ಡಾ. ಪಿ.ವಿ. ಎನ್. ಅವರ ನಾಲ್ಕು ಹೊಸ ಪುಸ್ತಕಗಳ ಬಗ್ಗೆ ಮೂರು ಮಾತು
- ಎಚ್, ಶೇಷಗಿರಿರಾವ್
ಕನ್ನಡವು ಶಾಸ್ತ್ರೀಯ ಭಾಷೆಯ ಸ್ಥಾನಮಾನ
ಪಡೆದ ಹಿನ್ನೆಲೆಯಲ್ಲಿ ನಮ್ಮ ಭಾಷೆಗೆ 2000 ವರ್ಷಗಳ ಹಾಗೂ ಕನ್ನಡ ಬರವಣಿಗೆಗೆ 1600 ವರ್ಷಗಳ ಇತಿಹಾಸವಿದೆ
ಎಂದು ಕನ್ನಡಿಗರೆಲ್ಲ ಹೆಮ್ಮೆಪಡುವುದು ಸಹಜ ಆದರೆ ಪ್ರಾಚೀನ ಕೃತಿಗಳನ್ನು ಓದಿದವರು ಎಷ್ಟು ಮಂದಿ ಎಂದಾಗ
ಮೌನಕ್ಕೆ ಶರಣಾಗುವವರೇ ಬಹಳ. ಕಾರಣ ಬಹು ಸರಳ; ಹತ್ತು ಹನ್ನೆರಡನೇ ಶತಮಾನಗಳ ಕೃತಿಗಳ ಹೆಸರು ಬಲ್ಲೆವೇ
ಹೊರತು ಮೂಲದಲ್ಲಿ ಅವುಗಳನ್ನು ಓದಿರುವವರು ವಿರಳ, ಬೆರಳೆಣಿಕೆಯಷ್ಟು. ಕಾರಣ ಕಬ್ಬಿಣದ ಕಡಲೆಯಾಗಿರುವ
ಹಳೆಗನ್ನಡ ಭಾಷೆ ಮತ್ತು ಗದ್ಯಪದ್ಯ ಮಿಶ್ರಿತವಾದ ಸಂಸ್ಕೃತಮಯವಾಗಿರುವ ಚಂಪೂ ಶೈಲಿ. ನಾರಿಕೇಳ ಪಾಕದಂತಿರುವ
ಸಾಹಿತ್ಯ ಕೃತಿಗಳನ್ನು ದ್ರಾಕ್ಷಾಪಾಕ ಮಾಡಿ ಜನಸಾಮಾನ್ಯರೂ ಓದಬಹುದಾದ ಹೊಸಗನ್ನಡ ಗದ್ಯಶೈಲಿಯಲ್ಲಿ
ಸಾದರ ಪಡಿಸುವ ಪ್ರಯತ್ನದ ಫಲವೇ ಡಾ. ಪಿ. ವಿ. ನಾರಾಯಣ ಅವರ ಈ ನಾಲ್ಕು ಕೃತಿಗಳು. ಅವುಗಳಲ್ಲಿ ಎರಡು
ಹಳೆಗನ್ನಡ ಅಧ್ಯಯನಕ್ಕೆ ಸಹಾಯಕವಾಗುವಂಥವಾದರೆ ಇನ್ನೆರಡು ಹೊಸಗನ್ನಡ ಗದ್ಯ ಕಥನಗಳು. ‘ಪಂಪ ಕಾವ್ಯಸಾರ’
ಪಂಪನ ಎರಡೂ ಮಹಾಕಾವ್ಯಗಳ ಸಂಕ್ಷಿಪ್ತ ರೂಪಗಳು, ಹಾಗೂ ‘ಪಂಪನ ನುಡಿಗಣಿ’ ಅವನ ಎರಡೂ ಕಾವ್ಯಗಳ ನುಡಿಸಮಸ್ತಕ್ಕೆ
ಅರ್ಥ ವಿವರಣೆಗಳನ್ನು ಪ್ರಯೋಗಸಹಿತ
ನೀಡುವ ಪ್ರಯತ್ನಗಳು. ಇವು ಹಳಗನ್ನಡ ಕಾವ್ಯಾಭ್ಯಾಸಿಗಳಿಗೆ ಅನುಕೂಲವಾಗುವುದರಲ್ಲಿ
ಸಂದೇಹವಿಲ್ಲ. ಇನ್ನೆರಡು ನಾಗಚಂದ್ರನ ಪಂಪರಾಮಾಯಣ” ಮತ್ತು ನಯಸೇನನ ‘ಧರ್ಮಾಮೃತ’ಗಳು ಹೊಸಗನ್ನಡ ಕಥನಗಳು.
ಡಾ. ಪಿ. ವಿ. ನಾರಾಯಣ ಅವರು ಹಳೆಯ ಸೃಷ್ಟಿಯನ್ನು
ಹೊಸ ದೃಷ್ಟಿಯಲ್ಲಿ ನೋಡಬಲ್ಲ ವಿರಳ ವಿದ್ವಾಂಸರಲ್ಲಿ ಒಬ್ಬರು. ಹಳೆಯದೆಲ್ಲ ಹೊನ್ನು ಎಂಬ ಅಂಧಾಭಿಮಾನ
ಅವರದಲ್ಲ; ಸಂಸ್ಕೃತಭೂಯಿಷ್ಠ ಭಾಷೆ
ಅಸಂಬದ್ಧ, ಅಷ್ಟಾದಶ ವರ್ಣನೆಗಳಿವೆ ಎಂಬ ತಾತ್ಸಾರವೂ ಇಲ್ಲ. ಮಾರ್ಗದಲ್ಲಿ
ದೇಸಿಯನ್ನು ಕಾಣುವ ಅಂದಿನ
ಮಿತಿಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಯತ್ನವನ್ನು ಗುರುತಿಸುವ ಸಹೃದಯತೆ
ಅವರಿಗಿದೆ. ಹಾಗೆಂದು ದೋಷವನ್ನು
ಗುಣ ಎನ್ನದೆ ಎತ್ತಿ ತೋರಿಸುವ ಎದೆಗಾರಿಕೆ ಅವರಿಗಿದೆ. ಈ ಕಾರಣಗಳಿಂದ
ಪ್ರಾಚೀನ ಕೃತಿಗಳೂ ಇಂದಿನ ಸಮಕಾಲೀನ ಸಮಾಜಕ್ಕೆ ಆಪ್ತವಾಗಬಲ್ಲವು. ‘ಹಾದರದ ಕತೆ’ ‘ಸೋದರ ವಧೆ’ ಎಂದು
ಹೀಗಳೆಯುವವರೂ ಓದಿ ಅವುಗಳಲ್ಲಿರುವ ುದಾತ್ತತೆ, ಸಾರ್ವತ್ರಿಕ ಸತ್ಯ, ಜನಜೀವನ ಮತ್ತು ಭಾಷಾ ಬಳಕೆಯ
ಸೌಂದರ್ಯದ ಕಿರುನೋಟ ಪಡೆಯಲು ಈ ಕೃತಿಗಳು ಸಹಾಯಕವಾಗಿವೆ, ಹೊಸರೂಪದಲ್ಲಿ ಬಂದ ಈ ಕೃತಿಗಳು.
‘ಪಂಪರಾಮಾಯಣ’ – ಗದ್ಯಕಥನ
ಹನ್ನೊಂದು ಹನ್ನೆರಡನೆಯ ಶತಮಾನದ ಸಂಧಿಕಾಲದಲ್ಲಿ
ಇದ್ದ ನಾಗಚಂದ್ರ ಜೈನಕವಿಗಳಲ್ಲಿ ಗಣ್ಯ,
ಪಂಪನ ಉತ್ಕಟ ಅಭಿಮಾನಿ. ಅಭಿನವ ಪಂಪನೆಂದು ಕರೆದುಕೊಂಡು ಹೆಮ್ಮೆಪಟ್ಟುಕೊಂಡವ.
ಅವನಂತೆಯೇ
ಎರಡು ಕಾವ್ಯಗಳನ್ನು ಬರೆದ ನಾಗಚಂದ್ರ ಎರಡನ್ನೂ ಧಾರ್ಮಿಕ ಹಿನ್ನೆಲೆಯಿಂದಲೇ
ನಿರೂಪಿಸಿದವ. ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂದು ಕುಮಾರವ್ಯಾಸ ಹೇಳಿದರೂ ಕನ್ನಡದಲ್ಲಿ
ದೊರಕಿರುವ ರಾಮಾಯಣಗಳ ಕಾವ್ಯಗಳ ಸಂಖ್ಯೆ ಬಹಳವಾಗೇನೂ ಇಲ್ಲ. ಆದರೆ ನಾಗಚಂದ್ರನ ‘ರಾಮಚಂದ್ರಚರಿತ ಪುರಾಣ’ಒಂದು ವಿಶಿಷ್ಟ ಕೃತಿ. ಇದರಲ್ಲಿ ಜೈನ ಸಂಪ್ರದಾಯದ ರಾಮಾಯಣ ಕತೆ ಅಡಕವಾಗಿದೆ.
ಇದು ವಾಲ್ಮೀಕಯ ಕಾವ್ಯಕ್ಕಿಂತ ಅನೇಕ ವಿಧಗಳಲ್ಲಿ ಭಿನ್ನ. ಸಾಂಪ್ರದಾಯಿಕ ವಾಲ್ಮೀಕಿ ರಾಮಾಯಣವನ್ನು
ಮಾತ್ರ ಬಲ್ಲವರಿಗೆ ಿದರಲ್ಲಿ ಅನೇಕ ವಿಚಿತ್ರ ಅಂಶಗಳಿರುವಂತೆ ಕಾಣುತ್ತದೆ. ಈ ಕಾವ್ಯದ ನಾಯಕ ರಾಮನಾದರೂ
ರಾವಣನನ್ನು ಕೊಲ್ಲುವುದು ಲಕ್ಷ್ಮಣ; ಹನುಮಂತ, ಸುಗ್ರೀವ ಮೊದಲಾದವರು ವಾನರರಲ್ಲ, ಕಪಿಧ್ವಜರು. ರಾಮನು
ಕೈಕೆಯ ಮಾತಿನಂತೆ ವನವಾಸಕ್ಕೆ ಹೋಗುವುದಿಲ್ಲ,
ದೇಶ ಸಂಚಾರಕ್ಕೆಂದು ಹೋಗುವವನು. ರಾವಣ ಪ್ರತಿನಾಯಕನಾದರೂ ದುಷ್ಟನಲ್ಲ,
‘ಪರಾಂಗನಾವಿರತಿ ವ್ರತ’ನಿಷ್ಠ.
ಮೊದಲ ಬಾರಿಗೆ ಕನ್ನಡ ಕಾವ್ಯದಲ್ಲಿ ದುರಂತ ನಾಯಕನಾಗಿ ಅವನ ಚಿತ್ರಣ
ಈ ಕಾವ್ಯದಲ್ಲಿ ಭವ್ಯವಾಗಿ ಮೂಡಿಬಂದಿದೆ. ಭಾರತದಲ್ಲಿ ಕಾವ್ಯಗಳು ಬಹುತೇಕ ನಾಯಕಪ್ರಧಾನ. ಆದರೆ ಇಲ್ಲಿ
ರಾವಣ ತನ್ನ ಎಲ್ಲ ಸಾಧನೆಯ ಗುಣಗಳ ಹೊರತಾಗಿಯೂ ವಿಧಿಯ ಕೈಗೊಂಬೆಯಾಗಿ ದುರಂತ ನಾಯಕನಾಗುವನು; ಓದುಗರ
ಸಹಾನುಭೂತಿಗೆ ಪಾತ್ರವಾಗುವನು. ಈ ರೀತಿಯ ಪಾತ್ರಚಿತ್ರಣ ಗ್ರೀಕ್ ದುರಂತ ನಾಟಕಗಳಲ್ಲಿ ಸಾಮಾನ್ಯವಾದರೂ
ಕನ್ನಡದಲ್ಲಿ ಅತಿ ವಿರಳ. ಇದರ ಪ್ರಭಾವ ಆಧುನಿಕ ಕವಿಗಳ ಮೇಲೆ ಆಗಿರುವುದನ್ನು ಗುರುತಿಸಬಹುದು, ಅಷ್ಟೆ.
ಚಂಪೂವಿನಲ್ಲಿರುವ ಈ ಕಾವ್ಯವನ್ನು ಹೊಸಗನ್ನಡ ಗದ್ಯದಲ್ಲಿ ನಿರೂಪಿಸಿರುವುದರಿಂದ ಇದು ಸರಾಗವಾಗಿ ಓದಿಸಿಕೊಂಡು
ಹೋಗುತ್ತದೆ. ಇದರಿಂದ ಪ್ರಾಚೀನ ಕಾವ್ಯವೊಂದರ ಪರಿಚಯ ಸುಲಭವಾಗಿ ಆಗುವುದು.
ನಯಸೇನನ ‘ಧರ್ಮಾಮೃತ’ - ಗದ್ಯಕಥನ
ಹನ್ನೆರಡನೆಯ ಶತಮಾನದ ಕವಿ ನಯಸೇನ. ಅವನ
ಕೃತಿಯಾದ ‘ಧರ್ಮಾಮೃತ’ ಹೆಸರೇ ಸೂಚಿಸುವಂತೆ ಜೈನಧರ್ಮದ ಹಿರಿಮೆಯನ್ನು ಸಾರುವುದು ಅದರ ಗುರಿ. ಆದರೆ
ಅದಕ್ಕೆ ಅವನು ಆರಿಸಿಕೊಂಡ ವಿಧಾನ ಜೈನತತ್ವಗಳನ್ನು ಬೇರೆ ಬೇರೆ ಹದಿನಾಲ್ಕು ಕತೆಗಳ ಮೂಲಕ ಚಿತ್ರಿಸುವುದು.
ಅದೂ ಪಂಚತಂತ್ರದ ಮಾದರಿಯಲ್ಲಿ. ಕೃತಿಯ ಶೈಲಿ ಗದ್ಯಪದ್ಯ ಮಿಶ್ರಿತ ಚಂಪೂ ಆದರೂ ಸಂಸ್ಕೃತ ಅತಿಯಾಗಿಲ್ಲ
ಗದ್ಯಕ್ಕೆ ಆದ್ಯತೆ. ಅಚ್ಚಗನ್ನಡದಲ್ಲಿ ಸಂಸ್ಕೃತ ಬೆರೆಸುವುದಕ್ಕೆ ಅವನು ಕಡುವಿರೋಧಿ. ಕನ್ನಡಕ್ಕೆ
ಮೊದಲ ಸ್ಥಾನ. ಆಡುನುಡಿಯ ಸೊಬಗನ್ನು ಮೈಗೂಡಿಸಿಕೊಂಡ ಕಾವ್ಯವಿದು. ಕವಿ ಉಪಮಾಲೋಲ. ಹೀಗಾಗಿ ತಿಳಿಯಾದ
ಶೈಲಿಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ಸರಳ ಭಾಷೆ ಇಲ್ಲಿನದು.
ಈ ಕಾರಣಗಳಿಂದ ನಯಸೇನನ ಕೃತಿ ಕನ್ನಡಿಗರ
ಹೃದಯಕ್ಕೆ ಹತ್ತಿರವಾಗಿದೆ. ಅದನ್ನು ಪೂರ್ಣವಾಗಿ ಹೊಸಗನ್ನಡ ಗದ್ಯದಲ್ಲಿ ರೂಪಾಂತರಿಸಿರುವುದರಿಂದ ಇಂದಿನ
ಓದುಗರಿಗೆ ಅನುಕೂಲ. ಹಳಗನ್ನಡದ ಎರಡು ಕೃತಿಗಳ ಸರಳ ರೂಪಾಂತರ ಇಂದಿನ ಓದುಗರಿಗೆ ಹಳಗನ್ನಡದ ಬಗ್ಗೆ
ಅಭಿರುಚಿಯುಂಟುಮಾಡುವಂತೆ ಮಾಡಿರುವ ಲೇಖಕರ ಪ್ರಯತ್ನ ಅಭಿನಂದನೀಯ.
‘ಪಂಪ ಕಾವ್ಯಸಾರ’ - ಪಂಪನ ಕೃತಿಗಳ ಸಂಕ್ಷಿಪ್ತ ರೂಪ
ಹೆಸರೇ ಸೂಚಿಸುವಂತೆ ಆದಿಕವಿ ಪಂಪನ ‘ಾದಿಪುರಾಣ’
ಮತ್ತು ‘ವಿಕ್ರಮಾರ್ಜುನ ವಿಜಯ’ ಗಳ ಸಂಕ್ಷಿಪ್ತ ಆವೃತ್ತಿಯನ್ನೊಳಗೊಂಡ ಗ್ರಂಥವಿದು. ಮುಖ್ಯವಾದವುಗಳನ್ನು
ಬಿಡದೆ, ಅನವಶ್ಯಕವೆನ್ನಿಸುವ ಭಾಗಗಳನ್ನು ಹೊರತುಪಡಿಸಿ ಸಿದ್ಧಪಡಿಸಿರುವ ಈ ಪ್ರಯತ್ನವು ಸಮಯದೊಂದಿಗೆ
ಸ್ಪರ್ಧಿಸುತ್ತಿರುವ ಆಧುನಿಕ ಓದುಗರಿಗೆ ಮಾತ್ರವಲ್ಲದೆ ಪಂಪನ ಹಿರಿಮೆ ಎದ್ದು ತೋರುವ ಭಾಗಗಳ ಮೂಲಕ
ಅವನ ಕೊಡುಗೆಯನ್ನು ಪರಿಚಯ ಮಾಡಿಕೊಡಲು ಇದರಿಂದ ಅನುಕೂಲ.
ಪಂಪ ಕನ್ನಡದ
ಆದಿಕವಿ; ಕಾಲದೃಷ್ಟಿಯಿಂದಲ್ಲದಿದ್ದರೂ ಮಾರ್ಗನಿರ್ಮಾಣದ ದೃಷ್ಟಿಯಿಂದ, ಗುಣಮಟ್ಟದ ದೃಷ್ಟಿಯಿಂದ.
‘ಆದಿಪುರಾಣ’ ಕನ್ನಡದಲ್ಲಿನ ಮೊದಲ ಜೈನ ಕಾವ್ಯ, ಆದಿತೀರ್ಥಂಕರನ ಚರಿತೆಯನ್ನೊಳಗೊಂಡದ್ದು. ಅವನು ಜೀವನವನ್ನು
ಪಾವನವಾಗಿ ಮಾಡಿಕೊಂಡ ಪರಿ ಎಲ್ಲರಿಗೂ ಆದರ್ಶ. ಲೌಕಿಕ ಕಾವ್ಯ ಎಂದು ಅವನೇ ಕರೆಯುವ ‘ವಿಕ್ರಮಾರ್ಜುನ
ವಿಜಯ’ದ ಕತೆ ವ್ಯಾಸಭಾರತಕ್ಕಿಂತ ತೀರ ಭಿನ್ನವಾಗದಿದ್ದರೂ, ಅದರ ಅಭಿವ್ಯಕ್ತಿ ಮತ್ತು ತನ್ನ ಆಶ್ರಯದಾತ
ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿ ಮಾಡಿಕೊಂಡ ಬದಲಾವಣೆ ಮತ್ತು ಸಮಕಾಲೀನ ಪರಿಸ್ಥಿತಿಯ
ಚಿತ್ರಣ ಇದರ ವೈಶಿಷ್ಟ್ಯ. ವಿಶೇಷವಾಗಿ ‘ಮಾರ್ಗ’ವನ್ನು ಕುರುಡಾಗಿ ಅನುಸರಿಸದೆ
‘ದೇಸಿ’ಯನ್ನು ಇದರಲ್ಲಿ ಬೆಸೆದಿರುವ ರೀತಿಯಿಂದಾಗಿ ಈ ಕಾವ್ಯ ಸಾವಿರ ವರ್ಷ ಕಳೆದರೂ ಜೀವಂತವಾಗಿದ್ದು
ಸ್ಫೂರ್ತಿಯ ಸೆಲೆಯಾಗಿದೆ.
‘ಪಂಪನ ನುಡಿಗಣಿ’ - ಶಬ್ದಕೋಶ
‘ಪಂಪನ ನುಡಿಗಣಿ’ ಒಂದು ಅಪೂರ್ವ ಶಬ್ದಕೋಶ.
ಪಂಪನ ಎರಡೂ ಕಾವ್ಯಗಳಲ್ಲಿ ಪ್ರಯೋಗವಾಗಿರುವ ಪದಗಳ ಸಂಗ್ರಹ. ಪಂಪನ ಕಾವ್ಯಗಳಲ್ಲಿ ಹಾಸುಹೊಕ್ಕಾಗಿರುವ
ದೇಸಿ ಮತ್ತು ಮಾರ್ಗ ಪದಗಳ ಅರ್ಥವನ್ನು
ಪ್ರಯೋಗಗಳ ಮೂಲಕ ಪರಿಚಯಿಸುವ ಪರಿ ಅನನ್ಯ. ಅಲ್ಲಿಯೇ ಪದಗಳ ವ್ಯಾಕರಣಸ್ವರೂಪವನ್ನೂ
ನೀಡಲಾಗಿದೆ.
ಅಕಾರಾದಿಯಾಗಿ ಱಕಾರದವರೆಗೆ ಇರುವ ಪದಗಳ
ವಿವಿಧ ರೂಪಗಳನ್ನು 600 ಕ್ಕೂ ಮೀರಿದ
ಪುಟಗಳಲ್ಲಿ ಅಳವಡಿಸಲಾದ ಈ ಕೃತಿ ವಿಶಿಷ್ಟ
ಮಾದರಿಯದು.
(ಕೃಪೆ: ಇತಿಹಾಸ ಅಕೆಡೆಮಿಯ ಬ್ಲಾಗ್ itihasaacademy.blogspot.in)
No comments:
Post a Comment