Friday, 31 January 2014

ಗೆಲವು

ಗೆಲವು
       
                                             ರವೀಂದ್ರನಾಥ ಟಾಗೂರ್ 'The Victory'

ಅವಳು ರಾಜಕುಮಾರಿ ಅಜಿತಾ. ನಾರಾಯಣ ಮಹಾರಾಜರ ಆಸ್ಥಾನ ಕವಿ ಅವಳನ್ನು ಎಂದೂ ನೋಡಿರಲೇ ಇಲ್ಲ. ಅವನು ಮಹಾರಾಜರ ಮುಂದೆ ಹೊಸ ಕಾವ್ಯವೊಂದನ್ನು ವಾಚಿಸುವಾಗ,  ಸಭಾಂಗಣದ ಮೇಲಂತಿಸ್ತಿನಲ್ಲಿ ಪರದೆಗಳ ಹಿಂದೆ ಕುಳಿತಿರುತ್ತಿದ್ದ ಅಂತಃಪುರದ ಕೇಳುಗರಿಗೆ ಕೇಳಿಸಲೆಂದು ಜೋರಾದ ದನಿಯಲ್ಲಿ ಓದುತ್ತಿದ್ದ. ಅವನು ತನ್ನ ಕಾವ್ಯವನ್ನು ದೂರದ ಕಾಣದ ನಕ್ಷತ್ರಲೋಕಕ್ಕೆ ಒಯ್ದಿದ್ದ, ಅಲ್ಲಿ ಅವನ ವಿಧಿಯನ್ನು ನಿಯಂತ್ರಿಸುತ್ತಿದ್ದ ಗ್ರಹದ ಪ್ರಭಾವಳಿಯು ಯಾರಿಗೂ ತಿಳಿಯದಂತೆ ಅರಿವಿನಾಚೆಗೆ ಹೊಳೆಯುತ್ತಿತ್ತು.
ಪರದೆಯ ಹಿಂದೆ ಸುಳಿದಾಡುತ್ತಿದ್ದ ನೆರಳನ್ನು ಅವನು ಗಮನಿಸಿದ್ದ. ದೂರದಿಂದ ಗೆಜ್ಜೆಗಳ ಸದ್ದು ಬಂದು ಅವನ ಕಿವಿಗಳನ್ನು ತಾಕುತ್ತಿತ್ತು. ಇಡುತ್ತಿದ್ದ ಪ್ರತಿ ಹೆಜ್ಜೆಗೂ ಗಾನದ ನಾದವನ್ನು ಹೊಮ್ಮಿಸುತ್ತಿದ್ದ ಕಿರುಗೆಜ್ಜೆಗಳು ಅಲಂಕರಿಸಿದ್ದ ಆ ಕಾಲುಗಳ ಬಗ್ಗೆ ಅವನ ಕನಸು ಗರಿಗೆದರುತ್ತಿತ್ತು. ಪತಿತರ ಮೇಲೆ ಕರುಣೆಗೈಯುವ ದೈವಕೃಪೆಯಂತೆ ನೆಲದ ಮೇಲೆ ಊರಿ ನಡೆದಾಡುವ ಕೋಮಲ ಕೆಂಪು ಪಾದಗಳ ಬಗ್ಗೆ ಅವನ ಕಲ್ಪನೆ ಮೊಳೆಯುತ್ತಿತ್ತು. ಅವುಗಳನ್ನು ಕವಿ ತನ್ನ ಹೃದಯಪೀಠದ ಮೇಲೆ ಇರಿಸಿಕೊಂಡಿದ್ದ, ಅಲ್ಲಿಂದ ಆ ಹೊನ್ನ ಗೆಜ್ಜೆಗಳ ಲಯಕ್ಕನುಗುಣವಾಗಿ ಅವನು ಹಾಡುಗಳನ್ನು ನೇಯುತ್ತಿದ್ದ. ಆದರೆ ಪರದೆಯ ಹಿಂದೆ ಸುಳಿದಾಡುತ್ತಿದ್ದ ಆ ನೆರಳು ಯಾರದಾಗಿರಬಹುದೆಂಬ ಬಗ್ಗೆಯಾಗಲೀ ತನ್ನ ಎದೆಮಿಡಿತಕ್ಕೆ ತಕ್ಕನಾಗಿ ಉಲಿಯುತ್ತಿದ್ದ ಗೆಜ್ಜೆಗಳ ಬಗ್ಗೆಯಾಗಲೀ ಅವನಿಗೆ ಕಿಂಚಿತ್ತಾದರೂ ಅನುಮಾನವಿರಲಿಲ್ಲ.
ರಾಜಕುಮಾರಿಯ ಸಖಿ ಮಂಜರಿಯು ನದಿಗೆ ಹೋಗುವಾಗ ಕವಿಯ ಮನೆಯ ಮುಂದೆಯೇ ಹೋಗಬೇಕಾಗಿತ್ತು. ಹಾಗೆ ಹೋಗುವಾಗ ಅವನೊಡನೆ ಸ್ವಲ್ಪ ಹೊತ್ತು ಮಾತನಾಡದೆ ಅವಳೆಂದೂ ಹೋದದ್ದಿಲ್ಲ. ದಾರಿಯಲ್ಲಿ ಇಲ್ಲದಿದ್ದಾಗ ಹಾಗೂ ಮಬ್ಬು ಕವಿದಿರುವಾಗ ಅವಳು ಧೈರ್ಯವಾಗಿ ಅವನ ಕೋಣೆಗೆ ಬರುವಳು, ಅವನ ಚಾಪೆಯ ತುದಿಯಲ್ಲಿ ಕುಳಿತುಕೊಳ್ಳುವಳು. ವಿಶೇಷ ಮುತುವರ್ಜಿಯಿಂದ ತನ್ನ ಅವಕುಂಠನದ ಬಣ್ಣವನ್ನು, ತನ್ನ ಮುಡಿಯಲ್ಲಿ ಮುಡಿದಿದ್ದ ಹೂವನ್ನು ಅವಳು ಆಯ್ದುಕೊಂಡಿರಬಹುದೇ ಎಂಬ ಅನುಮಾನ ಅವನಿಗೆ ಉಂಟಾಗುತ್ತಿತ್ತು.
ಇದನ್ನು ಕಂಡು ಜನ ಪಿಸುಮಾತನಾಡಿಕೊಳ್ಳುತ್ತಿದ್ದರು, ಇದರಲ್ಲಿ ಅವರ ತಪ್ಪೇನೂ ಇರಲಿಲ್ಲ. ಈ ಭೇಟಿಗಳು ತನಗೆ ಪರಿಶುದ್ಧ ಆನಂದವನ್ನು ತರುತ್ತಿದ್ದ ವಿಷಯವನ್ನು ಕವಿ ಎಂದೂ ಶೇಖರನಿಂದ ಮರೆಮಾಚಿರಲಿಲ್ಲ.
ಅವಳ ಹೆಸರಿನ ಅರ್ಥವೆಂದರೆ ಹೂಗಳ ಗೊಂಚಲು ಎಂದು. ಅವುಗಳ ಕಂಪು ಸಾಮಾನ್ಯ ಮನುಷ್ಯನಿಗೆ ಸಾಕೇ ಸಾಕು. ಆದರೆ ಶೇಖರ್ ಈ ಹೆಸರಿಗೆ ವಿಶೇಷಣವೊಂದನ್ನು ಸೇರಿಸಿಕೊಂಡು ಚೈತ್ರದ ಹೂಗೊಂಚಲು ಎಂದು ಅವಳನ್ನು ಕರೆಯುತ್ತಿದ್ದ. ಸಾಮಾನ್ಯ ಜನ ತಮ್ಮ ತಲೆಯಲ್ಲಾಡಿಸಿ 'ಆ' ಎಂದು ಉದ್ಗರಿಸುತ್ತಿದ್ದರು!
ಕವಿ ಹಾಡುತ್ತಿದ್ದ ವಸಂತ ಕುರಿತ ಕವನಗಳಲ್ಲಿ ಎದ್ದು ಕಾಣುವಂತೆಯೇ ಮತ್ತೆ ಮತ್ತೆ ಹೂಗೊಂಚಲಿನ ವರ್ಣನೆಯನ್ನು ಮಾಡುತ್ತಿದ್ದ. ಇದನ್ನು ಕೇಳಿದ ಮಹಾರಾಜರು ತನ್ನ ಕಣ್ಣು ಮಿಟುಕಿಸಿ ಮುಗುಳ್ನಗುತ್ತಿದ್ದರು, ಅದಕ್ಕೆ ಪ್ರತಿಯಾಗಿ ಕವಿಯ ಮುಖದ ಮೇಲೂ ಕಿರುನಗೆ ಮೂಡುತ್ತಿತ್ತು. 
:ದುಂಬಿಯ ಕೆಲಸ ವಸಂತನ ಆಸ್ಥಾನದಲ್ಲಿ ಹಾಡುವುದಷ್ಠೇ ಏನು?" ಎಂದು ಮಹಾರಾಜರು ಕವಿಯನ್ನು ಪ್ರಶ್ನಿಸುತ್ತಿದ್ದರು.
"ಇಲ್ಲ ಪ್ರಭು, ಆ ಹೂಗೊಂಚಲಿನ ಬಂಡನ್ನು ಹೀರುವುದೂ ಅದರ ಕೆಲಸವೇ" ಎಂದು ಉತ್ತರಿಸುತ್ತಿದ್ದ.
ಇದನ್ನು ಕೇಳಿ ರಾಜಾಸ್ಥಾನದಲ್ಲಿದ್ದವರೆಲ್ಲ ನಗುತ್ತಿದ್ದರು. ಇದನ್ನು ಕೇಳಿದ ತನ್ನ ಸಖಿಯು ಅದು ತನ್ನನ್ನೇ ಕುರಿತದ್ದು ಎಂದು ಭಾವಿಸುತ್ತಿದ್ದುದನ್ನು ಕಂಡು ರಾಜಕುಮಾರಿ ಅಜಿತಾ ಕೂಡ ನಗುತ್ತಿದ್ದಳೆಂಬ ವದಂತಿಯಿತ್ತು. ಮಂಜರಿಗೆ ಒಳಗೊಳಗೇ ಸಂತಸವುಂಟಾಗುತ್ತಿತ್ತು.
ಬದುಕಿನಲ್ಲಿ ಸತ್ಯಮಿಥ್ಯಗಳು ಯಾವಾಗಲೂ ಕೂಡಿಕೊಂಡೇ ಇರುತ್ತವೆ. ದೇವರ ಸೃಷ್ಟಿಗೆ ಮನುಷ್ಯ ತನ್ನದೇ ಅಲಂಕಾರ ಮಾಡುತ್ತಾನೆ.
ಕವಿ ಹಾಡುತ್ತಿದ್ದುದು ಮಾತ್ರವೇ ನಿಜವಾದ ಸತ್ಯಗಳು. ಹಾಡಿನ ವಸ್ತು ಚಿರಂತನ ಗಂಡು ಹೆಣ್ಣುಗಳ ಪ್ರತೀಕವಾದ ಪ್ರೇಮದ ದೇವರು ಕೃಷ್ಣ ಹಾಗೂ ಅವನ ಪ್ರೇಯಸಿ ರಾಧೆಯರನ್ನು ಕುರಿತದ್ದು,  ಕಾಲದ ಆದಿಯಿಂದ ಮೊದಲಾಗುವ ವಿರಹದ ನೋವು, ಮತ್ತು ಕೊನೆಯಿಲ್ಲದ ಆನಂದ. ಇದರ ಸತಾಸತ್ಯತೆಯನ್ನು ಕುರಿತು ಮಹಾರಾಜನಿಂದ ಭಿಕ್ಷುಕನವರೆಗೆ ಎಲ್ಲರ ಹೃದಯಗಳೂ ಪರೀಕ್ಷಿಸುತ್ತಿದ್ದವು. ಕವಿಯ ಹಾಡುಗಳು ಎಲ್ಲರ ನಾಲಗೆಗಳ ಮೇಲೂ ನಲಿಯುತ್ತಿದ್ದವು. ಬಿದಿಗೆ ಚಂದ್ರಮನ ಹೊಳಪನ್ನು ಕಂಡಾಗ, ಬೇಸಿಗೆಯಲ್ಲಿ ನವಿರಾದ ತಂಗಾಳಿ ಸುಳಿದಾಗ ಅವನ ಹಾಡುಗಳು ಕಿಟಕಿಗಳ ಮೂಲಕ, ಅಂಗಳಗಳಲ್ಲಿ, ತೇಲುವ ನಾವೆಗಳಿಂದ, ದಾರಿಗಳ ಪಕ್ಕದ ಮರದ ನೆರಳಿನತ್ತಣಿಂದ ಅಸಂಖ್ಯಾತ ದನಿಗಳಲ್ಲಿ ಹೊಮ್ಮುತ್ತಿದ್ದವು.
ಹೀಗೇ ಸುಖಕರವಾಗಿ ದಿನಗಳು ಸಾಗಿದವು. ಕವಿ ಕಾವ್ಯ ಹಾಡಿದ, ಮಹಾರಾಜರು ಕೇಳಿದರು, ಶ್ರೋತೃಗಳು ಚಪ್ಪಳೆಯಿಕ್ಕಿದರು, ನದಿಗೆ ಹೋಗುವಾಗ ಬರುವಾಗ ಮಂಜರಿ ಕವಿಯ ಕೋಣೆಯನ್ನು ಹೊಕ್ಕು ಹೊರಬಂದಳು, ತೆರೆಯ ಹಿಂದಿನ ನೆರಳು ಓಡಾಡಿತು, ಕಾಲುಗಜ್ಜೆಗಳ ಮೃದು ಸಪ್ಪುಳ ಕೇಳಿಬಂದಿತು.
ಅಷ್ಟು ಹೊತ್ತಿಗೆ ದಕ್ಷಿಣದಿಂದ ಕವಿಯೊಬ್ಬ ಗೆಲವನ್ನು ಸಾಧಿಸುವೆನೆಂದು ಈ ಕಡೆಗೆ ಹೊರಟ. ಅವನು ಅಮರಾಪುರ ರಾಜ್ಯದ ದೊರೆ ನಾರಾಯಣನ ಸನ್ನಿಧಾನಕ್ಕೆ ಬಂದ. ಸಿಂಹಾಸನದ ಮುಂದೆ ಬಾಗಿ ನಿಂತು ರಾಜನ ಸ್ತುತಿಪರವಾದ ಪದ್ಯವೊಂದನ್ನು ಹೇಳಿದ. ದಾರಿಯುದ್ದಕ್ಕೂ ವಿವಿಧ ಆಸ್ಥಾನಗಳ ಕವಿಗಳಿಗೆ ಮುಂಡಿಗೆಯಿಕ್ಕಿ ಗೆದ್ದು ಬಂದಿದ್ದ ಅವನ ಗೆಲವಿನ ಸರಪಳಿಗೆ ಕೊನೆಯೇ ಇರಲಿಲ್ಲ.
ಮಹಾರಾಜರು ಅವನನ್ನು ಗೌರವದಿಂದ ಬರಮಾಡಿಕೊಂಡು ಹೀಗೆಂದರು: "ಕವಿವರ್ಯರೇ, ನಿಮಗೆ ಸುಸ್ವಾಗತ."
ಕವಿ ಪುಂಡರೀಕ ಹೆಮ್ಮೆಯಿಂದ ಹೇಳಿದ, "ಮಹಾಪ್ರಭು, ನನಗೆ ಹೋರಾಟ ಬೇಕು."
ಈ ಮಹಾರಾಜನ ಆಸ್ಥಾನ ಕವಿಯಾದ ಶೇಖರನಿಗೆ ಈ ಕಾವ್ಯಕದನವನ್ನು ಹೇಗೆ ಮಾಡಬೇಕೋ ತಿಳಿದಿರಲಿಲ್ಲ ರಾತ್ರಿ ಅವನಿಗೆ ನಿದ್ದೆ ಬಾರದಾಯಿತು. ಕವಿ ಪುಂಡರೀಕನ ಭವ್ಯ ನಿಲವು, ಬಾಗುಕತ್ತಿಯಂತಿದ್ದ ಚೂಪು ಮೂಗು, ಹೆಮ್ಮೆಯಿಂದ ಒಂದು ಕಡೆ ಬಾಗಿದ ಅವನ ತಲೆ ಗ ಇವೆಲ್ಲ ಅವನನ್ನು ಕತ್ತಲಲ್ಲೂ ಕಾಡಿದವು.
ಎದೆಯಲ್ಲಿ ನಡುಕವನ್ನು ಹೊತ್ತು ಕವಿಯು ಮನೆಯಿಂದ ಹೊರಟ. ಸಭಾಂಗಣವು ಜನಗಳಿಂದ ಕಿಕ್ಕಿರಿದಿತ್ತು.
ಕವಿ ತನ್ನ ಪ್ರತಿಸ್ಪರ್ಧಿಯನ್ನು ತಲೆ ಬಾಗಿ ವಂದಿಸಿ ಸ್ವಾಗತಿಸಿದ. ತನ್ನ ತಲೆಯನ್ನು ತುಸುವೆ ಆಡಿಸಿ ಪುಂಡರೀಕ ಇದಕ್ಕೆ ಪ್ರತಿಕ್ರಿಯೆ ನೀಡಿ, ತನ್ನ ಆರಾಧಕರಾದ ಹಿಂಬಾಲಕವರ್ಗವಿದ್ದ ಕಡೆ ನೋಡಿದ. ಶೇಖರ್ ತೆರೆಯ ಮಹಡಿಯ ಕಡೆ ಕಣ್ಣಾಡಿಸಿ ತನ್ನ ದೇವಿಗೆ ಮನಸ್ಸಿನಲ್ಲಿ ವಂದಿಸಿ ಹೀಗೆಂದು ಹೇಳಿದ: "ಈ ಸ್ಪರ್ಧೆಯಲ್ಲಿ ನಾನಿಂದು ಗೆದ್ದುದೇ ಆದರೆ ನಿನ್ನ ಹೆಸರನ್ನು ಚಿರಸ್ಥಾಯಿಯಾಗಿಸುತ್ತೇನೆ."
ಕಹಳೆ ಮೊಳಗಿತು, ಜನಸ್ತೋಮ ಎದ್ದು ನಿಂತು ಮಹಾರಾಜರಿಗೆ ಜಯಕಾರ ಮಾಡಿದರು. ಬಿಳಿಯ ರಾಜಪೋಷಾಕನ್ನು ಧರಿಸಿದ್ದ ಮಹಾರಾಜರು ಮಾಗಿಯ ಮೋಡದಂತೆ ತೇಲುತ್ತ ನಡೆದು ಬಂದು ಸಿಂಹಾಸನದಲ್ಲಿ ಆಸೀನರಾದರು.
ಪುಂಡರೀಕ ಎದ್ದು ನಿಂತ. ಮಹಾ ಜನಸ್ತೋಮ ನೀರವಗೊಂಡಿತು. ತಲೆಯನ್ನು ಮೇಲೆತ್ತಿ ಎದೆಯನ್ನುಬ್ಬಿಸಿಕೊಂಡು ಕವಿ ನಾರಾಯಣ ತನ್ನ ಮೊಳಗಿನಂತಹ ಕಂಠದಿಂದ ಮಹಾರಾಜರನ್ನು ಸ್ತುತಿಸತೊಡಗಿದ. ಅವನ ಮಾತುಗಳು ಸಮುದ್ರದ ನಿರ್ಘೋಷದಂತೆ ಹೊಮ್ಮಿ ಸಭಾಂಗಣದ ಗೋಡೆಗಳನ್ನು ತಾಕಿದವು. ಕೇಳುತ್ತಿದ್ದ ಪ್ರೇಕ್ಷಕವೃಂದದ ಪಕ್ಕೆಗಳನ್ನು ತಿವಿಯುವಂತೆ ತೋರಿತು. ನಾರಾಯಣ ಎಂಬ ಹೆಸರಿಗೆ ಅವನು ಚಮತ್ಕಾರದಿಂದ ನೀಡಿದ ಬಗೆಬಗೆಯ ವ್ಯಾಖ್ಯಾನ, ಅದರ ಪ್ರತಿ ಶಬ್ದವನ್ನೂ ವೃತ್ತಗಳಲ್ಲಿ ನವಿರಾಗಿ ನಾನಾ ಹೊಂದಿಕೆಗಳಲ್ಲಿ ಜೋಡಿಸಿ ಹೆಣೆದ ಬಗೆ ಕೇಳುತ್ತಿದ್ದವರನ್ನು ಉಸಿರುಕಟ್ಟುವಂತೆ ಬೆರಗುಗೊಳಿಸಿತು.
ಅವನು ತನ್ನ ಆಸನದಲ್ಲಿ ಕೂತಾದ ಮೇಲೆ ಕೂಡ ಹಲವು ನಿಮಿಷಗಳ ಕಾಲ ಅವನ ಗಂಭೀರಧ್ವನಿಯು ಆಸ್ಥಾನಮಂಟಪದ ಕಂಬಗಳಲ್ಲಿಯೂ ಅಸಂಖ್ಯಾತ ಕೇಳುಗರ ಮೂಕವಿಸ್ಮಿತ ಹೃದಯಗಳಲ್ಲಿಯೂ ಅನುರಣನಗೊಳ್ಳುತ್ತಲೇ ಇತ್ತು. ದೂರಪ್ರದೇಶಗಳಿಂದ ಬಂದು ಅಲ್ಲಿ ನೆರೆದಿದ್ದ ಪಂಡಿತೋತ್ತಮರು ತಮ್ಮ ಬಲಗೈಗಳನ್ನು ಝಳಪಿಸುತ್ತ 'ಭಲಾ!' ಎಂದು ಕೂಗಿದರು.
ಮಹಾರಾಜರು ಒಮ್ಮೆ ಶೇಖರನ ಮುಖದತ್ತ ದೃಷ್ಟಿ ಹಾಯಿಸಿದರು. ಅದಕ್ಕೆ ಪ್ರತಿಯಾಗಿ ಶೇಖರ ತನ್ನ ನೋವು ತುಂಬಿದ ಕಣ್ಣುಗಳನ್ನು ತನ್ನ ಪ್ರಭುವಿನೆಡೆಗೆ ತಿರುಗಿಸಿದ. ಆನಂತರ ಏಟು ತಿಂದು ಗಾಬರಿಗೊಂಡ ಚಿಗರೆಯಂತೆ ಮೇಲೆದ್ದು ನಿಂತ. ಅವನ ಮುಖ ಬಿಳಿಚಿಕೊಂಡಿತ್ತು, ಅವನಾದರೋ ಹೆಣ್ಣಿನಂತೆ ನಾಚಿಕೊಂಡಿದ್ದ. ಅವನ ಕೋಮಲ ಯೌವನಭರಿತ ಸಪೂರ ದೇಹವು ತುಸು ಮುಟ್ಟಿದರೂ ಸಾಕು ನಾದವನ್ನು ಹೊಮ್ಮಿಸಲು ಹುರಿಗೊಳಿಸಿದ ತಂತಿಗಳಿಂದ ಸಿದ್ಧಪಡಿಸಿರುವ ವೀಣೆಯಂತೆ ಕಾಣಿಸಿತು.
ಆರಂಭಿಸಿದಾಗ ಅವನ ತಲೆ ಬಾಗಿತ್ತು, ಧ್ವನಿ ಮಿದುವಾಗಿತ್ತು. ಅವನು ಹೇಳಿದ ಮೊದಲ ಕೆಲವು ಚರಣಗಳು ಕೇಳಿಸುತ್ತಲೇ ಇರಲಿಲ್ಲ. ಆದರೆ ಕ್ರಮೇಣ ಅವನು ತಲೆ ಎತ್ತಿ ನಿಂತ, ಅವನ ಮಧುರ ಧ್ವನಿಯು ಬೆಂಕಿಯ ಜ್ವಾಲೆಯಂತೆ ಹಿರಿದಾಗುತ್ತ ಆಗಸವನ್ನೆಲ್ಲ ಪಸರಿಸುವಂತೆ ಏರಿತು. ಅವನು ಮೊದಲು ಹೇಳಿದ್ದು ಭೂತಕಾಲದಲ್ಲಿ ಅಡಗಿಹೋಗಿದ್ದ ರಾಜವಂಶಕ್ಕೆ ಸಂಬಂಧಿಸಿದ ಪ್ರಾಚೀನ ಸ್ವರೂಪ, ಅದು ಹೇಗೆ ತನ್ನ ನಿಡುಗಾಲದ ಚರಿತ್ರೆಯಲ್ಲಿ ಪರಾಕ್ರಮ ಹಾಗೂ ಎಣೆಯಿಲ್ಲದ ಔದಾರ್ಯಗಳನ್ನು ಮೆರೆಯುತ್ತ ಇದುವರೆಗೂ ಬೆಳೆದು ಬಂದಿದೆ ಎಂಬ ಕಥನವನ್ನು. ಅವನ ಕಣ್ಣುಗಳು ಮಹಾರಾಜರ ಮುಖವನ್ನೇ ದಿಟ್ಟಿಸುತ್ತಿದ್ದವು, ರಾಜಕುಲದ ಬಗ್ಗೆ ಜನರು ಇದುವರೆಗೂ ಎದೆಯೊಳಗೆ ಬಚಿಟ್ಟುಕೊಂಡಿದ್ದ ಅಪಾರ ಪ್ರೀತಿ ಗೌರವಗಳ ಬಣ್ಣನೆ ಅವನ ಹಾಡಿನಲ್ಲಿ ಗಾಳಿಯಲ್ಲಿ ಗಂಧ ಬೆರೆತಂತೆ ಸಾಗಿ, ಸಿಂಹಾಸನದ ಸುತ್ತಲೂ ಆವರಿಸಿತು. ತನ್ನ ಮಾತುಗಳನ್ನು ಮುಗಿಸಿ ಕಂಪಿಸುತ್ತಲೇ ಕುಳಿತುಕೊಳ್ಳುವಾಗ ಅವನಾಡಿದ ಕೊನೆಯ ಮಾತುಗಳಿವು: "ಮಹಾಪ್ರಭುಗಳೇ, ನನ್ನನ್ನು ಕಾವ್ಯರಚನೆಯಲ್ಲಿ ಸೋಲಿಸಬಹುದು, ಆದರೆ ನಾನು ತಮ್ಮ ಬಗ್ಗೆ ಇಟ್ಟಿರುವ ಪ್ರೀತಿಯ ವಿಷಯದಲ್ಲಲ್ಲ."
ಈ ಮಾತುಗಳು ಕೇಳುಗರ ಕಣ್ಣುಗಳಲ್ಲಿ ನೀರನ್ನುಕ್ಕಿಸಿತು. ಸಭಾಂಗಣದ ಕಲ್ಲು ಕಂಬಗಳೂ ಕಉೇಕಿ ಎಂದು ಉದ್ಗರಿಸಿದುವು.
ಪುಂಡರೀಕನು ಎದ್ದು ನಿಂತು, ಈ ಜನಪ್ರಿಯ ಭಾವುಕ ಉಕ್ತಿಗಳನ್ನು ಅಲ್ಲಗಳೆಯುವಂತೆ ತನ್ನ ತಲೆಯನ್ನು ಗಂಭೀರವಾಗಿ ಅಲ್ಲಾಡಿಸುತ್ತ ತಿರಸ್ಕಾರದ ದನಿಯಲ್ಲಿ ಸಭೆಯೆದುರಿಗೆ ಈ ಪ್ರಶ್ನೆಯ ಬಾಣವನ್ನೆಸೆದ: ಖಶಬ್ದಗಳಿಗೆ ಮಿಗಿಲಾದದ್ದು ಯಾವುದು?ಖ ಇಡೀ ಸಭೆ ಮತ್ತೆ ಮೌನದಲ್ಲಿ ಮುಳುಗಿತು.
ತನ್ನ ಗಾಢ ಪಾಂಡಿತ್ಯಪೂರ್ಣ ಶೈಲಿಯಲ್ಲಿ ಅವನು ಮುಂದುವರೆದು ಹೇಳಿದ: "ಮೊದಲು ಇದ್ದದ್ದೇ ಶಬ್ದ. ಶಬ್ದವೇ ದೇವರು." ಶ್ರುತಿ ಸ್ಮೃತಿ ಶಾಸ್ತ್ರಗ್ರಂಥಗಳಿಂದ ಹೆಕ್ಕಿ ತೆಗೆದ ವಾಕ್ಕುಗಳನ್ನು ಉದ್ಧರಿಸಿ ಭೂಮಿ ಸ್ವರ್ಗಗಳಿಗೂ ಮೇಲೆ ಉನ್ನತ ಪೀಠವೊಂನ್ನು ರಚಿಸಿ ಅದರ ಮೇಲೆ ಶಬ್ದವನ್ನು ಕೂರಿಸಿದ. ತನ್ನ ಪರಿಣಾಮಕಾರಿ ದನಿಯಿಂದ ಮತ್ತೆ ತನ್ನ ಪ್ರಶ್ನೆಯನ್ನು ಉಚ್ಚರಿಸಿದ: "ಶಬ್ದಗಳಿಗೆ ಮಿಗಿಲಾದದ್ದು ಯಾವುದು?"
ಹೆಮ್ಮೆಯಿಂದ ಬೀಗುತ್ತ ಅವನು ಸುತ್ತಲೂ ತನ್ನ ಮೊಗವನ್ನು ತಿರುಗಿಸಿ ನೋಡಿದ. ಅವನ ಪ್ರಶ್ನೆಯನ್ನೆದುರಿಸುವ ಧೈರ್ಯ ಯಾರಿಗೂ ಇರಲಿಲ್ಲ. ತನ್ನ ಮಿಕವನ್ನು ಪೂರ್ತಿ ಉಂಡು ತಣಿದ ಸಿಂಹದಂತೆ ಅವನು ನಿಧಾನವಾಗಿ ತನ್ನ ಆಸನದಲ್ಲಿ ಕುಳಿತ. ನೆರೆದಿದ್ದ ಪಂಡಿತರು 'ಭಲಾ!' ಎಂದು ಉಗ್ಗಡಿಸಿದರು. ದೊರೆಯೂ ಮೂಕವಿಸ್ಮಿತನಾಗಿ ಕುಳಿತಿದ್ದ, ಈ ಅಗಾಧ ಪಾಂಡಿತ್ಯದ ಜೊತೆ ಹೋಲಿಸಿದಲ್ಲಿ ತಾನು ಯಾವ ಲೆಕ್ಕ ಎಂದು ಶೇಖರನೂ ಅಂದುಕೊಂಡ. ಅಂದಿನ ಸಭೆ ಮುಗಿಯಿತು.
ಮಾರನೆಯ ದಿನ ಶೇಖರ ತನ್ನ ಕಾವ್ಯಪಠಣಕ್ಕೆ ಆರಂಭಿಸಿದ. ವೃಂದಾರಣ್ಯದ ನೀರವ ಪರಿಸರವನ್ನು ಪ್ರೇಮ ಕೊಳಲು ತನ್ನ ನಾದದಿಂದ ಮೊಟ್ಟ ಮೊದಲ ಬಾರಿ ತಲ್ಲಣಗೊಳಿಸಿದ ದಿನವದು. ಕುರಿ ಕಾಯುವ ಹೆಂಗೆಳೆಯರಿಗೆ ಆ ನಾದವನ್ನುಂಟುಮಾಡುತ್ತಿರುವವರು ಯಾರು, ಅದೆಲ್ಲಿಂದ ಬರುತ್ತಿದೆ ಎಂದು ತಿಳಿಯಲಿಲ್ಲ. ಅದು ತೆಂಕಣ ಗಾಳಿಯ ಎದೆಯಾಳದಿಂದ ಹೊಮ್ಮಿ ಬರುತ್ತಿದೆ ಎಂದು ಕೆಲವು ವೇಳೆ ಅನ್ನಿಸುತ್ತಿತ್ತು, ಮತ್ತೂ ಕೆಲವು ವೇಳೆ ಅದೇನಾದರೂ ಬೆಟ್ಟಶಿಖರಗಳಲ್ಲಿ ತೇಲಾಡುವ ಮೋಡಗಳಿಂದ ಹೊಮ್ಮುತ್ತಿರಬಹುದೇ ಅನ್ನಿಸುತ್ತಿತ್ತು. ಸೂರ್ಯೋದಯದ ನಾಡಿನಿಂದ ಅದು ಸಂಗಮಸಂದೇಶವೊಂದನ್ನು ಹೊತ್ತು ಬರುತ್ತಿತ್ತು, ಸೂರ್ಯಾಸ್ತದ ಪಡುವಲ ತುದಿಯಂಚಿನ ನೋವಿನ ನಿಟ್ಟುಸಿರಿನಿಂದ ಮೂಡಿ ಬರುತ್ತಿತ್ತು. ರಾತ್ರಿಯನ್ನು ಆವರಿಸಿದ ಸ್ವಪ್ನಗಾನವನ್ನು ಹೊಮ್ಮಿಸುವ ವಾದ್ಯದ ಮೆಟ್ಟಿಲುಗಳಂತೆ ನಕ್ಷತ್ರಗಳು ಗೋಚರಿಸುತ್ತಿದ್ದವು. ಬಯಲೊಳಗಿಂದ, ಗಿಡಮರಗಳ ಕೊರಳೊಳಗಿಂದ, ನೆರಳಿದ್ದ ದಾರಿಗಳಿಂದ, ನಿರ್ಜನ ವೀಧಿಗಳಿಂದ, ಆಗಸದ ಕರಗಿದ ನೀಲಿಮೆಯೊಳಗಿನಿಂದ, ಹೊಳೆಯುವ ಹಸುರುಹುಲ್ಲಿನ ಕಾಂತಿಯಿಂದ -  ಎಲ್ಲೆಡೆಯಿಂದಲೂ ಸಂಗೀತವು ಒಮ್ಮೆಗೇ ಸ್ಫುರಿಸಿದಂತೆ ಭಾಸವಾಗುತ್ತಿತ್ತು. ಅವರಿಗೆ ಅದರ ಅರ್ಥವಾಗುತ್ತಿರಲಿಲ್ಲ, ಅಲ್ಲದೆ ತಮ್ಮದೆಗಳಲ್ಲಿನ ಬಯಕೆಗಳನ್ನು ಹೇಳಿಕೊಳ್ಳಬಹುದಾದ ಶಬ್ದಗಳಾಗಲೀ ಅವರಿಗೆ ಗೊತ್ತಿರಲಿಲ್ಲ. ಅವರೆಲ್ಲರ ಕಣ್ಣುಗಳು ಹನಿಗೂಡಿದುವು, ಅವರ ಜೀವಗಳು ತಮ್ಮ ಬಯಕೆಪೂರೈಕೆಗಾಗಿ ಸಾವಿಗೆ ತವಕಿಸುವಂತೆ ಕಾಣುತ್ತಿತ್ತು.
ಶೇಖರನಿಗೆ ಪ್ರೇಕ್ಷಕರ ಅರಿವಾಗಲೀ, ತಾನು ಪ್ರತಿಸ್ಪರ್ಧಿಯೊಬ್ಬನೊಡನೆ ಹೋರಾಡುತ್ತಿದ್ದೇನೆಂಬ ಪ್ರಜ್ಞೆಯಾಗಲೀ ಇರಲಿಲ್ಲ. ಬೇಸಿಗೆಯ ತಂಗಾಳಿಯಿಂದ ಅಲುಗಾಡಿ ಮರಮರಗುಟ್ಟುವ ಎಲೆಗಳಂತಹ ಆಲೋಚನೆಗಳ ನಡುವೆ ಏಕಾಕಿಯಾಗಿ ಅವನು ನಿಂತಿದ್ದ, ಆ ಕೊಳಲಗಾನದ ಬಗ್ಗೆ ಅವನ ಹಾಡು ಹೊಮ್ಮಿತು. ನೆರಳಿನಿಂದ ಮೂಡಿದ ಆಕೃತಿಯಂತೆ, ದೂರದ ನಡಿಗೆಯಿಂದ ಹೊಮ್ಮುವ ಕಾಲ್ಗೆಜ್ಜೆಯ ನರುದನಿಯ ಮಾರ್ದನಿಯಂತೆ ಅವನ ಮನಸ್ಸಿನಲ್ಲಿ ದರ್ಶನವೊಂದು ಮೂಡಿತ್ತು.
ಅವನು ಕುಳಿತುಕೊಂಡ. ಅವನ ಕೇಳುಗರು ಗಾಢವೂ ಅಸ್ಪಷ್ಟವೂ ಅನಿರ್ವಚನೀಯವೂ ಆದ ಮಧುರ ಯಾತನೆಯ ಅನುಭವದಿಂದ ನಡುಗಿಹೋದರು, ಎಷ್ಟೆಂದರೆ ಅವರು ಚಪ್ಪಾಳೆ ಹೊಡೆಯುವುದನ್ನೇ ಮರೆತರು. ಆ ಅನುಭವ ಕಣ್ಮರೆಯಾದ ಮೇಲೆ ಪುಂಡರೀಕ ಸಿಂಹಾಸನದ ಮುಂದೆ ನಿಂತು ಸವಾಲನ್ನಸೆದ: "ಈ ಪ್ರಿಯಕರ ಯಾರು? ಅವನ ಪ್ರೇಯಸಿ ಯಾರು?" ಸ್ಪಷ್ಟಪಡಿಸಬೇಕೆಂದು ಕೇಳಿಕೊಂಡ. ಅವನು ದರ್ಪದಿಂದ ಸುತ್ತ ನೋಡಿ ತನ್ನ ಹಿಂಬಾಲಕರ ಕಡೆ ತಿರುಗಿ ಮುಗುಳ್ನಕ್ಕು, ಮತ್ತೆ ಪ್ರಶ್ನೆಯನ್ನೆಸೆದ: "ಈ ಕೃಷ್ಣ ಯಾರು? ಅವನ ಪ್ರೇಯಸಿ ಈ ರಾಧೆ ಯಾರು?"
ಆನಂತರ ಆ ಹೆಸರುಗಳ ಮೂಲದ ಬಗ್ಗೆ ವಿಶ್ಲೇಷಣೆ ಮಾಡತೊಡಗಿದ, ಅವುಗಳ ಅರ್ಥದ ಬಗ್ಗೆ  ಬಗೆಬಗೆಯ ವ್ಯಾಖ್ಯಾನಗಳನ್ನು ನೀಡಿದ. ವಿವಿಧ ದಾರ್ಶನಿಕ ಪಂಥಗಳು ಅವುಗಳಿಗೆ ನೀಡಿದ್ದ ಅರ್ಥಗಳ ಗೋಜಲನ್ನು ತನ್ನ ಕೌಶಲದಿಂದ ವಿವರಿಸಿದ, ಇದರಿಂದ ಕೇಳುಗರು ನಡುಗಿದರು. ಅವುಗಳ ಪ್ರತಿ ವರ್ಣವನ್ನೂ ಉಳಿದವುಗಳಿಂದ ಬೇರ್ಪಡಿಸಿ, ತಾರ್ಕಿಕ ಮಾರ್ಗದಿಂದ ಅವುಗಳಿಗೆ ಅರ್ಥವಿಸಿದ, ಇದನ್ನು ಕೇಳಿದವರು ಗೊಂದಲದ ಹುಡಿಯಲ್ಲಿ ಬಿದ್ದು ಹೊರಳಾಡುವಂತಾಯಿತು, ಮತ್ತೆಯೂ ಯಾವ ನಿರುಕ್ತಕಾರನೂ ಬಗೆಯದಿದ್ದ ಬಗೆಯಲ್ಲಿ ಅವುಗಳಿಗೆ ಅರ್ಥ ಹಚ್ಚಿದ.
ಪಂಡಿತರೆಲ್ಲ ಆನಂದತುಂದಿಲರಾದರು; ಗಟ್ಟಿಯಾಗಿ ಚಪ್ಪಾಳೆ ತಟ್ಟಿದರು. ತಮ್ಮ ಕಣ್ಮುಂದೆಯೇ ಆ ಬೌದ್ಧಿಕ ದೈತ್ಯನ ವಾಕ್ಕುಗಳು ಸತ್ಯದ ಕೊಟ್ಟ ಕೊನೆಯ ಎಳೆಯನ್ನೂ ತುಂಡರಿಸಿಬಿಟ್ಟುದನ್ನು ಕಂಡು ನಿಶ್ಚಿತತೆಯ ಭ್ರಮೆಯಲ್ಲಿ ತೇಲಿಹೋಗಿ ಉಳಿದವರೂ ಚಪ್ಪಾಳೆಯಿಕ್ಕಿದರು. ಅವನ ಅದ್ಭುತ ಚಮತ್ಕಾರದಿಂದ ಅವರಿಗಾಗಿದ್ದ ಆನಂದ ಎಷ್ಟೆಂದರೆ, ಅವನ ವಾದದ ಹಿಂದೆ ಕಿಂಚಿತ್ತಾದರೂ ಸತ್ಯಾಂಶ ಅಡಗಿದೆಯೇ ಎಂದು ಆಲೋಚಿಸುವುದನ್ನೂ ಮರೆತುಬಿಟ್ಟರು.
ಮಹಾರಾಜರ ಮನಸ್ಸನ್ನೆಲ್ಲ ಆಶ್ಚರ್ಯವು ಆಕ್ರಮಿಸಿತ್ತು. ಇಡೀ ವಾತಾವರಣದಲ್ಲಿನ ಸಂಗೀತದ ಭ್ರಮೆ ಹೋಗಿ ಎಲ್ಲವೂ ಸ್ಪಷ್ಟವಾಗಿ, ಸುತ್ತಲ ಜಗತ್ತಿನ ದರ್ಶನವು ತನ್ನ ಲಕಲಕಿಸುವ ಕೋಮಲ ಹಸುರುತನವನ್ನು ಸಂಪೂರ್ಣವಾಗಿ ಕಳೆದೊಂಡು ಜಲ್ಲಿಗಳನ್ನು ಹಾಕಿ ಗಟ್ಟಿಗೊಳಿಸಿದ್ದ ಉನ್ನತ ಬೀದಿಯಂತಹ ವಾಸ್ತವವನ್ನು ಬರಮಾಡಿಕೊಂಡಂತೆ ಕಾಣಿಸಿತು.
ಅಲಿ ನೆರೆದಿದ್ದವರಿಗೆ ತಮ್ಮ ಆಸ್ಥಾನ ಕವಿಯು ಈ ಪ್ರಚಂಡ ಬುದ್ಧಿಯ ದೈತ್ಯನೆದುರಿನಲ್ಲಿ ಒಬ್ಬ ಹುಡುಗನಂತೆ ಕಾಣಿಸಿದ. ಶಬ್ದಗಳ ಮತ್ತು ಆಲೋಚನೆಗಳ ಹೆದ್ದಾರಿಯ ಪ್ರತಿ ಹೆಜ್ಜೆಯಲ್ಲಿಯೂ ಎದುರಾದ ಕಷ್ಟಗಳನ್ನೆಲ್ಲ ತುಂಬ ಸುಲಭವಾಗಿ ಪುಂಡರೀಕ ಹುಡಿಗುಟ್ಟಿಬಿಟ್ಟಿದ್ದ. ಶೇಖರ ಹೇಳಿದ್ದ ಕಾವ್ಯವೆಲ್ಲವೂ ಅಸಂಗತವೆನಿಸುವಷ್ಟು ಸರಳವಾದವು ಎಂಬ ಭಾವನೆ ಮೊಟ್ಟ ಮೊದಲ ಬಾರಿಗೆ ಅವರಲ್ಲುದಿಸಿತು, ತಾವೂ ಅಂತಹ ಪದ್ಯಗಳನ್ನು ರಚಿಸದಿರುವುದು ಕೇವಲ ಆಕಸ್ಮಿಕದಿಂದಷ್ಟೇ ಎಂಬ ಭಾವನೆ ಅವರಿಗುಂಟಾಯಿತು. ಅವು ಹೊಸವೂ ಆಗಿರಲಿಲ್ಲ, ಕಷ್ಟಕರವಾಗಿರಲೂ ಇಲ್ಲ, ತಿಳಿವಳಿಕೆಯಿಂದ ಕೂಡಿದವೂ ಅಲ್ಲ, ಹಾಗಾಗಿ ಆವಶ್ಯಕವೇ ಅಲ್ಲ.
ಮಹಾರಾಜರು ತಮ್ಮ ಆಸ್ಥಾನ ಕವಿಯ ಕಡೆಗೆ ಹರಿತ ನೋಟವನ್ನು ಬೀರಿ, ಕೊಟ್ಟ ಕೊನೆಯ ಪ್ರಯತ್ನ ಮಾಡುವಂತೆ ಮೌನವಾಗಿಯೇ ಸೂಚಿಸಲು ಕಷ್ಟಪಟ್ಟರು. ಆದರೆ ಶೇಖರ ಅದನ್ನು ಗಮನಿಸದೆ ತನ್ನ ಆಸನದಲ್ಲಿ ಗಟ್ಟಿಯಾಗಿ ಕೂತಿದ್ದ.
ಕೋಪಾವಿಷ್ಟರಾಗಿದ್ದ ಮಹಾರಾಜರು ಸಿಂಹಾಸನದಿಂದ ಇಳಿದು ಬಂದು, ತಮ್ಮ ಕೊರಳಿನಲ್ಲಿದ್ದ ಮುತ್ತಿನ ಹಾರವನ್ನು ತೆಗೆದು ಪುಂಡರೀಕನ ಕತ್ತಿನಲ್ಲಿ ತೊಡಿಸಿದರು. ಆಗ ಸಭಾಂಗಣದಲ್ಲಿದ್ದವರೆಲ್ಲ ಜಯಕಾರ ಮಾಡಿದರು. ನಡೆದಾಡುವಾಗಿನ ಬಟ್ಟೆಯ ಸರಸರ ಸದ್ದು  ಹಾಗೂ ಸೊಂಟದಲ್ಲಿ ಧರಿಸಿದ ಕಾಂಚೀದಾಮದಲ್ಲಿ ಕಟ್ಟಿದ್ದ ಚಿನ್ನದ ಕಿರುಗೆಜ್ಜೆಗಳ ಉಲಿ ಸೇರಿದ ಮೆಲುದನಿ ಮೇಲಿನ ಮಹಡಿಯಿಂದ ಕೇಳಿಬಂತು. ಶೇಖರ ಮೇಲೆದ್ದು ಸಭಾಂಗಣದಿಂದ ಹೊರಬಂದ.
ಅದು ಕೃಷ್ಣಪಕ್ಷದ ಕಗ್ಗತ್ತಲ ಒಂದು ರಾತ್ರಿ. ಶೇಖರ ತನ್ನ ಹಸ್ತಪ್ರತಿಗಳನ್ನು ಕಪಾಟಿನಿಂದ ಹೊರತೆಗೆದು ನೆಲದ ಮೇಲೆ ರಾಶಿ ಹಾಕಿದ. ಅವುಗಳಲ್ಲಿದ್ದವು ತಾನು ಮೊದಮೊದಲು ಬರೆದ ಪದ್ಯಗಳು, ಅವುಗಳ ಬಗ್ಗೆ ಈಗವನಿಗೆ ಮರೆತೇ ಹೋಗಿತ್ತು. ಅಲ್ಲಿನ ಹಾಳೆಗಳನ್ನು ತಿರುವಿ ಹಾಕುತ್ತ ಅಲ್ಲಿದ್ದ ಬರವಣಿಗೆಯ ಮೇಲೆ ಕಣ್ಣಾಡಿಸಿದ. ಅಲ್ಲದ್ದವೆಲ್ಲ ತೀರ ಕಳಪೆ ಅನ್ನಿಸಿತು, ಬರಿಯ ಶಬ್ದಗಳು, ಬಾಲಿಶ ಪ್ರಾಸ!
ಹೊತ್ತಗೆಗಳ ಹಾಳೆಗಳನ್ನೆಲ್ಲ ಒಂದೊಂದಾಗಿ ಹರಿದು ಚೂರು ಮಾಡಿ ಬಳಿಯಲ್ಲಿದ್ದ ಅಗ್ಗಿಷ್ಟಿಕೆಯ ಕೆಂಡದ ಮೇಲೆ ಹಾಕುತ್ತ ಹೇಳಿದ: "ನನ್ನ ಮುದ್ದು ಪ್ರೇಯಸಿಯೇ, ಇವೆಲ್ಲ ನಿನಗಾಗಿ! ಈ ಬರಡು ವರ್ಷಗಳೆಲ್ಲ ನೀನು ನನ್ನಲ್ಲಿ ಧಗಧಗ ಉರಿಯುತ್ತಿದ್ದೆ. ನನ್ನ ಬದುಕು ಬಂಗಾರವಾಗಿದ್ದಿದ್ದರೆ ಈ ಅಗ್ನಿಪರೀಕ್ಷೆಯಲ್ಲಿ ಹೊಚ್ಚ ಹೊಸ ಹೊಳಪಿನಿಂದ ಹೊರಬರುತ್ತಿದ್ದೆ. ಆದರೆ ಅದು ತುಳಿದೂ ತುಳಿದೂ ಸತ್ತ ಒಣಹುಲ್ಲಿನ ಹಾದಿ, ಅದರಲ್ಲಿ ಉಳಿಯುವುದು ಈ ಹಿಡಿಯಷ್ಟು ಬೂದಿ."
ರಾತ್ರಿ ಕಳೆಯಿತು. ಶೇಖರ ತನ್ನ ಕೋಣೆಯ ಕಿಟಕಿಗಳನ್ನೆಲ್ಲ ತೆರೆದ. ತನ್ನ ಹಾಸಿಗೆಯ ಮೇಲೆ ತನಗಿಷ್ಟವಾದ ಬಿಳಿಯ ಮಲ್ಲಿಗೆ, ಗುಲಾಬಿ, ಸೇವಂತಿಗೆ ಹೂಗಳನ್ನೆರಚಿದ. ತನ್ನ ಮನೆಯೊಳಗಿದ್ದ ದೀಪಗಳನ್ನೆಲ್ಲ ಕೋಣೆಯೊಳಕ್ಕೆ ತಂದಿರಿಸಿಕೊಂಡು ಅವುಗಳನ್ನೆಲ್ಲ ಹೊತ್ತಿಸಿದ. ಆನಂತರ ವಿಷದ ಮೂಲಿಕೆಯ ರಸಕ್ಕೆ ಒಂದಷ್ಟು ಜೇನುತುಪ್ಪವನ್ನು ಹಾಕಿಕೊಡು ಕುಡಿದು ಹಾಸಿಗೆಯ ಮೇಲೆ ಉರುಳಿಕೊಂಡ.
ಬಾಗಿಲ ಹೊರಗಿನಿಂದ ಚಿನ್ನದ ಕಿಂಕಿಣಿಯ ಸದ್ದು ಕೇಳಿ ಬಂತು, ಜೊತೆಗೆ ತಂಗಾಳಿಯೊಡನೆ ಬೀಸಿ ಬಂದ ನವಿರು ಕಂಪು.
ಕಣ್ಣು ಮುಚ್ಚಿದ್ದ ಕವಿ ಹೇಳಿದ: "ದೇವಿ ನಿನ್ನ ಸೇವಕನ ಮೇಲೆ ಕೊನೆಗೂ ಕರುಣೆಯಿಟ್ಟು ಅವನನ್ನು ನೋಡಲು ಬಂದೆಯಾ?"
ಕೋಮಲ ಕಂಠದಿಂದ ಕೇಳಿ ಬಂತು: "ನನ್ನ ಪ್ರೀತಿಯ ಕವಿಯೇ, ನಾನು ಬಂದಿದ್ದೇನೆ."
ಶೇಖರ ಕಣ್ಣು ತೆರೆದು ನೋಡಿದ: ತನ್ನ ಹಾಸಿಗೆಯ ಎದುರಿಗೆ ಹೆಣ್ಣೊಂದರ ಆಕೃತಿ ಕಾಣಿಸಿತು.
ಅವನ ದೃಷ್ಟಿ ಕ್ಷೀಣಿಸಿತ್ತು, ನೋಟ ಮಂಜುಮಂಜಾಗಿತ್ತು. ತನ್ನ ಹೃದಯಾಂತರಾಳದ  ಪೀಠದ ಮೇಲೆ ಇರಿಸಿಕೊಂಡಿದ್ದ ಆಕೃತಿಯ ನೆರಳು ತನ್ನ ಕೊನೆಯ ಕ್ಷಣದಲ್ಲಿ ನೋಡಲು ಹೊರಜಗತ್ತಿಗೆ ಬಂದು ನಿಂತಂತೆ ಅವನಿಗನ್ನಿಸಿತು.
ಆ ಹೆಣ್ಣು ಹೇಳಿತು: "ನಾನು, ರಾಜಕುಮಾರಿ ಅಜಿತಾ."
ತೀರ ಪ್ರಯಾಸದಿಂದ ಕವಿ ಹಾಸಿಗೆಯ ಮೇಲೆ ಎದ್ದು ಕುಳಿತ.
ಅವನ ಕಿವಿಯಲ್ಲಿ ರಾಜಕುಮಾರಿ ಪಿಸುಗುಟ್ಟಿದಳು: "ಮಹಾರಾಜರು ನಿಮಗೆ ನ್ಯಾಯ ಒದಗಿಸಲಿಲ್ಲ. ಸ್ಪರ್ಧೆಯಲ್ಲಿ ಗೆದ್ದವರು ನೀವೇ, ನನ್ನ ಕವಿ. ನಿಮಗೆ ಗೆಲವಿನ ಕಿರೀಟವನ್ನು ತೊಡಿಸಲು ಬಂದಿದ್ದೇನೆ."
ತನ್ನ ಕೊರಳಲ್ಲಿ ಧರಿಸಿದ್ದ ಹೂಮಾಲೆಯನ್ನವಳು ಹೊರತೆಗೆದಳು, ಕವಿಯ ಕೊರಳಿಗೆ ಹಾಕಿದಳು, ಕವಿ ಹಾಸಿಗೆಯಲ್ಲಿ ಸತ್ತು ಬಿದ್ದ.
=====
                                                          



No comments: