ವಡ್ಡಾರಾಧನೆ ಅರ್ಥಾತ್ ಕರ್ಣಾಟ ಆರಾಧನಾ ಟೀಕಾ
ನಾವೀಗ ‘ವಡ್ಡಾರಾಧನೆ’ ಎಂದು ಕರೆಯುವ
ಕೃತಿಯ ಹೆಸರು, ಕರ್ತೃ ಹಾಗೂ ಕಾಲಗಳ ಬಗ್ಗೆ ವಿದ್ವಾಂಸರಲ್ಲಿ
ಭೀನ್ನಾಭಿಪ್ರಾಯಗಳಿವೆ. ಡಿ. ಎಲ್. ಎನ್. ಅವರೇನೋ ಇದನ್ನು ಆ ಹೆಸರಿನಿಂದ ಕರೆದುದಲ್ಲದೆ, ಕೃತಿಕಾರನನ್ನು
ಶಿವಕೋಟ್ಯಾಚಾರ್ಯ ಎಂದರು, ಹಾಗೆಯೇ ಅದರ ಕಾಲ ಪಂಪಪೂರ್ವದ್ದು, ಸುಮಾರು
ಕ್ರಿಶ 920 ಎಂದು ಕೃತಿಯ ನಾಲ್ಕನೆಯ ಮುದ್ರಣದ ಪ್ರಸ್ತಾವನೆಯಲ್ಲಿ
ಹೇಳಿದರು. ಆದರೆ ಅವರಿಗಿಂತ ಮುಂಚೆಯೇ ಕಲ್ಬುರ್ಗಿಯವರು, ತಮ್ಮ ‘ಕವಿರಾಜಮಾರ್ಗ
ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧದಲ್ಲಿ ಕೃತಿಯ ಹೆಸರು, ‘ಆರಾಧನಾ ಕರ್ಣಾಟಟೀಕಾ’ ಎಂದೂ ಕೃತಿಕಾರ ಭ್ರಾಜಿಷ್ಣು ಎಂದೂ
ಪ್ರತಿಪಾದಿಸಿದ್ದರು. ಬಹುಕಾಲ ಡಿ.ಎಲ್.ಎನ್ ಅವರ ಅಭಿಪ್ರಾಯವನ್ನೇ ಕನ್ನಡ ಸಾಹಿತ್ಯ ಚರಿತ್ರಕಾರರು
ಅನುಸರಿಸಿದರು. ಆದರೆ ಆನಂತರ ಹಂಪನಾ ತಮ್ಮ ಪಿಎಚ್.ಡಿ ಮಹಾಪ್ರಬಂಧದಲ್ಲಿ ಕಲ್ಬುರ್ಗಿಯವರ
ಅಭಿಪ್ರಾಯವನ್ನೇ ಎತ್ತಿ ಹಿಡಿದರು. ಹಾಗೆಯೇ ಕೃತಿಯ ಕಾಲವು ‘ಕವಿರಾಜಮಾರ್ಗ’ಪೂರ್ವದ್ದು, ಕ್ರಿಶ 800-870 ರ ನಡುವಿನದು ಎಂದು ಪ್ರತಿಪಾದಿಸಿದರು. ನಾನು ಮಾತನಾಡಬೇಕಾದದ್ದು ‘ವಡ್ಡಾರಾಧನೆ’ಯ ಬಗ್ಗೆ
ಎಂದು ಈ ಸಮ್ಮೇಳನದ ಆಯೋಜಕರು ಹೇಳಿರುವುದರಿಂದ ಅದೇ ಹೆಸರಿನಲ್ಲಿಯೇ ಮುಂದುವರಿಯುತ್ತೇನೆ.
ಕೃತಿಯ ಕಾಲವು ಹಂಪನಾ ಹೇಳಿದಂತೆ ‘ಕವಿರಾಜಮಾರ್ಗ’ಪೂರ್ವದ್ದು
ಎಂಬುದನ್ನು ಒಪ್ಪಿಕೊಂಡರೆ ಇದುವರೆಗಿನ ಅನೇಕ ವಾದಗಳನ್ನು ಬದಲಿಸಬಹುದು. ಆಗ ‘ವಡ್ಡಾರಾಧನೆ’ಯು ಅತ್ಯಂತ
ಪ್ರಾಚೀನ ಉಪಲಬ್ಧ ಕನ್ನಡ ಕೃತಿ, ಅತ್ಯಂತ ಪ್ರಾಚೀನ ಉಪಲಬ್ಧ ಕನ್ನಡ ಸೃಜನಶೀಲಕೃತಿ
ಮತ್ತು ಅತ್ಯಂತ ಪ್ರಾಚೀನ ಉಪಲಬ್ಧ ಕನ್ನಡ ಗದ್ಯ ಕೃತಿ ಎಂಬ ಹೆಗ್ಗಳಿಕೆಗಳಿಗೆ ಪಾತ್ತವಾಗುತ್ತದೆ. ಇದರಿಂದಾಗಿ ‘ಕವಿರಾಜಮಾರ್ಗ’ ಮೇಲೂ ಹೊಸ
ಬೆಳಕು ಬೀಳಬಹುದು. ಆ ಕೃತಿಯಲ್ಲಿ “ಮಿಗೆ ಕನ್ನಡಗಬ್ಬಂಗಳೊಳ್ ಅಗಣಿತಗುಣ
ಗದ್ಯಪದ್ಯಸಮ್ಮಿಶ್ರಿತಮಂ ನಿಗದಿಸುವರ್ಗದ್ಯಕಥಾ ಪ್ರಗೀತಿಯಿಂ ತಚ್ಚಿರಂತನಾಚಾರ್ಯರ್ಕಳ್” ಎಂಬ
ಪದ್ಯವಿದೆ (ಕವಿರಾಮಾ, 1. 27). ಇಲ್ಲಿನ ‘ಗದ್ಯಕಥಾ’
ಎಂಬುದು ‘ಚಂಪೂ’ ಪ್ರಕಾರವನ್ನು
ಸೂಚಿಸಬಹುದು ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ; ಆ ಕೃತಿಯ
ಪೂರ್ವದಲ್ಲಿ ರಚಿತವಾದ ಅನೇಕ ಕನ್ನಡ ಕಾವ್ಯಗಳು ಚಂಪುವೇ ಆಗಿರಬೇಕೆಂದೂ ಹೇಳುತ್ತಾರೆ; ನಾನೂ
ಹಾಗೆಯೇ ಭಾವಿಸಿದ್ದೆ. ‘ಕವಿರಾಜಮಾರ್ಗ’ಕ್ಕೆ ಮುಖ್ಯ
ಪ್ರೇರಣೆಯಾದ ದಂಡಿಯ ‘ಕಾವ್ಯಾದರ್ಶ’ದಲ್ಲಿನ “ಗದ್ಯಪದ್ಯಮಯೀ
ಕಾಚಿತ್ ಚಂಪೂರಿತ್ಯಭಿಧೀಯತೇ” ಎಂಬ ವಾಕ್ಯವನ್ನಾಧರಿಸಿ ಗದ್ಯಪದ್ಯಮಿಶ್ರಿತವಾದ
ಕಾವ್ಯಪ್ರಕಾರ ಚಂಪೂ ಎಂಬುದನ್ನೇ ಸೂಚಿಸುತ್ತದೆ ಎಂಬುದು ಬಹುಮಂದಿಯ ತೀರ್ಮಾನವಾಗಿದೆ. ದಂಡಿಯ ಈ
ವಾಕ್ಯದ ಕೊನೆಯ ಭಾಗಕ್ಕೆ ‘ಚಂಪೂರಿತ್ಯಭಿವಿದ್ಯತೇ’ ಎಂಬ
ಪಾಠಾಂತರವನ್ನು ಸ್ವೀಕರಿಸಿ, ಇದರಿಂದಾಗಿ ದಂಡಿಯು ಸ್ವತಃ ಯಾವುದೇ ಚಂಪೂ
ಕಾವ್ಯವನ್ನು ಕಣ್ಣಾರೆ ಕಂಡಿರಲಿಲ್ಲ, ಅದರ
ಲಕ್ಷಣವನ್ನು ಅವರಿವರಿಂದ ಕೇಳಿದಂತೆ ಹೇಳಿದ್ದಾನೆ ಎಂಬುದು ಪ್ರೊ| ಬಲದೇವ
ಉಪಾಧ್ಯಾಯ ಅವರ ತೀರ್ಮಾನ. ಅಲ್ಲದೆ, ‘ಕವಿರಾಜಮಾರ್ಗ’ಕ್ಕೆ ಮುಖ್ಯ
ಪ್ರೇರಣೆಯನ್ನು ದಂಡಿಯಿಂದಲೇ ಪಡೆದ ಕೃತಿಕಾರನು ತನ್ನ ಕೃತಿಯಲ್ಲಿ ಎಲ್ಲಿಯೂ ಚಂಪೂ ಎಂಬ ಶಬ್ದವನ್ನು ಬಳಸುವುದೇ ಇಲ್ಲ. ಇದರಿಂದ ಈ
ವಾಕ್ಯವನ್ನು ಸಂಸ್ಕøತದಲ್ಲಿ ಚಂಪೂ ಕಾವ್ಯಗಳು ಪ್ರಚುರವಾದ ಮೇಲೆ ಬೇರಾರೋ ‘ಕಾವ್ಯಾದರ್ಶ’ದಲ್ಲಿ
ಸೇರಿಸಿರಬಹುದೆಂದೂ ಅನುಮಾನಿಸುವಂತಾಗುತ್ತದೆ.
ಈ ಅನುಮಾನ ನಿಜವಾದರೆ, ಆಗ ‘ಕವಿರಾಜಮಾರ್ಗ’ದಿಂದ ಮೇಲೆ
ಉಲ್ಲೇಖಿಸಲಾದ ಪದ್ಯಕ್ಕೆ ಬೇರೆಯ ರೀತಿಯಲ್ಲಿಯೇ ವ್ಯಾಖ್ಯಾನಿಸಬಹುದು. ಮಾರ್ಗಕಾರನು ಗದ್ಯಕಥಾ
ಎಂಬುದು ‘ಕನ್ನಡಗಬ್ಬಂ’ಗಳಲ್ಲಿ, ಅಂದರೆ
ಕನ್ನಡ ಕಾವ್ಯಪ್ರಕಾರಗಳಲ್ಲಿ ಒಂದೆಂದು ಹೇಳುತ್ತಿರುವಂತಿದೆ. ಕವಿರಾಜಮಾರ್ಗಕಾರನ ಮೂಲೋದ್ದೇಶ
ಕನ್ನಡಕ್ಕೊಂದು ವಿಶಿಷ್ಟ ಕಾವ್ಯಸಂಪ್ರದಾಯವಿದೆ,
ಅದರ ಮೂಲಕ ಕಾವ್ಯಲಕ್ಷಣಗಳನ್ನು
ನಿರೂಪಿಸುವುದೇ ತನ್ನ ಉದ್ದೇಶ ಎಂಬಂತೆ ತೋರುತ್ತದೆ. ಈ ಪ್ರಕಾರದಲ್ಲಿ ಗದ್ಯಪದ್ಯಗಳ
ಮಿಶ್ರಣವಿರುವುದೇನೋ ಸರಿ, ಜೊತೆಗೆ ಹೆಸರೇ ಹೇಳುವಂತೆ ಇದರಲ್ಲಿ ಮುಖ್ಯವಾದ ಎರಡು
ಲಕ್ಷಣಗಳೆಂದರೆ ಗದ್ಯಪ್ರಾಚುರ್ಯ ಮತ್ತು ಕಥಾನಿರೂಪಣೆ ಎಂಬ ಅರ್ಥ ಹೊರಡುತ್ತದೆ. ನಾವು
ಚರ್ಚಿಸುತ್ತಿರುವ ‘ವಡ್ಡಾರಾಧನೆ’ಯು ಈ
ವ್ಯಾಖ್ಯೆಗೆ ಅಡಕವಾಗಿ ಹೊಂದುತ್ತದೆ. ಇದು ಬೆದಂಡೆ,
ಚತ್ತಾಣಗಳಂತೆ ಕನ್ನಡಕ್ಕೇ ವಿಶಿಷ್ಟವಾದ
(ಅಂದರೆ ಸಂಸ್ಕøತದಲ್ಲಿಲ್ಲದ) ಕಾವ್ಯಪ್ರಕಾರ ಎಂದು ಹೇಳುವುದು
ಮಾರ್ಗಕಾರನ ಉದ್ದೇಶವಿರಬಹುದು. ಹಾಗಾಗಿ ಈ ಪದ್ಯವನ್ನು ‘ವಡ್ಡಾರಾಧನೆ’ಯನ್ನು
ಗಮನಿಸಿಯೇ ಹೇಳಿರದಿರಬಹುದಾದರೂ, ಅಂತಹ ಕೃತಿಗಳು ಬೇರೆಯವೂ ಇದ್ದು, ಅವುಗಳನ್ನು
ಅನುಲಕ್ಷಿಸಿ ಹೇಳುತ್ತಿರಬಹುದು. ಇಷ್ಟು ಹಿನ್ನೆಲೆಯಲ್ಲಿ ‘ವಡ್ಡಾರಾಧನೆ’ಯ
ವೈಶಿಷ್ಟ್ಯವನ್ನು ಮತ್ತಷ್ಟು ಅರ್ಥಪೂರ್ಣವಾಗಿ ವಿವರಿಸಬಹುದು ಎಂಬುದು ನನ್ನ ನಂಬಿಕೆ.
ಕ್ರಿಸ್ತಶಕದ ಮೊದಲ ಸಹಸ್ರಮಾನದ
ಎಂಟೊಂಬತ್ತು ಶತಮಾನಗಳ ಅವಧಿಯದು ನಮ್ಮ ಸಾಂಸ್ಕøತಿಕ ಚರಿತ್ರೆಯ ದೃಷ್ಟಿಯಿಂದ ಬಹು ಮಹತ್ವದ ಕಾಲ
ಎಂಬುದು ನನ್ನ ತಿಳಿವಳಿಕೆ. ವೈದಿಕದ ಜನವಿದೂರವಾದ ಧೋರಣೆಯಿಂದಾಗಿ ಪರ್ಯಾಯಗಳನ್ನು ರೂಪಿಸ ಹೊರಟ
ಮಹಾವೀರ-ಬುದ್ಧರು ಕ್ರಿಸ್ತಪೂರ್ವದ ಕೊನೆಯರ್ಧಭಾಗದಲ್ಲಿ ವ್ಯಾಪಕ ಜನಬೆಂಬಲವನ್ನು ಪಡೆದಂತೆ
ತೋರುತ್ತದೆ. ಇದರಿಂದ ಗಾಬರಿಗೊಂಡ ವೈದಿಕವಲಯವು ತನ್ನ ಮೇಲ್ಮೆಯನ್ನು ಪೃಥಕ್ಕರಿಸುವುದಕ್ಕಾಗಿ
ಧರ್ಮಸೂತ್ರಗಳು ಹಾಗೂ ಧರ್ಮಶಾಸ್ತ್ರಗಳಂತಹ ಕೃತಿಗಳನ್ನು ರಚಿಸಿತು. ಅಲ್ಲದೆ ಎಂಟನೆಯ ಶತಮಾನದ
ಕೊನೆ ಮತ್ತು ಒಂಬತ್ತರ ಮೊದಲಲ್ಲಿದ್ದ ಶಂಕರಾಚಾರ್ಯರು ಮಠಗಳ ಸ್ಥಾಪನೆಯ ಮೂಲಕ ವೈದಿಕ
ಪುನರುತ್ಥಾನಕ್ಕಾಗಿ ನಡೆಸಿದ ಪ್ರಯತ್ನ ಯಶಸ್ವಿಯಾದಂತೆ ಕಾಣುತ್ತದೆ. ಇವುಗಳಿಂದಾಗಿ ವೈದಿಕವು
ಜನಸಾಮಾನ್ಯರನ್ನು ಒಳಗೊಳ್ಳದಿದ್ದರೂ, ವೈದಿಕೇತರ ಧರ್ಮಗಳಿಗಿಂತ ತಮ್ಮದು ಭಿನ್ನ ಮಾತ್ರವಲ್ಲ, ಮೇಲುಮಟ್ಟದ್ದು, ಜೊತೆಗೆ ಜನನುಡಿಗಳಿಗಿಂತ
ಸಂಸ್ಕøತ ಉನ್ನತಮಟ್ಟದ್ದು ಎಂಬ ಎಂಬ ಭಾವನೆಯನ್ನು ನಿಧಾನವಾಗಿ
ಬೇರೂರಿಸಿದಂತೆ ತೋರುತ್ತದೆ ಇದರಿಂದಾಗಿ ಜೈನದಂತಹ ಮೂಲ ವೈದಿಕವಿರೋಧಿ ನೆಲೆಯ ಧರ್ಮವೂ
ಪ್ರಾಕೃತದಿಂದ ಸಂಸ್ಕøತದ ಕಡೆಗೆ ಹೊರಳುವುದಲ್ಲದೆ, ವೈದಿಕದ
ಸಾಮಾಜಿಕ ಪೌರಾಣಿಕ ಕಲ್ಪನೆಗಳನ್ನು ತನ್ನಲ್ಲಿಯೂ ಅಳವಡಿಸಿಕೊಂಡಂತೆ ತೋರುತ್ತದೆ. ಆದಿಬ್ರಹ್ಮನೆನಸಿದ
ಆದಿತೀರ್ಥಂಕರನು ವರ್ಣಗಳನ್ನು ಸೃಷ್ಟಿಸಿದುದು (ಶಂಕರಾಚಾರ್ಯರ ಹೊತ್ತಿಗಾಗಲೇ ‘ಭಗವದ್ಗೀತೆ’ಯಲ್ಲಿ “ಚಾತುರ್ವಣ್ರ್ಯಂ
ಮಯಾಸೃಷ್ಟಂ ಗುಣಕರ್ಮವಿಭಾಗಶಃ” ಎಂಬ ವಾಕ್ಯ ಸೇರಿದ್ದಿರಬೇಕು; ಪ್ರಾಯಶಃ ಆ
ನಂಬಿಕೆಯಿಂದಲೇ ಬ್ರಹ್ಮಜ್ಞಾನಪಡೆಯಲು ಬ್ರಾಹ್ಮಣರು ಮಾತ್ರ ಅರ್ಹರು ಎಂದು ತಮ್ಮ ‘ಬ್ರಹ್ಮಸೂತ್ರಭಾಷ್ಯ’ದಲ್ಲಿ ಪ್ರತಿಪಾದಿಸಿದ್ದು); ಮನುಗಳ
ಪರಿಕಲ್ಪನೆ, ಜನ್ಮಾಭಿಷೇಕ ಕಲ್ಯಾಣಕಾಲದಲ್ಲಿ ಇಂದ್ರನು
ಆನಂದನೃತ್ಯಮಾಡಿ ಅದರಲ್ಲಿ ಆದಿಜಿನನ ಹತ್ತು ಜನ್ಮಗಳ ಕತೆಯನ್ನು (ವಿಷ್ಣುವಿನ ದಶಾವತಾರದ ಕಲ್ಪನೆಯ
ಹೋಲಿಕೆ) ದಶರೂಪಕಗಳನ್ನು ಪ್ರದರ್ಶಿಸಿದ್ದು,
ಯಕ್ಷ ಮುಂತಾದ ಖಗೋಳವಾಸಿಗಳ ಕಲ್ಪನೆ
ಮುಂತಾದುವನ್ನು ಇಲ್ಲಿ ಉದಹರಿಸಬಹುದು. ವೈದಿಕದಲ್ಲಿ ಈ ಕಲ್ಪನೆಗಳು ಮೂಡುವುದಕ್ಕೆ ಮುಂಚೆಯೇ
ಜೈನದಲ್ಲಿ ಇವುಗಳ ಕಲ್ಪನೆಯಿತ್ತೋ, ಹಾಗಾದಾಗ ವೈದಿಕವೇ ಇವುಗಳನ್ನು ಜೈನದಿಂದ ಪಡೆಯಿತು
ಎಂದು ವಾದಿಸಬಹುದು, ಎಂಬುದೂ ವಿಚಾರಾರ್ಹವೇ.
ಈಗ ‘ವಡ್ಡಾರಾಧನೆ’ಯ
ವೈಶಿಷ್ಟ್ಯಗಳನ್ನು ಗಮನಿಸಬಹುದು. ಇಲ್ಲಿರುವುದು ಹತ್ತೊಂಬತ್ತು ಕತೆಗಳು: ಎಲ್ಲವೂ ಒಂದೇ
ಚೌಕಟ್ಟಿನಲ್ಲಿರುವಂಥವು, ಮೊದಲು ಒಂದು ಪ್ರಾಕೃತ ಗಾಹೆಯಲ್ಲಿ ಬೀಜರೂಪವಾಗಿ
ಸೂಚಿತವಾದ ಕತೆಯೊಂದನ್ನು ಹಂತಹಂತವಾಗಿ ವಿಸ್ತರಿಸುವುದು; ಅವೆಲ್ಲವೂ
ಉಪಸರ್ಗ ಕೇವಲಿಗಳ ಸಾಧನೆಯನ್ನು ಹೇಳುವಂಥವು. ಕೃತಿಯ ಆರಂಭದಲ್ಲಿನ ಪೀಠಿಕೆಯಲ್ಲಿ “ದೇವೋಪಸರ್ಗ
ಮನುಷ್ಯೋಪಸರ್ಗ, ತಿರಿಕೋಪಸರ್ಗಮಚೇತನೋಪಸರ್ಗಮೆಂದಿಂತು
ಚತುರ್ವಿಧಮಪ್ಪುಸರ್ಗಮುಮಂ ಪಸಿವುಂ ನೀರ¿õÉ್ಕ ಮೊದಲಾಗೊಡೆಯ ಇಪ್ಪತ್ತೆರಡು ಪರೀಷಹಂಗಳುಮಂ ಸೈರಿಸಿ
ಅಯ್ದುಮಿಂದ್ರಿಯಂಗಳಂ ಗೆಲ್ದು ಬಾಹ್ಯಾಂಭ್ಯಂತರ ಪರಿಗ್ರಹಂಗಳಂ ತೊ¾õÉದು ದ್ವಾದಶಮಪ್ಪ ತಪದೊಳ್ ನೆಗ¿್ದು ಪ್ರಾಯೋಪಗಮನದಿಂ ಸಂನ್ಯಸನಂ ಗೆಯ್ದು ಕರ್ಮಕ್ಷಯಂ
ಗೆಯ್ದು ಮೋಕ್ಷಕ್ಕೆ ವೋದ ಮತ್ತಂ ಸರ್ವಾರ್ಥಸಿದ್ಧಿಯೊಳ್ ಪುಟ್ಟಿದ ಮಹಾಪುರುಷರ್ಕಳ ಕಥೆಗಳಂ” ಹೇಳುವುದಾಗಿ
ತಿಳಿಸುತ್ತದೆ. ಇಂತಹವರು ಮೊದಲು ಏನೇ ಆಗಿರಲಿ
ಹೇಗೇ ಇರಲಿ ಕ್ರಮಕ್ರಮವಾಗಿ ಈ ರೀತಿ ಸಾಧನೆಮಾಡಿ ಕೇವಲಿಗಳಾದ ಬಗೆಯನ್ನು ಆಯಾ ವ್ಯಕ್ತಿಗೆ
ಅನುಗುಣವಾದ ರೀತಿಯಲ್ಲಿ ನಿರೂಪಿಸುತ್ತದೆ. ಅವರೆಲ್ಲ ಕೊನೆಯಲ್ಲಿ “ವ್ಯಾಧಿಗಳಂ
.. .. ಸೈರಿಸಿ ಘೋರವೀರತಪಶ್ಚರಣಂಗೆಯ್ದು .. .. ಸಂನ್ಯಸನಂಗೆಯ್ದು ಸಮಾಧಿಮರಣದಿಂ ಮುಡಿಪಿ ಮಿಕ್ಕ
ರತ್ನತ್ರಯಂಗಳಂ ಸಾಧಿಸಿ (ಬೇರೆ ಬೇರೆ ಕಲ್ಪವೊಂದರಲ್ಲಿ ಎಷ್ಟೋ)
ಸಾಗರೋಪಮಾಯುಷ್ಯಸ್ಥಿತಿಯನೊಡೆಯನಪ್ಪನಿಂದ್ರನಾಗಿ ಹುಟ್ಟು”ತ್ತಾನೆ.
ಪ್ರತಿ ಕತೆಯ ಕೊನೆಯಲ್ಲಿ “ಪೆ¾ರುಮಾರಾಧಕರಪ್ಪವರ್ಗಳ್ ಧರ್ಮಘೋಷ (ಆಯಾ ಕತೆಯ
ಸಾಧಕನನ್ನು) ಮನದೊಳ್ ಬಗೆದು ಪಸಿವುಂ ನೀರ¿õÉ್ಕ ಮೊದಲಾಗೊಡೆಯ ಪರೀಷಹಂಗಳಂ ಸೈರಿಸಿ ಸಮ್ಯಗ್ ದರ್ಶನ
ಜ್ಞಾನ ಚಾರಿತ್ರಂಗಳಂ ಸಾಧಿಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ” ಎಂಬ ಆಶಯವು
ವ್ಯಕ್ತವಾಗುತ್ತದೆ. ಪರಿಭಾಷೆಯನ್ನು ಹೊರತುಪಡಿಸಿದರೆ, ಇಲ್ಲಿನ
ಸಂಗತಿ-ಅನುಭವಗಳೆಲ್ಲ ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುವಂತಹುವೇ ಆಗಿವೆ. ಹೀಗಾಗಿ ಎಸ್.ವಿ.
ರಂಗಣ್ಣನವರು ಹೇಳುವಂತೆ “ಅವನ ಕಾವ್ಯೋದ್ದೇಶ ಹತ್ತು ಜನರ ನಿತ್ಯ ಜೀವನಕ್ಕೆ
ಅತ್ಯವಶ್ಯಕವಾದ ನೀತಿಧರ್ಮದ ಸ್ಪಷ್ಟವೂ ಸುಲಭವೂ ಆದ ಉಪದೇಶ. ಕಥೆ ಹೇಳುವುದೇ ಅವನ ಕಾವ್ಯರೀತಿ; ಕಥೆ
ಹೇಳುವಾಗ ಅವನ ಚಿತ್ತ ಅತ್ತಿತ್ತ ಚಲಿಸದೆ ನೇರವಾಗಿ ನಡೆಯುತ್ತದೆ.”
ಕತೆಗಾರ ಇಲ್ಲಿನ ಕತೆಗಳನ್ನು
ಸೃಷ್ಟಿಸುವುದಿಲ್ಲ; ಆಕರ್ಷಕವಾಗಿ ಕತೆ ಹೇಳುವ ಚಾಪಲ್ಯವೂ
ಕೃತಿಕರ್ತೃವಿನದಲ್ಲ; ಆರಾಧನಾ ಗ್ರಂಥದ ಹಲವಾರು ಕಥೆಗಳಲ್ಲಿ
ಹತ್ತೊಂಬತ್ತನ್ನು ಆಯ್ದು ಅಲ್ಲಿ ಗಾಹೆಯ ಬೀಜರೂಪದಲ್ಲಿ ಹೇಳದುದನ್ನು ತನ್ನ ಮಾತುಗಾರಿಕೆ, ಕಲ್ಪಕತೆಯಿಂದ
ವಿಸ್ತರಿಸುತ್ತ ಹೋಗುವ ರೀತಿ ಇಲ್ಲಿನದು. ಸಾಮಾನ್ಯ ಕೇಳುಗರಿಗೆ ವಿಷಯ ತಲುಪಿಸುವ ಹರಿಕತೆ, ಕಾವ್ಯವ್ಯಾಖ್ಯಾನ
ಮುಂತಾದವುಗಳಂತೆ ಈ ನಿರೂಪಣೆ ಕಾಣುತ್ತದೆ. ಕರ್ತೃವಿನ ಟಾರ್ಗೆಟ್ ಸಾಮಾನ್ಯ ಜನ; ಹಾಗಾಗಿ ಅವರ
ಮನಸ್ಸನ್ನು ನೇರವಾಗಿ ಹುಗುವ ಬಗೆ ಅವನಿಗೆ ಮುಖ್ಯ.
ಈ ಕತೆಗಳು ಆರಂಭಗೊಳ್ಳುವುದು ‘ಒಂದಾನೊಂದು
ಕಾಲದಲ್ಲಿ’, ‘ಒಂದು ಊರಿನಲ್ಲಿ’, ‘ಒಂದು ಬಾರಿ
ಏನಾಯಿತು ಅಂದರೆ’ – ಮುಂತಾದ
ಮಾತುಗಳಿಂದ; ಅಂತೆಯೇ ಇಲ್ಲಿನ ಎಲ್ಲ ಕತೆಗಳ ಆರಂಭದಲ್ಲಿ ಒಂದು
ಗಾಹೆಯಿದ್ದು, ಆ ಗಾಹೆಗೆ ಅರ್ಥ ನೀಡಿದ ಮೇಲೆ, “ಅದೆಂತೆಂದೊಡೆ” ಎಂದು ಹೇಳಿ, ಕತೆಯನ್ನು
ನೇರವಾಗಿ ಆರಂಭಿಸುವುದು “ಈ ಜಂಬೂದ್ವೀಪದ ಭರತಕ್ಷೇತ್ರದೊಳ್” ಇಂತಹುದು
ನಾಡು, ಅಲ್ಲಿನ ರಾಜಧಾನಿ ಇಂತಹುದು, ಅವನ ರಾಜ
ಇಂತಹವನು, ಅವನ ರಾಣಿ ಇಂತಹವಳು, “ಅತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯಳ್”, ಆ ದಂಪತಿಗಳು “ಇಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತಿರೆ” ಎನ್ನುತ್ತ
ಮುಂದೆ ಸಾಗುತ್ತದೆ. ಅಂತೆಯೇ ಇಲ್ಲಿನ ಮುನಿಗಳು ಪರ್ಯಟಣೆ ಕೈಗೊಂಡಾಗ ವಿಹರಿಸುವುದು “ಗ್ರಾಮ ನಗರ
ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖ”ಗಳಲ್ಲಿ. ಕತೆ ಮುಂದೆ ಸಾಗುತ್ತ ಮುಖ್ಯಪಾತ್ರದ ಹಲವು
ಮಜಲುಗಳನ್ನು ಚಿತ್ರಿಸುತ್ತ, ವೈರಾಗ್ಯಕ್ಕೆ ಕಾರಣ, ಅದು
ಪ್ರಾಪ್ತವಾಗುವ ಬಗೆ, ಆನಂತರ ತಪಸ್ಸಿಗೆ ತೊಡಗಿ ಪರೀಷಹಗಳನ್ನು ಗೆಲ್ಲುವ
ವರ್ಣನೆ. ಕೃತಿಕಾರನಿಗೆ ಕತೆ ಹೇಳುವುದೇ ಮುಖ್ಯೋದ್ದೇೀಶವಾದ್ದರಿಂದ ಮಧ್ಯೆ ಅನವಶ್ಯಕ ವಿವರಗಳಾಗಲೀ, ವರ್ಣನೆಗಳಾಗಿ
ನಿರೂಪಣೆಯಲ್ಲಿ ನುಸುಳುವುದಿಲ್ಲ. ಯತಿಧರ್ಮವನ್ನು - ಅಂದರೆ ಆರಾಧನೆಯನ್ನು ಬೋಧಿಸುವ ಗ್ರಂಥವಿದು; ಇದನ್ನು ನೇರ
ನಿರೂಪಣೇಯಿಂದ ಮಾತ್ರ ಸಾಧಿಸಲು ಸಾಧ್ಯ ಎಂಬುದನ್ನು ಈ ಕೃತಿಕಾರ ಮನಗಂಡಿದ್ದಾನೆಂದೇ ಎಲ್ಲ ನೇರ
ಕಥಾನಕಗಳಾಗಿವೆ. ಈ ಕೃತಿ ಬರುವ ಹೊತ್ತಿಗೆ ಜೈನವು,
ಆಗಲೇ ಗಮನಿಸಿರುವಂತೆ, ವೈದಿಕದ
ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೂ, ತನ್ನ ಅಸ್ಮಿತೆಯನ್ನುಳಿಸಿಕೊಳ್ಳುವ ಹೆಣಗಾಟವನ್ನು
ಮಾಡಿತು. ಆ ಪ್ರತಿರೋಧ (ವಚನಗಳ ಕಾಲದಲ್ಲಿ ಆದಂತೆ) ರೋಷಯುಕ್ತವಾಗಿ ರೋಚಕವಾಗಿ ನಡೆಯದೆ ಮೆಲುಗತಿಯ
ರೀತಿಯಲ್ಲಿ ಸಾಗಿತು. ಆ ರೀತಿ ಎಂದರೆ ಜೀವನಮೌಲ್ಯಗಳನ್ನು ಪ್ರತಿಪಾದಿಸುವುದು, ಪ್ರಚಾರಗೊಳಿಸುವುದು, ಒಟ್ಟು
ಬದುಕಿನ ಮೇಲ್ಮೆಯನ್ನು ಸಾಧಿಸುವ ಪರಿಯನ್ನು ಹಿರಿಯರ ನಿದರ್ಶನಗಳ ಮೂಲಕ ತೋರಿಸಿಕೊಡುವುದು.
ಕನ್ನಡದಲ್ಲಿ ಜೈನ ಸಾಹಿತ್ಯ ಬರಲು ಕಾರಣಗಳು,
ಒಂದೆಡೆ ಕನ್ನಡ ಅಸ್ಮಿತೆಯನ್ನು
ಸ್ಥಾಪಿಸುವುದು, ಮತ್ತೊಂದೆಡೆ ಸಾಮಾನ್ಯ ಜನರನ್ನು ತನ್ನತ್ತ ಸೆಳೆಯುವುದು.
ವೈದಿಕ ಮೇಲುವರ್ಣಗಳಿಗೆ, ಸೀಮಿತ ವಲಯಕ್ಕೆ ಸಂಬಂಧಿಸಿದ್ದಾದರೆ, ಜೈನದ
ಉದ್ದೇಶ ಧರ್ಮದ ಹರಹನ್ನು ಹೆಚ್ಚಿಸುವುದು. ಇದನ್ನು ಸಾಧಿಸಲು ಮುಖ್ಯ ಸಾಧನವೆಂದರೆ ಕತೆ
ಹೇಳುವುದು. ಎದುರಾಳಿಯನ್ನು ನೇರವಾಗಿ ನಿಂದಿಸದೆ,
ತನ್ನ ವೈಶಿಷ್ಟ್ಯಗಳನ್ನೂ, ಮಾಲ್ಯಗಳನ್ನೂ, ಜನಪರತೆಯನ್ನೂ
ವಾಸ್ತವತೆಯನ್ನೂ ಕತೆಗಳಲ್ಲಿ ಅಡಕಗೊಳಿಸಿ ಕಟ್ಟಿಕೊಡುವುದು.
ಇಲ್ಲಿನ ಮುಖ್ಯ ಪಾತ್ರಗಳಲ್ಲಿ ವೈರಾಗ್ಯ
ಉದಯಿಸುವ ಸನ್ನಿವೇಶಗಳು ದೀರ್ಘ ಪುರಾಣಕಾವ್ಯಗಳಲ್ಲಿರುವಂತೆ ನರೆತ ಕೂದಲು ಕಾಣಿಸುವುದು, ಉಲ್ಕಾಪಾತವಾಗುವುದು, ಇದ್ದಕ್ಕಿದ್ದಂತೆ
ಮರ ಕೆಡೆದು ಬೀಳುವುದು ಮುಂತಾದ ಯಥಾಪ್ರಕಾರದವಾಗಿರದೆ ವಿಭಿನ್ನವಾಗಿವೆ. ಇದು ಪುರಾಣಕೃತಿಯಾಗದುದೂ
ಅದಕ್ಕೆ ಮುಖ್ಯ ಕಾರಣ, ಸರಿಯೇ,
ಜೊತೆಗೆ ಇದು ಉದ್ದಿಷ್ಟ ಕಾವ್ಯಕೃತಿಯೂ
ಅಲ್ಲ. ಇಲ್ಲಿನ ಮುಖ್ಯ ಪಾತ್ರಗಳು ಕ್ಷತ್ರಿಯರು ಎಂಬುದು ನಿಜ; ಆದರೆ ಅವರು
ಪೌರಾಣಿಕ ವ್ಯಕ್ತಿಗಳಲ್ಲ. ಆದಿದೇವ ಸೃಷ್ಟಿಸಿದ ವರ್ಣಗಳಲ್ಲಿ ಶ್ರೇಷ್ಠವಾದದ್ದು ಎಂಬುದಲ್ಲದೆ, ಒಟ್ಟು ಜೈನ
ಪರಿವಲಯದಲ್ಲಿ ಕ್ಷತ್ರಿಯನಿಗೆ ವಿಶೇಷ ಸ್ಥಾನವಿದೆ;
ಮುಂದೆ ಬ್ರಹ್ಮಶಿವ ಹೇಳಿದಂತೆ, “ಕ್ಷತ್ರಿಯನೆ ಧಾತ್ರಿಗೊಡೆಯಂ ಕ್ಷತ್ರಿಯನಾರ್ಗೇನನಿತ್ತನದು ದೆಯ್ವಕೃತಂ| ಕ್ಷತ್ರಿಯನೆ
ತೀರ್ಥಕರನಾ ಕ್ಷತ್ರಿಯನದ¾Âಂದೆ ಪಿರಿಯನೆಲ್ಲಂದದೊಳಂ||” ಎಂಬ ನಂಬಿಕೆ ಅಲ್ಲಿನದು. ‘ವಡ್ಡಾರಾಧನೆ’ಯ ಈ
ಕ್ಷತ್ರಿಯರು ರಾಜರೇನೋ ನಿಜ, ಆದರೆ ಸಾಮಾನ್ಯ ರಾಜರು; ಎಲ್ಲರಲ್ಲೂ
ಉದಯಿಸಬಹುದಾದ ವೈರಾಗ್ಯದ ಬಗೆ ಇಲ್ಲಿನ ರೀತಿ. ಹೀಗಾಗಿ, ಇದಕ್ಕೆ
ಮೂಲವಾದ ಕೃತಿಗಳ ಬಗೆಯಲ್ಲಿಯೇ, ಧರ್ಮವನ್ನು ಪೌರಾಣಿಕ ನೆಲೆಯಲ್ಲಿ ನೋಡದೆ ಜನಸಾಮಾನ್ಯರ
ಬದುಕಿನ ನೆಲೆಯಿಂದ ನೋಡುವುದು ಈ ಕೃತಿಯ ವೈಶಿಷ್ಟ್ಯ. ಧರ್ಮವನ್ನು ಸಾಮಾನ್ಯರೆಡೆಗೆ ಇಳಿಸಿ
ತರುವುದೇ ಇಲ್ಲಿನ ಉದ್ದೇಶ. ಬದುಕಿನ ಶ್ರೇಷ್ಠ ಮೌಲ್ಯಗಳನ್ನು ಪೌರಾಣಿಕ ಪರಿವಲಯದಿಂದ
ಬಿಡುಗಡೆಗೊಳಿಸಿ ಸಾಮಾನ್ಯ ಬದುಕಿಗೆ ಸಂಬಂಧಿಸುವುದು ಕೃತಿಯ ರೀತಿ. ‘ಸುಕುಮಾರಸ್ವಾಮಿಯ
ಕತೆ’ಯ ಸೂರ್ಯಮಿತ್ರನ ಮನಸ್ಸು ಧರ್ಮದ ಕಡೆಗೆ ತಿರುಗುವ
ರೀತಿಯನ್ನು ಗಮನಿಸಿ: ಕುತೂಹಲವೇ ಅನ್ವೇಷಣೆಯ,
ಸತ್ಯದರ್ಶನಮಾರ್ಗದ ಕಾರಣವಾಗುತ್ತದೆ.
ಹಾಗೆಯೇ ಅಗ್ನಿಭೂತಿಯಲ್ಲಿ ವೈರಾಗ್ಯ ತಟಕ್ಕನೆ ಚಿಮ್ಮುವುದು ತನ್ನ ತಮ್ಮ ಗುರುಗಳೊಡನೆ
ನಡೆದುಕೊಳ್ಳುವ ಅವಿನಯದ ಕಾರಣದಿಂದ ಉಂಟಾದ ತೀವ್ರ ನೀವಿನಿಂದ; ಅಂತೆಯೇ
ವಾಯಭೂತಿಯು ಕೇವಲಿಯಾಗುವ ಪರಿಯೂ ನಿಡುಗಾಲದ ಬೆಳವಣಿಗೆಯಿಂದ, ತನ್ನ
ಪಾಪಕೃತ್ಯಗಳಿಗೆ ಕ್ರಮಕ್ರಮವಾಗಿ ಅನುಭವಿಸುವ ಪ್ರಾಯಶ್ಚಿತ್ತದ ಮೂಲಕ. ನಿಡುಗಾಲವನ್ನು ಜೈನ
ಕಾವ್ಯಗಳಲ್ಲಿ ಸಂಕೇತಿಸವುದು ಜನ್ಮಾಂತರಗಳ ಮೂಲಕವಾಗಿರುವಂತೆ ಇಲ್ಲಿನದೂ ಎಂಬುದು ನಿಜವಾದರೂ, ಇಲ್ಲಿನ
ವಿಕಾಸಕ್ರಮ ಸಹಜವಾದುದು; “ಇಹವೇ ಪರವಾಗಿ ಅರಳುವ” ಬಗೆಯದು.
ಆಗಲೇ ಹೇಳಿದಂತೆ, ಇಲ್ಲಿನ
ಕೌಟುಂಬಿಕ ಹಿನ್ನೆಲೆ, ರಾಜರವು ಎಂಬುದು ನಿಜವಾದರೂ ರಾಜತ್ವವನ್ನು
ತೆಗೆದುಹಾಕಿದರೆ ಅವರು ಸಾಮಾನ್ಯರೇ ಹೊರತು ಅತಿಮಾನುಷರಲ್ಲ; ಜೊತೆಗೆ
ಅವರೆಲ್ಲ “ಸಂಸಾರ ಶರೀರಭೋಗ ನಿವ್ರ್ವೇಗಪರಾಯಣ”ರಾಗುವವರು.
ಅಂತಹ ನಿವ್ರ್ವೇಗ ಮೊಳೆಯುವುದು ರಾಜರ ವೈಭವ ಜೀವನದ ನೆಲೆಯಲ್ಲಿ ಎಂಬ ಚಿತ್ರಣವು ವೈದೃಶ್ಯದ ಮೂಲಕ
ತಟ್ಟನೆ ಕಾಣಿಸುವಂಥದು. ವೈಭವ-ವೈರಾಗ್ಯಗಳ ಈ ವೈದೃಶ್ಯದ ಮೂಲಕ ಬದುಕಿನ ವಿಪರ್ಯಾಸವನ್ನು
ಸೂಚಿಸುವುದು ಒಂದೆಡೆಯಾದರೆ, ವೈಭವ ಐಹಿಕತೆಗಳ ತೀವ್ರತೆಯು ಸಾರ್ಥಕವಾಗಿ
ಪಕ್ವಗೊಳ್ಳುವುದು ನಿವ್ರ್ವೇಗದಲ್ಲಿ ಮಾತ್ರ ಎಂಬ ಕಟು ವಾಸ್ತವವನ್ನು ದರ್ಶನ ಮಾಡಿಸುವುದು ಇಲ್ಲಿನ
ಕತೆಗಳ ಪಾತ್ರಚಿತ್ರಣದ್ದು. ಜೊತೆಗೆ ಬಯಸುವ ಎಲ್ಲ ಇರುವ ಸ್ಥಿತಿಯೇ ಏನೂ ಇಲ್ಲದ ಸ್ಥಿತಿಯನ್ನು
ಹೊಂದಲು ಕಾರಣ; ಏನೆಲ್ಲವನ್ನೂ ಹೊಂದಿದರೂ ಉಳಿಯುವುದು ಕೊರತೆಯ
ಸ್ಥಿತಿಯೇ, ಆದರೆ ಎಲ್ಲವನ್ನೂ ತೊರೆಯುವುದೆಂದರೆ ಎಲ್ಲವನ್ನೂ
ಹೊಂದುವುದು, ಪೂರ್ಣತೆಯನ್ನು ಪಡೆಯುವುದು. ಬದುಕಿನ
ಸಾರ್ಥಕ್ಯವಿರುವುದು ಪಡೆಯುವುದರಲ್ಲಲ್ಲ, ತೊರೆಯುವುದರಲ್ಲಿ ಎಂಬ ಸೂಕ್ಷ್ಮ ಕಾಣ್ಕೆ ಇಲ್ಲಿನ
ದರ್ಶನದ್ದು. ಈ ದರ್ಶನ ಎಲ್ಲ ಮತಧರ್ಮಗಳ ಆದರ್ಶವೂ ಹೌದಾದ್ದರಿಂದ, ಆಗಲೇ
ಸೂಚಿಸಿದಂತೆ, ಪರಿಭಾಷೆಯನ್ನು ಕಳಚಿದರೆ ಇಲ್ಲಿ ಚಿತ್ರಿತವಾದ
ಪಾತ್ರಗಳು ಯಾರು ಬೇಕಾದರೂ ಆಗಬಹುದು, ಸನ್ನಿವೇಶಗಳು ಯಾರಿಗೆ ಬೇಕಾದರೂ ಅನ್ವಯಿಸಬಹುದು.
ಜನರನ್ನೇ ನೇರವಾಗಿ ಉದ್ದೇಶಿರುವುದರಿಂದ
ಇಲ್ಲಿನ ಭಾಷಾ-ಶೈಲಿಗಳು ಸಹಜವಾಗಿದೆ, ನೇರವಾಗಿದೆ; ಎಸ್. ವಿ.
ರಂಗಣ್ಣನವರು ಹೇಳುವಂತೆ, ಇಲ್ಲಿನ ಶೈಲಿ ಸಹಜ ಸರಳತೆಯಿಂದ ಅಥವಾ ಸರಳ ಸಜತೆಯಿಂದ
ಕೂಡಿದುದು. ಓದುಗರಿಗೆ ಆನಂದವೀಯುವುದು ಈ ಕೃತಿಯ ಮೂಲೋದ್ದೇಶವಲ್ಲದ್ದರಿಂದ ಜನರ ದಿನಬಳಕೆಯ
ನಾಣ್ಣುಡಿಗಳೂ, ಗಾದೆಗಳೂ ಸೇರಿ ಶೈಲಿಗೆ ದೇಶೀ ರೂಪ ಬಂದಿದೆ. ಮೂಲ
ಕೃತಿಯ ಹೆಸರು ‘ಆರಾಧನಾ’
ಆದ್ದರಿಂದ ಈ ಕೃತಿಯದು
ಕಾವ್ಯೋದ್ದೇಶವಲ್ಲ. ಇಲ್ಲಿನ ಅನೇಕ ಕತೆಗಳಳ್ಲಿ ನೇರವಾಗಿ ಚಾರಿತ್ರಿಕ ಸಂಗತಿಗಳು ಸೇರಿವೆ:
ಭದ್ರಬಾಹು ಭಟಾರರ ಕತೆ, ಚಾಣಕ್ಯ ರಿಸಿಯ ಕತೆ, ಚಿಲಾತಪುತ್ರನ
ಕತೆ, ಗುರುದತ್ತ ಭಟ್ಟಾರರ ಕತೆ – ಇಂಥವುಗಳಲ್ಲಿ
ನವನಂದರು, ಚಂದ್ರಗುಪ್ತ, ಸಂಪ್ರತಿ
ಚಂದ್ರಗುಪ್ತ, ಅಶೋಕ,
ಕುಣಾಲ, ಚಾಣಾಕ್ಯ, ಬಿಂಬಸಾರ, ಭದ್ರಬಾಹು
ಮುಂತಾದ ಚಾರಿತ್ರಿಕ ಪುರುಷರು ಬರುತ್ತಾರೆ. ಹಾಗೆಯೇ ಜೈನಮತ ದಟ್ಟವಾಗಿದ್ದ ಮಹಾವೀರ ಓಡಾಡಿದ ಮಗಧ
ದೇಶ ಇಲ್ಲಿನ ಬಹು ಪಾಲು ಕತೆಗಳ ಕಾರ್ಯಕ್ಷೇತ್ರ. ಕಾರ್ತೀಕ ಋಷಿಯ ಕತೆಯಂತಹ ಕಡೆಗಳಲ್ಲಿ ಜಾನಪದ
ಅಂಶಗಳೂ ಸೇರಿಕೊಂಡಿವೆ. ಹೀಗಾಗಿ ಚರಿತ್ರೆಗೂ ಸಮಕಾಲೀನತೆಗೂ ಕೊಂಡಿಯಾಗಿ ಬದುಕಿನ ಮೌಲ್ಯಗಳ
ನಿರಂತರತೆಯನ್ನು ಈ ಕೃತಿ ಸೂಚಿಸುತ್ತದೆ. ಜೊತೆಗೆ ಮಹಾವೀರ ಉಪದೇಶಗೈದ ಚಂಪಾನಗರ, ವಾರಣಾಸಿ, ಮಿಥಿಲೆ, ಶ್ರಾವಸ್ತಿ
- ಇವುಗಳ ಉಲ್ಲೇಖ ಇಲ್ಲಿನ ಕತೆಗಳ ವಾತಾವರಣಕ್ಕೆ ಧಾರ್ಮಿಕ ಪರಿವಲಯವನ್ನು ತಂದುಕೊಡುತ್ತದೆ.
ಗಾಹೆಯ ರೂಪದಲ್ಲಿನ ಅಡಕವಾದ ಕತೆಯನ್ನು ಕೃತಿಕಾರ ಮನದಟ್ಟು ಮಾಡಿಕೊಂಡು ಎದುರಿಗೆ
ಕುಳಿತವರನ್ನುದ್ದೇಶಿಸಿ ಹೇಳಿದಂತೆ ಇಲ್ಲಿನ ಕತೆಗಳಿವೆ; ಇದರಿಂದಲೇ
ಇಲ್ಲಿನ ನಿರೂಪಣೇಗೆ ಆತ್ಮೀಯತೆ ಪ್ರಾಪ್ತವಾಗುತ್ತದೆ. ಇದರಿಂದಾಗಿಯೇ ಇಲ್ಲಿನ ಶೈಲಿ
ಘನಿಷ್ಠವಾಗುವುದು, ಎಲ್ಲಿಯೂ ಅಸ್ಪಷ್ಟತೆಯಾಗಲೀ ಸೂಕ್ಷ್ಮ
ಭಾವಗಮ್ಯತೆಯಾಗಲೀ ಇರದಿರುವುದು. ಅನೇಕ ಕತೆಗಳಲ್ಲಿ ಉಪಕತೆಗಳನ್ನು ಸೇರಿಸಿರುವುದರಿಂದ ಓದುಗರನ್ನು
ಆಕರ್ಷಿಸುವುದು ನಿಜವಾದರೂ, ಅದು ಕತೆ ಹೇಳುವ ಬಗೆಯೇ ವಿನಾ ಆಕರ್ಷಣೆಗಾಗಿ
ತಂದವಲ್ಲ. ಈಗಿನ ನಮ್ಮ ದೃಷ್ಟಿಯಿಂದ ಇದು ಕತೆಗಾರಿಕೆಗೆ ಮೆರುಗನ್ನು ನೀಡಿದೆ ಎನ್ನುವುದೇನೋ
ಸತ್ಯವೇ.
ಮುಗಳಿಯವರೆಂದಂತೆ, “ಸಂಸ್ಕøತ-ಕನ್ನಡಗಳ ಸರಿಬೆರಕೆ, ದೇಸಿಮಾರ್ಗಗಳ
ಸಮನ್ವಯ” ಇಲ್ಲಿನ ಶೈಲಿಯ ಮುಖ್ಯ ಲಯ. ‘ವಡ್ಡಾರಾಧನೆ’ಯಲ್ಲಿ
ಕನ್ನಡ ದೇಶಿಯು ಪ್ರಾಧಾನ್ಯ ಪಡೆದಿರಲು ಕಾರಣ ಇಲ್ಲಿನ ನಿರೂಪಣೆ ಸಾಮಾನ್ಯರನ್ನೇ
ಕುರಿತದ್ದಾಗಿರುವುದು. ಸಂಸ್ಕøತವನ್ನು ತೀರ ಬಿಡಲಾರದ ಸ್ಥಿತಿಯಲ್ಲಿ ಕನ್ನಡ ಬರವಣಿಗೆ
ಆ ಹೊತ್ತಿಗಾಗಲೇ ಪಾಕಗೊಂಡಿದ್ದರಿಂದ, ವಿಶೇಷವಾಗಿ, ಜ್ಞಾನಕ್ಕೆ
ಸಂಬಂಧಿಸಿದ ವಿಷಯಗಳನ್ನು ಹೇಳುವಾಗ, ಸಂಸ್ಕøತವನ್ನು ಬಳಸಿರುವುದನ್ನು ಕಾಣಬಹುದು. ಆದರೆ
ಅನುಭವದ್ರವ್ಯವೇ ಜೀವಾಳವಾದ ಸಂದರ್ಭಗಳಲ್ಲಿ ಕನ್ನಡತನ ಎದ್ದು ಕಾಣುತ್ತದೆ. “ವಿಶೇಷವೆಂದರೆ, ಇವೆಲ್ಲ
ಕಥೆಗಳು ಜಾನಪದದ ನಾಲಗೆಯಿಂದ ಆಗ ತಾನೇ ಬಿಡಿಸಿಕೊಂಡು ಬಂದಿರುವ ಹಾಗೆ ತಾಜಾತನ ಮತ್ತು
ದೇಸೀಯತೆಯಿಂದ ಕೂಡಿರುವುದು” (ದಿಬ್ಬದ) ಎಂಬ ಮಾತು ಸಮಂಜಸವಾದುದು. ಯಾವ ಯಾವ
ಬಗೆಯಲ್ಲಿ ಕನ್ನಡ-ಸಂಸ್ಕøತಗಳ ಮಿಶ್ರಣವನ್ನು ಮಾಡಬೇಕು, ಯಾವ
ಬಗೆಯಲ್ಲಿ ಮಾಡಬಾರದು ಎಂಬ ವಿವರಣೆ ‘ಕವಿರಾಜಮಾರ್ಗ’ದಲ್ಲಿ
ನಿಯಮದಂತೆ ಸೇರಿಹೋಗಿರುವುದನ್ನು ನೆನೆದರೆ ಆ ಹೊತ್ತಿಗೆ ಅದು ಕನ್ನಡ ಬರವಣಿಗೆಯ ಸ್ವರೂಪವೇ
ಆಗಿದ್ದಿರೆಬೇಕು. ಆಗಲೇ ಹೇಳಿದಂತೆ, ಕನ್ನಡ ಸಂಸ್ಕøತವನ್ನು ತೀರ
ತೊರೆಯಲಾರದ್ದಾದ್ದರಿಂದ ಶಬ್ದಗಳ ಕನ್ನಡೀಕರಣಪ್ರಕ್ರಿಯೆ ವ್ಯಾಪಕವಾಗಿ ಸಾಗಿತು. ಸಂಸ್ಕøತ-ಕನ್ನಡಗಳ
ಸೇರುವಿಕೆಯ ಬಗ್ಗೆ ‘ಕವಿರಾಜಮಾರ್ಗ’ ಚರ್ಚಿಸುವುದನ್ನು
ನೆನಪಿಸಿಕೊಳ್ಳಬಹುದು. ಒಟ್ಟಾರೆ, ಸಂಭಾಷಣೆಯ ಸಹಜತೆ, ಚಿಕ್ಕ
ಚಿಕ್ಕ ವಾಕ್ಯಗಳ ರಚನೆ, ಪೆಡಸಲ್ಲದ ಲಲಿತಶೈಲಿ, ಅಚ್ಚಗನ್ನಡ
ಬಳಕೆ, ಗಾದೆ-ನಾಣ್ಣುಡಿಗಳು, ಜನಸಾಮಾನ್ಯರ
ಬದುಕಿನ ವಿವರಗಳು, ವಿರಸಗಳು,
ಹೊಂದಾಣಕೆಗಳು, ದೊಡ್ಡತನ, ದಡ್ಡತನ – ಇವೆಲ್ಲ ‘ವಡ್ಡಾರಾಧನೆ’ಯಲ್ಲಿ
ಮೇಳೈಸಿ ಅದನ್ನು ಎದೆಗೊತ್ತಿಕೊಳ್ಳುವ ಹಾಗೆ ಮಾಡುತ್ತವೆ.
ಮೇಲ್ಮಟ್ಟದ ಲೇಖಕನಾದರೂ ವಡ್ಡಾರಾಧನೆಯ
ಕರ್ತೃ ಬೇರೆ ಬೇರೆ ಕತೆಗಳನ್ನಾರಿಸಿಕೊಂಡದ್ದರಿಂದ ಅವನ ಕಾವ್ಯಕೌಶಲ ವ್ಯಕ್ತವಾಗಿಲ್ಲ ಎಂಬ
ಅಭಿಪ್ರಾಯವೊಂದಿದೆ. ತಾನೊಬ್ಬ ದೊಡ್ಡ ಲೇಖಕನೆನಿಸಿಕೊಳ್ಳಬೇಕೆಂಬ ಹಂಬಲ ಪ್ರಾಯಶಃ ಕೃತಿಕಾರನಿಗೇ
ಇದ್ದಂತಿಲ್ಲ. ಏಕೆಂದರೆ ತಾನು ಕಾವ್ಯವೊಂದನ್ನು ರಚಿಸುತ್ತಿದ್ದೇನೆಂದು ಅವನೆಲ್ಲೂ ಹೇಳಿಕೊಂಡಿಲ್ಲ; ಹಾಗೆ
ನೋಡಿದರೆ ನಮ್ಮ ಎಷ್ಟೋ ಮಂದಿ ಕವಿಗಳು ತಮ್ಮ ಹೆಸರೆನ್ನೂ ಕೃತಿಯಲ್ಲಿ ಹೇಳಿಕೊಳ್ಳುವುದಿಲ್ಲ.
ಅದಕ್ಕೆ ಕಾರಣ ಅವರ ಉದ್ದೇಶ ಜನಗಳನ್ನು ಕುರಿತು ಹೇಳುವುದು, ಅವರನ್ನು
ತಿದ್ದುವುದು, ತನ್ನ ಹಿರಿಮೆಯನ್ನು ಬಿಂಬಿಸುವುದಲ್ಲ. ‘ವಡ್ಡಾರಾಧನೆ’ಯ ಪ್ರತಿ
ಕತೆಯ ಕೊನೆಯಲ್ಲಿ “ಮತ್ತಂ ಪೆ¾ರ್
ಸಂನ್ಯಸನಂ ಗೆಯ್ದ ಭವ್ಯಕ್ರ್ಕಳ್ ಚಿಲಾತರಿಸಿಯರಂ ಮನದೊಳ್ ಬಗೆದು ಚತುರ್ವಿಧಮಪ್ಪುಪಸರ್ಗಮುಂ
ಪಸಿವು ನೀರ¿õÉ್ಕ ಮೊದಲಾಗೊಡೆಯ ದುಃಖಂಗಳುಮಂ ಸೈರಿಸಿ ಪರಮ ಶುದ್ಧ
ಸಹಜದರ್ಶನ ಜ್ಞಾನ ಚಾರಿತ್ರಂಗಳುಮಂ ಸಾಧಿಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ” ಎಂಬಂತಹ
ಆಶಯವಾಕ್ಯಗಳ ಮೂಲಕ ಕತೆ ಹೇಳುವ ಮೂಲೋದ್ದೇಶವನ್ನು ಲೇಖಕ ಸ್ಪಷ್ಟಪಡಿಸುತ್ತಾನೆ. ಈ ಕೃತಿಯಲ್ಲಿ
ಲೇಖಕ ನಿರೂಪಿಸಲು ನೆಲೆಯಾಗಿರಿಸಿಕೊಳ್ಳುವುದು ಮೂಲ ಗ್ರಂಥವಾದ ‘ಭಗವತೀ
ಆರಾಧನಾ’ ದ 1509 ರಿಂದ 1682 ರವರೆಗಿನ ‘ಕವಚ’ ಎಂಬ ವಿಭಾಗದ
ಗಾಹೆಗಳನ್ನು. ಕವಚ ಎಂಬುದು, ಆ.ನೇ. ಉಪಾಧ್ಯೆ ಅವರು ವಿವರಿಸುವಂತೆ “ಯಾವುದಾದರೂ
ದೇವತೆಯನ್ನು ಕುರಿತ ಮಂತ್ರಸ್ತೋತ್ರ ವಿಭಾಗದ ಗ್ರಂಥವನ್ನು ನಿರ್ದೇಶಿಸುತ್ತದೆ; ಈ ಮಂತ್ರಗಳ
ಪುನಶ್ಚರಣೆಯಿಂದ ಭಕ್ತನಿಗೆ ಎಲ್ಲ ತೊಂದರೆಗಳೂ ನಿವಾರಣೆಯಾಗುತ್ತವೆಯೆಂದೂ, ಅವುಗಳಲ್ಲಿ
ಅದ್ಭುತವಾದ ಶಕ್ತಿ ಯಾವುದೋ ಇರುವುದೆಂದೂ ಭಕ್ತನು ಭಾವಿಸುತ್ತಾನೆ. ಸಿಪಾಯಿಯನ್ನು ಕವಚವು
ರಕ್ಷಿಸುವಂತೆ ಈ ಮಂತ್ರಗಳೂ ರಕ್ಷಿಸುತ್ತವೆಯೆಂದು ನಂಬಿಕೆಯಿದೆ.” ಪ್ರತಿ ಕತೆಯ
ಕೊನೆಯ ಆಶಯವಾಕ್ಯವು ಇದೇ ಭಾವನೆಯನ್ನು ಮತ್ತೊಂದು ರೀತಿಯಲ್ಲಿ ಹೇಳುತ್ತದೆ.
‘ವಡ್ಡಾರಾಧನೆ’ ಕರ್ತೃ ಹೀಗೆ
ಜನಸಾಮಾನ್ಯರೆಡೆಗೆ ದೃಷ್ಟಿ ನೆಟ್ಟವನು. ಮಹಾವೀರನೇ ಜನನುಡಿಯಾದ ಪ್ರಾಕೃತದಲ್ಲಿ ಮಾತಾಡಿದ, ಆನಂತರ ಆ
ನುಡಿಯಲ್ಲಿಯೇ ಅನೇಕ ಧಾರ್ಮಿಕ ಗ್ರಂಥಗಳು ರಚಿತವಾದುವು; ಆದರೆ
ವೈದಿಕದ ದಟ್ಟ ನೆರಳು ಕವಿದು ಒಲವು ಸಂಸ್ಕøತದ ಕಡೆಗೆ ವಾಲಿದಂತೆ ತೋರುತ್ತದೆ. ಇದರಿಂದಾಗಿ ಧರ್ಮವೂ
ಜನದೂರವಾಯಿತು, ಜನಪ್ರೀತಿಯನ್ನು ಗಳಿಸುವುದು ಸಾಧ್ಯವಿಲ್ಲವಾಯಿತು. ಈ
ಅರಿವು ಮೂಡಿದ ಮೇಲೆ ಮತ್ತೆ ಜನನುಡಿಗಳೆಡೆ ಧರ್ಮಪ್ರಸಾರಕರ ಗಮನ ಹರಿಯಿತು. ಕನ್ನಡದಂತಹ
ಜನನುಡಿಗಳೇ ಜನರನ್ನು ತಲುಪಬಲ್ಲುದು, ತಿದ್ದಬಲ್ಲುದು ಎಂಬ ತಿಳಿವಳಿಕೆಯೇ ಇಂತಹ ಕೃತಿರಚನೆಯ
ಆಂತರ್ಯ. ಪಂಪನಂತಹ ಕವಿಯ “ಬಗೆ ಪೊಸತಪ್ಪುದಾಗಿ ದೇಶಿಯೊಳ್ ಪುಗುವುದು, ಪೊಕ್ಕ
ಮಾರ್ಗದೊಳೆ ತಳ್ವುದು” ಎಂಬಂತಹ ಮಾತಿನ ಮೂಲಕ ಸಾಂಪ್ರದಾಯಿಕ ಕಾವ್ಯಗಳಲ್ಲಿಯೂ
ದೇಸಿಗೆ ಮಾನ್ಯತೆ ದೊರೆಯಿತು. ಜನಸಂವೇದನೆಯನ್ನು ಒಳಗೊಂಡಾಗ ಮಾತ್ರ ಬರಹ ಸಾರ್ಥಕ್ಯವನ್ನು
ಪಡೆಯಬಲ್ಲುದೆಂಬ ಭಾವ ಪಂಪನದು. ಹೀಗಾಗಿ, ಕೃತಿಕಾರನಿಗೇ ಇರದ ಉದ್ದೇಶವನ್ನು ಮುಂದಿಟ್ಟುಕೊಂಡು
ವಾದಿಸುವುದು ತರವಲ್ಲ. ಒಂದು ಕೃತಿಯ ಸಾರ್ಥಕ್ಯವನ್ನು ಅಳೆಯಲು ಮಾನದಂಡವೆಂದರೆ ಆ ಕೃತಿಯೇ ಇರಿಸಿಕೊಂಡÀ ಆಶಯ
ಎಷ್ಟರಮಟ್ಟಿಗೆ ಸಫಲವಾಗಿದೆ ಎಂಬುದೇ ಆಗಿದೆ.
ಧಾರ್ಮಿಕೋದ್ದೇಶದ ಕೃತಿಗಳಲ್ಲಿಯೂ ನಮ್ಮ
ಈಗಿನ ದೃಷ್ಟಿಯ ಕಾವ್ಯಮಯತೆಯನ್ನು ಕಾಣಲು ಸಾಧ್ಯವಾಗುವುದು, ಅಂತಹ
ಕೃತಿಗಳ ರಚಯಿತರ ಆದ್ರ್ರಹೃದಯ. ಅಂತಹವರು ಆಡಿದ್ದು ಕಾವ್ಯವಾಗುತ್ತದೆ, ತಿಳಿಸಿದ್ದು
ಬೋಧೆಯಾಗುತ್ತದೆ. ಬುದ್ಧ, ಮಹಾವೀರ,
ಅಲ್ಲಮ, ಬಸವ
ಇಂತಹವರು ಒದ್ದೆಯಾದ ಮನಸ್ಸುಳ್ಳವರಾದ್ದರಿಂದ ಅವರದು ಕಾವ್ಯವೆಂಬಂತೆ ತೋರುತ್ತದೆ. ಎಲ್ಲ ಧಾರ್ಮಿಕ
ಬರವಣಿಗೆಗಳಲ್ಲಿಯೂ ಇಂತಹ ಕಾವ್ಯಮಯತೆಯನ್ನು ಗುರುತಿಸಬಹುದು. ಹಾಗೆಂದು ಅವರದ್ದು ಕಾವ್ಯೋದ್ದೇಶ
ಎಂಬ ನಿಲವಿಗೆ ಬರಬಾರದು, ಆ ಅಳತೆಗೋಲಿನಿಂದ ಬರಹವನ್ನು ಅಳೆಯಬಾರದು. ವಚನಕಾರರಾಗಲೀ, ಹರಿದಾಸರಾಗಲೀ
ತಾವು ಕವಿಗಳೆಂದು ಭಾವಿಸಲಿಲ್ಲ, ಆದರೆ ನಮಗೀಗ ಅವುಗಳಲ್ಲಿ ಕಾವ್ಯವು ಗೋಚರಿಸುತ್ತದೆ. ‘ವಡ್ಡಾರಾಧನೆ’ಯ ರೀತಿಯೂ
ಅಂತಹುದೇ.
******
1 comment:
ತುಂಬಾ ದನ್ಯವಾದಗಳು ಸಾರ್
Post a Comment