ವಚನ ಚಳವಳಿ ಒಂದು ಭಕ್ತಿ ಚಳವಳಿಯೇ?
ಭಕ್ತಿ ಚಳವಳಿ ಎಂದರೇನು? ಭಕ್ತಿ ಚಳವಳಿಯ ಸ್ವರೂಪ ಲಕ್ಷಣಗಳನ್ನು ಶ್ರೇಯ ಆಚಾರ್ಯ ಹೀಗೆ ಪಟ್ಟಿ
ಮಾಡುತ್ತಾರೆ: 1. ಭಕ್ತಿ ಎಂದರೆ ದೇವರ ಬಗೆಗಿನ ಎರಡಿಲ್ಲದ ನಿಷ್ಠೆ; ಭಕ್ತಿಯ ಗುರಿ ದೇವರ ಕೃಪೆಯನ್ನು
ಸಂಪಾದಿಸುವುದು. 2. ಭಕ್ತಿ ಚಳವಳಿಯು ದೇವರನ್ನೊಲಿಸಿಕೊಳ್ಳುವ ಸಾಧನಗಳಾಗಿ ಆಚರಣೆಗಳು ಹಾಗೂ ಯಜ್ಞಯಾಗಾದಿಗಳನ್ನು
ನಿರಾಕರಿಸಿ, ಹೃದಯ ಮನಸ್ಸುಗಳ ಪರಿಶುದ್ಧತೆ ಹಾಗೂ ಮಾನವೀಯತೆಗಳಿಗೆ ಒತ್ತು ನೀಡುತ್ತದೆ, ಅದರಲ್ಲಿ
ಸರಳ ಭಕ್ತಿಗೆ ಆದ್ಯತೆ. 3 ಭಕ್ತಿ ಚಳವಳಿಯು ಮುಖ್ಯವಾಗಿ ಏಕದೇವೋಪಾಸನೆಯ ನೆಲೆಯದು; ಭಕ್ತರು ಒಬ್ಬ
ದೇವರನ್ನು ಆರಾಧಿಸುವವರು – ಸಗುಣ ಮತ್ತು ನಿರ್ಗುಣ ಎರಡೂ ರೀತಿಗಳಲ್ಲಿ. ವೈಷ್ಣವರು ಸಗುಣೋಪಾಸಕರು;
ಅವರಲ್ಲಿ ರಾಮಮಾರ್ಗಿಗಳು ಮತ್ತು ಕೃಷ್ಣಮಾರ್ಗಿಗಳು – ಇಬ್ಬರೂ ವಿಷ್ಣುವಿನ
ಅವತಾರಗಳು - ಎಂಬ ಎರಡು ಪ್ರಭೇದಗಳುಂಟು; ನಿರ್ಗುಣೋಪಾಸಕರು ವಿಗ್ರಹಾರಾಧನೆಯ ವಿರೋಧಿಗಳು; ಅವರ ಪ್ರಕಾರ
ದೇವರು ಸರ್ವಾಂತರ್ಯಾಮಿ. 4. ಸಗುಣ-ನಿರ್ಗುಣೋಪಾಸಕರಿಬ್ಬರೂ ಉಪನಿಷತ್ತುಗಳ ಅದ್ವೈತ ತಾತ್ವಿಕತೆಯಲ್ಲಿ
ನಂಬಿಕೆಯಿಟ್ಟವರು, ಆದರೆ ವಿವಿಧ ಭಕ್ತಿ ಪಂಥಗಳಲ್ಲಿ ಈ ವಿಷಯದ ಅಲ್ಪ ಭೇದಗಳುಂಟು. 5. ಉತ್ತರ ಹಾಗೂ
ದಕ್ಷಿಣ ಭಾರತದ ಭಕ್ತಿ ಚಳವಳಿಯ ಸಂತರ ಜ್ಞಾನವು ಭಕ್ತಿಯ ಭಾಗ; ಅದನ್ನು ಗುರುವಿನ ಮೂಲಕ ಪಡೆಯಬೇಕು,
ಹೀಗಾಗಿ ಗುರುಸೇವೆಗೆ ಪ್ರಾಧಾನ್ಯ. 6. ಭಕ್ತಿ ಚಳವಳಿಯು ಸಮಾನತೆಯ ನೆಲೆಗಟ್ಟಿನ ಮೇಲೆ ನಿಂತದ್ದು;
ಹೀಗಾಗಿ ಜಾತಿ-ಮತ ಭೇದಗಳನ್ನು ತಿರಸ್ಕರಿಸುವಂಥದು; ಭಕ್ತ ಸಂತರು ಸಾಮಾಜಿಕ ಐಕ್ಯದ ಪ್ರತಿಪಾದಕರು;
ಹೀಗಾಗಿ ಅದರಲ್ಲಿ ಕೆಳವರ್ಗದವರಿಗೆ, ದಲಿತರಿಗೆ ಅವಕಾಶವಿರುತ್ತದೆ. 7 ಭಕ್ತಿ ಚಳವಳಿಯು ಪುರೋಹಿತಶಾಹಿಯನ್ನೂ
ನಿರಾಕರಿಸುತ್ತದೆ, ಭಕ್ತಿ ಮತ್ತು ಸ್ವಪ್ರಯತ್ನಗಳಿಂದ ದೇವರನ್ನು ಕಾಣಬಹುದೆಂಬುದು ಅವರ ಪ್ರತಿಪಾದನೆ.
ಹೀಗಾಗಿ ಇಲ್ಲಿ ಯಜ್ಞಯಾಗಾದಿಗಳಿಗೂ ಧಾರ್ಮಿಕ ಆಚರಣೆಗಳಿಗೂ ಅವಕಾಶವಿಲ್ಲ. 8. ಭಕ್ತ ಸಂತರು ಜನತೆಯ
ನುಡಿಯ ಮೂಲಕ ತಮ್ಮ ಬೋಧನೆಗಳನ್ನು ಪ್ರಚಾರ ಮಾಡಿದರು; ಈ ಮೂಲಕ ಜನಭಾಷೆಗಳಿಗೆ ಅಪಾರ ಕೊಡುಗೆಯನ್ನು
ಕೊಟ್ಟರು. ಇವುಗಳ ಜೊತೆಗೆ ಅವರು ಮಹತ್ವದ ಒಂದು ಅಂಶವನ್ನು ಮುಂದಿಡುತ್ತಾರೆ. ಭಕ್ತಿ ಚಳವಳಿಯ ಮೂಲೋದ್ದೇಶಗಳು
ಎರಡು: ಒಂದು, ಇಸ್ಲಾಮಿಕ್ ಆಕ್ರಮಣವನ್ನು ಎದುರಿಸಿ ಮತಾಂತರವನ್ನು ತಡೆಗಟ್ಟುವುದು; ಹಾಗೂ ಎರಡು, ಹಿಂದೂ-ಮುಸ್ಲಿಮರಲ್ಲಿ
ಸಾಮರಸ್ಯವನ್ನು ಸಾಧಿಸುವುದು.
ಸಂಗ್ರಹವಾಗಿ ಹೇಳಬಹುದಾದರೆ, ಭಕ್ತಿ ಚಳವಳಿ ಎನ್ನುವುದು ಭಕ್ತಿಯನ್ನೇ ಏಕೈಕ ಗುರಿಯಾಗಿ ಹೊಂದಿದ
ಆಂದೋಲನ. ಭಕ್ತಿ ಚಳವಳಿಯ ಮುಖ್ಯ ಆಶಯಗಳೆಂದರೆ ಭಕ್ತಿ ಮಾತ್ರವೇ ಮೋಕ್ಷಸಾಧನೆಗೆ ಸಹಾಯಕವಾದುದು, ಯಜ್ಞ-ಯಾಗಾದಿಗಳಲ್ಲ,
ಅರ್ಥಾತ್ ಕ್ರಿಯಾಮಾರ್ಗವಲ್ಲ ಅಥವಾ ಜ್ಞಾನಮಾರ್ಗವಲ್ಲ ಎಂಬ ನಂಬಿಕೆ (ಈ ರೀತಿಯಲ್ಲಿ ಅದು ವೈದಿಕ ಸಂಸ್ಕೃತಿಗೆ
ಪರೋಕ್ಷವಾಗಿ ಸೆಡ್ಡು ಹೊಡೆದುದು ನಿಜ). ಆಳ್ವಾರರು, ನಿಂಬಾರ್ಕ, ಕಬೀರ, ಚೈತನ್ಯ, ವಲ್ಲಭಾರ್ಯ, ಶಂಕರದೇವ
ಮುಂತಾದವರು ಭಕ್ತಿ ಚಳವಳಿಯ ಪ್ರತಿಪಾದಕರು. ಇವರೆಲ್ಲ ವೈದಿಕ ವ್ಯಾಪ್ತಿಯಲ್ಲಿಯೇ ಬಂದವರು; ಆದರೆ ಯಾರೂ
ವೈದಿಕವ್ಯವಸ್ಥೆಯ ವಿರುದ್ಧ ಸಂಘಟಿತ ಹೋರಾಟ ನಡೆಸಲಿಲ್ಲ. ಅಲ್ಲದೆ, ಈ ಚಳಿವಳಿಗಳಲ್ಲಿ ಮೊದಲು ಒಬ್ಬ
ತೋರಿಸಿದ ದಾರಿಯನ್ನು ಹಿಂಬಾಲಕರು ಅನುಸರಿಸಿದ ರೀತಿ ಕಂಡುಬರುತ್ತದೆ. ಕನ್ನಡ ನಾಡಿನಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳನ್ನು
ದ್ವೈತದ ಹಿನ್ನೆಲೆಯಲ್ಲಿ ಪ್ರತಿಪಾದಿಸಿದ ಹರಿದಾಸ ಆಂದೋಲನವೂ ಈ ಗುಂಪಿಗೇ ಸೇರುತ್ತದೆ. ಒಬ್ಬ ವ್ಯಕ್ತಿಯಿಂದ
ಆರಂಭಗೊಂಡು ವಿವಿಧ ಜನಗಳನ್ನು ತನ್ನ ವಲಯದಲ್ಲಿ ಒಳಗೊಳ್ಳುತ್ತ ಹೋಗುವುದು ಭಕ್ತಿ ಚಳವಳಿಯ ಸ್ವರೂಪ.
ದಕ್ಷಿಣದಲ್ಲಿ ಆಳ್ವಾರರು ಮತ್ತು ಹರಿದಾಸರು ಇದನ್ನು ಮುನ್ನಡೆಸಿದವರು. ಆಳ್ವಾರರು ರಾಮಾನುಜ ಪರಂಪರೆಯವರಾದರೆ,
ಹರಿದಾಸರು ಮಧ್ವಾಚಾರ್ಯ ಪರಂಪರೆಯವರು.. ಭಕ್ತಿಯಲ್ಲಿ ಮುಖ್ಯ ಮನೋಭಾವವೆಂದರೆ ಶರಣಾಗತಿ, ತನ್ನ ವೈಯಕ್ತಿಕತೆಯನ್ನು
ನೀಗಿಕೊಳ್ಳುವುದು, ತಾನು ದೇವರ ಭಾಗವೆಂಬ ಭಾವನೆಯನ್ನು ತಾಳಿ ಅವನೊಡನೆ ಬೆರೆಯುವ ಗುರಿ ಉಳ್ಳದ್ದು.
ಅಲ್ಲಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯೇನೂ ಇರುವುದಿಲ್ಲ. ಇದ್ದರೂ ಭಕ್ತಿನೆಲೆಯಲ್ಲಿ ತಾರತಮ್ಯ
ಮಾಡದಿರುವಂಥದೇ ಹೊರತು ಸಾಮಾಜಿಕ ಆಂದೋಲನವಾಗಿ ಅದು ರೂಪುಗೊಳ್ಳುವುದಿಲ್ಲ. ಸಾಮಾಜಿಕ ಕಟ್ಟುಪಾಡುಗಳ
ಬಗ್ಗೆ ಅವಜ್ಞೆಯಿರಬಹುದಾದರೂ ಅದು ವ್ಯಕ್ತಿನೆಲೆಯಲ್ಲಿಯೇ ಹೊರತು ಹೋರಾಟದ ನೆಲೆಯಲ್ಲಲ್ಲ. ಮುಖ್ಯ ಹರಿದಾಸರಲ್ಲಿ
ಒಬ್ಬನಾದ ಕನಕದಾಸ ವ್ಯವಸ್ಥೆಯ ವಿರುದ್ಧ ಅಸಮಾಧಾನ ತಾಳಿದ್ದಿರಬಹುದು, ಆದರೆ ಅದರ ಅಭಿವ್ಯಕ್ತಿ ಹೋರಾಟ
ರೂಪದಲ್ಲಿ ನಡೆಯದೆ, ಒಂದು ನೆಲೆಯಲ್ಲಿ ಕೀರ್ತನೆಗಳಲ್ಲಿ ಕುಲನಿರಾಕರಣೆಯ ಮೂಲಕವಾಗಿಯೂ, ಮತ್ತೊಂದರಲ್ಲಿ
– ‘ರಾಮಧಾನ್ಯಚರಿತೆಯಲ್ಲಿ
- ರೂಪಕಾತ್ಮಕವಾಗಿ ಜಾತಿ ತಾರತಮ್ಯವನ್ನು ಅಲ್ಲಗಳೆಯುವುದರ ಮೂಲಕವೂ ನಡೆಯಿತೆಂಬುದು ಸರ್ವವಿದಿತ. ಅಲ್ಲಿ
ವ್ಯಕ್ತಿ ನೆಲೆಯ ಮೋಕ್ಷ ಸಂಪಾದನೆ ಮುಖ್ಯವೇ ಹೊರತು ಸಮುದಾಯ ಸುಧಾರಣೆ ಅಲ್ಲ.
ಈ ಸಂಕ್ಷಿಪ್ತ ಹಿನ್ನೆಲೆಯಲ್ಲಿ
ಪರಿಭಾವಿಸಿದರೆ, ವಚನ ಚಳವಳಿಯು ಇತರವುಗಳೊಡನೆ ಸಮೀಕರಿಸಬಹುದಾದ ಭಕ್ತಿ ಚಳವಳಿಯಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಅದರದ್ದು ಸಾರಾಸಗಟಾದ ವೈದಿಕ ಸಂಸ್ಕೃತಿಯ ನಿರಾಕರಣೆ ಮಾತ್ರವಲ್ಲ, ಅದರ ವಿರುದ್ಧದ ಹೋರಾಟ. ಕ್ರಿಸ್ತಪೂರ್ವದಲ್ಲಿ
ನಡೆದ ಜೈನ-ಬೌದ್ಧಗಳಂತೆ ಅದರದ್ದೂ ವೈದಿಕದ ವರ್ಣ-ಜಾತಿ-ಲಿಂಗಗಳ ನಡುವಣ ತಾರತಮ್ಯ ಧೋರಣೆಯ ತಿರಸ್ಕಾರ.
ಅಷ್ಟೇ ಅಲ್ಲ, ವೈದಿಕದ ಸಕಲ ಪರಿಕಲ್ಪನೆ-ಆಚರಣೆಗಳನ್ನು lock, stock,
barrell ಆಗಿ ತಿರಸ್ಕರಿಸುವ ದಿಟ್ಟತನ, ಗಟ್ಟಿತನ
ಅದರದ್ದು. ಬಸವಣ್ಣನಂತಹ ವಚನಕಾರರು ವೈದಿಕದ ಮೂಲ ಮತ್ತು ಮುಖ್ಯ ಪ್ರಕ್ರಿಯೆಯಾದ ಯಜ್ಞವನ್ನು ಸಾಮಾಜಿಕ
ಹಿಂಸೆಯ ಪ್ರತಿಮೆಯಾಗಿ ಬಳಸಿದರು. ಅನೇಕ ಕಡೆಗಳಲ್ಲಿ ಯಜ್ಞಗಳ ಬಗೆಗಿನ ವಚನಕಾರರ ಆಕ್ರೋಶ ಭುಗಿಲೆದ್ದಿರುವುದನ್ನು
ಕಾಣಬಹುದು. ಹಾಗೆಯೇ ಯಜ್ಞ ನಡೆಸಲು ಅರ್ಹತೆಯನ್ನು ಪಡೆದ ದ್ವಿಜತ್ವವನ್ನು ಖಂಡಿಸಿದರು; ಅದರಲ್ಲೂ ಶ್ರೇಷ್ಠನೆನಿಸಿದ್ದ
ಬ್ರಾಹ್ಮಣನನ್ನು ಕಟುಮಾತುಗಳಿಂದ ಟೀಕಿಸಿದರು: ವೇದಗಳ ಬಗ್ಗೆಯೂ ಅವರದ್ದು ತೀಕ್ಷ್ಣ ಟೀಕಾಪ್ರಹಾರ.
ವೈದಿಕ ಧರ್ಮಗ್ರಂಥಗಳನ್ನೆಲ್ಲ ಲೇವಡಿ ಮಾಡಿದರು: ಮೂರ್ತಿಪೂಜೆ-ದೇವಸ್ಥಾನ ಪದ್ಧತಿಗಳನ್ನು ಖಂಡಿಸಿದರು:
ವೈದಿಕ ಸಾಮಾಜಿಕ ನೆಲೆಯಾದ
ವರ್ಣ-ಜಾತಿವ್ಯವಸ್ಥೆಯ ವಿರುದ್ಧ ವಚನಕಾರರದು ಹರಿಹಾಯ್ದರು. 'ಚತುರ್ವರ್ಣಾತೀತನೇ ವೀರಶೈವ ನೋಡಾ' ಎಂಬ
ಸಿದ್ಧರಾಮನ ಮಾತು ಈ ವಿರೋಧವನ್ನು ಮಂಡಿಸುವುದರೊಂದಿಗೆ ವಚನ ಚಳವಳಿಯ ಭಾಗಿಗಳು ವೈದಿಕ ವಲಯವನ್ನು ಮೀರಿದವರು
ಎಂಬುದನ್ನು ಧ್ವನಿಸುತ್ತದೆ. ಅಂತೆಯೇ ಸಾಧನೆಗೆ ಲಿಂಗತಾರತಮ್ಯವಿಲ್ಲವೆಂಬುದನ್ನು ಸಾರಿದರು. ವೈದಿಕ
ಭಾಷೆಯಾದ ಸಂಸ್ಕೃತವೇ ಶೂದ್ರರನ್ನೂ ಸ್ತ್ರೀಯರನ್ನೂ ದೂರವಿರಿಸುವ ಸಾಧನ. ಸಂಸ್ಕೃತ ಕಲಿತವರಿಗೆ ಮಾತ್ರ
ಯಜ್ಞಯಾಗಗಳ ಅಧಿಕಾರ, ಈ ಜ್ಞಾನವಿಲ್ಲದ ಅದ್ವಿಜರಿಗಲ್ಲ; ಹೀಗಾಗಿ ಅವರಾರಿಗೂ ಮೋಕ್ಷವಿಲ್ಲವೆಂದು ಹೇಳಿತು.
ವಚನಕಾರರು ಈ ಸಂಸ್ಕೃತವನ್ನೇ ತಿರಸ್ಕರಿಸಿದರು. ಸ್ಥಾವರ-ಜಂಗಮ ಪರಿಕಲ್ಪನೆಯಲ್ಲಿ ಸ್ಪಂದನೆಯಿಲ್ಲದ
ಸಂಸ್ಕೃತ ಹಾಗೂ ಜನಮನದ ನುಡಿಯಾದ ಕನ್ನಡಗಳೂ ಒಳಗೊಳ್ಳುತ್ತವೆ. ನಗೆಯ ಮಾರಿತಂದೆ 'ಸಂಸ್ಕೃತ ಪಸರ'ವನ್ನು
ಉಲ್ಲೇಖಿಸುತ್ತಾನೆ; ಅದು ಜನಗಳನ್ನು ವಂಚಿಸುವ ನುಡಿಗಾರಿಕೆಯುಳ್ಳದು ಎಂದು ಲೇವಡಿಮಾಡುತ್ತಾನೆ.
ಒಟ್ಟಾರೆ, ವಚನ ಚಳವಳಿಯ
ನಿಲವು ಸಂಪೂರ್ಣವಾಗಿ ವೈದಿಕವಿರೋಧೀ ನಿಲವು. ಇದು ಅಲ್ಲಮನ ಒಂದು ವಚನದಲ್ಲಿ ಅದ್ಭುತವಾಗಿ ವ್ಯಕ್ತವಾಗಿದೆ:
ವೇದಂಗಳೆಂಬವು ಬ್ರಹ್ಮನ ಬೂತಾಟ,
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ,
ಆಗಮಂಗಳೆಂಬವು ಋಷಿಯ ಮರುಳಾಟ,
ಪುರಾಣಂಗಳೆಂಬವು ಪೂರ್ವದವರ ಗೊಡ್ಡಾಟ,
ಇಂತಿವನು ಅರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೇ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು
ಈ ವಚನವು ವೈದಿಕ ಧರ್ಮಗ್ರಂಥಗಳನ್ನು ನಿರಾಕರಿಸುವುದು
ಮಾತ್ರವಲ್ಲದೆ, ಅವುಗಳ ರಚನೆಯ ಹಿಂದಿರುವ ಮನಸ್ಸುಗಳನ್ನೂ ನಿರಾಕರಿಸುತ್ತಿದೆ. ಬ್ರಹ್ಮ, ಸರಸ್ವತಿ,
ಋಷಿ – ಇತ್ಯಾದಿ ಪರಿಕಲ್ಪನೆಗಳನ್ನೂ
ನಿರಾಕರಿಸುತ್ತದೆ. ಮುಖ್ಯವಾಗಿ ಕೊನೆಯ ಎರಡು ಸಾಲುಗಳನ್ನು ಗಮನಿಸಿ: ವೇದ ಶಾಸ್ತ್ರ ಆಗಮ ಪುರಾಣಗಳನ್ನು
ಅರಿತವನನ್ನು 'ನೇತಿಗಳೆ'ದಾಗ ಮಾತ್ರವೇ 'ನಿಜ'ದಲ್ಲಿ ನಿಲ್ಲಲು ಸಾಧ್ಯ; ಅಂತಹವನು ಮಾತ್ರ 'ಅಚ್ಚಲಿಂಗೈಕ್ಯ'ನಾಗಬಲ್ಲ.
ವೈದಿಕ ಗುಂಗಿನಿಂದ ಸಂಪೂರ್ಣವಾಗಿ ಹೊರಬಂದಾಗ ಮಾತ್ರವೇ ಶರಣನಿಗೆ ಸರಿದಾರಿ ಕಾಣುವುದು. "ಕನ್ನಡದ
ಬಳಕೆ, ಸ್ಥಾವರಲಿಂಗ ನಿಷೇಧ, ವೇದಪುರಾಣಗಳ ನಿಂದೆ – ಇವೆಲ್ಲವನ್ನೂ ಶಿಷ್ಟೀಕರಣ
ವಿಧಾನ ನಿಲ್ಲಿಸುವುದಕ್ಕಾಗಿ ಮಾಡಿದ Symbolic Gesture ಎಂದು ತಿಳಿದುಕೊಳ್ಳಬೇಕೇ
ಹೊರತು ಶಿವಶರಣರಲ್ಲಿ ಸಂಸ್ಕೃತದ ಬಗ್ಗೆ ತಿರಸ್ಕಾರ, ಸ್ಥಾವರಲಿಂಗವನ್ನು ಅವಮಾನಗೊಳಿಸುವ ಉದ್ದೇಶ,
ವೇದಶತ್ರುತ್ವ ಇತ್ತೆಂದು ತಿಳಿಯಬಾರದು" ಎಂಬ ಶಂಕರ ಮೊಕಾಶಿ ಪುಣೇಕರರ ತಿಪ್ಪೆ ಸಾರಿಸುವ ಮಾತನ್ನು
ನಾನು ಒಪ್ಪುವುದಿಲ್ಲ. ವಚನಕಾರರ ಉದ್ದೇಶ ವೈದಿಕಕ್ಕೆ ಪರ್ಯಾಯವಾದ ವ್ಯವಸ್ಥೆಯನ್ನು ನೆಲೆಗೊಳಿಸುವುದೇ
ಆಗಿತ್ತು.
ಜೈನ-ಬೌಧ್ಧಗಳು
ವೈದಿಕದ ವರ್ಣತಾರತಮ್ಯ, ಆಶ್ರಮಪದ್ಧತಿ, ಯಜ್ಞಯಾಗಾದಿಗಳು ಮುಂತಾದವುಗಳ ವಿರುದ್ಧ ಹಿಂದೆಯೇ ರಣಕಹಳೆಯನ್ನೂದಿದ್ದವು. ಜೈನ-ಬೌಧ್ಧಗಳು
ಧಾರ್ಮಿಕ ಚಳವಳಿಗಳಾದರೂ ನಿರೀಶ್ವರ ಮಾರ್ಗವನ್ನು ಬೋಧಿಸುವುದರ ಮೂಲಕವೇ ವೈದಿಕ ಪಾರಮ್ಯವನ್ನು ಪ್ರಶ್ನಿಸಿದ್ದವು.
ಯಾಕಂದರೆ ವೈದಿಕದ ಪ್ರಕಾರ ಮೋಕ್ಷಸಿದ್ಧಿ ಯಜ್ಞಗಳ ಮೂಲಕ ಮಾತ್ರವೇ ಆಗುವಂಥದು; ಯಜ್ಞದಲ್ಲಿ ಭಾಗಿಯಾಗಲು
ಶೂದ್ರನಿಗೆ ಅವಕಾಶವಿಲ್ಲ; ಹೀಗಾಗಿ ಮೋಕ್ಷಕ್ಕೆ ದ್ವಿಜರು ಮಾತ್ರವೇ ಅರ್ಹರು ಎಂಬ ನಿಲವನ್ನವು ಖಂಡಿಸಿದುವು.
ಆದರೆ ಜೈನ-ಬೌದ್ಧಗಳಲ್ಲಿ ಭಕ್ತಿಗೆ ಅವಕಾಶವಿಲ್ಲ; ಯಾಕಂದರೆ ಭಕ್ತಿಯ ಮೂಲಕ ಒಲಿಸಿಕೊಳ್ಳಬೇಕಾದ ಹಾಗೂ
ಕಾಣಬೇಕಾದ ದೇವರ ಕಲ್ಪನೆಯನ್ನು ಎರಡೂ ಅಲ್ಲಗಳೆದವು. ಬೌದ್ಧದಲ್ಲಿ ಬುದ್ಧಿಗೆ ಪ್ರಾಧಾನ್ಯ, ಪ್ರತಿಯೊಂದನ್ನೂ
ಬೌದ್ಧಿಕ ವಿಶ್ಲೇಷಣೆಗೆ ಒಳಪಡಿಸಿ ಸೂಕ್ತವಾದುದನ್ನು ಸ್ವೀಕರಿಸುವ ಮಾರ್ಗವನ್ನು ಬುದ್ಧ ಬೋಧಿಸಿದ.
ಹಾಗೆಯೇ ತೀರ್ಥಂಕರತ್ವವೇ ಜೈನದ ಪರಮೋದ್ದೇಶ. ಬೌದ್ಧಿಕತೆಯ ಮೂಲಕ ಬುದ್ಧನಾಗುವುದು ಒಂದರಲ್ಲಿ ಸಾಧ್ಯವಾದರೆ,
ವ್ಯಕ್ತಿವಿಕಾಸದಿಂದ ತೀರ್ಥಂಕರತ್ವ ಮತ್ತೊಂದರಲ್ಲಿ ಸಾಧ್ಯ.
ಆದರೆ
ವೈದಿಕದ ಪ್ರಾಬಲ್ಯ ಅನತಿ ಕಾಲದಲ್ಲಿಯೇ ಹೇಗೆ ಮರುಕಳಿಸಿತೆಂದರೆ ಬೌದ್ಧ ಬಹುತೇಕ ಕಣ್ಮರೆಯಾಯಿತು,.
ಮತ್ತು ಜೈನ ಉಳಿದುಕೊಳ್ಳಲು ವೈದಿಕದ ದಟ್ಟ ಪ್ರಭಾವಕ್ಕೆ ಒಳಗಾಗಬೇಕಾಯಿತು. ಪ್ರಾಯಶಃ ಏಳನೇ ಶತಮಾನದಲ್ಲಿದ್ದಿರಬಹುದಾದ
ಶಂಕರಾಚಾರ್ಯ ಮೊತ್ತ ಮೊದಲ ಬಾರಿಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ವೈದಿಕ ಮಠಗಳನ್ನು ಸ್ಥಾಪಿಸುವುದರ
ಮೂಲಕ ವೈದಿಕವನ್ನು ವ್ಯವಸ್ಥಿತ ಸಾಂಸ್ಥಿಕತೆಗೆ ಅಳವಡಿಸಿದಂತೆ ಕಾಣುತ್ತದೆ. ಹೀಗಾಗಿ ಯೋಜಿತ ರೂಪದ
ಸಂಘಟನೆ ಸಾಧ್ಯವಾಗಿ ತನ್ನ ವಿರುದ್ಧ ಎಂತಹ ಚಳವಳಿ ಬಂದರೂ ಅದನ್ನು ಕಬಳಿಸುವಷ್ಟರ ಮಟ್ಟಿಗೆ ವೈದಿಕಕ್ಕೆ
ಕಬಂದತ್ವ ಪ್ರಾಪ್ತವಾಯಿತು. ವೈದಿಕವನ್ನು ತೀವ್ರವಾಗಿ
ವಿರೋಧಿಸಿದ ಕಾರಣದಿಂದಾಗಿ ಬೌದ್ಧವು ಕಾಲ್ತೆಗೆಯಬೇಕಾಯಿತು; ಆದರೆ ರಾಜಿಯಾಗಿ ಅಲ್ಲಿನ ಪೌರಾಣಿಕತೆ,
ಮೂರ್ತಿಪೂಜೆ, ಧಾರ್ಮಿಕಾಚರಣೆ, ವರ್ಣವ್ಯವಸ್ಥೆ ಮುಂತಾದವುಗಳನ್ನು
ಅನುಸರಿಸಿದ ಜೈನ ಉಳಿದುಕೊಂಡಿತು. ಮುಂದೆಯೂ ಅದು ವೈದಿಕ ಪ್ರಭಾವಕ್ಕೆ ಒಳಗಾಗುತ್ತಲೇ ಹೋಯಿತು. ಪಂಪನ
'ಆದಿಪುರಾಣ'ದಲ್ಲಿ ಎರಡು ಪ್ರಸಂಗಗಳಿವೆ: ಒಂದು ಆದಿದೇವನು "ಅಖಿಳಕ್ಷತ್ರಿಯಸಮೂಹಕ್ಕೆ ಶಸ್ತ್ರಕರ್ಮಮುಮಂ,
ವಣಿಗ್ವಂಶಕ್ಕೆ ಪಾಶುಪಾಲಕೃಷಿ ಪಣ್ಯಕರ್ಮಂಗಳುಮಂ ಮತ್ತಂ ಸ್ಪೃಶ್ಯಾಸ್ಪೃಶ್ಯಕಾರುಗಳುಮೆಂದಿರ್ತೆರದ
ಶೂದ್ರಸಂತತಿಗೆ ಶುಶ್ರೂಷಾನಿಯೋಗಂಗಳುಮಂ ಯಥಾಯೋಗ್ಯಮುಪದೇಶಂಗೆಯ್ದು ವರ್ಣಸಂಕರಮಾಗಲೀಯದೆ ತಮ್ಮ ತಮ್ಮ
ಜಾತಿಗಳೊಳ್ ನಣ್ಪುಮಂ ಕೊಳ್ಕೊಡೆಯುಮಂ" ನಿಯೋಜಿಸಿದ ಸನ್ನಿವೇಶ. ಜೈನದಲ್ಲಿ ಆರಂಭದಲ್ಲಿ ಒಪ್ಪಿಕೊಂಡದ್ದು
ಮೂರುವರ್ಣಗಳನ್ನು; ಅಲ್ಲಿ ಬ್ರಾಹ್ಮಣನಿಗೆ ಅವಕಾಶವಿಲ್ಲ. ಇನ್ನೊಂದು, ಅಂದರೆ ಬ್ರಾಹ್ಮಣ ವರ್ಣವು,
ಮುಂದೆ ಅವನ ಮಗನಾದ ಭರತನು ಸೂಕ್ಷ್ಮಮನಸ್ಸು ಹಾಗೂ ವಿವೇಚನೆಗಳನ್ನು ತೋರಿಸಿದ ಕೆಲವರನ್ನು "ಮೆಚ್ಚಿ
ದಾನಸನ್ಮಾನಯೋಗ್ಯರಪ್ಪರೆಂದು ಪದ್ಮನಿಧಿಯಂ ತರಿಸಿ ತಪನೀಯಸೂತ್ರದೊಳೇಕಾದಶೋತ್ತರ ದಶಾಂತಂಬರಂ ಅವರವರ
ನೆಲೆಗಳೊಳ್ ಬ್ರಹ್ಮಸೂತ್ರಾಭಿಧಾನ ಯಜ್ಞೋಪವೀತದಿಂ ಪವಿತ್ರಗಾರ್ತರ್ಮಾಡಿ" ಅವರಿಗೆ ಆರು ಆರ್ಯ
ಷಟ್ಕರ್ಮಗಳನ್ನು ನಿಗದಿಪಡಿಸಿದನಂತೆ. ಹೀಗೆ ಬ್ರಾಹಣವೂ ಸೇರಿ ವೈದಿಕದಲ್ಲಿದ್ದಂತೆ ಚಾತುರ್ವರ್ಣ್ಯ
ಅಲ್ಲಿಯೂ ಕಾಲಿಟ್ಟಿತು. ಅಂದರೆ ಮೂಲದಲ್ಲಿ ತಾನು ವಿರೋಧಿಸಿದ್ದ ವರ್ಣವ್ಯವಸ್ಥೆಯನ್ನು ಜೈನವು ಮತ್ತೆ
ಸ್ವೀಕರಿಸಿತು, ವರ್ಣಸಂಕರವನ್ನು ನಿಷೇಧಿಸಿತು; ಅಸ್ಪೃಶ್ಯತೆಗೂ ಅವಕಾಶವುಂಟಾಯಿತು.
ಯಾವ
ಶರಣನೂ ಭಕ್ತಿಯ ದಾಸನಾಗಲಿಲ್ಲ. ಭಕ್ತಿ ಎಂಬುದನ್ನು ಬಸವಣ್ಣ ಗರಗಸಕ್ಕೆ ಹೋಲಿಸುವನಾದರೂ ಸದಾ ಧ್ಯಾನದಲ್ಲಿ
ಯಾವ ಶರಣನೂ ನಿರತನಾಗಲಿಲ್ಲ. ವಚನ ಚಳವಳಿಯ ಮುಖ್ಯ ನೆಲೆ ಕಾಯಕ. ಬಹುತೇಕ ವಚನಕಾರರ ಹೆಸರಿನ ಹಿಂದೆ
ಸೂಚಿತವಾದ ವಿಶೇಷಣಗಳೆಲ್ಲ ಕಾಯಕಸೂಚಿಗಳು. ವಚನ ಚಳವಳಿಯ ಮೌಲ್ಯಗಳ ಕ್ರೋಡೀಕರಣಗೊಳಿಸಿದ 'ಶೂನ್ಯಸಂಪಾದನೆ'ಯ
ಎರಡು ಮುಖ್ಯ ಪ್ರಸಂಗಗಳನ್ನು ಉಲ್ಲೇಖಿಸುತ್ತೇನೆ: 'ಕಾಯಕದಲ್ಲಿ ನಿರತನಾದಡೆ ಗುರುದರುಶನವಾದಡೂ ಮರೆಯಬೇಕು,
ಲಿಂಗಪೂಜೆಯಾದರೂ ಮರೆಯಬೇಕು" ಎಂಬ ನಿಲವಿನ ಆಯ್ದಕ್ಕಿ ಮಾರಯ್ಯನೇ ಅಲ್ಲಮನೊಡನೆ ಚರ್ಚೆಗೆ ನಿಂತು
"ನಿಮ್ಮ ಸಂಗದಿಂದ ಘನಲಿಂಗದಲ್ಲಿ ಮನಮಗ್ನವಾಯಿತ್ತು" ಎಂದು ಪ್ರಭುವಿಗೆ ಬಿನ್ನೈಸುವ ಸಂದರ್ಭದಲ್ಲಿ
ಆಯ್ದಕ್ಕಿ ಲಕ್ಕಮ್ಮ "ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೇ' ಎನ್ನುವ ಪ್ರಸಂಗ ಒಂದಾದರೆ;
ಕಾಯಕನಿರತನಾಗಿದ್ದ ನುಲಿಯ ಚಂದಯ್ಯನನ್ನು ಪರೀಕ್ಷಿಸಲು ಇಷ್ಟಲಿಂಗ ಸರಿದು ನೀರಲ್ಲಿ ಬಿದ್ದಾಗ ಚಂದಯ್ಯ
ಅದನ್ನು ಗಮನಿಸದೇ ಕಾಯಕದಲ್ಲಿ ತೊಡಗಿರಲು, "ಪುರುಷಾಕಾರಮಂ ತಳೆದು" "ನಾನು ಬಂದೆನು
ಬಿಟ್ಟು ಹೋಗದಿರಯ್ಯಾ" ಎಂದು ಬೇಡಿಕೊಂಡಾಗ ಅದನ್ನವನು ನಿರಾಕರಿಸುವ ಪ್ರಸಂಗ ಇನ್ನೊಂದು. ಇಡೀ
'ಶೂನ್ಯಸಂಪಾದನೆ'ಯ ಕೇಂದ್ರದಲ್ಲಿರುವುದು ಕಾಯಕ-ದಾಸೋಹಗಳ ಚರ್ಚೆ. ಆಯ್ದಕ್ಕಿ ಮಾರಯ್ಯಗಳ ಸಂಪಾದನೆ,
ಮೋಳಿಗಯ್ಯಗಳ ಸಂಪಾದನೆ ಮತ್ತು ನುಲಿಯ ಚಂದಯ್ಯಗಳ ಸಂಪಾದನೆ ಭಾಗಗಳಲ್ಲಿ ಕಾಯಕದ ವಿವಿಧ ಅಂಶಗಳು - ಕಾಯಕಪ್ರಜ್ಞೆ,
ಕಾಯಕನಿರತತೆ ಮತ್ತು ದುಡಿಮೆಗೆ ತಕ್ಕಷ್ಟೇ ಪ್ರತಿಫಲ – ಇವುಗಳು ಪ್ರತಿಪಾದಿತವಾಗಿದ್ದರೆ,
ಪ್ರಭುದೇವರ ಆರೋಗಣೆಯ ಪ್ರಸಂಗದಲ್ಲಿ ದಾಸೋಹದ ರೀತಿಯು ಚರ್ಚಿತವಾಗಿದೆ. ಕಾಯಕ-ದಾಸೋಹ ಒಂದೇ ನಾಣ್ಯದ
ಎರಡು ಮುಖಗಳು. ವಚನಕಾರರು ಕಾಯಕಕ್ಕೆ ಎಷ್ಟು ಮಹತಿಯನ್ನಿತ್ತರೆಂಬುದಕ್ಕೆ ಬಹುತೇಕ ವಚನಕಾರರು ಆಧ್ಯಾತ್ಮಿಕ ಸಾಧನೆಯನ್ನು ತಮ್ಮ ಕಾಯಕವಿವರಣೆಯ ರೂಪಕದಲ್ಲಿ ನಿರೂಪಿಸುತ್ತಾರೆಂಬುದೇ
ನಿದರ್ಶನ. ವಚನಕಾರರ ದೃಷ್ಟಿಯಲ್ಲಿ ದೇವರನ್ನೊಲಿಸಲು ಬೇಕಾದದ್ದು ಭಕ್ತಿಗಿಂತ ಹೆಚ್ಚಾಗಿ ಕಾಯಕನಿಷ್ಠೆ.
ಕುಂಬಾರ ಗುಂಡಯ್ಯನ ಕಾಯಕತಾದಾತ್ಮ್ಯ ಶಿವನನ್ನೇ ಕುಣಿಸುವಂತಹುದು. ಹೊರನೋಟಕ್ಕೆ ವಚನಕಾರರು ಶಿವನೊಬ್ಬನನ್ನೇ
ದೇವರೆಂದು ಪ್ರತಿಪಾದಿಸುವಂತೆ ಕಂಡರೂ, ಆ ಶಿವನ ಸ್ವರೂಪ
ಒಂದೇ ಅಲ್ಲ; ಎಷ್ಟು ಮಂದಿ ಭಕ್ತರು ಕಟ್ಟಿಕೊಂಡ ಅಷ್ಟೂ ಸಂಖ್ಯೆಯಲ್ಲಿ ಶಿವನಿರುತ್ತಾನೆ.. ಇಷ್ಟಲಿಂಗ
ಒಂದು ಕುರುಹು ಅಷ್ಟೆ, ಅದನ್ನು ಧರಿಸಿದವನ ಪರಿಕಲ್ಪನೆಯ ಶಿವನ ಸಂಕೇತ ಅದು. ಹೀಗಾಗಿ ಶಿವ ಸಾಕಾರವಲ್ಲ,
ನಿರಾಕಾರ, ಪರಿಕಲ್ಪನಾತ್ಮಕ, ವ್ಯಕ್ತಿವಿಶಿಷ್ಟ.
ಭಕ್ತಿ
ಎಂಥವನನ್ನೂ ಮಿದುವಾಗಿಸುವಂಥದು; ತನ್ನ ಪರಿಮಿತಿಯ ಅರಿವು ಈ ಸ್ಥಿತಿಯಲ್ಲಿ ಚೇತನವು ಜಾಗೃತವಾಗಿ ಅದಕ್ಕೆ
ಕಾರಣವಾದ ಶಕ್ತಿಯ ಎದುರು ತನ್ನೆಲ್ಲ ವ್ಯಕ್ತಿವಿಶಿಷ್ಟತೆಯನ್ನು ಕಳೆದುಕೊಳ್ಳಲು ತವಕಿಸುತ್ತದೆ. ಹೀಗಾಗಿ
ಎಂಥವನಿಗೂ ಭಕ್ತಿಯ ನೆಲೆಯಲ್ಲಿ ಅಕ್ರೋಶ ತಣ್ಣಗಾಗುತ್ತದೆ. ಭಕ್ತಿ ಆಕ್ರೋಶವನ್ನು ಅಡಗಿಸುವ ನೀರೇ ಹೊರತು
ಉದ್ದೀಪಿಸುವ ಎಣ್ಣೆಯಲ್ಲ. ಕನಕದಾಸ, ತಿರುಪಾಣಿ ಮುಂತಾದವರ ಉದಾಹರಣೆಗಳಲ್ಲಿ ಆದುದೂ ಇದೇ. ಸಂಪ್ರದಾಯದ
ದೌರ್ಜನ್ಯವನ್ನು ಅವರು ಎದುರಿಸಿದ್ದು ಪ್ರತಿಭಟನೆಗಿಂತ ಹೆಚ್ಚಾಗಿ ಅದಕ್ಕೆ ಒಳಗಾಗುವುದರ ಮೂಲಕ. ಅದನ್ನು
ಪ್ರತಿಭಟನೆ ಎಂದು ನೀವು ಕರೆಯಬಹುದು, ಆದರೆ ಅದೊಂದು ಬಗೆಯ ನಿಷ್ಕ್ರಿಯ ಪ್ರತಿಭಟನೆ. ಆಳ್ವಾರರು ಕೆಳವರ್ಗದವರಾದರೂ
ಅವರು ವೈದಿಕತೆಯನ್ನು ತಿರಸ್ಕರಿಸಲಿಲ್ಲ. ಹರಿದಾಸರು ಹೇಳಿಕೇಳಿ ದ್ವೈತಿಗಳು; ನೂರಕ್ಕೆ ನೂರು ಸಗುಣೋಪಾಸಕರು.
ರಾಮಾನುಜ-ಮಧ್ವ ಇಬ್ಬರೂ ಉಪನಿಷತ್ತುಗಳು-ಬ್ರಹ್ಮಸೂತ್ರ-ಭಗವದ್ಗೀತೆಗಳ ಮೂಲ ತಾತ್ವಿಕತೆಯನ್ನು ಒಪ್ಪಿಯೇ
ವಿವಿಧ ದೃಷ್ಟಿಕೋನಗಳಿಂದ ಅವುಗಳಿಗೆ ಭಾಷ್ಯ ರಚಿಸಿದವರು.
ಆದರೆ ವಚನಕಾರರಲ್ಲಿ ಎಲ್ಲರೂ ವೈದಿಕ ವ್ಯವಸ್ಥೆಯ ವಿರುದ್ಧ ಉರಿದುಬಿದ್ದವರು. ರಾಮಾನುಜರು
ಕೆಳವರ್ಗದವರಿಗೆ ವೈಷ್ಣವ ದೀಕ್ಷೆಯನ್ನಿತ್ತರೇ ಹೊರತು ವೈದಿಕ ಶ್ರೇಣಿಕರಣದಲ್ಲಿ ಅವರ ಸಮಾನತೆಗಾಗಿಯೇನೂ
ಶ್ರಮಿಸಲಿಲ್ಲ; ಹಾಗೆ ಮಾಡಿದ್ದೂ ಕೆಳವರ್ಗದವರ ಮೇಲಿನ ಕರುಣೆಯಿಂದಲೇ ಹೊರತು ಸಾಮಾಜಿಕ ನ್ಯಾಯದ ದೃಷ್ಟಿಯಿಂದಲ್ಲ.
ಇನ್ನು, ದ್ವೈತವು 'ಪಂಚತಾರತಮ್ಯ'ಗಳನ್ನು ಆತ್ಯಂತಿಕವೆಂದು ನಂಬುವಂತಹುದು. ಮೂಲಭೂತ ಸಮಾನತೆ ಎಂಬ ಕಲ್ಪನೆಗೆ
ಅಲ್ಲಿ ಅವಕಾಶವೇ ಇಲ್ಲ; ಅದರದ್ದು ಮೂಲಭೂತ ಅಸಮಾನತೆಯ ನಿಲವು. ಅವರೆಲ್ಲ ಒಟ್ಟಾರೆ ಕರ್ಮಸಿದ್ಧಾಂತವನ್ನು
ನಂಬಿದವರು. ಹೆಣ್ಣುಗಂಡುಗಳ ತಾರತಮ್ಯವನ್ನು ಬಹುಮಟ್ಟಿಗೆ ಮೌನವಾಗಿ ಸ್ವೀಕರಿಸಿದವರು. ಆಂಡಾಳ್-ಮೀರ
ರಂತಹ ಒಂದಿಬ್ಬರನ್ನು ಬಿಟ್ಟರೆ ಹೆಣ್ಣುಗಳಿಗೆ ಸಮಾನ ಆಧ್ಯಾತ್ಮಿಕ ಅವಕಾಶವಿಲ್ಲ. ಮೊದಲ ಘಟ್ಟದ ಹರಿದಾಸರ
ಹರಿವಿನಲ್ಲಿ ಯಾವೊಬ್ಬ ಹೆಣ್ಣು ಕೀರ್ತನಕಾರ್ತಿಯೂ ಇಲ್ಲ.
ಭಕ್ತ
ಚಳವಳಿಯಲ್ಲಿ ಪಾಲುಗೊಂಡವರು ಭಕ್ತಿಯ ನೆಲೆಯಲ್ಲಿ ಎಲ್ಲರೂ ಸಮಾನರು ಎಂದು ಭಾವಿಸಿದವರೇ ಹೊರತು ವಾಸ್ತವ
ಬದುಕಿನ ತಾರತಮ್ಯಗಳ ವಿರುದ್ಧ ಸಿಡಿದೇಳಲಿಲ್ಲ. ಅವರೆಲ್ಲ ವ್ಯವಸ್ಥೆಯನ್ನು ಒಪ್ಪಿಕೊಂಡವರೇ; ವೇದಪಾರಮ್ಯವನ್ನು
ಸ್ವೀಕರಿಸಿದವರೇ. ಭಕ್ತಿಯ ಉತ್ತುಂಗದಲ್ಲಿ ವೈಚಾರಿಕತೆಗೆ ಸ್ಥಾನವಿಲ್ಲ; ಅಲ್ಲೇನಿದ್ದರೂ ಶರಣಾಗತಿ.
ಬುದ್ಧಿಯುಳ್ಳವರಿಗೆ ದೇವರನ್ನು ಕಾಣುವ ಮಾರ್ಗ ಜ್ಞಾನವಾದರೆ, ಸಾಮಾನ್ಯರ ಮಾರ್ಗ ಭಕ್ತಿ ಎಂಬುದು ಅವರು
ಒಪ್ಪಿದ್ದ ರೀತಿ. ಮಧ್ವರ ಪ್ರಕಾರ ಜ್ಞಾನ-ಭಕ್ತಿ ಎರಡೂ ಒಂದೇ; ಒಂದನ್ನೊಂದು ಬಲಪಡಿಸುವಂಥದು. ಜ್ಞಾನ
ಎಂದರೆ 'ಹರಿ ಸರ್ವೋತ್ತಮ' ಎಂಬ ತಿಲಿವಳಿಕೆ; ಭಕ್ತಿ ಎಂದರೆ ಅದನ್ನೇ ನಂಬಿ ಧ್ಯಾನಿಸುವುದು, ಆ ಜ್ಞಾನವನ್ನು
ಗಟ್ಟಿಗೊಳಿಸುವುದು. ಆದರೆ ವಚನಕಾರರ 'ಅರುಹು-ಕುರುಹು' ಪರಿಕಲ್ಪನೆ ಇದಕ್ಕೆ ಭಿನ್ನವಾದುದು. ಅರುಹನ್ನು
ನೆನಪಿಸುವುದು ಕುರುಹು, ಆದರೆ ತಾನೇ 'ಅದು' ಎಂದು ನಂಬುವುದು ಅರುಹು. ಬಹುತೇಕ ಭಕ್ತ ಸಂತರಲ್ಲಿ ನಿರ್ಗುಣೋಪಾಸಕರಿರಬಹುದಾದರೂ
ಬಹುತೇಕ ಮಂದಿ ಸಗುಣೋಪಾಸಕರು.
ಹರಿದಾಸರಂತಹ ಭಕ್ತಿ
ಪ್ರತಿಪಾದಕರು ಭಕ್ತಿ-ಜ್ಞಾನ-ವೈರಾಗ್ಯಗಳನ್ನು ಬೋಧಿಸಿದರೆ, ವಚನಕಾರರು ಪಾರಮಾರ್ಥಿಕತೆಗಾಗಿ ಐಹಿಕತೆಯ
ನಿರಾಕರಣೆ ಅನಿವಾರ್ಯ ಎಂದವರಲ್ಲ. ಹೆಣ್ಣು ಹೊನ್ನು ಮಣ್ಣು ಮಾಯೆಯಲ್ಲ; 'ಮನದ ಮುಂದಣ ಆಸೆಯೇ ಮಾಯೆ'
ಎಂದು ಅಲ್ಲಮ ಮಾತ್ರ ಹೇಳಲಿಲ್ಲ. ಭಕ್ತ ಈ ಮೂರನ್ನು
ಸರಿಯಾದ ಮಾರ್ಗದಲ್ಲಿ ಪಡೆದು ಸಂತೋಷಪಡುವುದು ತಪ್ಪಲ್ಲ ಎಂದು ಸಿದ್ಧರಾಮ ಪ್ರತಿಪಾದಿಸಿದ. ಉರಿಲಿಂಗಪೆದ್ದಿಯಂತೂ "ಹೆಣ್ಣನು ಹೆಣ್ಣಂದರಿವಿರಿ, ಹೊನ್ನನು ಹೊನ್ನೆಂದರಿವಿರಿ,
ಮಣ್ಣನು ಮಣ್ಣೆಂದರಿವಿರಿ. ಬ್ರಹ್ಮಚಾರಿಗಳೆಂತಪ್ಪಿರಣ್ಣಾ? ಬಿಟ್ಟಡೆ ಹೆಣ್ಣು ಹೊನ್ನು ಮಣ್ಣು ಈ ಮೂರನು
ಬಿಟ್ಟು ಜ್ಞಾನದಲ್ಲಿ ಸುಳಿಯಬಲ್ಲಡೆ, ಭವನಾಸ್ತಿ ತಪ್ಪದು. ಹಿಡಿದಡೆ ಹೆಣ್ಣು ಹೊನ್ನು ಮಣ್ಣು ಈ ಮೂರನೂ
ಹಿಡಿದು, ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ, ಭವಂ ನಾಸ್ತಿ ತಪ್ಪದು" ಎಂದ.
ಆಳ್ವಾರರ ನಾಲಾಯಿರ
ಪ್ರಬಂಧಗಳಂತೆ, ಹರಿದಾಸರ ಕೀರ್ತನೆಗಳಂತೆ ಶರಣರು ಶಿವನ
ಸ್ತುತಿಗಾಗಿಯೇ ತಮ್ಮ ವಚನಗಳನ್ನು ಮೀಸಲಿರಿಸಲಿಲ್ಲ; ಅವರಿಬ್ಬರದೂ ಛಂದೋಬದ್ಧವಾದ ರಚನೆಗಳು, ಹಾಡುವ
ಉದ್ದೇಶವನ್ನು ಹೊಂದಿದವು. ಆದರೆ ವಚನಗಳು 'ನಿಯತಿಕೃತ ನಿಯಮರಹಿತ'ವಾದವು. ವಚನಗಳಲ್ಲಿ ಭಕ್ತಿಗಿಂತ
ಭಕ್ತಿಯೇತರ ಭಾವನೆಗಳ ಅಭಿವ್ಯಕ್ತಿಗೇ ಹೆಚ್ಚಿನ ಜಾಗ ಮತ್ತು ಆದ್ಯತೆಗಳಿವೆ. "ತಾಳಮಾನ ಸರಿಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ, ಆನು
ಒಲಿದಂತೆ ಹಾಡುವೆ" ಎಂಬುದು ವಚನವಿನ್ಯಾಸದ ಮುಖ್ಯ ಲಕ್ಷಣ.
ವೈದಿಕವನ್ನು ಅದರಲ್ಲಿನ
ಅಸಮಾನತೆಗಾಗಿ ವಿರೋಧಿಸಿದ್ದು ಮಾತ್ರವಲ್ಲದೆ, ವಚನ ಚಳವಳಿಯು ಅದನ್ನು ತೊಡೆದು ಹಾಕಲು ಪರ್ಯಾಯಗಳನ್ನೂ
ಗುರುತಿಸಿತು. ಜಾತಿರಹಿತ ಸಮಾಜ ಸೃಷ್ಟಿ; ಶಿವನನ್ನು ಪರಮದೈವವೆಂದು ನಂಬಿದರೂ ಸ್ಥಾವರಲಿಂಗದ ಬದಲು
ಇಷ್ಟಲಿಂಗದ ಪರಿಕಲ್ಪನೆಯ ಮೂಲಕ ವೈಯಕ್ತಿಕ ನೆಲೆಯ ಉಪಾಸನೆ; ಯಜ್ಞಯಾಗಾದಿಗಳ ಬದಲಾಗಿ ಕಾಯಕನಿಷ್ಠೆ;
ಮೋಕ್ಷದ ಸಾಧನೆಯ ಅಮೂರ್ತ ಭಾವನೆಗೆ ಬದಲಾದ ತಾನೇ ಶಿವನಾಗುವ ಗುರಿ; ಪಂಚಮಹಾಪಾತಕಗಳ ಬದಲಾದ ಪಂಚಾಚಾರ
ಪರಿಕಲ್ಪನೆ; ಸಪ್ತವ್ಯಸನಗಳ ಬದಲು ಸಪ್ತಸ್ಥಲಗಳ ವಿಂಗಡಣೆ; ತ್ರಿಮೂರ್ತಿಗಳ ಬದಲಾಗಿ ತ್ರಿವಿಧಗಳ ಕಲ್ಪನೆ;
ದಾನದ ಬದಲು ದಾಸೋಹ; ಸಂಸ್ಕೃತದ ಬದಲು ಕನ್ನಡ; ಮಂತ್ರಗಳ ಬದಲು ವಚನಗಳು; ಅಧಿಕಾರವಾಣಿಯನ್ನು ಒಪ್ಪುವ
ಬದಲು ಅದರ ಬಗೆಗಿನ ಚರ್ಚೆ – ಇವೇ ಮುಂತಾದವುಗಳ ಮೂಲಕ ವಚನಕಾರರು ವೈದಿಕಕ್ಕೆ
ಪರ್ಯಾಯವನ್ನು ಕಾಣಲು ತವಕಿಸಿದವರೇ ಹೊರತು ಕೇವಲ ಭಕ್ತಿಯಲ್ಲಿ ಮುಳುಗಿದವರಲ್ಲ. ಅಲ್ಲದೆ, ‘ಭಕ್ತ’
ಎಂಬುದು ವಚನ ಚಳವಳಿಯ ಆಶಯಗಳನ್ನು ಒಪ್ಪಿ ಬಂದವನೆಂಬ ಅರ್ಥದಲ್ಲಿ ಒಂದು ಪಾರಿಭಾಷಿಕ ಶಬ್ದವಾಗಿ ಬಳಕೆಯಾಗುವುದೇ
ಹೊರತು ಭಕ್ತಿಯಲ್ಲಿ ಮುಳುಗಿದವನು ("ಆಳ್ವಾರ್ ಎಂಬಂತೆ) ಎಂಬುದನ್ನದು ಸೂಚಿಸದು.
ಹೀಗೆ, ವಚನ ಚಳವಳಿಯನ್ನು
ಒಂದು ಭಕ್ತಿ ಚಳವಳಿ ಎಂದು ಕರೆಯುವುದಕ್ಕೆ ನನ್ನ ವಿರೋಧವಿದೆ. ಅದೊಂದು ಪ್ರತಿಭಟನೆ; ಪರ್ಯಾಯದ ಹುಡುಕಾಟ.
ಇಡೀ ವಚನ ಸಮೂಹ ಒಂದು ಕಾಲದ ಚರ್ಚೆಯ ದಾಖಲೆ, ಸಮರ್ಪಕ ಹಾದಿಯೊಂದನ್ನು ಕಂಡುಕೊಳ್ಳುವ ಪ್ರಯತ್ನ. ಅದಕ್ಕಾಗಿಯೇ
ಈ ಚಳವಳಿಯಲ್ಲಿ ತೊಡಗಿದವರಲ್ಲಿ ಭೀನ್ನಾಭಿಪ್ರಾಯಕ್ಕೂ ಅವಕಾಶವಿದೆ, ಭಿನ್ನ ನಿಲವಿಗೂ ಮಾನ್ಯತೆಯಿದೆ.
ಶೀಲದ ಬಗ್ಗೆ, ಲಿಂಗಧಾರಣೆಯ ಬಗ್ಗೆ, ಸಾಧನೆಯ ಸ್ವರೂಪದ ಬಗ್ಗೆ, ಶರಣಸತಿ-ಲಿಂಗಪತಿಯಂತಹ ಭಾವನೆಗಳ ಬಗ್ಗೆ
ವಾಗ್ವಾದಗಳು ವಚನ ಸಮುದಾಯದಲ್ಲಿ ಅಡಕವಾಗಿವೆ. ವಚನಗಳಲ್ಲಿ ಅಂತರ್ಗತವಾದ ಈ ಬೌದ್ಧಿಕ ತಿಕ್ಕಾಟದ ಕಾರಣವೇ
‘ಶೂನ್ಯಸಂಪಾದನೆ’ಯ ಕರ್ತೃವಿಗೆ ಅದರಲ್ಲಿನ ನಾಟಕೀಯತೆಯ ಅರಿವಾಗಿರಬೇಕು; ವಿವಿಧ ವಚನಕಾರರ ವಚನಗಳ ಪೋಣಿಸುವಿಕೆಯ
ಮೂಲಕವೇ ಅಲ್ಲಿ ಎಂಥ ತೀವ್ರ ವಾಗ್ವಾದಗಳು ನಡೆದಿವೆ
ಎಂಬುದನ್ನು ಗಮನಿಸಬೇಕು. ಚರ್ಚೆ ನಡೆದರೂ, ಅದರಲ್ಲಿ ಕಾವಿದ್ದರೂ ವ್ಯಕ್ತಿವಿರಸವಿಲ್ಲ; 'ಶೂನ್ಯ ಸಂಪಾದನೆ'ಯಲ್ಲಿ ಒಬ್ಬ ವಚನಕಾರ
ಇನ್ನೊಬ್ಬನನ್ನು ಗೌರವಿಸುವ ಸಂಬೋಧನೆಗ ರಾಶಿಯನ್ನೇ ಕಾಣಬಹುದು. ಭಕ್ತಿ ಚಳವಳಿಯಲ್ಲಿ ಪ್ರಶ್ನೆ ಮಾಡುವುದಕ್ಕಾಗಲೀ,
ಚರ್ಚೆಗಾಗಲೀ ಅವಕಾಶವಿಲ್ಲ, ಇದ್ದುದನ್ನು ಒಪ್ಪಿಬಿಡುವುದೇ ಅಲ್ಲಿ ರೀತಿ.
ಈ ಮಾತುಗಳಿಂದ
ವಚನ ಚಳವಳಿಯ ವೈದಿಕವಿರೋಧೀ ನಿಲವು ಸ್ಪಷ್ಟವಾಗುವುದರ ಜೊತೆಗೆ, ಅದನ್ನು ಭಕ್ತಿ ಚಳವಳಿ ಎಂದು ಸರಳಗೊಳಿಸಿ
ಕರೆಯುವುದು ಸಮಂಜಸವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಈ ಪ್ರಯತ್ನದ ಮಿತಿಯನ್ನೂ ನಾವರಿಯಬೇಕು.
ಈ ಚಳವಳಿ ವೈದಿಕ ವ್ಯವಸ್ಥೆಗೆ ವಿರುದ್ಧವಾದುದಲ್ಲ ಎಂಬುದು ಹೇಗೆ ಮೊಂಡು ವಾದವೋ, ಹಾಗೆಯೇ ವಚನಕಾರರ
ನಿಲವು ಈ ಕಾಲದ ಆಧುನಿಕ ಮನೋಭಾವದ್ದು ಎನ್ನುವುದೂ ಅಷ್ಟೇ ಸೀಮಿತ ತಿಳಿವಳಿಕೆಯಾಗುತ್ತದೆ. ವಚನಕಾರರು
ವೈದಿಕದ ವಿರೋಧಿಗಳಾಗಿ ಅಲ್ಲಿನ ಅಸಮಾನತೆಗೆ ಕಾರಣವಾದ ಅಂಶಗಳನ್ನು ಅಲ್ಲಗಳೆದು ಸಮಾನತೆಯ ನೆಲಗಟ್ಟಿನ
ಹೊಸ ಸಮಾಜವೊಂದರ ನಿರ್ಮಾಣಕ್ಕೆ ಹೆಣಗಿದರೆಂಬುದು ನಿಜ. ಆದರೆ ಆ ಪ್ರಯತ್ನ ತಮ್ಮ ನಂಬಿಕೆಯ ವ್ಯಾಪ್ತಿಗೆ
ಬಂದವರನ್ನು ತಿದ್ದುವುದಕ್ಕೆ ಮಾತ್ರವಾಗಿತ್ತೇ ಹೊರತು, ಮತಧರ್ಮಾತೀತ ನೆಲೆಯಲ್ಲಿ ನಡೆದ ವ್ಯಾಪಕ ಸಮಾಜ
ಸುಧಾರಣೆಯಲ್ಲ ಎಂಬುದನ್ನು ಗಮನಿಸಬೇಕು. 'ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲರನೊಂದೆ
ಎಂಬೆ; ಹಾರುವ ಮೊದಲು ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂದೆ ಎಂಬೆ' ಎಂಬ ವಚನದಲ್ಲಿ ಬಸವಣ್ಣನು
ಜಾತಿಗಣನೆಯಿಲ್ಲದೆ ಶಿವಭಕ್ತರನ್ನು ಸಮಾನವಾಗಿ ಗೌರವಿಸುವ ಮತ್ತು ಭವಿಯಾದವರನ್ನು ಅಲಕ್ಷಿಸುವ ಮನೋಭಾವನನ್ನು
ತೋರ್ಪಡಿಸುತ್ತಾನೆ. ಮನುಷ್ಯಸಂಕುಲವನ್ನು ವಚನಕಾರರು ಭಕ್ತ-ಭವಿ ಎಂದು ವಿಭಜಿಸಿದರು. ಚೆನ್ನಬಸವಣ್ಣನ
ಒಂದು ವಚನ ಹೀಗಿದೆ: 'ವಾರವೇಳು ಕುಲ ಹದಿನೆಂಟು ಎಂಬರಯ್ಯಾ, ಅದ ನಾವು ಅಲ್ಲವೆಂಬೆವು; ಹಗಲೊಂದು ವಾರ
ಇರುಳೊಂದು ವಾರ, ಭಕ್ತನೊಂದು ಕುಲ ಭವಿಯೊಂದು ಕುಲ, ನಾವು ಬಲ್ಲುದು ಕಾಣಾ ಕೂಡಲಚೆನ್ನಸಂಗಮದೇವ' ಎಂಬ
ಮಾತಿನಲ್ಲಿ ಈ ಮನೋಭಾವ ಮತ್ತಷ್ಟು ಸ್ಪಷ್ಟವಾಗಿದೆ. ಅಂದರೆ ವಚನ ಚಳವಳಿಯ ಸುಧಾರಣೆ ಭಕ್ತ ವಲಯಕ್ಕೆ
ಸೀಮಿತವಾಯಿತು, ಅದರ ಹೊರತಾದುದರ ಬಗ್ಗೆ ಅದರ ಗಮನವಿರಲಿಲ್ಲ.
ವೀರಶೈವ ಲಿಂಗಾಯತದಲ್ಲಿ ಮತ್ತೆ ಜಾತಿವ್ಯವಸ್ಥೆ ಬಲಗೊಳ್ಳಲೇನು
ಕಾರಣ? ಕಾಯಕದ ಕಾರಣದಿಂದ ಎಲ್ಲ ವೃತ್ತಿಗಳನ್ನೂ ಸಮಾನ ಪವಿತ್ರವೆಂದು ಕರೆದು, ವ್ಯಕ್ತಿ ತನ್ನ ಪರಂಪರಾಗತ
ವೃತ್ತಿಯನ್ನೇ ಮುಂದುವರಿಸಿ ಅದಕ್ಕಂಟಿಕೊಂಡ ಜಾತಿ ಹಣೆಪಟ್ಟಿಯನ್ನು ಕಿತ್ತೊಗೆಯುವ ಅವಕಾಶವಿಲ್ಲದ್ದು,
ಹಾಗೂ ಮೂರ್ತಿಪೂಜೆ, ಪುರೋಹಿತಶಾಹಿಯ ಪುನರುಜ್ಜೀವನ ಮುಂತಾದ ನೆಲೆಗಳಲ್ಲಿ ವೈದಿಕದ ದಟ್ಟ ನೆರಳಿನಡಿ
ಬಂದುದು. ವಚನ ಚಳವಳಿ ಸಾಧಿಸಿದ್ದು ಕಡಮೆಯಲ್ಲ, ಆದರೆ ಅದು ಮತ್ತೊಂದು ಸಾಂಸ್ಥಿಕ ಧರ್ಮದ ಸ್ಥಾಪನೆಗೆ
ಕಾರಣವಾಗಿ ಹಿಂಬಡ್ತಿ ಪಡೆಯಿತು. ಎಂತಹ ಸುಧಾರಣಾ ಕಾರ್ಯವೇ ಆಗಲಿ ಧಾರ್ಮಿಕ ಚೌಕಟ್ಟನ್ನು ಅಳವಡಿಸಿಕೊಂಡರೆ
ಆಗುವ ಪರಿಣಾಮ ಬಹು ಸೀಮಿತವೆಂಬುದನ್ನು ಅರ್ಥಮಾಡಿಕೊಳ್ಳಬೇಕು.
ವಚನ ಚಳವಳಿ ಭಕ್ತಿ ಚಳವಳಿಯೇ?

No comments:
Post a Comment