ಉರಿಲಿಂಗಪೆದ್ದಿ-ಕಾಳವ್ವೆ; ದಲಿತಪ್ರಜ್ಞೆಯ ಪ್ರತೀಕ
ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಚಳವಳಿಯನ್ನು ಕೇವಲ ಒಂದು
ಭಕ್ತಿ ಚಳುವಳಿ ಎಂದು ವರ್ಣಿಸುವುದನ್ನು ನಾನು ಒಪ್ಪಲಾರೆ; ಅದನ್ನು ಇತರ ಭಕ್ತಿ ಚಳುವಳಿಗಳಿಗೆ
ಹೋಲಿಸಲಾಗದು. ಭಕ್ತಿ ಚಳುವಳಿಗಳ ಮುಖ್ಯ ಲಕ್ಷಣವೆಂದರೆ ಭಕ್ತಿಯ ಭಾವ ವ್ಯಾಪಕವಾಗಿ ಹರಡುವುದು
ಮಾತ್ರವಲ್ಲದೆ, ರೂಢಮೂಲ ವ್ಯವಸ್ಥೆಯ ಶ್ರೇಣೀಕೃತ ಸಮಾಜದಲ್ಲಿ ಕೆಳವರ್ಗದವರು ಮೇಲುವರ್ಗದವರ
ಸಾಮಾಜಿಕ ತುಳಿತಕ್ಕೆ ಮಾತ್ರವಲ್ಲದೆ, ಅವರಿಂದ ನೇರವಾದ ಭರ್ತ್ಸನೆ, ದೈಹಿಕ ಹಿಂಸೆ ಮತ್ತು
ಅಪಮಾನಗಳಿಗೆ ಒಳಗಾಗಿ, ಕೊನೆಗೆ ಭಕ್ತಿಯ ಕಾರಣದಿಂದ ಅವರ ಆತ್ಮಿಕ ಶಕ್ತಿ ಪ್ರದರ್ಶನಗೊಂಡು
ಮೇಲುವರ್ಗದವರ ಭಯಗೌರವಗಳಿಗೆ ಒಳಗಾಗುವುದು. ತಿರುಪಾಣಿಯೋ ಕನಕದಾಸನೋ ಇದಕ್ಕೆ ತಕ್ಕ ಉದಾಹರಣೆ.
ಅವರು ವ್ಯವಸ್ಥೆಯನ್ನು ನೇರವಾಗಿ ಧಿಕ್ಕರಿಸಿದವರಲ್ಲ, ಅದರ ವಿರುದ್ಧ ಪ್ರತಿಭಟನೆಯ ಕಾವು
ಹರಡಿದವರಲ್ಲ. ಕನಕದಾಸನ 'ರಾಮಧಾನ್ಯಚರಿತೆ'ಯಲ್ಲಿ ಮೇಲುವರ್ಗ ಮತ್ತು ಕೆಳವರ್ಗಗಗಳ ಸಂರ್ಷವು
ಅಕ್ಕಿ-ರಾಗಿಗಳ ರೂಪಕಗಳ ಮೂಲಕ ಸ್ವಲ್ಪಮಟ್ಟಿಗೆ ವ್ಯಕ್ತವಾಗಿದ್ದರೂ, ರಾಗಿಯ ನಡವಳಿಕೆಯಲ್ಲಿ ಆತ್ಮಪ್ರತ್ಯಯ
ಕಾಣಿಸಿದರೂ ಅದರಲ್ಲಿ ವ್ಯವಸ್ಥೆಯ ವಿರುದ್ಧದ ಆಕ್ರೋಶವಿಲ್ಲ. ಹೀಗಾಗಿ ವ್ಯವಸ್ಥೆಯು ಅವರಿಗೆ ಅವರ
ಭಕ್ತಿಯ ಕಾರಣದಿಂದ ವೈಯಕ್ತಿಕವಾಗಿ ಒಂದಷ್ಟು ಮರ್ಯಾದೆಯನ್ನು ನೀಡಿತೇ ವಿನಾ, ಅದರ ನಡವಳಿಕೆಯು
ಮಾತ್ರ ಹಿಂದಿನಂತೆಯೇ ಜಡತ್ವದ ದಾರಿಯನ್ನೇ ಹಿಡಿಯಿತು. ಆದರೆ ವಚನ ಚಳುವಳಿ ಇಂತಹುದಲ್ಲ. ಯಾವ
ವಚನಕಾರನಾಗಲೀ ಭಕ್ತನಾಗಲೀ ವ್ಯವಸ್ಥೆಯಿಂದ ಅವಮಾನಗೊಂಡು ಆನಂತರ ಅದರ ಮಾನ್ಯತೆಯನ್ನು
ಸಂಪಾದಿಸಿದವನಲ್ಲ. ಈ ಚಳುವಳಿಯಲ್ಲಿ ಸಾತ್ವಿಕ ಭಕ್ತಿಗೆ ಮನ್ನಣೆ ದೊರಕಿದ್ದು ನಿಜ, ಡಾಂಭಿಕ
ಆಚರಣೆಗಳನ್ನು ಎಲ್ಲ ಶರಣರೂ ಟೀಕಿಸಿದ್ದೂ ನಿಜ. ಆದರೆ ಅವರಾರೂ ತಮ್ಮ ಜೀವಿತ ಕಾಲದಲ್ಲಿ ಹಿಂದಿನ
ವ್ಯವಸ್ಥೆಯ ಭಾಗವಾಗಿ ಮುಂದುವರಿಯಲಿಲ್ಲ. ಕಾಲಾನುಕಾಲಕ್ಕೆ ವಚನಕಾರರು ಹಾಕಿಕೊಟ್ಟ ಮಾರ್ಗವೂ
ಜಡತ್ವದ ಆವರಣದಲ್ಲಿ ನುಸುಳಿದ್ದು ಹಾಗೂ ತನ್ನತನವನ್ನು ಕಳೆದುಕೊಂಡದ್ದು ವಾಸ್ತವವಾದರೂ,
ಹನ್ನೆರಡನೆಯ ಶತಮಾನದಲ್ಲಿ ಈ ಚಳವಳಿಯಲ್ಲಿ ಭಾಗಿಗಳಾದವರಾರೂ ವ್ಯವಸ್ಥೆಗೆ ಮರಳಲಿಲ್ಲ. ಅದಕ್ಕೆ
ಕಾರಣ ಅವರು ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ಸಮಾಜವನ್ನು ನಿರ್ಮಿಸಲು ಹವಣಿಸಿದ್ದು. ಯಾವ
ವಚನಕಾರನೂ ತನ್ನ ಜಾತಿಯ ಕಾರಣದಿಂದಾಗಿ ಅವಮಾನಕ್ಕೊಳಗಾಗಲಿಲ್ಲ, ಏಕೆಂದರೆ ಅವರು ಹಳೆಯದನ್ನು
ಆಶ್ರಯಿಸಲಿಲ್ಲ, ಬದಲು ಅದನ್ನು ಒದ್ದು ಹೊಸದನ್ನು ರೂಪಿಸಿದರು. ಹೀಗಾಗಿ ಯಾರೂ
ಹುತಾತ್ಮರಾಗಲಿಲ್ಲ, ಆ ಕಾರಣದಿಂದ ಮೇಲುವರ್ಗದವರ ಗೌರವವನ್ನು ಸಂಪಾದಿಸಲಿಲ್ಲ. ಇಡೀ ಶರಣ
ಸಮುದಾಯವು ಹಳೆಯದರ ವಿರುದ್ಧ ಸೆಣೆಸಿತೇ ವಿನಾ ಕೇವಲ ಕೆಲವು ವ್ಯಕ್ತಿಗಳಲ್ಲ. ಭಕ್ತಿ
ಚಳುವಳಿಯಲ್ಲಿ ಅಂತಿಮವಾಗಿ ವೈಯಕ್ತಿಕ ಯೋಗ್ಯತೆಗೆ ಒಂದಷ್ಟು ಮನ್ನಣೆ ದೊರಕುತ್ತದೆಯೇ ವಿನಾ, ಇಡೀ
ವ್ಯವಸ್ಥೆ ಬದಲಾಗದು. ಅಂಥ ಭಕ್ತರೂ ವ್ಯವಸ್ಥೆಯನ್ನು ನಿರಾಕರಿಸುವ ವೈಚಾರಿಕತೆಯನ್ನು
ಪ್ರದರ್ಶಿಸಲು ಅಲ್ಲಿ ಅವಕಾಶವೇ ಇರದು. ಏಕೆಂದರೆ ಭಕ್ತಿನಿರ್ಭರತೆಯಲ್ಲಿ ಭಾವವು ಮಡುಗಟ್ಟಿರುವುದೇ
ಹೊರತು, ತನ್ನತನವಿರಹಿತವಾದ ಸಮಾಧಾನ ತುಂಬಿರುವುದೇ ಹೊರತು, ಅಲ್ಲಿ ವೈಚಾರಿಕತೆಯ ಬೆಳಕಾಗಲೀ,
ಪ್ರತಿಭಟನೆಯ ಬೆಂಕಿಯಾಗಲೀ ಇರಲು ಸಾಧ್ಯವಿಲ್ಲ. ಹೀಗಾಗಿ ವಚನ ಚಳುವಳಿಯನ್ನು ಭಕ್ತಿ ಚಳುವಳಿ
ಎನ್ನಲು ಬಾರದು; ಅದೊಂದು ಸಾಮಾಜಿಕ ಆಂದೋಲನ, ಕೆಳವರ್ಗದವರ ಚಳುವಳಿ. ವಚನಕಾರರೆಲ್ಲ ಭಕ್ತರೇ
ಆದರೂ, ಅವರಾರೂ ಸದಾ ಕಣ್ಣುಮುಚ್ಚಿ ದೇವರ ಧ್ಯಾನದಲ್ಲಿ ಮುಳುಗಿ ಸಾಮಾಜಿಕ ವಾಸ್ತವಕ್ಕೆ
ಕುರುಡಾದವರಲ್ಲ, ಆದದ್ದಾಗಲೀ ಎಂದು ಎಲ್ಲವನ್ನೂ ದೇವರಿಗೆ ಒಪ್ಪಿಸಿಬಿಟ್ಟವರಲ್ಲ. ಅಲ್ಲದೆ,
ವಚನಕಾರರು ಮೊದಲ ಮಣೆ ಹಾಕಿದ್ದು ಕಾಯಕಕ್ಕೆ. ಕಾಯಕದಲ್ಲಿ ನಿರತನಾದವನು ಯಾವ ದೇವರನ್ನೂ
ಲೆಕ್ಕಿಸಬೇಕಾಗಿಲ್ಲ ಎಂಬುದು 'ಶೂನ್ಯಸಂಪಾದನೆ'ಯ ನುಲಿಯ ಚಂದಯ್ಯಗಳ ಕತೆಯಲ್ಲಿ
ಸ್ಪಷ್ಟವಾಗುತ್ತದೆ. ಕಾಯಕದಲ್ಲಿ ತೊಡಗಿದ್ದ ಕುಂಬರ ಗುಂಡಯ್ಯನ ಬಳಿ ಶಿವ ತಾನೇ ಕುಣಿಯತೊಡಗಿದ್ದು
ಹರಿಹರನ ರಗಳೆಯ ಕತೆ.
ಈ ಚಳುವಳಿಯು ತನ್ನ ಕಾಲದ ಸಮಾಜದಲ್ಲಿನ ಕೆಳವರ್ಗದ ಜನರಲ್ಲಿದ್ದ
ಶಕ್ತಿಸಾಧ್ಯತೆಗಳನ್ನು ಅನಾವರಣಗೊಳಿಸುವುದರಲ್ಲಿ ಸಾಕಷ್ಟು ಮಟ್ಟಿಗೆ ಸಫಲವಾಯಿತು. ಎಷ್ಟೋ ಮಂದಿ
ದುರ್ಬಲವರ್ಗಗಳಿಗೆ ಸೇರಿದವರು ತಮ್ಮ ಅನಿಸಿಕೆಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವಂತಾಯಿತು.
ಕೆಲವರು ತಮ್ಮ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸ್ವಲ್ಪಮಟ್ಟಿಗೆ ಚಿಂತನೆ ನಡೆಸಿದರು. ಆದರೂ
ಇಲ್ಲೊಂದು ವಿಪರ್ಯಾಸವನ್ನು ಕಾಣಬಹುದು. ಅದೆಂದರೆ, ಕೆಳವರ್ಗದವರಲ್ಲಿನ ಬಹುಮಂದಿ ಆಧ್ಯಾತ್ಮಿಕ
ಜಗತ್ತಿನ ಗೂಡು ಸೇರಿ ಅಲ್ಲಿಯೇ ಮೈಮರೆತಂತೆ ಕಾಣುವುದು. ಕೆಳವರ್ಗದವರಿಗೆ ತಮ್ಮದೇ ಧಾರ್ಮಿಕ ಬದುಕು
ಇತ್ತಾದರೂ, ಯಜಮಾನ ಸಂಸ್ಕೃತಿಯ ನೆಲೆಯಲ್ಲಿ ಅವರು ವದೂರರೆನಿಸಿದ್ದರು, ಶಿಷ್ಟ ಪರಿಕಲ್ಪನೆಯ
ಮೋಕ್ಷಪ್ರಪಂಚದಿಂದ ವಂಚಿತರಾಗಿದ್ದರು. ಹೀಗಾಗಿ ಒಂದು ಬಗೆಯ ಆಳವಾದ ವಿಷಾದ ಅವರನ್ನು ಇದುವರೆಗೆ
ಆವರಿಸಿದ್ದುದರಲ್ಲಿ ಅಚ್ಚರಿಯಿಲ್ಲ. ಚಳವಳಿಯ ಕಾರಣದಿಂದ ಅವರಲ್ಲಿ ಆತ್ಮವಿಶ್ವಾಸ ಉಕ್ಕಿ ತಾವೂ
ಮೇಲುವರ್ಗದವರಿಗಿಂತ ಕಡಿಮೆಯೇನಲ್ಲ ಎಂಬ ಭಾವನೆ ಚಿಗುರಿದ್ದು ಬಹು ಮಹತ್ವದ ಟನೆ. ಪ್ರಾಯಶಃ ಈ
ಚಳವಳಿ ಇನ್ನೂ ದೀರ್ಘಕಾಲ ನಡೆದಿದ್ದರೆ, ಅದರ ಪ್ರತಿಭಟನೆಯ ಕಾವು ಮತ್ತಷ್ಟು ಗಾಢವಾಗಿ
ಆವರಿಸಿದ್ದರೆ, ತಮ್ಮದೇ ನಿಜವಾದ ಜಗತ್ತು, ಶಿಷ್ಟರೆನ್ನಿಸಿಕೊಂಡವರದ್ದಲ್ಲ ಎಂಬ ವಾದವನ್ನು ಅವರು
ಮುಂದಿಡುತ್ತಿದ್ದರೇನೋ, ಅಥವಾ ಜಡ ವ್ಯವಸ್ಥೆಯನ್ನು ಕಿತ್ತೆಸೆಯಲು ಅದಕ್ಕೆ ಮತ್ತಷ್ಟು
ಶಕ್ತಿಸಂಚಯನವಾಗುತ್ತದ್ದಿತೇನೋ. ಆದರೆ ಅದಕ್ಕೆ ಆಸ್ಪದವಾಗದಿದ್ದುದು ದುರದೃಷ್ಟದ ಸಂಗತಿ.
ತಮಗೆ ತೆರೆದುಕೊಂಡ ಶಿಷ್ಟಸಂಸ್ಕೃತಿಯು ಕೆಳವರ್ಗದವರಲ್ಲಿ
ಪುಲಕವನ್ನುಂಟುಮಾಡಿ ಅವರಲ್ಲಿಯೂ ಬಹುಪಾಲು ಮಂದಿ ಆಧ್ಯಾತ್ಮಿಕತೆಯ ಪೂರದಲ್ಲಿ
ಕೊಚ್ಚಿಹೋದರೆನಿಸುತ್ತದೆ. ಅಥವಾ ಹೀಗೂ ಇರಬಹುದು: ಐಹಿಕವಾಗಿ ತಮಗೆ ಪೂರ್ಣವಾಗಿ ದಕ್ಕದ
ಸ್ವಾತಂತ್ರ್ಯವು ಆಧ್ಯಾತ್ಮಿಕ ನೆಲೆಯಲ್ಲಿ ದೊರಕಿದ್ದರಿಂದ ಅದರಲ್ಲಿಯೇ ಅವರು ಹೆಚ್ಚು
ನೆಮ್ಮದಿಯನ್ನು ಪಡೆಯುವಂತಾಯಿತೇನೋ. ಅಲ್ಲದೆ, ಹಳೆಯದನ್ನು ಬಿಟ್ಟು ಹೊಸ ಜಗತ್ತನ್ನು ಸೇರಿದ್ದರೂ
ಅವರ ಮನಸ್ಸಿನಲ್ಲಿ ಹಳೆಯದರ ಗುಂಗು ಉಳಿದು ಅದರಿಂದ ಪಾರಾಗಲು ಆಧ್ಯಾತ್ಮಿಕ ಒಳಜಗತ್ತಿಗೆ
ಸರಿದಿರಬಹುದು. ಎಂದರೆ, ಹೊಸ ಸಂಘಟನೆಯಲ್ಲೂ ಕೆಲಮಟ್ಟಿಗೆ ತಾರತಮ್ಯ ಉಳಿದು ಬಂದು (ಇದಕ್ಕೆ
ವಚನಕಾರರಲ್ಲಿಯೇ ವಿಪುಲವಾದ ಪುರಾವೆಗಳು ದೊರಕುತ್ತವೆ) ಸಾಮಾಜಿಕವಾಗಿ ತಮಗೆ ಪೂರ್ಣ ಸ್ವಾತಂತ್ರ್ಯ
ದೊರಕುವುದು ಸುಲಭವಲ್ಲ ಎಂಬ ವಾಸ್ತವದ ಅರಿವು ಮೂಡಿ ಅವರು ಯಾವ ಹಂಗೂ ಇಲ್ಲದೆ ಸ್ವಚ್ಛಂದವಾಗಿ
ಆಧ್ಯಾತ್ಮಿಕ ಜಗತ್ತಿನಲ್ಲಿ ವಿಹರಿಸತೊಡಗಿದರೇನೋ. ಇದು ಕೇವಲ ಧಾರ್ಮಿಕ ಜಗತ್ತಲ್ಲ, ಅದನ್ನೂ
ಮೀರಿದುದು. ಸಾಂಸ್ಥಿಕಗೊಂಡ ಧಾರ್ಮಿಕ ವ್ಯವಸ್ಥೆಯಲ್ಲಿಯೂ ಸಾಮಾಜಿಕ ಕಟ್ಟುಪಾಡುಗಳೇ
ಕಾರ್ಯಶೀಲವಾಗಿರುವುದರಿಂದ ಅಲ್ಲಿಯೂ ವ್ಯಕ್ತಿಯ ಆಶೋತ್ತರಗಳಿಗಿಂತ ಹೆಚ್ಚಾದ ಮಹತ್ವವಿರುವುದು ಈ
ಮಿತಿಗಳಿಗೇ. ವಚನ ಚಳವಳಿಯು ತನಗೆ ಹಿಂದೆ ಇದ್ದ ಇತರ ಮತಧರ್ಮಗಳ ಸಾಂಸ್ಥಿಕ ಸ್ವರೂಪವನ್ನು ಅಲ್ಲಗಳೆದು
ಹೊಸ ಪರ್ಯಾಯಗಳನ್ನು ನಿರ್ಮಿಸಿಕೊಳ್ಳುವ ಪ್ರಯತ್ನ ಮಾಡಿದ್ದರಿಂದಾಗಿ, ಹಾಗೂ ಅದು ಇನ್ನೂ ಪೂರ್ಣ
ಪ್ರಮಾಣದಲ್ಲಿ ನೆಲೆಗೊಳ್ಳದಿದ್ದುದರಿಂದಾಗಿ, ಕೆಳವರ್ಗದ ಜನರಿಗೆ ತಮ್ಮ ಮಾನಸಿಕ ಅನುಸಂಧಾನವೇ
ಬಿಡುಗಡೆಯ ಏಕೈಕ ಮಾರ್ಗವಾಗಿತ್ತು. ಇದಕ್ಕೆ ಯಾರ ಹಂಗೂ ಇಲ್ಲವಲ್ಲ. ತನ್ನ ಮತ್ತು ತಾನು ನಂಬಿದ ದೇವರ
ನಡುವೆ ಇನ್ನಾರ ಪ್ರವೇಶಕ್ಕೂ ಆಸ್ಪದವಿರಲಿಲ್ಲ. ವಚನ ಚಳವಳಿಯು ವ್ಯಕ್ತಿವಿಶಿಷ್ಟ ದೇವರ ಕಲ್ಪನೆಗೆ
ಮಹತ್ವವಿತ್ತುದರಿಂದಲೂ, ಆರಾಧನೆಗೆ ಮಧ್ಯವರ್ತಿಯ ಆವಶ್ಯಕತೆಯನ್ನು ನಿರಾಕರಿಸಿದ್ದರಿಂದಲೂ ಇದು
ಸಾಧ್ಯವಾಯಿತು. ಹೀಗಾಗಿ ಅನುಭಾವಸ್ವಾತಂತ್ರ್ಯ ಅವರಿಗೆ ಬಹು ಆಪ್ಯಾಯಮಾನವೆನಿಸಿತು. ಅದರಲ್ಲಿಯೂ
ವಚನರಚನೆಯ ಶಕ್ತಿಯಿದ್ದವರಿಗೆ ಅಂಕಿತದ ನೆಪದಲ್ಲಿ ವೈಯಕ್ತಿಕ ಪರಿಕಲ್ಪನೆಯ ದೇವರವನ್ನು
ಆವಿಷ್ಕರಿಸಿಕೊಳ್ಳುವ ಮತ್ತು ಬೇಕಾದಾಗ ತಮ್ಮ ಮನಸ್ಸಿನ ಮುಂದೆ ನಿಲ್ಲಿಸಿಕೊಳ್ಳುವ ಅವಕಾಶವೂ
ಪ್ರಾಪ್ತವಾಯಿತು. ಇದರಿಂದಾಗಿ ಅವರು ಕುಳಿತಲ್ಲಿ ನಿಂತಲ್ಲಿಯೇ ತಮ್ಮದೇ ಜಗತ್ತಿನಲ್ಲಿ
ನುಸುಳಿಕೊಳ್ಳುವ ಅವಕಾಶವುಂಟಾಯಿತು.
ಈ ಮೇಲೆ ವಿವರಿಸಿದ ಲಕ್ಷಣಗಳು ಬಹುಮಂದಿ ಕೆಳವರ್ಗದ ವಚನಕಾರರಿಗೂ ಆ
ಕಾಲದ ಇತರ ಭಕ್ತರಿಗೂ ಅನ್ವಯಿಸುವುದಾದರೂ ಅವರಲ್ಲಿನ ಕೆಲವರಾದರೂ ತಮ್ಮ ಸಾಮಾಜಿಕ ಸ್ಥಾನಮಾನಗಳ
ಕುರಿತು ಆಲೋಚನೆಗೂ ತೊಡಗಿದರು, ಅದಕ್ಕೆ ಕಾರಣವಾದ ಪೌರಾಣಿಕತೆಯ ಬಗ್ಗೆಯೂ ಚಿಂತನೆ ನಡೆಸಿದರು
ಎಂಬುದು ನಿಜ, ಮತ್ತು ಅವರು ಸಾಕಷ್ಟು ಪ್ರಭಾವವನ್ನು ಬಿಟ್ಟು ಹೋದರೆಂಬುದೂ ನಿಜ.
ಉರಿಲಿಂಗಪೆದ್ದಿ, ಅವನ ಹೆಂಡತಿ ಕಾಳವ್ವೆ, ಅಂಬಿಗರ ಚೌಡಯ್ಯ ಮುಂತಾದವರು ಇದಕ್ಕೆ
ನಿದರ್ಶನರಾಗಿದ್ದಾರೆ. ಅವರು ಬಹು ಹರಿತವಾದ ವೈಚಾರಿಕ ಹಿನ್ನೆಲೆಯಲ್ಲಿ ಸಾಮಾಜಿಕ ತಾರತಮ್ಯಕ್ಕೆ
ಕಾರಣವಾದವುಗಳ ಬಗ್ಗೆಯೂ ಆಳವಾಗಿ ಆಲೋಚಿಸಿದರು. ಸಾಮಾಜಿಕವಾಗಿ ತರತಮಗಳಿಗೆ ಕಾರಣವಾಗಿದ್ದುದು
ಬಹುಮುಖ್ಯವಾಗಿ ಜಾತಿಪದ್ಧತಿ, ಅದರಿಂದಾಗಿ ಇಂತಹ ವಚನಕಾರರು ಅದನ್ನು ಕುರಿತು ತಮ್ಮ
ಆಲೋಚನಾಧಾರೆಯನ್ನು ಹರಿಸುತ್ತಾರೆ. ಆದರೆ ಅವರಲ್ಲಿಯೂ ಈ ಬಗ್ಗೆ ಭಿನ್ನವಾದ ನಿಲವುಗಳಿವೆ; ಕೆಲವರು
ಹಳೆಯ ಜಾತಿವ್ಯವಸ್ಥೆಗೆ ಹೊಸ ವ್ಯಾಖ್ಯಾನ ನೀಡುವುದರಲ್ಲಿ ತೃಪ್ತರಾದರು, ಮತ್ತೆ ಕೆಲವರು ಆ
ಪದ್ಧತಿಯನ್ನೇ ಅಲ್ಲಗಳೆಯುತ್ತಾರೆ, ಮತ್ತೂ ಕೆಲವರು ಇತರರಿಗಿಂತ ತಾವೇ ಮೇಲೆಂದು
ಪ್ರತಿಪಾದಿಸುತ್ತಾರೆ, ಇದಕ್ಕಾಗಿ ಜಾನಪದ ನಂಬಿಕೆಯನ್ನು ಮುಂದೊಡ್ಡುತ್ತಾರೆ, ಪ್ರಾಯಶಃ ಹೊಸ
ಪೌರಾಣಿಕತೆಯ ನಿರ್ಮಿತಿಗೂ ಕೈಹಾಕುತ್ತಾರೆ. ಈ ಪಂಗಡಕ್ಕೆ ಸೇರಿದವನು ಉರಿಲಿಂಗಪೆದ್ದಿ. ಅವನು
ದಲಿತವರ್ಗಕ್ಕೆ ಸೇರಿದ್ದರಿಂದ ಅವನ ದಿಟ್ಟತೆ ನಮ್ಮಲ್ಲಿ ಮತ್ತಷ್ಟು ಬೆರಗು ಮೂಡಿಸುತ್ತದೆ.
ಉರಿಲಿಂಗಪೆದ್ದಿಯ ವೈಯಕ್ತಿಕ ಬದುಕಿನ ಬಗ್ಗೆ ನಮಗೆ ಹೆಚ್ಚು ಮಾಹಿತಿ
ಲಭ್ಯವಿಲ್ಲ. ಇಂತಹ ಅನೇಕ ಕಿರು ವಚನಕಾರರ ಬಗೆ ಇರುವಂತೆಯೇ ಇವನ ಬಗ್ಗೆಯೂ ನಮಗೆ ದೊರಕುವ ಅಲ್ಪ
ಮಾಹಿತಿಯು, ಪೌರಾಣಿಕ ಸ್ವರೂಪದ್ದಾದರೂ, ಸಿಕ್ಕುವುದು 'ಭೈರವೇಶ್ವರಕಾವ್ಯ'ದಲ್ಲಿ; ಮತ್ತು ಅದರ
ವಿವರಣೆಯಂತಿರುವ `ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ'ದಲ್ಲಿ. ಕಾವ್ಯದಲ್ಲಿ ಬರುವ
"ಉರಿಲಿಂಗದೇವರಿ
ತ್ತುಱೆ ಪೆದ್ದಣ್ಣಯ್ಯನ
ಕರದ ಜ್ಯೋತಿರ್ಲಿಂಗದಂತೆ"
ಎಂಬ
ಪದ್ಯಕ್ಕೆ ವಿವರಣೆಯಾಗಿ 'ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ'ದಲ್ಲಿ ಒಂದು ಕತೆಯನ್ನು
ಕೊಡಲಾಗಿದೆ. ಅವಸೆ ಕಂಧಾರ ಎಂಬುದು ಒಂದು ಪಟ್ಟಣ. ಅದರಲ್ಲಿ ಉರಿಲಿಂಗದೇವ ಎಂಬ ಆಚಾರ್ಯನೊಬ್ಬ
ವೀರಶೈವಾಚಾರಮತದ ಗುರುವಾಗಿದ್ದ. ಅವನು ಭಕ್ತಜನಕ್ಕೆ ಉಪದೇಶ ಮಾಡುತ್ತಿದ್ದ. ಅವನು ಇಪ್ಪತ್ತೊಂದು
ಗುರುಸಂಪ್ರದಾಯಕ್ಕೆ ಯೋಗ್ಯನಾಗಿ ಒಮ್ಮೆ ನಂದ್ಯವಾಡದಲ್ಲಿ ಸೂರಯ್ಯ ಎಂಬ ಭಕ್ತನಿಗೆ ಅವನ ಮನೆಯಲ್ಲಿ
ಉಪದೇಶವನ್ನು ಮಾಡುತ್ತಿದ್ದ. ಪಂಚಕಳಸ ದೀಕ್ಷಾಮಂಟಪ ರಂಗವಾಲೆ ಮುಂತಾದ ಮುಖ್ಯವಾದ ಪರಿಕರಗಳ ನಡುವೆ
ಈ ಕಾರ್ಯ ಸಂಭ್ರಮದಿಂದ ನಡೆಯುತ್ತಿತ್ತು. ಅದೇ ಹೊತ್ತಿಗೆ ಸೂರಯ್ಯನ ಮನೆಯಲ್ಲಿ ಪೆದ್ದಣ್ಣನೆಂಬುವನೂ ಒಬ್ಬ
ಇದ್ದ. ಅಂದು ರಾತ್ರಿ ತಾನು ಕಳ್ಳತನ ಮಾಡಲು ಹೋಗುವೆನೆಂದುಕೊಂಡು ಹೊರಟ. ಆದರೆ ಕುತೂಹಲದಿಂದಲೋ
ಏನೋ ಕಳ್ಳತನಕ್ಕೆ ಹೋಗದೆ, ಸೂರಯ್ಯನ ಮನೆಯ ಮಾಳಿಗೆಯನ್ನೇರಿ (ಗವಾಕ್ಷಿಯ ಮೂಲಕ) ಮನೆಯೊಳಗೆ
ನೋಡಿದ. ಉರಿಲಿಂಗದೇವನು ಉಪದೇಶ ಮಾಡುವ ಮೊದಲು ಶಿವಪೂಜೆಗೆ ತೊಡಗಿದ್ದ. ತಾನು ಮಾಡುವ ಪೂಜೆ
ಇತರರಿಗೆ ಕಾಣಬಾರದೆಂದು ಅವನು ಕೋಣೆಯ ಬಾಗಿಲನ್ನು ಮುಚ್ಚಿಕೊಂಡಿದ್ದ. ಅಷ್ಟವಿಧಪೂಜೆ,
ಷೋಡಶೋಪಚಾರಗಳನ್ನು ಪೂರೈಸಿದ ಮೇಲೆ ಅವನ `ಶರಣಸತಿ ಲಿಂಗಪತಿ' ಮನೋಭಾವಕ್ಕನುಗುಣವಾಗಿ ಲಿಂಗವು
ಪುರುಷರೂಪವನ್ನು ಧರಿಸಿತು, ಉರಿಲಿಂಗದೇವನು ಸತಿಯ ರೂಪ ತಾಳಿದ. ಪೂಜೆ ಮುಂದುವರೆಯಿತು. "ಉರಿಲಿಂಗದೇವನೆ
ಚಲುವನು, ಉರಿಲಿಂಗದೇವನೆ ಗರುವನು, ಉರಿಲಿಂಗದೇವನೆ ಹಿರಿಯನು" ಎಂದು ಮುಂತಾಗಿ ಗುರು
ಹಾಡಿದ. ಅನಂತರ "ಕಾಮಿ ಉರಿಲಿಂಗದೇವ, ಕಾಮಿನಿ ನಾನು, ಎರಡು ಗುರಿ ಒಂದಾಗುವಂತೆ ಸರಳೆಸುಗೆಯ
ಮಾಡು ಕಂಡಾ ಕಾಮಾ! ನೀನು ಬಿಲ್ಲುಗಾರನಹೆ, ಸರಳೆರಡು ಒಂದಪ್ಪುದು ಕಂಡಾ ಕಾಮಾ! ಎನಗೆಯು
ಉರಿಲಿಂಗದೇವಂಗೆಯು ತೊಟ್ಟೆಸೆಯೆ ಅಸುವೊಂದಾದೊಡೆ ಬಿಲ್ಲಾಳು ನೀನಹೆಯಲೋ ಕಾಮಾ!" ಎಂದು
ಲಿಂಗಪೂಜೆಯಲ್ಲಿ ದಶಾವಸ್ಥೆಯಿಂದ ವಚನವನ್ನು ಹಾಡಿದ. ಲಿಂಗಪೂಜೆ ಮುಗಿಯಿತು. ತಾನು
ದೀಕ್ಷಾಮಂಟಪಕ್ಕೆ ಮರಳಿದ. ಇದನ್ನೆಲ್ಲ ಪೆದ್ದಣ್ಣ
ಮಾಳಿಗೆಯಿಂದ ನೋಡಿದ; ಗುರು ಶಿಷ್ಯನಿಗೆ ದೀಕ್ಷೆ ನೀಡುವ ಕ್ರಮವನ್ನೆಲ್ಲ ಮಾಳಿಗೆಯಿಂದಲೇ ಅವನು
ಗಮನಿಸಿದ್ದ. ಕೊನೆಯಲ್ಲಿ ಶಿಷ್ಯರು ಉರಿಲಿಂಗದೇವನಿಗೆ ನಮಸ್ಕಾರ ಮಾಡುವುದನ್ನು ಕಂಡ. ತಾನೂ ಶರಣು
ಎನ್ನುತ್ತ ಮಾಳಿಗೆಯಿಂದ ಇಳಿದು ಬಂದ.
ಬೆಳಗಾಯಿತು. ಪೆದ್ದಣ್ಣ ಉರಿಲಿಂಗದೇವನ ಮನೆಗೆ ಬಂದ. ಅವನು
ಹೇಳದಿದ್ದರೂ ತಾನಾಗಿಯೇ ಅವನಿಗೆಂದು ಒಂದು ಹೊರೆ ಹುಲ್ಲು, ಒಂದು ಹೊರೆ ಕಟ್ಟಿಗೆಯನ್ನು ತಂದು
ಹಾಕಿದ. ಅಂದು ಮಾತ್ರವಲ್ಲ, ಇದನ್ನು ಪ್ರತಿನಿತ್ಯ ಮಾಡುತ್ತ ಬಂದ. ಹೀಗೇ ಕೆಲವು ದಿನಗಳು ಕಳೆದವು.
ಒಂದು ದಿನ ಉರಿಲಿಂಗದೇವನು, "ನಿನಗೇನು ಬೇಕು? ಇದುವರೆಗೆ ಹುಲ್ಲು ಕಟ್ಟಿಗೆ ಹೊರೆಗಳನ್ನು
ತಂದು ಹಾಕಿದುದರ ಬಾಬ್ತು ಹಣವನ್ನು ತೆಗೆದುಕೋ, ಮತ್ತೆ ಈ ಕಡೆ ಬರಬೇಡ, ಅಂಗಳದಲ್ಲಿಯೇ
ನಿಂತುಕೊ" ಎಂದು ಗದರಿಸಿದ. ತನಗೆ ಲಿಂಗದೀಕ್ಷೆ ಕೊಡಲು ಸಾಧ್ಯವಿಲ್ಲದ್ದರಿಂದ ಬರಬೇಡವೆಂದು
ಹೇಳುತ್ತಿದ್ದಾನೆ ಎಂಬುದಾಗಿ ಪೆದ್ದಣ್ಣ ಅರ್ಥಮಾಡಿಕೊಂಡ. ಆದರೆ ಹುಲ್ಲು-ಕಟ್ಟಿಗೆ ಹೊರೆಗಳನ್ನು
ತಂದುಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ. ಹೀಗೆಯೇ ಮತ್ತೆ ಕೆಲವು ದಿನಗಳು ಸಂದವು. ಮುಂದೆ ಒಂದು
ದಿನ ಕಟ್ಟಿಗೆಯನ್ನು ತಂದಾಗ ಉರಿಲಿಂಗದೇವನು ಮತ್ತೆ, "ನಿನಗೆ ಏನು ಬೇಕು?" ಎಂದು
ಕೇಳಿದ. ಆಗ ಪೆದ್ದಣ್ಣನು, "ಸ್ವಾಮಿ, ನಂದಿವಾಡದ ಸೂರಭಕ್ತನಿಗೆ ದೀಕ್ಷೆಯನ್ನು ನೀಡಿದಂತೆ
ನನಗೂ ನೀಡಿ" ಎಂದು ವಿನಯದಿಂದ ಕೇಳಿಕೊಂಡ. "ಆ ವಿಚಾರ ನಿನಗೆ ಹೇಗೆ ತಿಳಿಯಿತು?"
ಎಂದು ಉರಿಲಿಂಗದೇವನು ಕೇಳಿದಾಗ ಪೆದ್ದಣ್ಣನು ತಾನು ಮಾಳಿಗೆಯ ಮೇಲಿನಿಂದ ಅದನ್ನು ಕಂಡ ವಿಷಯವನ್ನು
ವಿವರಿಸಿದ. ಗುರು ಆಗ ಸುಮ್ಮನಾದ. ಮತ್ತೂ ಕೆಲವು ದಿವಸಗಳಾದವು; ಪೆದ್ದಣ್ಣ
ಹುಲ್ಲು-ಕಟ್ಟಿಗೆಯನ್ನು ತರುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇನ್ನೊಂದು ದಿನವೂ ತನಗೆ
ಲಿಂಗವನ್ನು ಕೊಡಿ ಎಂದು ಕೇಳಿಕೊಂಡ; `ಇವನು ತಾನು ಹೋದಲ್ಲಿ ಹಿಂಬಾಲಿಸುತ್ತಾನೆ, ಇವನ ಕಾಟ
ಕಳೆದುಕೊಳ್ಳಬೇಕೆಂ'ದು ಬಗೆದು ಉರಿಲಿಂಗದೇವನು ಒಂದು ಕಲ್ಲನ್ನು ಕೈಯಲ್ಲಿ ತೆಗೆದುಕೊಂಡು
"ಗೆ ದಗಡಿ, ಜಾ" (ತಗೋ ಕಲ್ಲು, ತೊಲಗು) ಎಂದು ಹೇಳಿ ಒಂದು ಕಲ್ಲು ಕೊಟ್ಟ. ಅದನ್ನು
ಸ್ವೀಕರಿಸಿದ ಮುಗ್ಧ ಪೆದ್ದಣ್ಣ ಗುರು ಹೇಳಿದ್ದನ್ನೇ ಮಂತ್ರವೆಂದು ತಿಳಿದು "ಗೆ ದಗಡಿ,
ಜಾ" "ಜಾ, ದಗಡಿ ಗೆ" ಎಂದು ಹೇಳಿಕೊಳ್ಳುತ್ತ ನಡೆದ. ಪೆದ್ದಣ್ಣನ ಭಾವದ
ಬಲುಮೆಯಿಂದ ಕಲ್ಲು ಜ್ಯೋತಿರ್ಮಯಲಿಂಗವಾಯಿತು. ಅವನು ಗುರುಸೇವೆಯನ್ನು ಮುಂದುವರಿಸಿದ.
ಇತ್ತ, ನಂದರಾಜನೆಂಬುವನು ಒಂದು ಕೆರೆಯನ್ನು ಕಟ್ಟಿಸುತ್ತಿದ್ದ;
ಆದರೆ ಭೂಮಿಯನ್ನೆಷ್ಟೇ ಅಗೆದರೂ ನೀರು ಬೀಳಲಿಲ್ಲ. ಆಗ ಅವನು ತಾನು ಬಲ್ಲ ಶಿಲ್ಪಿಯೊಬ್ಬನನ್ನು
ಕರೆದು ಸಲಹೆ ಕೇಳಿದ. ಅವನು "ಮಧ್ಯದಲ್ಲಿರುವ ಬಂಡೆಯನ್ನು ಕಿತ್ತರೆ ನೀರು ಬಿದ್ದೀತು"
ಎಂದ. ಉರಿಲಿಂಗದೇವನು ನೋಡಿದಲ್ಲದೆ ಈ ಕಲ್ಲನ್ನು ಕೀಳಲು ಆಗದೆಂದು ಭಾವಿಸಿದ ನಂದರಾಜನು
ಗುರು-ಶಿಷ್ಯರಿಬ್ಬರನ್ನೂ ಕರೆದುಕೊಂಡು ಹೋಗಿ ಅದನ್ನು ತೋರಿಸಿದ. ಆಗ ಪೆದ್ದಣ್ಣನು ತನ್ನ
ಲಿಂಗವನ್ನು ಕುರಿತು, "ಗೆ, ದಗಡಿ, ಜಾ" ಎಂದು ಹೇಳಿದ. ಆಗ ಲಿಂಗವು ಹೋಗಿ ಆ ಬಂಡೆಯ
ಮೇಲೆ ಕುಳಿತುಕೊಂಡಿತು. ಮತ್ತೆ "ಗೆ, ದಗಡಿ, ಜಾ" ಎಂದು ಪೆದ್ದಣ್ಣನು ಹೇಳಲು ಅದು
ಬಂಡೆಯನ್ನು ಕಿತ್ತು ಹಾಕಿತು; ನೀರಿನ ಸೆಲೆ ಕಾಣಿಸಿಕೊಂಡಿತು. ನಂದರಾಜನು ಗೌರವದಿಂದ ನಮಸ್ಕರಿಸಿ
ಅವರಿಬ್ಬರನ್ನೂ ಕಳಿಸಿಕೊಟ್ಟ.
ಈ ಘಟನೆಯಿಂದಾಗಿ ಉರಿಲಿಂಗದೇವನಿಗೆ ಪೆದ್ದಣ್ಣನ ಮಹಿಮೆ ಗೊತ್ತಾಯಿತು.
ಈತನು ದೊಡ್ಡ ಗುರುಭಕ್ತನೆಂಬುದನ್ನು ಮನಗಂಡ, ಹಾಗೂ ತಾತ್ಸಾರದಿಂದ ತಾನಿತ್ತಿದ್ದ ಕಲ್ಲೇ ಅವನ
ಕೈಯಲ್ಲಿ ಜ್ಯೋರ್ತಿಮಯಲಿಂಗವಾದುದನ್ನು ಕಂಡು ಅಚ್ಚರಿಗೊಂಡ. ಅವನಿಗೆ ಉರಿಲಿಂಗಪೆದ್ದಣ್ಣ ಎಂಬ ಹೊಸ
ಹೆಸರನ್ನಿತ್ತು ಅವನಿಗೆ ಯಥಾವಿಧಿಯಾಗಿ ಉಪದೇಶಮಾಡಿದ. "ಯಥಾ ಭಾವಸ್ತಥಾ ಸಿದ್ಧಿಃ"
ಎಂಬ ಆಗಮದ ಮಾತಿನಂತೆಯೇ "ಭಕ್ತರ ಭಾವದಲ್ಲಿ ಶಿವ ನೆಲೆಗೊಂಬುದು ಸತ್ಯ" ಎಂದು ತಿಳಿದು
ಉರಿಲಿಂಗದೇವನು ತನ್ನ ಆಚಾರ್ಯಪೀಠವನ್ನು ಪೆದ್ದಣ್ಣನಿಗೆ ಇತ್ತು "ಗುರುಸಂಪ್ರದಾಯವ
ನಡೆಸು" ಎಂದು ಸೂಚಿಸಿದ. ಅದರಂತೆ ಪೆದ್ದಣಯ್ಯನು ಶಿವಭಕ್ತಿಯನ್ನು ಆಚರಿಸುತ್ತ ಕೆಲವು
ಕಾಲವಿದ್ದು, ಕೊನೆಗೆ ತನ್ನ ಮತ್ರ್ಯದ ಮಣಿಹ ತೀರಲು, 'ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ'ನೆಂಬ
ತನ್ನ ಇಷ್ಟಲಿಂಗದಲ್ಲಿ ಬೆರೆದು ನಿರ್ವಯಲಾದ.
ಈ ನಿರೂಪಣೆಯಲ್ಲಿ ಉರಿಲಿಂಗದೇವನಿದ್ದನೆಂದು ಹೇಳಲಾಗಿರುವ ಊರು ಅವಸೆ
ಕಂಧಾರ; ಅವನು ಪುಲಿಗೆರೆಯ ಮಹಾಲಿಂಗದೇವನ ಗುರುಪರಂಪರೆಯಲ್ಲಿ ಐದನೆಯವನು. ಇವನ ವಚನಗಳು
'ಶರಣಸತಿ-ಲಿಂಗಪತಿ' ಭಾವನೆಯ ಅಭಿವ್ಯಕ್ತಿಗೆ ಹೆಸರುವಾಸಿಯಾದದ್ದು. ವಚನಕಾರರಲ್ಲೆಲ್ಲ ಮಧುರಭಾವದ
ಹೆಚ್ಚು ಸಂಖ್ಯೆಯ ವಚನಗಳನ್ನು ಬರೆದವನಿವನು. ಅವನ ಮನೋಭಾವಕ್ಕನುಗುಣವಾಗಿ ಉರಿಲಿಂಗದೇವನ ವಚನಗಳು
ಮೃದುಪದಗಳಿಂದ ಕೂಡಿವೆ. ಪರವಾದಿಗಳು ಅವನ ಗುಡಿಸಿಲಿಗೆ ಬೆಂಕಿಯನ್ನು ಹಚ್ಚಿದರೂ ವಿಚಲಿತನಾಗದೆ
ಇವನು ಲಿಂಗಪೂಜೆಯಲ್ಲಿ ನಿಷ್ಠೆಯಿಂದ ತೊಡಗಿದ್ದವನು ಎಂದು ಕತೆಗಳು ಬಣ್ಣಿಸುತ್ತವೆ. ಅವನು ಸೂರಯ್ಯನಿಗೆ
ದೀಕ್ಷೆ ಕೊಟ್ಟದ್ದು ನಂದ್ಯವಾಡ ಅಂದರೆ ಈಗ ಮಹಾರಾಷ್ಟ್ರದಲ್ಲಿರುವ ನಾಂದೇಡ್. ಪೆದ್ದಣ್ಣನೂ ಅದೇ
ಊರಿನವನೇ. ಹನ್ನೆರಡನೆಯ ಶತಮಾನದಲ್ಲಿ ನಾಂದೇಡ್ ಕನ್ನಡ ಪ್ರದೇಶವಾಗಿದ್ದಿರಬೇಕು. ಈ ಕತೆ ಆ
ಪ್ರದೇಶದ ಜನಪದರಲ್ಲಿ ನೆಲೆಯೂರಿ ಹೋಗಿರಬೇಕು. ಹೀಗಾಗಿ ಉರಿಲಿಂಗದೇವನು ಪೆದ್ದಣ್ಣನಿಗೆ ಕಲ್ಲು
ಕೊಟ್ಟು ತಿರಸ್ಕಾರದಿಂದ "ಗೆ ದಗಡಿ, ಜಾ" ಎಂದು ಹೇಳಿದ ಮಾತು ಮೂಲದಲ್ಲಿ
ಕನ್ನಡದಲ್ಲಿಯೇ ಇದ್ದು ಮರಾಠಿಗರ ಬಾಯಲ್ಲಿ ಅವರ ಭಾಷೆಯಲ್ಲಿ ನಿರೂಪಿತಗೊಂಡಿರಬೇಕು. 'ಭೈರವೇಶ್ವರ
ಕಾವ್ಯದ ಕಥಾಮಣಿಸೂತ್ರರತ್ನಾಕರ'ವನ್ನು ರಚಿಸುವ ಕಾಲಕ್ಕೆ ಅದು ಮರಾಠಿಯ ಪ್ರದೇಶವಾಗಿದ್ದುದರಿಂದ
ಅದನ್ನು ಈ ಕೃತಿಯ ಲೇಖಕನು ತಾನು ಜನರಲ್ಲಿ ಪ್ರಚಲಿತವಿದ್ದ ಹೇಳಿಕೆಯನ್ನು ಮರಾಠಿಯಲ್ಲಿ
ಅನುವಾದಮಾಡಿ ಹೇಳಿರಬೇಕು. ಪೆದ್ದಣ್ಣನು ತನ್ನ ಅನನ್ಯ ನಂಬಿಕೆಯಿಂದ ಕಲ್ಲನ್ನು ಲಿಂಗವೆಂದು ಬಗೆದು
ಆರಾಧಿಸುತ್ತಿದ್ದ ರೀತಿ ಹಾಗೂ ಅದು ಕೆರೆಯ ನಡುವಿನ ಬಂಡೆಯನ್ನು ಸಿಡಿಸಿ ನೀರನ್ನು ಉಕ್ಕಿಸಿದ ಬಗೆ
ಇವುಗಳು ಉರಿಲಿಂಗದೇವನ ಮೇಲೆ ಎಂಥ ಪರಿಣಾಮವನ್ನು ಬೀರಿತೆಂದರೆ ಪೆದ್ದಣ್ಣನಿಗೆ (ಪ್ರಾಯಶಃ) ತನ್ನ
ಹೆಸರನ್ನೇ ಇತ್ತು ಉರಿಲಿಂಗಪೆದ್ದಿಯಾಗಿ ಮಾಡಿದ್ದಲ್ಲದೆ, ಅವನಿಗೆ ತನ್ನ ಪೀಠದ
ಉತ್ತರಾಧಿಕಾರಿತ್ವವನ್ನೇ ನೀಡಿ "ಗುರುಸಂಪ್ರದಾಯವನ್ನು ನಡೆ"ಸಲು ಅವಕಾಶ ನೀಡಿದ.
ಒಬ್ಬ ಅಸ್ಪೃಶ್ಯನಿಸಿಕೊಂಡವನಿಗೆ ಮಠಾಧಿಪತ್ಯವನ್ನು ಕೊಟ್ಟುದು ಅಪೂರ್ವ ಸಂಗತಿಯಾಗಿದೆ.
ಪೆದ್ದಣ್ಣನು ಮೊದಲು ಕಳ್ಳನಾಗಿದ್ದಿರಬೇಕೆಂಬುದು ಈ ಕತೆಯಿಂದ
ಸೂಚಿತವಾಗುತ್ತದೆ. ಕುತೂಹಲದಿಂದ ಅಕಸ್ಮಾತ್ ಕದ್ದು ನೋಡಿದ ದೀಕ್ಷಾಪ್ರಸಂಗ ಅವನಲ್ಲಿ ಸಂಪೂರ್ಣ
ಬದಲಾವಣೆಯನ್ನು ತಂದು ಭಕ್ತನಾಗಲು ಪ್ರೇರಿಸಿದುದೂ ಆಶ್ಚರ್ಯಕರ ಸಂಗತಿಯಾಗಿದೆ. ಜೊತೆಗೆ ಈ
ಪೀಠಾಧಿಕಾರದ ಪ್ರಸಂಗವು ನಮ್ಮ ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಘಟನೆಯಾಗಿಯೂ
ಉಲ್ಲೇಖಗೊಳ್ಳಬೇಕಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಅಸ್ಪೃಶ್ಯನೊಬ್ಬ ಸಂಸ್ಕೃತವನ್ನು ಕಲಿತುದು
ಹಾಗೂ ಮಠಾಧಿಪತಿಯಾದುದು ವಚನ ಚಳವಳಿಯ ಪ್ರತಿಭಟನೆಯ ತೀವ್ರತೆಯ ಸ್ವರೂಪದ ಸಂಕೇತವಾಗಿರುವುದರ
ಜೊತೆಗೆ, ನಮ್ಮ ಸಮಾಜದಲ್ಲಿ ತಂದ ತೀವ್ರ ಬದಲಾವಣೆಯನ್ನೂ ಸೂಚಿಸುತ್ತದೆ. ದಲಿತ ಶಿವಭಕ್ತರ ಅನೇಕ
ಮಠಗಳು ಕರ್ನಾಟಕದಲ್ಲಿವೆ; ಅವುಗಳನ್ನು ಉರಿಲಿಂಗಪೆದ್ದಿಯ ಮಠಗಳೆಂದೇ ಕರೆಯುತ್ತಾರೆ.
ಉರಿಲಿಂಗಪೆದ್ದಿಯು ಅಧಿಪತಿಯಾಗಿದ್ದ ಮಠಗಳ ಶಾಖೆಗಳು ಇವತ್ತಿಗೂ ಉತ್ತರ ಕರ್ನಾಟಕದ ಕಲ್ಯಾಣ,
ಕೊರಳಿ, ಬೇವಿನ ಚಿಂಚೋಳಿ, ಭಾಲ್ಕಿ ಮೊದಲದ ಊರುಗಳಲ್ಲಿವೆಯೆಂದು ತಿಳಿದು ಬರುತ್ತದೆ.
ಪೆದ್ದಣ್ಣನ ಭಕ್ತಿನಿರ್ಭರತೆಯಿಂದ ಪ್ರಭಾವಿತನಾದ ಉರಿಲಿಂಗದೇವನು
ಆನಂತರ ಅವನಿಗೆ ತನ್ನ ಪಾಂಡಿತ್ಯವನ್ನು ಧಾರೆಯೆರೆದ ಗುರುವಾಗಿರಲೂ ಸಾಕು. ತನ್ನ ಮಠದಲ್ಲಿಯೇ
ಅವನಿದ್ದುದರಿಂದ ಸದಾ ಅವನಿಗೆ ವಿವಿಧ ವಿಷಯಗಳ ತಿಳಿವಳಿಕೆ ನೀಡಿದುದಲ್ಲದೆ, ತನ್ನ
ಭಾಷಾಜ್ಞಾನವನ್ನೂ ಧಾರೆಯೆರೆದಿರಬೇಕು. ದೀಕ್ಷೆಯನ್ನು ಕಂಡೇ ಭಕ್ತನಾದ ಪೆದ್ದಣ್ಣ ಗುರುವಿನ
ಪಾಠದಿಂದ ಪ್ರಭಾವಿತನಾಗಿ ಸ್ವಾಧ್ಯಾಯಕ್ಕೂ ಆರಂಭಿಸಿ, ಗುರು ಹೇಳಿದುದರ ಜೊತೆಗೆ ಸ್ವಂತ
ಪ್ರಯತ್ನದಿಂದ ಅಪಾರ ತಿಳಿವಳಿಕೆಯನ್ನು ಸಂಪಾದಿಸಿರಬೇಕು. ಕನ್ನಡದ ಜೊತೆಗೆ ಅವನ ಸಂಸ್ಕೃತಜ್ಞಾನ
ಅಚ್ಚರಿ ಹುಟ್ಟಿಸುವಂಥದು. ಪ್ರಾಯಶಃ ವಚನಕಾರರಲ್ಲಿಯೇ ಅವನು ತನ್ನ ವಚನಗಳಲ್ಲಿ ಅತ್ಯಂತ ಹೆಚ್ಚು
ಸಂಸ್ಕೃತೋಲ್ಲೇಖಗಳನ್ನು ಕೊಡುವವನು. ಉರಿಲಿಂಗದೇವನು ನೀಡಿದ ಸಂಸ್ಕೃತಜ್ಞಾನ ಕಾಲುಭಾಗವಾದರೆ,
ಪೆದ್ದಣ್ಣ ರೂಢಿಸಿಕೊಂಡದ್ದು ಮುಕ್ಕಾಲು ಭಾಗವಾಗಿರಬೇಕು. ಸಂಸ್ಕೃತಜ್ಞಾನದಿಂದ ವಂಚಿತವಾದ
ಪಂಗಡದಿಂದ ಬಂದ ಪೆದ್ದಣ್ಣನು ಅದಕ್ಕೆ ವಾರಸುದಾರರೆಂದು ಭಾವಿಸಿದ್ವ ಅನೇಕರಿಗಿಂತ ಆಳವಾದ ಆ ಭಾಷೆಯ
ಜ್ಞಾನವನ್ನು ಪಡೆದದ್ದು ತನ್ನ ಛಲದಿಂದ ಎಂಬುದು ಸ್ಪಷ್ಟ. ಅವರಿಗಿಂತ ತಾನು ಕಡಿಮೆಯಲ್ಲ
ಎಂಬುದನ್ನು ತೋರಿಸಿಕೊಡುವುದರ ಜೊತೆಗೆ, ಸಂಸ್ಕೃತ ಗೀರ್ವಾಣಭಾಷೆಯೇನಲ್ಲ, ಶ್ರದ್ಧೆಯಂದ ಕಲಿತರೆ
ಎಂಥವನಿಗೂ ದಕ್ಕುವಂಥದು ಎಂದು ತೋರಿಸಿಕೊಡುವುದೂ ಅವನ ಮನದಾಳದ ಇಂಗಿತವಾಗಿದ್ದಿರಬೇಕು. ಅಲ್ಲದೆ
ಸಂಸ್ಕೃತವನ್ನು ನಗೆ ಮಾರಿತಂದೆ ಹೇಳಿದಂತೆ ಮಾರಾಟದ ಸರಕನ್ನಾಗಿ ಮಾಡಿಕೊಂಡು ಆ ಭಾಷೆಯ ಉಲ್ಲೇಖಗಳ
ಮೂಲಕ ಜನರನ್ನು ದಂಗುಬಡಿಸಿ ಶೋಷಿಸುತ್ತಿದ್ದ ಪುರೋಹಿತಶಾಹಿಯ ಡೌಲನ್ನು ಬಯಲಿಗೆಳೆಯಲು ಅವರ
ಸಾಧನವನ್ನು ತಾನೂ ಕರಗತಮಾಡಿಕೊಳ್ಳುವುದರ ಆವಶ್ಯಕತೆಯೂ ಅವನಿಗೆ ಕಂಡಿದ್ದಿರಬೇಕು. ಏಕೆಂದರೆ
ಮುಂದೆ ನಾವು ನೋಡುವಂತೆ ಉರಿಲಿಂಗಪೆದ್ದಿಯು ಪಾರಂಪರಿಕತೆಯನ್ನು ಎದುರಿಸುವುದು ಅದನ್ನು
ಸೃಷ್ಟಿಸಿದ್ದ ಸಂಸ್ಕೃತ ಪಠ್ಯಗಳ ಉಲ್ಲೇಖಗಳ ಮೂಲಕವೇ, ಅವುಗಳಿಗೆ ನೀಡುವ ಹೊಸ ವಾಖ್ಯಾನಗಳ
ಮೂಲಕವೇ. ಕೇವಲ ವಾದಿಸದೆ, ಮೂಲಕ್ಕೇ ಹೋಗಿ ಅಲ್ಲಿನದನ್ನು ಪುರೋಹಿತಶಾಹಿಯು ಹೇಗೆ
ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆಧಾರಸಹಿತವಾಗಿ ಹೇಳುವುದಕ್ಕಿಂತ ಪ್ರಬಲವಾದ ಪ್ರತ್ಯಸ್ತ್ರ
ಮತ್ತೇನಿದೆ? ಹೀಗಾಗಿ ಉರಿಲಿಂಗಪೆದ್ದಿಯನ್ನು ಸಂಪ್ರದಾಯಶರಣರು ಮತ್ತು ಢೋಂಗಿಗಳು ಎದುರಿಸುವುದು
ಕಷ್ಟಕರವಾಗಿದ್ದಿರಬೇಕು.
ಈಗ ಉರಿಲಿಂಗಪೆದ್ದಿಯ 366 ವಚನಗಳು ದೊರೆಯುತ್ತವೆ; ಅವುಗಳು
'ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ' ಎಂಬ ಮುದ್ರಿಕೆಯಿಂದ ಕೂಡಿದವು. ಅವನ ವಚನಗಳಲ್ಲಿ ಕಾಣುವ
ಸಾಮಾಜಿಕ ಪ್ರಜ್ಞೆ ತುಂಬ ಆಶ್ಚರ್ಯಕರವಾದುದು. ಅವನ ಹಲವಾರು ವಚನಗಳಲ್ಲಿನ ಧಾಟಿಯು ಮೃದುತ್ವ
ಮತ್ತು ವಿನೀತತೆಗಳಿಂದ ದೂರವಾಗಿ ಕೆಚ್ಚೆದೆಯನ್ನು ಪ್ರದರ್ಶಿಸುವಂಥವು, ಅದರ ಹಿಂದಿನ
ಆತ್ಮವಿಶ್ವಾಸ ಅಚ್ಚರಿಯನ್ನುಂಟುಮಾಡುವಂಥದು. ಅವನು ಹೇಳುವ ಅನೇಕ ಸಂಗತಿಗಳು ಬೇರೆಲ್ಲೂ ಕಾಣದೆ,
ಇವುಗಳೆಲ್ಲ ಅವನಿಗೆ ತಿಳಿದುಬಂದುದು ಹೇಗೆ ಎಂದು ನಮ್ಮಲ್ಲಿ ವಿಸ್ಮಯವನ್ನುಂಟುಮಾಡುತ್ತದೆ. ಇವು
ಅವನ ವಿಶಾಲ ಓದಿನಿಂದ ಮಾತ್ರ ಲಭಿಸಿರದೆ, ಜಾನಪದ ನಂಬಿಕೆಗಳ ಮೂಲದಿಂದ ಬಂದಿರಬೇಕು ಅಥವಾ ಅವನೇ
ಸೃಷ್ಟಿಸಿದ ಸಂಗತಿಗಳಾಗಿರಬೇಕು. ಬೇರೆಯ ಅನೇಕ ಕೆಳವರ್ಗದ ವಚನಕಾರರ ರಚನೆಗಳಲ್ಲಿ ಕಾಣಿಸದ
ಗಟ್ಟಿದನಿ ಇವನ ವಚನಗಳ ವೈಶಿಷ್ಟ್ಯವಾಗಿದೆ.
ಉರಿಲಿಂಗಪೆದ್ದಿಯ ಗುರುವಾದ ಉರಿಲಿಂಗದೇವನೂ ವಚನಕಾರನೆಂಬುದು
ಸರ್ವವೇದ್ಯ ಸಂಗತಿ. ಆದರೆ, ಈಗಾಗಲೇ ಗಮನಿಸಿರುವಂತೆ, ಅವನ ವಚನಗಳು ಪ್ರಸಿದ್ಧವಾಗಿರುವುದು
ಶರಣಸತಿ-ಲಿಂಗಪತಿ ಭಾವನೆಯ ಅಭಿವ್ಯಕ್ತಿಗಾಗಿ. ಗಜೇಶ ಮಸಣಯ್ಯನನ್ನು ಬಿಟ್ಟರೆ ಇವನೇ ಅತಿ ಹೆಚ್ಚು
ಸಂಖ್ಯೆಯ ಸತಿಪತಿಭಾವದ ವಚನಗಳನ್ನು ಬರೆದ ವಚನಕಾರ. ಈ ಭಾವನೆಯಲ್ಲಿ ಶರಣಾಗತಿಯೇ ಪ್ರಾಧಾನ್ಯ.
ಆದರೆ ಶಿಷ್ಯನಲ್ಲಿ ಆ ಭಾವನೆಯನ್ನವನು ತುರಕುಲು ಸಾಧ್ಯವಾಗಲಿಲ್ಲ, ಅದಕ್ಕೆ ಕಾರಣ ಪೆದ್ದಿಯ
ಸಾಮಾಜಿಕ ಎಚ್ಚರ. ಅವನಲ್ಲಿ ಎದ್ದು ಕಾಣುವ ಗುಣ ಸಿಟ್ಟು, ಅಸಹನೆ; ಮಠಾಧಿಪತಿಯಾಗಿದ್ದರೂ
ಅದನ್ನುಳಿಸಿಕೊಂಡ. ಇವನಲ್ಲಿ ಸತಿಪತಿಭಾವದ ವಚನಗಳೂ ಇಲ್ಲ; ಕೆಲವೆಡೆ ಸಾಂಪ್ರದಾಯಿಕತೆಯಿದ್ದರೂ
ಬಹುತೇಕ ಸಂದರ್ಭಗಳಲ್ಲಿ ಆಕ್ರೋಶವೇ ಹೆಚ್ಚಾಗಿದೆ. ಉರಿಲಿಂಗದೇವ ಈ ಶಿಷ್ಯನಲ್ಲಿ ತನ್ನ
ಮಿದುಗುಣವನ್ನು ತುಂಬಲು ಸಾಧ್ಯವಾಗದಿರಲು ಕಾರಣ ಶಿಷ್ಯನ ತನ್ನತನವನ್ನು ಅಳಿಸಿಹಾಕಲು
ಪ್ರಯತ್ನಿಸದೆ ಅದನ್ನುಳಿಸಿಕೊಳ್ಳಲು ಅವಕಾಶವಿತ್ತ ಗುರುವಿನ ಉದಾತ್ತತೆಯೋ ಅಥವಾ ಶಿಷ್ಯನ ಜಿಗುಟುಗುಣವೋ ತಿಳಿಯದು;
ಅಂತೂ ಮನೋಭಾವದಲ್ಲಿ ಇಬ್ಬರೂ ತೀರ ಭಿನ್ನ. ಇವರದು ಅಪೂರ್ವ ಗುರು-ಶಿಷ್ಯ ಜೋಡಿಯೇ ಸರಿ.
ಉರಿಲಿಂಗಪೆದ್ದಿಯ ವಚನಗಳಲ್ಲಿ ಎದ್ದು ಕಾಣುವ ಪ್ರಮುಖ ಧಾರ್ಮಿಕ
ನಿಲವುಗಳಲ್ಲಿ ಮುಖ್ಯವಾದುದು ಅವನ ಅಚಲ ಶಿವನಿಷ್ಠೆ; ಹಾಗೂ ಅವನು ಅಷ್ಟಾವರಣಗಳಲ್ಲಿನ ಪ್ರತಿಯೊಂದರ
ಬಗ್ಗೆಯೂ ತೋರ್ಪಡಿಸುವ ಭಕ್ತಿಗೌರವಗಳು. ದಲಿತವರ್ಗದಿಂದ ಬಂದ ಉರಿಲಿಂಗಪೆದ್ದಿ ಮತ್ತು
ಅವನಂತಹವರಿಗೆ, ಈ ಹೊತ್ತಿಗೆ ವೈದಿಕ ಪರಂಪರೆಯ ಮೇಲುವರ್ಗದ ದೈವಗಳೊಡನೆ ಸೇರಿ ಶಿಷ್ಟ ದೈವವಾಗಿದ್ದ
ಶಿವನಿಗೆ ಹತ್ತಿರವಾಗುವುದೇ ರೋಚಕ ಅನುಭವವಾಗಿದ್ದಿರಬೇಕು. ಹಾಗಾಗಿ ಇತರ ಕೆಳವರ್ಗದ
ವಚನಕಾರರಂತೆಯೇ ಅವನೂ, ಸಮಕಾಲೀನ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ನಿರಾಕರಿಸಿಯೂ,
ಸಾಂಪ್ರದಾಯಿಕವಾದ ಭಕ್ತಿ-ಅರಾಧನೆಗಳನ್ನು ನಿರಾಕರಿಸುವುದಿಲ್ಲ. ಮೇಲುವರ್ಗದವರು ಆರಾಧಿಸುವ
ವವನ್ನಾರಾಸುವ ಮೂಲಕ ತಾವೂ ಅವರ ಸಮನೆಲೆಯನ್ನು ತಲುಪಿದೆವೆಂಬ ಭಾವನೆ ಆಗಿನ ಬಹುತೇಕ
ಕೆಳವರ್ಗದವರಲ್ಲಿ ಉಂಟಾದಂತೆ ತೋರುತ್ತದೆ. ಶಿವನು ಕರ್ತ ಎಂದು ನಂಬಿದ್ದರಿಂದ ತನ್ನೆಲ್ಲ
ಬಳಲಿಕೆಯೂ ಅಂತ್ಯಗೊಂಡಿತೆಂದು ಒಂದು ವಚನದಲ್ಲಿ ಉರಿಲಿಂಗಪೆದ್ದಿಯು ತೋಡಿಕೊಳ್ಳುತ್ತಾನೆ: "ಶಿವನೆ
ಕರ್ತನು, ನಾನು ಭೃತ್ಯನು; ಮಿಕ್ಕುದೆಲ್ಲ ಮಿಥ್ಯವೆಂದರಿದು ಈ ಮಹಾಜ್ಞಾನಪದಕ್ಕೆ ಇನ್ನಾವುದೂ
ಸರಿಯಲ್ಲ" ಎಂಬುದು ಅವನ ಘೋಷಣೆ. ತನ್ನಲ್ಲಿಯೇ ಅಡಗಿರುವ ಶಿವನ ಬಗ್ಗೆ ಅವನದು ಅಚಲವಾದ
ನಂಬಿಕೆ; ಮಾನವ ದೇಹದಲ್ಲಿಯೇ ಶಿವಾರಾಧನೆಯು ಸಹಜವಾಗಿಯೂ ಸತತವಾಗಿಯೂ ನಡೆಯುವ ಪರಿಯನ್ನು ತುಂಬ
ಹೃತ್ಸ್ಪರ್ಶಿಯಾಗಿ ಅವನ ಒಂದು ವಚನ ಚಿತ್ರಿಸುತ್ತದೆ:
ಎನ್ನಂಗಳದಲ್ಲಿ
ನಿನಗೆ ಮಜ್ಜನ
ಎನ್ನ
ಲಲಾಟದಲ್ಲಿ ನಿನಗೆ ಗಂಧಾಕ್ಷತೆ
ಎನ್ನ
ತುರುಬಿನಲ್ಲಿ ನಿನಗೆ ಕುಸುಮಪೂಜೆ
ಎನ್ನ
ನೇತ್ರದಲ್ಲಿ ನಿನಿಗೆ ನಾನಾ ರೂಪು ವಿಚಿತ್ರವಿನೋದ
ಎನ್ನ
ಶ್ರೋತ್ರದಲ್ಲಿ ನಿನಗೆ ಪಂಚಮಹಾವಾದ್ಯ ಕೇಳಿಕೆ
ಎನ್ನ
ನಾಸಿಕದಲ್ಲಿ ನಿನಗೆ ಸುಗಂಧ, ಧೂಪಪರಿಮಳ
ಎನ್ನ
ಜಹ್ವೆಯಲ್ಲಿ ನಿನಗೆ ಷಡ್ರಸಾನ್ನ ನೈವೇದ್ಯ
ಎನ್ನ
ತ್ವಕ್ಕಿನಲ್ಲಿ ನಿನಗೆ ವಸ್ತ್ರಾಭರಣಾಲಂಕಾರ ಪೂಜೆ
ಎನ್ನ
ಸಚ್ಚಿದಾನಂದ ಸೆಜ್ಜೆಗೃಹದಲ್ಲಿ ನೀನು
ಸ್ಪರ್ಶನಂಗೈದು
ನೆರೆದಿಪ್ಪೆಯಾಗಿ ನೀ ನಾನೆಂಬೆರಡಳಿದು
ತಾನು
ತಾನಾದ ನವನೇನೆಂಬೆನು
ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರ
ಸರಳವಾಗಿದ್ದರೂ ಈ ವಚನವು ವಚನಕಾರನ ನಂಬಿಕೆಯನ್ನು ಮನಂಬುಗುವಂತೆ
ಚಿತ್ರಿಸುತ್ತದೆ. ಅದ್ವೈತದಲ್ಲಿ ಅಚಲ ನಂಬಿಕೆಯಿಟ್ಟ ಚೇತನವುಳ್ಳ ದೇಹದಲ್ಲಿನ ವ್ಯಾಪಾರಗಳು ಭೌತಿಕ
ನೆಲೆಯಲ್ಲಿಯೇ ಸಹಜ ಆರಾಧನೆಯಾಗಿ ಪರಿವರ್ತನೆಗೊಳ್ಳುವ ಅಪೂರ್ವ ರೀತಿ ಇಲ್ಲಿ ಮಾತಾಗಿದೆ.
ಪಂಚೇಂದ್ರಿಯಗಳೇ, ಅವುಗಳ ಕ್ರಿಯಾಪಟುತ್ವವೇ, ನಮ್ಮ ಅಸ್ತಿತ್ವದ ಕುರುಹು ತಾನೇ? ಇಂದ್ರಿಯಗಳು
ಮಾಡುವ ಕೆಟ್ಟುದನ್ನು ಯಾರೆಷ್ಟೇ ಬಣ್ಣಿಸಿ ಹೇಳಲಿ, ಅವುಗಳ ಮೂಲಕವಾಗಿಯೇ ನಮ್ಮೆಲ್ಲ ಸಾಧನೆಗಳು
ನಡಯಬೇಕು. ಅಂದರೆ ಇಂದ್ರಿಯಗಳಾಗಲೀ, ಅವುಗಳ ಮೂಲಕ ನಾವು ಪಡೆಯುವ ಅನುಭವಗಳಾಗಲೀ ತಮಗೆ ತಾವೇ
ಒಳ್ಳೆಯದೂ ಅಲ್ಲ, ಕೆಟ್ಟುದೂ ಅಲ್ಲ; ಅಲ್ಲದೆ, ಒಳಿತು-ಕೆಡುಕುಗಳು ಸಾಪೇಕ್ಷವಾದವೇ ಹೊರತು ಕೇವಲವೂ
ಅಲ್ಲ. ಇಂದ್ರಿಯವಿರಹಿತ ದೇಹವೆಂದರೆ ನಿರ್ಜೀವವೇ ತಾನೇ? ಹೀಗಾಗಿ ಅವು ಶಕ್ತಿಮೂಲಗಳು, ಅವುಗಳನ್ನು
ಬಳಸಿಕೊಳ್ಳುವುದರ ಮೇಲೆ ಅವುಗಳ ಉಪಯುಕ್ತತೆಯನ್ನು ನಾವು ಸಾಧಿಸಿಕೊಳ್ಳಬೇಕು. ಇಹದ ಬದುಕಿನಲ್ಲಿ
ಮಾಡಬೇಕಾದ ಸಾಧನೆಯು ಐಹಿಕ ನೆಲೆಯಲ್ಲಿಯೇ ನಡೆಯಬೇಕು. ಹಾಗಾಗಿ ಪರಿಷ್ಕೃತ ಮನಸ್ಸಿನ
ಕಣ್ಣಂಕೆಯಲ್ಲಿ ಇಂದ್ರಿಯಗಳನ್ನು ಕಾರ್ಯಶೀಲಗೊಳಿಸಬೇಕು. ಅಂದರೆ ಇಂದ್ರಿಯಗಳ ಹಿಂದಿನ ಚಾಲಕಶಕ್ತಿ
ಮನಸ್ಸೇ. ಅದು ಗಟ್ಟಿಯಾಗಿದ್ದರೆ, ಇಂದ್ರಿಯಗಳು ತಮ್ಮ ಬಾಲ ಬಿಚ್ಚಲಾರವು. ಹಾಗಾದಾಗ, ಇಂದ್ರಿಯಗಳ
ನೆಲೆಯಲ್ಲಿಯೇ ಅತೀಂದ್ರಿಯವನ್ನು ಸಾಧಿಸುವ ಪವಾಡ ನಡೆಸಬಹುದು. ಇದನ್ನೇ ವಚನಕಾರ ಹೃದ್ಯವಾಗಿ
ಇಲ್ಲಿ ನಿರೂಪಿಸುತ್ತಿರುವುದು; ಪ್ರಾಯಶಃ ಪ್ರಸಾದಿಸ್ಥಲದ ನಿಲವು ಈ ಮನೋಭಾವವನ್ನೇ ಒಳಗೊಂಡುದು.
ಇಂಥದೇ ಅನುಭವವನ್ನು ಮತ್ತೊಂದು ವಚನವೂ ಚಿತ್ರಿಸುತ್ತದೆ: "ಎನ್ನ ಗತಿ, ನಿನ್ನ ಗತಿ; ಎನ್ನ
ಕೇಳಿಕೆ, ನಿನ್ನ ಕೇಳಿಕೆ; ಎನ್ನ ನೋಟವೇ ನಿನ್ನ ನೋಟ; ಎನ್ನಂಗಸ್ಪರ್ಶನವೇ ನಿನ್ನಂಗಸ್ಪರ್ಶನ;
ಎನ್ನಂಗಸುಖಭೋಗವೇ ನಿನ್ನಂಗ ಸುಖಭೋಗ. ಎನ್ನೊಳಗೆ ನೀನು, ನಿನ್ನೊಳಗೆ ನಾನು. ಎನ್ನ ಪ್ರಾಣ ನೀನು,
ನಿನ್ನ ಪ್ರಾಣ ನಾನಾದ ಕಾರಣ ಎನ್ನ ಸೋಂಕಿತ್ತೆಲ್ಲ ನಿನ್ನ ಪೂಜೆಯಯ್ಯಾ" ಎನ್ನುವ ಶರಣನ
ಅನನ್ಯ ಚಿತ್ತಸ್ಥಿತಿಯನ್ನು ಕಲ್ಪಿಸಿಕೊಳ್ಳಬೇಕು. ಉರಿಲಿಂಗಪೆದ್ದಿಗೆ ಶಿವನೊಬ್ಬನೇ ದೇವ ಎಂಬ
ಬಗ್ಗೆ ಸಂದೇಹವೇ ಇಲ್ಲ. ಅದಕ್ಕೆ ಭಿನ್ನವಾದ ನಿಲವನ್ನುಳ್ಳವರು, ಎಂದರೆ `ಅಹಂ ಕರ್ತಾ' ಎಂದು
ನುಡಿವವರು, ಉದ್ಧಾರವಾಗರು ಎಂಬುದು ಅವನ ಅಚಲ ನಂಬಿಕೆ. "ವಿಶ್ವವೆಲ್ಲವೂ ಪಶು, ಶಿವನೊಬ್ಬನೇ
ಪತಿ, ಸರ್ವವೆಲ್ಲವೂ ಶಕ್ತಿರೂಪು, ಶಿವನೊಬ್ಬನೇ ಪುರುಷನು ಎಂದುದು, ಸರ್ವರೂ ಭೃತ್ಯರು,
ಶಿವನೊಬ್ಬನೇ ಕರ್ತನೆಂದುದು ಮನವಚನಕಾಯ ಒಂದಾಗಿ ನೆನವುತ್ತಿಪ್ಪವರು ಶಿವನೊಂದಾದರಯ್ಯಾ"
ಎಂಬುದು ಅವನ ನಿಷ್ಠೆಯ ಪರಾಕಾಷ್ಠೆ.
ಗುರು ಶಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವಿರಿಸಿ ಉಪದೇಶಮಾಡಿ ನೀಡುವ
ಕುರುಹೇ ಇಷ್ಟಲಿಂಗ. ಅಂದರೆ ಅದು ಭಕ್ತನ ಕಲ್ಪನೆಯ ಶಿವನ ಕುರುಹು. ಸದಾ ಅವನ ದೇಹದ ಮೇಲಿದ್ದು
ಲಿಂಗವೆಂಬುದು ತನ್ನಿಂದ ಹೊರತಾದುದಲ್ಲ ಎಂಬುದನ್ನು ಸೂಚಿಸುವಂಥದು. ಅಲ್ಲದೆ, ಇಷ್ಟಲಿಂಗ
ಪರಿಕಲ್ಪನೆಯು ದೇವರ ಕಲ್ಪನೆ ವ್ಯಕ್ತಿವಿಶಿಷ್ಟವಾದುದು ಎಂಬುದನ್ನು ಪ್ರತಿಪಾದಿಸುತ್ತದೆ. ಶಿವನು
ಎಲ್ಲೋ ಇಲ್ಲ, ತನ್ನಲ್ಲಿಯೇ ಇದ್ದಾನೆ, ತಾನು ಬಯಸಿದಾಗ ಬರುತ್ತಾನೆ ಎಂಬುದು ಇಲ್ಲಿನ ತಿಳಿವಳಿಕೆ;
ಹೀಗಾಗಿ ಶಿವನನ್ನು ಅರಸಿ ಭಕ್ತ ಎಲ್ಲಿಗೋ ಹೋಗಬೇಕಾಗಿಲ್ಲ; ಹೋಗಬೇಕಾದುದೆಲ್ಲ ತನ್ನ ಮನೋವಲಯಕ್ಕೆ.
ತನ್ನ ಅನುಭವಕ್ಕೆ ಬರುವುದೆಲ್ಲವನ್ನೂ ಶಿವನಿಗೆ ಅರ್ಪಿಸಿ ಎಲ್ಲವನ್ನೂ ಶಿವನ ಪ್ರಸಾದವೆಂದೇ
ಭಾವಿಸುವ ಭಕ್ತನು ಬಯಸಿದಾಗ ಶಿವನನ್ನು ಕಣ್ಣೆದುರು ನಿಲ್ಲಿಸಿಕೊಳ್ಳಲು ಇಷ್ಟಲಿಂಗ ಸಹಾಯಕ;
ಆದ್ದರಿಂದಲೇ ವಚನಕಾರರು ಇಷ್ಟಲಿಂಗಕ್ಕೆ ಹೊರತಾದ ಇತರ ಕುರುಹುಗಳ ಆರಾಧನೆಯನ್ನು ಅಲ್ಲಗಳೆದರು;
ದೇವಾಲಯಗಳ ಸ್ಥಾಪನೆ, ವಿಗ್ರಹಪ್ರತಿಷ್ಠಾಪನೆಗಳನ್ನು ಖಂಡಿಸಿದರು. ಬೇಕಾದಾಗ ಲಿಂಗಾಂಗ
ಸಾಮರಸ್ಯಸಾಧನೆಗೆ ದೇಹದ ಮೇಲಣ ಕುರುಹು ನೆರವಾಗುವ ಪರಿಯನ್ನು ಪೆದ್ದಿ, "ಅಂಗೈಯ ಲಿಂಗವ
ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ ಅಂಗೇಂದ್ರಿಯಗಳೆಲ್ಲ ಲಿಂಗೇಂದ್ರಿಯಗಳಾದವು" ಎಂದು
ಹೇಳುತ್ತಾನೆ. ಪ್ರಾಯಶಃ ಸಾಮಾನ್ಯ ಮನುಷ್ಯರನ್ನು ಗಮನದಲ್ಲಿರಿಸಿಕೊಂಡು ಅವನು ತನ್ನೊಂದು
ವಚನದಲ್ಲಿ, "ಸಾಕಾರವಿಡಿದು ಅರ್ಚನೆ ಪೂಜನೆಯಂ ಮಾಡುವುದಲ್ಲದೆ ನಿರಾಕಾರವ ನಂಬಲಾಗದು.
ಅಗ್ನಿಯಲ್ಲಿಹ ಗುಣವು ಪ್ರಕಾಶದಲ್ಲುಂಟೆ? ಶ್ರೀಗುರು ಕರಸ್ಥಲದಲ್ಲಿ ಬಿಜಯಂಗೈಸಿ ಕೊಟ್ಟ
ಇಷ್ಟಲಿಂಗವಿದ್ದ ಹಾಂಗೆ ವಜ್ರದೊಳಗೆ ಬಯಲನರಸುವರೆ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ" ಎನ್ನುತ್ತಾನೆ.
ಮತ್ತೊಂದು ಕಡೆ, "ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ? ದೀಪ ಇಲ್ಲದೆ ಬೆಳಕುಂಟೆ ಅಯ್ಯಾ?
ಪುಷ್ಪವಿಲ್ಲದೆ ಪರಿಮಳವುಂಟೆ ಅಯ್ಯಾ? ಸಕಲವಿಲ್ಲದೆ ನಿಷ್ಕಲವ ಕಾಣಬಾರದು. ಮಹಾಘನ ನಿರಾಳ
ಪರಶಿವನಿಂದ ಲಿಂಗವು ತೋರಿತ್ತು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ." ಆದರೆ ಇಲ್ಲೆಲ್ಲ
ಸಾಕಾರ, ಸಕಲ ಎನ್ನುತ್ತಿರುವುದು ಇಷ್ಟಲಿಂಗಕ್ಕೆ ಸೀಮಿತಗೊಳಿಸಿ, ಗುಡಿಯಲ್ಲಿ ಪ್ರತಿಷ್ಠೆಗೊಂಡ
ಮೂರ್ತಿಯನ್ನು ಕುರಿತು ಅಲ್ಲ ಎಂಬುದು ಗಮನಿಸಬೇಕಾದ ಅಂಶ.
ಸರಿಯೆ. ಆದರೆ ಶಿವನಿಂದೆಯ ಬಗ್ಗೆ, ಗಣಾಚಾರದ ಬಗ್ಗೆ ಇವನು ಒಂದು
ವಚನದಲ್ಲಿ ತೋರ್ಪಡಿಸುವ ಮನೋಭಾವವು ಮಾತ್ರ ತೀವ್ರವಾದುದು. ಮಿಕ್ಕ ಅನೇಕ ವೇಳೆ ತನ್ನ
ವೈಚಾರಿಕತೆಯನ್ನು ಮೆರೆಯುವ ಉರಿಲಿಂಗಪೆದ್ದಿಯು ಗಣಾಚಾರದ ಬಗ್ಗೆ ತೋರ್ಪಡಿಸುವ ಮನೋಭಾವ ನಮ್ಮಲ್ಲಿ
ಒಂದು ರೀತಿಯ ನಿರಾಸೆಯನ್ನೇ ತರುತ್ತದೆ. ಆ ವಚನ ಹೀಗಿದೆ:
ಲಿಂಗದೊಡನೆ
ಸಹಭೋಜನ ಮಾಡುವ
ಸದ್ಭಕ್ತನ
ಆಚರಣೆ ಕ್ರಿಯೆಗಳೆಂತುಟಯ್ಯಾ ಎಂದಡೆ:
ಲಿಂಗ
ಜಂಗಮದ ಕುಂದು ನಿಂದೆಯಂ ಕೇಳಲಾಗದು,
ಕೇಳಿದಡೆ
ಆ ನಿಂದಕನ ಕೊಲುವುದು,
ಕೊಲಲಾಗದಿರ್ದಡೆ
ತನ್ನ ತಾನಿರಿದುಕೊಂಡು ಸಾವುದು,
ಸಾಯಲಾರದಿರ್ದಡೆ
ಅವನ ಬಯ್ವುದು,
ತನ್ನ
ಅರ್ಥಪ್ರಾಣಾಭಿಮಾನವು ಶಿವಾರ್ಪಣವಾಯಿತ್ತೆಂದು
ಮನದಲ್ಲಿ
ಸಂತೋಷವ ತಾಳಿದಡೆ ಪ್ರಸಾದವುಂಟು.
ಇಂತಲ್ಲದೆ
ಮನದಲ್ಲಿ ನೋವ ತಾಳಿದಡೆ ಆಚಾರಭ್ರಷ್ಟನು.
ಇಲ್ಲಿ
ಉದ್ಧರಿಸಿರುವ ಸಾಲುಗಳಲ್ಲಿ ಕೊನೆಯ ಭಾಗದ ಮನೋಭಾವ ಸಾಧುವಾದುದು; ಅಪಮಾನವನ್ನು ಕೂಡ ಶಿವಾರ್ಪಣ
ಮಾಡುವ ನಿಲವು ಅದು. ಆದರೆ ಮೊದಲ ಸಾಲುಗಳಲ್ಲಿನ ಅಭಿಪ್ರಾಯವನ್ನು ಒಪ್ಪುವುದು ಕಷ್ಟ. ಗಣಾಚಾರದ ಈ
ತೀವ್ರತೆಯನ್ನು ಅನೇಕರು ಸಮರ್ಥಿಸಿದರೆಂಬುದು ನಿಜ; ಜೊತೆಗೆ ಈ ನಿಲವು ಒಟ್ಟು ವೀರಶೈವದ
ವೀರತ್ವಕ್ಕೆ ಸಂಬಂಧಿಸಿದ್ದು, ಸಮುದಾಯದಿಂದ ಒಟ್ಟಾರೆ ಒಪ್ಪಿತವಾದದ್ದು.
ಇಷ್ಟಲಿಂಗವು ಬಿದ್ದು ಹೋದರೆ, ಕಳೆದು ಹೋದರೆ, ಭಿನ್ನವಾದರೆ ಏನು
ಮಾಡಬೇಕೆಂಬ ಜಿಜ್ಞಾಸೆ ಅನೇಕರನ್ನು ಕಾಡಿದೆ. ಕೆಲವರು ಆಗಲೂ ಆತ್ಮಹತ್ಯೆಯನ್ನೇ ಪ್ರತಿಪಾದಿಸಿದರು.
ಚೆನ್ನಬಸವಣ್ಣನನ್ನೂ ಒಳಗೊಂಡಂತೆ ಮತ್ತೆ ಕೆಲವರು ಅದರಿಂದ ನಷ್ಟವೇನೂ ಇಲ್ಲ, ಇಂತಹ
ಸನ್ನಿವೇಶದಲ್ಲಿ ಮತ್ತೊಂದನ್ನು ಧರಿಸುವುದೇ ಸರಿ ಎಂಬ ಸರಳವೂ, ಉಪಾದೇಯವೂ ಆದ ಮಾರ್ಗವನ್ನೇ
ಹೇಳುತ್ತಾರೆ. ಹೇಳಿ ಕೇಳಿ ಇಷ್ಟಲಿಂಗ ಒಂದು ವಸ್ತು, ಕಲ್ಲಿನಿಂದಾದುದು; ಅದಕ್ಕೆ ಮಾನ್ಯತೆ
ದೊರೆಯುವುದು ಕಟ್ಟಿಕೊಂಡವನು ತನ್ನ ಮನಸ್ಸಿನ ಶಿವತ್ವದ ಕಲ್ಪನೆಯನ್ನು ಅದರಲ್ಲಿ ಆವಾಹಿಸಿಕೊಂಡಾಗ
ಮಾತ್ರವೇ. ಮೆಳೆಯ ಮೇಲೆ ಕಲ್ಲನ್ನಿಟ್ಟಾಕ್ಷಣ ಆ ಮೆಳೆ ಭಕ್ತನಾಗಲಾರದು ಎಂದು ಜೇಡರ ದಾಸಿಮಯ್ಯ ಅದರ
ಸೀಮಿತತೆಯನ್ನು ಸ್ಪಷ್ಟಪಡಿಸುತ್ತಾನೆ. ಇಷ್ಟಲಿಂಗ ಎನ್ನುವುದು ಒಂದು ನೆವವೇ ಹೊರತು ಅದು
ಗಂತವ್ಯವಲ್ಲ ಎಂಬುದನ್ನು, ವಚನಕಾರರ ನಾಡಿಮಿಡಿತವನ್ನೇ ಹಿಡಿದು ರಚಿಸಲಾದ 'ಶೂನ್ಯ ಸಂಪಾದನೆ'ಯು
ನಾನಾ ಪ್ರಸಂಗಗಳಲ್ಲಿ ಪ್ರತಿಪಾದಿಸುತ್ತದೆ. ನುಲಿಯ ಚಂದಯ್ಯನ ಪ್ರಸಂಗದಲ್ಲಿ (ಪರೀಕ್ಷೆಗೆಂದು)
ತಾನಾಗಿ ಬಿದ್ದು ಹೋದ ಇಷ್ಟಲಿಂಗವನ್ನು ಚಂದಯ್ಯ ಅವಜ್ಞೆ ಮಾಡುವ ರೋಚಕ ಸನ್ನಿವೇಶವಿದೆ. ಆಕಾಶಕ್ಕೇರಿದವನಿಗೆ
ಏಣಿಯ ಹಂಗಿಲ್ಲದಂತೆ, ಪರಮಸಾಧನೆಯನ್ನು ಮಾಡಿದವನಗೆ ಲಿಂಗದ ಹಂಗಿಲ್ಲ ಎಂಬುದು ಒಟ್ಟು ಮಥಿತಾರ್ಥ.
ಉರಿಲಿಂಗಪೆದ್ದಿಯೂ ಇದೇ ಅಭಿಪ್ರಾಯದವನು. ಅವನ ವಚನ ಹೀಗಿದೆ:
ಶ್ರೀಗುರು
ಶಿಷ್ಯಂಗೆ ಮಂತ್ರವ ಮೂರ್ತಿಗೊಳಿಸಬೇಕಾಗಿ,
ಪೃಥ್ವಿಯ
ಮೇಲಣ ಕಣಿಯ ತಂದು, ಇಷ್ಟಲಿಂಗವ ಮಾಡಿ,
ಶಿಷ್ಯನ
ತನುವಿನ ಮೇಲೆ ಧರಿಸಿದ ಲಿಂಗವು
ಅವತಳವಾಗಿ
ಭೂಮಿಯಲ್ಲಿ ಸಿಂಹಾಸನಗೊಂಡಿತ್ತೆಂದು
ಸಮಾಧಿಯ
ಹೊಗುವರಯ್ಯಾ.
ಲಿಂಗಕ್ಕೆ
ಅವತಳವಾದಡೆ ಭೂಮಿ ತಾಳಬಲ್ಲುದೆ?
ಮಾರಾಂತನ
ಗೆಲಿವೆನೆಂದು ಗರಡಿಯ ಹೊಕ್ಕು
ಕಠಾರಿಯ
ಕೋಲು ನೆಲಕ್ಕೆ ಬಿದ್ದಡೆ, ಆ ಕೋಲ ಬಿಟ್ಟು
ಸಾಧನೆಯಂ
ಬಿಟ್ಟು ಕಳೆವರೇ ಅಯ್ಯಾ?
ತಟ್ಟಿ
ಮುಟ್ಟಿ ಹಳಚುವಲ್ಲಿ
ಅಲಗು
ಬಿದ್ದಡೆ ಭಂಗವಲ್ಲದೆ ಕೋಲು ಬಿದ್ದಡೆ ಭಂಗವೇ ಅಯ್ಯಾ?
ಆ ಕೋಲ
ತಳೆದುಕೊಂಡು ಸಾಧನೆಯ ಮಾಡುವದೇ ಕರ್ತವ್ಯ.
ಆ ಲಿಂಗ
ಹುಸಿ ಎಂದಡೇನಯ್ಯಾ?
ಶ್ರೀವಿಭೂತಿವೀಳೆಯಕ್ಕೆ
ಸಾಕ್ಷಿಯಾಗಿ ಬಂದ ಶಿವಗಣಂಗಳು ಹುಸಿಯೇ?
ಆ
ಗಣಂಗಳು ಹುಸಿಯಾದರೆ, ಕರ್ಣಮಂತ್ರ ಹುಸಿಯೇ?
ಆ
ಕರ್ಣಮಂತ್ರ ಹುಸಿಯಾದಡೆ,
ಆ
ಶ್ರೀಗುರುಲಿಂಗವು ಹುಸಿಯೇ?
ಆ
ಶ್ರೀಗುರುಲಿಂಗ ಹುಸಿಯಾದಡೆ,
ಪಾದತೀರ್ಥ
ಪ್ರಸಾದ ಹುಸಿಯೇ?
ಇಂತೀ
ಷಟ್ಸ್ಥಲವ ತುಚ್ಛವ ಮಾಡಿ,
ಗುರೂಪದೇಶವ
ಹೀನವ ಮಾಡಿ, ಸಮಾಧಿಯ ಹೊಗುವ
ಪಂಚಮಹಾಪಾತಕರ
ಮುಖವ ನೋಡಲಾಗದು,
ಉರಿಲಿಂಗೆಪೆದ್ದಿಪ್ರಿಯ
ವಿಶ್ವೇಶ್ವರ.
ಕುರುಹಿನ
ಹಿಂದಿರುವ ಸಾಂಕೇತಿಕತೆಗೆ ಗೌರವವೇ ಹೊರತು, ಕುರುಹಿಗೇ ಅಲ್ಲ. ಅದಕ್ಕೆ ಮಾತ್ರ ಬೆಲೆಯೀಯುವವನು
ಮಹಾಪಾತಕಿ, ಅಂತಹವನ ಮುಖ ನೋಡುವುದೂ ಸಲ್ಲದು ಎಂಬ ಇಲ್ಲಿನ ನಿಲವು ಇತರ ಅನೇಕ ಮಂದಿ ವಚನಕಾರರೂ
ಪ್ರತಿಪಾದಿಸಿರುವಂತದೇ.
ಎಲ್ಲ ವಚನಕಾರರ ಹಾಗೆಯೇ ಉರಿಲಿಂಗಪೆದ್ದಿಯೂ ವೈದಿಕ ಆಕರಗಳ ಮೂಲಕವೇ
ಶಿವಪಾರಮ್ಯವನ್ನು ಸ್ಥಾಪಿಸುವ ಮಾರ್ಗವನ್ನು ಅನುಸರಿಸುತ್ತಾನೆ. ಶ್ರುತಿಗಳು `ಏಕ ಏವ ರುದ್ರೋ
ನದ್ವಿತೀಯ' ಎಂದು ಸಾರುತ್ತಿದ್ದರೂ, ವಿಷ್ಣುವನ್ನು ದೇವರೆಂದು ನಂಬುವವರನ್ನು ಅವನು
ಹಂಗಿಸುತ್ತಾನೆ. ಅಂತಹವರ ಬಾಯಲ್ಲಿ ಹುಳು ಸುರಿಯುತ್ತವೆ ಎಂದು ಕಿಡಿಗಾರುತ್ತಾನೆ. "ಹರಿಗೆ
ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ, ನಮ್ಮ ಹರಂಗೆ ಪ್ರಳಯ ಉಂಟಾದರೆ, ಬಲ್ಲರೆ ನೀವು ಹೇಳಿರೆ!
ನಿಮ್ಮ ವೇದದಲ್ಲಿ ಹೇಳಿಸಿರೆ! ಅರಿಯದಿರ್ದಡೆ ಸತ್ತ ಹಾಂಗೆ ಸುಮ್ಮನಿರಿರೆ. ಇದು ಕಾರಣ ನಮ್ಮ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವನೊಬ್ಬನೇ, ಎರಡಿಲ್ಲ" ಎಂದು ಸವಾಲು ಹಾಕಿ
ನಿರ್ಧಾರದಿಂದ ನುಡಿಯುತ್ತಾನೆ. ದೂರ್ವಾಸ ಉಪಮನ್ಯು ಮುಂತಾದ ಋಷಿಗಳು, ಬ್ರಹ್ಮ ವಿಷ್ಣು ಮೊದಲಾದ
ದೇವಜಾತಿಗಳು ಶಿವಲಿಂಗಾರ್ಚನೆಯನ್ನು ಮಾಡಿದರು; ಮತ್ಸ್ಯೇಶ್ವರ, ಕೂರ್ಮೇಶ್ವರ ಮುಂತಾದ ಹೆಸರುಗಳೇ
ಇದಕ್ಕೆ ಸಾಕ್ಷಿ; ಹಾಗೆಯೇ ಇಂದ್ರ ಮೊದಲಾದ ದೇವತೆಗಳೂ ಶಿವಲಿಂಗಾರ್ಚನೆಯ ಮಾಡಿದರು ಎಂದು ನುಡಿದು "ಇವರೆಲ್ಲರು ಮರುಳರೇ, ನೀವೇ
ಬುದ್ಧಿವಂತರೇ?" ಎಂದು ಪ್ರಶ್ನಿಸಿ
ಎದುರಾಳಿಗಳನ್ನವನು ಬಾಯಿ ಮುಚ್ಚಿಸುತ್ತಾನೆ.
ವಚನ ಚಳುವಳಿಯ ಹೊತ್ತಿಗೆ ನೆರೆಯ ತಮಿಳು ನಾಡಿನಲ್ಲಾದ ರಾಮಾನುಜ
ಪ್ರಣೀತ ಶ್ರೀವೈಷ್ಣವ ಸಂಪ್ರದಾಯದ ಆವಿಷ್ಕಾರದ
ಪ್ರಭಾವ ಕರ್ನಾಟಕದ ಮೇಲೂ ಆಗುತ್ತಿತ್ತು. ಹೀಗಾಗಿ ಶಿವ-ವಿಷ್ಣು ಪೈಪೋಟಿ ಬರಬರುತ್ತ
ತೀವ್ರವಾಯಿತು. ವಚನಕಾರಲಲ್ಲಿ ಬಹುತೇಕ ಮಂದಿ ಶಿವ-ವಿಷ್ಣುಗಳನ್ನು ಹೋಲಿಸಿ ಶಿವಪಾರಮ್ಯವನ್ನು
ಎತ್ತಿ ಹಿಡಿಯುತ್ತಿದ್ದರು; ಹಲವರು ವಿಷ್ಣುವನ್ನು ಹಳಿಯುವುರ ಮೂಲಕ ಶಿವನ ಮೇಲ್ಮೆಯನ್ನು
ಸಾಬೀತುಪಡಿಸಲು ಹೆಣಗುತ್ತಿದ್ದರು. ಕೆಲವರು ತಮ್ಮ ಪಾಂಡಿತ್ಯದ ನೆರವಿನಿಂದ ಪೌರಾಣಿಕ ಉಲ್ಲೇಖಗಳ
ಮೂಲಕ ತಮ್ಮ ನಿಲವನ್ನು ಪ್ರತಿಪಾದಿಸುತ್ತಿದ್ದರು. ಉರಿಲಿಂಗಪೆದ್ದಿಯಂತಹವರ ಬಗ್ಗೆ ಹೇಳಬೇಕೇ?
ಪ್ರಕಾಂಡ ಸಂಸ್ಕೃತ ಪಾಂಡಿತ್ಯ, ಹರಿತವಾದ ನಾಲಗೆಗಳಿದ್ದ ಮೇಲೆ ಕೇಳುವುದೇನು? ವಿಷ್ಣುವಿನ
ಹೆಚ್ಚುಗಾರಿಕೆಯನ್ನು ಮೊದಲಲ್ಲಿ ಹೊಗಳಿದ ವ್ಯಾಸನ ತಿಳಿವನ್ನು ಇವನು 'ಶ್ವಾನಜ್ಞಾನ' ಎಂದು
ಕರೆಯುತ್ತಾನೆ. ಅವನ ಪಾಡನ್ನು ವರ್ಣಿಸುವ ಮೂಲಕ ಶಿವನ ಮೇಲ್ಮೆಯನ್ನು ಸಾರುವ ಈ ವಚನವನ್ನು ನೋಡಿ:
ವ್ಯಾಸಾದಿಗಳಂತೆ
ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧ ಶರಣರು?
'ನ
ದೇವಃ ಕೇಶವಾತ್ಪರಂ' ಎಂದ ವ್ಯಾಸ
ತನ್ನ
ತೋಳುಗಳೆರಡನು ಹೋಗಲಾಡೆನೆ?
ಹಿಡಿಯರೆ
ಅಂದು ಆಕಾಶ ಗಣಂಗಳು?
ಮರಳಿ
ಈಶ್ವರನಲ್ಲದೆ ವವಿಲ್ಲೆಂದು
ಶ್ರುತ್ಯರ್ಥವನರಿದು
ದೇವಾರ್ಚನೆಯ ಮಾಡಲಾಗಿ
ಆ
ವ್ಯಾಸನ ಎರಡು ಕರಂಗಳು ಬಂದು,
ಅಶೇಷವಹಂತಹ ಧರ್ಮ
ಈಶ್ವರನ ಆಲಯದ ಮುಂದೆ
ಧ್ವಜಪತಾಕೆಗಳಾಗದೆ
ಈರೇಳು ಲೋಕವು ಅರಿಯೆ?
ಅನಂತಪುರಾಣಾಗಮಗಳಲ್ಲಿ
ಕೇಳಿರೇ
ಈಶ್ವರಾರ್ಚನೆಯ ಮಾಡಿ
ಮರಳಿ ವಿತಥವಾಗಿ
ಪರದಾರಕಿಚ್ಚೈಸಿದಡೆ
ಇವಂಗಿದೆ ಪ್ರಿಯವೆಂದು
ಆ ಇಂದ್ರನ ಮೈಯೆಲ್ಲಾ
ಅನಂಗನಂತಹ ಅಂಗವಾಗದೆ?
ಈರೇಳು ಭುವನವರಿಯೆ.
ಮರಳಿ ಈಶ್ವರಾರ್ಚನೆಯ
ಮಾಡಲು
ಆ ಅಂಗದ ಯೋನಿಕೂಪೆಲ್ಲ
ನಯನಂಗಳಾಗವೇ ಇಂದ್ರಂಗೆ?
ಇದನರಿದು ಶಿವಾರ್ಚನೆಯ
ಮಾಡಿ
ಶಿವನವರಿಗೆ ಧನಸಹಿತ
ತ್ರಿವಿಧವ ನಿವೇದಿಸುವುದು
ಶಿವಾಚಾರ ಕೇಳಿರಣ್ಣಾ.
ಇಲ್ಲಿ
ವಚನಕಾರನು ವ್ಯಾಸ-ಇಂದ್ರರು ಹೇಗೆ ಶಿವಾಪಚಾರದಿಂದ ಶಿಕ್ಷೆ ಪಡೆದು ನಂತರ ಪ್ರಾಯಶ್ಚಿತ್ತ ಕಾರಣ
ಶಿವನ ಕೃಪೆಗೊಳಗಾದರು ಎಂದು ಎಚ್ಚರಿಕೆ ನೀಡುತ್ತಿದ್ದಾನೆ.
ಉರಿಲಿಂಗಪೆದ್ದಿಯದು ದೃಢವಾದ ಗುರುನಿಷ್ಠೆ. ಗುರುವು ಶಿಷ್ಯನ
ಮಸ್ತಕದಲ್ಲಿ ತನ್ನ ಹಸ್ತವನ್ನು ನ್ಯಸ್ತಮಾಡಿದ್ದರಿಂದ ಶಿಷ್ಯನ ಆತ್ಮಶುದ್ಧಿಯಾಗುವುದೆಂದು ಅವನು
ನಂಬುತ್ತಾನೆ. ಪುರಾಕೃತ ಕರ್ಮಫಲದಿಂದ ಕರ್ಮವಶನಾಗಿ ತನ್ನ ತಾನರಿಯದೆ ಶಿಷ್ಯನು ಅಜ್ಞಾನಿಯಾಗಿ
ಮಹಾದೀನನಾಗಿದ್ದಾಗ, ಸಂಸಾರದಲ್ಲಿ ಮುಳುಗಿದ್ದಾಗ ಸದ್ಗುರುವು ಪೂರ್ವಜಾತವನ್ನು ಕಳೆದು
ಪುನರ್ಜಾತನನ್ನಾಗಿ ಮಾಡಿದ. ಹೀಗಾಗಿ ತಾನು ಗುರುಪುತ್ರನೆನಿಸಿದೆ ಎಂದು
ಹೇಳಿಕೊಳ್ಳುತ್ತಾನೆ. ತನ್ನ ಸದ್ಗುರು ಮಾಡುವ
ಗುರುತ್ವ ಉಮಾತೀತವಾದುದು;
ಅದೆಂತೆಂದಡೆ:
ಎನ್ನ ನೇತ್ರದಲ್ಲಿ ತನ್ನ ರೂಪು ತುಂಬಿ,
ಎನ್ನ
ನೇತ್ರವ ಗುರುವು ಮಾಡಿದ.ಎನ್ನ ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ,
ಎನ್ನ
ಶ್ರೋತ್ರವನು ಗುರುವು ಮಾಡಿದ.
ಎನ್ನ
ಪ್ರಾಣದಲ್ಲಿ ಗುರುಪಾದಪದ್ಮದಲ್ಲಿಹ ಮಹಾಗಂಧವ ತುಂಬಿ,
ಎನ್ನ
ಪ್ರಾಣವನು ಗುರುವು ಮಾಡಿದ.
ಎನ್ನ
ಜಿಹ್ವೆಯಲ್ಲಿ ತನ್ನ ಕರುಣಪ್ರಸಾದವ ತಂಬಿ,
ಎನ್ನ
ಜಿಹ್ವೆಯನು ಗುರುವು ಮಾಡಿದ.
ಎನ್ನ
ಕಾಯವನು ಭಕ್ತಕಾಯ ಮಮಕಾಯವೆಂದು
ಪ್ರಸಾದಕಾಯನೆಂದೆನಿಸಿ,
ಎನ್ನ
ಕಾಯವನು ಗುರುವು ಮಾಡಿದ.
ಎನ್ನ
ಪ್ರಾಣದಲ್ಲಿ ಲಿಂಗಪ್ರಾಣಸಂಬಂಧವ ಮಾಡಿ
ಎನ್ನ
ಪ್ರಾಣವನು ಗುರುವು ಮಾಡಿದ.
ಇಂತು
ಎನ್ನ ಅಂತರಂಗ ಬಹಿರಂಗವನು ಗುರುವು ಮಾಡಿ,
ಸರ್ವಾಂಗವನೂ
ಗುಪ್ತವ ಮಾಡಿದ ಮಹಾಶ್ರೀಗುರುವಿಗೆನಾನಿನ್ನೇನ ಮಾಡುವೆನಯ್ಯಾ?
ಎಂಬ
ಭಾವ ಅವನದು. ಆದರೆ ಗುರುತ್ವದ ಮಹಿಮೆಯನ್ನರಿಯದೆ ಕೆಲವರು ತಮ್ಮನ್ನು ಗುರು ಎಂದು
ಕರೆದುಕೊಳ್ಳುವುದನ್ನೂ ಅವನು ವಿಡಂಬಿಸುತ್ತಾನೆ. ಗುರು ಎಂಬ ಅಭಿಧಾನ ಹೊತ್ತವರೆಲ್ಲ ಗುರುಗಳಾಗಲು
ಸಾಧ್ಯವಿಲ್ಲ. ಅಂಥವರನ್ನು ಕುರಿತು "ಗುರುವಾರು ಲಘುವಾರೆಂದರಿಯಿರಿ" ಎಂದು ವಚನಕಾರ
ಗೇಲಿ ಮಾಡುತ್ತಾನೆ. ಹರಿಬ್ರಹ್ಮರು "ಗುರುತ್ವಕ್ಕೆ ಸಂವಾದಿಸಿ ಮಹದ್ಗುರುವಪ್ಪ
ಪರಂಜ್ಯೋತಿರ್ಲಿಂಗದ ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು" ಎನ್ನುತ್ತಾನೆ.
"ಅತ್ಯತಿಷ್ಠದ್ದಶಾಂಗುಲವೆನಿಪ ಮದ್ಗುರುವಪ್ಪ ಮಹಾಲಿಂಗ" ಎನ್ನುತ್ತಾನೆ. ನಿಜವಾದ
ಗುರುವಿನ ಸ್ವರೂಪವನ್ನು ದೀರ್ಘವಾಗಿ ವಿವರಿಸುತ್ತಾನೆ. ಅವನಿಗೆ ಗುರು-ಲಿಂಗಗಳಲ್ಲಿ ವ್ಯತ್ಯಾಸವೇ
ಇಲ್ಲ. "ಗುರುವನರಿವನ್ನಕ್ಕರ ಅಷ್ಟಾದಶ ವಿದ್ಯೆಯನರಿಯಲುಂಟು, ಓದಲುಂಟು ಕೇಳಲುಂಟು
ಹೇಳಲುಂಟು. ಗುರುಕರುಣದಿಂದ ಗುರುವನರಿದ ಬಳಿಕ ಗುರುವಲ್ಲದೆ ತಾನಿಲ್ಲ. ಕೇಳಲಿಲ್ಲ ಹೇಳಲಿಲ್ಲ,
ಹೇಳಲಿಲ್ಲಾಗಿ ಅರಿಯಲಿಲ್ಲ" ಎಂದು ಗುರುವಿನಿಂದ ತಾನೇ ಗುರುವಾಗುವ ಪರಿಯನ್ನು ಕುರಿತು
ಹೇಳುತ್ತಾನೆ.
ಉರಿಲಿಂಗಪೆದ್ದಿಯು ಪಂಚಾಕ್ಷರಿ ಮಂತ್ರದ ಬಗ್ಗೆ ಇಟ್ಟ
ನಂಬಿಕೆ-ನಿಷ್ಠೆಗಳೂ ಇದೇ ಬಗೆಯದು. "ಅಂತ್ಯಜನಾಗಲಿ, ಅಗ್ರಜನಾಗಲಿ ಮೂರ್ಖನಾಗಲಿ
ಪಂಡಿತನಾಗಲಿ ಜಪಿಸುವುದು ಶ್ರೀ ಪಂಚಾಕ್ಷರಿಯ. ಆ ಜಪದಿಂದ ರುದ್ರನಪ್ಪುದು ತಪ್ಪದು" ಎಂಬುದು
ಅವನ ನಂಬಿಕೆ. ಅದು ಮಂತ್ರ, ತಂತ್ರ ಹಾಗೂ ಯಂತ್ರ - ಎಲ್ಲವೂ ಆಗಿದೆ. ಆದರೆ ಅದನ್ನು ವಿಶ್ವಾಸದಿಂದ
ಅವಗ್ರಹಿಸಿ, ಅ ಉ ಮ ಗಳ ಮೂಲವನ್ನು ಭೇದಿಸಿ, ಓಂಕಾರದ ನೆಲೆಯನ್ನರಿತು ಸ್ಮರಿಸಿದರೆ ಅದು ತಪ, ಜಪ
ಮಾತ್ರವಲ್ಲ ಅದರಿಂದ ಸರ್ವಸಿದ್ಧಿ. ಷಡಕ್ಷರ ಮಂತ್ರ ಎಲ್ಲ ಮಂತ್ರಗಳಿಗೆ ಮೂಲಸ್ಥಾನ ಎಂಬುದು ಅವನ
ತಿಳಿವಳಿಕೆ; ಆ ಮಂತ್ರವನ್ನು ಸ್ಮರಿಸುವ ಸದ್ಭಕ್ತನು `ವೇದಾತೀತ'ನಾಗುತ್ತಾನೆ, ಶಾಸ್ತ್ರವಾನ್
ಆಗುತ್ತಾನೆ, ಆಗಮಿಕನಾಗುತ್ತಾನೆ. "ಓಂಕಾರವೆಂಬ ವೃಕ್ಷದಲ್ಲಿ ಋಗ್ವೇದ ಯಜುರ್ವೇದ ಸಾಮವೇದ
ಅಥರ್ವಣವೇದಗಳೆಂಬ ನಾಲ್ಕು ಶಾಖೆಗಳು, ಅನಂತವೈ ಉಪವೇದಂಗಳೆಂಬ ಉಪಶಾಖೆಗಳು, ಶಾಸ್ತ್ರಂಗಳೆಂಬ ಅಂಕುರ
ಪಲ್ಲವ, ಪುರಾಣಂಗಳೆಂಬ ಪುಷ್ಪ, ಆಗಮಗಳೆಂಬ ಕಾಯಿ ಬಲಿದು ಶ್ರೀ ಪಂಚಾಕ್ಷರಿ ಎಂಬ
ಮಧುರಪಣ್ಣುಗಳು" ಎಂದು ವರ್ಣಿಸುತ್ತಾನೆ. (ಈ ಮಾತು ಆಡುವ ವಚನಕಾರ ವೇದಾಗಮಗಳ
ಹಿರಿಮೆಯನ್ನೂ, ಅವುಗಳನ್ನು ತಿಳಿದವನ ಹಿರಿಮೆಯನ್ನೂ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾನೆ.
ಅಲ್ಲಮನಂತೆ ವೇದವೆಂಬುದು ಬ್ರಹ್ಮನ ಬೂತಾಟ, ಶಾಸ್ತ್ರವೆಂಬುದು ಸರಸ್ವತಿಯ ಮರುಳಾಟ ಮುಂತಾಗಿ
ವೈದಿಕ ವಾಙ್ಮಯವನ್ನು ಸಾರಾಸಗಟಾಗಿ ತಳ್ಳಿಹಾಕುವುದಿಲ್ಲ; ಇತರ ಅನೇಕ ವಚನಕಾರರೂ
ಉರಿಲಿಂಗಪೆದ್ದಿಯಂತೆ ತಾವು ನಂಬಿದ ಪರಿಕಲ್ಪನೆಯು ಶ್ರೇಷ್ಠವೆಂದು ಸಾಬೀತುಪಡಿಸಲು ಅವೇ
ಹಳೆಯವನ್ನು ಮಾನದಂಡವಾಗಿ ಬಳಸುತ್ತಾರೆ; ಇಂದೊಂದು ವಿಪರ್ಯಾಸ).
ವಿಭೂತಿಯ ಬಗ್ಗೆಯೂ ಅವನದು ಇಂತಹುದೇ ನಿಷ್ಠೆ, ನಂಬಿಕೆ.
ವಿಭೂತಿಧಾರಣೆಯನ್ನು ಅವನು ವ್ರತವೆಂದೇ ಕರೆಯುತ್ತಾನೆ. "ಎಲ್ಲಾ ವ್ರತಂಗಳಿಗೆ ಮೇಲಾದ ವ್ರತ
ವಿಭೂತಿವ್ರತ, ಸಕಲ ದುಃಖದುರಿತಗಳ ಪರಿಹಾರವ ಮಾಳ್ಪುದೀ ಭಸ್ಮವ್ರತ, ತನುಶುದ್ಧತೆ ಮನಶುದ್ಧತೆ,
ಶಿವಾತ್ಮೈಕಮಾರ್ಗಸೋಪಾನಕೆ ಶ್ರೀವಿಭೂತಿ ಮುಖ್ಯವಯ್ಯಾ, ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರಾ" ಎಂದು ವಿಭೂತಿಯ ಗುಣಗಾನ ಮಾಡುತ್ತಾನೆ. ತನ್ನೊಂದು ವಚನದಲ್ಲಿ, ಒಟ್ಟು
ಅಷ್ಟಾವರಣದ ಬಗ್ಗೆ ಎನ್ನಬಹುದಾದ ಮನೋಭಾವವನ್ನು ಹೀಗೆ ತೋರ್ಪಡಿಸಿಕೊಳ್ಳುತ್ತಾನೆ: "ಗುರು
ಲಿಂಗ ಜಂಗಮ ಪ್ರಸಾದ - ಒಂದೇ ಪರಶಿವಮೂರ್ತಿಯ ಮಹಾವಸ್ತುಗಳು ಕೇಳಿರಣ್ಣಾ: ಅರಿದು ಧ್ಯಾನಿಸಿ
ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿಸಿ, ಧರ್ಮ ಅರ್ಥ ಕಾಮ ಮೋಕ್ಷ ಸಾಲೋಕ್ಯ ಸಾಮಪ್ಯ ಸಾರೂಪ್ಯ
ಸಾಯುಜ್ಯ - ಈ ಚತುರ್ವಿಧಫಲಪದವಿಯ ಕೊಡುವುವು. ಗುರು ಲಿಂಗ ಜಂಗಮ ಪ್ರಸಾದವೆಂದು ನಂಬುವುದು, ಇದು
ಸತ್ಯ, ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ" ಈ ಬಗೆಯ
ನಂಬಿಕೆ-ನಿಷ್ಠೆಗಳನ್ನು ಉರಿಲಿಂಗಪೆದ್ದಿ ಅಷ್ಟಾವರಣಗಳೆಲ್ಲದರ ಬಗ್ಗೆ ತೋರ್ಪಡಿಸಿಕೊಳ್ಳುತ್ತಾನೆ.
ಉರಿಲಿಂಗಪೆದ್ದಿಯೂ ಎಲ್ಲ ವಚನಕಾರರಂತೆ ಐಹಿಕಾತಾವಿರೋಧಿಯೂ ಹೌದು.
ಅಂದರೆ, ಇಹವನ್ನೇ ಸಕಲವೆಂದು ನಂಬುವವನಲ್ಲ, ಇಹವು ಪರಕ್ಕೇರಲು ಮೆಟ್ಟಿಲು ಅಷ್ಟೆ ಎಂಬ ಭಾವನೆ.
ಶಿವನಲ್ಲಿ ಅಚಲ ನಂಬಿಕೆ, ಅಷ್ಟಾವರಣಗಳಲ್ಲಿನ ಶ್ರದ್ಧೆ, ದಾಸೋಹದಲ್ಲಿ ಪ್ರಾಮಾಣಿಕತೆ - ಇವೆಲ್ಲ
ಅನಿವಾರ್ಯವಾಗುವುದು ಆ ಪರವನ್ನು ಸೇರಲು. ಅಷ್ಟರ ಮಟ್ಟಿಗೆ ಇವನೂ ಐಹಿಕತೆಯ ವಿರೋಧಿ. ನ್ಯಾಯವಾಗಿ
ಇವನಂತಹ ದಮನಕ್ಕೊಳಗಾದ ವರ್ಗದಿಂದ ಬಂದವನು ಅದಕ್ಕೆ ಕಾರಣವಾದ ಸಾಂಪ್ರದಾಯಿಕತೆಯ ಎಲ್ಲ
ಮಗ್ಗುಲುಗಳನ್ನೂ ಎಲ್ಲ ವಿವರಗಳೊಂದಿಗೆ ವಿರೋಧಿಸಬೇಕಾಗಿತ್ತು; ಏಕೆಂದರೆ ಈ ನಂಬಿಕೆಗಳೇ ದಲಿತರಿಗೆ
ಹಿಂದುಳಿದವರಿಗೆ ಆಮುಷ್ಮಿಕವಾದುದಿರಲಿ, ಐಹಿಕ ಸೌಖ್ಯವನ್ನೂ ನಿರಾಕರಿಸಿದ್ದು. ಯಾವುದರಿಂದ ತಾವು
ವಂಚಿತರೋ ಅದನ್ನು ಪಡೆಯುವ ಛಲವೇನೋ ಇವರಲ್ಲಿದೆ; ಆದರೆ ಅದು ಸಾಂಪ್ರದಾಯಿಕತೆ-ತಾರತಮ್ಯ ಎರಡನ್ನೂ
ಒಟ್ಟಾರೆ ಒಗೆದುಬಿಡುವ ರೀತಿಯಾಗಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಅದರ ಬದಲು ಮೇಲುವರ್ಗದವರ
ಹಳೆಯ ನಂಬಿಕೆಗಳನ್ನು ತಾವೂ ಹೊಂದುವ ಮೂಲಕ ತಮಗೆ ಅಲಭ್ಯವಾದ ಅಪೂರ್ವವೂ ಹೊಸತೂ ಆದ ಏನನ್ನೋ
ಪಡೆದೆವೆಂಬ ತೃಪ್ತಿ ಹಲವರಲ್ಲಿ ಮನೆಮಾಡಿತು. ಕ್ರಾಂತಿ ಮನೋಭಾವವನ್ನು ಕೊಂದುಬಿಡುವ ಶಕ್ತಿ
ಭಕ್ತಿಗಿದೆ. ಶರಣಾಗತಿಯ ಬಿಸುಪಿನಲ್ಲಿ ಕ್ರಾಂತಿಯ ಕಿಚ್ಚು ಆಪ್ಯಾಯಮಾನವಾಗಲಾರದು. ಆದ್ದರಿಂದಲೇ
ಯಾವ ಭಕ್ತಿ ಚಳುವಳಿಯೂ ಕ್ರಾಂತಿಯನ್ನು ಮಾಡಲಾರದು. ಧಾರ್ಮಿಕ ಹಿನ್ನೆಲೆಯ ಚಳುವಳಿಗಳ ಮಿತಿ ಇದೇ.
ಏಕೆಂದರೆ ಭಕ್ತಿಯ ನೆಲೆಯಲ್ಲಿ ಎಲ್ಲರನ್ನೂ ಒಂದು ಎನ್ನುವ ಪರಿಸ್ಥಿತಿಯೊಡನೆ, ಭಕ್ತಿಯನ್ನುಳಿದು
ಮಿಕ್ಕುದೆಲ್ಲವೂ ಅಮುಖ್ಯ ಎಂಬ ಭಾವನೆಯನ್ನು ಬೆಳೆಸಿಬಿಡುವುದರಿಂದ ಈ ಮಿತಿ ಉಂಟಾಗಬಹುದು. ಮಿಕ್ಕ
ಭಕ್ತಿ ಚಳುವಳಿಗಳಲ್ಲಿ ಆದುದು ಇದೇ. ಭಕ್ತಿಯ ಗಾಢತೆಯು ವ್ಯಕ್ತಿಯಲ್ಲಿನ ಆವೇಶವನ್ನು
ಕಡಿಮೆಗೊಳಿಸಿಬಿಡುತ್ತದೆ; ಯಾಕೆಂದರೆ ಶರಣಾಗತಿಯೇ ಭಕ್ತಿಯ ಮುಖ್ಯ ಲಕ್ಷಣವಲ್ಲವೇ? ಹೀಗಾಗಿ ಇಹದ ನಂತರದಕ್ಕೆ
ಬೆಲೆ ಬಂದು ಐಹಿಕವು ಹಿಂದೆ ಸರಿದು ಭಕ್ತಿ ಚಳುವಳಿಗಳಲ್ಲಿ ಸಾಮಾಜಿಕ ಅಸಮಾನತೆಯ ಬಗೆಗಿನ ಆಕ್ರೋಶ
ಇಲ್ಲವಾಗಿಬಿಡುತ್ತದೆ. ದೇವರ ಮುಂದೆ ಎಲ್ಲರೂ ಸಮಾನ ಎಂಬ ಭಾವನೆಯಿಂದಾಗಿ, ಆ ನೆಲೆಯಲ್ಲಿ
ಸಮಾನತೆಯನ್ನು ಸಾಧಿಸುವುದು ಸುಲಭವಾದ್ದರಿಂದ ಈ ದಾರಿ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಈ
ಸಮಾನತೆಯ ಸಾಧನೆ ಮಾಡಲು ಯಾರ ವಿರೋಧವನ್ನೂ ಕಟ್ಟಿಕೊಳ್ಳಬೇಕಾಗುವುದಿಲ್ಲ, ಯಾವ ನಿಷ್ಠುರತೆಯನ್ನೂ
ತಾಳಬೇಕಾಗುವುದಿಲ್ಲ. ಅಂದರೆ ಭಕ್ತಿ ಎಂಬುದು ಸಂಘರ್ಷರಹಿತ ಸಮಾನತೆಯ ನೆಲೆ.
ಆದರೆ ವಚನ ಚಳುವಳಿ, ಮೊದಲಲ್ಲಿಯೇ ಗಮನಿಸಿರುವಂತೆ, ಬರಿಯ ಭಕ್ತಿ
ಚಳುವಳಿಯಲ್ಲ; ಅಷ್ಟೇ ಆಗಿದ್ದಿದ್ದರೆ ಅದಕ್ಕೆ ಈಗಿರುವ ಮಹತ್ವ ಪ್ರಾಪ್ತವಾಗುತ್ತಿರಲಿಲ್ಲ. ಒಂದು
ನೆಲೆಯಲ್ಲಿ ಭಕ್ತಿಯನ್ನು ಒಪ್ಪಿಕೊಂಡರೂ, ಅದು ವಿಶಾಲ ನೆಲೆಯಲ್ಲಿ ಕ್ರಿಯಾಶೀಲವಾಯಿತು.
ಸಾಮಾಜಿಕತೆಯನ್ನೇ ಪ್ರಮುಖ ನೆಲಗಟ್ಟನ್ನಾಗಿ ಮಾಡಿಕೊಂಡಿತು. ಇದಕ್ಕೆ ಕಾರಣ ಅದರಲ್ಲಿ
ಭಾಗವಹಿಸಿದ್ದವರೆಲ್ಲ ಕೆಳವರ್ಗದವರು; ಅವರ ಅತೃಪ್ತಿ ಸಾಮಾಜಿಕ ಅಸಮಾನತೆಯಿಂದ ಉಂಟಾದದ್ದು. ಅದು
ಪ್ರಸ್ತುತವಾಗುವುದೇ ಅದರಲ್ಲಿ ಪಾಲುಗೊಂಡವರು ತುಳಿಯಲಟ್ಟವರು ಎಂಬ ಕಾರಣಕ್ಕಾಗಿ. ಹೀಗಾಗಿ
ವಚನಕಾರರಲ್ಲಿ ಭಕ್ತಿಯ ನಿರ್ಭರತೆಯೂ ಇದೆ; ಸಾಮಾಜಿಕ ಆಕ್ರೋಶವೂ ಇದೆ. ಯಾರ ವ್ಯಕ್ತಿತ್ವ
ಗಟ್ಟಿಯಾಗಿತ್ತೋ, ಯಾರು ಮನದಾಳದಲ್ಲಿ ಧಾರ್ಮಿಕ ಅಸಮಾನತೆಗೆ ಸಾಮಾಜಿಕ ಅಸಮಾನತೆಯೇ ತಳಹದಿ ಎಂಬ
ಭಾವನೆಯು ತಳವೂರಿತ್ತೋ ಅಂಥವರು ಈ ಎರಡನ್ನೂ ತೋರ್ಪಡಿಸಿದರು. ಉರಿಲಿಂಗಪೆದ್ದಿ ಇಂತಹ ಚೇತನದ
ಪ್ರತಿನಿಧಿ. ಅವನಲ್ಲಿ ನಿಷ್ಠೆಯೂ ಇದೆ, ಉಲ್ಲಂಘನೆಯೂ ಇದೆ; ಶರಣಾಗತಿಯೂ ಇದೆ, ಪ್ರತಿಭಟನೆಯೂ
ಇದೆ. ಅವನ ಆಕ್ರೋಶವೇನಿದ್ದರೂ ಸಾಮಾಜಿಕ ಅಸಮಾನತೆಗಳ ಬಗ್ಗೆ ಮತ್ತು ಅದಕ್ಕೆ ಕಾರಣವಾದ ಮಾನವ
ಹುನ್ನಾರಗಳ ವಿರುದ್ಧ, ಧಾರ್ಮಿಕತೆಯ ಸಾಂಸ್ಥಿಕ ಸ್ವರೂಪದ ವಿರುದ್ಧ. ಪೆದ್ದಿಯ ಆಕ್ರೋಶ ಇಂತಹ
ಬಗೆಯದು; ಆದರೆ ಅದಕ್ಕೆ ಮಿತಿಯೂ ಇದೆ. ಎಂದರೆ, ಅದು ಎಲ್ಲವನ್ನೂ ತಿರಸ್ಕರಿಸುವ ಪರಿಯದಲ್ಲ,
ವ್ಯವಸ್ಥೆಯಲ್ಲಿ ತನ್ನ ಸ್ಥಾನಕ್ಕಾಗಿ ಹೋರಾಡುವ ರೀತಿಯದು, ತನ್ನ ಮೇಲ್ಮೆಯನ್ನು ಸ್ಥಾಪಿಸುವ
ಬಗೆಯದು. ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಇರುವ ಏಕೈಕ ಪರಿಪೂರ್ಣ ಮಾರ್ಗವೆಂದರೆ,
ಇಡೀ ವ್ಯವಸ್ಥೆಯನ್ನೇ ತಿರಸ್ಕರಿಸುವುದು ಎಂದೇನೂ ಅವನು ಭಾವಿಸಲಿಲ್ಲ. ಬಸವ, ಅಲ್ಲಮರಂತಹವರು ತಾವಿದ್ದ
ವೈದಿಕ ವ್ಯವಸ್ಥೆಯ ಸಾಂಸ್ಥಿಕ ವಿವರಗಳನ್ನು, ಅಂದರೆ ಯಜ್ಞ-ಯಾಗಾದಿಗಳು, ದೇವಾಲಯ-ಪೂಜಾರಿ
ಪದ್ಧತಿ, ವರ್ಣ-ಜಾತಿ ಶ್ರೇಣೀಕರಣ, ಗಂಡು-ಹೆಣ್ಣು ಭೇದ ಮುಂತಾದವನ್ನು ತಿರಸ್ಕರಿಸಿದರು. ಆದರೆ
ಅವರೂ ಆ ಹೊತ್ತಿಗೆ ವೈದಿಕ ಪರಿವಲಯಕ್ಕೆ ಬಂದಿದ್ದ ಶಿವನನ್ನು ಅಲ್ಲಗಳೆಯಲಿಲ್ಲ, ಅಥವಾ ದೇವರ ಅಸ್ತಿತ್ವವನ್ನೇ
ನಿರಾಕರಿಸಲಿಲ್ಲ, ಇವೆಲ್ಲ ಕೇವಲ ಮಾನವನಿರ್ಮಿತವೆಂಬ ನಿಲವನ್ನು ತಾಳಲಿಲ್ಲ. ಆ ಕಾಲಕ್ಕೆ ಇದೆಲ್ಲ
ಆಗಬಹುದಾಗಿತ್ತೆಂದು ನಿರೀಕ್ಷಿಸುವುದೂ ಪ್ರಾಯಶಃ ಅವಾಸ್ತವವೇನೋ! ಅಲ್ಲದೆ ದೇವರ ನಿರಾಕರಣೆ
ಎಂಬುದು ಕೆಲವು ವ್ಯಕ್ತಿಗಳಿಗೆ ಸಾಧ್ಯವಾಗಬಹುದಾದರೂ, ಯಾವ ಕಾಲಕ್ಕೂ ಇಡೀ ಮಾನವ ಸಮುದಾಯಕ್ಕೆ
ಸಾಧ್ಯವೇ ಇಲ್ಲವೇನೋ. ಯಾಕೆಂದರೆ ವಿಜ್ಞಾನ-ತಂತ್ರಜ್ಞಾನಗಳು ಎಷ್ಟೇ ಆವಿಷ್ಕಾರಗೊಳ್ಳಲಿ, ನಿಸರ್ಗ
ತನ್ನ ನಿಗೂಢತೆಯನ್ನು ಪೂರ್ತಿಯಾಗಿ ಬಿಟ್ಟುಕೊಡಲಾರದು, ಹೀಗಾಗಿ ಅದರ ಹಿಂದೆ ಯಾವುದೋ
ಅತೀಂದ್ರಿಯಶಕ್ತಿ ಇದೆಯೆಂಬ ನಂಬಿಕೆಯನ್ನು ಮಾನವಸಂಕುಲ ಪೂರ್ತಿ ತೊರೆಯಲಾರದು, ಅದರ ಬಗೆಗಿನ
ಬೆರಗು ಭಯ-ಭಕ್ತಿಗಳಿಗೆ ಎಡೆ ಕೊಡುವುದು ಪ್ರಾಯಶಃ ನಿಲ್ಲಲಾರದು.
ವಚನ ಚಳುವಳಿಯು ಸಾಮಾಜಿಕ ನೆಲೆಯಲ್ಲಿ ಹೋರಾಡಿದ ಪಿಡುಗೆಂದರೆ ವೈದಿಕ
ಪರಿವಲಯದಲ್ಲಿ ಅತ್ಯಂತ ಪ್ರಬಲವಾಗಿದ್ದ ಜಾತಿಪದ್ಧತಿ. ಆ ಹೊತ್ತಿಗೆ ವರ್ಣವ್ಯವಸ್ಥೆಯು
ಸಂಪೂರ್ಣವಾಗಿ ಜಾತಿಶ್ರೇಣಿಯಾಗಿ ಮಾರ್ಪಟ್ಟಿತ್ತು. ಮೊದಲ ಮೂರು ವರ್ಣಗಳು ಹಾಗೆಯೇ ಜಾತಿರೂಪದಲ್ಲಿ
ಉಳಿದು, ಕೊನೆಯ ದ್ವಿಜೇತರ ವರ್ಗ ಹಲವಾರು ಜಾತಿಗಳಾಗಿ ಬದಲುಗೊಂಡಿತ್ತು. ಬ್ರಾಹ್ಮಣ ಜಾತಿಯಲ್ಲಿ
ಹುಟ್ಟಿದನೆಂದು ಪುರಾಣಗಳು ಸಾರುವ, ಮತ್ತು ತನ್ನ ಕೆಲವು ವಚನಗಳಲ್ಲಿಯೇ "ಸೆಟ್ಟಿಯೆಂಬೆನೆ
ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ? ಡೋಹರನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರವನೆಂದರೆ ಕೂಡಲಸಂಗಯ್ಯ ನಗುವನಯ್ಯಾ", "ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯ" ಮುಂತಾದ ಕಡೆಗಳಲ್ಲಿ ಹೇಳಿಕೊಂಡಿರುವ, ಬಸವಣ್ಣನು
ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಮಾತ್ರವಲ್ಲದೆ, ಜಾತಿಯು ವೃತ್ತಿಯ ಕಾರಣದಿಂದ
ಬೇರೆ ಬೇರೆಯಾಗಿರುವುದನ್ನು ಗುರುತಿಸುತ್ತಾನೆ.
ಹೊಲೆಗಂಡಲ್ಲದೆ ಪಿಂಡದ
ನೆಲೆಗಾಶ್ರಯವಿಲ್ಲ.
ಜಲ-ಬಿಂದುವಿನ ವ್ಯವಹಾರ
ಒಂದೇ,
ಆಶೆಯಾಮಿಷರೋಷಹರುಷವಿಷಯಾದಿಗಳೆಲ್ಲ
ಒಂದೇ.
ಏನನೋದಿ, ಏನ ಕೇಳಿ ಏನು
ಫಲ?
ಕುಲಜನೆಂಬುವುಕ್ಕೆ
ಆವುದು ದೃಷ್ಟ?
ಸಪ್ತಧಾತು ಸಮಂ ಪಿಂಡಂ
ಸಮಯೋನಿ ಸಮುದ್ಭವಂ|
ಆತ್ಮಜೀವಸಮಾಯುಕ್ತಂ
ವರ್ಣಾನಾಂ ಕಿಂ ಪ್ರಯೋಜನಂ||
ಎಂದುದಾಗಿ
ಕಾಸಿ ಕಮ್ಮಾರನಾದ, ಬೀಸಿ
ಮಡಿವಾಳನಾದ,
ಹಾಸನಿಕ್ಕಿ ಸಾಲಿಗಗನಾದ,
ವೇದವನೋದಿ ಹಾರುನಾದ.
ಕರ್ಣದಲ್ಲಿ
ಜನಿಸಿದವರುಂಟೆ ಜಗದೊಳಗೆ?ಖ
ಎಂಬ
ವಚನದಲ್ಲಿ ಜಾತಿಯ ಹುಟ್ಟು ಆರ್ಥಿಕಮೂಲವನ್ನು ಹೊಂದಿರುವುದನ್ನು ಆತ ಸ್ಪಷ್ಟವಾಗಿ
ವಿಶ್ಲೇಷಿಸುತ್ತಾನೆ. "ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?" ಎಂಬ ಮಾರ್ಮಿಕ
ಪ್ರಶ್ನೆಯ ಮೂಲಕ ಹಾಗೂ "ಜಲಬಿಂದುವಿನ ವ್ಯವಹಾರ ಒಂದೇ" ಮತ್ತು "ಆಶೆಯಾಮಿಷರೋಷಹರುಷವಿಷಯಾದಿಗಳೆಲ್ಲ
ಒಂದೇ" ಎಂದು ಹೇಳುವುದರ ಮೂಲಕ ಜೈವಿಕ ಪ್ರಕ್ರಿಯೆ ಎಲ್ಲರಿಗೂ ಸಮಾನವಾದುದು ಎಂಬ ಸತ್ಯವನ್ನು
ಬಿಚ್ಚಿಡುತ್ತಾನೆ. ಅಂದರೆ, ಬಸವಣ್ಣನ ಮಾತಿನಲ್ಲಿ ಜಾತಿಪದ್ಧತಿಗೆ ಯಾವುದೇ ಪಾವಿತ್ರ್ಯವಿಲ್ಲ,
ಅದು ಅನುಲ್ಲಂಘನೀಯವೇನಲ್ಲ ಎಂಬ ಭಾವನೆಯಿದೆ. ಇದೇ ಮಾತುಗಳ ನೆರಳು ಮಾದಾರ ಚೆನ್ನಯ್ಯನ ಒಂದು
ವಚನದಲ್ಲಿಯೂ ಸ್ಪಷ್ಟವಾಗಿದೆ: "ಶುಕ್ಲ ಶೋಣಿತ ಮಜ್ಜೆ ಮಾಂಸ ಹಸಿವು ತೃಷೆ ವ್ಯಸನ
ವಿಷಯಾದಿಗಳೊಂದೆ ಭೇದ; ಮಾಡುವ ಕೃಷಿ ವ್ಯವಸಾಯ ಹಲವಲ್ಲದೆ ತೋರುವ ತೋರಿಕೆ ಅರಿವಾತ್ಮನೊಂದೇ ಭೇದ.
ಆವ ಕುಲವಾದಡೂ ಅರಿದಲ್ಲಿಯೇ ಪರತತ್ವಭಾವಿ". ಬೊಂತಾದೇವಿಯು "ಊರ ಒಳಗಣ ಬಯಲು, ಊರ
ಹೊರಗಣ ಬಯಲೆಂದುಂಟೆ? ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಯ ಬಯಲೆಂದುಂಟೆ?" ಎಂದು
ಕೇಳುತ್ತಾಳೆ. ಮಾದಾರ ಚೆನ್ನಯ್ಯ ದಲಿತ, ಬೊಂತಾದೇವಿ, ಪುರಾಣಗಳ ಪ್ರಕಾರ, ಮೇಲುವರ್ಗದವಳು. ಆದರೂ
ಇವರಿಬ್ಬರ ಮಾತುಗಳಲ್ಲಿ ಜಾತಿಯು ಯಾದೃಚ್ಛಿಕವೆಂಬ ಭಾವನೆಯಿದೆ.
ಇತರ ಅನೇಕ ಮಂದಿ ವಚನಕಾರರೂ ಜಾತಿ ತಾರತಮ್ಯವನ್ನು
ನಿರಾಕರಿಸುತ್ತಾರೆ; ಆದರೆ ಬಹುತೇಕ, ದಲಿತ ವಚನಕಾರರೂ ಸೇರಿದಂತೆ, ಇಡೀ ಜಾತಿ ವ್ಯವಸ್ಥೆಯನ್ನು
ಅಲ್ಲಗಳೆಯುವವರು ಕಡಿಮೆ. ಅನೇಕರು ಜಾತಿಗಳನ್ನು ಪುನರ್ ವ್ಯಾಖ್ಯಾನಕ್ಕೊಳಪಡಿಸುತ್ತಾರೆ; ಅಂದರೆ
ಜಾತಿ ಪದ್ಧತಿ ಅನಿವಾರ್ಯ, ಅಥವಾ ಅಪರಿಹಾರ್ಯ; ಆದರೆ ಅದನ್ನು ನೋಡುವ ದೃಷ್ಟಿ ಬೇರಾಗಬೇಕು ಎಂಬ
ಆಶಯ ಇವರಲ್ಲಿದ್ದಂತಿದೆ. ಮಾದಾರ ಚೆನ್ನಯ್ಯನದೇ ಮತ್ತೊಂದು ವಚನವನ್ನು ನೋಡಿ:
ವೇದಶಾಸ್ತ್ರಕ್ಕೆ
ಹಾರುವನಾಗಿ, ವೀರವಿತರಣಕ್ಕೆ ಕ್ಷತ್ರಿಯನಾಗಿ
ಸರ್ವವನಾರೈದು
ನೋಡುವಲ್ಲಿ ವೈಶ್ಯನಾಗಿ
ವ್ಯಾಪಾರದೊಳಗಾಗಿ ಕೃಷಿಯ
ಮಾಡುವುದಕ್ಕೆ ಶೂದ್ರನಾಗಿ -
ಇಂತೀ ಜಾತಿಗೋತ್ರದೊಳಗಾದ
ನೀಚಶ್ರೇಷ್ಠವೆಂಬ ಎರಡು
ಕುಲವಲ್ಲದೆ
ಹೊಲೆ ಹದಿನೆಂಟು
ಜಾತಿಯೆಂಬ ಕುಲವಿಲ್ಲ.
ಬ್ರಹ್ಮವನರಿದಲ್ಲಿ
ಬ್ರಾಹ್ಮಣ,
ಸರ್ವಜೀವಹಂತಕರ್ಮಕ್ಕೊಳಗಾದಲ್ಲಿ
ಸಮಗಾರ -
ಈ
ಉಭಯವನರಿದು ಮರೆಯಲಿಲ್ಲ.
ಜಾತಿವಿಂಗಡಣೆ
ಸರಿ, ಆದರೆ ಅದು ಹುಟ್ಟಿನಿಂದ ಆದುದಾಗಿರದೆ, ಮನೋಭಾವಾವಲಂಬಿಯಾಗಿರಬೇಕು ಎಂಬ ಭಾವನೆಯಿದ್ದಂತಿದೆ.
ದಲಿತರೂ ಹೀಗೆ ಹೇಳುವುದು ಅಚ್ಚರಿಯುಂಟುಮಾಡುತ್ತದೆ.
ಉರಿಲಿಂಗಪೆದ್ದಿಯೂ ಇದಕ್ಕೆ ಹೊರತಾಗಿರುವಂತೆ ಕಾಣುವುದಿಲ್ಲ. ಅವನ
ಗರಿಷ್ಠ ಗಮನ ಇರುವುದು ಬ್ರಾಹ್ಮಣ-ಅಂತ್ಯಜ ವ್ಯತ್ಯಾಸದ ಮೇಲೆ. ಇತರ ಜಾತಿಗಳ ಬಗ್ಗೆ ಅವನು
ಅಷ್ಟಾಗಿ ತಲೆಕೆಡಿಸಿಕೊಳ್ಳದೆ, ಬ್ರಾಹ್ಮಣನೊಡನೆ ತನ್ನ ಸಮಾನತೆಯನ್ನು ಸ್ಥಾಪಿಸುವ ಕಡೆಗೆ ಅವನ
ದೃಷ್ಟಿಯೆಲ್ಲ ನೆಟ್ಟಂತಿದೆ. ಜಾತಿಗಳ ಮೂಲವನ್ನು ಹುಟ್ಟಿನಲ್ಲಿ ಕಾಣುವುದಕ್ಕೂ ಅವನ
ಅಭ್ಯಂತರವಿಲ್ಲವೇನೋ ಎಂಬ ಅನುಮಾನ ಬರುವ ಮಾತುಗಳನ್ನು ಆಡುತ್ತಾನೆ ಅವನು. ಅವನ ಒಂದು ವಚನದ ಆರಂಭದ
ಸಾಲುಗಳು ಹೀಗಿವೆ:
ವಸಿಷ್ಠಗೋತ್ರದಲ್ಲಿ
ಹುಟ್ಟಿದವನು ವಸಿಷ್ಠಗೋತ್ರದವನೆಂಬಂತೆ,
ಭಾರದ್ವಾಜ
ಗೋತ್ರದಲ್ಲಿ ಹುಟ್ಟಿದವನು ಭಾರದ್ವಾಜಗೋತ್ರದವನೆಂಬಂತೆ,
ಕಾಶ್ಯಪ
ಗೋತ್ರದಲ್ಲಿ ಹುಟ್ಟಿದವನು ಕಾಶ್ಯಪ ಗೋತ್ರದವನೆಂಬಂತೆ,
ವಿಶ್ವಾಮಿತ್ರ
ಗೋತ್ರದಲ್ಲಿ ಹುಟ್ಟಿದವನು ವಿಶ್ವಾಮಿತ್ರಗೋತ್ರದವನೆಂಬಂತೆ,
ಆ ಪರಿ
ಅದಾವ ಗೋತ್ರದಲ್ಲಿ ಆವಾವ ಋಷಿಗಳ ವಂಶದಲ್ಲಿ ಜನಿಸಿದವರನು
ಆ
ಗೋತ್ರ, ಆ ಸಂತತಿ, ಆ ಸುತನು
ಎಂಬುದು
ಉಪಚರ್ಯವೇ? ಅಸತ್ಯವೇ ಹೇಳಿರಣ್ಣಾ?
ಅದು
ತಾತ್ಪರ್ಯ, ಅದು ಸತ್ಯ.
ಆ ಪರಿ
ಬ್ರಾಹ್ಮಣನ ಮಗ ಬ್ರಾಹ್ಮಣನು, ಕ್ಷತ್ರಿಯನ ಮಗ ಕ್ಷತ್ರಿಯನು
ವೈಶ್ಯನ
ಮಗ ವೈಶ್ಯನು, ಶೂದ್ರನ ಮಗ ಶೂದ್ರನು
ಆ ಪರಿ
ತಪ್ಪದು.
ದಿಟ
ದಿಟ ವಿಚಾರಿಸಿ ನೋಡಿರೆ
ಅದು
ಹೇಗೆಂದಡೆ ಶ್ರುತಿ:
'ಮಹಾಬ್ರಾಹ್ಮಣಮೀಶಾನಂ'
ಎಂದುದಾಗಿ
ಮತ್ತಂ 'ವಿರೂಪಾಕ್ಷಂ
ದ್ವಿಜೋತ್ತಮಂ' ಎಂದುದಾಗಿ
ಮಹಾಬ್ರಾಹ್ಮಣನೇ
ಮಹಾದೇವನು.
ಇದಕ್ಕೆ
ಮತ್ತೆ ಶಿವರಹಸ್ಯದಲ್ಲಿ
'ಗುರುದೇವೋ
ಮಹಾದೇವೋ ಗುರುದೇವಸ್ಸದಾಶಿವಃ|
ಗುರುದೇವಃ
ಪರಂ ತತ್ತ್ವಂ ತಸ್ಮೈ ಶ್ರೀಗುರವೇ ನಮಃ||'
ಎಂದುದಾಗಿ
ಮಹಾದೇವನೇ
ಶ್ರೀಗುರು ಕಾಣಿರಣ್ಣಾ.
ಆ ಶ್ರೀ
ಗುರುವಿನ ಕರಕಮಲದಲ್ಲಿ ಉದ್ಭವಿಸಿದ
ತಚ್ಛಿಷ್ಯನೇ
ಮಹಾಬ್ರಾಹ್ಮಣನು, ಇಂತೆಂಬುದು ಹುಸಿಯಲ್ಲ.
ಜಾತಿ
ಅಜಾತಿ ಎಂದು ಅಷ್ಟಾದಶಜಾತಿಯೊಳಗೆ ಇಕ್ಕಲಾಗದು,
ಅಷ್ಟಾದಶಜಾತಿಯೊಳಗೊಂದೂ
ಭಾವಿಸಲಾಗದು,
ಆ
ಮಹಿಮನೇ ಸತ್ಕುಲಜನು.
ಇದಕೆ
ಮತ್ತಂ
'ಬ್ರಹ್ಮಚರತೀತಿ
ಬ್ರಾಹ್ಮಣಃ' ಎಂದುದಾಗಿ
ಆ
ಮಹಾಮಹಿಮನು ಬ್ರಹ್ಮವ ಆಚರಿಸುವವನಾಗಿ ಬ್ರಾಹ್ಮಣ.
ಹೀಗೆ
ಬ್ರಹ್ಮವನ್ನಾಚರಿಸುವವನು ಬ್ರಾಹ್ಮಣ ಎಂದು ಮರುವ್ಯಾಖ್ಯಾನಿಸುವ ಉರಿಲಿಂಗಪೆದ್ದಿ ಆ ವಚನದಲ್ಲಿಯೇ
ಮುಂದೆ ಆ ಭಾವನೆಯನ್ನು ಪೃಥಕ್ಕರಿಸಲು ವಿವಿಧ ಧಾರ್ಮಿಕ ಗ್ರಂಥಗಳಿಂದ ಅನೇಕ ಉಲ್ಲೇಖಗಳನ್ನು
ನೀಡುತ್ತಾನೆ. ಮುಂದೆ "ಶಿವಭಕ್ತನೇ ಕುಲಜನು, ಶಿವಭಕ್ತನೇ ಉತ್ತಮನು. ಇಂತಹ ಶಿವಭಕ್ತನನು ಜಾತಿವಿಜಾತಿ
ಎಂದು ಭಾವಿಸಿದಡೆ, ಮರ್ತ್ಯ ಎಂದು ಭಾವಿಸಿದಡೆ ನರಕ ತಪ್ಪದು" ಎನ್ನುತ್ತಾನೆ. ಕೊನೆಗೆ
"ಮರ್ತ್ಯವನ್ಮನುತೇ ಯಸ್ತು ಶಿವನಿಷ್ಠಂ ದ್ವಿಜಂ ನರಃ| ಕುಂಭೀಪಾಕೇ ತು ಪತತಿ ನರಕೇ
ಕಾಲಮಕ್ಷಯಂ||' ಎಂದುದಾಗಿ, ಇದು ಕಾರಣ ಅಷ್ಟಾದಶವಿದ್ಯಂಗಳನು ವಿಚಾರಿಸಿ ತಿಳಿದು ನೋಡಿದಡೆ
ಋಷಿಪುತ್ರನ ಋಷಿ ಎಂಬಂತೆ ಶ್ರೀಗುರುಪುತ್ರನನು ಶ್ರೀಗುರು ಎಂಬುದಯ್ಯಾ. ಅ ಮಹಾಮಹಿಮನ ದರ್ಶನವ
ಮಾಡಿ ಪಾದೋದಕ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ" ಎನ್ನುತ್ತಾನೆ. ಎಂದರೆ ಸಾಮಾನ್ಯ
ಮನುಷ್ಯರಲ್ಲಿ ಜಾತಿವಿಭೇದ ಮಾಡುವುದನ್ನು ಅಲ್ಲಗಳೆಯದೆ, 'ಮಹಾಬ್ರಾಹ್ಮಣ'ನಾದ ಮಹಾದೇವನೆಂಬ
ಶ್ರೀಗುರುವಿನ ಕರಕಮಲಸಂಜಾತನಾದವನು ಮರ್ತ್ಯನಾಗಿ ಉಳಿಯುವುದಿಲ್ಲ, ಆದ್ದರಿಂದ ಅಂತಹವರಲ್ಲಿ ಈ
ವಿಂಗಡಣೆ ಮಾಡಬಾರದು ಎಂದು ಉರಿಲಿಂಗಪೆದ್ದಿಯು ಇಲ್ಲಿ ವಾದಿಸುತ್ತಿರುವಂತೆ ಕಾಣುತ್ತದೆ. ಸಾಮಾಜಿಕ
ನೆಲೆಯಲ್ಲಿ ಅಂತ್ಯಜನಾಗಿ ಹುಟ್ಟಿದರೂ, ಸಾಧನೆಯನ್ನು ಮಾಡಿದರೆ ಜಾತಿಭೇದ ಅಂಟಲಾರದು; ಅವನೂ
ಬ್ರಾಹ್ಮಣನಿಗೆ ಸಮಾನನಾಗುತ್ತಾನೆ ಎಂಬುದು ಅವನ ಮತಾರ್ಥವಿದ್ದಂತಿದೆ.
ಉರಿಲಿಂಗಪೆದ್ದಿಯ
ಜಗಳ ಇರುವುದು ಬ್ರಾಹ್ಮಣನ ಜೊತೆಯಲ್ಲಿ. ಹಿಂದೆಯೇ ನೋಡಿದಂತೆ, ಮಹಾದೇವನೆಂಬ ಗುರುವಿನ
ಕರಕಮಲಸಂಜಾತನೇ ಮಹಾಬ್ರಾಹ್ಮಣ. ಆದರೆ ವೇದಾದಿಗಳನ್ನು ದೈವವೆಂಬುವವರ ಬಗೆ ಅವನಿಗೆ ಮಹಾ ಆಕ್ರೋಶ ಈ
ಕೆಳಗಣ ರ್ದೀ ವಚನವನ್ನು ಪರಿಶೀಲಿಸಿ:
ವೇದಂಗಳು
ದೈವವೆಂಬ ವಿಪ್ರರಂತಹ ಮರುಳರುಂಟೆ ತ್ರಿಜಗದಲ್ಲಿ?
ವೇದವೆಂಬುದೊಂದು
ಸಾಧಕ ಸಂಪತ್ತು.
ವೇದಂಗಳು
ಶ್ವೇತ, ಕೃಷ್ಣ, ಅಗಸ್ತ್ಯ, ವಿಶ್ವಾಮಿತ್ರಮುನಿಗಳಿಂದಾದವು.
ಶಬ್ದಗಾಂಭೀರ್ಯ
ಶ್ರುತಿಕೋಟಿ ಚರಣಕಮಲವೆಂಬ
ಲಿಂಗದ
ಕೈಯಲ್ಲಿ ಕಲಿತ ವೇದಂಗಳು
ಅಜ್ಞಾನಸಂಗವಾಗಿ
ಅಗೋಚರವಾಗಿ ನುಡಿದವು.
ಋಗ್ವೇದ
– 'ನಾಹಂಕಾರೋ ಬ್ರಹ್ಮತೇಜಃ'
ಎಂದುದಾಗಿ,
ಯಜುರ್ವೇದ
– 'ನಾಹಂಕಾರೋ
ಲಕ್ಷ್ಮೀಪತಿರ್ವಿಷ್ಣುತೇಜಃ' ಎಂದುದಾಗಿ,
ಸಾಮವೇದ
– 'ನಾಹಂ ದೇವೋ ರುದ್ರತೇಜಃ'
ಎಂದುದಾಗಿ,
ಅಥರ್ವಣವೇದ
– 'ನಾಹಂ ಸ್ಥಲಂ' ಎಂದುದಾಗಿ,
ಕುಲಮದದಿಂದ
ಬ್ರಹ್ಮ ಕೆಟ್ಟ, ಬಲಮದದಿಂದ ವಿಷ್ಣು ಕೆಟ್ಟ,
ದೈವಮದದಿಂದ
ರುದ್ರ ಕೆಟ್ಟ, ಛಲಮದದಿಂದ ಇಂದ್ರ ಕೆಟ್ಟ.
ಇಂತೀ
ನಾಲ್ಕು ಶ್ರುತಿಗಳು ತಮ್ಮ ಗರ್ವದಿಂದ
ನೂಂಕಿಸಿಕೊಂಡವು
ಶಿವನ ಅರಮನೆಯ ಬಾಗಿಲಲ್ಲಿ.
ಮತ್ತಾ
ಚತುರ್ವೇದಂಗಳು ಬಂದು
ಲಿಂಗದ
ಚತುರ್ದಿಶೆಯಲ್ಲಿ ಓಲೈಸಿ,
ಕೈಮುಗಿದುಕೊಂಡು
ಹೊಗಳುತ್ತಿದ್ದವು.
ಅದೆಂತೆಂದಡೆ
ಶ್ರುತಿ:
'ಓಂ
ಜಯತತ್ತ್ವಾನಾಂ ಪುರುಷಮೇರು ಕಾಮ್ಯಾನಾಂ
ಪುಣ್ಯಜಪಧ್ಯಾನಾನಾಂ
ಸರ್ವಜನವಿನಾಶಿನಾಂ
ಆದಿ
ಅನಾದಿ ಪಿತ್ರೂಣಾಂ ಅಜಕೋಟಿಸಹಸ್ರವಂದ್ಯಾನಾಂ
ದೇವಕೋಟಿಚರಣಕಮಲಾನಾಂ'
ಎಂದು
ವೇದಂಗಳು
ದೇವರ ಚರಣದ ಕುರುಹ ಕಾಣವು.
ಆದಿಯಲ್ಲಿ
ನಮ್ಮ ಪುರಾತನರು ವೇದವನೋದಿದರೆ? ಇಲ್ಲ.
ಕಲ್ಲಲಿಟ್ಟರು.
ಕಾಲಲೊದೆದರು,
ಬಿಲ್ವಪತ್ರದ
ಮರದ ಕೆಳಗೆ ಲಿಂಗವಂ ಪುಟ್ಟಿಸಿ ನಿಷ್ಠೆಯ ಪಡೆದರು,
ಮನೆಯ
ಬಾಗಿಲ ಕಾಯಿಸಿಕೊಂಡರು,
ಆಡಿಸಿದರು,
ಅಡಗಿಸಿದರು,
ಓಡಿದ
ಲಿಂಗವಂ ತಂದು ಪ್ರತಿಷ್ಠೆಯಂ ಮಾಡಿದರು.
ಇಂತಪ್ಪ
ದೃಷ್ಟವ ಸಾಧಿಸಿದರು ನಮ್ಮ ಪುರಾತನರು.
ನಿಮ್ಮವರು
ಓದವನೋದಿದನೆಂಬುದನರಿದು.
ಅವರನೊಲ್ಲದೆ
ಬಿಟ್ಟ ಕಾಣಾ
ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರ.
ವೇದಗಳನ್ನೇ
ದೈವವೆಂದು ಪೂಜಿಸುವ ವಿಪ್ರರನ್ನಿಲ್ಲಿ ಹಿಗಾಮುಗ್ಗಾ ಖಂಡಿಸಲಾಗಿದೆ. ಆದರೆ ಆ ಖಂಡನೆಯಲ್ಲಿ
ವಾಸ್ತವ ದೃಷ್ಟಿ ಮಡುಗಟ್ಟಿದೆ; ವೇದ ಎಂಬುದು ದೈವವನ್ನು ಅರಿಯಲು ಸಾಧನ ಸಂಪತ್ತೇ ಹೊರತು, ತಾನೇ ದೈವವಲ್ಲ
ಎಂಬುದು ಅವನ ವಾದ. ಜೊತೆಗೆ ಅವೆಲ್ಲ ಅಪೌರುಷೇಯವಲ್ಲ, ಮಾನವನಿರ್ಮಿತವಾದವು, ಅವುಗಳನ್ನು ಋಷಿಗಳು
ರಚಿಸಿದರು. ಇಲ್ಲಿ ಶಿವ ಮತ್ತು ರುದ್ರರನ್ನು ಬೇರೆಯಾಗಿ ನೋಡಲಾಗಿದೆ; ವೇದಗಳಲ್ಲಿ ಉಲ್ಲಿಖಿತನಾದ
ರುದ್ರ ಒಂದು ಸಾಮಾನ್ಯ ದೈವ, ಆದರೆ ಶಿವ ಆತ್ಯಂತಿಕ ಶಕ್ತಿ. ಅಲ್ಲದೆ, ಶಿವನನ್ನು ಸಾಧಿಸಿದ
ಪುರಾತನರು ವೇದಗಳನ್ನು ಓದಿಯೇ ಇರಲಿಲ್ಲ, ಅಷ್ಟೇ ಅಲ್ಲ, ಅವುಗಳನ್ನು ಹೀನಾಯವಾಗಿ ನಡೆಸಿಕೊಂಡರು.
ತಾವೇ ಲಿಂಗವನ್ನು ಸೃಷ್ಟಿಸಿಕೊಂಡು ನಿಷ್ಠೆಯನ್ನು ಸಾಧಿಸಿದರು. ಲಿಂಗ ವೇದವನೋದಿದವರನ್ನು ತೊರೆದು
ಪುರಾತನರಿಗೆ ಒಲಿಯಿತು ಎಂಬಂತಹ ಅರ್ಥ ಈ ವಚನದಲ್ಲಿದೆ. ವೇದವಿದರಾದ ಬ್ರಾಹ್ಮಣರಿಗಿಂತ ಪುರಾತನರು
ಮಿಗಿಲೆಂಬ ಭಾವನೆ ಇಲ್ಲಿ ವ್ಯಕ್ತವಾಗಿದೆ. ಸಾಂಪ್ರದಾಯಿಕವಾದ ವೈದಿಕ ನಂಬಿಕೆಯನ್ನು ಈ ವಚನದಲ್ಲಿ
ಅತ್ಯಂತ ನಿಷ್ಠುರವಾಕ್ಕುಗಳಲ್ಲಿ ಖಂಡಿಸಿರುವುದನ್ನು ಕಾಣಬಹುದು.
ಮೇಲು ಕುಲ ಎಂದರೆ ಯಾವುದು ಎಂಬುದರ ಬಗ್ಗೆ ಒಂದೆಡೆ ಪೆದ್ದಿ ವಿಶ್ಲೇಷಣೆ
ಮಾಡುತ್ತಾನೆ. ಅವನಿಗೆ ಋಗ್ವೇದದ ಪುರುಷಸೂಕ್ತದಲ್ಲಿ ನಂಬಿಕೆ ಇದ್ದಂತಿದೆ; ಅದನ್ನನುಸರಿಸಿ ತನ್ನ
ವಾದವನ್ನವನು ಒಂದೆಡೆ ಈ ರೀತಿ ಮುಂದಿಡುತ್ತಾನೆ:
ಋಷಿಗಳ ಶಿವಾರ್ಚನೆಯ
ವಿಶೇಷವಂತಹ
ಫಲವ ಕೇಳಿರಣ್ಣಾ:
ಕೀಳುಗುಲದ ಋಷಿಗಳ
ಕುಲನಾಮಂಗಳ ತೊಡೆದು
ಮೇಲುಗುಲನಾಮವ
ಕೇಳಿರಣ್ಣಾ,
ಅದು ಹೇಗೆಂದಡೆ:
ಮುಖದಿಂದುತ್ಪತ್ಯವಾದ
ಬ್ರಾಹ್ಮಣನು
ಆ ಋಷಿಗಳ ಶಾಖೆಯಾದನು,
ಅವರ ಗೋತ್ರವಾದನು,
ಶಿವಾಚಾರ ವಿಶೇಷವೋ, ಕುಲ
ವಿಶೇಷವೋ? ಹೇಳಿರಣ್ಣಾ;
'ವರ್ಣಾನಾಂ ಬ್ರಾಹ್ಮಣೋ
ಗುರುಃ'
ಎಂಬ ಕ್ರೂರಹೃದಯರ ಮಾತ
ಕೇಳಲಾಗದು.
ಹೋಹೋ ಶಿವನ ಮುಖದಿಂದ
ಹುಟ್ಟಿ
ಉತ್ತಮವಹಂತಹ
ಬ್ರಾಹ್ಮಣಧರ್ಮದಲ್ಲಿ
ಜನಿಸಿದಂತಹ ವರ್ಣಿಗಳು
ಕ್ಷತ್ರಿಯನ ಭಜಿಸ
ಹೇಳಿತ್ತೇ ಈ ವೇದ?
'ಶಿವ ಏಕೋ ಧ್ಯೇಯಃ
ಶಿವಂಕರಃ ಸರ್ವಮನ್ಪರಿತ್ಯಜೇತ್'
ಎಂದುದಾಗಿ -
ಶಿವನ ಧ್ಯಾನಿಸಿ ಇತರ
ದೇವತೆಗಳ ಬಿಡಹೇಳಿತ್ತಲ್ಲವೇ?
ಅದಂತಿರಲಿ,
ಬಡಗಿ ಮಾಚಲದೇವಿಯ
ಕುಲಜೆಯ ಮಾಡಿಹೆವೆಂದು
ಸತ್ತ ಕಪಿಲೆಯ ಕಡಿದು
ಹಂಚಿ ತಿನ್ನ ಹೇಳಿತ್ತೇ ವೇದ?
ಆಗದು ಅವದಿರ ಸಂಗ.
ಅಧಮರ ವರ್ಣಾಶ್ರಮಹೀನರ
ಕರ್ಮವ ಕಳೆದೆಹೆವೆಂದು
ದತ್ತಪುತ್ರರಾಗಿ
ಹೊರಸಿನಡಿಯಲಿ ನುಸುಳ
ಹೇಳಿತ್ತೇ ಆ ವೇದ?
ಅದಂತಿರಲಿ,
ಭುಂಜಿಸಿ
ಮುಕ್ತಿಯನಿತ್ತಿಹೆವೆಂದಡೆ
ಹಲ ಕೆಲ ಕಾಲ ವಂದಿಸಿದ
ಗೌತಮಂಗೆ
ಬಾರದೇ ಅಂದು ಗೋವಧೆ?
ಅದಂತಿರಲಿ,
ಬ್ರಾಹ್ಮಣರೆ ದೈವವೆಂದು
ದಾನಾದಿಗಳ ಮಾಡಿದ
ಕರ್ಣನ ಶಿರಕವಚ ಹೋಗದೆ
ಜಗವರಿಯೆ?
ವಿಷ್ಣುವವೆಂದರ್ಚಿಸಿದ
ಬಲಿ ದಿಗ್ಬಂಧನಕ್ಕೆ ಬಾರನೆ
ಮೂಜಗವರಿಯೆ?
ಶಿಬಿಯ ಮಾಂಸವ ಕೊಂಡು
ಇತ್ತ ಮುಕ್ತಿಯ ಕೇಳಿರಣ್ಣಾ:
ಅವಂಗೆ ಬಂದ ವಿಧಿಯ
ಹೇಳಲಾಗದು.
ಅದಂತಿರಲಿ,
ಶಿವ ಭಕ್ತರಿಗೆ
ಪರಮಾಣುವಿನಷ್ಟು ಕಾಂಚನವೀಯೆ
ಅಣಿಮಾದ್ಯಷ್ಟ ಮಹೈಶ್ವರ್ಯವನೀವರು,
ಮೇಲೆ ಮುಕ್ತಿಯಹುದು,
'ಸಕೃತ್ ಲಿಂಗಾರ್ಚಕೇ
ದತ್ವಾ ಸುವರ್ಣಂ ಚಾಣುಮಾತ್ರಕಂ|
ಭೂಲೋಕಾಧಿರ್ಭೂತ್ವಾ ಶಿವ
ಸಾಯುಜ್ಯಮಾಪ್ನುಯಾತ್||'
ಎಂದುದಾಗಿ,
ಅದಲ್ಲದೆ ಮತ್ತೆ
ದಾನಪರಿಗ್ರಹಂಗಳಂ ಕೊಂಡ
ಕೆಲಬರ ಮುಕ್ತರ ಮಾಡಿ
ಶಿವಲೋಕಕ್ಕೆ
ಕೊಂಡೊಯ್ದುದುಂಟಾದಡೆ ಹೇಳಿರಣ್ಣಾ.
'ನಿತ್ಯಂ ಲಿಂಗಾರ್ಚನಂ
ಯಸ್ಯ ನಿತ್ಯಂ ಜಂಗಮಪೂಜನಂ|
ನಿತ್ಯಂ ಗುರುಪದಧ್ಯಾನಂ
ನಿತ್ಯಂ ನಿತ್ಯಂ ನಸಂಶಯಃ||'
ಇದು ಕಾರಣ,
ಉರಿಲಿಂಗಪೆದ್ದಿ
ವಿಶ್ವೇಶ್ವರಯ್ಯನ ಶರಣಮಹಾತ್ಮೆಯನ್ನು
ಯಜುರ್ವೇದ ಸಾಕ್ಷಿಯಾಗಿ
ಹೇಳುವೆ
ಕಾಶಿಯ ಕಾಂಡದಲ್ಲಿ.
ವಚನಪ್ರಾರಂಭದಲ್ಲಯೇ
ಬ್ರಾಹ್ಮಣನು "ಮುಖದಿಂದುತ್ಪತ್ಯವಾದವನು" ಎನ್ನುತ್ತಾನೆ. ಇದು
"ಮುಖಮಾಸೀದ್" ಎಂಬ ಪುರುಷಸೂಕ್ತದ ಸಾಲಿನ ಅನುರಣನದಂತೆ ಕಾಣಿಸುತ್ತದೆ; ಅಂದರೆ
ವಚನಕಾರನಿಗೆ ವರ್ಣಗಳ ಉತ್ಪತ್ತಿಯ ಬಗೆಗೆ ಸಾಂಪ್ರದಾಯಿಕ ನಂಬಿಕೆಯಲ್ಲಿ ಶ್ರದ್ಧೆಯಿತ್ತೇ ಎಂಬ
ಸಂಶಯ ನಮಗೆದುರಾಗುತ್ತದೆ. ಆದರೆ ಇದೇ ವಚನದ ಮುಂದಿನ ಸಾಲುಗಳಲ್ಲಿ "ಹೋಹೋ ಶಿವನ ಮುಖದಿಂದ
ಹುಟ್ಟಿ ಉತ್ತಮವಹಂತಹ ಬ್ರಾಹ್ಮಣಧರ್ಮದಲ್ಲಿ" ಎಂದೂ ಹೇಳುವುದರಿಂದ ಬ್ರಾಹ್ಮಣನು ಮೂಡಿ ಬಂದ
ಮುಖ ಬ್ರಹ್ಮನದ್ದಲ್ಲ, ಶಿವನದು ಎಂಬ ಅಭಿಪ್ರಾಯವಿದ್ದಂತಿದೆ. ಆದ್ದರಿಂದಲೇ, ಶಿವನ ಮುಖದಿಂದ
ಮೂಡಿದ ಬ್ರಾಹ್ಮಣನಿಗೆ ಶಿವಾಚಾರ ಮುಖ್ಯವೋ ಕುಲ ಮುಖ್ಯವೋ ಎಂದು ಪ್ರಶ್ನಿಸುತ್ತಾನೆ. ಇವೆರಡೂ
ಬೇರೆಯಾದವೇ? ಹೇಗೆ ಎಂಬ ಪ್ರಶ್ನೆಯೇಳುತ್ತದೆ. ಹೀಗೆ ಶಿವನ ಮುಖದಿಂದ ಹುಟ್ಟಿ "ಉತ್ತಮ"ವಾದ
ಬ್ರಾಹಣನು ಕ್ಷತ್ರಿಯನನ್ನು ಪೂಜಿಸುವುದು ಸರಿಯೇ? ಎಂದೂ ಪ್ರಶ್ನಿಸುತ್ತಾನೆ. (ತನಗಿಂತ
ಕೀಳುವರ್ಣಿಯಾದ ಕ್ಷತ್ರಿಯನನ್ನು ಬ್ರಾಹ್ಮಣ ಪೂಜಿಸಬಹುದೇ ಎಂದು ಗೇಲಿ ಮಾಡಿದರೆ
"ಚತುರ್ವರ್ಣಾತೀತನೇ ವೀರಶೈವ ನೋಡಾ" ಎಂಬ ಸಿದ್ಧರಾಮನ ಮಾತಿನ ಗತಿಯೇನು?)
ವಿಷ್ಣುವನ್ನು ಕ್ಷತ್ರಿಯ ಎಂದು ಕರೆದಿರುವಂತಿದೆ. ಅದು ಹೇಗೆ? ವಿಷ್ಣುವಿನ ಹತ್ತು ಅವತಾರಗಳಲ್ಲಿ
ಶ್ರೀರಾಮನದು ಮಾತ್ರ ಕ್ಷತ್ರಿಯಸಂತತಿ. ಹಾಗಾಗಿ ಈ ಮಾತು ಏನನ್ನು ಸೂಚಸುತ್ತಿದೆ? ಈ ವಚನದಲ್ಲಿ
ಶಿವ-ವಿಷ್ಣುಗಳ ನಡುವಣ ಹೋಲಿಕೆ ಇರುವುದು ನಿಜ, ಹಾಗಾಗಿ ಕ್ಷತ್ರಿಯ ವಿಷ್ಣುವನ್ನು
ಸೂಚಿಸುತ್ತಿರಲು ಸಾಕು. ಅಲ್ಲದೆ, ಬ್ರಾಹ್ಮಣನು ವೇದಗಳಿಗನುಸಾರವಾಗಿ ನಡೆಯವವನಾದರೆ ಅವನು
ವಿಷ್ಣುಪೂಜಕನಾಗಬಾರದು ಎನ್ನುತ್ತಿದ್ದಾನೆ. ಜೊತೆಯಲ್ಲಿ ಸಮಕಾಲೀನ ಬ್ರಾಹ್ಮಣನು
ವೇದಾಭಿಪ್ರಾಯಗಳಿಗೆ ವಿರೋಧಿಯಾಗಿ ನಡೆಯುತ್ತಾನೆ ಎಂದು ಹೇಳುತ್ತಿದಾನೆ. ಅಲ್ಲದೆ,
"ವರ್ಣಾನಾಂ ಬ್ರಾಹ್ಮಣೋ ಗುರುಃ" ಎಂಬ ಮಾತನ್ನು ಉರಿಲಿಂಗಪೆದ್ದಿ ಇಲ್ಲಿಯೂ
ಅಲ್ಲಗಳೆಯತ್ತಿದ್ದಾನೆ. ಬ್ರಾಹ್ಮಣನಿಗೆ ಪೂಜ್ಯತೆಯಿತ್ತವರ ಗತಿ ಹೇಗೆ ಕುಸಿಯಿತು ಎಂದು ಉಲ್ಲೇಖಿಸುವುದರ
ಮೂಲಕ ಅವನನ್ನು ಈ ಸ್ಥಾನದಲ್ಲಿ ಕೂರಿಸಲು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದಾನೆ. ಬಡಗಿಯಾಗಿದ್ದ
ಮಾಚಲದೇವಿಯನ್ನು ಉತ್ತಮಕುಲಸ್ಥೆಯಾಗಿ ಮಾಡ ಹೊರಟ ಪ್ರಸಂಗವನ್ನಿಲ್ಲಿ ಉಲೇಖಿಸಿದ್ದಾನೆ. ಈ ಮಾತು
ಬಸವಣ್ಣನ ಒಂದು ವಚನದಲ್ಲಿಯೂ ಬಂದಿದೆ. ಆದರೆ ಈ ಕತೆ ಎಲ್ಲೆ ಉಲ್ಲೇಖಗೊಂಡಿದೆಯೋ ತಿಳಿಯದು.
ವರ್ಣಾಶ್ರಮಹೀನರ ಕರ್ಮವ ಕಳೆಯುವೆವೆಂದು ದತ್ತುಪುತ್ರರಾಗಿ
"ಹೊರಸಿನಡಿಯಲ್ಲಿ ನುಸುಳಿದ"ವರ ಬಗ್ಗೆಯೂ ಲೇವಡಿಪೂರ್ವಕ ಪ್ರಸ್ತಾಪವಿದೆ. ಆದರೆ ಈ
ಮಾತು ಯಾವ ಪ್ರಸಂಗವನ್ನು ಸೂಚಿಸುತ್ತಿದೆಯೋ ಸ್ಪಷ್ಟವಾಗಿ ತಿಳಿಯುವುದಿಲ್ಲ. ಹೊರಸು ಅಂದರೆ
ಪಾರಿವಾಳ. ಶಿಬಿ ಚಕ್ರವರ್ತಿಯ ದಾನಶೂರತ್ವವನ್ನು ಪರೀಕ್ಷಿಸಲು ಇಂದ್ರ ಗಿಡಗನಾಗಿ, ಅಗ್ನಿ
ಪಾರಿವಾಳವಾಗಿ ಬಂದ ಕತೆಯಿದೆ. ಅಗ್ನಿ ಬ್ರಾಹ್ಮಣನ ಸೂಚಕವಾದ್ದರಿಂದ ಇದು ಶಿಬಿಯ ಕತೆಯನ್ನು
ಸೂಚಿಸುವುದೇ? ಆದರೆ ಮುಂದೆ ಶಿಬಿಯ ಉಲ್ಲೇಖ ನೇರವಾಗಿಯೇ ಬಂದಿದೆ. ಹೀಗಾಗಿ ಏನೂ
ಸ್ಪಷ್ಟವಾಗುವುದಿಲ್ಲ. ಆದರೆ ಗೌತಮ, ಕರ್ಣ, ಶಿಬಿ ಇವರುಗಳು ಬ್ರಾಹ್ಮಣರಿಂದ ಹಿಂಸೆಗೊಳಗಾದ
ಪೌರಾಣಿಕ ಪ್ರಸಂಗಗಳನ್ನು ಉಲ್ಲೇಖಿಸಿ ಬ್ರಾಹಣರನ್ನು 'ವರ್ಣಾನಾಂ ಗುರು' ಎಂದು ಕರೆಯುವುದನ್ನು
ತಪ್ಪೆಂದು ವಿವರಿಸುತ್ತದೆ. ಇಂದ್ರ ಬ್ರಾಹ್ಮಣ ವೇಷದಿಂದ ಬಂದು ಕರ್ಣನ ಕವಚಕುಂಡಲಗಳನ್ನು ದಾನವಾಗಿ
ಬೇಡಿ ಪಡೆದ ಕತೆ ಮಹಾಭಾರತದಲ್ಲಿ ಪ್ರಸಿದ್ಧವಾದ ಪ್ರಸಂಗ. ಇನ್ನು ಗೌತಮನ ಕತೆ: ಒಮ್ಮೆ ಹನ್ನೆರಡು
ವರ್ಷಗಳ ದೀರ್ಘ ಬರಗಾಲ ಬಂತು; ಆದರೂ ಗೌತಮ ತಾನು ಬಿತ್ತದ್ದು ಬೆಳೆಯಲೇಬೇಕೆಂದು ಶಿವನಿಂದ
ವರವನ್ನು ಪಡೆದ; ಹೀಗಾಗಿ ಅವನ ಆಶ್ರಮ ಬೆಂಗಾಡಿನ ಮಧ್ಯೆ ಹಸಿರಿನಿಂದ ಕಂಗೊಳಿಸುವ
ದ್ವೀಪದಂತಾಯಿತು; ಎಲ್ಲ ಋಷಿಗಳೂ ಅವನ ಆಶ್ರಮಕ್ಕೇ ಬಂದು ಆಶ್ರಯ ಪಡೆದರು; ಆದರೆ ದಾರುಕನೆಂಬ
ಬ್ರಾಹ್ಮಣ ಅವನ ಮೇಲಣ ಹೊಟ್ಟೆಯುರಿಯಿಂದ ಸಾಯುವ ಸ್ಥಿತಿಯಲ್ಲಿದ್ದ ಹಸುವೊಂದನ್ನು ಕೃತ್ರಿಮವಾಗಿ ಸೃಷ್ಟಿಸಿ ಅದನ್ನು ಗೌತಮನ
ಆಶ್ರಮದಲ್ಲಿ ಹೊಗಿಸಿದ; ಗೌತಮ ಅದನ್ನಟ್ಟಲು ಒಂದು ಸಣ್ಣ ಕಲ್ಲ ಹರಳಿನಿಂದ ಅದಕ್ಕೆ ಹೊಡೆದ; ಹಸು
ಸತ್ತು ಬಿತ್ತು; ಗೋಹತ್ಯೆ ಮಾಡಿದ್ದರಿಂದ ಋಷಿಗಳೆಲ್ಲ ಗೌತಮನ ಆಶ್ರಮವನ್ನು ಬಿಟ್ಟು ಹೋದರು; ಗೌತಮ
ಮತ್ತೆ ಶಿವನನ್ನು ಕುರಿತು ತಪಸ್ಸು ಮಾಡಿ ಆ ಪಾಪವನ್ನು ಹೋಗಲಾಡಿಸಿಕೊಂಡ. ಬ್ರಾಹ್ಮಣನಿಗೆ ಅಪಾರ
ದಾನವಿತ್ತರೂ ದೊರೆಯುವುದು ಹಿಂಸೆ, ಅದೇ ಶಿವಭಕ್ತನಿಗೆ ಅಣುಮಾತ್ರವಿತ್ತರೂ ಪ್ರತಿಫಲ
ಅಣಿಮಾದ್ಯಷ್ಟೈಶ್ವರ್ಯ ಎಂದು ಹೋಲಿಸುವ ಮೂಲಕ ಶಿವಭಕ್ತನ ಮಹಿಮೆಯನ್ನು ಪ್ರತಿಪಾದಿಸಲಾಗಿದೆ.
ಮತ್ತೊಂದು ವಚನದಲ್ಲಿಯೂ ಉರಿಲಿಂಗಪೆದ್ದಿಯು ಬ್ರಾಹ್ಮಣನ
ವೇದವಿದ್ಯೆಯನ್ನು ಲೇವಡಿ ಮಾಡುತ್ತಾನೆ. ವಿದ್ಯೆಯಿಂದ ಬ್ರಾಹ್ಮಣರು ಹಿರಿಯರಾಗುವುದಾದರೆ ದೊಂಬನೂ
ಹಿರಿಯನೇ, ಯಾಕೆಂದರೆ ಬ್ರಾಹ್ಮಣ ಕಲಿತ ವಿದ್ಯೆ ದೊಂಬನ ಅದೃಶ್ಯಕರಣ, ಮಿಣಿಯಾಟ,
ಅಗ್ನಿಸ್ತಂಭಗಳಂತೆ ಹೊಟ್ಟೆ ಪಾಡಿನ ವಿದ್ಯೆ ಎಂದು ವಿಶ್ಲೇಷಿಸುತ್ತಾನೆ. ಅಂತಹ ಬ್ರಾಹ್ಮಣ
ಲಿಂಗವಂತನಿಗೆ ಎಂದೂ ಸಮನಾಗಲಾರ, ಯಾಕೆಂದರೆ ಲಿಂಗವಂತ ಗುಣ, ಜ್ಞಾನ, ಧರ್ಮ, ಆಚಾರ, ಶೀಲಗಳನ್ನು
ಸಾಧಿಸಿದವನು ಎಂಬುದು ಅವನ ತೀರ್ಮಾನ. ಸ್ವಯಂ ಅತ್ಯಂತ ಕೆಳಸ್ತರವೆಂದು ಬಗೆಯಲಾದ ವರ್ಗಕ್ಕೆ
ಸೇರಿದ್ದ ಈ ವಚನಕಾರನು ಅತ್ಯಂತ ಮೇಲುಸ್ತರವೆಂದು ಭಾವಿಸಲಾಗಿದ್ದ ಬ್ರಾಹ್ಮಣರಿಗೆ (ಅಥವಾ
ಬ್ರಾಹ್ಮಣ್ಯಕ್ಕೆ) ಮುಖಾಮುಖಿಯಾದುದು ಸಮಂಜಸವೇ ಆಗಿದೆ. ಇವೆರಡರ ನಡುವಣ ಆ ಕಾಲದ ಉಳಿದ ಜಾತಿಗಳು
ಬ್ರಾಹ್ಮಣ್ಯದ ಹಿಡಿತದಲ್ಲಿಯೇ ಇದ್ದುದರಿಂದ, ಮತ್ತು ಶ್ರೇಣೀಕರಣಗೊಂಡ ಸಮಾಜದ ಪ್ರತಿ ಜಾತಿಯೂ
ತನ್ನ ಮೇಲುಜಾತಿಗಳನ್ನು ಅನುಸರಿಸುವ ಚಪಲ ಹೊಂದಿದ್ದ ಕಾರಣದಿಂದ (ಇದು ಎಲ್ಲ ಕಾಲದ ಪರಿಪಾಟವೂ
ಹೌದು. ಮೇಲಿನವನನ್ನು ಕೆಳಗಣವನು ಅನುಕರಿಸುವ ಪ್ರಕ್ರಿಯೆಯನ್ನು ಎಂ.ಎನ್. ಶ್ರೀನಿವಾಸ್ sankritization ಎನ್ನುತ್ತಾರೆ). ಬ್ರಾಹ್ಮಣ್ಯವನ್ನು
ಪ್ರಶ್ನಿಸುವುದೆಂದರೆ ತಾನು ಸೇರಿದ ಜಾತಿಗೆ ಮೇಲಿದ್ದುದನ್ನೆಲ್ಲ ಪ್ರಶ್ನಿಸಿದಂತೆಯೇ ಸರಿ. ಆದರೆ
ಯಾವುದೇ ಒಂದನ್ನು ತನ್ನ ಶತ್ರುವೆಂಬಂತೆ ಪರಿಗಣಿಸಿ ಹೋರಾಡುವುದರಿಂದ ಫಲ ಸೋಲು ಅಥವಾ ಗೆಲವು. ಅದರ
ಬದಲು ಚಳುವಳಿಯು ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರೆ ಸೋಲುವ ಅಥವಾ ಅದಕ್ಕೇ ಬಲಿಯಾಗುವ
ಅಪಾಯದಿಂದ ಪಾರಾಗಿ, ಸಮಾಂತರವಾದ ಹೊಸ ವ್ಯವಸ್ಥೆಯೊಂದನ್ನು ರೂಪಿಸಬಹುದಾಗಿತ್ತು. ಶಿವನನ್ನು ತನ್ನ
ದೇವರೆಂದು ವೀರಶೈವವು ಪರಿಗಣಿಸಿದ್ದೂ ಇದೇ ರೀತಿಯ ಫಲವನ್ನೇ ನೀಡಿತು. ಶಿವ ವೈದಿಕ ವ್ಯವಸ್ಥೆಯು
ಹಿಂದೆಯೇ ಒಪ್ಪಿಕೊಂಡಿದ್ದ ದೈವ. ಉರಿಲಿಂಗಪೆದ್ದಿ ರುದ್ರ ಮತ್ತು ಶಿವರ ನಡುವೆ ಕೆಲವೆಡೆ
ವ್ಯತ್ಯಾಸ ಮಾಡಿದರೂ, ವಚನ ಚಳುವಳಿಯ ಕಾಲಕ್ಕೆ ವೇದಗಳ ರುದ್ರನೊಡನೆ ಶಿವನ ಸಮೀಕರಣ
ಪೂರ್ಣಗೊಂಡಿತ್ತು. ಶಂಕರ ಪ್ರಣೀತ ಅದ್ವೈತವೂ ಶಿವನನ್ನೇ ಆರಾಧಿಸಿತು. ಹೀಗಾಗಿ ವೀರಶೈವ ಏನೇ
ಪರ್ಯಾಯಗಳನ್ನು ಕಂಡುಕೊಂಡರೂ ಮುಂದೆ ಈ ದೈವದ ಕಾರಣದಿಂದಾಗಿ ವೈದಿಕದ ನೆರಳಲ್ಲಿಯೇ
ಬರುವಂತಾಯಿತೇನೋ.
ಭಕ್ತಿಭಾಂಡದ ಶಿವಭಕ್ತರು ಹಾಗೂ ಕರ್ಮಭಾಂಡದ ದ್ವಿಜರ ಬಗ್ಗೆ
ಮತ್ತೊಂದು ದೀರ್ಘ ವಚನ ಪ್ರಸ್ತಾಪಿಸುತ್ತದೆ. ಆ ವಚನ ಹೀಗಿದೆ:
ಭಕ್ತಿಭಾಂಡದ
ಶಿವಭಕ್ತರ ನಿಷೇಧವ ಮಾಡುವ
ಕರ್ಮಭಾಂಡದ
ದ್ವಿಜರು ನೀವು ಕೇಳಿಭೋ:
'ಸತ್ಯಂ
ಭೋ ಬ್ರೂತ ಪಂಚಪ್ರಾಣ ಇಂದ್ರಿಯನಿಗ್ರಹ'ವೆಂದೋದಿ
ಗುದ್ದಿ
ಗುದ್ದಿ ಹೋತನ ತಿಂಬುವುದಾಚಾರವೇ?
'ಪಿತಾಮಹಶ್ಚ
ವೈಶ್ಯಸ್ತು ಕ್ಷತ್ರಿಯೋ ಪರಮೋ ಹರಿಃ|
ಬ್ರಾಹ್ಮಣೋ
ಭಗವಾನ್ ರುದ್ರಃ ಸರ್ವೇಷ್ವ್ಯುತ್ತಮೋತ್ತಮಃ||'
ಎಂಬ
ಶ್ರುತಿಯ ನೋಡಿ,
ತಮ್ಮ
ಕುಲವವಹ ಬ್ರಾಹ್ಮಣನಹ ರುದ್ರನ ನಿಂದಿಸಿ,
ತಮಗಿಂದ
ಕೀಳುಜಾತಿಯಹ ಕ್ಷತ್ರಿಯನ ಹರಿಯ
ಆರಾಧಿಸುವ
ಕುಲಹೀನರು ನೀವು ಕೇಳಿಭೋ:
'ಜನ್ಮನಾ
ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ',
'ವೇದಾಭ್ಯಾಸೇನ
ವಿಪ್ರಃ ಬ್ರಹ್ಮ ಚರಂತೀತಿ ಬ್ರಾಹ್ಮಣಾಃ'
ಎಂಬ
ಶ್ರುತಿಯನೋದಿ,
ಪರಬ್ರಹ್ಮನಂತಹ
ಶಿವಲಿಂಗಪೂಜೆಯನಾಚರಿಸಿ ಬ್ರಾಹ್ಮಣತ್ವವನೈದದೆ
ಶತಯಾಗಂಗಳ
ಮಾಡಿ ಶೂದ್ರನಹ ಇಂದ್ರತ್ವ ಬಯಸುವ
ಅಧಮರು
ನೀವು ಕೇಳಿಭೋ:
'ಜನ್ಮನಾ
ಜಾಯತೇ ಶೂದ್ರಃ ಮಾತಾಸಾ ಪ್ರಥಮಂ ಶೂದ್ರಾಣಿ|
ನಚೋಪದೇಶಃ
ಗಾಯತ್ರಿ ನಚ ಮೌಂಜೀ ನಚ ಕ್ರಿಯಃ||' ಎಂದುದಾಗಿ,
ದೀಕ್ಷೆಯಿಲ್ಲದೆ
ಸತಿಶೂದ್ರಗಿತ್ತಿಗೆ ಹುಟ್ಟಿದವನೊಡನುಂಬ
ಅನಾಚಾರಿಗೆ
ಎಲ್ಲಿಯದೋ ಬ್ರಾಹ್ಮಣತ್ವ?
ಆವಜಾತಿಯವನಾದರೇನು
ಶಿವಭಕ್ತನೆ ಬ್ರಾಹ್ಮಣ.
ಅದಕ್ಕೆ
ಸಾಕ್ಷಿ:
'ಸಾಂಖ್ಯಾಯನ
ಮಹಾಮುನಿಃ ತಪಸಾ ಬ್ರಾಹ್ಮಣೋ ಭೂತ್ವಾ|
ಜಾತಿಂ
ನ ಕಾರಯೇತ್ತೇಷು ಶ್ರೇಷ್ಠಃ ಸಮಭವತ್ತತಃ||
ಗೌತಮಸ್ತು
ಮಹಾಮುನಿಃ ತಪಸಾ ಬ್ರಾಹ್ಮಣೋ ಭೂತ್ವಾ|
ತಜ್ಜಾತಿರಭವತ್ತೇನ'
ಎಂದುದಾಗಿ,
ತಮ್ಮ
ತಮ್ಮ ಗೋತ್ರಂಗಳೆ ಸಾಕ್ಷಿಯಾಗಿ ಸಾರುತ್ತಿರಲು
ಕುಭ್ರಮೆಯಾತಕ್ಕೆ?
'ಶ್ವಪಚೋಪಿ
ಮುನಿಶ್ರೇಷ್ಠಃ ಶಿವಭಕ್ತಿಸಮನ್ವಿತಃ|
ಶಿವಭಕ್ತಿವಿಹೀನಸ್ತು
ಶ್ವಪಚೋಪಿ ದ್ವಿಜಾಧಮಃ||' ಎಂದುದಾಗಿ
ಶಿವಭಕ್ತನೆ
ಕುಲಜನು, ಶಿವಭಕ್ತಿ ಇಲ್ಲದನೆ ಶ್ವಪಚನೆಂದರಿಯದ
ಅಜ್ಞಾನಿಗಳು
ನೀವು ಕೇಳಿಭೋ:
'ಏಕಮೇವ
ರುದ್ರೋ ನದ್ವಿತೀಯಾವತಸ್ಥೇ' ಎಂದು
ವೇದವನೋದಿ
'ಪಶುಪತಿಯೇನ್ನಮಃ' ಎಂದಾ ರುದ್ರವನೋದಿ
ಶಿವನೆ
ಪತಿ ಮಿಕ್ಕಿನ ದೈವಂಗಳೆಲ್ಲ ಪಶುಗಳೆಂಬುದ ತಿಳಿದು
ಮತ್ತೆಯೂ
ಈ ದ್ವಿಜರು ಕಾಣಲರಿಯರು.
ಹರಿಹರನೊಂದೆಯೆಂಬ
ನರಗುರಿಗಳು ನೀವು ಕೇಳಿಭೋ:
'ಅದೌ
ರುದ್ರಾಂಗಮುತ್ಪತ್ತಿಃ ಮುಖೇ ಬ್ರಾಹ್ಮಣಮೀಶ್ವರಃ|
ವಿಷ್ಣುಂ
ಕ್ಷತ್ರಿಯಮಿತ್ಯಾಹುರ್ಬಾಹುನಾಚ ಅವಸ್ಥಿತಃ||
ವೈಶ್ಯಶ್ಚ
ಬ್ರಹ್ಮಮಿತ್ಯಾಹುಃ ಲಿಂಗದೇವ ಅವಸ್ಥಿತಃ|
ಸುರಪೋ
ಶೂದ್ರಯಿತ್ಯಾಹುಃ ದೇವಪಾದಾವಸ್ಥಿತಃ||' ಎಂದುದಾಗಿ,
ರುದ್ರನ
ಮುಖದಲ್ಲಿ ಹುಟ್ಟಿದವನೆ ಬ್ರಾಹ್ಮಣ,
ಮಿಕ್ಕಾದ
ವಿಪ್ರರೆಲ್ಲರೂ ಋಷಿಗೋತ್ರದಲ್ಲಿ ಹುಟ್ಟಿದರು.
ಆ
ಋಷಿಮೂಲದ ವಿಪ್ರರೆಲ್ಲರೂ ಅಧಮಜಾತಿ.
ಅಧಮಜಾತಿಯಾದರೇನು?
ರುದ್ರಭಕ್ತರಾದ
ಕಾರಣ ಬ್ರಾಹ್ಮಣರಾದರು.
ಈ
ಮರ್ಮವನರಿಯದ ಚಾಂಡಾಲವಿಪ್ರರ್ಗೇನೂ ಸಂಬಂಧವಿಲ್ಲ.
ಕಾಕ
ರುದ್ರನ ಮುಖದಲ್ಲಿ ಉದ್ಭವವೆಂಬುದಕ್ಕೆ
'ಶ್ವಾನಸೂಕರರೂಪೇ
ಪ್ರೇತಪಿಂಡ ಪ್ರದಾನತಃ|
ಪ್ರೇತತ್ವಂ
ಚ ಸದಾಸ್ಯಾತ್ ತಥಾ ಧರ್ಮೇಣಲುಪ್ಯತೇ||'
ಎಂದುದಾಗಿ
ಆಗಮಾರ್ಥವನರಿಯದೆ,
ಪ್ರೇತಪಿಂಡವನಿಕ್ಕುವ
ಪಾತಕರು.
'ಪ್ರಾಣಾಯ
ಸ್ವಾಹಾ ಅಪಾನಾಯ ಸ್ವಾಹಾ ವ್ಯಾನಾಯ ಸ್ವಾಹಾ
ಉದಾನಾಯ
ಸ್ವಾಹಾ ಸಮಾನಾಯ ಸ್ವಾಹಾ' ಎಂದು
ಭೂತಬಲಿಯ
ಬೆಕ್ಕುನಾಯಿಗೆ ಹಾಕಿ
ಮಿಕ್ಕ
ಭೂತಶೇಷವ ಕೊಂಬ ಅಕುಲಜರು, ನೀವು ಕೇಳಿಭೋ:
'ವಸುರೂಪೋ
ಮಧ್ಯಪಿಂಡಸ್ತು ಪುತ್ರಪೌತ್ರಪ್ರವರ್ಧನಃ' ಎಂದು,
ರುದ್ರಪ್ರಸಾದವನೆ
ಕೊಂಡು ರುದ್ರಪಿಂಡದಿಂದ ಹುಟ್ಟಿ,
ದೀಕ್ಷಾಕಾಲದಲ್ಲಿ
ಭಸಿತವ ಧರಿಸಿ,
ಬ್ರಹ್ಮಕಪಾಲಪಾತ್ರೆಯಂ
ಪಿಡಿದು,
ಪಲಾಶಕಂಕಾಳದಂಡಮಂ
ಪಿಡಿದು,
'ಭವತೀ
ಭಿಕ್ಷಾಂ ದೇಹಿ'ಯೆಂದು ಭಿಕ್ಷವಂ ಬೇಡಿ
ಪಿತೃಕಾರ್ಯದಲ್ಲಿ
'ವಿಶ್ವೇ ದೇವಾಸ್ತರ್ಪಯಾಮ'ಯೆಂದರ್ಚಿಸಿ,
ಮರಣಕಾಲದಲ್ಲಿ
ರುದ್ರಭೂಮಿಯಲ್ಲಿ ರುದ್ರಾಗ್ನಿಯಿಂದ
ದಹನ
ರುದ್ರವಾಹನದ ಬಾಲವಿಡಿದು ಸ್ವರ್ಗವೆಯ್ದಿದರು,
ರುದ್ರಭಕ್ತಿವಿರುದ್ಧ
ವಿಚಾರಹೀನರು.
'ತ್ರ್ಯಾಋಷೀತಿ
ಜಮದಗ್ನಿಃ ಕಶ್ಯಪೇತಿ ತ್ರಿಯಾ ಋಷಂ,
ಅಗಸ್ತ್ಯಸ್ಯ
ತ್ರಿಯಾ ಋಷಂ ಶತಾಯುಷಂ' ಎಂದು
ಸಕಲಋಷಿಗಳು
ಶ್ರೀವಿಭೂತಿಯಂ ಧರಿಸಿ,
ಬಹಳಾಯುಷ್ಯಮಂ
ಪಡೆದರೆಂದು
ಮತ್ತೆಯು
ಯಜುಸ್ಸಿನಲ್ಲಿ ದೀಕ್ಷೆಯನೈದಲ್ಲಿ,
'ಭೂತಿವಾಂಶ್ಚ
ಪ್ರಿಯಂ ಹೋತವ್ಯಂ' ಎಂದು,
ಶ್ರೀವಿಭೂತಿಯನೆ
ಧರಿಸ ಹೇಳಿತ್ತು ವೇದವು.
'ಗೋಪಿ
ಮಲಿನ ಧಾರೀತು ಶಿವಂ ಸ್ಪೃಶತಿಯೋ ದ್ವಿಜಃ|
ತದೈಕ
ವಿಂಶತಿಕುಲಂ ಸಾಕ್ಷಾತ್ತು ನರಕಂ ವ್ರಜೇತ್||' ಎಂದು,
ಗೋಪಿಮಲಿನ
ಚಂದನವನಿಟ್ಟು,
ಪಾತಕರು
ಶಿವಲಿಂಗವ ಮುಟ್ಟಿದರೆ
ತಮ್ಮಿಪ್ಪತ್ತೊಂದು
ಕುಲಸಹಿತ
ಕೇಡಿಲ್ಲದ
ನರಕದಲ್ಲಿ ಬೀಳುವರೆಂದರಿಯದೆ
ಮಟ್ಟಿಯನಿಟ್ಟ
ಭ್ರಷ್ಟರು,
ಮತ್ಸ್ಯ
ಕೂರ್ಮ ವರಾಹ ನಾರಸಿಂಹ ಈ ನಾಲ್ಕೂ ಅವತಾರದಲ್ಲಿ
ನೀರಿಂದ
ಬಲಿ ಧಾರೆಯನೆರೆದನೆಂಬುದನರಿದು,
ವಿಷ್ಣುವಿನ
ಪಾದದಲ್ಲಿ ಗಂಗೆ ಹುಟ್ಟಿತೆಂಬ ವಿಚಾರಹೀನರು
'ವಿಯದ್ವಿಷ್ಣುಪದಂ
ಪ್ರೋಕ್ತಂ ಪುಂಸ್ಯಾಕಾಶ ವಿಹಾಯಸಿ|
ವಿಕಾಶ್ಯೋಪ್ಯನಾಕೋಪಿ
ದ್ಯೌರಪಿಸ್ಯಾತ್ತದವ್ಯಯಂ||' ಎಂದು
ನಿಘಂಟಿನಲ್ಲಿ
ಆಕಾಶದ ಹೆಸರು ವಿಷ್ಣುಪದಿ,
ಆಕಾಶಗಂಗೆ
ಮುನ್ನಲುಂಟೆಂಬುದನರಿತು,
ವಿಷ್ಣುವಿನ
ಕಾಲಲ್ಲಿ ಗಂಗೆ ಹುಟ್ಟಿತೆಂಬ ದುಷ್ಟರು,
ವೇದಕ್ಕೆ
ನೆಲೆಗಟ್ಟು ಓಂಕಾರ,
ಬ್ರಾಹ್ಮಣಕ್ಕೆ
ನೆಲೆಗಟ್ಟು ಗಾಯತ್ರಿಯಲ್ಲಿ
ಶಿವನೆ ದೈವವೆಂದಿತ್ತು.
'ಓಂ
ಭೂಃ ಓಂ ಭುವಃ ಓಂ ಸ್ವಹಃ ಓಂ ಮಹಃ ಓಂ ಜನಃ
ಓಂ ತಪಃ
ಓಂ ಸತ್ಯಂ ಓಂ ತತ್ಸುವುತುವೇರೇಣ್ಯಂ
ಭರ್ಗೋದೇವಸ್ಯ
ಧೀಮಹಿ ಧಿಯೋ ಯೋನಃ ಪ್ರಚೋದಯಾತ್'
ಹರ
ಹರಿಭಕ್ತನೆಂದನಿಸುವ ವಿಚಾರಹೀನರು ನೀವು ಕೇಳಿಭೋ:
ಹರ
ಶಿವನ ಭಕ್ತನೆಂಬವುದಕ್ಕೆ ಸಾವಿರಕಮಲ ಕೊರತೆಗೆ
ತನ್ನ
ನಯನ ಕಮಲಮಂ ಕಳೆದು ಶಿವನಂಘ್ರಿಗರ್ಪಿಸಿ
ಚಕ್ರಮಂ
ಪಡೆದನೆಂದು ಮಹಿಮ್ನದಲ್ಲಿ
'ಹರಸ್ತೇ
ಸಹಸ್ರಕಮಲವದನಾಯ ಪಾದಯೋಃ'ಎಂದೋದಿ
ಮರೆದ
ಮತಿಭ್ರಷ್ಟರು ನೀವು ಕೇಳಿಭೋ:
ಹರನೆ
ಕರ್ತ, ಹರಿಯೆ ಭೃತ್ಯನೆಂಬುದಕ್ಕೆ
ರಾಮಪ್ರತಿಷ್ಠೆ
ಶಿವಲಿಂಗದ ಮೂರ್ತಿಗಳಿಂ ಕಾಣಿರೇ,
ಕಂಡು
ತಿಳಿಯಲರಿಯದ ಕುಲುಮನುಜರು
ಶ್ರೀರಾಮನ
ಗುರು ವಶಿಷ್ಠ
ಹಂಪೆಯಲ್ಲಿ
ವಿರೂಪಾಕ್ಷಲಿಂಗನ ಭಕ್ತನೆಂದರಿದು,
ಕೃಷ್ಣಾವಿಷ್ಣುವಿನ
ಗುರು ಉಪಮನ್ಯು
ಅಹಿಪುರದಲ್ಲಿ
ಸೋಮೇಶ್ವರಲಿಂಗನ ಭೃತ್ಯನೆಂಬುದನರಿದು,
ಇಂತು
ಭೃತ್ಯನ ಶಿಷ್ಯಂಗೆ ಕರ್ತನ ಸರಿಯೆಂಬ
ಕರ್ಮಚಂಡಾಲರು
ನೀವು ಕೇಳಿಭೋ:
'ಅಸಂಖ್ಯಕೋಟಿ
ಬ್ರಹ್ಮಾಣಾಂ ಕೋಟಿ ವಿಷ್ಣುಗಣಂ ತಥಃ|
ಗಂಗಾವಾಲುಕ
ಸಮೌ ಹೇತೌ ಕಿಂಚಿದಜ್ಞಾಃ ನ ಮಹೇಶ್ವರಾತ್||'
ಎಂದು
ರುದ್ರನ ಎವೆಯಾಡುವನಿತಕ್ಕೆ
ಲೆಕ್ಕವಿಲ್ಲದ
ಕೋಟಿ ಬ್ರಹ್ಮವಿಷ್ಣುರು ಸತ್ತುಹೋದರೆಂದು ಓದಿ ತಿಳಿದು
ಇಂಥ ಹುಲುದೈವಂಗಳ
'ಮೃತ್ಯುಂಜಯಃ
ನಿತ್ಯಃ ಏಕೋದೇವಃ ನದ್ವತೀಯಃ'
ಎಂದೆನಿಸುವ
ಶಿವಗೆ ಸರಿಯೆಂದೆನಿಸುವ ಭವಿವಿಪ್ರರಿಗೆ
ತಾವು
ಓದುವ ವೇದಾಗಮಂಗಳು ತಮಗೆ ಹಗೆಯಾಗಿ
ನಡೆಯೊಂದು
ಪರಿ ನುಡಿಯೊಂದು ಪರಿ ಆಗಿಹುದು.
ಅದೆಂತೆಂದರೆ:
ಗೌತಮ ದಧೀಚಿ ಭೃಗುವಾದಿಯಾಗಿ
ಹಿರಿಯರುಗಳೇ
ಶಾಪದಿಂದ ಶಾಪಹತರಾಗಿ
ಶಿವದ್ರೋಹಿಗಳಾಗಿ
ನರಕಕ್ಕಿಳಿವ
ಚಂಡಾಲರಿಂದ
ವಿಪ್ರರ ಸತ್ಪಾತ್ರರೆಂದಾರಾಧಿಸುವರ
ನರಕದ
ಕುಳಿಯೊಳು ಮೆಟ್ಟಿ
ನರಕಾಗ್ನಿಯಿಂದ
ಸುಡುತಿರ್ಪ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಈ ದೀರ್ಘ ವಚನೋಲ್ಲೇಖದಲ್ಲಿ ಕಾಣಬರುವ ವಚನಕಾರನ ನಿಲವೆಂದರೆ,
ಮಾಂಸಭಕ್ಷಣ ಮಾಡುವ ವಿಷ್ಣುವನ್ನು ಪೂಜಿಸುವ ಬ್ರಾಹ್ಮಣನನ್ನು ನಾನಾ ಆಧಾರಗಳಿಂದ ಖಂಡಿಸುವುದು.
ಅಲ್ಲದೆ, ವಚನಕಾರನು ವಿಪ್ರ ಮತ್ತು ಬ್ರಾಹ್ಮಣರ ನಡುವೆ ವ್ಯತ್ಯಾಸ ಮಾಡುತ್ತಿರುವುದು. 'ವೇದಾಭ್ಯಾಸೇನ
ವಿಪ್ರಃ ಬ್ರಹ್ಮ ಚರಂತೀತಿ ಬ್ರಾಹ್ಮಣಾಃ' ಎಂಬ ವಾಕ್ಯವನ್ನುದ್ಧರಿಸುವ ಮೂಲಕ ಉರಿಲಿಂಗಪೆದ್ದಿ
ವೇದವನ್ನು ಓದಿದವನು ವಿಪ್ರನಾಗಬಹುದೇ ಹೊರತು ಬ್ರಾಹ್ಮಣನಾಗಲಾರ, ಬ್ರಾಹ್ಮಣ್ಯವೇನಿದ್ದರೂ
ಬ್ರಹ್ಮಪಥದಲ್ಲಿ ನಡೆಯುವುದು ಎನ್ನುತ್ತಿದ್ದಾನೆ. ಶಿವಭಕ್ತರು ಭಕ್ತಿಭಾಂಡದವರು; ದ್ವಿಜರು
ಕರ್ಮಭಾಂಡದವರು ಎನ್ನುತ್ತಿದ್ದಾನೆ. ಇವನ ದೃಷ್ಟಿಯಲ್ಲಿ ವಿಪ್ರ ಮತ್ತು ದ್ವಿಜರು ಬೇರೆ,
ಬ್ರಾಹ್ಮಣ ಬೇರೆ. ಹಾಗೆಯೇ, ರುದ್ರನೇ ಬ್ರಾಹ್ಮಣ ಎಂಬ ನಿಲವು ಅವನದು; 'ರುದ್ರನ ಮುಖದಲ್ಲಿ
ಹುಟ್ಟಿದವ ಬ್ರಾಹ್ಮಣ, ಮಿಕ್ಕಾದ ವಿಪ್ರರೆಲ್ಲರು ಋಷಿಗೋತ್ರದಲ್ಲಿ ಹುಟ್ಟಿದರು' ಎಂದು ಮತ್ತೆ
ವಿಪ್ರ ಮತ್ತು ಬ್ರಾಹ್ಮಣರ ನಡುವೆ ವ್ಯತ್ಯಾಸದ ಮತ್ತೊಂದು ಲಕ್ಷಣವನ್ನು ಹೇಳುತ್ತಿದ್ದಾನೆ. ಜೊತೆಗೆ "ಆವಜಾತಿಯವನಾದರೇನು ಶಿವಭಕ್ತನೇ
ಬ್ರಾಹ್ಮಣ" ಎಂಬ ನಿಲವು ಅವನದು. ಹೀಗಾಗಿ ಉರಿಲಿಂಗಪೆದ್ದಿಯ ಗೌರವ ಹುಟ್ಟಿನಿಂದ
ವಿಪ್ರಜಾತಿಯವನಿಗಲ್ಲ, ಭಕ್ತಿಯಿಂದ ಹಾಗಾದವನಿಗೆ. ಎಂದರೆ ಇಲ್ಲಿಯೂ, ಬೇರೆಡೆಗಳಲ್ಲಿಯಂತೆ,
ವಚನಕಾರ ಜಾತಿ ಪರಿಕಲ್ಪನೆಯನ್ನೇ ಅಲ್ಲಗಳೆಯದೆ ಅದನ್ನು ಮರುವ್ಯಾಖ್ಯಾನಕ್ಕೆ
ಒಳಪಡಿಸುತ್ತಿದ್ದಾನೆ.
ಮತ್ತೊಂದು ವಚನದಲ್ಲಿ ಉರಿಲಿಂಗಪೆದ್ದಿ ಬ್ರಾಹ್ಮಣನಲ್ಲಿ ಎರಡು
ಪಂಗಡಗಳನ್ನು ಗುರುತಿಸುತ್ತಾನೆ: ಜಾತಿಬ್ರಾಹ್ಮಣ ಮತ್ತು ಶಾಪಹತ ಬ್ರಾಹ್ಮಣ. ಇವರಬ್ಬರ ನಡುವಣ
ವ್ಯತ್ಯಾಸಗಳನ್ನು ಹೀಗೆ ಪಟ್ಟಿಮಾಡುತ್ತಾನೆ:
ಜಾತಿಬ್ರಾಹ್ಮಣಂಗೆ
ಕರಸ್ಥಲದಲ್ಲಿ ಲಿಂಗ,
ಉರಸ್ಥಲದಲ್ಲಿ
ರುದ್ರಾಕ್ಷಿಮಾಲೆ, ಉಪನಯನ ನೊಸಲ ಕಣ್ಣು,
ಕಾವಿಯ
ಧೋತ್ರ, ಗಾಯತ್ರಿ ಮಂತ್ರ
ಪುರುಷಪ್ರಮಾಣ
ದಂಡ, 'ಭವತಿ ಭಿಕ್ಷಾಂದೇಹಿ'ಯೆಂದು
ಪರಬ್ರಹ್ಮವನಾಚರಿಕೊಂಡಿಪ್ಪಾತನೆ
ಬ್ರಾಹ್ಮಣ.
ಇಂತಲ್ಲದೆ,
ಮಿಕ್ಕವರೆಲ್ಲ ಶಾಪಹತ ವಿಪ್ರರು ನೀವು ಕೇಳಿರೊ.
ಕೃತಯುಗ
ಮೂವತ್ನಾಲ್ಕು ಲಕ್ಷದ ಐವತ್ಮೂರು(ತ್ತಾರು?) ಸಾವಿರ ವರುಷಂಗಳಲ್ಲಿ
ಗಜಾಸುರನೆಂಬ
ಆನೆಯ ಕೊಂದು
ಹೋಮಕಿಕ್ಕಿ
ಮಾಂಸವ ತಿನ್ನ ಹೇಳಿತ್ತೇ ವೇದ?
ಅಹುದು
ತಿನ್ನ ಹೇಳಿತ್ತು, ಅದೆಂತೆಂದಡೆ:
ಕುಲ ಚಲ
ಯೌವನ ರೂಪು ವಿದ್ಯಾ ರಾಜ್ಯ ತಪವೆಂಬ
ಅಷ್ಟಮದಂಗಳ
ಕೊಲ್ಲ ಹೇಳಿತ್ತಲ್ಲದೆ
ಆನೆಯ
ತಿಂಬ ಹೀನ ಹೊಲೆಯರ ಮುಖವ ನೋಡಲಾಗದು.
ತ್ರೇತಾಯುಗದ
ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ
ಅಶ್ವನೆಂಬ
ಕುದುರೆಯ ಕೊಂದು ಹೋಮಕಿಕ್ಕಿ
ಮಾಂಸವ
ತಿನ್ನ ಹೇಳಿತ್ತೇ ವೇದ?
ಅಹುದು
ತಿನ್ನ ಹೇಳಿತ್ತು ವೇದ, ಅದೆಂತೆಂದಡೆ:
ಪ್ರಾಣ
ವ್ಯಾನ ಅಪಾನ ಉದಾನ ಸಮಾನ
ನಾಗ
ಕೂರ್ಮ ಕೃಕರ ದೇವದತ್ತ ಧನಂಜಯವೆಂಬ
ಕುದುರೆಯ
ಕೊಂದು ತಿನ್ನ ಹೇಳಿತ್ತಲ್ಲದೆ
ಕುದುರೆಯ
ತಿಂಬ ಜಿನಗು ಹೊಲೆಯರ
ಮುಖವ
ನೋಡಲಾಗದು.
ದ್ವಾಪರ
ಎಂಟು ಲಕ್ಷದ ಐವ(ಅರುವ?)ತ್ನಾಲ್ಕು ಸಾವರ ವರುಷಂಗಳಲ್ಲಿ
ಮಹಿಷಾಸುರನೆಂಬ
ಕೋಣನ ಕೊಂದು ಹೋಮಕಿಕ್ಕಿ
ಮಾಂಸವ
ತಿನ್ನ ಹೇಳಿತ್ತೇ ವೇದ?
ಅಹುದು
ತಿನ್ನ ಹೇಳಿತ್ತು, ಅದೆಂತೆಂದಡೆ:
ಜಾತಿ
ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ
ಕೋಣನ
ಕೊಲ್ಲ ಹೇಳಿತ್ತಲ್ಲದೆ,
ಕೋಣನ
ತಿಂಬ ಕುನ್ನಿ ಹೊಲೆಯರ
ಮುಖವ
ನೋಡಲಾಗದು.
ಕಲಿಯುಗದ
ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ
ಮಾಂಸವ
ತಿನ್ನ ಹೇಳಿತ್ತೇ ವೇದ?
ಅಹುದು
ತಿನ್ನ ಹೇಳಿತ್ತು, ಅದೆಂತೆಂದಡೆ:
ಮನ
ಬುದ್ಧಿ ಚಿತ್ತ ಅಹಂಕಾರವೆಂಬ
ಹೋತನ
ಕೊಲ್ಲ ಹೇಳಿತ್ತಲ್ಲದೆ
ಹೋತನ
ಕೊಂದು ತಿಂಬ ಹೊಲೆಯರ
ಮುಖವ
ನೋಡಲಾಗದು.
ಇಂತೀ
ನಾಲ್ಕು ಯುಗಂಗಳಲ್ಲಿ ಮಾಂಸವ ತಿಂಬ
ಅನಾಚಾರಿ
ಹೊಲೆಯರ ಮುಖವ ನೋಡಲಾಗದು.
ಅಜಂಗೆ ದ್ವಿಜನೆ
ಗುರು, ದ್ವಿಜಂಗೆ ಹರಿಯೆ ಗುರು,
ಹರಿ
ಹರಿಣಾವತಾರದಲ್ಲಿ ಎರಳೆಯ ತಿಂಬುವುದಾವಾಚಾರ?
ಹರಿ
ಮತ್ಸ್ಯಾವತಾರದಲ್ಲಿ ಮೀನ ತಿಂಬುದಾವಾಚಾರ?
ಇಂತೀ
ಹೊನ್ನ ಗೋವ ತಿಂಬ ಕುನ್ನಿಗಳ ತೋರದಿರಾ
ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರ.
ಜಾತಿಬ್ರಾಹ್ಮಣನೆಂಬ
ಅಭಿದಾನಕ್ಕೆ ಯೋಗ್ಯನಾದವನು ಕೆಟ್ಟ ಗುಣಗಳನ್ನು ಸಾಂಕೇತಿಕವಾಗಿ ಬಲಿ ಕೊಟ್ಟು ಯಜ್ಞ ಮಾಡುವವನೇ
ಹೊರತು, ಯಜ್ಞದ ನೆಪದಲ್ಲಿ ಆಯಾ ಪ್ರಾಣಿಗಳನ್ನೇ ಬಲಿಯಿತ್ತು ಅದರ ಮಾಂಸವನ್ನು ತಿನ್ನುವವನಲ್ಲ
ಎಂಬುದು ಈ ವಚನದಲ್ಲಿನ ಅವನ ಅಭಿಪ್ರಾಯ. ಈ ಸಂದರ್ಭದಲ್ಲಿ, ದಲಿತ ವರ್ಗದಲ್ಲಿ ಹುಟ್ಟಿದ್ದ
ಉರಿಲಿಂಗಪೆದ್ದಿಯು ತನ್ನ ಚಿಕ್ಕ ವಯಸ್ಸಿನಿಂದಲೇ ಮಾಂಸಾಹಾರವಿರೋಧಿಯೇ ಅಥವಾ ವಚನ ಚಳುವಳಿಯ
ಪ್ರಭಾವದಿಂದ ಹಾಗಾದನೆ? ಅಥವಾ ಚಳವಳಿಯ ಕಾಲದಲ್ಲಿ ಅವನ ತಂದೆತಾಯಿಯರು ಮಾಂಸಾಹಾರ ತೊರೆದು
ಅದರಿಂದಾಗಿ ಈತ ಮೊದಲಿನಿಂದಲೇ ಅದನ್ನು ತಿರಸ್ಕರಿಸಿದ್ದನೇ ಮುಂತಾದ ಪ್ರಶ್ನೆಗಳೇಳುತ್ತವೆ.
ಅಲ್ಲದೆ, ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ಪ್ರಾಣಿಗಳನ್ನು ಬಲಿಯಿತ್ತು ಯಜ್ಞ ಮಾಡಬೇಕೆಂಬ
ನಿಯಮವನ್ನು ಉಲ್ಲೇಖಿಸುತ್ತಿದ್ದಾನೆ. ಈ ಯುಗಗಳು ಏನನ್ನು ಸೂಚಿಸುತ್ತವೆ? ಪ್ರತಿ ಯುಗವೂ
ಲಕ್ಷಾಂತರ ವರ್ಷಗಳ ವ್ಯಾಪ್ತಿಯವೆಂಬುದು ನಂಬಿಕೆ. ಇಂತಹ ನಿಯಮ ಹಾಗಾದರೆ ಯಾವಾಗ ಬಂತು?
ವೇದಗಳನ್ನು ಅಪೌರುಷೇಯವೆಂಬ ವೈದಿಕ ನಂಬಿಕೆಗೆ ಇವನ ಒಪ್ಪಿಗೆಯಿದೆಯೇ? ಇಲ್ಲವೆಂಬ ಅಭಿಪ್ರಾಯ ಇವನ
ಮಾತಿನಲ್ಲೆ ಹೊರಡುವುದನ್ನು ನಾವಾಗಲೇ ಗಮನಿಸಿದ್ದೇವೆ. ಅವನ ಕಾಲವೂ ಕಲಿಯುಗದ ಭಾಗ ತಾನೇ?
ಹಾಗಾಗಿ, ಇವನೇ ಹೇಳುವ ಪ್ರಕಾರ, ಕಲಿಯುಗದಲ್ಲಿ ಹೋತನನ್ನು ಕೊಂದು ಮಾಡುವ ಯಜ್ಞದಲ್ಲಿ ಅದರ
ಮಾಂಸವನ್ನು ತಿನ್ನುವುದನ್ನು ಈತ ಖಂಡಿಸುತ್ತಿರಬೇಕಾದರೆ, ಕರ್ನಾಟಕದಲ್ಲಿದ್ದ ಶ್ರೋತ್ರೀಯ
ಬ್ರಾಹ್ಮಣರು ಹನ್ನೆರಡನೇ ಶತಮಾನದಲ್ಲಿ ಯಜ್ಞದ ಹೆಸರಿನಲ್ಲಿಯೇ ಆಗಲಿ ಮಾಂಸ ತಿನ್ನುತ್ತಿದ್ದರೆ?
ಅಥವಾ ಕೇವಲ ಗ್ರಂಥಗಳಲ್ಲಿನ ಹೇಳಿಕೆಗಳನ್ನು ಅವಲಂಬಿಸಿ ತನ್ನ ವಾದವನ್ನಿವನು ಮಂಡಿಸುತ್ತಿರುವನೇ?
ಯಜ್ಞಕಾಲದಲ್ಲಿ ನೀಡಿದ ಬಲಿ ಹಿಂಸೆಯಾಗದು ಎಂಬ ಅಭಿಪ್ರಾಯ ಮನುವಿನಲ್ಲಿ ವ್ಯಕ್ತವಾಗಿದೆ. ಆದರೆ
ಅದು ಸ್ಮೃತಿಗಳ ಕಾಲ, ಅಂದರೆ ಕ್ರಿಸ್ತಶಕ ಐದಾರನೆಯ ಶತಮಾನವಿರಬಹುದು. ಆದರೆ ಹನ್ನೆರಡನೆಯ
ಶತಮಾನದಲ್ಲಿ ಅದನ್ನೆಲ್ಲ ಬ್ರಾಹ್ಮಣರು ಕಟ್ಟುನಿಟ್ಟಾಗಿಯೂ ಇಡಿಯಾಗಿಯೂ ಆಚರಿಸುತ್ತಿದ್ದರೇ? ಈ
ಪ್ರಶ್ನೆಗಳೂ ಉದ್ಭವಿಸುತ್ತವೆ.
ಬಲಿ ಸಾಂಕೇತಿಕ ಎಂಬ ಅಭಿಪ್ರಾಯ ಇಲ್ಲಿದೆ, ಒಪ್ಪಬೇಕಾದದ್ದೇ.
ಅಲ್ಲದೆ, ದ್ವಾಪರದ ಬಗ್ಗೆ ಹೇಳುವ ಸಂದರ್ಭದಲ್ಲಿ, ಯಜ್ಞದಲ್ಲಿ ಬಲಿ ನೀಡಬೇಕಾದ ಕೋಣವು
"ಜಾತಿ ವರ್ಣ ಆಶ್ರಮ ಕುಲ ಗೋತ್ರ" ಇವುಗಳ ಸಂಕೇತ ಎನ್ನುತ್ತಿದ್ದಾನೆ. ಆದರೆ
ಇವುಗಳನ್ನು ಬಿಡುವ ಪರಿಪಾಟ ಯಾವ ಬ್ರಾಹ್ಮಣನಲ್ಲಾದರೂ ಇತ್ತೇ? ಅಥವಾ ಬಲಿ ಕೊಡಬೇಕಾದ ಪ್ರಾಣಿಯು
ಸಂಕೇತಮಾತ್ರ ಎಂಬುದು ಉರಿಲಿಂಗಪೆದ್ದಿಯ ವ್ಯಾಖ್ಯಾನ ಮಾತ್ರವೋ? ಯಜ್ಞದ ಹೆಸರಿನಲ್ಲಿ ಮಾಂಸ
ತಿನ್ನುವವರನ್ನು ಸ್ವತಃ ಮಾಂಸಾಹಾರಿ ಪಂಗಡಕ್ಕೆ ಸೇರಿದವನಾಗಿದ್ದ ಉರಿಲಿಂಗಪೆದ್ದಿ
"ಅನಾಚಾರಿ ಹೊಲೆಯ" ಎನ್ನುತ್ತಿದ್ದಾನೆ! ಹೊಲೆಯ ಎಂಬುದು ಇತರ ಕೆಲವರಲ್ಲಿಯೂ
ಬೈಗುಳವಾಗಿರುವುದು ನಿಜವೇ. ಆದರೆ ಮಾಂಸಾಹಾರವನ್ನು ಹೊಲೆಗೆಲಸದ ಜೊತೆ ಸಮೀಕರಿಸುತ್ತಿರುವುದು
ಆಶ್ಚರ್ಯಕರವೇ ಸರಿ.
ಮತ್ತೊಂದು ವಚನದಲ್ಲಿಯೂ ಉರಿಲಿಂಗಪೆದ್ದಿಯು ಶಾಪಹತ ಬ್ರಾಹ್ಮಣರ
ಬಗ್ಗೆ ಮತ್ತೂ ಕೆಲವು ವಿವರಗಳನ್ನು ನೀಡುತ್ತಾನೆ. ಅದರಲ್ಲಿ ಅವರನ್ನು 'ಕರ್ಮಚಾಂಡಾಲವಿಪ್ರ'
ರೆಂದು ಕರೆಯುತ್ತಿದ್ದಾನೆ. ಅವರ ಮುಖ್ಯ ದೋಷ ಹರಿಹರರನ್ನು ಸಮಾನರೆಂದು ಕಾಣುವುದು. ಆ ವಚನವನ್ನು
ಇಲ್ಲಿ ಪೂರ್ತಿ ಉಲ್ಲೇಖಿಸುತ್ತೇನೆ:
ಅಚ್ಚಭವಿತನದಿಂದ
ನಿಚ್ಚ ನರಕಕ್ಕಿಳಿವ
ಕರ್ಮಚಾಂಡಾಲವಿಪ್ರರು
ನೀವು ಕೇಳಿರೇ!
ಈಶಭಕ್ತರ
ಕಂಡು ದೂಷಿಸಿ ನರಕಕ್ಕಿಳಿವ
ಶಾಪಹತರು
ನೀವು ಕೇಳಿರೇ!
ವಿಭೂತಿಯನೊಲ್ಲದೆ
ಬಿಳಿಯ ಮಣ್ಣನಿಡುವ
ಶ್ವಪಚರೆಲ್ಲ
ನೀವು ಕೇಳಿರೇ!
ಹರಿಯೂ
ಹರನೂ ಸರಿಯೆಂದು ಗಳಹುವ
ಮರುಳವಿಪ್ರರು
ನೀವು ಕೇಳಿರೇ!
ಆದಿಯಲ್ಲಿ
ಶ್ರೀವಿಷ್ಣು ಮೇದಿನಿಯರಿಯೆ
ಒಂದು
ನಯನವನು ಪುಷ್ಪಮಾಗಿತ್ತು ಪಡೆಯನೆ ವೈಕುಂಠವನು?
ವೇದಕ್ಕೆ
ನೆಲಗಟ್ಟಾವುದೆಂದು ಬಲ್ಲಡೆ ನೀವು ಹೇಳಿರೇ!
ಬ್ರಾಹ್ಮಣಿಕೆಗೆ
ನೆಲಗಟ್ಟಾವುದೆಂದು ಬಲ್ಲಡೆ ನೀವು ಹೇಳಿರೇ!
ವೇದಕ್ಕೆ
ನೆಲಗಟ್ಟು ಓಂಕಾರ, ಬ್ರಾಹ್ಮಣಿಕೆಗೆ ನೆಲಗಟ್ಟು ಗಾಯತ್ರೀ.
ಓಂಕಾರವೇನ
ಹೇಳಿತ್ತು, ಗಾಯತ್ರಿಯೇ ಹೇಳಿತ್ತೆಂಬುದ
ತಿಳಿದು
ವಿಚಾರಿಸಿಕೊಳ್ಳಿರೇ ಶ್ರುತಿಗಳೊಳಗೆ.
ಅದೆಂತೆಂದಡೆ:
'ಓಂಕಾರಪ್ರಭವಾ
ವೇದಾ ಓಂಕಾರಪ್ರಭವಾಸ್ಸ್ವರಾ|
ಓಂಕಾರಪ್ರಭವಂ
ಸರ್ವಂ ತ್ರೈಲೋಕ್ಯಂ ಸಚರಾಚರಂ||'
ಇನ್ನು
ಗಾಯತ್ರೀ:
ಓಂ ಮಹಃ
ಓಂ ಜನಃ ಓಂ ತಪಃ
'ಓಂ
ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್'
ಎಂದು
ಶ್ರಾದ್ಧ ತದ್ದಿನ ಪಿತೃಕಾರ್ಯವ ಮಾಡುವಲ್ಲಿ
ವಿಶ್ವದೇವರ
ಸ್ಥಾಪನೆಯಂ ಮಾಡುವಿರಿ,
'ವಿಶ್ವದೇವಾಯ
ಸ್ವಾಹಾ' ಎಂದು ಅರ್ಚನೆ ವಂದನೆಯಂ ಮಾಡುವಿರಿ,
ಯಥೋಕ್ತವಾಗಲಿ
ಯಥಾಕಾಲವಾಗಲೆಂದು ಬೇಡಿಕೊಂಬಿರಿ.
'ಗಯಾಯಾಂ
ಶ್ರೀರುದ್ರಪಾದೇ ದತ್ತಮಸ್ತು' ಎಂದೆಂಬಿರಲ್ಲಾ,
'ಗಯಾಯಾಂ
ಶ್ರೀವಿಷ್ಣುಪಾದೇ'
ಎಂದೆಂದುಂಟಾದಡೆ
ಹೇಳಿರೇ.
ಸತಿಗೆ
ಪಿಂಡವ ಕೊಡುವಲ್ಲಿ
'ವಸು
ರುದ್ರಾದಿತ್ಯರೂಪೇಭ್ಯೋ ಮಧ್ಯಪಿಂಡಸ್ತು ಪುತ್ರದಃ|
ವೇದೋಕ್ತರುದ್ರನಿರ್ಮಾಲ್ಯಂ
ಉರ್ರಸ್ಪಾಂನ್ಯಪವಿತ್ರಕಂ||'
'ಆದಿಪಿಂಡಾಂತ್ಯಪಿಂಡಂ
ಚ ವರ್ಜಯೇತ್ ಸತತಂ ಬುಧಃ'
ಎಂದು
ರುದ್ರಪಿಂಡದಿಂದ ಉತ್ಪತ್ಯವಾಗಿ
ಮರಳಿ
ಭಕ್ತರ ಜರಿದು ಗಳಹುವಾ ಪಾತಕರೆಲ್ಲರೂ ನೀವು ಕೇಳಿರೇ:
ಭಕ್ತರು
ಕೊಂಬುದು ಪಾದೋದಕ ಪ್ರಸಾದ,
ನೀವು
ಉಂಬುದೇ ಭೂತಶೇಷ.
ಅದೆಂತೆಂದೊಡೆ
ಮಂತ್ರ:
'ಪ್ರಾಣಾಯ
ಸ್ವಾಹಾಃ ಅಪಾನಾಯ ಸ್ವಾಹಾ ವ್ಯಾನಾಯ ಸ್ವಾಹಾ
ಉದಾನಾಯ
ಸ್ವಾಹಾ ಸಮಾನಾಯ ಸ್ವಾಹಾ' ಎಂದು
ಪಂಚಭೂತಕ್ಕೆ
ಬಲಿಯನಿಕ್ಕಿ
ಆ
ಭೂತಶೇಷವ ತಿಂಬ ಭೂತಪ್ರಾಣಿಯ
ಲಿಂಗಪ್ರಾಣಿಗೆ
ಸರಿಯೆಂಬುವನ ಬಾಯಲ್ಲಿ ಕೆರ್ಪನಿಕ್ಕಿ
ಈಶಭಕ್ತಿಯ
ಮೆರೆವ
ನಮ್ಮ
ಉರಿಲಿಗಪೆದ್ದಿಪ್ರಿಯ ವಿಶ್ವೇಶ್ವರ.
ವಿಪ್ರರನ್ನು
ಶಾಪಹತರೆಂದು ಕರೆಯಲು ಕಾರಣ, ಅವರು ಹರಿಹರರನ್ನು ಸಮಾನರೆಂದು ಹೇಳುವ ಮರುಳುತನ ತೋರಿಸುವುದು.
ವಿಷ್ಣು ಶಿವನಿಂದಲೇ ವೈಕುಂಠವನ್ನು ಪಡೆದುದನ್ನು ಉಲ್ಲೇಖಿಸಿ (ಈ ಕತೆ ಎಲ್ಲಿದೆಯೋ ತಿಳಿಯದು),
ವಿಭೂತಿಯ ಬದಲು ಬಿಳಿ ಮಣ್ಣನ್ನು ಇಟ್ಟುಕೊಳ್ಳುವುದು, ಶ್ರಾದ್ಧ ದಿನ ಬ್ರಾಹ್ಮಣರು 'ಶ್ರೀ
ವಿಷ್ಣುಪಾದೇ' ಎನ್ನದೆ 'ಶ್ರೀ ರುದ್ರಪಾದೇ' ಎನ್ನುವುದು, ಸತಿಗೆ ಪಿಂಡ ನೀಡುವಾಗ 'ರುದ್ರಪಿಂಡ'ವನ್ನು
ಉಲ್ಲೇಖಿಸುವುದು ಮುಂತಾದವನ್ನು ಹೇಳಿ ಆ ಕಾರಣದಿಂದ ಶಿವನೇ ವಿಷ್ಣುವಿಗಿಂತ ಶ್ರೇಷ್ಠ ಎಂದು
ವಚನಕಾರ ಪ್ರತಿಪಾದಿಸುತ್ತಾನೆ. ಇಂತಹ ಕಡೆ ಬ್ರಾಹ್ಮಣರ ಆಚರಣೆಗಳ ಬಗ್ಗೆ ಉಲಿಂಗಪೆದ್ದಿಗಿರುವ
ಆಳವಾದ ಅರಿವು ನಮ್ಮನ್ನು ಅಚ್ಚರಗೊಳಿಸುತ್ತದೆ. ವೇದಗಳನ್ನು ಕೇಳುವ ಅರ್ಹತೆಯನ್ನೂ
ಹೊಂದಿದ್ದಿಲ್ಲದ ವರ್ಗದವನೊಬ್ಬ ಇಷ್ಟು ವಿವರಗಳನ್ನು ಕಲೆಹಾಕುವುದು, ಅವುಗಳ ಬಗ್ಗೆ
ಅಧಿಕಾರಯುತವಾದ ಮಾಹಿತಿ ನೀಡುವುದು ವಿಸ್ಮಯಕಾರಿಯಾದ ಸನ್ನಿವೇಶ. ಉರಿಲಿಂಗಪೆದ್ದಿಗೆ ಬ್ರಾಹ್ಮಣರ ಆಚರಣೆಗಳ
ಬಗೆಗಿನ ತಿಳಿವಳಿಕೆ ಎಷ್ಟು ವ್ಯಾಪಕವೂ ಆಳವೂ ಆದುದೆಂಬುದು ನಮ್ಮ ಗಮನ ಸೆಳೆಯುತ್ತದೆ. ಇವನ್ನೆಲ್ಲ
ಇವನು ತಿಳಿದ ಬಗೆ ಹೇಗೆ? ಸಾಕ್ಷಾತ್ತಾಗಿ ನೋಡಿಯೇ ಅಥವಾ ಪುಸ್ತಕಗಳಿಂದ ವಿಷಯ ಸಂಗ್ರಹಿಸುವುದರ
ಮೂಲಕವೇ?
ಹಿಂದಿನ ಉಲ್ಲೇಖಗಳನ್ನು ನೀಡುವುದರೊಂದಿಗೆ ವಚನಕಾರರು ಹೊಸ
ವ್ಯವಸ್ಥೆಗೆ ಪರ್ಯಾಯಗಳನ್ನು ಸೃಷ್ಟಿಸಿದ್ದೂ ಕಂಡುಬರುತ್ತದೆ. ಅಂದರೆ ಹಳೆಯ ಧಾರ್ಮಿಕ ವಲಯದಲ್ಲಿ
ಪ್ರಚಲಿತವಾಗಿದ್ದ ಕೆಲವು ಪರಿಕಲ್ಪನೆಗಳಿಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದು ಒಂದೆಡೆಯಾದರೆ,
ಅವುಗಳಿಗೆ ಸಂವಾದಿಯಾಗಿ ಹೊಸವನ್ನು ಸೃಷ್ಟಿಸುವುದು ಮತ್ತೊಂದೆಡೆ, ಮತ್ತು ಪರಿಕಲ್ಪನೆಗಳ ಒಟ್ಟಂದ
ಹಳೆಯದಾದರೂ ಅಲ್ಲಿನ ವಿವರಗಳ ಸ್ಥಾನದಲ್ಲಿ ಹೊಸವನ್ನು ಸೇರಿಸುವುದೂ ಮುಖ್ಯವಾಗಿ ನಡೆಯಿತು.
ಜಾತಿಗಳನ್ನು ಹೊಸ ವ್ಯಾಖ್ಯಾನಕ್ಕೆ ಒಳಗುಮಾಡಿದ್ದು ಎಲ್ಲರಿಗೂ ತಿಳಿದದ್ದೇ. ಪಂಚಪಾತಕಗಳೆಂಬ ಹಳೆಯ
ಋಣಾತ್ಮಕ ಪರಿಕಲ್ಪನೆಯನ್ನು ಹೊಸ ಧನಾತ್ಮಕ ಪರಿಕಲ್ಪನೆಯನ್ನಾಗಿ ಮಾಡಿದ್ದುದನ್ನು ನೋಡಬಹುದು.
ಹಿಂದೆ ಮಾಡಬಾರದ ಐದನ್ನು ಹೇಳುತ್ತಿದ್ದರು; ವಚನಕಾರರು ಭಕ್ತನು ಮಾಡಬಾರದ ಐದನ್ನು ಪಂಚಪಾತಕಗಳೆಂದು
ಹಲವು ವೇಳೆ ಹೊಸ ಪಟ್ಟಿಯನ್ನು ನೀಡಿದರು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅವನು ಮಾಡಲೇಬೇಕಾದ
ಐದನ್ನು ಹೇಳಿದರು. ಪ್ರಾಯಶಃ ಅದೇ ಪಂಚಾಚಾರವೆಂಬ ಪರಿಕಲ್ಪನೆಯ ಮೂಲ. ಅಂತೆಯೇ ಸಪ್ತವ್ಯಸನಗಳೆಂಬ
ಋಣಾತ್ಮಕ ಪರಿಕಲ್ಪನೆಯ ಜಾಗದಲ್ಲಿ ಸಪ್ತಾಚಾರಗಳೆಂಬ ಧನಾತ್ಮಕ ಪರಿಕಲ್ಪನೆಯನ್ನಿರಿಸಿದ್ದು.
ವೈದಿಕದ ಉಪನಯನದ ಬದಲು ದೀಕ್ಷೆಯನ್ನು ಹೆಸರಿಸಿದರು; ಜನಿವಾರದ ಬದಲು ಲಿಂಗಧಾರಣೆಯನ್ನು
ವಿಧಿಸಿದರು; ಸಾರ್ವತ್ರಿಕ ದೈವದ ಕುರುಹಿಗೆ ಬದಲು ವೈಯಕ್ತಿಕವಾದ ಇಷ್ಟಲಿಂಗವನ್ನು ತಂದರು. ಇನ್ನು
ಕೆಲವದರ ಹಳೆಯ ಹೆಸರನ್ನೇ ಉಳಿಸಿಕೊಂಡರೂ, ವಚನಕಾರರು ಅವುಗಳಲ್ಲಿ ಹೊಸ ವಿವರಗಳನ್ನು ತುಂಬಿದರು. ಮಾದಾರ
ಚೆನ್ನಯ್ಯನು ಒಂದು ವಚನದಲ್ಲಿ "ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ, ದೂರ್ವಾಸ ಮಚ್ಚಿಗ,
ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ, ಕೌಂಡಿಲ್ಯ ನಾವಿದ" ಎಂದು ಅವರವರ ಜಾತಿಗಳ
ಸಮೇತ ಏಳು ಮಂದಿಯನ್ನು 'ಸಪ್ತರ್ಷಿ'ಗಳೆಂದು ಹೆಸರಿಸುತ್ತಾನೆ. 'ಸಪ್ತರ್ಷಿ' ಎಂಬುದು ಮೂಲತಃ
ವೈದಿಕ ಪರಿಕಲ್ಪನೆ. ಅವರು ಕಲ್ಪಭೇದದಿಂದ ಭೀನ್ನರಾಗುವರೆಂದು ಅಲ್ಲಿನ ನಂಬಿಕೆ. ಅವುಗಳಲ್ಲಿ ಎರಡು
ಗಣಗಳು ಪ್ರಸಿದ್ಧ: ವೈವಸ್ವತ ಮನ್ವಂತರದ ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ,
ಜಮದಗ್ನಿ, ವಸಿಷ್ಠರನ್ನು ಮಹಾಭಾರತದ ಶಲ್ಯಪರ್ವದಲ್ಲಿ ಸಪ್ತರ್ಷಿಗಳೆಂದು ಉಲ್ಲೇಖಿಸಿದ್ದರೆ,
ಮರೀಚಿ, ಅತ್ರಿ, ಅಂಗೀರಸ್ಸು, ಪುಲಸ್ತ್ಯ, ಪುಲಹ, ಕ್ರತ, ವಸಿಷ್ಠರನ್ನು ಸ್ವಾಯಂಭುವ ಮನ್ವಂತರದ
ಸಪ್ತರ್ಷಿಗಳೆಂದು ಅದೇ ಮಹಾಭಾರತದ ಶಾಂತಿಪರ್ವದಲ್ಲಿ ಹೇಳಿದೆಯಂತೆ. ಆದರೆ ಚೆನ್ನಯ್ಯನು
ನೀಡುತ್ತಿರುವ ಪಟ್ಟಯಲ್ಲಿ ಈ ಹೆಸರುಗಳಾವುವೂ ಇಲ್ಲ; ಆದರೆ ಆ ವೈದಿಕ ಪರಿಕಲ್ಪನೆಗೆ ಪರ್ಯಾಯಯವಾಗಿ
ಕೆಳಜಾತಿಗಳ ಋಷಿಗಳನ್ನು ಸಪ್ತರ್ಷಿಗಳೆಂದು ಕರೆಯಲಾಗಿದೆ. ಇದು (ಅಂದರೆ ಅವರ ಪಟ್ಟಿಯನ್ನು
ಅಲ್ಲಗಳೆದು ಹೊಸದನ್ನು ಹೇಳುವುದು) ಬ್ರಾಹ್ಮಣರಿಗೆ ಸೆಡ್ಡು ಹೊಡೆಯುವ ಒಂದು ಬಗೆಯಾದರೆ, ಹಳೆಯ
ಪರಿಕಲ್ಪನೆಗೆ ಹೊಸ ವಿವರಗಳನ್ನು, ಅದೂ ತಮ್ಮ ಆಶಯಕ್ಕನುಗುಣವಾಗಿ, ನೀಡುವುದು ಇನ್ನೊಂದು.
(ಕನಕದಾಸನ 'ರಾಮಧಾನ್ಯ ಚರಿತೆ'ಯಲ್ಲಿನ ಒಂದು ವಿವರ ಇಲ್ಲಿ ನೆನಪಾಗುತ್ತದೆ. ಅಲ್ಲಿ
ನವಧಾನ್ಯಗಳನ್ನು ಹೆಸರಿಸುವಾಗ ಹಳ್ಳಿಗಾಡಿನ ಧಾನ್ಯಗಳಾದ ಹಾರಕ, ಬರಗು, ಜೋಳ, ಕಂಬು, ಸಾಮೆ, ನವಣೆ
ಇವುಗಳನ್ನು – ಇವುಗಳನ್ನು
'ಸಿರಿಧಾನ್ಯ'ಗಳೆಂದು ಕರೆಯುವ ವಾಡಿಕೆಯಿದೆ - ಕವಿ ಹೆಸರಿಸುತ್ತಾನೆ. ಇವುಗಳಲ್ಲಿ ಯಾವುವೂ ವೈದಿಕ
ವಲಯದಲ್ಲಿನ ನವಧಾನ್ಯಗಳಲ್ಲಿ ಸೇರುವುದಿಲ್ಲ. ಇವೆಲ್ಲ ಮೇಲುವರ್ಗದಲ್ಲಿ ಮಾನ್ಯತೆ ಪಡೆದ ಶ್ರೇಷ್ಠ
ಧಾನ್ಯಗಳಲ್ಲ. ಅಲ್ಲದೆ ವೈದಿಕ ನವಧಾನ್ಯಗಳಲ್ಲಿ ಸೇರುವುದು ಎರಡು ಗುಂಪು: ಸಾಮಾನ್ಯವರ್ಗದವು;
ಶ್ರಾದ್ಧದಲ್ಲಿ ಪ್ರಶಸ್ತವಾದವು.)
ಉರಿಲಿಂಗಪೆದ್ದಿಗೆ ಪುರಾಣಗಳೆಂದರೆ ಬಹು ಇಷ್ಟ. ಆದರೆ ಇವನು
ಉಲ್ಲೇಖಿಸುವ ಪುರಾಣಪ್ರಸಂಗಗಳಲ್ಲಿ ಎಷ್ಟು ವೈದಿಕ ಪುರಾಣಗಳವು, ಎಷ್ಟು ಜಾನಪದ ಮೂಲದವು ಅಥವಾ
ಇವನವೇ ಸೃಷ್ಟಿ ಎಂದು ಹೇಳಲು ಬಾರವು. ಉದಾಹರಣೆಗೆ, ಒಂದು ವಚನದಲ್ಲಿ "ಅಂಗೀರಸ, ಶಾಂಡಿಲ್ಯ,
ವೇದವ್ಯಾಸ, ವಾಲ್ಮೀಕಿ, ಮಾಂಡವ್ಯ ಮೊದಲಾದ ಋಷಿಗಳೆಲ್ಲರೂ ಶಿವನಿಂದೆ, ಶಿವಭಕ್ತರ ನಿಂದೆಯ ಮಾಡಿ
ಶಿವನ ಕ್ಷೇತ್ರವಹ ವೇದಾದಿಶಾಸ್ತ್ರಾಗಮಂಗಳಿಗೆ ಪ್ರತಿಯಿಟ್ಟು ಕರ್ಮಶಾಸ್ತ್ರಂಗಳನೆಸಗಿ ಅಕ್ಷಯ
ನರಕವೈದಿರಲಾಗಿ, ತ್ರ್ಯಕ್ಷನ ಶರಣ ಕೃಪಾವರದಾನಿ ಏಕನಿಷ್ಠ ಪರಮಮಾಹೇಶ್ವರ ಸಾನಂದನು ಕರುಣದಿಂದಲೆತ್ತನೆ
ಅವರೆಲ್ಲರ ನರಕಲೋಕದಿಂದೆ?" ಎಂದಿದೆ. ಆದರೆ ಈ ಋಷಿಗಳು ಮಾಡಿದ ಶಿವನಿಂದೆ ಹಾಗೂ ಶಿವಭಕ್ತರ
ನಿಂದೆಯ ಸ್ವರೂಪವಾವುದು ಎಂಬುದು ಸುಲಭವಾಗಿ ತಿಳಿಯುವುದಿಲ್ಲ. ಅವುಗಳಿಗೆ ಆಕರವಾವುದೋ ತಿಳಿಯದು.
ಇದ್ದರೂ ಜನಜನಿತವಲ್ಲದ ಮೂಲಗಳಿಂದ ಅವುಗಳನ್ನು ಆಯ್ದಿರುವುದು ಉರಿಲಿಂಗಪೆದ್ದಿಯ ವೈದುಷ್ಯವನ್ನು
ತೋರಿಸುತ್ತದೆ. ಒಂದು ವಚನವಂತೂ ತನ್ನ ಪೌರಾಣಿಹ ಹಿನ್ನೆಲೆಯಿಂದ ತುಂಬ ಪ್ರಮುಖವಾಗಿದೆ. ಹೀಗಾಗಿ ಆ
ಇಡೀ ವಚನವನ್ನು ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ:
ಶಿವಶಿವಾ,
ಭಕ್ತಿಹೀನನ ಬಟ್ಟೆಯಲ್ಲಿ ಕಂಡು
ನೆಟ್ಟನೆ
ಶಿವಭಕ್ತ ಜೋಹಾರ ಎಂದಡೆ,
ಸುರಾಪಾನದಲ್ಲಿ
ಮಜ್ಜನಮಾಡಿದಂತಾಯಿತ್ತು, ಆತನ ಶಿವಪೂಜೆ,
ಕಟ್ಟಿದ
ಕೆರೆಯನೊಡೆದಂತಾಯಿತ್ತು ಅವನ ಶಿವಪೂಜೆ,
ಅಮೇಧ್ಯವ
ಭುಂಜಿಸಿದಂತಾಯಿತ್ತಯ್ಯ ಅವನ ಶಿಪೂಜೆ,
ಹೇಲೊಳಗಣ
ಹುಳವ ಕೋಳಿ ಕೆರೆದಂತಾಯಿತ್ತು ಅವನ ಶಿವಪೂಜೆ,
ಒಣಗಿದೆಲುವ
ಸೊಣಗ ಕಡಿದು
ತನ್ನ
ರಕ್ತವ ತಾನೇ ಭುಂಜಿಸಿದಂತಾಯಿತ್ತು ಅವನ ಶಿವಪೂಜೆ,
ಕನ್ನಡಿಯ
ಮೇಲೆ ಉದ್ದುರುಳಿದಂತಾಯಿತ್ತು ಅವನ ಶಿವಪೂಜೆ,
ಅರೆಯ
ಮೇಲೆ ಆಡು ಹಿಕ್ಕೆಯನಿಟ್ಟಂತಾಯಿತ್ತು ಅವನ ಶಿವಪೂಜೆ,
ಲೋಳೆಸರದ
ಮೇಲೆ ಬಂಡಿ ಹರಿದಂತಾಯಿತ್ತು ಅವನ ಶಿವಪೂಜೆ!
ಅದೆಂತೆಂದಡೆ,
ವಿಷ್ಣುಪುರಾಣೇ:
'ಬ್ರಹ್ಮಬೀಜಂ
ತೃಣಂ ನಾಸ್ತಿ ಕೇಶವಾಶ್ಚಧಿದೇವತಾ|
ಗುರುಭ್ರಷ್ಟಶ್ಚ
ಚಾಂಡಾಲೋ ವಿಪ್ರಃ ಶ್ವಾನೋಹಿ ಜಾಯತೇ||
ವಿಪ್ರಸ್ಯ
ದರ್ಶನಂ ಚೈವ ಪಾಪಪಂಜಮೇವವ ಚ|
ವಿಪ್ರಸ್ಯ
ವಂದನಂ ಚೈವ ಕೋಟಿಜನ್ಮಸು ಸೂಕರಃ||'
ಎಂದುದಾಗಿ,
ರೇಣುಕಾದೇವಿಯ ಮಗನೇ ಬ್ರಾಹ್ಮಣನು,
ಮಾತಂಗಿಯ
ಮಗನೇ ಹೊಲೆಯನು;
ಇವರಿಬ್ಬರೂ
ಜಮದಗ್ನಿಗೆ ಹುಟ್ಟಿದರಾಗಿ,
ಇದಕೆ
ಸಾಕ್ಷಿ: ಭಾರದ್ವಾಜ ವಿಶ್ವಾಮಿತ್ರ ಅಗಸ್ತ್ಯ ನಾರದ ಕೌಂಡಿಲ್ಯ
ಈಯೈವರು
ಸಾಕ್ಷಿಯಲ್ಲಿ,
ನಿಮ್ಮ
ನಿಮ್ಮೊಳಗೆ ಸಂವಾದವು ಬೇಡೆಂದು
ವಿಭಾಗವಂ
ಮಾಡಿಕೊಟ್ಟ ವಿವರಮಂ ಕೇಳಿರಣ್ಣಾ:
ಗ್ರಾಮದೊಳಗಣ
ಸೀಮೆಯ ಗೃಹವನೇ ಬ್ರಾಹ್ಮಣರಿಗೆ ಕೊಟ್ಟರು,
ಗ್ರಾಮದ
ಹೊರಗಣ ಸೀಮೆಯ ಗೃಹವನೇ ಹೊಲೆಯರಿಗೆ ಕೊಟ್ಟರು;
ಸತ್ತ ಹಸುವನೆಳೆದುಕೊಂಡು
ಹೋಹವರನೇ
ಹೊಲೆಯರ
ಮಾಡಿದರು,
ಜೀವದ
ಹಸುವ ಹದಿನೆಂಟು ಜಾತಿಯ ಮಂಚದಡಿಯಲ್ಲಿ ನುಸಿದು
ಗೋದಾನಮುಖದಲ್ಲಿ
ಕೊಂಡು ಹೋಹರನೇ
ಬ್ರಾಹ್ಮಣರ
ಮಾಡಿದರು.
ಇನ್ನು
ನಿಮಗೂ ತಮಗೂ ಸೊಮ್ಮು ಸಂಬಂದವಿಲ್ಲೆಂದು ಕಂಡಾಗ
ತೊಲಗುವಂತೆ
ಸಂಬೋಳಿಯ ನಾಮಾಂಕಿತವಂ ಕೊಟ್ಟು
ತೊರೆ
ಪತ್ರವಂ ಬರೆದರಾಗಿ.
ಇದನರಿಯದಿದ್ದಡೆ
ಇನ್ನೂ ಕೇಳಿರಣ್ಣಾ:
ನಳಚಕ್ರವರ್ತಿರಾಯನು
ಪಿಂಡ ಪಿತೃಕಾರ್ಯವ ಮಾಡುವಲ್ಲಿ,
ಹೊನ್ನ
ಗೋವಂ ತಂದು ಬಿನ್ನಾಣದಲ್ಲಿ ದಾನವ ಕೊಟ್ಟಲ್ಲಿ,
ಹೊಲೆಯರು
ನಾಡಕೂಟವ ಕೂಡಿ ಆ ಸ್ಥಲ ತಾರ್ಕಣೆಯಲ್ಲಿ
ಪೂರ್ವಸಾಧನ
ಸಂಬಂಧದಿಂದ ನ್ಯಾಯವ ಮಾಡಿ
ಇತ್ತಂಡವ
ಹಂಚಿಕೊಂಡ ವಿವರವ ಕೇಳಿರಣ್ಣಾ:
ಕೊಂಬುಕೊಳಗನೇ
ತೆಗೆದು ಏಳುನೂರೆಪ್ಪತ್ತು ತೂಕ ಚಿನ್ನವ ಹಂಚಿಕೊಂಡು
ಉಳಿದ
ಕೊಂಬು ಕೊಳಗವ ವಿಪ್ರರು ಎತ್ತಿಕೊಂಡರಾಗಿ,
ಈ
ಹೊನ್ನ ಗೋವನಳಿದು ತಿಂಬ ಕುನ್ನಿಗಳ
ಕಂಡು
ಕೇಳಿಯೂ ಅರಿದು ಮರೆದೂ
ಉತ್ತಮಕುಲದ್ವಿಜರೆಂದು
ಅಲ್ಲಿ ಉಪದೇಶವಂ ಕೊಂಡು
ನಮಸ್ಕರಿಸುವ
ಅಜ್ಞಾನಿ ಹೊಲೆಯರ ನಾನೇನೆಂಬೆನಯ್ಯಾ,
ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರ.
ಇದು
ಜಾನಪದ ಕತೆಯನ್ನು ಆಧರಿಸಿರುವ ಸಾಧ್ಯತೆಗಳೇ ಹೆಚ್ಚು. ವೈದಿಕ ಸಮಾಜದ ಎರಡು ತುದಿಗಳಾದ ಬ್ರಾಹ್ಮಣ
ಮತ್ತು ದಲಿತರನ್ನು ಒಂದೇ ತಂದೆಯ ಇಬ್ಬರು ಹೆಂಡಂದಿರ ಮಕ್ಕಳು, ಬ್ರಾಹ್ಮಣರು ರೇಣುಕೆಯ ಮಕ್ಕಳು,
ಹೊಲೆಯರು ಮಾತಂಗಿಯ ಮಕ್ಕಳೆಂದು ಉರಿಲಿಂಗಪೆದ್ದಿ ಹೇಳುತ್ತಿದ್ದಾನೆ. ಹೀಗಾಗಿ ಅವರಿಬ್ಬರೂ ಸೋದರರು
ಎಂದು ಈ ಐತಿಹ್ಯ ಹೇಳುತ್ತದೆ. ವೈದಿಕ ಪುರಾಣಗಳಲ್ಲಿ ಜಮದಗ್ನಿಯ ಹೆಂಡತಿಯಾದ ರೇಣುಕೆಯ ಉಲ್ಲೇಖ
ಮಾತ್ರವಿದೆ. ಅವಳೊಮ್ಮೆ ಗೆಳತಿಯರೊಂದಿಗೆ ಗಂಗೆಯಿಂದ ನೀರು ತರಲು ಹೋಗುತ್ತಾಳೆ; ಅಲ್ಲಿ
ಚಿತ್ರರಥನೆಂಬ ಗಂಧರ್ವನು ತನ್ನ ಮಡದಿಯರೊಡನೆ ನೀರಾಟವಾಡುತ್ತಿರುತ್ತಾನೆ; ಅದನ್ನು ಕಂಡು
ಮೋಹಪರವಶೆಯಾಗಿ ರೇಣುಕೆಯು ಅಲ್ಲಿಯೇ ಹೆಚ್ಚು ಹೊತ್ತು ನಿಂತಿದ್ದು ಆಶ್ರಮಕ್ಕೆ ತಡವಾಗಿ
ಹೋಗುತ್ತಾಳೆ; ಇದರಿಂದ ಕೋಪಗೊಂಡ ಜಮದಗ್ನಿಯು ಅವಳಿಗೆ ಮರಣದಂಡನೆಯನ್ನು ವಿಧಿಸಿ ಅವಳ
ಶಿರಚ್ಛೇದವನ್ನು ಮಾಡಲು ತನ್ನ ಮಕ್ಕಳಿಗೆ ಆಜ್ಞಾಪಿಸುತ್ತಾನೆ; ಐವರು ಮಕ್ಕಳಲ್ಲಿ ಮೊದಲ ನಾಲ್ಕು
ಜನ ಹಿಂಜರಿಯುತ್ತಾರೆ; ಆದರೆ ಐದನೆಯವನಾದ ಪರಶುರಾಮ ತಾಯಿಯ ಹಾಗೂ ತಂದೆಯ ಮಾತನ್ನು ನೆರವೇರಿಸದ
ನಾಲ್ವರು ಅಣ್ಣಂದಿರ ತಲೆ ಕತ್ತರಿಸುತ್ತಾನೆ; ಇದರಿಂದ ಸಂತುಷ್ಟನಾದ ಜಮದಗ್ನಿ ಅವನಿಗೆ ವರ ಬೇಡಲು
ಹೇಳಿದಾಗ, ಅವರೆಲ್ಲರನ್ನೂ ಬದುಕಿಸಲು ಪರಶುರಾಮ ಕೇಳಿಕೊಳ್ಳುತ್ತಾನೆ.
ಮೇಲಿನದರ ಜೊತೆಗೆ ಜನಪದರಲ್ಲಿ ಪ್ರಚಲಿತವಾದ ಈ ಕತೆಯ ಮತ್ತೊಂದು
ರೂಪವನ್ನೂ ಎಡ್ಗರ್ ಥರ್ಸ್ಟನ್ ಅವರು ತಮ್ಮ 'ಕಾಸ್ಟ್ಸ್ ಅಡ್ ಟ್ರೈಬ್ಸ್ ಆಫ್ ಸೌತ್ ಇಂಡಿಯ'
ಗ್ರಂಥದಲ್ಲಿ ನೀಡುತ್ತಾರೆ. ಅದರ ಪ್ರಕಾರ ಒಮ್ಮೆ ರೇಣುಕೆಯು ಗಂಡನ ಹೋಮಕಾರ್ಯಗಳಿಗೆ ನೀರನ್ನು
ತರಲು ಬೆಳಗಿನ ಜಾವವೇ ನದಿಗೆ ತೆರಳುತ್ತಾಳೆ; ಅವಳೊಡನೆ ಎಂದಿನಂತೆ ಸಮಗಾರ ಜಾತಿಯ
ಸೇವಕಿಯಿರುತ್ತಾಳೆ; ಅವಳು ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಆಗಸದಲ್ಲಿ ಕಾರ್ಯಾರ್ಥವಾಗಿ ಸಾವಿರ
ತೋಳುಗಳಿದ್ದ ಕಾರ್ತವೀರ್ಯಾರ್ಜುನನು ಹೋಗುತ್ತಿರುತ್ತಾನೆ; ಅವನ ಪ್ರತಿಬಿಂಬವು ನೀರಲ್ಲಿ
ರೇಣುಕೆಗೆ ಕಾಣುತ್ತದೆ; ಅದನ್ನು ಕಂಡು ಅವಳಿಗೆ ಸಂತಸವಾಗುತ್ತದೆ; ಅವಳ ಪಾತಿವ್ರತ್ಯದ
ಮಹಿಮೆಯಿಂದಾಗಿ ಅದುವರೆಗೂ ಅವಳೆಂದೂ ನೀರನ್ನು ಪಾತ್ರೆಯಲ್ಲಿ ತುಂಬಿಕೊಳ್ಳಬೇಕಾದ್ದಿರಲಿಲ್ಲ,
ನೀರು ತಾನಾಗಿ ಕೊಡಕ್ಕೆ ಬಂದು ತುಂಬಿಕೊಳ್ಳುತ್ತಿರುತ್ತದೆ; ಆದರೆ ಇಂದು ಈ ರೀತಿ ನಡೆಯುವುದಿಲ್ಲ,
ಹೀಗಾಗಿ ಅವಳು ನೀರಿಲ್ಲದೆಯೇ ಆಶ್ರಮಕ್ಕೆ ವಾಪಸಾಗಬೇಕಾಗುತ್ತದೆ; ಈ ಮಧ್ಯೆ, ಹೆಂಡತಿಯು ಏಕೆ
ತಡಮಾಡಿದಳೆಂದು ಯೋಚಿಸಿದ ಜಮದಗ್ನಿಗೆ ದಿವ್ಯದೃಷ್ಟಿಯಿಂದ ನಡೆದುದು ತಿಳಿಯುತ್ತದೆ; ಇದರಿಂದ
ಕ್ರುದ್ಧಗೊಂಡ ಮುನಿಯು ಅವಳ ತಲೆಯನ್ನು ಕತ್ತರಿಸುವಂತೆ ಮಗನಾದ ಪರಶುರಾಮನಿಗೆ ಆಜ್ಞಾಪಿಸುತ್ತಾನೆ;
ಹಾಗೆಯೇ ಮಾಡಲು ನದಿಯ ಕಡೆ ಸಾಗುತ್ತಿದ್ದ ಪರಶುರಾಮನಿಗೆ ತಾಯಿ ವಾಪಸಾಗುತ್ತಿರುವುದು ಕಾಣುತ್ತದೆ; ತನ್ನ ಬಿಲ್ಲಿಗೆ ಬಾಣವೊಂದನ್ನು ಹೂಡಿ ತಾಯಿಯ ಕಡೆ
ಬಿಡುತ್ತಾನೆ; ಅದು ತಾಯ ತಲೆಯನ್ನು
ಕತ್ತರಿಸುವುದರ ಜೊತೆಗೆ ಹಿಂದೆಯೇ ಬರುತ್ತಿದ್ದ ಸೇವಕಿಯ ತಲೆಯನ್ನೂ ಕತ್ತರಿಸುತ್ತದೆ; ತಕ್ಷಣ
ತಂದೆಯೆಡೆಗೆ ಮರಳಿದ ಪರಶುರಾಮನಿಗೆ ಇದು ತಿಳಿಯವುದೇ ಇಲ್ಲ; ಪಿತೃವಾಕ್ಯ ಪರಿಪಾಲನೆ ಮಾಡಿದ ಮಗನ
ಬಗ್ಗೆ ಅಭಿಮಾನ ತಾಳಿದ ಜಮದಗ್ನಿಯು ವರವನ್ನು ಬೇಡಲು ಅವನಿಗೆ ಹೇಳುತ್ತಾನೆ; ತಾಯಿಗೆ ಪುನರ್ಜನ್ಮ ನೀಡಲು ಅವನು
ಬೇಡಿಕೊಂಡಾಗ ಜಮದಗ್ನಿಯು ಮಂತ್ರಪೂತ ಜಲವನ್ನು ಮಗನ ಕೈಗೆ ಕೊಟ್ಟು ಬೇರಾದ ರುಂಡಮುಂಡಗಳನ್ನು
ಸೇರಿಸಿ ಪ್ರೋಕ್ಷಿಸಲು ಹೇಳುತ್ತಾನೆ;
ಸಂಭ್ರಮದಿಂದ ಹೊರಟ ಪರಶುರಾಮನು, ಇನ್ನೂ ನಸುಕಾಗಿಯೇ ಇದ್ದ ಕಾರಣದಿಂದ, ತಿಳಿಯದೆ ತಾಯ
ರುಂಡವನ್ನು ಸೇವಕಿಯ ಮುಂಡದೊಡನೆ ಸೇರಿಸಿ ನೀರನ್ನು ಪ್ರೋಕ್ಷಿಸುತ್ತಾನೆ. ಆಗ ಅವನಿಗೆ ಮತ್ತೊಂದು
ರುಂಡವಿರುವುದು ಗಮನಕ್ಕೆ ಬಂದು, ಅದು ಸೇವಕಿಯದಿರಬೇಕೆಂದು ಊಹಿಸಿ ಉಳಿದ ರುಂಡಮುಂಡಗಳನ್ನೂ
ಸೇರಿಸಿ ನೀರನ್ನು ಚುಮುಕಿಸಿದಾಗ, ಅದಕ್ಕೂ ಜೀವ ಬರುತ್ತದೆ; ಆನಂತರ ಅವನಿಗೆ ತನ್ನ ತಪ್ಪಿನ
ಅರಿವಾಗುತ್ತದೆ; ಆದರೆ ಈಗೇನೂ ಮಾಡುವಂತಿಲ್ಲ; ಇಬ್ಬರನ್ನೂ ಕರೆತಂದು ತಂದೆಯ ಮುಂದೆ ನಿಲ್ಲಿಸಿ
ತನ್ನ ತಪ್ಪನ್ನು ಕ್ಷಮಿಸಲು ಬೇಡುತ್ತಾನೆ; ಮುನಿಯು ರೇಣುಕೆಯ ಮುಂಡವಿದ್ದ ಹೆಂಗಸನ್ನು ಪತ್ನಿಯಾಗಿ
ಪರಿಗ್ರಹಿಸಿ, ಬೇಡಿಕೊಂಡಾಗ, ತನ್ನ ಹೆಂಡತಿಯ ದೇಹ ಅವಳಿಗಿರುವುದನ್ನು ಗಣಿಸಿ ಮತ್ತೊಬ್ಬಳಿಗೆ
ಕ್ಷುದ್ರ ದೇವತೆಯ ಸ್ಥಾನವನ್ನು ಅನುಗ್ರಹಿಸುತ್ತಾನೆ; ಇವಳೇ ಮಾತಂಗಿಯೆನಿಸುತ್ತಾಳೆ. ರೇಣುಕೆಯು
ಎಲ್ಲಮ್ಮನೆಂಬ ಹೆಸರಿನ ದೇವತೆಯಾಗಿ ಸವದತ್ತಿ ಮುಖ್ಯವಾಗಿ ಇಡೀ ಕರ್ನಾಟಕಾದ್ಯಂತ ವಿವಿಧೆಡೆಗಳಲ್ಲಿ
ಗ್ರಾಮದೇವತೆಯಾಗಿ ಕೆಳವರ್ಗಗಳವರಿಂದ ಪೂಜೆಗೊಳ್ಳುತ್ತಿದ್ದಾಳೆ. ಮಾತಂಗಿಯೆಂಬುದು ಎಲ್ಲಮ್ಮನಿಗಿರುವ ಮತ್ತೊಂದು ಹೆಸರು
ಮಾತ್ರವಾಗಿರದೆ, ಈ ಕತೆಯ ಪ್ರಕಾರ, ಅವಳ ಮತ್ತೊಂದು ರೂಪವಾಗಿದೆ.
ಉರಿಲಿಂಗಪೆದ್ದಿಯ ವಚನದಲ್ಲಿರುವುದು ಈ ಕತೆಯ ಸಾರವೇ ಎಂಬುದರಲ್ಲಿ
ಸಂಶಯವಿಲ್ಲ. (ಎಂದರೆ, ಈಗ ಜನಜನಿತವಾಗಿರುವ ಈ ಕತೆಯು ಹನ್ನೆರಡನೆಯ ಶತಮಾನದಲ್ಲಿಯೂ
ಚಾಲತಿಯಲ್ಲಿತ್ತು ಎಂಬುದು ವಿದಿತವಾಗುವ ಅಂಶ; ಅದಕ್ಕೂ ಹಿಂದೆಯೂ ಇದ್ದಿರಬೇಕು). ಉರಿಲಿಂಗಪೆದ್ದಿ
ಹೊಲೆಯನಿಗೆ ಹೊಂದಿಸಿ ಹೇಳಿರುವುದನ್ನು ಥರ್ಸ್ಟನ್ ಅವರು ಮಾದಿಗ ಜಾತಿಗೆ ಕೊಡುವ ವಿವರಗಳೊಡನೆ
ಹೇಳಿದ್ದಾರೆ (ಅವರ ಗ್ರಂಥದಲ್ಲಿ ಹೊಲೆಯನಿಗೆ ಸಂಬಂಧಿಸಿದಂತೆ ಈ ವಿವರವಿಲ್ಲ). ಅಂದರೆ ಈ
ವಚನಕಾರನು ಜಾನಪದ ಪುರಾಣ ಹಾಗೂ ಶಿಷ್ಟ ಪುರಾಣಗಳೆರಡನ್ನೂ ಆಧರಿಸಿ ತನ್ನ ನಿಲವುಗಳನ್ನು ಮಂಡಿಸುತ್ತಾನೆ. ಇದಕ್ಕೆಲ್ಲ ಐದು ಮಂದಿ ಋಷಿಗಳು
ಸಾಕ್ಷಗಳೆಂದು ಹೇಳುತ್ತಿದ್ದಾನೆ. ಅಲ್ಲದೆ, ಅವರು ಆಸ್ತಿವಿಭಾಗವನ್ನು ಮಾಡಿ ಇಬ್ಬರು ತಾಯಂದಿರ
ಮಕ್ಕಳಲ್ಲಿ ಹಂಚಿದರು ಎಂದು ಅದರ ವಿವರಗಳನ್ನೂ ನೀಡುತ್ತಿದ್ದಾನೆ. ಈ ಋಷಿಗಳ ಹೆಸರುಗಳನ್ನು
ಗಮನಿಸಿದರೆ ಅವರು ವೈದಿಕ ಪುರಾಣದಲ್ಲಿ ಉಲ್ಲೇಖಗೊಂಡವರೆಂಬುದು ಸ್ಪಷ್ಟ. ಬ್ರಾಹ್ಮಣರು ಊರ ಒಳಗೂ,
ಹೊಲೆಯರು ಊರ ಹೊರಗೂ ವಾಸಿಸುವ ಸಾಮಾಜಿಕ ವ್ಯವಸ್ಥೆಗೂ, ಬ್ರಾಹ್ಮಣರು ಜೀವಂತ ಹಸುಗಳ
ದಾನಸ್ವೀಕಾರಕ್ಕೂ ಅಂತ್ಯಜರು ಸತ್ತ ಹಸುಗಳ ಮೇಲೆ ಅಧಿಕಾರ ಹೊಂದಿರುವುದಕ್ಕೂ ಈ ಕತೆ ಒಂದು
ಕಾರಣವನ್ನು ಆರೋಪಿಸುತ್ತದೆ.
ಆದರೆ ಇದಕ್ಕಿಂತ ವಿಸ್ಮಯಕಾರಿಯಾದ ಅಂಶವೆಂದರೆ ವೈದಿಕವನ್ನು
ಧಿಕ್ಕರಿಸ ಹೊರಟ ಈ ವಚನಕಾರ ಹಿಂದಿನ ನಾನಾ ವೈದಿಕ ಪುರಾಣಗಳ ಉಲ್ಲೇಖಗಳ ಮೂಲಕವೇ ತನ್ನ ನಿಲವನ್ನು
ಪ್ರತಿಪಾದಿಸುತ್ತಿರುವುದರಿಂದ ಅವನ್ನೆಲ್ಲ ಮಾನದಂಡಗಳೆಂದು ತನಗರಿವಿಲ್ಲದೆಯೇ
ಮಾನ್ಯಮಾಡುತ್ತಿರುವುದು. ಮಾನದಂಡ ಹಳೆಯದೇ ಆಗಿರುವಾಗ ಹಳೆಯದನ್ನೆಲ್ಲ ಒರೆಸಿ ಹಾಕುವುದು ಹೇಗೆ
ಸಾಧ್ಯವಾದೀತು? ವಶಿಷ್ಠನನ್ನು ಧಿಕ್ಕರಿಸಿದ ವಿಶ್ವಾಮಿತ್ರ ಅದೇ ವಶಿಷ್ಠನಿಂದಲೇ ಬ್ರಹ್ಮರ್ಷಿ
ಎನ್ನಿಸಿಕೊಳ್ಳುವ ಚಪಲಕ್ಕೊಳಗಾದ ವಿಪರ್ಯಾಸ ಇಲ್ಲಿಯೂ ಕಾಣುತ್ತದೆ. ಒಂದು ನೆಲೆಯಲ್ಲಿ
ಬಸವಣ್ಣನಂತಹವರೂ ವೇದೋಕ್ತಿಗಳಿಂದ ಶಿವಪಾರಮ್ಯವನ್ನು ಸ್ಥಾಪಿಸಹೋದರೂ, ವೈದಿಕದ ಪ್ರಮುಖ ಧಾರ್ಮಿಕ
ಪರಿಕರಗಳಾದ ವೇದ ಯಜ್ಞ ವರ್ಣ ಪುರೋಹಿತ ಇವುಗಳನ್ನೂ ದೇವಸ್ಥಾನನಿರ್ಮಾಣವನ್ನೂ ಖಂಡಿಸಿದರು.
ಹಾಗಾಗಿ ವೀರಶೈವವು ವೈದಿಕ ವಿರೋಧಿ ಮಾತ್ರವಲ್ಲದೆ, ಅವೈದಿಕವೆನಿಸುವ ಭಾವನೆಯುಂಟುಮಾಡುತ್ತದೆ.
ಆದರೆ ಉರಿಲಿಂಗಪೆದ್ದಿ, ಇತರ ಅನೇಕರಂತೆಯೇ, ಶಿವನ ಶೇಷ್ಠತೆಯನ್ನು ಸ್ಥಾಪಿಸಲೋಸುಗ ವೈದಿಕ
ಗ್ರಂಥಗಳನ್ನೇ ಅವಲಂಬಿಸುವುದರ ಜೊತೆಗೇ ವಿಷ್ಣು ಮುಂತಾದ ದೈವಗಳ ಇರುವಿಕೆಯನ್ನು
ಒಪ್ಪಿಕೊಂಡಂತಾಗಿದೆ. ಇತರ ದೈವಗಳ ಅಸ್ತಿತ್ವವನ್ನೇ ನಿರಾಕರಿಸಿ, ಇರುವ ದೇವ ಶಿವ ಮಾತ್ರ ಎಂಬ
ನಿಲವನ್ನು ತಾಳಿದ್ದರೆ ಹಾಗೂ ವೈದಿಕ ಗ್ರಂಥೋಲ್ಲೇಖಗಳಿಂದ ಶಿವಪಾರಮ್ಯವನ್ನು ಸಾಬೀತುಗೊಳಿಸಲು
ಯತ್ನಿಸಿರದಿದ್ದರೆ ವೀರಶೈವವು ಅವೈದಿಕವಾಗಿಯೇ ಮುಂದುವರಿಯುತ್ತಿತ್ತೇನೋ. ತಮ್ಮ ವಾದದ
ಭರಾಟೆಯಲ್ಲಿ ತಾವು ನಿರಾಕರಿಸ ಹೊರಟ ನೆಲೆಯಿಂದಲೇ ತಮ್ಮ ನಿಲವನ್ನು ಪ್ರತಿಪಾದಿಸಿದ್ದು, ಮತ್ತು
ತನ್ನ ಹಾಗೂ ತನ್ನ ದೇವರ ಹಿರಿಮೆಯನ್ನು ಇತರರದೊಂದಿಗೆ ಹೋಲಿಸಿ ಸ್ಥಾಪಿಸಲು ಹೊರಟದ್ದು
ಪರೋಕ್ಷವಾಗಿ ಹಿಂದಿನದಕ್ಕೆ ಮಾನ್ಯತೆಯಿತ್ತು, ಮುಂದೆ ವೀರಶೈವವು ವೈದಿಕದ ಪಡಿನೆಳಲಾಗಲು
ಕಾರಣವಾಯಿತೇನೋ. ಇದು ವೀರಶೈವ ಚಳವಳಿಯ ಒಂದು ವಿಪರ್ಯಾಸ.
ಉರಿಲಿಂಗಪೆದ್ದಿಯ ವಚನಗಳಲ್ಲಿ ಇಂತಹ ವಾದವೈಖರಿ, ಉತ್ಸಾಹಭರಿತ
ಸಮರ್ಥನೆಗಳು ನಡೆಯುವುದು ಮುಖ್ಯವಾದ ಲಕ್ಷಣಗಳಾದರೂ, ಅವನ ರಚನೆಯಲ್ಲಿ ಹಿರಿಯರ ರಚನೆಗಳ ಮಾರ್ದವವೂ
ಕಾಣಿಸುತ್ತದೆ. ಉದಾಹರಣೆಗೆ ಹಲವು ಸಂದರ್ಭಗಳಲ್ಲಿನ ಇವನ ವಚನಗಳನ್ನೋದುತ್ತಿದ್ದರೆ ಜೇಡರ
ದಾಸಿಮಯ್ಯ ಬಸವಣ್ಣ ಮುಂತಾದವರ ವಚನಗಳ ನೆನಪು ಮೂಡುವುದು ಸಹಜ. ನಿದರ್ಶನಕ್ಕೆ, "ಒಡಲುಗೊಂಡವರ
ಜರಿಯಲೇತಕೆ? ನೀನೊಮ್ಮೆ ಒಡಲುಗೊಂಡು ನೋಡಾ" ಎಂಬ ಸಾಲುಗಳು ದಾಸಿಮಯ್ಯನ "ಒಡಲುಗೊಂಡವ
ಹಸಿವ, ಒಡಲುಗೊಂಡವ ಹುಸಿವ, ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ! ನೀನೆನ್ನಂತೆ
ಒಮ್ಮೆ ಒಡಲುಗೊಂಡು ನೋಡಾ, ರಾಮನಾಥ" ಎಂಬ ಪ್ರಸಿದ್ಧ ವಚನದ ನೆನಪು ತರುತ್ತದೆ. "ಜಗದಗಲ
ಮುಗಿಲಗಲ ಮಿಗೆಯಗಲ ನಿಮ್ಮಗಲ, ವಾಙ್ಮಾನಸಾಗೋಚರವೆಂದು ಹೇಳುತ್ತೈದಾವೆ ವಾಕ್ಯಂಗಳು" ಎಂಬ
ಮಾತು ಬಸವಣ್ಣನ ಅದೇ ರೀತಿ "ಜಗದಗಲ ಮುಗಲಗಲ ಮಿಗಿಲಗಲನಿಮ್ಮಗಲ" ಎಂದು ಆರಂಭವಾಗುವ
ವಚನವನ್ನು ನೆನಪಿಸಿದರೆ, "ತನ್ನ ತಾನರಿಹವೇ ಪರಮಾತ್ಮಯೋಗ, ತನ್ನ ತಾ ಮರಹವೇ
ಮಾಯಾಸಂಬಂಧ" ಎಂಬುದೂ, "ಅರಿದಡೆ ಪಾದೋದಕ, ಅರಿಯದಿರ್ದಡೆ ಬರಿಯ ನೀರೆಂದರಿಯರು"
ಎಂಬುದೂ ಬಸವಣ್ಣನ "ಅರಿದಡೆ ಶರಣ, ಮರೆದಡೆ ಮಾನವ" ಎಂಬ ಸಾಲನ್ನೂ, "ಹೆಣ್ಣ
ನೆಚ್ಚಿ, ಅಶುಭವ ಮುಚ್ಚಿ, ಮರೆಯಬೇಡ, ಅವಳು ನಿನ್ನ ನಂಬಳು; ನೀನು ತನು ಮನ ಧನವನಿತ್ತಡೆಯೂ
ಪರಪುರುಷನ ನೆನವುದು ಮಾಣಳು" ಎಂಬ ಮಾತುಗಳೂ ಬಸವಣ್ಣನನ್ನು ನೆನಪಿಸುತ್ತವೆ. "ಆ
ಭೂತಶೇಷವ ತಿಂಬ ಭೂತಪ್ರಾಣಿಯ ಲಿಂಗಪ್ರಾಣಿಗೆ ಸರಿಯೆಂಬವನ ಬಾಯಲಿ ಕೆರ್ಪನಿಕ್ಕಿ" ಎಂಬಂತಹ
ಹಳಿಯುವಿಕೆಯು ಅಂಬಿಗರ ಚೌಡಯ್ಯನ ಪರಿಯ ನೆರಳನ್ನು ಹೊದ್ದಿವೆ. ಹುಡುಕಿದರೆ ಇತರ ವಚನಕಾರರ
ಮಾತುಗಳಿಗೂ ಉರಿಲಿಂಗಪೆದ್ದಿಯ ಮಾತುಗಳಿಗೂ ಸಾಮ್ಯವು ಕಾಣಿಸಬಹುದು. ಈ ಹೋಲಿಕೆಯನ್ನು ಹಿಡಿದು
ಪ್ರಸಿದ್ಧರ ವಚನಗಳನ್ನು ಅಷ್ಟು ಪ್ರಸಿದ್ಧರಲ್ಲದವರು ಅನುಸರಿಸಿದ್ದಾರೆಂಬ ತೀರ್ಮಾನಕ್ಕೆ ಬರುವುದು
ಅಷ್ಟು ಸಮಂಜಸವಾಗಲಾರದೇನೋ. ಏಕೆಂದರೆ ಹಲವು ಸನ್ನಿವೇಶಗಳಲ್ಲಿ ಹಿರಿಯರೇ ಕಿರಿಯರ ಪ್ರಭಾವಕ್ಕೆ
ಒಳಗಾಗಬಹುದು. ಕೆಲವು ಸಂದರ್ಭಗಳಲ್ಲಿ, ಒಳ್ಳೆಯ ಮಾತನ್ನು ಕೇಳಿದಾಗ ಅದನ್ನು ಪ್ರಸಿದ್ಧರದೆಂದು
ಹೇಳಿಬಿಡುವ ಪರಿಪಾಟವೂ ಜನರಲ್ಲಿದೆ. ಉದಾಹರಣೆಗೆ, 'ಕಾಯಕವೇ ಕೈಲಾಸ' ಎಂಬ ಪ್ರಸಿದ್ಧವಾದ ಮಾತು
ಆಯ್ದಕ್ಕಿ ಮಾರಯ್ಯನದಾದರೂ, ಜನರು ಅದನ್ನು ಬಸವಣ್ಣನದೆಂದೇ ಹೇಳುವುದು ವಾಡಿಕೆ. ಇದಕ್ಕೆ
ಕಾರಣವೆಂದರೆ, ಪ್ರಸಿದ್ಧ ವಾಕ್ಯ ಹಾಗೂ ಪ್ರಸಿದ್ಧ ವ್ಯಕ್ತಿಗಳ ನಡುವೆ ಜನಸಾಮಾನ್ಯರು ಸಮೀಕರಣ
ಮಾಡುವುದು. ಆದರೆ ಒಂದು ಮಾತನ್ನಂತೂ ಹೇಳಬಹುದು. ಹನ್ನೆರಡನೇ ಶತಮಾನದ ವಚನಕಾರರ ರಚನೆಗಳಲ್ಲಿ
ಓದಿದ ತಕ್ಷಣ ಇದು ವಚನ ಎನ್ನಿಸುವ ಧಾಟಿ ಸಾರ್ವತ್ರಿಕವಾಗಿ ಪ್ರಾಪ್ತವಾದದ್ದು ಆಗ ಅವರೆಲ್ಲ
ಪರಸ್ಪರ ಪ್ರತಿಕ್ರಿಯಿಸುತ್ತಿದ್ದ ರೀತಿಯಿಂದ ಎನ್ನಿಸುತ್ತದೆ. ಈ ಕಡೆಯಿಂದ ಆ ಕಡೆಗೂ, ಅತ್ತಲಿಂದ ಇತ್ತ
ಕಡೆಗೂ, ಎತ್ತ ಕಡೆಗೂ ಹರಿದಾಡುವ ಪ್ರಭಾವ-ಪರಸ್ಪರತೆಗಳು ಆಗಿನ ಒಂದು ಲಕ್ಷಣ ಎನ್ನಬಹುದು.
ಉರಿಲಿಂಗಪೆದ್ದಿಯ ವಚನಗಳಲ್ಲಿ ಕಾಣಬರುವಷ್ಟು ಸಂಸ್ಕೃತೋಲ್ಲೇಖಗಳು ಮತ್ತಾವ
ವಚನಕಾರನಲ್ಲಿಯೂ ಕಾಣಲಾರವು. ದಲಿತನಾಗಿದ್ದರೂ ಸಂಸ್ಕೃತಭಾಷೆಯ ಮೇಲೆ ಇಷ್ಟು ಮಟ್ಟಿಗಿನ
ಪ್ರಭುತ್ವವನ್ನು ಸಂಪಾದಿಸುವ ಅವಕಾಶವು ಆ ಕಾಲದಲ್ಲಿ ಅವನಿಗೆ ಸಿಕ್ಕಿದ್ದು ಹೇಗೆ ಎಂಬುದೇ
ಆಶ್ಚರ್ಯಕರವಾಗಿದೆ. ಅವನ ಗುರುವಾದ ಉರಿಲಿಂಗದೇವ ಇವನ ಯೋಗ್ಯತೆಯನ್ನು ಗಮನಿಸಿ ದೀಕ್ಷೆಯಿತ್ತಂತೆ
ಸಂಸ್ಕೃತವನ್ನೂ ಕಲಿಸಿರಬಹುದು, ತನ್ನೆಲ್ಲ ವಿದ್ವತ್ತನ್ನೂ ಅವನಿಗೆ ಧಾರೆಯೆರೆದಿರಬಹುದು. ಅಂತೂ
ಸಿಕ್ಕಿದ ಅವಕಾಶವನ್ನು ಉರಿಲಿಂಗಪೆದ್ದಿ ಸರಿಯಾದ ರೀತಿಯಲ್ಲಿ ಬಳಸಿಕೊಂಡುದಲ್ಲದೆ ತನ್ನ ಸ್ವಂತ
ಶ್ರಮದಿಂದ ಮುಂದೆ ಅದನ್ನು ರೂಢಿಸಿಕೊಂಡಿರಬಹುದು. ಈ ಸಾಧನೆಯ ಹಿಂದೆ ಅತೀವ ಛಲ ಕೆಲಸ ಮಾಡಿರುವಂತೆ
ಕಾಣುತ್ತದೆ. ಯಾವ ಸಂಸ್ಕೃತಜ್ಞಾನದಿಂದ ತನ್ನ ಜಾತಿ ವಂಚಿತವಾಗಿದೆಯೋ ಅದನ್ನು ಕಲಿಯುವುದೇನೂ
ಕಷ್ಟವಲ್ಲ ಎಂಬುದೊಂದಾದರೆ, ಅದನ್ನು ಆಳವಾಗಿ ಕಲಿಯುವ ಮೂಲಕವೇ ಅದನ್ನು ತಮ್ಮ ಅನುಲ್ಲಂಘನೀಯ
ಆಸ್ತಿ ಎಂದು ಭಾವಿಸಿದ್ದವರ ವಿರುದ್ಧ ಬಂಡೇಳುವ ಪ್ರವೃತ್ತಿ ಇನ್ನೊಂದಾಗಿರಬಹುದು, ಜೊತೆಗೆ
ಯಾವುದು ಮೇಲುವರ್ಗದವರಿಗೆ ಶೋಷಣೆಯ ಅಸ್ತ್ರವಾಗಿತ್ತೋ ಅದರಿಂದಲೇ ಆ ಮಿಥ್ಯವನ್ನೊಡೆಯುವ ಬಯಕೆಯೂ
ಕೆಲಸ ಮಾಡಿರಬಹುದು. ಹೀಗಾಗಿ ತನ್ನ ಪ್ರತಿ ಮಾತಿಗೂ ಸಂಸ್ಕೃತೋಲ್ಲೇಖಗಳ ಮೂಲಕವೇ ಸವಾಲೊಡ್ಡಿ
ಪ್ರತಿವಾದ ಹೂಡುವ ಹಟ ಅವನಲ್ಲಿ ಕಾಣಿಸುತ್ತದೆ. ಪ್ರಾಯಶಃ ಎಲ್ಲ ಕಾಲದಲ್ಲಿಯೂ ಈ ಬಗೆಯ
ವಿರೋಧಾಭಾಸವನ್ನು ಕಾಣಬಹುದೇನೋ. ಬಹುಜನ ಒಪ್ಪಿರುವಂತೆ ಅಗ್ರಹಾರದಲ್ಲಿ ಹುಟ್ಟಿ ಬೆಳೆದಿದ್ದ
ಬಸವಣ್ಣ ಆಳವಾಗಿ ಸಂಸ್ಕೃತವನ್ನು ಕಲಿಯುವ ಅವಕಾಶವಿದ್ದು, ಹಾಗೆ ಮಾಡಿದ್ದಿರಬಹುದಾದರೂ,
ಆವಶ್ಯಕವಾದ ಕಡೆಗಳಲ್ಲಿ ಹೊರತು ಸಂಸ್ಕೃತೋಕ್ತಿಗಳನ್ನು ಉಲ್ಲೇಖಿಸುವ ಪರಿಪಾಟ ಅವನಲ್ಲಿಲ್ಲ. ಅವನ
ವಚನಗಳು ಅಚ್ಚಗನ್ನಡವನ್ನು ಒಡಲಲ್ಲಿ ತುಂಬಿಕೊಂಡಂತಹವು; ಅವನ ಮನಸ್ಸಿನಾಳದಲ್ಲಿಯ ಕನ್ನಡಪ್ರೇಮವು
ಅದರ ಸೊಬಗನ್ನು ಎತ್ತಿ ತೋರಿಸುವಂತಹ ಶೈಲಿಯನ್ನು ರೂಪಿಸಿಕೊಳ್ಳುವ
ಪ್ರೇರಕಶಕ್ತಿಯಾಗಿದ್ದಿರಬಹುದು. ಆದರೆ ಉರಿಲಿಂಗಪೆದ್ದಿಯಂತಹವನಿಗೆ ಮೇಲುವರ್ಗದವರಿಗೆ ತನ್ನ
ಸಾಮರ್ಥ್ಯವನ್ನು ತೋರಿಸಿಕೊಳ್ಳುವ ಹಂಬಲ, ಬೇಕಾದರೆ ಚಪಲ ಎನ್ನಲೂ ಬಹುದು, ಇದ್ದಿರಬಹುದು. ಈಗಲೂ
ಇಂತಹ ಪ್ರವೃತ್ತಿಯನ್ನು ಕಾಣಬಹುದು. ಮೇಲುವರ್ಗದವರು ಕನ್ನಡದ ಕಡೆ ಒಲೆದಿರುವಾಗ ಕೆಳವರ್ಗಗಳವರು
ಇಂಗ್ಲಿಷಿನ ಕಡೆ ಮುಖಮಾಡಿರುವುದನ್ನು ಕಾಣುತ್ತೇವಲ್ಲವೇ? ಹಾಗೆಯೇ ಇದೂ ಇರಬಹುದು. ಏನಾದರಾಗಲೀ
ಉರಿಲಿಂಗಪೆದ್ದಿಯ ಸಂಸ್ಕೃತಭಾಷೆಯ ಪ್ರಭುತ್ವ ಮಾತ್ರವಲ್ಲ, ಆ ವಿದ್ವತ್ತನ್ನು ಸೂಕ್ತವಾಗಿ ಬಳಸಿಕೊಳ್ಳುವ
ಪರಿಯೂ ಢಾಳಾಗಿ ಕಾಣುತ್ತದೆ. ಏಕೆಂದರೆ ಎಲ್ಲೆಲ್ಲಿ ವ್ಯವಸ್ಥೆಯೊಡನೆ ಮುಖಾಮುಖಿಯಾಗಬೇಕೋ
ಅಲ್ಲೆಲ್ಲ ಅದರ ಬೆನ್ನೆಲುಬಾದ ಸಂಸ್ಕೃತದ ಮೂಲಕವೇ ಅದನ್ನೊಡೆಯುವ ರೀತಿ ಇವನದು. ಅವನು
ಉಲ್ಲೇಖಿಸುವ ಮಾತುಗಳ ಆಕರ ಅಚ್ಚರಿ ಹುಟ್ಟಿಸುವಷ್ಟು ವ್ಯಾಪಕವಾಗಿದೆ. ಅವನೇ ಉಕ್ತಿಗಳ
ಉಲ್ಲೇಖಕ್ಕೆ ಮೊದಲು ಅವುಗಳ ಆಕರಗಳನ್ನು ಹೇಳುತ್ತಾನೆ. ವಿವಿಧ ವೇದಗಳು, ಉಪನಿಷತ್ತುಗಳು, ನಾನಾ
ಆಗಮಗಳು ಪುರಾಣಗಳು ಎಂತಹವನಲ್ಲಿಯೂ ಬೆರಗು ಹುಟ್ಟಿಸುವಂಥದು. ಇವೆಲ್ಲವೂ ಅವನ ಓದಿನ ಹರಹಿನ
ಜೊತೆಗೆ, ಅವನ ಜ್ಞಾಪಕಶಕ್ತಿ ಹಾಗೂ ಎಲ್ಲಿ ಯಾವುದನ್ನು ಉಲ್ಲೇಖಿಸಬೇಕೆಂಬ ವಿವೇಚನಾಶಕ್ತಿಗಳಿಗೂ
ಹಿಡಿದ ಕನ್ನಡಿಯಾಗಿದೆ. ಈಚೆಗೆ ಈ ಆಕರಗಳ ಮೂಲವನ್ನು ಶೋಧಿಸುವ ಕಾರ್ಯ ನಡೆದಿದೆ. ಈಗ ಅಚ್ಚಾಗಿರುವ
ಮುನ್ನೂರ ಅರುವತ್ತಾರು ವಚನಗಳಲ್ಲಿ ಸಂಸ್ಕೃತೋಕ್ತಿಗಳಿಲ್ಲದಿರುವ ವಚನಗಳ ಸಂಖ್ಯೆಯೇ ಕಡಿಮೆಯೇನೋ
ಎನ್ನುವಷ್ಟು ವಿಪುಲ ಸಂಖ್ಯೆಯ ಉಲ್ಲೇಖಗಳು ಅಲ್ಲಿ ದೊರಕುತ್ತವೆ. ಒಂದೇ ವಚನದಲ್ಲಿ ಹಲವಾರು ಬಾರಿ
ವಿವಿಧ ಆಕರಗಳಿಂದ ಉಲ್ಲೇಖಗಳನ್ನು ನೀಡುತ್ತಾನೆ. ಮತ್ತು ಇದರ ಗಾತ್ರವೂ ಪರಿಪರಿಯದು: ಒಂದೆರಡು
ಶಬ್ದಗಳಿಂದ ಹಿಡಿದು ಹತ್ತಾರು ಸಾಲುಗಳವರೆಗೆ, ಕೆಲವೊಮ್ಮೆ ಪುಟಗಟ್ಟಲೆಯವರೆಗೆ, ಉಲ್ಲೇಖ
ಸಾಗುತ್ತದೆ. ಒಂದು ವಚನದ ದೀರ್ಘತೆ ಒಂದು ನೂರ ಅರುವತ್ತೇಳು ಸಾಲುಗಳಷ್ಟು, ಅವುಗಳಲ್ಲಿ ಕನ್ನಡದ
ಮಾತುಗಳು ಕೇವಲ ಮೂವತ್ತೊಂದು ಸಾಲುಗಳು ಮಾತ್ರ; ಅದರಲ್ಲಿಯೂ ತತ್ತ್ವದೀಪಿಕೆಯಿಂದ ಒಮ್ಮೆಗೇ
ಒಂದೆಡೆ ಉಲ್ಲೇಖಗೊಂಡಿರುವ ಸಾಲುಗಳ ಸಂಖ್ಯೆ ಇಪ್ಪತ್ತೆರಡಾದರೆ, ಅದೇ ವಚನದಲ್ಲಿ ಶಿವರಹಸ್ಯದಿಂದ
ಎತ್ತಿ ಹೇಳಿದವು ಅರುವತ್ತು ಸಾಲುಗಳು! ಇಷ್ಟನ್ನೂ ಅವನು ಬಾಯಿಪಾಠದಿಂದಲೇ ಹೇಳಬಲ್ಲವನಾಗಿದ್ದನೇ,
ಅಥವಾ ವಚನರಚನೆಯ ಸಂದರ್ಭದಲ್ಲಿ ಪುಸ್ತಕಗಳನ್ನು ನೋಡಿ ಉದ್ಧೃತಗೊಳಿಸುತ್ತಿದ್ದನೇ ತಿಳಿಯದು. ಆದರೂ
ಈ ಅಗಾಧತೆ ಮಾತ್ರ ವಿಸ್ಮಯಕಾರಿಯಾದುದು. ಒಂದು ವಚನದಲ್ಲಿಯೇ ಅವನು ಅನೇಕ ಕಡೆಗಳಿಂದ ತಂದ
ಮಾತುಗಳನ್ನು ಉಲ್ಲೇಖಿಸುತ್ತಾನೆ; ಒಂದು ಅಂಶವನ್ನು ಸ್ಪಷ್ಟಪಡಿಸಲೋಸುಗ ಅವನು ಆವಾಹಿಸುವ
ಅಧಿಕಾರವಾಣಿಗಳು ಹಲವಾರು. ನಿದರ್ಶನಕ್ಕೆ, ಒಂದೆಡೆ ಒಂದೇ ವಚನದಲ್ಲಿಯೇ ವಾತುಳಾಗಮ, ವಾಶಿಷ್ಠ,
ಬ್ರಹ್ಮಾಂಡ ಪುರಾಣ, ಶಿವರಹಸ್ಯ, ಉತ್ತರವಾತುಳ, ಅಥರ್ವಣವೇದ, ಸಾಮವೇದ, ಶಿವಧರ್ಮಪುರಾಣ, ಗಾರುಡ
ಪುರಾಣ, ಯಜುರ್ವೇದ, ಸ್ಕಂದ ಪುರಾಣ, ಜ್ಞಾನವೈಭವಖಂಡ, ಮಹಿಮ್ನ, ಶಿವಧರ್ಮೋತ್ತರ, ಪುರುಷಸೂಕ್ತ,
ಉಪನಿಷತ್ತು, ಕೂರ್ಮಪುರಾಣ, ಋಗ್ವೇದ, ಲೈಂಗ್ಯ, ಸೌರಪುರಾಣ, ಕಾಳಿಕಾಖಂಡ, ಶಂಕರಸಂಹಿತೆ, ವೀರಾಗಮ
- ಇವುಗಳ ಉಲ್ಲೇಖಗಳನ್ನು ನೀಡಿ ತನ್ನ ನಿಲವನ್ನು ಸಮರ್ಥಿಸಿಕೊಳ್ಳುತ್ತಾನೆ.
ಅನೇಕ ಕಡೆಗಳಲ್ಲಿ ಉರಿಲಿಂಗಪೆದ್ದಿಯ ಮಾತುಗಳು ಗಾದೆ-ನಾಣ್ಣುಡಿಗಳಂತೆ
ಸೂತ್ರಬದ್ಧವಾಗಿರುತ್ತವೆ; ಅಪಾರ ಅರ್ಥವನ್ನು ಕಿರು ಸಾಲಿನಲ್ಲಿ ಹುದುಗಿಸಿರುತ್ತಾನೆ ಈ ವಚನಕಾರ.
"ಅರಿದಡೆ ಪಾದೋದಕ, ಅರಿಯದಿರ್ದಡೆ ಬರಿಯ ನೀರು", "ತತ್ ಶಿಷ್ಯನ ಶರೀರವೆ
ನಡೆದೇವಾಲಯ", "ಇಹದಲೂ ಮಹಾಗ್ರಾಸ, ಪರದಲೂ ಮಹಾಮುಕ್ತಿ", "ಹೊನ್ನು
ಹೆಣ್ಣು ಮಣ್ಣು ತ್ರಿವಿಧವು ಶಿವನು ಕಾಣಿರೋ", "ಪಂಕವಿಲ್ಲದ ಕಮಲಕ್ಕೆ ಸುಗಂಧ
ಸುಲಲಿತವೆಂತಪ್ಪುದಯ್ಯಾ?", "ಮರೆದಡೆ ಬಂಧನ, ಅರಿದಡೆ ಮೋಕ್ಷ", "ತ್ರಿವಿಧದಲ್ಲಿ
ನಿರ್ವಂಚನೆಯೆ ವೈರಾಗ್ಯ, ಪ್ರಸಾದವೆ ಮುಕ್ತಿ", "ಕಾಮಧೇನುವಿನ ಶಿಶು
ಕಾಮಧೇನುವಪ್ಪುದು ತಪ್ಪದು", "ಕಾದ ಲೋಹದ ಮೇಲೆ ಉದಕವನೆರೆದಂತೆ", "ಅಮೃತಕ್ಕೆ
ಹಸಿವುಂಟೆ? ಜಲಕ್ಕೆ ತೃಷೆಯುಂಟೆ?" ಮುಂತಾದ ಸಾಲುಗಳನ್ನು ನಿದರ್ಶನಕ್ಕೆಂದು ನೋಡಬಹುದು.
ಕೆಲವು ವೇಳೆ ಉರಿಲಂಗಪೆದ್ದಿಯ ಸಾಲುಗಳು ಕಾವ್ಯದ ಹೊಳಪಿನಿಂದಲೂ
ಕೂಡಿರುತ್ತವೆ. ಗುರುಕಾರುಣ್ಯಕ್ಕೊಳಗಾದ ಶಿಷ್ಯನಿಗೆ ಬಯಕೆಗಳು ಕೊನೆಗೊಳ್ಳುತ್ತವೆ ಎಂಬುದನ್ನು
ಅವನು "ಅಮೃತಕ್ಕೆ ಹಸಿವುಂಟೆ? ಜಲಕ್ಕೆ ತೃಷೆಯುಂಟೆ? ಮಹಾಜ್ಞಾನಿ ನಿತ್ಯಸ್ವರೂಪಂಗೆ
ವಿಷಯವುಂಟೆ?" ಎಂಬ ಪ್ರಶ್ನೆಗಳನ್ನಿಟ್ಟು ಮಂಡಿಸುತ್ತಾನೆ. ಅದೇ ರೀತಿ
ಸಾಮಾನ್ಯ-ಅಸಾಮಾನ್ಯಗಳ ನಡುವಣ ವ್ಯತ್ಯಾಸವನ್ನು ಸುಂದರವಾದ ದೃಷ್ಟಾಂತದ ಮೂಲಕ ವ್ಯಕ್ತಪಡಿಸುವ
ರೀತಿ ಇದು: "ಕರುವಿನ ರೂಪಿಂಗೆ ಒಳಗೊಂದು ಹೊರಗೊಂದಲ್ಲದೆ ಪರುಷದ ರೂಪಿಂಗೆ ಒಳಗೊಂದು
ಹೊರಗೊಂದುಂಟೆ?" "ವಟಬೀಜವು ವಟವೃಕ್ಷಕೋಟಿಯ ನುಂಗಿಪ್ಪಂತೆ ಸೆಟೆಯಿಂದಾದ ಅಜಾಂಡ
ಬ್ರಹ್ಮಾಂಡಕೋಟಿಗಳ ನುಂಗಿಪ್ಪ ಲಿಂಗವೇ?" ಎಂಬ ಮಾತನ್ನು ಗಮನಿಸಿ. ಅತ್ಯಂತ ಸಣ್ಣ ಆಕಾರದ
ವಸ್ತುವಿಶೇಷದಲ್ಲಿನ ಅಪರಿಮಿತ ಸಾಧ್ಯತೆಯನ್ನು ಎಷ್ಟು ಚೆನ್ನಾಗಿ ಬಿಂಬಿಸುತ್ತಿದ್ದಾನೆ ವಚನಕಾರ!
ಅವನ ಕೆಲವು ವಚನಗಳು ಇಡಿಯಾಗಿಯೇ ಚೆಲುವನ್ನು ಹೊತ್ತಿವೆ. ಈ
ವಚನವನ್ನು ನೋಡಿ:
ಎನ್ನೊಳಗೆ
ನೀನು ಪ್ರವೇಶ, ನಿನ್ನೊಳಗೆ ನಾನು ಪ್ರವೇಶ,
ದೇವ
ನೀನಲ್ಲದಿಲ್ಲ, ಭಕ್ತ ನಾನಲ್ಲದಿಲ್ಲ.
ಈ ಪರಿಯ
ಮಾಡುವರಿನ್ನಾರು ಹೇಳಾ?
ಎನಗೆ
ನೀನೇ ಗತಿ, ನಿನಗೆ ನಾನೇ ಗತಿ
ಇನ್ನೇಕೆ
ಜವನಿಕೆ ಉರಿಲಿಗಪೆದ್ದಿಪ್ರಿಯ ವಿಶ್ವೇಶ್ವರ?
ಭಕ್ತ-ದೇವರ
ನಡುವಣ ಅನನ್ಯಸಂಬಂಧವು ಸರಳವಾಗಿ ಆದರೆ ಹೃದಯಂಗಮವಾಗಿ ಅಭಿವ್ಯಕ್ತಿಗೊಂಡಿದೆ ಇಲ್ಲಿ. 'ಇನ್ನೇಕೆ
ಜವನಿಕೆ' ಎಂಬ ಮಾತಂತೂ ಇಬ್ಬರ ನಡುವಣ ಬೆಸುಗೆಗೆ ಅಡ್ಡಿಯನ್ನು ಕಳೆಯುವ ಕಾತರವನ್ನು ಸುಂದರವಾಗಿ
ಬಿಂಬಿಸುತ್ತದೆ.
ಮತ್ತೊಂದು ವಚನವನ್ನು ತೆಗೆದುಕೊಳ್ಳೋಣ:
ದೇಹವೆಂಬ
ಮನೆಯಲ್ಲಿ ಮಹಾಲಿಂಗನೆಂಬರಸು
ಮನವೆಂಬ
ಪೀಠದ ಮೇಲೆ ಮೂರ್ತಿಗೊಂಡಿರಲು
ಅಂತಃಕರಣವೆಂಬ
ಪರಿಚಾರಕರುಗಳ ಕೈಯಿಂದ
ಪಂಚೇಂದ್ರಿಯಗಳೆಂಬ
ಪರಿಯಾಣದಲ್ಲಿ
ಶಬ್ದ
ಸ್ಪರ್ಶ ರೂಪು ರಸ ಗಂಧಂಗಳೆಂಬ
ಪದಾರ್ಥಂಗಳನೆಡೆಮಾಡಿಕೊಂಡು
ಸವಿವುತ್ತಿರಲು,
ಆನಂದವೇ
ಮಹಾಪ್ರಸಾದವಾಗಿ
ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರನು ಸದಾ ಸನ್ನಿಹಿತ ಕಾಣಿರೆ.
ಅತ್ಯಂತ
ಸುಂದರವೆನ್ನಲಾಗದಿದ್ದರೂ ಇಡೀ ದೇಹವನ್ನು ದೇವರ ನೆಲೆಯಾಗಿ ಪರಿಭಾವಿಸುವ ಇಲ್ಲಿನ ಪರಿ
ಹೃದ್ಯವಾಗಿದೆ, ಶಿವ ಬೇರೆಲ್ಲೋ ಇಲ್ಲ, ತನ್ನಲ್ಲಿಯೇ ನೆಲೆಸಿದ್ದಾನೆಂಬ ವಚನಕಾರನ ಭಾವಕ್ಕೆ
ಅನುಗುಣವಾಗಿದೆ.
ದೇವರು ನಿರಾಕಾರವಾದರೂ ಒಂದೆ ನೆಲೆಯವರೆಗೂ ಸಾಕಾರವು ಆವಶ್ಯಕ
ಎಂಬುದು ಬಹು ಮಂದಿ ಧಾರ್ಮಿಕರ ನಿಲವು. ಇದಕ್ಕೆ ಉರಿಲಿಂಗಪೆದ್ದಿಯೂ ಹೊರತಲ್ಲ. ಸ್ಥೂಲದಲ್ಲಿ
ಮಾತ್ರ ಸೂಕ್ಷ್ಮ ಅಡಗಿರಬಹುದು, ಹಾಗಾಗಿ ಸ್ಥೂಲದ ಮೂಲಕವೇ ಸೂಕ್ಷ್ಮವನ್ನು ಅರಿಯಲು ಸಾಧ್ಯ ಎಂಬ
ನಿಲವನ್ನು ಮುಂದಿನ ವಚನವು ಸರಳವಾಗಿಯಾದರೂ ಮನಂಬುಗುವಂತೆ ಮಂಡಿಸುತ್ತದೆ:
ಸೂರ್ಯನಿಲ್ಲದೆ
ಹಗಲುಂಟೆ ಅಯ್ಯಾ?
ದೀಪ
ಇಲ್ಲದೆ ಬೆಳಕುಂಟೆ ಅಯ್ಯಾ?
ಪುಷ್ಪವಿಲ್ಲದೆ
ಪರಿಮಳವನರಿಯಬಹುದೆ ಅಯ್ಯಾ?
ಸಕಲವಿಲ್ಲದೆ
ನಿಷ್ಕಲವ ಕಾಣಬಾರದು.
ಮಹಾಘನ
ನಿರಾಳ ಪರಶಿವನಿಂದ ಲಿಂಗವು ತೋರಿತ್ತು,
ಉರಿಲಿಂಗಪೆದ್ದಿಪ್ರಿಯ
ವಿಶ್ವೇಶ್ವರಾ!
ಎಷ್ಟೋ
ವೇಳೆ ತರ್ಕಕ್ಕೆ ಮಿತಿಯಿರುತ್ತದೆ; ಆದರೆ ತರ್ಕವಿಲ್ಲದೆ ಇತರರಿಗೆ ಏನನ್ನಾದರೂ ಮನವರಿಕೆ
ಮಾಡಿಕೊಡಲು ತರ್ಕವನ್ನಾಶ್ರಯಿಸಬೇಕಾಗುತ್ತದೆ. ಅದನ್ನೇ ವಚನಕಾರನು ಇಲ್ಲಿ ಅನುಸರಿಸುತ್ತಿರುವ
ಮಾರ್ಗ. ಉರಿಲಿಂಗಪೆದ್ದಿಯ ರಚನಾ ಸಾಮರ್ಥ್ಯವನ್ನು ತೋರಿಸಲು ಇನ್ನೂ ಇಂತಹ ಕೆಲವಾರು ವಚನಗಳನ್ನು
ಉದಾಹರಿಸಬಹುದು. ಉರಿಲಿಂಗಪೆದ್ದಿಯಲ್ಲಿ ಮಾತ್ರವಲ್ಲ, ಬಹುತೇಕ ವಚನಕಾರರ ರಚನೆಗಳಲ್ಲಿ ಇಂತಹ
ಮಾತುಗಾರಿಕೆ ಸಹಜವಾಗಿ ಮೂಡಿಬರುತ್ತವೆ. ಇದಕ್ಕೆ ಕಾರಣ ಆ ಕಾಲದ ಕನ್ನಡವು ಬಳಕೆಯಿಂದ ಆ ಮಟ್ಟಿಗೆ
ನಾದಿ ಮಿದುಗೊಂಡಿದ್ದ ಬಗೆ. ತಕ್ಕಮಟ್ಟಿಗಿನ ತಿಳಿವಳಿಕೆ-ಪ್ರತಿಭೆಗಳಿದ್ದವನು ಮಾತಾಡಿದರೆ ಮಾತು
ವಚನವಾಗುತ್ತಿತ್ತು. ಕನ್ನಡದ ಮಟ್ಟಿಗೆ ಆ ಕಾಲದಲ್ಲಿ ಆದ ಈ ಪರಿಯ ಬೆಳವಣಿಗೆ ಬೇರಾವ ಶತಮಾನಗಳಲ್ಲೂ
ನಡೆದಂತಹುದಲ್ಲ.
ಅನೇಕ ಸಂದರ್ಭಗಳಲ್ಲಿ ಉರಿಲಿಂಗಪೆದ್ದಿಯ ನಿಲವು ವೈಚಾರಿಕತೆಯ
ಹೊಳಪಿನಿಂದ ಲೇಪಿತವಾದದ್ದು. ಜಾತಿ ವಿಶ್ಲೇಷಣೆಯ ಸಂದರ್ಭದಲ್ಲಿ ಅವನ ಆವೇಶಯುತ ವಾದಮಂಡನೆಯನ್ನು
ಆಗಲೇ ನೋಡಿದ್ದೇವೆ. ಹೊನ್ನು ಹೆಣ್ಣು ಮಣ್ಣುಗಳ ವಿಚಾರದಲ್ಲಿಯ ಅವನ ನಿಲವೂ ವಿವೇಕಯುತವಾಗಿದೆ.
"ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು ಬಣ್ಣವಿಟ್ಟು
ನುಡಿವ ಅಣ್ಣಗಳ ಪರಿಯ ನೋಡಿರೋ. ಹೆಣ್ಣ ಬಿಟ್ಟಡೆಯೂ ಹೊನ್ನ ಬಿಡು, ಹೊನ್ನ ಬಿಟ್ಟಡೆಯೂ ಮಣ್ಣ
ಬಿಡು, ಒಂದ ಬಿಟ್ಟಡೆಯೂ ಒಂದ ಬಿಡು. ಬ್ರಹ್ಮಚಾರಿಗಳೆಂತಪ್ಪಿರಿ ಹೇಳಿರಣ್ಣಾ? ಹೆಣ್ಣ ಬಿಟ್ಟು
ಬ್ರಹ್ಮಚಾರಿಗಳಾಗಬೇಕೆಂದು ಅವರೆಂತು ಹೇಳಿದರು, ನೀವೆಂತು ಕೇಳಿದಿರಿ? ಹೆಣ್ಣನು ಹೆಣ್ಣಂದರಿವಿರಿ,
ಹೊನ್ನನು ಹೊನ್ನೆಂದರಿವಿರಿ, ಮಣ್ಣನು ಮಣ್ಣೆಂದರಿವಿರಿ. ಬ್ರಹ್ಮಚಾರಿಗಳೆಂತಪ್ಪಿರಣ್ಣಾ? ಬಿಟ್ಟಡೆ
ಹೆಣ್ಣು ಹೊನ್ನು ಮಣ್ಣು ಈ ಮೂರನು ಬಿಟ್ಟು ಜ್ಞಾನದಲ್ಲಿ ಸುಳಿಯಲ್ಲಡೆ, ಭವನಾಸ್ತಿ ತಪ್ಪದು.
ಹಿಡಿದಡೆ ಹೆಣ್ಣು ಹೊನ್ನು ಮಣ್ಣು ಈ ಮೂರನೂ ಹಿಡಿದು, ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ, ಭವಂ
ನಾಸ್ತಿ ತಪ್ಪದು" ಎಂಬ ನಿಲವು ವಿಷಯವನ್ನು ವಚನಕಾರ ವಿಶ್ಲೇಷಿಸುವ ಅನನ್ಯ ಪರಿಯನ್ನು
ತೋರುತ್ತದೆ. ಮಠಾಧಿಪತಿಯಾದವನು ಈ ಬಗೆಯ ಮಾತನ್ನಾಡಿದ್ದು ಕಾಲದ ವಿವೇಕದ ಮಹಿಮೆಯಿಂದ.
ಅಪರೂಪವಾಗಿ ಉರಿಲಿಂಗಪೆದ್ದಿಯೂ ಬೆಡಗಿನ ಒಂದೆರಡು ವಚನಗಳನ್ನು
ಬರೆದಿದ್ದಾನೆ. ಸಾಮಾನ್ಯವಾಗಿ ಕಾಯಕಜೀವಿಗಳು ತಮ್ಮ ವೃತ್ತಿ ಪರಿಭಾಷೆಯನ್ನೇ ಆಧ್ಯಾತಿಕ ಸಾಧನೆಯ
ಮಾರ್ಗದ ರೂಪಕಗಳನ್ನಾಇ ಬಳಸಿಕೊಂಡು ಬೆಡಗನ್ನು ನಿರ್ಮಿಸುವುದು ಸಾಮಾನ್ಯ. ನೇಯ್ಗೆಯ-ಮಗ್ಗದ ಮೂಲಕ
ಜೇಡರ ದಾಸಿಮಯ್ಯ ಹಾಗೆ ಮಾಡಿದರೆ, ಚಪ್ಪಲಿ ತಯಾರಿಕೆಯ ವಿವಿಧ ಹಂತಗಳನ್ನೇ ಪ್ರಕ್ರಿಯೆಯನ್ನೇ
ಮಾದಾರ ಚೆನ್ನಯ್ಯ ತನ್ನ ಸಾಧನೆಯ ರೂಪಕವನ್ನಾಗಿ ಮಾಡಿಕೊಳ್ಳುತ್ತಾನೆ; ಉಳಿದ ಅನೇಕ ಮಂದಿ
ವಚನಕಾರರೂ ಹೀಗೆಯೇ. ಆದರೆ ಉರಿಲಿಂಗಪೆದ್ದಿ ಮಠಾಧಿಪತಿಯಾಗಿದ್ದವನು, ಹಾಗಾಗಿ ಇವನ ಬೆಡಗು ಭಿನ್ನ
ಮಾರ್ಗವನ್ನು ತುಳಿಯುತ್ತದೆ. ಅವನ ಒಂದು ಬೆಡಗಿನ ವಚನವನ್ನು ನೋಡೋಣ:
ಒಳಗೊಂದು
ಗಾಲಿ, ಹೊರಗೊಂದು ಗಾಲಿ
ಎರಡಕ್ಕೆ
ಹೂಡಿದುದೊಂದು ಹರಿಯಚ್ಚು,
ಮೇಲೆ
ಹಾಸಿದ ನೀಳ ಚೌಕದ ಕರುಗುಣಿಯ ಕೊಂಬಿಂಗೆ ಈಚೆರಡು.
ಏಳು
ಹುರಿಯ ಬಲುಮಿಣಿಯಿಂ ಆಳವನಿಕ್ಕಿದ ಕಾಮನ ನೊಗ.
ಆರೆತ್ತು
ಹೂಡಿ, ಹಾಸು ದಡಿಕೆ ಒಂದು, ಮೇಲು ದಡಿಕೆ ಎರಡು,
ಒಂದು
ದೊಡ್ಡದು, ಒಂದು ಚಿಕ್ಕದು, ಒಂದುರೆ ಚಿಕ್ಕದು,
ಬಂಡಿಯ
ಮೇಲೊಬ್ಬ ಮೊದಲೆತ್ತ ಹೊಡೆವ,
ತಲೆಯಾರು
ನಡುವಣಾರು ಹೊಡೆವರಿಬ್ಬರು.
ಬಂಡಿ
ನಡೆವ ಬಟ್ಟೆಯಯ್ದು, ತುಂಬಿದ ಭಂಡವೈದು
ಐದು
ಬಟ್ಟೆಯಂ ತಪ್ಪಿಸಿ ಆರು ಬಟ್ಟೆಯಲಿ ನಡೆಸಿ,
ಹೇರಿದ
ಭಂಡವನೊಡೆಯಂಗೊಪ್ಪಿಸಲರಿಯದೆ,
ಎಡೆಯ
ಕಡಿದು ಭುಂಜಿಸಿ ಒಡೆಯಂಗೆ ದೂರಾಗಿ,
ಬಹುಮುಖದ
ದಂಡಣೆಗೊಳಗಾಗಿ ಬಹಳ ಮುಖದಲ್ಲಿ ಬಂದು,
ಹೇರಡವಿಯ
ಕಗ್ಗತ್ತಲಲ್ಲಿ ತೊಳಲಿ ಭ್ರಮಿಸುವ ಹೊಲಬರಿಯದೆ
ಹೊಲಬುಗೆಟ್ಟ
ಮಲಮಾಯಾಧಿಕರು
ನಿಮ್ಮನೆತ್ತ
ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?
ಈ
ವಚನವು ಮಾನವ ದೇಹ ಮತ್ತು ಬದುಕುಗಳನ್ನು ಒಂದು ಬಂಡಿಯನ್ನಾಗಿ ಪರಿಭಾವಿಸಿ, ಅದರ ವಿವಿಧ ಭಾಗಗಳಿಗೆ
ಸಂಖ್ಯಾಸೂಚಿತ ಮನೋವೃತ್ತಿಗಳನ್ನು ಸಮೀಕರಿಸಿ, ಬಂಡಿಯನ್ನು ಸರಕಿನೊಂದಿಗೆ ಸರಿಯಾದ ರೀತಿಯಲ್ಲಿ
ಒಡೆಯನಿಗೆ ತಲುಪಿಸಬೇಕಾದ ತುರ್ತನ್ನು ಸೂಚಿಸುತ್ತದೆ. ಬೆಡಗಿನ ವಚನಗಳ ರಚನೆಯೂ ಆ ಕಾಲದಲ್ಲಿ
ವ್ಯಾಪಕ ಅಭಿವ್ಯಕ್ತಿತಂತ್ರವಾಗಿತ್ತು. ಅಲ್ಲಮನ ವಚನಗಳ ಗಾಢತೆ ಇವುಗಳಲ್ಲಿ ಕಾಣದಿದ್ದರೂ
ವಚನರಚನೆಯ ಚಳುವಳಿಯೂ ತನ್ನೆಲ್ಲ ಆಯಾಮಗಳಲ್ಲಿ ರೂಪು ತಾಳಿ ಮುನ್ನಡೆದು ಕನ್ನಡಕ್ಕೆ
ನವಶಕ್ತಿಯನ್ನು ಸಂಚಯನಗೊಳಿಸಿದ ಪರಿ ರೋಮಾಂಚಕಾರಿಯಾದುದು. ಇದಕ್ಕೆ ಎಲ್ಲ ವಚನಕಾರರೂ - ಹಿರಿಯರು
ಕಿರಿಯರೆನ್ನೆದೆ - ತಮ್ಮ ಕೊಡುಗೆಯನ್ನು ನೀಡಿದ್ದರಿಂದಲೇ ಭಾಷೆಗೆ ಅಷ್ಟು ಬಲ ಬಂದುದು.
ಒಟ್ಟಾರೆ ಉರಿಲಿಂಗಪೆದ್ದಿಯು ವಚನ ಚಳವಳಿಯ ಉತ್ತಮ ಫಲಗಳಲ್ಲಿ ಒಂದು.
ಆ ಕಾಲದ ವೈಚಾರಿಕತೆ, ವ್ಯವಸ್ಥಾವಿರೋಧ ಹಾಗೂ ಸಮಾನತೆಯ ಮೌಲ್ಯಗಳನ್ನು ರೂಢಿಸಿಕೊಂಡಿದ್ದ
ಎಚ್ಚೆತ್ತ ಚೇತನದ ಪ್ರತೀಕ ಅವನು. ಸಮಾಜದ ಅತ್ಯಂತ ಕೆಳವರ್ಗದಿಂದ ಬಂದಿದ್ದರೂ ತನ್ನ
ವರ್ಗದವರಲ್ಲಿದ್ದಿರಬಹುದಾದ ಕೀಳರಿಮೆಯನ್ನು ಬಿಸುಟು, ಆತ್ಮವಿಶ್ವಾಸದಿಂದ ಕೂಡಿ ಜನಪರ ಆಲೋಚನೆ
ಮತ್ತು ಕಾರ್ಯಗಳಲ್ಲಿ ತೊಡಗಿದ್ದವನು ಅವನು. ವಚನ ಚಳುವಳಿಯಂತಹ ವ್ಯಾಪಕವೂ ಕ್ರಾಂತಿಕಾರಕವೂ ಆದ
ಸನ್ನಿವೇಶದಲ್ಲಿ ಪಾಲುಗೊಂಡವರೆಲ್ಲ ಒಂದೇ ಮಟ್ಟದವರಾಗಿರುವರೆಂಬುದನ್ನಾಗಲೀ, ಅದು ಪ್ರತಿಪಾದಿಸಿದ
ಮೌಲ್ಯಗಳ ವಿವರಗಳೆಲ್ಲ ಸಾರ್ವಕಾಲಿಕ ಮಾನ್ಯತೆಯನ್ನು ಪಡೆದಿರುವುದೆಂಬುದನ್ನಾಗಲೀ ಯಾರೂ
ನಿರೀಕ್ಷಿಸುವಂತಿಲ್ಲ. ಅಲ್ಲದೆ, ವೈವಿಧ್ಯವೇ ಚಳುವಳಿಯ ವ್ಯಾಪಕತೆಯನ್ನು ಅಭಿಪ್ರಾಯಸ್ವಾತಂತ್ರ್ಯದ
ಅವಕಾಶವನ್ನು ಹಿರಿ-ಕಿರಿಯರು one to
one ಎನ್ನುವಂತೆ
ಸ್ವತಂತ್ರವಾಗಿ ವಿಷಯಗಳನ್ನು ಪರಿಶೀಲಿಸಲು ಇದ್ದ ಅವಕಾಶವನ್ನು ಸೂಚಿಸುತ್ತದೆ. ಅದರ ಒಂದು ಗಣ್ಯ
ಭಾಗವಾಗಿದ್ದ ಉರಿಲಿಂಗಪೆದ್ದಿಯ ಆಲೋಚನಾಕ್ರಮದಲ್ಲಿಯೂ ಹೀಗೆಯೇ ನಾವು ಕೆಲವು ನ್ಯೂನತೆಗಳನ್ನು,
ಚಳುವಳಿಯ ಒಟ್ಟು ನಿಲವಿಗೆ ಭಿನ್ನವೆನ್ನಿಸುವ ಮನೋಭಾವವನ್ನು ಹಾಗೂ ತನ್ನದೇ ಚಿಂತನಾಕ್ರಮವನ್ನು
ಹೊಂದಿರುವುದನ್ನು ಕಾಣಬಹುದು. ಒಟ್ಟಾರೆ ಅವನೊಬ್ಬ ಧೀರ, ಉತ್ಸಾಹಿ, ಜನಪರ ಧೋರಣೆಯ ಮತ್ತು
ಆತ್ಮವಿಶ್ವಾಸದ ಉಜ್ವಲವಾದ ನಿದರ್ಶನವಾಗಿದ್ದಾನೆ.
ಕಾಳವ್ವೆ
ಪುರಾತನರ ವಚನಗಳ ಓಲೆಯ ಗರಿಯ
ಪ್ರತಿಗಳಲ್ಲಿ ಕಾಳವ್ವೆಯನ್ನು ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಎಂದು ಕರೆಯಲಾಗಿದೆ. ನಮಗೆ ಸದ್ಯ
ದೊರೆಯುವ ವಚನಕಾರ್ತಿಯರ ಸಂಖ್ಯೆ ಮೂವತ್ತಮೂರು; ಕೆಲವು ವಚನಗಳು ಅಜ್ಞಾತ ವಚನಕಾರ್ತಿಯರ
ರಚನೆಗಳೆಂದು ಸಂಪಾದಕರು ನಮೂದಿಸುತ್ತಾರೆ. ಅವರಲ್ಲಿ ಕೆಲವರು ಪ್ರಸಿದ್ಧ ವಚನಕಾರರ ಹೆಂಡತಿಯರು: ನೀಲಮ್ಮ,
ದುಗ್ಗಳೆ ಹೀಗೆ; ಮತ್ತೆ ಕೆಲವರು ಸ್ವತಂತ್ರ ಸ್ತ್ರೀಯರು: ಮುಕ್ತಾಯಕ್ಕ, ಬೊಂತಾದೇವಿ ಮುಂತಾದವರು;
ಮತ್ತೂ ಕೆಲವರು ತಮ್ಮ ಕಾಯಕದಿಂದ ಗುರುತಿಸಲ್ಟಟ್ಟವರು: ಕದಿರ ಕಾಯಕದ ರೆಮ್ಮವ್ವೆ, ಕನ್ನಡಿ ಕಾಯಕದ
ರೇಮಮ್ಮ ಇಂತಹವರು; ಕೆಲವರು ತಮ್ಮ ಗಂಡಂದಿರ ಕಾಯಕ ವಿಶೇಷಣವನ್ನು ತಮ್ಮ ಹೆಸರಲ್ಲಿಯೂ
ಅಳವಡಿಸಿಕೊಂಡು ಪ್ರಸಿದ್ಧರಾದವರು: ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಹಾದೇವಿ, ಹೀಗೆ. ಆದರೆ ಈ
ಗುಂಪುಗಳಿಗೆ ಸೇರದ ಹಾಗೂ ಮಿಕ್ಕಾವುದಕ್ಕಿಂತಲೂ ಹೆಚ್ಚು ಮಂದಿ ವಚನಕಾರ್ತಿಯರಿರುವ ಗುಂಪೆಂದರೆ
ಪುಣ್ಯಸ್ತ್ರೀ ಹೆಸರು ಹೊತ್ತವರು. ಅವರ ಹಿಂದೆ ಯಾರ ಪುಣ್ಯಸ್ತ್ರೀ ಎಂಬುದೂ ಸೂಚಿತವಾಗಿರುತ್ತದೆ:
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ, ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ ಹೀಗೆ. ಒಟ್ಟು
ಮೂವತ್ತಮೂರು ಮಂದಿ ವಚನಕಾರ್ತಿಯರಲ್ಲಿ ಇಂತಹವರ ಸಂಖ್ಯೆ ಹದಿನಾಲ್ಕು. ಎಂ.ಎಂ. ಕಲಬುರ್ಗಿಯವರು
'ಪುಣ್ಯಸ್ತ್ರೀ' ಎಂಬ ತಮ್ಮೊಂದು ಲೇಖನದಲ್ಲಿ ಈ ಶಬ್ದಕ್ಕೆ ಮೊದಲು ಮೂರು ಪರ್ಯಾಯ ಅರ್ಥಗಳನ್ನು
ಆಲೋಚಿಸಿದ್ದರು: (1) ಕೆಳಜಾತಿಯಲ್ಲಿ ಹುಟ್ಟಿ ಮೇಲುಜಾತಿಯವರನ್ನು ಮದುವೆಯಾದ ಸ್ತ್ರೀಯರು; (2)
ಬೇರೆ ಬೇರೆ ಸಾಮಾಜಿಕ ಸ್ತರಗಳಿಂದ ಬಂದ ಶರಣರ ಪೂರ್ವಾಶ್ರಮದ ಉಪಪತ್ನಿಯರು; ಹಾಗೂ (3)
ವೇಶ್ಯೆಯರಾಗಿದ್ದು, ಶರಣರ ಪ್ರಭಾವದಿಂದ ಅವರೊಡನೆ ನಿಷ್ಠೆಯಿಂದ ಬಾಳಿದವರು. ಅಲ್ಲದೆ
ಪುಣ್ಯಸ್ತ್ರೀ ಎಂಬುದು ವೇಶ್ಯೆಯರನ್ನು ಗೌರವಪೂರ್ಣವಾಗಿ ಸಂಬೋಧಿಸುವ ಶಬ್ದ ಎಂದು ಅಲ್ಲಿ
ಪ್ರತಿಪಾದಿಸಿದ್ದರು. ಅಲ್ಲದೆ, ಲೇಖನದ ಕೊನೆಗೆ "ಇದು ಒಂದು ಪ್ರಮೇಯವೇ ಹೊರತು, ಕೊನೆಯ
ಸತ್ಯವಲ್ಲ" ಎಂಬ ಎಚ್ಚರಿಕೆಯ ಮಾತನ್ನೂ ಸೇರಿಸಿದ್ದರು. ಅವರು ಈ ಬಗೆಯ ಊಹೆಯನ್ನು ಮಾಡಲು
ಕಾರಣ ಪುಣ್ಯಸ್ತ್ರೀ ಅಥವಾ ಪುಣ್ಯಾಂಗನೆ ಎಂಬ ಪದಗಳು ಪಣ್ಯಸ್ತ್ರೀ ಅಥವಾ ಪಣ್ಯಾಂಗನೆ ಎಂಬುದರ
ಅಪಪಾಠವೋ ಉದ್ದೇಶಪೂರ್ವಕ ತಿದ್ದುಪಾಟೋ ಆಗಿರಬಹುದೆಂಬ ಕಲ್ಪನೆ. ಆದರೆ ಕೆಲ ಕಾಲದ ಬಳಿಕ ಅವರು 'ಪುಣ್ಯಸ್ತ್ರೀ
- ಮರು ಆಲೋಚನೆ' ಎಂಬ ಮತ್ತೊಂದು ಪ್ರಬಂಧವನ್ನು ಬರೆದು ಅದರಲ್ಲಿ
ಖಪುಣ್ಯಸ್ತ್ರೀ=ಧರ್ಮಪತ್ನಿಯೆಂಬಲ್ಲಿ ನನಗೆ ಅನುಮಾನವೇ ಇಲ್ಲಖ ಎಂದು ಹೇಳಿದರು. ಆದರೆ ಅದೇ
ಪ್ರಬಂಧದ ಕೊನೆಯಲ್ಲಿ ಅನೇಕ ಸಂಶಯಗಳನ್ನೆತ್ತಿ, "ಈ ನಿಟ್ಟಿನಲ್ಲಿ ಇನ್ನೂ ಅಧ್ಯಯನ
ನಡೆಯಬೇಕಾಗಿದೆ" ಎಂದು ಮುಕ್ತತೆಯನ್ನೂ ತೋರಿದ್ದಾರೆ. ತಮ್ಮ ಮೊದಲಿನ ತೀರ್ಮಾನವನ್ನು ಅವರು
ಬಹು ಆತುರವಾಗಿ ಮಾರ್ಪಡಿಸಿಕೊಂಡಂತೆ ಭಾಸವಾಗುತ್ತದೆ; ಅದಕ್ಕೆ ಕಾರಣವೇನೋ ತಿಳಿಯದು. ಆದರೆ ಈ
ವಿಷಯವಾಗಿ ಸ್ವಲ್ಪ ಆಲೋಚನೆಗೆ ಈಗಲೂ ಅವಕಾಶವಿದೆ.
ಹಿಂದೆಯೇ ನೋಡಿದಂತೆ ವಿವಿಧ ಗುಂಪುಗಳ ವಚನಕಾರ್ತಿಯರಲ್ಲಿ
ಪುಣ್ಯಸ್ತ್ರೀ ಹೆಸರು ಹೊತ್ತವರ ಸಂಖ್ಯೆ ಹದಿನಾಲ್ಕು. ಬೇರೆಯವರಿಗೆ, ಸ್ಪಷ್ಟವಾಗಿ ಒಬ್ಬ ಶರಣನ
ಹೆಂಡತಿಯೆಂದು ತಿಳಿದಿದ್ದರೂ ಅವರ ಪತ್ನಿಯೆಂದು ಸೂಚಿಸುವ ಪರಿಪಾಟವಿಲ್ಲ. ಅಲ್ಲದೆ ಅವರಾರ ಬಗೆಯೂ
ಪುಣ್ಯಸ್ತ್ರೀ ಎಂಬ ಮಾತನ್ನು 'ಧರ್ಮಪತ್ನಿ' ಎಂಬ ಅರ್ಥದಲ್ಲಿ ಬಳಸದೆ, ಈ ಹದಿನಾಲ್ಕು ಮಂದಿಗೆ
ಮಾತ್ರ ಗಂಡಸೊಬ್ಬನ ಪುಣ್ಯಸ್ತ್ರೀ ಎಂದು ಹೇಳುವ
ಆವಶ್ಯಕತೆಯೇನಿತ್ತು? ಅಂದರೆ ಧರ್ಮಪತ್ನಿಗೂ ಪುಣ್ಯಸ್ತ್ರೀಗೂ ಯಾವುದೋ ವ್ಯತ್ಯಾಸವಿರಬೇಕು. ನಾವು
ಹಿಂದೆ ಗಮನಿಸಿದಂತೆ ಪಣ್ಯ ಎಂಬುದೇ ಪುಣ್ಯ ಎಂದಾಗಿರುವ ಸಂಭವ ಹೆಚ್ಚಿರುವಂತೆ ತೋರುತ್ತದೆ.
ಕಲಬುರ್ಗಿಯವರು ಊಹಿಸುವ ಎರಡು ಮೂರನೇ ಅರ್ಥಗಳು ಈ ಪದಕ್ಕೆ ಹೆಚ್ಚು ಅನ್ವಯವಾಗುವಂತೆ ತೋರುತ್ತದೆ;
ಆದರೆ ಬಿಡಿಯಾಗಲ್ಲ, ಸಂಯೋಜಕವಾಗಿ. ಈ ಹದಿನಾಲ್ಕು ಮಂದಿ ಪುಣ್ಯಸ್ತ್ರೀಯರಲ್ಲಿ ಒಂಬತ್ತು ಜನರ
ಒಂದಿಲ್ಲೊಂದು ವಚನದಲ್ಲಿ "ವ್ರತಭ್ರಷ್ಟನ ಕೂಡಿದವರಿಲ್ಲ" (ಎಡೆಮಠದ ನಾಗಿದೇವ್ಯನ
ಪುಣ್ಯಸ್ತ್ರೀ ಮಸಣಮ್ಮ), "ವ್ರತಹೀನನ ಬೆರೆಯಲುಂಟೆ?" (ಕಾಟಕೂಟಯ್ಯಗಳ ಪುಣ್ಯಸ್ತ್ರೀ
ರೇಚವ್ವೆ), "ವ್ರತಹೀನನ ಬೆರೆಯಲಾಗದು" (ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ),
"ಭಕ್ತ ವ್ರತಹೀನನರಿದು ನೆರೆಯೆನಯ್ಯ" (ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ), "ವ್ರತಹೀನನಾದ
ಬಳಿಕ ನೆರೆದಡೆ ನರಕವಯ್ಯಾ" (ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ), "ವ್ರತಹೀನನ
ನೆರೆಯಲು ನರಕಕ್ಕೆ ಮೂಲ" (ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ), "ವ್ರತ
ತಪ್ಪಿದಡೆ ಕೂಡಲಿಲ್ಲ" (ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ),
"ವ್ರತಹೀನನ ನೆರೆಯಲಾಗದು" (ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ), "ವ್ರತಭ್ರಷ್ಟನ,
ಲಿಂಗಬಾಹ್ಯನ ಕಂಡಡೆ ಸತ್ತ ನಾಯ, ಕಾಗೆಯ ಕಂಡಂತೆ; ಅವರೊಡನೆ ನುಡಿಯಲಾಗದು"
(ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆ) ಇವರು ಈ ಮಾತುಗಳನ್ನಾಡಿ ಸೂಳೆ ಸಂಕವ್ವೆಯ "ವ್ರತಹೀನನರಿದು
ಬೆರೆದಡೆ ಕಾದ ಕತ್ತಿಯಲ್ಲಿ ಕಿವಿ ಮೂಗ ಕೊಯ್ವರಯ್ಯ" ಎಂಬ ಮಾತಿಗೆ ಪುಷ್ಟಿ ನೀಡುತ್ತಿದ್ದಾರೆ.
ಇಲ್ಲೆಲ್ಲ ಈ ವಚನಕಾರ್ತಿಯರು 'ಬೆರೆ'ಯಲಾಗದು ಎಂಬ ಮಾತಿನಲ್ಲಿ ಸೂಚಿಸುತ್ತಿರುವ ಅರ್ಥವಾದರೂ ಏನು?
ಕೆಲವೆಡೆ 'ನೆರೆ' ಮತ್ತು 'ಕೂಡು' ಎಂಬ ಪದಗಳೂ ಪರ್ಯಾಯವಾಗಿ ಬಳಕೆಯಾಗಿವೆ. ಈ ಬಗೆಯ ಮಾತುಗಳು ಇತರ
ಗುಂಪಿನ ವಚನಕಾರ್ತಿಯರಲ್ಲಿ ಕಾಣದು. ಹೀಗಾಗಿ ಈ ಮಾತುಗಳ ರೂಢಿಯ ಅರ್ಥವೇ, ಎಂದರೆ ಲೈಂಗಿಕತೆಯೇ,
ಇಲ್ಲಿ ಸೂಚಿತವಾಗುತ್ತಿರಬೇಕು. ಹಾಗೆಯೇ ಇಲ್ಲಿನ 'ವ್ರತ' ಏನನ್ನು ಸೂಚಿಸುತ್ತಿದೆ? ಅದು ಪ್ರಾಯಶಃ
ಅರವತ್ತನಾಲ್ಕು ಶೀಲ, ನೇಮ ಮುಂತಾದ ಅರ್ಥಗಳನ್ನು ಸೂಚಿಸದೆ, ವೀರಶೈವ ಎಂಬಷ್ಟನ್ನು ಮಾತ್ರ
ಸೂಚಿಸುತ್ತಿರಬೇಕು; ಅಂದರೆ 'ವ್ರತಹೀನ' ಎಂಬುದು ಭವಿಯನ್ನು ಸೂಚಿಸುವ ಪರ್ಯಾಯ ಶಬ್ದವಾಗಿರಬಹುದು.
ಹೀಗಾಗಿ ಈ ಮಾತು ಭವಿಯೊಡನೆ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎನ್ನಿಸುತ್ತದೆ. ಅಂದರೆ
ಪುಣ್ಯಸ್ತ್ರೀ ಎಂಬುದು ಪಣ್ಯಸ್ತ್ರೀ ಎಂಬುದರ ಆಕಸ್ಮಿಕವೋ ಉದ್ದೇಶಪೂರ್ವಕವೋ ಆದ ವ್ಯತ್ಯಸ್ತ
ರೂಪವಾಗಿರುವಂತೆ ಕಾಣುತ್ತದೆ. ತನ್ನೊಂದು ವಚನದಲ್ಲಿ ಉರಿಲಿಂಗಪೆದ್ದಿಯೇ "ಸೂಳೆ ಭಕ್ತಳಾದಡೆ
ಮಿಂಡಜಂಗಮಕ್ಕಲ್ಲದೆ ಮಾಡಳು" ಎನ್ನುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು
ಎನ್ನಿಸುತ್ತದೆ.
ಇಲ್ಲಿ ಇನ್ನೊಂದು ಅನುಮಾನವನ್ನೂ ವ್ಯಕ್ತಪಡಿಸಬಹುದು.
ಕಾಳವ್ವೆಯನ್ನು 'ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ' ಎಂದು ವಚನಕಟ್ಟುಗಳಲ್ಲಿ ಹೇಳಿದೆ.
'ಪುಣ್ಯಸ್ತ್ರೀ' ಎಂಬುದಕ್ಕೆ 'ಧರ್ಮಪತ್ನಿ' ಎಂಬ
ಅರ್ಥವನ್ನಿರಿಸಿಕೊಂಡರೆ ಮಠಾಧಿಪತಿಯಾಗಿದ್ದ ಉರಿಲಿಂಗಪೆದ್ದಿಗೆ
ಧರ್ಮಪತ್ನಿಯಿದ್ದಳೇ, ಮಠಾಧಿಪತಿಯಾಗುವ ಮುಂಚೆ
ಅವನು ಅವಳನ್ನು ಮದುವೆಯಾಗಿದ್ದನೇ, ಮಠಾಧಿಪತಿಯಾದ ನಂತರವೂ ಅವಳನ್ನು ಜೊತೆಯಿರಿಸಿಕೊಳ್ಳಲು ಮತ್ತು ಅವಳನ್ನು ತನ್ನ ಹೆಂಡತಿ ಎಂದು
ಕರೆದುಕೊಳ್ಳಬಹುದಾಗಿತ್ತೇ; ಅಥವಾ 'ಪುಣ್ಯಸ್ತ್ರೀ' ಎಂಬುದಕ್ಕೆ ಉಪಪತ್ನಿ ಎಂಬ
ಅರ್ಥವಿರಿಸಿಕೊಂಡರೆ, ಮಠಾಧಿಪತಿಯಾಗುವ ಮುಂಚೆಯೋ ಆದ ಬಳಿಕವೋ ಅವನು ಅವಳನ್ನು ಉಪಪತ್ನಿಯಾಗಿ
ಸ್ವೀಕರಿಸಿದ್ದನೇ, ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದನೇ, ಇದಕ್ಕೆ ಆ ಕಾಲದ ಶರಣಸಮುದಾಯದ
ಒಪ್ಪಿಗೆಯಿತ್ತೇ,? ಉರಿಲಿಂಗಪೆದ್ದಿ ಮಠಾಧಿಪತಿಯಾದ ಬಳಿಕವೂ ಕಾಳವ್ವೆಯನ್ನು ತನ್ನ 'ಪುಣ್ಯಸ್ತ್ರೀ
ಎಂದು ಒಪ್ಪಿಕೊಳ್ಳುವುದು, ಅಥವಾ ತಾನು ಮಠಾಧಿಪತಿಯೊಬ್ಬನ ಉಪಪತ್ನಿ ಎಂದು ಹೆಣ್ಣೊಬ್ಬಳು
ಹೇಳಿಕೊಳ್ಳುವುದು ನಿಜಕ್ಕೂ ಧೈರ್ಯದ ವಿಷಯ; ಅಥವಾ ಆಗ ಇಂಥದಕ್ಕೆಲ್ಲ ಅವಕಾಶವಿದ್ದಿರಬಹುದೇ? ಈ
ಕಾರಣಕ್ಕಾಗಿಯೇ ಉರಿಲಿಂಗಪೆದ್ದಿಯು "ಹೆಣ್ಣನು ಹೆಣ್ಣಂದರಿವಿರಿ, ಹೊನ್ನನು
ಹೊನ್ನೆಂದರಿವಿರಿ, ಮಣ್ಣನು ಮಣ್ಣೆಂದರಿವಿರಿ. ಬ್ರಹ್ಮಚಾರಿಗಳೆಂತಪ್ಪಿರಣ್ಣಾ? ಬಿಟ್ಟಡೆ ಹೆಣ್ಣು
ಹೊನ್ನು ಮಣ್ಣು ಈ ಮೂರನು ಬಿಟ್ಟು ಜ್ಞಾನದಲ್ಲಿ ಸುಳಿಯಲ್ಲಡೆ, ಭವನಾಸ್ತಿ ತಪ್ಪದು. ಹಿಡಿದಡೆ
ಹೆಣ್ಣು ಹೊನ್ನು ಮಣ್ಣು ಈ ಮೂರನೂ ಹಿಡಿದು, ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ, ಭವಂ ನಾಸ್ತಿ
ತಪ್ಪದು" ಎಂದು ಹೇಳಿದನೇ?
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯ ವೈಯಕ್ತಿಕ ಬದುಕಿನ
ಬಗ್ಗೆ ಯಾವ ವಿವರಗಳೂ ದೊರಕುವುದಿಲ್ಲ. ಮಿಕ್ಕ ಪುರಾಣಗಳಲ್ಲಾಗಲೀ, 'ಭೈರವೇಶ್ವರಕಾವ್ಯದ
ಕಥಾಮಣಿಸೂತ್ರರತ್ನಾಕರ'ದಲ್ಲಾಗಲೀ ಅವಳ ಬಗೆಗೆ ಯಾವ ಮಾಹಿತಿಯೂ ಸಿಕ್ಕುವುದಿಲ್ಲ. ಆದರೆ
ವಚನಗಳನ್ನು ಗಮನಿಸಿದರೆ ಅವಳು ಪೆದ್ದಿಗೆ ಅನುಗುಣವಾದ ಮನೋಭಾವವಳ್ಳ ವಚನಕಾರ್ತಿಯೇ ಸರಿ. ಇವಳ
ಹನ್ನೆರಡು ವಚನಗಳು ದೊರೆಯುತ್ತವೆ. ಅವಳ ವಚನಾಂಕಿತ ಕಉರಿಲಿಂಗಪೆದ್ದಿಗಳರಸಕಿ ಎಂದು; ಈ ಮೂಲಕವೂ
ಅವಳು ಉರಿಲಿಂಗಪೆದ್ದಿಗೆ ನಿಷ್ಠೆ ತೋರುತ್ತಾಳೆ. ಇವಳ ಅನೇಕ ವಚನಗಳು ವ್ರತದ ಬಗ್ಗೆ ಕಾಳಜಿಯನ್ನು
ವ್ಯಕ್ತಪಡಿಸುತ್ತವೆ. "ವ್ರತವೆಂಬುದು ನಾಯಕರತ್ನ; ವ್ರತವೆಂಬುದು ಸುಪ್ಪಾಣಿಯ ಮುತ್ತು;
ವ್ರತವೆಂಬುದು ಜೀವನ ಕಳೆ; ವ್ರತವೆಂಬುದು ಸುಯಿದಾನ; ವ್ರತ ತಪ್ಪಲು
ಉರಿಲಿಂಗಪೆದ್ದಿಗಳರಸನೊಲ್ಲನವ್ವಾ" ಎಂದು ಒಂದು ವಚನ ಹೇಳಿದರೆ, "ವ್ರತ ಹೋದಾಗಳೆ
ಇಷ್ಟಲಿಂಗದ ಕಳೆ ನಷ್ಟವವ್ವಾ. ಅವರು ಲಿಂಗವಿದ್ದೂ ಭವಿಗಳು, ಅದು ಹೇಗೆಂದಡೆ; ಪ್ರಾಣವಿಲ್ಲದ
ದೇಹದಂತೆ" ಎಂದು ಮತ್ತೊಂದೆಡೆ ಹೇಳುತ್ತಾಳೆ. ಇಲ್ಲಯೂ ವ್ರತ ಯಾವುದಾದರೂ ನಿರ್ದಿಷ್ಟ
ಆಚರಣೆಯನ್ನು ಸೂಚಿಸುತ್ತದೆಯೋ, ಒಟ್ಟಾರೆಯ ಮತನಿಷ್ಠೆಯನ್ನು ಹೇಳುತ್ತದೆಯೋ ಸ್ಪಷ್ಟವಾಗುವುದಿಲ್ಲ.
ಉರಿಲಿಂಗಪೆದ್ದಿಯಂತೆಯೇ ಕಾಳವ್ವೆಯದೂ ಜೋರು ದನಿಯೇ; "ಒಡೆಯರೆಂಬ
ತುಡುಗುಣಿಗಳು ತಾವು ಪೂಜೆಗೊಂಬಲ್ಲಿ, ಅವರ ಮನೆಗೆ ಹೂ ಹಣ್ಣು ಕಾಯಿ ಪತ್ರೆಗಳ ತಾಹ, ಹೋಗುವ ಬರುವ
ಊಳಿಗವ ಕೊಂಬಾತ ಭಕ್ತನಲ್ಲ" ಎಂಬ ಮಾತನ್ನೇ ನೋಡಿ. ಕೆಲವರು ಜಂಗಮರನ್ನು ತುಡುಗುಣಿಗಳು ಎಂದು
ಖಾರವಾಗಿ ಕರೆಯುವಷ್ಟರ ಮಟ್ಟಿನ ಅಪನಡತೆಯ ವಿರುದ್ಧದ ಸಿಡುಕು ಅವಳದು. ಹಾಗೆಯೇ ಅವಳು ಆಡಂಬರವನ್ನು
ಕುರಿತು ಬೆಂಕಿ ಕಾರುತ್ತಾಳೆ: "ತೂಬರದ ಕೊಳ್ಳಿಯಂತೆ ಉರಿವಾತ ಭಕ್ತನೇ?" ಎಂಬ
ಮಾತಿನಲ್ಲಿ ಒಂದು ಸಾರ್ಥಕ ಶಬ್ದಚಿತ್ರವೇ ಅಡಕವಾಗಿದೆ. ಅವಳಿಗೂ ಬ್ರಾಹ್ಮಣನ ಬಗ್ಗೆ (ಅಥವಾ
ಬ್ರಾಹ್ಮಣ್ಯದ ಬಗ್ಗೆ) ಕಡು ಅಸಹನೆ; ವಿವಿಧ ಪ್ರಾಣಿಗಳನ್ನು ಆಹುತಿ ಕೊಟ್ಟು ಹೋಮ ಮಾಡುವ ಬಗ್ಗೆ ಅವಳಿಗೆ
ಕ್ರೋಧ. (ಉರಿಲಿಂಗಪೆದ್ದಿಯ ಒಂದು ವಚನದಲ್ಲಿರುವಂತೆ ಇವಳೂ ತನ್ನೊಂದು ರಚನೆಯಲ್ಲಿ ಬ್ರಾಹ್ಮಣರು
ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ಪ್ರಾಣಿಗಳನ್ನು ಬಲಿಯಿತ್ತು ಹೋಮ ಮಾಡುವ ವಿವರವನು
ನೀಡುತ್ತಾಳೆ). ಹೀಗಾಗಿ, "ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗಜಂಗಮಕ್ಕೆ ಶರಣೆನ್ನದೆ
ಮುನ್ನ ಒಂಟಿ ಬ್ರಾಹ್ಮಣನ ಕಂಡು ಶರಣು ಎಂದಡೆ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಹಂದಿಯ
ಬಸುರಲ್ಲಿ ಬಪ್ಪುದು ತಪ್ಪದು ಕಾಣಾ" ಎನ್ನುತ್ತಾಳೆ.
ಜಾತಿ ಪದ್ಧತಿಯ ಬಗ್ಗೆ ಅವಳಿಗೂ ತೀವ್ರ ಅಸಹಿಷ್ಣುತೆ. ಅವಳ ಒಂದು
ವಚನ ಮಾರ್ಮಿಕವಾಗಿ ಜಾತಿಶ್ರೇಣಿಯ ಅವೈಚಾರಿಕತೆಯನ್ನು ವಿಡಂಬಿಸುತ್ತದೆ. ಆ ವಚನ ಹೀಗಿದೆ:
ಕುರಿ
ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂಬರು.
ಶಿವಗೆ
ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು
ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾದಿರೋ?
ಬ್ರಾಹ್ಮಣನುಂಡುದು
ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು
ಮಾದಿಗರುಂಡುದು
ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ:
ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ
ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು
ಕುಡಿದ ಬುದ್ಧಿಗೇಡಿ ವಿಪ್ರಂಗೆ ನಾಯಕ ನರಕ ತಪ್ಪದಯ್ಯಾ
ಉರಿಲಿಂಗಪೆದ್ದಿಗಳರಸ
ಒಲ್ಲನವ್ವಾ
ಇಲ್ಲಿ
ವಚನಕಾರ್ತಿಯು, ಉರಿಲಿಂಗಪೆದ್ದಿಯಂತೆಯೇ ಅಂತ್ಯಜನು ಬ್ರಾಹ್ಮಣನಿಗಿಂತಲೂ ಮಿಗಿಲು ಎಂಬ
ಭಾವನೆಯನ್ನು ವ್ಯಕ್ತಪಡಿಸುವ ದಿಟ್ಟತನ ತೋರುತ್ತಿದ್ದಾಳೆ. ಬ್ರಾಹ್ಮಣರು ಉಂಡ ಮೇಲೆ, ಅವರು
ಊಟಮಾಡಿದ ಎಲೆಯನ್ನು ಬಿಸಾಡುತ್ತಾರೆ; ಆದರೆ ಮಾದಿಗ ಹಸುವಿನ ಮಾಂಸ ತಿಂದ ಬಳಕ ಅದು ಇದ್ದ
ಚರ್ಮವನ್ನು ಸಿದ್ದಲಿಕೆ-ಸಗ್ಗಳೆಯಾಗಿ ಮಾಡುತ್ತಾರೆ; ಅವುಗಳಲ್ಲಿ ಎಣ್ಣೆ-ನೀರುಗಳನ್ನು ತುಂಬಿ
ಬೇರೆಡೆಗೆ ಕೊಂಡೊಯ್ಯಲು ಬಳಸುತ್ತಾರೆ. ಇದನ್ನು ಬ್ರಾಹ್ಮಣನೂ ಬಳಸುತ್ತಾನೆ. ಹೀಗಾಗಿ ಮಾದಿಗ
ಜಾತಿಯೇ ಬ್ರಾಹ್ಮಣನಿಗಿಂತ ಉತ್ತಮ ಎಂಬ ವಾದ ಅವಳದು. ಅವಳ ವಾದ ಚಾತುರ್ಯ ನಮ್ಮನ್ನು
ಬೆರಗುವಡಿಸುತ್ತದೆ. (ಈ ವಚನವನ್ನು ಬಹುಪಾಲು ಹೋಲುವ ವಚನವೊಂದು ಅಂಬಿಗರ ಚೌಡಯ್ಯನಲ್ಲಿಯೂ
ದೊರೆಯುತ್ತದೆ. ಇಬ್ಬರೂ ಇವುಗಳನ್ನು ಬೇರೆ ಬೇರೆಯಾಗಿಯೇ ಬರೆದರೋ, ಅಥವಾ ಒಬ್ಬರನ್ನೊಬ್ಬರು
ಅನುಸರಿಸಿದರೋ, ಅಥವಾ ವಚನ ಸಂಕಲನ ಸಂದರ್ಭದಲ್ಲಿ ಪಕ್ಷಪಾತ ಇಲ್ಲ ಬೇರೆ ಯಾವುದೋ ಕಾರಣದಿಂದ
ವಚನಾಂಕಿತ ಬದಲಾದವೋ ಹೇಳುವುದು ಕಷ್ಟ).
ಸರಳವಾದರೂ ಹೃದ್ಯವಾದ ವಚನವನ್ನು ಕಾಳವ್ವೆ ಬರೆಯಬಲ್ಲಳು. ಈ ಕೆಳಗಿನ
ವಚನವನ್ನು ನೋಡಿ:
ಭಾಗ್ಯವುಳ್ಳ ಪುರುಷಂಗೆ
ಕಾಮಧೇನು
ಕಾಮಿಸಿದುದುನೀವುದಯ್ಯಾ.
ನಿರ್ಭಾಗ್ಯ ಪುರುಷಂಗೆ
ಕಾಮಧೇನು
ತುಡುಗುಣಿಯಾಗಿ
ತೋರುವುದಯ್ಯಾ.
ಸತ್ಯಪುರುಷಂಗೆ
ಕಲ್ಪವೃಕ್ಷ
ಕಲ್ಪಸಿದುದುನೀವುದಯ್ಯಾ.
ಅಸತ್ಯಪುರುಷಂಗೆ
ಕಲ್ಪವೃಕ್ಷ
ಬೊಬ್ಬುಳಿಯಾಗಿ
ತೋರುವುದಯ್ಯಾ.
ಧರ್ಮಪುರುಷಂಗೆ
ಚಿಂತಾಮಣಿ
ಚಿಂತಿಸಿದುದನೀವುದಯ್ಯಾ.
ಅಧರ್ಮಪುರುಷಂಗೆ
ಚಿಂತಾಮಣಿ
ಗಾಜಿನ ಮಣಿಯಾಗಿ
ತೋರುವುದಯ್ಯಾ.
ಶ್ರೀಗುರುಕಾರುಣ್ಯವುಳ್ಳ
ಸದ್ಭಕ್ತಂಗೆ
ಜಂಗಮಲಿಂಗವಾಗಿ
ತೋರುವುದಯ್ಯಾ,
ಭಕ್ತನಲ್ಲದ ಪಾಪಿಷ್ಠಂಗೆ
ಜಂಗಮಲಿಂಗ
ಮಾನವನಾಗಿ ತೋರುವುದಯ್ಯಾ
ಉರಿಲಿಂಗಪೆದ್ದಿಗಳರಸ
ಒಲ್ಲನವ್ವಾ.
ಜಂಗಮದ
ಹಿರಿಮೆಯನ್ನು ವಚನಕಾರ್ತಿ ಅತ್ಯಂತ ಹೃದ್ಯವಾಗಿ ಹೇಳುತ್ತಿದ್ದಾಳೆ. ನೋಡುವ ನೋಟ
ಸರಿಯಾಗಿಲ್ಲದಿದ್ದಾಗ ವಸ್ತುಗಳು ಅಪಮೌಲ್ಯಗೊಳ್ಳುವ ಪರಿಯನ್ನು ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳ
ದೃಷ್ಟಾಂತದ ಮೂಲಕ ಸಮತೂಕದ ವಾಕ್ಯಗಳಲ್ಲಿ ಈ ವಚನ ಸೆರೆಹಿಡಿಯುತ್ತದೆ. ಕಾಳವ್ವೆ ಇಂತಹ ಮತ್ತಷ್ಟು
ವಚನಗಳನ್ನೇಕೆ ಬರೆಯಲಿಲ್ಲವೋ! ಇನ್ನೂ ಒಂದು ಮಾತು: ನಾವೀಗ ಕಿರುವಚನಕಾರರೆಂದು ಗುರುತಿಸುವವರಲ್ಲಿ
ಅನೇಕರು ಹಿರಿಯರ ಬರವಣಿಗೆಯ ಮಾರ್ಗವನ್ನು ಮೊದಲು ಅನುಕರಿಸ ಹೋಗಿ, ಆನಂತರ ಆ ಹಾದಿಯಲ್ಲಿ ಅವರ
ಪ್ರತಿಭೆ ಕ್ರಮೇಣ ಬಿಚ್ಚಿಕೊಂಡಿರಬೇಕು. ಆದರೆ ವಚನರಚನೆಯ ಒಂದು ಹದ ಈ ಅನುಕರಣೆಯಿಂದ
ವ್ಯಾಪಕವಾಯಿತೆಂದು ತೋರುತ್ತದೆ. ಈ ಕಾರಣದಿಂದಲೇ, ಹನ್ನೆರಡನೆಯ ಶತಮಾನದ ಈ ಚಳುವಳಿಯ ಕಾಲದಲ್ಲಿ
ವಚನಭಾಷೆಯೊಂದು ಸಿದ್ಧಗೊಂಡಿತು; ಅಷ್ಟೇ ಅಲ್ಲದೆ, ಅದನ್ನು ನೋಡಬೇಕಾದ ಪರಿಭಾವಿಸಬೇಕಾದ
ವಚನಮೀಮಾಂಸೆಯೂ ಸೃಷ್ಟಿಗೊಂಡಿತು. ಸಿದ್ಧರಾಮನು ವಚನಗಳನ್ನು ವಾಗ್ರಚನೆಯಲ್ಲ ಎಂದು ಹೇಳುವ
ಮೂಲಕವೂ, ಇತರ ರಚನೆಗಳಲ್ಲನ ಅಲಂಕಾರ ಮುಂತಾದವನ್ನು ಇಲ್ಲಿ ಕಾಣಾಗದು ಎಂದು ಹೇಳುವುದರ ಮೂಲಕವೂ
ವಚನಗಳ ಸ್ವರೂಪ ಸಾಹಿತ್ಯೇತರವಾದುದು ಎಂಬುದನ್ನು ಮನದಟ್ಟು ಮಾಡಿದ. ಈ ರಚನಾಕ್ರಮವನ್ನು ವಚನರಚನೆಯ
ಎರಡನೆಯ ಟ್ಟದಲ್ಲಿ ಮಾತ್ರವಲ್ಲ, ಆಧುನಿಕ ಕಾಲದಲ್ಲಿಯೂ ಅನೇಕರು ಅನುಕರಿಸುವಂತಾಯಿತು.
ವಚನಗಳೆನ್ನಿಸಿಕೊಳ್ಳಲು ಒಂದು ಭಾಷಾಹದ ಮತ್ತು ಶೈಲಿಗಳು ಚಳುವಳಿಯ ಕಾಲದಲ್ಲಿ ರೂಪುಗೊಂಡವು. ನೋಡಿದರೇ
ವಚನಗಳೆಂದು ತೋರುವ ಮಟ್ಟಿಗೆ ಇದು customize ಆಯಿತು. ಹೀಗಾಗಲು
ಕಿರುವಚನಕಾರರು ನೀಡಿದ ಕೊಡುಗೆ ಅನನ್ಯವಾದದ್ದು. ಎಷ್ಟೇ ಪ್ರತಿಭಾವಂತನಾಗಲಿ, ಒಬ್ಬನ ಬಳಕೆಯಿಂದ
ಭಾಷೆ ಹದಗೊಳ್ಳುವುದಿಲ್ಲ; ನೂರಾರು ಜನ ಆ ಮಾರ್ಗವನ್ನನುಸರಿಸಿ ಬರೆಯಬೇಕು, ಸಾವಿರಾರು ಜನ ಅದನ್ನು
ಕೈವಶಮಾಡಿಕೊಂಡು ಬಳಸಬೇಕು, ಲಕ್ಷಾಂತರ ಮಂದಿ ಅದನ್ನು ಕೇಳಿ ಅಭಿವ್ಯಕ್ತಿಯ ಹದವನ್ನರಿಯಬೇಕು.
ಇಂತಹ ಅದ್ಭುತವು ವಚನ ಚಳುವಳಿಯ ಒಂದೆರಡು ದಶಕಗಳ ಅವಧಿಯಲ್ಲಿ ನಡೆದದ್ದು ಕನ್ನಡದ ಭಾಗ್ಯ.
-0-0-0-
1 comment:
Excellent article
Post a Comment