದಿರೋ ಹಾಗೆ ಆದರೆ ಗತಿಯೇನು? ನನ್ನ ಹಿಂದಿನ ಜನ್ಮಗಳ ಕರ್ಮ ಇವನಿಂದ ಹೀಗೆಲ್ಲ ಮಾಡಿಸುತ್ತದೆಯೇ?
ನಾಳೆ ರಜ ಹಾಕಿ ಅವನು ಎಲ್ಲೆಲ್ಲಿ ಹೋಗ್ತಿದ್ದನೋ ಎಲ್ಲ ಕಡೆ ಹುಡುಕಿ ಕೊಂಡು ಬರಬೇಕು. ಅವನು ಸಲ ಮನೆಗೆ ಬಂದರೆ ಸಾಕು. ಹೀಗೆ ಇನ್ನು ನಡೆಯದ ಹಾಗೆ ನೋಡಿಕೊಳ್ಳುತ್ತೇನೆ. ಅವನನ್ನ ಏನೂ ಅನ್ನ ಬೇಡಾಂತ ರಮಂಗೆ ಚೆನ್ನಾಗಿ ಹೇಳಬೇಕು. ಅವನ ಪರಿಸ್ಥಿತಿ ತಿಳಿದರೂ ಇವಳು ಕ್ಯಾತೆ ಯಾಕೆ ತೆಗೀಬೇಕು. ಒಟ್ಟಲ್ಲಿ ನನ್ನ ಕರ್ಮ.
ಎಲ್ಲೀಂತ ಅವನನ್ನ ಹುಡುಕೋದು? ಅವನೇನಾದರೂ ತಾನೇ ಮಾಡಿಕೊಂಡಿರಬಹುದೇ? ಆದರೆ ಹಾಗೆ ಮಾಡಿಕೊಳ್ಳುವಂತಹದ್ದು ಏನಾಗಿದೆ ಈಗ ಅಂತ? ನಾನೇನೋ ಅವರಿಬ್ಬರ ಜಗಳ ನೋಡಲಾರದೆ ಅವನಿಗೊಂದೆರಡು ಏಟು ಕೊಟ್ಟಿದ್ದು ನಿಜ. ಆದರೆ ಅಷ್ಟಕ್ಕೇ ಅವನು ಏನಾದರೂ ಮಾಡಿಕೊಳ್ಳು ತ್ತಾನೆಯೇ? ಆದರೆ ಅಂತಹ ಕೆಲಸ ಮಾಡಿಕೊಳ್ಳೋದಕ್ಕೆ ಕಾರಣ ಯಾಕೆ ಬೇಕು. ಅಸಮಾಧಾನ ಆದರೆ ಸಾಕಾಗಲ್ಲವೇ? ಅವನು ಹೊರಟಾಗ ಅವನು ಹೀಗೆಲ್ಲ ಮಾಡಿಕೊಳ್ಳಬಹುದು ಅಂತ ಅನ್ನಿಸುವಂತೆ ಕಾಣಿಸುತ್ತಿರಲಿಲ್ಲವಲ್ಲ! ಛೇ, ನನ್ನ ಬಗ್ಗೆ ಶಶಿಗೆ ತುಂಬ ಅಭಿಮಾನ, ಗೌರವ. ನಾನು ಹಿಂದೆಯೂ ಒಂದೆರಡು ಬಾರಿ ಏಟು ಕೊಟ್ಟಿರಲಿಲ್ಲವೆ? ಏಟುಕೊಟ್ಟಿದ್ದು ಅವನಿಗೆ ನೋವುಂಟು ಮಾಡಬೇಕೂಂತೇನೂ ಅಲ್ಲ. ನನ್ನ ಕೋಪ ಇನ್ನು ಹೇಗೆ ಪ್ರಕಟವಾಗೋದು? ಕೋಪಕ್ಕಿಂತ ನನ್ನ ಅಸಹಾಯಕತೆ; ರಮ - ಅವನು ಜಗಳವಾಡಿದರೆ ಇನ್ನೇನು ಮಾಡಲಿ? ರಮಂಗೆ ಹೊಡೆಯೋಕೆ ಸಾಧ್ಯವೇ? ಎಷ್ಟಾದರೂ ನಾನು ಅಣ್ಣ, ಶಶಿ ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಂಡಿರಲಾರ. ಯಾವುದಾದರೂ ಊರಿಗೆ ಹೋಗಿರ ಬಹುದು. ಆದರೆ ಹೋಗುವಾಗ ಮಾತ್ರೆ ತಗೊಂಡಿರಲಿಲ್ಲ. ಅವನಿಗೇನು ಗೊತ್ತಿಲ್ಲವೇ? ಯಾವುದಾದರೂ ಔಷಧಿ ಅಂಗಡಿಗೆ ಹೋಗಿ ತೆಗೆದುಕೊಂಡಿರುತ್ತಾನೆ. ನಾಳೆ ಹುಡುಕಿಯೂ ಸಿಕ್ಕದಿದ್ದರೆ, ಅವನು ಬರದಿದ್ದರೆ ಏನು ಮಾಡುವುದು? ಪೋಲೀಸ್ ಕಂಪ್ಲೇಂಟ್ ಕೊಡುವುದೊಂದೇ ಬಾಕಿ. ಯಾಕೋ ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿದೆಯಲ್ಲ, ಏನೂ ಆಗದೆ ಇರಲಿ, ಅವನು ನಾಳೆ ಬಂದುಬಿಡಲಿ, ದೇವರೇ ಏನೂ ಆಗಿರದೆ ಇರಲಿ.
- - -
ಶಶಿ ಮನೆಬಿಟ್ಟ ಹಿಂದಿನ ದಿನ ನಮ್ಮ ಪೃಥ್ವೀಶನ ಹುಟ್ಟುಹಬ್ಬ. ಹುಟ್ಟು ಹಬ್ಬ ಅಂದರೆ ಅವತ್ತಿನ ದಿನ ಅವನು ಹುಟ್ಟಿದ್ದಲ್ಲ. ನ್ಯಾಯವಾಗಿ ನೋಡಿದರೆ ತಿಂಗಳ ಹಿಂದೆಯೇ ಅದನ್ನು ಮಾಡಬೇಕಾಗಿತ್ತು. ಆದರೆ ರಮಳದು ಎಷ್ಟಾದರೂ ಹೆಂಗಸರಿಗೆ ಸಹಜವಾದ ಸಂಪ್ರದಾಯದ ಬುದ್ಧಿ. ಅದೇನೋ ಹೆಚ್ಚಿಸಿ ಮಾಡುವುದಂತೆ. ಹುಟ್ಟಿದ ದಿನಕ್ಕೆ ಸರಿಯಾದ ದಿನವೇ ಹುಟ್ಟುಹಬ್ಬ ಮಾಡದೆ ಒಂದಷ್ಟು ದಿನ ತಡವಾಗಿ ಮಾಡಿದರೆ ಆಯುಸ್ಸು ಹೆಚ್ಚುತ್ತದೆಂದು ಅವಳ ನಂಬಿಕೆ. ಅದನ್ನು ನಾನು ತಮಾಷೆ ಮಾಡಿದ್ದೆ: ಹಾಗಾದರೆ ಒಂದು ವರ್ಷವೇ ಹೆಚ್ಚಿಸಿ ಮಾಡಿದರೆ ಅವನ ಆಯುಸ್ಸು ಇನ್ನೂ ಹೆಚ್ಚುತ್ತೆ, ಖರ್ಚೂ ಉಳಿತಾಯವಾಗುತ್ತೆ ಎಂದು. ಮಾತಿಗೆ ಅವಳು ಕಿಡಿಕಾರಿದ್ದಳು. “ನೀವೇನು ತಿಳಿದೇ ಮಾತಾಡ್ತೀರೋ ಅಥವಾ ತಿಳಿಯದೇ ಮಾತಾಡ್ತೀರೋ ಏನು ಮಾತಾಡಿದರೆ ಏನಾಗುತ್ತೆ ಅಂತ ಗೊತ್ತಾಗೊಲ್ಲವಾ?" ಅಂದಿದ್ದಳು. ನನ್ನ ಮಾತಿನಲ್ಲಿದ್ದದ್ದು ಕೇವಲ ಹಾಸ್ಯ, ಅದರಿಂದ ಇನ್ನಾವುದೋ ಅಗಾಧ ಪರಿಣಾಮವಾಗುತ್ತದೆಂದು ನನಗೆ ಅರ್ಥವೇ ಆಗಿರಲಿಲ್ಲ.
ಅವತ್ತು ಸಾಯಂಕಾಲ ಪೃಥ್ವಿಗೆ ಆರತಿ ಇಟ್ಟುಕೊಂಡಿದ್ದಳು. ನಮ್ಮ ನೆರೆಹೊರೆಯ ಮನೆಯವರನ್ನಲ್ಲದೆ ನನ್ನ ಸ್ನೇಹಿತೆಯರನ್ನೂ ಸಾಯಂಕಾಲ ಫಲಾಹಾರಕ್ಕೆ ಕರೆದಿದ್ದಳು; ಅವಳ ಸೂಚನೆಯಂತೆ ನಾನೂ ನನ್ನ ಸ್ನೇಹಿತರನ್ನು ಆಹ್ವಾನಿಸಿದ್ದೆ. ಪೃಥ್ವಿಗೆ ಸಡಗರ, ತನಗೆ ಹುಟ್ಟಿದ ಹಬ್ಬವೆಂದು ಹೆಮ್ಮೆಯಿಂದ ಬೀಗುತ್ತ ಓಡಾಡುತ್ತಿದ್ದ, ಅವನ ಅಕ್ಕ ಸುಷ್ಮಾ ಕೂಡ ಹೊಸಬಟ್ಟೆ ತೆಗೆದುಕೊಂಡಿದ್ದಳು. ನನಗೆ ಒಂಥರಾ ವೈಭವದ ವಾತಾವರಣವೆಂದರೆ ಅಷ್ಟಕ್ಕಷ್ಟೆ; ರಮಾ ಕೇಳಿದಷ್ಟು ದುಡ್ಡು ಕೊಟ್ಟರೆ ತೀರಿತು, ಮಿಕ್ಕಾವುದರಲ್ಲೂ ನಾನು ಹೆಚ್ಚು ಆಸಕ್ತಿ ವಹಿಸುವಂಥವನಲ್ಲ.
ಆದರೆ ಶಶಿ ಇಂಥ ಸಂದರ್ಭಗಳಲ್ಲಿ ತುಂಬ ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿದ್ದ. ಎಲ್ಲ ಹಬ್ಬ ಹರಿದಿನಗಳಲ್ಲೂ ಅವನದೇ ಅಲಂಕಾರದ ಕೆಲಸ. ಮನೆಯ ಮುಂದೆ ತೋರಣ ಕಟ್ಟುವುದರಿಂದ ಹಿಡಿದು, ದೀಪಾಲಂಕಾರದವರೆಗೆ ಅವನದೇ ಉಸ್ತುವಾರಿ. ಆದ್ದರಿಂದಲೇ ಮಕ್ಕಳಿಗೆ ಅವನನ್ನು ಕಂಡರೆ ತುಂಬ ಅಕ್ಕರೆ. ಗಣೇಶನ ಹಬ್ಬ ಬಂದರೆ ಮಂಟಪ ಮಾಡಿ ಅದಕ್ಕೆ ಸೀರಿಯಲ್ ಲೈಟು ಹಾಕಿ, ಬಣ್ಣದ ಕಾಗದದಿಂದ ವಿವಿಧಾಕಾರದ ಬಂಟಿಂಗುಗಳನ್ನು ಕತ್ತರಿಸಿ ಅಲಂಕಾರ ಮಾಡುತ್ತಿದ್ದರೆ ಮಕ್ಕಳಿಬ್ಬರೂ ಬೆರಗುಗಣ್ಣುಗಳಿಂದ ಅವನ ಕತ್ತರಿಸುವ ಕೈಗಳನ್ನೇ ನೋಡುತ್ತ ಕೂರುತ್ತಿದ್ದರು. ಇವನೂ ಗೋಂದು ತಗೊಂಬಾ, ದಾರ ಕಟ್ಟು. ಇಲ್ಲಿ ಹಿಡಿದುಕೋ ಅಂತೆಲ್ಲ ಹೇಳುತ್ತ ಹುಡುಗರನ್ನೂ ತನ್ನ ಕೆಲಸ ಕಾರ್ಯದ ಜೊತೆ ಸೇರಿಸಿಕೊಳ್ಳುತ್ತಾ ಕೆಲಸ ಮಾಡುತ್ತಿದ್ದುದರಿಂದಲೇ ಮಕ್ಕಳು ಪ್ರತಿಯೊಂದಕ್ಕೂ ಶಶಿಯನ್ನೇ ಕೇಳುತ್ತಿದ್ದುವು. ಪೆನ್ಸಿಲ್ ಒರೆದುಕೊಡಲೂ ಶಶಿಯೇ ಬೇಕು; ಜೊತೆಗೆ ಊಟಕ್ಕೆ ಕೂತುಕೊಳ್ಳಲೂ ಅವನೇ ಆಗಬೇಕು. ಎಲ್ಲಾದರೂ ಹೋಗ ಬೇಕಾದರೆ ಜೊತೆಗಿರಬೇಕು.
ರಮಳಿಗೆ ಮಕ್ಕಳನ್ನು ಶಶಿಯ ಉಸ್ತುವಾರಿಯಲ್ಲಿ ಬಿಡುವುದಕ್ಕೆ ಹಿಂಜರಿಕೆ. ಸುಷ್ಮಾ ಹುಟ್ಟಿದ ಹೊಸತರಲ್ಲಂತೂ ಅವಳನ್ನು ಶಶಿ ಎತ್ತಿಕೊಳ್ಳಲು ಯಾವಾಗಲೂ ಮುಂದಾಗುತ್ತಿದ್ದ. ಆದರೆ ಅವನು ಎತ್ತಿಕೊಂಡು ಹೊರಟರೆ ರಮಾ ಬೇಡವೆನ್ನುತ್ತಿದ್ದಳು. ಶಶಿಯ ಮುಖ ಆಗೆಲ್ಲ ಪೆಚ್ಚಾಗುತ್ತಿತ್ತು. ಇಂಥ ಸಂದರ್ಭಗಳಲ್ಲಿ ನಾನು ಹೇಗೆ ಮಧ್ಯೆ ಹೋಗುವುದು? ಇಬ್ಬರೇ ಇದ್ದಾಗ ಬಗ್ಗೆ ರಮಳನ್ನು ಕೇಳಿದ್ದೆ. “ದಾರಿಯಲ್ಲಿ ಒಬ್ಬನೇ ಮಗುವನ್ನೆತ್ತಿಕೊಂಡು ಹೋಗುವಾಗ ಅವನಿಗೆ ಅಟ್ಯಾಕ್ ಗಿಟ್ಯಾಕ್ ಬಂದರೇನು ಗತಿ' ಎನ್ನುತ್ತಿದ್ದಳು. ಇದನ್ನು ಕೇಳಿದ ಮೇಲೆಯೂ ಅವಳು ಮಾಡಿದ್ದು ಸರಿಯಲ್ಲ ಎಂದು ಹೇಗೆ ಹೇಳುವುದು? ಅವಳು ಹೇಳುವುದರಲ್ಲಿ ತಪ್ಪಾವುದೂ ಕಾಣುತ್ತಿರಲಿಲ್ಲ. ಆದರೆ ನನ್ನ ತಮ್ಮನಿಗೆ ಅಷ್ಟೂ ಸ್ವಾತಂತ್ರ್ಯವಿಲ್ಲವೇ ಎಂದು ಅವಳ ಬಗ್ಗೆ ಕೋಪವೂ ಬರುತ್ತಿತ್ತು.
ಜೊತೆಯಲ್ಲಿ ಊಟಕ್ಕೆ ಕೂತರಂತೂ ಕೆಲವು ವೇಳೆ ಪರಿಸ್ಥಿತಿ ಬಿಗಡಾಯಿಸಿಬಿಡುತ್ತಿತ್ತು. ಮಕ್ಕಳೋ ಅವನ ಪಕ್ಕದಲ್ಲಿಯೇ ಊಟಕ್ಕೆ ಕೂತು ಕೊಳ್ಳಬೇಕೆಂದುಹಟಮಾಡುತ್ತಿದ್ದವು. ರಮ ಅದೆಷ್ಟೋ ಬಾರಿ ಮಕ್ಕಳನ್ನು ಅವನಿಂದ ದೂರ ಕೂಡಿಸಬೇಕೆಂದು ತಟ್ಟೆಯನ್ನು ಹಾಕುವ ವ್ಯವಸ್ಥೆ ಮಾಡುತ್ತಿದ್ದಳು. ಆದರೆ ಅವು ತಮ್ಮ ತಟ್ಟೆಯನ್ನೆತ್ತಿಕೊಂಡು ಅವನ ಪಕ್ಕದಲ್ಲಿಯೇ ಕೂರುತ್ತಿದ್ದವು, ಅನ್ನುವ ಹಾಗಿಲ್ಲ ಅನುಭವಿಸುವ ಹಾಗಿಲ್ಲ ಎಂಬ ಪರಿಸ್ಥಿತಿ ರಮಳದು. ಪಕ್ಕದಲ್ಲಿ ಕೂತರೇನು ಇವರಪ್ಪನ ಮನೆ ಗಂಟುಹೋಗೋದು ಎಂದು ನಾನೂ ಕೆಲವು ವೇಳೆ ಅಸಮಾಧಾನಗೊಂಡಿದ್ದೆ, ಆದರೆ ಶಶಿ ಸುಮ್ಮನೆ ಊಟ ಮಾಡುವ ಸ್ವಭಾವದವನಲ್ಲ. ಹುಡುಗರನ್ನು ಚೇಷ್ಟೆ ಮಾಡುತ್ತಿದ್ದ. ಅವರ ಗಮನ ಬೇರೆಡೆ ಸೆಳೆದು ಅವರ ತಟ್ಟೆಯಲ್ಲಿದ್ದ ಹೋಳುಗಳನ್ನು ಮಾಯ ಮಾಡುವುದು, ತಟ್ಟೆ ಬೇರೆಡೆ ಹೋಗಿ ಬಿಡುವಂತೆ ಮಾಡುವುದು ಇತ್ಯಾದಿ ಚೇಷ್ಟೆಗಳಿಂದ ಹುಡುಗರನ್ನು ರಂಜಿಸುತ್ತಿದ್ದ. ಹುಡುಗರೂ ಅವನ ತಾಳಕ್ಕೆ ಕುಣಿಯುತ್ತಿದ್ದವು, ಅವನ ತಟ್ಟೆಯಲ್ಲಿದ್ದುದನ್ನು ತೆಗೆದುಕೊಂಡು ತಿಂದು ಬಿಡುತ್ತಿದ್ದುವು, ಇದನ್ನು ಕಂಡು ನನಗೇ ಎಷ್ಟೋ ವೇಳೆ ತಳಮಳವಾಗುತ್ತಿತ್ತು. ಎಪಿಲೆಪ್ಸಿಯೇನೂ ಅಂಟುರೋಗವಲ್ಲ ಎಂಬುದು ನನಗೆ ಗೊತ್ತು. ಶಶಿಯ ಸ್ಥಿತಿಯಿಂದ ಯೋಚನೆಗೀಡಾದ ನಾನು ಆರೋಗ್ಯದ ಬಗ್ಗೆ ಕೆಲವು ಗ್ರಂಥಗಳನ್ನು ಓದಿಕೊಂಡಿದ್ದೆ; ಡಾಕ್ಟರುಗಳಲ್ಲಿ ಅದರ ವಿಚಾರ ಚರ್ಚೆಮಾಡಿ ಕೆಲವು ಅಂಶಗಳನ್ನು ಗ್ರಹಿಸಿದ್ದೆ. ಆದರೆ ನನ್ನ ಮಕ್ಕಳು ಅವನ ಎಂಜಲು ತಿಂದರೆ ನನಗೆ ಏನೇನೋ ನೆನಪಿಗೆ ಬಂದು ಬಿಡುತ್ತಿದ್ದವು. ರಮಳಂತೂ ಹುಡುಗರು ಆದಷ್ಟೂ ಅವನಿಂದ ದೂರವಿರುವಂತೆಯೇ ನೋಡಿಕೊಂಡಿರುತ್ತಿದ್ದಳು. ಅವನ ಜೊತೆಗಿದ್ದರೂ ಅವನಿಗೆ ಅಂಟಿಕೊಂಡು ಕೂತುಕೊಳ್ಳದ ಹಾಗೆ, ಅವನು ಅವುಗಳಿಗೆ ಮುತ್ತುಕೊಡದ ಹಾಗೆ ಎಚ್ಚರವಹಿಸಿ ಅಂಥ ಪ್ರಸಂಗಗಳನ್ನು ನಿವಾರಿಸುತ್ತಿದ್ದಳು. ಇನ್ನು ಎಂಜಲು ತಿಂದರೆ ಸುಮ್ಮನೆ ಬಿಡುತ್ತಾಳೆಯೇ? ಮಕ್ಕಳನ್ನು ಗದರಿಕೊಳ್ಳುವಳು. ನಾನೂ ಹಲವಾರು ಬಾರಿ ಮಕ್ಕಳನ್ನು ಗದರಿಸಿದ್ದೆ, ಅವನಿಗೇ ನೇರವಾಗಿ ಹೇಗೆ ಹೇಳುವುದು ಎಂಬ ಸಂಕೋಚ ನನಗೆ. ರಮ ಕೆಲವು ವೇಳೆ ನೇರವಾಗಿ ಅಂದುಬಿಡುತ್ತಿದ್ದಳು. ಮಾತು ಕೇಳಿಸಿಕೊಂಡು ಶಶಿಯ ಮುಖ ನೋಡಿದಾಗ ನನಗೆ ದುಃಖ ಉಮ್ಮಳಿಸುವಂತಾಗುತ್ತಿತ್ತು, ಇವನಿಗ್ಯಾಕೆ ರೋಗ ಅಂಟಿಕೊಂಡಿತು. ಇದರಿಂದ ಅವನಿಗೂ ಬಿಡುಗಡೆಯಿಲ್ಲ ಎನಿಸಿ, ಅದರ ಬೆನ್ನ ಹಿಂದೆಯೇ ಇವನಿಂದ ನಮಗೂ ಬಿಡುಗಡೆಯಿಲ್ಲವೇ ಎಂಬ ಆಲೋಚನೆ ಮೂಡುತ್ತಿತ್ತು, ಆದರೆ ಅವನಿರದಿದ್ದರೆ ಮಕ್ಕಳ ನಗು ಕಡಿಮೆಯೇ.
ಆವತ್ತೂ ಹಾಗೆಯೇ. ಪೃಥ್ವಿಯ ಅಲಂಕಾರವನ್ನೆಲ್ಲ ಶಶಿಯೇ ಮಾಡಿದ್ದ, ರಮಾ ನೋಡಿಕೊಂಡೇ ಇದ್ದಳು. ಹಾಲಿನ ಮೂಲೆ ಮೂಲೆಗಳಿಗೆ ಬಂಟಿಂಗುಗಳನ್ನು ಅಂಟಿಸಿದ್ದ. ಒಂದಷ್ಟು ಬಣ್ಣಬಣ್ಣದ ಬಲೂನುಗಳನ್ನು ಊದಿ ಕಟ್ಟಿದ್ದ. ಒಂದು ಬರ್ತ್ಡೇ ಕೇಕನ್ನು ತಂದು ಪೃಥ್ವಿಯಿಂದ ಕತ್ತರಿಸಬೇಕೆಂಬ ಆಲೋಚನೆಯಿಂದ ಕಾರ್ಯಸನ್ನದ್ಧನಾಗಿದ್ದ. ಬಂದವರನ್ನು ತನ್ನ ಮಾತುಗಳಿಂದ ಜೋರಾಗಿ ನಗಿಸಿ ಮೆಚ್ಚುಗೆ ಸಂಪಾದಿಸುತ್ತಿದ್ದ. ಅವನು ಏನೋ ಒಂದು ಕೊಂಗ ಮಾತನ್ನಾಡಿ ಜನರನ್ನು ತಮಾಷೆ ಮಾಡುವುದರಲ್ಲಿ ನಿಸ್ಸೀಮ. ಅವನ ಜೋಕುಗಳು ಎಳಸು ಅನ್ನಿಸುತ್ತಿದ್ದವು ನನಗೂ ಕೂಡ. ಬಂದವರ ಹತ್ತಿರ, ದೊಡ್ಡವರ ಹತ್ತಿರ ಕೂಡ, ಹೀಗೆ ಮಾತಾಡುತ್ತಾನಲ್ಲ ಎಂದು ಹಲವು ಬಾರಿ ನನಗೆ ಮುಜುಗರವಾಗುತ್ತಿತ್ತು. ರಮ ಸಿಡಿಮಿಡಿಗುಟ್ಟುತ್ತಿದ್ದಳು.
ಅವನ ಮಾತು ಎಂದರೆ ಕೊನೆಯಿಲ್ಲದ ಪ್ರವಾಹ. ಬೇರೆಯೋರು ಏನಾದರೂ ಒಂದು ಮಾತಾಡಿದರೆ ಅದಕ್ಕೇನೋ ಒಂದು ಮಾರುತ್ತರ ಕೊಡುತ್ತಿದ್ದ. ಅದಕ್ಕೆ ಕೊನೆಯೇ ಇರುತ್ತಿರಲಿಲ್ಲ. ಅವನ ಮಾತಲ್ಲಿ ಏನು ತಪ್ಪು ಎಂದು ವಿವರಿಸಿ ಹೇಳುವುದಕ್ಕಾಗದು. ಆದರೆ ಮಾತು ನಮ್ಮೆಲ್ಲರ ಮಾತುಗಳಂತೆ ಇಲ್ಲ ಎನಿಸುತ್ತಿದ್ದವು, ನನಗಿಂತ ಹಿರಿಯರಾದ ನನ್ನ ಕಲೀಗ್ ಒಬ್ಬರು ಬಂದರು. ಅವರದು ಸ್ವಲ್ಪ ಸ್ಥೂಲ ದೇಹ, ಹೊಟ್ಟೆ ದಪ್ಪ. ಯಾವಾಗಲೂ ಷರ್ಟನ್ನು ಒಳಗೆ ಸೇರಿಸಿ ಪ್ಯಾಂಟಿನ ಮೇಲೆ ಬೆಲ್ಟ್ ಕಟ್ಟುತ್ತಿದ್ದರು. ಮೊದಲಿಂದ ಅವರು ಶಶಿಯನ್ನು ಕಂಡಿದ್ದವರೇ. ಅವರು ಬಂದಾಗ ಇವನುಏನ್ಸಾರ್ ಚೆನ್ನಾಗಿದ್ದೀರಾ?" ಎಂದ.
ನೋಡಪ್ಪ, ಇಷ್ಟರಮಟ್ಟಿಗೆ."
ಇಷ್ಟರ ಮಟ್ಟಿಗೆ ಏನು ಬಂತು ಸಾರ್, ಚೆನ್ನಾಗೇ ಇದ್ದೀರ."
ಹೌದು ಕಣಯ್ಯ, ಚೆನ್ನಾಗೇ ಇದ್ದೀನಿ."
ಮತ್ತೆ, ಇಷ್ಟರಮಟ್ಟಿಗೆ ಅಂತ ಅಂದಿರಲ್ಲ ಸಾರ್."
ಚೆನ್ನಾಗಿದ್ದೀರಾ ಅಂತ ಯಾರಾದರೂ ಕೇಳಿದಾಗ ಹಾಗೇ ಅಲ್ಲವೇನಯ್ಯಾ ಎಲ್ಲರೂ ಉತ್ತರ ಕೊಡೋದು."
ಆದರೆ ನೀವು ಎಲ್ಲರೂ ಅಲ್ಲವಲ್ಲ."
ಎಲ್ಲರೂ ಮಾತಾಡಿದ ಹಾಗೇ ತಾನೇ ನಾವೂ ಮಾತಾಡೋದು?"
ಹಾಗಾದರೆ ಎಲ್ಲರೂ ಊಟಮಾಡಿದ ಹಾಗೆ ನೀವೂ ಊಟ ಮಾಡ್ತೀರಾ ಸಾರ್?"
ಹೌದು ಮತ್ತೆ."
ಹಾಗಾದರೆ ಎಲ್ಲರ ತರಹ ನೀವಿಲ್ಲವಲ್ಲ ಸಾರ್" ಎಂದ. ಅವರ ಮುಖ ಒಂಥರವಾಯಿತು. ಮುಂದೆ ಮಾತಾಡದೆ ಸುಮ್ಮನಾದರು. ನನಗೆ ಸಿಟ್ಟುಬಂತು. “ಲೋ ಹೋಗಿ ಒಳಗಡೆ ಏನಾದರೂ ಕೆಲಸ ಇದೆಯಾ ನೋಡು" ಎಂದೆಒಳಗಡೆಯೇನಿದೆ, ನನ್ನ ಕೆಲಸವೆಲ್ಲ ಹೊರಗಡೇನೇ. ಒಳಗಡೆ ಕೆಲಸ ನಿನ್ನ ಶ್ರೀಮತೀದು" ಎಂದು ಹೇಳಿದ. ಅವನಿನ್ನೂ ತಾನು ತಮಾಷೆಯಾಗೇ ಮಾತಾಡ್ತಿದ್ದೀನಿ ಅಂದುಕೊಂಡಿದ್ದನೇನೋ. ನಾನು ಜೋರಾಗಿ ಕೂಗಿ ಅವನನ್ನು ಬೇರೆಡೆ ಕಳಿಸಿದ್ದೆ. ಆಮೇಲೆದಯವಿಟ್ಟು ಬೇಜಾರು ಮಾಡಿಕೋಬೇಡಿ ಸಾರ್" ಎಂದು ಅವರನ್ನು ಕ್ಷಮೆ ಯಾಚಿಸಿದ್ದೆ. “ಬಿಡಿ ಪಾಪ, ಕಾಯಿಲೆ ಹುಡುಗ" ಅಂದಿದ್ದರು.
ಕಾಯಿಲೆಯಿಂದ ಹೀಗೆ ಪರಿಣಾಮ ಮಾತಿನ ಮೇಲೂ ಆಗುತ್ತದೆಯೇ? ಅವನ ಮಾತಿನಲ್ಲಿಯೂ ಒಂದು ರೀತಿಯ ವಿಚಿತ್ರ ತರ್ಕವಿರುತ್ತಿತ್ತು. ಒಂದು ಹೇಳಿದರೆ ಅದಕ್ಕೆ ಸಂಬಂಧಿಸದೇ ಇರುವ ಇನ್ನೇನನ್ನೋ ಅವನು ಹೇಳುವುದಿಲ್ಲ. ಆದರೆ ತಾರ್ಕಿಕತೆ ನಾವು ಮಾಡುವ ತರ್ಕ ಸರಣಿಯಂತೆ ಇರುತ್ತಿರಲಿಲ್ಲ. ಅದರಲ್ಲೇನು ವಿಚಿತ್ರ ಎಂದು ಬೊಟ್ಟು ಮಾಡಿ ತೋರಿಸುವುದೂ ಸಾಧ್ಯವಿರಲಿಲ್ಲ. ಹಾಸ್ಯದ ಮಾತಾದರೂ ಅದರ ತರ್ಕರೀತಿಯಾಕೆ ಮಾತಾಡಬಾರದೋ, ನಾನೇನು ಮಾಡಿದೆ?" ಎನ್ನುತ್ತಿದ್ದ. ಅವನು ಮಾಡಿದ್ದೇನು ಎಂದು ನಾನು ಹೇಳಲಾರದವನಾಗಿದ್ದೆ.
ಬಂದವರನ್ನೆಲ್ಲಾ ಅವನೇ ಸ್ವಾಗತಿಸಬೇಕು. ಅವನು ಕಾಣಿಸದಿದ್ದರೆ ಅವನ ಪರಿಚಯವಿದ್ದವರೆಲ್ಲಎಲ್ಲಿ ಶಶಿ?' ಎಂದು ಕೇಳುತ್ತಿದ್ದರು. ಅವನನ್ನು ಕಂಡರೆ ಹಾಗಾದರೆ ಇತರರಿಗೆ ಇಷ್ಟವೇ ಅನ್ನಿಸುತ್ತಿತ್ತು. ಅವನ ಮಾತಿನ ಜಾಲಕ್ಕೆ ಸಿಲುಕಿ ಹಾಕಿಕೊಂಡವರೂಅಯ್ಯೋ ಪಾಪ, ಕಾಯಿಲೆ ಹುಡುಗ' ಎಂದು ಲೊಚಗುಟ್ಟಿ ಅವನನ್ನು ಪಾಪದ ಜ್ವಾಲೆಯಲ್ಲಿ ನರಳಿಸುತ್ತಿದ್ದರು. ಅವನ ಜೊತೆಯೇ ಜೀವನವಿಡೀ ಇರಬೇಕಾದ ಪ್ರಸಂಗ ಬಂದರೆ ಇವರೆಲ್ಲ ಇಷ್ಟೇ ಸಹಾನುಭೂತಿ ಯಿಂದ ಇರುತ್ತಿದ್ದರೇ ಎಂದು ನನಗನ್ನಿಸುತ್ತಿತ್ತು. ಅವನನ್ನು ಬೈದರೆ, ನನ್ನದೇ ತಪ್ಪು ಎಂಬಂತೆ ಅವನ ಕಡೆ ವಹಿಸಿಕೊಳ್ಳುವವರನ್ನು ಕಂಡರೆ ನನಗೆ ಸಿಟ್ಟೂ ಬರುತ್ತಿತ್ತು, ಇವರಿಗೆಲ್ಲ ಕಷ್ಟಗೊತ್ತಿಲ್ಲ. ಅರ್ಧ ಗಂಟೆ ಅವನನ್ನು ಕಾಣುವವರು; ನಾನು ಸಾಯುವವರೆಗೂ ಅವನೊಡನೆ ಏಗಬೇಕಲ್ಲ, ಇವರಿಗೇನು ಗೊತ್ತು ಕಷ್ಟ ಎಂದು ಅಸಹನೆಯಿಂದ ಕುದಿಯುತ್ತಿದ್ದೆ.
ನಮ್ಮ ಮನೆಯಲ್ಲಿ ಬಂದವರಿಗೆಲ್ಲ ಹಾಕುವಷ್ಟು ಕುರ್ಚಿಗಳಿಲ್ಲ. ಅದಕ್ಕೆ ಮನೆಯಲ್ಲಿದ್ದ ಚಾಪೆ ಜಮಖಾನೆಗಳನ್ನೆಲ್ಲ ಜಮಾಯಿಸಿ ಒಬ್ಬರು ಕುಳಿತುಕೊಳ್ಳಲು ಸಾಕಾಗುವಷ್ಟು ಅಗಲಕ್ಕೆ ಮಡಿಸಿ ಗೋಡೆಯ ಬದಿಗೆ ಹಾಸಿದ್ದೆವು. ಬಂದವರು ಸ್ವಲ್ಪ ಕಷ್ಟಪಟ್ಟುಕೊಂಡೇ ಕೂರಬೇಕಾದ ಪರಿಸ್ಥಿತಿ. ಆದರೆ ವಿಯಿಲ್ಲವಲ್ಲ. ಹೊರಗಡೆಯ ಹಾಲಿನಲ್ಲಿ ಗಂಡಸರು ಕೂತಿದ್ದರೆ, ಒಳಗಡೆಯ ರೂಮಿನಲ್ಲಿ ಹೆಂಗಸರು ತುಂಬಿಕೊಂಡಿದ್ದರು.
ಶಶಿ ಒಂದು ಸಣ್ಣ ಸ್ಟೂಲು ತಂದು ಅದರ ಮೇಲೆ ಬರ್ತ್ಡೇ ಕೇಕ್ ಇಟ್ಟ. ಮೇಣದ ಬತ್ತಿಗಳನ್ನು ಹತ್ತಿಸಿದ. ಪೃಥ್ವಿಯನ್ನು ಅನಾಮತ್ತಾಗಿ ಎತ್ತಿಕೊಂಡು ಒಳಗಿನಿಂದ ಕರೆತಂದು ಅದರ ಮುಂದೆ ನಿಲ್ಲಿಸಿ ಮೇಣದ ಬತ್ತಿಗಳನ್ನು ಆರಿಸಲು ಹೇಳಿದ. ಹಾಗೆಯೇ ಪೃಥ್ವಿ ಹೊಸ ಉತ್ಸಾಹದಿಂದ ಮಾಡಿದ. ಅವನಿಗೂ ಇದು ಹೊಸದು, ನಮಗೂ ಹೊಸದು. ತಾನು ಎಂದೂ ಕಾಣದ್ದನ್ನು ಮಾಡುವ ಹುಮ್ಮಸ್ಸು ಪೃಥ್ವಿಯದು. ಆಮೇಲೆ ಚಾಕುವಿನಿಂದ ಅದನ್ನು ಕತ್ತರಿಸಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಂಚುವಂತೆ ಸಹಾಯ ಮಾಡಿದ ಶಶಿ. ಕೆಲವರು ಹ್ಯಾಪಿ ಬರ್ತ್ಡೇ ಟು ಯೂ ಅಂತ ಕೂಗಿದರು. ಮನೆಯಲ್ಲೆಲ್ಲ ನಗು ಗದ್ದಲ ಮಾತುಗಳೇ ತುಂಬಿಕೊಂಡಿದ್ದವು.
ರಮ ಪೃಥ್ವಿಯನ್ನು ಒಳಗೆ ಕರೆದುಕೊಂಡು ಹೋಗಿ ಯಥಾಪ್ರಕಾರದ ಆರತಿ ಎತ್ತಿದಳು. ಬಂದ ಹೆಂಗಸರಿಂದ ಹಾಡು ಹೇಳಿಸಿದ್ದಳು. ಆಮೇಲೆ ಅವಳು ನಾನು ಬಂದವರಿಗೆಲ್ಲ ತಿಂಡಿ ಹಂಚಲು ಸಿದ್ಧರಾದೆವು. ಮೊದಲೇ ಪ್ಲೇಟುಗಳಲ್ಲಿ ಹಾಕಿ ಸಿದ್ಧಪಡಿಸಿದ್ದ ತಿಂಡಿಯನ್ನು ಒಂದೊಂದು ಕೈಯಲ್ಲಿ ಒಂದೊಂದು ಪ್ಲೇಟಿನಂತೆ ಹಿಡಿದು ಒಳಗಿನಿಂದ ತಂದು ಎಲ್ಲರ ಮುಂದೂ ಇಡಲು ತೊಡಗಿದೆವು. ಶಶಿ ಬಂದು ನಾನು ತರುತ್ತಿದ್ದ ಪ್ಲೇಟುಗಳನ್ನು ತೆಗೆದುಕೊಂಡು ನನಗೂ ಸ್ನೇಹಿತರ ಜೊತೆಯಲ್ಲಿ ಕೂತು ತಿನ್ನಲು ಹೇಳಿದ. ನಾನು ಬೇಡವೆಂದೆ. ಆದರೆ ಕೆಲವರು ಸ್ನೇಹಿತರು ಅವನ ಮಾತಿಗೆ ದನಿಕೂಡಿಸಿದರು. ನಾನು ವಿಧಿಯಿಲ್ಲದೆ ಒಂದೆಡೆ ಕುಳಿತೆ. “ತಾವು ಮನೇ ಯಜಮಾನರು, ಒಂದು ಕಡೆ ಕೂತು ತಿನ್ನಬೇಕು ಸಾರ್, ಕೆಲಸಕ್ಕೆ ನಾವಿದ್ದೀವಿ" ಅಂತ ಶಶಿ ನಾಟಕೀಯವಾಗಿ ನನಗೆ ಹೇಳಿದಾಗ ಎಲ್ಲರೂ ಗೊಳ್ ಅಂತ ನಕ್ಕರು. ಮಾತು ಕೇಳಿ ನಗಬೇಕೋ ಅಳಬೇಕೋ ಗೊತ್ತಾಗದೆ ಸುಮ್ಮನೆ ಕುಳಿತೆ. “ನೋಡಿದಿರಾ ಬದರೀನಾಥ್, ಹೇಗಿದಾರೆ ನಿಮ್ಮ ತಮ್ಮ" ಅಂತ ಒಬ್ಬರು ಶಶಿಯ ಬಗ್ಗೆ ಮೆಚ್ಚುಗೆ ತೋರಿಸಿದರೆ ಇನ್ನೊಬ್ಬರುತಮ್ಮ ಅಂದರೆ ಹೀಗಿರಬೇಕು" ಎಂದರು. “ತುಂಬ ಜಾಲಿ ಮನುಷ್ಯ," “ಅವರು ಇದ್ದರೆ ಮನೆ ತುಂಬಿಕೊಂಡಿರುತ್ತೆ" ಎಂದೆಲ್ಲ ಶಹಭಾಸ್ಗಿರಿ ಕೊಟ್ಟರು.
ಶಶಿಯದು ಅತಿ ಉತ್ಸಾಹ, ದಡಭಡ ಓಡಾಟ. ಅವರತ್ತಿಗೆಗೆ ಒಳಗೆ ಹೆಂಗಸರಿಗೆ ತಿಂಡಿ ಹಂಚುವುದರಲ್ಲಿ ನಿರತಳಾಗಿರಲು ಹೇಳಿ, ತಾನು ದೊಡ್ಡ ಟ್ರೇಯೊಂದರಲ್ಲಿ ಒಟ್ಟಿಗೆ ಐದಾರು ಪ್ಲೇಟುಗಳನ್ನು ಇಟ್ಟುಕೊಂಡು ಬಂದು ಒಬ್ಬೊಬ್ಬರ ಮುಂದೂ ನಿಂತುಸ್ವೀಕರಿಸಬೇಕು ಸಾರ್" ಎಂದು ಹೇಳುತ್ತಿದ್ದ. ಬಂದವರಲ್ಲಿ ಸಾಕಷ್ಟು ಮಂದಿ ಆಗಲೇ ತಿಂಡಿ ತಿನ್ನಲು ಆರಂಭಿಸಿದ್ದರು. ಇನ್ನು ಕೆಲವರಿಗೆ ತಿಂಡಿ ಬರಬೇಕಾಗಿತ್ತು. ಎಲ್ಲರೂ ಮಾತುಕತೆಯಲ್ಲಿ ತೊಡಗಿದ್ದರು.
ಟ್ರೇಯಲ್ಲಿ ತಿಂಡಿ ತಟ್ಟೆಗಳನ್ನಿಟ್ಟುಕೊಂಡು ಬರುತ್ತಿದ್ದ ಶಶಿಯ ಕಡೆ ನನ್ನ ಗಮನ ಹರಿಯಿತು. ಅವನು ದವಡೆ ಹಲ್ಲು ಮಸೆಯುವಂತಿದ್ದ. ಬೆವರು ಕಾಣಿಸಿಕೊಂಡಂತಿತ್ತು. ಮುಖ ವಿಲಕ್ಷಣವಾಯ್ತು. ಕಾಲುಗಳು ಸ್ಥಿರತೆಯನ್ನು ಕಳೆದುಕೊಂಡವುಗಳಂತೆ ಕಂಡವು. ಅವನಿಗೆ ಏನಾಗುತ್ತಿದೆ ಎಂಬುದು ನನಗೆ ತಿಳಿಯಿತು. ತಟ್ಟನೆ ಎದ್ದು ಅವನ ಕಡೆ ಹೊರಟೆ. ಬಳಿ ಬರುವುದರೊಳಗಾಗಿ ಅವನು ಕೈಯಲ್ಲಿದ್ದ ಟ್ರೇಯನ್ನು ಎತ್ತಿಹಾಕಿದ್ದ. ಅವನ ರಟ್ಟೆಯನ್ನು ಹಿಡಿದುಕೊಂಡು ನಿಧಾನವಾಗಿ ನಡೆಸಿಕೊಂಡು ಬಂದೆ.
ಟ್ರೇ ಬಿದ್ದ ಸದ್ದಿಗೆ ಎಲ್ಲರೂ ಗಾಬರಿಯಾದರು. ತಾವು ತಿನ್ನುತ್ತಿದ್ದ ತಿಂಡಿ ತಟ್ಟೆಗಳನ್ನು ನೆಲದ ಮೇಲಿರಿಸಿ ಮೇಲೆ ಎದ್ದರು. ನಮ್ಮ ಕಡೆಗೆ ಹಲವರು ಬಂದರು. ಒಳಗಡೆಯಿಂದ ಹೆಂಗಸರು ಏನಾಯಿತು ಎಂದು ನೋಡಲು ಬಂದರು. ನಗುಮಾತುಗಳಿಂದ ತುಂಬಿದ್ದ ಮನೆ ಒಂದು ಕ್ಷಣದಲ್ಲಿ ಮೌನವಾಯಿತು, ಮೇಲೆಏನಾಯಿತು' ಎಂಬ ಪ್ರಶ್ನೆ ಹಲವಾರು ಬಾಯಿಗಳಿಂದ ಬಂದುವು. “ಕೈ ಜಾರಿತಾ?" ಅಂದರು ಕೆಲವರು. “ಪಾಪ, ಅಟ್ಯಾಕೇನೋ" ಅಂದರು ಮತ್ತೆ ಕೆಲವರು. ಎಲ್ಲರೂ ಗುಂಪುಗೂಡಿದರು.
ಶಶಿಗೆ ಅಟ್ಯಾಕ್ ಬಂದಾಗ ಅವನ ಕೈ ಕಾಲುಗಳು ತೀರ ಜೋರಾಗೇನೂ ಅಲುಗಾಡುವುದಿಲ್ಲ. ಕೆಲವರಿಗೆ ಫಿಟ್ಸ್ ಬಂದಾಗ ನಾನು ಕಂಡಿದ್ದೀನಲ್ಲ, ವಿಪರೀತ ಅಲುಗಾಟ. ಆದರೆ ಫಿಟ್ಸ್ನಲ್ಲಿ ಬೇಕಾದಷ್ಟು ಬಗೆಗಳಿವೆಯೆಂದು ತಿಳಿದುಕೊಂಡಿದ್ದೆ. ಇವನಿಗೆ ಔಷಯಿಂದಾಗಿ ತೀವ್ರವಾದ ಮೂರ್ಛೆಯೇನೂ ಬರುತ್ತಿರಲಿಲ್ಲ. ಕೈಕಾಲು ಹಿಡಿತ ತಪ್ಪಿದರೂ ಅವನೆಂದೂ ಮೂರ್ಛೆಯಲ್ಲಿ ಧೊಪ್ಪೆಂದು ಕೆಳಗೆ ಬಿದ್ದವನಲ್ಲ. ಇದ್ದ ಜಾಗದಲ್ಲಿಯೇ ದಟ್ಟಡಿಯಿಡುತ್ತ ಓಡಾಡಿ ಬಿಡುವ ರೀತಿ ಅವನಿಗೆ ಬರುವ ಅಟ್ಯಾಕ್. ಎಷ್ಟೋ ಸಲ ನಾನು ಹಿಡಿದುಕೊಂಡು ಬಲವಾಗಿ ಎಳೆದರೂ ನನ್ನನ್ನೂ ಮೀರಿದ ಬಲದಿಂದ ಮುಂದೆ ಹೋಗುತ್ತಿದ್ದ. ಕಬ್ಬಿಣ ಕೊಡುವುದರಿಂದ ಏನೂ ಪ್ರಯೋಜನವಿಲ್ಲವೆಂದು ಡಾಕ್ಟರರು ಹೇಳಿದ್ದರು. ಬಂದ ಮೂರ್ಛೆ ತಾನಾಗಿ ಹೋಗಬೇಕೇ ಹೊರತು, ಎಚ್ಚರ ಬೇಗ ಬರಿಸಲು ಸಾಧ್ಯವೇ ಇಲ್ಲವಂತೆ. ಆದರೆ ರೋಗಿಗೆ ಮೂರ್ಛೆ ಬಂದಾಗ ಹತ್ತಿರ ಹರಿತವಾದ ಆಯುಧಗಳೋ ಬೆಂಕಿಯೋ ಇದ್ದರೆ ಅಪಾಯವಾದ್ದರಿಂದ ಒಂದೆಡೆ ಕೂಡಿಸಿದರೆ ಸಾಕು ಎಂಬುದನ್ನು ಡಾಕ್ಟರ್ರಿಂದ ತಿಳಿದು ಅದರಂತೆ ಅಟ್ಯಾಕುಗಳನ್ನು ನಿಭಾಯಿಸುತ್ತಿದ್ದೆ.
ಎಲ್ಲರ ಮುಖದಲ್ಲೂ ಒಂದು ರೀತಿಯ ಗಾಬರಿ, ಕಳವಳ. ಅವರ ಮಾತುಗಳು. ‘ನೀರು ತಟ್ಟಿ'. ‘ಬೀಗದ ಕೈ ಕೊಡಿ', ’ಮಲಗಿಸಿ' ಇತ್ಯಾದಿ ಸೂಚನೆ ಗಳು ಕಿವಿಗೆ ಬಂದು ಅಪ್ಪಳಿಸುತ್ತಿದ್ದವು. ಇವರೆಲ್ಲ ಯಾಕೆ ಸುಮ್ಮನಿರಬಾರದು ಎನ್ನಿಸುವಷ್ಟು ತಲೆ ಚಿಟ್ಟು ಹಿಡಿಯಿತು. ನಾನು ಎಷ್ಟು ವರ್ಷದಿಂದ ಇವನನ್ನು ಸ್ಥಿತಿಯಲ್ಲಿ ಕಂಡವನು, ಇವರೆಲ್ಲ ದೊಡ್ಡ ವೈದ್ಯರುಗಳ ಹಾಗೆ ಸಲಹೆ ಕೊಡುವುದರ ಬದಲು ಸುಮ್ಮನಿರುವ ವಿವೇಕವೇಕೆ ತೋರಿಸಬಾರದು ಎಂಬ ಅಸಹನೆಯುಂಟಾ ಯಿತು. ಆದರೆ ಅವರ ಮೇಲೆ ಕೋಪವನ್ನು ಪ್ರಕಟವಾಗಿ ತೋರಿಸುವಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ ನಾನು. ಅವರ ಮೇಲೆ ಸಿಟ್ಟು ತೋರಿಸಲು ನನಗೇನು ಅಧಿಕಾರ ಎಂಬ ಪ್ರಜ್ಞೆ ನನ್ನಲ್ಲಿತ್ತು. ಅವರು ಹೇಳಿದ್ದನ್ನು ಕೇಳದ ಹಾಗೆ ಸುಮ್ಮನೆ ನನ್ನ ಎಂದಿನ ರೀತಿಯಲ್ಲಿ ಅವನ ಮೂರ್ಛೆಯ ಸ್ಥಿತಿಯನ್ನು ಎದುರಿಸಿದೆ.
ಒಂದೆರಡು ನಿಮಿಷಗಳ ನಂತರ ಶಶಿ ಸ್ಥಿಮಿತಕ್ಕೆ ಬಂದ. ತನಗೇನಾಯಿತೆಂಬುದರ ಅರಿವು ಅವನಿಗೆ ಬಂತು. ಎದ್ದು ಕೂತ. “ಹೋಗಿ ಬಾಯಿ ತೊಳೆದುಕೊಂಡು ಬಾಅಂತ ಹೇಳಿದೆ. ನನ್ನ ಧ್ವನಿಯಲ್ಲಿದ್ದ ಭಾವವಾವುದು; ಬರಿಯ ಸೂಚನೆಯ ನಿರ್ವಿಕಾರತೆಯೇ? ಶಶಿಯ ಬಗ್ಗೆ ಕನಿಕರವೇ? ಎಂಥ ಸನ್ನಿವೇಶದಲ್ಲಿ ಇದಾಯಿತು ಎಂಬ ಜಿಗುಪ್ಸೆಯೇ? ನನ್ನ ಜೀವನವಿಡೀ ಕವಿಯುವ ಕತ್ತಲೆಯಿಂದ ಹೊರಬರುವುದು ಹೇಗೆ ಎಂಬ ಆಲೋಚನೆಯೇ? ಮೊದಲೇ ಗದ್ದಲ ಸಡಗರವೆಂದರೆ ನನಗೆ ಹೆಚ್ಚಾಗಿ ಸರಿಹೋಗದು. ಅಂಥದ್ದರಲ್ಲಿ ಹೀಗಾದರೆ ನನ್ನ ಬಾಯಿಂದ ಮಾತುಗಳೇ ಹೆಚ್ಚು ಹೊರಡಲಾರವು. ಏನೋ ಅಪರಾಧ ಮಾಡಿದವನಂತೆ ಎಲ್ಲರ ಮುಖ ನೋಡಲು ಹಿಂಜರಿಕೆ, ಒಂದು ಬಗೆಯ ಪರಿತಾಪ ಇವುಗಳಿಂದ ಮೂಕನಾದೆ.
ಕೆಲವರಾಗಲೇ ಹೇಳದೇ ಕೇಳದೇ ಹೊರಟುಹೋಗಿದ್ದರು, ಹಲವರು ಪಿಸುಮಾತಿನಲ್ಲಿ ತೊಡಗಿದ್ದರು. ಇನ್ನು ಕೆಲವರು ನನ್ನೆಡೆಗೆ ಸಹಾನುಭೂತಿಯನ್ನು ಸೂಚಿಸುವ ನೋಟ ಹರಿಸಿದ್ದರು. ಒಂದಿಬ್ಬರು ಹತ್ತಿರ ಬಂದು ಸಮಾಧಾನಪಡಿಸಲು ಕೈ ಹಿಡಿದು ಹಿಸುಕಿದರು. ನಾನೇನು ಹೇಳಬೇಕು ಅವರಿಗೆ? ‘ಶಶಿಯನ್ನು ನೋಡಿಕೊಳ್ಳಿ' ಎಂದು ಹೇಳಿ ಹೋದರು. ಕೆಲವರಿಗೆ ನನ್ನ ಮುಖ ನೋಡುವುದಕ್ಕೇ ಸಂಕೋಚವಾಗಿ ಹಿಂದೆ ಸರಿದರು. ಅಂತೂ ಒಬ್ಬೊಬ್ಬರಾಗಿ ಹೊರಟುಹೋದಾಗ ಮನೆ ಬಿಕೋ ಎಂದು ಹಾಳು ಸುರಿಯುವ ಸ್ಥಿತಿಗೆ ಬಂದಿಳಿಯಿತು.
ಮಕ್ಕಳಿಬ್ಬರೂ ಪೆಚ್ಚಾಗಿ ಮೂಲೆಯೊಂದರಲ್ಲಿ ಕುಳಿತಿದ್ದರು. ಅವರು ಮಧ್ಯಾಹ್ನವೆಲ್ಲ ಪಟ್ಟ ಸಂಭ್ರಮವನ್ನು ಕಂಡಿದ್ದ ನನಗೆ ಈಗಿನ ಅವರ ರೀತಿಯಿಂದ ಹೊಟ್ಟೆ ಕಿವುಚಿದಂತಾಯಿತು. ಕಣ್ಣು ಮಂಜಾಯಿತು. ಮನೆಯಲ್ಲೆಲ್ಲ ತಿಂಡಿಯೇ ಚೆಲ್ಲಿದೆ. ಯಾರೊಬ್ಬರೂ ಇನ್ನೂ ಪೂರ್ತಿ ತಿಂಡಿ ತಿಂದಿರಲಿಲ್ಲ. ಏನಾಯಿತೋ ಎಂದು ಒಂದೇ ಕಡೆ ಎಲ್ಲ ನುಗ್ಗಿದ್ದರಿಂದ ನೆಲದ ಮೇಲೆ ಬಿದ್ದ ತಿಂಡಿಯನ್ನು ತುಳಿದು ಅದು ನೆಲಕ್ಕೆ ಮೆತ್ತಿಕೊಂಡಿತ್ತು. ಗಾಳಿ ಬಂದಾಗ ಲೈಟು ಅಲುಗಿ ಕಟ್ಟಿದ್ದ ಬಂಟಿಂಗುಗಳ ನೆರಳು ಗೋಡೆಯ ಮೇಲೆಲ್ಲ ಅಲ್ಲಾಡಿ ಆವುದೋ ಭೂತ ಮನೆಯನ್ನು ಪ್ರವೇಶ ಮಾಡಿದೆಯೋ ಎಂಬಂತೆ ಕಾಣಿಸುತ್ತಿತ್ತು.
ರಮಳ ಮುಖ ನನಗೆ ನೋಡಲಾಗಲಿಲ್ಲ. ಒಂದು ಕಡೆ ಮಂಡಿಗಳ ನಡುವೆ ಮುಖವಿರಿಸಿ ಅಳುತ್ತ ಕೂತಿದ್ದಳು. ಶಶಿಯೂ ಪೆಚ್ಚಾಗಿಬಿಟ್ಟಿದ್ದ. ಯಾರನ್ನು ಯಾರು ಸಮಾಧಾನ ಮಾಡಬೇಕು? ಇದಕ್ಕೆಲ್ಲ ಯಾರು ಜವಾಬ್ದಾರಿ ತೆಗೆದು ಕೊಳ್ಳುವವರು? ಇಂಥವು ನಡೆಯದಂತೆ ಏನಾದರೂ ಮಾಡಲು ಸಾಧ್ಯವಿಲ್ಲವೇ? ಯಾರ ಕರ್ಮಫಲ ಇದು?
ಆದರೆ ಎಷ್ಟು ಹೊತ್ತು ಹೀಗೆ ಉಳಿತುಕೊಳ್ಳುವುದು? ಮನೆಯನ್ನೆಲ್ಲ ಚೊಕ್ಕಟ ಮಾಡಬೇಡವೇ? ಇನ್ನೂ ಹೆಚ್ಚು ಹೊತ್ತಾಗಿರದಿದ್ದರೂ, ಊಟ- ಮಲಗುವ ವ್ಯವಸ್ಥೆ ಮಾಡಬೇಡವೇ? ಕೊನೆಯ ಪಕ್ಷ ಮಕ್ಕಳಿಗೆ ಊಟ ಹಾಕಿ ಮಲಗಿಸಬೇಡವೇ? ನಾವು ಊಟಮಾಡುವ ಹಾಗೇ ಇದೆ. ರಮಳಿಗೆ ಈಗ ಕೆಲಸ ಮಾಡು ಎನ್ನಲೇ?
          ನಾನೇ ಮೇಲೆದ್ದು ನಿಟ್ಟುಸಿರಿನ ಜೊತೆಗೆ ಅಸ್ತವ್ಯಸ್ತವಾಗಿ ಬಿದ್ದ ಪ್ಲೇಟುಗಳನ್ನೆಲ್ಲ ಒಂದೊಂದಾಗಿ ತೆಗೆದು ಜೋಡಿಸಿಡಲು ಪ್ರಯತ್ನಿಸುತ್ತೇನೆ. ಕೈಗಳು ಯಾಂತ್ರಿಕವಾಗಿ ಕೆಲಸದಲ್ಲಿ ತೊಡಗಿದ್ದರೂ ಮನಸ್ಸೆಲ್ಲ ಏನೋ ಗಾಢಾಂಧಕಾರ ಆವರಿಸಿದೆ. ಏನೋ ಅಸ್ಪಷ್ಟ ಭಾವನೆ ತುಂಬಿದೆ. ಒಳಗಿನಿಂದ ಪರಕೆಯೊಂದನ್ನು ತಂದು ಚೆಲ್ಲಾಪಿಲ್ಲಿಯಾದ ತಿಂಡಿಯ ಚೂರುಗಳನ್ನು ಗುಡಿಸಲು ತೊಡಗುತ್ತೇನೆ. ಸುಷ್ಮಾ ಮುಂದೆ ಬಂದು ನನ್ನ ಕೈಯಿಂದ ಪರಕೆ ತೆಗೆದುಕೊಳ್ಳುತ್ತಾಳೆ, ಅವಳನ್ನು ತಬ್ಬಿಕೊಂಡು ಅತ್ತುಬಿಡಬೇಕು ಎನ್ನಿಸುತ್ತದೆ. ಮಕ್ಕಳು ತಮ್ಮ ಹುಟ್ಟುಹಬ್ಬದ ದಿನ ಕೂಡ ಸಂತೋಷವಾಗಿರದ ಹಾಗಾಯಿತೇ ಎನ್ನಿಸಿ ನನ್ನ ಮಕ್ಕಳಾಗಿ ಇವು ಏನೂ ಸುಖಪಡಲಾರವು ಎನಿಸುತ್ತದೆ. ಪಾಪ, ರಮ ಕೂಡ ಪರಿಸ್ಥಿತಿಗೆ ಸಿಕ್ಕುವಂತಾಯಿತಲ್ಲ. ಅವಳಿಗೆ ನಾನೇನೋ ದೊಡ್ಡ ಅನ್ಯಾಯ ಮಾಡಿದ್ದೇನೆಂಬ ಪಾಪ ಪ್ರಜ್ಞೆ ನನ್ನ ಹೃದಯವನ್ನು ಹಿಂಡುತ್ತದೆ.
ಮನೆಯಲ್ಲೆಲ್ಲ ಕೆಟ್ಟ ಮೌನ. ಪ್ಲೇಟು ಎತ್ತಿಡುವ, ಕಸ ಬಳಿಯುವ ಸ್ಟೂಲು ಜರುಗಿಸುವ ಸದ್ದು. ತಲೆಯ ಮೇಲೆ ಒನಕೆಯಿಂದ ಕುಟ್ಟಿದ ಸ್ವಲ್ಪ ಹೊತ್ತಾದ ಮೇಲೆ ರಮಳ ಹತ್ತಿರ ಹೋಗಿ ಅವಳ ತಲೆ ಎತ್ತಲು ಪ್ರಯತ್ನಿಸುತ್ತೇನೆ. ಅವಳು ಕೊಸರಿಕೊಳ್ಳುತ್ತಾಳೆ. ಅವಳ ಕೈಹಿಡಿದುಕೊಳ್ಳಲು ಹೋದರೆ ನನ್ನನ್ನು ದಬ್ಬುತ್ತಾಳೆ. ನನ್ನ ಮೇಲೇಕೆ ಇನ್ನು ಅಸಹನೆ ಎಂಬ ಸಿಟ್ಟು ನನಗೂ ಬರುತ್ತದೆ. ಆದದ್ದಕ್ಕೆ ನಾನೇನು ಹೊಣೆಯಲ್ಲವಲ್ಲ. ನನ್ನನ್ನು ಕಂಡರೆ ಇವಳೇಕೆ ಬೇಸರ ಪಡಬೇಕು. ಇವಳನ್ನೇ ನಾನು ಕೈಕಾಲಿಗೆ ಬಿದ್ದು ನನ್ನ ಮದುವೆಯಾಗು ಎಂದು ಕೇಳಿದೆನೇನು. ನಮ್ಮ ಮನೆಯ ಪರಿಸ್ಥಿತಿ ಎಲ್ಲ ಅವಳಿಗೇ ತಿಳಿದಿತ್ತಲ್ಲ. ಅವರ ಮನೆಯಲ್ಲಿ ಇದ್ದ ವಿಷಯವನ್ನೆಲ್ಲ ತಿಳಿಸಿ, ಕೊನೆಯವರೆಗೂ ಶಶಿ ನನ್ನ ಜೊತೆಯಲ್ಲಿರುತ್ತಾನೆಂದು ಹೇಳಿರಲಿಲ್ಲವೆ? ಅದಕ್ಕೆಲ್ಲ ಒಪ್ಪಿಗೆಯಿತ್ತು ಈಗ ಹೀಗಾಡಿದರೆ ತಿಂದುಕೊಬ್ಬು. ಇವಳೊಬ್ಬಳಿಗೇ ದುಃಖವಾದವಳ ಹಾಗೆ ಆಡ್ತಾಳೆ.
ಎಷ್ಟು ಹೊತ್ತೂಂತ ಹೀಗೆ ಇರೋಕೆ ಸಾಧ್ಯ. “ಏಳೇ ಮೇಲೆ, ಊಟಗೀಟ ಹಾಕು ಮಕ್ಕಳಿಗೆ. ನಾವೂ ಒಂದಷ್ಟು ತಿಂದು ಮಲಗೋಣ" ಎನ್ನುತ್ತೇನೆ.
ಆಯ್ತಲ್ಲ ಊಟ ಚೆನ್ನಾಗಿ" ಎಂಬ ರಮಳ ಮಾತಲ್ಲಿ ವ್ಯಂಗ್ಯ ಅಸಹನೆ ತುಂಬಿರುತ್ತದೆ.
ಯಾರೇನು ಮಾಡೋಕಾಗತ್ತೆ?"
ಇಲ್ಲ ಮಾಡಕ್ಕಾಗಲ್ಲ. ಸಾಯೋವರೆಗೂ ಹೀಗೆ ನರಳಬೇಕು."
ನಮ್ಮ ಹಣೇಲಿ ಬರೆದದ್ದು ಏನು ಮಾಡೋದು?"
ನೋಡಿ, ಮಕ್ಕಳ ಮುಖ ನೋಡಿ. ಅವುಗಳಂತೂ ಆಗ್ಲಿಂದಲೇ ಆಕಾಶ ತಲೇ ಮೇಲೇ ಬಿದ್ದವರ ಹಾಗೆ ಸಂಕಟಪಡುತ್ತಿವೆ."
ನೀನು ಹೇಳೋದು ನಿಜ ಕಣೆ. ಆದರೆ ಇದಕ್ಕೆ ಪರಿಹಾರವೆಲ್ಲೀಂತ?"
ಅವನನ್ನ ಎಲ್ಲಾದರೂ ಸಾಗಹಾಕಿ."
ನನಗೆ ಸಿಟ್ಟು ತಡೆಯಲಾಗಲಿಲ್ಲ. “ಏನೇ ನೀನು ಹೇಳೋದು" ಅಂತ ಕಿರುಚಿದೆ. ಶಶಿಯನ್ನು ಎಲ್ಲಾದರೂ ಸಾಗಹಾಕಬೇಕೆ? ಅವನಿಗೆ ನನ್ನ ಬಿಟ್ಟರೆ ಬೇರೆ ಯಾರು ದಿಕ್ಕು? ಅವನು ಬೇರೆ ಕಡೆ ಕ್ಷೇಮವಾಗಿ ಇರೋ ಹಾಗೆ ಏನಾದರೂ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗಿದ್ದಿದ್ದರೆ? ಬೇರೆ ಕೆಲವು ದೇಶಗಳಲ್ಲಿ ಮೂರ್ಛೆ ರೋಗ ಬರುವವರಿಗೇ ಪ್ರತ್ಯೇಕವಾದ ಹಾಸ್ಟಲುಗಳಿರುತ್ತವೆಂದು ಓದಿದ್ದೆ. ಅಂಥದೇನಾದರೂ ಇದ್ದಿದ್ದರೆ, ಆದರೆ ಹಾಗೆ ಬಿಟ್ಟರೆ ಜನ ಜನ ಏನೆಂದು ಕೊಂಡಾರು? ಜನಕ್ಕೇನು ಗೊತ್ತಾಗುತ್ತೆ ನನ್ನ ಕಷ್ಟ ಅನ್ನಿಸಿದರೂ ಅವನನ್ನು ಬಿಡುವುದು ಹೇಗೆ? ನನ್ನ ಮೇಲೆ ಅವನು ಅವಲಂಬಿಸಿ, ತುಂಬ ಭರವಸೆ ಇಟ್ಟುಕೊಂಡಿದ್ದಾನೆ. ಅವನನ್ನು ಕೈಬಿಡು ಅಂತ ಹೇಳ್ತಾಳಲ್ಲ ರಾಕ್ಷಸಿ. ಮನುಷ್ಯತ್ವವಿದೆಯಾ ಇವಳಿಗೆ?
ನನ್ನ ಗಟ್ಟಿಯಾದ ಧ್ವನಿ ಕೇಳಿ ಶಶಿ ಬಂದು ನಿಂತ. ಅವನ ಮುಖ ನೋಡಿದೆ. ಏನು ಅವಸ್ಥೆ ಬಂದಿದೆ ನನಗೆ ಅನ್ನಿಸಿತು. ಅತ್ತ ದರಿ, ಇತ್ತ ಪುಲಿ ಎಂಬುವ ಪರಿಸ್ಥಿತಿಯೇ ನನ್ನದು!
ಲೋ ಅಣ್ಣ ನಾಳೆಯಿಂದ ನಾನು ಬೇರೆಲ್ಲಾದ್ರೂ ಇರ್ತೀನಿ ಕಣೋ" ಎಂಬ ಶಶಿಯ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ಅವನೆಡೆಗೆ ತಿರುಗಿದೆ.
ಬಾಯಿ ಮುಚ್ಚಿಕೊಂಡು ಕೂತಿರು."
ಎಲ್ಲರಿಗೂ ತೊಂದರೆ, ನಾನು ಹೋಗ್ತೀನಿ."
ಸುಮ್ಮನೇ ಇರ್ತೀಯೋ ಇಲ್ಲವೋ ನೀನು?" ನನ್ನ ಧ್ವನಿ ನನಗರಿವಿಲ್ಲದಂತೆ ದೊಡ್ಡದಾಗಿತ್ತು. ಸುಮ್ಮನೆ ಕಿರುಚಾಡಬೇಕು ಅನ್ನಿಸುತ್ತದಲ್ಲ. ”ನಾನು ಬೇರೆ ಹೋದರೆ ನಿನಗೇನೊ? ಇಲ್ಲೇ ಇರ್ತೀನಿ ಅಂತ ನಾನೇನು ಬರಕೊಟ್ಟಿಲ್ಲವಲ್ಲ."
ಇವರು ಬರಕೊಟ್ಟಿದ್ದಾರಲ್ಲ" ಎಂಬ ರಮಳ ವ್ಯಂಗ್ಯಪೂರಿತ ಧ್ವನಿಯಿಂದ. ನಾನು ಸಿಡಿಲಾದೆ. “ಮಾತಾಡದೇ ಸುಮ್ನಿರೇ ಬೇವಾರ್ಸಿ" ಎಂದು ಕಿರುಚಿದೆ.
ಹೌದು, ನಾನೇನೂ ಮಾತಾಡಬಾರದು. ನನಗೆ ಯಾವ ಸ್ವಾತಂತ್ರ್ಯವೂ ಇಲ್ಲ" ಎಂದವಳು ಅಳತೊಡಗಿದಳು.
ಶಶಿ ರೂಮಿಗೆ ಹೋದ. ಅವನ ಹಿಂದೆಯೇ ನಾನು ಹೋದೆ. ಅವನೇನು ಮಾಡ್ತಾನೋ ಎಂದು ನೋಡುವ ಕುತೂಹಲವೇ? ಗಳುವಿನ ಮೇಲೆ ಒಣಗಿಹಾಕಿದ್ದ ಬಟ್ಟೆಗಳನ್ನೆಲ್ಲ ತೆಗೆದು ಒಂದೆಡೆ ಜೋಡಿಸಿದ. ತನ್ನ ಶರಟು ಪ್ಯಾಂಟುಗಳನ್ನೆಲ್ಲ ಮಡಿಸಿಡಿಲುತೊಡಗಿದ. ಅದನ್ನು ಕಂಡ ನನಗೆ ಸಹನೆಯೊಡೆಯಿತು. “ಏನು ಮಾಡ್ತಾ ಇದ್ದೀಯೋ ನೀನು?" ಮಾತಿಲ್ಲ. ಇನ್ನೊಮ್ಮೆ ಕೇಳಿದರೆ ನನ್ನ ಧ್ವನಿ ಏರಿತ್ತೇ ವಿನಾ ಅವನಿಂದ ಉತ್ತರವಿಲ್ಲ ನನಗೆ ಸಿಟ್ಟು, ಅವನ ರಟ್ಟೆ ಹಿಡಿದೆ, ಕೊಸರಿಕೊಂಡು ಮೊದಲಿನಂತೆಯೇ ಬಟ್ಟೆಗಳನ್ನು ಜೋಡಿಸುವುದರಲ್ಲಿ ತೊಡಗಿದ್ದ. ನಾನು ಇವನ ಬಗ್ಗೆ ಎಷ್ಟು ಆಸ್ಥೆ ವಹಿಸುತ್ತಿದ್ದೀನಿ, ಇವನಿಗಾಗಿ ಎಷ್ಟು ಕಷ್ಟಪಡ್ತಾ ಇದ್ದೀನಿ. ಹೆಂಡತಿಯ ವಿರೋಧ ಕಟ್ಟಿಕೊಂಡಿದ್ದೀನಿ. ಇವನು ಮಾತ್ರ ನನಗೆ ಏನೂ ಕೇಳುವ ಅಧಿಕಾರವಿಲ್ಲ ಎನ್ನುವಂತೆ ಕೇಳಿದ ಮಾತಿಗೆ ಉತ್ತರವನ್ನೂ ಕೊಡದೆ ಸುಮ್ಮನಿದ್ದಾನೆ! ಎಷ್ಟು ಸೊಕ್ಕು ಇವನಿಗೆ. ನನ್ನ ಮೈಮೇಲೆ ಬಂದಿತ್ತು. ಅವನ ಕೈಗಳನ್ನು ಒರಟಾಗಿ ಹಿಡಿದು ನನ್ನ ಕಡೆಗೆ ತಿರುಗಿಸಿಕೊಂಡುಹೇಳಿದ್ದು ಕೇಳಿಸಲಿಲ್ಲವೇನೋ?" ಎಂದೆ. ಸುಮ್ಮನೇ ಇದ್ದ. ನನ್ನ ಕಂಡರೆ ಇವನಿಗೆಷ್ಟು ತಿರಸ್ಕಾರ. ಒಂದು ಕಡೆ ಅವಳು, ಇನ್ನೊಂದು ಕಡೆ ಇವನು - ನನ್ನ ಪಾಪದ ಎರಡು ತುದಿಗಳು, ಅನಾದಿ ಕಾಲದ ಶತ್ರುಗಳು,
ಶಶಿಯದು ಮಾತಿಲ್ಲ, ಕತೆಯಿಲ್ಲ; ಮೊದಲಿನ ಕೆಲಸದಲ್ಲಿ ಮತ್ತೆ ಮಗ್ನ. ಹಲ್ಲು ಕಚ್ಚಿ ಒಂದೇಟು ಕೊಟ್ಟೆ ಅವನ ಕೆನ್ನೆ ಮೇಲೆ. ಅದನ್ನ ಸವರಿಕೊಂಡು ನನ್ನ ಕಡೆ ಒಂದು ಸಾರಿ ನೋಡಿದ. ಆದರೆ ಮತ್ತೆ ತನ್ನ ಕೆಲಸವೇ ತನಗೆ. ನನ್ನ ಮಾತಿಗೆ ಬೆಲೆಯೇ ಇಲ್ಲವೇ ಹಾಗಾದರೆ. “ನನ್ನ ಮಾತು ಕೇಳಲ್ಲವೇನೋ" ಉಹ್ಞೂ. ಹರ ಇಲ್ಲ; ಶಿವ ಇಲ್ಲ. ಸೂಳೇ ಮಗಂಗೆ ಬುದ್ಧಿ ಕಲಿಸಬೇಕು, ಎಷ್ಟು ಹಟ ಇವನದು. ಪಕ್ಕದಲ್ಲಿದ್ದ ಒಂದು ಕೋಲು ತೆಗೆದುಕೊಂಡು ಒಂದೆರಡು ಬೆನ್ನ ಮೇಲೆ ಬಾರಿಸಿದೆ. ಒಂದು ಅಣುವಿನಷ್ಟೂ ಪ್ರತಿಭಟನೆ ಇಲ್ಲ. ಕಣ್ಣು ರೆಪ್ಪೆಗಳನ್ನು ಪಟಪಟ ಆಡಿಸಿ ಒಂದು ದೀರ್ಘವಾದ ನಿಟ್ಟುಸಿರು ಬಿಟ್ಟು, ಒಮ್ಮೆ ಕಣ್ಣು ಮುಚ್ಚಿಕೊಂಡು ನೀಳವಾಗಿ ಉಸಿರೆಳೆದುಕೊಂಡು ಮತ್ತೆ ತನ್ನ ಕೆಲಸದಲ್ಲಿ ತೊಡಗಿದ. “ಹಲ್ಕ, ಸುವ್ವರ್, ನನ್ನ ಮಾತಿಗೇ ಬೆಲೆಯೇ ಇಲ್ಲವಾ?" ಎಂದು ಹುಚ್ಚನ ಹಾಗೆ ನಾಲ್ಕು ಬಾರಿಸಿದ್ದೆ ಕೋಲಿನಿಂದ. ಅವನಂತೂ ಒಂದೂ ಮಾತಾಡಿದವನಲ್ಲ.
ಗಲಾಟೆ ಕೇಳಿ ರಮ ಮಕ್ಕಳು ಓಡಿಬಂದರು. ಮಕ್ಕಳಂತೂ ಹೆದರಿಬಿಟ್ಟಿದ್ದರು. ರಮ ನನ್ನ ಕೈಯ ಕೋಲು ಕಿತ್ತುಕೊಂಡಳು. ರೂಮಿನಿಂದ ಹೊರಗೆ ಎಳೆದುಕೊಂಡು ಹೊರಟಳು. ಹೋಗುವಾಗ, “ಅಣ್ಣ ಅನ್ನೋ ಮರ್ಯಾದೆ ಬೇಡವೇನೋ ನಿಂಗೆ? ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದಾರೆ. ಅವರ ಒಂದು ಮಾತು ಕೇಳಕ್ಕಾಗಲ್ವ ನಿಂಗೆ. ಈಗ ಸುಮ್ಮನೆ ಹೋಗು" ಎಂದಳು ಸಿಡುಕಿನಿಂದ. ಅವನ ಕಡೆ ನೋಡಿದೆ. ಅವನೂ ನಮ್ಮಿಬ್ಬರ ಕಡೆ ನೀಳವಾಗಿ ನೋಡಿದ, ಆಮೇಲೆ ಕೈಯಲ್ಲಿದ್ದ ಬಟ್ಟೆಯನ್ನೆಲ್ಲ ಒಂದು ಮೂಲೆಯಲ್ಲಿ ಎಸೆದು ಹೊರಗೆ ಹೋದ.
ರಾತ್ರಿ ಯಾರಿಗೂ ಊಟವಿಲ್ಲ, ನಿದ್ದೆ ಇಲ್ಲ. ನಾವಿಬ್ಬರೂ ಒಟ್ಟಿಗೇ ಮಲಗಿದ್ದರೂ ಗಾವುದ ದೂರವಿದ್ದೆವು. ಮಾತಿಲ್ಲ. ಮಧ್ಯೆ ಮಧ್ಯೆ ನಿಟ್ಟುಸಿರು. ಮಗ್ಗುಲು ಹೊರಳಿಸಿದೆವು ನೂರಾರು ಸಲ, ಕಣ್ಣು ಸೋತವೇ ಹೊರತು ನಿದ್ದೆ ಬರಲಿಲ್ಲ. ಕಣ್ಣು ತೆರೆದುಕೊಂಡು ಸೂರು ನೋಡುತ್ತಿದ್ದರೆ ಒಂದೆರಡು ನಿಮಿಷ, ಕಣ್ಣುಗಳು ಮುಚ್ಚಿಕೊಳ್ಳುತ್ತಿದ್ದವು. ಮುಚ್ಚಿದ ಕಣ್ಣೊಳಗೆ ಏನೇನೋ ಕಾಣುತ್ತಿದ್ದವು. ನನ್ನ ಜೀವನದ ಬಗ್ಗೆ, ಸುತ್ತ ಮುತ್ತಲ ಜನಗಳ ಬಗ್ಗೆ, ಪ್ರಪಂಚದ ಬಗ್ಗೆ ಬರೀ ಶೂನ್ಯ ಭಾವನೆ, ಅವನು ಹೇಗೆ ಮಲಗಿದ್ದನೋ ಯಾರಿಗೆ ಗೊತ್ತು. ಅವನ ಹೊರಳಾಟ ಕೂಡ ಕೇಳಿಸದು. ಬೇರೆ ರೂಮಿನಲ್ಲಿದ್ದ ನಿಜ, ಆದರೆ ಮಂಚದ ಕಿರಿಕಿರ ಕೇಳಿಸಬೇಕಾಗಿತ್ತು, ಹೊರಳಾಡಿದ್ದರೆ. ವಿಚಿತ್ರ ಮನುಷ್ಯ ಅನ್ನಿಸಿತು. ಮಕ್ಕಳು ಮಾತ್ರ ನಿದ್ದೆ ಮಾಡಿದವು.
ಬೆಳಗಿನ ಜಾವ ಅವನೆದ್ದು ಯಥಾಪ್ರಕಾರ ತಣ್ಣೀರು ಹಾಕಿಕೊಂಡು ಬಟ್ಟೆ ಧರಿಸಿ ಹೊರಟ. ಹೊರಡುವಾಗ ಪ್ರತಿದಿನ ಹೇಳುವಂತೆ ಹೇಳಿದ. ಗಟ್ಟಿಯಾಗಿರುತ್ತಿದ್ದ ಅವನ ಧ್ವನಿ ಈಗ ಮೆದುವಾಗಿತ್ತು. ನಾನು ಉತ್ತರಿಸಲಿಲ್ಲ. ಆದರೆ ಕಿಟಕಿಯಿಂದ ಹೊರಗೆ ಕುತೂಹಲ ತಾಳದೇ ನೋಡಿದೆ. ಕೈಯಲ್ಲೇನೂ ಇರಲಿಲ್ಲ. ಸುಮ್ಮನೇ ಹೆದರಿಸಿದನಾ ಹಾಗಾದರೆ ಎಂದು ಕೊಂಡಾಗ ಮುಸಿನಗೆ ಮೂಡಿತ್ತು. ಅವನು ಹೋಗಿ ಆಗಲೇ ಮೂರು ದಿವಸ.
- - -
ಶಶಿಧರ ನನಗಿಂತ ಆರು ವರ್ಷಗಳಷ್ಟು ಚಿಕ್ಕವನು. ನಾನೇ ಹಿರಿಯ ಮಗ. ನನ್ನ ಅವನ ನಡುವೆ ಇನ್ನಿಬ್ಬರು ಮಕ್ಕಳಂತೆ - ಎರಡೂ ಹೆಣ್ಣುಗಳು ಆಗಿದ್ದವು; ಆದರೆ ಬಹುಬೇಗ ಹೋದುವಂತೆ. ನನಗೆ ಅವರ ನೆನಪೂ ಇಲ್ಲ. ಅವಕ್ಕೇನಾದರೂ ರೋಗವಿತ್ತೇ? ಜ್ಞಾಪಿಸಿಕೊಂಡರೇ ಎದೆ ನಡುಕವುಂಟಾಗುವುದು. ತಂಗಿ ಯೊಬ್ಬಳು ಬೇರೆ ಇದ್ದು, ಅವಳಿಗೂ ಮೂರ್ಚೆ ಬರುತ್ತಿದ್ದರೆ? ಜೀವನವಿಡೀ ನೋಡಿಕೊಳ್ಳುವುದಲ್ಲದೆ, ಹೆಣ್ಣು ಮಗಳನ್ನು ಮನೆಯಲ್ಲಿಟ್ಟುಕೊಳ್ಳುವ ಅಪಖ್ಯಾತಿ ಬೇರೆ! ಇಲ್ಲದಿದ್ದರೆ, ಯಾರು ತಾನೇ ಗೊತ್ತಿದ್ದೂ ಮೂರ್ಛೆ ರೋಗದವಳನ್ನು ಮದುವೆ ಆಗುತ್ತಾರೆ? ಆಗಬಹುದು, ಆದರೆ ಖಂಡಿತ ಹೃತ್ಪೂರ್ವಕವಾಗಿಯಲ್ಲ; ಹಣದಾಸೆಗೋ ಇನ್ನಾವುದೋ ಆಮಿಷಕ್ಕೊಳಗಾಗಿ, ಆಗ ಬೇರೆಯೇ ರೀತಿಯ ಸಮಸ್ಯೆಗಳು ಪ್ರಾಯಶಃ ಉದ್ಭವವಾಗುತ್ತಿದ್ದುವೆನಿಸುತ್ತದೆ. ಕೊನೆಯ ಪಕ್ಷ, ನಾನು ಅಷ್ಟರಮಟ್ಟಿಗೆ ಅದೃಷ್ಟವಂತ.
ಹುಡುಗನಾಗಿದ್ದಾಗ ಶಶಿಧರ ಹೇಗಿದ್ದ ಎಂಬ ನೆನಪು ನನಗಿನ್ನೂ ಒಂದಷ್ಟಿದೆ, ಮಸುಕು ಮಸಕಾಗಿ, ಮಗುವಿನಲ್ಲಿ ಅವನು ಬೆಳ್ಳಗೆ, ಗುಂಡಗುಂಡ ಗಿದ್ದವನು. ಹಾಗೆ ನೋಡಿದರೆ ಅವನಿಗಿಂತ ನಾನು ಕಪ್ಪು, ನೋಡಲು ಅವನೇ ವಾಸಿ, ಈಗ ಅವನು ಹಾಗಿಲ್ಲದಿರಬಹುದು. ಆದರೆ ಮೊದಲು ತುಂಬ ಚೆನ್ನಾಗಿದ್ದ. ನಮ್ಮಮ್ಮನಿಗೆ ಅವನ ಬಗ್ಗೆ ಹೆಚ್ಚು ಪ್ರೀತಿ-ಕೊನೆಯ ಮಗನಲ್ಲವೇ? ಜೊತೆಗೆ ನೋಡಲು ಚೆನ್ನಾಗಿದ್ದವನು. ಆದರೆ ಅವಳು ನನಗೇನೂ ಕಡಿಮೆ ಮಾಡಿದಳು ಎನ್ನಿಸುವುದಿಲ್ಲ; ಅಥವಾ ಶಶಿಧರನ ಬಗ್ಗೆ ಹುಡುಗನಾಗಿದ್ದಾಗ ನಾನು ಹೊಟ್ಟೆಕಿಚ್ಚು ತೋರಿಸಿದ್ದ ಸ್ಪಷ್ಟ ನೆನಪು ಯಾವುದೂ ಉಳಿದಿಲ್ಲ.
ಅವನಿಗೆ ಹೇಗೆ ರೋಗ ಬಂತು ಎಂದು ನಾನೆಷ್ಟೇ ಬಾರಿ ಯೋಚಿಸಿದ್ದೇನೆ. ಇದರಲ್ಲಿ ಹಲವಾರು ಬಗೆಗಳಿವೆಯತೆ; ಕೆಲವು ವಂಶ ಪಾರಂಪರ್ಯವಾಗಿ ಬರುವಂಥವು. ಇವನಿಗೇನಾದರೂ ಹಾಗೇ ಬಂದಿರಬಹುದೇ? ಅಪ್ಪ-ಅಮ್ಮನಿಗಿಲ್ಲದಿದ್ದರೇನು, ಹಿಂದಿನ ತಲೆಮಾರಿನ ಯಾರಿಗಾದರೂ ಇದ್ದಿರಬಹುದು. ವಂಶದಲ್ಲಿ ತಾನೇ ಇದು ಹೇಗೆ ಬರಬಹುದು! ಕೆಟ್ಟ ಅಭ್ಯಾಸಗಳಿಂದೇನಾದರೂ ಬರಬಹುದೇ? ಎಷ್ಟೋ ವೇಳೆ ಮನಸ್ಸಿಗೆ ವಿಚಾರದಿಂದಾಗಿ ಬೇಸರವಾದಾಗ ಅದೇನು ವಂಶವೋ ನಮ್ಮದು ಎಂದು ಬೇಸರಪಟ್ಟಿದ್ದೇನೆ. ಹಾಗೇನಾದರೂ ವಂಶದಲ್ಲಿ ಇಳಿದುಬಂದಿದ್ದರೆ, ಅಕಸ್ಮಾತ್ ನನಗೇ ರೋಗ ಅಂಟಿಕೊಳ್ಳಬಹುದಾಗಿತ್ತಲ್ಲವೇ ಎಂಬ ಕಲ್ಪನೆಯುಂಟಾದಾಗ ಮೈನಡುಕವುಂಟಾಗುತ್ತದೆ. ನಾನು ಅದೃಷ್ಟವಂತನಲ್ಲವೇ ಎನಿಸುತ್ತದೆ. ಇಲ್ಲದಿದ್ದರೆ ಯಾವ ಯಾವ ರೀತಿಯಲ್ಲಿ ಅನುಭವಿಸಬೇಕಾಗಿತ್ತೋ. ನಾನು ಶಶಿಯನ್ನು ಕಾಣುವಂತೆ ಮಿಕ್ಕವರು ನನ್ನನ್ನು ಕಾಣುತ್ತಿದ್ದರೆ? ಅದರಲ್ಲೂ ದೊಡ್ಡ ಮಗನಾದ ನನಗೇ ಬಂದರೆ ಸಾಕುವವರಾರು? ಹುಶ್, ಅಪಘಾತದಿಂದ ನಾನು ಪಾರಾದೆನೆಂಬ ಅನ್ನಿಸಿಕೆ.   
ಶಶಿಗೆ ಅಪಘಾತದಿಂದ ಇದು ಬಂದಿರಲಿಕ್ಕಿಲ್ಲ. ಮೆದುಳಿಗೆ ಏಟುಬಿದ್ದು ಮೂರ್ಚೆ ಬರಬಹುದಂತೆ. ಆದರೆ ಗಾಯ ವಾಸಿ ಆದಮೇಲೆ ಇದು ಹೋಗುತ್ತದೆ. ಅಥವಾ ಮೆದುಳಿಗೆ ಆದ ಜಖಂ ಸರಿಪಡಿಸಿದ ಮೇಲೆ ಅದು ಮರುಕಳಿಸಲಾರದು. ಆದರೆ ಶಶಿ ಚಿಕ್ಕವನಿದ್ದಾಗ ಯಾವುದೇ ಅಂಥ ಪ್ರಸಂಗವುಂಟಾದಂತೆ ನನಗೆ ನೆನಪಿಲ್ಲ. ಮೊದಲ ಬಾರಿಗೆ ಅವನಿಗೆ ಮೂರ್ಛೆ ಹೇಗೆ ಬಂತು ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಒಮ್ಮ ನಾವಿಬ್ಬರೂ ಊಟಕ್ಕೆ ಕೂತಿದ್ದೆವು. ಅವನಿಗಾಗ ಸುಮಾರು ಎಂಟು ವರ್ಷವಿರಬೇಕು. ಎರಡನೆಯ ಕ್ಲಾಸೋ ಮೂರನೆಯದೋ ಓದುತ್ತಿದ್ದ. ನಾನು ಪ್ರಾಯಶಃ ಹೈಸ್ಕೂಲಿನಲ್ಲಿದ್ದೆ; ಎರಡನೆಯ ವರ್ಷವಿರಬೇಕು. ಅಮ್ಮ ಬಡಿಸುತ್ತಿದ್ದಳು. ಊಟದ ಮಧ್ಯೆ ಅವನು ಒಂದೆರಡು ನಿಮಿಷ ಸುಮ್ಮನೆ ಯಾವುದೋ ಗುಂಗಿನಲ್ಲಿದ್ದಂತೆ ಕೂತಿದ್ದ. ಇದು ನಮ್ಮ ಗಮನಕ್ಕೆ ಬರುತ್ತಿರಲಿಲ್ಲವೇನೋ. ಆಗತಾನೇ ಅಮ್ಮ ಅನ್ನ ಹಾಕಿ ಹುಳಿ ಬಡಿಸುತ್ತಿದ್ದಳು. ಇವನು ಬೇಕು ಬೇಡ ಎನ್ನದೆಯೇ ಕೂತಿರುವಾಗ ಅಮ್ಮನಿಗೆ ಕೋಪ ಬಂತು. ಬೆನ್ನ ಮೇಲೆ ಗುದ್ದು ಹಾಕಿಏನೋ ಅಂಥದ್ದು ಯೋಚನೆ ನಿಂಗೆ, ಬೇಕು ಬೇಡ ಅನ್ನದೆ ಕೂತಿದ್ದೀಯಲ್ಲ" ಅಂದಳು. ಆದರೆ ಗುದ್ದಿನಿಂದ ಅವನು ಎಚ್ಚತ್ತಂತೆ ಕಾಣಿಸಲಿಲ್ಲ. ಆಮೇಲೆ ಒಂದು ನಿಮಿಷದ ಮೇಲೆ ಅವನು ತನ್ನಧ್ಯಾನ'ದಿಂದ ಹೊರಬಂದ, “ಏನಾಯಿತೋ?" ಎಂದು ಅಮ್ಮ-ನಾನು ಇಬ್ಬರೂ ಅವನ ಮೈಯಲುಗಿಸಿ ಕೇಳಿದೆವು. ಅವನುಏನಿಲ್ಲ" ಅಂದ. ಆದರೆ ಅವನು ಇದ್ದಕ್ಕಿದ್ದ ಹಾಗೆ ಮಂಕಾಗಿದ್ದನೇನೋ ಅನ್ನಿಸುತ್ತದೆ ನನಗೆ. ಅಮ್ಮ ಗಾಬರಿಯಾದಳು. ಎಷ್ಟು ವಿಚಾರಿಸಿದರೂ ತನಗೇನಾಯಿತೆಂದು ಅವನು ಹೇಳಲಿಲ್ಲ. “ಏನೂ ಇಲ್ಲ" ಎಂಬುದೇ ಉತ್ತರ. ಅದು ಅವನ ಮೊದಲ ಅಟ್ಯಾಕ್ ಆಗಿರಬಹುದೇ ಎಂದು ಈಗ ನನಗೆ ಅನುಮಾನವಾಗುತ್ತದೆ; ಏಕೆಂದರೆ ಮಕ್ಕಳಲ್ಲಿ ಮೊದಲು ರೀತಿಯಾಗಿಯೇ ರೋಗ ಕಾಣಿಸಿಕೊಳ್ಳುತ್ತದೆಂದು ಓದಿದ ನೆನಪು.
ಮುಂದೆ ರೋಗದ ಸ್ಪಷ್ಟ ಸೂಚನೆಗಳು ಕಾಣಿಸಿದವು. ಸ್ಕೂಲಲ್ಲಿ ಹೋದಾಗಲೂ ಹೀಗೇ ಆಗುತ್ತಿತ್ತಂತೆ; ಅವನ ಸ್ನೇಹಿತರು ಹೇಳುತ್ತಿದ್ದರು. ಒಮ್ಮೆಯಂತೂ ಆಡುತ್ತಿದ್ದಾಗ ಅವನಿಗೆ ಅಟ್ಯಾಕ್ ಆಗಿರಬೇಕು. ಬಿದ್ದು ಮೈ ಕೈ ಎಲ್ಲ ತರಚಿಕೊಂಡು ಬಂದಿದ್ದ. ಆದರೆ ಅದು ರೋಗವೆಂಬ ಕಲ್ಪನೆ ನಮಗೆ ಬಂದಿರಲಿಲ್ಲ. ನಾನಂತೂ ಚಿಕ್ಕವನು. ಅಮ್ಮನಿಗೆ ಇದರ ಅರಿವಿರಲಿಲ್ಲವೇನೋ ಹುಡುಗ ಅನ್ಯಮನಸ್ಕನಾಗಿರುತ್ತಾನೆಂದೇ ಅವಳಿಗೆ ಅನ್ನಿಸಿದ್ದಿರಬೇಕು. ಹರಕೆ ಗಿರಕೆ ಹೊತ್ತಳು ಅಂತ ಕಾಣುತ್ತೆ. ಗಾಯ ಮಾಡಿಕೊಂಡು ಬಂದಾಗ ಎಡವಿ ಬಿದ್ದೆನೆಂದು ಅವನೇ ಹೇಳಿದ್ದ.
ಆದರೆ ಅವನು ಹೈಸ್ಕೂಲಿಗೆ ಸೇರಿದಾಗ ವಿಚಾರ ನಮಗೆ ಗೊತ್ತಾಯಿತು. ಅದೂ ಅವರ ಸ್ಕೂಲಿನ ಮೇಷ್ಟರೊಬ್ಬರಿಂದ. ಅವರು ಅಪ್ಪನಿಗೆ ಪರಿಚಯವಂತೆ. ಅವರೊಮ್ಮೆ ಸಾಯಂಕಾಲ ಶಶಿಯ ಜೊತೆಗೇ ನಮ್ಮ ಮನೆಗೆ ಬಂದರು. ಅಪ್ಪ ಕೂಡ ಅದೇ ತಾನೇ ಬಂದು ಕೈಕಾಲು ತೊಳೆದು ಕಾಫಿ ಕುಡಿಯುತ್ತಿದ್ದರು. ಎಂದೂ ಮನೆಗೆ ಬಾರದ ಪರಿಚಿತರ ಆಗಮನದಿಂದ ಅಪ್ಪನಿಗೆ ಸಡಗರ. ಅದೂ ಬಂದವರು ಶಶಿಯ ಮೇಷ್ಟರು ಬೇರೆ. “ಬನ್ನಿ ಬನ್ನಿ" ಎಂದು ಸಡಗರದಿಂದ ಕರೆದರು.
ಕಾಫಿ ಕುಡಿದಾದ ಮೇಲೆ ಅಪ್ಪ, “ಅಪರೂಪಕ್ಕೆ ಬಂದಿರಿ? ಏನು ಸಮಾಚಾರ" ಅಂದರು.
ಅಂಥದೇನಿಲ್ಲ. ಒಂದು ಸಣ್ಣ ವಿಷಯ ತಿಳಿಸಕ್ಕೆ ಬಂದೆ" ಎಂದರು ಮೇಷ್ಟರು ಸಂಕೋಚ ಅನುಮಾನಗಳಿಂದ.
ಯಾಕೆ, ಶಶಿ ಏನಾದರೂ ಮಾಡಿದನೇನು?" ಅಪ್ಪನಿಗೆ ಗಾಬರಿ.
ಛೆ, ಛೆ, ಅವನು ತುಂಬ ಒಳ್ಳೆಯ ಹುಡುಗ."
ಹಾಗಾದರೆ ಇನ್ನಾವ ವಿಷಯ?"
ಅವನ ಬಗ್ಗೇನೇ, ಆದರೆ ಅವನ ನಡವಳಿಕೆ ವಿಚಾರವಲ್ಲ."
ಚೆನ್ನಾಗಿ ಓದಲ್ಲವೇನು? ನಿಮ್ಮ ಕೈಯಲ್ಲಿದ್ದಾನೆ. ಚೆನ್ನಾಗಿ ಬುದ್ಧಿ ಕಲಿಸಿ. ನಿಮಗೆ ಹೇಗೆ ತೋಚುತ್ತೊ ಹಾಗೆ ಅವನಿಗೆ ಶಿಕ್ಷೆ ಕೊಡಿ."
          “ಅದೆಲ್ಲ ಅಲ್ಲ. ಸ್ವಲ್ಪ ಅನುಮಾನ ಬಂದಿದೆ ನನಗೆ. ಏನೂ ತಪ್ಪು ತಿಳಿದುಕೋಬೇಡಿ. ಅವನ ಆರೋಗ್ಯದ ವಿಚಾರ."
ಅಪ್ಪನ ಮನಸ್ಸಿನಲ್ಲಿ ಆಗ ಏನಾಗುತ್ತಿದ್ದಿರಬಹುದು? ಒಂದು ರೀತಿಯ ಒಗಟಿನಂತೆ ಮಾತನಾಡುತ್ತಿದ್ದ ಮೇಷ್ಟರ ಧಾಟಿ ಎಂತಹವರಲ್ಲೂ ಕಾತರವುಂಟು ಮಾಡುವ ರೀತಿಯದಾಗಿತ್ತು. ನನಗೂ ಸ್ವಲ್ಪ ಹಾಗೇ ಅದದ್ದರ ಜೊತೆಗೆ ಅವರೇನು ಹೇಳುತ್ತಾರೋ ಎಂಬ ಕುತೂಹಲ ಬೇರೆ ಹೆಚ್ಚಾಯಿತು. ನನಗೇ ಹಾಗಾಗಿರ ಬೇಕಾದರೆ ಇನ್ನು ಅಪ್ಪನಿಗೆ? ಅಪ್ಪ ವಿಹ್ವಲರಾಗಿದಯವಿಟ್ಟು ಬಿಡಿಸಿ ಹೇಳಿ ಮೇಷ್ಟ್ರೇ, ಒಗಟು ಮಾತನಾಡಬೇಡಿ" ಎಂದಾಗ ಅವರು ಅಂಗಲಾಚುವ ಧ್ವನಿಯನ್ನೇ ತಾಳಿದ್ದಂತೆ ಕಂಡಿತು.
ಇದು ನನ್ನ ಅನುಮಾನ ಅಷ್ಟೆ" ಎಂದು ಪ್ರಾರಂಭಿಸಿದ ಮೇಷ್ಟರು ನಡೆದ ವಿಚಾರ ತಿಳಿಸಿದರು. ಆವತ್ತು ಮಧ್ಯಾಹ್ನ ಶಶಿಯ ಕ್ಲಾಸಿನಲ್ಲಿ ಮೇಷ್ಟರ ಪಾಠವಿತ್ತಂತೆ. ಪಾಠದ ಮಧ್ಯೆ ಯಾವನೋ ಹುಡುಗ ಗಮನವಿಟ್ಟು ಕೇಳದೆ ಅತ್ತ ಇತ್ತ ಮಿಸುಕಾಡುತ್ತಿದ್ದುದನ್ನು ಕಂಡು ಹುಡುಗನನ್ನು ಬೈದರಂತೆ. ಆದರೆ ಅವನುಸಾರ್. ಶಶಿಧರ ಹೇಗೆಹೇಗೋ ಆಡ್ತಿದ್ದಾನೆ" ಅಂದಾಗ ಇವರು ತಮ್ಮ ಸ್ಥಳದಿಂದ ಹುಡುಗನ ಹಿಂದಿನ ಬೆಂಚಲ್ಲಿ ಕೂತ ಶಶಿಧರನ ಹತ್ತಿರ ಹೋದರು. ಅವನು ತುಂಬ ಬೆವತಿದ್ದ, ಬಾಯ ಕೊನೆಯಲ್ಲಿ ಒಂದಷ್ಟು ಜೊಲ್ಲು ಕಾಣಿಸಿಕೊಂಡಿತ್ತು. ಕೈ ಮುಷ್ಠಿಗಳು ಬಿಗಿಯಾಗಿದ್ದವು. ಪಕ್ಕದ ಹುಡುಗರನ್ನು ಬೆಂಚಿನಿಂದ ಮೇಲಕ್ಕೇಳಿಸಿ ಅವನನ್ನು ಬೆಂಚಿನ ಮೇಲೆ ಮಲಗಿಸಿದರಂತೆ. ಒಂದೆರಡು ಕ್ಷಣಗಳ ನಂತರ ಶಶಿ ಎಚ್ಚರವಾದಏನಪ್ಪ?" ಎಂದವರು ಮೃದುವಾಗಿ ಕೇಳಿದರೆ ಅವನುಏನಿಲ್ಲ" ಎಂದನಂತೆ. ಅವನನ್ನು ಬೇರೊಬ್ಬ ಹುಡುಗನೊಟ್ಟಿಗೆ ಹೊರಗೆ ಕಳಿಸಿ ಮುಖ ಬಾಯಿ ತೊಳೆದು ಬರಲು ಹೇಳಿದರಂತೆ. ಸಾಯಂಕಾಲ ಸ್ಕೂಲು ಆದ ಮೇಲೆ ನನ್ನನ್ನು ನಿಮ್ಮ ಮನೆಗೆ ಕರಕೊಂಡು ಹೋಗು ಎಂದು ತಾವೇ ಬಂದರಂತೆ. “ಇದು ಎಪಿಲೆಪ್ಸಿ ಅನ್ನೋ ಅನುಮಾನ ನಂಗೆ" ಎಂದು ಮೆದುವಾಗಿ ಹೇಳಿದರು. ಅಪ್ಪ ತಲೆಯ ಮೇಲೆ ಕೈ ಹೊತ್ತು ಕೂತರು. ನನಗೂ ಏನೋ ಒಂಥರ ಆಯಿತು, ಅಪ್ಪನ ರೀತಿ ನೋಡಿ, ಮೇಷ್ಟರು ಹೇಳಿದ್ದು ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ; ಎಪಿಲೆಪ್ಸಿ ಎಂಬುದನ್ನು ಅದುವರೆಗೆ ಕೇಳಿರಲಿಲ್ಲ. ಅಪ್ಪನ ಚಿಂತೆಯನ್ನು ಕಂಡು ಮೇಷ್ಟರು ಅವರ ಭುಜದ ಮೇಲೆ ಕೈಯಿಟ್ಟುಸಮಾಧಾನ ಮಾಡಿಕೊಳ್ಳಿ ಇದು ನನ್ನ ಅನುಮಾನ, ಅಷ್ಟೆ, ದೇವರ ದಯೆಯಿಂದ ನನ್ನನುಮಾನ ಸುಳ್ಳಾಗಿರಲಿ, ಆದರೂ ಡಾಕ್ಟರಿಗೆ ತೋರಿಸಿ ಈಗಲಿಂದಲೇ ಉಪಚಾರ ಮಾಡಿದರೆ ಸರಿಹೋಗುತ್ತೇನೋ" ಎಂದು ಹೇಳಿ ಹೊರಟು ಹೋದರು.
ಮೇಷ್ಟರು ಹೇಳಿದ ವಿಚಾರಾನ ಅಮ್ಮನಿಗೆ ಅಪ್ಪ ವಿವರಿಸಿದಾಗ ಅವಳು ಗೊಳೋ ಎಂದು ಅಳುತ್ತ ಕೂತಳು. “ಎಂಥ ಶಿಕ್ಷೆ ಕೊಟ್ಟ್ಯಪ್ಪ ದೇವರೇ" ಅಂತ ಗೋಳಾಡಿದಳು. ಏನಾಗಿದೆ ಎಂಬ ಅರಿವು ನನಗೆ ಅಷ್ಟೊಂದಿರಲಿಲ್ಲ. ಆದರೆ ಹೊತ್ತಿಗಾಗಲೇ ಬೇರೆಯವರಿಗೆ ಮೂರ್ಛೆರೋಗ ಬಂದಿದ್ದನ್ನು ಕಂಡಿದ್ದ ನಾನು ಅಪ್ಪನ ವಿವರಣೆ ಕೇಳಿ ಶಶಿಗೆ ಯಾವ ರೋಗವಿರಬಹುದು ಎಂಬ ಕಲ್ಪನೆಯುಂಟಾಯಿತು. ಬರಬರುತ್ತ ಅವನ ಮೂರ್ಛೆಯ ಅವ ಮತ್ತು ಉಲ್ಬಣಿಕೆ ಹೆಚ್ಚಾದವು. ಡಾಕ್ಟರರಿಗೆ ತೋರಿಸಿಕೊಂಡು ಬಂದಾಗಿತ್ತು. ಅವರಂತೂ ನಿತ್ಯವೂ ನುಂಗಬೇಕೆಂದು ಮಾತ್ರೆಗಳನ್ನು ಬರೆದುಕೊಟ್ಟರು. ಮಾತ್ರೆಗಳನ್ನು ಒಂದೆರಡು ದಿನ ಬಿಟ್ಟರೆ ಮೂರ್ಛೆ ವಿಪರೀತ ಬರುತ್ತಿತ್ತು. ಬೇಗ ಬೇಗ ಬರುತ್ತಿತ್ತು. ಮೊದಮೊದಲು ನನಗೆ ಗಾಬರಿ ಆಗುತ್ತಿತ್ತು. ಅಮ್ಮ ಅಪ್ಪ ಅವನನ್ನು ಹಿಡಿದುಕೊಳ್ಳುತ್ತಿದ್ದರು. ಅಪ್ಪ ಮನೆಯಲ್ಲಿಲ್ಲದಾಗ ಅಮ್ಮನೊಬ್ಬಳಿಂದ ಅವನನ್ನು ತಡೆಯುವುದು ಸಾಧ್ಯವಿರಲಿಲ್ಲ. ನನ್ನನ್ನು ಕರೆಯುತ್ತಿದ್ದಳು. ನನಗೆ ಮೊದಮೊದಲು ಭಯವಾಗುತ್ತಿತ್ತು. ಅಮ್ಮ ಕೂಗಿದಾಗ ಹೋಗಲು ಹಿಂಜರಿದರೆಬೇಗ ಬಾರೋ, ಶನಿ, ನೀನೇನು ಸಾಯೋದಿಲ್ಲ ಎಂದು ಅಬ್ಬರಿಸುತ್ತಿದ್ದಳು. ಕಾಲ ಸರಿದಂತೆ ನನಗೆ ಇದೆಲ್ಲ ಅಭ್ಯಾಸವಾಯಿತು.
ಪ್ರತಿನಿತ್ಯ ಔಷಧಿಯ ಸೇವನೆಯಿಂದ ಮೂರ್ಛೆ ಹತೋಟಿಗೆ ಬಂದರೂ ಪೂರ್ತಿ ನಿಂತು ಹೋಗಲಿಲ್ಲ. ಇದು ಪೂರ್ತಿ ಗುಣ ಆಗುವ ಕಾಯಿಲೆ ಅಲ್ಲ ಎಂದು ಡಾಕ್ಟರು ಹೇಳಿದ್ದರು. ಹೀಗಾಗಿ ಔಷಧದ ಸೇವನೆಯಿಂದ, ರೋಗದ ಹೊಡೆತದಿಂದ ಶಶಿ ಮಂಕಾಗುತ್ತ ಬಂದ. ಅಂದರೆ ಅವನ ನಿತ್ಯ ಜೀವನದಲ್ಲಿ ಅವನು ಉತ್ಸಾಹದಿಂದಿರಲಿಲ್ಲವೆಂದಲ್ಲ; ಅವನ ಬುದ್ಧಿ ಮಂದವಾಯಿತೇನೋ! ಅವನ ಮಾತು ವಿಚಿತ್ರ ಆಗಿದೆಯೇನೋ ಎನ್ನಿಸುವುದು ಇದರಿಂದಲೇ ಎನಿಸುತ್ತದೆ. ಇದು ಮೆದುಳಿನ ಸಮಸ್ಯೆಯಾದ್ದರಿಂದ ಮೆದುಳಿಗೆ ಪ್ರತಿ ಮೂರ್ಛೆಯಿಂದಲೂ ಒಂದಷ್ಟು ಆಘಾತ ಆಗುತ್ತದೆ. ಆಘಾತಗಳನ್ನು ತಡೆಯಲು ಮೂರ್ಛೆ ಬರುವುದನ್ನು ಕಡಿಮೆ ಮಾಡಬೇಕು. ಅದಕ್ಕಾಗಿ ಪ್ರತಿನಿತ್ಯದ ಔಷ. ದೀರ್ಘ ಕಾಲದ ಔಷದಿಯ ಸೇವನೆಯಿಂದಾಗಿ ಉಂಟಾಗುವ ಅನ್ಯ ಪರಿಣಾಮಗಳು, ಅದರಿಂದ ಮಿದುಳಿನ ಶಕ್ತಿ ಕುಂಠಿತವಾಗುತ್ತದೆಯೆಂದು ಡಾಕ್ಟರು ವಿವರಿಸಿದ್ದರು.
ಮುಂದೆ ಶಶಿಯ ಉಪಚಾರದ ಹೊಣೆ ಸಂಪೂರ್ಣವಾಗಿ ನನ್ನ ಮೇಲೆ ಬಿದ್ದ ನಂತರ, ಸಹಾನುಭೂತಿಯಿಂದ ಅವನಿಗೇನಾದರೂ ಮಾಡಲು ಸಾಧ್ಯವೋ ಎಂಬ ಕಾತರದಿಂದ, ರೋಗದ ಬಗ್ಗೆ ಪರಿಣತರು ಸಾಮಾನ್ಯ ಜನರಿಗಾಗಿ ಬರೆದ ಪುಸ್ತಕಗಳನ್ನು ಓದಿದ್ದೆ, ಮೂರ್ಛೆಯೇ ರೋಗವಲ್ಲ, ಅದು ಸಿಂಪ್ಟಮ್ ಅಷ್ಟೇ ಅಂತೆ. ಎಂದರೆ ಮೂರ್ಛೆಗೆ ಹಲವಾರು ಕಾರಣಗಳು; ಆದರೆ ಬಹು ಸಂಖ್ಯೆಯ ಮೂರ್ಛೆ ರೋಗಗಳಲ್ಲಿ ಕಾರಣವಾವುದೆಂದು ಹೇಳಲಾಗುವುದಿಲ್ಲ. ಮೂರ್ಛೆ ಬರುವುದಕ್ಕೆ ಹಿನ್ನೆಲೆಯೆಂದರೆ ಮೆದುಳಿನಲ್ಲಿ ಉತ್ಪತ್ತಿ ಆಗುವ ವಿಪರೀತ ಎಲೆಕ್ಟ್ರಿಕಲ್ ಡಿಸ್ಚಾರ್ಜ್. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಆದರೆ ರೋಗಿಗಳಲ್ಲಿ ಡಿಸ್ಚಾರ್ಜ್ ತುಂಬ ಹೆಚ್ಚು. ಆದ್ದರಿಂದಲೇ ಮೆದುಳಿನಲ್ಲಿ ಉಂಟಾದ ವಿದ್ಯುತ್ತು ನರಗಳ ಮೂಲಕ ದೇಹವನ್ನು ವ್ಯಾಪಿಸಿಕೊಳ್ಳುತ್ತದಂತೆ. ಅದಕ್ಕೇ ಮೂರ್ಛೆ ಕಾಣಿಸಿಕೊಂಡಾಗ ಮೈಯೆಲ್ಲ ಅಲುಗಾಡುವುದು, ಷಾಕ್ನಿಂದಾಗಿ; ಜೊತೆಗೆ ಪ್ರಜ್ಞೆ ಹೋಗುವುದು.
ಇಷ್ಟು ವೈದ್ಯರು ಹೇಳುವ ರೀತಿ. ಆದರೆ ಅದು ಬಂದಾಗ ಶಶಿಗೆ ಏನಾಗುತ್ತಿರಬಹುದು ಎಂದು ನಾನು ಊಹಿಸಿಕೊಳ್ಳಲು ವಿವರಣೆಯ ಹಿನ್ನೆಲೆಯಲ್ಲಿ ಪ್ರಯತ್ನಿಸುತ್ತೇನೆ. ಅವನಿಗೆ ನೋವಾಗುತ್ತದೆಯೇ? ಸಂಕಟವಾಗು ತ್ತದೆಯೇ? ಎಲೆಕ್ಟ್ರಿಕಲ್ ಡಿಸ್ಚಾರ್ಜ್ನಿಂದ ಷಾಕ್ ಹೊಡೆದರೆ ಮೈ ಜುಂ ಎನ್ನುತ್ತದೆಯೇ? ಆದರೆ ಮೂರ್ಛೆ ಕಾಲದಲ್ಲಿ ಪ್ರಜ್ಞೆ ತಪ್ಪಿರುವುದರಿಂದ ರೋಗಿಗೆ ಆದದ್ದೇನೂ ತಿಳಿಯಲಾರದಲ್ಲ. ಇದೆಂಥ ರೋಗವಿದು! ಅದು ದೇಹವನ್ನೆಲ್ಲ ವ್ಯಾಪಿಸಿಕೊಂಡಾಗ ಏನೂ ಗೊತ್ತಾಗದು. ಆದರೆ ನಿಧಾನವಾಗಿ ಇಡೀ ಅಸ್ತಿತ್ವದ ಮೇಲೆ ಪರಿಣಾಮ ಬೀರಿ ಜೀವನವನ್ನೇ ಹಾಳು ಮಾಡುತ್ತದಲ್ಲ. ಎನಿಸಿ ಬೇಸರವಾಗುತ್ತದೆ.
ಮಿಕ್ಕನಾದಂತೆ ಶಶಿಧರ ಬೇರೆಯವರಂತೆಯೇ ಇದ್ದಾನಲ್ಲ. ಊಟ, ತಿಂಡಿ, ನಿದ್ದೆ - ದೈನಂದಿನ ಜೀವನ ನಮ್ಮದರಂತೆಯೇ, ಹಾಗಾದರೆ ಮಿಕ್ಕೆಲ್ಲ ಆಸೆ- ಆಕಾಂಕ್ಷೆಗಳೂ ನಾರ್ಮಲ್ ಆಗಿಯೇ ಇರಬೇಕಲ್ಲ. ಸಿಟ್ಟು ಕೋಪ, ಬೇಸರ ಎಲ್ಲವೂ ಅವನಲ್ಲಿ ಕಾಣಿಸಿಕೊಳ್ಳುತ್ತವೆ. ಅವನಿಗೆ ಲೈಂಗಿಕ ಆಸೆಯೂ ಇರಬೇಕಲ್ಲ. ಎಷ್ಟೋ ಜನರು ಮದುವೆ ಆಗಿದ್ದಾರಲ್ಲವೇ? ಆದರೆ ಮಕ್ಕಳಿಗೆ ರೋಗ ಬರುವ ಸಾಧ್ಯತೆಗಳು ಇರುತ್ತವಂತಲ್ಲ. ಇಬ್ಬರೂ-ಗಂಡ-ಹೆಂಡಿರು- ಮೂರ್ಛೆರೋಗದವರಾದರೆ ಮಕ್ಕಳಿಗೆ ಖಂಡಿತ ರೋಗ ಬರುತ್ತದೆ.
ರೋಗವನ್ನುಳಿದು ಮಿಕ್ಕಂತೆ ಅವನೂ ನಮ್ಮಂತಲ್ಲವೇ? ಆದರೆ ನಾನು ಚಿಕ್ಕವನಾಗಿದ್ದಾಗ ಮನೆಯಲ್ಲಿ ಶಶಿಗೆ ಮೂರ್ಚೆಬಂದು ಅದನ್ನು ಹುಡುಗರಾದರೂ ನೋಡಿದಾಗ ಶಶಿಗೆ ಯಾಕೆ ಹೀಗಾಗುತ್ತೆ?" ಅಂತ ಕೇಳಿದಾಗ ನನಗೆ ಕೋಪ-ಅಪಮಾನಗಳುಂಟಾದಂತೆ ಎನಿಸುತ್ತಿದ್ದವು. ಅವನಿಂದಾಗಿ ನಮ್ಮ ಮನೆಯವರಿಗೆಲ್ಲ ಏನೋ ಕುಂದು ಬಂದಿದೆಯೆನಿಸುತ್ತಿತ್ತು. ಅವನ ರೋಗದ ಬಗ್ಗೆ ಯಾರಾದರೂ ಕೇಳಿದರೆ ನಾಚಿಕೆಯಾಗುತ್ತಿತ್ತಲ್ಲ! ಅಷ್ಟೇಕೆ. ಈಗಲೂ ಎಷ್ಟೋ ಬಾರಿ ಮೂರ್ಚೆ ಬಂದ ಸನ್ನಿವೇಶಗಳಲ್ಲಿ ಅವನ ಬಗ್ಗೆ ಬೇಸರಪಟ್ಟುಕೊಂಡಿಲ್ಲವೇ? ಜೀವನಪೂರ್ತಿ ಗಂಟು ಬಿದ್ದ ಸಮಸ್ಯೆ ಎಂದು ನನಗನಿಸಲಿಲ್ಲವೇ?
ಮೂರ್ಛೆಯಿಂದಾಗಿ ನಿಧಾನವಾದ ಪರಿಣಾಮ ಮೆದುಳಿನ ಮೇಲೆ ಆಗಿ, ನಂತರ ಕ್ರಮೇಣ ದೇಹದ ಮೇಲಾಗುತ್ತದೆ. ಆದರೆ ಹುಟ್ಟುತ್ತಲೇ ಮಂಕರಾಗಿರುವವರು ಎಷ್ಟು ಜನರಿಲ್ಲ? ಮೂರ್ಚೆ ಬರದೇ ಇವನಿಗಿಂತ ದಡ್ಡರಾದವರು ಬೇಕಾದಷ್ಟು ಜನರಿದ್ದಾರೆ. ಅವರಿಗಿಂತ ಇವನು ಮೇಲಲ್ಲವೇ? ಆದರೆ ಜನ ಏಕೆ ಇವನನ್ನು ಗಾಬ ರಿಯಿಂದ ದೂರದಿಂದಲೇ ನೋಡುತ್ತಾರಲ್ಲ! ಇವನು ತುಂಬ ಬುದ್ಧಿವಂತನಲ್ಲದಿರ ಬಹುದು, ಆದರೆ ಸಾಕಷ್ಟು ಬುದ್ಧಿ ಶಕ್ತಿಯಿದೆ. ಡ್ರಾಫ್ಟ್ಮನ್ಶಿಪ್ ಪಾಸಾಗಿ ಡ್ರಾಯಿಂಗ್ ಮಾಡುತ್ತಾನಲ್ಲ. ಇಷ್ಟು ಬುದ್ಧಿ ಶಕ್ತಿ ಏನು ಕಡಿಮೆಯೇ? ತನ್ನ ಜೀವನಕ್ಕೆ ಬೇಕಾದ ಹಾಗೆ ಸಂಪಾದನೆ ಮಾಡುತ್ತಾನೆ; ಅವನ ಕಾಲಮೇಲೆ ಅವನು ನಿಂತಿದ್ದಾನೆ. ನಾನು ನೋಡಿಕೊಳ್ಳುವುದು ಎಂದರೇನು ಹಾಗಾದರೆ? ಮನೆಯಲ್ಲಿಟ್ಟು ಕೊಂಡಿರುವುದು ತಾನೇ?
ಅವನೇ ಒಂದು ಮನೆ ಮಾಡಿ ಮದುವೆಯಾದರೆ? ಹೆಂಡತಿ ನನ್ನ ಕೆಲಸ ವಹಿಸಿಕೊಳ್ಳಬಹುದಲ್ಲ. ಯಾರಾದರೂ ಬಡ ಹುಡುಗಿಯನ್ನು ಮದುವೆಗೆ ಒಪ್ಪಿಸಬಹುದೆನಿಸುತ್ತದೆ; ದಿಕ್ಕಿಲ್ಲದವಳಾದರೆ ಅವಳಿಗೂ ಒಂದು ನೆಲೆಯಾಗುತ್ತದೆ. ಇವನಿಗೂ ದಿಕ್ಕಾಗುತ್ತದೆ ಎನಿಸಿತ್ತು. ಆದ್ದರಿಂದ ಅವನಿಗೆ ಒಮ್ಮೆನೀನು ಯಾಕೋ ಮದುವೆ ಮಾಡಿಕೊಂಡು ಹಾಯಾಗಿರಬಾರದು?" ಎಂದಿದ್ದೆ.
ನಾನು ಸಾಯೋದಲ್ಲದೆ ಯಾವಳ್ನೋ ಹುಡುಗೀನು ಕೊಲ್ಲಬೇಕಾ?" ಎಂದು ಮರುಪ್ರಶ್ನೆ ಮಾಡಿದ್ದ.
ಕೊಲ್ಲೋದೇನಿದೆಯೋ ಇದರಲ್ಲಿ? ನಿನ್ನ ನೋಡಿಕೊಳ್ಳೋಕೆ ಒಬ್ಳು ದಿಕ್ಕಾದರೂ ಸಿಕ್ಕುತ್ತಲ್ಲ ಕೊನೇಪಕ್ಷ."
ಅಂದರೆ ನಾನು ನಿನ್ನ ಜೊತೇಲಿರೋದು ನಿಂಗೆ ಬೇಜಾರಾಗಿದೆ ಅನ್ನು. ಅಷ್ಟು ಹೇಳಕ್ಕೆ ಇಷ್ಟೊಂದು ಮಾತು ಯಾಕೆ? ನಾನು ಬೇರೆ ಹೋಗ್ತೀನಿ ಬಿಡು" ಎಂದಿದ್ದ. ನನಗಾಗ ಸಿಟ್ಟು ಬಂದಿತ್ತು.
ಮಹಾ ಬುದ್ಧಿವಂತ ಕಣಯ್ಯ ನೀನು. ಏನೋ ಒಳ್ಳೇದಕ್ಕೆ ಹೇಳಿದರೆ ಏನೇನೋ ಅರ್ಥಮಾಡ್ತಾನೆ. ನೀನೇನು ಅಂದುಕೊಂಡಿದ್ದೀಯೋ ಹಾಗೇ ಮಾಡು ನಮಸ್ಕಾರ" ಎಂದಿದ್ದೆ.
ಮಾತುಕತೆಯಿಂದ ಎರಡು ವಿಚಾರ ನನ್ನ ಆಲೋಚನೇಲಿ ಸಿಕ್ಕಿ ಹಾಕಿಕೊಂಡವು. ಇವನು ಎಷ್ಟು ಚೆನ್ನಾಗಿ ಆಲೋಚನೆ ಮಾಡ್ತಾನೆ. ತನ್ನ ಮದುವೆಯಿಂದ ಹುಡುಗಿ ಒಬ್ಬಳಿಗೆ ತಾನು ಭಾರವಾಗ್ತೀನಿ ಅನ್ನೋ ಪರಿಜ್ಞಾನ ಇವನಿಗಿದೆಯಲ್ಲ. ಎಲ್ಲರಂತಿರೋ ಹುಡುಗಿಗೆ ತನ್ನಂಥ ರೋಗಿ ಗಂಡ ಸಿಕ್ಕರೆ ಅವಳ ಆಶೋತ್ತರಗಳಿಗೆ ಕುಂದು ಉಂಟಾಗುತ್ತೆ ಅನ್ನುವಷ್ಟು ಸೂಕ್ಷ್ಮವಾಗಿ ವಿಚಾರ ಮಾಡ್ತಾನಲ್ಲ ಇವನು, ರೋಗದಿಂದ ಇವನ ಸೂಕ್ಷ್ಮತೆಗೇನೂ ಕುಂದುಬಂದಿಲ್ಲ ವೇನೋ ಅನ್ನಿಸಿತ್ತು. ಇನ್ನೊಂದು ಅಂದರೆ ಅವನು ಹೇಳಿದ್ದ ಮಾತು. ನಿನಗೆ ದಿಕ್ಕಾಗುತ್ತೆ ಅಂದಾಗ ನಾನು ಜೊತೇಲಿರೋದು ಬೇಜಾರಾ ಅಂದಿದ್ದ. ನಿಜವಾಗಲೂ ನನ್ನ ಮನಸ್ಸಲ್ಲಿ ಯೋಚನೆ ಇತ್ತೇ? ಅವನು ಮದುವೆಯಾಗಿ ಬೇರೆ ಹೋದರೆ ನನ್ನ ಜವಾಬ್ದಾರಿ ಕಡಮೆ ಆಗತ್ತೆ ಅನ್ನೋ ಆಲೋಚನೆ ಸುಪ್ತಪ್ರಜ್ಞೆಯಲ್ಲಿ ಮನೆಮಾಡಿಕೊಂಡಿದೆಯೇ? ಅವನಿಲ್ಲದಿದ್ದರೆ ನನ್ನ ಸಂಸಾರ ಇನ್ನೂ ಸುಖಮಯವಾಗುವುದಿಲ್ಲವೇ? ಉಹ್ಞೂ. ಅರ್ಥದಿಂದ ನಾನು ಅವನಿಗೆ ಮದುವೆಯ ಸೂಚನೆ ಕೊಡ್ಲಿಲ್ಲ. ಒಂದು ಅಂಶ ಬಿಟ್ಟು. ಮಿಕ್ಕ ಎಲ್ಲದರಲ್ಲೂ ನಮ್ಮ ಹಾಗೆಯೇ ಇರೋನಿಗೆ ಸುಖ ಯಾಕೆ ಕಡಮೆಯಾಗಬೇಕು ಅನ್ನುವ ಬುದ್ಧಿಯಲ್ಲವೇ ತನ್ನದು? ಹೋಗಲಿ. ಮದುವೆ ಬೇಡ. ಹೇಗಾದರೂ ಸುಖಪಡಿ ಅಂತ ಹೇಳಲೇ. ಥೂ, ನನ್ನ, ಇಂಥದನ್ನೇನಾ ನಾನು ಹೇಳೋದು. ಯಾವಳಾದರೂ ಸೂಳೇ ಮನೆಗೆ ಹೋಗು ಅಂತ ಅಣ್ಣ ತಮ್ಮನಿಗೆ ಹೇಳೋಕಾಗತ್ತಾ? ಅಥವಾ ಅವನೇ ಇಂಥ ಪ್ರಯತ್ನವೇನಾದರೂ ಮಾಡಿದಾನೆಯೋ? ಹಾಗಂದು ಕೊಂಡಾಗ ನನ್ನ ಕಲ್ಪನೆ ಹರಡಿಕೊಳ್ಳುತ್ತೆ. ಇವನು ಯಾವಳಾದರೂ ಒಬ್ಬಳ ಜೊತೆ ಮಲಗಿರುವಾಗ ಇವನಿಗೆ ಅಟ್ಯಾಕ್ ಆದರೆ ಅವಳ ಗತಿ ಏನಾಗಬೇಕು? ಇನ್ನೊಂದು ಸಲ ಇವನನ್ನು ಹತ್ತಿರ ಸೇರಿಸ್ತಾಳಾ? ಮದುವೆಯಾದರೂ ಹೆಂಡತಿಗೂ ಇದೇ ತಾನೇ ಆಗೋದು ಅನ್ನಿಸಿ ನನ್ನ ಕಲ್ಪನೆ ಇನ್ನೂ ಉಗ್ರವಾಗುತ್ತದೆ. ಹೆಂಡತಿ ಅಂದಾಗ ರಮ ನೆನಪಿಗೆ ಬರುತ್ತಾಳೆ. ನನಗೂ ಏನಾದರೂ ಮೂರ್ಛೆ ಬಂದು ಗಿಂದಿದ್ದಿದ್ದರೆ ರಮ ಹೇಗಿರ್ತಾ ಇದ್ದಳು. ಭಯವಾಗುತ್ತೆ. ಶಶಿ ತುಂಬ ಸಮಜಂಸವಾಗಿ ಯೋಚನೆ ಮಾಡ್ತಾನೇನೋ ಅನ್ನಿಸಿ ಗೌರವವುಂಟಾಗುತ್ತೆ.

ಮದುವೆ ಅಂದರೆ ಬರೀ ಸುಖ ಅಲ್ಲವಲ್ಲ. ಜವಾಬ್ದಾರಿ ಬೇರೆ. ಹೆಂಡತಿಯನ್ನ ನೋಡ್ಕೊಳ್ಳೋದರ ಜೊತೆಗೆ ಮುಂದೆ ಮಕ್ಕಳೂ ಆಗ್ತವಲ್ಲ. ಅವನ್ನ ಸಾಕಬೇಕು. ಅಕಸ್ಮಾತ್ ಮಗುವಿಗೇನಾದರೂ ರೋಗ ಬಂದರೆ ಎದೆ ಡವಡವಗುಟ್ಟುತ್ತದೆ. ಸುಷ್ಮಾ, ಪೃಥ್ವಿಯರು ನೆನಪಾಗುತ್ತಾರೆ. ನಮ್ಮ ವಂಶದಲ್ಲಿರೋ ಶಶಿಗೆ ಬಂದ ಕಾಯಿಲೆ ನನ್ನ ಮಕ್ಕಳಿಗೆ ಬಂದರೆ! ಬರೋದಕ್ಕೆ ಅಡ್ಡಿಯೇನಿಲ್ಲವಲ್ಲ ಎನ್ನಿಸಿ ವಿಲಕ್ಷಣ ಸಂಕಟವಾಗುತ್ತೆ. ಎಷ್ಟೋ ಸಲ ಪೃಥ್ವಿಯೊ ಸುಷ್ಮಾನೋ ಎಲ್ಲೋ ನೆಟ್ಟನೋಟದಿಂದ ನೋಡ್ತಾ ಇದ್ದರೆ ತಕ್ಷಣ ಅವತ್ತು ಊಟ ಮಾಡ್ತಾ ಇರೋವಾಗ ಶಶಿ ನೋಡ್ತಿದ್ದನಲ್ಲ, ದೃಶ್ಯ ನೆನಪಾಗುತ್ತದೆ. ಅವರನ್ನು ಮೈ ಹಿಡಿದು ಅಲುಗಿಸಿ ಯಾಕೋ ಎಂದು ಕೇಳುತ್ತೇನೆ. ಅವರು ನನ್ನ ಅಲುಗಿಸುವಿಕೆಯಿಂದ ಗಾಬರಿಯಾಗಿಯಾಕಣ್ಣ, ಅದನ್ನ ನೋಡ್ತಾ ಇದ್ದೆ ಅಷ್ಟೆ" ಎಂದು ಅಸಮಾಧಾನದಿಂದ ಹೇಳುತ್ತಾರೆ. ಸುಷ್ಮಾಳ ವಯಸ್ಸಿನಲ್ಲಲ್ಲವೇ ಶಶಿಗೆ ಮೊದಲಬಾರಿ ಹಾಗಾದದ್ದು ಅನ್ನಿಸಿ ಅವಳನ್ನು ನೋಡಿದರೆ ಏನು ಗತಿಯೋ ಎಂಬ ತವಕವುಂಟಾಗುತ್ತದೆ. ಅದಕ್ಕೇ ಇರಬೇಕು ರಮ ಕೂಡ ಮಕ್ಕಳನ್ನು ಶಶಿಯು ಹತ್ತಿರ ಬಿಡುವುದಕ್ಕೆ ಹೆದರ್ತಾಳೆ. ಜೊತೆಗಿದ್ದಾಗ, ಅವನಿಗೆ ಮೂರ್ಛೆ ಬಂದು ಅದರಿಂದ ಏನಾದರೂ ಆಗಬಹುದೆಂಬ ಗಾಬರಿಯ ಜೊತೆಗೆ, ಹುಡುಗರಿಗೂ ರೋಗ ಬಂದರೆ ಎಂಬ ಕಲ್ಪನೆ ಅವಳಿಗುಂಟಾಗುತ್ತಿರಬೇಕೇನೋ. ಅದರಿಂದಲೇ ಶಶಿಯ ಬಗ್ಗೆ ಅವಳ ಅಸಹನೆ ಇರಬೇಕು ಅನ್ನಿಸುತ್ತೆ. ಇದರಲ್ಲೇನೂ ಅಸಹಜತೆಯಿಲ್ಲವಲ್ಲ. ನಾನು ಯಾಕೆ ಅವಳ ಬಗ್ಗೆ ಕೆಲವು ಸಾರಿ ಕ್ರೂರವಾಗಿ ಆಲೋಚನೆ ಮಾಡ್ತೀನಿ?                                                                       ***

No comments: