Thursday 13 May 2021

ಉಳಿಯ ದನಿ, ಕಡಲ ಮೊರೆ

                                                ಉಳಿಯ ದನಿ, ಕಡಲ ಮೊರೆ


(ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ‘ಸಾಹಿತಿಗಳ ಪ್ರವಾಸ ಅನುದಾನ’ದ ನೆರವಿನಿಂದಾಗಿ 1994 ರ ಮೇ ತಿಂಗಳಲ್ಲಿ ನಾನು ಒರಿಸ್ಸಾ ರಾಜ್ಯದಲ್ಲಿ ಕೆಲವು ಕಾಲ ಪ್ರವಾಸ ಮಾಡಿದೆ. ಆಗ ನನ್ನೊಡನೆ ನನ್ನ ಸಹೋದ್ಯೋಗಿ ಪ್ರೊ. ನಾಗರಾಜ್ ನೀರಗುಂದ ಮತ್ತವರ ಮಗ ಻ಅಪೂರ್ವ ಇದ್ದರು. ಪ್ರವಾಸ ಮುಗಿಸಿ ವಾಪಸು ಬಂದು ಮಾಡಿಕೊಂಡಿದ್ದ ಟಿಪ್ಪಣಿಗಳ ಸಹಾಯದಿಂದ ರಚಿಸಿದ  ಈ ಪ್ರವಾಸ ಕಥನವನ್ನು ಅಕಾಡೆಮಿ ಅದೇ ವರ್ಷ ಪ್ರಕಟಿಸಿತು.)

ಬಿರುಬಿಸಿಲಲ್ಲಿ ಪಯಣ

ಭುವನೇಶ್ವರಕ್ಕೆ ಹೋಗಲು ಹಾಗೂ ವಾಪಸು ಬರಲು ತೇದಿಗಳನ್ನು ನಿಗದಿಗೊಳಿಸಿ ಫೆಬ್ರವರಿಯಲ್ಲಿಯೇ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿಸಿದ್ದೆ. ಆದರೆ ಹದಿನೈದು-ಇಪ್ಪತ್ತು ದಿನಗಳ ಕಾಲ ಒಬ್ಬನೇ ಸುತ್ತಾಡುವುದು ಹೇಗೆ ಎಂಬ ಯೋಚನೆ. ಜತೆಗೆ, ದೆಹಲಿಯ ಅನುವಾದ ಕಮ್ಮಟವೊಂದರಲ್ಲಿ ಪರಿಚಯವಾಗಿದ್ದ ಭುವನೇಶ್ವರದ ಕಾಲೇಜೊಂದರ ಒರಿಯ ಉಪನ್ಯಾಸಕರೊಬ್ಬರಿಗೆ ನಾನು ಬರೆದಿದ್ದ ಪತ್ರಕ್ಕೆ ಇನ್ನೂ ಉತ್ತರ ಬಂದಿರಲಿಲ್ಲ. ಅಲ್ಲದೆ, ನನ್ನ ಸಹೋದ್ಯೋಗಿ ನಾಗರಾಜ್ ರಜೆ ಬಂದ ಮೇಲಾದರೆ ತಾವೂ ಬರುವುದಾಗಿ ಹೇಳಿದರು. ಒಬ್ಬನಿಗಿಂತ ಇಬ್ಬರಿರುವುದು ಅಪರಿಚಿತ ಸ್ಥಳದಲ್ಲಿ ಸುತ್ತಾಡಲು ವಾಸಿ ಎಂಬ ಕಾರಣದಿಂದ ನನ್ನ ರೈಲ್ವೆ ಬುಕ್ಕಿಂಗನ್ನು ಕ್ಯಾನ್ಸಲ್ ಮಾಡಿಸಿದೆ.

ಇವತ್ತು ಆವತ್ತು ಎಂದು ಕೊನೆಗೆ ಏಪ್ರಿಲ್ ಮೊದಲ ವಾರದಲ್ಲಿ ಹೊರಡಲು ನಿಶ್ಚಯಿಸಿದೆವು. ನಾನು, ನಾಗರಾಜ್ ಹಾಗೂ ಅವರ ಮಗ ಬುಕ್ಕಿಂಗ್ ಮಾಡಿಸಿದವು. ಆದರೆ ದಿನ ಸರಿಯುತ್ತಿದ್ದಂತೆ ಬೆಂಗಳೂರಿನಲ್ಲಿಯೇ ವಾತಾವರಣ ಬಿಸಿಯಾಗತೊಡಗಿತ್ತು. “ಯಾವ ವರ್ಷವು ಇಷ್ಟು ಸೆಕೆಯಿರಲಿಲ್ಲಎಂದು ಪ್ರತಿವರ್ಷವು ಹೇಳುವಂತೆ ರಾಗಹಾಡುವ ಹಾಗೆ ಇಲ್ಲಿ ಬಿಸಿಲು ಹೆಚ್ಚಾಗಿತ್ತು. ಹೊರಡುವ ದಿನ ಹತ್ತಿರ ಬರುತ್ತಿದ್ದಂತೆ ಪ್ರತಿ ರಾತ್ರಿ ದೂರದರ್ಶನದ ವಾರ್ತೆಯ ಕೊನೆಗೆ ವಿವಿಧ ರಾಜ್ಯಗಳ ರಾಜಧಾನಿಗಳ ಉಷ್ಟಾಂಶಗಳನ್ನು ತೋರಿಸುವರಲ್ಲ - ಅದನ್ನು ನೋಡುತ್ತಿದ್ದೆವು. ದಿನೇ ದಿನೇ ಭುವನೇಶ್ವರದಲ್ಲಿ ಉಷ್ಣಾಂಶ ಏರುತ್ತಿತ್ತು. ಒಮ್ಮೆ ಅದು ೪೦ ಡಿಗ್ರಿಗಳೆಂದು ಕಂಡಾಗ ಇಲ್ಲೇ ಬೆವರುವಂತಾಯಿತು. ಮಾರನೇ ದಿನ ರಾತ್ರಿ ಅದು ೩೮ ಡಿಗ್ರಿ ಆಗಿತ್ತು. ನಾನು ತರ್ಕಮಾಡಿಕೊಂಡೆ, ಪ್ರತಿದಿನ ಹೀಗೆ ಎರಡು ಡಿಗ್ರಿಗಳಷ್ಟು ಇಳಿದರೆ ನಾವು ಹೊರಡುವ ವೇಳೆಗೆ ಇಪ್ಪತ್ತಾರೋ, ಇಪ್ಪತ್ತನಾಲ್ಕು ಡಿಗ್ರಿಯೋ ಕನಿಷ್ಠ ಉಷ್ಣಾಂಶವಾಗುವುದೆಂದು ಲೆಕ್ಕಹಾಕಿದೆ. ಆದರೆ ಮಾರನೆಯ ರಾತ್ರಿ ಮತ್ತೆ ಭುವನೇಶ್ವರದ ಗರಿಷ್ಠ ತಾಪಮಾನ ೪೦ ಡಿಗ್ರಿ! ಎರಡನೆಯ ಬಾರಿಯ ಬುಕ್ಕಿಂಗ್ ರದ್ದು ಮಾಡಿಸಲೇ ಎಂದುಕೊಂಡೆ; ಬಿಸಿಲು ಕಾಲ ಮುಗಿದ ಮೇಲೆ ಮಳೆಗಾಲ, ಆಮೇಲೆ ಕಾಲೇಜು ಬೇರೆ, ಹೀಗೆ ಮುಂದಕ್ಕೆ ಹಾಕುತ್ತ ಹೋಗುವುದು ಸರಿಯಲ್ಲ ಅನ್ನಿಸಿತ್ತು.

ಯಾವ ಕೆಲಸ ಮಾಡಬೇಕಾದರೂ ಅದನ್ನು ಸಮರ್ಥಿಸಲು ನಾವೇ ರೂಪಿಸಿಕೊಳ್ಳಬಹುದಾದ ತರ್ಕಸರಣಿಯೊಂದು ಇದ್ದೇ ಇರುತ್ತದಲ್ಲ, ಹಾಗೇ ನಾವೂ ಮಾಡದೆವು. ಇಂಥ ಬಿಸಿಲಲ್ಲಿ ಪ್ರವಾಸವೇ?” ಎಂದು ಯಾರಾದರೂ ಹುಬ್ಬೇರಿಸಿದರೆ, "ಅಲ್ಲೇನು ಜನರಿಲ್ಲವೇ?” ಎಂದು ಮರು ಪ್ರಶ್ನೆ ಹಾಕುತ್ತಿದ್ದೆವು ನಾನು, ನಾಗರಾಜ್; ಜೊತೆಗೆ ಅಲ್ಲೆಲ್ಲ ಬಿಸಿಲು ಹೇಗಿರುತ್ತದೆಂದು ಸ್ವಂತ ಅನುಭವ ಪಡೆಯುವುದೂ ಮುಖ್ಯವಲ್ಲವೇ ಎಂಬ ಸಮಾಧಾನ. ಬಳ್ಳಾರಿಯೋ ರಾಯಚೂರೋ ಗುಲ್ಬರ್ಗವೋ ಇಲ್ಲವೇ, ಅದಕ್ಕಿಂತ ಭಯಂಕರ ಬಿಸಿಲು ಇದ್ದೀತೇ ಆಲ್ಲಿ, ನಮ್ಮ ಸುಕೋಮಲ ಕನ್ನಡಿಗರು ತಡೆಯವ ಬಿಸಿಲು ತಾನೇ ಅದು. ಹಾಗಾಗಿ ನೋಡಿಯೇ ಬಿಡೋಣ ಎಂಬ ಛಲ. ಜತೆಗೆ, ಬಿಸಿಲಿಗೆ ಹೆದರಿ ಪ್ರವಾಸ ರದ್ದು ಮಾಡಿದರು ಎಂಬ ಗೇಲಿ ಮಾತು ಕೇಳಲು ನಾವು ಸಿದ್ಧರಿರಲಿಲ್ಲ. ಅಲ್ಲದೆ, ಅಲ್ಲೇನು ಹಗಲು ಪೂರ್ತಿ ಬಿಸಿಲಲ್ಲಿ ನಾವು ಬಯಲಲ್ಲ ದುಡಿಯಬೇಕೇ, ಅಲ್ಲಿನ ಸಾಹಿತಿಗಳು, ಬುದ್ಧಿ ಜೀವಿಗಳನ್ನು ಭೇಟಿಯಾಗಲು ಬೆಳಿಗ್ಗೆ ಬಿಸಿಲು ಏರುವ ಮುಂಚೆಯೋ, ಬಿಸಿಲು ಇಳಿದ ನಂತರ ಸಾಯಂಕಾಲವೋ ಹೋದರಾಯಿತು. ಮಧ್ಯಾಹ್ನವೆಲ್ಲ ರೂಮಿನಲ್ಲಿಯೇ ಇದ್ದರಾಯಿತು ಎಂದು ನಿಶ್ಚಯಿಸಿದೆವು. ಹಾಗಾಗಿ ಹೊರಡಬೇಕಾದ ದಿನ ಹೂರಟೇ ಹೊರಟೆವು.

ಭುವನೇಶ್ವರವೆಂದರೆ ಬೆಂಗಳೂರಿನಿಂದ ಮೂವತ್ತು-ಮೂವತ್ತೆರಡು ಗಂಟೆಗಳಷ್ಟು ದೀರ್ಘಕಾಲದ ರೈಲು ಪ್ರಯಾಣ. ಮದ್ರಾಸ್, ರಾಜಮಹೇಂದ್ರಿ, ವಿಜಯವಾಡ, ವಿಶಾಖಪಟ್ಟಣಗಳ ಮೂಲಕ ಪೂರ್ವ ಕರಾವಳಿಯ ಸಮಾನಾಂತರದಲ್ಲಿ ಹಾದು ಹೋಗುವ ರೈಲು ಮಾರ್ಗ. ಎಲ್ಲವೂ ತಮ್ಮ ಬಿಸಿಲಿಗೆ ಹೆಸರುವಾಸಿಯಾದವೇ! ಅಲ್ಲಿರುವುದು ಎರಡೇ ಕಾಲ ಬೇಸಗೆ ಮತ್ತು ಬಿರುಬೇಸಗೆ ಎಂದು ನಾವೇ ಆಡಿಕೊಳ್ಳುತ್ತೇವಲ್ಲ! ರೈಲಿನಲ್ಲಿನ ಬಂಧನ ಬೇರೆ, ಕೈಯಲ್ಲೊಂದು ಟವೆಲ್ ಹಿಡಿದು, ನಿಮಿಷಕ್ಕೊಮ್ಮೆ ಮುಖದಲ್ಲಿ ಹಣೆಯಿಂದ ಇಳಿದು ಬೆವರನ್ನೊರೆಸಿಕೊಳ್ಳುವುದೇ ಕೆಲಸ. ನಿದ್ದೆಯಾದರೂ ಎಷ್ಟು ಮಾಡಬಹುದು? ರಾತ್ರಿ ಮಲಗಿದಾಗಲೂ ಎಲ್ಲ ಕಿಟಕಿಗಳನ್ನು ತೆರೆದು ರೈಲು ಓಡುತ್ತಿದ್ದರೆ ಪರವಾಯಿಲ್ಲ. ಆದರೆ ಹಗಲು ಮಾತ್ರ ಶಕೆಯ ಉಪಟಳ ಹೆಚ್ಚು. ಆದರೇನು, ಕಾಲ ನಿಲ್ಲುವುದೇ, ರೈಲಿಗಿಂತ ವೇಗವಾಗಿ ಅದು ಓಡುತ್ತದೆ. ಆಗ ಈಗ ಬರುವ ಕಾಫಿ ಟೀ ಮತ್ತು ಬೇರೆ ತಿನಸುಗಳನ್ನು ಕೊಳ್ಳುತ್ತ ಕಾಲಹರಣದ ದಾರಿ, ಅದೂ ಇದೂ ಮಾತು, ಕಿಟಕಿಗಳ ಮೂಲಕ ಆಚೀಚೆಯ ದೃಶ್ಯಗಳನ್ನು ನೋಡುವುದು.

ದೀರ್ಘ ಪ್ರಯಾಣದ ರೈಲುಗಳಲ್ಲಿ ಹೊರಟರೆ ಕರ್ನಾಟಕ ಬಹು ಬೇಗ ಮುಗಿದು ಹೋಗುತ್ತದೆ. ಬೆಂಗಳೂರಿನಿಂದ ಮೀರಜ್‌ವರೆಗಿನ ಮಾರ್ಗ ಮಾತ್ರ ಪೂರ್ತಿ ನಮ್ಮ ನಾಡನ್ನು ಹಾದು ಹೋಗುವುದು; ಉಳಿದಂತೆ ಕಣ್ಣು ಮುಚ್ಚಿ ತೆರೆಯುವಷ್ಟು ಬೇಗ ಕರ್ನಾಟಕವನ್ನು ದಾಟಿರುತ್ತೇವೆ. ಅದೂ ರಾತ್ರಿ ಹೊರಟ ರೈಲಿನಲ್ಲಿ ರೈಲು ಮುಂದುವರಿಯಲು ತೊಡಗಿದ ಹಲವು ನಿಮಿಷಗಳಲ್ಲಿಯೇ ಮಲಗಿದ ನಾವು ಎಚ್ಚರವಾದದ್ದು ಮದರಾಸು ಸಮೀಪಿಸುತ್ತಿರುವಾಗಲೇ, ಬೆಳಗ್ಗಿನ ಹವಾ ತಂಪಾಗಿಯೇ ಇತ್ತು. ಆದರೆ ಸೂರ್ಯ ಮೇಲೇರುತ್ತ ಹೋದಂತೆ ಬಿಸಿಲು ಯಾವ ಮಟ್ಟ ಮುಟ್ಟುತ್ತದೋ ಎಂಬ ಆತಂಕವೇ ಹೆಚ್ಚು ಪ್ರಖರವಾದದ್ದು.

ಮದರಾಸಿನಿಂದ ಬೇಗಲೇ ಹೊರಟ ರೈಲು ಬಹು ಬೇಗ ತಮಿಳುನಾಡನ್ನೂ ದಾಟಿತು. ತಮಿಳುನಾಡಿನ ಬಗ್ಗೆ, ತಮಿಳರ ಬಗ್ಗೆ (ಅವರಿಗೆ ನಮ್ಮ ಬಗ್ಗೆ ಇರುವಂತೆಯೇ ನಮಗೆ ಮೊದಲಿನಿಂದಲೂ ಒಂದು ಬಗೆಯ ಕುತ್ಸಿತ ಮನೋಭಾವ ತಾನೇ?) ಆ ಸ್ಥಳದಲ್ಲಿ ಹಾದು ಹೊಗುತ್ತಿದ್ದಾಗ ನನಗೆ ಸ್ನೇಹಿತರೊಬ್ಬರ ಮಾತು ನೆನಪಾಯಿತು: ಇದು ತಮಿಳುನಾಡು ಎಂದು ಗುರುತಿಸಲು ಕಣ್ಣೂ ಬೇಕಿಲ್ಲ, ಕಿವಿಯೂ ಬೇಕಿಲ್ಲ; ಬರೀ ಮೂಗಿದ್ದರೆ ಸಾಕು. ಯಾಕೆಂದರೆ ಅದನ್ನು ಮುಚ್ಚಿಕೊಳ್ಳುವ ಪ್ರಸಂಗ ಬಂತೆಂದರೆ ಅದನ್ನು ತಮಿಳುನಾಡು ಎನ್ನಬಹುದು!” ನಿಜವೇ. ತಮಿಳುನಾಡಿನ ವಲಯದಲ್ಲಿದ್ದ ರೈಲ್ವೆ ನಿಲ್ದಾಣಗಳಲ್ಲಿ ಎಲ್ಲಿಯೂ ನಿಲ್ಲದೆ ವೇಗವಾಗಿ ಗಾಡಿಯ ಓಡುವಿಕೆ, ನಾವು ದಾಟಿದ ನಿಲ್ದಾಣದ ಹೆಸರೇನು ಎಂದು ಓದಲು ತವಕ, ಅದನ್ನು ಕಾಣುವ ಹೊತ್ತಿಗಾಗಲೇ ಮುಂದುವರಿದುಬಿಡುತ್ತಿದ್ದ ರೈಲುಗಾಡಿ. ಆದರೂ ಎಷ್ಟನ್ನೋ ಓದಿದೆವು. ತಮಿಳು ಹಿಂದಿ ಇಂಗ್ಲೀಷ್ ಭಾಷೆಗಳಲ್ಲಿ, ಆ ಕೈಮದಲ್ಲಿ ಬರೆದಿರುತ್ತಿದ್ದ ನಿಲ್ದಾಣದ ಹಿಂದಿ ಅಕ್ಷರಗಳ ಮೇಲೆ ಎಲ್ಲ ಕಡೆಯೂ ಮಸಿ ಬಳಿಯಲಾಗಿತ್ತು. ಪ್ರಾಯಶಃ ಈಚೆಗೆ ಡಿ ಎಂ ಕೆ ನೀಡಿದ ಕರೆಂತೆ ಆ ಕೆಲಸವಾಗಿರಬೇಕು. ತಮಿಳು ಭಾಷಿಕರು ನಮ್ಮ ನಾಡಲ್ಲಿ ನೆಲಸಿ ಕನ್ನಡ ಕಲಿಯದ ಬಗ್ಗೆ, ನಮ್ಮ ಯುವಜನರ ದ್ಯೋಗಾವಕಾಶಗಳನ್ನು ಆ ಜನ ಕಸಿಯುವ ಬಗ್ಗೆ ನಾವೆ ಆಕ್ರೋಶಗೊಂಡು ಮಾತನಾಡಿದರೂ ಅವರ ಸ್ವಾಭಿಮಾನ ನಮ್ಮ ಜನರಲ್ಲಿ ಇಲ್ಲವಲ್ಲ ಎಂದೇ ಕೊರಗು ಕಾಣಿಸಿಕೊಳ್ಳುವುದು. ಕನ್ನಡದ ಪರವಾಗಿ ಳುವಳಿ ನಡೆದರೆ ಅದು ಫ್ಯಾಸಿಸಂ ಎಂದೋ ಸುಂಕುಚಿತವೆಂದೋ ಕರೆದು, ತಮಿಳುನಾಡಿನ ದ್ರಾವಿಡ ಚಳುವಳಿಯನ್ನು `ಸ್ವಾಭಿಮಾನದ ಚಳುವಳಿ ಯೆಂದು ಕೊಂಡಾಡುವ ನಮ್ಮ ಅನೇಕ ಬುದ್ಧಿಜೀವಿಗಳ ಬಗ್ಗೆ ಏನನ್ನುವುದು? ಆದರೂ, ಅಲ್ಲಿನ ರೈಲು ನಿಲ್ದಾಣಗಳಲ್ಲಿ ಮಾತನಾಡುವ ಕೂಲಿಗಳನ್ನು ವ್ಯಾಪಾರಿಗಳನ್ನು ಕಂಡಾಗ ನಮಗೆ ಸ್ವಲ್ಪ ಸಮಾಧಾನ!

ಈ ಭಾಗದ ರೈಲು ಮಾರ್ಗದಿಂದ ಅತಿ ಹೆಚ್ಚಿನ ಲಾಭವಾಗಿರುವುದು ಆಂಧ್ರ ಪ್ರದೇಶಕ್ಕೆ, ಅದರ ಕರಾವಳಿಯ ಪೂರ್ತಿ ರೈಲುಮಾರ್ಗವೇ ನಾಲ್ಕಾರು ನೂರು ಕಿಲೋಮೀಟರುಗಳ ಜಂಟಿ ರೈಲುಮಾರ್ಗ ಅವರಿಗೆ ವರವಾಗಿದೆ. ಆಂಧ್ರದ ಕರಾವಳಿಯನ್ನು ನೆನೆಸಿಕೊಂಡಾಗ ಹಲವಾರು ವರ್ಷಗಳ ಹಿಂದೆ ಬಿರುಮಳೆಗೆ ಸಿಕ್ಕಿ ನಾಶವಾದ ಹಳ್ಳಿಗಳ ನೆನಪಾದವು. ಈಗ ಪರಿಸ್ಥಿತಿ ಸುಧಾರಿಸಿದೆ. ಪೂರ್ವಭಾವಿಯಾಗಿಯೇ ಹವೆ ಹೇಗಿರುತ್ತದೆಯೆಂದು ತಕ್ಕ ಮಟ್ಟಿಗಿನ ಕರಾರುವಾಕ್ಕುತನದಿಂದ ಹೇಳುವುದು ಈಗ ಸಾಧ್ಯ. ಈಗ ಆ ಹಳ್ಳಿಗಳು ಚೇತರಿಸಿಕೊಂಡಿವೆಯಂತೆ. ಬಿರುಗಾಳಿ ಬಿರುಮಳೆಗಳ ಹೊಡೆತವನ್ನು ತಾಳಬಲ್ಲ ಮನೆಗಳು ನಿರ್ಮಾಣವಾಗಿವೆಯಂತೆ. ಪ್ರವಾಹದ ನಿಯಂತ್ರಣಕ್ಕೂ ಕ್ರಮ ಕೈಗೊಂಡಿರುವರಂತೆ. ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವಿನಿಂದ ಇಲ್ಲಿನ ಜೀವನಪರಿಸ್ಥಿತಿ ಸುಧಾರಿಸಿದೆಯೆಂದು ದೂರದರ್ಶನದ ವರದಿಯಲ್ಲಿ ನೋಡಿದ್ದ ನೆನಪು. ರೈಲು ಸಮುದ್ರ ಕಾಣುವಷ್ಟು ಹತ್ತಿರ ಬರುತ್ತಿದ್ದುದು ತುಂಬ ಅಪರೂಪವಾಗಿ.

ರೈಲು ಅಸಂಖ್ಯಾತ ಸೇತುವೆಗಳ ಮೇಲೆ ಹಾದು ಹೋಗಬೇಕು. ಸಣ್ಣವು, ದೊಡ್ಡವು, ಅಗಾಧವಾದುವು. ಸಮುದ್ರಕ್ಕೆ ಹತ್ತಿರವಿರುವ ಪ್ರದೇಶವಾದ್ದರಿಂದ ಆ ಜಾಗದಲ್ಲಿಯೇ ಬಂಗಾಳ ಕೊಲ್ಲಿಗೆ ಸೇರುವ ನದಿಗಳು ಅಗಲವಾಗಿ ಹರಿಯುತ್ತವೆ. ಆದರೆ, ಎಷ್ಟೋ ನದಿಗಳಲ್ಲಿ ನೀರಿಲ್ಲ, ಇದ್ದವುಗಳಲ್ಲಿ ಬಹು ಬೇಸಿಗೆಯಾಗಿರುವುದರ ಜತೆಗೆ ನದಿಗಳಿಗೆಲ್ಲ ಒಡ್ಡು ಅಣೆಕಟ್ಟು ಕಟ್ಟಿದ್ದಾರೆ. ಕೃಷ್ಣ-ಗೋದಾವರಿಗಳು ಮಾತ್ರ ಭರ್ಜರಿ ನದಿಗಳು. ರೈಲು ಮಾರ್ಗದ ಎರಡು ಬದಿಯ ಬಹುಭಾಗ ಗದ್ದೆಗಳು, ತೋಟಗಳು, ತೆಂಗಿನ ಬಾಳೆಯ ಮರಗಳು. ತಕ್ಕ ಮಟ್ಟಿಗಿನ ಸಮೃದ್ಧಿ, ಕೃಷ್ಣ-ಗೋದೆಯರಿಗೆ ಹಾಕಿದ ಸೇತುವೆಗಳಂತೂ ಅಮೋಘ! ಗೋದಾವರಿಯ ಪಾತ್ರ ವಿಜಯವಾಡದ (ಬೆಜವಾಡ) ಬಳಿ ಎಷ್ಟು ಅಗಲವೆಂದರೆ ವೇಗವಾಗಿ ಓಡುವ ರೈಲು ಮೇಲಿನ ಸೇತುವೆ ಹಾದು ಹೋಗಲು ಆರೆಂಟು ನಿಮಿಷಗಳೇ ಬೇಕಾಗುತ್ತವೆ. ಇವೆಲ್ಲ ಇಲ್ಲದಿದ್ದಾಗ ಜನಜೀವನ ಹೇಗಿದ್ದೀತು ಎಂದು ಊಹಿಸಿಕೊಳ್ಳಲೂ ಕಷ್ಟ.

ತೆಲುಗಿನ ಸ್ವಲ್ಪ ಪರಿಚಯವಿದ್ದುದರಿಂದ ಅಲ್ಲಿನ ಕೆಲವು ಬರಹಗಾರರ ಹೆಸರು ತಿಳಿದಿದೆ. ಬೆಜವಾಡ ಗೋಪಾಲರೆಡ್ಡಿ, ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಇತ್ಯಾದಿ. ಸತ್ಯನಾರಾಯಣ ಅವರದು ಬೇಜವಾಡವೇ. ಅವರ ಕಾದಂಬರಿ ವೆಯ್ಯಿಪಡಗಲು’ (ಸಾವಿರ ಹೆಡೆಗಳು) ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಅದನ್ನು ಈಗಿನ ನಮ್ಮ ಪ್ರಧಾನಿ ಪಿ.ವಿ ನರಸಿಂಹರಾಯರೇ ತೆಲುಗಿನಿಂದ ಹಿಂದಿಗೆ ಅನುವಾದಿಸಿದ್ದಾರೆ. ಅದನ್ನು ದೂರದರ್ಶನದ ರಾಷ್ಟ್ರೀಯ ಜಾಲದ ಪ್ರಸಾರಕ್ಕಾಗಿ ಧಾರಾವಾಹಿಯನ್ನು ಮಾಡುತ್ತಿರುವರಂತೆ. ಆದರ ನಿರ್ದೆಶಕ ನಮ್ಮ ಟಿ.ಎಸ್. ನಾಗಾಭರಣ ಎಂದು ಈಚೆಗೆ ಪೇಪರಿನಲ್ಲಿ ಓದಿದ್ದು ನೆನಪಾಯಿತು.

ಬೆಟ್ಟದ ಬುಡಕ್ಕೆ ಹಾಗೂ ನದಿಯ ಪಕ್ಕಕ್ಕೆ ಹಚ್ಚಿಕೊಂಡಿರುವ ವಿಜಯವಾಡ ತುಂಬ ಚಿತ್ರವತ್ತಾಗಿ ಕಾಣುತ್ತದೆ. ರೈಲಿನ ಕಿಟಕಿಯ ಮೂಲಕ ಕಣ್ಣು ಹಾಯಬಲ್ಲವರೆಗೂ ಹಬ್ಬಿರುವ ಮನೆಗಳ ಸಾಲು. ಬೆಟ್ಟದ ತಪ್ಪಲಲ್ಲಿ ಒಂಟೊಂಟಿ ಮನೆಗಳನ್ನು ಕಂಡರೆ, ಅಂಥ ಕಡೆ ಮನೆಯಿರುವುದು ಎಷ್ಟು ಚೆನ್ನ ಎಂಬ ರೊಮ್ಯಾಂಟಿಕ್ ಆಲೋಚನೆ. ಗೋದಾವರಿ ನದಿಗೆ ಅಲ್ಲಿ ಹಾಕಿರುವ ಸೇತುವ ಅದ್ಭುತವಾದದ್ದು, ಹೋದಷ್ಟೂ ಇನ್ನೂ ಇರುವ ವಿಶಾಲವಾದ ನದಿ ಆದು. ಬೇಸಿಗೆಯಾಗಿದ್ದರೂ ಹಸುರಿಗೆ ಕೊರತೆಯಿದ ಪರಿಸರ.

ಬೆಂಗಳೂರಲ್ಲಿ ರೈಲು ನಿಲ್ದಾಣದಲ್ಲಿಯೇ ನಾಗರಾಜ್‌ಗೆ ಪರಿಚಿತರಾದ ಸಂಗೀತಗಾರ ಬಸವನಗುಡಿ ನಟರಾಜನ್ ಮತ್ತು ಅವರ ಪರಿವಾರದ ಪರಿಚಯ, ಮೈಗೆ ಚೆನ್ನಾಗಿರದ, ವಿಖಾಖಪಟ್ಟಣದಲ್ಲಿರುವ, ಅತ್ತೆಯವರನ್ನು ಕಾಣಲು ಅವರ ಪ್ರಯಾಣ ನಮ್ಮ ರೈಲಿನಲ್ಲಿಯೇ; ಜೊತೆಗೆ ನಮ್ಮೊಡನೆಯೇ ಕಟಕ್‌ವರೆಗೆ ಬರಲಿದ್ದ ಯುವಕನೊಬ್ಬನ ಪರಿಚಯವೂ ಆಯಿತು. ಮೂಲತಃ ಒರಿಸ್ಸಾದವನು, ಕಟಕ್‌ನ ಉತ್ತರದ ಜಾಜ್‌ಪುರದವನು. ಬೆಂಗಳೂರಿನಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡು ಪೀಣ್ಯ ಕೈಗಾರಿಕಾ ನಗರದ ಯಾವುದೂ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿರುವವನು, ಕಟಕ್‌ನಲ್ಲಿ ತನ್ನ ಅಣ್ಣನ ಮನೆಯಲ್ಲಿರುವ ಅತ್ತಿಗೆಯನ್ನು ಕೆಲದಿನಗಳ ನಂತರ ಬೆಂಗಳೂರಿಗೆ ಕರತರಲು ಹೊರಟಿದ್ದಾನೆ. ಚೆನ್ನಾಗಿ ಕನ್ನಡ ಮಾತನಾಡುತ್ತಾನೆ. ಒರಿಸ್ಸಾಗಿಂತ ಕರ್ನಾಟಕ ಚೆನ್ನಾಗಿದೆಯೆಂದು ಹೇಳುತ್ತಾನೆ. ಕಟಕ್‌ನಲ್ಲಿರುವ ತನ್ನ ಅತ್ತಿಗೆಯ ಅಣ್ಣ ಸಿಐಡಿ ಇನ್ಸ್‌ಪೆಕ್ಟರ್‌ ಎಂದ; ಅವರ ತಮ್ಮ ಭುವನೇಶ್ವರದಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಎಂದು ಅವರ ಹೆಸರುಗಳನ್ನು ಹೇಳಿದ. ಹೋಗಿ, ನಿಮಗೆ ಸಹಾಯಮಾಡುತ್ತಾರೆ ಎಂದು ಆಶ್ವಾಸನೆ ನೀಡಿದ, ಅವರ ಹೆಸರು ಬರೆದಿತ್ತ; ಹಾಗೆಯೇ ಬೆಂಗಳೂರಿನ ನಮ್ಮ ವಿಳಾಸ ತೆಗೆದುಕೊಂಡ; ಭೇಟಿ ಮಾಡುವುದಾಗಿ ಹೇಳಿದ.

ಕತ್ತಲೆಯನ್ನು ಸೀಳಿಕೊಂಡು ರೈಲು ಓಡುವಾಗ ಕಿಟಕಿಯ ಮೂಲಕ ಕಣ್ಣು ಹಾಯಿಸಿದರೆ ಮನಸ್ಸಿನಲ್ಲಿ ಏನೇನೋ ವಿಚಿತ್ರ ಭಾವನೆಗಳು, ದಟ್ಟ ಕತ್ತಲ ನಡುವೆ ದೂರದಲ್ಲೆಲ್ಲೋ ಪಿಳಿಗುಟ್ಟುವ ಒಂದೆರಡು ದೀಪಗಳು. ಸಣ್ಣ ಊರಿರಬೇಕು. ಈಗ ದೀಪಗಳ ಬಳಿ ಜನ ಏನು ಮಾಡುತ್ತಿರಬಹುದು? ಅದು ಮನೆಯ ದೀಪವೋ, ಬೀದಿಯ ದೀಪವೋ, ಆ ದೀಪವಲ್ಲದಿದ್ದರೆ ಹೋಗಲಿ, ಆ ಊರಿನ ಮನೆಗಳಲ್ಲಿ ಏನಾಗುತ್ತಿರಬಹುದು? ಗಂಡ-ಹೆಂಡತಿ ಜಗಳ? ಪ್ರೀತಿ? ಅಥವಾ ಕೊಲೆಗಿಲೆ ನಡೆಯುತ್ತಿರಲೂಬಹುದಲ್ಲವೇ? ಯಾವುದೇ ಕ್ಷಣವಾದರೂ, ಈ ವಿಶಾಲ ಜಗತ್ತಿನಲ್ಲಿ ಏನೇನೋ ಸಂಭವಿಸುತ್ತಿರಬಹುದು. ಇಲ್ಲಿ ಕತ್ತಲಾಗಿದ್ದರೆ, ಬೇರೆಲ್ಲೊ ಬೆಳಕು, ಇಲ್ಲಿ ಬೆಳಕಿದ್ದರೆ ಬೇರೆಲ್ಲೋ ಕತ್ತಲೆ. ಕತ್ತಲೆ-ಬೆಳಕುಗಳಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಅದೆಷ್ಟು ಥರ, ಅದೆಷ್ಟು ವಿಧ? ಪ್ರೀತಿ- ಪ್ರೇಮ- ಕಾಮ; ವ್ಯವಹಾರ-ದರೋಡೆ, ಸಂತೋಷ-ದುಃಖ; ಔದಾರ್ಯ- ಕ್ಷುಲ್ಲಕತನ, ಹುಟ್ಟು-ಸಾವು - ಇವೆಲ್ಲವನ್ನೂ ಬಸಿರಲ್ಲಿ ಹೊತ್ತ ಅಸಂಖ್ಯಾತ ಸಂಗತಿಗಳು ಪ್ರತಿಕ್ಷಣವೂ ನಡೆಯುತ್ತಲೇ ಇರುತ್ತವಲ್ಲ. ಯಾರಿಗೂ ಎಂದಿಗೂ ಪೂರ್ಣವಾಗಿ ದಕ್ಕಲು ಸಾಧ್ಯವಿಲ್ಲದಷ್ಟು ಅಗಾಧವಾದ ಬದುಕಿನ ಎಳೆಗಳು; ಅವುಗಳ ಗೋಜಲು. ಅಗಾಧತೆಯಲ್ಲಿ ನನ್ನದೇ ವ್ಯಕ್ತಿಗತ ಜೀವನದ ಸಂಗತಿಗಳೆಂದರೆ ತೀರ ಅಲ್ಪವೇ? ದೂರದಲ್ಲಿ ಎಲ್ಲೋ ಏನೋ ನಡೆದ, ಬಹುಮುಖ್ಯವೆನ್ನಿಸಿದ, ಗಮನಕ್ಕೆ ಬಂದ ಕೆಲವು ಸಂತಿಗಳು ವರದಿಯಾಗುತ್ತವೆ; ಆದರೆ ವರದಿಯಾಗುವ ಕಾಲದಲ್ಲಿ ಕರಗಿಹೋಗುವ, ಸಮುದ್ರದ ಅಗಾಧ ತೆರೆಗಳ ನಡುವಣ ನೊರೆಯ ಸಣ್ಣ ಕಣಗಳಂತಹ ಅಸಂಖ್ಯ ಘಟನೆಗಳು ಎಲ್ಲೂ ದಾಖಲಾಗದೆ ಮರೆಯಾಗಿಬಿಡುತ್ತವೆ. ಒಂದು ಕ್ಷಣದಲ್ಲಿ ಇಷ್ಟು ಘಟನೆಗಳು, ಈಗಾಗಲೇ ಕಾಲಗರ್ಭದಲ್ಲಿ ಅಡಗಿ ಹೋಗಿರುವ ವರ್ಷಗಳಲ್ಲಿ ಅದೇನೇನು ಸಂಭವಿಸಿಲ್ಲ. ದಾಖಲಾದವು ದಾಖಲಾಗದವುಗಳ ಪ್ರಮಾಣಕ್ಕೆ ಹೋಲಿಸಿದರೆ ಸಿಂಧುವಿನ ಬಿಂದು ಅಲ್ಲವೇ? ಇಂಥ ಯೋಚನೆಗಳಿಗೆ ಕೊನೆಯೆಲ್ಲಿ! ಕಣ್ಣು ರೆಪ್ಪೆಯ ಮೇಲೆ ಕೂತ ಆಲೋಚನೆಗಳ ಭಾರ ತೂಕಡಿಸುವಂತೆ ಮಾಡುತ್ತವೆ. ದಡಕ್ಕನೆ ರೈಲು ನಿಂತರೆ ಸರಣಿಯೆಲ್ಲ ತುಂಡಾಗಿ ಮತ್ತೆ ರೈಲು ಡಬ್ಬಿಯೊಳಗಣ ವಾಸ್ತವಕ್ಕೆ ಮರಳುವಿಕೆ.

ಮತ್ತೆ ರೈಲಿನಲ್ಲಿ ಮಲಗಲು ಸಿದ್ಧತೆ. ಮನೆಯಿಂದ ಕಟ್ಟಿಕೊಂಡು ಬಂದಿದ್ದ ಚಪಾತಿ ಬುತ್ತಿಯ ಊಟ. ಆಮೇಲೆ ಒಬ್ಬೊಬ್ಬರು ಒಂದೊಂದು ಬರ್ತಿನಲ್ಲಿ ಕಾಲುಚಾಚುವುದು.

ಮಲಗಿದ್ದರೇನು, ನಿದ್ದೆ ಬಾರದು. ಹಗಲೆಲ್ಲ ಕೂತಿರಲು ಬೇಸರವಾಗಿ ಆಗಾಗ ನಿದ್ದೆ ಹೊಡೆದಿದ್ದರೆ ದಿನದ ನಿದ್ದೆಯ ಪ್ರಮಾಣದಲ್ಲಿ ಬಹುಪಾಲು ಆಗಲೇ ಖರ್ಚಾಗಿಬಿಟ್ಟಿರುತ್ತದೆ. ರೈಲಲ್ಲಿ ಮಲಗಿರುವುದೆಂದರೆ ಕೂತಿರಲು ಸಾಧ್ಯವಿಲ್ಲದ್ದರಿಂದ, ಹಾಗೂ ರಾತ್ರಿಯಾದ್ದರಿಂದ ಮಲಗಲೇಬೇಕು ಎಂಬ ನಿಯಮಕ್ಕನುಗುಣವಾಗಿ. ಅಲ್ಲದೆ, ಹತ್ತಿರದಲ್ಲಿಯೇ ಇರುವ ರೈಲಿನ ಕಕ್ಕಸು ಮನೆಗಳಿಂದ ಬರುವ ವಾಸನೆಯ ದಾಳಿ, ಯಾರೋ ಮೂರ್ಖರು, ಬಾಗಿಲೇ ಹಾಕಿಲ್ಲವೇನೋ! ಅದಕ್ಕೆ ಯಾರನ್ನು ಬಯ್ಯುವುದು. ಎಲ್ಲ ಹಾಯಾಗಿದ್ದಾರಲ್ಲ. ಅವರೆಲ್ಲ ನಿದ್ದೆ ಮಾಡುತ್ತಿದ್ದಾರೆಯೇ ಎಂಬ ಅನುಮಾನದಿಂದಾದ ಹೊಟ್ಟೆಕಿಚ್ಚು, ಅಥವಾ ಅವರಿಗೆ ಮೂಗೇ ಇಲ್ಲವೋ! ಇದ್ದರೂ ಯಾರು ಎದ್ದು ಹೋಗಿ ಹೋಗಿ ಕಕ್ಕಸು ಬಾಗಿಲು ಹಾಕುವವರು? ಪಾಲುಮಾರಿಕೆಯೋ, ಇಲ್ಲ ಯಾರೋ ಮಾಡಬೇಕಾದದ್ದನ್ನು ನಾವ್ಯಾಕೆ ಮಾಡಬೇಕೆಂಬ ಭಾವನೆಯೋ? ಇಂಥ ಪರಿಸ್ಥಿತಿಯಲ್ಲಿ ಮಾಡುವುದೇನು, ಯಾರಾದರೂ ಹಾಳಾಗಲಿ ಎಂದು ಶಪಿಸಿಕೊಂಡು ಮೇಲೆದ್ದು ಹೋಗಿ ಕಕ್ಕಸಿನ ಬಾಗಿಲು ಮುಚ್ಚಲು ಪ್ರಯತ್ನ. ಆದರೆ ಚಿಲಕಗಳು ಸರಿಯಾಗಿದ್ದರೆ ತಾನೇ; ಸ್ವಲ್ಪ ಪ್ರಯಾಸ, ಕೊನೆಗೂ ಬಾಗಿಲು ಬಂದ್ ಮಾಡಿ ಮರುಳುವ ಹೊತ್ತಿಗೆ ಇದ್ದಬದ್ದ ತಾಳ್ಮೆಯೂ ಹಾಳಾಗುತ್ತದೆ.

ನಾವು ಪ್ರಯಾಣಿಸುತ್ತಿದ್ದುದು ಬೆಂಗಳೂರು ಗೌಹತಿ ಎಕ್ಸ್‌ಪ್ರೆಸ್‌, ಫಾಸ್ಟ್ ಎಕ್ಸ್ಪ್ರೆಸ್. ಹೆಸರಿಗೆ ಸರಿಯಾಗಿ ಓಡೇನೋ ಓಡುತ್ತಿದೆ. ಬೆಂಗಳೂರಿಂದ ಮದ್ರಾಸ್ ತಲುಪುವವರೆಗೆ ರಾತ್ರಿಯಾಗಿದ್ದುದರಿಂದ ಆ ಮಧ್ಯೆ ಎಷ್ಟು ಕಡೆ ಎಷ್ಟು ಹೊತ್ತು ನಿಂತಿತ್ತೋ ತಿಳಿಯದು. ಆದರೆ ಮದ್ರಾಸ್ ಬಿಟ್ಟ ಮೇಲೆ ರೈಲು ಬಿಟ್ಟ ಬಾಣದಂತೆಯೇ ಸಾಗಿತ್ತು. ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ನಂತರ ಸಿಗುವ ಓಂಗೋಲ್‌ವರೆಗೂ ಎಲ್ಲಿಯೂ ನಿಲ್ಲಲಿಲ್ಲ. ಅಷ್ಟು ಕಡಿಮೆ ನಿಲುಗಡೆಗಳು, ಕಿಟಕಿಯ ಹೊರಗೆ ಅಡ್ಡಲಾಗಿ ಕೈಯಿಟ್ಟರೆ ರೈಲಿನ ಓಟಕ್ಕೆ ವಿರುದ್ದವಾಗಿ ಬೀಸುವ ಗಾಳಿ ಕೈಯನ್ನು ಹಿಂದೆ ನೂಕುವಷ್ಟು, ವೇಗ, ಅದೆಲ್ಲ ಸರಿ, ಆದರೆ ಗಾಡಿಯ ಸ್ವರೂಪ ಮಾತ್ರ ಕರ್ನಾಟಕ - ಅಸ್ಸಾಂಗಳ ರಾಜಧಾನಿಗಳ ಬಗ್ಗೆ ರೈಲ್ವೆ ಇಲಾಖೆಗೆ ಇರುವ ಮನೋಭಾವನೆ ಪ್ರತೀಕದಂತಿದೆ. ಹಳೆಯ ಕಾಲದ ರೈಲು ಡಬ್ಬಿಗಳು, ಕಕ್ಕಸಿನ ಬಾಗಿಲುಗಳು ಹಾಕಲಾಗದು. ಒಂದೆಡೆ ಸಾಧಾರಣವಾದ ಕಕ್ಕಿಸಿದ್ದರೆ, ಮತ್ತೊಂದೆಡೆ ಕಮೋಡ್, ಓಹ್, ಇದು ಅಂಗ್ರೇಜಿ ಸಾಹೇಬರು ದೇಶವಾಳುತ್ತಿದ್ದಾಗಲೂ ಓಡುತ್ತಿದ್ದ ಡಬ್ಬಿಗಳಿರಬೇಕು. ಒಂದು ಕಡೆ ನಲ್ಲಿಯಲ್ಲಿ ನೀರು ಬಂದರೆ, ಮತ್ತೊಂದೆಡೆ ಇಲ್ಲ. ಕೆಲವು ದೀಪಗಳಲ್ಲಿ ಸ್ವಲ್ಪ ಕಾಂತಿಯಿದ್ದರೆ, ಮತ್ತೆ ಕೆಲವು ಕೆಂಪಗಾದ ಕಣ್ಣುಗಳು ಅಷ್ಟೆ, ಸೀಟುಗಳು ಹೆಸರಿಗೆ ಮೆತ್ತೆ, ಒಳಗೆ ತೆಂಗಿನ ನಾರು; ಅದೂ ಅಲ್ಲಿ ಇಲ್ಲಿ ಇಣುಕುತ್ತ ಒಳಗಿರುವುದು ತಾನೇ ಎಂದು ತೋರಿಸಿಕೊಳ್ಳುತ್ತಿವೆ. ಮೇಲಿನ ಚರ್ಮಕ್ಕೆ ಅಲ್ಲಲ್ಲಿ ಹೊಲಿಗೆ ಹಾಕಿ ರಿಪೇರಿ, ಒಟ್ಟಲ್ಲಿ ಮಲಗಲು ನಮಗಾಗಿ ಇದ್ದದ್ದು ತೇಪೆಯ ಕೌದಿಗಳು !

ಬೆಂಗಳೂರು-ಗೌಹತಿ ನಡುವೆ ನಡುವೆ ವಾರಕ್ಕೆ ಒಂದು ಬಾರಿ ಮಾತ್ರ ಓಡಾಡುವ ರೈಲಿದು. ಪ್ರತಿನಿತ್ಯದ ರೈಲಾದರೆ ಅದರ ಕಡೆ ಒಂದಷ್ಟು ಗಮನವನ್ನು ಇಲಾಖೆ ಹರಿಸಲೇಬೇಕು. ಆದರೆ ಇದು ನೆನಪಿಗೆ ಬರುವುದು ವಾರಕ್ಕೆ ಒಮ್ಮೆ ಮಾತ್ರ. ಯಾವ ಬೇರೆ ರೈಲಿಗೂ ಲಾಯಕ್ಕಲ್ಲದ ಡಬ್ಬಿಗಳನ್ನು ದೂರ ಎಸೆದಿದ್ದು, ಕೊನೆಗಳಿಗೆಯಲ್ಲಿ ಒಟ್ಟಿಗೇ ಜಮಾಯಿಸಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಕಳಿಸುವುದೆಂದು ಕಾಣುತ್ತದೆ. ಕರ್ನಾಟಕದ ಜನವಾಗಲಿ, ಅಸ್ಸಾಮೀಯರಾಗಲಿ, ಪಾಪ ದೇವರಂಥವರು; ನೀಡಿದ್ದನ್ನು ಸ್ವೀಕರಿಸುವವರು, ಪಡೆದದ್ದನ್ನು ಹಸಾದವೆನ್ನುವವರು. ಆದರೆ ಈ ರೈಲು ತಮಿಳುನಾಡು, ಆಂಧ್ರ, ಪಶ್ಚಿಮ ಬಂಗಾಳಗಳ ಮೂಲಕವೂ ಹಾದು ಹೋಗುತ್ತದಲ್ಲ, ಆದರೇನು, ಇದು ದಿನನಿತ್ಯದ ರೈಲೂ ಅಲ್ಲ. ಪ್ರತಿನಿತ್ಯ ಬೇರೆ ಹತ್ತಾರು ರೈಲುಗಳೂ ಆ ಮಾರ್ಗದಲ್ಲಿ ಓಡಾಡುತ್ತವೆ; ಹಾಗಾಗಿ, ಆ ರಾಜ್ಯಗಳವರಾರೂ ಈ ರೈಲಲ್ಲಿ ತುರ್ತು ಪ್ರಸಂಗದ ಹೊರತು, ಪಯಣಿಸುವುದಿಲ್ಲವೇನೋ. ನಮ್ಮ ಪುಣ್ಯಕ್ಕೆ ಈಗೇನೋ ಸುಮಾರು ಸರಿಯಾದ ಕಾಲಕ್ಕೇ ಓಡುತ್ತಿದ್ದರೂ, ಎಂದೂ ತಡವಾಗಿಯೇ ಬರುವ ಈ ರೈಲಿಗೆ ಕಾದು ಕೂರುವವರಾರು, ಇಲ್ಲಿ ಸೌಲಭ್ಯಗಳಿಲ್ಲವೆಂದು ದೂರುವವರು ಯಾರು? ಹಾಗಾಗಿ, ಇದ್ದುದರಲ್ಲಿ ಚೊಕ್ಕವಾದ ರೈಲುಗಾಡಿಗಳ ನಡುವೆ ಇದು ಗಟ್ಟಿ ಹಲ್ಲುಗಳ ನಡುವೆ ಸಿಕ್ಕಿಕೊಂಡ ಆಹಾರದ ಚೂರಿನಂತೆ, ಹೇಗೋ ಸಾವರಿಸಿಕೊಂಡು ಓಡುತ್ತಿದೆ. ಬ್ರಿಟಿಷರ ಕಾಲದ ಡಬ್ಬಿಗಳಿಗೆ ವಾರಕ್ಕೊಮ್ಮೆ ಕಾಲು ಬಂದು ಅವು ಚಟುವಟಿಕೆಯನ್ನಷ್ಟು ಪಡೆಯುತ್ತವೆ.

ಮತ್ತೆ ಬೆಳಗಾಗುವ ಹೊತ್ತಿಗೆ ಒರಿಸ್ಸಾ ರಾಜ್ಯದ ಪರಿಧಿಯಲ್ಲಿ ಓಡುತ್ತಿದ್ದೆವು. ಬೆಳಗು ಎಂದರೆ ಆದಷ್ಟು ಬೇಗ! ಐದು ಗಂಟೆಗೇ ಬೆಳಕು. ಭಾರತದ ಪೂರ್ವ ತುದಿಗೆ ನಾವಿದ್ದುದರಿಂದ, ಬೆಂಗಳೂರಿಗಿಂತ ಒಂದು ಗಂಟೆಯಷ್ಟು ಮುಂಚೆಯೇ ಇಲ್ಲಿ ಬೆಳ್ಳಂಬೆಳಗು: ಸಂಜೆಯೂ ಹಾಗೆಯೇ, ನಮ್ಮಲ್ಲಿಗಿಂತ ಒಂದು ಗಂಟೆ ಮುಂಚೆ ಕತ್ತಲೆ. ನಾವು ನಿದ್ದೆ ತಿಳಿದದ್ದು ಮುಖ ತೊಳೆಯಲು ಹೋಗುವ ಹೊತ್ತಿಗೆ ಬಹುಮಂದಿ ಪ್ರಯಾಣಿಕರು ಪ್ರಾತರ್ವಿಧಿಗಳನ್ನೆಲ್ಲ ಮುಗಿಸಿ ಶಿಸ್ತಾಗಿ ಕುಳಿತ್ತಿದ್ದರು! ಸೋಮಾರಿಗಳಿಲ್ಲದ ಜನ, ಸೂರ್ಯನೊಡನೆದ್ದು ಚಟುವಟಿಕೆಯಿಂದಿರುವ ಜನ. ಆದರೆ ಈ ಜನ ಸ್ವಲ್ಪ ಶುಚಿಯಾಗಿದ್ದಿದ್ದರೆ ಎಷ್ಟು ಚೆನ್ನ! ಏನು ತಿಂದರೂ ಸಿಪ್ಪೆಯನ್ನು ಇದ್ದಲ್ಲಿಯೇ ಎಸೆದಿರುತ್ತಾರೆ. ಯಾರೋ ಒಬ್ಬ ಬಡ ಹುಡುಗ ಅದನ್ನಷ್ಟು ಗುಡಿಸಿದಂತೆ ಮಾಡಿ ಕೈಯೊಡ್ಡಿದರೆ ನಿರ್ಲಿಪ್ತರಾಗಿ ಕುಳಿತಿರುತ್ತಾರೆ. ಮುಖ ತೊಳೆಯಲು ಹೋದರೆ, ಅಲ್ಲಿಯ ಬೇಸಿನ್‌ಗಳಲ್ಲಿ ಕಾಣದ ವಸ್ತುವೇ ಇಲ್ಲ. ಹಣ್ಣಿನ ಸಿಪ್ಪ, ಹಳೆಯ ಟೂಥ್ ಪೇಸ್ಟ್ ಟ್ಯೂಬು - ಅವನ್ನೆಲ್ಲ ಅಲ್ಲಿಯೇ ಹಾಕುವುದು? ಯಾರೋ ಕಕ್ಕಸ್ಸಿನ ಒಳಗೆ ಸ್ನಾನವನ್ನೇ ಮಾಡಿದ್ದರೇನೊ, ಹೊರಗಡೆಯೆಲ್ಲ ನೀರು ಹರಿಯುತ್ತಿರುತ್ತದೆ. ಪಾಪ, ಬಾರದ ನೀರಿಗಾಗಿ ಕೊಳಾಯಿಗಳೊಡನೆ ನಡೆಸಿದ ಸಂಘರ್ಷದ ಫಲವಾಗಿ ನೀರು ಹೊರಚೆಲ್ಲಿರಲಿಕ್ಕೂ ಸಾಕು.

ಸಿಕ್ಕದ ಕಾಫಿಗಾಗಿ ಹಂಬಲಿಸುತ್ತ, ಚಹಾ ಎಂದು ಪ್ಯಾಂಟ್ರಿಯವನು ದುಬಾರಿ ಬೆಲೆಗೆ ನೀಡುವ ದ್ರವವನ್ನು ಹೀರುತ್ತ, ಮಾತಿಗೆ ಪೀಠಿಕೆ ಹಾಕುತ್ತ ಕಿಟಕಿಯ ಹೊರಗೆ ಕಣ್ಣು ಹಾಯಿಸಿದರೆ ಬಯಲು ಸೀಮೆ, ಹಸಿರು ಹೊದಿಕೆ, ಪ್ರಶಾಂತ ವಾತಾವರಣ. ಹೇಳದಿದ್ದರೆ ಇದು ಒರಿಸ್ಸಾ ಏನು ಕರ್ನಾಟಕವೇನು, ತಮಿಳುನಾಡೇನು - ಭೂಮಿ ಎಲ್ಲೆಡೆಯೂ ಒಂದೇ ಅಲ್ಲವೇ, ಜೀವರಾಶಿ ಒಂದೇ ಅಲ್ಲವೇ. ಮಣ್ಣಿನ ಪುಟ್ಟ ಮಡಕೆಗಳಲ್ಲಿ, ರೈಲು ನಿಂತೆಡೆ, ತಂದಿತ್ತ ಚಹಾ ಮತ್ತೊಮ್ಮೆ ಕುಡಿದು, ಈ ಪದ್ಧತಿ ಎಷ್ಟು ಒಳ್ಳೆಯದು ಎಂದು ಹೊಗಳುತ್ತ, ಪ್ಲಾಸ್ಟಿಕ್ ಬಟ್ಟಲಲ್ಲಿ ಕೊಟ್ಟ ಚಹಾ ಕುಡಿದು ಬಟ್ಟಲನ್ನು ಮುರಿದು ಹಾಕದಿದ್ದರೆ ಅದನ್ನೇ ಆರಿಸಿಕೊಂಡು ಹೋಗಿ ಮತ್ತ ನಮಗೆ ಅದರಲ್ಲೇ ಚಹಾ ಕೂಡುವರೆಂದು ಮುಖ ಸಿಂಡಿರಿಸುತ್ತಿದ್ದಾಗ, ರೈಲು ಆ ನಿಲ್ದಾಣದಿಂದ ಹೊರಟಾಗ ಮುಂದಿನ ನಿಲ್ದಾಣವೇ ಭುವನೇಶ್ವರವೆಂದು ತಿಳಿದು ಬ್ಯಾಗುಗಳಲ್ಲಿ ಸಾಮಾನುಗಳನ್ನು ತುರುಕಲು ತೊಡಗುತ್ತೇವೆ.

****

ದೂರದ ನಾಡಿನಲ್ಲಿ

ಭುವನೇಶ್ವರದಲ್ಲಿ ರೈಲು ನಿಲ್ದಾಣ ದಾಟಿ ಹೊರಗೆ ಬಂದಾಗ ನಮಗೆ ಸಿಕ್ಕಿದವನು ಕನ್ನಡ ಮಾತನಾಡಿದ! ಆಶ್ಚರ್ಯವೋ ಆಶ್ಚರ್ಯ. ಎಲ್ಲ ಕಡೆಯೂ ಕನ್ನಡಿಗರು ನೆಲಸಿದ್ದಾರೆ. ಆದರೆ ಅಲ್ಲಿನ ಪರಿಸರದಲ್ಲಿ ಪೂರ್ತಿ ಹೊಂದಿಕೊಂಡು ತಾವು ತಾವೇ ಅಲ್ಲವೇನೋ ಎಂಬಂತೆ ನಮ್ಮ ಜನ ಬಾಳುತ್ತಾರೆ. ಬಂದ ಹೊರಗಿನವರು ತಾವೇ ತುಂಬಿದ್ದೇವೆಂಬಂತೆ ಅಟಾಟೋಪ ಮಾಡುತ್ತಾರೆ. ಹೀಗೆ, ಎರಡೂ ಕಡೆ ಕನ್ನಡ ಒಳನೆಲೆಯಲ್ಲಿ ಉಳಿದುಬಿಡುವುದು ನಮ್ಮ ದುರ್ದೈವ. ಭುವನೇಶ್ವರ ಒರಿಸ್ಸಾ ರಾಜ್ಯದ ರಾಜಧಾನಿ. ಅಲ್ಲಿ ಏನಿಲ್ಲವೆಂದರೂ ಸಿಂಡಿಕೇಟ್, ಕೆನರಾ ಬ್ಯಾಂಕುಗಳ ಶಾಖೆಗಳಿರುತ್ತವೆ; ಎಂದರೆ ಕೆಲವರಾದರೂ ಕನ್ನಡಿಗರಿರುತ್ತಾರೆ. ಹಾಗೆಯೇ ಭಾರತವ್ಯಾಪಿ ಶಾಖೆಗಳನ್ನು ಹೊಂದಿದ ಉದ್ಯಮಗಳಲ್ಲಿ ಕನ್ನಡ ಬಲ್ಲವರು ಇರುವುದು ಸಹಜ ತಾನೇ.

ಭುವನೇಶ್ವರದ ರೈಲು ನಿಲ್ದಾಣದ ಹೊರಗೆ ಬಂದರೆ ಸೈಕಲ್ ರಿಕ್ಷಾಗಳು ಪ್ರಯಾಣಿಕರಿಗಾಗಿ ಕಾಯುತ್ತಿದ್ದವು. ಆಟೋ ರಿಕ್ಷಾಗಳು ಕಡಿಮೆ. ನಿಲ್ದಾಣದ ತಕ್ಷಣವೇ ಇದ್ದದ್ದು ಆಚೀಚೆ ಹರಿಯುವ ಮಣ್ಣಿನ ಹಾದಿ. ನಾವು ಒಬ್ಬನನ್ನು ಗೊತ್ತು ಮಾಡಿಕೊಂಡೆವು. ಯಾವುದಾದರೂ, ಹೋಟೇಲಿಗೆ ಕರೆದುಕೊಂಡು ಹೋಗಲು ಕೇಳಿದೆವು - ಹರಕು ಮುರುಕು ಹಿಂದಿಯಲ್ಲಿ, ನಾವು ಕನ್ನಡದಲ್ಲಿ ಮಾತನಾಡಿಕೊಂಡದ್ದು ನೋಡಿ ಅವನು ಕನ್ನಡದಲ್ಲಿ ಮಾತನಾಡಿದ! ಧಾರವಾಡದ ಕಡೆಯ ಉಚ್ಚಾರ. ಅಷ್ಟೇ ಅಲ್ಲ, ಅವನ ಜತೆ ಮಾತನಾಡಿದ ಇನ್ನೊಬ್ಬ ರಿಕ್ಷಾ ಚಾಲಕನು ಕನ್ನಡ ಬಲ್ಲವನಂತೆ, ಸಾವಿರದ ಆರುನೂರು ಕಿಲೋಮೀಟರು ಪ್ರಯಾಣ ಮಾಡಿ ಬೆಳ್ಳಂಬೆಳಗು ಯಾರೊಡನೆಯೋ ಮಾತಾಡಿದರೆ ಅವನು ಕನ್ನಡ ಬಲ್ಲವನೆಂದರೆ! ಎಂಥವನಿಗೂ ಇದು ಶುಭ ಶಕುನ ಎನ್ನಿಸಬೇಕು. ಹಾಗೇ ಆಯಿತು, ನಮಗೆ ಋಷಿಯಾಯಿತು. ಅವನು ಧಾರವಾಡದ ಕಡೆಯವನೇ ಅಂತೆ; ಹತ್ತು ವರ್ಷಗಳ ಹಿಂದೆ ಇಲ್ಲಿಗೆ ಬಂದು ಈ ವೃತ್ತಿ ಮಾಡುತ್ತಿದ್ದಾನೆ. ಹೆಸರು ಏನೋ ಹೇಳಿದ, ಮರೆತಿದೆ; ಇಲ್ಲಿಗೆ ಬರುವ ಮುಂಚೆ ಸೂಪಾ ಅಣೆಕಟ್ಟಿನ ನಿರ್ಮಾಣದಲ್ಲಿ ಕಲಸ ಮಾಡುತ್ತಿದ್ದನಂತೆ ಕೂಲಿಯಾಗಿ, ಹಾಗೆಯೇ ಅವನು ಬಲ್ಲವನೆಂದು ಹೇಳಿದನಲ್ಲ, ಇನ್ನೊಬ್ಬ ರಿಕ್ಷಾ ಚಾಲಕ, ಅವನು ಕೂಡ ಹೆಂಡತಿ ಮಕ್ಕಳೊಡನೆ ಈಗ ಇಲ್ಲಿಯೇ ವಾಸ. ಇತರ ಕೆಲವು ರಿಕ್ಷಾ ಚಾಲಕರ ಜತೆ ಅವನು ಮಾತನಾಡಿದ್ದು ತೆಲುಗಿನಲ್ಲಿ ಎಂಥ ರಭಸದ ತೆಲುಗು ಅದು! ತೆಲುಗು ಬಲ್ಲೆವೆಂದು ಭಾವಿಸಿದ್ದ ನಮಗೆ ಅರ್ಥವಾಗುತ್ತಿದ್ದುದು ಅಲ್ಲೊಂದು ಇಲ್ಲೊಂದು ಕ್ರಿಯಾಪದ. ಪ್ರಾಯಶಃ ಮಾತಿನ ಸರಣಿಯನ್ನು ಮೂಲ ಪದಗಳಾಗಿ ವಿಂಗಡಿಸಿದ್ದಿದ್ದರೆ ಇನ್ನಷ್ಟು ಅರ್ಥವಾಗುತ್ತಿತ್ತೇನೋ!

ಬರಿಯ ಸಾಮಾನು ರಿಕ್ಷಾದಲ್ಲಿ ಹಾಕಿ ನಾವು ಅವನ ಹಿಂದೆ ನಡೆದೇ ಹೋದೆವು. ಅವನು ಕನ್ನಡ ಬಲ್ಲವನಾದ್ದರಿಂದ ಆತ್ಮೀಯ, ಅವನಿಗೆ ಶ್ರಮ ಕಡಿಮೆಯಾಗಲಿ ಎಂಬ ಹಾರೈಕೆ, ಅಲ್ಲದೆ ನಾವೂ ಕರುಣಾಮಯಿಗಳು. ಪಾಪ ನಮ್ಮನ್ನೆಲ್ಲ ಕೂಡಿಸಿಕೊಂಡು ಆ ಭಾರವು ತುಂಬಿದ ಸೈಕಲ್ ತುಳಿಯುವುದನ್ನು ನೋಡುವುದೆಂದರೆ, ನಮ್ಮ ಮೈ ಭಾರ ಅವನಿಗೆ ನೀಡುವ ಕಷ್ಟವನ್ನು ಕಣ್ಣಾರೆ ಕಾಣುವುದೆಂದರೆ ನಮಗೆ ಸರಿಹೋಗದು: ಪ್ರಾಯಶಃ ತುಂಬ ಮುಖ್ಯವಾದದ್ದು, ನಮ್ಮ ಸಾಮಾನುಗಳೇ ರಿಕ್ಷಾದ ತುಂಬ ತುಂಬಿಕೊಂಡಿದ್ದು. ಅವನು ಅದು ಇದು ಹೇಳುತ್ತ ಮಣ್ಣಿನ ದಾರಿಯ ಗುಂಟ ರಿಕ್ಷಾ ನೂಕಿಕೊಂಡು ಏರು ದಾರಿಯಲ್ಲಿ ನಡೆದ, ನಾವು ಅವನ ಹಿಂದೆ. ಸುಮಾರು ದೂರ ಹೋದ ಮೇಲೆ ಒಳ್ಳೆಯ ಟಾರ್ ಹಾಕಿದ ಡಬ್ಬಲ್ ರಸ್ತೆ ಅಡ್ಡ ಬಂತು. ಅದರ ಮೇಲೂ ಒಂದಷ್ಟು ಏರು ದಾರಿಯಲ್ಲಿ ರಿಕ್ಷಾ ನೂಕಿಕೊಂಡು ರೈಲ್ವೆ ಓವರ್ ಬ್ರಿಜ್ ಒಂದನ್ನು ದಾಟಿದ ಮೇಲೆ ನಮ್ಮನ್ನು ರಿಕ್ಷಾದಲ್ಲಿ ಕುಳಿತುಕೊಳ್ಳುವಂತೆ ಚಾಲಕ ಹೇಳಿದ; ಇಳಿಜಾರು ಇರುವುದರಿಂದ ಕಷ್ಟವಿಲ್ಲ ಎಂದು ಹೇಳಿದ ಮೇಲೆ ನಾವು ಮೂರು ಜನ ಕೂತವು! ರಿಕ್ಷಾ ಇಬ್ಬರಿಗೆ ಸರಿ; ಅದರಲ್ಲೂ ಒಬ್ಬರು ವಿಶಾಲ ದೇಹಿಗಳಾದರೆ ಕಷ್ಟ, ಅಂಥದ್ದರಲ್ಲಿ ನಾವು ಸಾಮಾನುಗಳ ನಡುವೆ ಹೇಗೋ ಹೇಗೋ ಕೂತೆವು. ನಡೆಯುವುದು ಎಷ್ಟು ಸುಖ ಎನ್ನಿಸುತ್ತಿತ್ತು ರಿಕ್ಷಾದಲ್ಲಿ ಕೂತ ಕಾಲಪೂರ್ತಿ.

ರಿಕ್ಷಾದ ಪ್ರಯಾಣಿಕರಿಗೆ ಬಿಸಿಲೇರಿದಾಗ ನೆರಳು ಒದಗಿಸಲು ಮೇಲೆ ಕವಿಯಬಲ್ಲಂತಹ ಮುಸುಕಿನ ವ್ಯವಸ್ಥೆ, ನೆರಳು ಬೇಕಿಲ್ಲದಾಗ ಹಿಂದೆ ಸರಿಸಬಹುದು. ಆ ಮುಸುಕು ಎಷ್ಟು ತಗ್ಗು ಎಂದರೆ ಮುಂದೆ ತುಳಿಯುವ ಚಾಲಕನ ಸೊಂಟದ ಕೆಳಗಿನ ಭಾಗ ಮಾತ್ರ ಕಾಣುತ್ತಿತ್ತು. ಹಾಕಿಕೊಂಡ ಹಾಗೆ ಹೊಸದಾಗಿ ಮದುವೆಯಾದ ದಂಪತಿಗಳು ಒತ್ತಾಗಿ ಕೂತು, ಕತ್ತು ತಿರುಗಿಸಿದರೆ ಪಕ್ಕದವರ ಕೆನ್ನೆಗೆ ಮೂಗು ತಾಕುತ್ತ ಸಲಿಗೆ ಬೆಳೆಸಿಕೊಳ್ಳಲು ಸರಿಯಾದ ವಾಹನ. ಆದರೆ ಜನರನ್ನು ಕೂರಿಸಿಕೊಂಡು ಏದುಸಿರು ಬಿಡುತ್ತಾ, ಮೈಯೆಲ್ಲ ಬೆವರಾಗಿ ತುಳಿಯುವ ಚಾಲಕನನ್ನು ಕಂಡಾಗ, ಆಟೋರಿಕ್ಷಾಗಳ ವ್ಯವಸ್ಥೆ ಹೆಚ್ಚಾಗಬಾರದೇ ಎಂದು ಅನ್ನಿಸಿತು. ಹಿಂದೆ, ಮದ್ರಾಸ್ ಹೈದ್ರಾಬಾದ್ ನಗರಗಳಲ್ಲಿ ನಾವು ಕಂಡಿದ್ದಂತೆ ಜನರನ್ನು ಕೂಡಿಸಿಕೊಂಡು ದನದಂತೆ ಎಳೆಯುತ್ತ ದಾರಿಯ ಉದ್ದಕ್ಕೂ ಓಡುತ್ತಿದ್ದ ಎಳೆಯುವ ರಿಕ್ಷಾಕ್ಕಿಂತ ಸೈಕಲ್ ರಿಕ್ಷಾ ಉತ್ತಮ. ಆದರೆ ಈ ಶ್ರಮ ತಪ್ಪಿಸಲು ಮೋಟರನ್ನು ರಿಕ್ಷಾಕ್ಕೆ ಅಳವಡಿಸಿದರೆ ಎಷ್ಟು ಚೆನ್ನ ಎನ್ನಿಸಿತು. ಆದರೆ ಬೆಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕರ ಧಿಮಾಕು ನೆನಪಿಗೆ ಬಂದಾಗ ನಮ್ಮ ಹಾರೈಕೆ ಸರಿಯೇ ಎಂಬ ಅನುಮಾನ ಒಂದು ಕ್ಷಣ. ಆದರೆ ಪುರೋಗಾಮಿ ಸ್ವಭಾವದ ನಾವು ಚಾಲಕರ ಶ್ರಮ ನಿವಾರಣೆಯ ಉಪಾಯಗಳನ್ನು ಹುಡುಕುವ ಕಡೆಗೇ ಬೆಂಬಲ ನೀಡುವವರು!

ನಾವು ಸ್ನಾನ ಮುಗಿಸಿ, ಉಳಿದುಕೊಂಡಿದ್ದ ಹೋಟಲ್ಲಿನಿಂದ ನಮ್ಮ ಸ್ನೇಹಿತರ ಮನೆಯ ಕಡೆ ಹೊರಟೆವು. ಸ್ನೇಹಿತರೆಂದರೆ ಡಾ. ಬಸಂತ ಕುಮಾರ್‌ ಪಂಡಾ, ಭುವನೇಶ್ವರದ ಬಳಿಯ ಕಾಲೇಜುವೊಂದರಲ್ಲಿ ಒರಿಯಾ ಅಧ್ಯಾಪಕರು; ಎರಡೂವರೆ ವರ್ಷಗಳ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ ರಾಷ್ಟ್ರೀಯ ಸಾಹಿತ್ಯಕೃತಿಗಳ ಅನುವಾದ ಕಮ್ಮಟದಲ್ಲಿ ನಾನು ಪಂಡಾ ಸಹಭಾಗಿಗಳಾಗಿದ್ದವರು. ಆದರೆ ಅವರು ಹೇಗಿರುವರೆಂದು ನೆನಪಿಲ್ಲ. ಆ ಕಮ್ಮಟದಲ್ಲಿ ನೀಡಿದ್ದ ಭಾಗಿಗಳ ವಿಳಾಸದ ಯಾದಿಯನ್ನು ಪರಿಶೀಲಿಸಿ ಅವರಿಗೆ ಕಾಗದ ಬರೆದಿದ್ದೆ - ನಮ್ಮ ಒರಿಸ್ಸಾ ಪ್ರವಾಸದ ವಿಷಯ ಕುರಿತು. ಅವರಿಂದ ಉತ್ತರ ಬಂದಿತ್ತು - ಬನ್ನಿ ಎಂದು ಸ್ವಾಗತಿಸಿ. ಹಾಗಾಗಿ ಅವರ ಹೆಸರು ಹಿಡಿದು ವ್ಯಕ್ತಿಯನ್ನು ಹುಡುಕುತ್ತ ಹೊರಟೆವು. ಅವರ ಮನೆ ಅಶೋಕ ನಗರದಲ್ಲಿ; ವಿಚಾರಿಸಿದಾಗ ಅದು ವಿಶಾಲವಾದ ಬಡಾವಣೆ ಎಂದು ಉತ್ತರ ಬಂತು. ಎಷ್ಟು ದೂರವೋ ಎಂದು ಹೆದರಿ ಒಂದು ರಿಕ್ಷಾ ಏರಿ ಅಶೋಕನಗರದ ಬಳಿ ಬಿಡು ಎಂದೆವು. ಒಂದೆಡೆ ಇಳಿಸಿದ. ಅವನಿಗಿಂತ ಹೆಚ್ಚಾಗಿ ನಮಗೆ ನೆಮ್ಮದಿ, ಏರು ದಾರಿಯಲ್ಲಿ ಹಿಂದೆ ಕುಳಿತ ನಮಗೆ ಅವನ ಬೆನ್ನ ಭಾಗದ ಬಟ್ಟೆ ಬೆವರಿನಿಂದ ತೊಯ್ದು ಹೋದದ್ದನ್ನು ಕಾಣುವಂತೆ ತುಳಿಯುತ್ತಿದ್ದಾಗ ಇನ್ನು ರಿಕ್ಷಾ ಹತ್ತುವುದು ಬೇಡ ಎಂದು ತೀರ್ಮಾನಿಸಿದೆವು. ಆದರೆ ಎಲ್ಲ ತೀರ್ಮಾನಗಳಾಗುವದು ಮುರಿಯುವುದಕ್ಕಾಗಿಯೇ ಎಂಬ  ಅಂಶ ಇದಕ್ಕೂ ಅನ್ವಯಿಸುವಂಥದ ತಾನೇ!

ಇಳಿದು ವಿಳಾಸ ಹಿಡಿದು, ನಿಧಿಗಾಗಿ ದೀಪ ಹಿಡಿದು ಹಿಂದಿನ ಕಾಲದಲ್ಲಿ ಹೋಗುತ್ತಿದ್ದರೆಂಬ ಉಲ್ಲೇಖ ಕಾವ್ಯಗಳಲ್ಲಿ ಬರುತ್ತದಲ್ಲ ಹಾಗೆ. ಪಂಡ ಅವರನ್ನು ಹುಡುಕುತ್ತ ಹೋದೆವು. ಎಲ್ಲವೂ ಅಶೋಕ ನಗರವೇ! ಆದರೆ ಅವರ ಮನೆ ಮಾತ್ರ ಅಷ್ಟು ಬೇಗ ಸಿಗಲಿಲ್ಲ. ಅಲ್ಲಿ ಇಲ್ಲಿ ಹೋಗಿ ತಿರುಗಿ ಎಂಬ ಅವರ ಸೂಚನೆಯನ್ನು ಅನುಸರಿಸುತ್ತ ಬೆವರ ಸುರಿಸಿದೆವು. ಏಕೆಂದರೆ ಆ ಹೊತ್ತಿಗೆ ಪರಮಾತ್ಮನ ಕರುಣೆ ಎಲ್ಲೆಡೆಯಲ್ಲ ಧಾರಾಕಾರವಾಗಿ ಹರಿಯುತ್ತಿತ್ತು. ಒಂಬತ್ತಕ್ಕೇ ಹೀಗೆ, ಹನ್ನೆರಡಕ್ಕೆ ಹೇಗೆ ಎಂಬ ತ್ರೈರಾಶಿಯ ಲೆಕ್ಕ ಹಾಕುತ್ತ ಮುನ್ನಡೆದೆವು. ಹುಡುಕಾಟದ ಜೊತೆಜೊತೆಗೇ ಕೊನೆಗೂ ಅವರು ನೀಡಿದ್ದ ಮನೆಯ ನಂಬರನ್ನು ಪತ್ತೆ ಹಚ್ಚಿ ಆದರ ಮುಂದೆ ನಿಂತೆವು. ಆದರೆ ಇದಲ್ಲ, ಪಕ್ಕದ ಮನೆ ಎಂದರು ಅಲ್ಲಿ ಹೋದವು

ಬಾಗಿಲು ಬಡಿದಾಗ ತೆಗೆದದ್ದು ಕೆಲಸದವಳು. ಯಜಮಾನರಿದ್ದಾರೆಯೇ ಎಂದರೆ, ‘ಇಲ್ಲ’ ಎಂದಳು.  ಆಷ್ಟೆ ಮಾತುಕತೆ, ಏಕೆಂದರೆ ಅವಳಿಗೆ ಬರುವುದು ಒರಿಯ ಮಾತ್ರ, ನಮಗೆ ಅದು ಬಿಟ್ಟಂತೆ ಉಳಿದೆರಡು ಮೂರು ಭಾಷೆಗಳು. ನಮ್ಮ ಪುಣ್ಯಕ್ಕೆ, ಆ ವಠಾರದ ಮತ್ತೊದುದ ಮನೆಗೆ ಸೇರಿದ ಗಂಡಸರೊಬ್ಬರು ಕಾಣಿಸಿದರು. ಇಂಗ್ಲಿಷಿನಲ್ಲಿ ಮಾತನಾಡಲು ಸಾಧ್ಯವಾಯಿತು. ಅವರು ಕೆಲಸದಾಕೆಯ ತೆತ ಮಾತಾಡಿ ಡಾ ಪಂಡಾ ಕಾಲೇಜಿಗೆ ಹೋಗಿದ್ದಾರೆಂದೂ, ಸ್ವಲ್ಪ ಹೊತ್ತಿಗೆ ವಾಸ್ಸಾಗುವರೆಂದೂ ತಿಳಿಯಿತು. ಎಲ್ಲಾದರೂ ಸುತ್ತಾಡಿ ರೋಣ ಎಂದು ಮತ್ತೆ ಬೀದಿಗಿಳಿದವು

ವಾಪಸ್ಸು ಒಂದು ಬೆವರೊರಸಿಕೊಳ್ಳುತ್ತ ಬಾಗಿಲು ಬಾಗಿಲು ತಟ್ಟಿದಾಗ ಮ್ಮನ್ನು ಎದುರುಗೊಂಡದ್ದು ಪ್ರಾಯಶ ಪಂಡಾ ಅವರೇ, ನಮ್ಮ ಪರಿಚಯ ಹೇಳಿಕೊಂಡೆವು. ಒಳಗೆ ಬನ್ನಿ ಎಂದು ಅವರು ತಿರುಗಿದಾಗಿ ಅವರನ್ನು ನಾವು ಹಿಂಬಾಲಿಸಿದೆವು. ಸುಮಾರು ಅಳತೆಯ ಹಾಲೊಂದರಲ್ಲಿ ನಮ್ಮನ್ನು ಕೊಡಿಸಿದರು, ಫ್ಯಾನ್ ಹಾಕಿದರು. ನಾನು ಅವರಿಗೆ ಬರೆದಿದ್ದ ಕಾಗದದಲ್ಲಿ ವಿವರಗಳನ್ನು ಬರೆದಿದ್ದುದರಿಂದ ಹೆಚ್ಚಿನ ಮಾತಿಗೆ, ಆ ಬಗ್ಗೆ ಆವಶ್ಯಕತೆಯಿರಲಿಲ್ಲ ಮಾತನಾಡುತ್ತ ಕೂತೆವು.

ಡಾ. ಪಂಡಾ ಅವರ ಪತ್ನಿಯೂ ಅವರ ಕಾಲೇಜಿನಲ್ಲಿಯೇ ಭೌತಶಾಸ್ತ್ರ ಅಧ್ಯಾಪಕಿ, ನ್ಯೂಕ್ಲಿಯರ್ ಭೌತವಿಜ್ಞಾನದಲ್ಲಿ ಆಕೆ ಪಿ.ಎಚ್.ಡಿ. ಪದವೀಧರೆ. ಡಾ. ಬಸಂತ ಕುಮಾರ್ ಪಂಡಾ ಹೆಸರೇ ಸೂಚಿಸುವಂತೆ ಬ್ರಾಹ್ಮಣರು, ಪುರೋಹಿತ ಕುಟುಂಬಕ್ಕೆ ಸೇರಿದವರು. ಪುರಿಯವರು. ಜಗನ್ನಾಥನ ದೇವಸ್ಥಾನದ ಪಕ್ಕದಲ್ಲಿಯೇ ಅವರ ಮನೆಯಂತೆ. ಅವರ ಉನ್ನತ ವಿದ್ಯಾಭ್ಯಾಸವೆಲ್ಲ ಶಾಂತಿನಿಕೇತನದಲ್ಲಿ, ಅವರಿಗೆ ಗುರುಳಾಗಿದ್ದ ಆ ವಿಶ್ವವಿದ್ಯಾಲಯದ ಒರಿಯಾ ವಿಭಾಗದ ಮುಖ್ಯಸ್ಥ ಡಾ. ಖಗೇಶ್ವರ ಮಹಾಪಾತ್ರರ ಮಗಳೇ ಬಸಂತ ಕುಮಾರರ ಹೆಂಡತಿ, ಈಗ ಪರೀಕ್ಷಾ ಸಮಯ ಕೊಠಡಿಯ ಉಸ್ತುವಾರಿ ಕೆಲಸವಿದ್ದ ಹೆಂಡತಿಯನ್ನು ಕಾಲೇಜಿಗೆ ಸ್ಕೂಟರಿನಲ್ಲಿ ಬಿಟ್ಟು ಪಂಡಾ ಬಂದಿದ್ದರು; ಸದ್ಯ ಅವರಿಗೆ ಆಗ ಆ ಕೆಲಸವಿರಲಿಲ್ಲ. ಅವರ ಕಾಲೇಜು ಪುರಿ ರಸ್ತೆಯಲ್ಲಿಯೇ ಸುಮಾರು ನಲವತ್ತು ಕಿಲೋಮೀಟರು ದೂರದ ನಿಮಾಪುರದಲ್ಲಿದೆ. ಖಾಸಗೀ ಕಾಲೇಜಾದರೂ ಅಧ್ಯಾಪಕರಿಗೆ ವರ್ಗಾವಣೆಯಿದೆ.

ಪಂಚೆಯುಟ್ಟು ಬರಿಮೈಯಲ್ಲಿ ಕೂತು ನಿಧಾನವಾಗಿ ಮಾತನಾಡುವ ಡಾ.ಪಂಡಾ ಮೂವತ್ತೇಳು ಮೂವತ್ತೆಂಟರ ತರುಣ, ಹಿತಮಿತಭಾಷಿ, ಮೊದಲ ಭೇಟಿಯೇ ಒಂದರ್ಥದಲ್ಲಿ. ಏಕೆಂದರೆ ಹಿಂದೆ ಭೇಟಿಮಾಡಿದ್ದು ನೆನಪಿನಲ್ಲೇ ಇರಲಿಲ್ಲ. ನನಗೆ ಒರಿಯಾ ಭಾಷೆಯ ಪ್ರತಿನಿಧಿಗಳಲ್ಲಿ ದೆಹಲಿಯ ಅನುವಾದ ಕಮ್ಮಟದಲ್ಲಿ ಭಾಗಿಗಳಾದವರಲ್ಲಿ ನೆನಪಿನಲ್ಲಿ ಉಳಿದಿದ್ದವರೆಂದರೆ ಶ್ರೀನಿವಾಸ್ ಪತ್ತಿ ಎಂಬ ಯಾವುದೂ ಕಾಲೇಜಿನ ರಾಜ್ಯಶಾಸ್ತ್ರ ಅಧ್ಯಾಪಕರು. ಅವರು ನೆನಪಿನಲ್ಲಿ ಉಳಿಯಲು ಕಾರಣವೂ ಇದೆ. ೧೯೯೧ ರ ಕೊನೆಯಲ್ಲಿ ಡಿಸೆಂಬರ್ ಚಳಿಯಲ್ಲಿ ನಡೆದಿತ್ತು ಕಮ್ಮಟ ದೆಹಲಿಯಲ್ಲಿ, ನಡೆದ ಸ್ಥಳ ವಿಶ್ವ ಯುವಕ ಕೇಂದ್ರದಲ್ಲಿ, ದೆಹಲಿಯ ಸುಂದರವಾದ ಪ್ರದೇಶದಲ್ಲಿ. ಅಲ್ಲಿ ನಮಗೆ ವಸತಿ ಒದಗಿಸಿದ್ದುದು ನಾಲ್ಕನೆಯ ಮಹಡಿಯ ಮೇಲೆ, ಲಿಫ್ಟ್ ಇರಲಿಲ್ಲ. ಜೊತೆಗೆ ಒಂದರ ಮೇಲೆ ಒಂದರಂತೆ ಎರಡು ಅಂತಸ್ತುಗಳ ಮಂಚ. ಅಲ್ಲಿಂದ ಇಳಿದು, ಇಲ್ಲಿಂದ ಹತ್ತಿ ಅನುವಾದ ಮಾಡಹೊರಟರೆ ಆಗುತ್ತಿದ್ದುದೆಂದರೆ ಕಾಲು ನೋವು, ಉಬ್ಬಸ, ರಕ್ತದೊತ್ತಡ ಏರುವಿಕೆ ಇವುಗಳೇ. ಅಭ್ಯರ್ಥಿಗಳು ಅನೇಕರು ಐವತ್ತು ದಾಟಿದವರು, ಕೆಲವರು ಹತ್ತಿರದವರು. ಒಂದು ಚಾ ಕುಡಿಯಲೂ ನಾಲ್ಕು ಮಹಡಿ ಇಳಿಯಬೇಕಾದರೆ, ಹತ್ತಬೇಕಾದರೆ, ಮೊದಲ ದಿನ ವರದಿ ಮಾಡಿಕೊಳ್ಳುವ ವೇಳೆಗೇ ಇಳಿಹೊತ್ತು. ಆದರೆ ಆ ರಾತ್ರಿ ವಿವಿಧ ಭಾಷೆ-ರಾಜ್ಯಗಳ ಪ್ರತಿನಿಧಿಗಳಾಗಿ ಬಂದಿದ್ದ ಅಭ್ಯರ್ಥಿಗಳಲ್ಲಿ ಭಾವೈಕ್ಯತೆ ಸುಲಭವಾಗಿ ಮೂಡಿತು. ಈ ವಿರುದ್ದ ಪ್ರತಿಭಟಿಸಬೇಕೆಂದು ಆ ರಾತ್ರಿ ನಿದ್ದೆಯನ್ನು ಕಡೆಗಣಿಸಿ ಮಾತಾಡಿದವು. ಆಗಲೇ ಹಾಳೆಯೊಂದರ ಮೇಲೆ ನಮ್ಮ ಆಕ್ರೋಶ ವ್ಯಕ್ತಪಡಿಸಿ ಒಂದು ಮನವಿ ಸಿದ್ಧಪಡಿಸಿದೆವು. ಸರಿಯಾದ ವಸತಿ ವ್ಯವಸ್ಥೆಯಾಗಿದಿದ್ದರೆ ನಾವು ಹಿಂತಿರುಗುತ್ತೇವೆ ಎಂದು ಹೆದರಿಸಿದ್ದೆವು. ಎಲ್ಲರ ಸಹಿ ಸಂಗ್ರಹಣೆಯಾಯಿತು. ಮಾರನೇ ದಿನ ಬೆಳಿಗ್ಗೆಯೇ, ಅಭ್ಯರ್ಥಿಗಳ ನೋಂದಾವಣೆಗೆಂದು ಬಂದ ಸಾಹಿತ್ಯ ಅಕಾಡೆಮಿ ಅಧಿಕಾರಿಗಳು ಡಿಸೆಂಬರ್‌ನ ದೆಹಲಿಯ ಡಿಗ್ರಿ ತಾಪಮಾನದಲ್ಲಿಯೇ ಬೆವರು ಸುರಿಸುವಂತಾಯಿತು. ಮುಂದೆ ಎಲ್ಲ ಸುಗಮವಾಯಿತೆನ್ನಿ. ಸ್ವಲ್ಪ ಪ್ರತಿಭಟನೆ-ಚಳುವಳಿಗಳ ಹಿನ್ನೆಲೆಯಿದ್ದ ನಾನು ಇದರಲ್ಲಿ ತಕ್ಕಷ್ಟು ಗಮನೀಯ ಪಾತ್ರ ವಹಿಸಿದ್ದೆ. ಶ್ರೀನಿವಾಸ್ ಪತ್ತಿ ಕೂಡ. ಹಾಗಾಗಿ ನನಗೆ ಅವರ ಮುಖದ ನೆನಪಿದ್ದಂತೆ ಪಂಡಾ ಅವರದಿರಲಿಲ್ಲ. ಪ್ರಾಯಶಃ ನನ್ನ ವಿಷಯದಲ್ಲಿ ಆತನಿಗೂ ಅದೇ ಅನುಭವವಿರಬೇಕು.

ಪಂಡ ಅವರಿಗೆ ತುಂಟನಾದ ಪುಟ್ಟ ಮಗನೊಬ್ಬನಿದ್ದಾನೆ - ಅಯನ ಎಂದು ಅವನ ಹೆಸರು, ತಮ್ಮ ಬರವಣಿಗೆಗೆ ಇಬ್ಬರು ಶತ್ರುಗಳೆಂದು ಅವರು ವಿವರಿಸುತ್ತಾರೆ; ಆಗಾಗ್ಗೆ ಹೋಗುವ ವಿದ್ಯುಚ್ಛಕ್ತಿ ಮೊದಲನೆಯದಾದರೆ, ಮಗ ಎರಡನೆಯ ಶತ್ತು. ಯಾರ ಹತ್ತಿರ ಬೇಕಾದರೂ ಬರಬಲ್ಲ, ಆದರೆ ಮಾತು ಹೇಗೆ? ಮೈಲಿ ಸರಿಯಿಲ್ಲದ ವಯಸ್ಸಾದ ತಾಯಿ ಬೇರೆ. ಪುರಿಯಲ್ಲಿ ಮೊದಲ ಮಗನ ಮನೆಯಲ್ಲಿ ಇದುವರೆಗಿದ್ದ ತಾಯಿ ಈಗ ತಮ್ಮ ಹತ್ತಿರ ಸ್ವಇಚ್ಚೆಯಿಂದ ಬಂದಿದ್ದಾರೆ, ಆದರೆ ಹಾಸಿಗೆ ಹಿಡಿದುಬಿಟ್ಟಿದ್ದಾರೆ. ತಮ್ಮ ಮನೆಗೆ ಅವರದು ಕೊನೆಯ ಭೇಟಿಯೋ ಏನೋ ಎಂಬ ಆತಂಕ ಅವರದು.

ತಾವೇ ಎದ್ದು ನಮಗೆ ಚಹಾ ಮಾಡುತ್ತಾರೆ. ನೀವೇಕೆ ತೊಂದರೆ ತೆಗೆದುಕೊಳ್ಳುತ್ತೀರಿ ಎಂದು ನಾವು ಉಪಚಾರಕ್ಕೆ ಮಾತಾಡುತ್ತೇವೆ. ಅಯ್ಯೋ ಅದೇನು ಕಷ್ಟಎಂದು ಎಂದು ಅವರು ಹೇಳುತ್ತಾರೆ. ನಾವು ಬೇಡವೆಂದರೂ ನಮ್ಮ ಬಾಳಿನಲ್ಲಿ ಔಪಚಾರಿಕತೆಗೊಂದು ಮುಖ್ಯವಾದ ಸ್ಥಾನ ಬಂದು ಬಿಟ್ಟಿದೆ. ಟೀ ಸವಿಯುತ್ತಾ ಒರಿಯಾ ಭಾಷೆಯ ಬಗ್ಗೆ ಮಾತಾಡುತ್ತೇವೆ. ಅರ್ಧಮಾಗಧಿ ಅಪಭ್ರಂಶದಿಂದ ಮೊದಲು ಕವಲೊಡೆದ ಭಾಷೆ ಇದಂತೆ. ಇದರೊಡನೆ ಬಂಗಾಳಿ, ಅಸ್ಸಾಮಿ, ಮೈಥಿಲಿ, ಮಣಿಪುರಿಗಳು ಸೇರಿ ಪೂರ್ವಭಾರತ ಭಾಷೆಗಳಾಗಿವೆ. ಬಂಗಾಳಿ ಅಸ್ಸಾಮಿಗಳದು ಒಂದೇ ಲಿಪಿ: ಆದರೆ ಒರಿಯಾದ್ದು ಸ್ವತಂತ್ರವಾದ ಲಿಪಿ, ಕನ್ನಡದಂತೆಯೇ ಗುಂಡಾದ ಬರವಣಿಗೆ. ಓಲೆಗರಿಯ ಮೇಲೆ ಕಂಠದಿಂದ ಬರೆಯುವ ಪರಿಪಾಠವಿದ್ದುದರಿಂದ ಗರಿ ಹರಿಯದಂತಿರಲು ಅಕ್ಷರಗಳು ಕೋನಗಳಾಗದೆ ಗುಂಡಾದವು. ಆಧುನಿಕ ಕಾಲದಲ್ಲಿ ಬಂಗಾಳಿಯಲ್ಲಿ ಸಾಹಿತ್ಯ ಸಮೃದ್ಧವಾಗಿದ್ದರೂ ಒರಿಯಾ, ಪೂರ್ವಭಾಷೆಗಳಲ್ಲಿ ಳೆಯದು ಎಂದು ಪಂಡ ಅಭಿಮಾನದಿಂದ ಹೇಳಿದರು.

ಸ್ವಲ್ಪ ಹೊತ್ತು ಅದೂ ಇದು ಮಾತನಾಡಿದೆವು. ದೆಹಲಿಯಲ್ಲಿ ನಾವು ಸೇರಿದ್ದ ಅನುವಾದ ಕಮ್ಮಟದ ಅನುಭವಗಳನ್ನು ಮೇಲುಕು ಹಾಕಿದೆವು. ಅದಕ್ಕಿಂತ ಮುಂಚೆ ೧೯೮೬ಲ್ಲಿ ಕನ್ನಡ ಒರಿಯಾ ದ್ವಿಭಾಷಾ ವಿಚಾರಸಂಕಿರಣವೊಂದು ಬೆಂಗಳೂರಲ್ಲಿ ನಡೆದಿತ್ತು, ನಾನು ಅದರಲ್ಲಿ ಒಂದು ಪ್ರಬಂಧ ಮಂಡಿಸಿದ್ದೆ. ಅವರೂ ಬಂದಿದ್ದರಂತೆ: ಆ ಬಗ್ಗೆಯ ನೆನಪುಗಳ ಮರುಕಳಿಕೆ. ಮುಂದೆ ನಮ್ಮ ಭೇಟಿ ಹೇಗಾಗಬೇಕು, ಯಾವಾಗಾಗಬೇಕು ಇತ್ಯಾದಿಗಳ ಬಗ್ಗೆ ಚರ್ಚಿಸಿದೆವು. ಮಧ್ಯಾಹ್ನದ ಕಾರ್ಯಕ್ರಮ ತತ್ಕಾಲಕ್ಕೆ ರೂಪಿಸಿಕೊಂಡವು.

****

ದೇವಾಲಯಗಳ ನಗರ

ಭುವನೇಶ್ವರದ ಹಳೆಯ ಭಾಗ ಧಾರವಾಡವನ್ನು ನೆನಪಿಗೆ ತರುವಂಥದು: ಮಣ್ಣು ದಾರಿಗಳು. ಹಳ್ಳಿಯಂತೆ ಕಾಣುವ ಹೊರನೋಟ. ಸರಳ ನಡವಳಿಕೆಯ ಜನ ಇತ್ಯಾದಿ. ಹೊಸ ಊರು ಈಚೆಗೆ ಅಭಿವೃದ್ಧಿಯಾಗಿದೆ; ನಲವತ್ತೆಂಟರನಂತರ ಕಟಕ್‌ನಿಂದ ಒರಿಸ್ಸಾದ ರಾಜಧಾನಿ ಇಲ್ಲಿಗೆ ವರ್ಗಾವಣೆಯಾದ ಮೇಲೆ, ಅಗಲವಾದ ರಸ್ತೆಗಳು, ಆಕರ್ಷಕವಾದ ಅನೇಕ ಕಟ್ಟಡಗಳು, ಉದ್ಯಾನಗಳು - ಎಲ್ಲ ಚೆನ್ನಾಗಿವೆ. ಆದರೆ ಭುವನೇಶ್ವರ ಸರಳವಾದ ನಗರ. ಸುಮಾರು ಆರೇಳು ಲಕ್ಷ ಜನಸಂಖ್ಯೆಯಿರುವ ಈ ಊರಲ್ಲಿ ಪರಿಸರವನ್ನು ತೀರ ಮಲಿನಗೊಳಿಸುವ ಹೆಚ್ಚು ಕಾರ್ಖಾನೆಗಳು ಕಂಡು ಬರಲಿಲ್ಲ. ಈಗಿರುವ ಊರಾದ ಮೇಲೂ ಹೊಸಬಡಾವಣೆಗಳು ಸಿದ್ಧಗೊಳ್ಳುತ್ತಿವೆ. ಆದರೆ ಪ್ರಶಾಂತತೆ ಇಲ್ಲಿಯ ವೈಲಕ್ಷಣ್ಯ, ಒಂದೆರಡು ರಸ್ತೆಗಳನ್ನು ಬಿಟ್ಟರೆ - ನಮ್ಮ ಮೈಸೂರು ಧಾರವಾಡಗಳಂತೆ.

ಈ ನಗರ ಪ್ರಾಚೀನ ಕಾಲದಲ್ಲಿಯೂ ರಾಜಧಾನಿಯಾಗಿತ್ತು, ದೇವಾಲಯಗಳ ನಗರವೆಂದು ಇದನ್ನು ಕರೆಯುತ್ತಾರೆ. ಒಂದು ಸಾವಿರ ದೇವಾಲಯಗಳು ಈ ಊರಲ್ಲಿದ್ದುವಂತೆ. ಆಶ್ಚರ್ಯವೇನಿಲ್ಲ. ಒಂದು ಗುಂಡುಕಲ್ಲಿಗೆ ಯಾರಾದರೂ ತಪ್ಪಿ ಅರಿಸಿನ ಕುಂಕುಮ ಬಳಿದರೂ ಅದೃಷ್ಟವಿದ್ದರೆ ಅದು ದೊಡ್ಡ ಯಾತ್ರಾಸ್ಥಳವಾಗಿ ಬಹು ಬೇಗ ರೂಪುಗೊಂಡುಬಿಡುವ ಈ ದೇಶದಲ್ಲಿ ಗುಡಿಗಳಿಗೇನು ಕೊರತೆ? ಆದರೆ ಪ್ರಾಚೀನ ಕಾಲದಲ್ಲಿ ವೈಭವದಿಂದ ಬಾಳಿದ ನಗರವಾಗಿ ಈ ಊರು ಇತ್ತೆನ್ನಲು ಸಾಕ್ಷಿಯಾದ ಖಾರವೇಲನ ಗುಹೆಗಳನ್ನು ನೋಡಬೇಕು. ಕ್ರಿ. ಪೂ. ಎರಡನೆಯ ಶತಮಾನಕ್ಕೆ ಸೇರಿದ ಈ ಗುಹಾದೇವಾಲಯಗಳನ್ನು ಹಾಥಿಗುಂಫ ಗುಹೆಗಳೆಂದು ಕರೆಯುತ್ತಾರೆ. ಏಕೆಂದರೆ ಇಲ್ಲಿನ ಪ್ರಮುಖ ಆಕರ್ಷಣೆ ಆನೆಗಳ ಶಿಲ್ಪಗಳು, ಖಂಡಗಿರಿ ಮತ್ತು ಉದಯಗಿರಿಗಳೆಂದು ಎರಡು ಬೆಟ್ಟಗಳ ಮೇಲಿನ ಈ ಗುಹಾದೇವಾಲಯಗಳಲ್ಲಿ ಖಾರವೇಲನ ಹದಿಮೂರು ವರ್ಷಗಳ ಆಳ್ವಿಕೆಗೆ ಸಂಬಂಧಿಸಿದ ಪಾಲಿ ಭಾಷೆಯಲ್ಲಿ ರಚಿತವಾದ ಅಮೂಲ್ಯ ಶಿಲಾಶಾಸನಗಳಿವೆ. ಇಲ್ಲಿ ಅಶೋಕನ ಶಾಸನವಿರುವುದು ಸಾಕಷ್ಟು ಜನಜನಿತ ಸಂಗತಿಯೇ. ಖಂಡಗಿರಿಯ ಮೇಲೆ ಮಹಾವೀರನ ದೊಡ್ಡ ಶಿಲಾವಿಗ್ರಹವೂ ಇದೆ. ಈ ಬೆಟ್ಟಗಳ ಮೇಲಿಂದ ಭುವನೇಶ್ವರದ ಸೊಗಸಾದ ಪಕ್ಷಿನೋಟ ಕಾಣಸಿಗುತ್ತದೆ. ಇಲ್ಲಿನ ಗುಹೆಗಳು ತಂಪಾಗಿರುವುದರಿಂದ ಪ್ರಾಚೀನ ಕಾಲದಲ್ಲಿ ಅರಸರು ಬೇಸಿಗೆಯ ಕಾಲದಲ್ಲಿ ಇಲ್ಲಿ ಬಂದು ತಂಗುತ್ತಿದ್ದರಂತೆ. ಅಲ್ಲದೆ ಎರಡಂತಸ್ತಿನ ಗುಹಾದೇವಾಲಯಗಳ ಮುಂದೆ ಉದಯಗಿರಿಯಲ್ಲಿ ವಿಶಾಲವಾದ ಅಂಗಳವಿದೆ. ಇಲ್ಲಿ ನೃತ್ಯ ಸಂಗೀತ ಮುಂತಾದ ಕಲೆಗಳ ಪ್ರದರ್ಶನಕ್ಕೆ ಅನಕೂಲವಿದೆ. ಹಿಂದೆಯೂ ಅಂಥದ್ದು ನಡೆಯುತ್ತಿದ್ದಿರಬೇಕು, ಈಗಲೂ ಒರಿಸ್ಸಾ ಉತ್ಸವದ ಕಾಲದಲ್ಲಿ ಅವೆಲ್ಲ ಜರುಗುತ್ತವೆ.

ದಯಾ, ಭಾರ್ಗವಿ, ಮಹಾನದಿ ಮುಂತಾದ ಸಣ್ಣ ದೊಡ್ಡ ನದಿಗಳು ಈ ಊರಿಗೆ ಸಮೀಪದಲ್ಲಿಯೋ ಅನತಿದೂರದಲ್ಲಿಯೋ ಹರಿಯುವುದರಿಂದ ಊರಿನ ಹೊರವಲಯ ಹಸುರಾಗಿದೆ. ನೀರಿಗೆ ಸಮೃದ್ಧಿಯಿರುವುದರಿಂದ ಬೇಸಿಗೆ ಕಾಲದಲ್ಲಿ ಎಷ್ಟು ಬಾರಿ ಬೇಕಾದರೂ ಸ್ನಾನ ಮಾಡಲೂ ಅನುಕೂಲ! ಆದರೂ ಊರಿನ ಚೊಕ್ಕಟತನ ಹೇಳುವಂತಹುದಲ್ಲ. ಜನ ಮುಗ್ಧರು. ಒರಿಸ್ಸಾದ ಶೇಕಡಾ ಅರವತ್ತರಷ್ಟು ಜನ ಬಡತನದ ರೇಖೆಯಿಂದ ಕೆಳಗೆ ವಾಸಿಸುವರಂತೆ, ಸಾಕ್ಷರತೆಯು ಸುಮಾರು ಶೇ. ನಲವತ್ತರಷ್ಟು, ಬೆಂಗಳೂರಿನಂತಹ ದೊಡ್ಡ ನಗರದಿಂದ ಇಲ್ಲಿಗೆ ಹೋದರೆ ನಮಗೆ ಎದ್ದು ಕಾಣುವುದು, ಆಕರ್ಷಿಸುವುದು ಇಲ್ಲಿಯ ಮುಗ್ಧ ಪ್ರಶಾಂತ ಪರಿಸರವೇ. ರಾಜಧಾನಿಯಾದ್ದರಿಂದ ಈಗೀಗ ಆಧುನಿಕತೆಯ ಗಾಳಿ ತುಸು ಜೋರಾಗಿಯೇ ಬೀಸಲು ಪ್ರಾರಂಭವಾಗಿದೆ. ಸಣ್ಣ ಪುಟ್ಟ ಕಟ್ಟಡಗಳ ಮಧ್ಯೆ ಎದ್ದು ಗಗನಕ್ಕೆ ನೆಗೆಯುವ ತಾರಾ ಹೋಟೆಲುಗಳು, ಸಣ್ಣ ಪುಟ್ಟ ಅಂಗಡಿಗಳ ಗುಂಪಿನ ಪಕ್ಕದಲ್ಲಿ ಕೋರೈಸುವ ಆಧುನಿಕ ಮಾರ್ಕೆಟ್‌ಗಳು, ಸಾಮಾನ್ಯರಾದ ಥಳುಕಿಲ್ಲದ ಜನರ ನಡುವೆ ಮೇಲಿಂದಿಳಿದು ಬಂದ ಕಿನ್ನರ-ಕಿಂಪುರುಷರು ಇವೆಲ್ಲ ಇಲ್ಲೂ ಪ್ರಾರಂಭವಾಗಿವೆ.

ಇಲ್ಲಿನ ಅವಶೇಷವಾಗಿ ಉಳಿದಿರುವ ಪ್ರಾಚೀನ ದೇವಾಲಯಗಳು ಕಳಿಂ ವಾಸ್ತುಶಿಲ್ಪದ ಮಾದರಿಗಳು, ಅವುಗಳ ಮೇಲೆ ದ್ರಾವಿಡ ಶೈಲಿಯ ಪ್ರಭಾವವೂ ಆಗಿದೆಯೆನ್ನುತ್ತಾರೆ. ಮುಕ್ತೇಶ್ವರ ದೇವಾಲಯ ಇಂತಹ ಒಂದು ಉದಾಹರಣೆ. ಇಲ್ಲಿನ ರಾಜಾರಾಣಿ ದೇವಸ್ಥಾನವು ಹನ್ನೊಂದನೆಯ ಶತಮಾನದಲ್ಲಿ ರಚಿತವಾದದ್ದು. ಮುಕ್ತೇಶ್ವರದಲ್ಲಿನ ದೊಡ್ಡ ಕಲ್ಲಿನ ತೋರಣವೆಂದು ಕರೆಯಲಾಗುವ ಮಹಾದ್ವಾರ ಆಕರ್ಷಿಸಿದರೆ, ರಾಜರಾಣಿ ದೇವಾಲಯದಲ್ಲಿ ಶಿಲಾಬಾಲಿಕೆಯರ ಕೆತ್ತನೆಗಳು ಮನಸೆಳೆಯುತ್ತವೆ. ಇಲ್ಲಿನ ಲಿಂಗರಾಜ ದೇವಾಲಯವೂ ಹನ್ನೊಂದನೆ ಶತಮಾನದ್ದೇ. ಮುಖ್ಯ ದೇವಾಲಯದ ಗೋಪುರ ಗೋಪುರ ೫೪ ಮೀಟರ್‌ಗಳಷ್ಟು ಉನ್ನತವಾಗಿದೆ. ವಿಶಾಲವಾದ ತಳಹದಿಯಿಂದ ಪ್ರಾರಂಭವಾಗಿ ಮೇಲೆ ಹೋದಂತೆ ಕ್ರಮವಾಗಿ ಕಿರಿದಾಗುತ್ತಾ ಹೋಗುವ, ಮೇಲೆ ಗೋಪುರ ತಳಹದಿಗಳಿರುವ, ಹಂತಹಂತದಲ್ಲೂ ಶಿಲ್ಪದ ಕುಸುರಿ ಕೆಲಸವಿರುವ ಈ ದೇವಸ್ಥಾನ ಕಳಿಂಗ ಮಾದರಿಯ ವಾಸ್ತುಶಿಲ್ಪದ ಉತ್ಕೃಷ್ಟ ಮಾದರಿಯೆಂದು ಹೇಳುತ್ತಾರೆ. ಇಲ್ಲಿನ ಶಾಂತಿಸ್ತೂಪವು ಗುಡ್ಡವೊಂದರ ಮೇಲೆ ಬೆಳ್ಳಗೆ ಎದ್ದು ಕಾಣುತ್ತದೆ. ಕ್ರಿ. ಪೂ. ಮೂರನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನು ಪ್ರಾಚೀನ ಒರಿಸ್ಸಾದ ಭಾಗವಾದ ಕಳಿಂಗವನ್ನು ಕೈವಶಮಾಡಿಕೊಂಡ. ಆದರೆ ಅಲ್ಲಿನ ಯುದ್ಧದಲ್ಲಿ ಆದ ಅಪಾರ ಪ್ರಾಣಹಾನಿಯಿಂದ ಅವನ ಮನ ತಲ್ಲಣಿಸಿತು. (ಒಬ್ಬ ಮಾರ್ಗದರ್ಶಿ ಒಂದೂವರೆ ಲಕ್ಷ ಜನ ಸೈನಿಕರು ಕಳಿಂಗ ಯುದ್ಧದಲ್ಲಿ ಮಡಿದರೆಂದರೆ, ಇನ್ನೊಬ್ಬ ನಾಲ್ಕು ಲಕ್ಷ ಜನ ಎಂದ!) ಆಗಲೇ ಬೌದ್ಧಮತಾವಲಂಬಿಯಾಗಲು ಅಶೋಕ ನಿರ್ಧರಿಸಿದ. ಭುವನೇಶ್ವರದ ಹೊರವಲಯದಲ್ಲಿನ ಈ ಪ್ರದೇಶ ಧೌಲಿ ಅಥವಾ ಧವಳಗಿರಿಯನಿಸಿಕೊಂಡಿದೆ. ಅಶೋಕನ ಹೃದಯ ಶಾಂತಿಯ ಕಡೆಗೆ ತಿರುಗಿದ ಜಾಗ ಇದೇ; ಈ ಗುಡ್ಡದಲ್ಲಿ ಅಶೋಕನ ಪ್ರಸಿದ್ಧ ಶಾಸನವಿದೆ. ಈ ಗುಡ್ಡದ ಸುತ್ತ ಹಸಿರು ಗದ್ದೆಗಳು ಕಣ್ಣು ಹೋಗುವಷ್ಟು ದೂರ ಹರಡಿವೆ. ಅವುಗಳ ಮಧ್ಯೆ, ಗುಡ್ಡಕ್ಕೆ ಹತ್ತಿರವೇ ದಯಾನದಿ ಹರಿಯುತ್ತದೆ. ಅಶೋಕ ಮಾಡಿದ ಕಳಿಂಗ ಯುದ್ಧದಲ್ಲಿ ಆದ ರಕ್ತಪಾತ ಎಷ್ಟೆಂದರೆ ದಯಾನದಿಯ ನೀರೆಲ್ಲ ಕೆಂಪಾಯಿತು' ಎಂದು ಆಲಂಕಾರಿಕವಾಗಿ ಹೇಳುವುದು ಸಾಮಾನ್ಯನಿಗೂ ಸಂಚಿತವಾದ ಶೈಲಿಯಾಗಿಬಿಟ್ಟಿದೆ. ಈ ಧೌಲಿ ಗುಡ್ಡದ ಮೇಲೆ ಜಪಾನಿನ ನಿಪ್ಪಾನ್ ಸಂಘದವರು ಭಾರತ ಸರ್ಕಾರದ ಸಹಕಾರದಿಂದ ಒಂದು ಶಾಂತಿಸ್ತೂಪವನ್ನು ಎಪ್ಪತ್ತರ ದಶಕದಲ್ಲಿ ನಿರ್ಮಿಸಿದ್ದಾರೆ. ವೃತ್ತಾಕಾರದ ಈ ಚನೆಯ ಸುತ್ತ ಎತ್ತರವಾದ ತಾಳೆಯಿದೆ. ವಿಶಾಲವಾದ ಮಂಟಪದ ಮೇಲೆ ವ್ಯವಾದ ಗೋಪುರ, ಅದರ ಮೇಲೆ ಐದು ಚತ್ರಿಗಳು ನಿಂತಿವೆ. ಆಹಿಂಸೆ, ದಯೆ, ಅಸಂಗ್ರಹ ಮುತಾದ ಐದು ಮೌಲ್ಯಗಳ ಪ್ರತೀಕವಾಗಿ, ಇಡೀ ಸ್ತೂಪ ಬಿಳಿಯ ಬಣ್ಣದ್ದು. ಸ್ತೂಪದ ಮುಂದೆ ಜಪಾನಿ ಭಾಷೆಯಲ್ಲಿ ದೊಡ್ಡದಾಗಿ ಏನೋ ಕೆತ್ತಿದ್ದಾರೆ. ಅಶೋಕನ ಶಾಸನಗಳು ಕಣ್ಣಿಗೆ ಬೀಳದಿದ್ದರೂ ಇದಂತೂ ನೋಟಕರ ಕಣ್ಣಿಂದ ದೂರಾಗಲು ಸಾಧ್ಯವೇ ಇಲ್ಲ-ಅಷ್ಟು ದೊಡ್ಡದಾಗಿ, ಬರಲಿರುವ ಪರಿಸ್ಥಿತಿಯ ಮುನ್ಸೂಚನೆಯೇನೋ!

ಒರಿಸ್ಸಾದ ಮುಂಚಿನ ಹೆಸರು, ಉತ್ಕಲ ಮತ್ತು ಕಳಿಂಗ, ಉತ್ಕಲವೆಂಬುದು ಉತೃಷ್ಟ ಕಲೆ' ಎಂಬುದರ ಸಂಕ್ಷಿಪ್ತರೂಪವೆಂದೂ, ಕಳಿಂಗ ಪದದ ಪ್ರಾರಂಭದಲ್ಲಿ 'ಕಲಾ' ಇದೆಯೆಂದೂ ವಿವರಿಸಿದ ಮಾರ್ಗದರ್ಶಿ ಒರಿಸ್ಸಾ ರಾಜ್ಯ ಶೇಷ್ಠ ಕಲಾವಂತಿಕೆಗೆ ಹೆಸರಾದದ್ದು ಎಂದು ಹೆಮ್ಮೆಯಿಂದ ಹೇಳಿದ. ಸರಿಯೇ ಆದರೆ ಈಗ ಅವೆಲ್ಲ ಸ್ಮಾರಕಗಳಾಗಿವೆ. ಒರಿಸ್ಸಾ ಸರ್ಕಾರದ ಮೂಸಿಯಂ ಒಂದಿದೆ; ವ್ಯಾಪಕ ಸಂಗ್ರಹದ ಮೂಸಿಯಂ ಅದು. ಹಳೆಯದು ಹೊಸದನ್ನು ಒಂದೆಡೆ ಸೇರಿಸುವ ಒಳ್ಳೆಯ ಪ್ರಯತ್ನ ಅದು. ಕೀಟಗಳು ಪ್ರಾಣಿಗಳನ್ನು ತಕ್ಕ ಹಿನ್ನೆಲೆಯೊಂದರಲ್ಲಿ ಇಟ್ಟಿರುವ ರೀತಿ ಮಕ್ಕಳಿಗೆ ಪ್ರಿಯವಾಗುತ್ತವೆ. ಅಲ್ಲಿಯ ವರ್ಣಚಿತ್ರ ಪ್ರದರ್ಶನ ಮತ್ತು ಓಲೆಗರಿಗಳ ಸಂಗ್ರಹ ನಿಜಕ್ಕೂ ಭರ್ಜರಿಯಾಗಿದೆ. ಒಟ್ಟಿಗೇ ಒಂದೇ ಕಟ್ಟಡದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರದರ್ಶಿತವಾದ ವಸ್ತುಗಳನ್ನೊಳಗೊಂಡ ಈ ಮೂಸಿಯಂ ನೋಡತಕ್ಕದ್ದು.

ಊರಿನ ಹೊರವಲಯದಲ್ಲಿರುವ ಉತ್ಕಲ ವಿಶ್ವವಿದ್ಯಾಲಯ ವಿಶಾಲವಾದ ಕ್ಯಾಂಪಸ್ಸಿನ ಮೇಲಿದೆ. ಮರಗಿಡಗಳು ಸಮೃದ್ಧಿಯಾಗಿರುವ ಆವರಣ ಪ್ರಶಾಂತವಾಗಿದೆ. ಇರುವ ಕಟ್ಟಡಗಳಲ್ಲಿ ಬಹುಪಾಲು ಹಳೆಯವು. ಏರುತಗ್ಗುಗಳಿಲ್ಲದ ಸಮತಟ್ಟಾದ ಭೂಮಿ. 'ಬಾಣಿ ಬಿಹಾರ' (ವಾಣಿ ವಿಹಾರ) ಎಂಬುದು ಕ್ಯಾಂಪಸ್ಸಿಗಿಟ್ಟಿರುವ ಹೆಸರು. ನಾವು ಹೋದಾಗ ತರಗತಿಗಳು ಮುಗಿದು ಪರೀಕ್ಷೆಗಳು ನಡೆಯುವ ಕಾಲವಾದ್ದರಿಂದ ಆವರಣದಲ್ಲಿ ವಿದ್ಯಾರ್ಥಿಗಳು ಎಂದಿನಂತೆ ಗಿಜಿಗುಟ್ಟುವುದು ಸಾಧ್ಯವಿರಲಿಲ್ಲ.

ಒಟ್ಟಾರೆ, ಭುವನೇಶ್ವರ ನಮಗೆ ಪ್ರಿಯವಾಗುವ ಊರು. ಬೇಸಿಗೆಯಲ್ಲಿ ಹೋದದ್ದರಿಂದ ಬೆವರು ಹಣೆಯಲ್ಲಿ, ಮೈಯಲ್ಲೆಲ್ಲ ಸುರಿಯುತ್ತಿರುತ್ತದೆ. ಸೊಗಸಾದ ಗಾಳಿ ಬೀಸುತ್ತಿರುತ್ತದೆ; ಬಿಸಿಲಿನ ಉರಿ ಮೈಯಲ್ಲಿ ಚುರುಚುರುಗುಟ್ಟಿಸಿದರೆ, ತಣ್ಣೀರು ಮೈಮೇಲೆ ಸುರಿದುಕೊಂಡರೆ ಹಾಯೆನಿಸುತ್ತದೆ. ಬೆಂಗಳೂರಿನಿಂದ ಹೋದವರಿಗೆ ಹೆಚ್ಚೆನಬಹುದಾದ ಬಿಸಿಲೇ ಹೊರತು ಭಯಂಕರವಾದದ್ದೇನಲ್ಲ. ಎಲ್ಲ ಅನುಕೂಲಗಳಿದ್ದೂ, ಆಧುನಿಕತೆಗೆ ಮೈತೆರೆದೂ ಪ್ರಶಾಂತತೆ-ಸರಳತೆಗಳು ಉಳಿದುಕೊಂಡಿರುವ ಭುವನೇಶ್ವರ ನಮಗೆ ಮೆಚ್ಚಾಯಿತು. ನಾಗರಾಜ್‌ರ ಮಗ ಅಪೂರ್ವ ಇಲ್ಲಿಯೇ ಇದ್ದು ಬಿಡೋಣ ಎನ್ನುವಷ್ಟರಮಟ್ಟಿಗೆ ಊರು ಚೆನ್ನವೆನ್ನಿಸಿತು.

****

ಕಥನ ಕುಶಲ

ಮೊಹಪಾತ್ರ ನೀಲಮಣಿ ಸಾಹು ಹಿರಿಯ ಕತೆಗಾರರು ಹಾಗೂ ಕಾದಂಬರಿಕಾರರು, ಭುವನೇಶ್ವರದ ಹೊಸ ಬಡಾವಣೆಯ ಹಾಗೆ ಕಾಣುವ ಸಹೀದ್ ನಗರದಲ್ಲಿ ಅವರ ವಾಸ. ಅವರು ಎಪ್ಪತ್ತನ್ನು ತಲುಪುತ್ತಿದ್ದಾರೆ. ನಾವು ನೋಡಹೋದ ಮೊದಲ ಒರಿಯಾ ಸಾಹಿತಿ ಅವರು, ಈ ಸಾಹಿತಿಗಳ ನಡವಳಿಕೆ ಬಗ್ಗೆ ಊಹೆ ಮಾಡುವುದು ಕಷ್ಟ. ಕನ್ನಡದ ಬೇರೆ ಬೇರೆ ಸಾಹಿತಿಗಳ ಪರಿಚಯ ತಕ್ಕಮಟ್ಟಿಗೆ ಇದೆಯಲ್ಲ! ಏನು ಬಿಂಕವೋ, ಬಿಗುಮಾನವೋ ಎಂಬ ಶಂಕೆ ಅಥವಾ ವಯಸ್ಸಾದವರಾದರೆ ಕಿವಿ ಕೇಳಿಸುತ್ತದೋ ಕಣ್ಣು ಕಾಣಿಸುತ್ತದೋ ಎಂಬ ಅನುಮಾನ; ನಾವು ಹೋಗುವ ವೇಳೆಗೆ ಕಾಯಿಲೆ-ಕಸಾಲೆ? ಒಟ್ಟಿನಲ್ಲಿ ಕೊಂಚ ಆತಂಕ, ಅನುಮಾನ.

ನಾವು ಬಾಗಿಲು ತಟ್ಟಿದಾಗ ಸಾಹು ಮನೆಯಲ್ಲಿದ್ದರು. ರಿಟೈರೂ ಆಗಿದೆ. ಬಿಸಿಲಿನ ಹೊತ್ತು ಬೇರೆ, ಎಲ್ಲಿಗೆ ಹೋದಾರು? ಅವರ ಮನೆಯವರು ಬಾಗಿಲು ತೆರೆದರು, ಒಳಗೆ ಬನ್ನಿ ಎಂದರು. ಚಪ್ಪಲಿ-ಶೂಗಳನ್ನು ಬಾಗಿಲ ಹೊರಗೆ ಬಿಟ್ಟು ಒಳಗಿನ ವರಾಂಡದಲ್ಲಿ ಹೋಗಿ ಕೂತೆವು. ಸ್ವಲ್ಪ ಹೊತ್ತಿಗೆ ಪಂಚೆ-ಬನೀನು ಕನ್ನಡಕ ಧರಿಸಿದ, ನೋಡಿದರೆ ವಯಸ್ಸನ್ನು ಊಹಿಸಬಹುದಾದ ನೀಲಮಣಿ ಸಾಹು ಒಳಗಿನಿಂದ ಬಂದರು. ಬಸಂತ ಕುಮಾರ್ ಪಂಡ ಅವರನ್ನು ಕಂಡೊಡನೆ ಎದ್ದು ಹೋಗಿ ಬಾಗಿ ಕಾಲು ಮುಟ್ಟಿ ನಮಸ್ಕರಿಸಿದರು; ಅವರು ತಲೆಯ ಮೇಲೆ ಕೈಯಾಡಿಸಿ ವಾತ್ಸಲ್ಯ ತೋರಿದರು. ಇಂಥ ದೃಶ್ಯ ನನ್ನನ್ನು ಭಾವುಕನನ್ನಾಗಿಸುತ್ತದೆ. ಈ ನಡವಳಿಕೆ ಎರಡು ಪೀಳಿಗೆಗಳವರ ನಡುವಣ ಹೊಂದಾಣಿಕೆಯ ಪ್ರತೀಕ. ಹಿರಿಯರು ತಮ್ಮ ಬದುಕಿನ ಗಳಿಕೆಯನ್ನು ಕಿರಿಯರಿಗೆ ನೀಡುವ ಸನ್ನಿವೇಶ. ಅಲ್ಲದೆ ನಮ್ಮ ಡಾ. ಪಂಡ ತುಂಬ ಸನ್ನಡತೆಯವರು; ಅವರ ಮಾತು ಮಿದು, ನಿಧಾನ; ಮಾತಾಡುವಾಗ ಮುಖದಲ್ಲಿ ವಿನಯ ಕಾಣುತ್ತದೆ; ಎಲ್ಲರ ಜೊತೆಯೂ ಅಷ್ಟೆ. ಒಂದು ಕ್ಷಣ ನಾನು ಕಾಲುಮುಟ್ಟಿ ನಮಸ್ಕರಿಸಬೇಕೇ ಎನ್ನಿಸಿತು. ಈ ಹಲವಾರು ವರ್ಷಗಳಿಂದ ನಾನು ಯಾರ ಕಾಲನ್ನೂ ಮುಟ್ಟಿ ನಮಸ್ಕರಿಸುತ್ತಿಲ್ಲ. ಹಿಂದೆಯೂ ಹಾಗೆ ನಮಸ್ಕರಿಸಿದ್ದು ನನ್ನ ತಾತ ಅಜ್ಜಿಯವರಿಗೆ ಮಾತ್ರ; ತಂದೆ ತಾಯಿಯರಿಗೂ ಕಾಲುಮುಟ್ಟಿ ನಮಸ್ಕರಿಸಿದ್ದ ನೆನಪಿಲ್ಲ. ಹೀಗೆ ನಮಸ್ಕರಿಸಬೇಕೆಂದು ನನಗೆ ಹೇಳಿಕೊಟ್ಟವರು ನಮ್ಮ ತಾತನೇ.

ನಮ್ಮ ತಾತ ಎಂದರೆ ತಾಯಿಯ ತಂದೆ. ವಿದ್ಯಾಭ್ಯಾಸ ಇಲಾಖೆಯಿಂದ ನಿವೃತ್ತರಾದ ಅವರು ತಮ್ಮ ಊರಿನಲ್ಲಿಯೇ ನೆಲಸಿದ್ದರು. ಅವರ ಪ್ರಯತ್ನದಿಂದಲೇ ಆ ಕುಗ್ರಾಮದಲ್ಲಿ ಒಂದು ಹೊಸ ಮಾದರಿ ಮಾಧ್ಯಮಿಕ ಶಾಲೆ, ಎಂದರೆ ಐದನೇ ತರಗತಿಯಿಂದ ಎಂಟನೆಯ ತರಗತಿಯವರಿಗೆ ಪ್ರಾರಂಭವಾಗಿತ್ತು. ಸಾಕಷ್ಟು ವಿದ್ಯಾರ್ಥಿಗಳು ಬರುತ್ತಾರೆಯೇ ಎಂದು ಪರಿಶೀಲಿಸಿ ಮೂರು ನಾಲ್ಕು ವರ್ಷ ಕಾದು ಶಾಲೆಯನ್ನು ಕಾಯಂಗೋಳಿಸುವ ಇಲ್ಲವೇ ರದ್ದು ಪಡಿಸುವ ಅಧಿಕಾರ ಸರ್ಕಾರದ್ದು. ಎಲ್ಲಿ ಹುಡುಗರಿಲ್ಲದೆ ಶಾಲೆ ಮುಚ್ಚಿ ಹೋಗುವುದೋ ಎಂಬ ಆತಂಕವೆಂದು ಕಾಣುತ್ತದೆ. ನಮ್ಮ ತಾತ ಬೆಂಗಳೂರಿನಲ್ಲಿ ಮೂರನೇ ತರಗತಿಯ ಓದನ್ನು ಮುಗಿಸಿದ ನನ್ನನ್ನು ಕರೆದು ಕೊಂಡು ಹೋಗಿ ಆ ಶಾಲೆಯಲ್ಲಿ ಐದನೇ ತರಗತಿಗೆ ಸೇರಿಸಿದ್ದರು. ನಾಲ್ಕು ವರ್ಷ ಅಲ್ಲಿ ಓದಿದ್ದ ನನ್ನ ಮೇಲೆ ನಮ್ಮ ತಾತನ ಪ್ರಭಾವ ಸಾಕಷ್ಟು ಬಿದ್ದದ್ದು ಸಹಜವೇ. ಊರಿಗೆ ಹೋಗುವಾಗ ಅಥವಾ ಮುಖ್ಯ ಕೆಲಸಕ್ಕೆ ಹೋಗುವಾಗ ದೇವರಿಗೆ, ಹಿರಿಯರಿಗೆ ನಮಸ್ಕಾರ ಮಾಡಿ ಹೋಗಬೇಕೆಂದು ಅವರ ಕಟ್ಟುನಿಟ್ಟು, ಬೆಂಗಳೂರಿಗೆ ನಾನು ವಾಪಸಾದ ಮೇಲೂ ಅವರು ಆ ಊರಲ್ಲಿದ್ದ ತನಕ ಪ್ರತಿವರ್ಷ ಬೇಸಿಗೆ ರಚೆಗೆ ಅಲ್ಲಿಗೆ ಹೋಗುತ್ತಿದ್ದೆ. ವಾಪಸ್ಸಾಗುವಾಗ ದೇವರಿಗಲ್ಲದೆ ಅಜ್ಜಿ ತಾತರಿಗೆ ನಮಸ್ಕಾರ ಮಾಡಿ ಹೊರಡುವುದು ರೂಢಿಯಾಯಿತು. ವಯಸ್ಸಾಯಿತೆಂದು ಅವರೂ ಬೆಂಗಳೂರಿಗೆ ಬಂದು ಮಲ್ಲೇಶ್ವರದಲ್ಲಿ ನಮ್ಮ ಚಿಕ್ಕಪ್ಪನ ಮನೆಯ ಬಳಿ ವಾಸವಾಗಿದ್ದರು. ಅಲ್ಲಿಗೆ ಹೋದಾಗಲೂ ವಾಪಸ್ಸಾಗುವಾಗ ಅವರಿಬ್ಬರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದೆ. ಆದರೆ ಅವರು ತೀರಿಹೋದ ಮೇಲೆ ಆ ಪರಿಪಾಠ ಮುಕ್ತಾಯವಾಗಿತ್ತು. ಪಂಡ ಸಾಹು ಅವರಿಗೆ ಬಾಗಿ ನಮಸ್ಕರಿಸುವುದು, ಅವರು ತಲೆ ಬೆನ್ನು ಸವರುತ್ತ ಮೇಲಕ್ಕೆ ಎತ್ತುವುದು - ಈ ದೃಶ್ಯ ನಮ್ಮ ತಾತನ ನೆನಪನ್ನು ಮನಸ್ಸಲ್ಲಿ ತಂದಿತ್ತು. ಸ್ವಲ್ಪ ಉತ್ಕಂಠಿತವಾದಂತೆ ನನಗೇ ಅನ್ನಿಸಿತು. ಆದರೂ ನಾನು ಕಾಲುಮುಟ್ಟಿ ನಮಸ್ಕರಿಸುವ ಗೋಜಿಗೆ ಹೋಗಲಿಲ್ಲ. ಒರಿಯಾದಲ್ಲಿ ಮಾತನಾಡುತ್ತ ಪಂಡ ನಾವು ಕರ್ನಾಟಕದವರೆಂದೂ, ಸಾಹಿತ್ಯ ಅಕೆಡೆಮಿಯ ಪರವಾಗಿ ಪ್ರವಾಸ ಕೈಗೊಂಡವರೆಂದೂ, ಅವರನ್ನು ಮಾತನಾಡಿಸಲು ಬಂದವರೆಂದೂ ಹೇಳುವುದು ಸ್ಕೂಲವಾಗಿ ತಿಳಿಯಿತು. ಸಾಹು ಅವರು ನಮ್ಮೆಡೆ ನೋಡಿದಾಗ ಕೈ ಮುಗಿದವು.

ಪಂಡ ನಮಗೆ ಇಂಗ್ಲಿಷ್‌ನಲ್ಲಿ ಹೇಳಿದರು. ಸಂಪ್ರತಿ' ಎಂಬ ಸಾಹಿತ್ಯಕ ಸಂಸ್ಥೆಯ ಅಧ್ಯಕ್ಷರಾಗಿದ್ದರು ಸಾಹು, ಈಗಲೂ ಪಂಡ ಅದರ ಕಾರ್ಯದರ್ಶಿ, ತಕ್ಕಮಟ್ಟಿಗಿನ ಒಳ್ಳೆಯ ಕೆಲಸವನ್ನು ಆ ಸಂಸ್ಥೆ ಮಾಡಿದೆಯಂತೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಏರ್ಪಾಟಾಗಿದ್ದ ಒರಿಯಾ ಕನ್ನಡ ದ್ವಿ-ಸಾಹಿತ್ಯಕ ವಿಚಾರ ಸಂಕಿರಣ ನಡೆಯಲು ಒರಿಸ್ಸಾದ ಕಡೆಯಿಂದ ಮುಖ್ಯವಾದ ಪ್ರೇರಣೆ ಮತ್ತು ಕೆಲಸ ನಡೆದದ್ದು 'ಸಂಪ್ರತಿ'ಯಿಂದ. ಅಲ್ಲದೆ, ಸಾಹು ಅವರದು ತುಂಬ ವಾತ್ಸಲ್ಯಮಯ ಹೃದಯ, ನಮ್ಮನ್ನೆಲ್ಲ ಮಕ್ಕಳಂತೆ ಕಾಣುತ್ತಾರೆ ಎಂದೂ ಆಮೇಲೆ ವಿವರಿಸಿದರು. ಅದು ನಿಜವಾಗಿದ್ದಂತೆ ಕಾಣಿಸಿತು. ಅವರ ಮಾತು ನಗೆಗಳು ಮುಗ್ಧವಾಗಿದ್ದಂತೆ ತೋರಿದೆವು. ಪರಿಚಯ ನಮಸ್ಕಾರಗಳಾದ ಮೇಲೆ ಒಂದು ನಿಮಿಷ ಎನ್ನುತ್ತ ಒಳಗೆ ಹೋಗಿ ಬಂದರು. ಸ್ವಲ್ಪ ಹೊತ್ತಿಗೇ ಅವರ ಶ್ರೀಮತಿಯವರು ಕೈಯಲ್ಲಿ ಟ್ರೇ ಹಿಡಿದು ಪಾನೀಯ ಹಾಗೂ ಮಿಠಾಯಿಗಳು ನೀಡಿದರು. ಅವರೂ ವಾತ್ಸಲ್ಯಪೂರ್ಣವಾಗಿಯೇ ಒರಿಯಾದಲ್ಲಿ ಮಾತನಾಡಿದರು.

ಮುಖ್ಯವಾಗಿ ಸಾಹು ಅವರು ಸಣ್ಣ ಕತೆಗಾರರು; ಅವರ ಕೆಲವು ಸಣ್ಣಕತೆಗಳು ಕಿರು ಕಾದಂಬರಿಗಳಷ್ಟು ದೀರ್ಘವಂತೆ. ಅಲ್ಲದೆ ಅವರು ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. 'ಧರಾ ಬ ಧರಾ' 'ತಾಮಸಿ ರಾಧಾ' ಮತ್ತು ಅಭಿಶಪ್ತ ಗಂಧರ್ವ' ಅವರ ಮುಖ್ಯ ಕಾದಂಬರಿಗಳು. ಕೊನೆಯ ಕೃತಿಗೆ ಎಂಬತ್ತ ನಾಲ್ಕನೇ ಇಸವಿಯಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರಂತೆ. ಕನ್ನಡದಲ್ಲಿ 'ಲಲಿತ ಪ್ರಬಂಧ' ಎಂಬ ಮಾತನ್ನು ಬಳಸುತ್ತೇವೆ ಎಂದು ಹೇಳಿದೆ. ಲಲಿತ ಎಂಬ ವಿಶೇಷಣ ಸರಿಯಲ್ಲ ಎಂದರು. ಈ ಪ್ರಬಂಧಗಳಲ್ಲಿ ಬೀಭತ್ಸವೂ ಅಭಿವ್ಯಕ್ತವಾಗಿರಬಹುದು, ಹಾಗಾಗಿ ಲಲಿತ ಎಂಬುದು ಸೂಕ್ತವಲ್ಲ ಎಂದು ಮತ್ತೆ ವಿಶ್ಲೇಷಿಸಿದರು; 'ಮ್ಯ' ಎಂಬ ಮಾತು ಸೂಕ್ತ ಎಂದರು.

ಅವರ ಪ್ರಶಸ್ತಿ ವಿಜೇತ ಕಾದಂಬರಿಯಾದ ಅಭಿಶಪ್ತ ಗಂಧರ್ವ'ದ ಬಗ್ಗೆ ಮಾತು ಹೊರಳಿತು.ಶಾಪಗ್ರಸ್ತ ಗಂಧರ್ವ' ಎಂಬದು ಆದರೆ ಆರ್ಥ. ಅದು ಒಂದು ರೀತಿಯಲ್ಲಿ ವಿಶಿಷ್ಟವಾದ ರಚನೆ. ಏಕೆಂದರೆ ಅದರಲ್ಲಿ ಹನ್ನೊಂದು ಕತೆಗಳಿವೆ. ಒಂದೊಂದೂ ಪ್ರತ್ಯೇಕವಾದ ಕತೆಯಾದರೂ ಆಗಬಹುದು; ಆದರೆ ಅವೆಲ್ಲ ಒಬ್ಬನಿಗೆ ಸಂಬಂಧಿಸಿದವಾದ್ದರಿಂದ ಪರಸ್ಪರ ಸಂಬಂಧವೂ ಇದೆ. ವರ್ತಮಾನದಲ್ಲಿ ನಿಂತು ಭೂತಕಾಲವನ್ನು ಗ್ರಹಿಸುವ ಪ್ರಯತ್ನ ಆ ಕೃತಿಯ ವೈಶಿಷ್ಟ, ಆತ್ಮ ಕಥನಾತ್ಮಕ ರಚನೆ. ಘಟನೆಗಳೆಲ್ಲ ನಿಜವಾಗಿ ನಡೆದವುಗಳೇ, ಅಲ್ಲಿನ ಪಾತ್ರಗಳು ಬಹುಪಾಲು ಈಗಲೂ ಬದುಕಿದ್ದಾರೆ ಎಂದರು ಸಾಹು. ತಾವು ಚಿಕ್ಕವರಾಗಿದ್ದಾಗ ಪಡೆದ ಅನುಭವಗಳನ್ನು ಪ್ರಬುದ್ಧ ವಯಸ್ಸಿನಲ್ಲಿ ಪುನರ್ ಪರಿಶೀಲಿಸಿದಾಗ ಸಿದ್ಧವಾದದ್ದು `ಅಭಿಶಪ್ತ ಗಂಧರ್ವ', ಅಲ್ಲಿನ ಎರಡು ಪ್ರಸಂಗಗಳನ್ನು ವಿವರಿಸಿದರು.

ತಮ್ಮ ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನ ಒಂದು ಅನುಭವ ಕಾದಂಬರಿಯ ಒಂದು ಪ್ರಸಂಗದ ವಸ್ತು. ಅವರಿಗಾಗಿ ಒಂಬತ್ತು ವರ್ಷ, ಅವರ ತರಗತಿಯಲ್ಲಿ ಪಾರ್ವತಿ ಎಂಬ ಹುಡುಗಿಯಿದ್ದಳು. ಅವಳಿಗೆ ಹತ್ತು ವರ್ಷ ಅವಳನ್ನು ತಾವು ಪ್ರೀತಿಸಿದ ಕತೆ ಅದು ಎಂದರು ಸಾಹು. `ಪ್ರಥಮ ಪ್ರಣಯ' ಎಂದೇ ಆ ಭಾಗದ ಹೆಸರು. ಆ ಪ್ರಣಯ ಭಾವನೆಯ ಸ್ವರೂಪದ ನವಿರು- ಸೂಕ್ಷ್ಮಗಳನ್ನು ಒಂದು ರೀತಿ ನೆನಪಿನ ಮುಖಾಂತರ ಚಿತ್ರಿಸುತ್ತದೆ ಈ ಕತೆ. ಲಾವಣ್ಯ ಸಿನಿಮಾ ಎಂಬ ಚಿತ್ರವಾಗಿಯೂ ಈ ಕತ ಆಗಿದೆಯಂತೆ. ನಾನು ಪ್ರೀತಿಸುತ್ತಿದ್ದ ಹುಡುಗಿ ಈಗಲೂ ಇದ್ದಾಳೆ. ಇಷ್ಟು ದಪ್ಪ, ಸುಕ್ಕುಗಟ್ಟಿದ ಚರ್ಮ, ಬೆಳ್ಳಗಾದ ಕೂದಲು, ಬೊಚ್ಚು ಬಾಯಿ ಎಂದು ನಗುತ್ತ ವರ್ಣಿಸಿದರು. ಆದರೆ ಆ ಕಾಲದ ಪ್ರೀತಿ ಈಗ ಅವಳನ್ನು ನೋಡಿದರೆ ಬಂದೀತೇ? ಎಂದು ಪ್ರಶ್ನೆ ಹಾಕಿಕೊಂಡರು. ಅದೊಂದು ಮುಗ್ಧ ಪ್ರಪಂಚ, ನಾಟಕಗಳಲ್ಲಿಯೊ, ಕತೆ- ಪುರಾಣಗಳಲ್ಲಿಯೂ ಪ್ರೇಮ ಪ್ರಣಯ ಪ್ರಸಂಗಗಳನ್ನು ನೋಡಿ-ಕೇಳಿ ಕಲ್ಪಿಸಿಕೊಂಡ ಪ್ರಣಯ ಅದು ಎಂದರು.

ಅವರ ಕಾದಂಬರಿಯ ಮತ್ತೊಂದು ಪಾತ್ರ ಅಭಿರಾಮ್; ಒಂದು ದೀರ್ಘ ಕಥಾನಕ ಅದಕ್ಕೇ ಮೀಸಲು . ಅವನು ಕೆಳವರ್ಗದವನು; ತಾವು ಬ್ರಾಹ್ಮಣರು (ನಾನು ಜನಿವಾರ ತೆಗೆದು ಬಹಳ ದಿನಗಳಾದವು.” ಎಂದು ವಿವರಣೆಯಿತ್ತರು ಜೊತೆಗೆ) ತಮ್ಮದು ಹಣವಂತ ಜಮೀನ್ದಾರರ ಕುಟುಂಬ; ಅವನು ದಲಿತ ಕೂಲಿಕಾರ ವರ್ಗಕ್ಕೆ ಸೇರಿದವನು. ಆದರೆ ಅಭಿರಾಮ ಅಪ್ರತಿಮ ಕಲಾವಿದ, ನಟ. ಜೀತದಾಳಾಗಿದ್ದರೂ ಅವನದು ಪರಿಷ್ಕೃತ ನಟನಾ ಸಾಮರ್ಥ್ಯ. ಜಾತ್ರಾ'ಗಳಲ್ಲಿ ಅವನು ರಾಜನ ಪಾತ್ರ ವಹಿಸಿದನೆಂದರೆ ರಾಜನ ಗತ್ತು ಎಲ್ಲಿಂದ ಬರುತ್ತಿತ್ತೋ; ಗಂಧರ್ವನಾದರೆ ದೇವಲೋಕದಿಂದ ಇಳಿದು ಬಂದವನಂತಯೇ ಕಾಣಿಸುತ್ತಿದ್ದ. ತನ್ನ ಬಳಿಯಿದ್ದ ಉಡುಗೆ ತೊಡುಗೆಗಳನ್ನೇ ಧರಿಸಿದ್ದರೂ ರಂಗದ ಮೇಲೆ ಅವನು ಪಾತ್ರ ವಹಿಸುತ್ತಿದ್ದಾಗ ತನ್ನ ನಟನೆಯಿಂದ ಅದ್ಭುತರಮ್ಯ ಪ್ರಪಂಚವೊಂದನ್ನು ಅವನು ಸೃಷ್ಟಿಸಿ ಬಿಡುತ್ತಿದ್ದ. ಚಿಕ್ಕವನಾಗಿದ್ದ ತಮಗೆ, ಕಾಲಲ್ಲಿ ಚಡಾವುಗಳಿಲ್ಲದೆ ಅಭಿರಾಮ ರಾಜನ ಪಾತ್ರ ವಹಿಸುತ್ತಿದ್ದುದರಿಂದ ಕೊರತೆ ಎನ್ನಿಸುತ್ತಿತ್ತು. ಹಾಗಾಗಿ ಯಾವುದೋ ಒಂದು ಸನ್ನಿವೇಶದಲ್ಲಿ ಅವರ ಚಿಕ್ಕಪ್ಪ ಕೊಂಡು ತಂದಿದ್ದ ಒಂದು ಜೊತೆ ಹೊಸ ಚಡಾವುಗಳನ್ನು ಯಾರಿಗೂ ಕಾಣದಂತೆ ಎತ್ತಿಕೊಂಡು ಬಂದು ಅಭಿರಾಮನಿಗೆ ನೀಡಿದರು. ಮನೆಯಲ್ಲಿ ಅವು ಕಾಣದಾದಾಗ ಪರದಾಡಿದರೂ, ಬಾಲಕ ಸಾಹು ಎನೂ ಹೇಳಲಿಲ್ಲ. ಆದರೇನು ಅವುಗಳನ್ನು ಧರಿಸಿ ರಂಗದ ಮೇಲೆ ಅಭಿರಾಮ ಬಂದಾಗ ಚಿಕ್ಕಪ್ಪ ನೋಡಿದರು. ಜೀತದಾಳು ಕಳ್ಳತನ ಮಾಡಿದ್ದಾನೆಂದು ತೀರ್ಮಾನಿಸಿದರು. ಅವನನ್ನು ಕರೆಸಿ ತಮ್ಮ ಮುಂದೆಯೇ ಚೆನ್ನಾಗಿ ಥಳಿಸಿದರು. ಅದು ತಾನೇ ಅವನಿಗೆ ಕೊಟ್ಟಿದ್ದು ಎಂದು ಹೇಳಲು ಬಾಲಕನಿಗೆ ಭಯವಾಗಿ ಸುಮ್ಮನಾಗಿಬಿಟ್ಟ. ಅದಕ್ಕಿಂತ ಮಿಗಿಲು ಎಂದರೆ ಅಭಿರಾಮ ತುಟಿಪಿಟಕ್ಕೆನ್ನದೆ ಏಟುಗಳನ್ನು ತಿಂದದ್ದು; ಸ್ನೇಹಿತ - ಯಜಮಾನ ಬಾಲಕನ ಹೆಸರನ್ನು ಹೇಳದೆಯೇ ಸುಮ್ಮನಿದ್ದದ್ದು - ಮುಂದೆ ಇವರು ದೊಡ್ಡವರಾದ ಮೇಲೆ, ಈಗಲೂ, ಅದೇ ಸ್ಥಿತಿಯಲ್ಲಿರುವ ಅಭಿರಾಮನನ್ನು ಸಂಧಿಸಿದಾಗ ಆ ವಿಷಯಗಳನ್ನು ಮಾತನಾಡಿಕೊಳ್ಳುತ್ತಾರೆ. ಹಿನ್ನೆಲೆಯರಿಯದ ಇತರರಿಗೆ ಇವರ ಮಾತು ಅರ್ಥವಾಗುವುದಿಲ್ಲ, ಆದರೆ ಆ ಮುದುಕ ಈಗಲೂ ಕಳ್ಳತನದ ಆರೋಪ ಹೊತ್ತು ಏಟು ತಿಂದದ್ದು ಸಾಹು ಅವರಿಂದಾಗಿ ಎಂಬುದನ್ನು ಯಾರಿಗೂ ಹೇಳಿಲ್ಲ !

ಇಂಥ ಪ್ರಸಗಗಳು ನಮ್ಮ ಸಾಹಿತ್ಯದಲ್ಲಿಯೂ ಅನೇಕ ಇವೆ; ಇದನ್ನು ಹೋಲುವ ಸನ್ನಿವೇಶಗಳಂತೂ ಹಲವಾರಿವೆ. ಆದರೆ ಒರಿಯಾದಲ್ಲಿ ಬರೆದ ಸಾಹು ಅವರ ಕಥನ ರೀತಿ ಜನರಿಗೆ ಹಿಡಿಸಿದೆ. ಪ್ರಸಂಗಗಳಲ್ಲಿ ಅರ್ಥಾತ್ ವಸ್ತುವಿನಲ್ಲಿ ಸಾಮ್ಯವಿದ್ದರೂ ಕೃತಿ ವಿಶಿಷ್ಟವಾಗುವುದು ಅದನ್ನು ರಚಿಸಿರುವ ಬಗೆಯಲ್ಲಲ್ಲವೇ? ಯಾರ ಅನುಭವಕ್ಕೂ ಬಾರದ, ಯಾರಿಗೂ ತಿಳಿಯದೇ ಇರುವ ಹೊಚ್ಚ ಹೊಸದನ್ನು ಹೇಳುವುದು ಬರಹಗಾರನಿಗೆ ಸಾಧ್ಯವೇ? `ನವ್ಯಂ ಭವತಿ ಕಾವ್ಯಂ ಗ್ರಥನಕೌಶಲಾತ್' ಎಂದು ಅದಕ್ಕೆ ಅಲ್ಲವೇ ಹೇಳುವುದು? ಅಲ್ಲದೆ ಅಭಿಶಪ್ತ ಗಂಧರ್ವ' (ಅಭಿರಾಮನಿಗೆ ಸಂಬಂಧಿಸಿದ ಪ್ರಸಂಗದ ಶೀರ್ಷಿಕೆಯೇ ಇಡೀ ಕೃತಿಯ ಶೀರ್ಷಿಕೆಯಾಗಿದೆ) ಸಾಹಿತ್ಯ ಕೃತಿಯಾಗಿ ಒಂದು ವಿಶಿಷ್ಟ ರಚನೆ ಎಂದು ನನಗನ್ನಿಸಿತು. ಮೂಲತಃ ಅದು ಜೀವನದ ನಿಜ ಸಂಗತಿಗಳನ್ನು ಆಧರಿಸಿದ್ದು; ಬೇರೆ ಬೇರೆ ಪ್ರಸಂಗಗಳಾದರೂ ನೀಲಮಣಿ ಸಾಹು ಎಂಬ ಬಾಲಕನ ಕಣ್ಣುಗಳ ಮೂಲಕ ಅವನೂ ಒಂದು ಪಾತ್ರವಾಗಿರುವ ಸನ್ನವೇಶಗಳು ಅಲ್ಲಿವೆ; ಇದೊಂದು ಕಾದಂಬರಿಯಾಗಿಯೂ ಕಾಣಿಸುವುದು.

ಸಾಹು ಅವರ ವಿವರಣೆಯ ಮಧ್ಯೆ ಅದೂ ಇದು ವಿವರಣೆ ಕೇಳುತ್ತಿದ್ದೆವು. ಸಾವಧಾನವಾಗಿ ಉತ್ತರಿಸುತ್ತಿದ್ದರು. ಸಾಕಷ್ಟು ದೀರ್ಘಕಾಲ ಮಾತನಾಡಿದವು. ಹೂರಟು ನಿಂತೆವು. ನಮ್ಮನ್ನು ತಬ್ಬಿಕೊಂಡು ಬೀಳ್ಕೊಟ್ಟರು. ಅವರ ಶ್ರೀಮತಿಯವರು ಅಷ್ಟೇ ವಾತ್ಸಲ್ಯದಿಂದ ಕಂಡರು. ನಮಸ್ಕಾರ ಮಾಡ ಹೇಳಿದ ಅಪೂರ್ವನನ್ನು ಪ್ರೀತಿಯಿಂದ ಮೊಮ್ಮಗನೆಂಬಂತೆ ತಬ್ಬಿ ಕೊಂಡರು.

ಅವರ ಮನೆಯ ಪಕ್ಕದಲ್ಲಿಯೇ ಒರಿಯಾದ ಬಹು ಪ್ರಸಿದ್ಧ ಕಾದಂಬರಿಕಾರ ಶಂತನು ಕುಮಾರ ಆಚಾರ್ಯರ ಮನೆ, ಅವರಲ್ಲಿ ಹೋಗುತ್ತೇವೆಂದು ಪಂಡಾ ಹೇಳಿದಾಗ ಸಾಹು ಅವರು ನಮ್ಮತ್ತ ತಿರುಗಿ, ಅವರನ್ನು ಮಾತನಾಡಿಸಿಕೊಂಡು ಹೋಗಿ, ನನಗಿಂತ ದೊಡ್ಡ ಲೇಖಕರು ಅವರು ಎಂದರು. ಹೊಟ್ಟೆಯ ಕಿಚ್ಚಿಲ್ಲದೆ ಇತರ ವ್ಯಕ್ತಿಯೊಬ್ಬ ತನಗಿಂತ ದೊಡ್ಡ ಲೇಖಕರೆಂದು ಹೇಳುವುದರ ಹಿಂದಿನ ಹೃದಯ ವೈಶಾಲ್ಯವಂತಹುದು!

****

ಕಾದಂಬರಿಯ ಆಚಾರ್ಯ

ನಮ್ಮ ಅದೃಷ್ಟಕ್ಕೆ ಶಂತನು ಕುಮಾರ ಆಚಾರ್ಯ ಮನೆಯಲ್ಲಿದ್ದರು. ಅವರ ಮನೆಗೆ ಫೋನ್ ಇದ್ದರೂ, ಪೂರ್ವಭಾವಿಯಾಗಿ ಭೇಟಿಯನ್ನು ಗೊತ್ತುಪಡಿಸಿಕೊಳ್ಳದಿದ್ದುದಕ್ಕೆ ಅಸಮಾಧಾನ ವ್ಯಕ್ತಪಡಿಸಬಹುದೇನೋ ಎಂಬ ಅಂಜಿಕೆ ನಮಗಿತ್ತು. ಆದರೆ ಹಾಗಾಗಲಿಲ್ಲ. ಪ್ರಾಯಶಃ ಬೇರೆ ರಾಜ್ಯದಿಂದ ಬಂದವರೆಂಬ ಕಾರಣಕ್ಕಾಗಿ ಅಂತಹ ಮನೋಭಾವದವರೂ ಸ್ವಲ್ಪ ತಾಳ್ಮೆಯಿಂದ ನಡೆದುಕೊಳ್ಳುವರೆನ್ನಿಸಿತು. ಅವರ ಹೆಸರು ನನಗೆ ಇಷ್ಟವಾಯಿತು; ಕನ್ನಡದಲ್ಲಿ ಅಪರೂಪವೆನ್ನಿಸುವ ಹೆಸರು: ಒರಿಯಾದವರ ಹೆಸರುಗಳೇ ಅಷ್ಟೆ. ನಮ್ಮ ಹೆಸರುಗಳು ಅವರಲ್ಲಿ ಅಪರೂಪ. ಕನ್ನಡಿಗರ ಹೆಸರುಗಳ ಕೊನೆಯಲ್ಲಿ ಸೇರಿಸುವ ಅಪ್ಪ, ಅಣ್ಣ, ಆಯ್ಯ ಮುಂತಾದವನ್ನು ಎಷ್ಟೋ ಕಡೆ ವಿವರಿಸುತ್ತಿದ್ದೆವು ನಾವು. ಶಂತನು ಹೆಸರಿನಲ್ಲಿನ ಹ್ರಸ್ವಸ್ವರಗಳು, ಅನುನಾಸಿಕಗಳು ಕಿವಿಗೆ ಇಂಪಾಗಿ ಕೇಳಿಸುವಂತಹವು.

ನಾವು ಕರ್ನಾಟಕದಿಂದ ಬಂದವರೆಂದು ತಿಳಿದ ಮೇಲೆ ಒಳಗಿನ ಹಾಲಿಗೆ ಆಹ್ವಾನಿಸಿದರು. ಒಳ್ಳೆಯ, ತಕ್ಕಮಟ್ಟಿಗೆ ವಿಶಾಲವಾದ ಮನೆ. ಆಚಾರ್ಯರು ಈಚೆಗಷ್ಟೇ ನಿವೃತ್ತರಾದವರು; ಆಗ ಅವರು ಉತ್ಕಲ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿದ್ದರು. ಅವರು ರಸಾಯನ ಶಾಸ್ತ್ರದಲ್ಲಿ ಎಂ. ಎಸ್.ಸಿ. ಪದವಿ ಪಡೆದು ಒರಿಸ್ಸಾ ಸರ್ಕಾರದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕ ರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದವರು. ತೆಳುವಾದ ಎತ್ತರವಾದ ವ್ಯಕ್ತಿ; ಪೈಜಾಮ ಜುಬ್ಬ ಧರಿಸಿದ್ದರು. ಮೊದಮೊದಲು ಸ್ವಲ್ಪ ಬಿಗುವೇನೋ ಎನ್ನಿಸಿತು; ಎಷ್ಟಾಗಲೀ ರಿಜಿಸ್ಟ್ರಾರ್ ಆಗಿದ್ದವರಲ್ಲವೇ ಎನ್ನಿಸಿತು. ಆದರೇನೋ ಬರಬರುತ್ತ ಸರಳವಾದರು, ವಾಚಾಳಿಯಾದರು. ಅವರ ಮಾತು ಸಲೀಸು, ಖಚಿತ ಹಾಗೂ ಜೋರು. ಬಿಗುಮಾನದ ವ್ಯಕ್ತಿಯೇ ಇರಬೇಕು. ನೀಲಮಣಿ ಸಾಹು ಅವರಂತೆ ತೀರ ಸರಳವಲ್ಲವೆಂಬ ಭಾವನೆ ಬಂತು.

ಅವರು ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿಯೇ ಕಥಾರಚನೆಗೆ ತೊಡಗಿದವರು; ಅಲ್ಲಿಂದ ಮುಂದೆ ಸಾಹಿತ್ಯ ಕೃಷಿಯಲ್ಲಿ ಹಿಂದೆ ನೋಡಿಲ್ಲ. ಸುಮಾರು ಸಮೃದ್ಧವೆನ್ನಬಹುದಾದ ಸಂಖ್ಯೆಯ ಕೃತಿಗಳನ್ನು ಪ್ರಕಟಿಸಿದ್ದಾರೆ, ಹತ್ತರಷ್ಟು ಕಥಾ ಸಂಕಲನಗಳನ್ನು, ಎಂಟು ಕಾದಂಬರಿಗಳನ್ನೂ ಬರೆದಿದ್ದಾರೆ. ಅಲ್ಲದೆ ಮಕ್ಕಳ ಸಾಹಿತ್ಯ ಮತ್ತು ವಿಜ್ಞಾನದ ಬರವಣಿಗೆಗೂ ಆಚಾರ್ಯರು ಹೆಸರು ಪಡೆದಿದ್ದಾರೆ. ಮಕ್ಕಳಿಗಾಗಿ ಸುಮಾರು ಹತ್ತು ಪುಸ್ತಕಗಳನ್ನವರು ಪ್ರಕಟಿಸಿದ್ದಾರೆ. ಅವುಗಳಲ್ಲಿ ನೇರವಾಗಿ ವಿಜ್ಞಾನಕ್ಕೆ ಸಂಬಂಧಿಸಿದವು ಮತ್ತು ವಿಜ್ಞಾನಾಧಾರಿತ ಕಲ್ಪಕ ಕತೆಗಳೂ ಸೇರಿವೆ. ಸಾಹಿತ್ಯ ವಿದ್ಯಾರ್ಥಿಗಳ ಬಳಗದವರಲ್ಲದೆ ಅನ್ಯಶಿಸ್ತುಗಳವರು ಸಾಹಿತ್ಯದಲ್ಲಿ ಕೃಷಿ ಮಾಡಿದರೆ ಒಳ್ಳೆಯದು.

ನಮ್ಮ ಮಾತುಕತೆ ಅಲ್ಲಿಂದಲೇ ಆರಂಭವಾಯಿತು. ವಿಜ್ಞಾನದ ಅಭ್ಯಾಸ ಮಾಡಿದ ನಿಮಗೆ ಸಾಹಿತ್ಯದಲ್ಲಿ ಆಸಕ್ತಿ ಹೇಗೆ ಮೂಡಿತು? ಎಂಬ ಕ್ಲೀಷೆ ಪ್ರಶ್ನೆ, ಪ್ರಾಯಶಃ ತಮ್ಮ ಬಾಲ್ಯದಲ್ಲಿ ಹಿರಿಯವರಿಂದ ಒದಗಿದ ಪ್ರೇರಣೆ ಎಂದೋ ಏನೋ ಉತ್ತರಿಸಿದರು; ಅವರದು ಕ್ ಜಿಲ್ಲೆಯ ಒಂದು ಹಳ್ಳಿ. ವಿದ್ಯಾವಂತ ಬ್ರಾಹ್ಮಣ ಕುಟುಂಬ; ವಂಶದಲ್ಲಿ ಕೆಲವರು ಪಂಡಿತರು. ಆ ಪ್ರಭಾವ ಇರಬೇಕು. ಆದರೆ ವಿವಿಧ ಕ್ಷೇತ್ರಗಳಿಂದ ಬಂದವರು ಸಾಹಿತ್ಯ ರಚನೆ ಮಾಡಿದರೆ ಸಾಹಿತ್ಯಕ್ಕೆ ಹೊಸ ಆಯಾಮ ವ್ಯಾಪ್ತಿಗಳು ದೊರೆಯುತ್ತವೆ ಎಂಬ ಮಾತನ್ನು ಒತ್ತಿ ಹೇಳಿದರು, ಒರಿಯಾ ಭಾಷೆಯಲ್ಲೂ ಕನ್ನಡ ಅಥವಾ ಇತರ ಭಾರತೀಯ ಭಾಷೆಗಳಲ್ಲಿರುವಂತೆ ಆಧುನಿಕ ಸಾಹಿತ್ಯ ವಲಯದಲ್ಲಿ ಇಂಗ್ಲೀಷ್ ಅಧ್ಯಾಪಕರದೇ ಮೇಲುಧ್ವನಿ. ಇಂಗ್ಲಿಷ್ ಸಾಹಿತ್ಯದ ಅಧ್ಯಾಪಕರು ಕನ್ನಡದಂಥ ಭಾರತೀಯ ಭಾಷೆಗಳಲ್ಲಿ ಬರೆದಿದ್ದರಿಂದ ಆದ ಉಪಯೋಗವಂತೂ ಅದ್ಭುತವಾದದ್ದೇ. ಆದರೆ ಇದರಿಂದ ಅನ್ಯಾಯವೂ ಆಗದೇ ಇಲ್ಲ. ಎಲ್ಲೋ ಓದಿದ್ದನ್ನು ಇಲ್ಲಿ ತಂದು ಹಾಕುವುದು ಅವರಿಗೆ ಸುಲಭ; ಹಾಗಾಗಿ ಪಟ್ಟನೆ ಹೆಸರು ಮಾಡುತ್ತಾರೆ. ಅಲ್ಲದೆ ಅವರಿಗೆ ನಮ್ಮಂತೆ ಕಪ್ಪು ತೊಗಲಿನ ಮಂದಿಯಾದರೂ 'ಇಂಗ್ಲಿಷ್ ಓದಿರುವುದರಿಂದ ಹೆಚ್ಚು ಗೌರವ, ಕನ್ನಡದಲ್ಲಿ ಬರೆದೇ ಅವರು ನಮಗೆ ಉಪಕಾರ ಮಾಡುತ್ತಿದ್ದಾರೆಂಬ ಭಾವನೆ ಬಂದುಬಿಡುತ್ತದೆ. ಜೊತೆಗೆ ವಿಶ್ವವಿದ್ಯಾಲಯದ ದೊಡ್ಡ ಹುದ್ದೆಗಳಲ್ಲಿದ್ದ ಇಂಗ್ಲೀಷ್ ಅಧ್ಯಾಪಕರಾದರೆ ರಾಷ್ಟ್ರಮಟ್ಟದ ಸಂಪರ್ಕಗಳು; ಪರಸ್ಪರ ಬೆನ್ನು ತುರಿಸುವಿಕೆ. ಇದಕ್ಕೆ ಕಳಸವಿಟ್ಟಂತೆ ಕನ್ನಡ ಮೇಷ್ಟರುಗಳ ಕೀಳರಿಮೆ. ಹೀಗಾಗಿ ನಮ್ಮಲ್ಲೂ ಇಂಗ್ಲಿಷ್ ಅಧ್ಯಾಪಕರೇ ದೊಡ್ಡ ವಿಮರ್ಶಕರು. ಅವರ ಶಂಖದಿಂದ ಬಿದ್ದ ನೀರು ತೀರ್ಥ, ಈಗ ಪರಿಸ್ಥಿತಿ ಸ್ವಲ್ಪ ಬದಲಾಯಿಸಿರಬಹುದು. ಒರಿಯಾ ಭಾಷೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.

ಸಾಹಿತ್ಯಾಭ್ಯಾಸವನ್ನು ಔಪಚಾರಿಕವಾಗಿ ಮಾಡದೆ ಸಾಹಿತ್ಯ ಬರೆದು ಶಂತನು ಕುಮಾರರು ದೊಡ್ಡ ಹೆಸರು ಮಾಡಿದ್ದಾರೆ. ಗೋಪಿನಾಥ ಮೊಹಂತಿ ಅವರ ನಂತರದ ಕಾಲದಲ್ಲಿ ಬರೆಯುತ್ತಿರುವ ಕಾದಂಬರಿಕಾರರಲ್ಲಿ ಅವರು ಅಗ್ರಗಣ್ಯರೆಂದು ಮಾನ್ಯತೆ ಪಡೆದಿದ್ದಾರೆ. ನರ ಕಿನ್ನರ' ಕಾದಂಬರಿ ಮೊದಲನೆಯದು; ಅದು ವಾಕ ವರ್ಗದ ಮೇಲೆ ತುಂಬ ಪ್ರಭಾವ ಬೀರಿತಂತೆ ಪ್ರಕಟಣೆ ಮೊದಲಲ್ಲಿ. ಏಕೆಂದರೆ ಸ್ವತಂತ್ರ ಭಾರತವು ಅಂಗೀಕರಿಸಿದುವ ಅನೇಕ ಮೌಲ್ಯಗಳನ್ನು ಅವರು ನೇರವಾಗಿ ಪ್ರಶ್ನಿಸುತ್ತಾರೆ. ನೇರವಾಗಿ ಕಥೆ ಹೇಳದ ಅವರ ಕಥನ ಸಾಹಿತ್ಯ ಪ್ರತಿಮಾತ್ಮಕವಾಗಿವೆ.

‘ನ-ಕಿನ್ನರ ಕಾದಂಬರಿಯ ವಸ್ತು ನರನು ಕಿನ್ನರನಾಗುವ ಪ್ರತಿಕ್ರಿಯೆಯ ನಿರೂಣೆಯೇ? ಎಂದು ನಾನು ಪ್ರಶ್ನಿಸಿದೆ. ಆ ಕಾದಂಬರಿ ಓದದ್ದರಿಂದ ಇಂಥ ಪ್ರಶ್ನೆ ಸಹಜವೇ. ಒರಿಯಾ ಭಾಷೆಯ ಕಾದಂಬರಿಗಳಲ್ಲಿ ಎಷ್ಟು ಕನ್ನಡಕ್ಕೆ ಬಂದಿವೆ? ಒಂದೂ ಇಲ್ಲ. ಇಂಗ್ಲಿಷಿನಲ್ಲಿ ಗೋಪಿನಾಥ ಮೊಹಂತಿ ಅವರ 'ಪಜಾ' ಕಾದಂಬರಿಯ ಇಂಗ್ಲಿಷ್ ಅನುವಾದವನ್ನು ಓದಿದ್ದೆ. ಇನ್ನಾವುದೂ ಸಿಕ್ಕಿರಲಿಲ್ಲ; ಅಥವಾ ಇರಲಿಲ್ಲ. ಒರಿಸ್ಸಾ ಪ್ರವಾಸ ಕೈಗೊಳ್ಳುವ ಮುಂಚೆ ಅವರ ಸಾಹಿತ್ಯದ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಬೇಕೆಂದು ಪ್ರಾಮಾಣಿಕ ಪ್ರಯತ್ನವನ್ನು ತಕ್ಕಮಟ್ಟಿಗೆ ಮಾಡಿದ್ದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಭಾರತೀಯ ಸಾಹಿತ್ಯ ಸಮೀಕ್ಷೆ' ಯ ಎರಡು ಬೃಹತ್ ಸಂಪುಟಗಳಲ್ಲಿನ ಒರಿಯಾ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಿದ್ದೆ. ನಾನು 'ಕಾದಂಬರಿ' ಎನ್ನಿಸಿಕೊಳ್ಳುವ ಕೆಲವು ಬರಹಗಳನ್ನು ಪ್ರಕಟಿಸಿದ್ದರಿಂದ ಅಲ್ಲಿನ ಕಾದಂಬರಿಕಾರನ್ನೇ ವಿಶೇಷವಾಗಿ ಭೇಟಿ ಮಾಡಬೇಕೆಂಬ ಆಸೆಯಿಂದ ಅಲ್ಲಿಗೆ ಹೋಗಿದ್ದೆ. ಮುಂಚೆ ಆದಷ್ಟು ಕಾದಂಬರಿಗಳ ಅನುವಾದವನ್ನು ಓದಬೇಕೆಂದು ಬಯಸಿದ್ದೆ. ಹಿಂದಿಯಲ್ಲಿ ಕೆಲವು ಅನುವಾದಗೊಂಡಿರಬಹುದಾದರೂ ಆ ಭಾಷೆ ನನಗೆ ಬಾರದು; ಆದರೆ ಇಂಗ್ಲಿಷ್ ಅನುವಾದಗಳು ಇಲ್ಲ. ಅದೂ ಕಾದಂಬರಿಯ ಅನುವಾದವೆಂದರೆ ಕಷ್ಟವೇ. ಪದ್ಯಗಳಾದರೆ ಅನುವಾದ ಗಾತ್ರದ ದೃಷ್ಟಿಯಿಂದ ಸುಲಭ, ಕವಿಯ ಜೊತೆಗೆ ಕೂತು, ಇಂಗ್ಲಿಷ್ ಅನುವಾದವನ್ನಿಟ್ಟುಕೊಂಡು, ಅವನೊಡನೆ ಪ್ರತಿ ಸಾಲನ್ನೂ ಚರ್ಚಿಸಿ ಕನ್ನಡಕ್ಕೆ ಅನುವಾದಿಸಿ, ತನ್ನ ಅನುವಾದವನ್ನು ಓದಿ ಚರ್ಚಿಸಿ ಒಂದು ಖಚಿತ ರೂಪಕೊಡುವುದು ಕಾಲದ ದೃಷ್ಟಿಯಿಂದ ಆಗುವ ಕೆಲಸ. ಆದರೆ ನಾಲ್ಕಾರು ನೂರು ಪುಟಗಳ ಕಾದಂಬರಿಯ ಅನುವಾದ ಹೀಗೆ ನಡೆಯಲು ಸಾಧ್ಯವೇ? ಹೋದ ವರ್ಷ ಒರಿಯಾದ ಪ್ರಸಿದ್ಧ ಕಾದಂಬರಿಗಾರ್ತಿ ಪ್ರತಿಭಾ ರಾಯ್ ಅವರ 'ಯಾಜ್ಞಸೇನಿ' ಎನ್ನುವ ಕಾದಂಬರಿಗೆ ಮೂರ್ತಿದೇವಿ ಪುರಸ್ಕಾರ ಸಿಕ್ಕಿದ್ದನ್ನು ಪತ್ರಿಕೆಗಳಲ್ಲಿ ಓದಿದ್ದೆ. ಅದರ ಇಂಗ್ಲಿಷ್ ಅನುವಾದವಿದ್ದರೆ ಓದಬೇಕೆಂದು ಹುಡುಕಾಡಿದೆ. ಪ್ರಯತ್ನ ಸಫಲವಾಗಲಿಲ್ಲ. ಏಕೆಂದರೆ ಇಂಗ್ಲಿಷ್‌ಗೆ ಆ ಕಾದಂಬರಿ ಬಂದಿಲ್ಲ; ಆದರ ಹಿಂದಿ ಅನುವಾದ ‘ದ್ರೌಪದಿ' ಯ ಆಧಾರದ ಮೇಲೆ ಆ ಪ್ರಶಸ್ತಿ ಆಕೆಗೆ ಸಿಕ್ಕಿದ್ದು. (ಮೂರ್ತಿ ದೇವಿ ಪುರಸ್ಕಾರ ಕೊಡುವುದೇ ವಿವಿಧ ಭಾರತೀಯ ಭಾಷೆಗಳ ಹಿಂದಿ ಅನುವಾದಗಳಲ್ಲಿ ಶ್ರೇಷ್ಠವಾದದಕ್ಕೆ ಎಂದು ಈಚೆಗೆ ನನಗೆ ತಿಳಿಯಿತು.)

ನನ್ನ ಪ್ರಶ್ನೆ ಶಂತನು ಕುಮಾರರಿಗೆ ಆಶ್ಚರ್ಯಕರವಾಗಿ ಕಾಣಲಿಲ್ಲ. ಏಕೆಂದರೆ ನಾನು ಕಾದಂಬರಿಯನ್ನು ಸಾಧ್ಯವಿಲ್ಲದ ಪರಿಸ್ಥಿತಿಯಿರುವುದು ಅವರಿಗೂ ತಿಳಿದಿರುವಂಥದೆ. ಆ ಕಾದಂಬರಿಯ ವಸ್ತು ನರ ವರ್ಸಸ್ ಕಿನ್ನರಎಂದು ವಿವರಿಸಿದರು. ಕಿನ್ನರ ಎಂಬುದು ಲಂಪಟತನದ ಸಂಕೇತ ಎಂದರು; ಅದನ್ನು ತೊರೆಯದ ಹೊರತು ನರ ನರನಾಗಲಾರ ಎಂದು ವಿವರಿಸಿದರು. ತಮ್ಮ ಕಾದಂಬರಿಗಳು ಮೆಟಫಿಸಿಕಲ್ ವಸ್ತುಗಳ ಬಗ್ಗೆ ಎಂದು ತಿಳಿಸಿದರು. ಈ ಕಾರಣದಿಂದಲೇ ಅವರ ಕಾದಂಬರಿಗಳ ಭಾಷೆ ಕೃತಕವಾಗಿರುತ್ತದೆ ಎಂದು ಕೆಲವು ವಿಮರ್ಶಕರು ಅಭಿಪ್ರಾಯ ಪಡುತ್ತಾರಂತೆ.

ನನ್ನ ಕಾದಂಬರಿಯ ಸ್ವರೂಪ ತಿಳಿಯಬೇಕಾದರೆ ನಿಮಗೆ ಅದರ ಕತೆಯನ್ನು ಹೇಳಬೇಕುಎಂದು 'ನರಕಿನ್ನರ' ಕಾದಂಬರಿಯ ವಸ್ತುವನ್ನು ತಮ್ಮ ಸುಲಲಿತವಾದ ಇಂಗ್ಲಿಷ್ ಮಾತುಗಳಲ್ಲಿ ನಿರೂಪಿಸುತ್ತ ಹೋದರು. ಅವರ ಒರಿಯಾ ಭಾಷಣ ಸಲೀಲವಾಗಿದ್ದರೂ ಗಾಢ ವಿಷಯಗಳಿಂದ ತುಂಬಿರುತ್ತದಂತೆ, ಸಹಜವೇ. ಅವರ ಮಾತುಗಾರಿಕೆ ಅಂಥದು. ಎದುರಿಗೆ ಕುಳಿತಿದ್ದವರು ಕೇಳಿಸಿಕೊಳ್ಳಲೇಬೇಕಾದಂತೆ ಮಾಡುವ ಮಾತಿನ ಓಘ ಅಸಮಾನವಾದುದು.

ಬಿಡುವಿನಿಂದಲೇ ಕಾದಂಬರಿಯ ಕತೆ ಹೇಳಿದರು: ಬ್ಬ ಕ್ರಿಶ್ಚಿಯನ್ ಪಾದ್ರಿ, ಒಮ್ಮೆ ಎಲ್ಲಿಯೋ ಬೆಳಿಗ್ಗೆಯೆದ್ದು ಹೋಗುತ್ತಿದ್ದಾನೆ;  ಸ್ವಲ್ಪ ತುರ್ತು ಎನ್ನಬಹುದಾದ ಕೆಲಸಕ್ಕೆ. ಸನಿಹದಲ್ಲಿ ಎಲ್ಲಿಂದಲೋ ಪುಟ್ಟ ಕಂದಮ್ಮನ ಅಕ್ರಂದನ ಅವನ ಕಿವಿಗೆ ಬೀಳುತ್ತದೆ. ಅವನು ಪಾದ್ರಿ; ಆಕ್ರಂದನ ಅವನ ಕರ್ತವ್ಯವನ್ನು ಎಚ್ಚರಿಸುತ್ತದೆ. ಮಗುವನ್ನು ಕಾಪಾಡಬೇಕು ಅದು ಕಷ್ಟದಲ್ಲಿರುವಂತಿದೆ; ಆದರೆ ತಾನು ಮಾಡಬೇಕಾದ ಕೆಲಸ ಮತ್ತು ಆಲಸ್ಯ, ಹೀಗೆ ಕರ್ತವ್ಯ-ಆಲಸ್ಯಗಳ ನಡುವೆ ಅವನ ಮನಸ್ಸು ಕೆಲಕಾಲ ಓಲಾಡುತ್ತದೆ, ಆದರೆ ಕೊನೆಗೆ ಗೆದ್ದದ್ದು ಅವನ ಪಾದ್ರಿ. ಹೀಗಾಗಿ ಆಕ್ರಂದನ ಬಂದ ದಿಕ್ಕಿಗೆ ಹೋಗಿ ನೋಡಿದರೆ ಹತ್ತಿರದ ಚರಂಡಿಯಲ್ಲಿ ಒಂದು ಸಣ್ಣ ಮಗು! ಮುಂದೆ ಯೋಚಿಸುತ್ತಾ ನಿಲ್ಲದ ಆ ಪಾದ್ರಿ ಮಗುವನ್ನೆತ್ತಿಕೊಂಡು ತಮ್ಮ ಮನೆಗೆ ಬರುತ್ತಾನೆ. ಮನೆಯಂದರೆ ತಾನೊಬ್ಬನೇ ಅಲ್ಲಿರುವುದು. ಅವನು ಒಂಟಿ, ಹೆಂಡತಿ ಮಕ್ಕಳು ಯಾರೂ ಇಲ್ಲ. ಆ ಮಗುವಿಗೆ ಜಾರ್ಜ್ ಎಂದು ಹೆಸರಿಟ್ಟು ಸ್ವಂತ ಮಗುವಿನಂತೆ ಅಕ್ಕರೆಯಿಂದ ಬೆಳಸುತ್ತಾನೆ, ಅದರ ಹುಡುಗನಿಗೆ ಅವನ ಹುಟ್ಟು ಮತ್ತು ತನ್ನ ಅವನ ಸಂಬಂಧದ ಬಗ್ಗೆ ಏನನ್ನೂ ಹೇಳುವುದಿಲ್ಲ. ಕಾಲ ಕಳೆದಂತ ಹುಡುಗ ದೊಡ್ಡವನಾದ ; ಪಾದ್ರಿಯ ಸಾವು ಸಮೀಪಿಸಿತ್ತು. ತನ್ನ ಕೊನೆಗಾಲದಲ್ಲಿ ನಿಜ ಹೇಳಬೇಕೆಂದು ಆ ಪಾದ್ರಿ ಜಾರ್ಜ್‌ಗೆ ಇದ್ದ ಸಂಗತಿಗಳನ್ನೆಲ್ಲ ವಿವರಿಸುತ್ತಾನೆ. ತಾನು ಪಾದ್ರಿಯ ಮಗನೇ ಎಂದು ಭಾವಿಸಿದ್ದ ಆ ಹುಡುಗನಿಗೆ ಆಘಾತವಾಗುತ್ತದೆ ಹಾಗೂ ಪಾದ್ರಿಯ ಸಾವಿನ ನಂತರ ಅವನ ನೆಲೆ ತಪ್ಪುತ್ತದೆ.

ನೆಲೆ ಕಳೆದು ಕೊಂಡ ಜಾರ್ಜ್ ಈಗ ಒಂಟಿ. ಆದರೆ ಬದುಕಬೇಕಲ್ಲ. ಎಲ್ಲಿಗೆಂದು ಹೋಗುವುದು? ಗೊತ್ತಿಲ್ಲದೆ ಗುರಿಯಿಲ್ಲದೆ ಬಂದ ಅವನು ಕೊನೆಗೆ ಸೇರಿದ್ದು ಒಂದು ಕೊಳಗೇರಿಯನ್ನು. ಅವನು ಬಂದಾಗ ಅಲ್ಲೊಬ್ಬ ಹೆಂಗಸು ಇಡೀ ವಾತಾವರಣವನ್ನು ತನ್ನ ಹತೋಟಿಯಲ್ಲಿಟ್ಟುಕೊಂಡವಳಂತ ಗಂಡಸರನೇಕರಿಗೆ ಅನ್ನ ನೀಡುತ್ತಿದ್ದಾಳೆ. ಅವಳು ಅನ್ನ ಕೊಡುತ್ತಿದ್ದುದರಿಂದಲೋ ಏನೋ ಎಲ್ಲರೂ ಅವಳ ಮಾತನ್ನು ಕೇಳುತ್ತಾರೆ. ಅವಳು ಹೇಳಿದಂತೆ ನಡೆದುಕೊಳ್ಳುತ್ತಾರೆ. ಚಿಕ್ಕ ಹುಡುಗ ಜಾರ್ಜ್ ಬಂದಾಗ ಅವಳು ಆತನನ್ನು ನೋಡುತ್ತಾಳೆ. ಇದುವರೆಗೆ ಅವಳಿಗಾಗಿದ್ದ ಅನುಭವವೆಂದರೆ ಎಲ್ಲ ಗಂಡಸರೂ ತನ್ನನ್ನು ಪ್ರೇಯಸಿಯಂತೆ ಕಂಡವರೆ; ಯಾರಾದರೂ ತನ್ನನ್ನು ತಾಯಿಯೆಂದು ಕಾಣಬಲ್ಲ ವ್ಯಕ್ತಿ ದೊರಕಿಯಾನೆ ಎಂದು ಅವಳು ಹಂಬಲಿಸುತ್ತಿರುತ್ತಾಳೆ; ಅವನಿಗೂ ಅವಳು ತಾಯಿಯಂತೆಯೇ ಗೋಚರಿಸುತ್ತಾಳೆ. ಅವನು ಆ ಕೊಳಗೇರಿಯಲ್ಲೇ ವಾಸಿಸಲು ತೊಡಗುತ್ತಾನೆ. ಆವನಲ್ಲಿ ಬಾಲ್ಯತನವಿರುವವರೆಗೂ ಆ ಹೆಂಗಸನ್ನು ತಾಯಿಯಂತೆ ಕಾಣುತ್ತಿದ್ದವನು ಯುವಕನಾಗುತ್ತ ಹೋದಂತೆ ಅವಳನ್ನು ಹೆಂಡತಿಯಾಗಿಸಿಕೊಳ್ಳುತ್ತಾನೆ. ಯಾವುದೋ ಘಟನಾವಳಿಗಳು ನಡೆದು ಚಾರ್ಜ್ ಕೊಳಗೇರಿಯನ್ನು ಬಿಟ್ಟು ಹೋಗಬೇಕಾಗುತ್ತದೆ. ಮತ್ತೆ ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆ ಅವನನ್ನು ಕಾಡುತ್ತದೆ.

ಕತೆ ಹೀಗೇ ಮುಂದುವರೆಯುತ್ತದೆ. ಅನಾಥ ಬಾಲಕನಾದ ಚಾರ್ಜ್ ತನ್ನತನಕ್ಕಾಗಿ ನಡೆಸುವ ಹುಡುಕಾಟ ಈ ಕಾದಂಬರಿಯ ವಸ್ತು; ಜೊತೆಗೆ ಅವರೇ ವಿವರಿಸುವಂತೆ ಮುಗ್ಧತೆಯನ್ನುಳಿಸಿಕೊಳ್ಳಬೇಕಾದ ಆವಶ್ಯಕತೆಯನ್ನು ಕೃತಿ ಒತ್ತಿ ಹೇಳುತ್ತದೆ. ಕಾದಂಬರಿಯು ತಾಯಿ-ಜಾರ್ಜ್ ಇವರ ಸಂಬಂಧ ಪ್ರಕೃತಿ-ಮಾನವ ಇವರ ನಡುವಣ ಸಂಬಂಧದಂತೆ ನನಗೆ ಅನ್ನಿಸಿತು; ತಾಯಿಯನ್ನು ಹೆಂಡತಿಯಂತೆ ಕಂಡು ಪ್ರಕೃತಿಯನ್ನು ಶೋಷಿಸುವ ಮಾನವ ಸಮಾಜದ ದುರಂತವನ್ನು ಈ ಕಾದಂಬರಿ ಪ್ರತೀಕಿಸುತ್ತದೇನೋ ಎಂಬ ಭಾವನೆ ನನಗೆ ಕಥಾಭಾಗವನ್ನು ನಿರೂಪಿಸುತ್ತಿದ್ದಾಗ ಅನ್ನಿಸಿತು. ಆದರೆ ಅದನ್ನು ಜೋರಾಗಿ ಕೇಳಲಿಲ್ಲ. ಏಕೆಂದರೆ ಕಾದಂಬರಿ ಇನ್ನೂ ಮುಂದುವರೆದು ಹೊಸ ಹೊಸ ತಿರುವನ್ನು ಪಡೆಯುತ್ತಲಿತ್ತು. ಕಾದಂಬರಿಯನ್ನು ಓದದೇ ಅವರ ಸಾಂಕೇತಿಕತೆಯ ಬಗ್ಗೆ ಚರ್ಚಿಸಬೇಕಾದ ಪರಿಸ್ಥಿತಿಯ ವಿಪರ್ಯಾಸವಿದಲ್ಲವೇ?

ತಮ್ಮ ಕಾದಂಬರಿಯ ಕತೆಯನ್ನು ವಿವರಿಸುವಾಗ ಕುಮಾರರದು ಸಾವಧಾನ ಶೈಲಿ, ವಿವಿಧ ವಿವರಗಳನ್ನು ತಿಳಿಸಿ ಅದರ ಸ್ವರೂಪವನ್ನು ನಮಗೆ ತಿಳಿಯಪಡಿಸುವ ಹಂಬಲ, ತಮ್ಮ ಮನೆಯವರು ಇಲ್ಲವೆಂದು ಹೇಳಿ ಒಳಗಿದ್ದ ಸಂಬಂಧಿಕರಾದ ವಯಸ್ಸಾದ ಹೆಂಗಸೊಬ್ಬರಿಗೆ ಸೂಚಿಸಿ ಪಾನಕ ಮಾಡಿಸಿದರು. ಜೊತೆಗೆ ಸಿಹಿ ತಿಂಡಿಯೇನನ್ನೋ ಕೊಟ್ಟರು.

ತಾವೇ ಒಳಗೆ ಹೋಗಿ ತಂದರು. ಆಗ ಅವರ ಕಥಾಸರಪಣಿಗೆ ಭಂಗಬಂತು. ನಿರೂಪಣೆಯ ಮಧ್ಯೆ ಕೆಲವು ವೇಳೆ ಮಾತು ಅಡ್ಡ ತಿರುಗಿದಾಗಲೂ ಕತೆಯ ನಿರೂಪಣೆ ನಿಲ್ಲಬೇಕಾಗುತ್ತಿತ್ತು. ಆದರೆ ಕಾದಂಬರಿಯನ್ನು ಪೂರ್ತಿ ವಿವರಿಸಲೇಬೇಕೆಂದು ಹಟತೊಟ್ಟವರಂತೆ ಅವರು ಮತ್ತೆ ಮತ್ತೆ ಸ್ವಲ್ಪ ಹೊತ್ತಿನಲ್ಲಿಯೇ ನಿರೂಪರ್ಣಾಕಾರ್ಯಕ್ಕೆ ವಾಪಸ್ಸಾಗುತ್ತಿದ್ದರು. ಇನ್ನು ಏನೇನೋ ಮಾತನಾಡಿದೆವು. ಅವರು ತುಂಬ ಗಂಭೀರವಾಗಿ ಆಲೋಚಿಸುವವರೆಂಬ ಭಾವನೆ ಬರಲು ಬಹಳಕಾಲ ಬೇಕಾಗಲಿಲ್ಲ. ತಮ್ಮ ಉನ್ನತ ವಿದ್ಯಾಭ್ಯಾಸ ಕಾಲದಲ್ಲಿ ಬಂಗಾಳಿ ಭಾಷೆ-ಸಂಸ್ಕೃತಿಗಳ ಪ್ರಭಾವವನ್ನು ತಾವು ನಿರಾಕರಿಸಿದ್ದಾಗಿ ತಿಳಿಸಿದರು. ಒರಿಯಾ ಭಾಷೆಗೆ ಒರಿಸ್ಸಾ ಸಂಸ್ಕೃತಿಗೆ ತನ್ನದೇ ಆದ ವ್ಯಕ್ತಿತ್ವವಿದೆ, ಸುದೀರ್ಘ ಪರಂಪರೆಯಿದೆ ಎಂದರು. ಒರಿಸ್ಸಾ ಎಂದರೆ ಕಗ್ಗಲ್ಲುಗಳಲ್ಲಿ ಸುಂದರಿಯರನ್ನು ಕೆತ್ತಿ ನಿಲ್ಲಿಸಿದ ರಾಜ್ಯ, ಹಾಗಾಗಿ ಒರಿಸ್ಸಾದ ಧ್ವನಿಯೆಂದರೆ ಉಳಿಯಲ್ಲಿ ಕಲ್ಲು ಕೆತ್ತುವಾಗಿನ ಧ್ವನಿ ಎಂದು ವಿವರಿಸಿದರು. ಹಾಗೆಯೇ ಆ ಧ್ವನಿಯಲ್ಲಿ ಸಮುದ್ರದ ಮೊರೆತವೂ ಸೇರಿದೆ ಎಂದು ಸೇರಿಸಿದರು. ಪಾಶ್ಚಾತ್ಯರ ಅತೀವ ಪ್ರಭಾವಕ್ಕೆ ಒಳಗಾಗುವುದಕ್ಕೆ ಅವರ ವಿರೋಧವಿದೆ. ಭಾರತೀಯ ಭಾಷೆಗಳಿಗೆ ತಮ್ಮದೇ ಆದ ಲಯಗಾರಿಕೆಯಿದೆ; ಪದ್ಯದಲ್ಲಿ ಮಾತ್ರವಲ್ಲ, ಗದ್ಯದಲ್ಲಿಯೂ, ಮಾತಿನಲ್ಲಿಯೂ, ಆದ್ದರಿಂದಲೇ ನಮ್ಮ ಭಾಷೆಗಳಲ್ಲಿ ವಿರಾಮ ಚಿಹ್ನೆಗಳ ಬಳಕೆಯಿರಲಿಲ್ಲ. ಓದುವ ರೀತಿಯಲ್ಲೇ ಈ ಚಿಹ್ನೆಗಳು ಸೇರುತ್ತವೆ. ಹೀಗಾಗಿ ನಮ್ಮ ಭಾಷೆಯಲ್ಲಿ ಬಳಸುವ ಇಂಗ್ಲಿಷ್ ವಿರಾಮ ಚಿಹ್ನೆಗಳು ಎಷ್ಟೋ ವೇಳೆ ಗೊಂದಲವನ್ನೇ ಉಂಟುಮಾಡುತ್ತವೆ. ಅವರ ವಿಶ್ಲೇಷಣೆ ಯೋಚಿಸಬೇಕಾದ ವಿಚಾರವೆನ್ನಿಸುತ್ತದೆ.

ಒರಿಯಾ ಸಾಹಿತ್ಯ ವಲಯದ ಗೌರವಾನ್ವಿತ ವ್ಯಕ್ತಿಯಾದ ಶಂತನು ಕುಮಾರ ಆಚಾರ್ಯರಿಗೆ ಬೇಕಾದಷ್ಟು ಪ್ರಶಸ್ತಿ ಪುರಸ್ಕಾರಗಳು ದೊರಕಿವೆ. ಶಕುಂತಲಾ' ಎಂಬ ಅವರ ಕಾದಂಬರಿಗೆ ಒರಿಸ್ಸಾದ ಅತ್ಯಂತ ಪ್ರತಿಷ್ಠಿತ 'ಸರಳಾ ಪ್ರಶಸ್ತಿ ದೊರಕಿದೆ. ಇದು ಪ್ರತಿಷ್ಠಾನವೊಂದು ವರ್ಷಂಪ್ರತಿ ನೀಡುವ ಒರಿಯಾ ಭಾಷೆಯ ಮೊದಲ ಕವಿ ಸರಳಾದಾಸ್‌ನ ಹೆಸರಲ್ಲಿ ಸ್ಥಾಪಿಸಿರುವ ಪ್ರಶಸ್ತಿ. ಪ್ರಜಾತಂತ್ರ ಪ್ರಚಾರ ಸಮಿತಿಯ ಬಿಶುವ ಪುರಸ್ಕಾರ' ವೂ ಇವರ ಪಾಲಿಗೆ ಬಂದಿದೆ. ಇನ್ನೂ ಅನೇಕವು ದೊಡ್ಡ ಪಟ್ಟಿಯೇ ಆಗುತ್ತದೆ. ೧೯೯೩ ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಅವರ ಸಣ್ಣ ಕತೆಗಳ ಸಂಕಲನ ಚಲಂತಿ ಠಾಕುರಾ' ಕ್ಕೆ ಸಿಕ್ಕಿದೆ. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಲು ಹೋದ ಸಂದರ್ಭವನ್ನು ವಿವರಿಸಿದರು. ಪ್ರಶಸ್ತಿಗಳನ್ನು ಭಾರತೀಯ ಭಾಷೆಗಳ ಲೇಖಕರಿಗೆ ಅಕಾರಾದಿ ಕ್ರಮದಲ್ಲಿ ವಿತರಿಸುತ್ತಾರಲ್ಲ. ತಮ್ಮ ಸರದಿ ಬರುವ ವೇಳೆಗೆ ಸಾಕಷ್ಟು ವೇಳೆಯಾಗಿತ್ತೆಂದರು. ಅಸ್ಸಾಮಿ, ಬೆಂಗಾಳಿ, ಡೋಗ್ರಿ- ಈ ಇಂಗ್ಲಿಷ್ ಅಕ್ಷರಾನುಕ್ರಮದಲ್ಲಿ ಒರಿಯಾ ಬರುವ ಹೊತ್ತಿಗೆ ಪ್ರಶಸ್ತಿ ನೀಡುವವರ ಕೈ ಬಿದ್ದು ಹೋಗಿರುತ್ತದೆ, ದೂರದರ್ಶನದಲ್ಲಿ ಸುದ್ದಿ ದೃಶ್ಯಕ್ಕಾಗಿ ಬಂದವರು ಮೊದಲ ಎರಡು-ಮೂರು ಭಾಷೆಗಳ ಲೇಖಕರಿಗೆ ಪ್ರಶಸ್ತಿ ಪಡೆಯುವ ಚಿತ್ರಗಳನ್ನು ತೆಗೆದುಕೊಂಡು ಹೋಗಿಬಿಡುತ್ತಾರೆ. ಹಾಗಾಗಿ ಅವರಿಗೇ ಸದಾ ಪ್ರಚಾರ ಎಂದು ಗೊಣಗಿದರು. ಸಂಸ್ಕೃತ ಭಾಷೆಯ ಲೇಖಕರಿಗೆ ಪ್ರಶಸ್ತಿ ಕೊಡುವಾಗಂತೂ ಸಮಾರಂಭದ ಕೊನೆ ಕೊನೆ (ತಮಿಳು, ತೆಲುಗು, ಉರ್ದುಗಳ ಗತಿ!) ಈ ವರ್ಷ ಸಂಸ್ಕೃತಕ್ಕಾಗಿ ಪ್ರಶಸ್ತಿ ಪಡೆದವರು ತೊಂಬತ್ತಮೂರು ವರ್ಷಗಳ ಕರ್ನಾಟಕದವರೇ ಆದ ಜಗ್ಗು ಆಳ್ವಾರ್ ಅಯ್ಯಂಗಾರ್ ಅವರು ನೂಕುಗಾಲಿಯ ಕುರ್ಚಿಯಲ್ಲಿ ದೀರ್ಘಕಾಲ ಕುಳಿತಿರಬೇಕಾದ ಪರಿಸ್ಥಿತಿಯನ್ನು ವಿಷಾದದಿಂದ ಹೇಳಿದರು (ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಯು ಆರ್. ಅನಂತಮೂರ್ತಿಯವರು ವೇದಿಕೆಯಿಂದ ತಾವೇ ಕೆಳಗಿಳಿದು ಅವರಿಗೆ ಪ್ರಶಸ್ತಿಯಿತ್ತ ಚಿತ್ರವನ್ನು ದೂರದರ್ಶನದಲ್ಲಿ ನೋಡಿದ್ದೆವು. ಹಾಗಾಗಿ ಪ್ರಚಾರದ ಬಗ್ಗೆ ಶಂತನು ಕುಮಾರರು ಹೇಳಿದ ಮಾತನ್ನು ತಕ್ಷಣ ಒಪ್ಪುವುದು ಹೇಗೆ? )

ಸುಮಾರು ಎರಡು ಗಂಟೆಗಳಷ್ಟು ಕಾಲ ಮಾತಾಡಿದ್ದೆವು - ಆಚಾರ್ಯರ ಜೊತೆಯಲ್ಲಿ. ನಮ್ಮ ವಿಳಾಸಗಳನ್ನು ಪಡೆದರು. ವಿಶ್ವಾಸದಿಂದ ಮಾತಾಡಿ ಬೀಳ್ಕೊಟ್ಟರು. ನಾನಂತೂ ಯಾವ ಲೇಖಕರ ಜೊತೆಗೂ ಇಷ್ಟು ಹೊತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಮ್ಮೆಗೇ ಮಾತನಾಡಿದ ಅನುಭವವಿರಲಿಲ್ಲ. ಅದಕ್ಕೆ ಅವಕಾಶವೂ ಉಂಟಾಗಬೇಕಲ್ಲವೇ? ಆ ಹೊತ್ತಿಗಾಗಲೇ ಮಧ್ಯಾಹ್ನ ಒಂದೂವರೆಗಂಟೆಯ ವೇಳೆ, ಹೊರಗೆ ನಿಚ್ಚಳವಾದ ಗಾಢವಾದ ಬಿಸಿಲು,

ಒಳಗಿನಿಂದ ಹೊರಗೆ ಬಂದರೆ ಒಂದು ಕ್ಷಣ ಕಣ್ಣು ಕೋರೈಸುವಂತೆ. ಮುಖದ ಮೇಲೆ, ಎಲ್ಲಿದ್ದರೂ, ಬೆವರಿನ ಸಾಲು. ಇನ್ನು ಹೊರಗೆ ಬಂದ ಮೇಲೇ !

****

ಕ್ಷೇತ್ರದರ್ಶನ

ಕೊನಾರ್ಕ್ ಹಾಗೂ ಪುರಿ ಕ್ಷೇತ್ರಗಳಿಗೆ ಹೋಗಲು ಎರಡು ದಿನ ಮೊದಲೇ ಒರಿಸ್ಸಾ ಪ್ರವಾಸಾಭಿವೃದ್ಧಿ ನಿಗಮದ ಬಸ್ಸಿನಲ್ಲಿ ರಿಜರ್ವ್ ಮಾಡಿಸಿದ್ದೆವು. ನಾವು ಇಳಿದುಕೊಂಡಿದ್ದ ಜಾಗಕ್ಕಿಂತ ನಿಗಮದ ಕಚೇರಿ - ಎಂದರೆ ಬಸ್ ಹೊರಡುವ ಜಾಗ - ದೂರವೇನೂ ಅಲ್ಲ. ಹಾಗೆ ನೋಡಿದರೆ, ಬೆಂಗಳೂರಿನಿಂದ ಹೋದವರಿಗೆ ಅಲ್ಲಿ ದೂರ ಎನ್ನಿಸುವುದೇ ಇಲ್ಲ. ನಡೆದೇ ಹೊರಟೆವು. ಕಚೇರಿಯು ಇರುವುದು ಪುರಿಗೆ ಹೋಗುವ ರಸ್ತೆಯಲ್ಲಿಯೇ; ಊರಲ್ಲಿ ಅದನ್ನು ಲೀವಿಸ್ ರೋಡ್ ಎನ್ನುತ್ತಾರೆ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಸತಿಗೃಹ - ಪಾಂಥನಿವಾಸದ ಆವರಣದಲ್ಲಿಯೆ ಕಚೇರಿ ಇರುವುದು, ಅಲ್ಲಿಂದಲೇ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ಬಸ್ ಪ್ರಯಾಣ ಪ್ರಾರಂಭ. ಆದೇ ಆವರಣದಲ್ಲಿಯೇ ಒಂದು ಸೌತ್ ಇಂಡಿಯನ್ ರೆಸ್ಟೋರೆಂಟ್ ಇದೆ. ಭುವನೇಶ್ವರದಲ್ಲಿ ಅಲ್ಲಲ್ಲಿ ಈ ಸೌತ್ ಇಂಡಿಯನ್ ರೆಸ್ಟೋರೆಂಟ್‌ಗಳ ಬೋರ್ಡ್‌ಗಳು ಕಾಣಿಸುತ್ತವೆ. ಎಂದರೆ ಇಡ್ಲಿ ವಡೆ ದೋಸೆಗಳು ದೊರೆಯುತ್ತವೆಂದು ಅರ್ಥ. ಇಲ್ಲಿಗೂ ಉಡುಪಿಯವರ ಪಾದಾರ್ಪಣವಾಗಿದಿಯೇನೋ, ಕನ್ನಡದಲ್ಲಿ ಮಾತನಾಡಿಸಬಹುದೇನೋ, ಎಂದು ನೋಡಿದರೆ, ಹ್ಞೂ, ಕಾಣಿಸುವುದಿಲ್ಲ. ದಕ್ಷಿಣ ಭಾರತದ ಹೋಟಲುಗಳು ಪ್ರಾಯಶಃ ನೆರೆಯ ಆಂಧ್ರದವರು ಪ್ರಾರಂಭದಲ್ಲಿ ತೆಗೆದದ್ದಿರಬೇಕು. ಆದರೆ ಬರಬರುತ್ತ ಇಲ್ಲಿನವರೇ ಅಂಥ ತಿನಿಸುಗಳನ್ನು ಮಾಡಲು ಕಲಿತಿರಬೇಕು. ನಾಲಗೆಯ ರುಚಿ ಆ ತಿಂಡಿಗಳಿಗೆ ಒಗ್ಗಿದಾಗ ಸ್ಥಳೀಯರನ್ನು ಆಕರ್ಷಿಸಲು ಅಂಥ ಹೋಟಲುಗಳನ್ನು ಇಲ್ಲಿನವರೇ ತೆಗೆದಿರಬೇಕು. ಬೆಂಗಳೂರಿನಲ್ಲಿ ಪಾನಿಪೂರಿ-ಮಸಾಲೆ ಪೂರಿಗಳು ವ್ಯಾಪಕವಾಗಿ ಹಬ್ಬಿಲ್ಲವೇ? ಗಾಡಿಗಳಲ್ಲಿ ಅವುಗಳನ್ನು ಮಾರುವವರೇನು ಉತ್ತರ ಭಾರತೀಯರಲ್ಲವಲ್ಲ.

ದಕ್ಷಿಣ ಭಾರತೀಯ ಹೋಟಲು ಎಂದರೆ ಒಳ್ಳೆಯ ಒಳ್ಳೆಯ ಕಾಫಿ ಸಿಕ್ಕಬಹುದೇನೋ ಎಂಬ ಆಸೆ. ಆದರೆ ಎಲ್ಲಿಯೂ ಫಿಲ್ಟರ್‌ನಲ್ಲಿ ಇಳಿಸಿದ ಕಾಫಿ ಸಿಕ್ಕುವುದಿಲ್ಲ. ಈಗ ಇನ್ಸ್ಟಂಟ್ ಕಾಫಿ ಪುಡಿಯ ಹಲವಾರು ಬ್ರಾಂಡುಗಳು ಸಿಕ್ಕುವುದರಿಂದ ಅದರಿಂದ ತಯಾರಿಸಿದ ಕಾಫಿಯೇ ಸಿಕ್ಕುವುದು. ಬೆಂಗಳೂರಿನಲ್ಲಿದ್ದಾಗ ಇನ್‌ಸ್ಟಂಟ್ ಕಾಫಿ, ಎಸ್‌ಪ್ರೆಸೋ ಕಾಫಿ ಎಂದರೆ ಮುಖ ಸಿಂಡರಿಸಿಕೊಳ್ಳುವ ನಮಗೆ ಆ ದೂರದ ಊರುಗಳಲ್ಲಿ ಆ ಕಾಫಿ ಸಿಕ್ಕಿದರೇ ಎಷ್ಟೋ ಆನಂದ. ಅದರಲ್ಲೂ ಧಾರಾಳವಾಗಿ ಸಕ್ಕರೆ ಹುಯಿದು ಪಾನಕ ಮಾಡಿಬಿಡುವುದನ್ನು ಕಂಡರೆ ತಾಳ್ಮೆಗೆಡುವಂತಾಗುತ್ತದೆ. ಆದರೆ ಬೇಕಾದಂತೆ ಕಾಫಿ ತಯಾರಿಸಿಕೊಳ್ಳಲು ಹೋಟಲುಗಳಲ್ಲಿ ನಮಗೆಲ್ಲಿ ಅವಕಾಶ ಕೊಡುತ್ತಾರೆ. ಅದಕ್ಕಾಗಿ ನಾವು ಇನ್‌ಸ್ಟಂಟ್ ಕಾಫಿ ಪುಡಿಯ ಪ್ಯಾಕೆಟ್ ಒಂದನ್ನು ರೂಮಿನಲ್ಲಿಟ್ಟುಕೊಂಡಿದ್ದೆವು. ಹಾಲು ತರಿಸಿ, ನಮಗೆ ಬೇಕಾದಷ್ಟು ಪುಡಿ, ಸಕ್ಕರೆ ಸೇರಿಸಿ ಸ್ಟ್ರಾಂಗ್ ಕಾಫಿ ಮಾಡಿಕೊಳ್ಳುತ್ತಿದ್ದೆವು. ಕೆಲವು ಕಡೆಗಳಲ್ಲಂತೂ ಕಾಫಿ ಎಂದರೆ ಹಾಲಿಗೆ ಧಂಡಿ ಸಕ್ಕರೆ ಹಾಕಿ ಮೇಲೆ ತೇಲುವಂತೆ ಇನ್‌ಸ್ಟಂಟ್ ಕಾಫಿ ಪುಡಿಯ ಚಿಟಿಕೆಯಷ್ಟನ್ನು ಉದುರಿಸಿ ಕೊಡುತ್ತಿದ್ದರು. ಇಂಥ ಕಾಫಿಗೆ ಅಲ್ಲಿಯ ಚಹಾದ ಎರಡರಷ್ಟು ಬೆಲೆ.

ಕಾಫಿ-ತಿಂಡಿ ಮುಗಿಸಿಯೇ ಪ್ರವಾಸಕ್ಕೆ ಬಂದದ್ದರಿಂದ ಪಾಂಥನಿವಾಸದ ಸೌತ್ ಇಂಡಿಯನ್ ಹೋಟಲಿಗೆ ಹೋಗುವ ಅವಕಾಶ ಬರಲಿಲ್ಲ. ಬಸ್ಸು ತಪ್ಪಿಹೋಗಬಾರದೆಂಬ ಅತಿ ಎಚ್ಚರದಿಂದ ಎಂಟೂಕಾಲಿಗೇ ಅಲ್ಲಿಗೆ ಬಂದಿದ್ದೆವು. ಅಷ್ಟು ಹೊತ್ತಿಗೆ ಇನ್ನೂ ಪರಮಾತ್ಮಾ ಬಿರುಸಾಗದಿದ್ದರೂ ಬಾಯಾರಿಕೆಯಾದ್ದರಿಂದ ಆ ಹೋಟಲಲ್ಲಿ ಹೋಗಿ ನೀರು ಕುಡಿದು ಬಂದೆವು. ಸದ್ಯ, ತಣ್ಣನೆಯ ನೀರು; ಅಂಥ ನೀರು ಸೆಕೆಯಲ್ಲಿಯೋ, ಬಿಸಿಲನ್ನು ನೆನಪಿಸಿಕೊಂಡ ಸನ್ನಿವೇಶದಲ್ಲಿಯೋ ಸಿಕ್ಕಿದರೆ ಆಗುವ ಆನಂದ ಅಂಥಿಂಥದಲ್ಲ. ಸಾಮಾನ್ಯವಾಗಿ ಊಟಕ್ಕೆಂದು ಹೋದಾಗಲೆಲ್ಲ ಮೊದಲು ಹೊಟ್ಟೆ ತುಂಬ ನೀರು ಕುಡಿಯವತಾಗಿರುತ್ತಿತ್ತು. ಪ್ರವಾಸೋದ್ಯಮ ಕಚೇರಿಯ ಹೂರಗೆ ಹಾಕಿದ ಕುರ್ಚಿಗಳಲ್ಲಿ ಕುಳಿತು ಬಸ್ಸಿಗಾಗಿ ಕಾಯುತ್ತಿದ್ದವು. ಅಲ್ಲಿ ಕುಳಿತಿದ್ದವರು ನಾವು ಮೂರೇ ಮಂದಿ; ಆಮೇಲೆ ಗೊತ್ತಾಯಿತು ಆ ಪ್ರವಾಸದಲ್ಲಿ ಪಾಲುಗೊಂಡಿದ್ದವರಲ್ಲಿ ಬಹುಮಂದಿ ಅದೇ ಆವರಣದ ಪಾಂಥನಿವಾಸದಲ್ಲಿದ್ದವರು.

ಸ್ವಲ್ಪ ಹೊತ್ತಾದ ಬಳಿಕ ನಮ್ಮೆದುರಿನ ಕುರ್ಚಿಯಲ್ಲಿ ಮತ್ತೊಬ್ಬರು ಬಂದು ಕುಳಿತರು. ನಲವತ್ತರ ಸುಮಾರಿನ ಕುಳ್ಳು-ಸಣ್ಣಗಿದ್ದ ದೇಹ, ಕನ್ನಡಕ. ಅವರನ್ನು ಕಂಡ ತಕ್ಷಣ ಎದ್ದು ತೋರುತ್ತಿದ್ದುದು ಹಣೆಯ ಮೇಲಿನ ನೀಳವಾದ ಕಪ್ಪು ತಿಲಕ, ಅದನ್ನು ಕಂಡು ನಾನು, ನೀವು ಕರ್ನಾಟಕದವರೇ?' ಎಂದು ಇಂಗ್ಲಿಷ್‌ನಲ್ಲಿ ಕೇಳಿದೆ. ಹೌದು ಎಂದರು. ಸರಿ, ಕನ್ನಡದಲ್ಲಿ ಮಾತಿಗೆ ಆರಂಭವಾಯಿತು. ಸದ್ಯ, ಕರ್ನಾಟಕದಿಂದ ಬಂದರೂ ಕನ್ನಡ ಬರುವುದಿಲ್ಲವೆಂದು ಹೇಳಿಬಿಡುವರೇನೋ ಎಂಬ ಶಂಕೆ ದೂರವಾಯಿತು. ತಾವು ಕರ್ನಾಟಕದವರೆಂದು ಅವರು ಹೇಳಿಕೊಂಡರೂ ಅವರ ಹುಟ್ಟಿದೂರು ವಿಜಯವಾಡ, ಈಗ ಕೆಲಸದಲ್ಲಿರುವುದು ಹೈದರಾಬಾದ್‌ನಲ್ಲಿ, ಯು.ಬಿಯಲ್ಲಿ. ಹೆಸರು ಶ್ರೀಧರ್ ಚೆಂಜಿ, ‘ಈ ಕಡೆ ಬನ್ನಿ, ಅಲ್ಲಿ ಬಿಸಿಲು' ಎಂದು ವಿಶ್ವಾಸ ತೋರಿದವು. ಬಸ್ಸಿನಲ್ಲಿ ಅವರ ಸೀಟು ಹಿಂದೆ ಇದ್ದುದರಿಂದ ಜೊತೆಗೆ ಕೂತುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಇಳಿದಾಗಲೆಲ್ಲ ಜೊತೆಗಿರುತ್ತಿದ್ದರು.

ಆಂಧ್ರದವರಾದರೂ ಅವರು ಮಾಧ್ವ ಬ್ರಾಹ್ಮಣರಾಗಿದ್ದರಿಂದ ಕನ್ನಡ ಬಲ್ಲರು: ದೇಶಸ್ಥರಂತೆ, ಆದ್ದರಿಂದ ಮರಾಠಿ ಮಾತೃಭಾಷೆ. ಬೆಂಗಳೂರಿನಲ್ಲಿ ಅನೇಕ ಮಂದಿ ಬಂಧುಗಳಿದ್ದಾರೆ. ಅಷ್ಟಕ್ಕೇ ಅವರು ಕರ್ನಾಟಕದವರೇ ಎಂದರೆ ಹೂ ಎಂದಿದ್ದರು. ನೀ ಮೆಟ್ಟುವ ನೆಲ ಅದೆ ಕರ್ನಾಟಕ' ಎಂಬ ಸಾಲು ನೆನಪಿಗೆ ಬಂದಿತು. ಅವರು ಯುಬಿಯ ಗುಣ ನಿಯಂತ್ರಣ ವಿಭಾಗದಲ್ಲಿ ಕೆಮಿಸ್ಟ್, ಭುವನೇಶ್ವರದ ಅವರ ಕಾರ್ಖಾನೆಯಲ್ಲಿ ಕೆಲಸವಿದ್ದುದರಿಂದ ಕಂಪನಿಯ ಪರವಾಗಿ ಅಲ್ಲಿಗೆ ಬಂದಿದ್ದರು. ಆದ್ದರಿಂದ ಒಬ್ಬರೇ. ಅವರು ಉಳಿದಿದ್ದುದು ಕೆನಿಲ್ ವರ್ತ್ ಹೋಟಲಿನಲ್ಲಿ, ತಮ್ಮ ಕಾರ್ಡ್ ಕೊಟ್ಟು ಅಲ್ಲಿಗೊಮ್ಮೆ ಬನ್ನಿ' ಎಂದರು. ಆ ಹೋಟಲೆಂದರ ಭುವನೇಶ್ವರದ ಪ್ರತಿಷ್ಠಿತ ಹೋಟಲುಗಳಲ್ಲಿ ಒಂದು. ಪ್ರತಿನಿತ್ಯ ಆ ಹೋಟೆಲಿನ ಮುಂದೆಯೇ ನಾವು ಹಾದು ಹೋಗುತ್ತಿದ್ದವು. ಒಬ್ಬರಿಗೆ ಒಂದು ದಿನಕ್ಕೆ ಏಳುನೂರು ರೂಪಾಯಿ ರೂಂ ಬಾಡಿಗೆ; ಅಲ್ಲಿನ ತಿಂಡಿ ತಿನಿಸುಗಳಿಗೆ ಆ ಪ್ರಮಾಣದಲ್ಲಿಯೇ ದರಗಳು. ಕಂಪನಿಯ ಪರವಾಗಿ ಹೋಗುವವರು, ಸರ್ಕಾರದ ಖರ್ಚಿನಲ್ಲಿ ಹೋಗುವವರು ಅಥವಾ ಆ ಮಟ್ಟದ ಸಂಪಾದನೆಯಿರುವ ವ್ಯಾಪಾರಿಗಳೊ ಉದ್ದಿಮೆದಾರರೋ ಆದರೆ ಅಂಥ ಹೋಟಲಲ್ಲಿಳಿದುಕೊಳ್ಳಬಹುದು. ಯುಬಿ ಎಂದರೇನು ಸಾಮಾನ್ಯವೇ? ಕನಿಷ್ಠ ಸಂಬಳ ಅಲ್ಲಿ ನಾಲ್ಕು ಸಾವಿರ ರೂಪಾಯಿ ಎಂದು ಕೇಳಿದ್ದೆ. ಅಂಥದ್ದರಲ್ಲಿ ಇಂಥ ವೆಚ್ಚಗಳನ್ನು ಅವರು ಸಲೀಸಾಗಿ ಭರಿಸಬಲ್ಲರು. ಸ್ವಂತವಾಗಿದ್ದರೆ ಇಂಥ ಹೋಟಲಲ್ಲಿರುವುದು ಸಾಧ್ಯವೇ?’ ಎಂದು ಚೆಂಜಿಯೇ ಕೇಳಿದರು. ಮಾರನೇ ದಿನ ಅವರ ರೂಮಿಗೂ ಹೋಗಿದ್ದೆವು. ಪಂಡ ಅವರನ್ನು ಕರೆದುಕೊಂಡು. ಕಿತ್ತಳೆ ಹಣ್ಣಿನ ಷರಬತ್ ತರಿಸಿ ಕೊಟ್ಟರು. ಎಲ್ಲೆಡೆ ಸಿಕ್ಕುವಂತಹುವೇ. ತುಂಬ ಚೆನ್ನಾಗಿರುವಂಥದು ಎಂದರೆ ಯಾವುದು; ಆರಿಸಿದ ತ್ಕೃಷ್ಟವಾದ ಹಣ್ಣುಗಳಿಂದ ಮಾಡಿದ ಅಪ್ಪಟ ರಸ, ಅಷ್ಟೇ ತಾನೇ! ಅದಕ್ಕೆ ಗ್ಲಾಸೊಂದಕ್ಕೆ ಇಲ್ಲಿ ಎಷ್ಟು ಬೆಲೆಯೋ ಇಪ್ಪತ್ತೈದೋ ಮೂವತ್ತೋ ರೂಪಾಯಿ. ಚೆಂಜಿಯವ ರಬಗ್ಗೆ ‘ಪಾಪ’ ಎಂದೇನೂ ಅನ್ನಿಸಲಿಲ್ಲ. ಒಂದು ದಿನದ ಪರಿಚಯದವರಿಗೆ ಅಷ್ಟು ದುಬಾರಿಯಾದ ಷರಬತ್ ಕೊಡಿಸಿದ್ದರು, ನಿಜ. ಆದರೆ ಅದೆಲ್ಲ ಯುಬಿಯವರ ಲೆಕ್ಕಕ್ಕೆ ಹೋಗುವುದಲ್ಲವೇ! ಅದೂ ಇದೂ  ಮಾತಾಡಿ ಬಂದಿದ್ದೆವು.

ರೂಮಿನ ಕಡೆ ಬರುತ್ತ ನನಗೆ ಒಂದು ಆಲೋಚನೆ, ಶಂಕೆ, ಅನುಮಾನ. ಹೊರಗಡೆ ಪ್ರವಾಸ ಬಂದಾಗಲೂ ಹಣೆಯ ಮೇಲೆ ಎದ್ದು ಕಾಣುವಂತೆ ತಿಲಧರಿಸುವ ಈ ಮಾಧ್ವ ದೇಶಸ್ಥ ಬಾಹ್ಮಣ, “ಭುವನೇಶ್ವರದಲ್ಲಿ ರಾಯರ ಮಠವೊಂದು ಇದೆಯಂತಲ್ಲ, ಎಲ್ಲಿದೆಎಂದು ಆ ವಿಷಯ ಅರಿಯದ ಪಂಡರನ್ನು ಪ್ರಶ್ನಿಸಿದ್ದ. ದೈವಭಕ್ತ, ಸಂಪ್ರದಾಯವಾದಿ ಯುನೈಟೆಡ್ ಬ್ರೂವರಿಸ್‌ನಲ್ಲಿ ಗುಣ ನಿಯಂತ್ರಣ ವಿಭಾಗದಲ್ಲಿ ಕೆಲಸ ನಿರ್ವಹಿಸುವುದು ಹೇಗೆ? ಅಲ್ಲಿ ತಯಾರಾಗುವ ಬಿಯರ್, ವಿಸ್ಕಿ, ಬ್ರಾದಿ, ರಮ್, ಜಿನ್ನುಗಳ ಗುಣಮಟ್ಟದ ಬಗ್ಗೆ ರುಚಿನೋಡದೆಯೇ ನಿರ್ಧಾರ ಕೈಗೊಳ್ಳಬಹುದೇ? ಅಥವಾ ಕರ್ತವ್ಯ ಪರಾಯಣತೆಯಿಂದ ಅವುಗಳ ರುಚಿ ನೋಡಬಹುದೇ? ಆದರೆ ಆ ಪಾನೀಯಗಳ ಬಗ್ಗೆ ರುಚಿ ಬೆಳೆಸಿಕೊಳ್ಳದಿದ್ದರೆ, ಅವುಗಳಲ್ಲಿ ಸರಿಸಮಗಳನ್ನು ಕಂಡುಕೊಳ್ಳುವ ಪರಿಣಿತಿ ಇಲ್ಲದಿದ್ದರೆ, ಇದು ಒಳ್ಳೆಯದು ಎಂದು ನಿರ್ಧರಿಸಲು ಸಾಧ್ಯವೇ? ಪಾಪ, ಇವರಿಗೆ ಕಂಪನಿಯ ಕೆಲಸ ಗುಣ ನಿಯಂತ್ರಣ ವಿಭಾಗದ ಲೆಕ್ಕ ಪತ್ರ ನೋಡಿಕೊಳ್ಳುವ ಕೆಲಸ ಇರಬಹುದು. ಯಾವುದೇ ಬಗೆಯಲ್ಲಿ ಸಂಪ್ರದಾಯಕ್ಕೆ ಭಂಗ ಬಾರದ ರೀತಿಯಲ್ಲಿ ನಿರ್ವಹಿಸಬಹುದಾದ ಕೆಲಸವೇನೋ ಇರಬಹುದು. ನಾವು ಕೆನಿಲ್‌ ವರ್ತ್ನ ನಾನ್ನೂರ ಒಂದನೇ ರೂಮಿಗೆ ಹೋದಾಗ ಅವರು ಯಾವುದೋ ಫೈಲನ್ನು ನೋಡುತ್ತಿದ್ದರು. ಆದರೆ ಎಲ್ಲ ಬಗೆಯ ಕೆಲಸವೂ ಫೈಲು ರೂಪದಲ್ಲಿಯೇ ತಾನೇ ದಾಖಲಾಗುವು?ಯೋಚಿಸಿದರೇನು? ಒಂದೇ ತಾನೇ ದಾಖಲಾಗುವುದು? ನಾನು ಎಷ್ಟು ಯೋಚಿಸಿದರೇನು? ಒಂದೇ ದಿನದ ಪರಿಚಯವಾದದ್ದರಿಂದ ಆ ಬಗ್ಗೆ ಕೆದಕಿ ಕೇಳುವುದಾಗಲೀ, ತಮಾಷೆ ಮಾಡುವುದಾಗಲೀ ಸಾಧ್ಯವಿಲ್ಲ. ಪ್ರಾಯಶಃ ನಮ್ಮ ಪರಿಚಯ ಇಷ್ಟಕ್ಕೆ ಮುಗಿಯುವಂತಹುದೇನೋ. ಸಣ್ಣದರಲ್ಲಿ ಪ್ರಾರಂಭವಾಗುವ ಪರಿಚಯಗಳನ್ನು ದೊಡ್ಡದಾಗಿ ಬೆಳೆಸಿಕೊಂಡು ಹೋಗುವ ಸ್ವಭಾವ ನನ್ನದಲ್ಲ. ಚೆನ್ನಾಗಿ ಪರಿಚತರೆನ್ನಿಸಿಕೊಳ್ಳುವ ಜನರೊಂದಿಗೂ ನನ್ನ ವ್ಯವಹಾರ ಸೀಮಿತವೇ. ಆದರೆ ನಾಗರಾಜ್ ಅಂಥವರಲ್ಲ. ಇಷ್ಟರಲ್ಲಿಯೇ ಬೆಂಗಳೂರಿಗೂ ಬರುವೆನೆಂದ ಚೆಂಜಿಯವರಿಂದ ಅವರ ಕಾರ್ಡ್ ಪಡೆದು, ತಮ್ಮ ವಿಳಾಸ ಅವರಿಗೆ ಕೊಟ್ಟು, ‘ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಖಂಡಿತ ಬನ್ನಿ' ಎಂದು ಆಹ್ವಾನಿಸಿದರು. ಅವರ ಮನೆಯಿಂದ ನಾಲ್ಕು ನಿಮಿಷದ ನಡಿಗೆ ನಮ್ಮ ಮನೆ. ಹಾಗಾಗಿ ಚೆಂಜಿಯವರು ನಿಜವಾಗಿಯೂ ಅವರಲ್ಲಿಗೆ ಭೇಟಿ ಕೊಟ್ಟರೆ, ಭುವನೇಶ್ವರದ ನೆನಪಿನಿಂದಾಗಿ ಮ್ಮ ಮನೆಗೂ ಅವರನ್ನು ನಾಗರಾಜ್ ಕರೆತಂದರೆ ನಮ್ಮ ಪರಿಚಯ ಮೊಳಕೆಯೊಡೆಯಬಹುದು.

ಬಸ್ಸು ಸರಿಯಾದ ಸಮಯಕ್ಕೆ ಬಂತು ಅಥವಾ ಸ್ವಲ್ಪ ತಡ ಎಂದರೂ ಸರಿಯೇ. ಎಲ್ಲರೂ ತಮ್ಮ ತಮ್ಮ ಟೀಕೇಟುಗಳನ್ನು ಹಿಡಿದು ಹತ್ತಿದರು, ತಮಗಾಗಿ ಮೀಸಲಾಗಿದ್ದ ಸೀಟುಗಳನ್ನು ಹುಡುಕತೊಡಗಿದವರಿಗೆ ಮಾರ್ಗದರ್ಶಿ ಸಹಾಯ ಮಾಡುತ್ತಿದ್ದ. ಒಂದು ತೊಂದರೆ ಬಂತು. ಒಂದೇ ಸಂಖ್ಯೆಯ ಎರಡು ಸೀಟುಗಳನ್ನು ಇಬ್ಬರಿಗೆ ಕೊಟ್ಟಿದ್ದ ಬುಕಿಂಗ್ ಕ್ಲರ್ಕ್. ಒಟ್ಟು ಪ್ರಯಾಣಿಕರ ಸಂಖ್ಯೆ ಸರಿಯಾಗಿತ್ತು, ಆದರೆ ಯಾರು ಎಲ್ಲಿ ಕುಳಿತು ಕೊಳ್ಳುವುದು? ನೌಕರರ ಇನ್ಎಫಿಷಿಯನ್ಸಿ ಬಗ್ಗೆ ಬೆಳಿಗ್ಗೆ ಒಂಬತ್ತು ಗಂಟೆಗೇ ಮಾತುಗಳಾದವು, ಟೀಕೆ ಟಿಪ್ಪಣಿಗಳಾದವು. ಪಾಪ ಮಾರ್ಗದರ್ಶಿ ಪೇಚಿಗೆ ಸಿಕ್ಕಿದ್ದ. ತಾನು ಮಾದ ತಪ್ಪಿಗೆ ಅವನು ಸಮಜಾಯಿಷಿ ನೀಡಬೇಕಾಯಿತು. ತಪ್ಪು ಆಗಿಹೋಗಿದೆ, ದಯವಿಟ್ಟು ಅನುಸರಿಸಿಕೊಳ್ಳಿ' ಎಂದು ಅಂಗಲಾಚಿದ. ಇಂಥ ಪ್ರಸಂಗಗಳಲ್ಲಿ ಮನುಷ್ಯರನ್ನು ಕಾಡುವುದು ಘನತೆಯ ಪ್ರಶ್ನೆ. ಬೇರೆಯವರಿಗೆ (ಅವರಿಗೂ ಅದೇ ನಂಬರ್‌ನ ಸೀಟುಗಳು ಎಂದು ನಮೂದಾಗಿದ್ದರೂ) ಸೀಟು ಬಿಟ್ಟುಕೊಟ್ಟರೆ ತಾನು ಸೋತಂತೆ ಅಲ್ಲವೇ ಎಂಬ ಭಾವನೆ. ನಾವೇ ಸಿಕ್ಕಿಕೊಳ್ಳದೆ ದೂರದಿಂದ ಇಂಥ ಪ್ರಸಂಗವನ್ನು ನೋಡುತ್ತಿದ್ದಾಗ, ಎಂಥ ಕ್ಷುಲ್ಲಕ ವಿಷಯಗಳನ್ನು ಈ ಜನ ದೊಡ್ಡದಾಗಿ ಮಾಡುತ್ತಾರಲ್ಲ ಎಂದು ಬೇಸರಿಸಿಕೊಳ್ಳುತ್ತೇವೆ. ಹೊಂದಿಕೊಂಡು ಹೋದರಾಗದೇ, ಸಾಯುವವರೆಗೂ ಬಸ್ಸಿನಲ್ಲಿರಬೇಕೇ ಸಂಜೆಯವರೆಗೆ ತಾನೇ, ಎಂದುಕೊಂಡರೂ ತಣ್ಣಗೆ ಕೂತು ನೆನಪಿಸಿ ಕೊಂಡರೆ, ನಾವೇ ಹಾಗೆ ನಡೆದುಕೊಂಡಿರುವ ಹಲವಾರು ಪ್ರಸಂಗಗಳು ಮನಸ್ಸಿನಲ್ಲಿ ಮೂಡುತ್ತವೆ. ಒಂದು, ಎರಡು, ಮೂರು........

ಮಾರ್ಗದರ್ಶಿ ಹೇಗೋ ಒಪ್ಪಿಸಿದ. ಜೊತೆಗೆ ಇನ್ನೊಂದು ಅನುಕಾಲ ಒದಗಿತು. ಪ್ರವಾಸಕ್ಕಾಗಿ ಬುಕ್ ಮಾಡಿಸಿದ್ದ ಒಂದು ತಂಡ ಬರಲೇ ಇಲ್ಲ. ಅವರಿಗಾಗಿ ಕಾಯುವುದು ಮತ್ತು ಈ ಜಗಳ ಬಗೆಹರಿಸುವುದು ಇದರಲ್ಲಿ ಅರ್ಧಗಂಟೆ ತಡವಾಗಿತ್ತು. ಆ ತಂಡ ಬಾರದ್ದರಿಂದ ಜಗಳವಾಡಿದ ಎರಡು ಗುಂಪುಗಳು ಅಷ್ಟೇನು ಬಾಧೆ ಪದೆ, ಸೋತೆವೆಂದು ಭಾವಿಸದೆ, ಸೀಟುಗಳಲ್ಲಿ ಕುಳಿತುಕೊಳ್ಳುವಂತಾಯಿತು. ಅಂತೂ ಬಸ್ಸು ಹೊರಟಿತು. ಆ ಹೊತ್ತಿಗಾಗಲೇ ಸೂರ್ಯ ಪರಮಾತ್ಮ ಬಿಸಿಯೇರಿದ್ದ, ಜಗಳದ ಪ್ರಸಂಗದಿಂದಾಗಿ ನಮ್ಮೆಲ್ಲರ ತಲೆಯೂ ಬಿಸಿಯೇರಿತ್ತು: ಜೊತೆಗೆ ಕಟ್ಟಡಗಳ ನಡುವೆ ನಿಂತ ಬಸ್ಸಿನಲ್ಲಿ ಗಾಳಿ ಸಂಚಾರ ಸ್ತಬ್ದವಾಗಿತ್ತು. ಬಸ್ಸು ಹೊರಟಾಗ ಇದರಿಂದಾಗಿ ಹಾಯೆನಿಸಿತು. ಗಾಳಿ ಬೀಸತೊಡಗಿ ಮುಖದ ಮೇಲೆ ಹರಿಯುತ್ತಿದ್ದ ಬೆವರ ಹನಿಗಳು ಒಣಗಿ ಅವಿಯಾಗ ತೊಡಗಿತು. ಸದ್ಯ, ಬಿಸಿಲಿಲ್ಲವೆಂದು ಆ ಭಾಗದ ಕಿಟಕಿಯ ಕಡೆಗೆ ಕುಳಿತಿದ್ದ ಪ್ರಯಾಣಿಕರು ಮಾತ್ರ ಸ್ವಲ್ಪ ಕಸಿವಿಸಿಗೊಂಡರು. ಏಕೆಂದರೆ ಬಸ್ಸು ನೂರೆಂಬತ್ತು ಡಿಗ್ರಿಗಳು ತಿರುಗಿ ಓಡತೊಡಗಿದ್ದರಿಂದ ನೇರವಾದ ಬಿಸಿಲು ಆ ಕಡೆಯ ಬದಲು ಈ ಕಡೆಯ ಕಿಟಕಿಗಳ ಬದಿಯಿದ್ದ ಪ್ರಯಾಣಿಕರ ಮೇಲೆ ಬೀಳತೊಡಗಿತ್ತು!

ಸ್ವಲ್ಪ ಹೊತ್ತಿನಲ್ಲಿಯೇ ಬಸ್ಸು ಸಿಪ್ಲಿ ಎಂಬ ಹಳ್ಳಿಯನ್ನು ತಲುಪಿತು; ಅದು ಭುವನೇಶ್ವರ-ಪುರಿಯ ಮುಖ್ಯ ಮಾರ್ಗದಲ್ಲಿಯೇ ಇದೆ. ಅಲ್ಲಿ ನೋಡುವಂಹುದೇನೂ ಇಲ್ಲ. ಅದು ಪ್ರಸಿದ್ಧವಾಗಿರುವುದು, ಅಲ್ಲಿನ ಬಟ್ಟೆಗಳಿಗೆ ಹೊಂದಿಸಿ ಮಾಡಿರುವ ಬಣ್ಣಬಣ್ಣದ ಹೊಲಿಗೆ ಕೆಲಸಕ್ಕೆ. Applique ಎಂದು ಕರೆಯಲಾಗುವ ಈ ಕೆಲಸವೆಂದರೆ ಬಣ್ಣ ಬಣ್ಣದ ಬಟ್ಟೆಗಳನ್ನು ಹಿನ್ನೆಲೆಯ ಬಟ್ಟೆಯೊಂದಕ್ಕೆ ಸೇರಿಸಿ ಹೊಲಿದು ಬಟ್ಟೆಗಳನ್ನು ಕಲಾತ್ಮಕವಾಗಿಸುವುದು. ಗೋಡೆಗೆ ತಗುಲು ಹಾಕಬಹುದಾದ ವಿವಿಧ ಚಿತ್ರಗಳಿಂದೊಡಗೂಡಿದ ಭಿತ್ತಿ ಫಲಕಗಳು ತಮ್ಮ ಬಣ್ಣಗಳಿಂದಾಗಿ ಕಣ್ಣು ಹಿನ್ನೆಲೆಯ ಸೆಳೆಯುತ್ತವೆ. ‘ಪಟ್ಟಾ’ ಎಂಬ ಹೆಸರಿನ ಬಟ್ಟೆಯ ಮೇಲೆ ಬರೆಯುವ ಚಿತ್ರಗಳಿಗೂ ಒರಿಸ್ಸಾ ಹೆಸರು ಪಡೆದಿದೆ. ಹಾಗೆಯೇ ಒಂದು ಲೋಹದ ತಗಡಿನ ಮೇಲೆ ಬೇರೆ ಲೋಹಗಳ ಚಿತ್ರಗಳನ್ನು ವಿನ್ಯಾಸಗಳನ್ನು ಹೊಂದಿಸಿರುವ ಲೋಹ-ತಂತಿಯ ಹೆಣಿಕೆ ಕೆಲಸಗಳು (filique) ರಾಜ್ಯದ ವೈಶಿಷ್ಟ್ಯ. ಮುಖ್ಯ ಮಾರ್ಗದ ಎರಡೂ ಕಡೆಗಳಲ್ಲಿ ಹತ್ತಾರು ಅಂಗಡಿಗಳಲ್ಲಿ ಇರುವುದು ಇಂಥ ಬಟ್ಟೆಯ ಚಿತ್ರಗಳೆ. ಹೆಂಗಸರು ಧರಿಸುವ ಉಡುಪುಗಳು, ಅವರ ಕೊಡೆ, ಕೈ ಚೀಲ ಮುಂತಾದ ಸಾಮಗ್ರಿಗಳ ಮೇಲೆಲ್ಲ ಇಂಥ ಹೊಲಿಗೆ ಕೆಲಸವಿರುತ್ತದೆ. ಇವುಗಳನ್ನು ಪ್ರವಾಸಿಗರು ಕೊಳ್ಳಲೆಂದೇ, ಇಪ್ಪತ್ತು ನಿಮಿಷಗಳ ಕಾಲ ಬಸ್‌ ನಿಂತಿತು. ಅಷ್ಟರಲ್ಲಿಯೇ ವಿವಿಧ ಅಂಗಡಿಗಳಲ್ಲಿ ಸಾವಿರಾರು ರೂಪಾಯಿಯ ವ್ಯಾಪಾರ ನಡೆಯುತ್ತದೆ. ಪ್ರವಾಸಿಗರ ತುವನ್ನು ಬಳಸಿಕೊಂಡು, ಅವರ ವ್ಯವಹಾರಜ್ಞಾನದ ಅಭಾವವನ್ನು ಸದುಪಯೋಗ ಪಡಿಸಿಕೊಂಡು ಸುಲಿಯಲು ಅಲ್ಲಿಯವರಿಗೆ ಅಷ್ಟು ಸಮಯ ಸಾಕು. ವಿದೇಶೀ ಪ್ರವಾಸಿಗರಾದರೆ ಒಂದು ರೀತಿಯ ಕೊಳ್ಳೆಯೇ ವ್ಯವಸ್ಥಿತವಾಗಿ ನಡೆಯುತ್ತದೆ. ನಮ್ಮವರಿಗೆ ಕೊಳ್ಳುವ ಶಕ್ತಿಯೂ ಕಡಿಮೆಯೇ. ಆದ್ದರಿಂದ ಶೋಷಣೆಯೂ ಕಡಿಮೆ. ಇವನ್ನೆಲ್ಲ ಕೊಳ್ಳುವ ಆಸಕ್ತಿ ಇಲ್ಲದವರು ತಾವು ತಂದ ಬಾಟಲುಗಳಿಂದ ನೀರು ಕುಡಿಯುವುದರಲ್ಲಿಯೋ, ಸಿಕ್ಕುವ ಎಳನೀರು ಕುಡಿಯುವುದರಲ್ಲಿಯೋ ನಿರತರಾಗಿರುತ್ತಾರೆ.

ಸಿಪ್ಲಿಯಿಂದ ಬಸ್ಸು  ಮುಂದೆ ಸಾಗುತ್ತದೆ. ನಾವು ಈಗ ಪಯಣಿಸುತ್ತಿರುವುದು ಪೂರ್ವದ ಕಡೆಗೆ, ಎಂದರೆ ಬಂಗಾಳ ಕೊಲ್ಲಿಯ ಕಡೆಗೆ, ಕೊನಾರ್ಕದತ್ತ. ಹಸಿರಾದ ಗಿಡಮರಗಳಿಗೇನೂ ಕೊರತೆಯಿಲ್ಲ. ಅಲ್ಲಲ್ಲಿ ನದಿಗಳನ್ನು ದಾಟಬೇಕಾಗುತ್ತದೆ, ಸೇತುವೆಯ ಮೇಲೆ. ನೀರಿಗೆ ಕೊರತೆಯಿಲ್ಲ. ಆದ್ದರಿಂದ ಸಸ್ಯಸಂಪತ್ತಿಗೂ ಕೊರತೆಯಿಲ್ಲ. ಭುವನೇಶ್ವರದಿಂದ ಕೊನಾರ್ಕವಿರುವುದು ಅರವತ್ತೈದು ಕಿಲೋಮೀಟರುಗಳ ದೂರದಲ್ಲಿ; ಅಂದರೆ ನೇರವಾಗಿ ಹೋದರೆ ಒಂದು ಗಂಟೆಯ ಪ್ರಯಾಣ. ಆದರೆ ಬಸ್ಸು ನಿಧಾನವಾಗಿ ಓಡುತ್ತದೆ. ಏಕೆಂದರೆ ಒಂದು ದಿನದ ಈ ಪ್ರವಾಸವಿರುವುದು ಕೊನಾರ್ಕ್ ಮತ್ತು ಪುರಿ- ಈ ಎರಡು ಸ್ಥಳಗಳನ್ನು ಸಂದರ್ಶಿಸಲು ಮಾತ್ರ. ಅದಕ್ಕೇ ಬಸ್ಸು ನಿಧಾನವಾಗಿ ಓಡುತ್ತಿದೆಯೇ?

“ಬಸ್ಸು ವೇಗವಾಗಿ ಹೋದರೆ ಪ್ರೇಕ್ಷಣೀಯ ಸ್ಥಳಗಳಲ್ಲಿ ನಮಗೆ ಹೆಚ್ಚು ಕಾಲ ದೊರೆಯುತ್ತದಲ್ಲ” ಎಂದು ಮಾರ್ಗದರ್ಶಿಯನ್ನು ಕೇಳಿದರೆ, ನಿಜ ಸಾರ್, ಆದರೆ ಗಾಡಿ ಹಳೆಯದು, ತುಂಬ ವೇಗವಾಗಿ ಹೋಗಲಾರದುಎಂಬ ಉತ್ತರ. ಇನ್ನೇನು ಮಾತು?

ಬಸ್ಸು ಓಡುತ್ತಿದ್ದರೆ ಎಲ್ಲರ ಮುಖಗಳು ಕಿಟಕಿಯ ಕಡೆಗೇ, ಸುತ್ತಲ ದೃಶ್ಯಗಳನ್ನು ನೋಡಲು, ಹಾಗೂ ಬೀಸುವ ಗಾಳಿಗೆ ಮುಖ ವೊಡ್ಡಲು. ಸಾಗುತ್ತಿದ್ದರೂ, ಗಾಳಿ ಬೀಸುತ್ತಿದ್ದರೂ, ಹರಿಯುವ ಬೆವರಿಗೆ ಕೊರತೆಯಿಲ್ಲ. ಆಗಾಗ ನೀರಿನ ಬಾಟಲ್ ತೆಗೆದು ಓಡುತ್ತಿರುವ ಬಸ್ಸಿನಲ್ಲಿಯೇ ಮೇಲಕ್ಕೆತ್ತಿ ಬಾಯೊಳಗೆ ನೀರು ಸುರಿದುಕೊಳ್ಳುವ ಸನ್ನಾಹ, ಬಾಯಲ್ಲಿ ಬಿದ್ದು ಭುಜಎದೆಗಳ ಮೇಲೂ ನೀರು ಸುರಿದಾಗ ಆ ತಂಪಿನಿಂದ ಉಲ್ಲಾಸವೇ! ಸಮುದ್ರದ ಹತ್ತಿರ ಬಂದಂತೆ ನಮ್ಮ ದಕ್ಷಿಣ-ಕನ್ನಡ ಉತ್ತರ ಕನ್ನಡದ ಕರಾವಳಿಯಂತೆಯೇ ಉದ್ದಕ್ಕೂ ಬೆಳೆದ ಗೋಡಂಬಿ ಮರಗಳ ಗುಂಪುಗಳು. ಆದರೆ ನಮ್ಮ ಕರಾವಳಿಯ ಸಸ್ಯ ವೈವಿಧ್ಯವಾಗಲೀ, ದಟ್ಟಣೆಯಾಗಲೀ ಇಲ್ಲಿ ಕಾಣದು. ಓಡುವ ಬಸ್ಸಿನ ಏಕನಾದದ ಶಬ್ದ, ಕುಲುಕಾಟ ಹಾಗೂ ಬೀಸುವ ಗಾಳಿಯ ಸಮ್ಮೋಹನ ಶಕ್ತಿಗೆ ಒಳಗಾಗಿ ಹಲವರ ಕಣ್ಣು ಮುಚ್ಚುತ್ತವೆ. ಪ್ರವಾಸವೆಂದರೆ ಓಡಾಟದಿಂದಾಗುವ ಆಯಾಸ, ರಾತ್ರಿ ಕೆಡುವ ನಿದ್ದೆ -ಇವುಗಳಿಂದಾಗಿ ಪ್ರಯಾಣ ಕಾಲವೇ ಹೀಗೆ ಕಣ್ಮುಚ್ಚಲು ಸರಿಯಾದ ಸಮಯ.

ಆದರೆ ಹೆಚ್ಚು ಹೊತ್ತು ಆಗುವಂತೆಯೇ ಇಲ್ಲ. ಎಷ್ಟೇ ನಿಧಾನವಾಗಿ ನಮ್ಮ ಬಸ್ಸು ಸಾಗುತ್ತ ಬಂದಿದ್ದರೂ ಹನ್ನೊಂದರ ಹೊತ್ತಿಗೆ ಕೊನಾರ್ಕಕ್ಕೆ ಬರುತ್ತವೆ. ಬಸ್ಸಲ್ಲಿ ಕೂತ ನಮಗೆ ಕಾಣುವುದು ಒರಿಸ್ಸಾ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ; ಅಲ್ಲಿ ಕಟ್ಟಿರುವ ಪಾಂಥನಿವಾಸ. ಜನರಿಗೆ ತಿಳಿಯುವಂತೆ ಬೋರ್ಡಿನಲ್ಲಿ ಅಲ್ಲಿ ವಸತಿಗೆ ಕೊಡಬೇಕಾದ ಶುಲ್ಕದ ವಿವರಗಳು. ನಿಜವಾಗಿಯೂ ತುಂಬಾ ಅಗ್ಗವೆಂದೇ ಹೇಳಬಹುದು. ಅಂತಹ ಪ್ರಶಾಂತ ವಾತಾವರಣದಲ್ಲಿ ಆರಾಮವಾಗಿ ಒಂದೆರಡು ರಾತ್ರಿಗಳನ್ನು ಕಳೆಯಬಹುದು, ಅದಕ್ಕೆ ಅಲ್ಲಿ ಅನುಕೂಲವಿದೆ. ಹೊಸದಾಗಿ ಮದುವೆಯಾದವರಿಗೆ ಅಂಥ ಪ್ರದೇಶಗಳು ನಿಜವಾಗಿಯೂ ಸೂಕ್ತ. ಕಡಿಮೆ ಜನಸಂಚಾರ, ಅಪಾರವಾದ ಸಮುದ್ರ, ಮರಳರಾಶಿ, ಹಳೆಯ ಸ್ಮಾರಕಗಳು. ಅದರೇನು, ನಮ್ಮಂಥವರಿಗೆ ಈ ಯೋಚನೆ ನಿಟ್ಟುಸಿರು ಬರಿಸಬಹುದು, ಅಷ್ಟೆ.

ಬಸ್ಸು ಸರ್ಕಾರದ್ದಾದ್ದರಿಂದ ಅಲ್ಲಿನ ಮ್ಯೂಸಿಯಂನ ಆವರಣದಲ್ಲಿ ನಿಂತಿತು. ಒಂದು ಗಂಟೆ ಸಮಯವಿದೆ, ಕೊನಾರ್ಕ್ ದೇವಸ್ಥಾನ ನೋಡುವ ಮುಂಚೆ ಅದರ ವೈಶಿಷ್ಟ್ಯವನ್ನು ಅರಿಯಿರಿ ಎಂದು ಮಾರ್ಗದರ್ಶಿ ವಿವರಗಳನ್ನು ನೀಡತೊಡಗಿದ. ಇಲ್ಲಿರುವುದು ಜಗತ್ ಪ್ರಸಿದ್ಧ ಸೂರ್ಯ ದೇವಾಲಯ. ಹದಿಮೂರನೆಯ ಶತಮಾನದಲ್ಲಿ ರಾಜಾಲಾಂಗೂಲ ನರಸಿಂಹದೇವನ ಆಜ್ಞೆಯಂತೆ ಆವನ ಕಾಲದಲ್ಲಿ ಈ ದೇವಸ್ಥಾನವು ನಿರ್ಮಿತವಾಯಿತು. ಸಮುದ್ರ ದಂಡೆಯ ಮೇಲೆ, ಪೂರ್ವಾಭಿಮುಖವಾಗಿ ಕಟ್ಟಲಾದ ಈ ದೇವಸ್ಥಾನ ನಿರ್ಮಾಣಕಾರ್ಯದಲ್ಲಿ ಸಾವಿರದ ಇನ್ನೂರು ಮಂದಿ ಕೆಲಸಗಾರರು ಹನ್ನೆರಡು ವರ್ಷಗಳ ಕಾಲ ದುಡಿದರಂತೆ, ಇಡೀ ದೇವಸ್ಥಾನ ಒಂದು ರಥದ ವಿನ್ಯಾಸದಲ್ಲಿದೆ. ಇಪ್ಪತ್ತ ನಾಲ್ಕು ಚಕ್ರಗಳಿವೆ, ಆ ರಥಕ್ಕೆ. ಈ ಚಕ್ರವಂತೂ ತುಂಬ ಹೆಸರುವಾಸಿಯಾದದ್ದು. ಒರಿಸ್ಸಾದಲ್ಲಿ ಎಲ್ಲೆಲ್ಲಿ ನೋಡಿದರೂ ಈ ಚಕ್ರದ ಲಾಂಛನವೇ. ರಥವನ್ನು ಏಳು ಕುದುರೆಗಳು ಎಳೆಯುತ್ತಿವ (ವಾರದ ಏಳು ದಿನಗಳು ಹಾಗೂ ಬೆಳಕಿನ ಏಳು ಬಣ್ಣಗಳ ಪ್ರತೀಕವಾಗಿ). ಮೂರು ಹಂತಗಳಲ್ಲಿ ಬರಬರುತ್ತ ಸಂಕುಚಿತಗೊಳ್ಳುವ ಗೋಪುರ, ಮೇಲುಗಡೆ ದುಂಡಾಕೃತಿಯ ಗೋಪುರ. ಇಪ್ಪತ್ತನಾಲ್ಕು ಚಕ್ರಗಳು ದಿನದ ೨೪ ಗಂಟೆಗಳ ಪ್ರತೀಕವಾಗಿವೆ. ಪೂರ್ವದಲ್ಲಿ ಹುಟ್ಟುವ ಸೂರ್ಯನ ಮೊದಲ ಕಿರಣಗಳು ಗರ್ಭಗೃಹದ ಮೇಲೆ ಬೀಳುತ್ತವೆ; ಮಧ್ಯಾಹ್ನದ ಪ್ರಖರ ಕಿರಣಗಳು ಹಾಗೂ ಮುಳುಗುವ ಸೂರ್ಯನ ಹೊಂಗಿರಣಗಳು ಮೇಲೆ ಬೀಳುವಂತೆ ದೇವಾಲಯದ ಹೊರಗೋಡೆಗಳಲ್ಲಿ ಮೂರು ಸೂರ್ಯನ ಸುಂದರವೂ ಆಳೆತ್ತರವೂ ಆದ ಮೂರ್ತಿಗಳಿವೆ. ದೇವಸ್ಥಾನದ ಕಲ್ಲುಗಳು ಬೀಳತೊಡಗಿದ್ದರಿಂದ ಬ್ರಿಟಿಷರ ಕಾಲದಲ್ಲಿಯೇ ಮುಖ್ಯ ದೇವಸ್ಥಾನದ ಒಳಗೆ ಕಲ್ಲು ಮಣ್ಣುಗಳನ್ನು ತುಂಬಲಾಯಿತಂತೆ. ಹಾಗಾಗಿ ಒಳಗೆ ಹೋಗಲು ಈಗ ಸಾಧ್ಯವಿಲ್ಲ. ಮೊದಲು ಅಲ್ಲಿದ್ದ ಸೂರ್ಯನ ಮೂರ್ತಿ ಕಬ್ಬಿಣದ್ದು. ಕೆಳಗಡೆ ಹಾಗೂ ಗೋಪುರದಡಿ ಮೇಲ್ಬಾಗದಲ್ಲಿಟ್ಟಿದ್ದ ವಿರುದ್ದವೂ ಶಕ್ತಿಶಾಲಿಯಾದ, ಪರಸ್ಪರ ಆನುರೂಪವು ಆದ ಆಯಸ್ಕಾಂತಗಳನ್ನಿಟ್ಟಿದ್ದರಿಂದಾಗಿ ಈ ಮೂರ್ತಿ ಮಧ್ಯೆ ಆಧಾರವಿಲ್ಲದೆ ತೇಲುತ್ತಿದ್ದಿತಂತೆ, ಈಗ ಹಾಳಾಗದೆ ಉಳಿದಿರವುದೆಂದರೆ ನಲವತ್ತು ಮೀಟರ್ ಎತ್ತರದ ಮುಶಾಲೆ ಅಥವಾ ಮುಖಮಂಟಪ, ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ನೋಡಿಕೊಂಡು ಹನ್ನರೆಡು ಗಂಟೆಗೆ ಬರಬೇಕೆಂದು ಮಾರ್ಗದರ್ಶಿ ಹೇಳಿದ. ಎಲ್ಲ ಸಂಭ್ರಮದಿಂದ ಹೊರೆಟೆವು.

ಎದುರಿಗೆ ಸಂಪೂರ್ಣವಾಗಿ ದೇವಸ್ಥಾನ ಕಾಣದು, ಪ್ರವೇಶದ್ವಾರ ಮುಂತಾದವು ಅಡ್ಡಿಯಾಗುತ್ತವೆ. ವಿಶಾಲವಾದ ಪ್ರದೇಶದಲ್ಲಿ ನಿರ್ಮಿತವಾಗಿರುವ ದೇವಸ್ಥಾನ ಅದು. ಮೆಟ್ಟಿಲುಗಳನ್ನು ಹತ್ತಿ ಇಳಿದು ಪ್ರಾಂಗಣಕ್ಕೆ ಬಂದರೆ ರಥದ ಭವ್ಯ ಚಿತ್ರ ಕಣ್ಣು ತುಂಬುತ್ತದೆ. ದೊಡ್ಡ ದೊಡ್ಡ ರಥದ ಚಕ್ರಗಳ ವೈಭವವಂತೂ ಮೇರೆ ಮೀರಿದ್ದು. ಪ್ರತಿಯೊಂದರಲ್ಲಿ ಪರ್ಯಾಯವಾಗಿ ಎಂಟೆಂಟು ಕಡ್ಡಿಯಂತಹ ಹಾಗೂ ಅಗಲವಾದ ಆರಗಳು, ಅಗಲ ಅರಗಳು ಮಧ್ಯದಲ್ಲಿ ತೀರ ಅಗಲವಾಗಿದ್ದು ಆಚ್ಚಿನ ಕಡೆ, ಗಾಲಿಯ ಕಡೆ ಸಾಗುತ್ತ ಕಿರಿದಾಗುತ್ತವೆ. ಆ ಮಧ್ಯದಲ್ಲಿ ವರ್ತುಲವೊಂದನ್ನು ಕೊರೆದು ವಿವಿಧ ಮೂರ್ತಿಗಳನ್ನು ಕೆತ್ತಲಾಗಿದೆ. ಪ್ರಾಯಶಃ: ಅಷ್ಟದಿಕಾಲಕರು. ಅಚ್ಚಿನ ಮೇಲೆಯೂ ರಥದೇವಸ್ಥಾನದ ಸುತ್ತಲಿನ ಗೋಡೆಗಳ ಮೇಲೆ ನಾನಾ ಬಗೆಯ ಶಿಲ್ಪಗಳು. ಯುದ್ಧದ ದೃಶ್ಯಗಳು; ವ್ಯಾಪಾರ ಹಾಗೂ ರಾಜಾಸ್ಥಾನಗಳನ್ನು ಚಿತ್ರಿಸಿವಂಥವು; ಬೇಟೆ, ಆನೆ ಹಿಡಿಯುವುದು, ಋಷಿಗಳು, ನೃತ್ಯಗಾತಿಯರು - ಇವುಗಳ ಶಿಲ್ಪಗಳು: ಅನೇಕ ಕಡೆಗಳಲ್ಲಿ ವಿವಿಧ ರತಿ ಆಸನಗಳಿಂದ ಕ್ರೀಡಿಸುವ ಗಂಡು-ಹೆಣ್ಣುಗಳ ಶಿಲ್ಪ ಜನರಿಗೆ ಮುದ ನೀಡುತ್ತವೆ. ದೇವಸ್ಥಾನಗಳಲ್ಲಿ ಮೈಥುನ ದೃಶ್ಯಗಳಿರುವುದನ್ನು ಕರ್ನಾಟಕದ ದೇವಾಲಯಗಳಲ್ಲೂ ನಾವು ಕಾಣುತ್ತೇವೆ. ಇದನ್ನು ಕೆತ್ತಿರುವುದು ದೃಷ್ಟಿ ಪರಿಹಾರಕ್ಕೆಂದು ಕೆಲವರು ಹೇಳಿದರೆ, ಇದಲ್ಲ ದೇವತೆಗಳ ಚಿತ್ರಗಳೆಂದು ಮುಗ್ಧರೆನ್ನುತ್ತಾರೆ. ಸೃಷ್ಟಿಗೆ ಮೂಲವಾದ ಕಾಮಕ್ಕೆ ಜೀವನದಲ್ಲಿರುವ ಸ್ಥಾನ ಈ ಚಿತ್ರಗಳಿಂದ ಸ್ಪುಟವಾಗುತ್ತದೆಂದು ಮತ್ತೆ ಕೆಲವರು. ಸಹಜ ಮೈಥುನ ದೃಶ್ಯಗಳಲ್ಲದೆ, ಪ್ರಾಣಿಗಳೊಂದಿಗೆ ಕ್ರೀಡಿಸುವ ಅಸಹಜ ಮೈಥುನದಲ್ಲಿ ತೊಡಗಿರುವವರು, ಏಕಾಂತದಲ್ಲಿರದೆ ಅನೇಕ ಜನ ಒಟ್ಟಿಗೆ ರತಿಕ್ರೀಡೆಯಲ್ಲಿ ತೊಡಗಿರುವುದು - ಇವೆಲ್ಲವೂ ಬೇರೆಲ್ಲ ಕಡೆಗಲ್ಲಿಯಂತೆ  ದೇವಸ್ಥಾನದಲ್ಲಿಯೂ ಕೆತ್ತಲ್ಪಟ್ಟಿವೆ. ಕೊನಾರ್ಕದ ದೇವಸ್ಥಾನದ ಚಿತ್ರಗಳ ಆಲ್ಬಮ್‌ಗಳಲ್ಲಿ ಹೆಚ್ಚಾಗಿರುವುದು ಇಂಥ ಮೈಥುನ ದೃಶ್ಯಗಳ ಚಿತ್ರಗಳೇ!

ಆದರೆ ದೇವಸ್ಥಾನದ ಗೋಡೆಗಳ ಮೇಲಿರುವ ವಿವಿಧ ಶಿಲ್ಪಗಳ ಕುಸುರಿ, ಕೆತ್ತನೆ ಬೆರಗುಗೊಳಿಸುವಂತಹವು. ಬೇಲೂರು, ಹಳೇಬೀಡು, ಸೋಮನಾಥಪುರಗಳಲ್ಲಿನ ತೀರ ಚಿಕ್ಕವೂ ನವಿರಾದ ಕುಸುರಿ ಕೆಲಸದಿಂದ ಕೂಡಿರುವಂಥವೂ ನಾಲ್ಕಾರು ಹಂತಗಳಲ್ಲಿ ಕೆತ್ತಲಾಗಿರುವಂತಹವೂ, ಅಷ್ಟೊಂದು ಸಂಖ್ಯೆಯವೂ ಆದ ಶಿಲ್ಪಗಳು ಇಲ್ಲಿ ಇಲ್ಲ; ಅಲ್ಲದೆ ಇಲ್ಲಿನ ಕಲ್ಲಿನಲ್ಲಿ ಅಷ್ಟು ಚಿಕ್ಕ ಶಿಲ್ಪಗಳನ್ನು ಪರಿಪೂರ್ಣವಾಗಿ ಕೆತ್ತಲು ಸಾಧ್ಯವಿಲ್ಲವೇನೋ. ನಮ್ಮ ಹೊಯ್ಸಳ ದೇವಾಲಯಗಳಲ್ಲಿರುವುದು ಕಗ್ಗಲ್ಲಿನ ಶಿಲ್ಪಗಳು; ಕೆತ್ತುವುದು ಕಷ್ಟವಾದರೂ ಬೇಕಾದ ಆಕೃತಿಯನ್ನು ಮೂಡಿಸಲು ಸಾಧ್ಯ, ಅದೆಷ್ಟೇ ಚಿಕ್ಕದಾದರೂ. ಆದರೆ ಕೊನಾರ್ಕದಲ್ಲಿನ ಕಲ್ಲು ಅಷ್ಟು ಗಟ್ಟಿಯಾದದ್ದಲ್ಲವೆನಿಸುತ್ತದೆ. ಹಾಗಾಗಿ ಇಲ್ಲಿರುವುದು ದೊಡ್ಡ ಶಿಲ್ಪಗಳು, ಆಳೆತ್ತರಕ್ಕಿಂತ ಹಿರಿದಾಕಾರದ ಸುರಸುಂದರಿಯರು ವಿವಿಧ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವ ಶಿಲ್ಪಗಳು ಇಲ್ಲಿವೆ, ಅವೆಲ್ಲ ಕಣ್ಮನ ಸೆಳೆಯುವಂತಹವು. ಇಲ್ಲಿನ ವಾಸ್ತು ಹಾಗೂ ಶಿಲ್ಪಗಳ ಬಗ್ಗೆ ಒರಿಸ್ಸಾದ ಜನರು ಹೆಮ್ಮೆ ಪಡುವುದು ಸಹಜವಾಗಿಯೇ ಇದೆ.

ಮುಖ್ಯ ದೇವಾಲಯದಿಂದ ಹೊರತಾಗಿ ಅದರ ಸುತ್ತಲೂ ನಿರ್ಮಾಣಗೊಂಡಿರುವ ಪ್ರಾಣಿಗಳ ಹಾಗೂ ಯುದ್ಧಗಳ ಶಿಲ್ಪಗಳೂ ಅಮೋಘವಾಗಿವೆ. ಆನೆ-ಕುದುರೆಗಳ ಭಾರೀ ಗಾತ್ರದ ಶಿಲ್ಪಗಳು ಭವ್ಯವಾಗಿವೆ. ಕೋಪಗೊಂಡ ಕುದುರೆಯೊಂದು ಯುದ್ಧದಲ್ಲಿ ಕೆಳಗೆ ಬಿದ್ದ ಸೈನಿಕನೊಬ್ಬನನ್ನು ತನ್ನ ಮುಂಗಾಲುಗಳಿಂದ ಅಪ್ಪಳಿಸಿ ತುಳಿಯುವ ಭಂಗಿಯ ಶಿಲ್ಪದಲ್ಲಿ ಕುದುರೆಯ ಕ್ರೋಧ ಎದ್ದು ಕಾಣುತ್ತದೆ. ಇದು ಒರಿಸ್ಸಾ ಸರ್ಕಾರದ ಲಾಂಛನವಾಗಿದೆ ಈಗ, ನಸುಗೆಂಪು ಬಣ್ಣದ ಕಲ್ಲುಗಳಿಂದಾದ ಕೊನಾರ್ಕ ದೇವಾಲಯವನ್ನು ನಾವಿಕರು ಕಪ್ಪು ಪಗೋಡ ಎಂದು ವರ್ಣಿಸುತ್ತಿದ್ದರಂತೆ. ನಿಜವಾಗಿಯೂ ಅದ್ಭುತ ಕಲೆಗಾರಿಕೆಯು ಇಲ್ಲಿ ಮೈವೆತ್ತಿ ನಿಂತಿದೆ.

ಎಷ್ಟು ಸುತ್ತಿದರೂ ದಣಿವಾಗದ ಹಾಗೆ ಜನರಲ್ಲಿ ಉತ್ಸಾಹ ತುಂಬುವ ವಾತಾವರಣ ಅಂಗಳದಲ್ಲಿಲ್ಲ. ವಿವಿಧ ಭಾಷೆಯ, ಬಣ್ಣದ ಜನರು; ನಾನಾ ಬಗೆಯ ಉಡುಪುಗಳ- ಸಾಂಸ್ಕೃತಿಕ ಹಿನ್ನೆಲೆಯ ಜನರು ಕಲೆಯುವ ತಾಣ ಇಂಥ ಜಾಗಗಳು. ಸುಂದರವಾಗಿ ಕಂಡದ್ದನ್ನು, ತಮ್ಮ ಸಂತಸದ ಕ್ಷಣಗಳನ್ನು ಶಾಶ್ವತಗೊಳಿಸಲು ಅನೇಕರಕೂಉಲ್ಲಿನ ಕೆಮೆರಗಳು ಕ್ಲಿಕ್ಕೆನ್ನುತ್ತವೆ. ಫೋಟೋ ತೆಗೆಯಲು ಇಲ್ಲಿ ಯಾವುದೇ ನಿಯಂತ್ರಣವಿಲ್ಲ. ಯಾವ ನಿಟ್ಟಿನಿಂದ ತೆಗೆದರೆ ಚೆನ್ನ, ಹೇಗೆ ತೆಗೆದರೆ ಇಡೀ ದೇವಾಲಯವನ್ನು ಚಿತ್ರೀಕರಿಸಬಹುದು, ಯಾವ ಭಾಗದಲ್ಲಿ ನಿಂತುಕೊಂಡು ಚಿತ್ರ ತೆಗೆಯಬೇಕು ಇತ್ಯಾದಿ ಜಿಜ್ಞಾಸೆ ಪ್ರವಾಸಿಗರಲ್ಲಿ ತಲೆದೋರುತ್ತದೆ. ಕಾಲ ಸವೆಯುವುದರಿಂದ ದಷ್ಟು ಬೇಗ ಚೆಂದ ಕಂಡದ್ದನ್ನು ಚಿತ್ರೀಕರಿಸುವ ಆತುರ. ತಂಡದ ಜನರೆಲ್ಲ ಚಿತ್ರದಲ್ಲಿ ಮೂಡಬೇಕೆಂಬ ಆಸೆಯಿಂದ ಸಹಪ್ರವಾಸಿಗರನ್ನು ಕೆಮೆರ ಕ್ಲಿಕ್ಕಿಸಲು ಪಾರ್ಥನೆ. ಹಾಗೆ ಮಾಡಿದಾಗ ಥ್ಯಾಂಕ್ಸ್ ಹೇಳುವ ಸಂಭ್ರಮ, ಜೊತೆಗೆ ಅಲ್ಲಿನ ಪ್ರವಾಸಿಗರಿಗೆ ಆಸೆ ಹುಟ್ಟಿಸುವ ರೀತಿಯಲ್ಲಿ ಮಾತನಾಡುತ್ತ, ದುಂಬಾಲು ಬಿದ್ದು ದಿಢೀರ್ ಚಿತ್ರ ತೆಗೆಯುವ ವ್ಯಾಪಾರೀ ಚಿತ್ರೀಕರಣ ಮಾಡುವವರ ಬೆಂಬತ್ತುವಿಕೆ. ಯಾವ ಮೂಲೆಯಿಂದ ಹೇಗೆ ತೆಗೆದರೆ ಇಡೀ  ದೇವಾಲಯ ಚಿತ್ರದಲ್ಲಿ ಮಾಡಬಹುದು; ಯಾವ ಹೊತ್ತಿನಲ್ಲಿ ಯಾವೆಡೆಯಿಂದ ಚಿತ್ರ ತೆಗೆದರೆ ಸಮರ್ಪಕ. ಆಗಾಧವಾದ ದೇವಾಲಯದ ಹಿನ್ನೆಲೆಯಿದ್ದು ವ್ಯಕ್ತಿಗಳು ಸ್ಫುಟವಾಗಿ ಮೂಡಲು ಎಲ್ಲಿ ಫೋಟೋ ತೆಗೆಯಬೇಕು ಇತ್ಯಾದಿ ಪ್ರವಾಸಿಗರಿಗೆ ತಿಳಿಯದು. ಹಾಗಾಗಿ ಇಂಥ ಚಿತ್ರಗ್ರಾಹಕರು ಸ್ವಲ್ಪ ವ್ಯಾಪಾರ ನಡೆಸುತ್ತಾರೆ. ನಮಗೂ ಅಂಥವನೊಬ್ಬ ಗಂಟುಬಿದ್ದ. ಮೊದಲು ಬೇಡವೆಂದರೂ ಕೊನೆಗೆ ನಾವು ಮೂವರೂ ನಿಂತಹಾಗೆ ಇಡೀ ದೇವಸ್ಥಾನದ ಚಿತ್ರ ಮೂಡುವಂತೆ ಒಂದು ಸ್ನ್ಯಾಪ್ ಮಾಡಲು ಹೇಳಿದೆವು. ಒಂದೇ ಚಿತ್ರ, ಅದೂ ಹನ್ನೆರಡು ಗಂಟೆಯ ಒಳಗೆ ಬಸ್ಸಿನ ಬಳಿ ಪೋಟೋ ತಂದೇ ಹಣ ಪಡೆಯುವುದಾಗಿ ಹೇಳಿದ (ಉಳಿದಿದ್ದದ್ದು ಹದಿನೈದು ನಿಮಿಷ ಮಾತ್ರ).

ಸಮಯವಾಗುತ್ತಿತ್ತು. ವಾಪಸು ಬಸ್ಸಿಗೆ ಮರಳಬೇಕು. ಜೊತೆಗೆ ಕೊನಾರ್ಕದ ಚಕ್ರಗಳ ಕಲ್ಲಿನ ಮಾದರಿಗಳನ್ನು ನೆನಪಿಗಾಗಿ ಕೊಳ್ಳಬೇಕು. ದೇವಸ್ಥಾನದ ಆವರಣದಿಂದ ಮುಖ್ಯ ರಸ್ತೆಯವರೆಗಿನ ಇನ್ನೂರೈವತ್ತು ಮುನ್ನೂರು ಅಡಿಗಳವರೆಗೂ ಇಕ್ಕೆಲದಲ್ಲಿ ಇಂಥ ಬೇರೆ ಬೇರೆ ವಸ್ತುಗಳನ್ನು ಮಾರುವ ಅಂಗಡಿಗಳು; ಕೆಲವು ಇಲ್ಲಿ ಮಾತ್ರ ದೊರೆಯುವ ಅಪರೂಪದ ವಸ್ತುಗಳು. ಮತ್ತೆ ಹಲವು ಎಲ್ಲಿ ಬೇಕಾದರೂ ಸಿಕ್ಕುವ ಅಲಂಕಾರ ಸಾಮಗ್ರಿಗಳು, ಕೆಲವನ್ನು ಕೊಳ್ಳುವ ಸಡಗರ. ಸರಿಯಾದ ಬೆಲೆಯೆಷ್ಟೋ ಯಾರಿಗೆ ಗೊತ್ತು. ಅವನು ಹೇಳಿದ ಬೆಲೆಗೆ ಚೌಕಾಸಿ, ಪಕ್ಕದಲ್ಲಿದ್ದ ಯಾರಾದರೂ ವ್ಯಾಪಾರ ಮಾಡಿದ್ದರೆ ವಸ್ತುಗಳ ಬೆಲೆಯ ಅಂದಾಜು ಹಿಡಿದು ವ್ಯಾಪಾರ. ಕೊನೆಗೊಮ್ಮೆ ಮುಗಿಯಬೇಕಲ್ಲ. ಏನಾದರೂ ತೆಗೆದುಕೊಳ್ಳಬೇಕು; ಬಸ್ಸಿಗೆ ಹೊರಡಬೇಕು - ಈ ಎರಡರ ಒತ್ತಡ. ನಮಗೆ ಮಾತ್ರವಲ್ಲದೆ ಯಾರಾರಿಗೆ ಏನೇನು ಕೊಡಬೇಕು. ಹಾಗಾಗಿ ಯಾವ ಯಾವುದನ್ನು ಎಷ್ಟೆಷ್ಟು ಕೊಳ್ಳಬೇಕು ಎಂಬ ಲೆಕ್ಕಾಚಾರ. ಇಷ್ಟು ಮುತುವರ್ಜಿ ವಹಿಸಿಕೊಂಡು ತಂದ ವಸ್ತುಗಳು ಊರಿಗೆ ಮರಳಿದ ಮೇಲೆ ಒಂದೆರಡು ದಿನ ನಮ್ಮ ಉತ್ಸಾಹವನ್ನು ತುಂಬಿರುವುದು ನಿಜ. ಹಲವು ದಿನಗಳಾದ ಮೇಲೆ ಅದರ ಬಗ್ಗೆ ಅವಜ್ಞೆ: ಹೊಸ ವಸ್ತುಗಳು ಬಂದ ಮೇಲೆ ಅಥವಾ ಚಾಗ ಸಾಲದೆ ಬಂದಾಗ ಅವೆಲ್ಲ ಸೇರುವುದು ಎಷ್ಟೋ ವೇಳೆ ಕಸದ ತೊಟ್ಟಿಯನ್ನೇ!

ಓಡಾಟದಲ್ಲಿ, ನೋಟದಲ್ಲಿ, ಚಿತ್ರೀಕರಣದಲ್ಲಿ ಮರೆತಿದ್ದ ದಣಿವು, ಕಾಲುನೋವು, ಕೆ, ಬೆವರು ಮುಂತಾದವು ಬಸ್ಸಿಗೆ ವಾಪಸ್ಸಾಗುವ ದಾರಿಯಲ್ಲಿ ಮೇಲೆ ಬರುತ್ತವೆ. ಏನಾದರೂ ತಣ್ಣಗೆ ಕುಡಿಯಬೇಕು. ರೆಫ್ರಿಜಿರೇಟರಿನಲ್ಲಿಟ್ಟ ಬಾಟಲಿಯ ಪಾನೀಯಗಳಾದರೆ ತಣ್ಣಗಿರುತ್ತವೆ; ಎಳೆನೀರಾದರೆ ಅಷ್ಟು ತಣ್ಣಗಿಲ್ಲದಿದ್ದರೂ ಆರೋಗ್ಯಕರ, ಆಹ್ಲಾದಕರ. ಚಿಕ್ಕವರಿಗೆ ಈ ಬೋಧನೆ ಹಿಡಿಸದು; ಅವರಿಗೆ ತಣ್ಣಗಿರುವ ಬಣ್ಣದ ನೀರಿನ ಆಕರ್ಷಣೆ ಹೆಚ್ಚು. ಎಳನೀರನ್ನೇ ನಾವು ಕುಡಿದದ್ದು; ಅಪ್ಯಾಯಮಾನವಾಗಿತ್ತು. ಬೆಲೆ ಕಡಿಮೆ, ಎಂದರೆ ಬೆಂಗಳೂರಿನ ದರಕ್ಕೆ ಹೋಲಿಸಿದರೆ. ಹಾಗೆ ಕುಡಿಯುವಾಗ ಇನ್ನೊಂದು ದೊಡ್ಡ ಬಸ್ಸು ಮತ್ತೊಂದು ತಂಡ ಪ್ರವಾಸಿಗರನ್ನು ಹೊತ್ತು ತಂದು ರಸ್ತೆಯಲ್ಲಿ ನಿಂತಿತು. ದಡದಡ ಹತ್ತಾರು ಪ್ರಯಾಣಿಕರು ಇಳಿಯುತ್ತಾರೆ, ಗಲಗಲ ಮಾತಾಡಿಕೊಂಡು ದೇವಸ್ಥಾನ ಸ್ಮಾರಕದೆಡೆಗೆ ಸಾಗುತ್ತಾರೆ. ಒಂದು ತಂಡ ಬಿಳಿಯ ತೊಗಲಿನವರದು. ಯಾವ ದೇಶದವರೋ, ಅವರದೂ ಹರಕುಮುರುಕು ಇಂಗ್ಲೀಷ್ ಆದ್ದರಿಂದ ಇಂಗ್ಲೆಂಡೋ ಅಮೆರಿಕವೋ ಅವರ ದೇಶವಾಗಿರಲಿಕ್ಕಿಲ್ಲ. ಮತ್ತಾವ ದೇಶವೋ. ಅವರಿಗೆ ಆಗಲೇ ಬಾಯಾರಿಕೆ; ಆ ತಂಡದ ಒಬ್ಬ ಬಂದು ನಾವು ಕುಡಿಯುತ್ತಿದ್ದ ಎಳೆನೀರನ್ನು ಸೂಚಿಸುತ್ತ 'ಸಿಹಿಯಾಗಿದೆಯೇ?' ಎಂದು ಪ್ರಶ್ನಿಸಿದ. ಹೌದು ಎಂದೆವು. ನಮ್ಮ ಎಳೆನೀರು ಮುಗಿದಿತ್ತು. ಬಸ್ಸಿನ ಕಡೆ ಕಾಲು ಹಾಕಿದವು ಅಲ್ಲಿಗೆ ನಮ್ಮ ಚಿತ್ರ ತೆಗೆದಿದ್ದ ಚಿತ್ರಗಾರ ಚಿತ್ರದ ಪ್ರತಿಗಳ ಸಮೇತ ಬಂದು ಹಾಜರಾಗಿದ್ದಾನೆ! ಹದಿನೈದೇ ನಿಮಿಷದಲ್ಲಿ ಚಿತ್ರ ಸಿದ್ಧ. ಹೌದು, ನಮ್ಮದೇ ಚಿತ್ರ! ತೆಗೆದುಕೊಂಡು ಹಣ ನೀಡಿದವು; ಚಿತ್ರ ಕಂಡು ಸಂತೋಷವಾಯಿತು. ಬಸ್ಸು ಹತ್ತಿ ಕುಳಿತಾದ ಮೇಲೆ ಐದು ನಿಮಿಷದಲ್ಲಿ ಮಿಕ್ಕವರೆಲ್ಲ ಬಂದು ಕುಳಿತರು. ಮುಂದೆ ಪುರಿ; ಸುಮಾರು ಒಂದೂವರೆ ಗಂಟೆಗೆ ತಲುಪುತ್ತದೆ; ಅಲ್ಲಿಯ ಪಾಂಥನಿವಾಸದಲ್ಲಿ ಊಟಕ್ಕೆ ಅವಕಾಶ ಎಂದು ಮಾರ್ಗದರ್ಶಿ ಹೇಳಿದ. ಕೊನಾರ್ಕದಿಂದ ಹೊರಟ ಬಸ್ಸು ಸಮುದ್ರಕ್ಕೆ ಸಮಾನಾಂತರವಾಗಿ ಕೆಲವೊಮ್ಮೆ ಕಡಲು ಕಾಣುವಷ್ಟು ಸಮೀಪ, ಮತ್ತೆ ಹಲವೊಮ್ಮೆ ದೂರ ಸರಿದು ಹರಿದ ರಸ್ತೆಯಗುಂಟ ನೈರುತ್ಯ ದಿಕ್ಕಿಗೆ ಪಯಾಣ ಮುಂದುವರೆಯುತ್ತದೆ. ಇಲ್ಲಿಂದ ಪುರಿ ಇರುವುದು ಸುಮಾರು ಎಂಬತೈದು ಕಿಲೋಮೀಟರುಗಳು ದೂರದಲ್ಲಿ. ಅಲ್ಲಿಯವರೆಗೆ ಒಂದೇ ಸಮನೆ ಬಸ್ಸು ಓಡಬೇಕು. ಆಕಡೆ ಈ ಕಡೆಯ ಒಂದೇ ರೀತಿಯ ಗೋಡಂಬಿ ಗಿಡಗಳ ಗುಂಪನ್ನು ನೋಡುತ್ತ, ಕೆಲವೊಮ್ಮೆ ದೂರದಲ್ಲಿ ಕಾಣುವ ಕಡಲಿನ ರೇಖೆಯನ್ನು ಗುರುತಿಸುತ್ತ, ಮುಖದ ಬೆವರನ್ನು ಆಗಾಗ್ಗೆ ಒರೆಸಿಕೊಳ್ಳುತ್ತ ಹೋಗುವಾಗ ಬಿಸಿಲಿನ ಝಳಕ್ಕೆ, ದಣಿವಿಗೆ ಮಣಿದ ದೇಹದಿಂದಾಗಿ ತಲೆ ಸೀಟಿಗೊರಗುತ್ತದೆ, ಕಣ್ಣು ಮುಚ್ಚಿಕೊಳ್ಳುತ್ತದೆ.

****

ಇಂಗ್ಲಿಷ್ ನಿಘಂಟು ಸೇರಿದ ದೈವ

ಸುಮಾರು ಎರಡು ಗಂಟೆಗಳ ಒಂದೇ ಸಮನೆ ಮಾಡಿದ ದೀರ್ಘ ಪ್ರಯಾಣ ಬೇಸರ ತರಿಸುತ್ತಿತ್ತು. ಆದರೆ ದಟ್ಟವಾಗುವ ಮೊದಲೇ ಸುಮಾರು ಎರಡೂಕಾಲು ಗಂಟೆಗೆ ಪುರಿಯ ಸಮುದ್ರದಂಡೆಯಲ್ಲಿರುವ ಒರಿಸ್ಸಾ ಸರ್ಕಾರದ ಪಾಂಥನಿವಾಸದ ಆವರಣಕ್ಕೆ ಬಸ್ಸು ಬಂದಿತು. ವಿಶಾಲವಾದ ಆವರಣದಲ್ಲಿರುವ ಈ ನಿವಾಸದ ಒಂದು ಭಾಗವಾದ ಭೋಜನಾಲಯದಲ್ಲಿ ಊಟ ಮಾಡಲು ಹೊರಟೆವು. ಹೊಟ್ಟೆಯಲ್ಲಿ ಹಸಿವಿನ ರುದ್ರನರ್ತನವೇ ನಡೆಯುತ್ತಿದ್ದರೂ, ಮುಖಕ್ಕೆ ಒಂದಷ್ಟು ತಣ್ಣೀರು ಸಿಂಪಡಿಸಿಕೊಂಡಲ್ಲದೆ ಜಡತ್ವವೂ ಹೋಗುವಂತಿಲ್ಲ, ಸೆಕೆಯ ತೀವ್ರತೆಯೂ ಕಡಿಮೆಯಾಗುವಂತಿಲ್ಲ.

ಮಂದವಾದ ಬೆಳಕಿರುವ ವಿಶಾಲವಾದ ಭೋಜನಾಲಯದಲ್ಲಿ ಹೋಗಿ ಕೂತೆವು. ವಿವಿಧ ತಂಡಗಳು ಬೇರೆ ಬೇರೆಡೆ. ನಾವು ಮೂವರು ಹಾಗೂ ಚೆಂಜಿ ಒಂದೆಡೆ. ಮಹಾರಾಷ್ಟ್ರದ ಹನ್ನೆರಡು ಮಂದಿಯ ಒಂದು ದೊಡ್ಡ ತಂಡ ಬಂದಿತ್ತು. ಅದರಲ್ಲಿ ಆರು ಜನ ಹುಡುಗರು. ಅವರು ಬಸ್ಸಲ್ಲಿರಲಿ, ಹೋಟಲಲ್ಲಿರಲಿ, ಪ್ರೇಕ್ಷಣೀಯ ಸ್ಥಳದಲ್ಲಿರಲಿ - ಗಲಾಟೆ ತುಂಬಿರುತ್ತಿತ್ತು; ಅದರಿಂದ ವಾತಾವರಣಕ್ಕೆ ಜೀವಕಳೆ. ಇಲ್ಲೂ ಹಾಗೆ ಒಂದೆಡೆಯಿಂದ ಇನ್ನೊಂದೆಡೆಗೆ ಹಾರುತ್ತ, ಕೂತ ಕಡೆಯಿಂದಲೇ ದೂರದ ಇನ್ನೊಬ್ಬನನ್ನು ಜೋರಾಗಿ ಮಾತನಾಡಿಸುತ್ತ, ಅದು ಬೇಕು, ಇದು ಬೇಡ ಎಂದು ಕಾಡುತ್ತ ಕಲೆಯುವ ಹುಡುಗರ ಚೀರಾಟ ಕೆಲವು ವೇಳೆ ತಲೆ ಚಿಟ್ಟು ಹಿಡಿಸಿದರೂ, ಇಲ್ಲದಾಗ ಭಣಗುಟ್ಟುತ್ತದೆ ವಾತಾವರಣ. ಇವರನ್ನೆಲ್ಲ ನಿಯಂತ್ರಿಸುತ್ತ ಹೋದ ಕಡೆಯಲ್ಲಿ ಹುಡುಗರನ್ನು ಸರಿಯಾದ ವೇಳೆಗೆ ಹೊರಡಿಸುತ್ತ ಇದ್ದ ಮಧ್ಯವಯಸ್ಕ ಗಂಡಸೊಬ್ಬರು ಹೆಡ್ಮಾಸ್ಟರಂತೆ ಕಾಣುತ್ತಿದ್ದರು, ಎಂದರೆ ನಡೆದುಕೊಳ್ಳುತ್ತಿದ್ದರು. ಆದರೆ ಆವರು ನೌಕರಿಯಲ್ಲಿದ್ದುದು ರೈಲ್ವೆಯಲ್ಲಿ, ಮುಂಬಯಿಯ ನಗರದ ಕಲ್ಯಾಣದಲ್ಲಿ ವಾಸ, ಆ ಹುಡುಗರಿಗೆ ಮುಂಬಯಿಯ ಉಸಿರು ಕಟ್ಟಿಸುವ ವಾತಾವರಣ ತಪ್ಪಿ ಆಹ್ಲಾದಕರವಾದ ಪ್ರಶಾಂತ ತಾಣ ದೊರೆತಿರುವಾಗ ಬಿಡುವರೇ? ಹೋದೆಡೆಯಲ್ಲೆಲ್ಲ ತಮ್ಮ ಗದ್ದಲದಿಂದ ಆಕಾಶವನ್ನು ತುಂಬುತ್ತಿದ್ದರು.

ನಮ್ಮ ಜೊತೆ ಕೂತು ಊಟಮಾಡುತ್ತಿದ್ದ ಚೆಂಜಿ, ಊಟ ಆದ ಮೇಲೆ ದೇವರ ದರ್ಶನ ಮಾಡಿಸುವರಲ್ಲ ಎಂದು ಗೊಣಗುತ್ತಿದ್ದರು. ನಮಗೇನೋ ಆ ಯೋಚನೆಯಿರಲಿಲ್ಲ. ದೇವರ ಬಗ್ಗೆ ಯೋಚಿಸದೆ ದೇವರ ಹಾಗೆ ಇದ್ದು ಬಿಟ್ಟಿರುವುದರಿಂದ ಅಂಥ ಒಳತೋಟಿ ದೇವರ ದರ್ಶನದ ಬಗ್ಗೆ ಉಂಟಾಗಲಾರದು. ಹಸಿವಾದದ್ದರಿಂದಲೋ ಏನೋ ತಿಂದ ಆಹಾರ ರುಚಿಯಾಗಿತ್ತು. ತಣ್ಣನೆಯ ನೀರು ಆಹ್ಲಾದಕರವಾಗಿತ್ತು. ಸುಮಾರು ಮೂರೂವರೆ ಗಂಟೆಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದರಿಂದ ಹೊಟ್ಟೆ ತುಂಬಿಸಿಕೊಂಡು ಪಾಂಥನಿವಾಸದ ಎದುರೇ ಇರುವ ಸಮುದ್ರ ದಂಡೆಗೆ ಹೊರಟೆವು. ಮಿಕ್ಕವರು ನಿಧಾನಿಗಳು; ಹೋದೆಡೆಯಲ್ಲೆಲ್ಲ ಎಲ್ಲ ಬಂದು ಬಸ್ಸಲ್ಲಿ ಕೂತರೂ ಒಂದಿಬ್ಬರು ಇನ್ನೂ ಬಂದೇ ಇರುತ್ತಿರಲಿಲ್ಲ. ಗುಂಪಿನಲ್ಲಿ ಇಂಥ ಒಂದಿಬ್ಬರು ಇರುವುದು ಸಹಜವೇ. ನಮ್ಮ ಬಸ್ಸಿನ ತಂಡದಲ್ಲಿ ಕಲ್ಕತ್ತದಿಂದ ಬಂದ ದಂಪತಿಗಳು ಮತ್ತವರ ಮಗ, ಹತ್ತು ಹನ್ನೆರಡು ವರ್ಷವಿರಬಹುದು, ಸ್ವಲ್ಪ ಇಂತಹ ನಿಧಾನಿವರ್ಗಕ್ಕೆ ಸೇರಿದ ಗುಂಪು. ನಾವು ಮಾತ್ರ ಎಲ್ಲೆಡೆಯೂ ಕಾಲಕ್ಕೆ ಸರಿಯಾಗಿ ಹೋಗುವ ಕರಾರುವಾಕ್ಕು ಮಂದಿ.

ಮೂರೂವರೆ ಎಂದರೆ ಇನ್ನೂ ಮುಕ್ಕಾಲು ಗಂಟೆ. ಕೊನಾರ್ಕ್‌ದಿಂದ ಹೊರಟ ಮೇಲೆ ಅಲ್ಲಿಯ ಸಮುದ್ರ ದಂಡೆಯ ಬಳಿಯೂ ಬಸ್ ಹತ್ತು ನಿಮಿಷ ನಿಂತಿತ್ತು. ಸಮುದ್ರವನ್ನು ಕಂಡರೆ, ಅದರ ಅಗಾಧತೆ, ತೆರೆಗಳ ಮೊರೆತ, ಶೀತಲ ಗಾಳಿ, ಮರಳಿನ ಹರಹು, ನೀರಿನ ಲಾಲಿತ್ಯ ಎಂಥವರನ್ನೂ ಆವರಿಸುತ್ತದೆ. ಸಮುದ್ರದೆಡೆಗೆ ಎಷ್ಟೇ ಜೋರಾಗಿ ಹೋದರು ನಿಧಾನವೇ ಆ ಮರಳಿನಲ್ಲಿ ಹೂತುಕೊಳ್ಳುವ ಕಾಲುಗಳನ್ನು ಕಿತ್ತುಕೊಂಡು ಹೆಜ್ಜೆಯಿಟ್ಟು ಹೋದರೆ ಕಾಲು ನೋವು, ಚಪ್ಪಲಿ ಹಾಕಿದ್ದರೆ ಮತ್ತಷ್ಟು ಕಷ್ಟ, ಬರಿಗಾಲಲ್ಲಿ ಹೋದರೆ ಕಾದ ಮರಳು. ನೀರಿನ ಹತ್ತಿರ ಬಂದ ತೆರೆಗಳಿಗೆ ಪಾದವೊಡ್ಡಿ ಹಾಯೆನಿಸಿ ಮುಂದಣ ನೀರಿನ ರಾಶಿಯನ್ನು ಗಮನಿಸುತ್ತ, ತೆರೆಗಳ ಆರ್ಭಟ ಬೆಳ್ನೊರೆಗಳಲ್ಲಿ ಕಣ್ಣು ನೆಟ್ಟು ವಾತಾವರಣಕ್ಕೆ ಹೊಂದಿಕೊಳ್ಳುವಷ್ಟರಲ್ಲಿಯೇ ಮಾರ್ಗದರ್ಶಿ ಹೊತ್ತಾಯಿತೆಂದು ಆತುರಮಾಡಿದ್ದ. ಆದ್ದರಿಂದಲೇ ಆದಷ್ಟು ಹೊತ್ತು ಕಳೆಯಬೇಕೆಂಬ ಆತುರದಿಂದ ಪುರಿಯ ವಿಶಾಲ ಸಮುದ್ರ ದಂಡೆಯ ಕಡೆಗೆ ಓಡಿದೆವು.

ತುಂಬ ಹರಹಾದ, ಸಾಕಷ್ಟು ಶುಭ್ರವಾಗಿದ್ದ ಸಮುದ್ರ ದಂಡೆ, ಆ ಕಡೆ; ಈ ಕಡೆಯೂ ಕಣ್ಣು ಹೋಗುವಷ್ಟು ದೂರ ಹಬ್ಬಿದ ಪುರಿಯ ಬೀಚ್ ಜಗತ್ ಪ್ರಸಿದ್ಧ. ಇದು ಮಧ್ಯಾಹ್ನವಾಗಿದ್ದುದರಿಂದ ಜನರಿರಲಿಲ್ಲ, ಬೆಳಿಗ್ಗೆ, ವಿಶೇಷವಾಗಿ ಸಾಯಂಕಾಲವಾದರೆ ಸಾವಿರಾರು ಜನರು ಬರಬಹುದು. ಇದು ಪೂರ್ವಸಮುದ್ರವಾದ್ದರಿಂದ ಬೆಳಿಗ್ಗೆ ಬಂದರೆ ಸಮುದ್ರದಿಂದ ಎದ್ದು ಬರುವ ಕೆಂಪು ಸೂರ್ಯನ ನೋಟ ಅದ್ಭುತವಾಗಿರುತ್ತದೇನೋ. ಕರ್ನಾಟಕದ ಕರಾವಳಿಯಿರುವುದು ಪಶ್ಚಿಮದಲ್ಲಿ, ಹಾಗಾಗಿ ಸಮುದ್ರದಲ್ಲಿ ಇಳಿಯುವ ಸೂರ್ಯನನ್ನು ಅನೇಕ ಕಡೆ ಕಂಡದ್ದುಂಟು. ವಿಶೇಷವಾಗಿ ಸುರತ್ಕಲಿನಲ್ಲಿ. ತಟಕ್ಕನೆ ದಿಣ್ಣೆಯು ಸಮುದ್ರದ ನಂತರ ಆರಂಭವಾಗುವುದರಿಂದ ಸೂರ್ಯಸ್ತ ಕಣ್ಣಿಗೆ ಹಬ್ಬ. ದೂರದಿಂದ ನೋಡಿದರೆ ಆಗುಂಬೆಯಿಂದಲೂ ಸೂರ್ಯ ಸಮುದ್ರದಲ್ಲಿ ಮುಳುಗುವ ದೃಶ್ಯ ಅದ್ಭುತವಾಗಿರುತ್ತದೆ. ಆದರೆ ನಾವಿರುವುದು ಮಧ್ಯಾಹ್ನದಲ್ಲಿ, ಸಮುದ್ರವನ್ನು ಕಂಡರೆ ಎಂಥವರೂ ಮೈಮರೆಯುವರಲ್ಲ ಏಕೆ? ನೋಡುವುದು ಅಪರೂಪ ಎಂದೇ? ಆದರೆ ಕರಾವಳಿಯಲ್ಲಿ ವಾಸಿಸುವವರು ಅಪರೂಪವಾಗಿ ನೋಡುವವರಂತೆ ಕುಣಿದಾಡದಿದ್ದರೂ ಸಮುದ್ರದ ಪ್ರಭಾವಕ್ಕೆ ಒಳಗಾಗಿರುತ್ತಾರೆ. ದಿನನಿತ್ಯದ ಬದುಕು ಸಮುದ್ರದಿಂದಾಗಿ ವಿಶಿಷ್ಟ ಸ್ವರೂಪವನ್ನು ಪಡೆಯುವುದರ ಬಗ್ಗೆಯಲ್ಲ, ಹೇಳುತ್ತಿರುವುದು, ಸೂಕ್ಷ್ಮಜ್ಞನಾದವನ ಮನೋಭೂಮಿಕೆಯು ಸಮುದ್ರದ ಕಾರಣದಿಂದ ಬೇರೆಯ ರೀತಿಯಲ್ಲಿ ರೂಪುಗೊಂಡಿರುತ್ತದೇನೋ, ಹಾಗೆಯೇ ಅಗಾಧ ಪರ್ವತಗಳು, ಕಾಡು ಇತ್ಯಾದಿ. ಬಯಲು ಸೀಮೆಯ ಜನಗಳ ಅಲೋಚನಾ ರೀತಿಯೇ ಭಿನ್ನವೆನ್ನಿಸುತ್ತದೆ. ಮಲೆನಾಡಿನಿಂದ ಬಂದವರು ವಿಶೇಷವಾಗಿ ಕಾವ್ಯ ಕುತೂಹಲಿಗಳು. ನಮ್ಮ ಕರ್ನಾಟಕದ ಮಲೆನಾಡಿನಲ್ಲಿ ಕಾಣುವಷ್ಟು ರಮ್ಮ ಪಂಥದ ಕವಿಗಳು ಬೇರೆಡೆ ಕಾಣಿಸುವುದಿಲ್ಲ ಅಲ್ಲವೇ? ಪ್ರಾಯಶಃ ಪರ್ವತ-ಕಾಡುಗಳ ದಟ್ಟತೆ ದೂರದಿಂದ ಕಂಡರೆ ಅದು ನೋಟಕರಲ್ಲಿ ಉಂಟುಮಾಡುವ ರಹಸ್ಯಮಯತೆ, ಗಾಢತೆಗಳು, ಕವನರಚನೆಯ ಪ್ರೇರಕವೇ? ವೈಚಾರಿಕ ಸ್ಪಷ್ಟತೆ, ವಿವರಗಳು ತುಂಬಿದ ಗದ್ಯ ರಚನೆ ಬಟ್ಟ ಬಯಲು ಸೀಮೆಯ ವೈಶಿಷ್ಟವೇ? ಈ ಬಗ್ಗೆ ಇನ್ನೂ ಆಳವಾಗಿ ಕೂಲಂಷವಾಗಿ ಪರಿಶೀಲಿಸಬೇಕೇನೋ.

ತೆರೆಗಳ ಜೊತೆ ಆಟವಾಡುವಾಗ ಎಲ್ಲರೂ ಮಕ್ಕಳೇ. ಇಂಥ ನಿಸರ್ಗದತ್ತ ವಾತಾವರಣದಲ್ಲಿ ಮನುಷ್ಯರ ಮೂಲ ಭಾವನೆಗಳು, ಲೋಕದ ಬಿಗುಮಾನ ಬಿಮ್ಮುಗಳಿಂದ ಮುಕ್ತವಾಗಿ, ಮೇಲೇಳುತ್ತವೇನೋ. ಆ ಕಾರಣದಿಂದಲೇ ಇಂತಹ ಕಡೆಗಳಲ್ಲಿ ಪರಿಚಿತರು, ಅಪರಿಚಿತರ ಭೇದವೇ ಉಳಿಯುವುದಿಲ್ಲ; ಜನ ಸುಲಭವಾಗಿ ಬೆರೆಯುತ್ತಾರೆ, ದೈನಂದಿನ ಮೇಲು ಕೀಳುಗಳು ತರಮಗಳು ದೊಡ್ಡ ಚಿಕ್ಕ ಭಾವನೆ ಮರೆಯಾಗುತ್ತಾವೇನೋ. ಮೂಕಂ ಕರೋತಿ ವಾಚಾಲಂ ಎನ್ನುತ್ತಾರಲ್ಲ ಹಾಗೆ, ಎಂಥವರಲ್ಲೂ ಚಟುವಟಿಕೆಯನ್ನು ಉದ್ದೀಪಿಸಬಲ್ಲುದು. ಬಂಗಾಳಿ ದಂಪತಿಗಳ ಮಗ ಇದುವರೆಗೆ ಮೌನವಾಗಿದ್ದವನು ಸಮುದ್ರದ ದಡಕ್ಕೆ ಬರುತ್ತಲೇ ಜಿಗಿಯಲು ಪ್ರಾರಂಭಿಸಿದ. ಕೊನಾರ್ಕದ ಸಮುದ್ರದ ದಂಡೆಯಲ್ಲಿ ಅವನೆಲ್ಲಿದ್ದನೋ ಕಂಡಿರಲಿಲ್ಲ. ಅವನ ತಾಯ್ತಂದೆಗಳು ನೀರಲ್ಲಿ ಅಷ್ಟಾಗಿ ಆಡಲು ಬಾರದಿದ್ದರೂ ಈ ಹುಡುಗ-ಶಂತನು ಮಾತ್ರ ನಮ್ಮೊಡನೆ ಸೇರಿ ಕುಣಿದಾಡಿದ. ಮಹಾರಾಷ್ಟ್ರದ ತಂಡದಲ್ಲಿದ್ದ ಹುಡುಗರು ಇನ್ನೂ ಬಂದಿರಲಿಲ್ಲ. ನೀರು ಹಿಂದೆ ಸರಿಯುವಾಗ ಅದರ ಹಿಂದೆಯೇ ನಡೆದು ಹೋಗುವುದು; ಅಷ್ಟು ದೂರ ಹೋದ ಮೇಲೆ ಮತ್ತೊಂದು ದೊಡ್ಡ ತೆರೆ ಬರುವಾಗ ಬಟ್ಟೆ ನೆನೆದೀತೆಂದು ಹಿಂದು ಹಿಂದಾಗಿಯೇ ಓಡಿಬರುವುದು. ಆದರೂ ನಾವು ಚಿಕ್ಕದೆಂದುಕೊಂಡಿದ್ದ ತೆರೆಯೇ ಅಗಾಧವಾಗಿದ್ದು ನಗಿಂತ ವೇಗವಾಗಿ ಬಂದು ಸೊಂಟದವರೆಗೂ ನೆನೆಸಿಬಿಡುವುದು. ದಂಡೆಯಲ್ಲಿ ನಿಂತಿದ್ದರೆ ಹಿಂದೆ ಸರಿಯುವ ನೀರು ಕಾಲ ಕೆಳಗಿನ ಮರಳನ್ನು ಕೊಂಡೊಯ್ಯುವಾಗ ಅಂಗಾಲಿನಲ್ಲಿ ಕಚಗುಳಿಯಿಡುವುದು - ಇವೆಲ್ಲ ಅನುಭವಿಸಬೇಕಾದ ಸಂತೋಷ ಕ್ಷಣಗಳು. ಕಾಲು ನೋಯುತ್ತಿದ್ದರೂ, ತಿಂದು ಹೊಟ್ಟೆ ಭಾರವಾಗಿದ್ದರೂ, ಅಲ್ಲಿ ಮತ್ತಷ್ಟು ಕಾಲ ಕಳೆಯಬೇಕೆಂಬ ಹಂಬಲವೇ.

ಅಲ್ಲಿಂದ ಹೊರಟು ಜಗತ್ ಪ್ರಸಿದ್ಧವಾದ ಪುರಿಯ ಜಗನ್ನಾಥ ದೇವಸ್ಥಾನದ ಬಳಿಗೆ ಬಸ್ಸು ಹೊರಟಿತು. ದೇವಾಲಯದ ಮುಂದಿನ ಬಹು ಅಗಲವಾದ ರಸ್ತೆಯ ಇನ್ನೊಂದು ತುದಿಯಲ್ಲಿದ್ದ ಪೊಲೀಸ್ ಠಾಣೆಯ ಮುಂದೆ ಬಸ್ಸನ್ನು ನಿಲ್ಲಿಸಿದರು; ಡ್ರೈವರ್ ಮತ್ತು ಸಹಾಯಕ ಅಲ್ಲೇ ಉಳಿದರು; ಮಾರ್ಗದರ್ಶಿ ನಮ್ಮನೆಲ್ಲ ಕರೆದುಕೊಂಡು ಹೊರಟ. ಒಳಗೆ ಹೋಗುವಾಗ ದೇಹದ ಮೇಲೆ ಯಾವುದೇ ರೀತಿಯ ಚರ್ಮದ ವಸ್ತು ಇರಬಾರದು; ಹಾಗಾಗಿ ಒಟ್ಟಾರೆ ನಾವೆಲ್ಲ ಒಂದೆಡೆ ಚಪ್ಪಲಿಗಳನ್ನು ಬಿಟ್ಟೆವು ರಕ್ಷಣೆಯಲ್ಲಿ, ಅಲ್ಲಿಯೇ ಬೆಲ್ಬನ್ನು ಕಳಚಿಟ್ಟೆ. ಮುಖ್ಯ ದ್ವಾರದ ಬಳಿಗೆ ಹೋದಾಗ ನನ್ನ ಕೈಯಲ್ಲಿ ತಿನ್ನುವ ಪದಾರ್ಥವಿದೆಯೆಂದು ಅಡ್ಡಿ ಮಾಡಿದ್ದರಿಂದ ಖಾರದ ಅವಲಕ್ಕಿಯಿದ್ದ ಚೀಲವನ್ನು ದ್ವಾರಪಾಲಕನ ಬಳಿಯೇ ಬಿಟ್ಟು ಒಳನಡೆದೆ.

ಜಗನ್ನಾಥ ದೇವಾಲಯದ ಒಳಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶ. ಇಂದಿರಾಗಾಂಧಿಯನ್ನೂ ಒಳಗೆ ಬಿಟ್ಟಿರಲಿಲ್ಲವಂತೆ. ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿಯೂ ಈ ಪದ್ಧತಿಯಿದೆ. ಆದರೇನು ಮಾಡಲಾದೀತು? ದೇವರು- ಧರ್ಮವೆಂದರೆ ಹೇಳಿದ್ದನ್ನೆಲ್ಲ ಅನುರಿಬೇಕು. ಬೇಡವಾದರೆ ದೇವಸ್ಥಾನಕ್ಕೆ ಹೋಗದಿರಬಹುದು; ಆದರೆ ಇಂಥ ಸ್ಥಳಗಳಲ್ಲಿ ನಾವು ಹೋಗುವುದು ದೇವರಿಗಾಗಿಯಲ್ಲ, ಅಲ್ಲಿನ ಐತಿಹಾಸಿಕತೆಗಾಗಿ, ಜನರ ಮೇಲೆ ಆ ದೈವ ಮಾಡಿದ ಪ್ರಭಾವದ ಕಾರಣದಿಂದಾಗಿ. ಇಲ್ಲಿ ಹೋರಾಟಕ್ಕೆ ಅವಕಾಶವಿಲ್ಲ.

ಒಳಗೆ ಹೋದರೆ ಜನಿವಾರಧಾರಿಗಳ ಆರ್ಭಟವೇ ಎಲ್ಲೆಲ್ಲು. ಪಕ್ಕದಲ್ಲಿದ್ದ ಪಾತ್ರೆಗಳಲ್ಲಿ ತುಂಬಿದ ಅನ್ನ, ಅದರಿಂದ ಬಡಿಸಿಕೊಂಡು ತಿನ್ನುತ್ತಿರುವ ನೂರಾರು ಜನರು. ಇಲ್ಲಿಯ ಪುರೋಹಿತರನ್ನು ಪಂಡ' ಎನ್ನುತ್ತಾರೆ. ಸ್ನೇಹಿತ ಬಸಂತ ಕುಮಾರ ಪಂಡ ಅವರು ಪುರಿಯವರೇ, ದೇವಸ್ಥಾನದ ಪಕ್ಕದಲ್ಲಿಯೇ ಅವರ ಮನೆಯಂತೆ; ಅದರಲ್ಲಿ ಅವರಣ್ಣನ ವಾಸ. ಈ ದೇವಾಲಯದಲ್ಲಿ ವಿವಿಧ ಕರ್ತವ್ಯಗಳನ್ನು ಪ್ರತಿನಿತ್ಯ ನಿರ್ವಹಿಸುವ ಸುಮಾರು ಆರು ಸಾವಿರ ಜನ ಪುರೋಹಿತರಿದ್ದಾರಂತೆ. ಪ್ರತಿಯೊಬ್ಬನಿಗೂ ಅವನು ನಿರ್ವಹಿಸಬೇಕಾದ ಖಚಿತವಾದ ಕರ್ತವ್ಯ ನಿಗದಿಯಾಗಿರುತ್ತದಂತೆ. ಅವರ ಹಾವಳಿ ತಡೆಯಲಸಾಧ್ಯ. ಒಂಟಿಯಾಗಿ ಹೋದರೆ ನಿಮಗೆ ಅದು ಇದು ಮಾಡಿಸುವುದಾಗಿ ಗಂಟು ಬೀಳುತ್ತಾರೆ. ನಾವಂತೂ ನಿರ್ಲಿಪ್ತರಾಗಿದ್ದೆವು. ದೇವರಿಗೆ ನೈವೇದ್ಯ ಮಾಡಿಸಲು ವಿವಿಧ ವಸ್ತುಗಳನ್ನು ನಿಗದಿತ ಬೆಲೆಗೆ ಇಲ್ಲಿ ವಿತರಣೆ ಮಾಡುತ್ತಾರೆ. ಬೆಲೆ ನೀಡಿ ಚೀಟಿ ಪಡೆದರೆ ನಮ್ಮ ಹೆಸರಲ್ಲಿ ದೇವರಿಗೆ ನೈವೇದ್ಯವಾಗಿ ಚೀಟಿ ತೋರಿಸಿದಾಗ ಅದನ್ನು ನೀಡುತ್ತಾರೆ, ಭಕ್ತಿಯಲ್ಲಿ ವ್ಯಾಪಾರ ನಡೆಯುವುದು ಹೀಗೆ. ಹಾಗೆ ಹೆಸರು ನೋಂದಾಯಿಸುವ ಕಡೆ ಮಾರ್ಗದರ್ಶಿ ಕರೆದೊಯ್ದ. ಅನೇಕರು ಹಣ ತೆತ್ತು ವಿವಿಧ ವಸ್ತುಗಳನ್ನು ದೇವರಿಗಾಗಿ ಅರ್ಪಿಸಲು ವ್ಯವಸ್ಥೆ ಮಾಡಿಕೊಂಡರು.

ಜಗನ್ನಾಥನೆಂದರೆ ಜಗತ್ತಿನ ಒಡೆಯ.   ಜಾಗವನ್ನು ಪುರುಷೋತ್ತಮ ಕ್ಷೇತ್ರವೆಂದೂ ಕರೆಯತ್ತಾರೆ. ಪ್ರಾಚೀನ ಕಾಲದಲ್ಲಿ ಈ ದೈವವನ್ನು ನೀಲಮಾಧವನೆಂಬ ಹೆಸರಿನಿಂದ ಸವರ ಎಂಬ ಬುಡಕಟ್ಟಿನ ರಾಜ ವಿಶ್ವಾವಸಿ ಎಂಬುವವನು ಪೂಜಿಸುತ್ತಿದ್ದನಂತೆ. ಇಂದ್ರದ್ಯುಮ್ನನೆಂಬ ಮತ್ತೊಬ್ಬ ಇಲ್ಲಿ ಮೊದಲು ಸಣ್ಣ ದೇವಾಲಯವೊಂದನ್ನು ಕಟ್ಟಿಸಿದನಂತೆ; ಆದರೆ ಅದು ಕಾಲಕ್ರಮೇಣ ನಾಶವಾಯಿತು. ಕೆಲವು ಶತಮಾನಗಳ ನಂತರ ಯತಾಜಿ ಎಂಬುವವನು ಬಲಭದ್ರ, ಜಗನ್ನಾಥ ಹಾಗೂ ಸುಭದ್ರರಿಗಾಗಿ ಕಟ್ಟಿಸಿದನಂತೆ. ಆದರೆ ಈಗಿರುವ ಅರವತ್ತೈದು ಮೀಟರ್ ಎತ್ತರದ ಗೋಪುರವಿರುವ ದೇವಾಲಯವನ್ನು ಕ್ರಿ.ಶ. ೧೨ನೆಯ ಶತಮಾನದಲ್ಲಿ ಚೋಡಗಂಗದೇವನೆಂಬುವವನು ಕಟ್ಟಿಸಿದನಂತೆ. ನಾವು ಹೋದಾಗ ಮುಖ್ಯ ಗೋಪುರದ ಬಿದ್ದ ಭಾಗಗಳ ರಿಪೇರಿ ಕಾರ್ಯ ನಡೆಯುತ್ತಿತ್ತು. ಇನ್ನೇನು ಪೂರ್ಣವಾಗುವುದರಲ್ಲಿದೆ. ಮುಖ್ಯವಾದ ದೇವಸ್ಥಾನದಲ್ಲಿ ಬಲಭದ್ರ, ಜಗನ್ನಾಥ, ಸುಭದ್ರೆಯರು ಪೂಜೆಗೊಳ್ಳುತ್ತಾರೆ. ದೇವಾಲಯದ ಆವರಣದಲ್ಲಿಯ ವಿಮಲ, ಲಕ್ಷ್ಮಿ ಹಾಗೂ ವಿಷ್ಣು ಇವರುಗಳ ಸಣ್ಣ ದೇವಾಲಯಗಳಿವೆ.

ಜಗನ್ನಾಥನ ದೇವಾಲಯ ಪುರಿ ಪಟ್ಟಣದ ಮಧ್ಯಭಾಗದಲ್ಲಿದೆ. ಎತ್ತರವಾದ ವೇದಿಕೆಯ ಮೇಲೆ ಕಳಿಂಗ ಶೈಲಿಯಲ್ಲಿ ನಿರ್ಮಿತವಾದ ದೇವಾಲಯ. ಗೋಪುರದ ವೈಶಿಷ್ಟ್ಯವೆಂದರೆ ಮೇಲೆ ಹೋಗುತ್ತ ಹೋಗುತ್ತಾ, ಕಿರಿದಾಗುತ್ತ ಹೋಗುವ ವಿವಿಧ ಕೋನಗಳ ಕಟ್ಟಡ. ಇಲ್ಲಿನ ಮೂರ್ತಿಗಳು ಮರದಿಂದ ಮಾಡಿದವು. ಅವುಗಳ ಕೆತ್ತನೆ, ಬಣ್ಣ, ಆಕಾರಗಳನ್ನು ಕಂಡರೆ ಇವು ಮೂಲತಃ ಆದಿವಾಸಿಗಳ ದೇವತೆಗಳಾಗಿದ್ದಿರಬೇಕೆನಿಸುತ್ತದೆ. ಹಿಂದೂ ಪಂಚಾಂಗ ರೀತ್ಯಾ ಅಧಿಕ ಆಷಾಢ ಮಾಸದಲ್ಲಿ ಐದು ಸೋಮವಾರಗಳು ಬಂದಾಗ ಈ ಮರದ ಮೂರ್ತಿಗಳನ್ನು ಹೊಸದಾಗಿ ಪ್ರತಿಷ್ಠಾಪಿಸುತ್ತಾರಂತೆ. ಹೀಗೆ ಬರುವುದು ಹದಿನಾರು ಅಥವಾ ಇಪ್ಪತ್ತು ವರ್ಷಗಳಿಗೊಮ್ಮೆ.ಗ ಹಳೆಯ ಮೂರ್ತಿಗಳನ್ನು ಸಮಾಧಿ ಮಾಡುತ್ತಾರೆ; ಆ ಚಾವನ್ನು ಸಮಾಧಿ ಸ್ಥಳವೆಂದೇ ಕರೆಯುತ್ತಾರೆ. ಅದು ತಗ್ಗಾದ ಸ್ಥಳ; ಅದರ ಸುತ್ತಲೂ ಹೂಗಿಡಗಳು ತುಂಬಿವೆ.

ಗರ್ಭಗೃಹಕ್ಕೆ ಎಲ್ಲರನ್ನೂ ಬಿಡುತ್ತಾರೆ; ಜಾತಿಗಳ ಭೇದವಿಲ್ಲ. ಆದರೆ ಮೂರೂ ಮೂರ್ತಿಗಳ ಮುಂದೆ ಪಂಡರಿರುತ್ತಾರೆ; ದುಡ್ಡು ಹಾಕು ಎನ್ನುತಾರೆ, ಪ್ರಸಾದವೆಂದು ಕುಂಕುಮ ಕೊಡುತ್ತಾರೆ. ಅದೇ ಪೂಜೆ. ಹಣದ ರಾಶಿ ಬೀಳುತ್ತದೆ, ಅದರ ಲೆಕ್ಕ ಹೇಗೋ ತಿಳಿಯದು. ದೇವರಿಗಂತೂ ಲೆಕ್ಕಾಚಾರ ಗೊತ್ತಾಗುವುದಿಲ್ಲ, ಪಾಪ! ಹುಂಡಿಯಲ್ಲಿ ಹಾಕಿದ ಹಣವೇನೋ ಧರ್ಮದರ್ಶಿಗಳ ಎದುರು ಎಣಿಕೆಯಾಗುತ್ತದೆ. ಆದರೆ ಇಲ್ಲಿ? ಒಂದೆಡೆ ನಾನು ಎರಡು ರೂಪಾಯಿ ನೋಟು ಇಟ್ಟೆ. ಮುಂದಿನ ಮೂರ್ತಿಯ ಬಳಿ ಹೋದಾಗಲೂ ದುಡ್ಡು ಎಂದ. ಅವನು ಏನಂದನೋ. ಆದರೆ ಅವನು ಹಣ ನೀಡಲು ಹೇಳಿದುದು ಗೊತ್ತಾಯಿತು. ನಾನು ಕನ್ನಡದಲ್ಲಿಯೇ ಕೂಗಾಡಿದೆ: ತೆಪ್ಪಗಾದ. ದೇವಾಲಯದ ರಂಗಮಂಟಪದಲ್ಲಿ ಇಟ್ಟಿರುವ ಅಧಿಕೃತವಾದ, ಸೀಲಾದ ಹುಂಡಿಯಲ್ಲಿ ಹತ್ತು ರೂಪಾಯಿ ಹಾಕಿದೆ. ಮನೆಯವರು ಕೊಟ್ಟಿದ್ದು, ಆದೇಶಿಸಿದ್ದು.

ಸುತ್ತ ಮುತ್ತಲೂ ಸಣ್ಣ ಪುಟ್ಟ ಗುಡಿಗಳು. ಅರಳಿಮರ ಎಲ್ಲ ಕಡೆ ಇದ್ದದ್ದೇ. ಆದರೆ ಎಲ್ಲ ಕಡೆಗಳಲ್ಲಿ ಇಲ್ಲದ ಪಂಡರ ಹಾವಳಿ ಇಲ್ಲಿ. ಅಷ್ಟೇ ಕೊಡಬೇಕು ಇಷ್ಟೇ ಕೊಡಬೇಕು ಎಂಬ ತಕರಾರು ಬೇರೆ. ಭಕ್ತಿಗೆ ಇಲ್ಲಿ ಅವಕಾವಿಲ್ಲ. ಇಲ್ಲಿರುವುದು ವ್ಯಾಪಾರ, ಎಂಥ ಮುಗ್ಧ ಭಕ್ತನಿಗೂ ಬೇಸರ ಬರಿಸುವಷ್ಟು ಸುಲಿಗೆ - ನಮ್ಮ ಚೆಂಜಿಯವರೂ ಯಾವ ದೇವರ ಬಳಿಗೋ ಹೋಗಿ ಗೊಣಗುತ್ತಾ ಬಂದರು. ಅದೇನೋ ಪೂಜೆ ಮಾಡಿಸಿದ್ದಕ್ಕೆ ನೂರನಲವತ್ತು ರೂಪಾಯಿ ಕೇಳಿದನಂತೆ! ಭಕ್ತಿ ಎಂಬುದು ವೈಯುಕ್ತಿಕವಾದ ತುರ್ತಿನ ಭಾವನೆಯಾಗದ ಪರಿಪಾಟವಾದರೆ ಹೀಗೆ. ತನ್ನಾಶ್ರಯದ ರತಿಸುಖವನು. ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಲಿ ಮಾಡಿಸಬಹುದೆ! ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಲಿ ಮಾಡಿಸಬಹುದೇ!ಎಂದು ಬಸವಣ್ಣನಂತಹವರು ತುಂಬ ಕಟುವಾಗಿ ಹೇಳಿದ್ದರೂ ಪೂಜಾರಿಯ ಕೈಲಿ ಪೂಜೆ ಮಾಡಿಸುವ ಮೂಲಕ ಮಹಾಶಯರೇ ಇರುವುದು. ಅದು ಆ ಪೂಜಾರಿಗಳಿಗೆ ಲಾಭಕರ. ಭಕ್ತಿ ಕ್ರಿಯಾಶೀಲವಾದರೆ, ಅಸಲಿಯಾದರೆ ಪ್ರಪಂಚದಲ್ಲಿನ ದುಃಖಕ್ಕೆ ಸಂಕಟಕ್ಕೆ ಪರಿಹಾರ ಹುಡುಕುವ ಅನ್ವೇಷಣಾ ಮಾರ್ಗವನ್ನು ಹಿಡಿದು, ಜನರನ್ನು ಸಂತೈಸುವ ಮರುಕದಿಂದ ತುಂಬುತ್ತದೆ; ಇಲ್ಲದಿದ್ದರೆ ಸುಲಿಗೆಯ ಮಾರ್ಗವಾಗುತ್ತದೆ.

ಜಗನ್ನಾಥ, ಸುಭದ್ರ, ಬಲಭದ್ರರ ರಥಯಾತ್ರೆ' ತುಂಬ ಹೆಸರುವಾಸಿಯಾದದ್ದು. ಪ್ರತಿವರ್ಷ ಹೊಸದಾಗಿ ಈ ದೇವತೆಗಳಿಗೆ ಮೂರು ದೊಡ್ಡ ದೊಡ್ಡ ಮರದ ರಥಗಳು ತಯಾರಾಗುತ್ತವೆ. ಗುಡಿಯ ಮುಂದಿನ ವಿಶಾಲ ರಸ್ತೆಯಲ್ಲಿ ಅವುಗಳ ಯಾತ್ರೆ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ; ತೇರು ಎಳದು ಧನ್ಯರಾಗುತ್ತಾರೆ. ಈ ರಥಯಾತ್ರೆ ನಡೆಯುವುದು ಆಷಾಢಮಾಸದ ಶುಕ್ಲಪಕ್ಷದ ಬಿದಿಗೆಯಂದು. ಈ ದಿನವನ್ನು ಶ್ರೀಗುಡಿಚವೆಂದು ಕರೆಯುತ್ತಾರೆ. ರಥಯಾತ್ರೆಯಂದು ಎಷ್ಟು ಜನ ಸೇರುತ್ತಾರೆಂದರೆ, ವಿದೇಶೀಯರಿಗೆ ಅದು ಪ್ರವಾಸೀ ತಾಣವಾಗಿ ಪ್ರೇಕ್ಷಣೀಯವೆನಿಸಿದೆ. ಸಾವಿರಾರು ಮುಂದಿ ರಥವನ್ನು ಎಳೆಯುವಾಗ ಎಷ್ಟೋ ವೇಳೆ ಕೆಲವರು ಬಿದ್ದು ರಥದಡಿ ಸಿಕ್ಕಿ ಸಾಯುತ್ತಿದ್ದುದುಂಟು. ಇದನ್ನು ಕಂಡ ಯುರೋಪಿಯನ್ನರು ಮೂಢನಂಬಿಕೆಯ ಜನ ತಾವಾಗಿ ಚಕ್ರದಡಿ ಬಿದ್ದು ಆತ್ಮಾಹುತಿ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿ, ಇಂಥವರನ್ನು Juggernaut ' ಎಂಬ ಪದದಿಂದ ವರ್ಣಿಸಿದರು. ಈ ಪದ ಜಗನ್ನಾಥದ ತದ್ಭವ. ಆ ದೈವವನ್ನು ಸೂಚಿಸುವುದರ ಜೊತೆಗೆ ಕುರುಡು ನಂಬಿಕೆಯಿಂದ ತಾವಾಗಿ ಬಲಿಯಾಗುವ ಅಥವಾ ಇತರರನ್ನು ಬಲಿಕೊಡುವ ಆಚಾರ ಎಂಬ ಅರ್ಥದಿಂದ ಇಂಗ್ಲಿಷ್ ಭಾಷೆಯಲ್ಲಿ ಸೇರಿಹೋಗಿದೆ. ಪದಗಳ ಮೂಲ ಹುಡುಕಿಕೊಂಡರೆ ಕೆಲವೊಮ್ಮೆ ಎಲ್ಲಿಯೋ ತಲುಪಿರುತ್ತೇವೆ.

ಜಗನ್ನಾಥನ ಪಂಥ ಒರಿಸ್ಸಾದಲ್ಲಿ ಹಳೆಯದು. ಆದಿವಾಸಿ ಮೂಲದಿಂದ ಬೆಳೆದು ಬಂದದ್ದು; ಬರಬರುತ್ತಾ ಶಿಷ್ಟ ಸಂಪ್ರದಾಯವಾಗಿರಬಹುದು. ಒಂದು ಬಗೆಯಲ್ಲಿ ಒರಿಸ್ಸಾದ ಸಾಂಸ್ಕೃತಿಕ ಬದುಕಿನ ಕೇಂದ್ರ ಈ ಜಗನ್ನಾಥ, ನೂರಾರು ಕಾವ್ಯಗಳು, ನಾಟಕಗಳು, ಹಾಡುಗಳು, ಈ ದೈವದ ಮಹಿಮೆಯನ್ನು ಬಣ್ಣಿಸುವಂಥವು. ಸಾವಿರಾರು ಜನ ಪ್ರತಿ ನಿತ್ಯ ಈ ದೇವಾಲಯದಲ್ಲಿ ಪಂಡರಾಗಿರುವುದು, ಅವರಿಗೆ ನೆರವಾಗಿ ಇನ್ನೂ ಹಲವು ಸಾವಿರ ಜನ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದುಡಿಯುವುದು, ಪ್ರತಿವರ್ಷ ಹೊಸದಾಗಿ ನಿರ್ಮಾಣವಾಗಬೇಕಾದ ಅಗಾಧ ಗಾತ್ರದ ರಥಗಳಿಗೆ ಮರ ಒದಗಿಸುವುದು, ರಥ ಸಿದ್ಧಗೊಳಿಸುವುದು, ಹಳೆಯ ರಥದ ಮರವನ್ನು ಕತ್ತರಿಸಿ ಪ್ರಸಾದ ಮಾಡಲು ಒಲೆಗೆ ಉಪಯೋಗಿಸುವುದು, ಸಾವಿರಾರು ಮಂದಿ ಪ್ರವಾಸಿಗರಿಂದ ಯಾತ್ರಿಕರಿಗೆ ಅವಕಾಶವಿರುವುದು - ಹೀಗೆ ನೂರಾರು ರೀತಿಯಲ್ಲಿ ಜಗನ್ನಾಥ ಚಟುವಟಿಕೆಯ ಕೇಂದ್ರವಾಗಿ ನೂರಾರು ವರ್ಷಗಳಿಂದ ಮರೆಯುತ್ತಿದ್ದಾನೆ; ಜೊತೆಗೆ ಅವನ ಸುತ್ತ ನಡೆಯುವ ಜನಜೀವನವು ಹೊಸ ಹೊಸ ಅರ್ಥಗಳನ್ನು ಸ್ಫುರಿಸುತ್ತಾ ಬರಹಗಾರರನ್ನು ಆಕರ್ಷಿಸಿದೆ; ಹೊಸ ಸೃಜನ ಕೃತಿಗಳ ನಿರ್ಮಾಣಕ್ಕೆ ಕಾರಣವಾಗುತ್ತಲೇ ಬಂದಿದೆ. ಪುರಿಯಲ್ಲಿ ದೀರ್ಘಕಾಲ ವಾಸಿಸಿದ್ದ ಶ್ರೀ ಚೈತನ್ಯನ ಕಾರಣದಿಂದಾಗಿ ಚಟುವಟಿಕೆ ಮತ್ತಷ್ಟು ವ್ಯಾಪಕವಾಯಿತು. ಆಳ ಪರಿಣಾಮವನ್ನುಂಟುಮಾಡಿತು. ವನಮಾಲಿ ದಾಸನಂಥ ಕವಿ, ಕವಿಸೂರ್ಯ ಬಲದೇವ ರಥನಂಥ ಕವಿ-ಗಾಯಕರು ನೂರಾರು ಹಾಡುಗಳನ್ನು ಹಾಡಿದರು. ರಾಧಾಕೃಷ್ಣರ ಪ್ರೇಮದ ನೆವದಿಂದ ಒರಿಯಾ ಬದುಕಿನ ಮಧುರ ಕ್ಷಣಗಳು ಅಭಿವ್ಯಕ್ತವಾದವು.

ಆಂಧ್ರದ ಪ್ರಸಿದ್ದ ಕ್ರಾಂತಿಕಾರಿ ಕವಿ ಶ್ರೀ ಶ್ರೀ ಅವರ ಪ್ರಖ್ಯಾತವಾದ ದೀರ್ಘಕವನವೊಂದಿದೆ. ಹೆಸರು ಜಗನ್ನಾಥುನಿ ರಥಚಕ್ರಾಲು' (ಜಗನ್ನಾಥನ ರಥದ ಚಕ್ರಗಳು) ಲಕ್ಷಾಂತರ ಮಂದಿ ನಿರ್ಗತಿಕರು, ದುಃಖಿಗಳು, ಬಡವರು ಸೇರಿ ಎಳೆಯುವ ರಥವು ಕ್ರಾಂತಿರಥವಾಗಬೇಕೆಂಬ ಆಶಯ ಆ ಕವನದಲ್ಲಿದೆ. ಒಂದೆಡೆ ಬರುವ ಪಾದಗಳಿವು:

ಆಕಾಶದ ದಾರಿಗಳಲ್ಲಿ

ಅಡ್ಡಾದಿಡ್ಡಿಯಾಗಿ ಹೊರಟಿರುವ

ಅರಚಿಕೊಳ್ಳುತ್ತಾ ಹೊರಟು ಹೋಗುವ ಜಗನ್ನಾಥನ ರಥಚಕ್ರಗಳು

ರಥಚಕ್ರದ ಪ್ರಳಯ ಘೋಷ

ಭೂಮಾರ್ಗವ ಹಿಡಿಸುತ್ತೇನೆ

ಭೂಕಂಪನ ಹುಟ್ಟಿಸುತ್ತೇನೆ

ಈ ಕ್ರಾಂತಿರಥವು ಬಂದಾಗ,

ಸ್ವಾತಂತ್ರ್ಯ,

ಸಮಭಾವ,

ಸೌಭಾತ್ರ,

ಸೌಹಾರ್ದ

ಬುನಾದಿಯಾಗಿ ಮನೆಗಳೆದ್ದು

ಜನಾವಳಿಗೆ ಶುಭವ ಮಾಡಿ

ಶಾಂತಿ ಶಾಂತಿ ಶಾಂತಿ ಶಾಂತಿ

ಜಗವೆಲ್ಲವ ಜಯಿಸುತ್ತದೆ

ಎಂದು ಹಾರೈಸುತ್ತಾರೆ ಕವಿ. ಹೀಗೆ ಜಗನ್ನಾಥ ಎಲ್ಲ ಕಾಲದ ಎಲ್ಲ ಬಗೆಯ ಜನಗಳಿಗೆ ವಿವಿಧ ಪ್ರೇರಣೆಗಳನ್ನೊದಗಿಸುತ್ತ ತಾನು ಮಾತ್ರ ಬದಲಾಗದ ಸಾಕ್ಷಿಯಾಗಿ ಮುಂದುವರೆಯುತ್ತಿದ್ದಾನೆ.

****

ಕೊಟ್ಟಕ್

ಕಟಕ್ ಪದವನ್ನು ಒರಯನ್ನರು ಉಚ್ಚರಿಸುವುದು ಕೊಟ್ಟಕ್ ಎಂದು. ಇದು ಭುವನೇಶ್ವರದಿಂದ ಕೇವಲ ಮೂವತ್ತೈದು ಕಿಲೋಮೀಟರ್ ದೂರದಲ್ಲಿದೆ. ಬಹಳ ಪ್ರಾಚೀನ ನಗರ ಹಾಗೂ ಒರಿಸ್ಸಾದ ಅತ್ಯಂತ ದೊಡ್ಡ ನಗರ. ಈಚಿನವರೆಗೂ ಇದು ಒರಿಸ್ಸಾದ  ಅಥವಾ ಕಳಿಂಗದ ರಾಜಧಾನಿಯಾಗಿತ್ತು; ಈಚೆಗಷ್ಟೇ  ಹೊಸದಾಗಿ ನಿರ್ಮಿತವಾದ ನಗರವನ್ನೊಳಗೊಂಡ ಭಯವನೇಶ್ವರಕ್ಕೆ ರಾಜಧಾನಿಯನ್ನು ಸ್ಥಳಾಂತರಿಸಲಾಗಿದೆ. ಒಂದು ರೀತಿ ಇದು ಸಂಗಮ. ನಗರದ ದೆಡೆಯಲ್ಲಿ ಹರಿಯುವ ಮಹಾನದಿ ಹಾಗೂ ಇನ್ನೊಂದೆಡೆಯಿಂದ ಹರಿದು ಬಂದು ಅದನ್ನು ಸೇರುವ  ಕಥಾಜುರಿ ಕೋನವೊಂದನ್ನು ಸೃಷ್ಟಿಸಿದೆ. ಅದರ ಕೋನವನ್ನು  ಹಿಂದೆ ಹಿಂದೆ ಹಿಗ್ಗಲಿಸಿಕೊಳ್ಳುತ್ತ ನಗರ ಹಬ್ಬಿದೆ. ಕಥಾಜುರಿಯಲ್ಲಿ ದೊಡ್ಡ ಪ್ರವಾಹ ಬಂದರೆ ನೀರು ಊರನ್ನೆಲ್ಲ ಆವರಿಸುವ ಅಪಾಯವಿತ್ತು; ಆದ್ದರಿಂದ ನದಿಯ ಪಾತ್ರಕ್ಕೆ ದೊಡ್ಡದಾದ ಕಲ್ಲಿನ ಒಡ್ಡು ಕಟ್ಟಿದ್ದಾರೆ. ಇದು ಹನ್ನೊಂದನೆಯ ಶತಮಾನದಲ್ಲಿಯೇ ನಿರ್ಮಿತವಾದದ್ದೆಂದು ಪ್ರತೀತಿ. ಕೇಳರಿ ವಂಶದ ರಾಜನೊಬ್ಬ ಇದರ ನಿರ್ಮಾಣಕ್ಕೆ ಕಾರಣವಾದವನು.

ದಿನವೇ, ಏಪ್ರಿಲ್ ಹದಿನೈದು ಎಂದು ಕಾಣುತ್ತದೆ. ಕಟಕ್‌ಗೆ ಹೋಗಬೇಕೆಂದು ತೀರ್ಮಾನಿಸಲು ಒಂದು ಕಾರಣವಿತ್ತು. ಬೇರೊಂದು ದಿನ ಹೋಗಬಹುದಾಗಿತ್ತು, ಆದರೆ ಅಂದೇ ಹೋಗಲು ಆತುರದ ತೀರ್ಮಾನ ಮಾಡಿದೆವು. ಏಪ್ರಿಲ್ ಹದಿನಾಲ್ಕು-ಹದಿನೈದು ಬಿಸುವ್ ಮಿಲನ್ ಸಮಾರಂಭ ನಡೆಯುತ್ತಿತ್ತು. 'ಬಿಸುವ` ವಿಶ್ವದ ತದ್ಭವ. ಅಂದು ಕಟಕ್- ಭುವನೇಶ್ವರಗಳ ಸಾಹಿತಿಗಳೆಲ್ಲಾ ಅಲ್ಲಿ ಸೇರುತ್ತಾರೆ. ಪ್ರಜಾತಂತ್ರ ಎಂಬುದೊಂದು ಒರಿಯಾದ ದಿನಪತ್ರಿಕೆ ಕಟಕ್ನಿಂದ ಹೊರಡುತ್ತದೆ. ಅದು ‘ಝಂಕಾರ್’ ಎಂಬ ಉನ್ನತ ಮಟ್ಟದ್ದೆಂದು ಹೇಳಲಾದ ಸಾಹಿತ್ಯಕ ಮಾಸಪತ್ರಿಕೆಯೊಂದನ್ನು ನಡೆಸುತ್ತದೆ. ಪ್ರಾರಂಭವಾಗಿದ್ದು ೧೯50ರಲ್ಲಿ. ಆಗ ಅದರ ಅಧ್ಯಕ್ಷರಾಗಿದ್ದ ಡಾ. ಹರೇಕೃಷ್ಣ ಮೆಹತಾಬ್ ಅವರ ಕರ್ತೃತ್ವಶಕ್ತಿಯಿಂದಾಗಿ ಪ್ರಜಾತಂತ್ರ ಪ್ರಚಾರ ಸಮಿತಿ ಆರಂಭಗೊಂಡಿತು. ಈ ಸಮಿತಿಯ ವತಿಯಿಂದಲೇ ಪತ್ರಿಕೆಗಳು ಹೊರಡುವುದು, ‘ಝಂಕಾರ್ ಯುಜಿಸಿಯಿಂದ ಸಂಶೋಧನಪತ್ರಿಕೆಯೆಂದು ಅಂಗೀಕೃತವಾದ ಏಕೈಕ ಒರಿಯಾ ಮಾಸಪತ್ರಿಕೆಯಂತೆ, 'ದಿ ಈಸ್ಟರ್ನ್ ಟೈಮ್ಸ್' ಎಂಬ ಇಂಗ್ಲಿಷ್ ಪತ್ರಿಕೆ ಹಾಗೂ ಮೀನಾಬಜಾರ್' ಎಂಬ ಮಕ್ಕಳ ಮಾಸಪತ್ರಿಕೆಯೂ ಪ್ರಕಟವಾಗುತ್ತಿವೆ. ಜೊತೆಗೆ 'ಪ್ರಜಾತಂತ್ರ ಪ್ರತಿಭಾ' ಎಂಬ ಮಾಸಿಕ ಡೈಜೆಸ್ಟ್ ಪ್ರಜಾತಂತ್ರ ಸಾಪ್ತಾಹಿಕೀ’ ಎಂಬ ವಾರಪತ್ರಿಕೆಯ ಎಂಬ ಹೊರಬರುತ್ತಿವೆ.

೧೯೫೦ ರಿಂದ ಈ ಪ್ರಜಾತಂತ್ರ ಪ್ರಚಾರ ಸಮಿತಿಯ ವತಿಯಿಂದ ಪ್ರತಿ ವರ್ಷದ ಬೇಸಿಗೆಯಲ್ಲಿ 'ಬಿಸುವ ಮಿಲನ್' ವ್ಯವಸ್ಥೆಗೊಳ್ಳುತ್ತಿದೆ. ಒಂದು ರೀತಿ ಇದನ್ನು ಒರಿಸ್ಸಾದ ರಾಷ್ಟ್ರೀಯ ಸಾಹಿತ್ಯ ಹಬ್ಬವೆಂದು ಕರೆಯಬಹುದಂತೆ. ಎರಡು ದಿನಗಳ ಈ ಉತ್ಸವದಲ್ಲಿ ನೂರಾರು ಜನ ಲೇಖಕರು ಒಂದೆಡೆ ಸೇರುತ್ತಾರೆ. ಒರಿಯಾದ ಶ್ರೇಷ್ಠ ಸಾಹಿತಿಯೊಬ್ಬನನ್ನು ಗೌರವಕ್ಕೆ ಪ್ರತಿವರ್ಷ ಆರಿಸಲಾಗುತ್ತದೆ. ಒಂದೆರಡು ಪುಸ್ತಕಗಳಿಗೆ ಬಹುಮಾನವನ್ನು ನೀಡಲಾಗುತ್ತದೆ: ಬಹುಮಾನದಲ್ಲಿ ಹಣವೂ ಸೇರಿದೆ. ಅಲ್ಲದೆ, ಒರಿಯಾಯೇತರ ಭಾಷೆಯ ಉತ್ತುಂಗ ಸಾಹಿತಿಯೊಬ್ಬರನ್ನು ಆಹ್ವಾನಿಸಿ ಅವರಿಂದ ಸಮ್ಮೇಳನದ ಘಟಿಕೋತ್ಸವ ಮಾಡಿಸಲಾಗುತ್ತದೆ. ಈ ವರ್ಷ ಘಟಿಕೋತ್ಸವ ಭಾಷಣಕ್ಕೆಂದು ಬಂದಿದ್ದವರು ನಮ್ಮ ಶಿವರಾಮ ಕಾರಂತರು, ಈ ವರ್ಷದ ಗೌರವಕ್ಕೆ ಪಾತ್ರರಾದ ಓರಿಯಾ ಲೇಖಕರೆಂದರೆ ಬಿಭೂತಿಭೂಷಣ್ ಪಟ್ನಾಯಕ್, ಜನಪ್ರಿಯ ಕಾದಂಬರಿಕಾರರು. ಸಾಹಿತ್ಯಕವಲಯದಲ್ಲಿ ಶ್ರೇಷ್ಠರೆಂದು ಪರಿಗಣಿತರಾಗದಿದ್ದರೂ ಆರವತ್ತಕ್ಕೂ ಹೆಚ್ಚಿನ ಇವರ ಕಾದಂಬರಿಗಳಲ್ಲಿ ಹಲವು ಇಪ್ಪತ್ತರಷ್ಟು ಮುದ್ರಣಗಳನ್ನು ಕಂಡಿವೆಯಂತೆ. ಯುವಕರ ಪ್ರೇಮ-ಪ್ರಣಯಗಳ ಜನಪ್ರಿಯ ಸರಕು ಇವರದು; ಹೀಗಾಗಿ ಮಾರುಕಟ್ಟೆ ವಿಸ್ತೃತವಾಗಿದೆ. ಭುವನೇಶ್ವರದ ಬಿಜೆಜಿ ಕಾಲೇಜಿನಲ್ಲಿ ಒರಿಯಾದ ಅಧ್ಯಾಪಕರಾದ ಇವರನ್ನು ಕಾಣಲು ಪ್ರಯತ್ನಿಸಿದ್ದೆವು. ಕಾಲೇಜಿಗೆ ರಜೆಯಾದ್ದರಿಂದ ಮನೆಯಲ್ಲಿ ನೋಡಬೇಕೆಂದು ಆಮೇಲೆ (ಬಿಸುವ ಸಮ್ಮಿಲನವಾದ ಬಳಿಕ) ಹೋಗಿದ್ದೆವು. ಅವರ ಮನೆಯನ್ನು ನೋಡಿದರೆ ಮನದಟ್ಟಾದರೂ ಕಾದಂಬರಿಗಳಿಂದ ಸಾಕಷ್ಟು ಹಣ ಮಾಡಿರಬೇಕೆಂದು, ಬಿಭೂತಿ ಪಟ್ನಾಯಕರು ಸಿಕ್ಕಲಿಲ್ಲ, ಯಾವುದೋ ಊರಿಗೆ ಹೋಗಿದ್ದರಂತೆ.

ನಾವು ಕಟಕ್‍ಗೆ ಹೋದದ್ದು ಬಿಸುವ ಮಿಲನದ ಎರಡನೆಯ ದಿನ. ಸಮಾರೋಪ ಸಮಾರಂಭದ ಕಾಲಕ್ಕೆ. ಒರಿಸ್ಸಾದ ರಾಜ್ಯಪಾಲ ಸತ್ಯನಾರಾಯಣ ರೆಡ್ಡಿ ಮುಖ್ಯ ಅತಿಥಿ. ಸಮಾರಂಭ ಬೆಳಿಗ್ಗೆಯೇ ಆದ್ದರಿಂದ ಬಸ್ ಇಳಿದವರೇ ಅಟೋರಿಕ್ಷದಲ್ಲಿ ಸಮಾರಂಭ ನಡೆಯುವ ಸಭಾಂಗಣದ ಕಡೆ ಹೊರಟೆವು. ದಾರಿಯುದ್ದಕ್ಕೂ ಕೊಳಕು, ಧೂಳು; ಭುವನೇಶ್ವರದ ಪ್ರಶಾಂತತೆ ಇಲ್ಲಿಲ್ಲ. ಗದ್ದಲ, ಕಿರುದಾರಿಗಳು, ಸಮಾರಂಭದ ಜಾಗಕ್ಕೆ ಬರುವ ವೇಳೆಗೆ ಹತ್ತಾರು ತಿರುವುಗಳನ್ನು ಹಾಕಿ ಬಂದೆವು. ಸಭಾಂಗಣವಿದ್ದ ಮುಖ್ಯವಾದವಾದರೂ ಇಕ್ಕಟ್ಟಾದದ್ದೇ. ರಾಜ್ಯಪಾಲರು ಂದಿದ್ದುದರಿಂದ ದಾರಿಯುದ್ದಕ್ಕೂ ಪೊಲೀಸರು. ಅಲ್ಲಿಯವರೆಗೂ ರಿಕ್ಷಾದಲ್ಲಿ ಹೋಗಲು ಅವಕಾಶವನ್ನೇನೋ ಕೊಟ್ಟರು.

ಸಿನಿಮಾ ಥಿಯೇಟರ್ ಆಗಿದ್ದು ಈಗ ಸಭೆ-ಸಮಾರಂಭಗಳಿಗಾಗಿ ಮೀಸಲಾಗಿದ್ದ ಸಭಾಂಗಣ ಅದು; ಪ್ರಜಾತಂತ್ರ ಪತ್ರಿಕಾ ಬಳಗಕ್ಕೆ ಸೇರಿದುದು. ರಾಜ್ಯಪಾಲರಾಗಲೇ ಬಂದಿದ್ದರು. ಸಮಾರಂಭ ಶುರುವಾಗಿತ್ತು. ನಾವು ಒಳಗೆ ಹೋದೆವು. ಒಳಗೆ ವಿಪರೀತ ಶಕೆ, ಮೊದಲೇ ಬಿರುಬೇಸಿಗೆ, ಜನನಿಬಿಡವಾಗಿದ್ದುದರಿಂದ ಒಳಗಿನ ವಾತಾವರಣ ಬಿಸಿಯಾಗಿತ್ತು. ನಾವು ಹೋಗಿ ಕುಳಿತಾಗ ವೇದಿಕೆಯ ಮೇಲೆ ಆಗತಾನೇ ಅತಿಥಿಗಳು ಆಸೀನರಾಗಿದ್ದು, ಸಭಿಕರು ಇನ್ನೂ ಬರುತ್ತಲೇ ಇದ್ದರು. ಹೀಗಾಗಿ ಕುಳಿತುಕೊಳ್ಳಲು ಸ್ಥಳಕ್ಕೇನೂ ಕೊರತೆಯಿರಲಿಲ್ಲ. ಅಲ್ಲದೆ, ಎಲ್ಲ ಕಡೆ ನಡೆಯುವಂತೆ, ಮತ್ತು ಒಳಗೆ ಶಕೆಯಿದ್ದುದರಿಂದ, ಹೊರಗಡೆಯೇ ಸುಮಾರು ಮಂದಿ ಹರಟುತ್ತ ಉಭಯಕುಶಲೋಪರಿ ವಿಚಾರಿಸುತ್ತ ನಿಂತುಕೊಂಡಿದ್ದರಿಂದ ಒಳಗೆ ಹಿಂಭಾಗದ ಸೀಟುಗಳು ಸಾಕಷ್ಟು ಸಂಖ್ಯೆಯಲ್ಲಿ ತೆರವಾಗಿದ್ದವು

ನಾವು ಹೋದ ಕೆಲವೇ ಕ್ಷಣಗಳಲ್ಲಿ ಸಮಾರಂಭ ರಂಭ - ಭಾರತಿಯನ್ನು ಕುರಿತ ಪ್ರಾರ್ಥನಾ ಗೀತದೊಂದಿಗೆ, ನಾಲ್ಕಾರು ಜನ ಹುಡುಗಿಯರು ಸುಶ್ರಾವ್ಯವಾಗಿ ಹಾಡಿದರು. ಹೊಸಬಗೆಯ ರಾಗಸಂಯೋಜನೆ. ನಮಗೆ ಪೂರ್ಣವಾಗಿ ಅರ್ಥವಾಗದಿದ್ದರೂ ಮಧ್ಯೆ ಮಧ್ಯೆ ಬರುತ್ತಿದ್ದ ಸಂಸ್ಕೃತ ಪದಗಳಿಂದಾಗಿ ಭಾರತಿಯ ಹಿರಿಮೆಯನ್ನು ವರ್ಣಿಸುವ ಮಾತುಗಳವು ಎಂದು ತಿಳಿಯಲು ಕಷ್ಟವಾಗಲಿಲ್ಲ. ಆಮೇಲೆ ಪ್ರಜಾತಂತ್ರದ ಮಾಲೀಕರಿಂದ ಪ್ರಸ್ತಾವನೆ, ಅತಿಥಿಗಳ ಪರಿಚಯ ಡೆಯಿತು. ಪೂರ್ತಿ ಒರಿಯಾದಲ್ಲಿದ್ದುದರಿಂದ ಏನೂ ಅರ್ಥವಾಗದು, ಒರಿಯಾ ಭಾಷೆಯಲ್ಲಿ ಸಾಕಷ್ಟು ಸಂಖ್ಯೆಯ ಸಂಸ್ಕೃತ ಶಬ್ದಗಳೇನೋ ಇವೆ, ಆದರೆ ಅದರ ಉಚ್ಚಾರ ಕೆಲವೊಮ್ಮೆ ಗಮನಿಸಿ ಕೇಳದಿದ್ದಾಗ, ಬೇರೆ ಯಾವುದೋ ದೇಸಿ ಪದ ರಬೇಕು ಎಂಬ ಭಾವನೆಯುಂಟುಮಾಡುತ್ತದೆ. ಜೊತೆಗೆ ಎಷ್ಟೋ ಸಂಸ್ಕೃತ ಪದಗಳನ್ನು ಒಂದೊಂದು ಭಾಷೆಯಲ್ಲಿ ಒಂದೊಂದು ಅರ್ಥದಲ್ಲಿ ಬಳಸುವುದೂ ಉಂಟು. ಹೀಗಾಗಿ ಶಬ್ಬ ಪರಿಚಿತವೇ ಹೊರತು, ಅರ್ಥ ತಿಳಿಯದು. ಒಂದೇ ಶಬ್ಬ ಹಲ ಶಬ್ದಗಳಾಗಿರುವ ಯಕ್ಷಿಣಿ ಇದು. ಸಂಸ್ಕೃತ ಭಾರತೀಯ ಭಾಷೆಗಳನ್ನು ಬಳಸಿರುವ ಬಗೆಯಿದು. ಪ್ರಸ್ತಾವನೆಯಾದನಂತರ ಜಾಧವಪುರ ವಿಶ್ವವಿದ್ಯಾಲಯದ ಮಾಜಿ ಕುಲಪತಿಯೊಬ್ಬರು ಇಂಗ್ಲೀಷಿನಲ್ಲಿ ಮಾತನಾಡಿದರು, ದೀರ್ಘವಾಗಿ; ಭಾರತದ ಸಂವೇದನೆಯ ವೈಶಿಷ್ಟ್ಯ, ಸಂಸ್ಕೃತಿಯ ಹಿರಿಮೆ ಇತ್ಯಾದಿಗಳನ್ನು ನಿರರ್ಗಳವಾಗಿ ವಿವರಿಸಿದರು. ಹೊಸದೇನೂ ಇಲ್ಲ, ಭಾಷಣಗಳೇ ಹೀಗೇನೋ, ಸಾಂಪ್ರದಾಯಿಕ ಬಹುವೇಳೆ, ಅದಕ್ಕೆ ಭಾಷಣ ಮಾಡ ಹೇಳಿದರೆ ಎಷ್ಟೋ ವೇಳೆ ನನಗೆ ಬೇಸರವಾಗುತ್ತದೆ, ನನ್ನ ಧ್ವನಿ ಕೇಳಿ ಕೇಳಿ ನನಗೆ ಸಾಕಾಗುತ್ತದೆನ್ನಿಸುತ್ತದೆ. ಹೊಸದನ್ನು ಎಷ್ಟೆಂದು ಹೇಳಲು ಸಾಧ್ಯ. ಅಂತೂ ಈ ಸಂಪ್ರದಾಯಗಳೆಲ್ಲ ಮುಂದುವರೆಯುತ್ತಿವೆ!

ಮತ್ತಾರದೋ ಮಾತು. ಸಂಪೂರ್ಣವಾಗಿ ಒರಿಯಾದಲ್ಲಿ; ಪುಣ್ಯಕ್ಕೆ ಅವರು ಹೆಚ್ಚು ಕಾಲ ತೆಗೆದುಕೊಳ್ಳಲಿಲ್ಲ. ಅವರದಾದ ಮೇಲೆ ವೇದಿಕೆಯ ಮೇಲೆ ಪಿಳಿಪಿಳಿ ಕಣ್ಣು ಬಿಟ್ಟು ಕೂತಿದ್ದ ಕಾರಂತರಿಂದಲು ಮಾತಾಡಿಸಬಹುದೆಂಬ ಕುತೂಹಲ ನಮ್ಮದು. ಹಿಂದಿನ ದಿನ ಅವರೇ ಮುಖ್ಯ ಭಾಷಣಕಾರರು. ಹೀಗಾಗಿ ಇಂದು ಅವರ ಮಾತಿಲ್ಲ. ಬಹುಮಾನಗಳ ವಿತರಣೆ, ಬಹುಮಾನಿತರ ಕಿರುಪರಿಚಯ, ರಾಜ್ಯಪಾಲರಿಂದ ಶಾಲು, ಹಾರ, ಕಾಣಿಕೆಗಳ ಪ್ರದಾನ. ಕೊನೆಗೆ ರಾಜ್ಯಪಾಲರ ಭಾಷಣ, ಹಿಂದಿಯಲ್ಲಿ ಬರೆದು ತಂದಿದ್ದ (ಯಾರೋ ಬರೆದಿದ್ದ) ಹಾಳೆಗಳಿಂದ ಓದಿದರು. ಹಿಂದಿಯಲ್ಲಿ ಮಾತ್ರ ಭಾಷಣ ಮಾಡುವ ವ್ರತವಂತೆ ಅವರದು. ಹಿಂದಿ ಪ್ರಚಾರವನ್ನು ಈ ರೀತಿ ಮಾಡುತ್ತಿದ್ದ ಅವರಿಗೆ ಕೇಂದ್ರ ಸರ್ಕಾ ಯಾವುದೋ ಬಹುಮಾನ ನೀಡಿದ್ದುದು ಹಿಂದಿನ ದಿನದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಚೋರಗುರು-ಚಂಡಾಲ ಶಿಷ್ಯ - ಎನ್ನುತ್ತಾರಲ್ಲ ಹಾಗೆ ಕೇಂದ್ರ ಸರ್ಕಾರ - ಹಿಂದಿ ಸೇವಕರು. ಈ ಹಿಂದಿಯ ಹೇರಿಕೆಯಿಂದಾಗಿ ಆ ಭಾಷೆಯಲ್ಲಿ ಭಾಷಣ ಮಾಡುವುದನ್ನು ಕೇಳಿದಾಗ ಮೈ ಉರಿಯುತ್ತದೆ. ಭೋಜ್‌ಪುರಿ, ಖಡೀಬೋಲಿ, ಬ್ರಜ್ ಭಾಷಾ - ಮುಂತಾದ ಐದಾರು ಭಾಷೆಗಳನ್ನೆಲ್ಲ ಹಿಂದಿ ಎಂದು ಕರೆದು ರಾಷ್ಟ್ರಕ್ಕೊಂದು ಭಾಷೆಯಿರಬೇಕೆಂಬ ಭ್ರಮೆಯಿಂದ ಅದರ ಪ್ರಚಾರಕ್ಕೆ ಹಣ ಸುರಿದದ್ದೇ ಸುರಿದದ್ದು, ಆಕಾಶವಾಣಿಯ ಹಿಂದಿ ಬಹಳ ಸಂಸ್ಕೃತ ಶಬ್ದಗಳನ್ನುಪಯೋಗಿಸುತ್ತದೆಂದು ನೆಹರೂ ಇದ್ದಾಗ ಕೋಪಗೊಂಡಿದ್ದರಿಂದ ಸರಳಗೊಳಿಸುವ ಯತ್ನಗಳು ಬೇರೆ ನಡೆದವು. ಹಿಂದಿ ಸಹಜ ಭಾಷೆಯಲ್ಲ, ಕೃತಕವಾದದ್ದೆಂದು ಪಂಡ ವಾದಿಸಿದ್ದರು. ಹಿಂದಿ ಎಂಬುದೊಂದು ಭಾಷೆಯೇ ಇಲ್ಲ; ಅದನ್ನು ಮಾತನಾಡುವವರೆಂದು ಹೇಳಿಕೊಳ್ಳುವವರು ಕೆಲವರೇ. ಹಿಂದಿಯ ಹೆಸರಿನಲ್ಲಿ ಅಪಾರ ಹಣ ಕಬಳಿಸುತ್ತ, ಅಧಿಕಾರ ಸ್ಥಾನಗಳನ್ನು ಹಿಡಿದು ಮಜಾಮಾಡುತ್ತಿದ್ದಾರೆ ಎಂದು ಪಂಡ ಅಭಿಪ್ರಾಯಪಟ್ಟಿದ್ದು ಸರಿಯೇ. ಸಾವಿರಾರು ವರ್ಷಗಳಿಂದ ಕೋಟ್ಯಾವಧಿ ಸಾಮಾನ್ಯರ ಬದುಕಿನ ಎಲ್ಲ ಕ್ಷೇತ್ರಗಳ ಜೀವಂತ ಸಂವಹನ ಮಾಧ್ಯಮವಾದ ಭಾರತದ ಹತ್ತಾರು ಭಾಷೆಗಳ ಮೇಲೆ ಈ ಟೆಸ್ಟ್ ಟ್ಯೂಬ್ ಬೇಬಿ ಸವಾರಿ ಮಾಡುತ್ತಿದೆ!

ಸದ್ಯ ಭಾಷಣ ಮುಗಿಯಿತು! ವಂದನಾರ್ಪಣೆಯಾಯಿತು. ಆ ಹೊತ್ತಿಗೆ ಹನ್ನೆರಡೂವರೆ ಗಂಟೆ. ಎಲ್ಲ ಸಭಾಂಗಣದಿಂದ ಹೊರಟರು. ನಾಗರಾಜ್‌ಗೆ ಕಾರಂತರನ್ನು ಮಾತಾಡಿಸಬೇಕು, ಅವರೊಡನೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಚಪಲ. ವೈಯಕ್ತಿಕವಾಗಿ ಕಾರಂತರು ನನ್ನನ್ನು ಬಲ್ಲವರಲ್ಲ; ಏನೆಂದು ಮಾತನಾಡಿಸುವುದು ಎಂದೆ ನಾನು. ಅದೇ ಆವರಣದ ಪಕ್ಕದ ಮತ್ತೊಂದು ಭವನಕ್ಕೆ ರಾಜ್ಯಪಾಲರೂ ಅವರೂ ಹೋದರು. ಆ ಭವನಕ್ಕೆ ಹೋಗಲು ಒಂದು ಗೇಟ್ ಬೇರೆ. ಅದರೊಳಗಿನ ಆವರಣದಲ್ಲಿ ಷಾಮಿಯಾನ ಹಾಕಿದ್ದರು. ಅತಿಥಿಗಳಿಗೆ ಆಮಂತ್ರಿತರಿಗೆ ಬಫೆ ವ್ಯವಸ್ಥೆ. ಆದರೆ ಗೇಟಿನ ಬಳಿ ಜನರ ಒಂದು ದಂಡು, ಒಳಗಿನ ಊಟದ ವಾಸನೆಯಿಂದ ಆಕರ್ಷಿತರಾದವರು. ಒಂದು ಗೇಟನ್ನು ಭದ್ರವಾಗಿ ಮುಚ್ಚಿ, ಇನ್ನೊಂದನ್ನು ಒಬ್ಬರು ಮಾತ್ರ ಹೋಗಲು ಸಾಧ್ಯವಾಗುವಂತೆ ತೆರೆದಿದ್ದರು. ಪಂಡ ಅವರು ಅಲ್ಲಿನ ನಿಯಂತ್ರಕರ ಬಳಿ ಹೋಗಿ ಏನೋ ಹೇಳಿದರು. ಬೆಂಗಳೂರಿನಿಂ ಬಂದವರು, ಕಾರಂತರನ್ನು ಭೇಟಿಯಾಗಬಯಸುತ್ತಾರೆ ಎಂದೇ ಇರಬೇಕು. ನಮ್ಮನ್ನು ಒಳಗೆ ಬಿಟ್ಟರು. ಪ್ರಜಾತಂತ್ರ ಕಚೇರಿಯ ಭವನದೊಳಗೆ ರಾಜ್ಯಪಾಲರಿಗೆ ಊಟದ ವ್ಯವಸ್ಥೆ; ಕಾರಂತರೂ ಅಲ್ಲಿಯೇ ಇದ್ದರು. ನಾವು ಊಟ ಮಾಡೋಣ ಹೊತ್ತಾಗಿದೆಯಲ್ಲ ಎಂದರು. ನಾವು ಊಟಕ್ಕೆ ಆಮಂತ್ರಿತರಲ್ಲ, ಹೊರಗೆ ಎಲ್ಲಾದರೂ ಊಟ ಮಾಡಬಹುದಲ್ಲ ಎಂಬ ಭಾವನೆ ನನ್ನದು. ಪೈಪೋಟಿಯಿಂದ ಕ್ಯೂನಲ್ಲಿ ನಿಂತು, ಹಿಂದಿನಿಂ ನೂಕುವವರನ್ನು ಸಹಿಸಿಕೊಂಡು ಒಂದೊಂದು ಕೌಂಟರ್ ಬಳಿ ಹೋಗಿ ಒಂದೊಂದು ತಿನಿಸನ್ನು ಹಾಕಿಸಿಕೊಂಡು ತಿನ್ನುವ ಈ ಪರಿಪಾಠ ಬೇಸರ ತರಿಸುತ್ತದೆ. ಅಲ್ಲದೆ, ಕಾರಂತರನ್ನು ಮಾತಾಡಿಸಬೇಕೆಂದರೆ ಅವರು ಊ ಮುಗಿಸಿ ಹೊರ ಬರುವುದನ್ನೇ ಕಾಯುತ್ತ ನಿಲ್ಲಬೇಕು. ಎಷ್ಟು ಹೊತ್ತೊ; ಏನೋ ಊಟ ಮಾಡೋಣ ಎಂದು ಹೇಳಿದಾಗ ನಾವೆಲ್ಲ ಪ್ಲೇಟು ಹಿಡಿದು ಹೊರಟೆವು. ಯಾವ್ಯಾವ ಕೌಂಟರಿನಲ್ಲಿ ಏನು ಎಂದು ಹುಡುಕಿಕೊಂಡು ಹೋಗುವವರಾರು. ನಾನಂತೂ ಮೊದಲ ಕೌಂಟರ್ ಬಳಿ ಹೋಗಿ ಸಿದ್ಧವಾದ ಯಾವುದೋ ಒಂದು ಬಗೆಯ ಅನ್ನ ಹಾಕಿಸಿಕೊಂಡು ಬಂದೆ. ನನಗೆ ಒಗ್ಗದ ರುಚಿ, ಕೆಲವು ತುತ್ತು ತಿಂದು ಮುಗಿಸಿದೆ. ಉಳಿದವರು ಇನ್ನೂ ಚಮಚಗಳನ್ನು ಪ್ಲೇಟಿನ ಮೇಲಾಡಿಸಿ ಕಟ್‌ಕಟ್ ಸದ್ದು ಮಾಡುತ್ತ, ಊಟ ಮುಂದುವರಿಸಿದ್ದರು. ಅಷ್ಟರಲ್ಲಿಯೇ ರಾಜ್ಯಪಾಲರು ಊಟ ಮುಗಿಸಿ, ಪತ್ರಿಕೆಯ ಕಚೇರಿಯಿಂದ ಹೊರಬಿದ್ದರು. ಇಂಥವರು ಹೋಗುವಾಗ ಕುಳಿತಿರುವಾಗ ಜನರ ಗಮನವನ್ನು ಸೆಳೆಯುವವರು ಅವರ ಎಡಿಸಿಗಳು. ಯಜಮಾನರು ಕೂತಿದ್ದರೆ ಹಿಂದೆ ಬೆನ್ನು ಸೆಟೆದು, ಕತ್ತು ಆ ಕಡೆ ಈ ಕಡ ಆಡಿಸದೆ ಮರದಂತೆ ನಿಂತ ಬಣ್ಣಬಣ್ಣದ ಬಟ್ಟೆ ತೊಟ್ಟ, ಎತ್ತರವಾದ ಈ ರಕ್ಷಣಾಧಿಕಾರಿ. ಅಂಥವರು ಸದಾ ಯುವಕರೇ ಸದೃಢರೇ ಆಗಿರುವುದರಿಂದ ನೋಡುವವರ ಕಣ್ಣು ಸೆಳೆಯುತ್ತಾರೆ. ಆತನ ಮುಂದುಗಡೆ ಇರುವುದರಿಂದ ಇವರು ರಾಜ್ಯಪಾಲರು ಎಂದುಕೊಳ್ಳಬೇಕು. ಸರಿ ಅವರ ಹಿಂದೆ ಮುಂದೆ ಒಂದು ಚಿಕ್ಕ ದಂಡು, ಅವರಿಗೆ ದಾರಿ ಮಾಡಿಕೊಡಲು ಜನರನ್ನು ಅತ್ತಿತ್ತ ಸರಿಸುತ್ತ ಮುಂದೆ ಹೋಗುವ ಪೋಲೀಸ್ ಅಧಿಕಾರಿಗಳು, ರಾಜ್ಯಪಾಲರು ಗೇಟಿನಿಂದ ಹೊರ ಹೋಗಿ ಸನಿಹಕ್ಕೆ ಬಂದು ನಿಂತಿದ್ದ ಕಾರನ್ನೇರಿ ಆ ಕಡೆ ಹೋದ ಮೇಲೆ ಇಲ್ಲಿ ಗೇಟನ್ನು ವಿಶಾಲವಾಗಿ ತೆಗೆದಾಗ, ಊಟಕ್ಕೆ ಕಾದಿದ್ದ ಒಂದು ದೊಡ್ಡ ಗುಂಪು  ಪ್ರವಾಹದೋಪಾದಿ ಒಳನುಗ್ಗಿದರು. ವಿವಿಧ ಹಾರದ ಕೌಂಟರುಗಳ ಬಳಿ ಅವರೆಲ್ಲ  ಕ್ಯೂಗಳಾಗಿ ಮಾರ್ಪಾಡಾಗುವ ಹೊತ್ತಿಗ ಇತ್ತ ಒಂದಿಬ್ಬರು ಕಾರಂತರನ್ನು ಕರೆತಂದರು. ನಾವೆಲ್ಲ ಸ್ವಲ್ಪ ಜಾಗೃತರಾದೆವು. ಗೇಟಿನ ಕಡೆಗೆ ಅವರು ಸಾಗುತ್ತಿದ್ದರು. ನಾಗರಾಜ್, ಪಂಡ ಮುಂತಾದವರ ಕೈಯಲ್ಲಿನ್ನೂ ಊಟದ ತಟ್ಟೆಗಳು. ಒಂದೆಡೆ ನಿಲ್ಲಿಸಿ ಕಾರಂತರನ್ನು ಮಾತಾಡಿಸುವಂತಿಲ್ಲ, ಏಕೆಂದರೆ ವ್ಯವಸ್ಥಾಪಕರು ಎಲ್ಲಿ ಕರೆದೊಯ್ಯುತ್ತಾರೋ ನಾವು ಹೋಗಬೇಕಲ್ಲ! ಕರೆದೊಯ್ಯುವವರು ಯಾರೊಡನೆಯೋ ಮಾತಾಡುತ್ತ ಒಂದು ಕಡೆ ನಿಂತಾಗ ಕಾರಂತರಿಗೆ ನಮಸ್ಕಾರ ಹೇಳಿದೆವು. ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂದೆವು, ನಕ್ಕರು. ದೂರದ ಊರಲ್ಲಿ ಕನ್ನಡದ ಮಾತು ಕೇಳಿ ಮುಗ್ಧವಾಗುವಷ್ಟು ಅವರ ಅನುಭವ ಹೊಸತೂ ಅಲ್ಲ, ಆ ವಯಸ್ಸೂ ಅಲ್ಲ ಅವರದು. ‘ಊಟ ಆಯಿತೇ ಸಾರ್?” ಎಂದಾಗ ವಯಸ್ಸಾಯಿತು, ಏನೋ ಇಷ್ಟು ತಿಂದೆ ಎಂದು ಕೈ ಬೆರಳುಗಳಿಂದ ಸೂಚಿಸಿದರು. ಎಷ್ಟು ದಿನ ಇರ್ತೀರಾ ಸಾರ್” ಎಂದಾಗ ನಾಳೆ ಸಾಯಂಕಾಲ ಹೋಗುತ್ತೇನೆ ಎಂದು ವಿಶಾಲವಾಗಿ ಇನ್ನೊಮ್ಮೆ ನಕ್ಕರು. ಈ ಹೊತ್ತಿಗೆ ಅವರ ಉಸ್ತುವಾರಿ ಹೊತ್ತವರು ಮುಂದೆ ಸಾಗಿದುದರಿಂದ ಕಾರಂತರೂ ಹಿಂಬಾಲಿಸಿದರು. ಇಷ್ಟರಲ್ಲಿ, ಮಾತನಾಡುತ್ತ ನಿಂತರಲ್ಲ ಎಂದು ಫೋಟೋ ಹಿಡಿಯಲು ತರಾತುರಿ ನಡೆದಿತ್ತು. ಆದರೆ ಕ್ಯಾಮರಾ ಸಿದ್ಧಗೊಳ್ಳುವ ಹೊತ್ತಿಗೆ ಕಾರಂತರು ಮುಂದೆ ಹೋಗಿಬಿಟ್ಟರು. ಆದರೇನು ಅಲ್ಲಿಯೇ ಇದ್ದ ಒಬ್ಬರನ್ನು ಕೇಳಿಕೊಂಡು ನಾವು ನಾಲ್ವರೂ ನಿಂತು ಊಟ ಮಾಡುವ ಭಂಗಿಯ ಒಂದು ಫೋಟೋ ತೆಗೆಸಿಕೊಂಡೆವು. ಕಾರಂತರ ಸಂದರ್ಶನ ಹೀಗೆ ಮುಗಿದಿತ್ತು.

ಮುಂದೆ ಕಟಕ್‌ನ ಮಧ್ಯಭಾಗದಲ್ಲಿರುವ ಸುಭಾಷ್ ಚಂದ್ರ ಬೋಸರ ಹಿರಿಯ ಮನೆ; ಅವರು ಹುಟ್ಟಿದ ಮನೆ. ಅದಾಗಲೇ ಮಧ್ಯಾಹ್ನ, ಈ ಹೊತ್ತಿಗೆ ಅದು ತೆರೆದಿರುತ್ತದೆಯೋ? ಅಲ್ಲೇನೋ ಮೂಸಿಯಂ ಇರಬಹುದು ಎನಿಸಿತ್ತು. ಸುಭಾಷರಿಗೆ ಸೇರಿದ ವಸ್ತುಗಳನ್ನಿಟ್ಟಿರುವರಂತೆ. ರಿಕ್ಷಾದವನೊಬ್ಬನನ್ನು ವಿಚಾರಿಸಿದವು. ತೆಗೆದಿರುತ್ತದೆ ಎಂದ. ಹೊರಟೆವು. ಎಲ್ಲೆಲ್ಲೋ ಸುತ್ತಬೇಕಾಯಿತು. ಈ ಮಧ್ಯೆ ಎಜಿಲ್' ಎಂಬ ಪತ್ರಿಕೆಯ ಸಂಪಾದಕ ಮನಮೋಹನ್ ಚೌಧರಿಯವರ ಮನೆಯಿರುವ ಜಾಗವೂ ಈ ಭಾಗದಲ್ಲೇ ಇದೆ; ಅವರನ್ನು ಸಾಧ್ಯವಾದರೆ ಕಾಣೋಣ ಎಂದುಕೊಂಡೆವು. ಬೆಂಗಳೂರಿನ ಸರ್ವೋದಯ ನಾಯಕ ದೊರೆಸ್ವಾಮಿ ಅವರು ಅವರನ್ನು ಕಾಣಿ ಎಂದಿದ್ದು, ಇವರೂ ಸರ್ವೋದಯ ನಾಯಕರಂತೆ. ಕಷ್ಟಪಟ್ಟು ಮನೆಯನ್ನು ಹುಡುಕಿದೆವು; ಪಂಡ ಜೊತೆಯಲ್ಲಿದ್ದುದರಿಂದ ಸಾಧ್ಯವಾಯಿತೆಂದು ಹೇಳಬೇಕಾಗಿಲ್ಲ. ಒರಿಯಾದಲ್ಲಿ ವಿಚಾರಿಸಿ ವಿಚಾರಿಸಿ ಹುಡುಕಿದ್ದರಿಂದ ಮನೆತ್ತೆಯಾಯಿತು. ದೊಡ್ಡ ಮನೆ, ಳೆಯದು, ರಸ್ತೆಯ ಆ ತುದಿಯಿಂದ ಈ ತುದಿಯವರೆಗೂ ಎತ್ತರದ ಕಾಂಪೌಂಡು. ಗೇಟು ಹಾಕಿತ್ತು. ಸದ್ದು ಮಾಡಿದಾಗ ಒಬ್ಬ ಆಳುಮಗ ಬಂದು ವಿಚಾರಿಸಿದಾಗ ಮನಮೋಹನ ಬಾಬು ಕಲ್ಪತ್ರೆಗೆ ಹೋಗಿರುವರೆಂದು ತಿಳಿಯಿತು. ಬೆಂಗಳೂರಿನಿಂದ ಹೊರಡುವ ಮುನ್ನ ಗ್ಯಾಟ್ ಒಪ್ಪಂದ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದಾಗ ದೊರೆಸ್ವಾಮಿಯವರು ಮನಮೋಹನರ ಬಗ್ಗೆ ಹೇಳಿದ್ದು. ಕಕ್‌ನಲ್ಲಿ ಅವರ ನೇತೃತ್ವದಲ್ಲಿ ಅವರು ಗ್ಯಾಟ್ ವಿರೋಧಿಯಾದದ್ದೇನಾದರೂ ನಡೆಯಬಹುದೇನೋ, ಅದರಲ್ಲಿ ನಾವು ಭಾಗವಹಿಸಲು ಸಾಧ್ಯವಾಗಬಹುದು ಎಂದು ಯೋಚಿಸಿದ್ದ ನಮಗೆ ಸಮಸ್ಯೆ ಬೇಗ ಪರಿಹಾರವಾಗಿತ್ತು. ಅವರು ಕಲ್ಕತ್ತೆಯಿಂದ ವಾಪಸ್ಸಾಗವುದು ಮೂರುನಾಲ್ಕು ದಿನಗಳಾಗುತ್ತವೆಂದು ತಿಳಿದ ಮೇಲೆ ನೇರವಾಗಿ ಸುಭಾಷ್ ಚಂದ್ರ ಭೋಸರು ಹುಟ್ಟಿದ ಮನೆಯ ಕಡೆ ಹೊರಟೆವು.

ಸುಭಾಷರು ಬಂಗಾಳಿಗಳು. ಈ ಶತಮಾನದ ಆರಂಭದಲ್ಲಿ ಕಟಕ್‌ನಲ್ಲಿ ಬಂಗಾಳಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ಅಂಥ ಒಂದು ಕುಟುಂಬ ಸುಭಾಷರದು. ಇಲ್ಲೆಲ್ಲ ಮೊದಲು ಬಂಗಾಳಿಗಳು ವಾಸಿಸುತ್ತಿದ್ದರು. ಆ ಕಡೆಗೆ ಹೋಗುತ್ತಿದ್ದಾಗ ತೆಲುಂಗ ಬಜಾರ್ ಎಂಬ ಭಾಗವೂ ಸಿಕ್ಕಿತು. ಒಂದು ಕಾಲದಲ್ಲಿ ತೆಲುಗರು ದಟ್ಟೈಸಿದ್ದ ಜಾಗ. ಈಗ ಅಂತಹ ವ್ಯತ್ಯಾಸವಿಲ್ಲ, ಎಲ್ಲ ಭಾಗವೂ ಒಂದೇ ರೀತಿಯಲ್ಲಿವೆ. ರಸ್ತೆ ಕಿರಿದಾದರೂ ಪ್ರಮುಖವಾದ ಜಾಗ. ಸುಭಾಷರ ಮೂಸಿಯಂ ಎಂದು ಒಂದು ಕಟ್ಟಡದ ಮುಂದೆ ರಿಕ್ಷಾ ನಿಲ್ಲಿಸಿದ ಡ್ರೈವರ್. ಇಳಿದು ಒಳನಡೆದವು, ಅಗಲವಾದ ಗೇಟು, ಎಡ ಭಾಗ- ಎದುರು- ಬಲಭಾಗಗಳಲ್ಲಿ ಒಂದು ಅಂತಸ್ತಿನ ಕಟ್ಟಡ ಮಧ್ಯೆ - ರಸ್ತೆಗೆದುರಾಗಿ ವಿಶಾಲವಾದ ಆವರಣ. ಹಳೆಯ ಕಟ್ಟಡ. ನೋಡಿದ ತಕ್ಷಣ ಮ್ಯೂಸಿಯಂ ಎಂದು ಏನನ್ನೋ ಕಲ್ಪಿಸಿಕೊಂಡಿದ್ದ ನಮಗೆ ಪಿಚ್ಚೆನಿಸಿತು. ಆವರಣದಲ್ಲಿ ಕಾಲಿಟ್ಟರೆ ಬಲಗಡೆಗೆ ಕಟಕಟೆಯ ಬಾಗಿಲಿನ ಒಳಗೆ ಸುಭಾಷ್ ಚಂದ್ರ ಬೋಸರ ಒಂದು ಪ್ರತಿಮೆಯಿತ್ತು; ಒರಿಯಾ ಭಾಷೆಯಲ್ಲಿ ಬರೆದ ಒಂದು ಫಲಕ. ಆ ಕಟ್ಟಡ ಸಾಕಷ್ಟು ವಿಶಾಲವಾದದ್ದೇ. ಸುಭಾಷರ ತಂದೆ ಆ ಕಾಲದಲ್ಲಿ ಸುಪ್ರಸಿದ್ಧ ವಕೀಲರು; ಶ್ರೀಮಂತರೂ, ಅದಕ್ಕನುಗುಣವಾಗಿ ಆ ಕಾಲಕ್ಕೆ ಭಾರಿ ಎನ್ನಬಹುದಾಗಿದ್ದ ಮನೆ ಅದು. ಇನ್ನೇನೂ ಕಾಣಲಿಲ್ಲ. ಅಲ್ಲಿ ಕುಟುಂಬವೊಂದು ಇದ್ದಂತಿತ್ತು. ಊಹೂ ಈಗದು ಸ್ವದೇಶೀವೈದ್ಯದ ಒಂದು ಧರ್ಮಾಸ್ಪತ್ರೆ, ಸ್ವದೇಶೀ - ಧರ್ಮದ್ದು ಎಂದರೆ ಬಡವರದೇ ತಾನೇ! ವಯಸ್ಸಾದ ಒಂದಿಬ್ಬರು ಮಂಚದ ಮೇಲೆ ಮಲಗಿದ್ದುದು ಕಾಣಿಸಿತು. ಅಲ್ಲಿ ಹೋಗಿ ವಿಚಾರಿಸಿದಾಗ ಮ್ಯೂಸಿಯಂ ಈ ಹೊತ್ತಿಗೆ ತೆಗೆದಿರುವುದಿಲ್ಲ ಎಂದು ಒಬ್ಬಾತ ತಿಳಿಸಿದ. ಆದರೇನು, ಕಬ್ಬಿಣದ ಸರಳುಗಳು ಮೇಲ್ಭಾಗದಲ್ಲಿದ್ದ ಬಾಗಿಲುಗಳು ಹಾಕಿದ್ದರಿಂದ ಒಳಗಿರುವುದನ್ನು ಹೊರಗಿನಿಂದಲೇ ನೋಡಬಹುದಾಗಿತ್ತು. ಅಷ್ಟು ಸಾಕೆಂದು ಹೋದೆವು. ಅಲ್ಲಿದ್ದುದು ಕೆಲವೇ ವಸ್ತುಗಳು, ಕನ್ನಡಕ, ಸಣ್ಣ ಕಣ್ಣಿನ ಗುಂಡಗಿನ ಕನ್ನಡಕ, ಚಿತ್ರದಲ್ಲಿ ಕಂಡ ಆಕಾರದ್ದು, ಬೂಟುಗಳು, ಅವರು ಉಪಯೋಗಿಸುತ್ತಿದ್ದ ಯೂನಿಫಾರಂ, ಒಂದು ಗನ್ ಇದ್ದಂತೆಯೂ ನೆನಪು ಅಷ್ಟೇ, ಅದೇ ಮ್ಯೂಸಿಯಂ. ಕಲ್ಕತ್ತದಲ್ಲಿ ಅವರು ಬಾಳಿದ ಮನೆಯನ್ನು ಸ್ಮಾರಕವನ್ನಾಗಿ ಮಾಡಿದ್ದಾರೆ. ಅದು ದೊಡ್ಡದಾಗಿದೆಯಂತೆ. ಇದು ಅವರು ಹುಟ್ಟಿದ ಮನೆ, ಪ್ರಾಯಶಃ ಹೆಚ್ಚು ಕಾಲ ಇಲ್ಲಿರಲಿಲ್ಲ. ಅವರ ತಂದೆ ಕಲ್ಕತ್ತೆಗೆ ಹೋದರು. ಆದರೂ ಇದನ್ನು ಒಂದು ಸ್ಮಾರಕವೆಂಬಂತೆ ಕಾದಿರಿಸಿದ್ದಾರೆ. ಆ ಒಂದು ರೂಮು, ಹೊರಗಡೆ ಆವರಣದಲ್ಲಿದ್ದ ಒಂದು ಪ್ರತಿಮೆ - ಇಷ್ಟು ಬಿಟ್ಟರೆ ಅವರದ್ದೆಂದು ಹೇಳಲು ಬೇರೇನೂ ಇಲ್ಲ. ಉಳಿದದ್ದು ಟ್ರಸ್ಟ್ ಒಂದು ನಡೆಸುತ್ತಿದ್ದ ಆಸ್ಪತ್ರೆಗೆ ಸೇರಿದ್ದು. ಹೊರಗಿನ ಪ್ರತಿಮೆಯ ಬಳಿ ಒಂದು ಫೋಟೋ ತೆಗೆದುಕೊಂಡೆವು. ಸುಭಾಷರಿಗೆ ಗೌರವ ಅರ್ಪಿಸಿದ್ದಾಯಿತು. ಮತ್ತೆ ರಿಕ್ಷಾ ಹತ್ತಿ ಹೊರಟೆವು. ಕಟಕ್‌ನಲ್ಲಿ ವಾಸಿಸುತ್ತಿದ್ದ ಸಚಿ ರೌತ್‍ರಾಯ್ ಅವರನ್ನು ಭೇಟಿಯಾಗಲು. ಸಾಧ್ಯವಾದರೆ, ಪ್ರತಿಭಾರಾಯ್ ಎಂಬ ಪ್ರಸಿದ್ಧ ಕಾದಂಬರಿಕಾರ್ತಿಯನ್ನು ನೋಡುವ ಆಸೆಯಿತ್ತು. ತಮ್ಮ ಸ್ತ್ರೀವಾದಿ ಧೋರಣೆಯಿಂದ ಪ್ರಸಿದ್ಧರಾದವರು. ಅವರ ಯಾಜ್ಞಸೇನಿ' ಎಂಬ ಕಾದಂಬರಿಗೆ (ಅರ್ಥಾತ್ ಅದರ ಹಿಂದಿ ಅನುವಾದ ‘ದ್ರೌಪದಿ'ಗೆ) ಮೂರ್ತಿದೇವಿ ಪುರಸ್ಕಾರ ದೊರೆತ ಸುದ್ದಿಯನ್ನು ಹಿಂದೆಯೇ ಓದಿದ್ದೆ. ಹೆಸರೇ ಹೇಳುವಂತೆ ದ್ರೌಪದಿಯ ದೃಷ್ಟಿಯಲ್ಲಿ ಕಾದಂಬರಿ ಚೌಕಟ್ಟಿನಲ್ಲಿ ಹೇಳಿದ ಮಹಾಭಾರತದ ಕಥೆ ಅದು. ಅವರನ್ನು ಎರಡು ವರ್ಷದ ಹಿಂದೆ ದೆಹಲಿಯ ಭಾಷಾಂತರ ಕಮ್ಮಟದಲ್ಲಿ ನೋಡಿದ್ದೆ. ಆದರೆ ಆಕೆ ತಮ್ಮ ಮಗಳ ಮದುವೆಗಾಗಿ ಸಿದ್ಧತೆಯಲ್ಲಿ ತೊಡಗಿರುವುದರಿಂದ, ಆ ನಿಮಿತ್ತ ಬೇರಾವುದೋ ಊರಿಗೆ ಹೋಗಿದ್ದರಂತೆ. ಹಾಗಾಗಿ ಅವರನ್ನು ಕಾಣುವುದು ಸಾಧ್ಯವಿರಲಿಲ್ಲ. ಅವರೂ ಭುವನೇಶ್ವರದ ಕಾಲೇಜೊಂದರಲ್ಲಿ ಅಧ್ಯಾಪಕಿ, ಹಾಗಾಗಿ ಅವರನ್ನು ಸಾಧ್ಯವಾದರೆ ಕಾಲೇಜಿನಲ್ಲೇ ಕಾಣುವುದೆಂದು ಹೊರಟೆವು. ರಿಕ್ಷಾ ಸಚಿ ರೌತ್‍ರಾಯ್ ಅವರನ್ನು ಹುಡುಕಲು ನಮ್ಮನ್ನು ಕರೆದೊಯ್ದಿತು.

****

ಜನತೆಯ ಕವಿ

ಒರಿಯಾ ಸಾಹಿತ್ಯ ವರ್ತುಲದಲ್ಲಿ ಬದುಕಿರುವ ಅತ್ಯಂತ ಹಿರಿಯ ಹಾಗೂ ಅತಿ ಮಹತ್ವದ ವ್ಯಕ್ತಿಯೆಂದರೆ ಸಚ್ಚಿದಾನಂದ ರೌತರಾಯ್, ಸಚಿ ರೌತರಾಯ್ ಎಂದೇ ಪ್ರಸಿದ್ಧರು. ಅವರ ಹೆಸರು ಹೇಳಿದಾಗ ಆಟೋ ರಿಕ್ಷಾ ಚಾಲಕ 'ಪೊಯೆಟ್?' ಎಂದು ಪ್ರಶ್ನಿಸಿದ. ಅವರಿರುವ ಪ್ರದೇಶ ಇಂಥ ಕಡೆಯಲ್ಲವೇ ಎಂದು ಪ್ರಶ್ನಿಸಿಕೊಂಡ. ಹಾಗಿದೆ ಅವರ ಜನಪ್ರಿಯತೆ. ಸಾಮಾನ್ಯನಿಗೂ ಅವರ ಕವಿತೆಗಳು ತಲುಪಿವೆ. ಅಂತೆಯೇ ಅವರನ್ನು ಜನತೆಯ ಕವಿ ಎಂದು ಕರೆಯುತ್ತಾರೆ. ನನಗೆ ಬೇಂದ್ರೆಯವರ ನೆನಪು ಬಂತು. ಅವರ ಗೆಳೆಯರ ಬಳಗ ಇನ್ನೂ ಕ್ರಿಯಾಶೀಲವಾಗಿದ್ದಾಗಲೇ, ಗೆಳೆಯರೊಡನೆ ಸಂಜೆಯ ಹೊತ್ತು ಧಾರವಾಡ ನಗರದ ಕೊನೆಯಲ್ಲಿ ವಾಯುವಿಹಾರಕ್ಕೆ ಹೋದಾಗ ಎಮ್ಮೆಯ ಮೇಲೆ ಕುಳಿತು ಬರುತ್ತಿದ್ದ ಹುಡುಗನೊಬ್ಬ ಅವರ ಕವಿತೆಯನ್ನು ಹಾಡಿಕೊಳ್ಳುತ್ತಿದ್ದನಂತಲ್ಲ, ಮೈಸೂರಿನಲ್ಲಿ ನಾನಿದ್ದಾಗ, ಶಿವರಾತ್ರಿಯಂದು ಮಾಡುತ್ತಿದ್ದ ಹರಿಕಥೆಯೊಂದರಲ್ಲಿ ಒಬ್ಬ ದಾಸರು ಜಾನಪದ ಕವಿಯದೆಂದು ಹೇಳಿ ಬೇಂದ್ರೆಯವರ ಪದ್ಯವನ್ನು ಹೇಳಿದ್ದರು. ಸಚಿ ರೌತರಾಮ್ ಪ್ರಸಿದ್ಧರಾಗಿರುವುದು, ಜನರನ್ನು ತಲುಪಿರುವುದು ಆ ರೀತಿಯಲ್ಲೇನಲ್ಲ, ಕಾರ್ಮಿಕರ - ಕೂಲಿಕಾರರ ದನಿಯಾಗಿ ಎಂಬುದು ಅವರ ವೈಶಿಷ್ಟ್ಯ.

ಮುಖ್ಯ ರಸ್ತೆಯೊಂದರ ಅಡ್ಡಲಾಗಿ ಬರುವ ಕಿರುರಸ್ತೆಯೊಂದರಲ್ಲಿ ಹೋದೆವು. ವಿಶಾಲವಾದ ಕಾಂಪೌಂಡಿನ ಮನೆ. ಗೇಟು ತೆರೆದು ಒಳಗೆ ಹೋದವು. ಮನೆಯ ಮುಂದೆ ಹಸುರು ಹುಲ್ಲು, ಹಲವಾರು ಗಿಡಮರಗಳು. ಒಂದಂತಸ್ತಿನ ಮನೆಯೂ ದೊಡ್ಡದೇ ಗೋಪೀನಾಥ ಮೊಹಂತಿಯವರಾದ ಮೇಲೆ ಒರಿಯಾಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಚಿ ರೌತರಾಯ್ ಮೂಲತಃ ಕವಿಯೆನಿಸಿಕೊಂಡಿದ್ದರೂ (ಇಪ್ಪತ್ತಕ್ಕೂ ಹೆಚ್ಚಿನ ಕವನ ಸಂಕಲನಗಳು) ಹಲವಾರು ಸಣ್ಣಕತೆಗಳ ಸಂಕಲನಗಳನ್ನೂ ಪ್ರಕಟಿಸಿ, ಆದ ಪ್ರಕಾರದಲ್ಲೂ ಮುಖ್ಯ ದನಿಯೆನಿಸಿದವರು. ಅವರ ರಕ್ತ ಸಿಖ, ‘ಉಥಾ, ಜಗವೊ ಬಂದಿ’ ಕವನ ಸಂಕಲನಗಳನ್ನು ಅವರು ಪ್ರಕಟಿಸಿದ್ದು ಸ್ವಾತಂತ್ರ್ಯಪೂರ್ವದಲ್ಲಿ; ಅವೆರಡನ್ನೂ ಬ್ರಿಟಿಷ್ ಸರ್ಕಾರ ಬಹಿಷ್ಕರಿಸಿತ್ತು, ಅಂಥ ಸ್ವಾತಂತ್ರ್ಯಪ್ರೇಮಿ ಕ್ರಾಂತಿಕಾರೀ ಕವಿ ಆವರು. ೧೯೫೫ರಲ್ಲಿಯೇ ಭಾರತದ ವಿವಿಧ ಭಾಷೆಗಳ ಸಾಹಿತ್ಯ ಕರ್ತರಲ್ಲಿ ಪ್ರಮುಖರು ಬರೆದ ಲೇಖನಗಳುಳ್ಳ 'Sachi Raut Roy: A Poet of the People’ ಎಂಬ ಗೌರವಗ್ರಂಥ ಪ್ರಕಟವಾಯಿತು.

ರೌತ್‍ರಾಯ್ ಅವರು ಹಿರಿಯರು ನಿಜ; ಆದರೆ ನಮ್ಮ ಕಾರಂತ, ಮೂರ್ತಿರಾವ್, ಕುವೆಂಪು, ಪುತಿನ ಅವರಷ್ಟು ಮುದುಕರಲ್ಲ. ಇನ್ನೂ ಎಪ್ಪತ್ತೆಂಟು ವರ್ಷ ಅಷ್ಟೆ. ಆದರೆ ಅವರ ದೃಷ್ಟಿ ಈಗ ಪೂರ್ತಿಯಾಗಿ ಆರಿದೆ. ಹೀಗಾಗಿ ಮನೆಬಿಟ್ಟು ಹೊರಹೋಗಲಾರರು. ಈ ವಿಷಯ ಕೇಳಿ, ನಮ್ಮನ್ನು ಕಾಣುತ್ತಾರೋ ಇಲ್ಲವೋ ಎಂದುಕೊಂಡು ಒಳನಡೆದವು. ಪಂಡ ಅವರು ಬಾಗಿಲು ತೆರೆದು ಒಳಬಂದ ಶ್ರೀಮತಿ ರೌತ್‍ರಾಯ್ ಅವರ ಪಾದಮುಟ್ಟಿ ನಮಸ್ಕರಿಸಿದರು. (ಎಂಥ ಹಿರಿಯರನ್ನು ಕರಗಿಸಲಬಿಡುವ ವಿನಯವಂತಿಕೆ!). ಒರಿಯಾದಲ್ಲಿ ಒಂದೆರಡು ಮಾತು ಹೇಳಿ ನಮ್ಮನ್ನು ತೋರಿಸಿದರು. ಆ ವರಾಂಡಾಕ್ಕೆ ಹೊಂದಿಕೊಂಡಿದ್ದ ಕವಿಯ ಅಭ್ಯಾಸ ಕೋಣೆಯಲ್ಲಿ ಬರಹೇಳಿ “ಕೂತುಕೊಳ್ಳಿ ಬರುತ್ತಾರೆಎಂದರು.

ಸಣ್ಣ ಕೊಠಡಿ. ಒಂದೆಡೆ ಮೇಜುಕುರ್ಚಿಗಳು; ಅವರ ಬರವಣಿಗೆಗಾಗಿ. ಸುತ್ತಲೂ ಪುಸ್ತಕದ ಕಪಾಟುಗಳು. ಒಂದು ಸೋಫಾಸೆಟ್, ಪ್ರಶಾಂತ ವಾತಾವರಣ. ಸ್ವಲ್ಪ ಹೊತ್ತಿನಲ್ಲಿಯೇ ಕವಿಗಳು ಬಂದರು. ಸಂಪೂರ್ಣ ಬಿಳಿಯ ಖಾದಿ ಪಂಚೆ, ಜುಬ್ಬ, ಕಣ್ಣಿಗೊಂದು ಕಪ್ಪು ಕನ್ನಡಕ. ಒಳಕೋಣೆಯಿಂದ ಗೋಡೆ ಬಾಗಿಲು ಹಿಡಿದುಕೊಂಡು ನಿಧಾನವಾಗಿ ಬಂದರು. ಕೋಣೆಯಲ್ಲಿ ಬಂದಾಗ ನಾವು ಎದ್ದು ನಿಂತು ಅವರ ಕೈ ಹಿಡಿದು ಒಂದೆರಡು ಹೆಜ್ಜೆಯಿಡಿಸಿ ಬಳಿಯಿದ್ದ ಕುರ್ಚಿಯಲ್ಲಿ ಕುಳ್ಳಿರಿಸಿದೆವು; ಪರಿಚಯವಾಯಿತು. 'ತಮ್ಮ ಆರೋಗ್ಯ ಹೇಗಿದೆ?' ಎಂದದ್ದಕ್ಕೆ ಕಣ್ಣು ಕಾಣುವುದಿಲ್ಲ, ಮಿಕ್ಕಂತೆ ಏನೂ ತೊಂದರೆಯಿಲ್ಲ' ಎಂದರು. ಮಟ್ಟಸವಾದ ದೇಹ, ವಯಸ್ಸು ತೋರದ ಮುಖ. ಆದರೆ ದೃಷ್ಟಿ ಪೂರ್ಣ ಹೋಗಿದೆ. ನೋಡಿದರೆ ಮಿಕ್ಕಂತೆ ಆರೋಗ್ಯ ಚೆನ್ನಾಗಿರುವ ವಿಷಯ ವಿಷಯ ತಾನಾಗಿ ಗೊತ್ತಾಗುತ್ತದೆ.

ಸ್ವಲ್ಪ ಹೊತ್ತಿನಲ್ಲಿ ಪಾನಕ ಬಂತು. ಕುಡಿದು ಮಾತಿಗೆ ತೊಡಗಿದವು. ಅವರು ವಿದ್ಯಾರ್ಥಿ ದೆಸೆಯಲ್ಲಿ ಸುಭಾಷರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ತಮ್ಮ ಹನ್ನೊಂದನೆಯ ವಯಸ್ಸಿಗೇ ಪದ್ಯ ಬರೆಯಲು ತೊಡಗಿದ ಅವರು ಇಂಟರ್‌ಮೀಡಿಯಟ್ ಪರೀಕ್ಷೆಗೆ ಕುಳಿತುಕೊಳ್ಳಲಾಗಲಿಲ್ಲ. ಪೊಲೀಸರು ವಶಕ್ಕೆ ತೆಗೆದುಕೊಂಡ ಕಾರಣ. ೧೯೩೯ರಲ್ಲಿ ಪದವೀಧರರಾದ ರೌತ್‍ರಾಯ್ ಔದ್ಯಮಿಕ ಸಂಬಂಧಗಳನ್ನು ಕುರಿತು ವಿದೇಶದಲ್ಲೂ ವಿಶೇಷ ಅಧ್ಯಯನ ನಡೆಸಿದವರು. ಅವರ ಮೇಲೆ ಮಾರ್ಕ್ಸಿಸಂನ ಪ್ರಭಾವ ಆಳವಾಗಿ ಬಿದ್ದಿತು. ಪ್ರಗತಿಶೀಲ ಕವಿಯಾಗಿಯೇ ಅವರ ಬರವಣಿಗೆ ಪ್ರಾರಂಭ. ವಿವಿಧ ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಪರ್ಕವಿದ್ದ ಹಲವು ಹುದ್ದೆಗಳಲ್ಲಿ ಅವರಿದ್ದರು. ಕಾರ್ಮಿಕ ಹೋರಾಟಗಳಲ್ಲಿ ತೊಡಗಿದ್ದರು.

'ಸೋವಿಯತ್ ಯೂನಿಯನ್ ಒಡೆದುಹೋಯಿತಲ್ಲ. ಕಮ್ಯುನಿಸಂ, ಭವಿಷ್ಯವೇನು?”

“ನಾನು ಮಾರ್ಕ್ಸಿಸ್ಟ್, ಅದು ಮುಂದೂ ಉಳಿಯುತ್ತದೆ” ಎಂದು ಉತ್ತರಿಸಿದರು.

ಕನ್ನಡದಲ್ಲಿ ಪ್ರಗತಿಶೀಲಯುಗ ಮುಗಿದ ಮೇಲೆ ನವ್ಯ ಆರಂಭವಾದುದನ್ನು ನೆನಪಿಸಿಕೊಂಡೆ. ಅಲ್ಲದೆ ಪ್ರಗತಿಶೀಲರಿಗೆ ಪ್ರತಿಯಾಗಿ ನಮ್ಮ ಪ್ರಾರಂಭವಾಯಿತು. ಅದನ್ನು ಹಿನ್ನೆಲೆಯಾಗಿರಿಸಿಕೊಂಡು ಕೇಳಿದೆ.

ನಿಮ್ಮ ಮೇಲೆ ನವ್ಯಕಾವ್ಯದ ಪ್ರಭಾವವಾಗಲಿಲ್ಲವೇ?” ನನ್ನ ಅಜ್ಞಾನ ಕಂಡು ಅವರು ಮುನಿಸಿಕೊಳ್ಳಲಿಲ್ಲ. ಬಹಳ ಮೃದುವಾಗಿಯೇ ಹೇಳಿದರು. ಒರಿಯಾದಲ್ಲಿ ನವ್ಯ ಸಂಪ್ರದಾಯಕ್ಕೆ ಬುನಾದಿ ಹಾಕಿದವನೇ ನಾನು.” ನಾನು ಸುಸ್ತಾದೆ. ೧೯೩೨-೪೭ರ ನಡುವಣ ಕಾಲದಲ್ಲಿ ಬರೆದ ಕವನಗಳು ೧೯೪೭ರಲ್ಲಿ 'ಪಾಂಡುಲಿಪಿ' ಸಂಕಲನವಾಗಿ ಪ್ರಕಟವಾಯಿತು. ಅದರಲ್ಲಿ ಪ್ರಗತಿಶೀಲ ಕವನಗಳೇ ಹೆಚ್ಚಿದ್ದರೂ, ಭಿನ್ನ ರೀತಿಯ ಕವನಗಳಿಂದಾಗಿ ಅದು ಹೊಸ ಮಾರ್ಗಕ್ಕೆ ನಾಂದಿ ಹಾಡಿತು. ಒಬ್ಬ ವಿಮರ್ಶಕರು ಹೀಗೆನ್ನುತ್ತಾರೆ: “... ಮೂವತ್ತು ಮತ್ತು ನಲವತ್ತರ ದಶಕದಲ್ಲಿ ರೊಮ್ಯಾಂಟಿಕ್ ಆಗಿ ಪ್ರಗತಿಶೀಲವಾಗಿ ಎಂಬ ಬರೆಯುತ್ತಿದ್ದ ಸಚ್ಚಿದಾನಂದ ರಾವುತರಾಯ್..... ಹೊಸ ರೀತಿಗೆ ಹಾದಿ ಹಾಕಿದ್ದರು. ಅಂದರೆ, ರೊಮ್ಯಾಂಟಿಕ್ ಕಾಲ್ಪನಿಕತೆಯಿಂದ ಪರವಶವಾಗಿ ಬಿಡಬಲ್ಲ ಕವನಗಳಲ್ಲಿ ಕೂಡ ಚತುರತೆ ಮತ್ತು ವ್ಯಂಗ್ಯ ಮೂಲಕ ಅನುಭಾವಗಳನ್ನು ಕಾವ್ಯಬಂಧದಲ್ಲಿ ಸಂಯೋಜಿಸಿರುವುದನ್ನು ಕಾಣಬಹುದಾಗಿದೆ (ಭಾರತೀಯ ಸಾಹಿತ್ಯ ಸಮೀಕ್ಷೆ, ಸಂ. ೧, ಪು. ೩೫೫). ರೊಮ್ಯಾಂಟಿಕ್ ಪ್ರಗತಿಶೀಲ ನವ್ಯ ಇವೆಲ್ಲ ಪಂಥಗಳು ಕನ್ನಡದಲ್ಲಿ ಒಂದಕ್ಕೆ ವಿರುದ್ಧವಾಗಿ ಮತ್ತೊಂದು ಬಂದಂತೆ ಕಂಡರೆ, ಸಚ್ಚಿದಾನಂದರಲ್ಲಿ ಅವು ಒಳಗಿನಿಂದಲೇ ವಿಕಾಸಗೊಂಡು ಬಂದಿವೆ. ಒಂದು ಪಂಥಕ್ಕೆ ಸೇರಿದ ಲೇಖಕರು ಮತ್ತೊಂದು ಪಂಥದವರನ್ನು ಹೀಯಾಳಿಸುವುದು ಕನ್ನಡಕ್ಕೆ ಮಾತ್ರ ಸೀಮಿತವಲ್ಲದಿರಬಹುದು; ಆದರೆ ಸಚ್ಚಿದಾನಂದರು ಮಾತ್ರ ಅವುಗಳಲ್ಲಿ ವಿರೋಧ ಕಾಣದೆ ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ.

ದೇಶದ ಈಗಿನ ಪರಿಸ್ಥಿತಿಯ ಬಗ್ಗೆ ಬೇಸರಪಟ್ಟುಕೊಂಡರು. ನಮ್ಮತನ ಬಿಟ್ಟುಕೊಡುತ್ತಿದ್ದೇವೆ, ಗ್ಯಾಟ್‌ಗೆ ಒಳಗಾಗುತ್ತಿದ್ದೇವೆ ಎಂದರು.

“ನಾಡಿದ್ದು ಪ್ರಣವ್ ಮುಖರ್ಜಿ ಭಾರತದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕುತ್ತಾರಲ್ಲ” ಎಂದೆ.

ಆ ವಿವರ ಅವರು ಮರೆತಿದ್ದರು “ಹೌದೆ?” ಎಂದರು. ಮತ್ತೆ ಮಾರ್ಕ್ಸಿಸಂ ಬಗ್ಗೆ ನೆನಪು ಮಾಡಿಕೊಂಡರು. ಕಲ್ಕತ್ತದ ಕೇಸೋರಾಂ ಹತ್ತಿ ಗಿರಣಿಯಲ್ಲಿ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಯಾಗಿದ್ದ ಅವರಿಗೆ ಕಾರ್ಮಿಕರ ಸ್ಥಿತಿಗತಿಗಳ ಪರಿಚಯ ಚೆನ್ನಾಗಿತ್ತು. ೧೯೪೬ರಲ್ಲಿ ಕಲ್ಕತ್ತದ ಕೋಮು ಗಲಭೆಗಳ ಕಾಲದಲ್ಲಿಯೂ, ೧೯೪೩ರ ಬಂಗಾಳದ ಕ್ಷಾಮ ಕಾಲದಲ್ಲಿಯೂ ಪರಿಹಾರ ಕಾರ್ಯಗಳನ್ನು ಸಂಘಟಿಸಿದ್ದ ರೌತ್‌ರಾಯ್ ಕಕ್ಕುಲತೆ-ಕ್ರಾಂತಿಗಳನ್ನು ತಲೆಯಲ್ಲಿ ತುಂಬಿಕೊಂಡವರೂ ಆಗಿದ್ದರು. ಒರಿಸ್ಸಾ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಾಲದಲ್ಲಿ ಮೊದಲ ಬಾರಿಗೆ ಸಾಹಿತಿಗಳಿಗೆ, ಕಲಾವಿದರಿಗೆ, ಕ್ರೀಡಾಪಟುಗಳಿಗೆ ಮಾಸಿಕ ವೇತನ ನೀಡುವ ಪದ್ಧತಿ ಜಾರಿಗೆ ಬಂತು. ನಾನಾ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿರುವ ಅವರನ್ನು “ಈಗಿನ ಒರಿಯಾ ಸಾಹಿತ್ಯದ ಪರಿಸ್ಥಿತಿಯ ಬಗ್ಗೆ ನಿಮಗೇನನ್ನಿಸುತ್ತದೆ?'” ಎಂದು ಕೇಳಿದೆ. “ಕೆಲವರು ಚೆನ್ನಾಗಿ ಬರೆಯುತ್ತಾರೆ' ಎಂದರು.

“ಉದಾಹರಣೆಗೆ?”ಎಂದಾಗ ಮಾತ್ರ ಹೆಸರುಗಳನ್ನು ಹೇಳುವುದು ಕಷ್ಟ” ಎಂದರು.

ಸಾಹಿತ್ಯಕ ಚಟುವಟಿಕೆಗಳಲ್ಲಿ ಈಗಲೂ ಭಾಗವಹಿಸುವಿರಾ?”

ಯಾರಾದರೂ ಬಂದು ಕರೆದುಕೊಂಡು ಹೋದರೆ ಹೋಗುತ್ತೇನೆ. ಆದರೆ ಹೆಚ್ಚಿಗೆ ಭಾಗವಹಿಸಲು ಆಗುವುದಿಲ್ಲ,”

ಬರವಣಿಗೆ?”

ಏನಾದರೂ ಬರೆಯಬೇಕೆನ್ನಿಸಿದರೆ ಹೇಳಿ ಬರೆಸುತ್ತೇನೆ. ಕಣ್ಣು ಕಾಣುವುದಿಲ್ಲ ಎಂದರು. ಮಾತಿನಲ್ಲಿ ವ್ಯಥೆಯೇನೂ ಕಾಣಿಸಲಿಲ್ಲ. ಸಮಾಧಾನದಿಂದ ಕೂಡಿತ್ತು.

ಒಮ್ಮೆ ಅವರು ರಷ್ಯಾಕ್ಕೆ ಭೇಟಿಕೊಟ್ಟಿದ್ದರು; ಸೋವಿಯತ್ ಯೂನಿಯನ್ ಭದ್ರವಾಗಿದ್ದ ಕಾಲ. ಅವರ ಕವನಗಳಲ್ಲಿ ಕೆಲವನ್ನು ರಷ್ಯನ್‌ಗೆ ಅನುವಾದ ಮಾಡಿ ಪ್ರಕಟಿಸಿದ್ದ ಲೇಖಕಿಯೊಬ್ಬಳಿದ್ದಳು. ಇವರು ಉಳಿದುಕೊಂಡಿದ್ದ ಜಾಗಕ್ಕೆ ಹತ್ತಿರದಲ್ಲಿಯೇ ಅವಳೂ ವಾಸವಾಗಿದ್ದಳಂತೆ. ಆ ಮಾತನ್ನು ಅವರ ದುಬಾಷಿ ಹೇಳಿದ್ದಳು. ಆದರೆ ಎಷ್ಟು ಸಾರಿ ಕೇಳಿದರೂ ಆಕೆಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಲಿಲ್ಲವಂತೆ, ಈಗ ಆಗ ಎಂದು ಹೇಳುತ್ತಲೆ ತಪ್ಪಿಸಿದಳಂತೆ. ಮಾರ್ಕ್ಸಿಸಂ ಬಗ್ಗೆ ಅಪಾರ ಗೌರವಿರಿಸಿಕೊಂಡ ಸಚಿ ರೌತ್‍ರಾಯ್ ಅವರಿಗೆ ಕಮ್ಯುನಿಸ್ಟ್ ಆಡಳಿತದಲ್ಲಿ ಆದ ಈ ಅನುಭವ ವಾಸ್ತವತೆಯ ವ್ಯಂಗ್ಯವನ್ನು ಸೂಚಿಸುವಂಥದು.

ಏನು ಮಾತನಾಡಿದರೂ ಉದ್ವೇಗವಿಲ್ಲದೆ, ಸ್ಪಷ್ಟವಾಗಿ, ನಿರರ್ಗಳವಾಗಿ ಮಾತಾಡುವ ರೌತ್‌ರಾಯ್ ಅಪಾರ ಕನಸು ಕಂಡು ಈಗ ಭೌತಿಕವಾಗಿ ಏನನ್ನೂ ಕಾಣಲಾರದ ಸ್ಥಿತಿಯಲ್ಲಿದ್ದಾರೆ. ಪಕ್ಷವಾದ ಮನಸ್ಸು, ತಿಳಿಯಾದ ಆಲೋಚನೆ ಅವರ ಮಾತುಗಳಲ್ಲಿ ಪಾರದರ್ಶಕವಾಗಿ ಕಾಣುತ್ತದೆ. ಕಾಲ ಸರಿದಿತ್ತು. ಅವರಿಗೆ ತೊಂದರೆಯಾದೀತೆಂದು ನಾವೇ ಎದ್ದೆವು. ಪ್ರೀತಿಯಿಂದ ಬೀಳ್ಕೊಟ್ಟರು. ಮತ್ತೆ ಭುವನೇಶ್ವರದ ಕಡೆ ಪ್ರಯಾಣ.

****

ಫೈಲುಗಳ ಮಧ್ಯೆ ಮೂಡಿದ ಕಾವ್ಯ

ರಮಾಕಾಂತ ಥ್ ಇಂದಿನ ಒರಿಯ ಕಾವ್ಯದ ಪ್ರಮುಖ ಹೆಸರುಗಳಲ್ಲಿ ಒಂದು. ಅವರ ಇತ್ತೀಚೆಗಷ್ಟೇ ಒರಿಸ್ಸಾ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದು ನಿವೃತ್ತರಾದವರು. ಈಗ ಯಾವುದೋ ನಿಗಮವೊಂದರ ಅಧ್ಯಕ್ಷರಾಗಿರುವುದರಿಂದ ಅವರ ಅಧಿಕೃತ ನಿವಾಸವನ್ನೂ ತೆರವು ಮಾಡಿಲ್ಲ. ಬಿಸುವ ಮಿಲನ್ ಉತ್ಸವದ ಸಂದರ್ಭದಲ್ಲಿ ಕಟಕ್‌ನಲ್ಲಿ ಅವರನ್ನು ಕಂಡಿದ್ದೆವು. ತಾವು ಭುವನೇಶ್ವರದಲ್ಲಿ ಸಿಕ್ಕುವುದಾಗಿಯೂ ಫೋನ್ ಮಾಡಿ ಭೇಟಿಯನ್ನು ನಿಗದಿ ಪಡಿಸಿಕೊಳ್ಳಬೇಕೆಂದೂ ಸೂಚಿಸಿದ್ದರು. ನಮ್ಮನ್ನು ಕಂಡ ಪರಿಚಯಿಸಿದಾಗ ಬೆಂಗಳೂರೆಂದ ತಕ್ಷಣ, ‘ಎಚ್.ಎಸ್. ಶಿವಪ್ರಕಾಶ್ ಹೇಗಿದ್ದಾರೆ?’ ಎಂದು ವಿಚಾರಿಸಿದರು. ಭೂಪಾಲಿನಲ್ಲಿ ಯಾವುದೋ ಸಾಹಿತ್ಯಕ ಸಂದರ್ಭದಲ್ಲಿ ಅವರ ಭೇಟಿಯಾಗಿದ್ದಿತಂತೆ.

ನಾವು ಭಾನುವಾರ ಬೆಳಿಗ್ಗೆ ಹೊರಟೆವು. ಸುಮಾರು ಹನ್ನೊಂದು ಗುಟೆಯ ಹೊತ್ತಿಗೆ ಫೋನ್ ಮಾಡಿದಾಗ ಈಗಲೇ ಬರಬಹುದು ಎಂದರು. ಸರಿ, ನಮ್ಮ ಪ್ರತಿಜ್ಞೆಯನ್ನು ಮತ್ತೊಮ್ಮೆ ಮುರಿದು, ಸೈಕಲ್ ರಿಕ್ಷಾದಲ್ಲಿ ಕುಳಿತು ಅವರ ಮನೆಯ ಕಡೆ ಹೊರಟೆವು. ಭುವನೇಶ್ವರದ ಪ್ರಮುಖವಾದ ಜೋಡಿ ರಸ್ತೆಯಲ್ಲಿ ಪ್ರಯಾಣ ನೂರಾರು ಜನರ ಮುಂದೆ ಹಾಗೆ ತೆರೆದ ರಿಕ್ಷಾದಲ್ಲಿ ಕುಳಿತು ಅವರ ಮನೆಯ ಕಡೆ ಹೊರಟೆವು. ದಿನದಲ್ಲಿ ಹಗಲು ಹಾಗೆ ಹೋಗುವುದು ಮೊದಮೊದಲು ಸಂಕೋಚವೆನಿಸಬಹುದು, ಆದರೆ ಬರಬರುತ್ತ ಅದು ಒಗ್ಗಿಹೋಗುತ್ತದೆ. ಸಚಿವಾಲಯದ ಹತ್ತಿರ ಜೋಡಿ ರಸ್ತೆಗೆ ಮುಖ ಮಾಡಿಯೇ ಅವರ ಮನೆ; ಸರ್ಕಾರದ ಅಧಿಕೃತ ನಿವಾಸ. ವಿಶಾಲವಾದ ಕಾಂಪೌಡ್ ಹೊರಗೆ ಇಳಿದು ಕಾಂಪೌಂಡಿನಿಂದ ತುಸು ಆಳದಲ್ಲಿಯೇ ಇದ್ದ ಮನೆಗೆ ಹೋದೆವು. ನಾಯಿಗೀಯಿ ಇರಬಹುದೆಂದು ಒಂದು ಕ್ಷಣ ಆಳುಕಿದೆವು. ಆದರೆಥ ಲಕ್ಷಣಗಳಾವುದೂ ಇಲ್ಲದ್ದರಿಂದ ಧೈರ್ಯವಾಗಿ ಬಾಗಿಲ ಮುಂದೆ ಬಂದವು.

ರಥ್ ಅವರು ಮನೆಯಲ್ಲಿರಲಿಲ್ಲ. ನಮಗೆ ತೀವ್ರ ನಿರಾಶೆಯಾಯಿತು ಜೊತೆಗೆ ಕೋಪ ಕೂಡ. ಕಾಲುಗಂಟೆಯ ಹಿಂದೆ ಬನ್ನಿ ಎಂದು ಫೋನಿನಲ್ಲಿ ಹೇಳಿದವರು ಎಲ್ಲೋ ಹೋಗಿಬಿಟ್ಟರಲ್ಲ ಎಂದು ಮುಖ್ಯ ಕಾರ್ಯದರ್ಶಿ, ಐಎಎಸ್‌ನ ಪೊಗರು ತೋರಿಸಿಬಿಟ್ಟರು ಎಂದು ಸಂತಾಪ. ಆದರೆ ನೋ ತುರ್ತು ಕೆಲಸವಿದೆಯಂತೆ; ಹತ್ತು ನಿಮಿಷದಲ್ಲಿ ವಾಪಸ್ಸಾಗುತ್ತಾರೆ. ನೀವು ಬಂದರೆ ಒಳಗೆ ಕೂಡಿಸು ಎಂದು ಹೇಳಿದ್ದಾರೆ ಎಂದು ಅಳು ಹೇಳಿದಾಗ ಸಮಾಧಾನ. ಎಷ್ಟಾದರೂ ಶಿಸ್ತಿನ ಐಎಎಸ್ ಅಧಿಕಾರಿಯಲ್ಲವೇ, ಎಲ್ಲ ವ್ಯವಸ್ಥೆ ಮಾಡಿ ಹೋಗಿದ್ದಾರೆ. ಪಾಪ, ಏನು ಅರ್ಜೆಂಟ್ ಕೆಲಸವೋ ಏನೋ ಎಂದುಕೊಂಡವು.

ಸೇವಕ ತೋರಿಸಿದ ಒಳಗಿನ ಡ್ರಾಯಿಂಗ್ ರೂಮಿನಲ್ಲಿ ಕುಳಿತೆವು. ಆಳು ಫ್ಯಾನ್ ಹಾಕಿದ, ಹಳೆಯ ಕಾಲದ ಕಟ್ಟಡ; ಆದರೆ ವಿಶಾಲವಾದದ್ದು. ಸರಳವಾದರೂ ಉತ್ತಮ ಅಭಿರುಚಿಯಿಂದ ವ್ಯವಸ್ಥೆಗೊಂಡ ಡ್ರಾಯಿಂಗ್ ರೂಂ ಅದು. ಸ್ವಲ್ಪ ನೀರು ಬೇಕೆಂದವು; ಆಳು ಗಾಜಿನ ಹೂಜಿಯಲ್ಲಿ ತಣ್ಣೀರು ತಂದಿಟ್ಟ. ಮನೆಯಲ್ಲಿ ಯಾರೂ ಇದ್ದ ಹಾಗೆ ಕಾಣಲಿಲ್ಲ. ಆಳನ್ನೊಬ್ಬನೇ ಮನೆಗೆಲ್ಲ ಬಿಟ್ಟು ಹೋಗಿದ್ದಾರಲ್ಲ ಎನ್ನಿಸಿತು. ಟೀಪಾಯಿಯ ಮೇಲಿದ್ದ ಪೇಪರ್ ಮ್ಯಾಗಸೀನ್‌ಗಳಲ್ಲಿ ಒಬ್ಬೊಬ್ಬರು ಒಂದೊಂದನ್ನೆತ್ತಿ ಕೊಂಡು ಹಾಳೆ ತಿರುವುತ್ತ ಪಿಸುದನಿಯಲ್ಲಿ ಮಾತನಾಡುತ್ತ ತಲೆಯನ್ನು ಅತ್ತಿತ್ತ ತಿರುಗಿಸಿ ಮನೆ ಗಮನಿಸುತ್ತ ಕಾಲಕಳೆಯಲಾರಂಭಿಸಿದವು.

ಆಳು ಬಂದು ಸಾಹೇಬರು ಬಂದರು ಎಂದ. ಶಬ್ದವಾಗದಂತೆ ಬಂದಿದ್ದರು ರಮಾಕಾಂತ್ ರಥ್. ಲಗುಬಗೆಯಿಂದ 'ಸಾರಿ' ಎಂದುಕೊಂಡೇ ಬಂದರು. ನೀಳವಾದ ದೇಹ; ಎತ್ತರಕ್ಕೆ ತಕ್ಕ ದಪ್ಪ; ನೋಡಿದರೆ ಸ್ವಲ್ಪ ಬಿಗುವೇನೋ ಎಂಬಂಥ ಮುಖ, ಒಂದು ಪ್ಯಾಂಟು, ಸ್ಲಾಕ್ ತೊಟ್ಟಿದ್ದರು. ಇದೀಗ ರಿಟೈರ್ ಆದ ಐಎಎಸ್ ಅಧಿಕಾರಿ ಎಂದರೆ ಅರವತ್ತು ದಾಟಿದೆ; ಆದರೆ ಅಷ್ಟು ವಯಸ್ಸಾದವರಂತೆ ಕಾಣದು. ಬಂದವರೇ ಮತ್ತೊಂದು ಸೋಫಾದಲ್ಲಿ ಕುಳಿತವರೇ ಸಿಗರೇಟ್ ಹಚ್ಚಿದರು. ಅವರನ್ನು ಕಟಕ್‌ನಲ್ಲಿ ಕಂಡಾಗಲೂ ಸಿಗರೇಟು ಸೇದುತ್ತಿದ್ದರು. ತುಂಬ ಸೇದುವರೇನೋ ಎನ್ನಿಸಿತು. ಇರಬೇಕು; ನಮ್ಮ ಭೇಟಿಯುದ್ದಕ್ಕೂ ಒಂದಾದ ಮೇಲೊಂದರಂತೆ ಸಿಗರೇಟ್ ಹತ್ತಿಸುತ್ತಲೇ ಮಾತನಾಡುತ್ತಿದ್ದರು. ನಮಗೆ ಕೊಟ್ಟರೂ ನಾವಾರೂ ಸಿಗರೇಟು ಸೇದುವವರಲ್ಲ. ನಾಗರಾಜ್ ಪಂಡ ಇಬ್ಬರೂ ಬಹಳ ದೂರ. ನಾನು ಆಗೊಮ್ಮೆ ಈಗೊಮ್ಮೆ ಯಾರಾದರೂ ಕೊಟ್ಟರೆ ಸೇದುವವನು. ಆರು ತಿಂಗಳಿಗೋ ಮೂರು ತಿಂಗಳಿಗೋ ಒಮ್ಮೆ, ನಾನೇ ಎಂದೂ ಕೊಂಡದ್ದಿಲ್ಲ. ಯಾವ ಬ್ರಾಂಡಿನ ರುಚಿ ಹೇಗೆ ಎಂಬುದೂ ಮನವರಿಕೆಯಾಗದಷ್ಟು ಅಪರೂಪ ನಾನು ಸಿಗರೇಟ್ ಸೇದಿರುವುದು. ಆದರೆ ಅವರು ನೀಡಿದಾಗ ನಾನೂ ತೆಗೆದುಕೊಳ್ಳಲಿಲ್ಲ; ಯಾಕೋ!

ನಮ್ಮ ಪರಿಚಯವಾಯಿತು. ನಾನು ನನ್ನ ಜೀವನ ವಿವರ ಹಾಗೂ ಪ್ರಕಟಣೆಗಳ ಪಟ್ಟಿಯೊಂದನ್ನು ಕೊಟ್ಟೆ. ಅದರ ಮೇಲೆ ಕಣ್ಣಾಡಿಸಿದರು. ಪ್ರಕಟಣೆಗಳ ಯಾದಿ ನೋಡಿ ', ನೀವು ಬಹಳ ಬರೆದಿದ್ದೀರಿಎಂದರು. ನಾನು ನಕ್ಕೆ. ನನ್ನ ಗುಟ್ಟು ನನಗೇ ಗೊತ್ತು. ನನ್ನ ಬರವಣಿಗೆಯ ಗುಣಮಟ್ಟ ಅವರೇನು ಬಲ್ಲರು; ಅವರ ಗಮನಕ್ಕೆ ಬರುವುದು ಸಂಖ್ಯೆ. ಆ ಪಟ್ಟಿ ನೋಡಿ, ಅದರಲ್ಲಿ ವಿವಿಧ ಪ್ರಕಾರಗಳಲ್ಲಿನ ಕೃತಿಗಳ ಹೆಸರು ಓದಿ, ನಾನೂ ಬಹುದೊಡ್ಡ ಲೇಖಕನಿರಬಹುದು ಎಂಬ ಶಂಕೆ ಬೇರೆಯ ಭಾಷೆಯವರಲ್ಲಿ ಮೂಡಬಹುದು. ಅದೊಂದು ಅನುಕೂಲವೇ. ಆ ಪಟ್ಟಿಗೆ ಕರ್ನಾಟಕದಲ್ಲಿ ಯಾವ ಮಾನ್ಯತೆಯಿದೆಯೋ ತಿಳಿಯದಾದರೂ ಒರಿಸ್ಸಾದಲ್ಲಿ ಬೇರೆ ಬೇರೆ ಲೇಖಕರನ್ನು ಭೇಟಿ ಮಾಡಿದಾಗ ಮೊದಲು ನೀಡಿದ ನನ್ನ ಪ್ರಕಟಣೆಗಳ ಪಟ್ಟಿ ಅವರ ಮೇಲೆ ಪರಿಣಾಮ ಬೀರಿರುವುದು ಸ್ಪಷ್ಟ.

“ನಾನು ಮೇಷ್ಟರಾದ್ದರಿಂದ ಪ್ರಾಯಶಃ ಅಷ್ಟು ಬರೆಯಲು ಸಹಾಯಕವಾಯಿತು ಎಂದೆ, ನಮ್ಮ ಸಂಭಾಷಣೆಗೆ ಅವರ ಮಾತು ಚಾಲನೆಯಿತ್ತಿತ್ತು.

“ಅದು ಹೇಗೆ? ನಾನು ಜೀವನೋಪಾಯಕ್ಕಾಗಿ ಅಧಿಕಾರಿಯಾಗಿದ್ದೇನೆ, ನೀವು ಮೇಷ್ಟರಾಗಿದ್ದೀರಿ. ಬರವಣಿಗೆ ನಮ್ಮ ಆ ಕೆಲಸದ ಹೊರಗೆ ನಡೆಯುವ ಚಟುವಟಿಕೆಯಲ್ಲವೇ?”

ಆದರೂ ನಮಗೆ ಹೆಚ್ಚು ವಿರಾಮ ಸಿಕ್ಕುತ್ತದೆ, ಸರ್ಎಂದು ಮುಂದುವರೆಸಿದೆ. ಬಿಡುವಿಲ್ಲದೇ ಇದ್ದರೂ ಸದ್ಯ ಬರೆಯುವುದು ದೈಹಿಕವಾಗಿಯಾದರೂ ಅಷ್ಟೊಂದು ಶ್ರಮದಾಯಕವಾದ ಕೆಲಸವಲ್ಲದ್ದರಿಂದ ಆಡಳಿತದಲ್ಲಿ ಇರುವವರು ಪದ್ಯರಚನೆಯನ್ನು ಆರಿಸಿಕೊಳ್ಳುತ್ತಾರೇನೋ? ಎಂದೆ. ಆ ಮಾತು ಹೇಳುವಾಗ ನನ್ನ ಮನಸ್ಸಿನಲ್ಲಿ ಕಛೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಪುತಿನ, ಕೆಎಸ್ ಅವರ ನೆನಪಿತ್ತು. ಪದ್ಯರಚನೆ ಸುಲಭವೆಂದು ಛೇಡಿಸುತ್ತಿದ್ದಾನೆ ಎಂದೇನೋ ರಥ್ ಅವರು ಭಾವಿಸಿದಂತೆ ಕಾಣಲಿಲ್ಲ.

“ಇಲ್ಲವಲ್ಲ ನಮ್ಮ ಗೋಪಿನಾಥ ಮೊಹಂತಿ, ಕಾದಂಬರಿಕಾರರು, ಅವರೂ ಆಡಳಿತಾಧಿಕಾರಿಯಾಗಿದ್ದವರೇ ಎಂದರು.  ಕ್ಷಣಕ್ಕೆ ನನಗೂ ಜ್ಞಾನೋದಯವಾಗಿತ್ತು. ಮಾಸ್ತಿಯವರ ನೆನಪಾಗಿ ಅವರ ಮಾತು ನಿಜ ಅನ್ನಿಸಿತು.

ಗದ್ಯವನ್ನೇ ನೀವು ಬರೆಯುವುದಿಲ್ಲವೇ?”

ಅಷ್ಟೊಂದಿಲ್ಲ ಎಂದರು.

ಮುಂದೆ ತಮ್ಮ ಕಾವ್ಯದ ಬಗ್ಗೆ ಮಾತಾಡಿದರು. ಅವರ ಪದ್ಯಗಳನ್ನು ಓದಿರಲಿಲ್ಲ. ಅವರು ಹೇಳುವುದನ್ನು ಕೇಳುವುದಷ್ಟೆ ನನ್ನ ಕೆಲಸ. ರಮಾಕಾಂತ್ ರಫ್ ಸರಸ್ವತಿ ಸಮ್ಮಾನ್ ವಿಜೇತರು. ಪ್ರತಿಷ್ಠಾನದವರು ಪ್ರತಿವರ್ಷ ಭಾರತೀಯ ಭಾಷೆಗಳ ಅತ್ಯುತ್ತಮವೆಂದು ಪರಿಗಣಿತನಾದ ಲೇಖಕನಿಗೆ ಮೂರು ಲಕ್ಷ ರೂಪಾಯಿಗಳ ಬಹುಮಾನ ನೀಡುತ್ತಾರೆ. ಎರಡನೆಯ ವರ್ಷ ರಥ್ ಅವರ ರಾಧಾ' ಕಾವ್ಯಕ್ಕೆ ದೊರಕಿತ್ತು. ಜ್ಞಾನಪೀಠ ಪ್ರಶಸ್ತಿಗೆ ಒಂದು ರೀತಿ ಪೈಪೋಟಿಯಿಂದೆಂಬಂತೆ ಈ ಪ್ರಶಸ್ತಿ ಸ್ವಾಪನೆಗೊಂಡಂತೆ ಕಾಣುತ್ತದೆ. ಬಹುಮಾನದ ಮೊತ್ತ ಅದಕ್ಕಿಂತ ಹೆಚ್ಚಾದರೂ ಜ್ಞಾನಪೀಠ ಪ್ರಶಸ್ತಿಯೆಂದರೆ ಉಂಟಾಗುವ ತೂಕದ ಭಾವನೆ ಈ ಪ್ರಶಸ್ತಿಯ ಬಗ್ಗೆ ಬರಲು ಇನ್ನೂ ಕೆಲವು ಕಾಲವಾಗಬೇಕು. ಕನ್ನಡದ ಯಾರಿಗೂ ಸರಸ್ವತಿ ಸಮ್ಮಾನ್ ಬಂದಿಲ್ಲ. ಜ್ಞಾನಪೀಠ ಪ್ರಶಸ್ತಿಗಳೇನೋ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಕ್ಕೆ ಸಂದಿವೆ. ಅಂದ ಹಾಗೆ ಈ ವರ್ಷದ ಜ್ಞಾನಪೀಠ ಪ್ರಶಸ್ತಿ ಒರಿಯಾದ ಮತ್ತೊಬ್ಬ ಪ್ರಸಿದ್ಧ ಕವಿ ಸೀತಾಕಾಂತ ಮಹಾಪಾತ್ರರಿಗೆ ಸಿಕ್ಕಿದೆ. ಅವರೂ ಐಎಎಸ್ ಅಧಿಕಾರಿ; ಈಗ ದೆಹಲಿಯಲ್ಲಿಯೇ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಗಳಾಗಿದ್ದಾರೆ.

ರಮಾಕಾಂತ್ ರಥ್ ಅವರ 'ರಾಧಾ ಪಾರಂಪರಿಕವಾದ ರಾಧಾ-ಕೃಷ್ಣ ಪ್ರಣಯವನ್ನು ವಸ್ತುವಾಗುಳ್ಳ ದೀರ್ಘ ಕವಿತೆ. ಆದರೆ ರಾಧೆ ಕೃಷ್ಣನನ್ನು ಇಲ್ಲಿ ದೈವವೆಂದು ಪೂಜಿಸುವ ಭಕ್ತಿಯಲ್ಲ; ಸಮಾನತೆಯನ್ನು ನಿರೀಕ್ಷಿಸುವ ಸಖಿ. ಜಯದೇವನ 'ಗೀತಗೋವಿಂದ' ಗಾಳದ ನೆರೆ ರಾಜ್ಯವಾದ ಒರಿಸ್ಸಾದ ಲೇಖಕರ ಮೇಲೂ ಅಮೋಘವಾದ ಪ್ರಭಾವ ಬೀರಿದ್ದಾನೆ.

ನಾನ್ನೂರು ಸಾಲುಗಳ ಈ ಕಾವ್ಯವು ಮಹಾಕಾವ್ಯಕ್ಕಿಂತ ಬಹುದೂರಎಂದು ಕರೆದುಕೊಂಡರು. ಅವರು ಹಾಗನ್ನಲು ಕಾರಣಕನ್ನಡದಲ್ಲಿ ಆಧುನಿಕ ನಾಲ್ಕು ಮಹಾಕಾವ್ಯಗಳು ಬಂದಿವೆ. ಒರಿಯಾದಲ್ಲಿ ಇಲ್ಲವೇ?” ಎಂದು ಕೇಳಿದ್ದ ನನ್ನ ಪ್ರಶ್ನೆ. ಕನ್ನಡದಲ್ಲಿನ 'ರಾಮಾಯಣ ದರ್ಶನ' 'ಭಾರತಸಿಂಧುರಶ್ಮಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಅವರಿಗೆ ತಿಳಿದಿರಬಹುದಾದರೂ ಅವು ಮಹಾಕಾವ್ಯಗಳೆಂಬ ವಿಷಯ ಅವರಿಗೆ ಗೊತ್ತಿದ್ದಂತಿಲ್ಲ. ನೆರೆ ರಾಜ್ಯದ ಭಾಷೆಯ ಬಗ್ಗೆ ನಮಗೆ ತಿಳಿದಿರುವುದು ಬಹು ಕಡಿಮೆ: ಪಾಶ್ಚಾತ್ಯ ಲೇಖಕರ ಬಗ್ಗೆ ಸಾಕಷ್ಟು ಗೊತ್ತಿರುತ್ತದೆ ಎಂಬ ಮಾತು ಈಗಾಗಲೇ ಕ್ಲೀಷೆಯಾಗಿದೆ. ಅಥವಾ ಅನೇಕ ದೊಡ್ಡ ಲೇಖಕರು ಇತರರದನ್ನು ಓದುವುದೂ ಕಡಿಮೆ; ಇತರ ಭಾರತೀಯ ಭಾಷೆಗಳ ಲೇಖಕರ ಕೃತಿಗಳ ಭಾಷಾಂತರ ಬಹುವಾಗಿ ಬಂದಿಲ್ಲ. ಅಲ್ಲದೇ, ಎಲ್ಲ ಭಾಷೆಗಳ ಲೇಖಕರ ಧೋರಣೆಯೂ ಸ್ವಲ್ಪ ಮಟ್ಟಿಗೆ ಇದೇ ಆಗಿರುತ್ತದೆ. ನಮಗಿಂತ ಕಿರಿಯರ ಬರಹಗಳನ್ನು ಓದುವವರು ಪ್ರಾಯಶಃ ಅಪರೂಪ ಸಮಕಾಲೀನರ ಕೃತಿಗಳನ್ನು ಅನಿವಾರ್ಯವಾಗಿ ಓದಬೇಕಾಗಿ ಬಂದರೂ ಏನು ಮಹಾ ಎಂಬ ಧೋರಣೆಯಿರಬಹುದು, ಬೇರೆ ಬಣದ ಲೇಖಕರ ಕೃತಿಗಳು ಓದಲರ್ಹವಾಗಿರುವುದಿಲ್ಲ! ಬೇರೊಬ್ಬ ಲೇಖಕರೊಬ್ಬರೊಡನೆ ಮುಂದೊಂದು ಸಂದರ್ಭದಲ್ಲಿ ಮಾತನಾಡುತ್ತಿದ್ದಾಗ ರಥ್ ಅವರ ಪ್ರಸ್ತಾಪವಾಯಿತು; ಮಾತಿಗೆ ಮಾತು ಬಂದು ಅವರು ಬೇರೆಯವರದನ್ನು ಎಷ್ಟು ಓದಿಕೊಂಡಿದ್ದಾರೆ?” ಎಂದು ಉದ್ಗರಿಸಿದ್ದರು.

ಒಂದು ಭಾಷೆಯ ಸಾಹಿತ್ಯದ ಪರಿಚಯ ಉಳಿದ ಭಾಷೆಗಳವರಿಗೆ ಆಗಬೇಕಾದರೆ ಭಾಷಾಂತರಗಳು ವಿಪುಲವಾಗಿ ಆಗಬೇಕು. ಈಗ ಆಂಥ ಭಾಷಾಂತರಗಳು ಕೆಲವು ಸಾಹಿತ್ಯ ಅಕಾಡೆಮಿ, ಎನ್‌ಬಿಟಿ ಇಂತಹ ಸಂಸ್ಥೆಗಳ ಮೂಲಕ ಆಗುತ್ತಿದ್ದರೂ ಅವು ಇಂಗ್ಲಿಷ್ ಮೂಲಕವಾಗಿಯೋ ಹಿಂದಿಯ ಮೂಲಕವಾಗಿಯೋ ಬೇರೆ ಭಾರತೀಯ ಭಾಷೆಗಳಿಗೆ ಬರಬೇಕು. ಒಮ್ಮೆ ಭಾಷಾಂತರವಾಯಿತೆಂದರೆ ಅದರ ಘಾಟು ಕಡಿಮೆಯಾಗಿರುತ್ತದೆ; ಭಾಷಾಂತರದ ಭಾಷಾಂತರವೆಂದರೆ `twice removed from truth’ ಎಂಬಂತಾಗುತ್ತದೆ. ಆದ್ದರಿಂದ ಒಂದು ಭಾಷೆಯಿಂದ ನೇರವಾಗಿ ಮತ್ತೊಂದು ಭಾಷೆಗೆ ಅನುವಾದ ಮಾಡಬಲ್ಲವರನ್ನು ತಯಾರಿಸಬೇಕು ಎಂದು ನಾನು ವಾದಿಸಿದೆ. ಅನಂತಮೂರ್ತಿಯವರೂ ಒಮ್ಮೆ ಪ್ರಯಾಣ ಕಾಲದಲ್ಲಿ ಈ ಅಭಿಪ್ರಾಯವನ್ನೇ ಸೂಚಿಸಿದ್ದರು. ತಕ್ಕಮಟ್ಟಿಗೆ ಪರಿಣತ ಬರಹಗಾರನೊಬ್ಬನು ಆಸಕ್ತನಾಗಿದ್ದರೆ, ಮತ್ತೊಂದು ಭಾಷೆಯನ್ನು ಕಲಿತು ಅನುವಾದದಲ್ಲಿ ತೊಡಗಿದಾಗ ಕೊಳು-ಕೊಡುಗೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಆದರೆ ಅಂತಹ ವ್ಯಕ್ತಿ ಸಹಜವಾಗಿಯೇ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೆಲಸದಲ್ಲಿ ಮುಂದುವರೆದಿರುತ್ತಾನೆ. ಅಂಥವನನ್ನು ಮತ್ತೊಂದು ರಾಜ್ಯದ ಭಾಷೆಯನ್ನು ಕಲಿತುಕೊಳ್ಳಲು ಸಂಬಳ ಸಮೇತ ಒಂದೆರಡು ವರ್ಷ ಡೆಪ್ಯೂಟ್ ಮಾಡುವ ಯೋಜನೆಯನ್ನು ಸಾಹಿತ್ಯ ಅಕಾಡೆಮಿಯೋ ಯುಜಿಸಿಯೋ ಮಾಡಬಹುದಲ್ಲ ಎಂದು ನಾನು ವಿವರಣೆ ನೀಡಿದೆ. ಅನಂತಮೂರ್ತಿ ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು; ರಮಾಕಾಂತ ರಥ್ ಅದರ ಉಪಾಧ್ಯಕ್ಷರು. ಇಂತಹ ಯೋಜನೆಯೊಂದನ್ನು ರೂಪಿಸಬಹುದಲ್ಲ ಎಂದು ಅವರನ್ನು ಕೇಳಿದೆ.

ಆದರೆ ಅವರು ಅಂತಹುದಕ್ಕೆ ಒಪ್ಪುವ ಮನಸ್ಸಿನವರಲ್ಲ. ಮೊದಲಿನಿಂದ ಒಂದು ಭಾಷೆಯನ್ನು ಎರಡು ವರ್ಷ ಕಲಿತರೆ ಎಷ್ಟೊಂದು ಪರಿಣತಿ ಪಡೆಯಬಹುದು. ಅಲ್ಲದೇ ಭಾಷಾಂತರಕಾರರು ಎಂದೇ ಕೆಲವರನ್ನು ತಯಾರಿಸಲು ಸಾಧ್ಯವೇ? ಜೊತೆಗೆ ಒಬ್ಬ ಸೃಜನಶೀಲ ಲೇಖಕನ ಮೊದಲ ಬದ್ಧತೆ ತನ್ನ ಸ್ವಂತ ಬರವಣಿಗೆಯ ಬಗೆಗೆ. ಹಾಗಾಗಿ ಅವನು ಭಾಷಾಂತರ ಎಂದು ಕೂತರೆ ಅವನ ಬರವಣಿಗೆ ಅಷ್ಟು ಮಟ್ಟಿಗೆ ಕುಂಠಿತವಾಗುತ್ತದೆ. ಆದ್ದರಿಂದ ಸೃಜನ ಲೇಖಕನನ್ನು ಇತರ ವಾತಾವರಣಗಳಿಗೆ ಒಡ್ಡುವುದು ಹೆಚ್ಚು ಲಾಭಕರ, ಎಂದು ರಥ್ ಅಭಿಪ್ರಾಯಪಟ್ಟರು. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲೂ ಲೇಖಕರಿಗೆ ಪ್ರವಾಸ ಅನುದಾನ ನೀಡುವ ಯೋಜನೆಯಿದೆ; ಆದರೆ ಪ್ರವಾಸ ಹೋಗಿ ಬಂದ ಲೇಖಕರು ವರದಿಗಳನ್ನೇ ನೀಡುವುದಿಲ್ಲ ಎಂದು ಅಕಾಡೆಮಿಯ ಅಧಿಕಾರಿಗಳು ಗೊಣಗುತ್ತಾರೆ ಎಂದು ಹೇಳಿದರು. ಆದರೂ ಒಬ್ಬ ಲೇಖಕ ಇನ್ನೊಂದು ಸಾಹಿತ್ಯ ವಾತಾವರಣಕ್ಕೆ ತನ್ನ ಮನಸ್ಸನ್ನು ಒಡ್ಡಿಕೊಂಡರೆ ಅದರ ಪ್ರಭಾವ- ಪರಿಣಾಮ ಅವನ ಬರವಣಿಗೆಯ ಮೇಲಾಗುತ್ತದೆ. ಅಂಥ ಸಂದರ್ಭದಲ್ಲಿ ಶ್ರೇಷ್ಠವೆಂದು ತನಗೆ ಗೊತ್ತಾದುದನ್ನು ಇಷ್ಟಪಟ್ಟರೆ ಅನುವಾದಿಸಬಹುದು ಎಂದೇ ಅವರ ವಾದ.

ನೀವು ಇಂಗ್ಲಿಷಿನಲ್ಲಿ ಕವನಗಳನ್ನು ಬರೆಯಲು ಪ್ರಯತ್ನಿಸಲಿಲ್ಲವೇ?” ಎಂದು ನಾನು ಕೇಳಿದೆ. ಎ.ಕೆ. ರಾಮಾನುಜನ್ - ನೆನಪಿನಲ್ಲಿದ್ದರು. ಆದರೂ ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಲೇಖಕರು ಎಷ್ಟರಮಟ್ಟಿಗೆ ಭಾರತೀಯ ಜೀವನವನ್ನು ತಮ್ಮ ಬರಹದ ಬಿಂಬಿಸಬಲ್ಲರು ಎಂಬ ಶಂಕೆ ನನಗಿದ್ದೇ ಇದೆ. ಏಕೆಂದರೆ ಅವರು ತಲುಪುವುದು ಎಲೈಟ್ ಎನ್ನುತ್ತಾರಲ್ಲ, ಆ ಓದುಗರನ್ನು ಅವರ ಸಂವೇದನೆಗಳೂ ಅಂತಹ ಎಲೈಟ್ ಸಂವೇದನೆಗಳೇ. ಭಾರತೀಯ ಇಂಗ್ಲೀಷ್ ಲೇಖಕರು ಅಲ್ಲೂ ಸೇರದ ಎಲ್ಲೂ ಸೇರಲಿಚ್ಚಿಸದ ವ್ಯಂತರಗಳಂತೆ ಎಂದೇ ನನಗೆ ಗೋಚರಿಸುತ್ತದೆ. ರಮಾಕಾಂತರು ಏನು ಹೇಳುವರೋ ಎಂಬ ಕುತೂಹಲ ನನಗಿತ್ತು.

“ನನ್ನ ಕಮಿಟ್‌ಮೆಂಟ್ ನನ್ನ ಭಾಷೆಯ ಬಗ್ಗೆ, ಇಂಗ್ಲಿಷ್‌ನ ಬಗ್ಗೆ ನನಗೆ ಯಾವ ಕವೀಟ್‌ಮೆಂಟೂ ಇಲ್ಲ: ಅದು ನನ್ನ ಭಾಷೆಯಲ್ಲ. ಅದರಲ್ಲಿ ಬರೆಯಲು ಬೇಕಾದಷ್ಟು ಜನರಿದ್ದಾರೆ” ಎಂದರು. ಇಷ್ಟಾದರೂ ನಾವು ಇಂಗ್ಲಿಷ್ ಬಿಡಲಾರೆವು. ಅದನ್ನು ನಮ್ಮ ಸೇವಕನನ್ನಾಗಿಸಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಕು ಸಾಗಿಸುವ ಕೆಲಸ ಮಾಡಿಸಿಕೊಳ್ಳಬೇಕು; ಅಷ್ಟಕ್ಕೆ ಮಾತ್ರ ಅದಕ್ಕೆ ಪ್ರಾಧಾನ್ಯವಿರಬೇಕು ಎನ್ನಿಸಿತು.

ಈ ಮಧ್ಯೆ ಸೇವಕ ತಂದಿಟ್ಟಿದ್ದ ತಿಂಡಿ ತಿಂದಿದ್ದೆವು, ಲಸ್ಸಿ ಕುಡಿದಿದ್ದೆವು “ನೀವು?” ಎಂದಾಗ ನನ್ನದೆಲ್ಲ ಆಯಿತು ಎಂದರು ರಥ್. ಯಥಾಪ್ರಕಾರ ಫೋಟೋ ತೆಗೆದುಕೊಳ್ಳುವ ಕೆಲಸ ನಡೆಯಿತು. ತಮ್ಮ ಜಾಗದಿಂದೆದ್ದು ನಮ್ಮ ದೀರ್ಘ ಸೋಫಾಕ್ಕೆ ಬಂದು ಕೂತರು. ಅವರ ಆ ಕಡೆ ನಾವು ಕೂತೆವು. ಅಪೂರ್ವ ಕ್ಲಿಕ್ಕಿಸಿದ. ಇನ್ನು ಸಾಕು ಎಂದುಕೊಂಡು ಎದ್ದೆವು

“ಹೇಗೆ ಬಂದಿದ್ದೀರಿ?” ಎಂದು ರಮಾಕಾಂತರು ಕೇಳಿದರು.

“ರಿಕ್ಷಾದಲ್ಲಿಎಂದವು.

ಹಾಗಾದರೆ ಒಂದು ನಿಮಿಷ ತಾಳಿ, ಬಿಸಿಲು ಜೋರಾಗಿದೆ. ನಿಮ್ಮನ್ನು ಕಳಿಸುವ ವ್ಯವಸ್ಥೆ ಮಾಡುತ್ತೇನೆ'” ಎಂದು ಒಳಹೋದರು.

ಆ ದಿನ ಭಾನುವಾರವಾದದ್ದರಿಂದ ಸರ್ಕಾರದ ವಾಹನ ಚಾಲಕ ಬಂದಿರಲಿಲ್ಲ. ಬನ್ನಿ ನಾನೇ ಬಿಟ್ಟು ಬರುತ್ತೇನೆ'” ಎಂದು ತಮ್ಮ ಮಾರುತಿ ಕಾರಿದ್ದ ಪೋರ್ಟಿಕೋ ಕಡೆ ನಡೆದರು. 'ಪರವಾಯಿಲ್ಲ ಸಾರ್, ನಾವು ಹೋಗುತ್ತೇವೆ' ಎಂದರೂ ಕೇಳಲಿಲ್ಲ. ನನ್ನ ಹೆಂಡತಿಯ ಮೈ ಸರಿಯಾಗಿಲ್ಲ. ಏನೋ ಒಂದು ಆಪರೇಷನ್ ಆಗಿದೆ, ಹೀಗಾಗಿ ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಲಾಗಲಿಲ್ಲ, ಕ್ಷಮಿಸಿ” ಎಂದರು ಕಾರಿನ ಡ್ರೈವರ್ ಸೀಟಲ್ಲಿ ತಾವೇ ಕೂಡುತ್ತ. ನಾವು ಕಾರು ಏರಿದವು. ಸೇವಕನಿಗೆ ಏನೋ ಸೂಚನೆಯಿತ್ತು ಕಾರ್ ಮುನ್ನಡೆಸಿದರು.

ದಾರಿಯಲ್ಲಿ ಅದೂ ಇದೂ ಮಾತು. ಒಂದಷ್ಟು ರಾಜಕೀಯದ ಪ್ರಸ್ತಾಪ, ರಾಜಕಾರಣಿಗಳು, ಸಿನಿಮಾ ನಟರು ಮಾತಿಗೆ ವಸ್ತುವಾದರು. ನಟರ ದೇವಸ್ಥಾನಗಳು ನಿರ್ಮಾಣವಾಗುವ ಬಗ್ಗೆ ಮಾತು. ಹೀಗೆ ನಡೆದುಕೊಳ್ಳುವ, ಯೋಚಿಸುವ ಜನರನ್ನು ನಾವು ತಲುಪಲು ಸಾಧ್ಯವೇ; ನಾವೇಕೆ ಬರೆಯಬೇಕು, ಯಾರಿಗಾಗಿ ಬರೆಯಬೇಕುಎಂದು ಬೇಸರ ವ್ಯಕ್ತಪಡಿಸಿದರು. ಇಂಥದಕ್ಕೆ ಉತ್ತರವೆಲ್ಲಿದೆ? ನಾವು ಅಂಥವರನ್ನು ತಲುಪುತ್ತೇವೆ, ಇಂಥವರನ್ನು ತಿದ್ದುತ್ತೇವೆ ಎಂಬ ಮಾತು ಎಷ್ಟು ಸರಿ. ಮೊದಲೇ ನಮ್ಮ ದೇಶದ ಅಕ್ಷರಸ್ಥರ ಪ್ರಮಾಣ ತಪ್ಪಾಗಿ ರುಜು ಮಾಡುವವರನ್ನೂ ಸೇರಿಸಿಕೊಂಡಂತೆ, ಶೇಕಡಾ ಐವತ್ತು. ಅವರಲ್ಲಿ ಓದುವ ಹವ್ಯಾಸ, ಸಾಹಿತ್ಯಾಸಕ್ತಿ ಎಷ್ಟು ಮಂದಿಗಿದೆ? ಅವರಲ್ಲಿಯೂ ಬರವಣಿಗೆಯನ್ನು ಗಂಭೀರವಾಗಿ ಅಭ್ಯಾಸ ಮಾಡುವವರೆಷ್ಟು, ಅದೂ ಕಾವ್ಯ ಓದುವರೆಷ್ಟು? ಅಂಥವರೂ ಸಾಕಷ್ಟು ಮೇಲು ಟ್ಟದವರೇ? ಅವರ ಮೇಲೆ ಪ್ರಭಾವ ಬೀರಬೇಕೆ? ಹೀಗಾಗಿ ಸಾಹಿತ್ಯ ಜನಜೀವನದ ಮೇಲೆ ಬೀರುವ ರಿಣಾಮದ ಚಿರಂತನ ಪ್ರಶ್ನೆ ಹಾಗೆಯೇ ಬಗೆಹರಿಯದೆ ಉಳಿದು ಬಿಡುತ್ತದೆ. ಬರೆಯುವವನು ತನ್ನ ಒಳಗಿನ ಒತ್ತಡದ ಕಾರಣದಿಂದ ಬರೆಯುತ್ತಾನೆ; ಅದರ ಪರಿಣಾಮಕಾರಕತೆಯ ಬಗ್ಗೆ ಯಾವುದೇ ಭ್ರಮೆಗಳನ್ನಿರಿಸಿಕೊಳ್ಳದಿರುವುದೇ ಸರಿಯಾದ ಧೋರಣೆ.

ನಾವಿಳಿದುಕೊಂಡಿದ್ದ ರೂಮಿನವರೆಗೂ ಬರಲಿಲ್ಲ. ಹತ್ತಿರದ ಒಂದು ವೃತ್ತದಲ್ಲಿಯೇ ಇಳಿಯುತ್ತೇವೆಂದು ಹೇಳಿದವು. ರಮಾಕಾಂತ್ ರಥ್ ಕಾರು ನಿಲ್ಲಿಸಿದರು. ನಾವು ಇಳಿದು ಥ್ಯಾಂಕ್ಸ್ ಅರ್ಪಿಸಿದಾಗ ಅವರು ವಾಹನವನ್ನು ಮನೆಯ ದಿಕ್ಕಿಗೆ ತಿರುಗಿಸಿದರು. ನಾವು ಏನೋ ಕೊಂಡುಕೊಳ್ಳಬೇಕಾಗಿತ್ತು. ಬೆಳಿಗ್ಗೆ ಹೋಟಲಲ್ಲಿ ತಿಂದಿದ್ದ ತಿಂಡಿ, ರಥ್ ಅವರ ಮನೆಯ ತಿಂಡಿ ಎರಡೂ ಹೊಟ್ಟೆಯಲ್ಲಿ ಗಡದ್ದಾಗಿ ಕೂತಿತ್ತು. ಆದ್ದರಿಂದ ಊಟದ ಆತುರವಿಲ್ಲ. ಬೇಕಾದದ್ದನ್ನು ಕೊಂಡು ರೂಮಿಗೆ ಹೋಗಿ ತಣ್ಣೀರು ಮೈಮೇಲೆ ಸುರಿದುಕೊಂಡಾಗ ಮತ್ತೆ ಚೈತನ್ಯ ಮರಳಬಹುದು. ತಣ್ಣೀರಿನ ನೆನಪೂ ನಮ್ಮಲ್ಲಿ ತುಸು ಚೈತನ್ಯ ತುಂಬಿದಂತಾಗಿ ಕಾಲುಗಳು ಕ್ರಿಯಾಶೀಲವಾದವು.

****

ದೈತ್ಯನಗರಿಯ ಬಸುರಲ್ಲಿ

ಇಷ್ಟು ದೂರ ಬಂದ ಮೇಲೆ ಕಲ್ಕತ್ತೆಗೆ ಭೇಟಿ ಕೊಡದಿದ್ದರೆ ಹೇಗೆ ಎಂದುಕೊಂಡು ಅಲ್ಲಿಗೆ ಹೋಗಲು ನಿರ್ಧರಿಸಿದೆವು. ಭುವನೇಶ್ವರದಿಂದ ಕಲ್ಕತ್ತೆಗೆ ಒಂದು ರಾತ್ರಿಯ ಪ್ರಯಾಣ. ಹಾಗಾಗಿ ಒಂದು ರಾತ್ರಿ ಹೊರಟು ಮಾರನೆಯ ರಾತ್ರಿ ಅಲ್ಲಿಂದ ಹೊರಟು ಮರಳಿ ಬರುವುದೆಂದು ತೀರ್ಮಾನಿಸಿ ಹೋಗಿ ವಾಪಸಾಗಲು ಟಿಕೆಟ್ ಬುಕ್ ಮಾಡಿಸಿದೆವು. ಹೋಗುವಾಗ ವೆಯ್ಟಿಂಗ್ ಲಿಸ್ಟ್ ಎನಿಸಿದರೂ ಹೇಗೋ ಹೊಂದಿಕೊಂಡು ಹೋದೆವು, ಕಲ್ಕತ್ತೆ ಎಂದರೆ ಮಾರಿನಗರ. ಪಂಡ ಶಾಂತಿಕೇತನದಲ್ಲಿಯೇ ಓದಿದವರು; ಆ ನಗರದ ಪರಿಚಯ ಻ಅವರಿಗೆ ಚೆನ್ನಾಗಿದೆ. “ನೀವು ಮೊದಲ ಬಾರಿಗೆ ಅಲ್ಲಿಗೆ ಹೋಗುತ್ತಿದ್ದೀರಿ. ಹುಷಾರಾಗಿರಿ” ಎಂದರು. ಅಲ್ಲಿ ಪಿಕ್‍ಪಾಕೆಟ್‍ಗಳ ಹಾವಳಿ ಜಾಸ್ತಿ, ಹಣದ ಬಗ್ಗೆ ಎಚ್ಚರ” ಎಂದು ಹೆದರಿಸಿದ್ದರು. ಅಲ್ಲಿನ ಪಿಕ್‍ಪಾಕೆಟ್‍ಗಳ ರೀತಿಯ ಬಗ್ಗೆ ಒಂದು ಕತೆ ಹೇಳಿದ್ದರು. ಒಮ್ಮೆ ಬೊಂಬಾಯಿನ ಪಳಗಿದ ಜೇಬುಗಳ್ಳನೊಬ್ಬ ತನ್ನ ವಿದ್ಯೆಗೆ ಸಮಾನವಾದ ರಿಣತಿ ಡೆದವನು ಕಲ್ಕತ್ತದಲ್ಲಿ ಸಿಕ್ಕಿಯಾನೆ; ಅಲ್ಲಿನ ಜೇಬುಗಳ್ಳತನದ ಬಗ್ಗೆ ಬರೀ ದಂತೆಗಳು ಮಾತ್ರ ದು ತಾತ್ಸಾರದಿಂದ ಪರೀಕ್ಷಿಸಲು ಹೋದನಂತೆ. ಅವನು ಬೇಕೆಂದೇ ತನ್ನ ಪ್ಯಾಂಟಿನ ಒಳಜೇಬಲ್ಲಿ ಐನೂರು ರೂಪಾಯಿಯ ಒಂದು ಖೋಟಾ ನೋಟನ್ನಿರಿಸಿಕೊಂಡ. ಎರಡು ದಿನ ಕಲ್ಕತ್ತೆಯಲ್ಲಿರುವುದು, ಪೂರ್ತಿ ಬಸ್ಸು ಟ್ರಾಂಗಳಲ್ಲಿ ಓಡಾಡುವುದು ಯಾರಾದರೂ ಭೂಪರು ತನ್ನ ಜೇಬಿನಲ್ಲಿನ ನೋಟನ್ನು ಕದಿಯುತ್ತಾರೆಯೇ ಎಂದು ಪರೀಕ್ಷಿಸುವುದು ಅವನ ಉದ್ದೇಶ. ಸರಿ, ಹೊರಟ, ಬಂದು ಒದೆಡೆಗಿದ. ಮೊದಲ ದಿನವೆಲ್ಲ ಓಡಾಡಿದ; ತನ್ನ ಜೇಬಿನ ನೋಟು ಹಾಗೆಯೇ ಇತ್ತು. ಈ ಮಧ್ಯೆ ಕಲ್ಕತ್ತೆಯಲ್ಲಿನ ವಿದ್ಯಾಪರಿಣತನೊಬ್ಬನ ಪರಿಚಯವಾಯಿತು. ಅವನ ಜತೆಯಲ್ಲಿ ಹನ್ನೆರಡು ವರ್ಷದ ಮಗನೊಬ್ಬನೂ ಇದನ್ನು ಅನುಸರಿಸುತ್ತಿದ್ದವನು. ತನ್ನ ಉದ್ದೇಶವನ್ನು ಆವರಿಗೂ ವಿವರಿಸಿದ. ಎರಡನೆಯ ದಿನವೂ ಅವನು ಓಡಾಡಿ. ಸಾಯಂಕಾಲವಾದರೂ, ಬಸ್ಸು, ಟ್ರಾಂಗಳಲ್ಲಿ ಜನಸಂದಣಿಯ ವೇಳೆ ಮುಗಿದಿದ್ದರೂ, ಪ್ಯಾಂಟಿನ ಜೇಬಿನಲ್ಲಿರಿಸಿಕೊಂಡಿದ್ದ ನೋಟು ಮಾತ್ರ ಹಾಗೆಯೇ ಇದೆ! ಸರಿ, ಊರು ನುರಿತ ಜೇಬುಗಳ್ಳರ ತವರು ಎಂಬುದು ಬರೀ ಬಡಾಯಿ, ತನ್ನಂತಹವರು ಇರುವ ಬೊಂಬಾಯಿಗೆ ಈ ಬಿರುದು ಸಲ್ಲಬೇಕು ಎಂದು ಅವನು ಬೀಗಿದ. ರೀಕ್ಷಿಸಿದ್ದಾಯಿತಲ್ಲ, ತನ್ನ ಪ್ರೀತಿಯ ಬೊಂಬಾಯಿಗೆ ಮರಳಬೇಕೆಂದು ಅವನು ನಿರ್ಧರಿಸಿದ. ಹೊರಡುವಾಗ ಕಲ್ಕತ್ತೆಯ ತನ್ನ ಕಸಬುದಾನಿಗೆ ವಿಷಯ ತಿಳಿಸಿದ.  ತಮ್ಮ ಊರೇ ಜೇಬುಗಳ್ಳರ ಸ್ವರ್ಗ ಎಂಬ ಬಿರುದಿಗೆ ಲಾಯಕ್ಕು ಎಂದು ಹೇಳಿ ಬೀಗಿದ. ಆತನನ್ನು ಬೀಳ್ಕೊಡಲು ಕಲ್ಕತ್ತದ ಕಸಬುದಾರನ ಮಗನೂ ಬಂದಿದ್ದ. ಅವನು ಈಗ ಬಾಯಿಬಿಟ್ಟ: “ನಾನೇ ನಿಮ್ಮ ಜೇಬಿನ ನೋಟನ್ನು ಎರಡು ಸಲ ಹಾರಿಸಿದ್ದೆ;  ಆದು ಖೋಟ ಎಂದು ಗೊತ್ತಾದದ್ದರಿಂದ ಮತ್ತೆ ಜೇಬಿನಲ್ಲೇ ಇರಿಸಿದೆ!”

ನಮಗೆ ಎದೆಯಲ್ಲಿ ಸ್ವಲ್ಪ ಗಾಬರಿಯೇ. ಆದಷ್ಟು ಕಡಿಮೆ ಸಾಮಾನು, ಹೆಚ್ಚು ಎಚ್ಚರ ನಮ್ಮ ಧ್ಯೇಯಯವಾಯಿತು. ಅಲ್ಲಿ ಕಾಣಲು ಒಂದಿಬ್ಬರ ವಿಳಾಸಗಳನ್ನು ಕೊಟ್ಟಿದ್ದರು - ಪಂಡ ಮತ್ತು ಒರಿಸ್ಸಾ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಇಂದುಭೂಷಣ ಕರ್. ಅಲ್ಲಿ ಆಡ್ರಸ್ ಹುಡುಕುವುದು ಕಷ್ಟ, ಒಂದೇ ರಸ್ತೆಗೆ ಮೂರು ಹೆಸರುಗಳಿರುತ್ತವೆ, ಎಷ್ಟೋ ಸಲ; ಅಂತೆಯೇ  ವಿಳಾಸ ಇರಿಸಿಕೊಂಡು ಹುಡುಕ ಹೊರಟರೆ ಬೇಕಾದ ವಿಳಾಸದ ಸುತ್ತೂ ಸುತ್ತುತ್ತಿರುತ್ತೀರಿ. ಆದರೆ ತ್ತೆ ಹಚ್ಚಲಾಗುವುದಿಲ್ಲ ಎಂದಿದ್ದರು. ತಾವು ಇತ್ತಿದ್ದ ಅಡ್ರೆಸ್‌ಗಳನ್ನು ತಲುಪುವುದು ಹೇಗೆ, ಎಲ್ಲಿಂದ ವಾಹನದಲ್ಲಿ ಹೊರಟು, ಇಳಿಯಬೇಕು, ವಿಳಾಸ ವಿಚಾರಿಸುವಾಗ ಏನೆಂದು ಕೇಳಬೇಕು ಎಂದೆಲ್ಲ ತಯಾರಿ ನೀಡಿದ್ದರು.

ಆ ಭಾಗದಲ್ಲಿ ಬೆಳಗು ಬೇಗ ಆಗಿಬಿಡುತ್ತದಲ್ಲ; ಬೆಗಾದ ಮೇಲೆ ಸುಮಾರು ಹೊತ್ತು ರೈಲು ಓಡುತ್ತಲೇ ಇತ್ತು. ಹಿಂದಿನ ರಾತ್ರಿ ಮಳೆ ಬಂದ ಹಾಗಿತ್ತು. ವಾತಾವರಣ ಸ್ವಲ್ಪ ತಂಪು; ಆ ಕಡೆ ಈ ಕಡೆಗಳಲ್ಲಿಣ್ಣು ಓಡುವಷ್ಟೂ ಒತ್ತದ ಗದ್ದೆಗಳು, ಸಮೃದ್ಧಿಯ ಹಸಿರು. ಸುಮಾರು ಎಂಟು ಗಂಟೆಯ ಹೊತ್ತಿಗೆ ಹೌರಾ ತಲಪುವುದೆಂದು ತಿಳಿಯಿತು. ಮುಖ ತೊಳೆದು ರೈಲುವೆ ಸ್ಟೇಷನ್ನಿನಲ್ಲಿ ಸಿಕ್ಕಿ ಟೀ ಕುಡಿದೆವು, ಮಣ್ಣಿನ ಬಟ್ಟಲಲ್ಲಿ ಹಾಕಿಕೊಟ್ಟ ಟೀ, ನಾವು ಬಂಗಾಳಿ ಮಾತನಾಡುತ್ತಿರಲಿಲ್ಲವಾದ ಕಾರಣ ನಮ್ಮಿಂದ ಒಂದೂವರೆ ರೂಪಾಯಿ ಪಡೆದ ಒಂದು ಟೀಗೆ. ಇಸ್ರೇಲ್‍ನಿಂದ ಇಬ್ಬರು ಯುವತಿಯರು ಬಂದಿದ್ದರು. ಅವರಿಂದ ಟೀಯೊಂದಕ್ಕೆ ಎರಡು ರೂಪಾಯಿನಂತೆ ಹಣ ಪಡೆದು ಚಿಲ್ಲರೆಯಿತ್ತ. ಇದನ್ನು ಗಮನಿಸುತ್ತಿದ್ದ ಸ್ಥಳೀಯರೊಬ್ಬರು ಗಲಾಟೆ ಮಾಡಿದರು; ಟೀ ವ್ಯಾಪಾರಿ ಹೆಚ್ಚಿಗೆ ಪಡೆದ ಹಣವನ್ನು ವಾಪಸ್ಸು ಕೊಟ್ಟ, ತೆಪ್ಪಗೆ! ಒಂದು ಟೀಗೆ ಒಂದು ರೂಪಾಯಿ. ಈ ಗಲಾಟೆಯಾದ ಮೇಲೆ ಕೆಲಸವೇನು, ಕಣ್ಣುಗಳು ಮತ್ತೆ ಮುಚ್ಚಿಕೊಂಡವು.

ಬೆಳಗಿನ ಎಂಟೂಕಾಲು ಗಂಟೆಯ ಹೊತ್ತಿಗೆ ರೈಲು ಹೌರಾ ನಿಲ್ದಾಣ ತಲುಪಿತು. ನಾವು ಇಳಿದು ನಿಲ್ದಾಣದಿಂದ ಹೊರಬಂದವು. ಅದು ಹೊಸ ನಿಲ್ದಾಣ. ಪಕ್ಕದಲ್ಲಿಯೇ ಹಳೆಯ ನಿಲ್ದಾಣವಿದೆ. ನಿಲ್ದಾಣಗಳ ಎದುರು ಅಗಲವಾದ ಹೂಗ್ಲಿ ನದಿ ಕಾಣುತ್ತದೆ. ಆಚೆಗಿರುವುದು ಕಲ್ಕತ್ತೆ, ನದಿಯ ಈ ಬದಿಯಿರುವುದು ಹೌರಾ ನಗರ, ಹಿಂದಿನ ದಿನ ಮಳೆಯಾಗಿತ್ತು. ನಿಲ್ದಾಣದ ಹೊರಗೆ ಬಂದಾಗ ರಸ್ತೆಗಳಲ್ಲಿ ನಿಂತಿದ್ದ ನೀರು ಅದಕ್ಕೆ ಸಾಕ್ಷಿಯಾಗಿತ್ತು. ಆ ಜನಸಂದಣಿಗೆ ಕಿರಿದೆನಿಸುವ ರಸ್ತೆಗಳು, ನೀರು, ವಾಹನಗಳ ಓಡಾಟ. ಕಲ್ಕತ್ತೆಯ ಬಗೆಗಿನ ಭಯ ಸ್ವಲ್ಪ ಇಣುಕು ನೋಡಿತು. ಆದರೇನು ಬಂದು ಆಯಿತಲ್ಲ, ಉಳಿದುಕೊಳ್ಳಲು ಎಲ್ಲಾದರೂ ಹೋಟಲು ಹುಡುಕಬೇಕು. ನಿಲ್ದಾಣದ ಪಕ್ಕದಲ್ಲಿ ಒಂದೆರಡು ರಸ್ತೆ ದಾಟಿದರೆ, ಹೂಗ್ಲಿಗೆ ಅಡ್ಡಲಾಗಿ ಹಾಕಿರುವ ರಬೀಂದ್ರ ಸೇತುವಿನ ನೇರಕ್ಕೆ ಸಾಲಾಗಿ ಅನೇಕ ಅಂತಸ್ತುಗಳ ಲಾಜಿಂಗ್‌ಗಳ ಬೋರ್ಡುಗಳು ಕಾಣಿಸಿದವು. ನಾವು ಕಳೆಯಬೇಕಾಗಿದ್ದುದು ಅದೊಂದೇ ರಾತ್ರಿ. ಮಾರನೆಯ ರಾತ್ರಿ ಮತ್ತೆ ರೈಲು ಪ್ರಯಾಣವಲ್ಲವೇ? ಹಾಗಾಗಿ ಯಾವುದೋ ಒಂದು ಜಾಗವಾದರೆ ಸಾಕೆಂದು, ರೈಲು ನಿಲ್ದಾಣಕ್ಕೆ ಹತ್ತಿರವಿರಲೆಂದು, ಅಲ್ಲಿಯೇ ಉಳಿಯಲು ನಿರ್ಧರಿಸಿದವು. ಒಂದೆರಡು ಕಡೆ ವಿಚಾರಿಸಿದ ಮೇಲೆ, ಪಕ್ಕದ ಅಡ್ಡರಸ್ತೆಯೊಂದರ ಕೊನೆಯಲ್ಲಿ ಹೋಟೆಲ್ ಮೇಘದೂತದಲ್ಲಿ ರೂಂ ದೊರಕಿತು. ನಾಲ್ಕನೆಯ ಮಹಡಿ; ಲಿಫ್ಟ್ ಇರುವುದರಿಂದ ಪರವಾಯಿಲ್ಲ. ಕೌಂಟರಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದವಳು ನಡುವಯಸ್ಸಿನ ಲಕ್ಷಣವಾದ ಹೆಂಗಸು. ಅಲ್ಲಿನ ಸೇವಕರು, ಇತರ ನೌಕರರನ್ನು ಇದ್ದೆಡೆಯಿಂದಲೇ ನಿಯಂತ್ರಿಸಬಲ್ಲ ಗಟ್ಟಿಗಿತ್ತಿ ಆಕೆಯೆಂಬುದು ಎರಡೇ ನಿಮಿಷದಲ್ಲಿ ಗೊತ್ತಾಯಿತು.

ಹಣ ತತ್ತು ನಾಲ್ಕನೇ ಮಹಡಿಗೆ ಬಂದವು. ಆಗಲೇ ಎಂದಂತೆ ಎಂಥದೋ ರೂಮು. ಆದರೆ ತೀರ ಕೆಟ್ಟದಾಗೇನೂ ಇರಲಿಲ್ಲ. ಒಂದು ರಾತ್ರಿ ಕಳೆಯಲು ಬೇಕಾದಷ್ಟು ಸಾಮಾನುಗಳನ್ನೊಗೆದು ಪ್ರಾತರ್ವಿಧಿಗಳನ್ನು ಮುಗಿಸತೊಡಗಿದವು. ಹೇಗೂ ರೈಲಲ್ಲಿ ಸುಮಾರಾಗಿ ನಿದ್ರಿಸಿದ್ದರಿಂದ ನಿದ್ದೆಯ ಅವಶ್ಯಕತೆಯಿರಲಿಲ್ಲ. ಸ್ನಾನ ಮುಗಿಸಿ ಕೆಳಗೆ ಹೊಗಿ, ತಿಂಡಿ ತಿಂದು, ಮೊದಲು ಮಾಡಬೇಕಾಗಿದ್ದ ಕೆಲಸ ಮಾರನೆಯ ದಿನ ಕಲ್ಕತ್ತ ನಗರ ವೀಕ್ಷಣೆಗೆ ಬಸ್ ಸೀಟುಗಳನ್ನು ಬುಕ್ ಮಾಡಿಸುವುದು, ಆಮೇಲೆ ಸಾಹಿತ್ಯಭಾರತಿ' ಎಂಬ ವ್ಯಕ್ತಿಯೊಬ್ಬರನ್ನು (ಇಂದೂಭೂಷಣ್‌ ಕರ್ ತಮ್ಮ ಸ್ನೇಹಿತರೆಂದು ಭೇಟಿ ಮಾಡಲು ಹೇಳಿದ್ದ ವ್ಯಕ್ತಿ) ಭೇಟಿ ಮಾಡಲು ಪ್ರಯತ್ನಿಸುವುದು. ಹಾಗೆಯೇ ನರೇಂದ್ರನಾಥ್ ಚಕ್ರವರ್ತಿ ಎಂಬ ಬಂಗಾಳಿ ಕವಿಯೊಬ್ಬರನ್ನು ಭೇಟಿ ಮಾಡುವುದು: ಉಳಿದಂತೆ ಬೇಕಾದಂತೆ ಓಡಾಡುವುದು, ಕಲ್ಕತ್ತೆಯ ಪರಿಚಯ ಮಾಡಿಕೊಳ್ಳುವುದು.

ಸ್ನಾನ ಮುಗಿಸಿ ಹೋಟಲಿನ ನೆಲ ಅಂತಸ್ತಿನಲ್ಲಿದ್ದ ರೆಸ್ಟೋರಂಟಿನಲ್ಲಿ ಅರ್ಧಗಂಟೆ ಕಾದಿದ್ದು, ಸುಮಾರಾದ ಪೂರಿಗಳು, ಗಬ್ಬು ಕಾಫಿ ಸೇವಿಸಿ ಒಂದಕ್ಕೆ ನಾಲ್ಕು ಬೆಲೆ ತೆತ್ತು ಡಾಲ್‌ಹೌಸಿ ಸ್ಕ್ವೇರ್ ತಲುಪಲು ಹೊರಟೆವು. ರೈಲು ನಿಲ್ದಾಣದ ಬಳಿಯೇ ಎಲ್ಲೆಡೆಗೆ ಬಸ್‌ಗಳು ದೊರೆಯುತ್ತವೆ. ಕಲ್ಕತ್ತದಲ್ಲಿ ಹಳೆಯ ಟ್ರಾಂಗಳಿವೆ, ಸರ್ಕಾರಿ ಬಸ್ಸುಗಳಿವೆ; ಈಗ ಮೆಟ್ರೋ ಬಂದಿದೆ. ಇದರ ಜೊತೆಗೆ ನಾನಾ ಕಂಪನಿಗಳು ಓಡಿಸುವ ನೂರಾರು ಖಾಸಗೀ ಬಸ್ಸುಗಳು. ಎಲ್ಲದರಲ್ಲೂ ಜನಸಂದಣಿ. ಜೊತೆಗೆ ಅದು ಕೆಲಸದ ದಿನ: ನಾವು ಹೊರಟಿರುವುದು ಆಫೀಸಿನ ಹೊತ್ತು, ಕೇಳಬೇಕೇ ಜನ-ಜನ-ಜನ. ಆದರೂ ಅನುಭವಕ್ಕೆಂದೇ ಅಲ್ಲವೇ ಈ ನಗರಕ್ಕೆ ಬಂದಿರುವುದು. ವಿಚಾರಿಸಿಕೊಂಡು ಒಂದು ಬಸ್ ಹತ್ತಿದೆವು. ಡೌಲ್‌ಹೌಸಿ ಚೌಕಕ್ಕೆ ಟಿಕೆಟ್ ದರ ಕಡಿಮೆಯೇ. ಆದರೆ ಆ ಸೆಕೆ, ಆ ನೂಕಾಟಕ್ಕೆ ಅದು ದುಬಾರಿಯೇ! ಬಸ್ ಓಡುತ್ತಿದ್ದರೆ, ರಸ್ತೆ ಮಧ್ಯದಲ್ಲೂ ವಾಹನಗಳ ಸಾಲಿನ ನಡುವೆಯೂ ಹತ್ತಿಕೊಳ್ಳುವ ಧೀರರು ಇಲ್ಲಿಯ ಜನ. ಮಹಿಳೆಯರೂ ವೀರಮಾತೆಯರೇ! ಜೋರಾಗಿ ಬಸ್ ಹೋಗಲು ಅವಕಾಶವೇ ಇಲ್ಲ. ಅಷ್ಟು ವಾಹನ ಸಂಚಾರ. ಎಲ್ಲಿ ಏನಾಗುವುದೋ ಎಂಬ ಆತಂಕ ನಮ್ಮಂತಹ ಹೊಸಬರಿಗೆ, ಅಲ್ಲಿನ ಜನ ಅದಕ್ಕೆ ಒಗ್ಗಿಬಿಟ್ಟಿದ್ದಾರಲ್ಲ.

ಯಾರೋ ಡಾಲ್‍ಹೌಸಿ ಎಂದರು. ಲಗುಬಗೆಯಿಂದ ಅಭಿಮನ್ಯುಗಳ ಹಾಗೆ ವ್ಯೂಹ ಭೇದಿಸಿಕೊಂಡು ಬಸ್ಸಿನಿಂದ ಹೊರಬಂದೆವು. ಯಾರುಯಾರನ್ನೋ ಕೇಳಿಕೊಂಡು ಪಶ್ಚಿಮ ಬಂಗಾಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಬಂದೆವು. ನಮ್ಮ ಪುಣ್ಯಕ್ಕೆ ಮಾರನೆಯ ದಿನದ ನಗರವೀಕ್ಷಣೆಗೆ ಬೆಳಿಗ್ಗೆ ಏಳೂವರೆಯಿಂದ ಆರಂಭವಾಗುವ ಟ್ರಿಪ್ಪಿನಲ್ಲಿ ಸೀಟುಗಳು ದೊರಕಿದವು.

‘ಸಾಹಿತ್ಯ ಭಾರತಿ’ ಎಂಥ ಹೆಸರು ಇದು; ಪ್ರಾಯಶಃ ಕಾವ್ಯನಾಮವಿರಬೇಕು ಅವರ ವಿಳಾಸ ಪತ್ತೆ ಮಾಡುವ ನೆಪದಲ್ಲಿ ಕಲ್ಕತ್ತೆಯ ಪರಿಚಯ ಮಾಡಿಕೊಳ್ಳುವ ಉದ್ದೇಶ ನಮ್ಮದು. ಪಂಡ ಅವರು ಸೂಚನೆ ಕೊಟ್ಟಂತೆ, ಡಾಲ್‍ಹೌಸಿ ಚೌಕಕ್ಕೆ ಸನಿಹದಲ್ಲಿರುವ ಎಸ್‍ಪ್ಲನೇಡ್‍ನಿಂದ ಮೆಟ್ರೋದಲ್ಲಿ ಹೋಗಿ ಕಾಳಿಘಟ್ಟದಲ್ಲಿ ಇಳಿಯುವುದು; ಅಲ್ಲಿಯೇ ಹತ್ತಿರ  ವಿಳಾಸ. ಸರಿ, ಹೊರಟೆವು. ನಾವು ಹೋದಾಗ ಕನಿಷ್ಠ ಪಕ್ಷ ಮೆಟ್ರೋ ಆರಾಮವೆನ್ನಿಸಿತು. ನೆಲದಡಿಯಲ್ಲಿ ಓಡುವ ವೇಗದ ರೈಲುಗಳು, ರೈಲು ನಿಲ್ಲುವ ಪ್ರತಿ ಸ್ಟೇಷನ್ ಹತ್ತಿರ ಬಂದಾಗ ಧ್ವನಿವರ್ಧಕದ ಮೂಲಕ ಮುಂದಿನ ನಿಲ್ದಾಣದ ಹೆಸರಿನ ಪ್ರಸಾರ. ರೈಲು ಡಬ್ಬಿಯ ಅಂಚುಗಳಲ್ಲಿ ನಿಂತಾಗ ತಾವೇ ತೆರೆದುಕೊಳ್ಳುವ ಬಾಗಿಲುಗಳು; ನಿಗದಿತ ಕಾಲಾನಂತರ, ‘ಬಾಗಿಲುಗಳು ತಾವಾಗಿ ಮುಚ್ಚಿಕೊಳ್ಳುತ್ತವೆ ಎಂದು ಎಚ್ಚರಿಸುವ ಧ್ವನಿವರ್ಧಕ. ಬಾಗಿಲು ಹಾಕಿಕೊಂಡ ಕ್ಷಣದಲ್ಲಿಯೇ ವೇಗವಾಗಿ ಕತ್ತಲನ್ನು ಸೀಳಿಕೊಂಡು ಮುನ್ನುಗ್ಗುವ ರೈಲು, ರೈಲು ಡಬ್ಬಿಯ ಅಂಚುಗಳಲ್ಲಿ ಕುಳಿತುಕೊಳ್ಳಲು ಸೀಟುಗಳಿದ್ದರೂ,ರ ನಾಲ್ಕಾರು ಪಟ್ಟು ಸಂಖ್ಯೆಯ ಜನರು ನಿಲ್ಲಲು ಅನುಕೂಲವಾಗುವಂತೆ ಹಿಡಿದುಕೊಳ್ಳುವ ಸರಳುಗಳು. ಡಬ್ಬಿಯ ತುಂಬೆಲ್ಲ ಹರಡಿವ ದೀಪ; ಡಬ್ಬಿಯ ಗೋಡೆಯ ಮೇಲುಭಾಗದಲ್ಲಿ ರೈಲು ಹೋಗುವ ಮಾರ್ಗದ ವಿವರಣೆ; ನಿಲ್ದಾಣ ಯಾವ ಕಡೆಗಿದೆ ಎಂಬ ನಕ್ಷೆ, ಒಂದು ನಿಲ್ದಾಣ ಹೋಗುವ ದಿಕ್ಕಿನ ಎಡಕ್ಕೆ ಬಂದರೆ, ಮುಂದಿನದು ಬಲಕ್ಕೆ; ಹಾಗೆ ಪರ್ಯಾಯ ಬದಿಗಳಲ್ಲಿ ನಿರ್ಮಿತವಾದ ನೆಲದೊಳಗಿನ ರೈಲು ವ್ಯವಸ್ಥೆ. ದೂರವನ್ನು ಅನುಸರಿಸಿದವುಗಳು. ಎಸ್‌ಪ್ಲನೇಡ್ ಮೆಟ್ರೋ ನಿಲ್ಮಾಣದಲ್ಲಿ ಟಿಕೇಟುಕೊಂಡು ಒಳಗೆ ಹೋಗುವಾಗ ಅಡ್ಡಲಾಗಿ ನಿಯಂತ್ರಕಗಳು. ನಮ್ಮ ಟಿಕೇಟನ್ನು ಯಂತ್ರದ ಬಾಯೊಂದರಲ್ಲಿ ಹಾಕಿದಾಗ ಯಂತ್ರ ಅಡ್ಡವನ್ನು ತೆಗೆದು ಮಾಡಿಕೊಡುತ್ತದೆ; ಬಾಯಿಗೆ ಹಾಕಿದ್ದ ಟಿಕೇಟು ಮತ್ತೊಂದೆಡೆ ಬಂದು ನಮ್ಮ ಕೈಸೇರುತ್ತದೆ. ಇಷ್ಟಾದರೂ ಉಸ್ತುವಾರಿ ಸಿಬ್ಬಂದಿ ಇದ್ದೇ ಇರುತ್ತಾರೆ. ಎಲ್ಲ ನಿಲ್ದಾಣಗಳಲ್ಲೂ ಈ ಯಾಂತ್ರಿಕ ವ್ಯವಸ್ಥೆಯಿಲ್ಲ. ಹೆಚ್ಚಿನ ಕಡೆ ಸಿಬ್ಬಂದಿಯೇ ಟಿಕೆಟ್ ತಪಾಸಣೆ ಮಾಡಿ ಒಳಗೆ ಬಿಡುವ ವ್ಯವಸ್ಥೆಯಿದೆ. ಕಲ್ಕತ್ತದ ಮೆಟ್ರೋ ವ್ಯವಸ್ಥೆ ಚೆನ್ನಾಗಿದೆ ಎಂದು ಕೆಲವರೆಂದದ್ದು ನಿಜವೆಂಬ ಭಾವನೆ ಬಂತು. ತಕ್ಕಮಟ್ಟಿಗೆ ಸ್ವಚ್ಛವಾದ ನಿಲ್ದಾಣಗಳು, ರೈಲು ಡಬ್ಬಗಳು. ನಾವು ಪ್ರಯಾಣ ಮಾಡಿದಾಗ ಅಷ್ಟೊಂದು ಜನಸಂದಣಿಯೂ ಇರಲಿಲ್ಲ. ಹೂಸ ಡಬ್ಬಿಗಳಾದ್ದರಿಂದ ಆಕರ್ಷಕವಾಗಿಯೂ ಇದ್ದವು.

ಕಾಳಿಘಟ್ಟದಲ್ಲಿ ಇಳಿದು ಮೇಲ್ಮೈಗೆ ಬಂದು ಅಡ್ರೆಸ್ ಹುಡುಕತೊಡಗಿದವು. ನಗರದ ಈ ಭಾಗವು ನಮ್ಮ ನಗರಗಳಂತೆಯೇ ಇದೆ. ಆದರೂ ಜನದಟ್ಟಣೆ ಹೆಚ್ಚು. ಅಪಾರ್ಟ್‌ಮೆಂಟ್‌ಗಳು ಇದ್ದರೂ ಗಗನಭೇದಿಗಳು ಈ ಭಾಗದಲ್ಲಿ ಕಡಿಮೆಯೇ. ಪಂಡ ಹೇಳಿದ್ದುದು ನಿಜ. ಅಷ್ಟು ಸುಲಭವಾಗಿ ಅಡ್ರೆಸ್ ಹುಡುಕುವುದು ಸಾಧ್ಯವಿಲ್ಲ. ನಮ್ಮ ಉದ್ದೇಶವೂ ಆ ವ್ಯಕ್ತಿಯನ್ನು ಕಾಣುವುದೇ ಅಲ್ಲ. ಈ ನೆವದಲ್ಲಿ ಕಲ್ಕತ್ತ ಸುತ್ತುವುದು. ಅಲ್ಲಿ ತಿರುಗಿ, ಇಲ್ಲಿ ಹೋಗಿ, ಹೀಗೆ ಬಂದು ಹಾಗೆ ಹೋಗಿ; ಅವರನ್ನು ಕೇಳಿ, ಇವರನ್ನು ವಿಚಾರಿಸಿ; ನಮಗೆ ಬೇಕಾದ ಮನೆಯ ನಂಬರಿನ ಆ ಈ ಪಕ್ಕದ ನಂಬರುಗಳಿದ್ದರೂ ಬೇಕಾದ್ದು ಕಾಣಿಸದೆ; ಕೊನೆಗೊಮ್ಮೆ ಒಂದು ಮನೆಯ ಬೆಲ್ ಒತ್ತಿದವು. ನಾಲ್ಕನೆ ಮಹಡಿಯ ಮೇಲೆ ಸಿಟ್ಔಟ್‌ನಲ್ಲಿ ಕೆಲಸಗಾತಿಯೊಬ್ಬಳು ಕಾಣಿಸಿಕೊಂಡಳು. ಹೆಸರು ಹೇಳಿದೆವು. ಅವಳಿಗೆ ತಿಳಿಯಲಿಲ್ಲ. ಈ ಬಾರಿ ಮನೆಯೊಡತಿ ಬಂದಳು. ನಾವು ಹೇಳಿದ ಹೆಸರು ಕೇಳಿ 'next door” ಎಂದು ಪಕ್ಕದ ಓಣಿ ತೋರಿಸಿದಳು. ಅಲ್ಲಿಗೆ ಹೋದರೆ, ಅರೇ, ನಮಗೆ ಬೇಕಾದ ವ್ಯಕ್ತಿಯ ಮನೆ! ಮೊದಲ ಬಾರಿಗೆ ಕಲ್ಕತ್ತೆಗೆ ಬಂದು ಊರ ತುದಿಯಲ್ಲಿರುವ ಬಡಾವಣೆ ಒಂದರಲ್ಲಿ ಕೇವಲ ಒಂದು ಗಂಟೆ ಮಾತ್ರ ಸುತ್ತಾಡಿ ಅಡ್ರೆಸ್ ಪತ್ತೆ ಮಾಡಿದ್ದೆವು. ಆದರೆ ವ್ಯಕ್ತಿ ಮನೆಯಲ್ಲಿರಲಿಲ್ಲ. ಬಾಗಿಲು ತೆರೆಯಲೂ ಹಿಂದುಮುಂದೆ ನೋಡಿದ ಮನೆಯೊಳಗಿನ ಯುವಕ (ನಾವು ಕಾಣಬೇಕೆಂದು ಬಂದವ ಮಗ) ನಮ್ಮ ಪರಿಚಯ, ಭುವನೇಶ್ವರದಿಂದ ಹೇಳಿಕಳಿಸಿದ್ದವರ ವಿಷಯ ಹೇಳಿದಾಗ ಬಾಗಿಲು ತೆಗೆದು ಕಿರಿದಾದ ಪುಸ್ತಕ ಪೇಪರುಗಳ ರಾಶಿಯ ನಡುವೆ ಇದ್ದ ಸ್ಟೂಲುಗಳ ಮೇಲೆ ಕೂರಿಸಿದ. 'ಸಾಹಿತ್ಯ ಭಾರತಿ ಎಲ್ಲಿ ಹೋಗಿದ್ದಾರೆ, ಎಷ್ಟು ಹೊತ್ತಿಗೆ ಬರುತ್ತಾರೆ, ಟೆಲಿಫೋನ್ ನಂಬರು ನೀಡುವಿರಾ ಇತ್ಯಾದಿ ವಿವರಗಳನ್ನು ಕೇಳಿ ಕಾಲಹರಣ ಮಾಡಿದವು. ಒಂದು ಗಂಟೆ ಸುತ್ತಿ ಕಾಲು ನೋಯುತ್ತಿತ್ತು. ಬಾಯಾರಿಕೆಯೆಂದು ನೀರು ಕೇಳಿ ಕುಡಿದೆವು. ಬಂದ ಕೆಲಸ - ಹುಡುಕಿಕೊಂಡು ಬಂದ ವ್ಯಕ್ತಿ ಸಿಗದಿದ್ದರೂ - ಯಶಸ್ವಿಯಾಗಿತ್ತು. ಸರಿ, ಯುವಕನಿಗೆ ವಿದಾಯ ಹೇಳಿ ಮನೆಯಿಂದ ಹೊರಬಿದ್ದೆವು.

ಕಲ್ಕತ್ತೆಯಲ್ಲಿ ಜನವೋ ಜನ ಎಂಬುದು ನಿಜ. ಆದರಲ್ಲಿ ಪಂಡ ಹೇಳಿದಂತಹ ಜೇಬುಗಳ್ಳರೂ ಇರಬಹುದು. ಆದರೂ ನಮ್ಮ ಅನುಭವದಲ್ಲಿ, ವಿಶ್ಲೇಷಣೆಯಲ್ಲಿ ಈ ಜನ ಬೊಂಬಾಯಿನ ಸಂದಣಿಯ ಹಾಗೆ ಯಂತ್ರಗಳಲ್ಲ. ಗುಂಪುಗಳಲ್ಲಿ ವ್ಯಕ್ತಿಗಳಿರುವಂತೆ ಕಾಣಿಸಿತು. ಅಲ್ಲದೆ, ಈ ಜನ ಥಳುಕಿನ ಆಧುನಿಕ ಸಂದಣಿಯವರಲ್ಲ, ಸರಳವಾದ ನೇರವಾದ ಜನರೆನ್ನಿಸಿತು. ಬಿಗುಮಾನವಿರದೆ, ಕೇಳಿದ್ದಕ್ಕೆ ಉತ್ತರ ಹೇಳುವ ಸೌಜನ್ಯಪೂರಿತ ವ್ಯಕ್ತಿಗಳು. ನಮಗೆ ತಪ್ಪು ದಾರಿ ತೋರಿಸಿದ್ದಾಗಲೀ, ಉಚಾಯಿಸಿ ಮಾತನಾಡಿದ್ದಾಗಲೀ ಮಾಡದೇ, ಎಷ್ಟೋ ವೇಳೆ ನಾಲ್ಕು ಹೆಜ್ಜೆ ಬಂದು ಎಲ್ಲಿ ತಿರುಗಬೇಕು ಹೇಗೆ ಹೋಗಬೇಕು ಎಂದು ಸಹಾಯ ಮಾಡಿದವರೇ ನಮಗೆ ಸಿಕ್ಕರು, ಅದು ನಮ್ಮ ಪುಣ್ಯವಿರಬೇಕು. ಏಕೆಂದೆರೆ ಸುಮಾರು ಒಂದೂ ಕಾಲು ಕೋಟಿ ಜನರಿರುವ ಈ ನಗರದಲ್ಲಿ ಬರೀ ಸಜ್ಜನರಿರಲು ಸಾಧ್ಯವೇ! ನಾವು ಸಜ್ಜನರಾದ್ದರಿಂದ ನಮಗೆ ಸಜ್ಜನರೇ ಕಾಣಿಸಿದರೇನೋ!

ಹೂಗ್ಲಿ ನದಿಯ ಒಂದು ಭಾಗದಲ್ಲಿರುವುದು ಹೌರಾ ನಗರ: ಬಹು ಹಳೆಯ ನಗರ. ಇನ್ನೊಂದು ದಡದ ಮೇಲಿರುವುದು ಆಧುನಿಕ ಕಲ್ಕತ್ತ. ಒಂದು ಕಿಷ್ಕಿಂಧೆ, ಇನ್ನೊಂದು ಅಯೋಧ್ಯೆ - ಎಂದರೆ ಒಂದೆಡೆ ಇಕ್ಕಟ್ಟು: ಇನ್ನೊಂದೆಡೆ ವೈಶಾಲ್ಯ. ಸಾಪೇಕ್ಷ ದೃಷ್ಟಿಯಿಂದ ಒಂದೆಡೆ ಹಳೆಯದು, ಇನ್ನೊಂದೆಡೆ ಹೊಸತು. ಒಂದು ಕಡೆ ಕೊಳಕು; ಇನ್ನೊಂದೆಡೆ ಪರವಾಯಿಲ್ಲ ಎನ್ನಬಹುದಾದ ಪರಿಸ್ಥಿತಿ. ಒಂದೆಡೆ ಜನನಿವಾಸವೇ ಹೆಚ್ಚು, ಮತ್ತೊಂದೆಡೆ ಆಧುನಿಕ ಜೀವನ ಭಾಗಗಳಾದ ಕಛೇರಿಗಳು, ಉದ್ಯಮಗಳು, ನೌಕರಿಯ ಸ್ಥಳಗಳು, ಮ್ಯೂಸಿಯಂ- ಪಾರ್ಕು-ಪ್ರಾಣಿಸಂಗ್ರಹಾಲಯಗಳು.

ಹೌರಾದಲ್ಲಿಯಂತೂ ಕಾಲಿಡಲು ತೆರಪಿಲ್ಲದಂತಹ ಜನಸಂದಣಿ; ಅದಕ್ಕೂ ಹೆಚ್ಚು ವಾಹನ ಸಂಚಾರ. ನಿಂತು ನಿಂತು ಹೋಗುವ ವಾಹನಗಳಿಂದ ಹೊರಗೆ ಬಂದು ಬಿಡಬೇಕೆಂಬಷ್ಟು ಬೇಸರ ಹುಟ್ಟಿಸುವ ಪ್ರಯಾಣ. ಪಾಪ ಚಾಲಕರ ಗತಿಯೇನು. ಒಂದು ಬಸ್ಸು ಸಂಚರಿಸಲೂ ಕಷ್ಟಕರವಾದ ರಸ್ತೆಯಲ್ಲಿ ಎದುರಿನಿಂದಲೂ ಸಂಚಾರ. ಅಡ್ಡಲಾಗೇನಾದರೂ ವಾಹನವೊಂದು ಬಂದರೆ ಎರಡೂ ಕಡೆಯ ವಾಹನ ಸಂಚಾರ ಸ್ತಬ್ಬ, ಇಲ್ಲಿ ಆಕ್ಸಿಡೆಂಟ್‌ಗಳು ಆಗಲು ಸಾಧ್ಯವೇ ಇಲ್ಲ. ವಾಹನಗಳು ಡಿಕ್ಕಿ ಹೊಡೆದರೂ ವೇಗವಿಲ್ಲದ್ದರಿಂದ ಅವುಗಳಿಗೆ ಒಂದಷ್ಟು ಜಖಂ ಆಗಬಹುದೇ ವಿನಾ ಒಳಗಿನ ಜನಕ್ಕೆ ಏನೂ ಆಗದು. ರಸ್ತೆಯ ಆ ಈ ಬದಿಯಲ್ಲಿ ಕೊಚ್ಚೆಯ ಪ್ರವಾಹ: ಮೋರಿಗಳಲ್ಲಿ ಹರಿಯಬಹುದಾದಷ್ಟು ಹರಿದು ಉಳಿದದ್ದೆಲ್ಲ ರಸ್ತೆಯ ಮೇಲೆ. ಇದನ್ನು ಶುಚಿಗೊಳಿಸುವುದು ಸಾಧ್ಯವೇ ಇಲ್ಲ. ಹೌರಾದಿಂದ ಮದ್ರಾಸಿನ ಕಡೆಗೆ ಹೋಗುವ ಗ್ರಾಂಟ್ ಟ್ರಂಕ್ ರಸ್ತೆ, ರಾಷ್ಟ್ರೀಯ ಹೆದ್ದಾರಿ ನಂ.೧, ಹೌರಾ ಮೂಲಕ ಹಾದು ಹೋಗಬೇಕು. ರಾಷ್ಟ್ರೀಯ ಹೆದ್ದಾರಿಯೆಂಬ ನಿಮ್ಮ ಕಲ್ಪನೆ ಎಗರಿ ಹೋಗುತ್ತದೆ ಇಲ್ಲಿ.

ಹೌರಾದಲ್ಲಿ ಶೇಕಡಾ ತೊಂಬತ್ತರಷ್ಟು ಬಂಗಾಳಿಯೇತರಿದ್ದಾರಂತೆ; ಅವರಲ್ಲಿಯೂ ಬಹುಮಂದಿ ಬಿಹಾರಿಗಳು, ಹಳೆಯ ಕಾಲದ ಪರಿಸರದಲ್ಲೂ ಶಾಲೆ ಕಾಲೇಜುಗಳೆಂಬ ಬೋರ್ಡುಗಳು ಅಲ್ಲಲ್ಲಿ ಕಾಣುತ್ತವೆ. ತಗಡಿನ ದೊಡ್ಡ ಡಬ್ಬದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಸೈಕಲ್ ರಿಕ್ಷಾಗಳು ಹೋಗುತ್ತಿರುತ್ತವೆ. ಬಂಗಾಳಿಗಿಂತ ಹಿಂದಿಯ ಬೋರ್ಡುಗಳೂ, ಮಾತೂ ಇಲ್ಲಿ ಸಹಜವಾಗಿಯೇ ಹೆಚ್ಚು. ಬಹಳ ಸಾದಾ ಜನ, ಬಡತನ ತುಂಬಿದ ಪ್ರದೇಶ ಇದು. ಹೂಗ್ಲಿಯ ದಕ್ಷಿಣಕ್ಕೆ ಕಲ್ಕತ್ತೆಗೆ ಹೋಗಲು ಮೂರು ಸೇತುವೆಗಳು ಹೂಗ್ಲಿಗೆ ಅಡ್ಡಲಾಗಿ ನಿಂತಿವೆ. ಒಂದು ಹಳೆಯ ಕಾಲದ ಹೌರಾ ಸೇತುವೆ, ರೈಲ್ವೆ ನಿಲ್ದಾಣದ ಹತ್ತಿರವಿರುವುದು ರಬೀಂದ್ರ ಸೇತು; ಅದ್ಭುತವಾದ ಇಂಜಿನಿಯರಿಂಗ್ ನಿರ್ಮಾಣಗೊಂಡ ಸೇತುವೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ಅಗಲದ ನದಿಯ ಆಚೆ ಈಚೆ ದಡಗಳಲ್ಲಿ ತನ್ನೆರಡು ಕಾಲುಗಳನ್ನು ಭದ್ರವಾಗಿ ಊರಿ ನಿಂತ ಹರ್ಕ್ಯುಲಸ್‍ನಂತೆ ಕಾಣುತ್ತದೆ ಈ ಸೇತುವೆ. ಕೆಳಗೆ ನದಿಯಲ್ಲಿ ಯಾವುದೇ ಅಡ್ಡಿಳಿಲ್ಲ, ನದಿಯಗಲಕ್ಕೂ ನಿರ್ವಿಘ್ನವಾಗಿ ದೋಣಿಗಳು ಫೆರಿಗಳೂ ತೇಲಾಡಬಹುದು. ಎರಡು ಕಾಲುಗಳ ಮೇಲೆ ಇಡೀ ಸೇತುವೆಯ ಭಾರ ಬೀಳುತ್ತದೆ. ದೀರ್ಘವಾದ ಸೇತುವೆಯ ಮೇಲಿನ ವಾಹನಗಳ ಭಾರ ಬೀಳದಂತೆ ಮೇಲಕ್ಕೆ ಅದನ್ನು ಎತ್ತಿ ಹಿಡಿಯಲು ದಡಗಳ ಮೇಲಿನಿಂದ ದ್ದು ಬಂದಿರುವ ಭಾರಿ ಭಾರಿ ಗರ್ಡ್ರ್‍ಗಳು. ನೋಡಲು ಕೂಡ ಕರ್ಷಕವಾಗಿರುವ  ಸೇತುವೆ ಆಧುನಿಕ ಕಾಲದ ಕಲ್ಕತ್ತ-ಹೌರಾಗಳ ಸಂಪರ್ಕ ಸೇತುವಾಗಿತ್ತು. ಈಚೆಗೆ  ಪ್ರಧಾನ ಮಂತ್ರಿಗಳು ಇದನ್ನು ಉದ್ಘಾಟಿಸಿದರು. ಅದೇ ಈಶ್ವರಚಂದ್ರ ವಿದ್ಯಾಸಾಗರ್ ಸೇತು. ದೂರದಿಂದ ಮೇಲೆ ಕೆಳಗೆ ಆಕರ್ಷಕವಾದ ಗೆರೆಗಳ ಚಿತ್ತಾರದಂತೆ ಕಾಣುವ ಈ ಸೇತುವ ಕಲೆ ಮತ್ತು ವಿಜ್ಞಾನಗಳ ಸಂಗಮ. ದಡಗಳಲ್ಲಿ ಎರಡು ಕಾಲುಗಳನ್ನು ಗಟ್ಟಿಯಾಗಿ ಊರಿರುವುದಲ್ಲದೆ ನದಿಯ ನಡುವೆಯೂ ದಡಗಳಿಗೆ ಸಮೀಪ ಆಧಾರ ಸ್ತಂಭಗಳು ಎರಡಿವೆ. ಆದರೆ ಈ ಸ್ತಂಭಗಳ ಮಧ್ಯ ಮಾತ್ರ ನದಿಯ ನೀರಿನಿಂದ ಬಹು ಎತ್ತರದ ಸೇತುವೆ; ದಡಗಳ ಕಡೆಯಿಂದ ಮೇಲಕ್ಕೇರುವ ನಡುವೆ ಅಂತರ ಹೆಚ್ಚಾದ ವಿನ್ಯಾಸ, ಸಮುದ್ರದ ದಿಕ್ಕಿನೆಡೆಯಿರುವ ಈ ಸೇತುವೆಯ ಈ ಮಧ್ಯಭಾಗದ ಕೆಳಗಡೆ ದೊಡ್ಡ ದೊಡ್ಡ ಹಡಗುಗಳೂ ಹಾದು ಹೋಗಬಹುದು.

ಈ ಸೇತುವೆಗಳಲ್ಲದೆ, ನದಿಯ ಎರಡು ದಡಗಳ ವಿವಿಧ ಘಟ್ಟಗಳನ್ನು ತಲುಪಲು ನದಿಯ ಮೇಲೆ ತೇಲುವ ಹತ್ತಾರು ಫೆರಿಗಳು. ಪಶ್ಚಿಮ ಬಂಗಾಳ ಸರ್ಕಾರದ ಮೇಲ್ಮೈ ಸಾರಿಗೆ ಇಲಾಖೆಯು ಎರಡೂ ದಡಗಳ ವಿವಿಧ ಬಿಂದುಗಳ ನಡುವೆ ಜನರನ್ನೂ ಸರಕನ್ನೂ ಸಾಗಿಸಲು ಈ ಫೆರಿಗಳನ್ನು ಓಡಿಸುತ್ತದೆ. ಇವುಗಳಲ್ಲಿ ಓಡಾಡುವುದು ನಿಜವಾಗಿ ಆಹ್ಲಾದಕರ ಅನುಭವ. ನೀರಿನ ಮಧ್ಯೆ ಇರುವುದರಿಂದಾಗಿ ಹಾಯಾಗಿ ಗಾಳಿ ಬೀಸುತ್ತಿರುತ್ತದೆ; ತಕ್ಷಣ ಬ್ರೇಕ್ ಹಾಕುವುದಾಗಲೀ, ಇನ್ನೊಂದು ವಾಹನಕ್ಕೆ ಡಿಕ್ಇ ಹೊಡೆಯುವುದಾಗಲೀ ಇಲ್ಲದೆ ನಿರಾತಂಕವಾಗಿ ಗಳಿಗೆಗೊಂದರಂತೆ ಬಂದು ಹೋಗುವ ಫೆರಿಗಳಲ್ಲಿ ಪ್ರಯಾಣ ಮಾಡುವುದೆಂದರೆ ಆರಾಮವಾಗಿರುತ್ತದೆ. ನಾವಂತೂ ಒಂದೆಡೆಯಿದ ನ್ನೊಂದೆಡೆಗೆ ಹೋಗುವುದು, ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಈ ಕಡೆ ಬರುವುದು. ಇದನ್ನೇ ಕೆಲವು ಬಾರಿ ಮಾಡಿದೆವು. ಹೋಟಲು ರೂಮಿಗಿಂತ ಲ್ಲಿಯೇ ಚೆನ್ನ!

****

 

ಪತ್ರಿಕಾ ಕಚೇರಿಯಲ್ಲಿ ಕವಿ

ಇಂದುಭೂಷಣ್ ಕರ್ ಅವರು ಭೇಟಿಯಾಗಲೇಬೇಕೆಂದು ಮತ್ತೆ ಮತ್ತೆ ಹೇಳಿದ್ದವರೆಂದರೆ ಬಂಗಾಳಿ ಕವಿ ನರೇಂದ್ರನಾಥ ಚಕ್ರಬೊರ್ತಿ ಅವರು. ಪೂರ್ವ ಭಾರತೀಯರು ಬಕಾರರು: ವಕಾರದ ಬದಲು ಬ ಅನ್ನು ಉಚ್ಚರಿಸುವುದು ಅವರ ರೂಢಿ; ಅಲ್ಲದೆ, ಅ ಕಾರವನ್ನು ಒ ಎಂದೂ ಅವರು ಉಚ್ಚರಿಸುತ್ತಾರೆ. ನರೇಂದ್ರನಾಥರು ಸುಮಾರು ಎಪ್ಪತ್ತು ವರ್ಷದವರು; ತಮಗೆ ತುಂಬ ಆತ್ಮೀಯರೆಂದು ಕರ್ ಹೇಳಿದ್ದರು. ನಮಗೆ ಕವಿಗಳನ್ನು ಭೇಟಿಮಾಡುವುದಕ್ಕಿಂತ ಬೇರೆ ಮುಖ್ಯ ಕೆಲಸವಿದೆಯೇ? ಅವರು ಆನಂದ ಬಜಾರ್ ಪತ್ರಿಕಾಲಯದಲ್ಲಿ ಮುಖ್ಯ ಸಲಹೆಗಾರರಾಗಿದ್ದಾರೆ. ಮತ್ತೆ ಡೌಲ್‌ಹೌಸಿ ಚೌಕದ ಬಳಿಯೇ ಇದ್ದ ಪತ್ರಿಕಾ ಕಚೇರಿಯನ್ನು ಹುಡುಕಿಕೊಂಡು ಹೊರಟೆವು. ಇದು ಯಾರಿಗೆ ತಿಳಿದಿರುವುದಿಲ್ಲ? ಪ್ರಸಿದ್ಧವೂ ಅತ್ಯಂತ ಹಳೆಯದೂ ಆದ ಪತ್ರಿಕೆಗಳ ಪ್ರಕಾಶಕರು ಅವರು. ಸುಲಭವಾಗಿಯೇ ಕಚೇರಿ ಸಿಕ್ಕಿತು. ಸ್ವಾಗತ ಕೌಂಟರ್‌ಗೆ ಹೋದೆವು. ಇಡೀ ಕಟ್ಟಡವೆಲ್ಲ ಏರ್‌ಕಂಡಿಷನ್ ಆದದ್ದರಿಂದ ಹವೆ ಹಾಯಾಗಿತ್ತು. ಅಲ್ಲಿ ಒಳಹೋಗುವ ಸಂದರ್ಶಕರಿಗೆ ಪಾಸ್ ಕೊಡುತ್ತಾರೆ. ಒಬ್ಬ ಸ್ವಾಗತಕಾರ ವಿವರ ತುಂಬಲು ಒಂದು ಫಾರಂ ಕೊಟ್ಟ ಚಿಕ್ಕದು. ಯಾರನ್ನು ಭೇಟಿಯಾಗಬೇಕು; ಯಾರು; ಉದ್ದೇಶ - ಇತ್ಯಾದಿ ಒಂದೆರಡು ವಿವರಗಳು. ನಾನು ಬರೆದಿತ್ತೆ. ಉದ್ದೇಶದ ಎದುರು ಕೆಲವು ವಿಷಯಗಳ ಬಗ್ಗೆ ಚರ್ಚೆ ಎಂದು ಬರೆದಿದ್ದೆ. ಏನು ಚರ್ಚೆ ಎಂದರೆ?” ಎಂದೇನೋ ಅದನ್ನು ನೋಡಿದ ಸ್ವಾಗತಕಾರ ಗೊಣಗಿಕೊಂಡ. ಜೊತೆಗೇ ನರೇಂದ್ರನಾಥರನ್ನು ಫೋನಿನಲ್ಲಿ ಸಂಪರ್ಕಿಸಿದ. ನಾನು ಸರಳವಾಗಿ ಖಾಸಗೀ ಭೇಟಿ ಎಂದು ಬರೆಯದೆ ದೊಡ್ಡದಾಗಿ ಏನೇನೋ ಬರೆದಿದ್ದೆ. ಆದರೆ ನರೇಂದ್ರರು ಕಳಿಸಲು ಹೇಳಿದರೆಂದು ಕಾಣುತ್ತದೆ. ಪಾಸ್‌ಗಳನ್ನಿತ್ತು ಎದೆಯ ಮೇಲೆ ಧರಿಸಿರಿ ಎಂದ. VISITOR ಎಂದು ದೊಡ್ಡದಾಗಿ ಮುದ್ರಿತವಾಗಿದ್ದ ವಿಸಿಟಿಂಗ್ ಕಾರ್ಡ್ ಅಳತೆಯ ಲ್ಯಾಮಿನೇಷನ್ ಮಾಡಿ ಚುಚ್ಚಿಕೊಳ್ಳಲು ಪಿನ್ನು ಇತ್ಯಾದಿಗಳಿಂದ ಸಜ್ಜಿತವಾಗಿದ್ದ ಪಾಸ್‌ಗಳವು. ಸರಿ, ಧರಿಸಿದೆವು. ನಾಲ್ಕನೆಯ ಮಹಡಿಯೆಂದು ಕಾಣುತ್ತದೆ, ಅವರಿದ್ದುದ್ದು. ಮೇಲೆ ಹೋಗಲು ಲಿಫ್ಟ್ ಬಳಸಬಹುದಾಗಿತ್ತು; ಹೋದೆವು. ಅಲ್ಲಿ ಇಲ್ಲಿ ವಿಚಾರಿಸಿ ನಾಲ್ಕನೆಯ ಮಹಡಿಯ ಹಜಾರದ ಸನಿಹವಿದ್ದ ಕೊಠಡಿಯ ಮುಚ್ಚಿದ್ದ ಬಾಗಿಲನ್ನು ಒಳದೂಡಿ 'ಮೇ ವಿ ಕಮ್ ಇನ್ ಪ್ಲೀಸ್?” ಎಂದಾಗ ಒಳಗಿನಿಂದ ಬನ್ನಿ ಎಂಬ ಉತ್ತರ ತಕ್ಷಣವೇ ಬಂತು.

ಪಕ್ಕದ ತುಂಬ ಬೆಳ್ಳಂಬೆಳಕಿನಿಂದ ಕೂಡಿದ ಚಿಕ್ಕ ಕೂಠಡಿ ಅದು. ನಾಲ್ಕು ಮೂಲೆಗೆ ನಾಲ್ಕು ಟೇಬಲ್‌ಗಳು- ಕುರ್ಚಿ, ಮುಂದೆ ಸಂದರ್ಶಕರಿಗಾಗಿ ಒಂದೊಂದು ಮೇಜಿನ ಮುಂದೆ ಎರಡೆರಡು ಮಡಿಸುವ ಕುರ್ಚಿಗಳು, ಚೀಫ್ ಅಡ್ವೈಸರ್ ಎಂದಿದ್ದುದರಿಂದ ನರೇಂದ್ರರಿಗೆ ಸ್ವತಂತ್ರವಾದ ದೊಡ್ಡ ಕೋಣೆಯೊಂದು ಕಚೇರಿಯಾಗಿರಬಹುದೆಂಬ ನಿರೀಕ್ಷೆಯಿತ್ತು. ಆದರೆ ಈ ರೂಂ ಕೂಡ ಚೆನ್ನಾಗಿಯೇ ಇತ್ತು. ಒಳಗೆ ಇದ್ದವರು ಅವರೊಬ್ಬರೇ. ಮಿಕ್ಕ ಕುರ್ಚಿಗಳವರು ನಾವು ಹೋದಾಗ ಎಲ್ಲಾದರೂ ಹೋಗಿದ್ದರೋ ಅಥವಾ ಅಲ್ಲಿ ಸಾಮಾನ್ಯವಾಗಿ ಕೂಡುವವರು ನರೇಂದ್ರರೊಬ್ಬರೆಯೋ ತಿಳಿಯಲಿಲ್ಲ. ನರೇಂದ್ರರು ಕುರ್ಚಿ ತೋರಿಸಿದರು; ಇದ್ದ ಎರಡರ ಜೊತೆ ಮೇಜಿನ ಮುಂದಿದ್ದ ಮತ್ತೊಂದನ್ನೆಳೆದುಕೊಂಡು ನಾವು ಮೂವರೂ ಕೂತೆವು - ನಾಗರಾಜ್, ಅಪೂರ್ವ ಮತ್ತು ನಾನು. ನಾವು ಪರಿಚಯ ಮಾಡಿಕೊಂಡೆವು; ಕರ್ ಅವರು ಕಳಿಸಿಕೊಟ್ಟರೆಂದು ಹೇಳಿದೆವು. ಸರಿ ಮಾತಿಗೆ ಅನುವಾದಂತಾಯಿತು.

ನರೇಂದ್ರನಾಥರು ಅಪ್ಪಟ ಬಂಗಾಳಿ ಬಾಬುಗಳಾಗಿ ಕಾಣಿಸಿದರೂ ಎಪ್ಪತ್ತಾದರೂ ಆರೋಗ್ಯದಿಂದ ಕೂಡಿದ ದೇಹ, ಕಪ್ಪು ಮೈಬಣ್ಣ; ಅದಕ್ಕೆ ವ್ಯತಿರಿಕ್ತವಾಗಿ ಬಂಗಾಳಿಗಳ ಕಚ್ಚೆ ಪಂಚೆ, ಜುಬ್ಬ - ಅಪ್ಪಟ ಬಿಳುಪಿನದು. ಖಾದಿಯದೋ ಏನೋ ಗಮನಿಸಲಿಲ್ಲ - ಇರಲಿಕ್ಕಿಲ್ಲ. ಗಟ್ಟಿಮುಟ್ಟಾದ ಹಲ್ಲುಗಳು, ಗೆರೆಕೊರೆದ ಹಾಗಿರುವ ಕೋನಾಕೃತಿಯ ಮುಖ; ದಪ್ಪ ಚೌಕಟ್ಟಿನ ಕನ್ನಡಕ ಸ್ಪುಟವಾಗಿ ನಿಧಾನವಾಗಿ ಅಸ್ಖಲಿತವಾಗಿ ಹೊರಬರುವ ಇಂಗ್ಲಿಷ್. ಅವರೊಬ್ಬ ಕವಿ ಎಂಬುದು ತಿಳಿದಿತ್ತು ಕರ್‌ ಅವರಿಂದ. ಆದರೆ ಎಂತಹ ಕವಿ ಎಂದು ತಿಳಿಯುವುದು ಹೇಗೆ, ಬೆಂಗಳೂರಿಗೆ ವಾಪಸಾದ ಮೇಲೆ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಭಾರತೀಯ ಸಾಹಿತ್ಯ ಸಮೀಕ್ಷೆಯ ಮೊದಲ ಸಂಪುಟದಲ್ಲಿರುವ ಬಂಗಾಳಿಯ ಆಧುನಿಕ ಕಾವ್ಯದ ಬಗೆಗಿನ ಲೇಖನ ನೋಡಿದೆ. ಕಮ್ಯುನಿಸ್ಟ್ ಬದ್ಧತೆಯಿಲ್ಲದ ಕವಿಗಳ ಸಾಲಲ್ಲಿ ಅವರಿಗೆ ಗಣನೀಯ ಸ್ಥಾನವಿದೆ ಎಂಬ ವಿಷಯ ತಿಳಿಯಿತು. ಎಡಪಂಥೀಯರಾಗಿಲ್ಲದೆ ಕಮ್ಯುನಿಸ್ಟರ ಗದ್ದಲದ ನಡುವೆ ಗಂಭೀರ ಕಾವ್ಯರಚನೆ ಮಾಡುವ ಕವಿಯೆಂದು ಕರೆದು, ಆ ಲೇಖನದಲ್ಲಿ ಅವರ ಕೌಶಲ ಎಷ್ಟು ಮಟ್ಟಿನದೆಂದರೆ ಅವರು ಯಾವುದನ್ನಾದರೂ ಕಾವ್ಯವಾಗಿಸಬಲ್ಲರು ಎಂಬ ಮಟ್ಟಿಗೆ ವ್ಯಕ್ತಪಡಿಸಲಾಗಿದೆ. ಅದಕ್ಕೆ ತಕ್ಕಂತೆ ಯಾವ ಸೋಗುಗಳಿಲ್ಲದ ಸರಳ ವ್ಯಕ್ತಿಯಂತೆ ಆವರು ಕಂಡರು. 'Would you mind taking some tea?” ಎಂದರು. ಬೇಡವೆನ್ನಲಾದೀತೇ? ಅವರು ಕರೆಗಂಟೆಯೊತ್ತಿದಾಗ ಬಂದ ಸೇವಕನಿಗೆ ಟೀ ತರಲು ಹೇಳಿದರು.

ಬೆಂಗಳೂರು ಎಂದಾಗ ತಮಗೆ ಸುಮತೀಂದ್ರ ನಾಡಿಗರು ಗೊತ್ತು ಎಂದರು. ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ಬಂಗಾಳಿ ಆಸೋಸಿಯೇಷನ್‌ನ ಆಶ್ರಯದಲ್ಲಿ ರಾಜ್ಯ ಯುವಕ ಕೇಂದ್ರದ ಸಭಾಂಗಣದಲ್ಲಿ ಒಂದು ಸಾಹಿತ್ಯಕ ಕಾರ್ಯಕ್ರಮ ಏರ್ಪಾಟಾಗಿತ್ತು. ಆ ದಿನದ ಮುಖ್ಯ ಅತಿಥಿ ಬಗಾಲಿಯ ಪ್ರಸಿದ್ಧ ಕವಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸುಭಾಷ್ ಮುಖೋಪಾಧ್ಯಾಯರು. ಆ ಸಮಾರಂಭದಲ್ಲಿ ಮುಖ್ಯ ಪಾತ್ರ ನಾಡಿಗರದೇ. ಅಲ್ಲದೆ, ಅದರ ಏರ್ಪಾಟಿನಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ್ದಲ್ಲದೆ, ತಾವೇ ಅನುವಾದಿಸಿದ್ದ ಸುಭಾಷರ ಕೆಲವು ಕವನಗಳನ್ನವರು ಓದಿದ್ದರು (ಬಂಗಾಳಿ-ಕನ್ನಡ ಕಾವ್ಯದ ಪರಸ್ಪರ ಅನುವಾದ ಕಮ್ಮಟ ಒಂದು ವಾರ ನಡೆದು ಅದರ ಸಮಾರೋಪವೇ ಅಂದಿನ ಸಮಾರಂಭ), ತಕ್ಷಣ ಆ ಸಮಾರಂಭ ನೆನಪಿಗೆ ಬಂದು "ಅಂದು ನೀವು ಅಲ್ಲಿದ್ದೀರಾ?” ಎಂದು ಕೇಳಿದೆ. ಇಲ್ಲ, ಬರಬೇಕಾಗಿತ್ತು. ಯಾವುದೋ ಕಾರಣಕ್ಕೆ ಬರಲಾಗಲಿಲ್ಲ ಎಂದರು. ಅಂದಿನ ಸಮಾರಂಭದಲ್ಲಿ ಹಣಕಾಸಿನ ವ್ಯವಸ್ಥೆಯ ಜವಾಬ್ದಾರಿ ಪ್ರಸಿದ್ಧ ಸ್ವೀಟ್ಸ್ ವ್ಯಾಪಾರಿ ಕೆ.ಸಿ. ದಾಸ್; ಅದನ್ನು ನರೇಂದ್ರರು ಬಲ್ಲರು. ರಸಗುಲ್ಲ ಕಡೆಗೆ ಮಾತು ವಾಲಿತು. ಯಂತ್ರದಿಂದ ತಯಾರಿಸುವ ಈ ಕಾಲದಲ್ಲಿ ದಾಸ್ ಅವರ ವೈಶಿಷ್ಟ್ಯವೆಂದರೆ ಕೈಯಿಂದ ರಸಗುಲ್ಲ ತಯಾರಿಸುವುದು, ಅದಕ್ಕೇ ಅವರ ಕಂಪನಿ ಅಷ್ಟು ಪ್ರಸಿದ್ದಿ ಎಂದು ವಿವರಿಸಿದರು, ನರೇಂದ್ರನಾಥರು.

ಅವರಿಗೆ ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯ ಸಂಸ್ಕೃತ ಪದಗಳನ್ನು ಬಳಸುವುದು ಸಂತೋಷದಾಯಕವಂತೆ. ಸಂಸ್ಕೃತ ಹೀಗೆ ಎಲ್ಲ ಭಾರತೀಯ ಭಾಷೆಗಳನ್ನು ಸೇರಿಸುವ ಸೂತ್ರ ಎಂಬಂತಹ ಅರ್ಥ ಮಾತನಾಡಿದರು. ಬಂಗಾಳಿಯಲ್ಲಿ ಶೇಕಡಾ ಎಂಬತ್ತರಷ್ಟು ಶುದ್ಧ ಸಂಸ್ಕೃ ಪದಗಳಿವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಚಕ್ರವರ್ತಿಗಳು ಬ್ರಾಹ್ಮಣರಾದ್ದರಿಂದ ಅವರಿಗೆ ಸಂಸ್ಕೃತದ ಬಗ್ಗೆ ಹೆಮ್ಮೆಯಿರಬಹುದೇ? ಆದರೆ ಅವರು ಮದುವೆಯಾಗಿರುವುದು ಕಾಯಸ್ಥ ಹೆಂಗಸನ್ನು, ಅವರ ಒಬ್ಬಳು ಮಗಳು ಲಗ್ನವಾಗಿರುವುದು ಕಾಯಸ್ಥನನ್ನೇ. ಬಂಗಾಳದಲ್ಲಿ ಆಗಿಹೋದ ಭಕ್ತಿಪಂಥದ ಪ್ರಭಾವ, ಇಂಗ್ಲಿಷರ ಪ್ರಭಾವದಿಂದ ಮಿಕ್ಕ ಕಡೆಗಳಿಗಿಂತ ಮೊದಲೇ ಮೂಡಿದ ಅಧುನಿಕತೆ, ರಾಜಾರಾಂ ಮೋಹನ್‌ರಾಯ್ ಮುಂತಾದ ಸಮಾಜ ಸುಧಾರಕರ ಚಳುವಳಿಗಳು - ಇವುಗಳಿಂದಾಗಿ ಕಾಸ್ಟ್ ಟೆನ್‌ಶನ್ ಇಲ್ಲಿಲ್ಲ ಎಂದರು. ಹಿಂದೂ-ಮುಸ್ಲಿಂ ಘರ್ಷಣೆಯ ಬಗ್ಗೆ ಅಲ್ಲ ಅವರು ಹೇಳುತ್ತಿದ್ದುದು; ಹಿಂದೂ ಸಾಮಾಜಿಕ ವಲಯದಲ್ಲಿನ ಜಾತಿ ವಿಷಮತೆಯ ಬಗ್ಗೆ. ಪ್ರಾಯಶಃ ಕನ್ನಡದಲ್ಲಿ ಈಗ ಬಂಡಾಯ-ದಲಿತ ಚಳುವಳಿಗಳು ಇವೆಯಲ್ಲ, ಹಾಗೆ. ಕಾವ್ಯಕ್ಷೇತ್ರದಲ್ಲಿನ ಟ್ರೆಂಡ್ ಪ್ರಸ್ತುತ ಯಾವುದು ಎಂಬ ನನ್ನ ಪ್ರಶ್ನೆಗೆ ಅವರು ಈ ಉತ್ತರ ಕೊಟ್ಟಂತೆ ನೆನಪು. ಈಗಲೂ ಹಳ್ಳಿಗಳ ಕಡೆ ದಲಿತರನ್ನು ಅಮಾನುಷವಾಗಿ ನಡೆಸಿಕೊಳ್ಳುವ ಪ್ರಕರಣಗಳು, ತುಂಬ ವಿದ್ಯಾವಂತರಲ್ಲೂ ಮದುವೆಯಾಗುವ ಸನ್ನಿವೇಶದಲ್ಲಿ ಜಾತಿ ವಹಿಸುವ ಪ್ರಮುಖ ಪಾತ್ರ ಇತ್ಯಾದಿಗಳ ಬಗ್ಗೆ ವಿವರಿಸಿದೆ. ಹನ್ನೆರಡನೇ ಶತಮಾನದ ಬಸವಣ್ಣನ ಚಳುವಳಿಯು ಅವನ ನಂತರ ಕಾಲಕ್ರಮೇಣ ಜಾತಿ ಜ್ವರಕ್ಕೆ ಬಲಿಯಾದುದನ್ನು ಸಂಕ್ಷಿಪ್ತವಾಗಿ ಹೇಳಿದೆ. ಎಂಟುನೂರು ವರ್ಷಗಳ ಹಿಂದೆ ನಡೆದ ಆ ಚಳುವಳಿ ಎಷ್ಟು ಆಧುನಿಕ ಮನೋಭಾವದಿಂದ ಕೂಡಿತ್ತು ಎಂದು ವಿವರಿಸಲು ನಾನು ಪ್ರಯತ್ನಿಸಿದ್ದೇನೆ. ಈ ವಿಷಯ ಕನ್ನಡೇತರರಿಗೆ, ವಿಶೇಷವಾಗಿ ಉತ್ತರ ಭಾರತೀಯರಿಗೆ, ಗೊತ್ತಿಲ್ಲ. ಅಲ್ಲದೆ, ಇದನ್ನು ಹೇಳಿದರೆ ಅದಾವ ಮಹಾ ಎಂಬ ಧೋರಣೆಯೇ ಅವರಲ್ಲಿ ಕಾಣುತ್ತದೆ.

ನರೇಂದ್ರರು ಬಂಗಾಳದ ವೈಶಿಷ್ಟ್ಯವನ್ನು ಉತ್ಸುಕರಾಗಿ ಹೇಳುತ್ತಿದ್ದರು. ಸಪಂಕ್ತಿಭೋಜನ ಎಲ್ಲ ಜಾತಿಗಳವರ ನಡುವೆ ಇದೆ ಎಂದರು. ನಮ್ಮ ಮನೆಯನ್ನು ಶುಚಿ ಮಾಡುವವನ ಜೊತೆಯಲ್ಲಿ ನಾವು ಊಟ ಮಾಡುತ್ತೇವೆ, ಕೆಲವೊಮ್ಮೆ ಎಂದರು. ಇದು ಹಳ್ಳಿಗಳಲ್ಲೂ ಇದೆಯೇ ಎಂದಾಗ ಹೌದು” ಎಂದು ಉತ್ತರಿಸಿದಂತೆ ನೆನಪು. ಟೀ ಬಂದಿತು. ನೀರು ಬೇಕೆಂದೆವು; ತರಿಸಿಕೊಟ್ಟರು. ಎರಡನ್ನೂ ಕುಡಿದು, ಮತ್ತಷ್ಟು ಹೊತ್ತು ಮಾತಾಡುತ್ತಿದ್ದೆವು. ಬಹಳ ಸರಳವಾಗಿ ಮುಕ್ತವಾಗಿ ಮಾತನಾಡಿದರು. ಆದರೂ ತಮ್ಮ ವಿಷಯ ಹೇಳೀಕೊಳ್ಳುವುದರಷ್ಟು ಆಸಕ್ತಿ, ಬೇರೆ ಭಾಗದ ಜನಜೀವನದ ಬಗ್ಗೆ ತಿಳಿದುಕೊಳ್ಳಲು ಇಲ್ಲವೇನೋ ಎನಿಸಿತು.

ಮೇಲಕ್ಕೆದ್ದೆವು; ಅವರೂ ಎದ್ದು ಬೀಳ್ಕೊಟ್ಟರು. ನೀಳವಾದ ಸಪೂರ ದೇಹ; ಕೈಕುಲುಕಿದರು. ನಾವು ಹೊರಬಂದೆವು. ಈಗ ಕೆಳಗೆ ಬರಲು ಮೆಟ್ಟಿಲುಗಳನ್ನು ಉಪಯೋಗಿಸಿದೆವು. ಹೊರಗೆ ಬಾಗಿಲಲ್ಲಿದ್ದ ದ್ವಾರಪಾಲಕನಿಗೆ ನಮ್ಮ ವಿಸಿಟರ್ ಕಾರ್ಡ್‌ಗಳನ್ನು ಮರಳಿಸಿದೆವು. ಆನಂದ್ ಬಜಾರ್ ಪತ್ರಿಕೆಯ ಕಚೇರಿಯಿಂದ ಹೊರಬಿದಿದ್ದರೆ, ಒಳಗೆಲ್ಲ ಹಾಯಾಗಿದ್ದುದು ದ್ದಕ್ಕಿದ್ದಂತೆ ಬಿಸಿಗಾಳಿ ಮುಖಕ್ಕೆ ಬಡಿಯಿತು. ಅದಕ್ಕೆ ಹೊಂದಿಕೊಳ್ಳಲು ಎರಡು ನಿಮಿಷವೇ ಬೇಕಾಯಿತು. ಮುಂದೆ ಹೋಟಲಿನ ರೂಂ ಸೇರಲು ಬಸ್ಸಿಗಾಗಿ ಕಾದೆವು.

****

ಕಲ್ಕತ್ತೆಯ ಸುತ್ತಮುತ್ತ

ಬೆಳಗ್ಗೆ ಏಳೂವರೆಗೇ ನಗರವೀಕ್ಷಣೆಯ ಬಸ್ಸು ಹೊರಡುವುದು, ಅದೂ ಡಾಲ್‌ಹೌಸಿ ಚೌಕದಲ್ಲಿನ ಪ್ರವಾಸೋದ್ಯಮ ಕಚೇರಿಯ ಬಳಿಯಿಂದ. ನಾವು ಬೇಗನೇ ಎದ್ದು ಬೆಳಗಿನ ಕಾರ್ಯಗಳನ್ನೆಲ್ಲ ಮುಗಿಸಿ ನೇರವಾಗಿ ಅಲ್ಲಿಗೆ ಹೋಗುವುದು; ಕಾಫಿ, ಟೀ ಎಂದು ತಡಮಾಡುವುದು ಬೇಡವೆಂದು ತೀರ್ಮಾನಿಸಿದ್ದವು. ಹೌರಾ ಸ್ಟೇಷನ್ ಸಿಕ್ಕುವುದೇನೂ ಕಷ್ಟವಲ್ಲ; ಅಲ್ಲದೆ ಬೆಳಿಗ್ಗೆಯೇ ಆದ್ದರಿಂದ ಅಷ್ಟೊಂದು ಜನಸಂಪರ್ಕವಿರಲಾರದಂದು. ಸರಿಯಾಗಿಯೇ ಊಹಿಸಿದ್ದವು. ಬಹು ಬೇಗ ಎನಿಸುವಂತೆ ಆ ಜಾಗಕ್ಕೆ ಬಂದವು; ಇನ್ನೂ ಆರುಮುಕ್ಕಾಲು ಗಂಟೆ ಆಗ.

ಆಗಲೇ ಕೆಲವರು ಬಂದಿದ್ದರು. ಕಚೇರಿಯ ಬಾಗಿಲು ತೆರೆದಿತ್ತು. ಕೆಲವರು ಮಟ್ಟಿಲುಗಳ ಮೇಲೆಯೇ ಕುಳಿತಿದ್ದರು. ಕಚೇರಿಯ ಎದುರಿಗೆ ಫುಟ್ಪಾತಿನ ಮೇಲೆ ಪತ್ರಿಕೆಗಳನ್ನು ಹರವಿಕೊಂಡ ವ್ಯಾಪಾರಿ ಕಾಣಿಸಿದ. ಬೆಳಿಗ್ಗೆ ಎಂದ ತಕ್ಷಣ - ಆಗಬೇಕಾದ ಕೆಲಸ ಅಥವಾ ಚಟ ಎಂದರೆ ಕಾಫಿ ಮತ್ತು ಪತ್ರಿಕೆ. ಇಲ್ಲಿ ಕ್ರಮ ವ್ಯತ್ಯಯವಾಯಿತು. ಮೊದಲೊಂದು ಪೇಪರ್ ಕೊಂಡು ತಿರುವಿ ಹಾಕುತ್ತ, ಎಲ್ಲಾದರೂ ಟೀ ಸಿಕ್ಕುವುದೇ ಎಂದು ವಿಚಾರಿಸಿದೆವು. ಪ್ರವಾಸೋದ್ಯಮ ಕಚೇರಿಯ ಒಳಗೇ ವ್ಯವಸ್ಥೆಯಿದೆ ಎಂದಾಗ ಶುಭಸೂಚನೆ ಎನ್ನಿಸಿ ಒಳಗೆ ಹೋದೆವು. ಹೌದು, ಅಲ್ಲಿ ನೌಕರನೊಬ್ಬ ಟೀ ಸರಬರಾಜು ಮಾಡುತ್ತಿದ್ದ. ನಾವೂ ಹೇಳಿದವು.

ನಿಯತಕಾಲಕ್ಕೆ ಬಸ್ಸು ಹೊರಟಿತು. ವಿವಿಧ ಭಾಷೆಗಳ ಕಲರವ, ನಮ್ಮ ಸೀಟುಗಳ ಹಿಂದೆ ಯಾರೋ ಇಬ್ಬರು ಅಪ್ಪಟ ಬೆಂಗಳೂರು ಕನ್ನಡದಲ್ಲಿ ಜೋರಾಗಿ ಸಂಭಾಷಣೆ ನಡೆಸಲು ತೊಡಗಿದರು. ನನಗೆ ನಿಜವಾಗಿ ಸಂತೋಷ, ಎರಡು ಕಾರಣಗಳಿಗಾಗಿ ಒಂದು ದೂರದಲ್ಲಿ ಕನ್ನಡ ಕೇಳಿಸಿದ್ದು, ಇನ್ನೊಂದು ಅವರು ಇನ್ನೊಂದು ಅವರು ಜೋರಾಗಿ ಮಾತನಾಡುತ್ತಿದ್ದದ್ದು. ಎಲ್ಲಿ ಹೋದರೂ ಕನ್ನಡಿಗರದು ಮೇಲುದನಿ. ತಮಿಳಿನವರಾದರೆ ದೂರದಲ್ಲಿರುವವರನ್ನು ಬೇಕಂತಲೇ ಜೋರಾಗಿ ಕರೆದು ಗಾಳಿಯಲ್ಲಿ ತಮ್ಮ ಭಾಷೆ ತೇಲಿಬಿಟ್ಟು - ಇಬ್ಬರ ನಡುವೆ ಇರುವ ಜನ ಅನಿವಾರ್ಯವಾಗಿ ಆ ಮಾತುಗಳನ್ನು ಕೇಳುವಂತೆ ಮಾಡುವ ದಾಷ್ಟೀಕ! ನಮ್ಮದು ಹಿತಮಿತಮೃದುವಚನ - ಪಂಪನ ಕಾಲದಿಂದ ಇತರ ಕನ್ನಡಿಗರ ಬಗ್ಗೆ ಹಾಗೆ ಹಳಿದರೂ ಮಾಡುವುದೂ ಅದನ್ನೇ. ಆದರೆ ನಿಸ್ಸಂಕೋಚವಾಗಿ ಕನ್ನಡದಲ್ಲಿ ಬೇರೆಡೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ; ಕೋಪ ಬಂದರೆ ಎದುರಿಗಿರುವವನು ಯಾರೇ ಆಗಲಿ ರೇಗುವುದು, ಕನ್ನಡದಲ್ಲಿಯೇ. ಏರಿದ ದನಿ, ಕೆಂಪಾದ ಕಣ್ಣು, ಉಗ್ರ ಮುಖಗಳನ್ನು ಕಂಡರೆ ಅವನು ಯಾವ ಭಾಷೆಯವನಾದರೇನು, ಕೋಪ ಎಂಬುದು ತಿಳಿಯುವುದಿಲ್ಲವೇ?

ಮಾರ್ಗದರ್ಶಿ ಬಸ್ಸೇರಿ ಎಲ್ಲರನ್ನೂ ಸ್ವಾಗತಿಸಿದ, ಇಂಗ್ಲೀಷಿನಲ್ಲಿ. ದಿನದ ಕಾರ್ಯಕ್ರಮವೇನು, ಎಲ್ಲೆಲ್ಲಿಗೆ ಸಂದರ್ಶನ ಎಂದು ವಿವರಿಸಿದ. ಬಸ್ಸು ಹೊರಟಿತು. ತಂಪಾದ ಗಾಳಿ ಕಿಟಕಿಗಳ ಮೂಲಕ ಎಳೆ ಬಿಸಿಲು ಹರಡಿಕೊಂಡ, ಇನ್ನೂ ಜನಸಂದಣಿಯಾಗದ ವಿಶಾಲ ರಸ್ತೆಯ ಮೂಲಕ ಬಸ್ಸು ಓಡತೊಡಗಿದಾಗ ಕಲ್ಕತ್ತೆಯೂ ಚೆನ್ನಾಗಿದೆ ಎನ್ನಿಸಿತು. ಚೆನ್ನಗಿಲ್ಲದ್ದು ಎಲ್ಲಿದೆ? ಸ್ವಲ್ಪ ಹೆಚ್ಚು ಕಡಿಮೆ ಇರಬಹುದು ಅಷ್ಟೆ. ನಮ್ಮ ಮೊದಲ ಭೇಟಿ ಕಲ್ಕತ್ತೆಯನ್ನು ಬಿಟ್ಟು ನದಿ ದಾಟಿ ಹೌರಾ ಮೂಲಕ ಹೋದರೆ ಇರುವ ಬೇಲೂರು ಮಠಕ್ಕೆ, ವಿವೇಕಾನಂದರು ತಮ್ಮ ಗುರುಗಳ ಹೆಸರಿನಲ್ಲಿ ನಿರ್ಮಿಸಿದ ರಾಮಕೃಷ್ಣಾಶ್ರಮದ (ಈಗ ರಾಮಕೃಷ್ಣ ಮಠ) ಮುಖ್ಯಸ್ಥಾನ. ಮಾರ್ಗದರ್ಶಿ ಕಲ್ಕತ್ತೆಯ ವಿಶಿಷ್ಟಾಂಶಗಳನ್ನು ಪರಿಚಯ ಮಾಡಿಕೊಡುತ್ತಿದ್ದ. ಇಲ್ಲಿನ ವಿಸ್ತೀರ್ಣ, ಜನಸಂಖ್ಯೆ ಇತ್ಯಾದಿ. ಅವನು ಕಲ್ಕತ್ತೆಯ ಜನಸಂಖ್ಯೆಯ ಶೇಕಡ ಅರವತ್ತೆರಡರಷ್ಟು ಬಂಗಾಳಿಗಳಲ್ಲದವರು ಇದ್ದಾರೆಂದು ಹೇಳಿದಾಗ ನನ್ನ ಕಿವಿ ನಿಮಿರಿತು. ಇಷ್ಟು ದೊಡ್ಡ ನಗರವಾದರೂ ಕಾಸ್ಮೋಪಾಲಿಟನ್ ಆದರೂ, ಬಹುಸಂಖ್ಯಾತರು ಬಂಗಾಳಿಗಳೇ ಇಲ್ಲಿರುವುದು; ಮಿಕ್ಕ ನಗರಗಳಲ್ಲೂ ಆಯಾ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ನಮ್ಮ ಕಲ್ಯಾಣನಗರಿಯಾದ ಬೆಂಗಳೂರು ಮಾತ್ರವೇ ಇದಕ್ಕೆ ಅಪವಾದ ಎಂದುಕೊಂಡಿದ್ದೆ. ಈ ವಿಷಯ ತಿಳಿದು ಸಮಾಧಾನವಾಯಿತು. ಸ್ವಲ್ಪ ಸಂತೋಷವೂ ಆಯಿತು. ಹೌರಾದಲ್ಲಿ ಮಾತ್ರ ಶೇಕಡ ತೊಂಬತ್ತರಷ್ಟು ಇತರರೇ ಎಂದು ಹೇಳುತ್ತಿದ್ದ ಮಾರ್ಗದರ್ಶಿ. ಈ ಅಂಕಿ ಸಂಖ್ಯೆಗಳು ನಿಜವಿರಬಹುದು, ಆತ ಸರ್ಕಾರದ ಪ್ರತಿನಿಧಿಯಲ್ಲವೇ?

ಬೇಲೂರು ಮಠ ತಲುಪಬೇಕಾದರೆ ಹೌರಾವನ್ನು ಸೀಳಿಕೊಂಡೇ ಹೋಗಬೇಕು. ಅಷ್ಟು ಹೊತ್ತಿಗೇ ಜನರ ವಾಹನಗಳ ಓಡಾಟ ಹೆಚ್ಚಾಗಿತ್ತು, ಕ್ಷಣ ಕ್ಷಣಕ್ಕೂ ನಿಂತು ಹೋಗಬೇಕು. ಸ್ವರ್ಗ ಸೇರಲು ಧರ್ಮರಾಜ ನರಕದ ಮೂಲಕ ಹೋದನಂತಲ್ಲ: ಇಲ್ಲೂ ಹಾಗೆ. ಪ್ರಶಾಂತವಾದ ಬೇಲೂರು ಮಠ ತಲುಪಲು ಇದೊಂದೇ ಮಾರ್ಗ ಎಂದು ಮಾರ್ಗದರ್ಶಿ ವಿವರಣೆ ನೀಡುತ್ತಿದ್ದ, ಆಲಂಕಾರಿಕ ಭಾಷೆಯಲ್ಲಿ. ಅಂತೂ ಇಂತೂ ಒಂದೂಕಾಲು ಗಂಟೆಯ ಕಾಲ ಮೈಮುದುರಿಕೊಂಡು ಓಡಿದ ಬಸ್ಸು ಬೇಲೂರು ಮಠ ತಲುಪಿತು, ಬಿಸಿಲು ಏರತೊಡಗಿತ್ತು. ನೆಲ ಆಗಲೆ ಕಾದಿತ್ತು. ಮಠದ ಮುಖ್ಯದ್ವಾರದ ಒಳಗಡೆಯೇ ಬಸ್ಸು ನಿಂತಿತು. ಚಪ್ಪ ಬಸ್ಸಲ್ಲೇ ಬಿಟ್ಟು ಹೋಗಿ ಎಂದದ್ದರಿಂದ ಬರಿಗಾಲಲ್ಲೇ ಕೆಳಗಿಳಿದವು.

ವಿಶಾಲವು ಪ್ರಶಾಂತವೂ ಆದ ವಾತಾವರಣ, ಸಮತಟ್ಟಾದ ನೆಲ. ದಾರಿಗಳನ್ನುಳಿದು ಹಸುರು ಹಾಸಲು, ಆದರೆ ಅಲ್ಲೂ ಜನರ ಓಡಾಟದಿಂದ ಮಧ್ಯೆ ಮಧ್ಯೆ ಬೋಳುಬೋಳು. ದೂರದೂರಕ್ಕೆ ಕಟ್ಟಡಗಳು. ರಾಮಕೃಷ್ಣ, ಶಾರದಾದೇವಿ, ವಿವೇಕಾನಂದರ ಹಾಗೂ ಇತರ ಕೆಲವರ ಸಮಾಧಿಗಳು. ಅಲ್ಲಿ ವಾಸಿಸುವ ಶಿಕ್ಷಣಾರ್ಥಿಗಳ ವಸತಿ ಗೃಹಗಳು, ಗದ್ದಲವಿಲ್ಲ. ಆದರೂ ಒಂದು ಕಟ್ಟಡದಲ್ಲಿ - ಅದೇ ಮೂಲಕಟ್ಟಡ - ವಿವೇಕಾನಂದರು ಬಳಸುತ್ತಿದ್ದ ಕುರ್ಚಿ-ಮಂಚ-ವಸ್ತ್ರಗಳು, ಪಾದುಕೆಗಳು ಮುಂತಾದವನ್ನು ಸ್ಮಾರಕವಸ್ತುಗಳಾಗಿ ಪ್ರದರ್ಶಿಸಿದ್ದರು. ಕಿಟಕಿಗಳ ಮೂಲಕ ಅದನ್ನು ನೋಡಿದೆವು. ಆಶ್ರಮವೂ ಹೂಗ್ಲಿ (ಗಂಗಾ) ನದಿಯ ದಡದ ಮೇಲೆಯೇ ಇರುವುದು. ಒಂದು ಕಡೆ ಸ್ನಾನಘಟ್ಟವೂ ಇದೆ. ಅಲ್ಲಿ ಮುದು ಪದಕರು ಆಗಲೇ ಪವಿತ್ರ ಸ್ನಾನ ಮಾಡುತ್ತಿದ್ದರು. ದೇವರೆಂದು ಹೇಳಿದರೆ ಜನ ಮೈಮರೆಯುತ್ತಾರೆ. ಇವೆಲ್ಲ ಮಾಡಬೇಡಿ, ಇವು ಮೂಢನಂಬಿಕೆಗಳು ಎಂದು ಹೇಳಿದ ಸುಧಾರಕರ ಸ್ಮಾರಕಗಳೂ ದೇವಸ್ಥಾನಗಳಾಗಿ ಅವನು ಧಿಕ್ಕರಿಸಿದ್ದನ್ನೇ ಜನ ಅನುಸರಿಸಿ ಗೌರವ ಸೂಚಿಸುತ್ತಾರೆ. ಆದರೆ ಜಾತಿ ಭಿನ್ನತೆಗಳಿಲ್ಲದೆ ಸಮಾಜ ಸುಧಾರಣೆಗೂ ಗಮನವಿಟ್ಟ ರಾಮಕೃಷ್ಣ ಮಿಶನ್ ತಕ್ಕಮಟ್ಟಿಗೆ ಆದರ್ಶಗಳನ್ನು ಕಾಯ್ದುಕೊಂಡು ಬಂದಿದೆ. ಅದೂ ವಿವೇಕಾನಂದರ ಮಾತುಗಾರಿಕೆ, ಎದೆಗಾರಿಕೆಗಳು ಯುವಕರ ಆರಾಧನೆ ಒಳಗಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಅಲ್ಲಿಂದ ಹೊರಟಿದ್ದು ದಕ್ಷಿಣೇಶ್ವರಕ್ಕೆ. ಇದೊಂದು ಯಾತ್ರಾಸ್ಥಳವೇ ಆಗಿಬಿಟ್ಟಿದೆ. ಎರಡು ದಶಕಗಳಿಂದ ಕಮ್ಯುನಿಸ್ಟ್ ಸರ್ಕಾರವನ್ನು ಅಧಿಕಾರಕ್ಕೆ ತಂದ ಇಲ್ಲಿಯ ಜನರ ಭಗವದ್ಭಕ್ತಿಗೇನೂ ಕೊರತೆಯಿಲ್ಲ; ಸದಾ ಗಿಜಿಗುಟ್ಟುವ ದೇವಸ್ಥಾನಗಳು. ಅಥವಾ ಇಲ್ಲಿಗೆ ಬರುವವರು ಹೂರಗಿನವರೇ ಇರಬಹುದು. ಆದರೂ ಕಮ್ಯುನಿಸ್ಟರಲ್ಲೂ ಭಕ್ತರಿರಬಹುದಲ್ಲ. ಈಚೆಗೆ ಒಡೆದ ಸೋವಿಯತ್ ಯೂನಿಯನ್‌ನ ವಿವಿಧ ಭಾಗಗಳಲ್ಲಿ ಜನ ಇದ್ದಕ್ಕಿದ್ದಂತೆ ಇನ್ನೂರು ವರ್ಷದ ಹಿಂದಿನ ಭಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಕಮ್ಯುನಿಸ್ಟ್ ಆಡಳಿತ ಬಂದಾಗ ಸೈಂಟ್ ಪೀಟರ್ಸ್‌ಬರ್ಗ್ ಲೆನಿಗ್ರಾಡ್ ಆಯಿತು. ಈಗ ಮಂಡಲ ಸುತ್ತಿ ಮತ್ತೆ ಸೈಂಟ್ ಪೀಟರ್ಸ್‌ಬರ್ಗ್ ಆಗಿದೆ. ಕಮ್ಯುನಿಸ್ಟ್ ಆಡಳಿತವಿದ್ದಾಗ ಲೆನಿನ್ನನ್ನೇ ದೇವರೆಂದು ಪೂಜಿಸುತ್ತಿದ್ದರು ಕಮ್ಯುನಿಷ್ಟರಾಗಿ; ಈಗ ಮತ್ತೆ ಪೀಟರ್‌ನನ್ನು ಪೂಜಿಸುತ್ತಾರೆ.

ರಾಮಕೃಷ್ಣರು ಶಾಕ್ತಪಂಥದವರು, ದೇವಿಯ ಆರಾಧಕರು. ಅವರು ಪೂಜಿಸುತ್ತಿದ್ದ ಕಾಳಿಮಾತೆ ಇಲ್ಲಿದ್ದಾಳೆ ಎಂದು ಜನ ನಂಬುತ್ತಾರೆ. ಅವರಿಗೆ ಕಂಡ ದೇವಿ ತಮಗೂ ಅಲ್ಲಿಯೇ ಕಾಣುತ್ತಾಳೆ, ಆಕೆ ಎಲ್ಲೆಡೆ ಇದ್ದರೂ ಎಂದು ಅಲ್ಲಿಗೆ ಹೋಗುತ್ತಾರೆ, ವಿಗ್ರಹವನ್ನು ನೋಡಿ ಪುನೀತರಾಗುತ್ತಾರೆ. ದೀರ್ಘವಾದ ಕ್ಯೂಗಳು. ಬದುಕಿನಲ್ಲಿ ನೋವು ಸಂಕಟಗಳು ಇಲ್ಲದಿದ್ದರೆ ದೇವರನ್ನು ಕ್ಯಾರೇ ಎನ್ನುವವರಿರುತ್ತಿರಲಿಲ್ಲ, ಅವುಗಳನ್ನು ತುಂಬಿ ದೇವರು ಉಳಿದುಕೊಂಡ, ಮಾನ್ಯತೆ ಸಂಪಾದಿಸಿಕೊಂಡ. ನನಗೇನೋ ದೇವಸ್ಥಾನಗಳಲ್ಲಿ ಕಿಕ್ಕಿರಿದಿರುವ ಭಕ್ತರ ಮುಖಗಳನ್ನು ನೋಡುವುದು ಕುತೂಹಲಕರವೂ ಆಸಕ್ತಿಯುತವೂ ಆದ ಹವ್ಯಾಸ. ಕಣ್ಣು ಮುಚ್ಚಿ ಕೆನ್ನೆ ಬಡಿದು ದೇವರ ಮುಂದೆ ಗೊಣಗಿಕೊಳ್ಳುವ ವ್ಯಕ್ತಿ ಯಾರಿಗೂ ಗೊತ್ತಿರದ ತನ್ನ ದೌರ್ಬಲ್ಯಗಳನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತಿರುತ್ತಾನೆ. ಭಗವಂತನ ಮುಂದ ಯಾರಿಗೂ ಹೇಳಲಾಗದ, ಹೇಳಬಹುದಾದರೂ ಅಭಿಮಾನ ಅಡ್ಡಬರುವ, ತನ್ನ ಆಂತರಂಗದ ಅಳಲುಗಳನ್ನು ತೋಡಿಕೊಳ್ಳುತ್ತ ಕಣ್ಣೀರು ಸುರಿಸುವವನು ತನ್ನೆದೆಯ ಭಾರವನ್ನು ಅವನೆದುರು ಸುರಿದು ಹಗುರಾಗುತ್ತಿರುತ್ತಾನೆ. ಜನಸಾಮಾನ್ಯರಿಗೆ, ಮುಗ್ಧರಿಗೆ, ಭಾವುಕರಿಗೆ ಇಂಥದರಿಂದ ಒಳ್ಳೆಯದಾಗುತ್ತದೆ ಎಂದು ರುಜುವಾತು ಮಾಡಿ ತೋರಿಸುವ ವ್ಯವಸ್ಥೆಗಳೆಲ್ಲ ದೋಷಯುಕ್ತವಾಗಿವೆ. ಆದ್ದರಿಂದ ಅವರು ಪ್ರತ್ಯಕ್ಷವಾಗಿ ಕಾಣಲಾರದ್ದರಿಂದಲೇ ಪರಿಪೂರ್ಣವೆಂದು ಭಾವಿಸಬಹುದಾದ ಭಗವಂತನ ಶರಣು ಹೋಗುತ್ತಾರೆ.

ದೇವರು ಇದ್ದಾನೆಂದರೆ ಇದ್ದಾನೆ, ಇಲ್ಲವೆಂದರೆ ಇಲ್ಲ ಎಂಬುದು ಹಳೆಯ ಮಾತು. ಆದರೆ ದೇವರಿಗಿಂತ ಹಳೆಯದೇನೂ ಇಲ್ಲ. ಇದ್ದಾನೆಂದು ನಂಬುವವನಿಗೆ ದೇವರು ಕಾಣಿಸುತ್ತಾನೆ; ಇಲ್ಲ ಎಂದು ನಂಬುವವನ ಪಕ್ಕದಲ್ಲೇ ಅವನು ಹಾದು ಹೂಗುತ್ತ `ಹಲೋ' ಎಂದರೂ ಗುರುತಿಸಲಾರ. ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಬಾರದು; ನಮಗನ್ನಿಸಿದ್ದನ್ನು ಪ್ರಾಮಾಣಿಕವಾಗಿ ಇತರರಿಗೆ ತೊಂದರೆಯಾಗದಂತೆ ಜವಾಬ್ದಾರಿಯಿಂದ ಅನುಸರಿಸಿದರೆ ಸಾಕು. ಆದರೂ ನಮ್ಮ ದೇಶದಲ್ಲಿ ಮಾತ್ರ. ಯಾಕೆ, ಜಗತ್ತಿನ ಬಹು ಭಾಗದಲ್ಲಿ ದೇವರ ಕಾರಣದಿಂದ ಕೆಲವು ಸಮಸ್ಯೆಗಳು ತಾವಾಗಿ ನಿವಾರಣೆಯಾಗುತ್ತವೆ. ಅಮೆರಿಕಾಕ್ಕೆ ಇಲ್ಲಿಂದ ಒಬ್ಬ ಮನೋವಿಜ್ಞಾನಿ ವಿಶೇಷ ಅಧ್ಯಯನಕ್ಕೆ ಹೋದ; ಮನೋಚಿಕಿತ್ಸೆಯ ಪರಿಣತಿ ಪಡೆದು ಇಲ್ಲಿಂದ ಆ ಸ್ವರ್ಗಕ್ಕೆ ಹೋದವರು ಮರಳಿ ಬಂದಾರೇ! ಅಲ್ಲೇ ಉಳಿದರೆ ಹಣವೋ ಹಣ. ಸಣ್ಣಪುಟ್ಟ ಮಾನಸಿಕ ಕಿರಿಕಿರಿಗಳಿಗೆಲ್ಲ ಮನೋಚಿಕಿತ್ಸಕರ ಬಳಿಗೆ ಹೋಗುವ ಪರಿಪಾಠ. ವಿಪರೀತ ಸೌಲಭ್ಯ ಆಧುನಿಕತೆಗಳ ನಡುವೆ ನಜ್ಜುಗುಜ್ಜಾದ ಮನಸ್ಸಿಗೆ ಸಮಾಧಾನ ಮರಳಿಸುವ ಕೆಲಸ ಈ ಚಿಕಿತ್ಸಕನದು. ಆದರೆ ಎಷ್ಟು ವರ್ಷ ಇದ್ದರೂ ಅದು ತನ್ನ ನೆಲ ಅಲ್ಲವಲ್ಲ, ತಾಯಿನಾಡು ಅಲ್ಲವಲ್ಲ. ಹಣ ಮಾಡಿ ಮಾಡಿ ಸಾಕಾಯಿತು. ಭಾರತಕ್ಕೆ ಬಂದು ಇಲ್ಲೇ ಕ್ಲಿನಿಕ್ ತೆರೆಯಲು ನಿರ್ಧರಿಸಿದ; ಹಾಗೆ ಮಾಡಿಯೂ ಮಾಡಿದ. ಆದರೆ ಇಲ್ಲಿ ಹಣ ನೀಡಿ ಮನೋಚಿಕಿತ್ಸಕರ ಹತ್ತಿರ ಹೋಗಿ ಸಲಹ ಪಡೆಯಬೇಕಾದರೆ ಅಂಥವರ ತಲೆ ಕೆಟ್ಟಿರಬೇಕು, ಅಷ್ಟೆ. ಜನರಿಗೆ ಕೊಡಬೇಕೆಂದರೂ ಹಣ ಎಲ್ಲಿದೆ, ಅದೂ ವಿದೇಶೀವಿದ್ಯೆ ಕಲಿತ ಮನೋಚಿಕಿತ್ಸಕನಿಗೆ ಕೊಡುವಷ್ಟು? ಎಂಟಾಣೆ ಮುಡಿಪು ತೆಗೆದಿಟ್ಟೋ, ಕೊಳಕಾದ ಬಂಡಿ ತಲೆಗೂದಲನ್ನು ಕೊಟ್ಟೋ, ಉರುಳು ಸೇವೆ ಮಾಡಿಯೊ ಎಂದಿನಂತೆಯೇ ಇದ್ದರೂ `ನಿನಗಾಗಿ' ಎಂದುಕೊಂಡು ವಾಸಿ ಮಾಡಿ ಬೇಡಿಕೊಂಡರೆ ಕಷ್ಟನಿವಾರಣೆಯಾಗುತ್ತದಲ್ಲ. ಬೇಳೆ ಬೇಯದೆಂದು ಅಮೆರಿಕಾದಲ್ಲಿಯೇ ಬೇಯಲು ಮನೋಚಿಕಿತ್ಸಕ ಮತ್ತೆ ಮರಳಿದ! ನಮ್ಮ ದೇಶದಲ್ಲಿ ದೇವಸ್ಥಾನಗಳಿಂದ ಕಡೆ ಸೋವಿ ದರದಲ್ಲಿ ಚಿಕಿತ್ಸೆ ನೀಡುವ ಅಗೋಚರ ಚಿಕಿತ್ಸಕರು ಸಾವಿರಾರು! ನನ್ನನ್ನು ಪ್ರತಿಗಾಮಿ ಎಂದುಕೊಳ್ಳಿ, ಅದು ನಿಮ್ಮ ನಂಬಿಕೆ!

ದೇ ಬಿಂದುವಿನಿಂದ ನೇರವಾಗಿ ಹೂಗಿ, ನದಿಯ ಆ ದಂಡೆಗೆ ಹೋರೆ, ಅದು ರಾಮಕೃಷ್ಣರು ಪ್ರಾರಂಭದಲ್ಲಿ ಅರ್ಚಕರಾಗಿ ನೇಮಿತರಾಗಿದ್ದ ಕಾಳಿಯ ಮೂಲಸ್ಥಾನ. ಅಲ್ಲಿಂದ ಮುಂದೆ ಹೋದರೆ ವಿಕ್ಟೋರಿಯಾ ಮೆಮೋರಿಯಲ್, ಈ ಭಾಗದಲ್ಲಂತೂ ಕಲ್ಕತ್ತ ವಿಶಾಲ ರಸ್ತೆಗಳಿಂದ ಅಚ್ಚುಕಟ್ಟಾದ ಕಟ್ಟಡಗಳಿಂದ ನೂರಾರು ಪ್ರತಿಮೆಗಳಿಂದ ಕೂಡಿ ನೋಡಿದರೆ ಸಂತೋಷವಾಗುವ ವಾತಾವರಣವಿದೆ. ವಿಶಾಲವಾದ ಕಾಂಪೌಂಡಿನ ಒಳಗಡೆ ವಿಕ್ಟೋರಿಯಾ ರಾಣಿಯ ವಿಗ್ರಹ, ಅದಕ್ಕೂ ಹಿಂದೆ ಭರ್ಜರಿ ಗುಮ್ಮಟದ ಕಟ್ಟಡ. ಬ್ರಿಟಿಷ್ ಕಾಲದ ದಾಖಲೆಗಳು, ಜನಜೀವನ ವಿಧಾನ, ವಸ್ತುಗಳು, ಇವುಗಳನ್ನು ಒಳಗೊಂಡ ಚಿತ್ರಗಳಿಂದ ಕೂಡಿದ ವಸ್ತುಸಂಗ್ರಹಾಲಯ ಇಲ್ಲಿದೆ. ಬ್ರಿಟಿಷ್ ಕಾಲದ ಅಧ್ಯಯನ ಮಾಡುವವರಿಗೆ ಇಲ್ಲಿ ಬೇಕಾದಷ್ಟು ವಿಷಯ ಸಿಗುತ್ತದೆ; ಕೆಲವರು ಹಾಗೆ ಮಾಡಿರಲೂ ಸಾಕು.

ಇಲ್ಲಿಯ ನ್ಯಾಷನಲ್ ಮ್ಯೂಸಿಯಂ ಕೂಡ ಭಾರಿ ಸಂಗ್ರಹದಿಂದ ಕೂಡಿದುದು. ಹೋದ ತಕ್ಷಣವೇ ಬಲಗಡೆಯಲ್ಲಿ ಸಂಗ್ರಹಿಸಿರುವ ಪ್ರಾಚ್ಯವಸ್ತು ವಿಭಾಗವಂತೂ ಅಮೂಲ್ಯ ಸ್ಮಾರಕಗಳಿಂದ ಕೂಡಿದೆ. ವಿವಿಧ ವಿಭಾಗಗಳ ಈ ವಿಸ್ತಾರವಾದ ಮ್ಯೂಸಿಯಂ ನೋಡಲು ದೀರ್ಘಕಾಲ ಬೇಕು. ಅಲ್ಲದೆ ಬೇರೆ ಬೇರೆ ಕಡೆಯ ಇಂಥದೇ ಮ್ಯೂಸಿಯಂಗಳಲ್ಲಿ ಪ್ರದರ್ಶಿತವಾದಂತಹ ವಸ್ತುಗಳು ಇಲ್ಲಿಯೂ ಇರುತ್ತವೆ. ಅಲ್ಲೆಲ್ಲ ಇಲ್ಲದವು ಇಲ್ಲಿ ಯಾವುದಿದೆ, ಅವುಗಳ ವೈಶಿಷ್ಟ್ಯವೇನು ಎಂದು ತಿಳಿಯಲು ವಿಷಯಗಳ ಬಗ್ಗೆ ಸಾಕಷ್ಟು ಆಳವಾದ ತಿಳುವಳಿಕೆ ಇರಬೇಕು. ಪ್ರವಾಸಿಗರಲ್ಲಿ ಬಹುಜನ ಅಂಥವರಲ್ಲ. ಇಲ್ಲಿನ ಪ್ರಾಣಿಸಂಗ್ರಹ ಭರ್ಜರಿಯದು. ಆನೆ-ಒಂಟೆಗಳಿಂದ ಹಿಡಿದು ಬಹು ಸಣ್ಣ ಪ್ರಾಣಿಗಳವರೆಗೂ ಇಟ್ಟಿರುವ ದೇಹಗಳು ಹಾಗೂ ಅಸ್ಥಿಪಂಜರಗಳು ಅಮೋಘವಾಗಿವೆ.

ಸ್ವಲ್ಪ ಹೊತ್ತಿಗೇ, ಎಂದರೆ ಅಷ್ಟು ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ, ಊಟಕ್ಕೆ ಬಿಡುವು ದೊರೆಯಿತು. ಎಸ್‌ಪ್ಲನೇಡ್ ಬಳಿ ಬಂದಿದ್ದವು. ಹತ್ತಿರದಲ್ಲಿ ಕಲ್ಕತ್ತೆಯ ಏಕೈಕ (?) ದಕ್ಷಿಣ ಭಾರತೀಯರ ಊಟದ ಹೋಟಲಿದೆ ದು ಮಾರ್ಗದರ್ಶಿ ಹೇಳಿದ. ಅಲ್ಲಿಗೆ ಹೋದೆವು. ನಿಜವಾಗಿ ನಮಗೆ ಹತ್ತಿರವಾದ ರುಚಿಯ ಊಟ ಸಿಕ್ಕಿತು. ಮತ್ತೆ ಬಸ್ಸಿನಲ್ಲಿ ಪ್ರಯೋಣ. ಆರ್ಟ್ಲ್ ಗ್ಯಾಲರಿಗೆ ಹೋದೆವು. ಅದರ ಹೆಸರು ಬೇರೆಯದಿರಬಹುದೇನೋ. ಅಲ್ಲಿ ಮ್ಮ ಕುತೂಹಲವನ್ನು ಆಕರ್ಷಿಸಿದ್ದು ರವೀಂದ್ರನಾಥ ಠಾಕೂರ್ ಕೆಲವು ಮೂಲ ಪೈಂಟಿಂಗ್‍ಗಳು. ಮುಂದೆ ಜೂ. ನೋಡಿದ ಪ್ರಾಣಿಗಳನ್ನೇ ನೋಡಿಕೊಂಡು ಒಂದು ಬಸ್ಸಲ್ಲಿ ಕೂತೆವು. ಇನ್ನೂ ಎಲ್ಲ ಪ್ರವಾಸಿಗಳೂ ಬಂದಿರಲಿಲ್ಲ. ಆಗಲೇ ನಾಲ್ಕೂವರೆ ವಾಪಸು ಹೋಗುವದಷ್ಟೇ, ಅದಕ್ಕೆ ಮಾರ್ಗದರ್ಶಿ ನಿಧಾನವಾಗಿದ್ದ.  ನಾವು ಹೋಗಿ ಬಸ್ಸಲ್ಲಿ ಕೂತಾಗ ಎದುರಿನದೇ ನ್ಯಾಷನಲ್ ಲೈಬ್ರರಿ ಎಂದ; ಅದನ್ನೂ ನೋಡಿದಂತಾಯಿತಲ್ಲ ಎಂದು ಕಣ್ಣರಳಿಸಿದೆವು.

ಎಲ್ಲಿತ್ತೋನೋ ಐದು ನಿಮಿಷದಲ್ಲಿ ಆಕಾಶದಲ್ಲಿ ಮೋಡ ಹೆಪ್ಪುಗಟ್ಟಿತು. ಭಾರಿ ಮಳೆಯೇ ಆರಂಭವಾಯಿತು. ನಾವು ಕಲ್ಕತ್ತೆಯ ಕಡೆ ಪಯಣಿಸುತ್ತಿದ್ದ ರಾತ್ರಿ ಭಾರಿ ಮಳೆಬಿದ್ದಿತ್ತು, ಇಲ್ಲಿ. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದ, ಲವಾರು ಮಳು ಬುಡಮೇಲಾದ, ಆರು ಜನ ಸತ್ತಿದ್ದ, ನೂರಾರು ಮಂದಿಯ ಗುಡಿಸಲು ನಾಶವಾದ ಸುದ್ದಿಯನ್ನು ನಿನ್ನಿನ ನ್ಯೂಸ್ ಪೇಪರಿನಲ್ಲಿ ಓದಿದ್ದೆವು. ಅದೇ ಪ್ರಕರಣ ಮರುಕಳಿಸಬಹುದೇನೋ ಎಂಬ ಭಯವಾಯಿತು. ಆದರೆ ನಮ್ಮ ದೇವಾನುದೇವತೆಗಳು ಶರಣಕ್ಷಕರಲ್ಲವೇ, ಅರ್ಧ ಗಂಟೆಯಲ್ಲಿ ಮಳೆ ನಿಂತು ವಾತಾವರಣದಲ್ಲಿ ಸೂರ್ಯ, ಹೊಂಗಿರಣಗಳು ಚೆಲ್ಲಾಡಿದುವು.

ಮಾರ್ಗದರ್ಶಿ ದಾರಿಯುದ್ದಕ್ಕೂ ಆಗಾ ಏನೇನೋ ಹೇಳುತ್ತಿದ್ದ. ಆ ಕಡೆ ನೋಡಿ, ಈ ಕಡೆ ನೋಡಿ ಸದಿದೆ ಇದಿದೆ ಎಂದು ಹೇಳಿದಾಗೆ ನಾವೆಲ್ಲ ಸೂತ್ರದ ಬೊಂಬೆಗಳಂತೆ ಕತ್ತು ತಿರುಗಿಸುತ್ತಿದ್ದೆವು, ಕಣ್ಣು ಹಾಯಿಸುತ್ತಿದ್ದೆವು. ಅವನು ಹೇಳಿದ್ದನ್ನೆಲ್ಲ ಕಾಣುತ್ತಿದ್ದೆವು. ಅವನು ದೇವಸ್ಥಾನಗಳಲ್ಲಿ ಭಕ್ತಿಪರವಶನಾಗುತ್ತಿದ್ದ, ಮೂಸಿಯಂಗಳಲ್ಲಿ ಸರ್ವಶ್ರುತನಾಗುತ್ತಿದ್ದ, ಸ್ಮಾರಕಗಳ ಮುಂದೆ ದೇಶಪ್ರೇಮವನ್ನು ತುಳುಕಿಸುತ್ತಿದ್ದ, ನಾವೆಲ್ಲ ಬಸ್ಸಿನಿಂದ ಹೊರಗೆ ಅಡ್ಡಾಡುವಾಗ ಅವನು ಸೀಟಿಗೊರಗಿಡ್ಡಾಗುತ್ತಿದ್ದ! ಆದರೂ ಮಾತುಗಾರ. ಆವನ ಪರಿಚಯ ಮಾಡಿಕೊಂಡರು ನಾಗರಾಜ್; ಅವರಿಗೆ ಎಲ್ಲರ ವಿಳಾಸ ಪಡೆಯುವ, ತಮ್ಮದನ್ನು ಎಲ್ಲರಿಗೆ ಕೊಟ್ಟು, ಬೆಂಗಳೂರಿಗೆ ತಮ್ಮ ಮನೆಗೆ ಆಹ್ವಾನಿಸುವ ಹವ್ಯಾಸ. ಬಸ್ಸಿನಲ್ಲಿ ಪರಿಚಯ ಮಾಡಿಕೊಂಡ ಇನ್ನೊಬ್ಬನೆಂದರೆ ಜಪಾನೀ ಪ್ರವಾಸಿ. ಅವನು ಹೊಸದಾಗಿ ಮದುವೆಯಾದವನಂತೆ ಕಾಣುವ ಯುವಕ, ಹೆಂಡತಿಯೂ ಜೊತೆಗಿದ್ದಳು. ಆದರೆ ಚೆಲ್ಲುಚೆಲ್ಲಾದವರಲ್ಲ, ಗಂಭೀರವಾಗಿದ್ದವರು. ಮುಗ್ಧವಾಗಿ ನಕ್ಕು ಕೈ ಜೋಡಿಸಿ ಕೃತಜ್ಞತೆ ಹೇಳುವ ರೀತಿ ಕಣ್ಣಿಗೆ ಕಟ್ಟಿದಂತಿದೆ. ಅವರನ್ನು ನಾಗರಾಜ್ ಐದುಕೋಟಿ ಕನ್ನಡಿಗರ ಪರವಾಗಿ ಕರ್ನಾಟಕಕ್ಕೆ ಭೇಟಿ ಕೊಡಲು ಆಹ್ವಾನ ನೀಡಿದರು. ಆತ, ಅವನ ಹೆಸರನ್ನೇನೋ ಹೇಳಿದ್ದ, ಆದರೆ ಹೆಸರು ನೆನಪಿರುವುದೇ; ನೆನಪಿನಲ್ಲಿರಬೇಕಾದ ನನ್ನ ಮಟ್ಟಿಗೆ ಮುಖ್ಯವಾದ ವಿಷಯಗಳೆಷ್ಟೋ ಮರೆತು ಹೋಗುತ್ತವೆ, ಇನ್ನು ಆತನ ಹೆಸರು! ಆದರೆ ಆತ ಒಳಗೋಡಿ, ಬಸ್ಸಿನಲ್ಲಿದ್ದ ತನ್ನ ಬ್ಯಾಗಿನಲ್ಲಿ ಟೂರಿಸ್ಟ್ ಗೈಡ್ ತಂದ, ಜಪಾನೀ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬಣ್ಣ ಬಣ್ಣವಾಗಿ ಮುದ್ರಿತವಾಗಿದ್ದ ಭಾರತದ ಬಗೆಗಿನ ಟೂರಿಸ್ಟ್ ಗೈಡ್ ಅದು. ಮಾಹಿತಿ ನೀಡಿದ್ದ ಊರಿನ ಪ್ರಮುಖ ವಸ್ತುವಿನ ಬಣ್ಣದ ಚಿತ್ರವೂ ಅದರಲ್ಲಿ ಮುದ್ರಿತವಾಗಿತ್ತು. ಮೈಸೂರುಗಳ ವಿಷಯವೂ ಅಲ್ಲಿತ್ತು. ಯಥಾಪ್ರಕಾರ ವಿಧಾನಸೌಧ ಹಾಗೂ ಬೆಂಗಳೂರು, ಮೈಸೂರಿನ ಅರಮನೆಗಳ ಚಿತ್ರ ಅಲ್ಲಿ ರಾರಾಜಿಸುತ್ತಿದ್ದವು. ಬೆಂಗಳೂರಿನ ಮಾಹಿತಿಯಿದ್ದ ಹಾಳೆಯ ಮಾರ್ಜಿನ್‌ನಲ್ಲಿ ತಮ್ಮ ವಿಳಾಸ ಬರೆದರು ನಾಗರಾಜ್. ಹಳೇಬೀಡು, ಬೇಲೂರು, ಬಾದಾಮಿ ಇವೆಲ್ಲದರ ಬಗ್ಗೆ ಏನೇನೋ ಹೇಳುತ್ತಿದ್ದರು. ತಾವೇನಾದರೂ ಜಪಾನಿಗೆ ಹೋದಾಗ ಅಲ್ಲಿ ನೆರವಾಗಬಹುದೆಂದೋ, ಅಥವಾ ಅಲ್ಲಿಗೆ ಹೋಗುವುದಕ್ಕೆ ನೆರವಾಗಬಹುದೆಂದೋ ಆತನೊಡನೆ ಸ್ನೇಹ ಬೆಳಸಿದ್ದರು.

ಹೌರಾಕ್ಕೆ ಫೆರಿಯಲ್ಲಿ ತಲುಪಲು ಹತ್ತಿರದಲ್ಲಿರುವ ಜಾಗದ ಬಳಿ ಬಸ್ಸು ನಿಲ್ಲಿಸಲು ಕೇಳಿಕೊಂಡೆವು. ಅಲ್ಲಿಳಿದು ಬಂದೆವು.

****

ಕೋವಿಯಿಂದ ಕಾವಿಗೆ

ಒಬ್ಬ ವಿಶಿಷ್ಟ ವ್ಯಕ್ತಿ, ಸಾಧ್ಯವಾದರೆ ಭೇಟಿಯಾಗೋಣ ಎಂದಿದ್ದರು ಪಂಡ. ಈಗಿನ ಜನತಾದಳದ ಸಚಿವರು ಆವರು: ರಾಜಕಾರಣಿಯಾಗಿರುವುದರ ಜೊತೆಗೆ ಪ್ರಾಧ್ಯಾಪಕ, ಕವಿ, ಕ್ರಾಂತಿಕಾರಿ, ತಪಸ್ವಿ, ಆಕರ್ಷಕ ಮಾತುಗಾರ. ಈಗ ಧರಿಸುವುದು ಕಾವಿಯನ್ನಂತೆ. ಅವರು ಭೇಟಿಗೆ ದೊರೆಯುವುದೇ ಕಷ್ಟ; ದಿನಕ್ಕೆ ನಾಲ್ಕಾರು ಕಡೆ ಉಪನ್ಯಾಸಗಳು. ಸಚಿವರೆಂದ ಮೇಲೆ ಸಿಕ್ಕುವುದು ಅಸಾಧ್ಯವೆಂದುಕೊಂಡು, ಅಥವಾ ಬೇರೆ ರಾಜ್ಯದಿಂದ ಬಂದ ಸಾಹಿತಿಗಳೆಂದು ಭೇಟಿಯಾದರೂ ಒಂದೈದು ನಿಮಿಷ, ಷ್ಟೇ ಅಂದುಕೊಂಡೆ. ಫೋನ್ ಮಾಡಿ ಅವರು ಊರಲ್ಲಿದ್ದರೆ ಹೋಗೋಣ ಎಂದಿದ್ದರು, ಪಂಡ.

ನಾವು ಕಲ್ಕತ್ತೆಯಿಂದ ಬಂದ ಮೇಲೆ, ನಾವು ಬರುವ ವೇಳೆ ತಿಳಿದಿದ್ದುದರಿಂದ, ಬೆಳಿಗ್ಗೆ ಒಂಬತ್ತರ ವೇಳೆಗೆ ಪಂಡ ಅವರೇ ನಮ್ಮ ಹೊಟೇಲಿಗೆ ಬಂದರು. ಇನ್ನೂ ಉಳಿದಿದ್ದ ಬೆಂಗಳೂರಿನಿಂದ ತೆಗೆದುಕೊಂಡು ಹೋಗಿದ್ದ ಕುರುಕು ತಿಂಡಿಯನ್ನು ತಿನ್ನುತ್ತ, ಟೀಗೆ ಹೇಳಿ ಮಾತನಾಡುತ್ತ ಕುಳಿತುಕೊಂಡೆವು. ಆನಂತರ ಬಟ್ಟೆ ಧರಿಸಿ, ಯಾರಾರನ್ನು ನೋಡುವುದೆಂದು ತೀರ್ಮಾನಿಸಿದೆವು. ನಾವಂದುಕೊಂಡವರು ಸಿಕ್ಕಲಿಲ್ಲ, ಒಂದಿಬ್ಬರನ್ನು ಭೇಟಿಯಾಗಿದ್ದೆವು. ಅಷ್ಟು ಹೊತ್ತಿಗೆ ಹಸಿವಾಗಿತ್ತು; ಊಟ ಮಾಡಿದೆವು. ಈಗಲೇ ಸಚಿವರ ಮನೆಗೆ ಹೋಗಿಬಿಡೋಣ, ಛಾನ್ಸ್ ತೆಗೆದುಕೊಳ್ಳೋಣ ಎಂದರು. ಫೋನು ಗೀನು, ಕಾಯುವುದು, ಇವುಗಳ ಬದಲು ಇದೇ ಸರಿ ಎಂದು ತೀರ್ಮಾನಿಸಿದೆವು. ಸರಿ, ದೂರವಾದ್ದರಿಂದ ಅವರ ಮನೆಯ ಕಡೆ ಹೋಗುವ ಸಿಟಿ ಬಸ್ಸಲ್ಲಿ ಕೂತೆವು.

ನಾವು ನೋಡಲಿದ್ದವರು ಪ್ರಸನ್ನ ಕುಮಾರ ಪಟ್ಸಾನಿ; ಈಗ ಒರಿಸ್ಸಾದ ಕುಂದುಕೊರತೆಗಳ ಸಚಿವರು. ಡಾಕ್ಟರೇಟ್ ಪದವಿ ಗಳಿಸಿದ್ದವರು, ವಿದೇಶ ಸಂಚಾರ ಮಾಡಿದ್ದವರು. ಚಿಕ್ಕ ವಯಸ್ಸಿನಲ್ಲಿ ಅವರು ನಕ್ಸಲೈಟ್ ಆಗಿ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರಂತೆ. ಅವರ ಬಗ್ಗೆ ಕೇಳಿದಂತೆಲ್ಲ ವಿಚಿತ್ರವೆನ್ನಿಸುತ್ತಿತ್ತು. ಸಚಿವರಾಗಿರುವರೆಂದ ಮೇಲೆ ರಾಜ್ಯದ ರಾಜಕೀಯದಲ್ಲಿ ಪ್ರಮುಖರೆಂಬುದು ಸುಸ್ಪಷ್ಟ. ಅವರು ಕವಿಗಳಾಗಿ ಕೆಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ. (ಕುತೂಹಲದಿಂದ ಬೆಂಗಳೂರಿಗೆ ಬಂದ ಮೇಲೆ ಭಾರತೀಯ ಸಾಹಿತ್ಯ ಸಮೀಕ್ಷೆ ನೋಡಿದೆ. ಅದು ಮೂಲ ಇಂಗ್ಲೀಷಿನಲ್ಲಿ ಪ್ರಕಟವಾಗಿ ಆಗಲೇ ಹದಿನಾಲ್ಕು ವರ್ಷಗಳಷ್ಟು ಕಾಲವಾಗಿದೆ. ಅಲ್ಲದೆ ಅಲ್ಲಿ ಗಣನೆಗೆ ಬಂದಿರುವುದು ೧೯೭೧ರ ದಶಕದವರೆಗಿನ ಕೃತಿಗಳು ಮಾತ್ರ. ಆದರೂ ಪಟ್ಸಾನಿಯವರ ಹೆಸರು ಆಧುನಿಕ ಕಾವ್ಯದ ಬಗೆಗಿನ ಲೇಖನದಲ್ಲಿ ಕಾಣಿಸಿಕೊಂಡಿದೆ. ಇನ್ನೊಬ್ಬರ ಹೆಸರು ಹೇಳಿ ....ತ್ತು ಪ್ರಸನ್ನಕುಮಾರ್ ಪಟ್ಸಾನಿ (೧೯೪೭) ಅವರು ವಾಮಪಂಥೀಯ 'ಪ್ರಗತಿಶೀಲ ಕವನಗಳನ್ನು ಬರೆಯುತ್ತಿದ್ದಾರೆಎಂದು ಸೂಚಿಸಲಾಗಿದೆ. ಸಿಕ್ಕುವರೋ ಇಲ್ಲವೋ ಎಂಬ ಅನುಮಾನ ಮಾತ್ರ ಇತ್ತು.

ಬಸ್ಸು ಇಳಿದರೆ ಕೆಲವೇ ಹೆಜ್ಜೆಗಳಲ್ಲಿ ಅವರ ಮನೆ. ಮುಂದೆ ಒಂದೆರಡು ಜೀಪುಗಳು ನಿಂತಿದ್ದವು; ರಜಾ ದಿನ ಬೇರೆ (ಅಂಬೇಡ್ಕರ್ ಜಯಂತಿ) ಇರಬಹುದು, ಆದರೆ ಜನರೂ ಇರುತ್ತಾರೇನೋ ಎನಿಸಿತು. ಆದರೆ ಮನೆಯ ಮುಂದೆ ಹೋದರೆ ಅಂಗಳದಲ್ಲಿ ಅವರು ಕುಳಿತಿದ್ದುದನ್ನು ಪಂಡ ಗುರುತಿಸಿದರು. ಗೇಟು ತೆರೆದೇ ಇತ್ತು. ಪಂಡ ನಾಲ್ಕಾರು ಮಂದಿಯ ಗುಂಪಿನ ನಡುವೆ ಇದ್ದವರ ಬಳಿ ಹೋದರು. ಲಂಗ-ಪಂಚೆ (ಕಾವಿಯದು) ಉಟ್ಟ ವ್ಯಕ್ತಿ ಕುರ್ಚಿಯ ಮೇಲೆ ಕಾಲುಗಳನ್ನು ಮಡಿಸಿಕೊಂಡು ಕೂತಿದ್ದಾರೆ; ಅವರೇ ಪ್ರಸನ್ನ ಕುಮಾರ್ ಪಟ್ಸಾನಿ, ನೀಳವಾದ ಕೂದಲು, ಕೆನ್ನೆಗಳಲ್ಲಿ ಸ್ವಲ್ಪವಾಗಿ ಗದ್ದದ ಬಳಿ ದಟ್ಟವಾಗಿ ಬೆಳೆದ ನೀಳವಾದ ಗಡ್ಡ; ಕಪ್ಪಗಿದೆ. ಎದೆಯ ಮೇಲೆ ಬಟ್ಟೆಯಿಲ್ಲ, ಜನಿವಾರ ಇಳಿಬಿದ್ದಿದೆ. ಸಣ್ಣ ಕಣ್ಣುಗಳ ವ್ಯಕ್ತಿ. ಪಂಡ ಯಥಾಪ್ರಕಾರ ಒರಿಯಾದಲ್ಲಿ ಪರಿಚಯ ಹೇಳಿದರು. ಸಚಿವರು ಎದುರಿಗಿದ್ದ ಕುರ್ಚಿಯಲ್ಲಿ ನಮಸ್ಕಾರ ಹೇಳುತ್ತ ಕೂಡಿಸಿದರು. ಇನ್ನೊಂದೆರಡು ಕುರ್ಚಿಗಳಿಗಾಗಿ ಅಲ್ಲಿದ್ದವರು ಹೋಗಿ ತೆಗೆದುಕೊಂಡು ಬಂದರು.

ನೀವು ಸಿಗುವಿರೋ ಇಲ್ಲವೋ ಎಂದುಕೊಂಡೇ ಬಂದೆವುಎಂದು ಮಾತಿಗಾರಂಭಿಸಿದರು.

ಸ್ವಲ್ಪ ಹೊತ್ತಾಯಿತಷ್ಟೆ ಬಂದು, ಆಫೀಸಿಗೆ ಹೋಗಿದ್ದೆ.

ರಜ ಅಲ್ಲವೇ ಇವತ್ತು?”

“ಆದರೇನು ನೋಡಲು ಜನ ಬಂದಿದ್ದರು. ಇಲ್ಲಿಯವರೆಗೆ ಭೇಟಿಯಿತ್ತು ಬಂದೆ.”

"ಎಷ್ಟಾದರೂ ಕುಂದುಕೊರತೆಗಳ ಸಚಿವರಲ್ಲವೇ? ದೇಶದಲ್ಲಿ ಕೊರತೆಗಳಿಗೇನು ಕೊರತೆ!'” ಎಂದು ಚಟಾಕಿ ಹಾರಿಸಿದೆ. ಇತರರೊಡನೆ ನಕ್ಕೆವು. ನಮ್ಮ ಪರಿಚಯ ಮಾಡಿಕೊಂಡೆವು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಬಂದಿರುವ ವಿಷಯ ತಿಳಿಸಿದೆ. ಹಿದೆ ಒರಿಯಾ-ಕನ್ನಡ ದ್ವಿಭಾಷಾ ವಿಚಾರಸಂಕಿರಣದ ಹೊತ್ತಿಗೆ ಬೆಂಗಳೂರಿಗೆ ಅವರೂ ಬಂದಿದ್ದರಂತೆ.

ಟೀ ತರಲು ಹೇಳಿ ಸುತ್ತಲಿದ್ದ ನಾಲ್ಕಾರು ಜನರನ್ನು ಪರಿಚಯಿಸಿದರು. ಅವರಲ್ಲಿ ಒಬ್ಬರು ಪಟ್ಸಾನಿಯವರ ಬಗ್ಗೆ ಸಂಶೋಧನೆ ಕೈಗೊಂಡಿರುವರಂತೆ! ತಾವು ರಾಜಕಾರಣಿಯಾದರೂ ವಿದ್ವಾಂಸರ ಜೊತೆಗೆ ಮಾತಾಡುವುದು ಇಷ್ಟ ಎಂದರು.

ನೀವು ನಕ್ಸಲೈಟ್ ಆಗಿದ್ದರಂತೆಎಂದು ಮಾತಿಗಾರಂಭಿಸಿದೆ. ನಿಮ್ಮ ತಾಯ್ತಂದೆಯರು ಅವಕಾಶವಿತ್ತರೇ?” ಎಂದೆ.

ಇದಕ್ಕೆಲ್ಲ ಯಾರಾದರೂ ಅನುಮತಿ ಕೇಳುತ್ತಾರೆಯೇ?” ಎಂದು ಸರಿಯಾಗಿಯೇ ಪ್ರಶ್ನಿಸಿದರು.

ಅಲ್ಲಿಂದ ಟ್ರಾನ್ಸೆಂಡೆಂಟಲ್ ಮೆಡಿಟೇಷನ್‌ವರೆಗೆ ನಿಮ್ಮ ಪ್ರಯಾಣ ಹೇಗೆ?” ಎಂದು ಪ್ರಶ್ನಿಸಿದೆ.

ಆಗಿನ ಅನುಭವಗಳನ್ನು ಹೇಳಿಕೊಂಡರು. ಹದಿನೆಂಟು ಇಪ್ಪತ್ತು ವಯಸ್ಸಿನವರಾಗಿದ್ದಾಗ ಒರಿಯ-ಬಂಗಾಳ ಗಡಿಯ ಕಾಡುಗಳಲ್ಲಿ ಅಡಗಿ ಚಟುವಟಿಕೆಗಳಲ್ಲಿ ತೊಡಗಿದ್ದ ಕಾಲವಂತೆ. ಬಂಗಾಳದ ಪೊಲೀಸರು ನಕ್ಸಲೈಟ್‌ಗಳ ತೀವ್ರ ಶೋಧದಲ್ಲಿ ನಿರತರಾಗಿದ್ದರು. ಅವರಿಂದ ತಪ್ಪಿಸಿಕೊಳ್ಳಲೆಂದು ಎಲ್ಲೆಲ್ಲೋ ಓಡಾಡುತ್ತ ಬಂದಾಗ ಒಬ್ಬ ಸಾಧುವಿನ ಆಶ್ರಮ ಸಿಕ್ಕಿತಂತೆ. ಅಲ್ಲಿ ಹೋಗಿ ಕುಳಿತರು. ಇವರ ಕತೆ ಕೇಳಿದ ಸಾಧು ಇವರಿಗೆ ಧ್ಯಾನದ ವಿಷಯ ತಿಳಿಸಿಕೊಟ್ಟನಂತೆ, ಯಾವುದೋ ಹಿಂದಿನ ಕಾಲದ ಕತೆ ಕೇಳಿದಂತಿತ್ತು. ಅಂಗುಲಿಮಾಲನ ಕತೆಯಂಥದು, ಆಮೇಲೆ ಅವನೇ ಮಹೇಶ್ ಯೋಗಿಗೆ ಭೇಟಿ ಮಾಡಿಸಿದನಂತೆ ಪಟ್ಸಾನಿಯವರನ್ನು. ಆತ ತಮ್ಮ ಚಾರ್ಟರ್ಡ್ ವಿಮಾನದಲ್ಲಿ ಪಾಸ್‌ಪೋರ್ಟಿಲ್ಲದಿದ್ದರೂ ಇವರನ್ನು ಸ್ವೀಡನ್ನಿಗೆ ಕರೆದೊಯ್ದರಂತೆ. ಅಲ್ಲಿನ ವಿಶ್ವವಿದ್ಯಾನಿಲಯ ವಿಜ್ಞಾನಕ್ಕೆ ಮೀಸಲಾದುದು. ಪಟ್ಸಾನಿ ಮನೋವಿಜ್ಞಾನದ ವಿದ್ಯಾರ್ಥಿಯಾದ್ದರಿಂದ ಅಲ್ಲಿ ಡಾಕ್ಟರೇಟ್ ಪಡೆದರಂತೆ - ಇವೆಲ್ಲ ಕೆಲಕಾಲವಾದ ಮೇಲೆ, ಅನ್ನಿ. ನಿಮ್ಮ ನಿಬಂಧದ ವಿಷಯವಾವುದು?” ಎಂದೆ. 'The Effect of the Dynamics of Conciousness on Crimes' ಎಂದರು.

ಮಹೇಶಯೋಗಿ, ಅತೀಂದ್ರಿಯ ಧ್ಯಾನ ಇತ್ಯಾದಿಗಳ ವಿಷಯ ಕೇಳಿದ್ದೆ; ಏನೆಂದರೆ ಗೊತ್ತಿಲ್ಲ. ವ್ಯಕ್ತಿ ಪ್ರಜ್ಞೆಯ ಮೂಲಕ ವಿಶ್ವಪ್ರಜ್ಞೆಯನ್ನು ಸೇರುವುದೇ ಧ್ಯಾನ ಎಂದೇನೇನೋ ವಿವರಿಸಿದರು. ಇಂಗ್ಲೆಂಡಿನಲ್ಲಿ ಭಾರತದ ಪರವಾಗಿ ಯಾವುದೋ ಅತಿಪ್ರಜ್ಞೆಯ ಬಗೆಗಿನ ವಿಚಾರಸಂಕಿರಣದಲ್ಲಿ ತಾವು ಭಾಗವಹಿಸಿದಾಗ, ತಮ್ಮ ಮಾತು ಸಭಿಕರ ಮೇಲೆ ಪ್ರಭಾವ ಬೀರಿದ್ದನ್ನು ವಿವರಿಸಿದರು. ಮಧ್ಯೆ ಮಧ್ಯೆ TM, TC, (Transendental Meditation, Transendental Cansciousness) ಎಂದೆನ್ನುತ್ತಿದ್ದರು. ಇಂಥ ವಿಷಯ ಬಂದಾಗ ತಿಳಿದವನಂತೆ ಕೆಲವು ವಿವರಣೆಗಳನ್ನು ಕೊಡುವ ಮಟ್ಟಿಗೆ ನಾನು ಜಾಣ, ಹಾಗೆ ಮಾಡಿದೆ. ಅವರ ಮಾತಿಗೆ ಪೂರಕವಾಗುವಂತೆ, ಆದರೆ ವಿವರಣೆ ಬಯಸಿ ಪ್ರಶ್ನೆಗಳನ್ನು ಹಾಕುತ್ತಿದ್ದೆ. ನಾನು ಕೆದಕಬೇಕೆಂದೂ ಆಶಿಸಿದ್ದೆ. ಆದರೆ ಅವರು ನಿಜವಾಗಿ ನಾನು ಆ ವಿಷಯಗಳಲ್ಲಿ ಆಸಕ್ತಿ ಹೊಂದಿದವನೆಂದು ಭಾವಿಸಿದರೋ, ನನಗೂ ಆ ವಿಷಯಗಳಲ್ಲಿ ತಕ್ಕ ಮಟ್ಟಿಗಿನ ಪ್ರವೇಶವಿದೆಯೆಂದು ಭಾವಿಸಿದರೋ ಅವರು ಪ್ರಸನ್ನವದನರಾಗೇ ಉತ್ತರಿಸಿದರು. ಸಮಾನ ಮನಸ್ಕರೊಡನೆ ಚರ್ಚಿಸುವುದೆಂದರೆ ಎಷ್ಟು ಸಂತೋಷದಾಯಕಎಂದೂ ಒಮ್ಮೆ ದ್ಗರಿಸಿದರು.

ಅವರು ಧ್ಯಾನವನ್ನು ಬಿಟ್ಟು ರಾಜಕೀಯದ ಕಡೆ ತಿರುಗಿದ ವಿಷಯಕ್ಕೆ ಮಾತು ಹೊರಳಿತು. ಯಾಕೆ ರಾಜಕೀಯಕ್ಕೆ ಬಂದರೆಂದು ಹೇಳಿದರೋ ನೆನಪಿಲ್ಲ; ಅಥವಾ ಆ ಪ್ರಶ್ನೆ ಬರಲೇ ಇಲ್ಲವೋ, ಅಥವಾ ನೀಡಿದ ಉತ್ತರ ಮರೆತುಹೋಗಿದೆಯೋ. ಆದರೆ ಅವರು ಈಗ ಸತತವಾಗಿ ಮೂರನೇ ಬಾರಿಗೆ ಭುವನೇಶ್ವರದ ಬಳಿಯ ಖುರ್ದಾ ಕ್ಷೇತ್ರವನ್ನು ಒರಿಸ್ಸಾ ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಮೊದಲ ಬಾರಿಗೆ ಕಾಂಗ್ರೆಸ್ ಟಿಕೆಟ್ ಮೇಲೆ ಆರಿಸಿ ಬಂದಿದ್ದರೆ ಎರಡನೆ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ, ಜನತಾದಳದ ಪ್ರತಿನಿಧಿ

“ಕಾಂಗ್ರೆಸ್‌ನ್ನು ಏಕೆ ಬಿಟ್ಟಿರಿ?” ದೆ ಚೇಷ್ಟೆಯಿಂದ. ನಿಮ್ಮದೂ ಹಾರುವ ಸಂಪ್ರದಾಯ ಎಂಬ ವ್ಯಂಗ್ಯ ನನ್ನ ಧ್ವನಿ.

ನಾನೆಲ್ಲಿ ಬಿಟ್ಟೆ, ಅವರೇ ಓಡಿಸಿದರು' ಎಂದರು ನಗುತ್ತ.

“ಏಕೆ?”

ನನಗೆ ಬೇಕಾದಷ್ಟು ಜನ ಸಾಧುಗಳ ಮುನಿಗಳ ಪರಿಚಯ ಮೊದಲಿನಿಂದಲೂ. ನಮ್ಮ ಮನೆಗೆ ಅವರು ಬಂದು ಯಜ್ಞಯಾಗಾದಿಗಳಲ್ಲಿ ತೊಡಗಿರುತ್ತಿದ್ದರು. ಅದನ್ನು ಕಂಡು ನಮ್ಮ ಪಾರ್ಟಿಯಲ್ಲಿ ಕೆಲವರು ಆಗಿನ ಮುಖ್ಯಮಂತ್ರಿಗಳಾದ ಜೆ. ಬಿ.ಟ್ನಾಯಕ್   ಅವರನ್ನು ಪದಚ್ಯುತಗೊಳಿಸಲು ಮಾಯಾಮಾಟ ಮಾಡಿಸುತ್ತಿರುವನೆಂದು ದೂರಿದರು. ನಮ್ಮ  ಮುಖ್ಯಮಂತ್ರಿಗಳ ಹೌಸಿಂಗ್ ಬೋರ್ಡ್ ಮನೆಯೊಂದರಲ್ಲಿ ವಾಸಿಸುತ್ತಿದ್ದ ನನ್ನನ್ನು ರಾತ್ರೋರಾತ್ರಿ ಖಾಲಿ ಮಾಡಿಸಿದರು. ಆಮೇಲೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ.”

ನಿಮ್ಮನ್ನು ಮನೆಯಿಂದ ಓಡಿಸಿದರೇ?” ಎಂದು ಆಶ್ಚರ್ಯದಿಂದ ಕೇಳಿದೆ. ಈ ವಿಷಯವನ್ನು ಪಂಡ ಮೊದಲೇ ಹೇಳಿದ್ದರು. ಆದರೆ ವಿವರಗಳನ್ನು ಅವರ ಬಾಯಿಯಿಂದಲೇ ಕೇಳಲು ಹಾಗೆ ಆಶ್ಚರ್ಯ ನಟಿಸಿದೆ.

ಹೌದು, ರಾತ್ರೋರಾತ್ರಿ, ಆಮೇಲೆ ನಮ್ಮ ಕ್ಷೇತ್ರದ ಜನರೆಲ್ಲ ಸೇರಿ ವಂತಿಗೆ ಕೂಡಿಸಿ ಈ ಮನೆ ಕಟ್ಟಿಸಿಕೊಟ್ಟರು” ಎಂದರು ಮೇಲೆ ತೋರಿಸಿ. ಇನ್ನೂ ಪುರ್ತಿಯಾಗದ ಮನೆ, ಸಚಿವರ ಮನೆಯಂತೆ ಥಳುಕು ಪಳುಕು ಇಲ್ಲ. ಅವರು ಹೇಳುತ್ತಿದ್ದುದು ನಿಜವಿರಬೇಕು. “ಒಳಗೆ ಹೋಗಿ ಅಲ್ಲಿನ ಫಲಕ ನೋಡಿ ಬನ್ನಿ ಎಂದರು.

ಎದ್ದು ಮನೆಯ ವರಾಂಡದೊಳಗೆ ಕಾಲಿಟ್ಟರೆ ನೇರವಾಗಿ ಎರಡು ಮಟ್ಟದ ಗೋಡೆಯಲ್ಲಿ ಕಲ್ಲಿನಲ್ಲಿ ಕೆತ್ತಿ ಅಂಟಿಸಿದ ಫಲಕ ಕಾಣಿಸಿತು. ಅದರ ಮೇಲೆ ಒರಿಯಾ ಭಾಷೆಯಲ್ಲಿ ಅದರ ಕೆಳಗೆ ಇಂಗ್ಲಿಷಿನಲ್ಲಿ ಬರಹ, ಇಂಗ್ಲೀಷಿನ ಭಾಗವಿದು.

This building is donated by the people of KHURDA

to our beloved leader, poet, professor Dr. Prasanna Patsani,

in protest of illegal eviction in the night of 21 - 09 -1986

by the Chief Minister, Orissa.

Inaugurated by: Dr. Radhanath Rath

Editor, Samaj

On SRIGUDICHA, 1987"

ಆ ಭಾಗವನ್ನು ನನ್ನ ನೋಟ್ ಪುಸ್ತಕದಲ್ಲಿ ಬರೆದುಕೊಂಡು ಬಂದೆ. ನಿಜವಾಗಿ ಆಶ್ಚರ್ಯವಾಗಿತ್ತು. ಅಲ್ಲದೆ ಸ್ವಲ್ಪ ಗುಮಾನಿ ಕೂಡ. ಹೇಳಿ ಕೇಳಿ ರಾಜಕಾರಣಿ; ತಾನೇ ಮನೆಕಟ್ಟಿಸಿ ಕ್ಷೇತ್ರದ ಜನ ಕಾಣಿಕೆಯಾಗಿ ಕೊಟ್ಟರು ಎಂದು ಹೇಳುವುದು ಕಷ್ಟವೂ ಅಲ್ಲ, ಅಸಂಭವವೂ ಅಲ್ಲ.

"ನೀವು ಮಾ ಮಾಡಿಸದಿದ್ದರೂ ಜಿ.ಬಿ ಪಟ್ನಾಯಕ್ ಅಧಿಕಾರ ಕಳೆದುಕೊಂಡರಲ್ಲ ಎಂದೆ ವಾಪಸ್ಸು ಬಂದು. ಪಟ್ಸಾನಿ ಕ್ಕರು. ಟೀ ಬಂದಿತು. ಒಳಗಿನಿಂದ ತಮ್ಮ ಬಯೋಡೇಟ ತನ್ನಿ ಎಂದರು. ಅವರ ಆಪ್ತಸಹಾಯಕ ತಂದು ನಮಗಿತ್ತ. ಆದರೆ ಅದೊಂದೇ ಪ್ರತಿ ಇರುವುದು ಎಂದನಾತ. ”ಆಮೇಲೆ ಪ್ರತಿ ಕಳಿಸಿಕೊಡುತ್ತೇನೆ” ಎಂದು ಪಟ್ಸಾನಿ ನಮ್ಮ ವಿಳಾಸಗಳನ್ನು ಗುರುತು ಹಾಕಿಕೊಳ್ಳಲು ಹೇಳಿದರು.

ನನಗೆ ಅನೇಕ ಅನುಮಾನಗಳಿದ್ದವು. ಅವರು ಕ್ರಾಂತಿಯ ಕಡೆಯಿಂದ ಸನ್ಯಾಸಿಯ ಹಾಗೆ ಬಟ್ಟೆ ತೊಡುವ ರೀತಿಯಲ್ಲಿ ಬದಲಾಗಲು ಕಾರಣಗಳೇನು? ಎನ್.ಟಿ. ರಾಮರಾವ್ ಅವರಂತ ಪಟ್ಸಾನಿ ನೀಳವಾದ ಕಾವಿ ಧರಿಸುವುದಿಲ್ಲ, ರುದ್ರಾಕ್ಷಿ ಹಾಕಿಲ್ಲ, ವಿವೇಕಾನಂದರ ಭಂಗಿಯಲ್ಲಿ ನಿಲ್ಲುವುದಿಲ್ಲ. ಜನರ ಜತ ಸಲೀಸಾಗಿ ಬೆರೆಯುತ್ತಾರೆ. ಅವರ ಮಾತಿನ ಆಕರ್ಷಣೆಗೆ ಜನ ಒಲಿಯುತ್ತಾರೇನೋ! ಮಹೇಶಯೋಗಿಗಳಂಥವರಿಂದ ಇನ್ನೇನಿಲ್ಲದಿದ್ದರೂ ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸುವ ತಂತ್ರವನ್ನು ಅವರು ಸಂಪಾದಿಸಿರಬಹುದು. ಇವರ ಭಾಷಣ ಹೇಗಿರುತ್ತದೋ! ಕಾವಿ ತೊಟ್ಟರೂ ಅವರು ಸಂಸಾರಿಯೇ; ಹೆಂಡತಿ-ಮಕ್ಕಳು ಮನೆಯ ಒಳಗಡೆ ಇದ್ದರೇನೋ. ಇಂತಹ ಻ನೇಕ ಻ನುಮಾನಗಳು ನನ್ನನ್ನು ಕಾಡಿದವು. ಧ್ಯಾನದ ಸ್ಥಿತಿಯಿಂದ ಜಾಗೃದವಸ್ಥೆಗೆ ಬರುವುದು, ಕಾರ್ಯ ನಿರ್ವಹಣೆಯ ಮೇಲೆ ಧ್ಯಾನದ ಪರಿಣಾಮ, ಜನತಾದಳದ ಪ್ರಸ್ತುತ ಸ್ಥಿತಿ - ಇವೆಲ್ಲದ ಬಗ್ಗೆ ಪ್ರಶ್ನೆಗಳನ್ನು ಹಾಕಿ ಪಟ್ಸಾನಿಯವರನ್ನು ಕೆಣಕಬೇಕು ದುಕೊಂಡಿದ್ದೆ. ಆದರೆ ಅಷ್ಟು ಹೊತ್ತಿಗೆ ನಾವು ಬಂದು ಒಂದು ಗಂಟೆಯ ಮೇಲಾಗಿತ್ತು. ಒಂದು ಗುಂಪು ಕಾರಿನಿಂದಿಳಿದು ಬಂದು ಈಚೆಗೆ ತಾನೇ ನಡೆದಿದ್ದ ಸಂಪುಪುನಾರಚನೆಗೆ ಹಿಂದಿದ್ದ ಮಂತ್ರಿಮಂಡಳದಲ್ಲಿ ವಿದ್ಯಾಮಂತ್ರಿಯಾಗಿದ್ದವರು ಬಂದಿದ್ದರು. ಪಟ್ಸಾನಿಯವರೇ ಅವರಿಗೆ ನಮ್ಮ ಪರಿಚಯ ಮಾಡಿಸಿದರು. “ಮೀಟಿಂಗ್ ಇದೆ ನೋಡೋಣ” ಎಂದು ಕೈಕುಲುಕಿದರು. ನಿಂತರೆ ಎತ್ತರದ ಒಳ್ಳೆಯ ಮೈಕಟ್ಟಿನ ಆಸಾಮಿ. ಮಾತನಾಡುವಾಗ ಕಿರಿದಾದ ಕಣ್ಣನ್ನು ಮತ್ತಷ್ಟು ಕಿರಿದುಗೊಳಿಸುತ್ತಾರೆ ಅಥವಾ ಮುಚ್ಚಿಕೊಳ್ಳುತ್ತಾರೆ. ಮುಖಭಾವವನ್ನು ತೀವ್ರ ರೀತಿಯಲ್ಲಿ ಬದಲಾಯಿಸುತ್ತ ಕೈಯಾಡಿಸಿ ಮಾತನಾಡುವ ಪಟ್ಸಾನಿಯವನ್ನು ನಾವು ಕಂಡದ್ದು ನೀರಲ್ಲಿ ತೇಲುವ ಹಿಮಗಡ್ಡೆಯ ಮೇಲುತುದಿಯನ್ನು ಕಂಡ ಹಾಗೆ ಮಾತ್ರ ಎನಿಸಿತ್ತು.

****

ಸಾಹಿತಿ- ಮಾಹಿತಿ

ನಮ್ಮ ಹಿಟ್‌ಲಿಸ್ಟಲ್ಲಿ ಸೇರ್ಪಡೆಯಾಗಿದ್ದ ಸಾಹಿತಿಗಳು ಹತ್ತಾರು ಮಂದಿ. ಅದನ್ನು ತಯಾರಿಸಲು ಪಂಡ ಮುಖ್ಯ ಕಾರಣರು; ಅವರೊಡನೆ ಒರಿಸ್ಸಾ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಇಂದುಭೂಷಣ ಕರ್ ಅನೇಕರನ್ನು ಭೇಟಿ ಮಾಡಲು ಸೂಚಿಸಿದರು. ಹಾಗೆ ನೋಡಿದರೆ ನಾವು ನೋಡಿದ ಮೊದಲ ಸಾಹಿತಿ (ಪಂಡ ಅವರನ್ನು ಬಿಟ್ಟಂತೆ) ಕರ್ ಅವರೇ. ಸಾಹಿತ್ಯ ಅಕಾಡೆಮಿಯ ಕಚೇರಿ ತುಂಬ ಸನಿಹದಲ್ಲಿದ್ದುದೂ ಒಂದು ಕಾರಣ. ನಾವು ಅಲ್ಲಿಗೆ ಹೋದಾಗ ಸಾಯಂಕಾಲ ನಾಲ್ಕೂವರೆ ಆಗಲೇ. ಅಕಾಡೆಮಿಗೆ ಹೆಸರಾಂತ ಸಾಹಿತಿಯೊಬ್ಬರು ಅಧ್ಯಕ್ಷರಾಗಿರುತ್ತಾರೆ; ಆದರೆ ಹೆಚ್ಚಿನ ಕೆಲಸವೆಲ್ಲ, ದಿನಗಟ್ಟಲೆಯದು, ಕಾರ್ಯದರ್ಶಿ ಮಾಡುತ್ತಾರೆ. ಕರ್‌ ಹಿರಿಯ ಬಿ.ಎ.ಎಸ್. ಅಧಿಕಾರಿಗಳು, ಸ್ವತಃ ಬರಹಗಾರರು. ದೊಡ್ಡ ಗಾತ್ರ, ದುಂಡು ಮುಖ, ಹೊಗೆಸೊಪ್ಪು ಆಗಿದು ಕಪ್ಪಾದ ಹಲ್ಲುಗಳು, ಬಕ್ಕತಲೆ, ಚಂಚಲ ಕಣ್ಣುಗಳು, ಮಾಸಿದ ದಭೆದಭೆ. ಎಲ್ಲ ಸಾಹಿತಿಗಳ ಬಗ್ಗೆಯೂ ಮೊನಚಾಗಿ ಕಾಮೆಂಟ್ ಮಾಡುತ್ತಾರೆ, ಸಮಯ ಬಂದಾಗ. ನಮ್ಮನ್ನು ತುಂಬ ಉತ್ಸಾಹದಿಂದ ಬರಮಾಡಿಕೊಂಡರು. ನಮ್ಮ ಜೀವನವಿವರ ತೆಗೆದುಕೊಂಡರು. ಶ್ಯಾಮಸುಂದರ ಬಿದರಕುಂದಿ ಒಮ್ಮೆ ಒರಿಸ್ಸಾಕ್ಕೆ ಭೇಟಿಯಿತ್ತಿದ್ದನ್ನು ನೆನಪಿಸಿಕೊಂಡರು. ತಮ್ಮ ಮಗಳು ಬೆಂಗಳೂರಲ್ಲಿರುವುದನ್ನು ಹೇಳಿದರು. ತಾವು ಸಂಪಾದಿಸುವ ಇಮೇಜ್ ಪತ್ರಿಕೆಯ ಬಗ್ಗೆ ಹೇಳಿದರು. ತಮ್ಮ ಅನುವಾದಗಳ ಬಗ್ಗೆ ಹೇಳಿಕೊಂಡರು. ಅವರು ಕವಿ ಕೂಡ. ಹತ್ತು ನಿಮಿಷದಲ್ಲಿ ಹತ್ತಾರು ವಿಷಯ ಪ್ರಸ್ತಾಪ ಮಾಡುತ್ತಾರೆ. ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳ ಬಗ್ಗೆ ಹೇಳಿದಾಗ ಚಕಿತರಾದರು. ಬೇರೆ ರಾಜ್ಯಗಳಿಗೆ ಭೇಟಿ ನೀಡುವ ಕಾರ್ಯಕ್ರಮ ತಮ್ಮ ಅಕಾಡೆಮಿಯಿಂದಲೂ ಆಗುತ್ತದೆ ಎಂದರು. ಈ ವರ್ಷ ಅನುದಾನ ನೀಡಿರುವ ಇಬ್ಬರಲ್ಲಿ ಒಬ್ಬರು ಕಾರಣಾಂತರಗಳಿಂದ ಹೋಗಲಾಗುತ್ತಿಲ್ಲ; ಪಂಡ ಅವರಿಗೇ ಇನ್ನೊಂದು ಅರ್ಜಿ ಸಲ್ಲಿಸಲು ಹೇಳಿದರು. ಆದರೆ ಅವರು ಒಳಹೋದಾಗ, ‘ಜೋರು ಮಾತುಗಾರರು' ಎಂದು ನಾನೆಂದಾಗ ಬರಿ ಮಾತು; ಕೆಲಸವಿಲ್ಲ' ಎಂದು ಪಂಡ ತಕ್ಷಣ ಪ್ರತಿಕ್ರಿಯಿಸಿದರು.

ಪಂಡ ಅವರ ಆಪ್ತಮಿತ್ರರಲ್ಲೊಬ್ಬರು ಹೃಷಿಕೇಶ ಮಲ್ಲಿಕ್, ಕವಿ, ಮೂಲತಃ ಒರಿಯಾ ಅಧ್ಯಾಪಕರಾದರೂ ಈಗ ಬಾಲಸಾಹಿತ್ಯ ಸಮಿತಿಯೆಂಬ ಸರ್ಕಾರೀ ವ್ಯವಸ್ಥೆಯ ಕಾರ್ಯದರ್ಶಿಯಾಗಿ ಡೆಪ್ಯೂಟ್ ಆಗಿದ್ದಾರೆ. ಡಾಕ್ಟರೇಟ್ ಪಡೆದ ಈತ ಸರಳ ವ್ಯಕ್ತಿ. 'ಧಾರಾ ಸೌಂತಗ್ರೋ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಬಾಲ ಸಾಹಿತ್ಯ ಸಮಿತಿ ಕಿರಿಯರಿಗಾಗಿ ವಿವಿಧ ಸಾಹಿತ್ಯಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಅದರ ಮುಖ್ಯ ಕಾರ್ಯವೆಂದರೆ ಶಿಶುಲೇಖಾ' ಎಂಬ ಮಾಸಪತ್ರಿಕೆಯೊಂದನ್ನು ನಡೆಸುವುದು. ಪ್ರತಿ ತಿಂಗಳೂ ಹೊರಬರುವ ಈ ಮ್ಯಾಗಸಿನ್ ಆಕಾರದ ಸುಮಾರು ನಲವತ್ತು - ನಲವತ್ತೆಂಟು ಪುಟಗಳ ಈ ಪತ್ರಿಕೆಯಲ್ಲಿ ವಿವಿಧ ವಯೋವರ್ಗದ ಬಾಲಕಬಾಲಕಿಯರಿಗೆಂದು ಹಲವಾರು ಬರಹಗಳನ್ನಲ್ಲದೆ, ಅವರಿಂದಲೇ ರಚಿತವಾದ ಬರಹಗಳೂ ಪ್ರಕಟವಾಗುತ್ತವೆ. ಪತ್ರಿಕೆಯ ಪ್ರಸಾರ ಸುಮಾರು ಇಪ್ಪತೈದು ಸಾವಿರ. ಸರ್ಕಾರವು ತನ್ನ ಆಜ್ಞೆಯ ಪ್ರಕಾರ ಶಾಲೆಗಳು ಅದರ ಪ್ರತಿಗಳನ್ನು ತರಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದರೂ ಒಳ್ಳೆಯ ಪ್ರಸರಣವಿದೆಯೆನ್ನಿಸಿತು. ಕನ್ನಡದಲ್ಲಿ ಇಂಥದೊಂದು ಪ್ರಯತ್ನ ಬೇಕೆನ್ನಿಸಿತು. ಪತ್ರಿಕೆಯ ಒಂದೆರಡು ಸಂಚಿಕೆಗಳನ್ನು ನೀಡಿದರು. ತಕ್ಕಮಟ್ಟಿಗೆ ಆಕರ್ಷಕವಾದ ಬಣ್ಣ ಬಣ್ಣದ ರಕ್ಷಾಕವಚ ಹಾಗೂ ಒಳಗೆ ಸಾಕಷ್ಟು ಚಿತ್ರಗಳಿಂದ ಕೂಡಿದ ಬರಹಗಳು.

ಮನೋರಮಾ ಬಿಸ್ವಾಲ್ ಮಹಾಪಾತ್ರ ಹೆಸರು ಗಳಿಸಿಕೊಂಡಿರುವ ಮಧ್ಯವಯಸ್ಸಿನ ಕವಯಿತ್ರಿ; ಅವರ ಮನೆಗೆ ಹೋದೆವು. ಗಂಡ-ಹೆಂಡತಿಯಿಬ್ಬರೂ ಇದ್ದರು. ಮಹಾಪಾತ್ರರು ಒರಿಯಾ ಸರ್ಕಾರದ ದೊಡ್ಡ ಹುದ್ದೆಯಲ್ಲಿರುವವರು. ಅವರಿಗೆ ಆರತಿ-ಕೀರುತಿಗಳಿಗೆ ಬೇಕಾದ ಮಕ್ಕಳು, ದೊಡ್ಡ ಮನೆ. ಸಂಕೋಚ ಸ್ವಭಾವದ ಮನೋರಮಾ ಎಷ್ಟೋ ವೇಳೆ ಒರಿಯಾದಲ್ಲೇ ಪಂಡ ಅವರನ್ನುದ್ದೇಶಿಸಿ ಮಾತನಾಡುತ್ತಿದ್ದರು; ಮಾತೇ ಕಡಿಮೆ. ಅವರಿಗಿಂತ ಅವರ ಯಜಮಾನರೇ ಕವಯಿತ್ರಿಯ ಪುಸ್ತಕ ಇತ್ಯಾದಿಗಳನ್ನು ತೋರಿಸಿದರು. ಅವರ ಕವನಗಳ ಕ್ಯಾಸೆಟ್ ಈಚೆಗೆ ಹೊರಬಿದ್ದಿದೆ. ಅದನ್ನು ಕೇಳಬೇಕೆಂದಾಗ ರೆಕಾರ್ಡರ್ ತಂದು ಕೇಳಿಸಿದರು. ನಾಗರಾಜ್ ಅದರ ಪ್ರತಿಯೊಂದನ್ನು ಕೊಳ್ಳಬೇಕು, ಎಲ್ಲಿ ದೊರೆಯುತ್ತದೆ ಎಂದು ವಿಚಾರಿಸಿದಾಗ ಅದನ್ನೇ ಕಾಣಿಕೆಯಾಗಿತ್ತರು. ಮನೋರಮಾ ಅವರು ಒರಿಯಾದಲ್ಲಿ ಅನೇಕ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ, ಅವರ ಕವನಗಳ ಇಂಗ್ಲೀಷ್ ಅನುವಾದಗಳ ಎರಡು ಸಂಕಲನಗಳನ್ನು 'Only A Poet Can Dream' ಮತ್ತು Mithuna Champu' - ಕಲ್ಕತ್ತೆಯ ರೈಟರ್ಸ್ ವರ್ಕ್‍ಷಾಪ್ ಪ್ರಕಟಿಸಿದೆ. ಒಳಗಿನಿಂದ ಮನೋರಮಾ ತಿಂಡಿ ತಟ್ಟೆಗಳನ್ನು ತಂದರು. ಹೊಟ್ಟೆ ತುಂಬಿದೆಯೆಂದರೂ ಮಹಾಪಾತ್ರ ಬಲವಂತ ಮಾಡಿದರು.

“ನೀವು ಸ್ತ್ರೀವಾದಿ ಧೋರಣೆಯವರೇ?” ಎಂದು ಕೇಳಿದೆ.

“ಅಂಥದಾವುದೂ ಇಲ್ಲ' ಎಂದು ಮನೋರಮಾ ಸಂಕೋಚದ ನಗೆ ನಕ್ಕರು. ಆಕೆಯೂ ಸನಿಹದ ಕಾಲೇಜೊಂದರಲ್ಲಿ ಒರಿಯಾ ಅಧ್ಯಾಪಕಿ. ಕನ್ನಡದ ಸಂದರ್ಭದಲ್ಲಿನ ಹಾಗೆಯೇ ಹೆಚ್ಚು ಜನ ಬರಹಗಾರರು ಅಧ್ಯಾಪಕರೇ ಇಲ್ಲಿಯೂ.ಮೆರಿಕಾದಿಂದ ಮನೋರಮಾ ಅವರಿಗೆ ಡಾಕ್ಟರೇಟ್ ಬಂದಿದೆಯೆಂದು ಅವರ ಪತಿ ಸರ್ಟಿಫಿಕೇಟ್ ತೋರಿಸಿದರು. ಕ್ಯಾಲಿಫೋರ್ನಿಯದ ನಾಗರಿಕರ ಸಂಸ್ಥೆಯೊಂದು ನೀಡಿದ್ದ ಪ್ರಶಸ್ತಿ ಪತ್ರ, ಡಾಕ್ಟರ್ ಆಫ್ ಲೆಟರ್ಸ್ ಎಂದು ಎಂದು ಮುದ್ರಿತವಾದ ಸುಂದರವಾದ ಸರ್ಟಿಫಿಕೇಟ್ ಅದು, ಆದರೆ ಕೊಟ್ಟಿದ್ದು ವಿಶ್ವವಿದ್ಯಾನಿಲಯವಲ್ಲ. ಇವನ್ನು ಮದ್ರಾಸ್‌ನಲ್ಲಿಯೇ ನೀಡುತ್ತಾರೆ.” ಎಂದು ಪಂಡ ಆಮೇಲೆ ಪಿಸುಗುಟ್ಟಿದರು. ಹೊರಡುವ ಮುನ್ನ ಭಾವಚಿತ್ರ ತೆಗೆದುಕೊಳ್ಳುವುದಾಗಿ ಹೇಳಿದಾಗ ಮನೋರಮಾ 'ಒಂದು ನಿಮಿಷ' ಎಂದು ಹೇಳಿ ಒಂದೇ ನಿಮಿಷದಲ್ಲಿ ಸೀರೆ ಬದಲಾಯಿಸಿ ಬಂದರು!

ಹೇಮಂತ್‌ಕುಮಾರ್ ದಲಾಲ್ ಪತ್ರಕರ್ತರು ಹಾಗೂ ಸಣ್ಣಕತೆಗಾರರು. ಅವರ 'ಶಂಭು' ಎಂಬ ಸಂತೋಷಕುಮಾರ್ ಘೋಷ್ ಅವರ ಬಂಗಾಳಿ ಕಾದಂಬರಿಯ ಒರಿಯಾ ಅನುವಾದಕ್ಕೆ ಈ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಿಕ್ಕಿದೆ. ಅವರ ಸ್ವಂತದ್ದು ಐದು ಸಣ್ಣ ಕತೆಗಳ ಸಂಕಲನ, ನಾಲ್ಕು ಕಾದಂಬರಿಗಳು ಹಾಗೂ ಐದು ಭಾಷಾಂತರ ಕೃತಿಗಳು ಪ್ರಕಟವಾಗಿವೆ. ಅವರು ಇಂಗ್ಲಿಷ್ ಹಾಗೂ ಬಂಗಾಳಿಗಳಿಂದ ಅನುವಾದ ಮಾಡಬಲ್ಲರು. ಸ್ಕೂಲಕಾಯದ ಕಪ್ಪು ಬಣ್ಣದ ಐವತ್ತೈದರ ಸುಮಾರಿನ ದಲಾಲ್ ಪತ್ರಿಕೆಗಳ ವಿಷಯ ಮಾತನಾಡಿದರು; ಕನ್ನಡ ಪತ್ರಿಕೆಗಳ ವಿಷಯ ಕೇಳಿದರು. ಕನ್ನಡದಲ್ಲಿ ಪ್ರಕಟಣೆಯ ಸ್ಥಿತಿ ಹೇಗಿದೆ ಎಂದು ವಿಚಾರಿಸಿದರು. ಸಾವಿರ ಪ್ರತಿಗಳು ಖರ್ಚಾಗಲು ಸಾಕಷ್ಟು ಕಾಲ ಹಿಡಿಯುವ ಸ್ಥಿತಿ ಒರಿಸ್ಸಾದಲ್ಲೂ ಇದೆ; ಮಾರಾಟ ಇನ್ನೂ ನಿಧಾನ. ಕರ್ನಾಟಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಗಟು ಖರೀದಿ ಯೋಜನೆಯು ಒರಿಸ್ಸಾದಲ್ಲಿಲ್ಲದಿರುವುದು ಅವರಿಗೆ ಬೇಸರ.

ಡಾ. ನಿತ್ಯಾನಂದ ಸತ್ಪಥಿ ಹಾಗೂ ಪ್ರತಿಭಾ ಸತ್ಪಥಿ ಬರಹಗಾರ ದಂಪತಿಗಳು. ನಿತ್ಯಾನಂದರು ಈಗ ಉತ್ಕಲ್ ವಿಶ್ವವಿದ್ಯಾನಿಲಯದ ಒರಿಯಾ ವಿಭಾಗದ ಮುಖ್ಯಸ್ಥರು, ಕ್ಯಾಂಪಸ್ಸಿನಲ್ಲಿದ್ದ ಕ್ವಾರ್ಟರ್ಸ್ನಲ್ಲಿ ವಾಸ. ನಾವು ಹೋದಾಗ ಪ್ರತಿಭಾ ಅವರಿರಲಿಲ್ಲ; ಆಕೆಯೂ ಅಧ್ಯಾಪಕಿಯೇ, ಯಾವುದೊ ಊರಿಗೆ ಹೋಗಿದ್ದರು. ನಿತ್ಯಾನಂದರು ಮುಖ್ಯವಾಗಿ ವಿಮರ್ಶಕರು. ಪ್ರತಿಭಾ ಕವಯಿತ್ರಿ, ಅವರ ಗ್ರಸ್ತಸಮಯ' ಮತ್ತು 'ಸಾಹವಾ ಸುಂದರಿ' ಸಂಕಲನಗಳು ವಿಮರ್ಶಕರಿಂದ ಪ್ರಶಂಸೆ ಪಡೆದಿವೆ. ಜ್ವರ ಬಂದು ಆಗತಾನೆ ಚೇತರಿಸಿಕೊಳ್ಳುತ್ತಿದ್ದ ನಿತ್ಯಾನಂದರೊಡನೆ ಒಟ್ಟು ಸಾಹಿತ್ಯಕ ವಿಷಯಗಳ ಬಗ್ಗೆ ಮಾತನಾಡಿದೆವು. ಅವರಿಗೆ ಮೈಸರಿಯಾಗಿಲ್ಲದಿದ್ದುದರಿಂದ ಹೆಚ್ಚು ತೊಂದರೆ ಕೊಡಲಿಲ್ಲ.

ಡಾ. ಜ್ಞಾನೇಶ್ವರ ಮಿಶ್ರಾ ಅವರು ಭಾರತೀಯ ಸಾಹಿತ್ಯ ಸಮೀಕ್ಷೆಯಲ್ಲಿ ಒರಿಯಾ ಕಾದಂಬರಿಗಳ ಬಗ್ಗೆ ಬರೆದಿದ್ದುದನ್ನು ಓದಿದ್ದ. ತಮ್ಮ ಭಾಷೆಯಲ್ಲಿ ಅತ್ಯುತ್ತಮ ಎನ್ನಬಹುದಾದ ಇಪ್ಪತೈದು ಕಾದಂಬರಿಗಳನ್ನಾರಿಸುವುದೂ ಕಷ್ಟ ಎಂದು ಎಂದು ಲೇಖನದ ಕೊನೆಯಲ್ಲಿ ಬರೆದಿದ್ದಾರೆ. ಅಲ್ಲದೇ ಅವರೇ ನಾಲ್ಕು ಕಾದಂಬರಿಗಳನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಆ ಲೇಖನ ಬಹು ಹಿಂದೆ ಬರೆದದ್ದು ಎಂಬುದು ನಿಜ. ಆದರೆ ಈಗಲೂ ಅದೇ ಪರಿಸ್ಥಿತಿ ಇದೆಯೇ ಎಂದೂ, ನಿಮ್ಮ ಕಾದಂಬರಿಗಳ ಸ್ವರೂಪವೇನು ಎಂದೂ ವಿಚಾರಿಸಲು ನನಗೆ ಆಸೆ, ನಿತ್ಯಾನಂದರ ಮನೆಯ ಹಿಂದಿನ ಸಾಲಿನಲ್ಲಿಯೇ ಜ್ಞಾನೇಶ್ವರರ ಮನೆ. ಆದರೆ ಅಲ್ಲಿ ವಿಚಾರಿಸಿದಾಗ, ವಿಭಾಗದಲ್ಲಿರುವುದಾಗಿ ತಿಳಿಯಿತು. ಅಲ್ಲಿಗೇ ಹೋದೆವು. ಅವರನ್ನು ಕಾಣುವ ಮುಂಚೆ ಹಸಿದ ಹೊಟ್ಟೆಯನ್ನು ಸಮಾಧಾನಪಡಿಸಬೇಕಾಗಿತ್ತು. ಹಾಗಾಗಿ ಇಂಗ್ಲಿಷ್ ವಿಭಾಗವಿರುವ ಕಟ್ಟಡದ ಪಕ್ಕದಲ್ಲಿಯೇ ಇರುವ ಕ್ಯಾಂಟೀನಿಗೆ ಹೋದೆವು, ಸಿಕ್ಕಿದ ಊಟ ಮಾಡಿದೆವು. ಇಲ್ಲಿ ಬದನೆಕಾಯಿಗಳ, ಅದೂ ದಪ್ಪ ಗಾತ್ರವು ಬಳಕೆ ಹೆಚ್ಚು. ಅದನ್ನು ಮಧ್ಯಕ್ಕೆ ಸೀಳಿದ ಎಣ್ಣೆಗಾಯಿ ಮಾಡುತ್ತಾರೆ. ಅದನ್ನು ನೋಡಿದರೆ ದಪ್ಪನಾದ ಮೀನಿನ ತಲೆಬಾಲಗಳನ್ನು ಕತ್ತರಿಸಿದ್ದಂತೆ ಕಾಣುತ್ತದೆ. ಶುದ್ಧ ಶಾಖಾಹಾರಿಗಳಿಗೆ ಗಾಬರಿ. ನಾನೂ ಶಾಖಾಹಾರಿಯೇ; ಆದರೆ ಶುದ್ಧನಲ್ಲ. ಆ ಪರಿಶುದ್ಧತೆಯನ್ನು ಹೋಗಲಾಡಿಸಿಕೊಳ್ಳಲೆಂದೇ ಮಾಂಸ ಬಾಯಿಗಿಟ್ಟುಕೊಂಡಿದ್ದೇನೆ. ಪರಿಶುದ್ಧವಾದದ್ದು ನನಗೆ ಇಷ್ಟವಿಲ್ಲ. ಬಿಳಿಯ ಶುದ್ಧ ಹಾಲು ಕುಡಿಯಲಾರೆ. ದೋಷಪೂರಿತವಾದ ಮರ್ತ್ಯಸಹಜ ಸ್ಥಿತಿಯೇ ನನಗಿಷ್ಟ. ಆದರೆ ಬಾಲ್ಯದಲ್ಲಿನ ಆಹಾರಪದ್ದತಿ-ರುಚಿ ಇವುಗಳು ಅಭ್ಯಾಸವಾಗಿ ಬಿಡುವುದರಿಂದ ಆಮೇಲೆ ಬದಲಾಯಿಸಿಕೊಳ್ಳುವುದು ಕಷ್ಟ, ಜತೆಗೆ ರುಚಿಸುವುದೂ ಕಷ್ಟ

ಊಟ ಮುಗಿಸಿ ಇಂಗ್ಲೀಷ್ ಡಿಪಾರ್ಟಮೆಂಟಿಗೆ ಬಂದೆವು; ಹಳೆಯ ಕಟ್ಟಡ; ಸುಣ್ಣಬಣ್ಣ ಮಾಡಿಯೂ ಸಾಕಷ್ಟು ವರ್ಷಗಳಾಗಿದ್ದಿರಬೇಕು. ಜ್ಞಾನೇಶ್ವರ ಮಿಶ್ರಾ ಈಗ ಪ್ರೊಫೆಸರ್‌ ಮತ್ತು ವಿಭಾಗದ ಮುಖ್ಯಸ್ಥರು. ಕಚೇರಿಯಲ್ಲಿ ವಿಚಾರಿಸಿದಾಗ ಅವರು ಇಲಾಖೆಯ ಅಧ್ಯಾಪಕರ ಸಭೆಯೊಂದರಲ್ಲಿರುವುದಾಗಿ ತಿಳಿಯಿತು; ಪಕ್ಕದ ಕೊಠಡಿಯಲ್ಲೇ. ತೆರೆದ ಬಾಗಿಲಾದ್ದರಿಂದ ಒಳಗೆ ಕುಳಿತಿದ್ದ ನಾಲ್ಕಾರು ಮಂದಿ ಕಾಣುತ್ತಿದ್ದರು. ಪ್ರಾಯಶಃ ಪಂಡ ಹೇಳಿ ಕಳಿಸಿದರೆಂದು ಕಾಣುತ್ತದೆ, ತಮ್ಮ ರೂಮಿನಲ್ಲಿ ಕುಳಿತಿರಲು ಹೇಳಿ ಕಳಿಸಿದ್ದರು. ಹಾಗಾಗಿ ಅವರ ರೂಮಿನಲ್ಲಿ ಹೋಗಿ ಕುಳಿತೆವು. ಗಾಳಿ-ಬೆಳಕು ಹೆಚ್ಚಾಗಿಲ್ಲದ ರೂಂ, ಸ್ವಲ್ಪ ಹೊತ್ತಿನಲ್ಲಿಯೇ ಅವರು ಬಂದರು. ನಾವು ಪರಿಚಯ ಹೇಳಿಕೊಂಡು ಮಾತು ಆರಂಭಿಸಿದೆವು ಆದರೆ ಅವರು ಹೆಚ್ಚು ಮಾತು ಬೆಳೆಸಲಿಲ್ಲ. ಸಾಯಂಕಾಲವೋ, ನಾಳೆ ಬೆಳಿಗ್ಗೆಯೋ ಮನೆಗೆ ಬನ್ನಿ, ಫೋನ್ ಮಾಡಿ ಬನ್ನಿ ಎಂದು ಹೇಳಿದರು. ಅಂದರೆ ಈಗ ಮಾತು ಮುಗಿದಂತೆ. ಅವರ ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡು ಹೊರಬಂದವು. ಆ ದಿನ ಸಂಜೆ ಪಂಡ ಅವರನ್ನು ಕೇಳಿದೆ. ಮೀಟಿಂಗ್ ಮುಗಿಸಿಕೊಂಡೇ ಬಂದಿದ್ದರು. ಸ್ವಲ್ಪಕಾಲ ಆಗಲೇ ಮಾತನಾಡಬಹುದಿತ್ತು. ಇಂಗ್ಲಿಷ್ ಗತ್ತು! ನಿಮಗೆ ಬೇಕಾದರೆ ಹೋಗೋಣಎಂದರು. ಅವರೆಂದದ್ದು ಸರಿ, ಬರಿ ಔಪಚಾರಿಕತೆಯಿಂದ ಲಾಭವಿಲ್ಲವಾದ್ದರಿಂದ ಬೇಡ ಬಿಡಿಎಂದೆ.

****

ಒರಿಯಾ-ಒರಿಸ್ಸಾ

ಒರಿಸ್ಸಾಕ್ಕೂ ಕರ್ನಾಟಕಕ್ಕೂ ಮೊದಲನಿಂದ ಸಂಬಂಧವಿರುವುದಷ್ಟೇ ಅಲ್ಲ, ಇವೆರಡರ ನಡುವೆ ಕೆಲವು ಬೇರೆ ಬಗೆ ಸಾಮ್ಯಗಳಿವೆ. ಸ್ವಾತಂತ್ರ್ಯ ಬಂದು ರಾಜ್ಯಗಳ ಪುನರ್ವಿಂಗಡಣೆಯು ಮೊದಲು ಎರಡೂ ರಾಜ್ಯಗಳ ವಿವಿಧ ಭಾಗಗಳು ಬೇರೆ ಬೇರೆ ಆಡಳಿತದಲ್ಲಿದ್ದವು; ಮೆತುವಾದ ಜನ. ಹಿಂದೆ ಬೆಂಗಳೂರಿನಲ್ಲಿ ನಡೆದ ಒರಿಯಾ-ಕನ್ನಡ ದ್ವಿಭಾಷಾ ವಿಚಾರಸಂಕಿರಣದ ಸಮಯದಲ್ಲಿ ಒಂದು ಪ್ರಸಂಗ: ಸಮಾರೋಪ ಭಾಷಣ ಒರಿಸ್ಸಾದ ಆಗಿ ಮುಖ್ಯಮಂತ್ರಿ ಜೆ.ಬಿ. ಪಟ್ನಾಯಕ್‌ರದು. ಸಮಾರಂಭವಾದ ಮೇಲೆ ಸಂಕಿರಣದಲ್ಲಿ ಭಾಗಿಗಳಾದವರಿಗೆ ಕರ್ನಾಟಕದ ಮುಖ್ಯಮಂತ್ರಿಮ ಔತಣವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬೆಂಗಳೂರಿನಲ್ಲಿರಲಿಲ್ಲ. ಇಷ್ಟರಲ್ಲಿಯೇ ತಾವು ಮಂಡಿಸಬೇಕಾದ ರಾಜ್ಯದ ಬಜೆಟ್ ತಯಾರಿಕೆಗಾಗಿ ಕಾಂತ ಸ್ಥಳವೊಂದಕ್ಕೆ ಹೋಗಿದ್ದರು. ನಾವು ಬೇಗ ಬ್ಯಾಂಕ್ವೆಟ್ ಹಾಲ್ ತಲುಪಿದ್ದವು. ಆಗೆ ಜೆ.ಬಿ. ಪಟ್ನಾಯಕ್ ಹಾಗೂ ಅವರ ಶ್ರೀಮತಿಯವರು ಬಂದಾಗ ಹೆಚ್ಚು ಜನರಿರಲಿಲ್ಲ; ಅವರೊಂದಿಗೆ ಕೆಲಹೊತ್ತು ನಾನೇ ಮಾತನಾಡುತ್ತ ನಿಂತೆ. ತಮ್ಮ ಸಮಾರೋಪ ಭಾಷಣದಲ್ಲಿ ಕರ್ನಾಟಕ-ಓರಿಸ್ಸಾಗಳ ಸಂಬಂಧ ಸಾಮ್ಯಗಳನ್ನು ಅವರು ವಿವರವಾಗಿ ಪ್ರಸ್ತಾಪಿಸಿದ್ದರು. ಆದರ ಹಿನ್ನೆಲೆಯಲ್ಲಿ ನಾನು ಹೇಳಿದೆ: “ಒಂದು ವಿಷಯದ ಬಗ್ಗೆ ಇರುವ ಸಾಮ್ಯದ ಬಗ್ಗೆ ನಿಮ್ಮನ್ನು ಪ್ರಸ್ತಾಪಿಸಲಿಲ್ಲ.

'ಏನದು?” ಎಂದರು.

“ಇಲ್ಲಿ ತಮಿಳರ ಹಾವಳಿ, ಆಕ್ರಮಣ, ಆರ್ಭ ಹೆಚ್ಚು; ನಿಮ್ಮ ರಾಜ್ಯದಲ್ಲಿ ನೆರೆಯವರಾದ ಬಂಗಾಳಿಗಳದುಎಂದೆ.

“ನೀವೆನ್ನುವುದು ನಿಜ. ಆದರೆ ಮುಖ್ಯಮಂತ್ರಿಯಾಗಿ ನಾನು ಹಾಗೆ ಹೇಳಲಾಗುವುದಿಲ್ಲವಲ್ಲಎಂದಿದ್ದರು.

ಒಂದೆಡೆ ತೆಲುಗರು ಮತ್ತೊಂದೆಡೆ ಬಂಗಾಳಿಗಳೂ ಒರಿಯಾವನ್ನು ಮುತ್ತಿದ್ದಾರೆ; ಬಿಹಾರಿಗಳದೂ ಇರಬಹುದು. ಆದ್ದರಿಂದ ಅಲ್ಲಿಯ ಕರ್ನಾಟಕದಲ್ಲಿನ ಕನ್ನಡ ಚಳುವಳಿಯಂತಹ ಆಂದೋಲನವಿತ್ತೇನೋ ಅಂದುಕೊಂಡಿದ್ದೆ. ೧೯೦೨ರ ಹೊತ್ತಿಗೇ ಒರಿಯಾ ಮಾತನಾಡುವ ಪ್ರದೇಶವನ್ನು ಒಂದು ಆಡಳಿತಕ್ಕೆ ಸೇರಿಸಬೇಕೆಂಬ ಮನವಿಯನ್ನು ಗವರ್ನರ್ ಜನರಲ್ ಲಾರ್ಡ್ ಕರ್ಜನ್‌ಗೆ ನೀಡಿದ್ದರು ಅಲ್ಲಿಯ ಜನ. ೧೯೦೩ರಲ್ಲಿ ಏಕೀಕರಣಕ್ಕಾಗಿ ಉತ್ಕಲ ಐಕ್ಯ ಪರಿಷತ್ (Utkal union Conference) ಪ್ರಾರಂಭವಾಗಿತ್ತು. ಕರ್ನಾಟಕ ಏಕೀಕರಣದ ಪ್ರಯತ್ನ ಆಮೇಲೆ ನಡೆದಿತ್ತು. ಹಾಗೆಯೇ ಕನ್ನಡಿಗರಿಗೆ ಅನ್ಯಾಯವಾಗುವುದನ್ನು ಕನ್ನಡಕ್ಕೆ ಅಗ್ರತೆಯುಂಟಾಗುವುದನ್ನು ಪ್ರತಿಪಾದಿಸುವ ಕನ್ನಡ ಚಳುವಳಿಯಂತಹುದು ಅಲ್ಲಿಯೂ ಇರಬೇಕೇನೋ ಎಂದುಕೊಂಡಿದ್ದೆ. ಆದರೆ ಅಂತಹ ವ್ಯವಸ್ಥಿತವಾದ ಪ್ರಯತ್ನವೇನೂ ಅಲ್ಲಿಲ್ಲ. ರಾಜ್ಯದಲ್ಲಿ ಒರಿಸ್ಸಾ ಭಾಷೆಗೆ ಪ್ರಾಧಾನ್ಯ ಸಿಕ್ಕಬೇಕು ಇತ್ಯಾದಿ ಎಲ್ಲರೂ ಒಪ್ಪುವ ತತ್ವ; ಅಷ್ಟೇ ವಿನಾ ಸ್ಥಳೀಯರಿಗೆ ಉದ್ಯೋಗ, ವಲಸೆ ನಿಲ್ಲಿಸಿ ಮುಂತಾದ ಕೂಗು ಅಲ್ಲಿ ಇಲ್ಲ.

ಕನ್ನಡ ಭಾಷೆಯ ಕಡ್ಡಾಯ ಕಲಿಕೆಗಾಗಿ ಇಲ್ಲಿ ನಡೆದ ಪ್ರಯತ್ನಗಳು ಸರ್ವವಿದಿತ. ೧೯೮೨ರಲ್ಲಿ ನಡೆದ ಗೋಕಾಕ್ ಚಳುವಳಿ ಸುವಿಖ್ಯಾತ ಹಾಗೂ ಮುಂದಿನ ಕನ್ನಡ ಚಳುವಳಿ ಅದರ ಬೆನ್ನಲ್ಲಿಯೇ ಬೆಳೆದುಕೊಂಡು ಬೇರೆಯೇ ಸ್ವರೂಪವನ್ನು ಪಡೆದುಕೊಂಡಿರುವುದು ಸುಸ್ಪಷ್ಟ. ಈಗ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕರ್ನಾಟಕ ಸರ್ಕಾರದ ಶಾಲಾ ಪದ್ಧತಿಯನ್ನು ಅನುಸರಿಸುವ ಶಾಲೆಗಳಲ್ಲಿ ಕನ್ನಡ ಭಾಷೆಯ ಕಲಿಕೆ ಕಡ್ಡಾಯ; ಮೂರು ಭಾಷೆಗಳನ್ನು ಕಲಿಸುವ ವ್ಯವಸ್ಥೆಯಿದ್ದರೂ ಕನ್ನಡವನ್ನೊಳಗೊಂಡಂತೆ ಎರಡು ಭಾಷೆಗಳಲ್ಲಿ ತೇರ್ಗಡೆಯಾಗಬೇಕು ಎಂಬ ನಿಯಮವಿದೆ. ಇದು ಎಲ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಈ ವರ್ಷದಿಂದ ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮದಲ್ಲಿಯೇ ಶಿಕ್ಷಣ ಎಂಬ ಆಜ್ಞೆಯೂ ಬಂದಿದೆ. ಈ ಬಗ್ಗೆ ಒರಿಸ್ಸಾದಲ್ಲಿ ಯಾವ ಸ್ಥಿತಿಯಿದೆಯೋ ತಿಳಿಯುವ ಕುತೂಹಲ ನನ್ನದಾಗಿತ್ತು. ಆದರೆ ಕರ್ನಾಟಕದಲ್ಲಿ ಆಗಿರುವ ಹಾಗೆ ಈ ಬಗ್ಗೆ ಆಜ್ಞೆಗಳು ಆಗಿಲ್ಲವೆಂಬುದು ಸ್ಪಷ್ಟ. ಸಹಜವಾಗಿಯೆ ಒರಿಯಾ ಮಾಧ್ಯಮದ ಮೂಲಕ ಓದುವ ವಿದ್ಯಾರ್ಥಿಗಳು ಅಲ್ಲಿ ಹೆಚ್ಚು. ಆದರೆ ಗಡಿನಾಡಿನಡಹ ಕಡೆಗಳಲ್ಲಿರುವ ಬಂಗಾಳಿ ತೆಲುಗು ಹಿಂದಿ ಮಾಧ್ಯಮ ಶಾಲೆಗಳಲ್ಲಿ ಒರಿಯಾ ಭಾಷೆಕಡ್ಡಾಯ ಕಲಿಕೆ ಇದ್ದಂತಿಲ್ಲ. ಅಲ್ಲದೆ, ಎಲ್ಲ ಕಡೆ ಇರುವಂತೆಯೇ ಇಂಗ್ಲೀಷ್ ಮಾಧ್ಯಮ ಶಾಲೆಗಳ ಹಾವಳಿ ಇಲ್ಲೂ, ಪಂಡ ಅವರ ಮಗ ಇನ್ನೂ ಕಿಂಡರ್ ಗಾರ್ಟನ್ ಗೆ ಹೋಗುವ ಬಾಲಕ. ಆದರೆ ಬೆಂಗಳೂರಿನಲ್ಲಿ ಯಾವುದಾದರೂ ಒಳ್ಳೆಯ ಇಂಗ್ಲೀಷ್ ಮಾಧ್ಯಮದ ರೆಸಿಡೆನ್ಸಿಯಲ್ ಶಾಲೆ ಇದೆಯೇ ಎಂದು ಅವರೇ ಹೇಳಿದಾಗ ನಾನು ದಂಗಾದೆ! ಅವರಿಗೆ ಇರುವವನು ಒಬ್ಬನೇ ಮಗ, ಅವನನ್ನು (ನಾಲೈದು ವರ್ಷಗಳು ಕಳೆದ ಬಳಿಕವೇ ಇರಬಹುದು) ದೂರ ಕಳಿಸುವ ಅವರ ಕಲ್ಪನೆಯನ್ನು ಕಂಡು ಬೆರಗಾದೆ!

ಪ್ರಾದೇಶಿಕ ಪಕ್ಷಗಳು ಒರಿಸ್ಸಾದಲ್ಲಿವೆಯೇ, ವಿವಿಧ ರಾಜ್ಯಗಳಿಗೆ ಬಹುಮಟ್ಟಿನ ಅಧಿಕಾರವಿದ್ದು ಕೆಲವೇ ವಿಷಯಗಳಲ್ಲಿ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳುವ ವ್ಯವಸ್ಥೆಯ ಫೆಡರಲ್ ಮಾದರಿ; ಅಂತರರಾಜ್ಯ ವಲಸೆಯನ್ನು ತಪ್ಪಿಸಿ, ರಾಜ್ಯಗಳ ನಡುವೆ ಜನರ ಹರಿದಾಟವನ್ನು ನಿಯಂತ್ರಿಸಿ ಆಯಾ ಪ್ರದೇಶಗಳ ಸಾಂಸ್ಕೃತಿಕ ವಿಶಿಷ್ಟತೆಯನ್ನು ಕಾಪಾಡಲು ಸಹಾಯಕವಾಗುವ ದ್ವಿಪೌರತ್ವ ವ್ಯವಸ್ಥೆ - ಇವುಗಳನ್ನು ಪ್ರತಿಪಾದಿಸುವ, ಆರೋಗ್ಯಕರ ಪ್ರಾದೇಶಿಕತೆಗೆ ಒತ್ತು ನೀಡುವ ರಾಜಕೀಯ ಪಕ್ಷಗಳ ಪ್ರಯತ್ನಗಳೇನಾದರೂ ನಡೆದಿದ್ದರೆ, ಅವುಗಳಿಗೆ ಸಂಬಂಧಿಸಿದವರನ್ನು ಕಾಣುವ ಆಸೆಯಿತ್ತು. ಅಸ್ಸಾಂ ಗಣ ಪರಿಷದ್, ತೆಲುಗು ದೇಶಂ, ದ್ರಾವಿಡ ಕಳಗಂನಂತಹ ಪಕ್ಷಗಳ ಬಗ್ಗೆ ನನಗೆ ಆಸಕ್ತಿ. ಆದರೆ ಇಂತಹ ಯಾವ ಪ್ರಯತ್ನವೂ ಒರಿಸ್ಸಾದಲ್ಲಿ ನಡೆದಿಲ್ಲ. ಕಾಂಗ್ರೆಸ್ ಜನತಾದಳದಂತಹ ಪಕ್ಷಗಳಲ್ಲಿನ ವಿವಿಧ ನಾಯಕರಲ್ಲಿ ವೈಮನಸ್ಸು ಮೂಡಿದಾಗ, ಯಾವನಾದರೊಬ್ಬನ ನೇತೃತ್ವದಲ್ಲಿ ಒಂದು ಭಾಗ ಸಿಡಿದು ಪಕ್ಷವಾಗಬಹುದು, ಹೆಸರಿಗೆ ಉತ್ಕಲ್ ಎಂಬ ಪ್ರಾದೇಶಿಕ ಅಭಿದಾನವನ್ನು ಸೇರಿಸುವುದು ಹೊಸದೇನಲ್ಲ. ಅದು ಬೇಕಾದಷ್ಟು ಆಗಿದೆ. ಆದರೆ ತಾತ್ವಿಕವಾಗಿ ಅಂಥ ಜನರಿಗೆ ಪ್ರಾದೇಶಿಕ ಸಂಘಟನೆಯ ಬಗ್ಗೆ ಮನವರಿಕೆಯಿಲ್ಲ. ಈಗಿನ ಮುಖ್ಯಮಂತ್ರಿ ಬಿಜು ಪಟ್ನಾಯಕರೇನೋ ರಾಜ್ಯಗಳಿಗೆ ಸ್ವಾಯತ್ತತೆ ನೀಡಬೇಕೆಂದು ಪ್ರತಿಪಾದಿಸಿದ್ದರು. ಅವರು ಜನತಾ ದಳಕ್ಕೆ ಸೇರಿದವರು. ಅಲ್ಲದೆ ಸ್ವಾಯತ್ತತೆ ಎಂದದ್ದು ಕೇಂದ್ರ ಸರ್ಕಾರವನ್ನು ಬೇಡಬೇಕೆಂಬ ಕೋಪದ ಕ್ಷಣದಲ್ಲಿ; ಕೇಂದ್ರದಲ್ಲಿ ಬೇರೆ ಪಕ್ಷದ ಸರ್ಕಾರವಿದೆಯೆಂಬ ಕಾರಣದಿಂದ. ಈಗ ಅವರೂ ತಣ್ಣಗಾಗಿದ್ದಾರೆ.

ಹಿಂದಿಯ ಬಗ್ಗೆ ಈಗೀಗ ಕರ್ನಾಟಕದಲ್ಲಿ ಹೆಚ್ಚಿನ ಕ್ರೋಧ ವ್ಯಕ್ತವಾಗುತ್ತಿದೆ. ಎಂದರೆ ಹಿಂದಿಯ ಹೇರಿಕೆಯ ಬಗ್ಗೆ, ಬುದ್ಧಿಜೀವಿಗಳು ಅದರ ವಿರುದ್ಧ ಮಾತನಾಡುತ್ತಿದ್ದಾರೆ. ಒರಿಸ್ಸಾದಲ್ಲಿ ನಾನು ಭೇಟಿಯಾದ ಅನೇಕ ಜನ ಸಾಹಿತಿಗಳೂ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕರ್, ಪಂಡ ಅವರು ಹಿಂದಿ ಹೇರಿಕೆಯನ್ನು ನೇರವಾಗಿ ಖಂಡಿಸಿದರು. ಪಂಡ ಅವರಂತೂ ಹಿಂದಿ ಕೃತಕವಾದ ಭಾಷೆಯೆಂಬ ಸಮರ್ಪಕವಾದ ವಿಶ್ಲೇಷಣೆ ಮಾಡಿದರು. ಆದರೆ ಹಿಂದಿಯ ಬಗೆಗಿನ ವಿರೋಧ ತಮಿಳುನಾಡಿಲ್ಲಿರುವಂತೆ, ಈಗೀಗ ಕೊಂಚಮಟ್ಟಿಗೆ ಕರ್ನಾಟಕದಲ್ಲೂ ಕೇಳುತ್ತಿರುವಂತೆ, ಬಹಿರಂಗವಲ್ಲ; ಅದೊಂದು ಇಶ್ಯೂ ಎಂದು ಜನ ಭಾವಿಸಿದಂತಿಲ್ಲ. ಒಂದು ರೀತಿಯಲ್ಲಿ (ಎರಡು ಭಾಷೆಗಳಲ್ಲಿ - ಕನ್ನಡ ಒಳಗೊಂಡಂತೆ) ತೇರ್ಗಡೆಯಾದರೆ ಸಾಕೆಂಬ ಆಜ್ಞೆ ಬಂದಿರುವುದರಿಂದ ಹಿಂದಿಯ ಕಡ್ಡಾಯ ಕಲಿಕೆ ಇಲ್ಲವಾಗಿದೆ; ಆದರೆ ಕಲಿಕೆಗೆ ಅವಕಾಶವಿದೆ. ಕಾನೂನು ಬದ್ಧವಾಗಿಯೇ ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳುವುದೇ ಸರಿಯಾದ ಮಾರ್ಗ.

ಭುವನೇಶ್ವರ ಒರಿಸ್ಸಾ ರಾಜ್ಯದ ರಾಜಧಾನಿ. ಅಲ್ಲಿನ ರೈಲ್ವೆ ಬುಕಿಂಗ್ ಕೌಂಟರಿನಲ್ಲಿ ಒರಿಯಾ ಭಾಷೆಯ ಫಾರಂಗಳಿವೆ. ಆದರೆ ಕರ್ನಾಟಕದ ರಾಜಧಾನಿಯಲ್ಲಿ ಸಿಗುತ್ತದೆಯೇ? ಇದು ಕಾಸ್ಮೋಪಾಲಿಟನ್ ನಗರ ಎಂದು ನಮ್ಮಲ್ಲಿಯ ಹಲವರೇ ಹೇಳುತ್ತಾರೆ. ಕಾಸ್ಮೋಪಾಲಿಟನ್ ಸ್ವರೂಪ ಏಕೆ ಬೇಕು? ಇದಾಗಬೇಕಾದರೆ, ಸ್ಥಳೀಯ ಸಂಸ್ಕೃತಿ ಊರ್ಜಿತವಾಗಬೇಕಾದರೆ ಅಂತರರಾಜ್ಯ ವಲಸೆ ನಿಲ್ಲಬೇಕು. ಆದರೆ ಹೊಸ ಆರ್ಥಿಕ ನೀತಿಯ ಕಾರಣ ವಿದೇಶೀಯರನ್ನೇ ಕೆಂಪುಕಂಬಳಿ ಹಾಸಿ ಕರೆಯುತ್ತಿದ್ದೇವಲ್ಲ. ಸ್ಟಾರ್ ಟಿವಿಯ ಜಾಲದಲ್ಲಿ ನಮ್ಮ ಮನಸ್ಸುಗಳು ಸಿಕ್ಕಿ ನೇರವಾಗಿ ವಿದೇಶೀ ಸಂಸ್ಕೃತಿಯ ಮಾಯಾಬುಟ್ಟಿಯಲ್ಲಿ ಬೀಳುತ್ತಿದ್ದೇವಲ್ಲ. ಪಾಶ್ಚಾತ್ಯರು ಬಂದು ಇಲ್ಲಿ ಹಣ ಬಿತ್ತಿ ಬೆಳೆಯುವುದಕ್ಕೆ ಬೇಕಾದಷ್ಟು ಸವಲತ್ತು ಒದಗಿಸಲು ಸರ್ಕಾರ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕುತ್ತಿರುವಾಗ, ಕನ್ನಡಿಗರಿಗೆ ಉದ್ಯೋಗ ಎಂದು ಕೂಗುವುದು ಫಲಪ್ರದವಾದೀತೇ? “ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದಂತೂ ನೋಡಬೇಕು!”

ಓರಿಸ್ಸಾದಲ್ಲಿ ಖಾಸಗಿ ಕಾಲೇಜುಗಳಿವೆ. ಅಲ್ಲಿನ ನೌಕರರಿಗೆ ಇಲ್ಲಿನಂತೆ ಸರ್ಕಾರವೇ ಸಂಬಳ ಕೊಡುವುದು (ಅನುದಾನಿತ ಕಾಲೇಜುಗಳಲ್ಲಿ). ಪಂಡ ಅಂತಹ ಒಂದು ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ; ಅವ ಶ್ರೀಮತಿಯೂ. ಆದರೆ ಅಲ್ಲಿ ಖಾಸಗಿ ಕಾಲೇಜು ಅಧ್ಯಾಪಕರನ್ನು ಒಂದೆಡೆಯಿಂದ ಇನ್ನೊಂದೆಡೆ ವರ್ಗಮಾಡುವ ಪದ್ಧತಿಯಿದೆ. ಸರ್ಕಾರೀ ಕಾಲೇಜುಗಳಲ್ಲಿಯಂತೆ! ಇದೊಂದಕ್ಕೆ ಕರ್ನಾಟಕದ ಖಾಸಗೀ ಕಾಲೇಜು ಶಿಕ್ಷಕರು ಒಪ್ಪಲಾರರು!

****

ಬೆವರ ಸಾಲು; ಬರದ ರೈಲು

ವಾಪಸು ಬೆಂಗಳೂರಿಗೆ ಬರುವಾಗಲೂ ನಾವು ಇಲ್ಲಿಂದ ಹೋದ ಗುವಾಹಾತಿ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿಯೇ ಮುಂಚಿತವಾಗಿ ರಿಸರ್ವ್ ಮಾಡಿಸಿದ್ದೆವು. ಹೋಗುವಾಗ ವೇಗವಾಗಿ ಹೋದ ನೆನಪಿನಿಂದ, ಅಷ್ಟೇ ವೇಗವಾಗಿ ವಾಪಸು ಬರಬಹುದೆಂದು ಆಶಿಸಿದ್ದವು. ಗುವಾಹಾತಿಯಿಂದ ಕಲ್ಕತ್ತ ಮಾರ್ಗವಾಗಿ ಬರುವ ಆ ರೈಲು ಗುರುವಾರ ಬೆಳಿಗ್ಗೆ ಆರು ಗಂಟೆ ಇಪ್ಪತ್ತು ನಿಮಿಷಕ್ಕೆ ಬಂದು ಆರೂ ಇಪ್ಪತ್ತಾರಕ್ಕೆ ಬಿಡಬೇಕು. ಅಷ್ಟು ಸ್ವಲ್ಪ ಕಾಲ ನಿಲ್ಲುವ ರೈಲಿನಲ್ಲಿ ಸೀಟು ಹುಡುಕಲು ಕಷ್ಟವಾಗಬಹುದೆಂಬ ಭಯವೂ ಇತ್ತು; ಆದರೆ ಯಾವ ಡಬ್ಬಿಯಲ್ಲಿ ಹತ್ತಿದರೂ ಸೀದಾ ದಾರಿ ಇರುವುದರಿಂದ ಬೇರೆ ಡಬ್ಬಿಗಳಿಗೆ ಹೋಗುವ ಅನುಕೂಲವಿದ್ದುದರಿಂದ ಸಮಾಧಾನವೂ ಇತ್ತು.

ಹಿಂದಿನ ರಾತ್ರಿಯೇ ನಮ್ಮ ಸಾಮಾನುಗಳ ಪ್ಯಾಕಿಂಗ್ ಮುಗಿಸಿದ್ದೆವು. ಹಾಕಿಕೊಂಡಿದ್ದ, ಬದಲಾಯಿಸಬೇಕಾದ ಬಟ್ಟೆಗಳಷ್ಟೇ ಹೊರಗಿದ್ದದ್ದು. ಬೆಳಿಗ್ಗೆ ಬೇಗನೆ ಎದ್ದೆವು; ಸ್ನಾನ ಮುಗಿಸಿ ಹೊರಬಿದ್ದೆವು ಹೋಟಲಿಂದ. ನಾವು ಇಳಿದುಕೊಂಡಿದ್ದ ಹೋಟಲು ವಿಶ್ರಾಮ ಭವನ, ಅದರ ಒಡಯ ಪ್ರಧಾನ್, ನನ್ನ ಮನೆಯ ಹೆಸರೂ ಪ್ರಧಾನ್! ಆತ ತುಂಬ ಸಂಭಾವಿತ ಯುವಕ. ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿದ್ದ; ಸೊಳ್ಳೆಗಳಿವೆಯೆಂದು ದೂರಿದಾಗ ಕಾಯಿಲ್‌ಗಳನ್ನು ತರಿಸಿಕೊಟ್ಟಿದ್ದ. ಕಲ್ಕತ್ತೆಗೆ ಎರಡು ದಿನ ಹೋಗಿದ್ದಾಗ, ನಮ್ಮ ಸಾಮಾನುಗಳನ್ನು ಜೋಕೆ ಮಾಡಿದ್ದಲ್ಲದೆ, ಆ ಎರಡು ದಿನದ ಬಾಡಿಗೆ ತೆಗೆದುಕೊಂಡಿರಲಿಲ್ಲ. ಹಿಂದಿನ ರಾತ್ರಿಯೇ ಹೋಟಲ್ ಬಿಲ್ ವ್ಯವಹಾರ ಮುಗಿಸಿದ್ದೆವು. ಆ ಹೋಟಲಿರುವುದು ಕಟಕ್ ರಸ್ತೆಯಲ್ಲಿ; ಭುವನೇಶ್ವರ ರೈಲ್ವೆ ನಿಲ್ದಾಣದ ಮುಖ್ಯ ಪ್ರವೇಶ ಪಶ್ಚಿಮಾಭಿಮುಖವಾಗಿದೆ. ಪೂರ್ವಕ್ಕೂ ಒಂದು ಸಣ್ಣ ದಾರಿಯಿದೆ. ಅಲ್ಲಿಂದ ಬಿಶ್ರಾತು ಭವನ ಹತ್ತಿರವೇ ಆದ್ದರಿಂದ ಒಂದು ಸೈಕಲ್ ರಿಕ್ಷಾದಲ್ಲಿ ಸಾಮಾನುಗಳನ್ನಷ್ಟೇ ಇರಿಸಿ, ನಾವು ನಡೆಯುತ್ತ ಹೋದೆವು. ಆರೆಂಟು ನಿಮಿಷದಲ್ಲಿಯೆ ನಿಲ್ದಾಣ ತಲುಪಿದವು. ನಮ್ಮ ಪುಣ್ಯಕ್ಕೆ ಪೂರ್ವದ ಬಾಗಿಲಿಂದ ಹೋದರೆ ಸಿಕ್ಕುವ ಪ್ಲಾಟ್‌ಫಾರ್ಮಿಗೇ ಗುವಾಹತಿಯಿಂದ ಬರುವ ರೈಲು ನಿಲ್ಲುವುದು; ಅದು ನಾಲ್ಕನೆಯದು. ಬೆಂಗಳೂರಿಂದ ಹೋದ ರೈಲು ನಿಂತಿದ್ದು ಒಂದನೇ ಪ್ಲಾಟ್‍ಫಾರ್ಮಿನಲ್ಲಿ ಅದು ಪಶ್ಚಿಮದ ಮುಖ್ಯ ಪ್ರವೇಶಕ್ಕೆ ಹೊಂದಿಕೊಂಡದ್ದು. ಇನ್ನೆರಡು ಪ್ಲಾಟ್‍ಫಾರ್ಮ್‍ಗಳು ನಡುವೆ ಇವೆ. ಪ್ಲಾಟ್‌ಫಾರ್ಮುಗಳ ನಡುವೆ ಎರಡು ರೈಲು ಹಳಿ ಜೊತೆಗಳು. ಒಂದರಿಂದ ಮಿಕ್ಕ ಪ್ಲಾಟ್‌ಫಾರ್ಮುಗಳಿಗೆ ಸೇತುವೆ ಹತ್ತಿ ಇಳಿದು ಹೋಗಬೇಕು.

ಚುಮುಚುಮು ಬೆಳಿಗ್ಗೆ ಆರಕ್ಕೇ ನಿಲ್ದಾಣ ತಲುಪಿದೆವು. ಇನ್ನು ಇಪ್ಪತ್ತು ನಿಮಿಷಕ್ಕೆ ರೈಲು ಬರುವುದೆಂದು ನಿರೀಕ್ಷಿಸಿದವು. ಆದರೆ ಯಾರೋ ಆ ರೈಲು ಯಾವತ್ತೂ ಸರಿಯಾದ ಸಮಯಕ್ಕೆ ಬಂದದ್ದಿಲ್ಲವೇ ಇಲ್ಲ ಎಂದರು. ಬೆಂಗಳೂರು-ಗುವಾಹತಿಗಳ ನಡುವೆ ಸರಿಯಾಗಿ ಮಧ್ಯದಲ್ಲಿ ಭುವನೇಶ್ವರವಿದೆ. ಬೆಂಗಳೂರಿನಿಂದ ಭುವನೇಶ್ವರಕ್ಕೆ ಸುಮಾರು ಮೂವತ್ತು ಗಂಟೆಯ ಪ್ರಯಾಣ; ಅಲ್ಲಿಂದ ಗುವಾಹತಿಗೂ ಸುಮಾರು ಅಷ್ಟೇ ಸಮಯ. ಬೆಂಗಳೂರಿನಿಂದ ಹೋದಾಗ ರೈಲು ಅರ್ಧಗಂಟೆಯಷ್ಟೇ ತಡ. ಹೀಗಾಗಿ ಕನಿಷ್ಠ ಪಕ್ಷ ಏಳಕ್ಕೆ ರೈಲನ್ನು ನಿರೀಕ್ಷಿಸುತ್ತ ಕುಳಿತೆವು. ನಮ್ಮ ಜೊತೆಗೆ ಕೆಲವೇ ಮಂದಿ ಕಾಯುತ್ತಿದ್ದವರು. ಅದರಲ್ಲಿ ಬಾಹುಬಲಿಯ ಹಾಗಿದ್ದ ಲಂಡಚಣ್ಣ ತೊಟ್ಟ ವಿದೇಶೀಯನೊಬ್ಬ. ಯಾರೋ ರೈಲು ಎರಡು ಗಂಟೆ ತಡ ಎಂದರು. ರೂಮಲ್ಲಿದ್ದ ಹಾಗೂ ಇಲ್ಲ, ರೈಲಲ್ಲಿ ಹೋಗುತ್ತಿದ್ದಂತೆಯೂ ಅಲ್ಲ. ಇಲ್ಲಿ ಕಾಯಬೇಕಲ್ಲ ಎಂದು ಗೊಣಗಾಟಕ್ಕೆ ಸ್ವಲ್ಪ ನಾಂದಿಯಾಯಿತು ಆ ಮಾತು. ಇನ್ನೊಂದು ಕಪ್ ಚಾ ಕುಡಿದು ಬರಬೇಕೆಂದುಕೊಂಡರೆ ಒಂದನೇ ಪ್ಲಾಟ್‌ಫಾರ್ಮಿಗೆ ಹೋಗಬೇಕು, ಇಲ್ಲ ಸೇತುವೆ ಹತ್ತಿ ಇಳಿಯಬೇಕು. ಅಥವಾ ಹಳಿಗಳನ್ನು ದಾಟಬೇಕು. ಹಿಂದಿನ ರಾತ್ರಿಯೇ ನಾವು ಊಟಮಾಡುತ್ತಿದ್ದ ಹೋಟಲಿನವನಿಗೆ ಹೇಳಿ ಒಂದಷ್ಟು ಚಪಾತಿಗಳನ್ನು ಕಟ್ಟಿಸಿಕೊಂಡಿದ್ದೆವು, ಬ್ರೆಡ್ ತೆಗೆದುಕೊಂಡಿದ್ದೆವು; ಪ್ರಯಾಣಕ್ಕೆ ಬೇಕೆಂದು. ಚಪಾತಿಯ ಯೋಚನೆ ನಾಗರಾಜ್ ಅವರದು. ಎಲ್ಲರ ಪರಿಚಯ ಮಾಡಿಕೊಳ್ಳುವ ಸ್ವಭಾವದ ಅವರು ಊಟದ ಹೋಟಲಿನ ಮಾಲೀಕನೊಡನೆ ಪರಿಚಯ ಕುದುರಿಸಿಕೊಂಡಿದ್ದರು. ಅದು 'ಸೌತ್ ಇಂಡಿಯನ್ ಹೋಟಲು' ಅಂಕಿತನಾಮ `ಪೂಜಾ'. ಆದರೆ ದಕ್ಷಿಣ ಭಾರತಕ್ಕೆ ರುಚಿಯಲ್ಲಿ ಇನ್ನೂ ಹತ್ತಿರ ಬರಲು ನಾಗರಾಜ್ ಮಾಲೀಕನಿಗೆ ಕೆಲವು ಸೂಚನೆಯಿತ್ತಿದ್ದರು. “ಒಳ್ಳೆಯ ಅಡಿಗೆಯವರು ಸಿಕ್ಕುವುದೇ ಕಷ್ಟಎಂದಾಗ ಬೆಂಗಳೂರಿನಲ್ಲಿ ಯಾರಾದರೂ ಬರುವವರಿದ್ದರೆ ತಿಳಿಸುತ್ತೇನೆ ಎಂದು ವಿಳಾಸಗಳ ವಿನಿಮಯ ಮಾಡಿಕೊಂಡಿದ್ದರು. ಯಾರೂ ಸಿಕ್ಕದಿದ್ದರೆ ನೀವೇ ವಾಲಂಟರಿ ರಿಟೈರ್‌ಮೆಂಟ್ ತೊಗೊಂಡು ಬಂದುಬಿಡಿ! ಎಂದು ನಾನು ಹಾಸ್ಯ ಮಾಡಿದ್ದೆ.

ಸೇತುವೆ ಹತ್ತಿ ಇಳಿದು ಮಾಡುವವರಾರೆಂದು ಪ್ಲಾಟ್‌ಫಾರ್ಮು ಇಳಿದು ಹಳಿಗಳನ್ನು ದಾಟಿ, ಪ್ಲಾಟುಫಾರ್ಮು ಹತ್ತಿ, ಮತ್ತೆ ಇನ್ನೊಂದು ಮಂಡಲ ಪೂರೈಸಿ ಒಂದನೇ ಪ್ಲಾಟ್‌ಫಾರ್ಮಿಗೆ ಬಂದೆ. ಆ ಹೊತ್ತಿಗೆ ಏಳೂಕಾಲು. ಚಾ ಕುಡಿದು, ನೋಟೀಸ್ ಬೋರ್ಡ್ ನೋಡಿದೆ. ಗುವಾಹತಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಮೂರುಗಂಟೆ ತಡವೆಂದು ಬರೆದಿತ್ತು! ಭುವನೇಶ್ವರದ ನಮ್ಮ ನಂಟು ಇನ್ನು ಒಂದು ಗಂಟೆ ಹೆಚ್ಚಾಗಿ ಬೆಳೆದಿತ್ತು. ಅಂದರೆ ಒಂಬತ್ತೂವರೆಗೆ ರೈಲು!

ರೈಲಲ್ಲಿಯೇ ಬ್ರೇಕ್‌ಫಾಸ್ಟ್ ಎಂದುಕೊಂಡಿದ್ದ ನಾವು ಯೋಜನೆ ಬದಲಾಯಿಸಿ ಬ್ರೆಡ್ ಜಾಮ್‌ಗಳನ್ನು ಅಲ್ಲಿಯೇ ಮುಗಿಸಬೇಕೆಂದು ನಿರ್ಧರಿಸಿದೆವು. ಕುಡಿಯುವ ನೀರಿಗೇನೂ ಬರವಿಲ್ಲ; ಆದರೆ ಎಂಟರ ಹೊತ್ತಿಗೇ ಬಿಸಿಲು ಜ್ವರದಂತೆ ಕಾಯುತ್ತಿತ್ತು. ನಿಧಾನವಾಗಿ ಆ ವಿಧಿ ಮುಗಿಸಿದೆವು. ಮತ್ತೊಂದು ಬಾರಿ ಕುಡಿದು ಬರೋಣವೆಂದು ನಾನೂ-ಅಪೂರ್ವ ಹೋದವು. ಆಗ ಎಂಟೂವರೆ, ಚಾ ಕುಡಿದು ನೋಟೀಸ್ ಬೋರ್ಡ್ ನೋಡಿದರೆ ರೈಲು ನಾಲ್ಕು ಗಂಟೆ ತಡವೆಂದು ಬರೆದಿತ್ತು! ಅಂದರೆ ಹತ್ತೂವರೆಗೆ ಬರುವುದು, ಗೊಣಗಾಟಕ್ಕೆ ಮಿತಿಯೇ ಇಲ್ಲ. ಚಾ

ಒಂದರ್ಧಗಂಟೆ ಬಿಟ್ಟು ಚಾ ಕುಡಿಯುವುದು, ಕಣ್ಣು ಮುಚ್ಚುವುದು, ಒಂದನೇ ಪ್ಲಾಟ್‌ಫಾರ್ಮಿನ ಕಡೆ ಹೋಗುವುದು, ನೋಟೀಸ್ ಬೋರ್ಡ್ ನೋಡುವುದು, ಮತ್ತಷ್ಟು ತಡವೆಂದು ಬರೆದಿದ್ದುದನ್ನು ಕಂಡು ಶಪಿಸಿಕೊಂಡು ಬರುವುದು - ಹೀಗೇ ಆಯಿತು. ಸೇತುವೆ ಹತ್ತಿ ಇಳಿಯಲಾರದ್ದಕ್ಕೆ ಪ್ಲಾಟ್‌ಫಾರ ಜಗಲಿ ಇಳಿದು ಹತ್ತುವಾಗ ಒಮ್ಮೆ ಆಯತಪ್ಪಿ ನನ್ನ ಮೊಣಕಾಲ ಕೆಳಗಿನ ಭಾಗಕ್ಕೆ ಜಗಲಿಯ ಮೂಲೆ ಬಡಿದು ಭುವನೇಶ್ವರದ ನೆನಪು ದೀರ್ಘಕಾಲ ಉಳಿಯುವಂತಾಯಿತು! ಕಾಲ ಸರಿದಂತೆ ಬಿಸಿಲಿನ ಝಳ ಏರುತ್ತಿತ್ತು; ರೂಮಿನಲ್ಲಿದ್ದಿದ್ದರೆ ಮೈ ಮೇಲೆ ತಣ್ಣೀರು ಹಾಕಿಕೊಳ್ಳಬಹುದಿತ್ತು; ರೂಮಿನ ಕಿಟಕಿ ಬಾಗಿಲು ತೆರೆದು, ಒಂದು ಪಂಚೆ ಇಲ್ಲಿ ಸುತ್ತಿಕೊಂಡು ಫ್ಯಾನ್ ಕೆಳಗೆ ಬಿದ್ದು ಕೊಳ್ಳಬಹುದಾಗಿತ್ತು. ಅದಾವುದೂ ಸಾಧ್ಯವಿಲ್ಲ.

ನಮ್ಮ ಜತೆಯ ಪ್ರಯಾಣಿಕರೂ ನಮ್ಮೊಡನೆ ಕಷ್ಟ ಅನುಭವಿಸುವರಲ್ಲ ಎಂದು ಸಮಾಧಾನ ಮಾಡಿಕೊಳ್ಳೋಣವೆಂದರೆ, ಬಂದವರೆಲ್ಲ ಬೇರೆ ರೈಲುಗಳಿಗೆ ಹೋಗುವವರು. ನಾಲ್ಕು ಪ್ಲಾಟುಫಾರ್ಮುಗಳಲ್ಲಿಯೂ ರೈಲುಗಳು ಬರುತ್ತಿದ್ದವು, ಹೋಗುತ್ತಿದ್ದವು. ಜನ ಬಂದವರು ಬಹುಬೇಗ ಖಾಲಿಯಾಗುತ್ತಿದ್ದರು. ನಮ್ಮ ರೈಲಿಗೆ ಕಾಯುವವರೇ ಇಲ್ಲ - ನಾವೂ, ಆ ಬಾಹುಬಲಿ. ಹಾಗೂ ಕಾಯುವಿಕೆಯಲ್ಲಿ ಪರಿಚಿತರಾದ ಗಂಡ-ಹೆಂಡತಿ-ಮಗ ಇವರನ್ನೊಳಗೊಂಡ ಒಂದು ಕುಟುಂಬ, ಕನ್ನಡಿಗರದು. ಅಲ್ಲೇ ಬೆಂಚೊಂದರ ಮೇಲೆ ಅಡ್ಡಾಗಿ ಕಣ್ಣು ಮುಚ್ಚುವುದು, ಸಾಕಾಗಿ ಮೇಲೇಳುವುದು, ಸದಾ ಪಕ್ಕದಲ್ಲಿಯೇ ಇರುತ್ತಿದ್ದ ಟವಲಿನಿಂದ ಬೆವರೊರೆಸಿಕೊಳ್ಳುವುದು, ದೂರಕ್ಕೆ ಹೋಗಿ ಚಹಾ ಕುಡಿಯುವುದು, ಆ ಕನ್ನಡಿಗರ ಕುಟುಂಬದ ಹುಡುಗನೊಡನೆ ಅಪೂರ್ವ ಚೆಸ್ ಆಡಿದುದು ಯಾವುದೂ ದೈವಕ್ಕೆ ಪ್ರಿಯವಾಗಲಿಲ್ಲ; ನಮ್ಮ ರೈಲು ಬರುವುದು ಮುಂದೆ ಮುಂದೆ ಹೋಗುತ್ತಿತ್ತು. ಬಿಶ್ರಾತು ಭವನದ ನಮ್ಮ ರೂಮಿಗೆ ಬೇರಾರೋ ಈ ಹೊತ್ತಿಗೆ ಬಂದಿರಬಹುದು, ಪಂಡ ಅವರ ಮಗ ಅಯನ ಸ್ಕೂಲಿಗೆ ಹೋಗಿರಬಹುದು, ಅವರು ಊಟಕ್ಕೆ ಕೂತಿರಬಹುದು, ನಮ್ಮನ್ನು ನೆನಪಿಸಿಕೊಳ್ಳುತ್ತಿರಬಹುದು. ಹೀಗೆ ಮಾತನಾಡಿಕೊಳ್ಳುತ್ತ ಕಾಲವನ್ನು ನೂಕುತ್ತಿದ್ದವು. ಎಷ್ಟೇ ಭಾರವಾದ ವಸ್ತುವನ್ನು ನೂಕಬಹುದು, ಕಾಲ ಕೈಗೆ ಸಿಕ್ಕರೆ ತಾನೇ ನೂಕಲು ಸಾಧ್ಯವಾಗುವುದು?

ಕಾದೂ ಕಾದೂ ಸಾಕಾಯಿತು. ಮಾನಸಿಕವಾಗಿ ನಾವಾಗಲೇ ಭುವನೇಶ್ವರದಿಂದ ದೂರವಾಗಿದ್ದೆವು; ದೇಹಗಳು ಆ ಊರಿನ ರೈಲ್ವೇ ನಿಲ್ದಾಣದಲ್ಲಿದ್ದರೂ ಊರಿನ ಚಟುವಟಿಕೆಗಳಲ್ಲಿ ಸೇರುವುದು ಸಾಧ್ಯವಲ್ಲದ್ದರಿಂದ ಭೌತಿಕವಾಗಿಯೂ ನಾವು ಊರು ಬಿಟ್ಟಿದ್ದೆವು. ಸೆಕೆ ಮಾತ್ರ ಊರಿನದೇ ಎಂದು ನೆನಪಾಗುತ್ತಿತ್ತು. ರೈಲು ಬರುವುದೇ ಇಲ್ಲವೇನೋ ಎಂದು ಗಾಬರಿಯಾಯಿತು. 'ವೈಟಿಂಗ್ ಫಾರ್ ಗಾಡೋ ನೆನಪಾಯಿತು. ಆದರೆ ನಾವು ಕಾಯುತ್ತಿದ್ದುದು ಗಾಡೋಗೆ ಅಲ್ಲ, ಗಾಡಿಗೆ. ಗುವಾಹಾತಿಯೆಂದರೆ ಪರ್ವತ ಪ್ರದೇಶವಿರಬೇಕು; ಮಳೆ ಭೂಕುಸಿತ ಇತ್ಯಾದಿಗಳಿಂದ ತೊಂದರೆಯಾಗಿರಬಹುದು ಎಂದುಕೊಳ್ಳುತ್ತ ತಡವಾದ ರೈಲನ್ನು ಕ್ಷಮಿಸಲು ಕಾರಣ ಹುಡುಕುತ್ತ ಕಾಯುತ್ತಿದ್ದೆವು. ಕೊನೆಗೆ, ಮಧ್ಯಾಹ್ನ ಎರಡೂವರೆಗೆ ರೈಲು ಬರುವುದೆಂದು ಹೇಳಿದರು. ಹೊತ್ತಿನವರೆಗೂ ಕಾಯಲೇಬೇಕಲ್ಲ. ಎರಡೂ ಮುಕ್ಕಾಲು ಗಂಟೆಯ ಹೊತ್ತಿಗೆ ಸುಸ್ತಾದಂತಿದ್ದ ರೈಲೊಂದು (ಆ ವೇಳೆಗೆ ಎಷ್ಟೋ ರೈಲುಗಳು ಬಂದು ಹೋಗಿದ್ದವು) ಬಂದು ನಿಂತಾಗ, ಅದೇ ಗುವಾಹತಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್ಪ್ರೆಸ್, ಎಂದರು. ನಮಗೆ ನಂಬಿಕೆಯೇ ಬರಲಿಲ್ಲ. ಇದ್ದರೂ ಇರಬಹುದೆಂಬ ಅನುಮಾನದಿಂದ ಒಳಗಿದ್ದ ಪ್ರಯಾಣಿಕರನ್ನು ವಿಚಾರಿಸಿದಾಗ ಹೌದೆಂದು ಗೊತ್ತಾಯಿತು. ನಮಗೆ ನಂಬಲೇ ಆಗಲಿಲ್ಲ, ಆದರೂ ನಂಬಬೇಕಲ್ಲ. ಲಗುಬಗೆಯಿಂದ ಹತ್ತಿದವು; ಆರೇ ನಿಮಿಷ ತಾನೇ ನಿಲ್ಲುವುದು. ಹದಿನೈದು ನಿಮಿಷಗಳಾದ ಮೇಲೆ ರೈಲು ಹೊರಟಿತು!

****

ರೈಲಲ್ಲಿ ರಾಮಾಯಣ

ಅಂತೂ ಬೆಂಗಳೂರಿಗೆ ಮತ್ತೆ ತಲುಪುವ ಉತ್ಸಾಹವನ್ನು ಹೊತ್ತು ರೈಲು ಮುಂದೆ ಓಡುತ್ತಿತ್ತು. ಸುಮಾರು ನಾಲ್ಕೂವರೆಯ ಹೊತ್ತಿಗೆ ಚಿಲಿತ ಸರೋವರವನ್ನು ಬದಿಗಿರಿಸಿಕೊಂಡು ರೈಲು ಮುಂದುವರಿಯುತ್ತಿತ್ತು. ಕೆಲವೇಳೆ ಹತ್ತಿರ, ಕೆಲವು ಸಲ ದೂರ. ಇದು ಭಾರತದ ಅತ್ಯಂತ ದೊಡ್ಡ ಸರೋವರ, ಸುಮಾರು ೧೧೦೦ ಚದರ ಕಿಲೋಮೀಟರ್ ವಿಸ್ತೀರ್ಣದ ಈ ಸರೋವರಕ್ಕೂ ಸಮುದ್ರಕ್ಕೂ ಕಿರಿದಾದ ಸಂಪರ್ಕವಿದೆ. ಅನೇಕ ಗುಡ್ಡಗಳ ಸುತ್ತ ಆವರಿಸಿ ಅವುಗಳನ್ನು ದ್ವೀಪಗಳನ್ನಾಗಿಸಿರುವ ಈ ಸರೋವರದ ನಡುವ ಪಕ್ಷಿಕಾಶಿಗಳಿವೆ- ಉಪ್ಪು ನೀರು. ನಾನಾ ಬಗೆಯ ಮೀನಿನ ಬೆಳೆ.  ಈ ಭಾಗದಲ್ಲಿ ರೈಲು ಹಾದುಹೋದದ್ದು ರಾತ್ರಿಯಾದ್ದರಿಂದ ಕಂಡಿರಲಿಲ್ಲ.

ರೈಲು ಪ್ರಯಾಣವೆಂದರೆ, ಅದೂ ದೀರ್ಘವಾದರೆ, ಅಕ್ಕಪಕ್ಕದವರ ಪರಿಚಯ ಸಹಜ ತಾನೇ. ನಮ್ಮ ಸೀಟುಗಳ ಎದುರಿಗೆ ಒಂದು ಶ್ರೀರಾಮನ ಪರಿವಾರ. ವಯಸ್ಸಾದ ಗಂಡ-ಹೆಂಡತಿ, ಗಂಡಸಿನ ತಮ್ಮ. ಆ ದಂಪತಿಗಳಿಗೆ ಮಕ್ಕಳಿಲ್ಲ, ತಮ್ಮನ ಮಗ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ; ಅವನನ್ನು ಬೆಳೆಸಿದ್ದು ಈ ದಂಪತಿಗಳೇ; ಬರಲೇಬೇಕೆಂದು ಬರೆದಿದ್ದಾನೆ. ಅಲ್ಲದೆ ಆ ಯಜಮಾನನಿಗೆ ಕಾಯಿಲೆ, ಹೊಟ್ಟೆಗೆ ಸಂಬಂಧಿಸಿದ್ದು. ತಮ್ಮ ಅಣ್ಣನ ಸೇವೆಯನ್ನು ಮುತುವರ್ಜಿಯಿಂದ ಮಾಡುತ್ತಾನೆ. ಹಾಸಿಗೆ ಹಾಸಿ ಕೊಡುವುದು, ಬೇಕಾದಾಗ ನೀರು ಕೊಡುವುದು, ಮಲಗಿದಾಗ ಕಾಲೊತ್ತುವುದು ಇತ್ಯಾದಿ. ಹೆಂಡತಿಯೂ ಮಾಡುತ್ತಾಳೆ, ಅದು ಅವಳ ಕರ್ತವ್ಯ ತಾನೇ! ರಾತ್ರಿ ಎಂಟುಗಂಟೆಯ ಹೊತ್ತಿಗೆ ಊಟಕ್ಕೆ ಕುಳಿತರು. ಆತನ ಊಟವೆಂದರೆ ಹುರಿದ ಅವಲಕ್ಕಿ- ಸಕ್ಕರೆ. ಒಂದು ಪಾತ್ರೆಯಲ್ಲಿ ಕಲಸಿ ತಿನ್ನುತ್ತಿದ್ದರು. ಹೆಂಡತಿ ಮೈದುನರೂ ಅದೇ ತಿಂದರು. ನಮಗೂ ಒಂದೊಂದು ಬೊಗಸೆಯಿತ್ತರು. ನಾವು ಬೇಡವೆಂದೆವು; ನಾವೂ ಚಪಾತಿಯ ಗಂಟು ಬಿಚ್ಚಬೇಕಾಗಿತ್ತಲ್ಲ. ಆದರೆ ಬಿಡಬೇಕಲ್ಲ; ಯಜಮಾನ 'ಹಂ ಬ್ರಾಹ್ಮಣ್ ಹೈಂ' ಎಂದ, ನಾವು ಹಿಂದೆ ಮುಂದೆ ನೋಡುತ್ತಿದ್ದುದಕ್ಕೆ ಉತ್ತರವೆಂಬಂತೆ, ಬೇಡವೆಂದು ಕೊಸರಾಡುವುದಕ್ಕೂ ಭಾಷೆ ಬಾರದು, ಆದ್ದರಿಂದ ಪಂಚಾಯಿತಿಯೇಕೆಂದು ತೆಗೆದುಕೊಂಡವು. ನಾಗರಾಜ್ ಸ್ವಲ್ಪ ಸಕ್ಕರೆ ಕೇಳಿದರು. ಆಮೇಲೆ ಹಣ್ಣುಗಳು- ಅವರು ಸಿಪ್ಪೆ ಬೀಜಗಳನ್ನು ಅಲ್ಲೇ ಬಿಸಾಕುತ್ತಿದ್ದರು. ನಾಗರಾಜ್ ಕೈ ನೀಡಿ ತೋರಿಸುತ್ತ ಅವನ್ನೆಲ್ಲ ಅಲ್ಲಿ ಹಾಕಬೇಡಿರಿ, ಕಿಟಕಿಯ ಹೊರಗೆಸೆಯಿರಿ ಎಂದು ಹೇಳಿದರು. ಅವರು ಕೈ ನೀಡಿದ್ದು ತಮಗೆ ಬೇಕೆಂದು ಭಾವಿಸಿ ಹಣ್ಣನ್ನೂ ಕೊಡಲು ಬಂದರು! ಒಳ್ಳೆ ಬ್ರಾಹ್ಮಣರು ಗಂಟು ಬಿದ್ದರಲ್ಲ ಎಂದುಕೊಂಡವು. ಸೇವೆಯನ್ನು ತನ್ನ ಹಕ್ಕು ಎಂಬಂತೆ ಆ ಯಜಮಾನ ಮಾಡಿಸಿಕೊಳ್ಳುತ್ತಿದ್ದ. ಅದೂ ಇದು ಅನುಜ್ಞೆ ಕೊಡುತ್ತಿದ್ದ.

ಮಾರನೆಯ ದಿನ ಪೂರ್ತಿ ರೈಲು ಓಡಬೇಕು. ಹಗಲೆಲ್ಲ ಪ್ರಯಾಣ. ರೈಲು ನಿಂತ ನಿಲ್ದಾಣಗಳಲ್ಲಿ ತಮ್ಮ ಇಳಿದು ಏನಾದರೂ ತಂದು ಅಣ್ಣನಿಗೆ ಕೊಡುತ್ತಿದ್ದ. ನಮಗೆ ವನವಾಸ ಕಾಲದಲ್ಲಿ ಸೀತಾ ಸಮೇತನಾದ ಶ್ರೀರಾಮನಿಗೆ ಸೇವೆಗೈಯುತ್ತಿದ್ದ ಲಕ್ಷ್ಮಣನ ನೆನಪು. ಪಾಪಿಗಳಾದ ನಾವು ಅಣ್ಣನ ಸೇವೆಯಿರಲಿ, ತಾಯ್ತಂದೆಯರ ಸೇವೆಯನ್ನೂ ಮಾಡಲಿಲ್ಲ, ನಮಗೇನು ಗತಿಯೋ ಎನ್ನಿಸುತ್ತಿತ್ತು. ಹೆಂಡತಿಯಂತೂ ಸೀತೆಯೇ ಆದ್ದರಿಂದ ಗಂಡನ ಸೇವೆ ಅವಳ ಭಾಗ್ಯ ತಾನೇ! ರೈಲು ಮದ್ರಾಸ್ ತಲುಪಿದಾಗ ಮಧ್ಯಾಹ್ನ ಎರಡು ಗಂಟೆ. ಲ್ಲಿ ತಣ್ಣೀರು ಹಿಡಿದುಕೊಳ್ಳಲು ಇಳಿದವು. ಅಣ್ಣನಿಗೆಂದು ಲಕ್ಷ್ಮಣ ಏನೇನೋ ತಂದ. ಶ್ರೀರಾಮನೂ ತಮ್ಮನಿಗೆ ವಾತ್ಸಲ್ಯಪೂರಿತವಾಗಿ ಮಾವಿನ ಹಣ್ಣುಗಳನ್ನು ತಂದುಕೊಟ್ಟ, ಸುಮಾರು ಮೂರು ಗಂಟೆಗೆ ರೈಲು ಹೊರಟಿತು; ನೋಡಿದರೆ ಶ್ರೀರಾಮ ಯಾವ ಮಾಯದಲ್ಲಿಯೋ ಮತ್ತೆ ಇಳಿದುಬಿಟ್ಟಿದ್ದಾನೆ! ಡಬ್ಬಿಯ ಎರಡೂ ಬದಿಯ ಟಾಯ್ಲೆಟ್‌ಗಳ ಬಾಗಿಲು ಬಡಿದರೂ ಸುಳಿವಿಲ್ಲ. ಈ ರೈಲು ಆ ಬೆಳಿಗ್ಗೆ ಹನ್ನೊಂದುವರೆಗೆ ಬೆಂಗಳೂರು ತಲುಪಿರಬೇಕಾಗಿತ್ತು. ಹಾಗಾಗಿ ಕೇಟರಿಂಗ್ ಇರಲಿಲ್ಲವಾದ್ದರಿಂದ ಡಬ್ಬಿಗಳ ನಡುವಣ ಸೇತುವೆಯನ್ನು ಮುಚ್ಚಿದರು; ಒಂದೊಂದೂ ಬೇರೆ ಬೇರೆಯಾಗಿದೆ. ಆದರೆ ಲಕ್ಷ್ಮಣ ತಹತಹದಿಂದ ಡಬ್ಬಿಯ ಒಂದು ಕಡೆಯ ಬಾಗಿಲು ತೆಗೆದು ಪಕ್ಕದ ಡಬ್ಬಿಯ ಕಡೆ ತಲೆಯಿಟ್ಟು ಕೂಗಿದಾಗ ಅಲ್ಲಿ ಶ್ರೀರಾಮಚಂದ್ರನಿದ್ದ. ಇದು ಖಚಿತವಾದ ಮೇಲೆ ವಾಪಸು ಬಂದು ಅತ್ತಿಗೆಯ ಪಕ್ಕ ಕುಳಿತ.

ಆದ್ದರಿಂದ ಮದ್ರಾಸು ಬಿಡುವ ವೇಳೆಗೆ ಅನೇಕ ಮಂದಿ ಇಳಿದಿದ್ದರು, ಈ ರೈಲು ವಾರಕ್ಕೊಮ್ಮೆಯಾದ್ದರಿಂದಲೂ, ಯಾವಾಗಲೂ ತಡವಾದ್ದರಿಂದಲೂ ಹತ್ತುವವರು ಇರಲಿಲ್ಲ. ಹಾಗಾಗಿ ನಮ್ಮ ಡಬ್ಬಿಯಲ್ಲಿ ಒಬ್ಬೊಬ್ಬರಿಗೆ ಮೂರು ಬರ್ತಗಳು! ಈ ಮಧ್ಯೆ ಇನ್ನೊಂದು ಕಾಂಡ ರಾಮಾಯಣದಲ್ಲಿ, ಒಬ್ಬ ಹಿರಿಯ, ಮತ್ತಿಬ್ಬರು ಕಿರಿಯ ಟಿಕೆಟ್ ತಪಾಸಣಾಧಿಕಾರಿಗಳು ಬಂದರು. ಹಿರಿಯ ಮುಂದೆ ಹೋದ, ಕಿರಿಯರು ಟಿಕೆಟ್ ನೋಡಿ ಆ ಕುಟುಂಬದ ಪ್ರಯಾಣಿಕರ ಬಗ್ಗೆ ತಕರಾರು ತೆಗೆದರು. ಎಲ್ಲ ಸರಿಯಾಗಿದೆ; ಆದರೆ ಆ ಹೆಂಗಸಿನ ವಯಸ್ಸು ಅರವತೈದು ಎಂದು ಮುದ್ರಿತವಾಗಿದೆ. ಆಕೆಗೆ ಹೆಚ್ಚೆಂದರೆ ಐವತ್ತೋ-ಐವತ್ತೆರಡು ರಬೇಕೆನ್ನುತ್ತಿದ್ದರು. ಈ ಉತ್ತರ ಭಾರತದವರೇ ಹೀಗೆ ಎಂಬುದು ಆ ತಮಿಳು ಅಧಿಕಾರಿಗಳ ಷರಾ ಬೇರೆ. ಪ್ರಿಂಟ್ ತಪ್ಪಾಗಿರಬಹುದು, ಯಾರೋ ಬೇರೆಯವರು ಇವರಿಗಾಗಿ ಟಿಕೆಟ್ ಬುಕ್ ಮಾಡಿಸಲು ಹೋಗಿ ತಪ್ಪಾಗಿ ವಯಸ್ಸು ಬರೆದಿರಬಹುದು. ಅದಕ್ಕಾಗಿ ವ್ಯಕ್ತಿ ಆವರೇ ಅಲ್ಲ ಎಂದು ಹೇಗೆ ಹೇಳುತ್ತೀರಿ, ಸುಮ್ಮನೆ ಬಿಡಿ ಎಂದು ನಾವು ವಾದ ಮಾಡಿದವು ಚುನಾವಣೆಗಳಲ್ಲಿ ಮತದಾರರ ಪಟ್ಟಿಯ ಉದಾಹರಣೆ ಎತ್ತಿದವು. ಓಟು ಹಾಕಲು ಬಂದವರ ಹೆಸರು ಸರಿಯಾಗಿದ್ದರೆ, ಆ ಹೆಸರಲ್ಲಿ ಓಟು ಆಗಿರದಿದ್ದರೆ ಮತಪತ್ರ ನೀಡಲು ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳಾಗಿ ಕೆಲಸ ಮಾಡಿದ್ದ ನಮಗೆ ಮೇಲಿನವರು ಸೂಚನೆಯಿತ್ತಿದ್ದರು. ಇದನ್ನೆಲ್ಲ ಹೇಳಿದೆವು. ಯಾವಾಗ ಚುನಾವಣೆಯ ಪ್ರಸ್ತಾಪ ಬಂದಿತೋ, ಮುಖ್ಯ ಚುನಾವಣಾಧಿಕಾರಿ ಶೇಷನ್ ನೆನಪಿಗೆ ಬಂದರು. ಆತ ಆಜ್ಞೆ ಮಾಡಿರುವಂತೆ ಗುರುತಿನ ಚೀಟಿ ನೀಡಿದರೆ ಇಂತಹ ತಾಪತ್ರಯಗಳು ಇರುವುದಿಲ್ಲ ಎಂದುಕೊಂಡೆವು (ಆ ಕಾರಣಕ್ಕಾಗಿಯೇ ಕೆಲವರು ಗುರುತಿನ ಚೀಟಿ ನೀಡುವ ಯೋಜನೆಗೆ ವಿರೋಧಿಗಳಂತೆ; ಗುರುತಿಸುವಿಕೆಯ ಗೊಂದಲ ಕೆಲವರಿಗೆ ಲಾಭದಾಯಕವಂತೆ!) ಆ ಹೊತ್ತಿಗೆ ಎಲ್ಲೋ ಹೋಗಿದ್ದ ಹಿರಿಯ ಅಧಿಕಾರಿ ಬಂದ. ಆತನಿಗೂ ಹೇಳಿದೆವು. ಆತ ಒಪ್ಪಿದ. ಇವತೈದು ಎಂಬುದರ ಬದಲು ಮುದ್ರಿತವಾಗಿರಬೇಕೆಂದು ಒಪ್ಪಿ ತಕರಾರನ್ನು ನಿಲ್ಲಿಸಿದ. ಈಗ ಸ್ಟ್ರಿಕ್ಟ್ ಆಗಿ ಎಲ್ಲ ವಿವರಗಳನ್ನೂ ಪರಿಶೀಲಿಸಬೇಕೆಂದು ರೈಲ್ವೆ ಬೋರ್ಡಿನ ಎಂಬ ಸೂಚನೆಯೆಂದು ಆತ ಹೇಳಿದ. ನಮ್ಮ ಡಬ್ಬಿಗೆ ತಪಾಸಣೆಗೆ ಬಂದದ್ದು ಹಿಂದಿನ ಮಧ್ಯಾಹ್ನವೇ ಎಂದು 'ಹೌದೇ!" ಎಂದು ಅಚ್ಚರಿ ವ್ಯಕ್ತಪಡಿಸಿದ. ಇಷ್ಟೆಲ್ಲ ಆಗುತ್ತಿದ್ದರೂ, ಗಂಡ ರೈಲು ಹತ್ತಿದನೋ ಇಲ್ಲವೋ! ರೈಲು ಮದ್ರಾಸ್ ಬಿಟ್ಟು ಸಾಕಷ್ಟು ಹೊತ್ತಾದರೂ ಹೆಂಗಸು ಮಾತ್ರ ನಿರುಮ್ಮಳವಾಗಿ ಕಿಟಕಿಗೊರಗಿ ಕೂತಿದ್ದಳು; ತೂಕಡಿಸುತ್ತ, ತನ್ನ ಪಾಲಿನ ತಿಂಡಿ ತಿಂದಳು. ಮೈದುನ ತಂದಿದ್ದನ್ನು ಸ್ವೀಕರಿಸಿದಳು. ರೈಲು ಮುಂದೆ ಯಾವುದೋ ನಿಲ್ದಾಣದಲ್ಲಿ ನಿಂತಿತು. ಆಗ ಅಣ್ಣ ಇಳಿದು ನಮ್ಮ ಡಬ್ಬಿಗೆ ಬಂದ. ಶ್ರೀರಾಮಚಂದ್ರನ ಮುಖ ಹನುಮಂತನದರ ಹಾಗೆ ಊದಿತ್ತು. ತಮ್ಮ ಕಕ್ಕುಲತೆಯಿಂದ ನೀಡಿದ ಊಟವನ್ನು ಕೋಪದಿಂದ ಕಿಟಕಿಯಲ್ಲೆಸೆದು ಬಿಟ್ಟ, ಏನೇನೋ ಗೊಣಗಾಡುತ್ತಿದ್ದ. ತಮ್ಮ ಸಮಜಾಯಿಷಿ ಮಾಡಲು ಪ್ರಯತ್ನಿಸುತ್ತಿದ್ದರೂ ಹೆಂಡತಿ ತೆಪ್ಪಗೇ ಇದ್ದಳು. ಗಂಡ ರೈಲು ಹತ್ತಲಿಲ್ಲವೆಂದು ತಿಳಿದರೂ ಗಾಬರಿಯಾದಂತೆ ಕಾಣಲಿಲ್ಲವಲ್ಲ - ಯಾಕೆ ಎನ್ನಿಸಿತು. ಸ್ವಭಾವತಃ ಸಮಾಧಾನಿಯಾಗಿರಬಹುದು, ಎಲ್ಲಿ ಹೋದಾರು, ಪಕ್ಕದೊಂದು ಡಬ್ಬಿಯಲ್ಲಿ ಹತ್ತಿದ್ದಾರು, ಬಂದಾರು ಸಮಾಧಾನವಿರಬಹುದೇ ಎನ್ನಿಸಿತು. (ಗಾಬರಿಯಲ್ಲಿ ಇವರೆಲ್ಲಾದರೂ ರೈಲು ನಿಲ್ಲಿಸುವ ಸರಪಳಿ ಎಳೆಯುತ್ತಾರೇನೋ, ರೈಲು ನಿಂತು, ವಿಚಾರಣೆಯಾಗಿ ಮತ್ತಷ್ಟು ತಡವಾಗುತ್ತದೇನೋ ಎಂದು ಸ್ವಲ್ಪ ತಳಮಳವೂ ಆಗ ಕೆಲಕಾಲ ಕಾಣಿಸಿಕೊಂಡಿತ್ತು. ಸದ್ಯ, ಹಾಗೆ ಮಾಡಿರಲಿಲ್ಲ.) ಅಥವಾ ಈ ಶ್ರೀರಾಮಚಂದ್ರನ ಸೇವೆ ಸಾಕು, ಆತ ಬಾರದಿದ್ದರೇನು ಚಿಂತೆಯಿಲ್ಲ ಹಾಯಾಗಿ ಮುಂದಿನ ಜೀವನ ಕಳೆಯಬಹುದೆಂದು ಮನಸ್ಸಿಗೆ ಹಗುರು ಉಂಟಾಯಿತೇ ಎಂದು ದುಷ್ಟ ಮನಸ್ಸು ಚಿಂತಿಸಿತು. ಅದಕ್ಕನುಗುಣವಾಗಿ ಪೋಲಂಕಿ ರಾಮಮೂರ್ತಿಯವರ ನೆನಪಾಯಿತು. ಸೀತೆಗೆ ಲಕ್ಷ್ಮಣನ ಬಗ್ಗೆ ಮೋಹವಿತ್ತು ಎಂದು ಅವರ ವಾದ ಈಕೆಯ ಪಕ್ಕದಲ್ಲಿ ಕೂತಿದ್ದ ಲಕ್ಷ್ಮಣನನ್ನು ಕಂಡಾಗ ನಮ್ಮಲ್ಲಿ ಕಾಣಿಕೊಂಡಿತು! ಛೇ, ಎಂತಹ ಹೀನ ಬುದ್ದಿ ನಮ್ಮದು ಎಂದುಕೊಂಡೆವು.

ಯಾರದೋ ರಾಮಾಯಣದ ಬಗ್ಗೆ ನಮ್ಮ ಮನಸ್ಸು ಯೋಚಿಸಲು ಬೆಂಗಳೂರು ಹತ್ತಿರವಾಗುತ್ತಿದ್ದಂತೆ ನಿರಾಕರಿಸಿತು. ಹಾಗೂ ಹೀಗೂ ಬಂಗಾರ ಪೇಟೆಯವರೆಗೆ ರೈಲು ಓಡುತ್ತಿತ್ತು. ಆಮೇಲೆ ಸ್ವಲ್ಪಕಾಲ ನಡೆಯುವುದು, ನಿಲ್ಲುವುದು; ಎದುರು ಬಂದ ಸಣ್ಣಪುಟ್ಟ ರೈಲುಗಳಿಗೆ ಬಿಟ್ಟು ಸಾವಧಾನವಾಗಿ ಏನೇನೂ ಅವಸರವಿಲ್ಲವೆಂಬಂತೆ ಪ್ರಯಾಣ. ಆದರೆ ನಿಂತೇ ಬಿಡಲು ಸಾಧ್ಯವಿಲ್ಲ. ಬೇಕಿರಲಿ, ಬೇಡವಾಗಲಿ ಅಂತೂ ರೈಲು ಬೆಳಿಗ್ಗೆ ಹನ್ನೊಂದೂವರೆಗೆ ಬೆಂಗಳೂರು ತಲುಪಬೇಕಾದದ್ದು ಬೆಂಗಳೂರು ರೈಲ್ವೆ ಮಿಲ್ದಾಣದಲ್ಲಿ ನಿಂತಾಗ ರಾತ್ರಿ ಒಂಬತ್ತೂ ಮುಕ್ಕಾಲು. ದಾಳಿಂಬೆ ಹಣ್ಣನ್ನು ಬಿಡಿಸಿದ ಕಾಳುಗಳು ಬಿಡಿಬಿಡಿಯಾದಂತೆ ರೈಲಿನಲ್ಲಿದ್ದ ಪ್ರಯಾಣಿಕರು ಚಲ್ಲಾಪಿಲ್ಲಿ!

*****

No comments: