Friday, 3 January 2014

ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರತೆ

ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರತೆ


ಈ ಲೇಖನದ ಶೀರ್ಷಿಕೆಯನ್ನು ಗಮನಿಸಿದರೆ ಅಲ್ಲಿ ಎಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರತೆರಡು ಅಂಶಗಳಿರುವುದು ಎದ್ದು ಕಾಣುತ್ತದೆ; ಅವುಗಳೆಂದರೆ ಸಾಹಿತ್ಯ ಪರಂಪರೆ ಹಾಗೂ ಜನಪರತೆ ಎಂಬಿವು. ಈ ಎರಡರ ಸ್ವರೂಪವನ್ನು ಮೊದಲು ಸ್ಪಷ್ಟಪಡಿಸಿಕೊಂಡರೆ ನಮ್ಮ ಚರ್ಚೆಗೊಂದು ಖಚಿತ ನೆಲೆ ಒದಗುತ್ತದೆ. ಈಗ ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ. ಇನ್ನೊಂದು ಅಂಶವನ್ನೂ ನಾವಿಲ್ಲಿ ಮನದಟ್ಟುಮಾಡಿಕೊಳ್ಳಬೇಕು. ಅದೆಂದರೆ ಬರವಣಿಗೆ ಆರಂಭಗೊಳ್ಳುವ ಮುಂಚಿನಿಂದಲೂ ಜಾನಪದ ಪರಂಪರೆ ಇದ್ದಿರಬೇಕು. ಆದರೆ ಅದರಲ್ಲಿನ ಕೃತಿಗಳ ರಚನಾ ಕಾಲವನ್ನು ನಿಗದಿಪಡಿಸುವುದು ಅಸಾಧ್ಯದ ಮಾತಾಗಿರುವುದರಿಂದ ಅದರಲ್ಲಿನ ಬೆಳವಣಿಗೆಯನ್ನು ಗುರುತಿಸಲು ಸಾಧ್ಯವಿಲ್ಲ. ಜಾನಪದದ ಅಧ್ಯಯನ ನೆಲೆಗಳು ಬೇರೆಯವೇ ಆದ್ದರಿಂದ ನಾನಿಲ್ಲಿ ಚರ್ಚೆಗೆ ಒಳಪಡಿಸುವುದು ಲಿಖಿತ ಸಾಹಿತ್ಯವನ್ನು ಮಾತ್ರ. ಕನ್ನಡದ ಬರವಣಿಗೆಯು ಒಂದು ಸಾವಿರದ ಆರು ನೂರು ವರ್ಷಗಳಿಂದ ಇರುವ ದಾಖಲೆ ನಮಗೆ ಸಿಕ್ಕಿದರೂ, ಸಾಹಿತ್ಯ ಕಳೆದ ಒಂದು ಸಾವಿರದ ಇನ್ನೂರು ವರ್ಷಗಳಿಂದ ನಿರಂತರವಾಗಿ ಬೆಳೆದು ಬಂದಿರುವುದಕ್ಕೆ ಪುರಾವೆಯಿದೆ. ಅಂದರೆ ಆ ಹಿಂದೆಯೂ ಕನ್ನಡ ಸಾಹಿತ್ಯ ನಿರ್ಮಾಣವಾಗುತ್ತಿತ್ತು, ಆದರೆ ಬರಹ ರೂಪದಲ್ಲಿ ನಮಗಿಂದು ದೊರೆಯುತ್ತಿಲ್ಲ ಎಂದರ್ಥ. ನಮಗೆ ದೊರೆಯುವ ಅತ್ಯಂತ ಪ್ರಾಚೀನ  ಕನ್ನಡ ಗ್ರಂಥ, ಎಲ್ಲರಿಗೂ ತಿಳಿದಿರುವಂತೆ, ‘ಕವಿರಾಜಮಾರ್ಗ’ ನಮಗೆ ಪೂರ್ತಿ ದೊರೆತಿದೆ. ಕಳೆದ ಸುಮಾರು ನೂರ ಹದಿನಾಲ್ಕು ವರ್ಷಗಳಿಂದ (ಅದು ಮೊದಲು ಪ್ರಕಟವಾದದ್ದು 1898 ರಲ್ಲಿ, ಕೆ.ಬಿ. ಪಾಠಕ್ ಅದರ ಸಂಪಾದಕರು)  ಅದರ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಲೇ ಬಂದಿದೆ. ಅದರಲ್ಲಿಯೇ ಅದುವರೆಗೆ ಬಂದ ಕನ್ನಡದ ಪ್ರಮುಖ ಲೇಖಕರ ಅನೇಕ ಹೆಸರುಗಳೂ ಉಲ್ಲೇಖಗೊಂಡಿವೆ; ಅದರೆ ಅವುಗಳಲ್ಲಿ ಯಾರ ಗ್ರಂಥವೂ ನಮಗೆ ದೊರೆತಿಲ್ಲ. ಹಾಗೆಯೇ  ಆ ಗ್ರಂಥದ ಕಾಲದಿಂದ ಆಧುನಿಕಪೂರ್ವ ಕಾಲದವರೆಗೆ ಕನ್ನಡದಲ್ಲಿ ರಚಿತವಾದ ಎಲ್ಲ ಕೃತಿಗಳೂ ನಮಗೆ ಸಿಕ್ಕಿಲ್ಲವಾದರೂ, ಸಿಕ್ಕಿರುವ ಗ್ರಂಥರಾಶಿ ಅಪಾರವಾಗಿದೆ; ಇನ್ನು ಹತ್ತೊಂಬತ್ತನೆಯ ಉತ್ತರಾರ್ಧದಿಂದ ರಚಿತವಾದ ಅಗಾಧ ಸಾಹಿತ್ಯ ತನ್ನ ಪ್ರಕಾರವೈವಿಧ್ಯ ಹಾಗೂ ಗುಣ-ಗಾತ್ರಗಳಲ್ಲಿ ಗಮನಾರ್ಹವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡೇ ಹಲವರು ಕನ್ನಡ ಸಾಹಿತ್ಯ ಚರಿತ್ರೆಯನ್ನು ವಿವಿಧ ದೃಷ್ಟಿಕೋನಗಳಿಂದ ರಚಿಸಿದ್ದಾರೆ. ಹೀಗಾಗಿ ಕನ್ನಡ ಸಾಹಿತ್ಯ ಪರಂಪರೆಯ ಕುರಿತಾದ ಎಲ್ಲ ಚರ್ಚೆಗಳೂ ಕವಿರಾಜಮಾರ್ಗದಿಂದಲೇ ಆರಂಭಗೊಳ್ಳುವುದು ಸಹಜ.
ಇನ್ನು ಜನಪರತೆ ಎಂಬುದರ ಬಗೆಗಿನ ನಿರ್ವಚನ. ಎಲ್ಲ ಪರಿಕಲ್ಪನೆಗಳಂತೆಯೇ ಇದೂ ಕಾಲಕಾಲಕ್ಕೆ, ಅಷ್ಟೇಕೆ ವ್ಯಕ್ತಿ ವ್ಯಕ್ತಿಗೆ, ಭಿನ್ನವಾಗಬಹುದು. ಆದ್ದರಿಂದ ನಾನು ಅದನ್ನು ಹೇಗೆ ಪರಿಭಾವಿಸುತ್ತೇನೆ ಎಂಬುದನ್ನು ಸ್ಪಷ್ಟಪಡಿಸಬೇಕು. ಶಬ್ದವೇ ಸೂಚಿಸುವ ಹಾಗೆ ಜನ ಎಂದರೆ ಸಾಮಾನ್ಯ ಜನತೆ; ಅದರ ಅಂತರಂಗವನ್ನು, ಅದರ ಆಕಾಂಕ್ಷೆಗಳನ್ನು, ತವಕ-ತಲ್ಲಣಗಳನ್ನು, ನಿರೀಕ್ಷೆಗಳನ್ನು, ಜೀವನಸ್ವರೂಪ ಹಾಗೂ ಜೀವನದರ್ಶನಗಳನ್ನು ಒಳಗೊಳ್ಳುವುದೇ ಜನಪರತೆ ಎನ್ನಬಹುದೇನೋ. ಏಕೆಂದರೆ ಕಾಲಕಾಲಕ್ಕೆ, ಸಮುದಾಯ ಸಮುದಾಯಕ್ಕೆ ಮೌಲ್ಯಸ್ವರೂ ಬದಲುಗೊಳ್ಳುತ್ತದೆ, ಒಂದು ಕಾಲದವರಿಗೆ, ಒಂದು ಸಮುದಾಯಕ್ಕೆ ಒಳಿತೆನಿಸುವುದು ಇನ್ನೊಂದರ ಆ ಪರಿಭಾವನೆಗಿಂತ ಭಿನ್ನವಾಗಿರಬಹುದು. ಹೀಗಾಗಿ ಶ್ರೇಷ್ಠವೆನಿಸಿಕೊಳ್ಳುವ ಸಾಹಿತ್ಯ ಕೃತಿಯೊಂದು ಯಾವುದರ ಬಗ್ಗೆಯೂ ನೇರವಾಗಿ ಪರವಿರೋಧಗಳನ್ನು ವ್ಯಕ್ತಪಡಿಸುವುದಿಲ್ಲ, ಅಥವಾ ವ್ಯಕ್ತಪಡಿಸಬಾರದು. ಹಾಗೆಂದಾಕ್ಷಣ ಬರಹಗಾರನಿಗೆ ತನ್ನದೇ ಆದ ಒಂದು ನಿಲವು ಇರುವುದಿಲ್ಲ ಎಂದರ್ಥವಲ್ಲ. ಅದು ಕೃತಿಯಲ್ಲಿ ಅಂತರ್ವಾಹಿನಿಯಾಗಿರುತ್ತದೆ. ಇಂಥವು ಜನಮನವನ್ನು ತನ್ನಲ್ಲಿ ಒಳಗೊಳ್ಳುತ್ತದೆ, ಜನಕಲ್ಪನೆಯ ಒಳ್ಳೆಯದು ಅಥವಾ ಕೆಟ್ಟುದನ್ನು ನಿರ್ಭಾವುಕ ನೆಲೆಯಲ್ಲಿ ಒಳಗೊಳ್ಳುತ್ತ, ತನ್ನ ನಿರ್ವಹಣೆಯಲ್ಲಿಯೇ ಅಂಗೀಕಾರಾರ್ಹವಾದುದನ್ನು ಸೂಚಿಸುತ್ತದೆ. ಇದನ್ನೇ, ಹಿಂದಿನವರ ಮಾತಿನಲ್ಲಿ ಹೇಳಬೇಕಾದರೆ, ‘ಪ್ರಬಂಧಧ್ವನಿ’ ಎನ್ನಬಹುದೇನೋ. ಕೃತಿಯು ಯಾವ ಕಾಲದ್ದೇ ಆಗಿರಲಿ, ಸಮಕಾಲೀನತೆಯನ್ನು ಒಳಗೊಳ್ಳುತ್ತಲೇ ಸಾರ್ವತ್ರಿಕತೆಯನ್ನು (?) ಸೂಚಿಸುತ್ತಿರುತ್ತದೆ. ತನ್ನ ಕಾಲದ ವಾಸ್ತವಗಳ ಚಿತ್ರಣದ ಮೂಲಕವೇ ಆದರ್ಶಸ್ಥಿತಿಯನ್ನು ಧ್ವನಿಸುತ್ತಿರುತ್ತದೆ. ಇದು ಸಾಧ್ಯವಾಗುವುದು ಬರಹಗಾರನ ವ್ಯಕ್ತಿತ್ವದ ಎರಡು ನೆಲೆಗಳ ಕಾರಣದಿಂದ: ಒಂದು ಅವನ ವೈಯಕ್ತಿಕ ನೆಲೆ, ಮೇಲೆ ಕಾಣುವ ಮತ್ತು ಜಾಗ್ರತ ಪ್ರಜ್ಞೆಯ ಅವನ ಬದುಕು ಒಂದಾದರೆ; ಅವನನ್ನು ಲೇಖಕನಾಗಿ ರೂಪಿಸುವ ಅಂತಃಪ್ರಜ್ಞೆ ಇನ್ನೊಂದು. ಈ ಎರಡು ನೆಲೆಗಳು ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುವ ಮಾತು. ಎಲ್ಲರಲ್ಲಿಯೂ ಒಂದು ಒಳ ವ್ಯಕ್ತಿತ್ವ, ಅಥವಾ ಕಾಣದ ವ್ಯಕ್ತಿತ್ವ ಇರುತ್ತದೆ; ಇದು ವ್ಯಕ್ತಿವ್ಯಕ್ತಿಗೆ ಭಿನ್ನವಾಗುತ್ತದೆ, ಸ್ವರೂಪದಲ್ಲಿ ಮತ್ತು ಪ್ರಮಾಣದಲ್ಲಿ. ಅದನ್ನೇ ಅಥವಾ ಅಂಥದನ್ನು ಏನೆಂದು ಕರೆಯಬಹುದು? ಹಿಂದಿನವರು ಅದನ್ನು ಕಪ್ರತಿಭೆಕಿ ಎಂದು ಕರೆದರು. ಪ್ರತಿಭೆ ಎಂದರೆ ಹೊಳಹು ಎಂದರ್ಥ; ಎಂದರೆ ಕಾಣದುದನ್ನು ಅಥವಾ ಕಾಣುವುದರ ಹಿಂದಿರುವುದನ್ನು ಸ್ಪಷ್ಟಪಡಿಸಿಕೊಳ್ಳಬಹುದಾದ ಸಾಮಥ್ರ್ಯ ಎನ್ನಬಹುದು.  ಹಾಗೆಯೇ ಬರಹಗಾರನನ್ನಾಗಿ ರೂಪಿಸುವ ಏನೋ ಒಂದು ಅಂಶವಿರುತ್ತದಲ್ಲ (ಹೀಗಿರಲೇ ಬೇಕು, ಯಾಕೆಂದರೆ ಎಲ್ಲರೂ ಲೇಖಕರಾಗುವುದಿಲ್ಲವಲ್ಲ!) ಅದು ಪಕ್ಷಗಳನ್ನು ವಹಿಸುವಂಥದಲ್ಲ; ಹೇಗೆ ಬೆಳಕು ನಿರ್ಭಾವುಕವಾಗಿ ವಸ್ತುಸ್ವರೂಪವನ್ನು ಕಾಣಿಸುತ್ತದೋ ಹಾಗೆಯೇ ಇದೂ. ಹೀಗಾಗಿ ಈ ನೆಲೆಯಲ್ಲಿ ಮಾನವೀಯತೆ ಮುಖ್ಯವಾಗುತ್ತದೆ. ಇಂಥದೊಂದು ಮಿಡುಕನ್ನು ನಾನು ಜನಪರತೆ ಎಂದು ಕರೆಯುತ್ತೇನೆ. ಈ ತಾತ್ವಿಕತೆಯ ಹಿನ್ನೆಲೆಯಲ್ಲಿ ನನ್ನ ಮುಂದಿನ ಚರ್ಚೆ ಸಾಗುತ್ತದೆ.
ಈಗ ಕನ್ನಡ ಸಾಹಿತ್ಯ ಪರಂಪರೆಯ ಮೊದಲ ಹಂತ ‘ಕವಿರಾಜಮಾರ್ಗ’ದ್ದೇ. ಇದೊಂದು ಶಾಸ್ತ್ರಗ್ರಂಥ, ಇದರಲ್ಲಿ ಒಂದಷ್ಟು ಅಲಂಕಾರಶಾಸ್ತ್ರ, ಒಂಷ್ಟು ವ್ಯಾಕರಣ, ಒಂದಷ್ಟು ವ್ಯಾಕರಣ - ಎಲ್ಲ ಇವೆ. ಇದಕ್ಕೆ ಪ್ರೇರಕವಾಗಿರುವುದು ದಂಡಿಯ ‘ಕಾವ್ಯಾದರ್ಶ’ ಮತ್ತು ಭಾಮಹನ ‘ಕಾವ್ಯಾಲಂಕಾರ’ ಎಂಬ ಎರಡು ಸಂಸ್ಕೃತ ಅಲಂಕಾರಶಾಸ್ತ್ರ ಗ್ರಂಥಗಳು. ಆರೆ ಇದನ್ನು ರಚಿಸಲು ಕಾರಣ, ಅದರ ಮೊದಲ ಪರಿಚ್ಛೇದದಲ್ಲಿ ಸ್ಪಷ್ಟಗೊಳ್ಳುತ್ತದೆ: ಅದೆಂದರೆ ಕನ್ನಡಕ್ಕೆ ಸಂಸ್ಕೃತದಿಂದ ಭಿನ್ನವಾದ, ಹೆಚ್ಚು ಶ್ರೀಮಂತವಾದ(?) ಕಾವ್ಯಸಂಪತ್ತು ಇದೆ; ಹಾಗಾಗಿ ಅದನ್ನು ಅರ್ಥಮಾಡಿಕೊಳ್ಳಲು ಕನ್ನಡಕ್ಕೆ ತನ್ನದೇ ಆದ ಒಂದು ಚರ್ಚೆಯ ನೆಲಗಟ್ಟು (ಇದನ್ನೇ ಕಾವ್ಯಮೀಮಾಂಸೆ ಎನ್ನುವುದು) ಬೇಕು, ಅದನ್ನು ರೂಪಿಸುವುದು. ಸಂಸ್ಕೃತಕ್ಕಿಂತ ಕನ್ನಡ ಭಿನ್ನವಾಗಿರಲು ಕಾರಣವೆಂದರೆ ಸಂಸ್ಕೃತ ಬರವಣಿಗೆಯ ಭಾಷೆ, ಕನ್ನಡ ಜನಭಾಷೆ ಎಂಬ ಕಾರಣವನ್ನು ಈ ಕೃತಿ ಬಾಯಿಬಿಟ್ಟು ಹೇಳದಿದ್ದರೂ ಅದು ಅದರ ಮನಸ್ಸಿನಲ್ಲಿದೆ ಎನಿಸುತ್ತದೆ. ಈ ಕನ್ನಡಪರ ನಿಲವಿನಿಂದಾಗಿಯೇ (ಕನ್ನಡವೆಂದರೆ ‘ಕವಿರಾಜಮಾರ್ಗ’ದ ದೃಷ್ಟಿಯಲ್ಲಿ ನುಡಿ, ನಾಡು ಮತ್ತು ಜನಪದ - ಈ ಮೂರೂ ಹೌದು) ಇಲ್ಲಿ ಭಾಷೆಯ ಬಗೆಗೆ ಹೇಗೋ ಜನತೆಯ ಬಗೆಗೂ ಅಭಿಮಾನದ ಮಾತುಗಳಿವೆ. ಸಂಸ್ಕೃತದಲ್ಲಿಲ್ಲದ ಬೆದಂಡೆ, ಚತ್ತಾಣ, ಗದ್ಯಕಥೆಯಂತಹ ವಿಶಿಷ್ಟ ಕಾವ್ಯಪ್ರಕಾರಗಳು ಕನ್ನಡದ ವೈಶಿಷ್ಟ್ಯ ಎಂದು ಗ್ರಂಥಕಾರ ಹೇಳುತ್ತಾನೆ. ಮೊದಲೆರಡು ಹೆಸರುಗಳನ್ನು ಗಮನಿಸಿದರೆ ಇವು ನೇರವಾಗಿ ಜಾನಪದಕಾವ್ಯವನ್ನಲ್ಲದಿದ್ದರೂ, ಅದರ ಗುಣಗಳನ್ನೊಳಗೊಂಡ ಗ್ರಾಂಥಿಕ ಪ್ರಕಾರವನ್ನು ಸೂಚಿಸುತ್ತದೆ. ಅಂದರೆ ‘ಕವಿರಾಜಮಾರ್ಗ’ವು ಜನತೆಗೆ ಹತ್ತಿರವಾದ ಅಂಶಗಳನ್ನು ಎದ್ದು ಕಾಣುವಂತೆ ಪ್ರಸ್ತಾಪಿಸಿರುವುದೇ ಇದರ ಜನಪರತೆಯ ಪ್ರತೀಕ ಎನ್ನಬಹುದು. ಜೊತೆಗೆ ಸಂಸ್ಕೃತವು ಹೊರೆಯಾಗದ ಹಾಗೆ ಕನ್ನಡದಲ್ಲಿ ಹೇಗೆ ಬಳಕೆಗೊಳ್ಳಬೇಕು ಎಂಬ ಬಗ್ಗೆಯೂ ಸುಳುಹುಗಳನ್ನು ಕೃತಿಯು ನೀಡುತ್ತದೆ. ಅಂದರೆ,  ಬರಹವು ಜನಸಾಮಾನ್ಯರ ಬದುಕನ್ನು ಒಳಗೊಳ್ಳಬೇಕಾದ ಆವಶ್ಯಕತೆಯನ್ನು ಸೂಚಿಸುವಂತೆ ನನಗೆ ಕಾಣಿಸುತ್ತದೆ.
ಮುಂದಿನ ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಯಲ್ಲಿ ರಚಿತವಾದ ಕಾವ್ಯಪ್ರಕಾರ ಚಂಪೂ. ಅದರ ಭಾಷೆ ಹಳಗನ್ನಡ, ಬರೆದವರು ರಾಜರಿಗೆ ಹತ್ತಿರವಾಗಿದ್ದವರು, ಮೇಲೆ ನೋಟಕ್ಕೆ ಕಾಣುವಂಥದು ರಾಜಶ್ರೇಷ್ಠತೆಯ ಪ್ರತಿಪಾದನೆ - ಇತ್ಯಾದಿಗಳು. ಆದರೆ ಈ ಪ್ರಕಾರದ ಅತ್ಯುತ್ಕೃಷ್ಟ ಮಾದರಿಯಾದ ಪಂಪ ತನ್ನೆರಡು ಕೃತಿಗಳಲ್ಲಿ (‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನವಿಜಯ’) ಪ್ರತಿಪಾದಿಸುವುದು ಜೈನಧರ್ಮದ ವೈಶಿಷ್ಟ್ಯ ಮತ್ತು ರಾಜಶ್ರೇಷ್ಠತೆ ಎನ್ನಿಸಿದರೂ - ಅವುಗಳು ನಾನು ಹಿಂದೆ ಹೇಳಿದ ಸಮಕಾಲೀನ ವಾಸ್ತವಗಳು - ಅವನ ಒಳನೋಟ ಗುರುತಿಸುವುದು ವ್ಯಕ್ತಿಜೀವನದ ಸಾರ್ಥಕ್ಯದ ಸ್ವರೂಪ ಮತ್ತು ತನ್ನ ಕಾಲದ ಜನಸಮುದಾಯದ ಪ್ರಮುಖ ತಲ್ಲಣಗಳಾದ ಜಾತಿದುರಂತ ಮತ್ತು ಸಾಮ್ರಾಜ್ಯಶಾಹಿಯ ಕ್ರೌರ್ಯಗಳನ್ನು. ಇವು ಆ ಕಾಲದಲ್ಲಿ ನೆಲೆಯೂರಿದ್ದುದಕ್ಕೆ ಕಾರಣ ‘ಜಾತಿ’ ದೈವನಿರ್ಮಿತ ಹಾಗೂ ‘ರಾಜಾ ಪ್ರತ್ಯಕ್ಷದೇವತಾ’ ಎಂಬ ನಂಬಿಕೆಗಳ ಬಿತ್ತನೆ. ಪ್ರಾಯಶಃ ಈ ನೋಟದ ಭಿನ್ನತೆಯನ್ನೇ ಅವನು ‘ಆದಿಪುರಾಣ’ದಲ್ಲಿ ‘ಕಾವ್ಯಧರ್ಮ’ ಎಂದೂ, ‘ವಿಕ್ರಮಾರ್ಜುನವಿಜಯ’ದಲ್ಲಿ ‘ದೇಸಿ’ ಅಥವಾ ‘ವರ್ಣಕ’ ಎಂದೂ ಕರೆದಿದ್ದಾನೆಂಬುದು ನನ್ನ ತಿಳಿವಳಕೆ.
ಈ ಎರಡೂ ಜನವಿರೋಧಿ ಅಂಶಗಳನ್ನೇ - ಜಾತಿ ಮತ್ತು ಸಾಮ್ರಾಜ್ಯಶಾಹಿ - ಪಂಪನಾದ ಎರಡು ಶತಮಾನಗಳ ಬಳಿಕ ಸ್ಫೋಟಿಸಿದ ವಚನ ಚಳವಳಿ ತೀವ್ರವಾಗಿ ವಿರೋಧಿಸಿದ್ದು. (ಇದರಿಂದ ಪಂಪನ ದೂರದೃಷ್ಟಿ ಮತ್ತು ಅವನ ಸೂಕ್ಷ್ಮಸಂವೇದನೆ ಎಂಥದೆಂಬುದು ಸ್ಪಷ್ಟವಾಗುತ್ತದೆ) ಈ ಎರಡೂ ವೈದಿಕ ವ್ಯವಸ್ಥೆಯ ಜನವಿರೋಧಿ ಪ್ರಮುಖಾಂಶಗಳು; ಅಸಮಾನತೆಯ ಬೀಜಗಳು. ಆ ಕಾರಣದಿಂದಲೇ ವಚನ ಚಳವಳಿಯು (ಅದರ ಮಿತಿಗಳೇನೇ ಇರಲಿ) ಈ ಎರಡನ್ನೂ [ಜೊತೆಗೆ ಲಿಂಗತಾರತಮ್ಯವನ್ನೂ - ಮತ್ತೆ ಮಿತಿಯಲ್ಲಿ - ತೀವ್ರವಾಗಿ ವಿರೋಧಿಸಿತು. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಬೀಜಮಂತ್ರದ ಈ ಚಳವಳಿಯು ಜಾತಿವಿಂಗಡಣೆ ಕೃತಕವಾದುದು ಎಂದು ವೈಚಾರಿಕ ನೆಲೆಯಲ್ಲಿ ಪ್ರತಿಪಾದಿಸಿದುದಲ್ಲದೆ, ‘ನೆಲನಾಳ್ದನ ಹೆಣನೆಂದಡೆ ಒಂದಡಕೆಗೆ ಕೊಂಬುವರಿಲ್ಲ’ ಎಂಬಂತಹ ಮಾತುಗಳಲ್ಲಿ ರಾಜನ ದೈವಾಂಶವನ್ನು ಅಲ್ಲಗಳೆಯಿತು. ವಚನ ಸಾಹಿತ್ಯ ಈ ಚಳವಳಿಯ ಒಂದು ಉಪಉತ್ಪನ್ನ. ಅಷ್ಟೆ. ವಚನಗಳನ್ನು ಸಾಹಿತ್ಯವೆಂದು ಪರಿಭಾವಿಸಬೇಕೆಂದು ವಚನಕಾರರು ನಿರೀಕ್ಷಿಸಿರಲಿಲ್ಲ. ಆದರೂ ಅದು ಮುಂದಿನ ಕನ್ನಡ ಸಾಹಿತ್ಯದ ಮೇಲೆ ವ್ಯಾಪಕವೂ ಆಳವೂ ಆದ ಪ್ರಭಾವವನ್ನು ಬೀರಿತು. ಕನ್ನಡ ಸಾಹಿತ್ಯ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ.
ವಚನಗಳ ಕಾಲವಾದ ಮೇಲೆ ಅದರಿಂದ ಪ್ರಭಾವಿತವಾದ ಮುಖ್ಯ ಕವಿಗಳೆಂದರೆ ಹರಿಹರ ಮತ್ತು ರಾಘವಾಂಕ. ಐತಿಹ್ಯಗಳ ಪ್ರಕಾರ, ಹರಿಹರ ಹೊಯ್ಸಳ ರಾಜನ ಬಳಿ ನೌಕರನಾಗಿದ್ದವನು, ಅದನ್ನು ಬಿಟ್ಟು ಹಂಪೆಗೆ ಬಂದ. ಅವನು ಮೊದಲು ಚಂಪೂ ಪ್ರಕಾರದಲ್ಲಿ ‘ಗಿರಿಜಾ ಕಲ್ಯಾಣ’ವನ್ನು ಬರೆದರೂ, ಮುಂದೆ ಕತೆ ಹೇಳಲು ಬಳಸಿದ್ದು ರಗಳೆಗಳನ್ನು. ವಸ್ತು, ಭಾಷೆ, ಶೈಲಿ, ಕಾವ್ಯಸ್ವರೂಪ, ಆಶಯ - ಈ ಎಲ್ಲದರಲ್ಲಿಯೂ ಅವನು ಹೊಚ್ಚ ಹೊಸತನವನ್ನು - ಸಾಮಾನ್ಯರಿಗೆ ಹತ್ತಿರವಾದುದನ್ನು - ಅಳವಡಿಸಿಕೊಂಡ. ಕಾಯಕಜೀವಿಗಳ ಭಕ್ತಿ-ಕಾಯಕನಿಷ್ಠೆಗಳೇ ರಗಳೆಗಳ ಕಾವ್ಯವಸ್ತು, ನಡುಗನ್ನಡ ಭಾಷೆ, ಸರಳ ಶೈಲಿ, ಅಷ್ಟಾದಶವರ್ಣನೆಗಳಿಲ್ಲದ ಹಾಗೂ ಸಾಮಾನ್ಯರ ಅಸಾಮಾನ್ಯತೆಯನ್ನು ಸಾರುವ ರೀತಿ ಅವನ ಕಾವ್ಯದ ಎದ್ದು ಕಾಣುವ ಅಂಶಗಳು. ರಾಘವಾಂಕನೂ ಹಾಗೆಯೇ, ತನ್ನ ಸೋದರಮಾವ ಹರಿಹರನಂತೆಯೇ, ಹೊಸ ಆಶಯದೊಡನೆ ಕಾವ್ಯರಚನೆ ಮಾಡಿದ; ತನ್ನ ಅತ್ಯಂತ ಹೃದ್ಯ ಕೃತಿಯಾದ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಅವನು ಸೂಕ್ಷ್ಮವಾಗಿ ತೆರೆದು ತೋರಿಸಿದ್ದೆಂದರೆ ಜಾತಿಯ ಅರ್ಥಹೀನತೆ ಮತ್ತು ರಾಜತ್ವದ ಟೊಳ್ಳುತನ ಹಾಗೂ ಗಟ್ಟಿ ವ್ಯಕ್ತಿತ್ವದ ಸ್ವರೂಪ ಎಂಥದು ಎಂಬಿವುಗಳನ್ನು.
ಈ ಕವಿಗಳಿದ್ದ ಹದಿಮೂರನೇ ಶತಮಾನದ ಬಳಿಕ ಬಂದದ್ದು ವೀರಶೈವ ಪುರಾಣಗಳ ರಚನೆಯ ಯುಗ. ‘ಶೂನ್ಯ ಸಂಪಾದನೆ’ ಎಂಬ ಅದ್ಭುತ ಕೃತಿಯು ಒಂದು ನೆಲೆಯಲ್ಲಿ ವಚನ ಚಳವಳಿಯ ಮೌಲ್ಯಗಳ ಕ್ರೋಡೀಕರಣವನ್ನು ನಾಟಕೀಯವಾಗಿ ಮಾಡಿದುದು ಮಾತ್ರವಲ್ಲದೆ, ಅಲ್ಲಮಪ್ರಭು ಎಂಬ ರೂಪಕದ ಮೂಲಕ ಜೀವವೊಂದರ ಪಯಣಸ್ವರೂಪವನ್ನು, ಹಾಗೂ ಅದಕ್ಕೆ ಪೂರಕವಾದ ಮೌಲ್ಯಗಳನ್ನು ಚಿತ್ರಿಸುತ್ತದೆ. ಜೊತೆಗೆ, ಅದರ ನಾಲ್ಕು ಪರಿಷ್ಕರಣಗಳ ಹಿಂದೆ ಸಮುದಾಯಪ್ರಜ್ಞೆಯೊಂದು ಕೆಲಸ ಮಾಡಿರುವುದೂ ಅಪೂರ್ವ ಸಂಗತಿ. ಚಾಮರಸನ ‘ಪ್ರಭುಲಿಂಗಲೀಲೆ’ಯಂತಹ ಪುರಾಣಗಳು ಜನಭಾಷೆಯಲ್ಲಿ ತಮ್ಮ ನಂಬುಗೆಯ ಮೌಲ್ಯಪ್ರತಿಪಾದನೆಗೆ ತೊಡಗಿದವು. ಈ ಕಾಲದ ವಚನರಚನೆ ಸಂಪೂರ್ಣವಾಗಿ ಮಠಶಾಹಿಗೆ ಒಳಗಾದರೂ, ಮುಂದೆ ತತ್ವಪದಗಳ ರಚನಗೆ ಅಡಿಪಾಯ ಹಾಕಿ ಕೆಳವರ್ಗದವರೂ ಅದರಲ್ಲಿ ಪಾಲುಗೊಳ್ಳುವಂತಾದದ್ದು ವಿಶೇಷ. (ನಾನಿಲ್ಲಿ ಹೇಳುತ್ತಿರುವುದು ಕಾವ್ಯಗಳು ಜನರಿಗೆ ತಲುಪಬೇಕೆಂಬ ಆಕಾಂಕ್ಷೆಯಿಂದ ಅವರಿಗೆ ಹತ್ತಿರವಾದ ಮತ್ತು ಪ್ರಿಯವಾದ ಭಾಷಾ ಶೈಲಿಗಳನ್ನು ಆಯ್ಕೆಮಾಡಿಕೊಳ್ಳುವುದರ ಮೂಲಕ ಅವು ಜನಪರತೆಯನ್ನು ತೋರಿಸಿದವು ಎಂಬ ಅಂಶವನ್ನೇ ಹೊರತು, ಅವು ಪ್ರತಿಪಾದಿಸಿದ ಮೌಲ್ಯಗಳ ಶ್ರೇಷ್ಠತೆಯನ್ನಲ್ಲ)
ಈ ಹಂತದ ಮುಂದಿನದು ವಿಜಯನಗರದಂತಹ ಬಲಿಷ್ಠ ಸಾಮ್ರಾಜ್ಯವೊಂದರ ಜೊತೆಜೊತೆಯಲ್ಲಿಯೇ ನಡೆದ ಕನ್ನಡ ಕಾವ್ಯರಚನೆ. ಒಂದೆಡೆ ಚಾಮರಸ-ಕುಮಾರವ್ಯಾಸನಂತಹ ಕವಿಗಳೂ, ಹತ್ತಾರು ಹರಿದಾಸರೂ ರಾಜಶಾಹಿಯ ನೆರಳಿಗೆ ಹೋಗದೆ ರಚನೆಗಳನ್ನು ಮಾಡಿದುದು ಒಂದು ವಿಶೇಷ. ಏಕೆಂದರೆ ಕನ್ನಡ ಕಾವ್ಯಪರಂಪರೆ ಚಂಪೂ ನಂತರ ರಾಜನನ್ನು ಹಿಂದಿನ ಆರಾಧನಾಭಾವದಿಂದ ನೋಡಲೇ ಇಲ್ಲ. ಆಸ್ಥಾನದಲ್ಲಿ ಕುಳಿತು ರಾಜನನ್ನು ಹೊಗಳಿದ ಕವಿಗಳು ಎರಡನೆಯ ದರ್ಜೆಯವರು ಅಥವಾ ಅದಕ್ಕೂ ಕೆಳಗಿನವರು. ಮಿಕ್ಕವರು ಸ್ವತಂತ್ರಪ್ರವೃತ್ತಿಯವರು. ಹರಿದಾಸ ಪರಂಪರೆಯ ವ್ಯಕ್ತ ಮೌಲ್ಯಗಳೇನೇ ಇರಲಿ ಅದು ಜನತೆಯ ಮನೆ ಬಾಗಿಲಿಗೆ ಹೋಗಿ ಹಾಡಿ ಕುಣಿದದ್ದೂ, ಕನ್ನಡದ ಗೇಯತೆಯನ್ನು ಮನವರಿಕೆ ಮಾಡಿಕೊಟ್ಟದ್ದೂ ಸಾಮಾನ್ಯವಲ್ಲ. ಮಿಕ್ಕ ಹರಿದಾಸರು ಒಪ್ಪಿತ ವೈದಿಕ ಹಾಗೂ ದ್ವೈತದ ಮೌಲ್ಯಗಳನ್ನು ಪ್ರತಿಪಾದನೆ ಮಾಡಿದರೂ, ಅದನ್ನು ‘ರಾಮಧಾನ್ಯಚರಿತೆ’ಯಲ್ಲಿನ ಧಾನ್ಯಗಳ ರೂಪಕದಿಂದ ತಾರತಮ್ಯವನ್ನು ಪ್ರಶ್ನಿಸಿದುದಲ್ಲದೆ, ಕೀರ್ತನೆಗಳ ಜೊತೆಗೆ ಕಾವ್ಯಗಳನ್ನೂ ಬರೆದು ಮೊದಲ ಬಂಡಾಯ ಕವಿಯಾದುದು ಅದ್ಭುತ ಸನ್ನಿವೇಶ. ಹಾಗೆಯೇ ನಂಜುಂಡಕವಿಯಂಥವರು ಜಾನಪದ ಛಂದಸ್ಸಾದ ಸಾಂಗತ್ಯವನ್ನು ದೀರ್ಘ ಕಾವ್ಯಕ್ಕೆ ಅಳವಡಿಸಿಕೊಂಡದ್ದೂ, ಜಾನಪದ ವೀರನೊಬ್ಬನನ್ನು ಕಾವ್ಯನಾಯಕನಾಗಿಸಿಕೊಂಡದ್ದೂ ಸಾಹಿತ್ಯವು ಜನರ ಕಡೆ ಮತ್ತಷ್ಟು ಹತ್ತಿರವಾದದ್ದರ ಸೂಚಕ.
ಮುಂದೆ ಸ್ವಲ್ಪಕಾಲ ಚಿಕ್ಕದೇವರಾಜನಂತಹ ರಾಜರ ಆಸ್ಥಾನಕ್ಕೆ ಕಾವ್ಯ ಮತ್ತೆ ಹೋದರೂ, ಅಲ್ಲಿ ಹೊನ್ನಮ್ಮನಂತಹ ಸೇವಕವೃತ್ತಿಯ ಹೆಣ್ಣುಮಗಳಿಗೂ ಕಾವ್ಯರಚನೆಗೆ ಎಡೆಯಾಯಿತೆಂಬುದು ಅಚ್ಚರಿಯ ಸಂಗತಿ. ಆ ಮುಂದೆ ಹೆಳನಕಟ್ಟೆ ಗಿರಿಯಮ್ಮನಂತಹ ಹಲವರು ಸ್ತ್ರೀಯರು ಕಾವ್ಯರಚನೆ ಮಾಡುವಂತಾದುದನ್ನೂ ನಾವು ಗಮನಿಸಬೇಕು. ಅಲ್ಲದೆ ಯಾವ ಕಟ್ಟುಪಾಡುಗಳಿಗೂ ಒಳಗಾಗದ ಅತ್ಯಂತ ಸ್ವತಂತ್ರ ಪ್ರವೃತ್ತಿಯ ಸರ್ವಜ್ಞ ಕನ್ನಡ ಜನಮನದ ಹಾಗೂ ಜಾನಪದ ವಿವೇಕದ ದನಿಯಾಗಿ ಎಲ್ಲೆಡೆ ಪಸರಿಸಿದುದು ಸಾಹಿತ್ಯವು ಜನರಿಂದಲೇ ಹೊಮ್ಮಿದುದರ ಸಂಕೇತ; ಜನಪದ ಹಾಗೂ ಶಿಷ್ಟಗಳ ಮಿಲನದ ಸಂದರ್ಭ. ಆವರೆಗೆ ಬಹುಪಾಲು ಧರ್ಮದ ಬೊಗಸೆಯಲ್ಲೇ ಬೆಳೆದ ಸಾಹಿತ್ಯದಲ್ಲಿ ಗದ್ಯ ಅಪರೂಪವಾಗಿತ್ತು; ಮುಂದೆ ಅದು ವ್ಯಾಪಕವಾಗಿ ಬೆಳೆದು, ಕೆಂಪುನಾರಾಯಣನಂಥವನು ಪೂರ್ತಿ ಲೌಕಿಕವೆಂಬಂತಹ ವಸ್ತುವೊಂದನ್ನು ಆಯ್ದುಕೊಂಡು ಹೊಚ್ಚ ಹೊಸ ಗದ್ಯದಲ್ಲಿ ಬರೆದ ‘ಮುದ್ರಾಮಂಜೂಷ’ವು ಆಧುನಿಕತೆ ಹಾಗೂ ಸೆಕ್ಯೂಲರ್ ದೃಷ್ಟಿಕೋನಗಳ ಬಾಗಿಲು ತಟ್ಟಿತು. ಆನಂತರ, ಬ್ರಿಟಿಷ್ ಪ್ರವೇಶದಿಂದ ಹಾಗೂ ಪಾಶ್ಚಾತ್ಯ ಪ್ರಭಾವದಿಂದ ನಮ್ಮ ಮನೋದೃಷ್ಟಿ ಸಂಪೂರ್ಣ ಬದಲಾಗಿ, ಒಂದೆಡೆ ಸೆಕ್ಯೂಲರ್ ಮನೋಭಾವ ಮತ್ತೊಂದೆಡೆ ಪ್ರಕಾರವೈವಿಧ್ಯಗಳು ಕನ್ನಡದಲ್ಲಿ ನೆಲೆಯೂರಲು ತೊಡಗಿ ನೂರಾರು ಹಕ್ಕಿಗಳು ಒಮ್ಮೆಗೇ ಚಿಂವುಗುಟ್ಟುವ ಬೆಳಗು ಕಾಣಿಸಿಕೊಂಡಿತು. ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯದ ಪ್ರಮುಖ ಟ್ಟಗಳಾದ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಮತ್ತು ಆ ಮುಂದಿನ ಸಾಹಿತ್ಯರಚನೆಯಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಸಾಹಿತ್ಯ ಹೊಸತನವನ್ನೂ, ಜನಪರತೆಯನ್ನೂ ಒಳಗೊಂಡುದು ರೋಚಕ ಇತಿಹಾಸ. ಈಗಿನ ಜಾಗತೀಕರಣದ ದಟ್ಟ ಪಾಶ್ಚಾತ್ಯೀಕರಣದ ಅಮಲಿನ ನಡುವೆಯೂ ಗಮನಾರ್ಹವೆನಿಸುವ ಸಾಹಿತ್ಯ ಕೃತಿಗಳಲ್ಲಿ ಕಾಣುವುದು ಸ್ವತಂತ್ರ ಮನೋಭಾವ, ದೇಸೀಪ್ರೀತಿ ಮತ್ತು ಜನತೆಯ ಬಗೆಗಿನ ಕಳಕಳಿ.
ಒಟ್ಟಾರೆ ನಾನಿಲ್ಲಿ ಒತ್ತಿ ಹೇಳಬಯಸುವುದು ಕನ್ನಡ ಸಾಹಿತ್ಯದ ಆರಂಭದಿಂದ ಇಂದಿನವರೆಗೂ ಅದು ಜನಪರವಾಗಿಯೇ ನಡೆದು ಬಂದಿದೆ ಎಂಬ ಅಂಶವನ್ನು. ಮೊದಲೇ ಸ್ಪಷ್ಟಪಡಿಸಿರುವಂತೆ ಜನಪರತೆಯ ಪರಿಕಲ್ಪನೆ ಕಾಲಕಾಲಕ್ಕೆ ಭಿನ್ನವಾಗುವುದು ಸಹಜ. ಆದರೆ ತನ್ನ ಕಾಲಕ್ಕೆ ಅದು ಮುನ್ನಡಿಯಿಟ್ಟಿತೆಂಬುದನ್ನು ಮಾತ್ರವೇ ನಾನಿಲ್ಲಿ ಗಮನಿಸಿದ್ದೇನೆ. ಬಸವಲಿಂಗಪ್ಪನವರು ಹೇಳಿದಂತೆ ಕನ್ನಡ ಸಾಹಿತ್ಯದಲ್ಲಿ ರಚಿತವಾದ ಒಟ್ಟು ಸಾಹಿತ್ಯರಾಶಿಯಲ್ಲಿ ಬಹುಪಾಲು ಬೂಸಾ ಎನ್ನುವುದು ನಿಜವಿರಬಹುದು. ಆದರೆ ನಮ್ಮ ಸಾಹಿತ್ಯ ಪರಂಪರೆ ಗೌರವಿಸುತ್ತ ಬಂದಿರುವುದು ಹೊರನೋಟಕ್ಕೆ ಪ್ರತಿಗಾಮಿ ಎಂದು ಕಾಣುವುದರ ಬಸಿರಲ್ಲಿಯೇ ಜನಪ್ರೀತಿಯನ್ನು ಅಡಗಿಸಿಕೊಂಡ ಕೃತಿಗಳನ್ನೇ ಎಂಬುದನ್ನು ಮಾತ್ರ ನಾನಿಲ್ಲಿ ಹೇಳುತ್ತಿರುವುದು. ರಾಶಿರಾಶಿ ಅದಿರಲ್ಲಿ ಸಿಕ್ಕುವುದು ಹಿಡಿಯಷ್ಟು ಚಿನ್ನ ತಾನೇ!
=====
                                                             





No comments: