ಪಂಪ ಹಾಗೂ ರಾಜತ್ವ
ನಮ್ಮ ಚಂಪೂ ಕವಿಗಳೆಲ್ಲರೂ
ಬರೆದ ಕಾವ್ಯಗಳು ರಾಜಸಂಬಂಧಿಯಾದ ಕತೆಗಳನ್ನೊಳಗೊಂಡವೇ ಆಗಿವೆ. ಇದಕ್ಕೆ ಕಾರಣ ಅವರಲ್ಲಿ ಬಹುತೇಕ ಮಂದಿ
ರಾಜಾಶ್ರಯದಲ್ಲಿದ್ದವರು ಎಂಬುದು ಮಾತ್ರವೇ ಆಗಿರದೆ ಅವರ ಕಾಲವು ‘ರಾಜಾ ಪ್ರತ್ಯಕ್ಷ ದೇವತಾಃ’ ಅಥವಾ
‘ನಾ ವಿಷ್ಣುಃ ಪೃಥಿವೀಪತಿಃ’ ಎಂಬ ಅಚಲ ನಂಬಿಕೆ ಹೊತ್ತಂತಹುದು. ಜನಸಾಮಾನ್ಯರಲ್ಲಿ ಮಾತ್ರವಲ್ಲದೆ ಬುದ್ಧಿಜೀವಿ
ವರ್ಗದಲ್ಲಿಯೂ ಈ ನಂಬಿಕೆಯಿತ್ತು. ಹಾಗೆ ನೋಡಿದರೆ ಈ ನಂಬಿಕೆಯನ್ನು ಬಿತ್ತಿ ಬೆಳೆದವರು ಬುದ್ಧಿಜೀವಿವರ್ಗದವರೇ.
ಕನ್ನಡದ ಎಲ್ಲ ಚಂಪೂ ಕವಿಗಳಿಗೂ, ಅದರಲ್ಲೂ ಮೊದಲ ಧಾರೆಯಾದ ಜೈನ ಕವಿಗಳಿಗೆ ಪಂಪನೇ ‘ಆಶ್ರಯದಾತ-ಕಥಾನಾಯಕ
ಸಮೀಕರಣ’ದ ಕಾವ್ಯಾದರ್ಶವನ್ನು ಒದಗಿಸಿದವನು.
ತನ್ನ ಕಾಲದ ರಾಜತ್ವದ
ನಂಬಿಕೆ ವೈಯಕ್ತಿಕವಾಗಿ ಪಂಪನಲ್ಲಿಯೂ ತುಂಬಿಕೊಂಡಿತ್ತು. ವೈಯಕ್ತಿಕವಾಗಿ ಎಂದರೆ ವ್ಯಕ್ತಿಯಾಗಿ ಅವನನ್ನು
ರೂಪಿಸಿದ್ದ ಗುಣಗಳಲ್ಲಿ ಈ ನಂಬಿಕೆಯೂ ಸೇರಿತ್ತು ಎಂದರ್ಥ. ಅರಿಕೇಸರಿಯ ಬಗ್ಗೆ ಅವನಿಗೆ ಸಂಪರ್ಕ ಯಾವ
ರೀತಿಯಿಂದಲೇ ಬಂದಿರಲಿ, ಅವನು ತನಗೆ ಗೌರವಾರ್ಹನಾಗಲು ಪ್ರಮುಖ ಕಾರಣ ರಾಜನಾಗಿದ್ದುದು ಎಂಬುದು. ಒಂದೆಡೆ ಜೈನಧರ್ಮದ ಪರಂಪರೆಯಲ್ಲಿಯೇ
ಇದ್ದ ರಾಜತ್ವದ ಬಗೆಗಿನ ಅನನ್ಯ ಗೌರವ, ಮತ್ತೊಂದೆಡೆ ತನ್ನ ಕಾಲದ ಗಾಳಿಯಲ್ಲಿದ್ದ ರಾಜಭಕ್ತಿ ಇವುಗಳು
ಪಂಪನ ವ್ಯಕ್ತಿತ್ವದ ಭಾಗವಾಗಿ ತನ್ನ ಕಾವ್ಯದಲ್ಲವನು ರಾಜತ್ವಕ್ಕೆ ಅಪಾರ ಗೌರವವನ್ನು ತೋರಿಸಲು ಕಾರಣವಾಗಿವೆ.
ಅಂದರೆ ಅವನು ಬೆಳಗಿದ ‘ಜಿನಾಗಮ’ ಹಾಗೂ ‘ಲೌಕಿಕ’ಗಳೆರಡಲ್ಲಿಯೂ ರಾಜತ್ವವು ವಿಜೃಂಭಿಸುವಂತೆ ಮಾಡುವುದು
ಅವನ ಧ್ಯೇಯವೇ ಆಯಿತೋ ಏನೋ.
ಹೀಗಾಗಿ ಪಂಪನಿಗೂ
ರಾಜತ್ವಕ್ಕೂ ಎಲ್ಲಿಲ್ಲದ ನಂಟು. ಪಂಪನ ಎರಡೂ ಕಾವ್ಯಗಳು ರಾಜರನ್ನು ಕುರಿತವು. ಪಂಪನ ಮೊದಲ ಕಾವ್ಯವಾದ
‘ಆದಿಪುರಾಣ’ವು ಮೊದಲನೆಯ ತೀರ್ಥಂಕರನ ಚರಿತೆ. ಜೈನಪರಂಪರೆಯ ಪ್ರಕಾರ ಎಲ್ಲ ತೀರ್ಥಂಕರರೂ ರಾಜರುಗಳೇ,
ಮೊದಲನೆಯ ತೀರ್ಥಂಕರನೂ ಇದಕ್ಕೆ ಹೊರತಲ್ಲ. ಜೊತೆಗೆ ‘ಭವಾವಳಿ’ಯಲ್ಲಿ ಚಿತ್ರಿತವಾಗಿರುವ ಹಿಂದಿನ ಜನ್ಮಗಳೆಲ್ಲದರಲ್ಲಿಯೂ
ಅವನು ರಾಜನಾಗಿದ್ದವನನು. ಇನ್ನು ಎರಡನೆಯ ಕಾವ್ಯ ‘ವಿಕ್ರಮಾರ್ಜುನ ವಿಜಯಂ’ನಲ್ಲಿ ತನ್ನ ಆಶ್ರಯದಾತ
ರಾಜನನ್ನು ಕಥಾನಾಯಕನಾದ ಅರ್ಜುನನೊಡನೆ ಸಮೀಕರಿಸಿ ಅವನಿಗೆ ಅರೆವತ್ವವನ್ನು ಒದಗಿಸಿದವನು. ಇದರಿಂದ
ಉಭಯತ್ರರಿಗೂ ಲಾಭವಾಯಿತು.
ಮೊದಲು ‘ಆದಿಪುರಾಣ’ದ
ಕಡೆ ಗಮನ ಹರಿಸೋಣ. ಆದಿ ತೀರ್ಥಂಕರನ ಕಾಲಕ್ಕೆ ಇದ್ದುದು ಮೂರೇ ವರ್ಣಗಳು: ಕ್ಷತ್ರಿಯ, ವೈಶ್ಯ ಹಾಗೂ
ಶೂದ್ರ. ಈ ಅನುಕ್ರಮದಲ್ಲಿ ಕ್ಷತ್ರಿಯನೇ ಅತ್ಯಂತ ಶ್ರೇಷ್ಠ; ಹಾಗಾಗಿಯೇ ತೀರ್ಥಂಕರರೆಲ್ಲ ಕ್ಷತ್ರಿಯರು
ಅರ್ಥಾತ್ ರಾಜರು. ಅವನಿಗಿಂತ ಮುಂಚೆ ಈ ತ್ರಿವರ್ಣಗಳಲ್ಲಿನ ಕರ್ತವ್ಯಗಳ ಹಾಗೂ ಕೊಳುಕೊಡುಗೆಗಳ ವಿಷಯದಲ್ಲಿ
ಗೊಂದಲವಿತ್ತೆಂದು ಕಾಣುತ್ತದೆ; ಹೀಗಾಗಿ ಪುರುದೇವನು ಈ ಮೂರೂ ವರ್ಣಗಳವರಿಗೆ ನಿರ್ದಿಷ್ಟ ಕೆಲಸಗಳನ್ನು
ನಿಯಮಿಸಿದ. ಅಲ್ಲದೆ “ವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ ಕೊಳ್ಕೊಡೆಯುಮಂ ನಿಯೋಜಿಸಿ”ದನಂತೆ.
ಇದರಿಂದ ವರ್ಣಗಳು ತಮ್ಮ ಶುದ್ಧತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿ ಎಂಬುದು ಅವನ ಉದ್ದೇಶವಾಗಿದ್ದಿರಬೇಕು.
ಆನಂತರದಲ್ಲಿ “ಫಳಕುಸುಮಪ್ರವಾಳಹರಿತಾಂಕುರ ರಾಜಿಯೊಳಲ್ಲಿ ಜೀವಸಂಕುಳಮಳವಲ್ಲದುಂಟು” ಎಂಬ ಪ್ರಜ್ಞೆಯನ್ನು
ತೋರಿಸಿದ ಜನರನ್ನು ಬ್ರಾಹ್ಮಣ ಎಂಬ ಹೊಸ ವರ್ಣದಿಂದ ಗುರುತಿಸಿದವನು ಭರತ ಚಕ್ರವರ್ತಿ. ಆದರೆ ಈ ಬ್ರಾಹ್ಮಣ
ವರ್ಣದವರು
ಧರೆಯೊಳ್ ಧರ್ಮಾರ್ಥದಿಂ ನೀಂ ಸೃಜಿಯಿಸಿ
ನೆಗೞ್ದ ವಿಪ್ರಸಂತಾನದೊಂದಾ
ಚರಣಂ ನೀನೆಂದ ಪಾಂಗಿಂ ಕೃತಯುಗದೊಳೆ ದಲ್
ಸಲ್ಗುಮಿನ್ನತ್ತ ನಷ್ಟಾ
ಚರಣಂ ಸನ್ಮಾರ್ಗದೊಳ್ ಮಚ್ಚರಿಸಿ ಕಲಿಯುಗಾಭ್ಯರ್ಣದೊಳ್
ದ್ರವ್ಯಲೋಭಾ
ತುರರುನ್ಮಾರ್ಗೋಪದೇಶೋದ್ಯತ ಮತಿಗಳತಿ ಕ್ರೂರಪ್ಪರ್
ದ್ವಿಜನ್ಮರ್
ಎಂದು ಆದಿತೀರ್ಥಂಕರನು ಭವಿಷ್ಯ
ನುಡಿದ. ಹೀಗಾಗಿ ವರ್ಣಗಳಲ್ಲೆಲ್ಲ ಕ್ಷತ್ರಿಯವೇ ಶ್ರೇಷ್ಠ, ಅದೆಂದೂ ಕೆಡದು ಎಂಬ ವಿಶ್ವಾಸವಿದೆ. ಜೈನರು
ಮೂಲತಃ ದೇವರಲ್ಲಿ ನಂಬಿಕೆಯಿಲ್ಲದವರು; ಹಾಗಾಗಿ ರಾಜರ ವತ್ವದ ಪರಿಕಲ್ಪನೆ ಅವರಲ್ಲಿಲ್ಲ. ಆದರೆ ತೀರ್ಥಂಕರರೆಲ್ಲ
ರಾಜ(ಕ್ಷತ್ರಿಯ)ರು; ಹೀಗಾಗಿ ರಾಜರಲ್ಲಿ ತೀರ್ಥಂಕರಾಂಶವಿದೆಯೆಂಬ ಭಾವನೆ ಜೈನರಲ್ಲಿದ್ದಿರಬಹುದು.1
ಆದಿ ತೀರ್ಥಂಕರ ಚರಿತೆಯಲ್ಲಿ
ವೈರಾಗ್ಯಭರದಿಂದ ರಾಜರು ತಮ್ಮ ಸ್ಥಾನವನ್ನು ತೆರವುಗೊಳಿಸುವ ಪ್ರಸಂಗಗಳಿವೆ. ಆದರೆ ಬಾಲ್ಯದಿಂದಲೇ ರಾಜತ್ವದ
ಬಗೆಗಿನ ನಿರಸನ ಎಲ್ಲಿಯೂ ಕಾಣಿಸುವುದಿಲ್ಲ. ಪುರುದೇವನು “ಅರುವತ್ತುಮೂರು ಲಕ್ಕೆ ಪುಬ್ಬಂ ರಾಜ್ಯಕಾಲಂ
ಸಲ”ಖ ರಾಜ್ಯಭಾರ ಮಾಡಿದನಂತೆ. ತಾನು ರಾಜ್ಯತ್ಯಾಗ ಮಾಡಿ ಜೈನದೀಕ್ಷೆಯನ್ನು ಪಡೆಯುವ ಸಂದರ್ಭದಲ್ಲಿ
“ವೃಷಭನಾಥಂ ಭರತ ರಾಜನಂ ಬರಿಸಿ ರಾಜ್ಯಾಭಿಷೇಕಂಗೆಯ್ದು
ಬಾಹುಬಲಿಗಂ ಯುವರಾಜ ಪದವಿಯಂ ದಯೆಗೆಯ್ದಯೋಧ್ಯಾ ಪೌದನಪುರಾಧಿಪತ್ಯದೊಳಿರ್ವರುಮಂ ನಿಱಿಸಿ ಉೞಿದಪತ್ಯವರ್ಗಕ್ಕೆಲ್ಲಮಿಳಾತಳ
ವಿಭಾಗಮಮಂ ಪಚ್ಚುಕೊಟ್ಟು” ಹೋದನಂತೆ. ಅಂದರೆ ವೈರಾಗ್ಯ ವೈಯಕ್ತಿಕವಾದದ್ದು; ಅದನ್ನು ಮಿಕ್ಕವರಲ್ಲಿ
ನಿರೀಕ್ಷಿಸದೆ ತನ್ನ ದೀಕ್ಷಾಸಮಯದಲ್ಲಿಯೂ ಆಸ್ತಿಯನ್ನು ಎಚ್ಚರಿಕೆಯಿಂದ ವಿಭಾಗ ಮಾಡಿಕೊಡುವ ವ್ಯಾವಹಾರಿಕತೆಯನ್ನಿಲ್ಲಿ
ಪ್ರದರ್ಶಿಸುತ್ತಾನೆ. ಹೀಗಾಗಿ ರಾಜತ್ವ ತನ್ನಲ್ಲಿಯೇ ತ್ಯಾಜ್ಯವೇನಲ್ಲ, ವೈರಾಗ್ಯವಿಲ್ಲದೆ ಅದನ್ನು
ಬಿಡಬೇಕಾದ್ದಿಲ್ಲ ಎಂಬುದು ವ್ಯಾಪಕವಾದ ಜೈನ ನಂಬಿಕೆ.
ಪಂಪನಿಗೆ ತನ್ನ ಆಶ್ರಯದಾತನ
ಜೊತೆಗಿದ್ದ ಸಂಬಂಧ ಅನನ್ಯವಾದುದು; ಜೊತೆಗೆ ಅವನ ಮೇಲೆ ಪ್ರಭಾವ ಬೀರುವಂತಹುದು. ಎಷ್ಟೆಂದರೆ, ರಾಜ
ತನಗೆ ಬಿರುದು ನೀಡುವ ಬದಲು ತಾನೇ ತನ್ನ ಬಿರುದನ್ನು ರಾಜನಿಗೆ ಅಳವಡುವಂತೆ ಮಾಡುವಷ್ಟು ಅವನು ಪ್ರಭಾವಶಾಲಿಯಾಗಿದ್ದ.
‘ಆದಿಪುರಾಣ’ದ ರಚನೆಯ ಕಾಲಕ್ಕೆ ಪಂಪ ರಾಜಾಶ್ರಯದಿಲ್ಲಿರಲಿಲ್ಲವೆನಿಸುತ್ತದೆ. ಇದ್ದಿದ್ದರೆ ಅದರ ಪ್ರಸ್ತಾಪ
ಆ ಕಾವ್ಯದಲ್ಲಿರುತ್ತಿತ್ತು. ‘ಆದಿಪುರಾಣ’ದ ಮೊದಲ ಆಶ್ವಾಸದ ಇಪ್ಪತ್ತೇಳನೆಯ ಪದ್ಯವನ್ನು ನೋಡಿ:
ಇದು ನಿಚ್ಚಂ ಪೊಸತರ್ಣವಂಬೊಲತಿಗಂಭೀರಂ ಕವಿತ್ವಂ ಜಗ
ಕ್ಕಱಿಂದಂ ಕವಿತಾಗುಣಾರ್ಣವನಿಳಾಲೋಕೈಕವಿಖ್ಯಾತನ
ಭ್ಯುದಯಪ್ರಾಪ್ತಿಮಿತ್ರಮುತ್ತಮಯಶಂ ಸಂಸಾರದೊಳ್ಸಾರಮ
ಪ್ಪುದಱಿಂ ಧರ್ಮಮಂ ನಿಮಿರ್ಚುವುದಱಿಂ ಸಂಸಾರ ಸಾರೋದಯಂ
ತನ್ನ ಕವಿತ್ವವು ಅರ್ಣವದಂತೆ ‘ನಿಚ್ಚಂ
ಪೊಸತಾ’ದುದುರಿಂದ ತಾನು ‘ಕವಿತಾಗುಣಾರ್ಣವ’ ಎಂದು ಕವಿ ಹೇಳಿಕೊಳ್ಳುತ್ತಾನೆ ಪಂಪ. ಅಂದರೆ ರಾಜಾಶ್ರಯಕ್ಕೆ
ಬರುವ ಮುಂಚೆಯೇ ಅವನಿಗೆ ಈ ಬಿರುದು ಇತ್ತು. ಇದು ಬೇರೆ ಯಾರಾದರೂ ಕೊಟ್ಟ ಬಿರುದಾಗಿರದೆ ತನ್ನನ್ನು
ತಾನು ವಿಶೇಷಿಸಿಕೊಂಡ ರೀತಿಯಾಗಿದ್ದಂತೆ ಕಾಣುತ್ತದೆ. ಏಕೆಂದರೆ ಅವನು ಆಗ ರಾಜಾಶ್ರಯದಲ್ಲಿ, ಅಥವಾ
ಇನ್ನಾವುದೇ ಆಶ್ರಯದಲ್ಲಿ ಇರಲಿಲ್ಲ; ಹಾಗೂ ಅವನಿನ್ನೂ ಏನನ್ನೂ ಬರೆದೇ ಇರಲಿಲ್ಲ. ಹೀಗಾಗಿ ಇದು ಸ್ವಯಂವರ್ಣನೆ
ಎಂದು ಭಾವಿಸಬಹುದು.
ಈಗ ‘ವಿಕ್ರಮಾರ್ಜುನ
ವಿಜಯಂ’ನಲ್ಲಿ ಕಾಣಬರುವ ರಾಜತ್ವ ಸಂಬಂಧೀ ಅಂಶಗಳನ್ನು ಗಮನಿಸಬಹುದು. ಮೊದಲ ಆಶ್ವಾಸದ ಹತ್ತನೆಯ ಪದ್ಯವನ್ನು
ನೋಡೋಣ:
ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಂ
ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು
ನೆಗೞ್ತೆವೆತ್ತ ಸ
ತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾ
ಗುಣಾರ್ಣವಂ
ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುಮೀ
ಗುಣಾರ್ಣವಂ
ತಾನು ಕವಿಗಳ ಹೆಸರುಮಾತ್ರದವನಲ್ಲ,
ಅರಿಕೇಸರಿ ನರಾಧಿಪ ಎಂಬ ಹೆಸರು ಮಾತ್ರ ಪಡೆದವನಲ್ಲ; ತಾನು ‘ಕವಿತಾಗುಣಾರ್ಣವ’ ಈತ ‘ಗುಣಾರ್ಣವ’. ಅಂದರೆ
ರಾಜಾಶ್ರಯಕ್ಕೆ ಬರುವ ಮುಂಚೆ ತನ್ನನ್ನು ಬಣ್ಣಿಸಿಕೊಂಡಿದ್ದಂತೆಯೇ ತನ್ನ ಆಶ್ರಯದಾತನನ್ನೂ ಕರೆದ. ಅಂದರೆ
ಅರಿಕೇಸರಿಯ ಈ ವಿಶೇಷಣ ಕವಿ ಇತ್ತುದು; ಅದೂ ತನ್ನದರಂತೆಯೇ ಇರುವಂಥದು. ಎಂದರೆ ತನ್ನ ಗುಣಕ್ಕನುಗುಣನಾದವನು
ಅರಿಕೇಸರಿ ಎಂಬ ಭಾವವಿಲ್ಲಿದೆ.
ಅಲ್ಲದೆ, ಅದೇ ಕಾವ್ಯದ
ಹದಿನಾಲ್ಕನೆಯ ಆಶ್ವಾಸದ ಐವತ್ತನಾಲ್ಕನೇ ಪದ್ಯವು ಮತ್ತೊಂದು ಕಾರಣದಿಂದ ಉಲ್ಲೇಖನೀಯ. ಆ ಪದ್ಯ ಹೀಗಿದೆ:
ಎನೆ ಸಕಲಾವನೀತಳ ಜನಂ ಪಿರಿದುಂ ದಯೆಗೆಯ್ದು
ಸಾರ್ಚಿ ಮೆ
ಲ್ಲನೆ ಪಿರಿದಪ್ಪ ಗೌರವದ ಮೈಮೆಯ ಮನ್ನಣೆಯೋಳಿಗಳ್
ಕರಂ
ಮನಮನಲರ್ಚೆ ಕೀರ್ತಿ ಜಗದೊಳ್ ನಿಲೆ ಪೇೞಿಸಿದಂ
ಜಗಕ್ಕೆ ನ
ಚ್ಚಿನ ಕವಿತಾಗುಣಾರ್ಣವನಿನೀ ಕೃತಿ ಬಂಧನಮಂ
ಗುಣಾರ್ಣವಂ
ತಾನು ಈ ಕಾವ್ಯವನ್ನು ಈ ಬಗೆಯಲ್ಲಿ
ರಚಿಸುವ ಮೂಲಕ ತನ್ನ ಆಶ್ರಯದಾತನ ಕೀರ್ತಿಯನ್ನು ಚಿರಸ್ಥಾಯಿಯಾಗಿ ಮಾಡುತ್ತಿದ್ದೇನೆ ಎಂಬ ಪ್ರಜ್ಞೆ
ಪಂಪನಿಗಿತ್ತೆಂಬುದು ಇಲ್ಲಿ ವಿದಿತವಾಗುತ್ತದೆ. ಎಂದರೆ ರಾಜನಿಂದ ತನಗಾದ ಉಪಯೋಗಕ್ಕಿಂತಲೂ ತಾನು ಅವನಿಗೆ
ಸಲ್ಲಿಸುತ್ತಿರುವ ಸೇವೆ ಹೆಚ್ಚು ಮೌಲಿಕವಾದುದೆಂಬ ಅರಿವು ಅವನಲ್ಲಿತ್ತು. (ತಮ್ಮಿಬ್ಬರ ಪ್ರಸ್ತಾಪ
ಒಟ್ಟಗೆ ಬಂದಾಗ ಪಂಪ ತನ್ನ ವಿಶೇಷಣವನ್ನು ಮೊದಲು ಹೇಳಿಕೊಂಡು ಆನಂತರ ಅರಿಕೇಸರಿಯದನ್ನು ಉಲ್ಲೇಖಿಸುತ್ತಾನೆ
ಎಂಬ ಅಂಶವೂ ಗಮನಾರ್ಹ).
ಇಡೀ ‘ವಿಕ್ರಮಾರ್ಜುನ
ವಿಜಯ’ವು ಪ್ರಜ್ಞಾಪೂರ್ವಕ ನೆಲೆಯಲ್ಲಿ ರಾಜತ್ವದ ವೈಭವೀಕರಣಕ್ಕೆ ಮತ್ತು ‘ವೀರ ಭೋಜ್ಯಾ ವಸುಂಧರಾ’
ಎಂಬ ರಾಜರ ಆದರ್ಶನಿರೂಪಣೆಗೆ ಮೀಸಲಾಗಿದೆ. ಆ ಕಾಲವು
‘ವೀರಯುಗ’ ಎನ್ನಿಸಿಕೊಳ್ಳಲು ಆಗಿನ ಸಾಮ್ರಾಜ್ಯಶಾಹಿ ಆಕಾಂಕ್ಷೆಗೆ ಸಾಧನವಾದ ಯುದ್ಧದ ಬಗೆಗಿನ ಮನೋಭಾವ.
ಸಾಮಾನ್ಯ ಜನಕ್ಕೆ ಇದು ಬೇಕಿತ್ತೋ ಇಲ್ಲವೋ (ಪ್ರಾಯಶಃ ಇಲ್ಲ), ರಾಜರಿಗಂತೂ ಇದು ಆವಶ್ಯಕವಾಗಿತ್ತು.
ರಾಜರಿಗೆ ಪ್ರಿಯವಾದುದು ಲೌಕಿಕ ದೃಷ್ಟಿಕೋನದಿಂದಾಗಿ, ಅಂದರೆ ಹಣ ಮತ್ತು ಮಾನ್ಯತೆಗಳ ಕಾರಣದಿಂದ, ಜನರಿಗೂ
ಬೇಕಾಗಿದ್ದಿತು. ಈ ಕಾರಣದಿಂದ ರಾಜತ್ವಪೂರಕ ಮೌಲ್ಯಗಳಿಗೆ ಬಹು ಬೆಲೆ ಬಂತು. “ಜಿತೇನ ಲಭ್ಯತೇ ಲಕ್ಷ್ಮೀ
ಮೃತೇನಾಪಿ ಸುರಾಂಗನಾ| ಕ್ಷಣವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ” ಎಂಬ ಮನೋಭಾವವನ್ನು ಈ ಕಾರಣದಿಂದಲೇ
ಜನರಲ್ಲಿ ಬಿತ್ತಲಾಯಿತು. ಕವಿಗಳೂ ತಮ್ಮ ಕಾವ್ಯಗಳಲ್ಲಿ ಇದನ್ನು ವೈಭವೀಕರಿಸಿದರು.
ಪಂಪ ಇದಕ್ಕೆ ಹೊರತಲ್ಲ.
ತನ್ನ ‘ವಿಕ್ರಮಾರ್ಜುನವಿಜಯ’ದಲ್ಲಿ ಅವನು ಉದ್ದಕ್ಕೂ ಮಾಡಿಕೊಂಡು ಬಂದಿರುವುದು ಇದನ್ನೇ. ಕಾವ್ಯದ ಹೆಸರೇ
ಇದನ್ನು ಸೂಚಿಸುತ್ತದೆ; ಅದು ಭಾರತವಲ್ಲ, ವಿಕ್ರಮಾರ್ಜುನವಿಜಯ. ಅಲ್ಲಿನ ಮೊದಲ ಪದ್ಯದಿಂದ ಕೊನೆಯದರವರೆಗೆ
ಕವಿ ಇದನ್ನು ಮಾಡಿದ್ದಾನೆ. ಕಾವ್ಯಗಾತ್ರದಲ್ಲಿ ಸುಮಾರು ಶೇಕಡ ನಲವತ್ತೈದರಷ್ಟು ಯುದ್ಧವರ್ಣನೆಗೆ ಮೀಸಲಾಗಿದೆ.
ಮೊದಲ ಆಶ್ವಾಸದ ಮೂವತ್ತೇಳು ಪದ್ಯಗಳು (14 ರಿಂದ 51) ಕವಿಯ ಆಶ್ರಯದಾತನ ವಂಶಜರು ನಡೆಸಿದ ವೀರಕೃತ್ಯಗಳ
ವರ್ಣನೆಗೆ ಮೀಸಲಾಗಿವೆ. ಹದಿನಾಲ್ಕನೆಯ ಆಶ್ವಾಸದ ಇಪ್ಪತ್ತಾರರಿಂದ ಮೂವತ್ತನೇ ಪದ್ಯದವರೆಗಿನ ಸಂಸ್ಕೃತ
ವೃತ್ತಗಳಲ್ಲಿ ವೈತಾಳಿಕನ ಮಾತುಗಳ ಮೂಲಕವೂ, ಮುಂದಿನ ಏಳು ಕನ್ನಡ ಪದ್ಯಗಳಲ್ಲಿ ಮಂಗಳಪಾಠಕರ ಮೂಲಕವೂ
ಅರಿಕೇಸರಿಯ ಶೌರ್ಯವನ್ನು ವೈಭವೀಕರಿಸಿ ಕವಿ ವರ್ಣಿಸುತ್ತಾನೆ. ಅಲ್ಲದೆ ಅರ್ಜುನ ನಡೆಸಿದ ದಾಳಿಗಳೆಲ್ಲ
ಅರಿಕೇಸರಿಯವೇ ಎಂಬಂತಿದೆ ಇಡೀ ಕಾವ್ಯದ ಚಿತ್ರಣ.
ಕಾವ್ಯದ ಮೊದಲ ಪದ್ಯದಿಂದ
ಕೊನೆಯವರೆಗೂ ಕವಿ ವೀರತ್ವದ ವೈಭವೀಕರಣ ಮಾಡಿದ್ದಾನೆಂಬ ಪ್ರಸ್ತಾಪ ಹಿಂದೆಯೇ ಬಂದಿದೆ. ಈಗ ‘ವಿಕ್ರಮಾರ್ಜುನ
ವಿಜಯ’ದ ಪ್ರಾರ್ಥನಾ ಪದ್ಯಗಳನ್ನು ನೋಡೋಣ. ಮೊದಲ ಆಶ್ವಾಸದ ಮೊದಲ ನಾಲ್ಕು ಪದ್ಯಗಳಲ್ಲಿ ಕವಿಯು ಕ್ರಮವಾಗಿ
ನಾರಾಯಣ, ಮಹೇಶ್ವರ, ಮಾರ್ತಾಂಡ ಹಾಗೂ ಮನೋಜರನ್ನು ಸ್ತುತಿಸಿದಂತೆ ಕಾಣುತ್ತದೆ. ಆ ಪದ್ಯಗಳ ಪೂರ್ಣ
ಪಾಠ ಹೀಗಿದೆ:
ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ
ಧರಿತ್ರಿಯಂ
ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತನಾ
ರಾಯಣನಾದ ದೇಮನೆಮಗೀಗರಿಕೇಸರಿ ಸೌಖ್ಯಕೋಟಿಯಂ
ಮುಳಿಸು ಲಲಾಟ ನೇತ್ರಶಿಖಿ ಮೆಚ್ಚೆ ವಿನೂತರಸಪ್ರಸಾದಮು
ಜ್ವಳ ಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ
ಶಕ್ತಿ ನಿ
ರ್ಮಳಮಣಿಭೂಷಣಂ ಫಣಿಭೂಷಣಮಾಗೆ ನೆಗೞ್ತೆಯಂ ಪುದುಂ
ಗೊಳಿಸಿದನೀಶ್ವರಂ ನೆಗಳ್ದುದಾರ ಮಹೇಶ್ವರನೀಗೆ ಭೋಗಮಂ
ಚಂಡವಿರೋಧಿ
ಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ
ಷಂಡಮರಲ್ದು ರಾಗದಿನೊರಲ್ದಿರೆ ಯಾಚಕ ಭೃಂಗಕೋಟಿ ಕೈ
ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ
ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ
ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಯೊಳ್ ಪೊದಳ್ದು ಸ
ನ್ನಿಹಿತವೆನಿಪ್ಪಪೂರ್ವ ಶುಭಲಕ್ಷಣ ದೇಹದೊಳೊಳ್ಪನಾಳ್ದು ಸಂ
ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ
ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ
ಆದರೆ ಅಲ್ಲಿ ನಡೆದಿರುವುದು ಈ
ದೇವತೆಗಳ ಸ್ತುತಿಯಲ್ಲ, ಬದಲಿಗೆ ಅವರಿಗಿಂತ ಮಿಗಿಲಾದ ತನ್ನ ಆಶ್ರಯದಾತ ಅರಿಕೇಸರಿಯ ಸ್ತುತಿ. (ಹೋಲಿಕೆಯಿಂದಾಗಿ
ದೇವತೆಗಳ ಗೇಲಿ!) ಮೊದಲ ಪದ್ಯದಲ್ಲಿ ನಾರಾಯಣನಿಗಿಂತ ಮಿಗಿಲಾದ “ಉದಾತ್ತ ನಾರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ” ಎಂದೂ; ಎರಡನೆಯದರಲ್ಲಿ
“ಉದಾರ ಮಹೇಶ್ವರನೀಗೆ ಭೋಗಮಂ” ಎಂದೂ; ಮೂರನೆಯ ಪದ್ಯದಲ್ಲಿ “ಪ್ರಚಂಡ ಮಾರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ
ನಿಜ ವಾಙ್ಮರೀಚಿಯಿಂ” ಎಂದೂ; ಹಾಗೂ ನಾಲ್ಕನೆಯದರಲ್ಲಿ “ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ”
ಎಂದೂ ಕವಿ ಪ್ರಾರ್ಥಿಸುತ್ತಾನೆ. ವೈದಿಕ ದೇವರು ನಾರಾಯಣನಾದರೆ ತನ್ನ ಆಶ್ರಯದಾತ ‘ಉದಾತ್ತ ನಾರಾಯಣ’;
ಅವನು ಮಹೇಶ್ವರನಾದರೆ, ತನ್ನ ಪ್ರಭು ‘ಉದಾರ ಮಹೇಶ್ವರ’; ಆತ ಚಂಡವಿರೋಧಿಯಾದರೆ ತನ್ನ ಯಜಮಾನ ‘ಪ್ರಚಂಡ
ಮಾರ್ತಾಂಡ’; ಹಾಗೆಯೇ ಮೂಲದವನು ಮನೋಜನಾದರೆ, ತನ್ನೊಡೆಯ ‘ಸಹಜಮನೋಜನೋಜ’.2
ಇನ್ನು ಕಾವ್ಯದ ಕೊನೆಯ
ಕಡೆ ಗಮನ ಹರಿಸೋಣ. ಹದಿನಾಲ್ಕನೆಯ ಆಶ್ವಾಸದ ಅರವತ್ತನಾಲ್ಕನೆಯ ಪದ್ಯವನ್ನು (ಅಂದರೆ ಇಡೀ ಕಾವ್ಯದ ಕೊನೆಯ
ಪದ್ಯದ ಹಿಂದಿನದು) ನೆನಪಿಸಿಕೊಳ್ಳೋಣ:
ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ
ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರ ಸಿಂಧೂದ್ಭವಂ
ಚಾಪ ವಿದ್ಯಾ
ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್
ಫಲ್ಗುಣಂ ಧರ್ಮದೊಳ್ ನಿ
ರ್ಮಲಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ
ಭಾರತಂ ಲೋಕಪೂಜ್ಯಂ
ಭಾರತವನ್ನು ಲೋಕಪೂಜ್ಯವಾಗಿ ಮಾಡಿರುವ
ಪಾತ್ರಗಳಿವು: ದುರ್ಯೋಧನ, ಇನತನಯ, ಭೀಮಸೇನ, ಮದ್ರೇಶ (ಶಲ್ಯರಾಜ), ಅಮರಸಿಂಧೂದ್ಭವ (ಭೀಷ್ಮ), ಕುಂಭೋದ್ಭವ
(ದ್ರೋಣ), ಫಲ್ಗುಣ ಹಾಗೂ ಧರ್ಮಪುತ್ರ. ಕವಿ ಇಲ್ಲಿ (ಪಾಂಡವ-ಕೌರವ) ಉಭಯಪಕ್ಷಗಳ ಪಾತ್ರಗಳನ್ನೂ ಒಂದೆಡೆ
ಉಲ್ಲೇಖಿಸಿ ಇವರು ಭಾರತದ ‘ಪೂಜ್ಯತೆ’[ಗೆ ಕಾರಣ ಎನ್ನುತ್ತಿದ್ದಾನೆ. ಅಲ್ಲದೆ, ಈ ಒಂದೊಂದು ಪಾತ್ರವೂ
ಒಂದೊಂದು ಗುಣದ ಪ್ರತೀಕವೆಂದಿಲ್ಲಿ ವರ್ಣಿತವಾಗಿದೆ. ಆ ಗುಣಗಳು ಚಲ, ನನ್ನಿ, ಗಂಡು, ಬಲ, ಅತ್ಯುನ್ನತಿ,
ಚಾಪವಿದ್ಯಾಬಲ, ಸಾಹಸ, ನಿರ್ಮಲಚಿತ್ತ - ಇವುಗಳು. ಈ ಗುಣಗಳ ಸ್ವರೂಪವೆಂತಹುದು? ಪಾತ್ರಗಳೂ ಮತ್ತವು
ಸಂಕೇತಿಸುವ ಗುಣಗಳು - ಇವುಗಳನ್ನು ಒಟ್ಟು ಕತೆಯ ಹಿನ್ನೆಲೆಯಲ್ಲಿ ಪರಿಕಿಸಿದರೆ ಅವುಗಳ ಸ್ವರೂಪ ಕಣ್ಮುಂದೆ
ನಿಲ್ಲುತ್ತದೆ. ಚಲವನ್ನು ತೆಗೆದುಕೊಳ್ಳಿ; ಇದು ದುರ್ಯೋಧನನ ವಿಶಿಷ್ಟ ಲಕ್ಷಣ. ಎಲ್ಲವನ್ನೂ ಎಲ್ಲರನ್ನೂ
ಕಳೆದುಕೊಂಡಾಗಲೂ ಅವನು ಆಡುವ ಮಾತು “ಚಲಮನೆ ಬಲ್ವಿಡಿವಿಡಿದೆಂ” ಎಂಬುದು. ಅವನು ಚಕ್ರವರ್ತಿ; ಅವನ
ಚಲ ಎಂತಹುದೆಂದರೆ ಏಕಾಂಗಿಯಾದರೂ ನಿಸ್ಸಹಾಯಕನಾದರೂ ಇರುವಂಥದು. ಅವನು ಸಾಯುವಾಗಲೂ ಅದು ತುಂಬಿತ್ತು.
ರಾಜನ ಗುಣ ಇಂತಹುದಾಗಿರಬೇಕು. ಮುಂದೆ, ಕರ್ಣನ ನನ್ನಿ. ಅವನ ನನ್ನಿ ಎಂತಹುದು? ತನ್ನ ಯಜಮಾನನಿಗಾಗಿ
“ಎನ್ನೊಡಲನಾಂ ತವಿಪೆಂ ರಣರಂಗಭೂಮಿಯೊಳ್” ಎಂಬಂತಹುದು. ಒಡೆದ ಮನಸ್ಸಿನಿಂದ ಶತ್ರುಗಳನ್ನು ಎದುರಿಸುವಾಗ
ಅವನ ಸ್ವಾಮಿನಿಷ್ಠೆ ಮಾತ್ರ ಒಡೆಯದೆ ಉಳಿದಿತ್ತು; ಇದು ಅವನ ನನ್ನಿಯ ಸ್ವರೂಪ. ಹಾಗೆಯೇ ಪರಾಕ್ರಮ,
ದೇಹಬಲ, ಅತ್ಯುನ್ನತಿ, ಚಾಪವಿದ್ಯೆ, ಸಾಹಸ ಮತ್ತು ನಿರ್ಮಲಚಿತ್ತ - ಇವುಗಳನ್ನು ಪ್ರತಿನಿಧಿಸುವ ಪಾತ್ರಗಳೂ
ಕೊನೆಯವರೆಗೂ (ಆಂದರೆ ಮಹಾಭಾರತ ಯುದ್ಧದ ಕೊನೆಯವರೆಗೆ) ಆ ಮೌಲ್ಯಗಳಿಗಾಗಿ ಬದುಕಿದವು. ಈ ಎಲ್ಲ ಪಾತ್ರಗಳೂ
ತಮ್ಮ ವಿಶಿಷ್ಟ ಗುಣಗಳನ್ನು ಮೆರೆದದ್ದು ಯುದ್ಧಭೂಮಿಯಲ್ಲಿ, ತಮ್ಮ ಪ್ರಾಣಗಳನ್ನು ಒತ್ತೆಯಿಟ್ಟು (ಬೇರೊಂದು
ಸಂದರ್ಭದಲ್ಲಿ ಈ ಕಾವ್ಯದಲ್ಲಿಯೇ ‘ಭಾರತಂ ಕಲಹಂ’ ಎಂಬ ಮಾತಿದೆ). ಅಂದರೆ ಈ ಎಲ್ಲ ಪಾತ್ರಗಳ ಒರೆಗಲ್ಲು
ಯುದ್ಧ, ಉಳಿದಂತೆ ಬದುಕಿನ ಬಗೆಯಲ್ಲ. ಯುದ್ಧ ರಾಜರ ಸುತ್ತ ತಾನೆ ಹೆಣೆದುಕೊಳ್ಳುವುದು? ಅಂದರೆ ಭಾರತವನ್ನು
‘ಲೋಕಪೂಜ್ಯವಾಗಿಸುವ’ ಈ ಗುಣಗಳೂ ಪೂಜ್ಯವಾದವು. ಅವೆಲ್ಲ ಯುದ್ಧಸಂಬಂಧಿ ಗುಣಗಳು, ರಾಜಪರವಾದ ಮೌಲ್ಯಗಳು.
ಅಂದರೆ ಈ ಮೌಲ್ಯಗಳಿಂದಾಗಿ ಬದುಕು ಮೌಲಿಕವಾಗುತ್ತದೆ, ಅಂಥ ಬದುಕು ಲೋಕಪೂಜಿತವಾಗುತ್ತದೆ ಎಂಬ ಧ್ವನಿಯನ್ನು
ಪಂಪ ಸೂಸುತ್ತಿದ್ದಾನೆ. ಪ್ರಾಯಃ ಒಬ್ಬ ವ್ಯಕ್ತಿಯ ಲೌಕಿಕ ಬದುಕು ಸಾರ್ಥಕವಾಗುವುದು ಈ ಮೌಲ್ಯಗಳಿಂದ,
ಯುದ್ಧಸಂಬಂಧೀ ಮೌಲ್ಯಗಳಿಂದ. ಅಂದರೆ ತಾನು ಬೆಳಗುತ್ತಿರುವ ಲೌಕಿಕ ಇದೇ ಆಗಿರಬಹುದು. ಇಂತಹ ಗುಣಗಳನ್ನು
ಮೆರೆಯುವುದರ ಮೂಲಕವೇ ಲೌಕಿಕ ಬದುಕು ಸಾರ್ಥಕಗೊಳ್ಳುವುದು.
ಈ ಪದ್ಯದಲ್ಲಿ ಕೃಷ್ಣನ ಪ್ರಸ್ತಾಪವಿಲ್ಲದ ಬಗ್ಗೆ ಅನೇಕ ವಿದ್ವಾಂಸರು ನಾನಾ ಬಗೆಯ ಊಹೆಗಳನ್ನು ಮಾಡಿದ್ದಾರೆ:
ಕೃಷ್ಣ ದೇವರಾದುದರಿಂದ ಅವನು ಎಲ್ಲೆಡೆಯೂ ಇದ್ದಾನೆ ಎಂಬ ಭಾವನೆಯಿಂದ ಅವನ ಹೆಸರನ್ನಿಲ್ಲಿ ಹೇಳಿಲ್ಲ
ಎಂಬುದರಿಂದ ಹಿಡಿದು, ಪಂಪ ಜೈನನಾದುದರಿಂದ ವೈದಿಕ ದೇವರಾದ ಕೃಷ್ಣನನ್ನು ಹೆಸರಿಸಿಲ್ಲ ಎಂಬುವವರೆಗೆ.
ಆದರೆ ಈಗ ನಾವೀಗ ಮಾಡಿದ ವಿಶ್ಲೇಷಣೆಗನುಗುಣವಾಗಿ ಕೃಷ್ಣನ ಹೆಸರನ್ನನಿಲ್ಲಿ ಸೇರಿಸದಿರುವುದು ಅವನು
ಇಲ್ಲಿ ಹೆಸರುಗೊಂಡವರಂತೆ ಯಾವುದೇ ಮೌಲ್ಯದ ಸಂಕೇತವಲ್ಲ ಎಂಬುದರಿಂದ. ಅವನು, ಪಂಪನ ದೃಷ್ಟಿಯಲ್ಲಿ ‘ಶ್ವೇತಕೃಷ್ಣಕಾರಕ’ನಾದ
ಮೆಕೈವಿಲ್ಲಿಯನ್ ತಂತ್ರಗಾರ, ಅಷ್ಟೆ.
ಕಾವ್ಯದ ಒಡಲಲ್ಲಿಯೂ
ಅಲ್ಲಲ್ಲಿ ಇಂತಹ ಗುಣಗಳ ಹೊಗಳಿಕೆ ಬರುತ್ತದೆ. ತನ್ನನ್ನು ಮಗನೆಂದು ಕುಂತಿ ಒಪ್ಪಿಕೊಂಡುದರಿಂದ ತನಗೆ
ಕುಲ(ಕ್ಷತ್ರಿಯತ್ವ)ವೂ ಬಂತು, ಜೊತೆಗೆ ಶ್ರೇಷ್ಠ ಲೌಕಿಕ ಗುಣಗಳು ಪ್ರಾಪ್ತವಾದವು ಎಂದು ಕರ್ಣ ಹೇಳುತ್ತಾನೆ
(ಆಶ್ವಾಸ 9, ಪದ್ಯ 80):
ಚಲಮುಂ ಚಾಗಮುಮಳವುಂ
ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೊಳ್
ನೆಲಸಿದುವು ನಿಮ್ಮ ಕರುಣಾ
ಬಲದಿಂ ನೀವೆನ್ನನಿಂದು ಮಗನೆಂದುದಱಿಂ
ಭೀಷ್ಮನಿಗೆ ಸೇನಾಧಿಪತಿಯ ಪಟ್ಟವನ್ನು
ಕಟ್ಟುವ ಪ್ರಸಂಗದಲ್ಲಿಯೂ ಕರ್ಣನು “ಚಲಂ ಗುಣಂ ಗುಣಂ ಕುಲಂ ಅಭಿಮಾನಮೊಂದೆ ಕುಲಂ ಅಣ್ಮು ಕುಲಂ” ಎಂದು
ಘೋಷಿಸುತ್ತಾನೆ. ಕರ್ಣನ ಸಾವಿನ ಸಂದರ್ಭದಲ್ಲಿ “ಚಾಗದ ನನ್ನಿಯ ಕಲಿತನದಾಗರಮೆನೆ ನೆಗಳ್ದ” ದೇಹ ಕರ್ಣನದು
ಎಂದು ಕವಿ ವರ್ಣಿಸುವುದಲ್ಲದೆ, (ಹನ್ನೆರಡನೆಯ ಆಶ್ವಾಸ, ಪದ್ಯ ಇನ್ನೂರ ಹದಿನೇಳು)
ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆ
ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್
ದೊರೆ ಕರ್ಣನೇರು ಕ
ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ
ಚಾಗಮೆಂದು ಕ
ರ್ಣನ ಪಡೆಮಾತಿನೊಲ್ ಪುದಿದು ಕರ್ಣರಸಾಯನಮಲ್ತೆ
ಭಾರತಂ
ಎಂದು ಕರ್ಣನ ಗುಣಗಾನ ಮಾಡುತ್ತಾನೆ.
ಕವಿಗೆ ಕರ್ಣ ಇಷ್ಟು ಆಪ್ತನಾಗಿರುವ ಕಾರಣ ಅವನ ಗುಣಗಳು; ಅವೆಂದರೆ ಹದಿನಾಲ್ಕನೆಯ ಆಶ್ವಾಸದ ಅರವತ್ತನಾಲ್ಕನೆಯ
ಪದ್ಯದಲ್ಲಿ ಉಕ್ತವಾದ ಗುಣಗಳೇ; ಅಂದರೆ ಚಲ, ಚಾಗ, ಅಳವು, ಕಲಿತನ, ನನ್ನಿ - ಇವುಗಳೇ. ಹಲವಾರು ಶ್ರೇಷ್ಠ
ಗುಣಗಳ ಆಗರವಾಗಿದ್ದ ಕರ್ಣ ಒಂದು ರೀತಿಯಲ್ಲಿ ಪಂಪನ ವೀರಮಾದರಿ.
ಪಂಪನಂತಹ
ಕವಿ ತನ್ನ ಕಾಲದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವ ರೀತಿ ಇದು. ಆದರೆ ಕವಿಯ ಪ್ರತಿಭೆ (ಅಂದರೆ ಸನ್ನಿವೇಶವನ್ನು
ವ್ಯಕ್ತ್ಯತೀತ ನೆಲೆಯಲ್ಲಿ ಪರಿಭಾವಿಸುವ ಸಾಮರ್ಥ್ಯ; ಇದೇ ಸಾಧಾರಣೀಕರಣ ಎನ್ನಬಹುದೇ?) ಇಂತಹ ಪೂರ್ವಸಿದ್ಧ
ಮೌಲ್ಯಗಳಿಗೆ ಬಲಿಬೀಳದೆ ನಿರ್ಭಾವುಕವಾಗಿ ಚಿಂತಿಸಬಲ್ಲದು; ಎಲ್ಲ ಕಾಲದ ಮಾನವ ಬದುಕಿಗೆ ಅನ್ವಯಿಸಬಹುದಾದುದನ್ನು
ಗುರುತಿಸಬಲ್ಲುದು. ಹೀಗಾಗಿಯೇ ತನ್ನ ದಟ್ಟ ರಾಜತ್ವಪರವಾದ ನಿಲವಿನ ಹಿನ್ನೆಲೆಯಲ್ಲಿಯೂ ಪಂಪ ಅದನ್ನೂ
ಮೀರಿದ ಮಾತುಗಳನ್ನಾಡಬಲ್ಲ. ‘ವಿಕ್ರಮಾರ್ಜುನ ವಿಜಯಂ’ನಲ್ಲಿ ಕರ್ಣನಿಗೆ ಸಾರಥಿಯಾಗೆಂದು ದುರ್ಯೋಧನನು
ಶಲ್ಯನನ್ನು ಕೇಳಿಕೊಳ್ಳುವ ಪ್ರಸಂಗವನ್ನಿಲ್ಲಿ ನೆನಪಿಸಿಕೊಳ್ಳಬಹುದು. ಕೆಳಜಾತಿಯವನಿಗೆ ತಾನು ಸಾರಥಿಯಾಗಬೇಕೆಂಬ
ಅವನ ಪ್ರಾರ್ಥನೆಯನ್ನು ಕೇಳಿದಾಗ ಶಲ್ಯ ಕೆರಳಿ ಹೇಳುವ ಮಾತುಗಳು ಹನ್ನೆರಡನೇ ಆಶ್ವಾಸದ ತೊಂಬತ್ತೆರಡು
ಹಾಗೂ ತೊಂಬತ್ತಮೂರನೇ ಪದ್ಯಗಳಲ್ಲಿವೆ.
ಕಲಿಯನೆ
ಪಂದೆ ಮಾಳ್ಪ ಕಡುವಂದೆಯನೊಳ್ಗಲಿ ಮಾಳ್ಪ ತಕ್ಕನಂ
ಪೊಲೆಯನೆ
ಮಾಳ್ಪ ಮುಂ ಪೊಲೆಯನಂ ನೆಱೆ ತಕ್ಕನೆ ಮಾಳ್ಪ ತಮ್ಮೊಳ
ಗ್ಗಲಿಸಿ
ಪೊದಳ್ದು ಪರ್ವಿದವಿವೇಕತೆಯಿಂ ನೃಪ ಚಿತ್ತವೃತ್ತಿ ಸಂ
ಚಲಮದಱಿಂದಮೋಲಗಿಸಿ ಬಾಳ್ವುದೆ ಕಷ್ಟಮಿಳಾಧಿನಾಥರಂ
ಅನುಪಮ ವಿಕ್ರಮಕ್ರಮಮುದಾರಗುಣಂ
ಋತವಾಕ್ಯಮೆಂಬ ಪೆಂ
ಪೆನಲಿವು
ಮೂಱೆ ನಾಲ್ಕೆ ಗುಣಮತ್ತ ಮದಾನ್ವಿತ ರಾಜಬೀಜಸಂ
ಜನಿತಗುಣಂ
ಮದಂ ಮದಮನಾಳ್ದವಿವೇಕತೆಯಿಂದಮಲ್ತೆ ತೊ
ೞ್ತಿನ ಮೊಲೆವಾಲನುಂಡ
ಗುಣಮಿಂತಿದನಾರ್ ಕಿಡಿಪರ್ ನರೇಂದ್ರರೊಳ್
ಇಲ್ಲಿ ಅವನು ವ್ಯಕ್ತಪಡಿಸುತ್ತಿರುವ ಅಭಿಪ್ರಾಯವೆಂದರೆ,
“ತಮ್ಮೊಳಗ್ಗಲಿಸಿ ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂಚಲಂ” ಹಾಗೂ “ಮತ್ತ ಮದಾನ್ವಿತ ರಾಜಬೀಜಸಂಜನಿತ
ಗುಣಂ ಮದಂ, ಮದಮನಾಳ್ದವಿವೇಕತೆ” ಎಂಬುದು. ದೊಡ್ಡ ಕವಿ ತನ್ನ ಕಾಲದ ವಾಸ್ತವತೆಗಳನ್ನು ಚಿತ್ರಿಸುತ್ತಲೇ
ಸಾರ್ವತ್ರಿಕವಾಗಿ ಮೌಲಿಕವಾದುದನ್ನು ಎತ್ತಿಹಿಡಿಯುತ್ತಾನೆ. ದಟ್ಟ ನಂಬಿಕೆಯ ನೆಲದಲ್ಲಿಯೇ ಮೊಳೆಯುವ
ಸತ್ಯಸಸ್ಯಗಳಿವು. ರಾಜನಿಷ್ಠೆಯ ವಾದ್ಯಗಳ ನಡುವೆಯೇ ಕೇಳಿಬರುವ ರಾಜವಿರೋಧಿ ಧ್ವನಿಯಿದು. ಹತ್ತನೆ ಶತಮಾನದ
ಕನ್ನಡನಾಡು ಯುದ್ಧ ಮತ್ತು ಜಾತಿ ಸಂಕಟಗಳಿಂದ ತಲ್ಲಣಗೊಂಡಿತ್ತು. ಒಟ್ಟು ಸಮಾಜ ಇವೆರಡನ್ನೂ ಮೀರಲಾರದವೆಂದು
ಭಾವಿಸಿದಂತಿದ್ದರೂ ಸೂಕ್ಷ್ಮದಲ್ಲಿ ಅವೆರಡರ ವಿರುದ್ಧವಾದ ಭಾವನೆ ನೆಲೆಗೊಂಡಿತ್ತೆನಿಸುತ್ತದೆ. ಇದರ
ಒಂದೂವರೆ ಶತಮಾನಾನಂತರ ನಡೆದ ವಚನ ಚಳವಳಿ ಈ ಎರಡರ ವಿರುದ್ಧವೂ ದಿಟ್ಟ ನಿಲವನ್ನು ತೆಗೆದುಕೊಂಡದ್ದನ್ನು
ನೆನಪಿಸಿಕೊಂಡರೆ, ಪಂಪ ತನಗರಿವಿಲ್ಲದೆಯೇ ಪ್ರಾತಿಭ ನೆಲೆಯಲ್ಲಿ ಜನರ ನೈಜ ಭಾವನೆಗಳನ್ನು ಧ್ವನಿಸುತ್ತಿರುವ
ಹಾಗೆ ತೋರುತ್ತದೆ. ಈ ಎರಡನ್ನೂ ಚಿತ್ರಿಸುವುದರಲ್ಲಿ ಕಾವ್ಯದ ದ್ವಂದ್ವವಿದೆಯೆಂದೇನೂ ಭಾವಿಸಬೇಕಾದ್ದಿಲ್ಲ.
ಶ್ರೇಷ್ಠ ಕಾವ್ಯ ಸಮಕಾಲೀನತೆಯನ್ನು ಮೇಲ್ಪದರದಲ್ಲಿ ಮಾತ್ರವಲ್ಲದೆ ಅದರ ಅಂತರಾಳದ ನೆಲೆಯಲ್ಲಿಯೂ ಒಳಗೊಳ್ಳುತ್ತದೆ.
ಟಿಪ್ಪಣಿಗಳು
1.
ತನ್ನ ‘ಸಮಯ ಪರೀಕ್ಷೆ’ಯಲ್ಲಿ ಬ್ರಹ್ಮಶಿವ ಈ ಬಗ್ಗೆ ಸ್ಪಷ್ಟವಾಗಿಯೇ
ಹೇಳುತ್ತಾನೆ:
ಕ್ಷತ್ರಿಯನೆ ಧಾತ್ರಿಗೊಡೆಯಂ
ಕ್ಷತ್ರಿಯನಾರ್ಗೇನನಿತ್ತನದು ದೆಯ್ವಕೃತಂ|
ಕ್ಷತ್ರಿಯನೆ
ತೀರ್ಥಕರನಾ
ಕ್ಷತ್ರಿಯನದಱಿಂದೆ ಪಿರಿಯನೆಲ್ಲಂದದೊಳಂ||
(ಸಮಯ ಪರೀಕ್ಷೆ: 2. 23)
2.
ಪಂಪನು ನಿರೀಶ್ವರನಾದ
ನವಜೈನನಾದುದರಿಂದ ವೈದಿಕ ದೇವರುಗಳ ಬಗ್ಗೆ ಅಂಥ ಭಕ್ತಿಯಿರಲಿಲ್ಲವೇ, ಅಥವಾ ದೈವಭಕ್ತಿಯನ್ನೂ ಮೀರಿಸಿದ
ಅವನ ಸ್ವಾಮಿಭಕ್ತಿ ಕಾರಣವೇ, ಅಂತೂ ತನಗೆ ಸೌಖ್ಯಕೋಟಿ, ಭೋಗ, ಹೃದಯಾಂಬುಜದ ಅಲರ್ಚುಗೆ ಹಾಗೂ ವಿಚಿತ್ರ
ರತೋತ್ಸವಗಳನ್ನು ನೀಡುವವನು ಅರಿಕೇಸರಿ ಎಂಬ ಭಾವನೆ ಪಂಪನಲ್ಲಿದ್ದಂತಿದೆ. ವೈದಿಕ ದೇವರೊಡನೆ ಹೋಲಿಸಿ
ತನ್ನ ಆಶ್ರಯದಾತನೇ ಅವರಿಗಿಂತ ಮಿಗಿಲು ಎಂಬ ರೀತಿಯ ವರ್ಣನೆ ಮಾಡಲು ಪಂಪನಿಗೆ ಕವಿರಾಜಮಾರ್ಗಕಾರ ಮಾದರಿಯಾಗಿರುವಂತಿದೆ.
‘ಕವಿರಾಜಮಾರ್ಗ’ದ ಮಂಗಳಾಚರಣೆಯ ಎರಡು ಪದ್ಯಗಳಲ್ಲಿ ಕವಿ ನಾರಾಯಣನಿಗೂ ನೃಪತುಂಗನಿಗೂ ಹೋಲಿಕೆಯನ್ನು
ಮಾಡುತ್ತಿದ್ದಾನೆ ಕವಿ.
ಶ್ರೀತಳ್ತುರದೊಳ್
ಕೌಸ್ತುಭ
ಜಾತದ್ಯುತಿ
ಬಳಸಿ ಕಾಂಡಪಟದಂತಿರೆ ಸಂ
ಪ್ರೀತಿಯಿನಾವನನಗಲಳ್
ನೀತಿನಿರತರನುದಾರನಾ ನೃಪತುಂಗಂ
ಕೃತಕೃತ್ಯಮಲ್ಲನಪ್ರತಿ
ಹತವಿಕ್ರಮನೊಸೆದು
ವೀರನಾರಾಯಣನ
ಪ್ಪತಿಶಯಧವಳಂ
ನಮಗೀ
ಗತರ್ಕಿತೋಪಸ್ಥಿತ
ಪ್ರತಾಪೋದಯಮಂ
ಎರಡನೆಯ
ಪದ್ಯದ ಕೊನೆಗೆ “ವೀರನಾರಾಯಣನಪ್ಪತಿಶಯಧವಳಂ ನಮಗೀಗತರ್ಕಿತೋಪಸ್ಥಿತ ಪ್ರತಾಪೋದಯಮಂ” ಎಂದು ಪ್ರಾರ್ಥಿಸುತ್ತಾನೆ.
ಅಂದರೆ ತನಗೆ ಪ್ರತಾಪೋದಯವನ್ನು ಮಾಡುವವನು ‘ಅತಿಶಯಧವಳ’ ಎಂಬ ನಂಬಿಕೆಯಿಲ್ಲಿ ನಿಚ್ಚಳವಾಗಿದೆ. ಈ ಸ್ತುತಿಯು
ಪಂಪನ ಪದ್ಯಗಳಿಗೆ ಮಾದರಿಯಾಗಿವೆ. ಲಕ್ಷ್ಮಿಯು ಸಂಪ್ರೀತಿಯಿಂದ ಅಗಲದಂತೆ ಇರುವವಳು ನಾರಾಯಣ, ಆದರೆ
ತನ್ನ ಆಶ್ರಯದಾತ ವೀರನಾರಾಯಣ.
********
No comments:
Post a Comment