Wednesday, 28 May 2014

ಜಿಎಸ್‍ಎಸ್ ಅವರ ಕಾವ್ಯಮೀಮಾಂಸೆ

ಜಿಎಸ್‍ಎಸ್ ಅವರ ಕಾವ್ಯಮೀಮಾಂಸೆ


             ಜಿಎಸ್ಎಸ್ ತಮ್ಮ ಕಾವ್ಯಸಂಬಂಧೀ ಚಿಂತನೆಯಲ್ಲಿ ವಿದ್ಯಾರ್ಥಿ ದೆಸೆಯಿಂದ ಇಬ್ಬಗೆಯ ಪ್ರಭಾವಗಳಿಗೆ ಒಳಗಾದವರು: 1) ಕಾವ್ಯರಚನೆ ಮತ್ತದರ ಸ್ವರೂಪಗಳ ಮಟ್ಟಿಗೆ ಅವರು ಕುವೆಂಪು ಅವರ ತೀವ್ರ ಪ್ರಭಾವಕ್ಕೆ ಒಳಗಾದರೆ; 2) ಕಾವ್ಯ ಕುರಿತ ಚಿಂತನೆಯ ನೆಲೆಯಲ್ಲಿ ಅವರ ಮೇಲೆ ಪ್ರಭಾವ ಬೀರಿದ್ದೆಂದರೆ ತೀನಂಶ್ರೀ. ಇಬ್ಬರೂ ಅವರಿಗೆ ನೇರವಾಗಿ ಬೋಧಿಸಿದ ಗುರುಗಳು. ಐವತ್ತು ವರ್ಷಗಳಿಗೂ ಹಿಂದೆ ನಾನವರ ವಿದ್ಯಾರ್ಥಿಯಾಗಿದ್ದಾಗ ಅವರ ಉಪನ್ಯಾಸಗಳ ಚಿಂತನೆಗಳು ಇಬ್ಬರು ಹಿರಿಯರ ದಟ್ಟ ನೆರಳಲ್ಲೇ ಸಾಗಿತ್ತೆನ್ನಿಸುವುದು. ಅವರು ನಮಗೆ ಪಾಠ ಮಾಡುತ್ತಿದ್ದುದು ಕಾವ್ಯಮೀಮಾಂಸೆಯನ್ನೇ. ಅದಾಗಲೇ ಅವರು ತಮ್ಮ ಪಿಎಚ್.ಡಿ. ಥೀಸಿಸ್ಸನ್ನು ಬರೆದಿದ್ದರು, ಅವರ ಪಾಠಗಳು ಪೌರ್ವಾತ್ಯ ಹಾಗೂ ಪಾಶ್ಚಾತ್ಯ ಕಾವ್ಯತತ್ವಗಳ ಮೇಳೈಕೆಯಿಂದಲೇ ಸಾಗುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ದಾರಿಯಲ್ಲಿಯೇ ಸಾಗಿ ಅವರು ಮುಂದೆ ವಿಮರ್ಶೆಯ ಪೂರ್ವ-ಪಶ್ಚಿಮ, ಕಾವ್ಯಾರ್ಥ ಚಿಂತನದಂತಹ ಕೃತಿಗಳನ್ನು ಬರೆದರು. ಅಲ್ಲಿರುವುದು ಓದಿನಿಂದ ಮೈಗೂಡಿಸಿಕೊಂಡ ಅಥವಾ ಓದಿನ ಹಿನ್ನೆಲೆಯಲ್ಲಿ ಮೂಡಿಬರುತ್ತಿದ್ದ ಚಿಂತನೆಗಳು. ಅದೆಲ್ಲ ಅವರ ಸ್ವಂತದ್ದಾಗಿರಲು ಸಾಧ್ಯವಿಲ್ಲ. ಹೀಗಾಗಿ ನಾನು ಅವರ ಕಾವ್ಯಮೀಮಾಂಸೆಯನ್ನು ಅವರ ಕವನಗಳ ಮೂಲಕ ಹಾಗೂ ಅವರ ಮಾತು ಸಂವಾದಗಳಲ್ಲಿ ಹೊಮ್ಮಿರುವ ಕಾವ್ಯಸಂಬಂಧೀ ಚಿಂತನೆಗಳ ಹಿನ್ನೆಲೆಯಲ್ಲಿ ಚರ್ಚಿಸಬಯಸುತ್ತೇನೆ.
                ಅವರು ಕವನ ರಚನೆಗೆ ತೊಡಗಿದ್ದು 1950 ದಶಕದ ಆರಂಭದ ಹೊತ್ತಿಗೆ: ಹೊತ್ತಿಗೆ ಪ್ರಗತಿಶೀಲ ಚಳವಳಿ ಆಗಿಹೋಗಿದ್ದರೂ ಅದು ಕಾವ್ಯಕ್ಷೇತ್ರಕ್ಕಿಂತ ಹೆಚ್ಚಾಗಿ ಕತೆ-ಕಾದಂಬರಿಗಳ ಮೇಲೆ ತನ್ನ ಛಾಪು ಮೂಡಿಸಿತ್ತು. ಹೀಗಾಗಿ ಕಾವ್ಯವೆಂದರೆ ನವೋದಯದ ದಟ್ಟ ನೆರಳೇ ಇನ್ನೂ ತಂಪೆರೆಯುತ್ತಿದ್ದುದು. ಪ್ರಗತಿಶೀಲ ಧೋರಣೆಗಳನ್ನು ಮಾನ್ಯ ಮಾಡಿದ್ದ ಗೋಪಾಲಕೃಷ್ಣ ಅಡಿಗರಂಥವರೂ ಮೊದಮೊದಲು ನವೋದಯ ಮಾರ್ಗದಲ್ಲಿಯೇ ಕಾವ್ಯರಚನೆ ಮಾಡುತ್ತಿದ್ದುದು ಕಾರಣದಿಂದಲೇ. ಶಿವರುದ್ರಪ್ಪನವರಂತೂ ಕುವೆಂಪು ಅವರ ದೀರ್ಘಕಾಲದ ಶಿಷ್ಯರು; ನೇರವಾಗಿ ತರಗತಿಗಳಲ್ಲಿ ಮತ್ತು ಸಂಶೋಧನೆಯ ಮಾರ್ಗದರ್ಶಕರಾಗಿ ತಮ್ಮ ಆಲೋಚನೆಗಳಲ್ಲಿ ಜಿಎಸ್ಎಸ್ ಅವರನ್ನು ಪ್ರಭಾವಿಸುತ್ತಿದ್ದರು. ಆದರೆ ಮುಂದೆ ಅವರು ವಿವಿಧ ಚಳವಳಿಗಳಿಗೆ - ನವ್ಯ, ದಲಿತ ಬಂಡಾಯ - ತಮ್ಮನ್ನು ತೆರೆದುಕೊಳ್ಳುತ್ತ, ಅವುಗಳಿಂದ ಪಡೆದುಕೊಳ್ಳುತ್ತ, ಬದಲಾಗುತ್ತ ಸಾಗಿದರು. ಅವರ ಕಾವ್ಯದ ಸ್ವರೂಪ ಬದಲಾದಂತೆ ಕಾವ್ಯವನ್ನು ಕುರಿತ ಅವರ ಚಿಂತನೆಗಳೂ ಬದಲಾಗತೊಡಗಿದವು. ನವೋದಯದ ಆದರ್ಶಮಯತೆ-ಕನಸುಗಾರಿಕೆ-ಛಂದೋಬದ್ಧತೆಗಳಿಂದ ನಿಧಾನವಾಗಿ ಪಾರಾಗುತ್ತ, ಸಮಕಾಲೀನ ತಲ್ಲಣಗಳಿಗೆ ಹಾಗೂ ಮುಕ್ತ ಛಂದಕ್ಕೆ ಹೊರಳಿಕೊಂಡರು.
                ಹಿಂದೆ ಬರದದ್ದನ್ನೆಲ್ಲ
                ಈಗ ತೆನೆ ಬಿಡಿಸಿ, ಕೇರಿ, ತೂರಿ, ನೋಡಿದರೆ
                ಕಾಳಿಗಿಂತ ಜಳ್ಳೇ ಹೆಚ್ಚೇನೋ ಅನ್ನಿಸುತ್ತದೆ.
   ಅದನ್ನೇ ರಾಗ-ತಾಳ-ಪಲ್ಲವಿಗಳಲ್ಲಿ ಕುರುಕುವ
                ತಲೆಯಿರದ ಕಂಠಗಳನ್ನು ಕೇಳಿ
                ನಗೆ ಬರುತ್ತದೆ                                          [ಸ್ವಗತ]
                ತಮ್ಮ ಐವತ್ತನೇ ವಯಸ್ಸಿಗೆ ಅವರೇ ಹೀಗೆ ಹೇಳಿಕೊಂಡಿದ್ದಾರೆ: “ಸ್ಥೂಲವಾಗಿ ಹೇಳುವುದಾದರೆ ನನ್ನ ಕಾವ್ಯದ ವಸ್ತು ಮೂರು ಎಂದು ನಾನು ತಿಳಿದುಕೊಂಡಿದ್ದೇನೆ. () ಕಾಲ ಮತ್ತು ಮಾನವ ಎರಡರ ಸಂಬಂಧ ಹಾಗೂ ಸಂಘರ್ಷ; (ಬಿ) ನಾಗರಿಕ ಬದುಕಿನಲ್ಲಿ ಮನುಷ್ಯ ದಿನದಿಂದ ದಿನಕ್ಕೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿರುವ ದುರಂತ; (ಸಿ) ವ್ಯಕ್ತಿ-ವ್ಯಕ್ತಿಗಳ ನಡುವಣ ಸಂರ್ಪರಾಹಿತ್ಯದಿಂದ ಉಂಟಾಗುವ ಏಕತಾನದ ವಿಷಾದ[ಸ್ನೇಹ-ಕಾರ್ತೀಕ]. ಆದರೆ ಅವರು ಇಲ್ಲಿಗೇ ನಿಲ್ಲದೆ ಮುಂದೂ ಪ್ರಭಾವಗಳಿಗೆ ಒಳಗಾಗುತ್ತ ತಮ್ಮ ನಿಲವನ್ನು ಮಾರ್ಪಡಿಸಿಕೊಳ್ಳುತ್ತಲೇ ಸಾಗಿದರು.
       ಕವಿಯ ಮೂಲಭೂತ ಸಾಮರ್ಥ್ಯವಾವುದು.? ಕಾವ್ಯರಚನೆಯ ಕಾರಣವಾವುದು? ಎಂದು ಭಾರತೀಯ ಕಾವ್ಯಮೀಮಾಂಸೆ ಚಿಂತಿಸುತ್ತದೆ; ಕೊನೆಗೆ ಮುಖ್ಯವಾಗಿ ಪ್ರತಿಭೆ ಮತ್ತು ವ್ಯುತ್ಪತ್ತಿಗಳನ್ನು ಪ್ರಮುಖಕಾವ್ಯ ಹೇತುಗಳೆಂದು ಗುರುತಿಸುತ್ತದೆ. ಪ್ರತಿಭೆ ಸಹಜ; ವ್ಯುತ್ಪತ್ತಿ ಸ್ವಯಾರ್ಜಿತ. ಒಂದಕ್ಕೆ ಇನ್ನೊಂದು ಪೂರಕ ಎಂಬುದು ಸ್ಥೂಲವಾಗಿ ಅದರ ನಂಬಿಕೆ. ಆದರೆ ಜಿಎಸ್ಎಸ್ ಕವಿಪ್ರತಿಭೆ ಪಾಂಡಿತ್ಯದ ಭಾರದಿಂದ ಕುಗ್ಗಬಾರದೆಂಬ ಆಭಿಪ್ರಾಯದವರು. “ಕಾವ್ಯನದಿಗೆ ಯಾವುದೇ ಶಾಸ್ತ್ರಮಾರ್ಗದ ಕಟ್ಟುಕಟ್ಟಳೆ ಇಲ್ಲದೆ ಸಹಜವಾಗಿ ಹರಿಯುವ ಪ್ರವಾಹದೋಪಾದಿಯಲ್ಲಿ ಹರಿಯಬೇಕುಎಂದು ಮುಂದೆಯೂ ಹೇಳಿದರುಕಾವ್ಯಕರ್ಮ ಸಹಜವಾದದ್ದು ಎಂಬುದು ಅವರ ಎಲ್ಲ ಕಾಲದ ಭಾವನೆ. ಸಹಜವಾದದ್ದು ಮಾತ್ರವಲ್ಲ ನಿರಪೇಕ್ಷವಾದದ್ದು ಎಂಬುದು ಅವರ ನಿಲವು. “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮವೆನಗೆಎಂಬಲ್ಲಿನದು ಕುವೆಂಪು ಅವರಹೇಳದಿರೆ ತಾಳಲಾರನೋ ಕವಿಯುಎಂಬ ಮಾತನ್ನು ನೆನಪಿಸುತ್ತದೆ.
                ಹೋದಲ್ಲಿ ತಂಪನೆರೆದು
   ನಲಿದುಲಿವ ನದಿಗೆ ಕಡಲಿರುವ ಕಡೆಗೆ
   ಕೈಮರದ ನೆರವು ಬೇಕೆ
   ಕಾವ್ಯಕ್ಕೆ ಶಾಸ್ತ್ರವೇಕೆ?                            [ಕಾವ್ಯಮಾರ್ಗ]     
ಪ್ರತಿಭೆ-ಪಾಂಡಿತ್ಯಎಂಬ ಒಂದು ಕವಿತೆಯಲ್ಲಿ ಅವರು ನಳಮಹಾರಾಜದ ಅಶ್ವಹೃದಯವನ್ನೂ ಋತುಪರ್ಣನ ಅಕ್ಷಹೃದಯವನ್ನೂ ಹೋಲಿಸಿ ಇವೆರಡರ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾರೆ. ಮೊದಮೊದಲಾದರೂ ಅವರಿಗೆ ಪ್ರತಿಭೆ ದೈವದತ್ತವಾದುದು ಎಂಬ ನಂಬಿಕೆಯಿದ್ದಿರಬಹುದು. “ನಾನು ಬಲ್ಬು, ನೀನು ಸ್ವಿಚ್ಚು, ನಿನ್ನಿಂದಲೆ ನನಗೆ ಕೆಚ್ಚು; ಇಲ್ಲದಿರಲು ಇದರೊಳೇನು? ಬರಿಯ ಗಾಜು ಬುರುಡೆಯು! ನನಗು ನಿನಗು ಮೀರಿದೊಂದು ಮೂಲಶಕ್ತಿ ಒಳಗೆ ನಿಂದು” ಬೆಳಕು ತುಂಬುತ್ತದೆ ಎಂದು ಪ್ರತಿಭೆಯನ್ನುಮೂಲಶಕ್ತಿಎಂದು ಕರೆಯುತ್ತಾರೆ [ಕವಿ, ಕಾವ್ಯಕ್ಕೆ]. ರವೀಂದ್ರರನ್ನು ಕುರಿತ ಒಂದು ಕವಿತೆ ಅವರನ್ನುಪ್ರತಿಭೆಯ ಸೂರ್ಯಎಂದು ವರ್ಣಿಸುತ್ತದೆ. ರವೀಂದ್ರರು ಸೂರ್ಯರಾಗಿರಬಹುದು, ಆದರೆ ಕವಿಯಾಗುವವನು ಒಂದು ಹಣತೆಯಾದರೂ ಆಗಿರಬೇಕು ಎಂಬ ಅಭಿಪ್ರಾಯವನ್ನಿದು ಸೂಸುತ್ತದೆ. ಹಣತೆ ಜಿಎಸ್ಎಸ್ ಅವರ ಪ್ರಮುಖ ಪ್ರತಿಮೆ, ಆದರೆ ಅದು ಬೇರೊಂದು ಅರ್ಥವಲಯದ್ದು ಎಂಬುದನ್ನು ನಾನು ಮರೆತಿಲ್ಲ.
ಪ್ರತಿಭಾವಂತನಾದವನ ಮನಸ್ಸಿನಲ್ಲಿ ಮಡುಗಟ್ಟಿದ್ದ ಭಾವನೆಗಳು ಹದಗೊಂಡು ಕವಿತೆಯಾಗಿ ಹೊಮ್ಮುತ್ತದೆ ಎಂಬುದು ನವೋದಯ ಮನೋಭಾವದ ಕವಿಯ ಅನಿಸಿಕೆ.
ಯಾವತ್ತಿನಿಂದಲೋ ಸುರಿದ ಜಡಿಮಳೆ ಇಳಿದು
ಒಳಗಿನ ಕುದಿಗೆ ಹದವಾಗಿ ಮಿದುವಾಗಿ
ಮಲಗಿರುವಾಗ
ಬಾವಿಯ ತೋಡಿ, ಯಾತವ ಹೊಡೆದು
ತಂದದ್ದು ರಾಗ!                                 [ ಕವಿತೆ]
ಸಾಲುಗಳನ್ನು ಓದಿದಾಗ ಯಾರಿಗಾದರೂ ಥಟ್ಟನೆ ನೆನಪಿಗೆ ಬರುವಂಥದ್ದು ವರ್ಡ್ಸ್‍ವರ್ತ್ “spontaeous overflow of powerful feelings .. .. emotions recollected intranquillity” ಎಂಬ ಸಾಲು.  ಮೇಲಿನ ಉದ್ಧೃತದಲ್ಲಿನಹದವಾಗಿ ಮಿದುವಾಗಿಎಂಬ ಶಬ್ದಗಳು ಕಾವ್ಯ ಮೂಡಲು ಬೇಕಾದ ಹದಗೊಂಡ ಕ್ಷಣವನ್ನು ಸೂಚಿಸುತ್ತದೆ. ಅಂಥ ಕ್ಷಣವನ್ನೇ ಕಾವ್ಯಮೀಮಾಂಸೆಯಲ್ಲಿಸ್ಫೂರ್ತಿ(inspiration) ಎಂದು ಕರೆಯುವುದು. ಪಾಠಮಾಡುವಾಗ ಜಿಎಸ್ಎಸ್ ಎರಡನ್ನೂ ಒಟ್ಟಿಗೇ ಹೇಳುತ್ತಿದ್ದುದೂ, ಸ್ಪೂರ್ತಿಗೆ ಉದಾಹರಣೆಯಾಗಿ ಅವರು ಕುಮಾರವ್ಯಾಸನು ಒದ್ದೆ ಬಟ್ಟೆಯಲ್ಲಿ ಕಾವ್ಯ ಬರೆಯುತ್ತಿದ್ದ, ಅದು ಒಣಗುತ್ತ ಬಂದಂತೆಲ್ಲ ಅವನ ಕಾವ್ಯರಚನಾ ಶಕ್ತಿ ಕುಂಠಿತಗೊಳ್ಳುತ್ತಿತ್ತು ಎಂಬ ಕತೆಯನ್ನು ನಿರೂಪಿಸುತ್ತಿದ್ದರು.
                ಸ್ಫೂರ್ತಿ ಎಂಬುದನ್ನು ಒಂದೆಡೆ ಕವಿಚಂಚಲೆಎಂದು ಬಣ್ಣಿಸುತ್ತಾರೆ. ಇನ್ನೊಂದು ಕಡೆಮೈಮುದುರಿ ಹೊದ್ದು ಬಿದ್ದಿರುವ, ನಿಂತಲ್ಲೇ ನಿಂತು ನಿಟ್ಟುಸಿರಿಡುವ ಭಾವದ ತುಮುಲ, ರೈಲು ಬರಲಿಲ್ಲವೋ ರೈಲು ಬರಲಿಲ್ಲ[ರೈಲು ಬರುತ್ತದೆ] ಎಂದು ಅದು ಹೊಮ್ಮುವ ಅನಿರ್ದಿಷ್ಟತೆಯನ್ನು ವರ್ಣಿಸುತ್ತಾರೆ. ಸಾಲುಗಳು ವಿಸೀ ಅವರಬಂದಾಗ ನೀ ಬರುವೆ ಹೋದಾಗ ಹೋಗುವೆ, ನಿನ್ನ ಮೇಲಧಿಕಾರವಿಲ್ಲವೆನಗೆಎಂಬ ಸಾಲುಗಳನ್ನು ನೆನಪಿಸುತ್ತವೆ. “ಸ್ಫೂರ್ತಿಯ ಕರು ಬಾಯಿಕ್ಕಲು ಪ್ರತಿಭೆಯ ಕೆಚ್ಚಲಿಗೆ ಶಬ್ದಾರ್ಥದ ಹಾಲಿಳಿವುದು ಕವಿಪಾತ್ರೆಯ ಒಳಗೆ[ಸ್ಫೂರ್ತಿ, ಪ್ರತಿಭೆ] ಎಂದು ಜಿಎಸ್ಎಸ್ ನೇರವಾಗಿಯೇ ಪದ್ಯೀಕರಿಸುತ್ತಾರೆ.      ಮೊದಲಿಗೆ ಸ್ಫೂರ್ತಿ ತತ್ವವನ್ನು ನಚ್ಚಿದ್ದ ಜಿಎಸ್ಎಸ್ ಬರಬರುತ್ತ ನಿಲವಿನಿಂದ ದೂರಾದಂತೆ ಕಾಣುತ್ತದೆ. ಕಾವ್ಯನಿರ್ಮಿತಿ ಒಂದು ಸಹಜವಾದರೂ ಕಟ್ಟುವ ಕೆಲಸ, ಅದರಲ್ಲಿ ಕಸಬುದಾರಿಕೆ ಮುಖ್ಯ ಎಂಬ ನಿಲವನ್ನು ತಾಳಿದರು.
                ನಿನ್ನೊಳಗನ್ನು ನೀನೇ ಅಗೆದು ತೆಗೆದು
                ಕಮ್ಮಟದ ಕುಲುಮೆ ಬೆಂಕಿಗೆ ಹಿಡಿದು
   ನಿನ್ನಿಷ್ಟಕ್ಕೆ ತಕ್ಕಂತೆ ಎರಕ ಹೊಯ್ಯುವವರೆಗು
   ತೆಪ್ಪಗಿರಬೇಡ                         [ನಾಲ್ಕು ಮಾತು]
ಸಾಲುಗಳು ಅಡಿಗರಭೂತಕವನದಚಿನ್ನದದಿರು ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ ಇನ್ನಾದರೂ ಕೊಂಚ ಕಲಿಯಬೇಕು; ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬುಎಂಬ ಸಾಲುಗಳ ಅನುರಣನವಿದ್ದಂತಿದೆ. ಜಿಎಸ್ಎಸ್ ಅವರ ಕಾವ್ಯಮೀಮಾಂಸೆಯ ಮೇಲೆ ನವ್ಯಮಾರ್ಗದ ಪ್ರಭಾವ ಆದುದಕ್ಕೆ ಇದು ನಿದರ್ಶನ. ತಮ್ಮ ಮೇಲೆ ಅಂಥ ಪ್ರಭಾವ ಆದುದನ್ನು ಜಿಎಸ್ಎಸ್ ಕೂಡ ನಿರಾಕರಿಸುವುದಿಲ್ಲ. “ನವ್ಯದ ಧೋರಣೆಯನ್ನು ನಾನು ಸ್ವೀಕರಿಸಲಿಲ್ಲ. ಆದರೆ ಅದರ ಅಭಿವ್ಯಕ್ತಿವಿಧಾನವನ್ನು ಸ್ವೀಕರಿಸಿದೆಎಂದು ಅವರೇ ಒಪ್ಪಿಕೊಂಡಿದ್ದಾರೆ [ಹಣತೆ, ಪು. 518]. ಕುಂಬಾರ ಮಣ್ಣಿನ ಮುದ್ದೆಯಿಂದ ಆಕಾರವನ್ನು ಹೊರಡಿಸುವಂತೆಯೇ ಕವಿಯ ಕಾವ್ಯನಿರ್ಮಿತಿ; ಅಮೂರ್ತಕ್ಕೆ ಆಕಾರ ಕೊಡುವಂಥದು ಎಂಬ ಭಾವನೆ ಇರುಳ ಮೌನಗಳಲ್ಲಿ ಎಂಬ ಅವರೊಂದು ಕವಿತೆಯಲ್ಲಿ ವ್ಯಕ್ತವಾಗಿದೆ. ಕಾವ್ಯನಿರ್ಮಿತಿಯೆಂದರೆ ಅವರ ಮಟ್ಟಿಗೆ
                ಹಾಳುಬಿದ್ದಿದೆ ತೋಟ
                ಎಂಥೆಂಥದೋ ಕೂಳೆ
                ಇದನ್ನೆಲ್ಲ ಅಗೆದು ತೆಗೆದು, ಯಾತವ ಹೊಡೆದು
   ನೀರನು ಹಾಯಿಸುವುದೂ ಸಾಕು,
   ಇಷ್ಟೆಲ್ಲ ಶ್ರಮವಹಿಸಿ ಬೆಳೆದರೂ    [ಸಂಪಾದಕರಿಗೆ]
ಎಂಬಲ್ಲಿ ಕಾವ್ಯಕರ್ಮದ ಹಿಂದಿನ ಶ್ರಮದ ಬಗ್ಗೆ ವಿಶೇಷ ಒತ್ತು ಇರುವುದನ್ನು ಗಮನಿಸಬಹುದು. ಕಾವ್ಯಕರ್ಮದ ಹಿಂದಿನ ಇಂಥ ಶ್ರಮದ ಪರಿಕಲ್ಪನೆಯೂ ನವ್ಯಮಾರ್ಗದ ನಿಲವೇ ಆಗಿದೆ.
                ಕಾವ್ಯ ಹೊಮ್ಮುವುದು ಸರಿಯೇ; ಆದರೆ ಅದಕ್ಕೆ ಸಾರ್ಥಕ್ಯ ಉಂಟಾಗುವುದು ಸಹೃದಯನ ಆಸ್ವಾದನೆಯಿಂದ ಎಂಬುದೂ, ಅವನೂ ಕವಿಯಂತೆಯೇ ಪ್ರತಿಭಾವಂತನಾಗಿರಬೇಕು, [ಕವಿ]ಸಮಾನ ಹೃದಯದವನಾಗಿರಬೇಕು ಎಂಬುದೂ ಭಾರತೀಯ ಕಾವ್ಯಮೀಮಾಂಸೆಯ ನಿಲವು. ಕವಿ-ಸಹೃದಯರ ಸಾಹಚರ್ಯದಿಂದಲೇ ಕಾವ್ಯಕ್ಕೆ ಸಾರ್ಥಕ್ಯ. ಕಾವ್ಯವುಸರಸ್ವತ್ಯಾಸ್ತತ್ವಂ ಕವಿಸಹೃದಯಾಖ್ಯಾಂ ವಿಜಯತೇಎಂಬ ಮಾತನ್ನು ನೆನಪಿಸಿಕೊಳ್ಳಿ. ಪಾಠ ಮಾಡುವಾಗ ಜಿಎಸ್ಎಸ್ ಇದರೊಡನೆಮಾಲೆಗಾ¾ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ?’ ಎಂಬ ನೇಮಿನಾಥನ ಮಾತನ್ನೂ ಉಲ್ಲೇಖಿಸುತ್ತಿದ್ದರು. ಅವರ ಅನೇಕ ಕವನಗಳಲ್ಲಿ ಅಭಿಪ್ರಾಯ ಅನುರಣಿಸಿದೆ. “ನನಗೆ ಬೇಕಾದದ್ದು ಹೃದಯವಿರುವಂಥ ಐದೋ ಆರೋ ಕಿವಿ!” ಎಂಬ ಸಾಲು ಅಂಥದ್ದೊಂದು.
                ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕಾವ್ಯವನ್ನುಶಬ್ದಾರ್ಥೌ ಸಹಿತೌಎಂದೇ ಮೊದಲಿನಿಂದ ಹೇಳಿಕೊಂಡು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಾವ್ಯದಲ್ಲಿ ಶಬ್ದ-ಅರ್ಥಗಳ ಸಾಹಚರ್ಯದ ಸ್ವರೂಪ ಬಿಡಿಸಲಾಗದ ಕಗ್ಗಂಟು. ಯಾಕಂದರೆ ಅರ್ಥ ಅಂದರೆ ಏನು ಎಂಬುದನ್ನೇ ಹೇಳಲಾಗುವುದಿಲ್ಲ. ಕುರಿತು ಜಿಎಸ್ಎಸ್ ಅವರ ಕವಿಮನಸ್ಸು ಮೊದಲಿನಿಂದಲೂ ಜಿಜ್ಞಾಸೆ ನಡೆಸಿದೆ. ಕಾವ್ಯ ಎಂದರೇ ಭಾಷೆಯ ಮೂಲಕ ವ್ಯಕ್ತಗೊಳ್ಳಬೇಕಾದುದು; ಭಾಷೆಯಿಲ್ಲದೆ ಕಾವ್ಯವಿಲ್ಲ. ಹೀಗಾಗಿ ಇವೆರಡರ ಸಾಹಚರ್ಯದ ಸ್ವರೂಪ ಕಾವ್ಯಮೀಮಾಂಸಕರಷ್ಟೇ ಕವಿಗಳನ್ನೂ ಕಾಡಿದೆ. ಅನೇಕ ಕವಿಗಳು ಕುರಿತು ಬರೆದಿರುವರಾದರೂ ನನಗೆ ಥಟ್ಟನೆ ನೆಪಿಗೆ ಬರುತ್ತಿರುವುದು ಕೆಎಸ್ ಅವರಕವನ ಹುಟ್ಟುವ ಸಮಯಎಂಬ ಕವಿತೆಯಆಳದನುಭವವನ್ನು ಮಾತು ಕೈಹಿಡಿದಾಗ ಕಾವು ಬೆಳಕಾದಾಗ ಒಂದು ಕವನಎಂಬ ಸಾಲು. ಜಿಎಸ್ಎಸ್  ಕೂಡ ಕುರಿತು ಅನೇಕ ಕಡೆ ತಮ್ಮ ಭಾವವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲ ಕವಿಯ ಸಮಸ್ಯೆ ಎಂದರೆ ತನ್ನೊಳಗಿನ ಅನುಭವಕ್ಕೆ ಯಾವ ಮಾತು ಸೂಕ್ತ ಎಂಬ ಆಯ್ಕೆಯದು. “ಕ್ಯೂ ನಿಂತು ಕಾಡುವುವು ನೂರಾರು ದನಿಕೊಡು ಈಗಲಾದರೂ ನಮಗೊಂದು ರೂಪ’” {ಸಂಪಾದಕರಿಗೆ];ಯಾವ ಭಾವವೊ ಬಂದು ತಲೆಯ ಬಳಿ ನಿಂದುರೂಪು ಕೊಡುಎಂದೆನ್ನ ಎಚ್ಚರಿಪುದು[ಇರುಳ ಮೌನಗಳಲ್ಲಿ] ಎಂಬ ಸ್ಥಿತಿ. ಆದರೆ ಕವಿಗೆ ಭಾವಗಳಿಗೆ ರೂಪ ಕೊಡಲು ಬೇಕಾದದ್ದು ತಕ್ಕುನಾದ ಮಾತುಗಾರಿಕೆ. ಹಾಗಾಗಿಯೇ ಕವಿಏನು ಆದರು ದೊರೆಯದಾದುದು ಮನಕೆ ಬಯಕೆಯ ರಾಗವು/ ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವುಎಂದು ಹಲುಬುವಂತಾಗುತ್ತದೆ. ತಮ್ಮ ಕಾವ್ಯಕೃಷಿಯ ಆರಂಭದಲ್ಲಿಯೇ ಅವರುಆಂತರಿಕ ಶ್ರೀಮಂತದನುಭವದ ಸಾರವನು ಸಾಂತಭಾಷೆಯೊಳೆಂತು ಹಿಡಿಯಬಹುದು[ಕಾವ್ಯಕೃಪೆ] ಎಂದು ಬೆರಗುಗೊಂಡಿದ್ದವರು, ಕೊನೆಯಲ್ಲಿಯೂ ಜಿಎಸ್ಎಸ್ ಅವರುಹೃದಯಾಂತರಾಳದಲ್ಲಿ ಹೊಮ್ಮುವ ನೋವನ್ನು, ಶ್ರೀಮಂತವಾದ ಅನುಭವಸಾರವನ್ನು ಸಾಂತವಾದ ಭಾಷೆಯಲ್ಲಿ ಪ್ರಕಟಿಸುವ ಕವಿಕಾರ್ಯ ಬಹು ದೊಡ್ಡದುಎಂದು ವಿಸ್ಮಿತರಾಗುತ್ತಾರೆ. ಕೊನೆಯಲ್ಲಿಯೂ ಅವರ ನಿಲವೆಂದರೆ ಕಾವ್ಯವುವಾಗರ್ಥಚಂದ್ರನ ಪ್ರಣತಿಎಂಬುದೇ ಆಗಿದೆ. ನವ್ಯಕಾವ್ಯದ ಅರ್ಥಕ್ಲಿಷ್ಟತೆಯನ್ನು ಕುರಿತೋ ಏನೋ ಅವರು ಬರೆದ ಒಂದು ಕವಿತೆಯಲ್ಲಿ
                ಅರ್ಥಮಾಡಿಕೊಳ್ಳಲಿ ಬಿಡು ಹಾಳಾದ ಓದುಗ
                ಅರ್ಥವಾಗಲಿಲ್ಲವೋ ಅವನೇ ಕೆಟ್ಟ
                ಬರೆದ ಕವಿ ಅರ್ಥ ಹೇಳುವುದಿಲ್ಲ
                ಹುಟ್ಟಿ ಬರುತ್ತಾನಲ್ಲ ಮುಂದೆ
                ಅರ್ಥ ಹೇಳುವ ಶೂರ                              [ಕವಿತೆ ಬರೆಯುವುದು ಹೇಗೆ?]
ಎಂದು ವಿಡಂಬಿಸುತ್ತಾರೆ. ಆದ್ದರಿಂದಲೇ ಈಚಿನ ವ್ಯಕ್ತಮಧ್ಯ ಸಂಕಲನದ ತಮ್ಮಎರಡು ಮಾತುಗಳಲ್ಲಿಕವಿತೆ ಎನ್ನುವುದು ಮೂಲತಃ ಶಬ್ದಾರ್ಥಗಳ ಒಂದು ವಿಶಿಷ್ಟ ರೀತಿಯ ಕಟ್ಟಡ ಎಂಬ ತಿಳಿವಳಿಕೆಯೇ ನಮ್ಮ ಇತ್ತೀಚಿನ ಬಹುತೇಕ ಕವಿಗಳಿಗೆ ಇಲ್ಲವಾಗುತ್ತಿದೆಯೇನೋಎಂದು ವಿಷಾದ ವ್ಯಕ್ತಪಡಿಸುತ್ತಾರೆ.
             ತಮ್ಮ ಕಾವ್ಯಾರ್ಥ ಚಿಂತನದಲ್ಲಿ ಅವರುಅರ್ಥವೆಂಬುದೇ ಕವಿಯ ಅನುಭವ ವಿಶೇಷಎಂದು ವ್ಯಾಖ್ಯಾನಿಸುತ್ತಾರೆ. ಇಲ್ಲಿನ ಅರ್ಥ ಎನ್ನುವುದು ಕಾವ್ಯದಲ್ಲಿ ಹುದುಗಿರುವ ಕವಿಯ ಅನುಭವ ಎಂಬುದು ಅವರ ವಿವರಣೆ. ಕೆ. ಕೃಷ್ಣಮೂರ್ತಿಯವರು ಇದನ್ನು ಕುರಿತು ವಿವೇಚಿಸುತ್ತಯಾವ ಲಾಕ್ಷಣಿಕನೂ ಅರ್ಥವನ್ನು ಅನುಭವಕ್ಕೆ ಸಮಾನ ಪದವೆಂದಿಲ್ಲಎಂದೂಕವಿಯ ಅನುಭವ ಕವಿಗೆ ಗೊತ್ತು; ರಸಿಕನಿಗೆ ಗೊತ್ತಾಗುವ ಅರ್ಥ ಅದಕ್ಕಿಂತ ಬೇರೆ ಎಂದೇ ಹಿಂದಿನವರ ಗ್ರಹಿಕೆಎನ್ನುತ್ತಾರೆ. ಈಚಿನ ಚಿಂತನಕ್ರಮದಲ್ಲಿ ಯಾವುದರಲ್ಲೂ ಅರ್ಥ ಇರುವುದಿಲ್ಲ; ಅದನ್ನು ಅಲ್ಲಿ ತುಂಬಬೇಕು ಎಂಬ ಭಾವನೆಯಿದೆ. ಕವಿಯ ಕಾವ್ಯವೆನ್ನುವುದುಪಠ್ಯ, ಅಷ್ಟೆ; ಅದನ್ನು ಓದುಗ ತನಗೆ  ಬೇಕಾದಂತೆ, ಅಥವಾ ಸಾಧ್ಯವಾಗುವಂತೆ ಅರ್ಥೈಸುತ್ತಾನೆ. ಕಾವ್ಯಕ್ಕೆಅರ್ಥವಿಲ್ಲ, ಸ್ವಾರ್ಥವಿಲ್ಲಎಂದು ಬೇಂದ್ರೆ ಹೇಳಿದರಲ್ಲ!. ಹಿಂಜಿ ನೋಡಿದರೆ, ಅರ್ಥ ಎಂದರೆ ಕವಿಯ ಅನುಭವ ಎಂಬ ಜಿಎಸ್ಎಸ್ ಅವರ ವ್ಯಾಖ್ಯಾನ ಸಮಂಜಸವಾಗಿರುವಂತೆ ನನಗೆನ್ನಿಸುತ್ತದೆ. “ಶಬ್ದಾರ್ಥೌ ಸಹಿತೌ ಕಾವ್ಯಂತಾವದಿಷ್ಟಾರ್ಥವ್ಯವಚ್ಚಿನ್ನಾ ಪದಾವಲೀ ಕಾವ್ಯಂಎಂಬಂತಹ ಹೇಳಿಕೆಗಳಲ್ಲಿನಶಬ್ದಅಥವಾಪದಾವಲಿಗಳು ತುಂಬಿಕೊಂಡಿರುವುದು ಕವಿಯ ಅನುಭವವಿಶೇಷವನ್ನು ತಾನೇ? ಕಾವ್ಯವು ಕವಿಯ ಅನುಭವವನ್ನು ತಾನೇ ಅಭಿವ್ಯಕ್ತಿಸುವುದು? ಹೀಗಾಗಿ ಹೇಳಿಕೆಗಳಲ್ಲಿನಅರ್ಥಎಂಬುದು ಅನುಭವವೇ. ಅರ್ಥ ಎಂದರೆ ಸಾಮಾನ್ಯ ವ್ಯವಹಾರದಲ್ಲಿನ ಸಮಾನಾರ್ಥಕ ಶಬ್ದವಲ್ಲ. ಆದ್ದರಿಂದ ಜಿಎಸ್ಎಸ್ ಅವರ ವ್ಯಾಖ್ಯಾನ ಸರಿ, ಲಾಕ್ಷಣಿಕರು ರೀತಿ ವ್ಯಾಖ್ಯಾನಿಸದಿದ್ದರೇನಾಯಿತು, ನಾವು ಹಾಗೆ ಭಾವಿಸುವುದು ಸಕಾರಣವಾಗಿಯೇ ಇದೆ.
                ಕಾವ್ಯದ ಆಶಯದ ಬಗ್ಗೆ ಜಿಎಸ್ಎಸ್ ಅವರ ನಿಲವು ಕಾಲಕಾಲಕ್ಕೆ ಬದಲಾಗಿರುವುದು ನಿಚ್ಚಳವಾಗಿ ಕಾಣುತ್ತದೆ. ಹೊಸ ಸಾಹಿತ್ಯ ಚಳವಳಿಗಳು ಕನ್ನಡ ಪರಿಸರದಲ್ಲಿ ಮೂಡಿಬಂದಾಗೆಲ್ಲ ಮುಕ್ತ ಮನಸ್ಸಿನ ಜಿಎಸ್ಎಸ್ ಅವುಗಳ ಪ್ರಭಾವಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಕಾವ್ಯ ಎಂಬುದು ನೆಲ-ಮುಗಿಲುಗಳ ಸಂಗಮ ಎಂಬ ಭಾವನೆ ಎಳೆಯ ಜಿಎಸ್ಎಸ್ ಅವರದಾಗಿತ್ತು. “ಕಲ್ಪನೆಯ ಮೋಡ ಕರಗಿ ವಾಸ್ತವದ ಮುಕ್ತಿ ಮಣ್ಣಿನಲ್ಲಿ[ನೀರು] ಎಂಬಲ್ಲಿ ಕಾವ್ಯ ವಾಸ್ತವದಲ್ಲಿ ಇಳಿಯಬೇಕು ಎಂಬ ಆಶಯವೂ ಇರುವುದನ್ನು ಗಮನಿಸಬಹುದು. ಆದರೆ ಕಲ್ಪನೆ ಆಕಾಶದಿಂದ ಕೆಳಗಿಳಿಯುವ ರೀತಿಯ ಬಗ್ಗೆ ಅಲ್ಲಿ ಬೆರಗು ಇದ್ದಂತಿದೆ. ಹಾಗಾಗಿಯೇ ಕಾವ್ಯವನ್ನು ಕುರಿತು
                ಬಾರದಿರು ಉಲ್ಕೆಯಂತೆ
   ನೀನು ನನ್ನ ಬಾನಿಗೆ
    .. .. .. .. .. .. .. .. .. ..
   ಚಿಕ್ಕೆಯಾಗು, ಹಕ್ಕಿಯಾಗು
   ಮಿನುಗು, ಹಾರು ತಣ್ಣಗೆ                     [ಬಾರದಿರು ಉಲ್ಕೆಯಂತೆ]
ಎಂದು ಪ್ರಾರ್ಥಿಸುತ್ತಾರೆ. ಆದರೆ ನೆಲ-ಮುಗಿಲುಗಳು ಒಂದಾಗಬೇಕೆಂಬ ಹಂಬಲ ಮಾತ್ರ ಹಾಗೆಯೇ ಉಳಿದುಬಂದಿದೆ. ಈಚೆಗೆ ಪ್ರಕಟವಾದ ವ್ಯಕ್ತಮಧ್ಯ’ ಸಂಕಲನದಲ್ಲಿನ ಒಂದು ಕವಿತೆಯಲ್ಲಿ ಜಿಎಸ್ಎಸ್ ಹೀಗೆ ನುಡಿಯುತ್ತಾರೆ:             
   ಈಗಲೋ ಆಗಲೋ ಹಾರಿಹೋಗಲೆಂದನು
                ವಾದ ಅಸಂಖ್ಯ ಒಂಟಿ ಕಾಲಿನ ಪಕ್ಷಿಯಂತಿ
   ರುವ ತೆಂಗಿನಮರದ ವಿಸ್ತಾರ, ನೆಲದಾಳ
   ಗಳಲ್ಲಿ ಬೇರೂರಿ, ವ್ಯಕ್ತಮಧ್ಯದೊಳಗೆಲ್ಲೊ
   ಥಟ್ಟನೆ ಅರಳಿ, ನೆಲಮುಗಿಲಿಗೂ ನಡುವೆ
    ನಿಂತ ಒಂದೊಂದೂ ಜೀವಂತ ಕವಿತೆಗಳೆ                        [ಕವಿತೆ ಕಂಡದ್ದು ಹೀಗೆ]
ಅದೇ ಕವನದಲ್ಲಿ ಮುಂದೆ ಕುಂಬಾರ ಗುಂಡನ ಕೈಯಲ್ಲಿ ಮಣ್ಣಿನ ಮುದ್ದೆಯೊಳಗೆ ಮಲಗಿದ್ದ ಆಕೃತಿಗಳು ಮೂಡಿಬರುವುದನ್ನು ಪವಾಡ ಎಂದು ಕರೆದು, “ನನಗೆ ಮುಗಿಯದ ಬೆರಗು, ಕವಿತೆ ಹುಟ್ಟುವುದು ಹೇಗೆಂದು ಮೊದಲು ಕಂಡದ್ದು ಹೀಗೆ!” ಎಂದು ಉದ್ಗರಿಸುತ್ತಾರೆ. ಇಲ್ಲಿ ಕಾವ್ಯನಿರ್ಮಿತಿಯ ಸ್ವರೂಪದ ಬಗ್ಗೆ ಕವಿ ಧೇನಿಸುತ್ತಿದ್ದಾರೆ ಎನಿಸುತ್ತದೆ. ಮಣ್ಣಿನ ಮುದ್ದೆಯಲ್ಲಿಯೇ ಮುಂದೆ ಅರಳಲಿರುವ ಆಕೃತಿ ಇದೆ ಎಂಬ ಭಾವ, ಗುಂಡನ ಕೆಲಸವೆಂದರೆ ಅಡಗಿದ್ದ ಆಕೃತಿಯನ್ನು ಹೊರತೆಗೆಯುವುದು ಎಂಬ ಅಭಿಪ್ರಾಯ ಹುದುಗಿರುವಂತಿದೆ. ಸಂದರ್ಭದಲ್ಲಿ ನಮಗೆ ನೆನಪಾಗುವುದು ಕೆಎಸ್ ಮೈಸೂರಿನ ಕ್ಲಾಕ್ ಟವರ್ ಬಳಿ ಮಾಲೆಗಟ್ಟುತ್ತಿದ್ದ ಸಾಬಿಯೊಬ್ಬನ ಕೈಚಳಕದ ಬಗೆ ತಮಗೆ ಕವನ ರಚನೆಗೆ ಸ್ಫೂರ್ತಿಯಾದುದನ್ನು ಹೇಳುವುದು. ನಮಗೆ ಪಾಠ ಮಾಡುವಾಗ ಜಿಎಸ್ಎಸ್ “art contains in the removal of the excess” ಎಂದೋ ಏನೋ ಹೇಳುತ್ತಿದ್ದ ನೆನಪು. ಶ್ರವಣಬೆಳುಗೊಳದಲ್ಲಿ ಗೊಮ್ಮಟನ ಆಕೃತಿ ಮೂಡುವ ಮೊದಲು ಇದ್ದದ್ದು ಬೃಹತ್ ಬಂಡೆಗಲ್ಲು; ಶಿಲ್ಪಿ ಅದರಲ್ಲಿದ್ದ ಗೊಮ್ಮಟಮೂರ್ತಿಯನ್ನುಕಂಡುಅದರ ಸುತ್ತಲಿನ ಹೆಚ್ಚಿನ ಕಲ್ಲನ್ನು ಉಳಿಯಿಂದ ಕೆತ್ತಿ ತೆಗೆದು ಹಾಕುತ್ತಾನಷ್ಟೆ ಎಂದು ವಿವರಿಸುತ್ತಿದ್ದದ್ದೂ ನೆನಪಿದೆ.
                ಜಿಎಸ್ಎಸ್ ತಮ್ಮ ಕಾವ್ಯರಚನೆಯ ಪ್ರಬುದ್ಧ ಹಂತದಲ್ಲಿ ಕಲ್ಪನಾತ್ಮಕ ವಿಷಯಗಳನ್ನು ತಮ್ಮ ಕಾವ್ಯವಸ್ತುವನ್ನಾಗಿ ಮಾಡಿಕೊಳ್ಳುವುದರ ಬದಲು ಸಮಕಾಲೀನತೆಯನ್ನು ಕುರಿತು ಬರೆದರು. ಕವಿ, ಕವಿತೆಗೆಎಂಬೊಂದು ಪದ್ಯದಲ್ಲಿ ಅವರುಸಾಕು, ನನಗಿಷ್ಟೆ ಸಾಕು, ವರ್ತಮಾನದ ಸರಕುಎಂದು ಉದ್ಗರಿಸುತ್ತಾರೆ. ಎಂದರೆ ಅವರ ಕಾವ್ಯ ಅನುದಿನದ ಸಮಸ್ಯೆ ಸಂಕಟಗಳಿಗೆ ಸ್ಪಂದಿಸುತ್ತ ಸಾಗಿತು. ಈಗಿನ ಅನೇಕ ವಿಷಮತೆಗಳ ವಿರುದ್ಧ ಅವರ ಮನಸ್ಸು ವ್ಯಗ್ರಗೊಳ್ಳುತ್ತದೆ. ಆದರೆ ಅವರದ್ದು ಅಬ್ಬರದ ಆಕ್ರೋಶವಲ್ಲ, ಅವುಗಳ ವಿರುದ್ಧದ ಸಾತ್ವಿಕ ಕ್ರೋಧ. “ಸ್ವಾತಂತ್ರ್ಯೋತ್ತರ ಭಾರತದಲ್ಲಿ man became more selfish, more cruel, more self-centred, more political. ಮನುಷ್ಯ ಸಂಬಂಧಗಳನ್ನ ಕೆಡಿಸುವ ವಿಚ್ಛಿದ್ರಕಾರಕ ಶಕ್ತಿಗಳು ಅಂತ ಏನು ಕರೀತೀವಿ, ಅದರೊಳಗೆ ಇವು ಸೇರ್ತವೆ. So I am always against divisive forcesಎಂದು ಹೇಳಿಕೊಳ್ಳುತ್ತಾರೆ. ಅವರೊಂದಿಗಿನ ಮುಖಾಮುಖಿಯಲ್ಲಿ ಒಬ್ಬ ವಿಮರ್ಶಕರು ಗುರುತಿಸಿರುವಂತೆ, “ಈಗ ಕಳೆದ 10 ವರ್ಷಗಳಲ್ಲಿ ನಿಮ್ಮ ಕಾವ್ಯ ಇಂಥ ಕೆಡಹು ಶಕ್ತಿಗಳ ಅಬ್ಬರಕ್ಕೆ ಹೆಚ್ಚು ರಿಯಾಕ್ಟ್ ಮಾಡ್ತಾ ಬಂದಿದೆ. ಆದರೆ ಅದು ಪಾಸಿಟಿವ್ ಆಗಿದೆ” ಎಂಬ ಮಾತು ಸರಿ. ಅವರ ಮನುಷ್ಯ-ಪ್ರಾಣಿ ಎಂಬ ಕವನದಲ್ಲಿನಈಚೀಚೆಗೆ ನನಗೆ ಒಂದೊಂದು ಸಲ ಅನ್ನಿಸುತ್ತದೆ: ಮನುಷ್ಯರಿಗಿಂತ ಪ್ರಾಣಿಗಳೆ ವಾಸಿ.” ಎಂಬ ಮಾತುಗಳನ್ನೂನಾನು ಬರೆಯುತ್ತೇನೆ ಕಾಳರಾತ್ರಿಗಳಲ್ಲಿ ಬಂದು ಕದವ ತಟ್ಟುವ ಧ್ವನಿಗಳನ್ನು ಕುರಿತು .. .. ನಾನು ಬರೆಯುತ್ತೇನೆ ಕೊನೆಯಿರದ ಬೀದಿಗಳ ಮೇಲೆ ಕೀರ್ತಿಗೆ ಕಚ್ಚಾಡುವವರನ್ನು ಕುರಿತುಎಂಬ ನಾನು ಬರೆಯುತ್ತೇನೆ ಪದ್ಯದ ಸಾಲುಗಳನ್ನೂ ನೋಡಬಹುದು.
                ಕಂಡೆ
                ಎಂಥೆಂಥವರು ಏನೇನೋ ಆದದ್ದ ಕಂಡೆ
   ಗೊಮ್ಮಟನಾಗಿ ನಿಂತಿದ್ದ ಮಹಾಮೂರ್ತಿ
                ಕರಗಿ ಕೊಚ್ಚೆಯಾಗಿ ಹರಿದಿದ್ದ ಕಂಡೆ
                ಇಂದ್ರನೈರಾವತಕ್ಕೆ ತೊಣಚೆ Àತ್ತಿ
                ಬೀದಿ ನಾಯಾಗಿ ಬೀದಿಯಲ್ಲಿ ಹೊರಳಾಡಿದ್ದ ಕಂಡೆ
   ನಿಗಿ ನಿಗಿ ಉರಿದ ಉಜ್ವಲವಾದ ಮಾತೆಲ್ಲ
    ಬರೀ ಬೂದಿಯಾಗಿ ತೆಪ್ಪಗಾದದ್ದ ಕಂಡೆ                  [ದುಃಸ್ವಪ್ನ]
ಎಂಬಂತಹ ಸಾಲುಗಳಲ್ಲಿ ಜಿಎಸ್ಎಸ್ ಅವರು ಸಮಕಾಲೀನ ಅನ್ಯಾಯಗಳ ಕುರಿತು ಪರಿತಪಿಸುವ ಬಗೆಯನ್ನು ಕಾಣುತ್ತೇವೆ. ಇಂತ ಅವರ ಧೋರಣೆಯ ಹಿಂದೆ ಪ್ರಗತಿಶೀಲ ಹಾಗೂ ದಲಿತ-ಬಂಡಾಯ ಚಳುವಳಿಗಳ ಪ್ರಭಾವ ಕೆಲಸಮಾಡಿರುವುದು ಸ್ಪಷ್ಟ. ಆದರೆ ಅವುಗಳಲ್ಲಿ ಯಾವುದಕ್ಕೂ ತಮ್ಮನ್ನು ಒಟ್ಟಾರೆಯಾಗಿ ಅರ್ಪಿಸಿಕೊಂಡವರಲ್ಲ. ಬಹು ಹಿಂದೆಯೇ
   ಅದೂ ಬೇಕು ಇದೂ ಬೇಕು
   ಎಲ್ಲವೂ ಬೇಕು ನನಗೆ
   ದಾರಿ ನೂರಾರಿವೆ ಬೆಳಕಿನರಮನೆಗೆ
   ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ                   [ಹಿನ್ನುಡಿ]
ಎಂದು ಹೇಳಿಕೊಂಡಿದ್ದ ಜಿಎಸ್ಎಸ್ ಮುಂದೆಯೂ, “ನಾನು ಚಳುವಳಿಯೊಳಗೆ ಯಾಕ್ ಸೇರಿಕೊಳ್ಳಲಿಲ್ಲ ಅಂತಂದ್ರೆ, ನಾನು ಯಾವುದಕ್ಕೂ ಬದ್ಧವಾಗೋದಕ್ಕೆ ಇಷ್ಟಪಡೋದಿಲ್ಲ[ಮುಖಾಮುಖಿ, ಹಣತೆ, 519] ಎಂದು ಘೋಷಿಸಿಕೊಂಡೂ ಚಳವಳಿಗಳ ಪ್ರಭಾವಕ್ಕೆ ಒಳಗಾದವರು, ತಮಗೆಷ್ಟು ಬೇಕೋ ಏನು ಬೇಕೋ ಅಷ್ಟನ್ನು ಮಾತ್ರ ತಮ್ಮದಾಗಿಸಿಕೊಂಡವರು. ಉದಾಹರಣೆಗೆಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರಎಂಬ ಬಂಡಾಯ ಚಳವಳಿಯ ಧ್ಯೇಯವಾಕ್ಯದಲ್ಲಿನಂತೆ ಅವರ ಕಾವ್ಯ ಖಡ್ಗವಾಗಲು ಬಯಸದೆ, ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾಗಲು ಮಾತ್ರ ಹಂಬಲಿಸಿತು.
                ಮನುಷ್ಯನ ಬದುಕಿನಲ್ಲಿನ ವಿಷಮತೆ ನಾಶವಾಗುವುದು ಪ್ರೀತಿಯಿಂದ ಮಾತ್ರ ಎಂಬುದು ಅವರ ನಿಲವು.
   ಪ್ರೀತಿ ಇಲ್ಲದ ಮೇಲೆ
   ಮಾತಿಗೆ ಮಾತು ಕೂಡೀತು ಹೇಗೆ?
   ಅರ್ಥ ಹುಟ್ಟೀತು ಹೇಗೆ?
   ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
    ಪದ್ಯವಾದೀತು ಹೇಗೆ?                            [ಪ್ರೀತಿ ಇಲ್ಲದ ಮೇಲೆ]
ಎಂಬ ಪ್ರಸಿದ್ಧ ಸಾಲುಗಳು ಕಾವ್ಯದ ಹಿಂದಿರಬೇಕಾದ ಮನೋಧರ್ಮವನ್ನು ಸೂಚಿಸುತ್ತದೆ. ಆದರೆ ಕಾವ್ಯ ಹೊಮ್ಮಲು ಪ್ರತಿಭೆ ಸ್ಫೂರ್ತಿಗಳಿದ್ದರಷ್ಟೇ ಸಾಲದು, ಮುಖ್ಯವಾಗಿ ಬೇಕಾಗುವುದು ಮಾಂತ್ರಿಕ ಮುಹೂರ್ತ, ಜೊತೆಗೆ ಪ್ರೀತಿ. ಭಾವ ಅವರ ಈಚಿನ ಕವನವೊಂದರಲ್ಲಿ ಹೀಗೆ ಅನುರಣಿಸಿದೆ:
    .. .. .. .. .. ಇತ್ತ
                ಸಿಂಡರೆಲಾ ಅಡುಗೆ ಮನೆಯೊಳಗೆ, ಸುಂದರ
                ವಾದ ಶ್ಲೋಕದಿಂದುದುರಿ ನಿರರ್ಥಕವಾದ ಪಾ
                ದದ ಹಾಗೆ ಏಕಾಂಗಿಯಾಗಿ ಚಡಪಡಿಸುತ್ತ
                ಪ್ರೀತಿ-ಪ್ರತಿಭೆಯ ಕರುಣೆ ಮತ್ತೆ ಹಿಡಿದೆತ್ತಿ
                ಕೂಡಿಸುವ ಮಾಂತ್ರಿಕ ಮುಹೂರ್ತಕ್ಕೆ ಕಾಯುತ್ತ                    [ಸಿಂಡರೆಲಾ]
ಇದಕ್ಕನುಗುಣವಾಗಿ ಅವರೇ ಸಂದರ್ಶನವೊಂದರಲ್ಲಿ, “ಮಾನವೀಯತೆ ಮತ್ತು ಪ್ರೀತಿಯ ಅನ್ವೇಷಣೆಯೇ ನನ್ನ ಕಾವ್ಯದ ಮುಖ್ಯ ಕಾಳಜಿಯಾಗಿ ಪರಿಣಮಿಸಿದೆ ಎನ್ನಬಹುದು [ಹಣತೆ, ಪು. 497] ಎಂದು ಹೇಳಿಕೊಳ್ಳುತ್ತಾರೆ. ಬಹು ಹಿಂದೆಯೇ ಅವರುಜಗದೊಲವಿನ ನಂಟತನ ಲಭಿಸಿತು, ಅದಕಾಗಿಯೆ ಕಾವ್ಯಕೆ ನಮನ [ಕಾವ್ಯಕೆ ನಮನ] ಎಂಬ ಸಾಲುಗಳ ಮೂಲಕ ಕಾವ್ಯ ಜಗದ ಬಗೆಗಿನ ಪ್ರೀತಿಯನ್ನು ಕಾಣಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು; ಪ್ರೀತಿ ಎಂದರೆ ಜೀವನಪ್ರೀತಿ, ಜೀವಪ್ರೀತಿ. “ಜೀವನವನ್ನು ಯಾರು ನಿಜವಾಗಿ ಪ್ರೀತಿಸ್ತಾರೋ ಅವರು ಜೀವನವನ್ನು ವಿರೂಪಗೊಳಿಸೋದಕ್ಕೆ ಹೋಗೋದಿಲ್ಲ. ಅದಕ್ಕೋಸ್ಕರ ಹಣತೆಯನ್ನು ಒಂದು ಪ್ರತೀಕವಾಗಿ ಮಂಡಿಸಿದ್ದೀನಿ[ಮುಖಾಮುಖಿ, ಹಣತೆ, 518] ಎಂದು ಹೇಳಿಕೊಂಡಿದ್ದಾರೆ. ಅವರು ಕಂಡರಸಿಕೊಂಡಿದ್ದ ಆದರ್ಶ ವ್ಯಕ್ತಿತ್ವ ಎಂದರೆ ಕನಸುಗಾರಿಕೆಯನ್ನು ಹೊಂದಿದ್ದೂ ವಾಸ್ತವದ ಅರಿವಿರುವಂಥದು. ಹಿಂದೆಯೇ ಕವಿ ಆಶಯವನ್ನು ವ್ಯಕ್ತಪಡಿಸಿದ್ದರು:
                ಉಡುಗಣವೇಷ್ಟಿತ
   ಚಂದ್ರಸುಶೋಭಿತ
   ದಿವ್ಯಾಂಬರಸಂಚಾರಿ,
   ಕಣ್ಣ ನೀರಿನಲಿ
   ಮಣ್ಣ ಧೂಳಿನಲಿ
   ಹೊರಳುತ್ತಿರುವರ ಸಹಚಾರಿ`                 [ಅಲ್ಲಿ-ಇಲ್ಲಿ]
ಅವರ ಆಶಯ ಮುಂದೆಯೂ ಹಾಗೆಯೆ ಉಳಿದುಕೊಂಡಿತೆಂಬುದಕ್ಕೆ ಅವರ ಇತ್ತೀಚಿನ ಸಂಕಲನಚಕ್ರಗತಿಯಲ್ಲಿನನಾವು ಮತ್ತು ಮರಗಳುಎಂಬ ಕವನದಲ್ಲಿನ ಸಾಲುಗಳನ್ನು ನೋಡಬಹುದು:
                ನಾವು ಮಾತ್ರ ನೆಲದಲ್ಲಿ ಕಾಲೂರಿ
                ನಿಂತಿದ್ದರೂ, ಮತ್ತೆ ನೆಲದ
                ಮಣ್ಣಿಗಂಟಿಕೊಂಡೇ ಬದುಕುವವರು.
                ಆದರೂ ಒಂದೊಂದು ಸಲ
                ಆಕಾಶದ ಕನಸು ಕಾಣುವವರು                               [ನಾನು ಮತ್ತು ಮರಗಳು]
ಹಾಗೆಯೇನಿಸರ್ಗವನ್ನು ಪ್ರೀತಿಸೋದು ಸೌಂದರ್ಯನಿಷ್ಠ ಅಥವಾ ಆಧ್ಯಾತ್ಮಿಕ ಮೌಲ್ಯ ಮಾತ್ರವಲ್ಲ, ಅದು ಸಾಮಾಜಿಕ ಮೌಲ್ಯ ಕೂಡ ಅನ್ನೋದು, ನಮಗೆ ಪರಿಸರನಾಶದ ದಿನಗಳಲ್ಲಿ ಗೊತ್ತಾಗುತ್ತಿದೆ. ನಮ್ಮಲ್ಲಿ ನಿಸರ್ಗವನ್ನು ಆರಾಧಿಸ್ತೇವೆ ಅಷ್ಟೇ. ಅದು ನಮ್ಮ ಬದುಕಿನ ಅನಿವಾರ್ಯವಾದ ಭಾಗ ಅನ್ನೋ ಪ್ರಜ್ಞೆ ನಮ್ಮಲ್ಲಿ ಹುಟ್ಟಿಲ್ಲಎಂದು ವಿಷಾದಿಸುತ್ತಾರೆ. ಒಟ್ಟಾರೆ ಜಿಎಸ್ಎಸ್ ಅವರ ಕಾವ್ಯದ ಆಶಯ ಮೊದಲಿನ ನಿಸರ್ಗತನ್ಮಯತೆ ಹಾಗೂ ಭಾವುಕತೆಗಳ ನೆಲೆಯಿಂದ ಐಹಿಕ ವಾಸ್ತವ ಮತ್ತು ವಿಷಾದಪೂರ್ಣ ಚಿಂತನಪರತೆಗಳ ಕಡೆಗೆ ಸಾಗಿದೆ ಎನ್ನಬಹುದು.
                ಹಿಂದೆಯೇ ಜಿಎಸ್ಎಸ್ ಅವರ ಕವನವೊಂದರಲ್ಲಿ [ಕವಿತೆ ಕಂಡದ್ದು ಹೀಗೆ] ನೆಲದಾಳಕ್ಕೆ ಬೇರು ಬಿಟ್ಟು ನೆತ್ತಿಯಲ್ಲಿ ಗರಿಗಳನ್ನು ಹರಡಿರುವ ಚಿತ್ರವೊಂದನ್ನು ಕಂಡಿದ್ದೇವೆ. ಇದು ಅವರು ಪ್ರಾಯಶಃ ಕವಿ ತನ್ನ ಪರಂಪರೆಯಲ್ಲಿ ನಿಂತು ತನ್ನತನವನ್ನು ಹರಡಬೇಕಾದ ಅನಿವಾರ್ಯತೆಯನ್ನೂ ಸೂಚಿಸುತ್ತದೆ ಎನ್ನಬಹುದು. “ನನ್ನ ದೃಷ್ಟಿಯಲ್ಲಿ ಒಬ್ಬ ಬರಹಗಾರನಾಗುವುದು ಎಂದರೆ ಒಂದು ಪರಂಪರೆಯಲ್ಲಿ ನಿಂತು ಮಾತನಾಡತೊಡಗುವುದು. ಪರಂಪರೆಯನ್ನು ಮೈಗೂಡಿಸಿಕೊಳ್ಳದ ಹೊರತು ಒಬ್ಬ ಲೇಖಕ ನಿಜವಾದ ಲೇಖಕ ಆಗಲಾರ.”  ಕಾವ್ಯಮೀಮಾಂಸೆಯನ್ನು ಪಾಠಮಾಡುತ್ತಿದ್ದ ಜಿಎಸ್ಎಸ್ ಅವರು ನಮಗೆ ಆಗಾಗ ಟಿ.ಎಸ್. ಎಲಿಯಟ್ Tradition and Individual Talent ಬಗ್ಗೆಯೂ ಹೇಳುತ್ತಿದ್ದರು. ಕವಿಗೆ ಚಾರಿತ್ರಿಕ ಪ್ರಜ್ಞೆ ಮುಖ್ಯ ಎಂಬ ಅದರಲ್ಲಿನ ಅಭಿಪ್ರಾಯವೇ ಜಿಎಸ್ಎಸ್ ಅವರ ಮಾತುಗಳಲ್ಲಿ ಅನುರಣಿಸಿದೆ ಎನ್ನಬಹುದು. ಆದರೆ ಪರಂಪರೆಯು ಮನುಷ್ಯನಿಗೆ ವಿವೇಕವನ್ನು ಕಲಿಸುವುದರ ಬದಲು ಹಿಂದಿನ ಕೆಟ್ಟುದನ್ನೇ ಅನುಕರಿಸುವಂತೆ ಮಾಡುವುದನ್ನು ಕವಿಹೃದಯ ಗಾಢವಿಷಾದದಿಂದ ನಿರೂಪಿಸುತ್ತದೆ:
                ಚರಿತ್ರೆ, ಅಂದರೆ ನಡೆದುದಷ್ಟೇ ಅಲ್ಲ, ನಡೆಯು
                ತ್ತಿರುವುದೂ ಕೂಡ, ಎಲ್ಲಾ ಪಾಠಗಳೂ ಮರೆತು
                ಮತ್ತೆ ಚಿತ್ತವಿಕಾರ. ಮಾನವತೆಯ ಹೃದ
                ಯದ ಮೇಲೆ ಎಷ್ಟೊಂದು ಗಾಯಗಳ ಗುರುತು?                     [ಚರಿತ್ರೆ .. .. ಅಂದರೆ]
ಹೀಗಾಗಿ ಜಿಎಸ್ಎಸ್ ಅವರ ಕಾವ್ಯದ ಮುಖ್ಯ ಕಾಳಜಿ ವರ್ತಮಾನ, ಕಂಡದ್ದು ಕಾಣದ್ದು ಎಲ್ಲವೂ ಇಂದನ್ನು ಹಸನುಗೊಳಿಸಲು ದುಡಿಯಬೇಕು, ಅದನ್ನು ಪ್ರತಿಪಾದಿಸುವುದೇ ಕಾವ್ಯದ ಗುರಿಯಾಗಬೇಕು ಎಂಬುದು ಅವರ ಹಂಬಲ. ಕಾವ್ಯವೆನ್ನುವುದುಆನಂದಾಯ, ಕಾಂತಾಸಮ್ಮಿತತಾ ಉಪದೇಶಾಯಎಂಬ ಹಿಂದಿನ ಕಾವ್ಯಮೀಮಾಂಸಕರ ಮಾತುಗಳನ್ನು ವಿವರಿಸುತ್ತಿದ್ದ ಜಿಎಸ್ಎಸ್ ಕೊನೆಗೆ ತಲುಪಿದ್ದು ಇಲ್ಲಿನ ಬದುಕಿನ ಕ್ಷಣಗಳಿಗೆ ಸ್ಪಂದಿಸುವ ರೀತಿಯನ್ನು. ಅವರ ಇತ್ತೀಚಿನ ಕವನ ಸಂಕಲನದ ಹೆಸರೇ ವ್ಯಕ್ತಮಧ್ಯ- ಹುಟ್ಟು-ಸಾವುಗಳೆಂಬ ಎರಡು ವ್ಯಕ್ತಗಳ ನಡುವೆ ನಾವು ಕಾಣುವ ಕ್ಷಣವೇ ಬದುಕು, ಅದೇ ನಮ್ಮ, ಅಂದರೆ ಕಾವ್ಯದ, ಮುಖ್ಯ ಕಾಳಜಿಯಾಗಬೇಕೆಂಬುದು ಅವರ ನಿಲವು. ಒಮ್ಮೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ etherized upon the table ಆಗಿ ಮಲಗಿದ್ದ ಕವಿಗೆ ವ್ಯಕ್ತಮಧ್ಯದ ಮಹತ್ತಿನ ಜೊತೆಗೆ ಅದರ ಬಗೆಗಿನ ಪ್ರೀತಿಯೂ ಪ್ರಬಲಗೊಂಡಿತೇನೋ.
                ನನಗೂ ಗೊತ್ತು
   ಈ ಹೂವುಗಳ ಬದುಕು ಕೆಲವೇ ಹೊತ್ತು
   ಆದರೆ ಕೆಲವೇ ಹೊತ್ತಿನ
    ಹೂವುಗಳಿಗಿರುವ ಸೊಗಸು,
                ನಕ್ಷತ್ರಗಳಿಗಿಲ್ಲ                                         [ಹೂವು-ನಕ್ಷತ್ರ]
ಎಚ್ಚರ, ಹಂಬಲ ಅವರ ಕಾವ್ಯವನ್ನು ನಡೆಸಿದ ಮುಖ್ಯ ಚಾಲಕಶಕ್ತಿ.
******
                                                                                                                                                               


No comments: